Tuesday 28 February 2017

ಸಶಬ್ದ




(ಚಿತ್ರ: ಅಂತರ್ಜಾಲ)
ಒಂದು ನಸುಕು
ಇನ್ನೂ ಮಬ್ಬುಗತ್ತಲು
ಭಾರೀ ಸದ್ದು!
ಬೇಲಿ ದೂಡಿ ಕಲ್ಲು ಝಾಡಿಸಿ
ಇದ್ದಲ್ಲೆ ಅತ್ತಿತ್ತ ಸರಿದು ಧೂಳು ಹಾರಿಸಿ
ಬೃಹದಾಕಾರದ ಮಿಶಿನು
ಬಂದೆನೆಂದು ಸಾರಿತು

ಮೇಲೆ ಗೂಡಿನಲಿ ಮಲಗಿದ್ದ ಜೋತಮ್ಮ
ಭಯಾನಕ ಸದ್ದಿಗೆ ಎಚ್ಚೆತ್ತು ಕಣ್ಣುಜ್ಜುತ್ತ
‘ಮಾಮ್, ವಾಟೀಸ್ ದಿಸ್’ ಎಂದಳು.
ಸಂಪಿಗೆ ಮರದ ತುತ್ತತುದಿ ಮಹಲಿನ
ಮರಿಕಾಗೆ, ಕಾಗಮ್ಮ
ಏನೋ ಆಗಿಹೋಯಿತೆಂದು
ಹುಯ್ಯಲಿಟ್ಟರು.
ಪುಟ್ಟ ಬೆಕ್ಕುಮರಿ ಕಂಗಾಲು
ಹಿಂದೆಮುಂದೆ ಸುಳಿಯುತ್ತ
ನನ್ನ ಕಾಲುಗಳತ್ತಲೇ ನೆಟ್ಟಿದೆ ಕಣ್ಣು..

ಕೊರೆವ ಸದ್ದು ಕಿವಿ ತುಂಬುತಿರಲು
ಹೊರಹೋಗಿ ನೋಡುತ್ತೇನೆ
ಬೀದಿಯಲಿ ಹೆಜ್ಜೆಗೊಂದೊಂದು ಗುರುತು
ನೆಲ ಕೊರೆದು ಆಳಬಾವಿ ತೋಡಲು.
ಗುರುಗುಡುತ್ತ ಬೀಡುಬಿಟ್ಟಿದೆ ಭಾರೀ ಮಿಶಿನು!

ಒಂದಿಡೀ ದಿವಸ ಕೊರೆದದ್ದೇ ಕೊರೆದದ್ದು
ಈ ಬೋರು ಆ ಬೋರು ಮತ್ತೊಂದು ಬೋರು
ನೂರಿನ್ನೂರು ಮುನ್ನೂರು ನಾನೂರು
ಕೊರೆದ ಅಡಿ ಇಂಚಿಗು ಲೆಕ್ಕ ಉಂಟು.
ಆದರೇನು, ಎಲ್ಲು ಇಲ್ಲ ನೀರು
ಕಿಸೆ ಕಂಗಾಲು
ಜನ ಕಂಗಾಲು
ಮಿಶಿನು ಕಂಗಾಲು
ಅಲ್ಲಿ ನೀರಿಲ್ಲ ಇಲ್ಲಿಯೂ ಇಲ್ಲ
ಸದ್ದು ಮಾಡಿದ್ದೇ ಬಂತು ನೀರೇ ಇಲ್ಲ
ಭುಸ್ಸೆಂದು ನಿಟ್ಟುಸಿರ್ಗರೆದು
ವಾಪಸು ಹೊರಟಿತು ಮಿಶಿನು
ಅಬಬ, ಏನು ಗದ್ದಲ ಏನಬ್ಬರ!
ಬರುವಂತೆ ಹೋಗುವಾಗಲೂ?

‘ಕೊರೆತವೇ ಹಾಗೆ,
ಸೋಲುಗೆಲುವು ಇರುವುದೇ
ಕೊರೆವ ಸದ್ದಿಗೆ ಬೆಚ್ಚದಿರಲು ಸಾಧ್ಯವೇ?’
ನನ್ನ ಅಚ್ಚರಿಗೆ
ಗೇರು ಮರದ ಕಾಂಡ ಕೊರೆವ ಹುಳು
ತೂತಿನಿಂದ ಹೊರಗಿಣುಕಿ ನಕ್ಕು
ಟ್ರೊಂಯ್ ಟ್ರೊಂಯ್ಯನೆ ಕೊರೆಯುತ್ತ
ಮತ್ತೆ ಒಳ ಸರಿಯಿತು.

ಹೌದಲ್ಲ ಹುಳವೇ,
ಕೊರೆವುದು ಎಂದಿಗು ಸಶಬ್ದ.
ಮೊಗೆವುದು, ನನದೆನುವುದು ಸಶಬ್ದ.
ಸಿಗಲಿಲ್ಲವೆನುವುದು ಸಶಬ್ದ.
ಕೊರಗುತ್ತ ಮರಳುವುದೂ ಸಶಬ್ದ..
ಯಂತ್ರವೆಂದಿಗು ಕರ್ಕಶ ಶಬ್ದ.

ಕೊಡುವಾಗ ಕೊಟ್ಟುಕೊಳುವಾಗ
ಅರಸುವಾಗ ಒಪ್ಪಿಸಿಕೊಳುವಾಗ
ನಿಶ್ಶಬ್ದವಾಗಿರಲು ಯಂತ್ರ ಹೆಣ್ಣಲ್ಲವಲ್ಲ?!


(ಅಂತರ್ಜಾಲ ಚಿತ್ರ)

Tuesday 21 February 2017

ಲಾಲ್ ಪೇರಿ


ಬ್ರಿಟಿಷ್ ಲೇಖಕ ವಿಲಿಯಂ ಡ್ಯಾಲ್‌ರಿಂಪಲ್‌ನ ಏಳನೆಯ ಪುಸ್ತಕ ‘ನೈನ್ ಲೈವ್ಸ್.’ ಅವರು ದೆಹಲಿಯ ಬಗೆಗೆ, ಮುಘಲ್ ಕಾಲದ ಭಾರತದ ಬಗೆಗೆ ಆಸಕ್ತಿಯಿಂದ ಹಳೆಯ ಲೈಬ್ರರಿಗಳಲ್ಲಿ, ಖಾಸಗಿ ಸಂಗ್ರಹಗಳಲ್ಲಿ ದಾಖಲೆಗೆ ತಡಕಾಡಿ ಮೂರು ಅತ್ಯುತ್ತಮ ಎನ್ನಬಹುದಾದ, ಸಂಶೋಧನಾ ಗ್ರಂಥಗಳಾದರೂ ಕಾದಂಬರಿಯಷ್ಟು ಆಸಕ್ತಿಯಿಂದ ಓದಿಸಿಕೊಂಡು ಹೋಗಬಲ್ಲ ಪುಸ್ತಕಗಳನ್ನು ಬರೆದಿದ್ದಾರೆ. ‘ಸಿಟಿ ಆಫ್ ಜಿನ್ಸ್,’ ‘ಲಾಸ್ಟ್ ಮುಘಲ್’ ಹಾಗೂ ‘ವೈಟ್ ಮುಘಲ್ಸ್’ ಪುಸ್ತಕಗಳು ‘ಇಂಡೋಫಿಲ್’ ಎಂಬ ಬಿರುದನ್ನು ಅವರಿಗೆ ತಂದಿತ್ತರೂ ಕುರುಡು ಭಾರತ ಪ್ರೇಮ ಅವರದಲ್ಲ. ಹೆಚ್ಚು ಕಡಿಮೆ ಎರಡು ದಶಕ ಕಾಲ ಭಾರತದಲ್ಲೇ ಅಲೆಯುತ್ತ ಕಳೆದಿರುವ ಆತ ತನ್ನ ಮನೆಯೆಂದರೆ ‘ದೆಹಲಿ’ ಎಂಬಷ್ಟೇ ಆಗಿಹೋಗಿರುವುದಾಗಿ ಹೇಳಿಕೊಂಡಿದ್ದಾರೆ. ಬರೀ ಸಂಶೋಧನಕಾರನ ಚಿಕಿತ್ಸಕ ಬುದ್ಧಿಯಲ್ಲದೆ, ತೆರೆದ ಮನದ ವಿಶ್ಲೇಷಣೆ, ಕುತೂಹಲ, ಮಾನವ ಪ್ರೇಮ ಇವೆಲ್ಲ ತುಂಬಿರುವುದು ಆ ಪುಸ್ತಕಗಳನ್ನು ಓದುತ್ತ ಹೋದಂತೆ ಅರಿವಾಗುತ್ತದೆ. ಭಾರತ ಉಪಖಂಡದ ವಿವಿಧ ಪ್ರದೇಶ, ಭಾಷೆ, ಆಸಕ್ತಿ, ಧಾರ್ಮಿಕ ಹಿನ್ನೆಲೆಗಳ ಒಂಭತ್ತು ಜನರನ್ನು ಭೇಟಿಯಾಗಿ ಅವರ ಪೂರ್ವಾಪರ ಅರಿತು, ಅದನ್ನು ಭೂತ ವರ್ತಮಾನದ ಸಾಮಾಜಿಕ, ರಾಜಕೀಯ ವಿದ್ಯಮಾನಗಳ ಜೊತೆ ವಿಶ್ಲೇಷಿಸುವ ಅಪೂರ್ವ ಪ್ರವಾಸ ಕಥನ ‘ನೈನ್ ಲೈವ್ಸ್’.

ಪಾಶ್ಚಾತ್ಯ ಜಗತ್ತಿಗೆ ಭಾರತವೆಂದರೆ ಸದಾ ಪುರಾತನವಾದ, ಎಂದೂ ಬದಲಾಗದ ಧಾರ್ಮಿಕ ಜ್ಞಾನದ ನಾಡು. ಭಾರತದಲ್ಲಾದರೋ ಧಾರ್ಮಿಕ ಅಸ್ಮಿತೆ ಎಂಬುದು ಜಾತಿ - ಗುಂಪು - ಪ್ರದೇಶ - ವಂಶಗಳಿಗೆ ಅಂಟಿಕೊಂಡಿದ್ದು ಆ ಸಂಸ್ಥೆಗಳ ಜೊತೆಗೇ ಬದಲಾಗುತ್ತ ಸಾಗಿದೆ  ಎನ್ನುವುದು ಅವನ ಅಬ್ಸರ್ವೇಷನ್. ಬದಲಾವಣೆಯ ವೇಗಕ್ಕೆ ಒಂದಕ್ಕೊಂದು ಘರ್ಷಣೆಗೊಳಗಾಗಿರುವುದನ್ನು, ರಾಜಕೀಯ, ಕೋಮು ಹಿಂಸಾಚಾರಕ್ಕೆ ಬಲಿಯಾದವರು ಧರ್ಮದ ಮಬ್ಬಿನಲ್ಲಿ ಸಾಂತ್ವನ ಬಯಸುತ್ತಿರಬಹುದೇ ಎಂಬುದನ್ನು ತನ್ನ ತಿರುಗಾಟದ ವೇಳೆ ಆತ ಪರಿಶೀಲಿಸಿದ್ದಾನೆ. ಬದಲಾಗುತ್ತಿರುವ ಕಾಲದಲ್ಲಿ ಇನ್ನೂ ಪವಿತ್ರ, ಧಾರ್ಮಿಕ ಎಂಬುದಾಗಿ ಯಾವುದು ಉಳಿದಿದೆ? ಯಾವ ಸ್ವರೂಪದಲ್ಲಿ ಉಳಿದಿದೆ? ಯಾವ ಬದಲಾವಣೆಗೆ ಮುಖವೊಡ್ಡಿದೆ? ಎಂದೆಲ್ಲ ಪರಿಶೀಲಿಸುತ್ತ ೯ ಜನ ಧಾರ್ಮಿಕ ವ್ಯಕ್ತಿಗಳನ್ನು ಭೇಟಿಯಾಗಿದ್ದಾನೆ. ಅದಕ್ಕಾಗಿ ಈ ದೊಡ್ಡ ದೇಶವನ್ನು ಸುತ್ತಿದ ತನ್ನ ಎರಡು ದಶಕಗಳ ಅನುಭವವನ್ನೆಲ್ಲ ಬಳಸಿಕೊಂಡಿದ್ದಾರೆ. ಅವರು ಭೇಟಿ ಮಾಡಿದ ಒಂಭತ್ತು ಜನ  ಭಾರತ ಉಪಖಂಡದಲ್ಲಿ ಶೀಘ್ರ ಬದಲಾಗುತ್ತಿರುವ ಧಾರ್ಮಿಕ ಮುಖವನ್ನು ತೆರೆದು ತೋರಿಸುತ್ತಾ ವಾಸ್ತವವನ್ನು ಪ್ರತಿನಿಧಿಸಿದ್ದಾರೆ.

 ಅಂತಹವರಲ್ಲಿ ಒಬ್ಬಳು ಸೂಫಿ ಭಕ್ತೆ ಲಾಲ್ ಫೇರಿ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಷೆಹ್ವಾನ್ ಷರೀಫ್ ಸೂಫಿ ಸಂತ ಲಾಲ್ ಶಹಬಾಜ್ ಖಲಂದರ್ ಅವರ ದರ್ಗಾದಿಂದ ವಿಖ್ಯಾತವಾದುದು. ಖಲಂದರ್ ಸಂತರ ಭಕ್ತಾನುಯಾಯಿ ‘ಲಾಲ್ ಫೇರಿ’ ಉಳಿದ ಸೂಫಿಗಳ ಹಾಗೆಯೇ ಲೋಕರೂಢಿಯನ್ನು ಮುರಿದವಳು. ಹೆಣ್ಣಾದರೂ ಸೂಫಿಯಾದವಳು. ಬಿಹಾರದ ಕುಗ್ರಾಮವೊಂದರ ಹೀನಾ ಕೊನೆಗೆ ಪಾಕಿಸ್ತಾನದ ಸಿಂಧ್‌ನ ಖ್ಯಾತ ದರ್ಗಾವೊಂದರ ಅನುಯಾಯಿಯಾಗುವ ತನಕ ಸಾಗಿ ಬಂದ ದಾರಿ ಹಲವು ಅಪಘಾತ, ಆಕಸ್ಮಿಕ, ದುಃಖಮಯ ತಿರುವುಗಳಿಂದ ಕೂಡಿದೆ. ಅವಳಷ್ಟೇ ಅವಳು ನಂಬಿ ಬಂದ ಸೂಫಿ ಮಾರ್ಗವೂ ಇಂದು ಅಪಾಯದಲ್ಲಿದೆ. ಅದನ್ನು ಡ್ಯಾಲ್‌ರಿಂಪಲ್‌ನ ಟಿಪ್ಪಣಿ ಸಹಿತ ಅವಳ ಬಾಯಿಯಲ್ಲೇ ಕೇಳಬೇಕು:



‘ಭಾರತ ಬಾಂಗ್ಲಾ ಗಡಿ ಭಾಗದಲ್ಲಿರುವ ಬಿಹಾರದ ಸೋನೆಪುರ ಎಂಬ ಸಣ್ಣ ಹಳ್ಳಿಯವಳು ನಾನು. ಅಂದಿನ ನನ್ನ ಹೆಸರು ಹೀನಾ. ಕಾಡಿನಂಚಿನ ನಮ್ಮ ಹಳ್ಳಿ ಎಷ್ಟು ಫಲವತ್ತಾಗಿತ್ತೆಂದರೆ ಬಡವರಾಗಿದ್ದರೂ ಮಕ್ಕಳಾದ ನಾವೆಂದೂ ಹಸಿದಿರುತ್ತಿರಲಿಲ್ಲ. ನನ್ನ ಬಾಲ್ಯದ ನೆನಪೆಂದರೆ ಮರ ಹತ್ತಿ ಹಣ್ಣು ಕುಯ್ದಿದ್ದೇ. ಮಾವು, ನೇರಳೆ, ಪೇರಲೆ, ಖರ್ಜೂರ, ಸಿಹಿತೆಂಗು - ಹೀಗೆ ಅಂಗಡಿಯಿಂದ ಯಾವ ಹಣ್ಣನ್ನೂ ಕೊಳ್ಳಬೇಕಿರಲಿಲ್ಲ. ವರ್ಷದ ಹನ್ನೆರೆಡೂ ತಿಂಗಳೂ ಯಾವುದಾದರೊಂದು ಪುಕ್ಕಟೆ ದೊರೆಯುತ್ತಿತ್ತು. ಹಾಗೆಯೇ ಕಾಡಿನಲ್ಲೂ ಕಾಡುಕುರಿ ಹಾಗೂ ಜಿಂಕೆ ಹೇರಳವಾಗಿರುತ್ತಿದ್ದವು. ನನ್ನಪ್ಪ ಬೇಟೆಗೆ ಹೋದ ಒಂದು ತಾಸಿನಲ್ಲಿ ಏನಾದರೂ ಬೇಟೆ ಹಿಡಿದೇ ಮನೆಗೆ ಬರುತ್ತಿದ್ದ.

ನಾನು ಸಣ್ಣವಳಿರುವಾಗ ಹಿಂದೂ ಮುಸ್ಲಿಮರೆಲ್ಲ ಸೋದರರೇನೋ ಎಂಬಂತೆ ಎಲ್ಲ ಇದ್ದರು. ನಾವು ಖುರೇಶಿಗಳು. ನಮ್ಮ ಮನೆಯ ಹೆಂಗಸರನ್ನು ಕೂಲಿಗೆ ಕಳಿಸುತ್ತಿರಲಿಲ್ಲ. ನನ್ನ ಆತ್ಮೀಯ ಗೆಳತಿ ಹಿಂದೂ, ಬ್ರಾಹ್ಮಣರವಳು. ನನ್ನ ತಂದೆಗೂ ಅಷ್ಟೇ, ಹಿಂದೂ ಗೆಳೆಯರು. ದೇವಾಲಯ ಮತ್ತು ಮಸೀದಿ ಎರಡೂ ಅಕ್ಕಪಕ್ಕವೇ ಇದ್ದವು. ಜನ ಎರಡೂ ಕಡೆ ಹೋಗುತ್ತಿದ್ದರು.

ನನ್ನಪ್ಪ ಸತ್ತಾಗ ತೊಂದರೆಗಳು ಶುರುವಾದವು. ಅವನಿಗೆ ಟಿಬಿ ಕಾಯಿಲೆ ಬಂದು ಕೆಮ್ಮಿ ಕೆಮ್ಮಿ ರಕ್ತಕಾರಿ ತೀರಿಕೊಂಡ. ಅವನು ತೀರಿಕೊಂಡಿದ್ದೇ ನನ್ನ ಚಿಕ್ಕಪ್ಪ ಇದ್ದ ಸ್ವಲ್ಪ ಗದ್ದೆಯನ್ನು ಕಬಳಿಸಿದ್ದರಿಂದ ಅನಾಥರಾಗಿಬಿಟ್ಟೆವು. ಹೀಗೆ ಸೋದರಮಾವನ ಆಶ್ರಯಕ್ಕೆ ಬಂದೆವು. ಒಂದು ವರ್ಷದಲ್ಲಿ ಅಮ್ಮ ಮತ್ತೊಂದು ಮದುವೆಯಾದಳು. ನನ್ನ ಮಲತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದರೆ ನಾನು ಹಾಗೂ ಅಣ್ಣಂದಿರೆಂದರೆ ಅವನಿಗೆ ಸಿಟ್ಟು. ಅದರಲ್ಲೂ ಕುರೂಪಿಯಾದ ನನ್ನಂಥವಳಿಗೆ ಅನ್ನ ಹಾಕಲು ತಾನೇಕೆ ದುಡಿಯಬೇಕೆಂಬುದು ಅವನ ತಕರಾರು. ಆದರೆ ಅಮ್ಮ ನನಗೆ ಯಾವಾಗಲೂ ಅರೆ ಹೊಟ್ಟೆಯಾಗಲು ಬಿಟ್ಟವಳಲ್ಲ.

ನನಗಾಗ ಹದಿಮೂರು ವರ್ಷ. ನನ್ನ ಆಪ್ತ ಗೆಳತಿ ಮುಸಲ್ಮಾನ ಹುಡುಗನನ್ನು ಪ್ರೀತಿಸಿ ಮದುವೆಯಾಗಲು ಸಾಧ್ಯವಾಗದೇ ಇದ್ದದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಳು. ಆಗ ನಮ್ಮೂರಲ್ಲಿ ವಾತಾವರಣ ಕಾವೇರತೊಡಗಿತು. ಹಿಂದೂಗಳು ಮುಸಲ್ಮಾನರನ್ನು ದ್ವೇಷಿಸತೊಡಗಿದರು. ಅದೇ ವೇಳೆಗೆ ಪೂರ್ವ ಪಾಕಿಸ್ತಾನ (ಬಂಗಾಳ) ದಲ್ಲಿ ಹಿಂದೂಗಳನ್ನು ಮುಸ್ಲಿಮರು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದ ಬಗ್ಗೆ ವರದಿಗಳು ಬರುತ್ತಿದ್ದವು. ನಮಗೂ, ಬಾಂಗ್ಲಾದಲ್ಲಿ ನಡೆಯುವುದಕ್ಕೂ ಸಂಬಂಧವೇ ಇಲ್ಲದಿದ್ದರೂ ಮುಸಲ್ಮಾನರಾಗಿದ್ದಕ್ಕೆ ನಾವು ಶಿಕ್ಷೆ ಅನುಭವಿಸಬೇಕು ಎಂದು ಹಿಂದೂಗಳು ಹೇಳುತ್ತಿದ್ದರು. ‘ಮುಸ್ಲಿಮರನ್ನು ತರಿದು ರಾಶಿ ಹಾಕಿ, ಸೇತುವೆ ಕಟ್ಟಿ ರುಪ್ಶಾ ನದಿಯನ್ನು ದಾಟುತ್ತೇವೆ. ಅವರ ರಕ್ತದಲ್ಲಿ ಮೀಯುತ್ತೇವೆ’ ಎಂದು ಹಾಡು ಕಟ್ಟಿ ಹೇಳುತ್ತಿದ್ದರು.

ಹೀಗೇ ಪರಿಸ್ಥಿತಿ ಗಂಭೀರವಾಗುತ್ತಾ ಹೋಯಿತು. ಒಂದು ದಿನ ಮಸೀದಿಯಲ್ಲಿ ನಮಾಜು ನಡೆಯುತ್ತಿರುವಾಗ ಗೂಂಡಾಗಳು ಮಸೀದಿಯನ್ನು ಸುತ್ತುವರಿದರು, ‘ಮುಂಜಿ ಮಾಡಿಕೊಂಡ ಹೇಡಿಗಳೇ, ಹೊರಬನ್ನಿ’ ಎಂದು ಅಬ್ಬರಿಸತೊಡಗಿದರು. ಹೊರಬಂದ ಬಹುಪಾಲು ನಿಶ್ಶಸ್ತ್ರ ಗಂಡಸರನ್ನು ಕೊಂದರು. ನಾನು ಹೀಗೆ ನನ್ನ ಮಲತಂದೆ, ಚಿಕ್ಕಪ್ಪ, ಬಂಧುಗಳ ಹುಡುಗರನ್ನೆಲ್ಲ ಕಳೆದುಕೊಂಡೆ. ನನ್ನ ಸೋದರಮಾವನೊಬ್ಬ ಅಂದು ಮಸೀದಿಗೆ ಹೋಗದೇ ಉಳಿದುಕೊಂಡಿದ್ದ. ನಂತರ ನಾವೆಲ್ಲ ಹಗಲಲ್ಲಿ ಬಾಳೆಲೆ ಮುಚ್ಚಿದ ಗುಂಡಿಯೊಳಗೆ ಅವಿತು ಕುಳಿತು ಕಾಲ ತಳ್ಳತೊಡಗಿದೆವು.

ಹೀಗೇ ದಿನ ಕಳೆಯುತ್ತಿದ್ದವು. ಸನ್ನಿವೇಶ ತಿಳಿಯಾಗುವವರೆಗೆ ನಾವು ಆ ಊರನ್ನು ಬಿಟ್ಟುಬಿಡುವುದೆಂದೂ, ಗಡಿಯಾಚೆ ಬಾಂಗ್ಲಾದಲ್ಲಿದ್ದ ನಮ್ಮ ನೆಂಟರ ಮನೆಗೆ ಹೋಗುವುದೆಂದೂ ತೀರ್ಮಾನಿಸಿದೆವು. ಅಂತೂ ದಿನಗಟ್ಟಲೇ ಅಡವಿಯಲ್ಲಿ ನಡೆದು, ಒಂದು ದಿನ ಆ ಗಡಿ ತಲುಪಿದೆವು. ಗಡಿಕಾವಲು ಅಧಿಕಾರಿಗಳಿಗೆ ಚಿಕ್ಕಪ್ಪ ಲಂಚ ಕೊಟ್ಟಿದ್ದ. ಕಾವಲಿನವನ ಮನೆಯಲ್ಲೇ ಒಂದು ದಿನ ಉಳಿದೆವು. ಮರುಬೆಳಿಗ್ಗೆ ಅವನು ನಮ್ಮನ್ನು ಹೊಳೆ ದಾಟಿಸಿ ಆಚೆ ಕಳಿಸಿ, ಬಲಕ್ಕೆ ತಿರುಗಿ ಹೋಗಬೇಕೆಂದೂ, ಗುಂಡು ತಗುಲುವ ಸಾಧ್ಯತೆಗಳಿದ್ದು ಎಲ್ಲೂ ನಿಲ್ಲದೇ ಸುಮ್ಮನೇ ಓಡುತ್ತ ಹೋಗಬೇಕೆಂದೂ ತಿಳಿಸಿದ.



ಅಂತೂ ಎರಡು ದಿನ ಓಡಿ, ನಡೆದು, ನಮ್ಮ ನೆಂಟರ ಊರು ತಲುಪಿದೆವು. ನಮ್ಮನ್ನವರು ಆದರದಿಂದಲೇ ಕಂಡರು. ನಮಗಾಗಿ ಹೊಳೆದಂಡೆಯಲ್ಲಿ ಗುಡಿಸಲು ಹಾಕಿಕೊಟ್ಟರು. ಹೀಗೇ ಒಂದು ವರ್ಷ ಕಳೆಯಿತು. ನಮ್ಮ ಭಯ ಹೊಳೆಯ ಪ್ರವಾಹದ್ದಾಗಿತ್ತೇ ಹೊರತು ಜನರದ್ದಾಗಿರಲಿಲ್ಲ. ಅಲ್ಲೂ ನಮ್ಮೂರಿನ ಹಾಗೆಯೇ ಹಣ್ಣು ಹಂಪಲು, ನೀರು ಯಾವುದಕ್ಕೂ ಕೊರತೆಯಿರಲಿಲ್ಲ. ಮೊದಲ ಬಾರಿ ನಾನು ಶಾಲೆಗೂ ಸೇರಿದ್ದೆ.

ಆಗ ಬಂತು ೧೯೭೧. ನಿಜಕ್ಕೂ ಕೆಟ್ಟ ವರ್ಷ. ಬಾಂಗ್ಲಾದೇಶೀಯರು ಪಾಕಿಸ್ತಾನದೊಂದಿಗೆ ಯುದ್ಧ ಶುರುಮಾಡಿದರು. ಈ ಯುದ್ಧದಲ್ಲಿ ಬಿಹಾರಿಗಳು ಪಾಕಿಸ್ತಾನಿಗಳ ಜೊತೆ ಸೇರಿದ್ದರು. ಇದು ನಮಗ್ಯಾರಿಗೂ ಸಂಬಂಧಿಸಿರಲಿಲ್ಲ. ಆದರೆ ಬಂಗಾಳಿಗಳು ಬಿಹಾರಿಗಳ ಮೇಲೆ ರೊಚ್ಚಿಗೆದ್ದರು. ದ್ರೋಹಿಗಳೆಂದು ಕರೆದು, ಅಪಹರಿಸಿ, ತಲೆ ಕಡಿದು ಬಿಸಾಡುತ್ತಿದ್ದರು. ಹೆದರಿ ಅಡಗಿಕೊಂಡ ನಮ್ಮ ಕಡೆಯ ಎಷ್ಟೋ ಜನ ಹಸಿವಿನಿಂದ ಸತ್ತರು. ನದಿಯಲ್ಲಿ ಹೆಣಗಳು ತೇಲತೊಡಗಿ ಮೀನು ತಿನ್ನುವುದನ್ನೂ ಬಿಟ್ಟೆವು. ಹುಟ್ಟಿದೂರು ಸೋನೆಪುರದಲ್ಲಿ ಹಿಂದೂಗಳು ಮುಸ್ಲಿಮರನ್ನು ಕೊಂದರು ನಿಜ. ಇಂದು ಮುಸ್ಲಿಮರೇ ಮುಸ್ಲಿಮರನ್ನೇಕೆ ಕೊಲ್ಲುತ್ತಿದ್ದಾರೆಂದು ನನಗೆ ಅರ್ಥವಾಗಲಿಲ್ಲ. ಜಗತ್ತೇ ರಕ್ತಮಯವಾಗಿದ್ದಂತೆ ಎನಿಸಿಬಿಟ್ಟಿತು.

ಹೀಗೇ ಪರಿಸ್ಥಿತಿ ಬಿಗಡಾಯಿಸುತ್ತ ಹೋದಾಗ ಪಾಕಿಸ್ತಾನ ಸರ್ಕಾರವು ಬಂಗಾಳದ ಬಿಹಾರಿಗಳು ಬರಲೊಪ್ಪಿದರೆ ಅವರಿಗೆ ಪಾಕಿಸ್ತಾನದ ದಕ್ಷಿಣ ಪಂಜಾಬ್‌ನಲ್ಲಿ ಭೂಮಿ ಕೊಡುವುದಾಗಿ ಹೇಳಿತು. ಯಾವ ಪಂಜಾಬ್? ಎಲ್ಲಿದೆ? ಏನೂ ಗೊತ್ತಿರದಿದ್ದರೂ ಪಂಜಾಬ್ ತುಂಬ ಸಮೃದ್ಧ ಎಂದಷ್ಟೇ ಕೇಳಿ ತಿಳಿದಿದ್ದೆವು. ಅಲ್ಲದೇ ನಾವಿದ್ದ ಬಂಗಾಳವು ಯುದ್ಧ, ಪ್ರವಾಹಗಳಿಂದ ತುಂಬ ಬಡ ನೆಲವಾಗಿತ್ತು. ಹೀಗಾಗಿ ತುಂಬ ಉತ್ಸುಕರಾಗಿ ಪಂಜಾಬಿಗೆ ಹೊರಟೆವು.

ಈಗ ನಮ್ಮ ಕುಟುಂಬ ಒಡೆಯಿತು. ತನಗೆ ವಯಸ್ಸಾದುದರಿಂದ ಪ್ರಯಾಣ ಸಾಧ್ಯವಿಲ್ಲವೆಂದು ಅಮ್ಮ ನಮ್ಮ ಜೊತೆ ಬರಲು ನಿರಾಕರಿಸಿದಳು. ನಾನೂ ನನ್ನ ತಮ್ಮನೂ ಪಾಕಿಸ್ತಾನಕ್ಕೆ ಹೊರಟೆವು. ಖುಲ್ನಾ ಕ್ಯಾಂಪ್ ಬಳಿಯ ಬಿಹಾರಿ ಸ್ವಯಂಸೇವಕರು ನಮ್ಮ ಪ್ರಯಾಣಕ್ಕೆ ಅನುವು ಮಾಡಿಕೊಟ್ಟರು. ಅವಶ್ಯವಿರುವ ದಾಖಲೆಗಳೊಂದಿಗೆ ಟ್ರಕ್ಕುಗಳಲ್ಲಿ ಮೊದಲು ಕಲಕತ್ತಾ, ನಂತರ ದೆಹಲಿ, ನಂತರ ಲಾಹೋರ್ ತಲುಪಿದೆವು. ಕೊನೆಗೆ ಮುಲ್ತಾನಿನ ಗಿರಣಿಗಳನ್ನು ಮುಟ್ಟಿದೆವು. ಭೂಮಿ ಸಿಗದಿದ್ದರೂ ಒಂದು ಸಣ್ಣ ಕೋಣೆ ಹಾಗೂ ಕೆಲಸ ದೊರೆಯಿತು.

ಅಲ್ಲಿ ಎಲ್ಲವೂ ಅಪರಿಚಿತ. ನಮಗೆ ಪಂಜಾಬಿ ಬರುತ್ತಿರಲಿಲ್ಲ. ಹತ್ತಿ ಗಿರಣಿಯ ಕೆಲಸ ಗೊತ್ತಿರಲಿಲ್ಲ. ಅನ್ನ ಮೀನು ತಿನ್ನುತ್ತಿದ್ದವರಿಗೆ ರೊಟ್ಟಿ ಮಾಂಸ ತಿಂದು ಗೊತ್ತಿರಲಿಲ್ಲ. ಆದರೆ ಅಲ್ಲಿ ರಕ್ಷಣೆಯಿತ್ತು. ನೆಲೆಯಿತ್ತು. ದಿನಕ್ಕೆ ಎಂಟು ಗಂಟೆ ದುಡಿದರೆ ೧೫ ರೂ. ಸಿಗುತ್ತಿತ್ತು. ಶಿಫ್ಟ್ ಕೆಲಸವಿಲ್ಲದಾಗ ಮುಲ್ತಾನಿನ ದರ್ಗಾಗಳಿಗೆ, ಫಕೀರರ ಬಳಿ ಹೋಗತೊಡಗಿದೆ. ಆಗಲೇ ನನಗೆ ಅಲೆಯುವ ಸೂಫಿಯಾಗಬೇಕೆಂಬ ಹಂಬಲ ಹುಟ್ಟಿದ್ದು.

ಈ ರೀತಿ ೧೦ ವರ್ಷ ಕಳೆಯಿತು. ಗಿರಣಿಯ ಕೆಲಸ ಮತ್ತು ಜೀವನಕ್ಕೆ ಹೊಂದಿಕೊಂಡುಬಿಟ್ಟಿದ್ದೆ. ಆಗಲೇ ಫ್ಯಾಕ್ಟರಿಯ ಅಪಘಾತದಲ್ಲಿ ನನ್ನ ತಮ್ಮ ತೀರಿಕೊಂಡ. ಅವನ ಹೆಂಡತಿ ನನ್ನ ಜೊತೆ ತುಂಬ ಕೆಟ್ಟದಾಗಿ ವರ್ತಿಸಿದಳು. ಅವನ ಹಣವನ್ನೆಲ್ಲ ನಾನೇ ಹಾಳು ಮಾಡಿದೆನೆಂದೂ, ನನ್ನ ದುರಾದೃಷ್ಟದಿಂದಲೇ ಅವನು ಸತ್ತಿದ್ದೆಂದೂ, ನಾನು ಮೂರ್ಖಳೂ, ಶಾಪಗ್ರಸ್ತಳೂ ಎಂದೂ, ಬಾಯಿಗೆ ಬಂದಂತೆ ಬೈದಳು. ನನ್ನ ಜೊತೆ ವಾಸಿಸುವ ಇಚ್ಛೆಯಿಲ್ಲವೆಂದು ಕೂಗಾಡಿದಳು. ಇಷ್ಟು ಕೇಳಿದ ಮೇಲೆ, ಮತ್ತಿನ್ನೇನು ಎಂದು ೪೦ನೆಯ ದಿನದ ಸೂತಕ ಕಳೆದಿದ್ದೇ ನಾನು ಮನೆ ಬಿಟ್ಟೆ.

ಅದಕ್ಕೆ ಮೊದಲು ಮುಲ್ತಾನಿನ ಶೇಕ್ ಬಹಾವುದ್ದೀನ್ ಝಕಾರಿಯಾ ದರ್ಗಾಕ್ಕೆ ಹೋಗಿದ್ದೆ. ಆ ರಾತ್ರಿ ಒಂದು ಕನಸಾಯಿತು. ಉದ್ದನೆಯ ಗಡ್ಡದ ವೃದ್ಧನೊಬ್ಬ ನನ್ನ ಹತ್ತಿರ ಬಂದು, ‘ನೀನೀಗ ಒಂಟಿಯಲ್ಲವೆ? ಹೆದರಬೇಡ, ನಾನು ನಿನ್ನನ್ನು ರಕ್ಷಿಸುವೆ. ಒಂದು ರೈಲು ಹತ್ತು. ಅದು ನಿನ್ನನ್ನು ನನ್ನ ಬಳಿ ತರುತ್ತದೆ. ಟಿಕೆಟ್ ಕೂಡಾ ಬೇಕಿಲ್ಲ. ಎಲ್ಲ ನಾನೇ ವ್ಯವಸ್ಥೆ ಮಾಡುತ್ತೇನೆ’ ಎಂದಂತಾಯಿತು.

ಕನಸಿನಲ್ಲಿ ಹೇಳಿದಂತೇ ನಡೆದುಕೊಂಡೆ. ಟಿಕೆಟ್ ಇಲ್ಲದೇ, ಕೈಯಲ್ಲಿ ಕಾಸಿಲ್ಲದೇ, ಪ್ರಯಾಣಿಸಿದರೂ ಊಟತಿಂಡಿಗೇನೂ ತೊಂದರೆಯಾಗಲಿಲ್ಲ. ಉರುಸ್ ನಡೆಯುವ ಸಮಯಕ್ಕೆ ಷೆಹ್ವಾನ್ ಷರೀಫ್ ತಲುಪಿದೆ. ‘ದಮ್ ದಮ್ ಮಸ್ತ್ ಖಲಂದರ್’ ಎಂದು ಹಾಡುತ್ತಾ ಸಾವಿರಾರು ಜನ ಪ್ರಯಾಣಿಸುತ್ತಿದ್ದರು. ಫಕೀರರೊಬ್ಬರು ಇದು ನಿನ್ನ ರಕ್ಷೆಗೆ ಎಂದು ಪದಕವೊಂದನ್ನು ಕೊಟ್ಟರು. ಅದರಲ್ಲಿದ್ದ ಚಿತ್ರವು ನನಗೆ ಕನಸಿನಲ್ಲಿ ಕಂಡ ವೃದ್ಧರದೇ ಆಗಿತ್ತು. ಅವರೇ ಲಾಲ್ ಷಹಬಾಜ್ ಖಲಂದರ್. ಹೀಗೆ ಷೆಹ್ವಾನ್ ಷೆರೀಫ್ ತಲುಪಿದ ನಾನು ವರ್ಷಕ್ಕೊಮ್ಮೆ ಬಿಟ್‌ಷಾದಲ್ಲಿ ಶಾಹ್ ಅಬ್ದುಲ್ ಲತೀಫ್ ಉರುಸಿಗೆ ಹೋಗುವುದು ಬಿಟ್ಟರೆ ಮತ್ತೆಲ್ಲೂ ಹೋಗದೇ ಇಲ್ಲೇ ಕಾಲ ಕಳೆಯುತ್ತಿದ್ದೇನೆ. ನನಗೀಗ ಲಾಲ್ ಖಲಂದರ್ ಬಾಬಾನೇ ಎಲ್ಲವೂ, ಎಲ್ಲರೂ..’


(ಶೆಹ್ವಾನ್ ಶರೀಫ್ - ಲಾಲ್ ಶಾಬಾಜ್ ಉರುಸ್)

(ಧಮಾಲ್ ನರ್ತನ)

ಡ್ಯಾಲ್‌ರಿಂಪಲ್ ಗಮನಿಸಿರುವಂತೆ, ಪಾಕಿಸ್ತಾನದ ಸಿಂಧ್ ಪ್ರಾಂತ್ಯವು ತುಂಬ ಹಿಂದುಳಿದ ಮರುಭೂಮಿ ಪ್ರದೇಶ. ಜಮೀನ್ದಾರೀ ಪಳೆಯುಳಿಕೆಯ ಭೂಮಾಲೀಕರ ಕೈಕೆಳಗೆ ಸಾವಿರಾರು ಜನ ಜೀತಕ್ಕಿರುವ, ಬಾಂಡೆಡ್ ಲೇಬರ್‌ಗಳಿರುವ ಸ್ಥಳ. ಈ ಪ್ರದೇಶದ ಭೌಗೋಳಿಕ, ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳು ಸರ್ಕಾರಕ್ಕೆ ಒಂದು ಸವಾಲಾಗಿದ್ದರೆ, ಅವು ಸೃಷ್ಟಿಸಿರುವ ಹಾಗೂ ಮುಖ್ಯವಾಹಿನಿಯ ಸಮಾಜ ಮತ್ತು ಧರ್ಮದಿಂದ ಹೊರದೂಡಲ್ಪಟ್ಟ ಢಕಾಯಿತರು - ಧಾರ್ಮಿಕ ಪಂಥ ಪಂಗಡಗಳಿಗೆ ಇದು ಸುರಕ್ಷಿತ ಸ್ವರ್ಗವೂ ಆಗಿದೆ. ಈ ಎಲ್ಲ ಕಾರಣಗಳಿಂದ ಸಿಂಧ್ ಪ್ರಾಂತ್ಯವು ಹೇಗೆ ಹಿಂದೂ ಭಾರತ ಮತ್ತು ಮುಸ್ಲಿಂ ಮಧ್ಯಪ್ರಾಚ್ಯದ ನಡುವೆ ಭೌಗೋಳಿಕವಾಗಿ ಸೇತುವೆಯಾಗಿದೆಯೋ ಹಾಗೆಯೇ ಸಾಮಾಜಿಕವಾಗಿಯೂ ಹಿಂದೂ ಮುಸ್ಲಿಂ ಬಾಂಧವ್ಯ ಸಾರಿದ ಹಲವು ಸೂಫಿ ಸಂತರ ನಾಡಾಗಿದೆ. ಬರಡು ಮರುಭೂಮಿಯ ಧಗೆಯಲ್ಲಿ ದಕ್ಷಿಣ ಏಷಿಯಾದ ಎರಡು ಪ್ರಬಲ ಧರ್ಮಗಳ ನಡುವಿನ ತಿಕ್ಕಾಟಕ್ಕೆ ಕೊನೆಹಾಡುವ ಯತ್ನಗಳು ಜರುಗಿದ್ದು ಅಲ್ಲಿರುವ ಸೂಫಿ ದರ್ಗಾಗಳಿಂದ ತಿಳಿದುಬರುತ್ತದೆ.

‘ಶಿವ ಸ್ಥಾನ’ವಾಗಿದ್ದ, ಶೈವ ಕವಿ ಭರ್ತೃಹರಿಯ ಸ್ಥಳವಾಗಿದ್ದ ಜಾಗವು ಇಂದು ‘ಷೆಹ್ವಾನ್ ಷರೀಫ್’ ಆಗಿದೆ. ಲಾಲ್ ಶಾಹ್‌ಬಾಜ್ ಖಲಂದರ್ ಅವರ ದರ್ಗಾ ಇರುವ ಈ ಜಾಗಕ್ಕೆ ಹಿಂದೂ, ಮುಸ್ಲಿಂ ಭಕ್ತರಿಬ್ಬರೂ ನಡೆದುಕೊಳ್ಳುತ್ತಾರೆ. ಖಲಂದರ್ ಬಾಬಾನನ್ನು ‘ಜೂಲೆ ಲಾಲ್’ (ಸಿಂಧೂ ನದಿ ದೇವರು) ಎನ್ನುವ ಹೆಸರಿನಿಂದಲೂ ಕರೆಯುತ್ತಾರೆ. ಮೊನ್ನೆಮೊನ್ನಿನ ತನಕ ದರ್ಗಾದಲ್ಲಿ ಶಿವಲಿಂಗವೊಂದು ಇದ್ದು, ಈಗದು ಬೀಗ ಹಾಕಿಟ್ಟ ಕೋಣೆ ಸೇರಿದೆ. ಯಾವ್ಯಾವ ವೈದ್ಯರಿಂದಲೂ ಗುಣ ಕಾಣದ ಖಾಯಿಲೆಗಳು ಖಲಂದರ್ ಬಾಬಾನಿಂದ ಗುಣ ಕಂಡಿದೆ ಎನ್ನುತ್ತ ಭಕ್ತರು ಗಡಿ ದಾಟಿ ಷೆಹ್ವಾನ್ ಷರೀಫ್‌ಗೆ ಹೋಗುತ್ತಾರೆ. ನಾಗಾ ಸಾಧುಗಳು ಮತ್ತು ತಾಂತ್ರಿಕರ ರೀತಿಯಲ್ಲಿಯೇ ರುದ್ರಾಕ್ಷಿ ಧರಿಸಿ ತಪಸ್ಸು ಮಾಡಿದ, ತಲೆಕೆಳಗಾಗಿ ಧ್ಯಾನ ಮಾಡಿದ, ಸೂಳೆಗೇರಿಗೆ ಹೋಗಿ ಅವರ ಮನಸ್ಸನ್ನೂ ಪರಿವರ್ತನೆ ಮಾಡಿದ ಹಠಯೋಗಿ ಖಲಂದರ್ ಬಾಬಾ ಪ್ರೇಮರಾಹಿತ್ಯದ ಖಾಯಿಲೆಗೆ ಒಂದು ಮದ್ದಾಗಿ ಆ ಪ್ರದೇಶಕ್ಕೆ ದೊರೆತವರು.

ಸೂಫಿ




ಇರಾನಿನ ತಬ್ರೀಜ್‌ನವರಾದ ಷೇಕ್ ಉಸ್ಮಾನ್ ಮರ‍್ವಂಡಿ ಹೆಚ್ಚುಕಡಿಮೆ ಜಲಾಲುದ್ದೀನ್ ರೂಮಿ ಆಫ್ಘನಿಸ್ತಾನ ತೊರೆದು ಟರ್ಕಿ ಸೇರಿದ ಕಾಲದಲ್ಲೇ ಮಂಗೋಲರ ಆಕ್ರಮಣಕ್ಕೆ ತುತ್ತಾಗಿ ಇರಾನನ್ನು ತೊರೆದರು. ಅವರು ಮೊದಲಿನಿಂದ ಪವಿತ್ರ ಹುಚ್ಚನ ತರಹ ಲೋಕರೂಢಿಯನ್ನು ತೊರೆದು ತಿರುಗಿದವರು. ಸಮಾಜದ ತಿರಸ್ಕಾರ ಮತ್ತು ಅಪಹಾಸ್ಯ ನಮ್ಮ ವ್ಯಕ್ತಿತ್ವದ ಶುದ್ಧತೆಗೆ ಅಳತೆಗೋಲು ಎಂದು ತಿಳಿದು, ಷರಿಯತ್ ಹಾಗೂ ಸಮಾಜದ ಎಲ್ಲ ಕಟ್ಟಳೆಗಳನ್ನೂ ಧಿಕ್ಕರಿಸಿದವರು. ತನ್ನ ಅನುಯಾಯಿಗಳಿಗೆ ಹಾಡು ಮತ್ತು ನರ್ತನದಿಂದ ಎಲ್ಲವನ್ನು ಮರೆತು ಭಗವಂತನಲ್ಲಿ ಲೀನವಾಗುವಂತೆ ಕರೆಯಿತ್ತವರು. ಬೆಂಕಿ ಎದುರು ಕತ್ತಿಯೆದುರು ಪ್ರಾಣವನ್ನು ಪಣಕ್ಕಿಟ್ಟು ಆಧ್ಯಾತ್ಮ ಸವಿದ ಹಠಯೋಗದ ದಾರಿಯವರು. ತನ್ನನ್ನೇ ತಾನು ಶಿಕ್ಷಿಸಿಕೊಳ್ಳುತ್ತಾ ಆಧ್ಯಾತ್ಮಿಕ ಅನುಭೂತಿ ಪಡೆಯಲು ಹಾಡು ನರ್ತನಗಳ ಮೊರೆ ಹೊಕ್ಕವರು.

ಧರ್ಮದ ನಡುವಿನ ಸೇತುವೆಯಂತೆ, ಗಾಯಕ್ಕೆ ತಂಪು ನೀಡುವ ಮುಲಾಮಿನಂತೆ ಹುಟ್ಟಿದ ಸೂಫಿ ಇಂದು ಅಪಾಯದಲ್ಲಿದೆ. ಸೂಫಿಗಳ ತತ್ವವನ್ನು ಇಸ್ಲಾಮಿನ ಮೌಲ್ಯ ಪ್ರತಿಪಾದಕರು ಒಪ್ಪುವುದಿಲ್ಲ. ಗೋರಿಪೂಜೆ, ಹಾಡು, ನೃತ್ಯ, ಹೆಂಗಸರು ದರ್ಗಾಗಳಿಗೆ ಬರುವುದು ಇವೆಲ್ಲ ಇಸ್ಲಾಮಿಗೆ ವಿರುದ್ಧ ಎಂದೇ ಅವರು ಭಾವಿಸುತ್ತಾರೆ. ದೇವ್‌ಬಂದ್‌ನವರು, ತಬ್ಲೀಗಿನವರು ಹಾಗೂ ಆಧುನಿಕ ವಹಾಬಿಗಳು ಸೂಫಿಗೆ ವಿರುದ್ಧವಾಗಿದ್ದಾರೆ.

ಡ್ಯಾಲ್‌ರಿಂಪಲ್ ದಾಖಲಿಸುವಂತೆ, ಸ್ವಾತಂತ್ರದ ಸಮಯದಲ್ಲಿ ಇದ್ದುದಕ್ಕಿಂತ ೨೭ ಪಟ್ಟು ಹೆಚ್ಚು ಮದ್ರಸಾಗಳು ಇಂದು ಪಾಕಿಸ್ತಾನದಾದ್ಯಂತ ಇವೆ. ಎಂಟು ಸಾವಿರಕ್ಕಿಂತ ಹೆಚ್ಚು ಇರುವ ಮದ್ರಸಾಗಳಲ್ಲಿ ಬಹುಪಾಲು ದರ್ಗಾಗಳ ಬಳಿ ತಲೆಯೆತ್ತುತ್ತಿವೆ. ಅವು ದರ್ಗಾಗಳು ಇಸ್ಲಾಮಿ ಸಂಸ್ಕೃತಿಯವಲ್ಲ ಎಂದು ಅಲ್ಲಗಳೆಯುತ್ತವೆ. ಷೆಹ್ವಾನ್ ಷರೀಫ್ ಬಳಿ ದೇವಬಂದೀ ಮದ್ರಸಾವೊಂದು ತಲೆಯೆತ್ತಿದೆ. ಅದಕ್ಕೆ ಹೆಚ್ಚು ಮಕ್ಕಳು ದಾಖಲಾಗಿಲ್ಲದಿದ್ದರೂ ತಾಳ್ಮೆಯಿಂದ ಕಾಯಬೇಕೆಂದು ಮದ್ರಸಾದ ಗುರು ಸಲೀಮುಲ್ಲಾ ಹೇಳುತ್ತಾರೆ. ಬಡ ಮಕ್ಕಳಿಗೆ ಉಚಿತ ಊಟ ಬಟ್ಟೆ ಕೊಟ್ಟು ಮೊದಲು ಮದ್ರಸಾಗಳತ್ತ ಅವರನ್ನು ಸೆಳೆಯಬೇಕು. ನೈಜ ಇಸ್ಲಾಂ ಎಂದರೇನೆಂದು ಅವರಿಗೆ ತಿಳಿಸಿ ವಿದ್ಯಾಭ್ಯಾಸ ಮಾಡಿಸಬೇಕು. ಒಮ್ಮೆ ಮಕ್ಕಳಿಗೆ ಸೂಫಿ ಇಸ್ಲಾಮಿಕ್ ಅಲ್ಲ ಎಂದು ತಿಳಿದುಬಿಟ್ಟರೆ ಉಳಿದ ಬದಲಾವಣೆಯೆಲ್ಲ ತಂತಾನೇ ಆಗಿ ಸತ್ಯ ಮಾತ್ರ ವಿಜೃಂಭಿಸುತ್ತದೆ ಎಂಬುದು ಸಲೀಮುಲ್ಲಾರ ನಂಬಿಕೆ. ಅವರ ಮಾತುಗಳಲ್ಲಿ ಹೇಳುವುದಾದರೆ:

‘ಸಂಗೀತ ಮನಸ್ಸನ್ನು ಚಂಚಲಗೊಳಿಸುತ್ತದೆ. ಅದು ಪಾಪಕರ, ನಿಷಿದ್ಧ. ಹಾಗಾಗಿ ಸಂಗೀತಗಾರರು ತಪ್ಪಿತಸ್ಥರು. ಕುರಾನ್ ಸತ್ತ ವ್ಯಕ್ತಿಗೆ ಪೂಜೆ ಮಾಡಿರೆಂದು, ಪ್ರಾರ್ಥನೆ ಸಲ್ಲಿಸಿರೆಂದು ಎಲ್ಲೂ ಹೇಳುವುದಿಲ್ಲ. ನಿಜವಾದ ಮುಸ್ಲಿಮ ಗೋರಿಗೆ ಹೋಗದೆ ಮಸೀದಿಗೆ ಹೋಗಬೇಕು. ಸತ್ತವನನ್ನು ಬೇಡುವುದಲ್ಲ, ಬದಲಿಗೆ ನೇರವಾಗಿ ದೇವರ ಬಳಿಯೇ ಬೇಡಿಕೊಳ್ಳಬೇಕು. ಸೂಫಿ ಇಸ್ಲಾಂ ಅಲ್ಲ. ಅದೊಂದು ತೆರನ ಮಾಟ, ಜಾದೂ. ಅದು ಮೂಢನಂಬಿಕೆ, ವಿಕೃತಿ, ಅಜ್ಞಾನ, ಮೂರ್ಖತನ ಈ ಎಲ್ಲದರ ಮಿಶ್ರಣ. ನಿರಕ್ಷರಿ ಫಕೀರರು ದೊಡ್ಡ ವಿದ್ವಾಂಸರಂತೆ ಮಾತನಾಡುತ್ತಾರೆ, ಆದರೆ ಅವರಿಗೆ ಕುರಾನ್ ಓದಲೂ ಬರುವುದಿಲ್ಲ. ಇದು ಹಿಂದೂ ಧರ್ಮದ ಸೋಂಕಿನಿಂದ ಹುಟ್ಟಿದ್ದು. ನಿಧಾನವಾಗಿಯಾದರೂ ಇದನ್ನು ತೆಗೆದು ಇಸ್ಲಾಮನ್ನು ಶುದ್ಧಗೊಳಿಸಬೇಕು.

ಸೂಫಿಯು ಸ್ವರ್ಗ ನಿನ್ನೊಳಗೇ ಇದೆಯೆನ್ನುತ್ತದೆ. ನಮ್ಮೊಳಗೇ ಸ್ವರ್ಗವೆ? ಇದೊಂದು ಭ್ರಮೆ ಮತ್ತು ಕನಸಷ್ಟೆ. ಕುರಾನಿನಲ್ಲಿ ಈ ಬಗ್ಗೆ ಯಾವ ಪುರಾವೆಯೂ ಇಲ್ಲ. ಮನುಷ್ಯನ ಹೃದಯ ದೇವನಿಗಾಗಿ ಬಹಳ ಸಣ್ಣದು. ಇನ್ನು ಸ್ವರ್ಗದ ಮಾತೆಲ್ಲಿ ಬಂತು? ಸ್ವರ್ಗ ಮನುಷ್ಯನ ಹೊರಗಿದೆ. ಅದು ನಮಗಾಗಿ ದೇವರ ಸೃಷ್ಟಿ.

ನೈಜ ಇಸ್ಲಾಂ ಎಂದರೆ ಶಿಸ್ತು. ಅದು ಮನಸ್ಸಿಗೆ ಬಂದ ಹಾಗೆ ವರ್ತಿಸುವುದಲ್ಲ. ಹೇಗೆ ತಿನ್ನಬೇಕು, ತೊಳೆಯಬೇಕು, ಮೀಸೆ ಹುರಿ ಮಾಡಿಕೊಳ್ಳಬೇಕು ಎಂಬುದೆಲ್ಲರ ಬಗ್ಗೆಯೂ ನೀತಿನಿಯಮಗಳಿವೆ. ಪ್ರವಾದಿಯವರು ಹೇಳಿರುವ ಈ ಕಟ್ಟಳೆಗಳನ್ನೆಲ್ಲ ಅನುಸರಿಸದ ಸೂಫಿಗಳು ಬರಿಯ ಪ್ರೀತಿ ಪ್ರೇಮವೆಂದು ಬಡಬಡಿಸಿದರೆ ಅದು ಅಸಮಂಜಸ.

ನೆನಪಿಡಿ. ತೀವ್ರವಾದಿಯಾದ ತಾಲಿಬಾನ್ ಈಗ ಬರುತ್ತಿದೆ. ಜನರೂ ಈಗಿರುವ ವ್ಯವಸ್ಥೆಯ ಬಗ್ಗೆ ಬೇಸತ್ತಿದ್ದಾರೆ. ಇಂಥ ಸಮಯದಲ್ಲಿ ತಾಲಿಬಾನ್ ಬಂದರೆ ಮತ್ತೆ ಖಲೀಫರ ಆಡಳಿತ ಬರುತ್ತದೆ. ಆಗ ಈ ಎಲ್ಲ ದರ್ಗಾಗಳೂ ಧ್ವಂಸವಾಗುವುದನ್ನು ನೋಡುತ್ತ ನಿಲ್ಲಬೇಕಷ್ಟೇ.’

ತರುಣ ಶಿಕ್ಷಕ ಸಲೀಮುಲ್ಲಾ ಸೂಫಿಸಂ ಬಗೆಗೆ ಹೀಗೆ ಇಷ್ಟು ನಿಷ್ಠುರವಾಗಿ ಮಾತನಾಡುತ್ತ ಬರಲಿರುವ ಸುದಿನಗಳ ಬಗೆಗೆ ಸಂತಸಪಡುತ್ತ ಇರುವಾಗಲೇ, ಭವಿಷ್ಯದ ಮುನ್ಸೂಚನೆಯೋ ಎಂಬಂತೆ ಪಾಕಿಸ್ತಾನದ ವಾಯವ್ಯ ಪ್ರಾಂತ್ಯದ ರೆಹಮಾನ್ ಬಾಬಾ ಅವರ ದರ್ಗಾ ಇತ್ತೀಚೆಗೆ ಅರೇಬಿಕ್ ಮದ್ರಸಾದ ವಿದ್ಯಾರ್ಥಿಗಳಿಂದ ಧ್ವಂಸಗೊಳಿಸಲ್ಪಟ್ಟಿತು. ಯಾರಿಗೂ ಪ್ರಾಣಾಪಾಯವಾಗಲಿಲ್ಲ ಅಷ್ಟೆ. ಆದರೂ ತಲೆತಲೆಮಾರುಗಳಿಂದ ಆ ದರ್ಗಾದಲ್ಲಿ ಹಾಡು ಹೇಳಿಕೊಂಡು ಬಂದಿದ್ದ ಕುಟುಂಬ ಮತ್ತು ಸಂತನನ್ನು ನಂಬಿದ್ದ ಪಾಶ್ತೋ ಬುಡಕಟ್ಟು ಜನರು ಇದರಿಂದ ನೆಲೆ ಕಳೆದುಕೊಡ ಅತಂತ್ರ ಸ್ಥಿತಿ ತಲುಪಿ ನೆಮ್ಮದಿ ಕಳೆದುಕೊಂಡಿದ್ದಾರೆ.


(ಶಾ ಅಬ್ದುಲ್ ಲತೀಫ್)
ಆದರೆ ಲಾಲ್ ಪೇರಿ ಈ ಅಪಾಯದ ಬಗೆಗೆ ಹೆದರುವುದಿಲ್ಲ. ಸಿಂಧ್ ಪ್ರಾಂತ್ಯದ ಜನ ಖಲಂದರ್ ಬಾಬಾನ ಮೇಲಿನ ನಂಬಿಕೆ ಎಂದೂ ಕಳೆದುಕೊಳ್ಳುವುದಿಲ್ಲ ಎನ್ನುತ್ತಾಳೆ. ತನ್ನ ಇಂದಿನ ಕರ್ತವ್ಯವೆಂದರೆ ಖಲಂದರ್ ಬಾಬಾ ಹಾಗೂ ಶಾಹ್ ಅಬ್ದುಲ್ ಲತೀಫ್ ಅವರ ದರ್ಗಾ ರಕ್ಷಿಸುವುದೇ ಆಗಿದೆ ಎನ್ನುತ್ತಾಳೆ. ಅವಳ ಪ್ರಕಾರ: ‘ಈ ಮುಲ್ಲಾಗಳು, ವಹಾಬಿಗಳು, ತಬ್ಲೀಗಿಗಳು, ಕಾನೂನು ಪುಸ್ತಕ ತಿರುವುತ್ತ, ಯಾರ ಗಡ್ಡ ಎಷ್ಟು ಉದ್ದ ಬೆಳೆಸಬೇಕೆಂದು ಕುರಾನಿನಲ್ಲಿ ಹೇಳಿದೆ ಎಂದು ವಾದಿಸುತ್ತಾ ಪ್ರವಾದಿಯವರ ನಿಜವಾದ ಸಂದೇಶ ಮರೆತಿದ್ದಾರೆ. ಸೈತಾನ ಮತ್ತು ಮುಲ್ಲಾ ಇಬ್ಬರೂ ಒಂದೇ.’

ಷೆಹ್ವಾನ್ ಷರೀಫ್‌ಗೆ ಸನಿಹದಲ್ಲಿರುವ ಬಿಟ್‌ಷಾದಲ್ಲಿ ಮತ್ತೋರ್ವ ಸೂಫಿ ಗುರು ಶಾಹ್ ಅಬ್ದುಲ್ ಲತೀಫ್ ಅವರ ದರ್ಗಾ ಇದೆ. ಸಂತರ ಒಂದು ಹಾಡು ಲಾಲ್‌ಫೇರಿಯ ಮಾತುಗಳನ್ನೇ ಧ್ವನಿಸುತ್ತದೆ. ಅದು ಹೀಗಿದೆ:

  ‘ನಿನ್ನನ್ನು ಪಂಡಿತನೆಂದೇಕೆ
  ಕರೆದುಕೊಳ್ಳುವೆ ಓ ಮುಲ್ಲಾ?

  ಶಬ್ದಗಳ ಗೊಂಡಾರಣ್ಯದಲ್ಲಿ
  ಕಳೆದುಹೋಗಿರುವೆ.
  ಅಸಂಬದ್ಧ ಮಾತುಗಳನಾಡುತ್ತ
  ನಿನ್ನನ್ನೇ ಪೂಜಿಸಿಕೊಳ್ಳುತ್ತಿರುವೆ.
  ಕಣ್ತೆರೆದು ದೇವರನ್ನು ಅರಸುವ ಬದಲು
  ಧೂಳಿನ ರಾಶಿಗೆ ಹಾರಿ ಬೀಳುತ್ತಿರುವೆ.
  ನಾವು ಸೂಫಿಗಳು
  ಪವಿತ್ರ ಕುರಾನಿನ ಮಿದು ಮಾಂಸ ಪಡೆದಿದ್ದೇವೆ.
  ನೀವು ನಾಯಿಗಳು ಕಚ್ಚಾಡುತ್ತಿದ್ದೀರಿ
  ಪರಸ್ಪರ ಕಿತ್ತೆಳೆಯುತ್ತಿದ್ದೀರಿ
  ಒಣ ಎಲುಬು ಕಡಿಯುವ ಅವಕಾಶ ಸಿಗಲೆಂದು..’

ಪಾಕಿಸ್ತಾನದ ವಾಯವ್ಯ ಪ್ರಾಂತದ ಸೂಫಿ ಸಂತ, ಪಾಶ್ತೋ ಬುಡಕಟ್ಟಿನ ಕವಿ, ರೆಹಮಾನ್ ಬಾಬಾ ಹಿಂಸೆಯನ್ನು ವಿರೋಧಿಸುವ, ಸಹಿಷ್ಣುತೆಯ ಕುರುಹಾಗಿರುವ ಸೂಫಿಯ ಸಾರವನ್ನೇ ತಮ್ಮ ಒಂದು ಉಕ್ತಿಯಲ್ಲಿ ಹೇಳಿಬಿಡುತ್ತಾರೆ:

   ನಾನೊಬ್ಬ ಪ್ರೇಮಿ, ಪ್ರೇಮದ ವ್ಯಾಪಾರಿ.
   ಹೂವನ್ನು ಬಿತ್ತು: ನಿನ್ನ ಸುತ್ತ ಉದ್ಯಾನ ಮೈದಳೆಯುತ್ತದೆ.
   ಮುಳ್ಳನ್ನು ಬಿತ್ತದಿರು: ಅವು ನಿನ್ನ ಕಾಲನ್ನೇ ಚುಚ್ಚುತ್ತವೆ.
   ನಮದೆಲ್ಲ ಒಂದೇ ದೇಹ.
   ಅವನ ಹಿಂಸಿಸಿದರೆ ನಮ್ಮ ದೇಹದಲ್ಲಿ ಗಾಯ.

ಷೆಹ್ವಾನ್ ಷರೀಫ್ ಮತ್ತೊಬ್ಬ ಸೂಫಿ ಕವಿ, ಮುಘಲ್ ಯುವರಾಜ ದಾರಾ ಶುಕೋನ ಗುರು ಮಿಯಾ ಮೀರ್‌ನ ಊರೂ ಹೌದು. ಹದಿನೇಳನೇ ಶತಮಾನದ ದಾರಾ ಶುಕೋ ಹಿಂದೂ ಮುಸ್ಲಿಂ ಬಾಂಧವ್ಯಕ್ಕಾಗಿ ಇನ್ನಿಲ್ಲದಂತೆ ಶ್ರಮಿಸಿದ, ಸೋದರ ಔರಂಗಜೇಬನಿಂದ ಹತ್ಯೆಗೀಡಾದ ಸೂಕ್ಷ್ಮ ಮನದ ಕವಿ. ಆತ ಹೀಗೆ ಬರೆಯುತ್ತಾನೆ:

   ಓ ದೇವರೇ,
   ನೀನು ಮೆಕ್ಕಾದ ಕಾಬಾದಲ್ಲಿರುವೆ
   ಸೋಮನಾಥದ ಲಿಂಗದಲ್ಲೂ ಇರುವೆ
   ಮಠದಲ್ಲಿರುವೆ
   ಪಡಖಾನೆಯಲ್ಲೂ ಇರುವೆ.

   ನೀನು ಒಮ್ಮೆಲೇ
   ದೀಪ ಮತ್ತು ಪತಂಗ
   ಮದಿರೆ ಮತ್ತು ಬಟ್ಟಲು
   ಸಂತ ಮತ್ತು ಮೂರ್ಖ
   ಸ್ನೇಹಿತ ಮತ್ತು ಅಪರಿಚಿತ
   ಗುಲಾಬಿ ಮತ್ತು ಕೋಗಿಲೆ
   ಎಲ್ಲವೂ ಆಗಿರುವೆ.


(ದಾರಾ ಶಿಕೊ ಮತ್ತು ಮಿಯಾ ಮಿರ್)

ಸೂಫಿ ತತ್ವದ ಅನುಯಾಯಿ, ಲಾಲ್ ಪೇರಿಯ ಗುರು ಮತ್ತು ಸ್ನೇಹಿತ ಎಲ್ಲವೂ ಆಗಿರುವ ಸೈನ್ ಫಕೀರ್ ಸೂಫಿಯೆಂದೊಡನೆ ಉತ್ಸಾಹದಿಂದ ಮಾತನಾಡುತ್ತಾರೆ. ಅವರ ಪ್ರಕಾರ,

‘ಸೂಫಿ ವಚನಗಳು, ಕಾವ್ಯಗಳು ಕುರಾನಿನ ಎಲ್ಲ ಮೌಲ್ಯವನ್ನೊಳಗೊಂಡಿವೆ. ಕುರಾನನ್ನು ಅರ್ಥೈಸುವುದು ಸುಲಭವಲ್ಲ. ಹಾಗಾಗಿ ಸಾಧಾರಣ ಮನುಷ್ಯರು ಪ್ರವಾದಿಯ ನಿಜ ಸಂದೇಶ ತಿಳಿದೇ ಇಲ್ಲ. ಸೂಫಿಗಳು ಮಾತ್ರ ಸತ್ಯದ ದಾರಿ ತಿಳಿದಿದ್ದಾರೆ, ಅದೇ ಪ್ರೇಮದ ದಾರಿ.

ಮುಲ್ಲಾಗಳು ವೈಯುಕ್ತಿಕ ಕಾರಣಗಳಿಗಾಗಿ ಪ್ರವಾದಿಯ ಮಾತುಗಳನ್ನು ತಿರುಚುತ್ತಾರೆ. ಅವರಂಥ ಕುರುಡರಿಗೆ ಬೆಳಗುವ ಸೂರ್ಯನೂ ಕಾಣಿಸುವುದಿಲ್ಲ. ಅದೊಂದು ಕ್ರೂರ ಜಾತಿ. ಅವರಿಗೆ ಮಾನವ ದೌರ್ಬಲ್ಯಗಳು ಅರ್ಥವಾಗುವುದಿಲ್ಲ. ಈ ಪ್ರಪಂಚದಲ್ಲಿ ಎಲ್ಲರೂ ಪಾಪ ಮಾಡುತ್ತಾರೆ. ಮಾನವ ದೌರ್ಬಲ್ಯವೆಂದರೇನೆಂದು ತಿಳಿದ ಸೂಫಿಗಳು ಅದಕ್ಕೆ ಕ್ಷಮೆ ನೀಡುತ್ತಾರೆ. ಜನ ಕ್ಷಮಿಸುವವರನ್ನು ಮೆಚ್ಚುತ್ತಾರೆ. ಜಿಯಾ ಲತೀಫ್. ಲತೀಫ್ ಬಾಬಾ ಹೇಳುವ ಹಾಗೆ,

   ಒಳ್ಳೆಯ ವಸ್ತು ವಿಷಯಗಳೊಂದಿಗೆ ಮಾತ್ರ ವ್ಯವಹರಿಸು.
   ಕಲ್ಲಿದ್ದಲು ಖರೀದಿಸಿದರೆ ಮೈಯೆಲ್ಲ ಕರಿಧೂಳು
   ಪುನುಗಿನ ವ್ಯವಹಾರದಲ್ಲಿ ಪರಿಮಳ ಎಲ್ಲವೂ.

ವಹಾಬಿಗಳು ಲಾಭಕ್ಕಾಗಿ ನಂಬಿಕೆಯನ್ನು ಮಾರುವ ವ್ಯಾಪಾರಿಗಳು. ನರಕದ ಬೆಂಕಿ ಹರಡುವ ಅವರು ನಿಜವಾದ ಮುಸ್ಲಿಮರಲ್ಲ. ಆದರೆ ಸೂಫಿ ಎಲ್ಲರನ್ನೂ ಪ್ರೀತಿಸುತ್ತದೆ - ಧರ್ಮಭ್ರಷ್ಟ, ಜಾರಿದ ಹೆಣ್ಣು, ಬಡವ, ಸಿರಿವಂತ, ಮುಸ್ಲಿಂ, ಮುಸ್ಲಿಂ ಅಲ್ಲದವ ಎಲ್ಲರನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ.

ಮುಲ್ಲಾಗಳು ಜಿಹಾದ್‌ಗೆ ಕತ್ತಿ ಬಳಸುತ್ತಾರೆ. ಆದರೆ ನಿಜವಾದ ಜಿಹಾದ್ ನಡೆಯಬೇಕಾದದ್ದು ನಮ್ಮೊಳಗೆ. ನಮ್ಮ ಆಸೆಗಳ ಮೇಲೆ ಜಯ ಸಾಧಿಸಲು ಹೋರಾಡಬೇಕು. ದುಷ್ಟತನ ನಮ್ಮ ಹೃದಯದೊಳಗೆ ಸೃಷ್ಟಿಸುವ ನರಕದ ವಿರುದ್ಧ ಹೋರಾಡಬೇಕು. ಕತ್ತಿಯಿಂದ ಮಾಡುವ ಜಿಹಾದ್ ಕೀಳು ಮಟ್ಟದ್ದು. ನಿನ್ನೊಳಗೆ ನೀನೇ ಹೋರಾಡುವುದು ನಿಜವಾದ ಜಿಹಾದ್. ಲತೀಫ್ ಬಾಬಾ ಹೇಳಿದಂತೆ ಕಾಫಿರರನ್ನು ಕೊಲ್ಲಬೇಡ. ಮೊದಲು ನಿನ್ನ ಅಹಮನ್ನು ಕೊಲ್ಲು.

  ಒಂದು ನೆನಪಿಡು: ಎಲ್ಲವೂ ನಿನ್ನೊಳಗೇ ಇದೆ - ಸ್ವರ್ಗ ಮತ್ತು ನರಕ.’

***

ಹೀಗೆ ಭವಿಷ್ಯದ ಬಗೆಗೆ ಆಶಾವಾದಿಯಾದ ಫಕೀರ್ ಅಜ್ಜ ಮುಂದುವರೆದು, ‘ಒಳ್ಳೆಯ ಕೆಲಸವು ಒಳ್ಳೆಯ ಪ್ರತಿಫಲ ನೀಡುತ್ತದೆ. ಕೆಟ್ಟ ಕೆಲಸವು ಕೆಟ್ಟ ಫಲ ನೀಡುತ್ತದೆ. ಈ ವಹಾಬಿ ಜನ ಈಗ ತಮ್ಮನ್ನೇ ತಾವು ಕೊಂದುಕೊಳ್ಳುತ್ತಿದ್ದಾರೆ. ಇಸ್ಲಾಮಾಬಾದ್‌ನಲ್ಲಿ, ಸ್ವಾತ್‌ನಲ್ಲಿ, ಆಫ್ಘನಿಸ್ತಾನದಲ್ಲಿ, ಇರಾಕಿನಲ್ಲಿ ಈಗ ಇದೇ ಆಗುತ್ತಿದೆ. ಅವರ ಅಂತ್ಯದ ಶುರು ಇದು.’

ಸೈನ್ ಫಕೀರಜ್ಜನ ಭರವಸೆಯಂತೆ ‘ಅವರೇ’ ಅಂತ್ಯ ಕಾಣುತ್ತಾರೋ? ಲಾಲ್ ಫೇರಿಯ ಭಯವೇ ನಿಜವಾಗುವುದೋ? ಧಾರ್ಮಿಕ ಶುದ್ಧತೆಯ ಬಗೆಗೆ ಉಗ್ರ ನಿಲುವು ಹೊಂದಿದ ಸಂಪ್ರದಾಯವಾದಿಗಳ ಕೈ ಮೇಲಾಗುವುದೋ? ಸಹಿಷ್ಣುತೆಯ ಕುರುಹಾದ ಸೂಫಿ ವಿಜೃಂಭಿಸುವುದೋ?

ಉತ್ತರ ಕಾಲನ ಕೈಯಲ್ಲಿ..

                     


Tuesday 14 February 2017

Freedom Without Fear - ಭಯವಿರದ ಸ್ವಾತಂತ್ರ್ಯ - ಕವಿತಾ ಕೃಷ್ಣನ್


Displaying 3.jpg


(ಈ ಭೂಮಿಯ ಮೇಲೆ ಪ್ರತಿದಿನವೂ ಹುಟ್ಟುವ ಸೂರ್ಯನಷ್ಟೇ ನಿಶ್ಚಿತವಾದದ್ದು ಮಹಿಳಾ ದೌರ್ಜನ್ಯ. ಲಿಂಗತಾರತಮ್ಯ ತಲೆತಲಾಂತರಗಳಿಂದ ಅವ್ಯಾಹತವಾಗಿ ನಡೆಯುತ್ತ ಬಂದರೂ ದನಿಯಿಲ್ಲದವಳಾಗಿದ್ದ ಹೆಣ್ಣು ಇತ್ತೀಚೆಗೆ ತನ್ನ ಮೇಲಾಗುವ ಅನ್ಯಾಯವನ್ನು, ಅದರ ಕಾರಣಗಳನ್ನು ಗುರುತಿಸುವ, ದನಿಯೆತ್ತಿ ಪ್ರತಿಭಟಿಸುವ ದಾರಿಯಲ್ಲಿ ಮೊದಲ ಹೆಜ್ಜೆಗಳನ್ನಿಡುತ್ತಿದ್ದಾಳೆ. ಸಾಮಾಜಿಕ ನ್ಯಾಯದ ಚಳುವಳಿಗಳಲ್ಲಿ ಲಿಂಗಪ್ರಶ್ನೆಯೂ ಮುನ್ನೆಲೆಗೆ ಬಂದು ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.

ಕರ್ನಾಟಕದಲ್ಲೂ ಅನೇಕ ಸಂಘ-ಸಂಘಟನೆ-ಚಳುವಳಿಗಳು ಮಹಿಳಾ ಸಮಸ್ಯೆಗಳನ್ನೆತ್ತಿಕೊಂಡು ದಶಕಗಳಿಂದ ಸಕ್ರಿಯವಾಗಿವೆ. ಕರ್ನಾಟಕದ ಅಂತಹ ಮಹಿಳಾಪರ ವ್ಯಕ್ತಿ-ಸಂಘ-ಸಂಘಟನೆಗಳ ಜಾಲವೇ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ. ಸಮತೆ-ಸೋದರಿತ್ವದ ಆಶಯ ಹೊತ್ತು ಅದು ಕಳೆದ ೫ ವರ್ಷಗಳಿಂದ ಪ್ರತಿ ವರ್ಷ ಕರ್ನಾಟಕದ ಒಂದೊಂದು ಜಿಲ್ಲಾಕೇಂದ್ರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ‘ಮಹಿಳಾ ಚೈತನ್ಯ ದಿನ’ವೆಂದು ಆಚರಿಸುತ್ತ ಬಂದಿದೆ. ಮಹಿಳಾಪರ, ಜಾತ್ಯತೀತ ಮನಸುಗಳ ಸಂಪರ್ಕ ಜಾಲವಾಗಿ ಮಹಿಳಾ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಅದರ ಸಮಾವೇಶಗಳಲ್ಲಿ ಸಕ್ರಿಯ ಹೋರಾಟ-ಬರಹದಲ್ಲಿ ತೊಡಗಿಕೊಂಡ ಹೊರರಾಜ್ಯದ ಮಹಿಳೆಯರೂ ಪಾಲ್ಗೊಂಡಿದ್ದಾರೆ. ಈ ಬಾರಿ ಒಕ್ಕೂಟದ ವಾರ್ಷಿಕ ಸಮಾವೇಶವು ಮಾರ್ಚಿ ೮, ೯ರಂದು ಕೊಪ್ಪಳದಲ್ಲಿ ನಡೆಯಲಿದ್ದು ಮಾರ್ಚಿ ೯ರಂದು ನಡೆಯಲಿರುವ ಹಕ್ಕೊತ್ತಾಯ ಜಾಥಾ ಮತ್ತು ಸಾರ್ವಜನಿಕ ಸಮಾವೇಶದಲ್ಲಿ ದೆಹಲಿಯ ಕವಿತಾ ಕೃಷ್ಣನ್ ಪಾಲ್ಗೊಳ್ಳಲಿದ್ದಾರೆ. ಅವರ ಕಿರು ಪರಿಚಯ ಇಲ್ಲಿದೆ.) 



ಕವಿತಾ ಕೃಷ್ಣನ್ ‘ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘ’ (ಆಲ್ ಇಂಡಿಯಾ ಪ್ರೊಗ್ರೆಸಿವ್ ವುಮೆನ್ಸ್ ಅಸೋಸಿಯೇಷನ್-ಐಪ್ವಾ)ದ ಜಂಟಿ ಕಾರ್ಯದರ್ಶಿ. ದೆಹಲಿಯಲ್ಲಿ ನಿರ್ಭಯಾ ಅತ್ಯಾಚಾರ ನಡೆದ ನಂತರ ಭುಗಿಲೆದ್ದ ಬೀದಿ ಹೋರಾಟಗಳಲ್ಲಿ ಹಾಗೂ ಜಾಲತಾಣಗಳಲ್ಲಿ ಮುಂಚೂಣಿಗೆ ಬಂದ ಹೆಸರು. ಮಹಿಳೆಯರ ಹಕ್ಕುಗಳ ಕುರಿತು ಖಚಿತ ಮತ್ತು ಮುಕ್ತ ಅಭಿಪ್ರಾಯಗಳನ್ನು ಹೊಂದಿರುವ ಕವಿತಾ ತಮ್ಮ ಈ ಗುಣಗಳಿಂದಲೇ ತರುಣ ಪೀಳಿಗೆಯನ್ನು ಸೆಳೆದಿರುವ ನಾಯಕಿ.

ಮೂಲತಃ ತಮಿಳುನಾಡಿನ ಕೂನೂರಿನ ಕವಿತಾ ಹುಟ್ಟಿ ಬೆಳೆದಿದ್ದು ಭಿಲಾಯಿಯಲ್ಲಿ. ತಂದೆ ಉಕ್ಕು ಕಾರ್ಖಾನೆಯಲ್ಲಿ ಇಂಜಿನಿಯರ್. ತಾಯಿ ಇಂಗ್ಲಿಷ್ ಉಪನ್ಯಾಸಕಿ. ಮುಂಬಯಿಯಲ್ಲಿ ಪದವಿ ಓದುವಾಗ ಬೀದಿ ನಾಟಕಗಳಲ್ಲಿ, ವಿದ್ಯಾರ್ಥಿ ಚಟುವಟಿಕೆಗಳಲ್ಲಿ ಮುಂದಿದ್ದ ಕವಿತಾ ದೆಹಲಿಯ ಜವಾಹರ್‌ಲಾಲ್ ವಿವಿಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂಫಿಲ್ ಮಾಡಿದರು. ೧೯೯೪ರಲ್ಲಿ ಜೆಎನ್ಯು ವಿದ್ಯಾರ್ಥಿ ಸಂಘದ ಚುನಾವಣೆಗೆ ಸ್ಪರ್ಧಿಸಿದ್ದ ಶಿವಸೇನಾ ವಿದ್ಯಾರ್ಥಿ ಸಾಂಪ್ರದಾಯಿಕ ನಿಲುವು ತಳೆದು ಮಹಿಳಾವಿರೋಧಿ ಭಾಷಣ ಮಾಡಿದಾಗ ಅದಕ್ಕೆ ಪ್ರತಿಯಾಗಿ ಅವನೆದುರು ತುಂಡುಲಂಗ ತೊಟ್ಟು ಸಿಗರೇಟ್ ಎಳೆಯುತ್ತ ಕವಿತಾ ಮತ್ತವರ ಗೆಳತಿಯರು ತಿರುಗಾಡಿದ್ದರು. ‘ನೀನೇನಾದರೂ ಆಯ್ಕೆಯಾದರೆ ನಮ್ಮಂತಹ ಹುಡುಗಿಯರನ್ನು ಏನು ಮಾಡುತ್ತಿ?’ ಎಂದು ಪ್ರಶ್ನಿಸಿದಾಗ, ‘ಜೈಲಿಗೆ ಅಟ್ಟುತ್ತೇನೆ’ ಎಂದಿದ್ದ ಅವನು. ಅವನ ದರ್ಪದ ಮಾತು ಕವಿತಾ ಮತ್ತವರ ಗೆಳತಿಯರಲ್ಲಿ ರೊಚ್ಚು, ಕೆಚ್ಚು ಎರಡನ್ನೂ ಮೂಡಿಸಿತು.

ಆಗ ಕವಿತಾ ‘ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್) ಲಿಬರೇಷನ್’ನ ವಿದ್ಯಾರ್ಥಿ ಸಂಘಟನೆ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಐಸಾ) ಸೇರಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಚಂದ್ರಶೇಖರ್ ಪ್ರಸಾದ್ ಎಂಬ ಯುವನಾಯಕನ ಗಾಢ ಪ್ರಭಾವಕ್ಕೆ ಒಳಗಾದರು. ನಂತರ ಜೆಎನ್ಯು ವಿದ್ಯಾರ್ಥಿ ಸಂಘಕ್ಕೆ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಆದರೆ ವಿದ್ಯಾರ್ಥಿ ಮುಖಂಡರಾದ ಚಂದ್ರಶೇಖರ್ ಹಾಗೂ ಶ್ಯಾಂ ನಾರಾಯಣ್ ಯಾದವ್ ಬಿಹಾರದ ಸಿವನ್‌ನ ರ‍್ಯಾಲಿಯಲ್ಲಿ ಭಾಷಣ ಮಾಡುವಾಗ ಹತ್ಯೆಯಾದರು. ಅದಕ್ಕೆ ಕಾರಣರಾದ ಆರ್‌ಜೆಡಿ ಎಂಪಿ ಸೈಯದ್ ಶಹಾಬುದ್ದೀನ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಭಾರೀ ಪ್ರತಿಭಟನೆ ನಡೆಸಿದಾಗ ಕವಿತಾ ಜೈಲಿಗೆ ಹೋದರು.

ಹೀಗೆ ವಿದ್ಯಾರ್ಥಿ ದೆಸೆಯಲ್ಲೇ ರಾಜಕೀಯ ಜೀವನ ಆಯ್ದುಕೊಂಡ ಕವಿತಾ ಮುಂದೆಯೂ ಹಲವು ಬಾರಿ ಜೈಲುವಾಸಿಯಾದರು. ಈಗ ಅವರು ‘ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್) ಲಿಬರೇಷನ್’ನ ಪಾಲಿಟ್ ಬ್ಯೂರೋ ಸದಸ್ಯೆ. ಪಕ್ಷದ ಮುಖವಾಣಿ ಪತ್ರಿಕೆ ‘ಲಿಬರೇಷನ್’ನ ಸಂಪಾದಕಿ. ತಮ್ಮ ಪಕ್ಷದ ಮಹಿಳಾ ಸಂಘಟನೆ ಆಲ್ ಇಂಡಿಯಾ ಪ್ರೊಗ್ರೆಸಿವ್ ವುಮೆನ್ಸ್ ಅಸೋಸಿಯೇಷನ್ (ಐಪ್ವಾ)ದ ಕಾರ್ಯದರ್ಶಿ. ಕರ್ನಾಟಕದ ಹಿರಿಯ ಮಹಿಳಾ ಹೋರಾಟಗಾರ್ತಿ ಮೈಸೂರಿನ ರತಿ ರಾವ್ ಈಗ ಐಪ್ವಾದ ಅಧ್ಯಕ್ಷರಾಗಿದ್ದಾರೆ.


ಐಪ್ವಾ, ಮಹಿಳೆಯರ ಮೇಲಾಗುವ ಎಲ್ಲ ರೀತಿಯ ಶೋಷಣೆ, ತಾರತಮ್ಯ ಮತ್ತು ಹಿಂಸೆಯನ್ನು ವಿರೋಧಿಸುತ್ತ ಹಕ್ಕು ಮತ್ತು ಸಮಾನತೆಯನ್ನು ಪ್ರತಿಪಾದಿಸಲು ಮಹಿಳೆಯರನ್ನು ಸಂಘಟಿಸುತ್ತದೆ. ಸಾಮಾಜಿಕ ಬದಲಾವಣೆಗಾಗಿ ಪ್ರಗತಿಪರ ಶಕ್ತಿಗಳ ಜೊತೆ ಕೈ ಜೋಡಿಸುತ್ತದೆ. ಮನೆ, ಉದ್ಯೋಗ ಸ್ಥಳ ಹಾಗೂ ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ತಾರತಮ್ಯ, ದೌರ್ಜನ್ಯಕ್ಕೆ ಕಾರಣವಾದ ಪುರುಷ ಪ್ರಧಾನ ದಬ್ಬಾಳಿಕೆಯನ್ನು ಐಪ್ವಾ ವಿರೋಧಿಸುತ್ತದೆ. ಸಮಾಜವಾದ ನೆಲೆಗೊಂಡ ಸಮಾನತೆಯ ಸಮಾಜಕ್ಕಾಗಿ ಹೋರಾಡುತ್ತದೆ. ಜಾತಿ, ವರ್ಗ, ಪಿತೃಪ್ರಾಧಾನ್ಯಗಳು ಶೋಷಣೆಯ ಮೂರು ಮುಖಗಳೆಂದು ಗುರುತಿಸಿ, ಅವುಗಳ ವಿರುದ್ಧ ಹೋರಾಟದಲ್ಲಿ ಸಮಾಜದ ಎಲ್ಲ ಸ್ತರಗಳ ಮಹಿಳೆಯರು ಭಾಗಿಯಾಗಬೇಕೆಂದು ಬಯಸುತ್ತದೆ.

ಐಪ್ವಾ ಸರ್ಕಾರಿ-ವಿದೇಶಿ ಧನಸಹಾಯದಿಂದ ನಡೆಯುವ ಸಂಘಟನೆಯಲ್ಲ. ಅದು ತನ್ನ ಇರವಿಗೆ ಜನಸಾಮಾನ್ಯ ಮಹಿಳೆಯರ ಶಕ್ತಿಯನ್ನೇ ಅವಲಂಬಿಸಿದೆ. ೧೬ ವರ್ಷ ಮುಗಿದ, ಐಪ್ವಾದ ಸಂವಿಧಾನ-ಕಾರ್ಯಕ್ರಮಗಳ ಬಗೆಗೆ ಸಹಮತವುಳ್ಳ ಯಾರೇ ಆದರೂ ಅದರ ಸದಸ್ಯರಾಗಬಹುದು. ಸದಸ್ಯತ್ವ ಶುಲ್ಕ ೨ ರೂಪಾಯಿ ಮಾತ್ರ. ಸಹಮತವಿರುವ ವ್ಯಕ್ತಿಗಳು, ಜನಸಾಮಾನ್ಯರಿಂದ ಸಂಗ್ರಹಿಸುವ ಹಣವೇ ಅದರ ಕೆಲಸ ಕಾರ್ಯಗಳಿಗೆ ಆಧಾರ. ಇಂತಹ ಸಂಘಟನೆಗಳ ಸದಸ್ಯರಲ್ಲಿ ಸಹಜವಾಗಿ ಕಾಣುವ ಸರಳ, ನಿರ್ಭಯ, ದಿಟ್ಟ ವ್ಯಕ್ತಿತ್ವ ಕವಿತಾ ಅವರದು.

‘ಫ್ರೀಡಂ ವಿತೌಟ್ ಫಿಯರ್’

೨೦೧೨ರ ನಿರ್ಭಯಾ ಅತ್ಯಾಚಾರ ಪ್ರಕರಣದ ವೇಳೆ ಕವಿತಾ ತಮ್ಮ ಭಿನ್ನ ನಿಲುವು, ನಾಯಕತ್ವದ ಗುಣಗಳಿಂದ ಮುನ್ನೆಲೆಗೆ ಬಂದರು. ಜಂತರ್ ಮಂತರ್, ಇಂಡಿಯಾ ಗೇಟ್, ಶೀಲಾ ದೀಕ್ಷಿತ್ ಮನೆ ಎದುರು ಮತ್ತು ದೆಹಲಿಯ ಇತರ ಕಡೆಗಳಲ್ಲಿ ನಡೆದ ಅತ್ಯಾಚಾರ ವಿರೋಧಿ ಪ್ರತಿಭಟನೆಗಳಲ್ಲಿ ಅವರು ಮುಂಚೂಣಿಯಲ್ಲಿದ್ದರು. ‘ಅತ್ಯಾಚಾರವಾದದ್ದು ದೆಹಲಿಯಲ್ಲಾದರೆ, ಸಾವಿರಾರು ಜನ ಪ್ರತಿಭಟಿಸಿದರೆ, ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದರೆ ಪ್ರಕರಣದ ವಿಚಾರಣೆ ತ್ವರಿತಗೊಂಡು ಕೂಡಲೇ ತೀರ್ಪು ಬರುತ್ತದೆ. ಇಲ್ಲದಿದ್ದರೆ ದಶಕಗಟ್ಟಲೆ ಕಳೆದ ನಂತರವೂ ‘ಸಾಕ್ಷ್ಯಾಧಾರಗಳಿಲ್ಲದೆ’ ಕೇಸು ಸಾಯುತ್ತದೆ. ಖೈರ್ಲಾಂಜಿಯಲ್ಲಿ, ನಾಗ್ಪುರದಲ್ಲಿ, ಮಣಿಪುರದಲ್ಲಿ ನಡೆದದ್ದು ಮುಚ್ಚಿ ಹೋಗುತ್ತವೆ. ಭಾರತದಲ್ಲಿ ನ್ಯಾಯ ಸಿಗುವುದು ಎಂದರೆ ಲಾಟರಿ ಹೊಡೆಯುವ ಹಾಗೆ’ ಎಂದು ಕವಿತಾ ನ್ಯಾಯವ್ಯವಸ್ಥೆಯ ವಿಳಂಬ ಮತ್ತು ಅದಕ್ಷತೆಯನ್ನು ಕಟುವಾಗಿ ಟೀಕಿಸಿದರು. ಬಲಿಪಶು ಆದವರ ಸಾಕ್ಷ್ಯ ನಂಬುವ ಬದಲು ಫೊರೆನ್ಸಿಕ್ ಸಾಕ್ಷ್ಯಗಳನ್ನೇ ಕೋರ್ಟು ಹೆಚ್ಚೆಚ್ಚು ನಂಬುತ್ತಿರುವುದು ನ್ಯಾಯವ್ಯವಸ್ಥೆಯ ದುರಂತ ಎಂದು ಬಣ್ಣಿಸಿದ ಕವಿತಾ, ಅತ್ಯಾಚಾರಿಗೆ ಮರಣದಂಡನೆ-ಪೌರುಷಹರಣ ಮಾಡುವುದನ್ನು ಖಂಡತುಂಡ ವಿರೋಧಿಸಿದರು.

‘ಅತ್ಯಾಚಾರವಾಗುವುದು ಲೈಂಗಿಕ ಬಯಕೆಯ ಕಾರಣದಿಂದಲ್ಲ. ಜ್ಯಾಕ್ ದ ರಿಪ್ಪರ್ ಎಂಬ ಸರಣಿ ಅತ್ಯಾಚಾರಿ-ಕೊಲೆ ಪಾತಕಿ ಷಂಡನಾಗಿದ್ದ. ಹೆಣ್ಣಿನ ಮೇಲೆ ಅತ್ಯಾಚಾರವೆಸಗಲು ಲೈಂಗಿಕ ಅಂಗವೇ ಬೇಕಿಲ್ಲ, ವಸ್ತುಗಳೂ ಸಾಕು. ಆದ್ದರಿಂದ ಪುರುಷತ್ವ ಹರಣ ಮಾಡುವುದು ಅತ್ಯಾಚಾರ ಕೊನೆಗೊಳಿಸುವುದಿಲ್ಲ. ೧೦೦ ಅತ್ಯಾಚಾರಿಗಳಲ್ಲಿ ೨೬ ಜನರಿಗೆ ಮಾತ್ರ ಶಿಕ್ಷೆಯಾಗುತ್ತಿರುವಾಗ ಮರಣದಂಡನೆ ಶಿಕ್ಷೆಯೂ ಅತ್ಯಾಚಾರ ತಡೆಗಟ್ಟಲಾರದು’ ಎಂದು ಅತ್ಯಂತ ಸ್ಪಷ್ಟ ಮಾತುಗಳಲ್ಲಿ ಕವಿತಾ ತಿಳಿಸಿದರು. ಹೆಣ್ಣಿಗೆ ಬೇಕಿರುವುದು ಬರಿಯ ರಕ್ಷಣೆಯಲ್ಲ, ಸ್ವಾತಂತ್ರ್ಯ, ಭಯವಿರದ ಸ್ವಾತಂತ್ರ್ಯ ಎನ್ನುತ್ತಾ, ‘ಫ್ರೀಡಂ ವಿತೌಟ್ ಫಿಯರ್’ ಎಂಬ ಘೋಷವಾಕ್ಯ ಚಾಲ್ತಿಯಲ್ಲಿಟ್ಟರು. ಹೆಣ್ಣಿಗೆ ಎಂದೆಂದೂ ನಿರಾಕರಿಸಲಾದ ಸ್ವಾತಂತ್ರ್ಯವನ್ನು ಎಲ್ಲ ದನಿಗಳೂ ಪ್ರತಿಪಾದಿಸಿದವು. ಅವರ ವಿಭಿನ್ನ ವಿಶ್ಲೇಷಣೆ ತರುಣ ಪೀಳಿಗೆಯನ್ನು ಸೆಳೆದು ಸಾಮಾಜಿಕ ಜಾಲತಾಣದ ಕಣ್ಮಣಿಯಾದರು.

ಎಲ್ಲರೂ ಮಹಿಳೆಯ ರಕ್ಷಣೆ-ಭದ್ರತೆಯ ಬಗೆಗೆ ಮಾತನಾಡಿದರೆ ಕವಿತಾ ಮಹಿಳಾ ಸ್ವಾತಂತ್ರ್ಯದ ಬಗೆಗೆ ಮಾತನಾಡಿದರು. ‘ಜಗತ್ತಿನ ಎಲ್ಲಕಡೆ ಹೆಣ್ಣನ್ನು ಆಸೆಯಿಂದಲೆ ನೋಡುತ್ತಾರೆ. ಎಲ್ಲಿ ಹೆಜ್ಜೆಯಿಟ್ಟರೂ ಹೆಣ್ಣು ಅವೇ ನೋಟಗಳ ಎದುರಿಸಬೇಕು. ಸುಂದರ ಹೆಣ್ಣುಗಳ ಚರ್ಮ, ಆಕಾರ, ಸ್ತನ, ನಿತಂಬಗಳಿಗೆ ಸೌಂದರ್ಯದ ಕಾರಣದಿಂದ ಜಾಹೀರಾತಿನಲ್ಲಿ ತೋರಿಸಿಕೊಳ್ಳುವ ಸ್ವಾತಂತ್ರ್ಯವಾದರೂ ಇದೆ. ಹಾಗಿಲ್ಲದಿರುವ ‘ಕುರೂಪಿ’ಗಳಿಗೆ ಯಾವ ಸ್ವಾತಂತ್ರ್ಯವಿದೆ? ಹೆಣ್ಣಿನ ಸಾಮಾಜಿಕ ಸ್ವಾತಂತ್ರ್ಯ, ಲೈಂಗಿಕ ಸ್ವಾತಂತ್ರ್ಯ ಬೇರೆ ಬೇರೆ ಅಲ್ಲ. ಯಾಕೆಂದರೆ ಲೈಂಗಿಕ ಸ್ವಾತಂತ್ರ್ಯ ಎಂದರೆ ನಿಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವೂ ಆಗಿದೆ.’

ಅತ್ಯಾಚಾರದ ಸುತ್ತ, ಅಪರಾಧಿಗಳ ಸುತ್ತ, ಹುಡುಗಿಯರ ‘ನಡತೆ-ಬಟ್ಟೆ’ಗಳ ಸುತ್ತ ಗಿರಕಿ ಹೊಡೆಯುತ್ತಿದ್ದ ಚರ್ಚೆ-ಸಂವಾದಗಳನ್ನು ಕವಿತಾ ಹೆಣ್ಣಿನ ಲೈಂಗಿಕ ಸ್ವಾತಂತ್ರ್ಯದ ವಿಸ್ತೃತ ಆಯಾಮಗಳತ್ತ ಒಯ್ದರು. ‘ಭಯವಿಲ್ಲದೆ ಹೆಣ್ಣು ಹೊರಗೆಲ್ಲು ಮುಕ್ತವಾಗಿ ತಿರುಗದಂತಹ ಸನ್ನಿವೇಶ ನಿರ್ಮಾಣವಾಗಿದೆ. ಮಾಧ್ಯಮಗಳು ಹೆಣ್ಣು ಎಂದರೆ ಸತಿ ಸಾವಿತ್ರಿಯಂತೆ ತೋರಿಸಿ ‘ಪಢಿಯೆ ಗೀತಾ ಬನೀಯೆ ಸೀತಾ’ ಎನ್ನುವ ತಪ್ಪು ಮಾದರಿ ಸೃಷ್ಟಿಸಿವೆ. ನಾನು ಅಂಥ ಎಲ್ಲ ಮಾದರಿಗಳ ವಿರುದ್ಧ ನಿಲ್ಲಬಯಸುತ್ತೇನೆ. ರಾತ್ರಿ ಏಕೆ ಓಡಾಡಬೇಕು? ಹುಡುಗರೊಡನೆ ಏಕೆ ಅಡ್ಡಾಡಬೇಕು? ಎಂದೆಲ್ಲ ನಮ್ಮನ್ನು ಕೇಳಬೇಡಿ. ಹೆಂಗಸರಿಗೆ ಅಡ್ವೆಂಚರಸ್ ಆಗುವ ಎಲ್ಲ ಹಕ್ಕೂ ಇದೆ: ನಾವು ಹಾಗೇ ಇರುವವರು. ನಮಗೆ ಎಂತೆಂಥ ಬಟ್ಟೆ ಹಾಕಬೇಕು ಎಂದು ಸಲಹೆ ಕೊಡಬೇಡಿ. ಹಗಲು-ರಾತ್ರಿಗಳ ಯಾವ ಹೊತ್ತಿನಲ್ಲಿ ಸಂಚರಿಸುವುದು ಸುರಕ್ಷಿತ ಎಂದು ಹೇಳಬೇಡಿ. ಸುರಕ್ಷಿತವಾಗಿರಲು ಯಾರ ಜೊತೆ, ಎಷ್ಟು ಪುರುಷರ ಜೊತೆಗೆ ಅಡ್ಡಾಡಬೇಕು ಎಂಬ ಲೆಕ್ಕ ಕೊಡಬೇಡಿ. ಎಂಥ ದಿರಿಸು ತೊಡಬೇಕೆಂದು ನಮಗಲ್ಲ, ಅವರಿಗೆ ಹೇಳಿ. ಏಕೆ ಅತ್ಯಾಚಾರ ಮಾಡಬಾರದು ಎಂದು ಅವರಿಗೆ ತಿಳಿಸಿ. ಅಪರಿಚಿತರು, ಹೊರಗಿನವರೇ ಅತ್ಯಾಚಾರಿಗಳು ಎಂದು ಹೆಣ್ಮಕ್ಕಳನ್ನು ಹೆದರಿಸಲಾಗುತ್ತಿದೆ. ಅದು ಪೂರ್ಣ ಸತ್ಯವಲ್ಲ. ಪರಿಚಯಸ್ಥರು, ಬಂಧುಗಳು, ಗುರುಗಳು, ನಾವು ಗೌರವಿಸುವವರು, ರಕ್ಷಿಸುವವರೇ ಅತ್ಯಾಚಾರ ಎಸಗುವುದು ಹೆಚ್ಚಿರುವಾಗ ಯಾರಿಂದ ಯಾರನ್ನು ರಕ್ಷಿಸುತ್ತೀರಿ? ಸಿಸಿಟಿವಿಗಳಿಂದ ಎಷ್ಟು ಹೆಣ್ಮಕ್ಕಳನ್ನು ರಕ್ಷಿಸುತ್ತೀರಿ? ಅತ್ಯಾಚಾರಕ್ಕೊಳಗಾಗದ ಹಾಗೆ ಸದಾ ನಮ್ಮನ್ನು ನಾವೇ ಕಾಪಾಡಿಕೊಳ್ಳುತ್ತಿರಲು ಸಾಧ್ಯವಿಲ್ಲ. ನಮಗೆ ಸ್ವಾತಂತ್ರ ಬೇಕು. ಭಯವಿರದ ಸ್ವಾತಂತ್ರ್ಯ ಬೇಕು.’

ಸಹಜವಾಗಿ ಅವರಿಗೆ ಬೆಂಬಲಿಗರೆಷ್ಟೋ ಅಷ್ಟೇ, ವಿರೋಧಿಗಳೂ ಹುಟ್ಟಿಕೊಂಡರು. ಕೆಟ್ಟ ಮೆಸೇಜುಗಳು, ಟೀಕೆ, ಪ್ರತಿಕ್ರಿಯೆಗಳ ಸುರಿಮಳೆಯೇ ಆಯಿತು. ಮಹಿಳೆ ತನ್ನ ಹಕ್ಕುಗಳ ಬಗೆಗೆ, ಸ್ವಾತಂತ್ರ್ಯದ ಬಗೆಗೆ ಮಾತನಾಡಿದಾಗಲೆಲ್ಲ ಲೈಂಗಿಕ ಸ್ವೇಚ್ಛಾಚಾರಿ ಎಂಬ ಗೂಬೆ ಕೂರಿಸಿ, ‘ಸೂಳೆ’ ಎಂಬ ಪಟ್ಟ ಕಟ್ಟಿ ಬಾಯ್ಮುಚ್ಚಿಸಲಾಗುತ್ತದೆ. ‘ನಕ್ಸಲೈಟ್’ ಎಂದು ಜರೆಯಲಾಗುತ್ತದೆ. ಕವಿತಾಗೂ ಅವೇ ಟೀಕೆಗಳು ಕೇಳಿಬಂದವು.

ಒಬ್ಬನಂತೂ, ‘ಇಷ್ಟಪಟ್ಟವರ ಜೊತೆ ಮಲಗುವುದು ಹಕ್ಕು ಎನ್ನುತ್ತೀ. ನಿನ್ನಮ್ಮನೂ ಇಷ್ಟಪಟ್ಟವರ ಜೊತೆ ಮಲಗಿದ್ದಳೇ ಕೇಳು’ ಎಂದ. ‘ಹೌದು, ನನ್ನಮ್ಮ ಅವಳಿಷ್ಟಪಟ್ಟವರ ಜೊತೆಯೇ ಮಲಗಿದ್ದಳು. ಬಹುಶಃ ನಿನ್ನಮ್ಮನೂ ಸಹ. ಇಷ್ಟಪಟ್ಟವರ ಜೊತೆ ಮಲಗುವುದು ಮಾತ್ರ ಸೆಕ್ಸ್. ಉಳಿದದ್ದು ರೇಪ್, ತಿಳಕೊ’ ಎಂದು ಅವನಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದರು. ಕವಿತಾಗೆ ಪೂರಕವಾಗಿ ಅವರ ತಾಯಿ ಲಕ್ಷ್ಮಿ ಕೃಷ್ಣನ್, ‘ನಾನು ನನಗೆ ಬೇಕಾದಾಗ, ನನಗಿಷ್ಟ ಬಂದವರ ಜೊತೆ ಮಲಗಿದ್ದೇನೆ. ಪ್ರತಿ ಸ್ತ್ರೀಪುರುಷರಿಗು ಪರಸ್ಪರ ಒಪ್ಪಿಗೆ ಮೂಲಕ ಸೇರಲು ಇರುವ ಈ ಸ್ವಾತಂತ್ರ್ಯವನ್ನು, ಬಲವಂತವಿರದ, ಬಂಧನಗಳಿರದ ಲೈಂಗಿಕ ಸ್ವಾತಂತ್ರ್ಯವನ್ನು ಕೊನೆತನಕ ಎತ್ತಿ ಹಿಡಿಯುತ್ತೇನೆ’ ಎಂದು ಟೀಕಾಕಾರರ ಬಾಯಿ ಮುಚ್ಚಿಸಿದರು!

***

ಒಟ್ಟಾರೆಯಾಗಿ ಹೇಳುವುದಾದರೆ ಸಂಪ್ರದಾಯನಿಷ್ಠ, ಬಲಾಢ್ಯ ವರ್ಗವು ಒಪ್ಪದ ವಿಷಯಗಳನ್ನು ಎತ್ತಿ ಆಡುವ, ಹಕ್ಕು ಪ್ರತಿಪಾದಿಸುವ ಕವಿತಾ ಕೃಷ್ಣನ್ ಒಬ್ಬ ಶಕ್ತ ಸಂಘಟಕಿ, ಮುಕ್ತ ನಿರ್ಭೀತ ಮಾತುಗಾರಿಕೆಯಿಂದ ಜನಸಾಮಾನ್ಯರ ಸೆಳೆವ ವಾಗ್ಮಿ. ಅವರ ವಿಚಾರಗಳ ಬಗೆಗೆ ಸಹಮತ ಇಲ್ಲದವರಿಗೂ ಅವರ ಹಿಂದಿನ ಬದ್ಧತೆ, ಕಳಕಳಿ, ಹೋರಾಟದ ಕೆಚ್ಚಿನ ಬಗೆಗೆ ಭಿನ್ನಮತವಿರಲು ಸಾಧ್ಯವಿಲ್ಲ. ಮಹಿಳಾಪರ ಮತ್ತು ಸಾಮಾಜಿಕ ಹೋರಾಟಗಾರ್ತಿಯಾಗಿ ತನ್ನದೇ ಹಾದಿ ರೂಪಿಸಿಕೊಳ್ಳುತ್ತಿರುವ ಕವಿತಾ ಭವಿಷ್ಯದ ಭರವಸೆಯ ನಾಯಕಿ ಎನ್ನುವುದರಲ್ಲಿ ಅನುಮಾನವಿಲ್ಲ.

ಹೆಜ್ಜೆ ಹಾಕಿ ಕವಿತಾ ಜೊತೆಗೆ; ಬನ್ನಿ ಎಲ್ಲರು ಕೊಪ್ಪಳದೆಡೆಗೆ..