Friday, 2 September 2016

ಇಳಾ ಆಗಿರುವುದು ಸುಲಭವಲ್ಲ..



ವಿಮ್ಸ್ ಆಸ್ಪತ್ರೆಯ ಒಂದನೇ ನಂಬರಿನ ಸ್ಪೆಶಲ್ ವಾರ್ಡ್ ತನ್ನ ಅಳತೆ-ಸುತ್ತಳತೆಗಳಲ್ಲಿ ಪರಿವರ್ತನೆಯಾಗಿ ಆಸ್ಪತ್ರೆ ಕಂ ಜೈಲಾಗಿ ಹದಿನೈದು ವರ್ಷವಾಯಿತು. ಹತ್ತು ಇಂಟು ಹತ್ತು ಕೋಣೆಯ ಗೋಡೆ ತುಂಬ ಶುಭಹಾರೈಕೆಯ ಗ್ರೀಟಿಂಗ್ ಕಾರ್ಡುಗಳು, ಪೋಸ್ಟರುಗಳು. ಟೇಬಲ್ಲಿನ ಮೇಲೆ ಸಿರಿಲ್ಯಾಕ್, ಹಾರ್ಲಿಕ್ಸ್, ಪ್ರೊಟೀನ್ ಪೌಡರ್ ಡಬ್ಬಿ, ಒಂದಷ್ಟು ಪುಸ್ತಕ, ನಿಯತಕಾಲಿಕ. ಮಂಚದ ಮೇಲೆ ಕೃಶದೇಹವೊಂದು ಮೂಗಿನ ಪೈಪನ್ನು ಸರಿಪಡಿಸಿಕೊಳ್ಳುತ್ತ ಆಚೀಚೆ ಹೊರಳುತ್ತಿದೆ. ಸೂರು ದಿಟ್ಟಿಸುತ್ತ ಸುಮ್ಮನೆ ಮಲಗುವುದು, ಎದ್ದು ಕೂತು ಟಿವಿ ನೋಡುವುದು, ಪುಸ್ತಕ ಓದುವುದು, ಚಿತ್ರ ಬರೆಯುವುದು, ಪತ್ರ ಬರೆಯುವುದು, ಸಂದರ್ಶಕರೊಡನೆ ಕೆಲ ಮಾತನಾಡುವುದರಲ್ಲೇ ನಿರತವಾಗಿ ಆ ಜೀವ ಇಷ್ಟು ವರ್ಷ ಕಳೆದಿದೆ. ಲೆಕ್ಕ ಮಾಡಿ ದಿನಕ್ಕೆ ಮೂರು ಬಾರಿ, ಎಂದರೆ ದಿನಕ್ಕೆ ಒಟ್ಟು ಒಂದೂವರೆ ಸಾವಿರ ಕ್ಯಾಲೊರಿ ಆಹಾರ ಸುರುವಲು ಡ್ಯೂಟಿ ಸಿಸ್ಟರುಗಳು ಬರುತ್ತಾರೆ. ಆರು ವೈದ್ಯರ ತಂಡ ದಿನಕ್ಕೆ ಇಬ್ಬಿಬ್ಬರಂತೆ ದಿನಬಿಟ್ಟು ದಿನ ಅವಳನ್ನು ಪರೀಕ್ಷಿಸುತ್ತದೆ. ಎರಡು ದಿನಕ್ಕೊಮ್ಮೆ ಲ್ಯಾಬ್ ಟೆಕ್ನೀಶಿಯನ್ ರಕ್ತ ಮೂತ್ರಗಳನ್ನು ತಪಾಸಣೆಗೆ ಒಯ್ಯುತ್ತಾಳೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಮಾಣು ಸ್ಥಾವರ ಸುರಕ್ಷತೆ ಕುರಿತು ಚರ್ಚೆ ಜೀವಂತವಾಗಿರಲು, ಇಡೀ ದೇಶದ ಗಮನ ಕರಾವಳಿಯ ಸಮಸ್ಯೆಗಳತ್ತ ಹರಿಯಲು ಈ ಕೃಶದೇಹಿಯ ಅತಿದೀರ್ಘ ಉಪವಾಸವೇ ಕಾರಣವಾಗಿದೆ.

ಆಕೆ ಇಳಾ. ಇಳಾ ರಘುನಾಥ್ ಕಾವೂರ್.

ರಾತ್ರಿಯಾಗುತ್ತದೆ, ಬೆಳಗಾಗುತ್ತದೆ.
ವಸಂತ ಮುಗಿಯುತ್ತದೆ, ಮಾಗಿ ಬರುತ್ತದೆ..
ಎಂಟೆಂಟು ತಾಸಿಗೆ ಸಿಸ್ಟರು, ಡಾಕ್ಟರು, ಸೆಂಟ್ರಿಗಳ ಡ್ಯೂಟಿ ಮುಗಿದು ಹೊಸಬರು ಬರುತ್ತಾರೆ.
ಮನಮೋಹನ ಹೋಗುತ್ತಾರೆ, ದಾಮೋದರ ಕುರ್ಚಿ ಹಿಡಿಯುತ್ತಾರೆ..
ಎಲ್ಲವೂ ಜಗತ್ತಿನಲ್ಲಿ ಬದಲಾಗುತ್ತವೆ.
ಬದಲಾಗದೇ ಇರುವುದು ಒಂದೇ, ಅದು ಉಕ್ಕಿನ ಮಹಿಳೆ ಇಳಾಳ ಆಮರಣಾಂತ ಉಪವಾಸ..

ಹೀಗೊಂದು ಮಾತು ಈಗ ನಾಣ್ಣುಡಿಯಂತೆ ಚಾಲ್ತಿಯಲ್ಲಿದ್ದರೆ ಅದಕ್ಕೆ ಕಾರಣ ಹದಿನೈದು ವರ್ಷಗಳ ಇಳಾ ಉಪವಾಸ. ಪಶ್ಚಿಮ ಕರಾವಳಿಯ ಪುಟ್ಟ ಊರು ಸಿಂಗೂರಿನಲ್ಲಿ ಬಂದರು ಮತ್ತು ಪರಮಾಣು ವಿದ್ಯುತ್ ಸ್ಥಾವರ ಯೋಜನೆ ವಿರೋಧಿಸಿ ಅದನ್ನು ಹಿಂತೆಗೆದುಕೊಳ್ಳುವವರೆಗೆ ಉಪವಾಸ ಮಾಡುವುದಾಗಿ ಇಳಾ ಪಟ್ಟು ಹಿಡಿದು ಹದಿನೈದು ವರ್ಷವಾಯಿತು. ಜೈಲುವಾಸಿಗಳಿಗಿರಬೇಕಾದ ಕೈಕೋಳ, ಸರಪಳಿಗಳು ಮೂರಡಿ ಉದ್ದದ ಪಾರದರ್ಶಕ ಪ್ಲಾಸ್ಟಿಕ್ ನಳಿಗೆಯಾಗಿ ಸಾಕಾರಗೊಂಡು ಅವಳ ಮೂಗಿನಿಂದ ಹೊಟ್ಟೆಗಿಳಿದು ಹದಿನೈದು ವರ್ಷವಾಯಿತು. ಬಾಯಿಗೆ ನೀರು ಹೋದೀತೆಂದು ತಲೆಸ್ನಾನ ಮಾಡದೇ ಕೂದಲು ಒರೆಸಿಕೊಳ್ಳುತ್ತ ಹದಿನೈದು ವರ್ಷವಾಯಿತು. ಹದಿನೈದು ದಿನಗಳಿಗೊಮ್ಮೆ ಕೋರ್ಟಿಗೆ ಹೋಗಿ, ‘ಉಪವಾಸ ನಿಲ್ಲಿಸುವುದಿಲ್ಲ, ಆದರೆ ನನ್ನದು ಆತ್ಮಹತ್ಯೆಯಲ್ಲ’ ಎಂದು ಇಳಾ ಜಡ್ಜ್‌ಗೆ ಹೇಳಿಬರತೊಡಗಿ ಹದಿನೈದು ವರ್ಷವಾಯಿತು. ೬೫ ಕೆಜಿ ಇದ್ದ ದೇಹ ೩೦ ಕೆಜಿಯಾಗಿ ಹಸಿವು, ಬಾಯಾರಿಕೆ, ಉಪ್ಪುಹುಳಿಕಾರ ರುಚಿಗಳನ್ನಷ್ಟೆ ಅಲ್ಲ, ತನಗೇನಾಗುತ್ತಿದೆ ಎನ್ನುವುದೇ ಮರೆತ ಇಳಾ ಹೋರಾಟದ ಸಂಕೇತನಾಮವಾಗಿದ್ದಾಳೆ. ಹಾಡುನಾಟಕಕತೆಗಳ ವಸ್ತುವಾಗಿ, ಹೋರಾಟಗಾರರ ಸ್ಫೂರ್ತಿಯಾಗಿದ್ದಾಳೆ.

ಹೀಗಿರುತ್ತ,

ಇದ್ದಕ್ಕಿದ್ದಂತೆ ರೂಪಾಂತರ ಕ್ರಿಯೆಯೊಂದು ಸಂಭವಿಸಿತು. ಇದ್ದಕ್ಕಿದ್ದಂತೆ ಎಂದು ಉಳಿದವರಿಗೆ ಅನಿಸಿದರೂ ನಿಧಾನವಾಗಿ ಕಂಬಳಿಹುಳ ಚಿಟ್ಟೆಯಾದಷ್ಟೇ ಸಹಜವಾಗಿ ನಡೆದ ಅಂತರಾಳದ ಹೊರಳುವಿಕೆ ಅದು.

***

ಎರಡು ವರ್ಷದಲ್ಲಿ ನಿವೃತ್ತರಾಗಲಿರುವ ವಿಮ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸೀನಿಯರ್ ಫಿಸಿಷಿಯನ್ ಡಾ. ವಾಗಳೆ ತಮ್ಮ ಸರ್ವೀಸಿನಲ್ಲಿ ಎಷ್ಟೋ ಪೇಶೆಂಟುಗಳು ಮೂಗಿಗೆ ರೈಲ್ಸ್ ಟ್ಯೂಬ್ ಹಾಕಿಕೊಂಡಿರುವುದನ್ನು ನೋಡಿದ್ದಾರೆ. ಆದರೆ ಅಂಥವರು ಒಂದೋ ಕೆಲ ತಿಂಗಳುಗಳಲ್ಲಿ ಇಹಲೋಕ ಯಾತ್ರೆ ಮುಗಿಸುತ್ತಿದ್ದರು ಅಥವಾ ಗುಣವಾಗಿ ಮನೆಗೆ ಹೋಗುತ್ತಿದ್ದರು. ಈ ಹುಡುಗಿ ಇಳಾ ಮಾತ್ರ ಇಪ್ಪತ್ತೈದರ ತರುಣಿಯಾಗಿದ್ದಾಗ ಊಟ ಮಾಡೆನೆಂದು ಹಠ ಹಿಡಿದವಳು ಹದಿನೈದು ವರ್ಷಗಳಿಂದ ರೈಲ್ಸ್ ಟ್ಯೂಬ್ ಹಾಕಿಕೊಂಡಿರುವುದು, ಹಾಕಿಸಿಕೊಳ್ಳುತ್ತಲೇ ಇರುವುದು ಅವರಿಗೆ ಪವಾಡವೆಂದೇ ಅನಿಸಿದೆ. ಮೂಗಿನಲ್ಲಿರುವ ನಳಿಕೆಯನ್ನು ತೆಗೆಯುವ, ಹಾಕುವ ಕ್ರಿಯೆ ಎಷ್ಟು ತ್ರಾಸದಾಯಕ ಎಂಬ ಕಲ್ಪನೆಯಿರುವ ಅವರಿಗೆ ಆ ತರುಣಿಯ ಗಟ್ಟಿತನಕ್ಕೆ ಅಚ್ಚರಿಯಾಗುತ್ತದೆ. ಪೈಪು ಹಳೆಯದಾಗುತ್ತ, ಪೆಡಸಾಗುತ್ತ ಬಂದಾಗ ಗಂಟಲಲ್ಲಿ ಕಿರಿಕಿರಿ, ಉಮ್ಮಳಿಕೆ ಇರುತ್ತದೆ. ಹೊಸತು ಹಾಕಿದ ಮೇಲೆ ಕೆಲದಿನ ಬಾಯ್ತುಂಬ ಪ್ಲಾಸ್ಟಿಕ್ ವಾಸನೆ. ಇದನ್ನೆಲ್ಲ ಪುಟ್ಟ ದೇಹ ಇನ್ನೆಷ್ಟು ದಿನ ತಡೆಯುತ್ತದೆ? ಹಿಡಿಯಷ್ಟಿರುವ ದೇಹ ಇನ್ನೆಷ್ಟು ವರ್ಷ ಬಾಳುತ್ತದೆ? ಅಕಸ್ಮಾತ್ ಶ್ವಾಸಕೋಶದ ಸೋಂಕಾದರೆ ಅವಳು ದೀರ್ಘಕಾಲ ಬದುಕುವುದಿಲ್ಲ ಎಂದು ಅವರಿಗೆ ಮರುಕ, ಪ್ರೀತಿ, ಕಾಳಜಿ, ಭಯ ಎಲ್ಲವೂ ಆಗುತ್ತವೆ. ಎಂದೇ ವಾಗಳೆ ಹದಿಮೂರು ವರ್ಷಗಳಿಂದ ಜ್ಯೂನಿಯರುಗಳನ್ನು ನೆಚ್ಚದೇ ಖುದ್ದಾಗಿ ತಾವೇ ತಿಂಗಳಿಗೊಮ್ಮೆ ರೈಲ್ಸ್‌ಟ್ಯೂಬನ್ನು ಹುಶಾರಾಗಿ ಬದಲಾಯಿಸುತ್ತಿದ್ದಾರೆ.

ವರ್ಷಗಟ್ಟಲೆ ಉಪವಾಸ ಹೇಗೆ ಸಾಧ್ಯ? ಅವಳು ಯಾರಿಗೂ ತಿಳಿಯದಂತೆ ಏನಾದರೂ ತಿನ್ನುತ್ತಿರಬಹುದೆ ಎಂದು ಪತ್ರಕರ್ತರು, ತನಿಖಾಧಿಕಾರಿಗಳೂ ಸೇರಿದಂತೆ ಎಷ್ಟೋ ಜನ ವಾಗಳೆಯವರ ಬಳಿ ಕೇಳಿದ್ದರು. ಕೆಲವರಿಗೆ ಮಾಹಿತಿ ಹಸಿವೆ, ಮತ್ತೆ ಕೆಲವರಿಗೆ ದುಷ್ಟ ಕುತೂಹಲ. ಆದರೆ ಮೂಗಿನಲ್ಲಿಳಿಬಿಟ್ಟ ಪೈಪು ಗಂಟಲಲ್ಲಿ ನೇತಾಡುವಾಗ ಮಾತಾಡುವುದೇ ಕಷ್ಟ. ಹಾಗಿರುತ್ತ ತಿನ್ನುವುದು ಹೇಗೆ? ಪ್ರಶ್ನಿಸುವವರಿಗೆ ನೀವೊಮ್ಮೆ ಟ್ಯೂಬ್ ಹಾಕಿಕೊಂಡು ನೋಡಿ ಎಂದುಬಿಟ್ಟಿದ್ದಾರೆ ವಾಗಳೆ. ಮ್ಲಾನವಾದ ಆದರೆ ಶಾಂತವಾದ ಎಳೆಯ ಮುಖ ನೋಡುವಾಗೆಲ್ಲ ಈ ಹುಡುಗಿ ಇನ್ನಾದರೂ ಉಪವಾಸ ನಿಲಿಸಲಿ ಎಂದು ಹಾರೈಸುತ್ತಾರೆ.

ಹಾರೈಸುತ್ತ ವರ್ಷಗಳೇ ಸರಿದಿವೆ. ಮಲಗಿದಲ್ಲೇ ಮಲಗಿಮಲಗಿ ಅವಳಿಗೆ ಡಯಾಬಿಟಿಸ್ ಶುರುವಾಗಿದೆ. ಕೂದಲು ನರೆಯುತ್ತಿದೆ. ಫೇಶಿಯಲ್ ಪಾಲ್ಸಿಯಾಗಿ ಮುಖ ಬಲಬದಿಗೆ ವಾರೆಯಾಗಿ ತಿರುಗಿದೆ. ಆದರೂ ಅವಳು ಮಣಿಯದೆ, ಸೋತೆನೆನ್ನದೆ ಇದ್ದಾಳೆ. ಅದಕ್ಕೇ ಅವರಿಗೆ ಇಳಾ ಎಂದರೆ ಅತಿ ಕಾಳಜಿ ಮತ್ತು ಪ್ರೀತಿ.

ಅವತ್ತು ಬೆಳಿಗ್ಗೆ ವಾರ್ಡ್ಸ್ ರೌಂಡ್ಸ್ ಮುಗಿಸಿ ಟ್ರೇ ಹಿಡಿದ ನಿರ್ಮಲಾ ಸಿಸ್ಟರ್ ಮತ್ತು ಲೇಡಿ ಪೊಲೀಸ್ ಪೂವಮ್ಮ ಒಳಹೋದರು. ‘ಓ ಇಳಾ’ ಎನ್ನುತ್ತ ಮೃದುವಾಗಿ ಕರೆಯುತ್ತ ಡಾ. ವಾಗಳೆ ಒಳಬಂದಾಗ ಇಳಾಗೆ ಬೆಳಗಿನ ಮಂಪರು ತಿಳಿಯಾಯಿತು. ಕಂಡೂಕಾಣದಂತೆ ನಸುನಗುವೊಂದು ತುಟಿಗಳಲ್ಲಿ ಸುಳಿಯಿತು. ಅವರ ದನಿ ಅವಳಿಗೆ ಬಾಪ್ಪಾನ ನೆನಪಿಸುತ್ತದೆ. ಬಾಪ್ಪಾ ತನ್ನನ್ನು ಹೀಗೇ ಅಲ್ಲವೆ ಕರೆಯುತ್ತಿದ್ದಿದ್ದು? ದನದ ಆಸ್ಪತ್ರೆಯ ಅಟೆಂಡರ್ ಆದರೂ ಗೋಡಾಕ್ಟ್ರೆಂದೇ ಎಲ್ಲ ಅವನನ್ನು ಕರೆಯುತ್ತಿದ್ದರು. ಹನ್ನೆರೆಡು ವರ್ಷವಾಯಿತು ಬಾಪ್ಪಾ ತೀರಿಕೊಂಡು. ಅವನದೇ ವಯಸ್ಸಿನ ವಾಗಳೆಯವರನ್ನು ಅವಳು ನೋಡುತ್ತ ಅಷ್ಟೇ ವರ್ಷವಾಯಿತು.

ಹಾಸಿಗೆಯ ಪಕ್ಕ ಸ್ಟೂಲು ಸರಿಸುತ್ತ ವಾಗಳೆ ಕೂತರು. ಅಮ್ಮಬೆಕ್ಕು ಮರಿಯನ್ನು ಬಾಯಲ್ಲಿ ಕಚ್ಚಿ ಹಿಡಿಯುವಷ್ಟೇ ಮೃದುವಾಗಿ ಅವಳ ಕತ್ತಿನ ಹಿಂಬದಿಯನ್ನು ಹಿಡಿದು ತಲೆಯನ್ನು ಹಿಂಬಾಗಿಸಿದರು. ಹಳೆಯ ರೈಲ್ಸ್ ಟ್ಯೂಬನ್ನು ಬೆಣ್ಣೆಯಿಂದ ಕೂದಲು ಹೊರತೆಗೆವಷ್ಟು ಮೃದುವಾಗಿ ಹೊರಗೆಳೆದರು. ‘ಜೆಲ್ ಸ್ವಲ್ಪ ಹೆಚ್ಚು ಹಾಕಿ ಸಿಸ್ಟರ್’ ಎನ್ನುತ್ತ ಹೊಸ ನಳಿಕೆಯನ್ನು ಜಾಗರೂಕವಾಗಿ ತದೇಕವಾಗಿ ಮೂಗಿನ ಹೊಳ್ಳೆಯಿಂದ ಒಳಗೆ ತೂರಿಸತೊಡಗಿದರು. ಪ್ರತಿಬಾರಿ ಹಳೆಯದನ್ನು ತೆಗೆದು, ಹೊಸದನ್ನು ಹಾಕುವಾಗ ಒಳ ಅಂಗಾಂಗಗಳು ಗಾಯವಾಗದೇ ಇರಲಿ ಎಂದು ವಿಶೇಷ ಕಾಳಜಿ ವಹಿಸುತ್ತಾರೆ. ಮೊದಲೆಲ್ಲ ನಳಿಕೆ ತೆಗೆದು ಹಾಕುವ ಕಷ್ಟಕ್ಕೆ ಹೆದರಿಯಾದರೂ, ‘ಇನ್ನು ನಾನು ಉಪವಾಸ ನಿಲ್ಲಿಸುವೆ’ ಎಂದವಳು ಹೇಳಬಹುದೆಂದು ಕಾಯುತ್ತಿದ್ದರು. ಹೊಸದು ಹಾಕುವ ಮುನ್ನ ಅವಳ ಮನಸ್ಥಿತಿ ತಿಳಿಯಲೆತ್ನಿಸುತ್ತಿದ್ದರು. ಈಗ ಆ ನಿರೀಕ್ಷೆ ನಿಲ್ಲಿಸಿಬಿಟ್ಟಿದ್ದಾರೆ.

‘ಡಾಕ್ಟರ್ ಬಾಪ್ಪಾ..’

ಕೈಯಿನ ಗ್ಲೋವ್ ತೆಗೆಯುತ್ತ ಸಿಂಕಿನ ಬಳಿ ನಿಂತಿದ್ದವರಿಗೆ ಇಳಾಳ ಕ್ಷೀಣ ದನಿ ಕೇಳಿ ಎಂಥದೋ ವೇದನೆಯ ತಂತು ಮಿಡಿದಂತಾಯಿತು:

‘ಹೇಳಮ್ಮ ಇಳಾ’

‘ಹೇಗೆ ಹೇಳಲಿ ಡಾಕ್ಟರ್ ಬಾಪ್ಪಾ? ನಂಗೆ ಊಟ ಮಾಡ್ಬೇಕು ಅನಿಸ್ತಿದೆ..’

‘ಏನಂದೆ?!’

‘ನಂಬಲಾಗುತ್ತಿಲ್ಲವೆ? ಆದರೆ ನಂಬಿ, ನಂಗೆ ಊಟ ಮಾಡ್ಬೇಕು, ಮದುವೆಯಾಗಬೇಕು, ಮಕ್ಕಳ ಹೆರಬೇಕು ಅನಿಸ್ತಿದೆ. ಇನ್ನೆಷ್ಟು ದಿನಾಂತ ಈ ಸಂಕ್ಟ ಅನುಭವಿಸಲಿ ಬಾಪ್ಪಾ?’

ನಿರ್ಮಲಾ ಸಿಸ್ಟರ್, ಡಾ. ವಾಗಳೆ ಎಲ್ಲರು ಬೆಚ್ಚಿ ಬಿದ್ದರು. ಇದೇನಿದು ಇಳಾ ಊಟಮಾಡಬೇಕೆನ್ನುತ್ತಿದ್ದಾಳೆ!? ‘ಸಿಸ್ಟರ್, ಇನ್ಸರ್ಷನ್ ಟೈಂ ರೆಕಾರ್ಡ್ ಮಾಡಿಬಿಡಿ’ ಎನ್ನುತ್ತ ವಾಗಳೆ ಇಳಾ ತಲೆದಸಿಗೆ ಬಂದು ಸಿಸ್ಟರನ್ನು ಆಚೆ ಕಳಿಸಿದರು. ಅವಳ ಮೂಗಿನ ಬಳಿ ಹಾರಾಡುತ್ತಿದ್ದ ಕೂದಲ ಸರಿಸುತ್ತ, ‘ಏನಂದೆ ಇಳಾ?’ ಎಂದರು. ಅವರ ದನಿಯ ಕರುಣೆಗೇ ಕರಗಿದವಳಂತೆ ಇಳಾ ಕಣ್ಣಲ್ಲಿ ನೀರುಕ್ಕಿತು. ‘ಬಾಪ್ಪಾ’ ಎನ್ನುತ್ತ ಬಿಕ್ಕಳಿಸಿದಳು. ನಿರಂತರ ಹಸಿವಿನಿಂದ, ಜಗಿಯುವಿಕೆಯೇ ಇಲ್ಲದೆ ಹುಟ್ಟಿದ ಖಿನ್ನತೆಯ ಕಾರಣದಿಂದ ಅವಳ ಮುಖ ಸದಾ ಗಂಭೀರವಾಗಿ, ಮ್ಲಾನವಾಗಿ ಇರುತ್ತಿದ್ದರೂ ಪ್ರಫುಲ್ಲತೆ ಇರುತ್ತಿತ್ತು. ಆದರಿಂದು ವಿಷಾದದ ಕಣ್ಣೀರು ಹರಿಯುತ್ತಿದೆ!

ವಾಗಳೆಯವರ ಆಶ್ಚರ್ಯಕ್ಕೆ ಪಾರವೇ ಇಲ್ಲ. ಬೆನ್ನುಹಾಕಿ ಮುಸುಕೆಳೆದು ಮಲಗಿದವಳ ಬಳಿ ‘ಹಾಗಾದರೆ, ಹಾಗಾದರೆ.. ತೆಗೆದುಬಿಡಲೆ ಇವತ್ತು ಹಾಕಿದ ಹೊಸ ಟ್ಯೂಬನ್ನ?’ ಎಂದು ಕೇಳಿದರು. ದನಿಯ ಸಂಭ್ರಮ ಹತ್ತಿಕ್ಕಲಾರದಷ್ಟಿತ್ತು.

‘ಬೇಡ ಡಾಕ್ಟರ್ ಬಾಪ್ಪಾ,’

‘ಯಾಕೆ ಬೇಡ? ಊಟ ಮಾಡಬೇಕು ಅಂದಿದ್ದಲ್ವ?’

‘ಆದರೆ ಅದು ಯಾರಿಗೂ ಇಷ್ಟವಿಲ್ಲ..’

‘ಹಾಗೆಂದರೇನು!? ಯಾರ ಇಷ್ಟಕ್ಕೆ ನೀನು ಇಷ್ಟುದಿನ ಉಪವಾಸವಿದ್ದದ್ದು?’

‘ಇನ್ನೊಮ್ಮೆ ಹೇಳ್ತೀನಿ ಬಾಪ್ಪಾ, ಪ್ಲೀಸ್..’

ಸುಮ್ಮನೆ ನಿಂತರು. ಐದು ನಿಮಿಷ, ಹತ್ತು ನಿಮಿಷ ಕಳೆಯಿತು. ಇಳಾ ಈಚೆ ತಿರುಗಲಿಲ್ಲ. ಬಿಕ್ಕು ನಿಲ್ಲಲಿಲ್ಲ. ಅವಳನ್ನು ಒತ್ತಾಯಿಸಿ ಕೇಳುವ ಮನಸ್ಸಾಗದೆ ಹೊರಬಂದ ವಾಗಳೆಯವರ ಮನದಲ್ಲಿ ನೂರು ಶಂಕೆಗಳು ಮಳೆಗಾಲದ ಅಣಬೆಯಂತೆ ಪುತಪುತನೆದ್ದವು. ಮದುವೆಯಾಗುವೆ ಅನ್ನುತ್ತಿದ್ದಾಳೆ, ಯಾರನ್ನು? ಅವಳ ಉಪವಾಸ ಬಲವಂತದ್ದೆ? ಅದನ್ನು ಹೇಗೆ ಗುರುತಿಸದೆ ಹೋದೆ ಇಷ್ಟುದಿನ? ಒಂದೊಮ್ಮೆ ಅವಳಿಗೀಗ ಉಪವಾಸ ನಿಲಿಸಬೇಕೆನಿಸಿದರೂ ಬಾಯಿಂದ ಉಣಲಾರದವಳ ಮುಂದಿನ ಗತಿಯೇನು? ನುಂಗಿದ ಅನ್ನವನ್ನು ಈಗ ಕೆಲಸ ಮರೆತಿರುವ ಅನ್ನನಾಳ ಒಳಬಿಟ್ಟುಕೊಂಡೀತೇ?



ಬೆಳಗಿನ ಬಿಸಿಲು ಮೇಲಕ್ಕೆ ಹೋಯಿತು. ಸಿಸ್ಟರು ಹೊಸ ನಳಿಕೆಯಲ್ಲಿ ಲೆಕ್ಕಮಾಡಿ ಆಹಾರ ಸುರುವಿ ಹೋದರು. ಇವತ್ತು ವಿಸಿಟರ‍್ಸ್ ಭೇಟಿ ಇರುವುದಿಲ್ಲ. ಇನ್ನಾರೂ ಇತ್ತ ಬರಲಾರರೆಂಬುದನ್ನು ಧೃಢಪಡಿಸಿಕೊಂಡು ಇಳಾ ತಲೆದಸಿಯಿಂದ ಪುಟ್ಟ ಕವರೊಂದನ್ನು ಎಳೆದಳು. ಅದರ ತುಂಬ ಪತ್ರಗಳ ಕಂತೆ. ಆ ಕೈಬರಹ ಕಂಡದ್ದೇ ಅವಳಿಗರಿವಿಲ್ಲದೆ ಹಿಗ್ಗು ಮೈಯನಾವರಿಸಿಕೊಂಡಿತು.

ಮೊನ್ನೆ ಬಂದ ಪತ್ರದ ಜೊತೆಗಿದ್ದ ಅವನ ಫೋಟೋ ಕೈಲಿ ಹಿಡಿದಳು. ಈಗ ಮಾತು ಶುರುಮಾಡುವನೇನೋ ಎನ್ನುವಂತೆ ಅರೆತೆರೆದ ತುಟಿಯಲ್ಲಿ ನಸುನಗೆ ತುಳುಕಿಸುತ್ತ ಮೆಟ್ಟಿಲ ಮೇಲೆ ಮುಂಬಾಗಿ ಕುಳಿತು ಕತ್ತೆತ್ತಿ ನೋಡುವ ಭಂಗಿಯ ಫೋಟೊ. ಸಾದಾ ಪ್ಯಾಂಟು ಜುಬ್ಬಾದಲ್ಲಿ ಇಡೀ ದೇಹವೇ ಪ್ರೀತಿ ಸೂಸುತ್ತಿರುವಂತೆ ಕಾಣಿಸುವ ಮುಖದ ಗೆರೆಗಳು. ಸುರಸುಂದರನಲ್ಲ, ಆದರೆ ದಿಟ್ಟಿಸುವ ಕಣ್ಣುಗಳಲ್ಲಿ ಏನೋ ಸೆಳೆತ.

‘ಜೀವ ಸಂಗಾತಿಯೇ, ನಾನು ನಿನಗಾಗಿಯೇ ಹುಟ್ಟಿದ್ದೇನೆ. ಇಷ್ಟುವರ್ಷ ಯಾತಕ್ಕಾಗಿ, ಯಾರಿಗಾಗಿ ಕಾದಿದ್ದೆ ಎನ್ನುವುದು ಈಗ ಸ್ಪಷ್ಟವಾಗಿದೆ. ನನ್ನ ದೇವತೆಯೇ, ನಿನ್ನ ಮನೋಬಲದಲ್ಲಿ, ಮಾಗಿದ ನಡವಳಿಕೆ-ಮಾತುಗಳಲ್ಲಿ ನನ್ನ ಆತ್ಮಸಂಗಾತಿಯನ್ನು ಕಂಡಿದ್ದೇನೆ. ನೀನು ಉಪವಾಸ ಶುರುಮಾಡಿದ ದಿನದಿಂದ ಗಮನಿಸಿದ್ದೇನೆ, ನಿನ್ನ ದೇಹದ ಸ್ಪಂದನೆ, ಮನೋನಿಗ್ರಹ ನನ್ನನ್ನು ನಿಬ್ಬೆರಗಾಗಿಸಿದೆ. ನೀನು ಸಾಧಾರಣ ವ್ಯಕ್ತಿಯಲ್ಲ. ನಿನ್ನಲ್ಲೊಂದು ಅಸೀಮ ಆಧ್ಯಾತ್ಮ ಪ್ರಭೆಯಿದೆ. ಆ ಶಕ್ತಿಯಿಂದಲೇ ಇಷ್ಟು ವರ್ಷ ಹೀಗೆ ಉಪವಾಸವಿದ್ದೂ ಜೀವಂತ ಉಳಿಯಲು ಸಾಧ್ಯವಾಗಿದೆ. ನಿನ್ನ ಬಲ ನಿನಗಿನ್ನೂ ತಿಳಿದಿಲ್ಲ ಜೀವವೇ. ನೀನು ನನ್ನ ಗುರು, ದಾರಿದೀಪ, ಸಂಗಾತಿ ಎಲ್ಲವೂ. ಈ ಎಲ್ಲ ವರ್ಷಗಳಲ್ಲಿ ನಾನು ತಿರುಗದ ಜಾಗವಿಲ್ಲ. ಸಂದರ್ಶಿಸದ ಆಧ್ಯಾತ್ಮ ಕೇಂದ್ರವಿಲ್ಲ. ಸೂಫಿ, ಯೋಗ, ವಿಪಸ್ಸನ, ಇವಾಂಜೆಲಿಸಂ.. ಎಂದೆಲ್ಲ ತಿರುಗಿ ಸಾಧನೆ ಮಾಡಿದರೂ, ನಾನು ಬಹು ಎತ್ತರ ತಲುಪಿರುವೆನೆಂದು ಉಳಿದವರು ಹೇಳುತ್ತಿದ್ದರೂ, ಯಾವುದೋ ಅಪೂರ್ಣತೆ ನನ್ನನ್ನು ಕಾಡುತ್ತಿದೆ. ಈಗ ಹೊಳೆಯಿತು, ನಿನ್ನ ಹೊರತು ನಾನು ಅಪೂರ್ಣ. ನೀನಿಲ್ಲದೆ ನನಗೆ ಭವಿಷ್ಯವೇ ಇಲ್ಲ. ಆದರೆ ದೈಹಿಕ ಕಾಮನೆಗಳ ಸೆಳೆತ ನನ್ನ ಬಳಿ ಈ ಮಾತು ಆಡಿಸುತ್ತಿದೆ ಎಂದು ತಿಳಿಯಬೇಡ. ವಾಂಛೆಗಳ ಮೀರಿ ಬದುಕುವುದೇ ಪವಿತ್ರ ಸಾಹಚರ್ಯ ಎಂದುಕೊಂಡಿರುವೆ. ನನಗೆ ಯಾವ ದಿನ, ತಿಂಗಳು, ವರ್ಷ ಎಂಬ ಎಣಿಕೆ ಇಲ್ಲ. ಇನ್ನೂ ಎಷ್ಟು ಕಾಲ ಎಂಬ ಲೆಕ್ಕಾಚಾರವೂ ಇಲ್ಲ. ಕೇವಲ ಆ ಒಂದು ದಿನಕ್ಕಾಗಿ ಕಾಯುತ್ತೇನೆ, ಎಂದು ನನ್ನ ದೇವತೆ ನನ್ನವಳಾಗುವಳೋ, ಎಂದು ನನ್ನನ್ನು ತನ್ನವನೆನ್ನುವಳೋ ಅಂಥ ಒಂದು ದಿನಕ್ಕಾಗಿ.

ಬರುವ ತಿಂಗಳು ಹದಿಮೂರಕ್ಕೆ ಪಣಜಿಯ ಕೋರ್ಟಿನಲ್ಲಿ ನಿನ್ನ ಹಾಜರುಪಡಿಸುವರಲ್ಲವೆ? ನಾನು ಅವತ್ತು ಅಲ್ಲಿರುತ್ತೇನೆ. ನಿನಗೇನನಿಸುತ್ತಿದೆಯೋ ಆ ಎದೆಯ ನಿಜವನ್ನೇ ಅವತ್ತು ಹೇಳು. ನಿನ್ನ ಮನದ ಮಾತುಗಳನ್ನು ಲಾಯರುಗಳಿಗೆ ಆಡಲು ಬಿಡದೆ ನೀನೇ ಆಡು. ನನ್ನ ಭಾಗ್ಯದೇವತೆಯೇ, ಅಂದು ನಿನ್ನೆದುರು ಮಂಡಿಯೂರಿ ಕುಳಿತು ನನ್ನೆದೆ ಬಿಚ್ಚಿ ಹರಡಬೇಕು. ಕೈಕೈ ಹಿಡಿದ ಒಂದು ಸ್ಪರ್ಶದಲ್ಲಿ ನಮ್ಮೆಲ್ಲ ಸುಖದುಃಖ, ಭೂತಭವಿಷ್ಯಗಳು ಹಂಚಿಹೋಗಬೇಕು. ಎಂದೂ ನಗುವನ್ನೇ ಕಾಣದಂತಿರುವ ಆ ಕೃಶದೇಹದಲ್ಲಿ, ಮಾಸಿದ ಮುಖದಲ್ಲಿ, ಒಣಗಿ ಸಿಪ್ಪೆ ಸುಲಿದ ಕೆಂಪುತುಟಿಗಳಲ್ಲಿ ನಗೆಮಿಂಚು ಸುಳಿಯಬೇಕು. ಒಂದೆಸಳು ನಗುವಿನ ಕಾರಣ ನಾನಾಗಬೇಕು.

ಇಷ್ಟೇ, ಇಷ್ಟೇ ಸಾಕು ನನಗೆ. ಮುಂದಿನ ಬದುಕನ್ನು ನಿರ್ಧರಿಸುವುದು ಅದೇ ಗಳಿಗೆ.

ಇಂತು ನಿನ್ನವನೇ,                                                  ಸಾಹಿಲ್ ಇಳಾ ಇಲಾಹಿ..’

ಇದು ಎಷ್ಟನೇ ಬಾರಿ ಅವಳು ಈ ಪತ್ರ ಓದುತ್ತಿರುವುದು? ಓದುತ್ತಿರುವಾಗಲೆಲ್ಲ ಜುಮ್ಮನೆ ಅಂಗಾಲಿಂದ ನೆತ್ತಿಗೆ ರಕ್ತ ಸರಸರ ಹರಿದಂತಾಗಿ ಕಿವಿ, ಹೊಟ್ಟೆ, ತೊಡೆಸಂದುಗಳೆಲ್ಲ ಬಿಸಿಯೇರಿ ಇದುವರೆಗು ಆಗದ ಅನುಭವವೊಂದು ಸುಳಿಯುತ್ತದೆ. ಕಣ್ಣು ಭಾರವೆನಿಸಿ ಎವೆ ತಂತಾನೇ ಮುಚ್ಚಿಕೊಳ್ಳುತ್ತದೆ. ಒಳಗೆಲ್ಲ ಏನೋ ಸುರಿದು ಒದ್ದೆಯಾದ ಅನುಭವ. ಪ್ರೇಮವೆಂದರೆ ಇದೇ ಏನು?

ಮೂರು ವರ್ಷಗಳಿಂದ ಪತ್ರ ಬರೆಯುತ್ತಿರುವ ಸಾಹಿಲನ ಹಿಂದಿನ ಪತ್ರಗಳನ್ನೆಲ್ಲ ಹುಡುಕಿ, ಹೆಕ್ಕಿ ಒಂದುಕಡೆ ಇಟ್ಟಿದ್ದಳು. ಎಷ್ಟು ಚಂದನೆಯ ಕೈಬರಹ?! ಮೊದಲೆಲ್ಲ ತಿಂಗಳಿಗೊಮ್ಮೆ ವ್ಯಕ್ತಿ ಪರಿಚಯ ಹೇಳದೆ ಸಂಗಾತಿ ಎಂಬ ಹೆಸರಿನಲ್ಲಿ ಪತ್ರ ಬರುತ್ತಿತ್ತು. ಅವಳ ಉಪವಾಸಕ್ಕೆ ಬೆಂಬಲ ಸೂಚಿಸುತ್ತಿತ್ತು. ಬರೆವವರು ಗಂಡೋ ಹೆಣ್ಣೋ ತಿಳಿಯದಿದ್ದರೂ ಅವಳ ನಡೆಗಳನ್ನು ಬಹು ಸೂಕ್ಷ್ಮದಿಂದ ಗಮನಿಸುವವರೆಂದು ಪತ್ರದ ಒಕ್ಕಣೆಯಿಂದ ತಿಳಿಯುತ್ತಿತ್ತು. ನಂತರ ಅವಳ ಉಪವಾಸಕ್ಕೆ ಸಹಮತ ವ್ಯಕ್ತಪಡಿಸುತ್ತ ತಾನೂ ವಾರಕ್ಕೆರೆಡು ದಿನ ಉಪವಾಸ ಮಾಡುತ್ತಿರುವುದಾಗಿ ಪತ್ರ ಹೇಳಿತು. ಉಪವಾಸದಿಂದ ದೊರಕುವ ಆತ್ಮಶಕ್ತಿ ಎಂಥ ಬಲಶಾಲಿ ಶತ್ರುವನ್ನೂ ಮಣಿಸುವಷ್ಟು ಬಲವುಳ್ಳದ್ದೆಂದು ಪ್ರತಿ ಪತ್ರವೂ ಧೈರ್ಯ ಹೇಳುವ ಮಾತುಗಳಿಂದ ತುಂಬಿರುತ್ತಿದ್ದವು. ತಾನಾರೆಂದು ತಿಳಿಸದೆ, ಎಲ್ಲಿಂದ ಎಂಬ ವಿಳಾಸವೂ ಇರದೆ ಬರುತ್ತಿದ್ದ ಸಂಗಾತಿಯ ಪತ್ರಗಳಿಗೆ ಉತ್ತರಿಸುವ ಪ್ರಮೇಯವೇ ಇಲ್ಲ.

ಪೂರ್ಣ ವಿಳಾಸವಿಲ್ಲದೆ ಜೈಲಿನ ಖೈದಿಗೆ ಬರುವ ಪತ್ರಗಳನ್ನು ಕೊಡಬಾರದೆಂಬ ನಿಯಮವಿದ್ದರೂ ಪೊಲೀಸರಿಗೆ ಇಳಾ ಖೈದಿ ಎನಿಸಿರಲೇ ಇಲ್ಲ. ಅವಳು ಹಠ ಹಿಡಿದು ಊಟ ಬಿಟ್ಟ ಪಕ್ಕದ ಮನೆಯ ಹುಡುಗಿಯಂತೆ ಕಾಣಿಸಿದ್ದಳು. ಎಂದೇ ಬರೆದವರ ವಿಳಾಸ ಇಲ್ಲದೆ ಬಂದ ಸಾಹಿಲನ ಪತ್ರಗಳೆಲ್ಲ ಅವಳಿಗೆ ಸಿಕ್ಕುತ್ತಿದ್ದವು. ಬರಬರುತ್ತ ಪತ್ರಗಳ ಧಾಟಿ ಬದಲಾಗುತ್ತ, ಬರೆವವರ ಪರಿಚಯ ಕೊಂಚಕೊಂಚವೇ ನಿಚ್ಚಳವಾಗುತ್ತ ಬಂತು. ಅದು ಗಂಡಸು. ಗೋವೆಯ ಪಣಜಿಯ ಆಚೀಚೆ ಎಲ್ಲೋ ವಾಸ. ತನ್ನನ್ನು ಆರಾಧಿಸುವ ಜೀವ ಎಂದು ಇಳಾಗೆ ಅರ್ಥವಾಯಿತು. ವರ್ಷದ ಕೆಳಗೆ ಬಂದ ಪತ್ರದಲ್ಲಿ ಪ್ರೇಮ ನಿವೇದನೆಯಿತ್ತು. ಮೊದಮೊದಲು ಇಳಾಗೆ ಭಯವೆನಿಸಿದರೂ ಅಶ್ಲೀಲವೆನಿಸದ ಕಾವ್ಯಮಯ ಧಾಟಿಯ ಬರಹ ಸೂಜಿಗಲ್ಲಿನಂತೆ ಹಿಡಿದಿಟ್ಟಿತು. ಆರ್ತದನಿಯ ನಿವೇದನೆ ಯಾವುದೋ ಅಂತಃಶಕ್ತಿ ತುಂಬುವಂತೆನಿಸುತ್ತಿತ್ತು.

ಓ ದೇವರೇ, ಪಾರ‍್ತಕ್ಕ ಏನಾದರೂ ಈ ಪತ್ರ ಕಂಡರೆ ಎಂಬ ಅಳುಕು ಇಳಾದು. ಪಾರ‍್ತಕ್ಕ ಇಳಾಗೆ ಪಿಎ, ಪಿಎಸ್, ಪಿಆರ್‌ಒ, ಅಕ್ಕ, ಅಣ್ಣ ಎಲ್ಲವೂ. ೨೫೦ ಕಿಮೀ ದೂರದಿಂದ ಬಂದು ವಾರಕ್ಕೆ ಮೂರು ದಿನ ಇಳಾ ಭೇಟಿ ಮಾಡುತ್ತಾಳೆ. ಇಳಾ ಪರವಾಗಿ ಎಲ್ಲವನ್ನೂ ನಿರ್ಧರಿಸುತ್ತಾಳೆ, ನಿಭಾಯಿಸುತ್ತಾಳೆ. ಮಹಿಳಾ ಹೋರಾಟಗಾರ್ತಿ ಪಾರ‍್ತಕ್ಕ ಕರಾವಳಿಯ ಜನವಾಹಿನಿ ಮಹಿಳಾ ಸಂಘಟನೆಯ ಬೆನ್ನೆಲುಬು. ಸಾರಾಯಿ ವಿರೋಧಿ ಹೋರಾಟ, ಪಶ್ಚಿಮ ಘಟ್ಟ ಉಳಿಸಿ ಹೋರಾಟ, ದೇವಬಾಳೆ ಭೂಹೋರಾಟದಲ್ಲಿ ಭಾಗವಹಿಸಿದವಳು. ಸ್ವಂತ ಕುಟುಂಬವನ್ನು ಕಟ್ಟಿಕೊಳ್ಳದೆ, ಮದುವೆಯಾಗದೆ ಲೋಕಸಂಸಾರಿಯಾಗಿರುವವಳು. ಅವಳು ಪ್ರೇಮಗೀಮದಂತಹ ಹುಚ್ಚಾಟ ಸಹಿಸಲಾರಳು. ಮೊನ್ನೆಯಷ್ಟೇ ಹೇಳಿದಳಲ್ಲ, ‘ಗಂಡಿಗೆ ಹೆಣ್ಣು ಮಾಯೆ. ಹೆಣ್ಣಿಗೆ ಗಂಡು ಮಾಯೆ. ಇಷ್ಟೇ ಅಂದರೆ ಇಷ್ಟೇ. ಪ್ರೇಮ, ಮದುವೆ, ಸಂಸಾರ, ಮಕ್ಕಳು ಉಳಿದಿದ್ದೆಲ್ಲ ಬರೀ ಬುಲ್‌ಶಿಟ್’ ಎಂದು. ಯಾತಕ್ಕಾಗಿ ಹಾಗೆ ಹೇಳಿದಳು? ಅವಳಿಗೇನಾದರೂ ಸಾಹಿಲನ ಸುಳಿವು ಹತ್ತಿತೇ?

***

‘ನಿಮ್ಮ ಪ್ರಯತ್ನ ಆತ್ಮಹತ್ಯೆಯಲ್ಲವೇ?’

‘ಅಲ್ಲ ಯುವರ್ ಆನರ್. ನನ್ನ ಉಪವಾಸದ ಉದ್ದೇಶ ಪ್ರಾಣ ತೆಗೆದುಕೊಳ್ಳುವುದಲ್ಲ, ಊರಿನ ಜನರ ಜೊತೆ ಮುಕ್ತ ಅವಕಾಶಗಳೊಡನೆ ಬದುಕುವುದು. ಕಡಲ ಮಕ್ಕಳ ಸುರಕ್ಷಿತ ಬದುಕಿಗಾಗಿ ಪರಮಾಣು ಸ್ಥಾವರ ಮತ್ತು ವಾಣಿಜ್ಯ ಬಂದರು ಯೋಜನೆ ನಿಲಿಸುವಂತೆ ಒತ್ತಾಯಿಸುವುದು ಈ ಉಪವಾಸದ ಉದ್ದೇಶವಾಗಿತ್ತು.’

‘ಎಂದರೆ ನಿಮಗೆ ಸಾಯುವ ಅಪೇಕ್ಷೆಯಿಲ್ಲವೆ?’

‘ಇಲ್ಲ. ನನಗೆ ಬದುಕುವ ಆಸೆ. ಹೀಗೆ ಈ ನಳಿಗೆ ಏರಿಸಿಕೊಂಡು ಹೆಚ್ಚು ದಿನ ಇರಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದಾಗ ಕಂಗಾಲಾಯಿತು. ನನಗೆ ಬದುಕಬೇಕು. ಈ ಸಲ ಒಂದು ವಿಷಯ ನಿಮ್ಮ ಬಳಿ ಹೇಳಲೆಂದೇ ವಕೀಲರ ಬದಲು ನಾನು ಮಾತನಾಡುತ್ತಿರುವೆ. ದಯವಿಟ್ಟು ಸಮಯ ಕೊಡುವಿರಾ ಯುವರ್ ಆನರ್?’

‘ಹೇಳಿ. ನಿಮ್ಮ ಪರವಾಗಿ ನೀವೇ ಮಾತನಾಡಬಹುದು. ಸಮಯಾಭಾವ ಇಲ್ಲ.’

‘ಈಗ ನನಗೆ ಊಟಮಾಡುವ ಆಸೆ ಹುಟ್ಟಿದೆ ಯುವರ್ ಆನರ್. ನಾನು ಗೆದ್ದು ಉಪವಾಸ ನಿಲಿಸಬೇಕು. ಆಯಿ ಮಾಡುವ ಮೀನ್‌ಫ್ರೈ, ಪತ್ರೊಡೆ, ತಂಬ್ಳಿ, ದೊಡ್ನ ಎಲ್ಲ ನೆನಪಾಗುತ್ತಿದೆ. ಅವುಗಳ ರುಚಿ ಮರೆಯುವ ಮೊದಲು ಎಲ್ಲರ ಜೊತೆ ಕೂತು ಉಣ್ಣಬೇಕು ಅನಿಸುತ್ತಿದೆ. ಅಷ್ಟೇ ಅಲ್ಲ, ನಾನು ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿರುವೆ. ಅವನ ಮದುವೆಯಾಗಬೇಕು. ಮಕ್ಕಳ ಹೆರಬೇಕು. ಸಂಸಾರ ಕಟ್ಟಿಕೊಳ್ಳಬೇಕು.’

‘ಏನು ಹೇಳುತ್ತಿದ್ದೀರಿ ಮಿಸ್ ಇಳಾ?’

‘ಸತ್ಯವನ್ನೇ ನುಡಿಯುತ್ತಿದ್ದೇನೆ ಯುವರ್ ಆನರ್. ಹಾಗೆಂದು ಪ್ರಮಾಣ ಮಾಡಿದ್ದೇನೆ. ಕೇಳಿ, ನನಗೊಬ್ಬ ಪ್ರೇಮಿಯಿದ್ದಾನೆ. ನಾವಿಬ್ಬರೂ ಎರಡು ದೇಹ, ಒಂದು ಜೀವವೆನ್ನುವಷ್ಟು ಹತ್ತಿರವಾಗಿದ್ದೇವೆ. ನಾನು ಒಮ್ಮೆಯೂ ಅವನನ್ನು ನೋಡಿಲ್ಲ. ಕೇವಲ ಪತ್ರ-ಅಭಿಪ್ರಾಯಗಳ ಮೂಲಕ ಸನಿಹವಾದ ಸಮಾನ ಮನಸ್ಕರು ನಾವು. ನನಗೆ ಸಾಯುವ ಇಚ್ಛೆಯಿಲ್ಲ, ಬಿಡುಗಡೆಯಾಗಿ ಅವನೊಡನೆ ನಾನೂ ನಾಲ್ಕು ಕಾಲ ಬಾಳಬೇಕು. ಆದರೆ.. ಅವನಿಗೆ ಹೊರಜಗತ್ತಿನಿಂದ ಅಪಾಯವಿದೆ. ಅವನಿಗೆ ರಕ್ಷಣೆ ಒದಗಿಸಿ. ಅವ ನನಗಾಗಿ ಬದುಕಬೇಕು.’

‘ಅವರು ಯಾರು? ಎಲ್ಲಿರುತ್ತಾರೆ? ಅವರಿಗೆ ಅಪಾಯ ಏಕೆ?’

‘ಯಾರು ಎಲ್ಲಿಯವರೆಂದು ನೀವೇ ತಿಳಿಯಿರಿ. ಈಗಿಲ್ಲೆಲ್ಲೋ ಇದ್ದಾರೆ. ಅವರಿಗೆ ಅಪಾಯ ಏಕೆಂದರೆ ನಾನು ಪ್ರೇಮಿಸುವುದು, ಉಪವಾಸ ನಿಲಿಸುವುದು ಯಾರಿಗೂ ಇಷ್ಟವಿಲ್ಲ. ನನ್ನ ಉಪವಾಸ ಹೀಗೇ ಮುಂದುವರೆದು, ದಾಖಲೆ ಮೇಲೆ ದಾಖಲೆಯಾಗಿ ಜನ ಜಾಗೃತರಾಗಬೇಕೆಂದು ಎಲ್ಲ ಬಯಸುತ್ತಾರೆ. ಆದರೆ, ಆದರೆ.. ನಾನೂ ಮನುಷ್ಯಳು. ಕೇವಲ ನನ್ನೊಬ್ಬಳ ಹೆಗಲ ಮೇಲೆ ಪರಮಾಣು ಸ್ಥಾವರ ವಿರೋಧಿ ಹೋರಾಟದ ಹೊರೆ ಹೊರಿಸಿ ಉಳಿದಂತೆ ಎಲ್ಲರು ಅವರವರ ಮನೆಯಲ್ಲಿ ಬೆಚ್ಚಗಿದ್ದಾರೆ. ಇನ್ನು ಯಾವ ಸಿಂಗೂರಿನ ಜನರಿಗಾಗಿ ಈ ಹೋರಾಟವೋ, ಅಲ್ಲಿನ ಜನರೇ ನಮಗೆ ಸ್ಥಾವರ ಬೇಕೆಂದು ಪಟ್ಟು ಹಿಡಿದರೆ ಏನೂ ಆಶ್ಚರ್ಯವಿಲ್ಲ. ಆಗ ಒಬ್ಬ ವ್ಯಕ್ತಿಯ ಹದಿನೈದು ವರ್ಷದ ಉಪವಾಸ, ಕೆಲವರ ಬಲಿದಾನ, ಜೈಲುವಾಸದಿಂದ ಏನು ಆದ ಹಾಗಾಯಿತು? ಜನ ಬೆಂಬಲವಿಲ್ಲದ ಹೋರಾಟಕ್ಕೆ ಏನರ್ಥ?’

ಇಡೀ ಕೋರ್ಟ್ ರೂಮು ದಂಗುಬಡಿಯಿತು. ಎಲ್ಲರಿಗು ಅವರವರ ಉಸಿರು ಅವರವರಿಗೆ ಕೇಳುವಷ್ಟು ನಿಶ್ಶಬ್ದ. ಪಾರ‍್ತಕ್ಕ ನಡುವೆಯೇ ಎದ್ದುನಿಂತು ಕೆಮ್ಮಿ ಗಮನ ಸೆಳೆಯಲು ಯತ್ನಿಸಿದರೂ ಜಡ್ಜ್ ಸನ್ನೆ ಮಾಡಿ ಕೂರಿಸಿದರು. ಆದರೆ ಅವಳನ್ನು ನೋಡಿದ್ದೇ ಇಳಾ ಮಾತು ನಿಲ್ಲಿಸಿದಳು. ಇಳಾದು ಆತ್ಮಹತ್ಯೆ ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾದ ಕಾರಣ ಆಕೆಯನ್ನು ಬಿಡುಗಡೆ ಮಾಡಲಾಗಿದೆ ಎಂದು ಜಡ್ಜ್ ಕೊನೆಗೆ ತೀರ್ಪು ಓದಿದರು. ಅಲ್ಲಿದ್ದ ಕೆಲವೇ ಮಾಧ್ಯಮದ ಮಂದಿ ಎಂಥ ಬಿಸಿಬಿಸಿ ತಾಜಾ ಸುದ್ದಿ ಸಿಕ್ಕಿತಲ್ಲ ಎಂದು ಇಳಾ ಸಂದರ್ಶನಕ್ಕಾಗಿ ಸಿದ್ಧಮಾಡಿಕೊಳ್ಳತೊಡಗಿದರು. ಇಳಾ ಹೀಗೆ, ಇಷ್ಟು ಎಂದೂ ಮಾತನಾಡಿರಲಿಲ್ಲ.

ಕಲಾಪದ ವೇಳೆ ಇಳಾ ಕಣ್ಣು ವಿಸಿಟರ‍್ಸ್ ಡೆಸ್ಕಿನ ಕಡೆಯೇ ತಿರುಗುತ್ತಿತ್ತು. ಸಂಗಾತಿ ಬಂದು ಅಲ್ಲಿರುವುದಾಗಿ ಹೇಳಿದ್ದ. ಬಂದಿರಬಹುದೆ ಎಂಬ ಕುತೂಹಲ. ತನ್ನ ಬಳಿಯಿದ್ದ ಫೋಟೋದ ಮುಖ ನೆನಪಿಸಿಕೊಳ್ಳುತ್ತ ಆ ಕಡೆ ನಡೆದಳು. ಪಾರ‍್ತಕ್ಕನ ಕರೆಯಾಗಲೀ, ‘ಮೇಡಂ ಒಂದ್ನಿಮಿಷ’ ಎಂಬ ಮೀಡಿಯಾದವರ ಕೂಗಾಗಲೀ ಅವಳ ಕಿವಿಗೇ ಬೀಳಲಿಲ್ಲ. ಕಣ್ಣುಕಾಲುಗಳೆರೆಡೂ ನೆಲ ನೋಡದೇ ಬರೀ ಹುಡುಕಾಟವೇ ಆಗಿ ಸರಸರ ಚಲಿಸುವಾಗ ಮೆಟ್ಟಿಲು ಕಾಣದೇ ಮುಗ್ಗರಿಸಿದಳು.

ಹಿಡಿದು ಮೇಲೆತ್ತಿದವರು ‘ಇಳಾ ಸಾಹಿಲ್ ಇಲಾಹಿ, ನನ್ನ ಒಲವಿನ ದೇವತೆಯೇ’ ಎಂದರು.



ಮುಂದಿನ ಹದಿನೈದು ನಿಮಿಷ ಇಡೀ ಜಗತ್ತು, ಸುತ್ತಮುತ್ತ ನೆರೆದವರು ಯಾವುದೂ ಅವರಿಬ್ಬರಿಗೆ ಕಾಣಲಿಲ್ಲ, ಕೇಳಲಿಲ್ಲ. ಆ ನೋಟದ ತೀವ್ರತೆಯನ್ನು ಅರ್ಥಮಾಡಿಕೊಂಡವರಂತೆ ಉಳಿದವರು ದೂರದೂರ ಸರಿದರು. ಸಂತೆಯೊಳಗೂ ಒಂದು ಏಕಾಂತದ ಗಳಿಗೆ ಹೊಂದಿಸಿಕೊಂಡ ಇಬ್ಬರು ಕೈಕೈ ಹಿಡಿದು ಖಾಲಿಯಾಗತೊಡಗಿದ್ದ ಬೆಂಚುಗಳ ಮೇಲೆ ಕುಳಿತರು. ಅವರ ನಡುವೆ ಒಂದೇ ಒಂದು ಮಾತೂ ಹರಿದಾಡಲಿಲ್ಲ. ಒಂದು ಸ್ಪರ್ಶದಲ್ಲಿ, ಆ ಕ್ಷಣದ ಕ್ಷಣಿಕತೆಯಲ್ಲಿ ಭೂತಭವಿಷ್ಯದ ಸುಖದುಃಖಗಳನ್ನೆಲ್ಲ ಹಂಚಿಕೊಳ್ಳುತ್ತಿರುವವರಂತೆ ಕುಳಿತರು. ಕೃಶವಾದ ಸಪೂರ ಕೈಗಳು ಬಾಹುಬಲಿಯ ಬೊಗಸೆಯ ಬಿಸಿಯಲ್ಲಿ ಬಂದಿಯಾದವು. ಸೆಟೆದು ಒಣಗಿದ ಅವಳ ತುಟಿಗಳು ಅರಳಿ ಕಣ್ಣಲ್ಲಿ ನೀರು ತುಂಬತೊಡಗಿತು. ಎಲ್ಲ ಮಸುಕುಮಸುಕಾಗಿ ಕಾಣುವಾಗ ಕತ್ತೆತ್ತಿ ನೋಡಿದರೆ ಅವನ ಅರೆನರೆತ ಕೂದಲು, ಇಳಿಬಿದ್ದ ಗಲ್ಲ, ಕಂಡೂ ಕಾಣದ ಕಿರುನಗೆಯ ತೇಜೋಮಯ ಮುಖ. ಆ ಕಣ್ಣಲ್ಲೂ ನೀರು..

ಅವರ ನರನಾಡಿಗಳಲ್ಲಿ ಆಡುತ್ತಿದ್ದದ್ದು ಖುಷಿಯೋ, ಪ್ರೇಮವೋ, ಧನ್ಯತೆಯೋ, ಇನ್ನೇನು ಅಗಲಬೇಕೆಂಬ ವಿಷಾದವೋ ಅವರಿಗೇ ಗೊತ್ತಾಗಲಿಲ್ಲ. ಅವರಿಬ್ಬರ ಕೈಲಿ ಗಡಿಯಾರವಿಲ್ಲದಿದ್ದರೂ ಸುತ್ತಮುತ್ತಲ ಜಗತ್ತು ಮೈತುಂಬ ಗಡಿಯಾರವಾಗಿ ಅವರ ಗಮನಿಸುತ್ತಿತ್ತು. ಕ್ಯಾಮೆರಾಗಳು ಎಡೆಬಿಡದೆ ಕೆಲಸ ಮಾಡಿದವು. ಇಳಾಳ ಸೆಕ್ಯುರಿಟಿ ಆಫೀಸರರಿಬ್ಬರೂ ಎರಡೂ ಕಡೆ ಬಂದು ನಿಂತಿದ್ದರು. ಮಹಿಳಾ ಪೊಲೀಸು ನೀಲಾ ಎಂದಿನಂತೆ ಅಕ್ಕಾ ಎನ್ನದೆ ‘ಮೇಡಂ..’ ಎಂದು ಟೈಂ ನೆನಪಿಸಿ ಅವಳನ್ನು ಎಳೆದುಕೊಂಡು ಆಂಬುಲೆನ್ಸಿನತ್ತ ಹೊರಟಳು. ಕೊನೆಗೆ ಸಾಹಿಲ್ ಓಡಿಹೋಗಿ ದೂರ ಇಟ್ಟಿದ್ದ ಚೀಲದಿಂದ ಬೆಕ್ಕಿನ ಮರಿ ಹಿಡಿದು ಬಂದ. ಮೀಂಗುಡುವ ಬಿಳಿಯ ಮುದ್ದು ಮರಿ..

ಸೆಕ್ಯುರಿಟಿಯವರು ಆ ಪ್ರಾಣಿಯನ್ನು ಏನು ಮಾಡುವುದೆಂದು ಯೋಚಿಸುವುದರೊಳಗೆ ಇಳಾ ಅದನ್ನು ಹಿಡಿದೆತ್ತಿ ಎದೆಗೆ ಅವುಚಿಕೊಂಡಳು. ಅವಳ ತುಂಬ ಇಷ್ಟದ ಪ್ರಾಣಿ ಬೆಕ್ಕು. ಆ ಕ್ಷಣ ಅದು ತಮ್ಮ ಪ್ರೇಮದ ಪ್ರತಿನಿಧಿಯಂತೆ, ಅದನ್ನು ಜೋಪಾನ ಮಾಡಬೇಕಾದ್ದು ತನ್ನ ಜವಾಬ್ದಾರಿಯೆಂಬಂತೆ ಅನಿಸಿಹೋಯಿತು. ನೀಲಾ ಟೈಂ ಆಯ್ತು ಎನ್ನುತ್ತ ಅವಳ ಕರೆದುಕೊಂಡು ಹೋಗುವ ಹೊತ್ತಿಗೆ ಕಮ್ಯಾಂಡೋಗಳು ಸುತ್ತುವರಿದರು. ಮೀಡಿಯಾದವರು ಪ್ರಶ್ನೆಗಳ ಮಳೆ ಸುರಿಸುತ್ತ ಪಾರ‍್ತಕ್ಕನ ಜೊತೆ ಬಂದರು.

‘ಮೇಡಂ, ನೀವಿವತ್ತು ಎಂದೂ ಕೊಡದ ಹೇಳಿಕೆಯೊಂದನ್ನು ಕೊಟ್ಟಿರಿ. ಊಟಮಾಡಬೇಕೆಂದಿರಿ. ಮದುವೆಯಾಗುವೆನೆಂದಿರಿ. ಸ್ವಲ್ಪ ಬಿಡಿಸಿ ಹೇಳಿ. ಕೊನೆಗೆ ನಿಮ್ಮ ಭೇಟಿಯಾದ ಆ ವ್ಯಕ್ತಿ ಯಾರು?’

‘ಅವರು ನನ್ನ ಸಂಗಾತಿ, ಸಾಹಿಲ್ ಇಲಾಹಿ. ಅಲ್ಲ ಅಲ್ಲ, ಸಾಹಿಲ್ ಇಳಾ ಇಲಾಹಿ. ನಾವಿಬ್ಬರೂ ನನ್ನ ಬಿಡುಗಡೆಯಾದ ನಂತರ ಒಟ್ಟಿಗೆ ಬದುಕಲಿಚ್ಛಿಸುತ್ತೇವೆ.’

‘ಯಾವ ಸೂಚನೆಯೂ ಇಲ್ಲದೆ ಇದ್ದಕ್ಕಿದ್ದಂತೆ ಪ್ರೇಮ ಘೋಷಿಸಿಬಿಟ್ಟಿರಿ?’

‘ಪ್ರೇಮ ಪೂರ್ವ ಸೂಚನೆ ಕೊಟ್ಟು ಬರುವಂಥದೆ? ಎಲ್ಲರಂತೆ ನನಗೂ ಖಾಸಗಿ ಇಷ್ಟಾನಿಷ್ಟಗಳಿವೆ. ಖಾಸಗಿ ಬದುಕೆ ಇಲ್ಲದೆ ನನ್ನ ತಾರುಣ್ಯವೆಲ್ಲ ಕಳೆದುಹೋಯಿತು. ಇನ್ನೂ ಹೀಗೇ ಇರಬೇಕೆನ್ನುವಿರೆ?’

‘ಎಂದರೆ ಉಪವಾಸ ನಿಲಿಸುತ್ತೀರಾ?’

‘ಸರ್ಕಾರ ಯೋಜನೆಯಿಂದ ಹಿಂದೆ ಸರಿದಿದೆ ಎಂದು ಹೇಳುವವರೆಗೆ ಹೋರಾಟ ಮುಂದುವರೆಯಲಿದೆ, ಆದರೆ ಉಪವಾಸದ ಮೂಲಕ ಅಲ್ಲ.’

‘ಹದಿನೈದು ವರ್ಷಗಳಿಂದ ಯೋಜನೆಯ ವಿರುದ್ಧ ಉಪವಾಸ ಮಾಡುತ್ತಿದ್ದೀರಿ. ಆದರೆ ಅತ್ತ ಸಿಂಗೂರಿನಲ್ಲಿ ಆ ಯೋಜನೆಯ ಪರವಾದ ಸಾರ್ವಜನಿಕ ಅಭಿಪ್ರಾಯ ರೂಪುಗೊಳ್ಳುತ್ತಿರುವುದಕ್ಕೆ ಏನೆನ್ನುವಿರಿ?’

‘ಏನೆನ್ನುವುದು? ನಮ್ಮ ತಿಳುವಳಿಕೆ ತಪ್ಪೋ, ಜನರ ಆಸೆಆಕಾಂಕ್ಷೆ ತಪ್ಪೋ? ಒಂದೂ ಅರ್ಥವಾಗುತ್ತಿಲ್ಲ. ಆದರೆ ನಾವು ನೆನಪಿಡೋಣ. ಹೋರಾಟ ದೀರ್ಘವಾದಷ್ಟೂ ಜನರ ವಿಶ್ವಾಸ ಕಳೆದುಕೊಳ್ಳುತ್ತದೆ. ತೀವ್ರತೆ, ಕಾಲಮಿತಿ ಎರಡೂ ಇಲ್ಲದ ಇಂದಿನ ಹೋರಾಟದಿಂದ ಯುವಪೀಳಿಗೆ ರೋಸಿಹೋಗಿದೆ. ಇಷ್ಟು ವರ್ಷಗಳಲ್ಲಿ ಒಂದು ಕ್ರಿಯಾಶೀಲ ತಲೆಮಾರೇ ಬದಲಾಗಿದೆ ಮತ್ತು ಹೊಸಬರ ಅಭಿಪ್ರಾಯಗಳು ಭಿನ್ನವಾಗಿವೆ. ಕೇವಲ ಉಪವಾಸದಿಂದ ಬರಲಿರುವ ತಲೆಮಾರುಗಳ ಜನಾಭಿಪ್ರಾಯವನ್ನು ರೂಪಿಸಲು ಸಾಧ್ಯವಿಲ್ಲ. ಹದಿನೈದು ವರ್ಷ ಒಂದು ಹೋರಾಟ ಚಾಲ್ತಿಯಲ್ಲಿದೆಯೆಂದರೆ ಅದು ಹೋರಾಟವಲ್ಲ, ಸೋಲು.’

‘ಎಂದರೆ ಉಳಿದ ಚಳುವಳಿಗಾರರು ಸುಮ್ಮನಿರುವರೆಂದು ನಿಮ್ಮ ಅಭಿಪ್ರಾಯವೇ?’

‘ಹೌದು. ಸಿಂಗೂರು ಮಾತ್ರವಲ್ಲ, ಇಡೀ ರಾಜ್ಯ ನನ್ನ ಉಪವಾಸದ ಮೇಲೆ ಎಲ್ಲ ಭಾರ ಹಾಕಿ ಸುಮ್ಮನಾಗಿದೆ. ಬೀದಿಯಲ್ಲಿ ಒಂದೂ ಘೋಷಣೆ ಕೇಳುವುದಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯಾರಿಗೂ ಧಾವಂತವೇ ಇಲ್ಲ. ಹಾಗಾಗಿ ಸಿಂಗೂರಿನ ನಿರುದ್ಯೋಗಿ ಹೊಸತಲೆಮಾರಿಗೆ ತಮ್ಮೂರು ಅಭಿವೃದ್ಧಿಯಾಗದಂತೆ ಇರುವ ದೊಡ್ಡ ತಡೆ ನಾನೇ ಎನಿಸಿರಬಹುದು. ಬಹುಶಃ ನನ್ನ ಸಾವೇ ಈ ಹೋರಾಟದ ತಾರ್ಕಿಕ ಅಂತ್ಯವಿರಬಹುದು.’

‘ಎಂದರೆ ನಿಮ್ಮ ಯೌವನ, ಆರೋಗ್ಯ ಎಲ್ಲ ವ್ಯರ್ಥವಾಯಿತೆಂದೇ?’

‘ದೇಹ, ಯೌವನ ಒಂದಲ್ಲ ಒಂದು ದಿನ ಲಯವಾಗಬೇಕಾದ್ದೇ. ಅದನ್ನು ಒಂದು ಸೂಕ್ತ ಉದ್ದೇಶಕ್ಕಾಗಿ ಪಣವಿಟ್ಟೆ. ಕಳೆದ ಕಾಲದ ಕುರಿತು ಯಾವ ತಕರಾರುಗಳಿಲ್ಲ. ಆದರೆ ಈಗ ಆ ಉದ್ದೇಶವೇ ಹುಸಿ ಎನ್ನುತ್ತಿರುವುದು ಚಳುವಳಿಯ ದುರಂತ ಎನಿಸಿದೆ...’

ಮಾತಾಡುತ್ತ ಆಡುತ್ತ ಕಾಲು ತಣ್ಣಗಾಗಿ, ಕಿವಿ ಬೆಚ್ಚಗಾಗಿ ಇಳಾ ಕುಸಿದು ಬೀಳುವಂತಾದಳು. ದೂರದೂರ ಹೋಗುತ್ತಿರುವ ಸಾಹಿಲ್ ಅಸ್ಪಷ್ಟವಾದ. ಬೆಕ್ಕಿನ ಮರಿ ಒರಲತೊಡಗಿತು. ಮೀಡಿಯಾದವರು ಸಾಹಿಲನತ್ತ ಓಡತೊಡಗಿದರು. ಕಮ್ಯಾಂಡೋಗಳಿಬ್ಬರು ಗಡಿಬಿಡಿಯಲ್ಲಿ ಅವಳನ್ನು ಅಂಗಾತ ಎತ್ತಿ ಆಂಬುಲೆನ್ಸಿಗೆ ಹಾಕಿದರು.

ಮಂಪರು, ಮಂಪರಿನ ಕಣ್ಣೆದುರು ನೆನಪಿನ ಚಿತ್ರಸಂತೆ..



ಸರಿಯಾಗಿ ಹದಿನೈದು ವರ್ಷ ಹಿಂದೆ..

ಅಂದು ಗುರುವಾರ, ಇಳಾಗೆ ಉಪವಾಸ. ಅವಳಿಗಷ್ಟೇ ಅಲ್ಲ, ಮನೆಯಲ್ಲಿ ಬಾಪ್ಪಾನನ್ನು ಬಿಟ್ಟು ಮತ್ತೆಲ್ಲರಿಗೂ ಸೋಮವಾರ, ಗುರುವಾರ ಉಪವಾಸ. ಆಯಿ ಬೆಳಗಿನ ತಿಂಡಿಗೆ ರವೆದೋಸೆ ಎರೆಯುವ ತಯಾರಿ ನಡೆಸಿದ್ದಳು.

‘ಆಯಿ, ಇವತ್ ನಾ ಆಫೀಸಿಗೆ ಹೋತ್ತಿಲ್ಲ. ಒಂದ್ ಹೋರಾಟದ ಸಭೆ ಇತ್ತು ಬಂದರದಲ್ಲಿ, ನಂಗೆ ಡಬ್ಬಿಗ್ ಎಂತದು ಬೇಡ.’

‘ಅದೆಂತ ಹೋರಾಟ ಮರಾಯ್ತಿ ನಿಂದು? ಬಾಪ್ಪಾ ಗಂಡು ನೋಡ್ತಿದ್ದದ್ದು ಗೊತ್ತಿಲ್ವ, ಕೆಲ್ಸ ಬಗ್ಸೆ ಮಾಡ್ಕಂಡ್ ಸುಮ್ನಿರು. ಇಲ್ಲದ್ ತಾಪತ್ರೆಗ್ ಹೋಗ್ಬೇಡ.’

‘ನಾ ಮದಿ ಆಗುದಿಲ್ಲ ಆಯಿ, ಗಂಡುಗಿಂಡು ನೋಡುದೆಲ್ಲ ಬೇಡ ಅಂತ ಬಾಪ್ಪಾನತ್ರ ಹೇಳಿಬಿಡು’

‘ಯಂತ ನಿನ್ ಮಂಡಿ ಸಮ ಇಲ್ಯ? ಹಂಗೆ ಇದ್ಕಂಡು ಯಂತ ಸಾಧುಸ್ತೆ?’

‘ಮದಿ ಆಗ್ದೆ ಸಾಧ್ನೆ ಮಾಡ್ತಿನೊ ಇಲ್ಲೊ ನಂಗೊತ್ತಿಲ್ಲ, ಆದ್ರೆ ನಾ ಮದಿ ಆಗುದಿಲ್ಲ ಅಷ್ಟೆ. ಅದೆಲ್ಲ ಆಮೇಲೆ ಕಾಂಬ, ಶುಗರ್ ಇರುವರು ತಡ ಮಾಡಿ ಊಟತಿಂಡಿ ತಿನಬಾರ್ದಂತ ಹೇಳಿದ್ದಲ್ವ ಡಾಕ್ಟ್ರು? ನೀನು ಮದ್ಲು ನಾಷ್ಟಾ ಮಾಡು, ನಾ ದೋಸೆ ಎರೆತೆ. ಅದಾದ್ಮೇಲೆ ಹೊರಡ್ತೆ’

‘ಅದೆಂತ ಕರ್ಮದ ಹೋರಾಟ ಮರಾಯ್ತಿ ಅದು?’

‘ಅದೆ ಆಯಿ, ನಿನ್ ಮಾವ ಅಪ್ಪಚ್ಚಿ ಎಲ್ಲ ನೆಲ ಕಳಕಂಡ್ರಲ ಇಪ್ಪತ್ ಮೂವತ್ ವರ್ಷದ್ ಹಿಂದೆ ಒಂದ್ ಕರೆಂಟ್ ಕಂಪನಿಗೆ ಅಂತ, ಅದ್ರ ಸಲುವಾಗಿ. ಅವರು ಜಮೀನು ತಗಂಡು ಇಷ್ಟೊರ್ಷ ಆದ್ರು ಉಷ್ಣಸ್ಥಾವರನು ಇಲ್ಲ, ಉತ್ತುಬಿತ್ತೋರು ಇಲ್ಲ. ಈಗ ಆ ಸ್ಥಾವರದ ಜೊತೆ ಒಂದು ದೊಡ್ ಬಂದರನ್ನೂ ಮಾಡ್ತಿವಂತ ಮತ್ತೆನೊ ಕೆರಕಂಡ್ ಕೂತಿದಾರೆ. ಅದು ಬೇಡ ಅಂತ ಹೋರಾಟ.’

‘ಎಲ್ಲ ಬ್ಯಾಡಾಂದ್ರೆ ಕರೆಂಟು ಬಪ್ಪುದು ಎಲ್ಲಿಂದ?’

‘ಈ ಊರಲ್ಲಿ ಬೇಡ, ಉಷ್ಣಸ್ಥಾವರದಿಂದ ಬೇಡ. ಸೋಲಾರ್, ವಿಂಡ್ ಮಿಲ್ ಹಿಂಗೇ ಬೇರೆ ಏನಾರಾ ಮಾಡ್ಲಿ, ಯಾರು ಬೇಡಂತಾರೆ? ಉಷ್ಣ ಸ್ಥಾವರ ಬಂದ್ರೆ ಇಲ್ಲಿನ ಮೀನುಮಳಿಚಟ್ಲಿ ಎಲ್ಲ ಸರ್ವನಾಶ ಆಗಿ ಕಡೆಗ್ ಬಂಗ್ಡೆನು ಇಲ್ಲ, ತೂರಿಕಾಣಿನೋಗ್ಲೆಬಳಿಂಜೆಬಳಚು ಎಂತದು ಇಲ್ಲ ಹಂಗಾತ್ ನೋಡು.’

‘ಅಯ್ಯಬ, ಹೌದ?’

‘ಹೌದ್ ಮತ್ತೆ. ಮೀನು ಬಳಚು ನೆಚ್ಕಂಡವ್ರ ಕುತ್ತಿಗ್ಗೆ ಗಳಪಾಸ್ನ ಅಷ್ಟೆಯ. ಅದ್ಕೆ ನಾ ಹೋರಾಟಕ್ ಹೋಗುದೆಯ. ನನ್ ಫ್ರೆಂಡ್‌ಗಳೇ ಸಂಘಟನೆ ಕಟ್ಟಿದೋರು. ಕುಸುಮ, ಪಾರ‍್ತಿ, ಹನೀಫ, ಪ್ರಕಾಶ ಎಲ್ಲ ಬರ‍್ತಾರೆ. ಬೆಳ್ಳಿಮಠದ ಸ್ವಾಮಿಗಳು ಕೂಡ ಬರ‍್ತಾರೆ’

‘ನೀ ಹೋರಾಟ ಅಂತ ಇದ್ರೆ ಕಡೆಗೆ ಸತೀಶನೂ ಅದೇ ಕುಣತ. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ.’

‘ಸರೋಜ, ಆ ಮಗಿನ ಕೈಲಿ ಎಂಥಾ ಮಾತಂತ ಆಡ್ತಿ? ಅಲ್ಲೆಲ್ಲೊ ಬಂದೂಕು ಹಿಡ್ಕಂಡು ನಿಲ್ಲುದಷ್ಟೆ ದೇಶಸೇವೆ ಅಲ್ಲ. ಊರೂರಲ್ಲು ಹೀಗೆ ಜನಹಿತ ಕಾಯುದು ದೇಶಸೇವೆ. ಮಗಾ ನೀ ಹೋಗು. ನಿನ್ ತಮ್ಮ ಬಂದ್ರೆ ಅವನ್ನೂ ಕರ‍್ಕಂಡ್ ಹೋಗು. ಅದು ಮಾಡ್ತಿವಿ ಇದು ಮಾಡ್ತಿವಿ ಅಂತ ಬುರ್ನಾಸು ಬಿಡೊ ಈ ನನ್ಮಕ್ಕಳಿಗೆ ಜನರ ಶಕ್ತಿ ಎಂಥದಂತ ತೋರ‍್ಸು.’

‘ಥಾಂಕ್ಯೂ ಮೈ ಡಿಯರ್ ಬಾಪ್ಪಾ..’

ಯಾರೋ ಭೂಮಿಯ ಪಟ್ಟಾ ಮರಳಿ ಕೊಡುವರೆಂದು ಸುದ್ದಿ ಹಬ್ಬಿಸಿ ಅವತ್ತು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಜನ ಸೇರಿದರು. ಹೋರಾಟ ಯಾವುದಕ್ಕೆಂಬ ಅರಿವೇ ಇಲ್ಲದೇ ಅಪಾರ ಜನಸ್ತೋಮ ಸೇರಿತು. ಸಂಘಟಕರಿಗೆ ಖುಷಿ. ಪೊಲೀಸರಿಗೆ ತಲೆನೋವು. ಜಾಥಾ, ಮೆರವಣಿಗೆ ಶುರುವಾಯಿತು. ಕೆರವನಕೊಪ್ಪ, ಬನಸಾರೆ, ತುಂಬಾಡೆಗಳ ದಾಟಿ ಸಿಂಗೂರಿನ ಬಂದರು ಆಫೀಸಿನ ಬಳಿಯ ಮೈದಾನದ ಕಡೆ ಜಾಥಾ ಸಾಗಿತ್ತು.

ಆದರೆ ಅದು ಹೇಗಾಯ್ತು ಎಂಬ ಬಗ್ಗೆ ಇವತ್ತಿಗೂ ಗೊಂದಲವಿದೆ. ಉಪ್ಪಿನಗದ್ದೆ ಮುರ್ಕಿಯಲ್ಲಿ ಜಾಥಾ ತಿರುಗುವಾಗ ಪೊಲೀಸ್ ಲಾಠಿಚಾರ್ಜ್ ಶುರುವಾಯಿತು. ಜನ ಪೊಲೀಸು ವ್ಯಾನಿಗೆ ಕಲ್ಲುತೂರಿ ಲಾಠೀಚಾರ್ಜ್ ಶುರುವಾಯಿತು ಎಂದು ಪೊಲೀಸರು ನಂತರ ದಾಸರಿ ಕಮಿಷನ್ ಎದುರಿಗೆ ಹೇಳಿದರೆ; ಘೋಷಣೆ ಕೂಗುತ್ತ ಪೊಲೀಸರ ಕಡೆಗೆ ನೋಡುತ್ತ ಹೋದವರಿಗೆ ‘ಬುದ್ಧಿ ಕಲಿಸಲು’ ಪೊಲೀಸರೇ ಮೊದಲು ಲಾಠಿ ಬೀಸಿದರು ಎನ್ನುತ್ತಾರೆ ಜನ. ಏನೇ ಆಗಲಿ, ಲಾಠಿಯ ಹೊಡೆತಕ್ಕೆ ಇಳಾ ಜೀವದ ಗೆಳತಿ ಕುಸುಮ ನೆಲಕ್ಕುರುಳಿದಳು. ಆರು ಜನ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದರು.

ಕಣ್ಣೆದುರೇ ನಡೆದ ಘಟನೆಗಳು ಇಳಾಗೆ ತೀವ್ರ ದುಃಖದ ಜೊತೆಗೆ ರೋಷವನ್ನೂ, ಆವೇಶವನ್ನೂ ಹುಟ್ಟಿಸಿತು. ಚದುರದೆ ಅಳಿದುಳಿದ ಜನ ಸಮಾವೇಶಗೊಂಡರು. ಜನವಾಹಿನಿ ಮಹಿಳಾ ಸಂಘಟನೆಯ ಪಾರ‍್ತಕ್ಕ ವೀರಾವೇಶದಿಂದ ಪೊಲೀಸರ ಕ್ರಮ ಖಂಡಿಸಿದಳು. ಹೋರಾಟ ಮುಂದುವರೆಸುವುದಾಗಿ ಕಾರ್ಯಕರ್ತರು ಒಬ್ಬೊಬ್ಬರೆ ಮಾತಾಡಿದರು. ತೀರಿಕೊಂಡ ಕುಸುಮಳ ನೆನೆನೆನೆದು ಸ್ಟೇಜಿನ ಮೇಲೇ ಇಳಾ ಕಣ್ಣೀರಿಟ್ಟಳು. ಇದ್ದಕ್ಕಿದ್ದಂತೆ ಯೋಜನೆಯನ್ನು ಸರ್ಕಾರ ಹಿಂದೆಗೆದುಕೊಳ್ಳುವತನಕ ತಾನು ಆಮರಣಾಂತ ಉಪವಾಸ ನಡೆಸುವುದಾಗಿ ಘೋಷಿಸಿಬಿಟ್ಟಳು. ಆ ಕುರಿತು ಯಾರಲ್ಲೂ ಮಾತನಾಡಿರಲಿಲ್ಲ, ಮನೆಯವರಲ್ಲಿ ಕೇಳಿರಲಿಲ್ಲ, ಉಳಿದವರ ಮಾತಂತಿರಲಿ, ಸ್ವತಃ ಅವಳೇ ಹಾಗೆ ಹೇಳುವ ತನಕ ಆ ಕುರಿತು ವಿಚಾರವನ್ನೇ ಮಾಡಿರಲಿಲ್ಲ. ಆದರೆ ಆ ಗಳಿಗೆ ಅದು ಬಿಟ್ಟು ಬೇರೆ ದಾರಿಯೇ ಇಲ್ಲ ಎನಿಸಿ ಆ ತೀರ್ಮಾನ ಅವಳ ಬಾಯಿಂದ ಹೊರಬಂತು.

ಸಭೆಯಲ್ಲಿ ಮಿಂಚಿನ ಸಂಚಾರ. ಎಲ್ಲೆಲ್ಲು ಕರತಾಡನ, ಪ್ರಶಂಸೆ, ಪ್ರೋತ್ಸಾಹ. ಅಲ್ಲೇ ಒಂದು ಟೆಂಟ್ ತಯಾರಾಯಿತು. ಯಾರೋ ಬ್ಯಾನರ್ ಬರೆಸಿ ತಂದರು. ಮನೆಯಿಂದ ಆಯಿ, ಬಾಪ್ಪಾ ಬಂದರು. ಬಾಪ್ಪಾ ಮೌನವಾದ. ಆಯಿ ಮಾತ್ರ ನಿರೀಕ್ಷಿಸಿರದ ಮಾತು ಹೇಳಿದಳು: ‘ಆಗ್ಲಿ ಮಗಾ, ಈ ದೇಶಕ್ಕಾಗಿ ಅಂತ್ಲೆ ನಿನ್ನ ಹೆತ್ತಿದೇನೆ ಅಂದ್ಕಂತೆ. ಇಟ್ಟ ಹೆಜ್ಜೆ ಹಿಂದೆ ಇಡಬೇಡ. ನಡಿತಿಯೊ ಓಡ್ತಿಯೊ ತೆವಳ್ತಿಯೊ, ಒಟ್ಟು ಗುರಿ ಮುಟ್ಟಿದ್ಮೇಲೇ ನಿಲ್ಲಬೇಕು ನೀನು.’

ಆ ದಿನ ಕಳೆಯಿತು. ಏನನ್ನೂ ತಿನ್ನಲಿಲ್ಲ, ಕುಡಿಯಲಿಲ್ಲ. ಟೆಂಟಿನಲ್ಲೇ ರಾತ್ರಿಯಾಗಿ ಮರುದಿನ ಬೆಳಕಾಯಿತು. ಏಳುವಾಗಲೆ ನಿಶ್ಶಕ್ತಿ, ಬಳಲಿಕೆ, ಕಣ್ಣು ಮಂಜುಮಂಜು. ಆದರೂ ಇಳಾ ಕೂತೇ ಇದ್ದಳು. ತೀರಿಕೊಂಡ ಮತ್ತಿಬ್ಬರ ದೇಹಗಳನ್ನು ತಂದು ಟೆಂಟಿನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಟ್ಟರು. ಜನ ಸಾಗರವೇ ಹರಿದು ಬಂತು. ರೋದನ, ಗಲಾಟೆ ಗದ್ದಲ ಕೇಳಿಕೇಳಿ ಬವಳಿ ಬಂದು ಹಾಸಿಗೆ ಹಿಡಿಯುವಂತಾಯಿತು. ಮೂರನೆಯ ದಿನ ಇಳಾಗೆ ಏಳಲಾಗುತ್ತಿಲ್ಲ. ಮೂತ್ರವೂ ಬರುತ್ತಿಲ್ಲ. ಕೆಳಗೆ ಸಿಕ್ಕಾಪಟ್ಟೆ ಉರಿ. ಬಾಯಿ ಒಣಗಿ ಹೊಟ್ಟೆ ತೊಳಸುತ್ತಿದೆ. ಕೈಕಾಲು ತನ್ನವೇ ಅಲ್ಲವೇನೋ ಎನಿಸಿ, ಎಲ್ಲೆಲ್ಲೋ ಹಾರುತ್ತಿರುವಂತೆ, ಉಬ್ಬಿಉಬ್ಬಿ, ಕೊನೆಗೆ ಹಾಳೆಯಾಗಿ ತೇಲಿ, ಚದುರಿ, ಕತ್ತಲೋ ಬೆಳಕೋ ಯಾವುದೆಂದೇ ತಿಳಿಯದ ಎಲ್ಲಿಗೋ ಪಯಣಿಸಿ..

ಎಚ್ಚರ ತಪ್ಪಿದವಳನ್ನು ಸಿವಿಲ್ ಆಸ್ಪತ್ರೆಗೆ ಸೇರಿಸಲಾಯಿತು. ಎರಡೂ ಕೈಗಳಿಗೆ ಗ್ಲೂಕೋಸ್. ಮಣಭಾರದ ಕಣ್ರೆಪ್ಪೆ ತೆರೆದು ಎಚ್ಚರವಾದಾಗ..

ಸುತ್ತಮುತ್ತ ಅಪರಿಚಿತ ಮುಖಗಳು, ಪತ್ರಕರ್ತರು, ಕ್ಯಾಮೆರಾಗಳು, ಮೂಲೆಯಲ್ಲಿ ಮುದುಡಿ ಕುಳಿತ ಆಯಿ. ‘ಆಯೀ, ಬಾಪ್ಪಾ, ಸತೀಶ ಎಲ್ಲಿ?’ ಎಂದಳು. ಪೊಲೀಸರು ಬಂದರು. ಖಾಕಿ ಬಣ್ಣ ಕಂಡದ್ದೇ ಗೆಳತಿ ಕುಸುಮಳನ್ನು ಅವರು ಹೊಡೆದದ್ದು, ಅವಳು ಕಣ್ಣೆದುರೇ ಪುತಪುತನೆ ಉದುರಿ ಬಿದ್ದದ್ದು, ತಾನು ಹೊಡೆತ ತಪ್ಪಿಸಿಕೊಳ್ಳಲು ಆಚೆ ಓಡಿಹೋಗಿದ್ದು ಮಸುಕುಮಸುಕಾಗಿ ನೆನಪಾಯಿತು. ಪೋಲೀಸರು ಊಟಮಾಡಲು ಒತ್ತಾಯಿಸಿದರು. ಜೀವದ ಗೆಳತಿಯಾದರೂ ಸತ್ತವರು ಬದುಕಿ ಬರುವುದಿಲ್ಲ, ಊಟ ಮಾಡೆಂದರು. ಯಾರ ಮನವೊಲಿಕೆಗೂ ಬಗ್ಗದೇ ಹೋದಾಗ ಆತ್ಮಹತ್ಯೆ ಯತ್ನವೆಂದು ಬಂಧನವಾಯಿತು. ಬಂಧನವೆಂದರೂ ಆಸ್ಪತ್ರೆಯಲ್ಲೇ. ನಾಲ್ಕಾರು ಪೊಲೀಸರು ಸುತ್ತಮುತ್ತ ಇದ್ದರು ಎನ್ನುವುದೇ ವ್ಯತ್ಯಾಸ. ನಳಿಕೆ ಬೇಡವೆಂದ ಹಠ ಒಂದು ದಿನ, ಎರಡು ದಿನ ಗೆದ್ದಿತು. ಒಂದು ವಾರ ಗ್ಲೂಕೋಸಿನಲ್ಲೇ ಕಳೆಯಿತು. ಆದರೆ ಆರನೇ ದಿನ ಅರೆಮಂಪರು. ಮಗಳು ಸತ್ತಳೆಂದೇ ತಿಳಿದು ಒಂದೇಸಮ ರೋದಿಸುತ್ತಿದ್ದ ಆಯಿಯನ್ನು ಸುಮ್ಮನಿರಿಸಿ, ಒತ್ತಾಯದಿಂದ ಮೂಗಿಗೆ ಆಹಾರ ನಳಿಕೆ ಏರಿಸಿಯೇ ಬಿಟ್ಟರು.

‘ಪೈಪಿನಲ್ಲಿ ಹೊಟ್ಟೆಗಷ್ಟು ಬಿದ್ದ ಮೇಲೆ ತಿಳಿವು ಅಷ್ಟಷ್ಟೆ ಮೂಡಿ ರಕ್ತ ಸರಸರ ಹರಿದಾಡಿದ್ದು ತಿಳಿಯಿತು. ಮೂರು ತಿಂಗಳು ಕಳೆವುದರಲ್ಲಿ ಕೋರ್ಟಿನ ಆಜ್ಞೆಯ ಮೇರೆಗೆ ವಿಮ್ಸ್‌ಗೆ ವರ್ಗಾಯಿಸಿದರು. ಬಂದುಹೋಗುವ ಜನರ ಮಹಾಪೂರ. ದಿನದಿನ ಮನಸ್ಸು ಗಟ್ಟಿಮಾಡಿಕೊಳ್ಳುತ್ತ ಬಂದೆ. ಉಣ್ಣುವ, ಉಡುವ, ಸಂತೆಪೇಟೆ ತಿರುಗುವ, ಸಡಗರಿಸುವ ಆಸೆಗಳನೆಲ್ಲ ಬಿಟ್ಟೆ. ಈ ಕೋಣೆ, ಪುಸ್ತಕ, ಪೊಲೀಸರು ನನ್ನೊಡನೆ ಸದಾ ಇರುವವರಾದರು. ಪಾರ‍್ತಕ್ಕ, ಸತೀಶ, ಬಾಪ್ಪಾ ವಾರದಲ್ಲಿ ಮೂರು ದಿನ, ಅದೂ ಒಂದು ತಾಸಿನ ಮಟ್ಟಿಗೆ ನನ್ನ ಜೊತೆಯಿರಬಹುದು ಅಷ್ಟೆ. ಹಬ್ಬ, ಮುಟ್ಟು, ಮಳೆ-ಚಳಿ-ಬೇಸಿಗೆಗಳನೆಲ್ಲ ಈ ಕೋಣೆಯಲ್ಲೇ ಕಳೆಯಬೇಕು. ನಾನು ಅರಬಿ ಕಡಲಿನ ಹೆಣ್ಣು. ಮಣಿಯಬಾರದು ಯಾವ ಆಮಿಷಗಳಿಗೂ. ಗುರಿ ಮುಟ್ಟುವ ತನಕ ಪ್ರಾಣ ಹೋದರೂ ಹೋಗಲಿ, ಅಗುಳು ಬಾಯಿಗೆ ಹಾಕಬಾರದು..

ಅವತ್ತು ಹೀಗೆ ನಿರ್ಧರಿಸಿದ್ದನ್ನು ಇವತ್ತಿನವರೆಗು ಪಾಲಿಸಿರುವೆ. ನನಗೆ ಹೊಟ್ಟೆಯಿದೆ, ಆದರೆ ಬಾಯಿಯಿಲ್ಲ. ಕೈಯಿದೆ ಆದರೆ ಅದು ಬಾಯಿಗೆ ತುತ್ತುಣಿಸುವುದಿಲ್ಲ. ಎಂದೇ ಈಗ ಇಳಾ ಎಂದರೆ ಸಿಂಗೂರಿನ ಗೋಡಾಕ್ಟ್ರ ಮಗಳು, ಬಂದರಿನಲ್ಲಿ ನೌಕರಿ ಮಾಡುವ ಹುಡುಗಿಯಲ್ಲ; ಇಳಾ ಎಂದರೆ ಮೂಗಿನಲ್ಲಿ ನೇತಾಡುವ ನಳಿಕೆಯಿಟ್ಟುಕೊಂಡ ಕೃಶದೇಹಿ, ಉಕ್ಕಿನ ಮಹಿಳೆ, ವಿಶ್ವದ ಅತಿದೀರ್ಘ ಕಾಲ ಉಪವಾಸ ಮಾಡಿದ ಹೋರಾಟಗಾರ್ತಿ. ಅಹಿಂಸಾತ್ಮಕ ಪರ್ಯಾಯ ಹೋರಾಟದ ಮಾದರಿ. ಸ್ತ್ರೀಶಕ್ತಿಯ ಸಂಕೇತ .. ವಗೈರೆ, ವಗೈರೆ..’

ಹೀಗೆ ಇಳಾ ದಿನಚರಿಯ ಬಿಳಿ ಪುಟಗಳಲ್ಲಿ ನೀಲಿ ಅಕ್ಷರಗಳು ತುಂಬುತ್ತ ಹೋದವು.

***

ನಿನ್ನೆ ದಿನ ನಡೆದದ್ದು ಮೈಮನಸುಗಳನ್ನೆಲ್ಲ ಆವರಿಸಿಕೊಂಡುಬಿಟ್ಟಿದೆ. ಸಾಹಿಲನನ್ನು ಮತ್ತೆ ನೋಡಬೇಕು, ಮಾತಾಡಬೇಕು, ಮುಟ್ಟಬೇಕು. ನಮ್ಮಿಬ್ಬರನ್ನು ಈ ಲೋಕ ಒಟ್ಟಿಗಿರಲು ಬಿಟ್ಟೀತೆ? ಅದು ನಮ್ಮ ಸ್ನೇಹವನ್ನು ಹೇಗೆ ಗ್ರಹಿಸಿರಬಹುದು? ಎಲ್ಲರ ಪ್ರತಿಕ್ರಿಯೆ ಹೇಗಿರಬಹುದು? ಯಾಕೆ ಇವತ್ತು ನೀಲಾ ಪೇಪರು ತರುತ್ತಿಲ್ಲ ಇಷ್ಟು ಹೊತ್ತಾದರೂ? ಅವರಿಗೆಲ್ಲ ವಿದಾಯ ಹೇಳುವ ಗಳಿಗೆ ಹತ್ತಿರ ಬಂದಿತೆಂದು ಬೇಸರವೆ? ಅಸಡ್ಡೆಯೆ?

ನಳಿಕೆಯೊಳಗೆ ಸುರುವಿದ ಕೊನೆಯ ಗುಟುಕು ನೀರು ಅಲ್ಲೇ ಉಳಿದು ಉಸಿರಾಡುವಾಗ ಮೇಲೆಕೆಳಗೆ, ಮೇಲೆಕೆಳಗೆ ಆಡುತ್ತಲಿದೆ. ಅಂತೂ ನೀಲಾ ಪೇಪರು ಹಿಡಿದು ತಂದಳು. ಮಾತಾಡದ ಅವಳ ಮುಖದಲ್ಲಿಂದು ಏನೋ ದುಗುಡ. ಇವತ್ತು ಎರಡು ದೊಡ್ಡ ಶೀರ್ಷಿಕೆಗಳು ಎದ್ದು ಕಾಣುತ್ತಿವೆ. ಮೊದಲನೆಯದಾಗಿ ಸಿಂಗೂರಿನ ತರುಣರ ಗುಂಪೊಂದು ತಮ್ಮೂರಿಗೆ ಬಂದರು ಬೇಕು ಎಂದು ಸಾರ್ವಜನಿಕ ಅಹವಾಲು ಸಭೆಯಲ್ಲಿ ಕೂಗಾಡಿತ್ತು. ಎರಡನೆಯದು ಹದಿನೈದು ವರ್ಷಗಳಿಂದ ಉಪವಾಸನಿರತ ಹೋರಾಟಗಾರ್ತಿ ಇಳಾ ‘ನಾನೂ ಉಣ್ಣಬಯಸುತ್ತೇನೆ, ಸಂಗಾತಿಯೊಂದಿಗೆ ಮದುವೆಯಾಗಬಯಸುತ್ತೇನೆ’ ಎನ್ನುತ್ತ ಸಂಗಾತಿಯೊಡನೆ ಕೈಕೈ ಹಿಡಿದು ಕುಳಿತ ಫೋಟೋ ಪ್ರಕಟವಾಗಿತ್ತು. ಇವೆರೆಡೂ ಘಟನೆಗಳು ಅಣುಸ್ಥಾವರ ವಿರೋಧಿ ಜನಹೋರಾಟಕ್ಕೆ ಹಿನ್ನಡೆ ಎಂದು ಸಂಪಾದಕೀಯಗಳು ಬಣ್ಣಿಸಿದ್ದವು.

ಆಯಿಯನ್ನೂ ಪತ್ರಿಕೆಯವರು ಮಾತನಾಡಿಸಿದ್ದರು. ಅವಳು ಬಂದರು ಕೆಲಸ ನಿಲಿಸಿದೆವು ಎಂಬ ಆದೇಶ ಬಂದು ಜಯಶಾಲಿಯಾಗಿ ಉಪವಾಸ ನಿಲಿಸಿದರಷ್ಟೆ ತಾನು ಕೈತುತ್ತುಣಿಸಿ ಮಗಳ ಕರೆದೊಯ್ಯುತ್ತೇನೆ, ಅಲ್ಲಿಯವರೆಗೆ ಅವಳು ಉಪವಾಸ ನಿಲಿಸಬಾರದು ಎಂದಿದ್ದಳು. ಹೋರಾಟವೆಂದರೆ ಬೇಡವೆನ್ನುತ್ತಿದ್ದ, ಬಾಪ್ಪಾ ನೋಡಿದ ಗಂಡಿನೊಡನೆ ಮದುವೆಯಾಗೆನ್ನುತ್ತಿದ್ದ ಆಯಿ ಬಾಯಲ್ಲಿ ಈಗ ಇಂಥ ಮಾತು! ಅಷ್ಟೇ ಅಲ್ಲ, ಮದುವೆಯೇ ಆಗೆನೆನ್ನುತ್ತಿದ್ದ ಮಗಳ ತಲೆಯನ್ನು ಯಾರೋ ದುಷ್ಟ ಕೆಡಿಸಿದ್ದಾನೆ. ಆ ಹುಚ್ಚ ಮಗಳ ಬಳಿ ಸುಳಿಯದಂತೆ ಮಾಡಿ ಎಂದು ಕೇಳಿಕೊಂಡಿದ್ದಳು. ಹೀಗಂತ ಪಾರ‍್ತಕ್ಕನ ಬಳಿ ಮಾತ್ರವಲ್ಲ, ಸಂದರ್ಶನ ಮಾಡಿದ ಪತ್ರಿಕೆಗಳ ಮೂಲಕ ಅಧಿಕಾರಿಗಳಿಗೂ ಆಯಿ ಮನವಿ ಮಾಡಿದ್ದಳು.

ಸಿಂಗೂರಿನ ತರುಣರಂತೂ ಹೋರಾಟಗಾರರ ಮೇಲೆ ಯದ್ವಾತದ್ವಾ ಆರೋಪ ಮಾಡಿದ್ದರು. ಎಲ್ಲ ಕಡೆ ಅಭಿವೃದ್ಧಿ ಆಗುತ್ತಿರುವಾಗ ಪರಿಸರ ನಾಶದ ನೆಪ ಹೇಳಿ ನಮ್ಮೂರಿಗಷ್ಟೆ ಏಕೆ ಯೋಜನೆ ಬೇಡ ಎನ್ನುತ್ತೀರಿ ಎಂದು ಪ್ರಶ್ನಿಸಿದ್ದರು. ಊರ ಹುಡುಗರು ಕೆಲಸವಿಲ್ಲದೆ ಮುಂಬಯಿ ಗೋವಾ ಎಂದು ಗುಳೆ ಹೋಗುತ್ತಿರುವಾಗ ಯಾವುದೋ ಸಂಘಟನೆಯು ತಮ್ಮೂರಿನ ಜನರ ತಲೆ ಕೆಡಿಸಿದೆಯೆಂದು ಕೂಗಾಡಿದ್ದರು. ಪಾರ್ವತಿ ಎಂಬ ಚೀನಾದ ಏಜೆಂಟ್ ಹಾಗೂ ಹನೀಫ್ ಎಂಬ ಪಾಕಿಸ್ತಾನಿ ಏಜೆಂಟ್ ಉಷ್ಣವಿದ್ಯುತ್ ಸ್ಥಾವರ ಶುರುಮಾಡಲಿರುವ ಅಮೆರಿಕನ್ ಕಂಪನಿ ಬರದಂತೆ ತಡೆಯುತ್ತ ನಿರುದ್ಯೋಗ ಸಮಸ್ಯೆಗೆ ಕಾರಣರಾಗಿದ್ದಾರೆ; ತಮ್ಮೂರಿನ ಇಳಾ ಎಂಬ ಅಮಾಯಕ ಹೆಣ್ಣುಮಗಳನ್ನು ಬಲವಂತದಿಂದ ಉಪವಾಸ ಇರಿಸಿ ಕೊಲ್ಲುತ್ತಿದ್ದಾರೆಂದು ನೇರವಾಗಿ ಆರೋಪಿಸಿದ್ದರು. ಬಂದರು ಹಾಗೂ ಸ್ಥಾವರ ಬಂದರೆ ಊರವರಿಗೆ ಉದ್ಯೋಗ ದೊರೆತು ಊರು ಅಭಿವೃದ್ಧಿಯಾಗುವುದೆಂದೂ; ಇಳಾ ಅವರಿವರ ಮಾತು ಕೇಳದೇ ಉಪವಾಸ ನಿಲಿಸಿ ಊರು ಉದ್ಧಾರ ಮಾಡಿದ ಪುಣ್ಯ ಕಟ್ಟಿಕೊಳ್ಳಬೇಕೆಂದೂ, ಸಿಂಗೂರಿನ ದನಕರುಗಳನ್ನು ಮಕ್ಕಳಂತೆ ನೋಡಿಕೊಂಡ ರಘುನಾಥ ಕಾವೂರರಿಗೆ ತಕ್ಕ ಮಗಳಾಗಿ ಬದುಕಬೇಕೆಂದೂ ಖಾರವಾಗಿ ಹೇಳಿದ್ದರು.

ಮನುಷ್ಯ ಮನಸು ಎಲ್ಲೆಲ್ಲಿ ಓಡುತ್ತದೆ? ಇವತ್ತಿನ ಸಿಂಗೂರು ತರುಣರ ಈ ಹೇಳಿಕೆಯಿಂದ ಪಾರ‍್ತಕ್ಕನಿಗೆಷ್ಟು ಬೇಸರವಾಗಿದೆಯೋ? ಆದರೂ ನಮ್ಮಗಳ ಒಳಗಿನ ಸಂದೇಹ, ಗೊಣಗಾಟಗಳನ್ನೇ ಆ ಹುಡುಗರು ಬಹಿರಂಗವಾಗಿ ಆಡಿಲ್ಲವೆ?

ಇವತ್ತು ಎನ್‌ಜಿಒ ಪ್ರತಿನಿಧಿಗಳೊಡನೆ ಸಂದರ್ಶನವಿದೆ. ಅವರು ಸಿಂಗೂರಿನಲ್ಲಿ ಕ್ರಿಯಾಶೀಲವಾಗಿರುವ ಬಂದರು ಮತ್ತು ಅದಿರು ಮಾಫಿಯಾ ಕುರಿತು ಮಾತನಾಡಬಯಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಆ ಇಷ್ಯೂ ಜೀವಂತ ಇಡಬೇಕಾದರೆ ಉಪವಾಸ ನಿಲಿಸಬಾರದು ಎಂದು ಕೇಳಿಕೊಂಡಿದ್ದಾರೆ. ಈಗಾಗಲೇ ನೂರಾರು ಎನ್‌ಜಿಒ ಪ್ರತಿನಿಧಿಗಳು, ಪತ್ರಕರ್ತರು, ಆಕ್ಟಿವಿಸ್ಟ್‌ಗಳ ಸಂದರ್ಶನ ಫಿಕ್ಸ್ ಆಗಿಹೋಗಿದೆ. ಆದರೆ ಇವತ್ತು ಪಾರ‍್ತಕ್ಕ ಯಾಕೋ ಬಂದಿಲ್ಲ. ನನಗಿನ್ನು ಯಾರೊಡನೆಯೂ ಮಾತನಾಡಲು ಏನೂ ಇಲ್ಲವೆನಿಸುತ್ತಿದೆ..

ವಾರಕ್ಕೆ ಮೂರು ದಿನ ಇಲ್ಲಿ, ಮೂರು ದಿನ ಸಂಘಟನೆಗಾಗಿ ಎಂದು ಓಡಾಡುವ ಪಾರ‍್ತಕ್ಕನಿಗೆ ಅವಳೊಡನೆ ಚರ್ಚಿಸದೆ ನಿನ್ನೆ ಕೋರ್ಟಿನಲ್ಲಿ ನಾನಾಡಿಬಿಟ್ಟ ಮಾತು, ನಡೆ ಬೇಸರ ತರಿಸಿದೆ. ಹಾಗೆಂದು ನೇರವಾಗಿ ಹೇಳಿಯೂಬಿಟ್ಟಿದ್ದಳು. ಉಪವಾಸದ ಸುತ್ತಮುತ್ತ ಇರುವ ೪೦ಕ್ಕೂ ಮಿಕ್ಕಿ ಎನ್‌ಜಿಒಗಳು, ಉಪವಾಸ ನಿಲಿಸಿದರೆ ಕೆಲಸ ಕಳೆದುಕೊಳ್ಳಲಿರುವ ಸಾವಿರಾರು ಕಾರ್ಯಕರ್ತರ ಬದುಕು - ಎಲ್ಲದರ ಕುರಿತೂ ಹೇಳಿದ್ದಳು. ಪ್ರೇಮಗೀಮದಂತಹ ಹುಚ್ಚಾಟ ಯಾವಾಗ ನಿನ್ನ ತಲೆಗೇರಿತು ಎಂದು ಕೇಳುವಾಗ ಅವಳ ದನಿಯಲ್ಲಿ ಎಷ್ಟು ಅಪರಿಚಿತತೆ, ಸಿಟ್ಟು, ತಿರಸ್ಕಾರ ತುಂಬಿಕೊಂಡಿತ್ತು!?

ಒಂದೇ ವಾರದಲ್ಲಿ ಏನೆಲ್ಲ ಆಗಿಹೋಯಿತು? ಹದಿನೈದು ವರ್ಷಗಳಿಂದ ಕಟ್ಟಿಕೊಂಡು ಬಂದದ್ದರ ಕುರಿತು ಊರ ಹುಡುಗರು ಹೀಗೇಕೆ ಯೋಚಿಸಿದರು? ಇದರಲ್ಲಿ ನನ್ನ ತಪ್ಪಿದೆಯೆ? ಉಪವಾಸ ನೀಡಿದ ಖ್ಯಾತಿ, ಕೀರ್ತಿ ನನ್ನನ್ನು ಯೋಚಿಸದಂತೆ ತಡೆಯಿತೆ? ಈ ಹದಿನೈದು ವರ್ಷಗಳಲ್ಲಿ ನಾನು ಯೌವನವನ್ನು, ಖಾಸಗಿ ಜೀವನವನ್ನು ಕಳಕೊಂಡಿರಬಹುದು. ಆದರೆ ಅದಕ್ಕಿಂತ ಮುಖ್ಯವಾಗಿ ಕಳಕೊಂಡದ್ದು ಜನರ ಜೊತೆಗಿನ ಒಡನಾಟವನ್ನಲ್ಲವೆ? ನಮ್ಮೂರಿನ ಹುಡುಗರ ನಿಜ ಪರಿಸ್ಥಿತಿ, ನಾಡಿ ಮಿಡಿತ ಏನೆಂದು ನನಗೆ ತಿಳಿಯಲಿಲ್ಲ. ಆದರೆ ಗುರಿ ಸಾಧನೆಗಾಗಿ ಉಪವಾಸಕ್ಕಿಂತ ದೊಡ್ಡ ಅಸ್ತ್ರವಿಲ್ಲ ಎನಿಸಿದ್ದು ಹೌದು. ಒಮ್ಮೆ ಇಟ್ಟ ಕಾಲು ಹಿಂದೆಗೆಯಲು ಸುತ್ತುಮುತ್ತು ಬಿಡಲಿಲ್ಲ.

ಇಲ್ಲ, ಇದು ಕೊನೆಯಾಗಬೇಕು. ತಮಗೇನು ಬೇಕೆಂದು ಊರ ಜನ ನಿರ್ಧರಿಸಲಿ. ನಾಳೆ ಬದುಕಬೇಕಿರುವ ಪೀಳಿಗೆ ನಿರ್ಧರಿಸಲಿ. ಜನಕ್ಕೆ ಬೇಡದ ಜನಹೋರಾಟದ ಐಕನ್ ನಾನಾಗಲಾರೆ..

ಈ ಪ್ರೇಮವೊಂದು ನೆಪ ಇಲಾಹಿ, ನಾನು ಸೋತೆ. ನಿನಗೆ, ಮತ್ತು ಕಾಯಿ ಮಾಗಿಸಿ ಹಣ್ಣು ಮಾಡುವ ಕಾಲಕ್ಕೆ..



ಮತ್ತೊಂದು ವಸಂತ ಬರುತ್ತಿರುವಂತಿದೆ. ಬೋಳುಮರದ ಗೆಲ್ಲುಗೆಲ್ಲಿನ ತುದಿಯೂ ಚಿಗುರುತ್ತಿದೆ. ರೂಂ ನಂಬರ್ ಒಂದರ ಎರಡು ಕಿಟಕಿಗಳಿಂದ ಎರಡು ದೃಶ್ಯಗಳು ಕಾಣಸಿಗುತ್ತವೆ. ಒಂದರಲ್ಲಿ ಆಸ್ಪತ್ರೆಯ ಮೋಟಾರು ಸ್ಟ್ಯಾಂಡು ಮತ್ತು ಒಳಬರುವ ಗೇಟು ಕಂಡರೆ ಇನ್ನೊಂದು ಕಿಟಕಿಯಿಂದ ಆಸ್ಪತ್ರೆಯ ಕಂಪೌಂಡಿನಾಚೆ ಇರುವ ಪೊಲೀಸ್ ಮೈದಾನ, ಗಿಡಮರಗಳು ಕಾಣುತ್ತವೆ. ಬಾಗಿಲ ಎದುರಿನ ಕಾರಿಡಾರು ದಾಟಿದರೆ ಸಂಪಿಗೆ ಮರವೊಂದು ಅಕಾ ಇಲ್ಲೇ ಇದೆ.

ಎರಡು ಪಿಕಳಾರ ಹಕ್ಕಿ ಕರೆಂಟುಲೈನಿನ ಮೇಲೆ ಪಕ್ಕಪಕ್ಕ ಕೂತಿವೆ. ಒಂದು ಹಕ್ಕಿ ತುಸು ಸರಿದರೆ ಅದರ ಪಕ್ಕದ್ದು ಅಷ್ಟೇ ಆಚೆ ಸರಿಯುತ್ತದೆ. ಕತ್ತು ಕೊಂಕಿಸುತ್ತ, ಆಚೀಚೆ ನೋಡುತ್ತ, ರೆಕ್ಕೆ ಸ್ವಚ್ಛಗೊಳಿಸುತ್ತ - ಕಣ್ಣಲ್ಲಿ ಕಣ್ಣಿಟ್ಟು ಚುಂಬಿಸುವುದಷ್ಟೇ ಪ್ರೇಮವಲ್ಲ. ಒಟ್ಟಿಗಿರುವುದು, ಒಬ್ಬರನೊಬ್ಬರು ಗಮನಿಸುತ್ತ, ಸಹಿಸುತ್ತ ಇರುವುದು ಕೂಡಾ ಪ್ರೇಮವೇ.

ಸಾಹಿಲ ನಿನ್ನೆ ಕೊಟ್ಟ ಪತ್ರ ಮತ್ತೆಮತ್ತೆ ಓದಿಸಿಕೊಳ್ಳುತ್ತಿದೆ:

‘ನಿನ್ನಿಂದ ನನ್ನ ಬದುಕಿಗೊಂದು ಅರ್ಥ ಕಾಣುತ್ತಿದೆ. ಕೊನೆಮೊದಲಿಲ್ಲದ ಆಧ್ಯಾತ್ಮಿಕ ಹುಡುಕಾಟಕ್ಕೊಂದು ಅಂತಿಮ ಬಿಂದು ಸಿಕ್ಕಿದೆ. ನಾನು ಹುಚ್ಚ. ನನಗೆ ಸುಲಭಕ್ಕೆ ಸಿಕ್ಕುವುದನ್ನು, ಕಣ್ಣೆದುರಿನ ಎಟುಕುವ ವಸ್ತುವನ್ನು ಸ್ವೀಕರಿಸಿ ರೂಢಿಯಿಲ್ಲ. ನಾನು ಆಯ್ದು ಪಡೆಯುವವನು. ನನಗೆ ಬೇಕು, ಆದರೆ ಅದೇ ಬೇಕು. ಆಯ್ಕೆ ಮಾಡಿಕೊಂಡದ್ದು ಸಿಗದಿದ್ದರೆ ಯಾವುದೂ ಬೇಡವೇಬೇಡ. ಅದಕ್ಕೇ ನಾನು ಹುಚ್ಚ. ನನ್ನನ್ನು ಲೋಕ ಹುಚ್ಚನೆಂದು ಕರೆಯುವುದಾದರೆ ಕರೆಯಲಿ, ಆಪ್ತಜೀವದ ತೊಡೆ ಮೇಲೆ ತಲೆಯಿಟ್ಟು ಮಲಗಬಹುದಾದ ಆ ಶಾಂತ, ಸುಖದ ಒಂದೇಒಂದು ಘಳಿಗೆಗಾಗಿ ಕೊನೆಯ ಉಸಿರಿರುವವರೆಗೆ ಕಾಯುತ್ತೇನೆ. ಒಲವೇ, ಕೊನೆಮೊದಲಿರದ ಕಾಯುವಿಕೆಯೆ ಪ್ರೇಮ. ಅದರ ಹೊರತಾಗಿ ಈ ಜಗದ ಮತ್ಯಾವ ಆಗುಹೋಗುಗಳಲ್ಲೂ ನನಗೆ ಅರ್ಥವೇ ಕಾಣುತ್ತಿಲ್ಲ. ನನ್ನ ದೇವತೆಯೇ, ನಾನು ಅಪ್ಪಟ ಮನುಷ್ಯ. ಅದಕ್ಕೇ ನನಗೆ ನೀನು ಬೇಕು, ಇಡಿಇಡಿಯಾಗಿ ಪೂರ್ತಿ..’

ಪಾರ‍್ತಕ್ಕನ ಪ್ರಕಾರ ಗಂಡಿಗೆ ಹೆಣ್ಣು ಮಾಯೆ, ಹೆಣ್ಣಿಗೆ ಗಂಡು ಮಾಯೆ; ಮತ್ತೆಲ್ಲ ಕಟ್ಟುಕತೆ. ಅವಳ ಪ್ರಕಾರ ಸಾಹಿಲ ಎಂಬ ವ್ಯಕ್ತಿ ಚಳುವಳಿಯನ್ನು ಮುರಿಯಲು ಈ ವ್ಯವಸ್ಥೆ ಸೃಷ್ಟಿಸಿರುವ ಸಂಚು. ಆಯಿಯನ್ನೂ ಸೇರಿದಂತೆ ನನ್ನ ಸುತ್ತಮುತ್ತಲಿರುವವರ ಪ್ರಕಾರ ಅವ ಹುಚ್ಚ. ಕೆಲವೊಮ್ಮೆ ಅವನ ಮಾತು ಅಸಂಬದ್ಧ ಎನಿಸುವುದಿದೆ. ಆದರೆ ಅಷ್ಟಕ್ಕೆ ಹುಚ್ಚನೆನ್ನಬಹುದೆ? ಹೌದು, ಅವನು ಹುಚ್ಚನೇ ಇರಬೇಕು. ನನ್ನ ಜೊತೆ ತನ್ನ ಉಳಿದ ಬದುಕನ್ನು ಕಲ್ಪಿಸಿಕೊಳ್ಳುವ ಧೈರ್ಯಕ್ಕೆ ಕೈಹಾಕಿದ ಅವ ಹುಚ್ಚನೇ ಸೈ. ಪ್ರೇಮಿಸುವುದು, ಸಂಸಾರ ನಡೆಸುವುದು ಎಂಬ ಯೋಚನೆಗಳೇ ಹುಟ್ಟಬಾರದ ನನ್ನ ಜೊತೆ ಜೀವಮಾನ ಕಳೆಯಬಯಸುವ ಅವ ಹುಚ್ಚನೇ ಹೌದು.

ನನಗಾಗಿ ಸಂಗಾತಿ ಹುಚ್ಚನೆಂದು ಕರೆಸಿಕೊಳ್ಳುತ್ತಿದ್ದಾನೆ. ನನಗಾಗಿ ಪಾರ‍್ತಕ್ಕ ಚೀನಾದ ಏಜೆಂಟಳೆಂದು ಕರೆಸಿಕೊಳ್ಳುತ್ತಿದ್ದಾಳೆ. ನನ್ನ ಉಪವಾಸ ನಿಂತರೆ ೪೦ ಎನ್‌ಜಿಒಗಳ ಸಾವಿರಾರು ಕಾರ್ಯಕರ್ತರು ಕೆಲಸ ಕಳಕೊಳ್ಳುತ್ತಾರೆ. ನನ್ನ ಉಪವಾಸದಿಂದ ಸಿಂಗೂರಿನ ಅವಳಿ ಯೋಜನೆಗಳು ನೆನೆಗುದಿಗೆ ಬಿದ್ದು, ಅಭಿವೃದ್ಧಿಯಾಗದೇ ಜನ ಗುಳೆ ಹೋಗುತ್ತಿದ್ದಾರೆ. ನನ್ನಿಂದ ಅಮ್ಮನಿಗೆ ಅವಮಾನ ಆಗಿದೆ. ನನ್ನ ಜೀವಂತ ಇಡಲು ಈ ಮೂಗಿನ ಪೈಪು, ಹಾರ್ಲಿಕ್ಸ್, ಸಿರಿಲ್ಯಾಕ್, ವೈದ್ಯರು, ಸಿಸ್ಟರುಗಳು, ಸೆಕ್ಯುರಿಟಿಗಳು ಎಂದು ಸರ್ಕಾರಕ್ಕೆ ದಿನಕ್ಕೆ ಹತ್ತುಸಾವಿರ ಖರ್ಚಾಗುತ್ತಿದೆ. ನನ್ನಿಂದಾಗಿ ಎಷ್ಟೆಲ್ಲ ತೊಂದರೆ? ಉಪವಾಸ ಮಾಡಿದರೆ ಕೆಲವರಿಗೆ ತೊಂದರೆ, ಉಪವಾಸ ನಿಲಿಸಿದರೆ ಮತ್ತೆ ಕೆಲವರಿಗೆ ತೊಂದರೆ. ಇದರ ನಡುವೆ ನಾನು ಎಲ್ಲಿದ್ದೇನೆ? ಎಲ್ಲಿ ಹೆಜ್ಜೆಯಿಟ್ಟು ಯಾವ ಹಾದಿಯಲ್ಲಿ ನಡೆದುಬಿಟ್ಟೆ ಇಷ್ಟುದಿನ?

ಇಲ್ಲ, ಇಲ್ಲ. ಇವನ್ನೆಲ್ಲ ಹೀಗೆ ಇಟ್ಟುಕೊಳ್ಳಬಾರದು. ಜನರಿಗೆ ಎದೆಯೊಳಗಿನ ಎಲ್ಲವನ್ನು ಬಿಚ್ಚಿ ಹೇಳಬೇಕು. ಮೌನಶಿಲೆ ಒಡೆಯಲೇಬೇಕು..

ಮರುದಿನ ಪತ್ರಿಕೆಗಳಲ್ಲಿ ಎರಡು ಪತ್ರಗಳು ಪ್ರಕಟವಾದವು. ಒಂದು ಜನವಾಹಿನಿ ಸಂಘಟನೆಯ ವಕ್ತಾರರಾದ ಹನೀಫ್ ಮತ್ತು ಪಾರ್ವತಿ ಅವರ ಜಂಟಿ ಹೇಳಿಕೆಯಿರುವ ಪತ್ರ.

‘ಹೋರಾಟವನ್ನು ನಿಲ್ಲಿಸಲು ಬಂದರು ಮಾಫಿಯಾ ಮತ್ತು ಪ್ರಭುತ್ವಗಳು ನಡೆಸಿರುವ ಹುನ್ನಾರವೇ ಇಳಾ ಪ್ರೇಮ ಪ್ರಕರಣ. ಏಕೆಂದರೆ ಇಳಾ ಈಗ ಸಂಪೂರ್ಣ ಆಳುವವರ ಸುಪರ್ದಿನಲ್ಲೆ ಇರುವುದು. ಅವಳ ನೆಂಟರಿಷ್ಟರು ಬರೆದ ಪತ್ರ ಅವಳನ್ನು ತಲುಪದಿರುವಾಗ ಸಾಹಿಲ್ ಅವರ ಪತ್ರ ಮಾತ್ರ ತಲುಪಿದ್ದು ಹೇಗೆ? ಭೇಟಿ ಮಾಡುವವರ ಸಂಖ್ಯೆಯ ಮೇಲೆ ನಿರ್ಬಂಧವಿರುವಾಗ ಇದ್ದಕ್ಕಿದ್ದಂತೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾಧ್ಯಮಗಳು ಅವಳ ಸಂದರ್ಶನ ಪ್ರಕಟಿಸಿ ಸಾಹಿಲ್ ಕುರಿತು ಬರೆಯತೊಡಗಿರುವುದೇಕೆ? ಉಪವಾಸದಿಂದ ಆದ ಪೋಷಕಾಂಶ ಏರುಪೇರಿನಿಂದ ಇಳಾ ಮಾನಸಿಕವಾಗಿ ಅಸ್ವಸ್ಥಳಾಗಿದ್ದಾಳೆ. ಅವಳನ್ನು ನೋಡಿಕೊಳ್ಳುವ ವೈದ್ಯರ ನಿರ್ಲಕ್ಷ್ಯದಿಂದ ಆರೋಗ್ಯದಲ್ಲು ಏರುಪೇರುಗಳಾಗಿ ಸಿಹಿಮೂತ್ರ ಕಾಯಿಲೆ ಶುರುವಾಗಿದೆ. ಅವಳು ಉಪವಾಸದಿಂದ ಸಾಯದಂತೆ ದಿನಕ್ಕೆ ಹತ್ತು ಸಾವಿರ ಖರ್ಚನ್ನು ಸರ್ಕಾರ ಮಾಡುತ್ತಿದೆ ನಿಜ. ಆದರೆ ಯಾರಿಗಾಗಿ ಮಾಡುತ್ತಿದೆ? ಜನ ದಂಗೆಯೇಳದಂತೆ ಸುಮ್ಮನಿರಿಸಲು ಮಾಡುತ್ತಿದೆ.

ಸಂಘಟನೆಯ ಕುರಿತು ಸುಳ್ಳು ಸುದ್ದಿ ಹರಡುವವರ ವಿರುದ್ಧ, ಮಾನಸಿಕವಾಗಿ ಅಸ್ವಸ್ಥಳಾದ ಇಳಾಳ ತಲೆಕೆಡಿಸಿದ ಸಾಹಿಲನ ವಿರುದ್ಧ, ಅವಳ ಮಾನಸಿಕ ಸ್ವಾಸ್ಥ್ಯ ಕಾಪಾಡಲು ವಿಫಲರಾದ ವೈದ್ಯರ ನಿರ್ಲಕ್ಷ್ಯದ ವಿರುದ್ಧ ದೂರು ದಾಖಲಿಸಿದ್ದೇವೆ. ಇವರೆಲ್ಲರ ಮೇಲೆ ಕ್ರಮ ಜರುಗಿಸುವಂತೆ ಕೋರಿ ಅಮಾಯಕ ಇಳಾ ಇಮೇಜಿಗೆ ಧಕ್ಕೆಯಾಗದಂತೆ, ಆಕೆ ಉಪವಾಸ ಹಿಂತೆಗೆದುಕೊಳ್ಳದಂತೆ ಜನ ವಾಹಿನಿ ಸಂಘಟನೆಯ ಕಾರ್ಯಕರ್ತರು ಧರಣಿ ಕೂರಲಿದ್ದಾರೆ..’

ಪತ್ರಿಕೆಗಳು ಈ ವಿಷಯಕ್ಕೆ ಸಂಬಂಧಪಟ್ಟಂತೆ ಹಲವರ ಸಂದರ್ಶನ ನಡೆಸಿದ್ದವು. ಒಬ್ಬ ಮಾನಸಿಕ ತಜ್ಞರು, ‘ಆಕೆ ಬಿಡುಗಡೆಯಾಗಿರುವುದು ಸಂತೋಷ ತಂದಿದೆ. ಆದರೆ ಊಟ ಮಾಡುವುದನ್ನೇ ಮರೆತ ದೇಹ ಮೊದಲಿನದಕ್ಕೆ ಹೊಂದಿಕೊಳ್ಳುವಂತೆ ಮಾಡಲು ಬಹಳ ಕಷ್ಟವಿದೆ. ಆಕೆಗೆ ಶುರುವಾದ ಡಯಾಬಿಟಿಸ್ ತೀವ್ರ ಹಸಿವನ್ನು ಹುಟ್ಟಿಸುವ ಕಾಯಿಲೆ. ಬಹುಶಃ ಹಸಿವಿನ ಸಂವೇದನೆ ಹಾಗೂ ಕೊನೆಗೊಳ್ಳದ ಹೋರಾಟ ಸಂದಿಗ್ಧ ಪರಿಸ್ಥಿತಿ ಹುಟ್ಟಿಸಿ ಇಂಥ ನಿರ್ಧಾರಕ್ಕೆ ಬರುವಂತೆ ಮಾಡಿರಬಹುದು. ಜಗಿಯುವ ಕ್ರಿಯೆಯು ಮನುಷ್ಯನಲ್ಲಿ ಪ್ರಫುಲ್ಲತೆ, ಕ್ರಿಯಾಶೀಲತೆಯನ್ನು ಹುಟ್ಟಿಸುತ್ತದೆ. ಜಗಿಯದೆ ಕಳೆದ ಹದಿನೈದು ವರ್ಷಗಳು ಡಿಪ್ರೆಷನ್‌ಗೆ ಕಾರಣವಾಗಿರಬಹುದು’ ಎಂದು ಅಭಿಪ್ರಾಯಪಟ್ಟಿದ್ದರು.

ಅದರ ಜೊತೆಗೇ ಇಳಾ ಬರೆದ ಪತ್ರವೂ ಪತ್ರಿಕೆಗಳಲ್ಲಿ ಪ್ರಕಟವಾಯಿತು:

‘ಮಹಾಜನತೆಗೆ ನಮಸ್ಕಾರ.

ಒಂದಗುಳು ಬಾಯಲ್ಲಿಡದೆ ಒಂದೂವರೆ ದಶಕ ಕಾಲವನ್ನು ಆಸ್ಪತ್ರೆ-ಜೈಲಿನಲ್ಲಿ ಸವೆಸಿದೆ. ಹುತಾತ್ಮಳಾಗುವುದು ನನ್ನ ಹೋರಾಟದ ಗುರಿಯಲ್ಲ. ನಾವೆಯನ್ನು ತೀರ ಸೇರಿಸುವ ಜವಾಬ್ದಾರಿ ನನ್ನ ಮೇಲೆ ಮಾತ್ರ ಇದೆಯೇ ಎಂಬ ಭಯಕ್ಕೆ ಹೆಗಲು ಭಾರವೆನಿಸುತ್ತಿದೆ. ಎಂದೇ ಈಗ ಅಂಥ ಕಾಲ ಸನ್ನಿಹಿತವಾಗಿದೆ. ಒಂದಲ್ಲ ಹತ್ತುಭುಜಗಳು ಈ ಗುರುತರ ಜವಾಬ್ದಾರಿ ನಿರ್ವಹಿಸಲಿ ಎಂದು ರಾಜ್ಯದ ಮಹಾಜನತೆಗೆ ಹೋರಾಟವನ್ನು ಮುಂದುವರೆಸುವ ಜವಾಬ್ದಾರಿ ವಹಿಸಿ ನಿರ್ಗಮಿಸುತ್ತಿದ್ದೇನೆ.

ಸಿಂಗೂರಿನ ಹುಡುಗರು, ಜನವಾಹಿನಿ ಮಹಿಳಾ ಸಂಘಟನೆಯ ವೈ. ಪಾರ್ವತಿ ಮತ್ತು ನನ್ನಮ್ಮನ ಹೇಳಿಕೆಗಳು ನಾನು ಈ ಯೋಜನೆಯನ್ನು ಕುರಿತು ಮರುಯೋಚಿಸುವಂತೆ ಮಾಡಿವೆ. ಎಂದೇ ಉಪವಾಸ ಹಿಂತೆಗೆದುಕೊಳ್ಳುತ್ತಿರುವೆ. ಆದರೆ ನನ್ನ ಹೋರಾಟ ಮುಗಿದಂತಲ್ಲ. ಏಕೆಂದರೆ ಇನ್ನು ಮುಂದಿನ ಬದುಕೇನಿದೆಯೋ ಅದೂ ದೊಡ್ಡ ಹೋರಾಟವೇ ಆಗಲಿದೆ. ಇಷ್ಟು ವರ್ಷ ಉಣ್ಣದೆ ತಿನ್ನದೆ ಇದ್ದರೂ ನನ್ನ ಜೀವಂತವಾಗಿಡಲು ಮೂಗಿನ ನಳಿಕೆ, ಡಾ. ವಾಗಳೆ ಮತ್ತು ತಂಡ, ಸರ್ಕಾರ ಎಲ್ಲ ಹೋರಾಡಿದರು. ಈಗ ನನ್ನ ಬಾಯಿ ಜಗಿಯುವುದನ್ನು ಮರೆತಿದೆ. ನಾಲಿಗೆ ರುಚಿಯನ್ನು ಮರೆತಿದೆ. ಜೊಲ್ಲು ಸ್ರವಿಸುವುದೂ ಗ್ರಂಥಿಗಳಿಗೆ ಮರೆತುಹೋಗಿದೆ. ಇನ್ನು ನಾನು, ನನ್ನ ದೇಹ ನಳಿಕೆಯಿಲ್ಲದೆ ಬದುಕಲು ಹೋರಾಡಬೇಕಾಗಿದೆ. ಅದು ಏಕಾಂಗಿಯಾಗಿ ಸಾಧ್ಯವಿಲ್ಲ. ನನಗೊಬ್ಬ ಆತ್ಮಸಖನ ಸಖ್ಯ ಬೇಕಾಗಿದೆ.

ಅಂತರಂಗ-ಬಹಿರಂಗಗಳೆಂಬ ಬೇರೆ ಕೋಣೆಗಳಿಲ್ಲದ ಬಯಲಿನಂತೆ ಬದುಕಿರಬೇಕೆಂಬ ನಂಬಿಕೆಯಂತೆ ಇಷ್ಟು ವರ್ಷ ಜೀವಿಸಿದೆ. ಕ್ಷಮಿಸಿ, ನನ್ನಾಳ ಕಲಕಿದ ಒಂದು ಸುಂದರ ಘಳಿಗೆಯಲ್ಲಿ ನನ್ನೆದೆಯಲ್ಲಿ ಪುಟ್ಟ ಮಂದಿರವೊಂದು ಎದ್ದು ನಿಂತಿದೆ. ಸಂಗಾತಿಯೊಬ್ಬ ಸಿಗುವ ಲಕ್ಷಣವಿದೆ. ಆ ತೀರ ಎಂಥದೋ, ಯಾವುದೋ ಖಚಿತವಿಲ್ಲ. ಆದರೂ ಕೊನೆಮೊದಲಿರದ ಪಯಣದಲ್ಲಿ ಕ್ಷಣಹೊತ್ತಾದರೂ ಆ ಇನ್ನೊಂದು ತೀರದಲ್ಲಿ ತಂಗಬೇಕೆನಿಸುತ್ತಿದೆ. ಯಾವುದನ್ನೂ ಏಕಾಂಗಿಯಾಗಿ ನಿರ್ಧರಿಸಲಾರೆ. ನನ್ನವರನ್ನೆಲ್ಲ ಒಪ್ಪಿಸಿಯೇ ಮುಂದಡಿಯಿಡಲಿದ್ದೇನೆ. ನಮಗೆ ಒಳಿತಾಗಲೆಂದು ಹರಸಿ.

ಇಳಾ ಆಗಿರುವುದು ಸುಲಭವಲ್ಲ..


(ಎಲ್ಲ ಚಿತ್ರಗಳು: ಕೃಷ್ಣ ಗಿಳಿಯಾರ್)