Sunday 26 December 2021

ಮದುವೆಯ ವಯಸ್ಸು: ಹದಿನೆಂಟೋ? ಇಪ್ಪತ್ತೊಂದೋ?

 



ಮದುವೆಯಾಗುವ ವಧೂವರರಿಗೆ ಕನಿಷ್ಟ ೨೧ ವರ್ಷವಾಗಬೇಕೆಂಬ ಕಾನೂನು ಬರುತ್ತಿದೆ. ತಾಯಿಮಗುವಿನ ಹಿತದೃಷ್ಟಿಯಿಂದಲೋ, ಒಂದು ಸಮುದಾಯವನ್ನು ಗುರಿಯಾಗಿಸಿ ಹಣಿಯಲೆಂದೋ ಅಂತೂ ನಾಲ್ಕು ದಶಕಗಳ ಬಳಿಕ ಮದುವೆಯ ವಯಸ್ಸನ್ನು ೧೮ರಿಂದ ಇಪ್ಪತ್ತೊಂದಕ್ಕೆ ಏರಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಒಂದೆಡೆ ಹೆಣ್ಣಿಗೆ ಸಿಕ್ಕ ಅತಿಸ್ವಾತಂತ್ರ್ಯದಿಂದ ಕೌಟುಂಬಿಕ ಬಿಕ್ಕಟ್ಟುಗಳು ತಲೆದೋರುತ್ತಿವೆಯೆಂದು ಸಿಬಿಎಸ್ಸಿ ಪ್ರಶ್ನೆಪತ್ರಿಕೆ ಬಿಂಬಿಸುತ್ತಿದ್ದರೆ, ಇನ್ನೊಂದೆಡೆ ಮದುವೆಯ ವಯಸ್ಸು ಏರಿಸಿ ಹೆಣ್ಣಿನ ಹಿತ ಕಾಯತ್ತಿರುವೆವೆಂದು ಆಳುವ ವ್ಯವಸ್ಥೆ ಹೇಳುತ್ತಿದೆ. 

ಭಾರತದ ಸಾಮಾಜಿಕ, ಆರ್ಥಿಕ ವಾಸ್ತವಗಳನ್ನು ಗಮನಿಸಿದರೆ ಬರಲಿರುವ ಕಾನೂನಿನ ಪರಿಣಾಮ ಎಲ್ಲರಿಗೂ ಒಂದೇ ಆಗಿರುವುದಿಲ್ಲ. ಎಂದೇ ಈ ಚರ್ಚೆಗೆ ಹಲವು ಆಯಾಮಗಳಿವೆ.


ಸುರಕ್ಷಿತ ತಾಯ್ತನ


ವೈದ್ಯಕೀಯ ದೃಷ್ಟಿಯಿಂದ ಹುಡುಗಿಯ ಮದುವೆಯ ವಯಸ್ಸು ೨೧ ಆಗುವುದು ಸ್ವಾಗತಾರ್ಹವಾಗಿದೆ. ಈಗ ಬಹುತೇಕ ಹುಡುಗಿಯರು ಹತ್ತು ವರ್ಷದ ಆಸುಪಾಸು ಮೈನೆರೆಯುತ್ತಾರೆ. ಮುಟ್ಟು ಬೇಗ ಶುರುವಾದರೂ ರಕ್ತಹೀನತೆ, ಅಪೌಷ್ಟಿಕತೆ, ಅತಿಶ್ರಮ ಅಥವಾ ಶ್ರಮರಾಹಿತ್ಯಗಳಿಂದ ರಸದೂತಗಳ ಚಕ್ರ ಅನಿಯಮಿತವಾಗಿರುತ್ತದೆ. ಹೀಗಿರುತ್ತ ಹದಿನೆಂಟಕ್ಕೆ ಅಥವಾ ಅದಕ್ಕೂ ಮೊದಲೇ ಮದುವೆಯಾದರೂ ಮದುವೆಯಾಗಿ ಒಂಭತ್ತು ತಿಂಗಳಿಗೆ ವಧು ಮಗು ಹೆರಲೆಂಬ ನಿರೀಕ್ಷೆಯಿರುತ್ತದೆ. ಮಗುತನವು ಮಾಸುವ ಮೊದಲೇ ಹುಡುಗಿ ಮಗುವಿನ ತಾಯಾಗುತ್ತಾಳೆ. ಮತ್ತೆಮತ್ತೆ ದೇಹವನ್ನು ಬಸುರು, ಗರ್ಭಪಾತ, ಕುಟುಂಬ ಯೋಜನಾ ವಿಧಾನಗಳಿಗೊಡ್ಡಿಕೊಳ್ಳುತ್ತಾಳೆ. ಒಂದುವೇಳೆ ಬಸುರಾಗದೇ ಪ್ರತಿತಿಂಗಳು ಮುಟ್ಟಾಗುತ್ತ ಹೋದಳೋ, ಮನೆಯವರಿಗೆ ಆತಂಕ ಶುರುವಾಗುತ್ತದೆ. ಅವಳ ಹೆಣ್ತನದ ಬಗೆಗೆ ಉಳಿದವರಿಗೂ, ಸ್ವತಃ ಅವಳಿಗೂ ಅನುಮಾನ ಮೊದಲಾಗುತ್ತದೆ. ಕಟ್ಟೆಕಲ್ಲುಗಳ ಪೂಜೆ, ಹರಕೆ, ಜ್ಯೋತಿಷ್ಯ, ಆಸ್ಪತ್ರೆಗಳಲ್ಲಿ ತಪಾಸಣೆ, ಗಾಂವಟಿ ಮದ್ದು ಮುಂತಾಗಿ ಎಲ್ಲ ಪ್ರಯೋಗವೂ ನಡೆಯುತ್ತದೆ. 

ಸುರಕ್ಷಿತ ತಾಯ್ತನ ಪ್ರತಿ ಹೆಣ್ಣಿನ ಹಕ್ಕು. ಭಾರತದ ೧೫-೧೯ ವರ್ಷ ವಯೋಮಾನದ ಯುವತಿಯರ ಸಾವಿನ ಮುಖ್ಯ ಕಾರಣ ತಾಯ್ತನ ಸಂಬಂಧಿ ಕಾಂಪ್ಲಿಕೇಷನ್ನುಗಳೇ ಆಗಿವೆ. ಭಾರತದಲ್ಲಿ ೨೦೧೬-೧೭ರಲ್ಲಿ ಒಂದು ಲಕ್ಷ ಸಜೀವ ಮಕ್ಕಳ ಜನನಕ್ಕೆ ೧೧೩ ತಾಯಂದಿರು, ಎಂದರೆ ೨೭,೦೦೦ ಬಾಣಂತಿಯರು ತೀರಿಕೊಂಡರು. ಅವರಲ್ಲಿ ಹೆಚ್ಚಿನವರು ೨೦ರ ಆಸುಪಾಸು ವಯಸ್ಸಿನವರು. ಶಿಶುಮರಣಗಳಲ್ಲಿ ಹದಿಹರೆಯದ ತಾಯಿ ಹೆತ್ತ ಕೂಸುಗಳೇ ಹೆಚ್ಚು. ಬಸುರು, ಹೆರಿಗೆ, ಗರ್ಭನಿರೋಧಕ ಮಾತ್ರೆ-ಕಾಪರ್ ಟಿ-ಸಂತಾನಹರಣ ಶಸ್ತ್ರಚಿಕಿತ್ಸೆ-ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೊದಲಾದುವುಗಳ ಕಾಂಪ್ಲಿಕೇಷನ್ನುಗಳು ಹದಿನೆಂಟರ ಹುಡುಗಿಗೆ ಗಹನವಾಗಿರುತ್ತವೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡರೆ ಮೊದಲ ಹೆರಿಗೆಗೆ ಬರುವ ಬಸುರಿಯ ವಯಸ್ಸು ಇಪ್ಪತ್ತರ ದಶಕದಲ್ಲಿ ಮುಂದೆ ಮುಂದೆ ಸರಿದಷ್ಟೂ ಒಳಿತೇ. 


ಎಳೆಗರುವಿಗೆ ಬಂಡಿ ಬಿಗಿದು..



ಬಾಲ್ಯವಿವಾಹ ಹುಟ್ಟಿಕೊಂಡಿದ್ದು ತಳಿ ಶುದ್ಧತೆ ಕುರಿತ ಅತಿರೇಕದ ಕಲ್ಪನೆಯಿಂದ. ಬಾಲ್ಯದ ಹಕ್ಕುಗಳನ್ನು, ಹೆಣ್ಣಿನ ಆಯ್ಕೆಯ ಅವಕಾಶವನ್ನು ಕಸಿಯುತ್ತದೆಂದು ಈಶ್ವರಚಂದ್ರ ವಿದ್ಯಾಸಾಗರ, ಬೆಹ್ರಾಮ್ಜಿ ಮಲಬಾರಿಯವರಂತಹ ಸಮಾಜ ಸುಧಾರಣಾಕಾರರು ೧೯ನೆಯ ಶತಮಾನದಲ್ಲೇ ಬಾಲ್ಯವಿವಾಹವನ್ನು ವಿರೋಧಿಸಿದರು. ವೈಯಕ್ತಿಕ ಸ್ವಾತಂತ್ರ್ಯ, ಧಾರ್ಮಿಕ ವಿಚಾರಗಳಲ್ಲಿ ಹಸ್ತಕ್ಷೇಪ ಎಂದೆಲ್ಲ ವಿರೋಧ ಕೇಳಿಬಂದರೂ ಬ್ರಿಟಿಷ್ ನ್ಯಾಯಾಲಯಗಳು ಬಾಲ್ಯವಿವಾಹ ನಿಷೇಧಿಸಿದವು. 

ಹೆಣ್ಣು ಎಂದರೆ ಹ್ಞೂಂ ಎಂದು ತಲೆಯಾಡಿಸಬೇಕಾದವಳು; ಬುದ್ಧಿ ಬಲಿಯುವ ಮುನ್ನವೇ ಅವರನ್ನು ಪಳಗಿಸಿಟ್ಟುಕೊಳ್ಳಬೇಕೆಂಬುದು ಬಾಲ್ಯವಿವಾಹದ ಹಿಂದಿರುವ ತರ್ಕ. ಈಗ ಮದುವೆ ಎನ್ನುವುದೊಂದು ಮಾರುಕಟ್ಟೆ. ವಯಸ್ಸಿಗೆ ಬಂದ ಮಗಳು ಮನೆಯಲ್ಲಿದ್ದರೆ ‘ಸೆರಗಲ್ಲಿ ಕೆಂಡ ಕಟ್ಟಿಕೊಂಡಂತೆ’ ಪಾಲಕರು ಚಡಪಡಿಸುತ್ತಾರೆ. ಹುಡುಗಿ ಎಳೆಯವಳಾದಷ್ಟೂ ವರನಿಗೆ ಕೊಡಬೇಕಾದ ದಕ್ಷಿಣೆ ಕಡಿಮೆಯಾದ್ದರಿಂದ ‘ಒಳ್ಳೆಯ ವರ’ ಸಿಕ್ಕರೆ ಮಗಳಿಗೆ/ವರನಿಗೆ ಎಷ್ಟೇ ವಯಸ್ಸಾದರೂ ಮದುವೆ ಮಾಡಿ ‘ಕೊಟ್ಟು’ಬಿಡುತ್ತಾರೆ. ಈ ಭಾವನೆ ಗ್ರಾಮೀಣ ಭಾಗದಲ್ಲಿ, ಕೆಳವರ್ಗಗಳಲ್ಲಿ ಬಲವಾಗಿದೆ.

ಹದಿಹರೆಯದ ಯುವತಿಯರ ದೃಷ್ಟಿಯಿಂದ ನೋಡಿದರೆ ತನ್ನ ಶಕ್ತಿಮಿತಿಗಳನ್ನು, ದೇಹಾಕಾಂಕ್ಷೆಗಳನ್ನು, ಸಾಮಾಜಿಕ ಸಂಬಂಧಗಳ ಸ್ವರೂಪ-ಸಂಕಟಗಳನ್ನು, ದಾಂಪತ್ಯದ ಸವಾಲುಗಳನ್ನು, ತಾಯ್ತನವೆಂಬ ಅಸ್ವಾತಂತ್ರ್ಯವನ್ನು ಅರಗಿಸಿಕೊಳ್ಳಲು ೨೧ ವರ್ಷಕ್ಕೆ ಮದುವೆಯಾಗುವುದು ಸೂಕ್ತವಾಗಿದೆ. ಉನ್ನತ ಶಿಕ್ಷಣ, ವೃತ್ತಿಗಳಲ್ಲಿ ತೊಡಗಿಕೊಳ್ಳುವ ಕನಸಿನ ತರುಣಿಯರಿಗೆ ಮದುವೆ ತಮ್ಮ ಸಾಧನೆಗೆ ಅಡೆತಡೆಯಾಗುವುದೆಂಬ ಭಾವನೆಯಿರುತ್ತದೆ. ಕಾಲೇಜಿಗೆ ಹೋಗದೇ ಸಣ್ಣಪುಟ್ಟ ಉದ್ಯೋಗಗಳಲ್ಲಿ ಅನಿವಾರ್ಯವಾಗಿ ದುಡಿಯಬೇಕಾದ ತರುಣಿಯರಿಗೂ ಮದುವೆಯ ಕನಿಷ್ಟ ವಯಸ್ಸು ಮುಂದೆ ಹೋದರೆ ಆರ್ಥಿಕ ಸ್ವಾಯತ್ತತೆ ದೊರಕಿ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗುತ್ತದೆ. 

ಹಾಗಾಗಿ ಇಪ್ಪತ್ತರ ನಂತರ ವಿವಾಹವಾಗುವುದು ಯುವತಿಯರ ದೈಹಿಕ, ಮಾನಸಿಕ, ವ್ಯಕ್ತಿತ್ವದ ಬೆಳವಣಿಗೆಯ ದೃಷ್ಟಿಯಿಂದ ಸೂಕ್ತ ಎನ್ನಬಹುದು. 


ಕಾಗದದ ಹುಲಿ



ಭಾರತದಲ್ಲಿ ಸಾಕಷ್ಟು ಮಹಿಳಾಪರವಾದ ಕಾನೂನುಗಳಿವೆ. ಬಾಲ್ಯವಿವಾಹ, ವರದಕ್ಷಿಣೆ, ಜಾತಿನಿಂದನೆಗಳೆಲ್ಲ ನಿಷೇಧಗೊಂಡು ದಶಕಗಳೇ ಕಳೆದಿವೆ. ಆದರೂ ಕಾನೂನು ಕಾಗದದ ಹುಲಿಯಾಗಿರುವುದರಿಂದ ಬಾಲ್ಯವಿವಾಹಗಳು ಸಿಂಧುವಾಗುತ್ತವೆ, ಅಂತರ್ಜಾತಿ ವಿವಾಹ ಅಪರಾಧವೆನಿಸಿಕೊಳ್ಳುತ್ತದೆ, ವರದಕ್ಷಿಣೆ ಸರ್ವಮಾನ್ಯವಾಗಿದೆ! ಯುನಿಸೆಫ್ ಪ್ರಕಾರ ಪ್ರತಿವರ್ಷ ಭಾರತದಲ್ಲಿ ೧೫ ಲಕ್ಷ ಅಪ್ರಾಪ್ತ ಹುಡುಗಿಯರ ಮದುವೆಯಾಗುತ್ತಿದೆ. ಎಂದರೆ ೨೩% ಮದುವೆಗಳು ಬಾಲ್ಯವಿವಾಹಗಳೇ ಆಗಿದ್ದು ಗುರುಹಿರಿಯರ, ಜನನಾಯಕರ ಆಶೀರ್ವಾದದೊಂದಿಗೇ ನಡೆಯುತ್ತಿವೆ. ಕೋವಿಡ್ ಸಮಯದಲ್ಲಿದು ಇನ್ನಷ್ಟು ಹೆಚ್ಚಾಗಿದೆ. ಅದನ್ನು ವಿರೋಧಿಸಿದ ರಾಜಾಸ್ಥಾನದ ಭಾಂವ್ರಿದೇವಿಯಂತಹ ಕಾರ್ಯಕರ್ತೆಯರು ಗುಂಪು ಅತ್ಯಾಚಾರಕ್ಕೊಳಗಾಗುತ್ತಾರೆ. 

೧೮ ವರ್ಷದೊಳಗಿನ ಬಾಲ್ಯವಿವಾಹವನ್ನೇ ತಡೆಯಲಾಗದ ಸರ್ಕಾರವು ೨೧ರವರೆಗೆ ಯುವತಿಯರು ಮದುವೆಯಾಗದಂತೆ ಏಕೆ ತಡೆಯುತ್ತಿದೆ? ಅದಕ್ಕಾಗಿ ಎಂತಹ ಕಾರ್ಯಯೋಜನೆ ರೂಪಿಸುತ್ತದೆ? ಈ ಕಾನೂನಿನ ಹಿಂದಿನ ಅಸಲಿ ಉದ್ದೇಶವೇನು? ಎಂಬ ಗಂಭೀರ ಪ್ರಶ್ನೆ ಹಲವರದಾಗಿದೆ. ಕಾನೂನು ದುರ್ಬಳಕೆಯಾಗಿ, ಕಾನೂನು ಜ್ಞಾನವಿರದ ಸಮುದಾಯಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಇದು ನೆಪವಾಗಲಿದೆಯೇ? ಇಚ್ಛೆಪಟ್ಟು ಸಂಗಾತಿಯನ್ನು ಆಯ್ಕೆಮಾಡಿಕೊಂಡ ಹುಡುಗಿಯೂ ಮದುವೆಯಾಗಲು ೨೧ರವರೆಗೆ ಕಾಯಬೇಕಾಗುವುದು ವ್ಯಕ್ತಿ ಸ್ವಾತಂತ್ರ್ಯದ ದೃಷ್ಟಿಯಿಂದ ಸರಿಯೇ? ಎಂದು ಮಹಿಳಾ ಸಂಘಟನೆಗಳು ಪ್ರಶ್ನಿಸುತ್ತ ಇದಕ್ಕೆ ವಿರೋಧ ವ್ಯಕ್ತಪಡಿಸಿವೆ. 

ಮತ್ತೊಂದು ತಾಂತ್ರಿಕ ತೊಡಕೂ ಇದರಲ್ಲಿದೆ: ಭಾರತದಲ್ಲಿ ೧೮ ವರ್ಷ ವಯಸ್ಸು ಬಾಲ್ಯ-ಪ್ರೌಢ ಅವಸ್ಥೆಗಳ ನಡುವಿನ ಗೆರೆಯೆಳೆಯುವ ಬಿಂದುವಾಗಿದೆ. ೧೮ ದಾಟಿದವರು ಮತ ಹಾಕಬಹುದು; ಒಪ್ಪಿಗೆ ನೀಡಿ ಲೈಂಗಿಕ ಸಂಪರ್ಕ ನಡೆಸಬಹುದು; ಕಾರ್ಮಿಕರೆಂದು ಕೆಲಸ ಮಾಡಬಹುದು; ೧೮ ದಾಟಿದ ಅಪರಾಧಿಯನ್ನು ವಯಸ್ಕ ಅಪರಾಧಿಯಾಗಿಯೇ ಪರಿಗಣಿಸಲಾಗುತ್ತದೆ. ಇಲ್ಲೆಲ್ಲ ಇರುವ ೧೮ರ ಗಡಿ ಮದುವೆಗೆ ಮಾತ್ರ ೨೧ ಏಕಾಗಬೇಕು ಎಂಬ ತಕರಾರು ಕೆಲವರದಾಗಿದೆ. 

ಆದರೆ ಮತ ಹಾಕುವುದಕ್ಕೂ, ಮದುವೆಯಾಗುವುದಕ್ಕೂ ಪರಿಣಾಮದ ದೃಷ್ಟಿಯಿಂದ ಅಜಗಜಾಂತರ ವ್ಯತ್ಯಾಸವಿದೆ. ೧೮ ವರ್ಷಕ್ಕೆ ಮತ ಹಾಕಿ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿದ್ದಕ್ಕೆ ಐದು ವರ್ಷ ಮಾತ್ರ ಜವಾಬ್ದಾರರಾಗಿರಬೇಕಾಗುತ್ತದೆ. ಮದುವೆಯ ಪ್ರತಿಫಲಕ್ಕೆ ಜೀವಮಾನವಿಡೀ ಬಾಧ್ಯಸ್ಥರಾಗಿರಬೇಕಾಗುತ್ತದೆ. ಅದಕ್ಕೇ ಕೊಂಚ ತಡೆದು ಮದುವೆಯಾಗುವುದು ಹೆಣ್ಣು ಹಿತ ಕಾಯುವ ನಿರ್ಧಾರವಾಗುತ್ತದೆ. ವಿಮೋಚನೆ ಯಾವ ದಿಕ್ಕಿನಿಂದ ಬರುವುದೆಂದು ಹೇಳಲಾಗುವುದಿಲ್ಲ. ಯಾವ ಸರ್ಕಾರವೇ ಇರಲಿ, ಯಾವುದೇ ದುಷ್ಟ ಗುಪ್ತ ಅಜೆಂಡಾದಿಂದ ಮದುವೆಯ ವಯಸ್ಸನ್ನು ೨೧ಕ್ಕೆ ಏರಿಸಿರಲಿ, ಪರಿಣಾಮದ ದೃಷ್ಟಿಯಿಂದ ಇದು ಸೂಕ್ತವಾಗಿದೆ. 

ಹಾಗೆ ನೋಡಿದರೆ ಪ್ರಜ್ಞಾವಂತ ಸಮಾಜಕ್ಕೆ ಕಾನೂನುಗಳೇ ಬೇಡ. ನ್ಯಾಯದ ತಿಳುವಳಿಕೆ ತಂತಾನೇ ಬರಬೇಕು. ಆದರೆ ಭಾರತದ ಸಾಮಾಜಿಕ, ಸಾಂಸ್ಕೃತಿಕ ಪರಿಸರ ಹೇಗಿದೆಯೆಂದರೆ ಇಲ್ಲಿ ಜಾತಿ ಹೆಸರು ಹಿಡಿದು ಅವಮಾನಿಸಬೇಡಿ ಎನ್ನಲೊಂದು ಕಾನೂನು ಬೇಕು. ನಿಮ್ಮ ಎಳೆಯ ಕೂಸಿಗೆ ಮದುವೆ ಮಾಡಬೇಡಿ ಎನ್ನಲೂ ಒಂದು ಕಾನೂನು ಬರಬೇಕು. ವರದಕ್ಷಿಣೆ ತಪ್ಪು, ಅತ್ಯಾಚಾರ ಅಪರಾಧ ಎಂದು ಎಚ್ಚರಿಸಲೂ ಕಾನೂನು ತರಬೇಕು. ಭಾರತದ ನೆಲ ಸಮತೆಯ ಸಮೃದ್ಧ ಬಯಲಾಗುವವರೆಗೆ ಹೊಸಹೊಸ ಕಾನೂನುಗಳು ರೂಪುಗೊಳ್ಳಲೇಬೇಕು. ಈ ಪರಿಸ್ಥಿತಿಯನ್ನು ಆಳುವ ಸರ್ಕಾರಗಳು ದುರುಪಯೋಗಪಡಿಸಿಕೊಳ್ಳಬಾರದು. ಯಾವುದೋ ಒಂದು ಸಮುದಾಯವನ್ನು ಮೆಚ್ಚಿಸಲು/ಹಣಿಯಲು ಕಾನೂನು ಮಾಡಬಾರದು. ಕಾಲದ ತುರ್ತನ್ನು, ಲೋಕಹಿತವನ್ನು ಸಮುದಾಯಗಳಿಗೆ ತಿಳಿಸುವ ಮಾರ್ಗವಾಗಿ ಕಾನೂನು ರೂಪಿಸಬೇಕು. ೨೧ರವರೆಗೆ ತಡೆದು ಮದುವೆಯಾದರೆ ಬದುಕು ಕ್ರಾಂತಿಕಾರಕವಾಗಿ ಬದಲಾಗುವಂತಹ ಹೊಸ ಅವಕಾಶಗಳನ್ನು ಸರ್ಕಾರ ಸೃಷ್ಟಿಸಬೇಕು. ಎಲ್ಲರಿಗೂ ಉಚಿತ ಕಡ್ಡಾಯ ಪದವಿ ಶಿಕ್ಷಣ, ಸರ್ವರಿಗೂ ನಿಶ್ಚಿತ ಕನಿಷ್ಟ ವರಮಾನ ದೊರೆಯುವಂತಹ ಉದ್ಯೋಗ ಕಾರ್ಯಕ್ರಮಗಳನ್ನು ಯೋಜಿಸಬೇಕು. 

ಅದಕ್ಕಾಗಿ ಪ್ರಜೆಗಳೂ, ಪ್ರಭುಗಳೂ ಸಂವಿಧಾನವನ್ನು ಬದುಕಬೇಕು. ಕಾನೂನುಗಳನ್ನು ಜೀವನಮೌಲ್ಯವಾಗಿ ಅಳವಡಿಸಿಕೊಳ್ಳಬೇಕು. ಆಗಷ್ಟೇ ಸರ್ವರಿಗೂ ಸಮಾನತೆ, ಸ್ವಾಯತ್ತತೆ, ಘನತೆಯ ಬದುಕು ಸಾಧ್ಯವಾದೀತು. 

ಕಲೆ: ಕೃಷ್ಣ ಗಿಳಿಯಾರ್

Sunday 21 November 2021

‘ನೀವೂ ದೇವರಾಗಿ’ ಪುಸ್ತಕ ಪರಿಚಯ - ಅಸಾಮಾನ್ಯ ಸಾಮಾನ್ಯರ ಲೋಕ

 


ದಲಿತೇತರ ಮನಸುಗಳು ದಲಿತ ಬದುಕಿನ ಕುರಿತು ಯೋಚಿಸುವಾಗ ಅಸ್ಪೃಶ್ಯತೆಯಿಂದ ಅವರೆದುರಿಸುವ ಅವಮಾನ, ಸಂಕಷ್ಟಗಳು ಕಣ್ಣೆದುರು ತುಂಬುತ್ತವೆ. ಆದರೆ ಸಾವಿರಾರು ವರ್ಷಗಳಿಂದ ಸಂಕಷ್ಟ, ಶೋಷಣೆಗಳನ್ನೆದುರಿಸಿಯೂ ತಮ್ಮದೇ ವಿವೇಕ, ಸಂಸ್ಕೃತಿ, ಒಳನೋಟವನ್ನವರು ರೂಪಿಸಿಕೊಂಡಿರುವುದು, ತುಳಿತದ ನಡುವೆಯೇ ನೆಲಕ್ಕಂಟಿದ ಗರಿಕೆಯಂತೆ ತಲೆಯೆತ್ತಿ ಬದುಕಿರುವುದೂ ಗಮನಾರ್ಹ ಸಂಗತಿಗಳಾಗಿವೆ. ಸಾಮಾನ್ಯರೂ ಅಸಾಮಾನ್ಯವಾಗಿರುವ ಆ ಲೋಕವನ್ನು ಪ್ರೊ. ಅರವಿಂದ ಮಾಲಗತ್ತಿಯವರು ತಮ್ಮ ಆತ್ಮಕತೆಯ ಎರಡನೆಯ ಭಾಗ ‘ನೀವೂ ದೇವರಾಗಿ’ಯಲ್ಲಿ ಅನಾವರಣಗೊಳಿಸಿದ್ದಾರೆ. ಮೊದಲ ಭಾಗ ‘ಗೌರ್ಮೆಂಟ್ ಬ್ರಾಹ್ಮಣ’ವನ್ನು ಓದದಿದ್ದರೂ ಇದನ್ನು ಓದುತ್ತ ಹೋದಂತೆ ಬರೆದವರ ಬದುಕು, ವ್ಯಕ್ತಿತ್ವಗಳು ಬಿಚ್ಚಿಕೊಳ್ಳತೊಡಗುತ್ತವೆ. 

ಅವಿಭಕ್ತ ಕುಟುಂಬದಲ್ಲಿ ಬೆಳೆದ ಹಳ್ಳಿಯ ಕಷ್ಟಕುಲದ ಹುಡುಗನೊಬ್ಬ ಹಲವಾರು ಇದೆ, ಇಲ್ಲಗಳ ನಡುವೆ ಗಾಳಿ, ನೀರು, ಬೆಳಕು, ಕತ್ತಲೆಗಳನ್ನು ಅರಗಿಸಿಕೊಳ್ಳುತ್ತಾ ಬಾಳಪಯಣದಲ್ಲಿ ಎದುರುಗೊಂಡವರನ್ನು ದಾಖಲಿಸಿರುವ ಬರಹವಿದು. ಬಿಜಾಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಅನುಕೂಲಸ್ಥ ಕೃಷಿ ಕುಟುಂಬದಲ್ಲಿ, ಚರ್ಮದ ವ್ಯವಹಾರ ಮಾಡುವ ಕುಲದಲ್ಲಿ ಹುಟ್ಟಿದ ಬಾಲಕ ತನ್ನ ಸುತ್ತಮುತ್ತ ಇರುವ ‘ತನ್ನ ತಾನರಿದು ತಾನಾರೆಂದು ತಿಳಿದು ತಾನೇ ದೇವರಾದ’ ಅಸಾಮಾನ್ಯ ವ್ಯಕ್ತಿತ್ವಗಳನ್ನು ಗಮನಿಸುತ್ತಾನೆ. ಅವರ ವಿವೇಕವನ್ನು ಒಳಗಿಳಿಸಿಕೊಳ್ಳುತ್ತಾನೆ. ತನ್ನ ಸೋಲು-ಗೆಲುವು, ಸ್ವೀಕಾರ-ನಿರಾಕರಣೆಯ ಸಂಕಟಗಳು ಕೇವಲ ತನ್ನದಷ್ಟೇ ಅಲ್ಲ ಎಂಬ ಅರಿವಿನ ಬೆಳಕಿನಲ್ಲಿ ಬಾಳು ಕಟ್ಟಿಕೊಳ್ಳುತ್ತಾನೆ. ಅಸ್ಪೃಶ್ಯತೆಯ ಅವಮಾನಕರ ಗಾಯಗಳನ್ನು ದಾಟಲು ಶಿಕ್ಷಣ, ಹೋರಾಟಗಳಂತೆಯೇ ಈ ಗಟ್ಟಿ ಪಾತ್ರಗಳು ಕೊಡಮಾಡಿದ ವಿವೇಕವೂ ಕಾರಣವಾಗುತ್ತದೆ.

ಪುಸ್ತಕದಲ್ಲಿ ಸಮಾಜಶಾಸ್ತ್ರೀಯ ಅಧ್ಯಯನಕ್ಕೆ ಆಕರವಾಗುವಷ್ಟು ವಿಪುಲವಾಗಿ ದೈನಂದಿನ ಬದುಕಿನ ವಿವರಗಳಿವೆ. ಬ್ರಾಹ್ಮಣ ವಧುವಿನ ನಾಲಿಗೆಗೆ ಬರೆಹಾಕಿ ದಲಿತ ಜಾತಿಯೊಳಗೆ ತಂದುಕೊಂಡು ತಪ್ಪುದಂಡದ ಊಟ ಹಾಕಿಸಿದ ನಂತರ ಚಿಕ್ಕಪ್ಪನ ಮದುವೆ ಊರ್ಜಿತವಾದದ್ದು; ಮೆಹಬೂಬನು ಎಲ್ಲಮ್ಮ ದೀಕ್ಷೆ ಪಡೆದು ಜೋಗಾಡುವ ಬೂಬಮ್ಮ ಜೋಗತಿಯಾದದ್ದು; ಕುಳಬಾನ ಕಟ್ಟಲು ಹೆಂಡಿಗಾಗಿ ಎಮ್ಮೆದನಗಳ ಹಿಂದೆ ಸಗಣಿ ಹಿಡಿಯಲು ತಿರುಗಾಡಿದ್ದು; ಮುಂಬಯಿಗೆ ಮಗನನ್ನೊಯ್ಯಬೇಡ ಎಂದು ಅಜ್ಜಿ ಬಸ್ಸಿನೆದುರು ಮಲಗಿ ಡ್ರೈವರನನ್ನು ತಡೆಯುವುದು; ದೇವರಿಗೆ ಬಿಟ್ಟ ಹೋತು ಮಟನ್ ತಿನ್ನುವುದು; ಬೆಕ್ಕು ನಾಗರಹಾವಿನೊಡನೆ ಜಗಳಾಡುವುದು; ದೇವರಿಗೆ ಮುಡಿಪು ಕಟ್ಟಿಟ್ಟ ಗುಳ್ಳಿ ಕಾಣೆಯಾದಾಗ ಅಜ್ಜಿ ಅದನ್ನು ಪತ್ತೆಹಚ್ಚಲು ಸುಡುಗಾಡಿನ ಬೋಕಿ ಅರೆದು ಪುಡಿಮಾಡಿ ಶಂಕಿತ ಕಳ್ಳರಿಂದ ಎಂಜಲು ಹಚ್ಚಿ ಗುಳಿಗೆ ಕಟ್ಟಿಸುವುದು; ಮೈನೆರೆದ ಮದುವಣಗಿತ್ತಿಯನ್ನು ಮೆರವಣಿಗೆಯ ಎಮ್ಮೆಯ ಮೇಲೆ ಕೂರಿಸದೇ ಅದರ ಬಾಲ ಹಿಡಿಸಿ ನಡೆಸುವಾಗ ಆದ ತರಲೆಗಳು; ಲೋಕದ ಕಣ್ಣಿಗೆ ತಿಳಿಸುವಂತೆ ‘ಮದುವೆ’ ಆಗದೇ ಸಂಗಾತಿ ಧರಣಿಯ ಜೊತೆ ಬದುಕು ಆರಂಭಿಸಿದಾಗ ಆಗುವ ಗೊಂದಲಗಳೇ ಮುಂತಾಗಿ ಹತ್ತಾರು ಪ್ರಸಂಗಗಳು ಹೊತ್ತಗೆಯಲ್ಲಿ ಬಂದುಹೋಗುತ್ತವೆ. ಕೆಲವು ನಕ್ಕುನಕ್ಕು ಕಣ್ಣೀರು ಬರಿಸಿದರೆ, ಉಳಿದವು ಅಚ್ಚರಿಗೆ ಕಣ್ಣರಳುವಂತೆ ಮಾಡುತ್ತವೆ. ಹಳ್ಳಿಯ ಬಡ ಹೆಣ್ಣುಮಕ್ಕಳ ಪೊರೆಯುವ, ಸಂಭಾಳಿಸುವ ಬಾವಣಿಕೆಯ ಗುಣಗಳು ಅರಿವಿಗೆ ನಿಲುಕುತ್ತವೆ.

ಕೆಲವೊಮ್ಮೆ ವಿಚಾರವಂತರೆಂದುಕೊಂಡು ನಮ್ಮ ಸರಿ-ತಪ್ಪು ಅಳತೆಪಟ್ಟಿಗೆ ತಕ್ಕಂತೆ ಬಂಧುಮಿತ್ರರನ್ನು, ಆಪ್ತೇಷ್ಟರನ್ನು ಅಳೆಯಹೊರಡುತ್ತೇವೆ. ಅದು ನಂಬಿಕೆಯ ಲೋಕಗಳ ನಡುವಿನ ವಿಚಿತ್ರ ಸಾಂಸ್ಕೃತಿಕ ಸಂಘರ್ಷ. ಸೋಲುಗೆಲುವುಗಳಿರದ ಕದನ. ನಮ್ಮ ಒಳಾವರಣಗಳು ರಣರಂಗವಾಗದಿರಲು, ಎಲ್ಲರನ್ನೂ ಅವರಿರುವ ಹಾಗೆಯೇ ಅರಿತು ಒಳಗೊಳ್ಳಲು ಮೈತ್ರಿಯ ಕಣ್ಣು ಬೇಕಾಗುತ್ತದೆ. ಈ ದೃಷ್ಟಿಯಿಂದ ನಾಸ್ತಿಕ ಮಗ-ಆಸ್ತಿಕ ತಾಯಿಯ ನಡುವೆ ಕಸಿವಿಸಿಯುಂಟಾಗುವ ಪ್ರಸಂಗದಲ್ಲಿ ‘ನೀವೂ ದೇವರಾಗಿ’ ಒಂದು ಹೊಸ ವೈಚಾರಿಕ ಆಯಾಮವನ್ನು ಪ್ರವೇಶಿಸುತ್ತದೆ. ಮಗನ ನಂಬಿಕೆಗಾಗಿ ತನ್ನ ದೇವರುಗಳನ್ನು ಬಿಟ್ಟುಕೊಡಲಾಗದ ಅವ್ವ ಟ್ರಂಕಿನಲ್ಲಿ ದೇವರ ಪಟಗಳನ್ನು ಬಚ್ಚಿಟ್ಟು ಗುಟ್ಟಾಗಿ ಪೂಜೆ ಮಾಡುತ್ತಾ, ಮಗನ ಮದುವೆಯಾಗಲೆಂದು ಎಡಗೈಯಲ್ಲಿ ಊಟ ಮಾಡುವ ಹರಕೆಯೊಪ್ಪಿಸುತ್ತಾ ಮೌನ ಪ್ರತಿರೋಧ ಒಡ್ಡುತ್ತಾಳೆ. ಆಗ ತಾನು ನಂಬಿದ ವೈಚಾರಿಕತೆ, ಮಗನಾಗಿ ತಾಯಿಯ ಅಪೇಕ್ಷೆ ಪೂರೈಸಬೇಕಾದ ಜವಾಬ್ದಾರಿಗಳ ನಡುವೆ ಹೊಯ್ದಾಡುವ ಲೇಖಕರು, ಪ್ರಸಂಗವನ್ನು ನಿಭಾಯಿಸಿರುವ ಕ್ರಮವು ಚಿಂತನೆಗೆ ಹಚ್ಚುವಂತಿದೆ. ಹೀಗೆ ಬರೆದರೆ ಯಾರೇನೆಂದುಕೊಂಡಾರೋ ಎಂಬ ಲೆಕ್ಕಾಚಾರವಿಲ್ಲದ ನಿರ್ಭೀತ, ಪಾರದರ್ಶಕ ಬರವಣಿಗೆ ಗಮನ ಸೆಳೆಯುತ್ತದೆ.

ದ್ವಿತೀಯಾ ವಿಭಕ್ತಿ ‘ಅನ್ನು’ವನ್ನು ಹೆಚ್ಚು ಬಳಸದ ಉತ್ತರ ಕರ್ನಾಟಕದ ಭಾಷಾಶೈಲಿ, ಮಡಿಕೆ (ಮಡಕೆ), ಹಲಿಗೆ (ಹಲಗೆ), ತಗೆಯುವುದು (ತೆಗೆಯುವುದು), ಕುದರೆ (ಕುದುರೆ), ಹೊಡಿತ (ಹೊಡೆತ) ಮುಂತಾದ ‘ಶುದ್ಧ ಕನ್ನಡಿಗ’ರು ಕಾಗುಣಿತ ದೋಷ ಎಂದು ಪರಿಗಣಿಸಿಬಿಡುವಂತಹ ಪದಗಳು; ಗದ್ಯದ ನಡುನಡುವೆಯಿರುವ ಕಾವ್ಯಮಯ ಬಿಜಾಪುರಿ ಕನ್ನಡದ ಸಾಲುಗಳು; ಕುತೂಹಲ ಕೆರಳಿಸುತ್ತ ಕಥೆಯಂತೆ ಓದಿಸಿಕೊಳ್ಳುವ ಶೈಲಿ; ಜವಾರಿ ಕನ್ನಡದ ಪದ, ನುಡಿಗಟ್ಟುಗಳು; ಸಾಲುಗಳ ನಡುವಿನ ಮೌನ, ಖಾಲಿ ಜಾಗಗಳು ಪುಸ್ತಕದಲ್ಲಿ ಎದ್ದು ಕಾಣುತ್ತವೆ.    

ತಮ್ಮ ವೈಯಕ್ತಿಕ ವಿವರಗಳನ್ನು ದಾಖಲಿಸುವ ಭರದಲ್ಲಿ ಕೆಲವು ಆತ್ಮಚರಿತ್ರೆಗಳು ‘ನಾನು’ವಿನಲ್ಲೇ ವಿಜೃಂಭಿಸಿ ಇತರ ಪಾತ್ರ, ಘಟನೆ, ವಿವರಗಳನ್ನು ಮಸುಕಾಗಿಸುವುದಿದೆ. ನಿರೂಪಿಸುವ ಪ್ರತಿ ಘಟನೆ, ಚಿತ್ರಿಸಿದ ಪ್ರತಿ ಪಾತ್ರವೂ ‘ನಾನು’ವಿಗೇರಿಸುವ ಒಂದು ಹೂವಾಗಿ ತುರಾಯಿ ಅಲಂಕರಿಸುವಂಥ ಬರವಣಿಗೆಯನ್ನು ನೋಡಿದ್ದೇವೆ. ‘ನೀವೂ ದೇವರಾಗಿ’ಯಲ್ಲಿ ಆತ್ಮವಿಮರ್ಶೆ ಮೇಲುಗೈ ಪಡೆದಿರುವುದರಿಂದ ಸ್ವಪ್ರಶಂಸೆ, ಸ್ವಮರುಕಗಳು ಕಡಿಮೆಯಿರುವುದು ಒಳ್ಳೆಯ ಅಂಶವಾಗಿದೆ. ಹಾಗಾಗಿ ಬರಹವು ಓದುವವರನ್ನು ಸುಸ್ತು ಹೊಡೆಸದೇ ಸುಲಲಿತವಾಗಿ ಮುಂದಕ್ಕೊಯ್ಯುತ್ತದೆ. 

ಹಲವು ಇಕ್ಕಟ್ಟುಗಳ ನಡುವೆಯೇ ನೊಂದವರು ಬಾಳಕಥನಗಳನ್ನು ಹೇಳಿಕೊಳ್ಳಲು ಅಷ್ಟಿಷ್ಟು ಅವಕಾಶವಿರುವ ಕಾಲಮಾನವಿದು. ದಲಿತ, ಮಹಿಳೆ, ಲಿಂಗಪರಿವರ್ತಿತ ಮೊದಲಾದ ಶೋಷಿತ ಅಸ್ಮಿತೆಗಳು ‘ಅವರು-ನಾನು’ ಎಂಬ ಎರಡು ದಂಡೆಗಳನ್ನು ಮೀರಿ ಸಮಾನತೆಯ ಬಯಲಿನೆಡೆಗೆ ಸಮಾಜವನ್ನು ಕೊಂಡೊಯ್ಯುವ ದೀವಟಿಗೆಗಳಾಗಬೇಕಾದ ಜರೂರು ಈ ಕಾಲಕ್ಕಿದೆ. ಶೋಷಿತ ಗುರುತಿನ ಆಚೆಗೊಂದು ದಾಟುವಿಕೆ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ‘ನೀವೂ ದೇವರಾಗಿ’ ಬಾಳಪಯಣದ ನಿರೂಪಣೆಗೆ ಒಂದು ಹೊಸ ಸಾಧ್ಯತೆಯನ್ನು ಸೂಚಿಸುವಂತಿದೆ.  

ಆತ್ಮಕತೆಯ ಬರವಣಿಗೆಯೆನ್ನುವುದು ಗಾಳಿಪಟ ಹಾರಿಸಿದಂತಲ್ಲ, ಬಿಸಿಲಿಗೆ ಕಾದ ನೆಲದ ಮೇಲಿನ ಬರಿಗಾಲ ನಡಿಗೆಯಂತೆ. ಅನುಭವವೇ ಪ್ರಮಾಣ. ಅಂತಹ ಎರಡು ಹೆಜ್ಜೆಗಳನ್ನು ಯಶಸ್ವಿಯಾಗಿ ಮುಂದಿಟ್ಟ ಪ್ರೊ. ಮಾಲಗತ್ತಿಯವರಿಗೆ ಅಭಿನಂದನೆಗಳು.

ಪ್ರಕಟಣೆ: ಲಡಾಯಿ ಪ್ರಕಾಶನ, ಗದಗ

ಸಂಪರ್ಕ: ಬಸವರಾಜ ಸೂಳಿಬಾವಿ, 9480286844




Sunday 24 October 2021

ಕಲ್ಯಾಣ - ಬಸವಣ್ಣ

 




ಬರಹಕ್ಕೆಂದು ಸೃಷ್ಟಿಸಿಕೊಳ್ಳುವ ಏಕಾಂತದ ಕ್ಷಣಗಳು ಒಂಟಿತನದ ಬಾವಿಯಲ್ಲಿ ಮುಳುಗಿಸುವ ಸಾಧ್ಯತೆಯಿದೆ. ಅದನ್ನು ಕಳೆದುಕೊಳ್ಳಲು ಬಸವಣ್ಣ ತುಳಿದ ದಾರಿ ಗುರುತುಗಳ ಊಹಿಸುತ್ತ, ಬಸವಣ್ಣನನ್ನು ಅರಸುತ್ತ ಕಲ್ಯಾಣ ಸುತ್ತಿದ್ದಾಯಿತು. ಈಗಿರುವ ಊರು ನಮ್ಮ ಕಲ್ಪನೆಯ ಕಲ್ಯಾಣದಂತಿರಲು ಸಾಧ್ಯವಿಲ್ಲ. ಒಂದಷ್ಟು ಪಳೆಯುಳಿಕೆಗಳಾದರೂ ಸಿಕ್ಕೀತೆಂಬ ಭರವಸೆಯಿಂದ ಹದಿನೈದು ತಾಸು ದೂರವಿರುವ ಬಸವ ಕಲ್ಯಾಣವನ್ನು ಹೋಳಿಹುಣ್ಣಿಮೆಯ ಹೊತ್ತಿಗೆ ತಲುಪಿದ್ದಾಯಿತು. ಆ ಪಾದದರಿವು ಇಲ್ಲಿದೆ:




ಫೋರ್ಟ್, ಕೋಟೆ ಅಂದಾಗ ಕಣ್ಕಣ್ಣು ಬಿಟ್ಟ ಸಾರಥಿಯು ಕಿಲ್ಲಾ ಅಂದದ್ದೇ ಭರ್ರನೆ ‘ಕೋಟೆ ವಸ್ತುಸಂಗ್ರಹಾಲಯದ ಎದುರು ತಂದು ನಿಲ್ಲಿಸಿದ. ದಾರಿಯುದ್ದಕ್ಕೂ ಹಳೆಯ ಶಾಸನ, ಶಿಲ್ಪ, ಕಂಬಗಳು ಪಾಯಕಲ್ಲು, ಒಗೆಯುವ ಕಲ್ಲು, ಹಾಸುಕಲ್ಲುಗಳಾಗಿ ಕಂಡದ್ದು ನನ್ನ ಭ್ರಮೆಯೇ? ತಿಳಿಯಲಿಲ್ಲ.

ಹೆಸರು, ಸಮಯ, ಊರು ಬರೆದು ಸಹಿ ಮಾಡಿ ವಸ್ತುಸಂಗ್ರಹಾಲಯದ ಒಳಹೊಕ್ಕರೆ ಅಂಗಾಂಗಗಳು ಛಿದ್ರಗೊಂಡ ಜಿನಬಿಂಬಗಳೂ, ಶಿವಶಿವೆಯರೂ, ವಿಷ್ಣುವಿನ ಅವತಾರಗಳೂ, ಬೋದಿಗೆಯ ಆಧಾರ ಶಿಲ್ಪಗಳೂ, ಅರೆಬರೆ ನಾಶವಾದ ಬಸ್ತಿ, ದೇಗುಲದ ಭಾಗಗಳೂ ಹರಡಿಕೊಂಡಿದ್ದವು. ಅವು ಎಲ್ಲಿ ದೊರೆತವು? ಯಾವ ಕಾಲಮಾನದವು? ಎಂಬ ಮಾಹಿತಿ ಬರೆದಿರಲಿಲ್ಲ. ಎಲ್ಲೋ ಒಂದೆರೆಡು ಶಿಲ್ಪಗಳ ಎದುರು ‘ನಾರಾಯಣಪುರ, ೧೨ನೆಯ ಶತಮಾನ ಎಂದು ಕಂಡದ್ದು ಬಿಟ್ಟರೆ ಉಳಿದಂತೆ ಸ್ಥಳ, ಕಾಲ ಬರೆದು ಅಂಟಿಸಿದ್ದ ತುಂಡುಗಳು ಕಿತ್ತು ಹೋಗಿದ್ದವು. ಲೋಹದ ತುಂಡುಗಳನ್ನು ಕಿಡಿಗೇಡಿಗಳು ಕಿತ್ತೊಯ್ದು ಮಾರಿಬಿಡುವರಂತೆ! ಹೊರಬರುವ ಮುನ್ನ ‘ಮ್ಯೂಸಿಯಂ ಸೂಕ್ತ ನಿರ್ವಹಣೆಯಿಲ್ಲದೆ ಸೊರಗಿದೆ. ಅತ್ಯಮೂಲ್ಯ ಶಿಲ್ಪಗಳು ಶಿಥಿಲಗೊಂಡು, ನಿರ್ಲಕ್ಷ್ಯಕ್ಕೊಳಗಾಗಿವೆಯೆಂದು ಸಂದರ್ಶಕರ ಪುಸ್ತಕದಲ್ಲಿ ಬರೆದುಬಿಟ್ಟೆ. ಪ್ರವೇಶದ್ವಾರದಲ್ಲಿದ್ದವರು ಬರೆಯುತ್ತಿರುವುದನ್ನು ದಿವ್ಯ ನಿಸ್ಪೃಹತೆಯಲ್ಲಿ ಓದಿ ಅತ್ತ ತಿರುಗಿದರು.

ನೂರಾರು ಎಕರೆ ವಿಸ್ತಾರದ ಹಲವು ಸುತ್ತಿನ ಕೋಟೆಯದು. ಆನೆಗಳು ಬಂದು ಒದ್ದರೂ ಬೀಳಿಸಲಾಗದ ಬೃಹತ್ ಬಾಗಿಲು, ದುಂಡನೆಯ ಕಲ್ಲುಗುಂಡುಗಳು, ಕೋಟೆಯ ಸುತ್ತೂ ಆಳ ಕಂದಕ, ಮದ್ದರೆಯುವ ಸ್ಥಳ, ಮದ್ದು ಸಂಗ್ರಹಿಸುವ ಕೋಣೆ, ರಾಣಿಯರ ಆವಾಸ, ಈಜುವ ಕೊಳ, ಬಣ್ಣದ ಕೊಳ (ರಂಗೀನ್ ಮಹಲ್), ಆನೆ ಕುದುರೆಗಳ ಲಾಯ, ದರ್ಬಾರ್, ಝರಿಯಂತೆ ನೀರು ಬೀಳುವ ಮೀನಿನಾಕಾರದ ಇಳಿಜಾರು, ರಾಣಿಯರ ಗ್ಯಾಲರಿ, ಬೃಹತ್ ಬೀಸೆಯ ಕಲ್ಲು, ಫಿರಂಗಿ ತೋಪುಗಳು, ಬಹುದೂರದವರೆಗಿನ ಹಾದಿ ತೋರಿಸುವ ಎತ್ತರದ ಬುರುಜುಗಳು, ದಾಖಲೆಗಳನ್ನಿಡುವ ಕೋಣೆ, ಸುರಂಗ, ಗರಡಿಮನೆ, ಮೊಹರಂಗೆ ಅಲಿ ದೇವರ ಕೂರಿಸುವ ಕಟ್ಟೆ - ಒಂದೇ ಎರಡೇ? ಶತಮಾನಗಟ್ಟಲೆ ಕಾಲಾವಧಿಯಲ್ಲಿ ಯೋಜನಾಬದ್ಧವಾಗಿ ಕಟ್ಟಿದ ನೂರಾರು ರಚನೆಗಳು ಅಲ್ಲಿವೆ. ಚಾಲುಕ್ಯರು, ಕಳಚೂರ್ಯ ಬಿಜ್ಜಳನ ಕಾಲದ ಕುರುಹಗಳಾಗಿ ಲಾಂಛನಗಳು, ದೇವಾನುದೇವತೆಗಳು, ಪೌರಾಣಿಕ ಶಿಲ್ಪಗಳಿವೆ. ಅನಂತರ ಬಂದವರ ಸೇರಿಸುವ-ಒಡೆಯುವ-ಕೀಳುವ ಹುಮ್ಮಸದ ಕುರುಹುಗಳು ಢಾಳಾಗಿ ಗೋಚರಿಸುತ್ತವೆ. ಕೋಟೆಯೊಳಗೆ ಮಂದಿರವೂ ಇದೆ, ಮಸೀದಿಯೂ ಇದೆ.

ಈಗ ಎಲ್ಲೆಡೆ ಕಸದ ರಾಶಿ. ನಾಕಾರು ಆಳೆತ್ತರದ ಕೋಟೆಗೋಡೆಯ ಮೇಲೆ ಹಳು, ಕಳೆ ಬೆಳೆದು ಶಿಥಿಲಗೊಳ್ಳುತ್ತಿದೆ. ಸುಣ್ಣಗಾರೆ ಉದುರಿ ಬೀಳುತ್ತಿದೆ. ಗೋಡೆ, ಕಂಬಗಳ ಮೇಲೆ ಇತಿಹಾಸ ನಿರ್ಮಾಪಕರು ತಮ್ಮ ಪ್ರಿಯರ, ಅಪ್ರಿಯರ ಹೆಸರುಗಳನ್ನು ಕೆತ್ತಿದ್ದಾರೆ. ಮಂದಿರ, ಮಸೀದಿಗಳಿಗೂ ಅವರು ವಿನಾಯ್ತಿ ನೀಡಿಲ್ಲ.

ಇದು ಬಸವಣ್ಣ ಭಂಡಾರಿಯಾಗಿ ಹೊಕ್ಕುಹೊರಟ ಕೋಟೆಯೇ? ಶರಣತತ್ತ್ವಗಳನ್ನು ಬೆಂಬಲಿಸಿ, ಬಳಿಕ ಪಟ್ಟಭದ್ರರ ಕಿವಿಕಚ್ಚುವಿಕೆಗೆ ಶರಣರನ್ನು ಬೆಂಬತ್ತಿ ಬಡಿದ ಬಿಜ್ಜಳನ ಕೋಟೆಯೇ? ಆನೆಗೆ ಶರಣರನ್ನು ಕಟ್ಟಿ ಎಳೆಸಿದ್ದು ಇಲ್ಲೇ? ಕಲ್ಪನೆಯ ಹಂಸವು ಗತವೆಂಬ ಆಗಸದಲ್ಲಿ ಕೋಟೆಯನ್ನು ಸುತ್ತಿಸುತ್ತಿ ಬಂದರೂ ಯಾವುದೂ ಸ್ಪಷ್ಟವಿಲ್ಲ. ಕೋಟೆ ಸುತ್ತಿಸಿಕೊಂಡು ಬಂದ ಮೇಲ್ವಿಚಾರಕ ಕಂ ಕಾವಲುಗಾರ ಕಂ ಕೆಲಸಗಾರ ಹೇಳಿದ: ‘ಬಸವಣ್ಣಾರು ಅದುಕ ಹೇಳ್ಯಾರ, ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.!

ಬಸವ, ಇದು ನಿನ್ನ ಸಂದೇಶವಾ?



ಮರುಬೆಳಿಗ್ಗೆ ಬೇಗನೆದ್ದು ಊರ ಹೊರಗಿದ್ದ ನುಲಿಯ ಚಂದಯ್ಯನ ಗವಿಯೆಡೆಗೆ ರಿಕ್ಷಾ ಹತ್ತಿ ಹೊರಟದ್ದಾಯಿತು. ಏಳೂವರೆಗಿಂತ ಮೊದಲು ಪ್ರವೇಶವಿಲ್ಲ. ಹಿಂದಿನಿಂದ ಹೋಗಬಹುದು ಎಂದು ಹಿರಿಯರಾದ ರಿಕ್ಷಾಭಾಯಿ ಹೇಳಿದರು. ದಾರಿಮೇಲೆ ಉರ್ದು-ಕನ್ನಡ-ಮರಾಠಿ ಮಿಶ್ರಿತ ಭಾಷೆಯಲ್ಲಿ ಮಾತುಕತೆ ನಡೆಯಿತು. ಮೂರು ಭಾಷೆಗಳ ಮಿಶ್ರಣದ ಕಲ್ಯಾಣಿಗರ ಮಾತು ಕೇಳುವುದೇ ಒಂದು ಸ್ವಾರಸ್ಯ. ಅಲ್ಲಿಯ ಕೋಮು ಸಾಮರಸ್ಯ ಹೇಗಾದರೂ ಇರಲಿ, ಭಾಷೆಗಳು ಮಾತ್ರ ಒಂದರೊಳಗೊಂದು ಬೆಸೆದುಕೊಂಡು ವಿಶಿಷ್ಟ ಕಲ್ಯಾಣಗನ್ನಡವನ್ನು ಸೃಷ್ಟಿಸಿರುವುದು ವಿಶೇಷವಾಗಿದೆ. ಅವರೊಂದು ಕುತೂಹಲಕರ ಪ್ರಸಂಗ ಹೇಳಿದರು.

ನುಲಿಯ ಚಂದಯ್ಯನ ಗುಹೆಯ ಬಳಿ ಉದ್ಯಾನವನ, ಸ್ಮಾರಕ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಅಲ್ಲೊಂದು ಬಾಬಾರ ದರ್ಗಾವೂ ಇತ್ತು. ಉದ್ಯಾನ ವಿಸ್ತರಿಸಿದರೆ ದರ್ಗಾಗೆ ಹಾನಿಯಾಗುವುದೆಂದು ಮುಸ್ಲಿಂ ಬಾಂಧವರು ದನಿಯೆತ್ತಿದರು. ಕೊಂಚ ಚಕಮಕಿ ಸಂಭವಿಸಿತು.

‘ಪೈಲೆ ನಾವೂ ಅವುರು ಕೂಡೆ ದೀಪಳಿ, ಉರುಸ ಮಾಡತಿದ್ವಿ. ನಮ್ಗೆ ಪೀರ್ ಬ್ಯಾರೆ ಅಲ್ಲ, ಚಂದಯ್ಯ ಶರಣ್ರು ಬ್ಯಾರೆ ಅಲ್ಲ. ಈಗ ಪಾಲಿಟಿಕ್ಸ್ ಬಂದೈತಿ. ಬಸವುರು ನಮ್ಮರು ಮಾತ್ರ ಅಂತಾರ. ಆದ್ರೆ ಬಸವರು ಅವುರಿಗಷ್ಟ ಅಲ್ಲ, ನಮ್ಮೋರ್ ಭೀ ಹೌದು. ಅನಬವ ಮಂಟಪದಾಗೆ ನಮ್ಮೋರ್ ಭೀ ಇದ್ರು. ಈಗೂ ಅಲಿಘರ‍್ಲಿಂದ ನಂ ಜನಾ ಇಲ್ಲೀಗ್ ಬಂದು ಬಸವರ ಬಗ್ಗೆ ತಿಳಕಂಡ್ ಹೋಕ್ಕಾರ. ಹೀಂಗಿರತ ಪಾಲಿಟಿಕ್ಸ್ ಬಂದು ದರ್ಗಾ ಬೀಳಸಾಕ ಜೆಸಿಬಿ ತಂದ್ರು. ಆದ್ರ ಅದರಾಗ ಬಿಜಲಿ ಹರದು ಡ್ರೈವರಗ ಕರೆಂಟು ಹೊಡೀತು. ಅಂವಾ ಪರೇಶಾನ್ ಆದ. ಆಗೇ ಚಲಾನಾ ಹೋತಾ ನೈ ಅಂದು ಕಾಮ್ ಚೋಡ್ಕೆ ಭಾಗಾ. ಹೀಂಗಿರತ ಡೀಸಿ ಸಾಹೇಬ್ ಏಕ್ ಸಪನ ದೇಖೆ. ಕನಸಿನ್ಯಾಗ ಬಸವರು ಬಂದು ‘ನಾ ಬ್ಯಾರೇ ಅಲ್ಲ, ಆ ಪೀರ ಬ್ಯಾರೇ ಅಲ್ಲ, ಯಲ್ಲಾ ಕೆಲ್ಸಾ ನಿಲುಸ್ರಿ ಅಂತ ಜೋರು ಮಾಡಿದುರಂತ. ವ್ಹಾಂ ದೇಖೊ, ದೈನೇಕ್ಕ, ದರಗಾ ಅದ ಅಲ್ಲಿ.

ಒಬ್ಬ ಅಧಿಕಾರಿಗೆ ಕನಸು ಬಿದ್ದು ಹೀಗೂ ಆಗುವುದಾದರೆ ಇಂಥ ಕನಸುಗಳು ಬೀಳುತ್ತಲೇ ಇರಲಿ, ಓ ದೇವರೇ ಎಂದುಕೊಳ್ಳುವಾಗ ‘ಈಗೇನರೆ ಬಸವುರು ಬಂದು ಎಲೆಕ್ಷನ್ನಿಗೆ ನಿಂತಿದ್ದರ ಇವ್ರೇ ಸೋಲಿಸ್ತಿದ್ರು ಮೇಡಂ ಎಂದು ಬೆಚ್ಚಿ ಬೀಳಿಸಿದರು. ಆಧುನಿಕ ಬಿಜ್ಜಳರನ್ನು ನಾವು ಸೃಷ್ಟಿಸುತ್ತಿರುವುದು ನಿಜವೇ. ಗುಹೆಯ ಹಿಂಭಾಗದಲ್ಲಿಳಿಸಿದ ಅವರೊಡನೆ ದರ್ಗಾ ಕಂಡು ಪೀರನನ್ನೂ ಚಂದಯ್ಯನನ್ನೂ ಬಂಧಿಸಿರಬಹುದಾದ ನೂಲು ಯಾವುದೆಂದು ಯೋಚಿಸುತ್ತ ಗವಿಯ ಕಡೆ ಹೋಗುವಾಗ ಕಾಗೆ ಉಲಿಯಿತು: ‘ಇವ ನಮ್ಮವ ಇವ ನಮ್ಮವ ಎನ್ನುವ ಪೀರನ ಅನುಯಾಯಿಗಳ ಎದೆಯಲ್ಲಿ ಇದ್ದಾನೆ ಬಸವಣ್ಣ.

 ಬಸವಣ್ಣನ ಅರಿವಿನ ಮನೆ ಎಲ್ಲೆಂದು ಕೇಳಿ ಅತ್ತ ಹೊರಟಾಯಿತು. ಬೃಹತ್ ಮೈದಾನದಂತಹ ಆವರಣ ಪ್ರವೇಶಿಸುವಾಗ ಹಿಂದಿಯಲ್ಲಿ ಬರೆದ ‘ಬಾಬಾಸಾಹೇಬ್ ಫಲಕ ಗಮನ ಸೆಳೆಯಿತು. ಅಲ್ಲೊಂದು ಸಮಾಧಿಯಿದೆ. ಸೊಲ್ಲಾಪುರದ ಬಾಬಾಸಾಹೇಬ್ ಮಲ್ಲಪ್ಪ ವಾರದ್ ಅವರದು. ಸ್ವಾತಂತ್ರ್ಯಾನಂತರ ಕಲ್ಯಾಣವು ಬರಿಯ ಒಂದು ಹೋಬಳಿಯಾಗಿ, ದೊಡ್ಡ ಹಳ್ಳಿಯಾಗಿ, ತನ್ನ ಗತವನ್ನು ಊಹಿಸಿಕೊಳ್ಳಲಾಗದ ವಿಸ್ಮೃತಿಯಲ್ಲಿದ್ದಾಗ ಒಂದೆಡೆ ಫ. ಗು. ಹಳಕಟ್ಟಿಯವರು ವಚನಗಳನ್ನು ಸಂಗ್ರಹಿಸಿ ಪ್ರಕಟಿಸಿ ವಚನಕಾಲದ ಅರಿವನ್ನು ಕಟ್ಟಿಕೊಟ್ಟರೆ ಇತ್ತ ಬಾಬಾ ಮಲ್ಲಪ್ಪ ವಾರದ್ ಅವರು ಕಲ್ಯಾಣವೆಂಬ ಊರೇ ಬಸವಣ್ಣನ ಕಲ್ಯಾಣವೆನ್ನುವುದನ್ನು ಜನರಿಗೆ ನೆನಪಿಸಿಕೊಟ್ಟರು. ಗಿಡಗಂಟೆ ಬೆಳೆದು, ಕಾಡುಪ್ರಾಣಿಗಳ, ಬಾವಲಿಗಳ ಆವಾಸವಾಗಿದ್ದ ಗುಹೆಗಳನ್ನು ಪತ್ತೆ ಹಚ್ಚಿದರು. ಹಲವು ಸಾಕ್ಷ್ಯಾಧಾರಗಳನ್ನಿಟ್ಟುಕೊಂಡು ಯಾವುದು ಯಾರ ಗುಹೆ ಇರಬಹುದೆಂದು ಹೆಸರಿಸಿದರು. ಹೂಳು ತುಂಬಿದ್ದ ತ್ರಿಪುರಾಂತಕ ಕೆರೆದಂಡೆಯ ಗುಡಿ, ಗವಿಗಳನ್ನು ಒಂದೊಂದಾಗಿ ಪತ್ತೆ ಹಚ್ಚಿ ತಾವೇ ಸ್ವಚ್ಛಗೊಳಿಸತೊಡಗಿದರು. ಬಸವ ಜಯಂತಿಯಂದು ರಥೋತ್ಸವ ಶುರು ಮಾಡಿಸಿದರು. ಬಳಿಕ ಹಲವರು ಅವರೊಡನೆ ಕೈಜೋಡಿಸಿದರು. ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಬಂದು ಕಲ್ಯಾಣವು ಇವತ್ತಿನ ಸ್ವರೂಪ ಪಡೆಯಿತು. ಒಟ್ಟಾರೆ ಕಲ್ಯಾಣ ಎಂಬ ಕಸಬಾ ಹೋಬಳಿಯು ಇಂದಿನ ಬಸವ ಕಲ್ಯಾಣವಾಗುವುದರಲ್ಲಿ ನಿಸ್ಪೃಹವಾಗಿ, ಪ್ರತಿಫಲಾಪೇಕ್ಷೆಯಿಲ್ಲದೆ ದುಡಿದ ಬಾಬಾಸಾಹೇಬ್ ಮಲ್ಲಪ್ಪ ವಾರದ್ ಅವರಂಥವರ ಪಾತ್ರ ಹಿರಿದಾಗಿದೆ ಎಂದು ಬೇವಿನ ಮರದ ಕೆಳಗೆ ಕುಳಿತಿದ್ದ ಕಲ್ಯಾಣದ ಹಿರಿಯರೊಬ್ಬರು ನೆನೆಸಿದರು.

‘ಎನಗಿಂತ ಕಿರಿಯರಿಲ್ಲ ಎಂದ ಬಸವಣ್ಣನನ್ನು ಈ ಬಾಬಾ ಅವರಲ್ಲಲ್ಲದೇ ಮತ್ತೆಲ್ಲಿ ಹುಡುಕುವುದು?


ಬಿರುಬಿಸಿಲಲ್ಲಿ ಹಸಿವೆಯಾಯಿತೋ, ಬಾಯಾರಿಕೆಯಾಯಿತೋ ತಿಳಿಯದೇ ಒಂದು ಖಾನಾವಳಿಗೆ ಹೋದೆವು. ಭಾನುವಾರವೆಂದು ಹಲವು ಖಾನಾವಳಿಗಳು ಮುಚ್ಚಿದ್ದವು. ಅಂತೂ ತೆರೆದಿದ್ದ ಒಂದು ಕಾಣಿಸಿತು. ಗಿರಾಕಿಯಿಲ್ಲದೇ ಒಳಗಿನವರು ಒಂದೊಂದು ಬೆಂಚಿನ ಮೇಲೆ ಆರಾಮದಲ್ಲಿ ಕುಳಿತಿದ್ದರು. ಬಾಗಿಲಿನಲ್ಲೇ ಇದ್ದ ಅಜ್ಜಿ ಬರ್‌ಬರ್ರಿ ಎಂದು ಮನೆಗೆ ಬಂದ ಅತಿಥಿಗಳೋ ಎಂಬಂತೆ ಸ್ವಾಗತಿಸಿ ಒಳಗೆದ್ದು ಹೋದರು. ಅವರ ಬೆನ್ನು ಪೂರಾ ಬಾಗಿತ್ತು. ತಮ್ಮ ರಾಜಕೀಯ ಒಲವನ್ನು ಪ್ರದರ್ಶಿಸುವವರಂತೆ ಭಜರಂಗಬಲಿಯ ಚಿತ್ರಪಟದ ಕೆಳಗೆ ಗಲ್ಲಾದಲ್ಲಿ ಅಜ್ಜ ಕುಳಿತಿದ್ದರು. ನಮ್ಮೆದುರು ಒಂದು ತಟ್ಟೆ, ಸಣ್ಣ ಬಟ್ಟಲ ತುಂಬ ಸುಟ್ಟ ಸೇಂಗಾಬೀಜ, ಹಸಿ ತರಕಾರಿ ಬಂದವು. ಒಂದೊಂದೇ ಕಾಳು ಬಾಯಿಗೆಸೆದುಕೊಳ್ಳುತ್ತಾ ಸುತ್ತ ತಿರುಗಿದರೆ..

ಅಲ್ಲೊಂದು ತೀರಾ ಅಪರೂಪದ ಚಿತ್ರಪಟ. ಇದುವರೆಗೆ  ನೋಡಿರದ ಚಿತ್ರಪಟ. ಅದರ ನಡುಮಧ್ಯದಲ್ಲಿದ್ದದ್ದು ಗಾಂಧೀಜಿ. ಅವರ ಹಿನ್ನೆಲೆಯಲ್ಲಿ ಓಂ. ಕೆಳಗೆ ‘ಆರ್ಯ ದೇಶ್ ಕೆ ಆದರ್ಶ್ ನೇತಾ, ಮರ್ಯಾದಾ ಪುರುಷೋತ್ತಮ್, ಮಹಾತ್ಮಾ ಶ್ರೀ ಗಾಂಧೀಜಿ ಎಂದು ಬರೆದಿತ್ತು. ಸ್ವಾತಂತ್ರ್ಯ ವೃಕ್ಷದ ಎಲೆಎಲೆಯಲ್ಲಿಯೂ ಕಾಂಗ್ರೆಸ್ಸಿನ ನೂರಾರು ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳಿದ್ದವು. ಮೇಲೊಂದು ವೃತ್ತದಲ್ಲಿ ನೆಹರೂ ಮಂತ್ರಿಮಂಡಲ. ಎಲ್ಲಕ್ಕಿಂತ ಮೇಲೆ ಭಾರತ ಮಾತಾ. ಗಾಂಧೀಜಿ ಪಕ್ಕ ಸಣ್ಣಗೆ ಕಸ್ತೂರಬಾ. ಗಾಂಧಿ ಮತ್ತು ನೆಹರೂ ಅವರ ಹಣೆಗೆ ಒಂದು ವಿಭೂತಿಯ ಬೊಟ್ಟು. ಕೆಳಗೆ ಕುದುರೆಯನೇರಿ ಕುಳಿತ ನೆಹರೂ, ಶಾಸ್ತ್ರಿ, ಪಟೇಲ, ಅಬ್ದುಲ್ ಕಲಾಂ ಆಜಾದ್. ಅದು ‘ಬೌರಿಂಗ್ ಪೇಟ್, ಕೋಲಾರದಲ್ಲಿ ೧೯೪೬ರಲ್ಲಿ ಶ್ರೇಷ್ಟಿಯೊಬ್ಬರಿಂದ ಮುದ್ರಿತವಾದ ಚಿತ್ರಪಟ.

ಅದರ ಪಕ್ಕದಲ್ಲಿ ಶಿರಡಿಯ ಸಾಯಿಬಾಬಾ ಅನ್ನ ಕುದಿಯುತ್ತಿರುವ ಪಾತ್ರೆಗೆ ಬರಿಗೈ ಹಾಕಿ ಅನ್ನ ತೆಗೆಯುತ್ತಿರುವ ಚಿತ್ರಪಟ. ಇದ್ದಕ್ಕಿದ್ದಂತೆ ನಗುವ ಸಾಯಿಬಾಬಾರ ಚಿತ್ರ ಝಗ್ಗನೆ ಬೆಳಗಿತು. ಮೊದಲ ಗಿರಾಕಿಗೆ ಊಟ ಕೊಡುವಾಗ ಸಾಯಿಬಾಬಾರ ಚಿತ್ರಪಟದ ಎದುರಿನ ದೀಪ ಉರಿಯುವುದಂತೆ. ನಮ್ಮೆದುರು ವಿಭೂತಿ ಉಂಡೆ ಬಂತು. ಎಲ್ಲಿಂದ ಬಂದೀರಿ, ಯಾಕ ಬಂದೀರಿ ಎಂದು ಅಜ್ಜಿ ವಿಚಾರಿಸಿದರು. ಉದ್ದೇಶ ತಿಳಿದು ಅವರಿಗೆ ಅಚ್ಚರಿಯಾಯಿತು. ‘ಆತಾತು, ನೋಡ್ರೆವ್ವ, ಇದು ಸಣ್ಣೂರು. ಎಲ್ಲಾನು ಒಂದಿನದಾಗ ನೋಡಬಹುದು ಎಂದು ನೋಡಬೇಕಾದ ಸ್ಥಳಗಳ ಪಟ್ಟಿ ಕೊಟ್ಟರು. ‘ಏ, ಹಂಚಿನ ಮ್ಯಾಗಿಂದ ತೋಂಡ್ ಬಾ, ಅವ್ರು ಅಲ್ಲಿಂದ ಇಲ್ಲಿಗ್ ಬಂದಾರ ಎಂದು ಬಿಸಿಬಿಸಿ ರೊಟ್ಟಿ ಹಾಕಿಸಿದರು.

ಅವರು ಕೊಟ್ಟ ಸ್ಥಳೀಯ ಬೆಲ್ಲಗಟ್ಟಿ ಹಿಡಿದು ಹೊರಬಂದು ಬೋರ್ಡು ನೋಡಿದರೆ ಅದು ‘ತಿರುಪತಿ ಲಿಂಗಾಯತ ಖಾನಾವಳಿ! ತಿರುಪತಿಗೂ ಲಿಂಗಾಯತಕ್ಕೂ ಎಲ್ಲಿಗೆಲ್ಲಿಯ ಸಂಬಂಧ? ಗಾಂಧಿ, ಸಾಯಿಬಾಬಾ, ಬಜರಂಗಬಲಿಯಿರುವ ಭಗವಾ ಧ್ವಜ ಒಟ್ಟಿಗಿರಲು ಹೇಗೆ ಸಾಧ್ಯ?

ಬಸವಣ್ಣ, ಈ ನಂಟು ಬೆಸೆದದ್ದು ‘ಅನ್ಯರಿಗೆ ಅಸಹ್ಯ ಪಡಬೇಡ ಎಂದ ನೀನೇ ಇರಬೇಕು.

ಆ ನಸುಕು ನುಲಿಯ ಚಂದಯ್ಯನ ಗವಿ ಹೊರಗಿನ ನಿರ್ಜನ ಮಂಟಪವು ಸೂರ್ಯ ನಮಸ್ಕಾರ ಮಾಡು ಬಾ ಎಂದು ಆಹ್ವಾನಿಸುವಂತಿತ್ತು. ಆದರೆ ಕಾಯಕದವರ ನೆಲದಲ್ಲಿ ಕಸ, ಕೊಳೆಯ ರಾಶಿ ಕಣ್ಣೆದುರು ಬಿದ್ದಿರುವಾಗ ಕಂಡರೂ ಕಾಣದವರಂತೆ ಅಂಗಸಾಧನೆ ಮಾಡಲು ನಾಚಿಕೆಯೆನಿಸಿತು. ಕೆಳಬಿದ್ದ ಹುಣಿಸೆಯ ಬರಲು ಜೋಡಿಸಿ, ಗುಡಿಸಿ, ಕಸ ರಾಶಿ ಮಾಡಿ ಹೊರಬಂದಾಗ ಅಲ್ಪ ಸಮಾಧಾನ!

ಓಹ್, ಇನ್ನು ಬಸವಣ್ಣನನ್ನು ಗತದ ಪಳೆಯುಳಿಕೆಗಳಲ್ಲಿ ಹುಡುಕುವುದಲ್ಲ. ಪ್ರತಿಮೆ, ಪೂಜೆ, ಪಾದಪೂಜೆ, ಜಾತ್ಯಸ್ಥರ ಮಠಗಳು ಬಸವಣ್ಣನನ್ನು ಮುಚ್ಚಿಟ್ಟರೂ, ಬಚ್ಚಿಟ್ಟರೂ ಅವ ಇಲ್ಲಿಯೇ ಇದ್ದಾನೆ, ಒಳಗಿದ್ದಾನೆ ಎಂಬ ವಿಶ್ವಾಸವು ಸೂರ್ಯನಷ್ಟೇ ಸ್ಪಷ್ಟವಾಯಿತು. ದಕ್ಷಿಣದ ಮನೆಗೆ ಹೊರಟದ್ದಾಯಿತು.


 



 (March 2021)


ಡಾ. ಎಚ್. ಎಸ್. ಅನುಪಮಾ - ಹೆಜ್ಜೆ ಜಾಡು (Autobiographical sketches)

 ಕಾಡು ತೊರೆಯ ಜಾಡು



ಇವತ್ತಿನ ನಾನು ನಾನಾದ ಕಾರಣ ಏನೆಂದು ಕೇಳಿದ್ದೀರಿ. ಇದುವರೆಗಿನ ಬದುಕಿನ ಸಾರಸಂಗ್ರಹದಲ್ಲಿ ನಿನ್ನ ಹೆಜ್ಜೆ ಜಾಡು ಗುರುತಿಸು ಎಂದಿರುವಿರಿ. ಇವೆಲ್ಲವನ್ನು ಓದಿದವರಿಗೆ ತಮ್ಮ ಬದುಕಿನಲ್ಲಿ ಹಾದು ಬಂದ ಹಂತಗಳೇ ಇವು, ಇದರಲ್ಲಿ ಹೊಸತೇನಿದೆ ಎಂದು ಅನಿಸಬಹುದು. ಹೌದು. ನನ್ನ ಬದುಕಿನಲ್ಲಿ ವಿಶೇಷವಾದದ್ದು ಏನೂ ಘಟಿಸಲಿಲ್ಲ. ಎಲ್ಲರಿಗೂ ಏನೆಲ್ಲ ಸಂಭವಿಸಬಹುದೋ ಅದಷ್ಟೇ ನನಗೂ ಸಂಭವಿಸಿತು. 

ಶಿಕ್ಷಕ ವೃತ್ತಿಯ, ಸಾಂಪ್ರದಾಯಿಕ ಮನಃಸ್ಥಿತಿಯ ತಾಯ್ತಂದೆಯರ ಮಗಳಾಗಿ ಹುಟ್ಟಿದೆ. ತಂದೆಯ ಊರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆಬ್ಬಾಗಿಲು. ತಾಯಿ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಕಣಕಟ್ಟೆಯವರು. ಅವರಿಬ್ಬರು ಪ್ರೌಢಶಾಲೆಯಲ್ಲಿ ಶಿಕ್ಷಕ, ಶಿಕ್ಷಕಿಯರಾಗಿ ಕೆಲಸ ಮಾಡುತ್ತ ವರ್ಗಾವಣೆಗೊಳಗಾಗುತ್ತ ಇದ್ದದ್ದರಿಂದ ನನ್ನ ವಿದ್ಯಾಭ್ಯಾಸ ಮೂರ್ನಾಲ್ಕು ಜಿಲ್ಲೆಗಳ ಹಳ್ಳಿಗಳಲ್ಲಿ ಆಯಿತು. ತಂದೆ ಇದ್ದ ತರಳಬಾಳು ಮಠದ ಪ್ರೌಢಶಾಲೆಗಳು ಅತಿ ಹಿಂದುಳಿದ ಹಳ್ಳಿಗಳಲ್ಲಿದ್ದವು. ನಗರ ಪ್ರದೇಶಗಳಿಂದ ದೂರವಿರುವ ಹಳ್ಳಿಗಳ ಕನ್ನಡ ಮೀಡಿಯಂ ಶಾಲೆಗಳಲ್ಲಿ ನಾವು ಮೂವರು ಮಕ್ಕಳು ವಿದ್ಯಾಭ್ಯಾಸ ಮಾಡಿದೆವು. ಒಂದೇ ಕೋಣೆಯಲ್ಲಿ ಎರಡು ತರಗತಿಯಿದ್ದ, ದಿನಕ್ಕೊಬ್ಬರಂತೆ ಪಾಳಿ ಮೇಲೆ ಬೀಗ ತೆಗೆದು, ಕಸ ಹೊಡೆದು, ಶನಿವಾರ ನೆಲಕ್ಕೆ ಸಗಣಿ ಸಾರಿಸಿ ನಮ್ಮ ತರಗತಿ ನಾವೇ ಸಿದ್ಧಪಡಿಸಿಕೊಳ್ಳಬೇಕಾದಂತಹ ಶಾಲೆಗಳವು. ಅಂಕಗಳಿಕೆ ಸ್ಪರ್ಧೆಯಂತೂ ಇರಲೇ ಇಲ್ಲ. ನಾಲ್ಕೈದು ಮೈಲಿ ನಡೆದು ಬಸ್ ಹತ್ತಬೇಕಿದ್ದ, ಶೌಚಕ್ಕೆ ಚೊಂಬು ಹಿಡಿದು ಬಯಲಿಗೆ ಹೋಗಬೇಕಿದ್ದ ಆ ಹಳ್ಳಿಗಳು ವಿವಿಧ ಸಂಸ್ಕೃತಿ, ಉಪಭಾಷೆ, ಜಾತಿ, ಹವಾಮಾನ, ಆಹಾರಪದ್ಧತಿ, ಬದುಕಿನ ಮಜಲುಗಳನ್ನು ಪರಿಚಯಿಸಿದವು. ಬಹುತ್ವ ಸಹಜ ಅನುಭವವಾಗಿ ಒಳಗಿಳಿಯಿತು. ಹಳ್ಳಿಗಳಲ್ಲಿ ಬಾಡಿಗೆ ಮನೆಗಳೂ ಸಿಗುತ್ತಿರಲಿಲ್ಲವಾಗಿ ಯಾರದೋ ದೊಡ್ಡ ಮನೆಯ ಒಂದು ಭಾಗದಲ್ಲಿ ನಮಗಾಗಿ ಮಾಡಿದ ಪಾರ್ಟಿಶನ್ ಮನೆಯಲ್ಲಿ ಇರುತ್ತಿದ್ದೆವು. ಅಡುಗೆ ಮನೆಯ ಕೊಡುಕೊಳುವಿಕೆಯೂ ನಡೆಯುತ್ತಿತ್ತು. ನನ್ನ ಬಾಲ್ಯವೆಲ್ಲ ಹೀಗೆ ಕುಡಿಯುವ ನೀರು, ಮಿಕ್ಸರ್, ಗ್ಯಾಸ್, ಟಿವಿ, ಫೋನ್, ಬಸ್ಸು, ರೈಲು ಮುಂತಾಗಿ ಯಾವುದೂ ಇಲ್ಲದ ತಾವುಗಳಲ್ಲಿ ಕಳೆಯಿತು. ಗ್ರಾಮೀಣ ಬದುಕಿನ ಸ್ವರೂಪ, ಕುರೂಪ, ಸೌಂದರ್ಯಗಳ ಅರಿವಾಗಿ ನೀರೊಳಗೆ ಮೀನಿರುವಷ್ಟೇ ಸಹಜವಾಗಿ ಹಳ್ಳಿಯಲ್ಲಿ ಇರಲಿಕ್ಕೆ ಸಾಧ್ಯವಾಯಿತು. ಒಟ್ಟಾರೆ ಯಾವುದೋ ಒಂದು ಊರಿನ, ಒಂದು ಜಾತಿಯ ಕೇರಿಯಲ್ಲಿ ನಾನು ಬೆಳೆಯಲಿಲ್ಲ ಎನ್ನುವುದು ಬಾಲ್ಯಕಾಲ ನನಗಿತ್ತ ಕೊಡುಗೆಯೆಂದೇ ಭಾವಿಸಿದ್ದೇನೆ. 

ಅಂದಿನ ದಿನಗಳಲ್ಲಿ ನಮ್ಮ ಊರಿಗೆ ದಿನಪತ್ರಿಕೆ ಬರುತ್ತಿರಲಿಲ್ಲ, ಆದರೆ ಪ್ರಜಾಮತ, ವನಿತಾ, ಮಯೂರ, ತುಷಾರ, ಕಸ್ತೂರಿ ಹೀಗೆ ನಿಯತಕಾಲಿಕಗಳನ್ನು ಅವು ಹಳತಾದರೂ ಅಪ್ಪ ಕೊಂಡು ತರುತ್ತಿದ್ದರು. ಅವರಂತೆಯೇ ನಾನೂ ಸಿಕ್ಕಿದ್ದನ್ನೆಲ್ಲ ಓದುವುದು. ಆಗ ಶುರುವಾದ ಒಂದು ಪತ್ರಿಕೆ ತಂದೆಯವರ ಗಮನ ಸೆಳೆಯಿತು. ಸಂತೆಗೆ ಪ್ರತಿವಾರ ಪೇಟೆಗೆ ಹೋದಾಗ ತಪ್ಪದೇ ಆ ಹೊಸ ಪತ್ರಿಕೆ ತರಲು ಶುರುಮಾಡಿದರು. ಅದು ಲಂಕೇಶ್ ಪತ್ರಿಕೆ. ಸಿಹಿ ಖಾದ್ಯ ತಿನ್ನುತ್ತಿರುವೆನೋ ಎಂಬಷ್ಟು ಮಗ್ನಳಾಗಿ ಒಂದಕ್ಷರ ಬಿಡದೆ ಓದುತ್ತಿದ್ದೆ. ಲಂಕೇಶ್ ಎಂದರೆ ಅತೀವ ಆರಾಧನೆ ಬೆಳೆಯಿತು. ನನ್ನ ಯೋಚನೆಯ ದಿಕ್ಕು ಮತ್ತು ಓದುವ ರುಚಿಯನ್ನು ವಿಸ್ತರಿಸಿದವರು ಲಂಕೇಶ್. ಪತ್ರಿಕೆ ಓದುತ್ತ ಬರೆಯುವ ತುಡಿತವೂ ಆಗುತ್ತಿತ್ತು. ಎಷ್ಟು ಚೆನ್ನಾಗಿ ಬರೆದಿದ್ದಾರಲ್ಲ ಎಂಬ ಅಚ್ಚರಿ. ಉಳಿದವರ ಬರಹ ರುಚಿಸದಷ್ಟು ಲಂಕೇಶ್ ಆವರಿಸಿದರು. ರಾಜ್ಯ, ದೇಶಗಳ ರಾಜಕೀಯ, ಸಾಹಿತ್ಯಿಕ ವಿದ್ಯಮಾನವೆಲ್ಲ ನನಗೆ ಗೊತ್ತು ಅನ್ನುವಂತೆ ಅನಿಸತೊಡಗಿತು. ಏಳನೇ ತರಗತಿಯಲ್ಲಿ ಒಂದು ಪದ್ಯ ಬರೆದೆ. ನಮ್ಮ ಮನೆಯ ಪ್ರೀತಿಯ ಮೊಲ ಶೆಲ್ಲಿಯು ನಾಯಿ ಬಾಯಿಗೆ ತುತ್ತಾದಾಗ ದುಃಖದಿಂದ ಬರೆದದ್ದು. ಆ ಪದ್ಯವನ್ನು ತಂದೆ ‘ವನಿತಾ’ ಪತ್ರಿಕೆಗೆ ಕಳಿಸಿದರು. ಐದು ರೂಪಾಯಿ ಬಹುಮಾನದ ಸಂಭಾವನೆ ಗಳಿಸಿದೆ! ನಂತರ ಪದ್ಯ ಬರೆಬರೆದು ಒಟ್ಟಿದೆ. ಯಾರಿಗೂ ತೋರಿಸದೇ ಬಚ್ಚಿಟ್ಟುಕೊಂಡು ಡೈರಿ ತುಂಬಿಸುತ್ತ ಹೋದೆ. 

ಹೆಣ್ತನವೆಂಬ ಕಣ್ಕಟ್ಟು

ಬಾಲ್ಯದ ನೆನಪುಗಳಲ್ಲಿ ಅಜ್ಜನ ಮನೆ ಹಸಿರಾಗಿರುವ ಜಾಗ. ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಟ್ಟದ ಬೆಟ್ಟಗಳ ಸೆರಗಿನ ಎರಡೇ ಎರಡು ಮನೆಗಳ ‘ಊರು’ ಹೆಬ್ಬಾಗಿಲು. ಅಮ್ಮ, ಅಪ್ಪ ವಿಧಿಸದಿದ್ದ; ತರಳಬಾಳು ಶಾಲೆಯಿದ್ದ ಊರುಗಳಲ್ಲಿ ಕಾಣಿಸದ ಕೆಲವೊಂದು ಆಚರಣೆಗಳನ್ನು ಅಲ್ಲಿ ಕಂಡು ದಂಗಾಗುತ್ತಿತ್ತು. ಅಜ್ಜನೊಡನೆ ವಾದ ಮೊದಲಾಗುತ್ತಿತ್ತು. ಬೇಲಿ ತುದಿಯಲ್ಲಿ ನಿಂತು ಅಡಿಕೆ ಪಡೆವ ದನ ಕಾಯುವ ಸಣ್ಣಿ, ಅವಳ ಜೊತೆ ಬರುತ್ತಿದ್ದ ಚಡ್ಡಿಯಿಲ್ಲದ ಮಕ್ಕಳು, ಇಡಿಯ ಮನೆ ಸುತ್ತಿಬಳಸಿ ಮುಂಚೇಕಡೆಯಿಂದ ಹಿತ್ತಲಿಗೆ ಬಂದು ಬಳ್ಳೆ ಮೇಲೆ ಬಡಿಸಿದ ತಂಗಳನ್ನವನ್ನು ದೊಡ್ಡ ಪರಮಾನ್ನವೆಂಬಂತೆ ಸ್ವೀಕರಿಸುತ್ತಿದ್ದ ಅವರ ಬಡತನ ನನ್ನಲ್ಲಿ ಮ್ಲಾನತೆಯನ್ನು ಹುಟ್ಟಿಸುತ್ತಿತ್ತು. ಅಜ್ಜ ಸಿರಿವಂತರಾಗಿರಲಿಲ್ಲ. ಆದರೆ ಕ್ರೂರಿಯೂ ಅಲ್ಲ. ಅವರಿಗೆ ಈ ಜೀವಗಳ ಮೇಲೆ ಕನಿಕರವಿತ್ತು. ಆದರೆ ತಮ್ಮ ಚಾಕರಿ ಮಾಡಿದರು; ಪ್ರತಿಯಾಗಿ ಎಲಡಿಕೆ, ಬೆಲ್ಲ, ಬಾಯಾರು, ಅನ್ನ, ಭತ್ತ ಪಡೆದರು ಎನ್ನುವುದರ ಆಚೆಗೆ ಹೆಚ್ಚೇನೂ ನಂಟು ಇರಲಿಲ್ಲ. ಕಾರ್ಯಕಟ್ಲೆ ಇರುವಾಗ ಕರೆಯಬೇಕೆಂದಿಲ್ಲ, ಅವರ ಕೇರಿಗೆ ಕೇರಿಯೇ ಹಿತ್ತಿಲ ಓಳಿಯಲ್ಲಿ ಕುಳಿತಿರುತ್ತಿತ್ತು. ಎಲ್ಲ ಪಂಕ್ತಿಗಳೂ ಮುಗಿದ ಮೇಲೆ ಅವರ ಊಟ. ಉಳಿದಿದ್ದ ಸಿಹಿ, ಭಕ್ಷ್ಯ, ಕರಿದ ತಿಂಡಿಗಳನ್ನು ಎಡಗೈ, ಬಲಗೈ ಮುಂದೆ ಹಿಡಿದು, ಮನೆಯಲ್ಲಿರುವ ಅವರಿಗೆ ಕೊಡಿ, ಇವರಿಗೆ ಕೊಡಿ ಎಂದು ಕೇಳಿಕೇಳಿ ಪಡೆಯುತ್ತಿದ್ದರು. ಆ ಗಳಿಗೆಗಳು ಬಗೆಹರಿಯದ ದುಃಖ, ವಿಷಾದಗಳನ್ನು ಹುಟ್ಟಿಸುತ್ತಿದ್ದವು.  

ಹೆಣ್ಣು ಪ್ರಜ್ಞೆ ಜಾಗೃತಗೊಳ್ಳುವುದು ಸಾಂಪ್ರದಾಯಿಕ ಕುಟುಂಬದಲ್ಲಿ ಬೆಳೆದ ಭಾರತೀಯ ಹೆಣ್ಣಿಗೆ ಏನೂ ಕಷ್ಟವಿಲ್ಲ. ನನ್ನ ಮಟ್ಟಿಗೆ ಅಜ್ಜನ ಮನೆ ಅಂತಹ ‘ತನ’ಗಳನ್ನು ಜಾಗೃತಗೊಳಿಸಿದ ಸ್ಥಳಗಳಲ್ಲಿ ಅಗ್ರಸ್ಥಾನ ಪಡೆದಿದೆ. ಅಮ್ಮ ಅಲ್ಲಿ ಹೋದಾಗ ಮುಟ್ಟಾದರೆ ಹೊರಗೆ ಕೂರುತ್ತಿದ್ದಳು. ನನ್ನ ತಂದೆಯ ಇಬ್ಬರು ಸೋದರತ್ತೆಯರು (ನನಗೆ ಅಜ್ಜಿಯರು) ಬಾಲವಿಧವೆಯರು. ಒಬ್ಬರ ಗಂಡ ಮೈನೆರೆಯುವುದರೊಳಗೆ ತೀರಿಹೋಗಿ ಅವರ ಒಂಭತ್ತು ದಶಕದ ತುಂಬು ಬದುಕು ಬೋಳುತಲೆಯಲ್ಲಿ, ಕೆಂಪು ಸೀರೆಯಲ್ಲಿ, ಒಪ್ಪತ್ತು ಊಟದಲ್ಲಿ ಕ್ಷಯಿಸಿ ಹೋಗುವಂತಾಗಿತ್ತು. ಮತ್ತೊಬ್ಬರು ಹದಿನಾರು ಆಗುವುದರಲ್ಲಿ ಎರಡು ಹೆಣ್ಣು ಹೆತ್ತು, ಗಂಡ ಧನುರ್ವಾಯು ಬಂದು ತೀರಿಕೊಂಡಾಗ ಎರಡು ಕೈಗೂಸುಗಳೊಡನೆ ವಿಧವೆಯಾಗಿ ತವರು ಸೇರಿದ್ದರು. ಆ ಎರಡು ಜೀವಗಳು ಬದುಕಿದ್ದ ಪರಿಸ್ಥಿತಿ, ಅವರೆದುರಿಸುತ್ತಿದ್ದ ಅವಮಾನ-ಭರ್ತ್ಸನೆ-ಅಸಹಾಯಕತೆ, ಅವರಿಗಾಗುವ ಅನ್ಯಾಯಗಳೆಲ್ಲ ಹೆಣ್ಣುಪರವಾದ ಯೋಚನೆಗಳನ್ನು ಬಿತ್ತಿದವು. ಎಲ್ಲದಕ್ಕೂ ಅಜ್ಜನೇ ಕಾರಣ ಎನ್ನುವಂತೆ, ಅಜ್ಜ ಬದುಕಿದ್ದಷ್ಟು ದಿನವೂ ಅವರೊಡನೆ ವಾದ ವಾಗ್ವಾದ ಬಿಟ್ಟು ಬೇರೆ ಮಾತಾಡಲೇ ಇಲ್ಲ. ಮುಟ್ಟಾದರೂ ಹೇಳಲೇ ಇಲ್ಲ. ಹಾಗೆ ನೋಡಿದರೆ ಎಳೆತರಲ್ಲಿ ಇಬ್ಬರು ಹೆಂಡಿರನ್ನು ಜ್ವರದ ಗಡ್ಡೆಗೆ ಕಳೆದುಕೊಂಡ ವಿಧುರ ಅಜ್ಜ ಆರುಮಕ್ಕಳ ಸಂಸಾರವನ್ನು ಬಹು ಕಷ್ಟದಲ್ಲಿ ನಿಭಾಯಿಸಿದ್ದ. ಬಡತನದ ಅಜ್ಜನೂ ದುಃಖಿಯೇ ಆಗಿದ್ದ. ಯಾಕೋ ಅದು ಮನ ತಲುಪಿರಲಿಲ್ಲ. ಅಜ್ಜಿಯರ ದಾರುಣ ಬದುಕು ವಿಚಲಿತಗೊಳಿಸಿಬಿಟ್ಟಿತ್ತು. 

ನಾವಿದ್ದ ಹಳ್ಳಿಯಲ್ಲಿ ನೋಡಿದ ಆ ಹುಚ್ಚಿಯೂ ಅಷ್ಟೆ. ಮೈಮೇಲಿನ ಬಟ್ಟೆಯ ನೆದರಿಲ್ಲದೆ ಓಡಾಡುವವಳ ಕಾಲ ನಡುವೆ ರಕ್ತ ಸೋರಿಸುವ ಮಾಂಸದ ತುಂಡು ಜೋತಾಡುತ್ತಿತ್ತು. ಅದು ಕೆಳಜಗ್ಗಿದ ಗರ್ಭಕೋಶ ಎಂದು ತಿಳಿದದ್ದು ಮೆಡಿಕಲ್‌ಗೆ ಹೋದಮೇಲೆ. ಅವಳ ಮೇಲೆ ಬಲಾತ್ಕಾರವಾಗುತ್ತಿತ್ತು! ಅವಳು ಕಿರುಚುತ್ತಿದ್ದಳು. ಮಣ್ಣು ತೂರುತ್ತಿದ್ದಳು. ಆ ದಾರುಣವನ್ನು ಹೇಗೆ ವರ್ಣಿಸಲಿ?

ಮತ್ತೆ ಆ ಅವ, ರಾಕ್ಷನ ರೂಪಿ. ನಾವು ನೋಡನೋಡುತ್ತಲೇ ಒಂದಾದಮೇಲೊಂದು ಮೂರು ಮದುವೆಯಾಗಿ ಮೂವರು ಹೆಂಡಿರನ್ನು ಹೊಡೆದು, ಬಡಿದು, ಹಿಂಸಿಸಿ ಮಣ್ಣು ಮಾಡಿದ. ಆದರೂ ನಮ್ಮ ಕುಟುಂಬ ಆ ಹಳ್ಳಿ ಬಿಡುವ ಹೊತ್ತಿಗೆ ನಾಲ್ಕನೆಯ ಮದುವೆಗೆ ಸಿದ್ಧನಾಗಿದ್ದ! ಆ ಪರಮ ಹಿಂಸಾರೂಪಿಗೆ ಒಂದಾದಮೇಲೊಂದು ಹೆಣ್ಣುಗಳು ಸಿಗುವರಲ್ಲ?! ಅವರೇಕೆ ಇವನನ್ನು ಒಲ್ಲೆ ಎನ್ನರು? ಎನಿಸುತ್ತಿತ್ತು. ಒಂದು ರಜೆಯಲ್ಲಿ ವಾವೆಯಲ್ಲಿ ಅಕ್ಕನಾದವರ ಮನೆಗೆ ಹೋಗಿದ್ದೆವು. ನನಗಿಂತ ಹಿರಿಯಳಾದ, ತವರಿನ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿ ಮಗುವಿದ್ದ ಅವರು ತಮ್ಮ ಮೇಲಾಗುವ ಹಿಂಸೆಯನ್ನು ಸಣ್ಣವಯಸ್ಸಿನ ನನ್ನ ಬಳಿ ಹೇಳಿ, ತೋರಿಸಿ ಭೋರಾಡಿ ಅತ್ತು ಬಿಟ್ಟಿದ್ದರು. ಪುಟ್ಟವಳಾದ ನನಗೆ ಹೇಳಿದರೆ ನಾನು ಯಾರಿಗೂ ಹೇಳುವುದಿಲ್ಲ ಎಂಬ ಧೈರ್ಯವೆ? ತವರುಮನೆ ತೊರೆದು ಬಂದಿದ್ದ ಆ ಅಕ್ಕನಿಗೆ ನನ್ನ ಹೊರತು ಹೇಳಿಕೊಳ್ಳಲೂ ಜನ ಸಿಕ್ಕಿರಲಿಲ್ಲವೆ? ನಾನಾದರೂ ಆ ಬಂಡೆಗಲ್ಲಿನಂತಹ ಭಾವನಿಂದ ಈ ಅಕ್ಕನನ್ನು ಹೇಗೆ ಪಾರಾಗಿಸಲಿ? ಅವರು ನನ್ನಮ್ಮನ ಬಳಿಯೂ ವಿಷಯ ಹೇಳಬೇಡವೆಂದದ್ದು ಯಾಕೆ? ಅಷ್ಟು ಬಡಿಯುವ ಭಾವನಿಗೆ ಮತ್ತೆ ಗಡಿಬಿಡಿಯಲ್ಲಿ ಬಿಸಿಬಿಸಿ ರೊಟ್ಟಿ ಮಾಡಿ, ಗರಿಮುರಿಯಿರುವಾಗಲೇ ತುಪ್ಪ, ಚಟ್ನಿ ಎಂದು ರುಚಿರುಚಿಯಾಗಿ ಯಾಕೆ ಅಕ್ಕ ಬಡಿಸುತ್ತಾರೆ?

ಉತ್ತರವಿರದ ಪ್ರಶ್ನೆಗಳು. ಕೊನೆಮೊದಲಿರದ ಪ್ರಶ್ನೆಗಳು ತೆರೆಯಂತೆ ಏಳುತ್ತಲೇ ಹೋದವು. ದಂಡೆಗಪ್ಪಳಿಸಿ ಹಿಂದೆ ಹೋಗಿ, ಚಣ ಸುಮ್ಮನಾಗಿ ಮತ್ತೆ ಅಪ್ಪಳಿಸಲೆಂಬಂತೆ ನೊರೆಯೆಬ್ಬಿಸುತ್ತ ಬರುತ್ತಲೇ ಹೋದವು. 

ಹಾಸ್ಟೆಲಿನ ಪಾಠ

ಪಿಯುಸಿಗೆ ಶಿವಮೊಗ್ಗದ ಡಿವಿಎಸ್ ಕಾಲೇಜು ಸೇರಿದೆ. ಹಾಸ್ಟೆಲಿನ ಬದುಕು ಸಹಬಾಳ್ವೆಯ ಪಾಠ ಹೇಳಿಕೊಟ್ಟಿತು. ಕಾಲೇಜಿನಲ್ಲಿ ಕನ್ನಡ ಬೋಧಿಸುತ್ತಿದ್ದ ಶಿವಮೊಗ್ಗ ಮುನೀರ್, ರಹಮತ್ ತರೀಕೆರೆ ಸರ್ ಅವರು ವಿಜ್ಞಾನ ವಿಭಾಗದವಳಾದರೂ ಸಾಹಿತ್ಯಿಕ ಆಸಕ್ತಿ ಇಟ್ಟುಕೊಂಡಿದ್ದೆನೆಂದು ವಿಶೇಷ ಕಾಳಜಿ ತೋರಿಸಿದರು. ಕವನಸ್ಪರ್ಧೆ, ಭಾಷಣ, ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಗೆ ಸೈನ್ಸ್ ವಿದ್ಯಾರ್ಥಿನಿಯನ್ನು ಕರೆದೊಯ್ದು ನನ್ನನ್ನು ಜೀವಂತವಾಗಿಟ್ಟರು. ನಂತರ ಬಳ್ಳಾರಿಯ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪ್ರವೇಶ ದೊರೆಯಿತು. ಬಾಲ್ಯದನುಭವಗಳಂತೆಯೇ ಬಳ್ಳಾರಿಯ ದಿನಗಳು ಅವಿಸ್ಮರಣೀಯ ಅನುಭವ ನೀಡಿದವು. 

ಬಳ್ಳಾರಿಯ ಹಾಸ್ಟೆಲಿನಲ್ಲಿ ನಾವೈದು ಜನ ಹುಡುಗಿಯರಿದ್ದೆವು. ಸರಳ ಉಡುಪಿನ, ಕನ್ನಡ ಮಾತಾಡುವ, ‘ಬಜಾರಿ’ ಹುಡುಗಿಯರ ಗುಂಪು ಅದು. ಒಬ್ಬೊಬ್ಬರದು ಒಂದೊಂದು ಸ್ವಭಾವ, ಹಿನ್ನೆಲೆ. ಆದರೂ ಅದು ಹೇಗೋ ಆಪ್ತರಾಗಿದ್ದೆವು. ಹುಡುಗರು ನಮ್ಮನ್ನು ‘ಬಂಡಾಯ ಗುಂಪು’ ಎಂದು ಕರೆಯುತ್ತಿದ್ದರು. ಏಪ್ರನ್ ಮೇಲಿರುವುದರಿಂದ ಕಾಣುವುದಿಲ್ಲ ಎಂದೋ, ನಮ್ಮ ಬಳಿ ಅಷ್ಟು ಒಳ್ಳೊಳ್ಳೆಯವು ಇರಲಿಲ್ಲವೆಂದೋ ಅಥವಾ ಬಳ್ಳಾರಿಯ ಸೆಕೆಗೋ ಅಂತೂ ಬ್ರಾ ಧರಿಸದೆ ‘ಬ್ರಾ ಲೆಸ್ ಬಂಡಾಯಾಸ್’ ಎಂದು ಕರೆಸಿಕೊಂಡಿದ್ದೆವು! (ಹಾಗೆಂದು ಇತ್ತೀಚೆಗೆ ನಡೆದ ಅಲಮ್ನಿ ಮೀಟ್‌ನಲ್ಲಿ ತಿಳಿಯಿತು!) ನಡೆದು ಹೋಗುವಾಗ ಹಿಂದಿನಿಂದ ನನಗೆ ‘ಬಂಡಾಯ’ ಎಂದು ಚುಡಾಯಿಸುತ್ತ ಊಳಿಡುವಂತೆ ಕೂಗುತ್ತಿದ್ದರು. ಅಲ್ಲೇ ತಿರುಗಿ ನಿಂತು ಅವರನ್ನು ಬೈದು ಮುಂದೆ ಹೋಗುತ್ತಿದ್ದೆ. ಬಜಾರಿಯಂತೆ ಮಾತನಾಡುವೆನೆಂದು ಸಾಕಷ್ಟು ರ‍್ಯಾಗಿಂಗ್‌ಗೆ ಒಳಗಾದೆ. ಮೊದಲ ವರ್ಷವೆಲ್ಲ ಭಯದಲ್ಲಿ, ಬಂಡಾಯದಲ್ಲಿ, ಕುತೂಹಲದಲ್ಲಿ ಕಳೆಯಿತು. ಅಲ್ಲೊಂದು ವಾಲ್‌ಜರ್ನಲ್ ಇತ್ತು. ಅದಕ್ಕೆ ನನ್ನನ್ನು ಎಡಿಟರ್ ಮಾಡಿದರು. ಬರೆಯುವ ವಿದ್ಯಾರ್ಥಿಗಳ ಸಂಪರ್ಕವಾಯಿತು. ಬರೆದರೆ ಲಂಕೇಶ್ ತರಹ ಬರೆಯಬೇಕು ಎಂಬ ಬಯಕೆಯಿತ್ತಲ್ಲ, ದೊಡ್ಡ ಮನುಷ್ಯಳಂತೆ ಘನಗಂಭೀರವಾಗಿ ವಾಲ್‌ಜರ್ನಲಿಗೆ ಸಂಪಾದಕೀಯ ಬರೆಯತೊಡಗಿದೆ. ಹಾಸ್ಟೆಲು, ಬಳ್ಳಾರಿಯ ಬಿಸಿಲು, ಹೆಂಡ ಕುಡಿಯುವ ವೈದ್ಯ ವಿದ್ಯಾರ್ಥಿಗಳು, ಬಳ್ಳಾರಿಯ ಬಡತನ, ಅಪೌಷ್ಟಿಕ ಮಕ್ಕಳು ಮುಂತಾಗಿ ಇದ್ದದ್ದನ್ನು, ಕಂಡದ್ದನ್ನು ಕಂಡಹಾಗೆ ಬರೆದು ಅಂಟಿಸಿ ಬಿಡುತ್ತಿದ್ದೆ. ಆಗ ನನಗೆ ಹುಡುಗರು ಎಂದರೆ ಪುಂಡರು, ಪೋಕರಿಗಳು, ಕೆಟ್ಟವರು ಎಂಬ ಭಾವನೆಯಿತ್ತು. ಯಾವ ಅಹಿತಕರ ಅನುಭವವಾಗಿರದಿದ್ದರೂ ಹುಡುಗರು ಅಪಾಯಕಾರಿ ಜೀವಿಗಳು, ಅವರಿಂದ ದೂರವಿರುವುದೇ ಉತ್ತಮ ಎಂದು ಭಾವಿಸಿದ್ದೆ. ಅದರಲ್ಲೂ ನನ್ನ ಓರಗೆಯ ಹುಡುಗರು ಒಳ್ಳೆಯವರಿರಬಹುದೆಂದು ಅನಿಸಿರಲೇ ಇಲ್ಲ. ಹುಡುಗಿಯರ ಹಾಸ್ಟೆಲಿನ ಎದುರು ಕುಡಿದು ಬಂದು ಗಲಾಟೆ ಹಾಕುವ ಹುಡುಗರನ್ನು ಬೈದು ಒಂದು ವಾರ ಸಂಪಾದಕೀಯ ಬರೆದೆ. ಭಾವೀ ವೈದ್ಯರ ಬೇಜವಾಬ್ದಾರಿಯನ್ನು ಕಟುವಾಗಿ ಟೀಕಿಸಿದೆ. ತಗೋ, ಎಡಿಟೋರಿಯಲ್ ಅನ್ನು ಹರಿದು ಹಾಕಿದ ಹುಡುಗರು ಗ್ರಂಥಾಲಯದೆದುರು ನನ್ನನ್ನು ಅಟಕಾಯಿಸಿಕೊಂಡರು. ಸೀನಿಯರ್‌ಗಳೆಂದರೆ ಗೌರವ ಕೊಡಬೇಕೆಂದು ಗೊತ್ತಿಲ್ಲವೇ ಎನ್ನುತ್ತ ಮೈಮೇಲೆ ಬೀಳುವವರಂತೆ ಸುತ್ತುವರೆದರು. ಮಾತಿಗೆ ಮಾತು. ಚಕಮಕಿಯ ಪ್ರಶ್ನೆಗೆ ಕಿಡಿಯ ಉತ್ತರ. ಆ ಸಮಯದಲ್ಲಿ ಪರಿಚಯವಾದ ಕತೆಗಾರ ಕೃಷ್ಣ ಮುಂದೆ ಬಾಳಸಂಗಾತಿಯೂ ಆದ.  

ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗ ಮೂಲತಃ ಬಳ್ಳಾರಿಯವರೇ ಆದ, ಶಿವಮೊಗ್ಗದಲ್ಲಿ ನೆಲೆಸಿದ್ದ ಸಾಹಿತ್ಯಾಸಕ್ತ ಹಿರೇಹಾಳ ಇಬ್ರಾಹಿಂ ಸಾಹೇಬರು ಮತ್ತು ನನ್ನ ಗುರುಗಳಾದ ಮುನೀರ್ ಬಾಷಾ ಸೇರಿ ಶಿವಮೊಗ್ಗದಲ್ಲಿ ಮುಸ್ಲಿಂ ಸಾಹಿತ್ಯ ಸಂವೇದನೆ ಕುರಿತು ಸಮಾವೇಶ ಮಾಡಿದರು. ಕೊನೆಯ ದಿನದ ಕವಿಗೋಷ್ಠಿಯಲ್ಲಿ ಕವಿತೆ ಓದಲು ನನ್ನನ್ನು ಕರೆದರು. ಬಹುಶಃ ಇದು ಹಿರಿಯ ಕವಿಗಳ ಮಧ್ಯೆ ಕವಿ ಎಂದು ಕರೆಸಿಕೊಂಡು ಓದಿದ ನನ್ನ ಜೀವನದ ಮೊದಲ ಅನುಭವವಾಗಿತ್ತು. 

ಒಂದೇಸಮ ಗಿಜಿಗುಡುವ ರೋಗಿಗಳಿಂದ ತುಂಬಿರುತ್ತಿದ್ದ ಓಪಿಡಿ, ಕುಷ್ಠ-ಕ್ಷಯ-ಸುಟ್ಟಗಾಯದವರ ವಾರ್ಡುಗಳು, ಕೋಟೆಯ ಕೆಂಪುದೀಪ ಪ್ರದೇಶ, ಕೌಲ್‌ಬಜಾರ್, ಏಕಶಿಲಾಬಂಡೆ, ಹಾಸ್ಟೆಲ್ ಹಿಂದೆಯೇ ಇದ್ದ ರಿಮ್ಯಾಂಡ್ ಹೋಮಿನ ‘ಬಾಲಾಪರಾಧಿ’ ಮಕ್ಕಳ ಒಡನಾಟ, ಕಿವುಡು ಮೂಕ, ಕುರುಡ ಮಕ್ಕಳ ಶಾಲೆಗೆ ಭೇಟಿ, ಪರಿತ್ಯಕ್ತ ಮಹಿಳೆಯರ ಸ್ತ್ರೀಸೇವಾ ನಿಕೇತನಕ್ಕೆ ಭೇಟಿ ಮೊದಲಾದವು ನನ್ನೊಳಗಿನ ನನ್ನನ್ನು ಎಬ್ಬಿಸಿದವು. ಅದರಲ್ಲೂ ಕಾಫಿಸೀಮೆಗೆ ವಲಸೆ ಹೋಗುವವರು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಆಗುವುದಿಲ್ಲವೆಂದು ಸುಳ್ಳು ಕಂಪ್ಲೇಂಟ್ ಮಾಡಿಸಿ, ತಮ್ಮ ಮಕ್ಕಳನ್ನು ರಿಮ್ಯಾಂಡ್ ಹೋಮಿನ ‘ಸೇಫ್ ಕಸ್ಟಡಿ’ಗೆ ತಂದು ಬಿಡುತ್ತಿದ್ದುದು ನಾನರಿಯದ ಬದುಕಿನ ಇನ್ನೊಂದು ಮುಖವನ್ನು ತೆರೆದು ತೋರಿಸಿತು. ಮಾತೆತ್ತಿದರೆ ಬಳಬಳ ಕಣ್ಣೀರು ಸುರಿಸುತ್ತಿದ್ದ ಆರನೇ ತರಗತಿಯ ಒಬ್ಬ ಹುಡುಗ ನನ್ನನ್ನು ಒದ್ದೆಮುದ್ದೆಯಾಗಿಸಿದ. ಗಾಂಧಿಯ ಪ್ರಭಾವ ದಟ್ಟವಾಗಿ ವಾರಕ್ಕೆರೆಡು ದಿನ ಉಪವಾಸ ಮಾಡತೊಡಗಿದೆ. ಬರಬರುತ್ತ ನಾಸ್ತಿಕಳಾದೆ. 

ಅಂದಿನ ದಿನಗಳಲ್ಲಿ ನಮ್ಮ ಹಾಸ್ಟೆಲ್‌ನಲ್ಲಿ ಬೇರೆ ಸಂಘ ಸಂಸ್ಥೆಗಳ ಒಡನಾಟ ಇದ್ದವರು ಹೆಚ್ಚಾಗಿದ್ದರು. ಡಿಎಸ್‌ಎಸ್‌ನಲ್ಲಿ ಸಕ್ರಿಯಳಾಗಿದ್ದ ಅರುಂಧತಿ ನನ್ನ ಆಪ್ತ ಗೆಳತಿಯಾಗಿದ್ದಳು. ಮೆಡಿಕಲ್ ಕಾಲೇಜಿಗೆ ಪೀಪಲ್ಸ್ ವಾರ್ ಸುದ್ದಿ ಬರುತ್ತಿತ್ತು. ಕಾಮ್ರೇಡ್‌ಗಳು ಬರುತ್ತಿದ್ದರು. ಕೆಲವು ವಿದ್ಯಾರ್ಥಿಗಳಿಗೆ ಅವರ ಸಂಪರ್ಕವಿದ್ದಿರಲೂಬಹುದು. ಬಂದ ವರ್ಷವೇ ನಮಗಿಂತ ತುಂಬ ಸೀನಿಯರ್ ಆಗಿದ್ದ ಹಾಸ್ಟೆಲ್‌ಮೇಟ್ ಒಬ್ಬರು ಚಳ್ಳಕೆರೆ ಬಳಿಯ ಗುಡ್ಡದ ಮೇಲೊಂದು ಶಿಬಿರಕ್ಕೆ ನಮ್ಮನ್ನು ಕರೆದೊಯ್ದರು. ಅವರೆಷ್ಟು ಒತ್ತಾಯಿಸಿದರೂ, ಮನವೊಲಿಸಿದರೂ ಆ ಹಿಂದುತ್ವವಾದಿ ಸಂಘಟನೆ ನಮಗೆ ಇಷ್ಟವಾಗಲೇ ಇಲ್ಲ. ಗಾಂಧಿ ಸೇವಾಶ್ರಮದವರು ‘ರಾಷ್ಟ್ರೀಯ ಏಕತಾ ಸದ್ಭಾವನಾ ಶಿಬಿರ’ವನ್ನು ಜಮ್ಮುವಿನಲ್ಲಿ ಏರ್ಪಡಿಸಿದಾಗ ನಾನದರ ಸದಸ್ಯೆಯಲ್ಲದಿದ್ದರೂ ಹದಿನೈದು ದಿನಗಳ ಶಿಬಿರಕ್ಕೆ ತಂಡದೊಡನೆ ಹೋಗಿ ಬರುವ ಅವಕಾಶ ದೊರೆಯಿತು. ಮುಮ್ತಾಜ್ ನನ್ನ ಅತ್ಯಾಪ್ತ ಗೆಳತಿಯಾಗಿದ್ದಳು. ಮುಸ್ಲಿಂ ಗೆಳತಿಯರ ಜೊತೆ ಅವರ ‘ಇಸ್ತಮಾ’ಗಳಿಗೆ ಹೋಗಿಬರುತ್ತಿದ್ದೆ. ಬಾಬರಿ ಮಸೀದಿ ಧ್ವಂಸ ಸಂಭವಿಸಿದ ಕಾಲ. ಎಲ್ಲ ಮುಸ್ಲಿಂ ಹುಡುಗಿಯರೂ ಒಂದೇಕಡೆ ಇರುತ್ತೇವೆ ಎಂದು ಮತ್ತೊಂದು ಬ್ಲಾಕಿಗೆ ಹೊರಟರು. ಸಾಂಪ್ರದಾಯಿಕಳಲ್ಲದ, ಬುರ್ಖಾ ಸ್ಕಾರ್ಫ್ ಧರಿಸದ ಮುಮ್ತಾಜ್ ಅಲ್ಲಿ ಹೋಗಲೂ ಆರಳು, ಹೋಗದೆಯೂ ಇರಲಾರಳು ಎನ್ನುವಂತಾದಾಗ ಅವಳ ಗೊಂದಲ ನನ್ನನ್ನು ಯೋಚಿಸಲು ಹಚ್ಚಿತು. ಕೊನೆಗೆ ಉಳಿದ ಮುಸ್ಲಿಂ ಹುಡುಗಿಯರ ಜೊತೆಗೆ ತಾನೂ ಹೋದದ್ದಲ್ಲದೆ, ನೀನೂ ಬಾರೆಂದು ಮುಮ್ತಾಜ್ ನನ್ನನ್ನೂ ಕರೆದೊಯ್ದಳು. ಅಲ್ಲಿದ್ದರೂ ಕ್ರಿಸ್ಮಸ್ ಮತ್ತು ಹೊಸವರ್ಷಕ್ಕೆ ಎಂದಿನಂತೆ ಚರ್ಚಿಗೆ ಹೋಗಿಬಂದೆವು. ಆಸ್ತಿಕ ಗೆಳತಿಯ ಜೊತೆ ಹನುಮಂತನ ಗುಡಿಗೂ ಹೋಗಿ ಬರುತ್ತಿದ್ದೆವು. ಹೀಗೆ, ಎಲ್ಲದರ ಒಳಹೊಗುವ ಕುತೂಹಲ. ಎಲ್ಲವನ್ನು ಗಮನಿಸುತ್ತ ಉಳಿದೆ. 

ವೈದ್ಯೆ ಸಾಹಿತಿ

ಮದುವೆಯಾಗಿ, ಹಳ್ಳಿಗೆ ಬಂದು, ವೃತ್ತಿ ಶುರುಮಾಡಿದ ಬಳಿಕ ಮತ್ತೊಂದು ಲೋಕಕ್ಕೆ ಪ್ರವೇಶವಾಯಿತು. ಈಗ ಸಂಸಾರಸ್ಥೆಯಾದ ನನ್ನ ಎರಡು ಕೈ ಹತ್ತು ಕೈಯಾಗಲೇಬೇಕಾಯಿತು. ಒಂದು ದಶಕ ಏನೂ ಬರೆಯಲು ಸಾಧ್ಯವಾಗಲಿಲ್ಲ. ಸಣ್ಣಮಕ್ಕಳು, ನೆಲೆಗೊಳಿಸಬೇಕಿದ್ದ ಸಂಸಾರ, ಆಸ್ಪತ್ರೆ-ಮನೆಯ ನಿಭಾವಣೆಗಳಲ್ಲಿ ಓದಿಗಷ್ಟೆ ಸಮಯ ಮೀಸಲಿಟ್ಟು, ಬರವಣಿಗೆ ಪೂರಾ ನಿಲ್ಲಿಸಿದೆ. ನನ್ನದೇ ಆದ ಸಮಯ ಸಿಗುತ್ತಿರಲಿಲ್ಲ. ಮನೆಗೆಲಸ, ವೃತ್ತಿಯಲ್ಲದೆ ಇನ್ನೂ ಏನೇನೋ ಮಾಡಬೇಕು, ಮಾಡಬಲ್ಲೆ ಎಂದು ಗೊತ್ತಿದ್ದರೂ ಅದಕ್ಕೆ ಬೇಕಾದ ಸಮಯ ಇಂದು ಸಿಕ್ಕೀತು, ನಾಳೆ ಸಿಕ್ಕೀತು ಎಂಬ ಮರೀಚಿಕೆಯ ಹಿಂದೆ ಆಶಾ ಭಾವನೆಯಿಂದ ಹೋಗುತ್ತಿದ್ದೆ. ಬರಬರುತ್ತ, ಯಾವುದನ್ನು ಅಮ್ಮ ಹೇಳಿದಾಗ ‘ಹೋಗಮ, ಅದು ನಿನ್ನ ಕಾಲದ ಕತೆ’ ಎನ್ನುತ್ತಿದ್ದೆನೋ, ಅವೆಲ್ಲ ನನ್ನ ಕಾಲಕ್ಕೂ, ನನಗೂ ನಿಜ ಎನ್ನುವುದು ಅರಿವಿಗೆ ಬಂತು. ಕೊಳೆಯಾದ ದಿಂಬು, ಧೂಳು ಹಿಡಿದ ಕಪಾಟು, ಆಗಬೇಕಿರುವ ಕೆಲಸ, ನಾಳಿನ ತಿಂಡಿಯ ಚಿಂತೆ ಎಲ್ಲ ನನ್ನದು ಮಾತ್ರವೇ. ಮನೆಯಿಂದ ಹೊರಬೀಳುವಾಗ ಹೇಗಿರುವುದೋ ಬರುವಾಗ ಮನೆ ಹಾಗೆಯೇ ಇರುವುದು. ನಾನು ಕೈಹಾಕದಿದ್ದರೆ ಒಂದು ಅಣು ಕಸವೂ ಅತ್ತ ಸರಿದು ಚೊಕ್ಕಗೊಳ್ಳುವುದಿಲ್ಲ! ಎಲ್ಲವನ್ನು ಮೈಮೇಲೆಳೆದುಕೊಂಡು ಹತ್ತು ಕೈಯ ಚಾಮುಂಡಾಂಬೆಯೆಂಬಂತೆ ಮಾಡಿದ್ದೇ ಮಾಡಿದ್ದು. ಕೊನೆಗೆ ತಿಳಿಯಿತು, ಓಹೋ! ಮಾಡುತ್ತಿರುವ ಈ ಎಲ್ಲದನ್ನು ಸಾಯುವ ತನಕ ಮಾಡಿದರೂ ಮುಗಿಯಿತು ಎಂದಾಗುವುದಿಲ್ಲ. ಪುರುಸೊತ್ತು, ವಿರಾಮ ನನಗೆಂದಿಗೂ ಸಿಗುವುದಿಲ್ಲ. ಮಾಡಬೇಕಿರುವುದನ್ನೆಲ್ಲ ಈಗಲೇ, ಈ ಜಂಜಾಟಗಳ ಜೊತೆಗೇ ಮಾಡಬೇಕೇ ಹೊರತು ಮುಂದೊಂದು ಸುವರ್ಣ ಯುಗ ಬರುವುದಿಲ್ಲ ಎಂದು ಹೊಳೆದು ಹೋಯಿತು. 

ಬೆಟ್ಟದ ದಾರಿಯಲ್ಲಿ ಏರುತ್ತಿದ್ದೆವು. ಬೆಟ್ಟದ ಮೇಲಿನಿಂದ ಅಬ್ಬಿ ಧಭಧಭ ಹಾರುತ್ತಿತ್ತು. ಅದನ್ನು ನೋಡನೋಡುತ್ತ ಕಾಡು ತೊರೆಯ ಜಾಡೇ ಪ್ರತಿ ಹೆಣ್ಣಿನದೂ ಎನಿಸಿತು. ಎಲ್ಲೋ ಹುಟ್ಟಿ, ಎಲ್ಲೆಲ್ಲೋ ಬೆಳೆದು, ಗುಂಡಿ ಸಿಕ್ಕಲ್ಲಿ ನಿಂತು, ಕಣಿವೆಯಿದ್ದರೆ ಹಾರಿ, ಆಚೀಚಿನ ಹಳ್ಳತೊರೆಗಳ ಕೂಡಿಕೊಂಡು ಅಂತಿಮ ಗಮ್ಯದತ್ತ ಹರಿಯುವುದು. ಅದನ್ನು ನೋಡಿ ಮತ್ತೆ ಬರವಣಿಗೆಯ ತುಡಿತ ಹುಟ್ಟಿತು. ಓದು ಎಷ್ಟೋ ಅಷ್ಟೇ ಬರವಣಿಗೆಯೂ ನನ್ನೊಡಲಾಳದ ಜೀವಚಿಲುಮೆ ಎನಿಸಿ ‘ಮಲೆಗಳಲ್ಲಿ ಮದುಮಗಳು’ ಎಂಬ ಕವಿತೆಯ ಜೊತೆಗೆ ಮತ್ತೆ ಕತೆ, ಕವಿತೆಗಳ ಬರವಣಿಗೆ ಪ್ರಾರಂಭವಾಯಿತು. ಸುತ್ತಲ ಆಗುಹೋಗುಗಳ ಬಗೆಗೆ ನನಗೆ ಖಚಿತ ವಿರೋಧಗಳು, ನಿಲುವುಗಳು ರೂಪುಗೊಳ್ಳತೊಡಗಿದವು. ನನ್ನ ಅನಿಸಿಕೆಗಳನ್ನು ಹೇಳಬೇಕು, ನನಗನ್ನಿಸಿದ್ದನ್ನು ಹಂಚಿಕೊಳ್ಳಬೇಕು ಅನಿಸಿದ್ದೇ ಸಂಘಟನೆಯ ಉತ್ಸಾಹ ಶುರುವಾಯಿತು. ಮಕ್ಕಳಿಬ್ಬರೂ ‘ತಮ್ಮ ಜಡೆ ತಾವು ಹೆಣೆದುಕೊಳ್ಳುವಷ್ಟು’ ದೊಡ್ಡವರಾಗಿ ಕೊಂಚ ಸಮಯ ಒದಗಿಸಿಕೊಳ್ಳಲು ಸಾಧ್ಯವಾಯಿತು. ಮತ್ತೆ ಇತ್ತಲ್ಲ, ರಾತ್ರಿಯೆಂಬ ಕರುಣಾಳು. ಓದುವ, ಬರೆಯುವ ಕೆಲಸಕ್ಕೆ ಲೇಬರ್ ರೂಮಿನ ಕಾಯುವಿಕೆಯ ಸಮಯವೂ ಉಪಯೋಗವಾಯಿತು. ‘ಕೆಂಡಸಂಪಿಗೆ’ಯಲ್ಲಿ ಬರೆದೆ. ಪತ್ರಿಕೆಗೆ ಬರೆಯಲು ಮೊದಲು ಮಾಡಿದೆ.

‘ವೈದ್ಯೆಯಾಗಿಯೂ ನೀವು ಇಷ್ಟೊಂದು ಸಾಹಿತ್ಯ ಕೃಷಿ..?’ ಮುಂತಾದ ಮಾತುಗಳನ್ನು ಪದೇಪದೇ ಕೇಳುತ್ತಿರುತ್ತೇನೆ. ಹಾಗೆ ನೋಡಿದರೆ ಸಾಹಿತ್ಯ ಮತ್ತು ವೈದ್ಯಕೀಯ ಎರಡೂ ಬೇರೆ-ಬೇರೆ ಅಲ್ಲ. ಅವು ಒಂದಕ್ಕೊಂದು ಪೂರಕ. ಏಕೆಂದರೆ ವೈದ್ಯರಿಗೆ ಸಾಹಿತ್ಯಕೃಷಿಗೆ ಬಿತ್ತಲು ಬೇಕಾದ ಅತ್ಯಮೂಲ್ಯ ಬೀಜಗಳು ವಿಪುಲವಾಗಿ ದೊರೆಯುತ್ತವೆ. ಬದುಕಿನ ಎಲ್ಲ ಬಣ್ಣಗಳನ್ನು, ಮನುಷ್ಯ ಸ್ವಭಾವಗಳನ್ನು ನೇರವಾಗಿ ಹತ್ತಿರದಿಂದ ನೋಡಲು ವೈದ್ಯವೃತ್ತಿಯಲ್ಲಿ ಸಾಧ್ಯವಿದೆ. ಸಾಹಿತಿ ಅಥವಾ ಸಾಹಿತಿಯ ಮುಖ್ಯ ಉದ್ದೇಶ ಸಮಾಜದಲ್ಲಿ ಇರುವ ನೋವು, ದುಃಖಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಜನಸಮುದಾಯಕ್ಕೆ ಹೇಳುವುದು. ವೈದ್ಯರು ಮಾಡುವುದೂ ಅದನ್ನೇ. ಹಾಗಾಗಿ ವೃತ್ತಿನಿರತರಾಗಿಯೂ ಆಕ್ಟಿವಿಸ್ಟ್ ಆಗಲು ಚಿಮ್ಮುಹಲಗೆಯಂತೆ ವೈದ್ಯಕೀಯವು ಒದಗಿಬರುತ್ತದೆ. ಹೀಗೆ ವೃತ್ತಿ ಕಾರಣವಾಗಿ ಪ್ರತಿನಿತ್ಯ ಹಳ್ಳಿಯ ಜನರ ಜೊತೆಗಿನ ಒಡನಾಟ ಓದುಗಳಾದ ನನ್ನನ್ನು ಬರಹಗಾರ್ತಿಯಾಗಿ, ಸಂಘಟಿತ ಚಟುವಟಿಕೆಯಲ್ಲಿ ವಿಶ್ವಾಸವುಳ್ಳವಳನ್ನಾಗಿ ರೂಪಿಸಿತು. 

೨೦೦೭-೦೮ರ ವೇಳೆಗೆ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೊನ್ನಾವರದಲ್ಲಿ ಸಂಘಟಿಸಲು ಶುರು ಮಾಡಿದೆವು. ಸಂಪರ್ಕ ಜಾಲ ಬೆಳೆಯುತ್ತ ಹೋಯಿತು. ಸಾಹಿತಿಗಳ, ಹೋರಾಟಗಾರರ, ಸಂಘಟನೆಗಳ ನಂಟು ಬೆಳೆಯುತ್ತ ಹೋದಹಾಗೆ ವೈಚಾರಿಕವಾಗಿ ನಾನೂ ಬೆಳೆದೆ. ಅಂಬೇಡ್ಕರ್ ಗಾಢವಾಗಿ ಪ್ರಭಾವಿಸಿದರು. ನಾಮದೇವ ಢಸಾಳ್ ಬೆಚ್ಚಿ ಬೀಳಿಸಿದರು. ಮತ್ತೆ ಓದಿದ ಚೆ, ಭಗತ್ ತಲ್ಲಣಿಸುವಂತೆ ಮಾಡಿದರು. ತೇಲ್ತುಂಬ್ಡೆ ಇಷ್ಟವಾದರು. ಈ ಹಂತದಲ್ಲಿ ಪರಿಚಯವಾದ ಲಡಾಯಿ ಪ್ರಕಾಶನದ ಬಸೂ ನನ್ನ ಯೋಚನೆಯ, ಬರಹದ-ಬದುಕಿನ ದಿಕ್ಕನ್ನೇ ಬದಲಿಸಿದ ಸಂಗಾತಿ. ಬಸೂವಿನ ಒಡನಾಟ, ಸಾಂಗತ್ಯ ಇಲ್ಲದಿದ್ದರೆ ಇಷ್ಟು ಬರಹ-ಪ್ರಕಟಣೆ ಸಾಧ್ಯವಾಗುತ್ತಿರಲಿಲ್ಲ. ನಾವು ಕನಸಿದ ಸಮಾವೇಶ, ಸಭೆ, ಸೆಮಿನಾರು, ಗೋಷ್ಠಿಗಳಿಗೆ ಲೆಕ್ಕವಿಲ್ಲ. ಚರ್ಚಿಸಿದ್ದು, ವಾದಿಸಿದ್ದು, ಮುನಿಸಿಕೊಂಡದ್ದು, ಹಂಚಿಕೊಂಡದ್ದಕ್ಕೆ ಎಣೆಯಿಲ್ಲ. ಆತನೊಂದಿಗಿನ ಕೊಡುಕೊಳುವಿಕೆ, ಜಗಳಗಳು ನನ್ನನ್ನೂ, ನನ್ನ ಚಿಂತನಾಲೋಕವನ್ನು ಇವತ್ತಿಗೂ ಸಜೀವವಾಗಿಟ್ಟಿವೆ. 

ಈ ಸಮಯದಲ್ಲೇ ದು. ಸರಸ್ವತಿ ಎಂಬ ಅಕ್ಕ ಪರಿಚಯವಾದಳು. ಬಸುವಿನಂತೆಯೇ ಅವಳೂ ಉಡಿಯಲ್ಲಿ ಕನಸಿನ ಬೀಜಗಳನ್ನಿಟ್ಟುಕೊಂಡು ಬಿತ್ತುವಾಕೆ. ಅವಳ ಕನಸಿನ ಹಕ್ಕಿಗೆ ರೆಕ್ಕೆ ಕಟ್ಟಿ ಹಾರಿಸಿದ ಸಬಿಹಕ್ಕ, ಗುಲಾಬಿ, ವಾಣಿ ಮತ್ತಿತರ ಗೆಳತಿಯರು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಹುಟ್ಟಿಗೆ ಕಾರಣರಾದರು. ನನ್ನನ್ನು ವಿನೀತಗೊಳಿಸಿದ್ದು, ಸೋದರಿತ್ವದ ಪ್ರಜ್ಞೆಯನ್ನು ಗಾಢವಾಗಿ ಬೆಳೆಸಿದ್ದು, ಚರ್ಚೆ ಮಾತುಕತೆಗಳ ಮೂಲಕ ಸ್ತ್ರೀವಾದದ ಆಚರಣಾ ಪಠ್ಯವನ್ನು ಅರ್ಥ ಮಾಡಿಸಿದ್ದು ಒಕ್ಕೂಟವೇ ಎನ್ನಬೇಕು. 

ಈಗ ನನ್ನ ಮಾತು-ಕ್ರಿಯೆಗಳ ಜೊತೆ ‘ಗುರುತಿಸಿಕೊಳ್ಳುವ’ ತಾಣ ‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ ಮತ್ತು ಲಡಾಯಿಯ ‘ಮೇ ಸಾಹಿತ್ಯ ಮೇಳ ಬಳಗ’. ಇವೆರೆಡೂ ಜೊತೆಗುಂಪುಗಳು ಸಂಘಟಿತ ಕ್ರಿಯೆಗಳ ಸ್ಥಾಪಿತ ಚೌಕಟ್ಟನ್ನು ಮುರಿದು, ಪ್ರಚಾರ-ತೋರುಗಾಣಿಕೆಯ ಹಪಾಹಪಿಯಿಲ್ಲದೆ ಕ್ರಿಯಾಶೀಲವಾಗಿ, ಅರ್ಥಪೂರ್ಣವಾದ ಕೆಲಸ ಮಾಡುವ ಬಗೆಗೆ ಯೋಚಿಸುವುದನ್ನು ಕಲಿಸಿದವು. ಬಿಕ್ಕಟ್ಟಿನ ಕಾಲದಲ್ಲೂ ಸೂಕ್ಷ್ಮವಾಗಿ ಚಿಂತಿಸುವುದು, ಕೆರಳದೇ ಪ್ರೀತಿಯಿಂದ ಕೆಲಸ ಮಾಡುವುದು ಸಾಧ್ಯ ಎನ್ನುವುದನ್ನು ಮನದಟ್ಟು ಮಾಡಿಕೊಟ್ಟವು.

ಮರದೊಳಗೆ ಮರ ಹುಟ್ಟಿ

ಬದಲಾವಣೆ ವ್ಯಕ್ತಿಗತ ಮತ್ತು ಸಾಮಾಜಿಕ - ಎರಡೂ ನೆಲೆಯಲ್ಲಿ ಸಂಭವಿಸಬೇಕು. ಓದು, ಬರಹ, ಜನರ ಒಡನಾಟ, ಆಳದ ಧ್ಯಾನ, ಅನುಭವ, ಗ್ರಹಿಕೆ ಎಲ್ಲದರಿಂದ ವ್ಯಕ್ತಿಗತ ಬದಲಾವಣೆ ಸಂಭವಿಸುತ್ತದೆ. ಆದರೆ ಅಷ್ಟೇ ಸಾಲದು. ನಾವು ಯಾವ ಸಮೂಹದ ಭಾಗವೋ ಆ ಸಮೂಹವೂ ಬದಲಾಗಬೇಕು ಎಂದು ಪ್ರಯತ್ನಿಸುವುದು ಮುಖ್ಯ. ಸುತ್ತಮುತ್ತಲ ಸಮಾಜವೂ ನಾ ನಂಬಿದ ಬದಲಾವಣೆಯ ಕಡೆಗೆ ಗಮನ ಹರಿಸುವಂತೆ, ಆ ಕಡೆಗೆ ಚಲಿಸಲು ಉತ್ತೇಜಿಸುವಂತೆ ಮಾಡುವುದು ಅವಶ್ಯಕ. ಅದಕ್ಕೆ ನನ್ನ ವೃತ್ತಿ ಮತ್ತು ಬರಹ ಒದಗಿ ಬರುತ್ತಿವೆ. 

ಹೀಗೆ.. 

ಉತ್ತರವಿರದ ಪ್ರಶ್ನೆಗಳು ಎಂದು ನಾನಂದುಕೊಂಡ ಜಟಿಲ ಸಂಗತಿಗಳಿಗೆಲ್ಲ ಓದುಬರಹವು ತಿಳಿವಿನ ಮಾರ್ಗ ಹುಡುಕಿಕೊಟ್ಟಿದೆ. ಬದುಕನ್ನೇ ಉತ್ತರವಾಗಿಸಬೇಕು ಎಂದು ಹಲವು ಜೀವಗಳು ಹೇಳಿಕೊಟ್ಟಿವೆ. ಗಾಂಧಿ, ಬಸವಣ್ಣ, ಅಕ್ಕ, ಲಂಕೇಶ್, ಅಂಬೇಡ್ಕರ್, ರೂಮಿ, ಬುದ್ಧ, ಫುಲೆ, ಶಾಹೂ, ಮಾರ್ಕ್ಸ್, ಸಾವಿತ್ರಿಬಾಯಿ, ಕಸ್ತೂರಬಾ, ಗಿಬ್ರಾನ್, ರೋಗಿಗಳು, ಹೋರಾಟಗಾರರು - ಹೀಗೆ ನನ್ನೊಳಗಿಳಿದ, ಅರಳಿದ, ಬೆಳೆದ ಸರ್ವರೊಳಗಿಂದ ಒಂದೊಂದು ನುಡಿಗಲಿತು ನನ್ನ ಹೆಜ್ಜೆಗಳು ರೂಪುಗೊಳ್ಳುತ್ತಿವೆ. 

ಮರದೊಳಗೆ ಮರ ಹುಟ್ಟಿ, ಮರ ಚಿತ್ರ ಕಾಯಾಗುವ ಹಾಗೆಯೇ ಮನುಷ್ಯ ಮನವೊಂದು ಲೇಖಕಿ/ಕ ಆಗುವ ಪ್ರಕ್ರಿಯೆ ಸಂಭವಿಸುತ್ತದೆ. ಇಷ್ಟು ಬರೆದಾದಮೇಲೂ ಇವತ್ತಿನ ಅನುಪಮಾ ಆಗಿ ಯಾವಾಗ ಬದಲಾದೆ? ಹೇಗೆ? ಎನ್ನುವುದನ್ನು ಗುರುತಿಸಿದೆ ಎನ್ನಲಾರೆ. ಅದು ತೆನೆಯೊಳಗೆ ಹಾಲು ತುಂಬಿದ್ದು ಹೇಗೆ? ಯಾವಾಗ? ಎಂದು ಹೇಳುವಷ್ಟೇ ಕಷ್ಟದ್ದು, ಅಲ್ಲವೇ?


(‘ಟಿವಿ೯ ಕನ್ನಡ ಡಿಜಿಟಲ್’ಗೆ ಬರೆದದ್ದು) 


‘ಶಯ್ಯಾಗೃಹದ ಸುದ್ದಿಗಳು’


ಶೃಂಗಾರದ ಒಳಬಂಡಾಯ



ಶೋಭಾ ನಾಯಕ ಅವರ ಮೂರನೇ ಕವನ ಸಂಕಲನ ‘ಶಯ್ಯಾಗೃಹದ ಸುದ್ದಿಗಳು’. ಪುಟ ತಿರುವಿದರೆ ಬೆಚ್ಚಿಬೀಳಿಸಿ ಯೋಚನೆಗೆ ಹಚ್ಚುವಂತಹ ಐವತ್ತು ಕವಿತೆಗಳಿಲ್ಲಿವೆ. ವಸ್ತು, ಮಂಡನೆ, ಅಲ್ಲಿಲ್ಲಿ ಮಿಂಚುವ ಆಡುಭಾಷೆ, ಹೆಣ್ಣು ಅಭಿವ್ಯಕ್ತಿಯ ಪಾರದರ್ಶಕತೆಗಳ ಕಾರಣದಿಂದ ಇದು ಮಹಿಳಾ ಕಾವ್ಯಕ್ಕೊಂದು ಗಮನಾರ್ಹ ಸೇರ್ಪಡೆಯಾಗಿದೆ.

ಜೀವಿಗಳಿಗೆ ಕಾಮ ಒಂದು ಗುಂಗು. ಮನುಷ್ಯರಿಗೆ ಶೃಂಗಾರ ಒಂದು ವಿಸ್ಮಯ, ಭಾರತೀಯರಿಗದು ಗುಟ್ಟಿನ ಸುಖ. ಕಾಮದ ಬಗೆಗೆ ಭಾರತೀಯರು ವಿಪುಲವಾಗಿ ಬರೆದಿದ್ದಾರೆ. ಕವಿಗಳೂ, ಸಂತರೂ, ಯತಿವರೇಣ್ಯರೂ ಕುಂಭಕುಚಗಳ ಹೆಣ್ಣಿನ ದೇಹವರ್ಣನೆ ಮಾಡಿದ್ದಾರೆ. ಮಿಥುನ ಶಿಲ್ಪಗಳನ್ನು ಗುಡಿಯಲ್ಲೂ ಕೆತ್ತಿಸಿದ್ದಾರೆ. ಯೋನಿಯನ್ನು ಮನರಂಜನೆಯ ಅಂಗವಾಗಿ ನೋಡಿದಷ್ಟೇ ಫಲವತ್ತತೆಯ ಸಂಕೇತವಾಗಿ ಪೂಜಿಸಿದ್ದಾರೆ. ಸ್ತ್ರೀಪುರುಷ ಮಿಲನಕ್ಕೆ ಹೊಸ ಅರ್ಥ, ಸಾಧ್ಯತೆಗಳನ್ನು ಅಧ್ಯಾತ್ಮ ಪರಂಪರೆಗಳು ಕೊಟ್ಟಿದ್ದಾವೆ. ಇಲ್ಲೆಲ್ಲ ಗಂಡು ಕಣ್ಣೋಟದಲ್ಲಿ ಹೆಣ್ಣು ದೇಹವನ್ನು, ಕಾಮದನುಭವವನ್ನು ಕಟ್ಟಿಕೊಡಲಾಗಿದೆ. ಹೆಣ್ಣುಗಳಿಗೆ ಅದೊಂದು ಆಡಬಾರದ ಗುಟ್ಟಿನ ಸಂಗತಿಯಾಗಿ ಉಳಿದಿದೆ. ಮಾತನಾಡಿದರೂ ಒಂದೋ ಅನುಭಾವಿ ಹಿನ್ನೆಲೆಯಲ್ಲಿ ಅಥವಾ ಅಭಿಸಾರಿಕಾ ಮನೋವೃತ್ತಿಯಾಗಿ ಅರ್ಥೈಸಲಾಗುತ್ತದೆ. 

ಆದರೆ ಅಕ್ಕಮಹಾದೇವಿಯ ಕನ್ನಡ ನೆಲದ ಹೆಣ್ಣುಗಳು ದೇಹತುಮುಲಗಳನ್ನು ಸಂಕೇತಾರ್ಥದಲ್ಲಿ ಬಿಡಿಸಿಡುತ್ತಲೇ ಇದ್ದಾರೆ. ಎನ್. ವಿ. ಭಾಗ್ಯಲಕ್ಷ್ಮಿ ೧೯೭೦ರ ದಶಕದಲ್ಲಿ ‘ಬೆರಳ ಸಂದಿಯ ಬದುಕು’ ಸಂಕಲನದಲ್ಲಿ ‘ಹುಡುಗಿಯರು ಕಾಮದ ಬಗ್ಗೆ ಪದ್ಯ ಬರೆದರೆ..’ ಏನೇನು ಆಗುತ್ತದೆಂದು ಬರೆದರು. ಶೃಂಗಾರ, ಪ್ರೇಮ, ವಿರಹಗಳು ಕನ್ನಡ ಮಹಿಳಾ ಕಾವ್ಯದಲ್ಲಿ ಒಂದೇಸಮ ಕಂಡುಬರುತ್ತಿವೆ. ಈ ನಿಟ್ಟಿನಿಂದ ‘ಶಯ್ಯಾಗೃಹದ ಸುದ್ದಿಗಳು’ ದಿಟ್ಟವಾದೊಂದು ತಿರುವು ತೆಗೆದುಕೊಂಡಿದೆ. ಹೆಣ್ಣು ಬರೆದಿದ್ದನ್ನೆಲ್ಲ ಆತ್ಮಚರಿತ್ರಾತ್ಮಕವಾಗಿ ನೋಡಿ, ಅಲ್ಲಿರುವ ‘ಅವನು’ ಯಾರಿರಬಹುದೆಂದು ಭೂತಕನ್ನಡಿಯಲ್ಲಿ ಹುಡುಕುವ ಲೋಕಕ್ಕೆ ‘ಬಟ್ಟೆಯನ್ನಷ್ಟೇ ತೊಟ್ಟವರ ಮಾನ ಕಾಯಲು ತಾನು ಬೆತ್ತಲನ್ನುಟ್ಟಿ’ರುವುದಾಗಿ ಕವಿತೆ ಹೇಳುತ್ತದೆ. 

ಹೆಣ್ಣಿಗೆ ಲಜ್ಜೆಯೇ ಆಭರಣವೆಂದು ಕಾಮದ ನಿಷ್ಕ್ರಿಯ ಪಾಲುದಾರಳನ್ನಾಗಿಸಿರುವ ಸಮಾಜಕ್ಕೆ, ‘ಮುಟ್ಟಿನ ಹೊಲೆಗೆ, ಕಟ್ಟಿನ ಮೊಲೆಗೆ ಹುಟ್ಟಿದವನೇ, ಮುಟ್ಟಿದರೆ ಮುನಿವ ಎಲೆಯಂತೆ ಮುದುರಿಕೊಳ್ಳುವುದನು ಬಯಸಬೇಡ ನನ್ನಿಂದ’ ಎಂದು ಕವಿತೆಗಳ ನಾಯಕಿ ತನ್ನನ್ನು ಪರಿಚಯಿಸಿಕೊಳ್ಳುತ್ತಾಳೆ. ‘ಬ್ರೈಲ್ ಲಿಪಿಯಲ್ಲಿ ಬರೆದ ಶೃಂಗಾರ ಕಾವ್ಯ ನಾನು. ಆದರೆ ಓದುವ ನೀನು ಕುರುಡನಲ್ಲ’ ಎಂದು ಲಿಂಗಸಂಬಂಧದ ತಕರಾರುಗಳನ್ನು ಎತ್ತುತ್ತಾಳೆ. ‘ಶಯ್ಯಾಗೃಹದಲ್ಲಿ ಹೆಣ್ಣು ನರಳುವಾಗ ಗಂಡಸಿಗೆ ಸಿಗುವ ಸುಖದ ಹೆಸರು ಅಹಂ’ ಎನ್ನುತ್ತ ಪುರುಷ ಲೈಂಗಿಕತೆಯನ್ನು ಕಟುವಿಮರ್ಶೆಗೊಡ್ಡುತ್ತಾಳೆ. 

ಬಹುಸಂಗಾತಿ ಸಂಬಂಧವನ್ನು ಗಂಡಸು ಹೆಮ್ಮೆಯಿಂದ ಹೇಳಿಕೊಂಡಂತೆ ಹೆಣ್ಣು ಹೇಳಿಕೊಂಡದ್ದಿಲ್ಲ. ಇಲ್ಲಿ ಕಾವ್ಯ ನಾಯಕಿಯು ತನ್ನಿನಿಯನಿಗೆ, ‘ನಾನು ಒಬ್ಬಳೇ ಅಲ್ಲ. ಕಣ್ಣಲ್ಲಿ ಕಣ್ಣೂರಿದಾಗ ನನ್ನೆಲ್ಲ ಪೂರ್ವಪ್ರೇಮಿಗಳನ್ನು ಭೇಟಿಯಾಗುವುದು, ಅವರೆಲ್ಲರೊಳಗೆ ನೀನೂ ಒಬ್ಬನಾಗುವುದು ಅನಿವಾರ್ಯ’ವೆಂದು ಬಹುಸಂಗಾತಿಗಳ ನಂಟನ್ನು ತೆರೆದಿಡುತ್ತಾಳೆ. ತನ್ನನ್ನು ಕಾಮುಕಿ ಎನ್ನುವ ಮತ್ತೊಬ್ಬನಿಗೆ, ‘ನಿನ್ನಂತೆ ನನಗೂ ಸೊಬಗು ಬೇಕು ಮಾರಾಯಾ’ ಎಂದುತ್ತರಿಸಿ ದಂಗುಬಡಿಸುತ್ತಾಳೆ. ಕಾಮವಿಲ್ಲದೆ ಬರಿಯ ಪ್ರೇಮಿಗಳಾಗಿರೋಣ ಎನ್ನುವ ಗೆಳೆಯನಿಗೆ, ‘ಅದು ಐಷಾರಾಮಿ ಕಲ್ಪನೆ; ತೊಗಲ ಆಯುಧಗಳೇ ವಾಸ್ತವ’ ಎನ್ನುತ್ತಾಳೆ. ಮುಟ್ಟು ನಿಂತ ನಂತರವೂ ಮುಟ್ಟುವವನು, ಮುಗಿಲಾಗಬಲ್ಲವನು, ಬೆನ್ನುಹಾಕಿ ಮಲಗದವನು ಇರಬಾರದಿತ್ತೇ ಎಂದು ಕನಲುತ್ತಾಳೆ.

ಒಟ್ಟಾರೆಯಾಗಿ ಶೃಂಗಾರ ಸಂಬಂಧದ ಸಾಂಪ್ರದಾಯಿಕ ಮಡಿವಂತಿಕೆಯ ಚೌಕಟ್ಟನ್ನು ಮುರಿಯಲು ಇಲ್ಲಿನ ಕವಿತೆಗಳು ಯತ್ನಿಸಿವೆ. ಮದುವೆ, ಪಾತಿವ್ರತ್ಯ, ಲಜ್ಜೆ ಮೊದಲಾಗಿ ಏಕಪಕ್ಷೀಯವಾಗಿ ಹೆಣ್ಣಿನ ಮೇಲೆ ಹೇರಲ್ಪಟ್ಟ ಮೌಲ್ಯಗಳನ್ನು ಮಿಕ್ಕು ಮೀರಿ ಒಳಬಂಡಾಯ ಹೂಡಿವೆ. ‘ತನ್ನದು ಮಾತ್ರ’ ಆದ ಜೀವವೊಂದನ್ನು ಪಡೆಯಲು ಗಂಡುಹೆಣ್ಣುಗಳು ಯತ್ನಿಸುವ ನಾಗರಿಕ ಸಮಾಜದಲ್ಲಿ ದೈಹಿಕ ಸಂಬಂಧ ಕುರಿತ ಈ ಧೋರಣೆಯನ್ನು ಎಲ್ಲರೂ ಒಪ್ಪಬೇಕೆಂದಿಲ್ಲ. ಒಪ್ಪುವುದೂ ಇಲ್ಲ. ನೀತಿಅನೀತಿಗಳ ಆಚೆಗೂ ಪ್ರಶ್ನೆಗಳಿಲ್ಲದೇ ಇಲ್ಲ. ಅದೇನೇ ಇರಲಿ, ಒಳ್ಳೆಯತನವೆಂಬ ರಥವನೇರಿರುವ ಹೆಣ್ಣುಗಳು ಇಂಥ ಕವಿತೆ ಬರೆಯುವುದು, ಪ್ರಕಟಿಸುವುದು ಎದೆಗಾರಿಕೆಯ ಮಾತೇ ಆಗಿದೆ. ಕವಿಗೆ ಸಾಧ್ಯವಾದ ಜಿಗಿತವು ಗಂಡು ಠೇಂಕಾರವನ್ನು ಕ್ಷೀಣಗೊಳಿಸಿ ಸಮಾಜವನ್ನು ಆತ್ಮಾವಲೋಕನಕ್ಕೆ ಹಚ್ಚುವಷ್ಟು ಶಕ್ತವಾಗಿದೆ.

ಆದರೆ ದೇಹವನ್ನು ಚಲಾವಣೆಯಲ್ಲಿಡಲು ತಾರುಣ್ಯ, ಸೌಂದರ್ಯಗಳೇ ನಾಣ್ಯವಾದರೆ ಮನುಷ್ಯರಿಗಿಂತ ವಸ್ತುಗಳೇ ಮುಖ್ಯವಾಗುವ ಅಪಾಯವಿದೆ. ಅದರಿಂದ ಪಾರಾಗಬೇಕೆಂದರೆ ದೇಹದ ಮೀರುವಿಕೆಯು ಬದುಕಿಗೂ ವಿಸ್ತರಿಸಿಕೊಳ್ಳಬೇಕಾಗುತ್ತದೆ. ಚೆಲುವಿಕೆಯ ವ್ಯಾಖ್ಯಾನಗಳನ್ನೂ ಮನುಷ್ಯ ಚೇತನ ಮೀರಬೇಕಾಗುತ್ತದೆ. ಯಾಕೆಂದರೆ ಸಮಾಜದ ಚೌಕಟ್ಟುಗಳು ಬರಿಯ ಹೆಣ್ಣನ್ನಷ್ಟೇ ಬಾಧಿಸಿಲ್ಲ. ಗೌರಿಯರ ದುಃಖ ಒಂದು ತರಹವಾದರೆ ಗಂಡು ದುಃಖದ ಆಳ ಬೇರೆಯದೇ ಆಗಿದೆ. ಗಡಸುದನಿ, ಬಲಿಷ್ಟ ದೇಹ, ಹುಚ್ಚು ಕೆಚ್ಚು ಇಲ್ಲದಿದ್ದಕ್ಕೆ; ಮೀಸೆ ಗಡ್ಡ ಮೂಡದಿದ್ದಕ್ಕೆ; ಬೇಗನೇ ಆರ್ದ್ರಗೊಂಡು ಕಣ್ಣೀರು ಮಿಡಿಯುವುದಕ್ಕೆ; ಅಂಗಾಂಗಗಳ ಉದ್ದಗಲ ಕಡಿಮೆಯಿರುವುದಕ್ಕೆ; ಹೆಣ್ಣಿನ ತನುಮನಧನಗಳ ದಾಹವನ್ನು ತೀರಿಸಲಾಗದ್ದಕ್ಕೆ ಗಂಡಸರೂ ಸಹ ಅವಮಾನ, ಕೀಳರಿಮೆಗಳನ್ನು ಅನುಭವಿಸುತ್ತಿದ್ದಾರೆ. ಹೆಣ್ಣುಗಳು ಹೆಣ್ಣುತನದ ಚೌಕಟ್ಟುಗಳನ್ನು ಕಿತ್ತು ಬಿಸಾಡುವಂತೆಯೇ ತನ್ನ ಜೊತೆಗಾರನ ಗಂಡಸುತನವೆಂಬ ಕಣ್ಕಟ್ಟನ್ನು ಕಿತ್ತು, ಅವರನ್ನೂ ಮುಕ್ತಗೊಳಿಸುವ ಕೆಲಸ ಮಾಡಬೇಕು. ಕರುಣಾ, ಮೈತ್ರಿ ಭಾವವನ್ನು ಬಂಡಾಯ ಗುಣದ ಜೊತೆಗೇ ಮಿಳಿತಗೊಳಿಸಿ ಸ್ತ್ರೀಪುರುಷ ಸಂಬಂಧಗಳು ಕೆಳೆತನದ ಬಯಲನ್ನು ತಲುಪಲು ಸಾಧ್ಯ ಮಾಡಬೇಕು.

ಆಗ ಮೀರುವಿಕೆಯ ಆಯಾಮ ಬೇರೆಯದೇ ಆಗಿರುತ್ತದೆ. ನಾವು ಕನಸುವ ಸಮತೆಯ ಬಯಲಿನೆಡೆಗೆ ಮನುಷ್ಯರನ್ನು ನಡೆಸುತ್ತದೆ. 

(ಪ್ರತಿಗಳಿಗಾಗಿ ಸಂಪರ್ಕ: ಮನೋರಮಾ ಬುಕ್ ಹೌಸ್, ಸೆಲ್: 8088380327, 9481451709)




‘ಪರ್ದಾ ಮತ್ತು ಪಾಲಿಗಮಿ’

 ಗಂಡು ಎಂಬ ಅಧಿಕಾರದ ತುಂಡು

ಮಹಿಳಾ ಚಳವಳಿ ಜಗತ್ತಿನ ಅತ್ಯಂತ ದೀರ್ಘ ವಿಮೋಚನಾ ಹೋರಾಟವಾಗಲಿರುವ ಬಗೆಗೆ ಯಾವುದೇ ಅನುಮಾನವಿಲ್ಲ. ಅದನ್ನು ಧೃಢಪಡಿಸುವಂತೆ ಇಕ್ಬಾಲುನ್ನಿಸಾ ಹುಸೇನ್ ಬರೆದ ‘ಪರ್ದಾ ಮತ್ತು ಪಾಲಿಗಮಿ’ ಕಾದಂಬರಿಯಿದೆ. ಭಾರತೀಯ ಸಮಾಜದಲ್ಲಿ ಗಂಡು ಎನ್ನುವುದೊಂದು ಅಧಿಕಾರದ ತುಂಡು. ಮನುಷ್ಯ ಸಂಬಂಧಗಳೆಲ್ಲ ಗಂಡಿನೊಡನೆಯ ಅಧಿಕಾರ ಸಂಬಂಧಗಳಾಗಿಯೇ ನಿರೂಪಿತವಾಗುತ್ತವೆ. ಮನೆಯೊಳಗಿನ ಗಂಡುಗಳನ್ನು ಪರೋಪಜೀವಿಯನ್ನಾಗಿ ಮಾಡಿದಷ್ಟೂ ತಮ್ಮ ಸ್ಥಾನಬೆಲೆ ಹೆಚ್ಚುವುದೆಂದು ಹೆಣ್ಣುಜೀವರು ಭಾವಿಸಿದ್ದಾರೆ. ಹೆಣ್ಣುಗಳ ಹುಳಿತೇಗಿನ ಮೂಲ ಗಂಡು ಅಧಿಕಾರದೊಂದಿಗೆ ನಡೆಸುವ ಪೈಪೋಟಿಯೇ ಆಗಿದೆ. ಸೆಣಸಾಟದ ಹೆಣ್ಣು ಬದುಕನ್ನು ೧೯೪೪ರಲ್ಲಿ ಇಂಗ್ಲಿಷ್‌ನಲ್ಲಿ ಬಂದ ಕಾದಂಬರಿ ‘ಪರ್ದಾ ಅಂಡ್ ಪಾಲಿಗಮಿ’ ಸಮರ್ಥವಾಗಿ ಚಿತ್ರಿಸಿದೆ. ದಾದಾಪೀರ್ ಜೈಮನ್ ಅದರ ಸಾಂಸ್ಕೃತಿಕ ಅನುವಾದವನ್ನು ಸಮರ್ಥವಾಗಿ ಮಾಡಿ ಕನ್ನಡದ್ದೇ ಆಗಿಸಿದ್ದಾರೆ. ಕನ್ನಡದ ಸೂಕ್ಷ್ಮ ಕತೆಗಾರ, ಉತ್ಸಾಹಿ ಪ್ರಕಾಶಕರಾದ ವಸುಧೇಂದ್ರ ತಮ್ಮ `ಛಂದ' ಪುಸ್ತಕದಿಂದ ಅನುವಾದವನ್ನು ಪ್ರಕಟಿಸಿದ್ದಾರೆ.



ಚಿಕ್ಕಬಳ್ಳಾಪುರದ ಇಕ್ಬಾಲುನ್ನಿಸಾ (ಜನನ ೧೮೯೭) ಹದಿವಯಸ್ಸಿನಲ್ಲಿ ಪೊಲೀಸ್ ಅಧೀಕ್ಷಕರಾಗಿದ್ದ ಸಯ್ಯದ್ ಹುಸೇನರನ್ನು ಮದುವೆಯಾದರು. ಬಳಿಕ ಓದು ಮುಂದುವರೆಸಿ, ಮಗನ ಜೊತೆಜೊತೆಗೆ ಮೈಸೂರಿನ ಮಹಾರಾಣಿ ಕಾಲೇಜಿನಿಂದ ಬಿ.ಎ. ಪದವಿ ಪಡೆದರು. ಐದು ಮಕ್ಕಳನ್ನು ಭಾರತದಲ್ಲಿ ಬಿಟ್ಟು, ಕೈಗೂಸಿನೊಡನೆ ಲಂಡನ್ ಸೇರಿ ಲೀಡ್ಸ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಮೊದಲ ಭಾರತೀಯ ಮಹಿಳೆಯಾದರು. ಪರ್ದಾ ತ್ಯಜಿಸಿದ್ದ ಇಕ್ಬಾಲುನ್ನಿಸಾ, ಸಾಮಾಜಿಕ ಕಾರ್ಯಕರ್ತೆ, ಲೇಖಕಿಯಾಗಿ ಬೆಳೆದರು. ಭಾರತೀಯ ಮುಸ್ಲಿಮರ ನಂಬಿಕೆ, ಮೂಢನಂಬಿಕೆ, ಶೋಕಿ, ಕಪಟ, ಅಮಾಯಕತೆ, ಅತಿಧಾರ್ಮಿಕತೆ, ಬಡತನ, ಹುಸಿಗರ್ವ, ಸಮುದಾಯಪ್ರಜ್ಞೆಗಳನ್ನು ತಮ್ಮ ಬರಹಗಳಲ್ಲಿ ಚಿತ್ರಿಸಿದರು.


‘ಪರ್ದಾ ಮತ್ತು ಪಾಲಿಗಮಿ’ ನಗರವೊಂದರ ಸಿರಿವಂತ ಮುಸ್ಲಿಂ ಕುಟುಂಬದ ಕಥೆ. ಉಮರ್, ಕಬೀರ್, ಅಕ್ರಮ್ ಎಂಬ ಮೂರು ತಲೆಮಾರಿನ ಗಂಡಸರ ಯಜಮಾನಿಕೆಯ ಏಳುಬೀಳಿನ ಕಥೆ. ಹಣ ಕೂಡಿಡುತ್ತ ಬದುಕು ಸವೆಸಿದ ಅತಿ ಸಂಪ್ರದಾಯವಾದಿ ಉಮರ್; ಹದಿಹರೆಯದಲ್ಲೇ ಸಿಕ್ಕ ಯಾಜಮಾನ್ಯವನ್ನು ಸ್ವೇಚ್ಛೆಗಾಗಿ ಬಳಸಿ ನಾಲ್ಕು ಮದುವೆಯಾಗುವ ಕಬೀರ್; ಆಧುನಿಕ ಬದುಕಿಗೆ ತೆರೆದುಕೊಂಡರೂ ಕುಟುಂಬದ ನಿಯಂತ್ರಣದಿಂದ ಹೊರಬರಲಾರದ ಅಕ್ರಮ್ ಎಂಬ ಮೂವರು ಗಂಡಸರ ಸುತ್ತ ಹೆಣೆದುಕೊಂಡ ‘ದಿಲ್ಖುಶ್’ ಮನೆಯ ಹೆಣ್ಣುಲೋಕದ ಕಥೆ. ಸಂಕೋಚದ ಮುದ್ದೆಯಂತಿರುವ ಹುಡುಗರಲ್ಲಿ ಅದು ಯಾವಾಗ ಗಂಡುಗರ್ವ ಸ್ಫೋಟಿಸಿ ಯಾಜಮಾನ್ಯದ ಚಹರೆ ಬೆಳೆಯುವುದೋ ಎಂಬ ಅಚ್ಚರಿಗೆ ಇಲ್ಲಿ ಉತ್ತರ ಸಿಗುತ್ತದೆ. 

‘ದಿಲ್ಖುಶ್’ ಮನೆಯಲ್ಲಿ ವಂಶೋದ್ಧಾರಕನನ್ನು ಹೆತ್ತ ಕಬೀರನ ಮೊದಲನೆಯ ಹೆಂಡತಿ ನಾಝ್ನಿಯು ಗುಣವಾಗದ ಕಾಯಿಲೆಗೆ ತುತ್ತಾಗಿ ಅಸಹಾಯಕತೆ, ಅಬಲತನವೇ ಮೈವೆತ್ತಂತಿರುವವಳು. ಮನೆಗೆಲಸ ಮಾಡಲೊಬ್ಬರು ಬೇಕೆಂದು ಮದುವೆಯಾದ ಎರಡನೆಯ ಹೆಂಡತಿ ‘ಕರಿಮುಸುಡಿ’ಯ ಬಡವಿ ಮುನೀರಾ, ಸಿರಿವಂತನ ಕೈಹಿಡಿವ ಭಾಗ್ಯ ಸಿಕ್ಕಿದ್ದಕ್ಕೆ ಕೃತಕೃತಾರ್ಥಳಾಗಿ ಗಂಡ-ಅತ್ತೆ-ಧರ್ಮ ವಿಧಿಸಿರುವುದನ್ನು ಒಂದಿಷ್ಟೂ ಬದಲಾಗಲು ಬಿಡದವಳು. ಭಾರೀ ಮೆಹೆರ್ ಪಡೆದು ಬಂದಿರುವ ಸುಂದರಿ, ಜಾಣೆ, ಕವಯಿತ್ರಿ ಮಕ್ಬೂಲ್ ಪ್ರತಿತಿಂಗಳ ಆದಾಯಕ್ಕೆ ದಾರಿ ಮಾಡಿಕೊಂಡು ಮೂರನೆಯ ಹೆಂಡತಿಯಾಗಿ ಬಂದವಳು. ಅಶುಭವನ್ನೇ ತಂದಿತ್ತ ಮೂರು ಎಂಬ ಸಂಖ್ಯೆಯನ್ನು ನಿವಾರಿಸಿ ‘ನಾಲ್ಕು’ ಮಾಡಿಕೊಳ್ಳಲು ಹದಿಹರೆಯದ ಸುಂದರ ನಿರ್ಗತಿಕ ಹುಡುಗಿ ನೂರ್‌ಜಹಾನ್ ನಾಲ್ಕನೆಯ ಹೆಂಡತಿಯಾಗಿ ಬಂದವಳು. ಇವರನ್ನೆಲ್ಲ ನಿಯಂತ್ರಿಸುವವಳು ಮುಳ್ಳುನಾಲಗೆಯ ನಿರ್ದಯಿ ಅತ್ತೆ ಜುಹ್ರಾ. ಇವರೆಲ್ಲ ಮನೆಯೊಡೆಯ ಕಬೀರನ ಅಧಿಕಾರ ಎತ್ತಿ ಹಿಡಿಯುವ ನೆಪದಲ್ಲಿ ತಮ್ಮ ಅಧಿಕಾರ ಸ್ಥಾಪಿಸಿಕೊಳ್ಳುವ ಹುಕಿಯಲ್ಲಿರುವವರು. ಒಬ್ಬರಿಗೊಬ್ಬರು ಹೆಣೆವ ಅಸಂಗತ ತರ್ಕಗಳ ಬಲೆಯಲ್ಲಿ ಸಿಲುಕಿ ಉಸಿರುಗಟ್ಟಿದ ಮನೆಯಲ್ಲಿ ಸಂಭ್ರಮಕ್ಕಿಂತ ಸಂಚೇ ಹೆಚ್ಚು. ನೆಮ್ಮದಿಗಿಂತ ಶಂಕೆಯೇ ಹೆಚ್ಚು. ಹೊಸದರ ಕನಸಿಗಿಂತ ಹಳೆಯದನ್ನು ಉಳಿಸುವ ಹಠವೇ ಹೆಚ್ಚು. ಇದ್ದಿದ್ದರಲ್ಲಿ ಸೇವಕಿಯರೇ ನಿರ್ಭೀತಿಯಿಂದ ಮಾತನಾಡುತ್ತಾರೆ. ಬಂಡೇಳುವ ಗುಣಕ್ಕಾಗಿಯೇ ನಿಂದೆಗೊಳಗಾಗುತ್ತಾರೆ. 

ಕಾದಂಬರಿಯ ಹೆಣ್ಣುಲೋಕದಲ್ಲಿ ಹೆಣ್ತನವೆಂದರೆ ಬಸುರು, ಅಡುಗೆ, ದಾಸ್ಯದ ಬದುಕು, ಪೈಪೋಟಿ, ಅಧಿಕಾರ ಸ್ಥಾಪನೆಯ ಗುದ್ದಾಟ ಅಷ್ಟೇ. ಕೂಪದೊಳಗಿನ ಜಿಗಿದಾಟದ ಬದುಕಿನಲ್ಲಿ ಕಳೆದುಕೊಂಡದ್ದರ ಬಗೆಗೆ ಯಾರಿಗೂ ಅರಿವಿಲ್ಲ. ಪ್ರಶ್ನೆಗಳು ಹುಟ್ಟುವುದಿಲ್ಲ. ಬದಲಾವಣೆಯ ಬಯಕೆಯಿಲ್ಲ. ಉಲ್ಲಂಘಿಸುವ ಧೈರ್ಯವಿಲ್ಲ. ಆರೋಗ್ಯಕರ ಧಾರ್ಮಿಕತೆಯೂ ಇಲ್ಲದ ಕುರುಡು ಅನುಯಾಯಿತ್ವದಲ್ಲಿ ಅಧ್ಯಾತ್ಮದ ಬಯಲಿಗೊಯ್ಯುವ ಬೆಳಕಿಲ್ಲ. ವೈಚಾರಿಕತೆ, ಸ್ವಾತಂತ್ರ್ಯ, ಸಮಾನತೆ, ಸ್ನೇಹಭಾವಗಳು ಅವರ ಪದಕೋಶದಲ್ಲಿಲ್ಲ. ಹಕ್ಕುಗಳಿಗಾಗಿ ಹೋರಾಡುವುದು ಒತ್ತಟ್ಟಿಗಿರಲಿ, ಸ್ವಾಯತ್ತ ಬದುಕಿನ ಕನಸೇ ಅವರಿಗಿಲ್ಲ. 

ಹೀಗೆ, ಧಾರ್ಮಿಕ ಮೂಲಭೂತವಾದಿಗಳ ಬೆದರಿಕೆಗೆ ಜಗ್ಗದೆ ವಸ್ತುಸ್ಥಿತಿಯನ್ನು ನಿರೂಪಿಸುವ ಧೈರ್ಯ ತೋರುವ ಕಾದಂಬರಿಯಲ್ಲಿ ಸುಧಾರಣೆಯ ಉತ್ಸಾಹ ಇಲ್ಲವೆನ್ನುವಷ್ಟು ಕಡಿಮೆ. ವ್ಯಂಗ್ಯ, ವಿಡಂಬನೆಗಳು ತೆರೆಮರೆಯಲ್ಲಿದ್ದರೂ ನೇರ ಬಂಡಾಯದ ಪಾತ್ರಗಳು ಬಲುಕಡಿಮೆ. ಬಂಡೇಳುವ ಗುಣದ ಮಕ್ಬೂಲ್, ಅಡುಗೆಯ ಕೆಲಸದವಳ ಪಾತ್ರಗಳು ವಿಸ್ತಾರಗೊಳ್ಳಬಹುದಾದ ಸಾಧ್ಯತೆಗಳಿದ್ದರೂ ಅದೇಕೋ ಮೊಟಕುಗೊಂಡಿವೆ. ಅಕ್ರಮ್‌ನ ಗೆಳತಿ ರೋಸ್ ಎಂಬ ಆಧುನಿಕ ಕ್ರೈಸ್ತ ಹುಡುಗಿ ಭಿನ್ನವಾಗಿದ್ದರೂ ಅವಳ ‘ಕಾಫಿರ‍್ನಿ’ ಚಿಂತನೆಗಳು ಮುಸ್ಲಿಂ ಹೆಣ್ಣುಗಳಿಗೆ ಅಸ್ವೀಕೃತವೆಂಬಂತೆ ಮಾಡಲಾಗಿದೆ. ಕೌಟುಂಬಿಕ, ಧಾರ್ಮಿಕ ವ್ಯವಸ್ಥೆಯ ಟೊಳ್ಳುಗಳನ್ನು ಮನಸ್ಸಿನಲ್ಲೂ ಟೀಕಿಸದ ಹೆಣ್ಣು ಪಾತ್ರಗಳು, ಅನ್ಯಾಯ ಎಸಗುವ ಗಂಡು ಉತ್ತರದಾಯಿತ್ವವೇ ಇಲ್ಲದೆ ಪಾರಾಗುವುದು, ಯಥಾಸ್ಥಿತಿಗೆ ಎಲ್ಲವನ್ನೂ ಅಂಟಿಸುವ ಅಂತ್ಯವು ಇಕ್ಬಾಲುನ್ನೀಸಾರ ಕಾದಂಬರಿಯೆಂದು ಇಟ್ಟುಕೊಂಡ ಭರವಸೆಯನ್ನು ಹುಸಿಗೊಳಿಸುತ್ತವೆ. 

ಹೆಣ್ಣು ಕನಸುವ ಆದರ್ಶ ಸಮಾಜ ಹೇಗಿರಬೇಕು? ಮಹಿಳಾ ಹೋರಾಟದ ಅಂತಿಮ ಬಿಂದು ಯಾವುದು? ಹೆಣ್ಣಿನ ಜೈವಿಕ ಹಾಗೂ ಸಾಮಾಜಿಕ ಪಾತ್ರಗಳ ನಿಭಾವಣೆಯಲ್ಲಿ ಗಂಡಸಿನ ಪಾತ್ರವೇನು? ಲಿಂಗಾಧಾರಿತ ಪಾತ್ರಗಳ ತಿರುವುಮುರುವು ಮಹಿಳಾ ಹೋರಾಟದ ತುದಿಯೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಒಳನೋಟ ಮತ್ತು ದೂರದರ್ಶಿತ್ವವಿರುವ ಹೆಣ್ಣು ಬರಹಗಳಲ್ಲಿ ಉತ್ತರವಿರುತ್ತದೆ. ೧೯೦೫ರಲ್ಲಿ ಬಂಗಾಳದ ಬೇಗಂ ರುಖಿಯಾ ಶೆಖಾವತ್ ಹುಸೇನ್ ಬರೆದ ‘ಸುಲ್ತಾನಾಳ ಕನಸು’ ನೆನಪಾಗುತ್ತಿದೆ. ಅದನ್ನು ಓದತೊಡಗಿದರೆ ಸ್ತ್ರೀವಾದದ ನಾಳೆಯ ಕನಸುಗಳು ಬಿಚ್ಚಿಕೊಳ್ಳುತ್ತವೆ. ಈ ಕಾದಂಬರಿಯಲ್ಲಿ ಅಂತಹ ಆಶಾವಾದ, ಹೊರದಾರಿ, ಕನಸುಗಳು ಕಾಣಿಸುವುದಿಲ್ಲ. ಎಂದೇ ಇದನ್ನು ಸ್ತ್ರೀವಾದಿ ಕಾದಂಬರಿ ಎನ್ನುವುದಕ್ಕಿಂತ ಸ್ತ್ರೀವಾದ ಸಮಾಜಕ್ಕೆ ಯಾಕೆ ಅನಿವಾರ್ಯವೆಂದು ತಿಳಿಸುವ ಕೃತಿ ಎನ್ನಬಹುದು. ನಾವು ಹುಟ್ಟಿದ ಕುಟುಂಬ-ಜಾತಿ-ಧರ್ಮಗಳಲ್ಲಿ ಹೆಣ್ಣುಪ್ರಶ್ನೆಗಳನ್ನು ಎತ್ತದಿರುವ ಕಾರಣಕ್ಕೇ ಅವೆಲ್ಲ ಹೆಣ್ಣು ಬಂದೀಖಾನೆಗಳಾಗಿವೆಯೆಂದು ಎಚ್ಚರಿಸುವ ಕೃತಿ ಎನ್ನುವುದು ಸೂಕ್ತವಾಗುತ್ತದೆ. 

(ಪ್ರತಿಗಳಿಗಾಗಿ ಸಂಪರ್ಕ: ವಸುಧೇಂದ್ರ, ಛಂದ ಪುಸ್ತಕ, ಐ-004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು - 560076. ಸೆಲ್: 9844422782)



Monday 6 September 2021

ಟ್ರೆಡ್‌ಮಿಲ್‌ನ ಓಟ

 


                                  



ಕಾಲವನ್ನು ಕೋವಿಡ್ ಪೂರ್ವ, ಕೋವಿಡ್ ನಂತರ ಎಂದು ಅಳೆಯಬೇಕಾದ ಘಟ್ಟದಲ್ಲಿ ನಿಂತಿರುವಾಗ ಭಾರತದ ಎಲ್ಲ ಆರ್ಥಿಕ, ಸಮಾಜೋ ಸಾಂಸ್ಕೃತಿಕ ಸಮಸ್ಯೆಗಳ ಪರಿಹಾರ ಎಂಬಂತೆ ಬಿಂಬಿಸಲಾದ ಜಾಗತೀಕರಣದ ಪರಿಣಾಮಗಳೇನೆಂದು ನಾವು ಮಹಿಳೆಯರು ವಸ್ತುನಿಷ್ಠವಾಗಿ ಚರ್ಚಿಸಬೇಕಿದೆ. 


೧೯೯೦ರ ಬಳಿಕ ಬಹುರಾಷ್ಟ್ರೀಯ ಕಂಪನಿಗಳು ಭಾರತಕ್ಕೆ ಬಂದಮೇಲೆ ಕಂಡು ಕೇಳರಿಯದ ಉದ್ಯೋಗಗಳಲ್ಲಿ ಮಹಿಳೆಯರು ತೊಡಗಿಕೊಂಡರು. ಮಹಿಳೆಯರ ಶಿಕ್ಷಣ, ಆದ್ಯತೆ, ಆಯ್ಕೆಗಳೇ ಬೇರೆಯಾದವು. ಶ್ರಮವು ಹೊಸ ವ್ಯಾಖ್ಯಾನಕ್ಕೊಳಗಾಯಿತು. ಮಹಿಳೆಯ ಕಾಲಿಗೆರೆಡು ಕಾಲು, ಕೈಗೆ ನಾಲ್ಕು ಕೈ ಸೇರಿ ಮಲ್ಟಿಟಾಸ್ಕಿಂಗ್ ಕಿರೀಟ ಭಾರವಾಯಿತು. ಸಂಪರ್ಕ ಕ್ರಾಂತಿಯು ತಮ್ಮಿಷ್ಟ ಬಂದದ್ದನ್ನು ನೋಡುವ, ಕೇಳುವ, ಹೇಳುವ, ಮಾಡುವ ಅವಕಾಶಗಳ ಹೊಸಮಾರ್ಗವನ್ನೇ ತೆರೆಯಿತು. ಅಮ್ಮ, ಅಜ್ಜಿಯಂದಿರು ‘ನಮ್ಮಂತಲ್ಲ ನಿಮ್ಮ ಪರಿಸ್ಥಿತಿ’ ಎನ್ನತೊಡಗಿದರು. 


ನಿಜ. ನಮ್ಮ ಸಂವಿಧಾನ, ಮಹಿಳಾ ಚಳವಳಿ ತಂದ ಹಕ್ಕೊತ್ತಾಯಗಳು, ಅದರಿಂದ ರೂಪುಗೊಂಡ ಕಾನೂನುಗಳ ಜೊತೆಗೆ ಜಾಗತೀಕರಣ ಕೊಡಮಾಡಿದ ಅವಕಾಶಗಳು ಒಂದಷ್ಟು ಬದಲಾವಣೆಗೆ ಕಾರಣವಾಗಿವೆ. ಮೊದಲು ಶಾಲೆಯ ಕನಸುಗಳೇ ಬೀಳುವಂತಿರಲಿಲ್ಲ. ಈಗ ಹುಡುಗಿಯರು ಶಾಲೆಗೆ ಬಂದರೆ ಬಹುಮಾನವಿದೆ. ಮಹಿಳಾ ಸಾಕ್ಷರತೆ ೬೫% ಇದೆ. ಬಾಲ್ಯವಿವಾಹಗಳ ಸಂಖ್ಯೆ ೨೧%ಗೆ ಇಳಿದಿದೆ. ಹೆರುವ ಯಂತ್ರಗಳಾಗಿದ್ದ ಮಹಿಳೆಯರಿಗೀಗ ಕುಟುಂಬ ಯೋಜನೆಯ ಅವಕಾಶವಿದೆ. ಅಡುಗೆ ಮನೆಗೆ ಬಂದ ಯಂತ್ರಗಳು ಶ್ರಮವನ್ನು ಮಾನವೀಯಗೊಳಿಸಿವೆ. ಅಷ್ಟಿಷ್ಟು ರಾಜಕೀಯ ಪ್ರಾತಿನಿಧ್ಯ ಸಿಕ್ಕಿದೆ. ಅಭಿವ್ಯಕ್ತಿಗೆ ಹೊಸ ಮಾರ್ಗಗಳು ತೆರೆದುಕೊಂಡಿವೆ. ಕೆಲಸ ಹುಡುಕಿ ವಲಸೆ ಹೋಗಲು ಸಾಧ್ಯವಾಗಿದೆ. ಮೊದಲೆಲ್ಲ ಹೆಣ್ಣುದುಡಿಮೆ ವೇತನರಹಿತ ಮನೆಗೆಲಸವಾಗಿತ್ತು. ಗಳಿಸಲು ಹೆಣ್ಣು ಹೊಸಿಲು ದಾಟಿದರೆ ಕುಟುಂಬ ಹಾಳಾಗುತ್ತದೆಂಬ ಭಾವವಿತ್ತು. ಈಗವಳು ಹೊರಗೂ ದುಡಿಯಲೇಬೇಕಾದ ಅನಿವಾರ್ಯತೆಯಿದೆ. ಹೆಣ್ಣು ದುಡಿಮೆಯಿಲ್ಲದಿದ್ದರೆ ಬಹುತೇಕ ಕುಟುಂಬಗಳು ‘ಬಡವ’ರಾಗುತ್ತವೆ. ಬಡತನದ ಮಹಿಳೀಕರಣದಿಂದ ಉದ್ಯೋಗದ ಮಹಿಳೀಕರಣವಾಗಿದೆ.


ಮಹಿಳೀಕರಣದ ಒಳಗುಟ್ಟು




ಉದ್ಯಮಗಳು ಮಹಿಳಾ ಕಾರ್ಮಿಕರನ್ನು ಹೊಂದಲು; ಸಿಬ್ಬಂದಿ ಕಡಿತವೆಂದು ಗಂಡಸರನ್ನು ತೆಗೆದು ಹೆಣ್ಣುಮಕ್ಕಳನ್ನು ಕೂರಿಸಲು ಉತ್ಸುಕವಾಗಿವೆ. ಮಹಿಳೆಯರು ಸಂಘಟಿತರಾಗಿ ತಿರುಗಿ ಬೀಳುವ ಸಾಧ್ಯತೆ ಕಡಿಮೆ; ವಿನಯದಿಂದ, ನಿಯತ್ತಿನಿಂದ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಾರೆ; ಸುಲಭದಲ್ಲಿ ಕೆಲಸದಿಂದ ತೆಗೆಯಬಹುದು; ಅವಶ್ಯಬಿದ್ದರೆ ಲೈಂಗಿಕವಾಗಿ ಬಳಸಿಕೊಳ್ಳಬಹುದು ಮುಂತಾದ ಕಾರಣಗಳು ಇದರ ಹಿಂದಿವೆ. ಇದೇ ಧೋರಣೆಯು ಉದ್ಯೋಗ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ, ಸ್ತ್ರೀದ್ವೇಷ, ಅಸಭ್ಯ ನಡವಳಿಕೆಗಳಾಗಿ ಮುಂದುವರೆಯುತ್ತವೆ.  


ವರ್ಲ್ಡ್ ಎಕನಾಮಿಕ್ ಫೋರಂ ಬಿಡುಗಡೆ ಮಾಡಿರುವ ‘ಜಾಗತಿಕ ಜಂಡರ್ ಗ್ಯಾಪ್-೨೦೨೧’ರ ಪ್ರಕಾರ: ಭಾರತದ ದುಡಿಯುವ ವರ್ಗದಲ್ಲಿ ಮಹಿಳೆಯರ ಸಂಖ್ಯೆ ೨೨.೩% ಇದೆ. ವೃತ್ತಿಪರ ಮತ್ತು ತಾಂತ್ರಿಕ ವಲಯದ ಉದ್ಯೋಗಗಳಲ್ಲಿ ೨೯.೨% ಮಹಿಳೆಯರಿದ್ದಾರೆ. ಮೇಲ್ಮಟ್ಟದ ನಿರ್ವಾಹಕ ಹುದ್ದೆಗಳಲ್ಲಿ (ಮ್ಯಾನೇಜರಿಯಲ್) ೧೪.೬% ಇದ್ದಾರೆ. ೨೦೧೭ರಲ್ಲಿ ಎನ್‌ಎಸ್‌ಇಯಲ್ಲಿ ದಾಖಲಾದ ೫೦೦ ಕಂಪನಿಗಳ ಬೋರ್ಡ್ ರೂಮುಗಳಲ್ಲಿ ೧೪% ಮಹಿಳೆಯರಿದ್ದರು. ಮಹಿಳೆಯರು ಮುಖ್ಯಸ್ಥಾನದಲ್ಲಿದ್ದು ನಡೆಸುವ ಉದ್ಯಮಗಳ ಸಂಖ್ಯೆ ೮-೯% ಇದೆ. ನಾಲ್ವರಲ್ಲಿ ಒಬ್ಬಳು ಒಂದಲ್ಲ ಒಂದು ಹಂತದಲ್ಲಿ ದೌರ್ಜನ್ಯ ಎದುರಿಸುತ್ತಾಳೆ. ‘ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೇ-೨೦೧೫’ರ ಪ್ರಕಾರ ೨೦೦೫-೦೬ರಲ್ಲಿ ಮದುವೆಯ ನಂತರವೂ ದುಡಿಯುವ ಮಹಿಳೆಯರ ಸಂಖ್ಯೆ ೪೩% ಇದ್ದದ್ದು ೨೦೧೫ರ ಹೊತ್ತಿಗೆ ೩೧%ಕ್ಕಿಳಿದಿದೆ. ಎಲ್ಲ ಕ್ಷೇತ್ರಗಳಲ್ಲಿ ಸ್ತ್ರೀಪುರುಷರ ನಡುವೆ ವೇತನ ತಾರತಮ್ಯವಿದೆ. ಮಹಿಳೆಯರು ೧೯% ಕಡಿಮೆ ವೇತನ ಪಡೆಯುತ್ತಾರೆ. ೯೫%ಕ್ಕಿಂತ ಹೆಚ್ಚು ಮಹಿಳೆಯರ ಹೆಸರಿನಲ್ಲಿ ಯಾವುದೇ ಆಸ್ತಿಯಿಲ್ಲ. ರಾಜಕಾರಣದಲ್ಲೂ ಇದು ಮುಂದುವರೆದು ೨೦೨೧ರಲ್ಲಿ ಭಾರತದಾದ್ಯಂತ ಮಹಿಳಾ ಮಂತ್ರಿಗಳು ೯.೧% ಇದ್ದಾರೆ.


ಮೇಲಿನ ಅಂಕಿಅಂಶಗಳು ಸ್ಪಷ್ಟವಾಗಿ ತಿಳಿಸುವಂತೆ ತಳಹಂತದ ಕೆಲಸಗಳಲ್ಲಿ; ಅಧಿಕಾರ, ಬಡ್ತಿ, ಭತ್ಯೆ, ರಜೆ, ಉನ್ನತೀಕರಣದ ಅವಕಾಶ, ವೇತನ ಕಡಿಮೆಯಿರುವ ಕೆಲಸಗಳಲ್ಲಿ ಹೆಚ್ಚೆಚ್ಚು ಮಹಿಳೆಯರಿದ್ದರೆ, ಶ್ರೇಣಿಯ ಮೇಲೇರುತ್ತ ಹೋದಂತೆ ವಿರಳವಾಗುತ್ತಾರೆ. ನಿರ್ಧಾರಕ, ಅಧಿಕಾರ ಸ್ಥಾನಗಳಲ್ಲಿ ಹೆಣ್ಣುಗಳು ಇಲ್ಲದಿರುವುದರಿಂದ ಎದ್ದು ಕಾಣುತ್ತಾರೆ. 



ಶಾಲೆಕಾಲೇಜುಗಳ ಪರೀಕ್ಷೆ, ಸ್ಪರ್ಧೆಗಳಲ್ಲಿ ಹುಡುಗಿಯರೇ ಚಿನ್ನದ ಪದಕ ಗೆಲ್ಲುತ್ತಾ, ಮುಂದಿರುತ್ತಾರಲ್ಲವೇ? ಉದ್ಯೋಗಸ್ಥಳದಲ್ಲಿ ಏಕೆ ಹೀಗೆ? ಎಲ್ಲಿ ಹೋದರು ಆ ‘ಚಿನ್ನದ ಹುಡುಗಿ’ಯರು?


ಗಾಣಕ್ಕೆ ಕಟ್ಟಿದ ಗೋವು




ಹುಡುಗಿಯರು ಉನ್ನತ ಶಿಕ್ಷಣಕ್ಕೆ ಹೋಗಬಯಸಿದರೆ ಮನೆಯಲ್ಲಿ ಒಬ್ಬರಲ್ಲ ಒಬ್ಬರಿಂದ ‘ನಿನಗಿಂತ ಹೆಚ್ಚು ಓದಿದವನನ್ನು ಎಲ್ಲಿ ಹುಡುಕುವುದು? ಹೆಚ್ಚು ವರದಕ್ಷಿಣೆ ಹೇಗೆ ತೆರುವುದು? ಓದು ಸಾಕು’ ಎನ್ನುವ ಮಾತು ಕೇಳಿಬರುತ್ತದೆ. ಮದುವೆಯೇ ಹೆಣ್ಣಿನ ಆತ್ಯಂತಿಕ ಗುರಿ, ಹೆರುವುದೇ ಪರಮೋಚ್ಛ ಸಾಧನೆ ಎಂಬ ಭಾವನೆಯನ್ನು ಉದ್ಯಮಗಳೂ, ಮಾರುಕಟ್ಟೆಯೂ ಬೆಳೆಸುತ್ತಿವೆ. ಹೆಂಗಸರಿಗೇ ಮೀಸಲಾದ ಸೋಪು, ಪೌಡರು, ಬಟ್ಟೆ, ಸುಗಂಧ ದ್ರವ್ಯ, ಬಣ್ಣಗಳಿವೆ. ಅವರಿಗೇ ಬೇರೆ ಡಿಸೈನಿನ ವಾಹನ. ಅವರದೇ ಬೇರೆ ಸಲೂನು, ಪಾರ್ಲರ್, ಜಿಮ್. ಅವನ್ನು ಬಳಸದಿದ್ದವರು, ಹಿಮ್ಮಡಿ ಒಡೆದವರು, ಮುಖ ಬೆಳ್ಳಗಿಲ್ಲದವರು, ಮೊಡವೆ ಕಲೆ ಇರುವವರು, ಕಪ್ಪಗಿರುವವರು ಅನರ್ಹ ಹೆಣ್ಣುಗಳು ಎಂದು ಜಾಹೀರಾತುಗಳು ಸಾರುತ್ತವೆ. ಹೆಣ್ಣು, ಹೆಣ್ತನ, ಗರ್ಭಕೋಶ, ಲೈಂಗಿಕತೆ, ಪ್ರೇಮ, ಮದುವೆ, ಕಣ್ಣೀರು ಎಲ್ಲವೂ ಮಾರುಕಟ್ಟೆಗೆ ಮುಖ್ಯವಾಗಿವೆ. ಹೆಣ್ಣುತನದ ಚೌಕಟ್ಟು ತಾಯ್ತನಕ್ಕೂ ಮುಂದುವರೆದಿದೆ. ಮಹಿಳಾ ಆರೋಗ್ಯ ಕ್ಷೇತ್ರಕ್ಕಿಂತ ಹೆಚ್ಚು ಬಂಡವಾಳವನ್ನು ಬಂಜೆತನ ಚಿಕಿತ್ಸೆಯ ಸಂಶೋಧನೆಗಳಿಗೆ ಹೂಡಲಾಗಿದೆ. 


ಸಮಾಜ ಹೆಣ್ಣು ಎಂದು ಯಾರನ್ನು ನೋಡುತ್ತಿದೆಯೋ ಅವಳು ನಿಜವಾದ ಹೆಣ್ಣಲ್ಲ. ಪುರುಷಪ್ರಧಾನ ಸಮಾಜ ನಿಯಂತ್ರಿಸುವ ಮಾರುಕಟ್ಟೆಯ ಕಲ್ಪನಾ ವಿಲಾಸ ಹೆಣ್ಣು ಹೇಗಿರಬೇಕೆಂದು ವ್ಯಾಖ್ಯಾನಿಸಿದೆಯೋ ಆ ಚೌಕಟ್ಟಿಗೆ ಸರಿಯಾಗಿ ತನ್ನನ್ನು ಕೂರಿಸಿಕೊಂಡ ಹೆಣ್ಣು. ಗೆರೆಯೆಳೆದು ನಿರ್ಬಂಧಿಸಿರುವವರಲ್ಲಿ ಕುಟುಂಬ-ಜಾತಿ-ಊರುಗಳಷ್ಟೇ ಅಲ್ಲ; ಬಂಡವಾಳಿಗರೂ ಸೇರಿದ್ದಾರೆ. ಚೌಕಟ್ಟನ್ನು ಮೀರುವ, ಅನುಕೂಲೆಯರಾಗದ ಹೆಣ್ಣುಗಳ ಮೇಲೆ ಸ್ತ್ರೀ ದ್ವೇಷ (ಮೀಸೋಗೈನಿ) ಹೆಚ್ಚುತ್ತಿದೆ. ಧರ್ಮ-ಜಾತಿ ಹೆಸರಿನಲ್ಲಿ ಲಿಂಗಾಧಾರಿತ ದೌರ್ಜನ್ಯಗಳು ಸಂಭವಿಸುತ್ತಿವೆ. 


ಜಾಗತೀಕರಣ ಕಾಲದ ಮಹಿಳೆಯರು ಗಾಣಕ್ಕೆ ಕಟ್ಟಿದ ಗೋವುಗಳಂತೆ. ಕೆಲವಕ್ಕೆ ಕಣ್ಣಿ ಉದ್ದ, ಕೆಲವಕ್ಕೆ ಗಿಡ್ಡ. ವರ್ಷಕ್ಕೊಂದು ದಿನ ಗೋ ಪೂಜೆ. ಮತ್ತೆಲ್ಲ ನಿರಂತರ ದುಡಿಮೆ. ಒಂದಷ್ಟು ಬೇಲಿಗಳು ತೆರವಾಗಿವೆ, ಮತ್ತೊಂದಷ್ಟು ಕಡಿದು ಬಿಸುಟ ಗೂಟಗಳು ಚಿಗುರಿ ಬಂಧನವನ್ನು ಗಟ್ಟಿಗೊಳಿಸುತ್ತಿವೆ.


ಅಂಗೈ ಹುಣ್ಣು




ಲಾಭವೇ ಮುಖ್ಯವಾದ ಮಾರುಕಟ್ಟೆಯು ಜಾತಿ-ಧರ್ಮ-ಲಿಂಗ ತಾರತಮ್ಯಗಳನ್ನು ಮರೆತು ಗ್ರಾಹಕ/ಕಿಯರನ್ನೆಲ್ಲ ಒಂದೇ ಆಗಿ ನೋಡಬಹುದೇನೋ ಎಂದು ತಳಸಮುದಾಯಗಳೂ, ಮಹಿಳೆಯರೂ ಆಶಿಸಿದ್ದರು. ಆದರೆ ಗಂಡುಹಿರಿಮೆಯ ಭಾರತೀಯ ಸಮಾಜವನ್ನು ಜಾಗತೀಕರಣ ಬದಲಿಸಲಿಲ್ಲ, ಬದಲಾಗಿ ಪೋಷಿಸಿಕೊಂಡು ಬಂತು. ಬಾಯಿಮಾತಿಗಷ್ಟೇ ಮಹಿಳಾ ಸ್ನೇಹಿಯಾಗಿರುವ ಬಂಡವಾಳಕ್ಕೆ ಲಿಂಗ ಪೂರ್ವಗ್ರಹ, ಲಿಂಗ ತಾರತಮ್ಯಗಳು ಸಮಸ್ಯೆಯೆಂದೇ ಅರಿವಾಗದೇ ಹೋಯಿತು. ಹಾಗಾಗಿ ಹೆಣ್ಣು ದುಡಿಮೆಯೊಂದಿಗೆ ಹೆಣ್ಣು ಘನತೆ ಹೆಚ್ಚಾಗಲಿಲ್ಲ. ಜಾಗತೀಕರಣದ ಬಳಿಕವೂ ಹಲವಾರು ಮಹಿಳಾ ಅಭಿವೃದ್ಧಿ ಸೂಚ್ಯಂಕಗಳು ಉತ್ತಮಗೊಳ್ಳಲಿಲ್ಲ. 


ಭಾರತದಲ್ಲಿ ಲಿಂಗಾನುಪಾತ ಒಂದೇಸಮ ಇಳಿಯುತ್ತಿದೆ. ಸ್ವಾತಂತ್ರ್ಯಾನಂತರ ೧೯೫೧ರಲ್ಲಿ ೧೦೦೦ ಗಂಡುಮಕ್ಕಳಿಗೆ ೯೮೩ ಹೆಣ್ಣುಮಕ್ಕಳಿದ್ದರು. ಅದು ೧೯೯೧ರಲ್ಲಿ ೯೪೫ಕ್ಕಿಳಿಯಿತು. ೨೦೦೧ರಲ್ಲಿ ೯೨೭ ಆದದ್ದು ೨೦೧೧ಕ್ಕೆ ೯೧೮ ಆಯಿತು. ಕಟ್ಟುನಿಟ್ಟಾದ ಕಾನೂನು ಜಾರಿಯಾದರೂ ಹೆಣ್ಣುಭ್ರೂಣ ಹತ್ಯೆ, ಹೆಣ್ಣುಶಿಶುಹತ್ಯೆ ಮುಂದುವರೆದಿವೆ. ಒಂದು ಅಂದಾಜಿನಂತೆ ೫೦ ಲಕ್ಷಕ್ಕಿಂತ ಹೆಚ್ಚು ಭ್ರೂಣ-ಶಿಶುಗಳು ಹೆಣ್ಣೆಂಬ ಕಾರಣಕ್ಕೆ ಪ್ರತಿವರ್ಷ ಮಾಯವಾಗುತ್ತಿವೆ.


ಶಿಕ್ಷಣವು ಮೂಲಭೂತ ಹಕ್ಕಾದರೂ ೩೪.೨% ಮಹಿಳೆಯರು ಅನಕ್ಷರಸ್ಥೆಯರಾಗಿದ್ದಾರೆ. ೬೫% ಭಾರತೀಯ ಗಂಡಸರು ಮನೆ ಸುಸೂತ್ರವಾಗಿ ನಡೆಸಲಿಕ್ಕೆ ಹೆಂಗಸರನ್ನು ಹೊಡೆಯಲೇಬೇಕೆಂದು, ಅದಕ್ಕವರು ಅರ್ಹರೆಂದು ನಂಬಿದ್ದಾರೆ. ೩೮% ಗಂಡಂದಿರು ಹೆಂಡತಿಯನ್ನು ಹೊಡೆಯುತ್ತಾರೆ. ಹೆಣ್ಣುಮಕ್ಕಳು ಜಾತಿ ಮೀರಿ ಪ್ರೇಮಿಸಿದರೆ ಅವರನ್ನು ಕೊಂದಾದರೂ ಜಾತಿ ಮರ್ಯಾದೆ ಉಳಿಸಿಕೊಳ್ಳಬೇಕೆಂದು ಪುರುಷಸಂಬಂಧಿಗಳು ಭಾವಿಸುತ್ತಾರೆ. ಜಾತಿದೌರ್ಜನ್ಯಗಳು ಹೆಣ್ಣಿನ ಮೇಲೇ ಜಾಸ್ತಿ ಸಂಭವಿಸುತ್ತಿವೆ. ವರದಕ್ಷಿಣೆಯ ಕಾರಣಕ್ಕೆ ಪ್ರತಿವರ್ಷ ೫೦೦೦ ಹೆಣ್ಣುಗಳ ಜೀವಹರಣವಾಗುತ್ತಿದೆ. ಪ್ರತಿ ೨೦ ನಿಮಿಷಕ್ಕೊಬ್ಬಳು ಅತ್ಯಾಚಾರಕ್ಕೊಳಗಾದ ದೂರು ದಾಖಲಾಗುತ್ತದೆ. ೫೦-೭೫% ಅತ್ಯಾಚಾರಗಳು ದಾಖಲಾಗದೇ ಮುಚ್ಚಿ ಹೋಗುತ್ತವೆ. 



ಮುಂದೇನು?




ಐಹಿಕ ಸುಖಭೋಗಗಳೇ ಆತ್ಯಂತಿಕ ಸತ್ಯ ಎನ್ನುವ ಮಾರುಕಟ್ಟೆ ಆರ್ಥಿಕತೆ ಒಂದೆಡೆ; ಮೊಲೆಮುಡಿ, ಕಿವಿಬಾಯಿ ಮುಚ್ಚಿಟ್ಟುಕೊಂಡರೆ ಹೆಣ್ಣುಗಳು ಸುರಕ್ಷಿತ ಎಂದು ನಂಬಿಸುವ ಧಾರ್ಮಿಕ ಮೂಲಭೂತವಾದಿಗಳು ಇನ್ನೊಂದು ಕಡೆ; ಕತ್ತಲಾದ ಮೇಲೆ ಮನೆಹೊರಗೆ ಚಂದದ ದಿರಿಸುಟ್ಟು ಬರಬೇಡಿರೆಂದು ಉಪದೇಶಿಸುವ ಮಂತ್ರಿಮಹೋದಯರು ಮಗದೊಂದು ಕಡೆ - ಈ ಬಲೆಯೊಳಗೆ ತಮಗರಿವಿಲ್ಲದೆ ಬೀಳುವ ಮಹಿಳೆಯರಿಗೆ ಲಿಂಗಪ್ರಶ್ನೆಯ ಅರಿವು ಮರೆಗೆ ಸರಿಯುತ್ತಿದೆ. 


ಸೂಕ್ತವಾದ ಸಾಮಾಜಿಕ, ಆರ್ಥಿಕ ವಾತಾವರಣವನ್ನು ಸೃಷ್ಟಿಸುವ ಯೋಜನೆಗಳಿದ್ದಿದ್ದರೆ ಜಾಗತೀಕರಣವು ಮಹಿಳೆಯರನ್ನು ಸಬಲೀಕರಣದ ಕಡೆ ಒಯ್ಯುತ್ತಿದ್ದಿರಬಹುದು. ಆದರೆ ಭಾರತದ ಬಹುಪಾಲು ಮಹಿಳೆಯರು ಸಂಪ್ರದಾಯಕ್ಕೆ ಕಟ್ಟಿಹಾಕಲ್ಪಟ್ಟವರು. ಅನುಕೂಲಕರ ಅಧಿಕಾರ ಹೊಂದಿಲ್ಲದವರು. ಇದ್ದಕ್ಕಿದ್ದಂತೆ ಅವರು ಜಾಗತೀಕರಣವೆಂಬ ಜಾರುಬಂಡಿಯಲ್ಲಿ ಅತಿವೇಗದಿಂದ ಚಲಿಸತೊಡಗಿದಾಗ ಸ್ಥಳಾಂತರ, ಸ್ಥಾನ ಬದಲಾವಣೆಗಳಿಗೆ ಹೊಂದಿಕೊಳ್ಳಲು ಎಲ್ಲರಿಗೂ ಕಷ್ಟವಾಯಿತು. ತಕ್ಷಣದ ಪಲ್ಲಟವು ಕುಟುಂಬ, ದಾಂಪತ್ಯ, ಗಂಡುಹೆಣ್ಣಿನ ಸಂಬಂಧಗಳನ್ನು ಬಿಕ್ಕಟ್ಟಿನಲ್ಲಿಟ್ಟಿತು. ಹಾಗಾಗಿ ಸಮಾನತೆಯ ಕಡೆಗಿನ ಮಹಿಳೆಯ ತುಡಿತವು ಸಮಾಜದ ಇಚ್ಛೆಯಾಗಿ ಬದಲಾಗದೇ ಹೋಗಿದೆ. ಭಾರತೀಯ ಮಹಿಳೆಯರ ಮೇಲೆ ಉದಾರೀಕರಣದ ಪ್ರಭಾವವು ಮನೆಯೊಳಗೇ ಟ್ರೆಡ್‌ಮಿಲ್ ಇಟ್ಟುಕೊಂಡು ಓಡಿದಂತೆ ಆಗಿದೆ. ಲೆಕ್ಕವಿಟ್ಟು ಸಾವಿರಾರು ಹೆಜ್ಜೆಗಳನ್ನಿಡುವುದು, ಬೆವರಿಳಿಸುವುದು, ಓಡುವುದು. ನಿಲ್ಲದ ಓಟ. ಮುಟ್ಟುವುದೆಲ್ಲಿಗೂ ಇಲ್ಲ! 

 

ಮಹಿಳಾ ಸಮುದಾಯದ ಜೊತೆಗೆ ತನ್ನ ತಾನು ಗುರುತಿಸಿಕೊಂಡು ಸ್ವಾಯತ್ತ, ಘನತೆಯ ಬದುಕನ್ನು ಹೆಣ್ಣು ಸಾಧ್ಯವಾಗಿಸಿಕೊಳ್ಳಬೇಕು. ಆ ಮೂಲಕ ಸಮಾಜವನ್ನೂ ಲಿಂಗಸೂಕ್ಷ್ಮ ಬದಲಾವಣೆಗೆ ಸಿದ್ಧಗೊಳಿಸಿ ನ್ಯಾಯದ ಕಣ್ಣು ತೆರೆಸಬೇಕು. ಆಗ ಮಾತ್ರ ಅಭಿವೃದ್ಧಿಯು ಅರ್ಥಪೂರ್ಣವಾಗಬಲ್ಲುದು. 


(All Images, sketches From Internet)


Tuesday 8 June 2021

ಇನ್ನೊಂದು ಭಾರತದ ಕತೆ!





ಈ ಋತುವಿನಲ್ಲಿ ಪ್ರತಿ ವರ್ಷವೂ ವೈದ್ಯರಿಗೆ ಪುರುಸೊತ್ತಿರುವುದಿಲ್ಲ. ಬೇಸಿಗೆ, ಮಳೆಗಾಲಗಳು ಬ್ಯಾಕ್ಟೀರಿಯಾ, ವೈರಸ್‌ಗಳ ವಂಶಾಭಿವೃದ್ಧಿಗೆ ಪೂರಕವಾಗಿರುವುದರಿಂದ ಆಸ್ಪತ್ರೆಗಳು ತುಂಬಿ ತುಳುಕುತ್ತಿರುತ್ತವೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿ ಗ್ರಾಮದ ನನ್ನ ಕ್ಲಿನಿಕ್ ಕೂಡಾ ಇದರಿಂದ ಹೊರತಲ್ಲ. ಒಣಗಿದ ಗಂಟಲು ಒದ್ದೆಯಾಗಲಿಕ್ಕೂ ನಮಗೆ ಸಮಯ ಇಲ್ಲ.

ನಾನು ಹೇಳಹೊರಟಿರುವುದು ಇನ್ನೊಂದು ಭಾರತದ ಕತೆ. ಇಲ್ಲಿ ಆಕ್ಸಿಜನ್ ಸಮಸ್ಯೆಯಿಲ್ಲ. ಸುಲಿಗೆ ಮಾಡುವ ಆಸ್ಪತ್ರೆಗಳಿಲ್ಲ. ಹಾಸಿಗೆ ಕೊರತೆಯಿಲ್ಲ. ಹೆಣ ಸುಡಲು ಸರತಿಯಿಲ್ಲ. ಕಟ್ಟಿಗೆಗೆ ಬರವಿಲ್ಲ. ಯಾಕೆಂದರೆ ಇದು ರಾಜಧಾನಿಯಿಂದ ನಾಲ್ಕುನೂರು ಕಿಮೀ ದೂರದಲ್ಲಿರುವ ದೊಡ್ಡ ಹಳ್ಳಿಯಂತಹ ಉತ್ತರಕನ್ನಡ ಜಿಲ್ಲೆ. ಇಡೀ ಜಿಲ್ಲೆಗೊಂದು ಅತ್ಯಾಧುನಿಕ ಆಸ್ಪತ್ರೆ ಇಲ್ಲ. ಕೋವಿಡ್ ಇನ್ನೂ ಎಲ್ಲೋ ಯಾರಿಗೋ ಆಗುತ್ತಿರುವ ವಿಪತ್ತೇ ಹೊರತು ತಮ್ಮ ಮನೆಬಾಗಿಲಿಗೆ ಬಂದಿದೆ ಎಂದು ಜನ ಭಾವಿಸಿಲ್ಲ. ಎಲ್ಲಕ್ಕೂ ಅವರು ನಾಗರಿಕ ವ್ಯವಸ್ಥೆಯನ್ನು ಎಷ್ಟೋ ಅಷ್ಟೇ ಅಣ್ಣಪ್ಪ, ತಿಮ್ಮಪ್ಪ, ಚೌಡಿ, ಜಟಗ, ಆರೋಗ್ಯಮಾತೆಯರಂತಹ ದೈವಗಳನ್ನೂ, ಮಾಟ-ನೋಟ-ಯಂತ್ರ-ತಾಯಿತಗಳನ್ನೂ ನಂಬಿದ್ದಾರೆ. ಇವರಲ್ಲಿ ಒಬ್ಬರಲ್ಲ ಒಬ್ಬರು ತಮ್ಮ ತಲೆ ಕಾಯ್ವರೆಂದು ನಿಶ್ಚಿಂತರಾಗಿದ್ದಾರೆ. ತಪಾಸಣೆ ಮಾಡಿಸಿದರೆ ಕೊರೋನಾ ಪತ್ತೆಯಾಗುವುದರಿಂದ ತಪಾಸಣೆಯನ್ನೇ ಮಾಡಿಸದೆ ಥಂಡಿಜ್ವರವೆಂದು ಗುಣ ಮಾಡಿಕೊಳ್ಳುವುದು ಜಾಣತನವೆಂದು ನಂಬಿದ್ದಾರೆ! 


ಗುಡ್ಡಗಾಡು ಪ್ರದೇಶವಾದ ನಮ್ಮೂರಿನಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಒಂದೂಕಾಲು ವರ್ಷದಿಂದ ಇಲ್ಲ. ಮೂಲೆಮೂಲೆಗಳಿಂದ ಆಸ್ಪತ್ರೆಗೆ ಬರಲು ಖಾಸಗಿ ವಾಹನಗಳನ್ನೇ ನೆಚ್ಚಬೇಕು. ನನ್ನ ಕ್ಲಿನಿಕ್ ತಲುಪಲು ಹೊಳೆ ದಾಟಿ, ಕಾಲ್ದಾರಿಯಲ್ಲಿ ನಡೆದು, ಮರಳಿನ ಗಾಡಿಯಲ್ಲೋ, ರಿಕ್ಷಾದಲ್ಲೋ ೩೦-೩೫ ಕಿ.ಮೀ. ಕ್ರಮಿಸಿ ಬರುವ ರೋಗಿಗಳಿದ್ದಾರೆ. ನೆರೆಹೊರೆಯವರ ನಿನ್ನೆ, ಇವತ್ತು, ನಾಳೆಗಳ ಜಡ್ಡಿಗೆ ಔಷಧಿ ಒಯ್ಯುವ ಹೊಣೆ ಬಂದವರಿಗೆ ಇರುತ್ತದೆ. ಒಬ್ಬರ ಮೇಲೊಬ್ಬರು ಒತ್ತೊತ್ತಿ ನಾಲ್ಕಾರು ಜನ ಒಂದೇ ರಿಕ್ಷಾದಲ್ಲಿ ಬರುತ್ತಾರೆ. ಮಾಸ್ಕ್ ಹಾಕಿದ್ದರೆ ಕೊರೊನಾ ವೈರಸ್ಸಿನ ಪುಣ್ಯ. 

ಬಂದವರೇ ನಂಬರ್ ತೆಗೆದು, ರಿಪೇರಿಗೆ ಕೊಟ್ಟ ಮಿಕ್ಸಿ, ತರಕಾರಿ, ಕಿರಾಣಿ ಸಾಮಾನು, ಕ್ಷೌರ, ಹೊಲೆಯಲು ಕೊಟ್ಟ ಬಟ್ಟೆ, ಗೋಡಾಕ್ಟ್ರ ಬಳಿ ಗಂಟಿಕಾಯಿಲೆಗೆ ಮದ್ದು, ಜಾತಕ ತೋರಿಸುವುದು, ಮಂತ್ರಿಸಿದ ದಾರ ಪಡೆಯುವುದು ಮೊದಲಾದ ಕೆಲಸಗಳನ್ನು ಪೂರೈಸಿಕೊಳ್ಳಲು ಹೊರಡುತ್ತಾರೆ. ಅದರ ನಡುವೆ ತಮ್ಮ, ಮನೆಯವರ ಜ್ವರಜಾಪತ್ತಿಗೆ ಇಂಜೆಕ್ಷನ್, ಮಾತ್ರೆ, ಗ್ಲುಕೋಸುಗಳ ಚಿಕಿತ್ಸೆ ಪಡೆಯುತ್ತಾರೆ. ಗಂಟಲು ದ್ರವ ಪರೀಕ್ಷೆಗೆ ಕೊಡಿರೆಂದು ಎಷ್ಟು ಹೇಳಿದರೂ ‘ಇವತ್ ಪುರ್ಸತ್ತಿಲ್ರಾ ಅಮಾ, ನಾಳಿಗ್ ಹೋಗುದೇ ಸೈ’ ಎಂದು ನಡೆದುಬಿಡುತ್ತಾರೆ. ‘ನೀವು ಮುಟ್ಟಿದ್ರೆ ಸಾಕು, ಗುಣ’ ಎಂದು ನನ್ನನ್ನೇ ಉಬ್ಬಿಸುತ್ತಾರೆ! 

ನೂರಾರು ರೋಗಿಗಳಲ್ಲಿ ಹತ್ತು ಜನರೂ ಕೋವಿಡ್ ಟೆಸ್ಟಿಗೆ ಹೋಗುವುದಿಲ್ಲ. ಹೋಗಿ ಪಾಸಿಟಿವ್ ಆದವರು ಯಾಕಾದರೂ ಟೆಸ್ಟ್ ಮಾಡಿಸಿಕೊಂಡೆವೋ? ತಮ್ಮಷ್ಟೇ/ತಮಗಿಂತ ಹೆಚ್ಚೇ ರೋಗಲಕ್ಷಣ ಇರುವವರು ಆರಾಮದಲ್ಲಿ ಅಡ್ಡಾಡಿಕೊಂಡಿರುವಾಗ ಮೇಡಂ ಹೇಳಿದರೆಂದು ಮಾಡಿಸಿ ಬಂಧಿಯಾದೆನಲ್ಲ ಎಂದು ಪಶ್ಚಾತ್ತಾಪ ವ್ಯಕ್ತಪಡಿಸಿದವರೇ ಹೆಚ್ಚು. ಕೆಲವರು ‘ಆಶಾ ಬಂದು ಪೋಟ ಹೊಡ್ದು ನಂ ಮನೆ ಮರ್ಯಾದೆ ಎಲ್ಲ ಹೋತು’ ಎಂದು ದೂರಿದ್ದೂ ಇದೆ. 


ಆ ಯುವತಿ ಗ್ರಾಮ ಚಾವಡಿಯ ಶ್ಯಾನುಭೋಗಳು. ಹತ್ತು ದಿನದಿಂದ ಜ್ವರ. ‘ಕೋವಿಡ್ ಟೆಸ್ಟ್ ಮಾಡ್ಸಿದಿರಾ?’ ಎಂಬ ಪ್ರಶ್ನೆ ಮುಗಿಯುವುದರಲ್ಲಿ, ‘ಅಯ್ಯೋ ಮೇಡಂ, ಕೋವಿಡ್ ಅಂಬೊ ಪದ ಕೇಳಿದ್ರೇ ಒಂತರ ವಾಂತಿ ಬರುವಂಗೆ, ಜ್ವರ ಬಂದಂಗೆ ಆಗ್ತದೆ ನಂಗೆ’ ಎಂದು ಕುಸಿದಳು. ‘ಈಗಂತೂ ಪಾಸಿಟಿವ್ ಇರೋರ ಮನೆಮನೆಗ್ ಹೋಗಿ ಅವ್ರ ಫೋಟೋ, ಕಾಂಟಾಕ್ಟ್ಸ್ ಫೋಟೋ ತರಬೇಕು. ಹೋದಹೋದಲ್ಲಿ ಬೈದು ಕಳಿಸ್ತಾರೆ. ಜಗಳ ಮಾಡ್ತಾರೆ. ಎಷ್ಟ್ ರಿಸ್ಕ್ ತಗಂಡು ಕೆಲ್ಸ ಮಾಡಿದ್ರೂ ಉಪಯೋಗಿಲ್ಲ. ಮನೇಲಿ ನೋಡಿದ್ರೆ ಊರೂರು ತಿರುಗಿ ನಾನೇ ಕೊರೊನ ತಗಂಡ್ ಬರ‍್ತಿನೆನೊ ಅನ್ನೋ ಹಂಗಾಡ್ತಾರೆ. ಈ ಪಗಾರೂ ಬೇಡ, ಕೆಲ್ಸನೂ ಬೇಡ, ರಿಸೈನ್ ಮಾಡುವ ಅನಿಸ್ತಿದೆ’ ಎನ್ನುತ್ತ ಗದ್ಗದಳಾದಳು. 

ಏಕತಾನತೆಯ ಕೆಲಸ, ಸಹಕಾರ-ಬೆನ್ನು ತಟ್ಟುವಿಕೆ ಇಲ್ಲದ ಒಂದೇಸಮ ದುಡಿತ - ಈ ದಣಿವು ಕೋವಿಡ್ ಸೋಂಕಿಗಿಂತ ಅಪಾಯಕಾರಿ. ಅವಳ ಟೆಸ್ಟ್‌ಗಳೇನೋ ನೆಗೆಟಿವ್ ಬಂದಿವೆ. ಆದರೆ ಮನದ ದಣಿವಿಗೆ ಮದ್ದು ಇದೆಯೆ?


ಈ ಮುಂಚೆ ಅನುಮತಿ ನೀಡಿದವೆಂದು ನೂರಾರು ಮದುವೆಗಳು ಈಗಲೂ ನಡೆಯುತ್ತಿವೆ. ‘ನಮಗಾದ್ದು ಬರಿ ತಂಡಿಕೆಮ್ಮ, ಬೇರೆಯೋರಿಗಾದ್ದು ಕೊರೊನಾ’ ಎಂದೇ ಜನ ಭಾವಿಸಿರುವುದರಿಂದ ದೇವಕಾರ್ಯ, ಬಯಕೆ ಶಾಸ್ತ್ರ, ನಾಮಕರಣ, ಗಡಿಪೂಜೆ, ಚೌಡಿಪೂಜೆ, ಹುಟ್ಟುಹಬ್ಬ, ನಿಶ್ಚಿತಾರ್ಥಗಳಂತಹ ಸಣ್ಣಪುಟ್ಟ ಸಮಾರಂಭಗಳು ಬೇಕಾದಷ್ಟು ನಡೆಯುತ್ತಿವೆ. ಬಳಿಕ ಸೋಂಕು ಬರುವುದೂ, ಮನೆಯವರೆಲ್ಲ ಮಲಗುವುದೂ ಇದೆ. ಆದರೆ ರೋಗಲಕ್ಷಣ ಮುಚ್ಚಿಡುವುದೇ ಹೆಚ್ಚು. ಜ್ವರ ಸುಟ್ಟು ಹೋಗುವಂತಿದ್ದರೂ, ‘ಮೈಕೈನೋವು, ತಲೆಸುತ್ತು, ಸುಸ್ತು, ಊಟಸೇರಲ್ಲ’ ಅಂದಾರೇ ಹೊರತು ಜ್ವರದ ಸುದ್ದಿ ಎತ್ತುವುದಿಲ್ಲ! ‘ಅಯ್ಯಯ್ಯಯ್ಯ, ತಂಡಿಜ್ವರ ಎಂಥದೂ ಇಲ್ಲ, ಗಂಟಲು ನೋವಂತೂ ಕೇಳಬಾರ‍್ದು, ನುಂಗದೇ ಬಗೇಲಿ ಕಸ್ಟ, ಬಗ್ಗೇಲಿ ಸುಸ್ತು, ರಾತ್ರಿ ಕೆಮ್ಮ ಅಷ್ಟೇ ಶಿವಾಯಿ ಬೇರೇನಿಲ್ಲ’ ಎನ್ನುತ್ತಾರೆ. ಕೆಲವರ ಸ್ಥಿತಿ ಗಂಭೀರಗೊಂಡರೂ, ‘ಕಡೆಗ್ ಹೆಣನೂ ಕೊಡುದಿಲ್ಲಂತೆ’, ‘ಹೆಣುದ್ ಕಣ್ಣು, ಹಾರ್ಟು, ಕಿಡ್ನಿ ತೆಗಿತಾರಂತೆ’, ‘ಕೊರೊನ ಪೇಶೆಂಟ್ ಅಡ್ಮಿಟ್ ಆದ್ರೆ ತಲೆಗಿಷ್ಟು ಅಂತ ಅವ್ರಿಗೆಲ್ಲ ದುಡ್ಡು ಬರ‍್ತದಂತೆ’ ಮುಂತಾದ ಅಂತೆಕಂತೆಗಳನ್ನು ನಂಬಿ ಮನೆಯಲ್ಲೇ ಇಟ್ಟುಕೊಳ್ಳುತ್ತಾರೆ. ಎಷ್ಟು ಬಸುರಿಯರಿಗೆ ಅವಧಿಪೂರ್ವ ಹೆರಿಗೆಗಳು, ಗರ್ಭಪಾತಗಳು ಸಂಭವಿಸಿವೆಯೋ? ವೃದ್ಧರ, ಬಡವರ, ಅಸಹಾಯಕರ ಎಷ್ಟು ಸಾವುಗಳು ಕೋವಿಡ್‌ನಿಂದ ಸಂಭವಿಸಿವೆಯೋ? ‘ಬಾರೀ ಟೆನ್ಶನ್ನಾಗಿದ್ದ, ಅದ್ಕೆ ಹಾರ್ಟ್ ಅಟ್ಯಾಕ್ ಆತು’; ‘ಮೃತ್ಯು ಹೊಡೀತು’; ‘ಗ್ರಾಚಾರ ತಿರುಗತು’; ‘ಅವಳ ಅವ್ವಿ, ಅಬ್ಬೆನು ಹೀಂಗೆ ಸತ್ತದ್ದು, ಇದ್ಕು ಹಂಗೇ ಆತು’ ಮುಂತಾಗಿ ನಾನಾ ಕಾರಣಗಳ ಬೆನ್ನೇರಿ ಸಾವುನೋವುಗಳು ಲೆಕ್ಕದಿಂದ ತಪ್ಪಿಸಿಕೊಂಡಿವೆ. 

ನೀವೆಷ್ಟು ವಿವರಿಸಿ ಹೇಳಿದರೂ ಗಾಳಿಸುದ್ದಿಗಳನ್ನು ನಂಬುವಷ್ಟು ಸತ್ಯವನ್ನು ನಂಬಲಾರರು. ಹೆಚ್ಚು ಹೇಳಿದರೆ ನಿಮ್ಮನ್ನು ಬಿಟ್ಟು ಯಂತ್ರಕ್ಕೋ, ತಾಯಿತಕ್ಕೋ ಮೊರೆ ಹೋದಾರೆಯೇ ಹೊರತು ನಿಜವನ್ನು ಎದುರಿಸಲಾರರು. ಕೋವಿಡ್ ಭೀತಿಗಿಂತ ಅದರ ನಿರಾಕರಣೆ, ನಿಷ್ಕಾಳಜಿ ದಿಗ್ಭ್ರಮೆ ಹುಟ್ಟಿಸುತ್ತದೆ. ಇದೇಕೆ ಹೀಗೆ? ತಮಗೆ ಬಂದ ಕಾಯಿಲೆ ಗುಟ್ಟಾಗಿಯೇ ಇರಲೆಂದು ಮನುಷ್ಯರು ಬಯಸುವುದಾದರೂ ಏಕೆ? ಕಲ್ಪಿತ ‘ನಾನು’ವಿಗೂ, ನಿಜವಾದ ‘ನಾನು’ವಿಗೂ ಇರುವ ವ್ಯತ್ಯಾಸ ಲೋಲುಪ ಜಗತ್ತಿನಲ್ಲಿ ಹಿಗ್ಗುತ್ತಲೇ ಇರುವುದು ಈ ಮನಃಸ್ಥಿತಿಗೆ ಕಾರಣವೇ? ಕಾಯಿಲೆಯ ಕಾರಣಕ್ಕೆ ಮನೆಮಂದಿ ಗುರುತಿಸಲ್ಪಡುವುದು ನಾನು ಎಂಬ ಅಹಮಿಗೆ ಪೆಟ್ಟು ಕೊಡುವುದೇ? 

ಉತ್ತರವಿಲ್ಲದ ಪ್ರಶ್ನೆಗಳು. ಪ್ರಶ್ನೆ ಕೇಳಿಕೊಳ್ಳುವುದು ಮೂರ್ಖತನವೋ? ದೇಶವನ್ನು ಕರಾಳ ಭವಿಷ್ಯಕ್ಕೆ ದೂಡಿದ ಹೊಣೆಗೇಡಿ ಆಳುವವರ್ಗ ಮೂರ್ಖವೋ? ರೋಗಿಗಳನ್ನು ದೂರದಿಂದಲೇ ನೋಡಿ ಹಣ ಗಳಿಸಿ ಸುಮ್ಮನಿರುವುದು ಬಿಟ್ಟು ಇಂಥ ಅಪಾಯಕಾರಿ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿರುವ ನಾನೇ ಮೂರ್ಖಳೋ?

ಎಲ್ಲ ಅಯೋಮಯ. ಇದು ನನ್ನಂತಹ ಸಾವಿರಾರು ವೃತ್ತಿ ಬಾಂಧವರ ಅನುಭವ. ಪಾಸಿಟೀವೋ, ನೆಗೆಟೀವೋ, ಸುರಕ್ಷತೆಯ ಕ್ರಮಗಳೊಂದಿಗೆ ಎಲ್ಲರನ್ನು ಮುಟ್ಟಿ ಪ್ರೀತಿ ಹಂಚುವುದೊಂದೇ ಮಾರ್ಗ.


 

Wednesday 28 April 2021

ಅಮ್ಮನೆಂಬ ಶಕ್ತಿ


ಅವಳು ಮುಟ್ಟಿದ್ದೇ 
ಎಲ್ಲ ಬದಲಾಗಿಬಿಡುತ್ತಿದ್ದವು!

ಬಿಡಿ ಮೊಗ್ಗು ಮಾಲೆಯಾಗುತ್ತಿತ್ತು!
ಇದ್ದಿಲು ಕೆಂಡವಾಗುತ್ತಿತ್ತು
ಅಕ್ಕಿ ಅನ್ನವಾಗುತ್ತಿತ್ತು
ನೀರು ಚಹವಾಗುತ್ತಿತ್ತು
ಹಿಟ್ಟು ಮುದ್ದೆಯಾಗುತ್ತಿತ್ತು

ಹಾಲು ಮೊಸರಾಗುತ್ತಿತ್ತು
ಬೆಣ್ಣೆ ತುಪ್ಪವಾಗುತ್ತಿತ್ತು
ಕೂದಲು ಹೆರಳಾಗುತ್ತಿತ್ತು
ತೆಳುನೂಲು ಪತ್ತಲದ ಹುವ್ವಾಗುತಿತ್ತು

ಅವಳು ಮುಟ್ಟಿದ್ದೇ 
ಲಿಂಬೆ ಉಪ್ಪಿನಕಾಯಾಗುತ್ತಿತ್ತು
ಸಿಪ್ಪೆ ಸಂಡಿಗೆಯಾಗುತಿತ್ತು
ಮೊಟ್ಟೆ ಮರಿಯಾಗುತ್ತಿತ್ತು
ಕರಿನೆಲ ಅಬ್ಬಲಿಗೆ ತೋಟವಾಗುತ್ತಿತ್ತು

ಮುಟ್ಟಿ ಬದಲಿಸುವವಳೇ ಅಮ್ಮ 
ಅರಿವಿನುಂಗುರದ ಬೆರಳಾಗಿರುವವಳು 
ಮುಟ್ಟಿಮುಟ್ಟಿ ಅದೆಷ್ಟು ಶಕ್ತಿ ಪಡೆದಿದ್ದಳೋ,
ಅವಳ ಮುಟ್ಟು ನಿಲಿಸಿದ್ದೇ ಆಗಿಬಿಟ್ಟೆ ನಾನು!
ಮುಟ್ಟಿ ಮುಟ್ಟಿ ಅದೆಂಥ ನೋವುಂಡಿದ್ದಳೋ,
‘ಹಿಜ್ಜಮಲ್ಲಿ, ನಗು ಸ್ವಲ್ಪ ಕಮ್ಮಿ ಮಾಡ್ಕಳೇ, 
ಯಾರ‍್ಗೂ ತಿಳಿಯಲ್ಲ ನಗೋರ ಒಳ ಬೇಗೆ’ 
ಎಂದು ಎಚ್ಚರಿಸಿದಳು!

ಮುಟ್ಟಿ ಹುಟ್ಟಿಸುವ ಮಾಯಕಾರ ಶಕ್ತಿಗಳೇ
ಲೋಕ ಪೊರೆವ ಜಗದ ಹೆಣ್ಣು, ಗಂಡು ಅಮ್ಮಗಳೇ
ನಿಮ್ಮ ಕರುಣದ ಅಮ್ಮತನಕೆ ಶರಣು,
ಬೆಚ್ಚನೆಯ ಮಡಿಲ ಬೆಳಕಿಗೆ ಶರಣು

 ರೇಖಾಚಿತ್ರ - ಕೃಷ್ಣ ಗಿಳಿಯಾರ್