Tuesday 12 July 2016

ಸಂತಾನೋತ್ಪತ್ತಿ: ಒಂದಷ್ಟು ವಿಜ್ಞಾನ, ಮತ್ತೊಂದಷ್ಟು..







(krishna giliyar chitra)

ಜೋರು ಮಳೆ ಶುರುವಾಗಿ ಒಂದು ತಿಂಗಳ ಮೇಲಾಯಿತು. ಅವರವರ ಅವಶ್ಯಕತೆಗೆ ತಕ್ಕ ತಯಾರಿಯಲ್ಲಿ ಅವರವರು ತೊಡಗಿದ್ದಾರೆ. ಮಳೆಗಾಲವೆಂದರೆ ಬೇಗ ಒಣಗುವ ಕಾಟನೇತರ ಬಟ್ಟೆ ಧರಿಸುವುದು; ಒಣಗದ ಬಟ್ಟೆಗಳ ಇಸ್ತ್ರಿ ಮಾಡಿ ಬಲವಂತವಾಗಿ ಒಣಗಿಸಿ ಹಾಕಿಕೊಳ್ಳುವುದು; ಹೊಟ್ಟೆ ಜಡವಾಗದ ಹಾಗೆ ಬಿಸಿ, ಲಘು ಆಹಾರ ತೆಗೆದುಕೊಳ್ಳುವುದು; ಒದ್ದೆ ಕೈಯಲ್ಲಿ ಏನನ್ನೂ ಮುಟ್ಟದಿರುವುದು; ಮಕ್ಕಳನ್ನು ಮಳೆಥಂಡಿಯಲ್ಲಿ ಎಬ್ಬಿಸಿ, ತಯಾರು ಮಾಡಿ ಶಾಲೆಗೆ ಕಳಿಸುವುದು ಇತ್ಯಾದಿ. ಮೀನುಪ್ರಿಯರ ಬವಣೆ ಬೇರೆ: ಸಂತಾನೋತ್ಪತ್ತಿ ಕಾಲವೆಂದು ಒಂದೂವರೆ ತಿಂಗಳ ಕಾಲ ಮಾನ್ಸೂನ್‌ಗಾಗಿ ಮೀನುಗಾರಿಕೆ ನಿಷೇಧ ಆಗುವುದರಿಂದ ಬೇರೆ ಆಹಾರಗಳಿಗೆ ಒಗ್ಗಿಕೊಳ್ಳುವ ಅನಿವಾರ್ಯ ಸಂಕಟ ಅವರದು. ಹೊರಗೆ ಕಚೇರಿ, ವ್ಯಾಪಾರವೆಂದು ತಿರುಗುವವರಿಗೆ ಕೊಡೆ ಹಿಡಿದೇ ತಿರುಗುವ, ಸೂಡಿಕೊಂಡು ಹೋದ ಕೊಡೆಯನ್ನು ನಂತರ ನೆನಪಿಟ್ಟು ಮರಳಿ ತರುವ ಜವಾಬ್ದಾರಿ. ಜಪ್ಪಿ ಹುಯ್ದು ಥಂಡಿ ಹುಟ್ಟಿಸುವ ಮೃಗಶಿರಾ-ಆರಿದ್ರೆಗಳೆಂಬ ಎರಡು ನಕ್ಷತ್ರಗಳ ಮಳೆ ಕಳೆದರೆ ಇನ್ನೊಂದು ವರ್ಷ ಬದುಕಿಯೇನು ಎಂಬ ಚಿಂತೆ ಪ್ರಾಯ ಹೋದವರದು.

ಹೀಗೆ ಜನವರ್ಗ ತನ್ನ ಸ್ಥಳ, ಉದ್ಯೋಗ, ಅವಶ್ಯಕತೆಗೆ ಅನುಗುಣವಾಗಿ ತೊಡಗಿರುವ ಬದಲಾವಣೆಗಳದು ಒಂದು ತೂಕವಾದರೆ ಮನುಷ್ಯೇತರ ಜೀವಸಾಮ್ರಾಜ್ಯದ ಅಸಂಖ್ಯಾತ ಜೈವಿಕ ಕ್ರಿಯೆಗಳದು ಸಾವಿರ ಪಟ್ಟು ತೂಕ. ಮನುಷ್ಯನಿಗೆ ಆಹಾರೋತ್ಪಾದನೆ ಹಾಗೂ ದೈನಂದಿನ ಚಟುವಟಿಕೆಗಳ ನಡೆಸಿಕೊಂಡು ಹೋಗಲು ಒಂದು ತೆರನ ಚಟುವಟಿಕೆ ಅವಶ್ಯವಾದರೆ; ನಮ್ಮ ಎದುರು, ಅಕ್ಕಪಕ್ಕ, ಸಂದಿಗೊಂದಿ ಸುಳಿವ ಪಶುಪಕ್ಷಿ ಕ್ರಿಮಿಕೀಟಗಳಲ್ಲಿ ಅತ್ಯಂತ ವೇಗದ, ವಿಶಿಷ್ಟ ಚಟುವಟಿಕೆಗಳು ನಮ್ಮ ಗಮನಕ್ಕೇ ಬರದೆ ನಡೆದುಹೋಗುತ್ತಿರುತ್ತವೆ. ಕೇವಲ ಒಂದು ಮಳೆ, ಒಂದೇ ಒಂದು ಮಳೆ ಸೃಷ್ಟಿಸಿಬಿಡುವ ಅದ್ಭುತಗಳನ್ನು ಗಮನಿಸಿದರೆ ಪ್ರಕೃತಿ ಎಂಥ ವಿಸ್ಮಯವೆಂಬ ಅರಿವಾಗುತ್ತದೆ.

ಪ್ರಾಣಿಲೋಕಕ್ಕೆ ಮಳೆಗಾಲವೆಂದರೆ ಕನ್ಯಾಮಾಸ, ಕನ್ನಿ ತಿಂಗ್ಳ್. ಮಕ್ಕಳುಮರಿ ಮಾಡಿಕೊಳ್ಳುವ ತುರ್ತುಪರಿಸ್ಥಿತಿಯ ಕಾಲವೂ ಹೌದು. ಭವಿಷ್ಯದಲ್ಲಿ ೨-೩ ವರ್ಷ ಸೂಕ್ತ ಪರಿಸ್ಥಿತಿ ಪೂರಕವಾಗಿ ಒದಗದಿರಬಹುದು ಎಂದು ಆದಷ್ಟು ತುರ್ತಾಗಿ ಸಂತಾನೋತ್ಪತ್ತಿ ನಡೆಸುತ್ತವೆ. ಇದರಲ್ಲಿ ವಿಸ್ಮಯವೇನಿಲ್ಲ, ಮನರಂಜನೆ-ಬೇಸರ-ಯುದ್ಧ ಗೊತ್ತಿರದ ಜೀವಿಗಳು ನಡೆಸುವ ಎಲ್ಲ ಅಂದರೆ ಎಲ್ಲ ಕ್ರಿಯೆಗಳು ಕೇವಲ ಸಂತಾನೋತ್ಪತ್ತಿಗಾಗಿ, ತಮ್ಮ ಉಳಿವಿಗಾಗಿಯೇ ಇವೆ. ಮನುಷ್ಯ ತಾನೂ ಉಳಿದ ಜೀವಿಗಳಂತೆ ಕೇವಲ ಒಬ್ಬ ಜೀವಿ ಎಂದುಕೊಳ್ಳುವ  ಮನಸ್ಥಿತಿ ದಕ್ಕಬೇಕಾದರೆ ಮತ್ತೆಮತ್ತೆ ಪ್ರಾಣಿ ಲೋಕದತ್ತ ಕಣ್ಣುಹಾಯಿಸುತ್ತಿರಬೇಕಾಗುತ್ತದೆ. ಅಂಥ ಕೆಲ ನೋಟಗಳು, ಅದರಲ್ಲು ಸಂತಾನೋತ್ಪತ್ತಿ ಚಟುವಟಿಕೆ ಕುರಿತ ಅವಲೋಕನಗಳು ಇಲ್ಲಿವೆ:

ಕಪ್ಪೆ-ಜೀರುಂಡೆ ನ್ಯಾಯ: ಗೆದ್ದರೆ ಸದ್ದು, ಸೋತರೆ ಸುಮ್ಮನಿರು!

ಬೇಸಿಗೆಯ ಸದ್ದುಗಳೇ ಬೇರೆ. ಅಲ್ಲಿ ಬಲು ಸದ್ದು ಮಾಡುವುದು ಬಿಸಿಲು. ಮನುಷ್ಯನ ಸುಳಿವಿರದ ಪ್ರಕೃತಿಯೆದುರು ನಿಂತರೆ ಬೇಸಿಗೆಯಲ್ಲಿ ಮೌನದ ಸದ್ದೇ ಹೆಚ್ಚು. ಆದರೆ ಮಳೆಗಾಲದ ಖದರೇ ಬೇರೆ. ಎಲ್ಲ ಜೀವರಾಶಿಗಳ ಸರ್ವಾಂಗಗಳೂ ಬಾಯಿಗಳೇನೋ ಎನ್ನುವಷ್ಟು ಸದ್ದು ಕೇಳಿಸುತ್ತದೆ. ಅದರಲ್ಲು ನೀವು ಮಲೆನಾಡಿನ ಮಳೆಕಾಡಿನ ಸನಿಹದಲ್ಲಿದ್ದರೆ ಈ ಮಾತು ಹೆಚ್ಚು ಅರ್ಥವಾಗುತ್ತದೆ.

ಸದ್ದುಗದ್ದಲ ಎಬ್ಬಿಸುವುದರಲ್ಲಿ ಮೊದಲ ಸ್ಥಾನಕ್ಕೆ ಪೈಪೋಟಿ ನಡೆಸುವವರು ಕಪ್ಪೆ ಹಾಗೂ ಜೀರುಂಡೆ. ಮಳೆಬಂದ ನಂತರ ನಿಂತ ನೀರಿನ ಬಳಿ ನಾನಾ ಲಯ, ಶೃತಿಯಲ್ಲಿ ಅವು ವರಲುವುದು ಕೇಳಿದರೆ ಮಳೆಯೊಡನೆ ಭೂಮಿಗೆ ಎಷ್ಟು ಬಾಯಿ, ಗಂಟಲು ಮೂಡಿದೆಯೊ ಅನಿಸದೆ ಇರದು. ಇಲ್ಲೊಂದು ವಿಶೇಷವಿದೆ: ಇವೆರೆಡೂ ಸದ್ದು ‘ಹಾಡು' ಅಲ್ಲ, ಸಂಗಾತಿಯನ್ನು ಕರೆವ ‘ಕರೆ'ಗಳು. ಯಾಕೆಂದರೆ ಸದ್ದು ಬಾಯಿಂದ ಬಂದಿದ್ದಲ್ಲ, ಬದಲಾಗಿ ಬೇರೆ ಅಂಗಾಂಗಗಳಿಂದ ಹೊರಡಿಸಿದ್ದು. ಅಷ್ಟೇ ಅಲ್ಲ, ಆ ಸದ್ದನ್ನು ಮಾಡುವವರು ಕೇವಲ ಗಂಡುಗಳು!

ಸದ್ದು ಶುರು ಮಾಡುವವರಲ್ಲಿ ಕಪ್ಪೆಯೆ ಮೊದಲು. ಅದರದು ಮಳೆ ಸುರಿವ ಮುನ್ನ ಮೋಡದ ಊಹೆಗೇ ಶುರುವಾಗುವ ಸದ್ದು. ಕಪ್ಪೆ ಶೀತರಕ್ತ ಪ್ರಾಣಿ. ಗಾಳಿಯಲ್ಲಿರುವ ನೀರು, ಆಮ್ಲಜನಕ ಹೀರಿಕೊಂಡು ಬದುಕಬಲ್ಲ, ನೀರು-ನೆಲ ಎರಡು ಕಡೆಯಲ್ಲು ಬದುಕುವ ಉಭಯಜೀವಿ. ಎಲ್ಲೊ ಹುದುಗಿಕೊಂಡಿರುವ ಕಪ್ಪೆಗೆ ಆಗಸದ ಮೋಡ ಕಾಣಲು ಬೆನ್ನಿನಲ್ಲಿ ಕಣ್ಣಿಲ್ಲ, ಆದರೆ ಅದರ ಚರ್ಮವೆಲ್ಲ ಕಣ್ಣೇ. ಒಂದು ಮಳೆ ಬಿದ್ದರೆ ಸಾಕು, ಚಿತ್ರ ವಿಚಿತ್ರ ಸದ್ದುಗಳಲ್ಲಿ ವಟರಗುಟ್ಟಲು ಶುರು ಮಾಡುತ್ತದೆ. ಗಂಡುಗಳು ಸಂತಾನೋತ್ಪತ್ತಿಗೆ ಪ್ರಶಸ್ತವಾದ ತೇವವಿರುವ ಸ್ಥಳವನ್ನು ಹುಡುಕಿಕೊಂಡು ಬರುತ್ತವೆ. ಹಲವು ಗಂಡುಗಳು ಅಂಥ ಜಾಗಗಳಲ್ಲಿ ನೆಲೆಯಾಗಿ ತಮ್ಮ ಭೌಗೋಳಿಕ ಪ್ರದೇಶದ ವ್ಯಾಪ್ತಿಯನ್ನು ತಿಳಿಸಲು; ಹೆಣ್ಣನ್ನು ಶೃತಿ-ಲಯಗಳೊಂದಿಗೆ ಆಕರ್ಷಿಸಲು ಬಾಯಿ ತೆಗೆಯದೆ ಸದ್ದು ಹೊರಡಿಸಿ ಹೆಣ್ಣುಗಳ ಕರೆಯತೊಡಗುತ್ತವೆ. ಸದ್ದು ಹೊರಡಿಸಲಾರದಂಥವು ಈಗಾಗಲೇ ಗದ್ದಲ ಇರುವ ಜಾಗಗಳಲ್ಲಿ, ಎಂದರೆ ಹರಿವ ನೀರಿನ ಪಕ್ಕ ನೆಲೆಯಾಗಿ ಬಣ್ಣ, ಆಕಾರ, ಜಿಗಿತ ಮೊದಲಾದ ಬೇರೆ ವಿಧಾನಗಳಲ್ಲಿ ಹೆಣ್ಣನ್ನು ಆಕರ್ಷಿಸುತ್ತವೆ.



ಚ್ಯೂಯಿಂಗ್ ಗಂ ಜಗಿದ ಮಕ್ಕಳು ಬಾಯೆದುರು ಮಾಡುವ ಗುಳ್ಳೆಯಂತಹ ಚೀಲ ಕಪ್ಪೆಯ ಗಂಟಲ ಕೆಳಗಿರುವುದನ್ನು ಬಹಳಷ್ಟು ಜನ ನೋಡಿರಬಹುದು. ಅದು ಗಂಟಲ ಕೆಳಗಿನ ಗಾಳಿ ಚೀಲ. ಗಾಳಿಚೀಲದ ಜೊತೆ ಗಂಟಲೂ ಜೊತೆಗೂಡಿ ಎಷ್ಟು ಜೋರು ಸದ್ದು ಹೊರಡಿಸುತ್ತವೆಂದರೆ ಒಂದು ಮೈಲು ದೂರದವರೆಗೆ ಕೇಳುತ್ತದೆ. ಅದರಲ್ಲಿ ಗಾಳಿಯನ್ನು ಇಷ್ಟಿಷ್ಟೆ ತುಂಬಿಕೊಂಡು ಕಂಪಿಸಲು ಶುರು ಮಾಡುವ ಮೂಲಕ ಗಂಡು ತನ್ನ ಶಕ್ತಿ, ಸಾಮರ್ಥ್ಯ, ಪ್ರೀತಿ, ತಾನಿರುವ ಸ್ಥಳ ಎಲ್ಲವನ್ನು ಹೆಣ್ಣಿಗೆ ತಿಳಿಸುತ್ತದೆ. ಈ ಸದ್ದಿಗೆ ಹೆಣ್ಣು ಪ್ರತಿಕ್ರಿಯೆಯ ಉತ್ತರ ನೀಡುತ್ತದೆ. ಉತ್ತರವು ಗಂಡನ್ನು ಸಂತಾನೋತ್ಪತ್ತಿ ಪ್ರಕ್ರಿಯೆಗೆ ಇನ್ನಷ್ಟು ಪ್ರಚೋದಿಸುತ್ತದೆ. ಹೆಣ್ಣುಗಳು ಗಟ್ಟಿಯಾಗಿ ಆದರೆ ಕಡಿಮೆ ವೇಗದಲ್ಲಿ ಹಾಡುವ ಗಂಡುಗಳನ್ನು ಹೆಚ್ಚು ಸಮರ್ಥ ಎಂದು ಭಾವಿಸುತ್ತವೆ. ಗಂಡುಗಳ ಸಂಖ್ಯೆ ಹೆಣ್ಣಿಗಿಂತ ಜಾಸ್ತಿ. ನೂರಾರು ಗಂಡಿದ್ದರೇನು, ಯಾರದು ಗಟ್ಟಿಧ್ವನಿ ಎಂದು ತನಗನಿಸುವುದೊ ಅದನ್ನೆ ಹೆಣ್ಣು ಆಯ್ದುಕೊಳ್ಳುತ್ತದೆ.

ಕಪ್ಪೆಗಳಲ್ಲಿ ಹೆಣ್ಣುಗಂಡಿನ ನಡುವೆ ಸ್ಪರ್ಶ ಸಂಪರ್ಕವಿದೆ, ಆದರೆ ಲೈಂಗಿಕ ಸಂಪರ್ಕವಿಲ್ಲ. ಅಲ್ಲಿ ಸಂತಾನೋತ್ಪತ್ತಿ ಬಾಹ್ಯ. ಎಂದರೆ ಹೆಣ್ಣು ಮೊಟ್ಟೆಗಳನ್ನು ಹೊರಗೆ ಬಿಡುಗಡೆ ಮಾಡುತ್ತದೆ, ಗಂಡು ವೀರ್ಯವನ್ನು ಬಿಡುಗಡೆಯಾದ ಮೊಟ್ಟೆಗಳ ಮೇಲೆ ಸ್ರವಿಸಿ ಫಲಿತಗೊಳಿಸುತ್ತದೆ. ಮೊಟ್ಟೆಗಳ ಹೊರಸುರಿಸುವಂತೆ ಹೆಣ್ಣನ್ನು ಒಪ್ಪಿಸಲು ಗಂಡು ಹೆಣ್ಣಿನ ಬೆನ್ನುಸವಾರಿ ಮಾಡುತ್ತದೆ. ಅದನ್ನು ‘ಆಂಪ್ಲೆಕ್ಸಸ್' ಎಂದು ವಿಜ್ಞಾನ ಭಾಷೆಯಲ್ಲಿ, ಅಪ್ಪುಗೆ ಎಂದು ಕನ್ನಡದಲ್ಲಿ ಹೇಳಬಹುದು. ಸಾಧಾರಣವಾಗಿ ಗಂಡುಗಳು ಹೆಣ್ಣಿನ ಗಾತ್ರದ ಅರ್ಧದಷ್ಟಿರುತ್ತವೆ. ಹೆಣ್ಣಿನ ಬೆನ್ನ ಮೇಲೆ ಕುಳಿತು ತನ್ನ ಮುಂಗಾಲುಗಳಿಂದ ಹೆಣ್ಣಿನ ಕುತ್ತಿಗೆ ಕೆಳಭಾಗ ಒತ್ತಿಹಿಡಿಯುತ್ತದೆ. ಭದ್ರವಾದ ಹಿಡಿತಕ್ಕೆಂದೇ ಗಂಡಿನ ಮುಂಗಾಲ ಒಳಭಾಗದಲ್ಲಿ ವಿಶಿಷ್ಟ ಪ್ಯಾಡುಗಳಿರುತ್ತವೆ. ಈ ಹಿಡಿತ ಹೆಣ್ಣಿಗೆ ಅಂಡವನ್ನು ಸ್ರವಿಸಲು ಪ್ರಚೋದಿಸುತ್ತದೆ. ಇದು ಕೆಲವೊಮ್ಮೆ ದಿನಗಟ್ಟಲೆ ತೆಗೆದುಕೊಳ್ಳಬಹುದು. ಹೆಣ್ಣು ಲೋಳೆಯಿಂದಾವೃತವಾದ ಅಂಡಗಳನ್ನು ನೀರಿನಲ್ಲಿ ಅಥವಾ ಒದ್ದೆ ಜಾಗದಲ್ಲಿ ಬಿಡುಗಡೆ ಮಾಡಿದ್ದೇ ಗಂಡು ಮೂತ್ರನಾಳದ ಮೂಲಕ ಮೊಟ್ಟೆಗಳ ಮೇಲೆ ವೀರ್ಯ ಸುರಿಸುತ್ತದೆ.



ಹೆಣ್ಣುಗಳು ಇನ್ನೂ ಹೆಚ್ಚು ‘ಸಮರ್ಥ' ಗಂಡು ಸಿಕ್ಕರೆ ಇರಲಿ ಎಂದು ಅರ್ಧದಷ್ಟು ಅಂಡಗಳನ್ನು ಮಾತ್ರ ಹೊರಸುರಿಸಿ ಉಳಿದವನ್ನು ಹಾಗೇ ಇಟ್ಟುಕೊಂಡಿರುತ್ತವೆ. ಇದಕ್ಕೆ ವ್ಯಭಿಚಾರ ಎಂದು ಹೆಸರಿಟ್ಟುಬಿಡಬೇಡಿ; ತಳಿ ರಕ್ಷಣೆಗಾಗಿ, ಉತ್ತಮ ತಳಿ ಸೃಷ್ಟಿಗಾಗಿ ಈ ಕಾಯ್ದಿರಿಸುವಿಕೆ. ಹೆಣ್ಣು ತನ್ನ ಕೆಲಸ ಮುಗಿದದ್ದೇ ಜಾಗ ಖಾಲಿ ಮಾಡಿದರೆ ಗಂಡು ಸುರಿದ ವೀರ್ಯವನ್ನು, ಫಲಿತಗೊಂಡ ಅಂಡಗಳನ್ನು ಕೆಲಕಾಲ ತನ್ನ ಭೌಗೋಳಿಕ ಪ್ರದೇಶ ರಕ್ಷಿಸಿಕೊಳ್ಳುತ್ತ ಕಾಯುತ್ತದೆ. ಕೆಲಗಂಡುಗಳಂತೂ ತಮ್ಮ ಹಿಂಗಾಲ ನಡುವೆ ಫಲಿತ ಮೊಟ್ಟೆಗಳನಿಟ್ಟುಕೊಂಡು ಕಾಯುತ್ತವೆ. ಇನ್ನು ಕೆಲ ಗಂಡುಗಳು ಫಲಿತ ಮೊಟ್ಟೆಗಳ ಮೇಲೆ ಜೆಲ್ಲಿ ಸ್ರವಿಸಿ ತಮ್ಮನ್ನು ತಾವು ಅದರ ನಡುವೆ ಮುಳುಗಿಸಿಕೊಂಡುಬಿಡುತ್ತವೆ!

ಇಂತಿಪ್ಪ ಮಂಡೂಕ ಸಂತಾನೋತ್ಪತ್ತಿ ಪುರಾಣಂ ಸಂಪೂರ್ಣಂ!!

ಮಳೆಗಾಲದ ಮತ್ತೊಬ್ಬ ಗಲಾಟೆಕೋರ ಜೀರುಂಡೆಗಳ ಕತೆಯೇನು? ಮಲೆನಾಡಿನ ಇರುಳುಗಳಲ್ಲಿ ಜೀರುಂಡೆ ಸದ್ದಿದ್ದರೆ ಮಾತ್ರ ಮರುಬೆಳಗು ಸೂರ್ಯ ಹುಟ್ಟುವುದು. ಕಿವಿಯೊಳಗೆ ಭೈರಿಗೆ ಹಾಕಿ ಕೊರೆದಂಥ ಸದ್ದು ಅವುಗಳದ್ದು. ಎಲ್ಲಿದ್ದಾವೆಂದು ಕಣ್ಣಿಗೇ ಕಾಣಿಸದ ಕೀಟವನ್ನು ನೋಡಿದವರು ಕಮ್ಮಿ, ‘ಕೇಳಿದವರು' ಬಹಳ. ಜೀರುಂಡೆ ಕೂಡ ಗಂಟಲಿನಿಂದ ಕೂಗುವುದಿಲ್ಲ. ತನ್ನ ದೇಹಕ್ಕಿಂತ ಗಿಡ್ಡದಾಗಿರುವ ರೆಕ್ಕೆಯನ್ನು ಅದುರಿಸಿ ಸದ್ದು ಹೊರಡಿಸುತ್ತದೆ. ಆ ರೆಕ್ಕೆಗಳು ತಂತಿಕಡ್ಡಿಗಳ ಜಾಲರಕಂಟಿಸಿದ ಚರ್ಮದ ಹಾಳೆಗಳು. ರೆಕ್ಕೆಗಳನ್ನು ಒಂದು ಕೋನದಲ್ಲಿ ಮೇಲೆತ್ತಿ ಎರಡೂ ರೆಕ್ಕೆ ಕಂಪಿಸುವಂತೆ ಮಾಡಿದಾಗ ರೆಕ್ಕೆ ನಡುವಿನ ಘರ್ಷಣೆ, ಗಾಳಿ, ಕಂಪನ ಎಲ್ಲ ಸೇರಿ ಒಂದು ಕರ್ಣಕಠೋರ ಶಬ್ದ ಉತ್ಪತ್ತಿಯಾಗುತ್ತದೆ.

ಈ ಸದ್ದು ಸೃಷ್ಟಿಸುವವರು ಗಂಡುಗಳು. ಅದು ಕರೆಯುವ, ಮನವೊಲಿಸುವ, ವಿಜಯೋತ್ಸವ ಆಚರಿಸುವ, ಒಂದು ಮಿಲನದ ಬಳಿಕ ಮತ್ತುಳಿದ ಮೊಟ್ಟೆಗಳನ್ನೂ ಇಲ್ಲೆ ಫಲಿತಗೊಳಿಸು ಎಂದು ಹೆಣ್ಣಿನ ಮನವೊಲಿಸುವ ಸದ್ದು.


ಮಳೆಗಾಲ, ತಂಪು ಕಾಲ ಬಂದದ್ದೆ ಮೀಸೆಯಿಂದ ಉಳಿದವರೊಡನೆ ಗುದ್ದಾಡಿ ಗಂಡು ಜೀರುಂಡೆ ತನ್ನ ಪ್ರದೇಶ ಗುರುತಿಸಿಕೊಳ್ಳುತ್ತದೆ. ಗೆದ್ದವ ಸದ್ದು ಮಾಡುತ್ತಾನೆ. ಸೋತವ ಸುಮ್ಮನಾಗುತ್ತಾನೆ. ಮೀಸೆಯಿಂದಲೆ ಬಳಿಬಂದ ಹೆಣ್ಣಿನ ಓಲೈಕೆ ಶುರುವಾಗುತ್ತದೆ. ಗಂಡು ವೀರ್ಯ ರಸವನ್ನು ಒಂದು ಪುಟ್ಟಚೀಲದಲ್ಲಿ ತುಂಬಿಸಿ ಅದನ್ನು ಬೆನ್ನ ಮೇಲೆ ಇಟ್ಟುಕೊಂಡಿರುತ್ತದೆ. ಅದರ ಮೇಲೆ ಒಲಿದ ಹೆಣ್ಣು ಕೂರುತ್ತದೆ. ತನ್ನ ಅಂಡಕೋಶದಲ್ಲಿ ವೀರ್ಯಚೀಲ ಹೊಕ್ಕು, ಸುರಿದು ಖಾಲಿಯಾಗತೊಡಗಿದ ಮೇಲೆ, ಚೀಲ ಹೆಣ್ಣಿನ ದೇಹದೊಳಗಿರುವಂತೆಯೇ ಬೇರೆಬೇರೆಯಾಗುತ್ತವೆ. ಕೆಲವು ಅಂಡಗಳು ಫಲಿತಗೊಳ್ಳುತ್ತವೆ. ಗಂಡು ಮನವೊಲಿಸುತ್ತಿದ್ದರೂ ತನ್ನ ಒಳಾಂಗದಲ್ಲಿ ಸೇರಿಹೋಗಿರುವ ವೀರ್ಯಚೀಲವನ್ನು ಹೆಣ್ಣು ತಿಂದು ಹಾಕುತ್ತದೆ! ಆ ಅರ್ಧಖಾಲಿಯಾದ ವೀರ್ಯಚೀಲ ಹೆಣ್ಣಿಗೆ ಆಹಾರವೂ ಹೌದು. ನಂತರ ಹೆಣ್ಣು ಹೊಸಹೊಸ ಗಂಡುಗಳ ಕರೆ ಹುಡುಕಿಕೊಂಡು ಹೋಗುತ್ತದೆ. ಕೊನೆಗೆ ಫಲಿತಗೊಂಡ ಮೊಟ್ಟೆಗಳ ಒದ್ದೆಜಾಗದ ಸಂದುಗೊಂದು, ತೋಡುಗಳಲ್ಲಿಟ್ಟು ಬರುತ್ತದೆ.

ಹೆಣ್ಣುಗಳು ‘ಚಂಚಲೆ'ಯರೆನಿಸುವುದೆ? ಜೆನೆಟಿಕ್ ಹೊಸತನಕ್ಕಾಗಿ, ತಳಿನಾಶ ತಪ್ಪಿಸುವ ಸಲುವಾಗಿ ಅನಿವಾರ್ಯವಾಗಿ ಪಾಲಿಸಲೇಬೇಕಾದ ಪ್ರಕೃತಿ ನಿಯಮ ಅದು! 

ಏನೇ ಇರಲಿ, ನಿಜವೆಂದರೆ ಹೆಣ್ಣಿಗೆ ಗಂಡು ಮಾಯೆ, ಗಂಡಿಗೆ ಹೆಣ್ಣು ಮಾಯೆ. ತಳಿ-ಸಂತಾನೋತ್ಪತ್ತಿ-ಪ್ರೇಮ ಎಲ್ಲ ನಂತರದ ಹಳಹಳಿಕೆಗಳು..

ಬೆಕ್ಕಿನ ಫ್ಯಾಮಿಲಿ ಪ್ಲಾನಿಂಗ್!

ಬೆಕ್ಕಿನ ಪ್ರೇಮಿ ಮಗಳು ಗಟಾರದಲ್ಲಿತ್ತೆಂದು ರೆಸ್ಕ್ಯೂ ಮಾಡಿ ತಂದ ಮರಿಬೆಕ್ಕು ಒಂದು ವರ್ಷ ಪ್ರಾಯವಾದ ಕೂಡಲೇ ಮರಿ ಹಾಕಲು ಶುರುಮಾಡಿತು. ಎರಡು ವರ್ಷಗಳಲ್ಲಿ ಪ್ರತಿ ಸಲ ೩-೪ ಮರಿಯಂತೆ ಐದು ಬಾರಿ ಮರಿ ಹಾಕಿತು. ಅವನ್ನು ಮೋಳ(=ಬಾವುಗ=ಗಂಡುಬೆಕ್ಕು) ಕೊಲ್ಲದಂತೆ ಕಾದು, ಸ್ವಲ್ಪ ದೊಡ್ಡವಾದ ಮೇಲೆ ಯಾರಿಗೆ ಬೇಕೋ ಅವರಿಗೆ ವಿಲೇವಾರಿ ಮಾಡಿ ನಾವು ಉಸಿರು ಬಿಡುವುದರಲ್ಲಿ ನಮ್ಮ ಅಮ್ಮನವರು ಮತ್ತೊಮ್ಮೆ ಮರಿ ಹಾಕಲು ಸಿದ್ಧವಾಗುತ್ತಿದ್ದರು! ಮರಿಗಳನ್ನು ಈದು ಈದು ಬೆಕ್ಕು ಸವೆದು ಸತ್ತು ಹೋಗುವುದೆನಿಸಿತು. ಕೊನೆಯ ಸಲದ ಎಳೆಮರಿಗಳನ್ನಂತೂ ಮೋಳ ಕೊಂದುಹಾಕಿದ್ದೇ ಅಲ್ಲದೆ ಗಂಡಿನೊಡನೆ ಗುದ್ದಾಡಿ ನಮ್ಮ ಬೆಕ್ಕಿನ ಮೈತುಂಬ ಗಾಯಗಳಾದವು. ಬೆಕ್ಕು ಬಾವುಗರ ತಾರಾಮಾರಿ ಮರಿಗಳ ರಕ್ಷಣೆಗಾಗಷ್ಟೇ ಅಲ್ಲ; ಬೆಕ್ಕು ಬೆದೆಗೆ ಬಂದಾಗ ಹೆಣ್ಣು ತೋರಿಸುವ ಪ್ರತಿರೋಧದಿಂದಲೂ ಆಗುತ್ತಿತ್ತು.

ಹೆಣ್ಣು ಬೆಕ್ಕಿಗೆ ಮೋಳಗಳಿಂದ ಮೋಕ್ಷ ಸಿಗುವಂತೆ ಏನು ಮಾಡುವುದು? ಬೆಕ್ಕಿಗೆ ಕುಟುಂಬ ಯೋಜನೆ ಆಪರೇಷನ್ ಮಾಡಿಸುವುದು. ಮಾಡಿಸಿಬಿಟ್ಟೆವು. ಇನ್ನಾದರೂ ಮೋಳಗಳ ಕಾಟವಿಲ್ಲದೆ ಇದು ಆರಾಮ ಇರಲಿ ಎಂದುಕೊಂಡು ನಾವು ನೆಮ್ಮದಿಯಾದೆವು. ಎಷ್ಟು ಮೂರ್ಖರೋ ನಾವು! ಆಪರೇಷನ್ ಆಗಿ ಗರ್ಭಕೋಶ ತೆಗೆದಿದ್ದರು. ಆದರೆ ಅಂಡಕೋಶ ಇತ್ತು. ಹೆಣ್ಣುಬೆಕ್ಕಿಗೆ ಬೆದೆ ಬರುವುದು ನಿಲ್ಲಲಿಲ್ಲ. ಮೋಳಗಳ ಕಾಟವೂ ನಿಲ್ಲಲಿಲ್ಲ..

ತೋಬಾ, ತೋಬಾ. ಕಾಟ ಎಂಬ ಪದ ಉಪಯೋಗಿಸುವುದು ತಪ್ಪು. ಯಾಕೆಂದರೆ ನಮ್ಮ ಬೆಕ್ಕಿಗೂ ಅದೇ ಬೇಕಿತ್ತು!

ಗಡವನಂತೆ ಕೆನ್ನೆಯುಬ್ಬಿರುವ, ಗಂಟಲುಬ್ಬಿಸಿ ಗದ್ಗದ ದನಿಯಲ್ಲಿ ಕರೆಯುವ ಮೋಳ (ಬಾವುಗ) ಬೆಕ್ಕುಗಳು ಒಂದೊಂದೇ ಠಳಾಯಿಸತೊಡಗಿದವು. ಗಂಡಿನಿಂದ ನಮ್ಮ ಮುದ್ದು ಬೆಕ್ಕನ್ನು ಕಾಪಾಡಬೇಕೆಂಬ ಇನ್‌ಸ್ಟಿಂಕ್ಟ್ ನಮದಾದರೆ, ಮೋಳನ ಕರೆ ಕೇಳಿದ್ದೇ ನಮ್ಮ ಬೆಕ್ಕು ವಯ್ಯಾರದಿಂದ ಎದ್ದು ಮೈ ನೆಕ್ಕಿಕೊಂಡು ಹೊರಟುಬಿಟ್ಟಿತು. ಅದು ಇದರ ಹಿಂದೆ ಸುತ್ತುವುದು, ಇದು ಅದರ ಹಿಂದೆಮುಂದೆ ಸುಳಿಯುವುದು. ಕೊನೆಗೊಬ್ಬ ಅಳಿಯ ಬಾವುಗರು ಎರಡು ದಿನ ಹಿಂದೆ ಮುಂದೆ ತಿರುಗಿ ಸಾಧನೆ ಮಾಡಿಯೇಬಿಟ್ಟರು. ಹಾಗೆಂದು ಬೆಕ್ಕು ವಂಯ್ಞ ವಂಯ್ಞ ಎಂದು ಕೂಗಿದಾಗಲೇ ಗೊತ್ತಾದದ್ದು. ಬೆಕ್ಕಿನ ಕಾಲು, ಕಿವಿ, ಬೆನ್ನಿನ ಮೇಲೆಲ್ಲ ಗೀರು ಗಾಯ. ಅವತ್ತಿಡೀ ದೇಹದ ಮೂಲೆಮೂಲೆಗಳನ್ನೂ ನೆಕ್ಕಿಕೊಂಡದ್ದೇ ಕೆಲಸ ಬೆಕ್ಕಿಗೆ.


ಮತ್ತೆ ಮರುಬೆಳಗಾಗುವುದರಲ್ಲಿ ಮತ್ತೊಂದು ಮೋಳ ಹಾಜರು! ಗಾಯಗೊಂಡಿದ್ದರೂ ಇದು ಎದ್ದು ಬಿಂಕದಿಂದ ಹೊರನಡೆಯಿತು! ಅದರೆದುರೇ ಕೂತಿತು. ಗಂಡು ಒಂದು ಹೆಜ್ಜೆ ಮುಂದೆ ಬಂದರೆ ಇದು ಪಂಜಾ ಎತ್ತಿ ಹೊಡೆಯುತ್ತಿತ್ತು. ಎದುರಿರಬೇಕು, ಆದರೆ ಮುಟ್ಟಬಾರದು. ನಿರ್ಜನವಾಗಿದ್ದ ಟಿವಿ ಹಾಲಿನಲ್ಲಿ ಒಂದು ದಿನವಿಡೀ ಇದೇ ಕಣ್ಣಾಮುಚ್ಚಾಲೆ ನಡೆಯಿತು. ನಮ್ಮ ಬೆಕ್ಕು ತನ್ನ ಜ್ಯೂರಿಸ್‌ಡಿಕ್ಷನ್ನಿನ ಸೋಫಾ ಮೇಲೆ ಅರೆನಿಮೀಲಿತ ನೇತ್ರೆಯಾಗಿ ಮಲಗಿದ್ದರೆ ಮೋಳ ಕೆಳಗೆ ನೆಲದ ಮೇಲೆ, ಇದರ ಎದುರೇ ಧ್ಯಾನಸ್ಥವಾಗಿ ಕೂತಿತು. ಅದು ಸಖಿಯ ದಾಸಾನುದಾಸ. ಹೀಗೆ ಟೆರೇಸಿನಲ್ಲಿ, ಕಿಟಕಿಯ ಚಡಿಯಲ್ಲಿ, ಮನೆಯೊಳಗೆ, ಕಂಪೌಂಡ್ ಗೋಡೆಯ ಮೇಲೆ ಒಬ್ಬರೆದುರು ಇನ್ನೊಬ್ಬರು ಕುಳಿತು ಉರುಟಣೆ ಆಯಿತು.

ಏನಾದರೇನು, ಮುಟ್ಟಲು ಕೊಡದ ಹೆಣ್ಣಿನಿಂದ ಬೇಸತ್ತ ಮೋಳ ವಾಪಸು ಹೋಯಿತು. ಅದು ಹೋದದ್ದೇ ನಮ್ಮ ಬೆಕ್ಕು ರಾಣಿಯವರಿಗೆ ವಿರಹ ವೇದನೆ. ಗೊಗ್ಗರು ಸ್ವರದಲ್ಲಿ ಕೂಗಿ ಕರೆದಿದ್ದೇ ಕರೆದಿದ್ದು!

ಎದುರಿರುವಾಗ ಬಿಂಕ, ತಿರಸ್ಕಾರ; ದೂರ ಇರುವಾಗ ಮೋಹ. ಬಿಟ್ಟೇನೆಂದರೂ ಬಿಡದ ಮಾಯೆ!

ನಾವು ದಿನನಿತ್ಯ ನೋಡುವ ಪ್ರಾಣಿಗಳಲ್ಲೇ ಬೆಕ್ಕುಗಳ ಜಾತಿಯ ಸಮಾಗಮ ಅತಿ ಪ್ರತಿರೋಧದ ನಡುವೆ ನಡೆಯುವಂಥದ್ದು. ಮೈಮೇಲೆ ಗಾಯವಿಲ್ಲದೆ ಹೆಣ್ಣು ಗರ್ಭ ಕಟ್ಟುವುದೇ ಇಲ್ಲವೆನಬಹುದು. ಒಂದನ್ನೊಂದು ಬೆರಸುತ್ತ, ಕಚ್ಚುತ್ತ, ಹೆದರಿಸುತ್ತಲಿರುವುದು ಗಂಡು ಹೆಣ್ಣುಗಳ ಸರಸವೋ, ಕಚ್ಚಾಟವೋ ಒಂದೂ ತಿಳಿಯುವುದಿಲ್ಲ. ಒಟ್ಟಾರೆ ಹೆಣ್ಣಿನ ತೀವ್ರ ಪ್ರತಿರೋಧದ ನಡುವೆ ಅಲ್ಲಿ ಸಂತಾನೋತ್ಪತ್ತಿ ನಡೆಯುತ್ತದೆ. ಆದರೆ ಹೆಣ್ಣಿನಿಂದೇಕೆ ಪ್ರತಿರೋಧ? ನಿರಾಕರಣೆ?

ಸಮಾಗಮದ ಹೊತ್ತಿಗೆ ತನಗೆ ಅನುಕೂಲಕರ ಭಂಗಿ ದಕ್ಕಿಸಿಕೊಳ್ಳಲು ಗಂಡು ಹೆಣ್ಣಿನ ಕುತ್ತಿಗೆ ಮೇಲಿನ ಚರ್ಮ ಕಚ್ಚಿ ಹಿಡಿದಾಗ ಗಂಡಿನ ಹಲ್ಲು, ಉಗುರುಗಳಿಂದ ಹೆಣ್ಣು ಗಾಯಗೊಳ್ಳುತ್ತದೆ. ಜೊತೆಗೆ ಸಮಾಗಮದ ಬಳಿಕ ಗಂಡುಬೆಕ್ಕು ತನ್ನ ಲೈಂಗಿಕ ಅಂಗವನ್ನು ಹೊರಗೆಳೆಯುವಾಗ ಹೆಣ್ಣು ತೀವ್ರ ನೋವನುಭವಿಸುತ್ತದೆ. ಯಾಕೆಂದರೆ ಗಂಡಿನ ಅಂಗದಲ್ಲಿ ೧೦-೧೫ ಚೂಪಾದ ಮೊಳೆಯಂತಹ ರಚನೆಗಳಿದ್ದು ಅವು ಯೋನಿಗೋಡೆಗಳನ್ನು ಗೀರುತ್ತ ಹೋಗುತ್ತವೆ. ಪ್ರತಿ ಸಂಭೋಗದ ಕೊನೆಗೆ ಹೆಣ್ಣುಬೆಕ್ಕು ಅರಚಿಕೊಳ್ಳುವುದು, ಗಂಡಿನ ಮೇಲೆ ದಾಳಿಗೆ ಮುಂದಾಗುವುದು ಇದೇ ಕಾರಣಕ್ಕೆ.

ಆದರೆ ಯೋನಿಗೋಡೆಗಳ ಗೀರುವಿಕೆ ಅನಿವಾರ್ಯ, ಯಾಕೆಂದರೆ ಅದೇ ಹೆಣ್ಣಿನಲ್ಲಿ ಅಂಡ ಬಿಡುಗಡೆಯಾಗುವಂತೆ, ತಾಯ್ತನದ ಹಾರ್ಮೋನುಗಳು ಬಿಡುಗಡೆಯಾಗುವಂತೆ ಮಾಡುವುದು. ಪ್ರಾಣಿಸಂಗ್ರಹಾಲಯದಲ್ಲಿರುವ ಎಷ್ಟೋ ಪ್ರಾಣಿಗಳು ಸಂಭೋಗವಿಲ್ಲದ ಕೃತಕ ಗರ್ಭಧಾರಣೆಯಿಂದ ಗರ್ಭ ಧರಿಸದಿರುವುದಕ್ಕೆ, ಹಾಗೆ ಪಡೆದ ಮರಿಗಳ ಮೇಲೆ ಲವಲೇಶ ಮೋಹವಿಲ್ಲದೆ ಕಾಳಜಿ ವಹಿಸಲು ನಿರಾಕರಿಸುವುದಕ್ಕೆ ಇದೇ ಕಾರಣ. ಒಂದುಬಾರಿಯ ಸಂಪರ್ಕದಿಂದ ಅಂಡ/ಹಾರ್ಮೋನು ಬಿಡುಗಡೆಯಾಗದಿರಬಹುದು, ಆದ್ದರಿಂದ ಮತ್ತೆಮತ್ತೆ ಬೇರೆ ಗಂಡುಗಳೂ ಸಂಪರ್ಕ ನಡೆಸಲು ಹೆಣ್ಣು ಅವಕಾಶ ನೀಡುತ್ತದೆ.

ಹೆಣ್ಣಿನ ಪ್ರತಿರೋಧಕ್ಕೆ ಮತ್ತೊಂದು ಕಾರಣ ಕುಟುಂಬ ಯೋಜನೆ. ಇಲ್ಲದಿದ್ದರೆ ಆರೋಗ್ಯವಂತ ಹೆಣ್ಣುಬೆಕ್ಕು ಪ್ರತಿ ಬೆದೆಯಲ್ಲಿ ಯಶಸ್ವಿಯಾಗಿ ಗರ್ಭ ಕಟ್ಟಿದ್ದರೆ, ಹಾಕಿದ ಎಲ್ಲ ಮರಿಗಳೂ ಉಳಿದುಬಿಟ್ಟರೆ ಜೀವಮಾನದಲ್ಲಿ ೧೫೦ ಮರಿಗಳನ್ನು ತಯಾರು ಮಾಡುತ್ತದೆ! ಭೂಮಿ ಬೆಕ್ಕುಗಳಿಂದ ತುಂಬಿ ಹೋಗುತ್ತಿತ್ತು. ಅದರ ವಿರುದ್ಧ ಪ್ರಕೃತಿಯ ಮೊದಲ ನಿಯಂತ್ರಣ ಬಾವುಗನ ದೂರವಿಡುವಂತೆ ಬೆಕ್ಕಿಗೆ ಕಲಿಸಿದ್ದೇ ಆಗಿರಬೇಕಲ್ಲವೆ?

ಬೆಕ್ಕೇಕೆ? ಹಳೆಯ ಕಾಲದ ಎಷ್ಟು ಅಜ್ಜಂದಿರು ತನ್ನ ಹೆಂಡತಿ ಬಾಣಂತನಕ್ಕೆ ತವರಿಗೆ ಹೋದದ್ದು ಮತ್ತೆ ಬರಲೇ ಇಲ್ಲವೆಂದೂ; ಅದನ್ನು ಕರೆತರಲು ತಾನು ಸರ, ಬಳೆ, ದನ ಅಂತ ಎಷ್ಟೆಷ್ಟು ವಸ್ತುಗಳ ತಂದುಕೊಟ್ಟು ಉಪಚಾರ ಮಾಡಬೇಕಾಯಿತೆಂದೂ; ಮತ್ತೆ ಕೆಲವರು ಪಂಚಾಯ್ತಿ-ಹೊಡೆತಬಡಿತಕ್ಕಿಳಿದೆವೆಂದೂ ಹೇಳಿದ್ದನ್ನು ನೀವು ಕೇಳಿಲ್ಲವೇ? ಬಾಣಂತನ ಮುಗಿಸಿ ಬರುವುದರೊಳಗೆ ಕಾವಲಿಯ ಮೇಲಿನ ನೀರಗುಳ್ಳೆಯಂತೆ ಕಾದಿರುತ್ತಿದ್ದ ಗಂಡ ಮತ್ತೆ ವರ್ಷ ತುಂಬುವುದರೊಳಗೆ ಹೊಟ್ಟೆ ಬರಿಸುವುದರಿಂದ ಬೇಸತ್ತು ಅಜ್ಜಿಮುತ್ತಜ್ಜಿಯರು ಹಾಗೆ ಮಾಡಿರಬಹುದು. ಗಂಡಿನಿಂದ ದೂರ ಇರುವುದೂ ಒಂದು ತೆರನ ಕುಟುಂಬ ಯೋಜನೆಯೇ ಅಲ್ಲವೆ?!



ನಾ ಕೂರುವ ಕಿಟಕಿ ಪಕ್ಕ ಇರುವ ಸಂಪಿಗೆ ಮರದ ಎಲೆ ಮೇಲೆ ಒಂದು ಗೊದ್ದದಷ್ಟು ಪುಟ್ಟ ಜೇಡ ಚಿತ್ರವಿಚಿತ್ರವಾಗಿ ಬಲೆ ನೇಯ್ದಿತು. ಅದರಲ್ಲಿ ಕೂತು ಬಲೆಯೂ ತಾನೂ ಒಟ್ಟಿಗೇ ಕಂಪಿಸುವಂತಹ ಚಲನೆ ಹೊರಡಿಸುತ್ತಿತ್ತು. ಮೊನ್ನೆ ಅದಕ್ಕಿಂತ ಹತ್ತುಪಟ್ಟು ದೊಡ್ಡ ಜೇಡ ಹತ್ತಿರ ಬಂತು. ಅದರ ಅಮ್ಮನಿರಬೇಕು, ಮೊಟ್ಟೆಯಿಂದ ಹೊರಬಂದದ್ದು ಹೇಗಿದೆ ನೋಡಿಹೋಗಲು ಬಂದಿರಬೇಕೆಂದು ಊಹಿಸಿದೆ. ಆದರೆ ಅದು ಬಂದದ್ದೇ ಪುಟ್ಟ ಜೇಡನ ಕಂಪನದ ರೀತಿಯೇ ಬದಲಾಯಿತು. ಎಲ್ಲ ಕಾಲುಗಳನ್ನೂ ಹಿಂದೆಳೆದುಕೊಂಡು ವಿಚಿತ್ರವಾಗಿ ಕುಣಿಯಲು ಶುರುಮಾಡಿತು. ದೊಡ್ಡ ಜೇಡ ಅದನ್ನು ತಿಂದು ಹಾಕುವುದೇನೋ, ಈ ಬೇಟೆಯನ್ನು ಹೇಗೆ ನೋಡುವುದು ಎಂಬ ತಳಮಳದೊಂದಿಗೇ ನೋಡುತ್ತ ಹೋದೆ. ದೊಡ್ಡದು ತನ್ನ ಕಡ್ಡಿ ಮುಂಗಾಲುಗಳಿಂದ ಸಣ್ಣಜೇಡವನ್ನು ಬಲೆಯಾಚೆ ಎಳೆಯತೊಡಗಿತು. ತೆಕ್ಕೆಗೆಳೆದುಕೊಳುವ ಮನುಷ್ಯರಂತೆ. ಸಣ್ಣದೂ ನಿಧಾನ ಕಂಪನ ನಿಲ್ಲಿಸಿ ದೊಡ್ಡ ಜೇಡ ನಿರ್ದೇಶನ ಮಾಡುವಲ್ಲಿ ಬಿಟ್ಟು ಎಲ್ಲೆಲ್ಲೊ ಸುತ್ತತೊಡಗಿತು. ಅದರ ಬೆನ್ನ ಮೇಲೇರಿತು. ಅಡಿ ಹೋಯಿತು. ಮುಖದ ಬಳಿ ಬಂತು. ಓಹ್, ಈಗ ಇದು ತಿಂದು ಹಾಕುತ್ತದೆ ಎಂದು ನನ್ನ ಊಹೆ. ಇಲ್ಲ. ಇದು ತಾಸುಗಟ್ಟಲೆ ನಡೆದು ಕೊನೆಗೆ ಗೊತ್ತಾಯಿತು, ಪುಟ್ಟದು ಗಂಡು, ಅದಕ್ಕಿಂತ ಹತ್ತು ಪಟ್ಟು ದೊಡ್ಡದು ಹೆಣ್ಣು. ಬಹುಪಾಲು ಹೆಣ್ಣುಜೇಡಗಳು ಸಮಾಗಮದ ಬಳಿಕ ಗಂಡನ್ನು ತಿಂದುಹಾಕುತ್ತವೆ. ಎಷ್ಟೋ ಗಂಡುಗಳು ಮೊದಲ ಸಮಾಗಮದ ವೇಳೆ ಸತ್ತು ಹೋಗುತ್ತವೆ. ಕೆಲವು ಪ್ರಬೇಧಗಳು ಹೆಣ್ಣು ತನ್ನನ್ನು ತಿನ್ನದಂತೆ ಏನೇನೋ ರಕ್ಷಣಾ ಉಪಾಯವನ್ನು ಮಾಡಿಕೊಳ್ಳುತ್ತವೆ. ಮೊದಲೆ ವೀರ್ಯವನ್ನು ಸಿರಿಂಜಿನಂತಹ ರಚನೆಯಲ್ಲಿ ತುಂಬಿಟ್ಟುಕೊಂಡು, ಹೆಣ್ಣುಬಂದು ಹೋಗುವ ಜಾಗದ ಗುರುತು ಹಿಡಿದು ಅಲ್ಲಿ ಕಾದು, ಕೊಳವೆಯಂತಹ ರಚನೆ ಮೂಲಕ ಅದನ್ನು ಹೆಣ್ಣಿನ ದೇಹಕ್ಕೆ ಸೇರಿಸಿ ತಮ್ಮನ್ನು ಕಾಪಾಡಿಕೊಳ್ಳುತ್ತವೆ!

ಕೀಟ ಸಾಮ್ರಾಜ್ಯದಲ್ಲಿ ಹೆಚ್ಚು ಸಂಖ್ಯೆಯ ಸಂತತಿ ಜನಿಸುತ್ತದೆ. ಅದರಲ್ಲಿ ಮೊಟ್ಟೆಯಿಡಬಲ್ಲ ಬಲಿಷ್ಟ ಹೆಣ್ಣಿನ ಸಂಖ್ಯೆ ಕಡಿಮೆ ಇರುತ್ತದೆ. ಅವು ಆಕಾರದಲ್ಲು ದೊಡ್ಡವು. ಸಮಾಗಮದ ಬಳಿಕ ಗಂಡನ್ನು ತಿನ್ನುವ ಸ್ವಭಾವ ಮನುಷ್ಯನಿಗೆ ವಿಲಕ್ಷಣ ಎನಿಸುತ್ತದೆ. ಹೆಣ್ಣುಗಂಡನ್ನು ತಿನ್ನುವುದೇಕೆ? ವೀರ್ಯದಾನಿಗಳ ಸಂಖ್ಯೆ ಇಳಿಸಲೆಂದೇ? ಇದೂ ಪ್ರಕೃತಿದತ್ತ ಕುಟುಂಬ ಯೋಜನೆಯೇ?

ಗೊತ್ತಿಲ್ಲ, ಜೇಡವನ್ನೇ ಕೇಳಬೇಕು.
                          
***

ವಿಕಾಸದ ಅತ್ಯಂತ ಕೆಳಹಂತದ ಜೀವಿಗಳು, ಏಕಕೋಶ ಜೀವಿಗಳಲ್ಲಿ ಸಂತಾನೋತ್ಪತ್ತಿಗೆ ಮತ್ತೊಂದು ಜೀವಿಯ ಅವಶ್ಯಕತೆಯಿಲ್ಲ. ಕೆಲವು ಸಸ್ಯಗಳೂ ಸೇರಿದಂತೆ ಅವೆಲ್ಲ ಅಲೈಂಗಿಕ ವಿಧಾನದಿಂದ ತಂತಾವೆ ಸಂತಾನೋತ್ಪತ್ತಿ ನಡೆಸುತ್ತವೆ. ಎಂದರೆ ಒಂದು ಜೀವಿ ತನ್ನ ಜೀನುಗಳಿಂದ ತನ್ನಂಥದೇ ಮತ್ತಷ್ಟು ಜೀವಿಗಳ ಉತ್ಪಾದಿಸುತ್ತದೆ. ನಂತರದ ಹಂತದ ಕೆಲವು ಜೀವಿಗಳಲ್ಲಿ ಸಮಯ ಹೇಗೆ ಬಯಸುತ್ತದೋ ಹಾಗೆ - ಕೆಲವೊಮ್ಮೆ ಲೈಂಗಿಕವಾಗಿ, ಕೆಲವೊಮ್ಮೆ ನಿರ್ಲಿಂಗಿ ವಿಧಾನದಲ್ಲಿ (ಎ-ಸೆಕ್ಷುವಲ್) ಸಂತಾನೋತ್ಪತ್ತಿ ನಡೆಸುತ್ತವೆ. ಇನ್ನೂ ಕೊಂಚ ವಿಕಾಸ ಹೊಂದಿರುವ ಮೃದ್ವಂಗಿಗಳಂತಹ ಜೀವಿಗಳು ದ್ವಿಲಿಂಗಿಗಳು. ಅವು ಗಂಡು ಮತ್ತು ಹೆಣ್ಣು ಎರಡೂ ಆಗಿರುತ್ತವೆ. ಒಂದು ಇನ್ನೊಂದರಿಂದ ವೀರ್ಯ ಪಡೆವಾಗ ತಾನೂ ವೀರ್ಯದಾನ ಮಾಡಿರುತ್ತದೆ. ಫಲಿತಗೊಳ್ಳುತ್ತಲೇ ಫಲಿತಗೊಳಿಸಿರುತ್ತದೆ.

ಅಲ್ಲಿ ಅಮಿತ ಸಂಖ್ಯೆಯ ಸಂತತಿ ಹುಟ್ಟುತ್ತದೆ. ಜೇಡ ಒಮ್ಮೆಗೆ ಸರಾಸರಿ ೩೦ ಸಾವಿರ ಮೊಟ್ಟೆಯಿಡುತ್ತದೆ! ವಿಕಾಸದ ಕೆಳ ಮಜಲುಗಳಲ್ಲಿ ಇರುವ ಜೀವಿಗಳೆಲ್ಲ ಬಹುಸಂಖ್ಯೆಯ ಸಂತತಿ ಉತ್ಪಾದಿಸುತ್ತವೆ. ಮೊಟ್ಟೆ ಒಡೆದು ಹೊರಬಂದ ಮೇಲೆ ಶಕ್ತವಾದವು ಉಳಿಯುವ ಅವಕಾಶ ಗಳಿಸಿಕೊಳ್ಳುತ್ತವೆ. ಬದುಕುವವರಿಗಿಂತ ಸಾಯುವವರ ಸಂಖ್ಯೆಯೇ ಹೆಚ್ಚಾಗಿರುತ್ತದೆ. ಎಂದೇ ಅಲ್ಲಿ ಪಾಲಕತನದ ಜವಾಬುದಾರಿ ಕಡಿಮೆ. ಸಾಂಗತ್ಯದ ಅವಧಿ ಕಡಿಮೆ. ಗಂಡುಹೆಣ್ಣುಗಳ ದೈಹಿಕ ಸಂಯೋಗದ ವಿಧಾನಗಳು ಬೇರೆ. ಅಂಥ ಸಂತಾನೋತ್ಪತ್ತಿ ಕ್ರಿಯೆ ನಡೆವಲ್ಲಿ ಅಮ್ಮನಿಗೆ ಮಕ್ಕಳ ಜವಾಬ್ದಾರಿ ಕಡಿಮೆ.

ಆ ವಿಕಾಸದ ಏಣಿಯ ನಂತರದ ಹಂತದ ಜೀವಿಗಳಲ್ಲಿ ಗಂಡು ಹೆಣ್ಣು ಎಂಬ ಲಿಂಗ ಭೇದ ಸೃಷ್ಟಿಯಾಯಿತು. ಆದರೆ ಹೆಚ್ಚು ಶಕ್ತಿ ಬೇಡುವ, ೫೦% ಜೀನುಗಳನ್ನಷ್ಟೆ ವರ್ಗಾಯಿಸಲು ಸಾಧ್ಯವಿರುವ, ೫೦% ಜೀವಿಗಳಷ್ಟೆ ‘ಉತ್ಪಾದಿಸಲು ಸಾಧ್ಯವಾಗುವ ಲೈಂಗಿಕ ಸಂತಾನೋತ್ಪತ್ತಿ ವಿಧಾನಕ್ಕೆ ಏಕೆ ಜೀವಿಗಳು ಹೊರಳಿಕೊಂಡವು ಎನ್ನುವುದು ಜೀವಶಾಸ್ತ್ರಜ್ಞರು ಇನ್ನೂ ಬಿಡಿಸಲಾರದ ಒಗಟು. ಬಹುಶಃ ತಳಿವೈವಿಧ್ಯ ಕಾಪಾಡಿಕೊಳ್ಳಲು, ಸಂತಾನ ಮಿತಗೊಳಿಸಲು ಪ್ರಕೃತಿ ಹೂಡಿದ ಉಪಾಯ ಇದಾಗಿರಬೇಕು ಎಂಬ ಊಹೆಯಿದೆ.

ಅದೇನೇ ಇರಲಿ, ಲೈಂಗಿಕವಾಗಿ ‘ಪ್ರಬುದ್ಧ'ವಾಗುತ್ತ ಹೋದಂತೆ ಜೀವಿಗಳ ಹಿಂಸಾಪ್ರವೃತ್ತಿಯೂ ಹೆಚ್ಚುತ್ತ ಹೋಗಿದೆ!

ಒಂದು ಅಧ್ಯಯನದಿಂದ ಕುತೂಹಲಕರ ಅಂಶ ಪ್ರಾಣಿಗಳಲ್ಲಿ ಪತ್ತೆಯಾಗಿದೆ: ಹಿಂಸಾಪ್ರವೃತ್ತಿ ಮತ್ತು ಲೈಂಗಿಕ ಪ್ರಚೋದನೆಯನ್ನು ನಿಯಂತ್ರಿಸುವ ಮಿದುಳಿನ ಭಾಗ ಒಂದೇ ಆಗಿದೆ! ಎಂದರೆ ಹಿಂಸೆಗೂ, ಲೈಂಗಿಕತೆಗೂ ಸಂಬಂಧವಿದೆ. ಪ್ರಾಣಿಯು ಜೊತೆಗೂಡಲು ತಯಾರಾಗುವುದೊ, ಯುದ್ಧ ಮಾಡಲು ಸಿದ್ಧವಾಗುವುದೊ ಎನ್ನುವುದನ್ನು ಮಿದುಳಿನ ಆ ಭಾಗ ಪ್ರಚೋದನೆಗನುಗುಣವಾಗಿ ನಿರ್ಧರಿಸುತ್ತದೆ. ಮತ್ತೊಂದು ಅಧ್ಯಯನದ ಪ್ರಕಾರ ಲೈಂಗಿಕ ಅನುಭವವಿರುವ ಜೀವಿಗಳು ಹಿಂಸಾತ್ಮಕ ಸ್ವಭಾವ ಹೊಂದಿವೆ. ಕಪ್ಪೆ, ಜೀರುಂಡೆಗಳಂತಹ ಜೀವಿಗಳಿಗೆ ಲೈಂಗಿಕಾನುಭವವಿಲ್ಲ. ಅಲ್ಲಿ ಹಿಂಸೆ ಕಡಿಮೆ. ಅವು ಕೇವಲ ಸಂತಾನೋತ್ಪತ್ತಿಯನ್ನು ತಮ್ಮ ಜವಾಬ್ದಾರಿ ಹಾಗೂ ಜೀವಮಾನದ ಹೊಣೆಯಾಗಿ ನಿಭಾಯಿಸುತ್ತವೆ. ಆದರೆ ಬೆಕ್ಕಿನಂತಹ ಪ್ರಾಣಿಗಳು ಲೈಂಗಿಕ ಅನುಭವ ಹೊಂದಿವೆ, ಅಲ್ಲಿ ಹಿಂಸೆಯೂ ಹೆಚ್ಚು ಇದೆ.

ಹಾಗಾದರೆ ವಿಕಾಸದ ತುತ್ತತುದಿಯಲ್ಲಿರುವ ಮನುಷ್ಯರ ಕತೆ ಏನು? ಎಲ್ಲ ಅನುಭವ, ಸಂವೇದನೆಗಳ ಆತ್ಯಂತಿಕ ತುದಿ ಮುಟ್ಟಿದ ಜೀವಿ; ಅದನ್ನು ವ್ಯಕ್ತಪಡಿಸಲು ಭಾಷೆ-ಕಲೆ ಮುಂತಾದ ಅಭಿವ್ಯಕ್ತಿ ರೂಢಿಸಿಕೊಂಡಿರುವ ಮನುಷ್ಯನ ಲೈಂಗಿಕತೆಗೂ ಹಿಂಸಾಪ್ರವೃತ್ತಿಗೂ ಏನು ಸಂಬಂಧ? ಕೌಟುಂಬಿಕ ದೌರ್ಜನ್ಯಗಳು, ಅತ್ಯಾಚಾರಕ್ಕೂ ಅವನ ಸೂಕ್ಷ್ಮ ಸಂವೇದನೆಗೂ ಸಂಬಂಧವಿದೆಯೆ?

ಸಂಬಂಧ ಇರಲೇಬೇಕು. ಅನುಭವಿಸುತ್ತಿರುವುದನ್ನು ಅಭಿವ್ಯಕ್ತಿಸಿದರೆ ಅಷ್ಟು ಪುರಾವೆ ಸಾಕು.


Monday 11 July 2016

ಪ್ಯಾಬ್ಲೊ ನೆರೂಡ: ನೆಲದ ಮೇಲಿನ ನಾವಿಕ



ಕವಿಯ ಮನೆಗೆ ಹೋದೆವು!



ಈಗ್ಗೆ ನಾಲ್ಕು ತಿಂಗಳ ಹಿಂದೆ ಚಿಲಿಯ ರಾಜಧಾನಿಯಿಂದ ೧೧೧ ಕಿಮೀ ದೂರದಲ್ಲಿರುವ ವಾಲ್ಪರೈಸೊ ಪಟ್ಟಣದ ‘ಲಾ ಸೆಬಾಸ್ಟಿಯಾನಾ’ಗೆ ಹೋಗಿಬಂದೆವು. ಅದು ‘ಒಂದು ದೇಶದ ನದಿಗಳು ಎಂದರೆ ಅಲ್ಲಿನ ಕವಿಗಳು’ ಎಂದ ಕವಿಯ ಮನೆ. ಆ ಆಪ್ತಕವಿಮಿತ್ರ ನೆಫ್ತಾಲಿ ರಿಕಾರ್ದೊ ಎಲಿಯೆಸರ್ ರೆಯೆಸ್ ಬಸುವಾಲ್ತೊನ ಮನೆಯ ಮೂಲೆಮೂಲೆ ನೋಡಿ, ಕೆಫೆಯಲ್ಲಿ ಕಾಫಿಯನ್ನೂ ಕುಡಿದುಬಂದೆವು.

ಹೀಗೆಂದರೆ ಹೇಳುತ್ತಿರುವುದೇನೆಂದೇ ಹಲವರಿಗೆ ತಿಳಿಯದೆ ಹೋಗಬಹುದು. ಆದರೆ ಚಿಲಿಯ ಕವಿ ಪ್ಯಾಬ್ಲೊ ನೆರೂಡನ ಮನೆಗೆ ಹೋಗಿಬಂದೆವು ಎಂದರೆ ಎಲ್ಲ ಅತ್ಯಾಸಕ್ತಿಯಿಂದ ಪ್ರಶ್ನೆಗಳ ಕೇಳಿಯಾರು. ಹೌದು, ಹತ್ತನೇ ವಯಸ್ಸಿಗೆ ಕಾವ್ಯ ಬರೆಯಲು ಮೊದಲುಮಾಡಿದ ರೆಯೆಸ್-ಬಸುವಾಲ್ತೊ ದಂಪತಿಗಳ ಮಗ ನೆಫ್ತಾಲಿ ರಿಕಾರ್ದೊ ಎಲಿಯೆಸರನೇ ಕನ್ನಡಪ್ರಜ್ಞೆಗೆ ತುಂಬ ಹತ್ತಿರದವನಾಗಿರುವ ಪ್ಯಾಬ್ಲೊ ನೆರೂಡ. ಓಎಲ್ಲೆನ್ ಅನುವಾದಿಸಿರುವ ನೆರೂಡನ ಆತ್ಮಕತೆ ಹಾಗೂ ತೇಜಶ್ರೀ ಅನುವಾದಿಸಿರುವ ಅವನ ಕವಿತೆಗಳ ಓದುತ್ತ ಕವಿಯ ಕರ್ಮಭೂಮಿಗೆ ಹೋಗಿಬಂದದ್ದು ಅವಿಸ್ಮರಣೀಯ ಅನುಭವ ಎನಿಸಿತು.

ನೆರೂಡ ಸಾಹಿತ್ಯಕ್ಕಾಗಿ ನೊಬೆಲ್ ಪಡೆದ ಚಿಲಿಯ ಕವಿ. ಮೊದಲ ಕವಿತೆಗಳು ಪ್ರಕಟಗೊಂಡಾಗ ಕವಿ ತಾನೇ ಎನ್ನುವುದು ಅಪ್ಪನಿಗೆ ಗೊತ್ತಾಗದಿರಲೆಂದು ಜಾನ್ ನೆರೂಡ ಎಂಬ ಝೆಕೊಸ್ಲವಾಕಿಯನ್ ಕವಿಯ ಹೆಸರನ್ನು ತನ್ನ ಕಾವ್ಯನಾಮವಾಗಿಸಿಕೊಂಡ. ಹಲವು ವಸ್ತುವಿಷಯಗಳನ್ನೊಳಗೊಂಡ, ಹಲವು ಶೈಲಿಯ ಕವಿತೆಗಳನ್ನು ಬದುಕಿನುದ್ದಕ್ಕೂ ಬರೆದ, ಕೇವಲ ಕವಿತೆಗಳನ್ನೆ ಬರೆದ. ಗಣಿಕಾರ್ಮಿಕರು, ವೇಗಾ ಮಾರ್ಕೆಟ್ಟಿನ ಹಮಾಲಿಗಳು, ಭೂಗತ ರೌಡಿ, ಕುರಿಕಾಯುವ ಹುಡುಗರಿಂದ ಹಿಡಿದು ಚೆಗೆವಾರ, ಪಿಕಾಸೊ, ಸ್ಟಾಲಿನ್ ಮೊದಲಾದ ಮಹಾನ್ ಚೇತನಗಳೂ ಅವನ ಕಾವ್ಯಾಭಿಮಾನಿಗಳಾಗಿದ್ದರು.

ಅವ ಕವಿಯಷ್ಟೆ ಅಲ್ಲ, ಚಿಲಿಯನ್ ಕಮ್ಯುನಿಸ್ಟ್ ಪಕ್ಷದ ಸದಸ್ಯ ಮತ್ತು ರಾಜಕಾರಣಿ. ಹಲವು ರಾಜತಾಂತ್ರಿಕ ಹುದ್ದೆ ನಿರ್ವಹಿಸಿದ ವಿಶ್ವ ಸಂಚಾರಿ. ಕಮ್ಯುನಿಸಂ ಅನ್ನು ಪ್ರೀತಿಸಿದ. ಕಾರ್ಯಕರ್ತರ ಸಶಸ್ತ್ರೀಕರಣ ವಿರೋಧಿಸಿದ. ಬಂಧನದ ಭೀತಿ ಎದುರಿಸಿದ. ಅನಿವಾರ್ಯವಾಗಿ ಭೂಗತನಾದ. ಇದರ ನಡುವೆಯೂ ಒಬ್ಬರಾದ ಮೇಲೊಬ್ಬ ಹೆಣ್ಣುಗಳನ್ನು ಪ್ರೇಮಿಸಿದ, ಕಾಮಿಸಿದ, ಮದುವೆಯಾದ, ಕವಿತೆಗಳ ಹೆರುತ್ತ ಹೋದ. ನೆರೂಡನನ್ನು ಅವನ ಎಡಪಂಥೀಯ ಒಲವಿಗಾಗಿ, ರೊಮ್ಯಾಂಟಿಕ್ ಪ್ರೇಮಕವಿತೆಗಳಿಗಾಗಿ, ರಾಜಕಾರಣದ ಸ್ಪಷ್ಟತೆಗಾಗಿ, ಪ್ರಕೃತಿ ಪ್ರೇಮಕ್ಕಾಗಿ ಹೀಗೆ ನಾನಾ ಕಾರಣಗಳಿಗಾಗಿ ಆರಾಧಿಸುವವರಿದ್ದಾರೆ. ಆದರೆ ಕವಿತೆ, ಸಿದ್ಧಾಂತ, ವಿಚಾರಗಳಾಚೆಗೂ ಬೆಳೆದುನಿಂತ ಅನನ್ಯ ಸೃಜನಶೀಲ ವ್ಯಕ್ತಿತ್ವ ಅದು. ಆಸೆ ಮತ್ತು ಭರವಸೆಯ ಕುರುಹು ಎಂದು ಹಸಿರು ಬಣ್ಣದ ಶಾಯಿಯಲ್ಲೆ ಬರೆಯುತ್ತಿದ್ದ ಕನಸುಗಾರ ಅವನು. ಒಣನೆಲದಲ್ಲಿಯೂ ಹಾಯಿ ನಡೆಸುವ ನಾವಿಕ - ‘ನೇವಿಗೇಟರ್ ಆಫ್ ದಿ ಡ್ರೈ ಲ್ಯಾಂಡ್’.

ಕಡುವ್ಯಾಮೋಹಿ ಕವಿ 

ನೆರೂಡನಿಗೆ ಕಡಲು ಇಷ್ಟ. ಹಡಗು ಇಷ್ಟ. ನಾವಿಕರು ಇಷ್ಟ. ಅವರ ಸಾಹಸಯಾನದ ಕತೆ ಕೇಳಲು ಇನ್ನೂ ಇಷ್ಟ. ಎಂದೇ ಕಡಲ ತೀರದಲ್ಲಿ ಮನೆ ನಿರ್ಮಿಸಿಕೊಂಡ. ನಾವೆಯಂತೆ ಕಾಣುವ ಮನೆಗಳ ಕಟ್ಟಿ, ಬಿಳಿಯ ಮೀನಿನ ಚಿತ್ರವಿರುವ ನೀಲಿ ಬಾವುಟವನ್ನು ಮೇಲೆ ಹಾರಿಸಿದ.

‘ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು’ ಎಂದು ಕುವೆಂಪು ಹೇಳಿದ್ದು ಕವಿಯ ಜೀವಚೈತನ್ಯ ಕುರಿತು. ತನಗಿಷ್ಟ ಬಂದಲ್ಲಿ ತನ್ನಿಷ್ಟದಂತೆ ಮನೆ ಕಟ್ಟಿ, ಅಮೂಲ್ಯವೆನಿಸುವುದನ್ನೆಲ್ಲ ಒಪ್ಪಗೊಳಿಸಿ, ಅದರೊಡನೆ ಬದುಕುತ್ತ ನೆಮ್ಮದಿ ಕಂಡುಕೊಳ್ಳುವುದು ಮನುಷ್ಯ ಗುಣ. ಇದರಿಂದ ನೆರೂಡ ಹೊರತಾಗಿರಲಿಲ್ಲ. ಹಾಗೆ ನೋಡಿದರೆ ಬೊಂಬೆ, ಮಣಿ, ಕಪ್ಪೆಚಿಪ್ಪು, ಬಣ್ಣದ ಗಾಜುಗಳಿಂದ ಹಿಡಿದು ಪುಸ್ತಕ, ನಕಾಶೆ, ಕಡಲ ನಾವಿಕನ ದಿಕ್ಸೂಚಿಯವರೆಗೆ ಎಲ್ಲವನ್ನೂ ಸಂಗ್ರಹಿಸುತ್ತಿದ್ದ ನೆರೂಡ ಕಡುವ್ಯಾಮೋಹಿ.

ಎಷ್ಟೋ ಕವಿಗಳ ಮನೆ ನೋಡಿದ್ದರೂ, ನೆರೂಡನ ಮನೆ ನೋಡಿದ ಮೇಲೆ ಅವನಷ್ಟು ವಸ್ತು ಮೋಹ ಇರುವವರು ತುಂಬ ಕಡಿಮೆ ಜನ ಎನಿಸಿತು. ನೆರೂಡ ತನಗೆ ಬೇಕೆನಿಸಿದ ವಸ್ತುಗಳನ್ನು ಹೇಗಾದರೂ ಪಡೆಯುತ್ತಿದ್ದ. ‘ನೀವು ಯಾವುದೆಂದರೆ ಯಾವುದೇ ವಸ್ತುವನ್ನಾದರೂ ಪಡೆಯಬಹುದು. ಅದಕ್ಕೆ ಬೇಕಾದದ್ದು ನಿಮಗದು ಬೇಕೇಬೇಕೆಂಬ ತೀವ್ರ ಹಂಬಲ. ಅಷ್ಟಿದ್ದರೆ ಅದು ತಂತಾನೇ ಬಂದು ನಿಮ್ಮ ಕೈಸೇರುತ್ತದೆ’ ಎನ್ನುತ್ತಿದ್ದ. ಕವಿಯೇ ಹೇಳಿಕೊಂಡಿರುವಂತೆ:

’ನನ್ನ ಮನೆ ನೋಡಿ ಕೆಲವರು ಎಂಥಾ ಹುಚ್ಚ! ಎಂತೆಂಥ ವಸ್ತುಗಳನ್ನು ಸಂಗ್ರಹಿಸಿದ್ದಾನೆ ಅನ್ನುತ್ತಾರೆ. ಮೆಕ್ಸಿಕೋದ ಸ್ವಚ್ಛ ಬೀಚುಗಳಲ್ಲಿ ಅಲೆದಾಡುತ್ತ ಅದ್ಭುತವಾದ ಕಡಲ ಚಿಪ್ಪುಗಳನ್ನು ಸಂಗ್ರಹಿಸಿದ್ದೆ. ಅನಂತರ ಕ್ಯೂಬಾ ಮತ್ತಿತರ ಕಡೆಗಳಲ್ಲಿ ನನ್ನ ಬಳಿ ಇದ್ದ ಚಿಪ್ಪುಗಳನ್ನು ವಿನಿಮಯ ಮಾಡಿ, ಕೆಲವನ್ನು ಖರೀದಿಸಿ, ಕೆಲವೊಮ್ಮೆ ಉಡುಗೊರೆ ಪಡೆದು, ಮತ್ತೆ ಅಪರೂಪಕ್ಕೆ ಬೇರೆಯವರ ಸಂಗ್ರಹದಿಂದ ಕದ್ದು (ಯಾವುದೇ ವಸ್ತುಗಳ ಪ್ರಾಮಾಣಿಕ ಸಂಗ್ರಾಹಕರು ಇಲ್ಲ) ನನ್ನ ಸಂಗ್ರಹ ಬೆಳೆಸಿದೆ. ಚೀನಾ ಸಮುದ್ರದ ಅಪೂರ್ವ ಮಾದರಿಗಳು, ಫಿಲಿಪೈನ್ಸ್, ಜಪಾನ್ ಮತ್ತು ಬಾಲ್ಟಿಕ್‌ನಿಂದ ಸಂಗ್ರಹಿಸಿದ ಚಿಪ್ಪುಗಳಿದ್ದವು. ಅಂಟಾರ್ಕಟಿಕದ ಶಂಕುಗಳು, ಕ್ಯೂಬಾದ ಕಪ್ಪೆಚಿಪ್ಪುಗಳು, ಕೆರೀಬಿಯದ ನರ್ತಕಿಯರಿಂದ ಸಂಗ್ರಹಿಸಿದ ಕೆಂಪು, ಕೇಸರಿ ಬಣ್ಣದ, ನೀಲಿ, ಊದಾ ಬಣ್ಣಗಳ ಚಿಪ್ಪುಗಳೂ ಇದ್ದವು. ಕೊನೆಗೆ ನನ್ನ ಸಾಗರ ಸಂಪತ್ತು ಒಂದಿಡೀ ಕೋಣೆ ತುಂಬುವಷ್ಟಾಯಿತು. ನನಗಾಗಿ ಶಂಕು, ಕಪ್ಪೆಚಿಪ್ಪು ಸಂಗ್ರಹಿಸಿ ತಂದು ಗೆಳೆಯರಿಗೂ ಚಿಪ್ಪಿನ ಹುಚ್ಚು ಹಿಡಿಯಿತು. ನನ್ನಲ್ಲಿ ಹದಿನೈದು ಸಾವಿರ ಚಿಪ್ಪುಗಳ ಸಂಗ್ರಹವಿತ್ತು. ಅವು ಮನೆಯ ಬೀರು-ಶೆಲ್ಫುಗಳ ತುಂಬಿ ಟೇಬಲ್ಲು, ಕುರ್ಚಿಗಳ ಮೇಲೆಲ್ಲ ಜಾಗ ಮಾಡಿಕೊಂಡವು. ಕಾಂಚಾಲಜಿ, ಮಲಕಾಲಜಿ, ಚಿಪ್ಪಿನಶಾಸ್ತ್ರ ಎಂದು ಏನು ಬೇಕಾದರೂ ಕರೆಯಿರಿ, ಅದಕ್ಕೆ ಸಂಬಂಧಪಟ್ಟ ಪುಸ್ತಕಗಳು ನನ್ನ ಗ್ರಂಥಾಲಯದಲ್ಲಿ ತುಂಬಿಕೊಂಡವು..’

ಕಪ್ಪೆಚಿಪ್ಪುಗಳಂತೆಯೇ ಕವಿಯ ಬಳಿ ವಿಶಿಷ್ಟ ಬೊಂಬೆ ಸಂಗ್ರಹವೂ ಇತ್ತು! ಬೊಂಬೆಯಾಕಾರದ ವೈನ್ ಬಾಟಲು, ಬಾಟಲಿಯೊಳಗೆ ಹಡಗು ಕೂರಿಸಿದ ಬೊಂಬೆ, ಹಡಗಿನ ಮುಂಚೂಣಿಯಲ್ಲಿರುತ್ತಿದ್ದ ಫಿಗರ್ ಹೆಡ್ ಬೊಂಬೆ ಎಲ್ಲ ಇದ್ದವು. ಕವಿಗೇಕೆ ಬೊಂಬೆ? ಅವನ ಮಾತುಗಳಲ್ಲೇ ನಮ್ಮ ಅಚ್ಚರಿಗೆ ಉತ್ತರವಿದೆ: ‘ಆಟವಾಡದ ಮಗು ಮಗುವೇ ಅಲ್ಲ, ಆಟವಾಡದೇ ಬೆಳೆದ ವ್ಯಕ್ತಿಗಳು ತಮ್ಮೊಳಗಿನ ಮಗುವನ್ನು ಶಾಶ್ವತವಾಗಿ ಕಳೆದುಕೊಂಡಿರುತ್ತಾರೆ. ತಮ್ಮೊಳಗಿನ ಮಗುತನಕ್ಕೆ ಅಪರಿಚಿತರಾಗಿರುತ್ತಾರೆ. ನಾನು ನನ್ನ ಮನೆಯನ್ನು ಬೊಂಬೆಮನೆಯ ಹಾಗೆ ಕಟ್ಟಿದ್ದೇನೆ. ಬೆಳಗಿನಿಂದ ಸಂಜೆಯವರೆಗೆ ಆಡುತ್ತೇನೆ’.

ಇಂಥ ಮಗುತನವನ್ನು ಉಳಿಸಿಕೊಳ್ಳಲೆಂದೇ ನೆರೂಡ ತನ್ನ ಅಭಿರುಚಿ, ಅವಶ್ಯಕತೆಗೆ ತಕ್ಕಂತೆ ಮೂರು ಮನೆಗಳನ್ನು ಸೆಂಟಿಯಾಗೊ, ವಾಲ್ಪರೈಸೊ ಮತ್ತು ಇಸ್ಲಾ ನೆಗ್ರಾದಲ್ಲಿ ನಿರ್ಮಿಸಬೇಕಾಯಿತು. ವಿಶ್ವದ ಎಲ್ಲ ಭಾಗಗಳಿಂದ ಚೂರುಗಳ ಹೆಕ್ಕಿತಂದು, ಸೇರಿಸಿ ಕಟ್ಟಿದ ಅವು ಅದ್ಭುತ ಮ್ಯೂಸಿಯಂಗಳೆನ್ನಲು ತಕ್ಕುದಾಗಿವೆ.

ಲಾ ಸೆಬಾಸ್ಟಿಯಾನಾ


‘ಸೆಂಟಿಯಾಗೊದ ದಣಿವು ನನ್ನರಿವಿಗೆ ಬರುತ್ತಿದೆ. ಶಾಂತಯುತವಾಗಿ ಕೂತು ಬರೆಯುವ ಜಾಗ ವಾಲ್ಪರೈಸೊದಲ್ಲಿ ಬೇಕಾಗಿದೆ.  ಅದು ಅತಿ ಎತ್ತರದ ಸ್ಥಳದಲ್ಲಿಯೂ ಇರಬಾರದು, ಹಾಗೆಂದು ತುಂಬ ತಗ್ಗಿನಲ್ಲೂ ಇರಬಾರದು. ಪ್ರತ್ಯೇಕವಾಗಿರಬೇಕು, ಆದರೆ ತೀರ ಒಂಟಿಮನೆಯಾಗಿರಬಾರದು. ಅಕ್ಕಪಕ್ಕದವರು ಕಾಣದಂತಿದ್ದರೆ, ಕೇಳಿಸದಂತಿದ್ದರೆ ಬಹಳ ಒಳ್ಳೆಯದು. ಸರಳ ಆದರೆ ಸುಖದಾಯಕವಾಗಿರುವ ಮನೆ. ತುಂಬ ದೊಡ್ಡದೂ ಅಲ್ಲದ, ತುಂಬ ಸಣ್ಣದೂ ಅಲ್ಲದ, ಗಟ್ಟಿಮುಟ್ಟಾಗಿರುವ ಮನೆ; ಎಲ್ಲದರಿಂದ ದೂರವಿರುವ ಆದರೆ ಸಾರ್ವಜನಿಕ ವಾಹನ ಸೌಲಭ್ಯ ಹತ್ತಿರದಲ್ಲೇ ಇರುವ; ಸ್ವತಂತ್ರವಾದ ಆದರೆ ಅಂಗಡಿಮುಂಗಟ್ಟುಗಳಿಗೆ ಹತ್ತಿರವಿರುವ ತುಂಬ ಕಡಿಮೆ ಬೆಲೆಯ ಮನೆ ನನಗೆ ಬೇಕು. ಅಂಥ ಒಂದು ಮನೆ ವಾಲ್ಪರೈಸೊದಲ್ಲಿ ಸಿಕ್ಕೀತೇನು?’

ರಾಜಧಾನಿ ಸೆಂಟಿಯಾಗೊದ ಗದ್ದಲದಿಂದ ದೂರವಿರಲು ಒಂದು ಮನೆ ನೋಡಬೇಕೆಂದು ನೆರೂಡ ೧೯೫೯ರಲ್ಲಿ ತನ್ನ ಆಪ್ತರಾದ ಸಾರಾ ಮತ್ತು ಮೇರಿ ಅವರಿಗೆ ಬರೆದ ಪತ್ರ ಇದು. ಅದರಂತೆ ಫ್ಲೋರಿಡಾ ಹಿಲ್‌ನಲ್ಲಿ ಅರೆಬರೆ ಕಟ್ಟಲ್ಪಟ್ಟಿದ್ದ ಒಂದು ಮನೆಯನ್ನು ನೋಡಲಾಯಿತು. ಸೆಬಾಸ್ಟಿಯನ್ ಕೊಲಾಡಾ ಎಂಬ ಸ್ಪ್ಯಾನಿಶ್ ವಾಸ್ತುವಿನ್ಯಾಸಕಾರ, ಹಡಗಿನ ಕ್ಯಾಪ್ಟನ್ನನ ಮನೆಯದು. ಕಟ್ಟಿ ಪೂರೈಸುವ ಮುನ್ನ ೧೯೪೯ರಲ್ಲಿಯೇ ಆತ ತೀರಿಕೊಂಡಿದ್ದ. ನೆರೂಡ ಅದನ್ನು ನೋಡಹೋದಾಗ ಬೆಕ್ಕು, ಪಾರಿವಾಳಗಳ ನೆಲೆಯಾಗಿ ದುರ್ವಾಸನೆ ಬೀರುತ್ತ ಧೂಳುಮಯವಾಗಿತ್ತು. ಆದರೆ ದೂರದ ಬಂದರು, ಗುಡ್ಡದ ಇಳಿಜಾರು, ಮನೆಗಳು, ಮೆಟ್ಟಿಲುಗಳು, ಕಡಲು ಎಲ್ಲ ಅದರ ಕಿಟಕಿಗಳಿಂದ ಕಾಣುವಂತಿತ್ತು. ಹಡಗಿನ ಕ್ಯಾಬಿನ್ನಿನಂತಹ ಅದರ ವಿನ್ಯಾಸ ಹಾಗೂ ಆಯಕಟ್ಟಿನ ಸ್ಥಳ ಕವಿಗೆ ಇಷ್ಟವಾಯಿತು. ತಮಗದು ದೊಡ್ಡದಾಯಿತೆನಿಸಿ ಕೊನೆಗೆ ಕೆಳಭಾಗವನ್ನು ಗೆಳೆಯ ಡಾ. ಫ್ರಾನ್ಸಿಸ್ಕೊ ವೆಲಾಸ್ಕೊನೊಂದಿಗೆ ಹಂಚಿಕೊಂಡರು. ೧೯೬೧ರಲ್ಲಿ ಆಪ್ತೇಷ್ಟರಿಗೆ ಸತ್ಕಾರಕೂಟ ಏರ್ಪಡಿಸಿ ನೆರೂಡ ಮತ್ತವನ ಪತ್ನಿ ಮಟಿಲ್ಡಾ ಉರುಷಿಯ ಆ ಮನೆ ತುಂಬಿದರು. ಹಳೆಯ ಮಾಲೀಕನ ನೆನಪಿಗೆ ‘ಲಾ ಸೆಬಾಸ್ಟಿಯಾನಾ’ ಎಂದು ಕರೆದರು. ಕವಿ ಆ ನೆನಪಿಗೆ ‘ಲಾ ಸೆಬಾಸ್ಟಿಯಾನಾ’ ಕವಿತೆ ಬರೆದ.


ಅದೀಗ ವಾಲ್ಪರೈಸೊದ ಪ್ರವಾಸಿ ಕೇಂದ್ರಗಳಲ್ಲೊಂದು. ದಾರಿ ತಿರುವಿನಲ್ಲೆ ನೆರೂಡನ ಬೃಹತ್ ಪೇಂಟಿಂಗ್ ಸ್ವಾಗತಿಸುತ್ತದೆ. ನೆರೂಡ ಫೌಂಡೇಷನ್ ಮನೆಯ ಉಸ್ತುವಾರಿ ವಹಿಸಿಕೊಂಡಿದೆ. ನಿಯಮಿತ ಜನರನ್ನು ತಂಡಗಳಲ್ಲಿ ಒಳಬಿಡುತ್ತಾರೆ. ಏನನ್ನೂ ಮುಟ್ಟಬಾರದು, ಫೋಟೋ ತೆಗೆಯಬಾರದು! ಕೈಲಿ ಆಡಿಯೋ ಹಿಡಿದು, ನೆರೂಡನ ದನಿಯಲ್ಲಿ ಸ್ಪ್ಯಾನಿಶ್ ಮಾತು/ಕವಿತೆಗಳನ್ನು, ಅದರ ಇಂಗ್ಲಿಷ್ ಅನುವಾದವನ್ನು ಕೇಳುತ್ತ ಮನೆ ಮೆಟ್ಟಿಲು ಹತ್ತಬೇಕು.



ಲಾ ಸೆಬಾಸ್ಟಿಯಾನಾ ಐದು ಅಂತಸ್ತುಗಳ, ಸಾಕಷ್ಟು ಗಾಳಿ-ಬೆಳಕುಗಳಿರುವ ಬಹುವರ್ಣ ಕಲಾಕೃತಿಯಂತಹ ಮನೆ. ಅದರ ಕಿಟಕಿಗಳು ಇಡಿಯ ನಗರದರ್ಶನ ಮಾಡಿಸುವಷ್ಟು, ಕಡಲು-ಆಗಸ ಕಾಣಿಸುವಷ್ಟು ದೊಡ್ಡದಾಗಿವೆ. ಮೆಟ್ಟಿಲ ಹತ್ತುವಾಗ ಆಚೀಚೆ ನಗರ-ದೇಶಗಳ ನಕಾಶೆಗಳು; ದೀಪಕಂಬಗಳು, ಅಪರೂಪದ ತೈಲವರ್ಣ ಚಿತ್ರಗಳು, ಲೋಹ ಪಾತ್ರೆಗಳು, ಹೂಜಿಗಳು, ಬಣ್ಣದ ಗಾಜು ಮತ್ತಿತರ ವಸ್ತುಗಳು ಕಾಣಿಸುತ್ತವೆ.

ಮೊದಲ ಮಹಡಿಯಲ್ಲಿ ದೊಡ್ಡ ಹಜಾರ ಮತ್ತು ಪ್ರವೇಶ ಕೋಣೆಗಳಿವೆ. ಹಲಬಗೆಯ, ಹಲವರ್ಣದ ಕಪ್ಪೆಚಿಪ್ಪುಗಳನ್ನು ಗೋಡೆಗೆ ಹೊದಿಕೆಯಂತೆ ಅಂಟಿಸಲಾಗಿದೆ. ಎರಡನೆಯ ಮಹಡಿ ನೆರೂಡ ಇದ್ದಾಗ ಅತಿಥಿಗಳನ್ನು ಬರಮಾಡಿಕೊಳ್ಳುವ ಜಾಗವಾಗಿತ್ತು. ಮೂರನೆ ಮಹಡಿಯಲ್ಲಿ ಲಿವಿಂಗ್ ರೂಂ, ಡೈನಿಂಗ್ ರೂಂ, ಬಾರ್ ಇವೆ. ಕೋಣೆಯ ನಡುವಲ್ಲಿ ನೆರೂಡ ಸ್ವತಃ ವಿನ್ಯಾಸ ಮಾಡಿದ ಲಾಟೀನು ಬುರುಡೆ ಆಕಾರದ ಬೃಹತ್ ಫೈರ್‌ಪ್ಲೇಸ್ ಇದೆ. ನೂರಾರು ತರಹದ ಗಾಜಿನ ಲೋಟ, ಮಗ್, ಆಕರ್ಷಕ ಬಾಟಲಿಗಳು ಬಾರ್‌ನಲ್ಲಿವೆ. ನೆರೂಡ ಎಲ್ಲೇ ಹೋಗಲಿ, ಚಿಲಿಯ ವೈನ್ ಅವನ ಜೊತೆಯಿರುತ್ತಿತ್ತು. ಹಲವು ತೆರನ ವೈನ್‌ಗಳು ಮನೆಯ ಬಾರಿನಲ್ಲಿರುತ್ತಿದ್ದವು. ಚಿಲಿ ವೈನ್‌ಗಾಗಿ ಪ್ರಖ್ಯಾತ. ವೈನ್, ಮೊಟ್ಟೆಯ ಬಿಳಿ, ನಿಂಬೆಹಣ್ಣು ಹಾಗೂ ಸಕ್ಕರೆ ಸೇರಿಸಿ ಮಾಡಿದ ಚಿಲಿಯನ್ ಕಾಕ್‌ಟೇಲ್ ಅದ್ಭುತ ರುಚಿಯದಂತೆ. ಗೆಳೆಯರು ಬಂದಾಗ ಅವರೊಡನೆ ಗಂಟೆಗಟ್ಟಲೆ ಹರಟುತ್ತ ವೈನ್ ಕುಡಿಯುವುದು ಕವಿಗೆ ಬಲುಪ್ರಿಯವಾಗಿತ್ತು.

ನಾಲ್ಕನೆಯ ಮಹಡಿಯಲ್ಲಿ ಮಲಗುವ ಹಾಗೂ ಸ್ನಾನದ ಕೋಣೆ ಇವೆ. ಮಟಿಲ್ಡಾಳ ವಾರ್ಡ್‌ರೋಬಿನ ಬಾಗಿಲಲ್ಲಿ ಚೀನಾ ಸುಂದರಿಯರ ವರ್ಣಚಿತ್ರಗಳಿವೆ. ಎಲ್ಲ ಕೋಣೆ, ಹಜಾರಗಳಂತೆ ಇಲ್ಲೂ ಇಂಚಿಂಚಿಗೂ ಒಂದು ಆಸಕ್ತಿದಾಯಕ ವಸ್ತುವಿದೆ. ಮೇಲಿನ ಐದನೆಯ ಮಹಡಿ ನೆರೂಡನ ಓದಿ ಬರೆಯುವ, ಲೈಬ್ರರಿಯಿರುವ ಕೋಣೆ. ಅಲ್ಲಿ ಗ್ರಾಮೋಫೋನು, ಅದರ ಡಿಸ್ಕುಗಳು, ಎಲ್ಲಿಯದೊ ಹಳೆಯ ಸಂದೂಕ, ದಿಕ್ಸೂಚಿ, ಕೈಬರಹದ ಡೈರಿಗಳಿವೆ. ಅವನ ೫,೦೦೦ ಅಮೂಲ್ಯ ಪುಸ್ತಕಗಳು ಕಪ್ಪೆಚಿಪ್ಪುಗಳ ಬೃಹತ್ ಸಂಗ್ರಹದೊಂದಿಗೆ ಸೆಂಟಿಯಾಗೋ ವಿಶ್ವವಿದ್ಯಾಲಯ ಸೇರಿದ್ದರೂ ಕೆಲವು ಈ ಮನೆಯ ಲೈಬ್ರರಿಯಲ್ಲಿವೆ. ಅಲ್ಲಿಯೇ ನೆರೂಡನನ್ನು ಬಹುವಾಗಿ ಪ್ರಭಾವಿಸಿದ ಕವಿ ವಾಲ್ಟ್ ವಿಟ್ಮನ್‌ನ ಆಳೆತ್ತರದ ಫೋಟೋ ಇದೆ. ಈ ಫೋಟೋ ತಂದಾಗ ಮನೆಯ ಕೆಲಸದಾತ ‘ಅದು ನಿಮ್ಮ ತಂದೆಯದೆ?’ ಎಂದು ಕೇಳಿದನಂತೆ. ನೆರೂಡ ‘ಹೌದು, ನನ್ನ ಕಾವ್ಯದ ತಂದೆ’ ಎಂದನಂತೆ! ನೆರೂಡನ ಕುರ್ಚಿಯ ಆಚೀಚೆ ಹಡಗಿನ ನಾವಿಕನ ಕೋಣೆಯಲ್ಲಿರುವಂಥ ವಸ್ತುಗಳೇ ಇವೆ. ಅಲ್ಲಿ ಕುಳಿತರೆ ಗಾಜಿನ ಆಳೆತ್ತರದ ಕಿಟಿಕಿಯಿಂದ ಬಂದರು, ಕಡಲತೀರ ಪಕ್ಕದಲ್ಲೇ ಇರುವ ಹಾಗೆ ಕಾಣುತ್ತದೆ. ನೇವಿಗೇಷನ್ ರೂಮಿನಲ್ಲಿರುವ ಅನುಭವವಾಗುತ್ತದೆ.

ಒಟ್ಟಾರೆ ತುಂಬ ಕಕ್ಕುಲಾತಿಯಿಂದ ಮನೆಗಳ ರೂಪಿಸಿದ ಹೆಣ್ಣು ಮನಸ್ಸು ನೆರೂಡನದು. ತಾನು ಮರಣದ ಬಳಿಕ ಹದ್ದಾಗಿ ಮನೆಯೊಳ ಬರುತ್ತೇನೆ ಎಂದು ಕವಿ ಹೇಳುತ್ತಿದ್ದನಂತೆ. ಒಮ್ಮೆ ಕಿಟಕಿಯೆಲ್ಲ ಮುಚ್ಚಿದ್ದರೂ ಹೇಗೋ ಒಂದು ಹದ್ದು ಮನೆಯೊಳಬಂದಾಗ ನೆರೂಡನ ಗೆಳೆಯ ಡಾ. ವೆಲಾಸ್ಕೊ ಅಚ್ಚರಿಯಿಂದ ಕವಿಮಾತು ನೆನಪಿಸಿಕೊಂಡಿದ್ದ. ವಾಲ್ಪರೈಸೊದ ವಸಂತದೊಂದಿಗೆ ಬಣ್ಣಬಣ್ಣದ ಲಾ ಸೆಬಾಸ್ಟಿಯಾನಾ ತಾನೂ ಅರಳಿದೆ. ಆ ಮನೆ ನೋಡಿ ಬರುವಾಗ ಕವಿಚೇತನವು ಹಕ್ಕಿಯಾಗಿ, ಹಾಡಾಗಿ ಅಲ್ಲೆಲ್ಲ ಆವರಿಸಿರುವುದು ನಮ್ಮರಿವಿಗೆ ಬರುತ್ತದೆ.



‘ಕವಿತೆಗಿಂತ ಅಪಾಯಕಾರಿಯಾದ ಯಾವುದೂ ಇಲ್ಲಿಲ್ಲ..’

ವಾಲ್ಪರೈಸೊ ನಗರ ತನ್ನ ಕಳೆದ ಶತಮಾನದ ಗತವೈಭವವನ್ನು ನೆನಪಿಸಿಕೊಂಡು ಬಿಕ್ಕುತ್ತಿದ್ದ ದಿನಗಳಲ್ಲಿ ಅಲ್ಲಿಗೆ ಬಂದು ನೆಲೆಸಿದ ನೆರೂಡ ನಗರದ ಪ್ರಸಿದ್ಧಿಯನ್ನು ಜೀವಂತವಾಗಿಟ್ಟವರಲ್ಲಿ ಒಬ್ಬನಾಗಿದ್ದ. ಇಡಿಯ ದಕ್ಷಿಣ ಅಮೆರಿಕ ಹಾಗೂ ಚಿಲಿ ತೀವ್ರ ಸಂಘರ್ಷ ಎದುರಿಸುತ್ತಿದ್ದ ಕಾಲಕ್ಕೆ ನೆರೂಡ ಸಾಕ್ಷಿಯಾಗಿದ್ದ. ಚಿಲಿ ದೇಶವನ್ನು ಸರ್ವಾಧಿಕಾರಿ ಪಿನೊಶೆ ಆಳತೊಡಗಿದ ಮೇಲೆ ಮಾರ್ಕ್ಸಿಸ್ಟ್ ಚಿಲಿಯ ಅವನ ಕನಸು ಭಗ್ನವಾಗಿತ್ತು. ಅವನ ಮನೆಗಳು ಪೊಲೀಸರಿಂದ ದಾಳಿಗೊಳಗಾದವು. ಅವನು ವಿಶ್ವವಿದ್ಯಾಲಯಕ್ಕೆ ನೀಡಿದ ಪುಸ್ತಕ-ವಸ್ತುಗಳನ್ನು ಪಡೆಯದಿರುವಂತೆ ಉನ್ನತಮಟ್ಟದ ಒತ್ತಡಗಳು ಬಂದವು. ಅವು ಕೊನೆಗೆ ಏನಾದವೋ ಇವತ್ತಿಗೂ ಗೊತ್ತಿಲ್ಲ. ನೆರೂಡನೇ ‘ಅವು ಕಡಲಾಳ ಸೇರಿರಬಹುದು ಅಥವಾ ಕಾಳಸಂತೆಯ ದಾರಿ ಹಿಡಿದಿರಬಹುದು’ ಎಂದು ನೊಂದುಕೊಂಡಿದ್ದ. ಇಸ್ಲಾ ನೆಗ್ರಾದ ಮನೆ ತಪಾಸಣೆಗೊಳಗಾದಾಗ, ‘ಎಲ್ಲಿ ಬೇಕಾದರೂ ಹುಡುಕಿ, ಕವಿತೆಗಿಂತ ಅಪಾಯಕಾರಿಯಾದ ಯಾವುದೂ ಇಲ್ಲಿ ಇಲ್ಲ..’ ಎಂದು ಹೇಳಿದ್ದ. ಅವನು ತನ್ನ ದೇಶದಲ್ಲಿ ಅತಿ ಪ್ರಖ್ಯಾತನಾಗಿದ್ದ, ಅತಿ ದ್ವೇಷದ ಬೆಂಕಿಗೆ ಸುಟ್ಟುಕೊಂಡವನೂ ಆಗಿದ್ದ. ಜಗತ್ತಿನಲ್ಲೆ ಅವನು ಪ್ರಸಿದ್ಧ ಕವಿಯಾಗಿದ್ದ. ಆದರೆ ಅತ್ಯಂತ ಕಡಿಮೆ ಓದಲ್ಪಟ್ಟ ಕವಿಯೂ ಆದ. ಯುದ್ಧ, ಸಂಸ್ಕೃತಿ, ಪ್ರೇಮ, ಸಂಬಂಧ, ಇತಿಹಾಸ, ಜನ, ನೆಲ, ಸ್ಮರಣಗೀತೆ - ನಮ್ಮ ನೆರೂಡ ಏನು ಬರೆದ, ಏನು ಬರೆಯಲಿಲ್ಲ! ಆದರೆ ಅವನನ್ನು ಸಮಗ್ರವಾಗಿ ಓದಿದವರು, ಬರಹ-ಬದುಕು-ಆಶಯಗಳ ಒಟ್ಟಿಗೆ ಅರ್ಥ ಮಾಡಿಕೊಂಡವರು ಹೆಚ್ಚಿನವರಿಲ್ಲ.

ಗೆಳೆಯ ಅಲ್ಲಂಡೆಯ ಸಾವಿನಿಂದ ಜರ್ಝರಿತನಾಗಿದ್ದ ನೆರೂಡನಿಗೆ ಪಿನೊಶೆ ಆಳ್ವಿಕೆಯಲ್ಲಿ ಬದುಕುವ ಇಚ್ಛೆಯಿರಲಿಕ್ಕಿಲ್ಲ. ಸರ್ವಾಧಿಕಾರಿಯು ಆಡಳಿತ ಹಿಡಿದು ಕೇವಲ ೧೨ ದಿನಗಳಲ್ಲಿ ತೀರಿಕೊಂಡ. ಕ್ಯಾನ್ಸರ್ ಉಲ್ಬಣಿಸಿ ಮರಣ ಸಂಭವಿಸಿತು ಎನ್ನಲಾದರೂ ಸಹ, ಕೊನೆ ಗಳಿಗೆ ಒಬ್ಬ ವೈದ್ಯ ಬಂದು ಹೊಟ್ಟೆಗೆ ಇಂಜೆಕ್ಷನ್ ಚುಚ್ಚಿ ಹೋದ ಆರೇ ತಾಸುಗಳಲ್ಲಿ ಅವನು ಕೊನೆಯುಸಿರೆಳೆದ. ಎಂದೇ ಅವನದು ಕೊಲೆ ಎಂಬ ಆರೋಪ ಕೇಳಿಬಂತು. ಮರಣೋತ್ತರ ಶವಪರೀಕ್ಷೆ ಆಯಿತು, ವರದಿ ಬಂತು. ಏನೋ ಕೈವಾಡ ಇದೆ ಎಂದರು; ಇಲ್ಲ ಎಂದು ಪರಿಣಿತರೆಂದರು. ಕೊನೆಗೆ ಕವಿಯ ಅಂತ್ಯಸಂಸ್ಕಾರ ಸಾರ್ವಜನಿಕ ಸಮಾರಂಭವಾಗಲು ಪಿನೊಶೆ ಅನುಮತಿ ಕೊಡಲಿಲ್ಲ. ಆದರೂ ಸಾವಿರಾರು ಜನ ತಮ್ಮ ನೆಚ್ಚಿನ ಕವಿಯ ದರ್ಶನ ಪಡೆದರು. ನೆರೂಡನ ಹೆಸರನ್ನು ಎದೆಯೊಳಗಿಟ್ಟುಕೊಂಡೇ ಬದುಕಿದರು.

‘ನಾನು ನನ್ನ ಮನೆ ಇಸ್ಲಾ ನೆಗ್ರಾವನ್ನು ಜನತೆಗೆ ಅರ್ಪಿಸುತ್ತಿದ್ದೇನೆ; ಒಂದಲ್ಲ ಒಂದು ದಿನ ಅದು ಯೂನಿಯನ್ ಮೀಟಿಂಗುಗಳ ಸ್ಥಳವಾಗುತ್ತದೆ, ಗಣಿ ಕಾರ್ಮಿಕರು, ರೈತರು ವಿಶ್ರಾಂತಿ ಪಡೆಯುವ ಜಾಗವಾಗುತ್ತದೆ. ಹೊಟ್ಟೆಯ ಕಿಚ್ಚಿನ ಜನರ ಮೇಲೆ ನನ್ನ ಕಾವ್ಯವು ತೀರಿಸಿಕೊಳ್ಳುವ ಪ್ರತೀಕಾರ ಅದು’ ಎಂದು ಹೇಳಿದ ನೆರೂಡ ಬಹುಜನರಿಗಾಗಿ ಬರೆದ, ಬಾಳಿದ ಕವಿ. ಎಂದೇ ಅವನ ಕವಿತೆಗಳು ಜನರ ಎದೆಯ ಹಾಡುಗಳಾದವು. ‘ಎಲ್ಲ ವಸ್ತುಗಳಿಗೂ ಕೊನೆಗೇನಾಗುವುದು? ಸಾವು ಮತ್ತು ಮರೆವು ಎರಗುವುದು’ ಎನ್ನುತ್ತಾನೆ ನೆರೂಡ. ಆದರೆ ಅವನ ಕವಿತೆಗಾಗಲೀ, ಮನೆಗಾಗಲೀ, ನೆನಪುಗಳಿಗಾಗಲೀ ಇನ್ನೂ ಆ ಎರಡೂ ಬಂದೆರಗಿಲ್ಲ. ಚಿಲಿ ಎಂಬ ಪುಟ್ಟ ದೇಶದ ಲಾ ಸೆಬಾಸ್ಟಿಯಾನಾಗೆ ಪ್ರತಿನಿತ್ಯ ಬಂದುಹೋಗುವ ಕಾವ್ಯಾಭಿಮಾನಿಗಳು, ಜಗತ್ತಿನ ಹಲವೆಂಟು ಭಾಷೆಗಳಿಗೆ ಇವತ್ತಿಗೂ ಮತ್ತೆಮತ್ತೆ ಅನುವಾದಗೊಳ್ಳುತ್ತಲೇ ಇರುವ ಅವನ ಕವಿತೆಗಳೇ ಇದಕ್ಕೆ ಸಾಕ್ಷಿಯಾಗಿವೆ.








Friday 8 July 2016

ಮದ್ದೂರಿ ನಾಗೇಶ ಬಾಬು ಕವಿತೆ







ಹೊಲಾರ ಅವ್ವ

ಯಾವತ್ತಾದ್ರೂ ನೀವು
ಸಾರ್ವಜನಿಕ ಆಸ್ಪತ್ರೆ ಅನ್ನೋ ಹೆಣದಂಗ್ಡೀಲಿ
ಕಣ್ಣೀರ ಹೊಂಡನೇನಾದ್ರು ನೋಡಿದ್ರಾ?
ಅದು ನನ್ನವ್ವ!

ಯಾವತ್ತಾದ್ರು ನೀವು
ಗೋರಿ ಮೇಲೊಂದು ಒಂಟಿ ಶಿಲುಬೆ
ಮೇಲೊಂದು ಗೋರಿಕಲ್ಲೂ ಇಲ್ದ ಮಣ್ಣಿನ ಗುಡ್ಡೆನ
ಸ್ಮಶಾನದಲ್ಲಿ ನೋಡಿದ್ರಾ?
ಅದು ನನ್ನವ್ವ!

ನನ್ನವ್ವ ಯಶೋದಾನೂ ಅಲ್ಲ, ಕೌಸಲ್ಯಾನೂ ಅಲ್ಲ
ಚಂದ್ರನ್ನ ತೋರುಸ್ತ ಬೆಳ್ಳಿ ಚಮಚದಲ್ಲಿ
ಹೊಟ್ಟೆ ತುಂಬೋವಷ್ಟು ಅನ್ನ ಎಂದೂ ಹಾಕ್ಲಿಲ್ಲ
ಒತ್ತಾಯ ಮಾಡಿ ಬಿಸ್ಕೀಟು ತಿನಿಸ್ಲಿಲ್ಲ
ಅವಳ ಕಣ್ಣಲ್ಲಿ ಎಂಥಾ ಬೆಳಕೂ ಇರ‍್ಲಿಲ್ಲ
ಪೆಪ್ಪರ್‌ಮಿಂಟ್ ಕೊಡ್ಸು ಅಂತ ರಚ್ಚೆ ಹಿಡಿದ್ರೆ
ಬೈದು, ಬರ್ಲು ತಗಂಡು ಸರೀ ಬಡಿತಿದ್ಲು.
ಇಂಥಾ ಅವ್ವನ ಬಗ್ಗೆ ನಾನೆಂಥ ಹಾಡು ಬರೀಲಿ?

ಎಲ್ರು ತಂ ತಾಯಂದ್ರ ಮೇಲೆ ಹಾಡು ಬರಿತಾರೆ
ಅವರೆಲ್ಲ ರಾಣಿಯರು, ಹಾಲುಣಿಸಿದವರು
ನನ್ನವ್ವನ ಬಗ್ಗೆ ಏನಿದೆ ಅಂಥಾ ಹೇಳಿಕೊಳೋವಂಥಾದ್ದು?
ಒಳ್ಳೆ ಹೆಸರಿಲ್ಲ, ಮರ್ಯಾದೆ ಬರೊ ಗುಣವಿಶೇಷ ಇಲ್ಲ!
ಅವ್ಳನ್ನ ಕರೆಯೋದೆ ಸೂಳೆ, ಮುಂಡೆ ಅಂತ.
ಒಂದು ಹಿಡಿ ಕೂಳಿಗೆ ಜೀವಮಾನಿಡಿ ಬಡಿದಾಡಿದ ಬುದ್ಧಿಗೇಡಿ
ಹಿಂಗಿರ‍್ತ ಈ ವರ್ಣಮಾಲೆ ಅಕ್ಷರಗೋಳು ಯಾವತ್ತಾದ್ರು
ಇಂಥ ಅವ್ವನ ಬಗ್ಗೆ ಹಾಡು ಬರೆಯಕ್ಕೆ ಒಪ್ತಾವೆ ಅಂತೀರ?
ಅವಳ ಮೇಲೊಂದು ಪದ್ಯ ಬರೆದ್ರೆ ಛಂದಸ್ಸು ಹೊಂದಿಕೊಳುತ್ತಾ?

ಎಲ್ಲಾರ ಅಮ್ಮಂದ್ರು ಗಾಢ ನಿದ್ದೇಲಿರೋವಾಗ
ನನ್ನವ್ವ ಬೆಳೆದು ನಿಂತ ಹೊಲದ ಎದುರು ಇರೋಳು.
ದುಡ್ಡಿದ್ದ ಅಮ್ಮಂದ್ರು ‘ಅತ್ಯುತ್ತಮ ತಾಯಿ’ ಬಹುಮಾನ ಪಡಿವಾಗ
ಹೊಲಾರ ಕೇರಿಯ ನನ್ನವ್ವ
ಒಂದು ಬಾಯಿ ನೀರು ಕುಡದ್ಲು ಅಂತ ಸಿಕ್ಸೆ ಅನುಬೈಸ್ತಿದ್ಲು
ಉಳದೋರ ಅಮ್ಮಂದ್ರು ಮಾ ನಾಯಕಿಯರಂಗೆ ಆಳುವಾಗ
ಹೊಲಾರ ನಮ್ಮವ್ವ ಹಕ್ಕಿಗಾಗಿ ಹೋರಾಡ್ತಿದ್ಲು
ಯಾರೇ ಆಗ್ಲಿ, ಅವ್ರ ತಾಯಿ ಅಂದ್ರೆ
ಕೂಸಿಗೆ ಹಾಲು ಕುಡ್ಸಿದ್ದು, ಜೋಗುಳ ಹಾಡಿದ್ದು ನೆನಪು ಮಾಡ್ಕೊತಾರೆ.
ನಂಗೆ ಮಾತ್ರ ಕಳೆ ತೆಗೆಯೋ, ಗೇಯೋ ಅವ್ವನೆ ನೆಪ್ಪಿಗ್ ಬರೋದು.

ಕಣ್ಣಿಗೇ ಕಾಣದ ಇಂಥಾ ಅವ್ವ
ತನ್ನ ಹೆಣ್ತನನೇ ಗೊತ್ತಿಲ್ದ ಈ ಅವ್ವನ ಬಗ್ಗೆ ಏಂತಾನೆ ಬರೀಲಿ?
ಕೋಳಿ ಕೂಗ್ದಾಗಿಂದ ರಾತ್ರಿ ಅಪ್ಪ ಮುಟ್ಟೋ ತನ
ಅವ್ವ ತಾನು ಹೆಣ್ಣು ಅನ್ನದ್ನೆ ಮರ‍್ತು ಬಿಟ್ಟಿರ‍್ತಾಳೆ!

ನನ್ನವ್ವ ಯಾವತ್ತೂ ಒಂದೇಒಂದು ಜೋಗುಳ ಹಾಡಲಿಲ್ಲ
ಹಸ್ತು ಹಸ್ತು ಅವಳ ಗಂಟ್ಲು ಎಂದೋ ಒಣಗೋಗಿದೆ
ಅವಳು ಯಾವತ್ತೂ ನನ್ನ ತಟ್ಟಿ ಮಲಗಿಸ್ಲೂ ಇಲ್ಲ
ಎಂದೋ ಅವಳ ಕೈ ಕೂಲಿ ಕೆಲ್ಸದ ಸಲಕರಣೆ ಆಗ್ಬಿಟ್ಟಿದಾವೆ

ಉಳದ ಮಕ್ಳು ಅಮ್ಮಂದ್ರ ಕೈ ಹಿಡ್ದು ಪಿಕ್ನಿಕ್ಕಿಗೆ ಹೋದ್ರೆ
ನನ್ನವ್ವನ ಕಣಿವೆಯಂತ ಹೊಟ್ಟೇಗೆ ಅಂಟಿ ಮಲಗ್ತಿದ್ದೆ ನಾನು
ಉಳದೋರೆಲ್ಲ ತಾಯಿನೆ ದೇವ್ರು ಅಂತ ಪೂಜೆ ಮಾಡ್ತಿರಬೇಕಾದ್ರೆ
ಶಾಲೆ ಫೀಸು ಕೊಡತಿಲ್ಲ ಯಾಕಂತ ಸಿಟ್ಟಿಲೆ ಬೈತಿದ್ದೆ ನಾನು
ಉಳದ ಮಗಂದ್ರು ತಮ್ಮಮ್ನ ತಲೆನೋವಿಗೆ ತಾವೇ ಸಂಕ್ಟ ಪಡ್ತಿರಬೇಕಾದ್ರೆ
ಕಾಯ್ಲೆ ಬಿದ್ದಿರೊ ಈ ಅವ್ವ ಯಾಕ್ ಸಾಯ್ತಿಲ್ಲ ಅಂತ ಗೊಣಗ್ತಿದ್ದೆ ನಾನು.
ಏನೇಳಲಿ?

ಮಳೇಲಿ ತೊಪ್ಪೆಯಾದೆ ಅಂತ ಅವ್ವನ ಸೀರೇಲಿ ಹೊಕ್ಕಂಡ್ರೆ
ಒಂದು ಸಾವ್ರ ತೇಪೆ ಅಣಕ್ಸಿದ್ವು ನನ್ನ
ಒಣಗಿದ ಗಂಟ್ಲು ಒದ್ದೆ ಆಗ್ಲೀಂತ ಅವಳ ಮೊಲೆ ಚೀಪಿದ್ರೆ
ಪಕ್ಕೆಲುವು ಸ್ವಾಟೆಗ್ ಚುಚ್ಚಿ ತಿವುದ್ವು ನನ್ನ.

ಏನೇ ಆದ್ರೂ
ಈ ಭಾಷೆ, ಈ ಪದ
ನನ್ನವ್ವನ ಮೇಲೆ ಹಾಡು ಬರೆಯಕ್ಕೆ ಯಾವತ್ತೂ ಸಾಲ್ದು
ಮನುಶ್ಳೇ ಅಲ್ಲದೋಳ ಮೇಲೆ
ಲಕ್ಷಾಂತರ ಅಮ್ಮಂದ್ರ ನಡುವೆ ದನದಂಗೆ ಇರೋಳ ಮೇಲೆ
ಯಾರು ಹೆತ್ತ ಮಕ್ಳನ್ನ ಪಶುಗಳಂಗೆ ನೋಡ್ತಾರೋ ಅಂಥ ಅವ್ವನ ಮೇಲೆ
ಯಾವತ್ತೂ ಹಾಡು ಬರೆಯೋಕಾಗಲ್ಲ ಈ ಭಾಷೆಗೆ, ಈ ಪದಗಳಿಗೆ.

ಅಂಬೇಡ್ಕರ್ ನಗರ






ಆ ಕೊಪ್ಪಲಲ್ಲಿ ಬರಿ ಗೋಡೆಗಳಷ್ಟೆ ಇಲ್ಲ
ಮಣ್ಣು.. ಮಣ್ಣು ಅಲ್ಲಿ ಉಸಿರಾಡ್ತಿದೆ
ಆ ಕೊಪ್ಲೇ ನಂ ಹೃದಯ
ಅಲ್ಲಿ ಪ್ರಾಣಜೋತಿಗಳೇ ಉರಿತಿವೆ

ಮೇಲ್ಜಾತಿ ಹೊಸಲು ಸುಮ್ಮಗಿರಬೋದು
ಅವಮಾನ ಆದ್ರೂ ಸುಮ್ಮಗಿರೊ ಗುಡುಸ್ಲು ಎಲ್ಲಾದ್ರೂ ಇದ್ದಾವು
ಆದ್ರೆ ಪಂಚಮರ ಕೊಪ್ಪಲಲ್ಲಿ ಬರಿ ಗುಡುಸ್ಲಷ್ಟೆ ಇಲ್ಲ
ಅಲ್ಲಿ ಹೃದಯಗಳಿದಾವೆ, ಅವು ಹೆಂಗ್ ಸುಮ್ಮನಿರ‍್ತಾವೆ?

ಕೊಪ್ಪಲು ಅಂದ್ರೆ ಜನ
ಎಂತಾ ನಂಟು ಅವ್ರುದು ಅಂದ್ರೆ
ಅಡಿಗೆನೆ ಮಾಡಲ್ಲ ಯಾರೋ ಒಬ್ರು ಸತ್ರೆ
ಹಿಂಗಿರ‍್ತ ಹೆಗಲ ಮೇಲೆ ಜನಿವಾರ ಇರೊ ನೀನು
ಒಳಗ್ ಬಂದಿದ್ ಅದೆಂಗೆ?

ಹೊರಗೇ ನಿಂತಿದ್ರೂ ಸೈತ
ಇಡೀ ಕೊಪ್ಪಲೆ ನಿಂಗೆ ಅಡ್ಡಬಿತ್ತು ಅಂದ್ರೆ ಸಾಕ?
ನಮ್ಮನ್ನ ಹೊರದಬ್ಬಿ, ಗುಡುಸ್ಲ ಖಾಲಿಗೋಡೆ ತೋರ‍್ಸಿ
ಅದು ನೀನೆ ಖಾಲಿ ಮಾಡ್ಸಿದ್ದು ಅನಬೋದ?

ಇಲ್ನೋಡು, ಲೇ ಹುಡುಗ!
ಅವಲಕ್ಷಣ, ಕೆಟ್ಟ ಶಕುನ ಅಂತೆಲ್ಲ ನಮುನ್ನ
ಮನೆ ಬಿಟ್ ಓಡ್ಸೊ ಕಾಲ ಹೋಯ್ತ್, ತಿಳ್ಕ.
ಈಗ ಎಲ್ಲಕಡೆ ಹೊಸಾ ಮನೆ ಮೇಲೇಳ್ತಿದಾವೆ
ನಿಂಗ್ ಒಳಗೆ ಬರೊ ಒಂದೇ ಒಂದು ದಾರಿ ಇದೆ,

ರವಷ್ಟಾದ್ರು ನಾಚ್ಕೆ ಪಟ್ಕಳೋದು, ನೆನಪಿಟ್ಕ!

ಪಂಚಮ ಗೀತ 

ಬಾ ಇಲ್ಲಿ!
ನೋಡಲಿಕ್ಕೆ ನಿನಗೆ ಕಣ್ಣಿದ್ದರೆ
ತೋರಿಸುತ್ತೇನೆ,
ನೆಲವ ಫಲವತ್ತುಗೊಳಿಸಿರುವ ಜೀವಂತ ಹೆಣಗಳನ್ನು.
ತೋರಿಸುತ್ತೇನೆ,
ಅವಮಾನದ ನೆಲದಲ್ಲಿ
ಕಾಲಿಡಲು ಅಂಜುತ್ತ
ಭಯದ ಊರುಗೋಲು ಹಿಡಿದು
ಅಳುತ್ತ ನಡೆವ ಹೆಣಗಳನ್ನು.

ಬಾ ಇಲ್ಲಿ!
ಕೇಳಲು ಕಿವಿಯಿದ್ದರೆ
ಕೇಳಿಸುತ್ತೇನೆ,
ಜನರ ನಡುವಿದ್ದೂ ಒಂಟಿತನದ ಮುಳ್ಳುಮೋಡಗಳಿರುವ
ಆಗಸದ ದುಃಖಭರಿತ ಹಾಡುಗಳನ್ನು.

ಬಾ ಇಲ್ಲಿ!
ಮೂಸಬಲ್ಲವನಾಗಿದ್ದರೆ
ನಿರಂತರ ಹೊತ್ತುರಿಯುತ್ತಿರುವ
ಜಾತಿ ಬೆಂಕಿಯ ವಾಸನೆ  ತಿಳಿಸಿಕೊಡುತ್ತೇನೆ!

ಬಾ ಇಲ್ಲಿ!
ನೀ ನಿದ್ರಿಸಬಲ್ಲೆಯಾದರೆ,
ಹಸಿವು, ದಾಹ ಅವಮಾನಗಳ ಚಿಮುಕಿಸಿರುವ
ಕಂಬಳಿಯ ಹೊದೆಯಲು ಕೊಡುತ್ತೇನೆ.

ಬಾ ಇಲ್ಲಿ!
ರುಚಿ ನೋಡಬಲ್ಲೆಯಾದರೆ
ನಿನಗಾಗಿ ಕತ್ತೆಯಂತೆ ಗೇಯ್ದರೂ ನನ್ನ ಜಾತಿ ಜನರು
ಸಂಕಟದಿಂದ ಹೊಟ್ಟೆ ತುಂಬಿಸಿಕೊಳುವ ಗಾಳಿ ಕುಡಿಸುತ್ತೇನೆ.

ಬಾ ಇಲ್ಲಿ!
ಹಿಡಿದುಕೊಳ್ಳಬಲ್ಲೆಯಾದರೆ
ನಿನಗೊಂದು ಮುಷ್ಟಿ ಮರಳು ಕೊಡುತ್ತೇನೆ,
ಅಲೆಗಳು ಒಂದೇ ಸಮ ಒತ್ತುತ್ತ ಒದೆಯುತ್ತ ಇದ್ದರೂ
ಧೈರ್ಯದಿಂದ ಎದುರಿಸಿ ನಿಂತಿರುವ ಮುಷ್ಟಿ ಮರಳು.

ಇಲ್ಲಿ ಬಾ!
ನೀನೇ, ಬಾರಲೇ!

(ತೆಲುಗು ದಲಿತ ಕವಿ ಮದ್ದೂರಿ ನಾಗೇಶ ಬಾಬು (೧೯೬೪-೨೦೦೫) ಆಕಾಶವಾಣಿಯಲ್ಲಿ ಉದ್ಯೋಗದಲ್ಲಿದ್ದವರು. ಏಳು ಕವನ ಸಂಕಲನ, ನಾಲ್ಕು ದೀರ್ಘ ಕವಿತೆಗಳು, ಹಲವು ಪ್ರಬಂಧಗಳನ್ನು ಬರೆದಿದ್ದಾರೆ. ಜಾತಿವ್ಯವಸ್ಥೆಯ ಕಟುಟೀಕಾಕಾರಾಗಿದ್ದ, ರಾಜಿಯಿರದೆ ಜಾತಿ ವಿರೋಧಿಸುತ್ತಿದ್ದ ಬರಹಗಾರ-ಹೋರಾಟಗಾರರ ಸಾಲಿನಲ್ಲಿ ನಾಗೇಶ ಬಾಬು ಒಬ್ಬರು. ಅವರ ಅಕಾಲಿಕ ಮರಣದಿಂದ  ತೆಲುಗು ಸಾಹಿತ್ಯವು ಪ್ರತಿಭಾವಂತ ಲೇಖಕನನ್ನು ಕಳೆದುಕೊಂಡಿದೆ.)

ಚಿತ್ರಗಳು: ಕೃಷ್ಣ ಗಿಳಿಯಾರ್