Sunday 30 January 2022

ನನ್ನೊಳಗಿನ ದೇವತೆಯರು

 



ನನ್ನೊಳಗಿದ್ದಾರೆ ಹಲವು ದೇವತೆಯರು 

ತ್ಯಾಗಮಯಿ ನಿಸ್ವಾರ್ಥಿ ಪರಮಸಾಧ್ವಿಯರು   

ಹೊರಲಾಗದ ಕಿರೀಟ ಹೊತ್ತ

ಅಗೋಚರ ಹೆಗಲಾಳ್ತಿಯರು


ಮನೆಯೆಂಬುದು ಪಾರದರ್ಶಕ ಜೈಲು

ಕಣ್ಣಿಗೇ ಕಾಣಿಸವು ಗೋಡೆಗಳು ಗಾಜು

ಗುದ್ದಿ ಒಡೆಯದಂಥದಲ್ಲ, ಆದರೂ

ಗೋಡೆಯಿದೆಯೆಂದೇ ಮನಸು ನಂಬಲಾರದು 

ಇದ್ದಾಳಲ್ಲ, ನನ್ನೊಳಗಿನ ಸತಿ ಸಾವಿತ್ರಿ

ಅವಳಿರುವ ತನಕ ಗೋಡೆ ಕಾಣಲಾರದು

ಕಂಡರೂ ಒಡೆದು ದಾಟಲಾಗದು.


ಎರಡು ಉದ್ದ ಜಡೆ, ಎರಡೂ ಮುಂದೆ

ತೊನೆಯಬೇಕು ಆಚೀಚೆ ಗುಮ್ಮಟಗಳ ಮೇಲೆ

ಸಡಿಲ ಬ್ಲೌಸು, ಮುಂಬಾಗಿದ ನಡಿಗೆ

ಕಟ್ಟಿದ ಕೈ, ಪುಸ್ತಕ ಅವಚಿದ ಎದೆ

ಸೆರಗು ವಲ್ಲಿ ದುಪಟಿ ಹಿಜಬು

ಎಕ್ಸ್‌ಎಕ್ಸ್ ಕ್ರೋಮೋಸೋಮಿನ ಠಸ್ಸೆಗಳ 

ಹತ್ತಿಕ್ಕಬೇಕು, ಒತ್ತಾಯದಿ ಮುಚ್ಚಿಡಬೇಕು

ಸೋಕಿದರೆಂದು ನೋಡಿದರೆಂದು ಕಲ್ಲಾಗಬೇಕು 

ಅವಳಿದ್ದಾಳಲ್ಲ, ನನ್ನೊಳಗಿನ ಅಹಲ್ಯೆ 

ಅವಳಿರುವ ತನಕ ಕಣ್ಕಟ್ಟು ನಿಲುವುದಿಲ್ಲ.


ಬಯಲಲಿ ಅವ ಎಳೆದಿದ್ದಷ್ಟೇ ಅಲ್ಲ

ಕಣ್ಣಲೇ ಇದೆ ಅದೃಶ್ಯ ಲಕ್ಷ್ಮಣರೇಖೆ

ಕನಸಿನಲೂ ದಾಟಬಾರದ ರೇಖೆ

ಯೋಚನೆಯಲೂ ಮೀರಬಾರದ ರೇಖೆ

ಆಡುವಲ್ಲಿ ಹಾಡುವಲ್ಲಿ ಹಂಬಲಿಸುವಲ್ಲಿ

ಕೈಯಾರ ಎಳಕೊಂಡ ಸಾವಿರದ ರೇಖೆ 

ಅವಳಿದ್ದಾಳಲ್ಲ, ನನ್ನೊಳಗಿನ ಸೀತಾಮಾತೆ

ಅವಳಿರುವ ತನಕ ಈ ಗೆರೆಗೆ ಅಳಿವು ಇಲ್ಲ.


ಸಾವಿತ್ರಿ, ಸೀತೆ, ಅಹಲ್ಯೆ ..

ಸಂತೆಯಲಿದ್ದೂ ಒಂಟಿಯಾದಾಗ ಹುಟ್ಟಿದವರು

ನಗ್ನತೆಯಲೂ ಲಜ್ಜೆಯುದಿಸಿ ಬೆಳೆದು ನಿಂತರು


ಅನು, 

ದೈವತ್ವದ ದುಗುಡಕ್ಕೆ ಹೊಂದಿಕೊಳ್ಳುವ ಮೊದಲು

ನಿನ್ನೆದೆಯ ಗುಡಿಗಳ ಕೆಡವಿ ಹಾಕು 

ನಿನ್ನೊಳಗಿನ ದೇವತೆಯರ ಸುಲಿದು ಹಾಕು 

ಅವರ ಮನುಷ್ಯರಾಗಿಸು ನೀ ಮಾನವಿಯಾಗು

(Art: KrishNa GiLiyar)

ಪಕ್ಷಿ ದಾರಿ

 



ನೀಲಿ ಮುಗಿಲು ಕಡು ಕೆಂಪಾದ ಹೊತ್ತು

ಮಾಗಿ ಮಂಜು ಕಣಿವೆಗಿಳಿಯೋ ಹೊತ್ತು

ದೀಪ ದೇಹದೊಳಗೆ ಲೀನವಾಗೋ ಹೊತ್ತು

ಸಕಲ ಚರಾಚರಗಳ ಹೆತ್ತ ಕರಿ ಕಾನ ಅವ್ವ 

ಕತ್ತಾಲ ಹೊದಿಸಿ ಜೀವ ಪೊರೆಯೋ ಹೊತ್ತು


ಗುರು ಕರುಣದ ಅವತರಣವೋ ಎನುವಂತೆ

ನೆಲಮುಗಿಲ ಹರಹಿಗೆ ಸರಿಮಿಗಿಲು ಎನುವಂತೆ

ಇರುಳನಪ್ಪಿದ ಜಗಕೆ ಕೈ ದೀಪವೆಂಬಂತೆ

ಕಣಿವೆಯ ಮೌನಕೆ ಕಾಯ ಮೂಡಿದಂತೆ

ಆದಿಮ ಲೋಕದ ಗೂಡಿನಿಂದೆಂಬಂತೆ

ಹಾರಿ ಬಂತು ಪಕ್ಷಿಯೊಂದು ನನ್ನ ಕಡೆಗೆ


ಏರಲಾಗದ ಬೆಟ್ಟ ಏರಿ ಬಂದಿತು ಪಕ್ಷಿ

ಮೀರಲಾಗದ ಗಡಿಯ ಮುಟ್ಟ ಬಂತು

ಕರಗಲಾಗದ ಬರಫ ಬಾಷ್ಪವಾಗಿರುವಲ್ಲಿ

ಉಸಿರ ತಿದಿಯನೊತ್ತುತ್ತ ಬಂತು

ಅದು ಹರಿಗೋಲ ಕೊಕ್ಕಿನ ಪಕ್ಷಿ

ಮೈತ್ರಿ ಬಿಳಿಯ ಬಣ್ಣದ ಪಕ್ಷಿ

ಕರಿಮಾಯ ಬೊಟ್ಟೆ ಕಣ್ಣಾದ ಪಕ್ಷಿ

ಕರಿಕಾನ ಹರಹು ನೋಟವಾದ ಪಕ್ಷಿ


ಬೆಟ್ಟಸಾಲಳೆಯುತ್ತ ಕಣಿವೆಯಾಳ ನಿರುಕಿಸುತ

ಭರಭರನೆ ಏರುತ್ತ ತೇಲುತ್ತ ತುಯ್ಯುತ್ತ

ನೆತ್ತಿ ಮೇಲಿಳಿಯುತಿದೆ ಕಾಲ ಪಕ್ಷಿ 

ಹಾರಲಾರದವಳಿಗೆ ರೆಕ್ಕೆಯಂಟಿಸುವಂತೆ

ಎದೆಯ ಗೂಡಿನ ದುಗುಡ ಕೇಳುವಂತೆ

ಲೋಕ ಸತ್ಯವ ಕಿವಿಯಲುಸುರುವಂತೆ

ಅಂಟುನಂಟಿನ ಬಂಧ ಬಿಡಿಸುವಂತೆ 

ಇಳಿದಿಳಿದು ಬರುತಿದೆ ನನ್ನ ಕಡೆಗೆ


ಹಾರುತಿದೆ ಹಕ್ಕಿ ದಿನರಾತ್ರಿಗಳ ನಡುವೆ

ಹಾರುತಿದೆ ಬಂಧನ ಬಿಡುಗಡೆಯ ನಡುವೆ

ಅಲ್ಲಿ ಇಲ್ಲಿಗಳೆಂಬ ನಿಜಗಳ ನಡುವೆ

ಹೌದು ಅಲ್ಲಗಳೆಂಬ ಹುಸಿಗಳ ನಡುವೆ

ಮಾತು ಮೌನಗಳೆಂಬ ದ್ವೀಪಗಳ ನಡುವೆ

ದುಗುಡ ಸಂಭ್ರಮವೆಂಬ ಸಹಜಗಳ ನಡುವೆ

ಹುಟ್ಟು ಸಾವುಗಳೆಂಬ ದಂಡೆಗಳ ನಡುವೆ

ಹಾರುತ್ತ ಬರುತಿದೆ ತನ್ನ ನನ್ನ ನಡುವೆ


ಅಹಹ ಪಕ್ಷಿಯೇ, 

ಚೆಲ್ಲಬಾರದೆ ಬೀಜವಾಗಿಸಿ ನನ್ನ, ನಿನ್ನ ಕಣಿವೆಯ ಮೂಲೆಯಲಿ?

ಎತ್ತೊಯ್ಯಬಾರದೆ ನನ್ನ, ನಿನ್ನ ಬಲಿಷ್ಠ ಪಾದಗಳಲಿ?

ಕುಕ್ಕಿ ಹಿಸಿಯಬಾರದೆ ನನ್ನ, ನಿನ್ನ ಹರಿಗೋಲ ಕೊಕ್ಕಿನಲಿ?

ತೇಲಿಸಬಾರದೆ ನನ್ನ, ನಿನ್ನ ರೆಕ್ಕೆಗಳ ಕಂಪನದಲಿ?

ಹಾರಿಸಬಾರದೆ ನನ್ನ, ನಿನ್ನ ಮಿದುಗರಿಯ ಹಗುರದಲಿ? 

ತೋರಿಸಬಾರದೇ ಮಣ್ಣ ಕಣ್ಣ ಬಡವಿ ನಾ, ಬಾನ್‌ಬಯಲ ಹಾದಿ?


ಕರಿಕಾನ ಅವ್ವಾ, 

ಒಂದು ಹಕ್ಕಿಯಾಗಿಸು ನನ್ನನು

ಹಕ್ಕಿ ಉಲಿಯಾಗಿಸು ನನ್ನನು


(Art: Krishna GiLiyar)

ದೇವರಿಗೆ



ಮುಂಜಾನೆ ಮುಸ್ಸಂಜೆ

ಅಮ್ಮನ ಅನುದಿನದ ಸಲಹೆ 

‘ದೇವ್ರಿಗೊಂದ್ ದೀಪನಾರು ಹಚ್ಚೆ’ 

ಎನ್ನುವುದು.

ಸೋತೆನೆಂದುಕೊಳ್ಳದಿರಲಿ ಹೆತ್ತೊಡಲು ಎಂದು

ತುಪ್ಪದ ದೀಪ ಹಚ್ಚಿಟ್ಟು ಬಂದೆ ಅಂದು.


ಹಾಸಿಗೆ ಹಿಡಿದರೂ ಸೀತಮ್ಮನ ಮಗಳು 

ಬಲೇ ಸೂಕ್ಷ್ಮದ ಮೂಗಿನವಳು

ಎಂದೋ ಕಾಸಿಟ್ಟ ತುಪ್ಪದ ಜಂಬು

ಗುಂ ಎಂದು ಮನೆಯೆಲ್ಲ ಪಸರಿಸಲು

ಮೆಲುವಾಗಿ ಕರೆದಳು:

‘ಇದೆಂತ ತುಪ್ಪನೇ ಇದು? ಯಾವಾಗಿಂದು?

ಪಾಪ, ಅದು ಆ ದೇವರೆಂಬೋದು

ಗೂಡೊಳಗಿಟ್ಟ ಮೂರ್ತಿಯಾದರೇನು

ಕೂತಿರುತ್ತೆ ಕಣೆ ನೆಲದ ಪರಿಮಳಕೆ ಕಾದು. 

ಮಕ್ಕಳಿಗೆ ಕಮಟು ತುಪ್ಪ ಬಡಿಸ್ತೀಯಾ?

ಜಂಬು ತುಪ್ಪದ ದೀಪ ಯಾಕೆ ಹಚ್ತೀಯ?

ದೀಪ ಹಚ್ಚಿ ಕಮಟು ನಾತ ಹರಡಕ್ಕಿಂತ 

ಬೆಳಕೇ ಇಲ್ದ ಶುದ್ಧ ಕತ್ತಲೆನೇ ಇರಲಿ ತಗ

ಮರೆತೇ ಬಿಟ್ಯಾ ತುಪ್ಪ ಕಾಸೋ ಹದ?’


ಕಲಿತ ಹದ ಹೇಗೆ ಮರೆಯಲಿ ಅಮ್ಮಾ?

ಹದಿ ಬರುವಂತೆ ಹಾಲು ಕಾಸಿ

ಉಗುರು ಬೆಚ್ಚಗಿರುವಾಗ ಹೆಪ್ಪು ಹಾಕಿ

ಮೊಸರು ಸಿಹಿಯಿರುವಾಗಲೇ ಕಡೆದು

ಹೆಚ್ಚಿಲ್ಲ ಕಮ್ಮಿಯಿಲ್ಲ 

ಕಡೆಗೋಲ ಅಂಡೆಗೆ ಹೆಪ್ಪಳಿಕೆ ಬೆಣ್ಣೆ 

ತಾಗಬೇಕು, ತಾಗಿಯೂ ಅಂಟದಂತಿರಬೇಕು

ಅಕಾ ಆಗ ತೇಲುವ ನವನೀತವ

ನೀರಲದ್ದಿ ತಂಪಾಗಿಸಿಕೊಂಡ 

ಒದ್ದೆ ಕೈಗಳಲ್ಲಿ ಉಂಡೆ ಕಟ್ಟಿ ಹಿಂಡಿ 

ಒಳಗಣ ಮಜ್ಜಿಗೆ ಹನಿಗಳ ದಬ್ಬಿ

ನೀರಲಿ ಮುಳುಗಿಸಿಡಬೇಕು

ದಿನಕ್ಕೊಮ್ಮೆ ನೀರು ಬದಲಿಸುತ್ತಾ 

ದಿನದಿನದ ಬೆಣ್ಣೆ ಸೇರಿಸುತ್ತಾ

ವಾರಕೊಮ್ಮೆ ಕುದಿಸಿ, ಕಾಯಿಸಬೇಕು.

ಬಂಗಾರ ಬಣ್ಣ ಕೊತಗುಟ್ಟಿ 

ಚೊರಚೊರ ಸದ್ದು ನಿಂತು

ಘಮ್ಮೆನುವ ಪರಿಮಳ ಮನೆ ತುಂಬಿದಾಗ

ಚಣ ತಡೆದು ಚರಟವುಳಿಸಿ ಸೋಸಬೇಕು

ಮರೆತಿಲ್ಲ ಮಹರಾಯ್ತಿ ಹದದ ಪಾಠ 

ಸವುಡಿಲ್ಲ ಅಷ್ಟೇ ಯಾವುದಕ್ಕೂ ಈಗ


‘ಶ್, ಇಲ್ಬಾ..’

ಮಗಳು ಕರೆಯುತ್ತಿದ್ದಾಳೆ

‘ಮಾಮ್, ನೀನಿದ್ದರೂ ನಿನ್ನ ಭಕ್ತಿ ಬದಲಾದ ಹಾಗೆ

ಬೆಳಕು ಇದೆ, ಈಗ ದೀಪ ಬದಲಾಗಿದೆ.

ಅಪ್‌ಡೇಟಾಗು, ಕಾಲ ಓಡುತ್ತಲಿದೆ

ಬಿಟ್ಟಾಕು ಅಜ್ಜಿಯ ಇಂಪ್ರಾಕ್ಟಿಕಲ್ ಮೀಮಾಂಸೆ

ಹಚ್ಚು, ಪರಿಮಳ ಜಂಬಿರದ ಮೇಣದ ಹಣತೆ

ಇಲೆಕ್ಟ್ರಿಕ್ ಲೈಟು ಬೇಕೆಂದಷ್ಟು ಬೇಕೆಂದಲ್ಲಿ ಉರಿಯುತ್ತೆ 

‘ನಾನೇ ಕಾಸಿದ ಘಮ್ಮನೆ ತುಪ್ಪದ ದೀಪ’ ಎಂದೇಕೆ 

ದೇವರೆದುರು ತೋರುವಿರಿ ಅಹಮು?

ಕಡೆದು ಕಾಸಿ ಸೋಸಿ ಹದವೆಂದೇಕೆ ವೇಸ್ಟು ಟೈಮು?

ಈಸಿ, ಇಕೋ ಫ್ರೆಂಡ್ಲಿ ಆಗಿರಬೇಕಾದ ಜಮಾನ ಇದು’


ಅತ್ತ ಅಮ್ಮ ಹೇಳುತ್ತಲೇ ಇದ್ದಳು, 

‘ದೀಪವೆಂದರೆ ಏನೆಂದುಕೊಂಡೆಯೆ?

ಬತ್ತಿ ಸುಡಬೇಕು ತುಪ್ಪ ಆವಿಯಾಗಬೇಕು

ಬೆಂಕಿಯುರಿದರಷ್ಟೇ ಬೆಳಕು

ಇಂಗಿ ಆವಿಯಾದರಷ್ಟೇ ಘಮಲು

ಲಯವಾದರಷ್ಟೇ ಹುಟ್ಟೀತು ಹೊಸತು’


ಮುಸ್ಸಂಜೆಯ ಮನೆ

ಒಳಕೋಣೆಯಲಿ ಅಮ್ಮ

ಪಡಸಾಲೆಯಲಿ ಮಗಳು

ಹೊಸಿಲು ದಾಟಿದ ಮಿಂಚುಹುಳು 

ಮಿನುಮಿನುಗಿ ಸುಳಿಸುಳಿದು

ನಡುಮನೆಯ ಬುದ್ಧನ 

ಹೆಗಲ ಮೇಲೆ ಕುಳಿತುಕೊಂಡಿತು.


(sketch: Krishna GiLiyar)

Sunday 2 January 2022

ಸಾವಿತ್ರಿ ಬಾಯಿ ಫುಲೆ - ಹೃದಯದಿಂದ ಕಲಿಸಿದ ಶಿಕ್ಷಕಿ


ಭೂ ತಾಪಮಾನ ಏರುತ್ತಿದೆ. ಕೆರೆಕಟ್ಟೆ ಬಾವಿ ಹಳ್ಳತೊರೆಗಳಷ್ಟೇ ಅಲ್ಲ, ಮನುಷ್ಯನ ಅಂತರಾಳದ ಜೀವಸೆಲೆಯೂ ಒಣಗತೊಡಗಿದೆ. ವಿಷಪೂರಿತ ತ್ಯಾಜ್ಯಗಳಿಂದ ಮಲಿನವಾಗಿರುವುದು ಕೇವಲ ಪವಿತ್ರ ನದಿಗಳಷ್ಟೇ ಅಲ್ಲ, ಒಳ ಹರಿವ ಅಂತರಗಂಗೆಯೂ ಮಲಿನಗೊಂಡಿದೆ. ವಿಶ್ವದೆಲ್ಲೆಡೆ ಮಕ್ಕಳು, ಹೆಣ್ಮಕ್ಕಳು, ದುರ್ಬಲರ ಮೇಲೆ ದಾಳಿಯಾಗುತ್ತ ಜನರನ್ನು ಭಯಗ್ರಸ್ತ ಸ್ಥಿತಿಯಲ್ಲಿಡುವುದೇ ಹೋರಾಟ ಎನಿಸಿಕೊಳ್ಳುತ್ತಿದೆ. ಆಧುನಿಕ ಶಿಕ್ಷಣವು ವೈಚಾರಿಕ ಜಾಗೃತಿ ಮೂಡಿಸುವ ಬದಲು ಜನರನ್ನು ಮೂಢನಂಬಿಕೆಗಳಿಗೆ ಜೋತುಬೀಳುವಂತೆ ಮಾಡುತ್ತಿದೆ.

ಇದರ ನಡುವೆ ಅಸಹಿಷ್ಣುತೆ ಮತ್ತು ಕದಡುತ್ತಿರುವ ಜಾತಿ-ಧರ್ಮಗಳ ನಡುವಿನ ಸೌಹಾರ್ದ ಭಾರತದ ಇವತ್ತಿನ ದೊಡ್ಡ ಪರಿತಾಪವಾಗಿದೆ. ಪ್ರತಿ ಮನುಷ್ಯನ ಸುತ್ತಲೂ ಭಾಷೆ-ರಾಜ್ಯ-ಧರ್ಮ-ಜಾತಿ-ಉಪಜಾತಿಗಳೆಂಬ ಗುರುತುಗಳು ಹಲವು ಸ್ತರಗಳ ಬೇಲಿ ನಿರ್ಮಿಸಿ ಮನುಷ್ಯನನ್ನು ಕೇವಲ ಮನುಷ್ಯನೆಂದು ನೋಡುವ ಪರಿಪಾಠವೇ ಕಾಣೆಯಾಗುತ್ತಿದೆಯೇ ಎಂದು ಆತಂಕವಾಗುತ್ತಿದೆ. ಬಹಳ ಜನರಿಗೆ ಈ ದೇಶದ ಸಾಮಾಜಿಕ ಪರಿಸ್ಥಿತಿ, ಶೈಕ್ಷಣಿಕ ಪರಿಸ್ಥಿತಿ, ಜಾತಿವ್ಯವಸ್ಥೆ, ಅವುಗಳ ಸಮಸ್ಯೆಗಳೆಲ್ಲ ಅರ್ಥವಾಗಿದೆ. ಆದರೆ ಅದನ್ನು ಬದಲಾಯಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವವರು ಕಡಿಮೆಯಾಗಿದ್ದಾರೆ. ಹೀಗಿರುತ್ತ

ಮಾನವನನ್ನು ಮಾನವನನ್ನಾಗಿ ಮಾತ್ರ ನೋಡುವ; ಪ್ರಶ್ನಿಸಿಯೇ ಒಪ್ಪಿಕೊಳ್ಳುವ; ತನ್ನಷ್ಟೆ ಪರರಿಗಾಗಿಯೂ ಬದುಕು ಎಂದು ಕಲಿಸುವ ಶಿಕ್ಷಣ ಪ್ರತಿ ಮಗುವಿಗೂ ದೊರೆತರೆ ಮಾತ್ರ ಭವಿಷ್ಯದ ಜಗತ್ತು ಸುಂದರವಾಗಲಿದೆ.

ಎಂದೇ ಮಕ್ಕಳೆಂಬ ಬಿಳಿಹಾಳೆಯ ಜೊತೆಗೆ, ಬಹುಪಾಲು ಮುಗ್ಧ ಬಾಲ್ಯದ ಜೊತೆಗೆ ಬೆಸೆತುಕೊಂಡಿರುವ ಶಿಕ್ಷಕ ವೃತಿ ಇವತ್ತು ಕೇವಲ ಜೀವನೋಪಾಯದ ಉದ್ಯೋಗವಲ್ಲ, ಅತ್ಯಂತ ಜವಾಬ್ದಾರಿಯ ಕೆಲಸವಾಗಿದೆ.

ಈಗ ಕಲಿಸುವ ಶಾಲೆಗಳಿಗೆ ಕೊರತೆಯಿಲ್ಲ. ತರಬೇತಿ ಪಡೆದ ಶಿಕ್ಷಕರಿಗೆ ಕೊರತೆಯಿಲ್ಲ. ಶಿಕ್ಷಣ ಮೂಲಭೂತ ಹಕ್ಕು ಎಂದಾದ ಮೇಲೆ ಊರೂರುಗಳಲ್ಲಿ ಶಾಲೆ ತೆರೆಯಲೂ ಯಾವ ಅಡ್ಡಿಯಿಲ್ಲ. ನಗರ ಪ್ರದೇಶಗಳಲ್ಲಂತೂ ಶಿಕ್ಷಣ ಸಂಸ್ಥೆ ತೆರೆಯುವುದೂ ಉದ್ಯಮ ಎನಿಸಿಕೊಂಡಿದೆ. ಮಕ್ಕಳು ಪರೀಕ್ಷೆಯಲ್ಲಿ ‘ಉತ್ತಮ ಸಾಧನೆ ತೋರಿಸುವಂತೆ ಪ್ರೇರೇಪಿಸಲಾಗುತ್ತಿದೆ. ‘ಸಾಧಕರ ಫೋಟೋ ಹೊತ್ತ ಶಾಲೆಗಳ ಜಾಹೀರಾತು ಸರ್ವೇಸಾಮಾನ್ಯವಾಗಿದೆ. ಇವತ್ತು ಪ್ರಾಥಮಿಕ ಶಾಲೆಗಳಲ್ಲಿ ೮೦% ಹಾಗೂ ಹೈಸ್ಕೂಲು-ಕಾಲೇಜುಗಳಲ್ಲಿ ೬೫-೭೦% ಬೋಧಕ ಸಿಬ್ಬಂದಿ ಮಹಿಳೆಯರೇ ಆಗಿದ್ದಾರೆ.

ಆದರೆ ತಾವೇ ಉದಾಹರಣೆಯಾಗಿ, ಸ್ಫೂರ್ತಿ ನೀಡುವ ಮಾದರಿಯಾಗಿ ಮಕ್ಕಳನ್ನು ಪ್ರಭಾವಿಸಬಲ್ಲ ಬೋಧಕ ವರ್ಗ ಎಷ್ಟು ಸಂಖ್ಯೆಯಲ್ಲಿದೆ? ಸಮಾಜವನ್ನೆದುರಿಸಿ ನಿಂತು ಅವಕಾಶ ವಂಚಿತರಿಗೆ ಕಲಿಸಹೊರಡುವ ಹುಮ್ಮಸ ಎಷ್ಟು ಶಿಕ್ಷಿತರಲ್ಲಿದೆ? ಎಂದೇ ಭಾರತೀಯ ಸಮಾಜದ ಕೆಡುಕುಗಳನ್ನೂ, ಅದರ ಮೂಲವನ್ನೂ ಆಮೂಲಾಗ್ರ ಅರ್ಥಮಾಡಿಕೊಂಡು ಬದಲಾವಣೆಗಾಗಿ ಹೋರಾಡಿದ; ಹಲವು ಅಡೆತಡೆಗಳ ನಡುವೆ ಹುಡುಗಿಯರ ನಾಲಿಗೆಯ ಮೇಲೆ ಅಕ್ಷರ ಬರೆದ ಮೊದಲ ಗುರು ಸಾವಿತ್ರಿ ಬಾಯಿ ಫುಲೆ ನಮಗೆ ಮುಖ್ಯರಾಗುತ್ತಾರೆ. ಅದುವರೆಗೂ ಬೋಧನೆಯಲ್ಲಿ ತೊಡಗಿಕೊಂಡ ಹಲವು ಶಿಕ್ಷಕಿಯರಿದ್ದರೂ ಅವರು ಬಹುತೇಕ ಕ್ರೈಸ್ತ ಮಿಷನರಿಗಳು ಹಾಗೂ ಧರ್ಮಬೋಧಕರು. ಆದರೆ ಧರ್ಮ ಕೊಡಮಾಡುವ ಪಾಪಪುಣ್ಯ-ಸ್ವರ್ಗನರಕಗಳ ಲೆಕ್ಕಾಚಾರ ಧಿಕ್ಕರಿಸಿ ನಿಂತು ಅಕ್ಷರ ಕಲಿಸಿದ ಸಾವಿತ್ರಿಬಾಯಿ ಮಹಾನ್ ಶಿಕ್ಷಕಿಯಷ್ಟೇ ಅಲ್ಲ, ಹೃದಯವಂತ ತಾಯಿಯೂ ಆಗಿದ್ದಾರೆ.

ಅಂಥ ತಾಯ್ತನದ ಚೇತನ ಇವತ್ತಿನ ತುರ್ತು ಅವಶ್ಯಕತೆಯಾಗಿದೆ.


 ಜನಜಾಗೃತಿಗಾಗಿ ಶಿಕ್ಷಣ

 ಈಗ್ಗೆ ಒಂದೂವರೆ ಶತಮಾನದ ಹಿಂದೆ..

ಅದಿನ್ನೂ ಸ್ವಾತಂತ್ರ್ಯ ಚಳುವಳಿ ರೂಪುಗೊಳ್ಳದಿದ್ದ ಕಾಲ. ಗಾಂಧಿ, ಅಂಬೇಡ್ಕರರಂಥ ದೂರದೃಷ್ಟಿಯ ಜನನಾಯಕರು ಹುಟ್ಟಿರದಿದ್ದ ಕಾಲ. ಆಳುವವರ ನಿರಂತರ ಬದಲಾವಣೆಯಿಂದ ಕ್ಷೆಭೆಗೊಂಡ ಸಮಾಜ ಸ್ವವಿಮರ್ಶೆಯನ್ನು ಮರೆತಂಥ ಕಾಲ. ಬಂಗಾಳ ಮತ್ತು ಉತ್ತರ ಭಾರತದ ಕೆಲ ಸಮಾಜ ಸುಧಾರಕರು ಇಂಗ್ಲಿಷ್ ಶಿಕ್ಷಣ ಪಡೆದು ಆಗಷ್ಟೇ ಭಾರತದ ಸಾಮಾಜಿಕ ಅನಿಷ್ಟಗಳ ಬಗೆಗೆ ಮಾತನಾಡತೊಡಗಿದ್ದರು. ಬಾಲ್ಯವಿವಾಹ ಹಾಗೂ ಸತಿ ಪದ್ಧತಿ ರದ್ಧತಿ ಕುರಿತು ಮಾತು ಕೇಳಿಬರತೊಡಗಿದ್ದವು. ಅಕ್ಷರ ಕಲಿಯಲು ತಾವು ಮಾತ್ರ ಅರ್ಹ ಎಂದುಕೊಂಡ ಜಾತಿಗಳ ಹೊರತು ಮತ್ತಾರಿಗೂ ಕಲಿಕೆಗೆ ಅವಕಾಶವಿರಲಿಲ್ಲ. ಆ ಕಾಲದ ಮಹಿಳೆಯರ ಶಿಕ್ಷಣ ಕುರಿತು ಹೇಳುವಂತೇ ಇಲ್ಲ. ‘ಹೆಣ್ಣು ಅಕ್ಷರ ಕಲಿತರೆ ಎಲ್ಲರಿಗೂ ಪತ್ರ ಬರೆಯತೊಡಗುತ್ತಾಳೆ. ಆಗ ಅವಳ ಗಂಡ ತಿನ್ನುವ ಅನ್ನದ ಅಗುಳು ಹುಳವಾಗಿ ಅವನು ಕಾಯಿಲೆ ಹಿಡಿದು ಬೇಗ ತೀರಿಕೊಳ್ಳುತ್ತಾನೆ ಎಂದು ಹೇಳಲಾಗುತ್ತಿತ್ತು. ಹೆಣ್ಣುಮಗು ತನ್ನ ಬಾಲ್ಯದ ಮುಗ್ಧತೆಯಲ್ಲಿ ಈ ಜಗತ್ತಿಗೆ ಕಣ್ಬಿಡುವ ಹೊತ್ತಿಗೆ ಅವಳ ಮದುವೆಯಾಗಿ, ಯಾರದೋ ಹೆಂಡತಿಯಾಗಿ, ಸೊಸೆಯಾಗಿ ಕೊನೆಗೆ ಅಮ್ಮನಾಗಿ ಬಿಟ್ಟಿರುತ್ತಿದ್ದಳು. ಕುಟುಂಬ ನಿರ್ವಹಣೆಗಾಗಿ, ಕುಟುಂಬ ನಿರ್ವಹಣೆಯಿಂದಲೇ ಅವಳ ವ್ಯಕ್ತಿತ್ವ ರೂಪುಗೊಂಡು ಅಲ್ಲೇ ಕಳೆದುಹೋಗುತ್ತಿತ್ತು. ಹೆಣ್ಮಕ್ಕಳು ಯಾವತ್ತೂ ಪ್ರಶ್ನಿಸಬಾರದಂತೆ ಹೊರುವ, ಹೆರುವ, ಪೊರೆಯುವ ಕೊನೆಮೊದಲಿಲ್ಲದ ಕೆಲಸಗಳಲ್ಲಿ ಅವರನ್ನು ತೊಡಗಿಸಲಾಗುತ್ತಿತ್ತು.

ಒಟ್ಟಾರೆ ಹೇಳುವುದಾದರೆ ದಲಿತ-ಶೂದ್ರ-ಮಹಿಳೆಯರಿಗೆ ಶಾಲೆ ಎನ್ನುವುದು ಕನಸಿನಲ್ಲೂ ಮೂಡಲಾಗದ ಅಸ್ಪಷ್ಟ ಕಲ್ಪನೆಯಾಗಿಯೇ ಉಳಿದಿತ್ತು.

ಆ ಕಾಲದಲ್ಲಿ, ೧೮೩೧ರಲ್ಲಿ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಹುಟ್ಟಿದ ಸಾವಿತ್ರಿ ಬಾಯಿಗೆ ೯ ವರ್ಷವಾದಾಗ ಮದುವೆಯಾಯಿತು. ಅವಳನ್ನು ಮದುವೆಯಾದ ಹುಡುಗ ಸಾಮಾನ್ಯ ವರನಾಗಿರಲಿಲ್ಲ. ಅವ ಇಂಗ್ಲಿಷ್ ಕಲಿತು ಅರಿವಿನ ಸ್ಫೋಟಕ್ಕೆ ಒಳಗಾಗಿದ್ದ ಜೋತಿಬಾ. ಶಾಲೆ ಕಲಿಯದ ಹೆಂಡತಿ ಸಾವಿತ್ರಿಗೆ ಗಂಡನೇ ಮೊದಲ ಶಿಕ್ಷಕನಾಗಿ ಅಕ್ಷರ ಕಲಿಸಿದ. ನಂತರ ಜೋತಿಬಾ ಅಸ್ಪೃಶ್ಯ ಹಾಗೂ ತಳಸಮುದಾಯದ ಮಕ್ಕಳಿಗೆಂದು ಶಾಲೆ ತೆರೆದಾಗ ಗಂಡುಮಕ್ಕಳಂತೇ ಹೆಣ್ಣುಮಕ್ಕಳಿಗೂ ಶಿಕ್ಷಣದ ಅವಶ್ಯಕತೆ ಇದೆ ಎಂದು ಅರಿತರು. ಹೆಣ್ಣುಮಕ್ಕಳ ಶಾಲೆ ತೆರೆಯಲು ಶಿಕ್ಷಕಿಯರ ಕೊರತೆಯಿತ್ತು. ಆಗ ಜೋತಿಬಾ ಶಿಕ್ಷಕ ತರಬೇತಿ ಪಡೆಯಲೆಂದು ಸಾವಿತ್ರಿಬಾಯಿಯನ್ನು ಅಹ್ಮದ್ ನಗರದ ಫಾರ್ಮಲ್ ಸ್ಕೂಲಿಗೆ ಕಳಿಸಿದರು. ಸಾವಿತ್ರಿಬಾಯಿ ಜೊತೆಗೆ ಫಾತಿಮಾ ಶೇಕ್ ಎನ್ನುವ ಮಹಿಳೆಯೂ ತರಬೇತಿ ಪಡೆದು ನಂತರ ಜೋತಿಬಾರ ಶಾಲೆಗಳಲ್ಲಿ ಕೆಲಸ ಮಾಡಿದರು.




ತರಬೇತಿ ಮುಗಿಸಿ ಸಾವಿತ್ರಿಬಾಯಿ ಬಂದ ಮೇಲೆ ೯ ವಿದ್ಯಾರ್ಥಿಗಳೊಂದಿಗೆ ಪುಣೆಯಲ್ಲಿ ೧೮೪೯ರಲ್ಲಿ ಮೊದಲ ಶಾಲೆ ಶುರುವಾಯಿತು. ಅಹ್ಮದ್ ನಗರದ ಸದಾಶಿವ ಗೋವಂದೆ ಮಕ್ಕಳಿಗೆ ಉಚಿತ ಪುಸ್ತಕ ಒದಗಿಸಿದರು. ಆದರೆ ಶಾಲೆಗಾಗಿ ಸ್ಥಳ ಕೊಡುವವರು ಮನಸು ಬದಲಾಯಿಸುತ್ತ ಇದ್ದದ್ದರಿಂದ ಶಾಲೆಯೂ ನಿರಂತರ ಸ್ಥಳ ಬದಲಾಯಿಸುತ್ತ, ಮುಚ್ಚುತ್ತ-ತೆರೆಯುತ್ತ ಹೋಯಿತು. ೧೮೫೧ರಲ್ಲಿ ಎರಡನೇ ಶಾಲೆ ಶುರುವಾಯಿತು. ೧೮೫೨ರಲ್ಲಿ ಮಹಿಳಾ ಸೇವಾ ಮಂಡಲ ಶುರುವಾಯಿತು. ಧಾರ್ಮಿಕ-ಆಧ್ಯಾತ್ಮಿಕ ವ್ಯಕ್ತಿಯಾಗಿದ್ದ ಸಾವಿತ್ರಿಬಾಯಿ ತಾನು ಮಾಡುತ್ತಿರುವ ಕೆಲಸದ ಬಗೆಗೆ ಅಚಲ ಶ್ರದ್ಧೆಯನ್ನಿಟ್ಟುಕೊಂಡಿದ್ದರು. ಶಾಲೆಗೆ ಹೋಗುವಾಗ ದಾರಿಮೇಲೆ ತೂರಿ ಬರುವ ಕಲ್ಲು, ಮಣ್ಣು, ಸಗಣಿಗಳ ದಾಳಿಗೆ ಎದೆಗುಂದದೇ ಪಾಠ ಹೇಳಿದರು.

ಫುಲೆ ದಂಪತಿಗಳು ಒಂದಾದಮೇಲೊಂದು ಶಾಲೆ ತೆರೆಯತೊಡಗಿದಾಗ ಅಕ್ಷರ ಕಲಿಯಬಾರದವರಿಗೆ ಕಲಿಸುತ್ತ ಧರ್ಮದ್ರೋಹ ಮಾಡುತ್ತಿದ್ದಾರೆ ಎಂಬ ಆಪಾದನೆಗಳು ಬಂದವು. ಬೆದರಿಕೆಗಳೂ ಬಂದವು. ಅದೆಲ್ಲದರಿಂದ ಒತ್ತಡಕ್ಕೊಳಗಾದ ಜೋತಿಬಾ ತಂದೆ ಮಗಸೊಸೆಯನ್ನು ಮನೆಯಿಂದ ಹೊರಕಳಿಸಿದರು. ಯುವದಂಪತಿ ಅಂಜದೆ ಬೇರೆ ಮನೆ ಮಾಡಿಕೊಂಡರು. ಸಾವಿತ್ರಿ ಬಾಯಿಯವರ ಅಣ್ಣ ಕೂಡಾ ಅಸ್ಪೃಶ್ಯರಿಗೇಕೆ ಶಿಕ್ಷಣ ಕೊಡುತ್ತಿದ್ದೀ ಎಂದು ಅವರ ಬಳಿ ವಾದಿಸಿದ್ದರು. ಬಂಧುಬಳಗಕ್ಕೂ, ಹಿತೈಷಿಗಳಿಗೂ ಉತ್ತರಿಸುತ್ತ, ಮನವೊಲಿಸುತ್ತ ಫುಲೆ ದಂಪತಿಗಳು ತಮ್ಮ ಕೆಲಸ ಮುಂದುವರೆಸಿದರು.


ಬೋಧಿಸುವವರು ಎಷ್ಟು ಯಶಸ್ವಿ ಎಂದು ತಿಳಿಯಬೇಕಾದರೆ ಅವರ ಶಿಷ್ಯಗಣವನ್ನು ನೋಡಬೇಕಲ್ಲವೆ? ಫುಲೆ ಶಾಲೆಯಲ್ಲಿ ಕಲಿತ ಹೆಣ್ಣುಮಕ್ಕಳು ವೈಚಾರಿಕ ಜಾಗೃತಿ ಪಡೆದು ಕೆಲವರು ಬರಹಗಾರರಾದರು. ಭಾರತದ ಮೊತ್ತಮೊದಲ ಸ್ತ್ರೀವಾದಿ ಲೇಖಕಿ ತಾರಾಬಾಯಿ ಶಿಂಧೆ ಇವರ ಶಿಷ್ಯೆ. ಆಕೆ ಬರೆದ ‘ಸ್ತ್ರೀಪುರುಷ ತುಲನ ಎಂಬ ಪುಟ್ಟ ಹೊತ್ತಗೆ ಇವತ್ತಿಗೂ ದಿಟ್ಟವಾಗಿ ಯುವತಿಯೊಬ್ಬಳು ಬರೆದ ಮೊದಲ ಭಾರತೀಯ ಸ್ತ್ರೀವಾದಿ ಬರಹವಾಗಿದೆ. ಮತ್ತೊಬ್ಬ ದಲಿತ ವಿದ್ಯಾರ್ಥಿನಿ ಮುಕ್ತಾಬಾಯಿಯ ಪ್ರಬಂಧಗಳೂ ಹುಡುಗಿಯರು ಪಡೆಯುತ್ತಿದ್ದ ಅರಿವಿನ ಶಿಕ್ಷಣದ ಗುಣಮಟ್ಟ ತಿಳಿಸುತ್ತವೆ.


ಸತ್ಯಶೋಧಕ


ತಾರತಮ್ಯ ಪ್ರತಿಪಾದಿಸುವ ಜಾತಿ ವ್ಯವಸ್ಥೆಯೇ ಸಮಾಜದ ಎಲ್ಲ ಕೆಡುಕುಗಳ ಮೂಲ ಎಂದು ಫುಲೆ ದಂಪತಿಗಳು ಅರಿತಿದ್ದರು. ಜಾತಿ ವಿನಾಶಕ್ಕೆ ಇಂಗ್ಲಿಷ್ ಕಲಿಯಿರಿ ಎನ್ನುವುದು ಅವರ ಬೋಧನೆಯಾಗಿತ್ತು. ಜಾತಿನಾಶದ ಮಾತು ಆಡಿದ ಕೂಡಲೇ ಅದು ಬ್ರಾಹ್ಮಣ ವಿರೋಧದ ಹಾಗೆಯೇ ಕೇಳಿಸುತ್ತದೆ. ಇವತ್ತಿಗೂ ಸಹಾ. ಆದರೆ ಮನುಷ್ಯನನ್ನು ಮನುಷ್ಯನನ್ನಾಗಷ್ಟೇ ನೋಡಲು ಪ್ರತಿಯೊಬ್ಬರೂ ತಮ್ಮೊಳಗಿರುವ ಜಾತಿಪ್ರಜ್ಞೆಯನ್ನು, ಬಿಟ್ಟೂ ಬಿಡದೆ ಒಳನುಸುಳುವ ಬ್ರಾಹ್ಮಣ್ಯವನ್ನು ಮುರಿದು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆಯಿದೆ. ವ್ಯಕ್ತಿಗತ ಶ್ರೇಷ್ಠತೆ ಹಾಗೂ ಕುಲದ ಶ್ರೇಷ್ಠತೆಯಲ್ಲಿ ನಂಬಿಕೆಯಿಟ್ಟು ಉಳಿದವರನ್ನು ಕೀಳಾಗಿ ಕಾಣುವುದೇ ಬ್ರಾಹ್ಮಣ್ಯ. ನಮ್ಮ ಸಮಾಜ ವ್ಯವಸ್ಥೆ ಹೇಗಿದೆಯೆಂದರೆ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿರುವವರಲ್ಲಿ ತರತಮ ಪ್ರಜ್ಞೆ ತಾನೇತಾನಾಗಿ ತುಂಬಿಕೊಳ್ಳುವ ಸಾಧ್ಯತೆಯಿದ್ದರೆ ಉಳಿದ ಜಾತಿಗಳಿಗೂ ಈ ಜಾಡ್ಯ ಅಷ್ಟಿಷ್ಟು ಅಂಟಿಕೊಂಡಿದೆ.

ಹೀಗಿರುತ್ತ ಭಾರತೀಯರ ಜಾತಿಪ್ರಜ್ಞೆ ನಾಶ ಮಾಡುವುದು ಎಂದರೆ ಎಲ್ಲ ಜಾತಿಯವರೂ ಸಮಾನರು ಎಂದು ಭಾವಿಸುವುದಷ್ಟೇ ಅಲ್ಲ, ಗಂಡು ಹೆಣ್ಣೂ ಸಮಾನರು ಎಂದು ತಿಳಿಯಬೇಕು. ಎಂದರೆ ಜಾತಿ ವಿನಾಶವೂ, ಮಹಿಳಾ ಹೋರಾಟವೂ ಒಟ್ಟೊಟ್ಟು ಸಾಗಬೇಕು.

ಈ ಸೂಕ್ಷ್ಮವನ್ನು ಫುಲೆ ದಂಪತಿ ಅರಿತಿದ್ದರು. ಅವರ ಸಮಾಜ ಸುಧಾರಣಾ ಕಾರ್ಯಕ್ರಮಗಳು ತಳಸಮುದಾಯಗಳಿಗೆ ಶಿಕ್ಷಣ-ಜಾಗೃತಿ ನೀಡುವುದರ ಜೊತೆಗೇ ಎಲ್ಲ ಸಮುದಾಯಗಳ ಮಹಿಳಾ ಸಮಸ್ಯೆಗಳ ಕುರಿತಾಗಿದ್ದವು. ಬ್ರಾಹ್ಮಣ ವಿಧವೆಯರ ಕಷ್ಟಗಳ ಬಗೆಗೆ ಅವರು ಗಮನ ಹರಿಸಿದರು. 




ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತದಲ್ಲಿ ಬ್ರಾಹ್ಮಣ ವಿಧವೆಯರಿಗೆ ವಿಧವಾಪದ್ಧತಿ ಕಟ್ಟುನಿಟ್ಟಾಗಿ ಜಾರಿಯಾಯಿತು. ಕಟ್ಟಳೆಗಳನ್ನು ಲಿಖಿತ ಕಾನೂನಾಗಿ ಜಾರಿಗೆ ತರಲಾಯಿತು. ಗಂಡನನ್ನು ಕಳೆದುಕೊಂಡ ಹೆಂಡತಿಯನ್ನು ವಿರೂಪಗೊಳಿಸಲಾಗುತ್ತಿತ್ತು. ಅಪವಿತ್ರರೆನಿಸಿಕೊಂಡು ಇಡೀ ಜೀವಮಾನವನ್ನು ಬದುಕಿದ ಶವದಂತೆ ಸವೆಸಬೇಕಿದ್ದ ವಿಧವೆಯರು ಪುರುಷರ ದುರಾಸೆಗೆ ಬಲಿಯಾಗುತ್ತಿದ್ದರು. ಕೆಲವರು ವಿವಾಹೇತರ ಸಂಬಂಧದಿಂದ ಗರ್ಭ ಧರಿಸಿ ಅಕ್ರಮ ಸಂತಾನ ಹೆರುತ್ತಿದ್ದರು. ಸಮಾಜದ ಅವಮಾನಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗುತ್ತಿದ್ದರು. ಅಮಾನುಷವಾದ ಈ ವಿಧವಾ ಪದ್ಧತಿ ನಿಲಿಸುವ ಸಲುವಾಗಿ ಸಾವಿತ್ರಿಬಾಯಿ ಒಂದು ವಿನೂತನ ಪ್ರಯತ್ನ ಮಾಡಿದರು. ೧೮೬೦ರಲ್ಲಿ ಕ್ಷೌರಿಕರನ್ನು ಸಂಘಟಿಸಿ ತಾವ್ಯಾರೂ ಇನ್ನುಮುಂದೆ ವಿಧವೆಯರ ಕೇಶಮುಂಡನ ಮಾಡುವುದಿಲ್ಲ ಎಂದು ಅವರ ಬಳಿ ಪ್ರತಿಜ್ಞೆ ಮಾಡಿಸಿದರು. ೧೯೬೩ರಲ್ಲಿ ವಿಧವೆಯರು ಮತ್ತವರ ಮಕ್ಕಳಿಗೆಂದೇ ಒಂದು ಆಶ್ರಮ ಸ್ಥಾಪಿಸಿದರು. ಪ್ರಸೂತಿಗೃಹ ತೆರೆದರು.


ಅದುವರೆಗೂ ಅಸ್ಪೃಶ್ಯ ಸಮುದಾಯದ ಜನ ಬಾಯಾರಿದರೂ ಹನಿ ನೀರನ್ನು ತಂತಾವೇ ಕೆರೆ, ಬಾವಿ, ನದಿಗಳಿಂದ ತೆಗೆದುಕೊಳ್ಳುವಂತಿರಲಿಲ್ಲ. ಫುಲೆ ದಂಪತಿಗಳು ೧೮೬೮ರಲ್ಲಿ ಎಲ್ಲರಿಗೂ ಬಳಕೆಗೆ ಮುಕ್ತವಾದ ನೀರಿನ ತೊಟ್ಟಿ ಕಟ್ಟಿದರು. ಜಾತಿ ತಾರತಮ್ಯ ಮತ್ತು ಶೋಷಣೆಯನ್ನು ಕೊನೆಗೊಳಿಸಬೇಕೆಂದರೆ ಚಿಂತನಶೀಲತೆಯನ್ನು, ಸತ್ಯ ತಿಳಿಯಬೇಕೆಂಬ ಹಂಬಲವನ್ನು ಜನರಲ್ಲಿ ಬಿತ್ತಬೇಕು ಹಾಗೂ ದೇವರ ದಲ್ಲಾಳಿಗಳೆಂದು ಭಾವಿಸುವ ಪುರೋಹಿತವರ್ಗದ ಹಿಡಿತದಿಂದ ಜನರನ್ನು ಪಾರು ಮಾಡಬೇಕೆಂದು ೧೮೭೩ರಲ್ಲಿ ಸತ್ಯಶೋಧಕ ಸಮಾಜ ಕಟ್ಟಿದರು. ಅದರ ಮೂಲತತ್ವ ‘ನಾವೆಲ್ಲರೂ ದೇವರ ಮಕ್ಕಳು; ದೇವರಿಗೂ ನಮಗೂ ಯಾವ ಮಧ್ಯವರ್ತಿಯ ಅವಶ್ಯಕತೆಯೂ ಇಲ್ಲ ಎನ್ನುವುದು. ಅದೇ ವರ್ಷ ಪುರೋಹಿತರಿಲ್ಲದೆ ಮೊದಲ ಮದುವೆ ಮಾಡಿಸಿದರು. ೧೮೭೪ರಲ್ಲಿ ಬ್ರಾಹ್ಮಣ ವಿಧವೆ ಕಾಶೀಬಾಯಿಯ ಮಗ ಯಶವಂತನನ್ನು ದತ್ತು ತೆಗೆದುಕೊಂಡು ಸಾಕಿದರು. ಮುಂದೆ ಆತ ಓದಿ ವೈದ್ಯನಾದ.

ಇಂತಹ ಕ್ರಾಂತಿಕಾರಿ ಕ್ರಮಗಳಿಂದ ಸಮಾಜದ ಬಲಶಾಲಿ ಜಾತಿಗಳನ್ನು ಎದುರು ಹಾಕಿಕೊಂಡರೂ ಅಂಜದೇ, ಅಳುಕದೇ ಕೆಲಸ ಮಾಡಿದರು. ಭೀಕರ ಕ್ಷಾಮ ತಲೆದೋರಿದಾಗ ಪರಿಹಾರ ಕಾರ್ಯಗಳಲ್ಲಿ ತೊಡಗಿ ಕ್ಯಾಂಪುಗಳಲ್ಲಿ ಶಾಲೆ ತೆರೆದರು. ೧೮೯೦ರಲ್ಲಿ ಜೋತಿಬಾ ಫುಲೆಯವರು ತೀರಿಕೊಂಡಾಗ ಅವರ ಚಿತೆಗೆ ಸಾವಿತ್ರಿ ಬಾಯಿ ಅವರೇ ಅಗ್ನಿಸ್ಪರ್ಶ ಮಾಡಿದರು. ನಂತರ ಸತ್ಯಶೋಧಕ ಸಮಾಜದ ಅಧ್ಯಕ್ಷರಾಗಿ ಸಾವಿತ್ರಿಬಾಯಿ ಜನಜಾಗೃತಿ ಮುಂದುವರೆಸಿದರು. ೧೮೯೭ರಲ್ಲಿ ಪ್ಲೇಗ್ ಬಂದೆರಗಿದಾಗ ಸಾವಿತ್ರಿಬಾಯಿ ದಣಿವರಿಯದೆ ರೋಗಿಗಳ ಶುಶ್ರೂಷೆ ಮಾಡುತ್ತ ಕೊನೆಗೆ ತಾವೂ ಪ್ಲೇಗ್ ತಗುಲಿ ಕಾಲವಾದರು.

ಸಾವಿತ್ರಿಬಾಯಿಗೆ ಮದುವೆ ಒಂದು ಬಂಧನವಾಗಲಿಲ್ಲ, ಮಿತಿಯಾಗಲಿಲ್ಲ. ಫುಲೆ ದಂಪತಿಗಳು ಪರಸ್ಪರರಿಗೆ ಎಷ್ಟು ಪೂರಕವಾಗಿ ಬದುಕಿ, ಕೆಲಸ ಮಾಡಿದರೆಂದರೆ ಒಬ್ಬರನ್ನು ಬಿಟ್ಟು ಇನ್ನೊಬ್ಬರ ಜೀವನ-ಸಾಧನೆ ವಿವರಿಸಲಾಗುವುದಿಲ್ಲ. ಆ ಅರ್ಥದಲ್ಲಿ ಫುಲೆ ಜೋಡಿಯ ಸಾಂಗತ್ಯ ಆದರ್ಶಪ್ರಾಯ ಎಂದು ಹೇಳಬಹುದು.


ದಿಕ್ಸೂಚಿ..


ನಮ್ಮ ದೇಶದ ಜನಸಂಖ್ಯೆಯ ಕಾಲುಭಾಗಕ್ಕಿಂತ ಹೆಚ್ಚು ಜನರಿಗೆ ಇನ್ನೂ ಅಕ್ಷರದ ಬೆಳಕು ಸಿಕ್ಕಿಲ್ಲ. ಸಿಕ್ಕಿದ ಎಲ್ಲರಿಗೂ ಅದು ಅನ್ನ ನೀಡುವ ಮಾರ್ಗ ತೋರಿಸಿಲ್ಲ. ಶಾಲೆಯೇ ಜಾತೀಯತೆಯ ಒಳಸುಳಿಗಳನ್ನು ಮಕ್ಕಳಿಗೆ ಪರಿಚಯಿಸುವ ತಾಣವಾಗುತ್ತಿದೆ. ಶಾಲಾ ಪಠ್ಯ ಮತ್ತು ಎಳೆಯರಿಗೆ ಬೋಧಿಸುವ ಇತಿಹಾಸವೇ ರಾಜಕೀಕರಣಗೊಳ್ಳುತ್ತಿದೆ. ಇಂಗ್ಲಿಷ್ ಎಂಬ ಜಾಗತಿಕ ಸರ್ವಾಧಿಕಾರಿ ಭಾಷೆಯೆದುರು ಸಣ್ಣಪುಟ್ಟ ಭಾಷೆಗಳು ಸೊರಗಿ ಕಣ್ಮುಚ್ಚುತ್ತಿವೆ. ಇಂಗ್ಲಿಷ್ ಬರದ ದೇಶೀ ಭಾಷೆಯ ಜ್ಞಾನಿ ಅನಕ್ಷರಸ್ಥ ಎನಿಸಿಕೊಳ್ಳುತ್ತಿದ್ದಾನೆ. ಮಾರುಕಟ್ಟೆಯೇ ಧರ್ಮವಾಗಿರುವ ಕಾಲದಲ್ಲಿ ಹಣ ಮೌಲ್ಯವಾಗಿದೆ. ಯಂತ್ರಗಳೊಡನೆ ಬದುಕು ನಿಕಟವಾಗುತ್ತ ಹೋದಂತೆ ಮಾನವ ವೇದನೆಗಳು ಸಿಟ್ಟು, ಹೋರಾಟ ಹುಟ್ಟಿಸಲು ವಿಫಲವಾಗುತ್ತಿವೆ.

ಇಂಥ ಸಂಕಟಕಾಲದಲ್ಲಿ ಮಕ್ಕಳಲ್ಲಿ ವೈಚಾರಿಕ ಮನೋಭಾವ ಬೆಳೆಸುವ, ಜಾತ್ಯತೀತ ಮೌಲ್ಯ ತುಂಬುವ ಅವಶ್ಯಕತೆಯಿದೆ. ನೆಲದಾಳದಲ್ಲಿ ಇಂದಿಗೂ ಅಲ್ಲೆಲ್ಲೋ ಇರುವ ಶುದ್ಧಜಲವನ್ನು, ಜಲದ ಕಣ್ಣನ್ನು ಅರಸಬೇಕಿದೆ. ಜಲಸೂಚಿಯ ಕೆಲಸವನ್ನು ಶಿಕ್ಷಕ ಬಂಧುಗಳು ನಿಭಾಯಿಸಬೇಕಾಗಿದೆ. ದಿಕ್ಸೂಚಿಯಾಗಬಲ್ಲ, ಸತ್ಯದರ್ಶಿಯಾಗಬಲ್ಲ ಶಿಕ್ಷಣ ನೀಡುವಂಥ ಅತಿ ಮಹತ್ತರ ಜವಾಬ್ದಾರಿ ಅವರ ಮೇಲಿದೆ.

ದಲಿತ ಮಹಿಳೆ ತಯಾರಿಸಿದ ಬಿಸಿಯೂಟ ಉಣಲೊಲ್ಲೆ ಎನುವ ಮಕ್ಕಳನ್ನು ಮನವೊಲಿಸಿ ಜೊತೆಗೊಯ್ಯಬೇಕು. ಮಗುವೇ, ಅತ್ಯಾಚಾರದ ಭಯ ಬಿಟ್ಟು ನೀ ಕಲಿ ಎಂದು ಹೇಳುವಷ್ಟು ಶಾಲೆ ಸುರಕ್ಷಿತ ತಾಣವಾಗಬೇಕು. ಹುಟ್ಟು, ಮುಟ್ಟು, ಸಾವು, ಗ್ರಹಬಲ ಮತ್ತಿತರ ವಿಷಯಗಳ ಕುರಿತು ಇರುವ ಮೌಢ್ಯವನ್ನು ಕಾಯ್ದೆ ಬರಲಿ ಎಂದು ಕಾಯದೆ ತೊಲಗಿಸಬೇಕು. ಮೊದಲು ‘ನಾವೊಬ್ರು ಪ್ರಯತ್ನ ಮಾಡಿದರೆ ಏನಾದೀತು? ಎಂಬ ಸಿನಿಕತನವನ್ನು ಶಿಕ್ಷಕವರ್ಗವೂ ಸೇರಿದಂತೆ ಎಲ್ಲರೂ ಬಿಡಬೇಕು. ನಮ್ಮ ಆತ್ಮಪ್ರಜ್ಞೆಯನ್ನು ಬಡಿದೆಬ್ಬಿಸುವ ಸಾವಿತ್ರಿಬಾಯಿಯಂತಹ ಶಿಕ್ಷಕಿ, ಜೋತಿಬಾರಂತಹ ಹೋರಾಟಗಾರರನ್ನು ನಮ್ಮ ಕಣ್ಣಗೊಂಬೆಯಲ್ಲಿಟ್ಟುಕೊಂಡು ಪ್ರತಿ ಮಗುವಿಗೂ ಅರ್ಹ ಶಿಕ್ಷಣ, ಸಮಾನ ಶಿಕ್ಷಣ ನೀಡಬೇಕೆಂಬ ಪ್ರತಿಜ್ಞೆ ಮಾಡಬೇಕು..

ಸಾವಿತ್ರಿಬಾಯಿ ಫುಲೆ

 

ವಿಪರೀತದ ಬೆಳಗು: ಫುಲೆ ಮಾರ್ಗ 


(ಚಿತ್ರ ಕೃಪೆ: ಅಂತರ್ಜಾಲ)

ಅಪರಿಮಿತದ ಕತ್ತಲನ್ನು ಕೇಡಿನ ರೂಪದಲ್ಲಿ ತಂದು ಒಟ್ಟುವವರ ನಡುವೆಯೇ ವಿಪರೀತದ ಬೆಳಗನ್ನು ಮೂಡಿಸುವವರ ಸಂಖ್ಯೆ ಕಡಿಮೆಯಿಲ್ಲ. ಭಾರತೀಯ ಸಮಾಜದಲ್ಲಿ ಕೇಡು ಸುರಿಯುವವರಷ್ಟೇ ಬೆಳಕು ಮೂಡಿಸುವವರೂ ಇದ್ದರು, ಇರುತ್ತಾರೆ. ಹಾಗೆ, ಸಮುದಾಯದ ನಡುವಿನಿಂದ ಎದ್ದುಬಂದ ಮಹಾನ್ ಜ್ಯೋತಿಯೊಂದು ತಾನು ಜಾಗೃತಗೊಳ್ಳುತ್ತ ಸಮಾಜವೂ ಜಾಗೃತಿಯತ್ತ ನಡೆಯುವಂತೆ ಮಾಡಿತು. ಅಕ್ಷರದ ಅರಿವೆಂಬ ದೀವಟಿಗೆಯನ್ನು ಪ್ರತಿ ಕೈಯಲ್ಲೂ ಇಟ್ಟಿತು. ತಮ್ಮ ಜೀವಿತಾವಧಿಯ ಒಂದೂಕಾಲು ಶತಮಾನದ ಬಳಿಕ ಭಾರತದಲ್ಲಿ ಮನೆ ಮಾತಾದ, ಜನವರಿ ೩ರಂದು ಹುಟ್ಟಿದ ಸಾವಿತ್ರಿಬಾಯಿ ಫುಲೆ ನಿರ್ಲಕ್ಷಿತ ಬದುಕುಗಳು ಘನತೆಯದಾಗುವಂತೆ ಮಾಡಿದ ಚೇತನವಾಗಿದ್ದಾರೆ. ಸಾವಿತ್ರಿಬಾಯಿ ಮತ್ತು ಅವರಿಂದ ‘ಸತ್ಯದ ಸಾಕ್ಷಾತ್ ರೂಪವಾದ ನನ್ನ ಸ್ವಾಮಿ’ ಎಂದು ಕರೆಸಿಕೊಂಡ ಪತಿ ಜೋತಿಬಾ ಫುಲೆ ಸಮಾಜಸೇವೆಗೆ ಕ್ರಾಂತಿಕಾರಿ ಹೊಳಹುಗಳನ್ನು ಕೊಟ್ಟವರು. ಅಧಿಕಾರದ ನೆಲೆಯಿಂದ ಯುದ್ಧವೆಂಬ ಸಾಮೂಹಿಕ ಪ್ರಯತ್ನವು ವೈಭವೀಕರಿಸಲ್ಪಟ್ಟ ಕಾಲದಲ್ಲಿ ಅಧಿಕಾರಹೀನರಿಗೆ ಸಂಘಟನೆಯೆಂಬ ಸಾಮೂಹಿಕ ವಿಮೋಚನೆಯ ‘ಫುಲೆ ಮಾರ್ಗ’ ಹಾಕಿಕೊಟ್ಟವರು. ಆಧುನಿಕ ಭಾರತದ ಸೆಕ್ಯುಲರ್ ಚಿಂತನಾಧಾರೆಗಳಿಗೆ ಸಶಕ್ತ ದೇಶೀ ಕೊಂಡಿಯಾಗಿರುವ ಜೋತಿಬಾ ಫುಲೆಯವರ ಚಿಂತನೆ, ಪ್ರಯತ್ನಗಳಿಗೆ ಹೆಣ್ಣುಸ್ಪರ್ಶ ನೀಡಿದ ಸಾವಿತ್ರಿಬಾಯಿ ಫುಲೆ ನಾವು ಮತ್ತೆಮತ್ತೆ ಪರಿಶೀಲಿಸಬೇಕಾದ ಆದರ್ಶ ಮಾದರಿಯಾಗಿದ್ದಾರೆ. 

ಮಹಾರಾಷ್ಟ್ರದ ನಾಯಗಾಂವ್ ಎಂಬ ಕುಗ್ರಾಮದ ರೈತ ಅಶಿಕ್ಷಿತ ಹುಡುಗಿ ಸಾವಿತ್ರಿಯನ್ನು ಬರಿಯ ಕೌಟುಂಬಿಕ ಹೆಣ್ಣಾಗಲು ಬಿಡದೆ ಸಾಮಾಜಿಕ ಮಹಿಳೆಯಾಗಿಸುವಲ್ಲಿ ಅವರ ಸಂಗಾತಿ ಜೋತಿಬಾರ ಪಾತ್ರ ಮಹತ್ತ್ವದ್ದಾಗಿದೆ. ಒಬ್ಬರೊಳಗೊಬ್ಬರ ವ್ಯಕ್ತಿತ್ವ ಹಾಸುಹೊಕ್ಕಾದಂತಿರುವ ಜೋಡಿದಾರಿಕೆಯಲ್ಲಿ ಅವರು ಸಮಾಜ ಸುಧಾರಣೆಯ ಹೊಸಪ್ರಯತ್ನಗಳನ್ನು ಕೈಗೆತ್ತಿಕೊಂಡರು. ಎಲ್ಲಿಯವರೆಗೆ ಶೋಷಣೆಯ ಮೂಲವನ್ನು ಗುರುತಿಸಲಾರೆವೋ ಅಲ್ಲಿಯವರೆಗೆ ಶೋಷಣೆಯನ್ನು ಒಪ್ಪಿಕೊಂಡೇ ಇರಬೇಕಾಗುತ್ತದೆ ಎಂದು ಗುರುತಿಸಿದರು. ಅದುವರೆಗಿನ ಸಮಾಜ ಸುಧಾರಕರು ಭಕ್ತಿ, ಅಧ್ಯಾತ್ಮದ ಭಾಷೆಯಲ್ಲಿ ಮೇಲುಕೀಳುಗಳನ್ನು ಪ್ರಶ್ನಿಸಿದ್ದರೆ ಫುಲೆಗಳು ದಮನದ ಬುಡಕ್ಕೇ ಕೈಹಾಕಿ ನೆಲೆಗಟ್ಟನ್ನು ಅಲುಗಿಸಿದರು. ಎಲ್ಲ ಸಮುದಾಯದವರಿಗೂ ಶಾಲೆಗಳನ್ನು ತೆರೆದರು. ವಿಧವೆಯರು, ಅನಾಥ ಮಕ್ಕಳನ್ನು ಪೊರೆದರು. ಅಸ್ಪೃಶ್ಯತೆಯ ಸಂಕಟಗಳಿಗೆ ಪರಿಹಾರ ಅರಸಿದರು. ಜಾತಿ ಶ್ರೇಣೀಕರಣವನ್ನು ಧಿಕ್ಕರಿಸಿ ಶೂದ್ರಾತಿಶೂದ್ರರಲ್ಲಿ ಆತ್ಮಗೌರವ ಬೆಳೆಸಿದರು. ಸತ್ಯಶೋಧಕ ಸಮಾಜ ಕಟ್ಟಿದರು. ಅವರು ಬರೆದರು, ಮಾತನಾಡಿದರು, ಸಂಚರಿಸಿದರು, ಹೇಳಿದಂತೆ ಬಾಳಿ ತೋರಿಸಿದರು. 


೧೮೪೮ರಲ್ಲಿ ಹುಡುಗಿಯರ ಶಾಲೆ ತೆರೆದು ಅಕ್ಷರ ದಾಸೋಹ ಆರಂಭಿಸಿದ ಫುಲೆಗಳ ಪ್ರಯತ್ನಕ್ಕೆ ಬ್ರಿಟಿಷ್ ಪ್ರಭುತ್ವದ ಅದಕ್ಕೂ ಮುಂಚಿನ ನಡೆಗಳು ಬೆಂಬಲವಾಗಿ ನಿಂತವು. ವಿಮೋಚಕರು ಎಲ್ಲೆಲ್ಲಿಂದ ಬರುವರೆಂದು ಹೇಳಲಾಗುವುದಿಲ್ಲ. ಭಾರತದ ಶೂದ್ರಾತಿಶೂದ್ರರಿಗೆ, ಮಹಿಳೆಯರಿಗೆ ಅಕ್ಷರ ಕಲಿಸುವ, ಆರೋಗ್ಯ ಕಲ್ಪಿಸುವ ಕ್ರೈಸ್ತ ಮಿಷನರಿಗಳು ಮತ್ತು ವಸಾಹತುಶಾಹಿ ಆಡಳಿತಗಾರರು ವಿಮೋಚಕರಂತೆ ಕಂಡಿದ್ದರೆ ಅಚ್ಚರಿಯಿಲ್ಲ. ಯಾಕೆಂದರೆ ೧೮೧೮ರ ವೇಳೆಗಾಗಲೇ ಕ್ರೈಸ್ತ ಮಿಷನರಿಗಳು ಭಾರತದಲ್ಲಿ ೧೧೧ ಶಾಲೆಗಳನ್ನು ನಡೆಸುತ್ತಿದ್ದರು. ೧೮೨೪ರಲ್ಲಿ ಮೊದಲ ಬಾಲಕಿಯರ ಶಾಲೆಯನ್ನು ಮುಂಬಯಿಯಲ್ಲಿ, ಬಳಿಕ ಕಲಕತ್ತಾ, ಸತಾರಾ, ಪುಣೆ, ನಾಸಿಕ್, ಅಹ್ಮದ್ ನಗರಗಳಲ್ಲಿ ತೆರೆದಿದ್ದರು. ೧೮೨೪ರಲ್ಲಿ ಗಂಗೂಬಾಯಿ ಎಂಬಾಕೆ ಮುಂಬಯಿಯಲ್ಲಿ ಬಾಲಕಿಯರ ಶಾಲೆ ತೆರೆದರೂ ಅದನ್ನು ಕೆಲವೇ ತಿಂಗಳಲ್ಲಿ ಮುಚ್ಚಿಸಲಾಗಿತ್ತು. ಅಲ್ಲದೆ ಜೋತಿಬಾರಂತಹ, ಸಾವಿತ್ರಿ ಫಾತಿಮಾ ಶೇಕರಂತಹ ಶಿಕ್ಷಕರನ್ನು ತರಬೇತಿಗೊಳಿಸಿದ ಮಿಸ್ ಫೆರಾರ್ ಫಾರ್ಮಲ್ ಸ್ಕೂಲನ್ನು ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿ ಆರಂಭಿಸಿದ್ದರು. ಸಾವಿತ್ರಿ, ಫಾತಿಮಾರ ಜೊತೆ, ಅವರಿಗಿಂತ ಮುಂಚೆ ಕೆಲವಾರು ಶಿಕ್ಷಕಿಯರು ತರಬೇತಿ ಪಡೆದಿರುವ ಸಾಧ್ಯತೆಯಿದೆ. ಚರಿತ್ರೆಯ ವಿಸ್ಮೃತಿಯಿಂದ ಅಂತಹ ರತ್ನಗಳೆಷ್ಟನ್ನೋ ಇನ್ನೂ ಹೆಕ್ಕಿ ತೆಗೆಯಬೇಕಿದೆ. ಒಟ್ಟಾರೆಯಾಗಿ ಭಾರತದ ನೆಲ, ಜನ, ಭಾಷೆ, ಇತಿಹಾಸದ ಬಗೆಗೆ ಮಿಷನರಿಗಳಿಗಿದ್ದ ಕುತೂಹಲವು ಕ್ರಮೇಣ ಗೌರವವಾಗಿ ಬದಲಾಗಿ ಅವರ ಆಸಕ್ತಿಗಳು ಮತಾಂತರದ ಆಚೆಗೂ ವಿಸ್ತರಿಸಿದವು. 

ಅಂದು ಮಿಷನರಿ ಶಾಲೆಗಳಿಗೆ ಸಾಮಾನ್ಯವಾಗಿ ಹೋಗುತ್ತಿದ್ದವರು ಕ್ರೈಸ್ತರು ಅಥವಾ ಅನಾಥರು. ಭಾರತೀಯ ಜನಸಾಮಾನ್ಯರು ಇನ್ನೂ ಶಾಲೆಗೆ ಮಕ್ಕಳನ್ನು ಕಳಿಸುವ ಅವಶ್ಯಕತೆಯನ್ನು ಮನಗಂಡಿರಲಿಲ್ಲ. ದೇಶೀ ಶಿಕ್ಷಕ-ಶಿಕ್ಷಕಿಯರ ಸಂಖ್ಯೆ ಜಾಸ್ತಿಯಾದರೆ ಕಲಿಯಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬಹುದೆಂದು ಜೋತಿಬಾ ಮತ್ತವರ ಗೆಳೆಯರು ಬಲವಾಗಿ ನಂಬಿದ್ದರು. ಹಾಗಾಗಿ ಜೋತಿಬಾ ತನ್ನ ಹದಿವಯಸ್ಸಿನ ಪತ್ನಿಯನ್ನು, ಅವರ ಗೆಳೆಯ ಉಸ್ಮಾನ್ ಶೇಕ್ ತನ್ನ ತಂಗಿ ಫಾತಿಮಾರನ್ನು ಅಹ್ಮದ್ ನಗರಕ್ಕೆ ಶಿಕ್ಷಕರ ತರಬೇತಿ ಶಾಲೆಗೆ ಕಳಿಸಿದರು. ಬೋಧಿಸುವ ಬಳಗದ ಸಂಖ್ಯೆ ಬೆಳೆಯುತ್ತ ಹೋದಂತೆ ಒಂದಾದಮೇಲೊಂದು ಶಾಲೆ ತೆರೆದರು.

ಮಿಷನರಿಗಳು ಭಾರತಕ್ಕಾಗುವಂತೆ ದೇಶೀ ಭಾಷೆಗಳಲ್ಲಿ ಪಠ್ಯ ತಯಾರು ಮಾಡಿದ್ದರೆ, ಇವರು ಸರಳಾತಿಸರಳ ಭಾಷೆಯಲ್ಲಿ ಶೂದ್ರಾತಿಶೂದ್ರ ವರ್ಗಕ್ಕೂ ಹೊಂದಿಕೊಳ್ಳುವಂತಹ ಪಠ್ಯವಸ್ತು, ಭಾಷೆ, ಬೋಧನಾ ಕ್ರಮವನ್ನು ಬಳಸಿದರು. ವಯಸ್ಕರಿಗೂ, ಕೂಲಿ ಕಾರ್ಮಿಕರಿಗೂ ಜಾತ್ರಾ-ಖೇತ್ರಾ ವಿಧಾನದಿಂದ ಶಿಕ್ಷಣ ನೀಡಿದರು. ಅವರ ಶಾಲೆಯಲ್ಲಿ ಕಲಿತ ಮಕ್ಕಳು ಪಡೆದ ವೈಚಾರಿಕ ಜಾಗೃತಿಗೆ ಮುಕ್ತಾಬಾಯಿ ಎಂಬ ದಲಿತ ಹುಡುಗಿ ಹಾಗೂ ಅವರ ಪ್ರಭಾವಕ್ಕೊಳಗಾದ ತಾರಾಬಾಯಿ ಶಿಂಧೆಯಂತಹ ದಿಟ್ಟೆಯರು ದ್ಯೋತಕವಾಗಿದ್ದಾರೆ. 

ಜೀವಮಾನವಿಡೀ ಸ್ಥಾಪಿತ ವ್ಯವಸ್ಥೆಯನ್ನು, ಅದರ ಮುಖ್ಯ ಸ್ಥಾನಗಳಲ್ಲಿರುವವರನ್ನು ಫುಲೆಗಳು ಎದುರು ಹಾಕಿಕೊಂಡಿದ್ದರು. ಅವರಿಗೆ ಎಷ್ಟು ಬೆಂಬಲ ಹರಿದು ಬಂತೋ, ಎಷ್ಟು ಮೆಚ್ಚುಗೆ ವ್ಯಕ್ತವಾಗಿತ್ತೋ ಅಷ್ಟೇ ಅವರ ವಿರುದ್ಧ ಕತ್ತಿ ಮಸೆಯುವವರೂ ಇದ್ದರು. ಮೇಲ್ಜಾತಿಯವರಿಂದ ಹಿಡಿದು ತಮ್ಮದೇ ಬಂಧುಬಳಗ, ಜಾತಿಯವರ ತನಕ ಹಲವರಿಂದ ವಿರೋಧ ಎದುರಿಸಿದರು. ಮೊದಮೊದಲು ಮಿಷನರಿಗಳಿಂದ ತಾತ್ತ್ವಿಕ, ಆರ್ಥಿಕ ಹಾಗೂ ನೈತಿಕ ಬೆಂಬಲವನ್ನು ಪಡೆದಿದ್ದರೂ ನಂತರ ತಮ್ಮದೇ ಆದ ವಿಚಾರಗಳು ಸ್ಪಷ್ಟಗೊಳ್ಳುತ್ತ ಹೋದಂತೆ ಅವರ ಅನುಮಾನಕ್ಕೆ ಒಳಗಾದರು. ಇವೆಲ್ಲ ಕಾರಣಗಳಿಂದ ಫುಲೆಗಳು ಶಾಲೆ ನಡೆಸಿದ್ದು ಹತ್ತು ವರುಷ ಮಾತ್ರ. ಬಳಿಕ ಕೆಲವು ಮುಚ್ಚಿ ಹೋದವು, ಕೆಲವನ್ನು ಮಿಷನರಿಗಳು ಮುಂದುವರೆಸಿದರು.

ಆದರೆ ಅಕ್ಷರ ಹಂಚುವುದಕ್ಕಷ್ಟೇ ಅವರ ಪ್ರಯತ್ನ ನಿಲ್ಲಲಿಲ್ಲ. ವಿರೋಧ, ವಿಫಲತೆಗಳಿಗೆ ಕಂಗೆಡದೆ ಅಸ್ಪೃಶ್ಯತೆ ವಿರೋಧ, ವಿಧವಾ ವಿವಾಹ, ಮೌಢ್ಯ ವಿರೋಧ, ಸರಳ ಮದುವೆ, ದುಡಿಯುವ ವರ್ಗದ ಸಂಘಟನೆ, ರೈತ ಸಂಘಟನೆ, ರಾಜಕೀಯ ಜಾಗೃತಿ, ಪ್ರಭುತ್ವದ ನೀತಿ ನಿರೂಪಣೆ ಬದಲಾಯಿಸಲು ಒತ್ತಡ ಹೇರುವುದೇ ಮೊದಲಾದ ಹೋರಾಟ, ಚಳವಳಿಗಳನ್ನು ಹುಟ್ಟುಹಾಕಿದರು. ತಮ್ಮಂತೆಯೇ ಯೋಚಿಸುವ ಸಮಾನ ಮನಸ್ಕರನ್ನು ಸಂಘಟಿಸಿ ಸತ್ಯಶೋಧಕ ಸಮಾಜ ಕಟ್ಟಿದರು. 





ವ್ಯಕ್ತಿಗತ ಸಮಸ್ಯೆಗಳ ಪರಿಹಾರ ಸಾಮೂಹಿಕ ಹೋರಾಟದಿಂದ ದೊರಕುತ್ತದೆ ಎಂಬ ಸಂಘಟನೆಯ ಪ್ರಾಥಮಿಕ ಪಾಠವನ್ನು ಫುಲೆಗಳು ದಮನಿತ ಸಮುದಾಯಗಳಿಗೆ ತೋರಿಸಿಕೊಟ್ಟರು. ಲೋಕಹಿತದ ದಾರಿ ಎಷ್ಟೇ ದುರ್ಗಮವಾಗಿದ್ದರೂ ಬದ್ಧತೆಯಿಂದ ಮುಂದುವರೆದರೆ ಬದಲಾವಣೆ ತರುವುದು ಸಾಧ್ಯ ಎಂದು ತೋರಿಸಿಕೊಟ್ಟರು. ಇದೇ ಫುಲೆ ಮಾರ್ಗ. ಎಲ್ಲ ಜೀವಪರ ಚಿಂತನೆಗಳ ಉಗಮ ಬಿಂದು, ಸಾಮೂಹಿಕತೆಯ ಧಾರಣ ಶಕ್ತಿಗೆ ಪ್ರತೀಕ. ಅವರ ಕಾಲಾನಂತರ ಭಾರತದಾದ್ಯಂತ ಹರಡಿ ಹಬ್ಬಿದ ಯಾವುದೇ ಮಾನವೀಯ ಚಳವಳಿ, ಚಿಂತನೆಗಳನ್ನು ನೋಡಿದರೂ ಅದರ ಬೇರುಗಳು ಫುಲೆಗಳ ನಿಸ್ವಾರ್ಥ ಪ್ರಯತ್ನದಲ್ಲಿ ಕಂಡುಬರುತ್ತವೆ. ಬಾಬಾಸಾಹೇಬ್ ಅಂಬೇಡ್ಕರರು ಮಹಾತ್ಮಾ ಎಂದೇ ಸಂಬೋಧಿಸುತ್ತಿದ್ದ ಜೋತಿಬಾ ಫುಲೆಯವರಿಗೆ ತಮ್ಮ ಒಂದು ಹೊತ್ತಗೆಯನ್ನು ಅರ್ಪಿಸಿದ್ದಾರೆ.

ಅಂತಹವರನ್ನು ನೆನಪಿಸಿಕೊಳ್ಳುವುದು ಎಂದರೆ ಅನ್ಯಾಯವನ್ನು ವಿರೋಧಿಸುತ್ತಲೇ ಮನುಷ್ಯ ಜೀವರನ್ನು ಮೈತ್ರಿಯಿಂದ ಅಪ್ಪಿಕೊಳ್ಳುವುದು. ಫುಲೆಗಳನ್ನು ಗೌರವಿಸುವುದು ಎಂದರೆ ಕಪಟ, ಕಂದಾಚಾರವಿರದ ಸರಳ ಮೌಲ್ಯಗಳನ್ನು ಒಪ್ಪಿ ಪಾಲಿಸುವುದು. ಸಾವಿತ್ರಿ ಬಾಯಿಯವರನ್ನು ಒಳಗಿಳಿಸಿಕೊಳ್ಳುವುದು ಎಂದರೆ ಇವತ್ತಿಗೂ ತಮ್ಮ ಅಲೆಮಾರಿತನಕ್ಕೆ, ಹಸಿವಿಗೆ, ಮಾರ್ಗದರ್ಶಿಗಳಿರದ ದಿಕ್ಕೇಡಿತನಕ್ಕೆ ಶಾಲೆ ತಲುಪಲಾಗದ ಲಕ್ಷಾಂತರ ಮಕ್ಕಳಿಗೆ ಅರಿವನ್ನು ಹಂಚುವುದು. 

ವೇಮುಲತನದ ಸಂಕಟಕ್ಕೆ ಮದ್ದು


ಚರಿತ್ರೆಯಿಂದ ಮಾದರಿಗಳನ್ನು ಆಯ್ದುಕೊಡಾಗ ಅವರನ್ನು ಮೂರ್ತೀಕರಿಸದೇ ಬದುಕಾಗಿ ಅನುವಾದಿಸಿಕೊಳ್ಳುವುದು ಮುಖ್ಯ. ಹಾಗೆ ೨೧ನೆಯ ಶತಮಾನದ ದಲಿತ ಹುಡುಗಿಯೊಬ್ಬಳು ಮೀಸಲಾತಿ ಕೀಳರಿಮೆಯಿಂದ ಹೊರಬರಲು ಸಾವಿತ್ರಿಬಾಯಿಯವರ ಬದುಕನ್ನು ತನ್ನ ಸ್ಫೂರ್ತಿಯಾಗಿ ಹೇಗೆ ಬಳಸಿಕೊಳ್ಳಬಹುದು ಎನ್ನುವುದನ್ನು ‘ಸಾವಿತ್ರಿಬಾಯಿ ಅಂಡ್ ಐ’ ಎಂಬ ಕೃತಿ ತಿಳಿಸುತ್ತದೆ. ಮಕ್ಕಳಿಗೆ ಗಂಭೀರ ವಿಷಯಗಳನ್ನು ಸರಳವಾಗಿ ತಿಳಿಸುವ ಹಂಬಲದ ಲೇಖಕಿ ಸಂಗೀತಾ ಮುಳೆ ಬರೆದ ಈ ಹೊತ್ತಗೆಯು ಕೆಸ್ತಾರ-ವಿಕಾಸ ಮೌರ್ಯ ಜೋಡಿಯಿಂದ ‘ಸಾವಿತ್ರಿಬಾಯಿ ಮತ್ತು ನಾನು’ ಎಂದು ಕನ್ನಡಕ್ಕೆ ಅನುವಾದಗೊಂಡಿದೆ. 

ಇಲ್ಲಗಳು ಅಷ್ಟೇನೂ ಮುಖ್ಯವಾಗದ ಬಾಲ್ಯವನ್ನು ಹಳ್ಳಿಯ ಸರಳ ಪರಿಸರದಲ್ಲಿ ಕಳೆದು, ಕನ್ನಡ ಮಾಧ್ಯಮದಲ್ಲಿ ಓದಿದ ಶಬರಿ ಎಂಬ ದಲಿತ ಹುಡುಗಿ ಕಾಲೇಜು ಶಿಕ್ಷಣದ ಸಲುವಾಗಿ ಪಟ್ಟಣಕ್ಕೆ ಬರುತ್ತಾಳೆ. ಅಲ್ಲಿಯ ವಿಶಿಷ್ಟ ನಾಗರಿಕ ಶಿಸ್ತು, ಸಿರಿತನದ ಭ್ರಮೆ ಹುಟ್ಟಿಸುವ ರೀತಿನೀತಿ, ಇಂಗ್ಲಿಷ್ ಭಾಷೆಯ ಅಪರಿಚಿತತೆಯಲ್ಲಿ ಹಲಬಗೆಯ ಸವಾಲುಗಳನ್ನು ಎದುರಿಸುತ್ತಾಳೆ. ತನ್ನ ಇದುವರೆಗಿನ ಬದುಕು ಬದುಕೇ ಅಲ್ಲವೆನಿಸಿಬಿಡುವಂತೆ ಇರುವ ಪರಿಸರದಲ್ಲಿ ದ್ವಂದ್ವ, ಗೊಂದಲ, ಹಿಂಜರಿಕೆ, ಕೀಳರಿಮೆಗಳಲ್ಲಿ ತೊಳಲುತ್ತಾಳೆ. ‘ಕೆಳಜಾತಿ’ಯವಳು, ಮೀಸಲಾತಿ ಪಡೆದು ಆ ಸ್ಥಾನ ತಲುಪಿದವಳೆಂಬ ಸಂಗತಿಗಳು ವೇಮುಲತನದ ಸಂಕಟಗಳಿಗೆ ಕಾರಣವಾಗುತ್ತವೆ. ಮೀಸಲಾತಿ ಕೊಡುವ ಅವಕಾಶ, ಧೈರ್ಯ, ಭರವಸೆಗಳದ್ದು ಒಂದುತೂಕವಾದರೆ ಅದರ ಜೊತೆಗೆ ಎದುರಾಗುವ ಹಿಂಜರಿಕೆ, ಭಯ, ಅವಮಾನಗಳ ವಜನು ಕುಸಿಯುವಂತೆ ಮಾಡುತ್ತವೆ. 

ಹೀಗಿರುತ್ತ ಅವಳಿಗೆ ವಾಡೆಯ ಕೆಳಮಾಳಿಗೆಯಲ್ಲಿ ದಿನಚರಿಯೊಂದು ಸಿಗುತ್ತದೆ. ಅದು ಯಾರದ್ದು? ಸಾವಿತ್ರಿಬಾಯಿ ಫುಲೆಯವರದು! ಆ ಕಾಲ್ಪನಿಕ ದಿನಚರಿಯ ಪುಟಗಳು ಹಿಂಜರಿಕೆಯ ಕೂಪದಿಂದೆದ್ದು ಬಂದು ಸಮೂಹದಲ್ಲಿ ಬೆರೆಯುವ ಸೂಚನೆಯನ್ನು ಅವಳಿಗೆ ಕೊಡುತ್ತವೆ. ಮೈಮೇಲೆ ಸಗಣಿ ಎಸೆವವರಿಂದ ಬಟ್ಟೆ ಕೊಳೆಯಾದರೂ ಸಾವಿತ್ರಿ ಬಾಯಿ ಧೃತಿಗೆಡದೆ ನಡೆದದ್ದು, ಸಂಘಟನೆ, ಶಿಕ್ಷಣ, ಸಮಾಜ ಸೇವೆಗಳಲ್ಲಿ ಸಂಗಾತಿಗಳೊಂದಿಗೆ ತೊಡಗಿಕೊಂಡದ್ದನ್ನು ಓದುತ್ತ, ಓದುತ್ತ ಕಂಬಳಿಹುಳು ಚಿಟ್ಟೆಯಾಗಿ ಮಾರ್ಪಾಟಾದಂತೆ ಸಹಜ ರೂಪಾಂತರ ಹೊಂದುತ್ತಾಳೆ. ಸಾಮೂಹಿಕವಾಗಿ ಹೋರಾಡಬೇಕೆಂಬ ಅರಿವು ಪಡೆಯುತ್ತಾಳೆ. 

ಸಾಧಾರಣವಾಗಿ ದಲಿತ ನಿರೂಪಣೆಗಳಲ್ಲಿ ಬ್ರಾಹ್ಮಣರು, ಹೆಣ್ಣು ನಿರೂಪಣೆಗಳಲ್ಲಿ ಗಂಡಸರು ಖಳರಂತಹ, ಖೂಳರಂತಹ ಪಾತ್ರವಾಗಿಯೇ ಕಾಣಿಸುತ್ತಾರೆ. ಅಂತಹ ಏಕರೂಪ ಜಾತಿ-ಲಿಂಗ ವ್ಯಾಖ್ಯಾನವನ್ನು ಸಂಗೀತಾ ಮುರಿದಿದ್ದಾರೆ. ಇಲ್ಲಿ ಒಳ್ಳೆಯ ಹುಡುಗರು ಇದ್ದಾರೆ. ತುಂಬ ಶ್ರದ್ಧೆಯಿಂದ ಅವಳಿಗೆ ಇಂಗ್ಲಿಷ್, ಗಣಿತ ಹೇಳಿಕೊಟ್ಟ ಸಿರಿವಂತ ಹುಡುಗನಿದ್ದಾನೆ. ‘ನಾನು ಶೂದ್ರ’ ಎಂದು ಎದೆಗೆ ಪೋಸ್ಟರು ಹಚ್ಚಿಕೊಂಡು ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸಬೇಕೆನ್ನುವ ಬ್ರಾಹ್ಮಣ ಹುಡುಗರು ಕಾಣಿಸುತ್ತಾರೆ. ಲೇಖಕಿ ಭವಿಷ್ಯದ ಬಗೆಗೆ ಇಟ್ಟಿರುವ ಆಶಾವಾದದ ದ್ಯೋತಕ ಇದಾಗಿರಬಹುದು. 

ಒಟ್ಟಾರೆಯಾಗಿ ಸಂಕುಚಿತ ಮನಸುಗಳಿರುವಂತೆಯೇ ಮನುಷ್ಯ ಸತ್ವವನ್ನು ಗುರುತಿಸುವ ಉದಾತ್ತರೂ ಇದ್ದಾರೆಂಬ ವಾಸ್ತವವು ಶಬರಿಗೆ ಬದುಕಿನ ಭರವಸೆ ಹೆಚ್ಚಿಸುತ್ತದೆ. ಸಂಘಟಿತ ಪ್ರಯತ್ನದ ಬಗೆಗೆ ವಿಶ್ವಾಸ ಮೂಡಿಸುತ್ತವೆ. ಸತ್ಯದೆಡೆಗೆ ನಿರ್ಭೀತಿಯಿಂದ ನಡೆಯತೊಡಗುತ್ತಾಳೆ. ಶಬರಿಯ ತುಮುಲ, ತಾಕತ್ತುಗಳ ಪಯಣವನ್ನು ಪುಸ್ತಕ ಸಶಕ್ತವಾಗಿ ಕಟ್ಟಿಕೊಟ್ಟಿದೆ. 

ಮೀಸಲಾತಿ ಈ ದೇಶಕ್ಕೆ ಹೊಸದಲ್ಲ, ಸಾವಿರಾರು ವರ್ಷಗಳಿಂದ ಇರುವಂಥದ್ದು. ಹೆಣ್ಣುಗಂಡು ಎಂಬ ಮೀಸಲು ಮೊದಲು ಶುರುವಾಯಿತು. ಬರಬರುತ್ತ ಇವರದೀ ಜಾತಿ, ಅವರದು ಆ ಜಾತಿ: ಇಂಥವರೇ ಜೀತ ಮಾಡಬೇಕು, ಇಂಥವರೇ ಮಸಣ ಕಾಯಬೇಕು, ಇಂತಿಂಥವರೇ ಮಲ ಹೊರಬೇಕು, ಮಡಕೆ ಮಾಡಬೇಕು, ನೇಗಿಲು ಹಿಡಿದು ಉಳಬೇಕು, ಸಿಂಹಾಸನದ ಮೇಲೆ ಕೂರಬೇಕು, ಗುಡಿಯಲ್ಲಿ ಹೂವೇರಿಸಬೇಕು ಎನ್ನುವಂತಹ ಅಸಂಖ್ಯ ಮೀಸಲುಗಳು ಜಾರಿಯಾದವು. ಮತ್ತೆ ಹೇಳಬೇಕಿಲ್ಲ, ಇದು ಅತ್ಯಂತ ಅಸಹಜ, ಅನೈತಿಕ, ಅಧಾರ್ಮಿಕ, ಅನ್ಯಾಯದ, ಇಂದಿಗೂ ಉಸಿರು ಕಟ್ಟಿಸುತ್ತ ಇರುವ  ಮೀಸಲಾತಿ. ಅನ್ಯಾಯದ ಈ ಜಾತಿ ಮೀಸಲು ಮುರಿಯಲು ನ್ಯಾಯದ ಮೀಸಲಾತಿ ಬೇಕೇಬೇಕು. ಆದರೆ ನ್ಯಾಯವೆಂಬ ಕಹಿಸತ್ಯವನ್ನು ಗುಳಿಗೆಯಂತೆ ನುಂಗಲು ಬಾರದು. ಅದನ್ನು ಜಗಿದು ರಸಹೀರಿ ಅರಗಿಸಿಕೊಳ್ಳಬೇಕು. ಅದಕ್ಕೆ ಫುಲೆ ಮಾರ್ಗವು ಬೇಕೇ ಬೇಕು.

ಹೀಗೆಂದು ‘ಸಾವಿತ್ರಿಬಾಯಿ ಮತ್ತು ನಾನು’ ಹೊತ್ತಗೆ ತಿಳಿಸುತ್ತದೆ. ಮೀಸಲಾತಿಯಡಿ ಶಿಕ್ಷಣ ಪಡೆಯುತ್ತಿರುವವರ ಸಂಕಟಗಳನ್ನು ಎದೆಗೆ ತುಂಬಿಸುತ್ತದೆ. ಸಾವಿತ್ರಿಬಾಯಿಯವರ ಜೀವನಚರಿತ್ರೆಯನ್ನು ಶಬರಿ ಎಂಬ ಹುಡುಗಿಯ ಬದುಕಿನ ವಿಕಾಸದ ಮೂಲಕ ನಿರೂಪಿಸಿರುವ ಕಥನ ತಂತ್ರ ಹೊಸದಾಗಿದೆ. ಅಂದುಇಂದುಗಳನ್ನು ಜಡೆಯಂತೆ ಹೆಣೆದ ಕೌಶಲ, ಬರಹದ ಪ್ರಾಮಾಣಿಕತೆ, ನಿರೂಪಣೆಗಳು ಓದಿಸುವ ಶಕ್ತಿಯನ್ನು ಹೊತ್ತಗೆಗೆ ಕೊಟ್ಟಿವೆ. ಸಾವಿತ್ರಿಬಾಯಿಯವರ ಬಗೆಗೆ ಹೀಗೂ ಯೋಚಿಸಿ, ಬರೆಯಬಹುದು ಎಂದು ಹೊಸ ಮಾದರಿಯೊಂದನ್ನು ತೋರಿಸಿರುವ ಹೊತ್ತಗೆಯನ್ನು ಸಕಾಲದಲ್ಲಿ ಸಮರ್ಥ ಅನುವಾದ ಮಾಡಿರುವ ಕೆಸ್ತಾರ ಮತ್ತು ವಿಕಾಸ್; ಪ್ರಕಟಿಸಿದ ಅಹರ್ನಿಶಿಯ ಗೆಳತಿ ಅಕ್ಷತಾ ಹುಂಚದಕಟ್ಟೆ ಅಭಿನಂದನಾರ್ಹರಾಗಿದ್ದಾರೆ.