Friday 29 April 2022

ದಾಕ್ಷಾಯಿಣಿ ವೇಲಾಯುಧನ್ (1912-1978) - ಮೊದಲ ದಲಿತ ಪದವೀಧರೆ

 


ಆ ಕೇರಿಯಲ್ಲಿ ಸಾಕಷ್ಟು ಹೆಣ್ಣುಮಕ್ಕಳಿದ್ದರು. ಬ್ರಿಟಿಷರು ತೆರೆದ ಶಾಲೆ ಅಷ್ಟು ದೂರದಲ್ಲಿತ್ತು. ಮೇಲಿನ ಕೇರಿಯ ಹುಡುಗರು, ಹುಡುಗಿಯರು ದಿನವೂ ವೆಂಬನಾಡು ಸರೋವರ ದಾಟಿ ‘ಶಾಲೆ’ ಎನ್ನುವುದಕ್ಕೆ ಹೋಗುವುದನ್ನು, ಕಲಕಲಗುಡುತ್ತ ಹಿಂತಿರುಗಿ ಬರುವುದನ್ನು ಕೇರಿಯ ಹೆಣ್ಣುಮಕ್ಕಳು ಕುತೂಹಲದ ಕಣ್ಣಿಂದ ನೋಡುತ್ತಿದ್ದರು. ಬಹುತೇಕ ಹುಡುಗಿಯರಿಗೆ ಶಾಲೆ ಎಂದರೇನೆಂದು ಗೊತ್ತಿರಲಿಲ್ಲ. ಅದೇನು ಹೋಗಿ ನೋಡಿ ಬಿಡುವಾ ಎಂಬ ಕುತೂಹಲವಿದ್ದರೂ ಹೋಗಲಾಗುತ್ತಿರಲಿಲ್ಲ. 

ಕಾರಣ ಅವರು ಅತಿಕಡಿಮೆ ಬಟ್ಟೆ ಧರಿಸುವ ಹಕ್ಕು ಪಡೆದ ಪುಲಯಾ ಹೆಣ್ಣುಗಳು. ನಂಗೇಲಿ ಎಂಬ ಹೆಣ್ಣು ತನ್ನ ಸ್ತನ ಮುಚ್ಚಿಕೊಳ್ಳಲು ವಸ್ತ್ರ ತೊಟ್ಟದ್ದಕ್ಕೆ, ಸ್ತನ ಕರ ಕೊಡಲು ಸಾಧ್ಯವಾಗದ ಕಾರಣಕ್ಕೆ ಬೇಸತ್ತು ಮೊಲೆಗಳನ್ನೇ ಕತ್ತರಿಸಿಟ್ಟ ದೇವರ ನಾಡಿನ ಹೆಣ್ಣುಗಳವರು. ಉಳಿದ ಹೆಣ್ಣುಗಳಂತೆ ಮುಂಡಿನ ಮೇಲೆ ಸೊಂಟದಿಂದ ಎಡಹೆಗಲ ತನಕ ಹೋಗಿ ಹಿಂದಿಳಿಯುವ ಮೇಲ್‌ಮುಂಡು ಅಥವಾ ನೆರಿಯತ್ತುಂ ಅನ್ನು ಅವರು ತೊಡುವಂತಿಲ್ಲ. ‘ಒಟ್ಟ ಮುಂಡ’ನ್ನುಟ್ಟು ಮಡಚಿದ ಕೈಗಳಿಂದ, ಮಣಿಸರಗಳಿಂದ ಮೊಲೆಗಳನ್ನು ಮುಚ್ಚಿಕೊಂಡು ದೂರವೇ ನಿಲ್ಲಬೇಕು. ದೇಹದ ಭಾಗ ಮುಚ್ಚಿಕೊಳ್ಳಬಹುದು, ಆದರೆ ಎದೆಯ ಮೇಲೆ ವಸ್ತ್ರ ಹಾಕಿಕೊಳ್ಳಬಾರದು. ಹಾಗಾಗಿ ಅವರಿಗಾಗಿ ಶಾಲೆ ತೆರೆದರೂ ತೆರೆದೆದೆಯಲ್ಲಿ ಹೋಗಲಾರದ ಲಜ್ಜೆಗೆ ಕಲಿಕೆಯಿಂದ ದೂರವಿದ್ದರು. 

ಅಂಥಲ್ಲಿ, ಅನ್ಯಾಯದ ನಿಯಮಗಳೇ ಮೇಲುಗೈ ಸಾಧಿಸಿದ್ದ ಕಾಲದಲ್ಲಿ ಪುಲಯಾ ಹುಡುಗಿಯೊಬ್ಬಳು ಹತ್ತಿಯ ಬಟ್ಟೆ ಹೊದ್ದು, ರವಿಕೆ ತೊಟ್ಟು ತನ್ನ ದೇಹದ ಮೇಲ್ಭಾಗವನ್ನು ಮುಚ್ಚಿಕೊಂಡಳು. ರವಿಕೆ ತೊಡುವುದು ಎಂದರೆ ಕೇವಲ ತುಂಡರಿವೆ ಕತ್ತರಿಸಿ ಹೊಲಿದು ಅಂದಚಂದ ಹೆಚ್ಚಿಸಲು ತೊಡುವ ವಿನ್ಯಾಸವಾಗಿರಲಿಲ್ಲ. ಬದಲಾಗಿ ಹೆಣ್ಣುಪ್ರಜ್ಞೆ, ದಲಿತ ಪ್ರಜ್ಞೆಗಳನ್ನು ಜಾಗೃತಗೊಳಿಸುವ ಅದ್ಭುತ ಸಂಭವಿಸಿತು. ಆ ಹುಡುಗಿ ಶಾಲೆ ಕಲಿತು, ಪದವಿ ಪಡೆದು, ಸ್ವತಂತ್ರ ಭಾರತದ ಸಂವಿಧಾನ ರೂಪಿಸುವ ತನಕ ದಿಟ್ಟವಾಗಿ ನಡೆದಳು. ನೇರ ನಿಲುವು, ಗಂಭೀರ ಸ್ವಭಾವ, ಸ್ಪಷ್ಟ ಮಾತುಗಳಿಂದ ತನ್ನ ಸಮುದಾಯವನ್ನು ಜಾಗೃತಗೊಳಿಸಲು ಹೋರಾಡಿದಳು.

ಆ ಮಹಿಳೆ ಕೆ. ದಾಕ್ಷಾಯಿಣಿ ವೇಲಾಯುಧನ್. 

ತನ್ನ ತಾಯಿ, ಸೋದರಿಯರೊಡಗೂಡಿ ಮೇಲುವಸ್ತ್ರ (ರವಿಕೆ) ಧರಿಸಿದ ಮೊದಲ ಪುಲಯಾ ಮಹಿಳೆ ದಾಕ್ಷಾಯಿಣಿ ಆ ಸಮುದಾಯದ ಮೊದಲ ತಲೆಮಾರಿನ ಶಿಕ್ಷಿತ ಮಹಿಳೆ. ಪದವಿ ಪಡೆದ ಭಾರತದ ಮೊದಲ ದಲಿತ ಮಹಿಳೆ. ವಿಜ್ಞಾನ ಪದವಿ ಪಡೆದ ಮೊದಲ ದಲಿತ ಮಹಿಳೆ. ಕೊಚ್ಚಿಯ ಜನಪ್ರತಿನಿಧಿ ಸಭೆಯ ಮೊದಲ ದಲಿತ ಮಹಿಳಾ ಪ್ರತಿನಿಧಿ. ಸಂವಿಧಾನ ರಚನಾಸಭೆಯ ಅತಿ ಕಿರಿಯ ಚುನಾಯಿತ ಪ್ರತಿನಿಧಿ. 389 ಸದಸ್ಯರ, 15 ಮಹಿಳೆಯರಿದ್ದ ಸಂವಿಧಾನ ಸಭೆಯ ಏಕೈಕ ದಲಿತ ಮಹಿಳೆ. ಇಂತಹ ಹಲವು ಮೊದಲುಗಳ ಸಮ್ಮಿಶ್ರಣವಾಗಿದ್ದ ದಾಕ್ಷಾಯಿಣಿ ವೇಲಾಯುಧನ್ ಅವರ ಗೌರವಾರ್ಥ ಕೇರಳ ಸರ್ಕಾರವು ಮಹಿಳಾ ಸಶಕ್ತೀಕರಣದಲ್ಲಿ ತೊಡಗಿಕೊಂಡಿರುವ ಮಹಿಳೆಯರಿಗೆ 2019ರಿಂದ ‘ದಾಕ್ಷಾಯಿಣಿ ವೇಲಾಯುಧನ್’ ಪ್ರಶಸ್ತಿ ನೀಡುತ್ತಿದೆ.

ಅಸ್ವತಂತ್ರ ಭಾರತದ ಅಸ್ವತಂತ್ರ ಪುಲಯಾ ಕುವರಿಯಾಗಿದ್ದ ದಾಕ್ಷಾಯಿಣಿ ಸ್ವತಂತ್ರ ಬರುವ ಮೊದಲೇ ಸ್ವತಂತ್ರಳಾಗಿ ರೂಪುಗೊಂಡಿದ್ದರ ಹಿಂದೆ ಕೇರಳದ ಅಸ್ಪೃಶ್ಯ ಸಮುದಾಯಗಳ, ಹೆಣ್ಣು ಜೀವಗಳ ಹೋರಾಟದ ಕಥನವಿದೆ. ಇವತ್ತಿಗೂ ಸ್ಫೂರ್ತಿ ನೀಡುವಂತೆ ಅವರ ಬದುಕಿನ ವಿವರಗಳಿವೆ.


ಪುಲಯಾಗಳು ಕೇರಳದ ಮೂಲನಿವಾಸಿಗಳು. ಆದರೆ ನೆಲ-ನೀರು-ಸಂಪನ್ಮೂಲಗಳ ಮೇಲಿನ ತಮ್ಮ ಹಕ್ಕುಗಳನ್ನು ಕಳೆದುಕೊಂಡು, ಭೂಹೀನರಾಗಿ, ಕೃಷಿಕೂಲಿಗಳಾಗಿ, ಅಸ್ಪೃಶ್ಯರಾಗಿ ವಂಚಿತರಾಗಿ ಬದುಕುತ್ತಿದ್ದರು. ಆ ಕಷ್ಟಕುಲದ ಜನರು ರಸ್ತೆಯಲ್ಲಿ ನಡೆಯುವಂತಿಲ್ಲ. ತಾವೇ ತೋಡಿದ ಬಾವಿಯಿಂದ ನೀರು ಸೇದಿ ಒಯ್ಯುವಂತಿಲ್ಲ. ಬೀದಿಬೀದಿಗಳಲ್ಲಿ ಮೊದಲೇ ಗೊತ್ತುಪಡಿಸಿದ ಜಾಗಗಳಲ್ಲಿ ನಿಂತು ಕೇ ಹೊಹೊಹೊ ಎಂದು ಕೂಗಬೇಕು. ಅದಕ್ಕೆ ಮೇಲ್ಜಾತಿಯವರ‍್ಯಾರಾದರೂ ಮರು ಉತ್ತರಿಸಿದರೆ ಮುಖ ಮುಚ್ಚಿಕೊಂಡು ಹಿಂದಿರುಗಿ ನಡೆದುಬಿಡಬೇಕು. ತಮಗಿಂತ ‘ಮೇಲು’ ಜಾತಿಯವರ ಎದುರು ಹೋಗಲೇಬೇಕಾದಾಗ ತಲೆಗೆ, ಎದೆಗೆ ತೊಟ್ಟ ವಸ್ತ್ರ ತೆಗೆದು ಕಂಕುಳಲ್ಲಿ ತುರುಕಿ ಸರಿದು ನಿಲ್ಲಬೇಕು. 

ಇದರ ವಿರುದ್ಧ ಕ್ಷೀಣವಾಗಿ ಆದರೆ ನಿರಂತರವಾಗಿ ಹೋರಾಟಗಳು ನಡೆದಿದ್ದರೂ ಸಮಾನ ಹಕ್ಕು, ಅವಕಾಶಗಳಿಗಾಗಿ 19ನೇ ಶತಮಾನದಲ್ಲಿ ದನಿಯೇಳತೊಡಗಿದವು. ಸಂಘಟನೆ, ಘರ್ಷಣೆ, ಹೋರಾಟಗಳು ನಡೆಯತೊಡಗಿದ್ದವು. ಸಾರ್ವಜನಿಕ ಸ್ಥಳಗಳು ಎಲ್ಲರಿಗೂ ಸೇರಿದವೆಂದು ಗ್ರಾಮೀಣ ಭಾಗದ ಕೂಲಿಗಳು, ಕೆಲಸಗಾರರು, ಜೀತದಾಳುಗಳು ಹಕ್ಕು ಪ್ರತಿಪಾದನೆಗೆ ತೊಡಗಿದ್ದರು. ಅಯ್ಯನ್ ಕಾಳಿ (1862-1941)  ಹೋರಾಟಗಳ ಮುಂಚೂಣಿಯಲ್ಲಿದ್ದರು. ಪುಲಯ ಮಹಾಜನ ಸಭಾ ಹುಟ್ಟಿದ ಕಾಲ ಅದು. 

ಕೊಚ್ಚಿ ರಾಜನ ‘ನೆಲ’ದಲ್ಲಿ ಅಸ್ಪೃಶ್ಯರು ಗುಂಪುಗೂಡಿ ಸಭೆ ಸೇರುವುದನ್ನು ನಿಷೇಧಿಸಲಾಗಿತ್ತು. ಅಂಥಲ್ಲಿ ‘ಸಭಾ’ ರೂಪುಗೊಂಡ ಪರಿಯೇ ವಿಶಿಷ್ಟವಾಗಿದೆ. ಸಮುದ್ರಕ್ಕೆ ಜಾತಿಭೇದವಿಲ್ಲದ ಕಾರಣ ಬೆಸ್ತರ ಸಹಾಯದಿಂದ ಹಲವು ಹಲಗೆಗಳನ್ನು ಒಂದರೊಡನೊಂದು ಜೋಡಿಸಿ ತೇಲುವ ತೆಪ್ಪ ಸಿದ್ಧಗೊಳಿಸಿದರು. ಮುಲವುಕ್ಕಾಡಿನ ಕಲ್ಲಚಮ್ಮೂರಿ ಕುಂಜನ್, ಅವರ ಇಬ್ಬರು ಮಗಂದಿರು, ಅವರ ತಮ್ಮ ಕೃಷ್ಣೇತಿ, ನಿಮ್ನವರ್ಗಗಳ ಹಿತೈಷಿಗಳಾಗಿ ಕೈಜೋಡಿಸಿದ್ದ ಮಹಾರಾಜಾ ಕಾಲೇಜಿನ ಪ್ರೊಫೆಸರರಾದ ಪಂಡಿತ ಕುರುಪ್ಪನ್, ಹಲವು ದಿವಾನರನ್ನು ಕೊಟ್ಟಿದ್ದ ತೊಟ್ಟೆಕಲ್ ಮನೆತನದ ಟಿ.ಕೆ. ಕೃಷ್ಣ ಮೆನನ್ ಮೊದಲಾದವರು ಬೋಲ್ಘಾಟಿ ಪ್ರದೇಶದಲ್ಲಿ ತೆಪ್ಪದ ಮೇಲೆ ಸೇರಿ ‘ಪುಲಯಾ ಮಹಾಜನ ಸಭಾ’ವನ್ನು ರಚಿಸಿದರು. ಕೃಷ್ಣೇತಿ ಅವರನ್ನು ಮೊದಲ ಅಧ್ಯಕ್ಷರನ್ನಾಗಿ ಮಾಡಿದರು.

ಪುಲಯಾ ಹುಡುಗಿಗೆ ಎಳವ ಹೆಸರು!

ಕೇರಳದ ಕೊಚ್ಚಿ ಸಮುದ್ರ ತೀರದ ವೆಂಬನಾಡು ಸರೋವರದಲ್ಲಿರುವ ಸಣ್ಣ ನಡುಗಡ್ಡೆ ಮುಲವುಕ್ಕಾಡ್ (ಕನಯ್ಯನೂರ ತಾಲೂಕು, ಎರ್ನಾಕುಲಂ ಜಿಲ್ಲೆ.) ಅಲ್ಲಿ ಕುಂಜನ್ ಮತ್ತು ತಯ್ಯಿತರ ಮಾಣಿಯಮ್ಮ ಅವರ ಮಗಳಾಗಿ ಜುಲೈ 4, 1912ರಲ್ಲಿ ಕೆ. ಕೆ. ದಾಕ್ಷಾಯಿಣಿ ಅಥವಾ ಕಲ್ಲಚಮ್ಮೂರಿ ಕುಂಜನ್ ದಾಕ್ಷಾಯಿಣಿ ಹುಟ್ಟಿದಳು. ಒಂದು ಎಕರೆಯಷ್ಟು ಭೂಮಿಯಲ್ಲಿ ತೋಟ ಎಬ್ಬಿಸಿದ್ದ, ಸಮುದಾಯದ ಹುಡುಗರಿಗೆ ಶಿಕ್ಷಕರಾಗಿದ್ದ ಕುಂಜನ್, ಅಯ್ಯನ್ ಕಾಳಿಯವರ ಚಿಂತನೆಗಳಿಂದ ಪ್ರಭಾವಿತರಾಗಿದ್ದರು. ತಮ್ಮ ಮಗಳಿಗೆ ಅಳಕಿ, ಪೂಮಾಲಾ, ಚಕ್ಕಿ, ಕಾಳಿ, ಕುರುಂಬಾ, ಕಿಲಿಪಕ್ಕ ಮೊದಲಾದ ‘ಕ್ಷುದ್ರ’ವೆನಿಸುವ ಹೆಸರಿಡದೆ ಸಾಧಾರಣವಾಗಿ ಪುಲಯಾಗಳಿಗಿಂತ ‘ಮೇಲು’ ಜಾತಿಯಾದ ಎಳವರು ಇಡುವ ದಾಕ್ಷಾಯಿಣಿ ಎಂಬ ಹೆಸರಿಟ್ಟರು. ಮಗಳನ್ನು ಶಾಲೆಗೆ ಸೇರಿಸಿದ ಕುಂಜನ್ ಅವಳ ಓದಿಗೆ ಬೆನ್ನೆಲುಬಾಗಿ ನಿಂತರು. ಕೊಚ್ಚಿ ರಾಜ್ಯವು ನಿಮ್ನವರ್ಗದ ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ಶೈಕ್ಷಣಿಕ ಧನಸಹಾಯದ ಆಧಾರದಿಂದ ಶಿಕ್ಷಣ ಪಡೆಯತೊಡಗಿದಳು.

ಮೊದಲ ದಲಿತ ಪದವೀಧರೆ ದಾಕ್ಷಾಯಿಣಿಯ ವಿದ್ಯಾಭ್ಯಾಸ ಸುಲಭದ್ದಾಗಿರಲಿಲ್ಲ. ಎರ್ನಾಕುಲಂನ ಮಹಾರಾಜಾ ಕಾಲೇಜಿನಲ್ಲಿ ಓದುವಾಗ ಇಡಿಯ ವಿಜ್ಞಾನ ವಿಭಾಗದಲ್ಲಿ ಅವಳೊಬ್ಬಳೇ ಹುಡುಗಿ ಇದ್ದದ್ದು. ರಸಾಯನ ಶಾಸ್ತ್ರದ ಪ್ರಯೋಗಾಲಯದಲ್ಲಿ ದೂರ ನಿಂತೇ ಪ್ರಯೋಗಗಳನ್ನು ನೋಡುತ್ತಿದ್ದಳು. ಪ್ರಯೋಗ ಮಾಡುವ ಅವಕಾಶ ಸಿಗುತ್ತಿರಲಿಲ್ಲ. ದಲಿತೇತರ ಜಾತಿಗಳಿಗೆ ಸೇರಿದ್ದ ಅಧ್ಯಾಪಕರು ಅವಳನ್ನು ಹತ್ತಿರ ಬಿಟ್ಟುಕೊಳ್ಳಲಿಲ್ಲ. ಪಾಠವನ್ನೂ ಎಲ್ಲರಿಗಿಂತ ದೂರ ಕುಳಿತು ಕೇಳಬೇಕಿತ್ತು. ಅವಳ ಹೆಸರು ಕೇಳಿ, ಎದೆ ವಸ್ತ್ರ ಧರಿಸಿದ್ದನ್ನು ನೋಡಿ ಎಳವ ಜಾತಿಯವಳೆಂದುಕೊಂಡು ಬಳಿ ಬಂದವರೂ ಪುಲಯಾ ಎಂದು ತಿಳಿದಮೇಲೆ ದೂರವಾಗುತ್ತಿದ್ದರು. ಪುಲಯಾ ಮಹಿಳೆಯರು ಎಳವಳೆಂದು ಭಾವಿಸಿ ಅಂತರ ಕಾಯ್ದುಕೊಳ್ಳಲು ದೂರ ನಿಲ್ಲುತ್ತಿದ್ದರು. ಆಕೆಯ ಜಾತಿ ತಿಳಿದ ಬಳಿಕ ಪುಲಯ ಹೆಣ್ಣಾಗಿ ಆ ಹೆಸರು ಇಟ್ಟುಕೊಂಡಿರುವ ಬಗೆಗೆ ಅಚ್ಚರಿಗೊಳ್ಳುತ್ತಿದ್ದರು. 

ಜಾತಿ ಕಾರಣಕ್ಕೆ ತೋರಿಸುವ ತಾರತಮ್ಯ, ಅವಮಾನಗಳಿಂದ ನೊಂದು ಒಳಗೊಳಗೆ ಕುದಿಯುತ್ತಿದ್ದರೂ ದ್ವಿತೀಯ ದರ್ಜೆಯಲ್ಲಿ ದಾಕ್ಷಾಯಿಣಿ ತೇರ್ಗಡೆ ಹೊಂದಿದರು. ಬಳಿಕ ಮದರಾಸಿನ ಶಿಕ್ಷಕ ತರಬೇತಿ ಕೇಂದ್ರದಲ್ಲಿ ಓದಿದರು. ಅಲ್ಲಿಯೂ ದೂರದಿಂದಲೇ ಪಾಠ ಕೇಳಿಸಿಕೊಂಡರು. ಶಿಕ್ಷಣ ಮುಗಿಸಿದ ತಕ್ಷಣ 1935ರಲ್ಲಿ ತ್ರಿಶೂರ್ ಜಿಲ್ಲೆಯ ಪೆರುಂಗೊತ್ತಿಕಾರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದರು. 1945ರ ತನಕ ಹತ್ತು ವರ್ಷ ತ್ರಿಶೂರ್ ಮತ್ತು ತ್ರಿಪುನಿತುರಗಳ ಸರ್ಕಾರಿ ಪ್ರೌಢಶಾಲೆಗಳಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದರು. 



ಅವರು ಬೋಧಿಸುತ್ತಿದ್ದ ಪ್ರೌಢಶಾಲೆಯಲ್ಲಿ ಪುಲಯಾಗಳಿಗಿಂತ ಮೇಲು ಎಂದುಕೊಂಡ ಜಾತಿಗೆ ಸೇರಿದ ಮಕ್ಕಳು ಹೆಚ್ಚು ಕಲಿಯುತ್ತಿದ್ದರು. ಎಂದೇ ವಿದ್ಯಾರ್ಥಿಗಳಿಂದಲೂ ಸಾಕಷ್ಟು ತಾರತಮ್ಯವನ್ನು ಎದುರಿಸಿದರು. ಗುರುವಿಗೆ ವಿದ್ಯಾರ್ಥಿಗಳೇ ಜಾತಿ ತಾರತಮ್ಯ ತೋರಿಸಲು ಸಾಧ್ಯವಾಗುವ ಮಹಾನ್ ಭಾರತ ದೇಶದಲ್ಲಿ, ಸಹೋದ್ಯೋಗಿಗಳಿಂದಲೂ ತಾರತಮ್ಯ ಎದುರಿಸಿದಲ್ಲಿ ಏನಚ್ಚರಿ!? ಆದರೆ ಸಮಾನ ಹಕ್ಕುಗಳಿರುವ ತಾನು ತಾರತಮ್ಯ ಸಹಿಸುವವಳಲ್ಲ ಎಂದು ದಾಕ್ಷಾಯಿಣಿ ತೋರಿಸಿದರು. ಎದುರಿಸಿ ನಿಂತು ಏಕಾಂಗಿಯಾಗಿ ಹೋರಾಡಿದರು. ಒಮ್ಮೆ ಶಾಲೆಗೆ ಬರುತ್ತಿರುವಾಗ ಅವರ ಎದುರು ನಾಯರ್ ಸಮುದಾಯದ ಮಹಿಳೆಯೊಬ್ಬಳು ಗದ್ದೆ ತೋಡಿನ ಮೇಲೆ ನಡೆಯುತ್ತ ಬಂದವಳು ದಾಕ್ಷಾಯಿಣಿಯನ್ನು ಕಂಡದ್ದೇ, ‘ಕೆಳಗಿಳಿದು ಗದ್ದೆಯಲ್ಲಿ ನಡೆ, ನನಗೆ ದಾರಿ ಬಿಡು’ ಎಂದಳು. ಅದಕ್ಕೆ ದಾಕ್ಷಾಯಿಣಿ, ‘ದಾರಿ ಬೇಕಿದ್ದರೆ ನೀನೇ ಗದ್ದೆಗಿಳಿದು ನಡಿ, ನಾನೇಕೆ ಇಳಿಯಲಿ’ ಎಂದು ಧೃಢವಾಗಿ ನಿಂತರು. ಬುಸುಬುಸುಗುಟ್ಟುತ್ತ ಆ ಮಹಿಳೆ ಗದ್ದೆಗಿಳಿದು ದಾರಿ ಬದಲಿಸಿಕೊಂಡು ನಡೆದು ಹೋದರು. ಇದೊಂದು ಉದಾಹರಣೆಯಷ್ಟೇ. ಇಂತಹ ಅಸಂಖ್ಯ ಘಟನೆಗಳು ಅವರ ದಿನದಿನದ ಅನುಭವದಲ್ಲಿ ಸೇರಿಹೋಗಿದ್ದವು.

ಎಗ್ಗಿಲ್ಲದೆ, ನ್ಯಾಯ ಅನ್ಯಾಯಗಳ ಯೋಚನೆಯಿಲ್ಲದೆ ತಾರತಮ್ಯ ಎಸಗುವ ಭಾರತೀಯ ಸಮಾಜವನ್ನು ಬರಿಯ ಸುಧಾರಣಾ ಕ್ರಮಗಳಿಂದ ಬದಲಿಸಲು ಸಾಧ್ಯವಿಲ್ಲ ಎಂದರಿತ ದಾಕ್ಷಾಯಿಣಿ ರಾಜಕಾರಣಕ್ಕಿಳಿಯುವ ಮನಸ್ಸು ಮಾಡಿದರು. ಸೋದರ ಕೆ. ಪಿ. ವಲ್ಲನ್ ಅವರಂತೆ ಕೊಚ್ಚಿಯ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದರು. ಗಾಂಧೀಜಿಯವರಿಂದ ಪ್ರಭಾವಿತರಾಗಿ ರಾಷ್ಟ್ರೀಯ ಹೋರಾಟದಲ್ಲಿ ತೊಡಗಿಕೊಂಡರು. ಗಾಂಧೀಜಿಯವರ ಸರಳತೆ, ಸಮತಾ ಭಾವ, ತಾಯ್ತನ, ಶಿಸ್ತುಬದ್ಧ ಬದುಕು ಅವರಿಗೆ ತುಂಬ ಪ್ರಿಯವಾಗಿತ್ತು. ತಮ್ಮ ಕುಟುಂಬದವರೆಲ್ಲ ಕ್ರೈಸ್ತರಾದರೂ ತಾನು ಪುಲಯಾ ಆಗಿ ಉಳಿದ ದಾಕ್ಷಾಯಿಣಿ, ದಲಿತ ಹೋರಾಟಗಾರ ರಾಮನ್ ಕೆಳನ್ ವೇಲಾಯುಧನ್ ಅವರನ್ನು 1940ರಲ್ಲಿ ಸರಳ ಮದುವೆಯಾದರು. ಗಾಂಧಿ-ಕಸ್ತೂರಬಾ ಎದುರಿನಲ್ಲಿ ವಾರ್ಧಾ ಆಶ್ರಮದಲ್ಲಿ ನಡೆದ ಅವರ ಮದುವೆಗೆ ಕುಷ್ಠರೋಗ ಪೀಡಿತ ಆಶ್ರಮವಾಸಿಯೊಬ್ಬರು ಪುರೋಹಿತರಾಗಿ ಕಾರ್ಯ ನಿರ್ವಹಿಸಿದರು. ಆಶ್ರಮದ ಆಹಾರವಾಗಿದ್ದ ಗೋಧಿರೊಟ್ಟಿ-ಬೆಲ್ಲ ತಿನ್ನಲು ಕಷ್ಟಪಡುತ್ತಿದ್ದ ದಾಕ್ಷಾಯಿಣಿಯನ್ನು ನೋಡಿದ ಗಾಂಧೀಜಿ, ‘ಇಲ್ಲಿ ಮೀನು ಸಿಗುತ್ತೆ ಅಂದುಕೊಂಡಿದ್ದೆಯಾ?’ ಎಂದು ನಗುತ್ತ ಕೇಳಿದರು. ‘ಅವಶ್ಯವಾದರೆ ನಿನ್ನ ಕೋಣೆಯಲ್ಲಿ ಬೇರೆ ಅಡುಗೆ ಮಾಡಿಕೋ’ ಎಂದೂ ಹೇಳಿದರು. ಆದರೆ ಕಟ್ಟಿಗೆ, ಬೆರಣಿಯಿಂದ ಮಣ್ಣಿನ ಒಲೆಯಲ್ಲಿ ಅಡುಗೆ ಬೇಯಿಸುವ ಶ್ರಮಕ್ಕಿಂತ ಚಪಾತಿ ಬೆಲ್ಲವೇ ಪರವಾಗಿಲ್ಲ ಎಂದು ದಾಕ್ಷಾಯಿಣಿ ಅದಕ್ಕೆ ಹೊಂದಿಕೊಂಡರು.



ಗಾಂಧೀಜಿಯವರ ಜೊತೆಗೆ ನಿಕಟ ಸಂಬಂಧ ಇಟ್ಟುಕೊಂಡಿದ್ದರೂ ತನ್ನ ಭಿನ್ನಮತವನ್ನೂ ಜೀವಂತವಾಗಿಟ್ಟುಕೊಂಡಿದ್ದರು. ಅಸ್ಪೃಶ್ಯತೆ ಜೀವಂತವಿರುವವರೆಗೆ ‘ಹರಿಜನ’ ಎಂಬ ಪದ ಅಸ್ಪೃಶ್ಯರ ಬದುಕನ್ನು ಕೊಂಚವೂ ಬದಲಿಸಲಾರದು ಎಂದು ಕಟುವಾಗಿ ಗಾಂಧೀಜಿಯವರೆದುರೇ ಹೇಳುತ್ತಿದ್ದರು. 

1942ರಲ್ಲಿ ಕೊಚ್ಚಿ ವಿಧಾನ ಪರಿಷತ್ತಿನ ಸದಸ್ಯೆಯಾದ ದಾಕ್ಷಾಯಿಣಿ ಆಗಸ್ಟ್ 2, 1945ರಲ್ಲಿ ಮೊದಲ ಬಾರಿ ಇಂಗ್ಲಿಷ್‌ನಲ್ಲಿ ಮಾತನಾಡಿದರು. ನಿಮ್ನವರ್ಗಗಳಿಗೆಂದು ತೆಗೆದಿಡುವ ಬಜೆಟ್ ಪ್ರಮಾಣವು ಕುಸಿಯುತ್ತಿರುವ ಬಗೆಗೆ ಗಮನ ಸೆಳೆಯುತ್ತಾ, ಪಂಚಾಯ್ತಿ ಮತ್ತು ಮುನ್ಸಿಪಾಲ್ಟಿಗಳಲ್ಲೂ ಜನಸಂಖ್ಯಾವಾರು ಮೀಸಲಾತಿಯಿರಬೇಕೆಂದು ಪ್ರತಿಪಾದಿಸಿದರು. ‘ಫೈರ್ ಬ್ರ್ಯಾಂಡ್’ ಎಂದೇ ಹೆಸರುವಾಸಿಯಾಗಿದ್ದ ಐದಡಿ ಎತ್ತರದ ದಾಕ್ಷಾಯಿಣಿ, ಜಾತಿ ತಾರತಮ್ಯ ಇಷ್ಟು ಉತ್ತುಂಗದಲ್ಲಿರುವಾಗ ಅಸ್ಪೃಶ್ಯರನ್ನು ಹರಿಜನ ಎಂದು ಕರೆಯುವುದೂ ಒಂದೇ, ನಾಯಿಯನ್ನು ನೆಪೋಲಿಯನ್ ಎಂದು ಕರೆಯುವುದೂ ಒಂದೇ ಎಂದು ಹೇಳಿ ಆಸ್ಫೋಟದಂತಹ ಪರಿಣಾಮವನ್ನು ಕಾಂಗ್ರೆಸ್ಸಿನಲ್ಲಿ, ಸದನದಲ್ಲಿ ಹುಟ್ಟು ಹಾಕಿದರು.

1946ರಲ್ಲಿ ಸಂವಿಧಾನ ರಚನಾ ಸಭೆಗೆ ಆಯ್ಕೆಯಾದರು. ಸಭೆಯ ಏಕೈಕ ದಲಿತ ಮಹಿಳೆ ದಾಕ್ಷಾಯಿಣಿ ೩೪ ವರ್ಷ ವಯಸ್ಸಿನ ಅತಿ ಕಿರಿಯ ಸದಸ್ಯೆಯಾಗಿದ್ದರು. ಒಂದಾದಮೇಲೊಂದು ಪ್ರಶ್ನೆ ಎತ್ತುತ್ತ, ‘ನಿಮ್ಮ ಸಮಯ ಮುಗಿಯಿತು’ ಎಂದು ಸಭಾಧ್ಯಕ್ಷರು ಪದೇಪದೇ ನೆನಪಿಸಿದರೂ ನಿರರ್ಗಳವಾಗಿ ಮಾತನಾಡುತ್ತ ಇರುತ್ತಿದ್ದರು. 



ಅವರು ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲು ಎರಡು ಮುಖ್ಯ ಉದ್ದೇಶಗಳಿದ್ದವು: 1. ಹೊಸ ಸಂವಿಧಾನದ ಮೂಲಕ ಬದುಕುವ ಹೊಸ ಸಾಮಾಜಿಕ ಚೌಕಟ್ಟನ್ನು ಭಾರತೀಯರಿಗೆ ರೂಪಿಸಿಕೊಡುವುದು 2. ಅಸ್ಪೃಶ್ಯತೆ ಕಾನೂನುಬಾಹಿರ, ಅನ್ಯಾಯ ಎಂದು ಸಾಧಿಸಿ ವಂಚಿತರಿಗೆ ನ್ಯಾಯ ಒದಗಿಸುವುದು. ಡಿಸೆಂಬರ್ 19, 1946ರಂದು ಮಾತನಾಡುತ್ತಾ, ಜೀತಪದ್ಧತಿಯ ವಿರುದ್ಧ ದನಿಯೆತ್ತಿದರು. ನಿಮ್ನವರ್ಗಗಳಿಗೆ ಪ್ರತ್ಯೇಕ ಮತಕ್ಷೇತ್ರ ಬೇಡವೆಂದು ನಿರಾಕರಿಸಿದರು. ಅಸ್ಪೃಶ್ಯತೆಯನ್ನು ನಿಷೇಧಿಸುವ ಕಾನೂನು ತರಬೇಕೆಂದು ಹೇಳುತ್ತಾ, ಆ ಕುರಿತು ಮಾತನಾಡದೇ ಇರುವ ಭಾರತದ ಸಂವಿಧಾನವನ್ನು ಊಹಿಸುವುದಾದರೂ ಹೇಗೆ ಎಂದು ಕೇಳಿದರು. ಕರಡು ಸಂವಿಧಾನದ 11ನೆಯ ಆರ್ಟಿಕಲ್ ಅಸ್ಪೃಶ್ಯತೆ ನಿಷೇಧದ ಕುರಿತೇ ಇರುವುದರಿಂದ ಆ ಬೇಡಿಕೆಯನ್ನು ಹಿಂತೆಗೆದುಕೊಳ್ಳುವಂತೆ ಪಕ್ಷ ಅವರಿಗೆ ಸೂಚಿಸಿತು. 

ಗಾಂಧೀಜಿ ಅವರ ಅನುಯಾಯಿಯಾಗಿ ಕಾಂಗ್ರೆಸ್ಸಿಗಳಾಗಿದ್ದರೂ ಪರಿಶಿಷ್ಟ ವರ್ಗಗಳ ಕುರಿತ ಚರ್ಚೆ ನಡೆದಾಗಲೆಲ್ಲ ಅವರು ಅಂಬೇಡ್ಕರರಿಗೆ ಬೆಂಬಲವಾಗಿ ನಿಲ್ಲುತ್ತಿದ್ದರು. ಅಸ್ಪೃಶ್ಯ ಎಂದು ಕರೆಸಿಕೊಳ್ಳುವ ಸಮುದಾಯವೇ ಇಲ್ಲದಂತೆ ಸಮಾಜ ರೂಪುಗೊಳ್ಳಲಿ ಎಂದು ಭಾವುಕವಾಗಿ ಹೇಳುತ್ತಿದ್ದ ಅವರು ಅಸ್ಪೃಶ್ಯತೆ ನಿಷೇಧಿಸುವ ಅನುಚ್ಛೇದ 17ರ ಬಗೆಗೆ, ಅಸ್ಪೃಶ್ಯರಿಗೆ ಸಿಗಬೇಕಾದ ಮಾನವ ಹಕ್ಕುಗಳ ಬಗೆಗೆ ಪದೇಪದೇ ಸದಸ್ಯರ ಗಮನ ಸೆಳೆಯುತ್ತಿದ್ದರು. 

ಅಂಬೇಡ್ಕರರಿಂದ ಗಾಢವಾಗಿ ಪ್ರಭಾವಿತಾಗಿದ್ದರೂ ಪ್ರತ್ಯೇಕ ಮತಕ್ಷೇತ್ರ ಬೇಡಿಕೆ, ‘ಹಿಂದೂ ಆಗಿ ಸಾಯಲಾರೆ’ ಎಂಬ ಘೋಷಣೆಗಳಿಂದ ಅಂತರ ಕಾಯ್ದುಕೊಂಡಿದ್ದರು. ಒಕ್ಕೂಟ ವ್ಯವಸ್ಥೆಯ ಬಗೆಗೆ ಒಮ್ಮೆ ಮಾತನಾಡುತ್ತ, ಪ್ರತಿ ರಾಜ್ಯಕ್ಕೂ ಕೇಂದ್ರ ಸರ್ಕಾರವು ರಾಜ್ಯಪಾಲರನ್ನು ನೇಮಿಸುವುದರ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದರು. ಕೇಂದ್ರ, ರಾಜ್ಯಗಳಲ್ಲಿ ವಿಭಿನ್ನ ಪಕ್ಷದ ಸರ್ಕಾರಗಳಿದ್ದರೆ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ತಲೆನೋವಾಗುವ, ಘರ್ಷಣೆ ಏರ್ಪಡುವ ಎಲ್ಲ ಸಾಧ್ಯತೆಗಳಿರುವುದರಿಂದ ಅದು ಸೂಕ್ತವಲ್ಲ ಎನ್ನುವುದು ಅವರ ಅಭಿಪ್ರಾಯ. 1947, ಆಗಸ್ಟ್ 28ರಂದು ಮಾತನಾಡುತ್ತ, ‘ಹರಿಜನ ಎಂದಾದರೂ ಕರೆಯಿರಿ, ಮತ್ತಿನ್ಯಾವ ಹೆಸರಿನಿಂದಾದರೂ ಕರೆಯಿರಿ, ಎಲ್ಲಿಯವರೆಗೆ ಪರಿಶಿಷ್ಟ ವರ್ಗದವರು ಆರ್ಥಿಕ ಗುಲಾಮಗಿರಿಯಲ್ಲಿ ಬದುಕುತ್ತಾರೋ, ಅಲ್ಲಿಯವರೆಗೆ ಪ್ರತ್ಯೇಕ ಮತಕ್ಷೇತ್ರವಾಗಲೀ, ಜಂಟಿ ಮತಕ್ಷೇತ್ರ ಹೊಂದುವುದಾಗಲೀ, ಶೇಕಡಾ ಪ್ರಾತಿನಿಧ್ಯ ಪಡೆಯುವುದಾಗಲೀ ಏನೂ ಅರ್ಥವಿಲ್ಲದ್ದು. ವೈಯಕ್ತಿಕವಾಗಿ ನಾನು ಯಾವುದೇ ಸ್ಥಳದಲ್ಲಿ ಯಾವುದೇ ರೀತಿಯ ಮೀಸಲಾತಿಯನ್ನು ವಿರೋಧಿಸುತ್ತೇನೆ. ಎಲ್ಲ ಪಕ್ಷಗಳು ತಮಗೆ ಗುಲಾಮರಾಗಿರುವ ಹರಿಜನ ಅಭ್ಯರ್ಥಿಗಳನ್ನೇ ಮೀಸಲು ಕ್ಷೇತ್ರದಲ್ಲಿ ನಿಲಿಸಿಯಾರು. ಅಂಥವರಿಂದ ಹರಿಜನರಿಗೇನು ಲಾಭ?’ ಎಂದು ಕೇಳಿದರು. ‘ನಾವು ಪ್ರತ್ಯೇಕತೆಯನ್ನು ಬಯಸಿ ಮುಂಬರುವ ಪೀಳಿಗೆಯ ಕಣ್ಣುಗಳಲ್ಲಿ ನಗೆಪಾಟಲಿಗೀಡಾಗಬಾರದು. ಹರಿಜನ, ಸಿಖ್, ಮುಸ್ಲಿಂ, ಕ್ರೈಸ್ತ ಮುಂತಾಗಿ ಯಾವುದೇ ಒಂದು ಕೋಮುಭಾವನೆ ಜಾಗೃತಗೊಳ್ಳುವುದು ರಾಷ್ಟ್ರೀಯತೆಯ ಭಾವನೆಗೆ ಧಕ್ಕೆಯುಂಟುಮಾಡುವಂತಹುದು. ಎಲ್ಲ ತರಹದ ಸುರಕ್ಷೆ ಬೇಕಿಲ್ಲ. ನೈತಿಕಕತೆಯ ಸುರಕ್ಷೆಯೊಂದೇ ಈ ನೆಲದ ವಂಚಿತರಿಗೆ ನಿಜವಾದ ನ್ಯಾಯ ಒದಗಿಸಿಕೊಡಬಲ್ಲದು’ ಎಂದು ಹೇಳಿದರು. ‘ನನಗೆ ನಿಮ್ನವರ್ಗಗಳನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಲು ಇಷ್ಟವಿಲ್ಲ. ಹರಿಜನರು ಭಾರತೀಯರು. ಅವರು ಭಾರತೀಯರಾಗಿಯೇ ಇರಬೇಕು, ಭಾರತೀಯರಾಗಿಯೇ ಭವಿಷ್ಯದಲ್ಲೂ ಬದುಕಬೇಕು. ತನ್ನ ತಾಯಿ, ಸೋದರ ಸೋದರಿಯರೆಲ್ಲ ಕ್ರೈಸ್ತರಾಗಿ ಮತಾಂತರ ಹೊಂದಿದರೂ ನಾನು ಹಿಂದೂ ಆಗಿಯೇ ಉಳಿದಿದ್ದೇನೆ’ ಎಂದ ದಾಕ್ಷಾಯಿಣಿ ಕೊನೆಯತನಕ ಮತಾಂತರದ ಬಗೆಗೆ ಒಲವು ಬೆಳೆಸಿಕೊಳ್ಳಲಿಲ್ಲ. 

ಹೀಗೆ ಗಾಂಧಿ, ಅಂಬೇಡ್ಕರರೆಂಬ ಎರಡು ಹೆಮ್ಮರಗಳ ನಡುವಿದ್ದರೂ ಆ ನೆರಳು ತನ್ನ ಚಿಂತನೆಯನ್ನು ಪೇಲವಗೊಳಿಸದಂತೆ ಇಬ್ಬರಿಂದಲೂ ಅಂತರ ಕಾಯ್ದುಕೊಂಡು ತಮ್ಮದೇ ಸ್ವತಂತ್ರ ನಿಲುವು ಹೊಂದಿದ್ದರು. ಹಿಂದೂ ಧರ್ಮದಿಂದ, ರಾಷ್ಟ್ರೀಯ ಹೋರಾಟದಿಂದ ಸಂಪೂರ್ಣ ಸಿಡಿದು ನಿಂತು ಸ್ವಾಯತ್ತ ಸಮಾಜ ಕಟ್ಟುವ ಅಂಬೇಡ್ಕರ್ ಮಾರ್ಗಕ್ಕಿಂತ; ಮೇಲ್ಜಾತಿಯವರ ಮನವೊಲಿಸಿ ಹಿಂದೂ ಧರ್ಮದೊಳಗೇ ಹರಿಜನರನ್ನು ಉಳಿಸಬಯಸುವ ಗಾಂಧೀಮಾರ್ಗಕ್ಕಿಂತ ಭಿನ್ನವಾದ, ಆದರೆ ಅವೆರೆಡನ್ನೂ ಒಳಗೊಂಡ ಮಾರ್ಗ ಅವರದಾಗಿತ್ತು. ಸ್ವತಂತ್ರ, ಸಮಾಜವಾದಿ ಗಣರಾಜ್ಯ ಮಾತ್ರ ಎಲ್ಲ ಬಗೆಯ ತಾರತಮ್ಯಗಳನ್ನು ಅಳಿಸಿಹಾಕಬಲ್ಲದು ಎಂದು ದಾಕ್ಷಾಯಿಣಿ ನಂಬಿದ್ದರು. ಬದುಕಿನ ಅನುಭವಗಳು, ಸಮಾಜವಾದಿ ಚಿಂತನೆಗಳು, ಅಂಬೇಡ್ಕರ್ ಮತ್ತು ಗಾಂಧೀಜಿಯವರ ಚಿಂತನೆಗಳ ಮೊತ್ತವಾಗಿ ದಾಕ್ಷಾಯಿಣಿ ರೂಪುಗೊಂಡರು. ಸಮಾಜವಾದಿ ತತ್ತ್ವಗಳ ಮೇಲಿನ ನಂಬಿಕೆಯು ಸೋಶಿಯಲಿಸ್ಟ್ ಆಗಿದ್ದ ಪತಿ ವೇಲಾಯುಧನ್ ಅವರಿಂದ ಬಂದಿರಬಹುದು. ವೇಲಾಯುಧನ್ ಸಂವಿಧಾನ ಸಭೆಯ ಸದಸ್ಯರಾಗಿದ್ದರು. ಸಂವಿಧಾನ ಸಭೆಯಲ್ಲಿ ಪತಿ ಪತ್ನಿಯರಿಬ್ಬರೂ ಇದ್ದ ದಲಿತ ದಂಪತಿಗಳು ಅವರು. 

1946-49ರವರೆಗೆ ದಾಕ್ಷಾಯಿಣಿ ದಿ ಕಾಮನ್ ಮ್ಯಾನ್ ಪತ್ರಿಕೆಯ ಸಂಪಾದಕಿಯಾಗಿದ್ದರು. ಗಾಂಧೀವಾದಿಯಾಗಿ ಎಲ್ಲ ಕೆಲಸಗಳನ್ನೂ ಸ್ವಯಂಸೇವಕಿಯಾಗಿ ಮಾಡುತ್ತಿದ್ದರು. ಯಾವುದರಿಂದಲೂ ಆರ್ಥಿಕ ಲಾಭ ಬಯಸಲಿಲ್ಲ. ಡಿಪ್ರೆಸ್ಡ್ ಕ್ಲಾಸಸ್ ಯುತ್ಸ್ ಫೈನ್ ಆರ್ಟ್ಸ್ ಕ್ಲಬ್‌ನ ಅಧ್ಯಕ್ಷೆಯಾಗಿದ್ದರು. 



ರೆಘು, ಪ್ರಹ್ಲಾದನ್, ಧ್ರುವನ್, ಭಗೀರಥ್, ಮೀರಾ ಎಂಬ ಐವರು ಮಕ್ಕಳು. ಅವರಲ್ಲಿ ಡಾ. ರೆಘು ಬಹುಕಾಲ ಇಂದಿರಾ ಗಾಂಧಿ ಅವರಿಗೆ ಖಾಸಗಿ ವೈದ್ಯರಾಗಿದ್ದರು. ಮಗಳು ಮೀರಾ ಒಂಬತ್ತು ವರ್ಷದವಳಿರುವಾಗಲೇ ದೇಹ ಬದಲಾವಣೆ ಕುರಿತು ಚಿತ್ರ ಬರೆದು ತಿಳಿಸಿ ಮುಟ್ಟಿನ ಬಗೆಗೆ ವೈಜ್ಞಾನಿಕ ಮನೋಭಾವ ಬಿತ್ತಿದ ದಾಕ್ಷಾಯಿಣಿ ಮಗಳಿಗೆ ಮುಟ್ಟಿನ ಒಳಹೊರಗುಗಳನ್ನು ಮೊದಲೇ ತಿಳಿಸಿದ್ದರು. ತಮ್ಮ ಪತಿಯ ಬಳಿ ಹೇಳಿ ಮಗಳಿಗೆ ಪ್ಯಾಡ್ ತರಿಸುತ್ತಿದ್ದರಂತೆ. ಪ್ರಸ್ತುತ ಗುಜರಾತಿನಲ್ಲಿರುವ, ತನ್ನಮ್ಮ ಅರೆಬರೆ ಬರೆದಿಟ್ಟಿದ್ದ ಆತ್ಮಚರಿತ್ರೆ ‘ನಾಟ್ ಬಾರ್ನ್ ಇನ್ ಎ ಪೂರ್ ಪುಲಯಾ ಫ್ಯಾಮಿಲಿ’ಯನ್ನು ಪ್ರಕಟಣೆಗೆ ಸಿದ್ಧಗೊಳಿಸುತ್ತಿರುವ ಭಾರತೀಯ ಮಹಿಳಾ ಅಧ್ಯಯನಗಳ ಸಂಘದ ಅಧ್ಯಕ್ಷೆಯಾಗಿದ್ದ ಮೀರಾ ವೇಲಾಯುಧನ್ ಅಮ್ಮನ ವೈಜ್ಞಾನಿಕ ನಿಲುವುಗಳನ್ನು ಇವತ್ತಿಗೂ ನೆನಪಿಸಿಕೊಳ್ಳುತ್ತಾರೆ. ಬಗ್ಗಿ ಮೊಲೆ ಮುಚ್ಚುವಂತೆ ನಡೆದು ದಾಕ್ಷಾಯಿಣಿ ಅವರ ಬೆನ್ನು ಕೊಂಚ ಬಾಗಿಕೊಂಡಿತ್ತು. ಮಗಳು ಪರೀಕ್ಷೆಗೆ ತಯಾರಿ ನಡೆಸುವಾಗ ಅಕಸ್ಮಾತ್ ಬಗ್ಗಿ ಕುಳಿತರೆ, ‘ಇಲ್ಲ ಇಲ್ಲ, ಹೀಗಲ್ಲ, ಸರಿ ಕೂತ್ಕೋ. ಯಾವತ್ತೂ ಬೆನ್ನು ಬಾಗಿಸಬೇಡ, ತಲೆ ತಗ್ಗಿಸಬೇಡ. ನೇರ ನಡೆ. ನೇರ ನಿಲ್ಲು. ಈ ಕಾಲದಲ್ಲಿ ಬೆನ್ನು ಬಗ್ಗಿಸಬಾರದು’ ಎನ್ನುತ್ತಿದ್ದರು.

1971ರ ಚುನಾವಣೆಯಲ್ಲಿ ದಾಕ್ಷಾಯಿಣಿ ಆಡೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. ಬರಬರುತ್ತ ಭಾರತದ ರಾಜಕಾರಣದಲ್ಲಿ ಮೌಲ್ಯ, ಬದ್ಧತೆಗಳ ಸ್ಥಾನದಲ್ಲಿ ಜಾತಿ, ಹಣ, ತೋಳಬಲವೇ ಮೇಲುಗೈ ಪಡೆಯತೊಡಗಿದ್ದರ ಸೂಚನೆಯಂತೆ ಅದು ಅನಿಸಿರಬಹುದು. ಅದರ ನಂತರ ಚುನಾವಣಾ ರಾಜಕಾರಣದಿಂದ ದೂರವಾದರು. ದೆಹಲಿಯ ಕಸಗುಡಿಸುವವರೊಡನೆ, ಸ್ಲಂವಾಸಿಗಳ ನಡುವೆ ಕೆಲಸ ಮಾಡಿದರು. 1977ರಲ್ಲಿ ಮಹಿಳಾ ಜಾಗೃತಿ ಪರಿಷದ್ ಸ್ಥಾಪಿಸಿದರು. ಮೊದಲ ರಾಷ್ಟ್ರೀಯ ದಲಿತ ಮಹಿಳಾ ಸಮಾವೇಶವನ್ನು ದೆಹಲಿಯಲ್ಲಿ ಏರ್ಪಡಿಸಿದರು. ಮದರಾಸಿನಿಂದ ಹೊರಬರುತ್ತಿದ್ದ ಜೈಭೀಮ್ ಪತ್ರಿಕೆಯ ಸಂಪಾದಕಿಯಾಗಿದ್ದರು. 1978ರಲ್ಲಿ ತಮ್ಮ 66ನೆಯ ವಯಸ್ಸಿನಲ್ಲಿ ಸ್ವಲ್ಪಕಾಲ ಅನಾರೋಗ್ಯಕ್ಕೊಳಗಾಗಿ ಹಠಾತ್ತಾಗಿ ಮರಣಿಸಿದರು.

‘ಅಸ್ಪೃಶ್ಯ ಎನಿಸಿಕೊಳ್ಳುವ ಜನರೇ ಇಲ್ಲದ ಒಂದು ಕಾಲ ಬರಲಿ. ಇಂತಹ ಅಮಾನವೀಯ ಪದ್ಧತಿ ಈ ನೆಲದಲ್ಲಿದೆಯೆಂದು ನನ್ನ ದೇಶವಾಸಿಗಳು ಹೊರದೇಶದಲ್ಲೂ ತಲೆತಗ್ಗಿಸುವ ಅವಕಾಶ ಬಾರದೇ ಹೋಗಲಿ’ ಎಂಬ ಮಾತುಗಳೊಂದಿಗೆ ತಮ್ಮ ಸಂವಿಧಾನ ಸಭೆಯ ಚರ್ಚೆಯನ್ನೊಮ್ಮೆ ದಾಕ್ಷಾಯಿಣಿ ಮುಗಿಸಿದರು. ಹೌದು, ನಾನು ನೊಂದೆ ಎನ್ನುವ ಜೀವವಿಲ್ಲದಂತಹ, ಇದ್ದರೂ ಅದನ್ನು ಮುಕ್ತವಾಗಿ ಹೇಳಿಕೊಳ್ಳುವಂತಹ, ಹೇಳಿದ್ದನ್ನು ಕೇಳಿಸಿಕೊಳ್ಳುವವರಿರುವ ಸಮಾಜ ರೂಪುಗೊಂಡರಷ್ಟೇ ದೇಶ ಪಡೆದ ರಾಜಕೀಯ ಸ್ವಾತಂತ್ರ್ಯಕ್ಕೆ, ಸ್ವಾತಂತ್ರ್ಯ-75 ಸಂಭ್ರಮಕ್ಕೆ ನಿಜವಾದ ಬೆಲೆ ಬರುತ್ತದೆ. ಅಲ್ಲವೇ?