Monday 6 September 2021

ಟ್ರೆಡ್‌ಮಿಲ್‌ನ ಓಟ

 


                                  



ಕಾಲವನ್ನು ಕೋವಿಡ್ ಪೂರ್ವ, ಕೋವಿಡ್ ನಂತರ ಎಂದು ಅಳೆಯಬೇಕಾದ ಘಟ್ಟದಲ್ಲಿ ನಿಂತಿರುವಾಗ ಭಾರತದ ಎಲ್ಲ ಆರ್ಥಿಕ, ಸಮಾಜೋ ಸಾಂಸ್ಕೃತಿಕ ಸಮಸ್ಯೆಗಳ ಪರಿಹಾರ ಎಂಬಂತೆ ಬಿಂಬಿಸಲಾದ ಜಾಗತೀಕರಣದ ಪರಿಣಾಮಗಳೇನೆಂದು ನಾವು ಮಹಿಳೆಯರು ವಸ್ತುನಿಷ್ಠವಾಗಿ ಚರ್ಚಿಸಬೇಕಿದೆ. 


೧೯೯೦ರ ಬಳಿಕ ಬಹುರಾಷ್ಟ್ರೀಯ ಕಂಪನಿಗಳು ಭಾರತಕ್ಕೆ ಬಂದಮೇಲೆ ಕಂಡು ಕೇಳರಿಯದ ಉದ್ಯೋಗಗಳಲ್ಲಿ ಮಹಿಳೆಯರು ತೊಡಗಿಕೊಂಡರು. ಮಹಿಳೆಯರ ಶಿಕ್ಷಣ, ಆದ್ಯತೆ, ಆಯ್ಕೆಗಳೇ ಬೇರೆಯಾದವು. ಶ್ರಮವು ಹೊಸ ವ್ಯಾಖ್ಯಾನಕ್ಕೊಳಗಾಯಿತು. ಮಹಿಳೆಯ ಕಾಲಿಗೆರೆಡು ಕಾಲು, ಕೈಗೆ ನಾಲ್ಕು ಕೈ ಸೇರಿ ಮಲ್ಟಿಟಾಸ್ಕಿಂಗ್ ಕಿರೀಟ ಭಾರವಾಯಿತು. ಸಂಪರ್ಕ ಕ್ರಾಂತಿಯು ತಮ್ಮಿಷ್ಟ ಬಂದದ್ದನ್ನು ನೋಡುವ, ಕೇಳುವ, ಹೇಳುವ, ಮಾಡುವ ಅವಕಾಶಗಳ ಹೊಸಮಾರ್ಗವನ್ನೇ ತೆರೆಯಿತು. ಅಮ್ಮ, ಅಜ್ಜಿಯಂದಿರು ‘ನಮ್ಮಂತಲ್ಲ ನಿಮ್ಮ ಪರಿಸ್ಥಿತಿ’ ಎನ್ನತೊಡಗಿದರು. 


ನಿಜ. ನಮ್ಮ ಸಂವಿಧಾನ, ಮಹಿಳಾ ಚಳವಳಿ ತಂದ ಹಕ್ಕೊತ್ತಾಯಗಳು, ಅದರಿಂದ ರೂಪುಗೊಂಡ ಕಾನೂನುಗಳ ಜೊತೆಗೆ ಜಾಗತೀಕರಣ ಕೊಡಮಾಡಿದ ಅವಕಾಶಗಳು ಒಂದಷ್ಟು ಬದಲಾವಣೆಗೆ ಕಾರಣವಾಗಿವೆ. ಮೊದಲು ಶಾಲೆಯ ಕನಸುಗಳೇ ಬೀಳುವಂತಿರಲಿಲ್ಲ. ಈಗ ಹುಡುಗಿಯರು ಶಾಲೆಗೆ ಬಂದರೆ ಬಹುಮಾನವಿದೆ. ಮಹಿಳಾ ಸಾಕ್ಷರತೆ ೬೫% ಇದೆ. ಬಾಲ್ಯವಿವಾಹಗಳ ಸಂಖ್ಯೆ ೨೧%ಗೆ ಇಳಿದಿದೆ. ಹೆರುವ ಯಂತ್ರಗಳಾಗಿದ್ದ ಮಹಿಳೆಯರಿಗೀಗ ಕುಟುಂಬ ಯೋಜನೆಯ ಅವಕಾಶವಿದೆ. ಅಡುಗೆ ಮನೆಗೆ ಬಂದ ಯಂತ್ರಗಳು ಶ್ರಮವನ್ನು ಮಾನವೀಯಗೊಳಿಸಿವೆ. ಅಷ್ಟಿಷ್ಟು ರಾಜಕೀಯ ಪ್ರಾತಿನಿಧ್ಯ ಸಿಕ್ಕಿದೆ. ಅಭಿವ್ಯಕ್ತಿಗೆ ಹೊಸ ಮಾರ್ಗಗಳು ತೆರೆದುಕೊಂಡಿವೆ. ಕೆಲಸ ಹುಡುಕಿ ವಲಸೆ ಹೋಗಲು ಸಾಧ್ಯವಾಗಿದೆ. ಮೊದಲೆಲ್ಲ ಹೆಣ್ಣುದುಡಿಮೆ ವೇತನರಹಿತ ಮನೆಗೆಲಸವಾಗಿತ್ತು. ಗಳಿಸಲು ಹೆಣ್ಣು ಹೊಸಿಲು ದಾಟಿದರೆ ಕುಟುಂಬ ಹಾಳಾಗುತ್ತದೆಂಬ ಭಾವವಿತ್ತು. ಈಗವಳು ಹೊರಗೂ ದುಡಿಯಲೇಬೇಕಾದ ಅನಿವಾರ್ಯತೆಯಿದೆ. ಹೆಣ್ಣು ದುಡಿಮೆಯಿಲ್ಲದಿದ್ದರೆ ಬಹುತೇಕ ಕುಟುಂಬಗಳು ‘ಬಡವ’ರಾಗುತ್ತವೆ. ಬಡತನದ ಮಹಿಳೀಕರಣದಿಂದ ಉದ್ಯೋಗದ ಮಹಿಳೀಕರಣವಾಗಿದೆ.


ಮಹಿಳೀಕರಣದ ಒಳಗುಟ್ಟು




ಉದ್ಯಮಗಳು ಮಹಿಳಾ ಕಾರ್ಮಿಕರನ್ನು ಹೊಂದಲು; ಸಿಬ್ಬಂದಿ ಕಡಿತವೆಂದು ಗಂಡಸರನ್ನು ತೆಗೆದು ಹೆಣ್ಣುಮಕ್ಕಳನ್ನು ಕೂರಿಸಲು ಉತ್ಸುಕವಾಗಿವೆ. ಮಹಿಳೆಯರು ಸಂಘಟಿತರಾಗಿ ತಿರುಗಿ ಬೀಳುವ ಸಾಧ್ಯತೆ ಕಡಿಮೆ; ವಿನಯದಿಂದ, ನಿಯತ್ತಿನಿಂದ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಾರೆ; ಸುಲಭದಲ್ಲಿ ಕೆಲಸದಿಂದ ತೆಗೆಯಬಹುದು; ಅವಶ್ಯಬಿದ್ದರೆ ಲೈಂಗಿಕವಾಗಿ ಬಳಸಿಕೊಳ್ಳಬಹುದು ಮುಂತಾದ ಕಾರಣಗಳು ಇದರ ಹಿಂದಿವೆ. ಇದೇ ಧೋರಣೆಯು ಉದ್ಯೋಗ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ, ಸ್ತ್ರೀದ್ವೇಷ, ಅಸಭ್ಯ ನಡವಳಿಕೆಗಳಾಗಿ ಮುಂದುವರೆಯುತ್ತವೆ.  


ವರ್ಲ್ಡ್ ಎಕನಾಮಿಕ್ ಫೋರಂ ಬಿಡುಗಡೆ ಮಾಡಿರುವ ‘ಜಾಗತಿಕ ಜಂಡರ್ ಗ್ಯಾಪ್-೨೦೨೧’ರ ಪ್ರಕಾರ: ಭಾರತದ ದುಡಿಯುವ ವರ್ಗದಲ್ಲಿ ಮಹಿಳೆಯರ ಸಂಖ್ಯೆ ೨೨.೩% ಇದೆ. ವೃತ್ತಿಪರ ಮತ್ತು ತಾಂತ್ರಿಕ ವಲಯದ ಉದ್ಯೋಗಗಳಲ್ಲಿ ೨೯.೨% ಮಹಿಳೆಯರಿದ್ದಾರೆ. ಮೇಲ್ಮಟ್ಟದ ನಿರ್ವಾಹಕ ಹುದ್ದೆಗಳಲ್ಲಿ (ಮ್ಯಾನೇಜರಿಯಲ್) ೧೪.೬% ಇದ್ದಾರೆ. ೨೦೧೭ರಲ್ಲಿ ಎನ್‌ಎಸ್‌ಇಯಲ್ಲಿ ದಾಖಲಾದ ೫೦೦ ಕಂಪನಿಗಳ ಬೋರ್ಡ್ ರೂಮುಗಳಲ್ಲಿ ೧೪% ಮಹಿಳೆಯರಿದ್ದರು. ಮಹಿಳೆಯರು ಮುಖ್ಯಸ್ಥಾನದಲ್ಲಿದ್ದು ನಡೆಸುವ ಉದ್ಯಮಗಳ ಸಂಖ್ಯೆ ೮-೯% ಇದೆ. ನಾಲ್ವರಲ್ಲಿ ಒಬ್ಬಳು ಒಂದಲ್ಲ ಒಂದು ಹಂತದಲ್ಲಿ ದೌರ್ಜನ್ಯ ಎದುರಿಸುತ್ತಾಳೆ. ‘ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೇ-೨೦೧೫’ರ ಪ್ರಕಾರ ೨೦೦೫-೦೬ರಲ್ಲಿ ಮದುವೆಯ ನಂತರವೂ ದುಡಿಯುವ ಮಹಿಳೆಯರ ಸಂಖ್ಯೆ ೪೩% ಇದ್ದದ್ದು ೨೦೧೫ರ ಹೊತ್ತಿಗೆ ೩೧%ಕ್ಕಿಳಿದಿದೆ. ಎಲ್ಲ ಕ್ಷೇತ್ರಗಳಲ್ಲಿ ಸ್ತ್ರೀಪುರುಷರ ನಡುವೆ ವೇತನ ತಾರತಮ್ಯವಿದೆ. ಮಹಿಳೆಯರು ೧೯% ಕಡಿಮೆ ವೇತನ ಪಡೆಯುತ್ತಾರೆ. ೯೫%ಕ್ಕಿಂತ ಹೆಚ್ಚು ಮಹಿಳೆಯರ ಹೆಸರಿನಲ್ಲಿ ಯಾವುದೇ ಆಸ್ತಿಯಿಲ್ಲ. ರಾಜಕಾರಣದಲ್ಲೂ ಇದು ಮುಂದುವರೆದು ೨೦೨೧ರಲ್ಲಿ ಭಾರತದಾದ್ಯಂತ ಮಹಿಳಾ ಮಂತ್ರಿಗಳು ೯.೧% ಇದ್ದಾರೆ.


ಮೇಲಿನ ಅಂಕಿಅಂಶಗಳು ಸ್ಪಷ್ಟವಾಗಿ ತಿಳಿಸುವಂತೆ ತಳಹಂತದ ಕೆಲಸಗಳಲ್ಲಿ; ಅಧಿಕಾರ, ಬಡ್ತಿ, ಭತ್ಯೆ, ರಜೆ, ಉನ್ನತೀಕರಣದ ಅವಕಾಶ, ವೇತನ ಕಡಿಮೆಯಿರುವ ಕೆಲಸಗಳಲ್ಲಿ ಹೆಚ್ಚೆಚ್ಚು ಮಹಿಳೆಯರಿದ್ದರೆ, ಶ್ರೇಣಿಯ ಮೇಲೇರುತ್ತ ಹೋದಂತೆ ವಿರಳವಾಗುತ್ತಾರೆ. ನಿರ್ಧಾರಕ, ಅಧಿಕಾರ ಸ್ಥಾನಗಳಲ್ಲಿ ಹೆಣ್ಣುಗಳು ಇಲ್ಲದಿರುವುದರಿಂದ ಎದ್ದು ಕಾಣುತ್ತಾರೆ. 



ಶಾಲೆಕಾಲೇಜುಗಳ ಪರೀಕ್ಷೆ, ಸ್ಪರ್ಧೆಗಳಲ್ಲಿ ಹುಡುಗಿಯರೇ ಚಿನ್ನದ ಪದಕ ಗೆಲ್ಲುತ್ತಾ, ಮುಂದಿರುತ್ತಾರಲ್ಲವೇ? ಉದ್ಯೋಗಸ್ಥಳದಲ್ಲಿ ಏಕೆ ಹೀಗೆ? ಎಲ್ಲಿ ಹೋದರು ಆ ‘ಚಿನ್ನದ ಹುಡುಗಿ’ಯರು?


ಗಾಣಕ್ಕೆ ಕಟ್ಟಿದ ಗೋವು




ಹುಡುಗಿಯರು ಉನ್ನತ ಶಿಕ್ಷಣಕ್ಕೆ ಹೋಗಬಯಸಿದರೆ ಮನೆಯಲ್ಲಿ ಒಬ್ಬರಲ್ಲ ಒಬ್ಬರಿಂದ ‘ನಿನಗಿಂತ ಹೆಚ್ಚು ಓದಿದವನನ್ನು ಎಲ್ಲಿ ಹುಡುಕುವುದು? ಹೆಚ್ಚು ವರದಕ್ಷಿಣೆ ಹೇಗೆ ತೆರುವುದು? ಓದು ಸಾಕು’ ಎನ್ನುವ ಮಾತು ಕೇಳಿಬರುತ್ತದೆ. ಮದುವೆಯೇ ಹೆಣ್ಣಿನ ಆತ್ಯಂತಿಕ ಗುರಿ, ಹೆರುವುದೇ ಪರಮೋಚ್ಛ ಸಾಧನೆ ಎಂಬ ಭಾವನೆಯನ್ನು ಉದ್ಯಮಗಳೂ, ಮಾರುಕಟ್ಟೆಯೂ ಬೆಳೆಸುತ್ತಿವೆ. ಹೆಂಗಸರಿಗೇ ಮೀಸಲಾದ ಸೋಪು, ಪೌಡರು, ಬಟ್ಟೆ, ಸುಗಂಧ ದ್ರವ್ಯ, ಬಣ್ಣಗಳಿವೆ. ಅವರಿಗೇ ಬೇರೆ ಡಿಸೈನಿನ ವಾಹನ. ಅವರದೇ ಬೇರೆ ಸಲೂನು, ಪಾರ್ಲರ್, ಜಿಮ್. ಅವನ್ನು ಬಳಸದಿದ್ದವರು, ಹಿಮ್ಮಡಿ ಒಡೆದವರು, ಮುಖ ಬೆಳ್ಳಗಿಲ್ಲದವರು, ಮೊಡವೆ ಕಲೆ ಇರುವವರು, ಕಪ್ಪಗಿರುವವರು ಅನರ್ಹ ಹೆಣ್ಣುಗಳು ಎಂದು ಜಾಹೀರಾತುಗಳು ಸಾರುತ್ತವೆ. ಹೆಣ್ಣು, ಹೆಣ್ತನ, ಗರ್ಭಕೋಶ, ಲೈಂಗಿಕತೆ, ಪ್ರೇಮ, ಮದುವೆ, ಕಣ್ಣೀರು ಎಲ್ಲವೂ ಮಾರುಕಟ್ಟೆಗೆ ಮುಖ್ಯವಾಗಿವೆ. ಹೆಣ್ಣುತನದ ಚೌಕಟ್ಟು ತಾಯ್ತನಕ್ಕೂ ಮುಂದುವರೆದಿದೆ. ಮಹಿಳಾ ಆರೋಗ್ಯ ಕ್ಷೇತ್ರಕ್ಕಿಂತ ಹೆಚ್ಚು ಬಂಡವಾಳವನ್ನು ಬಂಜೆತನ ಚಿಕಿತ್ಸೆಯ ಸಂಶೋಧನೆಗಳಿಗೆ ಹೂಡಲಾಗಿದೆ. 


ಸಮಾಜ ಹೆಣ್ಣು ಎಂದು ಯಾರನ್ನು ನೋಡುತ್ತಿದೆಯೋ ಅವಳು ನಿಜವಾದ ಹೆಣ್ಣಲ್ಲ. ಪುರುಷಪ್ರಧಾನ ಸಮಾಜ ನಿಯಂತ್ರಿಸುವ ಮಾರುಕಟ್ಟೆಯ ಕಲ್ಪನಾ ವಿಲಾಸ ಹೆಣ್ಣು ಹೇಗಿರಬೇಕೆಂದು ವ್ಯಾಖ್ಯಾನಿಸಿದೆಯೋ ಆ ಚೌಕಟ್ಟಿಗೆ ಸರಿಯಾಗಿ ತನ್ನನ್ನು ಕೂರಿಸಿಕೊಂಡ ಹೆಣ್ಣು. ಗೆರೆಯೆಳೆದು ನಿರ್ಬಂಧಿಸಿರುವವರಲ್ಲಿ ಕುಟುಂಬ-ಜಾತಿ-ಊರುಗಳಷ್ಟೇ ಅಲ್ಲ; ಬಂಡವಾಳಿಗರೂ ಸೇರಿದ್ದಾರೆ. ಚೌಕಟ್ಟನ್ನು ಮೀರುವ, ಅನುಕೂಲೆಯರಾಗದ ಹೆಣ್ಣುಗಳ ಮೇಲೆ ಸ್ತ್ರೀ ದ್ವೇಷ (ಮೀಸೋಗೈನಿ) ಹೆಚ್ಚುತ್ತಿದೆ. ಧರ್ಮ-ಜಾತಿ ಹೆಸರಿನಲ್ಲಿ ಲಿಂಗಾಧಾರಿತ ದೌರ್ಜನ್ಯಗಳು ಸಂಭವಿಸುತ್ತಿವೆ. 


ಜಾಗತೀಕರಣ ಕಾಲದ ಮಹಿಳೆಯರು ಗಾಣಕ್ಕೆ ಕಟ್ಟಿದ ಗೋವುಗಳಂತೆ. ಕೆಲವಕ್ಕೆ ಕಣ್ಣಿ ಉದ್ದ, ಕೆಲವಕ್ಕೆ ಗಿಡ್ಡ. ವರ್ಷಕ್ಕೊಂದು ದಿನ ಗೋ ಪೂಜೆ. ಮತ್ತೆಲ್ಲ ನಿರಂತರ ದುಡಿಮೆ. ಒಂದಷ್ಟು ಬೇಲಿಗಳು ತೆರವಾಗಿವೆ, ಮತ್ತೊಂದಷ್ಟು ಕಡಿದು ಬಿಸುಟ ಗೂಟಗಳು ಚಿಗುರಿ ಬಂಧನವನ್ನು ಗಟ್ಟಿಗೊಳಿಸುತ್ತಿವೆ.


ಅಂಗೈ ಹುಣ್ಣು




ಲಾಭವೇ ಮುಖ್ಯವಾದ ಮಾರುಕಟ್ಟೆಯು ಜಾತಿ-ಧರ್ಮ-ಲಿಂಗ ತಾರತಮ್ಯಗಳನ್ನು ಮರೆತು ಗ್ರಾಹಕ/ಕಿಯರನ್ನೆಲ್ಲ ಒಂದೇ ಆಗಿ ನೋಡಬಹುದೇನೋ ಎಂದು ತಳಸಮುದಾಯಗಳೂ, ಮಹಿಳೆಯರೂ ಆಶಿಸಿದ್ದರು. ಆದರೆ ಗಂಡುಹಿರಿಮೆಯ ಭಾರತೀಯ ಸಮಾಜವನ್ನು ಜಾಗತೀಕರಣ ಬದಲಿಸಲಿಲ್ಲ, ಬದಲಾಗಿ ಪೋಷಿಸಿಕೊಂಡು ಬಂತು. ಬಾಯಿಮಾತಿಗಷ್ಟೇ ಮಹಿಳಾ ಸ್ನೇಹಿಯಾಗಿರುವ ಬಂಡವಾಳಕ್ಕೆ ಲಿಂಗ ಪೂರ್ವಗ್ರಹ, ಲಿಂಗ ತಾರತಮ್ಯಗಳು ಸಮಸ್ಯೆಯೆಂದೇ ಅರಿವಾಗದೇ ಹೋಯಿತು. ಹಾಗಾಗಿ ಹೆಣ್ಣು ದುಡಿಮೆಯೊಂದಿಗೆ ಹೆಣ್ಣು ಘನತೆ ಹೆಚ್ಚಾಗಲಿಲ್ಲ. ಜಾಗತೀಕರಣದ ಬಳಿಕವೂ ಹಲವಾರು ಮಹಿಳಾ ಅಭಿವೃದ್ಧಿ ಸೂಚ್ಯಂಕಗಳು ಉತ್ತಮಗೊಳ್ಳಲಿಲ್ಲ. 


ಭಾರತದಲ್ಲಿ ಲಿಂಗಾನುಪಾತ ಒಂದೇಸಮ ಇಳಿಯುತ್ತಿದೆ. ಸ್ವಾತಂತ್ರ್ಯಾನಂತರ ೧೯೫೧ರಲ್ಲಿ ೧೦೦೦ ಗಂಡುಮಕ್ಕಳಿಗೆ ೯೮೩ ಹೆಣ್ಣುಮಕ್ಕಳಿದ್ದರು. ಅದು ೧೯೯೧ರಲ್ಲಿ ೯೪೫ಕ್ಕಿಳಿಯಿತು. ೨೦೦೧ರಲ್ಲಿ ೯೨೭ ಆದದ್ದು ೨೦೧೧ಕ್ಕೆ ೯೧೮ ಆಯಿತು. ಕಟ್ಟುನಿಟ್ಟಾದ ಕಾನೂನು ಜಾರಿಯಾದರೂ ಹೆಣ್ಣುಭ್ರೂಣ ಹತ್ಯೆ, ಹೆಣ್ಣುಶಿಶುಹತ್ಯೆ ಮುಂದುವರೆದಿವೆ. ಒಂದು ಅಂದಾಜಿನಂತೆ ೫೦ ಲಕ್ಷಕ್ಕಿಂತ ಹೆಚ್ಚು ಭ್ರೂಣ-ಶಿಶುಗಳು ಹೆಣ್ಣೆಂಬ ಕಾರಣಕ್ಕೆ ಪ್ರತಿವರ್ಷ ಮಾಯವಾಗುತ್ತಿವೆ.


ಶಿಕ್ಷಣವು ಮೂಲಭೂತ ಹಕ್ಕಾದರೂ ೩೪.೨% ಮಹಿಳೆಯರು ಅನಕ್ಷರಸ್ಥೆಯರಾಗಿದ್ದಾರೆ. ೬೫% ಭಾರತೀಯ ಗಂಡಸರು ಮನೆ ಸುಸೂತ್ರವಾಗಿ ನಡೆಸಲಿಕ್ಕೆ ಹೆಂಗಸರನ್ನು ಹೊಡೆಯಲೇಬೇಕೆಂದು, ಅದಕ್ಕವರು ಅರ್ಹರೆಂದು ನಂಬಿದ್ದಾರೆ. ೩೮% ಗಂಡಂದಿರು ಹೆಂಡತಿಯನ್ನು ಹೊಡೆಯುತ್ತಾರೆ. ಹೆಣ್ಣುಮಕ್ಕಳು ಜಾತಿ ಮೀರಿ ಪ್ರೇಮಿಸಿದರೆ ಅವರನ್ನು ಕೊಂದಾದರೂ ಜಾತಿ ಮರ್ಯಾದೆ ಉಳಿಸಿಕೊಳ್ಳಬೇಕೆಂದು ಪುರುಷಸಂಬಂಧಿಗಳು ಭಾವಿಸುತ್ತಾರೆ. ಜಾತಿದೌರ್ಜನ್ಯಗಳು ಹೆಣ್ಣಿನ ಮೇಲೇ ಜಾಸ್ತಿ ಸಂಭವಿಸುತ್ತಿವೆ. ವರದಕ್ಷಿಣೆಯ ಕಾರಣಕ್ಕೆ ಪ್ರತಿವರ್ಷ ೫೦೦೦ ಹೆಣ್ಣುಗಳ ಜೀವಹರಣವಾಗುತ್ತಿದೆ. ಪ್ರತಿ ೨೦ ನಿಮಿಷಕ್ಕೊಬ್ಬಳು ಅತ್ಯಾಚಾರಕ್ಕೊಳಗಾದ ದೂರು ದಾಖಲಾಗುತ್ತದೆ. ೫೦-೭೫% ಅತ್ಯಾಚಾರಗಳು ದಾಖಲಾಗದೇ ಮುಚ್ಚಿ ಹೋಗುತ್ತವೆ. 



ಮುಂದೇನು?




ಐಹಿಕ ಸುಖಭೋಗಗಳೇ ಆತ್ಯಂತಿಕ ಸತ್ಯ ಎನ್ನುವ ಮಾರುಕಟ್ಟೆ ಆರ್ಥಿಕತೆ ಒಂದೆಡೆ; ಮೊಲೆಮುಡಿ, ಕಿವಿಬಾಯಿ ಮುಚ್ಚಿಟ್ಟುಕೊಂಡರೆ ಹೆಣ್ಣುಗಳು ಸುರಕ್ಷಿತ ಎಂದು ನಂಬಿಸುವ ಧಾರ್ಮಿಕ ಮೂಲಭೂತವಾದಿಗಳು ಇನ್ನೊಂದು ಕಡೆ; ಕತ್ತಲಾದ ಮೇಲೆ ಮನೆಹೊರಗೆ ಚಂದದ ದಿರಿಸುಟ್ಟು ಬರಬೇಡಿರೆಂದು ಉಪದೇಶಿಸುವ ಮಂತ್ರಿಮಹೋದಯರು ಮಗದೊಂದು ಕಡೆ - ಈ ಬಲೆಯೊಳಗೆ ತಮಗರಿವಿಲ್ಲದೆ ಬೀಳುವ ಮಹಿಳೆಯರಿಗೆ ಲಿಂಗಪ್ರಶ್ನೆಯ ಅರಿವು ಮರೆಗೆ ಸರಿಯುತ್ತಿದೆ. 


ಸೂಕ್ತವಾದ ಸಾಮಾಜಿಕ, ಆರ್ಥಿಕ ವಾತಾವರಣವನ್ನು ಸೃಷ್ಟಿಸುವ ಯೋಜನೆಗಳಿದ್ದಿದ್ದರೆ ಜಾಗತೀಕರಣವು ಮಹಿಳೆಯರನ್ನು ಸಬಲೀಕರಣದ ಕಡೆ ಒಯ್ಯುತ್ತಿದ್ದಿರಬಹುದು. ಆದರೆ ಭಾರತದ ಬಹುಪಾಲು ಮಹಿಳೆಯರು ಸಂಪ್ರದಾಯಕ್ಕೆ ಕಟ್ಟಿಹಾಕಲ್ಪಟ್ಟವರು. ಅನುಕೂಲಕರ ಅಧಿಕಾರ ಹೊಂದಿಲ್ಲದವರು. ಇದ್ದಕ್ಕಿದ್ದಂತೆ ಅವರು ಜಾಗತೀಕರಣವೆಂಬ ಜಾರುಬಂಡಿಯಲ್ಲಿ ಅತಿವೇಗದಿಂದ ಚಲಿಸತೊಡಗಿದಾಗ ಸ್ಥಳಾಂತರ, ಸ್ಥಾನ ಬದಲಾವಣೆಗಳಿಗೆ ಹೊಂದಿಕೊಳ್ಳಲು ಎಲ್ಲರಿಗೂ ಕಷ್ಟವಾಯಿತು. ತಕ್ಷಣದ ಪಲ್ಲಟವು ಕುಟುಂಬ, ದಾಂಪತ್ಯ, ಗಂಡುಹೆಣ್ಣಿನ ಸಂಬಂಧಗಳನ್ನು ಬಿಕ್ಕಟ್ಟಿನಲ್ಲಿಟ್ಟಿತು. ಹಾಗಾಗಿ ಸಮಾನತೆಯ ಕಡೆಗಿನ ಮಹಿಳೆಯ ತುಡಿತವು ಸಮಾಜದ ಇಚ್ಛೆಯಾಗಿ ಬದಲಾಗದೇ ಹೋಗಿದೆ. ಭಾರತೀಯ ಮಹಿಳೆಯರ ಮೇಲೆ ಉದಾರೀಕರಣದ ಪ್ರಭಾವವು ಮನೆಯೊಳಗೇ ಟ್ರೆಡ್‌ಮಿಲ್ ಇಟ್ಟುಕೊಂಡು ಓಡಿದಂತೆ ಆಗಿದೆ. ಲೆಕ್ಕವಿಟ್ಟು ಸಾವಿರಾರು ಹೆಜ್ಜೆಗಳನ್ನಿಡುವುದು, ಬೆವರಿಳಿಸುವುದು, ಓಡುವುದು. ನಿಲ್ಲದ ಓಟ. ಮುಟ್ಟುವುದೆಲ್ಲಿಗೂ ಇಲ್ಲ! 

 

ಮಹಿಳಾ ಸಮುದಾಯದ ಜೊತೆಗೆ ತನ್ನ ತಾನು ಗುರುತಿಸಿಕೊಂಡು ಸ್ವಾಯತ್ತ, ಘನತೆಯ ಬದುಕನ್ನು ಹೆಣ್ಣು ಸಾಧ್ಯವಾಗಿಸಿಕೊಳ್ಳಬೇಕು. ಆ ಮೂಲಕ ಸಮಾಜವನ್ನೂ ಲಿಂಗಸೂಕ್ಷ್ಮ ಬದಲಾವಣೆಗೆ ಸಿದ್ಧಗೊಳಿಸಿ ನ್ಯಾಯದ ಕಣ್ಣು ತೆರೆಸಬೇಕು. ಆಗ ಮಾತ್ರ ಅಭಿವೃದ್ಧಿಯು ಅರ್ಥಪೂರ್ಣವಾಗಬಲ್ಲುದು. 


(All Images, sketches From Internet)