Saturday 13 June 2020

Che Gue Vera ಅರ್ನೆಸ್ಟೋ ಚೆ ಗೆವಾರ ಡಿ ಲಾ ಸೆರ್ನಾ - ಕವಿಯ ಮನಸು, ಕ್ರಾಂತಿಯ ಕನಸು..






ನೋಡಲು ಕಿಲಾಡಿ ಹುಡುಗನಂತೆ ಕಾಣುವ ಹೊಳೆವ ಕಣ್ಣುಗಳ ತೇಜೋಮಯ ತರುಣ; ಬಡರೋಗಿಗಳನ್ನು, ಕೃಷಿಕರನ್ನು, ಗಣಿ ಕೆಲಸಗಾರರನ್ನು ಕಂಡು ಅವರಿಗಾಗಿ ಏನಾದರೂ ಮಾಡಲೇಬೇಕೆಂದು ಪಣತೊಟ್ಟ ವೈದ್ಯ; ಬದುಕಿನ ಕೊನೆಯ ಕ್ಷಣಗಳಲ್ಲಿ ಬೊಲಿವಿಯನ್ ಪರ್ವತಗಳಲ್ಲಿ ಅಲೆದಾಡುವಾಗ ತನ್ನ ಒರಟು ಉಣ್ಣೆಯ ಬ್ಯಾಗಿನಲ್ಲಿ ಆಯುಧಗಳ ಜೊತೆ ನೆರೂಡನ ಕ್ಯಾಂಟೋ ಜನರಲ್ ಕವಿತೆ ಪುಸ್ತಕ ಇಟ್ಟುಕೊಂಡ ಕಾವ್ಯಪ್ರೇಮಿ; ಒಂದು ದೇಶದಲ್ಲಿ ಹುಟ್ಟಿ, ಮತ್ತೊಂದು ದೇಶಕ್ಕಾಗಿ ಹೋರಾಡಿ, ಮಗದೊಂದು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವೊಪ್ಪಿಸಿದ ಹೋರಾಟಗಾರ: ಬದುಕಿದ ೩೯ ವರ್ಷಗಳಲ್ಲಿ ವಿಶ್ವದ ಮುಕ್ಕಾಲು ದೇಶಗಳ ಸಂದರ್ಶಿಸಿದ ಜಂಗಮ; ಜಗತ್ತಿನ ಅಸಂಖ್ಯ ಜನರ ಸ್ಫೂರ್ತಿ; ನನ್ನಲ್ಲಿ ನಿರಂತರ ಬೆಳೆಯುತ್ತಲಿರುವ ಮಗು..

ಅವ ಅರ್ನೆಸ್ಟೋ ಗೆವಾರಾ ಡಿ ಲಾ ಸೆರ‍್ನಾ. ಸಂಕ್ಷಿಪ್ತವಾಗಿ ಚೆಗೆವಾರ. ಪ್ರೀತಿಯಿಂದ ಚೆ..

ಆತನನ್ನು ಪ್ರಾಣಬಿಡುವಷ್ಟು ಪ್ರೀತಿಸುವವರಿದ್ದಾರೆ, ಕುರುಡು ಅಭಿಮಾನಿಗಳಾದವರಿದ್ದಾರೆ, ಕೊಲೆಗಡುಕನೆಂದು ದ್ವೇಷಿಸುವವರೂ ಇದ್ದಾರೆ. ತಟ್ಟೆ, ಲೋಟ, ಪೆನ್ನು, ಪುಸ್ತಕ, ಕವಿತೆ, ಟೀ ಶರ್ಟ್, ಬ್ಯಾಗ್, ನೋಟು, ನಾಣ್ಯ, ಟೋಪಿ, ಹಚ್ಚೆ, ಸ್ಮಾರಕ, ಸಿನಿಮಾ - ಹೀಗೆ ಎಲ್ಲೆಂದರಲ್ಲಿ ಕಾಣುವ ಚೆಗೆವಾರ ಜಗತ್ತಿನ ಅತ್ಯಂತ ಪ್ರಸಿದ್ಧ ಮುಖ. ಅತಿ ಹೆಚ್ಚು ಕಮರ್ಷಿಯಲೈಸ್ ಆದ ನಾಯಕ. ನಮ್ಮ ನೆಲದಿಂದ ಹದಿನೈದು ಸಾವಿರ ಕಿಲೋಮೀಟರು ದೂರದಲ್ಲಿದ್ದರೇನು, ಕನ್ನಡ ಮನಸುಗಳನ್ನು ಇನ್ನಿಲ್ಲದಂತೆ ಪ್ರಭಾವಿಸಿದವನು. ಚೆ ಕುರಿತ ಪುಸ್ತಕ ಇಟ್ಟರೆ ತಮ್ಮನ್ನು ನಕ್ಸಲೈಟ್ ಬೆಂಬಲಿಗರೆಂದುಕೊಂಡಾರು ಎಂದು ಹಿಂಜರಿವ ಪುಸ್ತಕದಂಗಡಿ ಮಾಲೀಕರು, ತನ್ನ ಮಗನಿಗೆ ಚೆಗೆವಾರ ಎಂದು ಹೆಸರಿಟ್ಟ ವಿ.ಆರ್.ಕಾರ್ಪೆಂಟರ್, ಮೋಟಾರ್ ಸೈಕಲ್ ಡೈರೀಸ್ ಓದಿ ಮೂರ್ನಾಲ್ಕು ಬಾರಿ ಕರ್ನಾಟಕ ಸುತ್ತಿಬಂದ ಮುರಳೀ ಮೋಹನ್ ಕಾಟಿ, ಚೆ ಬದುಕನ್ನು ನೆನಪಿಸುವ ಸಾಕೇತ್ ರಾಜನ್ ಸಾವು - ಹೀಗೆ ಕನ್ನಡದಲ್ಲಿ ಅವನು ಹಲವು ರೀತಿಗಳಲ್ಲಿ ಹಾಸುಹೊಕ್ಕಾಗಿದ್ದಾನೆ.

ನನ್ನ ಮಟ್ಟಿಗೆ ಕನಸು, ಕೆಚ್ಚು, ಚೆಲುವಾಂತ ನಗೆ, ತೀವ್ರತೆ, ದುಡುಕುಗಳ ಮೊತ್ತವಾಗಿ; ಸಫಲನೋ ವಿಫಲನೋ ಎಂದು ಅಳೆಯಬಾರದ ಕೌತುಕವಾಗಿ ಚೆ ಒಳಗಿನವನಾಗಿದ್ದಾನೆ. ‘ಜಗತ್ತಿನ ಯಾವುದೇ ಭಾಗದಲ್ಲಿರುವ ಶೋಷಿತನಿಗಾಗಿ ನಿನ್ನೆದೆ ಕಂಪಿಸುತ್ತಿದ್ದರೆ ನಾನು ನಿನ್ನ ಸಂಗಾತಿ’ ಎಂದವನನ್ನು ಕಮ್ಯುನಿಸ್ಟ್ ನಾಯಕ, ಗೆರಿಲ್ಲಾ ಹೋರಾಟಗಾರ ಎಂದಷ್ಟೇ ನೋಡಲು ಸಾಧ್ಯವಿಲ್ಲ. ಅವ ಹುಟ್ಟಿ ಅರೆ ಶತಮಾನದ ಬಳಿಕ ನಾ ಹುಟ್ಟಿದರೂ ಬಹುವಚನದಲ್ಲಿ ಸಂಬೋಧಿಸಲೂ ಸಾಧ್ಯವಿಲ್ಲ.

ಆತ ನನ್ನ ಸಂಗಾತಿ.

ತನ್ನ ಬಳಿ ಚಿಕಿತ್ಸೆಗೆ ಬರುತ್ತಿದ್ದ ಬಟ್ಟೆ ತೊಳೆಯುವ ಮುದುಕಿಗೆ ಒಂದು ಕವಿತೆಯನ್ನು ಅರ್ಪಿಸಿದ ಹೆಂಗರುಳಿನ ಚೆ; ಮುಗುಳುನಗೆಯಿಲ್ಲದೆ ಮಾತಾಡದಿದ್ದ ಚೆ; ರಾತ್ರಿಯ ಹೊತ್ತು ನದಿನೀರಿನಲ್ಲಿ ಮುಳುಗಲು, ಬಾಗಿಲಿರದ ಕೋಣೆಯಲ್ಲಿ ಮಲಗಲು ಹೆದರುತ್ತಿದ್ದ ಚೆ ಕಡು ಕ್ರಾಂತಿಕಾರಿಯಾದದ್ದು ಹೇಗೆ? ತನ್ನ ಮನೆ ಲೈಬ್ರರಿಯ ೩೦೦೦ ಪುಸ್ತಕಗಳಲ್ಲಿ ಹೆಚ್ಚಿನವನ್ನು ಓದಿದ್ದ ವಿಚಾರಮಗ್ನ ವೈದ್ಯ ವಿದ್ಯಾರ್ಥಿ ಚೆ ಗೆರಿಲ್ಲಾ ಹೋರಾಟಗಾರನಾಗಿ ಬದಲಾದದ್ದು ಯಾವಾಗ ಎನ್ನುವುದು ನನ್ನನ್ನು ಸತತ ಕಾಡಿದೆ.

ಅವನಿಗೆ ಸಂಬಂಧಿಸಿದ್ದೆಲ್ಲವನ್ನು ಹುಡುಕಿ, ಓದುವ ಹುಕಿಯಲ್ಲಿ ಈ ಪುಸ್ತಕ ಕನ್ನಡಕ್ಕೆ ಅನುವಾದಗೊಂಡಿದೆ.

ಜಂಗಮ ಪಾದ - ಮೋಟಾರ್ ಸೈಕಲ್ ಡೈರೀಸ್



೧೯೨೮. ಅರ್ಜೆಂಟೀನಾದ ರೊಸಾರಿಯೋದಲ್ಲಿ ಅರ್ನೆಸ್ಟೋ ಗೆವಾರಾ ಲಿಂಚ್ ಹಾಗೂ ಸೆಲಿಯಾ ಡಿ ಲಾ ಸೆರ‍್ನಾ ಅವರ ಮೊದಲ ಮಗನಾಗಿ ಹುಟ್ಟಿದ ಅರ್ನೆಸ್ಟೋ ಸದಾ ಚಟುವಟಿಕೆಯ ಹುಡುಗ. ಅರೆ ಐರಿಶ್ ಮೂಲದ ಅವನ ಕುಟುಂಬದಲ್ಲಿ ಅಪ್ಪ ರಿಪಬ್ಲಿಕನ್ ಬೆಂಬಲಿಗ, ಸ್ಪ್ಯಾನಿಶ್ ಕ್ರಾಂತಿಕಾರಿಗಳ ಪರ. ಮಗನ ಅವಿಶ್ರಾಂತ ಚಟುವಟಿಕೆಗಳನ್ನು ನೋಡಿದ ತಂದೆ, ‘ಅವ ಹುಟ್ಟಿದ ಕೂಡಲೇ ನನಗೆ ಗೊತ್ತಾಯಿತು, ಅವನ ರಕ್ತದಲ್ಲಿ ಐರಿಶ್ ಕ್ರಾಂತಿಕಾರಿಗಳ ರಕ್ತ ಹರಿಯುತ್ತಿದೆ’ ಅಂದರಂತೆ. ಅಸ್ತಮಾ ಬಾಧಿಸುತ್ತಿದ್ದರೂ ಫುಟ್ಬಾಲ್, ರಗ್ಬಿ, ಈಜು, ಗಾಲ್ಫ್, ಸೈಕ್ಲಿಂಗ್, ಶೂಟಿಂಗ್ ಎಲ್ಲದರಲ್ಲೂ ಮುಂದಿದ್ದ ಆಟಗಾರ ಚೆ. ಯಾವುದೇ ಆಟವಿದ್ದರೂ ಆತನ ಅಗ್ರೆಸ್ಸಿವ್ ಶೈಲಿ ಎದ್ದು ಕಾಣುತ್ತಿತ್ತು. ನೆರೂಡ, ಕೀಟ್ಸ್, ಮಚಾಡೋ ಅಲ್ಲದೆ ಹಲವು ದೇಶೀ ಮತ್ತು ವಿದೇಶೀ ಕವಿಗಳನ್ನು ಕಂಠಪಾಠವಾಗುವಷ್ಟು ಓದಿಕೊಂಡಿದ್ದ. ವಿಜ್ಞಾನ, ಗಣಿತ, ಕವಿತೆ, ಕಾದಂಬರಿ, ವಿಚಾರ ಸಾಹಿತ್ಯ - ಹೀಗೆ ಜ್ಞಾನಕ್ಕೆ ಸಂಬಂಧಿಸಿದ ಹಲವು ಶಾಖೆಗಳ ಬಗೆಗೆ ಆಳ ತಿಳುವಳಿಕೆ ಹೊಂದಿದ್ದ.

ಚಟುವಟಿಕೆಯ ವ್ಯಕ್ತಿತ್ವ, ತೀವ್ರ ಭಾವುಕತನವೇ ಅವನನ್ನು ಅಲೆಮಾರಿಯನ್ನಾಗಿ ಮಾಡಿರಬಹುದು. ವಿದ್ಯಾರ್ಥಿ ಜೀವನದಲ್ಲೇ ತಿರುಗಾಟ ಶುರು ಮಾಡಿದ. ೧೯೫೦ರಲ್ಲಿ ಒಬ್ಬನೇ ಮೋಟರ್ ಅಳವಡಿಸಿದ ತನ್ನ ಸೈಕಲಿನಲ್ಲಿ ಉತ್ತರ ಅರ್ಜೆಂಟೀನಾದ ಹಳ್ಳಿಗಾಡುಗಳ ೪,೫೦೦ ಕಿಮೀ ಸಂಚರಿಸಿದ. ೧೯೫೧ರಲ್ಲಿ ಆಲ್ಬರ್ಟೋ ಗ್ರೆನಾಡೋ ಜೊತೆಗೂಡಿ ೮,೦೦೦ ಕಿಮೀ ದೂರವನ್ನು, ೯ ತಿಂಗಳಲ್ಲಿ ಕ್ರಮಿಸಿದ. ಎಲ್ಲೆಲ್ಲೂ ಇದ್ದ ಬಡತನ, ಹಸಿವು, ರೋಗ, ಶೋಷಣೆ ಅವನ ಗಮನ ಸೆಳೆದಿದ್ದವು. ವೈದ್ಯ ಪದವಿ ಪಡೆದೊಡನೆ ೧೯೫೩ರಲ್ಲಿ ಮತ್ತೆ ತಿರುಗಾಟಕ್ಕೆ ಹೊರಟ.

ಇಲ್ಲಿ ಅನುವಾದಿಸಲಾಗಿರುವ ‘ಮೋಟಾರ್ ಸೈಕಲ್ ಡೈರೀಸ್’ ಅವನ ಎರಡನೆಯ ತಿರುಗಾಟದ ಅನುಭವವನ್ನು ಟಿಪ್ಪಣಿಯ ರೂಪದಲ್ಲಿ ಹೊಂದಿರುವಂಥದು. ೧೯೫೧ರ ಅಕ್ಟೋಬರಿನಿಂದ ಅರ್ಜೆಂಟೀನಾ, ಚಿಲಿ, ಪೆರು, ಈಕ್ವೆಡಾರ್, ಕೊಲಂಬಿಯಾ, ವೆನಿಜುವೆಲಾ, ಪನಾಮಾ ಮತ್ತು ಮಿಯಾಮಿಗಳಲ್ಲಿ ಸುತ್ತಾಡಿ ಅಲ್ಲಿಂದ ಮನೆಗೆ ವಾಪಸಾದ ಅವನ ತಿರುಗಾಟದ ಅನುಭವ ಈ ಪುಸ್ತಕ. ಅವರು ಭೇಟಿ ನೀಡಿದ ಸ್ಥಳಗಳ ಪಟ್ಟಿ ನೋಡಿದರೆ ಅದು ರಜಾ ಕಳೆಯಲು ಅಥವಾ ಅಧ್ಯಯನ ಕುತೂಹಲದಿಂದ ಕೈಗೊಳ್ಳುವ ಪೂರ್ವನಿಯೋಜಿತ ಐಷಾರಾಮಿ ಪ್ರವಾಸವಾಗಿರಲಿಲ್ಲ ಎಂದು ತಿಳಿಯುತ್ತದೆ. ಅಲ್ಲಿ ಪೂರ್ವ ನಿಶ್ಚಿತವಾಗಿದ್ದುದು ಹೋಗಬೇಕಾದ ಜಾಗವಷ್ಟೇ. ಅಮ್ಮನಿಗೆ ಬರೆದ ಪತ್ರದಲ್ಲಿ ಚೆ, ಹೋಟೆಲು-ಹಾಸ್ಟೆಲಿನಲ್ಲಿ ಉಳಿಯುವ ಪೂರ್ವ ನಿಯೋಜಿತ ಪ್ರವಾಸ ‘ಬೂರ್ಷ್ವಾ’ ಪ್ರವಾಸ; ನಿಜವಾದ ಸಾಹಸಿ ಪ್ರವಾಸಿಗೆ ಅವತ್ತಿನದು ಅವತ್ತೇ ನಿರ್ಧಾರವಾಗಬೇಕು ಎಂದಿದ್ದಾನೆ.

ಪ್ರಯಾಣಕ್ಕೆ, ಚಲನೆಗೆ ಏನೋ ಚೈತನ್ಯವಿದೆ. ಭೂತ-ಭವಿಷ್ಯಗಳ ನಡುವಿನ ವರ್ತಮಾನದಲ್ಲಿರುವ ನಮ್ಮನ್ನು ನಾವು ಹೆಚ್ಚೆಚ್ಚು ಅರಿಯಲು ಅದು ಸಹಾಯ ಮಾಡುತ್ತದೆ. ಈ ಪ್ರಯಾಣ ಅವನನ್ನು ಅವ ನೋಡಿಕೊಳ್ಳುವ ರೀತಿಯನ್ನು, ಲ್ಯಾಟಿನ್ ಅಮೆರಿಕವನ್ನು ಅವ ಅರ್ಥಮಾಡಿಕೊಂಡ ಬಗೆಯನ್ನು ಬದಲಾಯಿಸಿತು. ಹಲವು ದೇಶಗಳ ಸುತ್ತಿ ಚೆ ಮತ್ತು ಗ್ರೆನಾಡೋ ಜನರನ್ನು ಬಾಧಿಸುತ್ತಿರುವ ಕಾಯಿಲೆ ಮತ್ತದರ ಮೂಲ ಏನೆಂದು ಅರ್ಥ ಮಾಡಿಕೊಂಡರು. ತನ್ನ ಟಿಪ್ಪಣಿಗಳಲ್ಲಿ ಚೆ ಚಿಲಿಯ ಗಣಿ ಕಾರ್ಮಿಕರ ದುಸ್ಥಿತಿ ಬಗ್ಗೆ ಬರೆದಿದ್ದಾನೆ. ದಾರಿಯಲ್ಲಿ ಭೇಟಿಯಾದ ನಿರ್ಗತಿಕ ಕಮ್ಯುನಿಸ್ಟ್ ದಂಪತಿಗಳಿಗಾಗಿ ಮರುಗಿದ್ದಾನೆ. ಮಚುಪಿಚುವಿನಲ್ಲಿ ಮೂಲನಿವಾಸಿಗಳನ್ನು ವಸಾಹತುಶಾಹಿಗಳು ಹೇಗೆ ಹೊಸಕಿ ಹಾಕಿದರು ಎಂದು ಗುರುತಿಸಿದ್ದಾನೆ. ಕುಷ್ಠರೋಗ ಕಾಲನಿಗಳಲ್ಲಿ ರೋಗಿಗಳು ತೋರಿಸಿದ ಪ್ರೀತಿಗೆ ಮನಸೋತು ‘ಅತಿ ಹೆಚ್ಚು ವಿಶ್ವಾಸ ಮತ್ತು ಸಹಭಾಗಿತ್ವ ನಿಸ್ಸಹಾಯಕರು ಮತ್ತು ಏಕಾಂಗಿಗಳ ನಡುವೆಯೇ ಒದಗಿಬರುತ್ತದೆ’ ಎನ್ನುತ್ತಾನೆ.

ಲ್ಯಾಟಿನ್ ಅಮೆರಿಕದ ದೇಶಗಳು ಗಣಿ, ಕಾಡು, ಖನಿಜ ಮತ್ತಿತರ ಸಂಪನ್ಮೂಲಗಳ ಹೊರತಾಗಿಯೂ ಹಿಂದುಳಿದಿರುವುದಕ್ಕೆ ಒಂದಾನೊಂದು ಕಾಲದ ಸಾಮ್ರಾಜ್ಯಶಾಹಿಗಳ ಆಕ್ರಮಣ ಹಾಗೂ ವರ್ತಮಾನದ ನವವಸಾಹತುಶಾಹಿಗಳ ಬಂಡವಾಳ ಹಿತಾಸಕ್ತಿಯೇ ಪ್ರಮುಖ ಕಾರಣ ಎಂದು ಅವನಿಗೆ ಈ ಅಲೆದಾಟದಲ್ಲಿ ಅರ್ಥವಾಯಿತು. ಲ್ಯಾಟಿನ್ ಅಮೆರಿಕದ ಮೇಲೆ ಉತ್ತರ ಅಮೆರಿಕಾದ ಹಿಡಿತ, ಮೂಲ ನಿವಾಸಿಗಳಿಗೆ ಆಗುತ್ತಿರುವ ಅನ್ಯಾಯದ ಕುರಿತು ಪ್ರಯಾಣ ಜಾಗೃತಿ ಮೂಡಿಸಿತು. ದುಡ್ಡಿಲ್ಲ ಎಂದು ಚಿಕಿತ್ಸೆ ಪಡೆಯಲಾಗದ ಮಗು, ನಿರಂತರ ಹಸಿವು ಹುಟ್ಟಿಸುವ ಮೂಢನಂಬಿಕೆಗಳು, ಅಪಘಾತದಿಂದ ಮಗ ಸತ್ತದ್ದನ್ನೂ ವಿಧಿಯೆಂದು ಭಾವಿಸುವ ತಂದೆಯ ಅಸಹಾಯಕತೆ ಅವನನ್ನು ಅಲುಗಾಡಿಸಿದವು. ಈ ಪ್ರಯಾಣದ ಕೊನೆಯಲ್ಲಿ ಅವನಿಗೆ ಅಲ್ಲಿನ ಎಲ್ಲ ಸಮಸ್ಯೆಗಳಿಗೆ ಉತ್ತರ ಅಖಂಡ ಲ್ಯಾಟಿನ್ ಅಮೆರಿಕಾ, ಶ್ರಮಿಕರ ಅಂತರರಾಷ್ಟ್ರೀಯತೆ ಹಾಗೂ ವಿಶ್ವಕ್ರಾಂತಿಯಲ್ಲಿದೆ ಎಂದು ಮನದಟ್ಟಾಯಿತು. ಗಡಿಯಿಲ್ಲದ ಏಕೀಕೃತ ಹಿಸ್ಪ್ಯಾನಿಕ್ ಅಮೆರಿಕವನ್ನು ಕಲ್ಪಿಸಿಕೊಂಡು ಇದನ್ನೇ ಮುಂದೆಯೂ ಪ್ರತಿಪಾದಿಸುತ್ತ ಬಂದ.

ಈ ಟಿಪ್ಪಣಿಗಳು ರಸ್ತೆ ಮೇಲಿರುವ ಸೂಕ್ಷ್ಮ ಮನಸು ಸುತ್ತಮುತ್ತಲನ್ನು ಹೇಗೆ ಗ್ರಹಿಸಬಹುದು ಹಾಗೂ ದೇಶ ತಿರುಗಿದ ಅನುಭವ ಒಬ್ಬ ಹೋರಾಟಗಾರನನ್ನು ಹೇಗೆ ರೂಪಿಸಬಹುದು ಎಂಬ ಸುಳಿವು ನೀಡುತ್ತವೆ. ಜೊತೆಗೆ ಮುಂದಿನ ಊಟ ಎಲ್ಲಿ, ಡ್ರಿಂಕ್ಸ್ ಎಲ್ಲಿ ಸಿಕ್ಕೀತು ಎಂಬ ಯೋಚನೆಗಳೇ ಪ್ರಧಾನವಾಗಿದ್ದ ಹುಡುಗಾಟಿಕೆಯ ಮನಸ್ಸು ಒಂಭತ್ತು ತಿಂಗಳ ತಿರುಗಾಟದ ಕೊನೆಗೆ ಅಖಂಡ ಲ್ಯಾಟಿನ್ ಅಮೆರಿಕಕ್ಕಾಗಿ ತನ್ನ ಹುಟ್ಟುಹಬ್ಬದ ಕೇಕನ್ನು ಹಂಚಿಕೊಳ್ಳುವಷ್ಟು ಬದಲಾಗಿದ್ದು ಹೇಗೆ ಎಂದೂ ತಿಳಿಸುತ್ತವೆ.

ಚೆ ಬರವಣಿಗೆ ವಿಪುಲ. ಗೆರಿಲ್ಲಾ ಯುದ್ಧ ನಿರತನಾಗಿದ್ದಾಗಲೂ ತಪ್ಪುಒಪ್ಪುಗಳ ದಿನಚರಿಯನ್ನು ಕಟ್ಟುನಿಟ್ಟಾಗಿ ಬರೆದವ. ಅವನ ಟಿಪ್ಪಣಿಗಳನ್ನು ಅದರ ಸಾಹಿತ್ಯಿಕ ಮೌಲ್ಯ, ಬರವಣಿಗೆಯ ಶೈಲಿ ಮತ್ತಿತರ ಮಾಪನಗಳ ಜೊತೆಗೇ ಸೂಕ್ಷ್ಮ ಮನದ ನನ್ನ ವೃತ್ತಿ ಬಾಂಧವ ಮೆಡಿಸಿನ್ ಕಿಟ್ ಎತ್ತಿಟ್ಟು ಶಸ್ತ್ರಾಸ್ತ್ರ ಸಂಗ್ರಹ ಕೈಗೆತ್ತಿಕೊಳ್ಳುವಂತೆ ಯಾವುದು ಪ್ರೇರೇಪಿಸಿತು ಎಂದು ತಿಳಿಯಲು ಓದಬೇಕಿದೆ ಎಂದು ಭಾವಿಸುತ್ತೇನೆ.

ಮೆಟಮಾರ್ಫಸಿಸ್



ಚೆಗೆವಾರ ಸಶಸ್ತ್ರ ಹೋರಾಟ ಪ್ರತಿಪಾದಿಸಿದವ. ಕ್ರಾಂತಿಗೆ ಇನ್ನೊಂದು ಹೆಸರು. ಸಮಾನತೆಗೆ ತುಡಿವ ಹೋರಾಟಗಾರರ ಗುರು. ಆದರೆ ಬಂದೂಕುಧಾರಿಯಾಗಿದ್ದರೂ ಅವನು ರಕ್ತ ಪಿಪಾಸುವಲ್ಲ. ಅವನ ಭಾವತೀವ್ರತೆ ಅವನನ್ನು ತೀವ್ರಗಾಮಿಯನ್ನಾಗಿ ಮಾಡಿತು. ದುಡುಕುತನ ಧೈರ್ಯವಾಗಿ ಕ್ರಾಂತಿಕಾರಿ ಗುಣ ರೂಪುಗೊಂಡಿತು. ಅವನಿದ್ದ ಕಾಲಮಾನ, ಅಲೆದಾಟ, ದೊರೆತ ಸಂಪರ್ಕಗಳು ಅಖಂಡ ಲ್ಯಾಟಿನ್ ಅಮೆರಿಕಕ್ಕಾಗಿ ಕನಸುವಂತೆ ಮಾಡಿದವು. ಅದನ್ನು ಸಾಕಾರಗೊಳಿಸಲೋ ಎಂಬಂತೆ ಗಡಿ ಮರೆತು ದೇಶ ಸುತ್ತಿದ. ಆದರೆ ತನ್ನನ್ನು, ತನ್ನ ಕನಸುಗಳನ್ನು ಲೋಕ ಅರ್ಥಮಾಡಿಕೊಳ್ಳುತ್ತಿಲ್ಲ ಎನಿಸಿದಾಗ; ಅದರ ಸಾಕಾರಕ್ಕೆ ಸಶಸ್ತ್ರ ಮಾರ್ಗವಲ್ಲದೆ ಬೇರೆ ದಾರಿಯಿಲ್ಲ ಎನಿಸಿದಾಗ ಇಂಜೆಕ್ಷನ್ ಕೊಡುವ ಕೈ ಬಂದೂಕು ಹಿಡಿಯಿತು.

ಇಲ್ಲಿ ಒಂದು ಕುತೂಹಲಕರ ವಿಷಯ ಗಮನಿಸಬೇಕು: ಗಾಂಧಿ-ಅಂಬೇಡ್ಕರರಂಥ, ಮಂಡೇಲಾ-ಟುಟು-ಮಾರ್ಟಿನ್ ಲೂಥರ್ ಕಿಂಗ್ ಅವರಂಥ, ಸೂಕಿ-ವಂಗಾರಿ ಮಥಾಯಿಯಂತಹ ಅಹಿಂಸಾತ್ಮಕ ಹೋರಾಟಗಾರರನ್ನು ದಕ್ಷಿಣ ಅಮೆರಿಕಾ ಸೃಷ್ಟಿಸಲಿಲ್ಲ ಏಕೆ?

ಈ ಪ್ರಶ್ನೆಗೆ ಉತ್ತರ ಪಡೆಯಲು ಅಂದಿನ ದಕ್ಷಿಣ ಅಮೆರಿಕಾದ ಸಾಮಾಜಿಕ/ಆರ್ಥಿಕ ಪರಿಸ್ಥಿತಿ ಮತ್ತು ಎದುರಾಳಿಯ ಮನಸ್ಥಿತಿ ತಿಳಿಯಬೇಕು. ಆಗ ವೈದ್ಯನೊಬ್ಬ ಮಾರ್ಕ್ಸಿಸ್ಟ್ ಹ್ಯೂಮನಿಸ್ಟ್ ಹೋರಾಟಗಾರನಾಗುವಂತೆ; ಫಿಡೆಲ್ ಕ್ಯಾಸ್ಟ್ರೋನಂಥ ಮುತ್ಸದ್ದಿ-ಅಹಿಂಸಾವಾದಿ ಕೊನೆಗೆ ಕಮ್ಯುನಿಸ್ಟ್ ರಾಜಕಾರಣಿಯಾಗುವಂತೆ ಮಾಡಿದ್ದು ಯಾವುದೆಂದು ಅರ್ಥವಾಗುತ್ತದೆ.

ಕೊಲಂಬಸ್ ಅಮೆರಿಕಾ ಖಂಡವನ್ನು ಅನ್ವೇಷಿಸಿದ ಮೇಲೆ ಉತ್ತರ ಅಮೆರಿಕಾ ಬ್ರಿಟಿಷ್ ವಸಾಹತುಶಾಹಿಗಳಿಂದ, ಅವರ ಗುಲಾಮರಿಂದ ತುಂಬಿಹೋದರೆ; ಜನವಸತಿಯಿದ್ದ ಸಂಪದ್ಭರಿತ ದಕ್ಷಿಣ ಅಮೆರಿಕಾವನ್ನು ಯೂರೋಪಿನ ವಸಾಹತುಶಾಹಿ ದೇಶಗಳು ಪಾಲು ಮಾಡಿಕೊಂಡವು. ಪೂರ್ವದಲ್ಲಿ ಪೋರ್ಚುಗಲ್, ಪಶ್ಚಿಮದಲ್ಲಿ ಸ್ಪೇನ್, ಮೇಲ್ಭಾಗದಲ್ಲಿ ಫ್ರೆಂಚ್ ಕಾಲನಿಗಳಾಗಿ ನೆಲವನ್ನು ಹಂಚಿಕೊಳ್ಳಲಾಯಿತು. ಅಲ್ಲಿನ ಮೂಲ ನಿವಾಸಿಗಳಾದ ಅಜಟೆಕ್ ಮತ್ತು ಇಂಕಾಗಳು ನೇಪಥ್ಯಕ್ಕೆ ಸರಿದರು. ಆ ಹೊತ್ತಿಗೆ ವಸಾಹತುಶಾಹಿ ಬ್ರಿಟಿಷ್ ರಾಜಸತ್ತೆಯಿಂದ ಉತ್ತರ ಅಮೆರಿಕಾ ಬೇರೆಯಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನವಾಗಿ, ಹೊಸ ಮಹತ್ವಾಕಾಂಕ್ಷಿ ದೇಶವಾಗಿ ಉದಯವಾಗಿತ್ತು. ಯೂರೋಪಿನ ವಸಾಹತುಶಾಹಿಗಳಿಂದ ಆಕ್ರಮಣಕ್ಕೆ ಒಳಗಾಗಿದ್ದ ದಕ್ಷಿಣ ಅಮೆರಿಕದ ಮೇಲೆ ಉತ್ತರ ಅಮೆರಿಕದ ಬಂಡವಾಳಗಾರರ ಕಣ್ಣುಬಿತ್ತು. ಅಲ್ಲಿನ ಅತ್ಯಮೂಲ್ಯ ಖನಿಜ ಸಂಪತ್ತು, ಫಲವತ್ತಾದ ನೆಲ ಬಂಡವಾಳಗಾರರನ್ನು ಇನ್ನಿಲ್ಲದಂತೆ ಆಕರ್ಷಿಸಿದವು. ಬಹುರಾಷ್ಟ್ರೀಯ ವ್ಯಾಪಾರೀ-ಗಣಿ-ಕೈಗಾರಿಕಾ ಕಂಪನಿಗಳು ಆ ನೆಲವನ್ನು ಹಾಗೂ ಜನರನ್ನು ಕಂಡುಕೇಳರಿಯದ ಶೋಷಣೆಗೆ ದೂಡಿದವು. ಅಮೆರಿಕಾ ಸಂಯುಕ್ತ ಸಂಸ್ಥಾನವು ಲ್ಯಾಟಿನ್ ಅಮೆರಿಕಾದ ನೆಲ-ಜಲ-ಜನರನ್ನು ತನ್ನ ಕಚ್ಛಾವಸ್ತುಗಳಂತೆ, ಗ್ರಾಹಕರಂತೆ, ಉತ್ಪಾದಿಸುವ ಕೆಲಸಗಾರರಂತೆ ನೋಡಿತು. ಯೂರೋಪಿನ ವಸಾಹತುಶಾಹಿಗಳ ಪ್ರಾಬಲ್ಯ ಕಡಿಮೆಯಾಗಿ ಸ್ವತಂತ್ರ ದೇಶಗಳು ಉದಯವಾದಾಗ ಅಮೆರಿಕದ ವಾಣಿಜ್ಯ ಹಿತಾಸಕ್ತಿ ಅದೆಲ್ಲದರಲ್ಲೂ ಕೈಯಾಡಿಸುತ್ತ ಹೋಯಿತು.

ವ್ಯಾಪಾರೀ ಹಿತಾಸಕ್ತಿ ಹೇಗೆ ಒಂದು ಸ್ವಾಯತ್ತ ದೇಶದ ಆಂತರಿಕ ವಿಷಯಗಳ ಮೇಲೆ ಹಿಡಿತ ಸಾಧಿಸುತ್ತದೆ ಎಂದು ತಿಳಿಯಲು ಯುನೈಟೆಡ್ ಫ್ರುಟ್ ಕಂಪನಿ (ಯುಫ್ಕೊ) ಉದಾಹರಣೆ ಒಂದೇ ಸಾಕು. ಮಧ್ಯ ಮತ್ತು ದಕ್ಷಿಣ ಅಮೆರಿಕದಲ್ಲಿ ಬೆಳೆದ ಹಣ್ಣನ್ನು - ಮುಖ್ಯವಾಗಿ ಬಾಳೆಯ ಹಣ್ಣನ್ನು ಕೊಂಡು ಯೂರೋಪ್ ಮತ್ತು ಉತ್ತರ ಅಮೆರಿಕ ಸೇರಿದಂತೆ ಬೇರೆ ದೇಶಗಳಿಗೆ ಮಾರಾಟ ಮಾಡುವುದು ಈ ಕಂಪನಿಯ ವ್ಯವಹಾರವಾಗಿತ್ತು. ೧೮೯೯ರಲ್ಲಿ ಶುರುವಾದ ಅಮೆರಿಕದ ಈ ಹಣ್ಣಿನ ಕಂಪನಿ ಬರಬರುತ್ತ ವಿಸ್ತಾರಗೊಂಡು ಅದಕ್ಕೆ ಪ್ರತಿಸ್ಪರ್ಧಿಗಳೇ ಇಲ್ಲ ಎನ್ನುವಂತಾಯಿತು. ಲ್ಯಾಟಿನ್ ಅಮೆರಿಕದ ಸಣ್ಣದೊಡ್ಡ ದೇಶಗಳ ಬಹುಪಾಲು ಭೂಮಿಯ ಮೇಲೆ ಒಡೆತನದ ಹಕ್ಕು ಪಡೆದು, ರೈತರು ಕಂಪನಿ ಹೇಳಿದ ಬೆಳೆಯನ್ನೇ ಬೆಳೆಯುವಂತೆ - ಅದರಲ್ಲೂ ಬಾಳೆಯಹಣ್ಣನ್ನೇ ಮುಖ್ಯ ಬೆಳೆಯನ್ನಾಗಿ ಬೆಳೆಯುವಂತೆ; ತಮ್ಮ ಸಾಂಪ್ರದಾಯಿಕ ಕೃಷಿ ಕೈಬಿಡುವಂತೆ; ಬೆಳೆದಿದ್ದನ್ನು ಕಂಪನಿಗೇ ಮಾರುವಂತೆ ಪರಿಸ್ಥಿತಿ ನಿರ್ಮಾಣ ಮಾಡಿತು. ತನಗೆ ಪ್ರತಿಸ್ಪರ್ಧಿಗಳಾಗಿದ್ದ ೩೩ ಹಣ್ಣು ಮಾರಾಟಗಾರ ಕಂಪನಿಗಳು ತಂತಮ್ಮ ಕಂಪನಿಯನ್ನು ಯುಫ್ಕೊಗೆ ವಹಿಸಿಕೊಡಬೇಕಾದ ಅನಿವಾರ್ಯತೆ ಸೃಷ್ಟಿಸಿತು. ತಮಗೆ ತೆರಿಗೆ ರಿಯಾಯ್ತಿಗಳನ್ನು ಪಡೆದು; ಅದನ್ನು ಕೊಡಬಲ್ಲ ಸರ್ಕಾರ ಬರಲು ಆಂತರಿಕ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತ ಯುನೈಟೆಡ್ ಫ್ರುಟ್ ಕಂಪನಿ ಒಂದು ಹಂತದಲ್ಲಿ ಮಧ್ಯ ಅಮೆರಿಕಾದ ಅತಿದೊಡ್ಡ ಭೂಮಾಲೀಕನೆನಿಸಿಕೊಂಡಿತು. ಪ್ರತಿ ದೇಶದಲ್ಲೂ ಲಕ್ಷಾಂತರ ಎಕರೆ ಭೂಮಿ ಕಂಪನಿಯ ಒಡೆತನದಲ್ಲಿತ್ತು. ಅದರ ಏಕಸ್ವಾಮ್ಯವಿರುವ ಪ್ರದೇಶಗಳನ್ನು ‘ಬನಾನಾ ರಿಪಬ್ಲಿಕ್’ಗಳೆಂದು ಕರೆಯಲಾಯ್ತು. ಈ ಹೊಸ ವಸಾಹತುಶಾಹಿ ೧೯೦೧ರಲ್ಲಿ ಗ್ವಾಟೆಮಾಲಾದಲ್ಲಿ ಪೋಸ್ಟಲ್ ಸರ್ವೀಸ್ ಶುರುಮಾಡಿತು. ೧೯೧೩ರಲ್ಲಿ ಟ್ರಾಪಿಕಲ್ ರೇಡಿಯೋ ಅಂಡ್ ಟೆಲಿಗ್ರಾಫ್ ಕಂಪನಿ ಶುರುಮಾಡಿತು. ವ್ಯಾಪಾರೀ ಹಡಗು ಸಂಚಾರ ವ್ಯವಸ್ಥೆ ಶುರುಮಾಡಿತು. ೧೯೨೮ರಲ್ಲಿ ಕಾರ್ಮಿಕರ ಮುಷ್ಕರವಾದಾಗ ನಡೆದ ಗೋಲಿಬಾರಿನಲ್ಲಿ ಅಂದಾಜು ೨೦೦೦ ಕೆಲಸಗಾರರ ಹತ್ಯೆಯಾಯಿತು. ೧೯೩೦ರ ವೇಳೆಗೆ ಅದು ಅತಿ ದೊಡ್ಡ ಉದ್ಯೋಗದಾತನಾಯಿತು. ಕ್ಯೂಬಾದ ಸಕ್ಕರೆ ಮಿಲ್‌ಗಳನ್ನೂ, ಉಳಿದ ದೇಶಗಳ ಹಣ್ಣು ಮತ್ತು ಕೃಷಿ ಉತ್ಪನ್ನಗಳನ್ನೂ ನಿಯಂತ್ರಿಸುವ ಮಟ್ಟಕ್ಕೆ ಹೋಯಿತು. ಬಾಳೆಹಣ್ಣಿನ ಕಂಪನಿ ಎದುರು ಸಣ್ಣಪುಟ್ಟ ರೈತರು, ಅವರ ಬೆಳೆಗಳು, ದರ, ಅವಕಾಶ ಎಲ್ಲ ನೆಲಕಚ್ಚಿದವು.

ನಿರುದ್ಯೋಗ, ಬಡತನ, ಹಸಿವು, ಕಾಯಿಲೆ, ದಬ್ಬಾಳಿಕೆಗಳು ಮನುಷ್ಯನನ್ನು ದಂಗೆಯೇಳಲು ಪ್ರೇರೇಪಿಸುತ್ತವೆ. ಆ ಕಾಲಮಾನದ ಲ್ಯಾಟಿನ್ ಅಮೆರಿಕಾ ದೇಶಗಳಲ್ಲಿ ಒಂದೆಡೆ ಗಣಿ ಕೆಲಸಗಾರರ ದುಸ್ಥಿತಿ, ಕಡಿಮೆ ವೇತನ, ಬಡತನ, ಹಸಿವು, ನಿರುದ್ಯೋಗವಿದ್ದರೆ ಇನ್ನೊಂದೆಡೆ ರೈತರನ್ನು ಯುಫ್ಕೋ ಸುಲಿಯಿತು. ಇವೆಲ್ಲವೂ ನವವಸಾಹತುಶಾಹಿಗಳ ವಿರುದ್ಧ ಸಂಘಟನೆ, ಹೋರಾಟ ಶುರುವಾಗಲು ಕಾರಣವಾಯಿತು. ಕಮ್ಯುನಿಸಂ ಎಂದು ಕರೆಯದೇ ವರ್ಗ ಹೋರಾಟ ಶುರುವಾಯಿತು.

ಕೆಲವೆಡೆ ಚುನಾಯಿತ ಸರ್ಕಾರಗಳೂ ಅಸ್ತಿತ್ವಕ್ಕೆ ಬಂದವು. ಅವು ಭೂ ಸುಧಾರಣೆಯನ್ನು ಮೊದಲ ಆದ್ಯತೆಯನ್ನಾಗಿ ತೆಗೆದುಕೊಂಡು ಜನರಿಗೆ ಭೂಮಿ ಹಂಚುವುದನ್ನು ಮುಖ್ಯ ಕಾರ್ಯಕ್ರಮವಾಗಿ ಮಾಡಿಕೊಂಡವು. ಗಣಿ, ಬ್ಯಾಂಕು, ಕೈಗಾರಿಕೆಗಳ ರಾಷ್ಟ್ರೀಕರಣ ಮಾಡಿದವು. ಇಂಥ ಸಮಾಜ ಕಲ್ಯಾಣ ಕಾರ್ಯಕ್ರಮಗಳು ಮೊದಲು ಪೆಟ್ಟು ಕೊಟ್ಟಿದ್ದು ಬಾಳೆಹಣ್ಣು ಕಂಪನಿ ಮತ್ತು ಅದರಂಥ ವ್ಯಾಪಾರಿ ಮಾಲೀಕರಿಗೆ. ಆ ಬಂಡವಾಳಗಾರ ಹಿತಾಸಕ್ತಿಗಳು ಸುಮ್ಮನೆ ಕೂರಲಿಲ್ಲ. ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ವರ್ತಿಸುವವರೇ ಅಧಿಕಾರದ ಮುಖ್ಯಸ್ಥಾನಗಳಲ್ಲಿರುವಂತೆ ನೋಡಿಕೊಂಡವು. ಸರ್ಕಾರಗಳನ್ನು ಉರುಳಿಸಿದವು. ಕೈಗೊಂಬೆಗಳನ್ನು ಕೂರಿಸಿದವು. ಜನಪರ ನಾಯಕರನ್ನು ಅಪಘಾತಗಳಲ್ಲಿ ಕೊಂದವು. ಕ್ಯೂಬಾ, ಗ್ವಾಟೆಮಾಲಾ, ಬೊಲಿವಿಯಾ ದೇಶಗಳ ಹೋರಾಟಕ್ಕೆ ಇದೇ ಪರಿಸ್ಥಿತಿ ಕಾರಣವಾಯಿತು.

ಸರ್ವಾಧಿಕಾರವೇ ಆಡಳಿತ ವಿಧಾನವಾದ, ಪ್ರಜಾಪ್ರಭುತ್ವವಾದಿ ಸಂವಾದ-ಮಾತುಕತೆ-ಕ್ರಿಯೆಗಳಿಗೆ ಅವಕಾಶವೇ ಇರದ ಲ್ಯಾಟಿನ್ ಅಮೆರಿಕಾದಲ್ಲಿ ಚೆಗೆವಾರನ ಸಮಕಾಲೀನರು, ಸಮಾನ ಮನಸ್ಕರು ಮತ್ತು ನ್ಯಾಯಯುತ ಬದುಕಿಗಾಗಿ ಹೋರಾಡುವವರ ಎದುರು ಬಹಳ ಆಯ್ಕೆಗಳಿರಲಿಲ್ಲ. ಅಂದಿನ ಸಮಾಜವೇ ಮೊದಲು ಶಸ್ತ್ರಾಸ್ತ್ರಗಳನ್ನು ನೆಚ್ಚದಿದ್ದ ಚೆಗೆವಾರ ಹಾಗೂ ಕ್ಯಾಸ್ಟ್ರೋ ಅಂಥವರು ಅಹಿಂಸಾವಾದಿಗಳಾಗಿ ಉಳಿಯದಂತೆ ಮಾಡಿತು. ಅವರು ಸಶಸ್ತ್ರ ಹೋರಾಟಗಾರರಾದ ಪ್ರಕ್ರಿಯೆ ಮರಿಹುಳ ಕಂಬಳಿಹುಳವಾದಷ್ಟೇ ಸಹಜವಾಗಿ ನಡೆಯಿತು.

ಕಟ್ಟಿದ ಮುಷ್ಟಿ, ಕೊನೆಯುಸಿರಿರುವವರೆಗೆ..


ಎರಡು ವಿದ್ಯಾರ್ಥಿ ಜೀವನದ ಪ್ರವಾಸದ ನಂತರ ವೈದ್ಯಕೀಯ ಡಿಗ್ರಿ ಪಡೆದ ಚೆ ಆ ಹೊತ್ತಿಗಾಗಲೇ ರಾಜಕೀಯ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಸ್ಪಷ್ಟ ನಿಲುವು ಹೊಂದಿದ್ದ. ತಿರುಗಾಟದಲ್ಲಿ ಏರ್ಪಟ್ಟ ಸಂಪರ್ಕಗಳಿಂದ ಸಂಘರ್ಷದ ಪಾಲುದಾರನಾದ.

೧೯೫೩ರಲ್ಲಿ ಗ್ವಾಟೆಮಾಲಾದಲ್ಲಿದ್ದಾಗ ಚಿಕ್ಕಮ್ಮನಿಗೆ ಬರೆದ ಪತ್ರದಲ್ಲಿ ತಾನು ಯುನೈಟೆಡ್ ಫ್ರುಟ್ ಕಂಪನಿಯ ಬಾಳೆಹಣ್ಣಿನ ಸಾಮ್ರಾಜ್ಯದಲ್ಲಿ ಪ್ರಯಾಣ ಮಾಡುತ್ತಿರುವುದಾಗಿ, ಅಲ್ಲಿ ‘ಕ್ಯಾಪಿಟಲಿಸ್ಟ್ ಆಕ್ಟೋಪಸ್’ಗಳು ನೆಲವನ್ನು, ರೈತರನ್ನು ಹಿಡಿದಿಟ್ಟುಕೊಂಡಿವೆ ಎಂದು ವರ್ಣಿಸಿದ್ದ. ಅವನು ಅಲ್ಲಿದ್ದಾಗಲೇ ಚುನಾಯಿತ ಸರ್ಕಾರದ ಪ್ರತಿನಿಧಿಯಾಗಿ ಭೂಸುಧಾರಣೆ ತರಲು ಯತ್ನಿಸುತ್ತಿದ್ದ ಜೇಕಬೊ ಆರ್ಬೆಂಜ್ ಸರ್ಕಾರವನ್ನು ಅಮೆರಿಕದ ಸಿಐಎ ಬೆಂಬಲಿತ ಕಾರ್ಲೋಸ್ ಕ್ಯಾಸ್ಟಿಲೊ ಕ್ಷಿಪ್ರಕ್ರಾಂತಿ ನಡೆಸಿ ಉರುಳಿಸಿದ. ಯುನೈಟೆಡ್ ಫ್ರುಟ್ ಕಂಪನಿಯ ೨.೨೫ ಲಕ್ಷ ಎಕರೆಯನ್ನು ಭೂ ಸುಧಾರಣೆಗಾಗಿ ಅದಾಗಲೇ ಆರ್ಬೆಂಜ್ ಸರ್ಕಾರ ವಹಿಸಿಕೊಂಡಿತ್ತು. ಅದರಿಂದ ಕಂಗಾಲಾದ ಕಂಪನಿ ತನ್ನ ವ್ಯಾಪಾರೀ ಹಿತಾಸಕ್ತಿ ಕಾಯುವ ಸರ್ಕಾರವನ್ನು ಸ್ಥಾಪಿಸಲು ಸಿಐಎ ಜೊತೆ ಸೇರಿ ಸಂಚು ನಡೆಸಿತು. ಆ ಸಂಚಿನ ವಿರುದ್ಧ ಅಲ್ಲಿ ದಂಗೆಯೇಳಲು ಸೂಕ್ತ ವಾತಾವರಣವಿತ್ತು. ಆಗ ಆರ್ಬೆಂಜೊ ಬೆಂಬಲಿಗರನ್ನು ಚೆ ಸೇರಿದ. ಮುಂದೆ ಅವ ಮದುವೆಯಾದ ಹಿಲ್ಡಾ ಗಾಡಿಯಾ ಪರಿಚಯವಾದದ್ದು ಅಲ್ಲೇ. ಕ್ಷಿಪ್ರಕ್ರಾಂತಿ ಕೂಡಲೇ ನಡೆಯಬೇಕೆಂಬುದು ಚೆ ಅಭಿಪ್ರಾಯವಾಗಿದ್ದರೂ ಉಳಿದವರು ಅವನಷ್ಟು ವೇಗವಾಗಿ ಯೋಚಿಸಲು ವಿಫಲರಾದರು. ಜೀವಕ್ಕೆ ಕುತ್ತು ಬರುವ ಸಾಧ್ಯತೆ ಎದುರಾಗಿ ಚೆ ಗ್ವಾಟೆಮಾಲಾ ತೊರೆದು ಮೆಕ್ಸಿಕೋಗೆ ಹೋದ.

ಅಮೆರಿಕ ಕುರಿತ ಅವನ ಅಭಿಪ್ರಾಯ ಗ್ವಾಟೆಮಾಲಾದಲ್ಲಿ ಗಟ್ಟಿಯಾಯಿತು. ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ಸರಿಪಡಿಸಲು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಎಲ್ಲ ಸರ್ಕಾರಗಳನ್ನೂ ಅದು ಬುಡಮೇಲು ಮಾಡುತ್ತದೆ ಎಂದು ತಿಳಿಯಿತು. ‘ಅಮೆರಿಕಕ್ಕೆ ಭೂ ಸುಧಾರಣೆ ಮಾತು ಬೇಡ, ಅವರು ಕುಡಿಯುವ ನೀರಿನ ಸಮಸ್ಯೆ ಕುರಿತು ಬೇಕಾದಷ್ಟು ಮಾತಾಡುತ್ತಾರೆ. ಬಹುಶಃ ಶೌಚ ಕ್ರಾಂತಿಗೆ ಜಗತ್ತನ್ನು ಸಿದ್ಧಮಾಡುತ್ತಿದ್ದಾರೆ’ ಎಂದು ಛೇಡಿಸಿದ. ಸಶಸ್ತ್ರ ಹೋರಾಟ, ಸಶಸ್ತ್ರ ಜನಸಮುದಾಯ ಮಾತ್ರ ನವವಸಾಹತುಶಾಹಿಗಳ ಹಗಲು ದರೋಡೆಯನ್ನು ತಡೆಗಟ್ಟಬಲ್ಲದು ಎಂಬ ಭಾವನೆ ಧೃಢವಾಯಿತು.

೧೯೫೫ರಲ್ಲಿ ಮೆಕ್ಸಿಕೋನಲ್ಲಿ ಕ್ಯೂಬಾದ ದೇಶಭ್ರಷ್ಟ ಕ್ರಾಂತಿಕಾರಿಗಳ ಪರಿಚಯವಾಯಿತು. ಫಿಡೆಲ್ ಕ್ಯಾಸ್ಟ್ರೋ ಮತ್ತು ಸಂಗಡಿಗರು ಸರ್ವಾಧಿಕಾರಿ ಬ್ಯಾಟಿಸ್ಟಾನ ಸರ್ಕಾರ ಕಿತ್ತೊಗೆಯಲು ಜನ ಹೋರಾಟ ಸಂಘಟಿಸತೊಡಗಿದ್ದರು. ಅವರ ಯೋಜನೆಯನ್ನು ಸಂಪೂರ್ಣ ಬೆಂಬಲಿಸಿದ ಚೆ ಕ್ಯೂಬಾ ಕ್ರಾಂತಿಯಲ್ಲಿ ಪಾಲ್ಗೊಳ್ಳಲು ತಕ್ಷಣ ನಿರ್ಧರಿಸಿದ. ಗೆರಿಲ್ಲಾ ತರಬೇತಿ ಪಡೆದ. ಹೊಸಬರನ್ನು ನೇಮಿಸಿಕೊಳ್ಳಲು ನೆರವಾಗಿ ಅವರಿಗೆ ತರಬೇತಿ, ತಿಳುವಳಿಕೆ ಕೊಟ್ಟ. ಶಸ್ತ್ರಾಸ್ತ್ರ ಫ್ಯಾಕ್ಟರಿಯನ್ನು ಶುರುಮಾಡುವಲ್ಲಿ ಅವನ ಪಾತ್ರ ಹಿರಿದು. ಅವರಿಗೆಲ್ಲ ವೈದ್ಯಕೀಯ ನೆರವನ್ನು ಕಲ್ಪಿಸುತ್ತಲೇ ಕ್ಷಿಪ್ರದಾಳಿ ನಡೆಸುವ ತುಕಡಿಯ ಕಮ್ಯಾಂಡರ್ ಆದ. ಆ ತಂಡದಲ್ಲಿ ವೈದ್ಯನಾಗಿ ಹೋಗಿದ್ದ ಚೆ ಮೊದಲ ಯತ್ನ ಸೋಲಿನಲ್ಲಿ ಕೊನೆಗೊಳ್ಳುವುದನ್ನು ನೋಡಬೇಕಾಯಿತು.

೧೯೫೯ರಲ್ಲಿ ತುಂಬ ಯೋಜಿತವಾಗಿ ನಡೆಸಿದ ಎರಡನೆಯ ಹೋರಾಟದಲ್ಲಿ ಕ್ಯಾಸ್ಟ್ರೋ ಬೆಂಬಲಿಗರಿಗೆ ಗೆಲುವಾಯಿತು. ಕ್ರಾಂತಿಕಾರಿಗಳ ನಾಯಕ ಕ್ಯಾಸ್ಟ್ರೋ ದೇಶದ ಅಧ್ಯಕ್ಷನಾದ. ಆಗ ಚೆಗೆ ಕ್ಯೂಬಾ ಪೌರತ್ವ ನೀಡಿ ಹಲವು ಜವಾಬ್ದಾರಿಗಳನ್ನು ವಹಿಸಲಾಯಿತು. ಕ್ಯೂಬಾ ಸರ್ಕಾರದ ಪ್ರತಿನಿಧಿಯಾಗಿ ಹಲವು ದೇಶಗಳಿಗೆ ಭೇಟಿಕೊಟ್ಟ. ಅಮೆರಿಕವನ್ನು ವಿರೋಧಿಸುತ್ತಿದ್ದ ಚೆ ಸೋವಿಯತ್ ಯೂನಿಯನ್ ಜೊತೆ ಕ್ಯೂಬಾ ಉತ್ತಮ ಸಂಬಂಧ ಹೊಂದಲಿ ಎಂದು ಆಶಿಸಿದ. ಅಮೆರಿಕ ಆರ್ಥಿಕ ದಿಗ್ಭಂಧನ ಹೇರಿದ್ದರಿಂದ ಈ ಕ್ರಮ ಅನಿವಾರ್ಯವಾಗಿತ್ತು. ಹಲವು ದೇಶಗಳ ಜೊತೆ ವ್ಯಾಪಾರ ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕಿದ. ಕ್ಯೂಬಾ ನ್ಯಾಷನಲ್ ಬ್ಯಾಂಕಿನ ಅಧ್ಯಕ್ಷನಾದ, ಕೈಗಾರಿಕಾ ಮಂತ್ರಿಯಾದ, ಕೃಷಿ ಸುಧಾರಣಾ ಸಮಿತಿಯ ಅಧ್ಯಕ್ಷನಾದ. ಭುಸುಧಾರಣೆಯತ್ತ ವಿಶೇಷ ಗಮನ ಕೊಟ್ಟ. ಅದಕ್ಕಾಗಿ ಒಂದು ಲಕ್ಷ ಕಾರ್ಯಕರ್ತರನ್ನು ನೇಮಿಸಿಕೊಳ್ಳಲಾಯಿತು. ಹೆಚ್ಚುವರಿ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಹಂಚಲಾಯಿತು. ಅಮೆರಿಕ ಕಂಪನಿಗಳ ವಶದಲ್ಲಿದ್ದ ೪.೮ ಲಕ್ಷ ಎಕರೆ ವಶಪಡಿಸಿಕೊಳ್ಳಲಾಯಿತು. ಜೊತೆಗೆ ಕೈಗಾರಿಕೆ, ಬ್ಯಾಂಕ್ ಹಾಗೂ ವ್ಯಾಪಾರ ವಹಿವಾಟು ರಾಷ್ಟ್ರೀಕರಣಗೊಂಡಿತು. ಉನ್ನತ ಶಿಕ್ಷಣದಲ್ಲಿ ಎಲ್ಲ ಸಮುದಾಯಗಳಿಗೂ ಸೂಕ್ತ ಪ್ರಾತಿನಿಧ್ಯ ಇರುವಂತೆ ನೋಡಿಕೊಳ್ಳಬೇಕೆಂದು ವಿಶ್ವವಿದ್ಯಾಲಯಗಳಿಗೆ ಸೂಚಿಸಲಾಯ್ತು. ಶಿಕ್ಷಣದ ಕಡೆ ಗಮನ ಕೊಟ್ಟು ೧೯೬೧ನ್ನು ‘ಶಿಕ್ಷಣ ವರ್ಷ’ ಎಂದು ಘೋಷಿಸಲಾಯ್ತು. ಹೀಗೆ ಹಲವು ಹುದ್ದೆ, ಅಧಿಕಾರ ವಹಿಸಿಕೊಂಡ ಚೆ ದಣಿವರಿಯದೆ ಕೆಲಸ ಮಾಡಿದ.

೧೯೬೪ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಚೆ ಅಮೆರಿಕವನ್ನು ತರಾಟೆಗೆ ತೆಗೆದುಕೊಂಡ. ‘ಚರ್ಮದ ಬಣ್ಣದ ಕಾರಣವಾಗಿ ತಮ್ಮದೇ ಮಕ್ಕಳಿಗೆ ತಾರತಮ್ಯ ತೋರಿಸಿ ಕೊಲ್ಲುವವರು; ಕರಿಯರ ಕೊಲೆಗಾರರನ್ನು ಶಿಕ್ಷಿಸದೆ ರಕ್ಷಿಸುವವರು; ಸ್ವತಂತ್ರ ಮನುಷ್ಯರಾಗಲು  ನ್ಯಾಯಯುತ ಹಕ್ಕು ಪ್ರತಿಪಾದಿಸುವ ಕರಿಯರನ್ನು ದಮನಿಸುವವರು ಬೇರೆ ದೇಶಗಳ ಸ್ವಾತಂತ್ರ್ಯ ರಕ್ಷಕರೆಂದು ಹೇಗೆ ಹೇಳಿಕೊಳ್ಳುತ್ತಾರೆ?’ ಎಂದು ಪ್ರಶ್ನಿಸಿದ. ವರ್ಣಭೇಧವನ್ನು ತೀವ್ರವಾಗಿ ಖಂಡಿಸಿ ಅದನ್ನು ಕೊನೆಗೊಳಿಸುವ ಸಲುವಾಗಿ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಲೇಬೇಕು ಎಂದು ಹೇಳಿದ.

ತೀಕ್ಷ್ಣವಾದ ಹಾಗೂ ಸ್ಪಷ್ಟವಾದ ಮಾತುಗಳಲ್ಲಿ ಸೂಕ್ತ ವಾದ ಮಂಡಿಸುತ್ತಿದ್ದ ಕಾರಣ ಚೆ ತೃತೀಯ ಜಗತ್ತಿನ ರಾಷ್ಟ್ರಗಳ ಪ್ರತಿನಿಧಿಯಂತೆ ಮಾತನಾಡತೊಡಗಿದ. ಜೊತೆಗೆ ಕ್ರಾಂತಿ ಎಲ್ಲೆಲ್ಲೂ ಸಂಭವಿಸಬೇಕು, ಹಲವು ವಿಯೆಟ್ನಾಂಗಳು ಹುಟ್ಟಬೇಕು ಎನ್ನತೊಡಗಿದ. ಸಮಾನತೆಯ ಮಾತು ಕೇಳಿದೊಡನೆ ಬಂಡವಾಳಶಾಹಿಗಳಿಗೆ ಎದೆ ನಡುಕ ಹುಟ್ಟುತ್ತದೆ. ಎಂದೇ ಚೆಯ ಪ್ರಾಣ ತೆಗೆವ ಹಲವು ಪ್ರಯತ್ನಗಳು ನಡೆದವು.

ಬರಬರುತ್ತ ಅವನಿಗೆ ಸೋವಿಯತ್ ಯೂನಿಯನ್‌ನಲ್ಲಿ ಮಾರ್ಕ್ಸ್ ಇಲ್ಲ, ಕಮ್ಯುನಿಸಮ್ಮೂ ಇಲ್ಲ ಎನಿಸತೊಡಗಿತು. ಆಲ್ಜೀರಿಯಾದ ಒಂದು ಸಮ್ಮೇಳನದಲ್ಲಿ ಬಹಿರಂಗವಾಗಿಯೇ ಅಮೆರಿಕ ಮತ್ತು ಸೋವಿಯತ್ ಯೂನಿಯನ್ ಎರಡನ್ನೂ ಒಂದೇ ಉಸಿರಿನಲ್ಲಿ ಖಂಡಿಸಿದ. ಉತ್ತರ ಗೋಳದ ಪೂರ್ವ-ಪಶ್ಚಿಮದಲ್ಲಿರುವ ಈ ಎರಡು ದೇಶಗಳು ದಕ್ಷಿಣ ಗೋಳಾರ್ಧವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿವೆಯೆಂದು ದೂರಿದ. ಈ ವಿಮರ್ಶೆ ಕ್ಯೂಬಾಕ್ಕೆ ಬಿಸಿ ತುಪ್ಪವಾಯಿತು. ಆಗ ಸೋವಿಯತ್ ಮತ್ತು ಚೀನಾ ಸಂಬಂಧಗಳು ಬಿಗುವಾಗಿದ್ದವು. ಈ ಸಮ್ಮೇಳನದ ಮಾತುಗಳೇ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಅವನ ಕೊನೆಯ ಭಾಷಣ. ನಂತರ ಅವನು ಕ್ಯೂಬಾದಲ್ಲಿ ಕಾಣಿಸಿಕೊಳ್ಳಲಿಲ್ಲ. ಆತನ ಇರುವಿಕೆ ಬಗ್ಗೆ ಪ್ರಶ್ನೆಗಳೆದ್ದವು. ಕೊನೆಗೊಂದು ದಿನ ಕ್ಯಾಸ್ಟ್ರೋ ಚೆಯ ವಿದಾಯ ಪತ್ರ ಓದಿದ. ಚೆ ಕ್ಯೂಬಾದಲ್ಲಿ ತಾನು ವಹಿಸಿಕೊಂಡಿದ್ದ ಎಲ್ಲ ಜವಾಬ್ದಾರಿಯನ್ನೂ ತ್ಯಜಿಸಿ ಪೌರತ್ವವನ್ನೂ ಬಿಟ್ಟುಕೊಟ್ಟಿದ್ದ. ತಾನು ಕ್ರಾಂತಿಯನ್ನು ಹರಡಲು ಇತರ ದೇಶಗಳಲ್ಲೂ ಕೆಲಸ ಮಾಡುವೆನೆಂದು ತಿಳಿಸಿ ಕಾಂಗೋಗೆ ಕ್ರಾಂತಿಕಾರಿಗಳಿಗೆ ತರಬೇತಿ ನೀಡಲು ಹೋದ. ಆದರೆ ಅಲ್ಲಿ ಅವನ ಪ್ರಯತ್ನ ವಿಫಲವಾಯಿತು. ನಂತರ ಗುಟ್ಟಾಗಿ ಕ್ಯೂಬಾಗೆ ಬಂದು ಬೊಲಿವಿಯಾಗೆ ಹೋದ. ಅಲ್ಲಿ ಕ್ರಾಂತಿಕಾರರನ್ನು ಸೇರಿಕೊಂಡಾಗ ಅವನ ಪಡೆ ಇಬ್ಭಾಗವಾಯಿತು. ಕೇವಲ ೧೭ ಜನರೊಂದಿಗೆ ಉಳಿದ ಚೆಯನ್ನು ಅಕ್ಟೋಬರ್ ೮, ೧೯೬೭ರಲ್ಲಿ ಸೆರೆ ಹಿಡಿಯಲಾಯ್ತು. ಮರುದಿನ ವಾಷಿಂಗ್ಟನ್ನಿನ ಮಾರ್ಗದರ್ಶನದಂತೆ ಹತ್ಯೆ ಮಾಡಲಾಯಿತು. ಬೆರಳಚ್ಚು ಪರೀಕ್ಷೆಗಾಗಿ ಅವನ ಕೈ ಕತ್ತರಿಸಿ ಅರ್ಜೆಂಟೀನಾಗೆ ಕಳಿಸಿ, ಉಳಿದ ದೇಹಗಳ ಜೊತೆ ಎಲ್ಲೆಂದು ತಿಳಿಸದೇ ಹೂಳಲಾಯಿತು.

೧೯೯೭ರಲ್ಲಿ ಗುರುತಿಸದ ಗೋರಿಯಲ್ಲಿ ಬೊಲಿವಿಯಾದಲ್ಲಿದ್ದ ಅವನ ದೇಹವನ್ನು ಹೊರತೆಗೆದು ಕ್ಯೂಬಾಕ್ಕೆ ತಂದು ಸಂತ ಕ್ಲಾರಾದಲ್ಲಿ ಸ್ಮಾರಕ, ಸಮಾಧಿ ನಿರ್ಮಿಸಲಾಯಿತು.

***

ಚೆ ಅಸ್ತಮಾ ಬಾಧಿತ. ಅವನ ಉಸಿರಿನಷ್ಟೇ ಉಸಿರನ್ನು ಬಿಗಿಹಿಡಿಯುವ ಅಸ್ತಮಾ ಕೂಡಾ ಅವನ ಸಂಗಾತಿಯಾಗಿತ್ತು. ಅವನ ವ್ಯಕ್ತಿತ್ವದ ನಿರಂತರ ಚಡಪಡಿಕೆಗೆ ಉಸಿರುಗಟ್ಟಿದ ಅನುಭವ ನೀಡುವ ಕ್ರಾನಿಕ್ ಅಸ್ತಮಾವೂ ಒಂದು ಕಾರಣವಾಗಿತ್ತೇ?

ಈಗಲೂ ಚೆಯನ್ನು ಬಾಧಿಸಿದ ಅಸ್ತಮಾ ಇದೆ. ಆಗವನು ಅಸ್ತಮಾಗೆ ತೆಗೆದುಕೊಳ್ಳುತ್ತಿದ್ದ ಚಿಕಿತ್ಸೆ ಬೇರೆ. ಈಗ ನೀಡುವ ಚಿಕಿತ್ಸೆ ಬೇರೆ. ಆಗ ಅವ ಚಿಕಿತ್ಸೆ ನೀಡಿದ ಕುಷ್ಠರೋಗ ಈಗಲೂ ಇದೆ. ಆದರೆ ಅದರ ಪ್ರಮಾಣ, ಚಿಕಿತ್ಸೆಯ ರೀತಿ ಎಲ್ಲ ಈಗ ಬೇರೆಯಾಗಿದೆ. ಈಗ ರೋಗಿಗಳನ್ನು ಬೇರ್ಪಡಿಸಿ ಕಾಲನಿಗಳಲ್ಲಿ ಒಂದೆಡೆ ಇಟ್ಟು ಚಿಕಿತ್ಸೆ ಕೊಡುವುದಿಲ್ಲ. ಬದಲಾಗಿ ಅವರವರು ಎಲ್ಲೆಲ್ಲಿ ಇದ್ದಾರೋ ಅಲ್ಲಲ್ಲೇ ಚಿಕಿತ್ಸೆ ಕೊಡಲಾಗುತ್ತಿದೆ. ಎಲ್ಲವೂ ಹಾಗೆಯೇ. ಸಮಸ್ಯೆ ಆಗಲೂ ಇತ್ತು, ಈಗಲೂ ಇದೆ. ಪರಿಹಾರ ಆಯಾ ಕಾಲದೇಶಗಳಿಗೆ ತಕ್ಕ ಸ್ವರೂಪ ಪಡೆದುಕೊಳ್ಳಬೇಕು ಅಷ್ಟೇ. ಎಂದೇ ಚಿಕಿತ್ಸಾ ರೂಪಿ ಎನ್ನುವುದಕ್ಕಿಂತ ನಮ್ಮ ರೋಗಗಳ ಗುರುತಿಸುವ ಡಯಾಗ್ನೋಸ್ಟಿಕ್ ಟೂಲ್ ಆಗಿ ಅವ ಹೆಚ್ಚು ಮುಖ್ಯವಾಗುತ್ತಾನೆ. ಅವನ ಸ್ಪಿರಿಟ್ ತರುಣರಲ್ಲಿ ವ್ಯವಸ್ಥೆಯ ಜಡತನದ ವಿರುದ್ಧ ಬಂಡೇಳುವ ಗುಣ ಹುಟ್ಟಿಸುವ ಉತ್ತೇಜಕವಾಗಬೇಕು. ಅವನ ಜೀವನ, ಧ್ಯೇಯ, ಚಿಂತನೆಗಳು ಇತಿಹಾಸದಿಂದ ಕಲಿವ ತಪ್ಪುಒಪ್ಪುಗಳ ಪಾಠವಾಗಿ ಮುಖ್ಯವಾಗಬೇಕು.

ನೆರೂಡನಿಗೆ ಅವ ಹೇಳಿದ ಮಾತೊಂದು ಇಲ್ಲಿ ಪ್ರಸ್ತುತವೆನಿಸುತ್ತದೆ: ‘ನಾವೆಲ್ಲ ಯುದ್ಧ ವಿರೋಧಿಗಳೇ. ಆದರೆ ಒಮ್ಮೆ ಅದರಲ್ಲಿ ಭಾಗಿಯಾದೆವು ಎಂದರೆ ಮುಗಿಯಿತು, ಅದನ್ನು ಬಿಟ್ಟಿರಲಿಕ್ಕೇ ಆಗುವುದಿಲ್ಲ. ಮತ್ತೆಮತ್ತೆ ಅದು ನಮ್ಮನ್ನು ಸೆಳೆದುಕೊಳ್ಳುತ್ತದೆ.’ ಇವತ್ತು ಶಾಂತಿಗಾಗಿ ಯುದ್ಧ ನಡೆಯುತ್ತಿದೆ. ಧರ್ಮಕ್ಕಾಗಿ ಯುದ್ಧ ನಡೆಯುತ್ತಿದೆ. ವೈಯಕ್ತಿಕ ಕಾರಣಗಳಿಗಾಗಿ, ಗಡಿಗಾಗಿ ಯುದ್ಧ ನಡೆಯುತ್ತಿದೆ. ನಾನು ನಂಬಿರುವುದನ್ನೇ ಎಲ್ಲರೂ ನಂಬುವಂತೆ ಮಾಡಲು ಯುದ್ಧ ಏರ್ಪಡುತ್ತಿದೆ. ಶಸ್ತ್ರಾಸ್ತ್ರ ತಯಾರಿಸುವ ದೇಶಗಳು ವ್ಯಾಪಾರ ಹೆಚ್ಚಿಸಿಕೊಳ್ಳಲು ಯುದ್ಧದ ಪರಿಸ್ಥಿತಿ ನಿರ್ಮಾಣ ಮಾಡುತ್ತಿವೆ. ಹೀಗಿರುವಾಗ ಹಿಂಸೆಯನ್ನು ಇವತ್ತಿನ ವಿಶ್ವಗ್ರಾಮ ಅರ್ಥಿಕತೆಯಲ್ಲಿ ಬೇರೆಯೇ ಆಗಿ ಗ್ರಹಿಸಬೇಕಿದೆ. ಜನರ ವಿಮೋಚನೆಯ ಹೋರಾಟದಲ್ಲಿ ಜಾಗೃತಿಯ ಉಪಕರಣಗಳನ್ನಾಗಿ ಯಾವ್ಯಾವುದನ್ನು ಸುರಕ್ಷಿತವಾಗಿ ಬಳಸಿಕೊಳ್ಳಬಹುದು ಎಂದು ವಿವೇಚಿಸುವ ಕಾಲ ಬಂದಿದೆ. ಹೆಚ್ಚುಕಡಿಮೆ ನೂರು ವರ್ಷಗಳ ಹಿಂದೆ ಲ್ಯಾಟಿನ್ ಅಮೆರಿಕದಲ್ಲಿದ್ದ ಪರಿಸ್ಥಿತಿ ಇಲ್ಲಿ ಈಗ ಇದೆ. ಪ್ರಜಾಪ್ರಭುತ್ವವು ಭಿನ್ನಮತ, ಅಸಮ್ಮತಿಯನ್ನು ಹಣಿಯಲು ನಾನಾ ಹತಾರಗಳನ್ನು ಬಳಸಿಕೊಳ್ಳುತ್ತಿದೆ. ಉದಾರವಾದ, ಮುಕ್ತ ಆರ್ಥಿಕತೆಯ ಆಕ್ಟೋಪಸ್ ಹಿಡಿತದಲ್ಲಿ ಜನ ಸಮುದಾಯ ನಲುಗುತ್ತಿದೆ. ಹೀಗಿರುವಾಗ ಪರ್ಯಾಯ ಮಾರ್ಗಗಳ ಶೋಧಿಸುವವರು ಅದರ ಸಾಧಕ-ಬಾಧಕಗಳ ಜೊತೆಗೇ ತಿಳಿದಿರಲೇಬೇಕಾದ ಒಂದು ಮಾರ್ಗ ಚೆಗೆವಾರನದು ಎನಿಸುತ್ತಿದೆ.

ಶಸ್ತ್ರ ಹಿಡಿದ ಸರ್ವಾಧಿಕಾರಿಗಳನ್ನೂ, ಧಾರ್ಮಿಕ ಮೂಲಭೂತವಾದಿ ಜಿಹಾದಿಗಳನ್ನೂ ಚೆಯೊಡನಿಟ್ಟು ಹೋಲಿಸುವ ‘ಅಹಿಂಸಾವಾದಿ’ ಪ್ರತಿಪಾದನೆಗಳು ನಮ್ಮೆದುರು ಇವೆ. ಆದರೆ ಚೆ ರಕ್ತ ಪಿಪಾಸುವಲ್ಲ. ಅವನ ದಾರಿಯನ್ನು ವಿಮರ್ಶಿಸುತ್ತಲೇ ಆ ಹಾದಿಯ ಪ್ರಧಾನ ಆಶಯ ಏನಾಗಿತ್ತು ಎನ್ನುವುದನ್ನು ಗಮನಿಸುವುದೂ ನಮ್ಮ ಜವಾಬ್ದಾರಿಯಾಗಿದೆ. ಎಂದೇ ಪೂರ್ವಯೋಜಿತ ವ್ಯಕ್ತಿ ಚಿತ್ರದಾಚೆಗೆ, ಅಡಿ ಟಿಪ್ಪಣಿಗಳ ವಿವರಗಳಾಚೆಗೆ ಚೇಯನ್ನು ಅವನು ಮಂಡಿಸಿಕೊಂಡ ಹಾಗೆಯೇ ಓದುಗ ತಿಳಿಯಲಿ; ಒಂದು ವಾದದವರಿಗೆ, ಒಂದು ವಿಚಾರ ಧಾರೆಯ ಹೋರಾಟಗಾರರಿಗಷ್ಟೇ ಅವನು ಸೀಮಿತವಾಗದಿರಲಿ ಎಂಬ ಉದ್ದೇಶದಿಂದ ಈ ಟಿಪ್ಪಣಿಗಳನ್ನು ಕನ್ನಡಿಗರಿಗೆ ತಲುಪಿಸುತ್ತಿದ್ದೇವೆ.

ಇಲ್ಲಿ ಅನುವಾದಿಸಲಾಗಿರುವ ‘ಮೋಟಾರ್ ಸೈಕಲ್ ಡೈರಿ’ ಕೆಲವೆಡೆ ಲವಲವಿಕೆಯಿಂದ ಓದಿಸಿಕೊಂಡು ಹೋಗುತ್ತದೆ. ಮತ್ತೆ ಕೆಲವೆಡೆ ಅವರು ಎಲ್ಲಿ ಹತ್ತಿ ಎಲ್ಲಿ ಇಳಿದರು ಎಂದು ತಿಳಿಯದೇ ಗೊಂದಲಗೊಳಿಸುತ್ತದೆ. ಕೆಲ ಐತಿಹಾಸಿಕ ಸ್ಥಳದ ವಿವರಗಳೂ ಅಸ್ಪಷ್ಟ ಹಾಗೂ ಅಪೂರ್ಣವಾಗಿವೆ. ಬಹುಶಃ ಸ್ಪ್ಯಾನಿಶ್ ಹೆಸರುಗಳಿರುವ ಆ ಸ್ಥಳಗಳ ಕುರಿತ ನಮ್ಮ ಅಪರಿಚಿತತೆ ಅದಕ್ಕೆ ಕಾರಣವಿರಬಹುದು. ಆದರೆ ವಿವರಗಳು ಪೇಲವ ಅನಿಸುವ ಹೊತ್ತಿಗೆ ಮಿಂಚಿನಂತೆ ಎದೆಯಾಳದ ಒಂದೆರೆಡು ಸಾಲುಗಳನ್ನು ಹೊಳೆಯಿಸಿಬಿಡುವ ಚೆ ನಿರೂಪಣೆಗೆ ಜೀವ ತುಂಬುತ್ತಾನೆ. ಅವನ ತರುಣ ಹುಮ್ಮಸ್ಸು ಮತ್ತು ಚೈತನ್ಯ ಓದುಗನಲ್ಲೂ ಜೀವ ಸಂಚಲನ ಉಂಟುಮಾಡುತ್ತದೆ. ಅದಕ್ಕೇ ಹುಂಬತನದ ನಡುವೆ ಮಿಂಚುವ ಎದೆಯಾಳದ ಎರಡು ಸಾಲುಗಳಾಗಿ ಚೆ ನಿಮ್ಮ ಮುಂದಿದ್ದಾನೆ..

(ಲಡಾಯಿ ಪ್ರಕಾಶನ ಪ್ರಕಟಿಸಿದ ಚೆಗೆವಾರನ ಮೋಟಾರ್ ಸೈಕಲ್ ಡೈರೀಸ್ ಪುಸ್ತಕದ ಕನ್ನಡಾನುವಾದಕ್ಕೆ 2014ರಲ್ಲಿ ನಾನು ಬರೆದ ಪ್ರವೇಶಿಕೆ)

Thursday 11 June 2020

ಕೋವಿಡ್ - 19 ಲಸಿಕೆ, ಚಿಕಿತ್ಸೆ: ಅವಸರ ಸಲ್ಲದು





ತಾಪಮಾನ ಏರಿದೆಯೆಂದು ನಾನಾ ವಿಧಗಳಲ್ಲಿ ಭೂಮಿ ಹೇಳಿದ್ದು ನಮಗೆ ಕೇಳಿರಲಿಲ್ಲ. ಆದರೆ ಕ್ಷುದ್ರವೆಂದುಕೊಳ್ಳಬಹುದಾದ ಅರೆಜೀವಿ ಕಣವೊಂದು ದೊಡ್ಡಣ್ಣ, ಸಣ್ಣಯ್ಯ ಎನ್ನದೆ ಎಲ್ಲರೂ ಮಂಡಿಯೂರುವಂತೆ ಮಾಡಿರುವಾಗ ನಮ್ಮ ಉಸಿರಾಟದ ಸದ್ದು ನಮಗೇ ಕೇಳುವಷ್ಟು ಗಾಬರಿ ಆವರಿಸಿಕೊಂಡಿದೆ. ನಡೆದು, ಹಸಿದು, ದಣಿದು ರಸ್ತೆಗಳ ತುಂಬಿರುವ ಶ್ರಮಿಕ ಭಾರತ; ಮೊಣಕಾಲೂರಿದಂತೆ ಕಂಡರೂ ಕೊರಳೊತ್ತಿ ಉಸಿರು ಕಟ್ಟಿಸುವ ಅಮೆರಿಕ; ಕೋವಿಡ್ ಸಂಕಷ್ಟ ಮರೆಸಲು ತೋಳೇರಿಸುತ್ತಿರುವ ಚೀನಾ; ದಿಟ್ಟ, ಖಚಿತ ನಿಲುವು ತೆಗೆದುಕೊಳ್ಳಲಾಗದಂತೆ ದುಡ್ಡಿದ್ದವರ ಹಂಗಿಗೊಳಗಾದ ವಿಶ್ವ ಆರೋಗ್ಯ ಸಂಸ್ಥೆ - ಇದನ್ನೆಲ್ಲ ನೋಡುವಾಗ ಇಡಿಯ ವಿಶ್ವ ದೂರದೃಷ್ಟಿಯ ದಾರ್ಶನಿಕ ನಾಯಕತ್ವವಿಲ್ಲದೇ ಸೊರಗಿರುವುದು ಸ್ಪಷ್ಟವಾಗಿದೆ. ಕಂಗೆಡಿಸುವ ವಾಸ್ತವದ ಆಳಗಲಗಳೇ ಇನ್ನೂ ಅಳತೆಗೆ ಸಿಗದಂತಾಗಿರುವಾಗ ಕೋವಿಡ್ ನಂತರದ ಜಗತ್ತು ಹೇಗಿರಬಹುದೆನ್ನುವುದು ನಮ್ಮ ಕಲ್ಪನೆಯ ಆಚೆ ಚಾಚಿಕೊಂಡಿದೆ. ಆದರೆ ಲಾಕ್‌ಡೌನ್ ಆದೆವೆಂದು ಮರುಗುತ್ತಿರುವವರ ಚಿತ್ತ ಎಷ್ಟು ಬೇಗ ಅನ್‌ಲಾಕ್ ಆದೇವೋ, ಎಷ್ಟು ಬೇಗ ಕೋವಿಡ್‌ಗೆ ಔಷಧ, ಲಸಿಕೆ ಕಂಡುಹಿಡಿದೇವೋ ಎನ್ನುವತ್ತ ನೆಟ್ಟಿದೆ. ಇದೇ ಧಾವಂತ ಆರೋಗ್ಯ ಕ್ಷೇತ್ರವನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡಿರುವ ಬಂಡವಾಳ ಜಗತ್ತಿಗೂ ಆವರಿಸಿಬಿಟ್ಟಿದೆ.

ಆದರೆ ಆರೋಗ್ಯ ಸಂಶೋಧನೆ ಎನ್ನುವುದು ಅಡುಗೆಯೆಂಬ ಧ್ಯಾನದ ಹಾಗೆ. ಅಲ್ಲಿ ಅವಸರ, ವಿಳಂಬ ಮತ್ತು ನಿರ್ಲಕ್ಷಗಳಿಗೆ ಕ್ಷಮೆಯೇ ಇಲ್ಲ.

ಹೈಡ್ರಾಕ್ಸಿಕ್ಲೋರೋಕ್ವಿನ್ (ಎಚ್‌ಸಿಕ್ಯು) ಎಂಬ ಮಲೇರಿಯಾ ಸೋಂಕಿಗೆ ಕೊಡುವ ಔಷಧಿಯನ್ನೇ ತೆಗೆದುಕೊಂಡರೆ, ಅದು ಕೋವಿಡ್-೧೯ಗೂ ಫಲಕಾರಿಯಾಗುತ್ತದೆಂದು ‘ಕಂಡು ಹಿಡಿ’ಯಲಾಯಿತು. ಆಸ್ಪತ್ರೆ, ಔಷಧಿಯಂಗಡಿಗಳ ಸ್ಟೋರಿನಲ್ಲಿದ್ದ ಎಚ್‌ಸಿಕ್ಯು ಮಂಗಮಾಯವಾಗಿಬಿಟ್ಟಿತು. ಅಮೆರಿಕವು ತುರ್ತಾಗಿ ಎಚ್‌ಸಿಕ್ಯು ಕಳಿಸುವಂತೆ ಕೇಳಿದಾಗ ಲಾಕ್‌ಡೌನ್ ಸಡಿಲಿಸಿ ಭಾರತ ಕಳಿಸಲೊಪ್ಪಿತು. ಕ್ಲೋರೋಕ್ವಿನ್ ಬಳಸಿದರೆ ಹೃದಯ ಕಾಯಿಲೆಯಿರುವವರಲ್ಲಿ ಮರಣ ಸಂಭವಿಸಬಹುದು ಎಂಬ ಎಚ್ಚರಿಕೆಯ ನಡುವೆ ಹಲವರು ಅದನ್ನು ಸೇವಿಸಿ ಹೃದಯಸ್ಥಂಭನಕ್ಕೊಳಗಾದರು.

ಇದರ ನಡುವೆ ಬ್ರಿಟನ್ನಿನಲ್ಲಿ ನೆಲೆಸಿದ ಇಬ್ಬರು ಭಾರತ ಮೂಲದ ವೈದ್ಯವಿಜ್ಞಾನಿಗಳು ಎಚ್‌ಸಿಕ್ಯು ಕೋವಿಡ್‌ಗೆ ಪರಿಣಾಮಕಾರಿಯಲ್ಲ, ಅಪಾಯಕಾರಿ ಎಂದು ಬ್ರಿಟಿಷ್ ವೈದ್ಯಕೀಯ ಜರ್ನಲ್ ‘ಲ್ಯಾನ್ಸೆಟ್’ನಲ್ಲಿ ಅಧ್ಯಯನ ವರದಿ ಪ್ರಕಟಿಸಿದರು. ಮತ್ತೊಂದೆಡೆ ಅಧ್ಯಯನ ವಿಧಾನವೇ ಸರಿಯಿಲ್ಲವೆಂದು ಇನ್ನೊಂದು ಗುಂಪು ಅದನ್ನು ಸಂಪೂರ್ಣ ಅಲ್ಲಗಳೆಯಿತು. ಒಬ್ಬರ ಹಿಂದೆ ಔಷಧ ತಯಾರಿಕಾ ಕಂಪನಿಯಿದ್ದರೆ, ಮತ್ತೊಬ್ಬರ ಹಿಂದೆ ಸ್ಯಾನಿಟೈಸರ್‌ಗಳನ್ನು ತಯಾರಿಸುವ ಕಂಪನಿಯಿತ್ತು. ಲೋಕಹಿತಕ್ಕಿಂತ ಬಂಡವಾಳ ಹಿತ, ಪೇಟೆಂಟ್ ಹಿತವೇ ಕ್ರಿಯಾಶೀಲವಾಯಿತು.

ಕೋವಿಡ್ ಲಸಿಕೆಯದು ಮತ್ತೊಂದು ಕತೆ. ಆರೋಗ್ಯವಂತ ವ್ಯಕ್ತಿಗೆ ರೋಗ ಬರದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಲಸಿಕೆ ನೀಡಲಾಗುತ್ತದೆ. ಈಗ ದಿನಕ್ಕೊಂದು ವಿಜ್ಞಾನಿಗಳ ತಂಡ ಕೋವಿಡ್‌ಗೆ ಪರಿಣಾಮಕಾರಿ ಲಸಿಕೆ ಸಿದ್ಧಗೊಳಿಸಿಯೇಬಿಟ್ಟೆವು ಎನ್ನುತ್ತಿವೆ. ನಮಗೆ ಅವಸರವಿದೆಯೆಂದು ಕೋವಿಡ್‌ಗೆ ಅವಸರವಿದೆಯೆ? ಲಸಿಕೆಯನ್ನು ಫಾಸ್ಟ್‌ಫುಡ್ಡಿನಂತೆ ಫಟಾಫಟ್ ತಯಾರಿಸಬಹುದೇ?

ಖಂಡಿತ ಇಲ್ಲ.

ಯಾವ ರೋಗಾಣುವಿನ ವಿರುದ್ಧ ಲಸಿಕೆ ಕಂಡುಹಿಡಿಯುವೆವೋ ಅದನ್ನು ಕೂಲಂಕಶ ಅಧ್ಯಯನಕ್ಕೊಳಪಡಿಸಬೇಕು; ಆಂಟಿಜೆನ್ನುಗಳ ಪಟ್ಟಿ ಮಾಡಿ, ಕಾಯಿಲೆಕಾರಕವಾದದ್ದನ್ನು ಬಿಟ್ಟು ರೋಗನಿರೋಧಕ ಶಕ್ತಿಯನ್ನು ಉದ್ದೀಪಿಸುವುದನ್ನು ಗುರುತಿಸಬೇಕು; ಆಯ್ದ ಕೆಲವು ಪ್ರಾಣಿಗಳಿಗೆ ಉದ್ದೀಪಕ ಆಂಟಿಜೆನ್ ಕೊಡಬೇಕು; ನಂತರ ಪ್ರಾಣಿಗಳ ರಕ್ತಮಾದರಿ ಸಂಗ್ರಹಿಸಿ ರೋಗಾಣುವಿನ ವಿರುದ್ಧ ಆಂಟಿಬಾಡಿಗಳು ಉತ್ಪತ್ತಿಯಾಗಿವೆಯೇ ಎಂದು ಪರೀಕ್ಷಿಸಬೇಕು; ಪ್ರಾಣಿಯನ್ನು ನಿಜವಾದ ರೋಗಾಣುವಿಗೊಡ್ಡಿ ಸೋಂಕುಂಟುಮಾಡಿ ಕಾಯಿಲೆ ಬರದಂತೆ ರೋಗನಿರೋಧಕ ಶಕ್ತಿ ಬಂದಿದೆಯೇ ಪರಿಶೀಲಿಸಬೇಕು; ಪ್ರಾಣಿಗಳ ಮೇಲಿನ ಪ್ರಯೋಗ ಸಫಲವಾದರೆ ಆರೋಗ್ಯವಂತ ಮನುಷ್ಯರನ್ನು ಆಯ್ದು, ಸಮ್ಮತಿ ಪಡೆದು, ಲಸಿಕೆ ನೀಡಬೇಕು; ಅವರ ರೋಗನಿರೋಧಕ ಶಕ್ತಿ ಹೆಚ್ಚಿತೇ? ರೋಗಾಣುವಿನ ಸಂಪರ್ಕವಾದಾಗ ರೋಗ ಬರದಂತೆ ತಡೆಗಟ್ಟಿತೇ? ರೋಗನಿರೋಧಕ ಶಕ್ತಿ ಎಷ್ಟು ಕಾಲ ಇರುವುದು ಎಂದೆಲ್ಲ ಪರೀಕ್ಷಿಸಬೇಕು; ಸುರಕ್ಷಿತತೆ, ವಿಶ್ವಾಸಾರ್ಹತೆ ಮತ್ತು ಪರಿಣಾಮಗಳ ಬಗೆಗೆ ವಿಸ್ತೃತ ಕ್ಲಿನಿಕಲ್ ಟ್ರಯಲ್‌ಗಳಾದ ನಂತರ ಮಾರುಕಟ್ಟೆಗೆ ಬಿಡಬೇಕು. ..

ಓಹೋ, ಎಂಥ ದೀರ್ಘ ಪ್ರಕ್ರಿಯೆ ಅಲ್ಲವೆ? ಹೌದು.


ಎಡ್ವರ್ಡ್ ಜೆನ್ನರ್


ಆಲ್ಬರ್ಟ್ ಬ್ರೂಸ್ ಸ್ಯಾಬಿನ್


ಲೂಯಿಸ್ ಪಾಶ್ಚರ್


ವ್ಲದಿಮಿರ್ ಹಾಫ್ಕಿನ್

ಎಡ್ವರ್ಡ್ ಜೆನ್ನರ್, ಲೂಯಿಸ್ ಪಾಶ್ಚರ್, ವ್ಲದಿಮಿರ್ ಹಾಫ್ಕಿನ್, ಆಲ್ಬರ್ಟ್ ಬ್ರೂಸ್ ಸ್ಯಾಬಿನ್ - ಒಬ್ಬರೇ ಇಬ್ಬರೇ? ಒಂದು ಲಸಿಕೆ ಕಂಡುಹಿಡಿಯಲು ಜೀವಿತಾವಧಿಯನ್ನೇ ಸವೆಸಿದವರಿದ್ದಾರೆ. ಸಫಲಗೊಳ್ಳದೇ ಲಯವಾಗಿ ಹೋದವರು ಅಸಂಖ್ಯ ಜನರಿದ್ದಾರೆ. ಇಂದಿನ ವೇಗದ ಕಾಲದಲ್ಲೂ ಒಂದು ಲಸಿಕೆ ತಯಾರಿಗೆ ಕನಿಷ್ಟ ಎರಡು ವರ್ಷ ಬೇಕೇಬೇಕು. ಅದಕ್ಕಿಂತ ಮುನ್ನ ಮಾರುಕಟ್ಟೆಗೆ ಬಂದದ್ದು ಮೌಲಿಕ, ಸುರಕ್ಷಿತ ಆಗಿರಲು ಸಾಧ್ಯವಿಲ್ಲ.

ಆದರೆ ಕೋವಿಡ್-೧೯ ಬಂದು ಆರು ತಿಂಗಳೂ ಆಗಿಲ್ಲ, ಲಸಿಕೆ ಪ್ರಯತ್ನ ಶುರುವಾಗಿ ಮೂರು ತಿಂಗಳಾಗಿಲ್ಲ, ದಿನಕ್ಕೊಂದು ತಂಡ ತಾನಿನ್ನೇನು ವ್ಯಾಕ್ಸೀನ್ ತಯಾರಿಸಿಯೇ ಬಿಟ್ಟೆ ಎನ್ನುತ್ತಿವೆಯಲ್ಲ!

ಇದ್ದಕ್ಕಿದ್ದಂತೆ ಜನರಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಅವರಸ ಹುಟ್ಟಿಕೊಂಡಿದೆ. ಕಂಡುಕೇಳರಿಯದ ಗಿಡ, ಮೂಲಿಕೆ, ಎಲೆ-ಬೇರು-ತೊಗಟೆ-ಕಷಾಯಗಳನ್ನು ಬಳಸತೊಡಗಿದ್ದಾರೆ. ಆದರೆ ನಿಯಮಿತ ಆಹಾರ, ನಿದ್ರೆ ಮತ್ತು ಶ್ರಮದ ಸರಳ ಬದುಕು ರೋಗನಿರೋಧಕ ಶಕ್ತಿಯನ್ನು ನಿಧಾನವಾಗಿ ಸಂಚಯಗೊಳಿಸೀತೇ ಹೊರತು ಛೂಮಂತ್ರ ಗಾಳಿ ಅಂದಕೂಡಲೇ ದೇಹ ಧೃಢವಾಗಲಾರದು. ನಾಗರಿಕ ಬದುಕಿನ ಎಲ್ಲ ಹಳವಂಡ, ಕೇಡು, ಆಮಿಷ, ಲೋಲುಪತೆಗಳನ್ನು ಅಡಿಯಿಂದ ಮುಡಿಯವರೆಗೆ ಹೊಲಿದುಕೊಂಡ ನಮಗೆ ಅಶಿಸ್ತಿನ ಬದುಕೇ ಹಿತವಾಗಿರುವಾಗ ನಾರುಬೇರುಗಳ ಸಿದ್ಧೌಷಧಗಳು ತಕ್ಷಣದ ಆರೋಗ್ಯ ನೀಡಲಾರವು.

ಮುಕ್ಕಾಲು ಭಾಗ ಸುಶಿಕ್ಷಿತರಿರುವ ಭಾರತದಲ್ಲಿ ಹೀಗಾಯಿತೇಕೆ?

ಸ್ವಾತಂತ್ರ್ಯಾನಂತರ ಎರಡು ದಶಕಗಳ ತನಕ ಹೊಸ ನಾಡು ಕಟ್ಟುವ ಹುಮ್ಮಸದ ಜನರು, ವೈಜ್ಞಾನಿಕ ದೃಷ್ಟಿಕೋನ-ವಿಜ್ಞಾನ ಸಂಶೋಧನೆಗಳನ್ನು ಬಲಪಡಿಸಬೇಕೆನ್ನುವ ನಾಯಕತ್ವ ದೇಶದಲ್ಲಿತ್ತು. ನಂತರ ನಾವು ಅಭಿವೃದ್ಧಿಯ ಮಾತನಾಡಿದೆವು, ಸಾಮಾಜಿಕ ನ್ಯಾಯದ ಮಾತನಾಡಿದೆವು, ಧರ್ಮ-ದೇಗುಲಗಳ ಬಗೆಗೆ ಎಗ್ಗಿಲ್ಲದೆ ಬಡಿದಾಡಿದೆವು. ಆದರೆ ವಿಜ್ಞಾನ, ವೈಜ್ಞಾನಿಕ ಸಂಶೋಧನೆಯ ಬಗೆಗೆ ಚಕಾರವೆತ್ತಲಿಲ್ಲ. ನಿತ್ಯ ಬದುಕಿನ ಲೋಲುಪತೆಗೆ ಪೂರಕವಾದ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಉಪಕರಣ, ಯಂತ್ರಗಳನ್ನೇನೋ ಕಂಡುಹಿಡಿದೆವು. ಮೂಲವಿಜ್ಞಾನ, ಆರೋಗ್ಯ ವಿಜ್ಞಾನ ನಮ್ಮನ್ನು ಸೆಳೆಯಲಿಲ್ಲ.


ಇದರಿಂದ ನಿಜಕ್ಕೂ ಸೊರಗಿದ್ದು ಭಾರತದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ. ಚರಕ, ಸುಶ್ರುತರಂಥ ಮೇಧಾವಿಗಳನ್ನು ಸಾವಿರಾರು ವರ್ಷ ಮೊದಲೇ ಸೃಷ್ಟಿಸಿದ ಭಾರತವು ನೂರನಲವತ್ತು ಕೋಟಿ ಜನಗಡಣದ ನಡುವೆ ತನಗೆ ಅಗತ್ಯವಿರುವ ಔಷಧ, ಲಸಿಕೆ ತಾನೇ ತಯಾರಿಸಿಕೊಳ್ಳುವ, ತನ್ನ ಕಾಯಿಲೆಗಳಿಗೆ ಕಾರಣ ಹುಡುಕಿ ಔಷಧ ಕಂಡುಹಿಡಿದುಕೊಳ್ಳುವ ಜಾಗತಿಕ ಗುಣಮಟ್ಟದ ಸಂಶೋಧನಾ ತಂಡ ಕಟ್ಟಲು ವಿಫಲವಾಗಿದೆ. ‘ಪುರಾಣ ಕಾಲದಲ್ಲೇ ಪ್ಲಾಸ್ಟಿಕ್ ಸರ್ಜರಿಯಿಂದ ಗಣಪನನ್ನು ಸೃಷ್ಟಿಸಿದೆವು, ರಾಮಾಯಣ ಕಾಲದಲ್ಲಿ ಆನೆ ಲದ್ದಿಯಿಂದ ಜೆಟ್ ಫ್ಯುಎಲ್ ತಯಾರಿಸಿ ಪುಷ್ಪಕವಿಮಾನ ಹಾರಿಸಿದ್ದೆವು, ಬರಲಿರುವ ರೋಗಗಳೆಲ್ಲವನ್ನು ಊಹಿಸಿ ಋಷಿಮುನಿಗಳು ಆಗಲೇ ಮಂತ್ರೌಷಧವನ್ನು ಸಂಹಿತೆಗಳಲ್ಲಿ ಬರೆದಿಟ್ಟಿರುವರು’ ಎಂಬಂತಹ ಅಪದ್ಧ, ಅಪಕ್ವ ವಿಚಾರಗಳನ್ನೇ ಹುಸಿಚಿಂತಕರು, ಜನನಾಯಕರು ತಾವೂ ನಂಬಿ, ಜನರನ್ನೂ ಕತ್ತಲಲ್ಲಿಟ್ಟ ಕಾರಣದಿಂದ ಒಂದೆಡೆ ಮೌಢ್ಯವು ಆರೋಗ್ಯ ಸಂಶೋಧನಾ ಕ್ಷೇತ್ರವನ್ನು ಬಡವಾಗಿಸಿದ್ದರೆ ಇನ್ನೊಂದೆಡೆ ಖಾಸಗಿ ಬಂಡವಾಳವು ಅದನ್ನೊಂದು ಉದ್ದಿಮೆಯಾಗಿಸಿದೆ. ಖಾಸಗಿ ಆರೋಗ್ಯ/ಔಷಧ ಸಂಸ್ಥೆಗಳಿಂದ ಅತ್ಯಾಧುನಿಕ, ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದೆ ನಿಜ. ಆದರೆ ರೋಗಿಗಳು ಲಾಭತರುವ ಗ್ರಾಹಕರಾಗಿ ಮಾರ್ಪಟ್ಟಿದ್ದರಿಂದ ಖಾಸಗಿ ವಲಯದ ಸಂಶೋಧನೆಯ ವಿಶ್ವಾಸಾರ್ಹತೆ ಮತ್ತು ಉದ್ದೇಶ ಕುರಿತು ಅನುಮಾನ ಮೂಡುವಂತಾಗಿದೆ.

ಎಂದೇ ಜನಸರ್ಕಾರಗಳು ಔಷಧ ತಯಾರಿಕೆ, ಸಂಶೋಧನೆ, ರೋಗ ನಿಯಂತ್ರಣ ಕ್ಷೇತ್ರವನ್ನು ಬಂಡವಾಳಿಗರಿಗೆ ಕೈಯೆತ್ತಿ ಕೊಟ್ಟು ತಮ್ಮ ಜವಾಬ್ದಾರಿಯಿಂದ ಕಳಚಿಕೊಳ್ಳಲು ನೋಡದೇ, ಈ ನೆಲದ ಬೌದ್ಧಿಕ ಸಂಪನ್ಮೂಲವನ್ನು ಉಪಯೋಗಿಸಿಕೊಳ್ಳಬೇಕು. ಜನರ ಜೀವ ಪೊರೆಯುವ ಕೃಷಿ, ಆರೋಗ್ಯ, ಕ್ರೀಡೆ, ಶಿಕ್ಷಣಗಳಿಗೆ ದೇಶದ ಸುರಕ್ಷತೆಗೆ ಕೊಡುವಷ್ಟೇ ಹಣಕಾಸನ್ನು ತೆಗೆದಿರಿಸಿ ಲೋಕಹಿತ ಕಾಪಾಡಬೇಕು. ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದರೆ ಲಾಭವಿಲ್ಲ ಎಂದರಿತು ಆರೋಗ್ಯ ಸಂಶೋಧನೆಯನ್ನು ಚುರುಕುಗೊಳಿಸಬೇಕು. ಜಾತಿ-ಧರ್ಮ-ಲಾಭ-ನಷ್ಟ ಲೆಕ್ಕಾಚಾರ ಬಿಟ್ಟು ಭವಿಷ್ಯದ ಅಗತ್ಯಗಳನ್ನು ಊಹಿಸಿ ಕಾರ್ಯಪ್ರವೃತ್ತರಾಗುವ ದೂರದೃಷ್ಟಿಯ ಕನಸುಗಾರರು ಜನರನ್ನು ಮುನ್ನಡೆಸುವಂತಾಗಬೇಕು.