Saturday 28 March 2015

ಇರೋಮ್ ಶರ್ಮಿಳಾ ಆಗಿರುವುದು ಸುಲಭವಲ್ಲ..




ವಿಶ್ವದಲ್ಲೇ ಅತಿ ದೀರ್ಘಕಾಲ ಉಪವಾಸ ಸತ್ಯಾಗ್ರಹ ನಡೆಸಿದ ವ್ಯಕ್ತಿ ಇರೋಂ ಶರ್ಮಿಳಾ. ಆಕೆ ಧೈರ್ಯಕ್ಕೆ, ಬದುಕುಳಿವ ಛಲಕ್ಕೆ, ಹೋರಾಟದ ಗುಣಕ್ಕೆ ಇನ್ನೊಂದು ಹೆಸರು. ಮಣಿಪುರದಲ್ಲಿ ಮಾನವ ಹಕ್ಕು ಉಲ್ಲಂಘನೆ ಮಾಡುತ್ತಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಕುರಿತು ಸಮಾಜದ ಗಮನ ಸೆಳೆದು ಅದನ್ನು ವಾಪಸ್ ತೆಗೆದುಕೊಳ್ಳುವಂತೆ ಸರ್ಕಾರದ ಮೇಲೆ ರಾಷ್ಟ್ರೀಯ-ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ತಂದಿದ್ದು ಇರೋಂ ಶರ್ಮಿಳಾ ಉಪವಾಸ. ಈ ಕಾರಣಕ್ಕಾಗಿಯೇ ಅವರಿಗೆ ಹಲವು ಪ್ರಶಸ್ತಿ-ಮನ್ನಣೆಗಳು ಸಂದಿವೆ.

ಆಕೆ ಉಪವಾಸ ಶುರುಮಾಡಿ ೧೫ ವರ್ಷಗಳಾದವು. ಅದು ನವೆಂಬರ್ ೨, ೨೦೦೦ನೇ ಇಸವಿ. ಮಣಿಪುರದ ಇಂಫಾಲ ಕಣಿವೆಯ ಒಂದು ಹಳ್ಳಿ ಮಾಲೋಮ್‌ನ ನಿಲ್ದಾಣದಲ್ಲಿ ಬಸ್ ಕಾಯುತ್ತಿದ್ದ ಹತ್ತು ಜನರನ್ನು ಅಸ್ಸಾಂ ರೈಫಲ್ಸ್ ಅರೆಸೇನಾ ಪಡೆಯ ಯೋಧರು ಗುಂಡು ಹಾರಿಸಿ ಕೊಂದರು. ಸತ್ತವರಲ್ಲಿ ೬೨ ವರ್ಷದ ಲಿಸಾಂಗ್ಬಮ್‌ನಿಂದ ಹಿಡಿದು ೧೯೮೮ರಲ್ಲಿ ರಾಷ್ಟ್ರೀಯ ಮಕ್ಕಳ ಶೌರ್ಯ ಪ್ರಶಸ್ತಿ ಪಡೆದ ಸಿನಮ್ ಚಂದ್ರಮಣಿ ಕೂಡಾ ಸೇರಿದ್ದರು. ೨೮ ವರ್ಷ ವಯಸ್ಸಿನ, ಪಶುವೈದ್ಯ ಇಲಾಖೆಯ ನೌಕರರ ಮಗಳಾದ ಇರೋಂ ಶರ್ಮಿಳಾ ಚಾನು ಪ್ರತಿ ಗುರುವಾರದಂತೆ ಅಂದೂ ಉಪವಾಸವಿದ್ದಳು. ಆಕೆ ಲಂಗುಲಗಾಮಿಲ್ಲದ ಸೇನೆಯ ಅಟಾಟೋಪಗಳ ಕುರಿತು ಕೇಳಿದ್ದಳು. ಮೆಯಿರಾ ಪೈಬಿ ಮಹಿಳಾಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದಳು. ಈ ಹತ್ಯಾಕಾಂಡದ ನಂತರ ಎಷ್ಟು ನೊಂದುಕೊಂಡಳೆಂದರೆ ಸೈನ್ಯ ಮತ್ತು ಅರೆಸೇನಾಪಡೆಗಳಿಗೆ ವಿಶೇಷಾಧಿಕಾರ ನೀಡಿ, ಮನಬಂದಂತೆ ಕೊಲ್ಲುವ ಅವಕಾಶ ಕೊಟ್ಟ ಎಎಫ್‌ಎಸ್‌ಪಿಎ ಕಾಯ್ದೆ ವಾಪಸು ತೆಗೆದುಕೊಳ್ಳುವವರೆಗೆ ಉಪವಾಸ ಮಾಡುವುದಾಗಿ ಘೋಷಿಸಿದಳು.

ಉಪವಾಸ ಕುಳಿತ ಮೂರನೇ ದಿನಕ್ಕೆ ದೇಹಸ್ಥಿತಿ ಗಂಭೀರವಾಯಿತು. ಪೊಲೀಸರು ಆತ್ಮಹತ್ಯೆ ಪ್ರಯತ್ನವೆಂದು ಐಪಿಸಿ ಸೆ. ೩೦೯ರ ಅಡಿಯಲ್ಲಿ ಬಂಧಿಸಿದರು. ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಬದುಕುಳಿಯಲೆಂದು ಆಕೆಯ ಮೂಗಿಗೆ ಒತ್ತಾಯವಾಗಿ ಆಹಾರ ನಳಿಕೆ (ರೈಲ್ಸ್ ಟ್ಯೂಬ್) ಏರಿಸಲಾಯಿತು. ಅಂದಿನಿಂದ ಆಹಾರ ಮತ್ತು ನೀರು ಎರಡೂ ನಳಿಕೆ ಮೂಲಕ ಆಕೆಯ ದೇಹ ಸೇರುತ್ತಿವೆ. ಆತ್ಮಹತ್ಯೆ ಪ್ರಯತ್ನಕ್ಕಾಗಿ ಗರಿಷ್ಠ ಒಂದು ವರ್ಷ ಕಾಲ ಮಾತ್ರ ಜೈಲು ಶಿಕ್ಷೆ ನೀಡಬಹುದು. ಆದ್ದರಿಂದ ಕಳೆದ ೧೫ ವರ್ಷಗಳಿಂದ ಪ್ರತಿ ವರ್ಷ ಶರ್ಮಿಳಾ ಬಿಡುಗಡೆಯಾಗುವುದು, ಆತ್ಮಹತ್ಯೆ ಪ್ರಯತ್ನವೆಂದು ಮತ್ತೆ ಮರುದಿನ ಬಂಧಿಸುವುದು, ಒಂದು ವರ್ಷದ ಬಳಿಕ ಮತ್ತೆ ಬಿಡುಗಡೆಯಾಗುವುದು ಮುಂದುವರೆದಿದೆ. ಬಂಧನದಲ್ಲಿರುವಾಗ ಪ್ರತಿ ೧೫ ದಿನಕ್ಕೊಮ್ಮೆ ಆಸ್ಪತ್ರೆಯಿಂದ ಕಮ್ಯಾಂಡೋಗಳ ರಕ್ಷಣೆಯಲ್ಲಿ ಕೋರ್ಟಿಗೆ ಹೋಗುವುದು; ಸೌಖ್ಯವೇ? ಉಪವಾಸ ನಿಲ್ಲಿಸುವೆಯಾ? ಎಂಬ ಪ್ರಶ್ನೆಗಳು ನ್ಯಾಯಾಧೀಶರಿಂದ ಬಂದಾಗ ಮಾಮೂಲಿಯಾಗಿ ನಿರಾಕರಿಸುವುದು ಪ್ರಹಸನದಂತೆ ನಡೆಯುತ್ತಲೇ ಇದೆ.

ಶರ್ಮಿಳಾ ಎಂಬ ಕೃಶದೇಹಿ ಮಣಿಪುರದ ಉಕ್ಕಿನ ಮಹಿಳೆ ಎನಿಸಿಕೊಂಡಿದ್ದಾರೆ. ಆದರೆ ಶರ್ಮಿಳಾ ಆಗುವುದು, ಆಗಿರುವುದು ಸುಲಭವಲ್ಲ.



ಜಗಿಯುವ ಕ್ರಿಯೆ ಮನಸ್ಸನ್ನು ಪ್ರಫುಲ್ಲವಾಗಿಡುವ ಒಂದು ಮಾರ್ಗ. ಉಂಡ, ಚ್ಯೂಯಿಂಗ್ ಗಂ/ಕವಳ ಜಗಿದ ವ್ಯಕ್ತಿ ಫ್ರೆಷ್‌ನೆಸ್ ಅನುಭವಿಸುವುದು ಜಗಿಯುವಿಕೆಯಿಂದಲೇ. ಜಗಿಯುವುದನ್ನೇ ಮರೆತು ಬದುಕುವುದು, ನಾಲಿಗೆಯ ರುಚಿಯ ಸೆಳೆತವನ್ನು ನಿರಾಕರಿಸುವುದು, ಪೊಲೀಸು-ಆಸ್ಪತ್ರೆ ಸಿಬ್ಬಂದಿ-ಪತ್ರಕರ್ತರು-ಆಕ್ಟಿವಿಸ್ಟರ ನಡುವೆ ಆಸ್ಪತ್ರೆ ಕಂ ಜೈಲಿನಲ್ಲಿ ೧೫ ವರ್ಷ ಬದುಕುವುದು ಸುಲಭವಲ್ಲ. ಯಾರೊಡನೆಯೂ ಖಾಸಗಿ ಮಾತುಕತೆಯಿಲ್ಲದೆ ಬರೀ ಓದಿ, ಟಿವಿ ನೋಡಿ, ಪತ್ರ-ಚಿತ್ರ ಬರೆದು, ಸಂದರ್ಶನ ನೀಡುತ್ತ, ಕೋರ್ಟಿಗೆ ಹೋಗಿಬರುತ್ತ ಇರುವುದು ಭಾವಜೀವಿಗೆ ಇನ್ನೂ ಕಷ್ಟ. ಆದರೂ ತಾನು ಹಾಗೆ ಬದುಕಲೇಬೇಕಾಗಿದೆ ಎಂದು ಈ ಎಲ್ಲ ವರ್ಷಗಳಲ್ಲಿ ಶರ್ಮಿಳಾ ಮನಸ್ಸನ್ನು ಗಟ್ಟಿ ಮಾಡಿಕೊಂಡು ಬದುಕಿದ್ದರು.

ಅಥವಾ ನಾವು ಹಾಗಂದುಕೊಂಡಿದ್ದೆವು. ಈಗ ಉಪವಾಸ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.



ಅವರಿಗೆ ಉಪವಾಸ ಸಾಕೆನಿಸುತ್ತಿದೆ. ತಾನು ಗೆದ್ದು, ಸರ್ಕಾರ ಆ ಕಾಯ್ದೆ ವಾಪಸು ಪಡೆದು, ಎಲ್ಲರೊಡನೆ ಊಟಮಾಡಬೇಕೆನಿಸತೊಡಗಿದೆ. ಕಳೆದ ೧೫ ವರ್ಷದಿಂದ ಊಟದ ರುಚಿಯನ್ನೇ ನೋಡದ ಬಾಯಿಗೆ ರುಚಿಯೇ ಮರೆತುಹೋಗಿದೆ. ಏನೇನನ್ನೋ ತಿನ್ನುವ ಬಯಕೆ. ಎಲ್ಲವನ್ನು ಬಾಯಿಗೆ ಹಾಕಿ ತಮ್ಮ ಕಳೆದುಕೊಂಡ ರುಚಿಯ ಸಂವೇದನೆಯನ್ನು ಮರಳಿ ಪಡೆಯುವ ಬಯಕೆ. ಅವರ ಬಳಿ ನಿಮ್ಮಿಷ್ಟದ ತಿನಿಸು ಯಾವುದು ಎಂದರೆ ಎಲ್ಲವನ್ನೂ ಕಣ್ಣೆದುರು ತಂದುಕೊಂಡು ಎಲ್ಲರೊಡನೆ ಎಲ್ಲವನ್ನೂ ತಿನ್ನಬೇಕೆನಿಸಿದೆ ಎನ್ನುತ್ತ ಸಂಭ್ರಮಿಸುತ್ತಾರೆ.

ಇದರ ಜೊತೆಗೆ ಸದ್ಯದಲ್ಲೇ ಐಪಿಸಿಯ ಸೆಕ್ಷನ್ ೩೦೯ ರದ್ದಾಗಿ ಆತ್ಮಹತ್ಯೆ ಕ್ರಿಮಿನಲ್ ಅಪರಾಧವಲ್ಲ ಎಂಬ ತೀರ್ಮಾನವಾಗಲಿದೆ. ಹಾಗಾದಲ್ಲಿ ಶರ್ಮಿಳಾ ಜೈಲಾಗಿ ಪರಿವರ್ತನೆಗೊಂಡ ಆಸ್ಪತ್ರೆಯ ರೂಮಿನಿಂದ ಬಿಡುಗಡೆಯಾಗುತ್ತಾರೆ. ಆಗ ಅವರ ರೈಲ್ಸ್ ಟ್ಯೂಬ್ ತೆಗೆದು ಆಸ್ಪತ್ರೆಯಿಂದ ಮನೆಗೆ ಕಳಿಸಲಾಗುತ್ತದೆ. ಆದರೆ ದಿನಕ್ಕೆ ೩ ಬಾರಿ ನಾಳದಲ್ಲಿ ಆಹಾರ ಒಳಹೋಗಿ ಹೋಗಿ ಶರ್ಮಿಳಾ ಊಟ ಮಾಡುವುದನ್ನು ಮರೆತಿದ್ದಾರೆ. ಅವರ ಬಾಯಿ ಜಗಿಯುವುದನ್ನು ಮರೆತಿದೆ, ಹಲ್ಲು ನಾಲಿಗೆ ತಂತಮ್ಮ ಕೆಲಸ ಮರೆತಿವೆ; ಅನ್ನನಾಳ, ಲಾಲಾಗ್ರಂಥಿಗಳು ಸ್ರವಿಸುವುದನ್ನು ಮರೆತಿವೆ. ತೂಕ ೬೫ ಕೆಜಿಯಿಂದ ೪೦ಕ್ಕೆ ಇಳಿದಿದೆ. ಅವರಿಗೆ ಬಿಪಿ, ಡಯಾಬಿಟೀಸ್ ಶುರುವಾಗಿದೆ. ಹೀಗೇ ಉಪವಾಸ ಮುಂದುವರೆಸಿದರೆ ಶ್ವಾಸಕೋಶದ ಸೋಂಕು ತಗಲುವ ಸಾಧ್ಯತೆಯಿದೆ. ಅಷ್ಟೇ ಅಲ್ಲ, ನರವ್ಯೂಹದ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಶರ್ಮಿಳಾರನ್ನು ಇಷ್ಟು ದೀರ್ಘಕಾಲದ ಉಪವಾಸದ ಬಳಿಕವೂ ಜೀವಂತವಾಗಿ, ಆರೋಗ್ಯವಾಗಿ ಇಡಲು ಸರ್ಕಾರಕ್ಕೆ ಪ್ರತಿದಿನ ೧೦ ಸಾವಿರ ರೂ. ಖರ್ಚಾಗುತ್ತಲಿದೆ. ಆದರೆ ಬಿಡುಗಡೆಯಾದನಂತರ ಇಷ್ಟೆಲ್ಲ ಖರ್ಚುವೆಚ್ಚಗಳ ಶರ್ಮಿಳಾ ಭರಿಸಲಾರರು.



ಎಲ್ಲಕ್ಕಿಂತ ಮಿಗಿಲಾದ ಬದಲಾವಣೆಯೊಂದು ಸಂಭವಿಸಿದೆ, ಶರ್ಮಿಳಾಗೆ ಉಳಿದೆಲ್ಲರಂತೆ ತನಗೂ ಮದುವೆಯಾಗಿ, ಸಂಸಾರ ನಡೆಸುವ ಆಸೆ ಬಂದಿದೆ. ಅವರೀಗ ಪ್ರೇಮಿಯಾಗಿದ್ದಾರೆ! ಗೋವಾ ಸಂಜಾತ ಬ್ರಿಟಿಷ್ ಪ್ರಜೆ, ಕಲಾವಿದ, ಆಕ್ಟಿವಿಸ್ಟ್, ಡೆಸ್ಮಂಡ್ ಕುಟಿನೊ ಅವರ ಪ್ರೇಮಿ. ಅಂಥ ಗಂಡಸನ್ನು ತಾನು ಇದುವರೆಗೆ ಭೇಟಿಯೇ ಆಗಿಲ್ಲ ಎನ್ನುವ ಶರ್ಮಿಳಾ ಆತನನ್ನು ಮದುವೆಯಾಗಬಯಸುತ್ತಾರೆ. ಆತ ಶರ್ಮಿಳಾಗೆ ಲೆಕ್ಕವಿಲ್ಲದಷ್ಟು ಪುಸ್ತಕಗಳನ್ನೂ, ಗೊಂಬೆಗಳನ್ನೂ, ರಮ್ಯ ಕನಸುಗಳನ್ನೂ ನೀಡಿದ್ದಾನೆ. ಈಗ ಶರ್ಮಿಳಾ ಜಗವೆಲ್ಲ ಡೆಸ್ಮಂಡ್ ಮಯ. ಆತ ಕೋರ್ಟಿನಲ್ಲಿ ತಾನೇ ವಾದಿಸಲು ಶರ್ಮಿಳಾಗೆ ಹೇಳಿ ಲಾಯರನ್ನು ನಿರಾಕರಿಸುವಂತೆ ಮನವೊಲಿಸಿದ್ದಾನೆ.


ಆದರೆ ಈ ಬೆಳವಣಿಗೆ ಯಾರಿಗೂ ಇಷ್ಟವಿಲ್ಲ! ಆಕೆ ಉಪವಾಸ ಬಿಡುವುದೂ ಇಷ್ಟವಿಲ್ಲ, ಮದುವೆಯಾಗುವುದೂ ಇಷ್ಟವಿಲ್ಲ!! ಡೆಸ್ಮಂಡ್ ಪದೇಪದೇ ಆಸ್ಪತ್ರೆಗೆ ಬಂದು ತೊಂದರೆ ಕೊಡುತ್ತಿದ್ದಾನೆಂದು ಆರೋಪಿಸಿ ನ್ಯಾಯಾಂಗ ಬಂಧನದಲ್ಲಿಡಲಾಗಿದೆ. ಶರ್ಮಿಳಾ ಭೇಟಿ ನಿರಾಕರಿಸಲಾಗಿದೆ.


ಶರ್ಮಿಳಾ ಅವರ ತಾಯಿ ಸಖೀದೇವಿ ತಮ್ಮ ಮಗಳನ್ನು ಹೆತ್ತು ಮಣಿಪುರದ ಸಮಾಜಕ್ಕಾಗಿ ತ್ಯಾಗ ಮಾಡಿರುವುದಾಗಿಯೂ, ತಮ್ಮ ಕುಟುಂಬವೆಂದೂ ಅವಳ ಹಾಗೂ ಅವಳ ಹೋರಾಟದ ಮಧ್ಯ ನಿಂತಿರಲಿಲ್ಲವೆಂದೂ ಹೇಳುತ್ತ, ಅವಳು ಎಎಫ್‌ಎಸ್‌ಪಿಎ ಹಿಂದೆಗೆದುಕೊಳ್ಳುವವರೆಗೆ ಉಪವಾಸ ಮುಂದುವರೆಸಬೇಕು; ಸರ್ಕಾರಕ್ಕೆ ಒತ್ತಡ ಹಾಕಬೇಕು; ಇಲ್ಲದಿದ್ದರೆ ಅವಳ ಬದುಕೇ ವ್ಯರ್ಥ ಎನ್ನುತ್ತಾರೆ. ಗಂಡಸರ ದರ್ಪ, ದೌರ್ಜನ್ಯಗಳ ಗಮನಿಸಿ ತಾನೆಂದೂ ಜೀವಮಾನದಲ್ಲಿ ಮದುವೆಯಾಗುವುದಿಲ್ಲ ಎನ್ನುತ್ತಿದ್ದ ತಮ್ಮ ಮಗಳು ಈಗ ಯಾರೋ ದುಷ್ಟನ ಪ್ರಭಾವಕ್ಕೊಳಗಾಗಿ ಮದುವೆಯ ಮಾತನಾಡುತ್ತಿದ್ದಾಳೆಂದೂ; ಆ ಕಾಯ್ದೆ ರದ್ದಾದನಂತರ ಉಪವಾಸ ನಿಲಿಸಿದರಷ್ಟೇ ತಾವು ಮಗಳನ್ನು ನೋಡಬಯಸುವುದಾಗಿಯೂ ಹೇಳುತ್ತಾರೆ. ಶರ್ಮಿಳಾ ಸೋದರನದೂ ಹೆಚ್ಚುಕಮ್ಮಿ ಇದೇ ಅಭಿಪ್ರಾಯ.

ಶರ್ಮಿಳಾ ಉಪವಾಸ ಕುಳಿತ ನಂತರ ೨೦೦೩ರಲ್ಲಿ ತಂಗ್ಜಂ ಮನೋರಮಾ ಹತ್ಯೆ ಖಂಡಿಸಿ ನಗ್ನ ಪ್ರತಿಭಟನೆ ನಡೆಸಿದ ತಾಯಂದಿರ ಮುಖಂಡೆ ಸೋಯ್ಬಾಮ್ ಕೂಡಾ ಶರ್ಮಿಳಾ ಉಪವಾಸ ನಿಲ್ಲಿಸುವುದನ್ನು ಖಂಡತುಂಡ ವಿರೋಧಿಸುತ್ತಾರೆ. ಮಹಿಳೆಗೆ ರಸ್ತೆಯಲ್ಲಿ ಬೆತ್ತಲಾಗುವುದೂ ಒಂದೇ, ಸಾಯುವುದೂ ಒಂದೇ. ಹಾಗಿರುತ್ತ ಬೆತ್ತಲಾದರೂ ಸರಿ ಎಂದು ತಾವೆಲ್ಲ ನಗ್ನರಾಗಿ ಇಂಫಾಲದ ಬೀದಿಗಳಲ್ಲಿ ನಡೆದು ಹೋರಾಟ ಮುಂದುವರೆಸಿದ್ದೆವು; ಈಗ ಶರ್ಮಿಳಾ ಉಪವಾಸ ಮುಂದುವರೆಸಲು ಏನಡ್ಡಿ ಎಂದು ಕೇಳುತ್ತಾರೆ!

ಶರ್ಮಿಳಾ ಉಪವಾಸ ಮಣಿಪುರಕ್ಕೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಖ್ಯಾತಿ ಕೊಟ್ಟಿದೆ. ಅವರ ಹೆಸರಿನಲ್ಲಿ ರಾಜ್ಯಕ್ಕೆ ಮಿಲಿಯನ್ನುಗಟ್ಟಲೆ ಡಾಲರ್ ಹರಿದುಬಂದಿದೆ. ಕನಿಷ್ಠ ೪೦ ಎನ್‌ಜಿಒಗಳು ಕಳೆದ ಐದು ವರ್ಷಗಳಲ್ಲಿ ಅವರ ಬೆಂಬಲಕ್ಕೆಂದು ಶುರುವಾಗಿವೆ. ಅವು ಆರೋಗ್ಯ, ಶಿಕ್ಷಣ, ಸುರಕ್ಷತೆ ಮತ್ತು ಜನರ ರಕ್ಷಣೆಯ ಸಲುವಾಗಿ ಕೆಲಸ ಮಾಡುತ್ತವೆ. ಸ್ವತಃ ಶರ್ಮಿಳಾ ಅವರದೂ ‘ಜಸ್ಟ್ ಪೀಸ್ ಫೌಂಡೇಷನ್’ ಎಂಬ ಎನ್‌ಜಿಒ ಇದೆ. ಅದಕ್ಕೆ ಹೊರಗಿನ ಧನಸಹಾಯ ಪಡೆಯುವುದಿಲ್ಲ, ಅವರಿಗೆ ಬಂದ-ಬರುವ ಹಣವೆಲ್ಲ ಅವರ ಎನ್‌ಜಿಒಗೆ ಹೋಗುತ್ತದೆ. ‘ಹಣ ಚಳುವಳಿಯನ್ನು ಕೊಲ್ಲುತ್ತದೆ. ನನಗೆ ಹಣ ಬೇಡ, ಜನರ ಬೆಂಬಲ ಬೇಕು’ ಎಂದು ಎಂದಿನಿಂದ ಶರ್ಮಿಳಾ ಹೇಳಿದ್ದಾರೆ. ಹೀಗೆ ಇಷ್ಟು ದೀರ್ಘಕಾಲ ಹೋರಾಡಿದಾಕೆ ಈಗ ನಡುಮಧ್ಯ ಉಪವಾಸ ನಿಲ್ಲಿಸಬಾರದು ಎನ್ನುವುದು ಸೋಯ್ಬಾಮ್, ವಿಧವೆಯರ ಸಂಘಟನೆಯ ಅಧ್ಯಕ್ಷೆ ರೇಣು ತಾಕೆಲ್ಲಂಬಂ ಹಾಗೂ ಇನ್ನಿತರರ ಅಭಿಮತ.

ಆದರೆ ಬಂಧುಗಳೂ, ಮಿತ್ರರೂ ಸರ್ಕಾರದ ಜೊತೆ ಕೈಜೋಡಿಸಿ ತನ್ನ ಬಿಡುಗಡೆಯಾಗದಂತೆ ನೋಡಿಕೊಂಡಿದ್ದಾರೆ; ತಾನು ಬಿಡುಗಡೆಯಾಗದೇ ಹೋರಾಡುತ್ತಲೇ ಇರಲಿ ಎನ್ನುವುದು ಅವರ ಆಸೆ ಎಂದು ಶರ್ಮಿಳಾ ಆಪಾದಿಸುತ್ತಾರೆ. ಉಳಿದಂತೆ ಇಡೀ ಮಣಿಪುರ ಯಾವ ಚಳುವಳಿ, ಹೋರಾಟವೂ ಇಲ್ಲದೆ ಬೆಚ್ಚಗೆ ಮನೆಯಲ್ಲಿ ಕುಳಿತಿರುವಾಗ ಕಳೆದ ೧೫ ವರ್ಷಗಳಿಂದ ಉಪವಾಸದ ಹೆಸರಿನಲ್ಲಿ ತನ್ನ ಯೌವನ, ಆರೋಗ್ಯ, ಸಮಯ ಎಲ್ಲವನ್ನೂ ಕಳೆದಾಗಿದೆ. ಇನ್ನೆಷ್ಟು ಕಾಲ ತಾನು ಮಾತ್ರ ಹೋರಾಡಬೇಕೆನ್ನುವುದು ಶರ್ಮಿಳಾ ಪ್ರಶ್ನೆ. ಎಂಟು ವರ್ಷದ ಕೆಳಗಿನ ಸಂದರ್ಶನದಲ್ಲಿ ‘ನನ್ನ ಹೋರಾಟದ ದಾರಿಯನ್ನು ನಾನೊಬ್ಬಳೇ ತುಳಿಯಬೇಕಾಗಿದೆ. ನನಗೆ ಯಾವ ರಾಜಕಾರಣಿ, ಆಕ್ಟಿವಿಸ್ಟರ ಬೆಂಬಲವೂ ಬೇಡ’ ಎಂದಾಕೆ ಇವತ್ತು ಮಣಿಪುರದ ಜನತೆ ತನ್ನನ್ನು ಬದುಕಲೂ ಬಿಡದೆ, ಸಾಯಲೂ ಬಿಡದೆ, ತನ್ನನ್ನು ಮಾತ್ರ ಚಳುವಳಿಯ ಹೆಸರಿನ ಮೂರ್ತಿಯಾಗಿಸಿ ತಾವು ಸುಖವಾಗಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ‘ಮಣಿಪುರದ ಜನತೆ ಹೀಗೇ ನಿಶ್ಚೇಷ್ಟಿತರಾಗೇ ಉಳಿದರೆ ಎಎಫ್‌ಎಸ್‌ಪಿಎ ಯಾವತ್ತೂ ರದ್ದಾಗುವುದಿಲ್ಲ ಬಹುಶಃ ಆಗ ಸಾವೇ ನನ್ನ ಹೋರಾಟದ ಕೊನೆಯಾಗಬಹುದು. ಸ್ತಬ್ಧವಾಗಿರುವ ಈ ಪೀಳಿಗೆಯಲ್ಲದಿದ್ದರೂ ಬರಲಿರುವ ಪೀಳಿಗೆಗಳಾದರೂ ನನ್ನ ಹೆಜ್ಜೆ ಗುರುತಿನಲ್ಲಿ ಸಾಗಬಹುದು’ ಎಂದು ವಿಷಾದದಿಂದ ಹೇಳುತ್ತಾರೆ.

ಸರಿಯುತ್ತಿರುವ ಯೌವನ; ಬಾಧಿಸುತ್ತಿರುವ ಕಾಯಿಲೆ; ಕೇವಲ ತನ್ನ ಉಪವಾಸವೊಂದನ್ನೇ ಹೋರಾಟವಾಗಿಸಿ ಉಳಿದಂತೆ ನಿಷ್ಕ್ರಿಯವಾಗಿರುವ ಜನತೆ; ಹಾರಾಡಬೇಕೆಂಬ ಮನಸು ೧೫ ವರ್ಷದಿಂದ ಮಲಗಿದಲ್ಲೇ ಮಲಗಿ, ಇದ್ದಲ್ಲೇ ಇದ್ದು ಹುಟ್ಟಿರುವ ಏಕತಾನತೆ; ಅದರ ನಡುವೆ ಬೆಚ್ಚನೆಯ ಭಾವನೆಗಳನ್ನು ಹುಟ್ಟಿಸಿದಾತನ ಒಂದು ಹಿಡಿ ಪ್ರೀತಿ ಪಡೆಯಲು ಸಮಾಜ ತೋರುತ್ತಿರುವ ವಿರೋಧ - ಇವೆಲ್ಲ ಶರ್ಮಿಳಾಗೆ ಹೀಗೆನಿಸುವಂತೆ ಮಾಡಿರಬಹುದು. ಅದು ಏನೂ ತಪ್ಪಲ್ಲ.


ಶರ್ಮಿಳಾ ಹೇಳಿದಂತೆ ಮಣಿಪುರದಲ್ಲಿ ತಾಯಂದಿರು ಬೆತ್ತಲಾದ ಹೋರಾಟದ ನಂತರ ಬೇರೆ ಯಾವ ಸಂಘಟಿತ ಹೋರಾಟವೂ ನಡೆಯಲಿಲ್ಲ. ಅಲ್ಲಿರುವ ಅಸಂಖ್ಯ ಬಂಡುಕೋರ ಗುಂಪುಗಳ ಕಾರಣದಿಂದ ಸೇನೆ ಸದ್ಯ ವಾಪಸು ಹೋಗುವ ಲಕ್ಷಣವೂ ಇಲ್ಲ. ಅಂತಾರಾಷ್ಟ್ರೀಯವಾಗಿ ಭಾರತದ ನೆರೆಹೊರೆ ಸಂಬಂಧಗಳು; ಬಾಂಗ್ಲಾದೇಶೀಯರ ಒಳನುಸುಳುವಿಕೆ; ಈಶಾನ್ಯ ರಾಜ್ಯಗಳ ಪರಸ್ಪರ ಕಾದಾಟ; ಮಾದಕ ದ್ರವ್ಯದ ಕಾಳಸಂತೆ ಜಾಲ - ಇವೆಲ್ಲದರಿಂದ ಆ ಪ್ರದೇಶ ಶಾಂತಿಯುತವಾಗಿರಬೇಕಾದರೆ ಅಲ್ಲಿ ಸೇನೆ ಇರಬೇಕೆಂದು ಜನರೇ ಭಾವಿಸುತ್ತಾರೆ. ಬೀದಿ, ಮಾಲ್, ಪಾರ್ಕಿಂಗ್ ಲಾಟ್ ಎಲ್ಲವನ್ನು ಹಫ್ತಾ ವಸೂಲಿಗೆಂದು ಹಂಚಿಕೊಂಡ; ಸರ್ಕಾರಿ ನೌಕರರನ್ನೂ ಹೆದರಿಸಿ ಅವರಿಂದ ಒಂದು ಪಾಲು ಸಂಬಳವನ್ನು ಹಫ್ತಾ ಆಗಿ ಪಡೆಯುವ ಬಂಡುಕೋರ ಗುಂಪುಗಳ ಪರಸ್ಪರ ಕಾದಾಟ ಸೇನೆಯಿಲ್ಲದಿದ್ದರೆ ಸಿವಿಲ್ ವಾರಿನಲ್ಲಿ ಕೊನೆಗೊಳ್ಳುತ್ತದೆ ಎಂದು ಚಿತ್ರಾ ಅಹೆಂತೆಮ್ ಎಂಬ ಮಣಿಪರದ ಪತ್ರಕರ್ತೆ, ಆಕ್ಟಿವಿಸ್ಟ್ ಅಭಿಪ್ರಾಯಪಡುತ್ತಾರೆ.

ಶರ್ಮಿಳಾ ದೀರ್ಘಕಾಲ ಬದುಕಬೇಕೆಂದರೆ ಉಪವಾಸ ಕೊನೆಯಾಗಬೇಕು, ಆಕೆ ಸಹಜವಾಗಿ ಆಹಾರ ತೆಗೆದುಕೊಳ್ಳುವಂತಾಗಬೇಕು. ಆಕೆ ಊಟಮಾಡಬೇಕೆಂದರೆ ಸೇನಾ ಕಾಯ್ದೆ ರದ್ದಾಗಬೇಕು. ಅದು ರದ್ದಾಗಬೇಕೆಂದರೆ ಮಣಿಪುರದ ಬಂಡುಕೋರ ಗುಂಪುಗಳು ತಣ್ಣಗಾಗಿ ಸಮಾಜದಲ್ಲಿ ಶಾಂತಿ ನೆಲೆಸಬೇಕು. ಆ ಕಾಲ ಬರುವುದು ಎಂದು? ಉರಿವ ಒಲೆಯ ಮೇಲಿನ ಬಾಣಲೆಯಲ್ಲಿ ಶರ್ಮಿಳಾ ಇನ್ನೆಷ್ಟು ಕಾಲ ಕಾಯುವುದು? ಉಪವಾಸ ಪ್ರತಿಭಟನೆಯ ಒಂದು ಮಾದರಿ ಅಷ್ಟೇ. ಮಾದರಿ ಪೂರಾ ಸಾಂಕೇತಿಕವಾದರೆ; ಒಂದಿಡೀ ರಾಜ್ಯದ ಚಳುವಳಿ ಒಬ್ಬ ವ್ಯಕ್ತಿಯ ಹೋರಾಟವನ್ನೇ ಕೇಂದ್ರೀಕರಿಸಿ ನಿಂತುಬಿಟ್ಟರೆ ಆಗುವ ಅಪಾಯ ಇದು.

ಈಗ ಅಲ್ಲಿನ ಪ್ರಜ್ಞಾವಂತರು ತುರ್ತಾಗಿ ಯೋಚಿಸಬೇಕು; ಹೋರಾಟದ ಗುರಿ-ರೂಪುರೇಷೆಗಳನ್ನು ಬದಲಿಸಿಕೊಳ್ಳಬೇಕು; ಇವತ್ತಿಗೆ ಅಲ್ಲಿ ಬೇಕಿರುವುದೇನು ಎಂದರಿತು ಬೇಡಿಕೆಯನ್ನು ಮರುಪರಿಶೀಲಿಸಬೇಕು. ಸೇನೆ ವಾಪಸಾತಿಗಿಂತ ಅದನ್ನು ಮಾನವೀಯಗೊಳಿಸುವ ಕುರಿತು, ಅದಕ್ಕೆ ನಾಗರಿಕ ಉತ್ತರದಾಯಿತ್ವ ಹೊರಿಸುವ ಕುರಿತು ಹೋರಾಡಬಹುದೇ ಎಂದು ಗಮನ ಹರಿಸಬೇಕು.

ಆಗ ಮಾತ್ರ ಶರ್ಮಿಳಾ ಆಧುನಿಕ ಗಾಂಧಾರಿಯಾಗುವ ಸಂಭವ ತಪ್ಪಬಹುದು.




Friday 13 March 2015

ತದಡಿ: ಯಾರಿಗೆ ಬೇಕು? ಏಕೆ ಬೇಡ?





(ಕಲೆ: ಕೃಷ್ಣ ಗಿಳಿಯಾರ್)

ಮಾಡುವವರಿಗೆ ಬೇಡ, ನೋಡುವವರಿಗೆ ಬೇಕು..

ಯಾಕೋ ಇತ್ತೀಚೆಗೆ ನಾವು ಗಟ್ಟಿಯಾಗಿ ಆಡಿಕೊಳ್ಳಬೇಕಾದ ಅಂತರಂಗದ ಮಾತುಗಳು ಹೆಚ್ಚು ಇವೆಯೇನೋ ಎನಿಸುತ್ತಿದೆ. ‘ನಾನೆಷ್ಟು ಪ್ರಯತ್ನಪಟ್ಟರೂ ಈ ಬದುಕು ನನ್ನನ್ನು ಬದುಕಲು ಬಿಡುತ್ತಿಲ್ಲ’ ಎಂದು ಪತ್ರ ಬರೆದಿಟ್ಟು ತನ್ನ ನೋವಿನ, ಸಾವಿನ ಸಣ್ಣ ಸುಳಿವನ್ನೂ ಕೊಡದೆ ಇದ್ದಕ್ಕಿದ್ದಂತೆ ಬದುಕನ್ನು ಕೊನೆಗೊಳಿಸಿದ ಗೆಳತಿಯ ನೆನಪಾಗುತ್ತಿದೆ. ತನ್ನ ಮನೋಕ್ಲೇಶಗಳೇನಿದ್ದರೂ ಅದನ್ನು ಹೊರತೋರದೆ ದುಡಿದವಳು ಕೊನೆಗೆ ಬದುಕೇ ಸಾಕೆಂದು ನಡೆದು ಹೋದಳು. ಅವಳಲ್ಲಿ ಸೋತಭಾವ ಹುಟ್ಟಿಸಿದ್ದು ಯಾವುದು? ಸಂಘಟನೆ? ಕುಟುಂಬ? ಹೆಚ್ಚುತ್ತಲೇ ಹೋದ ಹೆಗಲ ಮೇಲಿನ ಜವಾಬ್ದಾರಿ?

ಹೀಗೊಂದು ವಿಷಾದ ಸುಳಿಯುವಾಗಲೇ ಗ್ರೆಗರಿ ಪತ್ರಾವೋ ಅವರು ನ್ಯಾಯಕ್ಕಾಗಿ ನಡೆಸಿದ ಐದು ವರ್ಷಗಳ ಕೋರ್ಟು ಹೋರಾಟ ಕೊನೆಗೊಂಡು ಅವರ ಕುಟುಂಬವನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಪತ್ರಾವೋ ಕೊನೆಯ ದಿನಗಳಲ್ಲಿ ಹೋರಾಟದಲ್ಲಿ ಏಕಾಂಗಿಯಾಗುವಂತಾಯಿತೇಕೆ ಎಂಬ ಆತಂಕದ ಪ್ರಶ್ನೆ ಸುಳಿವ ಹೊತ್ತಿನಲ್ಲೇ ‘ಜನಪರ’ ಎಂದುಕೊಂಡವರ ಜನಪರತೆಯನ್ನು ಜನರು ಉದ್ದೇಶಪೂರ್ವಕ ಹರಾಜು ಹಾಕಿದ ಪ್ರಸಂಗ ಗೋಕರ್ಣ ಬಳಿಯ ತದಡಿಯಿಂದ ವರದಿಯಾಗಿದೆ. ಆ ಘಟನೆಯಷ್ಟೇ ಅಲ್ಲ, ಹಲವಾರು ಹೋರಾಟಗಳ ಸಂದರ್ಭದಲ್ಲಿ ಯಾರ ಪರವಾಗಿ ದನಿಯೆತ್ತಲಾಗುವುದೋ ಆ ಜನರೇ ಚಳುವಳಿಕಾರರ ಅನಿಸಿಕೆಗಳಿಗೆ ಸಂಪೂರ್ಣ ವ್ಯತಿರಿಕ್ತವಾಗಿ ಯೋಚಿಸುವುದು ಕಂಡುಬರುತ್ತಿದೆ. ಅದರಲ್ಲೂ ಅಭಿವೃದ್ಧಿಯ ಫಲಗಳು ಜನಸಾಮಾನ್ಯರನ್ನು ಹೇಗೆ ಆಮಿಷ-ದುರಾಸೆಗೆ ದೂಡುತ್ತಿವೆ ಎಂದರೆ ‘ಅಭಿವೃದ್ಧಿ’ಯನ್ನು ಪ್ರಶ್ನಿಸುವ ಪರಿಸರವಾದಿ, ಜನಪರ ಚಳುವಳಿಕಾರರನ್ನೇ ಅನುಮಾನದಿಂದ ನೋಡಲಾಗುತ್ತಿದೆ. 

ಕೃಷಿ, ಮೀನುಗಾರಿಕೆ, ಪಾರಂಪರಿಕ ಕಸುಬು, ಗ್ರಾಮೀಣ ಬದುಕು - ಇವೆಲ್ಲವೂ ಅದನ್ನು ಅನುಭವಿಸುವವರಿಗೆ, ಮಾಡುವವರಿಗೆ ಲಾಭರಹಿತ ಕಷ್ಟದ ಉದ್ಯಮವೆನಿಸಿ ಬೇಡವೆನಿಸತೊಡಗಿದೆ. ಆದರೆ ಅದರ ಕುರಿತು ಚಿಂತಿಸುವವರಿಗೆ, ನೋಡುವವರಿಗೆ ಎಲ್ಲವೂ ಹಾಗೆಯೇ ಪವಿತ್ರವಾಗಿರಲಿ ಎನಿಸುತ್ತಿದೆ. ಈ ವೈರುಧ್ಯವನ್ನು ಬೇರೆಬೇರೆ ಹಿತಾಸಕ್ತಿಯ ಜನರು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ದುಃಖದ ವಿಷಯವಷ್ಟೇ ಅಲ್ಲ, ನಮ್ಮನ್ನು ನಾವು ಮುಟ್ಟಿ ನೋಡಿಕೊಳ್ಳಬೇಕಾದ ಕಾರಣವೂ ಹೌದು. 

ಈಚೆಗೆ ಉತ್ತರಕನ್ನಡ ಜಿಲ್ಲೆಯ ತದಡಿಯಲ್ಲಿ ಬೃಹತ್ ಬಂದರು ಅಭಿವೃದ್ಧಿಪಡಿಸುವ ಕುರಿತ ಪ್ರಸ್ತಾಪಗಳು ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮದಿಂದ ಮತ್ತೆ ಕೇಳಿಬಂದವು. ತದಡಿ ಎಂಬ ನೈಸರ್ಗಿಕ ಬಂದರನ್ನು ವಾಣಿಜ್ಯ ಬಂದರನ್ನಾಗಿಸುವ ಉದ್ದೇಶ ಹೊತ್ತು ೧೯೭೦ರಲ್ಲೇ ೧೪೧೫ ಎಕರೆ ರೈತರ ಕೃಷಿಭೂಮಿ ಭೂಸ್ವಾಧೀನವಾಗಿದೆ. ತದಡಿ ಸುತ್ತಮುತ್ತಲ ಪರಿಸರದಲ್ಲಿ ೨೮% ಅರಣ್ಯಭೂಮಿ, ೩೩% ಪಾಳುಭೂಮಿ, ೮% ನೀರಾವರಿ ಭೂಮಿಯಿದ್ದು ನೂರಾರು ವಿಶಿಷ್ಟ ಜೀವಪ್ರಭೇದಗಳಿವೆ. ೬೮,೩೯೦ ಜನಸಂಖ್ಯೆಯ ೩೦% ಕೂಲಿಕಾರ್ಮಿಕರೇ ಇದ್ದಾರೆ. ೧೩೧೦೦ ಕುಟುಂಬಗಳಿದ್ದು ಅವು ಸಾಂಪ್ರದಾಯಿಕ ಮೀನುಗಾರಿಕೆಯನ್ನೇ ಬಹುವಾಗಿ ನೆಚ್ಚಿಕೊಂಡಿವೆ. ಈ ಎಲ್ಲ ಕಾರಣಗಳಿಂದ ಪರಿಸರ ಹೋರಾಟಗಾರರು ಹಾಗೂ ಜನರ ವಿರೋಧದ ನಡುವೆ ತದಡಿ ಬಂದರು ಯೋಜನೆ ನೆನೆಗುದಿಗೆ ಬಿದ್ದಿತ್ತು. ೧೯೯೩ರಲ್ಲಿ ಬಾರ್ಜ್ ಮೌಂಟೆಡ್ ಯೋಜನೆಯ ಪ್ರಸ್ತಾಪ ಬಂದು ಅದೂ ನಿಂತುಹೋಯಿತು. ಉದ್ದೇಶಿತ ಉಷ್ಣವಿದ್ಯುತ್ ಸ್ಥಾವರ ವಿರೋಧಿಸಿ ಬೃಹತ್ ಹೋರಾಟ ರೂಪುಗೊಂಡಿತ್ತು. ಹೋರಾಟಕ್ಕೆ ಪೂರಕವಾಗಿ ಕೇಸರಿ ಹರವೂ ಸಾಕ್ಷ್ಯಚಿತ್ರ ನಿರ್ಮಿಸಿದ್ದರು.

೧೯೭೦. ಅದಾಗಿ ಈಗ ೪೫ ವರ್ಷ ಸಂದಿದೆ. ಅವತ್ತು ಭೂಮಿ ಕಳೆದುಕೊಂಡ ರೈತರು ಹಾಗೂ ಅದರಿಂದ ತೊಂದರೆ ಅನುಭವಿಸಬಹುದಾದ ಮೀನುಗಾರರ ತಲೆಮಾರು ಹಿನ್ನೆಲೆಗೆ ಸರಿದಿದೆ. ಈಗ ತದಡಿ ಬಂದರು, ಹುಬ್ಳಿ ಅಂಕೋಲಾ ರೈಲು ಮಾರ್ಗ, ಉಷ್ಣಸ್ಥಾವರ ಎಲ್ಲವೂ ದಾಪುಗಾಲಿಡುತ್ತ ಬರುವ ಸೂಚನೆಗಳಿವೆ. ಸಂಸತ್ತು ಅಂಗೀಕರಿಸಿದ ಸುಗ್ರೀವಾಜ್ಞೆಯ ನಂತರ ಇಂಥ ಯೋಜನೆಗಳಿಗಿನ್ನು ಯಾವ ತಡೆಯೂ ಇಲ್ಲವಾಗಿದೆ. ಹೀಗಿರುತ್ತ ಮತ್ತೆ ಬಂದ ಬೃಹತ್ ಬಂದರು ನಿರ್ಮಾಣ ಯೋಜನೆಯಿಂದ ಪರಿಸರವಾದಿಗಳು ಹಾಗೂ ವಿಜ್ಞಾನಿಗಳು ಆತಂಕಗೊಂಡು ತದಡಿ ಮತ್ತು ಅದರ ಸುತ್ತಮುತ್ತಲ ಊರುಗಳಲ್ಲಿ ಜನಜಾಗೃತಿ ಸಭೆ ಕರೆದರು. 




ಪಶ್ಚಿಮ ಘಟ್ಟಗಳ ನದಿಗಳಲ್ಲೇ ಅಣೆಕಟ್ಟು ಕಟ್ಟದ ಏಕೈಕ ನದಿ ಅಘನಾಶಿನಿ. ಅದು ತದಡಿಯಲ್ಲಿ ಸಮುದ್ರ ಸೇರುವ ಜಾಗದಲ್ಲಿ ೧೮೦೦ ಹೆಕ್ಟೇರ್ ಅಳಿವೆ ಪ್ರದೇಶ ಸೃಷ್ಟಿಯಾಗಿದ್ದು ಅದು ಅತ್ಯಂತ ಜೀವವೈವಿಧ್ಯದ ಪ್ರದೇಶವಾಗಿದೆ. ಅಲ್ಲಿನ ಉಪ್ಪಿನಾಗರಗಳನ್ನು ೮೦೦ ಕುಟುಂಬಗಳು ನೆಚ್ಚಿಕೊಂಡಿವೆ. ಬಂದರು ನಿರ್ಮಾಣವಾದರೆ ಅದು ನಿಷೇಧಿತ ಪ್ರದೇಶವಾಗಲಿದೆ. ಮೀನುಗಾರಿಕೆಗೆ ಬೇರೆಯೇ ಬಂದರು ನಿರ್ಮಾಣ ಮಾಡಬೇಕಾಗುತ್ತದೆ. ಜೆಟ್ಟಿಯಲ್ಲಿ ಕನಿಷ್ಟ ೭ ಹಡಗು ನಿಲ್ಲುವ ವ್ಯವಸ್ಥೆ ಮಾಡಲು ಸಮುದ್ರದಾಳದ ಹೂಳು ತೆಗೆಯಲಾಗುತ್ತದೆ. ೮೦ ಅಡಿ ಆಳದವರೆಗೂ ಮರಳು ತೆಗೆಯಲಾಗುತ್ತದೆ. ಪ್ರತಿ ಹಡಗು ಒಂದು ಲಕ್ಷ ಟನ್ ಸರಕು ಸಾಗಣೆ ಮಾಡುತ್ತದೆ. ಎರಡು ಹಡಗು ಕಬ್ಬಿಣದ ಅದಿರನ್ನು ಒಯ್ಯುತ್ತವೆ. ಎರಡು ಕಲ್ಲಿದ್ದಲನ್ನು ಹೊತ್ತು ತರಲಿವೆ. ಬಂದರು ನಿರ್ಮಾಣ, ಹಡಗುಗಳ ತೈಲ ಹಾಗೂ ತ್ಯಾಜ್ಯ ಸೋರಿಕೆಯಿಂದ ಮೀನುಗಳಿಗೆ, ಆಳ ಸಮುದ್ರ ಜೀವಿಗಳಿಗೆ ಹಾನಿಯಾಗಲಿದೆ. ಚಿಪ್ಪಿಕಲ್ಲು ತೆಗೆಯುವುದು ನಿಲ್ಲುತ್ತದೆ. ಸಾಣಿಕಟ್ಟಾ ಮತ್ತು ನಾಗರಬೈಲಿನ ಉಪ್ಪಿನ ಆಗರಗಳು ಮುಚ್ಚಿಹೋಗಲಿವೆ. ಹೊರಗಿನ ಕಾರ್ಮಿಕರು ಹೆಚ್ಚಲಿದ್ದಾರೆ. ಅತ್ಯಧಿಕ ವಾಹನ, ಜನದಟ್ಟಣೆಯಾಗಿ ಭೌಗೋಳಿಕ ಸ್ವರೂಪವೇ ಬದಲಾಗುತ್ತದೆ. ಜನಜಾಗೃತಿ ಸಮಿತಿಯವರು ಇದನ್ನೆಲ್ಲ ಎಳೆಎಳೆಯಾಗಿ ಸಭೆಯಲ್ಲಿ ಬಿಡಿಸಿ ಹೇಳಿದರು.

ಆದರೆ ಅಲ್ಲಿಯ ಯುವಕರ ಅಭಿಪ್ರಾಯ ಮೊದಲಿನವರಿಗಿಂತ ಬೇರೆಯೇ ಇದೆ. ಇದು ಜನಜಾಗೃತಿ ಸಮಿತಿ ಎದುರು ಅವರು ವ್ಯಕ್ತಪಡಿಸಿದ ವಿರೋಧ ಹಾಗೂ ಆಕ್ರೋಶದಲ್ಲಿ ವ್ಯಕ್ತವಾಗಿದೆ. ಪರಿಸರವಾದಿಗಳು ಹಾಗೂ ವಿಜ್ಞಾನಿಗಳು ಹೋದಲ್ಲೆಲ್ಲ ತದಡಿ ಯುವಕರೂ ಹೋದರು. ‘ಢೋಂಗಿ ಪರಿಸರವಾದಿಗಳಿಗೆ ಧಿಕ್ಕಾರ’ ಎಂದು ಕೂಗಿದರು. 

‘ಅಡಿಕೆ ತೋಟ ಮಾಡಿಕೊಂಡು ಆರಾಮ ಇದ್ದವರು ನಮಗಿಲ್ಲಿ ಬಂದು ತೊಂದ್ರೆ ಕೊಡ್ತಾರೆ’ 
‘ನಿಮ್ಮನೆ ಹತ್ರ ಕಾರು ಹೋಗಲು ರಸ್ತೆ ಮಾಡಿದರೆ ಪರಿಸರ ಹಾಳಾಗಲ್ಲ, ತದಡಿಯಲ್ಲಿ ಮಾತ್ರ ಪರಿಸರ ಹಾಳಾಗುತ್ತಾ?’ 
‘ಅವತ್ತು ಖಾಲಿ ಹಾಳೆ ಮೇಲೆ ಸಹಿ ತಗೊಂಡ್ ಹೋಗಿದ್ರಿ? ಇಷ್ಟ್ ದಿನ ಎಲ್ಲಿದ್ರಿ? ಈಗ ಮತ್ತೆ ಬಂದು ನಾಟ್ಕ ಆಡ್ತೀರಾ’
‘ಯಾವ ಯೋಜನೆ ಬಂದ್ರೂ ಬೇಡಾಂತ ವಿರೋಧ ಮಾಡ್ತೀರಿ. ವಿರೋಧ ಮಾಡುದೇ ನಿಮ್ಕೆಲಸ ಆಗಿದೆ.’
‘ಯೋಜನೆ ಬಗ್ಗೆ ಸ್ಥಳೀಯರ ಅಭಿಪ್ರಾಯಕ್ಕೆ ಬೆಲೆನೇ ಇಲ್ಲ, ನೀವೆ ಎಲ್ಲ ಸೇರಿ ಬೇಡ ಅಂದ್ಬಿಡ್ತೀರಿ’, 
‘ಮಂಗ್ಳೂರಲ್ಲಿ ಬಂದರು ಇದೆ, ಅಲ್ಲಿನ ಜನರ ಜೀವನ ನರಕ ಕೂಪ ಆಗಿದೆಯಾ?’ 
‘ಬರೀ ಹಾನಿ ಕುರಿತೇ ಮಾತಾಡ್ತೀರಿ, ಯೋಜನೆಯಿಂದ ಆಗೋ ಲಾಭದ ಕುರಿತು ಯಾಕೆ ಏನೂ ಮಾತಾಡಲ್ಲ ನೀವು’ ‘ಮೀನುಗಾರ‍್ಕೆ ನಿಂತ್ರೆ ನಿಲ್ಲಲಿ. ನಮ್ಗೆ ವಿದ್ಯಾಭ್ಯಾಸ ಬೇಡ್ವಾ? ನಂ ಮಕ್ಕಳೂ ಯಾಕೆ ಇದೇ ದಂಧೆ ಮಾಡ್ಬೇಕು?’ 

ಎಂಬಿತ್ಯಾದಿಯಾಗಿ ತರುಣ ಪಡೆಯಿಂದ ಏರುದನಿಯ ಆರೋಪಗಳ ಸುರಿಮಳೆಯಾಗಿ ಜನಜಾಗೃತಿಗಾಗಿ ಬಂದವರನ್ನು ತಬ್ಬಿಬ್ಬುಗೊಳಿಸಿದರು.

ವಿಜ್ಞಾನಿ-ಪರಿಸರವಾದಿಗಳ ಯಾವ ಮಾತಿಗೂ ಯುವಕರ ತಂಡ ಕಿವಿಗೊಡಲಿಲ್ಲ. ಹೊರಗಿನವರು ಬಂದು ಈಗಾಗಲೇ ಚಿಪ್ಪಿಕಲ್ಲು ಲೂಟಿ ಮಾಡಿ ಹೋಗಿರುವುದರಿಂದ ಅದೂ ಸಿಗುತ್ತಿಲ್ಲ. ವಿಶಾಖಪಟ್ಟಣದಿಂದ ಚಿಪ್ಪಿಕಲ್ಲು ಬರುವಂತಾಗಿದೆ. ಮತ್ಸ್ಯಕ್ಷಾಮವಿದೆ. ಬಂದರು ಅಭಿವೃದ್ಧಿಯಾದರೆ ಉದ್ಯೋಗಾವಕಾಶ ಹೆಚ್ಚುತ್ತದೆ. ಅದಕ್ಕೆ ಪರಿಸರವಾದಿಗಳೇಕೆ ಕಲ್ಲು ಹಾಕುತ್ತೀರಿ? ನಮಗೆ ಉದ್ಯೋಗವಿಲ್ಲ, ನೀವು ಉದ್ಯೋಗಾವಕಾಶ ಮಾಡಿಕೊಡುವುದಾದರೆ ನಾವು ನಿಮ್ಮ ಹಿಂದೇ ಬರುತ್ತೇವೆ; ಇಲ್ಲದಿದ್ದರೆ ನಮಗೆ ಬಂದರು ಯೋಜನೆ ಬರಲೇಬೇಕೆಂದು ಪಟ್ಟುಹಿಡಿಯುತ್ತೇವೆ ಎಂದು ಕೂಗಾಡಿದರು.


ಮತ್ಸ್ಯಕ್ಷಾಮ, ಅದು ಹುಟ್ಟಿಸಿರುವ ನಿರುದ್ಯೋಗ ಸಮಸ್ಯೆ, ಪರ್ಯಾಯ ಉದ್ಯೋಗಾವಕಾಶಗಳ ಕೊರತೆ, ಬಂಡವಾಳ ಹೂಡಲು ಸಾಧ್ಯವಿಲ್ಲದವರಿಗೆ ಕಡಿಮೆಯಾಗಿರುವ ಅವಕಾಶ, ಬಂದ ಯೋಜನೆಗಳು ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ, ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿರುವುದು, ಬರಲಿರುವ ಯೋಜನೆಗಳು ಪರಿಸರದ ಕಾರಣದಿಂದ ನೆನೆಗುದಿಗೆ ಬಿದ್ದಿರುವುದು, ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಿಂದ ಸಣ್ಣಪುಟ್ಟ ಅಂಗಡಿಗಳು ಮುಚ್ಚುವಂತಾಗಿರುವುದು, ‘ಪಶ್ಚಿಮಘಟ್ಟ ಪಾರಂಪರಿಕ ತಾಣ’ ಘೋಷಣೆಯಿಂದ ಬೃಹತ್ ಕೈಗಾರಿಕೆಗಳು ಶುರುವಾಗದೆ ಇರುವುದು, ಯುವಕರು ಗೋವಾ, ಮುಂಬಯಿ, ರತ್ನಗಿರಿ, ಮಂಗಳೂರು, ಬೆಂಗಳೂರುಗಳತ್ತ ವಲಸೆ ಹೋಗುತ್ತಿರುವುದು - ಇವೆಲ್ಲ ಸಂಕಟಗಳನ್ನು ದಿನನಿತ್ಯ ಅರಗಿಸಿಕೊಂಡು ಅವರಲ್ಲಿ ಆಕ್ರೋಶ ಹುಟ್ಟಿರಬಹುದು. ಪರಿಸರವಾದಿಗಳು ತಮ್ಮ ಊಟದ ತಟ್ಟೆಯಲ್ಲಿ ಕಲ್ಲು ಹಾಕುವವರಂತೆ ಕಂಡಿರಬಹುದು.


ಬೇಕು - ಬೇಡ

ಕರ್ನಾಟಕದ ಕಡಲ ತೀರವು ಒಂದು ದೊಡ್ಡ ಬಂದರನ್ನು - ನವ ಮಂಗಳೂರು ಬಂದರು - ಹೊಂದಿದೆ. ಮಂಗಳೂರು ಬಂದರಿನಲ್ಲಿ ದ್ರವ ರೂಪದ ವಸ್ತು ಸಾಗಾಟ ಹೆಚ್ಚು ನಡೆಯುವುದರಿಂದ ಉತ್ತರ ಕರ್ನಾಟಕದ ಅದಿರನ್ನು ಸಾಗಿಸಲು ಕಾರವಾರ ಮತ್ತು ಬೇಲೇಕೇರಿ ಎಂಬ ಎರಡು ಸಣ್ಣ ಬಂದರುಗಳಷ್ಟೇ ಇವೆ. ಬಹುಪಾಲು ಅದಿರು ಎಣ್ಣೂರು, ಮರ್ಮಗೋವಾ ಹಾಗೂ ಕೃಷ್ಣಪಟ್ಣಂ ಬಂದರುಗಳನ್ನು ನೆಚ್ಚಿಕೊಂಡಿವೆ. ಹೀಗಿರುತ್ತ ಅಘನಾಶಿನಿ ಅಳಿವೆಯ ವಿಶಾಲತೆಯ ಕಾರಣದಿಂದಾಗಿಯೇ ಸರ್ವಋತು, ನೈಸರ್ಗಿಕ ಬಂದರನ್ನು ನಿರ್ಮಿಸಲು ತದಡಿ ಅತ್ಯಂತ ಸೂಕ್ತ ಪ್ರದೇಶವೆಂದು ಗುರುತಿಸಲ್ಪಟ್ಟಿತು. ಮುಂಬೈ ಬಂದರಿನ ಮಾದರಿಯಲ್ಲಿ ನಿರ್ಮಾಣಗೊಳ್ಳಲಿದ್ದು ಮೀನುಗಾರಿಕೆಗೆ ತೊಂದರೆಯಾಗುವುದಿಲ್ಲವೆಂದು ಹೇಳಲಾಯಿತು. 


ಉತ್ತರಕನ್ನಡದ ಮಟ್ಟಿಗೆ ಅರಣ್ಯ ನಾಶವಿಲ್ಲದೆ ಯಾವ ಯೋಜನೆಯೂ, ಅಭಿವೃದ್ಧಿಯೂ ಬರುವುದು ಸಾಧ್ಯವಿಲ್ಲ. ರೈಲುಮಾರ್ಗ ನಿರ್ಮಿಸಲೂ ಅರಣ್ಯ ನಾಶವಾಗುತ್ತದೆ. ರಸ್ತೆ ಅಗಲೀಕರಣಕ್ಕಾಗಿ ಸಾವಿರಾರು ಮರಗಳು ನೆಲಕ್ಕೊರಗಿವೆ. ಕೈಗಾ ಅಣುಸ್ಥಾವರ, ಸೀ ಬರ್ಡ್ ಯೋಜನೆ, ಬೇಡ್ತಿ, ಶರಾವತಿ ಟೇಲ್‌ರೇಸ್, ಕೊಂಕಣ ರೈಲ್ವೇ - ಹೀಗೇ ತದಡಿ ಯೋಜನೆಯೊಂದನ್ನು ಹೊರತುಪಡಿಸಿದರೆ ಮತ್ತೆಲ್ಲ ಯೋಜನೆಗಳೂ ಪರಿಸರಹಾನಿಯ ಕಾರಣಕ್ಕೇ ತೀವ್ರ ವಿರೋಧ ಎದುರಿಸಿವೆ. ಆದರೂ, ಎಲ್ಲ ಯೋಜನೆಗಳೂ ನಂತರ ಒಳನುಸುಳಿ ಬಂದಿವೆ. 

ಅದಕ್ಕೆ ಕಾರಣಗಳೇನೇ ಇರಲಿ, ಒಂದು ಯೋಜನೆ ಬೇಕೆಂದ ಕೂಡಲೇ ಉಳಿದವೂ ಅದರ ಹಿಂದೇ ದಾಂಗುಡಿಯಿಟ್ಟಿವೆ. ಉದಾ:ಗೆ ಘಟ್ಟದ ರಸ್ತೆಗಳು ಸಾಗಣೆ ವಾಹನಗಳ ಭರಾಟೆಯಲ್ಲಿ ಎಷ್ಟು ಹಾಳಾಗುತ್ತವೆಂದರೆ ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ಬೇಕೇಬೇಕೆನ್ನುವುದು ಎಲ್ಲರ ಕೂಗಾಗಿದೆ. ಆದರೆ ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ, ಉಷ್ಣ ಸ್ಥಾವರ, ತದಡಿ ಬಂದರು - ಇವು ಪರಸ್ಪರ ಸಂಬಂಧವುಳ್ಳ ಯೋಜನೆಗಳು. ಒಂದು ಬೇಕೆಂದರೆ ಉಳಿದವೂ ಜೊತೆಯೇ ಬರುತ್ತವೆ. 

ಯಾವುದು ಬೇಕು? ಯಾವುದು ಬೇಡ? ಬೇಕುಬೇಡಗಳ ನಡುವೆ ಗೊಂದಲದ ದೊಡ್ಡ ಮೈದಾನವಿದೆ.

ಪರಿಸರ ಉಳಿಯಬೇಕು, ನಿಜ. ಜನರಿಗೆ ಘನತೆಯ ಬದುಕಿನ ಅವಕಾಶಗಳು ದಕ್ಕಬೇಕು, ಅದೂ ನಿಜ. ಆದರೆ ಈ ಎರಡು ನಿಜಗಳ ನಡುವೆ ಯಾವುದನ್ನು ಅರಗಿಸಿಕೊಳ್ಳುವುದು? ಯಾವುದನ್ನು ಕೈಜಾರಿ ಸೋರಿಹೋಗಲು ಬಿಟ್ಟುಬಿಡುವುದು? ಮೊದಲೆಲ್ಲ ಜನರು ಪರಿಸರವಾದಿಗಳ ಜೊತೆ ಕೈಜೋಡಿಸಿದ್ದವರು ಈಗ ಬದಲಾಗಿರುವುದು ಯಾವುದರ ಸೂಚನೆಯಿರಬಹುದು? ಎತ್ತಂಗಡಿ, ಪುನರ್ವಸತಿಯಿಂದ ಪಲ್ಲಟಗೊಳ್ಳಲಿರುವ ಬದುಕಿನ ಚಿತ್ರಣ ಅವರ ಕಲ್ಪನೆಯಲ್ಲಿಲ್ಲ ಎಂದಲ್ಲ. ಏನಾದರೂ ಪರವಾಗಿಲ್ಲ, ಬದಲಾವಣೆ ಬೇಕೆಂದು ಏಕೆ ಅನಿಸಿತು? ಜನರ ದಿನನಿತ್ಯದ ಸಂಕಟಗಳಿಗೆ ದಿವ್ಯಮೌನ ವಹಿಸಿ, ಅವರ ಬದುಕಿನ ಕಷ್ಟಗಳಿಗೆ ಕಾರಣವಾದ ಮತ್ಯಾವುದರ ಬಗ್ಗೆಯೂ ಮಾತೇ ಆಡದೆ; ಕೇವಲ ಗಿಡಮರ, ಪರಿಸರ ಹಾಳಾಗುತ್ತಿದೆ ಎಂದಾಗ ಮಾತ್ರ ಅವರ ಪರವಾಗಿ ವಾದಿಸಲು ಹೋಗುವುದರಿಂದ ಹೀಗಾಯಿತೇ? ಅಥವಾ ಜನರ ಆಕ್ರೋಶದ ಹಿಂದೆ ಬಂದರು ಮಾಫಿಯಾದ ಕೈವಾಡವಿದೆಯೆ? ಹಾಗಾದರೆ ಜನರ ಸ್ವಾಯತ್ತತೆ ಹಾಗೂ ಸ್ವಾತಂತ್ರ್ಯಗಳನ್ನು ಗೌರವಿಸುತ್ತಲೇ ಬಂದರು ಯೋಜನೆ ಕುರಿತು ಏನು ಮಾಡಬಹುದು? 

ತದಡಿ ಕೇವಲ ತದಡಿಯವರದಷ್ಟೇ ಅಲ್ಲ, ಅಲ್ಲಿನ ಜನರ ಹಿತ-ನೋವು-ನಲಿವು ಅವರ ಜವಾಬ್ದಾರಿಯಷ್ಟೇ ಅಲ್ಲ ಎಂಬ ಅರಿವನ್ನು ಸದಾ ಕಾಲ ಇಟ್ಟುಕೊಂಡು ಅಲ್ಲಿನವರೊಡನೆ ಒಡನಾಡಬೇಕು; ಸ್ಥಳೀಯರಿಗೆ ಸಾಧಕ-ಬಾಧಕಗಳ ಬಗೆಗೆ ಸಂಯಮದಿಂದ ತಿಳುವಳಿಕೆ ನೀಡಬೇಕು; ಬಂಡವಾಳಿಗ-ಕಂಟ್ರಾಕ್ಟುದಾರ-ರಾಜಕಾರಣದ ಹಿತಾಸಕ್ತಿಗೆ ಅವರು ಬಲಿಯಾಗದಂತೆ ಎಚ್ಚರಿಸಬೇಕು; ಅಷ್ಟಕ್ಕೂ ಯೋಜನೆ ಬರುವುದೇ ಹೌದಾದರೆ ಸ್ಥಳೀಯ ಜನಬದುಕಿಗೆ ಆದಷ್ಟು ಹಾನಿಯಾಗದಂತೆ, ಅವರಿಗೆ ಉಪಯೋಗಿಯಾಗುವಂತೆ ಪ್ರಯತ್ನಿಸಬೇಕು. ಇದು ಕೇವಲ ಪರಿಸರವಾದಿ, ವಿಜ್ಞಾನಿಗಳ ಹೊಣೆಯಲ್ಲ; ಜನಪರ ಕಾಳಜಿಯಿರುವವರೆಲ್ಲರ ಜವಾಬ್ದಾರಿ ಎಂದು ವ್ಯವಸ್ಥೆಗೆ ತಿಳಿಸಿ ಹೇಳಬೇಕು. 

Thursday 12 March 2015

ರಾಜಸ್ಥಾನದ ರಾಣಿಯರು: ಯು ಕೆನ್ ಸೀ, ಬಟ್ ಕೆನಾಟ್ ಬಿ ಸೀನ್




ಅಂತಃಪುರದ ಅಳಲು

ಇಡೀ ಭಾರತವೇ ನೂರಾರು ಸಾವಿರಾರು ರಾಜಮಹಾರಾಜರು ಆಳಿ, ಮೆರೆದು, ಕಾದಾಡಿ, ಅಳಿದ ಭೂಮಿ. ಹೀಗಿರುತ್ತ ಆ ರಾಜ್ಯಕ್ಕೆ ಮಾತ್ರ ರಾಜಸ್ಥಾನವೆಂಬ ಹೆಸರು ಏಕೆ ಬಂತೋ?! ಈಗ ಭಾರತ ಗಣರಾಜ್ಯದ ಒಂದು ರಾಜ್ಯವಾಗಿರುವ ರಾಜಸ್ಥಾನದಲ್ಲಿ ಮೊದಲು ಹಲವು ರಾಜ ಮನೆತನಗಳು ಯುದ್ಧ, ವೀರಾವೇಶಗಳಿಂದ ಮೆರೆದದ್ದಕ್ಕೆ ಆ ಹೆಸರು ಬಂದಿರಬಹುದೇ? ಹಾಗೆ ನೋಡಿದರೆ ರಾಜಸ್ಥಾನವನ್ನು ರಾಣೀಸ್ಥಾನವೆಂದು ಕರೆಯುವುದು ಸೂಕ್ತ. ಅಲ್ಲಿ ಎಷ್ಟು ರಾಜರು ಆಳಿ ಹೋದರೋ ಅಷ್ಟೇ ಸಂಖ್ಯೆಯ ಪಟ್ಟದ ರಾಣಿಯರು, ಅದರ ಹತ್ತಿಪ್ಪತ್ತು ಪಟ್ಟು ಹಿರಿಯ ರಾಣಿಯರು, ನೂರುಪಟ್ಟು ಕಿರಿಯ ರಾಣಿಯರು, ಲೆಕ್ಕವಿಲ್ಲದಷ್ಟು ಜನಾನಾದ ಮನೋಸಾಮ್ರಾಜ್ಞಿಯರು ಆಗಿಹೋಗಿದ್ದಾರೆ. ರಾಣಿಸ್ಥಾನದ ಹೆಣ್ಣುಗಳ ಒಳಕತೆಗಳೋ, ಎಲ್ಲ ಬಣ್ಣಗಳನ್ನೂ ಒಡಲೊಳಗಿಟ್ಟುಕೊಂಡ ಮಳೆಹನಿ ಆವಾಗೀವಾಗೊಮ್ಮೆ ಫಳಾರನೆ ಕಾಮನಬಿಲ್ಲನ್ನು ಹೊರಹಾಕುವಂತೆ, ಕಂಡುಕೇಳಿ ಮರೆಯಾಗುತ್ತವೆ.

ಎಂದಿನಂತೆ, ಇಲ್ಲೂ ಇತಿಹಾಸವು ರಾಜರನ್ನು ನೆನಪಿಟ್ಟುಕೊಂಡಂತೆ ರಾಣಿಯರ ನೆನಪಿಟ್ಟುಕೊಂಡಿಲ್ಲ. ಅದಕ್ಕೆ ಇಂದಿನ ಉದಯಪುರ, ಜೋಧಪುರ, ಜೈಪುರ, ಜೈಸಲ್ಮೇರದ ಜನದಟ್ಟಣೆಯ ರಸ್ತೆ, ಚೌಕಗಳೇ ಸಾಕ್ಷಿ. ಆ ಸ್ಥಳಗಳು ಕೆನೆಯುವ ಕುದುರೆ ಮೇಲೆ ಕುಳಿತು ಖಡ್ಗ ಹಿರಿದ ಧೀರ ನಿಲುವಿನ ತಂತಮ್ಮ ರಾಜರ ಮೂರ್ತಿಗಳನ್ನು ಹೊಂದಿವೆಯೇ ಹೊರತು ರಾಣಿಯರ ಮೂರ್ತಿಗಳನ್ನಲ್ಲ. ಅರಮನೆ-ಮ್ಯೂಸಿಯಂಗಳಲ್ಲೂ ಅಷ್ಟೇ, ರಾಜರ ಆಳೆತ್ತರದ ಭಾವಚಿತ್ರ, ವರ್ಣಚಿತ್ರ, ಫೋಟೋಗಳು ಕಂಡಾವೇ ಹೊರತು ರಾಣಿಯರ ಚಿತ್ರಗಳು ಕಾಣುವುದಿಲ್ಲ. ಯಾರಿಗಾಗಿ ರಾಜಸ್ಥಾನದ ಖ್ಯಾತ ಕ್ಷತ್ರಿಯ ಮನೆತನವೊಂದು ಅಲ್ಲಾವುದ್ದೀನ್ ಖಿಲ್ಜಿಯ ಕಣ್ಣಿಗೆ ಬಿದ್ದು ನಾಶವಾಗಬೇಕಾಯಿತೆಂದು ಜನರಾಡಿಕೊಳ್ಳುತ್ತಾರೋ ಆ ಸುರಸುಂದರಿ, ಉದಯಪುರ (ಮೇವಾರ)ದ ಸೌಂದರ್ಯದ ಖನಿ, ರಾಣಿ ಪದ್ಮಿನಿಯ ಒಂದೂ ಚಿತ್ರ ಕಾಣಲಿಲ್ಲ.



ಅರಮನೆ, ಕೋಟೆ, ಮಹಲು, ಅಂತಃಪುರ ಎಲ್ಲೇ ನೋಡಿದರೂ ವಿವಿಧ ಆಕಾರ, ಸೂಕ್ಷ್ಮ ಕುಸುರಿ ಕೆತ್ತನೆಯ ಜಾಲಂಧ್ರಗಳು ಮನ ಸೆಳೆದವು. ಅದರಲ್ಲೂ ರಾಣಿವಾಸಕ್ಕೆ ಕಿಟಕಿಗಳಿಲ್ಲ, ಬರೀ ಜಾಲಂಧ್ರಗಳಿರುವ ಗೋಡೆಗಳಿವೆ. ಜೈಪುರದ ಹವಾ ಮಹಲು ಪೂರಾ ಹೀಗೇ ಇದೆ. ನಮ್ಮೊಡನೆ ತಾನೂ ಬಿಸಿಲ ದಾರಿ ಸವೆಸುತ್ತಿದ್ದ ಗೈಡ್ ಪ್ರಕಾರ ಜಾಲಂಧ್ರವೆಂಬ ಗೋಡೆಯನ್ನು ರಾಣೀವಾಸಕ್ಕೂ, ನೋಡುಗರ ನಡುವೆಯೂ ಇಡುವ ಉದ್ದೇಶ - ನೋಡಬಹುದು ಆದರೆ ಕಾಣಬಾರದು. (‘ಯು ಕೆನ್ ಸೀ, ಬಟ್ ಕೆನಾಟ್ ಬಿ ಸೀನ್’). ಅಲ್ಲಿಯ ಹೆಂಗಸರು ಇಡೀ ಮುಖ ಮುಚ್ಚುವಂತೆ ಸೆರಗೆಳೆದುಕೊಳ್ಳುವುದರ ಉದ್ದೇಶವೂ ಇದೇ.

ಎಲ ಎಲಾ, ಎಷ್ಟು ಸುಲಭವಾಗಿ ಹೇಳಿಬಿಟ್ಟ! ಎಂಥ ಪುರುಷ ಜಾಣ್ಮೆ!! ಅವಳು ನೋಡಬಹುದು, ಆದರೆ ಅವಳನ್ನು ಯಾರೂ ನೋಡಬಾರದು; ಕಾಣಬಹುದು, ಆದರೆ ಕಾಣಿಸಿಕೊಳ್ಳಬಾರದು. ಇರುವುದಾದರೆ ಇರು, ಇದ್ದೂ ಇಲ್ಲದಂತೆ. ಕೊಡುವುದಾದರೆ ಕೊಡು, ಗುರುತುಳಿಯದಂತೆ. ಬುರ್ಖಾ, ಜಾಲಂಧ್ರ, ಪರ್ದಾಗಳ ಹಿಂದೆ ಅವಳು ಅಡಗಿದರೂ ದಂಗೆಯೇಳದಂತೆ ಸುಮ್ಮನಾಗಿರುವುದಕ್ಕೆ, ಇದ್ದೂ ಇಲ್ಲದಂತಿರುವ ಅಸ್ತಿತ್ವವನ್ನು ಒಪ್ಪಿಕೊಂಡು ಬಂದಿರುವುದಕ್ಕೆ ಕಾರಣವಾಗಿರುವುದು ಇದೇ ಅಲ್ಲವೇ?

ರಾಣಿಯರ ಅಂಗವಿಕಲತೆ ಇಷ್ಟಕ್ಕೇ ನಿಲ್ಲುವುದಿಲ್ಲ. ಗೈಡ್ ಪ್ರಕಾರ ‘ಕ್ವೀನ್ಸ್ ವರ್ ಆಲ್ವೇಸ್ ಹ್ಯಾಂಡಿಕ್ಯಾಪಡ್’.

ಜೈಪುರದ ಅಮೇರಿ ಕೋಟೆಯ ದರ್ಬಾರ್ ಹಾಲ್‌ಗೆ ಹೋಗುವಾಗ ಒಂದು ಕಿರಿದಾದ ಏರುದಿಬ್ಬದಂತಹ ಪ್ಯಾಸೇಜ್ ಮೂಲಕ ಹೋದೆವು. ಅದು ಮೆಟ್ಟಿಲುಗಳಿಲ್ಲದ ಸ್ಲೋಪ್. ರಾಣಿಯರು ಹೋಗಿ ಬರುವ ದಾರಿ ಎಂದ ಗೈಡ್. ಎಷ್ಟು ಕಿರಿದಾಗಿದೆ ಎಂದರೆ ಪಲ್ಲಕ್ಕಿ, ಮೇನೆಗಳನ್ನು ಹೊತ್ತು ತರುವುದೂ ಸಾಧ್ಯವಿಲ್ಲ. ರಾಣಿಯರಿಗೇಕೆ ಇಂತಹ ಮೆಟ್ಟಿಲುಗಳಿಲ್ಲದ ಇಳಿಜಾರು ದಾರಿ? ನಾವು ಆಶ್ಚರ್ಯಪಡುವಾಗಲೇ ಗೈಡ್ ಸಣ್ಣ ನಕ್ಕು ಒಳ ಕರೆದುಕೊಂಡು ಹೋದಾಗ ಪ್ರದರ್ಶನಕ್ಕಿಟ್ಟ ರಾಣಿಯರ ಉಡುಪುಗಳ ಎದುರು ನಿಂತಿದ್ದೆವು. ದರ್ಬಾರಿನಲ್ಲಿ, ಅರಮನೆಯ ಸಂಭ್ರಮಾಚರಣೆಗಳಲ್ಲಿ ಕಾಣಿಸಿಕೊಳ್ಳುವಾಗ ರಾಣಿಯರು ಧರಿಸುತ್ತಿದ್ದ ವಸ್ತ್ರಗಳು ಅಲ್ಲಿದ್ದವು. ರೇಶಿಮೆಯ ಮೇಲೆ ಚಿನ್ನ, ಬೆಳ್ಳಿಯಂತಹ ಅಮೂಲ್ಯ ಲೋಹದ ತಂತಿಗಳಿಂದ ಮಾಡಿದ ಕಸೂತಿಯಿಂದ ಆ ಬಟ್ಟೆಗಳು ಅತಿಭಾರವಾಗಿದ್ದವು. ರಾಜಸ್ಥಾನದ ಶೈಲಿಯಂತೆ ಲಂಗದ ಮೇಲೆ ಲಂಗ, ಅದರ ಮೇಲೆ ಚೋಲಿ, ಚುನರಿ, ಅವಕುಂಠನ, ಕೊನೆಗೆ ಮೈಮೇಲೆ ರಾಜಮನೆತನದ ಆಭರಣ - ಎಲ್ಲವೂ ಸೇರಿ ಕನಿಷ್ಠ ೧೫೦ ಕೆಜಿ ಭಾರದ ಉಡುಪನ್ನು ರಾಣಿಯರು ಧರಿಸಬೇಕಿತ್ತು! ಎಂದೇ ಅಂತಃಪುರದ ಸಖೀವೃಂದವು ಮೆಟ್ಟಿಲು ಹತ್ತಿಳಿಯಲು ಸಾಧ್ಯವಿಲ್ಲದ ರಾಣಿಯರನ್ನು ವೀಲ್‌ಚೇರುಗಳಲ್ಲಿ ದೂಡಿಕೊಂಡು ಕರೆತರುತ್ತಿದ್ದರು!

ಆಸೆಯೆಂದು, ಅಪ್ಪಣೆಯೆಂದು, ಅನಿವಾರ್ಯವೆಂದು ಹೊರಲಾರದಷ್ಟು ಭಾರದ ವಸ್ತುಒಡವೆ ಹೇರಿಕೊಂಡರೆ ಹೀಗೇ. ಅಂಗವೈಕಲ್ಯ ತಾನಾಗಿ ಅಮರಿಕೊಳ್ಳುತ್ತದೆ.

ಅಂಗಾಲು ಉರುದಾವೆ, ಅಂಗೈ ಉರುದಾವೆ, ಉಂಗುರದ ಬಟ್ಟು ಉರುದಾವೆ..



ಅವರದನ್ನು ಇತಿಹಾಸ ಪುಸ್ತಕ ಓದಿ ತಿಳಿದಿರಲಿಕ್ಕಿಲ್ಲ, ಆದರೆ ಉದಯಪುರದಲ್ಲಿ ಹೆಜ್ಜೆಹೆಜ್ಜೆಗೆ ಖಿಲ್ಜಿ ಹಾಗೂ ರಾಣಿ ಪದ್ಮಿನಿಯ ಪ್ರಸಂಗವನ್ನು ಬಣ್ಣಿಸುತ್ತಾರೆ. ಸೂಫಿಸಂತ ಮಾಲಿಕ್ ಮುಹಮದ್ ಜಯಸಿ ತನ್ನ ಪದ್ಮಾವತ್ ಕಥನ ಕಾವ್ಯದಲ್ಲಿ ಈ ಕುರಿತು ಬರೆದಿರುವನೆಂದು ನಂತರ ತಿಳಿಯಿತು.

೭೦೦ ವರ್ಷ ಕೆಳಗೆ ಮೇವಾರ, ಚಿತ್ತೂರಿನ ರಾವಲ್ ರತನ್‌ಸಿಂಗ್ ಅಥವಾ ಮಹಾರಾಣಾ ಸಂಗ ಸಿಂಹಳದ ರಾಜಕುಮಾರಿಯನ್ನು ಸ್ವಯಂವರದಲ್ಲಿ ಗೆದ್ದು ತಂದು ಎರಡನೆಯ ಹೆಂಡತಿಯಾಗಿ ಸ್ವೀಕರಿಸಿದ. ಅವಳೇ ರಾಣಿ ಪದ್ಮಿನಿ. ಅಪ್ರತಿಮ ಸುಂದರಿ. ಅರಮನೆಯ ಮಾತನಾಡುವ ಗಿಳಿಗಳೂ ತಮ್ಮ ರಾಣಿಯ ಸೌದರ್ಯವನ್ನು ಬಣ್ಣಿಸುತ್ತಿದ್ದವು. ಆಗ ಖಿಲ್ಜಿಗಳು ದೆಹಲಿಯನ್ನಾಳುತ್ತ, ಸಾಮ್ರಾಜ್ಯ ವಿಸ್ತರಣೆಯ ಯುದ್ಧಗಳಲ್ಲಿ ತೊಡಗಿದ್ದರು. ಮೇವಾರದ ರಾಣಾ ರಾಜ್ಯದ ಒಬ್ಬ ಹಾಡುಗಾರ ಮಾಟಗಾರ ಎಂದು ಗಡೀಪಾರಾಗುತ್ತಾನೆ. ಆತ ಅಲ್ಲಾವುದ್ದೀನ್ ಖಿಲ್ಜಿ ಹೊರಸಂಚಾರ ಬರುವ ಸಮಯ ಸಾಧಿಸಿ ಅವನಿಗೆ ಕೇಳುವ ಹಾಗೆ ಕೊಳಲು ಬಾರಿಸಿ ಗಮನ ಸೆಳೆಯುತ್ತಾನೆ. ನಿನ್ನಂತಹ ಕಲಾವಿದ ದೆಹಲಿಯಲ್ಲಿರಬೇಕು, ಕಾಡಿನಲ್ಲಲ್ಲ ಎಂದು ಖಿಲ್ಜಿ ಕರೆದಾಗ ಕಲಾವಿದ ನಸುನಕ್ಕು  ತನ್ನಂತಹ ಸಾಮಾನ್ಯನನ್ನು ದೆಹಲಿ ಆಸ್ಥಾನಕ್ಕೆ ಕರೆಯುವುದಾದರೆ, ಮೇವಾರದಲ್ಲಿ ಇದಕ್ಕಿಂಥ ಶ್ರೇಷ್ಠವಾದವು ಎಷ್ಟಿವೆ ಗೊತ್ತೇ ಎಂದು ಪಟ್ಟಿಮಾಡುತ್ತಾನೆ. ಮೇವಾರ ರಾಜ್ಯದ ಸಂಪತ್ತಿನ ಬಗೆಗೆ, ಎಲ್ಲಕ್ಕಿಂತ ಮಿಗಿಲಾಗಿ ರಾಣಿ ಪದ್ಮಿನಿಯ ಸೌಂದರ್ಯದ ಬಗೆಗೆ ಉತ್ಪ್ರೇಕ್ಷೆಯ ಮಾತುಗಳಲ್ಲಿ ವರ್ಣಿಸುತ್ತಾನೆ. ಅದನ್ನು ಕೇಳಿದ ಖಿಲ್ಜಿ ಹೇಗಾದರೂ ಪದ್ಮಿನಿ ತನ್ನ ಅಂತಃಪುರ ಸೇರಬೇಕೆಂದು ದಂಡೆತ್ತಿ ಹೋಗುತ್ತಾನೆ. ಮೇವಾರ ಕೋಟೆಯ ವಶಕ್ಕಾಗಿ ಘನಘೋರ ಯುದ್ಧ ನಡೆಯುತ್ತದೆ. ದೊಡ್ಡ ಸೈನ್ಯದೆದುರು ರಾಣಾನ ಸೈನ್ಯ ವೀರಾವೇಶದಿಂದ ಹೋರಾಡಿದರೂ ಎಲ್ಲವೂ ಖಿಲ್ಜಿಯ ವಶವಾಗುತ್ತದೆ. ಆಗ ಖಿಲ್ಜಿಯು ರಾಣಿ ಪದ್ಮಿನಿ ತನ್ನ ಸೋದರಿಯಂತೆ. ಅವಳನ್ನು ತೋರಿಸಿದರೆ ತಾನು ವಾಪಸು ಹೋಗುವುದಾಗಿ ಹೇಳಿಕಳಿಸುತ್ತಾನೆ. ರಜಪೂತ ರಾಣಿಯೊಬ್ಬಳು ಅವಕುಂಠನ ಸರಿಸಿ ವೈರಿಗೆ ಮುಖ ತೋರಿಸುವುದಕ್ಕಿಂತ ಅವಮಾನ ಬೇರೆಯಿಲ್ಲ. ಆದರೂ ಬೇರೆದಾರಿಯಿಲ್ಲದೆ ಪದ್ಮಿನಿ ಕನ್ನಡಿಯಲ್ಲಿ ಮುಖ ತೋರಿಸುತ್ತಾಳೆ.

ಆದರೆ ನಂತರ ಮತ್ತೆ ದಂಡೆತ್ತಿ ಬಂದ ಖಿಲ್ಜಿ ಮೋಸದಿಂದ ರಾಣಾನನ್ನು ಸೆರೆಹಿಡಿಯುತ್ತಾನೆ. ಬಿಡುಗಡೆ ಮಾಡಬೇಕಾದರೆ ಪದ್ಮಿನಿಯನ್ನು ಕೊಡಬೇಕೆಂಬ ಷರತ್ತು ವಿಧಿಸುತ್ತಾನೆ. ಮರುದಿನ ಪದ್ಮಿನಿ ೧೫೦ ಸಖಿಯರೊಡನೆ ಖಿಲ್ಜಿಯ ಬಳಿ ಹೋಗುವುದೆಂದು ಒಪ್ಪಂದವಾಗುತ್ತದೆ. ಆದರೆ ೧೫೦ ಸೈನಿಕರು ಪಲ್ಲಕ್ಕಿಯಲ್ಲಿ ಹೋಗಿ ತಮ್ಮ ರಾಜನನ್ನು ಬಿಡಿಸಿಕೊಂಡು ಬರುತ್ತಾರೆ. ಖಿಲ್ಜಿ ಕೋಪಗೊಂಡು ಕೋಟೆ ಸುತ್ತುವರೆಯುತ್ತಾನೆ. ಕೋಟೆಯೊಳಗೆ ಆಹಾರದ ದಾಸ್ತಾನು ಮುಗಿಯತೊಡಗುತ್ತದೆ. ದೆಹಲಿಯ ದೊಡ್ಡ ಸೈನ್ಯದೆದುರು ಹೋರಾಡುವುದೆಂದರೆ ಸಾವು, ಸೋಲು ಖಚಿತ. ಆದರೂ ಅಳಿದುಳಿದ ರಜಪೂತ ಸೈನ್ಯ ಜೀವನ್ಮರಣದ ಹೋರಾಟಕ್ಕೆ ಸಜ್ಜಾಗುತ್ತದೆ.

ಅದಕ್ಕೂ ಮೊದಲು ರಾಣಿ ಪದ್ಮಿನಿಯೂ ಸೇರಿದಂತೆ ಕೋಟೆಯೊಳಗಿನ ಹೆಣ್ಣುಮಕ್ಕಳು ಜೌಹರ್‌ಗೆ ಸಿದ್ಧರಾಗಿ ಉರಿವ ಚಿತೆಯನ್ನು ಪ್ರವೇಶಿಸುತ್ತಾರೆ. ಮೇವಾರದ ಸೇನೆ ಹತವಾಗುತ್ತದೆ. ಗೆದ್ದ ಖಿಲ್ಜಿ ಸೇನೆಯನ್ನು ಉರಿದ ಚಿತೆ, ಬೂದಿಯಲ್ಲಿದ್ದ ಹೆಂಗಸರ ಮೂಳೆಗಳು ಎದುರುಗೊಳ್ಳುತ್ತವೆ.

ಖಿಲ್ಜಿ ಮತ್ತವನ ಸೇನೆಯ ಹೆಣ್ಣುಬಾಕತನ, ಅವನು ಗೆದ್ದೆಡೆಯಲ್ಲೆಲ್ಲ ಸ್ವಾಗತಿಸಿದ ಜೌಹರ್ ಬೂದಿ - ಇವೆಲ್ಲ ಎಷ್ಟು ನಿಜವೋ? ಎಷ್ಟು ಊಹೆಯೋ? ಅಂತೂ ಈ ಜೌಹರ್ ಪ್ರಸಂಗವನ್ನು ಹಾಡು, ಲಾವಣಿ, ಗೀತೆ, ನರ್ತನ ಎಲ್ಲದರಲ್ಲಿಯೂ ಅಳವಡಿಸಿಕೊಂಡು ಜನ ರಾಗವಾಗಿ ತಮ್ಮ ರಾಣಿವಾಸದವರು ಚಿತೆಯೇರಿದ್ದನ್ನು ಬಣ್ಣಿಸಿ, ಕಣ್ಣೀರಿಡುತ್ತಾರೆ.

ಕರ್ನಾಟಕದ ಅಸಂಖ್ಯ ವೀರಸೈನಿಕರು ಮಡಿದಾಗ ಅವರ ಮಡದಿಯರು ತಾವೂ ಚಿತೆಯೇರಿ ಮಹಾಸತಿಯರಾಗಿದ್ದಾರೆ. ಆದರೆ ಇಲ್ಲಿನ ಖ್ಯಾತ ರಾಣಿಯರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಹೋರಾಡಿದರೇ ವಿನಹ ಸತಿಯಾದಂತಿಲ್ಲ ಅಲ್ಲವೇ? ಇಲ್ಲಿನ ಕೆಲವು ಮಹಾಸತಿ ಕಥನಗೀತೆಗಳೂ ಭಿನ್ನವಾಗಿ ಮಾತನಾಡುತ್ತವೆ.

ತಾಡಿನಾಗಮ್ಮನ ಕಥನಗೀತೆಯು (ಈ ಪ್ಯಾರಾದ ಶೀರ್ಷಿಕೆಯೂ ಅದರದೆ) ಹೀಗೆ ಹೇಳುತ್ತದೆ:

`ಅಂಬಾರದುದ್ದಾಕೆ ಉರಿಯೆದ್ದೇಳುತಾವೆ
ನಾನೆಂಗೋಗಲಿ ಸಿವಸಿವನೆ
ನಾನೆಂಗೋಗಲಿ ಸಿವಸಿವನೆ ಏ ಸಿವನೆ
ರಾಯರ ಪ್ರಾಣವ ತಿರುವಯ್ಯಾ'


ಮಹಾಸತಿ ತಂಗ್ಯವ್ವನ ಕಥನ ಗೀತೆಯು,


`ಅಂಗಿಯ ವಲಸ್ಯಾಳು ಕಂದಮ್ಮಗಾಕ್ಯಾಳು
ಅತ್ತತ್ತ ವೋಗಿ ತಿರಿಗ್ಯಾಳು
ಅತ್ತತ್ತ ವೋಗಿ ತಿರಿಗ್ಯಾಳು / ಏನಂದಾಳು
ಕಂದಾಗು ನನಗು ರುಣವಿಲ್ಲ'

ಎನ್ನುತ್ತದೆ. ಜೌಹರ್‌ಗಾಗಿ ಉರಿಯುವ ಚಿತೆಯನ್ನು ಜೀವಂತ ಪ್ರವೇಶಿಸಿದ ರಾಣಿಯರ ಮನಸ್ಥಿತಿ ಹೇಗಿತ್ತು? ತನ್ನನ್ನು, ತನ್ನ ಮೈಸಿರಿಯನ್ನು, ಕರುಳನ್ನು, ಕರುಳ ಬಳ್ಳಿಯನ್ನು ಜೀವಂತವಿರುವಾಗಲೇ ಸುಟ್ಟುಕೊಂಡದ್ದು ಅಸಹಾಯಕತೆಯ ಆತ್ಮಾಹುತಿಯೇ? ಅಥವಾ ವಿಧವೆಯ ದುರ್ಗತಿಗೆ ಈಡುಮಾಡುವ ವ್ಯವಸ್ಥೆಯನ್ನು ಅನಿವಾರ್ಯ ಸಾವಿನಿಂದ ಧಿಕ್ಕರಿಸಿದ ಪ್ರತಿರೋಧವೇ?

ಪದ್ಮಿನಿ, ಎಲ್ಟಿಟಿಇ ಧನು, ವಫಾ ಇದ್ರಿಸ್ - ಬೇರೆಬೇರೆ ಕಾರಣಗಳಿಗೆ ತಮ್ಮನ್ನು ತಾವು ಸಮೂಹಕ್ಕೆ, ಸಾವಿಗೆ ತೆತ್ತುಕೊಂಡವರ ಒಳತುಡಿತಗಳಿಗೆ ಯಾವ ಪುರಾವೆಯಿದೆ? ಪುಡಿಯಾಗಿ ಹಾರುವ ಬೂದಿ ಸಾಕ್ಷಿ ಹೇಳುವುದೇ, ಬೆಂಕಿ ಸೇರಿದ ಕಣ್ಣಹನಿಗಳಿಗೆ?


ಪ್ರತಿ ಕಂಪನವೂ ಲಯಕಾರಕ

ರಾಜಸ್ಥಾನ ಪ್ರವಾಸೋದ್ಯಮ ಇಲಾಖೆ ಪ್ರತಿದಿನ ನಡೆಸುವ ಜನಪದ ಕಲಾಪ್ರಕಾರಗಳ ಪ್ರದರ್ಶನದಲ್ಲಿ ವಿವಿಧ ರೀತಿಯ ಕಲಾಪ್ರದರ್ಶನಗಳು, ನೃತ್ಯಗಳು ಗಮನ ಸೆಳೆದವು. ಅದರಲ್ಲೂ ಹೆಣ್ಣುಮಕ್ಕಳ ಕೆಲ ನೃತ್ಯ ಪ್ರಕಾರಗಳು ವಿಶೇಷವಾಗಿವೆ.


ತೇರಾತಾಲ್ ಎಂಬ ಕಲಾಪ್ರಕಾರದಲ್ಲಿ ಕಲಾವಿದೆ ತನ್ನ ದೇಹದ ಕನಿಷ್ಠ ೧೩ ಕಡೆ ಮುಂಜೀರ್ (ತಾಳ) ಕಟ್ಟಿಕೊಂಡಿರುತ್ತಾಳೆ. ಮೊಣಕೈ, ಮುಂಗೈ, ಭುಜ, ಕುತ್ತಿಗೆ, ಹಣೆ, ತಲೆ, ಬೆನ್ನು, ಸೊಂಟ, ಮೊಣಕಾಲು, ಪಾದ ಹೀಗೇ ನಾನಾ ಕಡೆಗಳಲ್ಲಿ ತೆರೆದ ತಾಳವನ್ನು ಕಟ್ಟಲಾಗಿರುತ್ತದೆ. ತನ್ನ ಎರಡೂ ಕೈಗಳಲ್ಲಿ ಬೀಸುವ ತಾಳ ಹಿಡಿದಿರುತ್ತಾಳೆ. ಕೂತು, ಎದ್ದು, ನಿಂತು, ಮಲಗಿ ಕಟ್ಟಿಕೊಂಡ ತಾಳಕ್ಕೆ ತನ್ನ ಕೈತಾಳ ಸೇರಿಸಿ ಲಯಬದ್ಧವಾಗಿ ಹಾಡುತ್ತ ನರ್ತಿಸುವುದೇ ಆ ನರ್ತನಕಲೆಯ ವಿಶೇಷ. ಅವರು ಕೂತರೂ ಲಯ, ನಿಂತರೂ ಲಯ, ಸೆಟೆದರೂ ಲಯ, ಮಣಿದರೂ ಲಯ. ಪ್ರತಿ ಕಂಪನವೂ ಲಯಕಾರಕವೇ.




ಚಾರಿ ಎಂಬ ಇನ್ನೊಂದು ಪ್ರಕಾರವು ನೀರು ಹುಡುಕುತ್ತ ಹೊರಟವರು ನೀರು ಸಿಕ್ಕ ಖುಷಿಗೆ ಮಾಡುವ ನರ್ತನ. ಮದುವೆ, ನಾಮಕರಣದಂತಹ ಶುಭ ಸಂದರ್ಭಕ್ಕೆ ಮಾಡುವ ನೃತ್ಯ. ಅದರಲ್ಲಿ ಹುಡುಗಿಯರು ನರ್ತಿಸುತ್ತಲೇ ಒಂದಾದಮೇಲೊಂದು ಕೊಡಗಳ ತಲೆಮೇಲೆ ಪೇರಿಸುತ್ತ ಹೋಗುತ್ತಾರೆ. ಕೊನೆಯ ಬಿಂದಿಗೆಯ ಮೇಲೆ ಅಥವಾ ಕೈಯಲ್ಲಿ ಹತ್ತಿಕಾಳೆಣ್ಣೆಯಿಂದ ಉರಿಯುವ ದೀಪವಿರುತ್ತದೆ. ನಾವು ನೋಡಿದಾಗ ಆಕೆ ದೊಡ್ಡ ಸೈಜಿನ ಬಿಂದಿಗೆಯಿಂದ ಶುರುಮಾಡಿ ಒಂದರಮೇಲೊಂದು ೨೩ ಕೊಡ ಇಟ್ಟುಕೊಂಡಳು. ಅವಳ ಎತ್ತರ ಎಷ್ಟೋ ಅದರ ಎರಡು ಪಟ್ಟು ಎತ್ತರದ ಗೋಪುರ ರೂಪುಗೊಂಡಿತು. ಕೊನೆಯದರ ಮೇಲೆ ಉರಿವ ದೀಪ. ನರ್ತಿಸಬೇಕು, ಜನರನ್ನು ರಂಜಿಸಬೇಕು. ಕೊಡಗಳು ಬೀಳಬಾರದು, ದೀಪ ಆರಬಾರದು. ಕೊನೆಗೆ ತಲೆ ಮೇಲೆ ಬಿಂದಿಗೆ ಹೊತ್ತವರು ಕತ್ತಿ ತುದಿಯ ಮೇಲೆ ನಿಂತು, ಗಾಜಿನ ಮೇಲೆ ನಿಂತು, ಕಂಚಿನ ಗಂಗಾಳದ ಮೇಲೆ ನಿಂತೂ ನರ್ತಿಸಿದರು!


ಒಟ್ಟಾರೆ ನೋಡುಗರು ಬಾಯಿ ತೆರೆದು ಒಂದಾದಮೇಲೊಂದರಂತೆ ಬರಲಿರುವ ಅಚ್ಚರಿಯನ್ನು ನೋಡುತ್ತ ಉದ್ಗರಿಸುವುದೇ ಕೆಲಸ. ಬರಬರುತ್ತ ಯಾವುದೂ ಅಚ್ಚರಿಯೇ ಅಲ್ಲ, ಅವರಿಗೆ ಎಲ್ಲವೂ ಸಲೀಸು, ಸಹಜ ಅನಿಸಿ ಕಣ್ಣರುಳುವುದೂ ನಿಂತುಹೋಗುತ್ತದೆ..

ಸಮತೋಲನ ಮತ್ತು ಕಸರತ್ತು ನಿರಂತರ ಬದುಕೇ ಆದವರ ಕುರಿತು ಆಗುವುದೂ ಹೀಗೇ ಅಲ್ಲವೇ? ಅವರಿಗೆ ಎಲ್ಲವೂ ಸಲೀಸು, ಸಹಜವಾಗಿ ಆಗುತ್ತಿರುವಂತೆ ಭಾಸವಾಗಿ ಗಮನ ಹರಿಯದೇ ಹೋಗುತ್ತದೆ.

ಹಗ್ಗದ ಮೇಲೆ ನಡೆವವಳು ಬಾಯ್ಬಿಟ್ಟರಷ್ಟೇ ಒಳಹೂರಣದ ರುಚಿ ತಿಳಿಯುತ್ತದೆ!








Monday 9 March 2015

ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ - ಆಶಯ, ಧ್ಯೇಯ






ಹಲವು ಹೆಜ್ಜೆಗಳು ಒಂದೇ ದಾರಿಯಲ್ಲಿ ನಡೆದ ಸದ್ದು..

ಇವತ್ತು ಮೂರೂವರೆ ಕಿಲೋಮೀಟರು ದೂರ, ಸಾವಿರಾರು ಹೆಜ್ಜೆ ನಡೆದು ಬಂದಾಗ ನಿಮಗೆ ಕೇಳಿಸಿದ್ದು ಏನು? ಹಲವು ಹೆಜ್ಜೆಗಳ ಸದ್ದು. ಏಕಕಾಲಕ್ಕೆ ತಾನೂ ಚಲಿಸುತ್ತ, ಅಕ್ಕಪಕ್ಕ ಇರುವವರನ್ನೂ ತನ್ನ ಜೊತೆ ಸೆಳೆದುಕೊಳ್ಳುತ್ತ ಹಲವು ಹೆಜ್ಜೆಗಳು ಒಂದೇ ದಾರಿಯಲ್ಲಿ ನಡೆದ ಸದ್ದು.

ಮನುಷ್ಯನೆಂಬ ಪ್ರಾಣಿಯನ್ನು ಒಡೆಯಲು ಮೊತ್ತಮೊದಲು ಹೆಣ್ಣುಗಂಡೆಂಬ ಲಿಂಗಭೇಧವಿದೆ. ನಂತರ ತೊಗಲ ಬಣ್ಣದಿಂದ ಹಿಡಿದು ಜಾತಿ/ಧರ್ಮ/ಪಕ್ಷ/ಸಂಘಟನೆ/ಸಿದ್ಧಾಂತ ಇತ್ಯಾದಿ ನಾನಾ ನೆಲೆಗಳಿವೆ. ದಮನಿತ ದನಿಯ ಹೋರಾಟಕ್ಕೆ, ಸಂಘಟನೆಗೆ ಜಾತಿ/ಧರ್ಮ/ಪಕ್ಷ/ಸಂಘಟನೆ/ಸಿದ್ಧಾಂತಗಳು ಕೊಡಮಾಡುವ ಅಸ್ಮಿತೆ ಕೊಂಚ ಬಲ ನೀಡಬಹುದು. ಕರ್ನಾಟಕದ ಎಲ್ಲ ಭಾಗಗಳ ಕ್ರಿಯಾಶೀಲ ಜೀವಗಳನ್ನೊಮ್ಮೆ ನೆನೆದು ನಿಮ್ಮ ಕಣ್ಮುಂದೆ ತಂದುಕೊಂಡರೆ ನಮ್ಮಲ್ಲಿ ಇವತ್ತು ಮಹಿಳೆ, ಶಿಕ್ಷಣ, ಮಾನವಹಕ್ಕು, ಪರಿಸರ, ಸಾಮಾಜಿಕ/ರಾಜಕೀಯ ಸಮಸ್ಯೆಗಳನ್ನೆತ್ತಿಕೊಂಡು ಹೋರಾಟ ನಡೆಸುವ ಸಂಘಟನೆಗಳು, ಸಂಘಸಂಸ್ಥೆಗಳು ಕರ್ನಾಟಕದಾದ್ಯಂತ ನೂರಾರು ಇದ್ದು ಎಂದಿನಿಂದ ಅವಿರತವಾಗಿ ಕೆಲಸ ಮಾಡುತ್ತಿವೆ. ಆದರೆ ಸಂಘಟನೆಯೊಂದರ ಸದಸ್ಯತ್ವ ಬಲ ನೀಡಿದಂತೆಯೇ ಒಂದೊಂದು ಇಸಮುಗಳಿಗೆ ಕಟ್ಟಿ ಹಾಕಿ ಮನುಷ್ಯರನ್ನು ಒಡೆದಿರುವುದೂ ಅಷ್ಟೇ ನಿಜವಾಗಿದೆ.

ಹೀಗೆ ಹೆಣ್ಣು ಕುಲವನ್ನು, ಹೆಣ್ಣು ಮನಸುಗಳನ್ನು ಒಡೆಯಲು ನಾನಾ ನೆಪಗಳಿವೆ; ಆದರೆ ಒಗ್ಗೂಡಿಸಲು ಯಾವುದು ಇದೆ? ಎಲ್ಲ ಬೇಲಿ-ಗಡಿಗಳ ದಾಟಿಸುವಂಥದ್ದು ಏನಿದೆ?

ಈ ಪ್ರಶ್ನೆ ಎರಡು ವರ್ಷದ ಹಿಂದೆ ಕರ್ನಾಟಕದ ಕರಾವಳಿ-ಮಂಗಳೂರು ಧರ್ಮರಕ್ಷಕರ ದಿಕ್ತಟಗಳಲ್ಲಿ ಬೇಯುತ್ತಿರುವಾಗ; ದೆಹಲಿಯ ನಿರ್ಭಯಾ ಪ್ರಕರಣದ ಆಸುಪಾಸು ಯುವಜನತೆ ಬೀದಿಗಿಳಿದು ಪ್ರತಿಭಟಿಸುವಾಗ, ಕ್ರಿಯಾಶೀಲರಾಗಿ ಹಲವು ದಿಕ್ಕುಗಳಲ್ಲಿ ಹರಿದುಹೋದ ಹೆಣ್ಣುಮಕ್ಕಳ ಮನಸಿನಲ್ಲಿ ಹುಟ್ಟಿತು. ಎಲ್ಲ ಕೂಡಿ ಒಂದು ಧಾರೆಯಾಗಿ ಪ್ರವಹಿಸಬೇಕಾದ ಅವಶ್ಯಕತೆ ಇದೆ ಎನಿಸಿತು. ಆದರೆ ಕೂಡಿ ನಡೆಯಲು ಯಾವುದೇ ಸಿದ್ಧ ಮಾರ್ಗವಿಲ್ಲ. ನಡೆಯುತ್ತಲೇ ದಾರಿ, ನಡೆದದ್ದೇ ದಾರಿಯಾಯಿತು.

ಹೀಗೆ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ರೂಪುಗೊಂಡಿತು. ಎಂದರೆ ನೂರು ಸಂಘಟನೆಗಳ ಜೊತೆ ನೂರಾಒಂದನೆಯದಾಗಿ ಇದು ಹುಟ್ಟಲಿಲ್ಲ. ನೂರು ರತ್ನಮಣಿಗಳ ನೇಯ್ದು ಒಂದು ಹಾರವಾಗಿಸುವ ದಾರವಾಗಿ ರೂಪುಗೊಂಡಿತು.

ಇದಕ್ಕಿನ್ನೂ ಪ್ರಣಾಳಿಕೆ ಬರೆಯಲಾಗಿಲ್ಲ. ಸಂಚಾಲಕ ಸಮಿತಿಯಿಲ್ಲ. ತಾಲೂಕು/ಜಿಲ್ಲಾವಾರು ಸಮಿತಿ, ಘಟಕಗಳಿಲ್ಲ. ಆದರೆ ನಮಗೆ ಯಾರನ್ನು ನಾವು ಪ್ರತಿನಿಧಿಸಬೇಕು; ಯಾರ ಪರವಾಗಿ ದನಿಯೆತ್ತಬೇಕು; ಕಾರ್ಯಚಟುವಟಿಕೆಗಳಿಗೆ ಯಾರಿಂದ ಹೇಗೆ ಹಣ ಸಂಗ್ರಹಿಸಬೇಕು ಎನ್ನುವುದರ ಬಗೆಗೆ ಸ್ಪಷ್ಟ ಅಭಿಪ್ರಾಯಗಳಿವೆ. ಏಕೈಕ ದೊಡ್ಡ ಪ್ರಾಯೋಜಕರಿಂದ, ಕಾರ್ಪೋರೇಟ್ ಕುಳಗಳಿಂದ, ಸರ್ಕಾರಿ ಇಲಾಖೆ-ಸಂಸ್ಥೆಗಳಿಂದ; ಪಕ್ಷ-ರಾಜಕಾರಣಿಗಳಿಂದ, ಕೋಮುದ್ವೇಷ ಹರಡುವವರಿಂದ ಪ್ರಾಯೋಜಕತ್ವ ಪಡೆಯಬಾರದು; ಅವರನ್ನು ಸಹಭಾಗಿಗಳಾಗಿ ಇಟ್ಟುಕೊಳ್ಳಬಾರದು ಎಂಬ ಅಲಿಖಿತ ಪ್ರಣಾಳಿಕೆ ಹೊಂದಿದ್ದೇವೆ. ಜನಸಾಮಾನ್ಯರಿಂದ ಕರಪತ್ರ, ಕರವಸ್ತ್ರ, ಪುಸ್ತಕ ಪ್ರಕಟಿಸಿ ಮಾರುವ ಮೂಲಕ ಹಣ ಸಂಗ್ರಹಿಸಿ ಜನಧನದಿಂದ ಕಾರ್ಯಕ್ರಮ ಮಾಡಿದ್ದೇವೆ. ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ಪ್ರಾಮಾಣಿಕವಾಗಿ ಮಿಡಿಯುವ ವ್ಯಕ್ತಿ/ಸಂಘಟನೆ/ಗುಂಪುಗಳು ಲಿಂಗಭೇದ ಮರೆತು ನಮ್ಮೊಡನಿವೆ. ಇಲ್ಲಿ ದಲಿತ, ಎಡಪಂಥೀಯ, ಮಹಿಳಾ, ಮಾನವಹಕ್ಕು, ರೈತ ಸಂಘಟನೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳಿವೆ. ಮಹಿಳೆಗೆ ಬೇಕಿರುವುದು ಮೀಸಲಾತಿ ಅಲ್ಲ, ಬದಲಾಗಿ ಸಮಾನ ಗೌರವ ಮತ್ತು ಪ್ರಾತಿನಿಧ್ಯ. ಸ್ಥಾನದ ಜೊತೆ ಸ್ಥಾನಬೆಲೆಯನ್ನೂ ಪಡೆಯಲು ಮಹಿಳೆ ಎಲ್ಲ ಹೋರಾಟಗಳ ಭಾಗವಾಗಬೇಕು ಎಂದು ಭಾವಿಸುತ್ತ ಒಕ್ಕೂಟವು ತನ್ನ ಇರವಿಗೆ ಚೈತನ್ಯ ತುಂಬಿಕೊಳ್ಳಬಯಸುತ್ತದೆ. ಈ ನಂಬಿಕೆಗಳೊಡನೆ, ಕೆಲ ಲೋಪದೋಷ-ಮಿತಿಗಳ ನಡುವೆಯೂ ಕೆಲಸ ಮಾಡುತ್ತಿದೆ.

ಮೊದಲ ಹೆಜ್ಜೆಗಳನ್ನೇನೋ ಇಟ್ಟೆವು, ಈಗ ನಡೆಯಬೇಕಿರುವ ದಾರಿ ಕಡಿದಾಗಿದೆ, ಕೊನೆಯಿಲ್ಲದುದಾಗಿದೆ.

ಧರ್ಮ, ರಾಜಕಾರಣ ಮತ್ತು ಲೈಂಗಿಕತೆ ಎಂಬ ಪುರುಷ ಪಾರಮ್ಯ ಪಡೆದ ಮೂರು ಕ್ಷೇತ್ರಗಳು ಹೆಣ್ಣನ್ನು ಎಲ್ಲಿಟ್ಟಿವೆ, ಹೇಗೆ ಹಿಂಸಿಸುತ್ತಿವೆ ಎಂದು ನೋಡುತ್ತಿದ್ದೇವೆ. ಕೋಮು ಮತ್ತು ಜಾತಿ ದೌರ್ಜನ್ಯ ಸಂಭವಿಸಿದ ಕಡೆಗಳಲ್ಲಿ ಮಹಿಳೆಯರೂ ಹಿಂಸೆಗೆ ಕುಮ್ಮಕ್ಕು ನೀಡಿದ್ದಕ್ಕೆ ಪುರಾವೆಗಳಿವೆ. ಮೊನ್ನೆ ಈಚೆಗೆ ಸಾಧ್ವಿಯೆಂದು ಕರೆದುಕೊಂಡ ಮುದ್ದು ಬಾಲಿಕೆಯೊಬ್ಬಳು ತಲವಾರು ಹಿಡಿದು ಅನ್ಯಧರ್ಮೀಯರ ರುಂಡ ಚಂಡಾಡುವ ಮಾತನಾಡಿದಳು. ಈ ಕಾಲದಲ್ಲಿ ಸಾಧುಸಂತರು ತ್ರಿಶೂಲ ಹಿಡಿದು ಹೋರಾಡಬೇಕೆಂದು ಕರೆಕೊಟ್ಟಳು. ಇನ್ನೊಂದೆಡೆ ನೈಜೀರಿಯಾದ ಅಪಹೃತ ೧೦ ವರ್ಷದ ಹುಡುಗಿ, ಬೋಕೊ ಹರಾಂ ಗುಂಪಿನ ಸೂಸೈಡ್ ಬಾಂಬರ್ ಆಗಿ ಮಾರ್ಕೆಟ್ ಪ್ರದೇಶದ ಹಲವರ ಸಾವಿಗೆ ಕಾರಣಳಾದಳು. ಐಸಿಸ್ ಎಂಬ ಅತ್ಯುಗ್ರ ಸಂಘಟನೆಯ ಮುಖ್ಯಸ್ಥನ ಹೆಂಡತಿ, ಅವಳೂ ಆತ್ಮಹತ್ಯಾ ಬಾಂಬರ್ ಆಗಿದ್ದವಳು, ಜೋರ್ಡಾನಿನಿಂದ ಪ್ರತೀಕಾರ ಕ್ರಮವಾಗಿ ಮರಣದಂಡನೆಗೆ ಗುರಿಯಾದಳು.

ಇವೆಲ್ಲ ಧರ್ಮ ಸೃಜಿಸುವ ಹಿಂಸೆಗೆ ಹೆಣ್ಣು ದಾಳವಾಗುವ, ಗುರಿಯಾಗುತ್ತಿರುವ ಸಾಕ್ಷಿಗಳು. ಹೀಗಿರುತ್ತ ಸೆಕ್ಯುಲರ್ ಮೌಲ್ಯಗಳಲ್ಲಿ ನಂಬಿಕೆ ಇಟ್ಟಿರುವವರೆಲ್ಲ ಒಗ್ಗೂಡಬೇಕಾದ ಕಾಲ ಇವತ್ತಿನ ತುರ್ತು ಅವಶ್ಯಕತೆಯಾಗಿದೆ. ಎಲ್ಲ ಮಹಿಳೆಯರು ಒಂದಾಗಿ ಪರಸ್ಪರ ಚಿಂತನೆ-ಅನುಭವ-ಭಿನ್ನಮತ ಎಲ್ಲವನ್ನು ಹಂಚಿಕೊಳ್ಳುವುದು ಆರೋಗ್ಯಕರ ಸಮಾಜದ ಸಲುವಾಗಿ ಅನಿವಾರ್ಯವಾಗಿದೆ.

ನಾವು ನಂಬುವ ರಾಜಕಾರಣ ಇದೇ. ಇವತ್ತು ಬಲಪಂಥೀಯ ಕೋಮುವಾದ, ಬಹುಸಂಖ್ಯಾತರ ಕೋಮುವಾದ ಭಾರತವಷ್ಟೇ ಅಲ್ಲ, ಜಗತ್ತಿನ ಬಹುಪಾಲು ದೇಶಗಳ ಮನುಷ್ಯರನ್ನು ದ್ವೇಷದ ವಸ್ತುವಾಗಿ ಮಾರ್ಪಡಿಸುತ್ತಿರುವಾಗ ಪ್ರೀತಿ-ಸಹಬಾಳ್ವೆ-ಬದ್ಧತೆಗಳೆಂಬ ಮಹಿಳಾ ರಾಜಕಾರಣ ಮುನ್ನೆಲೆಗೆ ಬರಲೇಬೇಕು. ಈ ನಂಬಿಕೆಯೊಂದಿಗೆ ಮಹಿಳೆಯರು ಮತ್ತು ಸಮಾನ ಮನಸ್ಕರ ವಾರ್ಷಿಕ ಸಮಾವೇಶಗಳನ್ನು ಸಂಘಟಿಸಿದ್ದೇವೆ. ಕಳೆದೆರೆಡು ಸಮಾವೇಶಗಳು ಮಂಗಳೂರಿನಲ್ಲಿ ಹಾಗೂ ಮೈಸೂರಿನಲ್ಲಿ ನಡೆದಿವೆ. ಇಂಥ ಒಂದು ಬೃಹತ್ ಕಾರ್ಯಕ್ರಮವನ್ನು ಆಗಮಾಡುವುದರ ಹಿಂದೆ ೨-೩ ತಿಂಗಳು ಎಲ್ಲ ಮಹಿಳೆಯರು, ಸಮಾನಮನಸ್ಕರು ಪದೇಪದೇ ಸಭೆಸೇರಿ ಅವಿರತವಾಗಿ ಕೆಲಸ ಮಾಡುವುದು; ಹಲವು ಧಾರೆ-ಚಿಂತನೆ-ಹಿನ್ನೆಲೆಯ ಜೀವಗಳು ಒಂದೊಟ್ಟು ಸೇರಿ ಕೆಲಸ ಮಾಡುವುದೇ ಒಂದು ಅನುಭವ. ಆ ಜೀವಮಾನದ ಪಾಠವನ್ನು ಭಾಗಿಯಾದ ಯಾರೂ ಮರೆಯಲಾರರು.

ಸಹಭಾಗಿ ಸಂಘಟನೆ-ಸಂಸ್ಥೆಗಳ ಯಾದಿ ಹಾಗೂ ಒಕ್ಕೂಟದ ಲೋಗೋ - ಈ ಎರಡೇ ಸಾಕು ಇವತ್ತು ಇಲ್ಲಿ ಇಷ್ಟು ಜನರನ್ನು ಒಂದೆಡೆ ತರಲು ಕನಸುಗಾರರಾದ ಸರಸ್ವತಿ, ಸವಿತ, ಪುಷ್ಪ, ವಿಜಯಮ್ಮ, ಸಬಿಹಾ, ಮರ್ಲಿನ್, ಅಕೈ, ಅಖಿಲಾ, ಜ್ಯೋತಿ ಮತ್ತು ಅವರಂತಹ ಅಸಂಖ್ಯ ಜೀವಗಳು ರಾತ್ರಿ ಹಗಲೆನ್ನದೆ ಇಷ್ಟು ಶ್ರಮ ಹಾಕಿದ್ದರ ಹಿಂದಿನ ಆಶಯ ಏನು ಎನ್ನುವುದನ್ನು ಬಿಂಬಿಸುತ್ತವೆ. ಬೆಂಗಳೂರು ಸಮಾವೇಶದಲ್ಲಿ ಎಲ್ಲ ಸ್ತರದ ಸಂಘಟನೆಗಳೂ ಇವೆ. ಹಳೆಯ-ಹೊಸದರ ಸಂಗಮವೂ ಇದೆ. ದಮನಿತರ ಪರವಾಗಿ ಹೋರಾಡುವ ಸಂಘಟನೆಗಳನ್ನೆಲ್ಲ ಒಂದು ವೇದಿಕೆಯಡಿ, ಒಂದು ಜಾಲದಡಿ ಪರಸ್ಪರ ಸಂಪರ್ಕ ಹೊಂದುವಂತೆ ಮಾಡುವ  ಒಕ್ಕೂಟದ ಆಶಯವನ್ನು ಸಹಭಾಗಿಗಳ ಇರುವಿಕೆಯೇ ಹೇಳುತ್ತಿದೆ.

ಈ ವರ್ಷದ ಸಮಾವೇಶ ಬೆಂಗಳೂರಿನಲ್ಲಿ ನಡೆಯುತ್ತಿದೆ. ಬೆಂಗಳೂರು ರಾಜಧಾನಿ ನಗರವಾಗಿಯಷ್ಟೇ ಅಲ್ಲ, ಚಾರಿತ್ರಿಕವಾಗಿಯೂ ಚಳುವಳಿಗಳನ್ನು, ಚಳುವಳಿಕಾರರನ್ನು ಕಂಡ ಊರು. ಇಲ್ಲಿ ಮಹಿಳಾ-ದಲಿತ-ಬಂಡಾಯ-ಭಾಷಾ-ರೈತ-ಕಾರ್ಮಿಕ-ಸಾಹಿತ್ಯ ಚಳುವಳಿಗಳು ನಡೆದ ಹೆಜ್ಜೆ ಗುರುತುಗಳಿವೆ. ಇದುವರೆಗೆ ಬೆಂಗಳೂರು ಕರ್ನಾಟಕಕ್ಕೆ ಹಲವು ಕ್ರಿಯಾಶೀಲ ಹೆಣ್ಣುಮಕ್ಕಳನ್ನು ನೀಡಿದೆ. ೧೯೧೦ರಲ್ಲಿ ಬೆಂಗಳೂರು ನಾಗರತ್ನಮ್ಮ ತೆಲುಗಿನ ಮುದ್ದು ಪಳನಿಯ ರಾಧಿಕಾ ಸಾಂತ್ವನ ಎಂಬ ಹೆಚ್ಚುಕಮ್ಮಿ ನಿಷೇಧಿತ ಪುಸ್ತಕ ಪ್ರಕಟಿಸಿರುವುದನ್ನು ಮೊದಲು ನೆನಪಿಸಿಕೊಳ್ಳಬೇಕು. ಅಲ್ಲಿಂದ ಹಿಡಿದು ದಲಿತ, ಬಂಡಾಯ, ಬಂಡಾಯೋತ್ತರ ಕಾಲಘಟ್ಟದ ತನಕ ಕರ್ನಾಟಕದ ಎಲ್ಲೆಡೆಯ ಬಂಡಾಯಗಾರರನ್ನು ಬೆಂಗಳೂರು ಸೆಳೆದಿಟ್ಟುಕೊಂಡಿದೆ. ವಿಮೋಚನಾ/ಮಾನಸ/ಮಾನಿನಿ/ವಿಮೆನ್ಸ್ ವಾಯ್ಸ್/ಎಐಎಂಎಸ್‌ಎಸ್ ಇನ್ನಿತರ ಮಹಿಳಾ ಸಂಘಟನೆಗಳ ಹೋರಾಟವನ್ನು; ಹುಣಸೀಕೋಟೆ ಅನಸೂಯಮ್ಮನವರ ದೌರ್ಜನ್ಯ ವಿರುದ್ಧ ದಲಿತ ಚಳುವಳಿ; ಬೂಸಾ ಚಳುವಳಿ; ೮೦-೯೦ರ ದಶಕಗಳ ಬೃಹತ್ ಕಾರ್ಮಿಕ ಚಳುವಳಿ; ಕೆಎಫ್‌ಸಿ ವಿರುದ್ಧ ಹೋರಾಟವನ್ನು ಉತ್ತುಂಗಕ್ಕೊಯ್ದ ಪ್ರೊ. ನಂಜುಂಡಸ್ವಾಮಿಯವರ ರೈತಸಂಘದ ಚಳವಳಿ; ಗೋಕಾಕ್ ವರದಿ ಜಾರಿಗೆ ಒತ್ತಾಯಿಸಿ ನಡೆದ ಭಾಷಾ ಚಳುವಳಿ - ಈ ಎಲ್ಲವನ್ನೂ ಬೆಂಗಳೂರು ಕಂಡಿದೆ. ಆಗ ಸಕ್ರಿಯವಾಗಿ ತೊಡಗಿಸಿಕೊಂಡ ಹಲವು ಜೀವಗಳು ಈಗ ನಮ್ಮ ಕಣ್ಣೆದುರಿಗಿವೆ.

ಪೌರಕಾರ್ಮಿಕರು ಬರಬೇಕಿದ್ದ ವೇತನ ಹೆಚ್ಚಳದ ಅರಿಯರ‍್ಸ್ ಅನ್ನು ಚೆಕ್ ರೂಪದಲ್ಲಿ ಪಡೆದು ತಮ್ಮ ಹೋರಾಟಕ್ಕೆ ಜಯ ಪಡೆದಿರುವುದು ಬೆಂಗಳೂರಿನಲ್ಲಿ. ಲೈಂಗಿಕ/ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಸೆಕ್ಸ್ ವರ್ಕರ್‌ಗಳು ಅತ್ಯಂತ ವ್ಯವಸ್ಥಿತವಾಗಿ ಸಂಘಟಿತವಾಗಿರುವ ನಗರ ಬೆಂಗಳೂರು. ಬೀದಿಬದಿ ವ್ಯಾಪಾರಿಗಳ ಸಂಘಟನೆ/ಬಸ್ ಪ್ರಯಾಣಿಕರ ವೇದಿಕೆಗಳು ಸುಸಂಘಟಿತವಾಗಿ ಕಾರ್ಯ ನಿರ್ವಹಿಸುತ್ತಿರುವುದು ಇಲ್ಲಿಯೇ. ಸ್ಲಂನವರಿಗಾಗಿ ಸ್ಲಂ ಜನಾಂದೋಲನ ಸಮಿತಿ, ಜನಸಹಯೋಗಗಳು ಇಲ್ಲಿವೆ. ಇಂಥ ಕಡೆ ಒಕ್ಕೂಟದ ಮೂರನೆಯ ಸಮಾವೇಶ ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಜೊತೆಗೆ ಈ ಸಮಾವೇಶದ ಕೆಲ ವಿಶೇಷತೆಗಳನ್ನೂ ಗುರುತಿಸಬೇಕಿದೆ:


  • ನೂರು ವರ್ಷ ಕೆಳಗೆ ಗಾರ್ಮೆಂಟ್ ಕಾರ್ಮಿಕರು ಸಮಾನ ವೇತನಕ್ಕಾಗಿ ಆಗ್ರಹಿಸಿ ಕ್ಲಾರಾ ಜೆಟ್ಕಿನ್ ನೇತೃತ್ವದಲ್ಲಿ ಸಂಘಟಿತರಾದರು. ಗಾರ್ಮೆಂಟ್ ಕೆಲಸಗಾರರ ಸಂಘಟನೆಗಳೇ ನಮಗೆ ಈ ವರ್ಷ ೫೦೦೦ ಕರವಸ್ತ್ರ ಹೊಲಿದುಕೊಟ್ಟು ಅವುಗಳ ಮಾರಾಟದಿಂದ ಸರಿ ಸುಮಾರು ಒಂದು ಲಕ್ಷ ಧನ ಸಂಗ್ರಹವಾಗಲು ಕಾರಣವಾಗಿದ್ದಾರೆ.
  • ಇವತ್ತು ಬೆಂಗಳೂರು ಮತ್ತು ಸುತ್ತಮುತ್ತಲ ಶಾಲೆಗಳಲ್ಲಿ ಎಳೆಯ ಮಕ್ಕಳ ಮೇಲೆ ದೌರ್ಜನ್ಯ ವರದಿಯಾಗುತ್ತಿರುವಾಗ, ತನ್ನ ಬಾಲ್ಯವಿವಾಹ ನಿಲ್ಲಿಸಿ ಎಂದು ೯ನೇ ತರಗತಿಯ ಹುಡುಗಿಯೊಬ್ಬಳು ಶಾಲಾ ಕಾರ್ಯಕ್ರಮಕ್ಕೆ ಬಂದ ನ್ಯಾಯಾಧೀಶರೊಬ್ಬರ ಬಳಿ ಅಲವತ್ತುಕೊಂಡಿರುವಾಗ; ಹುಡುಗಿಯರ ನಾಲಿಗೆಯ ಮೇಲೆ ಅಕ್ಷರಗಳ ಬರೆದ, ಜಾಗೃತಿಗಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟ ಸಾವಿತ್ರಿಬಾಯಿ ಫುಲೆ ಅವರಿಗೆ ಈ ವರ್ಷದ ಇಡೀ ಸಮಾವೇಶ ಅರ್ಪಿತವಾಗಿರುವುದು ವಿಶೇಷವಾಗಿದೆ.
  • ಬೆಂಗಳೂರು ನಗರವು ಅಭಿವೃದ್ಧಿ ಎಂಬ ಮಾಯೆಯಲ್ಲಿ ಮುಳುಗಿ, ಕರಗಿ, ಅರಳಿ, ನರಳಿ ಹೊರಳಾಡುತ್ತಿದೆ. ಆದರೆ ಈ ಸುಂದರ ಬೆಂಗಳೂರನ್ನು ಕಟ್ಟಲು ಬೇಕಾದವರೇ ಕಟ್ಟುವುದು ಮುಗಿದಾದ ಮೇಲೆ ನಗರ ಸೌಂದರ್ಯದ ನೆಪದಲ್ಲಿ ಊರಾಚೆ ಬಿಸಾಡಲ್ಪಡುತ್ತಾರೆ. ಸ್ಲಂಗಳು ಬೆಳೆಯುತ್ತ ಹೋಗಿರುವುದೇ ಇದಕ್ಕೆ ಸಾಕ್ಷಿ. ಹೀಗಿರುತ್ತ ಬೆಂಗಳೂರು ನಮ್ಮ ಬೆಂಗಳೂರು ಆಗಬೇಕಾದರೆ; ಮೆಟ್ರೋ ನಮ್ಮ ಮೆಟ್ರೋ ಆಗಬೇಕಾದರೆ ಊರಾಚೆ ಎಸೆಯಲ್ಪಟ್ಟವರನ್ನೂ ಒಳಗೊಳ್ಳಬೇಕಿದೆ. ಸ್ವಚ್ಛ ಬೆಂಗಳೂರು ಸಾಕಾರವಾಗಬೇಕಾದರೆ ಪೌರಕಾರ್ಮಿಕರ ಅಮೂಲ್ಯ ಶ್ರಮವನ್ನು ಗುರುತಿಸಬೇಕಿದೆ. ಎಂದೇ ಈ ಒಕ್ಕೂಟವು ಸ್ಲಂವಾಸಿ/ಪೌರಕಾರ್ಮಿಕರು/ಬೀದಿಬದಿ ವ್ಯಾಪಾರಿ/ಚಿಂದಿ ಆಯುವವರ ಜೊತೆ ಕೆಲಸ ಮಾಡುವ ವ್ಯಕ್ತಿ/ಸಂಘಟನೆಗಳನ್ನು ಸಹಭಾಗಿಯಾಗಿ ಹೊಂದಿದೆ. 
  • ನಾವು ಬದನೆ ಬೀಜ ನೀಡಲಿದ್ದೇವೆ. ರ‍್ಯಾಲಿ ಉದ್ಘಾಟಕರು ನೀರುಣಿಸಿದ ಬೇವಿನ ಗಿಡಗಳನ್ನು ಮಹಾರಾಣೀಸ್ ಕಾಲೇಜಿನ ಆವರಣದಲ್ಲಿ ನೆಡಲಿದ್ದೇವೆ. ಎಲ್ಲ ರೋಗಗಳಿಗೂ ಮದ್ದು ನಾವು ಮಾರಿಕೊಳ್ಳಲಿರುವ ಪೇಟೆಂಟ್ ಹಕ್ಕಿನ ರೂಪದಲ್ಲಿದೆ. ಕಾಪಿರೈಟ್ ಮತ್ತು ಪೇಟೆಂಟ್ ಹಕ್ಕುಗಳೆಂಬ ಜೀವ ವಿರೋಧಿ ಕಾನೂನುಗಳನ್ನು ಸಾರಾಸಗಟಾಗಿ ವಿರೋಧಿಸಲು ಹೆಜ್ಜೆಯಿಡಬೇಕಾದ ಅನಿವಾರ್ಯತೆ ನಮ್ಮೆಲ್ಲರದು ಎಂದು ನಾವು ಪ್ರತಿಪಾದಿಸುತ್ತಿದ್ದೇವೆ.
  • ಹಲವು ತಲೆಮಾರಿನ/ಭಾಷಿಕರ/ಸೈದ್ಧಾಂತಿಕ ಸಂಘಟನೆಗಳ ಸಂಗಮ ಈ ಒಕ್ಕೂಟ. ಕನ್ನಡವೇ ಬರದ ಎಷ್ಟೋ ಜನ ನಮ್ಮೊಡನೆ ಕೆಲಸ ಮಾಡಿದ್ದಾರೆ. ನಮ್ಮ ಕರಪತ್ರವು ಇಂಗ್ಲಿಷ್‌ಗೆ ಅನುವಾದಗೊಂಡಿರುವುದು ಇದಕ್ಕೆ ಸಾಕ್ಷಿ. ಇದೂ ಒಂದು ವಿಶೇಷವೇ.
  • ಭೋಪಾಲಿನ ಇಬ್ಬರು ಮಹಿಳೆಯರು - ರಶೀದಾಬಿ ಮತ್ತು ಚಂಪಾದೇವಿ ಶುಕ್ಲಾ - ಅತಿಥಿಗಳಾಗಿ ನಮ್ಮೊಂದಿಗಿದ್ದಾರೆ. ಮೂರು ದಶಕಗಳ ಹೋರಾಟದ ಬಳಿಕ ಯೂನಿಯನ್ ಕಾರ್ಬೈಡ್ ವಿರುದ್ಧ ಸಂತ್ರಸ್ತರಿಗೆ ಜಯ ಸಿಕ್ಕಿತೋ ಇಲ್ಲವೋ, ಆದರೆ ಮತ್ತಷ್ಟು ಭೋಪಾಲ್‌ನಂತಹ ದುರಂತಗಳು ವಿಶ್ವದಲ್ಲಿ ಸಂಭವಿಸದೇ ಇರಲಿ ಎಂದು ಅಲ್ಲಿನ ಮಹಿಳೆಯರು ದುರಂತದ ನೆನಪುಗಳನ್ನು ಜೀವಂತ ಇಟ್ಟು ಹೋರಾಟದ ಸ್ಫೂರ್ತಿಯಾಗಿದ್ದಾರೆ. ಮೊನ್ನೆ ಬಂದ ರೈತ ವಿರೋಧಿ ಸುಗ್ರೀವಾಜ್ಞೆಯಂತಹ ಕಂಡ-ಕಾಣದ ಹತ್ತುಹಲವು ಕಾನೂನುಗಳು ಈ ನೆಲದ ಸಾಮಾನ್ಯನ ಹಕ್ಕುಗಳನ್ನು ಕಿತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ಬೇಷರತ್ತಾಗಿ ಕೊಡಹೊರಟಿರುವಾಗ ಭೋಪಾಲ್ ಸಂತ್ರಸ್ತರ ಪರವಾಗಿ ಕೆಲಸ ಮಾಡುವವರ ಅನುಭವ, ಅಭಿಪ್ರಾಯಗಳು ಅಮೂಲ್ಯವಾಗಿವೆ. 
  • ಹೆಣ್ಣು ಎನ್ನುವುದು ಒಂದು ವ್ಯಕ್ತಿ. ಹೆಣ್ತನ ವ್ಯಕ್ತಿತ್ವದ ಒಂದು ಭಾಗ. ಎಂದೇ ಒಕ್ಕೂಟದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು, ಸಮಾನ ಮನಸ್ಕ ಪ್ರಗತಿಪರ ಸಂಘಟನೆಗಳೂ ಸಹಭಾಗಿಗಳಾಗಿವೆ.


***

ನಮ್ಮನ್ನು ಕನಸುಗಾರರೆಂದಾದರೂ ಕರೆಯಿರಿ, ಅವಾಸ್ತವವಾದಿಗಳೆಂದಾದರೂ ಕರೆಯಿರಿ, ಕೆಲಸವಿಲ್ಲದವರೆಂದಾದರೂ ಜರೆಯಿರಿ ಬೇಸರವಿಲ್ಲ, ಈ ಅನುಭವ ಮಂಟಪದಲ್ಲಿ ನಾವು ಸೇರಿದ್ದೇವೆ. ಕಳೆದ ವರ್ಷ ಅವಿರತವಾಗಿ ಒಕ್ಕೂಟಕ್ಕೆ ದುಡಿದಿದ್ದ ವೀಣಾ, ನೆಚ್ಚಿನ ವಸು ಹಾಗೂ ಅವರಂಥ ಪ್ರಿಯ ಚೇತನಗಳು ನಮ್ಮ ನಡುವೆ ಇವತ್ತು ಇಲ್ಲ. ಆದರೆ ಅಗಲಿದ ಸಂಗಾತಿಗಳ ಉಸಿರಿನ ನೆನಪಿನಲ್ಲಿ ಇಷ್ಟು ಮಾತ್ರ ಧೃಢವಾಗಿ ಹೇಳೋಣ:

ವಿ ಆರ್ ದ ಪೀಪಲ್ ವಿದೌಟ್ ಬಾರ್ಡರ‍್ಸ್. 
ವಿ ಆರ್ ಮೇಕಿಂಗ್ ಹಿಸ್ಟರಿ. 
ವಿ ಆಲ್ಸೋ ಮೇಕ್ ಹಿಸ್ಟರಿ.

Monday 2 March 2015

ಐಕ್ಯತೆ: ಮಹಿಳಾ ಮಾರ್ಗದ ತುರ್ತು




(ಚಿತ್ರ: ಕೃಷ್ಣ ಗಿಳಿಯಾರು)
ಮಹಿಳಾ ಸಮಾನತೆಗಿರುವ ತಡೆಗೋಡೆಗಳು

ಪ್ರೇಮ ಈ ಜಗತ್ತನ್ನು ಸೃಷ್ಟಿಸಿದೆ, ಆದರೆ ಆಳುತ್ತಿರುವುದು ಹಿಂಸೆಯೆ? ಹೀಗೊಂದು ಅನುಮಾನ ಸೂಕ್ಷ್ಮ ಮನಸುಗಳನ್ನು ಕಾಡುವಂತೆ ವರ್ತಮಾನದ ಸನ್ನಿವೇಶವಿದೆ. ಹಿಂಸೆ ಎಷ್ಟು ಹಾಸುಹೊಕ್ಕಾಗಿದೆ ಎಂದರೆ ಹಿಂಸೆ ಹಿಂಸೆಯೆಂದೇ ಅನ್ನಿಸದಷ್ಟು ಮಾನವ ಮನಸು ಜಡ್ಡುಗಟ್ಟಿದೆ. ಗೋಚರ-ಅಗೋಚರ ಸ್ವರೂಪಗಳ ಹಿಂಸೆ ನಮ್ಮ ಮಿದುಳನ್ನಾಳುತ್ತಿರುವಾಗ ಜಾತಿ/ಧರ್ಮ/ರಾಷ್ಟ್ರ/ಭಾಷೆಗಳ ಮೇಲಿನ ಸಿಟ್ಟನ್ನು ಪುರುಷ ಜಗತ್ತು ಹೆಣ್ಣಿನ ಮೇಲೆ ತೀರಿಸಿಕೊಳ್ಳುವುದು ದಿನ ಕಳೆದಂತೆ ಹೆಚ್ಚಾಗುತ್ತಿದೆ. ವೈಯಕ್ತಿಕ ದೌರ್ಬಲ್ಯವಿರಲಿ, ಬದಲಾಗುತ್ತಿರುವ ಸಮಾಜದ ಆದ್ಯತೆಗಳಿರಲಿ, ಮಾರುಕಟ್ಟೆಯ ಬೆಳವಣಿಗೆಯಿರಲಿ, ವಿಜ್ಞಾನ-ತಂತ್ರಜ್ಞಾನದ ಓಟವಿರಲಿ - ಎಲ್ಲವೂ ಮಹಿಳಾ ಘನತೆಯನ್ನು ಲೆಕ್ಕಕ್ಕೇ ತೆಗೆದುಕೊಳ್ಳದೇ ಸ್ವಾತಂತ್ರ್ಯಹರಣದ ಉಪಕರಣಗಳಾಗಿರುವ ವಿಪರ್ಯಾಸ ಆಧುನಿಕ ಸಮಾಜದ್ದಾಗಿದೆ.

ಮಹಿಳೆಯ ಮೇಲೆ ದೌರ್ಜನ್ಯ ಎಸಗುವುದರಲ್ಲಿ ಕೇವಲ ವ್ಯಕ್ತಿಗಳಷ್ಟೇ ಅಲ್ಲ, ವ್ಯವಸ್ಥೆಯೂ ಶಾಮೀಲಾಗಿದೆ. ಲಿಂಗತಾರತಮ್ಯದ ಆತ್ಯಂತಿಕ ದುಷ್ಟತನ ಹೆಣ್ಣು ಭ್ರೂಣಹತ್ಯೆ ಮತ್ತು ಅದು ಸೃಷ್ಟಿಸಿರುವ ಲಿಂಗಾನುಪಾತ ಇಳಿಕೆಯಾಗಿ ಕಾಣಿಸಿಕೊಂಡು ಹಲವು ಸಮಸ್ಯೆಗಳನ್ನು ಸೃಷ್ಟಿಸಿದೆ. ಅಧಿಕಾರ ವಂಚನೆ; ಕುಲಗೌರವ-ಪರಂಪರೆ-ಸಂಸ್ಕೃತಿಯ ಹೆಸರಿನ ದೌರ್ಜನ್ಯಗಳು; ಕುಟುಂಬಯೋಜನೆ ಹಕ್ಕುಗಳ ನಿರಾಕರಣೆ; ಬಲವಂತದ ವೇಶ್ಯಾವಾಟಿಕೆಗೆ ದೂಡುವುದು; ಮಾನವ ಕಳ್ಳಸಾಗಾಣಿಕೆ ಮತ್ತು ಲೈಂಗಿಕ ಗುಲಾಮರಂತೆ ನಡೆಸಿಕೊಳ್ಳುವುದು; ಮಾಟಗಾತಿ, ವ್ಯಭಿಚಾರಿಯ ಪಟ್ಟ ಕಟ್ಟಿ ಕೊಲ್ಲುವುದು - ಇಂಥವೆಲ್ಲ ಸಮಾಜದ ಲಿಂಗ ನಿರ್ಮಿತಿಯಿಂದಲೇ ಹುಟ್ಟಿಕೊಂಡ ದೌರ್ಜನ್ಯಗಳು. ಅಷ್ಟೇ ಅಲ್ಲ; ಚಕಮಕಿ ನಡೆಯುವ ಗಡಿಭಾಗಗಳು, ನಾಗರಿಕ ಅಶಾಂತಿಯಿರುವ ಪ್ರದೇಶಗಳಲ್ಲಿ ರಕ್ಷಣಾ ಪಡೆಗಳಿಗೆ ನೀಡಲಾಗಿರುವ ವಿಶೇಷ ಅಧಿಕಾರವೂ ಸೇರಿದಂತೆ ನಾಗರಿಕರನ್ನು ಕಾಯುವ ವ್ಯವಸ್ಥೆಯೂ ಮಹಿಳಾ ದೌರ್ಜನ್ಯದ ಪಾಲುದಾರನಾಗಿದೆ.

ವಿಶ್ವಾದ್ಯಂತ ನಿರಂತರ ಸಂಭವಿಸುತ್ತಿರುವ ಮಹಿಳೆಯರ ದೌರ್ಜನ್ಯಕ್ಕೆ ಇರುವ ಕಾರಣ ಎಂದಿನಿಂದಲೂ ಇರುವ ಲಿಂಗತಾರತಮ್ಯ. ಪುರುಷ ಪ್ರಧಾನ ಸಮಾಜ ಸೃಷ್ಟಿಸಿದ ಅಸಮಾನ ಬಯಲಿನಲ್ಲಿ ನಿರಂತರ ಅಧಿಕಾರ ಹಂಚಿಕೆಯ ಮೋಸಕ್ಕೊಳಗಾದವಳು ಹೆಣ್ಣು. ದೌರ್ಜನ್ಯದ ಉದ್ದೇಶ ಹೆಣ್ಣನ್ನು ಸದಾ ಶರಣಾಗತ ಮನಸ್ಥಿತಿಯಲ್ಲಿಡುವುದಾಗಿದೆ. ಅವಳನ್ನು ಆಸ್ತಿಯೆಂದು ಪರಿಗಣಿಸಿ ಹಾಗೂ ಒಂದು ನಿರ್ದಿಷ್ಟ ಪಾತ್ರವನ್ನು ಆರೋಪಿಸಿ ವಿಧಿಸಲಾಗಿರುವ ನೀತಿ ನಿಯಮಾವಳಿಗಳೂ ದೌರ್ಜನ್ಯದ ಕಾರಣವಾಗಿವೆ.

ಪ್ರಪಂಚದ ಯಾವುದೇ ದೇಶ, ಯಾವುದೇ ಸಂಸ್ಕೃತಿಯೂ ಹೆಣ್ಣನ್ನು ನ್ಯಾಯಯುತವಾಗಿ ನಡೆಸಿಕೊಂಡಿಲ್ಲ. ಸನಾತನ ಭಾರತದ ಮಾತು ಬಿಡಿ, ೧೯ನೇ ಶತಮಾನದ ಕೊನೆ ಭಾಗದ ತನಕ ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಬಹುತೇಕ ಪಾಶ್ಚಿಮಾತ್ಯ ದೇಶಗಳೂ ಕೂಡ ಹೆಂಗಸು ಕರ್ತವ್ಯದ ಗೆರೆ ದಾಟಿದರೆ ಅವಳಿಗೆ ‘ಸ್ವಲ್ಪ’ ಶಿಕ್ಷೆ ಕೊಡುವ ಹಕ್ಕು ಗಂಡಸಿಗಿದೆ ಎಂಬ ಕಾನೂನನ್ನು ಎತ್ತಿ ಹಿಡಿದಿದ್ದವು. ರಾಜಕೀಯ ಅಧಿಕಾರ ಮತ್ತು ಹೆಣ್ಣು ವಿರುದ್ಧ ಪದಗಳಾಗಿದ್ದವು.

ಯಾಕಾದರೂ ಮಾನವಕುಲ ಲಿಂಗತಾರತಮ್ಯ ರೂಢಿಸಿಕೊಂಡಿತು? ಕೇವಲ ಮಾನವರಂತೆ ಗಂಡುಹೆಣ್ಣು ಜೊತೆ ಸಾಗಬೇಕಾದರೆ ಏನು ಮಾಡಬೇಕು? ದೌರ್ಜನ್ಯಕ್ಕೆ ಮಹಿಳೆಯ ಪ್ರತಿರೋಧ ಇರಲಿಲ್ಲವೇ? ಇದ್ದರೆ ಯಾವ ಸ್ವರೂಪದ್ದಾಗಿತ್ತು?

ಮಹಿಳಾ ಚಳುವಳಿ ಮತ್ತು ಸಂಘಟನೆ 

ವೈಯಕ್ತಿಕ ನೆಲೆಯ ಹಾಗೂ ಧಾರ್ಮಿಕ ನೆಲೆಯ ಸುಧಾರಣಾ ಪ್ರಯತ್ನಗಳು ಅಲ್ಲಿಲ್ಲಿ ಸಂಭವಿಸಿದರೂ ಸಂಘಟಿತ ಹೋರಾಟ ಕಂಡುಕೊಳ್ಳಲು ಮಹಿಳಾ ಸಮೂಹ ೧೯ನೇ ಶತಮಾನದ ತನಕ ಕಾಯಬೇಕಾಯಿತು. ೧೯ನೇ ಶತಮಾನದ ಉತ್ತರಾರ್ಧ ಹಾಗೂ ೨೦ನೇ ಶತಮಾನದ ಮೊದಲ ಭಾಗದಲ್ಲಿ ಮಹಿಳೆಯರ ಸಂಘಟಿತ ದನಿ ಕೇಳಿಬಂತು. ಆದರೂ ಮೊದಲ ಮಹಿಳಾ ಚಳುವಳಿಯು ಸಮಾನ ಅವಕಾಶ, ಸಮಾನ ವೇತನ, ಸಮಾನ ನಾಗರಿಕ ಹಕ್ಕುಗಳಿಗಾಗಿಯೇ ಹೋರಾಟ ನಡೆಸಿತು. ಮೊದಲಿಗೆ ಮಹಿಳೆಯರ ಮೇಲಿನ ಹಿಂಸೆಯನ್ನು ಆರೋಗ್ಯ ಸಮಸ್ಯೆ ಎಂಬಂತೆ ನೋಡಲಾಗುತ್ತಿತ್ತು. ಎರಡು ಮಹಾಯುದ್ಧಗಳ ನಂತರ ೧೯೬೦-೭೦ರ ದಶಕದ ಮಹಿಳಾ ಬರಹ-ಚಳುವಳಿಗಳು ಕೊಂಚ ತೀವ್ರಗಾಮಿ ಸ್ವರೂಪ ಪಡೆದುಕೊಂಡವು. ಅವು ಆ ಕಾಲದಲ್ಲಿ ನಡೆದ ಉಳಿದ ಪ್ರಗತಿಪರ ಚಳುವಳಿಗಳ ಪ್ರಭಾವ ಮತ್ತು ಒತ್ತಾಸೆ ಪಡೆದಿದ್ದವು. ಮನೆಯ ಒಳಗೆ ಮತ್ತು ಹೊರಗೆ ಸಮಾನ ಗೌರವ; ಪ್ರಜನನ ಮತ್ತಿತರೆ ಹಕ್ಕುಗಳಿಗಾಗಿ ಪ್ರತಿಪಾದಿಸಿ ಹೋರಾಡುತ್ತ ವಿಮೋಚನೆಯ ಮಾತುಗಳನ್ನಾಡಿದವು.

೧೯೯೦ರಿಂದೀಚೆಗೆ ಮಹಿಳಾ ದೌರ್ಜನ್ಯವನ್ನು ಮಾನವ ಹಕ್ಕು ಉಲ್ಲಂಘನೆ ಎಂದು ಗುರುತಿಸಲಾಯಿತು. ತಾಂತ್ರಿಕ ಪರಿಣತಿಯ ಹಾಗೂ ಜಾಗತೀಕರಣಗೊಂಡ ವಿಶ್ವದಲ್ಲಿ ಮೂರನೇ ಅಲೆಯ ಮಹಿಳಾ ಚಳುವಳಿಯು ಲಿಂಗ ಅಸ್ಮಿತೆಯ ರಾಜಕಾರಣ, ದೇಹ ರಾಜಕಾರಣ ಹಾಗೂ ದೌರ್ಜನ್ಯವನ್ನು ಗುರುತಿಸಿತು. ಜೊತೆಗೆ ವರ್ಗ, ಲಿಂಗ, ಜನಾಂಗ ಹಾಗೂ ವಯೋಮಾನ ಆಧಾರಿತ ದೌರ್ಜನ್ಯಗಳನ್ನು, ಹೆಣ್ಣಿನ ವಿರುದ್ಧ ಚಾಲ್ತಿಯಲ್ಲಿರುವ ಹೊಸಬಗೆಯ ಯುದ್ಧನೀತಿಗಳನ್ನು ಗುರುತಿಸಿ ಗಡಿಗೆರೆಗಳಿಂದ ಮಹಿಳೆಯನ್ನು ಕಟ್ಟಿಹಾಕದಂತೆ ಮಹಿಳಾ ಸಮಸ್ಯೆಗಳನ್ನು ಅಂತರರಾಷ್ಟ್ರೀಕರಣಗೊಳಿಸುತ್ತ ಬಂತು. ಸೋದರಿತ್ವದ ಮಾತನಾಡತೊಡಗಿತು. ಈಗ ಜಾಗೃತ ಮಹಿಳಾ ಪ್ರಜ್ಞೆಯು ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು, ಪ್ರಭುತ್ವ ಮತ್ತು ಸಾಮಾಜಿಕ ಹಿಂಸೆಯ ಬದಲಾದ ಸ್ವರೂಪಗಳನ್ನು ಪ್ರಶ್ನಿಸುತ್ತಿದೆ. ನಂಬಿಕೆ-ಆಚರಣೆಗಳನ್ನು, ಮೂಲ ಕುಟುಂಬ ವ್ಯವಸ್ಥೆಯಲ್ಲೇ ಅಡಗಿರುವ ಲಿಂಗತಾರತಮ್ಯವನ್ನು ಗುರುತಿಸಿ ಪ್ರಶ್ನಿಸುತ್ತದೆ.

ರಾಜಕೀಯ ಪಕ್ಷಗಳು ಹಾಗೂ ಮುಖ್ಯವಾಹಿನಿ ರಾಜಕಾರಣವು ಮಹಿಳೆಯ ಸ್ಥಾನಮಾನ ಹೆಚ್ಚಿಸುವುದನ್ನು ಎಂದೂ ತಮ್ಮ ಆದ್ಯತೆಯನ್ನಾಗಿ ಮಾಡಿಕೊಳ್ಳಲಿಲ್ಲ. ರಾಜಕಾರಣದ ಬಯಲು ಪುರುಷ ಪ್ರಧಾನವಾಗಿರುವ ಕಾರಣದಿಂದ ಸರ್ಕಾರೇತರ ಸಂಘ-ಸಂಸ್ಥೆಗಳಾಗಿ ಮಹಿಳಾ ಸಂಘಟನೆಗಳು ಕೆಲಸ ಮಾಡುವ ಅನಿವಾರ್ಯತೆ ಸೃಷ್ಟಿಯಾಯಿತು. ಹೀಗೆ ಸ್ವಾಯತ್ತ ಸಂಘಟನೆಗಳು ಪ್ರತಿ ಅಲೆಯ ಮಹಿಳಾ ಚಳುವಳಿಯ ಹೊತ್ತಿನಲ್ಲೂ ಹುಟ್ಟಿಕೊಂಡವು. ತಮ್ಮ ಆದ್ಯತೆಗಳನ್ನು ಗುರುತಿಸಿಕೊಂಡು ಕೆಲಸ ಮಾಡತೊಡಗಿದವು. ಸ್ಥಳೀಯವಾಗಿ ಮಹಿಳಾ ಜಾಗೃತಿ/ಸಂಘಟನೆಗೆ ಯತ್ನಿಸುವುದು ಹಾಗೂ ತನ್ಮೂಲಕ ಸಮಾಜ ಮಹಿಳಾ ಸ್ನೇಹಿಯಾಗುವಂತಹ ಸಾಂಸ್ಥಿಕ ಬದಲಾವಣೆಗೆ ಒತ್ತಡ ತರುವುದು ಅಂಥ ಸಂಘಟನೆಗಳ ಉದ್ದೇಶ. ಸ್ಪಷ್ಟವಾದ ಆದರೆ ನೇರ ಮತ್ತು ಗಟ್ಟಿಯಾದ ಧ್ವನಿಯಲ್ಲಿ ಅವು ಹಕ್ಕೊತ್ತಾಯ ತರತೊಡಗಿದವು. ಗಡಿಯ ಹಂಗು ತೊರೆದ ಸಂಘಟನೆಗಳಿರುವಂತೆಯೇ ಒಂದೊಂದು ಪ್ರದೇಶಕ್ಕೆ, ಗುರಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡ ಅಸಂಖ್ಯ ಸಂಘಟನೆಗಳೂ ಹುಟ್ಟಿದವು.

ಎಲ್ಲದರ ಉದ್ದೇಶ ಒಂದೇ: ಮಹಿಳಾ ಸಮಾನತೆ, ಸಮಾನ ಗೌರವ ಹಾಗೂ ದೌರ್ಜನ್ಯ ತಡೆ.

ಇದು ಜಾಗತಿಕ ವಿದ್ಯಮಾನವಾದರೆ ಕರ್ನಾಟಕದಲ್ಲಿ ನಡೆದ ಎಲ್ಲ ಚಳುವಳಿಗಳಲ್ಲಿ ಮಹಿಳೆಯರೂ ಮುನ್ನೆಲೆಗೆ ಬಂದರು. ಮಹಿಳಾ ಚಳುವಳಿ ಸ್ಪಷ್ಟವಾಗಿ, ವಿಸ್ತೃತ ನೆಲೆಯಲ್ಲಿ ಬಹುಕಾಲ ನಿಲ್ಲಲಾಗಲಿಲ್ಲ ಎನ್ನುವುದಕ್ಕೆ ಹಲವು ಕಾರಣಗಳಿದ್ದರೂ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಬಂಡಾಯ ಸಂಘಟನೆ, ಎಡಪಂಥೀಯ ಸಂಘಟನೆಗಳ ಮಹಿಳಾ ಘಟಕಗಳಲ್ಲಿ ಆಯಾ ಸೈದ್ಧಾಂತಿಕ-ವಲಯ ಚೌಕಟ್ಟಿನಲ್ಲೇ ಹಲವು ಮಹಿಳೆಯರು ಕ್ರಿಯಾಶೀಲವಾಗಿ ತೊಡಗಿಕೊಂಡರು. ಹಲವಾರು ಸಂಘಟನೆಗಳು ಮಹಿಳಾ ಪರ ಉದ್ದೇಶವಿಟ್ಟುಕೊಂಡು ಸ್ವಾಯತ್ತ ಸಂಘಟನೆಯಾಗಿ, ಸರ್ಕಾರೇತರ ಸಂಸ್ಥೆಯಾಗಿ, ವೇದಿಕೆಗಳಾಗಿ ಕೆಲಸ ಮಾಡುತ್ತಿವೆ. ಜೊತೆಗೆ ಕಾರ್ಮಿಕ ವಲಯದ ಮಹಿಳೆಯರಿಗಾಗಿಯೂ ಸಂಘಟನೆಗಳಿವೆ. ಬಹುಪಾಲು ಎಲ್ಲವೂ ಸ್ಥಳೀಯವಾಗಿ ಹೋರಾಡುತ್ತಿವೆ; ಒಂದು ನಿರ್ದಿಷ್ಟ ತಾತ್ವಿಕತೆ/ಗುರಿಯನ್ನಿಟ್ಟುಕೊಂಡು ಹೋರಾಡುತ್ತಿವೆ ಹಾಗೂ ಜನಜಾಗೃತಿಗೂ ಶ್ರಮಿಸುತ್ತಿವೆ. ಸಾಮಾಜಿಕವಾಗಿ, ಸ್ಥಳೀಯವಾಗಿ ಮಹಿಳೆಯನ್ನು ಗ್ರಹಿಸುವ ಹಾಗೂ ದೌರ್ಜನ್ಯ ತಡೆಗೆ ಸಮಾಜ ಮುಂದಾಗಲೆಂಬ ಆಶಯವನ್ನಿಟ್ಟುಕೊಂಡೇ ಎಲ್ಲವೂ ಕೆಲಸ ಮಾಡುತ್ತಿವೆ.

ಆದರೆ ಮಹಿಳೆಯರ ಸಂಘಟನೆ-ಹೋರಾಟಗಳನ್ನು, ಸಂಘಟಿತ ಪ್ರಯತ್ನಗಳನ್ನು ಮುಖ್ಯವಾಹಿನಿಯ ಮಾಧ್ಯಮಗಳು ಹಾಗೂ ಸಮಾಜ ಇತ್ತೀಚಿನವರೆಗೂ ಗುರುತಿಸಲಿಲ್ಲ. ಸಂಘಟಿತ ಪ್ರಯತ್ನಗಳು ಅಗೋಚರವಾಗುಳಿದರೂ ಅದರ ಪ್ರತಿಫಲವನ್ನು ದೌರ್ಜನ್ಯ ವಿರೋಧಿ ಕಾನೂನು, ಮೀಸಲಾತಿ, ಪ್ರಾತಿನಿಧ್ಯ, ಬದಲಾದ ನ್ಯಾಯದ ಪರಿಕಲ್ಪನೆಗಳಲ್ಲಿ ಕಾಣಬಹುದಾಗಿದೆ. ಇವತ್ತು ಮಹಿಳಾ ಸಂಘಟನೆಗಳಷ್ಟೇ ಅಲ್ಲ, ಮಾನವ ಪರ ಮನಸುಗಳೆಲ್ಲ ಮಹಿಳಾ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರೆ; ಮಹಿಳಾ ದೌರ್ಜನ್ಯವು ಮಾನವ ಹಕ್ಕು ಉಲ್ಲಂಘನೆ ಎಂದು ಪರಿಗಣಿಸಲ್ಪಡುತ್ತಿದ್ದರೆ ಅದರ ಹಿಂದೆ ಸಮಾಜ ಗುರುತಿಸದ ಮಹಿಳಾ ಹೋರಾಟದ ಹೆಜ್ಜೆಗಳಿವೆ.


ಸಮಾನತೆಯತ್ತ: ಕೆಲವು ಸವಾಲು, ಸಲಹೆ..

ಮಹಿಳಾ ಸಂಘಟನೆ ಮತ್ತು ಜಾಗೃತಿಯು ಆಂತರ್ಯದಲ್ಲೆ ಕೆಲವು ಸವಾಲುಗಳನ್ನು ಹೊಂದಿದೆ:


  • ನಮ್ಮ ಸಂವಿಧಾನ ಮಹಿಳೆಯನ್ನು ಒಬ್ಬ ವ್ಯಕ್ತಿಯಾಗಿ ನೋಡುತ್ತದೆ. ಆದರೆ ಧರ್ಮ ಬೇರೆಯೇ ಚೌಕಟ್ಟು ವಿಧಿಸುತ್ತದೆ. ಸಂವಿಧಾನ ಧರ್ಮದ ಕುರಿತು ಮಾತನಾಡುವುದಿಲ್ಲ. ಅದು ವ್ಯಕ್ತಿಯ ಸ್ವಾತಂತ್ರ್ಯ ಎನ್ನಲಾಗಿದೆ. ಇದು ಮಹಿಳೆಯ ಸ್ವಂತ ವ್ಯಕ್ತಿತ್ವ, ಅಭಿಪ್ರಾಯ ರೂಪುಗೊಳಿಸುವಲ್ಲಿ ಹಲವು ಗೊಂದಲಗಳನ್ನು ಸೃಷ್ಟಿಸಿದೆ. ಏಕೆಂದರೆ ಲಿಖಿತ ಕಾನೂನು ಎಲ್ಲರೂ ಸಮಾನ ಎನ್ನುತ್ತದೆ. ಆದರೆ ಸಮಾಜ, ಧರ್ಮದ ಕಟ್ಟಳೆಗಳು ಹೊರಿಸುವ ಜವಾಬ್ದಾರಿಗಳಾದರೋ ಸಮಾನತೆಯ ಪದದ ಅರ್ಥವನ್ನೇ ಮೂಲೆಗೆಸೆದುಬಿಟ್ಟಿವೆ. ಜೊತೆಗೆ ಮಹಿಳೆಯು ತನ್ನ ಜಾತಿ/ಧರ್ಮದ ಸಂಘಟನೆಯ ಭಾಗವಾದರೆ ಅವಳ ಮಾತು, ಚಿಂತನೆ, ಕ್ರಿಯೆಯಲ್ಲಿ ಒಂದು ಮಿತಿ ತಂತಾನೇ ಒದಗಿಬಿಡುತ್ತದೆ. ಅಂಥ ಸಂಘಟನೆಯ ಭಾಗವಾಗಬೇಕಾದಾಗಲೂ ಸೋದರಿತ್ವದ ಆಶಯವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಸಂಘಟನೆಯು ತನ್ನ ಚೇತನವನ್ನು ಮಿತಿಗೊಳಿಸದಂತೆ ತನ್ನ ಪಾತ್ರ ಏನಿರಬೇಕೆಂದು ಸ್ಪಷ್ಟಗೊಳಿಸಿಕೊಳ್ಳಬೇಕಾಗಿದೆ.
  • ಮಹಿಳೆಯರಿಗೆ ಜಾಗೃತಿ-ರಾಜಕೀಯ ಪ್ರಜ್ಞೆ ಬಂದರೆ ಚಳುವಳಿ-ಸಂಘಟನೆಗಳ ದಿಕ್ಕೇ ಬದಲಾಗಿಹೋಗುತ್ತದೆ. ಒಂದು ಶತಮಾನದಷ್ಟು ಹಿಂದೆ ಅಂಬೇಡ್ಕರ್, ಗಾಂಧಿ ನಂತರ ಲೋಹಿಯಾ ಕೂಡಾ ಇದನ್ನೇ ಹೇಳಿದ್ದು. ರಾಜಕೀಯ ಪ್ರಜ್ಞೆ ಎಂದರೆ ತನಗೇನು ಆಗುತ್ತಿದೆ? ಸುತ್ತಮುತ್ತ ಏನು ನಡೆಯುತ್ತಿದೆ? ಎಲ್ಲಿ ಬದಲಾವಣೆ ಅವಶ್ಯವಿದೆ? ಅದಕ್ಕಿರುವ ಮಾರ್ಗವೇನು ಎಂಬ ಅರಿವು. ದೇಶದ ಅರ್ಧದಷ್ಟು ಜನಸಂಖ್ಯೆಯ ಮಹಿಳೆಯರು ತಮ್ಮ ಹಕ್ಕು, ಕರ್ತವ್ಯಗಳ ಬಗ್ಗೆ ಜಾಗೃತಗೊಂಡರೆ ಸಮಾಜದ ಒಟ್ಟಂದವೇ ಬದಲಾಗುವುದರಲ್ಲಿ ಅನುಮಾನವಿಲ್ಲ. ಆದರೆ ಅದು ಸುಲಭದ ಮಾತಲ್ಲ. ಏಕೆಂದು ಈ ದೇಶದ ಸಮಾಜ, ಸಮಾಜ ರಚನೆಯನ್ನು ಗಮನಿಸಿದರೆ ತಿಳಿಯುತ್ತದೆ: ಸಂಘಟನೆ ಎಲ್ಲ ಕಾಲದಲ್ಲೂ ಮಹಿಳೆಗೆ ಕಷ್ಟವೇ ಆಗಿದೆ. ಕೌಟುಂಬಿಕ ಜವಾಬ್ದಾರಿ, ವೃತ್ತಿ ಹಾಗೂ ಮನೆಯ ಹೆಚ್ಚುವರಿ ಕೆಲಸಗಳು ಮಹಿಳೆಗೆ ತನಗಾಗಿ ಸಮಯ ಮೀಸಲಿಟ್ಟುಕೊಳ್ಳುವುದನ್ನು ಊಹಿಸದಂತೆ ಮಾಡಿವೆ. ನಾನು, ನನ್ನ ಸಮಯ ಎಂದರೆ ಅದು ಸ್ವಾರ್ಥದ ಮಾತಾಗಿ ಕೇಳುವಂತಹ ಮೌಲ್ಯ ವ್ಯವಸ್ಥೆಯನ್ನು ಸಮಾಜ ಹೆಣ್ಣಿಗೆ ಬಳುವಳಿ ನೀಡಿದೆ. ಅದರ ನಡುವೆ ಸಂಘಟನೆಯ ಅವಶ್ಯಕತೆ ಇದೆಯೆಂದು ಹೆಣ್ಣಿಗೆ ಅನಿಸಬೇಕು; ಸಂಘಟಿತವಾಗಿ ಪ್ರಯತ್ನಿಸಬೇಕೆಂದು, ಪರಿಹಾರ ಕಂಡುಕೊಳ್ಳಬಹುದೆಂದು ಭರವಸೆಯಿಡಬೇಕು. ಇದು ಹೆಣ್ಣುಕುಲ ದಾಟಬೇಕಾದ ದೊಡ್ಡ ಅಂತರಂಗದ ಮಿತಿ ಎನ್ನಬಹುದು.
  • ಎಲ್ಲರೂ ಬೀದಿಗಿಳಿದು ಪ್ರತಿಭಟಿಸಲು ಸಾಧ್ಯವಾಗದೇ ಇರಬಹುದು. ಕಣ್ಣೆದುರು ಕಂಡಿದ್ದನ್ನು ನೋಡುತ್ತ ಸುಮ್ಮನಿರದೇ, ಅಂಥ ತಪ್ಪಿನಲ್ಲಿ ತಾವು ಭಾಗಿಯಾಗದೇ ಜಾಗೃತ ಪ್ರಜ್ಞೆಯನ್ನಿಟ್ಟುಕೊಳ್ಳುವುದೂ ಹೋರಾಟವೇ. ಬರಹದಲ್ಲಿ ವ್ಯಕ್ತಪಡಿಸುವುದೂ ಹೋರಾಟವೇ. ಅಂಥವರನ್ನೆಲ್ಲ ಒಳಗೊಳ್ಳುವುದು ಮಹಿಳಾ ಸಂಘಟನೆಗಳಿಗೆ ಸಾಧ್ಯವಾಗಬೇಕು. 
  • ಮಹಿಳಾ ಚಳುವಳಿಯೆಂಬ ಪ್ರತ್ಯೇಕ ಚಳುವಳಿ ಸಾಧುವೆ? ಸಾಧ್ಯವೇ? ಎಂಬ ಪ್ರಶ್ನೆಯೂ ಇದೆ. ಹಾಗೆ ನೋಡಿದರೆ ಎಲ್ಲ ವಿಷಯಗಳೂ ಮಹಿಳೆಗೆ ಸಂಬಂಧಪಟ್ಟವೇ. ಬೆಲೆ ಏರಿಕೆ, ಎಸ್‌ಇಝಡ್, ಕೋಮುವಾದ, ಪರಿಸರ ನಾಶ, ಗಣಿ, ಭ್ರಷ್ಟಾಚಾರ - ಇದರಲ್ಲಿ ಯಾವುದು ಮಹಿಳೆಗೆ ಸಂಬಂಧಿಸಿದ್ದಲ್ಲ? ಈ ಎಲ್ಲ ಹೋರಾಟಗಳ ತಾತ್ವಿಕತೆಯೊಟ್ಟಿಗೆ ಮಹಿಳೆ ಬೆರೆತುಕೊಳ್ಳಬೇಕು. ಅದೇ ವೇಳೆಗೆ ಎಲ್ಲ ಜನಪರ ಹೋರಾಟಗಳೂ ಮಹಿಳಾ ಇಶ್ಯೂಗಳನ್ನು ಎತ್ತಬೇಕು. ಜಾಗತೀಕರಣದ ಈ ದಿನಗಳಲ್ಲಿ ಚಳುವಳಿಗಳನ್ನಾಗಲೀ, ಅದರ ದಾರಿ-ಗುರಿಗಳನ್ನಾಗಲೀ ತುಂಡುತುಂಡಾಗಿ ನೋಡುವುದರಿಂದ ಒಟ್ಟಾರೆ ಸಾಮಾಜಿಕ ಬದಲಾವಣೆ ಸಾಧ್ಯವಾಗದೇ ಹೋದೀತು. ಹಾಗಾಗಿ ಮಹಿಳೆ ಎಲ್ಲ ಹೋರಾಟಗಳ ಭಾಗವಾಗಬೇಕು. ಎಲ್ಲ ಹೋರಾಟಗಳೂ ಮಹಿಳಾ ಸಮಸ್ಯೆಗಳನ್ನು ಪರಿಗಣಿಸಬೇಕು. ಅದು ನಿಜವಾದ ಮಹಿಳಾ ಸಬಲೀಕರಣದ ದಾರಿ.
  • ಮಹಿಳಾ ಚಳುವಳಿ ಮೊದಲು ಹೊಟ್ಟೆ ತುಂಬಿದವರ ಚಳುವಳಿ ಎಂಬ ಅಪಹಾಸ್ಯಕ್ಕೆ ಈಡಾಗಿತ್ತು. ಅದು ಜಾತಿಯು ಮಹಿಳೆಯನ್ನು ಹೇಗೆ ಬಾಧಿಸುತ್ತದೆ ಎಂಬ ವಿಷಯವನ್ನು ಪರಿಗಣಿಸುವುದಿಲ್ಲ ಎಂದೇ ಹೇಳಲಾಗುತ್ತಿತ್ತು. ಸ್ವಲ್ಪಮಟ್ಟಿಗೆ ಅದು ನಿಜವೂ ಆಗಿತ್ತು. ಜಾತಿ-ವರ್ಗಗಳನ್ನು ಪರಿಗಣಿಸಿದಾಗ ಮಹಿಳೆಯ ಕಷ್ಟಗಳು ಬೇರೆಬೇರೆ ಎನ್ನುವುದು ನಿಜವಾದರೂ ಮಹಿಳಾ ಚಳುವಳಿ ದಲಿತ-ಅಲ್ಪಸಂಖ್ಯಾತ ಅಥವಾ ಇನ್ನಿತರ ಗುಂಪುಗಳ ಮಹಿಳೆಯರ ಸಮಸ್ಯೆಗಳನ್ನು ವಿಶೇಷವಾಗಿ ಪರಿಗಣಿಸುತ್ತಲೇ ಸಮನ್ವಯಗೊಳ್ಳುವುದು ಅವಶ್ಯವಾಗಿದೆ. ಸೈದ್ಧಾಂತಿಕ ಸಂಬಂಧ ಸಾಧ್ಯವಾಗಿ ಸಮಾನ ನೆಲೆಯ ಹೋರಾಟ ರೂಪುಗೊಳ್ಳಬೇಕಾಗಿದೆ. ಸಮಾಜ ಜಾತಿ-ಧರ್ಮ-ಭಾಷೆಗಳಿಂದ ಛಿದ್ರವಾಗಿರುವಾಗ ತನ್ನನ್ನು ಎಲ್ಲಿ ಹೇಗೆ ಗುರುತಿಸಿಕೊಳ್ಳಬೇಕೆಂಬ ಬಗೆಗೆ ಆಕೆ ಸ್ಪಷ್ಟತೆ ಹೊಂದಬೇಕಿದೆ. 


***

ಭಾರತದಲ್ಲೇ ಆಗಲಿ, ಕರ್ನಾಟಕದಲ್ಲೇ ಆಗಲಿ, ಸಮರ್ಥ ಮಹಿಳಾ ನಾಯಕತ್ವ ಬಂದಿಲ್ಲ. ಕಾರಣವೇನು? ನಾಯಕತ್ವಕ್ಕೆ ಬೇಕಾದ ತ್ಯಾಗ ಮತ್ತು ಅರಿವು ಹೆಣ್ಣಿಗೆ ಸಾಧ್ಯವಾಗಲಿಕ್ಕಿಲ್ಲ ಎಂದೇ ಅನುಮಾನಿಸಲಾಗುತ್ತದೆ. ನಾಯಕತ್ವ ರೂಪುಗೊಳ್ಳದೇ ಇರುವುದರ ಮೂಲ ಪುರುಷ ಪ್ರಧಾನ ಸಮಾಜ ವ್ಯವಸ್ಥೆಯಲ್ಲಿದೆ. ಇದನ್ನು ಎದುರಿಸಿ ಮಹಿಳೆ ನಿಲ್ಲಬೇಕಾದರೆ ಸ್ವ ಬಿಡುಗಡೆ ಅತಿ ಮುಖ್ಯ ಘಟ್ಟವಾಗುತ್ತದೆ. ಇದು ಕತ್ತಿಯಂಚಿನ ದಾರಿ. ‘ನಾನು ಮಹಿಳೆ ಎನ್ನುವುದು ಗೊತ್ತು. ಆದರೆ ಅದು ಅದು ನನ್ನ ಮಿತಿಯಲ್ಲ ಎನ್ನುವುದೂ ಗೊತ್ತು’ - ಇದು ಮಹಿಳಾ ಘೋಷವಾಕ್ಯವಾಗಬೇಕು.

ಮಹಿಳೆ ಪ್ರಾಥಮಿಕ ಅಡೆತಡೆಗಳನ್ನು ದಾಟಿಕೊಂಡು ಹೊರಬಂದರೆ ನಂತರವೂ ಚಳುವಳಿ ಸಂಘಟನಾತ್ಮಕವಾಗಿ ಹಲವು ಗೊಂದಲಗಳನ್ನು ಎದುರಿಸಬೇಕಿದೆ. ಚಳುವಳಿಗಳಿಗೆ ಸಿದ್ಧಾಂತ ಮತ್ತು ಆಚರಣೆ ಎಂಬ ಎರಡು ಆಯಾಮಗಳಿರುತ್ತವೆ. ಚಳುವಳಿಯೊಂದು ಪ್ರಬುದ್ಧಾವಸ್ಥೆ ತಲುಪುವವರೆಗೆ ಕೇವಲ ಆಲೋಚನೆಗಳಿರುತ್ತವೆ. ಆಲೋಚನೆಗಳು ಆಚರಣೆಗಳನ್ನು ರೂಪಿಸುತ್ತವೆ. ಆಲೋಚನೆಗಳ ಆಚರಣಾತ್ಮಕ ಪರಿಪಕ್ವತೆಯಲ್ಲಿ ಸಿದ್ಧಾಂತ ರೂಪುಗೊಳ್ಳುತ್ತದೆ. ಮಹಿಳಾ ಚಳುವಳಿ ಆಲೋಚನೆಗಳ ಮಟ್ಟದಲ್ಲೇ ಇದ್ದು ಗಟ್ಟಿಗೊಳ್ಳುವುದು ಅವಶ್ಯವಿದೆ. ಎಲ್ಲ ಚಳುವಳಿಗಳು ತಾತ್ಕಾಲಿಕ ಹಿನ್ನಡೆ ಕಂಡಿರುವ ಸಮಯದಲ್ಲಿ ಹೊಸದಾಗಿ ರೂಪುಗೊಳ್ಳುವತ್ತ ಭಿನ್ನ ಧಾರೆಗಳು ಒಟ್ಟಾಗಿ ಕುಳಿತು ಚಿಂತಿಸಬೇಕಿದೆ.

ಹೀಗೆ ಜಾಗೃತಗೊಂಡ ಮಹಿಳೆ ತನ್ನನ್ನು ತಾನು ಸಮಸ್ಯೆಯಾಗಿ ಗ್ರಹಿಸಿಕೊಳ್ಳದೇ ಇಡೀ ವಿಶ್ವದ ವಿದ್ಯಮಾನಗಳ ಭಾಗವಾಗಿ ತನ್ನತನವನ್ನು ಗುರುತಿಸಿಕೊಳ್ಳಬೇಕು.  ಸ್ಥಾಪಿತ ವ್ಯವಸ್ಥೆಯ ಮೇಲೆ ಒತ್ತಡ ಹಾಕುವ ನೈತಿಕ ಶಕ್ತಿಯಾಗಬೇಕು. ಧಾರ್ಮಿಕ ಮೂಲಭೂತವಾದ, ಮಾರುಕಟ್ಟೆ ಮತ್ತು ಕೋಮುವಾದಿ ರಾಜಕಾರಣದ ದಾಳವಾಗದಂತೆ ಎಚ್ಚರ ಕಾಯ್ದುಕೊಳ್ಳಬೇಕು. ವಿಫಲಗೊಂಡ ನ್ಯಾಯವ್ಯವಸ್ಥೆಯನ್ನು ಹಾಗೂ ಮಲಿನಗೊಂಡ ರಾಜಕಾರಣವನ್ನು ಸರಿಪಡಿಸಬೇಕಲ್ಲದೆ, ನಿಷ್ಪಕ್ಷಪಾತ ನ್ಯಾಯ ಹಾಗೂ ಶಿಕ್ಷಾ ವ್ಯವಸ್ಥೆಗೆ ನಾಂದಿ ಹಾಡಬೇಕು. ಹೆಣ್ಣನ್ನು ಕುರಿತ ಆರೋಗ್ಯಕರ ಮನೋಭಾವನೆ ಬೆಳೆಸುವುದು, ಮಾನವಜೀವಿಯಾಗಿ ಆಕೆಯನ್ನು ಹಾಗೂ ಆಕೆಯ ದುಡಿಮೆಯನ್ನು ಗೌರವಿಸುವುದು; ಮಹಿಳೆಯರನ್ನು ಶೋಷಿಸುವ, ಹಿಂಸಿಸುವ, ಕೀಳಾಗಿ ಕಾಣುವ ಎಲ್ಲಾ ಮೂಢಾಚರಣೆಗಳನ್ನು ನಿಷೇಧಿಸುವುದು; ಇವೆಲ್ಲದರ ಕುರಿತೂ ಕೆಲಸ ಮಾಡಬೇಕು.

ಮಹಿಳಾ ಸಂಘಟನೆಗಳ ಐಕ್ಯತೆಯ ಚಾರಿತ್ರಿಕ ಅನಿವಾರ್ಯತೆ ಈಗ ಸೃಷ್ಟಿಯಾಗಿದೆ. ಶಾಲೆಗೆ ಹೋಗುವ ಮಗುವಿನಿಂದ ಹಿಡಿದು ವೃದ್ಧೆಯವರೆಗೆ ಹೆಣ್ಣು ಲೈಂಗಿಕ ಆಟದ ಆಟಿಕೆಯಾಗಿ ಬಳಸಲ್ಪಡುತ್ತಿದ್ದಾಳೆ. ಇಂತಹ ವಿಷಮ ಸಮಯದಲ್ಲಿ ನಾಗರಿಕ ಸಮಾಜ, ಮಾರುಕಟ್ಟೆ, ಮಾಧ್ಯಮ, ಸಂಘಟನೆಗಳು, ಸರ್ಕಾರ, ಯುವ ಸಮೂಹ ಎಲ್ಲರೂ ಲಿಂಗಸೂಕ್ಷ್ಮತೆ ಹೊಂದುವಂತೆ, ದೌರ್ಜನ್ಯದ ವಿರುದ್ಧ ದನಿಯೆತ್ತುವಂತೆ ಮಾಡಬೇಕಾದರೆ; ಮಹಿಳಾ ದನಿ ಕೇಳುವಂತಾಗಬೇಕಾದರೆ ಎಲ್ಲ ಮಹಿಳಾ ಸಂಘಟನೆಗಳು ಒಂದುಗೂಡಲೇಬೇಕು.

ಈ ಕಾರಣಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡು ಹಂಚಿ ಹೋಗಿರುವ ಮಹಿಳೆಯರು, ಮಹಿಳಾಪರ ಮನಸುಗಳು ಒಂದೆಡೆ ಕಲೆಯಬೇಕು; ಪರಸ್ಪರ ಸಂಪರ್ಕ ಜಾಲ ಏರ್ಪಡಬೇಕು; ಅವಶ್ಯ ಬಿದ್ದರೆ ದೊಡ್ಡ ಸಂಖ್ಯೆಯಲ್ಲಿ ಹಾಗೂ ವಿಸ್ತೃತ ಮಟ್ಟದಲ್ಲಿ ಮಹಿಳೆಯರು ಒಟ್ಟುಗೂಡಬಲ್ಲರೆಂಬ ಸಂದೇಶ ರಾಜಕೀಯ ಪಕ್ಷಗಳಿಗೂ ಹಾಗೂ ಪುರುಷ ಪ್ರಧಾನ ಮನಸ್ಸುಗಳಿಗೂ ರವಾನೆಯಾಗಬೇಕು. ಎಂದೇ ಜಾಗೃತ ಮಹಿಳೆಯರೆಲ್ಲ ಈಗ ಮಾಡಬೇಕಿರುವುದು ನಮ್ಮ ಎಲ್ಲ ಸೋದರಿಯರನ್ನೂ ಒಂದೇ ವರ್ತುಲದೊಳಗೆ ತಂದುಕೊಳ್ಳುವ ಬಾಧಿತ ಐಡೆಂಟಿಟಿಯನ್ನು ಕಟ್ಟಿಕೊಳ್ಳುವುದು. ಆಗ ದೊರೆಯುವ ಒಗ್ಗಟ್ಟಿನ ದನಿ ಮಾತ್ರ ಮಹಿಳಾ ಸಮಾನತೆಗಿರುವ ತಡೆಗೋಡೆಗಳ ಒಡೆದು ಕ್ಷಿತಿಜದಂಚಿನ ಕನಸನ್ನು ನೆಲದ ಮೇಲೆ ಸಾಕಾರಗೊಳಿಸಬಲ್ಲದು.