Saturday 16 July 2022

ಒಂದು ನೆರೆ ಅಧ್ಯಯನ ಪ್ರವಾಸ (ಕಥೆ)

 


ಈ ಸಲದ್ದು ಸಾಧಾರಣ ಮಳೆಗಾಲ ಅಲ್ಲ. ಮೃಗಶಿರಾ ಮಳೆಯಿಂದ ಶುರುವಾದ ಮಳೆ, ಮಗೆ ಮಳೆಗೂ ಮುಗಿಯದ ಹಾಗೆ ಬಿಟ್ಟೂ ಬಿಡದೇ ಹುಯ್ಯುತ್ತಿದೆ. ಬೇಸಿಗೆಯಲ್ಲಿ ನೀರಿಲ್ಲದೇ ತೋಟ ಒಣಗಿದಾಗ, ‘ಸ್ವಾಮೀ, ಮಾಗಣಪತೀ, ಬೇಗ ಮಳೆ ಬರೋ ಹಂಗೆ ಮಾಡಪ್ಪ’ ಅಂದವರೆಲ್ಲ, ಈಗ ‘ಮಾಗಣಪತಿ, ಈ ಹುಯ್ಯೋ ಮಳೆನ ಒಂದ್ಸಲ ನಿಲ್ಸು ಮಾರಾಯನೆ’ ಎಂದು ಬೇಡುವ ಹಂತಕ್ಕೆ ಬಂದಿದ್ದಾರೆಂದರೆ ಈ ಮಳೆ ಎಂತದಿರಬಹುದೆಂದು ನೀವೂ ಊಹಿಸಬಹುದು. ಸೂರ್ಯನ ಮುಖವನ್ನೇ ನೋಡದೇ ಹಲವು ದಿನಗಳಾಗಿ ಒದ್ದೆ ಬಟ್ಟೆಗಳು ಬಿಸಿಲನ್ನು ಕನಸುತ್ತಿವೆ. ಛತ್ರಿ, ಕಂಬಳಿಕೊಪ್ಪೆಗಳೆಲ್ಲ ಕೆಳಮಾಡಿನ ಜಂತಿಗೆ ಹೊಸದಾಗಿ ಸೇರ್ಪಡೆಯಾಗಿವೆ. ಸಂಗ್ರಹಿಸಿದ ಒಣ ಕಟ್ಟಿಗೆ ಮುಗಿದರೂ ಈ ಮಳೆ ಬಿಡದಿದ್ದರೆ ಏನು ಮಾಡುವುದೆಂಬ ಚಿಂತೆ ಹೆಂಗಸರಿಗೆ. ಅತಿ ಮಳೆಯ ಜೊತೆ ನೆರೆಯೂ ಸೇರಿ ಸಮಸ್ಯೆಗಳು ಇನ್ನಷ್ಟು ಉಲ್ಬಣಗೊಂಡಿವೆ.

ಮಳೆಗಾಲದಲ್ಲಿ ಘಟ್ಟ ಪ್ರದೇಶದಿಂದ ಇಳಿದು ಬಂದು ಶರಾವತಿಯನ್ನು ಸೇರುವ ಹಲವಾರು ಹಳ್ಳ ಹೊಳೆಗಳಲ್ಲಿ ಗುಡ್ಡೇಕಾನು ಹೊಳೆಯೂ ಒಂದು. ಭರಪೂರ ಮಳೆಯಿಂದ ತುಂಬಿ ಹರಿದು, ಹಲವು ಕೇರಿ - ಹಳ್ಳಿಗಳನ್ನು ಮುಳುಗಿಸಿ ದ್ವೀಪಗಳನ್ನಾಗಿ ಮಾಡುವ ಹೊಳೆ ಅದು. ಪ್ರತಿವರ್ಷ ಮೈದುಂಬುವ ಅದರ ಅಬ್ಬರಕ್ಕೆ ಆಚೀಚೆ ತೀರದ ಜನ ಜೀವ ಕೈಲಿ ಹಿಡಿದು ಮಳೆಗಾಲ ಕಳೆಯುತ್ತಾರೆ. ಈ ವರ್ಷವಂತೂ ಜೋರು ಮಳೆಗೆ ಹಿಗ್ಗಿಹಿಗ್ಗಿ ಅದು ಶರಾವತಿ ಹೊಳೆಯೇನೋ ಎಂಬಂತೆ ಕಾಣುತ್ತಿದೆ. ಎರಡೂ ಬದಿ ತೋಟಗಳಿಂದ ಮುಚ್ಚಿದ ಅದರ ದಡ ಹಚ್ಚಹಸಿರಾಗಿ ಕಂಗೊಳಿಸುತ್ತಿದ್ದರೂ, ತೋಟದೊಳಗೆಲ್ಲ ನೀರುನುಗ್ಗಿ, ಕೇರಿಮನೆಗಳು ನೀರುಪಾಲಾಗಿ, ಜನರ ತಿರುಗಾಟವೆಲ್ಲ ಪಾತಿದೋಣಿಯ ಮೇಲೇ ಆಗಿದೆ. ಎಲ್ಲೆಲ್ಲಿ ನೋಡಿದರೂ ಮಳೆಯದೇ ಮಾತು, ನೆರೆಯದೇ ಚಿಂತೆ.

ಇಂತಹ ಭಯಂಕರ ಮಳೆಯ ದಿನದಲ್ಲೇ ನಮ್ಮ ಹೊನ್ನಮ್ಮಜ್ಜಿ ಕಾಯಿಲೆ ಬಿತ್ತು. ಥಂಡಿ ಏರಿ, ಜ್ವರವಾಗಿ, ಕೆಮ್ಮಾಗಿ, ದಮ್ಮು ಹೆಚ್ಚಾಗಿ, ಹೊಟ್ಟೆನೋವಾಗಿ, ಕೊನೆಗೆ ವಾಂತಿ-ಭೇದಿಗೆ ಬಂದು ನಿಂತಿತು. ಅಜ್ಜಿಯ ಮಕ್ಕಳು, ಮೊಮ್ಮಕ್ಕಳು ಬಂದು ಬಂದು ಔಷಧ ತೆಗೆದುಕೊಂಡು ಹೋದರು. ಅಜ್ಜಿಯ ಮನೆ ನೆರೆಯಲ್ಲಿ ಅರ್ಧ ಮುಳುಗಿದ್ದರಿಂದ ಅಜ್ಜಿಯನ್ನು ಆಸ್ಪತ್ರೆಗೆ ಕರೆತರುವ ಮಾತೇ ಇರಲಿಲ್ಲ. ವಾಂತಿ ಹೆಚ್ಚಾಗಿ, ಬಾಯಲ್ಲೆಲ್ಲ ಜಂತು ಹುಳ ಬಂದು, ಮಲಗಿದಲ್ಲೇ ಎಲ್ಲ ಆಗಲಿಕ್ಕೆ ಶುರುವಾಯ್ತು. ಅಜ್ಜಿ ಒಂದೇ ಸಮನೆ ‘ಅಮ್ಮೋರ‍್ನ ಕರ‍್ಕಬನ್ರೋ, ಇಲ್ದಿರೆ ನಾ ಸತ್ತೋಯ್ತೆ.’ ಎಂದು ಹಲುಬಲು ಶುರು ಮಾಡಿತು. ಅಜ್ಜಿಯ - ನನ್ನ ಹಳೇ ದೋಸ್ತಿ, ಹಾಗೂ ಅದರ ಬಂಧುಗಳ ಒತ್ತಾಯಕ್ಕೆ ಮಣಿದು, ನೆರೆ ನೀರಲ್ಲಿ ನಡೆದಾದರೂ ಸೈ, ಅದರ ಮನೆಗೇ ಹೋಗಿ ಔಷಧ ಕೊಟ್ಟು ಬರಲು ನಿರ್ಧರಿಸಿದೆ.

ಈ ಹೊನ್ನಮ್ಮಜ್ಜಿಯ ಬಗ್ಗೆ ಮೊದಲೇ ಹೇಳಿಬಿಡುತ್ತೇನೆ. ಅದು ನನಗೆ ತುಂಬಾ ಬೇಕಾದ ‘ಮನಸ್ತಿ’. ನಮ್ಮ ಆಸ್ಪತ್ರೆ  ಉದ್ಘಾಟನೆಯಾದ ದಿನ ಸೇರಿದ ಮೊಟ್ಟಮೊದಲ ಒಳರೋಗಿ. ಈ ಹದಿನೈದು ವರ್ಷಗಳಲ್ಲಿ, ಹೊನ್ನಮ್ಮನೂ ಅವಳ ಆರು ಗಂಡು ನಾಕು ಹೆಣ್ಣು ಮಕ್ಕಳೂ, ಮೊಮ್ಮಕ್ಕಳೂ ನನ್ನ ಬಳಿ ನಾನಾ ಕಾರಣಗಳಿಗಾಗಿ ಬರುತ್ತಿರುವುದರಿಂದ, ಅವರ ಇಡೀ ಕುಟುಂಬವನ್ನು ಅವರವರ ಕಾಯಿಲೆ ಸಮೇತ ಬಲ್ಲೆ. ‘ಮುಂಚೆ ಗೇಯ್ದುಂದು. ಕೈಕಾಲೆಲ್ಲ ಹೆಬನೋವು. ಅಶಕ್ತಿಯಾಗಿ ನರ ಎಲ್ಲ ಬಿದ್ದೋಗಿದಾವೆ’ ಎಂದೋ; ‘ವಾಯುಗಸ ಕಾಲ್ನಾಗೇ ಹಿಡ್ದುಬಿಟ್ಟದೆ, ಕಾಲೊತ್ತಿದರೆ ಗರ್ರ್ ಅಂಬೋ ತೇಗು ಬತ್ತದೆ, ಚಲೋ ಜೀರ್ಣಾಗೋ ಔಸ್ತಿ ಕೊಡಿ’ ಎಂದೋ; ‘ರಗತ ಕೆಟ್ಟಿರಬೇಕು. ಮೈಯೆಲ್ಲ ತುರಿಕೆ. ಗನಾ ಮಾಡಿ ಒಂದು ನಂಜಿನ ಇಂಜೆಕ್ಷನ್ ಹಾಕ್ಬಿಡಿ’ ಎನ್ನುತ್ತಲೋ ಒಂದೆರೆಡು ತಿಂಗಳಿಗೊಮ್ಮೆ ಬಂದು, ಹದಿನಾರು ಮೊಳ ಸೀರೆಯನ್ನೂ ಸುತ್ತಿ ಸುತ್ತಿ ಭದ್ರ ಮಾಡಿದ ತನ್ನ ಸೊಂಟಕ್ಕೆ ಒಂದು ಇಂಜೆಕ್ಷನ್ ತಗೊಂಡು ಹೋಗದಿದ್ದರೆ ಹೊನ್ನಮ್ಮಜ್ಜಿಗೆ ಸಮಾಧಾನವೇ ಇಲ್ಲ. ಒಂದೆರೆಡು ದಿನಗಳ ರಜೆ ಮಾಡಿ ನಾನು ಊರಿಗೆ ಹೊರಟಿದ್ದು ಯಾರ ಬಾಯಿಂದಲಾದರೂ ತಿಳಿದರೆ ಸಾಕು, ‘ನನ್ನೊಂದು ಪರುಕ್ಸೆ ಮಾಡಿ ಹೋಗ್ರೋ ಅಮ, ಊರಿಗೆ ಹೋಗ್ತ್ರಂತೆ, ನೀವು ಇರುದಿಲ್ಲಂಬೊ ಸುದ್ದಿ ಸಿಗತು,’ ಎಂದು ನಾನೇನು ಮರಳಿಬಾರದ ಊರಿಗೆ ಹೊರಟಿದ್ದೇನೋ ಎಂಬಂತೆ ಆತಂಕಗೊಂಡು ಬಂದದ್ದಿದೆ ಆ ಅಜ್ಜಿ.

ಮದ್ದು ತಗೊಂಡು ಮುಗಿದರೂ ಸಾವಕಾಶವಾಗಿ ಕವಳದ ಚೀಲ ಬಿಚ್ಚಿ, ಎಲೆ - ಸುಣ್ಣ - ಸೊಪ್ಪು ತಿಕ್ಕಿ, ಅಡಿಕೆ ಹೋಳನ್ನು ಕಟುಮ್ಮನೆ ಕಡಿದು, ಕವಳ ಜಗಿಯುತ್ತಾ ಕೂತಿರುತ್ತಿತ್ತು. ನಂತರ ಒಳಬಂದ ಪೇಶೆಂಟುಗಳ ಮನೆಮಾರು ವಿಚಾರಿಸುತ್ತಾ, ಉಚಿತ ಸಲಹೆ ಕೊಡುತ್ತಾ, ಒಂದರ್ಧ ಘಂಟೆಯಾದರೂ ಆಸ್ಪತ್ರೆಯಲ್ಲಿ ಕೂತು ಕವಳದ ಜಂಬರ ಮುಗಿಸಿಕೊಂಡೇ ಮನೆಗೆ ಹೊರಡುವುದು. ತನ್ನ ಮಕ್ಕಳು ಮೊಮ್ಮಕ್ಕಳ ಹೆರಿಗೆ ಬಾಣಂತನ ಮಾಡಿಸಿದ ಅದರ ಹಳೇಕಾಲದ ಕತೆಗಳನ್ನು ಕೇಳುವುದೆಂದರೆ ನನಗೆ ತುಂಬಾ ಇಷ್ಟ. ‘ನಮ್ಕಾಲದಾಗೆ ಹಿಂಗೆಲ್ಲ ದವಾಖಾನಿ ಇರ‍್ಲಿಲ್ಲರಾ ಅಮ. ನನ್ನ ಹಿರೇ ಹುಡುಗ ಹುಟ್ಟುವಾಗೆ ಮೂರು ದಿನ ಮುಕ್ಕಿಮುಕ್ಕಿ ಅಂತೂ ಹೆರಿಗೆ ಆದಾಗ ಬಾಲೆ ಬಾಳಂತಿ ಇಬ್ರಿಗೂ ಉಸಿರೇ ಇರ್ಲಿಲ್ಲ. ಒಳಗಿದ್ದುಂದೆಲ್ಲ ಹೊರಬಂದು, ರಗತ ಹೋಗಿ, ಎಂಟು ದಿನ ತನಾ ನಂಗೆ ಎಚ್ರೇ ಇರ್ಲಿಲ್ಲಂತೆ. ಎಲ್ಲಾ ಅವ್ನ ಆಟ, ಇಬ್ರೂ ಹೆಂಗೆಂಗೋ ಬಚಾವಾದ್ವಿ. ಇನ್ನೂ ಏನೇನು ನೋಡ್ಬೇಕು ಅಂತ ಬದುಕ್ಸಿಟ್ಟಾನೋ,’ ಎಂದು ನಾವು ಊಹಿಸಲೂ ಕಷ್ಟವಾದ ತನ್ನ ಕಾಲದ ಕತೆಗಳನ್ನು ಬಿಚ್ಚಿಡುತ್ತಿತ್ತು. ವಯಸ್ಸಾದಂತೆ ಕಣ್ಣು, ಕಿವಿ ಎರಡೂ ದೂರವಾಗುತ್ತಾ ಬಂದ ಹೊನ್ನಮ್ಮಜ್ಜಿಯ ಮಾತು ಹೆಚ್ಚಾಗುತ್ತಿದೆ. ನನ್ನ ಕಟ್ಟಾ ಅಭಿಮಾನಿಯಾದ ಅದು ‘ಒಂದಪ ನಮ್ಮೂರಿಗೂ ಬನ್ರ ಅಮ, ತ್ವಾಟದಾಗೆ ಚಲೋ ಮಿಟಗನ ಕೊನಿ ಆದಾಗ ಹೇಳಿ ಕಳಸ್ತೆ’ ಎಂದು ಯಾವಾಗಲೂ ಕರೆಯುತ್ತಿತ್ತು. ಮುಂಚೆ ಕರೆದಾಗೆಲ್ಲ ಹೋಗದೇ, ಈಗ ಅಜ್ಜಿ ಹುಶಾರು ತಪ್ಪಿ ಮಲಗಿರುವಾಗ ಹೋಗುವಂತಾಯ್ತಲ್ಲ ಎಂದುಕೊಳ್ಳುತ್ತಾ, ಮಳೆ ನಿಲ್ಲಲಿ ಎಂತ ಕಾಯತೊಡಗಿದೆ. 

ಒಳ್ಳೇ ಕೊಡ ಮಗುಚಿಟ್ಟಂತೆ ಮಳೆ ಹೊಯ್ಯುತ್ತಿತ್ತು. ಸದ್ಯ ನಿಲ್ಲುವ ಯಾವ ಸೂಚನೆಗಳೂ ಕಾಣುತ್ತಿಲ್ಲ. ಕಿಟಕಿಯಿಂದ ಹೊರಗೆ ಕಾಣುತ್ತಿದ್ದ ರಥದಂತಹ ತೇಗದ ಹೂ ಗೊಂಚಲಿನಲ್ಲಿ ಮಳೆಯನ್ನು ಲೆಕ್ಕಿಸದೆ ದುಂಬಿಗಳು ಹಾರಾಡುತ್ತಿವೆ! ದೂರದ ನೇರಿಳೆ ಮರದ ಕೊಂಬೆಯ ಮೇಲೆ ಮಂಗವೊಂದು ನಿಶ್ಚಲವಾಗಿ ಕುಳಿತು ತಲೆಯ ಮೇಲೆ ಹುಯ್ಯುತ್ತಿರುವ ಮಳೆಯ ಸುಖವನ್ನು ಅನುಭವಿಸುತ್ತಿದೆ. ಕಾಗೆಗಳ ಜೋಡಿಯೊಂದು ಬೆಪ್ಪರಂತೆ ಅವನತ ಮುಖರಾಗಿ ಕುಳಿತು ನೆನೆಯುತ್ತ ಎತ್ತಲೋ ನೋಡುತ್ತಿವೆ. ಇವರಾರೂ ಈ ಹುಯ್ಯುವ ಮಳೆಗೆ ವಿಚಲಿತರಾಗದೇ ಇರುವಾಗ ನಾನೇಕೆ ಹೆದರಲಿ ಎಂದು ಕ್ಲಿನಿಕ್ ಬಾಗಿಲು ಎಳೆದದ್ದೇ ಅಜ್ಜಿ ಮೊಮ್ಮಗನ ಸಂಗಡ ಹೊರಟು ಬಿಟ್ಟೆ.

                                    ***

ಗುಡ್ಡೇಕಾನು ಹೊಳೆಸಾಲಿನಲ್ಲೇ ಅಜ್ಜಿಯ ಮನೆ. ಅಲ್ಲಿಗೆ ಹೋಗುವ ದಾರಿಯಾದರೂ ಎಂತಹುದು? ನಾಲ್ಕು ಮೈಲಿ ಸುತ್ತಿಸುತ್ತಿ, ಕೆನ್ನೀರು ಹಾರಿಸುತ್ತಾ, ಕುಲುಕುತ್ತಾ ಅಂತೂ ಒಂದು ಗುಡ್ಡದ ತಲೆಯಲ್ಲಿ ಗಾಡಿ ನಿಲ್ಲಿಸಿದೆವು. ಅಜ್ಜಿ ಮೊಮ್ಮಗ ತೋಯುತ್ತ ಕೆಳಗಿಳಿದು ಓಡಿಹೋದ. ಧೋ ಎಂದು ಸುರಿಯುವ ಮಳೆಯ ಅಬ್ಬರ ಕಿವಿ ತುಂಬಿದ್ದರೆ, ದಟ್ಟ ಮೋಡಗಳಿಂದ ಮಧ್ಯಾಹ್ನವೇ ಆವರಿಸಿದ್ದ ಮಳೆಗತ್ತಲು ಮತ್ತು ಮಂಜು ದಾರಿತುದಿ ಮಸುಕಾಗುವ ಹಾಗೆ ಮಾಡಿತ್ತು. ಸುರಿಯುತ್ತಿರುವ ಮಳೆಯಿಂದ ಸುತ್ತೆಲ್ಲ ಅಸ್ಪಷ್ಟ. ಮರಗಳೆಲ್ಲ ಮಳೆಯ ರಭಸಕ್ಕೆ ತಲೆದೂಗುತ್ತಾ ನಿಂತಿದ್ದವು. ಮಳೆಹಾಡನ್ನೂ ಭೇಧಿಸಿ ಮಂಗಟ್ಟೆ ಹಕ್ಕಿಗಳ ಅಪಸ್ವರದ ಕೇಕೆ ಕೇಳುವಾಗ ‘ಕಾರ್ಗಾಲದ ವೈಭವ’ ಕವಿತೆ ಕಿವಿಯಲ್ಲಿ ಗುಂಯ್ಗುಡುತ್ತಿತ್ತು. 

ಆ ಗುಡ್ಡದ ಮೇಲಿಂದ ಕೆಳಗೆ ಕೆನ್ನೀರಲ್ಲಿ ನಿಂತ ತೋಟಗಳೂ, ಮಧ್ಯೆ ಮನೆಗಳೂ, ವಾರೆನಿಂತ ಕರೆಂಟು ಕಂಬಗಳೂ, ಪಾತಾಳದಲ್ಲಿರುವಂತೆ ತೋರುತ್ತಿದ್ದವು. ಮಳೆಯ ಆನಂದ ಅನುಭವಿಸುತ್ತಾ ಗುಡ್ಡ ಇಳಿಯುತ್ತಿರುವಾಗ ದೊಡ್ಡ ಸಭಾಂಗಣದಂತಹ ಕಾಂಕ್ರೀಟು ಕಟ್ಟಡ ಎದುರು ಬಂತು. ಅದರ ತುಂಬಾ ಒತ್ತೊತ್ತಾಗಿ ನಿಂತ ದನ-ಕರು-ಎಮ್ಮೆಗಳು! ಕಟ್ಟಿಗೆ ರಾಶಿ, ಸಗಣಿ, ಮೇವು ಎಲ್ಲ ಒಂದು ಮೂಲೆಯಲ್ಲಿ ಒಟ್ಟಾಗಿ ಕೊಟ್ಟಿಗೆಯ ತರಹ ಕಾಣುತ್ತಿತ್ತು. ಯಾವುದೋ ಮಠದ ಗೋಶಾಲೆ ಇರಬಹುದೆಂದು ಕತ್ತೆತ್ತಿ ನೋಡಿದರೆ ಆ ಊರಿನ ಯುವಕಸಂಘದ ಕಟ್ಟಡ ಅದು! ಅಲ್ಲೇ ಆಚೆ ಮಕ್ಕಳಿಂದ ಗಿಜಿಗುಡುತ್ತಿರುವ ಶಾಲೆ. ಅದರ ಮುಂದೆ ಹಾದು ಹೋಗುವಾಗ ಹಲವು ಪರಿಚಿತ ಎಳೆಮುಖಗಳು ಕಂಡಂತಾಗಿ, ‘ಮೇಡಂ, ನಮಾ..ಸ್ತೇ..’ ಅಂತ ರಾಗವಾಗಿ ಕೂಗಿದವು. ‘ಈ ತರ ಮಳೇಲೂ ಇಷ್ಟು ಮಕ್ಳು ಶಾಲೆಗೆ ಬಂದಿದಾವಲ್ಲ, ಸಾಲೆಗೆ ಮಳೆ ರಜೆಯಾದ್ರೂ ಕೊಡಬೇಕಿತ್ತು’ ಎಂದೆ. ‘ನೆರೆ ನೀರು ಮನೆಗೆ ನುಗ್ಗಿದಾಗ ಮಕ್ಳು ಶಾಲೇಲಿರೋದೇ ಸುಖ. ಅವರ ಕರಕರೆಯೂ ಇರಲ್ಲ, ಕಾಯೂದೂ ಬೇಡ. ಅದ್ಕೇ ಮನೆಜನ ಮೊದ್ಲು ಮಕ್ಳನ್ನ ಶಾಲೇಗೆ, ಗಂಟೀನ ಯುವಕ ಸಂಘಕ್ಕೆ ಅಟ್ತಾರೆ’ ಎಂದು ನಗಾಡಿದ ಡ್ರೈವರ್ ಸುಬ್ರಾಯ.

ಅಷ್ಟೊತ್ತಿಗೆ ಮೇಲೆ ಹತ್ತಿಬಂದ ಅಜ್ಜಿಯ ಮಗ, ಮೊಮ್ಮಗ ಎದುರಿಗೆ ಸಿಕ್ಕರು. ‘ನಮ್ಮೂರಿನ್ಕತಿ ಏನ್ಕೇಳ್ತ್ರಿ ಅಮ? ನಾಳಿಂದ ಈ ಕನ್ನಡ ಶಾಲೇಲಿ ಗಂಜಿ ಕೇಂದ್ರ ಮಾಡ್ತಾರಂತೆ. ಮನೆಯಾಗೆಲ್ಲ ನೀರು ತುಂಬಿ ಒಳಗೆ ಕೂರೂ ಆಟವಿಲ್ಲ. ಏನೋ ಜೀವ ಒಂದು ಉಳುಸ್ಕಂಡಿದ್ದಿವಿ’ ಎಂದು ಸೋತ ದನಿಯಲ್ಲಿ ಹೇಳುತ್ತಾ, ದಾರಿ ತೋರುತ್ತಾ ಗುಡ್ಡ ಇಳಿಯತೊಡಗಿದರು. ಸುಮಾರು ಗುಡ್ಡ ಇಳಿದಾದ ಮೇಲೆ ಕೇರಿ ಶುರುವಾಯಿತು. ಕೇರಿಯೆಂದರೆ ಒತ್ತೊತ್ತಾಗಿ ಒಮ್ಮುಖವಾಗಿ ಮನೆಗಳಿರುವ ಬಯಲುಸೀಮೆಯ ಕೇರಿಗಳಂತಲ್ಲ ಅದು. ಗುಡ್ಡದ ಇಳಿಜಾರಿನಿಂದ ನದೀದಡದ ತನಕ ಬೇಲಿ ಚೌಕಟ್ಟಿನೊಳಗೆ ಉದ್ದುದ್ದ ಹಾಳೆಯಂತೆ ತೋರುವ ತೋಟಗಳು; ಅವರವರ ತೋಟದೊಳಗೆ, ಅವರವರ ಮನೆ. ಒಂದೊಂದು ದಿಕ್ಕಿಗೆ ಒಂದೊಂದು ಮನೆ ಇದ್ದರೂ ಅಸ್ತವ್ಯಸ್ತ ಎನಿಸದ ಕೇರಿ. ಒಂದಾದಮೇಲೊಂದು ಮನೆ ದಾಟುತ್ತಾ, ತೋಟ ದಾಟುತ್ತಾ, ಇಳಿಯತೊಡಗಿದೆವು. 

ಕಾಲಡಿಯ ನೀರಿನಲ್ಲಿ ಪಾದ ಮುಳುಗುತ್ತಿತ್ತು. ‘ಹ್ವಾಯ್ ಅಮ, ಸಾವಕಾಶ ಬನ್ರೋ.’ ಎಂಬ ದನಿ ಬಂದಲ್ಲಿಗೆ ಇಳಿಯುವುದು ಮುಗಿದು ನೆರೆನೀರು ನಿಂತ ಸಪಾಟು ನೆಲ ಬಂತು. ಓ ಮಾದೇವಿ! ಜಗಲಿಯಲ್ಲಿ ಕುಳಿತು ನೆರೆ ನೀರಲ್ಲಿ ಪಾತ್ರೆ ತೊಳೆಯುತ್ತಿದ್ದಾಳೆ. ‘ಯಂತದ್ರಾ ಈ ಬದಿ? ನೆರಿ ನೋಡುಕ್ ಬಂದ್ರಾ ಹೆಂಗೆ?’ ಎನ್ನುತ್ತಾ ಕೈ ಒರೆಸಿಕೊಳ್ಳುತ್ತಾ ಎದ್ದು ನಿಂತಳು. ‘ಎಲ್ಲಿ ಹನ್ಮಂತ?’ ಎಂದೆ. ‘ಮರ ಹಿಡುಕೋಗಾರೆ ಅಮಾ. ನಿನ್ನೆ ರಾತ್ರಿಡೀ ಸುರಿದ ಮಳೆಗೆ ಬೆಟ್ಟದ ಕಡಿಂದ ಒಂದು ಭಾರೀ ಮರ ಬಂದದಂತೆ. ಹಿಡುಕ್ ಹೋಗಾರೆ’ ಎಂದಳು. ಅಜ್ಜಿಯ ಮಗ ‘ಹಿಡ್ದ ಆ ಮರ ಚಲೋ ಹಲಸಿನ ಮರ ಅಂತೆ. ನಾಕು ಸಾವ್ರಕ್ಕೆ ಮಾರಾಟ ಆಯ್ತಂತೆ’ ಎಂದು ಸಣ್ಣಗೆ ಹೇಳಿದ. ನೆರೆ ನೀರಲ್ಲೂ ಈಜಿ, ಆದಾಯಮೂಲ ಹುಡುಕುವವರ ಧೈರ್ಯಕ್ಕೆ ಅಚ್ಚರಿಗೊಳ್ಳುತ್ತಾ ಮುನ್ನಡೆದೆ. 

ಮುಳುಗಿದ ದಣಪೆ ಒಂದನ್ನು ದಾಟಿದ್ದೇ ಹಬೀಬ ಶೇಕರ ಮನೆ ಬಂತು. ನಮ್ಮ ಪೇಟೆಯಲ್ಲೆ ಅವರ ಹಣ್ಣಿನಂಗಡಿ ಇದೆ. ಹಿತ್ತಿಲಲ್ಲೇ ನಿಂತಿದ್ದ ಶೇಕರು ‘ನಮ್ದು ಎಲ್ಲ ಮುಳುಗೋಗದೆ ಮೇಡಂ, ನೀವು ಬಂದಿರಂತ ಕರುದ್ರೆ ಚಾ ಮಾಡುದ್ ಸೈತ ಕಷ್ಟ. ಚಿಕ್ಕು ಹಣ್ಣು ಕೊಡ್ತೆ ಬರ್ರಿ’ ಎಂದರು. ಮತ್ತೊಮ್ಮೆ ಬರುವುದಾಗಿ ಹೇಳುತ್ತಾ ಮುಂದೆ ಸರಿಯುತ್ತಿದ್ದಂತೆ, ಅವರ ಹಿತ್ತಿಲ ಮಾಡಿನ ಕೆಳಗೆ ಅಗಲಿಸಿದ ತನ್ನ ರೆಕ್ಕೆಯಡಿ ಐದಾರು ಹೂಮರಿಗಳನ್ನು ಬಚ್ಚಿಟ್ಟುಕೊಂಡಂತೆ ನಿಂತ ಹೇಟೆ ಕಾಣಿಸಿತು. ನಾನದನ್ನು ನೋಡುತ್ತ ನಿಂತದ್ದನ್ನು ಗಮನಿಸಿ, ‘ನಾವು ಮಕ್ಳು ಮರೀನೆಲ್ಲ ಸಾಲಿಗೆ ಕಳ್ಸಿ ಬಿಡ್ತಾರೆ. ಈ ಕೋಳಿ ನೋಡಿ ಹ್ಯಾಗೆ ಕಾದ್ಕಂಡು ನಿತ್ತದೆ ಮಕ್ಳನ್ನ, ಅದ್ರ ಪ್ರೀತಿನೇ ದೊಡ್ದು’ ಎನ್ನುತ್ತಾ ನವಾಯ್ತಿ ಭಾಷೆಯಲ್ಲಿ ಅದಕ್ಕೆ ಪ್ರೀತಿಯಿಂದ ಏನೋ ಬೈದರು. 

ನಾಲ್ಕು ಮಾರು ಮುಂದೆ ಹೋಗುವುದರಲ್ಲಿ ಅರ್ಧ ಮುಳುಗಿದ್ದ ಕುರೋಸು ಕಟ್ಟೆಯೂ, ನಗಾಡುತ್ತಾ ನಿಂತಿದ್ದ ಪಾಸ್ಕೋಲೂ ಕಾಣಿಸಿದರು. ಅವನ ಹೆಂಡತಿ - ಕನ್ನಡ ಬಾರದ ಮೆಲೋಬಿನ, ಅವಳಿಂದಲೇ ಅವಳಿಗಾಗೇ ನಾನು ಹರಕು ಕೊಂಕಣಿ ಕಲಿತದ್ದು ಎನ್ನಬಹುದು - ಅಲ್ಲೇ ನಿಂತಿದ್ದವಳು, ‘ಮೇಡಂ, ತುಮ್ಹಿ ಅಮ್ಗೇಲ್ ಘಾರಾ ಯೇವ್‌ಕಾಂಚ್. ಚಾ ಪೀವ್ನ ವೋಸಾ’ ಎನ್ನುತ್ತ ಒತ್ತಾಯದ ದನಿಯಲ್ಲಿ ಕರೆಯುತ್ತಾ ಬಳಿ ಬಂದೇಬಿಟ್ಟಳು. ಅಜ್ಜಿ ಮಗನೂ ‘ಒಂದೈದ್ ಮಿನಿಟು ಹೋಗ್ಬನ್ರಾ ಅಮ, ನೀವಂದ್ರೆ ಬಾಳಾ ಅಬಿಮಾನ ಅದ್ಕೆ’ ಎಂದ. ಅದಾಗಲೇ ಮೊಳಕಾಲು ತನಕ ನೀರಲ್ಲಿ ನಡೆಯುತ್ತಿದ್ದ ನನಗೆ, ಬಿಸಿ ಚಹ ಸಿಗುತ್ತದೆಂದರೆ ನಂಬಲೇ ಕಷ್ಟವಾಯಿತು. ಅವಳ ಮನೆಯೊಳಗೆ ಹೋದದ್ದೇ ಸಂಭ್ರಮದಿಂದ ಎಲ್ಲೋ ಮೇಲಡರಿ ಕುಳಿತಿದ್ದ ಕುರ್ಚಿ ತಂದು ಹಾಕಿದರು. ಪೂರ್ತಿ ನೆಂದು ಒದ್ದೆಯಾದ ಮಂಗಳೂರು ಹೆಂಚಿನ ಮಾಡಿನಿಂದ ಪಟಪಟ ನೀರ ಹನಿಗಳು ಮನೆಯೊಳಗೆ ಬೀಳುತ್ತಿದ್ದವು. ದೇವರ ಗೂಡಿನ ಮುಂದೆ ಉರಿಯುತ್ತಿದ್ದ ಮೋಂಬತ್ತಿ ಮನೆಯೊಳಗೆ ಮಂದ ಬೆಳಕನ್ನು ಪಸರಿಸುತ್ತಿತ್ತು. ಅವಳ ಮಗ ಫಾರಿನ್ನಿಂದ ಕಳಿಸಿದ್ದ, ಹನಿಹನಿ ರಕ್ತ ಎದೆಯಿಂದ ಬಿದ್ದು ಬಟ್ಟಲಲ್ಲಿ ತುಂಬುತ್ತಿರುವಂತೆ ಭಾಸವಾಗುವ ಯೇಸುವಿನ ಬ್ಯಾಟರಿ ಚಾಲಿತ ಬೊಂಬೆ ಅಲೌಕಿಕವಾಗಿ ತೋರಿತು. ಈ ಗ್ಯಾಸ್ ಒಂದಿಲ್ಲದಿದ್ದರೆ ಕಟ್ಟಿಗೆ ಒಲೆಯಲ್ಲಿ ಅಡಿಗೆ ಮಾಡುವುದು ಎಷ್ಟು ಕಷ್ಟವಿತ್ತು ಎಂದು ರಾಗವಾಗಿ ಕೊಂಕಣಿಯಲ್ಲಿ ವಿವರಿಸುತ್ತಾ ಬಿಸಿಬಿಸಿ ಚಹ ಕೊಟ್ಟಳು ಮೆಲೋಬಿನ. ನೆರೆ ನಿಂತಾಗಲೂ ಕರೆಯುತ್ತಾರಲ್ಲ ಎಂದು ಅವರ ಅತಿಥಿ ಸತ್ಕಾರದ ಹುಕಿಗೆ ಅಚ್ಚರಿಯಾಯ್ತು.

ಅಡುಗೆ-ಪಾತ್ರೆ-ಬಟ್ಟೆ ಮುಂತಾದ ದಿನನಿತ್ಯದ ಸಣ್ಣಪುಟ್ಟ ಕೆಲಸಗಳೂ ನೆರೆ ನೀರು ನಿಂತರೆ ಎಷ್ಟು ಕಷ್ಟ ಎಂದು ಯೋಚಿಸುತ್ತಾ ಮನೆಯಿಂದ ಹೊರಬಿದ್ದೆ. ‘ಇದೇ ನಮ್ಮನಿ, ಬನ್ರಾ ಅಮ’ ಎನ್ನುತ್ತಾ ಅಜ್ಜಿಯ ಮಗ ಮೊಳಕಾಲ ತನಕ ನಿಂತ ನೀರಿನಲ್ಲಿದ್ದ ಬೇಲಿಯೊಂದನ್ನು ದಾಟಿದ. ನಿಂತ ನೀರಿನ ಮೇಲ್ಮೈ ಸಮತಟ್ಟಾಗಿದ್ದರೂ, ಮುಳುಗಿದ್ದ ನೆಲ ಹಾಗಿಲ್ಲವೆಂದು ಬೇಲಿ ದಾಟುತ್ತಾ ಎಡವಿದಾಗ ತಿಳಿಯಿತು. ಮನೆಯ ಅಂಗಳದಲ್ಲೇ ಬಾವಿ. ಸುತ್ತ ಕೆಸರು ಮಣ್ಣು ಬೆರೆತ ನೆರೆ ನೀರು ನಿಂತಿರುವಾಗ ಬಾವಿಯೊಳಗೆ ಸ್ಫಟಿಕ ಶುಭ್ರ ನೀರು! ಸರಬರ ಕಾಲೆಳೆದುಕೊಳ್ಳುತ್ತಾ ಅಜ್ಜಿ ಮನೆ ಮೆಟ್ಟಿಲು ಏರಿದೆ.

***

 ಸಾಮಾನೆಲ್ಲ ಅಟ್ಟ ಏರಿ ಕುಳಿತದ್ದಕ್ಕೋ ಏನೋ ಮನೆ ಖಾಲಿಖಾಲಿ ಎನಿಸುತ್ತಿತ್ತು. ‘ಅಮ್ಮನೇ, ಬನ್ರಾ ಅಂತಿ ನಾನೆಷ್ಟು ಸಲ ಕರ‍್ದಿದ್ದೆ. ಹಿಂತಾ ಪರುಸ್ತಿತೀಲಿ ನಿಮ್ಮನ್ನು ನಡ್ಸಿಕೊಂಡು ಬರಂಗಾತು. ರೂಡಿಲ್ದ ನಿಮ್ಗೆ ತ್ರಾಸಾತೋ ಏನೋ’ ಎಂಬ ಕ್ಷೀಣ ದನಿಯೊಂದು ದೊಡ್ಡಜಗಲಿ ಮೂಲೆಯಿಂದ ಬಂತು. ಒಂದಾದ ಮೇಲೊಂದು ಖಾಯಿಲೆಯಿಂದ ಸುಸ್ತಾಗಿ ನನ್ನ ಪ್ರೀತಿಯ ಹೊನ್ನಮ್ಮಜ್ಜಿ ಮುದುಡಿ ಮಲಗಿತ್ತು. ‘ಹೊಟ್ಯಾಗ್ ಒಂದ್ ಕೂಳ್ ಉಳಿಯಂಗಿಲ್ಲ. ಹುಳದ ಚಂಡು ಹಿಡಿದುಬಿಟ್ಟದೆ. ತಿಪ್ಪಿ ಗಂಟಲಿಗೇ ಬಂದಂಗಾತದೆ. ಇಲ್ಲಿ ತನಾ ಬಾಯಾಗೆ ಹತ್ತಿಪ್ಪತ್ತು ಹುಳ ಬಂದಿರಬೋದು ಅಮಾ, ಊಟ ಮಾಡ್ದೇ ಅಂತೂ ಒಂದು ವಾರಾತೋ ಏನೋ’ ಎಂದು ನನ್ನ ಕಂಡದ್ದೇ ತನ್ನ ಕಾಯಿಲೆಯ ಸವಿವರ ವರದಿ ಒಪ್ಪಿಸಿತು. ಕಾಯಿಲೆ ಶುರುವಾದ ಮೊದಲ ದಿನದಿಂದ ಇಲ್ಲಿಯವರೆಗೆ ಏನೇನಾಯಿತೆಂದು ಹೇಳಹೇಳುತ್ತ ಬಾಯಿ ಒಣಗಿ ನೀರು ಕೇಳಿತು. ನೀರಿನಂಶವೇ ಇಲ್ಲದೆ ಸೊರಗಿ ಹೋಗಿದ್ದ, ಆಳ ಗುಳಿಬಿದ್ದ ಕಣ್ಣುಗಳ ಅಜ್ಜಿಯನ್ನು ಪರೀಕ್ಷಿಸಿ, ಎರಡು ಇಂಜೆಕ್ಷನ್ ಹಾಕಿ, ಸಲೈನು ಏರಿಸಿ ಅದು ಮುಗಿಯುವುದನ್ನೇ ಕಾಯುತ್ತಾ ಕುಳಿತೆ. 



ಹೊರಗೆ ಮನೆ ಎದುರೇ ತುಳಸಿ ಗಿಡ ಕಾಣುತ್ತಿತ್ತು. ಕಟ್ಟೆ ಮುಳುಗಿ ಹೋಗಿತ್ತು. ಅಷ್ಟು ದೂರದಲ್ಲಿ ಆಳೆತ್ತರದ ಗೂಟಗಳ ಮೇಲೆ ನಿಂತ ಮೊಲದ ಗೂಡು, ಕೋಳಿಗೂಡು. ಅವುಗಳ ಮೇಲೆ ನೀಟಾಗಿ ಕತ್ತರಿಸಿದ ತೆಂಗಿನಮಡ್ಲು ನೇಯ್ದ ಮಾಡು. ಎಂತದೋ ಎಲೆ ಮೆಲ್ಲುತ್ತಾ ಕಿವಿ ನಿಮಿರಿಸಿಕೊಂಡು ಮೊಲಗಳು ಖುಷಿಯಾಗಿದ್ದಂತೆ ತೋರಿದರೆ, ಮುದುರಿ ಕುಳಿತ ಕೋಳಿಗಳು ವಿಷಾದದಲ್ಲಿದ್ದವು. ಬಲ ಮೂಲೆಯಲ್ಲಿ ಪುಟ್ಟ ದೇವಳದಂತೆ ಕಾಣುವ ಚೌಡಿಕಟ್ಟೆ. ಇಂದೂ ದೇವರಿಗೆ ಪೂಜೆಯಾದ ಎಲ್ಲ ಕುರುಹುಗಳು ಅಲ್ಲಿದ್ದವು.

 ಅಜ್ಜಿಯ ಬಳಿ ನಾಕಾರು ಮಾತನಾಡಿ ಅದು ನಿದ್ರೆಗೆ ಜಾರಿದ ಮೇಲೆ ಹೊರಬಂದು ನೋಡುತ್ತೇನೆ, ಸುತ್ತ ಎಲ್ಲೆಲ್ಲಿ ನೋಡಿದರೂ ನೀರು! ಕೆಂಪು ಸಮುದ್ರದಂತೆ ಕಾಣುತ್ತಿದೆ. ಅಜ್ಜಿಯ ಮಗ ಹೊರಬಂದು ನೆರೆ ತಾಪತ್ರಯದ ಬಗ್ಗೆ ಕತೆ ಹೇಳತೊಡಗಿದ. ‘ಈಗ ಭಾಳೊರ್ಸದ ಕೆಳಗೆ ಚೌತಿಗೆ ಒಂದಪ ನೆಗಸು ಬಂದಿತ್ರಾ ಅಮ. ರಾತ್ರಿ ಕಳ್ದು ಬೆಳಗಾಗುದ್ರಗೆ ಹಿತ್ಲ ಬಾಕ್ಲು ಒಡ್ದು ನೆರಿ ನೀರು ಒಳನುಗ್ಗಿಬಿಟ್ಟಿತ್ತು. ಒಂದೇ ರಾತ್ರೀಲಿ ಅಷ್ಟು ಮಳೆ ಮುಂಚೆ ಯಾವತ್ತೂ ಸುರ‍್ದಿರ್ಲಿಲ್ಲ. ಕಟಿಗೆ, ಅಕ್ಕಿ, ಅಡಕೆ, ಗೇರುಬೀಜ ಎಲ್ಲ ಮುಳುಗೋತು. ಬೆಳಗಾದ್ರೆ ಚೌತಿ ಹಬ್ಬ. ನಮ್ಮನೇಲಿ ಚೌತಿ ಹಬ್ಬಕೆ ದೇಸ್ಥಾನಕೆ ಹೋಗೇಹೋಗ್ಬೇಕು ಅಂಬೋ ರಿವಾಜು. ಎಲ್ಲ ನಿಂದೇ ಆಟ ಅಂತ ದೇವರ ನೆನ್ದು ದೋಣಿಮೇಲೆ ಆಚೆಬದಿ ಹೊಳೆ ದಾಟಿ, ಇಡಗುಂಜಿ ದೇಸ್ಥಾನಕೆ ಹೋಗಿ ಹಣ್ಣು ಕಾಯಿ ಮಾಡ್ಕಬಂದಿದ್ರು. ಈ ವರ್ಸವೂ ಮಳೆ ಸುರಿಯುದು ಕಂಡ್ರೆ ಅದೇ ಕತೆ ಅಂಬಂಗೆ ಕಾಂತದೆ. ಜೋಗದಾಗೆ ಹದಿನೆಂಟು ನೂರಡಿ ನೀರು ಆಯ್ತಂತೆ. ಇನ್ನು ಹತ್ತಡಿ ಏರಿದ್ರೆ ಎಲ್ಲ ಬಾಕ್ಲೂ ತೆಗೆದು ನೀರು ಬಿಡ್ತಾರೆ. ಆಗ ನಮ್ಮ ಬಂಗ ನೋಡ್ಬೇಕು ನೀವು. ಈ ಹೊಳೆಸಾಲಿನ ಬದುಕು ಯಾರಿಗೂ ಬೇಡ.’

ಅಣೆಕಟ್ಟೆಯ ಎಲ್ಲ ಗೇಟುಗಳನ್ನೂ ತೆರೆದಾಗ ಮೈದುಂಬಿಕೊಳ್ಳುವ ವಿಶ್ವವಿಖ್ಯಾತ ಜೋಗ ಜಲಪಾತವನ್ನು ನೋಡಿ ಲಕ್ಷಗಟ್ಟಲೆ ಜನ ಕಣ್ತುಂಬಿಕೊಂಡು ನಲಿದರೆ, ಶರಾವತಿಯ ಕೆಳಪಾತ್ರದ ಇಕ್ಕೆಲದ ಜನರೂ ಸಂಕಟದಲ್ಲಿ ಮುಳುಗಿ ಹೋಗಿರುತ್ತಾರೆ. ನಾನು ನೋಡಿದ್ದ ಜೋಗ ಕಣ್ಮುಂದೆ ಬಂದು ಎಂತಹ ವಿಪರ್ಯಾಸವೆನಿಸಿತು. ಕಣ್ತುಂಬುವ ಸೌಂದರ್ಯ ಕಣ್ಣೀರಿಗೂ ಕಾರಣವಾಗುತ್ತದೆ! ಆ ವೇಳೆಗೆ ಎರಡು ಸಲೈನು ಮುಗಿಯಿತೆಂಬ ಸೂಚನೆ ಮನೆಯೊಳಗಿಂದ ಬಂತು. ಒಳಹೋದರೆ ಅಜ್ಜಿ ಸ್ವಲ್ಪ ಗೆಲುವಾದಂತೆ ತೋರಿತು. ನಮ್ಮ ಮಾತನ್ನು ಕೇಳಿಸಿಕೊಂಡಿತ್ತೆಂದು ಕಾಣುತ್ತದೆ. ಈಗ ತನ್ನ ಮಾತನ್ನೂ ಸೇರಿಸುತ್ತಾ ಅಜ್ಜಿ ಹೇಳಿತು: ‘ಗುಡ್ಡ ಕಾಡು ಕಡಿದು ತೋಟ ಮಾಡ್ದಂಗೆ ಹೊಳೇನೂ ಅತಿಕ್ರಮಣ ಮಾಡಿದ್ರೆ ಸುಮ್ನಿದ್ದಾಳಾ ಗಂಗಮ್ಮ? ಗುಡ್ಡಿ ಮ್ಯಾನೆ ಮನಿ ಮಾಡಿದ್ರೆ ಈ ಕಷ್ಟ ಇರ್ತಿರ‍್ಲಿಲ್ಲ. ಬ್ಯಾಸಿಗೇಲಿ ನೀರಿಗೆ ಕಷ್ಟ ಆಗ್ಬಾರ‍್ದಂತ ಹೊಳೆ ಸಾಲಲ್ಲಿ ಮನೆ ಮಾಡ್ಕಂದ್ರೆ ಮಳೆಗಾಲ್ದಲ್ಲಿ ಕುತ್ಗಿಮಟ ನೀರಲ್ಲಿ ಬದ್ಕುದೆಯಾ.’

ಅಜ್ಜಿಯ ವಿಶ್ಲೇಷಣೆ ಜೀವನಾನುಭವದಿಂದ ಬಂದದ್ದಾಗಿತ್ತು, ಕರಾರುವಾಕ್ಕಾಗಿಯೂ ಇತ್ತು.

 ನಾಲ್ಕಾರು ಪಡ್ಡೆ ಹೈಕಳು ಹೊರಗೆ ಪಾತಿ ದೋಣಿಯಲ್ಲಿ ಓಡಾಡುತ್ತಿದ್ದವು. ಕೆಲವು ಮನೆಗಳ ಮುಂದೆ ಮುಳುಗಿದ ತೆಂಗಿನಮರಗಳ ಬುಡಕ್ಕೆ ದೋಣಿ ಕಟ್ಟಿಟ್ಟಿದ್ದರು. ಆಪತ್ಕಾಲಕ್ಕೆ ಹೊಳೆ ದಾಟಲು ಎಲ್ಲರ ಬಳಿಯೂ ಒಂದೊಂದು ದೋಣಿ ಇತ್ತು. ದೂರದಲ್ಲಿ ವೇಗವಾಗಿ ಗುಡ್ಡೇಕಾನು ಹೊಳೆ ಕೂಡಿಕೊಂಡ ಶರಾವತಿ ಬಿಟ್ಟ ಬಾಣದ ಹಾಗೆ ಹರಿಯುತ್ತಿದ್ದಳು. ಯಾಕೋ ಬಂದ ದಾರಿಯಲ್ಲೇ ವಾಪಸು ಸಾಗಿ ಮನೆ ಮುಟ್ಟುವುದಕ್ಕಿಂತ ನೀರಿನ ಮೇಲೆ ದೋಣಿಯಲ್ಲಿ ಹೋಗುವ ಉಮೇದಾಯಿತು. ‘ಇಗಾ ಈ ಗುಡ್ಡದಾಚೆ ಭಟ್ರ ಕೇರಿ ಬತ್ತದೆ. ಅದ್ನ ದಾಟಿದ್ದೇ ನಿಮ್ಮನೆ ಬತ್ತದೆ. ಇಲ್ಲೇ ಸನಿಯ’ ಎಂದು ಹೇಳಿದ ಅಜ್ಜಿಯ ಮಗನೂ ನನ್ನ ಉತ್ಸಾಹ ಹೆಚ್ಚಿಸಿದ. ನಮ್ಮ ಡ್ರೈವರನ ಭಯವನ್ನೆಲ್ಲ ಆಚೆ ತಳ್ಳಿ, ತಂದ ಔಷಧಗಳನ್ನು ಅಜ್ಜಿಗೆ ಕೊಟ್ಟು, ಬೇಗ ಗುಣವಾಗು ಎಂದು ಕೈಯೊತ್ತಿ, ಮತ್ತೊಂದು ಚಾಕಣ್ಣು-ಬಿಸ್ಕತ್ತು-ಬಾಳೆಹಣ್ಣು ಸಮಾರಾಧನೆ ಮಾಡಿಕೊಂಡು ಹೊರಟೆ. ‘ಅಮ, ದೇವ್ರು ಬಂದಂಗೆ ಬಂದು ನನ್ನ ಜೀಂವಾ ಉಳಿಸಿದ್ರಿ. ನಂಗೀಗ ಎಷ್ಟೋ ಆರಾಮ ಕಾಣ್ತಾ ಇದೆ. ನೀವಿಲ್ಲಾಗಿದ್ರೆ ನನ್ನ ಹೆಣಾ ಎತ್ತುಕೆ ತಯಾರು ಮಾಡುದೇ ಆಗಿತ್ತು’ ಎನ್ನುತ್ತಾ ಅಜ್ಜಿ ಕಣ್ಣೀರು ತುಂಬಿಕೊಂಡಿತು. ಒಂದು ಸೀತಾಳೆ ದಂಡೆ ನನ್ನ ಮುಡಿಗೇರಿತು. 

ಮರಕ್ಕೆ ಕಟ್ಟಿದ್ದ ಪಾತಿದೋಣಿ ಬಿಚ್ಚಿದ ಅಜ್ಜಿಯ ಮಗ ತಾನೇ ಹುಟ್ಟು ಹಾಕತೊಡಗಿದ. ಕುಕ್ಕುರುಗಾಲಲ್ಲಿ ಕೊಡೆ ಹಿಡಿದು ದೋಣಿಯ ಒಂದು ಮೂಲೆಯಲ್ಲಿ ನಾನು ಕುಳಿತೆ. ದೋಣಿಯೊಳಗೆ ಬಿದ್ದ ಮಳೆ ನೀರನ್ನು ಮೊಗೆದು ಹೊರಚೆಲ್ಲುತ್ತಿದ್ದ ಅಜ್ಜಿಯ ಮರಿಮಗ ಮತ್ತೊಂದು ಮೂಲೆಯಲ್ಲಿ ಕುಳಿತ. ಗಾಳಿಮಳೆ ಜೋರಾದಂತೆ ನಾನು ಬಿಡಿಸಿದ ಛತ್ರಿ ಹಿಡಿಯುವುದಕ್ಕಿಂತ ಮಡಚಿ ಕೂರುವುದೇ ಒಳ್ಳೆಯದೆನಿಸಿತು. ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ದೋಣಿ ಹೋಗುತ್ತಲಿತ್ತು. 

ಹುಟ್ಟುಹಾಕುತ್ತ ಅಜ್ಜಿಯ ಮಗ ಮತ್ತೊಂದು ಕತೆ ಹೇಳಿದ. ಆ ದೊಡ್ಡ ನೆರೆ ಬಂದ ವರ್ಷವೇ ಅವರ ಕೇರಿಯ ಎರಡು ಮಕ್ಕಳು ಪ್ರಾಣ ತೆತ್ತವು. ಒಂದು ಶಾಲೆಗೆ ಹೋಗುವ ಹುಡುಗಿ ಸಂಕ ದಾಟುವಾಗ ಕಾಲು ಜಾರಿ ಹಳ್ಳಕ್ಕೆ ಬಿದ್ದರೆ, ಮತ್ತೊಂದು ಕೈಗೂಸು ಆಡಾಡುತ್ತ ಹೊಳೆಯಲ್ಲಿ ಬಳಿದುಕೊಂಡು ಹೋಯಿತಂತೆ. ಅದರ ಹೆಣ ತೆಗೆಯಲು ಎರಡು ಮೂರು ಮೈಲು ಹೊಳೆಸಾಲ ಉದ್ದಕ್ಕೂ ಎಲ್ಲರೂ ದೋಣಿ ತಗಂಡು ತಿರುಗಿದ್ದರಂತೆ. ಅಂತೂ ಬೇಲಿಯೊಂದಕ್ಕೆ ಸಿಕ್ಕಿದ ಮಗುವಿನ ಹೆಣ ಸ್ವಲ್ಪ ನೀರಿಳಿದ ಮೇಲೆ ಮೂರು ದಿನವಾದ ನಂತರ ಸಿಕ್ಕಿದಾಗ ಕೊಳೆತು ನಾರುತ್ತಿತ್ತಂತೆ. ಕೈಕಾಲುಗಳೆಲ್ಲ ಮೀನು ಕಚ್ಚಿತಿಂದು ಮೊಂಡಾಗಿದ್ದುವಂತೆ. ನೀರಿನಲ್ಲಿ ಮುಳುಗಿ ವಿರೂಪಗೊಂಡ ಎಳೆ ಮಗುವಿನ ಶವ ನೆನೆಸಿಕೊಂಡು ನನ್ನ ಹೊಟ್ಟೆಯೊಳಗೂ ಸುಳಿ ತಿರುಗತೊಡಗಿದ ಅನುಭವ.

ಆಹ್, ಗುಡ್ಡೆಕಾನು ಹೊಳೆ! ಎಂಥ ಅನ್ವರ್ಥನಾಮ! ಎರಡೂ ಕಡೆ ಕೋಟೆ ಕಟ್ಟಿದಂತೆ ನಿಂತಿದ್ದ ಬೆಟ್ಟಸಾಲುಗಳನ್ನು ಕತ್ತೆತ್ತಿ ನೋಡಿದರೆ ನಾನೇ ಎಲ್ಲೋ ಪಾತಾಳದಲ್ಲಿದ್ದಂತೆ ಭಾಸವಾಗುತ್ತಿತ್ತು. ಸಾಲು ಸಾಲು ಅಡಿಕೆ ತೆಂಗಿನ ತೋಟಗಳು... ಹಸಿರು ಹೊದ್ದ ಗುಡ್ಡದ ತುದಿಗಳನ್ನು ಮುಚ್ಚಿಕೊಂಡಿರುವ ತೆಳು ಮಂಜುಮೋಡಗಳು... ಇಂಥ ರಮ್ಯ ಪ್ರಕೃತಿಯ ಒಡಲಲ್ಲೇ ನೋವಿನ ಕತೆಗಳು ಅದೆಷ್ಟು ಅಡಗಿದ್ದಾವೋ? ಮಹಾನ್ ನಿಸರ್ಗದೆದುರು ಮಾನವ ಕ್ಷುದ್ರಾತಿಕ್ಷುದ್ರ ಜೀವಿಯಾದರೂ ಪ್ರಕೃತಿಯೊಂದಿಗೇ ನಿರಂತರ ಹೋರಾಟಕ್ಕೆಳಸಿದ್ದಾನಲ್ಲ!

 ಉಕ್ಕಿ ಹರಿಯುವ ಈ ಸೊಕ್ಕಿನ ನದಿ ದಾಟಲು ಈ ಪುಟ್ಟ ಪಾತಿದೋಣಿ ಸಾಕೇ ಎಂಬ ಅನುಮಾನವಾಗತೊಡಗಿತು. ಒಂದು ಕಿಲೋಮೀಟರಿನಷ್ಟು ಅಗಲವಿರಬಹುದಾದ ಈ ನದಿಗೂ ಅದರ ಸೆಳವಿಗೂ ಹೆದರದ ಮಾನವ, ನೀರನ್ನು ಜಯಿಸಲು ಏನೇನನ್ನೆಲ್ಲ ಹುಡುಕಿಕೊಂಡಿದ್ದಾನೆ! ಇವರಲ್ಲಿ ಯಾರು ಹೆಚ್ಚು? ಕೋಟ್ಯಂತರ ವರ್ಷಗಳಿಂದ ಭೂಮಿಯ ಎಲ್ಲ ಆಗುಹೋಗುಗಳಿಗೆ ಕಾರಣವಾಗಿ ಮೂಕಸಾಕ್ಷಿಯಾಗಿ ನಿಂತ ಪ್ರಕೃತಿಯೋ? ಅದನ್ನೇ ಅಂಕೆಗೊಳಪಡಿಸುವ ದುಷ್ಟ ಉತ್ಸಾಹದ, ಹೆಚ್ಚೆಂದರೆ ನೂರು ವರ್ಷ ಬದುಕಬಲ್ಲ ಪುಟಗೋಸಿ ಮನುಷ್ಯನೋ? 

ನನ್ನ ಮನಸ್ಸನ್ನು ಪ್ರಶ್ನೆಗಳು ತುಂಬಿಕೊಂಡಂತೆ ದೋಣಿಯಲ್ಲಿ ಮಳೆನೀರು ತುಂಬುತ್ತ ಹೋಗುತ್ತಿತ್ತು. ಹೊಳೆಯ ನೀರು ಕಡುಕೆಂಪು ವರ್ಣದ್ದಾಗಿ ಹೆದರಿಸುವಂತೆ ಇತ್ತು. ಎಷ್ಟೋ ದನ - ಜನ ಕೊಚ್ಚಿ ಹೋದ ಕತೆ ಕೇಳಿದ್ದೆ. ಸುಳಿಸುಳಿದು ಭೋರೆಂದು ಹರಿಯುತ್ತಿರುವ ನೀರಿನ ಶಕ್ತಿ ಎಷ್ಟೆಂದು ನನ್ನೆದುರೇ ಕೊಚ್ಚಿ ಹೋಗುತ್ತಿರುವ ಮರದ ದಿಮ್ಮಿ ನೋಡಿ ಅರ್ಥವಾಯಿತು. ಅಂತಹ ದಿಮ್ಮಿಯೊಂದಕ್ಕೆ ಢಿಕ್ಕಿ ಹೊಡೆದು ಈ ಪಾತಿ ದೋಣಿಯೇನಾದರೂ ಮಗುಚಿಕೊಂಡರೆ ಎಂಬ ವಿಚಾರ ಬಂದಿದ್ದೇ ಈಜಲೂ ಬಾರದ ನನಗೆ ಹೊಕ್ಕುಳಿಂದ ಚಳಿಯೆದ್ದು ನಡುಕ ಬಂದಂತಾಯಿತು. 

ಹಳ್ಳಿಯ ಜನ ಪುಕ್ಕಲರು, ಮಾತೆತ್ತಿದರೆ ದೇವರು - ದೆವ್ವ - ಮಂತ್ರ ಅಂತ ಕಾಣದ್ದರ ಮೊರೆ ಹೋಗುತ್ತಾರೆ, ಅಂಥ ಮೂಢನಂಬಿಕೆಗಳಿಂದ ತೊಂದರೆಗೊಳಗಾಗುತ್ತಿದ್ದಾರೆ ಎಂದೇ ನಾನು ಭಾವಿಸಿದ್ದೆ. ಈಗ, ತೊಡೆ ಮಟ್ಟ ನೀರಲ್ಲಿ ನಡೆಯುವಾಗ, ಸುತ್ತ ನೀರು ನಿಂತು ಅಟ್ಟ ಹತ್ತಿ ದಿನ ಕಳೆದು ಜೀವವುಳಿಸಿಕೊಳ್ಳುತ್ತಾರೆನ್ನುವುದು ತಿಳಿದಾಗ, ಸುಳಿಸುಳಿದು ಎತ್ತೆತ್ತಲೋ ಸೆಳೆಯುವ ನೀರಿನ ಜೊತೆ ಹೋರಾಡುತ್ತಾ ಬದುಕುವುದು ನೋಡಿದಾಗ - ಈ ಜನ ನನಗಿಂತ ಧೈರ್ಯಶಾಲಿಗಳು ಎಂದೆನಿಸತೊಡಗಿತು. ಸವಲತ್ತುಗಳ ನಡುವೆಯೇ ಬದುಕುವವರ ವಿಚಾರಗಳಿಗೂ, ಕಷ್ಟವನ್ನೇ ಹಾಸಿಹೊದ್ದು ಬದುಕುವವರ ನಂಬಿಕೆಗಳಿಗೂ ವ್ಯತ್ಯಾಸ ಇರುವುದು ಸಹಜ. ನಮ್ಮ ಅಂಕೆಯಲ್ಲಿಲ್ಲದ ಪ್ರಕೃತಿ, ಹಾಗೂ ಅದರ ವಿಕೋಪಗಳ ಬುಡದಲ್ಲೇ ಬದುಕಬೇಕಾದವರಿಗೆ ಕಾಣದ ಶಕ್ತಿಯನ್ನು ನಂಬಿ ಬದುಕುವುದೇ ಧೈರ್ಯ ಕೊಡುವ ಉತ್ತಮ ಮಾರ್ಗವಿರಬಹುದು ಎಂತಲೂ ಅನಿಸತೊಡಗಿತು.

 ಈ ಪ್ರಕೃತಿ, ಅದರ ಒಡಲಲ್ಲಿ ಬಡಿದಾಡುತ್ತ ಬದುಕುವ ಈ ಇವರ ಎದುರಿಗೆ ನಾನು ಸಣ್ಣವಳಾಗುತ್ತಾ ಹೋದ ಹಾಗೆ ಇಳಿವ ಜಾಗೆ ಬಂದಿತು. 


ಡಾ. ಎಚ್. ಎಸ್. ಅನುಪಮಾ

(೨೦೦೯)


                                        


Monday 16 May 2022

ನ್ಯಾ. ಕೆ. ಚಂದ್ರು - ಜನಚಳವಳಿ ಮಾತ್ರ ಸಂವಿಧಾನವನ್ನು ರಕ್ಷಿಸಬಲ್ಲದು


ಮೈ ಲಾರ್ಡ್,  ನನ್ನ ವಾದ, ಕೇಳಿ ಕೇಳಿ’ ಎಂದು ವಕೀಲರು, ಕಕ್ಷಿದಾರರು ನ್ಯಾಯಾಧೀಶರನ್ನು ಕೇಳುವರಲ್ಲವೆ? ನ್ಯಾಯಾಧೀಶರೊಬ್ಬರು ‘ಮೈ ಲಾರ್ಡ್ ಎಂಬ ಪದ ಬಳಸಬೇಡಿ, ನಾನೂ ನಿಮ್ಮಂತೆಯೇ ಒಬ್ಬ ವ್ಯಕ್ತಿ' ಎಂದು ಹೇಳಿದರೆ? ತುರ್ತಾಗಿ ನ್ಯಾಯ ದೊರೆಯುವುದೇ ಕನಸು ಎಂಬಂತಾಗಿರುವ, ಪ್ರಕರಣಗಳ ಭಾರದಿಂದ ತತ್ತರಿಸಿರುವ, ಸಿಬ್ಬಂದಿ ಕೊರತೆಯಿರುವ ನ್ಯಾಯಾಲಯದಲ್ಲಿ ಒಬ್ಬ ನ್ಯಾಯಾಧೀಶರು ಕೇವಲ 6 ವರ್ಷದಲ್ಲಿ 96000 ಪ್ರಕರಣಗಳನ್ನು ಇತ್ಯರ್ಥಪಡಿಸಿ ದಾಖಲೆ ಮಾಡಿದರೆ? ನಂಬಲಸಾಧ್ಯ ಎನಿಸುತ್ತದೆ, ಅಲ್ಲವೆ?

ನೀವು ನಂಬಬೇಕು. ಅಂತಹ ನ್ಯಾಯಮೂರ್ತಿ ಒಬ್ಬರು ಈ ಕಾಲದಲ್ಲಿ ಇರುವರು ಎಂದೇ ನಾವಿನ್ನೂ ಭಾರತದ ನ್ಯಾಯ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟುಕೊಳ್ಳಬಹುದಾಗಿದೆ.

ಅಂಥವರು ನ್ಯಾಯಮೂರ್ತಿ ಕೆ. ಚಂದ್ರು. ಮದರಾಸು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು. ಅವರು ವಕೀಲರಾಗಿ 1993ರಲ್ಲಿ ನಿಭಾಯಿಸಿದ ಪ್ರಕರಣವೊಂದು ಕಳೆದ ವರ್ಷ ‘ಜೈ ಭೀಮ್’ ಎನ್ನುವ ತಮಿಳು ಸಿನಿಮಾ ಆದ ಬಳಿಕ ನ್ಯಾ. ಚಂದ್ರು ಮನೆಮಾತಾಗಿದ್ದಾರೆ. ಅವರ ಬದುಕು, ಪ್ರತಿಪಾದನೆಯ ಕುರಿತು ಎಲ್ಲರಿಗೂ ಆಸಕ್ತಿ, ಅಚ್ಚರಿ, ಗೌರವ ಮೂಡತೊಡಗಿದೆ.

***

ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಶ್ರೀರಂಗಂನಲ್ಲಿ 1951ರಲ್ಲಿ ಹುಟ್ಟಿದ ಚಂದ್ರು ವಿದ್ಯಾರ್ಥಿ ದೆಸೆಯಿಂದಲೇ ಸಿಪಿಐ(ಎಂ) ಪಕ್ಷದ ವಿದ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ವಿದ್ಯಾರ್ಥಿ ಪ್ರತಿಭಟನೆಗಳನ್ನು ಮುನ್ನಡೆಸಿದ ಕಾರಣಕ್ಕಾಗಿ ಅವರನ್ನು ಚೆನ್ನೈನ ಲೊಯೊಲಾ ಕಾಲೇಜು ಡಿಬಾರ್ ಮಾಡಿತ್ತು. ಬಳಿಕ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪದವಿ ಪೂರೈಸಿದ ಅವರು, 1973ರಲ್ಲಿ ಕಾನೂನು ಪದವಿಗಾಗಿ ಕಾಲೇಜು ಸೇರಿದರು. ಅವರು ವಿದ್ಯಾರ್ಥಿ ಸಂಘಟನೆಯ ವ್ಯಕ್ತಿ ಎಂದು ಹಾಸ್ಟೆಲಿನಲ್ಲಿ ಜಾಗ ಕೊಡದೆ ಹೋದಾಗ ಆಮರಣಾಂತ ಉಪವಾಸ ಆರಂಭಿಸಿದರು. ಕಾನೂನು ಪದವಿಯ ಬಳಿಕ ರಾವ್ ಅಂಡ್ ರೆಡ್ಡಿ ಎಂಬ ಲಾ ಫರ್ಮಿನಲ್ಲಿ ೮ ವರ್ಷ ಕೆಲಸ ಮಾಡಿದ ಅವರು 1988ರವರೆಗೂ ಸಿಪಿಐ(ಎಂ) ಪಕ್ಷದ ಕಾರ್ಯಕರ್ತನಾಗಿ ದುಡಿದರು. ಶ್ರೀಲಂಕಾದ ದಂಗೆ, ಅಂತರ್ಯುದ್ಧದ ಸಮಯದಲ್ಲಿ ತಮಿಳರ ಪರವಾಗಿ ಮಾತನಾಡುತ್ತಾ ಭಾರತದ ಹಸ್ತಕ್ಷೇಪವನ್ನು ಅವರು ವಿರೋಧಿಸಿದಾಗ ಅದು ಪಕ್ಷವಿರೋಧಿ ಚಟುವಟಿಕೆ ಎನಿಸಿಕೊಂಡಿತು. ಸಿಪಿಐ(ಎಂ) ಪಕ್ಷವು ಅವರನ್ನು ಹೊರಹಾಕಿತು. ಆ ವೇಳೆಗೆ ಅಂಬೇಡ್ಕರ್ ಶತಮಾನೋತ್ಸವ ದೇಶಾದ್ಯಂತ ಆಚರಣೆಯಾಯಿತು. ನ್ಯಾ. ಚಂದ್ರು ಅಂಬೇಡ್ಕರರನ್ನು ಹೆಚ್ಚೆಚ್ಚು ಓದಿಕೊಂಡರು. ಭಾರತದಲ್ಲಿ ಜಾತಿ-ಮತ-ಧರ್ಮಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕಾದರೆ ಅಂಬೇಡ್ಕರ್ ಅವರನ್ನು ನಿರ್ಲಕ್ಷಿಸಲಾಗದು ಎನ್ನುವುದನ್ನು ಕಂಡುಕೊಂಡರು. ಬಾರ್ ಎಟ್ ಲಾ ಮುಗಿಸಿಬಂದ ಅಂಬೇಡ್ಕರರ ಕನಸು  ನ್ಯಾಯಮೂರ್ತಿಯಾಗಬೇಕು ಎನ್ನುವುದಾಗಿರುತ್ತದೆ. ಅಂಬೇಡ್ಕರರ ಬದುಕು ಬರಹಗಳಿಂದ ಸ್ಫೂರ್ತಿ ಪಡೆದ ವಕೀಲ ಚಂದ್ರು ಅವರಿಗೂ ನ್ಯಾಯಮೂರ್ತಿಯಾಗಿ ಕೆಲಸ ಮಾಡುವ ಉತ್ಸಾಹ ಹುಟ್ಟುತ್ತದೆ. ಕ್ರಿಮಿನಲ್ ಮತ್ತು ಸಿವಿಲ್ ಖಟ್ಲೆಗಳೆರಡನ್ನೂ ಮದರಾಸು ಉಚ್ಚ ನ್ಯಾಯಾಲಯದಲ್ಲಿ ವಾದಿಸುತ್ತಿದ್ದ ಚಂದ್ರು, 2006ರಲ್ಲಿ ಅದೇ ನ್ಯಾಯಾಲಯಕ್ಕೆ ನ್ಯಾಯಮೂರ್ತಿಯಾಗಿ ಆಯ್ಕೆಯಾದರು. 2009ರಲ್ಲಿ ಖಾಯಂ ನ್ಯಾಯಾಧೀಶರಾದರು. 

ಎಷ್ಟೋ ನ್ಯಾಯಮೂರ್ತಿಗಳು ಬರುತ್ತಾರೆ, ಎಷ್ಟೋ ಜನ ಹೋಗುತ್ತಾರೆ. ಆದರೆ ಜನಮಾನಸದಲ್ಲಿ ನೆನಪಿನಲ್ಲುಳಿಯುವಂತೆ ಕೆಲಸ ಮಾಡುವವರು; ಮಾಡುವ ಕೆಲಸದ ಮೇಲೆ ಅತೀವ ಶ್ರದ್ಧೆಯಿಟ್ಟು ಅರ್ಥಪೂರ್ಣವಾಗಿ ಸೇವಾವಧಿ ಕಳೆಯಬೇಕೆನ್ನುವವರು ಎಲ್ಲೋ ಬೆರಳೆಣಿಕೆಯಷ್ಟು ಜನ. ಈ ದೃಷ್ಟಿಯಿಂದ ನ್ಯಾ. ಕೆ. ಚಂದ್ರು ತುಂಬ ಭಿನ್ನರಾಗಿ ಎದ್ದು ಕಾಣುತ್ತಾರೆ. ಅವರು ನ್ಯಾಯಮೂರ್ತಿಯಾದ ಮೇಲೆ ಕೆಲವು ಬದಲಾವಣೆ ತಂದರು. ಇನ್ನು ಮುಂದೆ ತಮಗೆ ಅಂಗರಕ್ಷಕರು ಬೇಡವೆಂದು ಹೇಳಿದರು. ನ್ಯಾಯಮೂರ್ತಿಗಳನ್ನು ‘ಮೈ ಲಾರ್ಡ್’ ಎಂದು ಸಂಬೋಧಿಸುವುದನ್ನು ನಿಲ್ಲಿಸಿದರು. 2013ರಲ್ಲಿ ನಿವೃತ್ತರಾದಾಗ ಬೀಳ್ಕೊಡುಗೆ ಸಮಾರಂಭವನ್ನೂ ಸ್ವೀಕರಿಸಲಿಲ್ಲ. ಅಲ್ಲಿ ನ್ಯಾಯಮೂರ್ತಿಗಳು ಬರುವ ಮೊದಲು ಒಬ್ಬ ಸೇವಕನು ಗದೆಯಂತಹ ಲಾಂಛನ ಹಿಡಿದು ಬಂದು ಜನರನ್ನು ದೂರ ಸರಿಸಬೇಕಿತ್ತು. ಅದನ್ನು ಕೂಡಾ ಬೇಡವೆಂದರು. ಅವರಿಗೊಬ್ಬ ಸೆಕ್ಯುರಿಟಿ ಪೊಲೀಸ್ ಆಫೀಸರ್ ಇದ್ದರು. ಅವರ ಅಗತ್ಯವೂ ಇಲ್ಲ ಬೇಡ ಎಂದರು. ಇವು ಬಾಹ್ಯ ಬದಲಾವಣೆಗಳಾದರೆ ನ್ಯಾಯಾಲಯದ ಒಳಗೂ ಬದಲಾವಣೆ ತಂದರು. ಅಂದಂದಿಗೆ ಸಿದ್ಧಪಡಿಸಿದ ಯಾದಿಯ ಪ್ರಕರಣಗಳನ್ನು ಅವತ್ತಿಗೆ ಮುಗಿಸಲೇಬೇಕು. ಕುದುರೆ ಹಾಗೆ ಕೆಲಸ ಮಾಡಿ, ಋಷಿಗಳ ತರಹ ಬದುಕಿ ಎಂದು ಮುಖ್ಯ ನ್ಯಾಯಮೂರ್ತಿ ಕಪಾಡಿಯಾ ಒಮ್ಮೆ ನ್ಯಾಯಮೂರ್ತಿಗಳಿಗೆ ಹೇಳಿದ್ದರು. ಅವರೂ ಹಾಗೇ ನಡೆದುಕೊಂಡರು. 

ದಲಿತ, ಹಿಂದುಳಿದ, ಶೋಷಿತ ಸಮುದಾಯಗಳ ಪ್ರಕರಣಗಳ ಬಗೆಗೆ ವಿಶೇಷ ಆಸ್ಥೆ ವಹಿಸುತ್ತಿದ್ದ ನ್ಯಾ. ಚಂದ್ರು, ವಿಳಂಬವಿಲ್ಲದೆ ಪ್ರಕರಣ ಇತ್ಯರ್ಥಗೊಳಿಸುವಲ್ಲಿ ಹೆಸರುವಾಸಿಯಾದರು. ಮೂರರಿಂದ ನಾಲ್ಕು ವಾರಗಳಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸಿದರು. ಮನೆಯಲ್ಲಿಯೇ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸುವುದು, ಒಂದೇ ತರಹದ ಪ್ರಕರಣಗಳನ್ನು ಒಗ್ಗೂಡಿಸುವುದು, ವಿಚಾರಣೆಯನ್ನು ಅನವಶ್ಯ ಮುಂದೂಡದೇ ಮಿತಗೊಳಿಸುವುದು, ತೀರ್ಪನ್ನು ಕೋರ್ಟಿನಲ್ಲಿ ಓದಿ ಹೇಳಿದ ಬಳಿಕ ಟೈಪಿಸಲು ಸಮಯ ವ್ಯರ್ಥ ಮಾಡದೇ ಮನೆಯಲ್ಲಿ ಮಾಡಿಸುವುದು, ಮೊದಲೇ ಸಿದ್ಧವಾಗಿ ಬರುವುದು - ಹೀಗೆ ತ್ವರಿತ ವಿಲೇವಾರಿಗೆ ಹಲವು ವಿಧಾನಗಳನ್ನು ಅನುಸರಿಸಿದರು. ವಿಚಾರಣೆ ಮುಂದೂಡಿಕೆ ಎನ್ನುವುದು ನ್ಯಾಯಾಲಯಕ್ಕೆ ಹತ್ತಿದ ಕಾಯಿಲೆ ಎನ್ನುವ ನ್ಯಾ. ಚಂದ್ರು, ವಕೀಲರಿಗೆ ಕಾಯಿಲೆ/ಅಪಘಾತ ಮುಂತಾದ ತುರ್ತು ಉಂಟಾಗಿದ್ದು ಹೊರತುಪಡಿಸಿದರೆ ಒಮ್ಮೆ ವಿಚಾರಣೆಗೆ ಬಂದ ಪ್ರಕರಣವನ್ನು ಯಾವ ಕಾರಣಕ್ಕೂ ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ತೆಗೆದುಕೊಳ್ಳುತ್ತಿದ್ದರು. ಹುಸಿ ಪ್ರಕರಣಗಳನ್ನು ವಜಾ ಮಾಡಿದರೆ. ಎಲ್ಲ ವಿಚಾರಣೆ ಮುಗಿದರೂ ವರ್ಷಗಟ್ಟಲೆಯಿಂದ ಕೊಳೆಬಿದ್ದ ಪ್ರಕರಣಗಳನ್ನು ತೀರ್ಪಿನ ತನಕ ತಂದು ಅಂತಿಮಗೊಳಿಸಿದರು. ಇದು ಅವರಿಗೆ ಹಗೆಗಳನ್ನು ಸೃಷ್ಟಿಸಿದರೂ ಸಹ ಯುದ್ಧೋಪಾದಿಯಲ್ಲಿ 96 ಸಾವಿರ ಪ್ರಕರಣಗಳನ್ನು ಇತ್ಯರ್ಥ ಮಾಡಿ ಅತ್ಯಪೂರ್ವ ದಾಖಲೆ ಬರೆದರು. 

ಆಕ್ರೋಶ, ಪ್ರತ್ಯೇಕತೆ, ಅಸಹಾಯಕತೆಗಳೆಲ್ಲ ಸೇರಿ ಶೋಷಿತರಿಗೆ ಒಂದು ತರಹದ ನಿರ್ಧಾರ ಹುಟ್ಟುತ್ತದೆ. ಅದು ಎಲ್ಲ ಅಡೆತಡೆಗಳ ವಿರುದ್ಧವೂ ಅವರು ಸೆಣಸುವಂತೆ ಮಾಡುತ್ತದೆ. ಅಂತಹ ಅಸಹಾಯಕರ, ಪೊಲೀಸ್ ದೌರ್ಜನ್ಯದ ವಿರುದ್ಧವೂ ಹೋರಾಡುತ್ತಿದ್ದ ಅಮಾಯಕರ ಪ್ರಕರಣಗಳನ್ನು ಹುಡುಹುಡುಕಿ ಇತ್ಯರ್ಥಗೊಳಿಸಿದರು. ಅಂತಹ 25 ಪ್ರಕರಣಗಳನ್ನು ಪ್ರಸ್ತುತಪಡಿಸಿ ‘ಲಿಸನ್ ಟು ಮೈ ವರ್ಡ್ಸ್’ (ಪ್ರ: ಲೆಫ್ಟ್ ವರ್ಡ್) ಎಂಬ ಅತ್ಯಂತ ಮನೋಜ್ಞ ಪುಸ್ತಕ ಪ್ರಕಟಿಸಿದರು. 



ಅವರು ವಕೀಲರಾಗಿದ್ದಾಗಲೂ ಅಮಾಯಕರ ಮೇಲೆ ನಡೆವ ಪೊಲೀಸ್ ದೌರ್ಜನ್ಯದ ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತಿದ್ದರು. ಪೊಲೀಸರೇ ಅಪರಾಧಿಗಳಾದರೆ ಅವರನ್ನು ಶಿಕ್ಷಿಸಲು ಒಂದೂ ಐಪಿಸಿ ಸೆಕ್ಷನ್ ಇಲ್ಲ, ಹಾಗಾಗಿ ರಕ್ಷಕ ವ್ಯವಸ್ಥೆಯೊಳಗೇ ಇರುವ ಸಾಂಸ್ಥಿಕ ಹಿಂಸೆಯ ವಿರುದ್ಧ ಜನ ಎಚ್ಚೆತ್ತುಕೊಳ್ಳಬೇಕು. ವರ್ಗಗ್ರಸ್ತ ಸಮಾಜದಲ್ಲಿ ನ್ಯಾಯವೂ ವರ್ಗಗ್ರಸ್ತವೇ ಆಗಿರುವುದರಿಂದ ಶೋಷಿತರು ಹೋರಾಟದ ಮೂಲಕ ನ್ಯಾಯ ಪಡೆಯಲು ಯತ್ನಿಸಬೇಕು ಎಂದು ಭಾವಿಸಿ ಅಂತಹವರಿಗೆ ಸಹಾಯ ಮಾಡುತ್ತಿದ್ದರು.  ಹಾಗೆ 1993ರಲ್ಲಿ ಅವರು ವಕೀಲರಾಗಿ ಇರುಳರು ಎಂಬ ಆದಿವಾಸಿ ಕುಟುಂಬದ ಒಂದು ಪ್ರಕರಣವನ್ನು ತೆಗೆದುಕೊಂಡಿದ್ದರು. ಆ ನೈಜ ಕತೆಯನ್ನಾಧರಿಸಿ, ಸೂರ್ಯ ನಾಯಕನಟರಾಗಿ ಜ್ಞಾನವೇಲು ನಿರ್ದೇಶಕರಾಗಿ, 2021ರಲ್ಲಿ ಜೈಭೀಮ್ ಚಿತ್ರವಾಗಿ ತೆರೆಗೆ ಬಂತು. ದೇಶಾದ್ಯಂತ ಅದು ಇರುಳರು ಎಂಬ ಆದಿವಾಸಿಗಳ ಬಗೆಗೂ, ಪೊಲೀಸ್ ದೌರ್ಜನ್ಯಗಳ ಬಗೆಗೂ ಚರ್ಚೆ ಹುಟ್ಟುಹಾಕಿತು. 

‘ನನ್ನ ತೀರ್ಪುಗಳಲ್ಲಿ ಕಾಣುವ ಅಂಬೇಡ್ಕರ್ ಬೆಳಕು’, ‘ಲಿಸನ್ ಟು ಮೈ ವರ್ಡ್ಸ್’ (‘ಸಾಹೇಬ್ರೇ, ನನ್ನ ಮಾತು ಕೇಳಿ’- ನ್ಯಾಯಾಲಯಕ್ಕೆ ಬರುವ ಮಹಿಳೆಯರ ಪ್ರಕರಣಗಳು) ಮೊದಲಾದ ಪುಸ್ತಕಗಳನ್ನು ಬರೆದಿರುವ ಅವರು, ನಿವೃತ್ತಿಯ ಬಳಿಕ ಜನಪರ ಚಿಂತನೆ, ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಶಾಲೆಯೊಂದನ್ನು ನಡೆಸುತ್ತಿದ್ದಾರೆ. ಅಲ್ಲಿ ೬, ೭ನೆಯ ತರಗತಿಯ ಮಕ್ಕಳಿಗೆ ಸಂವಿಧಾನದ ಪಾಠಗಳನ್ನು ತಾವೇ ಬೋಧಿಸುತ್ತಾರೆ. 

‘ಭಾರತ ಸಂವಿಧಾನ ಅಪಾಯದಲ್ಲಿದೆ, ಒಡೆಯುವ ಶಕ್ತಿಗಳ ವಿರುದ್ಧದ ಜನ ಚಳವಳಿ ಮಾತ್ರವೇ ಸಂವಿಧಾನವನ್ನು ರಕ್ಷಿಸಬಹುದಾಗಿದೆ. ಸರ್ಕಾರ ಜನರ ಹಿತಾಸಕ್ತಿ ಪೊರೆಯುವಲ್ಲಿ ವಿಫಲವಾದಾಗ ಜನ ಚಳವಳಿಯೇ ಪರ್ಯಾಯಗಳನ್ನು ಸೃಷ್ಟಿಸಬೇಕಿದೆ’ ಎನ್ನುವ ನ್ಯಾ. ಚಂದ್ರು, ಶೋಷಿತರು ನ್ಯಾಯಾಂಗ ವ್ಯವಸ್ಥೆಯ ಬಗೆಗೆ ಇನ್ನೂ ಭರವಸೆಯಿಟ್ಟುಕೊಳ್ಳಬಹುದು ಎನ್ನುವಂತೆ ಮಾಡಿದ್ದಾರೆ. ಈಗ ಚೆನ್ನೈನಲ್ಲಿ ಪತ್ನಿ ಭಾರತಿಯವರೊಡನೆ ವಾಸವಾಗಿದ್ದಾರೆ.


ಇದೇ ಮೇ 27,28ರಂದು ದಾವಣಗೆರೆಯಲ್ಲಿ ನಡೆಯುವ 8ನೆಯ ಮೇ ಸಾಹಿತ್ಯ ಮೇಳದಲ್ಲಿ (ಸ್ವಾತಂತ್ರ್ಯ-75: ನೆಲದ ದನಿಗಳು) ದಿಕ್ಸೂಚಿ ಮಾತುಗಳನ್ನು ಆಡಲಿದ್ದಾರೆ. 

Sunday 15 May 2022

ಭಯವಿರದ ಸ್ವಾತಂತ್ರ್ಯ - ಕವಿತಾ ಕೃಷ್ಣನ್

 


ಕವಿತಾ ಕೃಷ್ಣನ್ ‘ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘ’ (ಆಲ್ ಇಂಡಿಯಾ ಪ್ರೊಗ್ರೆಸಿವ್ ವುಮೆನ್ಸ್ ಅಸೋಸಿಯೇಷನ್-ಐಪ್ವಾ)ದ ಜಂಟಿ ಕಾರ್ಯದರ್ಶಿ. ದೆಹಲಿಯಲ್ಲಿ ನಿರ್ಭಯಾ ಅತ್ಯಾಚಾರ ನಡೆದ ನಂತರ ಭುಗಿಲೆದ್ದ ಬೀದಿ ಹೋರಾಟಗಳಲ್ಲಿ ಹಾಗೂ ಜಾಲತಾಣಗಳಲ್ಲಿ ಮುಂಚೂಣಿಗೆ ಬಂದ ಹೆಸರು. ಮಹಿಳೆಯರ ಹಕ್ಕುಗಳ ಕುರಿತು ಖಚಿತ ಮತ್ತು ಮುಕ್ತ ಅಭಿಪ್ರಾಯಗಳನ್ನು ಹೊಂದಿರುವ ಕವಿತಾ ತಮ್ಮ ಈ ಗುಣಗಳಿಂದಲೇ ತರುಣ ಪೀಳಿಗೆಯನ್ನು ಸೆಳೆದಿರುವ ನಾಯಕಿ.

ಮೂಲತಃ ತಮಿಳುನಾಡಿನ ಕೂನೂರಿನ ಕವಿತಾ ಹುಟ್ಟಿ ಬೆಳೆದಿದ್ದು ಭಿಲಾಯಿಯಲ್ಲಿ. ತಂದೆ ಉಕ್ಕು ಕಾರ್ಖಾನೆಯಲ್ಲಿ ಇಂಜಿನಿಯರ್. ತಾಯಿ ಇಂಗ್ಲಿಷ್ ಉಪನ್ಯಾಸಕಿ. ಮುಂಬಯಿಯಲ್ಲಿ ಪದವಿ ಓದುವಾಗ ಬೀದಿ ನಾಟಕಗಳಲ್ಲಿ, ವಿದ್ಯಾರ್ಥಿ ಚಟುವಟಿಕೆಗಳಲ್ಲಿ ಮುಂದಿದ್ದ ಕವಿತಾ ದೆಹಲಿಯ ಜವಾಹರ್‌ಲಾಲ್ ವಿವಿಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂಫಿಲ್ ಮಾಡಿದರು. 1994ರಲ್ಲಿ ಜೆಎನ್ಯು ವಿದ್ಯಾರ್ಥಿ ಸಂಘದ ಚುನಾವಣೆಗೆ ಸ್ಪರ್ಧಿಸಿದ್ದ ಶಿವಸೇನಾ ವಿದ್ಯಾರ್ಥಿ ಸಾಂಪ್ರದಾಯಿಕ ನಿಲುವು ತಳೆದು ಮಹಿಳಾವಿರೋಧಿ ಭಾಷಣ ಮಾಡಿದಾಗ ಅದಕ್ಕೆ ಪ್ರತಿಯಾಗಿ ಅವನೆದುರು ತುಂಡುಲಂಗ ತೊಟ್ಟು ಸಿಗರೇಟ್ ಎಳೆಯುತ್ತ ಕವಿತಾ ಮತ್ತವರ ಗೆಳತಿಯರು ತಿರುಗಾಡಿದ್ದರು. ‘ನೀನೇನಾದರೂ ಆಯ್ಕೆಯಾದರೆ ನಮ್ಮಂತಹ ಹುಡುಗಿಯರನ್ನು ಏನು ಮಾಡುತ್ತಿ?’ ಎಂದು ಪ್ರಶ್ನಿಸಿದಾಗ, ‘ಜೈಲಿಗೆ ಅಟ್ಟುತ್ತೇನೆ’ ಎಂದಿದ್ದ ಅವನು. ಅವನ ದರ್ಪದ ಮಾತು ಕವಿತಾ ಮತ್ತವರ ಗೆಳತಿಯರಲ್ಲಿ ರೊಚ್ಚು, ಕೆಚ್ಚು ಎರಡನ್ನೂ ಮೂಡಿಸಿತು. 

ಆಗ ಕವಿತಾ ‘ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್) ಲಿಬರೇಷನ್’ನ ವಿದ್ಯಾರ್ಥಿ ಸಂಘಟನೆ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಐಸಾ) ಸೇರಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಚಂದ್ರಶೇಖರ್ ಪ್ರಸಾದ್ ಎಂಬ ಯುವನಾಯಕನ ಗಾಢ ಪ್ರಭಾವಕ್ಕೆ ಒಳಗಾದರು. ನಂತರ ಜೆಎನ್ಯು ವಿದ್ಯಾರ್ಥಿ ಸಂಘಕ್ಕೆ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಆದರೆ ವಿದ್ಯಾರ್ಥಿ ಮುಖಂಡರಾದ ಚಂದ್ರಶೇಖರ್ ಹಾಗೂ ಶ್ಯಾಂ ನಾರಾಯಣ್ ಯಾದವ್ ಬಿಹಾರದ ಸಿವನ್‌ನ ರ‍್ಯಾಲಿಯಲ್ಲಿ ಭಾಷಣ ಮಾಡುವಾಗ ಹತ್ಯೆಯಾದರು. ಅದಕ್ಕೆ ಕಾರಣರಾದ ಆರ್‌ಜೆಡಿ ಎಂಪಿ ಸೈಯದ್ ಶಹಾಬುದ್ದೀನ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಭಾರೀ ಪ್ರತಿಭಟನೆ ನಡೆಸಿದಾಗ ಕವಿತಾ ಜೈಲಿಗೆ ಹೋದರು.

ಹೀಗೆ ವಿದ್ಯಾರ್ಥಿ ದೆಸೆಯಲ್ಲೇ ರಾಜಕೀಯ ಜೀವನ ಆಯ್ದುಕೊಂಡ ಕವಿತಾ ಮುಂದೆಯೂ ಹಲವು ಬಾರಿ ಜೈಲುವಾಸಿಯಾದರು. ಈಗ ಅವರು ‘ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್) ಲಿಬರೇಷನ್’ನ ಪಾಲಿಟ್ ಬ್ಯೂರೋ ಸದಸ್ಯೆ. ಪಕ್ಷದ ಮುಖವಾಣಿ ಪತ್ರಿಕೆ ‘ಲಿಬರೇಷನ್’ನ ಸಂಪಾದಕಿ. ತಮ್ಮ ಪಕ್ಷದ ಮಹಿಳಾ ಸಂಘಟನೆ ಆಲ್ ಇಂಡಿಯಾ ಪ್ರೊಗ್ರೆಸಿವ್ ವುಮೆನ್ಸ್ ಅಸೋಸಿಯೇಷನ್ (ಐಪ್ವಾ)ದ ಕಾರ್ಯದರ್ಶಿ. ಕರ್ನಾಟಕದ ಹಿರಿಯ ಮಹಿಳಾ ಹೋರಾಟಗಾರ್ತಿ ಮೈಸೂರಿನ ರತಿ ರಾವ್ ಈಗ ಐಪ್ವಾದ ಅಧ್ಯಕ್ಷರಾಗಿದ್ದಾರೆ.

ಐಪ್ವಾ, ಮಹಿಳೆಯರ ಮೇಲಾಗುವ ಎಲ್ಲ ರೀತಿಯ ಶೋಷಣೆ, ತಾರತಮ್ಯ ಮತ್ತು ಹಿಂಸೆಯನ್ನು ವಿರೋಧಿಸುತ್ತ ಹಕ್ಕು ಮತ್ತು ಸಮಾನತೆಯನ್ನು ಪ್ರತಿಪಾದಿಸಲು ಮಹಿಳೆಯರನ್ನು ಸಂಘಟಿಸುತ್ತದೆ. ಸಾಮಾಜಿಕ ಬದಲಾವಣೆಗಾಗಿ ಪ್ರಗತಿಪರ ಶಕ್ತಿಗಳ ಜೊತೆ ಕೈ ಜೋಡಿಸುತ್ತದೆ. ಮನೆ, ಉದ್ಯೋಗ ಸ್ಥಳ ಹಾಗೂ ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ತಾರತಮ್ಯ, ದೌರ್ಜನ್ಯಕ್ಕೆ ಕಾರಣವಾದ ಪುರುಷ ಪ್ರಧಾನ ದಬ್ಬಾಳಿಕೆಯನ್ನು ವಿರೋಧಿಸುತ್ತದೆ. ಸಮಾಜವಾದ ನೆಲೆಗೊಂಡ ಸಮಾನತೆಯ ಸಮಾಜಕ್ಕಾಗಿ ಹೋರಾಡುತ್ತದೆ. ಜಾತಿ, ವರ್ಗ, ಪಿತೃಪ್ರಾಧಾನ್ಯಗಳು ಶೋಷಣೆಯ ಮೂರು ಮುಖಗಳೆಂದು ಗುರುತಿಸಿ, ಅವುಗಳ ವಿರುದ್ಧ ಹೋರಾಟದಲ್ಲಿ ಸಮಾಜದ ಎಲ್ಲ ಸ್ತರಗಳ ಮಹಿಳೆಯರು ಭಾಗಿಯಾಗಬೇಕೆಂದು ಬಯಸುತ್ತದೆ.

ಐಪ್ವಾ ಸರ್ಕಾರಿ-ವಿದೇಶಿ ಧನಸಹಾಯದಿಂದ ನಡೆಯುವ ಸಂಘಟನೆಯಲ್ಲ. ಅದು ತನ್ನ ಇರವಿಗೆ ಜನಸಾಮಾನ್ಯ ಮಹಿಳೆಯರ ಶಕ್ತಿಯನ್ನೇ ಅವಲಂಬಿಸಿದೆ. 16 ವರ್ಷ ಮುಗಿದ, ಐಪ್ವಾದ ಸಂವಿಧಾನ-ಕಾರ್ಯಕ್ರಮಗಳ ಬಗೆಗೆ ಸಹಮತವುಳ್ಳ ಯಾರೇ ಆದರೂ ಅದರ ಸದಸ್ಯರಾಗಬಹುದು. ಸದಸ್ಯತ್ವ ಶುಲ್ಕ 2 ರೂಪಾಯಿ ಮಾತ್ರ. ಸಹಮತವಿರುವ ವ್ಯಕ್ತಿಗಳು, ಜನಸಾಮಾನ್ಯರಿಂದ ಸಂಗ್ರಹಿಸುವ ಹಣವೇ ಅದರ ಕೆಲಸ ಕಾರ್ಯಗಳಿಗೆ ಆಧಾರ. ಇಂತಹ ಸಂಘಟನೆಗಳ ಸದಸ್ಯರಲ್ಲಿ ಸಹಜವಾಗಿ ಕಾಣುವ ಸರಳ, ನಿರ್ಭಯ, ದಿಟ್ಟ ವ್ಯಕ್ತಿತ್ವ ಕವಿತಾ ಅವರದು.

‘ಫ್ರೀಡಂ ವಿತೌಟ್ ಫಿಯರ್’


2012ರ ನಿರ್ಭಯಾ ಅತ್ಯಾಚಾರ ಪ್ರಕರಣದ ವೇಳೆ ಕವಿತಾ ತಮ್ಮ ಭಿನ್ನ ನಿಲುವು, ನಾಯಕತ್ವದ ಗುಣಗಳಿಂದ ಮುನ್ನೆಲೆಗೆ ಬಂದರು. ಜಂತರ್ ಮಂತರ್, ಇಂಡಿಯಾ ಗೇಟ್, ದೆಹಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮನೆ ಎದುರು ಮತ್ತು ದೆಹಲಿಯ ಇತರ ಕಡೆಗಳಲ್ಲಿ ನಡೆದ ಅತ್ಯಾಚಾರ ವಿರೋಧಿ ಪ್ರತಿಭಟನೆಗಳಲ್ಲಿ  ಮುಂಚೂಣಿಯಲ್ಲಿದ್ದರು. ‘ಅತ್ಯಾಚಾರವಾದದ್ದು ದೆಹಲಿಯಲ್ಲಾದರೆ, ಸಾವಿರಾರು ಜನ ಪ್ರತಿಭಟಿಸಿದರೆ, ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದರೆ ಪ್ರಕರಣದ ವಿಚಾರಣೆ ತ್ವರಿತಗೊಂಡು ಕೂಡಲೇ ತೀರ್ಪು ಬರುತ್ತದೆ. ಇಲ್ಲದಿದ್ದರೆ ದಶಕಗಟ್ಟಲೆ ಕಳೆದ ನಂತರವೂ ‘ಸಾಕ್ಷ್ಯಾಧಾರಗಳಿಲ್ಲದೆ’ ಕೇಸು ಸಾಯುತ್ತದೆ. ಖೈರ್ಲಾಂಜಿಯಲ್ಲಿ, ನಾಗ್ಪುರದಲ್ಲಿ, ಮಣಿಪುರದಲ್ಲಿ ನಡೆದದ್ದು ಮುಚ್ಚಿ ಹೋಗುತ್ತವೆ. ಭಾರತದಲ್ಲಿ ನ್ಯಾಯ ಸಿಗುವುದು ಎಂದರೆ ಲಾಟರಿ ಹೊಡೆಯುವ ಹಾಗೆ’ ಎಂದು ಕವಿತಾ ನ್ಯಾಯವ್ಯವಸ್ಥೆಯ ವಿಳಂಬ ಮತ್ತು ಅದಕ್ಷತೆಯನ್ನು ಕಟುವಾಗಿ ಟೀಕಿಸಿದರು. ಬಲಿಪಶು ಆದವರ ಸಾಕ್ಷ್ಯ ನಂಬುವ ಬದಲು ಫೊರೆನ್ಸಿಕ್ ಸಾಕ್ಷ್ಯಗಳನ್ನೇ ಕೋರ್ಟು ಹೆಚ್ಚೆಚ್ಚು ನಂಬುತ್ತಿರುವುದು ನ್ಯಾಯವ್ಯವಸ್ಥೆಯ ದುರಂತ ಎಂದು ಬಣ್ಣಿಸಿದ ಕವಿತಾ, ಅತ್ಯಾಚಾರಿಗೆ ಮರಣದಂಡನೆ-ಪೌರುಷಹರಣ ಮಾಡುವುದನ್ನು ಖಂಡತುಂಡವಾಗಿ ವಿರೋಧಿಸಿದರು.

‘ಅತ್ಯಾಚಾರವಾಗುವುದು ಲೈಂಗಿಕ ಬಯಕೆಯ ಕಾರಣದಿಂದಲ್ಲ. ಜ್ಯಾಕ್ ದ ರಿಪ್ಪರ್ ಎಂಬ ಸರಣಿ ಅತ್ಯಾಚಾರಿ-ಕೊಲೆ ಪಾತಕಿ ಷಂಡನಾಗಿದ್ದ. ಹೆಣ್ಣಿನ ಮೇಲೆ ಅತ್ಯಾಚಾರವೆಸಗಲು ಲೈಂಗಿಕ ಅಂಗವೇ ಬೇಕಿಲ್ಲ, ವಸ್ತುಗಳೂ ಸಾಕು. ಆದ್ದರಿಂದ ಪುರುಷತ್ವ ಹರಣ ಮಾಡುವುದರಿಂದ ಅತ್ಯಾಚಾರ ಕೊನೆಗೊಳ್ಳುವುದಿಲ್ಲ. 100 ಅತ್ಯಾಚಾರಿಗಳಲ್ಲಿ 26 ಜನರಿಗೆ ಮಾತ್ರ ಶಿಕ್ಷೆಯಾಗುತ್ತಿರುವಾಗ ಅತ್ಯಾಚಾರಿಗೆ  ಮರಣದಂಡನೆ ಶಿಕ್ಷೆ ವಿಧಿಸಿಬಿಟ್ಟರೆ ಅತ್ಯಾಚಾರ ತಡೆಗಟ್ಟಲಾರದು’ ಎಂದು ಅತ್ಯಂತ ಸ್ಪಷ್ಟ ಮಾತುಗಳಲ್ಲಿ ಕವಿತಾ ತಿಳಿಸಿದರು. ಹೆಣ್ಣಿಗೆ ಬೇಕಿರುವುದು ಬರಿಯ ರಕ್ಷಣೆಯಲ್ಲ, ಸ್ವಾತಂತ್ರ್ಯ, ಭಯವಿರದ ಸ್ವಾತಂತ್ರ್ಯ ಎನ್ನುತ್ತಾ, ‘ಫ್ರೀಡಂ ವಿತೌಟ್ ಫಿಯರ್’ ಎಂಬ ಘೋಷವಾಕ್ಯ ಚಾಲ್ತಿಯಲ್ಲಿಟ್ಟರು. ಹೆಣ್ಣಿಗೆ ಎಂದೆಂದೂ ನಿರಾಕರಿಸಲಾದ ಸ್ವಾತಂತ್ರ್ಯವನ್ನು ಎಲ್ಲ ದನಿಗಳೂ ಪ್ರತಿಪಾದಿಸಿದವು. ಅವರ ವಿಭಿನ್ನ ವಿಶ್ಲೇಷಣೆ ತರುಣ ಪೀಳಿಗೆಯನ್ನು ಸೆಳೆದು ಸಾಮಾಜಿಕ ಜಾಲತಾಣದ ಕಣ್ಮಣಿಯಾದರು. 

ಎಲ್ಲರೂ ಮಹಿಳೆಯ ರಕ್ಷಣೆ-ಭದ್ರತೆಯ ಬಗೆಗೆ ಮಾತನಾಡಿದರೆ ಕವಿತಾ ಮಹಿಳಾ ಸ್ವಾತಂತ್ರ್ಯದ ಬಗೆಗೆ ಮಾತನಾಡಿದರು. ‘ಜಗತ್ತಿನ ಎಲ್ಲಕಡೆ ಹೆಣ್ಣನ್ನು ಆಸೆಯಿಂದಲೆ ನೋಡುತ್ತಾರೆ. ಎಲ್ಲಿ ಹೆಜ್ಜೆಯಿಟ್ಟರೂ ಹೆಣ್ಣು ಅವೇ ನೋಟಗಳ ಎದುರಿಸಬೇಕು. ಸುಂದರ ಹೆಣ್ಣುಗಳ ಚರ್ಮ, ಆಕಾರ, ಸ್ತನ, ನಿತಂಬಗಳಿಗೆ ಸೌಂದರ್ಯದ ಕಾರಣದಿಂದ ಜಾಹೀರಾತಿನಲ್ಲಿ ತೋರಿಸಿಕೊಳ್ಳುವ ಸ್ವಾತಂತ್ರ್ಯವಾದರೂ ಇದೆ. ಹಾಗಿಲ್ಲದಿರುವ ‘ಕುರೂಪಿ’ಗಳಿಗೆ ಯಾವ ಸ್ವಾತಂತ್ರ್ಯವಿದೆ? ಹೆಣ್ಣಿನ ಸಾಮಾಜಿಕ ಸ್ವಾತಂತ್ರ್ಯ, ಲೈಂಗಿಕ ಸ್ವಾತಂತ್ರ್ಯ ಬೇರೆ ಬೇರೆ ಅಲ್ಲ. ಯಾಕೆಂದರೆ ಲೈಂಗಿಕ ಸ್ವಾತಂತ್ರ್ಯ ಎಂದರೆ ನಿಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವೂ ಆಗಿದೆ.’ 

ಅತ್ಯಾಚಾರದ ಸುತ್ತ, ಅಪರಾಧಿಗಳ ಸುತ್ತ, ಹುಡುಗಿಯರ ‘ನಡತೆ-ಬಟ್ಟೆ’ಗಳ ಸುತ್ತ ಗಿರಕಿ ಹೊಡೆಯುತ್ತಿದ್ದ ಚರ್ಚೆ-ಸಂವಾದಗಳನ್ನು ಕವಿತಾ ಹೆಣ್ಣಿನ ಲೈಂಗಿಕ ಸ್ವಾತಂತ್ರ್ಯದ ವಿಸ್ತೃತ ಆಯಾಮಗಳತ್ತ ಒಯ್ದರು. ‘ಭಯವಿಲ್ಲದೆ ಹೆಣ್ಣು ಹೊರಗೆಲ್ಲು ಮುಕ್ತವಾಗಿ ತಿರುಗದಂತಹ ಸನ್ನಿವೇಶ ನಿರ್ಮಾಣವಾಗಿದೆ. ಮಾಧ್ಯಮಗಳು ಹೆಣ್ಣು ಎಂದರೆ ಸತಿ ಸಾವಿತ್ರಿಯಂತೆ ತೋರಿಸಿ ‘ಪಢಿಯೆ ಗೀತಾ ಬನೀಯೆ ಸೀತಾ’ ಎನ್ನುವ ತಪ್ಪು ಮಾದರಿ ಸೃಷ್ಟಿಸಿವೆ. ನಾನು ಅಂಥ ಎಲ್ಲ ಮಾದರಿಗಳ ವಿರುದ್ಧ ನಿಲ್ಲಬಯಸುತ್ತೇನೆ. ರಾತ್ರಿ ಏಕೆ ಓಡಾಡಬೇಕು? ಹುಡುಗರೊಡನೆ ಏಕೆ ಅಡ್ಡಾಡಬೇಕು? ಎಂದೆಲ್ಲ ನಮ್ಮನ್ನು ಕೇಳಬೇಡಿ. ಹೆಂಗಸರಿಗೆ ಅಡ್ವೆಂಚರಸ್ ಆಗುವ ಎಲ್ಲ ಹಕ್ಕೂ ಇದೆ: ನಾವು ಹಾಗೇ ಇರುವವರು. ನಮಗೆ ಎಂತೆಂಥ ಬಟ್ಟೆ ಹಾಕಬೇಕು ಎಂದು ಸಲಹೆ ಕೊಡಬೇಡಿ. ಹಗಲು-ರಾತ್ರಿಗಳ ಯಾವ ಹೊತ್ತಿನಲ್ಲಿ ಸಂಚರಿಸುವುದು ಸುರಕ್ಷಿತ ಎಂದು ಹೇಳಬೇಡಿ. ಸುರಕ್ಷಿತವಾಗಿರಲು ಯಾರ ಜೊತೆ, ಎಷ್ಟು ಪುರುಷರ ಜೊತೆಗೆ ಅಡ್ಡಾಡಬೇಕು ಎಂಬ ಲೆಕ್ಕ ಕೊಡಬೇಡಿ. ಎಂಥ ದಿರಿಸು ತೊಡಬೇಕೆಂದು ನಮಗಲ್ಲ, ಅವರಿಗೆ ಹೇಳಿ. ಏಕೆ ಅತ್ಯಾಚಾರ ಮಾಡಬಾರದು ಎಂದು ಅವರಿಗೆ ತಿಳಿಸಿ. ಅಪರಿಚಿತರು, ಹೊರಗಿನವರೇ ಅತ್ಯಾಚಾರಿಗಳು ಎಂದು ಹೆಣ್ಮಕ್ಕಳನ್ನು ಹೆದರಿಸಲಾಗುತ್ತಿದೆ. ಅದು ಪೂರ್ಣ ಸತ್ಯವಲ್ಲ. ಪರಿಚಯಸ್ಥರು, ಬಂಧುಗಳು, ಗುರುಗಳು, ನಾವು ಗೌರವಿಸುವವರು, ರಕ್ಷಿಸುವವರೇ ಅತ್ಯಾಚಾರ ಎಸಗುವುದು ಹೆಚ್ಚಿರುವಾಗ ಯಾರಿಂದ ಯಾರನ್ನು ರಕ್ಷಿಸುತ್ತೀರಿ? ಸಿಸಿಟಿವಿಗಳಿಂದ ಎಷ್ಟು ಹೆಣ್ಮಕ್ಕಳನ್ನು ರಕ್ಷಿಸುತ್ತೀರಿ? ಅತ್ಯಾಚಾರಕ್ಕೊಳಗಾಗದ ಹಾಗೆ ಸದಾ ನಮ್ಮನ್ನು ನಾವೇ ಕಾಪಾಡಿಕೊಳ್ಳುತ್ತಿರಲು ಸಾಧ್ಯವಿಲ್ಲ. ನಮಗೆ ಸ್ವಾತಂತ್ರ ಬೇಕು. ಭಯವಿರದ ಸ್ವಾತಂತ್ರ್ಯ ಬೇಕು.’

ಸಹಜವಾಗಿ ಅವರಿಗೆ ಬೆಂಬಲಿಗರೆಷ್ಟೋ ಅಷ್ಟೇ, ವಿರೋಧಿಗಳೂ ಹುಟ್ಟಿಕೊಂಡರು. ಕೆಟ್ಟ ಮೆಸೇಜುಗಳು, ಟೀಕೆ, ಪ್ರತಿಕ್ರಿಯೆಗಳ ಸುರಿಮಳೆಯೇ ಆಯಿತು. ಮಹಿಳೆ ತನ್ನ ಹಕ್ಕುಗಳ ಬಗೆಗೆ, ಸ್ವಾತಂತ್ರ್ಯದ ಬಗೆಗೆ ಮಾತನಾಡಿದಾಗಲೆಲ್ಲ ಲೈಂಗಿಕ ಸ್ವೇಚ್ಛಾಚಾರಿ ಎಂಬ ಗೂಬೆ ಕೂರಿಸಿ, ‘ಸೂಳೆ’ ಎಂಬ ಪಟ್ಟ ಕಟ್ಟಿ ಬಾಯ್ಮುಚ್ಚಿಸಲಾಗುತ್ತದೆ. ‘ನಕ್ಸಲೈಟ್’ ಎಂದು ಜರೆಯಲಾಗುತ್ತದೆ. ಕವಿತಾಗೂ ಅವೇ ಟೀಕೆಗಳು ಕೇಳಿಬಂದವು.

ಒಬ್ಬನಂತೂ, ‘ಇಷ್ಟಪಟ್ಟವರ ಜೊತೆ ಮಲಗುವುದು ಹಕ್ಕು ಎನ್ನುತ್ತೀ. ನಿನ್ನಮ್ಮನೂ ಇಷ್ಟಪಟ್ಟವರ ಜೊತೆ ಮಲಗಿದ್ದಳೇ ಕೇಳು’ ಎಂದ. ‘ಹೌದು, ನನ್ನಮ್ಮ ಅವಳಿಷ್ಟಪಟ್ಟವರ ಜೊತೆಯೇ `ಮಲಗಿ'ದ್ದಳು. ಬಹುಶಃ ನಿನ್ನಮ್ಮನೂ ಸಹ. ಇಷ್ಟಪಟ್ಟವರ ಜೊತೆ `ಮಲಗು'ವುದು ಮಾತ್ರ ಸೆಕ್ಸ್. ಉಳಿದದ್ದು ರೇಪ್, ತಿಳಕೊ’ ಎಂದು ಅವನಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದರು. ಕವಿತಾಗೆ ಪೂರಕವಾಗಿ ಅವರ ತಾಯಿ ಲಕ್ಷ್ಮಿ ಕೃಷ್ಣನ್, ‘ನಾನು ನನಗೆ ಬೇಕಾದಾಗ, ನನಗಿಷ್ಟ ಬಂದವರ ಜೊತೆ `ಮಲಗಿ'ದ್ದೇನೆ. ಪ್ರತಿ ಸ್ತ್ರೀಪುರುಷರಿಗು ಪರಸ್ಪರ ಒಪ್ಪಿಗೆ ಮೂಲಕ ಸೇರಲು ಇರುವ ಈ ಸ್ವಾತಂತ್ರ್ಯವನ್ನು, ಬಲವಂತವಿರದ, ಬಂಧನಗಳಿರದ ಲೈಂಗಿಕ ಸ್ವಾತಂತ್ರ್ಯವನ್ನು ಕೊನೆತನಕ ಎತ್ತಿ ಹಿಡಿಯುತ್ತೇನೆ’ ಎಂದು ಟೀಕಾಕಾರರ ಬಾಯಿ ಮುಚ್ಚಿಸಿದರು! 


ಒಟ್ಟಾರೆಯಾಗಿ ಸಂಪ್ರದಾಯನಿಷ್ಠ, ಬಲಾಢ್ಯ ವರ್ಗವು ಒಪ್ಪದ ವಿಷಯಗಳನ್ನು ಎತ್ತಿ ಆಡುವ, ಹಕ್ಕು ಪ್ರತಿಪಾದಿಸುವ ಕವಿತಾ ಕೃಷ್ಣನ್ ಒಬ್ಬ ಶಕ್ತ ಸಂಘಟಕಿ, ಮುಕ್ತ ನಿರ್ಭೀತ ಮಾತುಗಾರಿಕೆಯಿಂದ ಜನಸಾಮಾನ್ಯರನ್ನು ಸೆಳೆವ ವಾಗ್ಮಿ. ಮಹಿಳಾಪರ ಮತ್ತು ಸಾಮಾಜಿಕ ಹೋರಾಟಗಾರ್ತಿಯಾಗಿ ತನ್ನದೇ ಹಾದಿ ರೂಪಿಸಿಕೊಳ್ಳುತ್ತಿರುವ ಕವಿತಾ ಭವಿಷ್ಯದ ಭರವಸೆಯ ನಾಯಕಿ ಎನ್ನುವುದರಲ್ಲಿ ಅನುಮಾನವಿಲ್ಲ.


ಡಾ. ಎಚ್. ಎಸ್. ಅನುಪಮಾ

(18-2-2018ರಲ್ಲಿ ಬರೆದದ್ದು.)


Saturday 14 May 2022

ರಂಗನಾಯಕಮ್ಮ - ಕಮ್ಯುನಿಸ್ಂ ಎಂದರೆ ನಿರ್ಭೀತಿ

   


ಬಹುತೇಕ ಭಾರತೀಯರಿಗೆ ರಾಮಾಯಣ ಎನ್ನುವುದು ಒಪ್ಪಿ, ಆರಾಧಿಸುವ ಪವಿತ್ರ ಕಥನ. ನೀತಿನಿರೂಪಣೆಯ ದಿನನಿತ್ಯದ ಮಾತುಗಳಲ್ಲಿ ಹಾಸುಹೊಕ್ಕಾಗಿರುವ ಸಾಮಾನ್ಯ ಜ್ಞಾನ. ಚಾರಿತ್ರಿಕ ದಾಖಲೆಯೋ ಎನ್ನುವಂತೆ ಜನಮಾನಸದಲ್ಲಿ ನೆಲೆಸಿರುವ, ಓದುವವರ ಭಾವಕ್ಕೆ ತಕ್ಕಂತೆ ಅಪಾರ ಅರ್ಥವಿಸ್ತಾರಗಳನ್ನು ಒದಗಿಸುವ ಆಕರ. ರಾಮಾಯಣವನ್ನು ಕಲ್ಪವೃಕ್ಷ ಎಂದು ಕವಿಪುಂಗವರು ಹಾಡಿದರು. ಓದುಬರಹವಿರದವರ ಚಿಂತನೆಗಳೊಳಗೂ ಅದು ಹಾಸುಹೊಕ್ಕಾಯಿತು. ಅದಕ್ಕಿರುವಷ್ಟು ಜನಪ್ರಿಯತೆ, ವಿಭಿನ್ನ ಓದುಗಳು, ಜನಪದ ಆವೃತ್ತಿಗಳು ಬೇರಾವ ವೇದಪುರಾಣ ಶಾಸ್ತ್ರಗ್ರಂಥಗಳಿಗೂ ಇಲ್ಲ ಎನ್ನಬಹುದು.

ಕಲ್ಪವೃಕ್ಷವೆನಿಸಿಕೊಂಡ ಅಂಥ ರಾಮಾಯಣವನ್ನು ಗಂಡನಿಂದ ದೂರವಾಗಿದ್ದ ಮೂರು ಮಕ್ಕಳ ತಾಯಿಯೊಬ್ಬಳು ‘ರಾಮಾಯಣ ವಿಷವೃಕ್ಷ’ ಎಂದು ಕರೆದರೆ? ಒಂದಲ್ಲ, ಎರಡಲ್ಲ ೭೦೦ ಪುಟಗಳ ಮೂರು ಸಂಪುಟಗಳಲ್ಲಿ ಅದರ ಪ್ರತಿ ಸಾಲು, ಪ್ರತಿ ಪಾತ್ರ, ಪ್ರತಿ ಘಟನೆಗಳನ್ನೂ ವಿಶ್ಲೇಷಿಸಿ ನಮ್ಮ ಇಂದಿನ ಕೇಡುಗಳ ಮೂಲಕಾರಣ ಅಲ್ಲಿದೆ ಎಂದು ತೋರಿಸತೊಡಗಿದರೆ? ಆಳಿಸಿಕೊಳ್ಳುವವರ ವಿರುದ್ಧವಿರುವ ಆಳುವವನನ್ನು, ಕೆಳಜಾತಿಗಳ ವಿರುದ್ಧವಿರುವ ಮೇಲ್ಜಾತಿಯವರನ್ನು, ಅರಣ್ಯವಾಸಿಗಳ ವಿರುದ್ಧವಿರುವ ನಗರ ಸಮುದಾಯವನ್ನು, ಹೆಣ್ಣಿನ ವಿರುದ್ಧವಿರುವ ಗಂಡನ್ನು, ಮಕ್ಕಳ ಮೇಲಿನ ತಂದೆಯ ನಿಯಂತ್ರಣವನ್ನು, ತಮ್ಮಂದಿರ ಮೇಲೆ ಅಣ್ಣನ ನಿಯಂತ್ರಣವನ್ನು ಎತ್ತಿ ಹಿಡಿಯುವುದರಿಂದ ರಾಮಾಯಣ ಅನ್ಯಾಯದ ಸಂಸ್ಕೃತಿಯಾಗಿದ್ದು ಅದನ್ನು ವಿರೋಧಿಸಬೇಕು ಎಂದು ಬರೆದರೆ? ಸಮಾಜ ಬೆಚ್ಚಿಬಿದ್ದೀತು. ರೊಚ್ಚಿಗೆದ್ದು ಬರೆದವರನ್ನು ಹೊಡೆದು ಹಾಕೀತು.

ಹೌದು. ರಾಮ ಮತ್ತು ರಾಮಾಯಣ ಹಿಂದೆಂದಿಗಿಂತ ಹೆಚ್ಚು ರಾಜಕಾರಣದ ಭಾಗವಾಗಿರುವ ಇಂದು ಇಂಥ ಮಾತನ್ನು ಹೇಳಿ ಅರಗಿಸಿಕೊಳ್ಳುವುದು ಸುಲಭವಿಲ್ಲ. ಅಂದು ೧೯೭೩ರಲ್ಲಿಯೂ ಅಷ್ಟೇ, ಇದೇ ವಾತಾವರಣವಿದ್ದಿತು. ಆದರೆ ಯಾವ ಇಸವಿಯಲ್ಲೂ, ಎಂಥ ಕಷ್ಟಕಾಲದಲ್ಲೂ ದಿಟ್ಟದನಿಗಳು ಎದೆಯ ಮಾತನ್ನು ಹೇಳಲು ಅಂಜಲಾರವು. ಅಂಥ ಒಂದು ನಿರ್ಭೀತ ದನಿ ತೆಲುಗಿನ ಕ್ರಾಂತಿಕಾರಿ ಲೇಖಕಿ ರಂಗನಾಯಕಮ್ಮ ಅವರದು. 

೧೨ ಕಾದಂಬರಿ, ೫ ನೀಳ್ಗತೆಗಳು, ೧೦ ಕಥಾ ಸಂಕಲನಗಳು, ೧೫ ದೀರ್ಘ ಪ್ರಬಂಧಗಳು, ೪ ಲೇಖನ ಸಂಗ್ರಹಗಳು, ೨ ಪ್ರಶ್ನೋತ್ತರ ಹೊತ್ತಗೆಗಳು, ಇಂಗ್ಲಿಷ್‌ನಿಂದ ೨ ಹೊತ್ತಗೆಗಳ ಅನುವಾದ, ೩ ಇಂಗ್ಲಿಷ್ ಕಾದಂಬರಿಗಳ ರೂಪಾಂತರ, ೩ ಸಂಪುಟಗಳ ರಾಮಾಯಣ ವಿಷವೃಕ್ಷಂ, ಮೂರು ಸಂಪುಟಗಳ ಮಾರ್ಕ್ಸ್‌ನ ದಾಸ್ ಕ್ಯಾಪಿಟಲ್ ಮುಂತಾಗಿ ಒಟ್ಟು ೫೫ ಪುಸ್ತಕಗಳನ್ನು ಬರೆದ ದಣಿವರಿಯದ ಲೇಖಕಿ ರಂಗನಾಯಕಮ್ಮ. ಅವರು ಬರೆದ ಬಹುಚರ್ಚಿತ ಪುಸ್ತಕ ‘ರಾಮಾಯಣ ವಿಷವೃಕ್ಷಂ’ ಹಲವು ಭಾಷೆಗಳಿಗೆ ಅನುವಾದಗೊಂಡಿದ್ದು ಇಂದಿಗೂ ಒಂದಾದ ಮೇಲೊಂದು ಮರುಮುದ್ರಣಗಳನ್ನು ಕಾಣುತ್ತಲೇ ಇದೆ. ೮೩ರ ಇಳಿಹರೆಯದಲ್ಲೂ ಅವರು ಬರಹದಲ್ಲಿ ಕ್ರಿಯಾಶೀಲರಾಗಿದ್ದಾರೆ. ಎಷ್ಟೇ ವಿರೋಧ, ಬೆದರಿಕೆ ಬಂದರೂ ಸರಿಯೆನಿಸಿದ ಒಂದಕ್ಷರವನ್ನೂ ತೆಗೆಯದೆ ಮುದ್ರಣದಿಂದ ಮುದ್ರಣಕ್ಕೆ ತಮ್ಮ ಹೊತ್ತಗೆಗಳನ್ನು ನವೀಕರಿಸುತ್ತ, ಹೊಸ ಸಂಗತಿಗಳನ್ನು ಸೇರಿಸುತ್ತ ಸಾಗಿದ್ದಾರೆ.

***

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಬೊಮ್ಮಿಡಿ ಎಂಬ ಹಳ್ಳಿಯಲ್ಲಿ ೧೯೩೯ರಲ್ಲಿ ಲಕ್ಷ್ಮಿನರಸಮ್ಮ ಮತ್ತು ಲಕ್ಷ್ಮಿಸತ್ಯನಾರಾಯಣಯ್ಯ ಅವರ ಮಗಳಾಗಿ ರಂಗನಾಯಕಮ್ಮ ಹುಟ್ಟಿದರು. ಅವರಿಗೆ ಒಬ್ಬ ಅಕ್ಕ, ಅಣ್ಣ, ನಾಲ್ವರು ತಂಗಿಯರಿದ್ದರು. ತಾಲೂಕು ಕೇಂದ್ರ ತಾಡೆಪಲ್ಲಿಗುಡೆಯಲ್ಲಿ ಅವರ ತಂದೆ ತಮ್ಮ ಸಮುದಾಯಕ್ಕೆ ಸೀಮಿತವಾದ ಪದ್ಮನಾಯಕ ಎಂಬ ಪತ್ರಿಕೆ ನಡೆಸುತ್ತಿದ್ದರು. ಅವರದೇ ಆದ ಸಣ್ಣ ಮುದ್ರಣಾಲಯವೂ ಇತ್ತು. ೧೯೫೬ರಲ್ಲಿ ರಂಗನಾಯಕಮ್ಮ ಅವರ ಕುಟುಂಬ ತೀವ್ರ ಹಣದ ಬಿಕ್ಕಟ್ಟು ಎದುರಿಸಿ ಹಳ್ಳಿಗೆ ಹಿಂದಿರುಗಿತು. ಎಸ್ಸೆಲ್ಸಿ ಮುಗಿಸಿದ ಹುಡುಗಿಯ ಓದು ಮೊಟಕುಗೊಂಡಿತು. ತಾನು ಓದಲೇಬೇಕೆಂದು ಹುಡುಗಿ ಉಪವಾಸ ಕುಳಿತಳು. ಕೊನೆಗೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಪರೀಕ್ಷೆಯನ್ನು ಮನೆಯಿಂದಲೇ ಕಟ್ಟಿದಳು. ನಿಘಂಟಿನ ಸಹಾಯದಿಂದ ಹಿಂದಿ ಕಲಿತು ನಾಲ್ಕು ಹಂತದ ಪರೀಕ್ಷೆ ಪಾಸು ಮಾಡಿದಳು.

ರಂಗನಾಯಕಮ್ಮ ಬಾಲ್ಯದಲ್ಲಿ ದೈವಭಕ್ತಳು. ಏನನ್ನಾದರೂ ಬರೆಯುವ ಮುನ್ನ, ಕೆಲಸ ಆರಂಭ ಮಾಡುವ ಮುನ್ನ ಅಂಗೈಮೇಲೆ ಬೆರಳಿಂದ ಶ್ರೀರಾಮ ಎಂದು ಬರೆದುಕೊಂಡು ಅದನ್ನು ಕಣ್ಣಿಗೊತ್ತಿಕೊಳ್ಳುತ್ತಿದ್ದಳು. ಪಠ್ಯದ ಓದಿನ ಜೊತೆಗೆ ಕೈಗೆ ಸಿಕ್ಕಿದ್ದನ್ನೆಲ್ಲ ಓದುವ ಹವ್ಯಾಸದ ರಂಗನಾಯಕಮ್ಮನಿಗೆ ಒಮ್ಮೆ ಸಮಾಜ ಸುಧಾರಕ ವೀರೇಶಲಿಂಗಂ ಅವರ ಬರಹ ಓದಲು ಸಿಕ್ಕಿತು. ಮತ್ತಷ್ಟು ಅವರ ಬರಹಗಳನ್ನು ಓದಿದ ಮೇಲೆ ಹುಡುಗಿಯ ಯೋಚನೆಗಳು ಬದಲಾತಗತೊಡಗಿದವು. ವೀರೇಶಲಿಂಗಂ ವಿಚಾರವಾದಿಯಾಗಿದ್ದರೂ ನಾಸ್ತಿಕರಾಗಿರಲಿಲ್ಲ, ಅವರು ಏಕದೇವೋಪಾಸನೆಯನ್ನು ಬೋಧಿಸುತ್ತಿದ್ದರು. ಆದರೆ ಅವರನ್ನು ಓದಿದ ಹುಡುಗಿ ನಾಸ್ತಿಕಳಾಗಿ ರೂಪಾಂತರಗೊಳ್ಳತೊಡಗಿದಳು. ಓದಿನ ಜೊತೆಜೊತೆಗೆ ಬರವಣಿಗೆಯ ಒತ್ತಡವೂ ಜೋರಾಯಿತು. ಬರೆದದ್ದೆಲ್ಲ ತನ್ನ ತಂದೆ ಹೊರತರುತ್ತಿದ್ದ ನಿಯತಕಾಲಿಕದಲ್ಲೇ ಪ್ರಕಟವಾಗುತ್ತಿತ್ತು. ಮೊದಲು ಬರೆದವೆಲ್ಲ ರಾಜಕುಮಾರ, ರಾಜಕುಮಾರಿ, ರಾಕ್ಷಸ, ಭೂತ, ದೇವಾನುದೇವತೆಗಳ ಕತೆಗಳೇ ಆಗಿದ್ದವು. ಹುಡುಗಿ ಬರೆದ ಮೊದಲ ಸಾಮಾಜಿಕ ಕತೆ ‘ಪಾರ್ವತಮ್ಮ’ ತೆಲುಗು ಸ್ವಾತಂತ್ರ್ಯ ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಸಂಬಂಧದಲ್ಲೇ ಮದುವೆಯಾಗುವುದು ಸರಿಯಲ್ಲವೆಂದು ಹೇಳುವ ಕತೆ ಅದು. 

೧೯೫೮ರಲ್ಲಿ ಮನೆಯವರು ನೋಡಿದ ವರನೊಡನೆ ಸಾಂಪ್ರದಾಯಿಕ ವಿವಾಹವಾಯಿತು. ಅದೊಂದು ಏಳುಬೀಳಿನ ಸಂಘರ್ಷದ ದಾಂಪತ್ಯ. ಅಷ್ಟಾದರೂ ಬರಹ ಕಾಯಕ ಒಂದೇಸಮ ಮುಂದುವರೆಸಿದರು. ಬರೆದಿದ್ದೆಲ್ಲ ಪತ್ರಿಕೆಗಳಲ್ಲಿ ಪ್ರಕಟವಾದವು. ಕೂಡಲೇ ಪುಸ್ತಕಗಳೂ ಆದವು. ರಂಗನಾಯಕಮ್ಮ ತಎಲುಗಿನ ಜನಪ್ರಿಯ ಕತೆಗಾರ್ತಿಯೆನಿಸಿಕೊಂಡರು. ೧೯೬೨-೬೩ರಲ್ಲಿ ಆಂಧ್ರಪ್ರಭಾ ಪತ್ರಿಕೆಯಲ್ಲಿ ಬಲಿಪೀಠಂ ಧಾರಾವಾಹಿ ಪ್ರಕಟವಾಯಿತು. ಪುಸ್ತಕ ರೂಪದಲ್ಲಿ ಬಂದಾಗ ೧೯೬೫ರಲ್ಲಿ ಆಂಧ್ರಪ್ರದೇಶ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಬಂತು. 

ದಾಂಪತ್ಯದ ಸಂಘರ್ಷ ವೈಚಾರಿಕ ಓದಿನ ಕಡೆಗೆ ಎಳೆಯಿತು. ಅದರ ಪ್ರಭಾವವು ಕತೆ, ಕಾದಂಬರಿಗಳಲ್ಲಿ ಕಾಣತೊಡಗಿತು. ಸ್ತ್ರೀ, ಚಡುವುಕನ್ನ ಕಮಲಾ, ಕೃಷ್ಣವೇಣಿ ಮೊದಲಾದ ದಿಟ್ಟ ಹೆಣ್ಣು ಪಾತ್ರಗಳಿರುವ ಕಾದಂಬರಿಗಳನ್ನು ಬರೆದರು. ಬದುಕಿನ ಹೊರದಾರಿಗಳನ್ನು ಅವರು ಸೃಷ್ಟಿಸಿದ ಪಾತ್ರಗಳೇ ತೋರಿಸಿಕೊಟ್ಟವು. ೧೯೭೦ರಲ್ಲಿ ಇಬ್ಬರು ಮಗಂದಿರು, ಒಬ್ಬ ಮಗಳು ಹುಟ್ಟಿದ ಬಳಿಕ ಒಟ್ಟಿಗಿರಲು ಸಾಧ್ಯವಾಗದೇ ಗಂಡನಿಂದ ಬೇರೆಯಾದರು. 

ರಂಗನಾಯಕಮ್ಮ ಅವರ ವಿಶೇಷತೆಯೆಂದರೆ ಮಹಿಳಾ ಸ್ವಾತಂತ್ರ್ಯದ ಬಗೆಗೆ ತಮ್ಮ ಪ್ರತಿಪಾದನೆಗಳ ಹಾಗೆಯೇ ತಾವೂ ಸ್ವಾಯತ್ತವಾಗಿ ಬದುಕಿದ್ದು. ೩೧ ವರ್ಷಕ್ಕೆ ಮೂರು ಮಕ್ಕಳೊಡನೆ ಏಕಾಂಗಿಯಾದ ಅವರು ಮರುಮದುವೆಯ ಯೋಚನೆ ಮಾಡಲಿಲ್ಲ. ಕೆಲಸಮಯದ ಬಳಿಕ ತಮಗಿಂತ ೧೦ ವರ್ಷ ಕಿರಿಯ ವ್ಯಕ್ತಿಯೊಡನೆ ‘ಜೊತೆವಾಸ’ದ ಸಂಬಂಧ ಹೊಂದಿದರು. ಮದುವೆಯ ಮೊದಲು ತಮ್ಮ ಹೆಸರನ್ನು ತವರಿನ ಸರ್‌ನೇಮ್ ಜೊತೆಗೆ ದಡ್ಡನಾಲ ರಂಗನಾಯಕಮ್ಮ ಎಂದು ಬರೆದುಕೊಳ್ಳುತ್ತಿದ್ದರು. ಮದುವೆಯ ಬಳಿಕ ಗಂಡನ ಮನೆಯ ಸರ್‌ನೇಮ್ ಆದ ಮುಪ್ಪಾಲ ರಂಗನಾಯಕಮ್ಮ ಎಂದು ಮಾಡಿಕೊಂಡಿದ್ದರು. ಗಂಡನಿಂದ ಬೇರೆಯಾದ ಬಳಿಕ ಎರಡನ್ನೂ ಬಿಟ್ಟು ಕೇವಲ ರಂಗನಾಯಕಮ್ಮ ಎಂದಷ್ಟೇ ಉಳಿಸಿಕೊಂಡರು. 

ಇವೆಲ್ಲ ಸಣ್ಣ ವಿಷಯಗಳೆನಿಸಿದರೂ ತಮ್ಮ ಬರಹದ ಆಶಯಗಳಂತೆ ಮಾದರಿಯಾಗಿ ಬದುಕಲೆತ್ನಿಸಿದ ರಂಗನಾಯಕಮ್ಮ ವಿಶಿಷ್ಟರಾಗಿ ನಿಲ್ಲುತ್ತಾರೆ. 


ಕಮ್ಯುನಿಸ್ಂ ಸಂಪರ್ಕ

ಸಮಸಮಾಜ ಬಯಸುವ ಕಮ್ಯುನಿಸ್ಟ್ ಸಿದ್ಧಾಂತದಡಿ ನಾನಾ ಹೋರಾಟ, ಚಳವಳಿಗಳು ನಡೆದ ನೆಲ ಆಂಧ್ರಪ್ರದೇಶ. ವಿಚ್ಛೇದನದ ಬಳಿಕ ೧೯೭೩ರ ಹೊತ್ತಿಗೆ ರಂಗನಾಯಕಮ್ಮ ಅವರಿಗೆ ಮಾರ್ಕ್ಸ್‌ವಾದಿಗಳ ಪರಿಚಯವಾಯಿತು. ೧೯೭೪ರಲ್ಲಿ ಮಾರ್ಕ್ಸಿಸ್ಟ್ ಲೆನಿನಿಸ್ಟ್ ಎಂದು ಕರೆದುಕೊಳ್ಳುತ್ತಿದ್ದ ನಾಗಿರೆಡ್ಡಿಯವರ ಗುಂಪಿನ ಕಾರ್ಯಕರ್ತರು ಭೇಟಿಯಾದರು. ಅವರ ವಿಚಾರ ಒಪ್ಪಿತವೆನಿಸಿ ಕೈ ಜೋಡಿಸಿದರು. ಆ ನಂಟು ಅವರ ಬದುಕಿನ, ಬರವಣಿಗೆಯ ದಿಕ್ಕನ್ನೇ ಬದಲಿಸಿತು. 


ವಿಜಯವಾಡದ ವಿಶ್ವನಾಥ ಸತ್ಯನಾರಾಯಣ ಬರೆದ ರಾಮಾಯಣ ಕಲ್ಪವೃಕ್ಷಂ ತೆಲುಗಿನ ಜನಪ್ರಿಯ ಪುಸ್ತಕ. ಅದಕ್ಕೆ ತಿರುಗೇಟೋ ಎಂಬಂತೆ ವಾಲ್ಮೀಕಿ ರಾಮಾಯಣವನ್ನೇ ಆಧರಿಸಿ ರಾಮಾಯಣದ ಮಾರ್ಕ್ಸ್‌ವಾದಿ ವಿಮರ್ಶೆ ‘ರಾಮಾಯಣ ವಿಷವೃಕ್ಷಂ’ ಅನ್ನು ರಂಗನಾಯಕಮ್ಮ ಬರೆಯತೊಡಗಿದರು. ಮೂರು ಸಂಪುಟಗಳಲ್ಲಿ ಪ್ರಕಟವಾದಾಗ ತೆಲುಗು ಸಾಹಿತ್ಯ ಲೋಕದಲ್ಲಿ ಸ್ಫೋಟಕ ಪರಿಣಾಮವನ್ನುಂಟುಮಾಡಿತು. ರಂಗನಾಯಕಮ್ಮ ಬಡಪೆಟ್ಟಿಗೆ ಹೆದರಲಿಲ್ಲ. ತಮ್ಮ ವಿಮರ್ಶೆಗೆ ಮೂಲ ಸಂಸ್ಕೃತದ ಆಧಾರ ಒದಗಿಸಲು ೬೦೦ಕ್ಕಿಂತ ಹೆಚ್ಚು ಅಡಿಟಿಪ್ಪಣಿಗಳನ್ನು ಕೊಟ್ಟಿದ್ದರು. ಮೂಲ ವಾಲ್ಮೀಕಿ ರಾಮಾಯಣದ ಸಂಸ್ಕೃತ ಆವೃತ್ತಿಯ ಜೊತೆಗೆ ತೆಲುಗಿನಲ್ಲಿ ಅದಕ್ಕೆ ಬಂದ ‘ಪ್ರತಿ ಪದಾರ್ಥ’, ತಾತ್ಪರ್ಯ (ಸಾರಾಂಶ), ಟೀಕಾ, ವಿಮರ್ಶೆಗಳನ್ನು ಆಧರಿಸಿದ್ದರು. ದೀರ್ಘ ಮುನ್ನುಡಿ, ಹಿನ್ನುಡಿಗಳನ್ನು ತಾವೇ ಬರೆದರು. ಮೊದಲ ಸಂಪುಟಕ್ಕೆ ಬರೆದ ಪ್ರಸ್ತಾವನೆ ೧೭೫ ಪುಟಗಳಷ್ಟಿದೆ. ಆರಂಭದ ಸಾಮುದಾಯಿಕ ಬದುಕಿನ ಮಾನವ ಸಮಾಜವು ನಿರಂಕುಶಾಧಿಪತ್ಯದತ್ತ ಜಾರುತ್ತಿದ್ದ ಅವಧಿಯಾಗಿ ರಾಮಾಯಣ ಕಾಲವನ್ನು ಗುರುತಿಸಿದ ರಂಗನಾಯಕಮ್ಮ, ಹೇಗೆ ದುಡಿಯುವ ವರ್ಗವನ್ನು ದಮನಿಸಿ ರಾಜಸತ್ತೆಗಳು ಬೆಳೆದವು ಎನ್ನುವುದನ್ನು ರಾಮಾಯಣದ ವಿಶ್ಲೇಷಣೆಯ ಮೂಲಕ ವಿವರವಾಗಿ ದಾಖಲಿಸಿದರು. ಅವರ ಮುನ್ನುಡಿ ಓದಿಯೇ ಎಷ್ಟೋ ಜನ ಮಾರ್ಕ್ಸ್‌ವಾದದ ಕಡೆ ಚಲಿಸಿದೆವೆಂದು ಪತ್ರ ಬರೆದರು. ಮೂರು ಸಂಪುಗಳು ೧೯೭೪, ೧೯೭೫, ೧೯೭೬ರಲ್ಲಿ ಪ್ರಕಟವಾಗಿ ಸಾಹಿತ್ಯಲೋಕ, ಮಹಿಳಾವಾದಿಗಳು, ಸಾಮಾಜಿಕ ಹೋರಾಟಗಾರರ ನಡುವೆ ಭಾರೀ ಜನಪ್ರಿಯತೆ ಗಳಿಸಿದವು. ಸಹಜವಾಗಿ ಸಂಪ್ರದಾಯವಾದಿಗಳ ಕೆಂಗಣ್ಣಿಗೂ ಗುರಿಯಾದವು. ಲೇಖಕಿಯು ಪುರುಷ ದ್ವೇಷಿ, ಸಂಪ್ರದಾಯ ವಿರೋಧಿ, ಬ್ರಾಹ್ಮಣ ದ್ವೇಷಿ ಮುಂತಾದ ಹಣೆಪಟ್ಟಿ ಪಡೆದುಕೊಂಡರು.

ಕಾರ್ಲ್‌ಮಾರ್ಕ್ಸ್‌ನನ್ನು ತಮ್ಮ ಆದರ್ಶ ಸಿದ್ಧಾಂತ ಪ್ರತಿಪಾದಿಸಿದ ವ್ಯಕ್ತಿಯೆಂದು ಗೌರವಿಸುತ್ತಿದ್ದ ರಂಗನಾಯಕಮ್ಮ ಒಂದಾದಮೇಲೊಂದು ಮಾರ್ಕ್ಸ್‌ವಾದದ ಪುಸ್ತಕಗಳನ್ನು ಓದಿದರು. ಅರ್ಥವಾಗದ, ಕಬ್ಬಿಣದ ಕಡಲೆಯಂತಿದ್ದ ವಿಚಾರಗಳನ್ನು ಮತ್ತೆಮತ್ತೆ ಓದಿ ಅದರ ಛಾಯೆಯಲ್ಲಿ ತಮ್ಮ ಚಿಂತನೆಗಳನ್ನು ಹರಿತಗೊಳಿಸಿಕೊಂಡರು. ಎಲ್ಲ ಸಮಸ್ಯೆಗಳಿಗೂ ಮಾರ್ಕ್ಸ್‌ವಾದದಲ್ಲೇ ಪರಿಹಾರ ಇರುವಂತೆ ಕಾಣಿಸತೊಡಗಿತು. ಅದೇವೇಳೆಗೆ ತಾವು ಅರಿತ ಮಾರ್ಕ್ಸ್‌ವಾದಕ್ಕೂ, ಮಾರ್ಕ್ಸ್‌ವಾದಿಗಳ ಬದುಕಿಗೂ ಅಜಗಜಾಂತರ ವ್ಯತ್ಯಾಸ ಇದೆಯೆನಿಸತೊಡಗಿತು. ಸಮಾಜದ ವೈರುಧ್ಯಗಳನ್ನು ವಿಶ್ಲೇಷಿಸಿ ಮಾರ್ಕ್ಸ್‌ವಾದಿ ಸಂಘಟನೆಗಳು ಕಟ್ಟುತ್ತಿರುವ ಹೋರಾಟದಲ್ಲಿ ಏನೋ ಲೋಪವಿದೆ ಎನಿಸಿತು. ಹಾಗೆಂದು ನೇರವಾಗಿ ಸಭೆಗಳಲ್ಲಿ ಚರ್ಚಿಸಿದರು. ನಮ್ಮೊಳಗಿನ ಬೂರ್ಶ್ವಾತನವನ್ನು ನೀಗಿಕೊಳ್ಳುವ ಬಗೆಗೆ ಹೋರಾಟಗಾರರು ಯೋಚಿಸಬೇಕೆಂದು ಸೂಚಿಸಿದರು. ಅದು ಅವರ ಗುಂಪಿಗೆ ಅಪಥ್ಯವಾಯಿತು. ತುರ್ತುಪರಿಸ್ಥಿತಿಯ ವೇಳೆ ಗುಂಪಿನ ನಾಯಕ ನಾಗಿರೆಡ್ಡಿ ತೀರಿಕೊಂಡರು. ಮಿಕ್ಕವರೆಲ್ಲ ೧೯೭೮ರಲ್ಲಿ ‘ಜನಸಾಹಿತಿ’ ಎಂಬ ಸಾಂಸ್ಕೃತಿಕ, ಸಾಹಿತ್ಯಿಕ ಸಂಘಟನೆ ಆರಂಭ ಮಾಡಿದರು. 

ದಾಸ್ ಕ್ಯಾಪಿಟಲ್ ಅತ್ಯಂತ ಶ್ರೇಷ್ಠ ವಿಚಾರಗಳನ್ನು ಹೊಂದಿದ್ದರೂ ಜನಸಾಮಾನ್ಯರಿಗೆ ಅದನ್ನು ತಿಳಿಸುವಲ್ಲಿ ನಾವು ಮಾರ್ಕ್ಸ್‌ವಾದಿಗಳು ಸೋತಿದ್ದೇವೆ ಎಂದು ಅವರಿಗೆ ಅನಿಸಿತು. ಸಾಮಾನ್ಯ ಜನರಿರಲಿ, ಮಾರ್ಕ್ಸ್‌ವಾದಿ ಸಂಘಟನೆಯ ನಾಯಕರೂ ದಾಸ್ ಕ್ಯಾಪಿಟಲ್ ಓದಿಲ್ಲ ಎನ್ನುವುದು ಗಮನಕ್ಕೆ ಬಂತು. ಕ್ಯಾಪಿಟಲ್ ಅನ್ನು ಸರಳವಾಗಿ ಅರ್ಥವಾಗುವಂತೆ ಬರೆಯಬೇಕೆಂಬ ಪ್ರಯತ್ನ ಆರಂಭಿಸಿದಾಗ ಅವರ ಸಂಘಟನೆ ಒಪ್ಪಲಿಲ್ಲ. ಕೇಂದ್ರ ನಾಯಕತ್ವದ ಒಪ್ಪಿಗೆ ಪಡೆಯಬೇಕು; ಪುಸ್ತಕದ ಕೆಲಸವನ್ನು ಒಬ್ಬರ ಹೆಸರಿನಲ್ಲಲ್ಲ, ಒಂದು ತಂಡವಾಗಿ ಮಾಡಬೇಕು ಎಂದು ನಕಾರ ಸೂಚಿಸಿತು. ಕ್ಯಾಪಿಟಲ್ ಅನ್ನು ಓದಿ ಬರೆಯಲು ಕೇಂದ್ರನಾಯಕರನ್ನು ಏಕೆ ಕೇಳಬೇಕು ಎಂದು ರಂಗನಾಯಕಮ್ಮ ಬಂಡೆದ್ದು ತಮ್ಮಷ್ಟಕ್ಕೆ ತಾವು ಓದಿ ಬರೆಯತೊಡಗಿದರು. ಕೆಲ ಕಾಲದ ಬಳಿಕ ಯಾಕೋ ತನ್ನನ್ನು ಮೂಲೆಗುಂಪು ಮಾಡುವ, ಒಂದು ಗುಂಪಿನೊಂದಿಗೆ ಗುರುತಿಸುವ ಗುಂಪುಗಾರಿಕೆ ಇರುವುದನ್ನು ಗಮನಿಸಿದರು. ಕೂಡಲೇ ಸಂಘಟನೆಯಿಂದ ಹೊರಬಂದರು. ‘ಜನಸಾಹಿತಿ’ಯನ್ನೇಕೆ ಬಿಟ್ಟೆ ಎಂದೂ ಬರೆದುಕೊಂಡರು. ೧೯೭೭ರಿಂದ ೧೯೭೯ರವರೆಗೆ ಪ್ರಜಾಸಾಹಿತಿ ಎಂಬ ಸಾಹಿತ್ಯಿಕ ಮಾಸಿಕದ ಸಂಪಾದಕಿಯಾದರು. ಯಾವುದೇ ಸಂಘಟನೆ, ಪಕ್ಷ ಸೇರದೇ ಸ್ವತಂತ್ರ ಮಾರ್ಕ್ಸ್‌ವಾದಿಯಾಗಿ ಲೋಕಸಮಸ್ತವನ್ನೂ ಅರ್ಥೈಸತೊಡಗಿದರು. ಮೂರು ಸಂಪುಟಗಳಲ್ಲಿ ಕಾರ್ಲ್‌ಮಾರ್ಕ್ಸ್‌ನ ದಾಸ್ ಕ್ಯಾಪಿಟಲ್ ಕುರಿತ ಹೊತ್ತಗೆಗಳನ್ನು ತಾವೇ ಪ್ರಕಟಿಸಿದರು. ಅವು ಅತ್ಯಂತ ಸರಳವಾಗಿ ಮಾರ್ಕ್ಸ್‌ವಾದವನ್ನು ಜನಸಾಮಾನ್ಯರಿಗೆ ತಲುಪಿಸಿದವು. ಅವೆಷ್ಟು ಜನಪ್ರಿಯವಾದವೆಂದರೆ ತೆಲುಗಿನಿಂದ ಇಂಗ್ಲೀಷಿಗೆ ಅನುವಾದಗೊಂಡವು. 

೧೯೮೦ರ ಸಮಯ. ಅದು ಯಂಡಮೂರಿ ವೀರೇಂದ್ರನಾಥ್ ಜನಪ್ರಿಯ ಸಾಹಿತಿಯಾಗಿದ್ದ ಕಾಲ. ಅವರ ತುಳಸೀದಳ ಎಂಬ ಧಾರಾವಾಹಿ ಎಲ್ಲೆಡೆ ಮನೆಮಾತಾಗಿತ್ತು. ಕನ್ನಡವೂ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದವಾಗಿ ಸಿನಿಮಾ ಕೂಡಾ ಬಂದಿತು. ಭಾನಾಮತಿ, ಮಾಟ, ಮಂತ್ರ, ಭೂತ ಮೊದಲಾದ ಮೂಢನಂಬಿಕೆಗಳೆಂದು ಪರಿಗಣಿಸಲ್ಪಟ್ಟ ಆಚರಣೆಗಳನ್ನು ರೋಚಕವಾಗಿ ಹೆಣೆದ ಕಾದಂಬರಿಗೆ ವೈದ್ಯರೂ, ಲೇಖಕರೂ ಆಗಿದ್ದ ಕೊಮ್ಮೂರಿ ವೇಣುಗೋಪಾಲ ರಾವ್ ಮುನ್ನುಡಿ ಬರೆದು ಹೊಗಳಿ ಅಟ್ಟಕ್ಕೇರಿಸಿದರು. ಆಂಧ್ರಪ್ರಭಾ ಪತ್ರಿಕೆಯ ರವಿವಾರದ ಸಂಚಿಕೆಯಲ್ಲಿ ಆ ಜನಪ್ರಿಯ ಕಾದಂಬರಿಯ ಅವಗುಣಗಳ ಬಗೆಗೆ ನಿರಂತರವಾಗಿ ರಂಗನಾಯಕಮ್ಮ ಪ್ರಹಾರ ಮಾಡಿದರು. ವೈದ್ಯರಾಗಿಯೂ ಜನಸಾಮಾನ್ಯರಲ್ಲಿ ಮೂಢನಂಬಿಕೆ ಬಿತ್ತುವ ಸಾಹಿತ್ಯದ ಬಗೆಗೆ ಮೆಚ್ಚಿಗೆಯ ನುಡಿ ಬರೆದ ಕೊಮ್ಮೂರಿಯವರನ್ನು ತೀಕ್ಷ್ಣ ಟೀಕೆಗೆ ಗುರಿ  ಮಾಡಿದರು. ಇದೊಂದು ದೀರ್ಘ ಕಾನೂನು ಸಮರಕ್ಕೆ ನಾಂದಿ ಹಾಡಿತು. 

ವಿಚಾರಣೆಯ ವೇಳೆ ನ್ಯಾಯಾಧೀಶರು ರಾಮಾಯಣ ವಿಷವೃಕ್ಷಂ ಬರೆದಾಕೆ ಇದೇ ರಂಗನಾಯಕಮ್ಮನೇ ಎಂದು ಕೇಳಿ ಮುಂದುವರೆಯುತ್ತಿದ್ದರು. ಬಹುಪಾಲು ನ್ಯಾಯಾಧೀಶರು ಅವರ ಬಗೆಗೆ ಋಣಾತ್ಮಕ ಅಭಿಪ್ರಾಯ ಹೊಂದಿ ಸರಸರನೆ ಅವರ ವಿರುದ್ಧವಾಗಿ ತೀರ್ಪು ಕೊಡುತ್ತಿದ್ದರು. ವಿಚಾರಣೆಯು ನಾಸ್ತಿಕತೆ ವರ್ಸಸ್ ಸಂಪ್ರದಾಯಶೀಲತೆಯ ವಾಗ್ಯುದ್ಧದಲ್ಲಿ ಮುಗಿಯುತ್ತಿತ್ತು. ಆದರೆ ರಂಗನಾಯಕಮ್ಮ ಪಟ್ಟುಗಳನ್ನು ಸುಲಭಕ್ಕೆ ಸಡಿಲಿಸಲಿಲ್ಲ. ಸುಪ್ರೀಂಕೋರ್ಟಿನ ತನಕ ಹೋದರು. ಅಲ್ಲಿಯೂ ಪೂರ್ಣ ನ್ಯಾಯ ಸಿಗುವ ಭರವಸೆಯಿಲ್ಲದಾಗ ಅದುವರೆಗಿನ ಕೋರ್ಟ್ ವಿಚಾರಣೆಯ ಆಗುಹೋಗು ಹಾಗೂ ತನ್ನ ವಿಮರ್ಶೆಗಳನ್ನು ಸೇರಿಸಿ ಒಂದು ಪುಸ್ತಕ ಪ್ರಕಟಿಸಿದರು. ೨೦೦೮ರಲ್ಲಿ ಮುನ್ನುಡಿ ಬರೆದ ವೈದ್ಯರು ತೀರಿಕೊಂಡ ಬಳಿಕ ಕೋರ್ಟು ಆ ಪ್ರಕರಣದ ವಿಚಾರಣೆಯನ್ನೇ ನಿಲ್ಲಿಸಿತು. 

ಅವರ ಬಿಡುಬೀಸಾದ ಬರವಣಿಗೆ, ವಿಚಾರಗಳಿಗೆ ಬಂದ ವಿರೋಧವೇನೂ ಕಡಿಮೆಯದಲ್ಲ. ಆದರೆ ರಂಗನಾಯಕಮ್ಮ ವಿರೋಧಕ್ಕೆ ಹೆದರಿ ದನಿಯನ್ನು ತಗ್ಗಿಸಿಕೊಂಡವರಲ್ಲ. ಪತ್ರಕ್ಕೆ ಪ್ರತಿಪತ್ರ, ಪ್ರಶ್ನೆಗೆ ಉತ್ತರ, ಆರೋಪಕ್ಕೆ ಸ್ಪಷ್ಟೀಕರಣ, ವಿವಾದಕ್ಕೆ ವಿವರಣೆ - ಯಾವ ಗಾಳಿಮಾತೂ ಹಾಗೆಯೇ ಹಾರಿಹೋಗಲು ಬಿಡದೆ ಎಲ್ಲಕ್ಕೂ ಲಿಖಿತವಾಗಿ ಉತ್ತರಿಸಿ ತಾರ್ಕಿಕ ಅಂತ್ಯ ಮುಟ್ಟಿಸಿದರು. ಅಷ್ಟೇ ಅಲ್ಲ, ವಾಗ್ವಾದಗಳನ್ನು ಪುಸ್ತಕವಾಗಿ ಪ್ರಕಟಿಸಿದರು. 


ಅಂಬೇಡ್ಕರ್ ಜನ್ಮಶತಮಾನೋತ್ಸವದ ಬಳಿಕ ಅವರ ಪುಸ್ತಕಗಳನ್ನು ಆಮೂಲಾಗ್ರವಾಗಿ ಓದಿದರು. ತನಗೆ ಏಳುತ್ತಿದ್ದ ಎಷ್ಟೋ ದ್ವಂದ್ವಗಳಿಗೆ ಅವರಲ್ಲಿ ಉತ್ತರವಿದ್ದಂತೆ ತೋರಿತು. ಅಂಬೇಡ್ಕರರ ಬಗೆಗೆ ಅಪಾರ ಗೌರವ ಬೆಳೆಯಿತು. ಆದರೆ ದಲಿತರ ಸಮಸ್ಯೆಗಳಿಗೆ ಬುದ್ಧನಷ್ಟೇ ಪರಿಹಾರವಾಗಲಾರ; ಅಂಬೇಡ್ಕರರಷ್ಟೇ ಆದರೂ ಸಾಲದು; ಮಾರ್ಕ್ಸ್ ಬೇಕೇಬೇಕು ಎಂದು ಭಾವಿಸಿದರು. ಅಂಬೇಡ್ಕರ್-ಬುದ್ಧರ ಜೊತೆ ಮಾರ್ಕ್ಸ್‌ವಾದವೂ ಸೇರಿದರೆ ದಲಿತೋದ್ಧಾರವಾಗುತ್ತದೆ ಎಂಬ ಬರಹ ಬರೆದು ಸಾಕಷ್ಟು ಟೀಕೆಗೆ ಗುರಿಯಾದರು. ಅಂಬೇಡ್ಕರ್‌ವಾದಿಗಳು, ಮಾರ್ಕ್ಸ್‌ವಾದಿಗಳ ನಂತರ ಪ್ರಕರಣವೊಂದರಲ್ಲಿ ಆಂಧ್ರದ ಸ್ತ್ರೀವಾದಿಗಳು ತಳೆದ ನಿಲುವನ್ನು ಬೂರ್ಶ್ವಾ ಎಂದು ಜರೆದು ಅವರಿಂದಲೂ ಟೀಕೆ, ವಿಮರ್ಶೆಗಳನ್ನು ಸ್ವೀಕರಿಸಿದರು. ಹೀಗೆ ಸಮಾಜದ ಹಲವೆಂಟು ವಿಷಯಗಳ ಬಗೆಗೆ ತಮ್ಮ ಅಭಿಪ್ರಾಯವನ್ನು ನಿಖರವಾಗಿ, ನೇರವಾಗಿ ತಿಳಿಸುತ್ತಿದ್ದ ಅವರು ಪ್ರಜಾಸಾಹಿತಿ, ಪ್ರಜಾತಂತ್ರ, ಆಂಧ್ರಜ್ಯೋತಿಗಳಲ್ಲಿ ಪ್ರಶ್ನೋತ್ತರ ರೂಪದಲ್ಲಿ ಎಲ್ಲಾ ವಿಷಯಗಳ ಬಗೆಗೂ ಉತ್ತರಿಸುತ್ತಿದ್ದರು. ಪ್ರಶ್ನೋತ್ತರಗಳನ್ನೂ ಎರಡು ಸಂಪುಟಗಳಲ್ಲಿ ಪ್ರಕಟಿಸಿದರು.

ಇಂದಿಗೂ ಕೊಂಚ ವಿರಾಮ ದೊರೆತದ್ದೇ ತಮ್ಮ ಹಳೆಯ ಬರಹಗಳನ್ನು ಪರಿಶೀಲಿಸುತ್ತಾರೆ. ಜನರಿಗೀಗ ನಿರುಪಯೋಗಿ ಎಂದು ಹಿಂದೆ ಬರೆದ ತಮ್ಮ ಹಲವಾರು ಕತೆಗಳನ್ನು, ಕೃಷ್ಣವೇಣಿ ಕಾದಂಬರಿಯನ್ನೂ ಹಿಂದೆಗೆದುಕೊಂಡಿದ್ದಾರೆ. ರಾಮಾಯಣ ಓದಿದಂತೆ ಮಹಾಭಾರತವನ್ನೂ ಓದತೊಡಗಿ ೨೦೧೫ರಲ್ಲಿ ‘ಇದಂಡಿ ಮಹಾಭಾರತಮು’ ಬಂತು. ೨೦೧೬ರಲ್ಲಿ ವೇದಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸುವ ಯೋಚನೆ ಸರ್ಕಾರಕ್ಕಿದೆಯೆಂದು ತಿಳಿದದ್ದೇ ವೇದಗಳನ್ನು ಓದತೊಡಗಿದರು. ಅವುಗಳಲ್ಲೇನಿದೆ, ಇಲ್ಲ ಎಂದು ಅಭಿಪ್ರಾಯ, ಟೀಕೆಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದರು. 

ಹೀಗೆ ನಿರಂತರವಾಗಿ ಓದು, ಬರೆಹದಲ್ಲಿ ತೊಡಗಿರುವ ಅವರು ಆತ್ಮಚರಿತ್ರೆ ಬರೆಯಬೇಕು ಎಂದು ಓದುಗರು ಒತ್ತಾಯಿಸಿದರೂ ನಿರಾಕರಿಸಿದರು. ತಮ್ಮ ಕತೆ, ಕಾದಂಬರಿ, ಬರಹಗಳಲ್ಲಿ ಆತ್ಮವೃತ್ತಾಂತವು ಆಗೀಗ ಸುಳಿದು ಹೋಗಿರುವುದರಿಂದ ಮತ್ತೆ ಬರೆಯುವ ಅಗತ್ಯ ಇಲ್ಲ ಎನ್ನುವುದು ಅವರ ಅಭಿಪ್ರಾಯ. ಗೆಳತಿಯೊಬ್ಬಳಿಗೆ ತಮ್ಮ ದಾಂಪತ್ಯದ ಸಂಘರ್ಷಗಳ ಒಳಹೊರಗುಗಳನ್ನು ಪ್ರಸ್ತಾಪಿಸಿ ಬರೆದ ಪತ್ರಗಳನ್ನು ‘ಆತ್ಮಚರಿತ್ರಾತ್ಮಕ ವಿವರಗಳುಳ್ಳ ಪತ್ರಗಳು’ ಎಂಬ ಹೆಸರಿನಲ್ಲಿ ತಾವೇ ಪ್ರಕಟಿಸಿದರು. 

ತಮ್ಮ ಹೆಚ್ಚಿನ ಪುಸ್ತಕಗಳನ್ನು ಸ್ವೀಟ್ ಹೋಂ ಪಬ್ಲಿಕೇಷನ್ಸ್ ಎಂಬ ತಮ್ಮ ಪ್ರಕಟಣಾ ಸಂಸ್ಥೆಯಿಂದಲೇ ಪ್ರಕಟಿಸಿದ್ದಾರೆ. ಯಾವ ಪ್ರಶಸ್ತಿಯನ್ನೂ ತೆಗೆದುಕೊಳ್ಳಲಾರೆ ಎಂದು ಘೋಷಿಸಿಕೊಂಡಿದ್ದಾರೆ.


***

ಇದು ರಂಗನಾಯಕಮ್ಮ. ಈಗವರಿಗೆ ೮೩ರ ಇಳಿಹರೆಯ. 

ಈ ಭೂಮಿ ಮೇಲಿನ ಜೀವ ಅಜೀವರ ನಡುವೆ ಭೇದ, ತಾರತಮ್ಯ ಇರಕೂಡದು; ಎಲ್ಲರೂ ಎಲ್ಲವನ್ನು ಹಂಚಿಕೊಂಡು ಸಮರಾಗಿ ಘನತೆಯ ಬಾಳು ನಡೆಸುವಂತಹ ಸಮಾಜ ಬರಬೇಕು ಎಂಬ ಉದಾತ್ತ ಕನಸಿನ ಕಮ್ಯುನಿಸ್ಟ್ ಸಿದ್ಧಾಂತ ದುಡಿಯುವ ವರ್ಗಕ್ಕೆ, ಶೋಷಿತರಿಗೆ, ಮಾನವೀಯ ಮನಸ್ಸುಗಳಿಗೆ ಉದಾತ್ತವೆನಿಸುತ್ತದೆ. ಆದರೆ ಬಂಡವಾಳ ಹೂಡುವವರಿಗೆ, ಜಾತಿಧರ್ಮದ ಆಧಾರದ ಮೇಲೆ ಮನುಷ್ಯರನ್ನು ಅಳೆಯುವವರಿಗೆ ಅದು ಇಷ್ಟವೇ ಆಗುವುದಿಲ್ಲ. ಈಗಂತೂ ವಿಶ್ವಾದ್ಯಂತ ಎಡ, ಕಮ್ಯುನಿಸ್ಟ್ ಚಿಂತನೆ ಎಂದರೆ ಸಮಾಜದ್ರೋಹಿ, ದೈವವಿರೋಧಿ, ರಾಷ್ಟ್ರದ್ರೋಹಿ ಚಿಂತನೆ ಎಂದು ಬಿಂಬಿಸುವಲ್ಲಿ ಬಂಡವಾಳಶಾಹಿಗಳು ಮತ್ತವರ ಏಜೆಂಟರಾದ ಆಳುವ ಸರ್ಕಾರಗಳು ಯಶಸ್ವಿಯಾಗಿವೆ. ಅಂಥದರ ನಡುವೆ ಎಡ ಸಿದ್ಧಾಂತವನ್ನೇ ಗಟ್ಟಿಯಾಗಿ ನಂಬಿದ ರಂಗನಾಯಕಮ್ಮ ಯಾವ ಅಳುಕಿಲ್ಲದೆ ಅದರಂತೆ ಬದುಕುತ್ತ, ಅದರಲ್ಲಿ ಭರವಸೆ ಇಟ್ಟುಕೊಳ್ಳಿ ಎಂದು ಮುಂದಿನ ತಲೆಮಾರುಗಳಿಗೆ ಹೇಳುತ್ತ ಸಮಾನತೆಯ ಕನಸಿನ ಕೊಂಡಿಯಾಗಿದ್ದಾರೆ. ನಾಳೆಯ ನೆಮ್ಮದಿಯ ಬಗೆಗೆ ಲೋಕವನ್ನು ಎಚ್ಚರಿಸುತ್ತಲೇ ಇದ್ದಾರೆ. 

ನ್ಯಾಯದ ಕಣ್ಣು ತೆರೆದುಕೊಂಡ ಆ ಹೆಣ್ಣು ಜೀವಕ್ಕೆ, ಲೋಕವನ್ನೂ ಬೆಳಕಿನೆಡೆಗೆ ಒಯ್ಯುತ್ತಿರುವ ಆ ಕೆಂಪು ಜೀವಕ್ಕೆ ಶರಣು ಶರಣು.


Friday 29 April 2022

ದಾಕ್ಷಾಯಿಣಿ ವೇಲಾಯುಧನ್ (1912-1978) - ಮೊದಲ ದಲಿತ ಪದವೀಧರೆ

 


ಆ ಕೇರಿಯಲ್ಲಿ ಸಾಕಷ್ಟು ಹೆಣ್ಣುಮಕ್ಕಳಿದ್ದರು. ಬ್ರಿಟಿಷರು ತೆರೆದ ಶಾಲೆ ಅಷ್ಟು ದೂರದಲ್ಲಿತ್ತು. ಮೇಲಿನ ಕೇರಿಯ ಹುಡುಗರು, ಹುಡುಗಿಯರು ದಿನವೂ ವೆಂಬನಾಡು ಸರೋವರ ದಾಟಿ ‘ಶಾಲೆ’ ಎನ್ನುವುದಕ್ಕೆ ಹೋಗುವುದನ್ನು, ಕಲಕಲಗುಡುತ್ತ ಹಿಂತಿರುಗಿ ಬರುವುದನ್ನು ಕೇರಿಯ ಹೆಣ್ಣುಮಕ್ಕಳು ಕುತೂಹಲದ ಕಣ್ಣಿಂದ ನೋಡುತ್ತಿದ್ದರು. ಬಹುತೇಕ ಹುಡುಗಿಯರಿಗೆ ಶಾಲೆ ಎಂದರೇನೆಂದು ಗೊತ್ತಿರಲಿಲ್ಲ. ಅದೇನು ಹೋಗಿ ನೋಡಿ ಬಿಡುವಾ ಎಂಬ ಕುತೂಹಲವಿದ್ದರೂ ಹೋಗಲಾಗುತ್ತಿರಲಿಲ್ಲ. 

ಕಾರಣ ಅವರು ಅತಿಕಡಿಮೆ ಬಟ್ಟೆ ಧರಿಸುವ ಹಕ್ಕು ಪಡೆದ ಪುಲಯಾ ಹೆಣ್ಣುಗಳು. ನಂಗೇಲಿ ಎಂಬ ಹೆಣ್ಣು ತನ್ನ ಸ್ತನ ಮುಚ್ಚಿಕೊಳ್ಳಲು ವಸ್ತ್ರ ತೊಟ್ಟದ್ದಕ್ಕೆ, ಸ್ತನ ಕರ ಕೊಡಲು ಸಾಧ್ಯವಾಗದ ಕಾರಣಕ್ಕೆ ಬೇಸತ್ತು ಮೊಲೆಗಳನ್ನೇ ಕತ್ತರಿಸಿಟ್ಟ ದೇವರ ನಾಡಿನ ಹೆಣ್ಣುಗಳವರು. ಉಳಿದ ಹೆಣ್ಣುಗಳಂತೆ ಮುಂಡಿನ ಮೇಲೆ ಸೊಂಟದಿಂದ ಎಡಹೆಗಲ ತನಕ ಹೋಗಿ ಹಿಂದಿಳಿಯುವ ಮೇಲ್‌ಮುಂಡು ಅಥವಾ ನೆರಿಯತ್ತುಂ ಅನ್ನು ಅವರು ತೊಡುವಂತಿಲ್ಲ. ‘ಒಟ್ಟ ಮುಂಡ’ನ್ನುಟ್ಟು ಮಡಚಿದ ಕೈಗಳಿಂದ, ಮಣಿಸರಗಳಿಂದ ಮೊಲೆಗಳನ್ನು ಮುಚ್ಚಿಕೊಂಡು ದೂರವೇ ನಿಲ್ಲಬೇಕು. ದೇಹದ ಭಾಗ ಮುಚ್ಚಿಕೊಳ್ಳಬಹುದು, ಆದರೆ ಎದೆಯ ಮೇಲೆ ವಸ್ತ್ರ ಹಾಕಿಕೊಳ್ಳಬಾರದು. ಹಾಗಾಗಿ ಅವರಿಗಾಗಿ ಶಾಲೆ ತೆರೆದರೂ ತೆರೆದೆದೆಯಲ್ಲಿ ಹೋಗಲಾರದ ಲಜ್ಜೆಗೆ ಕಲಿಕೆಯಿಂದ ದೂರವಿದ್ದರು. 

ಅಂಥಲ್ಲಿ, ಅನ್ಯಾಯದ ನಿಯಮಗಳೇ ಮೇಲುಗೈ ಸಾಧಿಸಿದ್ದ ಕಾಲದಲ್ಲಿ ಪುಲಯಾ ಹುಡುಗಿಯೊಬ್ಬಳು ಹತ್ತಿಯ ಬಟ್ಟೆ ಹೊದ್ದು, ರವಿಕೆ ತೊಟ್ಟು ತನ್ನ ದೇಹದ ಮೇಲ್ಭಾಗವನ್ನು ಮುಚ್ಚಿಕೊಂಡಳು. ರವಿಕೆ ತೊಡುವುದು ಎಂದರೆ ಕೇವಲ ತುಂಡರಿವೆ ಕತ್ತರಿಸಿ ಹೊಲಿದು ಅಂದಚಂದ ಹೆಚ್ಚಿಸಲು ತೊಡುವ ವಿನ್ಯಾಸವಾಗಿರಲಿಲ್ಲ. ಬದಲಾಗಿ ಹೆಣ್ಣುಪ್ರಜ್ಞೆ, ದಲಿತ ಪ್ರಜ್ಞೆಗಳನ್ನು ಜಾಗೃತಗೊಳಿಸುವ ಅದ್ಭುತ ಸಂಭವಿಸಿತು. ಆ ಹುಡುಗಿ ಶಾಲೆ ಕಲಿತು, ಪದವಿ ಪಡೆದು, ಸ್ವತಂತ್ರ ಭಾರತದ ಸಂವಿಧಾನ ರೂಪಿಸುವ ತನಕ ದಿಟ್ಟವಾಗಿ ನಡೆದಳು. ನೇರ ನಿಲುವು, ಗಂಭೀರ ಸ್ವಭಾವ, ಸ್ಪಷ್ಟ ಮಾತುಗಳಿಂದ ತನ್ನ ಸಮುದಾಯವನ್ನು ಜಾಗೃತಗೊಳಿಸಲು ಹೋರಾಡಿದಳು.

ಆ ಮಹಿಳೆ ಕೆ. ದಾಕ್ಷಾಯಿಣಿ ವೇಲಾಯುಧನ್. 

ತನ್ನ ತಾಯಿ, ಸೋದರಿಯರೊಡಗೂಡಿ ಮೇಲುವಸ್ತ್ರ (ರವಿಕೆ) ಧರಿಸಿದ ಮೊದಲ ಪುಲಯಾ ಮಹಿಳೆ ದಾಕ್ಷಾಯಿಣಿ ಆ ಸಮುದಾಯದ ಮೊದಲ ತಲೆಮಾರಿನ ಶಿಕ್ಷಿತ ಮಹಿಳೆ. ಪದವಿ ಪಡೆದ ಭಾರತದ ಮೊದಲ ದಲಿತ ಮಹಿಳೆ. ವಿಜ್ಞಾನ ಪದವಿ ಪಡೆದ ಮೊದಲ ದಲಿತ ಮಹಿಳೆ. ಕೊಚ್ಚಿಯ ಜನಪ್ರತಿನಿಧಿ ಸಭೆಯ ಮೊದಲ ದಲಿತ ಮಹಿಳಾ ಪ್ರತಿನಿಧಿ. ಸಂವಿಧಾನ ರಚನಾಸಭೆಯ ಅತಿ ಕಿರಿಯ ಚುನಾಯಿತ ಪ್ರತಿನಿಧಿ. 389 ಸದಸ್ಯರ, 15 ಮಹಿಳೆಯರಿದ್ದ ಸಂವಿಧಾನ ಸಭೆಯ ಏಕೈಕ ದಲಿತ ಮಹಿಳೆ. ಇಂತಹ ಹಲವು ಮೊದಲುಗಳ ಸಮ್ಮಿಶ್ರಣವಾಗಿದ್ದ ದಾಕ್ಷಾಯಿಣಿ ವೇಲಾಯುಧನ್ ಅವರ ಗೌರವಾರ್ಥ ಕೇರಳ ಸರ್ಕಾರವು ಮಹಿಳಾ ಸಶಕ್ತೀಕರಣದಲ್ಲಿ ತೊಡಗಿಕೊಂಡಿರುವ ಮಹಿಳೆಯರಿಗೆ 2019ರಿಂದ ‘ದಾಕ್ಷಾಯಿಣಿ ವೇಲಾಯುಧನ್’ ಪ್ರಶಸ್ತಿ ನೀಡುತ್ತಿದೆ.

ಅಸ್ವತಂತ್ರ ಭಾರತದ ಅಸ್ವತಂತ್ರ ಪುಲಯಾ ಕುವರಿಯಾಗಿದ್ದ ದಾಕ್ಷಾಯಿಣಿ ಸ್ವತಂತ್ರ ಬರುವ ಮೊದಲೇ ಸ್ವತಂತ್ರಳಾಗಿ ರೂಪುಗೊಂಡಿದ್ದರ ಹಿಂದೆ ಕೇರಳದ ಅಸ್ಪೃಶ್ಯ ಸಮುದಾಯಗಳ, ಹೆಣ್ಣು ಜೀವಗಳ ಹೋರಾಟದ ಕಥನವಿದೆ. ಇವತ್ತಿಗೂ ಸ್ಫೂರ್ತಿ ನೀಡುವಂತೆ ಅವರ ಬದುಕಿನ ವಿವರಗಳಿವೆ.


ಪುಲಯಾಗಳು ಕೇರಳದ ಮೂಲನಿವಾಸಿಗಳು. ಆದರೆ ನೆಲ-ನೀರು-ಸಂಪನ್ಮೂಲಗಳ ಮೇಲಿನ ತಮ್ಮ ಹಕ್ಕುಗಳನ್ನು ಕಳೆದುಕೊಂಡು, ಭೂಹೀನರಾಗಿ, ಕೃಷಿಕೂಲಿಗಳಾಗಿ, ಅಸ್ಪೃಶ್ಯರಾಗಿ ವಂಚಿತರಾಗಿ ಬದುಕುತ್ತಿದ್ದರು. ಆ ಕಷ್ಟಕುಲದ ಜನರು ರಸ್ತೆಯಲ್ಲಿ ನಡೆಯುವಂತಿಲ್ಲ. ತಾವೇ ತೋಡಿದ ಬಾವಿಯಿಂದ ನೀರು ಸೇದಿ ಒಯ್ಯುವಂತಿಲ್ಲ. ಬೀದಿಬೀದಿಗಳಲ್ಲಿ ಮೊದಲೇ ಗೊತ್ತುಪಡಿಸಿದ ಜಾಗಗಳಲ್ಲಿ ನಿಂತು ಕೇ ಹೊಹೊಹೊ ಎಂದು ಕೂಗಬೇಕು. ಅದಕ್ಕೆ ಮೇಲ್ಜಾತಿಯವರ‍್ಯಾರಾದರೂ ಮರು ಉತ್ತರಿಸಿದರೆ ಮುಖ ಮುಚ್ಚಿಕೊಂಡು ಹಿಂದಿರುಗಿ ನಡೆದುಬಿಡಬೇಕು. ತಮಗಿಂತ ‘ಮೇಲು’ ಜಾತಿಯವರ ಎದುರು ಹೋಗಲೇಬೇಕಾದಾಗ ತಲೆಗೆ, ಎದೆಗೆ ತೊಟ್ಟ ವಸ್ತ್ರ ತೆಗೆದು ಕಂಕುಳಲ್ಲಿ ತುರುಕಿ ಸರಿದು ನಿಲ್ಲಬೇಕು. 

ಇದರ ವಿರುದ್ಧ ಕ್ಷೀಣವಾಗಿ ಆದರೆ ನಿರಂತರವಾಗಿ ಹೋರಾಟಗಳು ನಡೆದಿದ್ದರೂ ಸಮಾನ ಹಕ್ಕು, ಅವಕಾಶಗಳಿಗಾಗಿ 19ನೇ ಶತಮಾನದಲ್ಲಿ ದನಿಯೇಳತೊಡಗಿದವು. ಸಂಘಟನೆ, ಘರ್ಷಣೆ, ಹೋರಾಟಗಳು ನಡೆಯತೊಡಗಿದ್ದವು. ಸಾರ್ವಜನಿಕ ಸ್ಥಳಗಳು ಎಲ್ಲರಿಗೂ ಸೇರಿದವೆಂದು ಗ್ರಾಮೀಣ ಭಾಗದ ಕೂಲಿಗಳು, ಕೆಲಸಗಾರರು, ಜೀತದಾಳುಗಳು ಹಕ್ಕು ಪ್ರತಿಪಾದನೆಗೆ ತೊಡಗಿದ್ದರು. ಅಯ್ಯನ್ ಕಾಳಿ (1862-1941)  ಹೋರಾಟಗಳ ಮುಂಚೂಣಿಯಲ್ಲಿದ್ದರು. ಪುಲಯ ಮಹಾಜನ ಸಭಾ ಹುಟ್ಟಿದ ಕಾಲ ಅದು. 

ಕೊಚ್ಚಿ ರಾಜನ ‘ನೆಲ’ದಲ್ಲಿ ಅಸ್ಪೃಶ್ಯರು ಗುಂಪುಗೂಡಿ ಸಭೆ ಸೇರುವುದನ್ನು ನಿಷೇಧಿಸಲಾಗಿತ್ತು. ಅಂಥಲ್ಲಿ ‘ಸಭಾ’ ರೂಪುಗೊಂಡ ಪರಿಯೇ ವಿಶಿಷ್ಟವಾಗಿದೆ. ಸಮುದ್ರಕ್ಕೆ ಜಾತಿಭೇದವಿಲ್ಲದ ಕಾರಣ ಬೆಸ್ತರ ಸಹಾಯದಿಂದ ಹಲವು ಹಲಗೆಗಳನ್ನು ಒಂದರೊಡನೊಂದು ಜೋಡಿಸಿ ತೇಲುವ ತೆಪ್ಪ ಸಿದ್ಧಗೊಳಿಸಿದರು. ಮುಲವುಕ್ಕಾಡಿನ ಕಲ್ಲಚಮ್ಮೂರಿ ಕುಂಜನ್, ಅವರ ಇಬ್ಬರು ಮಗಂದಿರು, ಅವರ ತಮ್ಮ ಕೃಷ್ಣೇತಿ, ನಿಮ್ನವರ್ಗಗಳ ಹಿತೈಷಿಗಳಾಗಿ ಕೈಜೋಡಿಸಿದ್ದ ಮಹಾರಾಜಾ ಕಾಲೇಜಿನ ಪ್ರೊಫೆಸರರಾದ ಪಂಡಿತ ಕುರುಪ್ಪನ್, ಹಲವು ದಿವಾನರನ್ನು ಕೊಟ್ಟಿದ್ದ ತೊಟ್ಟೆಕಲ್ ಮನೆತನದ ಟಿ.ಕೆ. ಕೃಷ್ಣ ಮೆನನ್ ಮೊದಲಾದವರು ಬೋಲ್ಘಾಟಿ ಪ್ರದೇಶದಲ್ಲಿ ತೆಪ್ಪದ ಮೇಲೆ ಸೇರಿ ‘ಪುಲಯಾ ಮಹಾಜನ ಸಭಾ’ವನ್ನು ರಚಿಸಿದರು. ಕೃಷ್ಣೇತಿ ಅವರನ್ನು ಮೊದಲ ಅಧ್ಯಕ್ಷರನ್ನಾಗಿ ಮಾಡಿದರು.

ಪುಲಯಾ ಹುಡುಗಿಗೆ ಎಳವ ಹೆಸರು!

ಕೇರಳದ ಕೊಚ್ಚಿ ಸಮುದ್ರ ತೀರದ ವೆಂಬನಾಡು ಸರೋವರದಲ್ಲಿರುವ ಸಣ್ಣ ನಡುಗಡ್ಡೆ ಮುಲವುಕ್ಕಾಡ್ (ಕನಯ್ಯನೂರ ತಾಲೂಕು, ಎರ್ನಾಕುಲಂ ಜಿಲ್ಲೆ.) ಅಲ್ಲಿ ಕುಂಜನ್ ಮತ್ತು ತಯ್ಯಿತರ ಮಾಣಿಯಮ್ಮ ಅವರ ಮಗಳಾಗಿ ಜುಲೈ 4, 1912ರಲ್ಲಿ ಕೆ. ಕೆ. ದಾಕ್ಷಾಯಿಣಿ ಅಥವಾ ಕಲ್ಲಚಮ್ಮೂರಿ ಕುಂಜನ್ ದಾಕ್ಷಾಯಿಣಿ ಹುಟ್ಟಿದಳು. ಒಂದು ಎಕರೆಯಷ್ಟು ಭೂಮಿಯಲ್ಲಿ ತೋಟ ಎಬ್ಬಿಸಿದ್ದ, ಸಮುದಾಯದ ಹುಡುಗರಿಗೆ ಶಿಕ್ಷಕರಾಗಿದ್ದ ಕುಂಜನ್, ಅಯ್ಯನ್ ಕಾಳಿಯವರ ಚಿಂತನೆಗಳಿಂದ ಪ್ರಭಾವಿತರಾಗಿದ್ದರು. ತಮ್ಮ ಮಗಳಿಗೆ ಅಳಕಿ, ಪೂಮಾಲಾ, ಚಕ್ಕಿ, ಕಾಳಿ, ಕುರುಂಬಾ, ಕಿಲಿಪಕ್ಕ ಮೊದಲಾದ ‘ಕ್ಷುದ್ರ’ವೆನಿಸುವ ಹೆಸರಿಡದೆ ಸಾಧಾರಣವಾಗಿ ಪುಲಯಾಗಳಿಗಿಂತ ‘ಮೇಲು’ ಜಾತಿಯಾದ ಎಳವರು ಇಡುವ ದಾಕ್ಷಾಯಿಣಿ ಎಂಬ ಹೆಸರಿಟ್ಟರು. ಮಗಳನ್ನು ಶಾಲೆಗೆ ಸೇರಿಸಿದ ಕುಂಜನ್ ಅವಳ ಓದಿಗೆ ಬೆನ್ನೆಲುಬಾಗಿ ನಿಂತರು. ಕೊಚ್ಚಿ ರಾಜ್ಯವು ನಿಮ್ನವರ್ಗದ ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ಶೈಕ್ಷಣಿಕ ಧನಸಹಾಯದ ಆಧಾರದಿಂದ ಶಿಕ್ಷಣ ಪಡೆಯತೊಡಗಿದಳು.

ಮೊದಲ ದಲಿತ ಪದವೀಧರೆ ದಾಕ್ಷಾಯಿಣಿಯ ವಿದ್ಯಾಭ್ಯಾಸ ಸುಲಭದ್ದಾಗಿರಲಿಲ್ಲ. ಎರ್ನಾಕುಲಂನ ಮಹಾರಾಜಾ ಕಾಲೇಜಿನಲ್ಲಿ ಓದುವಾಗ ಇಡಿಯ ವಿಜ್ಞಾನ ವಿಭಾಗದಲ್ಲಿ ಅವಳೊಬ್ಬಳೇ ಹುಡುಗಿ ಇದ್ದದ್ದು. ರಸಾಯನ ಶಾಸ್ತ್ರದ ಪ್ರಯೋಗಾಲಯದಲ್ಲಿ ದೂರ ನಿಂತೇ ಪ್ರಯೋಗಗಳನ್ನು ನೋಡುತ್ತಿದ್ದಳು. ಪ್ರಯೋಗ ಮಾಡುವ ಅವಕಾಶ ಸಿಗುತ್ತಿರಲಿಲ್ಲ. ದಲಿತೇತರ ಜಾತಿಗಳಿಗೆ ಸೇರಿದ್ದ ಅಧ್ಯಾಪಕರು ಅವಳನ್ನು ಹತ್ತಿರ ಬಿಟ್ಟುಕೊಳ್ಳಲಿಲ್ಲ. ಪಾಠವನ್ನೂ ಎಲ್ಲರಿಗಿಂತ ದೂರ ಕುಳಿತು ಕೇಳಬೇಕಿತ್ತು. ಅವಳ ಹೆಸರು ಕೇಳಿ, ಎದೆ ವಸ್ತ್ರ ಧರಿಸಿದ್ದನ್ನು ನೋಡಿ ಎಳವ ಜಾತಿಯವಳೆಂದುಕೊಂಡು ಬಳಿ ಬಂದವರೂ ಪುಲಯಾ ಎಂದು ತಿಳಿದಮೇಲೆ ದೂರವಾಗುತ್ತಿದ್ದರು. ಪುಲಯಾ ಮಹಿಳೆಯರು ಎಳವಳೆಂದು ಭಾವಿಸಿ ಅಂತರ ಕಾಯ್ದುಕೊಳ್ಳಲು ದೂರ ನಿಲ್ಲುತ್ತಿದ್ದರು. ಆಕೆಯ ಜಾತಿ ತಿಳಿದ ಬಳಿಕ ಪುಲಯ ಹೆಣ್ಣಾಗಿ ಆ ಹೆಸರು ಇಟ್ಟುಕೊಂಡಿರುವ ಬಗೆಗೆ ಅಚ್ಚರಿಗೊಳ್ಳುತ್ತಿದ್ದರು. 

ಜಾತಿ ಕಾರಣಕ್ಕೆ ತೋರಿಸುವ ತಾರತಮ್ಯ, ಅವಮಾನಗಳಿಂದ ನೊಂದು ಒಳಗೊಳಗೆ ಕುದಿಯುತ್ತಿದ್ದರೂ ದ್ವಿತೀಯ ದರ್ಜೆಯಲ್ಲಿ ದಾಕ್ಷಾಯಿಣಿ ತೇರ್ಗಡೆ ಹೊಂದಿದರು. ಬಳಿಕ ಮದರಾಸಿನ ಶಿಕ್ಷಕ ತರಬೇತಿ ಕೇಂದ್ರದಲ್ಲಿ ಓದಿದರು. ಅಲ್ಲಿಯೂ ದೂರದಿಂದಲೇ ಪಾಠ ಕೇಳಿಸಿಕೊಂಡರು. ಶಿಕ್ಷಣ ಮುಗಿಸಿದ ತಕ್ಷಣ 1935ರಲ್ಲಿ ತ್ರಿಶೂರ್ ಜಿಲ್ಲೆಯ ಪೆರುಂಗೊತ್ತಿಕಾರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದರು. 1945ರ ತನಕ ಹತ್ತು ವರ್ಷ ತ್ರಿಶೂರ್ ಮತ್ತು ತ್ರಿಪುನಿತುರಗಳ ಸರ್ಕಾರಿ ಪ್ರೌಢಶಾಲೆಗಳಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದರು. 



ಅವರು ಬೋಧಿಸುತ್ತಿದ್ದ ಪ್ರೌಢಶಾಲೆಯಲ್ಲಿ ಪುಲಯಾಗಳಿಗಿಂತ ಮೇಲು ಎಂದುಕೊಂಡ ಜಾತಿಗೆ ಸೇರಿದ ಮಕ್ಕಳು ಹೆಚ್ಚು ಕಲಿಯುತ್ತಿದ್ದರು. ಎಂದೇ ವಿದ್ಯಾರ್ಥಿಗಳಿಂದಲೂ ಸಾಕಷ್ಟು ತಾರತಮ್ಯವನ್ನು ಎದುರಿಸಿದರು. ಗುರುವಿಗೆ ವಿದ್ಯಾರ್ಥಿಗಳೇ ಜಾತಿ ತಾರತಮ್ಯ ತೋರಿಸಲು ಸಾಧ್ಯವಾಗುವ ಮಹಾನ್ ಭಾರತ ದೇಶದಲ್ಲಿ, ಸಹೋದ್ಯೋಗಿಗಳಿಂದಲೂ ತಾರತಮ್ಯ ಎದುರಿಸಿದಲ್ಲಿ ಏನಚ್ಚರಿ!? ಆದರೆ ಸಮಾನ ಹಕ್ಕುಗಳಿರುವ ತಾನು ತಾರತಮ್ಯ ಸಹಿಸುವವಳಲ್ಲ ಎಂದು ದಾಕ್ಷಾಯಿಣಿ ತೋರಿಸಿದರು. ಎದುರಿಸಿ ನಿಂತು ಏಕಾಂಗಿಯಾಗಿ ಹೋರಾಡಿದರು. ಒಮ್ಮೆ ಶಾಲೆಗೆ ಬರುತ್ತಿರುವಾಗ ಅವರ ಎದುರು ನಾಯರ್ ಸಮುದಾಯದ ಮಹಿಳೆಯೊಬ್ಬಳು ಗದ್ದೆ ತೋಡಿನ ಮೇಲೆ ನಡೆಯುತ್ತ ಬಂದವಳು ದಾಕ್ಷಾಯಿಣಿಯನ್ನು ಕಂಡದ್ದೇ, ‘ಕೆಳಗಿಳಿದು ಗದ್ದೆಯಲ್ಲಿ ನಡೆ, ನನಗೆ ದಾರಿ ಬಿಡು’ ಎಂದಳು. ಅದಕ್ಕೆ ದಾಕ್ಷಾಯಿಣಿ, ‘ದಾರಿ ಬೇಕಿದ್ದರೆ ನೀನೇ ಗದ್ದೆಗಿಳಿದು ನಡಿ, ನಾನೇಕೆ ಇಳಿಯಲಿ’ ಎಂದು ಧೃಢವಾಗಿ ನಿಂತರು. ಬುಸುಬುಸುಗುಟ್ಟುತ್ತ ಆ ಮಹಿಳೆ ಗದ್ದೆಗಿಳಿದು ದಾರಿ ಬದಲಿಸಿಕೊಂಡು ನಡೆದು ಹೋದರು. ಇದೊಂದು ಉದಾಹರಣೆಯಷ್ಟೇ. ಇಂತಹ ಅಸಂಖ್ಯ ಘಟನೆಗಳು ಅವರ ದಿನದಿನದ ಅನುಭವದಲ್ಲಿ ಸೇರಿಹೋಗಿದ್ದವು.

ಎಗ್ಗಿಲ್ಲದೆ, ನ್ಯಾಯ ಅನ್ಯಾಯಗಳ ಯೋಚನೆಯಿಲ್ಲದೆ ತಾರತಮ್ಯ ಎಸಗುವ ಭಾರತೀಯ ಸಮಾಜವನ್ನು ಬರಿಯ ಸುಧಾರಣಾ ಕ್ರಮಗಳಿಂದ ಬದಲಿಸಲು ಸಾಧ್ಯವಿಲ್ಲ ಎಂದರಿತ ದಾಕ್ಷಾಯಿಣಿ ರಾಜಕಾರಣಕ್ಕಿಳಿಯುವ ಮನಸ್ಸು ಮಾಡಿದರು. ಸೋದರ ಕೆ. ಪಿ. ವಲ್ಲನ್ ಅವರಂತೆ ಕೊಚ್ಚಿಯ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದರು. ಗಾಂಧೀಜಿಯವರಿಂದ ಪ್ರಭಾವಿತರಾಗಿ ರಾಷ್ಟ್ರೀಯ ಹೋರಾಟದಲ್ಲಿ ತೊಡಗಿಕೊಂಡರು. ಗಾಂಧೀಜಿಯವರ ಸರಳತೆ, ಸಮತಾ ಭಾವ, ತಾಯ್ತನ, ಶಿಸ್ತುಬದ್ಧ ಬದುಕು ಅವರಿಗೆ ತುಂಬ ಪ್ರಿಯವಾಗಿತ್ತು. ತಮ್ಮ ಕುಟುಂಬದವರೆಲ್ಲ ಕ್ರೈಸ್ತರಾದರೂ ತಾನು ಪುಲಯಾ ಆಗಿ ಉಳಿದ ದಾಕ್ಷಾಯಿಣಿ, ದಲಿತ ಹೋರಾಟಗಾರ ರಾಮನ್ ಕೆಳನ್ ವೇಲಾಯುಧನ್ ಅವರನ್ನು 1940ರಲ್ಲಿ ಸರಳ ಮದುವೆಯಾದರು. ಗಾಂಧಿ-ಕಸ್ತೂರಬಾ ಎದುರಿನಲ್ಲಿ ವಾರ್ಧಾ ಆಶ್ರಮದಲ್ಲಿ ನಡೆದ ಅವರ ಮದುವೆಗೆ ಕುಷ್ಠರೋಗ ಪೀಡಿತ ಆಶ್ರಮವಾಸಿಯೊಬ್ಬರು ಪುರೋಹಿತರಾಗಿ ಕಾರ್ಯ ನಿರ್ವಹಿಸಿದರು. ಆಶ್ರಮದ ಆಹಾರವಾಗಿದ್ದ ಗೋಧಿರೊಟ್ಟಿ-ಬೆಲ್ಲ ತಿನ್ನಲು ಕಷ್ಟಪಡುತ್ತಿದ್ದ ದಾಕ್ಷಾಯಿಣಿಯನ್ನು ನೋಡಿದ ಗಾಂಧೀಜಿ, ‘ಇಲ್ಲಿ ಮೀನು ಸಿಗುತ್ತೆ ಅಂದುಕೊಂಡಿದ್ದೆಯಾ?’ ಎಂದು ನಗುತ್ತ ಕೇಳಿದರು. ‘ಅವಶ್ಯವಾದರೆ ನಿನ್ನ ಕೋಣೆಯಲ್ಲಿ ಬೇರೆ ಅಡುಗೆ ಮಾಡಿಕೋ’ ಎಂದೂ ಹೇಳಿದರು. ಆದರೆ ಕಟ್ಟಿಗೆ, ಬೆರಣಿಯಿಂದ ಮಣ್ಣಿನ ಒಲೆಯಲ್ಲಿ ಅಡುಗೆ ಬೇಯಿಸುವ ಶ್ರಮಕ್ಕಿಂತ ಚಪಾತಿ ಬೆಲ್ಲವೇ ಪರವಾಗಿಲ್ಲ ಎಂದು ದಾಕ್ಷಾಯಿಣಿ ಅದಕ್ಕೆ ಹೊಂದಿಕೊಂಡರು.



ಗಾಂಧೀಜಿಯವರ ಜೊತೆಗೆ ನಿಕಟ ಸಂಬಂಧ ಇಟ್ಟುಕೊಂಡಿದ್ದರೂ ತನ್ನ ಭಿನ್ನಮತವನ್ನೂ ಜೀವಂತವಾಗಿಟ್ಟುಕೊಂಡಿದ್ದರು. ಅಸ್ಪೃಶ್ಯತೆ ಜೀವಂತವಿರುವವರೆಗೆ ‘ಹರಿಜನ’ ಎಂಬ ಪದ ಅಸ್ಪೃಶ್ಯರ ಬದುಕನ್ನು ಕೊಂಚವೂ ಬದಲಿಸಲಾರದು ಎಂದು ಕಟುವಾಗಿ ಗಾಂಧೀಜಿಯವರೆದುರೇ ಹೇಳುತ್ತಿದ್ದರು. 

1942ರಲ್ಲಿ ಕೊಚ್ಚಿ ವಿಧಾನ ಪರಿಷತ್ತಿನ ಸದಸ್ಯೆಯಾದ ದಾಕ್ಷಾಯಿಣಿ ಆಗಸ್ಟ್ 2, 1945ರಲ್ಲಿ ಮೊದಲ ಬಾರಿ ಇಂಗ್ಲಿಷ್‌ನಲ್ಲಿ ಮಾತನಾಡಿದರು. ನಿಮ್ನವರ್ಗಗಳಿಗೆಂದು ತೆಗೆದಿಡುವ ಬಜೆಟ್ ಪ್ರಮಾಣವು ಕುಸಿಯುತ್ತಿರುವ ಬಗೆಗೆ ಗಮನ ಸೆಳೆಯುತ್ತಾ, ಪಂಚಾಯ್ತಿ ಮತ್ತು ಮುನ್ಸಿಪಾಲ್ಟಿಗಳಲ್ಲೂ ಜನಸಂಖ್ಯಾವಾರು ಮೀಸಲಾತಿಯಿರಬೇಕೆಂದು ಪ್ರತಿಪಾದಿಸಿದರು. ‘ಫೈರ್ ಬ್ರ್ಯಾಂಡ್’ ಎಂದೇ ಹೆಸರುವಾಸಿಯಾಗಿದ್ದ ಐದಡಿ ಎತ್ತರದ ದಾಕ್ಷಾಯಿಣಿ, ಜಾತಿ ತಾರತಮ್ಯ ಇಷ್ಟು ಉತ್ತುಂಗದಲ್ಲಿರುವಾಗ ಅಸ್ಪೃಶ್ಯರನ್ನು ಹರಿಜನ ಎಂದು ಕರೆಯುವುದೂ ಒಂದೇ, ನಾಯಿಯನ್ನು ನೆಪೋಲಿಯನ್ ಎಂದು ಕರೆಯುವುದೂ ಒಂದೇ ಎಂದು ಹೇಳಿ ಆಸ್ಫೋಟದಂತಹ ಪರಿಣಾಮವನ್ನು ಕಾಂಗ್ರೆಸ್ಸಿನಲ್ಲಿ, ಸದನದಲ್ಲಿ ಹುಟ್ಟು ಹಾಕಿದರು.

1946ರಲ್ಲಿ ಸಂವಿಧಾನ ರಚನಾ ಸಭೆಗೆ ಆಯ್ಕೆಯಾದರು. ಸಭೆಯ ಏಕೈಕ ದಲಿತ ಮಹಿಳೆ ದಾಕ್ಷಾಯಿಣಿ ೩೪ ವರ್ಷ ವಯಸ್ಸಿನ ಅತಿ ಕಿರಿಯ ಸದಸ್ಯೆಯಾಗಿದ್ದರು. ಒಂದಾದಮೇಲೊಂದು ಪ್ರಶ್ನೆ ಎತ್ತುತ್ತ, ‘ನಿಮ್ಮ ಸಮಯ ಮುಗಿಯಿತು’ ಎಂದು ಸಭಾಧ್ಯಕ್ಷರು ಪದೇಪದೇ ನೆನಪಿಸಿದರೂ ನಿರರ್ಗಳವಾಗಿ ಮಾತನಾಡುತ್ತ ಇರುತ್ತಿದ್ದರು. 



ಅವರು ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲು ಎರಡು ಮುಖ್ಯ ಉದ್ದೇಶಗಳಿದ್ದವು: 1. ಹೊಸ ಸಂವಿಧಾನದ ಮೂಲಕ ಬದುಕುವ ಹೊಸ ಸಾಮಾಜಿಕ ಚೌಕಟ್ಟನ್ನು ಭಾರತೀಯರಿಗೆ ರೂಪಿಸಿಕೊಡುವುದು 2. ಅಸ್ಪೃಶ್ಯತೆ ಕಾನೂನುಬಾಹಿರ, ಅನ್ಯಾಯ ಎಂದು ಸಾಧಿಸಿ ವಂಚಿತರಿಗೆ ನ್ಯಾಯ ಒದಗಿಸುವುದು. ಡಿಸೆಂಬರ್ 19, 1946ರಂದು ಮಾತನಾಡುತ್ತಾ, ಜೀತಪದ್ಧತಿಯ ವಿರುದ್ಧ ದನಿಯೆತ್ತಿದರು. ನಿಮ್ನವರ್ಗಗಳಿಗೆ ಪ್ರತ್ಯೇಕ ಮತಕ್ಷೇತ್ರ ಬೇಡವೆಂದು ನಿರಾಕರಿಸಿದರು. ಅಸ್ಪೃಶ್ಯತೆಯನ್ನು ನಿಷೇಧಿಸುವ ಕಾನೂನು ತರಬೇಕೆಂದು ಹೇಳುತ್ತಾ, ಆ ಕುರಿತು ಮಾತನಾಡದೇ ಇರುವ ಭಾರತದ ಸಂವಿಧಾನವನ್ನು ಊಹಿಸುವುದಾದರೂ ಹೇಗೆ ಎಂದು ಕೇಳಿದರು. ಕರಡು ಸಂವಿಧಾನದ 11ನೆಯ ಆರ್ಟಿಕಲ್ ಅಸ್ಪೃಶ್ಯತೆ ನಿಷೇಧದ ಕುರಿತೇ ಇರುವುದರಿಂದ ಆ ಬೇಡಿಕೆಯನ್ನು ಹಿಂತೆಗೆದುಕೊಳ್ಳುವಂತೆ ಪಕ್ಷ ಅವರಿಗೆ ಸೂಚಿಸಿತು. 

ಗಾಂಧೀಜಿ ಅವರ ಅನುಯಾಯಿಯಾಗಿ ಕಾಂಗ್ರೆಸ್ಸಿಗಳಾಗಿದ್ದರೂ ಪರಿಶಿಷ್ಟ ವರ್ಗಗಳ ಕುರಿತ ಚರ್ಚೆ ನಡೆದಾಗಲೆಲ್ಲ ಅವರು ಅಂಬೇಡ್ಕರರಿಗೆ ಬೆಂಬಲವಾಗಿ ನಿಲ್ಲುತ್ತಿದ್ದರು. ಅಸ್ಪೃಶ್ಯ ಎಂದು ಕರೆಸಿಕೊಳ್ಳುವ ಸಮುದಾಯವೇ ಇಲ್ಲದಂತೆ ಸಮಾಜ ರೂಪುಗೊಳ್ಳಲಿ ಎಂದು ಭಾವುಕವಾಗಿ ಹೇಳುತ್ತಿದ್ದ ಅವರು ಅಸ್ಪೃಶ್ಯತೆ ನಿಷೇಧಿಸುವ ಅನುಚ್ಛೇದ 17ರ ಬಗೆಗೆ, ಅಸ್ಪೃಶ್ಯರಿಗೆ ಸಿಗಬೇಕಾದ ಮಾನವ ಹಕ್ಕುಗಳ ಬಗೆಗೆ ಪದೇಪದೇ ಸದಸ್ಯರ ಗಮನ ಸೆಳೆಯುತ್ತಿದ್ದರು. 

ಅಂಬೇಡ್ಕರರಿಂದ ಗಾಢವಾಗಿ ಪ್ರಭಾವಿತಾಗಿದ್ದರೂ ಪ್ರತ್ಯೇಕ ಮತಕ್ಷೇತ್ರ ಬೇಡಿಕೆ, ‘ಹಿಂದೂ ಆಗಿ ಸಾಯಲಾರೆ’ ಎಂಬ ಘೋಷಣೆಗಳಿಂದ ಅಂತರ ಕಾಯ್ದುಕೊಂಡಿದ್ದರು. ಒಕ್ಕೂಟ ವ್ಯವಸ್ಥೆಯ ಬಗೆಗೆ ಒಮ್ಮೆ ಮಾತನಾಡುತ್ತ, ಪ್ರತಿ ರಾಜ್ಯಕ್ಕೂ ಕೇಂದ್ರ ಸರ್ಕಾರವು ರಾಜ್ಯಪಾಲರನ್ನು ನೇಮಿಸುವುದರ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದರು. ಕೇಂದ್ರ, ರಾಜ್ಯಗಳಲ್ಲಿ ವಿಭಿನ್ನ ಪಕ್ಷದ ಸರ್ಕಾರಗಳಿದ್ದರೆ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ತಲೆನೋವಾಗುವ, ಘರ್ಷಣೆ ಏರ್ಪಡುವ ಎಲ್ಲ ಸಾಧ್ಯತೆಗಳಿರುವುದರಿಂದ ಅದು ಸೂಕ್ತವಲ್ಲ ಎನ್ನುವುದು ಅವರ ಅಭಿಪ್ರಾಯ. 1947, ಆಗಸ್ಟ್ 28ರಂದು ಮಾತನಾಡುತ್ತ, ‘ಹರಿಜನ ಎಂದಾದರೂ ಕರೆಯಿರಿ, ಮತ್ತಿನ್ಯಾವ ಹೆಸರಿನಿಂದಾದರೂ ಕರೆಯಿರಿ, ಎಲ್ಲಿಯವರೆಗೆ ಪರಿಶಿಷ್ಟ ವರ್ಗದವರು ಆರ್ಥಿಕ ಗುಲಾಮಗಿರಿಯಲ್ಲಿ ಬದುಕುತ್ತಾರೋ, ಅಲ್ಲಿಯವರೆಗೆ ಪ್ರತ್ಯೇಕ ಮತಕ್ಷೇತ್ರವಾಗಲೀ, ಜಂಟಿ ಮತಕ್ಷೇತ್ರ ಹೊಂದುವುದಾಗಲೀ, ಶೇಕಡಾ ಪ್ರಾತಿನಿಧ್ಯ ಪಡೆಯುವುದಾಗಲೀ ಏನೂ ಅರ್ಥವಿಲ್ಲದ್ದು. ವೈಯಕ್ತಿಕವಾಗಿ ನಾನು ಯಾವುದೇ ಸ್ಥಳದಲ್ಲಿ ಯಾವುದೇ ರೀತಿಯ ಮೀಸಲಾತಿಯನ್ನು ವಿರೋಧಿಸುತ್ತೇನೆ. ಎಲ್ಲ ಪಕ್ಷಗಳು ತಮಗೆ ಗುಲಾಮರಾಗಿರುವ ಹರಿಜನ ಅಭ್ಯರ್ಥಿಗಳನ್ನೇ ಮೀಸಲು ಕ್ಷೇತ್ರದಲ್ಲಿ ನಿಲಿಸಿಯಾರು. ಅಂಥವರಿಂದ ಹರಿಜನರಿಗೇನು ಲಾಭ?’ ಎಂದು ಕೇಳಿದರು. ‘ನಾವು ಪ್ರತ್ಯೇಕತೆಯನ್ನು ಬಯಸಿ ಮುಂಬರುವ ಪೀಳಿಗೆಯ ಕಣ್ಣುಗಳಲ್ಲಿ ನಗೆಪಾಟಲಿಗೀಡಾಗಬಾರದು. ಹರಿಜನ, ಸಿಖ್, ಮುಸ್ಲಿಂ, ಕ್ರೈಸ್ತ ಮುಂತಾಗಿ ಯಾವುದೇ ಒಂದು ಕೋಮುಭಾವನೆ ಜಾಗೃತಗೊಳ್ಳುವುದು ರಾಷ್ಟ್ರೀಯತೆಯ ಭಾವನೆಗೆ ಧಕ್ಕೆಯುಂಟುಮಾಡುವಂತಹುದು. ಎಲ್ಲ ತರಹದ ಸುರಕ್ಷೆ ಬೇಕಿಲ್ಲ. ನೈತಿಕಕತೆಯ ಸುರಕ್ಷೆಯೊಂದೇ ಈ ನೆಲದ ವಂಚಿತರಿಗೆ ನಿಜವಾದ ನ್ಯಾಯ ಒದಗಿಸಿಕೊಡಬಲ್ಲದು’ ಎಂದು ಹೇಳಿದರು. ‘ನನಗೆ ನಿಮ್ನವರ್ಗಗಳನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಲು ಇಷ್ಟವಿಲ್ಲ. ಹರಿಜನರು ಭಾರತೀಯರು. ಅವರು ಭಾರತೀಯರಾಗಿಯೇ ಇರಬೇಕು, ಭಾರತೀಯರಾಗಿಯೇ ಭವಿಷ್ಯದಲ್ಲೂ ಬದುಕಬೇಕು. ತನ್ನ ತಾಯಿ, ಸೋದರ ಸೋದರಿಯರೆಲ್ಲ ಕ್ರೈಸ್ತರಾಗಿ ಮತಾಂತರ ಹೊಂದಿದರೂ ನಾನು ಹಿಂದೂ ಆಗಿಯೇ ಉಳಿದಿದ್ದೇನೆ’ ಎಂದ ದಾಕ್ಷಾಯಿಣಿ ಕೊನೆಯತನಕ ಮತಾಂತರದ ಬಗೆಗೆ ಒಲವು ಬೆಳೆಸಿಕೊಳ್ಳಲಿಲ್ಲ. 

ಹೀಗೆ ಗಾಂಧಿ, ಅಂಬೇಡ್ಕರರೆಂಬ ಎರಡು ಹೆಮ್ಮರಗಳ ನಡುವಿದ್ದರೂ ಆ ನೆರಳು ತನ್ನ ಚಿಂತನೆಯನ್ನು ಪೇಲವಗೊಳಿಸದಂತೆ ಇಬ್ಬರಿಂದಲೂ ಅಂತರ ಕಾಯ್ದುಕೊಂಡು ತಮ್ಮದೇ ಸ್ವತಂತ್ರ ನಿಲುವು ಹೊಂದಿದ್ದರು. ಹಿಂದೂ ಧರ್ಮದಿಂದ, ರಾಷ್ಟ್ರೀಯ ಹೋರಾಟದಿಂದ ಸಂಪೂರ್ಣ ಸಿಡಿದು ನಿಂತು ಸ್ವಾಯತ್ತ ಸಮಾಜ ಕಟ್ಟುವ ಅಂಬೇಡ್ಕರ್ ಮಾರ್ಗಕ್ಕಿಂತ; ಮೇಲ್ಜಾತಿಯವರ ಮನವೊಲಿಸಿ ಹಿಂದೂ ಧರ್ಮದೊಳಗೇ ಹರಿಜನರನ್ನು ಉಳಿಸಬಯಸುವ ಗಾಂಧೀಮಾರ್ಗಕ್ಕಿಂತ ಭಿನ್ನವಾದ, ಆದರೆ ಅವೆರೆಡನ್ನೂ ಒಳಗೊಂಡ ಮಾರ್ಗ ಅವರದಾಗಿತ್ತು. ಸ್ವತಂತ್ರ, ಸಮಾಜವಾದಿ ಗಣರಾಜ್ಯ ಮಾತ್ರ ಎಲ್ಲ ಬಗೆಯ ತಾರತಮ್ಯಗಳನ್ನು ಅಳಿಸಿಹಾಕಬಲ್ಲದು ಎಂದು ದಾಕ್ಷಾಯಿಣಿ ನಂಬಿದ್ದರು. ಬದುಕಿನ ಅನುಭವಗಳು, ಸಮಾಜವಾದಿ ಚಿಂತನೆಗಳು, ಅಂಬೇಡ್ಕರ್ ಮತ್ತು ಗಾಂಧೀಜಿಯವರ ಚಿಂತನೆಗಳ ಮೊತ್ತವಾಗಿ ದಾಕ್ಷಾಯಿಣಿ ರೂಪುಗೊಂಡರು. ಸಮಾಜವಾದಿ ತತ್ತ್ವಗಳ ಮೇಲಿನ ನಂಬಿಕೆಯು ಸೋಶಿಯಲಿಸ್ಟ್ ಆಗಿದ್ದ ಪತಿ ವೇಲಾಯುಧನ್ ಅವರಿಂದ ಬಂದಿರಬಹುದು. ವೇಲಾಯುಧನ್ ಸಂವಿಧಾನ ಸಭೆಯ ಸದಸ್ಯರಾಗಿದ್ದರು. ಸಂವಿಧಾನ ಸಭೆಯಲ್ಲಿ ಪತಿ ಪತ್ನಿಯರಿಬ್ಬರೂ ಇದ್ದ ದಲಿತ ದಂಪತಿಗಳು ಅವರು. 

1946-49ರವರೆಗೆ ದಾಕ್ಷಾಯಿಣಿ ದಿ ಕಾಮನ್ ಮ್ಯಾನ್ ಪತ್ರಿಕೆಯ ಸಂಪಾದಕಿಯಾಗಿದ್ದರು. ಗಾಂಧೀವಾದಿಯಾಗಿ ಎಲ್ಲ ಕೆಲಸಗಳನ್ನೂ ಸ್ವಯಂಸೇವಕಿಯಾಗಿ ಮಾಡುತ್ತಿದ್ದರು. ಯಾವುದರಿಂದಲೂ ಆರ್ಥಿಕ ಲಾಭ ಬಯಸಲಿಲ್ಲ. ಡಿಪ್ರೆಸ್ಡ್ ಕ್ಲಾಸಸ್ ಯುತ್ಸ್ ಫೈನ್ ಆರ್ಟ್ಸ್ ಕ್ಲಬ್‌ನ ಅಧ್ಯಕ್ಷೆಯಾಗಿದ್ದರು. 



ರೆಘು, ಪ್ರಹ್ಲಾದನ್, ಧ್ರುವನ್, ಭಗೀರಥ್, ಮೀರಾ ಎಂಬ ಐವರು ಮಕ್ಕಳು. ಅವರಲ್ಲಿ ಡಾ. ರೆಘು ಬಹುಕಾಲ ಇಂದಿರಾ ಗಾಂಧಿ ಅವರಿಗೆ ಖಾಸಗಿ ವೈದ್ಯರಾಗಿದ್ದರು. ಮಗಳು ಮೀರಾ ಒಂಬತ್ತು ವರ್ಷದವಳಿರುವಾಗಲೇ ದೇಹ ಬದಲಾವಣೆ ಕುರಿತು ಚಿತ್ರ ಬರೆದು ತಿಳಿಸಿ ಮುಟ್ಟಿನ ಬಗೆಗೆ ವೈಜ್ಞಾನಿಕ ಮನೋಭಾವ ಬಿತ್ತಿದ ದಾಕ್ಷಾಯಿಣಿ ಮಗಳಿಗೆ ಮುಟ್ಟಿನ ಒಳಹೊರಗುಗಳನ್ನು ಮೊದಲೇ ತಿಳಿಸಿದ್ದರು. ತಮ್ಮ ಪತಿಯ ಬಳಿ ಹೇಳಿ ಮಗಳಿಗೆ ಪ್ಯಾಡ್ ತರಿಸುತ್ತಿದ್ದರಂತೆ. ಪ್ರಸ್ತುತ ಗುಜರಾತಿನಲ್ಲಿರುವ, ತನ್ನಮ್ಮ ಅರೆಬರೆ ಬರೆದಿಟ್ಟಿದ್ದ ಆತ್ಮಚರಿತ್ರೆ ‘ನಾಟ್ ಬಾರ್ನ್ ಇನ್ ಎ ಪೂರ್ ಪುಲಯಾ ಫ್ಯಾಮಿಲಿ’ಯನ್ನು ಪ್ರಕಟಣೆಗೆ ಸಿದ್ಧಗೊಳಿಸುತ್ತಿರುವ ಭಾರತೀಯ ಮಹಿಳಾ ಅಧ್ಯಯನಗಳ ಸಂಘದ ಅಧ್ಯಕ್ಷೆಯಾಗಿದ್ದ ಮೀರಾ ವೇಲಾಯುಧನ್ ಅಮ್ಮನ ವೈಜ್ಞಾನಿಕ ನಿಲುವುಗಳನ್ನು ಇವತ್ತಿಗೂ ನೆನಪಿಸಿಕೊಳ್ಳುತ್ತಾರೆ. ಬಗ್ಗಿ ಮೊಲೆ ಮುಚ್ಚುವಂತೆ ನಡೆದು ದಾಕ್ಷಾಯಿಣಿ ಅವರ ಬೆನ್ನು ಕೊಂಚ ಬಾಗಿಕೊಂಡಿತ್ತು. ಮಗಳು ಪರೀಕ್ಷೆಗೆ ತಯಾರಿ ನಡೆಸುವಾಗ ಅಕಸ್ಮಾತ್ ಬಗ್ಗಿ ಕುಳಿತರೆ, ‘ಇಲ್ಲ ಇಲ್ಲ, ಹೀಗಲ್ಲ, ಸರಿ ಕೂತ್ಕೋ. ಯಾವತ್ತೂ ಬೆನ್ನು ಬಾಗಿಸಬೇಡ, ತಲೆ ತಗ್ಗಿಸಬೇಡ. ನೇರ ನಡೆ. ನೇರ ನಿಲ್ಲು. ಈ ಕಾಲದಲ್ಲಿ ಬೆನ್ನು ಬಗ್ಗಿಸಬಾರದು’ ಎನ್ನುತ್ತಿದ್ದರು.

1971ರ ಚುನಾವಣೆಯಲ್ಲಿ ದಾಕ್ಷಾಯಿಣಿ ಆಡೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. ಬರಬರುತ್ತ ಭಾರತದ ರಾಜಕಾರಣದಲ್ಲಿ ಮೌಲ್ಯ, ಬದ್ಧತೆಗಳ ಸ್ಥಾನದಲ್ಲಿ ಜಾತಿ, ಹಣ, ತೋಳಬಲವೇ ಮೇಲುಗೈ ಪಡೆಯತೊಡಗಿದ್ದರ ಸೂಚನೆಯಂತೆ ಅದು ಅನಿಸಿರಬಹುದು. ಅದರ ನಂತರ ಚುನಾವಣಾ ರಾಜಕಾರಣದಿಂದ ದೂರವಾದರು. ದೆಹಲಿಯ ಕಸಗುಡಿಸುವವರೊಡನೆ, ಸ್ಲಂವಾಸಿಗಳ ನಡುವೆ ಕೆಲಸ ಮಾಡಿದರು. 1977ರಲ್ಲಿ ಮಹಿಳಾ ಜಾಗೃತಿ ಪರಿಷದ್ ಸ್ಥಾಪಿಸಿದರು. ಮೊದಲ ರಾಷ್ಟ್ರೀಯ ದಲಿತ ಮಹಿಳಾ ಸಮಾವೇಶವನ್ನು ದೆಹಲಿಯಲ್ಲಿ ಏರ್ಪಡಿಸಿದರು. ಮದರಾಸಿನಿಂದ ಹೊರಬರುತ್ತಿದ್ದ ಜೈಭೀಮ್ ಪತ್ರಿಕೆಯ ಸಂಪಾದಕಿಯಾಗಿದ್ದರು. 1978ರಲ್ಲಿ ತಮ್ಮ 66ನೆಯ ವಯಸ್ಸಿನಲ್ಲಿ ಸ್ವಲ್ಪಕಾಲ ಅನಾರೋಗ್ಯಕ್ಕೊಳಗಾಗಿ ಹಠಾತ್ತಾಗಿ ಮರಣಿಸಿದರು.

‘ಅಸ್ಪೃಶ್ಯ ಎನಿಸಿಕೊಳ್ಳುವ ಜನರೇ ಇಲ್ಲದ ಒಂದು ಕಾಲ ಬರಲಿ. ಇಂತಹ ಅಮಾನವೀಯ ಪದ್ಧತಿ ಈ ನೆಲದಲ್ಲಿದೆಯೆಂದು ನನ್ನ ದೇಶವಾಸಿಗಳು ಹೊರದೇಶದಲ್ಲೂ ತಲೆತಗ್ಗಿಸುವ ಅವಕಾಶ ಬಾರದೇ ಹೋಗಲಿ’ ಎಂಬ ಮಾತುಗಳೊಂದಿಗೆ ತಮ್ಮ ಸಂವಿಧಾನ ಸಭೆಯ ಚರ್ಚೆಯನ್ನೊಮ್ಮೆ ದಾಕ್ಷಾಯಿಣಿ ಮುಗಿಸಿದರು. ಹೌದು, ನಾನು ನೊಂದೆ ಎನ್ನುವ ಜೀವವಿಲ್ಲದಂತಹ, ಇದ್ದರೂ ಅದನ್ನು ಮುಕ್ತವಾಗಿ ಹೇಳಿಕೊಳ್ಳುವಂತಹ, ಹೇಳಿದ್ದನ್ನು ಕೇಳಿಸಿಕೊಳ್ಳುವವರಿರುವ ಸಮಾಜ ರೂಪುಗೊಂಡರಷ್ಟೇ ದೇಶ ಪಡೆದ ರಾಜಕೀಯ ಸ್ವಾತಂತ್ರ್ಯಕ್ಕೆ, ಸ್ವಾತಂತ್ರ್ಯ-75 ಸಂಭ್ರಮಕ್ಕೆ ನಿಜವಾದ ಬೆಲೆ ಬರುತ್ತದೆ. ಅಲ್ಲವೇ?

Monday 28 March 2022

ಸೋನಿ ಸೋರಿ: ಬಲಿಪಶುವಾಗಲೊಲ್ಲದ ಜೀವ

 


2022, ಮಾರ್ಚ್ 16ರಂದು ತನ್ನ ಮೇಲಿದ್ದ ಎಲ್ಲ ಎಂಟು ಸುಳ್ಳು ಪ್ರಕರಣಗಳಿಂದ ಖುಲಾಸೆಯಾದ 47 ವರ್ಷದ ಸೋನಿ ಸೋರಿ ತನ್ನ ಆಜಾದಿಯನ್ನು ತಾನೇ ಗಳಿಸಿಕೊಂಡ ಆದಿವಾಸಿ ಮಹಿಳೆ. ದೇಶವಿದೇಶಗಳಿಂದ ಅಭೂತಪೂರ್ವ ಬೆಂಬಲ ದೊರೆತರೂ ಹನ್ನೊಂದು ವರ್ಷ ನ್ಯಾಯದ ಜಗಲಿ ಹತ್ತಿಳಿದು ಹತ್ತಿಳಿದು ಅಂತೂ ಕೊನೆಗೆ ಆರೋಪಮುಕ್ತಳಾದಳು. ತೀರ್ಪು ಹೊರಬಂದ ಬಳಿಕ ಸೋನಿ, ‘ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇನೆ. ಆದರೆ ಅವರು ಸುಳ್ಳು ಪ್ರಕರಣಗಳಲ್ಲಿ ನನ್ನನ್ನು ಸಿಲುಕಿಸಿದರು. ನಿರಪರಾಧಿಯೆಂದು ಸಾಬೀತುಪಡಿಸಲು ಒಂದು ದಶಕಕ್ಕೂ ಹೆಚ್ಚುಕಾಲ ಹೋರಾಡಬೇಕಾಯಿತು. ನಾನು ಶಾಲಾ ಶಿಕ್ಷಕಿಯಾಗಿದ್ದೆ. ನಕಲಿ ಪ್ರಕರಣಗಳು ನನ್ನ ಜೀವನ, ಘನತೆ, ಕುಟುಂಬವನ್ನು ಹಾಳು ಮಾಡಿದವು. ಕಳೆದುಹೋದ ಹನ್ನೊಂದು ಅಮೂಲ್ಯ ವರ್ಷಗಳನ್ನು ಮರಳಿ ಕೊಡುವವರು ಯಾರು? ರಾಜ್ಯ ಅಥವಾ ಕೇಂದ್ರ ಸರ್ಕಾರ ಅದನ್ನು ಹಿಂದಿರುಗಿಸುತ್ತವೆಯೇ?’ ಎಂದು ಸುದ್ದಿಗೋಷ್ಟಿಯಲ್ಲಿ ಖಾರವಾಗಿ ಪ್ರಶ್ನಿಸಿದಳು. ‘ಸಾವಿರಾರು ಆದಿವಾಸಿಗಳು ಇಂತಹ ಸುಳ್ಳು ಪ್ರಕರಣಗಳ ಭಾರ ಹೊತ್ತು ಜೈಲುಗಳಲ್ಲಿದ್ದಾರೆ. ನನ್ನ ಬದುಕಿನ ಗುರಿ ಆದಿವಾಸಿಗಳಿಗೆ ನ್ಯಾಯ ಒದಗಿಸುವುದೇ ಆಗಿದೆ’ ಎಂದು ಧೃಢವಾಗಿ ಹೇಳಿದಳು.

ಸೋನಿ ಸೋರಿ ಪ್ರಭುತ್ವ ಹಾಗೂ ಮಾವೋವಾದಿಗಳೆಂಬ ಎರಡು ಅಧಿಕಾರಯುತ, ಸಶಸ್ತ್ರ ಬಲಗಳ ನಡುವೆ ಸಿಲುಕಿರುವ ಆದಿವಾಸಿ ಮಹಿಳೆ. ತನ್ನ ಅನುಭವ, ಅಭಿಪ್ರಾಯಗಳನ್ನು ನೇರಾನೇರ ಬಿಚ್ಚಿಡುವ ಬುಡಕಟ್ಟು ಜನರ ಆತ್ಮಸಾಕ್ಷಿ. ಅಪಾರ ಧೈರ್ಯದ ಮತ್ತು ಕೆಚ್ಚಿನ ಜೀವ. ತಾನನುಭವಿಸಿದ ದಾರುಣ ಕಷ್ಟ, ತಾಳಿಕೊಂಡ ದುಃಖಗಳನ್ನು ಹೋರಾಟದ ಮೆಟ್ಟಿಲಾಗಿಸಿಕೊಂಡಾಕೆ. ನಿರಂತರ ದೌರ್ಜನ್ಯಕ್ಕೆ ಒಳಗಾದರೂ ನ್ಯಾಯಕ್ಕಾಗಿ ಹೋರಾಡುವ ಛಲ ಉಳಿಸಿಕೊಂಡವಳು. ‘ಆಸಿಡ್‌ನಲ್ಲಿ ಸುಟ್ಟ ನನ್ನ ಮುಖ ಬಸ್ತಾರ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಸಂಕೇತವಾಗಿದೆ’ ಎನ್ನುವ ಸೋನಿ ವೈಯಕ್ತಿಕ ನೋವು, ಅವಮಾನಗಳನ್ನು ಸಮುದಾಯದ ಉನ್ನತಿಗಾಗಿ ಸಂಘರ್ಷಕ್ಕೆ ಬಳಸಿಕೊಂಡಾಕೆ.

ಅವಳ ಬದುಕಿನ ಏಳುಬೀಳುಗಳಲ್ಲಿ ಭಾರತದ ಕಠೋರ ವಾಸ್ತವಗಳು ಅಡಗಿವೆ. 

ಛತ್ತೀಸಗಡ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಲ, ಮಧ್ಯಪ್ರದೇಶ, ಮಹಾರಾಷ್ಟ್ರ - ಈ ಆರು ರಾಜ್ಯಗಳ ಭಾಗಗಳನ್ನು ಹೊಂದಿದ ಮಧ್ಯಭಾರತ ಅದಿರು ಸಮೃದ್ಧವಾಗಿದೆ. ಅಲ್ಲಿನ ಕಾಡು, ಬೆಟ್ಟ, ಕಣಿವೆಗಳಲ್ಲಿ ಆರು ಕೋಟಿ ಆದಿವಾಸಿಗಳಿದ್ದಾರೆ. ತಲೆತಲಾಂತರಗಳಿಂದ ನೀರು, ನೆಲ, ಕಾಡಿನ ಉತ್ಪನ್ನಗಳನ್ನು ಬಳಸುತ್ತಿದ್ದ ಅವರು ಈಗ ಬೃಹತ್ ಅದಿರು ಕಂಪನಿಗಳಿಗೆ, ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ತಮ್ಮ ನೆಲೆ ಕಳೆದುಕೊಳ್ಳುತ್ತಿದ್ದಾರೆ. ಇದು ಆದಿವಾಸಿಗಳು ಮತ್ತು ಆಳುವವರ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ತಮ್ಮ ನೆಲ, ನೀರು, ಕಾಡುಗಳ ರಕ್ಷಣೆಗಾಗಿ ಅಭಿವೃದ್ಧಿ ಯೋಜನೆಗಳ ವಿರುದ್ಧ ಹೋರಾಟ ನಡೆಸುವಂತಾಗಿದೆ. ದುರಂತವೆಂದರೆ ತಮ್ಮ ನೆಲೆಯ ಮೇಲಿರುವ ತಮ್ಮ ಹಕ್ಕಿಗಾಗಿ ಹೋರಾಡುವ ಆದಿವಾಸಿಗಳಿಗೆ ನಕ್ಸಲೈಟರೆಂದು ಹೆಸರಿಟ್ಟು ಸಾವಿರಾರು ಪ್ರಕರಣಗಳು ದಾಖಲಾಗಿವೆ. 2019ರಲ್ಲಿ ಛತ್ತೀಸಗಡ ರಾಜ್ಯವೊಂದರಲ್ಲೇ 16,475 ಆದಿವಾಸಿಗಳು ಆರೋಪಿಗಳಾಗಿ, 6,743 ಆದಿವಾಸಿಗಳು ವಿಚಾರಣಾಧೀನ ಖೈದಿಗಳಾಗಿ ಜೈಲಿನಲ್ಲಿದ್ದರು. ರಾಜ್ಯಸರ್ಕಾರವು ಆದಿವಾಸಿಗಳ ಮೇಲಿರುವ 23,000 ಪ್ರಕರಣಗಳ ಪರಿಶೀಲನೆಗಾಗಿ ನಿವೃತ್ತ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯವರ ನೇತೃತ್ವದ ಸಮಿತಿ ರಚಿಸಿತ್ತು. ಹಲವು ಪ್ರಕರಣಗಳು ನಕಲಿಯೆಂದು ಬಳಿಕ ಧೃಢಪಟ್ಟಿತು. 

ಸಾವಿರಾರು ಖೈದಿಗಳಲ್ಲಿ ಒಬ್ಬಳಾಗಿದ್ದ ಸೋನಿ ತಮಗಿನ್ನೂ ನಲವತ್ತೇಳರ ಸ್ವಾತಂತ್ರ್ಯ ಸಿಕ್ಕಿಲ್ಲವೆಂದೇ ಹೇಳುತ್ತಾಳೆ. ತನ್ನ ದಿಟ್ಟತನ, ಛಲ, ಪ್ರಶ್ನಿಸಿ ಬಂಡೇಳುವ ಗುಣದಿಂದ ವಿಶ್ವದ ಗಮನ ಸೆಳೆದು ಅಭಿವೃದ್ಧಿ ಪರಿಕಲ್ಪನೆಯ ಬಗೆಗೆ ಚರ್ಚೆ ನಡೆಯುವಂತೆ ಮಾಡಿದ್ದಾಳೆ.


ಕಲಿಸುವ ಹೆಬ್ಬಯಕೆಯ ಸೋನಿ

ಛತ್ತೀಸ್‌ಗಡ ರಾಜ್ಯ, ದಾಂತೇವಾಡ ಜಿಲ್ಲೆಯ ಸಮೇಲಿ ಗ್ರಾಮದಲ್ಲಿ ವಿದ್ಯಾವಂತ, ಅನುಕೂಲಸ್ಥ ಆದಿವಾಸಿಗಳ ಕುಟುಂಬದಲ್ಲಿ ಹುಟ್ಟಿದವಳು ಸೋನಿ (1975). ಅವಳ ತಂದೆ ಮುಂಡ್ರಾ ರಾಮ ತಮ್ಮ ಹಕ್ಕಿನ ಅರಣ್ಯಭೂಮಿಯಲ್ಲಿ ಕೃಷಿ ನಡೆಸುತ್ತಿದ್ದವರು. ಕಾಂಗ್ರೆಸ್ ಪಕ್ಷದಲ್ಲಿದ್ದು ಗ್ರಾಮದ ಸರಪಂಚನಾಗಿದ್ದರು. ಅಣ್ಣ ಸುಖದೇವ, ಅತ್ತಿಗೆ ಪಂಚಾಯ್ತಿ ಸದಸ್ಯರಾಗಿದ್ದರು. ಅವಳ ಇಬ್ಬರು ಚಿಕ್ಕಪ್ಪಂದಿರು ಕಾಂಗ್ರೆಸ್ ಶಾಸಕರಾಗಿದ್ದರು. ಅವಳ ಕಸಿನ್ ಅಮೃತಾ ಸೋರಿ ಜಗದಾಳಪುರ ಜಿಲ್ಲೆಯ ಡಿವೈಎಸ್ಪಿ ಆಗಿದ್ದಳು. ಸೋದರ ಸಂಬಂಧಿ ಲಿಂಗಾರಾಂ ಕೊಡೊಪಿ ದೆಹಲಿಯಲ್ಲಿ ಜರ್ನಲಿಸಂ ಕಲಿತು ಪತ್ರಕರ್ತನಾಗಿರುವವನು. 

ಸೋನಿ ಜಗದಾಳಪುರದ ದಿಮ್ರಪಾಲದ ಮಾತಾ ರುಕ್ಮಣಿ ಕನ್ಯಾ ಆಶ್ರಮದಲ್ಲಿ ಹೈಯರ್ ಸೆಕೆಂಡರಿ ತನಕ ಓದಿದಳು. ಬಳಿಕ ನರ್ಸಿಂಗ್ ತರಬೇತಿಗಾಗಿ ಸೇರಿದವಳು ಯಾಕೋ ಅದು ಸರಿಬರದೆ ಜಬೇಲಿಯಲ್ಲಿ ಹುಡುಗಿಯರ ಹಾಸ್ಟೆಲಿನ ವಾರ್ಡನ್ ಆದಳು. 2002ರಲ್ಲಿ ಸಂಸ್ಥೆಯೊಂದು ನಡೆಸುವ ಆಶ್ರಮಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿಕೊಂಡಳು. 2006ರಲ್ಲಿ ಮುಖ್ಯೋಪಾಧ್ಯಾಯಿನಿಯ ಜವಾಬ್ದಾರಿ ಬಂತು. ಮೂರು ಕೋಣೆಯ ಆಶ್ರಮ ಶಾಲೆಯನ್ನು ಉತ್ತಮಪಡಿಸಿ ಹೆಚ್ಚೆಚ್ಚು ಮಕ್ಕಳಿಗೆ ಶಿಕ್ಷಣ ನೀಡುವ ಗುರಿ ಅವಳದು. ತನಗಿರುವ ರಾಜಕೀಯ ಪ್ರಭಾವ, ಪರಿಚಯ ಬಳಸಿಕೊಂಡು ಉತ್ಸಾಹದಿಂದ ಕೆಲಸ ಮಾಡತೊಡಗಿದಳು. ಅಡೆತಡೆಗಳನ್ನೆದುರಿಸಿ ಜಬೇಲಿಯಲ್ಲಿ ಶಾಲಾ ಕಟ್ಟಡ ಎದ್ದು ನಿಲ್ಲಲು ಕಾರಣಳಾದಳು. ಹೊಸ ಕಟ್ಟಡದಲ್ಲಿ ಮಕ್ಕಳು ಖುಷಿಯಿಂದ ಕಲಿಯತೊಡಗಿದರು. ಈ ವೇಳೆಗೆ ಅನಿಲ ಫುತಾನೆ ಎಂಬ ಸಾಮಾಜಿಕ ಕಾರ್ಯಕರ್ತನನ್ನು ಬಾಳಸಂಗಾತಿಯಾಗಿ ಪಡೆದಳು. ಮೂವರು ಮಕ್ಕಳ ತಾಯಿಯಾದಳು.

ಆದಿವಾಸಿಗಳನ್ನು ಸಂಘಟಿಸಿ ಹಕ್ಕು ಜಾಗೃತಿ ಮೂಡಿಸುವ, ಸಮಾನತೆಯ ಸಮಾಜ ಕಟ್ಟಲು ಜೀವ ಪಣಕ್ಕಿಟ್ಟು ಹೋರಾಡುವ ಮಾವೋವಾದಿಗಳ ಪ್ರಾಬಲ್ಯ ಉತ್ತುಂಗದಲ್ಲಿದ್ದ ಕಾಲ ಅದು. ಮಾವೋವಾದಿಗಳ ಆಶಯಗಳು ಆದಿವಾಸಿಗಳನ್ನು ಆಕರ್ಷಿಸಿದ್ದವು. ಅವರ ಯೋಜನೆಗಳಲ್ಲಿ ಒಂದಷ್ಟು ಜನ ಭಾಗಿಯೂ ಆದರು. ಆದರೆ ಜನರಲ್ಲಿ ಹಕ್ಕಿನ ಪ್ರಶ್ನೆ ಜಾಗೃತಗೊಳಿಸುವ ಮಾವೋವಾದಿಗಳೆಂದರೆ ಯಾವುದೇ ಪಕ್ಷದ ಸರ್ಕಾರಕ್ಕೂ ಇಷ್ಟವಿಲ್ಲ. ಅಂಥವರ ದಮನ ಮಾಡದಿದ್ದರೆ ಸರ್ಕಾರಗಳಿಗೆ ಉಳಿಗಾಲವಿರುವುದಿಲ್ಲ. ಮಾವೋವಾದಿ ಹೋರಾಟಗಾರರನ್ನು, ಎಚ್ಚೆತ್ತ ಜನರನ್ನು ಬಗ್ಗುಬಡಿಯಲು ಸೈನ್ಯ, ಅರೆಸೇನಾಪಡೆಗಳು ಆ ಪ್ರದೇಶಕ್ಕೆ ಬಂದವು. ಮಾವೋವಾದಿಗಳ ವಿರುದ್ಧ ಸಲ್ವಾ ಜುಡುಂ ಎಂಬ ಆದಿವಾಸಿಗಳ ಸಶಸ್ತ್ರ ಪಡೆಯನ್ನು ಸರ್ಕಾರವೇ ಸೃಷ್ಟಿಸಿತು. 


ಎಲ್ಲ ಆದಿವಾಸಿಗಳಂತೆ ಮೊದಮೊದಲು ಸೋನಿಯೂ ಮಾವೋವಾದಿಗಳ ಜೊತೆ ಕೈಜೋಡಿಸಿದ್ದಳು. ಬರಬರುತ್ತ ಸರ್ಕಾರದ ಬಗೆಗೆ ಹೇಗೋ ಹಾಗೆ ಮಾವೋವಾದಿಗಳೊಂದಿಗೂ ಭಿನ್ನಮತ ಹೊಂದಿದಳು. ಸರ್ಕಾರವನ್ನು ವಿರೋಧಿಸುವ ನೆಪದಲ್ಲಿ ಆದಿವಾಸಿಗಳ ನೆಮ್ಮದಿಯ ಬದುಕಿಗೆ ಮಾವೋವಾದಿಗಳು ಮುಳ್ಳಾಗತೊಡಗಿರುವರೆಂದು ಅವರಿಗೆ ನೇರವಾಗಿ ಹೇಳಿದಳು. ಒಮ್ಮೆ ಎಲ್ಲ ಶಿಕ್ಷಕರನ್ನೂ ಮಾವೋವಾದಿಗಳು ಜನ್ ಅದಾಲತ್‌ಗೆ ಕರೆದರು. ತಮ್ಮ ಮೇಲೆ ಆಕ್ರಮಣ ಮಾಡುವಾಗ ಹೈಡ್‌ಔಟ್‌ಗಳಾಗಿ ಬಳಸಿಕೊಳ್ಳಲೆಂದೇ ಸೇನಾಪಡೆಗಳು ಆಶ್ರಮ(ಶಾಲೆ)ಗಳನ್ನು ಕಟ್ಟಿವೆ, ಹಾಗಾಗಿ ಅವನ್ನೆಲ್ಲ ಧ್ವಂಸಗೊಳಿಸುತ್ತೇವೆ ಎಂದವರು ಹೇಳಿದಾಗ ಸೋನಿ ಬಲವಾಗಿ ವಿರೋಧಿಸಿದಳು. ಜನರಿಗಾಗಿ ಹೋರಾಡುವವರು ಅವರ ಮನೆ, ಶಾಲೆಗಳನ್ನು ಧ್ವಂಸಗೊಳಿಸುವುದು ಸರಿಯಲ್ಲ. ಆಶ್ರಮ ಶಾಲೆಗಳನ್ನು ಕೆಡವಿದರೆ ಆದಿವಾಸಿ ಮಕ್ಕಳು ಎಲ್ಲಿ ಕಲಿಯಬೇಕು ಎಂದು ಪ್ರಶ್ನಿಸಿದಳು. ಕೊನೆಗೆ ರಕ್ಷಣಾ ಪಡೆಗಳನ್ನು ಶಾಲೆಯೊಳಗೆ ಬಿಡಬಾರದು ಎಂಬ ಷರತ್ತಿನ ಮೇಲೆ ತನ್ನ ಶಾಲೆ ಉಳಿಯುವಂತೆ ನೋಡಿಕೊಂಡಳು. 

ಎಲ್ಲ ಆಶ್ರಮಗಳು ನಾಶವಾದರೂ ಸೋನಿಯ ಆಶ್ರಮ ಉಳಿಯಿತು. ಮಕ್ಕಳು ಹೆಚ್ಚು ಸಂಖ್ಯೆಯಲ್ಲಿ ಕಲಿಯತೊಡಗಿದರು. ಉಳಿದೆಲ್ಲ ಶಾಲೆಗಳನ್ನು ಕೆಡವಿದ ಮಾವೋವಾದಿಗಳು ಅವಳ ಶಾಲೆ ಉಳಿಸಿದ್ದರಿಂದ ಸೋನಿ ನಕ್ಸಲ್ ‘ನೇತಾ’ ಆಗಿರಬೇಕು; ಅಥವಾ ಅವರ ಏಜೆಂಟ್ ಆಗಿರಬೇಕೆಂದು ಪೋಲೀಸರು ತರ್ಕಿಸಿದರು. ಸೋನಿಯ ಸೋದರ ಸಂಬಂಧಿ ಲಿಂಗಾರಾಮ್ ಕೊಡೊಪಿ ದೆಹಲಿಯಲ್ಲಿ ಜರ್ನಲಿಸಂ ಓದುತ್ತಿದ್ದ. ತನ್ನ ಜನರ ಹಕ್ಕಿನ ಬಗೆಗೆ ಸೋನಿಯಂತೆಯೇ ದನಿಯೆತ್ತರಿಸಿ ಮಾತನಾಡುತ್ತಿದ್ದ. ತನ್ನ ನೆಲದ ಕತೆಗಳನ್ನು ಪತ್ರಕರ್ತನಾಗಿ ಹೊರಜಗತ್ತಿಗೆ ತಿಳಿಸುವೆನೆಂದು ಕನಸಿದ್ದ. ವ್ಯವಸ್ಥೆಯ ವಿರುದ್ಧ ಸೋನಿ, ಲಿಂಗಾರಾಮನಂಥವರು ತೋರಿಸುವ ಪ್ರತಿರೋಧ ಮಾವೋವಾದಿಗಳೆಂಬ ಹಣೆಪಟ್ಟಿ ಹಚ್ಚಲು ಸಾಕಾಯಿತು. 

ಇಲ್ಲಿಂದಾಚೆ ಸೋನಿ ಅಡಕತ್ತರಿಯಲ್ಲಿ ಸಿಲುಕಿದಳು. ಒಂದು ನಿಗೂಢ ಪಾತ್ರವೋ ಎನ್ನುವಂತೆ ಅವಳ ಬಗೆಗೆ ಸುದ್ದಿಗಳು ಹರಿದಾಡಿದವು. ಕ್ರಿಮಿನಲ್ ಪ್ರಕರಣಗಳು ಸುತ್ತಿಕೊಂಡವು. ಸಂಘರ್ಷ ಇರುವ ಪ್ರಾಂತ್ಯದಲ್ಲಿ ಬದುಕುವುದು ಸುಲಭವಿಲ್ಲ. ಮುಗ್ಧ, ಸರಳ ಆದಿವಾಸಿಗಳಿಗೆ ಅದು ಇನ್ನೂ ಕಷ್ಟ. ನೀವು ಒಂದೋ ‘ಇದು’ ಆಗಿರಬೇಕು. ಅಥವಾ ‘ಅದು’ ಆಗಿರಬೇಕು. ಅದಲ್ಲದಿದ್ದರೂ ನಿಮ್ಮನ್ನು ‘ಅದು’ ಎಂದೇ ಪರಿಗಣಿಸಲಾಗುತ್ತದೆ. ಇದು, ಅದುಗಳ ನಡುವೆ ಸಿಲುಕಿ ದೌರ್ಜನ್ಯ ಅನುಭವಿಸುತ್ತಿರುವವರು ಸೋನಿಯಂತಹ ಸಾವಿರಾರು ಮಹಿಳೆಯರು. ಪೊಲೀಸರು ಅವಳನ್ನು ಮಾವೋವಾದಿಯೆಂದರು. ಮಾವೋವಾದಿಗಳು ಅವಳು ಪೊಲೀಸ್ ಮಾಹಿತಿದಾರಳೆಂದು ಅನುಮಾನಿಸಿ ತಮ್ಮ ಹಿಟ್‌ಲಿಸ್ಟಿನಲ್ಲಿ ಅವಳ ಕುಟುಂಬವನ್ನು ಸೇರಿಸಿದರು. ಅವಳು ಎರಡೂ ಕಡೆಯವರನ್ನು ವಂಚಿಸಿ ತಮ್ಮಿಂದ ಹಫ್ತಾ ವಸೂಲು ಮಾಡುತ್ತಿರುವಳೆಂದು ಆ ಪ್ರದೇಶದಲ್ಲಿದ್ದ ಬೃಹತ್ ಕಬ್ಬಿಣ ಮತ್ತು ಉಕ್ಕು ಕಂಪನಿ ಎಸ್ಸಾರ್ ಹೇಳಿತು. 

ಎಲ್ಲ ಬಂಡವಾಳಗಾರರಂತೆ ಎಸ್ಸಾರ್ ತನ್ನ ವ್ಯವಹಾರ ಸುಗಮವಾಗಿರಲು ಇತ್ತ ಅಧಿಕಾರಿಗಳಿಗೂ ಲಂಚ ಕೊಡುತ್ತಿತ್ತು, ಅತ್ತ ಆದಿವಾಸಿಗಳು ತಮ್ಮ ಸುದ್ದಿಗೆ ಬಾರದೇ ಕೆಲಸ ಸುಸೂತ್ರವಾಗಿ ನಡೆಯಲು, ಕಬ್ಬಿಣದ ಸ್ಲರಿ ಹಾದುಹೋಗುವ ಪೈಪ್‌ಲೈನ್ ಅನ್ನು ರಕ್ಷಿಸಲು ಮಾವೋವಾದಿಗಳಿಗೂ ಹಣ ಸಂದಾಯ ಮಾಡುತ್ತಿತ್ತು. ಇಬ್ಬರೂ ಫಲಾನುಭವಿಗಳು ಪರಸ್ಪರ ಕತ್ತಿ ಮಸೆಯುತ್ತಿದ್ದರು. 2011ರ ಸೆಪ್ಟೆಂಬರ್‌ನಲ್ಲಿ ಎಸ್ಸಾರ್ ಕಂಪನಿಯಿಂದ ಮಾವೋವಾದಿಗಳಿಗೆ ತಲುಪಿಸಲು 15 ಲಕ್ಷ ರೂಪಾಯಿ ಒಯ್ಯುತ್ತಿದ್ದರೆಂದು ಲಿಂಗಾರಾಂ ಕೊಡೊಪಿ, ಲಾಲ್ ಎಂಬ ಕಂಟ್ರಾಕ್ಟರ್ ಹಾಗೂ ಎಸ್ಸಾರ್ ಕಂಪನಿಯ ಅಧಿಕಾರಿಯನ್ನು ಪೊಲೀಸರು ಸಂತೆಯಲ್ಲಿ ಬಂಧಿಸಿದರು. ಅಲ್ಲೇ ಇದ್ದ ಸೋನಿ ತನಗೆ ಅಪಾಯವಿದೆಯೆಂದರಿತು ಸಂತೆಯ ಗದ್ದಲದಿಂದ ತಪ್ಪಿಸಿಕೊಂಡು ದೆಹಲಿ ಸೇರಿದಳು. ಅವಳನ್ನು ಕೆಲವೇ ದಿನಗಳಲ್ಲಿ ದೆಹಲಿ ಪೊಲೀಸರು ಹಣ ವಸೂಲಿ, ಅಪರಾಧ ಸಂಚು, ಕಾನೂನುಬಾಹಿರ ಚಟುವಟಿಕೆ ಮುಂತಾದ ಆರೋಪಗಳನ್ನು ಹೊರಿಸಿ ಬಂಧಿಸಿದರು.  

ಬಳಿಕ ವಿಚಾರಣೆಗಾಗಿ ದಾಂತೇವಾಡಾ ಪೊಲೀಸರ ಸುಪರ್ದಿಗೆ ವಹಿಸಲಾಯಿತು. ಪೊಲೀಸ್ ಕಸ್ಟಡಿ ಎನ್ನುವುದು ಭೂಮಿ ಮೇಲಿನ ನರಕವೆಂದು ಆ ಎರಡೇ ದಿನದಲ್ಲಿ ಸೋನಿಗೆ ತಿಳಿದುಹೋಯಿತು. ವಿಚಾರಣೆಗೆಂದು ಸಾಕ್ಷಾತ್ ಎಸ್‌ಪಿಯೇ ಬಂದ. ದಿನವಿಡೀ ಉಪವಾಸ ಕೆಡವಿದರು. ಊಹಿಸಲೂ ಆಗದಷ್ಟು ಅವಾಚ್ಯ ಪದಗಳಿಂದ ಬೈದು ಅವಮಾನಿಸಿದರು. ಪೊಲೀಸ್ ಮಾಹಿತಿದಾರಳಾಗು, ಬಿಡುಗಡೆ ಮಾಡುತ್ತೇವೆ ಎಂಬ ಆಮಿಷವೊಡ್ಡಿದರು. ಅರುಂಧತಿ ರಾಯ್, ಪ್ರಶಾಂತ ಭೂಷಣ್, ಹಿಮಾಂಶು ಕುಮಾರ್ ಮತ್ತಿತರ ಹೋರಾಟಗಾರರಿಗೆ, ಲಿಂಗಾರಾಮನಿಗೆ ಮಾವೋವಾದಿಗಳೊಂದಿಗೆ ಸಂಪರ್ಕ ಇದೆಯೆಂದು ಪತ್ರದಲ್ಲಿ ಬರೆದು ಸಹಿ ಹಾಕು ಎಂದರು. ಸೋನಿ ನಿರಾಕರಿಸಿದಳು. ಮತ್ತಾರೋ ವಿಚಾರಣೆ ನಡೆಸಲು ಬಂದರು. ನಕ್ಸಲೈಟರ ಸೂಳೆ ಎಂದು ಜರೆದರು. ಬತ್ತಲಾಗಿಸಿ ವಿದ್ಯುತ್ ಶಾಕ್ ಕೊಟ್ಟರು. ಯೋನಿಯಲ್ಲಿ, ಗುದದ್ವಾರದಲ್ಲಿ ಕಲ್ಲು ತುಂಬಿದರು. ಮೂತ್ರಕ್ಕೆ ಹೋಗಲೂ ಬಿಡಲಿಲ್ಲ. ಗುಪ್ತಾಂಗಗಳ ಸುತ್ತಲ ಗಾಯದಿಂದ ಕೂರಲಾಗದೇ ಒದ್ದಾಡಿದಳು. ಮೂರು ಮಕ್ಕಳನ್ನು ಹೆರುವಾಗ ಅನುಭವಿಸಿದ್ದಕ್ಕಿಂತ ಹೆಚ್ಚು ನೋವು ಅನುಭವಿಸಿದಳು. ಕುಡಿಯಲು, ತಿನ್ನಲು ಏನನ್ನೂ ಕೊಡಲಿಲ್ಲ. ಎರಡು ದಿನ ಹೊಡೆದು, ಸುಟ್ಟು, ಉಪವಾಸವಿಟ್ಟು ನ್ಯಾಯಾಲಯಕ್ಕೆ ಕರೆದೊಯ್ದ ಸಮಯದಲ್ಲಿ ಅವಳು ಏಳಲಾಗದ ಸ್ಥಿತಿಯಲ್ಲಿ ಜೀಪಿನಲ್ಲಿ ಬಿದ್ದುಕೊಂಡಿದ್ದಳು. ಹೇಳಿಕೆ ಕೊಡಲು ನಿರಾಕರಿಸಿದಳೆಂಬ ನೆಪ ಹೇಳಿ ಕಸ್ಟಡಿ ಮುಂದುವರೆಯಿತು. ಆರೋಗ್ಯ ಹದಗೆಟ್ಟಿತು. ಕಲಕತ್ತಾ ಆಸ್ಪತ್ರೆಗೆ ದಾಖಲು ಮಾಡಿ ಯೋನಿಯಲ್ಲಿದ್ದ ಕಲ್ಲುಗಳನ್ನು ಹೊರತೆಗೆದರು. ಸರ್ಕಾರದ ದಾಖಲೆಗಳಲ್ಲಿ ಇವನ್ನೆಲ್ಲ ಬರೆಯದೇ ಮರೆಮಾಚಿದರು.

ಅನಂತರ ಜಗದಾಳಪುರ ಜೈಲು ತಲುಪಿದ ಸೋನಿ ಅಲ್ಲಿ ತನ್ನಂತೆ ಬಂಧಿಯಾಗಿದ್ದ ಹಲವಾರು ಆದಿವಾಸಿ ತರುಣಿಯರನ್ನು ಕಂಡಳು. ಅವರೆಲ್ಲರೂ ಅತ್ಯಾಚಾರಕ್ಕೊಳಗಾಗಿದ್ದರು. ಯೋನಿಯಲ್ಲಿ ಕಡ್ಡಿ, ಲಾಠಿ ತುರುಕುವುದು, ಮೊಲೆತೊಟ್ಟು ಕತ್ತರಿಸುವುದು, ಗಾಯಕ್ಕೆ ಶಾಕ್ ಕೊಡುವುದೇ ಮೊದಲಾದ ಊಹಿಸಲಾಗದ ಭೀಭತ್ಸ ಹಿಂಸೆಗೆ ಈಡಾಗಿದ್ದರು. ಬಟ್ಟೆ ಬಿಚ್ಚಿಸಿ ಬೆತ್ತಲಾಗಿ ಕಾಲಗಲಿಸಿ ಕೂರುವಂತೆ ಹೇಳುತ್ತಿದ್ದರು. ಒಬ್ಬ ಹುಡುಗಿಯನ್ನಂತೂ ತಿಂಗಳುಗಟ್ಟಲೆ ಒಂದು ಸ್ಟೇಷನ್ನಿನಿಂದ ಇನ್ನೊಂದು ಸ್ಟೇಷನ್ನಿಗೆ ವರ್ಗಾಯಿಸಿ ದಿನನಿತ್ಯ ಅತ್ಯಾಚಾರ ನಡೆಸಿದ್ದರು. ಮಹಿಳಾ ಪೊಲೀಸರೂ ಶಿಕ್ಷಾ ಪ್ರಯೋಗಗಳನ್ನು ನಡೆಸಿದ್ದರು. ತಮಗೇಕೆ ಈ ಅವಮಾನ? ಇದರಲ್ಲಿ ತಮ್ಮ ತಪ್ಪೇನು? ಆದಿವಾಸಿಗಳ ನೆಲಜಲ ಸಂಪನ್ಮೂಲ ದೋಚುವ ದರೋಡೆಕೋರ ಕಂಪನಿಗಳನ್ನು ರಕ್ಷಿಸುವ ಸರ್ಕಾರ ತಮ್ಮ ಮೇಲೇಕೆ ದೌರ್ಜನ್ಯ ಎಸಗುತ್ತಿದೆ? ವಿಚಾರಣೆಯ ನೆಪದಲ್ಲಿ ಪೊಲೀಸರೇ ಎಸಗುತ್ತಿರುವ ಕ್ರೌರ್ಯಕ್ಕೆ ವ್ಯವಸ್ಥೆ ಏಕೆ ಕುರುಡಾಗಿದೆ? ಮುಂತಾದ ಪ್ರಶ್ನೆಗಳು ಸೋನಿಯನ್ನು ಬಾಧಿಸಿದವು. ಮುಖ್ಯಮಂತ್ರಿಗಳಿಗೊಂದು ಪತ್ರ ಬರೆದಳು. ತನ್ನನ್ನು ನಗ್ನಳಾಗಿಸಿ ಹಿಂಸಿಸಿದರೆ, ಯೋನಿಗೆ ಕಲ್ಲುಕಡ್ಡಿ ತುರುಕಿದರೆ, ವಿದ್ಯುತ್ ಶಾಕ್ ಕೊಟ್ಟರೆ ನಕ್ಸಲ್ ಬಿಕ್ಕಟ್ಟು ಕೊನೆಗೊಳ್ಳುವುದೇ ಎಂದು ಪ್ರಶ್ನಿಸಿದಳು. ಅದನ್ನು ಮಾನವ ಹಕ್ಕು ಹೋರಾಟಗಾರರ ಮೂಲಕ ಮಾಧ್ಯಮಗಳಿಗೆ ತಲುಪಿಸಿದಳು. ಅವಳಿಗೆ ತಲೆ ಸರಿಯಿಲ್ಲವೆಂದ ಆಡಳಿತ ಮಾನಸಿಕ ಚಿಕಿತ್ಸೆಗೆ ಕಳಿಸುವ ತಯಾರಿ ಮಾಡತೊಡಗಿತು.

ಈ ವೇಳೆಗೆ ಸೋನಿಯ ಪ್ರಕರಣ ದೇಶಾದ್ಯಂತ ಸುದ್ದಿಯಾಯಿತು. ದೇಶವಷ್ಟೇ ಅಲ್ಲ, ವಿಶ್ವದ ಎಲ್ಲ ಕಡೆಯಿಂದ ಅಪಾರ ಬೆಂಬಲ ಹರಿದು ಬಂತು. ‘ಒನ್ ಬಿಲಿಯನ್ ರೈಸಿಂಗ್’ ಅಭಿಯಾನದ ಭಾಗವಾಗಿ ಸಾವಿರಾರು ಪೋಸ್ಟ್ ಕಾರ್ಡುಗಳು ಜೈಲಿನಲ್ಲಿದ್ದ ಸೋನಿಯನ್ನು ತಲುಪಿದವು. ಮಾನವಹಕ್ಕು, ಮಹಿಳಾ ಸಂಘಟನೆಗಳು ಅವಳ ಬಿಡುಗಡೆಗೆ ಅಭಿಯಾನ ಆರಂಭಿಸಿದರು. ಅದರಲ್ಲೂ ಕಾಲಿನ್ ಗೊನ್ಸಾಲ್ವಿಸ್ ಎಂಬ ಸರ್ವೋಚ್ಚ ನ್ಯಾಯಾಲಯದ ಲಾಯರ್ ನಡೆಸುವ ‘ಹ್ಯುಮನ್ ರೈಟ್ಸ್ ಲಾ ನೆಟ್ವರ್ಕ್’ ಅವಳ ಪ್ರಕರಣದ ಎಲ್ಲ ಕೋನಗಳನ್ನೂ ಪರಿಶೀಲಿಸಿ ನ್ಯಾಯಾಲಯದ ದೀರ್ಘ ಹೋರಾಟಕ್ಕೆ ಬೆಂಬಲ ನೀಡಿತು. ಎರಡೂವರೆ ವರ್ಷ ಬಳಿಕ ಸರ್ವೋಚ್ಚ ನ್ಯಾಯಾಲಯ ಎಂಟರಲ್ಲಿ ಆರು ಪ್ರಕರಣಗಳಲ್ಲಿ ಸೂಕ್ತ ಸಾಕ್ಷ್ಯಾಧಾರಗಳಿಲ್ಲವೆಂದು ಬೇಲ್ ಮೇಲೆ ಬಿಡುಗಡೆ ಮಾಡಿತು. 

2011ರಲ್ಲಿ ಅವಳ ಪತಿ ಅನಿಲ ಫುತಾನೆಯೂ ಬಂಧಿತನಾಗಿ ಕಸ್ಟಡಿಯಿಂದ ಬೇಗ ಬಿಡುಗಡೆಯಾಗಿದ್ದ. ಆದರೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಡೆತ, ಗಾಯಗಳಿಂದ ಸುಧಾರಿಸಿಕೊಳ್ಳಲಾಗದೇ ತೀರಿಹೋದ. ಅದೇವೇಳೆಗೆ ಸೋನಿಯ ತಂದೆ ಪೊಲೀಸ್ ಮಾಹಿತಿದಾರನಾಗಿರುವನೆಂದು ಅವನ ಕಾಲಿಗೆ ಮಾವೋವಾದಿಗಳು ಗುಂಡು ಹೊಡೆದಿದ್ದರು. ಮನೆ ಸುಟ್ಟಿದ್ದರು. ಕೃಷಿ ಮಾಡಬಾರದೆಂಬ ಒತ್ತಡ ತಂದರು. ಅನಿವಾರ್ಯವಾಗಿ ಅವರು ಊರು ಬಿಡಬೇಕಾಯಿತು. ಆಗ ಅವಳ ಮೂವರು ಮಕ್ಕಳ ಪರಿಸ್ಥಿತಿ ಏನಾಗಿರಬಹುದು?! ಸೋನಿ ಬಿಡುಗಡೆಯಾದರೂ ಛತ್ತೀಸಗಡಕ್ಕೆ ಹೋಗುವಂತಿರಲಿಲ್ಲ. ಒಮ್ಮೆ ಹೋಗಿ ಮಕ್ಕಳ ಮುಖ ಕಂಡು ೨೪ ಗಂಟೆಯಲ್ಲಿ ವಾಪಸು ಬರಲು ಅನುಮತಿ ಸಿಕ್ಕಿತು. ಬೇಲ್ ಸಿಕ್ಕರೂ ಎರಡು ಪ್ರಕರಣಗಳ ತೂಗುಗತ್ತಿ ಅವಳ ತಲೆಯ ಮೇಲೆ ನೇತಾಡುತ್ತಲೇ ಇತ್ತು. ದೆಹಲಿಯ ಸಣ್ಣ ಮನೆಯೊಂದರಲ್ಲಿ ಅವಳು ಮತ್ತು ಲಿಂಗಾರಾಂ ಗೃಹಬಂಧನದಲ್ಲಿ ವಾಸಿಸಿದರು. ವಿದ್ಯಾರ್ಥಿಗಳನ್ನು, ಹೋರಾಟಗಾರರನ್ನು ಭೇಟಿಯಾದರು. ‘ಛತ್ತೀಸಗಡದಲ್ಲಿ ಲಾಲ್ ಸಲಾಂ ಎಂದರೆ, ಮಾರ್ಕ್ಸ್ ಎಂದರೆ ನಿಮ್ಮನ್ನು ನಕ್ಸಲ್ ಎಂದು ಬಂಧಿಸುತ್ತಾರೆ, ಇಲ್ಲಿ ಹಾಗಿಲ್ಲ’ ಎಂದು ಲಿಂಗಾರಾಮನೂ, ಅವಳೂ ಓದುವುದರಲ್ಲಿ ತೊಡಗಿಕೊಂಡರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗತೊಡಗಿದಾಗ ಸರ್ಕಾರ ಇರಿಸುಮುರುಸು ಅನುಭವಿಸಿತು. ಒಂದಾದಮೇಲೊಂದು ಪ್ರಕರಣಗಳಲ್ಲಿ ಅವಳು ನಿರ್ದೋಷಿಯೆಂದು ಸಾಬೀತಾದಾಗ ರಾಜಕೀಯಕ್ಕೆ ಇಳಿದಳು. ತನ್ನ ಕುಟುಂಬದವರು ಇದ್ದ ಕಾಂಗ್ರೆಸ್ ಪಕ್ಷ ಬೇಡವೆನಿಸಿತ್ತು. ಕಮ್ಯುನಿಸ್ಟ್ ಪಕ್ಷದ ನಡೆಗಳೂ ಬೇಸರ ತಂದಿದ್ದವು. ೨೦೧೪ರಲ್ಲಿ ಆಮ್‌ಆದ್ಮಿ ಪಕ್ಷ ಸೇರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಳು. ಸ್ವಾಮಿ ಅಗ್ನಿವೇಶ್ ಸೇರಿದಂತೆ ಹಲವರು ಅವಳ ಪರ ಪ್ರಚಾರ ಮಾಡಿದರು. ನಿರೀಕ್ಷೆಯಂತೆ ಹಣ ಚೆಲ್ಲದ ಅವಳು ಚುನಾವಣೆಯಲ್ಲಿ ಸೋತಳು. 2016ರಲ್ಲಿ ಬಸ್ತಾರಿನಲ್ಲಿ ಅಪರಿಚಿತರು ಆಸಿಡ್‌ನಂತಹ ಏನನ್ನೋ ಅವಳ ಮೇಲೆರಚಿ ಹೋದರು. ಮುಖವೆಲ್ಲ ಸುಟ್ಟು, ಬೊಬ್ಬೆಯೆದ್ದು ಕರಕಲಾಯಿತು. ಕಣ್ಣು ಬಿಡಲಾಗದೇ ಒದ್ದಾಡುವವಳನ್ನು ಯಾರೋ ಆಸ್ಪತ್ರೆಗೆ ಒಯ್ದರು. ಬಳಿಕ ದೆಹಲಿಗೆ ತೆರಳಿ ಚಿಕಿತ್ಸೆ ಪಡೆದಳು. 

ಆದಿವಾಸಿಗಳು ಸ್ವಾತಂತ್ರ್ಯ ಪ್ರೇಮಿಗಳು. ಸ್ವಯಂಪೂರ್ಣರು. ಸರ್ಕಾರದ ಸವಲತ್ತು, ಸಹಾಯ, ಕೋರ್ಟು ಕಾನೂನುಗಳ ನೆರವಿಲ್ಲದೆ ಸರಳವಾಗಿ ತಮ್ಮಂತೆ ತಾವು ಪ್ರಕೃತಿಯಲ್ಲಿ ಲೀನವಾಗಿ ಬದುಕುವವರು. ಅವರ ಭಾಷೆಯಲ್ಲಿ ಅನಾಥ ಎಂಬ ಶಬ್ದವಿಲ್ಲ. ಆದರೆ ಅವರೀಗ ನಾಗರಿಕ ವ್ಯವಸ್ಥೆಯ ದುರಾಸೆಗೆ ಬಲಿಯಾಗಿ ತಾವೇ ಅನಾಥರಾಗುತ್ತಿದ್ದಾರೆ. 

‘ನಾನೆದುರಿಸಿದ ಶಿಕ್ಷೆಯೇ ನನಗೆ ಬಲ ನೀಡಿತು’ ಎನ್ನುವ ಸೋನಿ ಈಗ ಅಧಿಕೃತವಾಗಿ ಸರ್ಕಾರದ ನ್ಯಾಯಭಾಷೆಯಲ್ಲಿ ಬಿಡುಗಡೆಯಾಗಿದ್ದಾಳೆ. ಆದರೆ ಅವಳ ಬಿಡುಗಡೆಗೆ ಯತ್ನಿಸಿದ, ಹೋರಾಡಿದ ಎಷ್ಟೋ ಹೋರಾಟಗಾರರು ಬಂಧಿಸಲ್ಪಟ್ಟಿದ್ದಾರೆ. ಅವಳ ಮುಖದಲ್ಲಿ ನಗೆಯ ಒಂದು ಎಳೆಯೂ ಕಾಣುವುದಿಲ್ಲ. ನೆಮ್ಮದಿಯ ಒಂದು ಗೆರೆಯೂ ಸಡಿಲವಿಲ್ಲ. ಅಪಮಾನ, ಅತ್ಯಾಚಾರ, ನೋವು, ಆರೋಪ, ಶಿಕ್ಷೆ, ಮಾನನಷ್ಟ, ಆಪ್ತರ ಸಾವು, ಅಸಹಾಯಕತೆ ಮುಂತಾಗಿ ನುಡಿಕೋಶದಲ್ಲಿ ಬದುಕಿನ ಕಷ್ಟನೋವುಗಳನ್ನು ವಿವರಿಸಬಲ್ಲ ಯಾವ್ಯಾವ ಪದಗಳಿವೆಯೋ ಅವನ್ನೆಲ್ಲ ಅನುಭವಿಸಿ ಗಟ್ಟಿಯಾಗಿರುವ, ಸುಟ್ಟುಕೊಂಡಿರುವ ಜೀವ ಅವಳದು. ಅವಳ ಬಿಡುಗಡೆ ಅವಳಿಗೆ ಎಂತಹ ಬಿಡುಗಡೆಯಾಗಿದೆ, ಅವಳ ಮುಂದಿನ ಹೆಜ್ಜೆಗಳು ಎಷ್ಟು ಮುಕ್ತವಾಗಿರಲಿವೆ ಎನ್ನುವುದು ಕಾದು ನೋಡಬೇಕಾದ ಸಂಗತಿಯಾಗಿದೆ. 

‘ನಕಲಿ ಪ್ರಕರಣಗಳನ್ನು ಸೃಷ್ಟಿಸಿ, ಎನ್‌ಕೌಂಟರ್ ಹತ್ಯೆ ಮಾಡುತ್ತಿರುವ ಸುರಕ್ಷಾ ಪಡೆಗಳ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ. ನಾನು ಬಂಧಿತಳಾದಾಗ ಶಿಕ್ಷಕಿ ವೃತ್ತಿಗೆ ರಾಜೀನಾಮೆ ನೀಡಿರಲಿಲ್ಲ. ನನ್ನಂತೆ ಬಸ್ತಾರಿನಲ್ಲಿ ಬಹಳ ಶಿಕ್ಷಕಿಯರು ತಮ್ಮವರ ಪರ ದನಿ ಎತ್ತಿ ಮಾವೋವಾದಿಗಳೆಂಬ ಹಣೆಪಟ್ಟಿ ಹೊತ್ತು ಕಿರುಕುಳ ಅನುಭವಿಸುತ್ತ ಬದುಕಿದ್ದಾರೆ. ನಾನೀಗ ಮರಳಿ ಕೆಲಸಕ್ಕೆ ಹೋದರೆ ಅಂತಹ ಶಿಕ್ಷಕಿಯರಿಗೆ ತಾವು ಮಾವೋವಾದಿಗಳಲ್ಲ ಎಂದು ಹೇಳಲು ಧೈರ್ಯ ಬರುತ್ತದೆ. ನಕ್ಸಲ್ ಹಣೆಪಟ್ಟಿ ಹೊತ್ತವರು ಬಿಡುಗಡೆಯಾಗಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದರಲ್ಲಿ ತೊಡಗಬಹುದಾಗಿದೆ’ ಎನ್ನುವ ಸೋನಿ ಆದಿವಾಸಿ ಮಹಿಳೆಯರಲ್ಲಿ ಹೋರಾಟದ ಚೈತನ್ಯ ತುಂಬಬಲ್ಲವಳು. ‘ಮೊದಲೆಲ್ಲ ಜನ ಯಾಕೆ ನಕ್ಸಲೈಟರಾಗುತ್ತಾರೆ ಎಂದುಕೊಳ್ಳುತ್ತಿದ್ದೆ. ಆದರೆ ಈಗ ಅರಿವಾಗುತ್ತಿದೆ, ಆದಿವಾಸಿಗಳು ನಕ್ಸಲರಾಗಲು ಸರ್ಕಾರವೇ ಕಾರಣ. ಅವರ ಬದುಕು ಎಷ್ಟು ದುರ್ಭರವಾಗಿದೆ ಎಂದರೆ ಕೋವಿ ಹಿಡಿಯದೇ ಬೇರೆ ಮಾರ್ಗವೇ ಇಲ್ಲ. ನನಗೂ ಅಕ್ಷರ ಬರದಿದ್ದರೆ ಮಾವೋವಾದ ಬಿಟ್ಟು ಬೇರೆ ದಾರಿಯಿರಲಿಲ್ಲ. ಆದರೆ ನನಗೆ ನನ್ನ ಪೆನ್ನಿನ ಮೇಲೆ ನಂಬಿಕೆಯಿದೆ. ನನ್ನ ಶಿಕ್ಷಣದ ಮೇಲೆ ನಂಬಿಕೆಯಿದೆ. ನಮ್ಮ ಮಕ್ಕಳಿಗೆ ಶಿಕ್ಷಣ ಬೇಕು. ಸರ್ಕಾರ ಸಹಾಯ ಕೊಡದಿದ್ದರೆ ಬೇರೆ ಕಡೆಯಿಂದ ದುಡ್ಡೆತ್ತಿ ಆ ಕೆಲಸ ಮಾಡುತ್ತೇನೆ, ಆದಿವಾಸಿ ಮಕ್ಕಳೂ ಸಹಿತ ಓದಿ ಐಎಎಸ್, ಐಪಿಎಸ್, ಡಾಕ್ಟರ್, ಎಂಜಿನಿಯರ್ ಆಗಬೇಕು, ಹಾಗೆ ಶಾಲೆ ನಡೆಸುತ್ತೇನೆ. ಇದು ನನ್ನ ಕನಸು..’ ಎನ್ನುತ್ತಾಳೆ.

ಸೋನಿಯ ಕನಸು ಅರಣ್ಯವಾಸಿಗಳ ನಾಳೆಗಳ ಬಗೆಗೆ ಭರವಸೆ ತುಂಬುವಂತಿದೆ. ನಕಲಿ ಕೇಸುಗಳಲ್ಲಿ ಆದಿವಾಸಿಗಳರನ್ನು ಸಿಲುಕಿಸಿ, ಎನ್‌ಕೌಂಟರ್ ಹೆಸರಲ್ಲಿ ಹತ್ಯೆ ಮಾಡುವ ರಕ್ಷಣಾಪಡೆಗಳ ವಿರುದ್ಧ ಸೋನಿ ಸೋರಿಯಂತೆಯೇ ದಯಾಮಣಿ ಬಾರ್ಲಾ, ಕುನಿ ಶಿಕಾಕಾ, ಶಕುಂತಲಾ ಟೊಪೊ, ಹಿದ್ಮೆ ಮರ್ಕಂ ಮೊದಲಾದ ಆದಿವಾಸಿ ಮಹಿಳೆಯರು ಹೋರಾಡುತ್ತಿದ್ದಾರೆ. ಲಿಂಗನ್ಯಾಯದ ಪ್ರಶ್ನೆಗಳನ್ನು ಅರಣ್ಯವಾಸಿಗಳಿಗೂ, ಅರಣ್ಯದಲ್ಲಿರುವ ಕ್ರಾಂತಿಕಾರಿಗಳಿಗೂ, ಆಡಳಿತ ಯಂತ್ರಕ್ಕೂ ಕೇಳಬಲ್ಲಷ್ಟು ಶಕ್ತರಾಗಿದ್ದಾರೆ.





Thursday 24 February 2022

Fathima Sheikh_Savitri Bai Phule: ಫಾತಿಮಾ ಶೇಕ್ - ಸಾವಿತ್ರಿಬಾಯಿ ಫುಲೆ: ಪತ್ರ ಸಂವಾದ

 





(ಜನವರಿ ಒಂಬತ್ತು ಫಾತಿಮಾ ಶೇಕರನ್ನು ನೆನಪಿಸಿಕೊಳ್ಳಬೇಕಾದ ದಿನ. ಮಹಾರಾಷ್ಟ್ರದ ಕ್ರಾಂತಿಕಾರಿ ಸಮಾಜಸುಧಾರಕರು, ದೀನದಲಿತಪರ ಹೋರಾಟಗಾರರು, ಬರಹಗಾರರೂ ಆದ ಜೋಡಿ ಜೋತಿಬಾ-ಸಾವಿತ್ರಿಬಾಯಿ ಫುಲೆಯವರದು. ಜೋತಿಬಾರ ಗೆಳೆಯ ಉಸ್ಮಾನ್ ಶೇಕ್ ಅವರ ಎಲ್ಲ ಕಾರ್ಯಗಳಲ್ಲಿ ಕೈಜೋಡಿಸಿದ್ದವರು. ಉಸ್ಮಾನರ ಸೋದರಿ ಫಾತಿಮಾ ಶೇಕ್, ಸಾವಿತ್ರಿಬಾಯಿಯ ಆಪ್ತ ಗೆಳತಿ. ಇಬ್ಬರೂ ಒಟ್ಟಿಗೇ ಶಿಕ್ಷಣ ಪಡೆದು ಶಿಕ್ಷಕಿಯರಾದವರು. ಭಾರತದ ಮೊದಲ ಶಿಕ್ಷಕಿ ಎಂಬ ಗೌರವ ಸಾವಿತ್ರಿಬಾಯಿ ಫುಲೆಯವರಿಗೆ ದೊರಕಿದ್ದರೆ, ಫಾತಿಮಾ ಶೇಕರನ್ನು ಮೊದಲ ಮುಸ್ಲಿಂ ಸಮುದಾಯದ ಶಿಕ್ಷಕಿ ಎಂದು ಗುರುತಿಸಲಾಗಿದೆ. ಪ್ರಸ್ತುತ  ಹಿಜಾಬ್ ಸುತ್ತಮುತ್ತ ಎದ್ದಿರುವ ಚರ್ಚೆಗಳ ಹೊತ್ತಿನಲ್ಲಿ ಫಾತಿಮಾ ಶೇಕ್, ಸಾವಿತ್ರಿಬಾಯಿಯವರ ನಡುವಿನ ಕಾಲ್ಪನಿಕ ಪತ್ರ ಸಂವಾದ ಇದಾಗಿದೆ.

ನಾನು ಮತ್ತೆ ಹೇಳಲಿಚ್ಛಿಸುವೆ: ಪತ್ರದಲ್ಲಿ ಚರ್ಚಿಸಲ್ಪಟ್ಟ ಕೆಲವು ಸಂಗತಿಗಳು ಆಧಾರಸಹಿತವಾಗಿವೆ. ಆದರೆ ಪತ್ರವು ಸಂಪೂರ್ಣ ಡಾ. ಎಚ್. ಎಸ್. ಅನುಪಮಾ ಆದ ನಾನು ಕಲ್ಪಿಸಿಕೊಂಡದ್ದು. ಕಟ್ಟುಕತೆ, ಪುರಾಣಗಳೂ ಇತಿಹಾಸವಾಗಿಬಿಡುವ ಕಾಲದಲ್ಲಿ ಇದನ್ನು ಮತ್ತೆಮತ್ತೆ ಹೇಳುತ್ತಿರುವುದಕ್ಕೆ ಮನ್ನಿಸಿ..)

ಜೀಂವದ ಗೆಳತಿ ಸಾವಿತ್ರಿ ಮತ್ತು ಜೋತಿ ಬಾವ, 

ಅಸ್ಸಲಾಂ ಅಲೈಕುಂ. ಇಂಕಿಲಾಬಾದದಿಂದ ಫಾತಿಮಾಳ ಪ್ರೀತಿಯ ನೆನಪುಗಳು. ಹ್ಯಂಗದಿ ಸಾವಿತ್ರಿ? ಹ್ಯಂಗದಾರ ‘ಸತ್ಯದ ಸಾಕ್ಷಾತ್ ರೂಪವೇ ಆದ ನಿನ್ನ ಪ್ರಾಣ ಜೋತಿಬಾ’ ಬಾವ?

ಏ ಸಾವಿತ್ರಿ, ಏನಾತು ಗೊತ್ತ? ಎಲ್ಲ ಕಡೆ ಹಂಗ ಇಲ್ಲೂ ವಿವಾದ ನಡದದ. ಈ ಊರಿನ ಎಲ್ಲ ಶಾಲೆಕಾಲೇಜಿನ ಪ್ರಿನ್ಸಿಪಾಲರಿಗೆ, ಟೀಚರ್ ಮಂದೀಗೆ ನಿನ್ನ ಪತ್ರ ಬಂದದಂತ ಸುದ್ದಿ ಆಗ್ಯದ. ನೀ ಬಿಡವ, ನಿದ್ದೀ ಒಳಗೂ ಜಾಗ್ರತಾ ಆಗಿ ಇರಕಿ, ಭಲೆಭಲೆ ಅಂತಂದುಕೊಂಡು ಮಲಗಿದರ ಕನಸಿನ್ಯಾಗೂ ನೀನ ಬರಬೇಕ! ಆ ಕನಸಿನಲ್ಲಿ ನಮ್ಮನಿ ಮುಂದ ಜಗ್ಗಿ ಮಂದಿ ಸೇರ‍್ಯಾರ, ಗಲಾಟೆ ಮಾಡ್ಲಿಕ್ ಹತ್ಯಾರ. ಕೆಲವ್ರು ನನಗ ಪರದಾ ತಂದಾರ. ಕೆಲವ್ರು ನನ್ನ ಹಳೇ ಫೊಟಾ ಇಳಸಿ ಅದಕ ಹಿಜಾಬ್ ಬರೀಲಿಕ್ ಹತ್ಯಾರ. ಮತ್ತೆ ಕೆಲವ್ರು ಕಲ್ಲು ಒಗಿಯಾಕ್ ತಯಾರಾಗ್ಯಾರ. ಅಷ್ಟೊತ್ತಿಗಿ ನೀನೂ ಜೋತಿ ಬಾವನೂ ಬಂದ್ರಿ. ನೀವಿಬ್ರು ಕಂಡಿದ್ದೇ ಎಲ್ಲಾ ಗಪ್ಪಾದ್ರು ಅನ್ನತ್ತಿಗೆ ನನಗ ಎಚ್ಚರಾತು. 

ಸಾತಿ, ಈ ಪತ್ರಾ ನೋಡಿ ನಿನಗ ಸಿಟ್ಟು ಬರತದ ಗೊತ್ತು. ಆದರ ನೀ ಸಿಟ್ಟು ಸೆಡ ಹಿಡಕೊಂಡ್ ಕೂಡಂಥ ಸಣ್ಣ ಮನಸಿನಾಕಿ ಅಲ್ಲಂತ ಮನಸು ತಡೀಲಾಗ್ದ ಬರದೇನಿ. ಎಲ್ಲಿಂದ ಸುರು ಮಾಡಲೆ? ಬರಬರತ ಸುದ್ದೀ ಓದೂದು, ಕೇಳೂದು ತಳಮಳಾ ಹುಟ್ಟಸತಾ ನೀವ್ ಬಾಳಾ ನೆನಪಾಗತಾ ಇದೀರಿ. ಮಕ್ಕಳು ಸಾಲೀ ಕಲೀಬೇಕ, ಓದಿ ಬರೆಯೂದು ತಿಳೀಬೇಕ; ಆಗ ಎಲ್ಲಾ ಮೌಢ್ಯ, ಅನ್ಯಾಯ ತೊಲಗತಾವ ಅನಕೊಂಡಿದ್ದುವಿ ನಾವು. ಈಗ ನೋಡಿದರ ಸಾಲಿ ಕಲತೋರೇ ಉಲ್ಟಾ ಹೊಡದಾರ. ಒಬ್ರು ಹಿಜಾಬ್ ಹಾಕೂದು ನಂ ಹಕ್ಕು ಅನತಾರಂತ, ಮತ್ತೊಬ್ರು ನಾವೇನ್ ಕಡಿಮಿ ಅಂದು ಶಾಲು ಪೇಟ ಅರಿಬಿ ಸುತಕೊಂಡ್ ಬರ್ಲಿಕ್ ಹತ್ಯಾರಂತ. ಹಿಜಾಬ್ ಹಾಕೋಬಾರದಂತ ಕಾನೂನು ಮಾಡ್ಯಾರಂತ. ಅಲ್ಲಾ ಸಾತಿ, ಅರಬೀ  ಹಾಕೋಬಾಡದಂತನೂ ಕಾನೂನ ಮಾಡತಾರ?! ಅದೆಂತ ಕಾನೂನೆವ್ವ? ಹಿಂಗಿರತ ಹಿಜಾಬ್ ಹಾಕ್ಕೋಬ್ಯಾಡರಿ ಅಂತ ಅವರಂದರ, ಹಾಕ್ಕೊಳದಿದ್ರ ನೀವು ಮುಸಲಮಾನರೇ ಅಲ್ಲಂತ ಮುಲ್ಲಾಗುಳು ಫರ್ಮಾನು ಹೊರಡಿಸ್ಯಾರಂತ. ಅದನ ಕೇಳಿಕೊಂಡು ಮುಸಲಮಾನ ಹುಡುಗೇರು ನಾವು ಸಾಲೀ ಬೇಕರೆ ಬಿಡತೀವಿ, ನಮಗ ಸಾಲೀಕ್ಕಿಂತ ಧರ್ಮಾ ದೊಡದು ಅನಲಿಕ್ಕತ್ತಾರಂತ! ಹಗ್ಗ ಕೊಟ್ಟು ಕೈಕಾಲ ಕಟ್ಟಿ ಹಾಕಿಸಿಗೋತಾರಲ, ಆಟೂ ತಿಳೀವಲ್ದಲ, ಏನನಬೇಕು ಇವ್ಕೆ!  

ಸಾತೀ, ನಾನೂ ನೀನೂ ಕೇರಿಕೇರಿ ಅಲೆದು, ಅಪ್ಪಅವ್ವಾರ ಕುಟೆ ಮಾತಾಡಿ, ಹುಡ್ರನ್ನ ಸಾಲೀಗ್ ಹಚ್ರಿ ಸಾಲೀಗ್ ಹಚ್ರಿ ಅಂತ ಬೇಡಕೋತ ತಿರಗ್ಯಾಡಿದಿವಿ, ಹೌದಿಲ್ಲ? ಜಾತ್ರೀ, ಸಂತೀ, ಪ್ಯಾಟೇಗ್ ಹೋಗಿ ಸಾಲೀಗ್ ಬರ್ರ್ ಬರ್ರಿ ಅಂತ ಕರ‍್ಕಂಡ್ ಬಂದಿವಿ. ಹ್ಯಂಗ್ ಹೇಳಿದ್ರೆ ಪಾಠ ಅರ್ಥ ಆಕ್ಕತಿ ಅಂತ ರಾತ್ರಿ ಹಗಲಾ ಯೋಚ್ನೆ ಮಾಡಿದಿವಿ. ಸಾಲಿ ನಡಸಾಕ ಅವ್ರಿವ್ರ ಬಲ್ಲಿ ರೊಕ್ಕಾ ಎತ್ತಿದಿವಿ. ಕಾಸಿಲ್ಲ ದಮ್ಡಿ ಇಲ್ದಂಗ ಕೆಲ್ಸಾ ಮಾಡಿದಿವಿ. ಈಗ ಇವ್ರಿಗೇನ್ ಮಲರೋಗ ಬಂದೈತಂತ ಅರ್ತ ಆಗವಲ್ದು. ಮಾಸ್ತರ ಮಂದೀನ ನಿಂತು ಹುಡುಗೇರ‍್ನ ಸಾಲೀ ಹೊರಗ ಹಾಕ್ಯಾರಂತಲ್ಲ?! ಅವ್ರಿಗಿ ಏಕಿ ಮಾಡಾಕೂ ಒಳಗ ಬಿಡಲಿಲ್ಲಂತ! ದಾವ ಆಗ್ಯತೆನು, ನೀರು ಕೊಡಲ್ಯಾ ಅಂತನೂ ಯಾರೂ ಕೇಳ್ಳಿಲ್ಲಂತ! 

ಜೋತಿಬಾವ ಹೇಳ್ತಿದ್ದಂಗ ಇದೆಲ್ಲ ಬಟ್ಜಿ, ಸೇಟ್ಜಿಗಳ ಕರಾಮತ್ತು. ಮಾಸ್ತರ ಮಂದೀನೂ ಅವುರಿಗೆ ಕೈ ಜೋಡಿಸ್ಯಾರ.

ಅದೆಲ್ಲ ಇರ್ಲಿ, ನೀನೂ ಬಾವನೂ ಹ್ಯಾಂಗದಿರಿ? ಅವತ್ ನಿಂ ಮನೇಮಂದಿ ಹೊರಗಾಕಿದಾಗ ನೀನೂ ಬಾವನೂ ನಮ್ಮನೀಗ್ ಬಂದ ದಿವ್ಸ ಇನ್ನೂ ನೆನಪಿದೆನೆ ನನಗ. ನಮ್ಮಣ್ಣ ಯವ್ವಾಗೂ ಜೋತಿಬಾ ಜೋತಿಬಾ ಅನ್ನತಿದ್ದ. ಸಾಲಿ ಕಲತ್ರ, ಮನೀ ಹೊರಗ್ ಕಳಿಸಿದ್ರ ಹುಡುಗೇರು ಹಾಳಾಕ್ಕಾರ, ಧರ್ಮಾ ಮರೀತಾರ, ಹುಡುಗೀರಿಗೆ ಮನೀ ಕೆಲ್ಸಾ ಬಂದ್ರ ಸಾಕು, ಸಾಲೀ ಬ್ಯಾಡಂತ ನಮ್ಮನೇಲಿ ಹೇಳೋರು. ಕೆಲವ್ರು ಉಸ್ತಾದರು ಮನೀಗೇ ಬಂದು ಪರದಾ ಹಿಂದೆ ಹುಡುಗೀರಿಗೆ ಅದು ಇದು ಕಲಿಸಿ ಹೋಗೋರು. ಆದ್ರ ಜೋತಿಬಾ ಮಾತು ಕೇಳಿ ನಮ್ಮಣ್ಣ ಮದರಸಾಕ್ಕ ನನ್ನ ಹಚ್ಚಿದ. ಬ್ಯಾಡಂತ ಅಮ್ಮಿ ಹಠಾ ಹಿಡಿದುರೂ ಸೈತ ಪ್ರವಾದಿಯವರ ಮಾತು ಹೇಳಿ, ಮದರಸಾದಾಗ ಪರದಾ ಇರತದ ಅಂದು ಅವರ‍್ನ ಸುಮ್ ಮಾಡಿದ. ಅಂತಾ ತನ್ನ ಗೆಳ್ಯಾ ಜೋತಿಬಾನೂ, ಅವುನ್ ಬೀಬೀ ಸಾವಿತ್ರಿಬಾಯಮ್ಮನೂ ನಮ್ಮನಿಗೇ ಇರಾಕ್ ಬರ‍್ತಾರಂತ ಉಸ್ಮಾನಣ್ಣ ಅಂದಾಗ ನನಗ ನಂಬಾಕ ಆಗಿರ್ಲಿಲ್ಲ. ನೀನಂತ್ರೂ ಅಂಜಿದ ಚಿಗರಿ ಹಂಗ ಇದ್ದೀ. ಬಾವ ಸಿಟ್ಟು, ಬ್ಯಾಸ್ರ ಬಂದು ಮಕಾ ಕಪ್ಪ ಮಾಡಿಕೊಂಡಿದ್ದ. ನೀವೆಲ್ಲ ಬಂದ ಮ್ಯಾಲ ನನಗ ಮರಾಟಿ, ಇಂಗ್ಲೀಷ ಪಾಠನೂ ಸುರು ಆದ್ವು. 

ಉಸ್ಮಾನಣ್ಣ ನಿಮಗ ಇರಾಕ ಜಾಗ ಕೊಟ್ಟ; ಭಾಂಡೇ ಸಾಮಾನ, ಅನಾಜ, ಹಣ್ಣಾಹಂಪಲ ಕೊಟ್ಟ; ಸಾಲಿಗೂ ಜಾಗಾ ಕೊಟ್ಟ ಅಂತ ನಮ್ಯಾಲ ಬಾಳಮಂದಿ ಸಿಟ್ಟಿಗೆದ್ರು. ಆ ಕಾಫೀರ್ ಸಂಗ್ತೀ ಏನ ಮಾಡಲತೀರಿ? ಅವಕ ದೇವ್ರಿಲ್ಲಾ, ದಿಂಡ್ರಿಲ್ಲಾ. ಇದ್ರೂ ಸೈತ ಕಲ್ಲುಮಣ್ಣುಹಾವುಹಲ್ಲೀ ಪೂಜತಾರಂತ ಜಮಾತ್ ಕಡೀಲಿಂದ ವಿರೋಧ ಬಂತು. ಆಕೀಗ್ ಮದವಿ ಮಾಡಂಗಿಲ್ಲೆನು, ಹಾಳಾಗಿ ಹೋಕಾಳ ಅಂತ ಒಷ್ಟ್ ಮಂದಿ ಕೇಳಿದ್ರು. ಆದ್ರ ಅಣ್ಣ ಜಗ್ಗಲಿಲ್ಲ. ಜೋತಿಬಾವನ ಮಾತಿಗೆ ಒಪ್ಪಿ ನಿನ್ನೂ ನನ್ನೂ ಜೋಡಿ ಮಾಡಿ ಪುಣಾದಿಂದ ಅಮ್ಮದ್ ನಗರಕ್ಕ ಓದಾಕ ಕಳಸೇ ಬಿಟ್ರು. 

ನಾ ಸಾಲೀಗ್ ಹೋಗೂ ಮುಂದ ತೆಲಿಮ್ಯಾಲ ವಲ್ಲಿ, ದುಪ್ಟ, ಸೆರಗು ಹಾಕತಿದ್ದೆನೇ ಹೊರ‍್ತು ಹಿಜಾಬ್ ಹಾಕತಿದ್ದಿಲ್ಲ. ಹೌದಿಲ್ಲ? ನೀನೂ ಅಷ್ಟ, ಹೌದಿಲ್ಲ? ಸಣ್ಣಾಕಿದ್ದೆ ಅಂತ ಬಿಟ್ಟಿದ್ದುರೋ ಏನ. ಅಮ್ಮದ್ ನಗರಕ್ಕ ಕಾಲೇಜಿಗೆ ಹೋಗೂ ಮುಂದ ಬುರಖಾ ಹಾಕಲಿಲ್ಲ ಅನ್ನೂ ವಿಷ್ಯ ಬೆಳದು ಬೆಳದು ನನ್ನ ಶಾದೀ ತನ ಬಂದು ನಿಂತತು ಅಂತ ಆಮ್ಯಾಲ ತಿಳಿತು. ಊರು ಉಪಕಾರ ಅರೀದು, ಹೆಣಾ ಸಿಂಗಾರ ಅರೀದು ಅಂದಂಗ ಎಷ್ಟ್ ಜನ್ರಿಗೆ ಒಳ್ಳೇದ್ ಮಾಡಿದ್ದ ನಮ್ಮಣ್ಣ? ಅಂತವನಿಗೇ ಜೀವ ಬೆದರಿಕೆ ಬಂತು. ನಿನ್ನೂ, ನಿನ್ ಗೆಳೆಯರ ಠೋಳಿನೂ ಬಿಸ್ಮಿಲ್ಲಾ ಮಾಡಿ ಮುಗಸತೇವಿ ಅಂದ್ರಂತ. ಆದ್ರ ಯಾರೂ ನಮ್ಮ ಕುತಿಗಿ ಕುಯ್ಯಲಿಲ್ಲ. ಈಗ ಪುಣೇದಾಗ ಖೂನಿನೇ ಆಗತಾವಂತ. ಆ ಊರ‍್ಗೆ ಎಂತೆಂಥಾ ಜನಾ ಬಂದುಹೋದುರು, ಎಷ್ಟ್ ಸೇವಾ ಮಾಡಿದುರು! ಆದ್ರ ಎಂತೆಂಥರ ಹೆಣಾ ಬಿದ್ದುವು! ಅವತ್ಗಿಂತ ಹೆಚ್ಚೇ ಕೇಡಿಗರು ತುಂಬ್ಯಾರ ಈಗ. ನೆನಸಿಗೊಂಡ್ರ ಬ್ಯಾಸರಾಗತದ. 

ಕೇಡು ಎದುರ‍್ಸದು ಅಷ್ಟು ಸುಲಬಿಲ್ಲ. ಅದೂ ನಮ್ಮೋರೇ, ನಮ್ಮನಿಯೋರೇ ನಮಗ ವಿರುದ್ಧ ಆದರ ಬಾರೀ ಕಷ್ಟ. ಜೋತಿ ಬಾವನ ಸಂಗಾಟ ಇದ್ದಾಗ ಉಸ್ಮಾನಣ್ಣ ಗಟ್ಟಿ ಇರತಿದ್ದ. ಮನೀಗ್ ಬಂದ್ರ ಅಂವನ್ನ ಹೆದರಿಸೋರು. ಬಟ್ಜಿ, ಸೇಟ್ಜಿಗಳು ನಮ್ ಮ್ಯಾಲೆ ಕತ್ತೀ ಮಸೀತಾ ಇದ್ರು. ನಮ್ಮ ಮಂತಾನದ ವ್ಯಾಪಾರ, ವ್ಯವಹಾರಕ್ಕ ಕಲ್ಲ ಹಾಕತಿದ್ರು. ಅವರದಂತೂ ಆತೇ ಆತು, ಅವರ ಜೋಡಿ  ಭಾಯಿಚಾರ್ ಲೋಗ್ ಸಹಾ ವಿರುದ್ಧ ಆದಾಗ ಮನೆಯರಿಗೆ ಚಿಂತೀ ಆಗತಿತ್ತು. ಯಾವಾಗೂ ಇದೇ ಮಾತು. ದಾವತ್ ಇರಲಿ, ದುವಾ ಕೇಳಲಿ, ಇಫ್ತಾರ್ ಆಗಲಿ, ಇಸ್ತಮಾಗ ಹೋಗಲಿ, ಮುಲ್ಲಾಗಳ ಕೈಗೆ, ಜನ್ರ ಬಾಯಿಗೆ ಬೀಳದಂಗ ಏನು ಮಾಡಬೇಕು ಅಂತನೇ ಚರ್ಚೆ, ವಾದ. 

ಹೆದ್ರಿದವರಿಗೆ ಹೇಲೂ ಹಾವಿನಂಗ ಕಾಣತದ. ನಮಗೂ ಹಂಗ ಆತು. ಜನಕ್ಕ ಅಂಜಿದ್ವಿ. ನಮಗೇನಾಗತತೋ ಅಂತ ಅಂಜಿದ್ವಿ. ಅಣ್ಣಗ ಹೆಣ್ಣ ಕೊಡಾಕ ಸುತ ಯಾರೂ ಒಪ್ಪಲಿಲ್ಲಾ. ಇದು ಹೀಂಗ ಆದರ ಕಷ್ಟ ಆಕ್ಕೇತಿ ಅಂತ ಅಬ್ಬಾಜಾನ್, ಅಮ್ಮಿ ಒಂದೇಸಮ ವರಾತ ಸುರು ಹಚ್ಚಿದುರು. ಚೊಲೋ ನಂಟಸ್ತಿಕೆ ಅಂತ ನನಗ ಶಾದೀ ಮಾಡಿದುರು. ಗಟ್ಟಿ ಯಾಪಾರಸ್ಥ ವರಾ. ಲೆಕ್ಕಾಪಕ್ಕಾ ಕಲ್ತ ಬೀಬೀ ಇದ್ರ ಚೊಲೋದಾತು ಅಂತ ನಗಾಡಿ ಹ್ಞೂಂ ಅಂದ. ವರನ ನಗೆ ನೋಡಿ ನಮ್ಮಣ್ಣ ನಂಬಿದ. ಆದ್ರ ಮಳಗಾಲದ ಬಿಸ್ಲು, ಮನೆಗಂಡನ ನಗೆ ಎರಡ್ನೂ ನಂಬಬಾರ‍್ದಂತ ಆಮ್ಯಾಗ ನನಗ ಗೊತ್ತಾತು. ಶಾದೀ ಆಗೂಮಟ ಎಲ್ಲದ್ಕೂ ಹೂಹೂ ಅಂದು ಆಮ್ಯಾಲ ಎಲ್ಲ ಗಣಸುಮಕ್ಳ ಹಂಗನೇ ಇವ್ರೂ ಆದರು. ಮದವಿ ಆತಂದ್ರ ಮುಗೀತು, ಹೆಣಮಕ್ಳ ಎಲ್ಲಾ ದರವಾಜ ಬಂದ್ ಆಕ್ಕಾವು. ಜೆನಾನಾದ ಒಳಗೇ ಮಕ್ಳುಮರಿ, ಜನ್ನತ್, ಜಹನ್ನುಮ್ ಎಲ್ಲಾ. ಬ್ಯಾಸರ ಆದ್ರೂ ನುಂಗಿ ಸುಮ್ಮಾದೆ. ಯಾರ‍್ಗೆ ಹೇಳದು? 

ಎಲ್ಲಾ ಗಂಡರೂ ನಂ ಜೋತಿ ಬಾವನಂಗ ಇರಂಗಿಲ್ಲ ಸಾತಿ. ಯಾವ ಗಂಡನೂ ಅವುರಂಗ ಇರಂಗಿಲ್ಲಾ. ಗಣಸುಮಕ್ಳ ಮರ್ದಾನಾ ಬುದ್ಧಿ ಸುಲಬಕ್ಕ ಬದಲಾಗಲ್ಲ. ಅದ್ಕೇ ಹುಡುಗೇರ ಪರಿಸ್ಥಿತಿ ಇವತ್ಗೂ ಬದಲಾಗಿಲ್ಲ. ಅತವ ನಮಗಿಂತನೂ ಈ ಕಾಲ ಕೆಟ್ ಅದ. ಆಗ ಏನೂ ಕಲೀದಿದ್ದವ್ರು ನಾವು ಅಂತ ತಿಳಕೊಂಡು ಮಾತಾಡದಂಗ ಇದ್ದುವಿ. ಈಗ ಎಲ್ಲಾ ಕಲತೂ ಮಾತು ಸತ್ತಂಗ ಅದಾರ.

ನಿನಗೊಂದ್ ಗುಟ್ಟು ಹೇಳತೀನಿ ಕೇಳು. ಒಂದ್ ಹುಡುಗೀ ಕಾಲೇಜಿಗೆ ಹೋಗತಾ ‘ಬುರಕಾ ನನ್ನ ಹಕ್ಕು’ ಅಂತಂದು ಅಲ್ಲಾಹು ಅಕ್ಬರ್ ಅಂದುಳಂತ ಸುದ್ದೀ ಮಾಡ್ಯಾರಲ, ಅಕಿ ನನಗ ಮರಿಮಗಳ ಮೊಮ್ಮಗಳಾಕ್ಕಾಳ. ಏನ ತಗಳಪ್ಪ ಆಕೀಗೆ ರೊಕ್ಕಾ ಆಯಾರ ಮಾಡಿದ್ದೇ ಮಾಡಿದ್ದು. ಹಾರ, ತುರಾಯಿ, ಸನ್ಮಾನ ಮಾಡಿದ್ದೇ ಮಾಡಿದ್ದು. ಎಲ್ಲಾ ಗಣಸುಮಕ್ಳ ಚಿತಾವಣೆ. ತಮ್ಮ ಪುಂಗೀಗೆ ತೆಲೀ ಆಡ್ಸೂ ಹೆಣಮಕ್ಳನ್ನ ತೆಲೀ ಮ್ಯಾಲೆ ಕೂರಿಸಿಕೋತಾರ ಅಷ್ಟ. ಮುಸಲಮಾನ ಹುಡಗಿ ಆಗಿ ಚೊಲೋ ಆಟ ಆಡಿ ಸಾಧನಾ ಮಾಡಿದೆವ್ವ ಅಂತ ಸಾನಿಯಾ ಮಿರ್ಜಾಗ, ಗಂಡಗ ಚೊಲೋ ಬುದ್ದೀ ಕಲಿಸಿದಿ ಅಂತ ಶಾಬಾನುಗ, ನಿನ್ನ ಕಾಲ ಮ್ಯಾಲ ಅಂಜದಂಗ ನಿಂತೀ ಅಂದು ಮುಕ್ತರ ಮಾಯೀಗ ಅವರ‍್ಯಾರರೆ ಸನ್ಮಾನ ಮಾಡಿದ್ರೇನು? ಆಯಾರ್ ಕೊಟ್ರೇನು? ಇಲ್ಲಾ. ನನಗ ತಿಳಿದದ ಇದು, ಈ ಕಲ್ತ ಹುಡುಗೇರಿಗೆ ತಿಳೆಂಗಿಲ್ಲಲ! ಕಲತೇನು ಫಲಾ? ಕತ್ತೀ ಮೇಲೆ ಕುಂಬಳಕಾಯಿ ಬಿದ್ರೂ ಒಂದೇ, ಕುಂಬಳ ಕಾಯಿ ಮೇಲೆ ಕತ್ತಿ ಬಿದ್ರೂ ಒಂದೇ. ಇದನ ನಂ ಮಂದೀ ತಿಳೀವಲ್ರಲ?

ಯಾ ಅಲ್ಲಾ, ಪರ್ವರ್ದೀಗಾರ್, ದುವಾ ಕರೋ. 

ಯಾಕೋ ಬರಿಬರೀ ಇಂತಾ ಮಾತಾ ಬರಲಿಕತಾವ ಸಾತಿ. ನೀವು ಹುಶಾರಿ ಮತ್ತ. ಪುಣೆ ಊರಿನಾಗ ಅದ ವಾಡೇ ವಳಗ ಅದೀರಿ ಅಂತ ಗೊತ್ತಾತು. ಪುಣಾ ಊರು ಮ್ಯಾಲಮ್ಯಾಲ ಬಾರೀ ಬದಲಾಗೇತಂತ. ಆದ್ರ ಆಳದಾಗ ಅವತ್ ಹ್ಯಾಂಗಿತ್ತ ಹಂಗ ಇರೂ ತರ ಅದ. ಬಟ್ಜಿ, ಸೇಟ್ಜಿ ಪಕ್ಷಾ ಕಟ್ಯಾರಂತ. ಸದ್ದಿರದಂಗ ಏನ್ ಬೇಕರೆ ಮಾಡತಾರಂತ. ಜೋತಿಬಾವಗ ಒಂಟಿ ಆಗಿ ಅಕ್ಕಡಿ ಇಕ್ಕಡಿ ಹೋಗಬ್ಯಾಡ ಅನ್ನು, ಎಲ್ಲಾನು ಮೈಮ್ಯಾಲ ಎಳಕೋಬ್ಯಾಡನ್ನು. ಹ್ಞಾಂ?

ಇನ್ ಶಾ ಅಲ್ಲಾ, ಒಂದುಸಲ ಬೆಟ್ಟಿ ಆಗೂಣು ಸಾತಿ, ಯಾವಾಗ ಪುರ್ಸತ್ತು ಆಗತದೋ ಗೊತ್ತಿಲ್ಲ. ಜೋತಿ ಬಾವನಿಗೂ ಅದಾಬ್ ತಿಳಸು. ನಿನ್ನ ಪತ್ರ ಎದುರು ನೋಡತಿದೀನಿ.

ಜೋ ಅಪ್ನೇ ಲಿಯೆ ನಹೀಂ, ಔರೋಂ ಕೆ ಲಿಯೆ ದುವಾ ಕರ‍್ತೆ ಹೈ; ಉನ್ಕೆ ಹಕ್ ಮೆ ಫರಿಷ್ತಾ ದುವಾ ಕರ‍್ತೆ ಹೈ. ಖುದಾ ಹಾಫೀಜ್.

ನಿನ್ನ,

                                                                                                                               ಫಾತಿಮಾ

ಪ್ರೀತಿಯ ಫಾತಿ, 

ಅರೆರೆ, ಅದೆಲ್ಲಿ ಇದ್ದೆ ಮಹರಾಯತಿ ಇಷ್ಟು ದಿನ. ನಿನ್ನಿಂದ ಯಾವ ಸುದ್ದಿ ಇಲ್ಲ, ಭೇಟಿ ಇಲ್ಲ ಅಂತ ಎಷ್ಟೋ ಸಲ ನೆನಪು ಮಾಡಿಕೊಂಡಿದ್ದೆ. ಇರಲಿ, ಈಗಲಾದರೂ ನೆನಪಾದ್ವಲ! 

ನಿನ್ನ ಪತ್ರದ ತುಂಬ ಕಾಲದ ಕಷ್ಟವನ್ನೇ ತೋರಿಸಿದೀಯಲ್ಲೆ? ಬಾವನಿಗೆ ತಕ್ಕ ನಾದಿನಿ ನೀನು. ಕಷ್ಟ ಎಲ್ಲಾ ಕಾಲದಲ್ಲೂ ಬರ‍್ತಾವೆ ಪಾತಿ. ನಮ್ಮ ನೋಟ ಅಲ್ಲಿಗೆ ನಿಲ್ಲಬಾರ್ದು. ಕಷ್ಟ ಗೆಲ್ಲುವ ದಾರಿಗಳೂ ಕಣ್ಣೆದುರು ಬರ್ತವೆ. ಅದನ್ನು ಕಾಣೋವರೆಗೂ ತಾಳ್ಮೆ, ಭರವಸೆ ಇಟ್ಟುಕೋಬೇಕು. ಹಿಜಾಬು ಹಾಕಿದ, ಹಾಕದಿದ್ದ ಹುಡುಗೀರ ಮಧ್ಯ ಪರದೆ ಬಿಟ್ಟಿದಾರೆ ನಿಜ. ಆದ್ರೆ ಅದು ಎಷ್ಟು ದಿನ ಇರಕ್ಕೆ ಸಾಧ್ಯನೇ? ನೋಡು ಒಬ್ಳು ಕೇಸರಿ ಹುಡುಗಿ, ‘ಹಿಜಾಬ್ ಹಾಕಂಡ್ರೆ ಏನ್ ತಪ್ಪು?’ ಅಂದಳಂತೆ. ಇವತ್ತೆಲ್ಲೋ ಫೋಟೋ ನೋಡಿದೆನವ್ವ, ಒಬ್ಬ ಹಿಜಾಬ್ ಹುಡಗೀರನ್ನ ಉಳಿದೋರು ಕೈಕೈ ಹಿಡಿದು ಶಾಲೆ ಒಳಗೆ ಕರಕೊಂಡು ಹೋಗತಿದಾರೆ. ಆ ಫೊಟೋ ನೋಡಿ ಪರಮಾನಂದ ಆಗೋಯ್ತು ನನಗೆ. ಅವತ್ತು ನೆನಪಿದೆಯಾ? ಒಬ್ಬ ಹುಡುಗನ ತಂದೆ ನಾನು ಪಾಠ ಮಾಡುವ ಕೊಠಡಿಯೊಳಗೆ ಸೀದಾ ನುಗ್ಗಿ ಮೊಹಮದ್ ಅನ್ನೋ ಒಬ್ಬ ವಿದ್ಯಾರ್ಥಿ ತನ್ನ ಮಗನ್ನ ಹೊಡೀತಾನೆ ಅಂತನೂ, ತಾನು ಅವನನ್ನ ಹೊಡೀತೀನಿ ಅಂತನೂ ಏರಿಹೋದ. ಆಗ ನಾವೇನು ಮಾಡಿದ್ವಿ? ಮೊಹಮದನಿಗೆ ಬುದ್ದಿ ಹೇಳಿ ಸರಿಪಡಿಸ್ತಿವಿ ಅಂತ ಆ ತಂದೇನ ತಿರುಗಿ ಕಳಿಸಿದ್ವಿ, ಹೌದಾ? ಮೊಹಮದನನ್ನ ಕರೆದ್ವಿ, ಮಾತನಾಡಿದ್ವಿ. ಅವ ಆಮೇಲೆ ಎಷ್ಟು ಸುಬುದ್ಧಿಯ ವಿದ್ಯಾರ್ಥಿಯಾಗಿ ಮಾರ್ಪಟ್ಟ! ತನ್ನ ತರಗತಿಯ ಹಿರೇಮಣಿ ಆದ. ತನ್ನ ಮೊಹಲ್ಲಾದ, ತನ್ನ ಹಳ್ಳಿಯ ಎಷ್ಟೋ ಹುಡುಗ, ಹುಡುಗೀರನ್ನ ಶಾಲೆಗೆ ಕರಕೊಂಡು ಬಂದ.

ಹಾಗೆ ಹುಡುಗ ಹುಡುಗೀರನ್ನ ಒಳ್ಳೇದರ ಕಡೆಗೆ ಎಳೆಯೋರು ಬೇಕಾಗಿದಾರೆ ಕಣೇ. ಕೇಸರಿ ಶಾಲು ಹೊದ್ದೋರಿರಲಿ, ಹಿಜಾಬ್ ಹಾಕಿದೋರಿರಲಿ, ಹಿಜಾಬ್ ಗೆಳತಿಯರ ಕಂಡೂ ಕಾಣದಂಗೆ ನಿಂತ ಹುಡುಗೀರಿರಲಿ, ಎಲ್ಲಾ ಜೀವರೊಳಗೂ ಒಳ್ಳೇತನ ಇದ್ದೇ ಇರುತ್ತೆ. ಅದನ್ನ ಉದ್ದೀಪನೆ ಮಾಡಿ ಹೊರಗೆಳೀಬೇಕಾಗಿದೆ ಅಷ್ಟೆ. ಬಿಸಿ ರಕ್ತದ ಜೀವಗಳ ಹೆಗಲ ಮೇಲೆ ಕೈಹಾಕಿ ಯಾಕೋ ತಮ್ಮ, ತಂಗೀ ಅಂತ ಮಡಿಲಿಗೆ ಹಾಕ್ಕೋಬೇಕಾಗಿದೆ. ಉಳಿದೋರು ಮನಸ್ಸು ಒಡೀತಾ ಇದ್ದರೆ ಅದನ್ನು ಕೂಡಿಸೋ ಕೆಲಸ ಮಾಡಬೇಕು. ಗೋಡೆ ಎಬ್ಬಿಸ್ತಾ ಇದಾರೆ ಅಂದ್ರೆ ಅದನ್ನ ಒಡೀಬೇಕು. ಒಂದು ಬತ್ತಿ ಎಷ್ಟು ಹಣತೆನಾದ್ರೂ ಹೊತ್ತಿಸಲ್ವ, ಹಾಗೆ. ಪ್ರತಿ ಶಾಲೇಲೂ ಅಂತಹ ಒಂದು ಪ್ರೀತಿಯ ಹಣತೆ ಇದ್ರೆ ಸಾಕು ಕಣೇ.

ಅದಕ್ಕೇ ಕಾಗದ ರಾಶಿ ಹಾಕೊಂಡು ಕೂತಿದೀನಿ. ಎಲ್ಲ ಶಾಲೆಗಳ ಮಾಸ್ತರ ಮಂದಿಗೆ ಪತ್ರ ಬರೀತಿದೀನಿ.

ನಾವು ಕಂಡ ಕ್ಷಾಮ ಏನೂ ಅಲ್ಲ, ಅದಕ್ಕಿಂತ ಭೀಕರ ಪ್ರೀತಿವಿಶ್ವಾಸದ ಕ್ಷಾಮ ಈಗ ಹೊಗೆ ತರಹ ಸುತ್ತಿಕೊಂಡಿದೆ. ಆದರೆ ಬಾವನ ಮಾತು ಕೇಳಿ ಆತಂಕ ಮಾಡ್ಕಬೇಡ. ಅವರದು ರಾಜಕಾರಣದ ದಾರಿ. ನಮ್ಮದು ಪ್ರೀತಿಯ ದಾರಿ ಎಎ. ನಾ ಹೀಗೆ ಬರೀತಿರುವಾಗ ಜೋತಿ ಇಲ್ಲೇ ಕೂತು ಹುಬ್ಬು ಹಾರಿಸುತ್ತಾ ಮೀಸೆ ತುದಿಯಲ್ಲಿ ಕಂಡೂ ಕಾಣದಂತೆ ನಗತಾ ಇದ್ದಾರೆ! ನನಗಂತೂ ಧೃಢ ಇದೆ, ಹಗೆಯ ಹೊಗೆ ಕರಗಿಸಕ್ಕೆ ಹಟ್ಟಿ ಮೊಹಲ್ಲಾಗಳ ನಡುವೆ ಪ್ರೀತಿಯ ಗಾಳಿ ಬೀಸೇ ಬೀಸುತ್ತೆ. ಗಡಿಗಳ ಮೀರಿದ ಸಂಬಂಧ ಬೆಳೆದೇ ಬೆಳೆಯುತ್ತೆ. ನನಗೆ ಭರವಸೆಯಿದೆ, ಅಂತಹ ದಿನ ಬಂದೇ ಬರುತ್ತೆ. ಒಂದಲ್ಲ ಒಂದು ದಿನ ಭೂಮಿ ಮೇಲಿನ ಮನುಷ್ಯರಿಗೆ ಜಾತಿ, ಮತ, ಧರ್ಮ, ದೇಶ, ಬಾವುಟಗಳ ಅಹಮನ್ನು ಉಂಡುಉಂಡು ಹೇವರಿಕೆ ಬಂದು ಇದ್ಯಾವುದರಿಂದಲೂ ಬದುಕಕ್ಕಾಗಲ್ಲ ಅಂತ ಅರಿವಾಗಿ ಮನುಷ್ಯರು ಮನುಷ್ಯರಾಗಿ ಒಂದಾಗೋ ಕಾಲ ಬಂದೇ ಬರುತ್ತೆ. ಅದನ್ನ ನಮ್ಮ ಜೀವಿತ ಕಾಲ್ದಲ್ಲಿ ನೋಡಲಿಕ್ಕಾಗದೇ ಇರಬೋದು, ಆದರೆ ಅಲ್ಲೀತಂಕ ನಮ್ಮನ್ನ ನಾವು ಜೀವಂತವಾಗಿ, ಮೈತ್ರಿ ಮನಸಿನವರಾಗಿ ಇಟ್ಟುಕೊಬೇಕು. ಅಲ್ವಾ ಫಾತಿ? 

ಜೋತಿಬಾವ ಆಶೀರ್ವಾದ ತಿಳಿಸಿದಾರೆ. ನಂತರ ನಿಂಗೆ ವಿವರವಾದ ಪತ್ರ ಬರಿತಾರಂತೆ. ಈಗ ತುರ್ತದ ಕೆಲಸ ತುಂಬ ಬಂದಿದೆ. ಇದು ಮುಗಿದ ಬಳಿಕ ಒಮ್ಮೆ ಭೆಟ್ಟಿಯಾಗಣ. ಆಯ್ತಾ?

ಪ್ರೀತಿಯ ಅಪ್ಪುಗೆ ಕಣೇ ಫಾತೀ.

ನಿನ್ನವಳೇ

                                                                                                                                       ಸಾವಿತ್ರಿ.

(ಈ ಪತ್ರದಲ್ಲಿ ಚರ್ಚಿಸಲ್ಪಟ್ಟ ಕೆಲವು ಸಂಗತಿಗಳು ಆಧಾರಸಹಿತವಾಗಿವೆ. ಆದರೆ ಈ ಪತ್ರವು ಸಂಪೂರ್ಣ ಕಾಲ್ಪನಿಕ. )

                                                                                                            ಡಾ. ಎಚ್. ಎಸ್. ಅನುಪಮಾ