ಬಡಿಯಿತು, ನಡುರಾತ್ರಿ ಹನ್ನೆರೆಡು
ಬಂದೇಬಿಟ್ಟಿತು ಮತ್ತೊಂದು ಪಂದ್ರಾ ಆಗಸ್ಟು
ರಾಜಪಥದಲಿ ಗುಂಡುಗೋವಿ ಮಿಸೈಲು
ವಾಘಾ ಬಾಗಿಲ ಬಳಿ ಉದ್ರೇಕದ ಕೂಗು
ಸಮವಸ್ತ್ರ ಸಂಭ್ರಮ ಉಬ್ಬಿದೆದೆಯ ಸೆಲ್ಯೂಟು
ಹಾರುವ ತಿರಂಗ, ಹೋಶಿಯಾರ್ ಬಹುಪರಾಕು..
ತಮ್ಮಾ ಒಮರ, ಇದು ಆಜಾದಿ ಬಂದ ದಿನ..
ಮೂರು ಸುತ್ತೂ ಮೊರೆವ ಕಡಲು
ಕನ್ನಡಿಯಂತೆ ಮುಗಿಲ ಬಿಂಬಿಸುತಿರಲು
ಕಠುವಾ, ಪಟನಾದ ಎಳೆಕೂಸುಗಳು,
ಮಾಲೂರು, ಹಾವೇರಿಯ ಪೋರಿಯರು
ಮಣ್ಣೊಳಗೆ ತಣ್ಣಗೆ ಮಲಗಿಬಿಟ್ಟಿದ್ದಾರೆ
ನೆಲಮುಗಿಲ ಸಂದುಗಳಲಿ
ಬೆಟ್ಟ ಬಯಲು ಬೀದಿಗಳಲಿ
ಮೊಲೆಯೋನಿಗಳ ಹಿಸಿಯಲಾಗುತ್ತಿದೆ
ಯುದ್ಧದಲ್ಲೂ ಶಾಂತಿಯಲ್ಲೂ
ನಿದ್ರೆಯಲ್ಲೂ ಎಚ್ಚರದಲ್ಲೂ
ಮಹಲುಗಳಲೂ ಮೋರಿಯಲ್ಲೂ
ಮಠಮಂದಿರಗಳಲೂ ಮಸಣದಲ್ಲೂ
ಲೆಕ್ಕವಿರದಷ್ಟು ಅಸ್ವತಂತ್ರ ಕುವರಿಯರು
ತೊಡೆ ನಡುವೆ ರಕ್ತ ಸುರಿಸಿದ್ದಾರೆ
ಭೀತಿಯರದ ನೆಲವೇ ಮಾತೃಭೂಮಿ
ಭಯವಿರದ ಬದುಕೇ ಆಜಾದಿ
ಹುಣ್ಣಿಮೆಯಂದು ಚಿಕ್ಕೆಗಳು ನೆಲಕಿಳಿದು
ಚಂದಿರನಿಗಾಗಿ ಹುಡುಕತೊಡಗಿರಲು
ನಾವು ದನಿಗೂಡಿಸುವುದಾದರೂ ಹೇಗೆ
ಅವರ ಜಯಘೋಷಗಳಿಗೆ?
ತಮ್ಮಾ ಒಮರ, ಇಂದು ಆಜಾದಿ ಬಂದ ದಿನ
ನಿಂತ ಹಾಗಿದೆ ತಿರಂಗದೊಳಗಿನ ಚಕ್ರ
ಹುಡುಕೋಣ ಬಾ ಅಂದು ಬಂದದ್ದು
ಅದೆಂದು ಕಳೆದುಹೋಯಿತು ಎಂದು
ಒಗ್ಗೂಡಿ ಅರಸೋಣ ಬಾ
ಬೆಸೆದದ್ದು ಹಿಸಿದು ಹೋಗಿದ್ದು ಹೇಗೆ ಎಂದು
ತಮ್ಮಾ ಒಮರ, ಇಂದು ಆಜಾದಿ ಬಂದ ದಿನ
ಎಷ್ಟು ಹುಡುಗಿಯರ ನೆತ್ತರ ಕುಡಿದಿದೆಯೋ ನೆಲ
ಎಲ್ಲೂ ಇಲ್ಲದಷ್ಟು ಕೆಂಪಾಗಿ ಅರಳಿದೆ ದಾಸವಾಳ