(ಬ್ರೂಸ್ ಬ್ರೆಂಡಾ ರೀಮರ್)
ಲಿಂಗ (ಸೆಕ್ಸ್) ಜನ್ಮಜಾತವಾಗಿದ್ದು, ಗಂಡು-ಹೆಣ್ಣು ಎಂದು ಜೈವಿಕವಾಗಿ ವ್ಯಾಖ್ಯಾನಿಸಲ್ಪಟ್ಟಿದ್ದರೆ, ಲಿಂಗತ್ವ (ಜೆಂಡರ್) ಸಾಂಸ್ಕೃತಿಕವಾಗಿ ನಿರೂಪಿಸಲ್ಪಟ್ಟದ್ದು. ಲಿಂಗತ್ವ ಅಲ್ಪಸಂಖ್ಯಾತರ ಆತ್ಮಕಥನಗಳು ಹಾಗೂ ಅನುಭವ ಕಥನಗಳನ್ನು ಗಮನಿಸಿದರೆ ಅವರ ಆಯ್ಕೆಯ ಲಿಂಗತ್ವಕ್ಕಿಂತ ಆರೋಪಿಸಲ್ಪಟ್ಟ ಲಿಂಗತ್ವಕ್ಕೆ ತಕ್ಕಂತೆ ನಡೆದುಕೊಳ್ಳಲು ಅಪಾರ ಒತ್ತಡ ಬಂದಿರುತ್ತದೆ. ತಮ್ಮ ಮಗುವಿಗೆ ದ್ವಂದ್ವಮಯ ಲೈಂಗಿಕ ಅಂಗಾಂಗಗಳಿದ್ದರೂ ಪಾಲಕರು ಮಗುವಿನ ಲಿಂಗತ್ವ ಆಯ್ಕೆಯನ್ನು ನಿರಾಕರಿಸುತ್ತಾರೆ. ವಿದ್ಯೆ ಕಲಿತವರೂ ಸಹ ಹಿಜ್ರಾಗಳನ್ನು, ‘ಚಿಕ್ಕಂದಿನಲ್ಲೇ ತಾಯ್ತಂದೆಯರು ‘ಸರಿ’ಯಾಗಿ ಬುದ್ಧಿ ಕಲಿಸಿದ್ದರೆ ವಿಚಿತ್ರವಾಗಿ, ಅತಿಯಾಗಿ ಆಡುವ ಈ ಗಂಡುಗಳು ಹೀಗಾಗುತ್ತಿರಲಿಲ್ಲ’ ಎಂದು ಹಗುರವಾಗಿ ವ್ಯಾಖ್ಯಾನಿಸುವುದನ್ನು ಕೇಳುತ್ತೇವೆ. ಇಂಥ ಧೋರಣೆಯ ಹಿಂದೆ ಐಚ್ಛಿಕ ಲಿಂಗತ್ವದಂತೆ ಮಗುವನ್ನು ಬಾಲ್ಯದಿಂದಲೇ ಬೆಳೆಸಬಹುದು ಎಂಬ ಅಭಿಪ್ರಾಯವಿರುತ್ತದೆ. ಇಂಥ ಅಭಿಪ್ರಾಯವನ್ನು ಜನಸಾಮಾನ್ಯರಂತೆ ಮನೋವಿಜ್ಞಾನಿಗಳೂ ನಂಬಿದ್ದರು. ಅವರ ನಿಲುವುಗಳನ್ನು ಬದಲಿಸಲು ಒಬ್ಬ ಹುಡುಗನ ಬಲಿ ತೆಗೆದುಕೊಂಡ ತುಟ್ಟಿ ಪ್ರಯೋಗ ಕಾರಣವಾಯಿತು.
ಜೈವಿಕವಾಗಿ ಗಂಡಾಗಿ ಹುಟ್ಟಿದವರ ಮೇಲೆ ಹೆಣ್ತನವನ್ನು ಹೇರಿದರೆ ಮನಸಿಗೊಗ್ಗದ ಲಿಂಗತ್ವದಂತೆ ಬದುಕು ಸವೆಸಲು ದುರ್ಭರ ನೋವು ಅನುಭವಿಸಬೇಕಾಗುತ್ತದೆ. ತೃತೀಯ ಲಿಂಗಿಗಳ ಒಳಸಂಕಟಗಳು ಇಂಥ ದಾರುಣ ಬದುಕಿನ ಒಂದು ತುದಿಯಾದರೆ, ಎಳಸು ಗಿಡವಾಗಿದ್ದಾಗಲೇ ಬಗ್ಗಿಸಿದರೆ ಹುಡುಗನನ್ನು ಹುಡುಗಿಯಾಗಿಸಬಹುದು ಎಂಬ ಪ್ರಯೋಗಕ್ಕೀಡಾದ ಒಬ್ಬ ನತದೃಷ್ಟ ಹುಡುಗನ ಬದುಕು ಅದರ ಮತ್ತೊಂದು ತುದಿಯಾಗಿದೆ. ಬೇಕೆಂದ ಹಾಗೆ ಲಿಂಗತ್ವವನ್ನು ಬದಲಾಯಿಸಬಹುದೆಂಬ ಪ್ರಯೋಗಕ್ಕೀಡಾದ ಹುಡುಗ/ಹುಡುಗಿ ಬ್ರೂಸ್ ಬ್ರೆಂಡಾ ಡೇವಿಡ್ ರೀಮರ್ (1965-2004). ಆ ಬದುಕಿನ ವಿವರಗಳಲ್ಲಿ ಮನಕಲಕುವ ಕಥನವಷ್ಟೇ ಅಲ್ಲ, ಕಣ್ತೆರೆಸುವ ಪಾಠಗಳೂ ಅಡಗಿವೆ.
ಹುಡುಗ ಬ್ರೂಸ್ ಹುಡುಗಿ ಬ್ರೆಂಡಾ ಆದ ಕಥೆಯು
ಐವತ್ತು ವರ್ಷ ಕೆಳಗೆ ಕೆನಡಾದ ರೀಮರ್ ದಂಪತಿಗಳಿಗೆ ಬ್ರೂಸ್ ಮತ್ತು ಬ್ರಿಯಾನ್ ಎಂಬ ತದ್ರೂಪಿ (ಐಡೆಂಟಿಕಲ್) ಅವಳಿ ಗಂಡುಮಕ್ಕಳು ಹುಟ್ಟಿದವು. ಮುದ್ದಾದ, ಆರೋಗ್ಯವಂತ ಮಕ್ಕಳು ಉಚ್ಚೆ ಹಾರಿಸುವಾಗ ಅಸಹಜತೆ ಇದೆಯೆಂದು ಗಮನಿಸಿದ ರೀಮರ್ ದಂಪತಿಗಳು ಯುರಾಲಜಿಸ್ಟ್ ಬಳಿ ಕರೆದೊಯ್ದರು. ಅವಕ್ಕೆ ಗಂಡು ಹಸುಗೂಸುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ, ಮೂರ‍್ನಾಲ್ಕು ವರ್ಷವಾಗುವ ಹೊತ್ತಿಗೆ ತಂತಾನೇ ಸರಿಯಾಗುವ ಫೈಮೋಸಿಸ್ ಎಂಬ ಸಮಸ್ಯೆಯಿತ್ತು. (ಫೈಮೋಸಿಸ್ ಇದ್ದವರಿಗೆ ಶಿಶ್ನದ ತುದಿಯ ಚರ್ಮವನ್ನು ಹಿಂದೆಮುಂದೆ ಸರಿಸಲು ಕಷ್ಟವಿರುತ್ತದೆ.) ಆರು ತಿಂಗಳ ಕೂಸುಗಳಿಗೆ ಸರ್ಕಮ್ಸಿಷನ್ (ಮುಂಜಿ ಶಸ್ತ್ರಚಿಕಿತ್ಸೆ) ಮಾಡಿಸಲು ಯುರಾಲಜಿಸ್ಟ್ ಸಲಹೆ ಕೊಟ್ಟರು. ಬ್ರೂಸನಿಗೆ ಆಪರೇಷನ್ ಆಯಿತು. ಶಿಶ್ನದ ಮುಂದೊಗಲು ತೆಗೆವ ಈ ಸರಳ ಶಸ್ತ್ರಚಿಕಿತ್ಸೆ ಕೋಟ್ಯಂತರ ಮುಸ್ಲಿಂ ಗಂಡುಮಕ್ಕಳಿಗೆ ಸುಲಲಿತವಾಗಿ ನಡೆಯುತ್ತಿರುತ್ತದೆ. ಆದರೆ ಬ್ರೂಸ್‌ನ ಶಸ್ತ್ರಚಿಕಿತ್ಸೆ ವೇಳೆ ರಕ್ತಸ್ರಾವ ತಡೆಗಟ್ಟಲು ಬಳಸಿದ ಎಲೆಕ್ಟ್ರೋಕಾಟರಿಯಿಂದ ರಕ್ತನಾಳಗಳು ಎಷ್ಟು ಸುಟ್ಟುಹೋದವೆಂದರೆ ಶಿಶ್ನ ಕರ್ರಗಾಗಿ ಚಿರುಟಿಹೋಯಿತು. ಹೆದರಿದ ಸರ್ಜನ್ ಮತ್ತು ಪಾಲಕರು ಮತ್ತೊಬ್ಬ ಅವಳಿ ಸೋದರ ಬ್ರಿಯಾನನಿಗೆ ಶಸ್ತ್ರಚಿಕಿತ್ಸೆ ಮಾಡಲಿಲ್ಲ. ಅವನಿಗೆ ನಂತರ ತಾನೇ ಸರಿಹೋಯಿತು.
(ಬ್ರೂಸ್-ಬ್ರಿಯಾನ್ ತದ್ರೂಪಿ ಅವಳಿಗಳು)
ಬಾಲ್ಟಿಮೋರಿನ ಜಾನ್ ಹಾಪ್ಕಿನ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತ ದ್ವಂದ್ವಲಿಂಗಿ ಮಕ್ಕಳ ಬಗೆಗೆ ಸಂಶೋಧನೆ ಮಾಡುತ್ತಿದ್ದ ಮನಿ ಮತ್ತು ಸಂಗಡಿಗರು, ಶಿಶ್ನವನ್ನು ಮರುರೂಪಿಸುವುದು ಅಸಾಧ್ಯ; ಆದರೆ ಯೋನಿಯನ್ನು ಮರುರೂಪಿಸಬಹುದು; ಅದು ಸುರಕ್ಷಿತ ಮತ್ತು ಸೂಕ್ತ ಎಂದು ಪ್ರತಿಪಾದಿಸುತ್ತಿದ್ದರು. ಖಚಿತ ಲೈಂಗಿಕ ಅಂಗಗಳಿಲ್ಲದೆ ಹುಟ್ಟಿದ ಮಕ್ಕಳಿಗೆ, ಸಂತಾನೋತ್ಪತ್ತಿ ಸಾಧ್ಯವಾಗದ ವ್ಯಕ್ತಿಗಳಿಗೆ ಲಿಂಗತ್ವ ಹೊಂದಾಣಿಕೆ ಪ್ರಯೋಗ ಮಾಡುತ್ತಿದ್ದರು. ಬ್ರೂಸನನ್ನು ಪರೀಕ್ಷಿಸಿದ ಆ ಮನೋವಿಜ್ಞಾನಿಗಳ ತಂಡ, ಗಂಡಾಗುವುದಕ್ಕಿಂತ ಹೆಣ್ಣಿನಂತೆ ಲೈಂಗಿಕ ಪ್ರಬುದ್ಧತೆ ಸಾಧಿಸುವುದು ಮಗು ಬ್ರೂಸನಿಗೆ ಅತ್ಯುತ್ತಮ ಆಯ್ಕೆ ಎಂದು ಹೇಳಿದರು. ತದ್ರೂಪಿ ಅವಳಿ ಗಂಡುಮಕ್ಕಳಲ್ಲಿ ಒಬ್ಬನನ್ನು ಗಂಡಿನಂತೆ, ಒಬ್ಬನನ್ನು ಹೆಣ್ಣಿನಂತೆ ಬೆಳೆಸಿ ನೋಡುವ ಪ್ರಯೋಗ, ಜೈವಿಕವಾಗಿ ಪರಿಪೂರ್ಣ ಗಂಡನ್ನು ಹೆಣ್ಣು ಲಿಂಗತ್ವದೊಂದಿಗೆ ಬೆಳೆಸುವ ಪ್ರಯೋಗ ಶುರುವಾಯಿತು.
ಇಲ್ಲಿಂದ ಬ್ರೂಸ್ ಎಂಬ ಮುದ್ದು ಹುಡುಗನನ್ನು ಬ್ರೆಂಡಾ ಎಂಬ ಹುಡುಗಿಯಾಗಿಸುವ ಕತೆ ಶುರುವಾಗುತ್ತದೆ.
22 ತಿಂಗಳ ಮಗು ಬ್ರೂಸನ ವೃಷಣ ಮತ್ತು ಬೀಜ (ಟೆಸ್ಟಿಸ್) ಕತ್ತರಿಸಿ ಹಾಕಲಾಯಿತು. ವೃಷಣದ ಹೊರಭಾಗದ ಚರ್ಮವನ್ನು ಮರುರೂಪಿಸಿ ಹೆಣ್ಣಿನ ಲೈಂಗಿಕ ಅಂಗದ ಹೊರಭಾಗದಂತೆ ಕಾಣುವ ಹಾಗೆ ರೂಪಿಸಲಾಯ್ತು. ಬ್ರೂಸನನ್ನು ಇನ್ನುಮುಂದೆ ಬ್ರೆಂಡಾ ಎಂಬ ಹುಡುಗಿಯಾಗಿ ಬೆಳೆಸುತ್ತಾ ಲಿಂಗತ್ವ ಮರುರೂಪಿಸುವ ಜವಾಬ್ದಾರಿ ತಾಯ್ತಂದೆಯರ ಮೇಲೆ ಬಿತ್ತು. ಬ್ರೂಸ್ ಯಾನೆ ಬ್ರೆಂಡಾ ಹೊಟ್ಟೆಯಲ್ಲಿ ಮಾಡಿದ ತೂತಿನಿಂದ ಉಚ್ಚೆ ಹುಯ್ಯಬೇಕಿತ್ತು. ಸ್ತನ ಬೆಳೆಯಲೆಂದು ಈಸ್ಟ್ರೋಜೆನ್ ಕೊಡಲಾಯಿತು. ಪ್ರತಿವರ್ಷ ರೀಮರ್ ದಂಪತಿಗಳು ಮಾನಸಿಕ ಬೆಂಬಲ ಮತ್ತು ಸಲಹೆಗಾಗಿ ಜಾನ್ ಮನಿಯನ್ನು ಭೇಟಿಯಾಗುತ್ತಿದ್ದರು.
ಇದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿ ವೈದ್ಯಲೋಕದ ಗಮನ ಸೆಳೆಯಿತು. ಪ್ರಯೋಗದ ಯಶಸ್ಸು ಹೋಲಿಸಲು ಒಂದೇ ಮನೆಯ, ಒಂದೇ ತಾಯ್ತಂದೆಯರಿಗೆ ಹುಟ್ಟಿ, ಅದೇ ಪರಿಸರದಲ್ಲಿ ಗಂಡಾಗಿ ಬೆಳೆಸಲ್ಪಡುತ್ತಿರುವ ಅವಳಿ ಸೋದರ ಸಿಕ್ಕಿದ್ದ. ಹುಟ್ಟುತ್ತ ಯಾವುದೇ ಲಿಂಗವೈಕಲ್ಯ, ಅಸಹಜತೆಯಿರದ ಗಂಡೊಬ್ಬನನ್ನು ಹೆಣ್ಣಾಗಿಸುವ ಮೊದಲ ಪ್ರಯತ್ನ ಇದಾಗಿತ್ತು.
ಬ್ರೆಂಡಾಗೆ ಹುಡುಗಿಯ ಪಾತ್ರ ರೂಢಿಯಾಗಲು ಬಾಲ್ಯದ ಲೈಂಗಿಕ ಆಟಗಳನ್ನು ಸೂಚಿಸಲಾಯಿತು. ಬಟ್ಟೆ ಬಿಚ್ಚಿ ಬ್ರೆಂಡಾ ಮತ್ತು ಬ್ರಿಯಾನ್ ಪರಸ್ಪರರ ಲೈಂಗಿಕ ಅಂಗಗಳ ನೋಡಿಕೊಳ್ಳುವಂತೆ ಉತ್ತೇಜಿಸಲಾಗುತ್ತಿತ್ತು. ಬ್ರೆಂಡಾ ಕೆಳಗಿರುವ ಭಂಗಿಯಲ್ಲಿ ಒಬ್ಬರ ಮೇಲೊಬ್ಬರು ಮಲಗುವಂತೆ, ಚತುಷ್ಪಾದಿಯ ರೀತಿ ಬ್ರೆಂಡಾ ನಿಂತು ಬ್ರಿಯಾನ್ ಹಿಂದಿನಿಂದ ಒತ್ತುವಂತೆ, ಬ್ರೆಂಡಾ ಕಾಲು ಅಗಲಿಸಿ ಮಲಗುವಂತೆ ಸಲಹೆ ನೀಡಲಾಯಿತು. ಮಕ್ಕಳು ಈ ಚಟುವಟಿಕೆಯಲ್ಲಿ ತೊಡಗಿದಾಗ ದಾಖಲೀಕರಣಕ್ಕೆಂದು ಕನಿಷ್ಠ ಒಮ್ಮೆ ಫೋಟೋ ತೆಗೆಯಲಾಯಿತು. ಬಾಲ್ಯದ ಲೈಂಗಿಕ ರಿಹರ್ಸಲ್ ಆಟಗಳು ವಯಸ್ಕರಾದ ನಂತರ ಆರೋಗ್ಯಕರ ಲಿಂಗತ್ವ ಅಸ್ಮಿತೆ ಬೆಳೆಸಿಕೊಳ್ಳಲು ಸಹಾಯ ಮಾಡುತ್ತವೆ ಎನ್ನುವುದು ಜಾನ್ ಮನಿಯ ಅಭಿಮತ.
(ಬ್ರೆಂಡಾ ಎಂಬ ಹುಡುಗಿಯಾದ ಬ್ರೂಸ್ ಎಂಬ ಹುಡುಗ)
ರೀಮರ್ ಕುಟುಂಬ ಮತ್ತು ಜಾನ್ ಮನಿ.
(ಬ್ರಿಯಾನ್-ಬ್ರೆಂಡಾ ಅವಳಿಗಳು)
ಪ್ರೊ. ಮನಿ ಇದನ್ನು ‘ಜಾನ್/ಜೋನ್ ಪ್ರಕರಣ’ (ಗಂಡನ್ನು ಹೆಣ್ಣಾಗಿಸಿದ ಲಿಂಗತ್ವ ಮರುಹೊಂದಾಣಿಕೆ ಪ್ರಕರಣ) ಎಂದು ಕರೆದು ‘ಪುಟ್ಟ ಹುಡುಗಿ ತನ್ನ ಸೋದರನಿಗಿಂತ ತುಂಬ ಭಿನ್ನವಾಗಿ ಬೆಳೆಯುತ್ತಿದ್ದಾಳೆ’ ಎಂದು ಅಧ್ಯಯನ ವರದಿಗಳ ಕಳಿಸುತ್ತಲೇ ಹೋದ. ಪ್ರಯೋಗ ಯಶಸ್ವಿಯಾಗಿದೆ ಎಂದೇ ಭಾವಿಸಿ ದ್ವಂದ್ವಲಿಂಗ ಹೊಂದಿರುವವರನ್ನು ಶಸ್ತ್ರಚಿಕಿತ್ಸೆ ಮತ್ತು ಲಿಂಗತ್ವ ಮರುಹೊಂದಾಣಿಕೆ ಮೂಲಕ ಸರಿ ಮಾಡಬಹುದೆಂದು ಸೂಚಿಸಿದ. ರೀಮರ್ ದಂಪತಿಗಳೂ ಸಹ ಎಲ್ಲ ಯಶಸ್ವಿಯಾಗಿ ನಡೆದಿದೆ ಎಂದೇ ವೈದ್ಯರಿಗೆ ಹೇಳುತ್ತಿದ್ದರು.
ಆದರೆ ಸುರಳೀತವಾಗಿ ಎಲ್ಲವೂ ನಡೆದಿಲ್ಲ ಎಂದು ಅವರಿಗೆ ಗೊತ್ತಿತ್ತು.
ಪ್ರಕೃತಿ ಅದೆಲ್ಲೆಲ್ಲಿ ಲಿಂಗತ್ವ ಗುಣಗಳನ್ನು ಅಡಗಿಸಿಟ್ಟಿರುತ್ತದೆಯೋ!? ಹೊರಲೋಕ ಬ್ರೂಸನನ್ನು ಬ್ರೆಂಡಾ ಎಂಬ ಹುಡುಗಿಯಂತೆಯೇ ನಡೆಸಿಕೊಳ್ಳುತ್ತಿದ್ದರೂ, ಬ್ರೆಂಡಾ ತೀವ್ರ ತಳಮಳದ ಹುಡುಗಿಯಾದಳು. ನೀನು ಹುಡುಗಿ ಎಂದು ಸಮಾಜ ಒತ್ತಿಒತ್ತಿ ಹೇಳುತ್ತಿದ್ದರೂ, ಬೆಳೆಯುತ್ತಿರುವ ಮಗುವಿನ ತಲ್ಲಣಗಳ ಲೋಕ ಬೇರೆಯದೇ ಒಳಸತ್ಯ ತಿಳಿಸುತ್ತಿತ್ತು.
ಬ್ರೆಂಡಾಗೆ 13 ವರ್ಷವಾದಾಗ ಖಿನ್ನತೆ ಶುರುವಾಯಿತು. ಆತ್ಮಹತ್ಯೆಯ ಯೋಚನೆ ಪದೇಪದೇ ಬರತೊಡಗಿತು. ಅಗಲ ಭುಜ, ಕಟ್ಟುಮಸ್ತಾದ ಮೈಕಟ್ಟು ಬೆಳೆಯತೊಡಗಿ ಸಹಪಾಠಿಗಳೆಲ್ಲ ‘ಕಾಡುಹೆಣ್ಣು’ ಎಂದು ಲೇವಡಿ ಮಾಡುತ್ತಿದ್ದರು. ಪದೇಪದೇ ಆಸ್ಪತ್ರೆ, ಲೈಂಗಿಕ ಅಂಗಾಂಗಗಳ ಪರೀಕ್ಷೆ, ಶಸ್ತ್ರಚಿಕಿತ್ಸೆ, ಚಿಕಿತ್ಸೆ ಇವೆಲ್ಲದರಿಂದ ಬ್ರೆಂಡಾಳ ಎಳೆಯ ಮನಸು ರೋಸಿಹೋಗಿ ಬಾಲ್ಟಿಮೋರ್ ಆಸ್ಪತ್ರೆಗೆ ಹೋಗುವುದೆಂದರೆ ಹೇವರಿಕೆ, ನಡುಕ ಶುರುವಾಗಿತ್ತು. ಯೋನಿ ರೂಪಿಸುವ ಶಸ್ತ್ರಚಿಕಿತ್ಸೆಗೆ ಬರುವಂತೆ ವೈದ್ಯರ ತಂಡ ಹೇಳಿದಾಗ ಆಸ್ಪತ್ರೆಗೆ ಬರಬೇಕೆಂದು ಒತ್ತಾಯ ಮಾಡಿದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹುಡುಗಿ ಬೆದರಿಸಿದಳು. ಅಲ್ಲಿಗೆ ರೀಮರ್ ಕುಟುಂಬವು ಜಾನ್ ಮನಿ ತಂಡದ ಬಳಿ ಹೋಗುವುದನ್ನೇ ನಿಲ್ಲಿಸಿಬಿಟ್ಟಿತು.
ಕೊನೆಗೆ 1980ರಲ್ಲಿ ತಾಯ್ತಂದೆಯರು ಬ್ರೆಂಡಾಳಿಗೆ ನಿಜ ಏನೆಂದು ಸವಿಸ್ತಾರವಾಗಿ ಹೇಳಿದರು. ಅವಳು ಅವಳಲ್ಲವೆಂದೂ, ಅವನೆಂದೂ, ಅದಕ್ಕಾಗಿಯೇ ಹಾರ್ಮೋನು ಮಾತ್ರೆ-ಇಂಜೆಕ್ಷನ್ನು-ಶಸ್ತ್ರಚಿಕಿತ್ಸೆ ನಡೆಯಬೇಕಾಯಿತೆಂದೂ ಕಟುಸತ್ಯ ಹೇಳಿಬಿಟ್ಟರು.
ಮರುಪಯಣ - ಡೇವಿಡ್ ಆದ ಬ್ರೆಂಡಾ
ನಿಜ ಅರಿವಾದ ತಕ್ಷಣ ಬ್ರೆಂಡಾಳ ಒಳಗಿದ್ದ ಗಂಡು ಧಿಗ್ಗನೆದ್ದ. ಹಳೆಯ ಎರಡೂ ಹೆಸರು ಬಿಟ್ಟು ಡೇವಿಡ್ ಎಂಬ ಹೊಸ ಹೆಸರಿಟ್ಟುಕೊಂಡ. ತನ್ನೆಲ್ಲ ಮಾನಸಿಕ ಅಲ್ಲೋಲಕಲ್ಲೋಲಗಳ ಮೂಲ ಎಲ್ಲಿದೆಯೆಂದು ತಿಳಿದಿದ್ದೇ, ಹೆಣ್ಣು ಲಕ್ಷಣಕ್ಕೆ ಕಾರಣವಾಗಿದ್ದ ಎಲ್ಲವನ್ನು ಕಿತ್ತುಹಾಕಲು ನಿರ್ಧರಿಸಿದ. ಹೆಣ್ಣು ಹಾರ್ಮೋನುಗಳ ಥೆರಪಿ ನಿಂತು ಹೋಯಿತು. ಎರಡೂ ಕಡೆಯ ಸ್ತನಗಳನ್ನು ಶಸ್ತ್ರಚಿಕಿತ್ಸೆ ಮಾಡಿಸಿ ತೆಗೆದು ಹಾಕಲಾಯಿತು. ವೃಷಣದ ತದ್ರೂಪು ಸೃಷ್ಟಿಸಲು ಯತ್ನಿಸಲಾಯಿತು. ಎರಡು ಶಸ್ತ್ರಚಿಕಿತ್ಸೆಗಳಿಂದ ಶಿಶ್ನ ಭಾಗವನ್ನು ಮರುರೂಪಿಸಲು ಯತ್ನಿಸಲಾಯ್ತು. ಗಂಡಾಗಿ-ಹೆಣ್ಣಾಗಿದ್ದ 22 ವರ್ಷದ ಡೇವಿಡ್ ಈಗ ಮತ್ತೆ ಗಂಡಾಗಲು, ಲಿಂಗತ್ವವನ್ನು ಮರು-ಮರುಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧನಾದ. ‘ಟೆಸ್ಟೋಸ್ಟಿರಾನ್’ ಎಂಬ ಗಂಡು ಹಾರ್ಮೋನಿನ ಇಂಜೆಕ್ಷನ್ ತೆಗೆದುಕೊಳ್ಳತೊಡಗಿದ. ಬರಿಯ ಗಂಡಿನಂತೆ ಕಂಡರೆ ಸಾಲದು, ಗಂಡಿನದೆಂದು ಪರಿಗಣಿಸಲ್ಪಟ್ಟ ಎಲ್ಲವನ್ನು ಅನುಭವಿಸುವೆನೆಂದು ಪಣತೊಟ್ಟ. 25 ವರ್ಷ ಆದಾಗ ತನಗಿಂತ ಹಿರಿಯಳಾಗಿದ್ದ ಜೇನ್ ಮೊಂಟೇನಳನ್ನು ಮದುವೆಯಾದ. ಅವಳ ಮೂರು ಮಕ್ಕಳನ್ನು ದತ್ತು ಪಡೆದ.
ಡೇವಿಡ್ ರೀಮರ್ ಮತ್ತು ಜೇನ್
ಇತ್ತ.. ಬ್ರೂಸನ ಮೇಲೆ ನಡೆದಿದ್ದ ಪ್ರಯೋಗ ಯಶಸ್ವಿಯಾಗಿದ್ದು, ಬಾಲ್ಯದಿಂದಲೇ ಪ್ರಯತ್ನಿಸಿದರೆ ಲಿಂಗತ್ವ ಮರುಹೊಂದಾಣಿಕೆ ಸಾಧ್ಯವೆಂಬ ಜಾನ್ ಮನಿಯ ವರದಿಯಿಂದ ವೈದ್ಯಕೀಯ ಜಗತ್ತು ಬೆಚ್ಚಿಬಿದ್ದಿತ್ತು. ದ್ವಂದ್ವಲಿಂಗಿ ಮಕ್ಕಳು ಮತ್ತು ಕೆಲವು ರೋಗಿಗಳಲ್ಲಿ ಲಿಂಗತ್ವ ಮರುಹೊಂದಾಣಿಕೆ ಮಾಡುವ ಪ್ರಯತ್ನಗಳು ನಡೆಯತೊಡಗಿದವು.
ಆದರೆ 1997ರಲ್ಲಿ ಜಾನ್ ಮನಿಯ ಪ್ರತಿಸ್ಪರ್ಧಿ, ಮನೋರೋಗತಜ್ಞ ಮಿಲ್ಟನ್ ಡೈಮಂಡ್‌ಗೆ ‘ಜಾನ್/ಜೋನ್ ಪ್ರಕರಣ’ದ ಸತ್ಯಾಸತ್ಯತೆ ತಿಳಿಯಿತು. ಕೂಡಲೇ ಡೇವಿಡ್ ರೀಮರ್ ಲೋಕದೆದುರು ಸತ್ಯ ಬಿಚ್ಚಿಡಬೇಕೆಂದು, ಆ ಮೂಲಕ ಇನ್ನಷ್ಟು ತಪ್ಪು ಪ್ರಯೋಗಗಳನ್ನು ನಿಲ್ಲಿಸಬಹುದೆಂದು ಹೇಳಿದ. ರೀಮರ್ ತನ್ನ ಬದುಕಿನ ಕಥೆಯನ್ನು ಎಳೆಎಳೆಯಾಗಿ ಬಿಡಿಸಿ ಓಪ್ರಾ ವಿನ್‌ಫ್ರೇ ಎದುರು ಹೇಳುತ್ತಿದ್ದರೆ ಕೇಳುಗರ ಕಣ್ಣಾಲಿಗಳಲ್ಲಿ ಸಂತಾಪದ ಹೊಳೆ ಹರಿಯಿತು. ತುಂಬು ನೆರಿಗೆಯ ಉಡುಪುಗಳಾಗಲೀ, ಹಾರ್ಮೋನು ಇಂಜೆಕ್ಷನ್ನುಗಳಾಗಲೀ, ಕೃತಕವಾಗಿ ಉಬ್ಬಿಸಿಕೊಂಡ ಸ್ತನಗಳಾಗಲೀ ತಾನು ಹೆಣ್ಣು ಎಂದು ಭಾವಿಸುವಂತೆ ಮಾಡಲಿಲ್ಲ ಎಂಬ ಆಘಾತಕಾರಿ ಸತ್ಯವನ್ನು ಡೇವಿಡ್ ಜಗತ್ತಿನೆದುರು ಬಿಚ್ಚಿಟ್ಟ. ಅವನ ಜೀವನಕಥನ ರೋಚಕ ಕತೆಯಾಯಿತು. ಟಿವಿ ಸರಣಿ ಬಂತು, ಜೀವನ ಚರಿತ್ರೆ ಸಾಕ್ಷ್ಯಚಿತ್ರ, ಸಿನಿಮಾ ಎಲ್ಲ ಬಂದವು. ಜಾನ್ ಮನಿ ಇದು ಸ್ತ್ರೀವಾದಿ ವಿರೋಧಿಗಳ ಕೆಲಸ ಎಂದ, ಟ್ರಾನ್ಸ್‌ಜೆಂಡರ್‌ಗಳ ವಿರುದ್ಧ ಇರುವವರ ಪಿತೂರಿ ಎಂದ. ಆದರೆ ವೈಯಕ್ತಿಕವಾಗಿ ತಪ್ಪು ಪ್ರಯೋಗದ ಹೊಣೆಗಾರನಾಗಿ ಅದಕ್ಕೆ ಬಂದ ಕಟುಟೀಕೆಗಳಿಗೆ ಜರ್ಝರಿತನಾಗಿಹೋದ.
ಹೆಣ್ತನ-ಗಂಡಸುತನ ಬೆಳೆಸಿಕೊಳ್ಳುವ ದೈಹಿಕ, ಮಾನಸಿಕ ತಿಕ್ಕಾಟದಲ್ಲಿ ಡೇವಿಡ್‌ನ ವ್ಯಕ್ತಿತ್ವ ಛಿದ್ರಗೊಂಡಿತ್ತು. ಅವ ಆಸ್ಪತ್ರೆ, ವೈದ್ಯರು, ಔಷಧಿ ಇವೆಲ್ಲದರ ಕುರಿತು ಸಂಪೂರ್ಣ ವಿಶ್ವಾಸ ಕಳೆದುಕೊಂಡ. ಜೀವನ ಪರ್ಯಂತ ತಾಯ್ತಂದೆಯರೊಂದಿಗೆ ಸಂಘರ್ಷಮಯ ಸಂಬಂಧ ಇಟ್ಟುಕೊಂಡ. ಶಿಕ್ಷಣ ಪೂರೈಸಲಾಗದೆ, ಕೆಲಸ ಸಿಗದೆ ನಿರುದ್ಯೋಗಿಯಾದ. ಸಿಝೋಫ್ರೇನಿಯಾದಿಂದ ನರಳುತ್ತಿದ್ದ ಸೋದರ ಬ್ರಿಯಾನ್ ಅತಿಯಾಗಿ ಖಿನ್ನತೆಯ ಔಷಧಿ ಸೇವಿಸಿ ೨೦೦೨ರಲ್ಲಿ ತೀರಿಕೊಂಡರೆ, ಹೆಂಡತಿ ಜೇನ್ ೨೦೦೪ರಲ್ಲಿ ವಿಚ್ಛೇದನ ಪಡೆದಳು. ಅದಾದ ಎರಡೇ ದಿವಸದಲ್ಲಿ ಕಿರಾಣಿ ಅಂಗಡಿಯ ಪಾರ್ಕಿಂಗ್ ಲಾಟಿಗೆ ಕಾರು ನುಗ್ಗಿಸಿದ ಡೇವಿಡ್, ತನ್ನ ತಲೆಗೆ ತಾನೇ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡ.
ಡೇವಿಡ್ ರೀಮರ್
ನಾಲ್ಕು ದಶಕಕಾಲ ಕಾಲ ತಾನು ಹೆಣ್ಣೋ, ಗಂಡೋ ಎಂದು ಅರಿಯುವುದರಲ್ಲಿ, ಅದರಂತೆ ಅಂಗಾಂಗಗಳನ್ನು, ಲೈಂಗಿಕ ಸಾಮರ್ಥ್ಯವನ್ನು ರೂಪುಗೊಳಿಸಿಕೊಳ್ಳುವುದರಲ್ಲಿ, ಹಾಗೆಂದು ಲೋಕಕ್ಕೆ ಸಾಬೀತುಪಡಿಸುವಲ್ಲಿ ಬಲಿಪಶುವಾಗಿ, ಪ್ರಯೋಗಪಶುವಾಗಿ ದೇಹವನ್ನು ಅತಿಗಳಿಗೆ ಒಡ್ಡುವಂತಾದ ಬ್ರೂಸ್ ಬ್ರೆಂಡಾ ಡೇವಿಡ್ ರೀಮರ್‌ನ ಸಂಘರ್ಷಮಯ ಬದುಕು ಹೀಗೆ ದಾರುಣ ಅಂತ್ಯ ಕಂಡಿತು.
ಇಲ್ಲಿ ತಪ್ಪು ಯಾರದು? ಎಳೆಮಗುವಿನ ಶಿಶ್ನ ಸುಟ್ಟು ಹಾಕಿದ ಶಸ್ತ್ರಚಿಕಿತ್ಸಕರದೇ? ಗಂಡನ್ನು ಹೆಣ್ಣು ಮಾಡಲು ಹೋದ ಜಾನ್ ಮನಿಯ ತಂಡದ್ದೇ? ತಮ್ಮ ಮಗುವಿಗೆ ಹೇಗಾದರೂ ಸಹಾಯ ಮಾಡಬೇಕೆಂಬ ಧಾವಂತದಲ್ಲಿ ಅದರ ಹಿತಾಸಕ್ತಿಗೆ ವಿರುದ್ಧವಾಗಿದ್ದ ನಿರ್ಣಯಗಳನ್ನೇ ತೆಗೆದುಕೊಳ್ಳುತ್ತ ಹೋದ ಆತಂಕಿತ ಪಾಲಕರದ್ದೇ?
ತಪ್ಪು ಯಾರದಾದರೂ ಆಗಿರಲಿ, ಶಿಕ್ಷೆ ಅನುಭವಿಸಿದ್ದು ಮಾತ್ರ ನಿರಪರಾಧಿ ಎಳೆಯ ಮಗು ಬ್ರೂಸ್. ಒಂದು ದುರಂತ ಕೊನೆಯಲ್ಲದೆ ಬದುಕು ಬೇರೆ ಯಾವ ದಾರಿಯನ್ನು ಅವನಿಗುಳಿಸಿತ್ತು?
***
ಮನುಷ್ಯರ ಕೇಂದ್ರಪ್ರಜ್ಞೆ ಲೈಂಗಿಕತೆ. ಸ್ವಭಾವ, ವ್ಯಕ್ತಿತ್ವ, ಸಂಬಂಧಗಳ ಸ್ವರೂಪ, ಯಶಸ್ಸು, ವಿಫಲತೆ, ಸಂಘರ್ಷ ಇವೆಲ್ಲವನ್ನು ರೂಪಿಸುವಲ್ಲಿ ಲೈಂಗಿಕತೆಯ ಪಾತ್ರ ದೊಡ್ಡದು. ಅದು ಕೇವಲ ಜೈವಿಕ ಕ್ರಿಯೆಯಲ್ಲ. ಕೇವಲ ಮನೋವ್ಯಾಪಾರವೂ ಅಲ್ಲ. ಕಾನೂನಾತ್ಮಕ/ಆರ್ಥಿಕ/ಸಾಮಾಜಿಕ/ಧಾರ್ಮಿಕ/ಆಧ್ಯಾತ್ಮಿಕ/ಸಾಂಸ್ಕೃತಿಕ ವಿಷಯವಷ್ಟೇ ಅಲ್ಲ. ಒಂದು ಪರಿಸರದಲ್ಲಿ ಬೆಳೆಯುವ ಪ್ರತಿಯೊಬ್ಬ ವ್ಯಕ್ತಿ ತನ್ನ ಸುತ್ತಮುತ್ತಣ ವ್ಯಕ್ತಿಗಳೊಡನೆಯ ಸಂಬಂಧ ಕಟ್ಟಿಕೊಳ್ಳುವಾಗ ವ್ಯಕ್ತಿಯ ಲೈಂಗಿಕತೆ ಪ್ರಭಾವ ಬೀರುತ್ತದೆ. ಮನುಷ್ಯನ ಚಿಂತನೆ, ನಂಬಿಕೆ, ಭ್ರಮೆ, ಕನಸು, ಗುಣ, ನಡತೆ ಮುಂತಾದ ಎಲ್ಲದರಲ್ಲೂ ಅದರ ಪ್ರಭಾವವಿದ್ದೇ ಇದೆ. ಆದರೆ ದೇಹದ ನಿಜವನ್ನು ನೈತಿಕ ನಿಜ ಎಂದು ಒಪ್ಪಲು ಸಮಾಜ ಯಾವತ್ತೂ ಸಿದ್ಧವಿರುವುದಿಲ್ಲ. ಸಂತಾನೋತ್ಪತ್ತಿಯಾಚೆಗಿನ ಲೈಂಗಿಕತೆಯ ಅವಶ್ಯಕತೆಯನ್ನು ಗೌರವದಿಂದ ಕಾಣುವುದಿಲ್ಲ.
ಮನೋವಿಜ್ಞಾನಿಗಳಲ್ಲಿದ್ದ ಮುಖ್ಯ ಪ್ರಶ್ನೆ ಲಿಂಗತ್ವ ಹುಟ್ಟಿನಿಂದ ಬರುವುದೋ ಅಥವಾ ಪರಿಸರ-ಸಮಾಜಗಳು ವ್ಯಕ್ತಿಯಲ್ಲಿ ಹೇರುವುದೋ? ಅದು ತೊಡೆ ನಡುವೆ ನಿರ್ಧಾರವಾಗುವುದೋ ಅಥವಾ ಕಿವಿಗಳ ನಡುವೆ ನಿರ್ಧರಿಸಲ್ಪಡುವುದೋ? ಎಂಬುದಾಗಿತ್ತು. ವ್ಯಕ್ತಿತ್ವ ಬೆಳವಣಿಗೆಯಲ್ಲಿ ನಿರ್ಧಾರಕ ಪಾತ್ರ ವಹಿಸುವ ಲಿಂಗತ್ವವನ್ನು ನಮ್ಮಿಷ್ಟದಂತೆ ಬದಲಾಯಿಸಲಾಗದು ಎಂದು; ಪೋಷಣೆಪಾಲನೆಗಿಂದ ಪ್ರಕೃತಿಯೇ ಹೆಚ್ಚು ಲಿಂಗತ್ವ ನಿರ್ಧಾರಕ ಎನ್ನುವುದನ್ನು ರೀಮರ್ ಪ್ರಕರಣ ಎತ್ತಿ ತೋರಿಸಿತು. ಅವನ ಬದುಕಿನ ಕಥೆ ಲಿಂಗತ್ವವೆಂಬ ಸೂಕ್ಷ್ಮ ವಿಷಯ ಕುರಿತು, ಬಯಕೆ-ಲಿಂಗತ್ವ-ನಡವಳಿಕೆಗಳ ಸಹಜತೆ ಕುರಿತು ಲೋಕದ ಕಣ್ಣು ತೆರೆಸಿತು. ಅಷ್ಟೇ ಅಲ್ಲ, ಮನೋವೈದ್ಯಲೋಕಕ್ಕೂ ಹಲವು ಪಾಠಗಳನ್ನು ಕಲಿಸಿತು.
ಮಾತನಾಡಬಾರದ, ಮುಚ್ಚಿಟ್ಟ, ಮಡಿ ವಿಷಯವೊಂದರ ಕುರಿತು ಲಿಂಗತ್ವ ಅಲ್ಪಸಂಖ್ಯಾತ ಬಂಧುಗಳ ದೆಸೆಯಿಂದ ಈಗಷ್ಟೇ ಮಾತನಾಡತೊಡಗಿದ್ದೇವೆ. ಒಂದಲ್ಲಾ ಒಂದು ದಿನ, ಸಭ್ಯತೆ-ನಾಗರಿಕತೆ ಎಂಬಿತ್ಯಾದಿ ಕಟ್ಟುಕತೆಗಳ ಆಚೆ ಸರಿಸಿ ಮನುಷ್ಯರು ಕೇವಲ ಮನುಷ್ಯರಂತೆ ಬದುಕಲು ಸಾಧ್ಯವಾಗುವ ದಿನಗಳು ಬಂದಾವೆಂದು ಹಾರೈಸಬಹುದು ಅಷ್ಟೆ.