Sunday, 6 October 2019

ಪೋರಬಂದರದ ಪ್ರಣಾಮಿ





1

ಗಾಂಧಿ-150 ಸಂದರ್ಭದಲ್ಲಿ ಯಾವುದೋ ಲಹರಿಯ ಬೆನ್ನೇರಿದಂತೆ ಪೋರಬಂದರಕ್ಕೆ ಹೋಗಿಬಂದೆ. ಕಸ್ತೂರಬಾ ತಾಯಿಮನೆ ಹಾಗೂ ಪ್ರಣಾಮಿ ಮಂದಿರಗಳಿಗೆ ನೀಡಿದ ಅವಿಸ್ಮರಣೀಯ ಭೇಟಿಯ ಕುರಿತು ಈ ಬರಹ:

ಪೋರಬಂದರದ ಪುರಾತನ, ಜನನಿಬಿಡ ಮಾರುಕಟ್ಟೆ ಪ್ರದೇಶ ಮಾಣೆಕ್ ಚೌಕದಲ್ಲಿ ಕಸ್ತೂರಬಾ ತಾಯಿಮನೆಯಿದೆ. ಅದನ್ನು ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆ ವಹಿಸಿಕೊಂಡಿದೆ. ಮಾರುದೂರದಲ್ಲಿ ಗಾಂಧಿ ಪೂರ್ವಜರ ಮನೆಯನ್ನು ಬರೋಡಾದ ಸಯ್ಯಾಜಿರಾವ್ ಗಾಯಕವಾಡರು ‘ಕೀರ್ತಿ ಮಂದಿರ’ವಾಗಿಸಿದ್ದಾರೆ. ಗಾಂಧೀಜಿಯವರಿಗೆ ಸಂಬಂಧಿಸಿದ ಎಲ್ಲವೂ ಅಲ್ಲಿದ್ದು ಜನ ಗಿಜಿಗುಡುತ್ತಿರುತ್ತಾರೆ. ಆದರೆ ಕೀರ್ತಿಮಂದಿರದ ಹಿತ್ತಿಲು ದಾಟಿ, ಪಾಗಾರದ ಗೋಡೆ ಹತ್ತಿಳಿದು, ಕಿರುಗಲ್ಲಿಯಲ್ಲಿ ಹಾದುಹೋದರೆ ಸಿಗುವ ಕಸ್ತೂರಬಾ ಮನೆ ನಿರ್ಜನವಾಗಿದೆ. ಅಂತರಜಾಲವೂ ಕಸ್ತೂರ್ ಮನೆ ಬಗೆಗೆ ಏನೂ ಹೇಳುವುದಿಲ್ಲ. ಗಣ್ಯರು ಕೀರ್ತಿಮಂದಿರಕ್ಕೆ ಹೋಗಿಬರುವಂತೆ ಬಾ ಮನೆಗೆ ಬರುವುದಿಲ್ಲವೆಂದು ಅಲ್ಲಿದ್ದವರು ನೊಂದು ಹೇಳಿದರು.

ಮಕನ್‌ಜಿ ಕಪಾಡಿಯಾರ ಮನೆಯಲ್ಲಿ ಪುರಾತತ್ತ್ವ ಇಲಾಖೆಯ ಸಾದಿಯಾ ವಿನೋದ್‌ಕುಮಾರ್ ಒಬ್ಬರೇ ಕೂತಿದ್ದರು. ಫೋಟೋ ತೆಗೆಯುವಂತಿಲ್ಲ ಎಂದು ಮನೆಯ ಮೂರೂ ಮಹಡಿ ಹತ್ತಿಳಿಸಿ ತೋರಿಸಿದರು. ಹದಿನೆಂಟು ಕೋಣೆಗಳ ಮನೆಯನ್ನು ಕಸ್ತೂರಬಾರ ಪೂರ್ವಜರು ತುಂಬ ಯೋಜಿತವಾಗಿ, ಗಟ್ಟಿಮುಟ್ಟಾಗಿ ಕಟ್ಟಿಸಿದ್ದಾರೆ. ಮಳೆ ನೀರು ಸಂಗ್ರಹ, ಭಿತ್ತಿಚಿತ್ರಗಳು, ಅಡಿಗೆ-ಊಟ-ಪೂಜೆ-ಸ್ನಾನದ ಮೂಲೆಗಳು 200 ವರ್ಷಗಳಾದ ನಂತರವೂ ತಾಜಾ ಆಗಿವೆ. ಗುಜರಾತಿಗಳ ಮಳೆನೀರು ಸಂಗ್ರಹ ಜ್ಞಾನ ಮತ್ತು ತಂತ್ರಗಾರಿಕೆಗಳು ಅನುಕರಣೀಯ. ಬಳಪದ ಕಲ್ಲಿನಂತಹ ಕಲ್ಲಿಟ್ಟಿಗೆಗಳಲ್ಲೇ ರಂಧ್ರ ಕೊರೆದು ಹೇಗೆ ಜೋಡಿಸಲಾಗಿದೆಯೆಂದರೆ ಸೂರಿನ ಮಳೆ ನೀರು ಗೋಡೆಯ ಕಲ್ಲುಗಳೊಳಗೇ ಚಲಿಸಿ ನೆಲದಾಳದಲ್ಲಿರುವ ದೊಡ್ಡತೊಟ್ಟಿಯನ್ನು ತುಂಬುತ್ತದೆ. ಹರಿಯುತ್ತ ಜಾಲಿಸಿಕೊಂಡು ಶುದ್ಧವಾಗುತ್ತದೆ, ಕಲ್ಲೂ ತಂಪಾಗುತ್ತದೆ. ಈ ಅದ್ಭುತ ವ್ಯವಸ್ಥೆ ಇವತ್ತಿಗೂ ಕಾರ್ಯಪ್ರವೃತ್ತವಾಗಿದೆ.

ಆ ಮನೆಯಲ್ಲಿ ಎಳೆಹುಡುಗಿ ಕಸ್ತೂರ್ ಎದ್ದ, ಕೂತ, ಅತ್ತ, ಮದುವೆಯಾದ ಚಿತ್ರಗಳನ್ನೆಲ್ಲ ಕಲ್ಪಿಸಿಕೊಳ್ಳುತ್ತ ಸುತ್ತಾಡಿದೆ.






2

ಬಾ-ಬಾಪು ಮನೆಯವರು ಪ್ರಣಾಮಿಗಳು. ಮೋಕ ಗಾಂಧಿ ಮಹಾತ್ಮಾ ಗಾಂಧಿಯೆನಿಸಿಕೊಳ್ಳುವುದರ ಹಿಂದೆ ಪ್ರಣಾಮಿ ಪಂಥದ ಪ್ರಭಾವ ದಟ್ಟವಾಗಿದೆ. ಅದೇನದು ಪ್ರಣಾಮಿ?



400 ವರ್ಷ ಕೆಳಗೆ ದೇವಚಂದ್ರಜಿ ಮಹಾರಾಜರಿಂದ ಶುರುವಾದದ್ದು ನಿಜಾನಂದ ಸಂಪ್ರದಾಯ. ಪಾಕಿಸ್ತಾನದ ಸಿಂಧ್‌ನವರಾಗಿದ್ದ ದೇವಚಂದ್ರಜಿ ಗುಜರಾತಿನ ಜಾಮನಗರದಲ್ಲಿ ನೆಲೆಯಾದರು. ಎಲ್ಲರಲ್ಲೂ ಆತ್ಮಜ್ಞಾನ ಮೂಡಬೇಕು, ಅದುವೇ ಪವಿತ್ರ ಜ್ಞಾನ ‘ತಾರತಮ್’ ಎನ್ನುತ್ತಿದ್ದ ಅವರಿಗೆ ಜಾಮನಗರದ ದಿವಾನರ ಮಗ ಮೆಹ್ರಾಜ್ ಠಾಕೂರ್ ಪರಮಶಿಷ್ಯನಾದ. ಆತನೇ ಮುಂದೆ ‘ಮಹಾಮತಿ ಪ್ರಾಣನಾಥ ಮಹಾರಾಜ್’ ಎಂದು ಹೆಸರಾಗಿ ಪ್ರಣಾಮಿ ಪಂಥ ಬೆಳೆಯಲು ಕಾರಣರಾದರು. ಪ್ರಾಣನಾಥರಿಗೆ ಹಲವು ಧರ್ಮದ ಅನುಯಾಯಿಗಳಿದ್ದರು. ಮುಸ್ಲಿಮರು ಪ್ರಾಣನಾಥನನ್ನು ‘ಕೊನೆಯ ಇಮಾಂ ಮೆಹ್ನದಿ’ ಎಂದು ಪರಿಗಣಿಸಿದ್ದರೆ, ಹಿಂದೂಗಳು ಕಲ್ಕಿಯ ಅವತಾರವೆಂದು ಭಾವಿಸಿದ್ದರು. ಇವತ್ತಿಗೂ ಪ್ರಣಾಮಿ ಗಾಯಕ-ಗಾಯಕಿಯರು ಪ್ರವಾದಿ ಮುಹಮ್ಮದರನ್ನು ಮತ್ತು ಕೃಷ್ಣನನ್ನು ಒಟ್ಟೊಟ್ಟಿಗೆ ನೆನೆಯುತ್ತಾರೆ. ಅವರ ಪ್ರಾರ್ಥನೆ, ಪುಸ್ತಕಗಳಲ್ಲಿ ಮೋಮಿನ್, ಹಕೀಕತ್, ಖಯಾಮತ್, ಹುಕುಂನಂತಹ ಪದಗಳು ಹೇರಳವಾಗಿವೆ.

ಭಾರತ, ಇರಾಕ್, ಇರಾನು, ಅರೇಬಿಯಾಗಳನ್ನೆಲ್ಲ ಪ್ರಾಣನಾಥಜಿ ಸುತ್ತಿದ್ದರು. ಮೆಕ್ಕಾ, ಮಥುರಾಗಳಿಗೆ ಯಾತ್ರೆ ಹೋಗುತ್ತಿದ್ದರು. ಹರಿದ್ವಾರದ ಕುಂಭಮೇಳದಲ್ಲಿ ವಿವಿಧ ಪಂಥ-ಗುಂಪುಗಳೊಡನೆ ವಾಗ್ವಾದ ನಡೆಸಿ ‘ನಿಷ್ಕಳಂಕ ಬಿಜಯಾಭಿನಂದ ಬುಧ್ ಅವತಾರ್’ ಎಂಬ ಬಿರುದು ಪಡೆದಿದ್ದರು. ತಮ್ಮ ಜ್ಞಾನವನ್ನೆಲ್ಲ ಗುಜರಾತಿ, ಸಿಂಧಿ, ಉರ್ದು, ಅರೇಬಿಕ್, ಪರ್ಷಿಯನ್, ಹಿಂದಿ ಭಾಷೆಗಳಲ್ಲಿ ‘ಕುಲ್ಜಾಮ್ ಸ್ವರೂಪ್’ ಆಗಿ ಪ್ರಸ್ತುತಪಡಿಸಿದರು. ಅದು ಹದಿನಾಲ್ಕು ಗ್ರಂಥಗಳ ಗುಚ್ಛ ‘ತಾರತಮ್ ಸಾಗರ್’ ಎಂದೂ ಹೆಸರಾಗಿದೆ. ಅದರಲ್ಲಿ ವೇದ, ಕತೇಬ್‌ಗಳ ಸಾರವಿದೆ. (ಕತೇಬ್ ಎಂದರೆ ಕುರಾನ್, ತೋರಾ, ಡೇವಿಡನ ಕೀರ್ತನೆ, ಬೈಬಲ್‌ಗಳಂತಹ ಧರ್ಮಗ್ರಂಥಗಳು.) ಅದಲ್ಲದೆ ಪರಂಧಾಮ ಎಂಬ ಅಂತಿಮ ಗಮ್ಯವನ್ನು ತಲುಪುವ ಮಾರ್ಗ ಕುರಿತ ವಿವರಣೆಯಿದೆ. 18, 758 ಶ್ಲೋಕಗಳಿದ್ದು ಮಹಾಮತಿ ಪ್ರಾಣನಾಥನ ಬೋಧನೆ, ಜ್ಞಾನದ ಸಾರವೆಲ್ಲ ಅವುಗಳಲ್ಲಿದೆ.



ಪ್ರಣಾಮಿಗಳು ಹೆಂಡ, ಹೊಗೆಸೊಪ್ಪು, ಮಾಂಸಾಹಾರ ಸೇವಿಸುವುದಿಲ್ಲ. ಜಾತಿ-ಧರ್ಮದ ಭೇದವಿಲ್ಲ. ಮೂರ್ತಿಪೂಜೆ ಇರುವುದಿಲ್ಲ. ಪವಿತ್ರ ಹೊತ್ತಗೆಗಳನ್ನು ಜೋಕಾಲಿ ಮೇಲಿಟ್ಟು ತೂಗುತ್ತಾರೆ. ತೀರ್ಥ-ಪ್ರಸಾದಗಳಿಗೆ ಮಹತ್ವವಿಲ್ಲ. ಕುಲ್ಜಾಮ್ ಸ್ವರೂಪ್‌ನ ಪಠಣ ಮತ್ತು ಮನನವೇ ವ್ರತ, ಆಚರಣೆ. ವ್ರತಾಚರಣೆಗೆ ಪವಿತ್ರ ಹೊತ್ತಗೆಯ ಓದು ಕಡ್ಡಾಯವಾಗಿದೆ. ನಿರ್ದಿಷ್ಟ ಅವಧಿಯಲ್ಲಿ ನಿರ್ದಿಷ್ಟ ಬಾರಿ ‘ಓದ’ಲೇಬೇಕು. ‘ಓದದವರ’ ಪರವಾಗಿ ಆಗಲೇ ಮುಗಿಸಿದವರು ಓದಿ ಸಹಾಯ ಮಾಡುತ್ತಾರೆ!

3

ಪ್ರಣಾಮಿ ಮಂದಿರ ಹುಡುಕುತ್ತ ಇಡಿಯ ಪೋರಬಂದರದ ಅರ್ಧವೃತ್ತಾಕಾರದ ಸಮುದ್ರದಂಡೆ, ಹುಜೂರ್ ಪ್ಯಾಲೇಸ್, ಉಪ್ಪಿನ ಫ್ಯಾಕ್ಟರಿ, ದೀಪಸ್ತಂಭ, ಜೆಟ್ಟಿ ಎಲ್ಲ ಸುತ್ತಿದ್ದಾಯಿತು. ಕೆಲವರಿಗೆ ಆ ಹೆಸರೇ ಗೊತ್ತಿಲ್ಲ. ಕೆಲವರಿಗೆ ಎಲ್ಲೆಂದು ಗೊತ್ತಿಲ್ಲ. ಮತ್ತೆ ಕೆಲವರು, ‘ಸ್ವಾಮಿನಾರಾಯಣ ದೇವಸ್ಥಾನ, ಅಕ್ಷರಧಾಮದಂತಹ ದೊಡ್ಡದೊಡ್ಡ ಮಂದಿರಗಳಿವೆ. ದ್ವಾರಕಾ, ಸೋಮನಾಥವಿದೆ. ಪ್ರಣಾಮಿಯನ್ನೇಕೆ ಹುಡುಕುತ್ತೀರಿ?’ ಎಂದರು. ಸಾರಥಿ ವಿಜಯನದೂ ಅದೇ ಪ್ರಶ್ನೆ. ಪೋರಬಂದರದ ಮತ್ತೊಂದು ಹೆಸರು ಸುದಾಮಪುರಿ. ದೇಶದಲ್ಲಿ ಎಲ್ಲೂ ಇಲ್ಲದ ಸುದಾಮನ ದೇವಾಲಯಕ್ಕೆ ವಿಜಯ ಕರೆದುಕೊಂಡು ಹೋಗಿ, ಅವಲಕ್ಕಿ ಪ್ರಸಾದ ಕೊಡಿಸಿ, ಸುಮ್ಮನಾಗಿಸಲು ನೋಡಿದ. ನಾನು ಪ್ರಣಾಮಿ ಜಪ ಬಿಡಲಿಲ್ಲ. ಕೊನೆಗೆ ಗೂಗಲಿಸಿದೆವು. ಅದು ಊರಿಡೀ ಸುತ್ತಿಸಿ ಅತಿಕಿರಿದಾದ ಗಲ್ಲಿಯಲ್ಲಿ ಹೊತ್ತುಹಾಕಿತು.

ಅಲ್ಲೆಂಥ ಮಂದಿರ? ಯಾವ ಗೋಪುರವೂ ಕಾಣುತ್ತಿಲ್ಲ!

ಕೊಚ್ಚೆಯಲ್ಲಿ ಒಂಟಿಗಾಲಿಟ್ಟು ನಡೆಯುತ್ತಿದ್ದ ಹಿರಿಯರೊಬ್ಬರು ಮಾಳಿಗೆಯ ಮೇಲೆ ಮಂದಿರವಿದೆ ಎಂದರು. ಒಂದೇ ಹೆಜ್ಜೆಯೂರುವಷ್ಟು ಸಣ್ಣ ಮೆಟ್ಟಿಲು. ಮೇಲೆ ಹೋದರೆ ಬಾಗಿಲು ಮುಚ್ಚಿತ್ತು. ನಂಬಿ ಕರೆದರೂ ಯಾರೂ ಓಗೊಡಲಿಲ್ಲ. ಯಾವ ಸದ್ದೂ ಇಲ್ಲ. ಹತ್ತು ನಿಮಿಷ ಕಾದೆ. ಇದೊಂದು ಉಳಿಯಿತಲ್ಲ ಎಂದು ಬೇಸರಿಸುತ್ತ ವಾಪಸು ಬರುವಾಗ ಅಲೆಲೆ! ಕಸ್ತೂರಬಾ ಮನೆ ಎಡತಾಕಿತು. ನನ್ನ ಕಂಡ ವಿನೋದ್‌ಕುಮಾರ್ ಮತ್ತೆ ಪ್ರಣಾಮಿ ಮಂದಿರಕ್ಕೆ ಕರೆದೊಯ್ದರು. ಬಾ-ಬಾಪು ಮನೆಯವರು ಅಲ್ಲಿಗೇ ಬರುತ್ತಿದ್ದರೆಂದು ಹೇಳುತ್ತಾ, ‘ಮಹಾರಾಜ್’ ಎಂದು ಕೂಗಿದರು ವಿನೋದ್. ‘ಹಲೋ’ ‘ಜೀ’ಗಳಿಗೆ ಓಗೊಡದಿದ್ದ ಪ್ರಣಾಮಿ, ‘ಮಹಾರಾಜ್’ ಸದ್ದಿಗೆ ಓಗೊಟ್ಟು ಬಾಗಿಲು ತೆರೆದರು.

ಬರಿಯ ನಂಬಿ ಕರೆದರೆ ಸಾಲದು, ಕರೆವಂತೆ ಕರೆದರಷ್ಟೇ ಓ ಎನ್ನುವನು ಶಿವನು!

ಮಹಡಿ ಹತ್ತಿದೆವು. ಗೋಡೆ ಮೇಲೆ ಸಂತರ ಫೋಟೋಗಳು, ಉರಿಯುತ್ತಿರುವ ಊದುಗಡ್ಡಿ, ಲೋಬಾನದ ಹೊಗೆಯ ಹಜಾರದಲ್ಲಿ ಒಂದೆಡೆ ಅಲಂಕೃತ ಮಂಟಪವಿತ್ತು. ಅದರಲ್ಲಿ ಫಳಫಳ ಹೊಳೆವ ಕೆಂಪು ಜರಿಯ ಬಟ್ಟೆ ಹೊದೆಸಿದ ಜೋಕಾಲಿ. ಅದರ ಮೇಲೆರಡು ಹೊತ್ತಗೆರಾಶಿ. ಅವುಗಳ ಮೇಲೆ ಕಿರೀಟ, ತೂಗುವ ಛತ್ರ. ಇದುವೇ ಆರಾಧನಾ ಸ್ಥಳ. ಜೋಕಾಲಿಯನ್ನು ಅಂದರೆ ಹೊತ್ತಗೆಗಳನ್ನು ತೂಗುವುದೇ ಪೂಜೆ! ಮಡಿಯಿಲ್ಲ, ಮೈಲಿಗೆಯಿಲ್ಲ. ಎಲ್ಲರೂ, ಎಲ್ಲವೂ ಪವಿತ್ರ.




ಮಹಾರಾಜ್ ಪ್ರಣಾಮಿ ಪಂಥ ಕುರಿತು ಸಾಕಷ್ಟು ವಿವರ ನೀಡಿದರು.

ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಅಸ್ಸಾಂ, ಸಿಕ್ಕಿಂ, ಪಶ್ಚಿಮ ಬಂಗಾಳದಲ್ಲಿ ಪ್ರಣಾಮಿಗಳಿದ್ದಾರೆ. ವಿದೇಶಗಳಲ್ಲಿಯೂ ಇದ್ದಾರೆ. ಈಗದು ಹಿಂದೂ ಧರ್ಮದ ಪಂಥವಾಗಿ ಪರಿಗಣಿಸಲ್ಪಟ್ಟಿದೆ. ಅಲ್ಲಿದ್ದವರು ಕಲಕತ್ತಾದವರು. ಧರ್ಮರಕ್ಷಕರ ಕೆಂಗಣ್ಣಿಗೆ ಗುರಿಯಾಗಿ ಪ್ರಣಾಮಿ ಪಂಥದವರ ಸಂಖ್ಯೆ ಗುಜರಾತಿನಲ್ಲಿ ಇಳಿಮುಖವಾಗುತ್ತಿದೆ. ಬಂಗಾಳ, ಅಸ್ಸಾಮಿನಿಂದ ಬಂದವರೇ ಇಲ್ಲಿ ಪೂಜೆ ಮಾಡುವರಂತೆ. ಮಾತನಾಡುತ್ತ ಜೋಕಾಲಿ ತೂಗಿರೆಂದು ಲೋಹ ಸರಪಳಿಯನ್ನು ನನ್ನ ಕೈಗಿಟ್ಟರು. ಕೊಂಚ ಎಳೆದದ್ದೇ ಜೋಕಾಲಿ ತೂಗಿತು. ಹಸುಗೂಸಿನಂತೆ ಪವಡಿಸಿದ ಪುಸ್ತಕಗಳ ತೂಗಿದರೆ ಕಿಣಿಕಿಣಿ, ಗಲಗಲ ಸದ್ದು! ಹೊತ್ತಗೆಗಳು ನಮ್ಮನ್ನು ನೋಡಿ ನಗುತ್ತಿರುವಂತಿದೆ.

‘ಎಲುಬಿನ ಹಂದರ’ದ ಮೂಡ್ನಾಕೂಡು ಅವರನ್ನು, ‘ನೈಹರವಾ’ದ ಕಬೀರನನ್ನು ಪುಸ್ತಕದ ದೇವರಿಗೆ ಹಾಡಿನ ಮೂಲಕ ಮುಖಾಮುಖಿಯಾಗಿಸಿದೆವು. ಕನ್ನಡ ಹಾಡಿನ ಅರ್ಥ ತಿಳಿದು ಮಹಾರಾಜರಿಗೆ ಎಷ್ಟು ಖುಷಿಯಾಯಿತೆಂದರೆ ತಮ್ಮ ಪಂಥ ಹೇಳುವುದೂ ಇದೇ ತತ್ತ್ವವನ್ನು ಎನ್ನುತ್ತಾ, ಒಂದು ಶ್ಲೋಕ ಹೇಳಿದರು:

‘ಜೊ ಕಚ್ಚು ಕಹ್ಯಾ ವೇದ್ ನೆ/ಸೊ ಹಿ ಕಹ್ಯಾ ಕತೇಬ್
ದೋನೋ ಬಂದೆ ಏಕ್ ಸಾಹೇಬ್ ಕೆ/ಪರ್ ಲಡತ್ ಪಾಯೆ ಬಿನಾ ಭೇದ್’ 

(ವೇದ ಏನು ಹೇಳಿದೆಯೋ/ಕತೇಬ್ ಅದನೇ ಹೇಳಿದೆ
ಇಬ್ಬರೂ ದೇವರ ಮಕ್ಕಳೇ/ಕಾದಾಡುವರು ನಿಜವರಿಯದೆ’)

ವಾಹ್! ಕಬೀರಾ, ಬಾರದಿದ್ದರೆ ನನ್ನ ಭೇಟಿ ಅಪೂರ್ಣವಾಗುತ್ತಿತ್ತಲ್ಲ ಮಾರಾಯಾ..