‘ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲಿನ’ ನಮ್ಮೂರಿಗೆ ಯಾತ್ರೆ-ಪ್ರವಾಸ-ಮೋಜು-ಪ್ರಿವೆಡ್ಡಿಂಗ್ ಫೋಟೋ ಮುಂತಾಗಿ ನಾನಾ ಕಾರಣಗಳಿಂದ ಬಂದವರು, ‘ಎಲ್ಲ ಸರಿ, ಇನ್‌ಸೊಲ್ಪ ಡೆವಲಪ್ ಆಗ್ಬೇಕಿತ್ತು’ ಎಂಬ ಷರಾ ಉಳಿಸಿ ಹೋಗುತ್ತಾರೆ. ಅವರ ಪ್ರಕಾರ ಸಂದಿಮೂಲೆಗೂ ಸುಲಭವಾಗಿ ತಲುಪಲು ರಸ್ತೆ, ಹೋದಲ್ಲೆಲ್ಲ ಚಾಟ್-ಚಾ-ಗುಟ್ಕಾ ಅಂಗಡಿ, ‘ಎಕ್ಸಾಟಿಕ್ ಲೊಕೇಷನ್’ಗಳಲ್ಲಿ ಹೋಟೆಲು-ರೆಸಾರ್ಟ್, ಒಳ್ಳೇ ನೆಟ್ ಕನೆಕ್ಟಿವಿಟಿ ಇಲ್ಲಿಲ್ಲ. ಇಲ್ಲಗಳ ಕಾರಣದಿಂದಲೇ ಅಷ್ಟಿಷ್ಟು ಹಸಿರು ಉಳಿದಿದೆಯೆಂದು ಗುರುತಿಸದೇ, ‘ಅದಾಗ್ಬಿಟ್ರೆ ಲೋಕಲ್ ಜನ್ರುಗೆ ವ್ಯಾಪಾರ ಆಗುತ್ತೆ, ಅವರೂ ಡೆವಲಪ್ ಆಗ್ತಾರೆ’ ಎನ್ನುತ್ತಾರೆ! ಆದರೆ ಇದುವರೆಗಿನ ಅಭಿವೃದ್ಧಿಯಿಂದ ಮೂರೂ ಮುಕ್ಕಾಲು ಜನ ಉಳ್ಳವರು ಡೆವಲಪ್ ಆಗಿದ್ದು ಬಿಟ್ಟರೆ, ಉತ್ತರಕನ್ನಡದ ಕಾಡು, ನದಿ, ಅಳಿವೆ, ಹಳ್ಳ, ಸಂಕ, ಕಡಲ ತೀರಗಳಲ್ಲೆಲ್ಲ ಕಸದ ರಾಶಿ ಗುಡ್ಡವಾಗಿ ಬೆಳೆದಿದೆ. ಜೀವವೈವಿಧ್ಯ ಕಳೆದುಕೊಂಡು ಶರಾವತಿ ಮೃತ ನದಿಯಾಗುವತ್ತ ಸರಿಯುತ್ತಿದ್ದಾಳೆ. ಅದ್ಯಾವುದೋ ಬಿಲಿಯಾಧಿಪತಿಯು ಇನ್ನೆಲ್ಲೋ ತಯಾರಿಸಿ ಇಲ್ಲಿ ತಂದುತಂದು ಸುರಿದ ಬಾಟಲು-ಪ್ಯಾಕೆಟ್ಟುಗಳು ಗೂಡಂಗಡಿಗಳಲ್ಲಿ ರಾರಾಜಿಸುತ್ತ ನಮ್ಮ ಹಪ್ಪಳ, ಬಾಳೆದಿಂಡಿನ ಬೆಲ್ಲ, ಹುರಿದ ಶೇಂಗಾ, ಮುರುಗಲು ಹುಳಿ ಪಾನಕ, ಅನಾನಸ್ ಪಾಕ, ಬಾಳೆಕಾಯಿ-ಹಲಸಿನಕಾಯಿ ಉಪ್ಕರಿಗಳಂತಹ ತಿಂಡಿತೀರ್ಥ ತಯಾರಿಸಿ ಮಾರುವುದನ್ನು ಜನ ಮರೆಯುತ್ತಿದ್ದಾರೆ. ಪರಿಸರದೊಂದಿಗಿನ ಸಹಬಾಳ್ವೆಯ ಪಾರಂಪರಿಕ ಬದುಕು ಮರೆತೇ ಹೋಗುತ್ತಿದೆ.
ಇದು ನಮ್ಮೂರಲ್ಲಷ್ಟೇ ಅಲ್ಲ, ವಿಶ್ವದೆಲ್ಲೆಡೆ ಸಂಭವಿಸುತ್ತಿರುವ ಸಂಗತಿ. ಅಭಿವೃದ್ಧಿಯೆಂದರೆ ಈಗಿರುವುದಕ್ಕಿಂತ ಸುಲಭವಾಗಿ, ಶ್ರಮರಹಿತವಾಗಿ, ಬೇಜವಾಬ್ದಾರಿಯಿಂದ ಬದುಕುವ ‘ಸುಖ’ವನ್ನು ಸಾಧ್ಯ ಮಾಡುವುದು ಎನ್ನುವಂತಾಗಿದೆ. ಇದಕ್ಕೆ ಇಂಬು ಕೊಡುವಂತೆ ಅವಶ್ಯಕತೆಗಿಂತ ಲಕ್ಷಪಟ್ಟು ಹೆಚ್ಚೆಚ್ಚು ವಸ್ತುಗಳನ್ನು ಉತ್ಪಾದಿಸಿ, ಕೊಳ್ಳಲೇಬೇಕೆನ್ನುವಂತೆ ಮಾರುಕಟ್ಟೆಯ ಬಲೆ ಬೀಸಿ, ಜನರ ಕಿಸೆಗೆ ಕನ್ನ ಹಾಕುವ ಭಾರೀ ಬಂಡವಾಳ ಸುರಿದ ಉದ್ಯಮಗಳಿವೆ. ಈ ‘ಮ್ಯಾಡ್ ರಶ್’ ಅನ್ನು ಮೊದಲೇ ಊಹಿಸಿದ ಹಲವಾರು ಚಿಂತಕರು ಕೈಗಾರಿಕೀಕರಣವು ಜನರಲ್ಲಿ ಶ್ರಮಶಕ್ತಿಯ ಒಲವನ್ನು ಕಡಿಮೆ ಮಾಡಿ, ಸ್ವಾರ್ಥ ಮತ್ತು ವಸ್ತುಮೋಹ ಬೆಳೆಸುತ್ತದೆ, ಮನುಷ್ಯ ಹಿತಕ್ಕೆ ವಿರುದ್ಧವಾಗಲಿದೆ ಎಂದು ಹೇಳಿದ್ದರು.
ಅದ್ಯಾವುದೂ ನಮಗೆ ನೆನಪಿಲ್ಲ. ಅಭಿವೃದ್ಧಿಯ ಜಾರುಬಂಡಿಯಲ್ಲಿ ವೇಗವಾಗಿ ಇಳಿಯುತ್ತಿದ್ದೇವೆ. ಎಲ್ಲಿಗೂ ತಲುಪದ ಈ ಜಾರಬಂಡಿಯ ಚಲನೆ ಒಂದುರೀತಿಯ ಉನ್ಮಾದ ಸೃಷ್ಟಿಸಿದೆ. ತಮ್ಮದೇ ಸಂಪನ್ಮೂಲಗಳಿಂದ ವಂಚಿತರಾದರೂ ದನಿಯೆತ್ತಲಾಗದ ವಸ್ತು ಮೋಹ ಆವರಿಸಿಬಿಟ್ಟಿದೆ. ಇಂತಹ ಕಾಲಘಟ್ಟದಲ್ಲಿ ನಮ್ಮನ್ನು ಎಚ್ಚರಿಸುವಂತೆ ಕೆಲವು ಬರಹ, ಬದುಕುಗಳು ಮತ್ತೆಮತ್ತೆ ಕಣ್ಣೆದುರು ಸುಳಿಯುತ್ತವೆ. ಅವರಲ್ಲಿ ಗಾಂಧಿ ಒಬ್ಬರು.
ಯಂತ್ರ ನಾಗರಿಕತೆಯು ಅಸಮ ಅಭಿವೃದ್ಧಿಗೆ ಕಾರಣವಾಗಿ ಹಿಂಸೆ, ಸರ್ವಾಧಿಕಾರ ನೆಲೆಯಾಗುತ್ತದೆಂದು ಗಾಂಧಿ ೧೯೦೮ರ ತಮ್ಮ ಹಿಂದ್ ಸ್ವರಾಜ್ ಪುಸ್ತಕದಲ್ಲಿ ಪ್ರತಿಪಾದಿಸಿದ್ದರು. ಬ್ರಿಟಿಷರೆಂಬ ಭಾರೀ ಬಂಡವಾಳಗಾರರು ನಮ್ಮ ನೆಲದ ಸಂಪನ್ಮೂಲಗಳನ್ನು ಲೂಟಿ ಮಾಡಿದ್ದಲ್ಲದೆ ಉತ್ಪಾದನಾ ಕೌಶಲ್ಯವನ್ನೂ ಮೊಟಕುಗೊಳಿಸಿ ಕುಶಲಕರ್ಮಿಗಳ ಬದುಕನ್ನು ಮೂರಾಬಟ್ಟೆ ಮಾಡಿದ ಸಂದರ್ಭದಲ್ಲಿ ಗಾಂಧಿ, ‘ನಿಮ್ಮ ವಸ್ತು ನಮಗೆ ಬೇಡ’ವೆಂಬ ನಿರಾಕರಣೆಯ ಹೋರಾಟ ರೂಪಿಸಿದರು. ಲಾಭಕೋರ ಆರ್ಥಿಕ ರಾಜಕಾರಣದ ವಿರುದ್ಧ ನೈತಿಕ, ರಾಜಕೀಯ ಮತ್ತು ಆರ್ಥಿಕ ಪ್ರತಿರೋಧದ ವಿಶಿಷ್ಟ ಅಸ್ತ್ರವಾಗಿ ‘ಖಾದಿ’ಯನ್ನು ಮುಂದಿಟ್ಟರು. ಅದು ಭಾರತೀಯರೆಲ್ಲ ರಾಜಕೀಯ ಸ್ವಾತಂತ್ರ್ಯ ಪಡೆಯುವುದರ ಜೊತೆಗೆ ‘ಆತ್ಮಸ್ವರಾಜ್ಯ’ದ ಕಡೆಗೆ ಚಲಿಸುವಂತೆ ಮಾಡುವ ಉಪಾಯವಾಗಿತ್ತು.
ಆದರೆ ಮೊದಮೊದಲು ಭಾರೀ ಬೆಂಬಲ ಪಡೆದ ಚರಕಾ, ಖಾದಿ ಚಿಂತನೆಗಳು ಬರಬರುತ್ತ ಕಾಂಗ್ರೆಸ್ಸಿನ ಒಳಗೇ ಮೂಲೆಗುಂಪಾದವು. ಸ್ವಾತಂತ್ರ್ಯಾನಂತರ ಗಾಂಧೀಜಿಯವರ ಗ್ರಾಮೀಣಾಭಿವೃದ್ಧಿ ಯೋಜನೆಗಳು ಸಂಪೂರ್ಣ ಕಡೆಗಣಿಸಲ್ಪಟ್ಟವು. ಅದಾಗಿ 75 ವರ್ಷ ಕಳೆದು ನಮ್ಮ ನದಿಗಳಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ೨೦೨೨ನೇ ಇಸವಿಯಲ್ಲಿ ಲಾಂಛನ ಮತ್ತು ಹೆಸರುಗಳ (ಅನುಚಿತ ಬಳಕೆ ತಡೆಗಟ್ಟುವಿಕೆ) ಕಾಯ್ದೆ-1950 ಮತ್ತು ಭಾರತದ ಧ್ವಜ ಸಂಹಿತೆಗಳಿಗೆ ತಿದ್ದುಪಡಿ ತರಲಾಯಿತು. ಭಾರತದ ರಾಷ್ಟ್ರಧ್ವಜವನ್ನು ತಯಾರಿಸಲು ಕೇವಲ ಖಾದಿ ವಸ್ತ್ರವನ್ನಷ್ಟೇ ಬಳಸಬೇಕೆಂದು ಇದ್ದ ನಿಯಮ ಬದಲಿಸಿ ಯಂತ್ರನಿರ್ಮಿತ, ಪಾಲಿಯೆಸ್ಟರ್ ಮತ್ತಿತರ ಬಟ್ಟೆಗಳಿಂದಲೂ ರಾಷ್ಟ್ರಧ್ವಜ ಮಾಡಬಹುದೆಂದು ಹೇಳಲಾಯಿತು. 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು 20 ಕೋಟಿ ಮನೆಗಳಿಗೆ ಧ್ವಜ ತಲುಪಿಸುವ ತರಾತುರಿಯಲ್ಲಿ ವಿದೇಶದಿಂದ (ಚೀನಾ?) ಸಸ್ತಾ, ಅನಾಕರ್ಷಕ ರಾಷ್ಟ್ರಧ್ವಜಗಳು ಆಮದಾದವು. ಈ ಮೂಲಕ ಖಾದಿಯ ಬಹುಮುಖ್ಯ ಖರೀದಿದಾರ ವ್ಯವಸ್ಥೆಯಾಗಿದ್ದ ಸರ್ಕಾರವು ಬಹಿರಂಗವಾಗಿಯೇ ಅದರಿಂದ ದೂರ ಸರಿಯಿತು. ಗಾಂಧಿಯನ್ನು ಕೊಂದವರು ಗಾದಿ ಮೇಲೆ ಕುಳಿತಿರುವಾಗ ಗಾಂಧಿ ತತ್ವಗಳನ್ನೂ, ಅದರ ಸಂಕೇತಗಳನ್ನೂ ಒಂದೊಂದಾಗಿ ಗುರಿಯಿಟ್ಟು ಬೀಳಿಸುವುದು ಅವ್ಯಾಹತವಾಗಿ ಮುಂದುವರೆಯಿತು.
ಇಂತಹ ಸಂಕೀರ್ಣ ಕಾಲಘಟ್ಟದಲ್ಲಿ ಗಾಂಧಿ ದೃಷ್ಟಿಕೋನದ ‘ಸ್ವರಾಜ್’ ಅಭಿವೃದಿ ಮಾದರಿಯನ್ನು ಮಂಡಿಸುತ್ತ ಒಬ್ಬ ಯುವ ಕನಸುಗಾರ ‘ಡೆವಲಪ್‌ಮೆಂಟ್ ಆಸ್ ಸ್ವರಾಜ್’ ಎಂಬ ಸಂಶೋಧನಾ ಮಹಾಪ್ರಬಂಧದ ಹೊತ್ತಗೆ ಪ್ರಕಟಿಸಿದ್ದಾರೆ. ಅದು ಅವರು ನಂಬಿ, ಬದುಕಿರುವ ವಿಚಾರವನ್ನೇ ಬುಡಮಟ್ಟ ಇಳಿದು ಜಾಲಾಡಿ ಮಂಡಿಸಿರುವ ಪುಸ್ತಕ. ವರ್ತಮಾನದ ಕೇಡಿಗೆ ತಲ್ಲಣಿಸುವ ಮನಸ್ಸುಗಳು ಗಾಂಧಿ ಚಿಂತನೆಗಳ ಆನ್ವಯಿಕ ವಿಚಾರಧಾರೆಯ ಈ ಹೊಸ ಪುಸ್ತಕವನ್ನು ಓದಿ ಅರಗಿಸಿಕೊಳ್ಳಬೇಕಾದ ಅಗತ್ಯವಿದೆ.
‘ಡೆವಲಪ್‌ಮೆಂಟ್ ಆಸ್ ಸ್ವರಾಜ್’
ಈ ಪುಸ್ತಕ ಬರೆದ ಮೇಲುಕೋಟೆಯ ಸುಮನಸ ಕೌಲಗಿ ಮೂರು ತಲೆಮಾರುಗಳ ಗಾಂಧಿ ಚಿಂತನಾ ಪರಂಪರೆಯ ಕೌಟುಂಬಿಕ ಹಿನ್ನೆಲೆಯವರು. ಅವರ ಅಜ್ಜ ಬಿಜಾಪುರದ ಸುರೇಂದ್ರ ಕೌಲಗಿ ಸರ್ವೋದಯ ತತ್ವಗಳ ಆಧಾರದಲ್ಲಿ ಬದುಕು ಕಟ್ಟಿಕೊಂಡು ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ನೆಲೆಯಾದರು. ಜಯಪ್ರಕಾಶ್ ನಾರಾಯಣರ ಆಪ್ತ ಕಾರ್ಯದರ್ಶಿಯಾಗಿದ್ದ ಅವರು ಸಾಮಾಜಿಕ ಚಟುವಟಿಕೆಗಳ ಜೊತೆಗೆ ಖಾದಿ ಕೇಂದ್ರವನ್ನು ನಡೆಸಿದರು. ಅವರ ಮಗ ಸಂತೋಷ ಕೌಲಗಿ ಮತ್ತು ಕುಟುಂಬದ ಸದಸ್ಯರು ಗಾಂಧಿ ಚಿಂತನಾ ಪರಂಪರೆಯನ್ನು ಮುಂದುವರೆಸುತ್ತಾ, ‘ಹೊಸ ಜೀವನ ದಾರಿ’ ಎಂಬ ಆಶ್ರಮ ಕಟ್ಟಿದ್ದಾರೆ. ಸಾವಯವ ಕೃಷಿ, ಖಾದಿ ಚಟುವಟಿಕೆ, ಅನಾಥಾಶ್ರಮ, ಸಾಮಾಜಿಕ ಕಾರ್ಯಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ಸಂತೋಷ್ ತಮ್ಮ ಮೂವರು ಮಕ್ಕಳಿಗೆ ‘ಮನೆಶಾಲೆ’ಯಲ್ಲಿ ಆರಂಭಿಕ ಮಾತೃಭಾಷಾ ಶಿಕ್ಷಣ ನೀಡಿದರು. ಎಲ್ಲ ಯುವಜನರಂತೆ ಪಾರಂಪರಿಕವಾಗಿ ಬಂದದ್ದರ ಬಗೆಗೆ ಒಂದು ಒಳಘರ್ಷಣೆಯನ್ನಿಟ್ಟುಕೊಂಡೇ ಬೆಳೆದ ಅವರ ಮಗ ಸುಮನಸ್, ಬರಬರುತ್ತ ತಾನು ಪ್ರೀತಿಸಿದ ಮೇಲುಕೋಟೆಯ ಪರಿಸರ, ಕುರುಚಲು ಕಾಡು, ಪಕ್ಷಿಪ್ರಾಣಿಗಳು ಕಣ್ಮರೆಯಾಗತೊಡಗಿದಾಗ ಅದರ ಕಾರಣ, ಪರಿಣಾಮ, ಪರಿಹಾರಗಳ ಬಗೆಗೆ ಗಾಢವಾಗಿ ಚಿಂತಿಸಿದರು. ಸುತ್ತುಮುತ್ತನ್ನು ನಾಶ ಮಾಡಿ ಬದುಕುವುದರಲ್ಲಿ ಏನರ್ಥವಿದೆ? ಪರಿಸರಕ್ಕೆ ಕೇಡಾಗದಂತೆ ಬದುಕಲಾಗದೇ? ಸಮಾಜದ ತಾರತಮ್ಯ ಕೊನೆಯಾಗುವುದು ಹೇಗೆ? ಎಂಬ ಪ್ರಶ್ನೆಗಳು ಕೊರೆಯತೊಡಗಿದಾಗ ಗಾಂಧಿ ಚಿಂತನೆಗಳಲ್ಲಿ ಅವಕ್ಕೆಲ್ಲ ಉತ್ತರವಿರುವಂತೆನಿಸಿತು. ಆಕ್ಸ್‌ಫರ್ಡ್‌ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ಬಳಿಕ, ಸಸೆಕ್ಸ್ ವಿಶ್ವವಿದ್ಯಾಲಯದಿಂದ ‘ಅಭಿವೃದ್ಧಿ-ಸ್ವರಾಜ್ ಆಗಿ’ ಎಂಬ ವಿಷಯದ ಬಗೆಗೆ ಪಿಎಚ್ಡಿ ಮಾಡಿ ೨೦೨೦ರಲ್ಲಿ ಡಾಕ್ಟೊರೇಟ್ ಪದವಿ ಪಡೆದರು. ತಮ್ಮ ಪ್ರೌಢ ಪ್ರಬಂಧದ ಸಲುವಾಗಿ ನಡೆಸಿದ ಓದು, ಹುಡುಕಾಟಗಳು ‘ಡೆವಲಪ್ಮೆಂಟ್ ಆಸ್ ಸ್ವರಾಜ್’ ಎಂಬ ಪುಸ್ತಕವಾಗಿ ಈ ವರ್ಷ ಪ್ರಕಟವಾಗಿದೆ.
ಗಾಂಧೀಜಿ ಮತ್ತವರ ಆಪ್ತವಲಯದ ಅರ್ಥಶಾಸ್ತ್ರಜ್ಞ ಜೆ. ಸಿ. ಕುಮಾರಪ್ಪ ಅವರ ದೃಷ್ಟಿಯಲ್ಲಿ ಸ್ವರಾಜ್ ಆಧರಿತ ಆರ್ಥಿಕತೆಯ ಪರಿಕಲ್ಪನೆಯೇನು? ಸ್ವರಾಜ್ ಮಾದರಿಯ ಅಭಿವೃದ್ಧಿ ಎಂದರೇನು? ಅದು ಹೇಗಿರಬಹುದು? ಹೇಗದನ್ನು ಸಾಧಿಸಬಹುದು? ಎಂದು ಹಂತಹಂತವಾಗಿ, ತರ್ಕಬದ್ಧವಾಗಿ ಸುಮನಸ್ ಈ ಹೊತ್ತಗೆಯಲ್ಲಿ ಪರಿಶೀಲಿಸಿದ್ದಾರೆ.
ಪುಸ್ತಕದಲ್ಲಿ ಸ್ವರಾಜ್ಯ (ಅಥವಾ ಸ್ವರಾಜ್) ಎಂದರೆ ಏನು ಎನ್ನುವುದನ್ನು ಮೊದಲು ವಿಸ್ತೃತವಾಗಿ ಚರ್ಚಿಸಲಾಗಿದೆ. ಸ್ವರಾಜ್ಯ ಎಂದರೆ ಸಂಪೂರ್ಣ ಸ್ವಾಯತ್ತವಾಗಿ ಬದುಕುವ ದಾರಿ. ಎಲ್ಲ ಜೀವಿ ನಿರ್ಜೀವಿಗಳ ನಡುವೆ ಅವಿನಾಭಾವ ಸಂಬಂಧವಿದೆ ಮತ್ತು ಎಲ್ಲದರ ಒಳಿತೇ ಮನುಷ್ಯರ ಒಳಿತು ಆಗಿರುತ್ತದೆ ಎಂಬ ಲೋಕದೊಂದಿಗಿನ ತಾದಾತ್ಮ್ಯವೇ ಸ್ವರಾಜ್ಯದ ಆತ್ಯಂತಿಕ ಸ್ಥಿತಿಯಾಗಿದೆ. ಈ ಮಾದರಿಯ ಅಭಿವೃದ್ಧಿಯಲ್ಲಿ ಉತ್ಪಾದನೆ, ಮಾರಾಟ, ಖರೀದಿಗಳು ಕೇವಲ ಆರ್ಥಿಕ ಚಟುವಟಿಕೆಗಳಾಗದೇ ನೈತಿಕ ಚಟುವಟಿಕೆಗಳಾಗಿರುತ್ತವೆ. ನಾವು ಕೊಳ್ಳುವ ವಸ್ತು ಎಲ್ಲಿಂದ ಬಂತು? ಹೇಗೆ ತಯಾರಾಯಿತು? ತಯಾರಿಕೆಯ ಹಿಂದಿನ ರಕ್ತ, ಬೆವರು, ಕಣ್ಣೀರು ಎಷ್ಟು ಎಂದು ಪರಿಗಣಿಸುವ ನೈತಿಕ ಆಯಾಮವನ್ನು ಅದು ಮುನ್ನೆಲೆಗೆ ತರುತ್ತದೆ. ಶೋಷಣೆ ನಡೆಸಿ ತಯಾರಾದ ವಸ್ತುಗಳನ್ನು ನಿರಾಕರಿಸುತ್ತದೆ. ಇಂತಹ ಬದುಕು ನಡೆಸಲು ಆರ್ಥಿಕ ಸ್ವಾಯತ್ತತೆಯೂ ಮುಖ್ಯ. ಅದಕ್ಕಾಗಿ ದೂರದ ನಗರ/ದೇಶದಲ್ಲಿ ಬೃಹತ್ ಬಂಡವಾಳಿಗರ ಕಾರ್ಖಾನೆಗಳು ತಯಾರಿಸಿದ ವಸ್ತುಗಳ ಬದಲಾಗಿ ಸಣ್ಣ ಉದ್ದಿಮೆ, ಗುಡಿ ಕೈಗಾರಿಕೆಯಿಂದ ತಯಾರಾದ, ಕೈಯಿಂದ ತಯಾರಾದ, ಸ್ಥಳೀಯವಾಗಿ ಉತ್ಪಾದಿಸಲಾದ ವಸ್ತುಗಳನ್ನು ಬಳಸಬೇಕು. ನಮ್ಮ ಜೀವನಾವಶ್ಯಕತೆಗಳ ಮೇಲೆ, ಕೊಳ್ಳುವಿಕೆಯ ಮೇಲೆ ಮಿತಿ ಹೇರಿಕೊಳ್ಳಬೇಕು. ನಮ್ಮ ಅಗತ್ಯಗಳನ್ನು ಸಾಧ್ಯವಾದಷ್ಟು ನಾವೇ ಪೂರೈಸಿಕೊಳ್ಳಬೇಕು. ಹೀಗೆ ಬದುಕುವ ಮೂಲಕ ನಮ್ಮ ಮೇಲಿನ ರಾಜಕೀಯ ಹಿಡಿತ ಕಡಿಮೆಗೊಳಿಸಬೇಕು. ಪ್ರತಿ ಗ್ರಾಮವೂ ತನ್ನ ಅಗತ್ಯಗಳನ್ನು ತಾನೇ ಪೂರೈಸಿಕೊಳ್ಳಲು ಸಾಧ್ಯವಾಗುವಂತೆ ಅಧಿಕಾರ ವಿಕೇಂದ್ರೀಕರಣವಾಗಬೇಕು. ಬ್ರಿಟಿಷರು ಭಾರತದಿಂದ ಹೊರಹೋಗಿ ರಾಜಕೀಯ ಸ್ವಾತಂತ್ರ್ಯ ಬಂದರೆ ಸಾಲದು, ‘ಸ್ವರಾಜ್ಯ’ ಬರಬೇಕು ಎಂಬ ಗಾಂಧಿ ದೃಷ್ಟಿಕೋನವು ಸ್ವರಾಜ್ ಅಭಿವೃದ್ಧಿ ಮಾದರಿಯ ಕಾಣ್ಕೆಯಾಗಿದೆ ಎಂದು ಪುಸ್ತಕದಲ್ಲಿ ಗುರುತಿಸಲಾಗಿದೆ.
ಮಾನವರ ಶ್ರಮಕ್ಕೆ ಅತಿ ಹೆಚ್ಚು ಮೌಲ್ಯ ನೀಡುವ ಸ್ವರಾಜ್ ಮಾದರಿಯ ಅಭಿವೃದ್ಧಿ ಬರಿಯ ಪುಸ್ತಕದ ಚಿಂತನೆಯೋ ಅಥವಾ ಪ್ರಸ್ತುತ ಕಾಲಮಾನದಲ್ಲಿ ನಿಜವಾಗಲು ಸಾಧ್ಯವೋ ಎಂದು ಪರೀಕ್ಷಿಸಲು ಗಾಂಧೀಜಿಯವರ ಮುಖ್ಯ ಪ್ರಯತ್ನಗಳಲ್ಲಿ ಒಂದಾದ ಖಾದಿ ವಲಯವನ್ನು ಸುಮನಸ್ ವಿವರವಾಗಿ ಪರಿಶೀಲಿಸಿದ್ದಾರೆ. ಸರ್ಕಾರಿ ಮತ್ತು ಖಾಸಗಿ ವಲಯದ ಹತ್ತಾರು ಪ್ರಯತ್ನಗಳ ಬಗೆಗೆ ವಿವರ ನೀಡಿದ್ದಾರೆ. ಖಾದಿ ಕ್ಷೇತ್ರದ ಒಳಹೊರಗುಗಳ ಹೊಕ್ಕು ನೋಡುವ ಮೊದಲು ಹತ್ತಿ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟಗಳು ಒಂದರೊಡನೊಂದು ಬೆಸೆದುಕೊಂಡ ಚರಿತ್ರೆಯನ್ನು ಪರಿಶೀಲಿಸಲಾಗಿದೆ.
ಹತ್ತಿ ಮತ್ತು ಸ್ವಾತಂತ್ರ್ಯ
ಕ್ರಿ. ಪೂ. 5000ದ ಹೊತ್ತಿಗೆ ಸಿಂಧೂ ಬಯಲ ನಾಗರಿಕತೆ ರೂಪುಗೊಳ್ಳುವಾಗ ಭಾರತ ನೆಲದಲ್ಲಿ ಹತ್ತಿ ಬೆಳೆಯುತ್ತಿದ್ದರು. ಬಣ್ಣದ ಬಟ್ಟೆ ತಯಾರಿಸುವ ಕೆಲಸವು ಕುಶಲಕಲೆಯಾಗಿ ವಿಕಾಸಗೊಂಡಿತು. ವಿಶ್ವದ ಅತ್ಯುತ್ತಮ ಗುಣಮಟ್ಟದ ಬಟ್ಟೆ ತಯಾರಾಗುವ ದೇಶಗಳಲ್ಲಿ ಭಾರತ ಪ್ರಮುಖವಾಗಿತ್ತು. ಈಸ್ಟ್ ಇಂಡಿಯಾ ಕಂಪನಿ ಭಾರತಕ್ಕೆ ಬಂದದ್ದು ಕಚ್ಚಾವಸ್ತು ಕೊಳ್ಳಲು ಮತ್ತು ಉತ್ಪಾದನೆಗಳನ್ನು ಮಾರಲೆಂದು. ಆಗ ಕೈಗಾರಿಕಾ ಕ್ರಾಂತಿ ಸಂಭವಿಸಿ ಬೃಹತ್ ಕಾರ್ಖಾನೆಗಳು ಸ್ಥಾಪನೆಯಾಗಿದ್ದವು. ಜವಳಿ ಉದ್ಯಮ ಅತಿ ವೇಗದಲ್ಲಿ, ಲಾಭದಾಯಕವಾಗಿ ಬೆಳೆಯಿತು. ಭಾರೀ ಪ್ರಮಾಣದ ಹತ್ತಿ ಅವಶ್ಯವಿದ್ದುದರಿಂದ ಬ್ರಿಟಿಷರು ಭಾರತದಲ್ಲಿ ತಮಗೆ ಬೇಕಾದಂತಹ ಹತ್ತಿ ಬೆಳೆಯಲು ರೈತರಿಗೆ ಒತ್ತಡ ಹೇರಿದರು. ಅದನ್ನು ಮ್ಯಾಂಚೆಸ್ಟರಿನ ಗಿರಣಿಗಳಲ್ಲಿ ಬಟ್ಟೆಯಾಗಿಸಿ ಭಾರತಕ್ಕೆ ತಂದರು. ಬಹುಪಾಲು ಭಾರತೀಯರಿಗೆ ಅನ್ನ ನೀಡುತ್ತಿದ್ದ ಜವಳಿ ಉದ್ಯಮ ನೆಲ ಕಚ್ಚಿತು. ಲಾಭವೆಲ್ಲ ಬ್ರಿಟಿಷರಿಗೆ. ಕೆಲಸ ಕಳೆದುಕೊಂಡ ಭಾರತೀಯರಿಗೆ ಉಳಿದಿದ್ದು ಹಸಿವೆ. ಬ್ರಿಟಿಷ್ ಅಧಿಕಾರಿಗಳೇ ಬಡ ಭಾರತೀಯರಿಗೆರಗಿದ ಆರ್ಥಿಕ ಅವಘಡವನ್ನು ಕಂಡು ದಂಗುಬಡಿದರು.
ವ್ಯಾಪಾರಿಗಳನ್ನು ಮಣಿಸಲು ಅತ್ಯುತ್ತಮ ವಿಧಾನ ಅವರ ವಸ್ತುಗಳನ್ನು ನಿರಾಕರಿಸುವುದು ಎಂಬ ಸತ್ಯ ಅರಿತಿದ್ದ ಗಾಂಧಿ, ಈ ಹಂತದಲ್ಲಿ ‘ನಿಮ್ಮ ಬಟ್ಟೆ ಬೇಡ’ ಎಂದು ಬ್ರಿಟಿಷರಿಗೆ ಹೇಳುವಂತೆ ಭಾರತೀಯರ ಮನವೊಲಿಸಿದರು. ಚರಕಾ, ಕೈಮಗ್ಗಗಳನ್ನು ಜನಪ್ರಿಯಗೊಳಿಸಿದರು. ಸ್ವಾತಂತ್ರ್ಯ ಹೋರಾಟವನ್ನು ಹತ್ತಿಬಟ್ಟೆಯ ಜೊತೆಗೆ ತಳುಕು ಹಾಕಿ ಬ್ರಿಟಿಷರ ಬುಡವನ್ನೇ ಅಲುಗಾಡಿಸಿದರು.
ಪ್ರಪಂಚದ ಅತಿದೊಡ್ಡ ಹತ್ತಿಯ ಕೃಷಿ ಕ್ಷೇತ್ರ (ವಿಶ್ವದ ಕಾಲುಭಾಗ) ಭಾರತದಲ್ಲಿದೆ. ಚೀನಾ, ಅಮೆರಿಕ ಬಿಟ್ಟರೆ ಅತಿ ಹೆಚ್ಚು ಹತ್ತಿ ಬೆಳೆಯುವ ದೇಶ ನಮ್ಮದು. ಹತ್ತಿ ಬೆಳೆಯನ್ನು ನಾಲ್ಕೈದು ಬಾರಿ ಕಟಾವು ಮಾಡಬೇಕು. ಅರಳೆ ಹತ್ತಿಯನ್ನು ಬೀಜದಿಂದ ಬೇರ್ಪಡಿಸಿ, ಹತ್ತಿರಾಶಿಯನ್ನು ನಾನಾ ಆಕಾರಗಳಲ್ಲಿ ಒತ್ತಿ, ಬಳಿಕ ದಾರ, ನೂಲುಂಡೆ ತಯಾರಿಸಬೇಕು. ದಾರಕ್ಕೆ ಬಣ್ಣ ಹಾಕಿ, ನೇಯ್ದು, ಬಟ್ಟೆ ತಯಾರಿಸಿ ಗ್ರಾಹಕರ ಕೈಸೇರಬೇಕು. ಇಷ್ಟು ನಡೆಯಬೇಕೆಂದರೆ ಅದು ಬೃಹತ್ ಸಂಘಟಿತ ಉದ್ಯಮವಾಗಲೇಬೇಕು. ಹೌದು. ಜವಳಿಯು ಭಾರತದ ಅತಿ ಬೃಹತ್, ಸಂಘಟಿತ ಉದ್ಯಮವಾಗಿತ್ತು. ಎಲ್ಲವನ್ನು ಕೈಯಿಂದ ಮಾಡಿದಲ್ಲಿ ಕೋಟ್ಯಂತರ ಜನರಿಗೆ ಉದ್ಯೋಗವನ್ನೂ, ಕನಿಷ್ಟ ವರಮಾನವನ್ನೂ ಒದಗಿಸುತ್ತಿತ್ತು. ಜಾತಿ, ಮತ ಭೇದವಿಲ್ಲದೆ ಎಲ್ಲರಿಗೂ ಅನ್ನ ನೀಡುವ ಶಕ್ತಿ ಜವಳಿ ಕ್ಷೇತ್ರಕ್ಕಿತ್ತು. ಎಂದೇ ದೀರ್ಘ ಚರ್ಚೆ, ಮುಂದಾಲೋಚನೆಯ ಬಳಿಕ ಗಾಂಧಿ ಚರಕಾವನ್ನು ಅಭಿವೃದ್ಧಿಪಡಿಸಿದರು. ಅದು ಸ್ವರಾಜ್ಯದ, ರಾಷ್ಟ್ರೀಯ ಹೋರಾಟದ ಸಂಕೇತವಾಯಿತು. ರಾಷ್ಟ್ರಭಕ್ತಿಯ ಸಂಕೇತವಾಗಿ ಎಷ್ಟೋ ಜನ ಖಾದಿಬಟ್ಟೆ ಧರಿಸಿದಾಗ ಚಪ್ಪಲಿ ಹಾಕದೆ ಗೌರವ ತೋರಿಸುತ್ತಿದ್ದದ್ದೂ ಇತ್ತು.
ಖಾದಿ - ಕಳವಳ
ಅಹಿಂಸಾತ್ಮಕ, ಪರಿಸರ ಸ್ನೇಹಿ, ಸಮಾನತೆಯ ಸಮಾಜದತ್ತ ಕೊಂಡೊಯ್ಯುವ ಉತ್ಪಾದನಾ ಕ್ರಮವಾಗಿ ಖಾದಿ ಜನಪ್ರಿಯವಾಯಿತು. ದೇಶಾದ್ಯಂತ ಖಾದಿ, ಗ್ರಾಮೋದ್ಯೋಗ ಕೇಂದ್ರಗಳು ತಲೆಯೆತ್ತಿದವು. ಹಾಗೆ ಕರ್ನಾಟಕದಲ್ಲಿ ಆರಂಭವಾದ ಖಾದಿ ಉತ್ಪಾದನಾ ಸಂಘಸಂಸ್ಥೆಗಳನ್ನು ಸುಮನಸ್ ಸಂಶೋಧನೆಗಾಗಿ ಬಳಸಿಕೊಂಡಿದ್ದಾರೆ. ಅಲ್ಲಿನ ನೌಕರರ ಜೊತೆ ಮಾತನಾಡಿದ್ದಾರೆ. ಖಾದಿ ಕೇಂದ್ರಗಳ ಹುಟ್ಟು, ಬೆಳವಣಿಗೆಯ ಸಂಕ್ಷಿಪ್ತ ಚರಿತ್ರೆ ತಿಳಿಸುತ್ತಲೇ ಕಾರ್ಯ ಚಟುವಟಿಕೆ, ಲಾಭನಷ್ಟ, ಅಧಿಕಾರದೊಂದಿಗಿನ ಸಂಬಂಧದ ಸ್ವರೂಪ, ಖಾದಿ-ಸ್ವರಾಜ್ ವಿಷಯದ ಬಗೆಗೆ ನೌಕರ ವರ್ಗದ ತಿಳುವಳಿಕೆ, ಅಭಿಪ್ರಾಯಗಳನ್ನು ಅನಾವರಣಗೊಳಿಸಿದ್ದಾರೆ. ವಿಷಯದ ಆಳಕ್ಕಿಳಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಖಾದಿಮಂಡಳಿಗಳೆಂಬ ಅಧಿಕಾರಶಾಹಿಯ ಕೆಳಗೆ ಖಾದಿ ಕ್ಷೇತ್ರವು ಉತ್ಪಾದನೆ, ಬಳಕೆ, ವಿತರಣೆ ಮುಂತಾದ ಎಲ್ಲ ವಿಷಯಗಳಲ್ಲೂ ಸ್ವರಾಜ್‌ನ ಮೂಲ ಆಶಯ, ಮುನ್ನೋಟಗಳಿಂದ ಬಹುದೂರ ಚಲಿಸಿರುವ ಕಟುವಾಸ್ತವ ಎದುರು ಹಾಯುತ್ತದೆ.
ಪುಸ್ತಕದ ಅಂಕಿಅಂಶ ಹೇಳುವಂತೆ ಈಗ ಭಾರತದ ಒಟ್ಟೂ ಹತ್ತಿಬಟ್ಟೆಯ ಉತ್ಪಾದನೆಯಲ್ಲಿ ೦.೧% ಮಾತ್ರ ಖಾದಿ ಇದೆ. (೪% ಪಾಲು ಮಿಲ್‌ಗಳದು. 2-13% ಕೈಮಗ್ಗದ್ದು. ಯಂತ್ರಚಾಲಿತ ಮಗ್ಗಗಳ ಪಾಲು 76%.) ಅಷ್ಟು ಅಲ್ಪ ಪ್ರಮಾಣದ ಖಾದಿ ತಯಾರಿಕೆಯೂ ಸರ್ಕಾರಿ ಕೃಪಾಪೋಷಿತ ಚಟುವಟಿಕೆಯಾಗಬೇಕಾದ ಅನಿವಾರ್ಯತೆಗೆ ಒಳಗಾಗಿ ಜಡಗೊಂಡಿರುವುದನ್ನು ಕ್ಷೇತ್ರಕಾರ್ಯದಲ್ಲಿ ಸುಮನಸ್ ಕಂಡುಕೊಂಡಿದ್ದಾರೆ. ಕೈಯಿಂದ ನೂಲುವ, ನೇಯುವ, ಬಣ್ಣ ಹಾಕುವ ಕುಶಲಕರ್ಮಿಗಳ ಕೊರತೆ, ಖಾದಿ ಉತ್ಪಾದನೆ, ಮಾರುಕಟ್ಟೆಯನ್ನು ನಿಯಂತ್ರಿಸುವ ಸರ್ಕಾರದ ಪ್ರಾಧಿಕಾರಗಳ ಪರಮ ಭ್ರಷ್ಟತೆ, ತಮ್ಮ ಅಭಿಪ್ರಾಯ, ಕೌಶಲ್ಯ ಬಳಸುವವರೇ ಇಲ್ಲದೇ ಸೃಜನಶೀಲತೆ ಕಳೆದುಕೊಳ್ಳುತ್ತಿರುವ ಕುಶಲಕರ್ಮಿಗಳು, ಫ್ಯಾಕ್ಟರಿಗಳ ‘ಕಾಟನ್ ಬಟ್ಟೆ’ಯನ್ನೇ ‘ಖಾದಿ’ ಎಂದು ತೋರಿಸುವ ದಗಾಕೋರ ವ್ಯಾಪಾರಸ್ಥರು, ಸಹಾಯಧನ ಬಿಡುಗಡೆ ಮಾಡದೆ ಲಂಚಕ್ಕೆ ಸತಾಯಿಸುವ ಅಧಿಕಾರಿಗಳು, ಗಾಂಧಿ ವಿಚಾರಧಾರೆಗೆ ವಿರುದ್ಧವಿದ್ದೂ ಅಧಿಕಾರ ದೊರೆತ ಕಾರಣ ಖಾದಿ ಗ್ರಾಮೋದ್ಯೋಗದ ಚುಕ್ಕಾಣಿ ಹಿಡಿದ ಅಸಡ್ಡೆಯ ಜನಪ್ರತಿನಿಧಿಗಳು - ಒಂದೇ ಎರಡೇ! ಖಾದಿಗೆ ಮತ್ತು ಗಾಂಧಿ ಚಿಂತನೆಗಳಿಗೆ ಅಡ್ಡಗಾಲಾಗಿರುವ ಹಲವಂಶಗಳನ್ನು ಸುಮನಸ್ ಎತ್ತಿ ತೋರಿಸಿದ್ದಾರೆ. ಓದುವವರು ದಿಗ್ಭ್ರಮೆಯಿಂದ ತತ್ತರಿಸುವಂತಾಗುತ್ತದೆ.
ಪ್ರಸಕ್ತ ರಾಜಕಾರಣ-ಮಾರುಕಟ್ಟೆ ಸಮೀಕರಣ ಸೃಷ್ಟಿಸಿರುವ ಅನಾನುಕೂಲಕರ ಪರಿಸ್ಥಿತಿಯಲ್ಲಿ ಅಷ್ಟು ತುಟ್ಟಿಯಾದ, ಸರ್ಕಾರದ ಸಹಾಯಧನದಿಂದ ಬದುಕಬೇಕಿರುವ ಖಾದಿಯನ್ನೇಕೆ ತಯಾರಿಸಬೇಕು ಎಂಬ ಸಂದೇಹ ಕೊರೆಯತೊಡಗುತ್ತದೆ. ಪ್ರಸ್ತುತ ವಿಶ್ವ ವಿನ್ಯಾಸವು ಭಾರೀ ಬಂಡವಾಳದಾರರ ಪಾಲಾಗಿ, ಸಮಸಮಾಜ ಕನಸುವ ಸರ್ಕಾರ-ಚಿಂತನೆಗಳು ಅಪ್ರಸ್ತುತ ಎನ್ನುವಂತೆ ಆಗಿರುವಾಗ ಸ್ವರಾಜ್ ಚಿಂತನಾ ಕ್ರಮವು ಇಷ್ಟು ಭಾರೀ ಜನಸಂಖ್ಯೆಗೆ, ಇಷ್ಟು ಅಸಮಾನ ಆರ್ಥಿಕ ಹಂಚಿಕೆಯಿರುವ ಸಮಾಜಕ್ಕೆ ಅನ್ವಯವಾಗಬಹುದೇ? ಗಾಂಧಿ ಆರ್ಥಿಕ ನೀತಿಗಳ ಮೂಲಕ ಸಮಾನ ಹಂಚಿಕೆ, ಘನತೆ, ಸ್ವಾಯತ್ತ ಬದುಕು ಸಾಧ್ಯವಾಗಬಹುದೇ? ಅಭಿವೃದ್ಧಿ ಮಾದರಿಯಾಗುವ ಮೊದಲು ಬದುಕುವ ಕ್ರಮವಾಗಿ ಸ್ವರಾಜ್ ಚಿಂತನಾಕ್ರಮವನ್ನು ಅಳವಡಿಸಿಕೊಳ್ಳಲು ಸಾಧ್ಯವೇ? ಎಂಬ ಪ್ರಶ್ನೆಗಳು ಕಾಡತೊಡಗುತ್ತವೆ.
ಇದಕ್ಕೆ ಉತ್ತರವೋ ಎಂಬಂತೆ ಒಂದು ವರ್ಕಿಂಗ್ ಮಾಡೆಲ್ ಅನ್ನು ಪ್ರಸ್ತುತಪಡಿಸಲು ಹಲವು ವ್ಯಕ್ತಿ-ಸಂಘ-ಸಂಸ್ಥೆಗಳ ಉದಾಹರಣೆಗಳನ್ನು ಸುಮನಸ್ ನೀಡಿದ್ದಾರೆ. ಜೊತೆಗೆ ತಾವು ಮಾಡಿದ ಪ್ರಯೋಗಗಳನ್ನು ಪುಸ್ತಕದ ಕೊನೆಯಲ್ಲಿ ನೀಡಿದ್ದಾರೆ. ಅದು ಚೇತೋಹಾರಿಯಾಗಿ, ಹೊಸ ಕನಸುಗಳನ್ನು ಬಿತ್ತುವಷ್ಟು ಸಶಕ್ತವಾಗಿದೆ.
ಸ್ವರಾಜ್ ಮಾದರಿ-ಪ್ರಯೋಗ
2020ರಲ್ಲಿ ಡಾಕ್ಟೊರೇಟ್ ಪಡೆದ ಬಳಿಕ ‘ಜನಪದ ಖಾದಿ ಟ್ರಸ್ಟ್’ನಲ್ಲಿ ಸ್ವರಾಜ್ ಅಭಿವೃದ್ಧಿ ಮಾದರಿಯ ಅನ್ವಯ ಕೆಲವು ಬದಲಾವಣೆಗಳನ್ನು ಸುಮನಸ್ ಕೈಗೊಂಡರು. ಒಮ್ಮತ ಮೂಡಲು ಮತ್ತು ಡೆಮಾಕ್ರೆಟಿಕ್ ಆಗಿರಲು ಉದ್ದಿಮೆಯಲ್ಲಿ ಯಾವತ್ತೂ 50ಕ್ಕಿಂತ ಹೆಚ್ಚು ಜನರಿರಬಾರದು; ವಿಸ್ತಾರಗೊಳ್ಳುವ ಅವಕಾಶವಿದ್ದರೆ ಮತ್ತೊಬ್ಬರು ಇನ್ನೊಂದು ಯುನಿಟ್ ತೆರೆಯಲು ಅನುವು ಮಾಡಬೇಕೇ ಹೊರತು ತಮ್ಮದನ್ನೇ ಬೆಳೆಸಬಾರದು ಎಂದು ಎಲ್ಲ ಸೇರಿ ನಿರ್ಧರಿಸಿದರು. ಕೆಲಸದ ಸಮಯ ತೀರಾ ನಿಶ್ಚಿತವಲ್ಲ. ಬೆಳಿಗ್ಗೆ ಒಂಭತ್ತರಿಂದ ಸಂಜೆ ಐದರ ಒಳಗೆ ದುಡಿಮೆ. 11 ಗಂಟೆಗೆ ಪ್ರಾರ್ಥನಾ ಸಭೆ. ಅದು ವಿಚಾರ ವಿನಿಮಯ ಸಭೆಯೂ ಆಗಬಹುದು. ಅವರವರು ಮಾಡಿದ ಕೆಲಸದ ಆಧಾರದ ಮೇಲೆ ಪಾಲು. ರಜೆ ಹಾಕಲು ನಿಯಮಗಳಿಲ್ಲ. ಕೆಲಸ ಮಾಡುವವರಿಗೆ ಒಡೆತನವನ್ನು, ಪ್ರತಿ ನಾಲ್ಕು ತಿಂಗಳಿಗೆ ಲಾಭವನ್ನು ಹಂಚಲಾಗುತ್ತದೆ. 25% ಲಾಭ ಉದ್ದಿಮೆಯ ಕಾಯ್ದಿಟ್ಟ ನಿಧಿಗೆ, 60% ಕೆಲಸ ಮಾಡುವವರ ಹೂಡಿಕೆ ಆಧರಿಸಿ ಹಂಚಿಕೆಯಾಗಲು, 10% ಸಮುದಾಯ ಉನ್ನತಿಯ ಕೆಲಸಗಳಿಗೆ, 2% ಆರೋಗ್ಯನಿಧಿಗೆ, 2% 60 ವರ್ಷ ಮೇಲ್ಪಟ್ಟವರ ಬೋನಸ್‌ಗೆ, 5% ಪಿಂಚಣಿನಿಧಿಗೆ, 1% ತುರ್ತು ಬಳಕೆಗೆ ಎಂದು ಹಂಚಿಕೆಯಾಗುತ್ತವೆ. ಉತ್ಪಾದನೆಗೆ ‘ಕನಿಷ್ಟ ಗುರಿ’ ಇಲ್ಲ, ಗರಿಷ್ಟ ಗುರಿ ನಿಗದಿ ಮಾಡಲಾಗಿದೆ. ಅದಕ್ಕಿಂತ ಹೆಚ್ಚು ಉತ್ಪಾದನೆಯು ಹಿಂಸೆಯಾಗುತ್ತದೆ ಎಂದು ತಂಡಕ್ಕೆ ಮನವರಿಕೆ ಮಾಡಲಾಗಿದೆ. ಪ್ರತಿಯೊಬ್ಬರಿಗೂ ವಿರಾಮ, ಪ್ರವಾಸ, ಭೇಟಿ, ಓದು, ಬೌದ್ಧಿಕ ಚಿಂತನೆ, ಮನರಂಜನೆಗಳು ದೊರೆಯುವಂತೆ ನೋಡಿಕೊಂಡಿದ್ದಾರೆ. ಆದಾಯ ಹೆಚ್ಚುತ್ತ ಹೋದ ಕಾರಣ ಉತ್ಪಾದಕರು ತಾವು ತಯಾರಿಸಿದ ತುಟ್ಟಿ ಖಾದಿಯನ್ನುಡಲು ಸಮರ್ಥರಾಗಿದ್ದಾರೆ.
ಎಲ್ಲಕ್ಕಿಂತ ಮನಸೆಳೆದದ್ದು ‘ದೇವರ ಸಹಾಯ’ ಎಂಬ ತುರ್ತು ನಿಧಿ. ಲಾಭದ 1% ಹಣವೆಂದು 1000 ರೂಪಾಯಿಯಿಂದ ಅದು ಆರಂಭವಾಯಿತು. ತಂಡದ ಯಾರು ಬೇಕಾದರೂ ಯಾರನ್ನು ಕೇಳದೇ, ಹೇಳದೇ ತೆಗೆದು ಬಳಸಬಹುದು. ಒಂದು ತಿಂಗಳಿನೊಳಗೆ ಸ್ವಲ್ಪವಾದರೂ ಹೆಚ್ಚು ಸೇರಿಸಿ ಹಿಂತಿರುಗಿ ಹಾಕಬೇಕು. ಅದು ಸಂಪೂರ್ಣ ನಂಬಿಕೆಯ ಮೇಲೇ ನಡೆಯುವಂಥದು. ‘ಯಾರಾದ್ರೂ ಎಗರುಸ್ತಾರೆ ನೋಡಿ’ ಎಂದೇ ಹಲವರು ಹೇಳಿದರೂ ‘ದೇವರ ಸಹಾಯ’ ಆರಂಭಿಸಲಾಯಿತು. ಆಶ್ಚರ್ಯವೆಂದರೆ ಯಾರೂ ಲಪಟಾಯಿಸಲಿಲ್ಲ. ವರ್ಷದ ಕೊನೆಗೆ 1120 ರೂಪಾಯಿ ಆಗಿತ್ತು! ಈಗ 10000 ರೂಪಾಯಿ ‘ದೇವರ ಸಹಾಯ’ದಲ್ಲಿದೆ.
ನನಗಂತೂ ಇಡಿಯ ಪುಸ್ತಕದಲ್ಲಿ ಸುಮನಸ್ ಅವರ ಈ ಪ್ರಾಯೋಗಿಕ ಪ್ರಯತ್ನ ಮತ್ತು ಅದರ ಹಿಂದಿರುವ ಪ್ರಾಮಾಣಿಕತೆ ಮನಸೆಳೆಯಿತು. ಯಾವುದೇ ಸಿದ್ಧಾಂತ, ತಾತ್ವಿಕತೆಯೂ ಎಷ್ಟು ಪ್ರಾಯೋಗಿಕ ಎಂದು ಯೋಚಿಸುವ ಮಹಿಳೆಯರಿಗೆ ಅವರ ಬರಹದ ಈ ಭಾಗ ಹೆಚ್ಚು ಆಪ್ತವೆನಿಸುತ್ತದೆ. ತಮ್ಮ ಗುರಿಯೆಡೆಗಿನ ನಡಿಗೆ ಎಷ್ಟು ಸೂಕ್ಷ್ಮ, ದುರ್ಗಮ ಎಂಬ ಅರಿವು; ತಮ್ಮದು ಪರಿಪೂರ್ಣ ಉದಾಹರಣೆಯಲ್ಲ ಎಂಬ ವಿನಯ ಅವರಿಗಿದೆ. ಸ್ವರಾಜ್ ಕಡೆಗೆ ಚಲಿಸುತ್ತಿದ್ದೇವೆಂಬ ಗಾಢ ವಿಶ್ವಾಸವೂ ಇದೆ. ಅನಾಥ ಮಕ್ಕಳ ನಿಲಯ ನಡೆಸುತ್ತಿದ್ದ, ಸಾವಯವ ಕೃಷಿಯಲ್ಲಿ ತೊಡಗಿದ್ದ ಅವರ ಕುಟುಂಬವು ಗಾಂಧಿ ಚಿಂತನೆಗಳ ಆಧಾರದಲ್ಲಿ ಶಿಕ್ಷಣ ನೀಡುವ ಹೊಸ ಪ್ರಯತ್ನವನ್ನು ಆರಂಭಿಸಿದೆ. ಇವೆಲ್ಲವೂ ಗಾಂಧಿ ಚಿಂತನೆಗಳು ಪುಸ್ತಕದ ತಾತ್ವಿಕತೆಯಷ್ಟೇ ಅಲ್ಲದೆ, ವಾಸ್ತವ ಸತ್ಯಗಳೂ ಆಗಬಲ್ಲವು ಎಂದು ತೋರಿಸುವತ್ತ ಇಟ್ಟ ಧೃಢ ಹೆಜ್ಜೆಗಳಾಗಿವೆ.
ಕೊನೆಯ ಮಾತು:
ಸಿರಿವಂತಿಕೆಯ ಅನ್ಯಾಯವನ್ನು, ಉತ್ಪಾದನೆ-ವಿತರಣೆಯ ನೈತಿಕ ಪ್ರಶ್ನೆಗಳನ್ನು ಗಾಂಧಿ-ಕುಮಾರಪ್ಪ ಎತ್ತಿದರು. ಮಾರ್ಕ್ಸ್-ಏಂಗೆಲ್ಸ್ ಸಹಾ ಹೇಳಿದರು. ಫುಲೆ-ಅಂಬೇಡ್ಕರರೂ ತಮ್ಮದೇ ವಿಶಿಷ್ಟತೆಯಲ್ಲಿ ಮಂಡಿಸಿದರು. ಪುಕ್ಕಟೆ ಅಮಾನವೀಯ ಶ್ರಮಕ್ಕೀಡಾಗಿ ದುಡಿಯುವ ಅಸಂಖ್ಯ ಹೆಣ್ಣುಮಕ್ಕಳು ದಿನನಿತ್ಯ ಪ್ರಶ್ನಿಸಿದರು. ಎಂದರೆ ಯಾವುದೇ ಒಂದು ಸಿದ್ಧಾಂತದ ತಾತ್ವಿಕ ಗಡಿಗಳನ್ನು ಮೀರಿ ಎಲ್ಲದರ ಒಳಹೊಕ್ಕು ಸತ್ವ ಪಡೆದು ಬರುವುದು ಲೋಪಗಳನ್ನು ಮೀರಿ ಬೆಳೆಯಲು ಅಗತ್ಯವಿದೆ. ಅದು ಸುಮನಸ್‌ಗೆ ಸಾಧ್ಯವಿದೆ. ಅವರೊಳಗಣ ಆತ್ಮವಿಮರ್ಶಾ ಪ್ರಜ್ಞೆಯು ಬುದ್ಧಪ್ರಜ್ಞೆಯ ಕಡೆಗೆ ಚಲಿಸಿದರೆ ಗಾಂಧಿ ಚಿಂತನೆಗಳಲ್ಲಿರುವ ಕೆಲವು ಮಿಥ್ಯಾದೃಷ್ಟಿಗಳನ್ನು ಮೀರಿಕೊಳ್ಳಲು ಸಾಧ್ಯವಾಗುತ್ತದೆ. ಗಾಂಧಿ ಚಿಂತನೆಗಳನ್ನು ಈ ನೆಲದ ಜನಪರ ತಾತ್ವಿಕತೆಗಳೊಡನೆ ಮಿಳಿತಗೊಳಿಸಿ ‘ಅಶುದ್ಧ’ಗೊಳಿಸಿದರೆ ಅದು ಲೋಕಕ್ಕೆ ಉಳಿವಿನ ದಾರಿಯೂ ಆಗಲಿದೆ.
ಅವರ ಪ್ರಯತ್ನಗಳೆಲ್ಲ ಯಶ ಕಾಣಲಿ. ಸ್ವಾಯತ್ತ, ಸಮತೆಯ, ಘನತೆಯ ಬದುಕು ಲೋಕಕ್ಕೆ ದೊರೆಯಲಿ. ಆದಷ್ಟು ಬೇಗ ಕೃತಿಯು ಕನ್ನಡಕ್ಕೆ ಬರಲಿ.
ಡಾ. ಎಚ್. ಎಸ್. ಅನುಪಮಾ