Saturday, 24 August 2024

ಅಮ್ಮಮ್ಮನ ಕವಿತೆಗಳು


 

ಪೃಥಿವಿ ವಿಕಾಸ

ದ ದಂಡೆಗಳ ನಡುವೆ

ಜೀವ ಯಾನ ನಡೆದಿರಲು

ಕಾರ್ಮುಗಿಲು ಗುಡುಗು

ಮೇಘಸ್ಫೋಟಗಳ

ಬ್ಬರಿಸುತಿರಲು

ಅನಾದಿ ಜೋತಿಯಿಂದೊಂದು

ಟಿಸಿಲೊಡೆದು

ನಮ್ಮನೆಗೊಂದು

ಬೆಳಕಿನ ಕಿರಣ ಬಂದಿದೆ 

‘ಸೂರ್ಯ’ನಿಳಿದ ಚಣದಿಂದ 

ವಿಮಲ ಬೆಳಕು ಪಸರಿಸಿದೆ 


ಅಕಾರಣ             

ಮುಗುಳು ನಗುವ ಸೂರ್ಯ

ನಿರ್ಮಲ ದುಃಖಕೆ 

ಬಿಕ್ಕಳಿಸಿ ಅಳುವ ಸೂರ್ಯ

ಮುತ್ತು ಕದ್ದು 

ಮುದ್ದುಕ್ಕಿಸುವ ಸೂರ್ಯ

ನಿದಿರೆ ಕಳೆದು 

ಇರುಳ ಕದಿವ ಸೂರ್ಯ

ಬಂದಿದೆ ನಮ್ಮಯ ಮಡಿಲಿಗೆ..


ನಿತ್ಯ ಬೆಳಕು 

ಸೂರ್ಯ ಚೆಲುವು 

ಬಂದಿದೆ ಬುವಿಗೆ 

ಲೋಕದ ಕತ್ತಲುಗಳೆಲ್ಲ 

ಕಳೆದು ಹೋಗಲಿವೆಯೆಂಬ 

ಬೆಳಗಿನ ಭರವಸೆಗೆ..



ಲೋಕವೇ ತಣ್ಣಗಾಗು

ಮಲಗಿಸಬೇಕು ಶಿಶುವನ್ನು.

ಕಾಣಬೇಕು ಅದು

ಬಣ್ಣಿಸಲಾಗದ ಕನಸುಗಳನ್ನು.

ನಂಬಬೇಕು ಲೋಕ

ತಾನರಿಯಲಾರದ

ಶಿಶು ಕಂಡ ಕನಸುಗಳನ್ನು


ಉಬ್ಬಿದೆದೆಯ ನಾಯಕನೇ

ನಿಲಿಸು ನಿನ್ನ ಉದ್ದುದ್ದ

ಪೊಳ್ಳು ಭಾಷಣಗಳನ್ನು.

ಕೇಳಿಸಬೇಕು ಮಗುವಿಗೆ

ಪ್ರೇಮ ರಾಗದ ಮಟ್ಟುಗಳನ್ನು,

‘ಲಿಂಗ ಮೆಚ್ಚಿ ಅಹುದಹುದೆನುವ’

ನಿತ್ಯ ಸತ್ಯ ಸೊಲ್ಲುಗಳನ್ನು 


ಲೋಗರೇ ನಿಲ್ಲಿ 

ಹಗ್ಗ ಕಂಬ ಕಲ್ಲನೈತಂದು 

ಗೋಡೆ ಬೇಲಿಗಳನೆಬ್ಬಿಸಬೇಡಿ 

ಇದು ಇದೇ ಎಂದು ಕೂನ ಹಿಡಿದು

ಯಾವ ಅಂಕಿತವನೂ ಬರೆಯಬೇಡಿ


ಇದು ‘ಸೂರ್ಯ’ ಶಿಶು 

ಆಡಲಿ ಸ್ವತಂತ್ರವಾಗಿ

ಸೂರ್ಯನಂತೆ..

ಜಗದ ಮೂಲೆಮೂಲೆಗಳ 

ತಡಕಿ ಹುಡುಕಿ ಹೊಕ್ಕು ಬರಲಿ

ಲೋಕ ಮಿಡಿತ ಪ್ರಾಣದುಸಿರಾಗುವಂತೆ.. 

ಬೆಳೆಯಲಿ ಚಣಚಣಕು 

ನೆಲ ಮುಗಿಲುಗಳ ಸತ್ವ ಹೀರಿಕೊಳುತ 

ಬೋಧಿಯಂತೆ..


ಅಮ್ಮಮ್ಮ (ಡಾ. ಎಚ್. ಎಸ್. ಅನುಪಮಾ)

(ಜುಲೈ ೨೯ರಂದು ಮಗಳು ಪೃಥ್ವಿ-ಅಳಿಯ ವಿಕಾಸರ ಮಗ ‘ಸೂರ್ಯ’ ಮನೆ ತುಂಬಿದ.)