Sunday, 25 October 2015

ಧಾನ್ಯ ಚರಿತೆ
‘ಅಯ್ಯೋ, ನಾ ರಾತ್ರೀ ಊಟ ಬಿಟ್ ಏಳೆಂಟು ವರ್ಷಾಯ್ತ್ರ ಅಮಾ, ದಿನಕೆ ಒಂದು ಊಟ. ಒಂದೇ ಊಟ..’

ಇದು ಸಿಹಿಮೂತ್ರ ರೋಗಿಗಳ ವಿಷಾದ ಬೆರೆತ ನಿಟ್ಟುಸಿರು. ಅವರು ರಾತ್ರಿ ಉಪವಾಸವೇನೂ ಇರುವುದಿಲ್ಲ, ಆದರೆ ಅನ್ನ ಬಿಡುವುದೆಂದರೆ ಅವರಿಗೆ ‘ಊಟವೇ ಬಿಟ್ಟ’ ಹಾಗೆ. ಆಧುನಿಕ ಶ್ರಮರಹಿತ ಜೀವನದಲ್ಲಿ ಸಿಹಿಮೂತ್ರ ರೋಗವು ವಯಸ್ಸು, ವರ್ಗ, ಜಾತಿ ಇಲ್ಲದೆ ಎಲ್ಲರನ್ನು ಬಾಧಿಸತೊಡಗಿದ್ದು ಅವರಿಗೆ ಅಕ್ಕಿ ಕಡಿಮೆ ಮಾಡಿ ಎನ್ನುವ ಆಹಾರ ಸಲಹೆ ನೀಡಲಾಗುತ್ತಿದೆ. ಉಳಿದ ದವಸಗಳಿಗೆ ಹೋಲಿಸಿದರೆ ಹೆಚ್ಚು ಪಾಲಿಶ್ ಆದ, ಕಡಿಮೆ ನಾರಿನಂಶ ಹೊಂದಿದ, ಹೆಚ್ಚು ಕ್ಯಾಲೊರಿ ನೀಡುವ ಅಕ್ಕಿ ಬಳಕೆಯನ್ನು ಮಿತಗೊಳಿಸುವುದು ಸಿಹಿಮೂತ್ರ ನಿಯಂತ್ರಣಕ್ಕೆ ಹಾಗೂ ಒಟ್ಟಾರೆ ಆರೋಗ್ಯಕ್ಕೆ ಅವಶ್ಯವೇ. ಆದರೂ ಅಕ್ಕಿ ಬಿಡುವುದೆಂದರೆ ಹಲವರಿಗೆ ರುಚಿಯ ಸಖ್ಯವನ್ನೇ ಬಿಟ್ಟ ಹಾಗೆ. ಅಕ್ಕಿಯಿಂದ ಅನ್ನವಷ್ಟೆ ಅಲ್ಲ, ಎಂತೆಂತಹ ಖಾದ್ಯ ಕಂಡುಕೊಂಡಿರುವವರು ನಾವು!? ಇಡ್ಲಿ, ದೋಸೆ, ಪಡ್ಡು, ರೊಟ್ಟಿ, ಕಡುಬುಗಳು, ಅವಲಕ್ಕಿ, ಪತ್ರೊಡೆ, ಪಾಯಸ, ಭಾತ್‌ಗಳು, ತರತರಹೇವಾರಿ ಚಿತ್ರಾನ್ನ, ಉಂಡೆ, ಕರಿದ ತಿಂಡಿಗಳು..

ಅಕ್ಕಿ ಪ್ರಿಯರಿಗೆ ಬಿಡುವ ಸಂಕಟ ಈ ತೆರನದ್ದಾದರೆ ಅಕ್ಕಿಯೇತರ ದವಸ ತಿನ್ನುವವರ ಧಾಟಿಯೇ ಬೇರೆ. ‘ನಿನ್ನಿಡೀ ಅನ್ನ, ಇವತ್ ಮದ್ಯಾಣನೂ ಅನ್ನ ಸಾರು, ರಾತ್ರಿಗೆ ಹೋದರೂ ಅದೇ ಇತ್ತು. ಬರಿ ಅದ್ನ ತಿಂದ್ರ ಕೈಕಾಲ್ ಸತು ಉಡುಗ್ಹೋಕಾವ ಅಂದ್ ಅಲ್ಲಿಂದೆದ್ದು ಇಲ್ ಬಂದೇನಿ ನೋಡು’ - ಇದು ಒಂದು ದಿನ ಬರಿ ಅನ್ನ ತಿಂದಿದ್ದಕ್ಕೆ ಕೈಕಾಲು ಶಕ್ತಿ ಉಡುಗೀತೆಂದು ಹೆದರಿ ಕುರಿ ತಲೆಯ ಊಟಕ್ಕೆ ಹೋದ ಜೋಳದ ಗೆಳೆಯನ ಮಾತು. ನನ್ನ ಪ್ರತಿಕ್ರಿಯೆ ಶುರುವಾಗುವ ಮೊದಲೇ ಬರುತ್ತದೆ, ‘ಅಕ್ಕಿ ತಿಂದ್ರ ಹಕ್ಕಿಯಾಕಾರ, ರಾಗಿ ತಿಂದ್ರ ನಿರೋಗಿಯಾಕಾರ, ಅದ ಜ್ವಾಳ ತಿಂದ್ರ ತೋಳನಂಗಾಕಾರಂತ ಗಾದಿನ ಐತಿ, ತಿಳಿದಿಲ್ಲೆನು ನಿನಗ?’ ಎಂಬ ಮರುಮಾತು.ಈಗ ಕರಾವಳಿ, ಮಲೆನಾಡುಗಳಲ್ಲಿ ಎಲ್ಲಿ ನೋಡಿದರೂ ಎರಡು ತೆರನ ಹಸಿರು ಕಣ್ಣಿಗೆ ರಾಚುತ್ತದೆ - ಆಕಾಶದತ್ತ ಬೆಳೆದು ನಿಂತ ತೋಟದ ಹಸಿರು; ನೆಲಹಾಸಿನಂತಹ ಭತ್ತದ ಗದ್ದೆಯ ಹಸಿರು. ಎಲ್ಲಿ ಮಳೆ ಬರದಿದ್ದರೂ ಕರಾವಳಿ ಮತ್ತು ಮಲೆನಾಡುಗಳಲ್ಲಿ ಒಂದಷ್ಟು ಮಳೆ ಸುರಿಯುವುದು ನಿಶ್ಚಿತವಾದ್ದರಿಂದ ಮೇ, ಜೂನ್ ತಿಂಗಳಿನಿಂದಲೇ ಗದ್ದೆಯ ಕೆಲಸಗಳು ಶುರುವಾಗುತ್ತವೆ. ನೋಡನೋಡುತ್ತಿದ್ದಂತೆ ಬೇಸಿಗೆಗೆ ಒಣಗಿದ ಹೂಟೆಯಾದ ಗದ್ದೆ ಬಯಲುಗಳು ಒಂದೆರೆಡು ಗಟ್ಟಿ ಮಳೆಗೆ ಆಕಾಶ ಪ್ರತಿಫಲಿಸತೊಡಗುತ್ತವೆ. ನೀರಕನ್ನಡಿಯಂಥ ಗದ್ದೆ ಬಯಲುಗಳು ಭತ್ತ ಬೆಳೆವ ರೈತರ ಹಾಗೂ ಕೂಲಿಗಳ ಮುಂದಿನ ವರ್ಷದ ಭವಿಷ್ಯವನ್ನೂ ಬರೆಯುತ್ತವೆ.

ಗದ್ದೆ ಎಂದರೆ ಕೋಣ, ಎತ್ತುಗಳ ಬೆನ್ನತ್ತಿ ಹೂಟೆ ಹೂಡುವ ಅರೆನಗ್ನ ರೈತನ ಕನಸು. ಗದ್ದೆ ಎಂದರೆ ಸೊಂಟ ಮುರಿವಂತೆ ಬೆನ್ನು ಬಾಗಿಸಿ ನೇಜಿ ನೆಡುವ, ಕಳೆ ಕೀಳುವ, ಕೊಯ್ಯುವ, ಒಕ್ಕುವ ಹೆಂಗಸರು. ಗದ್ದೆ ಎಂದರೆ ಹುಲ್ಲು ಕಟ್ಟುವ ಗಡಿಬಿಡಿ. ಗದ್ದೆ ಎಂದರೆ ಕೊಯ್ಲಾದ ಪೈರು ಕಾಳು ಉದುರಿಸುವುದರೊಳಗೆ ಹೊಡೆಮಂಚಕ್ಕೇರಿಸುವ ಅವಸರ. ಕರಾವಳಿಯ ಗದ್ದೆಗೆ ಭತ್ತ ಬೇಯಿಸಿ, ಹರಡಿ ಒಣಗಿಸಿ, ಕುಚ್ಚಲಕ್ಕಿ ಮಾಡುವ ಹೊಣೆ. ಮತ್ತೆಲ್ಲ ಕಡೆ ವರ್ಷ ಪೂರ್ತಿ ಸಾಕಾಗುವಷ್ಟು ಅಕ್ಕಿ, ಅವಲಕ್ಕಿ ಮಾಡಿಸಿಡುವ ಜವಾಬ್ದಾರಿ. ಮುಡಿ, ತಿರಿ, ಕಣಗಳಲಿ ಸಂತೃಪ್ತ ಜೀವಗಳ ಹೆಮ್ಮೆ..

ಒಂದೇ ಎರಡೇ, ಗದ್ದೆಯೆಂದರೆ ನೆಲದ ಮೇಲೆ ಬೆವರು ಬಿಡಿಸುವ ಚಿತ್ತಾರದ ಕುಸುರಿಯ ಎಣೆಯಿಲ್ಲದ ನೆನಪು..

ಜನಸಂಖ್ಯೆಯಲ್ಲಿ ಹೇಗೋ ಹಾಗೆ, ಅಕ್ಕಿ ಬೆಳೆಯುವುದರಲ್ಲಿ, ತಿನ್ನುವುದರಲ್ಲಿ ಭಾರತಕ್ಕೆ ಚೀನಾ ನಂತರದ ಸ್ಥಾನ. ಅರ್ಧಕ್ಕರ್ಧ ಭಾರತದ ಜನ ಊಟಕ್ಕೆ ಬಳಸುವುದು ಅಕ್ಕಿಯನ್ನು. ನಮ್ಮ ಒಟ್ಟೂ ಕೃಷಿಯ ಕಾಲು ಭಾಗ ಭತ್ತ ಬೆಳೆಯೇ ಆಗಿದೆ. ಭಾರತದ ಪೂರ್ವ ಮತ್ತು ದಕ್ಷಿಣ ಭಾಗದ ಜನ ಊಟಕ್ಕೆ ಅಕ್ಕಿಯನ್ನೇ ಮುಖ್ಯ ಆಹಾರವಾಗಿ ಬಳಸುತ್ತಾರೆ. ಏಷ್ಯಾದ ೨೦೦ ಕೋಟಿ ಜನರ ಮುಖ್ಯ ಆಹಾರ, ಅವರ ೬೦-೭೦% ಕ್ಯಾಲೊರಿ ಪೂರೈಸುವ ಧಾನ್ಯ ಭತ್ತವೇ ಆಗಿದೆ. ಅದರಲ್ಲೂ ಮಳೆ ಬೀಳುವ ಪ್ರದೇಶಗಳಲ್ಲಿ ಭತ್ತ ಬೆಳೆಯುವುದೂ ಹೆಚ್ಚು, ಅಕ್ಕಿ ತಿನ್ನುವುದೂ ಹೆಚ್ಚು.ಭತ್ತದ ಎರಡು ಮುಖ್ಯ ಪ್ರಬೇಧಗಳು ಏಷ್ಯಾದವೇ - ಇಂಡಿಕಾ, ಜಪಾನಿಕಾ. ಪ್ರಪಂಚದ ೮೭% ಅಕ್ಕಿ ಬೆಳೆಯುವವರು ಏಷ್ಯಾದ ರೈತರು. ಭತ್ತದ ಗದ್ದೆಗಳು ಹೆಚ್ಚು ಕಡಿಮೆ ಮುಕ್ಕಾಲು ಏಷ್ಯಾ ಖಂಡದ ಭೌಗೋಳಿಕ ಲಕ್ಷಣವಾಗಿವೆ. ಭತ್ತದ ಮೂಲ ಸಸ್ಯ ಚೀನಾದ ಯಾಂಗ್‌ತ್ಸೆ ನದಿಯ ದಕ್ಷಿಣದ ಕಡೆಯದು. ಮನುಷ್ಯ ನೆಲೆ ನಿಂತು ಸಾಗುವಳಿ ಶುರು ಮಾಡಿದ ಕೂಡಲೇ ಮೊದಲು ಬೆಳೆದಿದ್ದು ನೆಲ್ಲು ಹುಲ್ಲನ್ನು. ದನಕರುಗಳಿಗೆ ಮೇವು, ಮನುಷ್ಯರಿಗೆ ಅಕ್ಕಿ ಎರಡನ್ನೂ ಕೊಡುವ ಭತ್ತ ನದೀಬಯಲಿನ ಸಮುದಾಯಗಳ ಜನಪ್ರಿಯ ಬೆಳೆಯಾಯಿತು. ಸುಮಾರು ೧೦-೧೩ ಸಾವಿರ ವರ್ಷ ಕೆಳಗೆ ಭತ್ತ ಕುಟ್ಟಿ ಅಕ್ಕಿ ಮಾಡುವುದು ಹಾಗೂ ನಾಗರಿಕತೆ ರೂಪುಗೊಳ್ಳುವುದು ಎರಡೂ ಒಟ್ಟೊಟ್ಟಿಗೇ ಸಂಭವಿಸಿದವು. ಭಾರತದಲ್ಲಿ ಸಮುದ್ರಮಟ್ಟದಿಂದ ಹಿಡಿದು ೨೫೦೦ ಅಡಿ ಎತ್ತರದ ಪೀಠಭೂಮಿಗಳ ತನಕ ಎಲ್ಲೆಡೆ ಭತ್ತದ ಗದ್ದೆಗಳಿವೆ. ವಾರ್ಷಿಕ ೧೦೦-೨೦೦ ಸೆಂ.ಮೀ. ಮಳೆಯಾಗುವ ಪ್ರದೇಶಗಳಲ್ಲಿ, ನೀರಾವರಿ ಪ್ರದೇಶಗಳಲ್ಲಿ ಬೆಳೆಯುವ ಬೆಳೆ ಇದು. ಬಹಳ ಜನರಿಗೆ ಮುಖ್ಯ ಆಹಾರ ಮೂಲವಾಗಿರುವ ಅಕ್ಕಿ ಬೆಳೆಯಲು ಬಹಳ ಮಳೆ ಬೇಕು, ಬಹಳ ಕೂಲಿಗಳು ಬೇಕು, ಬಹಳ ಶ್ರಮ ಬೇಕು, ಬಹಳ ಶಾಖವೂ ಬೇಕು! ಭತ್ತದ ಕೃಷಿಗೆ ಬಹುಸಂಖ್ಯೆಯ ಶ್ರಮಿಕರು ಬೇಕಿರುವುದರಿಂದಲೇ ಜನ ಬಾಹುಳ್ಯವಿರುವ ಪ್ರದೇಶಗಳಲ್ಲೇ ಭತ್ತ ಬೆಳೆಯುತ್ತಾರೆ.

ಭತ್ತ ಕೃಷಿಯ ವಿಶೇಷತೆ ಸಸಿ ಕಿತ್ತು ನೆಡುವುದು. ಭತ್ತವನ್ನು ಎರಚಿಯೂ ಬಿತ್ತನೆ ಮಾಡುತ್ತಾರೆ, ಉತ್ತುವವರ ಹಿಂದೆ ಬಿತ್ತುತ್ತ ಹೋಗಿಯೂ ಬಿತ್ತನೆ ಮಾಡುತ್ತಾರೆ. ಮಳೆ ಹೆಚ್ಚು ಬೀಳದ, ಕೂಲಿ ಜನ ಹೆಚ್ಚು ಸಿಗದ ಕಡೆ ಈ ವಿಧಾನಗಳು ಜನಪ್ರಿಯವಾಗಿವೆಯಾದರೂ ಅದರಿಂದ ಇಳುವರಿ ಕಡಿಮೆ. ಈ ವಿಧಾನಗಳಿಗಿಂತ ಭಿನ್ನವಾಗಿ ಸಸಿಮಡಿಗಳಿಂದ ಗಿಡಕಿತ್ತು ನೆಡುವುದಕ್ಕೆ ಹೆಚ್ಚು ಕೂಲಿ ಕಾರ್ಮಿಕರು ಬೇಕಾದರೂ ಅದರಿಂದ ಇಳುವರಿ ಹೆಚ್ಚು. ಸಾಲುಗಳ ನಡುವೆ ಕಳೆ ನಿಯಂತ್ರಣವೂ ಸುಲಭ.

ಭತ್ತ ಒಂದು ತೆರನ ಜಲಚರ ಸಸ್ಯ. ಬಿತ್ತನೆ ಹಾಗೂ ನೆಟ್ಟಿ ಸಮಯದಲ್ಲಿ ೨-೩ ಇಂಚು ನೀರು ಗದ್ದೆಯಲ್ಲಿ ನಿಂತಿರಬೇಕಾಗುತ್ತದೆ. ಬೆಟ್ಟ ಪ್ರದೇಶಗಳಲ್ಲಿ ನೆಲವನ್ನು ಸಣ್ಣ ಸಣ್ಣ ಹಾಳೆಗಳಂತೆ ಸಮತಟ್ಟಾಗಿಸಿ ಭತ್ತ ಬೆಳೆಯಲಾಗುತ್ತದೆ. ಅತಿ ಹೆಚ್ಚು ಮಳೆಬೀಳುವ ಗುಡ್ಡಗಾಡುಗಳಲ್ಲೂ ಭತ್ತ ಬೆಳೆಯುತ್ತದೆ. ಕಡಲ ತಡಿಯ ಉಪ್ಪುನೀರಿನ ಗಜನಿಯಲ್ಲೂ ‘ಕಗ್ಗ’ ಮತ್ತಿತರ ತಳಿಗಳ ನೆಲ್ಲು ಬೆಳೆಯುತ್ತದೆ. ಪ್ರಪಂಚದಲ್ಲಿ ೧೦೦೦೦ಕ್ಕೂ ಮಿಕ್ಕಿ ಭತ್ತದ ತಳಿಗಳಿದ್ದು ಅದರಲ್ಲಿ ಭಾರತವೊಂದರಲ್ಲೇ ೪೦೦೦ ಭಿನ್ನ ತಳಿಗಳನ್ನು ಬೆಳೆಯಲಾಗುತ್ತದೆ. ಈ ಎಲ್ಲ ವರ್ಷಗಳಲ್ಲಿ ಆಯಾಯಾ ಮಣ್ಣಿಗೆ, ಅಲ್ಲಲ್ಲಿನ ಪರಿಸ್ಥಿತಿಗೆ ತಕ್ಕಂತೆ ತಳಿಗಳನ್ನು ಉಳಿಸಿ, ಬೆಳೆಸಿ ರೈತರು ಕಾಪಿಟ್ಟುಕೊಂಡು ಬಂದಿದ್ದಾರೆ. ಆದರೆ ಗದ್ದೆ ಬೇಸಾಯ ಮಾಡುವ ಯಾರನ್ನೇ ಕೇಳಿದರೂ ಬೇಸಾಯ ಅವರನ್ನೆಷ್ಟು ಹೈರಾಣಾಗಿಸಿದೆ ಎಂದು ತಿಳಿಯುತ್ತದೆ. ಅದರಲ್ಲೂ ಕೃಷಿ ಕಾರ್ಮಿಕರ ಕೊರತೆ ಗದ್ದೆ ಮಾಲೀಕರನ್ನು ಯಂತ್ರಗಳಿಗೆ ಮೊರೆ ಹೋಗುವಂತೆ, ಅದಕ್ಕಾಗಿ ಸಾಲ ಮಾಡುವಂತೆ ಮಾಡಿದೆ.


ಭಾರತದಲ್ಲಿ ಹಸಿರು ಕ್ರಾಂತಿಯ ನಂತರ ಭತ್ತದ ಇಳುವರಿ ನಾಲ್ಕು ಪಟ್ಟು ಹೆಚ್ಚಿದೆ. ಆದರೂ ಈಗ ಪ್ರತಿ ಹೆಕ್ಟೇರಿಗೆ ಇಳುವರಿ ೨೦೫೦ ಕೆಜಿ ಇದ್ದರೆ ಚೀನಾ-ಅಮೆರಿಕಗಳಲ್ಲಿ ೪೭೭೦ ಕೆಜಿ, ಜಪಾನಿನಲ್ಲಿ ೬೨೪೬ ಕೆಜಿ ಹಾಗೂ ಕೊರಿಯಾದಲ್ಲಿ ೬೫೫೬ ಕೆಜಿ ಇದೆ! ಸಣ್ಣ ಕೃಷಿಕ್ಷೇತ್ರ ಹಾಗೂ ಪಾರಂಪರಿಕ ಬೆಳೆ ವಿಧಾನಗಳು ಇದಕ್ಕೆ ಕಾರಣವೆಂದು ದೂರಲಾಗುತ್ತಿದ್ದರೂ ರೈತರ ಪಾರಂಪರಿಕ ಜ್ಞಾನವನ್ನು ಆಧುನಿಕ ವಿಜ್ಞಾನದ ಜೊತೆಗೆ ಬೆಸೆಯಲು ವಿಫಲವಾಗಿರುವುದು ಇದಕ್ಕೆ ಕಾರಣವಾಗಿದೆ. ಇಳುವರಿ ಕಡಿಮೆಯಾಗಿ ನಷ್ಟ ಅನುಭವಿಸುವ ರೈತರು ಬೇರೆ ಬೆಳೆಗಳತ್ತ, ಅದರಲ್ಲೂ ಕಬ್ಬಿನಂತಹ ವಾಣಿಜ್ಯ ಬೆಳೆಗಳತ್ತ ಆಕರ್ಷಿತರಾಗಿ ಬೇರೆಬೇರೆ ಸಮಸ್ಯೆಗಳು ತಲೆದೋರತೊಡಗಿವೆ. ನೀರಾವರಿ ಪ್ರದೇಶ ಹೊರತುಪಡಿಸಿ ಉಳಿದೆಡೆ ಭತ್ತ ಬೆಳೆಯುವ ಹುಕಿ ಕಡಿಮೆಯಾಗುತ್ತಿದೆಯೆ ಎಂಬ ಅನುಮಾನ ಕೆಲವರಿಗಿದೆ. ಅದಕ್ಕೆ ಸರಿಯಾಗಿ ಕರಾವಳಿಯಲ್ಲಿ ಭತ್ತದ ಗದ್ದೆಗಳ ವಿಸ್ತೀರ್ಣ ಬರಬರುತ್ತ ಕಡಿಮೆಯಾಗಿದೆಯೆಂದು ಈಗ ನಾವು ಓಡಾಡುವ ಸಪಾಟು ರಸ್ತೆಗಳು, ಸೈಟುಗಳು, ಬಡಾವಣೆಗಳ ಪೂರ್ವೇತಿಹಾಸ ತೋರಿಸಿ ಹಿರಿಯರು ಹೇಳುತ್ತಾರೆ. ಅವೆಲ್ಲ ಒಂದು ಕಾಲದಲ್ಲಿ ಗದ್ದೆಯಾಗಿದ್ದವು. ‘ಗದ್ದೆ ಎಲ್ಲ ಸೈಟ್ ಆಗಿ, ಅಕ್ಕಿ ಬೆಳೆ ಈಗ ಕಮ್ಮಿಯಾಗಿರುವುದೇ ಅಕ್ಕಿಗೆ ಈ ಪರಿ ಬೆಲೆಯಾಗಲು ಕಾರಣ’ ಎಂದು ಹೇಳುವವರ ಆತಂಕ ನಾವು ಊಟದಕ್ಕಿ ಕೆಜಿಗೆ ೫೦-೬೦ ರೂಪಾಯ್ ತೆರುವಾಗ ಅರ್ಥವಾಗುತ್ತದೆ.

ವೈವಿಧ್ಯವೇ ಆರೋಗ್ಯ

ಈ ಬರಹದ ಉದ್ದೇಶ ಭತ್ತ, ಅಕ್ಕಿಯ ಮಹಿಮೆಯನ್ನು ಹಾಡಿ ಹೊಗಳುವುದಲ್ಲ; ತಿನ್ನುವ ವಸ್ತುವಿನ ಕುರಿತು ಇರುವ ಇಲ್ಲಸಲ್ಲದ ವಿಧಿನಿಷೇಧ, ಪೂರ್ವಗ್ರಹಗಳನ್ನು ಓಡಿಸುವುದು. ಅಕ್ಕಿಯಷ್ಟೇ ಅಲ್ಲ, ಯಾವುದೇ ದವಸವಾಗಲಿ, ಅದನ್ನಷ್ಟೇ ತಿಂದರೆ ಎಲ್ಲ ಜೀವಸತ್ವಗಳೂ ಸಿಗಲು ಸಾಧ್ಯವಿಲ್ಲ. ನಿತ್ಯದ ಆಹಾರದಲ್ಲಿ ಕನಿಷ್ಠ ಐದು ವೈವಿಧ್ಯಗಳಾದರೂ ಇರಬೇಕು. ತರಕಾರಿ, ಹಣ್ಣು, ದವಸ, ಧಾನ್ಯ, ಮಾಂಸ ಇತ್ಯಾದಿ ಆಯ್ಕೆಯ ವೈವಿಧ್ಯಗಳಲ್ಲಿ ನಮ್ಮ ರುಚಿ, ನಾಲಗೆಯ ಅವಶ್ಯಕತೆಗೆ ತಕ್ಕಂತೆ ಆಹಾರ ಕ್ರಮ ರೂಢಿಸಿಕೊಳ್ಳಬೇಕು.

ಉಸಿರಾಟ, ಜೀರ್ಣಕ್ರಿಯೆ, ಚಲನೆ ಸೇರಿದಂತೆ ಎಲ್ಲ ದೈಹಿಕ ಕ್ರಿಯೆಗಳು ನಡೆಯಲು, ದೇಹವೆಂಬ ಯಂತ್ರ ಕೆಲಸ ಮಾಡಲು, ಇಂಧನ ಬೇಕು. ಹಾಗೆ ತಕ್ಷಣಕ್ಕೆ ಒದಗಿಬರುವ ಇಂಧನ ಕಾರ್ಬೋಹೈಡ್ರೇಟು (ಶರ್ಕರಪಿಷ್ಠ). ಸುಲಭದಲ್ಲಿ ಜೀರ್ಣವಾಗುವ, ದೇಹಕ್ಕೆ ಕ್ಯಾಲೊರಿ ನೀಡಬಲ್ಲ, ಕರುಳ ಚಲನೆ ಸುಗಮಗೊಳಿಸಬಲ್ಲ ಕಾರ್ಬೋಹೈಡ್ರೇಟು ಅನ್ನದಲ್ಲಿದೆ. ಆದರೆ ಭಾರತೀಯರ ಆಹಾರಕ್ರಮದ ಅವೈಜ್ಞಾನಿಕತೆ ಹಾಗೂ ಜೀವನಶೈಲಿಯ ಕಾರಣದಿಂದ ಬೊಜ್ಜು ಕಂಡುಬರುತ್ತಿದೆ. ಬೊಜ್ಜು ಬೆಳೆಸಿರುವವರು ಅನ್ನ ತಿಂದು ಹಾಗಾಯಿತೆನ್ನುತ್ತಾರೆ. ಪೂರ್ವಗ್ರಹ ತುಂಬಿದ ಇಷ್ಟಾನಿಷ್ಟಗಳು ಮತ್ತು ದೈಹಿಕ ಶ್ರಮರಹಿತ ಜೀವನಶೈಲಿ ಅಪೌಷ್ಟಿಕತೆ ಮತ್ತು ಬೊಜ್ಜು ಎಂಬ ಆಹಾರಸೇವನೆಯ ಎರಡು ಅತಿಗಳಿಗೆ ಕಾರಣವಾಗಿದೆಯೇ ಹೊರತು ಅದರಲ್ಲಿ ಅನ್ನದ ಪಾತ್ರವಿಲ್ಲ.

ಸ್ಥಳೀಯವಾಗಿ ನಾವು ಬಳಸುವ ಆಹಾರ, ತಯಾರಿಕಾ ವಿಧಾನಗಳು ಸಾವಿರಾರು ವರ್ಷಗಳಿಂದ ನಮ್ಮ ಹಿರೀಕರು, ಅಜ್ಜಿ-ಅಮ್ಮಂದಿರು ಸರಿತಪ್ಪು ಪ್ರಯೋಗಗಳ ಮೂಲಕ ಉಳಿಸಿಕೊಂಡು ಬಂದಿರುವಂಥವು. ಅಕ್ಕಿ ಇಂದಿಗೂ ಬಳಕೆಯಲ್ಲಿ ಉಳಿದಿದ್ದರೆ ಅದು ಅಂಥ ಎಷ್ಟೋ ಅಸಂಖ್ಯ ಪ್ರಯೋಗಗಳ ನಂತರವೇ. ಎಂದೇ ‘ಅಕ್ಕಿ ತಿಂದರೆ ಡಯಾಬಿಟಿಸ್ ಬರುತ್ತದೆ’, ‘ಅಕ್ಕಿ ತಿಂದರೆ ಶಕ್ತಿ ಇರುವುದಿಲ್ಲ’ ಎಂಬ ಕಟ್ಟುಕತೆಗಳನ್ನೆಲ್ಲ ನಂಬದೆ ಮಿಶ್ರಾಹಾರ ಸಮತೋಲನ ಆಹಾರ ಪದ್ಧತಿ ರೂಢಿಸಿಕೊಳ್ಳುವುದು ಹಾಗೂ ಬೆವರು ಹರಿಸಿದಷ್ಟೆ ಉಣುವುದು ಆರೋಗ್ಯಕರ ಬದುಕಿನ ಗುಟ್ಟು ಎನ್ನಬಹುದಾಗಿದೆ.
No comments:

Post a Comment