Tuesday 10 November 2015

ಸುರ್ಜಿತ್ ಪತಾರ್ ಪಂಜಾಬಿ ಕವಿತೆ




ಸುರ್ಜಿತ್ ಪತಾರ್ ಪಂಜಾಬಿಯ ಮುಖ್ಯ ಕವಿ. ಇದುವರೆಗೆ ೭ ಕವನ ಸಂಕಲನಗಳನ್ನೂ, ಒಂದು ಗದ್ಯ ಬರಹ ಸಂಕಲನವನ್ನೂ ಪ್ರಕಟಿಸಿದ್ದಾರೆ. ಹಲವು ಯೂರೋಪಿನ ನಾಟಕಗಳನ್ನು ಪಂಜಾಬಿಗೆ ರೂಪಾಂತರ ಮಾಡಿದ್ದಾರೆ. ಪದ್ಮಶ್ರೀ, ಸರಸ್ವತಿ ಸಮ್ಮಾನ್, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಸಮ್ಮಾನ ಗಳಿಸಿದ್ದಾರೆ.


೧ ನನ್ನಮ್ಮ ಮತ್ತು ನನ್ನ ಕವಿತೆ

ನನ್ನಮ್ಮನಿಗೆ ನನ್ನ ಕವಿತೆ ಅರ್ಥವೇ ಆಗುವುದಿಲ್ಲ
ಮಾತೃಭಾಷೆಯಲ್ಲೇ ನಾನು ಬರೆದಿದ್ದರೂ ಸಹಾ.

ಅವಳು ತಿಳಿದುಕೊಳ್ಳಲು ಆದದ್ದು ಇಷ್ಟೇ:
ತನ್ನ ಮಗನ ಮನದಲ್ಲಿ ಎಂಥದೋ ದುಃಖ ಮಡುಗಟ್ಟಿದೆ.

ಆದರೆ ನಾನಿಲ್ಲೆ ಇರುವಾಗ
ಈ ದುಃಖ ಅವನ ಬಳಿಗೆ ಬಂದದ್ದಾದರೂ ಹೇಗೆ?

ಅಕ್ಷರ ಅರಿಯದ ಅಮ್ಮ
ನನ್ನ ಕವಿತೆಯನ್ನು ಬಹುಸೂಕ್ಷ್ಮವಾಗಿ ಜಾಲಾಡಿದಳು
ತನಗೆ ತಾನೇ ಹೇಳಿಕೊಂಡಳು:
ನೋಡಿ ಮಹಾಜನರೇ, ಇಲ್ಲಿ ನೋಡಿ
ನಮ್ಮ ಹೊಟ್ಟೆಯಿಂದ ನಾವೇ ಹುಟ್ಟಿಸಿದ ನಮ್ಮ ಮಕ್ಕಳು
ತಮ್ಮ ದುಃಖವನ್ನು ಕಾಗದಕ್ಕೆ ಹೇಳುತ್ತಾರೆ,
ನಮಗಲ್ಲ.

ಅವಳು ಕಾಗದವ ತನ್ನೆದೆಗೆ ಒತ್ತಿ ಹಿಡಿದಳು
ಅದಾದರೂ
ತನ್ನನ್ನು ತನ್ನ ಮಗನ ಬಳಿ
ತಂದೀತೆಂಬ ಆಸೆಯಿಂದ..

೨ ಶಬುದಗಳು ಬಲು ಹಗುರ




ಶಬುದಗಳು ಬಲು ಹಗುರ
ಎಲ್ಲಿಂದಲಾದರೂ ಕಿತ್ತು
ಎಲ್ಲಿಯಾದರೂ ಇಟ್ಟುಬಿಡಬಹುದು.

‘ಕಡಲು’ ಎಂಬ ಪದ ತೆಗೆದುಕೊ
ನಗು’ವಿನ ಪಕ್ಕ ಇಡು
‘ನಗುವ ಕಡಲು’ ಆಯಿತು.

‘ಮರ’ ಎಂಬ ಪದ ತಗೊ
‘ನಡೆ’ ಯ ಪಕ್ಕ ಇಡು
‘ನಡೆವ ಮರ’ ಸೃಷ್ಟಿಸು

ಎಷ್ಟು ಸುಲಭ!
ಎರಡು ಪದ ಹೆಕ್ಕು, ಕೂಡಿಸು.
ಹಸಿರು ಸೂರ್ಯ
ಎಣ್ಣೆಗೆಂಪು ಚಂದ್ರ
ಹಾರುವ ಹಣತೆ
ಹಾಡುವ ತಾರೆ..

ಸುಲಭ!
ಹೆಕ್ಕಿಕೊ, ಇಡು.

ಆದರೆ ಕಷ್ಟ ಇರುವುದು
ಎಲ್ಲಿಂದ ಹೆಕ್ಕಿ
ಎಲ್ಲಿ ಇಡಬೇಕೆಂದು ತಿಳಿಯಲು.

ಕಷ್ಟ ಯಾಕೆಂದರೆ
ಅವನ್ನು ಅವು ಇಟ್ಟ ಜಾಗದಲ್ಲೆ
ಶತಮಾನಗಟ್ಟಲೆ ಉಳಿಯುವಂಥ ಜಾಗ
ಹುಡುಕಬೇಕಲ್ಲ, ಅದಕ್ಕೆ.

ಇಲ್ಲವಾದರೆ
ಸತ್ಯದ ಒಂದು ಮೆಲುಗಾಳಿ ಬೀಸಿದರೆ
ಹಸಿರು ಸೂರ್ಯ
ಎಣ್ಣೆಗೆಂಪು ಚಂದ್ರ
ಹಾಡುವ ತಾರೆಗಳೆಲ್ಲ ಚದುರಿಹೋಗುತ್ತವೆ.
ಏಕೆಂದರೆ ಶಬುದಗಳು ಬಲು ಹಗುರವಾಗಿವೆ.

೩ ಶ್ರೀಮಾನ್ ಕವಿ


ಮೊದಲ ಸಾಲು ಬರೆಯುತ್ತೇನೆ
ಆಳುವ ಅರಸನ
ಭಯದಲ್ಲಿ ಮುರುಟಿ
ಆ ಸಾಲನ್ನು ಚಕಚಕ ಕತ್ತರಿಸುತ್ತೇನೆ.

ಮತ್ತೊಂದು ಸಾಲು ಬರೆಯುತ್ತೇನೆ
ಗೆರಿಲ್ಲಾ ಬಂಡುಕೋರರ ನೆನಪಾಗಿ
ಹೆದರಿ ಕತ್ತರಿಸುತ್ತೇನೆ

ಹೀಗೆ ನಾನು
ನನ್ನದೇ ನೂರಾರು ಸಾಲುಗಳ ಕೊಂದೆ
ಜೀವ ಉಳಿಸಿಕೊಳ್ಳಲು.

ಆಗಾಗ ಹತ ಸಾಲುಗಳಿಂದ ಪಿಶಾಚಿಗಳೆದ್ದು
ನನ್ನ ಸುತ್ತ ತಿರುಗುತ್ತ ಕೇಳುತ್ತವೆ:

‘ಶ್ರೀಮಾನ್ ಕವಿಯೇ,
ನೀನೊಬ್ಬ ಕವಿಯೊ
ಅಥವಾ ಕಾವ್ಯ ಹಂತಕನೋ?’


೪ ಪಂಚನದಿಗಳ ನಾಡು

ಶೋಕ
ಹಿಂಸೆ
ಭಯ
ನಿರಾಶೆ
ಮತ್ತು ಅನ್ಯಾಯ

ಇವು ಇತ್ತೀಚಿಗೆ ನನ್ನ ಪಂಚನದಿಗಳ ಹೆಸರು.

ಒಂದಾನೊಂದು ಕಾಲದಲ್ಲಿ ಅದು
ಸಟ್ಲೆಜ್
ಬಿಯಾಸ್
ರಾವಿ
ಝೀಲಂ
ಮತ್ತು ಚಿನಾಬ್
ಆಗಿತ್ತು.

ನನಗೆ ಭರವಸೆಯಿದೆ
ಅಂಥ ಒಂದು ದಿನ
ಒಂದಲ್ಲ ಒಮ್ಮೆ ಬರುತ್ತದೆ
ಆಗ ನನ್ನ ಪಂಚನದಿಗಳ ಹೆಸರು
ಸಂಗೀತ
ಕಾವ್ಯ
ಪ್ರೇಮ
ಸೌಂದರ್ಯ
ಮತ್ತು ನ್ಯಾಯ
ವೇ ಆಗಿರುತ್ತದೆ.


೫  ಆ ದಿನ


ಹೇಗಾದರೂ ಆ ‘ದಿನ’
ಮತ್ತೆ ಸಿಕ್ಕಿಬಿಟ್ಟರೆ
ಅದರ ಬಿಳಿಹಂಸೆಯಂತಹ ಗಾಯಗೊಂಡ ಕಾಯಕೆ
ಮುಲಾಮು ಸವರುತ್ತೇನೆ

ಆದರೆ ಒಂದು ‘ದಿನ’ ಎಂದರೆ
ಅಲ್ಲಿಲ್ಲಿ ಅಂಡಲೆದು
ಇದ್ದಕ್ಕಿದ್ದಂತೆ ಒಂದು ಸಂಜೆ
ಚಿಂದಿಯುಟ್ಟು ಮನೆಗೆ ಮರಳುವ;
ರೈಲಿಗೆ ಕಾಯುತ್ತ ಯಾವುದೋ ಸ್ಟೇಷನ್ನಿನಲ್ಲಿ ಸಿಕ್ಕ
ಮನೆ ಬಿಟ್ಟು ಓಡಿಹೋದ ಮಗನಂತಲ್ಲ..

ದಿನಗಳು ಮನೆಬಿಟ್ಟು ಓಡಿಹೋದ ತಿರುಬೋಕಿಗಳಲ್ಲ
ದಿನವೆಂದರೆ
ನಮ್ಮ ಮಾತಿನಿಂದ, ಮೌನದಿಂದ
ಕೊಲ್ಲಲ್ಪಟ್ಟ ದಿನದ ಊಳಿಡುವ ಭೂತ.
ಅವುಗಳ ಗಾಯ
ಈಗ ನಮ್ಮ ಕೈಯಳತೆಗೆ ಮೀರಿದ್ದು

ಈ ದಿನದ ಆಕ್ರಂದನ
ನಿನ್ನೆ ದಿನವ ತಲುಪಲಾರದು
ಶತಶತಮಾನ ಕಳೆದರೂ..




ನ್ಯಾಯ ಕೇಳಬೇಡವೆಂದು ನಾನ್ಯಾವಾಗ ಹೇಳಿದೆ?
ನಿನ್ನ ಹಕ್ಕುಗಳಿಗಾಗಿ ಹೋರಾಡಬೇಡವೆಂದೆನೆ?
ಆದರೆ ನಿಜ ಶತ್ರು ಯಾರೆಂದು ಗುರುತಿಸದೆ
ನಿನ್ನದೇ ಕೈಕಾಲು ಕಡಿದುಕೊಳಬೇಡ ಅಷ್ಟೆ.

ಬೇಡವಾದಲ್ಲೆಲ್ಲ ಸುಮ್ಮಸುಮ್ಮನೆ ಹಾರಾಡುತ್ತ
ನಿನ್ನ ರೆಕ್ಕೆಗಳ ಗೌರವ ಕಳೆಯಬೇಡ
ದುಃಖದ ವಿರುದ್ಧ ಹೋರಾಡಬೇಕಿದೆ
ಬಡತನದ ವಿರುದ್ಧ ಹೋರಾಡಲಿಕ್ಕಿದೆ
ತಲೆ ಕಾಯ್ವ ನೆಪದಲ್ಲಿ ತಲೆ ತೆಗೆವವರ
ವಿರುದ್ಧವೂ ನಾವು ಹೋರಾಡಬೇಕಿದೆ

ನಿನ್ನ ಕತ್ತಿ ಮೊನೆಯಂಚಿಗೆ ನನ್ನ ಪ್ರಾಣ ಕೊಡಬಲ್ಲೆ
ಅದು ಅಮುಖ್ಯವೆಂದು ಯಾರಾದರು ಹೇಳಬಹುದೆ?

ಅದರ ಕಡೆ ಗಮನ ಹರಿಸು, ಚೆನ್ನಾಗಿ ಮಸೆ
ಅಲಗುಗಳ ಹರಿತಗೊಳಿಸಿ ಇಡು
ಕತ್ತಲಲ್ಲಿ ಬೆಳಕಾಗಿ ಬರೆಯುವಂತೆ
ಬೆಂಕಿಯ ಜ್ವಾಲೆಯಂತೆ ಅದನಿಡು
ಅಂಥ ಕಾಲವೂ ಇದೆ, ಆಗ
ಕತ್ತಿಯಷ್ಟೆ ಬರೆಯಬಲ್ಲುದಾಗಿದೆ..

ಕ್ರಮಿಸಿದ ಹಾದಿಯ ಮತ್ತೇಕೆ ಕ್ರಮಿಸುವೆ?
ಎದುರಿನ ಹಾದಿ ಎಷ್ಟೊಂದು ಕಡಿದಾಗಿದೆ..

(ಇಂಗ್ಲಿಷ್‌ಗೆ: ಅಜ್ಮೇರ್ ರೋದೆ
ಕನ್ನಡಕ್ಕೆ: ಅನುಪಮಾ)

ಚಿತ್ರಗಳು: ಕೃಷ್ಣ ಗಿಳಿಯಾರ್

No comments:

Post a Comment