Friday, 11 March 2016

ಸಾವಿನ ಸುತ್ತ ತಾಯ್ತನದ ಕವಚ: ಬ್ಯೂನಸ್ ಐರಿಸ್‌ನ ಪ್ಲಾಜಾ ಡಿ ಮೆಯೊಕಳೆದ ತಿಂಗಳು ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿ ಸುತ್ತಾಡುವಾಗ ಓವರ್ ಬ್ರಿಡ್ಜ್‌ಗಳ ತಳಭಾಗದಲ್ಲಿ ಸಾವಿರಾರು ಭಾವಚಿತ್ರಗಳು ಅಂಟಿಸಲ್ಪಟ್ಟಿದ್ದು ಗಮನಕ್ಕೆ ಬಂತು. ಮುಖ್ಯ ಚೌಕ ಪ್ಲಾಜಾ ಡಿ ಮೇಯೊ ಬಳಿ ಕುತೂಹಲಕರ ಸಂಗತಿಯೊಂದು ಎದುರಾಯಿತು. ಪ್ರತಿ ಗುರುವಾರ ಮಧ್ಯಾಹ್ನ ೩.೩೦ಕ್ಕೆ ಅಮ್ಮಂದಿರು ಅಲ್ಲಿ ಸೇರುತ್ತಾರೆ; ವಿಶ್ವಾದ್ಯಂತ ನಡೆವ ಮಾನವ ಹಕ್ಕು ಉಲ್ಲಂಘನೆಗಳನ್ನು ಪ್ರತಿಭಟಿಸುತ್ತಾರೆ; ಕಳೆದ ೪೦ ವರ್ಷಗಳಿಂದ ಇದು ನಡೆಯುತ್ತಿರುವುದರಿಂದ ಚೌಕಕ್ಕೆ ‘ಅಮ್ಮಂದಿರ ಚೌಕ’ ಎಂಬ ಹೆಸರು ಬಂದಿದೆ ಎಂದು ಗೈಡ್ ಚುಟುಕಾಗಿ ಹೇಳಿದಳು. ತಮ್ಮ ಹೆಮ್ಮೆಯ ಸ್ಮಾರಕಗಳ ತೋರಿಸುತ್ತಿದ್ದವಳಿಗೆ ಇದು ಕಹಿಗುಳಿಗೆಯಂತೆ ಕಂಡಿರಬೇಕು, ನನ್ನ ಪ್ರಶ್ನೆಗಳಿಗೆ ಉತ್ತರಿಸುತ್ತ ಅವಳ ಪ್ರಸನ್ನತೆ ಮಾಯವಾಯಿತು. ಆ ಕಡೆಯಿಂದ ಟುಪಾಕ್ ಅಮಾರು ಸಂಘಟನೆಯ ಬುಡಕಟ್ಟು ಮಹಿಳೆ ಮಿಲಾಗ್ರಿಸ್ ಸಾಲಾ ಬಿಡುಗಡೆಗಾಗಿ ಆಗ್ರಹ ಕೇಳಿಬರತೊಡಗಿತ್ತು.

‘ಮದರ‍್ಸ್ ಆಫ್ ಪ್ಲಾಜಾ ಡಿ ಮೆಯೊ’ ಅಹಿಂಸಾತ್ಮಕ ಹಾಗೂ ಪರ್ಯಾಯ ಹೋರಾಟದ ಮಾದರಿ ಸಂಘಟನೆ. ಅದು ಸಾವಿನ ಸುತ್ತ ಹೆಣೆಯಲಾದ ತಾಯ್ತನದ ವರ್ತುಲ. ಅಧ್ಯಕ್ಷೀಯ ಭವನ ‘ಕಾಸಾ ರೋಸಾಡಾ’ (ಪಿಂಕ್ ಹೌಸ್) ಎದುರು ಪ್ರತಿವಾರ ಮಹಿಳೆಯರು ಕಲೆತು ಆಳುವವರ ಹಿಂಸಾತ್ಮಕ ನಡೆಗಳನ್ನು ಪ್ರಶ್ನಿಸುವ ಜಾಗ. ತಾಯ್ತನಕ್ಕೆ ಹೊಸ ವ್ಯಾಖ್ಯೆ ಬರೆದ ಸ್ಥಳ.

ಸಾಂಪ್ರದಾಯಿಕ ನೈತಿಕ-ಧಾರ್ಮಿಕ-ನ್ಯಾಯಿಕ ವ್ಯವಸ್ಥೆಯಿಂದಾಗಲೀ, ಆಳುವ ಪ್ರಭುತ್ವದಿಂದಾಗಲೀ ತಮಗೆ ಸಿಗಬೇಕಾದ ನ್ಯಾಯ ಸಿಗುವುದಿಲ್ಲ ಎನಿಸಿದಾಗಲೆಲ್ಲ ಮಹಿಳೆಯರು ತಮ್ಮದೇ ನ್ಯಾಯವ್ಯವಸ್ಥೆಯನ್ನು ಅನ್ವೇಷಿಸಿಕೊಂಡಿದ್ದಾರೆ. ಅಂಥ ನ್ಯಾಯಹೋರಾಟಕ್ಕಾಗಿ ಅಮಾಯಕ ತಾಯಂದಿರ ದುಃಖಾರ್ತ ಘಳಿಗೆಯಲ್ಲಿ ‘ಮದರ್ಸ್ ಆಫ್ ಪ್ಲಾಜಾ ಡಿ ಮೇಯೊ’ ರೂಪುಗೊಂಡಿತು. ಅರ್ಜೆಂಟೀನಾ ಚರಿತ್ರೆಯಲ್ಲಿ ೧೯೭೬ರಿಂದ ೧೯೮೩ರವರೆಗಿನ ಏಳೆಂಟು ವರ್ಷಗಳ ಅರಾಜಕತೆ ‘ಡರ್ಟಿ ವಾರ್’ ಎಂದು ಗುರುತಿಸಲ್ಪಡುತ್ತದೆ. ಜೀವಗಳು ಹರಣವಾದ, ಕುಟುಂಬಗಳು ಛಿದ್ರಗೊಂಡ, ಮಾನವೀಯತೆ ಕ್ಷೀಣಿಸಿದ ಅವಧಿ ಅದು. ಆಗ ‘ರಾಷ್ಟ್ರೀಯ ಪುನರ್ನಿರ್ಮಾಣ ಪ್ರಕ್ರಿಯೆ’ಯನ್ನು ಶುರುಮಾಡಿದ ಸೇನಾಡಳಿತ ದಿಟ್ಟ ದನಿಗಳನ್ನು ಶಾಶ್ವತವಾಗಿ ಇಲ್ಲವಾಗಿಸಿತು. ಒಂದು ವರ್ಷದಲ್ಲಿ ಹಲವಾರು ಕಾರ್ಯಕರ್ತರು, ಅದರಲ್ಲೂ ಸಮಾಜವಾದಿ ಒಲವಿದ್ದ ವೈದ್ಯ, ವಕೀಲ, ವಿದ್ಯಾರ್ಥಿ, ನಾಗರಿಕರು ಇದ್ದಕ್ಕಿದ್ದಂತೆ ಕಾಣೆಯಾದರು. ದುಃಖತಪ್ತ ತಾಯಂದಿರು ತಮ್ಮ ಮಕ್ಕಳು ಎಲ್ಲಿ ಹೋದರೆಂದು, ಯಾರನ್ನು ಕೇಳುವುದೆಂದು ತಿಳಿಯದೇ ಕಂಗೆಟ್ಟರು.

ಆಗ ಮಗ-ಸೊಸೆಯನ್ನು ಕಳೆದುಕೊಂಡ ಅಜುಸೆನಾ ವಿನ್ಸೆಂಟಿ ಎಂಬಾಕೆ ಹತ್ತಾರು ತಾಯಂದಿರೊಂದಿಗೆ ಮೇ ಸ್ಕ್ವೇರ್ ಕಡೆ ಹೊರಟರು. ಭಿನ್ನ ಹಿನ್ನೆಲೆಗಳ ಅವರೆಲ್ಲ ದುಃಖವನ್ನು ಸಾಮೂಹಿಕವಾಗಿ ಹಂಚಿಕೊಳ್ಳಲು, ಪರಸ್ಪರ ಚರ್ಚಿಸಲು ಒಗ್ಗೂಡಿದರು. ಏನಾಗುತ್ತಿದೆ ಎನ್ನುವುದರ ಸ್ಪಷ್ಟ ಅರಿವು ಆಗಲೇ ಅವರಿಗೆ ದೊರೆತದ್ದು. ಪೊಲೀಸರೇ ಕಾರ್ಯಕರ್ತರನ್ನು ಗುರುತಿಸಿ, ಅಪಹರಿಸಿ ಅನಾಮಿಕ ಸ್ಥಳಗಳಿಗೆ ಒಯ್ದಿದ್ದರು. ಭಯಾನಕ ಹಿಂಸೆ ನೀಡಿ, ಕೊಂದು ದೂರದ ಗ್ರಾಮೀಣ ಪ್ರದೇಶಗಳಲ್ಲಿ, ಗುರುತಿಲ್ಲದ ಸಾಮೂಹಿಕ ಗೋರಿಗಳಲ್ಲಿ ಹುಗಿದಿದ್ದರು. ನಾಪತ್ತೆಯಾದ ಗರ್ಭಿಣಿ ಹೆಂಗಸರು ಹಿಂಸಾಕೇಂದ್ರಗಳಲ್ಲಿ ಹೆತ್ತ ಮಕ್ಕಳನ್ನು ಯಾರ‍್ಯಾರಿಗೋ ದತ್ತು ಕೊಟ್ಟು ಬಾಣಂತಿಯರನ್ನೂ ಕೊಲ್ಲಲಾಗಿತ್ತು. ದತ್ತು ಕೊಟ್ಟ ೨೫೬ ಎಳೆಗೂಸುಗಳು ನಾಪತ್ತೆಯಾಗಿದ್ದವು.

ಕರುಳು ಕತ್ತರಿಸುವ ದುಃಖ, ಒತ್ತರಿಸಿ ಬರುವ ಅಸಹಾಯಕ ಸಿಟ್ಟು, ಆಳುವವರ ಕಣ್ಣಿಗೆ ಬೀಳುವುದೆ ಅಪಾಯಕಾರಿ ಎನ್ನುವಂತೆ ಮಾಡಿದ್ದ ಮಿಲಿಟರಿ ಆಡಳಿತ - ಮುಂದೇನು ಮಾಡುವುದು? ವಾರದಿಂದ ವಾರಕ್ಕೆ ನೂರಾರು ಮಹಿಳೆಯರು ಸೇರಿಕೊಂಡಾಗ ತಮ್ಮ ಬಲದ ಅರಿವಾಯಿತು. ಪ್ರತಿವಾರ ಮೆರವಣಿಗೆ, ಪ್ರದರ್ಶನ ನಡೆಸಿ ಪ್ರಭುತ್ವದ ಹಿಂಸೆಯನ್ನು ಖಂಡಿಸಿದರು. ಹಿಂಸೆಯನ್ನು ಕಂಡೂ ಸುಮ್ಮನಿರುವ ನಿರ್ಲಿಪ್ತಿಯನ್ನು ವಿರೋಧಿಸಿದರು. ಅರ್ಜೆಂಟೀನಾದ ಮಾನವಹಕ್ಕು ಉಲ್ಲಂಘನೆಯನ್ನು ಹೊರ ಜಗತ್ತಿಗೆ ತಿಳಿಸಿದರು.

ಸರ್ಕಾರ ಅವರನ್ನು ಹುಚ್ಚು ಹೆಂಗಸರು ಎಂದು ಬಣ್ಣಿಸಿತು!


‘ನಾಪತ್ತೆಯಾದವರ’ ಸಂಖ್ಯೆ ಬೆಳೆಯುತ್ತ ಹೋದಂತೆ ನಾಪತ್ತೆಯಾದವರ ಕತೆಗಳೂ ಬೆಳೆದವು. ೧೯೭೭ರಲ್ಲಿ ಮಾನವ ಹಕ್ಕು ದಿನಾಚರಣೆಯಂದು ಕಾಣೆಯಾದವರ ಭಾವಚಿತ್ರ, ಹೆಸರುಗಳಿರುವ ಪತ್ರಿಕೆ ಪ್ರಕಟಿಸಿ ತಾಯಂದಿರು ಮಾಧ್ಯಮದ ಗಮನ ಸೆಳೆದರು. ಆದರೆ ಅದೇ ರಾತ್ರಿ ಈ ಸಂಘಟನೆ ಶುರುಮಾಡಿದವರಲ್ಲಿ ಒಬ್ಬರಾದ ಮಹಿಳೆ ಅಜುಸೆನಾರನ್ನು ಅವರ ಮನೆಯಿಂದ ಅಪಹರಿಸಿ ಎಸ್ಮಾ ಕ್ಯಾಂಪಿಗೆ ಒಯ್ಯಲಾಯಿತು. ಹಾಗೆ ಅಪಹರಿಸಲ್ಪಟ್ಟವರನ್ನು ಬರ್ಬರವಾಗಿ ಹಿಂಸಿಸಿ, ಮಾದಕ ದ್ರವ್ಯ ನೀಡಿ ಪ್ರಜ್ಞೆ ತಪ್ಪಿಸಿ, ಬಟ್ಟೆ ಬಿಚ್ಚಿ, ಸಮುದ್ರ ಮಧ್ಯೆ ಬಿಸಾಡಲಾಗುತ್ತಿತ್ತು.

೧೯೭೮ರಲ್ಲಿ ಅರ್ಜೆಂಟೀನಾವು ಫುಟ್ಬಾಲ್ ವಿಶ್ವಕಪ್ ಆಯೋಜಿಸಿತು. ಇದೇವೇಳೆ ಸಂಘಟನೆಯ ಮತ್ತಿಬ್ಬರು - ಎಸ್ತರ್ ಮತ್ತು ಮಾರಿಯಾ ನಾಪತ್ತೆಯಾದರು. ಇಬ್ಬರು ಫ್ರೆಂಚ್ ಸನ್ಯಾಸಿನಿಯರಾದ ಲಿಯೊನಿ ಡುಕೆ ಮತ್ತವರ ಸೋದರಿ ಸೇರಿದಂತೆ ಹಲವರು ನಾಪತ್ತೆಯಾದರು. ಕೆಲವರ ದೇಹ ಅಟ್ಲಾಂಟಿಕ್ ತೀರದಲ್ಲಿ ವಿಕಾರಗೊಂಡು ಬಂದು ಬಿದ್ದರೆ ಮತ್ತೆ ಕೆಲವರ ದೇಹ ಪತ್ತೆಯಾಗಲೇ ಇಲ್ಲ. ಫ್ರಾನ್ಸ್ ಆ ನನ್‌ಗಳ ಪತ್ತೆ ತಿಳಿಸಲು ಒತ್ತಾಯಿಸಿ ವಿಶ್ವಸಂಸ್ಥೆಯ ತನಕ ವಿಷಯ ಕೊಂಡೊಯ್ದಿತು. ಮಿಲಿಟರಿ ಆಡಳಿತದ ವಿರುದ್ಧ ಒತ್ತಡ ಬೆಳೆದು ಅವರು ಒಂಭತ್ತು ಸಾವಿರ ಜನರನ್ನು ಅಪಹರಿಸಿದ್ದಾಗಿ ಒಪ್ಪಿಕೊಂಡರು. ಆದರೆ ಅಮ್ಮಂದಿರು ಅಪಹೃತರ ಸಂಖ್ಯೆ ೩೦ ಸಾವಿರಕ್ಕೂ ಮಿಕ್ಕಿದೆ ಎಂದು ದಾಖಲೆ ಒದಗಿಸಿದರು.

ಪಾಪದ ಕೊಡ ತುಂಬಿತು. ೧೯೮೩ರಲ್ಲಿ ಅಂತೂ ಮಿಲಿಟರಿ ಆಳ್ವಿಕೆ ಕೊನೆಗೊಂಡು ಜನಪ್ರಿಯ ಸರ್ಕಾರ ಅಧಿಕಾರಕ್ಕೆ ಬಂತು.

ಆಗಲಾದರೂ ಸರ್ಕಾರ ತಮ್ಮ ಮಕ್ಕಳ ಕುರಿತ ಮಾಹಿತಿ ನೀಡಬಹುದೆಂದು ಅಮ್ಮಂದಿರು ಭಾವಿಸಿದರು. ಸರ್ಕಾರ ರಾಷ್ಟ್ರೀಯ ಆಯೋಗವೊಂದನ್ನು ರಚಿಸಿ ತನಿಖೆ, ಡಿಎನ್‌ಎ ಹೋಲಿಕೆ ಶುರುಮಾಡಿತು. ಮಿಲಿಟರಿಯ ಹಲವು ಉನ್ನತ ಅಧಿಕಾರಿಗಳು ಶಿಕ್ಷಿಸಲ್ಪಟ್ಟರು. ದತ್ತು ಕೊಟ್ಟ ೩೧ ಮಕ್ಕಳು ತಂತಮ್ಮ ಕುಟುಂಬ ಸೇರಿದವು. ಕೆಲವು ಮಕ್ಕಳು ಸಾಕು ತಾಯ್ತಂದೆಯರು ಹಾಗೂ ಮೂಲ ಪಾಲಕರಿಂದ ಜಂಟಿಯಾಗಿ ಬೆಳೆಸಲ್ಪಟ್ಟವು.

೨೦೦೫ರಲ್ಲಿ ಗುರುತಿಸದ ಗೋರಿಗಳಲ್ಲಿದ್ದ ದೇಹವನ್ನು ಫೋರೆನ್ಸಿಕ್ ತಜ್ಞರು ಪರೀಕ್ಷೆಗೊಳಪಡಿಸಿದಾಗ ನಾಪತ್ತೆಯಾಗಿದ್ದ ಸಂಘಟನೆಯ ಮೂವರು ಮಹಿಳೆಯರ ಶವ ಪತ್ತೆಯಾಯಿತು. ಅಜುಸೆನಾ ದೇಹವನ್ನು ಸುಟ್ಟು ಬೂದಿಯನ್ನು ಮೇ ಚೌಕದಲ್ಲಿ ಸಮಾಧಿ ಮಾಡಲಾಯಿತು. ‘ನನ್ನಮ್ಮ ಹುಟ್ಟಿದ್ದು ಈ ಸಾರ್ವಜನಿಕ ಸ್ಥಳದಲ್ಲಿ. ಅವಳು ಬದುಕಿರುವುದು ಇಲ್ಲಿಯೇ. ಅದಕ್ಕೇ ಅವಳ ಅಂತಿಮ ಅವಶೇಷಗಳು ಇಲ್ಲಿಯೇ ಇರಲಿ’ ಎಂದು ಅವರ ಮಗಳು ಹೇಳಿದಳು. ಸಂಘಟನೆಯು ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆಯಿತು.

ನಂತರ ಬಹುಪಾಲು ಸಂಘಟನೆಗಳಿಗೆ ಆಗುವಂತೆ ಇಲ್ಲೂ ಆಯಿತು. ೧೯೮೬ರ ಹೊತ್ತಿಗೆ ಈ ಗುಂಪು ಒಡೆಯಿತು. ಒಂದು ಭಾಗವು ತಮ್ಮ ಮಕ್ಕಳ ಮಾಹಿತಿ, ಅಂತಿಮ ಅವಶೇಷಗಳನ್ನು ಪಡೆಯಲಷ್ಟೇ ಪ್ರಯತ್ನಿಸಿತು. ಅಧ್ಯಕ್ಷರಿಗೆ ಹತ್ತಿರದವರಾಗಿ ಒಂದು ಪತ್ರಿಕೆ, ರೇಡಿಯೊ ಕೇಂದ್ರ ಹಾಗೂ ವಿಶ್ವವಿದ್ಯಾಲಯ ಶುರು ಮಾಡಿತು. ಸ್ಲಂವಾಸಿಗಳಿಗೆ ಮನೆ ಕಟ್ಟಿಕೊಡುವ ಸರ್ಕಾರಿ ಕಾರ್ಯಕ್ರಮದ ಸಂಚಾಲಕರಾಗಿ ಮಾತೆಯರು ಧನಸಹಾಯ ಪಡೆದರು. ೨೦೦೬ರ ಜನವರಿ ೨೬ರಂದು ನಡೆಯುವುದು ತಮ್ಮ ಕೊನೆಯ ವಾರ್ಷಿಕ ಪ್ರದರ್ಶನವೆಂದೂ, ‘ಶತ್ರುವು ಸರ್ಕಾರಿ ಕಚೇರಿಯೊಳಗಿಲ್ಲ’ ಎಂದೂ ಅದು ಘೋಷಿಸಿತು.

ಅಂದಹಾಗೆ ನಮ್ಮ ಗೈಡ್ ಈ ಗುಂಪಿನ ಮೊಮ್ಮಗಳು.


ಸಂಘಟನೆಯ ಮತ್ತೊಂದು ಭಾಗ ತಮ್ಮ ಮಕ್ಕಳ ರಾಜಕೀಯ ಅಜೆಂಡಾ ಮುಂದುವರೆಸಲು ನಿರ್ಧರಿಸಿತು. ಈ ಕ್ರಾಂತಿಕಾರಕ ಗುಂಪು ಸರ್ಕಾರದ ಸಹಾಯಧನ, ಪರಿಹಾರ ನಿರಾಕರಿಸಿ ಅರ್ಜೆಂಟೀನಾದ ರಾಜಕೀಯ ಸಂಸ್ಕೃತಿಯಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕೆಂದು ಬಯಸಿತು. ಅವರಿಗೆ ಕ್ಯೂಬಾ ಕ್ರಾಂತಿಯನ್ನು ಆದರ್ಶವಾಗಿಟ್ಟುಕೊಂಡಿದ್ದ ತರುಣರ ಗುಂಪಿನ ಬೆಂಬಲ ದೊರೆಯಿತು. ಈ ತಾಯಂದಿರು ನ್ಯೂಯಾರ್ಕ್ ವರ್ಲ್ಡ್ ಟ್ರೇಡ್ ಸೆಂಟರ್ ಮೇಲಿನ ಉಗ್ರಗಾಮಿಗಳ ದಾಳಿಂiನ್ನು ‘ಅಮೆರಿಕದಿಂದ ಅನ್ಯಾಯಕ್ಕೊಳಗಾದ ನಾಗರಿಕ ಗುಂಪುಗಳ ಹತಾಶ ಪ್ರಯತ್ನ’ ಎಂದು ಬಣ್ಣಿಸಿ ವಿವಾದಕ್ಕೊಳಗಾದರು.


‘ಮೊದಲು ಏಕಾಂಗಿಯಾಗಿ ಅಳುತ್ತಿದ್ದೆವು. ಈಗ ಸಾಮೂಹಿಕವಾಗಿ ದುಃಖಿಸುವುದು ಕಲಿತಿದ್ದೇವೆ’

ಈ ಸಂಘಟನೆ ಹಲವು ದೇಶಗಳ ಅಮ್ಮಂದಿರನ್ನು ಪ್ರಭಾವಿಸಿತು. ನಾನಾಕಾರಣಗಳಿಗಾಗಿ ಆಳುವವರ ಹಿಂಸೆಗೆ ಮಕ್ಕಳನ್ನು ಕಳಕೊಂಡವರ ಹೋರಾಟ ಮಾದರಿಗಳನ್ನೂ ಸೃಷ್ಟಿಸಿತು. ಅಂಥವುಗಳಲ್ಲಿ ಕೆಲ ಸಂಘಟನೆಗಳಿವು:

  • ಇರಾನಿನ ಜೈಲುಗಳಲ್ಲಿ ರಾಜಕೀಯ ಬಂದಿಗಳ ಸಾಮೂಹಿಕ ಹತ್ಯೆಯನ್ನು ವಿರೋಧಿಸಿ ೧೯೮೧ರಿಂದ ಶುರುವಾದ ಸಂಘಟನೆ ಮದರ್ಸ್ ಆಫ್ ಕಾವರಾನ್. ಪ್ರತಿ ತಿಂಗಳ ಮೊದಲ ಶುಕ್ರವಾರ ಕಾವರಾನಿನ ಸಾಮೂಹಿಕ ಗೋರಿಯ ಬಳಿ ಅವರ ಪ್ರದರ್ಶನ. ಈ ಗುಂಪು ೨೦೦೯ರಿಂದ ಇರಾನಿನಲ್ಲಿ ಶುರುವಾದ ‘ಮೌರ್ನಿಂಗ್ ಮದರ್ಸ್’ ಅಥವಾ ‘ಮದರ್ಸ್ ಆಫ್ ಲಾಲೇಹ್ ಪಾರ್ಕ್’ ಜೊತೆ ಸೇರಿತು. ೨೦೦೯ರ ಅಧ್ಯಕ್ಷೀಯ ಚುನಾವಣೆ ವೇಳೆ ಸಂಗಾತಿ-ಮಕ್ಕಳನ್ನು ಕಳೆದುಕೊಂಡ ಮಹಿಳೆಯರು ಪ್ರತಿ ಶನಿವಾರ ಸಂಜೆ ೭ ರಿಂದ ೮ರ ತನಕ ಟೆಹ್ರಾನಿನ ಲಾಲೇಹ್ ಪಾರ್ಕಿನಲ್ಲಿ ಕಪ್ಪುಬಟ್ಟೆ ಧರಿಸಿ ತಮ್ಮವರ ಸಾವು, ಬಂಧನ, ನಾಪತ್ತೆಗೆ ಸರ್ಕಾರ ಉತ್ತರದಾಯಿತ್ವ ಹೊಂದಿದೆಯೆಂದು ಪ್ರತಿಪಾದಿಸಿ ನ್ಯಾಯ ಕೇಳುತ್ತಾರೆ. ಮರಣದಂಡನೆ ರದ್ದುಗೊಳಿಸಲು ಆಗ್ರಹಿಸುತ್ತಾರೆ. ನೊಬೆಲ್ ವಿಜೇತೆ ಶಿರೀನ್ ಎಬಾಡಿ ಈ ಗುಂಪಿನವರು.

  • ೧೯೮೮ರ ಜನವರಿಯಲ್ಲಿ ಜೆರುಸಲೇಂನ ಇಸ್ರೇಲಿ ಮಹಿಳೆಯರಿಂದ ಶುರುವಾದ ‘ವಿಮೆನ್ ಇನ್ ಬ್ಲಾಕ್’ ಕಪ್ಪು ಉಡುಗೆಯ ಮಹಿಳೆಯರ ಯುದ್ಧವಿರೋಧಿ ಸಂಘಟನೆ. ಅರ್ಜೆಂಟೀನಾದ ಅಹಿಂಸಾತ್ಮಕ ಪ್ರತಿರೋಧದಿಂದ ಸ್ಫೂರ್ತಿ ಪಡೆದ ಇಸ್ರೇಲಿ ಮಹಿಳೆಯರು ಪ್ರತಿ ಶುಕ್ರವಾರ ಜೆರುಸಲೇಂನ ಹಗಾರ್ ಸ್ಕ್ವೇರ್‌ನಲ್ಲಿ ಮಧ್ಯಾಹ್ನ ಒಂದರಿಂದ ಎರಡರ ತನಕ ‘ಸ್ಟಾಪ್ ಆಕ್ಯುಪೇಷನ್’ ಎಂಬ ಪ್ಲಕಾರ್ಡ್ ಹಿಡಿದು ಮೌನವಾಗಿ ನಿಂತರು. ಇಸ್ರೇಲಿನ ಇತರ ನಗರಗಳಲ್ಲೂ ವಾರಕ್ಕೊಮ್ಮೆ ಮಹಿಳೆಯರು ನಗರದ ಚೌಕಗಳಲ್ಲಿ, ಹೆದ್ದಾರಿ ಜಂಕ್ಷನ್‌ಗಳಲ್ಲಿ, ಮೌನವಾಗಿ ಕಪ್ಪುಬಟ್ಟೆ ಧರಿಸಿ ನಿಂತು ಜನರ ಗಮನ ಸೆಳೆದರು. ೧೯೯೩ರ ಓಸ್ಲೋ ಒಪ್ಪಂದದ ಬಳಿಕ ಇದು ಕಡಿಮೆಯಾಯಿತು. 

  • ಟರ್ಕಿಯ ಇಸ್ತಾನ್‌ಬುಲ್‌ನ ‘ಸ್ಯಾಟರ್ಡೆ ಮದರ್ಸ್’ ಪ್ರತಿ ಶನಿವಾರ ಮಧ್ಯಾಹ್ನ ೧೨ ಗಂಟೆಗೆ ಅರ್ಧ ತಾಸು ಅವಧಿಗೆ ೧೯೯೫ರಿಂದ ಸೇರುತ್ತ ಮೌನ ಜಾಗೃತಿ ಮಾಡುತ್ತಿದ್ದಾರೆ. ೮೦-೯೦ರ ದಶಕಗಳ ಕ್ಷಿಪ್ರಕ್ರಾಂತಿ ಮತ್ತು ಅರಾಜಕ ಆಡಳಿತದ  ವೇಳೆ ‘ನಾಪತ್ತೆ’ಯಾದವರ ಮಹಿಳಾ ಸಂಬಂಧಿಗಳು ‘ಮೊದಲು ಏಕಾಂಗಿಯಾಗಿ ಅಳುತ್ತಿದ್ದೆವು. ಈಗ ಸಾಮೂಹಿಕವಾಗಿ ದುಃಖಿಸುವುದು ಕಲಿತಿದ್ದೇವೆ’ ಎನ್ನುತ್ತಾರೆ.

  • ಕ್ಯೂಬಾ ಹವಾನಾದಲ್ಲಿ ಜೈಲಿಗೆ ಕಳಿಸಲ್ಪಟ್ಟ ಭಿನ್ನಮತೀಯರ ಕುಟುಂಬದ ಮಹಿಳೆಯರು ‘ಲೇಡೀಸ್ ಇನ್ ವೈಟ್’. ಅವರು ೨೦೦೩ರಿಂದ ಪ್ರತಿ ಭಾನುವಾರ ಬಿಳಿಬಟ್ಟೆ ಧರಿಸಿ ಮೌನವಾಗಿ ನಡೆಯುತ್ತಾರೆ. 

  • ಚೀನಾದಲ್ಲಿ ೧೯೮೯ರಲ್ಲಿ ಟಿಯಾನಾನ್ಮನ್ ಸ್ಕ್ವೇರ್ ಪ್ರತಿಭಟನೆ ವೇಳೆ ಮರಣಿಸಿದ ಹುಡುಗರ ತಾಯಂದಿರ ಗುಂಪು ಟಿಯಾನಾನ್ಮನ್ ಮದರ್ಸ್. ಇದು ಚೀನಾದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು ಬರಬೇಕೆಂದು ಪ್ರತಿಪಾದಿಸುತ್ತದೆ. ಸಾರ್ವಜನಿಕವಾಗಿ ಆ ಘಟನೆಯ ವಿಚಾರಣೆ; ಶಾಂತಿಯುತ ದುಃಖಾಚರಣೆಗೆ ಅವಕಾಶ; ದೇಶ-ವಿದೇಶಗಳಿಂದ ಪರಿಹಾರ ಪಡೆಯಲು ಅವಕಾಶ; ಬಂಧಿಸಲ್ಪಟ್ಟವರ ಬಿಡುಗಡೆ; ಮರಣದಂಡನೆ ತಡೆ ಮೊದಲಾದ ಬೇಡಿಕೆಗಳನ್ನದು ಮುಂದಿಟ್ಟಿದೆ. ಆದರೆ ಚೀನಾ ಸರ್ಕಾರ ಈ ಗುಂಪು ‘ಪ್ರತಿಕ್ರಾಂತಿಗೆ ಪೂರಕ’ ಎಂದು ಭಾವಿಸಿ ಸಂಘದ ಸ್ಥಾಪಕಿ ಡಿಂಗ್ ಜಿಲಿನ್‌ರ ಬಂಧಿಸಿ ಕಮ್ಯುನಿಸ್ಟ್ ಪಕ್ಷದಿಂದ ಉಚ್ಛಾಟಿಸಿದೆ. 


***

ಮಹಿಳಾ ಚಳುವಳಿ ಎಂಬುದೊಂದು ಸಂಭವಿಸುತ್ತಿದೆಯೆ? ಅದರ ಸ್ವರೂಪ, ಶೈಲಿ ಯಾವುದು? ಅದರ ನಾಳೆ ಹೇಗಿರಬಹುದು? ರೂಪುಗೊಳ್ಳಲು ಇರುವ ಮುಕ್ತ ಅವಕಾಶ ಎಷ್ಟು? ವಿದ್ಯೆ-ಸಂಪರ್ಕ-ಸಂಪನ್ಮೂಲಕ್ಕೆ ಮೊದಲಿಗಿಂತ ಹೆಚ್ಚು ಅವಕಾಶವಿದ್ದರೂ ಮಹಿಳಾ ಸಂಘಟನೆ ಕಟ್ಟಿ ಬೆಳೆಸುವುದು ಏಕೆ ಕಷ್ಟವಾಗುತ್ತಿದೆ? ಮುಂತಾದ ಪ್ರಶ್ನೆಗಳು ಮುನ್ನೆಲೆಗೆ ಬರುತ್ತಿರುವ ಈ ಹೊತ್ತು; ಪ್ರತಿಭಟನಾ ಮಾದರಿಗಳು ಸವಕಲಾಗುತ್ತ ಸಾಂಕೇತಿಕವಾಗುತ್ತ ಹೋದಂತೆನಿಸುತ್ತಿರುವ ಈ ಹೊತ್ತು ಹೊಸ ಸ್ಥಳೀಯ, ಸರಳ ಹೋರಾಟ ಮಾದರಿಗಳು ಸೃಷ್ಟಿಯಾಗಬೇಕಿದೆ. ರಾಜಕೀಯ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಬದಿಗಿರಿಸಿ ಮಹಿಳೆಯರು ಜೀವಪರ ಸಂಘಟನೆ ಕಟ್ಟಬೇಕಿದೆ. ಸ್ತ್ರೀವಾದವೆಂಬುದು ಕೇವಲ ಹಕ್ಕಿನ ಹೋರಾಟವಷ್ಟೇ ಅಲ್ಲ, ಎಲ್ಲವನ್ನು ಒಳಗೊಂಡು ನೇರ್ಪಡಿಸುವ ಭರವಸೆಯ ತಾಯ್ತನ. ಹಾಗಿರುತ್ತ ತಮ್ಮ ತರುಣ ಪ್ರತಿಭಾವಂತ ಮಕ್ಕಳನ್ನು ಸಮಾಜದ ಅಸೂಕ್ಷ್ಮ, ಅನ್ಯಾಯಗಳಿಗೆ ಕಳಕೊಂಡ ಭಾರತದ ತಾಯಂದಿರಿಗೆ ಅರ್ಜೆಂಟೀನಾ ಅಮ್ಮಂದಿರ ಮಾದರಿ ಕೈದೀಪವಾಗಬಹುದಲ್ಲವೆ?


No comments:

Post a Comment