ಪ್ರಿಯ ಓದುಗ,
ನಾನೀಗ ತೊಡಗಿಕೊಂಡಿರುವುದು ವಾರಂಗಲ್ಲಿನ ಕಾಕತೀಯ ವಿಶ್ವವಿದ್ಯಾಲಯದ ಪ್ರೊ. ಕೆ. ಪುರುಷೋತ್ತಮ್ ಇಂಗ್ಲಿಷ್‌ಗೆ ಅನುವಾದಿಸಿ, ಸಂಪಾದಿಸಿರುವ ಪುಸ್ತಕ ‘ಬ್ಲ್ಯಾಕ್ ಲಿಲೀಸ್’ (ತೆಲುಗು ದಲಿತ ಕವಿತೆಗಳ ಸಂಗ್ರಹ) ಅನುವಾದದಲ್ಲಿ. ಸಾಕಷ್ಟು ಮರಾಠಿ ದಲಿತ ಕವಿತೆಗಳ ಪರಿಚಯವಿರುವ ಕನ್ನಡ ಓದುಗರಿಗೆ ತೆಲುಗು ದಲಿತ ಕಾವ್ಯದ ಒಂದು ನೋಟ ಈ ಸಂಗ್ರಹದಲ್ಲಿ ದಕ್ಕುತ್ತದೆ. ಮೊದಲ ತಲೆಮಾರಿನ ದಲಿತ ಕವಿ ಗುರ್ರಂ ಜಷುವಾರಿಂದ ಹಿಡಿದು ಇತ್ತೀಚೆಗೆ ಬರೆಯುತ್ತಿರುವ ಇನಾಲ ಸೈದುಲು ತನಕ ಒಟ್ಟಾರೆ ೩೯ ಕವಿಗಳ ೭೩ ಕವಿತೆಗಳು ಇಲ್ಲಿದ್ದು ಅವು ವಿಭಿನ್ನ ಕಾಲ, ವಿಷಯ, ಸಿದ್ಧಾಂತ, ಶೈಲಿ, ಕಾಳಜಿಗಳನ್ನೊಳಗೊಂಡಿವೆ. ಅನುವಾದಕರಾದ ಪುರುಷೋತ್ತಮ್ ಅವರ ಪ್ರಕಾರ, ‘ತೆಲುಗು ದಲಿತ ಕಾವ್ಯ ಕ್ರಿಯೆಯನ್ನು ಓದುಗರ ಮುಂದೆ ಇಡುವ ಪ್ರಯತ್ನ ಈ ಸಂಗ್ರಹ. ೧೦೦ ವರ್ಷಕ್ಕಿಂತ ಅಧಿಕ ಕಾಲಮಾನದ ದಲಿತ ಕವಿತೆಗಳ ಪ್ರತಿನಿಧಿಸುತ್ತ, ತೆಲುಗು ಕಾವ್ಯದಲ್ಲಿ ದಲಿತ ಕಾವ್ಯ ಒಂದು ಸಾಹಿತ್ಯಿಕ ಪ್ರಕಾರವಾಗಿ ಬೆಳೆದುಬಂದ ಬಗೆಯನ್ನು ಇವು ತೋರಿಸಿಕೊಡುತ್ತವೆ. ಇಲ್ಲಿ ದಲಿತ ಸಮುದಾಯದ ಪ್ರತಿಭಟನೆ, ಪ್ರತಿಪಾದನೆಗಳಿಂದ ಶುರುವಾಗಿ ದಲಿತ ದೇವತೆಗಳು, ಆಚರಣೆಗಳು, ವಿಧಿಗಳು, ದಲಿತ ರಂಗಭೂಮಿ, ದಲಿತ ಭಾಷೆ ಮತ್ತು ಆಡುನುಡಿಗಳಿಂದ ದಲಿತರ ಸಾಂಸ್ಕೃತಿಕ ಪರ್ಯಾಯಗಳನ್ನು ಹುಡುಕುವ ತನಕದ ಮಾಗುವಿಕೆ ಕಂಡುಬರುತ್ತದೆ.’
ಅದರಿಂದ ಆಯ್ದ ಎಂಟು ಕವಿತೆಗಳ ಅನುವಾದವನ್ನು, ಕವಿಗಳ ಕಿರು ಪರಿಚಯವನ್ನು ಇಲ್ಲಿ ಕೊಡಲಾಗಿದೆ. ನಾಲ್ವರು ತಮ್ಮ ತಾಯಿಯ ಬಗೆಗೆ ಬರೆದ ಕವಿತೆಗಳನ್ನು ಆಸಕ್ತಿಯಿಂದ ಓದಿದರೆ ಕೆಲವು ವಿಶಿಷ್ಟ ಆಯಾಮಗಳು ಹೊಳೆಯುತ್ತವೆ. ಹಲವು ಕವಿಗಳನ್ನು ಒಬ್ಬ ವ್ಯಕ್ತಿ ಅನುವಾದಿಸುವಾಗ ಭಾಷೆಯ ಏಕತಾನತೆ ಉಂಟಾಗುತ್ತದೆ. ಅದನ್ನು ಸಾಧ್ಯವಾದಷ್ಟು ಮಟ್ಟಿಗೆ ತಡೆಯಲು ಶಿಷ್ಟ ಕನ್ನಡದ ಜೊತೆಗೆ ಎರಡು-ಮೂರು ಉಪಭಾಷೆಗಳನ್ನು ಬಳಸಲಾಗಿದೆ.
ಒಪ್ಪಿಸಿಕೊಳ್ಳಿ..
ಕುಸುಮ ಧರ್ಮಣ್ಣ (೧೮೯೮-೧೯೪೮)
ಕೃಷಿಕ, ಹೋರಾಟಗಾರ, ಬರಹಗಾರ, ಭಾಷಣಕಾರ. ಆದಿ ಆಂಧ್ರ ಸಮ್ಮೇಳನಗಳ ಅಧ್ಯಕ್ಷರಾಗಿದ್ದವರು. ಅಂಬೇಡ್ಕರರ ವಿಚಾರಧಾರೆಗಳ ಜನರಿಗೆ ತಲುಪಿಸಲೆಂದು ಜಯಭೇರಿ ಎಂಬ ನಿಯತಕಾಲಿಕ ನಡೆಸುತ್ತಿದ್ದರು. ದಲಿತರು ಇಸ್ಲಾಮಿಗೆ ಮತಾಂತರ ಹೊಂದಬೇಕೆಂದು ಹೇಳುತ್ತಿದ್ದರು. ನಾಲ್ಕು ಬಹುಮುಖ್ಯ ಪುಸ್ತಕಗಳ ಪ್ರಕಟಿಸಿದರು. ರಾಷ್ಟ್ರೀಯ ಚಳುವಳಿಯಲ್ಲಿದ್ದ ಗರಿಮೆಲ್ಲ ಸತ್ಯನಾರಾಯಣ ‘ಯೂರೋಪಿಯನ್ನರ ದೊರೆತನಕೆ ಧಿಕ್ಕಾರ’ ಎಂಬ ಪ್ರಖ್ಯಾತ ಕವನ ಬರೆಯುವುದಕ್ಕೆ ಮೊದಲೇ ಕೆಳಗಿನ ಕವಿತೆ ಬರೆಯಲಾಯಿತು ಎನ್ನುವುದು ದಲಿತ ಚಿಂತಕರ ಅಭಿಪ್ರಾಯ.
ಈ ಕರೇ ಮನ್ಶರ ದೊರೆತನಕೆ ಧಿಕ್ಕಾರ
ಸಂಗೀತದೆಸ್ರು ಯೇಳ್ಕಂಡು
ಹೆಂಗಸ್ರ ಗುಡಿ ವಳಿಕ್ ತತ್ತರೆ
ವರ್ಷೊರ್ಷ ಹೆಣ್ಣೆಂಗಸ್ರ ದ್ಯಾವ್ರಿಗೆ ಮದ್ವೆ ಮಾಡ್ಸಿ
ತಾವು ಅವರ‍್ನ ಹಾಸಿಗ್ಗೆ ಬಳಸ್ಕತಾರೆ.
ಬಿಳೇರ‍್ನು ಜೊತೆ ಬಿಟ್ಕತಾರೆ ಬೇಕಾರೆ.
ಅಯ್ಯ ದ್ಯಾವ್ರೆ,
ನಾವು ಹೊಲೆರೇನಾರ ಗುಡಿ ವಳಿಕ್ ಬರ‍್ತಿವಂದ್ರೆ
ಅಲಲಲಲಾ,
ಕೆರಳಿ ಧುಮುದುಮು ಅಂತ್ ಉರ‍್ದ್ ಬೀಳತಾರೆ.
ನಾವ್ ನಿಂತಲ್ಲಿ ಅವ್ರು ನಿಲ್ಲಲ್ಲ
ಅವ್ರ್ ಬೆಂಕಿ ತಗಂಡ್ರೆ, ಗಂಟ್ಲು ಹರ‍್ಕತಾರೆ
ನಮ್ಮೇಲೆ ಗಾಳಿ ಬೀಸ್ಕಂಡ್ ವೋದ್ರು ಸೈತ
ಮೈಲಿಗಾಯ್ತು ಅಂತ ಬಡ್ಕತಾರೆ.
ನಮ್ಮತ್ರ ಇರೊ ಏನ್ನೂ ಮುಟ್ಟಲ್ಲ ಅವ್ರು.
ಅಯ್ಯ ದೇವ್ರೆ,
ಧರ್ಮ ನ್ಯಾಯನೀತಿಗುಳ ಹುಗದಾಕಿದಾರೆ ಅವ್ರು.
ನಾವ್ ಕೊಟ್ಟ ತರಕಾರಿನ ಗಂಭೀರವಾಗಿ ತಗತರೆ
ಹಣ್ಣು ಕೊಟ್ರೆ ಬೋ ಕುಶಿಂದ್ಲೆ ತಿಂತರೆ
ಕಾಸು ಕೊಟ್ರೆ ಉಶಾರಾಗಿ ಕಿಸೆಗಿಳಿಸ್ತಾರೆ
ಸೇವೆನು ಜಗ್ಸಿ ಮಾಡಿಸ್ಕತ್ತಾರೆ.
ಅಯ್ಯ ದ್ಯಾವ್ರೆ,
ಅವ್ರಿಗೆ ಬೇಕಾದಾಗ ಯಾವ್ದೂ ಮೈಲಿಗೆ ಅಲ್ಲ ಅವ್ರಿಗೆ.
ಸ್ಯಾನೆ ಚೆನಾಗೆ ಯೋಳ್ತರೆ,
ನೀವು ಹೊಲೇರು ಮುಟ್ಟಿದ್ದೇನುನ್ನು ನಾವ್ ಮುಟ್ಟಲ್ಲ ಅಂತ.
ಆದ್ರೆ ನಾವ್ ಕೊಟ್ಟ ಔಸ್ತ ತಗತಾರೆ.
ನಾವ್ ಕಾಸಿದ ಕಷಾಯ ಕುಡೀತರೆ.
ನಾವ್ ಕರೆದ ಹಾಲು ಕುಡೀತರೆ.
ಅಯ್ಯಯ್ಯ, ಏನ್ ಜನ,
ಅವ್ರಿಗೆ ಔಸ್ತ ಕೊಟ್ಟಿದ್ದು ಮರ‍್ತೆ ಬಿಟ್ಟು
ನೀವು ಹೊಲೇರು, ವಂಟೋಗ್ರಿ ಅತ್ತಗೆ ಅಂದ್ಬಿಡ್ತರೆ.
ಇಂಗ್ಲೀಷೋರ ವಿರುದ್ಧ ಹೋರಾಡ್ತ
ಸ್ವರಾಜ ಬೇಕು ಸ್ವಾಸಂತ್ರ ಬೇಕು ಅಂತೇನೊ ಕೇಳ್ತವ್ರೆ
ಆದ್ರೆ ಸ್ವಾಸಂತ್ರನ ನಮ್ಗವ್ರು ಬಿಲ್ಕುಲ್ ಕೊಡದಿಲ್ಲ
ತಮ್ ಗುಡಿಗುಂಡಾರಗುಳಾಗೆ ನಮ್ಮುನ್ನ ಬಿಟ್ಕಳದಿಲ್ಲ
ಧರ್ಮಚತ್ರದ ವಳೀಕು ಬಿಡಲ್ಲ
ಊರ ಬಾವಿಂದ ನೀರು ಸೇದಕ್ ಬಿಡಲ್ಲ
ಅವರಂತಾರೆ, ಹೊಲೆಮಾದುಗರ‍್ಗೆ ಆ ಹಕ್ಕೇ ಇಲ್ಲ
ಅಲ್ಕಣ ದ್ಯಾವ್ರೆ,
ನಮ್ಗೆ ಹಕ್ಕಿಲ್ಲ ಪಕ್ಕಿಲ್ಲ ಅಂದ್ರೆ
ಅದೆಂಗೆ ಸ್ವಸಂತ್ರ ಬತ್ತದೆ ಅವ್ರಿಗೆ?
ನಂ ಜನ್‌ಗುಳೇ,
ಇಲ್ ಕೇಳಿ, ಸಿಟ್ಟಾಗಬ್ಯಾಡಿ.
ನನ ಮಾತು ಕೇಳಿದ್ರೆ,
ನಂಗೂ ನಿಮ್ಗು ವಿಮೋಚ್ನೆ
ನಾನು ನಂದು ಅಂತ ಬಡಿದಾಡ್ತನೆ ಇದ್ರ,
ಎಂದೆಂದ್ಗು ನಿಮ್ಗಿಲ್ಲ ಬಿಡುಗಡೆ.
ಎಲ್ಲೀವರ‍್ಗು ನಮುನ್ನ ಕೀಳಾಗಿ ನೋಡ್ತಿರೊ
ಎಲ್ಲೀವರ‍್ಗು ಮೇಲ್ಜಾತಿ ಕೀಳ್ಜಾತಿ ಇದೆ ಅಂತೀರೊ
ಎಲ್ಲೀವರ‍್ಗು ಮೈಲಿಗೆ ಅಂಬೋದು ಇರುತ್ತೊ
ಭಾಗ್ಯರೆಡ್ಡಿ ಹೇಳಿದ್ನ ಎಲ್ಲೀವರ‍್ಗು ಯಾರೂ ಅರೀರೋ
ಧರ್ಮಣ್ನ ಮಾತ್ಗೆ ಎಲ್ಲೀವರ‍್ಗು ಯಾರೂ ಕಿಮ್ಮತ್ ಕೊಡಲ್ವೊ
ಅಲ್ಲೀವರ‍್ಗು ಬಿಡುಗಡೆನು ಇಲ್ಲ, ವಿಮೋಚನೆನು ಇಲ್ಲ.
ನೆನಪಿಟ್ಕಳಿ ಈ ಮಾತ್ನ.
(ಭಾಗ್ಯ ರೆಡ್ಡಿ ವರ್ಮ (೧೮೮೮-೧೯೩೭) ಆಂಧ್ರಪ್ರದೇಶದಲ್ಲಿ ದಲಿತರು ಶಿಕ್ಷಣ ಪಡೆವಂತೆ, ಸಂಘಟಿತರಾಗುವಂತೆ ಅಂಬೇಡ್ಕರರಿಗಿಂತ ಮೊದಲೆ ಪ್ರಯತ್ನಿಸಿದ ವ್ಯಕ್ತಿ. ಅವರು ದಲಿತ ಮಕ್ಕಳಿಗಾಗಿ ಶಾಲೆ ನಡೆಸಿದರು ಮತ್ತು ಆದಿ ಆಂಧ್ರ ಸಮಾವೇಶಗಳನ್ನು ನಡೆಸಿದರು.)
ಬೋಯಿ ಭೀಮಣ್ಣ (೧೯೧೧-೨೦೦೫)
ಪೂರ್ವ ಗೋದಾವರಿ ಜಿಲ್ಲೆಯವರು. ಬರಹಗಾರ, ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಕ, ಪತ್ರಕರ್ತ ಮತ್ತು ವಿಧಾನ ಪರಿಷತ್ ಸದಸ್ಯರಾಗಿದ್ದವರು. ಮಹಾತ್ಮಾ ಗಾಂಧಿ ಮತ್ತು ಬಾಬಾಸಾಹೇಬ್ ಅಂಬೇಡ್ಕರರ ಬರಹಗಳಿಂದ ಪ್ರಭಾವಿತರಾಗಿದ್ದರು. ಅಂಬೇಡ್ಕರರ ವಿಭಿನ್ನ ವಿಚಾರಧಾರೆಯ ನಾಲ್ಕು ಪುಸ್ತಕಗಳನ್ನು ತಂದರು. ಅಂಬೇಡ್ಕರರ ಜಾತಿ ವಿನಾಶ ಪುಸ್ತಕವನ್ನು ಮೊದಲು ತೆಲುಗಿಗೆ ಅನುವಾದ ಮಾಡಿದವರು ಅವರು. ದಲಿತರು ಮೊದಲ ಆರ್ಯನ್ನರು ಹಾಗೂ ಮಾಲಾಮಾದಿಗರು ಒಗ್ಗೂಡಬೇಕೆನುವುದು ಅವರ ಪ್ರತಿಪಾದನೆಯಾಗಿತ್ತು. ಆಂಧ್ರಪ್ರದೇಶ ಅನುವಾದ ಸಂಸ್ಥೆಯ ನಿರ್ದೇಶಕರಾಗಿದ್ದರು. ಪದ್ಮಶ್ರೀ, ಪದ್ಮಭೂಷಣ ಮತ್ತಿತರ ಹಲವು ಪ್ರಶಸ್ತಿ ಪಡೆದರು. ೭೦ ಪುಸ್ತಕ ಪ್ರಕಟಿಸಿದರು. ಒಂದು ಪುಸ್ತಕ ಇಂಗ್ಲಿಷ್‌ನಲ್ಲಿಯೂ ಬರೆದರು. ಅವರ ನಾಟಕ ಪಾಲೆರು ಎಷ್ಟೊ ದಲಿತರಿಗೆ ರೈತಾಪಿ ಕೆಲಸ ಬಿಟ್ಟು ಶಿಕ್ಷಣ ಪಡೆಯಲು ಪ್ರೇರೇಪಿಸಿತು.
ಹಟ್ಟಿಗೆ ಬೆಂಕಿ
ಹಟ್ಟಿಗೆ ಬೆಂಕಿ ಬಿದ್ದದೆ
ಅಯ್ಯೋ, ಹೌದಲ, ಅವು ಉರ‍್ದೋಗ್ತಿದಾವೆ!
ಅಯ್ಯಯ್ಯೋ, ಯಾರ ಹಟ್ಟಿನೋ ಏನೋ?
ಇನ್ಯಾರವು, ದಲಿತರವೇ, ನೋಡು ಬೇಕಾದ್ರೆ.
ಉರ‍್ದೋಗೋ ಹಟ್ಟಿ ಇನ್ಯಾರದಾಗಿರಕ್ಕೆ ಸಾಧ್ಯ ಮತ್ತೆ?
ಈ ದೇಸ್ದ ಧರ್ಮನೇ ಹಂಗದೆ
ಅದ್ರಲ್ಲಿ ಹೇಳಿದ್ ಪರ್‌ಕಾರನೇ
ಲಕ್ಷಗಟ್ಲೆ ಹಟ್ಟಿ, ಗುಡುಸ್ಲು ಇಲ್ಲಿದಾವೆ
ವರ್ಷಕೊಂದ್ಸಲ ಅವು ಸುಟ್ಟೋಯ್ತನೇ ಇರ‍್ತಾವೆ
ಒಂದ್ಸಲ ಸುಟ್ಟವು
ಮತ್ತಮತ್ತ ಸುಡದು ಅದೆಂಗಣ್ಣ?
ಅವೇನು ಮೊಳ್ಕೆ ಬತ್ತಾವಾ?
ಹೌದು ಕಳ್ಲಾ ಮತ್ತೆ,
ಮತ್ತೆ ಎಲ್ಲಿಂದ ಬತ್ತವೆ ಅವು
ಮೊಳಕೆ ಒಡೀದೆ?
ಇದೇ ನಂ ಧರ್ಮದ ಗುಟ್ಟು ಕಳ್ಲಾ
ಗುಡುಸ್ಲೂ ಅವತಾರ ಎತ್ತತವೆ!
ಮತ್ತೆ ಮತ್ತೆ
ಧರ್ಮ ಸಂಸ್ಥಾಪನೆಗಾಗಿ ಸುಟ್ಟೋಯ್ತವೆ
ಮತ್ತೆಮತ್ತೆ ಅವತಾರ ಎತ್ತಿ ಮ್ಯಾಕೇಳ್ತವೆ!
ಸುಟ್ಟು ಉರ‍್ದು ಕರುಕ್ಲಾಗದು
ಮತ್ತೆ ಏಳದು
ಈ ವಿಷಚಕ್ರ ಎಷ್ಟ್ ಕಾಲ
ಇಂಗೇ ತಿರುಗುತ್ತಪ ಅಂಗಾರೆ?
ಇದು ಇಂಗೇನೇ,
ಆ ಹಟ್ಟಿ ವಳ್ಗೆ ಇದಾರ‍್ನೋಡು
ಆ ಜೀವಗುಳ್ಗೆ
ಈ ಧರ್ಮ ರಹಸ್ಯ ತಿಳಿಯೋವರ‍್ಗೆ
ಇದು ಇಂಗೇನೆ.
ಯೆಂಡ್ಲೂರಿ ಸುಧಾಕರ (೧೯೫೯)
ಮಹಾರಾಷ್ಟ್ರದಿಂದ ವಲಸೆ ಬಂದ ಕುಟುಂಬದವರು. ಕವಿ, ಕತೆಗಾರ. ನಾಲ್ಕು ಕವನ ಸಂಕಲನ ಪ್ರಕಟಿಸಿದ್ದಾರೆ. ದಲಿತ ಭಾಷೆ ಹಾಗೂ ಮಾದಿಗ ಅಸ್ಮಿತೆ ಅವರ ಬರಹಗಳಲ್ಲಿ ಎದ್ದು ಕಾಣುತ್ತದೆ. ಪಿಎಸ್ ತೆಲುಗು ವಿಶ್ವವಿದ್ಯಾಲಯದ ಮುಖ್ಯಸ್ಥರು ಅವರು.
ಖೈರ್ಲಾಂಜಿ
ಆಕಾಸ್ದಿಂದ ರಗತ ಬೆಳದಿಂಗ್ಳು ಸುರಿತು
ಮಣ್ಣು ಮಾಂಸದ ಮುದ್ದೆ ಹಂಗಾತು
ಅವತ್ ರಾತ್ರಿ ಆಳೆತ್ರದ ನೀಲಿ ಮೂರ್ತಿ ಕಿರುಚ್ದಾಗ
ಆ ರಾತ್ರಿ, ಆತ್ಮಗೌರವ ಅಂಬದು ಗೋಳಿಡ್ತು.
ಕಣ್ಣಲ್ಲಿ ರಕ್ತ ಇಲ್ಲದ್ ಈ ದೇಸ್ದಾಗೆ
ಎಷ್ಟ್ ಸುಲ್ಬ ದಲಿತ್ರ ಕೊಚ್ಚಿ ಕೊಂದ್ ಬಿಸಾಡದು?
ದನಕುರಿ ಕಡಿಯೊ ಕೈಗಾದ್ರು ರವಷ್ಟು
ಹೃದಯ ಕರುಣೆ ಅಂತ ಇರಬೌದು;
ಮಾವ್ಸ ಕಡಿಯೊ ಕತ್ತಿಗೂ ಸೈತ
ಮುಟ್ಟಿದ ಅನುಭವ ಆಗ್ತಿರಬೌದು.
ಹೂ ಕುಯ್ಯೊ ಕೈಯಿ
ದೇವ್ರುನ ಬೇಡ್ಕಳೊ ಕೈಯಿ
ಬೇರ‍್ಯೋರ್ಗೆ ಸಾಯ ಮಾಡೊ ಕೈಯಿ
ಏನ್ ಕಡಿತಿದ್ವು ಆವಾಗ ಅಲ್ಲಿ?
ನನ್ ಪ್ರೀತಿಯ ಯವ್ವೋ, ಯಕ್ಕೋ
ಬೇರೆ ಹೆಂಗಸ್ರ ಕೊಂದು ಕೊಚ್ಚಿ
ಸಾಯೂ ತನ ಜಪ್ಪಿದ
ಕ್ರೂರಪ್ರಾಣಿಗಳಂತ ನಿಮ್ ಗಣಸ್ರ
ಅದೆಂಗ್ ನೀವ್ ಎತ್ತಿ ಕಟ್ಟಿದ್ರವ್ವ?
ರವಷ್ಟು ಸೆರಗು ಕೆಳಗ್ ಸರುದ್ರೆ ಸಾಕು
ನಿಂ ಶೀಲನೆ ಹಾಳಾಯ್ತು ಅಂತ ಗಾಬ್ರಿಯಾಯ್ತಿರಿ
ಅಂತೋರು, ಅದೆಂಗೆ ನಿಮ್ಮಂತ ಹೆಣ ಮಕ್ಳ
ಮೊಲೆ ಕತ್ತರ‍್ಸಿ ಕಿತ್ ಬಿಸಾಡಿ
ತಾಯಿ ಮಗಳ್ನ ಎದ್ರಾಎದ್ರೆ ರೇಪ್ ಮಾಡಿ ಅಂತ
ನಿಮ್ ಗಣಸ್ರಿಗೆ ಚುಚ್ಚಿಕೊಟ್ರಿ?
ಇಂಥಾ ಭಯಾನಕ ಕಣ್ಣೆದ್ರೆ ನಡಿತಿದ್ರು
ಅದೆಂಗ್ ಅದಕ್ ಸಾಕ್ಷಿಯಾಗಿ ಸುಮ್ಮನಿದ್ರಿ?
ಯಮೋ, ಭಾರತ್ ಮಾತೆ
ನಾವು ಸಂಕ್ಟ ಬಟ್ಟು ಅಳ್ತಿದಿವಿ ಕಮ್ಮೊ
ಯೋ ಗಾಂಧಿ
ನಾವ್ ಕಷ್ಟದಾಗಿದಿವಿ ಕಯ್ಯೊ
ಓ ಬಾಬಾಸಾಹೇಬಾ
ಸಿಟ್ನಿಂದ ನಾವ್ ಕುದಿತಿದಿವಿ ಕಯ್ಯೊ.
ತಲೆಯೆತ್ತಿ ಬದ್ಕಕ್ಕೆ ನಮ್ಗೆ ಹೊಸ್ದೊಂದು ಲೋಕಾನೆ ಬೇಕನುಸ್ತಿದೆ
ಕೊನೆಪಕ್ಸ ನಂ ಯೋನಿ ಮೊಲೆನಾದ್ರು ಸುರಕ್ಷಿತವಾಗಿರೋವಂಗೆ.
ಜೂಪಾಕ ಸುಭದ್ರ (೧೯೬೩)
ತೆಲುಗು ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸುಭದ್ರ ಹೈದರಾಬಾದ್ ಸೆಕ್ರೆಟರಿಯೆಟ್‌ನಲ್ಲಿ ಕೆಲಸ ಮಾಡುತ್ತಾರೆ. ಮಹಿಳಾವಾದಿ ಮತ್ತು ಹೋರಾಟಗಾರ್ತಿಯಾಗಿದ್ದಾರೆ. ತಮ್ಮ ಸಾಮಾಜಿಕ ಹೋರಾಟ ಹಾಗೂ ಟ್ರೇಡ್ ಯೂನಿಯನ್ ಅನುಭವಗಳನ್ನು ಬರಹವನ್ನಾಗಿಸಿರುವ ಅವರು ಅಯ್ಯಯ್ಯೊ ದಮ್ಮಕ್ಕ ಎಂಬ ಕವನ ಸಂಕಲನ ತಂದಿದ್ದಾರೆ. ದಲಿತ ಹೋರಾಟದಲ್ಲಿ ಪಾಲ್ಗೊಳ್ಳುವ ಅವರು ದಲಿತ ಸ್ತ್ರೀವಾದ ಕುರಿತ ಚಿಂತನೆಗಳನ್ನು ವಿಸ್ತರಿಸಿದ್ದಾರೆ.
ನನ್ನವ್ವ, ದುಃಖದ ಬಣವೆ
ಅವ್ವ, ನನ್ನವ್ವ
ಗೋಡೆ ಗೂಡಲ್ಲಿ ಹಚ್ಚಿಟ್ಟ ಬುಡ್ಡಿದೀಪ ಅಲ್ಲ
ಆಕಾಶ ಕಂಬಳಿಯಲ್ಲಿ ಹಾದಿತಪ್ಪಿ ಅಲೆವ ಸೂರ್ಯ
ಭೂಮ್ತಾಯಿ ಹರಡಿ ಬಿಚ್ಚಿದ
ಸೆರಗಿನ ಬರಗಾಲ
ಅವ್ವ, ಕಾಲಾತೀತ ಹುಣ್ಣಿವಿ ಚಂದ್ರ
ಕೊನೆಯಿರದ ಹೋರಾಟದ ಸಾಕಾರ ರೂಪ
ಒರಳಲಿ ಹಾಕಿ ಕುಟ್ಟಿದರೂ ತಲೆ ಮೇಲೆತ್ತಿ
ಒನಕೆ ಎದುರು ಸಿಡಿವ ದವಸದ ಹೊಟ್ಟು
ಕೋಳಿ ಕೂಗಿದ್ದೇ ಏರುವ ಸೂರ್ಯ
ಅವ್ವನ ಕಣ್ಣಲಿ ಬೆಂಕಿ ಕಾಯಿಸಿ ಬೆಚ್ಚಗಾಗುತ್ತಾನೆ
ಬೆಳಗಾತ ಅವ್ವ ನಕ್ಷತ್ರ ಗುಡಿಸುತ್ತಾಳೆ
ಅಂಗಳಕೆ ಸಗಣಿ ನೀರು ಸಾರಿಸಿ
ನಮ್ಮನೆಚ್ಚರಿಸಿ, ತಿನಿಸಿ ಕೂಲಿಗೆ ಹೊರಡುತ್ತಾಳೆ
ಅಡವಿಯ ಹಸುವಾಗಲೀ ಕೊಟ್ಟಿಗೆಯ ಕರುವಾಗಲೀ
ಸಂಜೆವರೆಗೆ ಪರಸ್ಪರ ಕೂಗಿ ಕರೆವಂತಿಲ್ಲ, ಕರೆಯುವುದೂ ಇಲ್ಲ
ಅವ್ವ
ಮತ್ತೆಮತ್ತೆ ಅಯ್ಯನ ಕುಲುಮೆಯಲಿ ಬೇಯುವವಳು
‘ಊಟ ಹೊಟ್ಟೆ ತುಂಬ್ಲಿಲ್ಲ, ಅನ್ನದಲ್ಲಿ ಕಲ್ಲು ಸಿಗತು
ಸಾರಿನಲ್ಲಿ ಕೂದ್ಲು ಸಿಗತು, ಹಡ್ಬೆ ಮುಂಡೆ,
ದುಡದ್ ದುಡ್ನ ತತ್ತಾ ಇಲ್ಲಿ, ಹೆಂಡದಂಗ್ಡಿಗೆ ಕೊಡ್ಬೇಕು..’
ಹಿಂಗೇ ಅವ್ವನ ಮೇಲೆ ಅಯ್ಯನ ಯಾವ್ಯಾವುದೋ ಸಿಟ್ಟು.
ಅವ್ವ
ನಮ್ಮ ಕೈಯ ಊಟ ತುಂಬಿದ ತಾಟು
ರಂಟೆ ಹೊಡೆದ ಸಾಲುಗಳಲ್ಲಿ ಬಿತ್ತಿದ ಬೀಜ
ಹಸಿರು ಬೆಳೆಯಾಗುವ ಮೊಳಕೆ
ಕೆಸರಲಿ ಮುಳುಗಿಸಿದ ಮೊಣಕಾಲು
ನೆಟ್ಟಿ ಮಾಡುವ ಕಳೆ ತೆಗೆವ
ಸಂಜೆ ಕಪ್ಪಾದರೂ ನಿಲಿಸದೆ ಗೇಯುವ
ನನ್ನವ್ವ ಅವಳು.
ನನ್ನವ್ವ
ಗದ್ದೆ ಬದುಗಳಲಿ ಗೇಯುತ್ತ ಹಾಡುವಳು
ಆ ಹಾಡೇ ಹಳ್ಳಿ ಬೀದಿ ತುಂಬಿದ ಬೆಳಕು
ಗೇಯುವ ಅವಳ ಬೆವರೇ
ಮರಳುಗಾಡಿನ ಬುಗ್ಗೆಯಂತೆ ಚಿಮ್ಮುವುದು
ಸದಾ ಉರಿವ ಮಣ್ಣೊಲೆಯ ಬೆಂಕಿ ಅವಳು.
ಅವ್ವನ ಸೊಂಟ ಏರಿ ಕೂತ
ಸವಿ ನೆನಪುಗಳು ನನಗಿಲ್ಲ
ನನಗವಳು ಜೋಗುಳ ಹಾಡಿದ್ದು ಕೇಳಲಿಲ್ಲ
ಹೊಗೆ ಹಿಡಿದ ಒರಟು ಕೈಗಳಲಿ
ತುತ್ತುಣಿಸುತ್ತ ಕತೆ ಹೇಳಲೂ ಇಲ್ಲ
ಆಕಳಿಸುತ್ತ ಅವಳ ಮಡಿಲಲಿ
ತಲೆಯಿಟ್ಟು ಮಲಗುವ ಕಾಲ ಬರಲೇ ಇಲ್ಲ
ನೆಗ್ಗಿದ ಸಿಲವಾರು ತಾಟು ಹಿಡಿದು
ಕೂಳು ಹಾಕೆಂದು ಕಿರುಚಿದ ನನ್ನ ಕೀರಲು ದನಿ
ಇನ್ನೂ ಹಸಿಹಸಿ.
ನನ್ನವ್ವ
ಒಡೆದ ತಮಟೆಯ ನಾದ
ನೆಲಕೆ ಹೂಬಿಡಲು ಹಣ್ಣಾಗಲು ಕಲಿಸಿಕೊಟ್ಟವಳು
ಚಪ್ಪಲಿಗೆಂದು ಚರ್ಮವಾದವಳು
ಒಡೆಯರೆಂಬ ಚಾವಟಿಗೆ
ಬುಗುರಿಯಾಗಿರುವ ಕಡು ದುಃಖಿ
ಬೂಮ್ತಾಯಿಗೆ ತನ್ನೆದೆ ಹಾಲ ನೀಡಿ
ಸುಗ್ಗಿಕಣದಿಂದ ಆಚೆ ನೂಕಲ್ಪಟ್ಟ ಪರದೇಶಿ
ನನ್ನವ್ವ
ಚರಿತ್ರೆಯ ಬಣವೆಯ ದುಃಖಗಳೆಲ್ಲ ರಾಶಿಯಾಗಿ
ಅದುವೆ ತಾನಾಗಿ, ಬಾಗಿಲ ಚಪ್ಪಡಿ ಹಾಸಾಗಿ ಬಿದ್ದಿರುವವಳು
ಸೊಂಟದ ಸುತ್ತ ಸೆರಗು ಬಿಗಿದ
ಕೈಯಲಿ ಕುಡುಗೋಲು ಹಿಡಿದ ನನ್ನ ಅವ್ವ
ಒಂದು ಪ್ರಶ್ನೆ.
ನನ್ನವ್ವ ಅಲೆದ, ನಡೆದ, ಕುಸಿದ ನೆಲಗಳಲಿ
ಎಂದೂ ಕಾಲಿಡದ ಭಾಷೆಗಳೆಲ್ಲ ಸರ್ವನಾಶವಾಗಲಿ.
ಮದ್ದೂರಿ ನಾಗೇಶ ಬಾಬು (೧೯೬೪-೨೦೦೫)
ಆಕಾಶವಾಣಿಯಲ್ಲಿ ಉದ್ಯೋಗದಲ್ಲಿದ್ದವರು. ಏಳು ಕವನ ಸಂಕಲನ, ನಾಲ್ಕು ದೀರ್ಘ ಕವಿತೆಗಳು, ಹಲವು ಪ್ರಬಂಧಗಳನ್ನು ಬರೆದಿದ್ದಾರೆ. ಜಾತಿ ವ್ಯವಸ್ಥೆಯ ಕಟುಟೀಕಾಕಾರಾಗಿದ್ದ, ರಾಜಿಯಿರದೆ ಜಾತಿ ವಿರೋಧಿಸುತ್ತಿದ್ದ ಬರಹಗಾರ-ಹೋರಾಟಗಾರರ ಸಾಲಿನಲ್ಲಿ ನಾಗೇಶ ಬಾಬು ಒಬ್ಬರು. ಅವರ ಅಕಾಲಿಕ ಮರಣದಿಂದ ತೆಲುಗು ಸಾಹಿತ್ಯವು ಪ್ರತಿಭಾವಂತ ಲೇಖಕನನ್ನು ಕಳೆದುಕೊಂಡಿದೆ.
ಹೊಲಾರ ಅವ್ವ
ಯಾವತ್ತಾದ್ರೂ ನೀವು
ಸಾರ್ವಜನಿಕ ಆಸ್ಪತ್ರೆ ಅನ್ನೋ ಹೆಣದಂಗ್ಡೀಲಿ
ಕಣ್ಣೀರ ಗುಂಡೀನೇನಾದ್ರು ನೋಡಿದ್ರಾ?
ಅದು ನನ್ನವ್ವ!
ಯಾವತ್ತಾದ್ರು ನೀವು
ಗೋರಿ ಮೇಲೊಂದು ಒಂಟಿ ಶಿಲುಬೆ
ಗೋರಿಕಲ್ಲೂ ಹುಗೀದ ಮಣ್ಣಿನ ಗುಡ್ಡೆ
ಸ್ಮಶಾನದಲ್ಲಿ ನೋಡಿದ್ರಾ?
ಅದು ನನ್ನವ್ವ!
ನನ್ನವ್ವ ಯಶೋದಾನೂ ಅಲ್ಲ, ಕೌಸಲ್ಯಾನೂ ಅಲ್ಲ
ಚಂದ್ರನ್ನ ತೋರುಸ್ತ ಬೆಳ್ಳಿ ಚಮಚದಲ್ಲಿ
ಹೊಟ್ಟೆ ತುಂಬೋವಷ್ಟು ಅನ್ನ ಎಂದೂ ಹಾಕ್ಲಿಲ್ಲ
ಒತ್ತಾಯ ಮಾಡಿ ಬಿಸ್ಕೀಟು ತಿನಿಸ್ಲಿಲ್ಲ
ಅವಳ ಕಣ್ಣಲ್ಲಿ ಎಂಥಾ ಬೆಳಕೂ ಇರ‍್ಲಿಲ್ಲ
ಪೆಪ್ಪರ್‌ಮಿಂಟ್ ಕೊಡ್ಸು ಅಂತ ರಚ್ಚೆ ಹಿಡಿದ್ರೆ
ಬೈದು, ಬರ್ಲು ತಗಂಡು ಸರೀ ಬಡಿತಿದ್ಲು.
ಇಂಥಾ ಅವ್ವನ ಬಗ್ಗೆ ನಾನೆಂಥ ಹಾಡು ಬರೀಲಿ?
ಎಲ್ರು ತಂ ತಾಯಂದ್ರ ಮೇಲೆ ಹಾಡು ಬರಿತಾರೆ
ಅವರೆಲ್ಲ ರಾಣಿಯರು, ಹಾಲುಣಿಸಿದವರು
ನನ್ನವ್ವನ ಬಗ್ಗೆ ಏನಿದೆ ಅಂಥಾ ಹೇಳಿಕೊಳೋವಂಥಾದ್ದು?
ಒಳ್ಳೆ ಹೆಸರಿಲ್ಲ, ಮರ್ಯಾದೆ ಬರೊ ಗುಣವಿಶೇಷ ಇಲ್ಲ!
ಅವ್ಳನ್ನ ಕರೆಯೋದೆ ಸೂಳೆ, ಮುಂಡೆ ಅಂತ.
ಒಂದು ಹಿಡಿ ಕೂಳಿಗೆ ಜೀವಮಾನಿಡಿ ಬಡಿದಾಡಿದ ಬುದ್ಧಿಗೇಡಿ
ಹಿಂಗಿರ‍್ತ ಈ ವರ್ಣಮಾಲೆ ಅಕ್ಷರಗೋಳು ಯಾವತ್ತಾದ್ರು
ಇಂಥ ಅವ್ವನ ಬಗ್ಗೆ ಹಾಡು ಬರೆಯಕ್ಕೆ ಒಪ್ತಾವೆ ಅಂತೀರ?
ಅವಳ ಮೇಲೊಂದು ಪದ್ಯ ಬರೆದ್ರೆ ಛಂದಸ್ಸು ಹೊಂದಿಕೊಳುತ್ತಾ?
ಎಲ್ಲಾರ ಅಮ್ಮಂದ್ರು ಗಾಢ ನಿದ್ದೇಲಿರೋವಾಗ
ನನ್ನವ್ವ ಬೆಳೆದು ನಿಂತ ಹೊಲದ ಎದುರು ಇರೋಳು.
ದುಡ್ಡಿದ್ದ ಅಮ್ಮಂದ್ರು ‘ಅತ್ಯುತ್ತಮ ತಾಯಿ’ ಬಹುಮಾನ ಪಡಿವಾಗ
ಹೊಲಾರ ಕೇರಿಯ ನನ್ನವ್ವ
ಒಂದು ಬಾಯಿ ನೀರು ಕುಡದ್ಲು ಅಂತ ಸಿಕ್ಸೆ ಅನುಬೈಸ್ತಿದ್ಲು
ಉಳದೋರ ಅಮ್ಮಂದ್ರು ಮಾ ನಾಯಕಿಯರಂಗೆ ಆಳುವಾಗ
ಹೊಲಾರ ನಮ್ಮವ್ವ ಹಕ್ಕಿಗಾಗಿ ಹೋರಾಡ್ತಿದ್ಲು
ಯಾರೇ ಆಗ್ಲಿ, ಅವ್ರ ತಾಯಿ ಅಂದ್ರೆ
ಕೂಸಿಗೆ ಹಾಲು ಕುಡ್ಸಿದ್ದು, ಜೋಗುಳ ಹಾಡಿದ್ದು ನೆನಪು ಮಾಡ್ಕೊತಾರೆ.
ನಂಗೆ ಮಾತ್ರ ಕಳೆ ತೆಗೆಯೋ, ಗೇಯೋ ಅವ್ವನೆ ನೆಪ್ಪಿಗ್ ಬರೋದು.
ಕಣ್ಣಿಗೇ ಕಾಣದ ಇಂಥಾ ಅವ್ವ
ತನ್ನ ಹೆಣ್ತನನೇ ಗೊತ್ತಿಲ್ದ ಈ ಅವ್ವನ ಬಗ್ಗೆ ಏಂತಾನೆ ಬರೀಲಿ?
ಕೋಳಿ ಕೂಗ್ದಾಗಿಂದ ರಾತ್ರಿ ಅಪ್ಪ ಮುಟ್ಟೋ ತನ
ಅವ್ವ ತಾನು ಹೆಣ್ಣು ಅನ್ನದ್ನೆ ಮರ‍್ತು ಬಿಟ್ಟಿರ‍್ತಾಳೆ!
ನನ್ನವ್ವ ಯಾವತ್ತೂ ಒಂದೇಒಂದು ಜೋಗುಳ ಹಾಡಲಿಲ್ಲ
ಹಸ್ದು ಹಸ್ದು ಗಂಟ್ಲು ಎಂದೋ ಒಣಗೋಗಿದೆ
ಅವಳು ಯಾವತ್ತೂ ನನ್ನ ತಟ್ಟಿ ಮಲಗಿಸ್ಲೂ ಇಲ್ಲ
ಎಂದೋ ಅವಳ ಕೈ ಸನಿಕೆ ಪಿಕಾಸಿ ಆಗ್ಬಿಟ್ಟಿದಾವೆ
ಉಳದ ಮಕ್ಳು ಅಮ್ಮಂದ್ರ ಕೈ ಹಿಡ್ದು ಪಿಕ್ನಿಕ್ಕಿಗೆ ಹೋದ್ರೆ
ನನ್ನವ್ವನ ಕಣಿವೆಯಂತ ಹೊಟ್ಟೇಗೆ ಅಂಟಿ ಮಲಗ್ತಿದ್ದೆ ನಾನು
ಉಳದೋರೆಲ್ಲ ತಾಯಿನೆ ದೇವ್ರು ಅಂತ ಪೂಜೆ ಮಾಡ್ತಿರಬೇಕಾದ್ರೆ
ಶಾಲೆ ಫೀಸು ಕೊಡತಿಲ್ಲ ಯಾಕಂತ ಸಿಟ್ಟಿಲೆ ಬೈತಿದ್ದೆ ನಾನು
ಉಳದ ಮಗಂದ್ರು ತಮ್ಮಮ್ನ ತಲೆನೋವಿಗೆ ತಾವೇ ಸಂಕ್ಟ ಪಡ್ತಿರಬೇಕಾದ್ರೆ
ಕಾಯ್ಲೆ ಬಿದ್ದಿರೊ ಈ ಅವ್ವ ಯಾಕ್ ಸಾಯ್ತಿಲ್ಲ ಅಂತ ಗೊಣಗ್ತಿದ್ದೆ ನಾನು.
ಏನೇಳಲಿ?
ಮಳೇಲಿ ತೊಪ್ಪೆಯಾದೆ ಅಂತ ಅವ್ವನ ಸೀರೇಲಿ ಹೊಕ್ಕಂಡ್ರೆ
ಒಂದು ಸಾವ್ರ ತೇಪೆ ಅಣಕ್ಸಿದ್ವು ನನ್ನ
ಒಣಗಿದ ಗಂಟ್ಲು ಒದ್ದೆ ಆಗ್ಲೀಂತ ಅವಳ ಮೊಲೆ ಚೀಪಿದ್ರೆ
ಪಕ್ಕೆಲುವು ಸ್ವಾಟೆಗ್ ಚುಚ್ಚಿ ತಿವುದ್ವು ನನ್ನ.
ಏನೇ ಆದ್ರೂ
ಈ ಭಾಷೆ, ಈ ಪದ
ನನ್ನವ್ವನ ಮೇಲೆ ಹಾಡು ಬರೆಯಕ್ಕೆ ಯಾವತ್ತೂ ಸಾಲ್ದು
ಮನುಶಳೇ ಅಲ್ಲದೋಳ ಮೇಲೆ
ಲಕ್ಷಾಂತರ ಅಮ್ಮಂದ್ರ ನಡುವೆ ದನದಂಗೆ ಇರೋಳ ಮೇಲೆ
ಯಾವಳು ಹೆತ್ತ ಮಕ್ಳ ಪಶುಗಳಂಗೆ ನೋಡ್ತಾರೋ ಅಂತೋಳ ಮೇಲೆ
ಯಾವತ್ತೂ ಹಾಡು ಬರೆಯೋಕಾಗಲ್ಲ ಈ ಭಾಷೆಗೆ, ಈ ಪದಗಳಿಗೆ.
ರವಿನುತಾಲ ಪ್ರೇಮ ಕಿಶೋರ್ (೧೯೬೫)
ಪ್ರಕಾಶಂ ಜಿಲ್ಲೆಯ ಹಳ್ಳಿಯವರು. ಎಂಟು ನಾಟಕ, ೧೨ ಏಕಾಂಕಗಳು ಹಾಗೂ ಎರಡು ಕವನ ಸಂಕಲನ ಪ್ರಕಟಿಸಿದ್ದಾರೆ. ಇತಿಹಾಸ ಸ್ನಾತಕೋತ್ತರ ಪದವಿ ಪಡೆದವರು. ಹೈದರಾಬಾದಿನ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಗಣಸು ತಾಯಿಯ ಮಗ
ಅವ್ವಾ, ಏ ಯವ್ವಾ
ನಿನ್ ಹೊಟ್ಯಾಗ್ ನಾ ಬೆಳಿಯಾಕ್ ಒಲ್ಲೆ
ಸುಳ್ಳೇ ಒಂಭತ್ ತಿಂಗ್ಳ ಯಾಕ ಹೊರತೀಯಬೆ?
ನೀ ಒಂದ್ ಜಾತ್ಯಾಕಿ, ಅಪ್ಪ ಒಂದ್ ಜಾತ್ಯೋನು
ಜಾತಿ ಒಲ್ಲಂತ ಓಡಿ ಹ್ವಾದವ್ರು ನೀವಲ್ಲೆನು?
ಜಾತಿ ಬೇತಾಳ ನಿಮ್ನ, ನನ್ನ ಹಿಂಗ್ ಬೆನ್ನತ್ತೈತಿ
ಇನುಇನೂ ನಾ ಹುಟ್ಟಿ ಬರಬೇಕಂತಿಯೇನು?
ಜಾತಿ ರೂಢಾ ಮುರದಿ, ಜಾತಿಮರ‍್ವಾದಿ ಮುರ‍್ಯೂದಾಗ್ಲಿಲ್ಲವ್ವ ನಿನಗ
ಜಾತಿ ಬಿಟ್ ಮದಿವಾದಿ ಖರೆ, ಆದ್ರ ಒಳಸೂಕ್ಷ್ಮ ಅರುವಾಗ್ಲಿಲ್ಲ
ಎಲ್ಲಾಕಡೆ ಅಪ್ಪನ ಜಾತಿನೆ ಮುಂದ್ ಬರು ಹೊತ್ನ್ಯಾಗ
ಪಂಚರು ಸೈತ ಅದ್ರ ಕಡೆನೆ ಹೊಳ್ಳಿಕೊಂಡಾಗ
ಹೆಣ್ಣೆಂಗ್ಸು ನಿನ್ ಹೊಟ್ಯಾಗ ಹುಟ್ಟಾಕ್ ಒಲ್ಲೆ ನಾನು
ಗಂಡು ಅವ್ವನ ಗರ್ಭದೊಳಗಽ ಈ ಮಗ ಬೆಳೀಬೇಕು
ಓ ಮುತ್ಯಾ, ಪಂಚರ ಹಿರ‍್ಯಾ,
ದೇವ್ರಿಗೆ ಒಂದ್ ಆಜ್ಞೆ ಹೊಂಡ್ಸು,
ನಂಗೂ ಅದರದೊಂದ್ ಕಾಪಿ ಕಳಸು
ಇನಮ್ಯಾಲ ಅಪ್ಪಂದ್ರು, ಅಪ್ಪಂದ್ರಷ್ಟ ಹೆರತಾರ, ಹೆರಬೇಕು
ಅಪ್ಪಂದರಷ್ಟ ಹೊತ್ತು ಹೆತ್ತು ಕೂಸ್ನ ಬೆಳಸತಾರ, ಬೆಳಸಬೇಕು
ಹೇಳು ಅವ್ರಿಗಿ, ಇದಽ ಕೊನೀ ಫರಮಾನು..
ಚಲ್ಲಪಳ್ಳಿ ಸ್ವರೂಪಾ ರಾಣಿ (೧೯೭೦)
ಗುಂಟೂರಿನ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದಲ್ಲಿ ಬೌದ್ಧ ಅಧ್ಯಯನ ವಿಭಾಗದಲ್ಲಿ ಬೋಧಕರಾಗಿದ್ದಾರೆ. ಮಂಕೇನಾ ಪುವ್ವು ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಮೌಖಿಕ ಪರಂಪರೆ, ಆದಿವಾಸಿ ಮತ್ತು ದಲಿತ ಮಹಿಳೆಯರ ಕುರಿತು ಹಲವು ಪ್ರೌಢ ಪ್ರಬಂಧಗಳನ್ನು ಬರೆದಿದ್ದಾರೆ. ಅವರ ಕವಿತೆಗಳು ದಲಿತ ಸ್ತ್ರೀವಾದದ ಎಲ್ಲ ಲಕ್ಷಣಗಳನ್ನು ಪಡೆದಿದೆ.
ಕೆಸರು ಕೈ
ಪಾತ್ರೆಪಗಡೆಗಳ ಟಣಟಣ ಸದ್ದಿನೊಂದಿಗೆ
ಕೋಳಿ ಕೂಗುವ ಹೊತ್ತಿಗೆ
ಅವಳು ಗುಡಿಸಲ ಎಬ್ಬಿಸುತ್ತಾಳೆ
ಗವ್ಗತ್ತಲ ಸೀಳಿ ಹಟ್ಟಿ ಬೆಳಗುತ್ತಾಳೆ
ಕುಡಿಗಳಿಗೆ ನಾಲ್ಕಗುಳು ತಿನಿಸುತ್ತಾಳೆ
ಬುತ್ತಿ ಹೊತ್ತು ಹೊಲಕೆ ಬಂದರೆ
ಒಡೆಯ ಬೈಗುಳದೊಂದಿಗೆ ಸ್ವಾಗತಿಸುತ್ತಾನೆ
ಭತ್ತದ ಎಳೆಸಸಿಯ ಮಿದುವಾಗಿ ಊರಿ ನೆಟ್ಟಿ ಮಾಡುವಾಗ
ಹೊಟ್ಟೆ ಕಳ್ಳು ಗುಡುಗುಡೆಂದು ಭೋರಿಟ್ಟು ಕುಣಿಯುತ್ತದೆ
ಹಿಡಿ ಅನ್ನ, ಚಟಾಕು ಮೆಣಸಿಗಾಗಿ ದಿನವಿಡೀ ಗೇಯುತ್ತಾಳೆ
ಹೆಮ್ಮರದ ಕೊಂಬೆಗೆ ನೇತಾಡುವ ಜೋಳಿಗೆಯಲಿ
ಕೈಗೂಸು ಕಿರುಚುವುದು ಕೇಳುತ್ತಿದ್ದರೂ,
ಆಡಿಸುವವರಿಲ್ಲದ ತನ್ನ ಚಂದುಳ್ಳಿ ಮಗಳು
ಕೆರೆಯ ಕೆಸರಲ್ಲಿ ಆಡುತ್ತಿದ್ದರೂ,
ನೋಡೇ ಇರದವರಂತೆ
ಗದ್ದೆಗೆ ರಸಗೊಬ್ಬರ ಹರಡುತ್ತಾಳೆ
ಕೆಸರು ಮೆತ್ತಿದ ಕೈ, ಮಗ್ನ ಕಳೆಕೀಳುವುದರಲ್ಲಿ..
ಬೇಯಿಸಲು ತಟಾಕು ಕಾಳಿಲ್ಲ ಹಟ್ಟಿಯಲಿ
ಒಡೆಯನ ಕಣದಲ್ಲಿ ಭತ್ತದ ರಾಶಿ
ಕೈ ಕೆಸರಾಗಿಸಿ ಚಿನ್ನದ ಹೂವರಳಿಸಿ
ತೂತು ಕಾಸಿನ ಕೂಲಿ ಪಡೆದಾಗ
ಅವಳ ಹೆಣ್ತನ ಅಣಕಿಸುತ್ತದೆ
ಕರುಳಕುಡಿಗಳ ಹೊಟ್ಟೆ ತುಂಬಿಸಲು
ಬಲೆ ಹಾಕಿ ಕಾಯುವಾಗ
ಅತ್ತ ಗಂಡನೂ ಕಾದಿದ್ದಾನೆ ಮನೆಯಲ್ಲಿ
ಅವಳ ಬೆವರ ಹೆಂಡವಾಗಿಸಿ ಕುಡಿಯಲು
ಬಿಸಿಲಲ್ಲಿ ಒಣಗಿ ಮಳೆಗೆ ನೆಂದು
ಗಂಡನಿಂದ ವದೆ ತಿಂದು
ವರುಷಗಟ್ಟಲೆ ಕೂಲಿಯಲಿ ಜೀವ ತೇದು
ಚೆಂಡು ಹುವ್ವಂತೆ ಫಳಫಳವೆನುತಿದ್ದ ಮೈಯಿ
ಒಣಗಿ ಮಾಸಲಾಗುತ್ತಿದೆ
ಉದುರಲಿರುವ ಎಲೆಯ ಕಡ್ಡಿಯಂತೆ.
ಮುಗ್ಧೆ ಅವ್ವ, ಜೀವಕಳೆ ಮಾಸಿಹೋದವಳು
ಕಣ್ಣೀರ ಹಳ್ಳದಲಿ ಮುಳುಗಿದವಳು
ಮುಳುಗುವ ಸೂರ್ಯನಂತೆ
ಒಲೆಯ ಕಟ್ಟಿಗೆಯಂತೆ
ಸುಟ್ಟು ಕರಕಲಾದವಳು
ಹಸಿವಿನ ಶಿಲುಬೆ ಹೊತ್ತು
ಬದುಕಿನ ಕಲ್ಲುಮುಳ್ಳಿನ
ಹಾದಿಯಲಿ ನಡೆದಿರುವವಳು.
ಯೇಡ್ಲ ಪೀಟರ್ ಪಾಲ್ (೧೯೭೨)
ಗುಂಟೂರು ಜಿಲ್ಲೆಯವರು. ಒಂದು ಕವನ ಸಂಕಲನ ಪ್ರಕಟಿಸಿದ್ದಾರೆ. ಕೃಷಿ ಇಲಾಖೆಯಲ್ಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಸಮಕಾಲೀನ ವಿಷಯ ಕುರಿತು ಕವಿತೆ ಬರೆಯುತ್ತಾರೆ.
ಬೀದಿನೆ ಬೆಡ್ರೂಂ ಆಗ್ಸಿ..
ಸಜ್ಜಾಲಗುಡವೇ!
ನಿನ್ನೆಸ್ರು ಕೇಳಿದ್ರೆ ಸಾಕು ನಂಗೆ, ಅಯ್ಯಬ್ಬ!
ಅಮಲು ಬರುಸ್ದೆ ಆಪ್ರೇಷನ್ ಮಾಡ್ಕಂಡಂಗಾಯ್ತದೆ
ಎಳಗೂಸ್ನ ಸೋಬ್ನಕ್ಕೆ ಕಳಿಸಿದಷ್ಟು ಗಾಬ್ರಿಯಾಯ್ತದೆ
ಸಜ್ಜಾಲಗುಡ, ಯೋ,
ಅವಳ್ನ ಹಂಗೆ ಎಲ್ಲರೆದುರ‍್ಗೆ ಬತ್ಲೆ ಮಾಡ್ಬೇಕಿತ್ತ?
ಬರೀ ಮೂರ್ರುಪಾಯ್ ಸಾಲ ತೀರ‍್ಸಲಿಲ್ಲಂತ
ಬೀದೀನೆ ಬೆಡ್ರೂಂ ಮಾಡ್ಬೇಕಿತ್ತ?
ಅವ್ಳೇನ್ ಲೈಂಗಿಕ ಬೊಂಬೆ, ರೊಬಾಟು ಅಂತ ತಿಳ್ಕಂಡ್ರ?
ಅವ್ಳು ಬಸವಿ ಅಂಬೊ ಒಂದೇ ಕಾರಣಕ್ಕೆ
ರೇಪ್ ಮಾಡೊ ಹಕ್ಕು ಇದೆ ಅಂದ್ಕಂಡ್ಯ?
ಅತ್ಯಾಚಾರ, ಬೀದೀಲಿ ಬತ್ಲೆ ಮೆರವಣಿಗೆ ಮಾಡಿದ್ರೆ
ಗಿನ್ನೆಸ್ ಬುಕ್ನಲ್ಲಿ ನಿನ್ನೆಸ್ರು ಸೇರಿಬಿಡುತ್ತನ್ನೊ ಆಸೆನ?
ಅವಳ್ನ ರೇಪ್ ಮಾಡೊವಾಗ ಓ ಸಜ್ಜಾಲಗುಡವೇ,
ನೀ ಅದೆಂಗ್ ಸಾಕ್ಷಿಯಾಗ್ ತಿಕ ಮುಚ್ಕಂಡ್ ಸುಮ್ಕಿದ್ದೆ?
ನಿನ್ ಬಾಯಲ್ಲಿ ಅದ್ಯಾರ ಹೇಲು ತುಂಬ್ಕಂಡಿದ್ದೆ?
ಓಗ್ಲಿ ಜನನಾರ ಅದೇನ್ ಮಾಡ್ತಿದ್ರು?
ಅಮ್ಮಾ ಮಹದೇವಮ್ಮ, ಅಯ್ಯೊ
ಪ್ರಾಣಿಗಳಾಗಿದ್ರು ಅವ್ರುನ್ನ ಬಿಡ್ತಿರಲಿಲ್ಲ ತಾಯೆ,
ಕಲ್ಲೂ ಸೈತ ಕರಗ್ತಿತ್ತು
ಅಮ್ಮಾ, ಮಾದೇವಮ್ಮ, ಅಯ್ಯೋ
ಈ ಅಮಾನವೀಯ ಲೋಕ್ದಾಗೆ
ಎಷ್ಟೆಷ್ಟೊ ಹೆಣಮಕ್ಳ ಸೂಳೇರ್ ಮಾಡಿದಾರೆ
ನಿನ್ ಬದುಕ್ನ ಬಂಡೆಕಲ್ಲು ಮಾಡೊ ಕಾಲ ಇದು
ಇದಕ್ಕೆಲ್ಲ ಒಳ್ಳೆ ಮದ್ದು ಯಾವ್ದು ಗೊತ್ತ ತಾಯೆ?
ಅವ್ರ ಅಂಗಾಂಗಗಳ್ನ ಬೇರಲ್ಲೆ ಕಚ್ಚಿ ಬಿಸಾಡದು!
ಅಳಬ್ಯಾಡ ಕಣವ್ವ
ಅವ್ರುನ್ ನೋಡಿ ಗಹಗಹಿಸಿ ನಗ್ಬೇಕು ನೀನು
ಎಂಗ್ ನಗ್ಬೇಕು ಅಂದ್ರೆ
ನಿನ್ ನಗು ಕೇಳಿದ್ ತಟೂವೆ
ದೇವ್ರು ದಿಂಡ್ರು ಎಲ್ರುವೆ
ಮುಚ್ಕಂಡ್ ಅಂಗೆ ಓಡೋಯ್ತಿರ‍್ಬೇಕು.
(ರಾಯಲಸೀಮೆಯ ಕರ್ನೂಲು ಜಿಲ್ಲೆಯ ಹಳ್ಳಿ ಸಜ್ಜಾಲಗುಡದಲ್ಲಿ ಮೂರು ರೂಪಾಯಿ ಸಾಲ ಮರಳಿ ಕೊಡಲಿಲ್ಲವೆಂದು ಮಹದೇವಮ್ಮನನ್ನು ಬೆತ್ತಲಾಗಿಸಿ, ಬೀದಿಯಲ್ಲಿ ಮೆರವಣಿಗೆ ಮಾಡಿ ಅತ್ಯಾಚಾರ ಎಸಗಿದ್ದರು.)
(ರೇಖಾಚಿತ್ರ: ಡಾ. ಕೃಷ್ಣ ಗಿಳಿಯಾರ್)
Really super medam
ReplyDeleteReally super medam
ReplyDelete