Saturday, 31 December 2016

ಸರಿದ ವರುಷ ಮೂಡಿಸಿದ ಕೆಲ ಸಾಲುಗಳು..ಕಸ ಬೀಳುವವರೆಗೂ ಕನ್ನಡಿಯಲಿ ಕಣ್ಣು ನೋಡಿಕೊಂಡಿರಲಿಲ್ಲ
ನವೆಯಾಗುವವರೆಗೂ ಚರ್ಮದ ಬಿರುಕು ಕಾಣಿಸಿರಲಿಲ್ಲ
ಮುಳ್ಳು ಚುಚ್ಚುವವರೆಗು ಪಾದದ ಧೂಳು ಗಮನಿಸಿರಲಿಲ್ಲ
ಧನ್ಯವಾದ, ನನ್ನ ನನಗೆ ತೋರಿಸಿದ್ದಕ್ಕೆ.
ಮನ್ನಿಸಿ,
ಗುರುಗಳೆಂದು ನಿಮ್ಮ
ಇಷ್ಟುದಿನ ಕರೆಯದೆ ಇದ್ದುದಕ್ಕೆ..


ಹುಣ್ಣಿಮೆಯ ರಾತ್ರಿ
ರಕ್ತ ಹಾಲಾಗಿ ಕೆಚ್ಚಲ ತುಂಬುವ ಹೊತ್ತು..
ಒಬ್ಬರ ಮೈಗೊಬ್ಬರು 
ಬೆಳದಿಂಗಳು ಸವರುತ್ತಾ ಕೂತಿದ್ದೆವು
ಬೆನ್ನ ಹುರಿಯೊಳಗೇನೋ ಇಳಿದಂತಾಗಿ 
ಚಂದ್ರ ಸಾಕ್ಷಿ
ಇದ್ದಕ್ಕಿದ್ದಂತೆ ಅವನೊಂದು ಹಣತೆಯಾದ
ಅನುದಿನ ಎದುರೆದುರೆ ಇದ್ದರು
ಆಡದೆ ಚರಿತ್ರೆಯಾದ ಮಾತುಗಳು
ಬೆಳಕಾಗಿ ನನ್ನ ಬೆರಳ ಹೊಕ್ಕವು
ಕಣ್ಣು ತುಂಬಿ
ಎದೆಯೊಳಗಿನ ಬೂದಿರಾಶಿಯ ನೇವರಿಸುತ್ತ
ಹರಿದ ನೆರೆ ಬೆಳಕು
ಕವಿತೆಯ ಸಾಲು ಪ್ರವೇಶಿಸಿತು
ಒಂದು ಹೆಜ್ಜೆ ಮುಂದಿಡಲು 
ಎರಡು ಹೆಜ್ಜೆ ಬೆಳಕಾಯಿತು

ಜೀವತೈಲ ಉರಿಸಿ ಉರಿದು
ಅವ ಬೆಳಕಾಗಲು
ಬೆಳಗದಿದ್ದೀತೇ ಕವಿತೆ?
ಬೆಳೆಯದಿದ್ದೀತೇ ಬದುಕು?ಮರಳ ಮೇಲೆ ದಿನಗಳು ಮೂಡಿದವು
ತೊಳೆದು ಹೋದವು
ಕಡಲು ಕಿನಾರೆಗಳ ಫರಕೇ ತಿಳಿಯದಂತೆ 
ತೇಲಿಸಿತು ನಿನ್ನ ಬೆರಳು..

ಉಗುರು ನೋಯಿಸಿತು; ಬೆರಳು ತಾಗಿದ್ದು ಸುಳ್ಳಲ್ಲ
ದೀಪವಾರಿತು; ತೈಲವೆರೆದದ್ದು, ಬೆಳಕಾದದ್ದು ಸುಳ್ಳಲ್ಲ
ವಿರಹ ಬೇಯಿಸಿತು, ಎದೆಯ ಬಿಸಿಗೆ ಒಲಿದದ್ದು ಸುಳ್ಳಲ್ಲ
ಕಾಯ ದೂರಾಯಿತು, ಜೀವ ಜೀವವೇ ಆಗಿರುವುದು ಸುಳ್ಳಲ್ಲ
ನೆಲ ಒಣಗಿತು, ಬೀಜ ಕನಸಾಗಿ ಧೂಳಲಡಗಿರುವುದು ಸುಳ್ಳಲ್ಲ  

ನಿನ್ನ ಅಂಗೈ ತಾವಿಗೆ ಹಂಬಲಿಸುವ ಅದೃಶ್ಯ ಹಕ್ಕಿ ನಾನು


ಮಾತಿಗೆ ಮಾತು ಸೇರಿತು
ಕುಂಬಾರನ ಕೈಗೆ ಮಣ್ಣು ಸೇರಿತು

ಚಳಿಗೆ ಬಿಸಿಲು ಕಾಯಿಸುವ
ಘಟ್ಟದ ಬೆಟ್ಟಗಳ ಕಡು ಏಕಾಂತದಲ್ಲಿ
ನಕ್ಕವು ಶಬ್ದಗಳು..

‘ಆಡಲೇಬೇಕಾದ ಮಾತುಗಳನ್ನು
ಆಡುವಾಗ ಆಡದಿದ್ದರೆ
ಪಾಪನಿವೇದನೆಗೆಂದು ಕಾಲ
ಯಾವ ಅವಕಾಶವನ್ನೂ ಕೊಡುವುದಿಲ್ಲ..
ಉಸಿರು ಕಟ್ಟಿಸಬೇಡ ನಿನ್ನ ನಾಲಿಗೆಯೊಳಗೆ
ಉಸಿರು ಕಟ್ಟಬೇಡ ಬದುಕಿರುವಾಗಲೇ..’
(ಕಲೆ: ಕೃಷ್ಣ ಗಿಳಿಯಾರ್)

9 comments:

 1. ತುಂಬ ಸೊಗಸಾಗಿದೆ ಮ್ಯಾಡಂ

  ReplyDelete
 2. ಆಡಲೇಬೇಕಾದ ಮಾತುಗಳನ್ನು
  ಆಡುವಾಗ ಆಡದಿದ್ದರೆ
  ಪಾಪನಿವೇದನೆಗೆಂದು ಕಾಲ
  ಯಾವ ಅವಕಾಶವನ್ನೂ ಕೊಡುವುದಿಲ್ಲ..
  ಉಸಿರು ಕಟ್ಟಿಸಬೇಡ ನಿನ್ನ ನಾಲಿಗೆಯೊಳಗೆ
  ಉಸಿರು ಕಟ್ಟಬೇಡ ಬದುಕಿರುವಾಗಲೇ..’
  .....................ಈ ಸಾಲುಗಳು ತುಂಬಾ ಇಷ್ಟವಾದವು. ಇಡೀ ಕವಿತೆ ಪ್ರಕೃತಿ ಮತ್ತು ಮನುಷ್ಯ ಲೋಕದ ತಲ್ಲಣ,ಕಾತುರ, ಪ್ರೇಮ ಕನಸುಗಳನ್ನು ಹಿಡಿದಿಟ್ಟಿದೆ. ತುಂಬಾ ಕಡಿಮೆ ಶಬ್ದಗಳಲ್ಲಿ ಬದುಕಿನ ಪಲ್ಲವಿಯನ್ನು ಹಿಡಿಯಲಾಗಿದೆ. ಅರ್ಥಪೂರ್ಣ ಕವಿತೆ ವರ್ಷದ ಕೊನೆಯ ಘಳಿಗೆಯಲ್ಲಿ.

  ReplyDelete
 3. ಹೌದು ಗೆಳತಿ,ಕನಸುಗಳೊಂದಿಗೆ ಸಾಗುವ ಬದುಕು ಪ್ರತಿ ವರುಷವೂ ಬೀಜ ದೂಳಿನಲ್ಲಡಗಿದಂತೆ, ಻ಅದ್ಬುತವಾಗಿ ಮೂಡಿದೆ. ಹೊಸ ವರುಷದ ಶುಭಾಶಯ.

  ReplyDelete
 4. ಹೌದು ಗೆಳತಿ,ಕನಸುಗಳೊಂದಿಗೆ ಸಾಗುವ ಬದುಕು ಪ್ರತಿ ವರುಷವೂ ಬೀಜ ದೂಳಿನಲ್ಲಡಗಿದಂತೆ, ಻ಅದ್ಬುತವಾಗಿ ಮೂಡಿದೆ. ಹೊಸ ವರುಷದ ಶುಭಾಶಯ.

  ReplyDelete
 5. ವಾವ್, ತುಂಬ ಶಕ್ತವಾದ ಕವಿತೆ.
  "ಮಾತಿಗೆ ಮಾತು ಸೇರಿತು
  ಕುಂಬಾರನ ಕೈಗೆ ಮಣ್ಣು ಸೇರಿತು"

  ಮನಸಿನ ತುಂಬ ಈ ಕವಿತೆ ಸೃಷ್ಟಿಸಿದ ಭಾವಲಯ ವ್ಯಾಪಿಸಿತು!!!

  ReplyDelete
 6. ಕವಿತೆಗಳು ಮನದೊಳಗಿನ ಚಿತ್ತ ವಿಸ್ತರಿಸಿ ವಿಶಾಲತೆಯ ಕನಸಿಗೆ ಕಡಲ ಫಕೀರನಂತೆ ಮಣ್ಣ ಬೀಜಗಳಾಗಿ
  ಚಂದಿರನ ಸಾಕ್ಷಿಯಾಗಿದೆ

  ReplyDelete
 7. This comment has been removed by the author.

  ReplyDelete
 8. ಅನು, ಸರಿದ ವರುಷದ ಸಾಲುಗಳಾದರೂ ವರುಷ ವರುಷದ ಜೀವದ್ರವ್ಯ ಅಡಗಿದೆ... ಉಸಿರು ಕಟ್ಟಬೇಡ ಬದುಕಿರುವಾಗಲೇ... ನನಗೆ ನಾನು ಹೇಳಿಕೊಳ್ಳಬೇಕಾದ ಸಾಲು ಎನಿಸಿತು. ಥ್ಯಾಂಕ್ಯೂ.

  ReplyDelete
 9. VERY NICE POEM MADAM...CHANDADA KAVITEGAGI DHANYAVADA..

  ReplyDelete