ಈ ದೇಶದ ೭೭% ಜನ ದಿನಕ್ಕೆ ತಲಾ ೨೦ ರೂ. ಆದಾಯದಲ್ಲಿ ಬದುಕುತ್ತಿದ್ದರೆ ೩೦% ಜನ ಹಸಿದೇ ನಿದ್ದೆ ಹೋಗುತ್ತಿದ್ದಾರೆ. ಹಸಿರುಕ್ರಾಂತಿಯನ್ನು ಸಾಕಾರಗೊಳಿಸಿದ ಅನ್ನ ಬೆಳೆವ ರೈತನೋ ಸಾಲ-ಸೋಲು-ಸಾವಿನ ಸುಳಿಗೆ ಸಿಲುಕಿದ್ದಾನೆ. ಬರಪೀಡಿತ ಪ್ರದೇಶಗಳಲ್ಲಷ್ಟೇ ಅಲ್ಲ, ‘ಭಾರತದ ಅನ್ನದ ಕಣಜ’ ಪಂಜಾಬಿನಲ್ಲಿ ಹಸಿರು ಕ್ರಾಂತಿಯ ಸಮೃದ್ಧಿಯನ್ನು ಪೋಸ್ಟರುಗಳಲ್ಲಿ ಬಿಂಬಿಸುವ ರೈತರೂ ಸಹಾ ಮುಕ್ತ ಮಾರುಕಟ್ಟೆಯ ಇಕ್ಕಳದಲ್ಲಿ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹಸಿರು ಕ್ರಾಂತಿ, ಜಾಗತೀಕರಣ, ಮುಕ್ತ ಆರ್ಥಿಕತೆಯ ನಂತರ ಹೆಚ್ಚುತ್ತಿರುವ ರೈತ ಆತ್ಮಹತ್ಯೆಗಳು ಕೃಷಿಯನ್ನು ಸರಕೀಕರಣಗೊಳಿಸಿರುವುದರ ವಿನಾಶಕಾರಿ ಪರಿಣಾಮಗಳ ಕುರಿತು ಹೇಳತೊಡಗಿವೆ.
ಸಾಧಾರಣವಾಗಿ ರೈತ ಆತ್ಮಹತ್ಯೆಗಳಾದಾಗಲೆಲ್ಲ ಕೃಷಿ ಬಿಕ್ಕಟ್ಟು, ಅದರ ಪರಿಹಾರ, ಬೆಂಬಲ ಬೆಲೆ, ನೀರಾವರಿ, ಬೆಳೆವಿಮೆ, ಸಾಲಬಡ್ಡಿ ಮನ್ನಾ ಮೊದಲಾದ ವಿಷಯಗಳು ಮುನ್ನೆಲೆಯ ಚರ್ಚೆಗೆ ಬರುತ್ತವೆ. ಆದರೆ ಪಂಜಾಬಿನಂತಹ ಅತಿ ಸಂಪ್ರದಾಯಶೀಲ ಮತ್ತು ಪಿತೃಪ್ರಾಧಾನ್ಯ ಸಮಾಜದಲ್ಲಿ ಮಾರುಕಟ್ಟೆ ಸೃಷ್ಟಿಸಿರುವ ಕೃಷಿಯ ಅವಾಂತರಗಳನ್ನು ಆತ್ಮಹತ್ಯೆಯಾದ ರೈತರ ಕುಟುಂಬಗಳ ದೃಷ್ಟಿಯಿಂದ ನೋಡಬೇಕು ಎಂದು ಪುಸ್ತಕವೊಂದು ಒತ್ತಾಯಿಸುತ್ತದೆ. ಅದು ರಂಜನಾ ಪಾಡಿ ಎಂಬ ಒರಿಸ್ಸಾದ ಮಹಿಳಾ ಹೋರಾಟಗಾರ್ತಿ ಪಂಜಾಬಿನ ರೈತ ಸಮುದಾಯವನ್ನು ವಿಸ್ತೃತ ಅಧ್ಯಯನಕ್ಕೊಳಪಡಿಸಿ ಬರೆದ ಪುಸ್ತಕ ‘ದೋಸ್ ಹು ಡಿಡ್‌ನಾಟ್ ಡೈ.’ ರೈತಮಹಿಳೆಯ ದೃಷ್ಟಿಯಿಂದ ರೈತನಿಲ್ಲದ ಕುಟುಂಬ ಮತ್ತು ಕೃಷಿ ಬಿಕ್ಕಟ್ಟನ್ನು ಆ ಪುಸ್ತಕ ಪರಿಶೀಲಿಸುತ್ತದೆ. ಪಂಜಾಬಿನ ಮಾಳವಾ ಪ್ರದೇಶ ಅತಿಹೆಚ್ಚು ರೈತ ಆತ್ಮಹತ್ಯೆಗಳಿಗೆ ಸಾಕ್ಷಿಯಾಗಿರುವ ಪ್ರದೇಶ. ಅದು ಕ್ಯಾನ್ಸರ್ ಬೆಲ್ಟ್, ಡ್ರಗ್ ಬೆಲ್ಟ್, ಆಲ್ಕೊಹಾಲ್ ಬೆಲ್ಟ್ ಎನಿಸಿಕೊಂಡ ಪ್ರದೇಶವೂ ಹೌದು. ಮಾಳವಾದ ೧೦ ಜಿಲ್ಲೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ೧೨೫ ರೈತರ ಕುಟುಂಬಗಳ ಜೊತೆ ಒಡನಾಡಿ, ಸಂದರ್ಶಿಸಿ ಈ ಪುಸ್ತಕ ಸಿದ್ಧವಾಗಿದೆ.
ಕೆಲವರ ದೃಷ್ಟಿಯಲ್ಲಿ ಹೆಣ್ಣು ಎಂದರೆ ಆಸ್ತಿ, ಸರಕು. ಮತ್ತೆ ಕೆಲವರ ದೃಷ್ಟಿಯಲ್ಲಿ ಹೆಣ್ಣೆಂದರೆ ಹಿಂಸೆ, ಅನ್ಯಾಯ ಅನುಭವಿಸಲೆಂದೇ ಹುಟ್ಟಿರುವ ಜೀವ. ಸತ್ಯ ಇವೆರೆಡರ ನಡುವೆ ಎಲ್ಲೋ ಇದೆ. ಹೆಣ್ಣುಮಕ್ಕಳಿಗೆ ಇವೆರೆಡೂ ಅನುಭವಿಸುವ ಕಹಿ ವಾಸ್ತವಗಳಾಗಿವೆ. ಎಂದೇ ಹೆಣ್ಣು ದೃಷ್ಟಿಕೋನದಿಂದ ವಿಷಯಗಳನ್ನು ಕಾಣುವುದು, ವಿಶ್ಲೇಷಿಸುವುದು ಬಿಕ್ಕಟ್ಟನ್ನು ಬೇರೆಯೇ ಸ್ವರೂಪದಲ್ಲಿ ತೋರಿಸಿಕೊಡಬಲ್ಲವಾಗಿವೆ. ರಂಜನಾ ಪಾಡಿ ಅವರ ಪುಸ್ತಕ ಕೃಷಿ ಬಿಕ್ಕಟ್ಟನ್ನು ಮಹಿಳಾ ದೃಷ್ಟಿಕೋನದಿಂದ ವಿಶ್ಲೇಷಿಸಿರುವ ಒಂದು ಸಫಲ ಪ್ರಯತ್ನವಾಗಿದೆ.
ಇವತ್ತಿಗೂ ಭಾರತದ ಸಾಂಸ್ಕೃತಿಕ ಚಹರೆಗಳಲ್ಲಿ ಹೆಣ್ಣಿಗೆ ಮದುವೆಯೇ ಕೊನೆಯ ದಿಕ್ಕು ಎನ್ನುವ ಭಾವನೆ ತುಂಬಿದೆ. ಕುಟುಂಬ ಕೊಡುವ ಸುರಕ್ಷಿತ ಭಾವವನ್ನು ಮುಂದೆ ಮಾಡಿ ಇದನ್ನು ಪುಷ್ಟೀಕರಿಸಲಾಗುತ್ತಿದೆ. ಆದರೆ ಕುಟುಂಬವು ಸುರಕ್ಷಿತ ಭಾವ ನೀಡುವ ಜೊತೆಜೊತೆಗೇ ನೀಗಿಕೊಳ್ಳದ ಬಂಧಿತ ಸ್ಥಿತಿಯನ್ನು, ಅವಲಂಬಿತ ಮನಸ್ಥಿತಿಯನ್ನೂ ತಂದುಕೊಡುತ್ತದೆ. ಮಾಡಿಮಾಡಿ ಸವೆದರೂ ಮೊದಲೇ ಹೆಣ್ಣಿನ ಶ್ರಮ ಅದೃಶ್ಯ. ವಿಧವೆಯಾದ ಮೇಲಂತೂ ತನ್ನ ಶಕ್ತಿ, ಸಾಮರ್ಥ್ಯ ಎಲ್ಲ ಮರೆತು ಪೂರ್ಣ ಶ್ರಮವನ್ನು ಸಂಸಾರಕ್ಕೆ ವಿನಿಯೋಗಿಸುವಂತಾಗುತ್ತದೆ. ಭಾರತದಲ್ಲಿ ವಿಧುರನ ಪರಿಸ್ಥಿತಿಗಿಂತ ವಿಧವೆಯ ಸ್ಥಿತಿ ತುಂಬ ಭಿನ್ನ. ವಿಧುರ ವ್ಯಕ್ತಿಗೆ ಭಾವನಾತ್ಮಕ, ದೈಹಿಕ, ಕೌಟುಂಬಿಕ ಅಗತ್ಯಗಳಿಗೆ ಮತ್ತೊಬ್ಬ ಹೆಣ್ಣು ಒದಗುವುದು ಕಷ್ಟವೂ ಅಲ್ಲ, ವಿರಳವೂ ಅಲ್ಲ. ಆದರೆ ವಿಧವೆ ಮಾತ್ರ ಕುಟುಂಬ, ಮಕ್ಕಳು, ಅತ್ತೆಮಾವ, ಕೃಷಿ ಕೆಲಸ, ಮನೆಗೆಲಸವನ್ನು ಏಕಾಂಗಿಯಾಗಿ ಜೀವಮಾನವಿಡೀ ನಿಭಾಯಿಸಬೇಕು. ಗಂಡ ಮಾಡಿಟ್ಟ ಸಾಲಕ್ಕೂ ಬಾಧ್ಯಸ್ಥಳಾಗಬೇಕು. ಮದುವೆ ಎಂಬ ಸಂಸ್ಥೆಯನ್ನು ಕಾಪಿಡಬೇಕಾದ ಗಹನ ಜವಾಬ್ದಾರಿಗೆ ಹೆಗಲು ಕೊಡಬೇಕು. ಒಟ್ಟಾರೆ ವಿಧವಾ ಪಟ್ಟ ಡೆಡ್‌ಎಂಡ್ ಎನ್ನುವಂತಹ ಬದುಕಿನ ಕೊನೆಗೆ ಅವರನ್ನು ಮುಟ್ಟಿಸುತ್ತಿದೆ. ರಂಜನಾ ಭೇಟಿಯಾದ ೪೦% ವಿಧವೆಯರು ನಿದ್ರಾಹೀನತೆಯಿಂದ ಬಳಲುತ್ತ ನಿದ್ರೆಮಾತ್ರೆಗಳ ತೆಗೆದುಕೊಳ್ಳುತ್ತಿದ್ದರು ಎನ್ನುವ ಒಂದೇ ಅಂಕಿಅಂಶ ಅವರ ಮನೋವೇದನೆಯ ಆಳಗಲ ಎಷ್ಟೆಂದು ತಿಳಿಸುತ್ತದೆ.
ಪಂಜಾಬಿನಲ್ಲಿ ಅಂಥವರ ಸಂಖ್ಯೆ ದಿನೇದಿನೇ ಬೆಳೆಯುತ್ತಿದೆ. ಕೃಷಿಸಾಲ, ಬೆಳೆ ವೈಫಲ್ಯ ಹುಟ್ಟಿಸುವ ಸಾಮಾಜಿಕ, ಆರ್ಥಿಕ ಬಿಕ್ಕಟ್ಟುಗಳಿಗೆ ನಮ್ಮ ಸರಕಾರಗಳು ಕೃಷಿನೀತಿ ರೂಪಿಸುತ್ತವೆ. ಆದರೆ ವೈಧವ್ಯ ಹುಟ್ಟಿಸುವ ಭಾವನಾತ್ಮಕ ಬಿಕ್ಕಟ್ಟುಗಳಿಗೆ ಯಾವ ಕೃಷಿ ನೀತಿಯಲ್ಲಿ ಪರಿಹಾರವಿದೆ?
ವರದಕ್ಷಿಣೆ - ರೈತ ಆತ್ಮಹತ್ಯೆ: ನಿಕಟ ಸಂಬಂಧ
ಈ ಪುಸ್ತಕದ ಅಧ್ಯಯನವು ಹಲವು ಹೊಸ ವಿಚಾರಗಳತ್ತ ಬೆಳಕು ಚೆಲ್ಲುತ್ತದೆ. ಪಿತೃಪ್ರಾಧಾನ್ಯ ಮೌಲ್ಯಗಳು ಸುಖವಾಗಿ ವಿರಮಿಸಿರುವ ಗುಪ್ತತಾಣಗಳನ್ನೆಲ್ಲ ಹೊರಗೆಳೆದು ತೋರಿಸುತ್ತದೆ.
ಪಂಜಾಬಿನಲ್ಲಿ ೨೦೦೧ರಲ್ಲಿ ಪ್ರತಿ ಸಾವಿರ ಗಂಡು ಮಕ್ಕಳಿಗೆ ೮೭೬ ಹೆಣ್ಣುಮಕ್ಕಳಿದ್ದರು. ಈಗ ೮೯೫ ಇದ್ದಾರೆ. ಇದು ರಾಷ್ಟ್ರೀಯ ಸರಾಸರಿ ೯೪೦ಕ್ಕಿಂತ ತುಂಬ ಕಡಿಮೆ. ಅಲ್ಲಿ ಸ್ತ್ರೀಭ್ರೂಣ ಹತ್ಯೆಯಿಂದ ಹೆಣ್ಣುಮಕ್ಕಳ ಸಂಖ್ಯೆ ಇಳಿಯುತ್ತಿದ್ದರೂ ವರದಕ್ಷಿಣೆ ಪಿಡುಗು ಎಗ್ಗಿಲ್ಲದೆ ಮುಂದುವರೆದಿದೆ. ವರದಕ್ಷಿಣೆ ಜೀವಂತವಾಗಿದೆ ಎನ್ನುವುದೇ ಈ ಸಮಾಜ ಹೆಣ್ಣಿಗೆ ನೀಡಿರುವ ಎರಡನೆಯ ದರ್ಜೆಯ ಸ್ಥಾನಮಾನವನ್ನು ಧೃಢಪಡಿಸುತ್ತದೆ. ಕೃಷಿಯ ಅನಿವಾರ್ಯ ಭಾಗವೇ ಆಗಿರುವ ಹೆಣ್ಣನ್ನು, ದುಡಿಯುವ ಒಂದು ಪುಕ್ಕಟೆ ಆಳನ್ನು ತಮ್ಮ ಮನೆಗೆ ತಂದುಕೊಳ್ಳಲು ವರದಕ್ಷಿಣೆ ಕೊಡಲೇಬೇಕೆಂದು ಹಿಂಸಿಸುವ ವರರ ಕುಟುಂಬಗಳು ವಧುವಿನ ಮುಖ್ಯ ಅರ್ಹತೆ ಅವಳು ತನ್ನೊಡನೆ ಹೊತ್ತು ತರುವ ಧನಕನಕವೆಂದು ಭಾವಿಸಿವೆ. ಆದರೆ ವರದಕ್ಷಿಣೆ ಒಂದಲ್ಲ ಒಂದು ರೀತಿ ಪ್ರತಿ ಕುಟುಂಬವನ್ನು ಬಾಧಿಸುತ್ತಿದ್ದರೂ ಹೊಸಿಲು ತುಳಿವ ಹೆಣ್ಣಿನೊಡನೆ ಹರಿದು ಬರುವ ಹಣಕ್ಕೆ ಎಲ್ಲರೂ ಬಾಯ್ತೆರೆದಿದ್ದಾರೆ. ಹೀಗಾಗಿಯೇ ಕುಟುಂಬಗಳಿಗೆ ಹೆಣ್ಣುಮಗುವೆಂದರೆ ದುಃಖ, ಅವಳು ಹೊರೆ. ಅವಳು ಬೇಡದವಳು.
ಅಂತಹ ಸಮಾಜದಲ್ಲಿ ಸಹಜವಾಗಿ ಆಗುವಂತೆ ಮಗಳ ಮದುವೆಯ ‘ವರದಕ್ಷಿಣೆ’ ಹಣ ಹೊಂದಿಸುವುದಕ್ಕಾಗಿಯೇ ಸಾಲಬಾಧೆ ಉಂಟಾಗಿದೆ. ಎಂದೇ ಬಹುಪಾಲು ರೈತ ಆತ್ಮಹತ್ಯೆಗಳು ಕೃಷಿ ಅಗತ್ಯಗಳಿಗಿಂತ ವರದಕ್ಷಿಣೆ ಸಾಲಕ್ಕಾಗಿಯೇ ಸಂಭವಿಸಿವೆ!
ಆಗಲೇ ಮಾಡಿದ ಬೆಳೆಸಾಲದ ಕಾರಣ ‘ವರದಕ್ಷಿಣೆ’ಗೆ ಮತ್ತೆ ಸಾಲ ಸಿಗದೆ ಹತಾಶರಾಗಿ ಜೀವತೆತ್ತ ಅಪ್ಪಂದಿರಿದ್ದಾರೆ. ಅಪ್ಪನಿಲ್ಲದ ಹೆಣ್ಣುಮಕ್ಕಳ ಮದುವೆ ಮಾಡಲು ಮಾಡಿದ ಸಾಲ ತೀರಿಸಲಾಗದೇ ಮಗನೂ ಆತ್ಮಹತ್ಯೆ ಮಾಡಿಕೊಂಡಿರುವ; ಶಾಲೆಗೆ ತುಂಬಲು ಫೀಸು ಹಣ ಇಲ್ಲವೆಂದು ೧೩ ವರ್ಷದ ಮಗ ಆತ್ಮಹತ್ಯೆ ಮಾಡಿಕೊಂಡಿರುವ; ಆತ್ಮಹತ್ಯೆ ಮಾಡಿಕೊಂಡ ಅಪ್ಪನ ಮಗಳಾಗಿ ವರದಕ್ಷಿಣೆಯಿಲ್ಲದೆ ಗಂಡನ ಮನೆಗೆ ಕಾಲಿಟ್ಟು ಅವಮಾನ ತಾಳಲಾರದೆ ಹುಡುಗಿಯೂ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಭರ ಕತೆಗಳು ಇಲ್ಲಿ ಅನಾವರಣಗೊಂಡಿವೆ.
ವಿಶೇಷವೆಂದರೆ ಸಾಲಬಾಧೆ ಗಂಡಸರನ್ನೇ ಹೆಚ್ಚು ಕಾಡಿದೆ. ಅದರಲ್ಲೂ ೨೧ರಿಂದ ೫೦ ವರ್ಷ ವಯೋಮಾನದ, ಅತ್ಯಂತ ಕ್ರಿಯಾಶೀಲ ವಯಸ್ಸಿನ ಗಂಡಸರಲ್ಲಿ ೮೦%ಗಿಂತ ಹೆಚ್ಚು ಆತ್ಮಹತ್ಯೆ ಸಂಭವಿಸಿದೆ.
ಹೀಗೇಕೆ?
ಲಿಂಗತಾರತಮ್ಯ ರೂಢಿಸಿಕೊಂಡ ಸಮಾಜವು ‘ಹೆಣ್ಣು-ಗಂಡು’ ಎಂಬ ಕಲ್ಪಿತ ಚೌಕಟ್ಟಿನೊಳಗೆ ಮನುಷ್ಯರನ್ನು ಬಂಧಿಸಿಟ್ಟು ಏನೇನು ಅವಾಂತರ ಸೃಷ್ಟಿಸಿದೆ ಎನ್ನಲು ಪ್ರಸಕ್ತ ಕಾಲಮಾನವೇ ಸಾಕ್ಷಿಯಾಗಿದೆ. ಹೆಣ್ಣನ್ನು ಕೀಳಾಗಿ ಕಾಣುವ ಗಂಡು ಸಮಾಜವು ಸಹಜವಾಗಿಯೇ ಗಂಡಸರನ್ನು ‘ಗಂಡುತನ’ದ ಚೌಕಟ್ಟಿನಲ್ಲಿ ಬಂಧಿಸುತ್ತದೆ. ವೈಭವೀಕರಿಸಲ್ಪಟ್ಟ ಆ ಪ್ರಮಾಣದ ಅಳತೆಗೆ ಸರಿಯಾಗಿ ತನ್ನನ್ನು ಹೊಂದಿಸಿಕೊಳ್ಳಲು ಗಂಡಸರ ಅಹಮು ನಿರಂತರ ಸೆಣಸಬೇಕಾಗುತ್ತದೆ. ಗಡಸು ದನಿಯ, ಎತ್ತರ ನಿಲುವಿನ, ಮಾಸಖಂಡಗಳು ಹುರಿಹುರಿಯಾಗಿರುವ, ಬಲಶಾಲಿಯಾದ, ಹೆದರದೆ ಮುನ್ನುಗ್ಗುವ, ಪೊರೆಯುವ ಎಂಬಿತ್ಯಾದಿ ಗುಣವಿಶೇಷಣಗಳು ಗಂಡಿಗೆ ಪ್ರಭಾವಳಿಯಂತೆ ಸುತ್ತುವರೆದಿದ್ದು ತನ್ನ ಹೆಣ್ಣನ್ನು, ಅವಳಿಂದ ವಿಸ್ತಾರವಾಗುವ ತನ್ನ ಸಂಸಾರವನ್ನು ಪೊರೆಯುವುದೇ ಗಂಡಸುತನ ಎಂಬ ಭಾವವನ್ನು ಸಮಾಜ ಗಂಡಸಿನಲ್ಲಿ ಬಿತ್ತಿದೆ. ಇದು ಅಪರಿಮಿತ ಜವಾಬ್ದಾರಿಯನ್ನೂ, ಅಸಹಾಯಕತೆಯನ್ನೂ ಗಂಡಸರಲ್ಲಿ ಹುಟ್ಟಿಸಿ ಹೆಣ್ಣುಜೀವಗಳ ಮೇಲಿನ ದಬ್ಬಾಳಿಕೆಗೂ ಕಾರಣವಾಗಿದೆ. ತನ್ನ ಪಾತ್ರ ನಿರ್ವಹಿಸಲು ತಾನು ಅಶಕ್ತ ಎಂಬ ಭಾವ ತಲೆದೋರಿದಾಗ ಖಿನ್ನತೆಯುಂಟಾಗಿ ಆತ್ಮಹತ್ಯೆಗಳು ಸಂಭವಿಸುತ್ತವೆ.
ಹಾಗೆ ನೋಡಿದರೆ ಇಲ್ಲದ ಹೆಮ್ಮೆಯನ್ನು, ಹುಸಿ ಶ್ರೇಷ್ಠತನವನ್ನು ಗಂಡಸುತನದೊಳಗೆ ತುಂಬಿದ ಸಮಾಜವೇ ಅಪ್ಪಅಣ್ಣತಮ್ಮಂದಿರ ಆತ್ಮಹತ್ಯೆಗಳಿಗೆ ಸಂಪೂರ್ಣ ಹೊಣೆ ಹೊರಬೇಕಾಗುತ್ತದೆ.
‘ಗಂಡು ದಿಕ್ಕಿಲ್ಲದ’ ಮನೆಗಳ ನಿಭಾಯಿಸಲು ವಿಧವೆಯರು ಅವಿರತ ಹೋರಾಟ ನಡೆಸಬೇಕು. ಜಾತಿ-ವರ್ಗಗಳು ವಿಧಿಸುವ ಚೌಕಟ್ಟು ಮೀರಿ, ಮನೆಯಾಚೆ ಬಂದು, ಸಗಣಿ ಹೆಕ್ಕಿ, ಹಾಲು ಮಾರಿ, ಬಟ್ಟೆ ಹೊಲಿದು, ಪಶುಸಾಕಣೆ ಮಾಡಿ, ನೇಕಾರಿಕೆಯಲ್ಲಿ ತೊಡಗಿ - ಅಂತೂ ಹೇಗೋ ಕುಟುಂಬ ಪೊರೆಯಬೇಕು. ಅಂಥವರ ಬದುಕಿನ ಧೀರ ಹೋರಾಟದ ಕತೆಗಳನ್ನು ಈ ಪುಸ್ತಕ ವಿಶದವಾಗಿ ಚಿತ್ರಿಸಿದೆ. ‘ಸಾಯದೇ ಇರುವವರು’ ಎಂಬ ಪುಸ್ತಕದ ಶೀರ್ಷಿಕೆಯೇ ಸಾಲ-ವರದಕ್ಷಿಣೆ-ಕೃಷಿ ವೈಫಲ್ಯ-ವಿಧವೆತನಗಳು ತಂದೊಡ್ಡುವ ಸಂಕಷ್ಟಗಳ ಸರಮಾಲೆಯನ್ನು ಅವರು ದಿಟ್ಟವಾಗಿ ಹೇಗೆ ಎದುರಿಸಿ ಬದುಕಿದ್ದಾರೆ ಎಂದು ವಿವರಿಸುತ್ತದೆ. ಈ ಕಾರಣಕ್ಕಾಗಿಯೇ ಆತ್ಮಹತ್ಯೆ ಮಾಡಿಕೊಂಡ ರೈತನ ವಿಧವೆ ವಿಕ್ಟಿಮ್ ಅಲ್ಲ. ನಿಜಾರ್ಥದ ‘ಸರ್ವೈವರ್’ ಎನ್ನುವುದು ಪುಸ್ತಕದ ಸಂದೇಶವಾಗಿದೆ.
ಈ ಪುಸ್ತಕ ಬರೆದ ರಂಜನಾ ಪಾಡಿ ಒರಿಸ್ಸಾದ ಭುವನೇಶ್ವರದವರು. ಎಂಭತ್ತರ ದಶಕದಿಂದಲೂ ಸ್ವಾಯತ್ತ ಮಹಿಳಾ ಗುಂಪುಗಳೊಡನೆ ಕೆಲಸ ಮಾಡಿಕೊಂಡು ಬಂದವರು. ದೆಹಲಿಯ ಸಹೇಲಿ, ವರ್ಕರ್ರ‍್ಸ್ ಸಾಲಿಡಾರಿಟಿ, ಕಾಶಿಪುರ ಸಾಲಿಡಾರಿಟಿಯಂತಹ ಸಾಂಸ್ಥಿಕ ಧನಸಹಾಯ ಪಡೆಯದೆ ಕಾರ್ಯನಿರ್ವಹಿಸುವ, ಎನ್‌ಜಿಒದಂತೆ ರಾಚನಿಕ ಚೌಕಟ್ಟುಗಳಿಲ್ಲದ ಗುಂಪುಗಳಲ್ಲಿ ಕ್ರಿಯಾಶೀಲರು. ಅದರೊಡನೆ ಪ್ರಗತಿಪರ ಶಕ್ತಿಗಳ ಜೊತೆ ಪ್ರಭುತ್ವದ ದಮನ, ನಾಗರಿಕ ಹಕ್ಕು ದಮನ, ಸ್ಥಳಾಂತರ, ಸ್ಲಂ ನೆಲಸಮ, ಆದಿವಾಸಿಗಳ ಒಕ್ಕಲೆಬ್ಬಿಸುವಿಕೆ ಮೊದಲಾದ ವಿಷಯಗಳ ವಿರುದ್ಧ ಸಹಭಾಗಿಯಾಗಿ ಹೋರಾಡಿದ್ದಾರೆ. ಉದ್ಯೋಗವಾಗಿ ಐಟಿ ಕಂಪನಿಗಳ ಭಾಷಾ ತರಬೇತಿ ಹಾಗೂ ಸಂಪಾದನ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಜಾತಿ ಮತ್ತು ವರ್ಗ ಇವೆರೆಡೂ ಮಹಿಳೆಯರನ್ನು ಮುಂದಡಿಯಿಡದಂತೆ ತಡೆಯಬಲ್ಲ ಕಂದಕಗಳಾಗಿರುವ ಕಾರಣ ಬರಿಯ ಮಾರ್ಕ್ಸ್‌ವಾದಿ ದೃಷ್ಟಿಕೋನದಿಂದಾಗಲೀ ಅಥವಾ ಬರಿಯ ಸ್ತ್ರೀವಾದಿ ದೃಷ್ಟಿಕೋನದಿಂದಾಗಲೀ ಸಮಗ್ರವಾಗಿ ಸಮಸ್ಯೆ ಅರಿಯಲು, ಪರಿಹಾರದ ದಾರಿಗಳ ಹುಡುಕಲು ಸಾಧ್ಯವಾಗುವುದಿಲ್ಲ; ಸಮಗ್ರ ಮತ್ತು ವಿಸ್ತೃತ ಜೀವನ ದೃಷ್ಟಿಯನ್ನು ಮಹಿಳಾ ಹೋರಾಟಗಾರರು ಬೆಳೆಸಿಕೊಳ್ಳಬೇಕು ಎನ್ನುವುದು ಅವರ ಅಭಿಪ್ರಾಯವಾಗಿದೆ.
ರಂಜನಾ ಪಾಡಿ ಈಗ ಕರ್ನಾಟಕಕ್ಕೆ ಬರುತ್ತಿದ್ದಾರೆ. ಇದೇ ಮಾರ್ಚಿ ೮, ೯ ರಂದು ಕೊಪ್ಪಳದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ನಡೆಸುವ ವಾರ್ಷಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೊಪ್ಪಳಕ್ಕೆ ಎಲ್ಲ ಬನ್ನಿ, ಚರ್ಚೆಯಲ್ಲಿ ಪಾಲ್ಗೊಳ್ಳುವಾ.
No comments:
Post a Comment