ವೈಶಾಖ ಹುಣ್ಣಿಮೆಯ ಇರುಳು.
ಬೆಟ್ಟಬೇಣಗಳಲಿ ಬೆಳದಿಂಗಳಲ್ಲಿ
ಪದಗಳು ಕೊಚ್ಚಿ ಹೋಗುತ್ತಿದ್ದವು
ಅವ ಕಣ್ಣ ದೋಣಿಯಲೆ ದಡಕೆ ತಂದ
ಪದಗಳು ಮೌನದುಸುಬಿನಲಿ ಮುಳುಗುತಿದ್ದವು
ಕಿರುಬೆರಳಲೆತ್ತಿ ಸಂತೈಸಿ
ಎದೆಯೊಳಗೆ ಉಸಿರು ತುಂಬಿದ
ಪದಗಳು ಭಾರವಾಗಿದ್ದವು
ಕಾಲ ರೆಕ್ಕೆ ಕಟ್ಟಲಾಗಿತ್ತು
ಗಂಟು ಸಡಿಲಿಸಿ ಬಿಚ್ಚಿದ
ಪದಗಳು ತೋಯ್ದು ನೆನೆದು
ಒದ್ದೆ, ಪತಪತ ನೀರಿಳಿವಷ್ಟು
ಗಾಳಿಗೆ ಹರಡಿ, ವಿರಮಿಸಿದ
ತಥಾಗತ, ಭಂತೇ,
ಪದಗಳ ಮೇಲೂ ಪ್ರೇಮವೆ?!
‘ಚೆಲುವಾದ ಸತುವಾದ ಪದಗಳು
ಎಲ್ಲಿ ಹೋದಾವು ಕಾಯವಿಲ್ಲದವು?
ಆಡಲಿ ಯಾವ ನಾಲಿಗೆ ಮೇಲಾದರೂ’
ಅಮ್ಮ ಬಾರದೆ ಗುಟುಕು ತಾರದೆ
ಕಂಗೆಟ್ಟ ಮರಿಯ ಆರ್ತ ಕೂಗು
ಪದವಾಯಿತು, ಪದ್ಯವಾಯಿತು
ಯುದ್ಧಕೆ ಅಯ್ಯನ ಕಳಕೊಂಡವಳು
ಎದೆಯ ನೋವಿಗೆ ಕುಸಿಯುತಿದ್ದಳು
ಗಾಯ ಪದವಾಯಿತು, ಪದ್ಯವಾಯಿತು
ಹಕ್ಕಿ ಉಲಿ, ಕೂಸಿನಳು, ಚಿಗುರ ಸಂಭ್ರಮ,
ಬೇರಿನ ಆತಂಕ, ಬೀಜದ ಧಾವಂತ
ಎಲ್ಲವೂ ಪದಗಳಾಗಿ ರೆಕ್ಕೆಯಗಲಿಸಿದವು.
ಗಾಳಿಯೇ, ಹಾರಿಸು, ಪದ ಪಟವನ್ನು
ಹಾರಿಸು, ಪಟ ಹರಿದರೂ ಪದಗಳನ್ನು
ಮಳೆಯೇ ತೇಲಿಸು ಪದ ನಾವೆಯನ್ನು
ತೇಲಿಸು, ನಾವೆ ಮುಳುಗಿದರೂ ಪದಗಳನ್ನು
ನೆಲವೇ ಹೀರಿಕೋ, ಪದ ಸ್ಮೃತಿ ಸಾರವನ್ನು
ಹೀರಿಕೋ, ಸ್ಮೃತಿಯಳಿದರೂ ಪದದ ಸಾರವನ್ನು
ತಥಾಗತನೇ,
ಒಂದು ಪದವಾಗಿಸು ನನ್ನನು.
ವಿಶ್ವ ಹೃದಯವೇ,
ಬರಿದೆ ಒಂದು ಪದವಾಗಿಸು ನನ್ನನು.
(ಚಿತ್ರಗಳು: ಕೃಷ್ಣ ಗಿಳಿಯಾರ್)
ಎಂದಿನಂತೆ ಸರಳ ಸುಂದರ ಗೀತ. ಆದಕೊಪ್ಪುವ ಅಂದದ ಚಿತ್ರಗಳು
ReplyDelete