Friday, 22 June 2018

ನಾನೊಂದು ಮರವಾಗಿದ್ದರೆ..




‘ಪ್ರತಿದಿನವೂ ಭೂಮಿದಿನ’

ಕಳೆದ ತಿಂಗಳು ಆಸ್ಟ್ರೇಲಿಯಾದಲ್ಲಿದ್ದೆವು. ಅತಿ ನಗರೀಕೃತ ಖಂಡ-ದೇಶದಲ್ಲಿ ಸಿಡ್ನಿ, ಮೆಲ್ಬರ್ನ್ ಮೊದಲಾದ ಮಹಾನಗರಗಳ ಕಾಂಕ್ರೀಟ್ ಕಾಡಿನ ನಡುವೆ ಅರಣ್ಯಭರಿತ ಪಾರ್ಕುಗಳು ಗಮನ ಸೆಳೆದವು. ಆದಿಮ ಕಾಡುಗಳ ಕಡಿದು ನಗರ ಕಟ್ಟುವಾಗ ನಡುನಡುವೆ ಹಳೆಯ ಮರಗಿಡಗಳ ಉಳಿಸಿಕೊಂಡು ಊರು ಕಟ್ಟಿದ್ದಾರೆ. ಹಾಗಾಗಿ ಅಲ್ಲಿನ ಪಾರ್ಕುಗಳಲ್ಲಿ ಎತ್ತರೆತ್ತರದ ನೂರಾರು ವರ್ಷ ಹಳೆಯ ಮರಗಳಿದ್ದವು. ಒಂದೆಡೆ ‘ಪ್ರತಿದಿನವೂ ಭೂಮಿದಿನ’ ಎಂದು ಬರೆದಿದ್ದರು. ‘ಸಸ್ಯವು ನೀರು, ನೆಲ, ಬೆಳಕಿನಿಂದ ತನ್ನ ಆಹಾರ ತಾನೇ ತಯಾರಿಸಿಕೊಳ್ಳುವ ಸಂಪೂರ್ಣ ಸ್ವಾವಲಂಬಿ. ನೆಲಬಾನುಗಳ ನಡುವಿನ ನೀರಕೊಂಡಿ. ಇಂಗಾಲವನ್ನು ಆಮ್ಲಜನಕವಾಗಿಸುವ ಜರಡಿ. ಬೆಳಕುನೀರನ್ನು ಅನ್ನವಾಗಿಸುವ ಅಡಿಗೆಗುಡಿ. ಉಳಿದ ಜೀವರಾಶಿಗಳ ಬದುಕಿಸಲೆಂದೇ ಇರುವ ಮರಗಿಡಗಳಿಗೆ ಧನ್ಯವಾದಗಳು’ ಎಂಬ ಮತ್ತೊಂದು ಫಲಕವಿತ್ತು.

ಪ್ರತಿದಿನ ಭೂಮಿದಿನ! ನಿಜವೇ. ಕಾಂಗರೂ ನಾಡಿನವರ ಹಸಿರುಪ್ರಜ್ಞೆಗೆ ಶರಣುಶರಣು.

ಭೂಮಿಮೇಲಿನ ಕೆಲವು ಅತಿಹಳೆಯ ಮರಗಳು ಆಸ್ಟ್ರೇಲಿಯಾದಲ್ಲಿವೆ; ನ್ಯೂಸೌತ್‌ವೇಲ್ಸ್ ಪ್ರಾಂತ್ಯದಲ್ಲಿ 13, 000 ವರ್ಷ ಹಳೆಯ ರೇರ್ ಯೂಕಲಿಪ್ಟಸ್ ಎಂಬ ಜಾತಿಯ ಐದಾರು ನೀಲಗಿರಿ ಮರಗಳಿವೆ. ಅವನ್ನು ಯಾರ ಕಣ್ಣಿಗೂ ಬೀಳದಂತೆ ಗೌಪ್ಯವಾಗಿಟ್ಟು ಸಂರಕ್ಷಿಸಲಾಗಿದೆ. ಕಲ್ಪಿಸಿಕೊಳ್ಳಿ: 13 ಸಾವಿರ ವರ್ಷ ಹಳೆಯ ಮರಗಳು! ಆಸ್ಟ್ರೇಲಿಯಾ ಧ್ವಜದಲ್ಲಿ ಆರು ನಕ್ಷತ್ರಗಳಾಗಿರುವುದು ಆ ಆರು ಮರಗಳೇ ಇರಬೇಕು. ಅವು ಭೂತಕಾಲಕ್ಕೆ, ವರ್ತಮಾನ ಬೆಳೆದು ಭವಿಷ್ಯವಾಗುವ ಘಳಿಗೆಗಳಿಗೆ ಮರಸಾಕ್ಷಿಯಾಗಿರಬೇಕು.

ಈಗ ಭೂಗ್ರಹದ ನೆಲದ ಮೇಲೆ 40% ಕೃಷಿಭೂಮಿ, 37% ನಗರ ಆವರಿಸಿರುವುದರಿಂದ ಕೇವಲ 23% ಕಾಡು ಮಾತ್ರ ಉಳಿದಿದೆ. ನಾವೀಗ ಎಲ್ಲವೂ ತನ್ನ ಉಪಭೋಗಕ್ಕೇ ಇರುವುದೆಂದು ಬಗೆದ ಮನುಷ್ಯ ನಾಗರಿಕತೆಯ ಕಾಲಘಟ್ಟದಲ್ಲಿದ್ದೇವೆ. ಭೂಮಿ ಮೇಲಿನ ಚರಾಚರಗಳ ಬಗೆಗೆ ಕನಿಷ್ಠ ಕುತೂಹಲವೂ ಇಲ್ಲದ ಮನುಷ್ಯರ ಬುದ್ಧಿಬಡತನಕ್ಕೆ ಪ್ರಕೃತಿ ಬಲಿಯಾಗುತ್ತಿದೆ. ಸಾಕಷ್ಟು ಪ್ರಕೃತಿನಾಶವಾದ ಮೇಲೆ ಕೆಲ ದೇಶಗಳು ಎಚ್ಚೆತ್ತಿವೆ. ಭೂಮಿಮೇಲೆ ಬರಿಯ ಮನುಷ್ಯರಷ್ಟೆ ಇಲ್ಲ, ಇರುವುದೆಲ್ಲ ಬರಿಯ ಮನುಷ್ಯ ಮಾತ್ರರಿಗಲ್ಲ ಎಂದರಿತು ರಕ್ಷಿತಾರಣ್ಯಗಳ ರೂಪಿಸಲಾಗಿದೆ.

ಹಾಗೆ ಆಸ್ಟ್ರೇಲಿಯಾ ಪಶ್ಚಿಮತೀರದಲ್ಲಿ ಹವಳ ದಂಡೆಗಳ ಮಳೆಕಾಡು ರಕ್ಷಿತಾರಣ್ಯವಾಗಿದೆ. ಅದು ವಿಶ್ವದ ಅತಿಹಳೆಯ ಮಳೆಕಾಡು. 15 ಕೋಟಿ ವರ್ಷಗಳಿಂದ ಆ ಕಾಡು ನಿರಂತರ ರೂಪುಗೊಳ್ಳುತ್ತ ಬಂದಿದೆ. ಅದು ವಿಶ್ವದ ಮೊದಲ ಹೂಬಿಡುವ ಸಸ್ಯಗಳ, ಡೈನೋಸಾರುಗಳ ನೆಲೆಯೂ ಆಗಿತ್ತು. 5,000 ವರ್ಷಗಳಿಂದ ಮನುಷ್ಯರು ವಾಸವಾಗಿರುವ ಅಲ್ಲಿ ೨೦ಕ್ಕಿಂತ ಹೆಚ್ಚು ಆದಿವಾಸಿ ಕುಲಗಳಿವೆ. ಆಸ್ಟ್ರೇಲಿಯಾದ ಅರ್ಧದಷ್ಟು ಹಕ್ಕಿಗಳು, ಮೂರನೇ ಒಂದು ಭಾಗ ಸಿಹಿನೀರ ಮೀನು, ಕಾಲುಭಾಗ ಕಪ್ಪೆ, ಮೂರನೆ ಒಂದು ಭಾಗ ಸಸ್ತನಿ ಪ್ರಭೇದಗಳು ಅಲ್ಲಿವೆ. 2,260 ಸಸ್ಯ ಪ್ರಭೇದಗಳು, (ಅದರಲ್ಲಿ 678 ಮತ್ತೆಲ್ಲೂ ಇಲ್ಲದಂಥ ಜಾತಿಯವು), ಕಾಂಗರೂ, ಮಸ್ಕಿ ರ‍್ಯಾಟ್ ಕಾಂಗರೂ, ಚಿಟ್ಟೆಗಳು, ಹಾರಲಾಗದ ದೊಡ್ಡ ಹಕ್ಕಿ ಸದರ್ನ್ ಕ್ಯಾಸೊವೆರಿಯಂತಹ ಹಲವು ಅಪರೂಪದ, ವಿನಾಶದಂಚಿನ ಜೀವಿಗಳ ಕೊನೆಯ ನೆಲೆಯೂ ಆಗಿದ್ದು ಜೀವಂತ ಮ್ಯೂಸಿಯಂ ಎಂದು ಕರೆಯಲ್ಪಟ್ಟಿದೆ. ಆದರೆ ಮೊದಲು ಇಡಿಯ ಆಸ್ಟ್ರೇಲಿಯಾವನ್ನೇ ಆವರಿಸಿದ್ದ ಮಳೆಕಾಡುಗಳು ಈಗ ಕೇವಲ ಒಂಭತ್ತು ಲಕ್ಷ ಹೆಕ್ಟೇರ್ ಪ್ರದೇಶವನ್ನು ಎಂದರೆ ಒಟ್ಟೂ ವಿಸ್ತೀರ್ಣದ 0.12%ನಷ್ಟು ಮಾತ್ರ ಉಳಿದಿವೆ. ಎಂದೇ ಮಳೆಕಾಡುಗಳನ್ನು ಅದರ ಮೂಲಸ್ವರೂಪದಲ್ಲಿ ಬರಲಿರುವ ಪೀಳಿಗೆಗೆ ಉಳಿಸಬೇಕು, ಭೂತದ ಕೊಂಡಿಯಾಗಿ ಭವಿಷ್ಯಕ್ಕೂ ತಲುಪಿಸಬೇಕೆಂಬ ಉದ್ದೇಶದಿಂದ ಅದನ್ನು ‘ವಿಶ್ವ ಪಾರಂಪರಿಕ ತಾಣ’ವೆಂದು ಪರಿಗಣಿಸಲಾಗಿದೆ.

ಸ್ಕೈ ರೇಲ್ ಎಂಬ ಹಕ್ಕಿನೋಟ

ಕ್ವೀನ್ಸ್‌ಲ್ಯಾಂಡ್ ಪ್ರಾಂತ್ಯದ ಕೇರ್ನ್ಸ್ ಬಳಿಯಿರುವ ದಟ್ಟಾರಣ್ಯದಲ್ಲಿ ಕುರಂಡಾ ಆದಿವಾಸಿಗಳ ಹಳ್ಳಿಯಿದೆ. ಕುರಂಡಾದ ಆಸುಪಾಸು 9000 ಚ.ಕಿ.ಮೀ. ಪ್ರದೇಶ ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಗಿದೆ. ಕುರಂಡಾ ರಕ್ಷಿತಾರಣ್ಯಕ್ಕೆ ಹೋಗಲು ಇರುವ 7.5 ಕಿಮೀ ಉದ್ದದ ರೋಪ್ ವೇ (ಸ್ಕೈ ರೇಲ್) 1995ರಿಂದ ಪ್ರವಾಸಿಗರನ್ನೊಯ್ಯುತ್ತಿದೆ. ವಿಮಾನದಲ್ಲಿ ಹಾರುತ್ತ ಕೆಳಗಿರುವ ಗುಡ್ಡಬೆಟ್ಟಗಳನ್ನು ನೋಡಿದ್ದೆವು. ಬೆಟ್ಟಗಳನ್ನು ಹೆಮ್ಮರಗಳ ತಲೆಮೇಲಿಂದ ಹಕ್ಕಿಯಂತೆ ದಾಟುತ್ತ ಮೇಲಿಂದ ಕಾಡು ನೋಡುವುದು ಹೊಸ ಅನುಭವ ನೀಡಿತು. ಪಕ್ಷಿಗಳ ಹಾಡು, ಕೀಟಗಳ ಸದ್ದು, ಪ್ರಾಣಿಗಳ ಚಲನೆ, ಹೂಬಿಟ್ಟ-ಚಿಗುರಿದ ಮರಬಳ್ಳಿಗಳ ಅಂದ ನೋಡುತ್ತ ಸಾಗುವುದು ಅವರ್ಣನೀಯ ಆನಂದ ತುಂಬಿತು.




ಅಲೆಕ್ಸಾಂಡ್ರಾ ಪಾಮ್, ಕೌರಿ ಪೈನ್, ಆಲ್ಪೈನ್ ಬೀಚ್, ಹೂಪ್ ಪೈನ್, ರೆಡ್ ಪೆಂಡಾ, ಆಲ, ಫಿಗ್, ಕಡಗಿ, ನಾನಾ ಆಕಾರ-ಗಾತ್ರ-ವಯಸ್ಸಿನ ನೀಲಗಿರಿ ಮರಗಳೇ ಮೊದಲಾದ ಸಾವಿರಾರು ಜಾತಿಯ ಗಿಡಮರಗಳು ಅಲ್ಲಿದ್ದವು. ನೀಲಗಿರಿಯ ಹೂವು ಇಷ್ಟು ಚಂದ ಎಂದು ಗೊತ್ತೇ ಇರಲಿಲ್ಲ. ಈಗದರ ತಲೆಮೇಲೆ ಸರಿದು ಹೋಗುವಾಗ ದುಂಬಿ ಮುತ್ತಿದ ಮಧುಭರಿತ ಹೂವಿನ ಚೆಲುವಿಗೆ ಮನಸೋತೆವು. ನೀಲಗಿರಿಯ ತವರು ಆಸ್ಟ್ರೇಲಿಯಾದಲ್ಲಿ ೭೦೦ ವಿವಿಧ ಜಾತಿಯ ನೀಲಗಿರಿ ಮರಗಳಿದ್ದು ಇಲ್ಲಿದ್ದ ಹಲವು ಪ್ರಭೇದಗಳು ಗಮನ ಸೆಳೆದವು.

ಅಲ್ಲಿನ ಮತ್ತೊಂದು ವಿಶೇಷ ಜರಿಗಿಡ. ಹೂಬಿಡದೆ ಸಂತಾನೋತ್ಪತ್ತಿ ಮಾಡುವ ಜರಿಗಿಡ (ಫರ್ನ್) ಹೆಮ್ಮರಗಳ ಮೈಮೇಲೆ, ಕೆಳಗೆ ಎಲ್ಲೆಲ್ಲು ಕಂಡವು. ಕೆಲವು ಹೆಮ್ಮರಗಳ ಕಾಂಡದ ಮೇಲೆ ಒಂದು ಗಿಡವಿಟ್ಟಂತೆ ಕೂತಿದ್ದರೆ ಮತ್ತೆ ಕೆಲವು ಮರವಿಲ್ಲದ ಚೂರು ಜಾಗದಲ್ಲಿ ನೆಲದ ಮೇಲೆಲ್ಲ ಹರಡಿದ್ದವು. ಕೂಪರ‍್ಸ್ ಫರ್ನ್ ನೆಲದ ಮೇಲಿಂದ ಕೋಲಿನಂತೆ ಮೇ..ಲೆ ಬಂದು ತುದಿಯಲ್ಲಿ ಚಂಡರಳಿಸಿಕೊಂಡು ಛತ್ರಿಯಂತೆ ನಿಂತಿತ್ತು. ಸ್ಟ್ಯಾಗ್ ಹಾರ್ನ್, ಬರ್ಡ್ಸ್ ನೆಸ್ಟ್ ಜರಿಗಿಡಗಳು ಹಕ್ಕಿಗೂಡೇನೋ ಎನುವಂತೆ, ಬುಟ್ಟಿ ಕೌಚಿಟ್ಟಂತೆ ಕಂಡವು. ಮರದ ಕಾಂಡಕ್ಕಂಟಿಕೊಂಡ ಬುಟ್ಟಿಯಲ್ಲಿ ಸಂಗ್ರಹವಾದ ಉದುರಿದೆಲೆಗಳು, ತೇವಾಂಶ, ಮಳೆನೀರು, ಮಂಜುಹನಿ ಜರಿಗಿಡಕ್ಕೆ ಸತ್ವ ಒದಗಿಸುವುದು.

ಹೆಮ್ಮರದ ಪಕ್ಕವಿದ್ದ ಕೆಲವು ಗಿಡಬಳ್ಳಿಗಳು ಮರದ ತುತ್ತತುದಿಯವರೆಗೂ ಹರಡಿ ಸೂರ್ಯಕಿರಣಗಳಿಗೆ ಪೈಪೋಟಿ ನಡೆಸಿದ್ದವು. ಕಾಡುಬಳ್ಳಿಗಳು ರಟ್ಟೆಗಾತ್ರದ ಹುರಿಹಗ್ಗದಂತೆ ಮರಗಳ ಸುತ್ತಿ, ಸಂಕಲೆಯಲ್ಲಿ ಕೊಂಬೆರೆಂಬೆಗಳ ಬಂಧಿಸಿ ಮರದ ಮೇಲ್ಭಾಗದಲ್ಲಿ ಬಲೆಯಂತೆ, ಚಾಮರದಂತೆ, ರೇಶಿಮೆ ಬಟ್ಟೆಯಂತೆ ಹರಡಿಕೊಂಡಿದ್ದವು. ಮೂಲಮರ ಕಾಣದಷ್ಟು ಎಲೆ, ಹೂವು ಅರಳಿಸಿದ್ದವು. ಒಂದೆಡೆ ಹಾಗೆ ಮುಚ್ಚಿದ್ದ ಬಳ್ಳಿ ಪೂರಾ ಒಣಗಿ ಮರದ ಮೇಲೆ ಗೋಣಿಬಲೆ ಹಾಸಿದಂತಿತ್ತು. ಹೆಮ್ಮರಗಳ ನಡುವೆ ತಾನೂ ಅಷ್ಟೇ ಎತ್ತರಕ್ಕೆ ಹಬ್ಬಿ ಬಿದಿರು (ಲಾಯರ್ ಕೇನ್) ಚಂಡರಳಿಸಿ ನಿಂತಿತ್ತು. ಒಣಮರ ಬಿದ್ದು ಅಷ್ಟು ಜಾಗ ಬೆಳಕಾಗಿದ್ದರೆ ಸಾಕು, ಅಕ್ಕಪಕ್ಕದ ಮರಗಿಡಬಳ್ಳಿಗಳೆಲ್ಲ ತಮ್ಮ ರೆಂಬೆಕೊಂಬೆಗಳ ಖಾಲಿಜಾಗಕ್ಕೆ ನುಗ್ಗಿಸಿದ್ದವು.







ಮಳೆಕಾಡುಗಳಲ್ಲಿ ಪಕ್ಕಪಕ್ಕ ನಿಂತಿರುವ ಸಸ್ಯಗಳ ನಡುವೆ ನೀರಿಗಾಗಿ ಅಲ್ಲ, ನೆಲಕ್ಕಾಗೂ ಅಲ್ಲ, ಸೂರ್ಯನ ಬೆಳಕಿಗಾಗಿ ತೀವ್ರ ಸ್ಪರ್ಧೆಯಿರುತ್ತದೆ. ಮಳೆಗಾಲಕ್ಕಿಂತ ವಿಪುಲ ಬೆಳಕಿನ ಬೇಸಿಗೆಯಲ್ಲೇ ಮಳೆಕಾಡುಗಳ ಬೆಳವಣಿಗೆ ಹೆಚ್ಚಿರುತ್ತದೆ. ಸಸ್ಯದ ಎಲೆಗಳಲ್ಲಿ ಬೆಳಕುಸಂವೇದಿ ರಾಸಾಯನಿಕ ಇದ್ದು ಎಷ್ಟು, ಹೇಗೆ, ಎಲ್ಲಿ, ಯಾವ ದಿಕ್ಕಲ್ಲಿ ಬೆಳೆಯಬೇಕೆಂಬ ಸೂಚನೆಯನ್ನು ಕಾಂಡಕ್ಕೆ ಕೊಡುವುದು ಬಿಸಿಲು ಹೀರಿಕೊಳ್ಳುವ ಎಲೆಗಳೇ ಆಗಿವೆ. ಪ್ರತಿಸಸ್ಯಕ್ಕೂ ಪಕ್ಕದವರಿಗಿಂತ ಬೇಗ ಬೆಳೆದು ಹೆಚ್ಚು ಬೆಳಕು ಪಡೆಯುವ ಗುರಿ. ವಾರೆ ಬಾಗಿದ ಬಿದಿರು, ಹಬ್ಬುತ್ತ ಮೇಲೆಮೇಲೆ ಹೋದ ಬಳ್ಳಿ, ಮರವೊಂದನ್ನು ಬಳ್ಳಿಯಂತೆ ಮೂರೂ ಸುತ್ತು ಆವರಿಸಿ ಅದಕಿಂತ ಮೇಲೆ ಹೋಗುವ ಇನ್ನೊಂದು ಮರ - ಇವರೆಲ್ಲ ಬೆಳಕಿನ ಪೈಪೋಟಿಗೆ ಬಿದ್ದು ನೆರಳಿನಿಂದಾಚೆ ಬರಲು ಪ್ರಯತ್ನಿಸಿದವರು. ಇದೆಲ್ಲದರ ಉದಾಹರಣೆಗಳೂ ಅಲ್ಲಿದ್ದವು.

ಅಲೆಲೆ! ಮೂಕಜೀವಿಗಳ ನಡುವೆ ಇಷ್ಟು ಸ್ಪರ್ಧೆ! ಬೆಳಕಿಗಾಗಿ ಹೂಡಿದ ಜೀವನ ನಾಟಕಗಳನ್ನು ಮೇಲಿಂದ ನೋಡುವಾಗ ಯಾಕೋ ಬಿ. ಜಿ. ಎಲ್. ಸ್ವಾಮಿ ನೆನಪಾದರು. ಜೊತೆಯಿರಬೇಕಿತ್ತು ಎನಿಸಿತು..

ವೃಕ್ಷವೈಭವ


ನಡುನಡುವೆ ಗೋಪುರ ತಂಗುದಾಣಗಳಲ್ಲಿ ಸ್ಕೈ ರೇಲ್ ನಿಲ್ಲುತ್ತದೆ. ಅಲ್ಲಿಂದ ಕಾಡಿನೊಳಹೊಕ್ಕು ಕಾಡುನಡಿಗೆಗೆ ಅವಕಾಶವಿದೆ. ಮರಗಳ ಕೆಳಗೆ, ದಾರಿಯುದ್ದಕ್ಕೂ ವಿವರಣೆಗಳ ಫಲಕ ಇದೆ. ಗೈಡ್ ಜೊತೆ ಹೋಗಿಬರಲೂ ಸಾಧ್ಯವಿದೆ. ಒಂದೆಡೆ ರೋಪ್‌ವೇನಿಂದ ಕೆಳಗಿಳಿದು ಕಾಡಿನೊಳಗೆ ನಡೆಯತೊಡಗಿದೆವು. ಕೇವಲ 1% ಸೂರ್ಯ ರಶ್ಮಿಯಷ್ಟೆ ನೆಲ ತಲುಪುವ ದಟ್ಟಕಾಡು..

ಕಾಳಬೆಳಕು. ಸುತ್ತಲೂ ಬೃಹತ್ ಮರಗಳು. ನೆಲತುಂಬಿದ ಸಣ್ಣಸಣ್ಣ ಸಸ್ಯಗಳು. ಆಲ್ಪೈನ್ ಬೀಚ್ ಮರಗಳು ಸಾಕಷ್ಟಿದ್ದವು. ಒರಟೊರಟಾದ ಅದರ ಮೈಮೇಲೆ ಶಿಲೀಂಧ್ರ, ಪಾಚಿ, ಹಾವಸೆ ಯಥೇಚ್ಛ ಬೆಳೆದು ತೊಗಟೆ ಮೇಲೆ ಮರಿಕಾಡನ್ನೇ ಸೃಷ್ಟಿಸಿದ್ದವು. ಅಲ್ಲಿದ್ದ ಬಹುಪಾಲು ಹೆಮ್ಮರಗಳ ಮೈಮೇಲೆಲ್ಲ ಸಸ್ಯರಾಶಿ. ಮರದ ಆಶ್ರಯ ಅರಸಿ ಬಂದವರಿಂದ ಒಂದು ಲಾಭ ಮರಕ್ಕಾದರೆ ಎರಡು ಲಾಭ ಬಂದವರಿಗೆ.

ಬೀಚ್ ಮರದ ಬುಡದಲ್ಲೆ ಹೊಟ್ಟೆಬಿರಿ ತಿಂದು ಜಡಗೊಂಡು ಬಿದ್ದ ಕುದ್ರಬಾಳ (ಹೆಬ್ಬಾವಿನ ಜಾತಿಯ ಹಾವು) ಇತ್ತು. ಕೆಲ ಹಕ್ಕಿ, ದೊಡ್ಡ ಜೇಡ, ನೀಲಿ ಚಿಟ್ಟೆ ಬಿಟ್ಟರೆ ನಮಗೆ ಹೆಸರೇ ಗೊತ್ತಿರದ ಅಸಂಖ್ಯ ಕ್ರಿಮಿಕೀಟ ಹಕ್ಕಿಗಳು ಅಲ್ಲಿದ್ದವು. ನಾನಾ ಸದ್ದುಗಳ ಹೊರಡಿಸುತ್ತಿದ್ದವು. ಹಣೆಮೇಲೆ ತಿಲಕವಿದ್ದ ನಾಮಗೋಳಿ, ಕಾಡುಕೋಳಿ ಹೀಗೆ ಕಂಡು ಹಾಗೆ ಮಾಯವಾಗುತ್ತಿದ್ದವು.

ನಡೆಯುತ್ತ, ನಡೆಯುತ್ತ ಒಂದು ಬೃಹತ್ ಕಾಂಡದೆದುರಿಗೆ ನಿಂತೆವು. ನಾವು ನಾಲ್ಕೂ ಜನ ಕೈಯಗಲಿಸಿ ನಿಂತರೂ ಅದರ ಕಾಂಡ ಸುತ್ತುವರೆಯಲಾಗುವುದಿಲ್ಲ. ಒಂದೂ ರೆಂಬೆಕೊಂಬೆಯಿಲ್ಲದೆ ನೇರ ಮೇಲೆ ಹೋಗಿ ಒಮ್ಮೆಲೆ ಛತ್ರಿಯಂತೆ ಅರಳಿಕೊಂಡಿದ್ದ ಮರ ನೋಡಲು ಪೂರಾ ಕುತ್ತಿಗೆ ಎತ್ತಿ ಹಿಂಬಾಗಬೇಕು. ಆಕಾಶಕ್ಕೆ ಸವಾಲೆಸೆದು ಬೆಳೆದಿದೆಯೋ ಎನ್ನುವಂತೆ ಮರ ನಿಂತಿತ್ತು. ಬೂದುಗುಲಾಬಿ ಬಣ್ಣದ, ನಯಸು ಕಾಂಡದ, ೬೦ ಮೀ (೧೫೦ ಅಡಿ) ಎತ್ತರದ ಕೌರಿ ಪೈನ್. ತೆಳುವಾಗಿ ಕಾಂಡದ ಸಿಪ್ಪೆ ಸುಲಿದಿತ್ತು. ಕೆಂಜಿಗೆಹಿಂಡು ಯಾವುದೋ ರಾಜಕಾರ್ಯದ ಅವಸರವೆಂಬಂತೆ, ಯಾರೋ ತುರ್ತೆಂದು ಹೇಳಿಕಳಿಸಿದರೋ ಎನುವಂತೆ, ದರುಶನಕ್ಕಾಗಿ ಸರದಿಯಲಿ ಹೋಗುವವರಂತೆ ಶಿಸ್ತಾಗಿ ಒಂದರ ಹಿಂದೊಂದು ಸರಸರ ಸಾಗಿದ್ದವು. ಪುಟ್ಟ ಕೆಂಪುಕಪ್ಪು ಬಣ್ಣದ ಕೀಟಗಳು ಮಿಲನಾನಂದದಲ್ಲಿ ತಲ್ಲೀನವಾಗಿದ್ದವು.

ಕೌರಿಪೈನ್ ಆ ನೆಲದ ವೃಕ್ಷವಿಶೇಷ. ಆದರೀಗ ಕೌರಿ ನಾಶದಂಚಿನಲ್ಲಿರುವ, ರಕ್ಷಿಸಲ್ಪಟ್ಟ ಪ್ರಭೇದ. ಅದು ಬಲು ಮೃದು. ರೆಂಬೆಗಳಿಲ್ಲದೆ ಇರುವುದರಿಂದ ಅತಿ ಉದ್ದದ, ಅಗಲದ ಹಲಗೆ, ತೊಲೆಗಳ ಮಾಡಬಹುದು. ಒಳ್ಳೆ ಪಾಲಿಶ್ ಹಿಡಿಯುತ್ತದೆ. ಎಂದೇ ಎಗ್ಗಿಲ್ಲದೆ ಕಡಿದರು. ಹುಡುಹುಡುಕಿ ದೊಡ್ಡದೊಡ್ಡ ಹಳೆಮರಗಳ ಕಡಿದು ಪೀಠೋಪಕರಣ, ಮನೆ, ಬೇಲಿ, ಹಡಗು ಕಟ್ಟಲು ಬಳಸಿದರು. ಒಂದಾನೊಂದು ಕಾಲದಲ್ಲಿ ಎಲ್ಲೆಲ್ಲು ಕಾಣುತ್ತಿದ್ದ ಶತಮಾನಗಟ್ಟಲೆ ಹಳೆಯ ಕೌರಿ ಪೈನ್ ರಕ್ಷಿತಾರಣ್ಯಕ್ಕೆ ಸೀಮಿತವಾದವು.




ಆ ಜೀವಚೇತನವನ್ನು ಏನೆಂದು ವರ್ಣಿಸುವುದು? ಐದೂವರೆ ಅಡಿಯ ನನ್ನ ದೇಹವು ೧೫೦ ಅಡಿಯ ವೃಕ್ಷವೈಭವದೆದುರು ನಿಂತು ಅಚ್ಚರಿ, ಆನಂದ ಮತ್ತಿನ್ನೇನೇನನ್ನೋ ಅನುಭವಿಸತೊಡಗಿತು. ತನ್ನ ಅಸಂಖ್ಯ ಬೆರಳೆಲೆಗಳ ಆಡಿಸುತ್ತ ಅದು ಮಾತನಾಡುವಾಗ ಮರ ನೋಡುತ್ತ ಹೀಗೇ ನಿಲ್ಲಬೇಕೆನಿಸಿತು.

ಜೀವವುಕ್ಕುವ ಮರಗಳು ಬೆಂಕಿ, ನೀರು, ಗಾಳಿಯಂತೆ ನಿರ್ಜೀವವೆಂದು ಬಗೆದಿದ್ದೆವಲ್ಲ ನಾವು!? ಹೆಚ್ಚೆಂದರೆ ನೂರು ವರ್ಷ ಬದುಕುವ ನಮಗೆ ಸಸ್ಯಗಳಿಗೂ ಜೀವ ಇದೆ ಎಂದು ತಿಳಿಯಲು ಸಾವಿರಾರು ವರುಷ ಬೇಕಾಯಿತಲ್ಲ!

ಮರ ಎಂದರೆ ಜೀವಚೈತನ್ಯ. ಮರ ಎಂದರೆ ಪ್ರೀತಿ, ಸಹನೆ, ಸಹಬಾಳ್ವೆ. ನಾನೊಂದು ಮರವಾದರೂ ಆಗಿದ್ದರೆ..?..

ನಾನೊಂದು ಮರವಾಗಿದ್ದರೆ
ನಿಂತಲ್ಲೆ ಚಲಿಸಬಹುದಿತ್ತು.
ಪಾಚಿ, ಹಲ್ಲಿ, ಹಕ್ಕಿ, ಹಾವು,
ಚಿಟ್ಟೆ, ಹುಳಗಳೊಡನೆ ಒಟ್ಟೆ ಬಾಳಬಹುದಿತ್ತು.
ಚಳಿಗೆ ಮರಗಟ್ಟಿ ಎಲೆ ಹಳದಿಯಾದರೂ
ವಸಂತಕ್ಕೆ ಹಸಿರೆಲೆಗಳ ಚಿಗುರಿಸಬಹುದಿತ್ತು.
ಗಡಿಯಾರ ಕಟ್ಟದೇ, ಕ್ಯಾಲೆಂಡರು ನೋಡದೇ
ವರುಷವರುಷ ಹೂಹಣ್ಣು ತಳೆಯಬಹುದಿತ್ತು.
ಕೊನೆಯುಸಿರಿನವರೆಗೂ ಬೆಳೆಯಬಹುದಿತ್ತು.
ಸಾವು ಬರುವನಕ ಹೊಸದಾಗಲು ಬೆಳೆಯಬಹುದಿತ್ತು..

ಮರ ಎಂದೂ ವಿಷಾದಿಸುವುದಿಲ್ಲ.
ಮರ ಎಂದೂ ಕೋಪಗೊಳ್ಳುವುದಿಲ್ಲ.
ಮರ ಎಂದೂ ದೂರುವುದಿಲ್ಲ.
ಸಂತಸಕೆ ಹುಚ್ಚೆದ್ದು ಕುಣಿಯುವುದಿಲ್ಲ.
ಆರ್ತವಾಗಿ ಮೊರೆಯಿಡುವುದಿಲ್ಲ.
ನೊಂದರೆ ಕಣ್ಣೀರು ಸುರಿಸುವುದಿಲ್ಲ.
ಗಾಯಗೊಂಡರೆ ರಕ್ತ ಹರಿಸುವುದಿಲ್ಲ.
ವಿಕೋಪಕ್ಕೆ ಬೆದರಿ ಓಡುವುದಿಲ್ಲ
ಅಪಾಯವೆಂದು ಮೇಲೆರಗುವುದಿಲ್ಲ
ಸಾಯುವಾಗ ನಿಶ್ಶಬ್ದ, ಸತ್ತಮೇಲೂ ನಿಶ್ಶಬ್ದ.
ಎಂದೆಂದೂ ಗಂಭೀರ, ಮಹಾಮೌನ.

ಎಂಥ ಘನತೆಯ ಬದುಕು ಮರವೇ..
ನಾನೊಂದು ಮರವಾದರೂ ಆಗಿದ್ದರೆ..

***

ಬರಿಯ ೧೦೦ ವರ್ಷ ಬದುಕುವ ಮನುಷ್ಯರು ಕ್ಷೀಣಾಯುಗಳು. ಓಡಾಡುವ ಪ್ರಾಣಿಗಳು ಹೆಚ್ಚೆಂದರೆ 200 ವರ್ಷದ ಆಚೀಚೆ ಬದುಕಬಲ್ಲವು. ಆದರೆ ಸಸ್ಯಗಳು ಸಾವಿರಾರು ವರ್ಷ ಬದುಕಿಯಾವು. ಚಿಲಿಯ ಅಟಕಾಮ ಮರುಭೂಮಿ, ನಮೀಬಿಯಾದ ಮರುಭೂಮಿಗಳಲ್ಲಿ 2000 ವರ್ಷ ಹಳೆಯ ಮುಳ್ಳುಕಂಟಿಗಳಿವೆ. ದ. ಆಫ್ರಿಕಾದ ಬೇಯೋಬಾಬ್ 2000 ವರ್ಷ, ಕ್ಯಾಲಿಫೋರ್ನಿಯಾದ ಬ್ರಿಸಲ್‌ಕೋನ್ ಪೈನ್ 5000 ವರ್ಷ ಹಳೆಯವು. ಆಸ್ಟ್ರೇಲಿಯಾದ ರೇರ್ ಯೂಕಲಿಪ್ಟಸ್ 13,000 ವರ್ಷದಿಂದ ನಿಂತಿದೆ. ಸ್ಪೇನಿನ ಮೆಡಿಟರೇನಿಯನ್ ಸಮುದ್ರದಾಳದ ಪೊಸಿಡೊನಿಯಾ ಹುಲ್ಲುಗಾವಲು ಒಂದು ಲಕ್ಷ ವರ್ಷ ಹಳೆಯದು!

ಅದ್ಭುತ! ಈ ಭೂಮಿಗ್ರಹ ನನ್ನದು, ನನ್ನದಷ್ಟೆ ಅಲ್ಲ, ಇನ್ನೆಷ್ಟೊ ಪಶುಪಕ್ಷಿ ಕ್ರಿಮಿಕೀಟಗಳದೂ ಹೌದು ಎಂಬ ಅರಿವು ಹುಟ್ಟುವ ಗಳಿಗೆ ಇನ್ನೂ ಅದ್ಭುತ. ಅಂಥ ಅರಿವು ಹುಟ್ಟಿಸಿದ ಮಳೆಕಾಡಿಗೆ ಶರಣು.. ಹವಳದಂಡೆಗೆ ಶರಣು..

‘ಒತ್ತಾಯವಿಲ್ಲದೆ ಬೆಳೆಯುವ, ವಸಂತವು ಬರುವುದೋ ಎಂಬ ಆತಂಕವಿಲ್ಲದ, ಬೇಗಬೇಗ ಬೆಳೆಯಬೇಕೆಂಬ ಆತುರವಿಲ್ಲದ ಮರದ ಹಾಗಿರಬೇಕು ಕಲಾವಿದ’ ಎನ್ನುತ್ತಾನೆ ರಿಲ್ಕ್. ಕಲಾವಿದರಷ್ಟೆ ಅಲ್ಲ, ಮನುಷ್ಯರೆಲ್ಲ ಹಾಗೇ ಇರಬೇಕು. ಮರದ ಬದುಕು ಪಾಠವಾಗಿ ನಮ್ಮಾಳಕಿಳಿಯಲಿ. ಹಸಿರು ಅವಿರತ ಪ್ರಜ್ಞೆಯಾಗಲಿ.


(Photos: Dr Prithvi K A)

Monday, 4 June 2018

ಪ್ಲಾಸ್ಟಿಕ್ ಎಂಬ ಮೋಹಿನಿಯೂ, ಭಸ್ಮಾಸುರರಾದ ನಾವೂ..







ಉತ್ತರ ಕನ್ನಡದ ಬೆಟ್ಟಕಾಡುಗಳ ಹಳ್ಳಿಗೆ ಇಪ್ಪತ್ತೈದು ವರ್ಷ ಕೆಳಗೆ ನಾವು ಬಂದಾಗ ಬಹುತೇಕ ಎಲ್ಲರೂ ಕಾಲುಗಾಡಿ ನೆಚ್ಚಿಕೊಂಡಿದ್ದರು. ಗುಡ್ಡ ಹತ್ತಿಳಿದು, ಕೊಡ್ಲು ದಾಟಿ, ರಸ್ತೆ ಬದಿಯ ಪೇಟೆಗೆ ಬರುವುದೆಂದರೆ ಅವರ ತಲೆ ತುಂಬ ತರಬೇಕಾದ ಸಾಮಾನುಗಳ ಯಾದಿಯಿರುತ್ತಿತ್ತು. ವಸ್ತುಗಳ ಹೊತ್ತು ತರಲು ಹಳೆಪಂಚೆ, ಟವೆಲ್ಲು, ಗೋಣಿಚೀಲ, ಗೊಬ್ರದ ಚೀಲಗಳ ಕಟ್ಟು ಕೈಲಿರುತ್ತಿತ್ತು. ಒಂದೇ ಪಂಚೆ ಹಾಸಿ ಅದರ ನಾಲ್ಕಾರು ಮೂಲೆಗಳಲ್ಲಿ ನಾಲ್ಕಾರು ಸಾಮಾನು ಹಾಕಿಸಿ ಗಂಟು ಕಟ್ಟಿ ಕಂತೆಯನ್ನು ಗೋಣಿ/ಸಿಮೆಂಟು ಚೀಲದಲ್ಲಿ ತುಂಬಿ ತಲೆಮೇಲಿಟ್ಟು ಹೊರಡುತ್ತಿದ್ದರು. ಮಳೆಯ ದಿನವಾದರೆ ಗಂಟಿನ ಮೇಲೊಂದು ಛತ್ರಿ. ಹಿಡಿದು ಗದ್ದೆಬದು, ಇಳಿಜಾರುಗಳಲ್ಲಿ ಭಾರ ಹೊತ್ತು ಸಾಗುತ್ತಿದ್ದರು.

ಈಗ ಸರ್ರನೆ ಹೋಗಿ ಭರ್ರನೆ ಬರುವ ಕಾಲ ಬಂದಿದೆ. ಖಾಲಿ ಕೈಯಲ್ಲಿ ಮನೆಯಿಂದ ಹೊರಟವರು ವಾಪಸು ಬರುವಾಗ ಹತ್ತಾರು ಪ್ಲಾಸ್ಟಿಕ್ ಚೀಲ ಹಿಡಿದು ಬರುತ್ತಾರೆ. ದಾರಿ ಮೇಲೆ ಬಾಯಾರಿಕೆಯಾದರೆ ಅರ್ಧ ಲೀಟರು ನೀರೋ, ತಂಪು ಪೇಯವನ್ನೋ ಕುಡಿದು ಬಾಟಲಿ ಅಲ್ಲೇ ಬಿಸಾಡುತ್ತಾರೆ. ಹಸಿವೆಯಾದರೆ ಒಂದು ಪ್ಯಾಕೆಟ್ ತಿನಿಸು ಕೊಂಡು ಕವರನ್ನು ಅಲ್ಲಾಚೆ ಎಸೆಯುತ್ತಾರೆ.

ಮೊದಲೆಲ್ಲ ಮುಟ್ಟಾಗಿ ತೊಳೆದ ಬಟ್ಟೆ ಒಣಗದೆ ಒದ್ದಾಡಬೇಕಿತ್ತು, ಈಗ ರಕ್ತ ಸೋರದ ಪ್ಲಾಸ್ಟಿಕ್ ಪದರಿರುವ ನ್ಯಾಪ್ಕಿನ್ ಬಂದಿದೆ. ಮಕ್ಕಳ, ವಯಸ್ಸಾದವರ ಮಲಮೂತ್ರಾದಿಗಳ ಹೀರಿಕೊಳಲು ಅಂಥದ್ದೇ ಡಯಾಪರ್ ಬಂದಿದೆ. ಮೊದಲೆಲ್ಲ ಏನೇ ಸರ್ಕಸ್ಸು ಮಾಡಿದರೂ ಸಕ್ಕರೆ ಜಿನುಗುತ್ತಿತ್ತು, ಅಕ್ಕಿಯಲ್ಲಿ ಕುಟ್ಟೆ ಹರಿಯುತ್ತಿತ್ತು, ಹಿಟ್ಟು ಮುಗ್ಗಲಾಗುತ್ತಿತ್ತು, ತುಪ್ಪ ಜಂಬು ಹಿಡಿಯುತ್ತಿತ್ತು. ತೇವಾಂಶ ಒಂದಷ್ಟೂ ತಾಗದಂತೆ ಉಪ್ಪಿನಕಾಯಿ-ಬೆಣ್ಣೆ-ಎಣ್ಣೆ-ತುಪ್ಪ ವಗೈರೆ ವಸ್ತುಗಳ ರಕ್ಷಿಸುವುದು ಕಷ್ಟವಿತ್ತು. ಈಗ ಪ್ಲಾಸ್ಟಿಕ್ ಡಬ್ಬಿ, ಬಾಟಲಿ ಬಂದ ಮೇಲೆ ಎಲ್ಲವೂ ಬಲೇ ಸುಲಭವಾಗಿದೆ. ಬಡಗಿಗೆ ನಮ್ಮಿಷ್ಟದ ಡಿಸೈನನ್ನು ಮನವರಿಕೆ ಮಾಡಿ, ಒಳ್ಳೆಯ ಮರತಂದು ಕುರ್ಚಿಮೇಜು ಮಾಡಿಸಲು ಅಪ್ಪನಿಗೆ ತಿಂಗಳುಗಟ್ಟಲೆ ಹಿಡಿಯುತ್ತಿತ್ತು. ಈಗ? ಅಲಲಾ! ಮರದ ಪೀಠೋಪಕರಣದ ಖರ್ಚಿನ ಕಾಲುಭಾಗದಲ್ಲಿ ಹೀಗೆ ಹೋಗಿ ಹಾಗೆ ಬರುತ್ತ ಮನೆಗೆ ಕುರ್ಚಿ, ಮೇಜು, ಟೀಪಾಯಿ, ಸ್ಟೂಲು ಎಲ್ಲ ಪ್ಲಾಸ್ಟಿಕ್ಕಿನದು ತಂದಾಯಿತು. ಹೊಲಗದ್ದೆಗಳ ಧಾನ್ಯರಾಶಿಯನ್ನು ಮಳೆ-ಇಬ್ಬನಿಯಿಂದ ರಕ್ಷಿಸಲು ಹುಲ್ಲು, ಸೋಗೆ ನೆಯ್ದು ಶ್ರಮಪಡಬೇಕಿತ್ತು. ಈಗ ಏನಿಲ್ಲ, ದೊಡ್ಡ ಪ್ಲಾಸ್ಟಿಕ್ ಶೀಟು ಹಾಸಿದರಾಯಿತು. ಮೊದಲು ಚಳುವಳಿಕಾರರು ಕೈಯಲ್ಲಿ ಬ್ಯಾನರು ಬರೆಸಬೇಕಿತ್ತು, ಮಳೆಬಂದೀತೋ ಎಂದು ಆತಂಕಪಡಬೇಕಿತ್ತು. ಈಗ ಕ್ಷಣಮಾತ್ರದಲ್ಲಿ ಬಣ್ಣಬಣ್ಣದ ಬೃಹತ್ ಬ್ಯಾನರುಗಳ ಪ್ರಿಂಟಿಸಿ ತಂದರಾಯಿತು. ‘ಹಳೇ ಕೂದ್ಲಾ, ಪಿನ್ನಾ, ಟಿಕ್ಲಿ’ ಎಂದು ಜೋಳಿಗೆ ನೇಲಿಸಿಕೊಂಡು ಬರುತ್ತಿದ್ದ ಅಲೆಮಾರಿಗಳ ವಿನಿಮಯ ವಸ್ತು ಪ್ಲಾಸ್ಟಿಕ್ ಆಯಿತು. ಉತ್ತರ ಧ್ರುವದ ಬೃಹತ್ ಮಂಜುಗಡ್ಡೆಯಡಿಯ ನೀರಿನಿಂದ ಹಿಡಿದು ಯಾವುದೋ ನಿರ್ಮಾನುಷ ದ್ವೀಪದ ತೀರದವರೆಗು ಪ್ರಪಂಚದ ಯಾವುದೇ ಜನನಿಬಿಡ, ನಿರ್ಜನ ಸ್ಥಳವನ್ನೂ ಪ್ಲಾಸ್ಟಿಕ್ ತಲುಪಿತು. ಅತಿ ಕಡಿಮೆ ದರದಲ್ಲಿ ಸಿಗುವ, ಅತಿ ವೇಗವಾಗಿ ಉತ್ಪಾದಿಸಬಹುದಾದ, ಸುಲಭದಲ್ಲಿ ಎಲ್ಲೆಡೆ ಸಿಗುವ ಪ್ಲಾಸ್ಟಿಕ್ ವಸ್ತುಗಳು ಯಾವ ಜಾಹೀರಾತಿಲ್ಲದೆ ಜನಪ್ರಿಯಗೊಂಡವು.

ಪೆಟ್ರೋಕೆಮಿಕಲ್ಸ್ ಮೂಲಧಾತುವಿನಿಂದ ತಯಾರಾಗುವ ಪ್ಲಾಸ್ಟಿಕ್ ಅನ್ನು ೧೯೦೭ರಲ್ಲಿ ಮೊದಲು ನ್ಯೂಯಾರ್ಕಿನ ವಿಜ್ಞಾನಿ ಲಿಯೋ ಬೆಕೆಲ್ಯಾಂಡ್ ಕಂಡುಹಿಡಿದ. ಅದಕ್ಕೂ ಮುನ್ನ ರಬ್ಬರ್ ಮತ್ತಿತರ ನಾರು, ಅಂಟಂಟು ವಸ್ತುಗಳನ್ನು ಬಳಸಿ ಪ್ಲಾಸ್ಟಿಕ್‌ನಂತಹ ವಸ್ತು ತಯಾರಿಸಲಾಗುತ್ತಿತ್ತು. ಯಾವ ಆಕಾರ, ಗಾತ್ರ, ದಪ್ಪವಾದರೂ ಆಗಬಲ್ಲ, ನೀರಿಗೆ ಒದ್ದೆಯಾಗದ, ಯಾವ ಆಕಾರದಲ್ಲಾದರೂ ಅತಿವೇಗವಾಗಿ ತಯಾರಿಸಬಹುದಾದ ವಂಡರ್ ವಸ್ತು ‘ಪ್ಲಾಸ್ಟಿಕ್ ಮೋಹಿನಿ’ಗೆ ಎಲ್ಲರೂ ಮನಸೋತರು. ಆ ಕಾಲದಲ್ಲಿ ಸಂಭವಿಸಿದ ಮಹಾಯುದ್ಧಗಳು, ಕೈಗಾರಿಕಾ ಕ್ರಾಂತಿಯು ವೇಗದ, ಹೊಸಹೊಸ ವೈಜ್ಞಾನಿಕ ಆವಿಷ್ಕಾರಕ್ಕೆ ಕಾರಣವಾದವು. ಬಿಎಎಸ್‌ಎಫ್, ಡವ್ ಕೆಮಿಕಲ್ಸ್ ಮೊದಲಾದ ಬೃಹತ್ ರಾಸಾಯನಿಕ ಕೈಗಾರಿಕಾ ಸಂಸ್ಥೆಗಳು ಕೋಟ್ಯಂತರ ಬಂಡವಾಳ ಹೂಡಿದವು. ಪ್ಲಾಸ್ಟಿಕ್ ತಯಾರಿಕೆ ಲಕ್ಷಕೋಟಿ ಡಾಲರ್ ವಹಿವಾಟಿನ ಬೃಹತ್ ಇಂಡಸ್ಟ್ರಿಯಾಗಿ ಬೆಳೆಯಿತು. ಹೊಸವಸ್ತುವಿನ ಜೊತೆಗಿನ ನಮ್ಮ ಸಂಬಂಧ ಬಲುಬೇಗ ಕುದುರಿಬಿಟ್ಟಿತು.

ಪ್ಲಾಸ್ಟಿಕ್ ಹೊಸದಾಗಿ ಪರಿಚಯವಾದಾಗ ಅಲ್ಲಾವುದ್ದೀನನ ದೀಪದೊಳಗಿಂದ ಬಂದ ವರವೋ ಎಂಬಂತೆ ಭಾಸವಾಗಿದ್ದು ಸುಳ್ಳಲ್ಲ. ಏನಿದೇನಿದು! ಕುರ್ಚಿ, ಮೇಜು, ಬುಟ್ಟಿ, ಬಾಚಣಿಕೆ, ತಟ್ಟೆ, ಲೋಟ, ಚಮಚ, ಡಬ್ಬಿ, ಚೊಂಬು, ಬಕೆಟು, ಫೈಲು, ಪೆನ್ನು, ಫ್ಯಾನು, ಫೋನು! ಎಲ್ಲ ಅಂದರೆ ಎಲ್ಲವೂ ಪ್ಲಾಸ್ಟಿಕ್ ಪರದೆಯೊಂದಿಗೆ ಫಳಫಳ ಹೊಳೆಯುತ್ತ ಚಂದಚಂದ ಮಾಡಿಕೊಂಡು ಮೋಹಗೊಳಿಸತೊಡಗಿದವು. ಅದಿಲ್ಲದೆ ನಮ್ಮ ಅಡಿಗೆಮನೆಯೂ ಇಲ್ಲ, ಬಚ್ಚಲು ಮನೆಯೂ ಇಲ್ಲ ಎಂಬಂತಾಯಿತು.

ಎಲ್ಲಿದ್ದರೂ ಕಸ





ಇಂತಿಪ್ಪ ಪ್ಲಾಸ್ಟಿಕ್ ದೇವತೆಯ ಪಾದಾರವಿಂದದಲ್ಲಿ ಹೊರಳಿ ಎಲ್ಲ ಸುಖವಾಗಿರುತ್ತಿರಲಾಗಿ ಬರಸಿಡಿಲಿನಂತೆ ಸತ್ಯಗಳು ಬಂದೆರಗತೊಡಗಿದವು. ನಾವು ಕುಡಿದದ್ದು ಮೊಲೆಹಾಲಲ್ಲ, ವಿಷ ಎಂದು ಗೊತ್ತಾಗತೊಡಗಿತು. ಸುಲಭಕ್ಕೆ ಹರಿಯದ ಗಟ್ಟಿತನ, ಬಾಗುವಿಕೆ, ಬಳುಕುವಿಕೆ, ತೆಳುಹಾಳೆ ತಯಾರಿಕೆ ಸಾಧ್ಯವಾಗುವುದು ಪ್ಲಾಸ್ಟಿಕ್‌ನ ಗುಣವಿಶೇಷಗಳು. ವಿಪರ್ಯಾಸವೆಂದರೆ ಪ್ಲಾಸ್ಟಿಕ್‌ನ ಹೆಗ್ಗಳಿಕೆಗೆ ಯಾವ ವಿಶಿಷ್ಟ ಗುಣಗಳು ಕಾರಣವೋ ಅದರ ವಿಷಯುಕ್ತತೆಗೂ ಅವೇ ಕಾರಣವಾಗಿವೆ. ಪ್ಲಾಸ್ಟಿಕ್ ತಯಾರಿಯಲ್ಲಿ ಬಳಕೆಯಾಗುವ ಬಿಸ್‌ಫಿನಾಲ್-ಎ ಮತ್ತು ಥ್ಯಾಲೇಟ್ಸ್ ಅತ್ಯಂತ ವಿಷಕಾರಕ ವಸ್ತುಗಳು ಎಂಬ ಸತ್ಯ ತಿಳಿದುಬಂತು. ದನಕರುಗಳ ಖಾಯಂ ಉಬ್ಬಿದ ಹೊಟ್ಟೆಯಲ್ಲಿರುವುದು ಪ್ಲಾಸ್ಟಿಕ್; ಹೆಚ್ಚತೊಡಗಿರುವ ಕ್ಯಾನ್ಸರ್ ಕಾಯಿಲೆಯ ಬಹುಮುಖ್ಯ ಕಾರಣ ಪ್ಲಾಸ್ಟಿಕ್; ಜನ್ಮಜಾತ ಅಂಗವೈಕಲ್ಯ, ಕುಂಠಿತ ರೋಗನಿರೋಧಕ ಶಕ್ತಿ, ಎಂಡೋಕ್ರೈನ್ ಕಾಯಿಲೆಗಳಿಗೆ ಕಾರಣ ಪ್ಲಾಸ್ಟಿಕ್ ಎಂದು ತಿಳಿಯಿತು.

ಪ್ಲಾಸ್ಟಿಕ್ ಸಣ್ಣಸಣ್ಣ ಕಣವಾಗಿ ವಿಭಜನೆಗೊಂಡು ಆಹಾರ ಸರಪಳಿಯ ಕೊಂಡಿ ಹಿಡಿದು ನಮ್ಮ ರಕ್ತ, ಅಂಗಾಂಶಗಳಲ್ಲಿ ಈಗಾಗಲೇ ಸೇರಿಹೋಗಿದೆ. ನಾಶವಾಗಬಾರದೆಂದೇ ಸೃಷ್ಟಿಯಾದ ವಸ್ತು ಪ್ಲಾಸ್ಟಿಕ್. 2000 ಸಾವಿರ ವರ್ಷಗಳವರೆಗೂ ಮಣ್ಣ ಅಡಿಯಲ್ಲಿ ಹಾಗೇ ಇರುವಂಥ ಅವಿನಾಶಿ ವಸ್ತು ಅದು. ಸಣ್ಣಸಣ್ಣ ಕಣಗಳಾಗುತ್ತ ವಿಷಕಾರಕ ವಸ್ತುವಾಗುತ್ತ ಹೋಗುವುದೇ ಹೊರತು ಅದು ಇಲ್ಲವಾಗುವುದಿಲ್ಲ. ಇಂಥ ಅಪಾಯಕಾರಿ ವಸ್ತುವನ್ನು ಎಗ್ಗಿಲ್ಲದೆ, ವಿವೇಕವಿಲ್ಲದೆ ಅತಿಬಳಸಿದೆವು. ಬಳಸಿ ಬಿಸಾಡಿದ್ದು ಎಲ್ಲಿ ಹೋಯಿತು, ಏನಾಯಿತು ಎಂದು ಒಂದಷ್ಟೂ ಗಮನಿಸದೇ ಇದ್ದೆವು. ಪರಿಸರಪ್ರಿಯರು ಪದೇಪದೇ ಎಚ್ಚರಿಸಿದರೂ ಕೆಪ್ಪರಂತಿದ್ದೆವು. ಈಗ ಪ್ಲಾಸ್ಟಿಕ್ ನಂಟನ್ನು ಕಡಿದುಕೊಳ್ಳಬೇಕಾದ ಕಾಲ ಬಂದಿದೆ ಎಂದು ವಿಶ್ವಸಂಸ್ಥೆ ಹೇಳತೊಡಗಿದೆ.

ಈ ಸಲದ ಪರಿಸರ ದಿನಾಚರಣೆಗೆ ವಿಶ್ವಸಂಸ್ಥೆ ಪ್ಲಾಸ್ಟಿಕ್ ಕಸದ ಕಡೆ ಗಮನ ಹರಿಸಿದೆ. ಪ್ರತಿನಿತ್ಯ ನಾವು ಬಳಸುತ್ತಿರುವ ಒಮ್ಮೆ ಬಳಸಿ ಬಿಸಾಡುವ ಡಿಸ್ಪೋಸಿಬಲ್ ಪ್ಲಾಸ್ಟಿಕ್ ಅನ್ನು ಬಳಸದಿರುವಂತೆ ಜಗತ್ತಿಗೆ ಸಲಹೆ ಇತ್ತಿದೆ. ಪ್ರತಿವರ್ಷ 5 ಲಕ್ಷಕೋಟಿ ಪ್ಲಾಸ್ಟಿಕ್ ಬ್ಯಾಗುಗಳನ್ನು ಬಳಸಿ ಬಿಸಾಡುತ್ತೇವೆ. 8 ಮಿಲಿಯನ್ ಟನ್ ಪ್ಲಾಸ್ಟಿಕ್ ಕಸವನ್ನು ಕಡಲಿಗೆ ಸೇರಿಸುತ್ತೇವೆ. ಕಳೆದ ಶತಮಾನವಿಡೀ ತಯಾರಿಸಿದ್ದಕ್ಕಿಂತ ಹೆಚ್ಚು ಪ್ಲಾಸ್ಟಿಕ್ ಅನ್ನು ಕಳೆದ ದಶಕದಲ್ಲಿ ತಯಾರಿಸಿದ್ದೇವೆ. ಗಾಜು, ಪಿಂಗಾಣಿ, ಮರ, ಲೋಹ, ಚರ್ಮ, ಕಲ್ಲು ಎಲ್ಲದರಿಂದ ತಯಾರಿಸಲ್ಪಡುತ್ತಿದ್ದ ವಸ್ತುಗಳನ್ನು ಪ್ಲಾಸ್ಟಿಕ್‌ನಲ್ಲಿ ತಯಾರಿಸಿ, ಬಳಸಿ, ಬಿಸಾಡಿದ್ದೇವೆ. ಪರಿಣಾಮವಾಗಿ ದಿನದಿಂದ ದಿನಕ್ಕೆ ಪ್ಲಾಸ್ಟಿಕ್ ಕಸ ಭೂಮಿಯ ಮೂಲೆಮೂಲೆಗಳನ್ನೂ, ಸಾಗರಗಳ ಆಳವನ್ನೂ, ಧ್ರುವ ಪ್ರದೇಶಗಳ ಹಿಮಗಡ್ಡೆಗಳನ್ನೂ ತಲುಪಿ ಕಲುಷಿತಗೊಳಿಸುತ್ತಿದೆ. ಪ್ರಾಣಿಪಕ್ಷಿ, ಜಲಚರಗಳೆಲ್ಲವನ್ನೂ ಪ್ಲಾಸ್ಟಿಕ್ ಆವರಿಸಿ ಉಸಿರುಗಟ್ಟಿಸುತ್ತಿದೆ. ಇನ್ನು ಎಚ್ಚೆತ್ತುಕೊಳ್ಳದಿದ್ದರೆ ಯಾರಿಗೂ ಉಳಿಗಾಲವಿಲ್ಲ ಎಂದು ನಿಸರ್ಗ ಕಠಿಣ ಎಚ್ಚರಿಕೆಯ ಸಂಕೇತಗಳ ಕಳಿಸತೊಡಗಿದೆ.



ಪ್ಲಾಸ್ಟಿಕ್ ನಿತ್ಯವೂ ಅಗಾಧ ಪ್ರಮಾಣದಲ್ಲಿ ಸಮುದ್ರ ಸೇರುತ್ತಿದ್ದು ಕಡಲ ಜೀವಿಗಳಿಗೂ ಮೃತ್ಯುಪ್ರಾಯವಾಗಿ ಪರಿಣಮಿಸಿದೆ. ಪ್ಲಾಸ್ಟಿಕ್‌ನಲ್ಲಿರುವ ತೈಲಾಂಶ ನೀರನ್ನು ಅದು ಮುಟ್ಟಿಸಿಕೊಳ್ಳದಿರುವಂತೆ ಮಾಡಿವೆ. ಹಾಗಾಗಿ ಸಮುದ್ರಕ್ಕೆ ಸೇರಿದ ಟನ್ನುಗಟ್ಟಲೆ ಪ್ಲಾಸ್ಟಿಕ್ ನೀರಲ್ಲಿ ಕರಗದೆ ಸಣ್ಣಸಣ್ಣ ಕಣಗಳಾಗಿ ವಿಷಕಾರಕ ವಸ್ತುಗಳನ್ನೆಲ್ಲ ಅಂಟಿಸಿಕೊಂಡು ಇನ್ನಷ್ಟು ಅಪಾಯಕಾರಿ ವಸ್ತುವಾಗಿ ಸಾಗರಗಳಲ್ಲಿ ತೇಲುತ್ತ ಖಂಡಾಂತರ ಚಲಿಸತೊಡಗಿದೆ. ಸಾಗರ ತಳದಲ್ಲಿ ನಂಬಲಸಾಧ್ಯ ಪ್ರಮಾಣದ ಪ್ಲಾಸ್ಟಿಕ್ ಕಸದ ಪುಡಿ ಹರಡಿಕೊಂಡಿದೆ. ಮತ್ಸ್ಯಕ್ಷಾಮಕ್ಕೆ, ದಡಕ್ಕೆ ಬಂದು ಸತ್ತು ಬೀಳುವ ತಿಮಿಂಗಿಲಗಳ ಸಾವಿಗೆ ಪ್ಲಾಸ್ಟಿಕ್ ನೇರ ಕಾರಣವಾಗಿದೆ.

ತಿನ್ನುವ ವಸ್ತುವೆಂದು ಭಾವಿಸಿ ಪ್ಲಾಸ್ಟಿಕ್ ಸೇವಿಸುವುದರಿಂದ, ಚಲಿಸುವಾಗ ಪ್ಲಾಸ್ಟಿಕ್ ಎಳೆ-ವಸ್ತುಗಳೊಳಗೆ ಜೀವಿಗಳು ಸಿಲುಕುವುದರಿಂದ ವನ್ಯಜೀವಿಗಳಿಗೂ ಅಪಾಯ ಹೆಚ್ಚಿದೆ. ಜೀವಿಗಳ ಸಂತಾನೋತ್ಪತ್ತಿ ಶಕ್ತಿ ಕುಂಠಿತಗೊಂಡಿದೆ. ಅವು ಸುಮ್ಮನೇ ಗಾಯಗೊಳ್ಳುತ್ತಿವೆ. ಲಿವರ್ ಬರಬರುತ್ತ ಕುಸಿಯುತ್ತಿದೆ.

ಇವೆಲ್ಲ ಪರಿಸರ ಪ್ರೇಮಿಗಳ ಅತಿ ಉತ್ಪ್ರೇಕ್ಷಿತ ಮಾತುಗಳೆಂದು ಅತ್ತ ಸರಿಸಿ ಇಡುವಂತಿಲ್ಲ. ನೆಲದ ಮೇಲಿದ್ದರೂ, ನೆಲದೊಳಗೆ ಹುಗಿದರೂ, ಸುಟ್ಟು ಹೊಗೆಯಾಡಿದರೂ, ಬೂದಿಯಾದರೂ ವಿಷವೇ ಆಗಿರುವ ಪ್ಲಾಸ್ಟಿಕ್ ಸರ್ವಾಂಗವೂ ವಿಷಮಯವಾಗಿರುವ ವಸ್ತು. ನಾವೇ ಸೃಷ್ಟಿಸಿದ ವಸ್ತುಗಳಿಂದ ವಿನಾಶದ ಭೀತಿ ಎದುರಿಸುತ್ತಿರುವ ಕುಲ ನಮ್ಮದು.

ಕಂಡಕಂಡಲ್ಲಿ ಪ್ಲಾಸ್ಟಿಕ್ ಬಿಸಾಡಲು ನಾವು ನಿಸ್ಸೀಮರು. ಆದರೆ ನಮಗಿಂತ ಅತಿಹೆಚ್ಚು ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಮುದ್ರಕ್ಕೆ ಸೇರಿಸುವವರಿದ್ದಾರೆ. ಸಮುದ್ರ ಸೇರುವ ಪ್ಲಾಸ್ಟಿಕ್ ಕಸದ 60% ಕೇವಲ 5 ದೇಶಗಳಿಂದ ಬರುತ್ತಿದೆ: ಅದರಲ್ಲಿ ಚೀನಾ ಮೊದಲ ಸ್ಥಾನದಲ್ಲಿ. ನಂತರ ಇಂಡೋನೇಷ್ಯಾ, ಫಿಲಿಪೀನ್ಸ್, ವಿಯೆಟ್ನಾಮ್ ಮತ್ತು ಥೈಲ್ಯಾಂಡ್‌ಗಳಿವೆ. ಅಮೆರಿಕವೂ ಕಡಿಮೆಯಿಲ್ಲ. ಕಡಿಮೆ ಜನಸಂಖ್ಯೆಯಿದ್ದರೂ ವರ್ಷಕ್ಕೆ 0.3 ಮೆಟ್ರಿಕ್ ಟನ್ನುಗಳಷ್ಟು ಕಸ ಸಮುದ್ರಕ್ಕೆ ಸೇರಿಸುತ್ತದೆ. (ಚೀನಾ 8.8 ಮೆಟ್ರಿಕ್ ಟನ್.) 2050ರ ಹೊತ್ತಿಗೆ ಸಮುದ್ರದಲ್ಲಿ ಮೀನಿಗಿಂತ ಹೆಚ್ಚು ಪ್ಲಾಸ್ಟಿಕ್ ಕಸವೇ ತುಂಬಲಿದೆ. ಕಳೆದ 6 ದಶಕದಲ್ಲಿ 830 ಮೆಟ್ರಿಕ್ ಟನ್ ಪ್ಲಾಸ್ಟಿಕ್ ಕಸ ತಯಾರಿಸಿದ್ದೇವೆ. ಅದರಲ್ಲಿ ಬಹುಪಾಲು ಮರುಬಳಕೆ ಮಾಡಲಾಗದ ಕೀಳುದರ್ಜೆಯ ವಿಷಕಾರಕ ಪ್ಲಾಸ್ಟಿಕ್ ಆಗಿವೆ.







ಹೀಗೆ ನಾವೀಗ ಭೂಮಿ ಮೇಲೆ, ಅಂತರಿಕ್ಷದಲ್ಲೂ ಸಾಕಷ್ಟು ಪ್ಲಾಸ್ಟಿಕ್ ಕಸವನ್ನು ಮೂಲೆಮೂಲೆ ತಲುಪಿಸಿದ ಕುಖ್ಯಾತಿಗೆ ಕಾರಣರಾಗಿದ್ದೇವೆ.

ಕಸದಿಂದ ರಸ

ಹಾಗಾದರೆ ಪ್ಲಾಸ್ಟಿಕ್ ಅನ್ನು ಏನು ಮಾಡುವುದು? ಒಂದು ಉತ್ತರ ಮರುಬಳಕೆ ಮಾಡುವುದು. ಆದರೆ ಅದೂ ಸರಳವಿಲ್ಲ.

ಅತಿ ಕಡಿಮೆ ಬೆಲೆಗೆ ಚೈನಾ ಮಾಲು ಎಲ್ಲೆಡೆ ಸಿಗುವುದಲ್ಲವೆ? ಅದಕ್ಕೆ ಕಾರಣ ಮರುಬಳಕೆಯ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬೇರೆ ದೇಶಗಳಿಂದ ಚೀನಾ ಆಮದು ಮಾಡಿಕೊಳ್ಳುತ್ತದೆ. ಹೌದು. ಕಸದಿಂದ ರಸವಾಗಿಸುವ ಅತಿ ಹೆಚ್ಚು ರೀಸೈಕಲ್ ಯುನಿಟ್‌ಗಳು ಚೀನಾದಲ್ಲಿವೆ. ಹಾಗಾಗಿ ಮರುಬಳಕೆಯ ವಸ್ತುಗಳಿಂದ ತಯಾರಾದ ಚೈನಾ ಮಾಲು ಅತಿ ಕಡಿಮೆ ಬೆಲೆಗೆ ಸಿಗುತ್ತದೆ. ಇಂಗ್ಲೆಂಡ್, ಯೂರೋಪಿಯನ್ ಯೂನಿಯನ್, ಅಮೆರಿಕ ಮತ್ತು ಜಪಾನುಗಳಿಂದ ಕಳೆದ ಒಂದು ವರ್ಷದಲ್ಲಿ ಚೀನಾದ ಪ್ಲಾಸ್ಟಿಕ್ ಮರುಬಳಕೆ ವಸ್ತುಗಳ ತಯಾರಕರು ೭.೮ ಮೆಟ್ರಿಕ್ ಟನ್ ಪ್ಲಾಸ್ಟಿಕ್ ಕಸವನ್ನು ಆಮದು ಮಾಡಿಕೊಂಡಿದ್ದಾರೆ. ಆದರೆ ಇತ್ತೀಚಿನ ಅಧ್ಯಯನ ವರದಿಯೊಂದು ವಿಶ್ವದ ಸಾಗರಗಳಿಗೆ ಅತಿಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಕಳಿಸುತ್ತಿರುವ ದೇಶಗಳ ಸಾಲಲ್ಲಿ ಮೊದಲ ಸ್ಥಾನ ಚೀನಾಗೆ ಕೊಟ್ಟ ನಂತರ ಮರುಬಳಕೆ ಪ್ಲಾಸ್ಟಿಕ್‌ನ ಸೂಕ್ತ ವಿಲೇವಾರಿ ಮಾಡಲು ಚೀನಾದ ಮೇಲೆ ವಿಶ್ವದ ಒತ್ತಡ ಹೆಚ್ಚತೊಡಗಿದೆ. ಆ ಹೊರೆ ಇಳಿಸಿಕೊಳ್ಳಲು ಚೀನಾ ಪ್ಲಾಸ್ಟಿಕ್ ತ್ಯಾಜ್ಯ ‘ಯಾಂಗ್ ಲಾಜಿ’ (ಆಮದು ಕಸ) ನಿಲ್ಲಿಸಬೇಕೆಂದು, ತನ್ನ ದೇಶದವರು ಬಳಸಿದ ಪ್ಲಾಸ್ಟಿಕ್ ಅನ್ನೇ ಮರುಬಳಕೆ ಮಾಡುವುದಾಗಿಯೂ ನಿರ್ಧರಿಸಿದೆ. ಅದು ೨೦೧೭ರಲ್ಲಿ ೨೪ ತರಹದ ಘನತ್ಯಾಜ್ಯಗಳ ತರಿಸಿಕೊಳ್ಳುವುದನ್ನು ನಿಲ್ಲಿಸಿತು. ಯೂರೋಪಿಯನ್ ಯೂನಿಯನ್ ಅತಿಹೆಚ್ಚು ತಲಾ ಕಸ ಉತ್ಪಾದಿಸುವ ನೆಲ. ಅವರ ೮೭% ಕಸ ಚೀನಾಗೇ ಹೋಗುತ್ತಿತ್ತು. ಇಷ್ಟುದಿನದವರೆಗೆ ಅಮೆರಿಕ, ಜಪಾನುಗಳೂ ಚೀನಾವನ್ನೇ ನಂಬಿದ್ದವು. ಇನ್ನು ಅವು ತಮ್ಮ ಕಸ ಬಿಸಾಡಲು ಬೇರೆ ದೇಶಗಳ ನೋಡಿಕೊಳ್ಳಬೇಕಾಗಿದೆ.


ಅತಿ ಹೆಚ್ಚು ತಲಾವಾರು ಪ್ಲಾಸ್ಟಿಕ್ ಬಳಸಿ ಬಿಸಾಡುವವರು ಮುಂದುವರಿದ ದೇಶಗಳೇ. ಬೃಹತ್ ಪ್ಲಾಸ್ಟಿಕ್ ತಯಾರಿಕಾ ಕಂಪನಿಗಳಲ್ಲಿ ಅರ್ಧ ಅಮೆರಿಕದಲ್ಲಿವೆ. ಮಿಕ್ಕವು ಜಪಾನ್, ಜರ್ಮನಿ ಮತ್ತಿತರ ಕಡೆಗಳಲ್ಲಿವೆ. ವಿಚಿತ್ರವೆಂದರೆ ಮೊದಲು ಪ್ಲಾಸ್ಟಿಕ್ ತಯಾರಿಸುವವರು ಸಿರಿವಂತ ‘ಮುಂದುವರಿದವರು’. ಅದರ ಕಸ ಮರುಬಳಕೆ ಮಾಡುವವರು ‘ಬಡ ಹಿಂದುಳಿದ ದೇಶ’ದವರು! ಪ್ಲಾಸ್ಟಿಕ್ ವಿಷದ ವಿಲೇವಾರಿ ಬಡವರ ಹೆಗಲ ಮೇಲೆ. ತಮ್ಮ ಪ್ಲಾಸ್ಟಿಕ್ ಕಸವನ್ನು ಬಡ ದೇಶಗಳಿಗೆ ಮಾರಿ ಸಿರಿವಂತ ದೇಶಗಳು ‘ಶುದ್ಧ’ರಾಗಿದ್ದಾರೆ!

ಆದರೆ ತಮ್ಮ ‘ಮುಂದುವರೆಯುವಿಕೆ’ ಮತ್ತು ‘ಅಭಿವೃದ್ಧಿ’ ಇಡಿಯ ಭೂಮಿಗೇ ತಲೆನೋವಾಗಿದೆ ಎಂದು ಆ ದೇಶಗಳು ಅರಿಯಬೇಕು; ತಮ್ಮ ಕಸಕ್ಕೆ ತಾವೇ ಜವಾಬ್ದಾರರು ಎನ್ನುವುದನ್ನು ಪ್ರತಿ ದೇಶ, ಪ್ರಜೆಯೂ ತಿಳಿದುಕೊಳ್ಳಬೇಕು.

***

ಯಾವುದೇ ಕಸ ವಿಲೇವಾರಿಗೆ ನಾವೀಗ ಅನುಸರಿಸುತ್ತಿರುವುದು ಒಂದೇ ನೀತಿ: ನಮ್ಮಲ್ಲಿರುವುದನ್ನು ದೂರ ಬಿಸಾಡುವುದು. ನಮ್ಮ ಮನೆಯ ಕಸವನ್ನು ಕಂಪೌಂಡಿನಾಚೆ ಬಿಸಾಡುವುದು. ನಮ್ಮ ಊರಿನ ಕಸವನ್ನು ಊರಗಡಿ ದಾಟಿಸಿ ಬಿಸಾಡುವುದು; ಕಣ್ಣಿಗೆ ಕಾಣದಂತೆ ಗುಡ್ಡ, ನದಿ, ಕಡಲುಗಳಲ್ಲಿ ಬಿಸಾಡುವುದು.. ಹೀಗೇ. ನಮ್ಮ ಈ ದುರ್ಗುಣದ ಕಾರಣವಾಗಿ ಎಲ್ಲೆಲ್ಲೂ ಅಸಹ್ಯವಾಗಿ ಕಸ ಗುಪ್ಪೆಗೊಂಡು, ಚಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಾಣಬಹುದು.

ಆದರೆ ಇರುವುದೊಂದೇ ಭೂಮಿ, ಕುಡಿವುದೊಂದೇ ನೀರು. ಬಳಸಿ ಬಿಸಾಡಿದ್ದು ನಮ್ಮ ಹೊಟ್ಟೆಯೊಳಗೆ ಸೇರದಿರಲು ಸಾಧ್ಯವೇ? ಮಲಮೂತ್ರವಿರಲಿ, ಪ್ಲಾಸ್ಟಿಕ್-ಸೀಸವಿರಲಿ, ಸೂಕ್ತ ವಿಲೇವಾರಿ ಮಾಡದಿದ್ದ ಕಸ ಆಹಾರ ಸರಪಳಿ, ಗಾಳಿ, ನೀರಿನ ಮೂಲಕ ಹೇಗಾದರೂ ನಮ್ಮ ದೇಹ ಪ್ರವೇಶಿಸಿಯೇ ಪ್ರವೇಶಿಸುತ್ತವೆ.



ಈ ವಿಷದಿಂದ ಪಾರಾಗುವುದು ಹೇಗೆ? ಇದಕ್ಕೆ ಯಾವುದೇ ಸರಳ ಸೂತ್ರವಿಲ್ಲ. ಇದುವರೆಗೆ ನಾವು ರೂಢಿಸಿಕೊಂಡು ಬಿಟ್ಟಿರುವ ಸುಲಭ ಬದುಕಿನ ಅಡ್ಡದಾರಿಗಳನ್ನು ಬಿಟ್ಟು, ಕೊಂಚ ಶ್ರಮವಾದರೂ ಸರಿ, ಉತ್ತಮ ಹಾದಿ ಹಿಡಿಯಬೇಕಿದೆ. ಅದಕ್ಕಾಗಿ, ಗ್ರಾಹಕರಾಗಿ ನಮ್ಮ ನಡವಳಿಕೆ ಬದಲಿಸಿಕೊಳ್ಳಬೇಕು. ಆಳುವವರು ಮತ್ತು ಕೈಗಾರಿಕೆಗಳು ಪರಿಸರಸ್ನೇಹಿ ನೀತಿ ರೂಪಿಸಿಕೊಳ್ಳಬೇಕು.

ಈ ನಿಟ್ಟಿನಲ್ಲಿ ನಾಗರಿಕರ ಜವಾಬ್ದಾರಿಗಳೆಂದರೆ:




  • ಪ್ಲಾಸ್ಟಿಕ್ ಮಾಲಿನ್ಯದಲ್ಲಿ ಕೆಲವೇ ನಿಮಿಷ, ಗಂಟೆ ಬಳಸಿ ಬಿಸಾಡುವ ಚೀಲಗಳ ಪಾಲು ದೊಡ್ಡದಿದೆ. ಅಂಗಡಿಗೆ ಹೋಗುವಾಗ ಮನೆಯಿಂದ ಚೀಲ ಒಯ್ಯೋಣ. ನಮ್ಮ ಕೈಚೀಲವಿದ್ದಾಗಲೂ ಅವರು ಪ್ಲಾಸ್ಟಿಕ್ ಚೀಲದಲ್ಲಿ ಸಾಮಾನು ಕೊಡಬಂದರೆ ನಿರಾಕರಿಸೋಣ. 
  • ಮೊದಲು ನಾವು ಬಳಸಿದ್ದನ್ನೇ ಮತ್ತೆ ಬಳಸುತ್ತಿದ್ದೆವು. ಮತ್ತೆಮತ್ತೆ ಬಳಸಬಹುದಾದ ವಸ್ತುಗಳನ್ನೇ ಬಳಸುತ್ತಿದ್ದೆವು. ಈಗ ಆಧುನಿಕತೆಯ, ನಾಗರಿಕತೆಯ ಲಕ್ಷುರಿ ಎಂದರೆ ಒಮ್ಮೆ ಬಳಸುವುದು, ಬಿಸಾಡುವುದು ಎಂದು ಭಾವಿಸಿದ್ದೇವೆ. ಆದರೆ ಬರಿಯ ಪ್ಲಾಸ್ಟಿಕ್ ಅಷ್ಟೆ ಅಲ್ಲ, ಎಲ್ಲವನ್ನೂ ಮರುಬಳಸುವುದೇ ಪ್ರಕೃತಿಸ್ನೇಹಿ ಬದುಕಿನ ಮಾರ್ಗ. ಒಮ್ಮೆ ಬಳಸಿ ಬಿಸಾಡಲೇಬೇಕಾದ ಪ್ಲಾಸ್ಟಿಕ್ ಉತ್ಪನ್ನಗಳನ್ನು ತರುವುದೇ ಬೇಡ. ಅಕಸ್ಮಾತ್ ಮನೆಯೊಳಗೆ ಬಂದ ಪ್ಲಾಸ್ಟಿಕ್ ವಸ್ತುಗಳನ್ನು ಮತ್ತೆಮತ್ತೆ, ದೀರ್ಘಕಾಲ ಬಳಸೋಣ. 
  • ನಮ್ಮ ಅಂಗಳ ಸ್ವಚ್ಛವಿರಬೇಕು ನಿಜ. ಅದಕ್ಕೆ ಪಕ್ಕದ ಅಂಗಳ, ಗುಡ್ಡ, ಬೆಟ್ಟ, ಕಣಿವೆಗಳ, ಬಯಲುಗಳ ಕಸದ ತೊಟ್ಟಿಯಾಗಿಸದಿರೋಣ. 
  • ಯಾವ ಕಾರಣಕ್ಕೂ ಪ್ಲಾಸ್ಟಿಕ್ ಸುಡಬಾರದು. ಸುಟ್ಟಾಗ ಬಿಡುಗಡೆಯಾಗುವ ಡಯಾಕ್ಸಿನ್ ತೀರ ವಿಷಕಾರಿ. ಗಾಳಿಯಲ್ಲಿ ಡಯಾಕ್ಸಿನ್ ವಿಷ ತುಂಬಿದರೆ ಬಲು ಅಪಾಯಕಾರಿ. ಜೊತೆಗೆ ಸುಟ್ಟಬೂದಿ ಮೂಲಕ ಮಳೆನೀರಿನ ಮೂಲಕ ಕುಡಿವ ನೀರು ತಲುಪುವ ಪ್ಲಾಸ್ಟಿಕ್ ಹೊಟ್ಟೆ ಸೇರುತ್ತದೆ. ಎಂದೇ ಪ್ಲಾಸ್ಟಿಕ್ ಸುಡುವುದು ‘ಹಸಿರು ಅಪರಾಧ’ ಎಂದು ನೆನಪಿಡೋಣ.


ಆಡಳಿತದ ಜವಾಬ್ದಾರಿ

  • ಪ್ಲಾಸ್ಟಿಕ್ ಕಸ ಸಂಗ್ರಹಣೆ, ವಿಂಗಡಣೆ, ಮರುಬಳಕೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಪ್ಲಾಸ್ಟಿಕ್ ನಿಷೇಧ ಕಾನೂನನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು.
  • ಪ್ಲಾಸ್ಟಿಕ್‌ನ ಬೆಲೆಯನ್ನು ತುಂಬ ಏರಿಸಬೇಕು. ತಯಾರಿಯನ್ನು ಅತಿ ಮಿತಗೊಳಿಸಬೇಕು. ಆಗದು ‘ಅಮೂಲ್ಯ’ವಾಗಿ ಹಾದಿಬೀದಿಯಲ್ಲಿ ಕಸವಾಗುವುದು ನಿಲ್ಲುತ್ತದೆ. (ಗಂಧ, ಬಂಗಾರ, ವಜ್ರ ಬೀದಿಯಲ್ಲಿ ಕಾಣವು. ಯಾಕೆ!?)
  • ವಿಶ್ವಾದ್ಯಂತ ಅತಿಹೆಚ್ಚು ಪ್ಲಾಸ್ಟಿಕ್ ಬಳಕೆಯಾಗುವುದು ಪ್ಯಾಕೇಜಿಂಗ್ ಸಲುವಾಗಿ. ಅದರಲ್ಲಿ ಬರೀ ೨% ಪ್ಲಾಸ್ಟಿಕ್ ಮಾತ್ರ ಮರುಬಳಕೆಯಾಗುತ್ತಿದೆ. ಪ್ಲಾಸ್ಟಿಕ್ ಬದಲಾಗಿ ಸುಧಾರಿತ, ಪ್ಲಾಸ್ಟಿಕ್ ರಹಿತ ಪ್ಯಾಕೇಜಿಂಗ್ ವಿಧಾನಗಳ ಕಂಡುಹಿಡಿಯುವುದು; ಉತ್ತಮ ದರ್ಜೆಯ ಮರುಬಳಕೆಯಾಗುವ ಪ್ಲಾಸ್ಟಿಕ್, ಜೀರ್ಣವಾಗಬಲ್ಲ ಪ್ಲಾಸ್ಟಿಕ್ ಕಂಡುಹಿಡಿಯುವ ಬಗೆಗೆ ವಿಜ್ಞಾನಿಗಳು ಮತ್ತು ಕೈಗಾರಿಕೆಗಳು ಸಂಶೋಧನೆ ನಡೆಸಬೇಕು.
  • ಪೆಟ್ರೋಲಿಯಂ ಉಪಉತ್ಪನ್ನವಾದ ಪ್ಲಾಸ್ಟಿಕ್ ಅನ್ನು ಸುರಕ್ಷಿತವಾಗಿ ‘ಉರಿಸಿ’ ವಿದ್ಯುತ್ ತಯಾರಿಸುವ, ಬಳಕೆಯಲ್ಲೇ ಪ್ಲಾಸ್ಟಿಕ್ ಕಡಿಮೆ ಮಾಡುವ ಪ್ರಯತ್ನ ಶುರುವಾಗಿದೆ. ಪ್ಲಾಸ್ಟಿಕ್ ಅನ್ನು ಜೀರ್ಣಿಸಬಲ್ಲ ‘ಕಿಣ್ವ’ವೊಂದನ್ನು ಕಂಡುಹಿಡಿದಿದ್ದು ಪ್ರಯೋಗಗಳ ಚುರುಕುಗೊಳಿಸಬೇಕು. 


ಹೀಗೆ ಎಲ್ಲ ನೆಲೆಗಳಿಂದ ಪ್ಲಾಸ್ಟಿಕ್ ರಹಿತರಾಗಲು ನಾವು ಪ್ರಯತ್ನಿಸಿದರಷ್ಟೆ ಬರುವ ಪೀಳಿಗೆಗೆ ವಾಸಯೋಗ್ಯ ಭೂಮಿ ಬಿಟ್ಟುಹೋಗಲು ಸಾಧ್ಯವಿದೆ.

***

ಕಾಲದ ವೇಗವೋ ಮತ್ತೊಂದೋ ಹೇಗಿದೆ ಎಂದರೆ ಹತ್ತಿಪ್ಪತ್ತು ವರ್ಷದ ಹಿಂದಿನ ನಮ್ಮ ದಿನಚರಿ ನೆನೆಸಿಕೊಂಡರೆ ನಾವೇನಾ ಹೀಗಿದ್ದವರು ಎಂದು ಅಚ್ಚರಿಯಾಗುತ್ತದೆ. ಆದರೆ ಈ ಬದಲಾವಣೆ ಸ್ವವಿನಾಶದ ಹಾದಿಯಲ್ಲಿರುವುದು ತೀವ್ರ ಆತಂಕ ಹುಟ್ಟಿಸುವ ವಿಷಯವಾಗಿದೆ. ಎಂದೇ ನಾವೆಲ್ಲ ಎಚ್ಚೆತ್ತುಕೊಳ್ಳುವ: ಪ್ಲಾಸ್ಟಿಕ್ ರಕ್ತ ಬೀಜಾಸುರನಿದ್ದಂತೆ. ಅದು ಮಣ್ಣಿನಲ್ಲಿ ಕರಗದು; ನೀರಿನಲ್ಲಿ ನೆನೆಯದು; ಸುಟ್ಟರೂ ಹೊಗೆ ಬೂದಿಯ ವಿಷಗುಣ ಹೋಗದು.

ಪ್ಲಾಸ್ಟಿಕ್ ಹೂವು ಮುಡಿದರೆ ಅದು ತಲೆದಂಡವನ್ನೇ ಬೇಡುತ್ತದೆ. ನೆಲ, ಜಲ, ಜೀವ ರಕ್ಷಿಸುವುದು ಎಂದರೆ ಕಡಿಮೆ ಪ್ಲಾಸ್ಟಿಕ್ ಬಳಸುವುದೇ ಆಗಿದೆ.





(All Image courtesy: Internet)