Tuesday, 11 September 2018

ಸಂಗಾತಿ..





ಕುಕ್ಕಿಕುಕ್ಕಿ ಹೊಟ್ಟುಹಾರಿಸಿ ಹಕ್ಕಿ ತಿರುಳು ಹೊರಗೆಳೆಯುತಿದೆ 
ಬೆಳಗಿನ ಮಂಜಿನಂತೆ ನನ್ನ ತುಟಿಗಳೂ ಸೆಟೆದುಕೊಂಡಿವೆ 
ಇಂದೋ ನಾಳೆಯೋ ಬರಲಿರುವ ವಸಂತನಿಗೆಂದು
ಎದೆಮರ ಎಲೆಯುದುರಿಸಿ ಹೊಂಚುಹಾಕಿದೆ 
ಅವಶೇಷದಡಿಯಿಂದ ಬುದುಂಗನೇಳಲು ಕನಸಿನಣಬೆ ಕಾದಿದೆ

ಕೋರೈಸುವ ಬೆಂಕಿ ಬೆಳಕಿಗೆ ಕಣ್ಣು ದಣಿದಿದೆ
ಪಾಪೆಯೊಳಗಷ್ಟು ತಂಪು ಕತ್ತಲನಿಳಿಸು ಸಂಗಾತಿ

ಬರಬರನೆ ನಡೆನಡೆದು ಕಾಲು ಸೋತಿದೆ
ಮಾಂಸಮಜ್ಜೆಗೆ ನಿಧಾನವನುಣಿಸು ಸಂಗಾತಿ

ನನ್ನ ನಾ ಕಾಣದ ಗೋಡೆಗಳೇ ಎದುರಿವೆ
ನಿನ್ನೆದೆ ಕನ್ನಡಿಯಲೊಮ್ಮೆ ಕಾಣಿಸು ಸಂಗಾತಿ

ಚೌಕಟ್ಟುಗಳಬ್ಬರಕೆ ಕುಸಿದಿದೆ ಪಿಸು ಮಾತು
ಜೀವಕೇಂದ್ರದ ಮೌನ ಕವಿತೆಯಾಗಿಸು ಸಂಗಾತಿ

ಮುಟ್ಟದವರ ಚಿತ್ರಗಳಲಿ ಬಣ್ಣವೇ ಇಲ್ಲ
ಸ್ಪರ್ಶ ಮಾತ್ರದಿ ಬಣ್ಣ ತುಂಬು ಸಂಗಾತಿ

ಕೆಂಬೂತದ ಕೊಕ್ಕಿನಲಿ ಹಸಿವೆ ಅರಳುವ ಹೊತ್ತು
ಇಣಚಿಯ ಕಿಚಕಿಚಕೆ ಇರುವೆಯಂಜದೆ ಹರಿವ ಹೊತ್ತು
ಗೊರವಂಕದಂಗಳದಲಿ ಕಾಮಿ ಸುಳಿದಾಡಿದ ಹೊತ್ತು
ಹೂದಂಟ ಮೇಲಣ ಹಕ್ಕಿ ಮಧು ಹೀರುವ ಹೊತ್ತು
ಮಂಜುಮಣಿ ಎಲೆಮೇಲೆ ಮುತ್ತಾಗುವ ಹೊತ್ತು..

ಶಬ್ದಸಮುದ್ರದಲಿ ಹುಸಿಹೋದದ್ದು ನಿಶ್ಶಬ್ದದಲಿ ಕೈಗೆಟುಕುತ್ತಿದೆ
ಜೀವಜೋಕಾಲಿಯಲಿ ಜೀಕುವ ಬಾ ಸಂಗಾತಿ

(line drawing: Krishna Giliyar)

8 comments:

  1. good attempt. congrats. But the two line pattern in the middle is obstructing the flow.

    ReplyDelete
  2. ಈ ಜೀಕುವ ಜೋಕಾಲಿಯಲ್ಲಿ ಮನುಷ್ಯ ಸಂಬಂಧಗಳು ಹತ್ತಿರವಿದ್ದು ದೂರವಾಗುತ್ತಿವೆ ಎನ್ನುವಾಗ ಮೌನದಲ್ಲೂ ಮತ್ತೆ ಸಂಬಂಧಗಳು ಬೆಸೆಯುತ್ತವೆ, ಮೌನಕ್ಕೂ ಭಾಷೆ ಇದೆ, ಜೀವ ಕಳೆ ಇದೆ ಎಂಬುದನ್ನು ಆ ಹಕ್ಕಿಗಳ ಮೂಲಕ ಭರವಸೆಯನ್ನ ಮೂಡಿಸುವ ಕವಿತೆ ಅನಿಸಿತು ಮ್ಯಾಮ್. ಆ ಮೌನ ಅರ್ಥವಾಗುವುದು ನಮ್ಮನರಿತ ಮಿಡಿವ ಮನಕ್ಕೆ ಮಾತ್ರ. ನಾನು ನಿಮ್ಮ ಕವಿತೆಯನ್ನ ವಿಮರ್ಶೆ ಮಾಡುವಷ್ಟು ಬುದ್ಧಿವಂತಳು ಅಲ್ಲ. ಆದರೆ ನನಗನಿಸಿದ್ದನ್ನು ಹೇಳಿದ್ದೀನಿ. ಮಂಜುಳಾ

    ReplyDelete
  3. This comment has been removed by the author.

    ReplyDelete
  4. ಚೆನ್ನಾಗಿದೆ :-)

    ReplyDelete
  5. muttadavra chitrakke bannavilla, sparsha matradi banna kattu- samakalina

    ReplyDelete