Sunday 14 April 2019

ದಲಿತ ಮಹಿಳಾ ಅರಿವು: ಮಹಿಳಾ ಚಳುವಳಿಯ ದಾರಿದೀಪ




ಜಾತಿ-ವರ್ಗ-ಲಿಂಗ ಮೂರೂ ನೆಲೆಗಳಿಂದ ಹತ್ತಿಕ್ಕಲ್ಪಟ್ಟವರು.. ಪ್ರಕೃತಿಗೆ ಹತ್ತಿರವಾಗಿದ್ದು ಬದುಕಿ ಮನುಷ್ಯ-ಪ್ರಕೃತಿ ನಡುವಣ ಸಮತೋಲನ ಕಾಯ್ದವರು.. ಶ್ರಮಕ್ಕೆ ತೆತ್ತುಕೊಂಡವರು.. ಎಲ್ಲ ಸೇವಾವಲಯಗಳನ್ನು ಪ್ರಧಾನವಾಗಿ ಆವರಿಸಿ ಪ್ರತಿ ಕುಟುಂಬ, ಸಮಾಜದ ಅಡಿಪಾಯವಾಗಿರುವವರು.. ಮನುಷ್ಯ-ಪ್ರಾಣಿಪಕ್ಷಿಗಳೆಲ್ಲವನ್ನು ಅಸೀಮ ಕ್ಷಮೆ ಮತ್ತು ತಾಯ್ತನದಿಂದ ಪೊರೆದ ಋಣಮುಕ್ತರು.. ದಾಸಿಯರ ದಾಸಿಯಂತೆ ಸಮಾಜ ತಮ್ಮನ್ನು ನಡೆಸಿಕೊಂಡರೂ ಅಖಂಡ ಜೀವನೋತ್ಸಾಹ ಮತ್ತು ಧೈರ್ಯವನ್ನು ಮೈಗೂಡಿಸಿಕೊಂಡವರು.. ಎಲ್ಲ ಮಾನವ ಸಹಜ ದೌರ್ಬಲ್ಯ-ದಮನಗಳನ್ನು ನೇರಾನೇರ ಇದಿರುಗೊಂಡವರು.. ಆ ಕಾರಣವಾಗಿಯೇ ಉಳಿದೆಲ್ಲ ಹೆಣ್ಮನಗಳಿಗಿಂತ ವಸ್ತುನಿಷ್ಠವಾಗಿ, ವಿಮರ್ಶಾತ್ಮಕವಾಗಿ ಯೋಚಿಸಬಲ್ಲವರು..

ಇವರು ಭಾರತದ ದಲಿತ ಮಹಿಳೆಯರು. ಇವತ್ತಿಗೂ ಭಾರತೀಯ ಸಮಾಜದ ಸಾಕ್ಷಿಪ್ರಜ್ಞೆಗಳಂತೆ, ನೈತಿಕ ಅಳತೆಗೋಲಿನಂತೆ ಪರಿಗಣಿಸಬಹುದಾದ ಗುಂಪು ದಲಿತ ಮಹಿಳೆಯರದು. ಭಾರತದ ದಲಿತೇತರ ಹೆಣ್ಣುಮಕ್ಕಳು ಏಕಕಾಲಕ್ಕೆ ದಮನಿತಳು-ದಮನಿಸುವವಳು; ಅವಕಾಶ ಪಡೆದವಳು-ಅವಕಾಶ ವಂಚಿತಳು ಆಗಿದ್ದರೆ; ದಲಿತ ಮಹಿಳೆಯರು ಎಲ್ಲ ನೆಲೆಗಳಿಂದ ವಂಚಿತರೇ ಆಗಿದ್ದಾರೆ.

ಮಹಿಳಾ ಪ್ರಜ್ಞೆ ಎಲ್ಲ ಮಹಿಳೆಯರ ಸಮಾನತೆ-ಸ್ವಾತಂತ್ರ್ಯ-ಸ್ವಾಯತ್ತತೆಯನ್ನು ಪ್ರತಿಪಾದಿಸುತ್ತದೆ. ಎಲ್ಲ ವರ್ಗ-ಜಾತಿ-ಹಿನ್ನೆಲೆ-ಉದ್ಯೋಗದ ಮಹಿಳೆಯರ ಕುರಿತೂ ಮಾತನಾಡುತ್ತದೆ. ಅದುವೇ ಸಬಲೀಕರಣ. ಯಾವುದಾದರೂ ಒಂದು ಗುಂಪು, ವರ್ಗ, ಜಾತಿ, ಉದ್ಯೋಗದ ಮಹಿಳೆಯರಷ್ಟೇ ಸಬಲಗೊಳ್ಳಲು ಸಾಧ್ಯವಿಲ್ಲ. ಮಹಿಳಾ ಸಬಲೀಕರಣ ಒಟ್ಟೊಟ್ಟಿಗೇ ಆಗಬೇಕಾದ ಪ್ರಕ್ರಿಯೆ. ಎಂದರೆ ಪ್ರತಿಯೊಬ್ಬರ ಹಕ್ಕಿಗಾಗಿ ಎಲ್ಲರೂ ಹೋರಾಡಬೇಕು. ಈ ಸಾಮೂಹಿಕ ಪ್ರಜ್ಞೆ ಮಹಿಳಾ ಚಳುವಳಿಗೆ ಅತಿ ಅವಶ್ಯವಾಗಿದೆ. ಸಮಾಜದ ತಳಸ್ತರದ ಮಹಿಳೆಯರ ಪ್ರಜ್ಞೆ ಪ್ರಧಾನವಾಗಿ ಸಮೂಹ ಪ್ರಜ್ಞೆಯೇ ಆಗಿರುವುದರಿಂದ ಅವರ ತಿಳುವಳಿಕೆ ಮಹಿಳಾ ಚಳುವಳಿಯ ತಳಪಾಯವಾಗಬೇಕಿದೆ. ಭಾರತದ ಮಹಿಳಾ ಚಳುವಳಿ ಅಂಬೇಡ್ಕರರ ವಿಚಾರಧಾರೆಯಿಂದ ತನ್ನರಿವನ್ನು ವಿಸ್ತರಿಸಿಕೊಂಡಿದ್ದರೆ, ದಲಿತ ಮಹಿಳೆಯರ ಅರಿವು ಭಾರತದ ಮಹಿಳಾ ಚಳುವಳಿಯ ಮಾರ್ಗದರ್ಶಿ ಪ್ರಜ್ಞೆ ಆಗಬೇಕಾದ ಅನಿವಾರ್ಯತೆಯಿದೆ.

ಇಷ್ಟು ಹಿನ್ನೆಲೆಯೊಂದಿಗೆ, ೫೦-೬೦ರ ದಶಕದಲ್ಲಿ ದಲಿತ ಚಳುವಳಿಯ ಮಹಿಳಾ ಪ್ರಜ್ಞೆ ಎನಿಸಿಕೊಂಡ ಬೇಬಿತಾಯಿ ಕಾಂಬ್ಳೆ (೧೯೨೯-೨೦೧೨) ಅವರ ಬದುಕು, ವಿಚಾರಗಳ ಬಗೆಗೊಮ್ಮೆ ಅವಲೋಕಿಸುವುದು ಮತ್ತೊಂದು ಅಂಬೇಡ್ಕರ್ ಜಯಂತಿ, ಮತ್ತೊಂದು ಲೋಕಸಭೆ ಚುನಾವಣೆ ಹತ್ತಿರವಾಗಿರುವ ಈ ಕಾಲದಲ್ಲಿ ಸೂಕ್ತವಾಗಿದೆ. ಮರಾಠಿ ಸಾಹಿತ್ಯ ಮತ್ತು ಚಳುವಳಿಯ ವಲಯಗಳಲ್ಲಿ ಬಹು ಪರಿಚಿತ ಮತ್ತು ಗೌರವಾನ್ವಿತ ವ್ಯಕ್ತಿಯಾದ ಬೇಬಿತಾಯಿ ಕಾಂಬ್ಳೆ ಜಾತಿ ತಾರತಮ್ಯದಂತೆಯೇ ಲಿಂಗ ತಾರತಮ್ಯವನ್ನು ಪ್ರಶ್ನಿಸಿದವರು. ದೇಶದ ಬಹುತೇಕ ಚಳುವಳಿ, ರಾಜಕಾರಣಗಳು ಮಹಿಳಾ ನಾಯಕತ್ವದ ವಿಷಯದಲ್ಲಿ ಹಿಂದಿರುವಾಗ ಬೇಬಿತಾಯಿಯವರಂತಹ ಪ್ರಾಮಾಣಿಕ ದಿಟ್ಟ ಬೌದ್ಧ ಮಹಿಳೆಯರು ದಲಿತ ಮತ್ತು ಮಹಿಳಾ ಚಳುವಳಿಯ ದಿಕ್ಕುದೆಸೆಗಳನ್ನು ರೂಪಿಸುವುದು ಅವಶ್ಯವಾಗಿದೆ.

ಬೇಬಿತಾಯಿ ಕಾಂಬ್ಳೆ (೧೯೨೯-೨೦೧೨)


ಬೇಬಿತಾಯಿ ಕಾಂಬ್ಳೆಯವರ ತಂದೆ ಫಂಡರಿನಾಥ ಕಾಕಡೆ ಮುಂಬಯಿಯ ಮುಂಬಾದೇವಿ ದೇವಾಲಯ ಮತ್ತು ಪುಣೆಯ ಹಾಲಿನ ಡೈರಿಗೆ ಕೂಲಿಗಳನ್ನು ಒದಗಿಸುವ ಸೇರೆಗಾರರಾಗಿದ್ದರು. ಅವರ ತವರಿನ ಅಜ್ಜಂದಿರು, ಮಾವಂದಿರು ಬ್ರಿಟಿಷರ ಬಳಿ ಬಟ್ಲರುಗಳಾಗಿದ್ದರು. ತನ್ನ ಮನೆಯ ಹಿರಿಯರಿಂದಲೇ ಅಂಬೇಡ್ಕರರ ವಿಚಾರಗಳ ಬಗೆಗೆ ತಿಳಿದಿದ್ದ ಬೇಬಿ, ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದರು.

ಬೇಬಿಗಿಂತ ಮುನ್ನ ಅವರ ತಾಯಿಗೆ ಮೂರು ಹೆಂಗೂಸುಗಳು ಹುಟ್ಟಿ ತೀರಿಕೊಂಡಿದ್ದವು. ಎಳೆಗೂಸು ಬೇಬಿ ಸಹ ಹುಟ್ಟಿದ ಕೂಡಲೇ ಅಳದೆ ನಿಶ್ಚೇಷ್ಟಿತವಾಗುಳಿಯಿತೆಂದು ‘ಶವ’ ಹೂಳುವ ತಯಾರಿ ನಡೆದಿತ್ತು. ಆದರೆ ಅವರ ಅವ್ವ ಬೆಳಗಾಗುವ ತನಕ ಯಾರೂ ಕೂಸನ್ನು ಮುಟ್ಟಲು ಬಿಡಲಿಲ್ಲ, ತೊಡೆ ಮೇಲಿಂದ ತೆಗೆಯಲೂ ಇಲ್ಲ. ಏನಾಶ್ಚರ್ಯ, ಅವ್ವನ ಬೆಚ್ಚನೆ ಮಡಿಲಿನಲ್ಲಿ ರಾತ್ರಿಯಿಡೀ ಇದ್ದ ಮಗು ಬೆಳಗಾಗುವ ಹೊತ್ತಿಗೆ ಮೆಲ್ಲನೆ ಉಸಿರಾಡತೊಡಗಿ ಅಳುವ ಸದ್ದು ಕೇಳಿತು. (ಹೀಗೆ ಎಷ್ಟು ಹೆಣ್ಣುಶಿಶುಗಳು ಜೀವಂತ ಗುಂಡಿಯೊಳಗೆ ಹೋಗಿವೆಯೋ ಎಂದು ನಂತರ ಬೇಬಿತಾಯಿ ನೆನೆಸಿಕೊಂಡಿದ್ದಾರೆ.)

ಸಾಕಷ್ಟು ಅನುಕೂಲಸ್ಥರಾಗಿದ್ದ ವೀರಗಾಂವಿನ ಅಜ್ಜನ ಮನೆಯಲ್ಲಿ ಬಾಲ್ಯ ಕಳೆದ ಬೇಬಿ ಒಂಭತ್ತನೇ ವರ್ಷದಲ್ಲಿ ತನ್ನೂರಿಗೆ ಬಂದು ಬ್ರಿಟಿಷರು ನಡೆಸುತ್ತಿದ್ದ ಬಾಲಕಿಯರ ಶಾಲೆಗೆ ಹೋಗಲು ಶುರು ಮಾಡಿದರು. ಅದು ಅಂಬೇಡ್ಕರರ ಹೋರಾಟ ಮತ್ತು ಚಳುವಳಿ ದೇಶಾದ್ಯಂತ ಬಲಗೊಂಡಿದ್ದ ಕಾಲ. ಅವರದು ಬ್ರಾಹ್ಮಣರೇ ಹೆಚ್ಚು ಸಂಖ್ಯೆಯಲ್ಲಿದ್ದ ಶಾಲೆಯಾಗಿತ್ತು. ದಲಿತ ವಿದ್ಯಾರ್ಥಿಗಳನ್ನು ಕರಿಹಲಗೆ ಮತ್ತು ಮಾಸ್ತರು ಎರಡೂ ಕಾಣದ ದೂರದ ಮೂಲೆಯಲ್ಲಿ ಕೂರಿಸಲಾಗುತ್ತಿತ್ತು. ಶಾಲೆಗೆ ಹೋಗಿಯೂ ಹೋಗದಂತಹ ಅನುಭವ. ಹೀಗೆ ಅಸ್ಪೃಶ್ಯತೆಯ ಎಲ್ಲ ಸಂಕಟಗಳನ್ನೂ ಅನುಭವಿಸುತ್ತ ಬೇಬಿತಾಯಿ ಸೂಕ್ಷ್ಮವಾಗಿ ಎಲ್ಲವನ್ನೂ ಗ್ರಹಿಸಿ ನೆನಪಿನ ಕೋಶಗಳಲ್ಲಿ ಭದ್ರವಾಗಿಟ್ಟುಕೊಂಡರು. ೧೯೩೦ರಲ್ಲಿ ವೀರಗಾಂವಿಗೆ ಬಂದು ಮಾತನಾಡಿದ ಅಂಬೇಡ್ಕರರ ವ್ಯಕ್ತಿತ್ವ ಅವರ ಮೇಲೆ ಗಾಢ ಪ್ರಭಾವ ಬೀರಿತು.

ನಾಲ್ಕನೇ ತರಗತಿ ಪಾಸಾದ ೧೩ ವರ್ಷದ ಬೇಬಿಗೆ ಕೋಂಡಿಬಾ ಕಾಂಬ್ಳೆ ಎಂಬ ವರನ ಜೊತೆ ಮದುವೆಯಾಯಿತು. ಬೇಬಿ ಮತ್ತವರ ಪತಿ ವ್ಯಾಪಾರ ಶುರುಮಾಡಿದರು. ಅಂಗಡಿಯಲ್ಲಿ ಕೂತ ಬೇಬಿತಾಯಿ ಸಾಮಾನು ಕಟ್ಟಲು ತರುತ್ತಿದ್ದ ಹಳೆಯ ಪತ್ರಿಕೆಗಳನ್ನು, ಪುಸ್ತಕಗಳನ್ನು ಓದತೊಡಗಿದರು. ಗ್ರಂಥಾಲಯದ ಸದಸ್ಯೆಯಾಗಿ ಅಲ್ಲಿನ ಪುಸ್ತಕಗಳನ್ನೂ ತಂದು ಓದತೊಡಗಿದರು. ತನ್ನ ಬದುಕಿನ ಅನುಭವಗಳನ್ನು ಬರೆದಿಡತೊಡಗಿದರು. ತನ್ನ ಕುರಿತಾಗಿ ಮಾತ್ರ ಬರೆಯದೇ, ಜಾತಿ ಮತ್ತು ಗಂಡುದರ್ಪದಿಂದ ಬವಣೆ ಅನುಭವಿಸುವ ಎಲ್ಲ ದಲಿತ ಮಹಿಳೆಯರ ಬಗೆಗೆ ಬರೆದರು. ಆದರೆ ೨೦ ವರ್ಷ ಕಾಲ ತನ್ನ ಗಂಡನಿಂದ ಮತ್ತು ಬಂಧುಗಳಿಂದ ಬರೆದಿದ್ದನ್ನು ಮುಚ್ಚಿಟ್ಟರು. ನಂತರ ಅದು ಆತ್ಮಕತೆಯಾಗಿ ‘ಜೀನಾ ಅಮುಚ್ಯಾ’ ಹೆಸರಿನಲ್ಲಿ ಪ್ರಕಟವಾಯಿತು. ಅದು ಬರೀ ಅವರೊಬ್ಬರ ಬದುಕಿನ ಕತೆಯಲ್ಲ. ಅವರಂತಹ ಹಲವು ಬದುಕುಗಳ ಜೀವನಗಾಥೆ. ಮದುವೆ, ಬಾಲ್ಯವಿವಾಹ, ಹೆಣ್ಣಿನ ದಮನ, ಮೂಢನಂಬಿಕೆಗಳನ್ನು ಹೆಣ್ಣುಕಣ್ಣೋಟದಿಂದ ಅದರಲ್ಲಿ ಕಾಣಿಸಿದ್ದಾರೆ. ಅದು ಹಲವು ಭಾಷೆಗಳಿಗೆ ಅನುವಾದಗೊಂಡಿದೆ.

ಮಹಾರಾಷ್ಟ್ರದ ದಲಿತ ಚಳುವಳಿಯ ಭಾಗವಾಗಿದ್ದ ಬೇಬಿತಾಯಿ ಫಲ್ಟಣದಲ್ಲಿ ಮಹಿಳಾ ಮಂಡಲ ಶುರು ಮಾಡಿದರು. ನಿಂಬೂರೆಯಲ್ಲಿ ಹಿಂದುಳಿದ ವರ್ಗದ ಬಾಲಕಿಯರಿಗಾಗಿ ವಸತಿ ಶಾಲೆ ಶುರು ಮಾಡಿದರು. ಕವಿತೆ ಮತ್ತು ಬರಹಗಳನ್ನೂ ಬರೆದರು.

‘ಜೀನಾ ಅಮುಚ್ಯಾ’ವನ್ನು ‘ದ ಪ್ರಿಸನ್ಸ್ ವಿ ಬ್ರೋಕ್’ ಎಂದು ಇಂಗ್ಲಿಷ್‌ಗೆ ಅನುವಾದಿಸಿದ ಮಾಯಾ ಪಂಡಿತ್ ನಡೆಸಿದ ಸಂದರ್ಶನದ ಸಂಗ್ರಹಾನುವಾದ ಇಲ್ಲಿದೆ. ಅಭಿವ್ಯಕ್ತಿಯಲ್ಲಿ ಮುಚ್ಚುಮರೆಯಿಲ್ಲದ ಪ್ರಾಮಾಣಿಕತೆ, ಗಾಢ ಸಾಮೂಹಿಕ ಪ್ರಜ್ಞೆ, ಸೂಕ್ಷ್ಮ ಸ್ತ್ರೀ ಸಂವೇದನೆ, ಬೌದ್ಧ ಸಂಯಮ ಮೊದಲಾದ ಗುಣಗಳನ್ನು ಸಂದರ್ಶನದುದ್ದಕ್ಕೂ ಗಮನಿಸಬಹುದಾಗಿದೆ.

‘ಕೆಲಸ ಮಾಡೋರೇ ಹೆಂಗಸರು..’



ನಿಮ್ಮ ಆತ್ಮಚರಿತ್ರೆಯಲ್ಲಿ ವೈಯಕ್ತಿಕ ಬದುಕಿನ ವಿವರಗಳು ಸ್ವಲ್ಪ ಕಡಿಮೆ ಇವೆ. ನಿಮ್ಮ ಬಗೆಗೆ ಇನ್ನೂ ಸ್ವಲ್ಪ ಹೇಳುತ್ತೀರಾ?

ಹೌದು, ನಾನು ನನ್ನ ಬಗ್ಗೆ ಬರೆಯಕ್ಕಿಂತ ಸಮುದಾಯದ ಅನುಭವಗಳ್ನ ಜಾಸ್ತಿ ಬರೆದೆ. ಅವ್ರು ಅನುಭವಿಸಿದ್ದೆಲ್ಲ ನನ್ನ ಅನುಭವನೂ ಆಗಿತ್ತು. ನನ್ನ ಜನರ ಕಷ್ಟನಷ್ಟ ನಂದೂ ಆಗಿತ್ತು. ಹಾಗಾಗಿ ನಂಗೆ ಸಮುದಾಯದ ಹೊರ‍್ಗೆ ನಿಂತು ನನ್ನ ಬಗ್ಗೆ ಮಾತ್ರ ಯೋಚನೆ ಮಾಡೋದು ಭಾಳ ಕಷ್ಟ. ಸುತ್ತಮುತ್ತ ಭಾಳ ಮಹಿಳೇರಿದ್ರು. ಅವರು ತಮ್ಮ ಬಾಬಾಸಾಹೇಬ(ಅಂಬೇಡ್ಕರ್)ರ ಮಾತಿನಂಗೆ ತಮ್ಮ ಮಕ್ಳನ್ನ ಶಾಲೆಗೆ ಕಳಿಸಬೇಕೂಂತ ನಿರ್ಧಾರ ಮಾಡಿದ್ರು. ಅವರು ಸಾಧಾರ‍್ಣ ಕೃಷಿ ಕೂಲಿಗಳು. ಅವರಿಗೆ ಇಂಗ್ಲಿಷ್ ಶಾಲೆಗೆ ಕಳಿಸಕ್ಕೆ ದುಡ್ಡೆಲ್ಲಿಂದ ಬರಬೇಕು? ಆ ಕಾಲ್ದಲ್ಲಿ ಹಿಂದುಳಿದ ವರ್ಗದೋರಿಗೆ ಯಾವ ರಿಯಾಯ್ತಿನೂ ಇರ್ಲಿಲ್ಲ. ಶಾಲೆಗಳು ಸರ್ಕಾರದಿಂದ ಯಾವ್ದೇ ಅನುದಾನ ಪಡೀತಿರಲಿಲ್ಲ.

ಒಬ್ಬಾಕೆ ತನ್ನಿಬ್ಬರು ಮಗಂದಿರನ್ನು ಸೆಕೆಂಡರಿ ಸ್ಕೂಲಿಗೆ ಸೇರ‍್ಸಕ್ಕೆ ೯೦ ರೂಪಾಯಿ ಕಟ್ಬೇಕಿತ್ತು. ಅಷ್ಟು ದುಡ್ಡು ಎಲ್ಲಿಂದ ತರ‍್ತಾಳೆ? ಅದು ಮಳೆಗಾಲ ಬೇರೆ. ಹೊಲ್ದಲ್ಲಿ ಕೆಲಸನೂ ಇಲ್ಲ, ಕೂಲಿನೂ ಇರಲ್ಲ. ದುಡ್ಡೂ ಇಲ್ಲ. ಗಂಡ ಕಟ್ಟಡ ಕಟ್ಟೋ ಕೆಲಸಗಾರ. ಅವುನ್ನ ದುಡ್ಡು ಕೇಳಿದ್ರೆ ಶಾಲೆ ಬಿಡಿಸಿ ಕೆಲಸಕ್ಕೆ ಕರ‍್ಕಂಡುಹೋಗ್ತಿದ್ದ. ಅವಳ ನೆಂಟರಿಷ್ಟರೂ ಬಡವ್ರೇ. ಎಲ್ಲಿಂದ ದುಡ್ಡು ತರದು? ಕೂಡ್ಲೇ ಅವಳಿಗೆ ಮಳೆಗಾಲದ ಊಟಕ್ಕೆ ಬಿದಿರು ಬುಟ್ಟೀಲಿ ತುಂಬಿಟ್ಟ ಜೋಳ ನೆನಪಾಯ್ತು. ಗಂಡ ಆಚೆ ಹೋದ್ದೇ ಮಗಂದಿರ ಸಹಾಯದಿಂದ ಕುಕ್ಕೆಗಟ್ಲೆ ಜೋಳನ ಅಂಗಡಿಗೆ ಒಯ್ದು ಮಾರಿದ್ಲು. ಫೀಸು ಕಟ್ಟುವಷ್ಟು ದುಡ್ಡು ಬಂದೇಬಿಡ್ತು! ಆದ್ರೆ ಗಂಡಂಗೆ ವಿಷ್ಯ ತಿಳ್ದಿದ್ದೇ ಚೆನ್ನಾಗಿ ಹೊಡ್ದ. ಆ ಮಳೆಗಾಲ ಇಡೀ ಅರೆಹೊಟ್ಟೆ, ಉಪಾಸ. ಆದ್ರೆ ಬಾಬಾಸಾಹೇಬ್ರು ಹೇಳ್ದಂಗೆ ಅವ್ಳು ನಡೆದಿದ್ಲು. ಮಕ್ಕಳ ಶಿಕ್ಷಣಕ್ಕೆ ತೊಂದ್ರೆ ಆಗ್ಲಿಲ್ಲ. ಅವರು ಮೆಟ್ರಿಕ್ ಮುಗಿಸಿದರು, ಕಾಲೇಜಿಗೂ ಹೋದ್ರು.

ಅಂದರೆ ಈ ವಿಷಯದಲ್ಲಿ ಹೆಣ್ಣುಮಕ್ಕಳು ಗಂಡಸರಿಗಿಂತ ಭಿನ್ನವಾಗಿದ್ದರು ಅಲ್ಲವೆ? ಅವರು ಬಾಬಾರನ್ನು ಅಷ್ಟೊಂದು ನಂಬಿದ್ದು ಏಕೆ?

ಮೇಲ್ಜಾತಿಯವರ ಮನೆ ಮುಂದೆ ಕಟ್ಟಿಗೆ ಹೊರೆ ಹಾಕಿ ಅವರು ಅಷ್ಟು ದೂರ‍್ದಲ್ಲಿ ಆಳೆತ್ತರದ ಜಗಲಿ ಮೇಲೆ ನಿಂತು ಚೌಕಾಶಿ ಮಾಡ್ತಿದ್ರು. ನಂತರ ಅದರಲ್ಲೇನಾದ್ರೂ ‘ಅಸ್ಪೃಶ್ಯ’ ಹೆಂಗಸರ ಕೂದಲು ಉಳಿದಿದೆಯಾ ನೋಡೀಂತ ತಾಕೀತು ಮಾಡಿ ಪೈಸೆ ಬಿಸಾಡೋರು. ಹಿಂಗಿರುವಾಗ ದಲಿತ ಹೆಣ್ಮಕ್ಕಳು ಉಳಿದ ಮಹಿಳೇರನ್ನ ಹೇಗೆ ನೆಚ್ಕಳಕ್ಕೆ ಆಗುತ್ತೆ? ಅವ್ರು ನಂಬೋದಾದ್ರೆ ಬಾಬಾಸಾಹೇಬ್ರ ಮಾತನ್ನೇ ನಂಬಬೇಕಿತ್ತು. ಗಂಡಸರನ್ನು ಕೇಳಿದ್ದರೆ, ‘ಹುಡುಗ್ರುನ್ನ ಯಾಕ್ ಶಾಲೆಗ್ ಕಳಿಸ್ಬೇಕು? ಮಹಾ ಓದಿ ಮಾಸ್ತರೋ ಕಾರಕೂನ್ರೋ ಆಗಿ ಉದ್ಧರಿಸದು ಅಷ್ಟ್ರಲ್ಲೇ ಇದೆ. ನನ್ಜೊತೆ ಕೂಲಿ ಕೆಲ್ಸಕ್ಕಾದ್ರೂ ಬರ‍್ಲಿ. ಅವ್ರ ಅನ್ನ ಹುಟ್ಟೋವಷ್ಟಾದ್ರೂ ಕಾಸು ಬಂದೀತು. ಶಾಲೆಪಾಲೆ ಓದು ಅಂತ ಹುಚ್ಚು ಹಿಡ್ಸಿ ಅವುನ್ನ ನಾಶ ಮಾಡ್ತಿದಿರಿ’ ಅಂತಿದ್ರು. ಆದ್ರೆ ದಲಿತ ಮಹಿಳೆಯರು ಗಂಡಸರ ಮಾತಿಗೆ ಕಿವಿಗೊಡ್ತನೇ ಇರ್ಲಿಲ್ಲ. ಅಂಬೇಡ್ಕರ್ ಹೇಳಿದ್ರು, ‘ನೀವು ದೇವರನ್ನು ನಂಬಿದಿರಿ. ತಲೆಮಾರುಗಳನ್ನೇ ಅವನಿಗೆ ಕೊಟ್ಟಿರಿ. ಈಗ ನನಗೊಂದು ಅವಕಾಶ ಕೊಡಿ. ನನಗೆ ಈ ತಲೆಮಾರಿನ ಹುಡುಗ ಹುಡುಗಿಯರನ್ನ ಕೊಡಿ. ೨೦ ವರ್ಷ ಸ್ವಲ್ಪ ತ್ಯಾಗ ಮಾಡಿ. ಮಕ್ಕಳನ್ನು ಶಾಲೆಗೆ ಸೇರಿಸಿ. ಉಪವಾಸ ಬಿದ್ದರೂ ಪರವಾಗಿಲ್ಲ ಶಾಲೆಗೆ ಮಾತ್ರ ಕಳಿಸದೇ ಇರಬೇಡಿ. ೨೦ ವರ್ಷ ಕಳೆದಮೇಲೆ ನೀವೇ ಬಂದು ಹೇಳುತ್ತೀರಿ, ದೇವರು ಮತ್ತು ಶಿಕ್ಷಣ ಈ ಎರಡರಲ್ಲಿ ಯಾವುದು ಒಳ್ಳೆಯದು ಅಂತ’ ಅಂದಿದ್ರು. ಅವರು ಹೇಳಿದ ಈ ಮಾತು ದಲಿತ ಹೆಣ್ಣುಮಕ್ಕಳ ಎದೆಗೆ ನಾಟಿತ್ತು. ಈಗ ನೀವು ಮೇಲ್ಮಟ್ಟದಲ್ಲಿ ಕಾಣೋ ಎಲ್ಲ ದಲಿತ ಗಂಡಸ್ರನ್ನೂ ಅವರ ತಾಯಂದ್ರೇ ಹೀಗೆ ತಯಾರು ಮಾಡಿದ್ದು. ಆದರೆ ಅವ್ರ ಮಕ್ಕಳು ಈ ವಿಷಯದಲ್ಲಿ ಹಿಂದೆ. ಯಾಕಂದ್ರೆ ಅವರು ಶ್ರೀಮಂತ್ಕೇಲಿ ಮುಳುಗೋಗಿದಾರೆ.

ಆ ಕಾಲದ ದಲಿತ ಚಳುವಳಿಗೆ, ದಲಿತ ರಾಜಕಾರಣಕ್ಕೆ ಮಹಿಳೆಯರ ಕೊಡುಗೆ ಏನು? ಮಹಿಳೆಯರ ಭಾಗವಹಿಸುವಿಕೆ ಹೇಗಿತ್ತು? 

ದಲಿತ ಚಳುವಳೀಲಿ ಇದ್ದೋರಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರೇ ಆಗಿದ್ರು.

ಅದಕ್ಕೆ ಗಂಡಸರ ಪ್ರತಿಕ್ರಿಯೆ ಹೇಗಿತ್ತು?

ಆಗ ಚಾವಡಿಗೆ ಸಾರ್ವಜನಿಕ ಸಭೆಗೆ ಬರ‍್ತಿದ್ದ ಹೋರಾಟಗಾರ್ರಲ್ಲಿ ಹೆಚ್ಚಿನೋರು ಮುಂಬೈಯೋರೇ ಆಗಿದ್ರು. ಇಡೀ ಸಮುದಾಯ ಅವರು ಏನು ಹೇಳ್ತಾರೆ ಅಂತ ಕೇಳಕ್ಕೆ ನೆರೀತಿತ್ತು. ಆ ಹೋರಾಟಗಾರರು ಹೇಳೋರು, ‘ಇಲ್ಲಿ ನೋಡ್ರಿ, ಇಡೀ ಮನೇನ ನಿಭಾಯಿಸೋರು ಹೆಣ್ಣುಮಕ್ಕಳು. ಹೌದಾ? ಹಂಗಾಗಿ ಮೌಢ್ಯ, ದೇವರು ಮುಂತಾದವು ಹೆಚ್ಚಿಕೊಂಡಿರೋದ್ರಲ್ಲಿ ಅವರ ಪಾತ್ರ ದೊಡ್ಡದಿದೆ. ಅವರ ಮೈಮೇಲೇ ದೆವ್ವ ಭೂತ ಬರ‍್ತಾವೆ. ಮೂಢನಂಬಿಕೆಗಳು ಗಟ್ಟಿಯಾಗೋದರಲ್ಲಿ ಅವರ ಪಾಲು ದೊಡ್ಡದಿದೆ. ನಿಜ. ಆದ್ರೆ ನಿಜವಾಗಿ ಕೆಲಸ ಮಾಡೋರೇ ಹೆಂಗಸರು. ಅದಕ್ಕೇ ಕತ್ತಲನ್ನು ತರೋ ಹೆಂಗಸರೇ ಬೆಳಕನ್ನೂ ತರಬಲ್ಲರು. ಈ ಮನುಷ್ಯ ಅಂಬೇಡ್ಕರ್, ಏಳು ಸಮುದ್ರ ದಾಟಿ ಹೋಗಿ ಎಲ್ಲ ತಿಳ್ಕಂಡು ಬಂದಿದಾರೆ. ತುಂಬ ಓದಿದಾರೆ. ಹಾಗಾಗಿ ವಿಷಯಗಳನ್ನ ನಮಗೆಲ್ಲರಿಗಿಂತ ಚೆನ್ನಾಗಿ ಅರ್ಥ ಮಾಡ್ಕತಾರೆ. ಅವರು ಹೇಳದ್ರಲ್ಲಿ ಅರ್ಥ ಇದೆ’ ಅಂತ ಹೇಳ್ತಾ ಮಹಿಳೆಯರ ಭಾಗವಹಿಸುವಿಕೆ, ಶಿಕ್ಷಣದ ಬಗ್ಗೆ ಬಾಬಾಸಾಹೇಬ್ರು ಏನು ಹೇಳಿದ್ರೋ ಅದನ್ನ ತಿಳಿಸ್ತಿದ್ರು. ಅವರ ಮಾತ್ನ ಉಳಿದ ಗಂಡಸರು ಒಪ್ಕಳೋರು. ನಿಧಾನ ಹೆಣ್ಣುಮಕ್ಕಳೂ ಸಭೆಗ್ ಬರಕ್ಕೆ ಶುರು ಮಾಡಿದ್ರು. ದೂರದೂರದ ಊರಲ್ಲಿರ‍್ತಿದ್ದ ಸಭೆಗೆ ನಾಕೈದ್ ದಿನಕ್ಕಾಗೋವಷ್ಟು ಭಕ್ರಿ ಮಾಡಿ ಹೊತ್ಕಂಡು ಬರೋರು.

ಹಾಗೆ ಬಂದಾಗ ಅವರ ಮನೇನ ಯಾರು ನೋಡಿಕೊಳ್ತಾ ಇದ್ದರು?

ವಯಸ್ಸಾದ ಹೆಂಗಸರು. ಅವರ ಅತ್ತೇರು, ಅವ್ವಂದ್ರು ಶಿಕ್ಷಣ ಮುಖ್ಯ ಅನ್ನೋದನ್ನ ಬಲು ಗಂಭೀರವಾಗಿ ಹಚ್ಚಿಕೊಂಡಿದ್ದರು. ಅವರೂ ಕಾರ್ಯಕ್ರಮಗಳಲ್ಲಿ ಭಾಗವಹಿಸೋರು. ಹೀಗಾಗಿ ಹೆಚ್ಚೆಚ್ಚು ಹೆಣ್ಮಕ್ಕಳು ತಮ್ಮ ಮಕ್ಕಳು, ಮನೇನ ಬಿಟ್ಟುಬಂದು ಮೋರ್ಚಾ, ದೇವಾಲಯ ಪ್ರವೇಶ, ಹೋಟೆಲ್ ಮತ್ತಿತರ ಸಾರ್ವಜನಿಕ ಸ್ಥಳಗಳ ಪ್ರವೇಶ ಹೋರಾಟದಲ್ಲಿ ಸೇರಿಕೊಳ್ತಿದ್ದರು. ತಮ್ಮ ಗಂಡಸರಿಂದ ಅದಕ್ಕೆ ಪ್ರೋತ್ಸಾಹನೂ ಪಡಕೊಂಡ್ರು. ಅವರವರ ಕುಟುಂಬದ ಹಿರಿಕಿರಿಯರೆಲ್ಲ ಬೆಂಬಲಕ್ಕೆ ನಿಂತ್ರು. ಬಾಬಾ ಒಂದು ಟೆಲಿಗ್ರಾಂ ಕಳಿಸಿ ಹಿಂಗೆ ಮಾಡಿ ಅಂದ್ರೆ ಮುಗೀತು. ತಕ್ಷಣ ಸಿದ್ಧತೆ ಶುರುವಾಗ್ತಿತ್ತು. ನನ್ನ ಅಣ್ಣ ಹಾಸ್ಟೆಲಲಿದ್ದ. ಅವನು ಒಂಭತ್ತನೇ ಕ್ಲಾಸಲ್ಲಿ, ನಾನು ನಾಕನೇ ಕ್ಲಾಸಲ್ಲಿದ್ದೆ ಅಂತ ಕಾಣುತ್ತೆ. ನನ್ನ ಅಣ್ಣತಮ್ಮಂದಿರ ಕಾರಣದಿಂದ ಅಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸೋ ಅವಕಾಶ ನಂಗೆ ಸಿಕ್ತು.

ನಿಮ್ಮ ಅನುಭವ ಹೇಗಿತ್ತು?

ಅವೆಲ್ಲ ಮಹಾನ್ ಹೋರಾಟಗಳು. ಮೇಲ್ಜಾತಿಯೋರ ಜೊತೆ ಯಾವಾಗ್ಲೂ ಸಂಘರ್ಷ. ಅವ್ರು, ‘ಈ ಮಹಾರರು ಹೆಚ್ಕಂತಾ ಇದಾರೆ. ಅವ್ರನ್ನ ಊರೊಳಕ್ಕೆ ಬಿಟ್ಕಳಲ್ಲ ನಾವು’ ಅಂತಿದ್ರು. ಎಲ್ಲ ಕಡೆ ನಿಷೇಧ. ಹಿಟ್ಟಿನ ಗಿರಣಿಗೂ ಹೋಗೋ ಹಂಗಿಲ್ಲ. ಬದುಕೇ ಕಷ್ಟ ಅನ್ನೋ ಹಂಗಿತ್ತು. ನಮ್ಮನೇಲಿ ಪರಿಸ್ಥಿತಿ ಸ್ವಲ್ಪ ಬೇರೆಯಾಗಿತ್ತು. ನಮ್ಮಪ್ಪ ಅದೆಂಗೋ ಎಲ್ಲ ನಿಭಾಯಿಸ್ತಿದ್ದ. ನಮ್ಮವ್ವನ್ನ ಮನೆ ಹೊರ‍್ಗೆ ಹೋಗಕ್ಕೇ ಬಿಡ್ತಿರಲಿಲ್ಲ. ಅಪ್ಪ ಮತ್ತು ನಮ್ಮಣ್ಣ ಇಬ್ರು ಹೋರಾಟಗಾರರಾಗಿದ್ರು, ಮನೆಗೆ ಬೇಕಾದ ಸಾಮಾನ್ನೆಲ್ಲ ಅವ್ರೇ ತಂದು ಹಾಕೋರು.

ಶಾಲೆ ಬಗ್ಗೆ ಹೇಳಿ.

ನಮ್ಮ ನಾಯಕರೆಲ್ಲ ನಮ್ಜೊತೆ ಶಾಲೆಗೂ ಬರೋರು. ಬಾಬಾ ಸಾಹೇಬ್ರು ಹೇಳಿದ್ರಲ, ಶಿಕ್ಷಣ ನಿಮ್ಮ ಹಕ್ಕು, ನೀವು ಶಾಲೆಗೆ ಹೋಗ್ಲೇಬೇಕೂಂತ, ಅದು ನಂ ಮನ್ಸಲ್ಲಿ ಅಚ್ಚೊತ್ತಿತ್ತು. ಆದ್ರೆ ಶಾಲೆಗ್ ಹೋದ್ಮೇಲೆ ನಮ್ಮುನ್ನ ಬೇರೆದೇ ತರ ನಡುಸ್ಕಳೋರು. ಒಂದು ಬದೀಲಿ ಅಥ್ವಾ ಮೂಲೇಲಿ ಕೂರಿಸೋರು. ನಾನು ಹೋಗ್ತಿದ್ದ ಶಾಲೆ ಬ್ರಾಹ್ಮಣರ ಶಾಲೆ. ಅಂದ್ರೆ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಮಾಸ್ತರು ಬ್ರಾಹ್ಮಣರೇ ಆಗಿದ್ರು. ಅವ್ರುನ್ನ ಮುಟ್ಟಿ ನಾವೆಲ್ಲಿ ಮೈಲಿಗೆ ಮಾಡಿಬಿಡ್ತೀವೋ ಅನ್ನೋದರ ಬಗ್ಗೆ ಅವರು ಸಿಕ್ಕಾಪಟ್ಟೆ  ತಲೆಬಿಸಿ ಮಾಡ್ಕತಿದ್ರು. ಅವರ ಶತ್ರುಗಳೇನೋ ಅನ್ನೋ ಹಾಗೆ ತೊಂದರೆ ಕೊಡೋರು. ಕುಷ್ಠರೋಗಿಗಳ ತರ ನಡುಸ್ಕಳೋರು. ನಮ್ಮಕಡೆ ನೋಡ್ತನೇ ಇರಲಿಲ್ಲ. ನನ್ನ ಸಹಪಾಠಿಗಳೆಲ್ಲ ಮೇಲ್ಜಾತಿ ಹೆಣ್ಣುಮಕ್ಕಳು. ಅವರಿಗೆ ಎಲ್ಲಿ ಮೈಲಿಗೆ ಆಗುತ್ತೋ ಅನ್ನೋದೊಂದೇ ಚಿಂತೆ. ನಾವೆಂತದೋ ವಿಚಿತ್ರ ಜೀವಿಗಳೇನೋ ಅನ್ನೋಹಂಗೆ ನೋಡ್ತಿದ್ರು. ನಂಗೆ ಬ್ರಾಹ್ಮಣ ಹುಡುಗೀರಲ್ಲಿ ಗೆಳತೀರಿರಲಿಲ್ಲ. ಪ್ರವಾಸಕ್ಕೆ ಹೋದಾಗ ಅವ್ರು ತಮ್ಮ ಊಟ ನಮಗೆ ಕೊಡ್ತಿದ್ರು. ಆದ್ರೆ ನಾವ್ ತಂದಿದ್ದು ಏನೂ ಮುಟ್ತಿರಲಿಲ್ಲ. ಇದು ೧೯೪೫ರ ಸುಮಾರಿಗೆ ಇರ್ಬೇಕು.

ನಿಮ್ಮ ಮದುವೆಯಾಗಿದ್ದು ಯಾವಾಗ?

ಮದುವೆಯಾದಾಗ ನಂಗೆ ೧೩ ವರ್ಷ. ತುಂಬ ದೊಡ್ಡೋಳು ಅಂತ ಲೆಕ್ಕ! ನಾನು ನಾಕನೇ ಇಯತ್ತೆ ಪಾಸಾಗಿದ್ದೆ. ನನ್ನ ಮದುವೆಯಾದವರು ಕೋಂಡಿಬಾ ಕಾಂಬಳೆ. ನನ್ನಣ್ಣನ ಸಹಪಾಠಿ. ಇಬ್ರೂ ಒಂದೇ ಹಾಸ್ಟೆಲಲ್ಲಿದ್ರು. ನಾವು ದೂರದ ನೆಂಟ್ರೂ ಆಗಿದ್ವಿ. ಅವರ ಮನೆಯೋರು ಬಂದು ನೋಡ್ಕಂಡು ಹೋಗಿ ಒಪ್ಪಿಗೆ ಅಂದ್ರು. ಆಗ ಬಾಬಾಸಾಹೇಬ್ರು ನಾವು ಗಾಂಧರ್ವ ರೀತ್ಯಾ ಮದುವೆ ಆಗ್ಬೇಕು ಅಂತ ಹೇಳ್ತಾ ಇದ್ರು. ಬ್ರಾಹ್ಮಣ ಪುರೋಹಿತರನ್ನ ಕರೀಬೇಡಿ, ಬಾಸಿಂಗ ಮುಂಡಾಸು ಸುತ್ತಬೇಡಿ, ನಾಕು ದಿನ ಅಂತ ಮದುವೆಗೆ ಕಾಲ, ಹಣ ದಂಡ ಮಾಡ್ಬೇಡಿ. ಹುಡುಗಿಗೊಂದ್ ಸೀರೆ, ಹುಡುಗನಿಗೊಂದು ಜೊತೆ ಬಟ್ಟೆ ಸಾಕು ಅಂತಿದ್ರು. ಪುರೋಹಿತರ ಬದಲು ನಿಮ್ಮಲ್ಲೇ ಒಬ್ರು ಹಿರೇರು ಮದುವೆ ಶಾಸ್ತ್ರ ಮಾಡಿಸಿ, ನಿಂ ಚಾವಡೀಲೇ ಮದುವೆ ಮಾಡ್ಸಿ ಅಂತಿದ್ರು. ಹೀಗೆ ಹೊಸ ರೀತೀಲಿ ಆದ ಮೊದಲ ಮದುವೆಗಳಲ್ಲಿ ನಂದೂ ಒಂದು. ಈಗ ದೀಕ್ಷೆ ಆದ್ಮೇಲೆ ಮದುವೆಗಳು ಬೌದ್ಧ ರೀತ್ಯಾ ಆಗ್ತಾ ಇವೆ. ಅಲ್ಲಿವರೆಗೂ ಬಾಬಾಸಾಹೇಬ್ರು ಹೇಳಿದಂಗೆ ಗಾಂಧರ್ವ ವಿವಾಹನೇ ಆಗ್ತಿದ್ದಿದ್ದು. ನನ್ ಮದುವೆಗೆ ನಮ್ಮಣ್ಣ ಬಾಬಾಸಾಹೇಬರನ್ನು ಸ್ತುತಿಸುವ ಮಂಗಳಾಷ್ಟಕನ ತಾನೇ ಬರೆದಿದ್ದ. ಬಡತನ ನನ್ನ ಮತ್ತು ಗಂಡನ ಮನೆಗೆ ಸಾಮಾನ್ಯವಾಗಿತ್ತು. ನೌಕ್ರಿ ಅನ್ನೋದು ಸಾಧ್ಯನೇ ಇಲ್ಲ ಅನ್ನೋ ಹಾಗಿತ್ತು. ೪ನೇ ಇಯತ್ತೆ, ೭ನೇ ಇಯತ್ತೆ ಓದಿದೋರಿಗೆ ಯಾರು ಕೆಲ್ಸ ಕೊಡ್ತಾರೆ? ಬದುಕು ತುಂಬ ಕಷ್ಟ ಇತ್ತು.

ಬಾಬಾಸಾಹೇಬರು ‘ಬರೀ ಸರ್ಕಾರಿ ನೌಕ್ರಿ ಅಂತ ಕಾದು ಕೂರ‍್ಬೇಡಿ. ನೀವಿರುವಲ್ಲೇ ಏನಾದ್ರೂ ಸಣ್ಣಕ್ಕೆ ವ್ಯಾಪಾರ ಮೊದ್ಲು ಶುರು ಮಾಡಿ. ಹಾಲಿನ ವ್ಯಾಪಾರ ಮಾಡ್ಬೇಡ್ರಿ. ನಿಮ್ಮತ್ರ ಹಾಲನ್ನ ಯಾರು ತಗತಾರೆ? ನಿಮ್ಮ ಜನ ಹಾಲು ಕುಡಿಯಲ್ಲ, ಮೇಲ್ಜಾತಿಯೋರು ನಿಂ ಕೈಯಿಂದ ತಗಳಲ್ಲ. ನಿಮ್ಮ ಜನ್ರ ಮಧ್ಯನೇ ವ್ಯಾಪಾರ ಮಾಡ್ಬೋದಾದಂಥ ಏನಾರ ವ್ಯವಹಾರ ಮಾಡಿ’ ಅಂತ ಹೇಳ್ತಿದ್ರು.

ಆಗ ನಮ್ಗೆ ದ್ರಾಕ್ಷಿ ಹಣ್ಣಿನ ವ್ಯಾಪಾರ ಯಾಕ್ ಮಾಡ್ಬಾರ್ದು ಅನ್ನೋ ಯೋಚ್ನೆ ಬಂತು. ಅಲ್ಲಿ ಸುತ್ತಮುತ್ತ ತುಂಬ ದ್ರಾಕ್ಷಿ ತೋಟ ಇದ್ವು. ಒಂದು ಕೆಜಿಗೆ ಐದ್ರುಪಾಯಿ ಹಂಗೆ ದರ ಇತ್ತು. ಆದ್ರೆ ಉದುರಿದ ದ್ರಾಕ್ಷಿನ ಎಂಟಾಣೆಗೆ ಒಂದು ಕೆಜಿ ತಗೋಬೌದಾಗಿತ್ತು. ದ್ರಾಕ್ಷಿ ತೋಟಕ್ ಹೋಗಿ ಬುಟ್ಟಿ ತುಂಬ ಉದುರಿದ್ ದ್ರಾಕ್ಷಿ ಹೆಕ್ಕಂಡ್ ಬರ‍್ತಿದ್ದೆ. ನಾನು ಎಂಟಾಣೆ ಖರ್ಚು ಮಾಡಿದ್ರೆ ಕೊನೆಗೆ ಒಂದ್ರುಪಾಯಿ ಅಥವಾ ಕೆಲವು ಸಲ ಅದಕ್ಕಿಂತ ಹೆಚ್ಚು ಸಿಗ್ತಿತ್ತು. ಅದನ್ನ ಹಂಗೇ ಉಳಿಸಿಟ್ಟೆ. ನಿಧಾನ ನನ್ನತ್ರ ಇದ್ದ ದುಡ್ಡು ನಲವತ್ತೆಂಟ್ ರೂಪಾಯಿ ಆಯ್ತು. ಆಗ ನಮ್ಮ ವ್ಯಾಪಾರದಲ್ಲಿ ತರಕಾರಿನೂ ಸೇರ‍್ಕಂತು. ಬರಬರ‍್ತ ತರಕಾರಿ ಜೊತೆಗೆ ಎಣ್ಣೆ, ಉಪ್ಪು ಮತ್ತೂ ಬೇರೆಬೇರೆ ಕಿರಾಣಿನೂ ಇಡ್ತಿದ್ವಿ. ಅದ್ರಲ್ಲು ಲಾಭನೇ ಆಯ್ತು. ನಂ ವ್ಯಾಪಾರ ದೊಡ್ಡ ಮಾಡುವಾಂತ  ನಮ್ಮನೇಲಿ ಕಿರಾಣಿ ಸಾಮಾನು ತಂದು ಇಡಣ ಅಂತ ಗಂಡ ಮತ್ತು ಅಣ್ಣನತ್ರ ಅಂದೆ. ಆಗ ನಾವು ನನ್ನ ಗಂಡನ ಮನೆಲೇ ಇದ್ವಿ. ಆದ್ರೆ ತೌರುಮನೆ ಚಾವಡಿ ಎದ್ರಿಗೇ ಇದ್ದಿದ್ದಕ್ಕೆ ಅಲ್ಲಿ ವ್ಯಾಪಾರ ಮಾಡ್ತಿದ್ವಿ. ನಾವು ಗಳಿಸಿದ್ದನ್ನ ಮನೆಗೇಂತ ಖರ್ಚು ಮಾಡ್ದೆ ಹಾಗೇ ಉಳಿಸಿದ್ವಿ. ನನ್ನತ್ತೆ ಮಾವ ತುಂಬ ಸಹಾಯ ಮಾಡಿದ್ರು. ಅವರ ಮನೇಲಿ ಇರಕ್ ಬಿಟ್ರು. ಅವ್ರು ತಿನ್ನೋ ಎಂಥದೋ ಒಂದ್ನ ನಮ್ಗೂ ಕೊಟ್ರು. ಮುಂದಿನ ಮೂರು ತಿಂಗಳಲ್ಲಿ ಮುನ್ನೂರೈವತ್ತು ರೂಪಾಯಿ ಸಾಮಾನು ತಂದ್ವಿ. ಎಷ್ಟು ಸಾಮಾನು ಬಂತು ಅಂದ್ರೆ ಮನೆಯಿಡೀ ತುಂಬೋಯ್ತು. ಆಗ ಮಂಗಳವಾರ ಪೇಟೇಲಿ ತುಂಬ ಜನ ಮಹಾರ್‌ಗಳಿದ್ರು. ಅವ್ರೆಲ್ಲ ನಂ ಗಿರಾಕಿಗಳಾದ್ರು.

ವ್ಯಾಪಾರ ಚೆನಾಗಾಗ್ತ ಹೋಯ್ತು. ಅದೇ ಮನೇಲಿ ನಾವು ಬೇರೆ ಇರಬೇಕು ಅಂತ ನಿರ್ಧಾರ ಮಾಡಿದ್ವಿ. ನೀರು ತರದು, ಅಡಿಗೆ ಅಂತ ಕೆಲಸದ ಹೊರೆ ನನ್ಮೇಲೇ ಬಿತ್ತು. ಬೆಳಗಿನ ಜಾವ ಮೂರು ಗಂಟೆಗೆಲ್ಲ ಎದ್ದು ನಲ್ಲಿಯಿಂದ ನೀರು ತರಬೇಕು. ಅಷ್ಟೊತ್ತಿಗೆ ನಮಗೆ ಎರಡು ಮಕ್ಕಳಿದ್ರು. ಕಾಲುವೆಗ್ ಹೋಗಿ ಅವ್ರ ಬಟ್ಟೆ ತೊಳ್ದು ತರಬೇಕು. ಆಮೇಲೆ ಅಡಿಗೆ. ಎಲ್ಲಾದ್ನೂ ಒಂಭತ್ತರ ಒಳಗೆ ಮುಗ್ಸಿ ಅಂಗಡಿಗೆ ಹೋಗ್ಬೇಕು. ಅಲ್ಲೀವರ‍್ಗೂ ನನ್ ಗಂಡ ಗಲ್ಲಾದ ಮೇಲೆ ಕೂತಿರ‍್ತಿದ್ದ. ಆಮೇಲೆ ನಾನು ಗಲ್ಲಾದ ಮೇಲೆ, ಅವನು ಪೇಟೆಗೆ ಬೇಕಿದ್ದ ಸಾಮಾನು ತರಕ್ಕೆ ಹೋಗ್ತಿದ್ದ.

ಸಾಮಾನು ಪಡೆಯೋದರಲ್ಲಿ ಏನಾದ್ರೂ ಸಮಸ್ಯೆ ಎದುರಿಸಿದಿರಾ?

ಏನೂ ತೊಂದ್ರೆ ಆಗ್ಲಿಲ್ಲ. ಅವ್ರು ನಮ್ಮನ್ನ ಅಂಗಡಿ ಒಳಗೆ ಬಿಟ್ಟುಕೊಳ್ತಿರಲಿಲ್ಲ, ಆದರೆ ಏನು ಬೇಕೋ ಅದ್ನೆಲ್ಲ ಕೊಡ್ತಿದ್ರು. ಹಿಂಗೇ ದುಡ್ಡು ಕೂಡಿಡ್ತಾ, ಪರಿಸ್ಥಿತೀಲಿ ಉತ್ತಮಾಗ್ತಾ ಹೋದ್ವಿ. ಒಟ್ಟು ಹತ್ತು ಮಕ್ಳು ಹುಟ್ಟಿದ್ರು. ಅವ್ರಲ್ಲಿ ಮೂರು ಸಣ್ಣಲ್ಲೇ ತೀರ‍್ಕಂಡ್ವು. ಆಸ್ಪತ್ರೆಗೆಲ್ಲ ಹೋಗ್ಲೇ ಇಲ್ಲ, ಎಲ್ಲ ಮನೇಲೇ. ಅವ್ವ, ಅತ್ತೆ ಸಹಾಯ ಮಾಡೋರು.

ನೀವು ಕೆಲಸ ಮಾಡುವಾಗ ಸಭೆ, ಸಮಾರಂಭದಲ್ಲಿ ಭಾಗವಹಿಸಿ ಭಾಷಣ ಮಾಡೋ ಬೇರೆ ಮಹಿಳಾ ಹೋರಾಟಗಾರರಿದ್ದರೆ?

ಹೆಚ್ಚಿಲ್ಲ. ಮಹಿಳೇರು ಭಾಗವಹಿಸೋಕೆ ಶುರು ಮಾಡಿದ್ದು ಸ್ವಲ್ಪ ತಡದು, ಅವ್ರು ಶಿಕ್ಷಣ ಪಡೆದ್ಮೇಲೆ. ನಾನು ಸಭೆಗೆ ಹೋಗ್ತಿದ್ದೆ, ಭಾಷಣ ಮಾಡ್ತಿದ್ದೆ. ನನ್ನಜ್ಜಿ ಮುಂಬೈಯಲ್ಲಿದ್ರು. ಆಕೆ ಕಾರ್ಮಿಕ ಸಂಘದಲ್ಲಿ ಕೆಲಸ ಮಾಡ್ತಿದ್ರು. ನಿಧಾನ ಉಳದ ಹೆಣ್ಣುಮಕ್ಕಳೂ ಬರಕ್ಕೆ ಶುರು ಮಾಡಿದ್ರು. ಫಲ್ಟಣದಲ್ಲಿ ರಾಜಾ ಮಾಳೋಜಿರಾಜೇ ನಿಂಬಾಳ್ಕರ್ ಮತ್ತವರ ಹೆಂಡ್ತಿ ಲಕ್ಷ್ಮೀಬಾಯಿ ಶುರುಮಾಡಿದ ಮಹಿಳಾ ಮಂಡಲದ ಬಗ್ಗೆ ನಿಮ್ಗೆ ಹೇಳ್ಬೇಕು. ಪ್ರತಿ ಮಹಾರ್ ಮನೆಯಿಂದ ಒಬ್ಬ ಹೆಣ್ಣುಮಗಳಾದ್ರೂ ಮಹಿಳಾ ಮಂಡಲದ ಸದಸ್ಯೆ ಆಗ್ಬೇಕೂಂತ ರಾಜ ಅಪ್ಪಣೆ ಮಾಡಿದ್ದ. ನಮ್ಮವ್ವನ್ನ ಅಯ್ಯ ಯಾವತ್ತೂ ಹೊರಗೋಗಕ್ಕೆ ಬಿಡ್ತಿರ್ಲಿಲ್ಲ, ಅದ್ಕೇ ನಾನು ಸದಸ್ಯಳಾದೆ. ನಂ ಸಮುದಾಯದ ಕೆಲವು ಗಟ್ಟಿ ಮಹಿಳೇರೂ ಸದಸ್ಯರಾದ್ರು. ತಮ್ಮ ಹಕ್ಕುಗಳನ್ನ ಕೇಳಕ್ಕೆ, ಪಡೆಯಕ್ಕೆ ಹೋರಾಟ ಮಾಡಕ್ಕೆ ಅವರೆಂದೂ ಹಿಂಜರಿದೋರಲ್ಲ. ಸಭೆ ನಡೆಯುವಾಗ ಕೂರಕ್ಕೆ ಕುರ್ಚಿ ಬೇಕೂಂತ ಕೇಳಿ ತಗಂಡು, ಕೂತೇ ಭಾಗವಹಿಸ್ತಿದ್ರು.



ನಿಮ್ಮ ಆತ್ಮಕತೆ ಬರಿಬೇಕು ಅಂತ ಯಾಕನಿಸ್ತು?

ನಾನು ಅಂಗಡಿ ಗಲ್ಲಾದಲ್ಲಿ ಕೂರ‍್ತಿದ್ನಲ, ತುಂಬ ಸಮಯ ಇರ‍್ತಿತ್ತು. ಸಾಮಾನು ಕಟ್ಟಕ್ಕೆ ತರ‍್ತಿದ್ವಲ, ಹಳೇ ಪೇಪರ್ ರದ್ದಿ, ಅದ್ರ ಜೊತೆಗೆ ಕೆಲವು ಕತೆ ಪುಸ್ತಕನೂ ಇರೋವು. ಕೆಲವು ದೇವ್ರ ಬಗ್ಗೆ, ಅವರ ಮಹಾನ್ ಕಾರ್ಯಗಳ ಬಗ್ಗೆ ಇರೋವು. ಅವುನ್ನ ಓದಿ ನಂಗೆ ಕೋಪ ಬರ‍್ತಿತ್ತು. ಅವೆಲ್ಲ ತಪ್ಪು ತಪ್ಪು ಕತೆಗಳಾಗಿದ್ವು. ಉದಾಹರಣೆಗೆ ವೃಂದಾ ಅನ್ನೋ ಶೂದ್ರ ರಾಜಕುಮಾರಿ ಕತೆ.

ಒಂದಿನ ಶೂದ್ರ ರಾಜಕುಮಾರಿ ವೃಂದಾ ಹತ್ರ ನಾರದ ಹೋಗಿದ್ದ. ಅವಳಿಗೆ ಬಲಶಾಲಿ ಮಗಂದಿರು ಹುಟ್ತಾರೆ ಅಂತ ನಾರದಂಗೆ ಗೊತ್ತಿತ್ತು. ಆಗ ಶೂದ್ರರು (ಅಂದ್ರೆ ರಾಕ್ಷಸರು) ಮತ್ತು ದೇವತೆಗಳ ಮಧ್ಯ ತುಂಬ ವೈರ ಇತ್ತು. ಶೂದ್ರರು ಯಾವತ್ತಿಗೂ ದೇವ್ತೆಗಳ ಹಿರಿಮೇನ ಒಪ್ತಿರಲಿಲ್ಲ. ಅವರ ಹೆಸರನ್ನೂ ಹೇಳ್ತಿರಲಿಲ್ಲ. ನಾರದ ವೃಂದಾನ ಹತ್ರ ಬಂದು ವಿಷ್ಣುವಿನ ಗುಣಗಾನ ಮಾಡೇ ಮಾಡ್ದ. ಅವಳು ಎಳೇ ಹುಡುಗಿ. ವಿಷ್ಣು ಮಹಾನ್ ದೇವತೆ ಅಂತ ಅಂದ್ಕಂಡ್ಳು. ಅವಳಿಗೆ ವಿಷ್ಣುನ ನೋಡ್ಬೇಕನಿಸ್ತು. ಆಗ ನಾರದ ಒಂದು ವಿಷ್ಣು ಮೂರ್ತಿ ಕೊಟ್ಟು ಪೂಜೆ ಮಾಡೂಂತ ಹೇಳಿದ. ಅವಳದನ್ನ ತನ್ನ ಕೋಣೇಲಿಟ್ಕೊಂಡು ಪೂಜೆ ಮಾಡ್ತ ಇದ್ಲು. ಅವಳಪ್ಪಂಗೆ ತುಂಬ ಸಿಟ್ಟು ಬಂತು. ಆದರೆ ವೃಂದಾ ವಿಷ್ಣುಜಪ ನಿಲ್ಲಿಸ್ಲಿಲ್ಲ. ವಿಷ್ಣು ಅಂದ್ರೆ ಅವಳು ತಿಳಕಂಡಿರುವಂತೋನಲ್ಲ ಅಂತ ಪರಿಪರಿ ಹೇಳಿದ್ರೂ ಅವಳು ಕೇಳಲಿಲ್ಲ. ಹಿಂಗೇ ಬೆಳೆದು ದೊಡ್ಡೋಳಾದ್ಲು. ಅವಳಪ್ಪ ಜಲಂಧರನ ಜೊತೆ ಮದುವೆ ಮಾಡಿದ. ಅವ ಮತ್ತೊಬ್ಬ ಶೂದ್ರ ರಾಜ ಸಗರನ ಮಗ. ಅವಳು ತನ್ನ ಜೊತೆ ವಿಷ್ಣುಮೂರ್ತಿನೂ ತಗೊಂಡು ಹೋಗಿ ಪೂಜೆ ಮಾಡ್ತಾ ಇದ್ಲು. ಸಗರ ಅವಳತ್ರ ಹೋಗಿ ವಿಷ್ಣುಪೂಜೆ ನಿಲ್ಲಿಸು ಅಂತ ಕೇಳ್ದ. ಆದ್ರೆ ಅವ್ಳು ಪೂಜೆ ಮಾಡ್ತನೇ ಹೋದ್ಲು. ಅವಳು ತುಂಬ ಪತಿವ್ರತೆ. ಅದೇ ಅವ್ಳ ಶಕ್ತಿ. ಅವಳ ಗಂಡನ್ನ ಯಾರೂ ಯಾವ ದೇವರೂ ಕೊಲ್ಲದಂಗೆ ಅಜೇಯನನ್ನಾಗಿ ಮಾಡಿದ್ದು ಅವಳ ಪಾತಿವ್ರತ್ಯವೇ. ಅವಳ ಗಂಡ ಯುದ್ಧಭೂಮಿಯಲ್ಲಿರೋವಷ್ಟು ಹೊತ್ತು ಅವಳು ಏನನ್ನೂ ತಿಂತಿರಲಿಲ್ಲ, ಕುಡಿತಿರಲಿಲ್ಲ. ಹಾಗಾಗಿ ಜಲಂಧರ ಯಾವಾಗ್ಲೂ ಗೆದ್ದುಕೊಂಡೇ ಬರ‍್ತಿದ್ದ. ಇದು ತಿಳಿದ ನಾರದ ಜಲಂಧರನ ಕೊಲ್ಲಬೇಕಂದ್ರೆ ವೃಂದಾಳ ಪಾತಿವ್ರತ್ಯ ನಾಶ ಮಾಡಬೇಕು ಅಂತ ಒಂದು ಯೋಜನೆ ಹಾಕಿ ವಿಷ್ಣು ಹತ್ರ ಹೋದ. ಜಲಂಧರ ಯುದ್ಧಕ್ಕೆ ಹೋದಾಗ ವಿಷ್ಣು ಅವನ ವೇಷ ಹಾಕಿ ವೃಂದಾಳನ್ನು ಹಾಸ್ಗೆಗೆ ತಗಂಡೋದ. ಅವಳ ಪಾತಿವ್ರತ್ಯ ನಾಶವಾದ್ದೇ ಜಲಂಧರನ ವಧೆ ಆಯ್ತು. ಅವನ ಶಿರ ಬಂದು ಅವಳ ತೊಡೆ ಮೇಲೆ ಬಿದ್ದು ವಿಷ್ಣು ತನ್ನ ನಿಜರೂಪ ತೋರುಸ್ದ. ಮೋಸಹೋದ ತನ್ನ ಭಕ್ತೆಯ ಕೋಪ ತಣಿಸಕ್ಕೆ ವಿಷ್ಣು, ‘ನೀನು ಸದಾ ಮುತ್ತೈದೆ ಆಗೇ ಉಳಿತೀ. ಅದಕ್ಕೇ ನಿನ್ನ ಮದುವೆ ಪ್ರತಿವರ್ಷ ಸಾಲಿಗ್ರಾಮ ರೂಪದ ಜಲಂಧರನ ಜೊತೆ ನಡೀತ್ತೆ, ಜನ ಹಬ್ಬ ಆಚರಿಸ್ತಾರೆ. ನೀನಿನ್ನು ಎಂದಿಗೂ ವಿಧವೆ ಆಗಲ್ಲ’ ಎಂಬ ವರ ಕೊಟ್ಟ.

ಇದು ಕತೆ. ಆದ್ರೆ ನೋಡಿ, ಶೂದ್ರ ರಾಜಕುಮಾರಿ ವೃಂದಾನ್ನ ತುಳಸಿ ಆಗ್ಸಿ ಮನೆ ಹೊರಗೇ ಇಟ್ಟು ಹೊರಗೇ ಮದುವೆ ಮಾಡ್ತಾರೆ, ಮನೆಯೊಳಗೆ ಕರೆಯಲ್ಲ! ಹೇಗೆ ಮೇಲ್ಜಾತಿಯೋರು ಶೂದ್ರರನ್ನ ತುಳಿದು ಅದನ್ನೇ ಕತೆ, ಪುರಾಣ ಮಾಡಿದ್ರು ಅಂತ ಇದರಿಂದ ತಿಳಿಯುತ್ತೆ. ಇಂಥದನ್ನ ಓದಿದ್ಮೇಲೆ ನಂಗೆ ಸುಮ್ನಿರಕ್ಕಾಗಲಿಲ್ಲ. ಇಂಥ ವಿಷಯಗಳ ಬಗ್ಗೆ ಬರೆದೆ. ಪಂಡಿತಾ ರಮಾಬಾಯಿ ಕುರಿತೂ ಓದಿದೆ.

ಇಂತಾ ಪುಸ್ತಕಗಳ ಓದ್ತ, ಬಾಬಾಸಾಹೇಬರ ಸಭೆಗಳಿಗೆ ಹೋಗಿಬರ‍್ತಾ ನಂಗೆ ಎಷ್ಟೋ ಹೆಣ್ಣುಮಕ್ಕಳು ಅನುಭವಿಸೋ ಸಂಕ್ಟದ ಅರಿವಾಯ್ತು. ಆಮೇಲೆ ನಂ ಸಿಟ್ಟನ್ನು ಹೇಳ್ಲೇಬೇಕು, ಪ್ರತಿಭಟನೆನ ಮಾತಾಡಿ ತಿಳಸ್ಲೇಬೇಕು ಅನಿಸ್ತು. ಆದ್ರೆ ಬರೀ ಅದ್ರ ಬಗೆಗೆ ಮಾತಾಡಿದ್ರೆ ಸಾಕಾಗಲ್ಲ. ಆ ರೀತಿ ಎಷ್ಟು ಜನ್ರನ್ನ ತಲುಪಕ್ಕೆ ಸಾಧ್ಯ ನಂಗೆ? ಅದ್ರ ಬಗ್ಗೆ ಬರೀಬೇಕು. ನಾವು ಸಂಕ್ಟ ಅನುಭವಿಸ್ತಿದಿವಿ ಅಂತ ಜಗತ್ತಿಗೇ ಸಾರಿ ಹೇಳ್ಬೇಕೂಂತ ಅನಿಸ್ತು. ಬರ‍್ದೆ.

ಆದರೆ ಬರವಣಿಗೆ ಶುರುಮಾಡಿದ್ದು ಹೇಗೆ? ಅಂಗಡಿ ಗಲ್ಲಾದಲ್ಲಿ ಕೂತು ನಿಭಾಯಿಸಬೇಕಾಗಿತ್ತು, ಬರೆಯಕ್ಕೆ ಸಮಯ ಹೇಗೆ ಸಿಕ್ಕಿತು?

ಓಹ್, ಅದೊಂದ್ ದೊಡ್ ಕತೆ. ನೋಡಿ, ಬೆಳಿಗ್ಗೆ ಒಂಭತ್ತಕ್ಕೆ ಅಂಗಡಿಗೆ ಹೋಗ್ತಿದ್ದೆ. ನಾ ಹೋದಕೂಡ್ಲೇ ನನ್ನ ಗಂಡ ಸಾಮಾನು ತರಕ್ಕೆ ಪೇಟೆಗ್ ಹೋಗ್ತಿದ್ದ. ವಾಪಸ್ ಬರ‍್ತಿದ್ದಿದ್ದು ಸಂಜೆ ನಾಕು ಗಂಟೆಗೇ. ನಂಗೆ ತುಂಬ ಸಮಯ ಸಿಗ್ತಿತ್ತು. ನಾನು ಪದಪದ ಕೂಡ್ಸಿ ಬರೆಯಕ್ ಶುರು ಮಾಡ್ದೆ. ನನ್ನ ಸಮುದಾಯ ಎದುರಿಸೊ ಕಷ್ಟಗಳ್ನೆ ಬರ‍್ದೆ. ಲೈಬ್ರರಿನೂ ಸೇರಿದ್ದೆ, ಪುಸ್ತಕ ತಂದು ಓದ್ತಿದ್ದೆ. ಸಮಯ ಸಿಕ್ಕ ಕೂಡ್ಲೆ ನೋಟ್ಸ್ ಮಾಡ್ತ ಕೂರದು. ಬರೆಯದು ಕಷ್ಟದ ಕೆಲ್ಸನೇ ಆಗಿತ್ತು. ಯಾರೂ ನೋಡ್ದಿದ್ದಂಗೆ ಕಾಳಜಿ ವಹಿಸ್ತಿದ್ದೆ. ಹಳೇ ರದ್ದಿ ಪೇಪರಿನ ಕೆಳಗೆ ಅಡಗ್ಸಿ ಇಡ್ತಿದ್ದೆ. ಅಥವಾ ಯಾರೂ ಕೈ ಹಾಕ್ದೇ ಇರೋ ನಾಗಂದಿಗೆ ತುದೀಲಿ ಇಟ್ಟಿರ‍್ತಿದ್ದೆ.

ನೀವು ಬರೆಯಲು ಶುರು ಮಾಡಿದಾಗ ಮೂವತ್ತು ವರ್ಷ. ಅದು ಪ್ರಕಟವಾದಾಗ ಐವತ್ತು ವರ್ಷ. ಇಪ್ಪತ್ತು ವರ್ಷ ಅದನ್ನ ಮುಚ್ಚಿಟ್ಟಿರಾ?

ಹೌದು, ಇಡ್ಲೇಬೇಕಾಗಿತ್ತು. ಬರ‍್ದಿದ್ನೆಲ್ಲ ಧೂಳು ಹಿಡ್ದ ಮೂಲೇಲಿ ಇಡ್ತಿದ್ದೆ. ನಾನು ಬರೆಯೋ ಹೊತ್ಗೆ ನನ್ ಮಗ ಶಾಲೆಗೆ ಹೋಗ್ತಿದ್ದ. ಅವ ಕಲ್ತವ. ತಿಳಿದವ. ನಂಗೆ ಮಗ ಮತ್ತು ಗಂಡ ಇಬ್ರಿಗೂ ಬರೆದಿಟ್ಟಿದ್ದು ಕಂಡ್ರೆ ಅನ್ನೋ ಹೆದ್ರಿಕೆ. ಅವ್ರ ಪ್ರತಿಕ್ರಿಯೆ ಹೆಂಗಿರುತ್ತೋ ಅನ್ನೋ ಹೆದ್ರಿಕೆ. ನನ್ನ ಗಂಡ ನನ್ನನ್ನ ದಡ್ಡಿ ಅಂತಲೇ ಕರೀತಿದ್ದಿದ್ದು. ಅವರೇನಂತಾರೋ ಅನ್ನೋ ಭಯ. ಅದಕ್ಕೇ ಎಲ್ಲದನ್ನೂ ಹೆಚ್ಚುಕಮ್ಮಿ ಇಪ್ಪತ್ತು ವರ್ಷ ಮುಚ್ಚಿಟ್ಟಿದ್ದೆ.

ಅಂಬೇಡ್ಕರ್ ಚಳವಳಿಗೆ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಸೇರಿದರು. ಅಂಬೇಡ್ಕರೋತ್ತರ ದಲಿತ ಚಳುವಳಿಯಲ್ಲಿ ಅವರ ಪಾತ್ರವೇನು? ಕೆಲವೇ ಕೆಲವು ಮಹಿಳೆಯರು ನಾಯಕಿಯಾಗಿ ಹೊಮ್ಮಿದಾರೆ, ಯಾಕೆ?

ನೀವು ಕೇಳಿದ್ದು ಸರಿ. ಬಾಬಾಸಾಹೇಬ್ರ ಹೋರಾಟದಲ್ಲಿ ಮಹಿಳೆಯರು ತುಂಬ ಪ್ರಮುಖ ಪಾತ್ರ ವಹಿಸಿದ್ರು. ಆದ್ರೆ ನಂತ್ರ ಅದು ಮುಂದುವರೀಲಿಲ್ಲ. ೧೯೫೬ರಲ್ಲಿ ಬಾಬಾ ಇಲ್ಲವಾದರು. ನಂತರ ನಾಯಕರಲ್ಲಿ ತುಂಬ ಕಚ್ಚಾಟ ಶುರುವಾಯ್ತು - ಎಲ್ರೂ ತಾವು ಇನ್ನೊಬ್ಬ ಅಂಬೇಡ್ಕರ್ ಅಂತ ತೋರಿಸ್ಕಳೋ ಹುಕಿಯಲ್ಲಿದ್ರು. ಅದು ಕೆಟ್ಟ ಪರಿಣಾಮ ಬೀರ‍್ತು. ಜನರಿಗೆ ಗೊಂದಲ ಆಯ್ತು. ಬಾಬಾಸಾಹೇಬ್ರ ನಂತ್ರ ಯಾರು? ಅಧಿಕಾರದ ಕಚ್ಚಾಟ ನೋಡ್ತ ಜನ ಹಿಂದುಳಿದ್ರು. ನಾಯಕರೆಲ್ಲ ಮುಂಬೈಗೆ ಹೋಗಿ ಕ್ಯಾಂಪ್ ಹೂಡಿದ್ರು. ಎಲ್ರಿಗೂ ಅವ್ರದ್ದೇ ಹೊಗಳುಭಟರ ಪಡೆ. ಎಲ್ರು ತಂ ಕಹಳೆ ತಾವೇ ಊದತಾ ಇದ್ರು. ಉದಾಹರಣೆಗೆ ಹೇಳದಾದ್ರೆ: ರಾಮದಾಸ ಅಠವಳೆ ಆಗ ತರುಣ, ಹುಶಾರಿದ್ದ. ದಲಿತ್ ಪ್ಯಾಂಥರ್‌ನವ. ದಲಿತ ನಾಯಕತ್ವದ ಬಗ್ಗೆ ಜಗಳ ನೋಡಿ ರೋಸಿ ಹೋದ ತರುಣರ ಸಂಘಟನೆ ಅದು. ಜನ ಅವ್ನನ್ನ ಇಷ್ಟಪಟ್ರು. ತಮ್ಮ ನಾಯಕ ಅಂತ ಒಪ್ಪಿದ್ರು. ಅವನು ಮಾತ್ರ ಬಾಬಾ ಸಾಹೇಬರ ಉದ್ದೇಶ ಈಡೇರಿಸಬಲ್ಲ ಅಂತ ಭಾವಿಸಿದ್ರು. ತುಂಬ ಜನ ಅವನ ಅನುಯಾಯಿಗಳಾದ್ರು. ರಿಪಬ್ಲಿಕನ್ ಪಕ್ಷಕ್ಕಿಂತ ಹೆಚ್ಚು ದಲಿತರು ದಲಿತ್ ಪ್ಯಾಂಥರ್ಸ್ ನಂಬಿದ್ರು. ಮತ್ತೆ ಒಳ್ಳೇ ಕಾಲ ಬಂತು ಅಂತ ಎಲ್ಲ ಭಾವಿಸಿದ್ರು. ಆದರೆ ಬ್ರಾಹ್ಮಣರ, ಮರಾಠರ ಪಕ್ಷಗಳಿಗೆ ಇದ್ನ ಸೈಸಕ್ಕಾಗಲಿಲ್ಲ. ಅವ್ರು ಮಾಮೂಲಿ ಉಪಾಯ ಮಾಡಿದ್ರು. ರಾಮದಾಸನಿಗೆ ಮಂತ್ರಿ ಮಾಡ್ತೀವಿ ಅಂತ ಆಮಿಷ ಒಡ್ಡಿದರು. ದಲಿತ್ ಪ್ಯಾಂಥರ್ಸ್ ದುರ್ಬಲವಾಯ್ತು. ರಿಪಬ್ಲಿಕನ್ ಪಕ್ಷ ಹೋಳಾಯ್ತು. ಜನರ ಬಗ್ಗೆ ಯೋಚ್ನೆ ಮಾಡೋರು, ಜನರಿಗಾಗಿ ನಾಯಕತ್ವ ವಹಿಸೋರು ಯಾರೂ ಉಳೀಲೇ ಇಲ್ಲ.

ಅಂದರೆ ಅದೇ ರಾಜಕಾರಣ ಮುಂದುವರೀತಾ ಇದೆ ಅಲ್ಲವೆ? ಹೇಗಾದರೂ ಸರಿ, ದಲಿತರನ್ನು ದಮನಿಸೇ ಇಡಬೇಕು ಅನ್ನೋದು..

ನಿಶ್ಚಯವಾಗಿ. ಆಗಿನ ಕಾಲದಲ್ಲಿ ದಲಿತರು ಅಶಿಕ್ಷಿತರಾಗಿದ್ರು ಅಂತ ನಡೀತು. ಇವತ್ತು ಸುಶಿಕ್ಷಿತರಾಗಿದಾರೆ ಅಂತ ನಡೀತಿದೆ. ಆಗ ಇಡೀ ಹಳ್ಳಿಗೆ ಹಳ್ಳಿನೇ ನೀರು ಕೊಡದೇ, ದೂರ ನಿಲ್ಸಿ, ಶೋಷಣೆ ಮಾಡಿ, ಅನ್ಯಾಯ ಮಾಡಿ ದೂರ ಇಟ್ಟಿತ್ತು. ಈಗ ಸುಶಿಕ್ಷಿತ ದಲಿತರು ಮೇಲ್ಜಾತಿ ಹಳ್ಳಿಗರು ತಮ್ಜೊತೆ ಹೇಗೆ ನಡ್ಕಂತ ಇದ್ರೋ ಹಾಗೆ ತಾವು ನಡೀತಿದಾರೆ. ಸರ್ಕಾರದ ಉನ್ನತ ಹುದ್ದೆಗಳಲ್ಲಿ ಶಿಕ್ಷಣ ಪಡೆದ ದಲಿತರನ್ನ ಕಾಣಬೋದು. ಅವರ ಮಕ್ಕಳು ಉತ್ತಮ ಬದುಕನ್ನ ಬದುಕ್ತನೂ ಇದಾರೆ. ಆದರೆ ಬಡವರಿಗೆ ಏನಾಗ್ತಿದೆ ಅಂಬೋ ಬಗ್ಗೆ ಅವರಿಗೆ ಯೋಚ್ನೆನೇ ಇಲ್ಲ. ಅವರು ಏನು ಮಾಡಿದ್ರೂ ತಮಗೋಸ್ಕರ ಮಾತ್ರ ಮಾಡ್ತಾರೆ. ಬಡ ದಲಿತರು ಎಲ್ಲಿದಾರೋ ಅಲ್ಲೇ ಇದಾರೆ. ನಂಗಂತೂ ಹೀಗನಿಸ್ತಿದೆ.

ಮಾತಂಗರು ನಿಮ್ಮ ಜೊತೆ ಯಾಕೆ ಬೌದ್ಧರಾಗಿ ಮತಾಂತರ ಹೊಂದಲಿಲ್ಲ?

ತುಂಬ ಕಾರಣಗಳಿದಾವೆ. ಮೊದಲನೇದಾಗಿ ಅವರು ಹಿಂದೂ ಧರ್ಮನ ಪ್ರಶ್ನಿಸಲಿಲ್ಲ. ಎರಡನೇದಾಗಿ ಅವರು ಸಂಖ್ಯೆಯಲ್ಲಿ ತುಂಬ ಕಮ್ಮಿ ಜನ ಇದ್ರು. ಒಂದ್ ಹಳ್ಳೀಲಿ ಮಾತಂಗರ ಒಂದೋ ಎರಡೋ ಮನೆ ಇರ‍್ತಿತ್ತು ಅಷ್ಟೆ. ಹಿಂದೂಗಳನ್ನ ಎದುರು ಹಾಕ್ಕಳೋವಷ್ಟು ಅಧಿಕಾರ ಅವರತ್ರ ಇರ್ಲಿಲ್ಲ. ಹಾಗಾಗಿ ಅವರು ಸುರಕ್ಷಿತ ದಾರೀಂತ ಹಿಂದೂ ಧರ್ಮಕ್ಕೆ ಅಂಟಿಕೊಂಡಿರೋದನ್ನೇ ಆಯ್ಕೆ ಮಾಡ್ಕಂಡ್ರು. ಹಾಗಾಗಿ ಅತಿ ದೊಡ್ಡ ಸಂಖ್ಯೆಯ ಸಮುದಾಯವಾಗಿದ್ರೂ ನಾವು ಮಹಾರರು ಒಂಟಿಯಾಗುಳಿಯೋ ಹಂಗಾಯ್ತು.

ಇವತ್ತಿನ ದಲಿತರ ಮುಖ್ಯ ಸಮಸ್ಯೆ ಯಾವುದೆಂದು ನಿಮಗನಿಸುತ್ತದೆ?

ಹಳ್ಳಿಯಿಂದ ಪಟ್ಣಕ್ಕೆ ವಲಸೆ ಹೋಗೋ ದಲಿತರನ್ನ ನೋಡ್ರಿ. ಕೆಲ್ಸ ಹುಡುಕ್ಕಂಡು ತುಂಬ ಜನ ಹಳ್ಳಿಯಿಂದ ನಗರಕ್ಕೆ ಹೋಗ್ತಾರೆ. ಆದ್ರೆ ತುಂಬ ಜನ ಈಗ್ಲೂ ಹಳ್ಳೀಲೇ ಉಳ್ಕಂಡಿದಾರೆ. ಬರೀ ಆರೇಳು ಮನೆಗಳಷ್ಟೇ ದಲಿತರದ್ದಾದ್ರೆ ಇಡೀ ಹಳ್ಳಿ ದಲಿತರ ಮೇಲೆ ಒತ್ತಡ ಹಾಕ್ಬೋದು. ಅದೇ ಇಪ್ಪತ್ತು, ಇಪ್ಪತ್ತೈದು ಮನೆಗಳಿದ್ರೆ ಕಡಿಮೆ ಒತ್ತಡ ಇರುತ್ತೆ. ಮುಂಬೈ, ಪುಣೆ, ಫಲ್ಟಣಗಳಂತಹ ನಗರಗಳಲ್ಲಿ ಅವರ ಮೇಲೆ ಒತ್ತಡ ಹೇರೋ ಪ್ರಶ್ನೆನೇ ಇಲ್ಲ. ಆದರೆ ಎಷ್ಟು ಜನರಿಗೆ ಶಿಕ್ಷಣಕ್ಕೆ ಅವಕಾಶ ಇದೆ? ಎಷ್ಟು ಜನರಿಗೆ ನೌಕ್ರಿ ಸಿಕ್ಕಿದೆ? ಈಗ್ಲೂ ನಂ ಜನ ಬಡವ್ರೇ. ಈಗ ಹಲವು ಹೋಳಾಗಿ ಹೋಗಿದಾರೆ. ದೊಡ್ಡ-ಸಣ್ಣ, ಅಂಬೇಡ್ಕರ್‌ವಾದಿ-ಅಂಬೇಡ್ಕರ್‌ವಾದಿ ಅಲ್ದಿರೋ, ಉತ್ತಮ ಸಂಸ್ಕೃತಿ-ಕೀಳು ಸಂಸ್ಕೃತಿಯ .. ಹಿಂಗೇ ಹೋಳುಗಳು. ಆದ್ರೆ ಒಂದ್ವಿಷ್ಯ ಹೇಳ್ಬೇಕು, ಇವತ್ತು ಅಸ್ಪೃಶ್ಯತೆ ಅನ್ನೋದು ಮೀಸಲಾತಿಯಷ್ಟು ದೊಡ್ ಸಮಸ್ಯೆ ಅನಿಸಿಲ್ಲ ಯಾರ್ಗೂ. ಅದೇ ದೊಡ್ಡ ಸಮಸ್ಯೆ. ಆದರೆ ಯಾವ್ದೇ ಹೋರಾಟಕ್ಕೂ ಒಳ್ಳೇ ನಾಯಕತ್ವ ಬೇಕು. ಅಂಬೇಡ್ಕರ್ ಹೇಳಿದ್ರು, ಬರೀ ಸರ್ಕಾರಿ ನೌಕ್ರಿಗೆ ಕಾಯ್ಬೇಡಿ, ವ್ಯಾಪಾರ ವ್ಯವಹಾರ ಶುರುಮಾಡಿ ಅಂತ. ಈಗ ಬ್ಯಾಂಕುಗಳಿದಾವೆ, ಸಾಲ ವ್ಯವಸ್ಥೆ ಇದೆ. ಅದ್ರಲ್ಲಿ ಎಷ್ಟು ಭಾಗ ದಲಿತರನ್ನ ಮುಟ್ತಾ ಇದೆ? ಸರ್ಕಾರಿ ಯೋಜನೆಗಳನ್ನೇ ಉದಾಹರಣೆಯಾಗಿ ತಗಳಿ, ಅದು ನಂ ತನಕ ಬರೋದೇ ಇಲ್ಲ. ನಾವು ಮೌಢ್ಯ, ಭ್ರಷ್ಟಾಚಾರ, ಸಾರಾಯಿ, ಮಾದಕವಸ್ತು ಚಟ ಇಂಥದೇ ಸಮಸ್ಯೆಗಳನ್ನ ಎದುರಿಸಬೇಕಾಗಿದೆ.

ಮಹಿಳೆಯರು ಹೆಚ್ಚು ಕಷ್ಟ ಅನುಭವಿಸಬೇಕಾಗಿದೆ ಅನಿಸುತ್ತಾ?




ನನ್ನ ವೈಯಕ್ತಿಕ ಬದುಕಲ್ಲಿ ಎಷ್ಟೋ ಮಹಿಳೇರ ತರಹ ಕಷ್ಟ ಅನುಭವಿಸ್ಬೇಕಾಯ್ತು. ಆದ್ರೆ ಎಲ್ರು ಅದ್ನೇ ಅನುಭವಿಸ್ತಾ ಇರೋವಾಗ ಯಾರತ್ರ ಹೇಳ್ಕೊಳೋದು? ನನ್ನ ವೈಯಕ್ತಿಕ ಬದುಕಲ್ಲೂ ಅಂಥ ಕೆಲವು ಸಮಸ್ಯೆಗಳಿದ್ವು. ಆ ಕಾಲ್ದಲ್ಲಿ ಯಾವಾಗ್ಲೂ ಗಂಡಸ್ರು ಹೆಂಗಸ್ರನ್ನ ನಿಯಂತ್ರಣದಲ್ಲಿಟ್ಟುಕೊಳ್ಳೋಕೆ ಪ್ರಯತ್ನ ಪಡ್ತಿದ್ರು. ಹೆಂಡ್ತಿ ಮೇಲೆ ಅನುಮಾನಪಟ್ಟು ಅವಳನ್ನು ಬಡಿಯೋದು ತುಂಬ ಸಾಮಾನ್ಯವಾಗಿತ್ತು. ನಾನೇನೂ ಅದ್ಕೆ ಹೊರತಲ್ಲ. ಒಂದ್ಸಲ ಒಂದ್ ಸಭೆಗೆ ಹೋಗ್ಬೇಕೂಂತ ಮುಂಬೈಗೆ ಹೋಗ್ತಿದ್ವಿ. ತುಂಬ ಜನ ತುಂಬಿರೋ ರೈಲಿನ ಜನರಲ್ ಬೋಗಿ. ಯಾರೋ ಹುಡುಗ್ರು ನನ್ನಕಡೆ ಕೆಕ್ಕರಿಸಿಕೊಂಡು ನೋಡಿದ್ರಂತೆ.  ಅಷ್ಟೆ. ನನ್ನ ಗಂಡ ಅದ್ನ ಕಂಡಿದ್ದೇ ನನ್ನ ಮುಖದ ಮೇಲೆ ಯಾವ ತರ ಹೊಡ್ದ ಅಂದ್ರೆ ಮೂಗು ಒಡದು ಸಿಕ್ಕಾಪಟ್ಟೆ ರಕ್ತ ಹರೀಲಿಕ್ಕೆ ಶುರುವಾಯ್ತು. ರೈಲಲ್ಲಿದ್ದ ಜನ ನಮ್ಕಡೆ ನೋಡ್ತಾರೆ. ಅವ್ರು ನೋಡ್ದಂಗೆ ಹೆಂಗ್ ತಡೀತಿ ನೀನು? ಆದ್ರೆ ನನ್ನ ಗಂಡಂಗೆ ಇದ್ನೆಲ್ಲ ವಿವರಿಸಿದ್ರೆ ಕೇಳುವ ಸ್ಥಿತೀಲೇ ಇರ್ಲಿಲ್ಲ. ಆ ಕಾರ್ಯಕ್ರಮಕ್ಕೂ ಹೋಗ್ಲಿಲ್ಲ. ಅವತ್ ಸಂಜೆನೇ ವಾಪಸ್ ಬಂದ್ವಿ. ಅವ್ನಿಗೆ ಎಷ್ಟು ಸಿಟ್ಟು ಬಂದಿತ್ತು ಅಂದ್ರೆ ರೈಲಲ್ಲಿ ಉದ್ದಕ್ಕೂ ಹೊಡೀತನೇ ಇದ್ದ. ಇದು ಆವಾಗ ತುಂಬ ಸಾಮಾನ್ಯ ಆಗಿತ್ತು. ಇಡೀ ಜೀವಮಾನ ನಾನು ಇಂಥದೇ ಹಿಂಸೆ ಅನುಭವಿಸಿದೀನಿ.

ಅದನ್ನ ಹೇಗೆ ಸಹಿಸಿದ್ರಿ? ಎಲ್ಲಿಂದ ಶಕ್ತಿ ಬಂತು?

ಎಂಥದೋ ಕ್ಷುಲ್ಲಕ ಕಾರ‍್ಣಕ್ಕೆ ಬಡಿತಿದ್ದ. ಅವ್ನಿಗೆ ಬಲು ಅನುಮಾನ. ನನ್ನ ಮುಗ್ಧತೆ ತಿಳಿಸಿ ಹೇಳಕ್ಕೆ, ನಾನಂತೋಳಲ್ಲ ಅಂತ ಅರ್ಥ ಮಾಡ್ಸಕ್ಕೆ ತುಂಬ ಪ್ರಯತ್ನಪಟ್ಟೆ. ಅಳ್ತಿದ್ದೆ, ವಿವರಿಸ್ತಿದ್ದೆ, ವಾದ ಮಾಡ್ತಿದ್ದೆ. ಒಂದ್ ಸ್ವಲ್ಪ ದಿನ ಎಲ್ಲ ಸರಿ ಇರ‍್ತಿತ್ತು. ಒಂದ್ವಾರ ಕಳಿಯೋದ್ರಲ್ಲಿ ಮತ್ತೆ ಏನೋ ಒಂದ್ ಸಣ್ಣ ವಿಷ್ಯ, ಅನುಮಾನ ಹೆಡೆ ಎತ್ತತಾ ಇತ್ತು. ಒಂದೇಸಮ ಈ ಚಕ್ರದಲ್ಲಿ ಹಾದುಬಂದಿದೀನಿ ನಾನು. ನಿಜ ಹೇಳ್ಬೇಕಂದ್ರೆ ಇದು ಬಹುಪಾಲು ಹೆಣ್ಣುಮಕ್ಕಳ ಗತಿನೂ ಆಗಿತ್ತು. ಎಲ್ಲ ಹೆಣ್ಣುಮಕ್ಕಳಿಗೂ ಎದೆ ಒಳಗೆ ತಾನೇನೂಂತ ಗೊತ್ತಿರುತ್ತೆ. ಪ್ರತಿ ಮಹಿಳೆನೂ ಈ ಕಷ್ಟದಿಂದ ಹೊರಬರಕ್ಕೆ ತಮ್ಮತಮ್ಮದೇ ದಾರಿ ಹುಡುಕ್ಕಂಡಿದ್ರು. ಒಬ್ಬ ಗಂಡನ್ನ ಬಿಟ್ಟು ಇನ್ನೊಬ್ಬನ್ನ ಕಟ್ಕಳದ್ರಲ್ಲಿ ಏನೂ ಅರ್ಥವಿಲ್ಲ. ಯಾಕೇಂದ್ರೆ ಎಲ್ಲ ಗಂಡಸಿನೊಳಗಿನ ‘ಗಂಡತನ’ ಒಂದೇ ಆಗಿರುತ್ತೆ. ಅದ್ಕೇ ಅವನನ್ನ ಬಿಡಲ್ಲ ಅಂತ ನಾನು ತೀರ್ಮಾನ ಮಾಡ್ದೆ. ಏನಾದ್ರೂ ಕ್ರಿಯಾಶೀಲವಾಗಿರೋದು ಮಾಡ್ಬೇಕು, ಏನಾರ ಆಗ್ಲಿ ಮಾಡ್ಲೇಬೇಕೂಂತ ನಿಶ್ಚಯ ಮಾಡ್ದೆ. ಯಾವತ್ತೂ ಅವ್ನಿಗೆ ತಿರುಗಿ ಹೇಳಲಿಲ್ಲ. ನನಗ್ ನಾನೇ ಹೇಳ್ಕತಿದ್ದೆ, ‘ಅವ್ನು ಏನ್ ಬೇಕಾದ್ರೂ ಹೇಳ್ಕಳ್ಳಿ, ಮತ್ಯಾರೂ ಹೇಳಲ್ಲವಲ್ಲ, ಇರಲಿ..’ ಅಂತ. ಸಮಾಜದಲ್ಲಿ ಎಲ್ರೂ ನನ್ ಬಗ್ಗೆ ಒಳ್ಳೇ ಮಾತನ್ನೇ ಆಡ್ತಿದ್ರು. ಸಮುದಾಯದ ಎಲ್ಲ ಗಂಡಸ್ರು, ಹೆಂಗಸ್ರ ಬೆಂಬಲ ಇತ್ತು ನಂಗೆ. ಅದು ತುಂಬ ಅಮೂಲ್ಯ. ನಿಜವಾಗಿ ಅದೇ ನನ್ನ ಶಕ್ತಿ.

ಈ ಹಿಂಸೆಯ ಭಯ, ಗಂಡಂದಿರ ಅನುಮಾನಕ್ಕೆ ಒಳಗಾಗೋ ಭಯನೇ ಮಹಿಳೆಯರು ರಾಜಕೀಯ ನಾಯಕತ್ವದಿಂದ ದೂರ ಉಳಿಯಲಿಕ್ಕೆ ಕಾರಣ ಅನ್ನಿಸುವುದೇ?

ಖಂಡಿತವಾಗಿ. ಮಹಿಳೆಯರಿಗೆ ತಮ್ಮ ಗಂಡನ್ನ ತಲೆ ಎತ್ತಿ ನೋಡಕ್ಕೂ ಭಯನೇ. ಸದ್ಯ ನಾನು ಫಲ್ಟಣದವಳು. ಅಲ್ಲಿನ ಜನಕ್ಕೆ ನಾನು ಏನೂಂತ ಗೊತ್ತಿತ್ತು. ಎಲ್ಲ ನನ್ನನ್ನೇ ಬೆಂಬಲಿಸ್ತಿದ್ರು. ನಮ್ಮಪ್ಪ, ಅಣ್ಣ, ಸಮುದಾಯದ ಜನ ಎಲ್ಲ. ಹಾಗಾಗಿ ನಂಗೇನೋ ಸಾಧಿಸೋಕೆ ಸಾಧ್ಯ ಆಯ್ತು..





No comments:

Post a Comment