Thursday, 11 June 2020

ಕೋವಿಡ್ - 19 ಲಸಿಕೆ, ಚಿಕಿತ್ಸೆ: ಅವಸರ ಸಲ್ಲದು





ತಾಪಮಾನ ಏರಿದೆಯೆಂದು ನಾನಾ ವಿಧಗಳಲ್ಲಿ ಭೂಮಿ ಹೇಳಿದ್ದು ನಮಗೆ ಕೇಳಿರಲಿಲ್ಲ. ಆದರೆ ಕ್ಷುದ್ರವೆಂದುಕೊಳ್ಳಬಹುದಾದ ಅರೆಜೀವಿ ಕಣವೊಂದು ದೊಡ್ಡಣ್ಣ, ಸಣ್ಣಯ್ಯ ಎನ್ನದೆ ಎಲ್ಲರೂ ಮಂಡಿಯೂರುವಂತೆ ಮಾಡಿರುವಾಗ ನಮ್ಮ ಉಸಿರಾಟದ ಸದ್ದು ನಮಗೇ ಕೇಳುವಷ್ಟು ಗಾಬರಿ ಆವರಿಸಿಕೊಂಡಿದೆ. ನಡೆದು, ಹಸಿದು, ದಣಿದು ರಸ್ತೆಗಳ ತುಂಬಿರುವ ಶ್ರಮಿಕ ಭಾರತ; ಮೊಣಕಾಲೂರಿದಂತೆ ಕಂಡರೂ ಕೊರಳೊತ್ತಿ ಉಸಿರು ಕಟ್ಟಿಸುವ ಅಮೆರಿಕ; ಕೋವಿಡ್ ಸಂಕಷ್ಟ ಮರೆಸಲು ತೋಳೇರಿಸುತ್ತಿರುವ ಚೀನಾ; ದಿಟ್ಟ, ಖಚಿತ ನಿಲುವು ತೆಗೆದುಕೊಳ್ಳಲಾಗದಂತೆ ದುಡ್ಡಿದ್ದವರ ಹಂಗಿಗೊಳಗಾದ ವಿಶ್ವ ಆರೋಗ್ಯ ಸಂಸ್ಥೆ - ಇದನ್ನೆಲ್ಲ ನೋಡುವಾಗ ಇಡಿಯ ವಿಶ್ವ ದೂರದೃಷ್ಟಿಯ ದಾರ್ಶನಿಕ ನಾಯಕತ್ವವಿಲ್ಲದೇ ಸೊರಗಿರುವುದು ಸ್ಪಷ್ಟವಾಗಿದೆ. ಕಂಗೆಡಿಸುವ ವಾಸ್ತವದ ಆಳಗಲಗಳೇ ಇನ್ನೂ ಅಳತೆಗೆ ಸಿಗದಂತಾಗಿರುವಾಗ ಕೋವಿಡ್ ನಂತರದ ಜಗತ್ತು ಹೇಗಿರಬಹುದೆನ್ನುವುದು ನಮ್ಮ ಕಲ್ಪನೆಯ ಆಚೆ ಚಾಚಿಕೊಂಡಿದೆ. ಆದರೆ ಲಾಕ್‌ಡೌನ್ ಆದೆವೆಂದು ಮರುಗುತ್ತಿರುವವರ ಚಿತ್ತ ಎಷ್ಟು ಬೇಗ ಅನ್‌ಲಾಕ್ ಆದೇವೋ, ಎಷ್ಟು ಬೇಗ ಕೋವಿಡ್‌ಗೆ ಔಷಧ, ಲಸಿಕೆ ಕಂಡುಹಿಡಿದೇವೋ ಎನ್ನುವತ್ತ ನೆಟ್ಟಿದೆ. ಇದೇ ಧಾವಂತ ಆರೋಗ್ಯ ಕ್ಷೇತ್ರವನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡಿರುವ ಬಂಡವಾಳ ಜಗತ್ತಿಗೂ ಆವರಿಸಿಬಿಟ್ಟಿದೆ.

ಆದರೆ ಆರೋಗ್ಯ ಸಂಶೋಧನೆ ಎನ್ನುವುದು ಅಡುಗೆಯೆಂಬ ಧ್ಯಾನದ ಹಾಗೆ. ಅಲ್ಲಿ ಅವಸರ, ವಿಳಂಬ ಮತ್ತು ನಿರ್ಲಕ್ಷಗಳಿಗೆ ಕ್ಷಮೆಯೇ ಇಲ್ಲ.

ಹೈಡ್ರಾಕ್ಸಿಕ್ಲೋರೋಕ್ವಿನ್ (ಎಚ್‌ಸಿಕ್ಯು) ಎಂಬ ಮಲೇರಿಯಾ ಸೋಂಕಿಗೆ ಕೊಡುವ ಔಷಧಿಯನ್ನೇ ತೆಗೆದುಕೊಂಡರೆ, ಅದು ಕೋವಿಡ್-೧೯ಗೂ ಫಲಕಾರಿಯಾಗುತ್ತದೆಂದು ‘ಕಂಡು ಹಿಡಿ’ಯಲಾಯಿತು. ಆಸ್ಪತ್ರೆ, ಔಷಧಿಯಂಗಡಿಗಳ ಸ್ಟೋರಿನಲ್ಲಿದ್ದ ಎಚ್‌ಸಿಕ್ಯು ಮಂಗಮಾಯವಾಗಿಬಿಟ್ಟಿತು. ಅಮೆರಿಕವು ತುರ್ತಾಗಿ ಎಚ್‌ಸಿಕ್ಯು ಕಳಿಸುವಂತೆ ಕೇಳಿದಾಗ ಲಾಕ್‌ಡೌನ್ ಸಡಿಲಿಸಿ ಭಾರತ ಕಳಿಸಲೊಪ್ಪಿತು. ಕ್ಲೋರೋಕ್ವಿನ್ ಬಳಸಿದರೆ ಹೃದಯ ಕಾಯಿಲೆಯಿರುವವರಲ್ಲಿ ಮರಣ ಸಂಭವಿಸಬಹುದು ಎಂಬ ಎಚ್ಚರಿಕೆಯ ನಡುವೆ ಹಲವರು ಅದನ್ನು ಸೇವಿಸಿ ಹೃದಯಸ್ಥಂಭನಕ್ಕೊಳಗಾದರು.

ಇದರ ನಡುವೆ ಬ್ರಿಟನ್ನಿನಲ್ಲಿ ನೆಲೆಸಿದ ಇಬ್ಬರು ಭಾರತ ಮೂಲದ ವೈದ್ಯವಿಜ್ಞಾನಿಗಳು ಎಚ್‌ಸಿಕ್ಯು ಕೋವಿಡ್‌ಗೆ ಪರಿಣಾಮಕಾರಿಯಲ್ಲ, ಅಪಾಯಕಾರಿ ಎಂದು ಬ್ರಿಟಿಷ್ ವೈದ್ಯಕೀಯ ಜರ್ನಲ್ ‘ಲ್ಯಾನ್ಸೆಟ್’ನಲ್ಲಿ ಅಧ್ಯಯನ ವರದಿ ಪ್ರಕಟಿಸಿದರು. ಮತ್ತೊಂದೆಡೆ ಅಧ್ಯಯನ ವಿಧಾನವೇ ಸರಿಯಿಲ್ಲವೆಂದು ಇನ್ನೊಂದು ಗುಂಪು ಅದನ್ನು ಸಂಪೂರ್ಣ ಅಲ್ಲಗಳೆಯಿತು. ಒಬ್ಬರ ಹಿಂದೆ ಔಷಧ ತಯಾರಿಕಾ ಕಂಪನಿಯಿದ್ದರೆ, ಮತ್ತೊಬ್ಬರ ಹಿಂದೆ ಸ್ಯಾನಿಟೈಸರ್‌ಗಳನ್ನು ತಯಾರಿಸುವ ಕಂಪನಿಯಿತ್ತು. ಲೋಕಹಿತಕ್ಕಿಂತ ಬಂಡವಾಳ ಹಿತ, ಪೇಟೆಂಟ್ ಹಿತವೇ ಕ್ರಿಯಾಶೀಲವಾಯಿತು.

ಕೋವಿಡ್ ಲಸಿಕೆಯದು ಮತ್ತೊಂದು ಕತೆ. ಆರೋಗ್ಯವಂತ ವ್ಯಕ್ತಿಗೆ ರೋಗ ಬರದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಲಸಿಕೆ ನೀಡಲಾಗುತ್ತದೆ. ಈಗ ದಿನಕ್ಕೊಂದು ವಿಜ್ಞಾನಿಗಳ ತಂಡ ಕೋವಿಡ್‌ಗೆ ಪರಿಣಾಮಕಾರಿ ಲಸಿಕೆ ಸಿದ್ಧಗೊಳಿಸಿಯೇಬಿಟ್ಟೆವು ಎನ್ನುತ್ತಿವೆ. ನಮಗೆ ಅವಸರವಿದೆಯೆಂದು ಕೋವಿಡ್‌ಗೆ ಅವಸರವಿದೆಯೆ? ಲಸಿಕೆಯನ್ನು ಫಾಸ್ಟ್‌ಫುಡ್ಡಿನಂತೆ ಫಟಾಫಟ್ ತಯಾರಿಸಬಹುದೇ?

ಖಂಡಿತ ಇಲ್ಲ.

ಯಾವ ರೋಗಾಣುವಿನ ವಿರುದ್ಧ ಲಸಿಕೆ ಕಂಡುಹಿಡಿಯುವೆವೋ ಅದನ್ನು ಕೂಲಂಕಶ ಅಧ್ಯಯನಕ್ಕೊಳಪಡಿಸಬೇಕು; ಆಂಟಿಜೆನ್ನುಗಳ ಪಟ್ಟಿ ಮಾಡಿ, ಕಾಯಿಲೆಕಾರಕವಾದದ್ದನ್ನು ಬಿಟ್ಟು ರೋಗನಿರೋಧಕ ಶಕ್ತಿಯನ್ನು ಉದ್ದೀಪಿಸುವುದನ್ನು ಗುರುತಿಸಬೇಕು; ಆಯ್ದ ಕೆಲವು ಪ್ರಾಣಿಗಳಿಗೆ ಉದ್ದೀಪಕ ಆಂಟಿಜೆನ್ ಕೊಡಬೇಕು; ನಂತರ ಪ್ರಾಣಿಗಳ ರಕ್ತಮಾದರಿ ಸಂಗ್ರಹಿಸಿ ರೋಗಾಣುವಿನ ವಿರುದ್ಧ ಆಂಟಿಬಾಡಿಗಳು ಉತ್ಪತ್ತಿಯಾಗಿವೆಯೇ ಎಂದು ಪರೀಕ್ಷಿಸಬೇಕು; ಪ್ರಾಣಿಯನ್ನು ನಿಜವಾದ ರೋಗಾಣುವಿಗೊಡ್ಡಿ ಸೋಂಕುಂಟುಮಾಡಿ ಕಾಯಿಲೆ ಬರದಂತೆ ರೋಗನಿರೋಧಕ ಶಕ್ತಿ ಬಂದಿದೆಯೇ ಪರಿಶೀಲಿಸಬೇಕು; ಪ್ರಾಣಿಗಳ ಮೇಲಿನ ಪ್ರಯೋಗ ಸಫಲವಾದರೆ ಆರೋಗ್ಯವಂತ ಮನುಷ್ಯರನ್ನು ಆಯ್ದು, ಸಮ್ಮತಿ ಪಡೆದು, ಲಸಿಕೆ ನೀಡಬೇಕು; ಅವರ ರೋಗನಿರೋಧಕ ಶಕ್ತಿ ಹೆಚ್ಚಿತೇ? ರೋಗಾಣುವಿನ ಸಂಪರ್ಕವಾದಾಗ ರೋಗ ಬರದಂತೆ ತಡೆಗಟ್ಟಿತೇ? ರೋಗನಿರೋಧಕ ಶಕ್ತಿ ಎಷ್ಟು ಕಾಲ ಇರುವುದು ಎಂದೆಲ್ಲ ಪರೀಕ್ಷಿಸಬೇಕು; ಸುರಕ್ಷಿತತೆ, ವಿಶ್ವಾಸಾರ್ಹತೆ ಮತ್ತು ಪರಿಣಾಮಗಳ ಬಗೆಗೆ ವಿಸ್ತೃತ ಕ್ಲಿನಿಕಲ್ ಟ್ರಯಲ್‌ಗಳಾದ ನಂತರ ಮಾರುಕಟ್ಟೆಗೆ ಬಿಡಬೇಕು. ..

ಓಹೋ, ಎಂಥ ದೀರ್ಘ ಪ್ರಕ್ರಿಯೆ ಅಲ್ಲವೆ? ಹೌದು.


ಎಡ್ವರ್ಡ್ ಜೆನ್ನರ್


ಆಲ್ಬರ್ಟ್ ಬ್ರೂಸ್ ಸ್ಯಾಬಿನ್


ಲೂಯಿಸ್ ಪಾಶ್ಚರ್


ವ್ಲದಿಮಿರ್ ಹಾಫ್ಕಿನ್

ಎಡ್ವರ್ಡ್ ಜೆನ್ನರ್, ಲೂಯಿಸ್ ಪಾಶ್ಚರ್, ವ್ಲದಿಮಿರ್ ಹಾಫ್ಕಿನ್, ಆಲ್ಬರ್ಟ್ ಬ್ರೂಸ್ ಸ್ಯಾಬಿನ್ - ಒಬ್ಬರೇ ಇಬ್ಬರೇ? ಒಂದು ಲಸಿಕೆ ಕಂಡುಹಿಡಿಯಲು ಜೀವಿತಾವಧಿಯನ್ನೇ ಸವೆಸಿದವರಿದ್ದಾರೆ. ಸಫಲಗೊಳ್ಳದೇ ಲಯವಾಗಿ ಹೋದವರು ಅಸಂಖ್ಯ ಜನರಿದ್ದಾರೆ. ಇಂದಿನ ವೇಗದ ಕಾಲದಲ್ಲೂ ಒಂದು ಲಸಿಕೆ ತಯಾರಿಗೆ ಕನಿಷ್ಟ ಎರಡು ವರ್ಷ ಬೇಕೇಬೇಕು. ಅದಕ್ಕಿಂತ ಮುನ್ನ ಮಾರುಕಟ್ಟೆಗೆ ಬಂದದ್ದು ಮೌಲಿಕ, ಸುರಕ್ಷಿತ ಆಗಿರಲು ಸಾಧ್ಯವಿಲ್ಲ.

ಆದರೆ ಕೋವಿಡ್-೧೯ ಬಂದು ಆರು ತಿಂಗಳೂ ಆಗಿಲ್ಲ, ಲಸಿಕೆ ಪ್ರಯತ್ನ ಶುರುವಾಗಿ ಮೂರು ತಿಂಗಳಾಗಿಲ್ಲ, ದಿನಕ್ಕೊಂದು ತಂಡ ತಾನಿನ್ನೇನು ವ್ಯಾಕ್ಸೀನ್ ತಯಾರಿಸಿಯೇ ಬಿಟ್ಟೆ ಎನ್ನುತ್ತಿವೆಯಲ್ಲ!

ಇದ್ದಕ್ಕಿದ್ದಂತೆ ಜನರಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಅವರಸ ಹುಟ್ಟಿಕೊಂಡಿದೆ. ಕಂಡುಕೇಳರಿಯದ ಗಿಡ, ಮೂಲಿಕೆ, ಎಲೆ-ಬೇರು-ತೊಗಟೆ-ಕಷಾಯಗಳನ್ನು ಬಳಸತೊಡಗಿದ್ದಾರೆ. ಆದರೆ ನಿಯಮಿತ ಆಹಾರ, ನಿದ್ರೆ ಮತ್ತು ಶ್ರಮದ ಸರಳ ಬದುಕು ರೋಗನಿರೋಧಕ ಶಕ್ತಿಯನ್ನು ನಿಧಾನವಾಗಿ ಸಂಚಯಗೊಳಿಸೀತೇ ಹೊರತು ಛೂಮಂತ್ರ ಗಾಳಿ ಅಂದಕೂಡಲೇ ದೇಹ ಧೃಢವಾಗಲಾರದು. ನಾಗರಿಕ ಬದುಕಿನ ಎಲ್ಲ ಹಳವಂಡ, ಕೇಡು, ಆಮಿಷ, ಲೋಲುಪತೆಗಳನ್ನು ಅಡಿಯಿಂದ ಮುಡಿಯವರೆಗೆ ಹೊಲಿದುಕೊಂಡ ನಮಗೆ ಅಶಿಸ್ತಿನ ಬದುಕೇ ಹಿತವಾಗಿರುವಾಗ ನಾರುಬೇರುಗಳ ಸಿದ್ಧೌಷಧಗಳು ತಕ್ಷಣದ ಆರೋಗ್ಯ ನೀಡಲಾರವು.

ಮುಕ್ಕಾಲು ಭಾಗ ಸುಶಿಕ್ಷಿತರಿರುವ ಭಾರತದಲ್ಲಿ ಹೀಗಾಯಿತೇಕೆ?

ಸ್ವಾತಂತ್ರ್ಯಾನಂತರ ಎರಡು ದಶಕಗಳ ತನಕ ಹೊಸ ನಾಡು ಕಟ್ಟುವ ಹುಮ್ಮಸದ ಜನರು, ವೈಜ್ಞಾನಿಕ ದೃಷ್ಟಿಕೋನ-ವಿಜ್ಞಾನ ಸಂಶೋಧನೆಗಳನ್ನು ಬಲಪಡಿಸಬೇಕೆನ್ನುವ ನಾಯಕತ್ವ ದೇಶದಲ್ಲಿತ್ತು. ನಂತರ ನಾವು ಅಭಿವೃದ್ಧಿಯ ಮಾತನಾಡಿದೆವು, ಸಾಮಾಜಿಕ ನ್ಯಾಯದ ಮಾತನಾಡಿದೆವು, ಧರ್ಮ-ದೇಗುಲಗಳ ಬಗೆಗೆ ಎಗ್ಗಿಲ್ಲದೆ ಬಡಿದಾಡಿದೆವು. ಆದರೆ ವಿಜ್ಞಾನ, ವೈಜ್ಞಾನಿಕ ಸಂಶೋಧನೆಯ ಬಗೆಗೆ ಚಕಾರವೆತ್ತಲಿಲ್ಲ. ನಿತ್ಯ ಬದುಕಿನ ಲೋಲುಪತೆಗೆ ಪೂರಕವಾದ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಉಪಕರಣ, ಯಂತ್ರಗಳನ್ನೇನೋ ಕಂಡುಹಿಡಿದೆವು. ಮೂಲವಿಜ್ಞಾನ, ಆರೋಗ್ಯ ವಿಜ್ಞಾನ ನಮ್ಮನ್ನು ಸೆಳೆಯಲಿಲ್ಲ.


ಇದರಿಂದ ನಿಜಕ್ಕೂ ಸೊರಗಿದ್ದು ಭಾರತದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ. ಚರಕ, ಸುಶ್ರುತರಂಥ ಮೇಧಾವಿಗಳನ್ನು ಸಾವಿರಾರು ವರ್ಷ ಮೊದಲೇ ಸೃಷ್ಟಿಸಿದ ಭಾರತವು ನೂರನಲವತ್ತು ಕೋಟಿ ಜನಗಡಣದ ನಡುವೆ ತನಗೆ ಅಗತ್ಯವಿರುವ ಔಷಧ, ಲಸಿಕೆ ತಾನೇ ತಯಾರಿಸಿಕೊಳ್ಳುವ, ತನ್ನ ಕಾಯಿಲೆಗಳಿಗೆ ಕಾರಣ ಹುಡುಕಿ ಔಷಧ ಕಂಡುಹಿಡಿದುಕೊಳ್ಳುವ ಜಾಗತಿಕ ಗುಣಮಟ್ಟದ ಸಂಶೋಧನಾ ತಂಡ ಕಟ್ಟಲು ವಿಫಲವಾಗಿದೆ. ‘ಪುರಾಣ ಕಾಲದಲ್ಲೇ ಪ್ಲಾಸ್ಟಿಕ್ ಸರ್ಜರಿಯಿಂದ ಗಣಪನನ್ನು ಸೃಷ್ಟಿಸಿದೆವು, ರಾಮಾಯಣ ಕಾಲದಲ್ಲಿ ಆನೆ ಲದ್ದಿಯಿಂದ ಜೆಟ್ ಫ್ಯುಎಲ್ ತಯಾರಿಸಿ ಪುಷ್ಪಕವಿಮಾನ ಹಾರಿಸಿದ್ದೆವು, ಬರಲಿರುವ ರೋಗಗಳೆಲ್ಲವನ್ನು ಊಹಿಸಿ ಋಷಿಮುನಿಗಳು ಆಗಲೇ ಮಂತ್ರೌಷಧವನ್ನು ಸಂಹಿತೆಗಳಲ್ಲಿ ಬರೆದಿಟ್ಟಿರುವರು’ ಎಂಬಂತಹ ಅಪದ್ಧ, ಅಪಕ್ವ ವಿಚಾರಗಳನ್ನೇ ಹುಸಿಚಿಂತಕರು, ಜನನಾಯಕರು ತಾವೂ ನಂಬಿ, ಜನರನ್ನೂ ಕತ್ತಲಲ್ಲಿಟ್ಟ ಕಾರಣದಿಂದ ಒಂದೆಡೆ ಮೌಢ್ಯವು ಆರೋಗ್ಯ ಸಂಶೋಧನಾ ಕ್ಷೇತ್ರವನ್ನು ಬಡವಾಗಿಸಿದ್ದರೆ ಇನ್ನೊಂದೆಡೆ ಖಾಸಗಿ ಬಂಡವಾಳವು ಅದನ್ನೊಂದು ಉದ್ದಿಮೆಯಾಗಿಸಿದೆ. ಖಾಸಗಿ ಆರೋಗ್ಯ/ಔಷಧ ಸಂಸ್ಥೆಗಳಿಂದ ಅತ್ಯಾಧುನಿಕ, ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದೆ ನಿಜ. ಆದರೆ ರೋಗಿಗಳು ಲಾಭತರುವ ಗ್ರಾಹಕರಾಗಿ ಮಾರ್ಪಟ್ಟಿದ್ದರಿಂದ ಖಾಸಗಿ ವಲಯದ ಸಂಶೋಧನೆಯ ವಿಶ್ವಾಸಾರ್ಹತೆ ಮತ್ತು ಉದ್ದೇಶ ಕುರಿತು ಅನುಮಾನ ಮೂಡುವಂತಾಗಿದೆ.

ಎಂದೇ ಜನಸರ್ಕಾರಗಳು ಔಷಧ ತಯಾರಿಕೆ, ಸಂಶೋಧನೆ, ರೋಗ ನಿಯಂತ್ರಣ ಕ್ಷೇತ್ರವನ್ನು ಬಂಡವಾಳಿಗರಿಗೆ ಕೈಯೆತ್ತಿ ಕೊಟ್ಟು ತಮ್ಮ ಜವಾಬ್ದಾರಿಯಿಂದ ಕಳಚಿಕೊಳ್ಳಲು ನೋಡದೇ, ಈ ನೆಲದ ಬೌದ್ಧಿಕ ಸಂಪನ್ಮೂಲವನ್ನು ಉಪಯೋಗಿಸಿಕೊಳ್ಳಬೇಕು. ಜನರ ಜೀವ ಪೊರೆಯುವ ಕೃಷಿ, ಆರೋಗ್ಯ, ಕ್ರೀಡೆ, ಶಿಕ್ಷಣಗಳಿಗೆ ದೇಶದ ಸುರಕ್ಷತೆಗೆ ಕೊಡುವಷ್ಟೇ ಹಣಕಾಸನ್ನು ತೆಗೆದಿರಿಸಿ ಲೋಕಹಿತ ಕಾಪಾಡಬೇಕು. ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದರೆ ಲಾಭವಿಲ್ಲ ಎಂದರಿತು ಆರೋಗ್ಯ ಸಂಶೋಧನೆಯನ್ನು ಚುರುಕುಗೊಳಿಸಬೇಕು. ಜಾತಿ-ಧರ್ಮ-ಲಾಭ-ನಷ್ಟ ಲೆಕ್ಕಾಚಾರ ಬಿಟ್ಟು ಭವಿಷ್ಯದ ಅಗತ್ಯಗಳನ್ನು ಊಹಿಸಿ ಕಾರ್ಯಪ್ರವೃತ್ತರಾಗುವ ದೂರದೃಷ್ಟಿಯ ಕನಸುಗಾರರು ಜನರನ್ನು ಮುನ್ನಡೆಸುವಂತಾಗಬೇಕು.



6 comments:

  1. ಇಂದಿನ ಗೊಂದಲದ ಸ್ಥಿತಿಯಲ್ಲಿರುವ ಜನತೆಗೆ ಬಹಳ ಉಪಯುಕ್ತವಾದ ಮಾಹಿತಿ.

    ReplyDelete
  2. ಅಯೋಮಯ ಸ್ಥಿತಿಯಲ್ಲಿ ಕಂಗಾಲಾಗಿರುವ ಜನತೆಗೆ ದಾರಿ ತೋರುವ ಕೈಗಂಬದಂತಿದೆ, ಲೇಖನ............
    ಕೆ.ಆರ್.ಉಮಾದೇವಿ ಉರಾಳ್.

    ReplyDelete
  3. ವಿಜ್ಞಾನದ ಅರಿವೂ ಇಲ್ಲದಂತೆ ಲಾಕ್ ಡೌನ್ ನಿಂದ ಸ್ವಾತಂತ್ರ್ಯ ಸಿಕ್ಕಿತ್ತು ಎಂದು ಕೆಲವರು ಸಂಭ್ರಮಿಸುತ್ತಿದ್ದರೆ.ಕೆಲವರು ನರಳುತ್ತಿದ್ದಾರೆ ನಮ್ಮ ದೇಶದ ಸರಕಾರ ಜನರಿಗೆ ತಟ್ಟೆ ಬಾರಿಸಿ,ದೀಪ ಹಚ್ಚಿ, ದೇವಸ್ಥಾನ ತೆರೆದು ದೇವರ ದರ್ಶನ ಪಡೆದು ಕೊರೊನಾ ಮಹಾಮಾರಿ ಓಡಿ ಹೋಗುತ್ತದೆ ಎಂಬಂತೆ ಬಿಂಬಿಸುತ್ತಿದೆ.ಜನರಲ್ಲಿ ವಿಜ್ಞಾನದ ಅರಿವು ಮೂಡಿಸುವದು ಬಿಟ್ಟು ಅಜ್ಞಾನ ಕಡೆಗೆ ದುಡುವುದು ವಿಪರ್ಯಾಸದ ಸಂಗತಿ.ಇಂಥಹ ಸಂದರ್ಭದಲ್ಲಿ ವೈಜ್ಞಾನಿಕ ಅರಿವು ಮೂಡಿಸುವ ಲೇಖನ. ತುಂಬಾ ಧನ್ಯವಾದಗಳು ಮೇಡಂ ಮಲ್ಲಿನಾಥ ಎಸ್ ನಿಂಬರಗಿ, ಕಲಬುರಗಿ

    ReplyDelete
  4. ಲೇಖನ ಸಮಯೋಚಿತವಾಗಿದೆ. ಸ್ವತಃ ವೈದ್ಯರಾದ ನಿಮಗೆ ಆ ಕ್ಷೇತ್ರದ ಒಳಹೊರಗುಗಳು ನಮಗಿಂತ ಚನ್ನಾಗಿ ತಿಳಿದಿರುತ್ತದೆ. ಆದರೆ ವಿಜ್ಞಾನದ ಮೇಲಿನ ರಾಜಕೀಕರಣ ಮತ್ತು ವ್ಯಾಪಾರೀಕರಣದ ಒತ್ತಡ ಎಂಥದ್ದು ಎಂಬುದು ನನ್ನಂತಹ ಸಾಮಾನ್ಯರಿಗೂ ಅರ್ಥವಾಗುವಷ್ಟು ಢಾಳಾಗಿದೆ ಈಗ. ಹಿಂದೆ ಕೂಡ ಇಂತಹ ಒತ್ತಡಗಳು ಬಂದ ಸಂದರ್ಭದಲ್ಲಿ ವಿಜ್ಞಾನ ಅದನ್ನು ಎದುರಿಸಿ ನಿಂತಿರುವ ಉದಾಹರಣೆಗಳಿರುವುದರಿಂದ ಈಗಲೂ ವಿಜ್ಞಾನ ತನ್ನ ಸ್ವಾಯತ್ತತೆಯನ್ನು ಉಳಿಸಿಕೊಳ್ಳಲು ಯತ್ನಿಸುತ್ತದೆ ಎಂಬುದೊಂದು ಆಶಾವಾದ. ಇಷ್ಟಾಗಿಯೂ ಕುತೂಹಲಕ್ಕಾಗಿ ಒಂದು ಪ್ರಶ್ನೆ. ವ್ಯಾಪಾರೀಕರಣದ ಕಾರಣದಿಂದಾದರೂ ಸರಿ ಸಂಶೋದನೆಗೆ ದೊಡ್ಡ ಪ್ರಮಾಣದ ಆರ್ಥಿಕ ನೆರವು ಈಗ ಹರಿದು ಬರುತ್ತಿದೆ. ಮಾಹಿತಿ ತಂತ್ರಜ್ಞಾನದ ನೆರವಿನಿಂದ ವೈದ್ಯಕೀಯ ದತ್ತಾಂಶ ಸಂಗ್ರಹಣೆ, ವಿನಿಮಯ ಮತ್ತು ಸಂವಾದ ಸುಗಮವಾಗುತ್ತಿದೆ. ಸಂಶೋಧನೆಗೆ ಪೂರಕವಾದ ಸಲಕರಣಗಳು, ವೈಧಾನಿಕತೆಯ ಹೊಸ ದೃಷ್ಟಿಕೋನಗಳು ಇತ್ಯಾದಿಗಳಿಂದಾಗಿ ಇಂದಿನ ಲಸಿಕೆಯ ಕೆಲಸ ತ್ವರಿತವಾಗಬಹುದಲ್ಲವೆ? (ತ್ವರಿತ ಎಂದರೆ ನಾಳೆ ಎನ್ನುವ ಅರ್ಥದಲ್ಲಿ ಅಲ್ಲ) ಹಲವು ವಿಜ್ಞಾನಿಗಳ ಬಯಾಗ್ರಫಿಗಳನ್ನು ಗಮನಿಸಿದರೆ ಇವುಗಳಿಗಾಗಿ ಅವರು ಪಟ್ಟ ಪಾಡು ಎದ್ದು ಕಾಣುತ್ತದೆ.

    ReplyDelete
    Replies
    1. ಪ್ರಿಯ ಮೇಡಂ, ತಂತ್ರಜ್ಞಾನದ ಸಹಾಯದಿಂದ ವೈದ್ಯಕೀಯಕ್ಕೆ ಬಹಳ ನೆರವಾಗಿದೆ. ಎಂದೇ ಒಂದು ಜೀವಮಾನ ವ್ಯಯಿಸದೇ ಎರಡು ವರುಷಗಳಲ್ಲಿ ಲಸಿಕೆ ಕಂಡುಹಿಡಿಯಬಹುದು. ಆದರೆ ಈಗ ಪ್ರತಿ ಸಂಶೋಧನೆ, ಹೊಸ ಔಷಧ, ಸೇವೆಯ ಹಿಂದೆ ಇರುವ ಆರ್ಥಿಕ ಪ್ರಾಯೋಜಕತ್ವ ಬೇಷರತ್ತಾಗಿಲ್ಲ. ಹಾಗಾಗಿ ಯಾವುದು ಎಷ್ಟು ನಂಬಲರ್ಹವೋ ಎಂದು ತಿಳಿಯದ ಅಯೋಮಯ ಪರಿಸ್ಥಿತಿ ಇದೆ. ಹೊಚ್ಚಹೊಸದಾಗಿ ಮಾರುಕಟ್ಟೆಗೇ ಬರುತ್ತಲೇ ಇರುವ ಅಸಂಖ್ಯ ಹೊಸಹೊಸ ಔಷಧಿಗಳನ್ನು ಪ್ರಯೋಗಿಸಲು ನನಗಂತೂ ಇದೇ ಅನುಮಾನವಿದೆ. ಕಾಲದ ಉಬ್ಬೆಯಲ್ಲಿ ಪಕ್ವವಾಗದಿದ್ದುದು ತಿನ್ನಬಲ್ಲ ಹಣ್ಣಾಗದು ಎನ್ನುವುದು ನನ್ನ ಭಾವನೆ :):).

      Delete