Saturday, 20 May 2023

Chennabhairadevi Chaturmukha Basadi - ಗೇರುಸೊಪ್ಪೆ ಸೀಮೆಯ ರಾಣಿ ಚೆನ್ನಭೈರಾದೇವಿ-ಚತುರ್ಮುಖ ಬಸದಿ

 ಕಾನುಹಾದಿ, ನದಿ, ಬಸದಿಯೂ, ಮತ್ತದರ ಕಾಳುಮೆಣಸಿನ ರಾಣಿಯೂ.. 


ಕತ್ಲೆಕಾನಿನ ನಟ್ಟನಡುವೆ 

ಸುಮಾರು ೩೦ ವರ್ಷಗಳ ಕೆಳಗೆ, ಉತ್ತರಕನ್ನಡವೆಂಬ ೮೩% ಅಡವಿ, ೧೭% ಜನವಸತಿಯಿರುವ ಹಸಿರುಮಯ ಜಿಲ್ಲೆಗೆ ನಾವು ಬಂದ ಹೊಸತು. ಹೊಸನೆಲದ ಮೂಲೆಮೂಲೆ ನೋಡುವ ತವಕ. ಎಲ್ಲರ ಬಾಯಲ್ಲೂ ನಲಿಯುವ ಕತ್ಲೆಕಾನಿನ ಗೇರುಸೊಪ್ಪೆಗೆ ಹೊರಟಿದ್ದೆವು. ೩೦ ಕಿ.ಮೀ. ಬೈಕಿನಲ್ಲಿ ಹೋಗಿ ಶರಾವತಿ ದಂಡೆಯ ತನಕ ನಡೆದೆವು. ನೀರು ಎಲ್ಲಿಯವರೆಗೆ ಏರಿದರೆ ಎಷ್ಟು ಅಪಾಯ ಎಂದು ಸೂಚಿಸುವ ಹಸಿರು-ಹಳದಿ-ಕೆಂಪು ಪಟ್ಟಿಗಳ ‘ಪ್ರವಾಹ ಅಪಾಯ ಸೂಚನಾ ಫಲಕ’ವು ನದಿಯೊಳಗೆ ನಿಂತಿತ್ತು. ದಡದಲ್ಲಿ ನಿಲ್ಲಿಸಿದ್ದ ದೋಣಿ ಕರೆದು ಶರಾವತಿ ನದಿಗಿಳಿದೆವು. ಒಂದರ್ಧ ಗಂಟೆ ಪಯಣಿಸಿ, ತಾರಿಯಲ್ಲಿಳಿದು ಅಂಬಿಗರಿಂದ ದಾರಿ ಗುರುತು ಪಡೆದು ದಟ್ಟ ಕಾಡಿನೊಳಗೆ ನಡೆದು ಹೋದೆವು. ಹಿಡಿದ ದಾರಿ ಸರಿಯಿದೆಯೇ ಎಂದು ಕೇಳಲು ದಾರಿ ಮೇಲೆ ಯಾರೂ ಸಿಗಲಿಲ್ಲ. ಕೆಸರು, ಮಣ್ಣಿನ ದಾರಿಯಲ್ಲಿ ನಡೆದು, ಅರೆಬರೆ ಶಿಥಿಲಾವಸ್ಥೆ ತಲುಪಿದ ಬಸದಿ ತಲುಪಿ ಅಯ್ಯಬ್ಬಾ ಎಂದು ಕುಳಿತೆವು. ನಮ್ಮನ್ನು ಕಂಡು ಮರುಗಿದ ಭಟ್ಟರ ಮನೆಯಲ್ಲಿ ಆಸರ ಕುಡಿದು, ಅನಾರೋಗ್ಯದ ಅವರ ಕುಟುಂಬ ಪಡುವ ಕಷ್ಟಕ್ಕೆ ಮರುಗಿ, ನಿಧಿಗಳ್ಳರ ದುರಾಸೆಗೆ ಬಲಿಯಾದ ಬಸದಿಯ ದುಃಸ್ಥಿತಿಗೆ ತಳಮಳಿಸಿ ಹಿಂತಿರುಗಿ ಹೊರಟೆವು. ತಾರಿಯ ಬಳಿ ಬಂದರೆ ಅಂಬಿಗರು, ‘ನೀರು ಕಮ್ಮಿ ಅದೆ. ಆದ್ರೂ ಕುಳ್ಳಿ ನೋಡುವನಿ’ ಎಂದು ದೋಣಿ ಹತ್ತಿಸಿದರು. ಕಡಲ ಇಳಿತ ಬಂದೆರಗಿ ಹೊಳೆ ನೀರು ಜರ್ರನಿಳಿಯಿತು. ನಮ್ಮನ್ನು ಕೆಳಗಿಳಿಸಿ ಅಂಬಿಗರು ಕೈಯಲ್ಲಿ ದೋಣಿಯನ್ನೆಳೆದು ಮುಂದೊಯ್ದರು. ಜಾರುವ ಹೊಳೆ ತಳದ ಕಲ್ಲುಗಳ ಮೇಲೆ ಹುಶಾರಾಗಿ ಕಾಲಿಡುತ್ತಾ, ಬಟ್ಟೆ ಒದ್ದೆ ಮಾಡಿಕೊಂಡು ನೀರಿನಲ್ಲಿ ನಡೆಯತೊಡಗಿದೆವು. ಇಳಿತ ಮುಗಿದು ಭರತ ಬಂದದ್ದು ನಮ್ಮ ಕಾಲುಗಳ ಅನುಭವಕ್ಕೆ ನಿಲುಕುವ ಮೊದಲೇ ಅಂಬಿಗರಿಗೆ ತಿಳಿದುಹೋಯ್ತು. ದೋಣಿ ಹತ್ತಿಸಿ ಗೇರುಸೊಪ್ಪೆಯ ಹೊಳೆಬಾಗಿಲು ಮುಟ್ಟಿಸಿದರು.

ಕೆಲವರ್ಷಗಳ ಬಳಿಕ ಭರತ, ಇಳಿತ ನೆಚ್ಚುವ ದೋಣಿಯ ಸಹವಾಸವೇ ಬೇಡವೆಂದು ನಿಜಾರ್ಥದಲ್ಲಿ ಜೋಲಿಯಂತೆ ತೂಗುತ್ತಿದ್ದ, ಮರದ ಹಲಗೆಗಳನ್ನು ಹಗ್ಗದಲ್ಲಿ ಹೆಣೆದು ಮಾಡಿದ ತೂಗುಸೇತುವೆಯ ಮೇಲೆ ತಳದ ನದಿ ನೋಡುತ್ತಾ ದ್ವೀಪಗಳ ದಾಟಿ ಹೋದೆವು. ಅಡಿಕೆ ಮರದ ಸಾರದಲ್ಲಿ ಮಳೆಗಾಲದ ಹಳ್ಳ ದಾಟಿ ರೂಢಿಯಿದ್ದರೂ ಹಲಗೆಗಳ ನಡುವಿಂದ ಆಳದಲ್ಲಿ ಕಾಣುವ ವಿಶಾಲ ನದಿಯು ಭಯ ಹುಟ್ಟಿಸಿತು. ಭಯ, ರೋಮಾಂಚನಗಳ ನಡುವೆ ಬಸದಿ ಕಂಡು, ಒಯ್ದದ್ದು ತಿಂದು, ಇಂಬಳ-ಉಣುಗುಗಳಿಗೆ ರಕ್ತದಾನ ಮಾಡಿ ಹಿಂತಿರುಗಿದರೂ ಅವು ಕಚ್ಚಿದ ಜಾಗದಲ್ಲಿ ತಿಂಗಳುಗಟ್ಟಲೆ ಕೆರೆತ ಅನುಭವಿಸಿದೆವು.


ಮಗದೊಮ್ಮೆ ಹೋದದ್ದು ಶರಾವತಿ ಟೇಲ್‌ರೇಸ್ ಎಂಬ ಐದು ಮೆಗಾವ್ಯಾಟ್ ವಿದ್ಯುತ್ ತಯಾರಿಸುವ ಯೋಜನೆ ಬಿಸಿಬಿಸಿ ಸುದ್ದಿಯಲ್ಲಿದ್ದಾಗ. ಅದನ್ನು ವಿರೋಧಿಸುತ್ತಿದ್ದ ಪರಿಸರವಾದಿ ಡಾ. ಕುಸುಮಾ ಸೊರಬ ಅಪಘಾತಕ್ಕೀಡಾಗಿ ತೀರಿಕೊಂಡಿದ್ದರು. ಬರಲಿರುವ ಅವಘಡವನ್ನರಿಯದ ಜನ ಹೊಳೆಯಂತೆಯೇ ತಣ್ಣಗಿದ್ದರು. ಅಣೆಕಟ್ಟೆಯ ಕೆಲಸ ಭರದಿಂದ ನಡೆದಿತ್ತು. ಉತ್ತರ ಭಾರತದಿಂದ ಬಂದು ಬೀಡುಬಿಟ್ಟ ಕೆಲಸಗಾರರ ಕಾಲನಿಯ ಪಕ್ಕದಿಂದಾಸಿ, ಯಾರದೋ ಹೆಸರು ಹೇಳಿ ಪ್ರವೇಶ ಗಿಟ್ಟಿಸಿ ಅಣೆಕಟ್ಟೆಯೆದುರಿನ ಸೇತುವೆ ದಾಟಿದೆವು. ಸ್ವಲ್ಪ ದೂರ ಕೆಮ್ಮಣ್ಣಿನಲ್ಲಿ ಚಲಿಸಿದ ‘ಮಾರುತಿ’ಯು ಆಳಗುಂಡಿ, ಕೆಸರಿಗೆ ಹೆದರಿ ಢಕ್ಕೆಂದು ಅಲ್ಲೇ ನಿಂತಿತು. ಇನ್ನೇನು ಬಂತು, ಬಂತು ಎಂದು ಮಕ್ಕಳನ್ನು ಪುಸಲಾಯಿಸುತ್ತ ಮುಂಬರಿದೆವು. ಹೊಳೆಸಂಗ ತೊರೆದು  ಕಾಲುದಾರಿಯಲ್ಲಿ ನಡೆದು ಹೋಗುವಾಗ ತಣ್ಣೀರ ಹಳ್ಳ ಎದುರು ಹಾಯಿತು. ಆಳವಾಗಿ, ಶಾಂತವಾಗಿ, ಕೆಲವೆಡೆ ಹರಿವ ಸದ್ದೂ ಕೇಳದಷ್ಟು ಗಂಭೀರವಾಗಿ, ದಿಕ್ಕು ಬದಲಿಸುತ್ತ ಶರಾವತಿ ನಮ್ಮ ಎಡಬಲ ಹರಿಯುತ್ತಿದ್ದಳು. ರಸ್ತೆಯ ಇಕ್ಕೆಲದಲ್ಲೂ ಕತ್ತಲೆ ಕಾನು. ನಂದಿ, ಮತ್ತಿ, ಸಾಗವಾನಿ, ಭರಣಿಗೆ, ಶಿವನಿ, ಹೆಬ್ಬಲಸು, ಮಾವು ಮುಂತಾದ ಹೆಸರರಿಯದ ನೂರಾರು ಜಾತಿಯ ಹೆಮ್ಮರಗಳು. ಎಲ್ಲೆಲ್ಲೂ ಬೆತ್ತ. ರಸ್ತೆ ಮೇಲೂ ಮೈಚಾಚಿದ್ದ ಬೆತ್ತದ ಹಿಂಡಲು ಚರ್ಮ ಸೀಳದಂತೆ ಎಚ್ಚರಿಕೆಯಿಂದ ನಡೆದೆವು. ಅಂತೂಇಂತೂ ಬಸದಿ ತಲುಪಿದಾಗ ಪುರಾತತ್ತ್ವ ಇಲಾಖೆಯ ಬೋರ್ಡು ಸ್ವಾಗತಿಸಿತು. ಸುತ್ತಮುತ್ತ ಸ್ವಚ್ಛವಾಗಿ ಕಲ್ಲು ಹಾಸು ಹಾಸಿಕೊಂಡು ಕೊಂಚ ಸುಧಾರಣೆ ಕಂಡಿತ್ತು.

ಈಗಿನ ಕತೆ ಬೇರೆ. ಬಸದಿಗೆ ಹೋಗಲು ಕಿರಿದಾದ ಡಾಂಬರು ರಸ್ತೆ ಆಗಿದೆ. ಯಾರ ಪ್ರಭಾವ, ಅನುಮತಿಯಿಲ್ಲದೇ ಅಣೆಕಟ್ಟೆಯೆದುರಿಂದಲೇ ವಾಹನದಲ್ಲಿ ಹೋಗಲು ಸಾಧ್ಯವಿದೆ. ಇಷ್ಟು ಸಲೀಸಾದ ಮೇಲೂ ನಮ್ಮೂರ ಮುಕ್ಕಾಲು ಪಾಲು ಜನ ಬಸದಿ ನೋಡಿಲ್ಲ, ‘ಅಲ್ಲಿಗ್ ಹೋಪುದ್ ರಾಶೀ ಕಷ್ಟ’ ಅಂತಲೇ ಭಾವಿಸಿದ್ದಾರೆ. ಆದರೆ ವಾರಕ್ಕೊಂದು ದೇಶ ನೋಡುವ, ದಿನಕ್ಕೆರೆಡು ಊರು ನೋಡುವ, ಜಾಲತಾಣಗಳಲ್ಲಿ ಪ್ರವಾಸಕಥನಗಳನ್ನು ಹೇಳುವುದೇ ಬದುಕಾಗಿರುವ ತಿರುಗಾಡಿಗಳು ಬಂದುಹೋಗುತ್ತಿದ್ದಾರೆ. ಇಲ್ಲಿಯ ಚರಿತ್ರೆ, ಜನಜೀವನದ ಆಳಕ್ಕಿಳಿಯದೇ ತಪ್ಪುತಪ್ಪು ವ್ಯಾಖ್ಯಾನಗಳ ಮಾಡುತ್ತ ಮೋಜು ಮಾಡಲಿಚ್ಛಿಸುವ ಪ್ರವಾಸಿಗರನ್ನು ಕರೆಯುತ್ತಿದ್ದಾರೆ. ‘ಇಲ್ಲಿ ನೆಟ್ವರ್ಕೇ ಇಲ್ಲ ಬ್ರೋ, ಮ್ಯಾಪೂ ಹಾಕಕ್ಕಾಗಲ್ಲ. ಸ್ವಲ್ಪ ಊಟತಿಂಡಿ, ನೆಟ್ವರ್ಕ್ ಇಷ್ಯೂ ಸುಧಾರಿಸ್ಬುಟ್ರೆ ಗುರೂ, ಈ ಜಾಗ ಸಖತ್ ಡೆವಲಪ್ ಆಗುತ್ತೆ. ಆಗ ನೋಡಿ ದೇವ್ರೂ, ಕೈಕಾಲಿಡಕ್ಕಾಗಲ್ಲ, ಅಷ್ಟು ಟೂರಿಸ್ಟ್ಸ್ ಬರ‍್ತಾರೆ’ ಎನ್ನುತ್ತಾರೆ. ಯಾರೂ ನೋಡದ ಲೋಕದಲ್ಲಿ ಸಿನಿಮಾದಂತೆ ತಮ್ಮ ಮದುವೆ ಆಗಬೇಕೆಂಬ ಭ್ರಮೆಯ ನವದಂಪತಿಗಳು ಸಹಾ ಮೇಕಪ್ ತಂಡ, ಸ್ಟುಡಿಯೋ ತಂಡದೊಡನೆ ಬಂದು ಮೂಲೆಮೂಲೆಗಳನ್ನು ತಡಕುತ್ತಿದ್ದಾರೆ.

ಆದರೆ, ‘ಓ ಅರಹಂತರೇ, ಈ ಜಾಗ ಅಭಿವೃದ್ಧಿಯಾಗಿ ಹೆಚ್ಚೆಚ್ಚು ಜನ ಬರುವುದೂ ಬೇಡ. ಸೆಲ್ಫಿಯ ಉನ್ಮಾದದಲ್ಲಿ ತಿಂದು, ಕುಡಿದು ಬಿಸಾಡಿ ಕಾಡು, ನದಿ, ಝರಿಗಳು ಗಬ್ಬೆದ್ದು ನಾರುವುದೂ ಬೇಡ. ಈಗಿರುವಂತೆ ದಟ್ಟಕಾಡಿನ ನಟ್ಟನಡು ನೀವು ಕಷ್ಟಲಭ್ಯರಾಗಿಯೇ ಇರಿ. ಬರಬೇಕೆನ್ನುವವರು ಕಷ್ಟಪಟ್ಟೇ ಬರುವಂತಿರಲಿ’ ಎಂದು ನಾವು ಪ್ರಾರ್ಥಿಸುತ್ತಿದ್ದೇವೆ.

ಚತುರ್ಮುಖ ಬಸದಿ


ಜೈನಮತದಲ್ಲಿ ಸೃಷ್ಟಿಕರ್ತ ದೇವರ ಪರಿಕಲ್ಪನೆಯಿಲ್ಲ. ಪೂಜನೀಯ, ಆದರ್ಶ ಮಾನವರಾದ ತೀರ್ಥಂಕರರ ಬಿಂಬಗಳು ಬಸದಿಯಲ್ಲಿರುತ್ತವೆ. ತೀರ್ಥ ಎಂದರೆ ಧರ್ಮ. ಧರ್ಮೋಪದೇಶ ಮಾಡುವವರು, ಧರ್ಮವೆಂಬ ದೋಣಿಯ ಮೂಲಕ ಮಾರ್ಗದರ್ಶನ ಮಾಡಿದವರು ತೀರ್ಥಂಕರರು. ರಾಗದ್ವೇಷ ಜಯಿಸಿದ ಜಿನರು, ವೀತರಾಗರು, ಅರಿಹಂತರು ಅವರು. ತೀರ್ಥಂಕರರ ಬಿಂಬವಿರುವ, ಜಿನಮುನಿಗಳಿಗಾಗಿ ಕಟ್ಟಿದ ಮಂದಿರ ಜಿನಾಲಯ ಅಥವಾ ಬಸದಿ. ಅಂಥದೊಂದು ಬಸದಿಯು ನದಿ ತಳದ ಕರಿಬಂಡೆಯೇ ಎದ್ದುಬಂದು ಮೈಮೇಲೆ ಚಿತ್ತಾರ ಅರಳಿಸಿಕೊಂಡು ನಿಂತಿದೆಯೋ ಎನ್ನುವಂತೆ ಗೇರುಸೊಪ್ಪೆಯ ಶರಾವತಿ ತಟದ ದಿಬ್ಬದ ಮೇಲೆ ನಿಂತಿದೆ. ಆಚೀಚೆ ಗುಡ್ಡೆಯಾಗಿ ಬಿದ್ದ ಅವಶೇಷಗಳ ನಡುವಿನ ಅಗಲ ದಾರಿಯಲ್ಲಿ ನಡೆದು ೩೦-೪೦ ಮೆಟ್ಟಿಲೇರಿದರೆ, ಆಹಾ, ೫೦೦ ವರುಷಗಳಿಂದ ಏಳುಬೀಳು, ಹಗೆ, ಮೋಹ, ದ್ವೇಷ, ನಿರಾಸಕ್ತಿಗಳನ್ನು ತಮ್ಮೊಳಗೇ ಅರಗಿಸಿಕೊಂಡು ಲೋಕವನ್ನು ಅವಲೋಕಿಸುತ್ತ ಶಾಂತವಾಗಿ ಅರಹಂತರು ಕುಳಿತಿದ್ದರೆ ಅವರನ್ನು ವರ್ಣಿಸುವುದು ಹೇಗೆ?!

ಸಮವಸರಣದ ಬಸದಿಯನ್ನು ಪ್ರವೇಶಿಸುವವರ ಸರ್ವಸೊಕ್ಕುಗಳನ್ನು ಮುರಿಯುವಂತೆ ‘ಮಾನಸ್ತಂಭ’ ಎದುರು ಹಾಯುತ್ತದೆ. ಹಿನ್ನೆಲೆಗೆ ನಾಲ್ವರ ಬಿಂಬಗಳನ್ನು ನಾಲ್ಕು ದಿಕ್ಕಿಗೆ ಸಮನಾಗಿಟ್ಟು ಪೂಜಿಸುವ ಸರ್ವತೋಭದ್ರ ಚತುರ್ಮುಖ ಬಸದಿ ಕಾಣುತ್ತದೆ. ನಕ್ಷತ್ರಾಕಾರದ ಜಗತಿಯ ಮೇಲೆ ಕಟ್ಟಲ್ಪಟ್ಟ, ಹೊಯ್ಸಳ-ವಿಜಯನಗರ ಶೈಲಿಯ ಶಿಲ್ಪ ಕಲಾಕೃತಿ. ನಾಲ್ಕು ದ್ವಾರಗಳ ಬಸದಿಯನ್ನು ಯಾವ ಕಡೆಯಿಂದ ಹೊಕ್ಕರೂ ನಾಲ್ಕು ಕಂಬಗಳ ನವರಂಗ ಎದುರಾಗುತ್ತದೆ. ಒಳಗೆ ಅಂತರಾಳದಲ್ಲಿ ಅಲಂಕೃತ ಕಂಬಗಳ ನಡುವೆ ಭದ್ರಪೀಠದ ಮೇಲೆ ಕುಳಿತಿರುವ ಆದಿನಾಥ (ರಿಷಭನಾಥ), ಅಜಿತನಾಥ, ಶಾಂಭವನಾಥ, ಅಭಿನಂದನನಾಥ ಎಂಬ ತೀರ್ಥಂಕರರು ಕಾಣುತ್ತಾರೆ. ಜೈನಮತದ ೨೪ ತೀರ್ಥಂಕರರಲ್ಲಿ ಮೊದಲ ನಾಲ್ವರ ಮೂರ್ತಿಗಳು ಇವು.



೨೪ರಲ್ಲಿ ೨೧ ತೀರ್ಥಂಕರರು ನಿಂತ ಭಂಗಿ ‘ಕಾಯೋತ್ಸರ್ಗ’ದಲ್ಲಿ ನಿರ್ವಾಣ ಹೊಂದಿದ್ದರೆ, ಆದಿನಾಥ, ನೇಮಿನಾಥ ಮತ್ತು ಮಹಾವೀರರು ಪದ್ಮಾಸನದಲ್ಲಿ ನಿರ್ವಾಣ ಹೊಂದಿದವರು. ನಿರ್ವಾಣ ಭಂಗಿಯಲ್ಲೇ ಶಿಲ್ಪ ಕಟೆಯಬೇಕೆಂದು ಜೈನ ಶಿಲ್ಪಶಾಸ್ತ್ರ ಹೇಳಿದರೂ ಇಲ್ಲಿ ಎಲ್ಲರೂ ಎಡಗಾಲ ಮೇಲೆ ಬಲಗಾಲು ಇಟ್ಟು, ಹಸ್ತವನ್ನು ಒಂದರಮೇಲೊಂದಿಟ್ಟು ಧ್ಯಾನಸ್ಥರಾಗಿ ಪಲ್ಯಂಕಾಸನದಲ್ಲಿ ಕುಳಿತಿದ್ದಾರೆ. ಅವರನ್ನು ಪೀಠದಲ್ಲಿರುವ ಸಂಕೇತಗಳಿಂದ (ಆದಿನಾಥ-ವೃಷಭ, ಅಜಿತನಾಥ-ಆನೆ, ಶಾಂಭವನಾಥ-ಕುದುರೆ, ಅಭಿನಂದನನಾಥ-ಕಪಿ), ಅವರ ಸಹಚರ ಯಕ್ಷಯಕ್ಷಿಯರಿಂದ ಯಾವುದು ಯಾರೆಂದು ಗುರುತಿಸಬಹುದು. ತಲೆಯ ಮೇಲೆ ಜೈನಪ್ರಭಾವವನ್ನು ಬಿಂಬಿಸುವ ಮುಕ್ಕೊಡೆಯಿಂದ ಆದಿನಾಥ ಮೂರ್ತಿಯನ್ನು ಗುರುತಿಸಬಹುದು. 

ಚತುರ್ಮುಖದ ದಕ್ಷಿಣ ಬಾಗಿಲವಾಡದಲ್ಲಿ ಗಜಲಕ್ಷ್ಮಿಯಿದ್ದಾಳೆ. ಮಿಕ್ಕೆಲ್ಲ ಕಡೆ ಧ್ಯಾನಸ್ಥ ತೀರ್ಥಂಕರರೇ ಇದ್ದಾರೆ. ನಾಲ್ಕು ದ್ವಾರಗಳ ಎರಡೂ ಕಡೆ ದ್ವಾರಪಾಲಕರು ಅಲಂಕೃತರಾಗಿ ದ್ವಿಭಂಗದಲ್ಲಿ ನಿಂತಿದ್ದಾರೆ. ಹೊರಾವರಣದ ಗೋಡೆಯಲ್ಲಿ ಸಾಲಭಂಜಿಕಾ ಶಿಲ್ಪಗಳಿವೆ. ಸುಂದರ ಕೆತ್ತನೆಯ ಜಾಲಂಧ್ರಗಳಿವೆ. ನಾಗರಶೈಲಿಯ ಪುಟ್ಟ ಗೋಪುರ, ಮಂಟಪಗಳಿವೆ. 

೭೦೦ ಎಕರೆಗಿಂತ ಹೆಚ್ಚು ಪ್ರದೇಶದಲ್ಲಿ ಹರಡಿಕೊಂಡ ಬಸದಿ ಸಮುಚ್ಚಯದ ಆಸುಪಾಸಿನಲ್ಲಿ ಪೂಜೆಗೊಂಡ ನಾಗಶಿಲ್ಪಗಳು ಕಂಡುಬರುತ್ತವೆ. ಭಾರತದ ಬಹುತೇಕ ಆದಿ ಮತಪಂಥಗಳಂತೆ ಜೈನರಲ್ಲಿಯೂ ನಾಗಾರಾಧನೆ ಇದೆ. ಪಾರ್ಶ್ವನಾಥ, ಸುಪಾರ್ಶ್ವನಾಥರಿಗೆ ತಲೆಮೇಲೆ ಹಾವಿನ ಕೊಡೆಯಿದೆ. ಪಾರ್ಶ್ವನಾಥರ ಯಕ್ಷ, ಯಕ್ಷಿಯರಾದ ಧರಣೇಂದ್ರ, ಪದ್ಮಾವತಿಯರು ನಾಗದಂಪತಿಗಳು ಎಂದೇ ವರ್ಣಿಸಲ್ಪಟ್ಟಿದ್ದಾರೆ.

ಇಲ್ಲಿ ಜೈನಮುನಿ ಸಮಂತಭದ್ರರ ಮಠವಿತ್ತು. ಶ್ರವಣಬೆಳಗೊಳದ ಶಾಖಾಮಠವಾಗಿದ್ದ ಅದರಲ್ಲಿ ಮುನಿವೃಂದವೂ, ವಿದ್ಯಾರ್ಥಿಗಳೂ ಇದ್ದರು. ಚತುರ್ಮುಖ ಬಸದಿಯ ಹತ್ತಿರದಲ್ಲೇ ಪಾರ್ಶ್ವನಾಥ ಬಸದಿ, ನೇಮಿನಾಥ ಬಸದಿಗಳಿವೆ. ಪಾರ್ಶ್ವನಾಥರ ಯಕ್ಷಿ ಜ್ವಾಲಾಮಾಲಿನಿ ಅಮ್ಮನವರ ದೇವಾಲಯವಿದ್ದು ಪೂಜೆ ನಡೆಯುತ್ತದೆ. ಬಸದಿಯ ಆಚೀಚೆ ೧೦೮ ಜೈನದೇವಾಲಯಗಳು ಇದ್ದವು. ಚತುರ್ಮುಖ ಬಸದಿಯನ್ನು ಕಲ್ಲಿನಲ್ಲಿ ಕಟ್ಟಿದ್ದರೆ ಸುತ್ತಮುತ್ತಲ ಬಸದಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಜಂಬಿಟ್ಟಿಗೆ ಕಲ್ಲಿನಲ್ಲಿ ಕಟ್ಟಿರಬಹುದು. ಎಲ್ಲೆಂದರಲ್ಲಿ ಪಾಳುಬಿದ್ದ ಗೋಡೆ, ಪಾಯ, ಕಂಬ, ಮಂಟಪಗಳ ಅವಶೇಷಗಳನ್ನು ನೋಡಿದರೆ ಹಾಗೆನಿಸುತ್ತದೆ. ಬಸದಿಯ ನಾಲ್ಕೂ ದಿಕ್ಕಿಗೆ ಕುದುರೆಯಲ್ಲಿ ಓಡಾಡುವ ದಾರಿಗಳಿದ್ದುವಂತೆ. ಬಳಸದ ಹಾದಿಯನ್ನು ಕಾಡು ಆವರಿಸಿಕೊಂಡ ಕಾರಣಕ್ಕೆ ಅವು ಕಾಣೆಯಾಗಿವೆ. ಅರಣ್ಯ ಉತ್ಪನ್ನಗಳ ಸಂಗ್ರಹ, ಶುದ್ಧೀಕರಣಕ್ಕೆಂದು, ಕುಡಿಯುವ ನೀರಿಗೆಂದು ತೋಡಿರಬಹುದಾದ ಹತ್ತಾರು ಬಾವಿಗಳು ಇಲ್ಲಿವೆ.

ಹತ್ತಿರದಲ್ಲಿಯೇ ಒಂದೆಡೆ ಜೈನದಾನ ಶಾಸನ, ಸಮಾಧಿಮರಣದ ಸ್ಮರಣೆಗೆ ನಿಲ್ಲಿಸಿದ ನಿಷಿದಿಗಲ್ಲು, ವೀರಗಲ್ಲು, ಮಹಾಸತಿಗಲ್ಲುಗಳನ್ನು ಜೋಡಿಸಿಟ್ಟಿದ್ದಾರೆ. ಬಹುತೇಕ ಶಾಸನಗಳು ‘ಮಹಾಮಂಡಲೇಶ್ವರ ಭೈರಾದೇವಿ ಅಮ್ಮನವರ ವರಕುಮಾರಿ ಮಹಾಮಂಡಲೇಶ್ವರ ಚೆನ್ನಭೈರಾದೇವಿ ಅಮ್ಮನವರು ಸಂಗೀತಪುರದಲ್ಲಿದ್ದುಕೊಂಡು ಭಟಿಕಳ ಮುಂತಾದ ಸಮಸ್ತ ರಾಜ್ಯವನ್ನಾಳುತ್ತಿರಲು’ ಬರೆಸಲ್ಪಟ್ಟವೇ ಆಗಿವೆ. ಇವಲ್ಲದೆ ಲೋಹಶಾಸನ, ಸ್ಮಾರಕ ಶಿಲ್ಪಗಳೂ ಸಾಕಷ್ಟು ದೊರೆತಿವೆ. ಈ ಪ್ರದೇಶದಲ್ಲಿ ದಾನಶಾಸನಗಳು ವಿಪುಲವಾಗಿ ದೊರಕಿವೆ. ಬಹುತೇಕ ಶಾಸನಗಳನ್ನು ಓದಿ ದಾಖಲಿಸಲಾಗಿದೆ. ಕೆಲವು ಧರ್ಮಸ್ಥಳದ ಮಂಜೂಷಾ ಸಂಗ್ರಹಾಲಯ ತಲುಪಿದ್ದರೆ ಮತ್ತೆ ಕೆಲವು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಸಂಶೋಧನಾ ಸಂಸ್ಥೆಯ ವಸ್ತುಸಂಗ್ರಹಾಲಯದಲ್ಲಿವೆ. ಉಳಿದವು ಇಲ್ಲಿ ಪಂಚಭೂತಗಳಿಗೊಡ್ಡಿಕೊಂಡು ಸವೆಯುತ್ತಿವೆ. 



ಜೈನ ಗೃಹಸ್ಥರಿಗೆ ಷಟ್ಕರ್ಮಗಳಲ್ಲಿ ದಾನ ಪ್ರಮುಖವಾದದ್ದು. ಆಹಾರ, ಅಭಯ, ಶಾಸ್ತ್ರ, ಭೈಷಜ (ಹಸಿದವರಿಗೆ ಅನ್ನ, ಸಂಕಟದಲ್ಲಿರುವವರಿಗೆ ಆಶ್ರಯ, ರೋಗಿಗಳಿಗೆ ಔಷಧಿ, ಅಭ್ಯಾಸಿಗಳಿಗೆ ಶಾಸ್ತ್ರಗ್ರಂಥ) ದಾನ ಮಾಡಿದರೆ ಪುಣ್ಯಪ್ರಾಪ್ತಿಯಾಗುತ್ತದೆಂಬ ನಂಬಿಕೆಯಿದೆ. ಜೈನದಾನ ಶಾಸನಗಳನ್ನು ಹಾಳು ಮಾಡಿದರೆ ಏನಾಗುವುದು ಎಂದು ಶಾಪಾಶಯವನ್ನೂ ಕೆತ್ತಲಾಗಿದೆ. 

ಗೇರುಸೊಪ್ಪೆ ಸೀಮೆಯ ಶಾಸನಗಳನ್ನು ಬ್ರಿಟಿಷ್ ಅಧಿಕಾರಿ ಕರ್ನಲ್ ಮೆಕೆಂಜಿ ಸ್ವಾತಂತ್ರ್ಯಪೂರ್ವದಲ್ಲಿಯೇ ಸಂಗ್ರಹಿಸಿದ್ದ. ೧೮೬೭ರಲ್ಲಿ ಅಜಂತಾ ಕೇವ್ ಟೆಂಪಲ್ ಕಮಿಷನ್ ಎಂದು ಆರಂಭವಾಗಿ ಕೊನೆಗೆ ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ಆದ ನಮ್ಮ ಹೆಮ್ಮೆಯ ಪುರಾತತ್ತ್ವ ಇಲಾಖೆಯು ಪ್ರತಿವರ್ಷ ‘ಆನ್ಯುವಲ್ ರಿಪೋರ್ಟ್ ಆಫ್ ಇಂಡಿಯನ್ ಎಪಿಗ್ರಫಿ’ ಪ್ರಕಟಿಸುತ್ತಿತ್ತು. ಇಲ್ಲಿನ ಶಾಸನಗಳನ್ನು ೧೯೨೦-೩೦ರ ಹೊತ್ತಿಗಾಗಲೇ ಓದಿ ಪ್ರಕಟಿಸಲಾಗಿತ್ತು. ಸ್ವಾತಂತ್ರ್ಯಾನಂತರವೂ ಅಧ್ಯಯನ ಮುಂದುವರೆದಿತ್ತು. ಎಂ. ಚಿದಾನಂದಮೂರ್ತಿ ೧೯೬೬ರಲ್ಲಿ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ನಡೆಸುವಾಗ ಇಲ್ಲಿಯ ಶಾಸನಗಳ ಮೇಲೆ ಬೆಳಕು ಚೆಲ್ಲಿದ್ದರು. ಅಲ್ಲದೇ ಪಿ.ಬಿ.ದೇಸಾಯಿ, ಆರ್. ನರಸಿಂಹಾಚಾರ್, ಹಂಪನಾ, ಸೂರ್ಯನಾಥ ಕಾಮತ್, ಕೆ. ಜಿ. ಭಟ್ ಸೂರಿ, ಕೆ. ಜಿ. ವಸಂತ ಮಾಧವ ಮೊದಲಾದವರು ಸಾಕಷ್ಟು ಅಧ್ಯಯನ ನಡೆಸಿ ಕರಾವಳಿ ಕರ್ನಾಟಕದ ಇತಿಹಾಸ ಅರಿತುಕೊಳ್ಳಲು ಕಾರಣರಾದರು. ಆದರೆ ಈಗಿನ ಆಳುವವರ ಇತಿಹಾಸ ಪ್ರಜ್ಞೆ, ಆಸಕ್ತಿಗಳು ಅಡ್ಡದಾರಿ ಹಿಡಿದಿರುವ ಕಾರಣ ಪುರಾತತ್ತ್ವ ಇಲಾಖೆ ಸಿಬ್ಬಂದಿಯಿಲ್ಲದೇ ಸೊರಗುತ್ತಿದೆ. ಕಣ್ಣೆದುರೇ ಶಾಸನ, ಗುಡಿ, ಕೋಟೆಗಳು ಕರಗಿಹೋಗುತ್ತಿದ್ದರೂ ಅದರ ಬಗೆಗೆ ಜನರ, ಜನಪ್ರತಿನಿಧಿಗಳ ಅಸಡ್ಡೆ ಕಂಗೆಡಿಸುವಂತಿದೆ. 

ಕೆಕ್ಕೇಕೆಕೆಕೆಕೆಕೆಕೆ

ಹೆಚ್ಚುಕಡಿಮೆ ೪೦೦ ವರುಷಗಳಿಂದ ಈ ಬಸದಿ ದುರಾಶೆಯ ಕಳ್ಳರ ಹಾರೆಗುದ್ದಲಿ ಪ್ರಯೋಗಕ್ಕೊಳಗಾಗಿ ತಾನೊಂದೇ ಈ ದಟ್ಟ ಕಾಡಿನಲ್ಲಿ ನಿಂತಿದೆ. ಬರುವವರಿಲ್ಲದೆ, ಹೋಗುವವರಿಲ್ಲದೆ, ಹೇಳುವವರು ಕೇಳುವವರು ಪೂಜಿಸುವವರು ನಂಬುವವರು ಇಲ್ಲದೆ, ಯಾರಿಲ್ಲದಿದ್ದರೂ ಲೋಕವಿದೆಯಲ್ಲ ಎನ್ನುವಂತೆ ಗಿಡಮರಪಕ್ಷಿಪ್ರಾಣಿಕ್ರಿಮಿಕೀಟ ಬಾವಲಿಗಳ ನಡುವೆ ಅರಹಂತರು ಇದ್ದಾರೆ. 

ಇಂತಹ ಕಡೆ ಅಷ್ಟುಹೊತ್ತು ಮೌನವಾಗಿ ಕೂರದಿದ್ದರೆ ಯಾವುದೂ ಎದೆಗಿಳಿಯದು ಎನಿಸಿ ಸುಮ್ಮನೇ ಕುಳಿತೆವು.

ಮುಗಿಲೆತ್ತರ ಬೆಳೆದ ಮರಗಳ ನಡುವೆ ಕಲ್ಲಿನಲ್ಲಿ ಅರಳಿದ ಹೂವೋ ಎನ್ನುವಂತೆ ಬಸದಿ ನಿಂತಿದೆ. ಆವರಣದ ನಂದಿಮರ ಎಷ್ಟು ನೂರು ವರ್ಷ ಹಳೆಯದೋ? ಆಚೀಚೆ ರಾಶಿಗೊಂಡು ಬಿದ್ದ ಕಲ್ಲುಗಳಲ್ಲಿ ಯಾರ‍್ಯಾರ ಬೆವರು, ಹೆಸರು ಅಡಗಿದೆಯೋ? ದಿಬ್ಬದಡಿ ಎಷ್ಟು ಗುಡಿಗಳಿವೆಯೋ? ಇದರಲ್ಲಿ ರಾಣಿಯ ಅರಮನೆ ಯಾವುದೋ? ಸೆರೆಮನೆ ಯಾವುದೋ? ಆಸ್ಥಾನ, ಪೂಜಾಗೃಹ, ಪುರಪ್ರಮುಖರ ಮನೆಗಳೆಲ್ಲ ಎಲ್ಲಿದ್ದವೋ? ಇಲ್ಲೇ ಕುಳಿತು ಚೆನ್ನೆಯೂ, ಜೈನಮುನಿಗಳೂ, ಶ್ರಾವಕರೂ ಅದಾವ ಪ್ರಾರ್ಥನೆಗಳನ್ನು ವಿಶ್ವಹೃದಯಕ್ಕೆ ತಲುಪಿಸಿದ್ದರೋ? ಪ್ರಕೃತಿಯು ಕಾಡಿನ ರೂಪದಲ್ಲಿ ಹಳೆಯ ಚಹರೆಗಳನ್ನು ಅಳಿಸಿದೆ. ಬಿದ್ದಕಲ್ಲುಗಳ ನಡುವಿಂದ ಗಿಡಮರಬಳ್ಳಿಗಳು ಮೈತಳೆದು ಹಸಿರು ಹೊದ್ದು ನಿಂತುಬಿಟ್ಟಿವೆ. ಯಾವುದರ ಅಡಿ ಏನಿದೆಯೋ? ಬಗೆಯುತ್ತ ಹೋದರೆ ಅನಾವರಣಗೊಳ್ಳುವ ಸತ್ಯಗಳನ್ನು ತಡೆದುಕೊಳ್ಳುವ ಶಕ್ತಿ ಈ ಕಾಲಕ್ಕೆ ಇದೆಯೋ ಇಲ್ಲವೋ? 

ಕಟಕಟಕಟಕಟ ಸದ್ದು. ಸದ್ದು ಹಿಂಬಾಲಿಸಿ ಕುತ್ತಿಗೆ ಮೇಲೆತ್ತಿಕೊಂಡಿತು. ಅದೋ ಅಲ್ಲಿ, ಕುನ್ನೇರಳೆ ಮರದ ಮೇಲೆ ಕಾಣುವ ಕ್ಯಾಸಾಳ. ಎರಡು ಮೊಳದಷ್ಟು ದೊಡ್ಡದಿರುವ ಕೆಂಪು-ಬಿಳಿ ಬಣ್ಣದ ಬೃಹತ್ ಮರದಳಿಲು ಅಥವಾ ಕೆಂದಳಿಲು ಮುಂಗಾಲುಗಳ ನಡುವೆ ಏನನ್ನೋ ಹಿಡಿದು ತಿನ್ನುತ್ತಿದೆ. ಅದಲ್ಲಿ ಕೂತಿರುವಂತೆಯೇ ಮತ್ತೊಂದು ಬಂತು. ಅಟ್ಟಾಡಿಸಿಕೊಂಡು ಒಂದರ ಹಿಂದೊಂದು ಓಡಿದವು. ಜಗಳವೋ, ಚಿನ್ನಾಟವೋ ಅವರ ಭಾವ-ಭಾಷೆ ಗೊತ್ತಿರದ ನಾವು. ಜೇನ್ನೊಣಗಳ ಝೇಂಕಾರ, ಪುಟ್ಟ ಚಿಟ್ಟುಗುಟುರ ಹಕ್ಕಿಯ ಟೊಂಯ್ಞ್ಗ್ ಟೊಂಯ್ಞ್ಗ್ ಎಂಬ ಲೋಹಕುಟ್ಟಿದ ಸದ್ದು; ಕುರ್ರೋ ಕುಟ್ರ್ ಕುಟ್ರ್ ಕುಟ್ರ್ ಎಂಬ ಹಸಿರೆಲೆಗಳ ನಡುವೆ ಅಡಗಿದ ಸೊಪ್ಪುಕುಟುರ ಹಕ್ಕಿಯ ಹಾಡು; ಕಾಡಿಗೆ ಕಾಡೇ ಪ್ರತಿಧ್ವನಿಸುವಂತೆ ಚಿಂವಚಿಂವಚಿಂವ ಎನ್ನುತ್ತ ಹಿಂಡುಹಿಂಡಾಗಿ ಸರ್ರಭರ್ರ ಹಾರುವ ಹೆಬ್ಬೆರಳಿನಷ್ಟು ದೊಡ್ಡದಿರುವ ಬಾಳೆಗುಬ್ಬಿಗಳು; ಕೊಳಪಳಕೊಳಪಳವೆಂಬ ಪಿಕಳಾರ, ಯುಗಾದಿಯ ಕೋಗಿಲೆ, ಗುಟುರುಗುಡುವ ಕೆಂಬೂತ, ಪದಗಳಲ್ಲಿ ಹಿಡಿದಿಡಲಾಗದ ಕದುಗ ಹಕ್ಕಿಯ ಕರೆ, ಕೆಕ್ಕೇಕೆಕ್ಕೆಕ್ಕೆಕ್ಕೆಕ್ಕೆಕ್ಕೆ ಎಂದು ವಿಚಿತ್ರವಾಗಿ ಸದ್ದು ಮಾಡುತ್ತ ನಿಧಾನ ಬಂದು ಕೂತ ಮಂಗಟ್ಟೆ ಹಕ್ಕಿಯ ಗೌಜು ಮತ್ತು ಕಾಡಿನ ಶಬ್ದವೈವಿಧ್ಯಕ್ಕೆ ಬೆರಗಾಗಿ ಲಬಡಬಲಬಡಬವೆನ್ನುವ ನಮ್ಮ ಹೃದಯಗಳು - ಓಹ್ ಕವಿವಾಣಿಯೇ, ಈ ಜಗಹೃದಯ ಆನಂದಮಯವೇ!!

ಸಾಳುವರು

ಇದನ್ನು ಕಟ್ಟಿಸಿದ ರಾಣಿ ಚೆನ್ನಭೈರಾದೇವಿ (ಆಳ್ವಿಕೆ ಕ್ರಿ.ಶ. ೧೫೫೨-೧೬೦೬) ಸಾಳುವ ವಂಶಕ್ಕೆ ಸೇರಿದವಳು. ಸಾಳುವರ ರಾಜಧಾನಿಯಾಗಿದ್ದ ಗೇರುಸೊಪ್ಪವು ಉತ್ತರಕನ್ನಡ ಜಿಲ್ಲೆ, ಹೊನ್ನಾವರ ತಾಲೂಕಿನ ಶರಾವತಿ ನದೀದಂಡೆಯ ಮೇಲಿದೆ. ನದಿಯ ಉತ್ತರ ದಂಡೆಗೆ ಗೇರುಸೊಪ್ಪ ಇದ್ದರೆ ದಕ್ಷಿಣ ದಂಡೆಯಲ್ಲಿ ನಗಿರೆಯಿತ್ತು. ಅಲ್ಲಿ ನೂರಾರು ಜೈನ ಬಸದಿಗಳಿದ್ದ ಕಾರಣ ಬಸದಿಕೇರಿಯೆಂದೂ ಕರೆಯುತ್ತಿದ್ದರು. (ಈಗದನ್ನು ನಗರಬಸ್ತಿಕೇರಿ ಎಂದು ಕರೆಯುತ್ತಾರೆ). ಎರಡು ಶತಮಾನಗಳಿಗೂ ಹೆಚ್ಚು ಕಾಲ ಸಾಳುವ ರಾಜರಿಂದ ಆಳಲ್ಪಟ್ಟ ಈ ಪ್ರದೇಶವು ‘ಹೈವೆ’ ಎಂದೂ ಕರೆಸಿಕೊಂಡಿತ್ತು. ವ್ಯಾಪಾರ, ವ್ಯವಹಾರ, ವಾಣಿಜ್ಯ ವಹಿವಾಟು ಕೇಂದ್ರವಾಗಿದ್ದ ಗೇರುಸೊಪ್ಪೆಯು ಸುಂದರ ದೇವಾಲಯ, ಬಸದಿಗಳಿಗೂ ಪ್ರಸಿದ್ಧವಾಗಿತ್ತು. ಹೊನ್ನಾವರವು ಒಳನಾಡು ಬಂದರಾಗಿಯೂ, ಭಟ್ಕಳವು ವಿದೇಶೀ ಬಂದರಾಗಿಯೂ ಪ್ರಖ್ಯಾತವಾಗಿದ್ದವು. ಬಂದರುಗಳ ಸಲುವಾಗಿಯೇ ಯುದ್ಧ, ಮೈತ್ರಿ ಎರಡೂ ಏರ್ಪಟ್ಟವು. ಆಗ ಭಾರತಕ್ಕೆ ವಿದೇಶಿ ವರ್ತಕರು ಮಸಾಲೆ ಪದಾರ್ಥಗಳ ವ್ಯಾಪಾರಕ್ಕಾಗಿಯೇ ಬರುತ್ತಿದ್ದರು. ನಿತ್ಯಹರಿದ್ವರ್ಣ ಕಾಡುಗಳಲ್ಲಿ ಸಹಜವಾಗಿ ಸೊಂಪಾಗಿ ಬೆಳೆಯುತ್ತಿದ್ದ ಕಾಡುಮೆಣಸಿನ ಬಳ್ಳಿ ಖಾರವಾದ ಆದರೆ ಹಗುರವಾದ ಮೆಣಸಿನ ಕಾಳನ್ನು ಸುರಿಸುತ್ತಿತ್ತು. ಮಲೆನಾಡಿನ ಸಣ್ಣಪುಟ್ಟ ಪಾಳೆಯಪಟ್ಟುಗಳಿಗೂ ಇದು ವಿದೇಶೀ ವಿನಿಮಯದ ಮುಖ್ಯ ವಸ್ತುವಾಗಿತ್ತು. ಉತ್ತಮ ಜಾತಿಯ ಕುದುರೆಗಳನ್ನು ಹಾಗೂ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು. 

ಈಗಿನ ಉತ್ತರ ಕನ್ನಡವನ್ನು (ಹೈವೆ) ಸಾಳುವ ವಂಶದವರೂ, ದಕ್ಷಿಣ ಕನ್ನಡವನ್ನು (ತುಳುನಾಡು) ತುಳುವ ವಂಶದವರೂ ಆಳುತ್ತಿದ್ದರೆಂದು ಶಾಸನಗಳಲ್ಲಿ ಹೇಳಲಾಗಿದೆ. ಆದರೆ ಈ ಎರಡೂ ಹೆಸರುಗಳು ಅದಲುಬದಲಾಗುತ್ತಿದ್ದದ್ದೂ ಇದೆ. ವಿಜಯನಗರವನ್ನು ಆಳಿದವರು ತುಳುವ ಅರಸು ಮನೆತನದವರು. ಆ ವಂಶದ ಮೂಲಪುರುಷರು ಯಾವುದೋ ಕಾಲಘಟ್ಟದಲ್ಲಿ ಹಂಪಿಗೆ ವಲಸೆ ಹೋಗಿರಬಹುದು. ಹಾಗೆಯೇ ಆ ಮನೆತನದ ಶಾಖೆಯೊಂದು ತಮಿಳುನಾಡಿನ ಉತ್ತರ ಆರ್ಕಾಟ್ ಜಿಲ್ಲೆಯ ದೇವಿಕಾಪುರಕ್ಕೂ ಹೋಗಿ ನೆಲೆಯಾಯಿತು. ಅದರ ಮತ್ತೊಂದು ಟಿಸಿಲು ಸಾಳುವ ವಂಶವಾಗಿ ನಾಲ್ಕುನೂರು ವರ್ಷ ಕರಾವಳಿಯಲ್ಲಿ ಆಳ್ವಿಕೆ ನಡೆಸಿತು.

೧೪ನೆಯ ಶತಮಾನದಲ್ಲಿ ಹೊಯ್ಸಳ ವೀರಬಲ್ಲಾಳನ ಸೈನಿಕನಾಗಿದ್ದ ಹೊನ್ನನೆಂಬುವನು ಸಾಳುವ ಅರಸು ಮನೆತನದ ಮೂಲ ವ್ಯಕ್ತಿ. ಹೊಯ್ಸಳರ ಅವನತಿಯ ಬಳಿಕ ದಟ್ಟಡವಿಯಿಂದಾವೃತವಾದ ನಗಿರೆ-ಹಾಡುವಳ್ಳಿಗಳಲ್ಲಿ ನೆಲೆ ನಿಂತು ಪಾಳೆಯಪಟ್ಟನ್ನು ಕಟ್ಟಿದನು. ಅವನ ಬಳಿಕ ಹೈವರಸನು ಹಾಡುವಳ್ಳಿ, ಭಟಕಳ, ಹೊನ್ನಾವರ, ಚಂದಾವರ, ಗೋಕರ್ಣ ಸೀಮೆಗಳನ್ನು ಆಳಿದನು. ವಿಜಯನಗರದ ಸಾಮಂತನಾಗಿ ಮಹಾಮಂಡಲೇಶ್ವರನೆಂಬ ಬಿರುದು ಪಡೆದನು. ಅವನ ಬಳಿಕ ದಾಯಾದಿ ಕಲಹ ಉಂಟಾಗಿ ಸಾಳುವ ಮನೆತನವು ಹಾಡುವಳ್ಳಿ ಮತ್ತು ನಗಿರೆ (ಗೇರುಸೊಪ್ಪ) ಎಂದು ಇಬ್ಭಾಗವಾಯಿತು. ಹಾಡುವಳ್ಳಿಯಲ್ಲಿ ಹೈವನ ಮಗ ಸಂಗಿರಾಯ ಮತ್ತು ಗೇರುಸೊಪ್ಪೆಯಲ್ಲಿ ಅವನ ಅಳಿಯ ಸಂಗಮ ರಾಜರಾದರು. ಇವೆರೆಡು ಸಣ್ಣ ರಾಜ್ಯಗಳ ಮಧ್ಯೆ ಸದಾ ಹಗೆ. ಒಬ್ಬರಮೇಲೊಬ್ಬರು ಯುದ್ಧ ಮಾಡಿ ಸಾವುನೋವುಗಳಾದವೇ ಹೊರತು ಯಾರೋ ಒಬ್ಬರ ಆಳ್ವಿಕೆ ಬರಲು ಸಾಧ್ಯವಾಗಲಿಲ್ಲ. 

ಸಂಗಿರಾಯನು ವಿಜಯನಗರದ ಮಾಂಡಲಿಕನಾಗಲು ಒಲ್ಲದೆ ಸ್ವತಂತ್ರ ರಾಜನಾಗಿರಬಯಸಿದನು. ಅದಕ್ಕಾಗಿ ಯುದ್ಧವನ್ನೂ ಮಾಡಿದನು. ಸಂಗಿರಾಯನ ಬಳಿಕ ಇಂದಗರಸ ಪಟ್ಟಕ್ಕೆ ಬಂದು ಕನಿಷ್ಟ ೬೦ ವರ್ಷ ರಾಜ್ಯಭಾರ ಮಾಡಿದನು. ಬಳಿಕ ಇಮ್ಮಡಿ ಸಂಗಿರಾಯ, ಇಮ್ಮಡಿ ಇಂದಗರಸ, ದೇವರಾಯ ಒಡೆಯ, ಗುರುರಾಯ ಒಡೆಯ ಮೊದಲಾದವರು ಆಳ್ವಿಕೆ ನಡೆಸಿದರು. ಇಮ್ಮಡಿ ದೇವರಾಯನು (೧೫೧೫-೧೫೫೦) ಮಡಗೋವೆಯ ಬಳಿ ನಡೆದ ಭೀಕರ ಯುದ್ಧದಲ್ಲಿ ಸೋಲನ್ನಪ್ಪಿ ೧೫೫೦ರಲ್ಲಿ ಸಾವನ್ನಪ್ಪಿದ ಬಳಿಕ ಇಮ್ಮಡಿ ದೇವರಾಯನ ಪತ್ನಿ ಹಾಡುವಳ್ಳಿಯ ಚೆನ್ನಾದೇವಿ ರಾಣಿಯಾಗಿ ಆಳ್ವಿಕೆ ನಡೆಸತೊಡಗಿದಳು. ಭೈರಾದೇವಿಯೆಂಬ ದಿಟ್ಟ ಮಹಿಳೆಯ ಮಗಳಾದ ಚೆನ್ನಾದೇವಿ ಈ ನೆಲದವಳೇ ಆದರೂ ಅವಳ ರಾಜ್ಯವನ್ನು ಕಸಿಯಲು ಪೋರ್ಚುಗೀಸರು ಪಿಳ್ಳೆನೆವ ತೆಗೆದರು. ಮೊದಲೇ ಆದ ಒಪ್ಪಂದದಂತೆ ತಮಗೆ ಕಪ್ಪ ಕೊಡಲಿಲ್ಲ ಮತ್ತು ತಮ್ಮ ಅನುಮತಿ ಪಡೆಯದೆ ಅರಬ್ಬರ ಹಡಗುಗಳಿಗೆ ಭಟಕಳದ ಬಂದರಿನಲ್ಲಿ ಆಶ್ರಯ ಕೊಟ್ಟಳು ಎಂಬ ಆರೋಪ ಹೊರಿಸಿ ಗೋವೆಯ ಪೋರ್ಚುಗೀಸರ ಮಂಡಲಾಧಿಕಾರಿ ಆಲ್ಫಾನ್ಸೋ ಡಿಸೋಜಾ ಮತ್ತವನ ೧೨೦೦ ಸೈನಿಕರ ದಂಡು ರಾಣಿಯ ವ್ಯಾಪಾರ ಕೇಂದ್ರಗಳನ್ನು ಮುತ್ತಿಗೆ ಹಾಕಿ, ಭಟಕಳವನ್ನು ಸುಟ್ಟು ಹಾಕಿತು. ರಾಣಿ ಪೋರ್ಚುಗೀಸರಿಗೆ ಕಪ್ಪ ಕೊಡುವಂತಾಯಿತು. ಸೋಲಿನಿಂದ ಕಂಗೆಟ್ಟು ಅವಳು ವೈರಾಗ್ಯ ಹೊಂದಿದ ಬಳಿಕ ತಂಗಿ ಚೆನ್ನಭೈರಾದೇವಿ ಪಟ್ಟಕ್ಕೆ ಬಂದಳು. ಆದರೆ ಅವಳು ಕಿರಿಯಳೆಂದು ಸೋದರಮಾವ ಕೃಷ್ಣದೇವರಸ ಆಡಳಿತ ನಡೆಸಿದನು. 

ಗೇರುಸೊಪ್ಪ ಹಾಡುವಳ್ಳಿಯ ಸಾಳುವರು ಜೈನಮತಾವಲಂಬಿಯಾಗಿದ್ದರು. ಭದ್ರಬಾಹು ಭಟ್ಟಾರಕರು ಚಂದ್ರಗುಪ್ತ ಮೌರ್ಯನೊಡನೆ ಬೆಳಗೊಳಕ್ಕೆ ಬಂದ ನೂರಿನ್ನೂರು ವರ್ಷಗಳಲ್ಲಿ ಕನ್ನಡ ನಾಡಿನೆಲ್ಲೆಡೆ ಜೈನಮತವು ಪಸರಿಸಿತು. ಉತ್ತರಕನ್ನಡದ ಬನವಾಸಿಯ ಕದಂಬರು ವೈದಿಕ ಮತಾವಲಂಬಿಯಾದರೂ ಜೈನಧರ್ಮದವರೊಡನೆ ವೈವಾಹಿಕ ಸಂಬಂಧ ಬೆಳೆಸಿದ್ದರು. ಕದಂಬ ರಾಣಿಯೋರ್ವಳು ಸಲ್ಲೇಖನ ಸ್ವೀಕರಿಸಿದ್ದನ್ನು ಕುಮಟೆಯ ಪಾರ್ಶ್ವನಾಥ ಬಸದಿಯ ನಿಷಿಧಿ ಶಾಸನ ಹೇಳುತ್ತದೆ. ಗೇರುಸೊಪ್ಪೆಯ ಸಾಳುವರು ಕೆಲವೆಡೆ ವಿಜಯನಗರದ ಮಹಾಮಂಡಲೇಶ್ವರರೆಂದೂ, ಕೆಲವೆಡೆ ‘ಕದಂಬಾನ್ವಯ’ರೆಂದೂ ಹೇಳಿಕೊಂಡಿದ್ದಾರೆ. ಅಂತೂ ಜೈನಮತವು ಸಾಳುವರ ಕಾಲದಲ್ಲಿ ಕರಾವಳಿಯಲ್ಲಿ ಮತ್ತಷ್ಟು ಭದ್ರವಾಯಿತು. ನಗಿರೆಯಲ್ಲಿ ಸಮಂತಭದ್ರ ಮಠ, ಹಾಡುವಳ್ಳಿಯಲ್ಲಿ ಅಕಲಂಕ ಮಠಗಳು ಕುಂದುಕುಂದಾನ್ವಯ ಯತಿಪರಂಪರೆಯ ಬೇರೆಬೇರೆ ಶಾಖೆಗಳಾಗಿದ್ದರೂ ಶ್ರವಣಬೆಳಗೊಳದ ಶಾಖಾಮಠವಾಗಿ ಬೆಳವಣಿಗೆಯಾದವು.

ಕರಿಮೆಣಸಿನ ರಾಣಿ ಚೆನ್ನಭೈರಾದೇವಿ (೧೫೩೬-೧೬೦೬)

ಭಾರತದ ಇತಿಹಾಸದಲ್ಲೇ ಅತಿ ದೀರ್ಘ ಅವಧಿಗೆ ರಾಣಿಯಾಗಿದ್ದವಳು ಚೆನ್ನಭೈರಾದೇವಿ. ಮಹಿಳೆ ‘ರಾಣಿ’ಯಾಗಿ ೫೪ ವರ್ಷ ‘ಅವ್ವರಸಿ’ಯಾಗಿ ರಾಜ್ಯಭಾರ ನಡೆಸಿದ್ದು ಸಾಮಾನ್ಯವಲ್ಲ. ಕಳೆಗುಂದುತ್ತಿದ್ದ ಆಶ್ರಿತ ವಿಜಯನಗರ ಸಾಮ್ರಾಜ್ಯ, ಆಚೀಚಿನ ರಾಜರ ಜೊತೆಯ ನಿರಂತರ ಯುದ್ಧದ ನಡುವೆ ೫೪ ವರ್ಷ ಆಳಿದ ಚೆನ್ನಭೈರಾದೇವಿ ಅಪರೂಪದ ರಾಜತಾಂತ್ರಿಕ ಕೌಶಲ, ಧೈರ್ಯ ಮತ್ತು ಸರ್ವಧರ್ಮ ಸಹಿಷ್ಣುತೆಗೆ ಹೆಸರಾಗಿದ್ದಳು. ಮಿರ್ಜಾನ್ ಕೋಟೆ, ಹಾಡುವಳ್ಳಿಯ ಬಸದಿಗಳು, ಗೇರುಸೊಪ್ಪದ ಚತುರ್ಮುಖ ಬಸದಿ, ಭಟ್ಕಳದ ದೇವಾಲಯ-ಬಸದಿಗಳು ಅವಳ ಕಾಲದಲ್ಲಿ ಕಟ್ಟಿಸಿದಂಥವು. ಶಾಸನಗಳು ಅವಳನ್ನು ನಗಿರೆಯ ರಾಣಿ, ಹೈವ - ತುಳುವ - ಕೊಂಕಣ ಪ್ರದೇಶಗಳ ರಾಣಿಯೆಂದು ಉಲ್ಲೇಖಿಸುತ್ತವೆ. ಈಗಿನ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳು, ಗೋವಾದ ದಕ್ಷಿಣ ಭಾಗವನ್ನು ಇದು ಒಳಗೊಂಡಿದೆ. ಗೇರುಸೊಪ್ಪ ಹಾಡುವಳ್ಳಿಗಳಿಂದ ಭೈರಾದೇವಿ ಹಾಗೂ ಪದ್ಮಲಾದೇವಿ ಎಂಬ ಮತ್ತಿಬ್ಬರು ರಾಣಿಯರು ಅಲ್ಪಕಾಲ ಆಳ್ವಿಕೆ ನಡೆಸಿದ್ದರೂ ತನ್ನ ವ್ಯವಹಾರ ಚಾತುರ್ಯ, ದೀರ್ಘಕಾಲದ ಆಳ್ವಿಕೆಯ ಕಾರಣವಾಗಿ ಚೆನ್ನಭೈರಾದೇವಿ ಗಮನಾರ್ಹಳಾಗಿದ್ದಾಳೆ. ಮಲೆಕಾಡುಗಳಲ್ಲಿ ಪತ್ತೆಯಾಗುತ್ತಿರುವ ಪಾಳುಬಿದ್ದ ಅವಶೇಷಗಳಿಂದ ಇತಿಹಾಸಾಸಕ್ತರನ್ನು ಇತ್ತೀಚೆಗೆ ಸೆಳೆಯುತ್ತಿದ್ದಾಳೆ.

ವ್ಯವಹಾರ, ಮಾತುಕತೆ, ತಂತ್ರಗಾರಿಕೆಯಲ್ಲಿ ನಿಪುಣಳಾದ ಕೂಡಲೇ ತರುಣಿ ಚೆನ್ನಭೈರಾದೇವಿ ಗೇರುಸೊಪ್ಪ ಮತ್ತು ಹಾಡುವಳ್ಳಿಯ ಆಡಳಿತವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಳು. ಬರಿಯ ಹಣಕ್ಕೆ, ಅಧಿಕಾರಕ್ಕೆ, ನೆಲದೊಡೆತನಕ್ಕೆ ಬಡಿದಾಡದೇ ಸ್ವಾಯತ್ತತೆಗಾಗಿ ಹೋರಾಡಿದಳು. ಒಟ್ಟು ೩೭ ರೇವುಗಳ ಅಧಿಪತ್ಯ ಹೊಂದಿದ್ದ ಚೆನ್ನೆಯ ಕಾಲದಲ್ಲಿ ಹೊನ್ನಾವರವು ವಿಜಯನಗರದ ರಾಜ್ಯಪಾಲನನ್ನು ಹೊಂದಿತ್ತು. ರೇವುಗಳ ಒಡೆತನವಲ್ಲದೇ ಘಟ್ಟಪ್ರದೇಶ, ಮತ್ತದರಾಚೆಯ ಭಾರಂಗಿ, ಆವಿನಹಳ್ಳಿ, ಬಿದನೂರು, ಕರೂರು, ಮರಬಿಡಿ, ಸೌಳನಾಡು ಸೀಮೆಗಳೂ ಅವಳ ಆಡಳಿತಕ್ಕೆ ಬಂದವು. ಮಿದಿಗೆ (ಈಗಿನ ಮಿರ್ಜಾನ್)ಯಲ್ಲಿ, ಕಾನೂರಿನಲ್ಲಿ ಕೋಟೆ ನಿರ್ಮಾಣ ಆರಂಭವಾಯಿತು. 

ಒಳನಾಡುಗಳಿಂದ ಕಾಳುಮೆಣಸು, ಗಂಧ, ಶುಂಠಿ, ದಾಲ್ಚಿನ್ನಿಯಂತಹ ಅರಣ್ಯ ಉತ್ಪನ್ನಗಳು ಬರುತ್ತಿದ್ದವು. ಅಡಿಕೆ, ಕುಚ್ಚಿಗೆ ಅಕ್ಕಿ, ಕಣಿವೆಯ ಗದ್ದೆಗಳಲ್ಲಿ ಬೆಳೆಯುತ್ತಿದ್ದ ಗಂಧಸಾಲೆ ಎಂಬ ಪರಿಮಳದ ಅಕ್ಕಿ (ಪಾಯಸದ ಅಕ್ಕಿ), ಜಾಯಿಕಾಯಿ, ಹತ್ತಿ (ಬೂರುಗ), ಲವಂಗವೇ ಮೊದಲಾದ ವಸ್ತುಗಳನ್ನು ವಿದೇಶಗಳಿಗೆ ಕಳಿಸತೊಡಗಿದಳು. ಹಗ್ಗ, ತಾಮ್ರ, ತೆಂಗು, ಅಡಕೆಗಳು ಯೂರೋಪ್, ಆಫ್ರಿಕಾ, ಪಶ್ಚಿಮ ಏಷ್ಯಾದ ದೇಶಗಳಿಗೆ ರಫ್ತಾಗುತ್ತಿದ್ದವು. ಅದಕ್ಕೆ ಬದಲಾಗಿ ಪರ್ಷಿಯನ್ ಕುದುರೆಗಳು, ಶಸ್ತ್ರಾಸ್ತ್ರ, ಮದ್ದುಗುಂಡುಗಳು ಅವಳ ಸೇನೆಗೆ ಸೇರ್ಪಡೆಯಾದವು. ರೇವುಗಳ ಸುಂಕದಿಂದ ಬಂದ ಹಣವನ್ನು ಕಲೆ, ಸಂಸ್ಕೃತಿ, ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಿದಳು.

ಪೋರ್ಚುಗೀಸರ ವಶದಲ್ಲಿದ್ದ ಕೊಚ್ಚಿನ್ ಬಂದರಿನ ಕ್ಯಾಪ್ಟನ್ ಆಲ್ಫಾನ್ಸೋ ಮೆಕ್ಸಿಯು ಪೋರ್ಚುಗೀಸ್ ರಾಜನಿಗೆ, ‘ಬಟಿಕಳ (ಭಟ್ಕಳ) ಮತ್ತು ಗೋವಾಗಳ ನಡುವೆ ಒನೋರ್ (ಕಾನೂರು), ಮರ್ಜೆನ್ (ಮಿರ್ಜಾನ್) ಮತ್ತು ಅಂಕೋಲಾಗಳೆಂಬ ಜಾಗಗಳಿವೆ. ಅವುಗಳಿಂದ ವಾರ್ಷಿಕ ೫೦೦೦ ಕ್ರೂಜೆಡೋಸ್ (ಹದಿನೈದನೆಯ ಶತಮಾನದಲ್ಲಿದ್ದ ಪೋರ್ಚುಗೀಸ್ ಬಂಗಾರದ ನಾಣ್ಯ)ಗಳಷ್ಟು ಕಾಳುಮೆಣಸು ರಫ್ತಾಗುತ್ತಿದೆ ಎಂದು ನಾನು ಕೇಳಿದ್ದೇನೆ. ಈ ಜಾಗಗಳು ಗೇರುಸೊಪ್ಪೆಯ ರಾಣಿ (ಚೆನ್ನಭೈರಾದೇವಿ)ಯ ಆಳ್ವಿಕೆಗೆ ಒಳಪಟ್ಟಿವೆ. ಈ ಕಾಳುಮೆಣಸು ಕೊಚ್ಚಿನ್ನಿನ ಕಾಳುಮೆಣಸಿಗಿಂತ ದಪ್ಪವೂ, ಕಮ್ಮಿ ತೂಕ ಮತ್ತು ಖಾರದ್ದೂ ಆಗಿವೆ. ಈ ಜಾಗಗಳನ್ನು ನಮ್ಮ ವಶಕ್ಕೆ ಪಡೆಯಬೇಕು’ ಎಂದು ಬರೆದಿದ್ದಾನೆ. ಈ ಕಾರಣದಿಂದಲೇ ‘ಆಕೆಯ ಜೊತೆಗೆ ಅತ್ಯಂತ ಜಾಗರೂಕತೆಯಿಂದ, ಮುತ್ಸದ್ದಿತನದಿಂದ ವರ್ತಿಸಬೇಕು. ಸ್ನೇಹಸೌಹಾರ್ದಗಳಿಂದಲ್ಲದೇ ಅವಳನ್ನು ನಮ್ಮ ಪರವಾಗಿ ಮಾಡಿಕೊಳ್ಳಲು ಸಾಧ್ಯವಿಲ್ಲ..’ ಎಂದು ೧೫೯೧ರ ಪೋರ್ಚುಗೀಸ್ ದಾಖಲೆಗಳು ಚೆನ್ನಭೈರಾದೇವಿಯ ಬಗ್ಗೆ ಹೇಳುತ್ತವೆ. ಕಾಳುಮೆಣಸಿನ ವ್ಯಾಪಾರ ವಹಿವಾಟಿನಿಂದಲೇ ಅವಳಿಗೆ ‘ಕಾಳು ಮೆಣಸಿನ ರಾಣಿ’ (ರೈನಾ ದ ಪಿಮೆಂಟಾ-ಪೆಪ್ಪರ್ ಕ್ವೀನ್) ಎಂಬ ಹೆಸರು ಬಂತು. 

ವಿಜಯನಗರದ ಅರಸು ಸದಾಶಿವರಾಯ ಅವಳ ರೇವುಗಳ ಮೂಲಕವೇ ಪರ್ಶಿಯನ್ ಕುದುರೆಗಳು ಬರುತ್ತಿದ್ದುದರಿಂದ ಮೈತ್ರಿಯಿಂದಿದ್ದನು. ಅವಳೂ ೧೫೬೦ರಲ್ಲಿ ವಿಜಯನಗರದದ ಅಧಿರಾಜತ್ವವನ್ನು ಒಪ್ಪಿದಳು. ಬಿಜಾಪುರದ ಆದಿಲ್ ಶಾಹಿಗಳೊಡನೆ ೧೫೬೯ರಲ್ಲಿ ಒಪ್ಪಂದ ಮಾಡಿಕೊಂಡಳು. ಕಲ್ಲಿಕೋಟೆಯ ಜಾಮೊರಿನ್ ದೊರೆಯೊಡನೆಯೂ ಒಪ್ಪಂದ ಮಾಡಿಕೊಂಡಳು. ವ್ಯಾಪಾರೀ ಕುತಂತ್ರಗಳಿಗೆ ಕುಖ್ಯಾತರಾಗಿದ್ದ ಪೋರ್ಚುಗೀಸರು ಹೊನ್ನಾವರ ಬಂದರಿನಲ್ಲಿ ಅಕ್ರಮವಾಗಿ ಯುದ್ಧನೌಕೆ ನಿಲ್ಲಿಸಲು ಯತ್ನಿಸಿದಾಗ ೧೫೭೦ರಲ್ಲಿ ಯಶಸ್ವಿಯಾಗಿ ಹಿಮ್ಮೆಟ್ಟಿಸಿದಳು. ಅವರನ್ನು ಹೊನ್ನಾವರದಿಂದ ಓಡಿಸಲು ಭೀಕರ ಕದನ ನಡೆಸಿ ಅಪಾರ ನಷ್ಟವನ್ನುಂಟುಮಾಡಿದಳು. ಬಸ್ರೂರನ್ನು ಪೋರ್ಚುಗೀಸರು ಮುತ್ತಿದಾಗ ಅಲ್ಲಿನ ಆಳುವವರ ನೆರವಿಗೆ ೩೦೦೦ ಬಲದ ಸೈನ್ಯ ಕಳಿಸಿದಳು. ರೇವುಗಳ ಮೇಲಿನ ಹಿಡಿತ ಮತ್ತು ಕಾಳುಮೆಣಸಿನ ಉತ್ಪಾದನಾ ಪ್ರದೇಶಗಳ ಮೇಲಿನ ಹಿಡಿತ ಎರಡೂ ಇದ್ದ ಕಾರಣ ಪೋರ್ಚುಗೀಸರು ಅವಳೊಡನೆ ಸ್ನೇಹಸಂಬಂಧವಿಟ್ಟುಕೊಳ್ಳಲೇಬೇಕಾಗಿತ್ತು. ಎಂದೇ ಪೋರ್ಚುಗೀಸರ ಮತಾಂತರ ತಪ್ಪಿಸಿಕೊಳ್ಳಲು ಗೋಮಾಂತಕದಿಂದ ವಲಸೆ ಬಂದ ಕೊಂಕಣಿ ಭಾಷಿಕ ಬ್ರಾಹ್ಮಣ, ಅಂಬಿಗ, ಸೊನಗಾರರೇ ಮೊದಲಾದ ಸಮುದಾಯಗಳಿಗೆ ರಾಣಿ ಆಶ್ರಯ ಕೊಟ್ಟರೂ ಅವರದನ್ನು ಸಹಿಸಬೇಕಾಯಿತು. ಆದರೆ ಮಿರ್ಜಾನ್, ಅಂಕೋಲ, ಬೈಂದೂರು ರೇವುಪಟ್ಟಣಗಳಿಗಾಗಿ ನೆರೆಯ ಕೆಳದಿ ಮತ್ತು ಬೀಳಗಿಯ ರಾಜರ ಜೊತೆ ನಿರಂತರ ಸಂಘರ್ಷ ಏರ್ಪಡುತ್ತಿತ್ತು. ಒಮ್ಮೆ ಬೀಳಗಿಯ ಅರಸ ನರಸಿಂಗ(ರಂಗರಾಜ)ನು ಗೇರುಸೊಪ್ಪೆಯನ್ನು ಆಕ್ರಮಿಸಲು ಹೊನ್ನಾವರ ಬಳಿಯ ಹಳದೀಪುರದವರೆಗೂ ಬಂದಾಗ ಅವನನ್ನು ಹಿಮ್ಮೆಟ್ಟಿಸಿದ್ದಳು. 

೧೬೦ ವರ್ಷಕಾಲ ನಗಿರೆ, ಹಾಡುವಳ್ಳಿ ರಾಜ್ಯಗಳು ದಾಯಾದಿಗಳಂತೆ ಕಾದಾಡಿಕೊಂಡಿದ್ದಾಗ ಇವಳು ಅವೆರೆಡನ್ನೂ ಒಗ್ಗೂಡಿಸಿದಳು. ಹಲವೆಡೆ ಬಸದಿ, ಮಠಗಳನ್ನು ಕಟ್ಟಿಸಿದಳು. ಶೈವ, ವೈಷ್ಣವ ದೇವಸ್ಥಾನಗಳಿಗೆ ಉದಾರ ದೇಣಿಗೆ ನೀಡಿದಳು. ಉಪ್ಪುಂದ ಎಂಬ ಇಂದಿನ ಉಡುಪಿ ಜಿಲ್ಲೆಯ ಊರಿನಲ್ಲಿ ಸಿಕ್ಕ ಚೆನ್ನಭೈರಾದೇವಿಯ ಶಾಸನವು ಇಡೀ ಸೀಮೆಯ ತೆರಿಗೆಯನ್ನು ಮನ್ನಾ ಮಾಡಿರುವ ವಿಷಯ ಮತ್ತು ಗೋಕರ್ಣದ ಮಹಾಬಲೇಶ್ವರ ದೇವರ ಧರ್ಮಕ್ಕೆ ಬಿಟ್ಟ ವಿಷಯವನ್ನು ತಿಳಿಸುತ್ತದೆ. ೧೫೫೬ರ ಒಂದು ಶಾಸನದಲ್ಲಿ ಚೆನ್ನಭೈರಾದೇವಿಯು ‘ಅಮೃತಪಡಿ ಸೇವೆ, ಕಾರ್ತೀಕ ಪೂಜೆ, ಶಿವರಾತ್ರಿ, ಜಿನದಯಾಷ್ಟಮಿ, ಯುಗಾದಿ, ಶ್ರುತಪಂಚಮಿ, ಶ್ರಾವಣದ ಕ್ಷೀರಾಭಿಷೇಕ, ಅಷ್ಟಾನ್ಹಿಕ ದಶಲಕ್ಷಣ ಪೂಜೆ, ಹಾಲಧಾರೆ, ಕಜ್ಜಾಯಸೇವೆ’ ನಡೆಸಿದ್ದನ್ನು ಹೇಳಿದೆ. ಇದರಿಂದ ಉಳಿದ ಧರ್ಮಗಳನ್ನೂ ಅವಳು ಕಡೆಗಣಿಸಲಿಲ್ಲ ಎನ್ನುವುದು ಗೊತ್ತಾಗುತ್ತದೆ.

ರಾಜಕಾರಣದ ಏಳುಬೀಳುಗಳ ನಡುವೆ ಕಲೆ, ಸಾಹಿತ್ಯವನ್ನೂ ಅವಳು ಪ್ರೋತ್ಸಾಹಿಸಿದಳು. ತನ್ನ ಆಳ್ವಿಕೆಯ ಪ್ರದೇಶದಲ್ಲಿ ನೂರಾರು ಬಸದಿ, ಮಠ, ಗುಡಿ ಕಟ್ಟಿಸಿ ದಾನ ನೀಡಿದಳು. ಜೈನ ವಿದ್ವಾಂಸ, ವೈಯ್ಯಾಕರಣಿ ಭಟ್ಟಾಕಳಂಕ ಅವಳ ಕಾಲದಲ್ಲಿ ಹಾಡುವಳ್ಳಿಯಲ್ಲಿದ್ದು ಕರ್ನಾಟಕ ಶಬ್ದಾನುಶಾಸನವೆಂಬ ಮಹಾನ್ ವ್ಯಾಕರಣ ಗ್ರಂಥ ರಚಿಸಿದ. ಹಾಡುವಳ್ಳಿಯೂ ಜ್ಞಾನಕೇಂದ್ರವಾಗಿ ಬೆಳೆಯಿತು.

ಇಂಥ ರಾಣಿಯನ್ನು ಕೆಳದಿಯ ನಾಯಕ ಹಾಗೂ ಬೀಳಗಿಯ ಅರಸರ ನಿರಂತರ ದಾಳಿ ದುರ್ಬಲಗೊಳಿಸುತ್ತ ಬಂದಿತು. ಆ ಎರಡು ಮನೆತನಗಳ ನಡುವೆ ವೈವಾಹಿಕ ಸಂಬಂಧ ಏರ್ಪಟ್ಟಿದ್ದೇ ಅವರಿಬ್ಬರೂ ಗೇರುಸೊಪ್ಪದ ಮೇಲೆ ದಾಳಿ ನಡೆಸಿದರು. ಕೆಳದಿಯ ವೆಂಕಟಪ್ಪ ನಾಯಕನು ದಳವಾಯಿ ಲಿಂಗಣ್ಣನೊಡನೆ ಭಾರೀ ಸೇನೆ ಕಳಿಸಿ ಕುಟಿಲೋಪಾಯದಿಂದ ರಾಣಿಯನ್ನು ಕೈಸೆರೆ ಹಿಡಿದನು. ಹಾವಿನಹಳ್ಳಿ, ಕರವೂರು, ಗೇರುಸೊಪ್ಪೆ, ಗೋವರ್ಧನಗಿರಿ, ವಡ್ಡಿಮೇದಿನ ಮೊದಲಾದ ಅವಳ ಕೋಟೆಗಳನ್ನು ವಶಪಡಿಸಿಕೊಂಡನು. ಅವಳ ಬಳಿಯಿದ್ದ ‘ವಿಚಿತ್ರತರ’ ವಸ್ತುಗಳು, ವಾಹನಗಳು, ಬಟ್ಟೆ ಮೊದಲಾದ ಎಲ್ಲವನ್ನು ಕೆಳದಿಗೆ ಸಾಗಿಸಿದರು. ಅವಳಿಗೆ ಸಂಬಂಧಿಸಿ ಸಿಕ್ಕಿರುವ ಕೊನೆಯ ಶಾಸನ ೧೫೯೯ನೇ ಇಸವಿಯದು. ವೃದ್ಢರಾಣಿ ಚೆನ್ನಭೈರಾದೇವಿ ಸೆರೆಯಾಳಾಗಿ ತನ್ನ ಕೊನೆಗಾಲವನ್ನು ನಗಿರೆಯ ಕಾರಾಗೃಹದಲ್ಲಿ ಕಳೆದು ೧೬೦೬ರಲ್ಲಿ ನಿಧನ ಹೊಂದಿದಳು. ಅವಳ ಕಣ್ಣೆದುರೇ ಗೇರುಸೊಪ್ಪೆಯು ಕೆಳದಿ ಸಾಮ್ರಾಜ್ಯದ ಭಾಗವಾಯಿತು. ಬಳಿಕ ಮತ್ತೆಂದೂ ಅದು ತನ್ನದೇ ಆಳರಸರನ್ನು ಪಡೆಯಲು ಸಾಧ್ಯವಾಗಲಿಲ್ಲ. 

ಇತಿಹಾಸದ ತೆರವುಗಳು

೧೫೭೯ರ ಒಂದು ಶಾಸನದಲ್ಲಿ ‘ವೀರಮ್ಮನ ಕುಮಾರತಿಯರಾದ, ವೀರ ಒಡೆಯರ ಸಂಜಾತೆಯಾದ, ಶ್ರೀಮನ್ ಮಹಾಮಂಡಳೇಶ್ವರ ಸಾಳುವ ಕೃಷ್ಣ ದೇವರಸರವರ ಹೆಂಡತಿಯಾದ ಪಟ್ಟಮಹಾದೇವಿಯರೆನಿಸಿದ ಶ್ರೀಮನ್ ಮಹಾಮಂಡಳೇಶ್ವರ ಚೆನ್ನಭೈರಾದೇವಿಯಮ್ಮ’ ಎಂಬ ಉಲ್ಲೇಖವಿದೆ. ಹಾಡುವಳ್ಳಿ ಅರಸರ ಮತ್ತೊಂದು ವಂಶಾವಳಿಯಲ್ಲಿ ಗುರುರಾಯ ಒಡೆಯ ಮತ್ತು ವೀರಮ್ಮನವರ ಮಗಳು ಭೈರಾಂಬ ಮತ್ತು ಅವಳ ಇಬ್ಬರು ಹೆಣ್ಣುಮಕ್ಕಳು ಚೆನ್ನಾಂಬ (ವಿಜಯನಗರದ ಸದಾಶಿವರಾಯನ ಪತ್ನಿ) ಹಾಗೂ ಚೆನ್ನಭೈರಾದೇವಿ (ನಗಿರೆಯ ಕೃಷ್ಣರಾಯರ ಪತ್ನಿ) ಎಂಬ ಉಲ್ಲೇಖವಿದೆ. ಎಂದರೆ ಅವಳು ವಿವಾಹಿತಳೇ? ಸಂಗೀತಪುರದಲ್ಲಿದ್ದು ಗೇರುಸೊಪ್ಪೆಯನ್ನೂ ಆಳಿದಳೇ? ಅವಳ ಸಂತತಿ ಮುಂದುವರೆಯಿತೇ? 

ಬಸದಿಯ ಹೊರಭಾಗದಲ್ಲಿ ಸೂರಿಲ್ಲದೆ ನಿಂತ ಕಂಬಗಳು, ಅದರಾಚೆ ಎಲ್ಲೆಲ್ಲೂ ಚದುರಿದ ಕಲ್ಲುಕಂಬಗಳನ್ನು ನೋಡಿದರೆ ಕಟ್ಟುವಿಕೆ ಅಪೂರ್ಣವಾಗಿದೆ ಅನಿಸುತ್ತದೆ. ಇದೇ ಸಾಳುವರ, ಚೆನ್ನಭೈರಾದೇವಿಯ ಇತರ ಬಸದಿಗಳು ಶಿಸ್ಟ್ ಕಲ್ಲು ಚಪ್ಪಡಿಗಳ ಇಳಿಜಾರು ಸೂರನ್ನು ಹೊದ್ದು ನಿಂತಿದ್ದರೆ ಇದಕ್ಕೆ ಸೂರಿಲ್ಲ ಏಕೆ? ಕಲ್ಲುಕಂಬಗಳ ಮೇಲೆ ಮುಳಿಹುಲ್ಲ ಸೂರು ಹೊದಿಸಿದ್ದರೇ? 

೧೬೨೩ರಲ್ಲಿ ಚೆನ್ನಭೈರಾದೇವಿ ಸತ್ತು ಹದಿನೇಳು ವರ್ಷಗಳ ನಂತರ ಭಾರತಕ್ಕೆ ಬಂದ ಪೋರ್ಚುಗೀಸ್ ಪ್ರವಾಸಿಗ ಪೆಟ್ರೋ ಡೆಲ್ಲಾವೆಲ್ಲೆ ಹೊನ್ನಾವರದಿಂದ ಕೆಳದಿಗೆ ಹೋದ. ಹದಿನೆಂಟು ದಿನಗಳ ಕಾಲ ಕೆಳದಿಯ ಅರಸರ ಆಸ್ಥಾನದಲ್ಲಿದ್ದ. ತಾನು ಕೇಳಿದ ಕೆಳದಿಯ ವೈರಿ ಚೆನ್ನಭೈರಾದೇವಿಯ ಕತೆಗಳನ್ನು ಪ್ರವಾಸಕಥನದಲ್ಲಿ ದಾಖಲಿಸಿದ. ಆದರೆ ಡೆಲ್ಲಾವೆಲ್ಲೆಯಾಗಲೀ, ಈ ಪ್ರದೇಶಕ್ಕೆ ಬಂದ ಇತರ ಪ್ರವಾಸಿಗರು, ವರ್ತಕರಾಗಲೀ ಯಾರೂ ಚತುರ್ಮುಖ ಬಸದಿಯ ಬಗೆಗೆ ಉಲ್ಲೇಖಿಸಿಲ್ಲ ಏಕೆ?

ಡೆಲ್ಲಾವೆಲ್ಲೆಯ ಕತೆಗಳನ್ನೇ ಇತಿಹಾಸವೆಂದು ಪರಿಗಣಿಸಿ ರಾಣಿಗೆ ತನ್ನ ಸೇನಾಧಿಪತಿ ಗೊಂಡನಾಯಕಯೊಂದಿಗೆ ಅನೈತಿಕ ಸಂಬಂಧವಿತ್ತೆಂದೂ, ಅದರಿಂದಲೇ ಆಕೆ ಕೆಳದಿ ಅರಸರೊಂದಿಗಿನ ಯುದ್ಢದಲ್ಲಿ ಸೋಲನ್ನಪ್ಪಿದಳೆಂದೂ ಕೆಲ ಇತಿಹಾಸಕಾರರು ದಾಖಲಿಸುತ್ತಾರೆ. ಆದರೆ ಕೆಳದಿಯ ರಾಜ ಹಿರಿಯ ವೆಂಕಟಪ್ಪ ನಾಯಕನು ಎಪ್ಪತ್ತು ವರ್ಷದ ವೃದ್ಧ ರಾಣಿ ಚೆನ್ನಭೈರಾದೇವಿಯನ್ನು ಮೋಸದಿಂದ ಸೆರೆ ಹಿಡಿದು ನಗಿರೆಯ ಸೆರೆಮನೆಯಲ್ಲಿ ಆಕೆಯ ಸಾವಿನವರೆಗೂ ಇಟ್ಟನೆಂದೂ, ತಮಗೆ ಸಹಾಯ ಮಾಡಿದ ಗೊಂಡನಾಯಕನನ್ನು ಬಳಿಕ ಕೊಲ್ಲಿಸಿದ ಎಂಬ ಚೆನ್ನಭೈರಾದೇವಿಯ ಬಗೆಗೆ ಕಾದಂಬರಿ ಬರೆದ ಲೇಖಕ ಡಾ| ಗಜಾನನ ಶರ್ಮರ ಅಭಿಪ್ರಾಯ ಸರಿಯೇ? 

ನಗಿರೆಯ ರಾಣಿ, ಆ ಕಾಲದ ಮತಪಂಥ-ಜನಜೀವನ-ಆಳರಸರ ಬಗೆಗೆ ಇತಿಹಾಸದಲ್ಲಿ ಸಾಕಷ್ಟು ಖಾಲಿಜಾಗಗಳಿವೆ, ಅಸ್ಪಷ್ಟತೆಯಿದೆ. ಅವೆಲ್ಲದರ ಬಗೆಗೆ ಸಂಶೋಧನೆಗಳಾಗಬೇಕಿದೆ. 

ಗೇರುಸೊಪ್ಪ, ಹೊನ್ನಾವರ ಸೀಮೆಯ ಕಾಡುನಾಡಿನೊಳಗೆ ತೋಟ, ಗದ್ದೆ ರೂಢಿಸುವವರಿಗೆ ಚಿಕ್ಕಪುಟ್ಟ ಮೂರ್ತಿಗಳು, ಶಾಸನಗಳು ಸಿಗುತ್ತಲೇ ಇರುತ್ತವೆ. ನದೀ ತಟದ, ಕಾನು ಮಧ್ಯದ ಯಾವ ಊರು ಹೊಕ್ಕರೂ ಅಲ್ಲೊಂದು ಬಾವಿ, ಜಟಗ ಸಿಗುತ್ತವೆ. ಅಂತಹ ಜಟಗನ ಮೂರ್ತಿಗಳಲ್ಲಿ ಜೈನಜಟಗಕ್ಕೆ ‘ಪವರ್ರು’ ಹೆಚ್ಚೆಂಬ ಭಾವನೆಯಿದೆ. ಜೈನಜಟಗ ಸಿಕ್ಕ ಭೂಮಿಯನ್ನೂ ಯಾರೂ ಸುಲಭಕ್ಕೆ ಖರೀದಿಸುವುದಿಲ್ಲ. ಬಲಿಗಿಲಿ ನಡೆಯದ ಅದರ ಪೂಜೆಗೆ ಜೈನ ಭಟ್ಟರೇ ಬರಬೇಕಾಗುತ್ತದೆ! ಕ್ರೈಸ್ತ ಬಾಂಧವರ ಮನೆ, ತೋಟದಲ್ಲಿ ಸಿಕ್ಕ ಮೂರ್ತಿಗಳೂ ಪೂಜೆಗೊಳ್ಳುತ್ತವೆ. ಕೆಲವು ಪುರಾತತ್ವ ಇಲಾಖೆಯ ಕಚೇರಿ ಸೇರಿದರೆ ಹಲವು ಜೈನ ವಸ್ತುಸಂಗ್ರಹಾಲಯಕ್ಕೆ ಹೋದವು. ಮತ್ತೆ ಕೆಲವು ಸ್ಥಳೀಯರ ಮನೆಯಂಗಳಲ್ಲಿ ಚೌಡಿ, ಜಟಗ, ನಾಗನ ಮೂರ್ತಿಗಳಾಗಿ ನೆರಕೆ ಚಪ್ಪರ ಕಟ್ಟಿಸಿಕೊಂಡಿವೆ. ಕಾಳುಮೆಣಸಿನ ಸಂಗ್ರಹಕ್ಕೆಂದು ಚೆನ್ನಭೈರಾದೇವಿ ತೋಡಿಸಿದ ಬಾವಿಗಳು ಈ ಭಾಗದ ಹಲವು ಹಳ್ಳಿಗಳಲ್ಲಿವೆ. 

ಇತಿಹಾಸವೆಂದರೆ ಮುಳುಗಿದ ಹಡಗಿನ ತೇಲುವ ಹಲಗೆಗಳು ಎಂದಿದ್ದಾನೆ ಫ್ರಾನ್ಸಿಸ್ ಬೇಕನ್. ತೇಲುವುದನ್ನು ಎಚ್ಚರಿಕೆಯಿಂದ ಜೋಡಿಸಿ, ಮುಳುಗಿರುವುದನ್ನು ಶ್ರದ್ಧೆಯಿಂದ ಹುಡುಕಾಡಿ ನಮ್ಮ ನಿಜ ಇತಿಹಾಸವನ್ನು ನಾವೇ ಕಟ್ಟಿಕೊಳ್ಳಬೇಕಿದೆ. ಎಲ್ಲೆಲ್ಲೋ ಹುದುಗಿರುವ ಕಲ್ಲು, ಮೂರ್ತಿ, ಶಾಸನ, ಗಡಿಗಂಬಗಳು ಸತ್ಯದ ಒಂದೊಂದು ಕೊಂಡಿಯನ್ನು ಬಚ್ಚಿಟ್ಟುಕೊಂಡಿರುವ ಸಾಧ್ಯತೆಯಿದೆ. ಅವನ್ನೆಲ್ಲ ಕಾಪಿಟ್ಟು ಮುಂದಿನ ಪೀಳಿಗೆ ತಮ್ಮ ಗತವನ್ನು ಅದಿರುವಂತೆ ಸಮಗ್ರವಾಗಿ ಅರಿಯಲು ನಾವು ಅವಕಾಶ ಕಲ್ಪಿಸಬೇಕಿದೆ.  ಯಾಕೆಂದರೆ ತಮ್ಮ ನಿನ್ನೆಗಳ ಅರಿಯದವರು ನಾಳೆಗಳ ಸೃಷ್ಟಿಸಲಾರರು. ಇವತ್ತಿನ ಜಾತಿ, ಧರ್ಮಗ್ರಸ್ತ ಮನಸುಗಳು ಭವಿಷ್ಯದ ಸಮಾಜವನ್ನೂ ಒಡೆಯದಂತೆ, ಬರಲಿರುವ ಪೀಳಿಗೆ ಆರೋಗ್ಯಕರ ನೆಮ್ಮದಿಯ ನಾಳೆಗಳನ್ನು ಪಡೆಯುವಂತೆ ಮಾಡಲು ಗತದ ಸರಿಯಾದ ಅರ್ಥೈಸುವಿಕೆ ಅಗತ್ಯವಾಗಿದೆ. 





ಡಾ. ಎಚ್. ಎಸ್. ಅನುಪಮಾ

No comments:

Post a Comment