Tuesday, 9 January 2024

CSMVS Mumbai - ಕಳೆದ ಕಾಲದ ಸಾಕ್ಷಿ: ಛತ್ರಪತಿ ಶಿವಾಜಿ ಮಹಾರಾಜ ವಸ್ತು ಸಂಗ್ರಹಾಲಯ, ಮುಂಬಯಿ

 

ಛತ್ರಪತಿ ಶಿವಾಜಿ ಮಹಾರಾಜ ವಸ್ತುಸಂಗ್ರಹಾಲಯ, ಮುಂಬಯಿ

ಋತು ಹೊರಳುತ್ತಿದೆ. ಪ್ರತಿ ಬಾರಿ ಒಂದಷ್ಟು ಹೊಸದನ್ನು ಹೊತ್ತು ತರುತ್ತಿದೆ. ಹಳೆಯದರ ಕುರುಹು ಉದುರಿದ ಎಲೆಯ ತೊಟ್ಟು ಅಂಟಿದ ಗುರುತಿನಲ್ಲಿ, ಮರದ ಕಾಂಡದೊಳಗೆ ಸೇರಿ ಹೋದ ವರ್ತುಲದಲ್ಲಿ ಕಾಣದಂತೆ ಅಡಗಿರುತ್ತವೆ. ಕಾಣದ ಕಾಲ ಸಾಕ್ಷಿಗಳ ಕಾಣುವ ಹಂಬಲದಿಂದ ಚರಿತ್ರೆಯ ಪುಟಗಳಲ್ಲಿ ನಡೆದಾಡಿ ಬಂದೆ. ಮುಂಬಯಿಯ ಗೇಟ್ ವೇ ಆಫ್ ಇಂಡಿಯಾದ ಬಳಿಯಿರುವ ‘ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ’ ಅಥವಾ ‘ಛತ್ರಪತಿ ಶಿವಾಜಿ ಮಹಾರಾಜ ವಸ್ತುಸಂಗ್ರಹಾಲಯ’ದ ನೆಲದೈವಗಳ ಭೇಟಿ ಮಾಡಿದೆ. ‘ಹೇಗಿದ್ದ ನಾವು ಹೀಗಾದ’ ಚರಿತ್ರೆಯ ಅರುಹುತ್ತ, ಬಾಳಿಹೋದ ಕಾಲದ ವೈಭವ, ಸವಾಲು, ಅಚ್ಚರಿ, ದುಃಖಕ್ಕೆ ಸಾಕ್ಷಿಯಾದ ಎಪ್ಪತ್ತು ಸಾವಿರ ವಸ್ತುಗಳನ್ನು ಒಡಲುಗೊಂಡ ವಸ್ತುಸಂಗ್ರಹಾಲಯವನ್ನು ಒಮ್ಮೆ ಸುತ್ತಿ ಬರಲು ದಿನವಿಡೀ ಬೇಕು. ಬರಿದೆ ‘ನೋಡಲು’ ವಾರಗಳೇ ಬೇಕಾದಾವು. ಅದು ರೂಪುಗೊಂಡ ಕಥನವು ಇತಿಹಾಸದ ಒಂದು ಅಧ್ಯಾಯಕ್ಕೆ ಸರಿ ಮಿಗಿಲು. 

ಕ್ರಿ. ಶ. 1905ರಲ್ಲಿ ವೇಲ್ಸ್ ರಾಜಕುವರ ಮುಂಬಯಿಗೆ ಬಂದ ನೆನಪಿಗೆ ವಸ್ತುಸಂಗ್ರಹಾಲಯವನ್ನು ತೆರೆಯಬೇಕೆಂದು ನಾಗರಿಕರು ಯೋಚಿಸಿದರು. ಫಿರೋಜ್ ಶಾ ಮೆಹ್ತಾ, ಬದ್ರುದ್ದೀನ್ ತ್ಯಾಬ್ಜಿ, ಜಸ್ಟಿಸ್ ಚಂದಾವರ್ಕರ್, ಸಸೋನ್ ಡೇವಿಡ್, ನರೋತ್ತಮದಾಸ್ ಗೋಕುಲದಾಸ್ ಮುಂತಾದವರು ‘ರಾಯಲ್ ವಿಸಿಟ್ ಮೆಮೊರಿಯಲ್ ಫಂಡ್’ ಸ್ಥಾಪಿಸಿದರು. ಸಾರ್ವಜನಿಕ ದೇಣಿಗೆ ಮತ್ತು ಬಾಂಬೆ ಪ್ರೆಸಿಡೆನ್ಸಿ ಸರ್ಕಾರದ ನೆರವಿನಿಂದ ಯೋಜನೆ ಸಿದ್ಧವಾಯಿತು. ವಿನ್ಯಾಸ ರೂಪಿಸಲು ಮುಕ್ತ ಸ್ಪರ್ಧೆ ನಡೆದು (ಮುಂದೆ ಗೇಟ್ ವೇ ಆಫ್ ಇಂಡಿಯಾ ವಿನ್ಯಾಸಗೊಳಿಸಿದ) ಸ್ಕಾಟಿಶ್ ವಾಸ್ತುಶಿಲ್ಪಿ ಜಾರ್ಜ್ ವಿಟೆಟ್ ಯಶಸ್ವಿಯಾದನು. ಮುಂಬೈ ದ್ವೀಪದ ತುತ್ತತುದಿಯ ಪ್ರದೇಶದಲ್ಲಿ ಭೂಮಿ ದೊರೆಯಿತು. ಕುರ್ಲಾ ಪ್ರದೇಶದ ಬಸಾಲ್ಟ್ ಶಿಲೆ ಬಳಸಿ ನಿರ್ಮಾಣ ಕಾರ್ಯ ನಡೆಯಿತು. ಬಿಜಾಪುರದ ಗೋಲ್‌ಗುಂಬಜ್, ಗೋಲ್ಕೊಂಡ ಕೋಟೆ, ಮುಘಲ್-ಮರಾಠಾ-ಜೈನ ವಾಸ್ತುಶಿಲ್ಪಗಳ ಮಿಶ್ರಣವಾದ ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿ ಕಟ್ಟಡ ಕಟ್ಟಲಾಯಿತು. 


1915ರ ಹೊತ್ತಿಗೆ ಸಿದ್ಧವಾದರೂ ಮೊದಲ ಮಹಾಯುದ್ಧದ ಕಾರಣ ಮಕ್ಕಳ ಕಲ್ಯಾಣ ಕೇಂದ್ರವಾಗಿ, ಮಿಲಿಟರಿ ಆಸ್ಪತ್ರೆಯಾಗಿ ಕಟ್ಟಡ ಬಳಕೆಯಾಯಿತು. 1920ರಲ್ಲಿ ಟ್ರಸ್ಟಿನ ಸುಪರ್ದಿಗೆ ಬಂತು. ಮುಂಬಯಿಯ ಸಿರಿವಂತರು, ಕಲಾಸಕ್ತರು, ಸ್ಥಳೀಯ ನಿವಾಸಿಗಳು, ಪಾರ್ಸಿ ವ್ಯಾಪಾರಸ್ಥರು ದೇಣಿಗೆ, ತಮ್ಮ ವಸ್ತು ಸಂಗ್ರಹಗಳನ್ನು ಉದಾರವಾಗಿ ನೀಡಿದರು. ವಿಶಿಷ್ಟ ವಸ್ತುಗಳ ಖರೀದಿಯೂ ನಡೆಯಿತು. ಒಂದೆಡೆ ಮುಂಬಯಿಯಲ್ಲಿ 1922ರಲ್ಲಿ ವೇಲ್ಸ್‌ನ ರಾಜಕುವರ (ಐದನೆಯ ಜಾರ್ಜ್ ದೊರೆ) ಮತ್ತೆ ಬಂದಾಗ ಬ್ರಿಟಿಷ್ ರಾಜಸತ್ತೆಯ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರರ ಹರತಾಳ, ಪ್ರದರ್ಶನಗಳು ಏರ್ಪಾಟಾದರೆ ಮತ್ತೊಂದೆಡೆ ವಸ್ತುಸಂಗ್ರಹಾಲಯ ಉದ್ಘಾಟನೆಯಾಯಿತು. 

ಅಲ್ಲಿ ಕಲೆ, ಪುರಾತತ್ವಶಾಸ್ತ್ರ, ನ್ಯಾಚುರಲ್ ಹಿಸ್ಟರಿಯ ಮೂರು ವಿಭಾಗಗಳಿವೆ. ಆರು ಭಾಷೆಗಳಲ್ಲಿ ಆಡಿಯೋ ವಿವರಣೆ ವ್ಯವಸ್ಥೆಯಿದೆ. ರಾಜ್ಯ ಸರ್ಕಾರ ಮತ್ತು ಮುಂಬಯಿ ಮುನಿಸಿಪಲ್ ಕಾರ್ಪೊರೇಶನ್ ಧನಸಹಾಯದೊಂದಿಗೆ ನಡೆಯುತ್ತಿದ್ದು 1998ರಲ್ಲಿ ‘ಛತ್ರಪತಿ ಶಿವಾಜಿ ಮಹಾರಾಜ್ ವಸ್ತು ಸಂಗ್ರಹಾಲಯ’ ಎಂದು ಹೆಸರು ಬದಲಾಗಿದೆ. 



ಒಳಹೊಕ್ಕ ಕೂಡಲೇ ಒಂಬತ್ತನೆಯ ಶತಮಾನದ ಮಧ್ಯಪ್ರದೇಶದ ಬೃಹತ್ ಯಜ್ಞ ವರಾಹ ಎದುರುಗೊಳ್ಳುತ್ತದೆ. ಮುಖ್ಯ ಗುಂಭದ ಕೆಳಗಿನ ವಿಶಾಲ ಆವರಣದ ಮೂರು ಮೂಲೆಗಳಲ್ಲಿ ಬೋಧಿಸತ್ವ ಮೈತ್ರೇಯ ಮತ್ತು ಗ್ರೀಸ್‌ನ ಡಯೋನಿಸಸ್; ಈಜಿಪ್ಟಿನ ನದಿದೇವತೆ ಹಾಪಿ ಮತ್ತು ಭಾರತದ ಗಂಗೆ; ಈಜಿಪ್ಟಿನ ಸಿಂಹಮುಖಿ ದೇವ ಸೆಖ್ಮೆಟ್ ಮತ್ತು ಭಾರತದ ನರಸಿಂಹರು ವಿವರ, ವರ್ಣನೆ, ತುಲನೆಗಳೊಂದಿಗೆ ಜೊತೆಜೊತೆ ಕಾಣಿಸುತ್ತಾರೆ. ನಾಸಿಕ್‌ನ ಬೃಹತ್ ವಾಡೆಯೊಂದರ ಮರದ ಕಟಾಂಜನವನ್ನು ಅದಿರುವ ಹಾಗೆಯೇ ಆಕರ್ಷಕವಾಗಿ ಬಳಸಿ ಹತ್ತಿಹೋಗುವ ವ್ಯವಸ್ಥೆ ಮಾಡಲಾಗಿದೆ. ಮೂರು ಮಹಡಿಗಳಲ್ಲಿ ವಸ್ತುಗಳಿವೆ. ವಸ್ತುಗಳ ಹಿನ್ನೆಲೆ ಬಣ್ಣ, ಸ್ಥಳ, ಮೌನ ಎಲ್ಲವೂ ಅವುಗಳ ಪ್ರಾಚೀನತೆ, ಗಹನತೆ, ಮೌಲ್ಯವನ್ನು ತಿಳಿಸುವಂತಿವೆ. ಪುರಾತನ ಶಿಲ್ಪಗಳಿರುವ ಕಡೆ ಕತ್ತಲನ್ನು ಸೃಷ್ಟಿಸಿ, ಶಿಲ್ಪಗಳ ಮೇಲಷ್ಟೇ ಬೆಳಕು ಬೀಳುವಂತೆ ಮಾಡಿ ದೇಶಕಾಲದಾಚೆಯ ಅಲೌಕಿಕ ಆವರಣದ ಭಾಸವಾಗುತ್ತದೆ. 


ಶಿಲಾಯುಗದಿಂದ ಇಂದಿನವರೆಗೆ ಭಾರತ ರೂಪುಗೊಂಡ ಚರಿತ್ರೆಯನ್ನು ಪ್ರಸ್ತುತಪಡಿಸುವ ಶಿಲೆ, ಟೆರ್ರಾಕೋಟಾ, ಕಂಚು, ಮರದ ಸಾವಿರಾರು ವಿಗ್ರಹಗಳು; ಜಪಾನ್, ಚೀನಾದ ಆನೆದಂತ ಹಾಗೂ ಪಿಂಗಾಣಿ ವಸ್ತುಗಳು; ಗುಪ್ತ, ಮೌರ್ಯ, ಚಾಲುಕ್ಯ, ರಾಷ್ಟ್ರಕೂಟರ ವಸ್ತುಗಳು; ಕರ್ನಾಟಕದ ದುರ್ಗಾ, ಶೇಷಶಾಯಿ ವಿಷ್ಣು, ಉಮಾಮಹೇಶ್ವರ, ಬ್ರಹ್ಮ, ನಾಗರ, ವರುಣ; ಸ್ಥಳೀಯ ದೈವಗಳು, ವೈದಿಕ-ಬೌದ್ಧ-ಜೈನ-ಆದಿವಾಸಿ ಶಿಲ್ಪಗಳು; ಸಿಂಧೂ  ನಾಗರಿಕತೆಯ ಉತ್ಖನನದ ವಸ್ತುಗಳು; ಅಲಂಕಾರಿಕ ಕಲಾಪ್ರಕಾರಗಳು, ಕಿರುವರ್ಣ ಚಿತ್ರಗಳು; ಅಕ್ಬರನ ಶಿರಸ್ತ್ರಾಣ, ಕವಚ; ಹಲವು ರಾಜ್ಯ-ದೇಶ-ಕಾಲಮಾನದ ನಾಣ್ಯಗಳು; ಖ್ಯಾತನಾಮರ ವರ್ಣಚಿತ್ರಗಳು; ಓಲೆಗರಿ, ಶಿಲ್ಪದ ಪ್ರತಿಕೃತಿಗಳು; ನ್ಯಾಚುರಲ್ ಹಿಸ್ಟರಿ ವಿಭಾಗದಲ್ಲಿ ಮೈದುಂಬಿಕೊಂಡ ಜೀವಿಗಳು; ಮುಂಬಾದೇವಿಯ ಮುಂಬಯಿಯು ಬಂಬಯ್ (ಪೋರ್ಚುಗೀಸ್ ಭಾಷೆಯಲ್ಲಿ ಗುಡ್ ಹಾರ್ಬರ್) ಆಗಿ ಮತ್ತೀಗ ಮುಂಬಯಿ ಮಹಾನಗರವಾಗಿ ಬೆಳೆದ ಪರಿ; ಮನುಷ್ಯ ಸಮಾಜವನ್ನು ಬಾಧಿಸಿದ ರೋಗರುಜಿನ ಯುದ್ಧಗಳ ಚಿತ್ರ - ಓಹ್! ಏನುಂಟು ಏನಿಲ್ಲ!! 


ಪಾಕಿಸ್ತಾನದ ತಖ್ತ್-ಇ-ಬಹಿಯ ಗಾಂಧಾರ ಶೈಲಿಯ ಮೀಸೆಯಿರುವ ಬುದ್ಧನ (ಕ್ರಿ.ಶ. ೧-೩ನೆಯ ಶತಮಾನ) ತದ್ರೂಪ


ಆಂಧ್ರದ ಅಮರಾವತಿಯ ಎರಡನೆಯ ಶತಮಾನದ ಸ್ತೂಪವೊಂದರ ಪದ್ಮಪೀಠ


ಮಹಾರಾಷ್ಟ್ರದ ಭಂಢಾರಾ ಜಿಲ್ಲೆ ಪೌನಿಯಲ್ಲಿ ದೊರೆತ ಕ್ರಿ. ಶ. ಒಂದನೆಯ ಶತಮಾನದ ಹೀನಾಯಾನ ಸ್ತೂಪದ ಶಿಲಾಸ್ಥಂಭ

ಒರಿಸ್ಸಾದ ಹನ್ನೆರೆಡನೆಯ ಶತಮಾನದ ‘ಭೂಮಿಸ್ಪರ್ಶ ಮುದ್ರೆ’ಯ ಬುದ್ಧ

ಸಾವಿರಾರು ವಸ್ತುಗಳಲ್ಲಿ ಬುದ್ಧ ಸಂಬಂಧಿ ವಸ್ತುವಿಷಯಗಳು ಗಮನ ಸೆಳೆಯುತ್ತವೆ. ಪ್ರವೇಶ ದ್ವಾರದಲ್ಲೇ ಹಸಿರು ಹುಲ್ಲುಹಾಸಿನ ಮೇಲೆ ಮಲಗಿರುವ ಬುದ್ಧನ ತಲೆಯ ಬೃಹತ್ ಶಿಲ್ಪ ಕೈಬೀಸಿ ಕರೆಯುತ್ತದೆ. ಕೆಳಮಹಡಿಯಲ್ಲಿ ಪತನಗೊಂಡ/ನಾಶಗೊಳಿಸಲ್ಪಟ್ಟ ಸ್ತೂಪಗಳ ಉತ್ಖನನದಲ್ಲಿ ದೊರೆತ ಪ್ರಾಚೀನ ಬೌದ್ಧ ಶಿಲ್ಪಗಳ ನೆರವಿಯೇ ಇದೆ. ಜಾನ್ ಲಾಕ್‌ವುಡ್ ಕಿಪ್ಲಿಂಗ್ (ರುಡ್ಯಾರ್ಡ್ ಕಿಪ್ಲಿಂಗ್ ತಂದೆ) ರೂಪಿಸಿದ, ಪಾಕಿಸ್ತಾನದ ತಖ್ತ್-ಇ-ಬಹಿಯ ಗಾಂಧಾರ ಶೈಲಿಯ ಮೀಸೆಯಿರುವ ಬುದ್ಧನ (ಕ್ರಿ.ಶ. ೧-೩ನೆಯ ಶತಮಾನ) ತದ್ರೂಪವಿದೆ. ಆಂಧ್ರದ ಅಮರಾವತಿಯ ಎರಡನೆಯ ಶತಮಾನದ ಸ್ತೂಪವೊಂದರ ಪದ್ಮಪೀಠವಿದೆ. ಕನ್ಹೇರಿ ಗುಹೆಯ ಕ್ರಿ.ಶ. ಒಂದನೇ ಶತಮಾನದ ಮಹಾಸುತಸೋಮ ಜಾತಕ ಶಿಲ್ಪವಿದೆ. ಮಹಾರಾಷ್ಟ್ರದ ಭಂಢಾರಾ ಜಿಲ್ಲೆಯ ಪೌನಿಯಲ್ಲಿ ದೊರೆತ ಕ್ರಿ. ಶ. ಒಂದನೆಯ ಶತಮಾನದ ಸ್ತೂಪವೊಂದರ ಸುಂದರ ಶಿಲಾಸ್ಥಂಭವು ಬುದ್ಧನನ್ನು ಚಕ್ರ, ಸ್ತೂಪ, ಬೋಧಿವೃಕ್ಷದಿಂದ ಚಿತ್ರಿಸಿ ಹೀನಾಯಾನದ ಪ್ರಭಾವವನ್ನು ತಿಳಿಸುತ್ತದೆ. ಮೂರನೇ ಶತಮಾನದ ಗಾಂಧಾರದ ಬೋಧಿಸತ್ವ, ಐದನೆಯ ಶತಮಾನದ ಕಿರೀಟವಿರುವ ಚಕ್ರವರ್ತಿ ಬುದ್ಧರಿದ್ದಾರೆ. ಒರಿಸ್ಸಾದ ಹನ್ನೆರೆಡನೆಯ ಶತಮಾನದ ‘ಭೂಮಿಸ್ಪರ್ಶ ಮುದ್ರೆ’ಯ ಕರಿಕಲ್ಲ ಬುದ್ಧನಿದ್ದಾನೆ. ಬಲಗೈಯಲ್ಲಿ ಭೂಮಿ ಮುಟ್ಟುವಂತೆ ಪದ್ಮಾಸನದಲ್ಲಿ ಕುಳಿತ ಶಿಲ್ಪವು ಬುದ್ಧ ಸಾಕ್ಷಾತ್ಕಾರ ಪಡೆದ ಕ್ಷಣವನ್ನು ಪ್ರತಿನಿಧಿಸುವ ಭಂಗಿಯಾಗಿದೆ. 


ಮಹಾರಾಷ್ಟ್ರದ ನಾಲಾಸೊಪಾರಾದಲ್ಲಿ ದೊರೆತ ಅಶೋಕನ ಒಂಭತ್ತನೆಯ ಶಿಲಾಶಾಸನ

ಮಹಾರಾಷ್ಟ್ರದ ನಾಲಾಸೊಪಾರಾದಲ್ಲಿ ದೊರೆತ ಮೌರ್ಯ ಬ್ರಾಹ್ಮಿಲಿಪಿಯಲ್ಲಿ ಕೆತ್ತಲಾಗಿರುವ ಅಶೋಕನ ಒಂಭತ್ತನೆಯ ಶಿಲಾಶಾಸನವಿದೆ. ಎಲ್ಲ ದಮ್ಮಗಳನ್ನೂ ಗೌರವಿಸಿ ಪ್ರೋತ್ಸಾಹಿಸುತ್ತಿದ್ದ ಸಾಮ್ರಾಟ ಅಶೋಕನು ದಮ್ಮ ಮತ್ತು ವಿನಯಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಹನ್ನೆರೆಡು ಭಿಕ್ಕುಗಳನ್ನು ಕಾಶ್ಮೀರ-ಗಾಂಧಾರ, ಮಹಿಷ ಮಂಡಲ(ಮೈಸೂರು), ಬನವಾಸಿ, ಅಪರಾಂತಕ(ಪಶ್ಚಿಮ ಭಾರತದ ಗುಜರಾತ್, ಕಛ್, ಸಿಂಧ್), ಮಹಾರಾಷ್ಟ್ರ, ಯವನ(ಗ್ರೀಸ್), ಹಿಮಾಲಯ(ಟಿಬೆಟ್), ಸುವರ್ಣಭೂಮಿ(ಥೈಲ್ಯಾಂಡ್, ಬರ್ಮಾ) ಮತ್ತು ಶ್ರೀಲಂಕಾ ಎಂಬ ಒಂಭತ್ತು ದೇಶಗಳಿಗೆ ಕಳಿಸಿದ. ಕೊಂಕಣ ಪ್ರದೇಶದ ಮುಖ್ಯ ಬಂದರು ಸೊಪಾರಾ (ಶೂರ್ಪರಕ, ಈಗ ನಾಲಾಸೋಪಾರಾ)ಗೆ ದಮ್ಮರಖ್ಖಿತ ಎಂಬ ಭಿಕ್ಕುವನ್ನು ಕಳಿಸಿದ್ದ. ನಾಲಾಸೊಪಾರಾದಲ್ಲಿ ಕುಸಿದ ಬೌದ್ಧ ಸ್ತೂಪದ ಅವಶೇಷಗಳಿವೆ. ಜಗನ್ನಾಥ ಮಂದಿರದ ಅಡಿಪಾಯ, ಸುತ್ತಮುತ್ತೆಲ್ಲ ಬೌದ್ಧ ವಸ್ತುಗಳು ಸಿಕ್ಕಿವೆ. ಸನಿಹದ ಹಳ್ಳಿಯೊಂದರ ಮುಸ್ಲಿಂ ರುದ್ರಭೂಮಿಯಲ್ಲಿ ಅಶೋಕನ ಎಂಟು, ಒಂಬತ್ತನೇ ಶಿಲಾಶಾಸನಗಳು ದೊರೆತಿವೆ. ಮುಂಬಯಿ ಸಂಗ್ರಹಾಲಯದಲ್ಲಿರುವ ಒಂಭತ್ತನೆಯ ಶಿಲಾಶಾಸನದ ಸರಳ ಅನುವಾದ ಇದು: 

‘ದೇವಾನಾಂಪ್ರಿಯ ಪ್ರಿಯದರ್ಶಿ ಹೇಳುತ್ತಾನೆ: ರೋಗಗಳು ಬಂದೆರಗಿದಾಗ, ಮಗನ/ಮಗಳ ಮದುವೆ ಮಾಡುವಾಗ, ಮಗು ಹುಟ್ಟಿದಾಗ, ಯಾತ್ರೆ ಮಾಡುವಾಗ ಗಂಡಸರು ಮತ್ತವರ ಹೆಂಡತಿ, ತಾಯಂದಿರು ಹಲವಾರು ಆಚರಣೆಗಳನ್ನು ಮಾಡುತ್ತಾರೆ. ಕ್ಷುಲ್ಲಕ, ನಿರುಪಯೋಗಿ ನೇಮಗಳನ್ನು ನಡೆಸುತ್ತಾರೆ. ಆಚರಣೆಗಳನ್ನು ಮಾಡಬೇಕು, ಆದರೆ ಅವರು ಮಾಡುತ್ತಿರುವವು ಕಡಿಮೆ ಪ್ರತಿಫಲ ನೀಡುವಂತಹವು. ಎಂದೇ ಸದಾಚಾರ(ನೈತಿಕತೆ)ಯನ್ನುದ್ದೀಪಿಸುವಂತಹ, ಫಲಪ್ರದವಾಗುವಂತಹ ಕೆಳಕಂಡ ಆಚರಣೆಗಳನ್ನಷ್ಟೇ ಮಾಡುವುದು ವಿಹಿತ: ಬಂದಿಗಳಿಗೆ, ದಾಸ-ದಾಸಿಯರಿಗೆ ಕರುಣೆ ತೋರುವುದು; ಹಿರಿಯರಿಗೆ ಗೌರವ ತೋರುವುದು; ಪಶುಗಳ ಬಗೆಗೆ ಕರುಣೆ, ಮೃದುಭಾವ ಹೊಂದುವುದು; ಬ್ರಾಹ್ಮಣ ಮತ್ತು ಶ್ರಮಣರಿಗೆ ಉದಾರವಾಗಿರುವುದು. ತಂದೆ, ಮಗ, ಮಾಲಕ, ಗೆಳೆಯ, ನೆರಹೊರೆಯವರೆಲ್ಲ ‘ಇದು ನೀತಿ, ಗುರಿ ತಲುಪುವವರೆಗೆ ಮಾಡಬೇಕಾದದ್ದು ಇಂತಹದನ್ನು’ ಎಂದು ತಿಳಿಯಬೇಕು.’ 

ಶಾಸನ ಓದಿ ಮುಂದೆ ಹೋದರೆ 5-6ನೆಯ ಶತಮಾನದ ಸಿಂಧ್ ಪ್ರಾಂತ್ಯದ ‘ಕಹುಜೊದಾರೊ ಸ್ತೂಪ’ (ಇಂದಿನ ಪಾಕಿಸ್ತಾನದ ಮಿರ್‌ಪುರ್‌ಖಾಸ್) ಉತ್ಖನನದ ವಸ್ತುಗಳು ಹೊಸಲೋಕಕ್ಕೆ ಕರೆದೊಯ್ಯುತ್ತವೆ. ಮೂವತ್ತು ಎಕರೆ ಜಾಗದಲ್ಲಿ ಗುಪ್ಪೆಬಿದ್ದ ಇಟ್ಟಿಗೆ ರಾಶಿಯನ್ನು ಸಿಂಧ್‌ನ ರೈಲುರಸ್ತೆ ಕಾಮಗಾರಿ ನಡೆಯುವಾಗ ಗಮನಿಸಲಾಯಿತು. ಬ್ರಿಟಿಷ್ ಕಮಿಷನರ್ ಜಾನ್ ಜೇಕಬ್ ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದ ಸೂಪರಿಂಟೆಂಡೆಂಟ್ ಹೆನ್ರಿ ಕಸಿನ್ಸ್‌ಗೆ ವಿಷಯ ತಿಳಿಸಿದ. ಮಿರ್‌ಪುರ್‌ಖಾಸ್‌ಗೆ ಬಂದ ಕಸಿನ್ಸ್ ದಿಬ್ಬದ ಉತ್ಖನನ, ವಸ್ತುಗಳ ದಾಖಲೀಕರಣದಲ್ಲಿ ಮುಳುಗಿಯೇ ಹೋದ. ಸ್ಥಳದ ಚಿತ್ರ, ನಕಾಶೆ, ಫೋಟೋ, ವರದಿಗಳನ್ನು ಪ್ರಕಟಿಸಿ ಸಿಂಧ್ ಪ್ರಾಂತ್ಯದ ಇತಿಹಾಸದ ಮೇಲೆ ಹೊಸಬೆಳಕು ಚೆಲ್ಲಿದ.  

ಅದೇ ಹೆನ್ರಿ ಕಸಿನ್ಸ್ ಮುಂಬಯಿ ವಸ್ತುಸಂಗ್ರಹಾಲಯದ ಆರಂಭದ ಬುನಾದಿ ರೂಪಿಸಿದವರಲ್ಲಿ ಒಬ್ಬ. ಎಂದೇ ಅಲ್ಲೀಗ ಮಿರ್‌ಪುರ್‌ಖಾಸ್‌ನ ಕುಳಿತ ಭಂಗಿಯ ಐದು ಬುದ್ಧ ಶಿಲ್ಪಗಳು, ಅನುಯಾಯಿಯ ಶಿಲ್ಪ, ಜಾಂಭುಲ, ಕುಬೇರ ಮೊದಲಾಗಿ ೨೯೭ ಅಚ್ಚಿನ ಚಿತ್ರಗಳ ಹೊಂದಿದ ಟೆರ್ರಾಕೋಟ ಇಟ್ಟಿಗೆಗಳು, ಜಾತಕ ಕತೆಗಳಿರುವ ಕಲ್ಲಿನ ತುಂಡುಗಳಿವೆ. ಗುಪ್ತ-ಕುಶಾನರ ಕಾಲದ ಭಾರತ, ಬೌದ್ಧ ಧರ್ಮ, ಅರಬ್-ಗ್ರೀಸ್-ಸಿಂಧೂ ಸಂಸ್ಕೃತಿಗಳ ಕೊಡುಕೊಳ್ಳುವಿಕೆಗಳನ್ನು ಅರ್ಥ ಮಾಡಿಕೊಳ್ಳಲು ಅವು ಸಹಕಾರಿಯಾಗಿವೆ. 

‘ಕಹುಜೊದಾರೊ ಸ್ತೂಪ’ (ಇಂದಿನ ಪಾಕಿಸ್ತಾನದ ಮಿರ್‌ಪುರ್‌ಖಾಸ್) ಉತ್ಖನನದ ವಸ್ತುಗಳು




ಕೃತಕ ಬುದ್ಧಿಮತ್ತೆಯನ್ನು ಅವಲಂಬಿಸತೊಡಗಿರುವ, ಹುಸಿ ವ್ಯಾಖ್ಯಾನಗಳಲ್ಲಿ ಸತ್ಯ ಮಸುಕಾದಂತೆ ಕಾಣಿಸುತ್ತಿರುವ ವರ್ತಮಾನ ಕಾಲದಲ್ಲಿ ಯುವ ಪೀಳಿಗೆಯನ್ನು ಕಲೆ, ಚರಿತ್ರೆಗಳ ಅಧ್ಯಯನ ಮಾಡುವಂತೆ ಪ್ರೋತ್ಸಾಹಿಸಲು; ಅಂತಾರಾಷ್ಟ್ರೀಯ ಕಲೆ, ಸಂಗೀತ, ಚರಿತ್ರೆಗಳನ್ನು ಭಾರತದ ಜೊತೆಯಿಟ್ಟು ಅರಿಯಲು; ಅಂದಿನ ಮತ್ತು ಇಂದಿನ ಸಮಾಜ, ಸಂಸ್ಕೃತಿಯನ್ನು ರೂಪುಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ವ್ಯಕ್ತಿ, ಚಿಂತನೆ, ಸಂದರ್ಭಗಳ ತಿಳಿಯಲು ವಸ್ತುಸಂಗ್ರಹಾಲಯಗಳು ಅವಕಾಶ ಕಲ್ಪಿಸುತ್ತವೆ. ಇದರ ಮಹತ್ವವನ್ನರಿತಿರುವವರು ಈ ವಸ್ತುಸಂಗ್ರಹಾಲಯದ ಚುಕ್ಕಾಣಿ ಹಿಡಿದಿರುವ ಕಾರಣ ಅದೀಗ ತನ್ನ ೬೦% ಬಜೆಟ್ ಅನ್ನು ಕಲಾ ಶಿಕ್ಷಣಕ್ಕಾಗಿ ವ್ಯಯಿಸುತ್ತದೆ. ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯಗಳೊಂದಿಗೆ ಸೇರಿ ಹೊಸಹೊಸ ಥೀಮುಗಳ ಪ್ರದರ್ಶನ ಏರ್ಪಡಿಸುತ್ತದೆ. ಆ ಮೂಲಕ ವಿದೇಶೀ ಕಲೆ, ಸಂಗೀತ, ವಸ್ತುಗಳನ್ನು ಭಾರತದ ಜೊತೆಯಿಟ್ಟು ಅರಿಯಲು ಹೊಸ ಅವಕಾಶ ಕಲ್ಪಿಸಿದೆ. ಪ್ರಸ್ತುತ ಗೆಟ್ಟಿ, ಬ್ರಿಟಿಷ್ ಮ್ಯೂಸಿಯಂ, ಬರ್ಲಿನ್ ಮ್ಯೂಸಿಯಂ ಮತ್ತು ಭಾರತದ ಇತರ ಮ್ಯೂಸಿಯಂಗಳ ಜೊತೆ ಸೇರಿ ಪ್ರದರ್ಶನವೊಂದನ್ನು ಏರ್ಪಡಿಸಿ ಹೆಚ್ಚೆಚ್ಚು ಜನರನ್ನು ಆಕರ್ಷಿಸುತ್ತಿದೆ. ವಿದೇಶಗಳಿಂದ ನೂರರಷ್ಟು ಬಹುಮುಖ್ಯ ವಸ್ತುಗಳು ಬಂದಿವೆ. ಪ್ರಾಚೀನ ಮತ್ತು ವರ್ತಮಾನದ ಸಂಸ್ಕೃತಿಯನ್ನು ರೂಪುಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಮೂರು ಸಂಗತಿಗಳ ಬಗೆಗೆ - 1. ಬದುಕಿನಲ್ಲಿ ಪ್ರಕೃತಿಯ ಪಾತ್ರ 2. ದೈವೀ ಸ್ವರೂಪ 3. ಸೌಂದರ್ಯ ಕುರಿತ ಮಾನದಂಡ-ಚಿಂತನೆಗಳ ಕುರಿತು ನಮ್ಮ ತಿಳಿವನ್ನು ಆಳಗೊಳಿಸಿಕೊಳ್ಳುವುದು ಅಂತಾರಾಷ್ಟ್ರೀಯ ಸಹಭಾಗಿತ್ವದ ಉದ್ದೇಶವಾಗಿದೆ. ಈ ಪ್ರದರ್ಶನ ೨೦೨೪ ಅಕ್ಟೋಬರ್‌ವರೆಗೆ ಇರುತ್ತದೆ. 

ಇಷ್ಟು ಹೇಳಿದ ಮೇಲೂ ಅಲ್ಲಿರುವ ಇತಿಹಾಸವೆಂಬ ಹಡಗಿನ ಒಂದು ಹಲಗೆಯನ್ನೂ ಅಕ್ಷರಗಳಲ್ಲಿ ಕಾಣಿಸಲು ಸಾಧ್ಯವಾಗಿಲ್ಲ. ಮ್ಯೂಸಿಯಮ್ಮಿನ ವಸಾಹತುಶಾಹಿ ಹೆಸರೇನೋ ಬದಲಾಯಿತು, ಆದರೆ ಸರ್ವಾಧಿಕಾರ ಹೇರುವ ಆಳ್ವಿಕೆ ಕೊನೆಗೊಂಡು ಜನತಂತ್ರ ಸಾಕಾರವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರ ಸಕಾರಾತ್ಮಕವಾಗಿಲ್ಲ. ಫ್ರಾನ್ಸಿಸ್ ಬೇಕನ್ ‘ಇತಿಹಾಸವೆಂದರೆ ತೇಲುವ ಹಲಗೆಯ ಕಂಡು ಮುಳುಗಿದ ಹಡಗನ್ನು ಕಲ್ಪಿಸುವುದು’ ಎನ್ನುತ್ತಾನೆ. ತೇಲುವ ಹಲಗೆಗಳನ್ನು ಅವಿರುವಂತೆ ನೋಡುವುದು, ಎಲ್ಲಿ ಹೇಗೆ ಯಾವ ಸ್ಥಿತಿಯಲ್ಲಿ ಸಿಕ್ಕಿದವೆಂದು ಅರಿಯುವುದು ಹಡಗನ್ನು ಕಲ್ಪಿಸಲು, ಅದರಲ್ಲಿ ಕಾಲಯಾನ ಕೈಗೊಳ್ಳಲು ತುಂಬ ಮುಖ್ಯ. 

ಎಂದೇ, ಹೊರಡಿ ಮುಂಬಯಿಗೆ. ವಸ್ತುಸಂಗ್ರಹಾಲಯದ ದಾರಿ ಮರೆಯದಿರಿ ಮತ್ತೆ. 

                                                                                                                ಡಾ. ಎಚ್. ಎಸ್. ಅನುಪಮಾ

(7-1-24, Prajavani)

No comments:

Post a Comment