Friday, 28 June 2024

ಒಕ್ಕೂಟದ ಸೋದರಿಯರು

 


(Art: Krishna GiLiyar)



ತಿಕ್ಕಿ ತೊಳೆದು

ಒರೆಸಿ ಓರಣಗೊಳಿಸಿ

ಅದಕೆ ನಾನು

ನನಗೆ ಅದು 

ಎಂಬ ಭಾವವ ಗಟ್ಟಿಗೊಳಿಸಿ

ಅದಿದ್ದರೇ ನಾನು ಎಂದು ಅನಿವಾರ್ಯಗೊಳಿಸಿ 

ಅದರಿಂದಲೇ ಎಂದು ಸಂಬಂಧಗೊಳಿಸಿ


ಸಾಕಾಯಿತೇ ಅಕ್ಕಾ

ತೋರಿಸು 

ಒಪ್ಪಗೊಳಿಸುವುದು ಬೇಡದ ದಾರಿಗಳನ್ನು

ಪಥ ಹಿಡಿದು ನಡೆಯದ ಪಥಿಕರನ್ನು



ಬರುಬರುತ್ತ 

ಕುಚ ಜಘನ ಕೇಶ ಕಪೋಲ ಕಂಕಣ

ಗೋಡೆ ಬಾಗಿಲು ಅಗಳಿ ಚಿಲಕ

ಮುಂತಾಗಿ ಬಿಗಿಯಾಗಿ ಬಂಧಿಸುವ 

ಯಾವುದೂ ಬೇಡವೆನಿಸುತ್ತಿದೆ

ಪಟವಾಗುವುದು ಚೌಕಟ್ಟಿನೊಳಗೆ ಕೂರುವುದು

ಮೂರ್ತಿಯಾಗುವುದು ಸ್ಮಾರಕವಾಗುವುದು

ಒಲ್ಲೆನೆಂದು ಕೂಗಬೇಕೆನಿಸುತ್ತಿದೆ


ಚಿಟ್ಟಿಬಾಬುವಿನ ವೀಣೆ

ಕೇಳಿದ ಜೀವಗಳೆಲ್ಲ ತಲೆದೂಗುವಂತೆ

ಜೀವ ಮಿಡಿವ ಸದ್ದು 

ಕೇಳಿದ್ದೇ ಬಯಲುಗೊಳುವ ಹಂಬಲ

ಮೊಳೆಯುತ್ತಿದೆ



ನಿಲ್ಲಲು ಕಾಲುಗಳೇ ಇರದ ಬಾನಾಡಿ

ರೆಕ್ಕೆಯ ವಜ್ಜೆಗೆ ಹಾರಲಾಗದ ಹಕ್ಕಿ

ಗೂಡಲ್ಲಿ, ಬಂಡೆ ಸಂದಲಿ, 

ಪೊಟರೆಗಳಲಿ ನೆಲದಾಳದಲ್ಲಿ 

ಗುಟ್ಟಾಗಿ ಮೊಟ್ಟೆಯಿಟ್ಟು, 

ಸರತಿಯಲಿ ಕಾವು ಕೊಟ್ಟು

ಮರಿಯೊಡೆಸಿ ಮಕ್ಕಳ ಬೆಳೆಸುವ ಕನಸಿಗರು

ಒಮ್ಮೆ

ಮೇಳ ಸೇರಿದರು 


ಇವರ ನೋಡುತ್ತ ಅವರ ಕಾಲು ಬೆಳೆದು

ಅವರ ನೋಡುತ್ತ ಇವರ ಪುಕ್ಕ ಚಿಗುರಿ

ನಡೆಯಲಾಗದ ಮರಿಗಳ ಬೆನ್ನಮೇಲೆ ಹೊತ್ತು

ಕೈಕೈ ಹಿಡಿದು ಕೊನೆಯಿರದ ಸರಪಳಿ ಬೆಸೆದು 

ಸಾಗಿದರು ಒಕ್ಕೂಟಗೊಂಡ ಜೀವರು


ನಾವು 

ಸಮತೆಯೆಡೆಗೆ ನಡೆವ ಒಕ್ಕೂಟಿಗಳು

ಅರಿವಿನ ಪಯಣ ಹೊರಟ ಸೋದರಿಯರು

ಒಟ್ಟಿಗಿರುವವರು, ಒಟ್ಟಿಗೇ ನಲುಗುವವರು 

ಬರುವುದ ಬಂದಂತೆ ಎಳೆದುಕೊಳದೆ

ಬೇಕಿರುವಂತೆ ಬದುಕುವ ಸಗ್ಗದ ಚೆಲುವಿಯರು


ನಮ್ಮ ಲಲಿತಕ್ಕ ಹೇಳುವಂತೆ

ಲೋಕವೇ, 

ಧನ್ಯವಾದ ನಿನಗೆ 

ನಮ್ಮನ್ನು ಹೀಗೆ ಬೆಳೆಯಗೊಟ್ಟಿದ್ದಕ್ಕೆ..

ಧನ್ಯವಾದ ನಿಮಗೆ

ಚಿವುಟುತ್ತ

ಚಿಗುರುವ ಹಂಬಲ ಜೀವಂತವಾಗಿಟ್ಟಿರುವುದಕೆ..


                                                                                 ಡಾ. ಎಚ್. ಎಸ್. ಅನುಪಮಾ 



Sunday, 16 June 2024

Ashoka Edict koppal - ಕೊಪ್ಪಳ: ಬಂಡೆಗಳ ಮೇಲೆ ಕವನ ಬರೆಸಿದ ನಾಡು

 







ಬಯಲಿಗೊಂದು ಸೌಂದರ್ಯ, ಬಂಡೆಗಳಿಗೊಂದು ಗಾಂಭೀರ್ಯ. ದಟ್ಟಡವಿಗೊಂದು ನಿಗೂಢ ಚೆಲುವು, ಮನ ತೆರೆದು ಹರಡುವಂತೆ ಬಯಲು. ಪ್ರಕೃತಿ ಎಲ್ಲೆಡೆಯೂ ‘ಸಿರಿ’ಯೇ ಆದರೂ ಹಸಿರು ಹೊದ್ದ ಬುವಿಯನ್ನು ನೋಡುತ್ತಲೇ ಇರುವ ಮಲೆಸೀಮೆಯ ನಮಗೆ ಧೀರ ಗಂಭೀರವಾಗಿ ನಿಂತ ಬಂಡೆಗಳ ಬೆಟ್ಟಗಳೆಂದರೆ ಕಣ್ಣಿಗೆ ಹಬ್ಬ. 

ಕಣ್ಣು ಹಾಯಿಸಿದತ್ತ ಬಂಡೆಗಳೆಂಬ ಕಾವ್ಯ ಎದುರುಗೊಳುವ ಊರು ಕೊಪ್ಪಳ. ಊರೊಳಗೂ ಬಡಾವಣೆಗಳಲ್ಲಿ ನಿಸರ್ಗ ವ್ಯಾಪಾರಗಳಿಗೆ ಸಾಕ್ಷಿಯಾಗಿ ಕೋಟ್ಯಂತರ ವರ್ಷಗಳಿಂದ ಮಲಗಿರುವ ಮೌನಿಗಲ್ಲುಗಳು ಕಾಣಸಿಗುತ್ತವೆ. ಏನು ಸೋಜಿಗವೋ, ಬೃಹತ್ ಬಂಡೆಯೊಂದರ ಎದುರು ನಿಂತರೆ ನಮ್ಮೊಳಗೊಂದು ಏಕಾಂತ ಸೃಷ್ಟಿಯಾಗಿಬಿಡುತ್ತದೆ! 

ಅಂತಹ ಕೊಪ್ಪಳ ನಾಡಿಗೆ ಕಾಲಿಟ್ಟ ಮೇಲೆ ಸಣ್ಣ ಬೆಟ್ಟವನ್ನಾದರೂ ಹತ್ತಿಯೇ ಸಿದ್ಧ ಎಂದು ಪಟ್ಟಣದ ಸೆರಗಿಗೆ, ಗವಿಮಠದ ಹಿಂದಿರುವ ಗುಡ್ಡಕ್ಕೆ ಆ ಬೆಳಗು ಹೊರಟೆವು. ನಿಲುಕದ ಬಂಡೆಯೊಂದರ ಮೇಲೆ ಅಂದೆಂದೋ ನಾಡನಾಳಿದ ಅರಸು ಅಕ್ಷರಗಳನ್ನು ಅಕ್ಕರೆಯಿಂದ ಕಡೆಸಿಟ್ಟಿರುವ ತಾಣವದು. ಎರಡು ಸಾವಿರದ ಮುನ್ನೂರು ವರುಷ ಕೆಳಗೆ ಲೋಕದ ಶೋಕ ಕಾರಣವ ಹೋಗಲಾಡಿಸುವೆನೆಂದು ಪಣ ತೊಟ್ಟು ಲೋಕಹಿತದ ಬೌದ್ಧಮಾರ್ಗ ತುಳಿದ ಸಾಮ್ರಾಟ ಅಶೋಕನು ತನ್ನ ಪ್ರಜೆಗಳಿಗೆ ಕಾಲಾತೀತ ಸತ್ಯವನ್ನರುಹಲು ಬರೆಸಿದ ಶಾಸನ ಅಲ್ಲಿದೆ. ಮಳೆಗಾಳಿ, ಚಳಿ ಧೂಳಿಗೆ ಅಕ್ಷರಗಳೀಗ ಮಸುಕು ಮಸುಕಾಗಿವೆ. ನಮ್ಮ ಕಣ್ಣಬೆಳಕು ಆರುವ ಮೊದಲೇ ನೋಡಬೇಕೆಂಬ ತುರ್ತುಭಾವ ಆವರಿಸಿ ಬಳಗದೊಂದಿಗೆ ನಾನಲ್ಲಿದ್ದೆ. 

ದಿಬ್ಬದಂತಹ ಬೆಟ್ಟದ ಬುಡದ ಬೇಲಿ ದಾಟಿ, ಪುರಾತತ್ವ ಇಲಾಖೆಯ ಫಲಕ ಓದಿ ಏರತೊಡಗಿದೆವು. ಕಣ್ಣು ಹಾಯಿಸಿದತ್ತ ನಾನಾ ಆಕಾರ, ರೂಪ, ರಚನೆ, ಜೋಡಿದಾರಿಕೆಯ ಬಂಡೆಗಳು. ಹಿಡಿಮಣ್ಣು ಇರುವಲ್ಲೆಲ್ಲ ಹಸಿರು. ಸಂದಿಗೊಂದಿಗಳಲ್ಲಿ ಬಾವಲಿ, ನಾಯಿ, ಹಾವುಹರಣೆ. ವಾರದ ಕೆಳಗೆ ಸುರಿದ ಮಳೆಯಿಂದ ಮೇ ತಿಂಗಳಿನಲ್ಲೂ ತಂಗಾಳಿ ಬೀಸುತ್ತಿತ್ತು. ಏರತೊಡಗಿದ ಹತ್ತು ನಿಮಿಷದಲ್ಲಿ ದೊಡ್ಡ ಬಂಡೆಯೊಂದರೆದುರು ನಿಂತೆವು. ನಾವು ಕುಬ್ಜರೆನಿಸುವಂತೆ ಮಾಡಿದ ಅದು ಅಗಮ್ಯವೇನಲ್ಲ, ಆದರೆ ಡಬಲ್ ಡೆಕರನ್ನು ಏರುವುದು ಐವತ್ತು ದಾಟಿದ ಹೆಣ್ಣು ಮೊಣಕಾಲುಗಳಿಗೆ ಸುಲಭವಾಗಿರಲಿಲ್ಲ. ಚತುಷ್ಪಾದಿಗಳಾಗಿ ಕೆಳಬಂಡೆಯ ಮೇಲೆ ಕೆತ್ತಿಟ್ಟ ಕಚ್ಚುಗಳಲ್ಲಿ ಕೈಕಾಲಿಟ್ಟು ಹತ್ತಿದರೆ ಮೇಲಿನ ಬಂಡೆ ಛತ್ರಿಯಂತೆ, ಸೂರಿನಂತೆ ಹರಡಿಕೊಂಡು ವಿಶಾಲ ಆವರಣ ರೂಪಿಸಿರುವುದು ಕಾಣುತ್ತದೆ. ಅದರಡಿ ಬಿಸಿಲು ತಾಗಲು ಸಾಧ್ಯವೇ ಇಲ್ಲ. ರುಮುರುಮು ಗಾಳಿಗೆ ಬೆವರು ಸುಳಿಯುವುದಿಲ್ಲ. ಮಳೆ ಬಂದರೂ ನೆನೆಯುವುದಿಲ್ಲ. ಹುಡುಕಿ ನೋಡಿದರಷ್ಟೇ ಬ್ರಾಹ್ಮಿ ಲಿಪಿಯ ಅಕ್ಷರಗಳು ಕಾಣುವಂತಿವೆ. ಕಲ್ಲುಬಂಡೆಗಳ ಮೇಲೆ ಕಾವ್ಯದಂತಹ ಸಾಲುಗಳ ಮೂಡಿಸಿಟ್ಟು ಹೋದ ಉದಾತ್ತ ದೊರೆ ಅಶೋಕ ಬರೆಸಿದ ಶಿಲಾಶಾಸನ ಅದು. ಎಂಟು ಸಾಲುಗಳ ಶಾಸನದ ಸಾರಾಂಶ ಹೀಗಿದೆ:







‘ದೇವನಾಂಪ್ರಿಯ ಪ್ರಿಯದರ್ಶಿಯು ಹೇಳುತ್ತಾನೆ: ನಾನು ಎರಡೂವರೆ ವರ್ಷಗಳಿಂದ ಶಾಕ್ಯನಾಗಿದ್ದೆ. ಆದರೆ ಮನಃಪೂರ್ವಕ  ಬೌದ್ಧನಾಗಲು ಪ್ರಯತ್ನಿಸಿರಲಿಲ್ಲ. ವರ್ಷದ ಕೆಳಗೆ ಸಂಘದೊಳಹೊಕ್ಕು ಈಗ ನಿಜ ಬೌದ್ಧನಾಗಲು ಮನಸ್ಸಿಟ್ಟು ಯತ್ನಿಸುತ್ತಿರುವೆನು. ಜಂಬೂದ್ವೀಪದಲ್ಲಿ ದೇವರುಗಳು ಸಾಮಾನ್ಯ ಜನರೊಂದಿಗೆ ಸಂಪರ್ಕವಿಟ್ಟುಕೊಂಡಿರಲಿಲ್ಲ. ಉನ್ನತ ಜನ್ಮದವರಷ್ಟೇ ದೇವರುಗಳ ಮಿತ್ರರಾದರು. ಅದು ಪ್ರಯತ್ನದ ಫಲ. ಆದರೆ ಅವರಿಗಷ್ಟೇ ಇದು ಸಾಧ್ಯವೆಂದು ತಿಳಿಯಬೇಡಿ. ಸಾಮಾನ್ಯ ಜನರೂ ನಿಷ್ಠೆಯಿಂದ ಪ್ರಯತ್ನಿಸಿದರೆ ವಿಮುಕ್ತಿಯನ್ನು ಪಡೆಯಬಹುದು. ಈ ದಿಕ್ಕಿನಲ್ಲಿ ಕ್ಷುದ್ರರೂ, ಮಹಾತ್ಮರೂ, ಜಯಶಾಲಿಗಳಾಗಲಿ ಎಂದು; ನೆರೆಹೊರೆಯ ಗಡಿನಾಡಿನವರೂ ಇದನ್ನರಿಯಲೆಂದು; (ದಮ್ಮವು) ಚಿರಸ್ಥಾಯಿಯಾಗಿ ನಿಲ್ಲಲೆಂದು ಇದನ್ನು (ದಮ್ಮ ಸಂದೇಶ ಸಾರುವ ಶಾಸನವನ್ನು) ಮಾಡಿಸಿರುವುದು. ಇದು (ಅನುಸರಿಸಿದಲ್ಲಿ ದಮ್ಮವು) ವರ್ಧಿಸುತ್ತದೆ. ವಿಪುಲವಾಗಿಯೇ ವರ್ಧಿಸುತ್ತದೆ.’

ದಮ್ಮ ರಾಜಕಾರಣ

ಅಶೋಕನು ಮೌರ್ಯ ವಂಶದ ಮೂರನೆಯ ಸಾಮ್ರಾಟ. ಸೋದರ ಸುಸಿಮನೇ ರಾಜನಾಗಲೆನ್ನುವುದು ತಂದೆಯ ಅಪೇಕ್ಷೆಯೆಂದು ತಿಳಿದ ಅಶೋಕ ಅಪ್ಪ ತೀರಿಕೊಂಡದ್ದೇ ಸೋದರರನ್ನು ಕೊಲ್ಲಿಸಿ ತಾನೇ ಸಾಮ್ರಾಟನಾದ. ಕ್ರಿ.ಪೂ. ೨೭೨ರಿಂದ ೨೩೨ರವರೆಗೆ ನಲವತ್ತು ವರ್ಷ ಆಳ್ವಿಕೆ ನಡೆಸಿದ. ಆರಂಭದ ಹನ್ನೆರೆಡು ವರ್ಷಗಳಲ್ಲಿ ಕೊನೆಮೊದಲಿಲ್ಲದ ಹಿಂಸೆಯ ತಾಂಡವದಿಂದ ರಾಜ್ಯ ವಿಸ್ತರಿಸಿದ. 

ತನ್ನ ವಿಶಾಲ ಸಾಮ್ರಾಜ್ಯದಿಂದ ಸುತ್ತುವರೆಯಲ್ಪಟ್ಟ, ಪೂರ್ವ ಕರಾವಳಿಯ ರಾಜ್ಯ ಕಳಿಂಗವನ್ನು (ಅದೀಗ ಒಡಿಶಾದಲ್ಲಿದೆ) ವಶಪಡಿಸಿಕೊಳ್ಳಲು ಕ್ರಿ.ಪೂ. ೨೬೦ರಲ್ಲಿ ಅಶೋಕ ಭೀಕರ ಯುದ್ಧ ನಡೆಸಿದ. ಲಕ್ಷ ಜನ ಸತ್ತರು. ಒಂದೂವರೆ ಲಕ್ಷ ಜನ ಗಡೀಪಾರಾದರು. ವಿಜಯದ ಬಳಿಕ ರಣರಂಗದಲ್ಲಿ ರಕ್ತಮಾಂಸ, ಹೆಣಗಳ ನಡುವೆ ನಡೆದ ಅಶೋಕನಿಗೆ ಇದ್ದಕ್ಕಿದ್ದಂತೆ ಗಾಢ ವಿಷಾದ ಆವರಿಸಿತು. ಪಶ್ಚಾತ್ತಾಪ ಸುಡುತ್ತಿರುವಾಗ ನ್ಯಗ್ರೋಧನೆಂಬ ಭಿಕ್ಕುವನ್ನು ಭೇಟಿಯಾದ. ದಮ್ಮದೆಡೆಗೆ ಸೆಳೆಯಲ್ಪಟ್ಟ. ಮನದ ಪರಿತಾಪ ಕಳೆದುಕೊಳ್ಳಲು ಬೌದ್ಧ ಮಾರ್ಗ ಅನುಸರಿಸಿದ. ತನ್ನ ಆಡಳಿತ, ಆದರ್ಶ, ಬದುಕಿನ ರೀತಿನೀತಿ, ದೃಷ್ಟಿಕೋನಗಳಲ್ಲಿ ಸಂಪೂರ್ಣ ಬದಲಾದ. 

ಮನುಷ್ಯ ಸ್ವಭಾವಗಳಲ್ಲಿ ಅತ್ಯುತ್ತಮವಾದದ್ದನ್ನು ಹೊರಗೆಳೆಯುವ ಬೌದ್ಧ ದಮ್ಮವು ಸದಾಕಾಲ ಜನರ ನೆನಪಿನಲ್ಲಿರಲೆಂದು ಅಶೋಕ ಶಾಸನಗಳನ್ನು ಬರೆಸಿದ. ಅವನ ಆಳ್ವಿಕೆಯ ಆರಂಭದಲ್ಲಿ ಕಿರು ಬಂಡೆಶಾಸನಗಳು ಬಂದವು. ನಂತರ ಸ್ತಂಭ ಶಾಸನಗಳು, ಭಾರೀ ಬಂಡೆಶಾಸನಗಳು ಬಂದವು. ದಮ್ಮವೆಂದರೇನು? ಅದೇಕೆ ಮುಖ್ಯ? ಹೇಗೆ ಅನುಸರಿಸುವುದು? ತಾನು ಹೇಗಿದ್ದವ ಹೇಗಾದೆ? ಆಳ್ವಿಕರು ಜನಾನುರಾಗಿಯಾಗಿರುವುದು ಹೇಗೆ? ಮುಂತಾದ ವಿಷಯಗಳನ್ನು ಬರೆಸಿದ. ದಮ್ಮ ಪ್ರಚಾರಕರನ್ನು ಕಳಿಸಿ ಕಾಲಕಾಲಕ್ಕೆ ಅವನ್ನು ಓದಿ ಬೌದ್ಧ ಮಾರ್ಗ ತಿಳಿಸುವ ವ್ಯವಸ್ಥೆ ಮಾಡಿದ. ಬೌದ್ದ ಮತವು ವಿಶ್ವದಮ್ಮವಾಗಿ ಹೊರಹೊಮ್ಮುವಂತೆ ಶ್ರಮಿಸಿದ. 

ಆದರೆ ಅವನ ಮರಣಾನಂತರ ಐವತ್ತೇ ವರ್ಷಗಳಲ್ಲಿ ಮೌರ್ಯ ಸಾಮ್ರಾಜ್ಯ ಪತನವಾಯಿತು. ದಕ್ಷಿಣದ ತುದಿಯನ್ನು ಹೊರತುಪಡಿಸಿ ಇವತ್ತಿನ ಭಾರತ ಉಪಖಂಡವನ್ನೆಲ್ಲ ವ್ಯಾಪಿಸಿದ್ದ ಸಾಮ್ರಾಜ್ಯವು ನಾಲ್ಕಾರು ಪಟ್ಟಣಗಳಿಗೆ ಸೀಮಿತವಾಯಿತು. ಬರಬರುತ್ತ ಶೈವ, ಜೈನ, ಬೌದ್ಧ, ವೈಷ್ಣವಗಳ ‘ಚತುಸ್ಸಮಯ’ದಲ್ಲಿ ಬುದ್ಧನ ದಮ್ಮವೂ ಒಂದಾಗಿ, ಶಿಥಿಲಗೊಂಡು, ಬುದ್ದನು ಹನ್ನೆರಡನೆಯ ಅವತಾರವಾಗಿ ಸನಾತನ ಸಂಕಥನಗಳಲ್ಲಿ ಸೇರಿಹೋದ ಬಳಿಕ ಹಿನ್ನಡೆ ಕಂಡಿತು. ಅಶೋಕನ ಶಿಲಾಶಾಸನಗಳು, ಬ್ರಾಹ್ಮಿ ಲಿಪಿ, ಪ್ರಾಕೃತ-ಪಾಲಿ ಭಾಷೆಗಳೂ ಮರೆವಿಗೆ ಸರಿದವು. ಹೀಗಿರುತ್ತ ೧೯ನೆಯ ಶತಮಾನದಲ್ಲಿ ಬ್ರಿಟಿಷ್ ವಿದ್ವಾಂಸ ಜೇಮ್ಸ್ ಪ್ರಿನ್ಸೆಪ್ (೧೭೯೯-೧೮೪೦) ಸಾಂಚಿಯ ಸ್ತೂಪದ ಸ್ತಂಭ ಶಾಸನಗಳನ್ನು ಮೊದಲು ಓದಿದ. ಶ್ರೀಲಂಕಾದ ಬೌದ್ಧ ಪಠ್ಯಗಳು ಮತ್ತಿತರ ಸಾಕ್ಷ್ಯಾಧಾರಗಳ ಆಧಾರದಲ್ಲಿ ಅಲ್ಲಿ ಉಲ್ಲೇಖಿಸಲ್ಪಟ್ಟ ‘ದೇವನಾಂಪಿಯ ಪಿಯದಸ್ಸಿ’ ಅಶೋಕನೇ ಎಂದು ಪತ್ತೆಹಚ್ಚಿದ. ಅಧ್ಯಯನದ ಫಲಿತವನ್ನು ೧೮೩೭ರಲ್ಲಿ ಪ್ರಕಟಿಸಿದ. ಭಾರತವಷ್ಟೇ ಅಲ್ಲ, ಆಗ್ನೇಯ ಏಷ್ಯಾದ ಬಹುತೇಕ ಲಿಪಿಗಳು ಬ್ರಾಹ್ಮಿ ಮೂಲದಿಂದಲೇ ಹುಟ್ಟಿವೆಯೆಂದು ತಿಳಿದುಬಂತು. ಭಾರತದ ಇತಿಹಾಸದಲ್ಲಿ ಹೊಸ ಅಧ್ಯಾಯವೇ ತೆರೆದುಕೊಂಡಿತು.

 


೧೯೩೧ರಲ್ಲಿ ಕೊಪ್ಪಳದ ಲಿಂಗಾಯತ ಮಠಾಧಿಪತಿಗಳೊಬ್ಬರಿಗೆ ಮಠದ ಹಿಂದಿನ ಬಂಡೆಯ ಮೇಲೆ ಅಕ್ಷರಗಳಿರುವುದು ತಿಳಿಯಿತು. ಇತಿಹಾಸಕ್ತರಾಗಿದ್ದ ಅವರು ಅಕ್ಷರಗಳನ್ನು ಎನ್. ಬಿ. ಶಾಸ್ತ್ರಿಯವರಿಗೆ ತೋರಿಸಿದರು. ಬಂಡೆಯ ಮೇಲೆ ತಮಿಳು ಅಕ್ಷರಗಳಿದ್ದು ಪರಿಶೀಲಿಸಬೇಕೆಂದು ಹೈದರಾಬಾದಿನ ಪುರಾತತ್ವ ಇಲಾಖೆಯನ್ನು ಶಾಸ್ತ್ರಿ ಕೋರಿದರು. ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದ ಸೈಯದ್ ಯೂಸುಫ್, ನಿರ್ದೇಶಕರಾಗಿದ್ದ ಯಜ್ದಾನಿ ಕೊಪ್ಪಳಕ್ಕೆ ಬಂದರು. ಕೂಲಂಕುಶ ಸಂಶೋಧನೆ ನಡೆಸಿ, ಅದು ಬ್ರಾಹ್ಮಿ ಲಿಪಿಯ ಅಶೋಕನ ಶಿಲಾಶಾಸನವೆಂದು ಪತ್ತೆ ಹಚ್ಚಿದರು. ಪಶ್ಚಿಮದ ಕಡೆಯಿಂದ ಕೊಪ್ಪಳ ಊರು ಪ್ರವೇಶಿಸುವಾಗ ಬಲಬದಿಯ ಬೆಟ್ಟ ಸಾಲಿನ ಮೇಲೊಂದು ಅಪೂರ್ವ ಆಕಾರವು ಗಮನ ಸೆಳೆಯುತ್ತದೆ. ಬೆಟ್ಟದ ತುತ್ತತುದಿಯಲ್ಲಿ ಕಲ್ಲು ಚಪ್ಪಡಿಯೊಂದನ್ನು ಎರಡು ಬಂಡೆಗಳ ಮೇಲೆ ಹೊದೆಸಿಟ್ಟಿರುವರೋ ಎನ್ನುವಂತಹ ರಚನೆ ಕಾಣುತ್ತದೆ. ಅದು ಪಾಲ್ಕಿಗುಂಡು ಬೆಟ್ಟ. ಅಲ್ಲೂ ಇದೇ ಬರಹವುಳ್ಳ ಶಾಸನವಿದೆ.

ಇವಾದ ಬಳಿಕ ಒಂದಾದಮೇಲೊಂದು ಅಶೋಕನ ಶಿಲಾಶಾಸನಗಳು ಪತ್ತೆಯಾದವು. ಈವರೆಗೆ ಕರ್ನಾಟಕದ ಕೊಪ್ಪಳದಲ್ಲಿ ಎರಡು, ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಒಂದು, ಬಳ್ಳಾರಿ ಜಿಲ್ಲೆಯ ನಿಟ್ಟೂರು-ಉದೆಗೊಳದಲ್ಲಿ ತಲಾ ಒಂದು, ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ-ಜತಿಂಗ ರಾಮೇಶ್ವರ-ಅಶೋಕ ಸಿದ್ದಾಪುರಗಳಲ್ಲಿ ತಲಾ ಒಂದು, ಯಾದಗಿರಿ ಜಿಲ್ಲೆಯ ಸನ್ನತಿಯಲ್ಲಿ ಒಂದು - ಒಟ್ಟು ಒಂಭತ್ತು ಕಡೆಗಳಲ್ಲಿ ಸಿಕ್ಕಿವೆ. ಇವುಗಳಲ್ಲಿ ಸನ್ನತಿಯದು ಬೃಹತ್ ಶಿಲಾಶಾಸನ (ಮೇಜರ್ ಎಡಿಕ್ಟ್). ಮಿಕ್ಕವು ಕಿರಿಯವು (ಮೈನರ್ ಎಡಿಕ್ಟ್ಸ್). ಇನ್ನು ಗ್ರಾನೈಟ್ ಕ್ವಾರಿಗಾಗಿ ಒಡೆದುಕೊಂಡ ಎಷ್ಟು ಬಂಡೆಗಳಲ್ಲಿ ಎಷ್ಟೆಷ್ಟು ಬರಹಗಳಿದ್ದವೋ; ಏನೆಲ್ಲ ಕನಸು, ಸಂದೇಶಗಳಿದ್ದವೋ; ಯಾವ್ಯಾವುವು ನಮ್ಮ ಮನೆಗಳ ನೆಲ ಹಾಸಾಗಿ ಹಿರೀಕರ ಆಶಯವನ್ನು ಹುದುಗಿಸಿಕೊಂಡಿವೆಯೋ, ನೆಲದವ್ವನೇ ತಿಳಿಸಬೇಕು. 

ಬೌದ್ಧ ನೆಲವಾಗಿದ್ದ ಕೊಪ್ಪಳದಲ್ಲಿ ಮೈತ್ರಿಯ ಕುರುಹುಗಳು ಈಗಲೂ ಹೇರಳವಾಗಿವೆ. ಶಿರಸಪ್ಪಯ್ಯನ ಮಠವೇ ಮೊದಲಾದ ಸೌಹಾರ್ದ ಪರಂಪರೆಯ ಅನೇಕ ತಾಣಗಳಿವೆ. ಕೋಮುವಾದದ ಉರಿಬಿಸಿಲು ನೆತ್ತಿ ಸುಡುತ್ತಿರುವಾಗಲೂ ಕಲ್ಯಾಣ ಕರ್ನಾಟಕವು ಸಹಬಾಳುವೆಯ ತಣ್ಣೆಳಲನ್ನು ಸಾಧಿಸಿಕೊಂಡಿದೆ. ಇದನ್ನೆಲ್ಲ ಯೋಚಿಸುತ್ತ ಬಸ್ ಕಾಯುವಾಗ ‘ಕಿಸೆಗಳ್ಳರಿದ್ದಾರೆ, ಎಚ್ಚರಿಕೆ’ ಎಂದು ಪ್ರಭುತ್ವ ಪ್ರಕಟಿಸಿದ ೨೪ ಸರಗಳ್ಳರ ಪಟ ಕಾಣಿಸಿತು. ಒಂದೊಮ್ಮೆ ಸಮಾಜ ಮೆರೆಸಾಡುವ ಅಸಲಿ ಕಳ್ಳರ ಪಟವನ್ನು ಸಾರ್ವಜನಿಕವಾಗಿ ಪ್ರಕಟಿಸಿದರೆ ಯಾರ‍್ಯಾರನ್ನು ಸೇರಿಸಬೇಕಾಗಬಹುದು ಎಂದುಕೊಳ್ಳುತ್ತ ನಡೆದೆ. ಕಳೆದ ವಾರ ಬಂದ ಮಳೆಯ ಪರಿಣಾಮವಿರಬೇಕು, ಬಸ್ಟ್ಯಾಂಡಿನ ಹೊರಬದಿಯ ಮೂಲೆಯಲ್ಲಿ ಕರಟಿದ್ದ ಸಗಣಿ ಗುಪ್ಪೆಯ ಮೇಲಿಂದ ಹತ್ತಾರು ಅನಾಮಿಕ ಬೀಜಗಳು ಮೊಳಕೆಯೊಡೆದಿದ್ದವು! ‘ಹೀಗೆಯೇ. ಒಳಿತು ಅದೃಶ್ಯವಾಗುಳಿದು ತನ್ನ ತಾ ಕಾಪಿಟ್ಟುಕೊಂಡು ಹದ ದೊರೆತಾಗ ಮೊಳಕೆಯೊಡೆಯುವುದು, ತಲ್ಲಣಿಸದಿರು’ ಎಂದು ಕೊಪ್ಪಳವು ಹಾರೈಸಿ ವಿದಾಯ ಹೇಳಿತು.

                                                                                                     ಡಾ. ಎಚ್. ಎಸ್. ಅನುಪಮಾ