ಬಯಲಿಗೊಂದು ಸೌಂದರ್ಯ, ಬಂಡೆಗಳಿಗೊಂದು ಗಾಂಭೀರ್ಯ. ದಟ್ಟಡವಿಗೊಂದು ನಿಗೂಢ ಚೆಲುವು, ಮನ ತೆರೆದು ಹರಡುವಂತೆ ಬಯಲು. ಪ್ರಕೃತಿ ಎಲ್ಲೆಡೆಯೂ ‘ಸಿರಿ’ಯೇ ಆದರೂ ಹಸಿರು ಹೊದ್ದ ಬುವಿಯನ್ನು ನೋಡುತ್ತಲೇ ಇರುವ ಮಲೆಸೀಮೆಯ ನಮಗೆ ಧೀರ ಗಂಭೀರವಾಗಿ ನಿಂತ ಬಂಡೆಗಳ ಬೆಟ್ಟಗಳೆಂದರೆ ಕಣ್ಣಿಗೆ ಹಬ್ಬ.
ಕಣ್ಣು ಹಾಯಿಸಿದತ್ತ ಬಂಡೆಗಳೆಂಬ ಕಾವ್ಯ ಎದುರುಗೊಳುವ ಊರು ಕೊಪ್ಪಳ. ಊರೊಳಗೂ ಬಡಾವಣೆಗಳಲ್ಲಿ ನಿಸರ್ಗ ವ್ಯಾಪಾರಗಳಿಗೆ ಸಾಕ್ಷಿಯಾಗಿ ಕೋಟ್ಯಂತರ ವರ್ಷಗಳಿಂದ ಮಲಗಿರುವ ಮೌನಿಗಲ್ಲುಗಳು ಕಾಣಸಿಗುತ್ತವೆ. ಏನು ಸೋಜಿಗವೋ, ಬೃಹತ್ ಬಂಡೆಯೊಂದರ ಎದುರು ನಿಂತರೆ ನಮ್ಮೊಳಗೊಂದು ಏಕಾಂತ ಸೃಷ್ಟಿಯಾಗಿಬಿಡುತ್ತದೆ!
ಅಂತಹ ಕೊಪ್ಪಳ ನಾಡಿಗೆ ಕಾಲಿಟ್ಟ ಮೇಲೆ ಸಣ್ಣ ಬೆಟ್ಟವನ್ನಾದರೂ ಹತ್ತಿಯೇ ಸಿದ್ಧ ಎಂದು ಪಟ್ಟಣದ ಸೆರಗಿಗೆ, ಗವಿಮಠದ ಹಿಂದಿರುವ ಗುಡ್ಡಕ್ಕೆ ಆ ಬೆಳಗು ಹೊರಟೆವು. ನಿಲುಕದ ಬಂಡೆಯೊಂದರ ಮೇಲೆ ಅಂದೆಂದೋ ನಾಡನಾಳಿದ ಅರಸು ಅಕ್ಷರಗಳನ್ನು ಅಕ್ಕರೆಯಿಂದ ಕಡೆಸಿಟ್ಟಿರುವ ತಾಣವದು. ಎರಡು ಸಾವಿರದ ಮುನ್ನೂರು ವರುಷ ಕೆಳಗೆ ಲೋಕದ ಶೋಕ ಕಾರಣವ ಹೋಗಲಾಡಿಸುವೆನೆಂದು ಪಣ ತೊಟ್ಟು ಲೋಕಹಿತದ ಬೌದ್ಧಮಾರ್ಗ ತುಳಿದ ಸಾಮ್ರಾಟ ಅಶೋಕನು ತನ್ನ ಪ್ರಜೆಗಳಿಗೆ ಕಾಲಾತೀತ ಸತ್ಯವನ್ನರುಹಲು ಬರೆಸಿದ ಶಾಸನ ಅಲ್ಲಿದೆ. ಮಳೆಗಾಳಿ, ಚಳಿ ಧೂಳಿಗೆ ಅಕ್ಷರಗಳೀಗ ಮಸುಕು ಮಸುಕಾಗಿವೆ. ನಮ್ಮ ಕಣ್ಣಬೆಳಕು ಆರುವ ಮೊದಲೇ ನೋಡಬೇಕೆಂಬ ತುರ್ತುಭಾವ ಆವರಿಸಿ ಬಳಗದೊಂದಿಗೆ ನಾನಲ್ಲಿದ್ದೆ.
ದಿಬ್ಬದಂತಹ ಬೆಟ್ಟದ ಬುಡದ ಬೇಲಿ ದಾಟಿ, ಪುರಾತತ್ವ ಇಲಾಖೆಯ ಫಲಕ ಓದಿ ಏರತೊಡಗಿದೆವು. ಕಣ್ಣು ಹಾಯಿಸಿದತ್ತ ನಾನಾ ಆಕಾರ, ರೂಪ, ರಚನೆ, ಜೋಡಿದಾರಿಕೆಯ ಬಂಡೆಗಳು. ಹಿಡಿಮಣ್ಣು ಇರುವಲ್ಲೆಲ್ಲ ಹಸಿರು. ಸಂದಿಗೊಂದಿಗಳಲ್ಲಿ ಬಾವಲಿ, ನಾಯಿ, ಹಾವುಹರಣೆ. ವಾರದ ಕೆಳಗೆ ಸುರಿದ ಮಳೆಯಿಂದ ಮೇ ತಿಂಗಳಿನಲ್ಲೂ ತಂಗಾಳಿ ಬೀಸುತ್ತಿತ್ತು. ಏರತೊಡಗಿದ ಹತ್ತು ನಿಮಿಷದಲ್ಲಿ ದೊಡ್ಡ ಬಂಡೆಯೊಂದರೆದುರು ನಿಂತೆವು. ನಾವು ಕುಬ್ಜರೆನಿಸುವಂತೆ ಮಾಡಿದ ಅದು ಅಗಮ್ಯವೇನಲ್ಲ, ಆದರೆ ಡಬಲ್ ಡೆಕರನ್ನು ಏರುವುದು ಐವತ್ತು ದಾಟಿದ ಹೆಣ್ಣು ಮೊಣಕಾಲುಗಳಿಗೆ ಸುಲಭವಾಗಿರಲಿಲ್ಲ. ಚತುಷ್ಪಾದಿಗಳಾಗಿ ಕೆಳಬಂಡೆಯ ಮೇಲೆ ಕೆತ್ತಿಟ್ಟ ಕಚ್ಚುಗಳಲ್ಲಿ ಕೈಕಾಲಿಟ್ಟು ಹತ್ತಿದರೆ ಮೇಲಿನ ಬಂಡೆ ಛತ್ರಿಯಂತೆ, ಸೂರಿನಂತೆ ಹರಡಿಕೊಂಡು ವಿಶಾಲ ಆವರಣ ರೂಪಿಸಿರುವುದು ಕಾಣುತ್ತದೆ. ಅದರಡಿ ಬಿಸಿಲು ತಾಗಲು ಸಾಧ್ಯವೇ ಇಲ್ಲ. ರುಮುರುಮು ಗಾಳಿಗೆ ಬೆವರು ಸುಳಿಯುವುದಿಲ್ಲ. ಮಳೆ ಬಂದರೂ ನೆನೆಯುವುದಿಲ್ಲ. ಹುಡುಕಿ ನೋಡಿದರಷ್ಟೇ ಬ್ರಾಹ್ಮಿ ಲಿಪಿಯ ಅಕ್ಷರಗಳು ಕಾಣುವಂತಿವೆ. ಕಲ್ಲುಬಂಡೆಗಳ ಮೇಲೆ ಕಾವ್ಯದಂತಹ ಸಾಲುಗಳ ಮೂಡಿಸಿಟ್ಟು ಹೋದ ಉದಾತ್ತ ದೊರೆ ಅಶೋಕ ಬರೆಸಿದ ಶಿಲಾಶಾಸನ ಅದು. ಎಂಟು ಸಾಲುಗಳ ಶಾಸನದ ಸಾರಾಂಶ ಹೀಗಿದೆ:
‘ದೇವನಾಂಪ್ರಿಯ ಪ್ರಿಯದರ್ಶಿಯು ಹೇಳುತ್ತಾನೆ: ನಾನು ಎರಡೂವರೆ ವರ್ಷಗಳಿಂದ ಶಾಕ್ಯನಾಗಿದ್ದೆ. ಆದರೆ ಮನಃಪೂರ್ವಕ ಬೌದ್ಧನಾಗಲು ಪ್ರಯತ್ನಿಸಿರಲಿಲ್ಲ. ವರ್ಷದ ಕೆಳಗೆ ಸಂಘದೊಳಹೊಕ್ಕು ಈಗ ನಿಜ ಬೌದ್ಧನಾಗಲು ಮನಸ್ಸಿಟ್ಟು ಯತ್ನಿಸುತ್ತಿರುವೆನು. ಜಂಬೂದ್ವೀಪದಲ್ಲಿ ದೇವರುಗಳು ಸಾಮಾನ್ಯ ಜನರೊಂದಿಗೆ ಸಂಪರ್ಕವಿಟ್ಟುಕೊಂಡಿರಲಿಲ್ಲ. ಉನ್ನತ ಜನ್ಮದವರಷ್ಟೇ ದೇವರುಗಳ ಮಿತ್ರರಾದರು. ಅದು ಪ್ರಯತ್ನದ ಫಲ. ಆದರೆ ಅವರಿಗಷ್ಟೇ ಇದು ಸಾಧ್ಯವೆಂದು ತಿಳಿಯಬೇಡಿ. ಸಾಮಾನ್ಯ ಜನರೂ ನಿಷ್ಠೆಯಿಂದ ಪ್ರಯತ್ನಿಸಿದರೆ ವಿಮುಕ್ತಿಯನ್ನು ಪಡೆಯಬಹುದು. ಈ ದಿಕ್ಕಿನಲ್ಲಿ ಕ್ಷುದ್ರರೂ, ಮಹಾತ್ಮರೂ, ಜಯಶಾಲಿಗಳಾಗಲಿ ಎಂದು; ನೆರೆಹೊರೆಯ ಗಡಿನಾಡಿನವರೂ ಇದನ್ನರಿಯಲೆಂದು; (ದಮ್ಮವು) ಚಿರಸ್ಥಾಯಿಯಾಗಿ ನಿಲ್ಲಲೆಂದು ಇದನ್ನು (ದಮ್ಮ ಸಂದೇಶ ಸಾರುವ ಶಾಸನವನ್ನು) ಮಾಡಿಸಿರುವುದು. ಇದು (ಅನುಸರಿಸಿದಲ್ಲಿ ದಮ್ಮವು) ವರ್ಧಿಸುತ್ತದೆ. ವಿಪುಲವಾಗಿಯೇ ವರ್ಧಿಸುತ್ತದೆ.’
ದಮ್ಮ ರಾಜಕಾರಣ
ಅಶೋಕನು ಮೌರ್ಯ ವಂಶದ ಮೂರನೆಯ ಸಾಮ್ರಾಟ. ಸೋದರ ಸುಸಿಮನೇ ರಾಜನಾಗಲೆನ್ನುವುದು ತಂದೆಯ ಅಪೇಕ್ಷೆಯೆಂದು ತಿಳಿದ ಅಶೋಕ ಅಪ್ಪ ತೀರಿಕೊಂಡದ್ದೇ ಸೋದರರನ್ನು ಕೊಲ್ಲಿಸಿ ತಾನೇ ಸಾಮ್ರಾಟನಾದ. ಕ್ರಿ.ಪೂ. ೨೭೨ರಿಂದ ೨೩೨ರವರೆಗೆ ನಲವತ್ತು ವರ್ಷ ಆಳ್ವಿಕೆ ನಡೆಸಿದ. ಆರಂಭದ ಹನ್ನೆರೆಡು ವರ್ಷಗಳಲ್ಲಿ ಕೊನೆಮೊದಲಿಲ್ಲದ ಹಿಂಸೆಯ ತಾಂಡವದಿಂದ ರಾಜ್ಯ ವಿಸ್ತರಿಸಿದ.
ತನ್ನ ವಿಶಾಲ ಸಾಮ್ರಾಜ್ಯದಿಂದ ಸುತ್ತುವರೆಯಲ್ಪಟ್ಟ, ಪೂರ್ವ ಕರಾವಳಿಯ ರಾಜ್ಯ ಕಳಿಂಗವನ್ನು (ಅದೀಗ ಒಡಿಶಾದಲ್ಲಿದೆ) ವಶಪಡಿಸಿಕೊಳ್ಳಲು ಕ್ರಿ.ಪೂ. ೨೬೦ರಲ್ಲಿ ಅಶೋಕ ಭೀಕರ ಯುದ್ಧ ನಡೆಸಿದ. ಲಕ್ಷ ಜನ ಸತ್ತರು. ಒಂದೂವರೆ ಲಕ್ಷ ಜನ ಗಡೀಪಾರಾದರು. ವಿಜಯದ ಬಳಿಕ ರಣರಂಗದಲ್ಲಿ ರಕ್ತಮಾಂಸ, ಹೆಣಗಳ ನಡುವೆ ನಡೆದ ಅಶೋಕನಿಗೆ ಇದ್ದಕ್ಕಿದ್ದಂತೆ ಗಾಢ ವಿಷಾದ ಆವರಿಸಿತು. ಪಶ್ಚಾತ್ತಾಪ ಸುಡುತ್ತಿರುವಾಗ ನ್ಯಗ್ರೋಧನೆಂಬ ಭಿಕ್ಕುವನ್ನು ಭೇಟಿಯಾದ. ದಮ್ಮದೆಡೆಗೆ ಸೆಳೆಯಲ್ಪಟ್ಟ. ಮನದ ಪರಿತಾಪ ಕಳೆದುಕೊಳ್ಳಲು ಬೌದ್ಧ ಮಾರ್ಗ ಅನುಸರಿಸಿದ. ತನ್ನ ಆಡಳಿತ, ಆದರ್ಶ, ಬದುಕಿನ ರೀತಿನೀತಿ, ದೃಷ್ಟಿಕೋನಗಳಲ್ಲಿ ಸಂಪೂರ್ಣ ಬದಲಾದ.
ಮನುಷ್ಯ ಸ್ವಭಾವಗಳಲ್ಲಿ ಅತ್ಯುತ್ತಮವಾದದ್ದನ್ನು ಹೊರಗೆಳೆಯುವ ಬೌದ್ಧ ದಮ್ಮವು ಸದಾಕಾಲ ಜನರ ನೆನಪಿನಲ್ಲಿರಲೆಂದು ಅಶೋಕ ಶಾಸನಗಳನ್ನು ಬರೆಸಿದ. ಅವನ ಆಳ್ವಿಕೆಯ ಆರಂಭದಲ್ಲಿ ಕಿರು ಬಂಡೆಶಾಸನಗಳು ಬಂದವು. ನಂತರ ಸ್ತಂಭ ಶಾಸನಗಳು, ಭಾರೀ ಬಂಡೆಶಾಸನಗಳು ಬಂದವು. ದಮ್ಮವೆಂದರೇನು? ಅದೇಕೆ ಮುಖ್ಯ? ಹೇಗೆ ಅನುಸರಿಸುವುದು? ತಾನು ಹೇಗಿದ್ದವ ಹೇಗಾದೆ? ಆಳ್ವಿಕರು ಜನಾನುರಾಗಿಯಾಗಿರುವುದು ಹೇಗೆ? ಮುಂತಾದ ವಿಷಯಗಳನ್ನು ಬರೆಸಿದ. ದಮ್ಮ ಪ್ರಚಾರಕರನ್ನು ಕಳಿಸಿ ಕಾಲಕಾಲಕ್ಕೆ ಅವನ್ನು ಓದಿ ಬೌದ್ಧ ಮಾರ್ಗ ತಿಳಿಸುವ ವ್ಯವಸ್ಥೆ ಮಾಡಿದ. ಬೌದ್ದ ಮತವು ವಿಶ್ವದಮ್ಮವಾಗಿ ಹೊರಹೊಮ್ಮುವಂತೆ ಶ್ರಮಿಸಿದ.
ಆದರೆ ಅವನ ಮರಣಾನಂತರ ಐವತ್ತೇ ವರ್ಷಗಳಲ್ಲಿ ಮೌರ್ಯ ಸಾಮ್ರಾಜ್ಯ ಪತನವಾಯಿತು. ದಕ್ಷಿಣದ ತುದಿಯನ್ನು ಹೊರತುಪಡಿಸಿ ಇವತ್ತಿನ ಭಾರತ ಉಪಖಂಡವನ್ನೆಲ್ಲ ವ್ಯಾಪಿಸಿದ್ದ ಸಾಮ್ರಾಜ್ಯವು ನಾಲ್ಕಾರು ಪಟ್ಟಣಗಳಿಗೆ ಸೀಮಿತವಾಯಿತು. ಬರಬರುತ್ತ ಶೈವ, ಜೈನ, ಬೌದ್ಧ, ವೈಷ್ಣವಗಳ ‘ಚತುಸ್ಸಮಯ’ದಲ್ಲಿ ಬುದ್ಧನ ದಮ್ಮವೂ ಒಂದಾಗಿ, ಶಿಥಿಲಗೊಂಡು, ಬುದ್ದನು ಹನ್ನೆರಡನೆಯ ಅವತಾರವಾಗಿ ಸನಾತನ ಸಂಕಥನಗಳಲ್ಲಿ ಸೇರಿಹೋದ ಬಳಿಕ ಹಿನ್ನಡೆ ಕಂಡಿತು. ಅಶೋಕನ ಶಿಲಾಶಾಸನಗಳು, ಬ್ರಾಹ್ಮಿ ಲಿಪಿ, ಪ್ರಾಕೃತ-ಪಾಲಿ ಭಾಷೆಗಳೂ ಮರೆವಿಗೆ ಸರಿದವು. ಹೀಗಿರುತ್ತ ೧೯ನೆಯ ಶತಮಾನದಲ್ಲಿ ಬ್ರಿಟಿಷ್ ವಿದ್ವಾಂಸ ಜೇಮ್ಸ್ ಪ್ರಿನ್ಸೆಪ್ (೧೭೯೯-೧೮೪೦) ಸಾಂಚಿಯ ಸ್ತೂಪದ ಸ್ತಂಭ ಶಾಸನಗಳನ್ನು ಮೊದಲು ಓದಿದ. ಶ್ರೀಲಂಕಾದ ಬೌದ್ಧ ಪಠ್ಯಗಳು ಮತ್ತಿತರ ಸಾಕ್ಷ್ಯಾಧಾರಗಳ ಆಧಾರದಲ್ಲಿ ಅಲ್ಲಿ ಉಲ್ಲೇಖಿಸಲ್ಪಟ್ಟ ‘ದೇವನಾಂಪಿಯ ಪಿಯದಸ್ಸಿ’ ಅಶೋಕನೇ ಎಂದು ಪತ್ತೆಹಚ್ಚಿದ. ಅಧ್ಯಯನದ ಫಲಿತವನ್ನು ೧೮೩೭ರಲ್ಲಿ ಪ್ರಕಟಿಸಿದ. ಭಾರತವಷ್ಟೇ ಅಲ್ಲ, ಆಗ್ನೇಯ ಏಷ್ಯಾದ ಬಹುತೇಕ ಲಿಪಿಗಳು ಬ್ರಾಹ್ಮಿ ಮೂಲದಿಂದಲೇ ಹುಟ್ಟಿವೆಯೆಂದು ತಿಳಿದುಬಂತು. ಭಾರತದ ಇತಿಹಾಸದಲ್ಲಿ ಹೊಸ ಅಧ್ಯಾಯವೇ ತೆರೆದುಕೊಂಡಿತು.
೧೯೩೧ರಲ್ಲಿ ಕೊಪ್ಪಳದ ಲಿಂಗಾಯತ ಮಠಾಧಿಪತಿಗಳೊಬ್ಬರಿಗೆ ಮಠದ ಹಿಂದಿನ ಬಂಡೆಯ ಮೇಲೆ ಅಕ್ಷರಗಳಿರುವುದು ತಿಳಿಯಿತು. ಇತಿಹಾಸಕ್ತರಾಗಿದ್ದ ಅವರು ಅಕ್ಷರಗಳನ್ನು ಎನ್. ಬಿ. ಶಾಸ್ತ್ರಿಯವರಿಗೆ ತೋರಿಸಿದರು. ಬಂಡೆಯ ಮೇಲೆ ತಮಿಳು ಅಕ್ಷರಗಳಿದ್ದು ಪರಿಶೀಲಿಸಬೇಕೆಂದು ಹೈದರಾಬಾದಿನ ಪುರಾತತ್ವ ಇಲಾಖೆಯನ್ನು ಶಾಸ್ತ್ರಿ ಕೋರಿದರು. ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದ ಸೈಯದ್ ಯೂಸುಫ್, ನಿರ್ದೇಶಕರಾಗಿದ್ದ ಯಜ್ದಾನಿ ಕೊಪ್ಪಳಕ್ಕೆ ಬಂದರು. ಕೂಲಂಕುಶ ಸಂಶೋಧನೆ ನಡೆಸಿ, ಅದು ಬ್ರಾಹ್ಮಿ ಲಿಪಿಯ ಅಶೋಕನ ಶಿಲಾಶಾಸನವೆಂದು ಪತ್ತೆ ಹಚ್ಚಿದರು. ಪಶ್ಚಿಮದ ಕಡೆಯಿಂದ ಕೊಪ್ಪಳ ಊರು ಪ್ರವೇಶಿಸುವಾಗ ಬಲಬದಿಯ ಬೆಟ್ಟ ಸಾಲಿನ ಮೇಲೊಂದು ಅಪೂರ್ವ ಆಕಾರವು ಗಮನ ಸೆಳೆಯುತ್ತದೆ. ಬೆಟ್ಟದ ತುತ್ತತುದಿಯಲ್ಲಿ ಕಲ್ಲು ಚಪ್ಪಡಿಯೊಂದನ್ನು ಎರಡು ಬಂಡೆಗಳ ಮೇಲೆ ಹೊದೆಸಿಟ್ಟಿರುವರೋ ಎನ್ನುವಂತಹ ರಚನೆ ಕಾಣುತ್ತದೆ. ಅದು ಪಾಲ್ಕಿಗುಂಡು ಬೆಟ್ಟ. ಅಲ್ಲೂ ಇದೇ ಬರಹವುಳ್ಳ ಶಾಸನವಿದೆ.
ಇವಾದ ಬಳಿಕ ಒಂದಾದಮೇಲೊಂದು ಅಶೋಕನ ಶಿಲಾಶಾಸನಗಳು ಪತ್ತೆಯಾದವು. ಈವರೆಗೆ ಕರ್ನಾಟಕದ ಕೊಪ್ಪಳದಲ್ಲಿ ಎರಡು, ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಒಂದು, ಬಳ್ಳಾರಿ ಜಿಲ್ಲೆಯ ನಿಟ್ಟೂರು-ಉದೆಗೊಳದಲ್ಲಿ ತಲಾ ಒಂದು, ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ-ಜತಿಂಗ ರಾಮೇಶ್ವರ-ಅಶೋಕ ಸಿದ್ದಾಪುರಗಳಲ್ಲಿ ತಲಾ ಒಂದು, ಯಾದಗಿರಿ ಜಿಲ್ಲೆಯ ಸನ್ನತಿಯಲ್ಲಿ ಒಂದು - ಒಟ್ಟು ಒಂಭತ್ತು ಕಡೆಗಳಲ್ಲಿ ಸಿಕ್ಕಿವೆ. ಇವುಗಳಲ್ಲಿ ಸನ್ನತಿಯದು ಬೃಹತ್ ಶಿಲಾಶಾಸನ (ಮೇಜರ್ ಎಡಿಕ್ಟ್). ಮಿಕ್ಕವು ಕಿರಿಯವು (ಮೈನರ್ ಎಡಿಕ್ಟ್ಸ್). ಇನ್ನು ಗ್ರಾನೈಟ್ ಕ್ವಾರಿಗಾಗಿ ಒಡೆದುಕೊಂಡ ಎಷ್ಟು ಬಂಡೆಗಳಲ್ಲಿ ಎಷ್ಟೆಷ್ಟು ಬರಹಗಳಿದ್ದವೋ; ಏನೆಲ್ಲ ಕನಸು, ಸಂದೇಶಗಳಿದ್ದವೋ; ಯಾವ್ಯಾವುವು ನಮ್ಮ ಮನೆಗಳ ನೆಲ ಹಾಸಾಗಿ ಹಿರೀಕರ ಆಶಯವನ್ನು ಹುದುಗಿಸಿಕೊಂಡಿವೆಯೋ, ನೆಲದವ್ವನೇ ತಿಳಿಸಬೇಕು.
ಬೌದ್ಧ ನೆಲವಾಗಿದ್ದ ಕೊಪ್ಪಳದಲ್ಲಿ ಮೈತ್ರಿಯ ಕುರುಹುಗಳು ಈಗಲೂ ಹೇರಳವಾಗಿವೆ. ಶಿರಸಪ್ಪಯ್ಯನ ಮಠವೇ ಮೊದಲಾದ ಸೌಹಾರ್ದ ಪರಂಪರೆಯ ಅನೇಕ ತಾಣಗಳಿವೆ. ಕೋಮುವಾದದ ಉರಿಬಿಸಿಲು ನೆತ್ತಿ ಸುಡುತ್ತಿರುವಾಗಲೂ ಕಲ್ಯಾಣ ಕರ್ನಾಟಕವು ಸಹಬಾಳುವೆಯ ತಣ್ಣೆಳಲನ್ನು ಸಾಧಿಸಿಕೊಂಡಿದೆ. ಇದನ್ನೆಲ್ಲ ಯೋಚಿಸುತ್ತ ಬಸ್ ಕಾಯುವಾಗ ‘ಕಿಸೆಗಳ್ಳರಿದ್ದಾರೆ, ಎಚ್ಚರಿಕೆ’ ಎಂದು ಪ್ರಭುತ್ವ ಪ್ರಕಟಿಸಿದ ೨೪ ಸರಗಳ್ಳರ ಪಟ ಕಾಣಿಸಿತು. ಒಂದೊಮ್ಮೆ ಸಮಾಜ ಮೆರೆಸಾಡುವ ಅಸಲಿ ಕಳ್ಳರ ಪಟವನ್ನು ಸಾರ್ವಜನಿಕವಾಗಿ ಪ್ರಕಟಿಸಿದರೆ ಯಾರ್ಯಾರನ್ನು ಸೇರಿಸಬೇಕಾಗಬಹುದು ಎಂದುಕೊಳ್ಳುತ್ತ ನಡೆದೆ. ಕಳೆದ ವಾರ ಬಂದ ಮಳೆಯ ಪರಿಣಾಮವಿರಬೇಕು, ಬಸ್ಟ್ಯಾಂಡಿನ ಹೊರಬದಿಯ ಮೂಲೆಯಲ್ಲಿ ಕರಟಿದ್ದ ಸಗಣಿ ಗುಪ್ಪೆಯ ಮೇಲಿಂದ ಹತ್ತಾರು ಅನಾಮಿಕ ಬೀಜಗಳು ಮೊಳಕೆಯೊಡೆದಿದ್ದವು! ‘ಹೀಗೆಯೇ. ಒಳಿತು ಅದೃಶ್ಯವಾಗುಳಿದು ತನ್ನ ತಾ ಕಾಪಿಟ್ಟುಕೊಂಡು ಹದ ದೊರೆತಾಗ ಮೊಳಕೆಯೊಡೆಯುವುದು, ತಲ್ಲಣಿಸದಿರು’ ಎಂದು ಕೊಪ್ಪಳವು ಹಾರೈಸಿ ವಿದಾಯ ಹೇಳಿತು.
ಡಾ. ಎಚ್. ಎಸ್. ಅನುಪಮಾ
ಮೇ ಸಾಹಿತ್ಯ ಸಮ್ಮೇಳನಕ್ಕೆ ಕೊಪ್ಪಳಕ್ಕೆ ಬಂದಾಗ ಇದನ್ನು ನಮ್ಮ ಸ್ನೇಹಿತರೊಟ್ಟಿಗೆ ನೋಡಿದೆ. ಸಂತೋಷದ ಜೊತೆಗೆ ವಿಷಾದವು ಆಯಿತು...
ReplyDeleteನಮ್ಮ ಪೂರ್ವಜರ ಕುರುಹನ್ನು ನೋಡಿ ಖುಷಿಯಾದರೆ.. ಈಗಿನ ಅದರ ಸ್ಥಿತಿ ನೋಡಿ ವಿಷಾದ ಆಯಿತು.
ದಯಮಾಡಿ ನಿಮ್ಮಂತವರು ಸರ್ಕಾರದ ಗಮನಕ್ಕೆ ತಂದರೆ ಇದನ್ನು ಅಭಿವೃದ್ಧಿ ಮಾಡಬಹುದು ಮೇಡಂ..
Dear ಅನುಪಮಾ
ReplyDeleteAshokan Edict, Koppal - it excites curiosity.
ಅಶೋಕನು ಭಾಷೆ ಮತ್ತು ಲಿಪಿ ಮೊಳಕೆಯೊಡೆಯುತ್ತಿದ್ದ ಆದಿಯುಗದಲ್ಲೇ "ಶೀಲ" ಕುರಿತಂತೆ "ಶಿಲೆ"ಗಳ ಮೂಲಕ ಬೋಧನೆಗಳನ್ನು ಪಸರಿಸಿದ್ದು ("ಶಿಲೆಗಳು ಸಂದೇಶವ ಹಾಡಿವೆ") ಬಹು ಅಚ್ಚರಿಯ, ಮೆಚ್ಚುಗೆಯ ಸಂಗತಿ. ಕೊಪ್ಪಳವೂ ಸೇರಿದಂತೆ, ಕರ್ನಾಟಕದ ಉತ್ತರಭಾಗದಲ್ಲಿ ಅವನ ಶಿಲಾಶಾಸನಗಳು ಚಾಚಿಕೊಂಡಿರುವುದು ಈ ನಾಡಿನ ಇತಿಹಾಸದ ಉಜ್ಜ್ವಲ ಸಂಗತಿಗಳಲ್ಲೊಂದು. ಈ ಸಂಗತಿಗಳೂ, ಅಶೋಕನ "ಹೃದಯ ಪರಿವರ್ತನೆ"ಯಾದ ಐತಿಹಾಸಿಕ ಮಹಾಸಂಗತಿಯೂ, ಈ ಸಚಿತ್ರ ಲೇಖನದಲ್ಲಿ ಮನಸೆಳೆವಂತೆ ಮೂಡಿಬಂದಿವೆ. ಇಲ್ಲಿರುವ ಸ್ವಾರಸ್ಯದ ಮಾಹಿತಿಯು, historical tourism, heritage conservation, "epigraphy" ರೀತಿಯ ವಿಷಯಗಳಲ್ಲಿ ಓದುಗರ ಕುತೂಹಲವನ್ನು ಅರಳಿಸುತ್ತದೆ.
ವಿಶ್ವ ಇತಿಹಾಸದ ತಾರಾಗಣದಲ್ಲಿ "ಅಶೋಕನೊಬ್ಬನೇ ಹೇಗೆ ಮಿನುಗುತ್ತಾನೆ" ಎಂಬುದನ್ನು ಮನೋಹರವಾಗಿ ಸಾರುವ H. G. Wells ಮಹಾಶಯನ ಈ ಕೆಳಕಾಣುವ ಮೆಚ್ಚುಮಾತು ಇಲ್ಲಿ ಸ್ಮರಣಾರ್ಹ: “Amid tens of thousands of names of monarchs that crowd the columns of history — their majesties, and graciousness, and serenities and royal highnesses and the like — the name of Ashoka shines and shines almost alone, a star…”.
"ಬ್ರಾಹ್ಮಿ" ಲಿಪಿಯನ್ನು ಓದುವ ಜಾಣರು ಇಂದಿಗೂ ಇದ್ದಾರಲ್ಲ ಎಂಬುದು ಬಹು ಹಿತಕರ ಸಂಗತಿ. ಆದರೆ ಬುದ್ಧ, ಅಶೋಕ, ಗಾಂಧಿ ಮುಂತಾದ ಮಹಾನ್ ಶಾಂತಿದೂತರನ್ನು ಬಹಿಷ್ಕರಿಸಿದ ಭಾರತದ "ಬ್ರಹ್ಮಲಿಪಿ" ("ಹಣೆಯ ಬರಹ") ಕುರಿತು ಯೋಚಿಸಿದಾಗ ಹರಿಯುವುದು ಕೇವಲ "ಶೋಕ". (ಓದಲು ಸಾಧ್ಯವಾಗದ ಅಸುಂದರ ಬರವಣಿಗೆಗೂ "ಬ್ರಹ್ಮಲಿಪಿ" ಎಂದೇ ಗೇಲಿ ಮಾಡುತ್ತಾರೆ!). ಇರಲಿ, ಅದು ಅಂದಿನ "ಅಶೋಕ ಶಾಸನ" ಕುರಿತ ಮಾತಾಯಿತು. ಆದರೆ, ಇಂದು ಬೇರೊಂದು "ಅಶೋಕ ಶಾಸನ" ಜೋರಾಗಿಯೇ ಜಾರಿಯಲ್ಲಿದೆಯಲ್ಲ? -- "ಶಾಸಕನಾಯಕ ಅಶೋಕ"ನ ಹುಚ್ಚು ವಿರೋಧಿ ನೇತೃತ್ವದಲ್ಲಿ! ಶಾಸನಕ್ಕಿಂತಲೂ ಈಗ ಹೆಚ್ಚಾಗಿ ಚಾಲ್ತಿಯಲ್ಲಿರುವುದು "ದುಃಶಾಸನ" ಎನಿಸದೇ?
ಹೆಬ್ಬೆಟ್ಟ-ಕಿಬ್ಬೆಟ್ಟಗಳನ್ನು ಹುಮ್ಮಸ್ಸಿನಿಂದ ಏರಿ, ಹೆಬ್ಬಂಡೆ-ಕಿಬ್ಬಂಡೆಗಳಲ್ಲಿ ಹುದುಗಿರುವ ಅಕ್ಕರದ ಐಸಿರಿಯನ್ನು ಅಕ್ಕರೆಯಿಂದ ಓದುಗರ ಗಮನಕ್ಕಿರಿಸಿರುವ ನಿಮ್ಮ ಇತಿಹಾಸಾನುರಾಗಕ್ಕೆ ಜಯವಿರಲಿ!
* "ಅಶೋಕ"ನಿಂದ ("ಪ್ರಿಯದಸ್ಸಿ") ಪ್ರೇರಿತರಾಗಿ ನೆಹ್ರೂ ತಮ್ಮ ಮಗಳ ಹೆಸರಿಗೆ "ಪ್ರಿಯದರ್ಶಿನಿ" ಎಂದು ಸೇರಿಸಿದರೆಂಬ ಮಾತಿದೆ. "ರಾಹುಲ್" ಎಂಬುದು ಬುದ್ಧನ ಮಗನ ಹೆಸರು ಎಂಬುದೂ, 'ಪ್ರಿಯಾಂಕ ಗಾಂಧಿ' ವಿದ್ಯಾರ್ಹತೆಗಳಲ್ಲಿ "Master of Buddhist Studies" ಎಂದಿರುವುದೂ ಗಮನಾರ್ಹ.
* ನ್ಯಗ್ರೋಧ= ಆಲದ ಮರ ("ನ್ಯಕ್"- ಅಧೋಮುಖ, ನ್ಯಗ್ರೋಧ= ಕೆಳಮುಖವಾಗಿ ಬೆಳೆಯುವುದು).
ಸೀತಾರಾಮ್, ಮೈಸೂರು
c_ta_rom@yahoo.co.in