ಮೂಲ ಹಲ್ಮಿಡಿ ಶಾಸನದ ಶಿಲೆಯನ್ನು ನೋಡಬೇಕೆಂದು ಬೆಂಗಳೂರಿನ ಪುರಾತತ್ವ ವಸ್ತುಸಂಗ್ರಹಾಲಯದ ಕಡೆಗೆ ಅಂದು ಹೊರಟೆ. ನಮ್ಮ ವಾಹನ ರಕ್ತಗೆಂಪು ಬಣ್ಣದ ಹೈಕೋರ್ಟ್ ಕಟ್ಟಡವನ್ನು ದಾಟಿತು. ಅದರ ಅಂದಚಂದ ಭವ್ಯತೆಗೆ ಮರುಳಾಗಿರುವಾಗಲೇ ಅಂತಹುದೇ ದಟ್ಟ ಕೆಂಪು ಬಣ್ಣದ ಇನ್ನೊಂದು ಕಟ್ಟಡ ಕಬ್ಬನ್ ಪಾರ್ಕಿನ ಮತ್ತೊಂದು ತುದಿಯಲ್ಲಿ ಕಾಣಿಸಿತು. ಅದು ಸರ್ಕಾರದ ಕೇಂದ್ರ ಗ್ರಂಥಾಲಯ ಕಟ್ಟಡ. ಚಂದಚಂದ ಎಂದುಕೊಂಡು ಹೋದರೆ ಮುಂದೆ ಮತ್ತೊಂದು ಪರಿಚಿತ ವಿನ್ಯಾಸದ ಕೆಂಪು ಕಟ್ಟಡ ಎದುರು ಹಾಯಿತು ಮತ್ತು ಅದುವೇ ಪುರಾತತ್ವ ಇಲಾಖೆಯ ವಸ್ತುಸಂಗ್ರಹಾಲಯವಾಗಿತ್ತು! ನನ್ನ ಊಹೆ ನಿಜ, ವಿನ್ಯಾಸದಿಂದ ಕಟ್ಟೋಣದವರೆಗೆ ಈ ಮೂರೂ ಕಟ್ಟಡಗಳನ್ನು ರೂಪಿಸಿದ್ದು ಒಬ್ಬರೇ ಇಂಜಿನಿಯರು.
ಆತ ರಿಚರ್ಡ್ ಹೀರಮ್ ಸ್ಯಾಂಕಿ. ಸ್ಯಾಂಕಿ! ಎಲ್ಲೋ ಕೇಳಿದ ಹೆಸರು ಅನಿಸುವುದೇ? ಹ್ಞಾಂ, ಅದೇ, ಆ ಕೆರೆ. ಸ್ಯಾಂಕಿ ಕೆರೆ. ಒಂದುಕಾಲದ (ಇಂದಿಗೂ ಸಹಾ) ಬೆಂಗಳೂರಿನ ಹೆಮ್ಮೆಯ ಸಂಕೇತಗಳಲ್ಲಿ ಹಲವನ್ನು ಕಟ್ಟಿದ ಇಂಜಿನಿಯರ್ ಸ್ಯಾಂಕಿ. ಭಾರತದ ಇತರೆಡೆಗಳಲ್ಲೂ ಅವನು ಕಟ್ಟಿದ ಕಟ್ಟಡ, ಚರ್ಚ್, ಉದ್ಯಾನವನ, ವಸ್ತುಸಂಗ್ರಹಾಲಯಗಳಿದ್ದರೂ ಮೈಸೂರು ರಾಜ್ಯದ ಚೀಫ್ ಇಂಜಿನಿಯರನಾಗಿ ೧೩ ವರ್ಷ ಗಮನಾರ್ಹ ಕೆಲಸ ಮಾಡಿದ್ದಾನೆ. ಸ್ಯಾಂಕಿ ಕೆರೆ, ಪುರಾತತ್ವ ವಸ್ತುಸಂಗ್ರಹಾಲಯ, ಅಠಾರಾ ಕಚೇರಿ, ಕೇಂದ್ರ ಗ್ರಂಥಾಲಯಗಳಷ್ಟೇ ಅಲ್ಲದೆ ಕಬ್ಬನ್ ಪಾರ್ಕ್ ರೂಪಿಸಿದವನೂ ಅವನೇ. ಬೆಂಗಳೂರು ನಗರಪಾಲಿಕೆ ಕಚೇರಿಯಿರುವ ಮೇಯೋ ಹಾಲ್ ವಿನ್ಯಾಸವೂ ಅವನದೇ! ಬೆಳೆಯುತ್ತಿದ್ದ ನಗರಕ್ಕೆ ಕೆರೆ, ಕಚೇರಿ, ಉದ್ಯಾನವನ, ಪ್ರಾರ್ಥನಾ ಸ್ಥಳ, ವಸ್ತುಸಂಗ್ರಹಾಲಯ ಎಲ್ಲವೂ ಅವಶ್ಯವೆಂದು ಯೋಜಿಸಿ ವಿನ್ಯಾಸಗೊಳಿಸಿದ ಸ್ಯಾಂಕಿಯ ಬಗೆಗೆ ತಿಳಿದುಕೊಳ್ಳುತ್ತ ಹೋದಂತೆ ವಸಾಹತುಶಾಹಿಗಳ ಕೇಡಿನ ಜೊತೆಯಲ್ಲಿ ಅನಾಯಾಸವಾಗಿ ಭಾರತಕ್ಕೆ ಬಂದ ಕೆಲವು ಒಳಿತುಗಳ ಅನಾವರಣವಾಯಿತು.
ರಿಚರ್ಡ್ ಹೀರಮ್ ಸ್ಯಾಂಕಿ
ಐರ್ಲೆಂಡಿನ ರಿಚರ್ಡ್ ಹೀರಮ್ ಸ್ಯಾಂಕಿ (1829-1908) ಹದಿನಾರು ವರ್ಷದವನಿರುವಾಗ ಈಸ್ಟ್ ಇಂಡಿಯಾ ಕಂಪನಿಯ ಮಿಲಿಟರಿ ಕಾಲೇಜು ಸೇರಿದ. ಮೂರು ವರ್ಷ ತರಬೇತಿ ಪಡೆದ ಬಳಿಕ ಸೀದಾ ಭಾರತಕ್ಕೆ, ಮಡಿಕೇರಿಗೆ ಬಂದಿಳಿದ. ಮದ್ರಾಸ್ ಎಂಜಿನಿಯರ‍್ಸ್ ತಂಡದಲ್ಲಿ ಎರಡು ವರ್ಷ ಕೆಲಸ ಮಾಡಿದ ಬಳಿಕ ನಾಗ್ಪುರಕ್ಕೆ ವರ್ಗಾವಣೆಯಾದ. 22 ವರ್ಷದ ಯುವಕ ನಾಗ್ಪುರದ ಆಲ್ ಸೇಂಟ್ಸ್ ಕ್ಯಾಥೆಡ್ರಲ್ ಎಂಬ ಅನನ್ಯ ಶೈಲಿಯ ಕೆಂಪುಬಿಳಿ ಕಟ್ಟಡ ರೂಪಿಸಿದ. ಅದು ಅವನ ಮೊದಲ ಗ್ರೀಕೋ ರೋಮನ್ ಶೈಲಿಯ ಕಟ್ಟಡ ಕಟ್ಟೋಣದ ಪ್ರಯತ್ನ. ನಂತರ ಆ ಶೈಲಿಯಲ್ಲಿ ಹಲವು ವಿನ್ಯಾಸಗಳನ್ನು ರೂಪಿಸಿದ.
ಮರಗಳನ್ನು ಅತೀವವಾಗಿ ಪ್ರೀತಿಸುತ್ತಿದ್ದ ಪ್ರಕೃತಿ ಪ್ರೇಮಿ ಸ್ಯಾಂಕಿ ತನ್ನಷ್ಟೇ ಪ್ರಕೃತಿ ಪ್ರೇಮಿಯಾಗಿದ್ದ ಸೋಫಿಯಾ ಮೇರಿ ಎಂಬವಳನ್ನು ಮದುವೆಯಾದ (1859). ಅವನು ಉತ್ತಮ ಚಿತ್ರಕಾರನೂ ಹೌದು. ಊರು, ಕೆರೆ, ನದಿ, ಬೀದಿ, ಜನ, ಮನೆ, ಸಸ್ಯವೈವಿಧ್ಯಗಳ ಹಲವಾರು ತೈಲವರ್ಣ ಚಿತ್ರಗಳನ್ನು ರಚಿಸಿದ. ಆ ಚಿತ್ರಗಳನ್ನು ನೋಡಿದರೆ ಸಾಕು, ಅಂದಿನ ಭಾರತದ ಸ್ಥಿತಿಗತಿ ತಿಳಿದುಬರುತ್ತದೆ. ಇಂಜಿನಿಯರ್ ಸ್ಯಾಂಕಿಗೆ ಕಂಡದ್ದರ ಮೇಲೆಲ್ಲ ಆಸಕ್ತಿ. ಅವನಿಗೆ ಭಾರತವು ಐತಿಹಾಸಿಕ, ಪುರಾತತ್ವ ಸಾಕ್ಷ್ಯಗಳ ಮ್ಯೂಸಿಯಮ್ಮಿನಂತೆಯೇ ಕಾಣಿಸಿತು. ನಾಗ್ಪುರದ ಭೂ ಲಕ್ಷಣಗಳನ್ನು ಅಭ್ಯಾಸ ಮಾಡಿದ. ಕಾನ್ಹಾ ಕಣಿವೆಯಲ್ಲಿ ಕಲ್ಲಿದ್ದಲ ಗಣಿ ಇದೆಯೆಂದು ಪತ್ತೆ ಮಾಡಿದ. ೨೫ ಕೋಟಿ ವರ್ಷಗಳ ಹಿಂದಿನ ಸಸ್ಯ ಪಳೆಯುಳಿಕೆಗಳನ್ನು ಕಂಡು ರೋಮಾಂಚಿತನಾದ. ಕಂಡದ್ದು, ಸಿಕ್ಕಿದ್ದನ್ನೆಲ್ಲ ಸಂಗ್ರಹಿಸತೊಡಗಿದ.
ನಾಗ್ಪುರದ ಬಳಿಕ ಕಲಕತ್ತಾ, ಕಾನ್ಪುರ, ಲಕ್ನೋ, ಅಲಹಾಬಾದುಗಳಲ್ಲಿ ಅಧಿಕಾರಿಯಾಗಿದ್ದ ಸ್ಯಾಂಕಿ ಸಿಪಾಯಿ ದಂಗೆಯ ಕಾಲದಲ್ಲಿ ಬ್ರಿಟಿಷ್ ಸೇನೆಯ ಚಲನೆಗೆ ಅನುಕೂಲವಾಗುವಂತೆ ಹಲವೆಡೆ ಸೇತುವೆ, ಕಟ್ಟು, ಕಟ್ಟಡಗಳನ್ನು ಅತಿಕಡಿಮೆ ಸಮಯದಲ್ಲಿ ನಿರ್ಮಿಸಿ ಮೆಚ್ಚುಗೆ ಗಳಿಸಿದ. ಬರ್ಮಾ, ನೀಲಗಿರಿ ಪ್ರದೇಶಗಳಲ್ಲಿ ಕೆಲಸ ಮಾಡಿದ ನಂತರ 1861ರಲ್ಲಿ ಮತ್ತೆ ಮೈಸೂರು ರಾಜ್ಯಕ್ಕೆ ಬಂದ. 13 ವರ್ಷಗಳ ಸೇವಾವಧಿಯಲ್ಲಿ ಚೀಫ್ ಇಂಜಿನಿಯರರ ಸಹಾಯಕನಾಗಿ, ತಾನೇ ಚೀಫ್ ಇಂಜಿನಿಯರನಾಗಿ, ಬಳಿಕ ಮುಖ್ಯ ಆಯುಕ್ತರ ಕಾರ್ಯದರ್ಶಿಯಾಗಿ ಕೆಲಸ ಮಾಡಿದ.
ಬೆರಗಾಗುವಂತೆ ಬೆಳೆದ ಬೆಂಗಳೂರು
ನಾಲ್ಕನೇ ಮೈಸೂರು ಯುದ್ಧದಲ್ಲಿ ಗೆದ್ದ ಬಳಿಕ ೧೮೦೯ರ ವೇಳೆಗೆ ಬ್ರಿಟಿಷರಿಗೆ ಶ್ರೀರಂಗಪಟ್ಟಣಕ್ಕಿಂತ ಉತ್ತಮ ಹವೆಯ ಬೆಂಗಳೂರೇ ವಾಸಯೋಗ್ಯವೆನಿಸಿತು. ಅವರ ಸೇನಾದಳ ಬೆಂಗಳೂರಿಗೆ ವರ್ಗಾವಣೆಯಾಯಿತು. ಅವರೊಡನೆ ದಂಡುಪ್ರದೇಶಕ್ಕೆ ಅಗತ್ಯವಿದ್ದ ಸೇವಾವಲಯದ ಹಿಂಡೂ ಬಂತು. ಒಂದೇಸಮ ಬೆಳೆಯುತ್ತಿದ್ದ ಬೆಂಗಳೂರಿನ ಮೇಲೆ ವಿಶ್ವದೆಲ್ಲೆಡೆಯ ಜನರ ಕಣ್ಣು ಬಿತ್ತು. ಮೈಸೂರಿನ ಆಳ್ವಿಕರೂ ಆಧುನಿಕ ಬೆಂಗಳೂರು ಕಟ್ಟುವ ಉತ್ಸಾಹ ಹೊಂದಿದ್ದರು. ಈ ಅವಕಾಶವನ್ನು ಸ್ಯಾಂಕಿ ಸಮರ್ಥವಾಗಿ ಬಳಸಿಕೊಂಡ. ನಗರವನ್ನು ಚಂದವಾಗಿಸಿ, ಶಿಸ್ತುಗೊಳಿಸುವ ನಿರ್ಮಾಣ ಕಾರ್ಯಗಳನ್ನು ಕೈಗೆತ್ತಿಕೊಂಡ. ನಂದಿಬೆಟ್ಟದಲ್ಲೊಂದು ವಿಶ್ರಾಂತಿ ಗೃಹವನ್ನೂ ಸ್ಯಾಂಕಿ ಕಟ್ಟಿಸಿದ್ದು ಇವತ್ತಿಗೂ ಅಲ್ಲಿ ‘ಸ್ಯಾಂಕಿ ರೂಮ್ಸ್’ ಎಂದು ಕೆತ್ತಿಸಿದ ಕೋಣೆಯಿದೆ.
ಅವನ ಮೊದಲ ಕೆಲಸ ಮೈಸೂರು ರಾಜ್ಯದ ಕೆರೆಗಳನ್ನು, ಅವುಗಳ ಜಲಾನಯನ ಪ್ರದೇಶವನ್ನು ವಿಸ್ತೃತವಾಗಿ ಅಧ್ಯಯನ ಮಾಡಿದ್ದು. ರಾಜ್ಯದ ೬೦% ಕೃಷಿಭೂಮಿಯು ನೀರಾವರಿಗಾಗಿ ಕೆರೆಯನ್ನೇ ನಂಬಿತ್ತು. ಒಬ್ಬ ಅಭಿಯಂತರನಾಗಿ ಅವನಿಗೆ ಕೆರೆಗಳಲ್ಲಿ ನೀರು ಸಂಗ್ರಹಿಸುವ ಪದ್ಧತಿ ಬಹಳ ಸೆಳೆಯಿತು. ಹಳೆಯ ಕೆರೆಗಳ ಏರಿ, ತೋಡು, ಕಾಲುವೆಗಳನ್ನು ದುರಸ್ತಿ ಮಾಡಿಸಿದ. (ಮದ್ದೂರಿನ ಬಳಿಯ ಸೂಳೆಕೆರೆಯೂ ಅಂತಹುದರಲ್ಲಿ ಒಂದು.) ಹೊಸ ಕೆರೆಗಳ ಕಟ್ಟಿಸಲು ಸೂಕ್ತ ಸ್ಥಳ ಹುಡುಕತೊಡಗಿದ.
ಬ್ರಿಟಿಷ್ ಸೇನೆ, ಅಧಿಕಾರಿಗಳು ಬೀಡುಬಿಟ್ಟಿದ್ದ ಕಂಟೋನ್ಮೆಂಟ್ ಪ್ರದೇಶವು ಹಲಸೂರು ಕೆರೆ ಮತ್ತದರ ಸುತ್ತಣ ಬಾವಿಗಳನ್ನೇ ನೆಚ್ಚಬೇಕಿತ್ತು. ಬೇಸಿಗೆ ಬಂತೆಂದರೆ ನೀರಿನ ಕೊರತೆ ಮಿತಿ ಮೀರುತ್ತಿತ್ತು. ಬೆಂದಕಾಳೂರು ಜನರನ್ನು ಬೇಯಿಸುತ್ತಿತ್ತು. ಲಭ್ಯವಿದ್ದ ನೀರಿನ ಗುಣಮಟ್ಟವೂ ಆರೋಗ್ಯಕರವಾಗಿರಲಿಲ್ಲ. ‘ಓಡುವ ಕುದುರೆ ಮೇಲಿಂದ ಬಿದ್ದು ಸತ್ತವರನ್ನ ಬಿಟ್ರೆ ಬೆಂಗ್ಳೂರಿನ ಉಳಿದ ಜನ ಗಬ್ಬು ನೀರು ಕುಡಿದು ಡಾಕ್ಟ್ರ ಕೈಯಲ್ಲೆ ಸಾಯಬೇಕು’ ಎಂಬ ಆಕ್ರೋಶದ ಮಾತು ಕೇಳಿಬರುತ್ತಿತ್ತು. ಇದಕ್ಕೆಲ್ಲ ಉತ್ತರವೋ ಎಂಬಂತೆ ಹೊಸ ಕೆರೆ ಕಟ್ಟಲು, ಈಗಾಗಲೇ ಇರುವ ಕೆರೆಗಳ ನಡುವಿನ ಕೋಡಿ ಸಂಪರ್ಕ ನವೀಕರಿಸಲು, ಕಲುಷಿತ ನೀರು ಕೆರೆಗೆ ಮಿಶ್ರವಾಗದಿರಲು ಸ್ಯಾಂಕಿ ಯೋಜನೆ ರೂಪಿಸತೊಡಗಿದ. ಕಂಟೋನ್ಮೆಂಟಿನ ಬಳಕೆಗಾಗಿಯೇ ನೀರಿನ ಸಂಗ್ರಹಾಗಾರ ಕಟ್ಟಲು ತಯಾರಿ ನಡೆಸಿದ.
ಆದರೆ ಕೆರೆ ನಿರ್ಮಾಣ/ದುರಸ್ತಿಯ ಕೆಲಸ ಕೈಗೆತ್ತಿಕೊಳ್ಳಲು ಒಮ್ಮೆಲೇ ಸರ್ಕಾರದಿಂದ ಅನುಮೋದನೆ ದೊರೆಯದ ಕಾರಣ ಇತರ ವಿಷಯಗಳೆಡೆ ಗಮನ ಹರಿಸಿದ. ಬೆಳೆಯುತ್ತಿದ್ದ ಬೆಂಗಳೂರು ಪೇಟೆ ಮತ್ತು ಕಂಟೋನ್ಮೆಂಟ್ ನಡುವೆ 300 ಎಕರೆ ಖಾಲಿ ಜಾಗವಿತ್ತು. ತಾನು ಬರೆಯುತ್ತಿದ್ದ ಜಲವರ್ಣ ಚಿತ್ರಗಳ ಉದ್ಯಾನವನಗಳಂತಹುದೇ ಒಂದನ್ನು ಬೆಳೆಸುವ ಯೋಜನೆ ಹಾಕಿದ. 1864ರಲ್ಲಿ ಮೈಸೂರಿನ ಕಮಿಷನರ್ ಮಾರ್ಕ್ ಕಬ್ಬನ್ ಹೆಸರಿನಲ್ಲಿ ಉದ್ಯಾನವನ ನಿರ್ಮಾಣಗೊಂಡಿತು. ಅದೇ ವರ್ಷ ಸೇಂಟ್ ಆಂಡ್ರ್ಯೂ ಕೆಥೆಡ್ರಲ್, ಈಸ್ಟ್ ಪರೇಡ್ ಚರ್ಚ್ ನಿರ್ಮಾಣವಾದವು.
ನ್ಯಾಯಾಲಯ ಸಮುಚ್ಚಯಕ್ಕಾಗಿ ಅವನು ಮಾಡಿದ ವಿನ್ಯಾಸವು ಆಕರ್ಷಕ ಕಟ್ಟಡವಾಗಿ ಮೇಲೆದ್ದಿತು. ಕಂಟ್ರಾಕ್ಟರುಗಳಾದ ನಾರಾಯಣ ಸ್ವಾಮಿ ಮೊದಲಿಯಾರ್, ಬನ್ಸಿಲಾಲ್ ಅಭಿರ್ ಚಂದ್ ಮತ್ತು ವ್ಯಾಲೇಸ್ ಅಂಡ್ ಕಂಪನಿಯ ಸಹಕಾರದಿಂದ 1868ರಲ್ಲಿ ‘ಅಠಾರಾ ಕಚೇರಿ’ ನಿರ್ಮಾಣವಾಯಿತು. ಸರ್ಕಾರಿ ಆಡಳಿತ ಕಚೇರಿಗಾಗಿಯೇ ಒಂದು ಕಟ್ಟಡ ಬೇಕಿತ್ತು. ಮಂಜೂರಾದ ಸ್ಥಳದಲ್ಲಿ ನೀರ ಕಾಲುವೆಗಳು, ಬಂಡೆಗಳು ತುಂಬಿ ಕಟ್ಟಡ ರೂಪಿಸುವುದು ಸಾಹಸವೇ ಆದರೂ ಅದರ ವಿನ್ಯಾಸ ರೂಪಿಸಿದ ಸ್ಯಾಂಕಿ 1870ರಲ್ಲಿ ನಿರ್ಮಾಣ ಆರಂಭಿಸಿದ. ‘ಸೂರ್ಯ ಬೆಳಗುವಷ್ಟು ಕಾಲವೂ ಬ್ರಿಟನ್ ದೇಶ ಭಾರತವನ್ನು ತನ್ನ ಸುಪರ್ದಿಯಲ್ಲಿಟ್ಟುಕೊಂಡಿರಬೇಕು’ ಎಂದಿದ್ದ ಗವರ್ನರ್ ಜನರಲ್ ಲಾರ್ಡ್ ಮೇಯೋನನ್ನು ಅಂಡಮಾನಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಆಫ್ಘನ್ನನಾದ ಶೇರ್ ಅಲಿ ಕೊಂದಿದ್ದ. ಲಾರ್ಡ್ ಮೇಯೋ ಹೆಸರನ್ನು ಬೆಂಗಳೂರಿನ ಆಡಳಿತ ಕಚೇರಿಯ ಕಟ್ಟಡಕ್ಕೆ ಬಳಿಕ ಇಡಲಾಯಿತು. ‘ಮೇಯೋ ಹಾಲ್’ ಜನಾಕರ್ಷಣೆಯ ಕೇಂದ್ರವಾಯಿತು.
ವಸ್ತು ಸಂಗ್ರಹಾಲಯ
ಭಾರತದ ಇತಿಹಾಸವನ್ನು ಸಾಕ್ಷ್ಯಾಧಾರಗಳ ಮೂಲಕ ತಿಳಿಯಲು ಇತಿಹಾಸಾಸಕ್ತ ಭಾರತೀಯರು ಮತ್ತು ಬ್ರಿಟಿಷರಿಂದ ಸಂಶೋಧನೆ, ಅಧ್ಯಯನಗಳು ನಡೆಯತೊಡಗಿದ್ದವು. ಸ್ಯಾಂಕಿಯಷ್ಟೇ ಅಲ್ಲ, ಹಲವು ಬ್ರಿಟಿಷ್ ಅಧಿಕಾರಿಗಳು ತಾವಿರುವ ಕಡೆಗಳಲ್ಲೆಲ್ಲ ಶೋಧ, ಸಂಗ್ರಹ ಮಾಡಿ ಪ್ರಾಚೀನ ವಸ್ತುಗಳು, ಶಾಸನಗಳು, ನಾಣ್ಯಗಳನ್ನು ಸಂಗ್ರಹಿಸಿದ್ದರು. ಬೆಲೆ ಕಟ್ಟಲಾಗದ ಪುರಾತತ್ವ ವಸ್ತುಗಳನ್ನು ಕೆಲವರು ತಮ್ಮ ವೈಯಕ್ತಿಕ ಸಂಗ್ರಹಕ್ಕೆ ಸೇರಿಸಿಕೊಂಡರೆ, ಹಲವನ್ನು ಇಂಗ್ಲೆಂಡಿಗೆ ಸಾಗಿಸಿದರು. ಅಂತೂ ಸಂಗ್ರಹಿಸಿದ ವಸ್ತುಗಳನ್ನಿಡಲು ವಿಶಾಲ ಕಟ್ಟಡಗಳು ಬೇಕಿದ್ದವು.
ಮದರಾಸಿನ ಸರ್ಜನ್ ಎಡ್ವರ್ಡ್ ಬಾಲ್‌ಫೋರ್ 1851ರಲ್ಲಿ ದಕ್ಷಿಣ ಭಾರತದ ಮೊತ್ತಮೊದಲ ವಸ್ತುಸಂಗ್ರಹಾಲಯವನ್ನು ಮದರಾಸಿನಲ್ಲಿ ಆರಂಭಿಸಿದ್ದ. ಮದರಾಸಿನಂತೆ ಬೆಂಗಳೂರಿನಲ್ಲಿಯೂ 1865ರಲ್ಲಿ ವಸ್ತುಸಂಗ್ರಹಾಲಯ ರೂಪುಗೊಂಡಿತು. ಬೆಂಗಳೂರಿನ ಮುಖ್ಯ ಆಯುಕ್ತನಾಗಿದ್ದ ಎಲ್. ಬಿ. ಬೌರಿಂಗ್ ನೆರವಿನೊಂದಿಗೆ ಬಾಲ್‌ಫೋರ್ ನೇತೃತ್ವದಲ್ಲಿ ಹಳೆಯ ಜೈಲು ಕಟ್ಟಡದಲ್ಲಿ ಸಂಗ್ರಹಾಲಯ ಆರಂಭವಾಯಿತು. ಮೈಸೂರು ಸರ್ಕಾರಿ ಮ್ಯೂಸಿಯಂ ಎಂದೇ ಹೆಸರಾಯಿತು. ಆದರೆ ಪ್ರಾಚೀನ ವಸ್ತುಗಳನ್ನು ಪ್ರದರ್ಶಿಸಲು ಜೈಲು ಕಟ್ಟಡ ಸೂಕ್ತವಾಗಿರಲಿಲ್ಲ ಮತ್ತು ಅದು ತುಂಬಿ ಹೋಗಿ ಸ್ಥಳಾವಕಾಶ ಇಲ್ಲವಾಗಿತ್ತು. ಆಗ ಮೈಸೂರು ರಾಜ್ಯದ ಇಂಜಿನಿಯರನಾದ ಸ್ಯಾಂಕಿ ಹೊಸ ಕಟ್ಟಡದ ವಿನ್ಯಾಸವನ್ನು ಸಿದ್ಧಗೊಳಿಸಿದ. 1877ರ ವೇಳೆಗೆ ಈಗಿನ ಕಸ್ತೂರಬಾ ರಸ್ತೆಯಲ್ಲಿ (ಮೊದಲು ಸಿಡ್ನಿ ರಸ್ತೆ) ಸರ್ಕಾರಿ ವಸ್ತು ಸಂಗ್ರಹಾಲಯ ನಿರ್ಮಾಣ ಪೂರ್ಣಗೊಂಡಿತು.
ಸ್ಯಾಂಕಿಯ ಕನಸಿನ ವಿನ್ಯಾಸದಂತೆ ರೂಪುಗೊಂಡ ಕಟ್ಟಡದಲ್ಲಿ ಎರಡು ಪ್ರದರ್ಶನ ಮಹಡಿಗಳಿದ್ದವು. 70 ವರ್ಣಚಿತ್ರಗಳು, 84 ಶಿಲ್ಪಗಳು, ನೂರಾರು ವಸ್ತುಗಳಿದ್ದವು. ಕೆಲವು ವಸ್ತುಗಳಂತೂ 5000 ವರ್ಷಗಳಷ್ಟು ಹಳೆಯವು. ಚಂದ್ರವಳ್ಳಿಯಲ್ಲಿ ದೊರೆತ ನವಶಿಲಾಯುಗದ ಮಡಕೆ ಚೂರು, ಮೊಹೆಂಜದಾರೊವಿನ ವಸ್ತುಗಳು, ಹಳೇಬೀಡು, ವಿಜಯನಗರ ಕಾಲದ ಶಿಲ್ಪ-ಶಾಸನಗಳು, ಮಥುರಾದ ಟೆರ್ರಾಕೋಟಾ, ಕೊಡಗಿನ ಶಸ್ತ್ರಾಸ್ತ್ರಗಳು, ಟಿಪ್ಪುವಿನ ಶ್ರೀರಂಗಪಟ್ಟಣ ಕೋಟೆಯ ಯೋಜನೆಯ ನಕಾಶೆ, ಹಾಸನ ಜಿಲ್ಲೆ ಹಲ್ಮಿಡಿಯಲ್ಲಿ ದೊರೆತ ಐದನೆಯ ಶತಮಾನದ ಕನ್ನಡದ ಶಿಲಾಶಾಸನ, ಅಟಕೂರು ಶಾಸನ, ಬೇಗೂರು ಶಾಸನಗಳೇ ಮೊದಲಾಗಿ ಸಾವಿರಾರು ವಸ್ತುಗಳು ಸಂಗ್ರಹವಾದವು.
ಅದು ಆರಂಭವಾದ ಮೊದಲಿಗೆ 1870ರಲ್ಲಿ 2.8 ಲಕ್ಷ ಜನರು ಬಂದು ನೋಡಿದರು. 20ನೆಯ ಶತಮಾನದ ಆರಂಭದಲ್ಲಿ ವಾರ್ಷಿಕ ಸರಾಸರಿ ನಾಲ್ಕು ಲಕ್ಷದಷ್ಟು ಜನ ಬಂದು ಹೋಗುತ್ತಿದ್ದರು.
‘ಕೆರೆಯ ನೀರನು ಕೆರೆಗೆ ಹರಿಸಿ’
1876-78ರ ನಡುವೆ ಭಯಾನಕ ಕ್ಷಾಮ ಮೈಸೂರು ರಾಜ್ಯವನ್ನು ಬಾಧಿಸಿತು. ಪ್ರಕೃತಿಯ ಅಸಹಕಾರ ಒಂದೆಡೆ; ವಸಾಹತುಶಾಹಿ ಆಡಳಿತದ ನಿರ್ಲಕ್ಷ್ಯ ಮತ್ತೊಂದೆಡೆ ಸೇರಿ ಮೈಸೂರು ರಾಜ್ಯದ ಕಾಲು ಭಾಗ ಜನರನ್ನು ಕ್ಷಾಮ ಬಲಿ ತೆಗೆದುಕೊಂಡಿತು. ಬೆಂಗಳೂರಿನ ಕೆರೆಗಳ ಬಳಿ ಚರ್ಮ ಹದ ಮಾಡುವ, ಬಣ್ಣ ಹಾಕುವ ಕಾರ್ಯಾಗಾರಗಳಿದ್ದವು. ಒಳಚರಂಡಿಯ ಕಲುಷಿತ ನೀರು, ಮಲಮೂತ್ರಾದಿ ತ್ಯಾಜ್ಯಗಳು ಕೆರೆಗೆ ಸೇರುತ್ತಿದ್ದವು. ಹಬ್ಬದ ಬಳಿಕ ದೇವತಾಮೂರ್ತಿಗಳ ಮುಳುಗಿಸಲೂ ಕೆರೆಗಳು ಬಳಕೆಯಾಗುತ್ತಿದ್ದವು. ಕಲುಷಿತ ನೀರಿನಿಂದ ಕಾಲರಾ, ಅರಿಶಿನ ಕಾಮಾಲೆ, ಟೈಫಾಯ್ಡ್ ಮತ್ತಿತರ ಕಾಯಿಲೆಗಳು ಬರುತ್ತಿದ್ದವು. ಎಂದೇ ಶುದ್ಧ ಕುಡಿಯುವ ನೀರಿಗಾಗಿ ಹೊಸ ಯೋಜನೆ ರೂಪಿಸಲೇಬೇಕಾಯಿತು. ಇತರ ಕಾಮಗಾರಿಗಳ ನಡುವೆ ನೆನೆಗುದಿಗೆ ಬಿದ್ದಿದ್ದ ಕೆರೆ ಕಟ್ಟುವ ಸ್ಯಾಂಕಿಯ ಯೋಜನೆ ಮತ್ತೆ ಚಾಲ್ತಿಗೆ ಬಂತು.
37 ಎಕರೆ ಪ್ರದೇಶದಲ್ಲಿ ಇವತ್ತಿನ ಮಲ್ಲೇಶ್ವರಂ, ವೈಯಾಲಿಕಾವಲ್ ಮತ್ತು ಸದಾಶಿವನಗರಗಳ ನಡುವೆ ಸ್ಯಾಂಕಿ ಯೋಜಿಸಿದ ಕೆರೆ ಹರಡಿಕೊಳ್ಳತೊಡಗಿತು. ಮಳೆ ನೀರನ್ನು ಜಲಮೂಲವನ್ನಾಗಿ ಹೊಂದಿರುವ ಒಂದೂಕಾಲು ಕಿಲೋಮೀಟರ್ ವ್ಯಾಪ್ತಿಯ ಜಲಾನಯನ ಪ್ರದೇಶ ಹೊಂದಿರುವ, ಅತಿ ಹೆಚ್ಚು ಎಂದರೆ ೩೦ ಅಡಿ ಆಳವಿರುವ, 1.7 ಕಿಲೋಮೀಟರು ದಂಡೆ ಹೊಂದಿರುವ ಕೆರೆ ಸಿದ್ಧವಾಗತೊಡಗಿತು. ಮಿಲ್ಲರ್ ಕೆರೆ, ಧರ್ಮಾಂಬುಧಿ ಕೆರೆ, ಮತ್ತಿಕೆರೆ, ಸಂಪಂಗಿ ಕೆರೆ ಮುಂತಾಗಿ ಹಲವು ಕೆರೆಗಳು ಒಂದರೊಡನೊಂದು ಸಂಪರ್ಕ ಹೊಂದಿದವು. (ಮತ್ತಿಕೆರೆಯ ಕೋಡಿ ಸ್ಯಾಂಕಿ ಕೆರೆ ತುಂಬಿಸುತ್ತಿತ್ತು, ಸಂಪಂಗಿ ಕೆರೆಯ ಹೆಚ್ಚುವರಿ ನೀರು ಸ್ಯಾಂಕಿ ಕೆರೆಗೆ ಬರುವಂತೆ ಮಾಡಿದ್ದರು ಎಂದು ಬೆಂಗಳೂರು ಮೂಲವಾಸಿ ಹಿರಿಯರು ನೆನಪಿಸಿಕೊಳ್ಳುತ್ತಾರೆ.) ಕೆರೆಯ ಪಕ್ಕವೇ ಸರ್ಕಾರಿ ಗಂಧದ ಸಂಗ್ರಹಾಗಾರವಿದ್ದಿದ್ದರಿಂದ ಗಂಧದಕೋಠಿ ಕೆರೆ ಎಂಬ ಹೆಸರು ಜನಜನಿತವಾಯಿತು. 5,75,000 ರೂಪಾಯಿ ವೆಚ್ಚದಲ್ಲಿ 1882ರಲ್ಲಿ ಕೆರೆ ನಿರ್ಮಾಣ ಮುಗಿಯುವ ಹೊತ್ತಿಗೆ ಸ್ಯಾಂಕಿ ಮೈಸೂರಿನಲ್ಲಿರಲಿಲ್ಲ. ಅವನ ಪ್ರಯತ್ನದ ನೆನಪಿಗಾಗಿ ಕೆರೆಗೆ ಸ್ಯಾಂಕಿಯ ಹೆಸರನ್ನಿಡಲಾಯಿತು.
ಆದರೆ ಜನರಿಗೆ ಅಗತ್ಯವಿರುವ ಕೆಲಸಗಳನ್ನು ಮಾಡಿದ ಸ್ಯಾಂಕಿಯಂತಹ ಅಧಿಕಾರಿಗೂ ವೃತ್ತಿ ಬದುಕು ಸುಗಮವಾಗಿರಲಿಲ್ಲ. ಒಳಗೊಳಗೇ ಸಾಕಷ್ಟು ಪ್ರತಿರೋಧ ಎದುರಿಸಬೇಕಾಯಿತು. ಮೈಸೂರು ರಾಜ್ಯವನ್ನು ಭೀಕರ ಬರ ಬಾಧಿಸಿದಾಗ ನೀರು, ಅನ್ನ, ಮೇವಿಗಾಗಿ ಹಾಹಾಕಾರವೆದ್ದಿತ್ತು. ಲಾರ್ಡ್ ಲಿಟ್ಟನ್ನನಂತಹ ಜನವಿರೋಧಿ ಗವರ್ನರ್ ಜನರಲ್‌ಗಳು ಕ್ಷಾಮ ಪರಿಹಾರಕ್ಕಾಗಿ ಇದೇ ನೆಲದಲ್ಲಿ ಬೆಳೆದ ದವಸ, ಧಾನ್ಯಗಳನ್ನು ಬಳಸಲಿಲ್ಲ. ಪರಿಹಾರ ಕೇಂದ್ರ ತೆರೆದು ಕಾಳುಕಡಿಗಳ ಪುಕ್ಕಟೆ ಹಂಚಿದರೆ ಜನ ದುಡಿಯದೆ ಸೋಮಾರಿಗಳಾಗುವರೆನ್ನುವುದು ಅವನ ನಿಲುವು. ದುಡಿಮೆಗೆ ಬರಲಿ, ಕಾಳು ಕೊಡೋಣ ಎಂದು ಕಾಮಗಾರಿಗಳನ್ನು ಪ್ರಕಟಿಸಿದ. ತುತ್ತು ಕೂಳಿಗಾಗಿ ಹಂಬಲಿಸಿ ಹತ್ತಾರು ಮೈಲಿ ಬಿಸಿಲ ಝಳದಲ್ಲಿ ನಡೆದು ಕಾಮಗಾರಿಯ ಸ್ಥಳಕ್ಕೆ ಬರುವುದರಲ್ಲಿಯೇ ಸಾವಿರಾರು ಜನ ಬಳಲಿ ಸತ್ತರು. ಅವರಲ್ಲಿ ಮಕ್ಕಳು, ವೃದ್ಧರು, ತಾಯಂದಿರು ಹೆಚ್ಚಿದ್ದರು. ಸ್ಯಾಂಕಿ ಇದನ್ನು ವಿರೋಧಿಸಿದ. ಬರ ನಿರ್ವಹಣೆ ಅಸಮರ್ಪಕವೆಂದು, ಬರದ ಸಾವುಗಳ ತಡೆಯಬಹುದಿತ್ತೆಂದು ದನಿಯೆತ್ತಿದ. ಈ ಭಿನ್ನಮತವೇ ಮೂಲವಾಗಿ ಸ್ಯಾಂಕಿ ಮೈಸೂರಿನಿಂದ ‘ನೀರು ನೆರಳಿಲ್ಲದ’ ಆಫ್ಘನಿಸ್ತಾನದ ಒಂದು ಪ್ರದೇಶಕ್ಕೆ ವರ್ಗಾವಣೆಯಾದ. ನಂತರ ಶಿಮ್ಲಾ, ಬಳಿಕ ಮದರಾಸಿಗೆ ಹೋಗಬೇಕಾಯಿತು. ಅಲ್ಲಿ ಮರೀನಾ ಬೀಚಿನ ನಿರ್ಮಾಣ, ಬೊಟಾನಿಕಲ್ ಉದ್ಯಾನವನದ ನಿರ್ಮಾಣದಲ್ಲಿ ತೊಡಗಿದ. ವೃತ್ತಿ ಬದುಕಿನ ಕೊನೆಕೊನೆಗೆ ಆಸ್ಟ್ರೇಲಿಯಾದ ಅಡಿಲೇಡ್ ಮುಂತಾದ ಸ್ಥಳಗಳಿಗೆ ಜಲತಜ್ಞನಾಗಿ ಹೋಗಿಬಂದ. ಯರ್ರ ನದಿಯ ಪ್ರವಾಹ ನಿರ್ವಹಣೆ, 50 ಜಲಾಶಯಗಳ ನಿರ್ವಹಿಸುವ ಕೋಲಿಬನ್ ಕಾರ್ಪೊರೇಷನ್ನನ್ನು ರೂಪುಗೊಳಿಸಲು ತಜ್ಞ ಸಲಹೆ ನೀಡಿದ.
ನಿವೃತ್ತನಾದ ಸ್ಯಾಂಕಿ ಸ್ವದೇಶಕ್ಕೆ ಮರಳಿದ. ಸಮಾಜದ ಕೆಲಸ ಕಾರ್ಯಗಳಲ್ಲಿ ತೊಡಗಿದ. ಮರಗಳನ್ನು ಅತೀವವಾಗಿ ಪ್ರೀತಿಸುತ್ತಿದ್ದವ ತನ್ನ ಒಡೆತನದ ಜಾಗದಲ್ಲಿ ಕೈಯಾರ ಗಿಡಗಳ ನೆಟ್ಟು ಒಂದು ವನವನ್ನು ರೂಪಿಸಿದ. ಮರಣಾನಂತರ ಅಲ್ಲಿಯೇ ಅವನ ಸಮಾಧಿ ಮಾಡಿದರು. ಈಗಲೂ ಆ ಹೆಮ್ಮರಗಳಿರುವ ವೃತ್ತಾಕಾರದ ಜಾಗವನ್ನು ‘ಸ್ಯಾಂಕಿ ವುಡ್ಸ್’ ಎಂದು ಕರೆಯುತ್ತಾರೆ.
ಕೆರೆ ನುಂಗಿ ಬೆಳೆದ ಊರು
ಬೆಂಗಳೂರಿನಲ್ಲಿ ಸ್ಯಾಂಕಿಯ ಕುರುಹು ಇವತ್ತಿಗೂ ಇದೆ. ಇವತ್ತಿಗೂ ಬೆಂಗಳೂರಿನ ಪುರಾತತ್ವ ವಸ್ತು ಸಂಗ್ರಹಾಲಯ ಅದೇ ಕಟ್ಟಡದಲ್ಲಿದೆ. ಕಟ್ಟಡ ಹಳೆಯದಾಗಿದೆ. 9000ಕ್ಕೂ ಮಿಕ್ಕಿ ವಸ್ತುಗಳು ಅಲ್ಲಿದ್ದರೂ 4000 ವಸ್ತುಗಳಷ್ಟೇ ಪ್ರದರ್ಶನಗೊಂಡು ಮಿಕ್ಕವು ಸ್ಥಳಾಭಾವ ಎದುರಿಸಿವೆ. ಒಂದು ಕೋಟಿಗಿಂತ ಹೆಚ್ಚು ಜನಸಂಖ್ಯೆಯ ಬೆಂಗಳೂರಿನ ವಸ್ತುಸಂಗ್ರಹಾಲಯಕ್ಕೆ ವರ್ಷಕ್ಕೆ 90 ಸಾವಿರ ಸಂದರ್ಶಕರಷ್ಟೇ ಬರುತ್ತಾರೆ. ಸಂದರ್ಶಕರ ಸಂಖ್ಯೆ ಇಳಿಮುಖವಾಗಿರುವುದಕ್ಕೆ ಕಾರಣಗಳೇನೇ ಇರಲಿ, ಸಾರ್ವಜನಿಕರನ್ನು ಸೆಳೆಯುವಂತೆ ವಿಷಯ ನಿರ್ವಹಣೆ, ಆಡಿಯೋ ವಿಷುವಲ್ ಸಹಾಯ, ವ್ಯವಸ್ಥೆ ಅಗತ್ಯವಾಗಿದೆ. ಎಂದೇ ಅದರ ನವೀಕರಣ, ವಿಸ್ತರಣೆ, ದುರಸ್ತಿಯ ಕಾಮಗಾರಿ ನಡೆಯುತ್ತಿದೆ. ಅದರ ಒಂದು ಪಕ್ಕ ಇರುವ ವೆಂಕಟಪ್ಪ ಆರ್ಟ್ ಗ್ಯಾಲರಿಯೂ ನವೀಕರಣಗೊಳ್ಳುತ್ತಿದೆ.
ಇವತ್ತಿಗೂ ಬೆಂಗಳೂರು ಮಹಾನಗರಪಾಲಿಕೆಯ ಕಟ್ಟಡ, ಕೆಂಪೇಗೌಡ ವಸ್ತುಸಂಗ್ರಹಾಲಯ ಮೊದಲಾದ ಕಚೇರಿಗಳು ಮೇಯೋ ಹಾಲಿನಲ್ಲಿವೆ. ಕರ್ನಾಟಕದ ಉಚ್ಚ ನ್ಯಾಯಾಲಯ ಅದೇ ಅಠಾರಾ ಕಚೇರಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರಿ ಕೇಂದ್ರ ಗ್ರಂಥಾಲಯ ಅದೇ ಕಟ್ಟಡಲ್ಲಿದೆ. ಅವ ರೂಪಿಸಿದ ಕೆಥೆಡ್ರಲ್ ಇವೆ. ಕಬ್ಬನ್ ಪಾರ್ಕ್ ಇನ್ನು ಹೆಚ್ಚೆಚ್ಚು ಚಂದಗೊಂಡು ಜನರನ್ನು ಆಕರ್ಷಿಸುತ್ತಿದೆ. ಸ್ಯಾಂಕಿ ಕೆರೆಯು ಒತ್ತುವರಿಗೊಳಗಾಗಿ ನಿರ್ಲಕ್ಷ್ಯಕ್ಕೊಳಗಾಗಿದ್ದದ್ದು ಈಗ ಕೆಲವು ವರ್ಷಗಳಿಂದ ಉದ್ಯಾನವನವಾಗಿ ಜನರನ್ನು ಸೆಳೆಯುತ್ತಿದೆ.
ಯಾವುದೇ ಊರಿನಂತೆ ಬೆಂಗಳೂರು ಬೆಳೆಯುತ್ತಲೇ ಇದೆ. ತನ್ನ ಸುತ್ತುಮುತ್ತಲ ಹಳ್ಳಿ, ಕೇರಿಗಳ ಗುರುತು ಕರಗಿಸಿ ಬೆಂಗಳೂರಾಗಿಸುವ ಪ್ರಕ್ರಿಯೆಯೊಂದಿಗೆ ಅಪಾಯಕಾರಿಯಾಗಿಯೇ ಬೆಳೆಯುತ್ತಿದೆ. ಅಲ್ಲಿ ಇರುವವು, ಇಲ್ಲವಾಗಿರುವವು, ಅಭಿವೃದ್ಧಿಗೊಳ್ಳುತ್ತಿರುವವು ಯಾವುವು ಎಂದು ಗಮನ ಹರಿಸಿದರೆ ಒಂದು ಸಂಗತಿ ಸ್ಪಷ್ಟವಾಗುತ್ತದೆ: ಕಟ್ಟಡ, ನಿಲ್ದಾಣ, ಆಟದ ಮೈದಾನ, ಮಾಲ್‌ಗಳು ಬೆಳೆಯುತ್ತಿವೆ. ಆದರೆ ಕೆರೆಗಳ ನುಂಗಿ ಬದುಕ ಬಯಸಿದ್ದೇವೆ.
ಹೌದು. ಬೆಳೆಯುವ ಪಟ್ಟಣಕ್ಕೆ ಒಂದಾದ ಮೇಲೊಂದು ಕೆರೆ ಕಟ್ಟಿ ನೀರಿನ ಅಗತ್ಯ ಪೂರೈಸಲು ಅಂದಿನ ಆಳ್ವಿಕರು ಪ್ರಯತ್ನಿಸಿದ್ದರು. ಆದರೆ ಈಗ ಕೆರೆಗಳನ್ನೇ ಮಂಗಮಾಯ ಮಾಡಿದ್ದೇವೆ. ಸರ್ಕಾರಿ ಅಂಕಿಅಂಶಗಳ ಪ್ರಕಾರ 40483 ಕೆರೆಗಳ ರಾಜ್ಯ ಕರ್ನಾಟಕ. ಅದರಲ್ಲಿ 837 ಕೆರೆಗಳು ಬೆಂಗಳೂರಿನ ಆಸುಪಾಸು ಇವೆ. ಕರ್ನಾಟಕದ 18,885 ಕೆರೆಗಳ ಸರ್ವೇ ಆದಾಗ ತಿಳಿದುಬಂದ ವಿಷಯ ಅದರಲ್ಲಿ 7,800 ಕೆರೆಗಳು ಒತ್ತುವರಿಯಾಗಿವೆ ಮತ್ತು ಕೆಲವು ಕೆರೆಗಳೇ ಇಲ್ಲದಾಗಿವೆ! ಬೆಂಗಳೂರು ಒಂದರಲ್ಲೇ 734 ಕೆರೆಗಳು ಒತ್ತುವರಿಯಾಗಿವೆ! ಮಿಲ್ಲರ್ ಕೆರೆ, ಧರ್ಮಾಂಬುಧಿ ಕೆರೆಯಂತಹ ನೂರಾರು ಕೆರೆಗಳು ಹೇಳ ಹೆಸರಿಲ್ಲವಾಗಿವೆ. ಬೆಂಗಳೂರಿನ ಅತಿ ದೊಡ್ಡ ಕೆರೆಯಾಗಿದ್ದ ಸಂಪಂಗಿ ಕೆರೆ ಕಂಠೀರವ ಸ್ಟೇಡಿಯಂ ಆಗಿ, ಚಂದಕ್ಕಾಗಿ ಒಂದು ಮೂಲೆಯಲ್ಲಿ ಅಂಗೈಯಗಲದ ಕೊಳವಷ್ಟೇ ಆಗಿ ಉಳಿದುಕೊಂಡಿದೆ. ಧರ್ಮಾಂಬುಧಿ ಕೆರೆ ಇಲ್ಲವಾಗಿ ಮೆಜೆಸ್ಟಿಕ್ ಬಸ್ಟ್ಯಾಂಡ್, ಮೆಟ್ರೋ ಸ್ಟೇಷನ್ ಆಗಿದೆ. ಮಿಲ್ಲರ್ ಕೆರೆ ಇಲ್ಲ, ಮಿಲ್ಲರ್ ಕೆರೆಯ ರಸ್ತೆ ಮಾತ್ರ ಹೆಸರಿನಲ್ಲಿ ಉಳಿದಿದೆ. ವಿಷಕಾರಿ ತ್ಯಾಜ್ಯಗಳನ್ನು ನೊರೆಯಾಗಿಸಿ ಮೈಗೊಂಡು ಬೆಳ್ಳಂದೂರು ಕೆರೆ ಚರಂಡಿಯಷ್ಟು ಕಲುಷಿತವಾಗಿದೆ. ಪುರಾತತ್ವ ವಸ್ತುಸಂಗ್ರಹಾಲಯದ ಒಂದು ಪಕ್ಕ ನೀರ ಹೊಂಡವಿದ್ದು ಅದು ಕಳೆ, ಆಪು, ಪಾಚಿ ಬೆಳೆದು ಕಲುಷಿತವಾಗಿದೆ. ಮೊದಲು ಆ ಹೊಂಡದ ನೀರು ಸಂಪಂಗಿ ಕೆರೆಗೆ ಹೋಗುತ್ತಿತ್ತು. ಸಂಪಂಗಿ ಕೆರೆ ನೀರು ಸ್ಯಾಂಕಿ ಕೆರೆಗೆ ಹೋಗುತ್ತಿತ್ತು. ಈಗ ಬಹುಶಃ ಹೊಂಡಕ್ಕೆ ತುಂಬಿಕೊಳ್ಳುವ ಅವಕಾಶವೂ ಇಲ್ಲ. ನೀರು ಹರಿದು ಹೋಗುವ ಅವಕಾಶವೂ ಇಲ್ಲವಾಗಿದೆ.
(Museum view from Cubbon park)
ಹೊಟ್ಟೆಪಾಡಿಗಾಗಿ, ವಿಶ್ರಾಂತ ಬದುಕಿಗಾಗಿ ಬೆಂಗಳೂರಿಗೆ ಬಂದು ನೆಲೆಸಿರುವವರಿಗೆ ಕೆರೆಗಳ ಇತಿಹಾಸ, ಗುರುತು ತಿಳಿದೇ ಅಲ್ಲ. ಕೆರೆಗಳ ಸುತ್ತಮುತ್ತ ಲೇಕ್ ವ್ಯೂ ಹೋಟೆಲು, ವಸತಿ ಸಮುಚ್ಚಯಗಳನ್ನು ಕಟ್ಟುವವರಿಗೆ ಕೆರೆಯ ಮಹತ್ವ ಏನಿದ್ದರೂ ಚಂದಕ್ಕೆ ಮತ್ತು ರೇಟು ಏರಿಸುವುದಕ್ಕೆ. ಇನ್ನು ಸುರಿದ ಮಳೆ ನೀರನ್ನು ಅಲಕ್ಷಿಸಿ ಚರಂಡಿಗೆ ಹರಿಯಲು ಬಿಟ್ಟು, ಇರುವ ಕೆರೆಗಳ ತುಂಬಿ ಕಟ್ಟಡ ಮೈದಾನಗಳ ಕಟ್ಟಲು ಅನುಮತಿಯಿತ್ತು, ಶರಾವತಿ, ಕಾವೇರಿ, ಹೇಮಾವತಿಯಂತಹ ದೂರದ ನದಿ-ಅಣೆಕಟ್ಟೆಗಳಿಂದೆಲ್ಲ ಬೆಂಗಳೂರಿಗೆ ನೀರು ತರುವ ಯೋಜನೆ ಹಾಕುವವರು ನಮ್ಮ ಆಳ್ವಿಕರಾಗಿದ್ದಾರೆ. ಗಂಗಾಮಾತೆಯ ಬಗೆಗೆ ಭಕ್ತಿ, ಕೆರೆನದಿಗಳ ಬಗೆಗೆ ಅಸಡ್ಡೆ, ನಿರಾಸಕ್ತಿ! ಇದೆಂಥ ಸಾಂಸ್ಕೃತಿಕ ಮನೋಭಿತ್ತಿ?
ಇದರಿಂದಲೇ ಇವತ್ತು ಅಂತರ್ಜಲ ಪಾತಾಳ ಗಂಗೆಯಾಗುತ್ತ ನಡೆದಿರುವುದು. ಅಂತರ್ಜಲದ ಮಟ್ಟ ಹೆಚ್ಚಿಸಲಾದರೂ ಕೆರೆಗಳ ಉಳಿಸಿಕೊಳ್ಳಬೇಕಲ್ಲವೆ? ನಮ್ಮ ಕುಡಿಯುವ ನೀರಾಗಿ ಅಲ್ಲದಿದ್ದರೂ ಭೂಗ್ರಹದ ಮೇಲೆ ಬದುಕುವ ಇತರ ಜೀವಿಗಳಿಗಾದರೂ ಕೆರೆಕಟ್ಟೆಗಳ ಶುದ್ಧವಾಗಿಡಬೇಕಲ್ಲವೆ? ಹೀಗೆಂದು ಆಳ್ವಿಕರನ್ನು ಒತ್ತಾಯಿಸುವವರು ಯಾರು? ಜಲಮೂಲಗಳ ನುಂಗಿ ಬೆಳೆಯುವ ನಗರದ ಭವಿಷ್ಯ ಏನಾಗಬಹುದು?
ಅತಿವೇಗದಲ್ಲಿ ಬೆಳೆವ ನಗರಗಳು ಹೃದಯವನ್ನು ಕಳೆದುಕೊಳ್ಳಬಾರದು. ಪ್ರತಿ ಊರಿಗೂ ಒಂದು ಇತಿಹಾಸವಿರುತ್ತದೆ. ಮಾದರಿಗಳೂ, ಪಾಠಗಳೂ ಇರುತ್ತವೆ. ಕಾಲಕಾಲಕ್ಕೆ ಅವನ್ನು ಬಗೆದು ಕಣ್ಣಮುಂದೆ ಹರಡಿಕೊಂಡರೆ ಎಡವಿದಲ್ಲೇ ಮತ್ತೆ ಎಡವುವ ಪ್ರಮಾದ ಸಂಭವಿಸದು. ಈ ದೃಷ್ಟಿಯಿಂದ ಬೆಂಗಳೂರೆಂಬ ಊರನ್ನು ಕಟ್ಟಿದವರ, ಕಟ್ಟಿದ ಬಗೆಗಳ ಬಗೆಗೆ ಅವಲೋಕನ ಅಗತ್ಯವಾಗಿದೆ. ಸ್ಯಾಂಕಿಯ ವ್ಯಕ್ತಿತ್ವವು ಇತಿಹಾಸದರಿವಿನಲ್ಲಿ ವರ್ತಮಾನವ ಕಂಡು ಭವಿಷ್ಯದ ಮುನ್ನೋಟ ರೂಪಿಸುವಂತಹ ಎಚ್ಚರವನ್ನು ಪ್ರಜೆಗಳಲ್ಲಿಯೂ, ಅವರು ಆಯ್ದು ಕಳಿಸಿದ ಜನಪ್ರತಿನಿಧಿಗಳಲ್ಲಿಯೂ ಮೂಡಿಸಬೇಕಿದೆ.
ಡಾ. ಎಚ್. ಎಸ್. ಅನುಪಮಾ
(Published in `Sudha' weekly, 1 Aug 2024 Issue)
No comments:
Post a Comment