Tuesday, 11 February 2025

ನಾಗರಾಜ ನೂರಿಯಾದ ವೃತ್ತಾಂತವು (ಕಥೆ)

 


ಅರಬ್ಬಿ ಸಮುದ್ರ ದಂಡೆಯ ಅಪಾರ್ಟ್‌ಮೆಂಟಿನಲ್ಲಿ ನೂರಿಯ ಪುಟ್ಟ ಚೆಲುವಾದ ಮನೆ. ಒಪ್ಪವಾಗಿ, ಓರಣವಾಗಿ ಇಟ್ಟುಕೊಂಡ ಮನೆ. ಮನೆಯಿಡೀ ಬಣ್ಣಬಣ್ಣದ ವಸ್ತುಗಳು. ತಟ್ಟೆ, ಲೋಟ, ಪರದೆ, ಹೂಜಿ, ಟವೆಲ್ಲು, ಗಾಜು, ಹೂದಾನಿ, ಗೋಡೆ ಎಲ್ಲವೂ ಢಾಳಾದ ಬಣ್ಣ ಬಳಿದುಕೊಂಡು ಕಣ್ಣಿಗೆ ಹೊಡೆಯುತ್ತಿದ್ದವು. ಅಡುಗೆಮನೆಗೆ ಹೊಂದಿಕೊಂಡಂತಿದ್ದ, ಕಡಲು ಕಾಣುತ್ತಿದ್ದ ಬಾಲ್ಕನಿಯಲ್ಲಿ ಕೂತು ಮಗಳಿಗಾಗಿ ಕೊಂಡಿದ್ದ ‘ಎಲ್ಮರ್ ದಿ ಎಲಿಫೆಂಟ್’ ಕಾಮಿಕ್ ಪುಸ್ತಕವನ್ನು ತಿರುವಿ ಹಾಕುತ್ತಿದ್ದೆ. ತನ್ನ ಭಿನ್ನವರ್ಣದ ಕಾರಣದಿಂದ ಗುಂಪಿನಿಂದೆಲ್ಲಿ ದೂರವಾದೇನೋ ಎಂದು ಆತಂಕಗೊಂಡು ಉಳಿದವರ ಬಣ್ಣವನ್ನೇ ತಾನೂ ಹಚ್ಚಿಕೊಂಡು ಕಷ್ಟಪಟ್ಟ ಆನೆಯ ಕತೆ ಅದು. 

ಕಡಲಲ್ಲಿ ಮುಳುಗಿದ ಸೂರ್ಯಚೆಂಡು ಉಪ್ಪುನೀರು ಕುದಿಸಿ ಬಿಸಿ ಗಾಳಿ ಎರಚುತ್ತಿತ್ತು. ಬೇಗಬೇಗ ಊಟ ಮುಗಿಸಿ ಸಮುದ್ರ ಕಾಣುತ್ತ ಬಾಲ್ಕನಿಯಲ್ಲಿ ಕೂತು ಹಾಡುವ, ಹರಟುವ ಪ್ಲಾನ್ ಮಾಡಿಕೊಂಡಿದ್ದೆವು. ‘ಕಿಕ್ ಆಗುವಂತದು ಏನೂ ಅಲ್ಲ, ಸೆಕೆ ದಿನ್ಕೆ ಚೆನಾಗಾಗುತ್ತೆ’ ಎಂದು ತರತರಹದ ಹಣ್ಣುಗಳಿಂದ ತಾನೇ ತಯಾರಿಸಿದ ವೈನಿನ ಬಾಟಲಿಗಳನ್ನು ನೂರಿ ಊಟದ ಟೇಬಲಿನ ಮೇಲೆ ಸಾಲಾಗಿ ಜೋಡಿಸಿದ್ದಳು. ಒಂದು ಚಿತ್ರಾನ್ನ ಮಾಡ್ಕಳ್ಳುವ, ಸಾಕು ಎಂದರೂ ಕೇಳದೆ ನನ್ನನ್ನು ಸುಮ್ಮನೆ ಕೂರಲು ಹೇಳಿ, ಬಗೆಬಗೆಯ ಅಡುಗೆ ತಯಾರಿಯಲ್ಲಿ ತೊಡಗಿದ್ದಳು. ‘ಈ ಮುಂಡೇರದ್ದು ಏನ್ಗೊತ್ತ ಅಕ್ಕ. ಹೆಂಗ್ಸಿನಂಗೆ ತೋರುಸ್ಕಬೇಕು, ಹೆಂಗ್ಸು ಅಂತ ಅನುಸ್ಕಬೇಕು ಅಂತ ನೀವೇನೇನ್ ಮಾಡ್ತೀರೋ ಅದ್ನೆಲ್ಲ ಮಾಡಕ್ಕೆ ಒದ್ದಾಡ್ತಿರ‍್ತಿವಿ’ ಎನ್ನುತ್ತ, ಮಾತಾಡುತ್ತ ಆಡುತ್ತ ಕುಕರ್ ಏರಿಸಿದಳು. ಹೆಚ್ಚಿದಳು, ಹುರಿದಳು, ಕಾಸಿದಳು, ಬೇಯಿಸಿದಳು. ಅಡುಗೆ ಮುಗಿಸಿ ಚೊಂಬು, ಚಮಚ, ತಟ್ಟೆ, ಇಕ್ಕಳಗಳನ್ನೆಲ್ಲ ತಿಕ್ಕಿ ತೊಳೆದು, ಅಡುಗೆ ಕಟ್ಟೆ ಒರೆಸಿಟ್ಟಳು.

ಅವಳ ಪದ್ಯಗಳ ಕಟ್ಟು ಹಿಡಿದು ನಾನು ‘ಪದ್ಯಪಾನ’ದಲ್ಲಿ ತೊಡಗಿದ್ದರೆ, ಅವಳು ಕೇಳಿಸಿಕೊಳ್ಳುತ್ತ ವೈನುಪಾನದಲ್ಲಿ ತೊಡಗಿದ್ದಳು. ‘ಮದುವೆ, ದಾಂಪತ್ಯ, ತಾಯ್ತನದಂತಹ ಚೌಕಟ್ಟೆಲ್ಲ ಸಾಕಾಗಿದೆ. ಜೆಂಡರ್‌ಲೆಸ್ ಆಗಿ ಬದುಕೋದ್ನ ಟ್ರಾನ್ಸ್‌ಜೆಂಡರ‍್ಸ್ ನೋಡಿ ಕಲಿಬೇಕು ಅಂತ ನಾವಂದುಕೊಳ್ತೀವಿ. ನೀವು ನೋಡಿದ್ರೆ ಪಕ್ಕಾ ಹೆಣ್ಣು ಅನುಸ್ಕಬೇಕಂತ ಅದೇ ಚೌಕಟ್ಟಿನೊಳಗೆ ತುರುಕ್ಕತೀರಲ್ಲೇ?’ ಕಿಚಾಯಿಸಿದೆ.

‘ನಿಮ್ಗೆ ಚೌಕಟ್ಟು ಇದೆ, ಬೇಡ ಅಂತಿರ. ನಮ್ಗೆ ಏನೂ ಇಲ್ಲಲ, ಅದ್ಕೇ ನಾವು ತುರುಕ್ಕತೀವಿ, ತುರುಕುಸ್ಕಂತೀವಿ..’ ಕಣ್ಣು ಹೊಡೆದು ಗಟ್ಟಿಯಾಗೊಮ್ಮೆ ನಕ್ಕಳು. ಎದುರಾಎದುರು ಕೂತು ಮಾತಾಡುತ್ತ ಉಂಡೆವು. ಪದ್ಯ ಓದಿದೆವು. ನಗುವ ಬೆಳದಿಂಗಳ ಸಾಕ್ಷಿಯಾಗಿ, ಭೋರ್ಗರೆವ ಸಮುದ್ರ ಸಾಕ್ಷಿಯಾಗಿ, ನೊರೆಯಲೆಗಳ ಸಾಕ್ಷಿಯಾಗಿ ಆರಡಿ ಎತ್ತರದ ಬಲಿಷ್ಟ ದೇಹದ ನೂರಿ ತನ್ನ ಎದೆನದಿಯ ಹರಿಯಬಿಟ್ಟಳು. ಹುಟ್ಟುವಾಗ ನಾಗರಾಜ ಎಂಬ ಹುಡುಗನಾಗಿದ್ದವ ನೂರಿಯೆಂಬ ಹುಡುಗಿಯಾದ ವೃತ್ತಾಂತ ಅಡೆತಡೆಯಿಲ್ಲದೇ ಹರಿಯಿತು.. 

ನೀವದನ್ನು ಅವಳ ಬಾಯಲ್ಲೇ ಕೇಳಬೇಕು.. 




ಉಳಪಳ, ಗಿಡಮರ, ಮನುಶ್ರು, ಪಶುಪಕ್ಷಿ ಪ್ರಾಣಿಗಳಂಗೆ ನಾನೂ ಒಂದಿನ ಉಟ್ದೆ ಕನಕ್ಕ. ಮದ್ಲೆಲ್ಲ ಉಳದೋರ‍್ಗೆ ಗೊತ್ತಾಗೂ ಹಂಗೆ ಏನೂ ಐಬಿರ‍್ಲಿಲ್ಲ. ನಂಗೂ ನಂಗೇನ್ ಕಮ್ಮಿ ಅಂತ ಗೊತ್ತಾಗ್ತ ಇರ್ಲಿಲ್ಲ. ಮಕ್ಳಿಗೆ ತಾವ್ ಗಂಡುಎಣ್ಣು ಅಂತ ಏನು ಬಾವ್ನೆ ಇರುತ್ತೇಳು? ಎಲ್ಲ ಒಂದೇ ತರ‍್ಕೆ ಇರ‍್ತವೆ, ಒಂದೇ ತರ‍್ಕೆ ಆಡ್ತವೆ. ಆಮೇಲೇ, ಹತ್ತನ್ನೇಡು ವರ್ಷಾಗಿ ದೊಡ್ಡ ಆಗ್ತಾಗ್ತ ಶುರ‍್ವಾಯ್ತ್ ನೋಡು. ನಾನು ವಿಚಿತ್ರವಾಗಿ ಆಡ್ತಿನಿ ಅಂತ ಅವ್ರು ಅನ್ನರು. ಏನುಎತ್ತ ಅನ್ನದ್ ತಿಳಿದೆ ನಾನೂ ಎಂಗೆಂಗೋ ಆಡುವೆ. ಇಂಗಿರ‍್ತ, ಒಂದಿನ ನಂ ದೊಡಪ್ಪ ನನ್ ಲಿಂಗ ಪರೀಕ್ಷೆ ಮಾಡನ ಅಂತ ಎಲ್ಲರೆದ್ರು ಚಡ್ಡಿ ಬಿಚ್ಬಿಟ್ಟ. ಎಲ್ಲ ಬಿದ್‌ಬಿದ್ ನಗ್ತಿದಾರೆ, ನಾನು ಅಳ್ತಾ ಕೈಮುಗಿತಾ ನಿಂತಿದೀನಿ. ಅಬ್ಬಾ, ನಂಗೆ ಎಂಗಾಯ್ತು ಅಂದ್ರೆ ಅವುನ್ನ ಸುಟ್ ಬೂದಿ ಮಾಡಿ ಅಲ್ಲೆ ಮಾಯ ಆಗ್ಬಿಡ್ಬೇಕು ಅನಿಸ್ತು. ಕೂಗಿ ಕಿರುಚಿ ಪರಚಿ ಅವ್ನ ಪಂಚೇನ ಎಳ್ದಾಕ್ಬುಟ್ಟೆ. 

ಅಷ್ಟೆ. ಉದುರಿಬಿದ್ದ ಅವನ ಪಂಚೆ ನಂಗೆ ಸತ್ಯದರ್ಶನ ಮಾಡಿಸ್ತು. ಐವತ್ತಕ್ಕಿಂತ ಹೆಚ್ಚು ವರ್ಷ ವಯಸ್ಸಾದ ಅವ್ನಿಗೆ ಅದೇಷ್ಟ್ ದೊಡ್ಡ ಸಾಮಾನಿತ್ತು ಅಂತಿಯ ಅಕ್ಕಾ!? ಅಬ್ಬಾ, ಇವತ್ಗು ಅವ್ನ ಲಿಂಗನ ನೆನುಸ್ಕಂಡ್ರೆ ಮೈಮೇಲೆ ಮುಳ್ಳು ಏಳ್ತವೆ. ಅವತ್ತೇ ನಂಗೇನಿದೆ, ಏನಿಲ್ಲ ಅಂತ ಅರ್ಥಾಗೋಯ್ತು. ನಾನು ದೊಡ್ಡಪ್ಪನಂತ ಗಂಡು ಅಲ್ವೇ ಅಲ್ಲ, ಆದ್ರೆ ಹೆಣ್ಣು ಅಂತ ಇವ್ರಿಗೆ ಗೊತ್ತಿಲ್ಲ. ಹುಡ್ಗಿಯಾಗಿ ಬಂದು ಇವರೆಲ್ರಿಗು ತೋರುಸ್ತಿನಿ ಅಂತ ನಿಚ್ಚಯಿಸಿ ಅವತ್ತೇ ಮನೆ ಬಿಟ್ಟೆ.

ಮನೆ ಏನೋ ಬಿಟ್ಟೆ. ಹೊಟ್ಟೆ ಅಂತೊಂದಿದೆಯಲ್ಲ? ಹಸಿವು ತಡಿಲಾರ‍್ದೆ ಒಂದ್ ಹೋಟ್ಲಲ್ಲಿ ಕದ್ದೆ. ಅವ್ರು ಪಾತ್ರೆ ತಿಕ್ಕ ಕೆಲ್ಸಕ್ ಹಾಕ್ಕಂಡ್ರು. ಯಾವಾಗ ಹೋಟ್ಲು ಹುಡುಗ್ರೆಲ್ಲ ಚಡ್ಡಿ ಬಿಚ್ಸಿ ಸವಾರಿ ಮಾಡುದ್ರೊ, ಜಾಗ ಖಾಲಿ ಮಾಡ್ದೆ. ಏನೇನೋ ಕೆಲ್ಸ ಮಾಡ್ದೆ. ನಾನು ಹೆಣ್ಣೋ, ಗಂಡೋ ಏನು ಅಂತ ನಂಗೇ ಗೊತ್ತಿಲ್ಲ ಅಂದ್ರೆ ಸಮಾಜ, ‘ಅದ್ಕೆ ನಾವ್ ಹೇಳದು, ನೀನು ಸರಿ ಇಲ್ಲ’ ಅಂತ ಹೇಳ್ತು. ಆ ಸಮಾಜನೇ ನಿನ್ನಂಗಿರೋರು ಆ ಊರಲ್ಲಿ ಅವ್ರಿದ್ದಾರೆ, ಈ ಊರಲ್ಲಿ ಇಂಥೋರು ಇದಾರೆ ನೋಡು ಅಂತ ತೋರಿಸ್ತು. ಹಿಂಗೆ ನಂಗೊತ್ತಿಲ್ಲದಂಗೆ ನನ್ನಂಗೆ ಇರೋರ ಪರಿಚಯ ಆಗ್ತಾ ಹೋಯ್ತು. ನಮ್ಮೋರ ಗುಂಪು ಸಿಕ್ತು. ಆದ್ರೆ, ‘ನೀನಿನ್ನೂ ಸಣ್ಣೋನು, ಸೊಲ್ಪ ದಿನ ಬಿಟ್ಬಾ, ನಾವಿಂತಲ್ಲಿ ಇರ‍್ತಿವಿ’ ಅಂತೇಳಿ ಅವರು ಬಿಟ್ಟು ಹೋದ್ರು. ವಾಪ್ಸು ಮನೆಗೋದೆ. 

ಮತ್ತೆ ಅದೆ ರಾಮಾಯ್ಣ. ಮನೆಬಿಟ್ ಓಡೋದೆ. 

ಗುರುನ ಹುಡಿಕ್ಕಂಡೋದೆ. ಅಲ್ಲಿ ನಂ ಗುರು ಜೊತೆ ಇದ್ದೋರೆಲ್ಲ ಹೆಚ್ಚಾಗಿ ಬಡವ್ರು, ನನ್ನಂಗೇ ತಳ ಜಾತಿಯೋರೇ ಆಗಿದ್ರು. ಮೇಲ್ಜಾತ್ಯೋರು ಮತ್ತು ಶ್ರೀಮಂತ್ರು ಓದ್ತಾರೆ, ದುಡಿತಾರೆ, ಇಂಗ್ಲಿಷ್ ಮಾತಾಡ್ತ ಚಿತ್ರವಿಚಿತ್ರ ಬಟ್ಟೆ ಹಾಕ್ತಂಡಿರ‍್ತಾರೆ. ನಮ್ಮಂಗೆ ನಿರ್ವಾಣನೂ ಆಗಲ್ಲ, ಸೀರೆನೂ ಉಡಲ್ಲ. ಮನೆ ಬಿಟ್ ಬರೋರು ಹೆಚ್ಚಿನಂಶ ಕೆಳ್ ಜಾತ್ಯೋರು, ಬಡುವ್ರೇ ಆಗಿರ‍್ತಾರಕ್ಕ. ಇರ್ಲಿ, ನಿರ್ವಾಣದ್ ವಿಷ್ಯ ಹೇಳ್ತಿದ್ದೆ. ಗುರು ಕೇಳುದ್ರು, ನಿರ್ವಾಣ ಮಾಡ್ಕಳ್ದಿರ ಏನು ಬೆಲೆಯಿಲ್ಲ, ಹೆಂಗ್ಸಾಗ್ತಿಯ ಅಂತ. ಹೆಂಗ್ಸಾಗದೇ ನನ್ನ ಗುರಿ, ಆಸೆ ಎಲ್ಲನು ಆಗಿತ್ತಲ್ವ? ಊಂ ಅಂದೆ. ಆದ್ರೆ ಭಯವಾಗ್ತಿತ್ತು. ನಿರ್ವಾಣ ಮಾಡ್ಕಳದ್ನ ಮುಂದೂಡ್ತ ಇದ್ದೆ. ನಿಮ್ಗೆ ಗೊತ್ತಿರಲ್ಲ ಅಂತ ಹೇಳ್ತಿದಿನಿ, ನಮ್ಮಲ್ಲಿ ಜಾತಿಗೀತಿಗಿಂತ್ಲು ನಿರ್ವಾಣ ಆದವರ‍್ಗೆ ಜಾಸ್ತಿ ಗೌರವ. ಒಂದ್ಸಲ ಏನಾಯ್ತು ಗೊತ್ತ? ಧರ್ಮಸ್ಥಳಕ್ಕೆ ನಾವೆಲ್ಲ ಬಸ್ಸಲ್ಲಿ ಹೋಗ್ತಿದ್ವಿ. ಉಚ್ಚೆಗಂತ ಬಸ್ ನಿಲಿಸ್ದ. ನನ್ ಫ್ರೆಂಡು, ‘ಕೆಳಗೆ ಕೂತು ಉಚ್ಚೆ ಮಾಡ್ಬೇಡ, ಲಿಂಗ ನೆಲಕ್ ತಾಗುತ್ತೆ’ ಅಂತಂದು ಕಿಸಕ್ ಅನ್ಬೇಕಾ? ಎಷ್ಟ್ ಅವಮಾನ ಆಯ್ತು ಅಂದ್ರೆ ಆಗ್ಲೆ ಎಳ್ದು ಕತ್ರುಸ್ಕಂಡ್ ಬಿಡ್ಲ ಅನಿಸ್ತು. ಕೊನ್ಗೆ ಭಯ ಬಿಟ್ಟು ಕೊಯ್ಸಿಕಂಡೆ. ತುಂಬ ನೋವು, ತುಂಬ ಹಿಂಸೆ. ಆದ್ರೆ ಏನ್ಮಾಡದು, ಒಂದು ಹೆಣ್ಣು ಅನುಸ್ಕಳೋ ಆಸೆಗೇ ಕೊಯ್ಸಿಕೊಂಡೆ. ರಕ್ತ ಹರೀತ್ತೆ, ಪ್ರಾಣನೂ ಹೋಗಬಹುದು ಅಂತ ಗೊತ್ತಿದ್ರೂ ಬ್ಯಾಡ್ದೆ ಇರೊ ಲಿಂಗಾನ, ಅರೆಬರೆ ಅಂಗಾನ ಕತ್ರುಸಿ ಹಾಕ್ಲೇಬೇಕೂಂತ ರೊಚ್ಚಿಗೆ ಕೊಯ್ಸಿಕೊಂಡೆ. ನನ್ನತ್ರ ದುಡ್ಡಿರ್ಲಿಲ್ಲ. ಆಸ್ಪತ್ರೆಗೆ ಹೋಗಲಿಲ್ಲ, ಗುರುನೇ ಕತ್ತರ‍್ಸಿದ್ರು..

ನೋವು, ಭಯ, ಅನಾಥ ಅನ್ಸೊ ಭಾವ.. ಅಬ್ಬಬ್ಬಾ.. ಅದು ತುಂಬ ಭಯಾನಕ ಕ್ಷಣ.

ಕೊಯ್ಯುವಾಗ ಮಾತಾಮಾತಾ ಅಂತಿರು ಅಂದ್ರು ನಮ್ಮೋರು. ಉಸುರು ಬಿಡದೆ ಮಾತಾಮಾತಾಮಾತಾ ಅಂತಿದ್ದೆ. ಬರ‍್ತಬರ‍್ತ ಕಣ್ಣು ಕಪ್ಪಾಗಿ ದನಿ ಸಣ್ಣ ಆಗಿ ಕಣ್ಣೆದುರು ಮಾತಾ ಕಂಡೇಬಿಟ್ಟಳು. ನಿಜ ಅಕ್ಕಾ. ನಾನೂ ಮೊದ್ಲು ನಂಬ್ತಿರ್ಲಿಲ್ಲ. ನಿರ್ವಾಣ ಆಪ್ರೇಷನ್ ಆಗುವಾಗ ಯುದ್ಧ ಮಾಡೋ ಮಾತಾ ಕಂಡೇಬಿಟ್ಳು. ಮಾತಾ ಕಾಣೋ ಆ ಮುಮೆಂಟ್ ಇದ್ಯಲ್ಲ, ಬಿಡ್ಬಾರ್ದು ಅದ್ನ, ಅದು ತುಂಬ ಮುಖ್ಯ ಅಂತ ಹೇಳಿದ್ರು. ಅದ್ನ ತಪ್ಪೋಗಕ್ಕೆ ಬಿಟ್ರೆ ಸತ್ತೋಗ್ತಾರೆ ಅಂದಿದ್ರು. ಆದ್ರೆ ನಂಗೆ ಮಾತಾ ಕಂಡೇಬಿಟ್ಟು ಸಮಾಧಾನ ಆಯ್ತು. ಇನ್ನು ನಾನು ಸಾಯಲ್ಲ ಅಂತ ಧೈರ್ಯ ಬಂತು. ಲಿಂಗ ಕತ್ತರ‍್ಸಿ ರಕ್ತ ಸುರೀತ ಇತ್ತು. ಆ ರಕ್ತನ ಮೈಗೆಲ್ಲ ಬಳಿದ್ರು. ಹಂಗ್ಮಾಡಿದ್ರೆ ಮತ್ತೆ ಗಂಡಸ್ರ ತರ ಕೂದ್ಲು ಹುಟ್ಟಲ್ಲ ಅಂತೆ. 

ಹಿಂಗೆ ನಾಗರಾಜ ನೂರಿ ಆದೆ. ನಮ್ಮೋರಲ್ಲಿ ಬಾಳ ಜನ ಮುಸ್ಲಿಂ ಹೆಸ್ರು ಇಟ್ಕತಾರೆ. ನಿಂಗೆ ಆಚ್ಚರ‍್ಯ ಆಗ್ಬೋದು, ನಮ್ಮಲ್ಲಿ ಮುಸಲಮಾನರಿಗೆ ಹೆಚ್ಚು ಗೌರವ. ಎಲ್ರು ರಂಜಾನ್ ಆಚರುಸ್ತಿವಿ. ಮತಾಂತರ ಆಗಿ ಗಂಡ್ಸಾಗಿ ಲುಂಗಿ ಪಂಚೆ ಉಟ್ಕಂಡು ಹಜ್‌ಗೆ ಹೋಗ್ತಿವಿ! ಬಾಂಬೇಲಿ ನಮ್ಮೋರು ಇರೋ ಕಡೆ ಒಳಗೋಗುವಾಗ ಟಿಕ್ಲಿ ಕಿತ್ತಾಕಿ ಹೋಗ್ತಿವಿ. 

ಎಷ್ಟೋ ವರ್ಷ ಕಳೀತು. ಅವ್ವನ ನೆನಪು, ಅವ್ಳ ಕೈ ಅಡ್ಗೆ ನೆನಪು ಬರ‍್ತನೇ ಇತ್ತು. ಆದ್ರೆ ಹೆಂಗೆ ಹೋಗ್ಲಿ ಅನ್ನೋ ಭಯ. ಕೊನೆಗೊಂದಿನ ಧೈರ್ಯ ಮಾಡಿ ಸೀರೆ ಉಟ್ಕಂಡು, ಹುವ್ವ ಮುಡ್ಕಂಡು ಮನೆಗೋದೆ. ನಮ್ಮವ್ವ ಗುರ‍್ತನೆ ಹಿಡಿಲಿಲ್ಲ. ‘ನಾನ್ ಕನವ್ವ ನಾಗ್ರಾಜ, ಈಗ ಚೇಂಜಾಗಿ ನೂರಿ ಆಗಿ ಬಂದಿನಿ ನೋಡು’ ಅನ್ನುತ್ಲೆ ತಲೆ ತಿರ‍್ಗಿ ಬಿದ್ಲು. ನಮ್ಮಯ್ಯ ಅಂತೂ ಬಲು ಎಗರಾಡಿದ. ಸಿಕ್‌ಸಿಕ್ ಬೈಗಳನೆಲ್ಲ ಬೈದ. ವದ್ದ, ಹೊಡ್ದ. ಚುಚ್ಚಿದ. ಅವ್ರ ದುಕ್ಕ ನಂಗೆ ಅರ್ಥ ಆಗತ್ತೆ ಅಕ್ಕ. ಆದ್ರೆ ನಾನೇನು ಮಾಡ್ಲಿ? ಕೊನ್ಗೆ ಅವ್ರಿಗೆ ಸೀರೆ ಎತ್ತಿ ತೋರ‍್ಸೆಬಿಟ್ಟೆ - ನೋಡಿ, ಗಂಡ್ಸು ಅನ್ನಂತದು ಈಗ ಏನು ಇಲ್ಲ ಅಂತ. ನನ್ ಹುಟ್ಸಿದ್ದು ಅವ್ರೆ ಅಲ್ವ? ನಂದು ಅಲ್ದೆ ಇರೊ ಲಿಂಗ ಅಂಟಿಸಿದ್ ಅವುರೇ ಅಲ್ವ? ನೋಡ್ಲಿ ಈಗೇನಾಗಿದೆ ಅಂತ ಸೀರೆ ಎತ್ತಿ ತೋರ‍್ಸಿದ್ದೆ. ಅಯ್ಯ ಮಕ ಕಿವಿಚಿ ಹೊಡೆಯಕ್ ಬಂದ ಗಳಿಗೆನ ಯಾವತ್ತೂ ಮರ‍್ಯಕ್ಕಾಗಲ್ಲ ಅಕ್ಕ. ಕನಸಲ್ಲೂ ಅದೇ ಮಕ ಬಂದು ಬೆಚ್ಚಿ ಬೀಳ್ತಿರ್ತೀನಿ..

ಅವ್ರೇನಾರಾ ಅಂದ್ಕಳ್ಳಿ, ಮನೆಲೇ ಇದ್ದೆ. ಮಾತೇ ಇಲ್ಲ ನನ್ಜೊತೆ. ಮನೆಯವ್ರ ಮರ‍್ಯಾದೆ ಕಳಿಬಾರ್ದು ಅಂತ ಬೆಳಿಗ್ಗೆ ಐದರ ವಳ್ಗೆ ಮನೆ ಬಿಡದು. ರಾತ್ರಿ ೧೦ರ ಮೇಲೇ ಬರದು. ಹಿಂಗೇ ನಡಿತು. ನಾ ಹೋದ್ರೆ ಅಯ್ಯ ಮನೆಗೇ ಬರ‍್ತಿರಲಿಲ್ಲ. ಮನೇಲಿ ಮಲಗ್ತಿರಲಿಲ್ಲ. ಎರಡೊರ್ಷ, ಮತ್ತೆ ಮನೆ ಬಿಟ್ಟೆ. ಆವಾಗೀವಾಗ ಹೋಗಿ ಕಾಸು ಕೊಟ್ಟು ನಮ್ಮವ್ವನ ಕೈ ಅಡ್ಗೆ ಉಂಡು ಬರ‍್ತಿದ್ದೆ. ಒಂದ್ಸಲ ಮನ್ಗೆ ಇಬ್ರು ಫ್ರೆಂಡ್ಸ್‌ನ ಕರ‍್ಕಂಡು ಹೋಗಿದ್ದೆ. ಅವ್ರುನ್ನೆಲ್ಲ ನೋಡಿದ್ದೇ ನಮ್ಮವ್ವ, ‘ಒಬ್ನೆ ಮಗ ಹುಟ್ಟಿದ್ದ. ಸೀರೆ ಉಟ್ಕಂಡು ಇಂಗಾದ. ನಮ್ ಮನೆ ದೀಪ ಆರ‍್ಸಿಬಿಟ್ರಿ ನೀವು’ ಅಂತ ಗೋಳಾಡಿದ್ಲು. ಅವ್ಳು ಗೋಳಾಡದು, ನನ್ ಫ್ರೆಂಡ್ಸ್ ಬಿದ್ದುಬಿದ್ದು ಪಕಪಕ ನಗೋದು. ಅದಾದ ಒಂದು ವಾರಕ್ಕೆ ತನ್ನ ಮನೆಯೋರ ಅವಮಾನ ತಡಿಲಾರ‍್ದೆ ನನ್ ಫ್ರೆಂಡು ಬಾವಿಗ್ ಬಿದ್ದು ಸತ್ತೋದ್ಲು. ಬೇಕೂಂತ ಅವ್ವನ ಕಿವಿಮೇಲೆ ಈ ವಿಷ್ಯ ಹಾಕ್ದೆ. ಮೊದ್ಲುಮೊದ್ಲು ‘ನೀ ಸತ್ರು ಬೇಜಾರಿಲ್ಲ, ನೆಗ್ದ್ ಬಿದ್ದೋಗು’ ಅಂತಿದ್ದೋಳು ಕೊನ್ಗೆ ನಿಜವಾಗೂ ಎಲ್ಲಿ ಸಾಯ್ತಿನೋಂತ ಸುಮ್ಗಾದ್ಲು.

ಆದ್ರು ಈಗ್ಲೂ ಅನ್ಸುತ್ತೆ. ಅವ್ರು ನನ್ ಒಪ್ಕಂಡ್ ಸುಮ್ನಿದಾರೊ? ಅತ್ವಾ ದುಡ್ದ್ ಕಾಸು ಕೊಡ್ತಿನಿ ಅಂತ ಸುಮ್ನಿದಾರೊ? ನಾನೇ ಒಂದ್ ಮನೆ ಕಟ್ಟುಸ್ಕೊಟ್ಟಿದಿನಿ. ಜಾತ್ರೆಗ್ ದುಡ್ಡೆಲ್ಲ ನಾನೇ ಕೊಟ್ಟಿರ‍್ತಿನಿ. ಆದ್ರು ನಮ್ಮವ್ವ, ‘ಆ ಎರ‍್ಡ್ ದಿವ್ಸ ಮನೆಗ್ ಬರ‍್ಬೇಡ, ನೆಂಟ್ರು ಇಸ್ಟ್ರು ಬತ್ತರೆ, ಅವರ ಎದ್ರು ಮರ‍್ವಾದೆ ಹೋಯ್ತದೆ, ಆಮೇಲ್ ಬಾ, ನಿಂಗಿಷ್ಟುದ್ ಎಲ್ಲ ಮಾಡಾಕ್ತಿನಿ’ ಅನ್ನುತ್ತೆ. ಕಳ್ತನ ಮಾಡಿ ಬಂದ ಮಕ್ಳನ್ನ, ಕೊಲೆ ರೇಪು ಮಾಡಿರೊ ಮಕ್ಳನ್ನ, ಹ್ಯಾಂಡಿಕ್ಯಾಪ್ ಮಕ್ಳನ್ನ ಅಪ್ಪ ಅಮ್ಮ ಒಪ್ಕಂತಾರೆ. ಆದ್ರೆ ನಮ್ಮುನ್ನ ಬಿಲ್ಕುಲ್ ಒಪ್ಪಲ್ಲ, ನಮ್ಮ ಮೊದ್ಲ ಶತ್ರುಗಳು ನಮ್ಮನೆ ಜನನೇ ಆಗಿರ‍್ತಾರೆ. ಈಗ ಸ್ವಲ್ಪ ಪರಿಸ್ತಿತಿ ಸುದಾರ‍್ಸಿದೆ. ಬಿಡಿಸಿ ನಾ ಎಲ್ಲ ಹೇಳಿದ್ಮೇಲೆ ನಂ ನೆಂಟ್ರಿಷ್ಟ್ರು ಕೆಲವ್ರು ಅರ್ಥ ಮಾಡ್ಕಂಡಿದಾರೆ. 

ಕಾಲ ಇಂಗೇ ಕಳಿತಾ ಇರುವಾಗ ಒಂದು ಸ್ವಯಂಸೇವಾ ಸಂಸ್ಥೆಯಿಂದ ನಿಜಕ್ಕೂ ಬಾಳಾ ಸಹಾಯ ಸಿಕ್ತು ಅಕ್ಕ. ಅವರು ಬಿಎ ಮಾಡ್ಸಿದ್ರು. ಕಂಪ್ಯೂಟರ್ ಕಲ್ಸಿದ್ರು. ಒಂದ್ ಆಫೀಸ್ನಲ್ಲಿ ಕೆಲ್ಸ ಕೊಡ್ಸಿದ್ರು. ಈಗಿರೋ ಮನೆ ಕೊಡ್ಸಿದ್ರು. ಸೆಕ್ಸ್‌ವರ್ಕ್ ಧಂಧೆ ಮಾಡೋರು ನನ್ನ ಸಂಬ್ಳದ ಹತ್ರಷ್ಟು ದುಡಿತಿರಬೋದು. ಆದ್ರೆ ಅದು ನಂಗೆ ಬ್ಯಾಡ. ನಂಗೆ ಘನತೆ, ಸ್ವಾತಂತ್ರ್ಯ, ಧೈರ್ಯದಿಂದ ಬದ್ಕೋ ಅವಕಾಶ ಸಿಕ್ಕು ನೆಮ್ಮದಿಯಾಗಿದೀನಿ..’



 

ನೂರಿಯ ಮಾತಿನ ನದಿ ಹರಿಯುತ್ತಲೇ ಇತ್ತು. ಟೇಬಲಿನೆದುರು ಇಟ್ಟದ್ದು ಯಾವಾಗಲೋ ಖಾಲಿಯಾಗಿತ್ತು. ಸೆಕೆಗೋ, ಉದ್ವೇಗಕ್ಕೋ ಅವಳ ವಿಶಾಲ ಹಣೆಮೇಲೆ ಮೂಡಿದ್ದ ಬೆವರ ಹನಿಗಳು ಒಂದರೊಡನೊಂದು ಸೇರಿ ಕೆಳಗೆ ಧುಮುಕುವ ಆಟದಲ್ಲಿ ತೊಡಗಿದ್ದವು. ತಾನೇ ಎಲ್ಲ ಪಾತ್ರೆ ತೊಳೆದು ಒರೆಸಿಟ್ಟಳು. 

ಈಗೇನೋ ನೂರಿಯಂತಹವರ ಗುಂಪುಗಳು, ಬೆಂಬಲಿಸುವ ಸಂಘ-ಸಂಸ್ಥೆ-ಕಾನೂನುಗಳು ರೂಪುಗೊಂಡಿವೆ. ಆದರೆ ಮೊದಲೆಲ್ಲ ಇವರು ಹೇಗಿದ್ದರೋ ಎಂದು ಆಶ್ಚರ‍್ಯಪಡುವಾಗ ಇದ್ದಕ್ಕಿದ್ದಂತೆ ನನ್ನ ಬಾಲ್ಯದ ನೆನಪು ಸುಳಿದು ಹೋಯಿತು..

ನಮ್ಮ ಹಳ್ಳಿಯಲ್ಲಿ ಜೋಗಪ್ಪಗಳಿದ್ದರು, ಅವರಿಗೆ ಗೌರವ ಇತ್ತು. ಫಕ್ಕನೆ ನೆನಪಿಗೆ ಬರುವುದು ತಿಮ್ಮಕ್ಕ ಯಾನೆ ತಿಮ್ಮಪ್ಪ. ಅವರನ್ನು ಅವಳು ಇವಳು ಅನ್ನುವುದಕ್ಕಿಂತ ಅದು-ಇದು ಅಂತಲೇ ಎಲ್ಲ ಕರೆಯುತ್ತಿದ್ದದ್ದು. ಪ್ರತಿ ಶನಿವಾರ ಸಂತೆಯಲ್ಲಿ ವಾಲೆ ಬೆಲ್ಲ, ರುದ್ರಾಕ್ಷಿ, ವಿಭೂತಿ, ಲೋಬಾನ, ಮಣಿಸರ ಹೀಗೇ ಏನೇನೋ ಯಾರೂ ಇಡದ ಸಾಮಾನು ಇಟ್ಟುಕೊಂಡು ಮಾರುತ್ತ ಕೂತಿರುತ್ತಿದ್ದರು. ಗಡ್ಡ ಮೀಸೆಯೂ ಇರುತ್ತಿತ್ತು, ಸೀರೆಯನ್ನೂ ಉಡುತ್ತಿದ್ದರು. ನಮ್ಮಮ್ಮ ಸಂತೆಪೇಟೆಗೆ ಸುತ್ತಾಡಲು ಹೋಗುವ ಮುನ್ನ ನನ್ನನ್ನು ಮತ್ತು ತಂಗಿಯನ್ನು ಅವರತ್ರ ಕೂರಿಸಿ, ‘ಇಲ್ಲೇ ಕೂತಿರಿ ಮಕ್ಳಾ, ಸಾಮಾನು ತಗಂಬರ‍್ತಿನಿ’ ಅಂತ ಹೇಳಿ ಚೀಲಗಳ ಹಿಡಿದು ಹೋಗುತ್ತಿದ್ದಳು. ಅಷ್ಟು ನಂಬಿಕೆ. ಅವರು ಕೊಡೊ ಬೆಲ್ಲದ ಚೂರು ತಿನ್ನುತ್ತಾ, ಮೀಸೆ ಮತ್ತು ಸೀರೆ ಎರಡೂ ಒಟ್ಟು ಹೇಗಿರಲು ಸಾಧ್ಯ ಅಂತ ಕಣ್ಣರಳಿಸಿ ನೋಡುತ್ತಿದ್ದಿದ್ದು ನೆನಪಾಯಿತು. ತನ್ನ ಅಪ್ಪನ ಮನೆ ಪಕ್ಕದಲ್ಲೇ ಇನ್ನೊಂದು ಸಣ್ಣ ಬಿಡಾರ ಹಾಕಿಕೊಂಡು ಇದ್ದರು. ಆವಾಗೀವಾಗ ನಮ್ಮನೆಗೆ ಬರುತ್ತಿದ್ದರು. ಅಮ್ಮನಿಗೆ ಆಪ್ತಬಂಧು ತರಹ. ಇಬ್ಬರೂ ಕಷ್ಟಸುಖ ಮಾತಾಡುತ್ತ ಎಷ್ಟೋ ಹೊತ್ತು ಕಳೆಯುತ್ತಿದ್ದರು. 

ಹಾಗಾದರೆ ಅದು ಯಾವಾಗ ಅವರ ಮೇಲಿನ ಗೌರವ ಹೋಗಿ ಹುಳಗಳ ಹಾಗೆ ನೋಡಲು ಸಮಾಜ ಶುರುಮಾಡಿತು? ನಾನು ಈ ಅಚ್ಚರಿಯಲ್ಲಿ ಮುಳುಗಿರುವಾಗ ನೂರಿ ಒಂದಷ್ಟು ಫೋಟೋಗಳ ಹಿಡಿದು ಬಂದಳು. ಅದರಲ್ಲಿ ನಾಗರಾಜ ಅವನ ಅಪ್ಪ ಅಮ್ಮನೊಡನೆ ನಿಂತಿದ್ದ. ತನ್ನವರೊಡನೆ ನಿಂತ ನೂರಿಯಿದ್ದಳು. ಅವಳ ಅರ್ಧದಷ್ಟಿದ್ದ ಸಣಕಲು ವ್ಯಕ್ತಿಯೊಡನೆ ಸರ್ವಾಲಂಕಾರ ಭೂಷಿತೆಯಾಗಿ ನಿಂತ ಫೋಟೋ ಗಮನ ಸೆಳೆಯಿತು. 




ಅಕ್ಕಾ, ಇವುನ್ಯಾರು ಗೊತ್ತ? ನನ್ ಕೊನೇ ಗಂಡ. ನಿಜಕ್ಕೂ. ನಾವ್ ನೋಡಕ್ಕೆ ಹೆಣ್ಣಿನಂಗಾರ ಕಾಣ್ಲಿ, ಗಂಡಿನ್ತರನಾದ್ರು ಇರ್ಲಿ, ನಮ್ ದೇಹ ಮಾತ್ರ ಗಂಡ್ಸೇ ಬೇಕು ಅನ್ನುತ್ತೆ. ಅದೂ ಎಂಥಾ ಗಂಡ್ಸು? ಪಕ್ಕಾ ಗಂಡ್ಸು. ಪಕ್ಕಾ ಗಂಡನೇ ಬೇಕು. ಏನಾಗುತ್ತೆ ಗೊತ್ತ? ನಮ್ಮುನ್ನ ಹೆಂಗ್ಸು, ಹೆಂಡ್ತಿ ಅಂತ ಒಪ್ಕಳೋರು ನಮ್ಗಿಂತ ಬಾಳ ಚಿಕ್ಕೋರೇ ಆಗಿರ‍್ತಾರೆ. ಹಂಗಾಗಿ ಸಾದಾರ‍್ಣ ನಮ್ಗಿಂತ ಸಣ್ಣೋರ‍್ನೆ ಹುಡಿಕ್ಕತಿವಿ. ಅವ್ರೇನು ನಮ್ಮೇಲಿನ ಪ್ರೀತಿಗ್ ಬಂದಿರ‍್ತಾರೋ, ಒತ್ತಾಯಕ್ ಬಂದಿರ‍್ತಾರೊ, ಕುತೂಹಲಕ್ ಬಂದಿರ‍್ತಾರೊ ಅತ್ವ ಇನ್ಯಾರು ಸಿಗ್ಲಿಲ್ಲ ಅಂತ ನಮ್ಮತ್ರ ಬಂದಿರ‍್ತಾರೋ, ಅಂತೂ ಹಿಂಗ್ ಬಂದೋರು ಹಂಗ್ ಹೊಂಟೋಯ್ತರೆ, ಇದು ಮಾತ್ರ ಸತ್ಯ. ಅವ್ರುನ್ನ ಮಕ್ಕಳಂಗೆ ನೋಡ್ಕತಿವಿ. ಸಾಲಸೋಲ ಮಾಡಿ ಬಟ್ಟೆಬರೆ ತಂದ್ಕೊಡ್ತಿವಿ. ಚಿಕನ್ನು, ಮಟನ್ನು, ಕಬಾಬು ಎಲ್ಲ ಮಾಡಿಮಾಡಿ ಸೇವೆ ಮಾಡ್ತಿವಿ. ಉಣ್ಣದು, ಉಡದು, ಕುಡಿಯದು ಎಲ್ಲಾದ್ರಲ್ಲು ಅವ್ರಿಗೇ ಮೊದಲ ಪ್ರಿಫರೆನ್ಸ್. ಅಷ್ಟಾದ್ರೂ ಹನಿ ನೀರು ಕೊಟ್ಟು ಸಮುದ್ರನೇ ವಾಪಸ್ ಬರ‍್ಲಿ ಅಂತ ಬಯಸ್ತಾರೆ. ಸ್ವಲ್ಪೇ ದಿನದಲ್ಲಿ ಯಾರ ಹಿಂದೋ ಹೋಗ್ಬಿಡ್ತಾರೆ. ನಮಗಿಂತ ಪಕ್ಕಾ ಆಗಿರೊ ಹೆಣ್ಣು ಸಿಗತ್ತ ಅಂತ ಬೇರೆ ಕಡೆ ನೋಡ್ತನೇ ಇರ್ತಾರೆ. ಆಗ ನಾವೂನೂ ಮತ್ತೊಬ್ಬುನ್ನ ಹುಡುಕಕ್ ಶುರು ಮಾಡ್ತಿವಿ. ನನ್ ಜೀವ್ನದಲ್ಲಿ ಹಂಗೆ ಐದಾರ್ ಜನ ಬಂದಿರಬೌದು ಅಕ್ಕ. ಮೊದ್ಲುಮೊದ್ಲು ಇದ್ದ ಗಂಡ ಬಿಟ್ಟಾಗ ತುಂಬ ಬೇಸ್ರ ಆಗ್ತಿತ್ತು. 

ನಮ್ಗೆ ಬೇಕಾದ್ದು ಪ್ರೀತಿ. ಹುಚ್ಚು ಹಿಡಿಯೋವಷ್ಟು ಪ್ರೀತಿ. ಅದು ಮನೆಯೋರಿಂದ ಸಿಕ್ಕಿರಲ್ಲ. ಅಕ್ಕಪಕ್ಕದೋರಿಂದ್ಲು ಸಿಕ್ಕಿರಲ್ಲ. ಒಡಹುಟ್ಟಿದೋರಿಂದ, ಶಾಲೆಕಾಲೇಜು ಫ್ರೆಂಡ್ಸಿಂದ ಸಿಕ್ಕಿರಲ್ಲ. ಎಲ್ರಿಗು ನಾವು ಗೇಲಿ, ಕುತೂಹಲದ ವಸ್ತುಗಳಾಗಿರ‍್ತಿವೇ ಹೊರ‍್ತು ಯಾರಿಗೂ ಕ್ಲೋಸ್ ಆಗಿರಲ್ಲ. ಅದೆಂಗೊ ನಮ್ಮುನ್ ನೋಡಿದ್ದೇ ‘ಕೋತಿ’ ‘ಹಿಜ್ರ’ ಅಂತ ಗುರ‍್ತು ಹಿಡ್ದೇ ಬಿಡ್ತಾರೆ. ಹಂಗಾಗಿ ನಮ್ಮಂತೋರ ಗುಂಪನ್ನೇ ಸೇರ‍್ಬೇಕಾಗುತ್ತೆ. ಲಿಂಗ ಕತ್ರುಸ್ಕಂಡು ಹೆಣ್ಣು ಅನ್ಕತಿವಿ, ‘ನಾನು ಹೆಣ್ಣು’ ಅಂತ ಸಮಾಜಕ್ಕೆ ತೋರ‍್ಸಕ್ಕೆ ಒದ್ದಾಡ್ತಿವಿ. ಹೆಣ್ಣು ಅಂದ್ರೆ ಹೇಗಿರ‍್ಬೇಕು ಅಂತ ಸಮಾಜ ಹೇಳುತ್ತೋ ಅದನ್ನೆಲ್ಲ ಊಹೆ ಮಾಡ್ಕಂಡು ಹಂಗೇ ಇರಕ್ಕೆ ನೋಡ್ತಿವಿ. ವಯ್ಯಾರದಿಂದ ನಡಿತಿವಿ. ಒನಿತಿವಿ. ಢಾಳಾಗಿ ಅಲಂಕಾರ ಮಾಡ್ಕತಿವಿ, ಹೂ ಮುಡ್ಕತಿವಿ, ಸೀರೆ ಉಟ್ಕತಿವಿ, ಲಿಪ್‌ಸ್ಟಿಕ್ಕು-ವಡವೆ-ಕಾಲುಂಗುರ-ಗೆಜ್ಜೆ ಎಲ್ಲದ್ನು ಹೇರ‍್ಕತಿವಿ. ಒಟ್ಟಾರೆ ಹೆಂಗಾದ್ರು ಹೆಣ್ಣಿನಂಗೆ ಕಂಡು ಒಂದ್ ಗಂಡಿನ ಪ್ರೀತಿ ಗಳಿಸ್ಕೊಬೇಕೂಂತ ಒದ್ದಾಡ್ತೀವಿ. ಸಿಕ್ಕಿದ್ದಕ್ಕಿಂತ ಹೆಚ್ಚು, ಇನ್ನೂ ಹೆಚ್ಚು ಅಂತ ಹುಡುಕ್ತಾ ಹೋಗ್ತೀವಿ. ಒಂದಾದ್ಮೇಲೊಂದು ಸ್ನೇಹ. 

ಆದ್ರೆ ನಂಗೆ ಗಂಡ ಅನುಸ್ಕಳೋರ ಒರಿಜಿನಲ್ ಬುದ್ಧಿ ಏನಂತ ಅರ್ಥವಾಗಿದ್ದೇ ಒಂದ್ಕತೆ..

ಈ ಫೋಟೋದಲ್ಲಿದಾನಲ, ಅವ ಗಂಡನಾಗಿ ಸಿಕ್ದ. ಅದುವರ‍್ಗೆ ಮೂರ್ನಾಕು ಜನ ಕೈಕೊಟ್ಟು ಯಾರೂ ಜೊತೆಯಿಲ್ದೆ ಒಬ್ಳೇ ಆಗಿ ಬೇಜಾರಲ್ಲಿದ್ದೆ. ಈ ನನ್ಮಗ ಸಿಕ್ಕ. ನಂಗಿಂತ ವಯಸ್ನಲ್ಲೂ, ಅಳತೇಲ್ಲೂ ಸಣ್ಣೋನು. ಬಲು ಪ್ರೀತಿ ಮಾಡಿದ್ದೆ ಕಣಕ್ಕ. ತುಂಬ ಅಂದ್ರೆ ತುಂಬನೆ. ನೋಡು, ಈ ಫೋಟೋ ತೆಗೀವಾಗ ಅವುನ್ನ ಒಂದ್ ಬಾಕ್ಸ್ ಮೇಲೆ ನಿಲ್ಸಿ ನನ್ನಷ್ಟ್ ಎತ್ರ ಮಾಡಿದ್ದೆ. ಆದ್ರೆ ಮಾಮೂಲು, ಒಂದೆರೆಡ್ ವರ್ಷದಲ್ಲಿ ಕೈ ಬಿಟ್ಟ. ಸಿಕ್ಕಾಪಟ್ಟೆ ಬೇಜಾರಾಗಿ ಗಂಗಾನದೀಲಿ ಬಿದ್ದು ಸಾಯ್ಬೇಕು, ಮುಂದಿನ ಜನ್ಮದಲ್ಲಾದ್ರೂ ನಂಬಬಲ್ಲಂತ ಒಳ್ಳೇ ಗಂಡ, ಎಲ್ಲರಂತಾ ಬದುಕು ಸಿಗ್ಬೋದೂಂತ ಹೋದೆ. ಅಲ್ಲೊಬ್ಳು ನಮ್ಮೋಳು, ಪೂನಾದೋಳು ಸಿಕ್ಲು. ನಿಜಕ್ಕು ನನ್ ಕಣ್ಣು ತೆರೆಸಿದ ಗುರು ಅವ್ಳು. ಅವಳ ಹತ್ರ ಮಾತಾಡ್ತ ನಂಗೆ ಜ್ಞಾನೋದಯ ಆಯ್ತು, ಗಂಡಸ್ರಿಗೆ ಬೇಕಿರದು ಹೆಂಗಸ್ರೇ ಹೊರ‍್ತು ಹಿಜ್ಡಾಗಳಲ್ಲ ಅಂತ. ನಾವ್ ಹೆಂಗೆ ಪಕ್ಕಾ ಗಂಡ್ಸು ಗಂಡ ಆಗ್ಲಿ ಅಂತ ಇಷ್ಟಪಡ್ತಿವೊ ಹಂಗೆ ಅವ್ರೂ ಯೋನಿ ಇರೋಳು, ಗರ್ಭಚೀಲ ಇರೋಳು, ಮಕ್ಳನ್ನು ಹೆರೋಳು ಹೆಂಡ್ತಿಯಾಗಿ ಬೇಕು ಅಂತ ಆಸೆಪಡ್ತರೆ. ಅದು ತಪ್ಪಲ್ಲ. ಆದ್ರೆ ಅವ್ರು ನಮ್ಗೆ ಮೋಸ ಮಾಡ್ತಾರಲ್ಲ ಅದು ತಪ್ಪು. ನಂ ವೀಕ್ನೆಸ್ ಕಂಡುಹಿಡ್ದು ಬ್ಲ್ಯಾಕ್‌ಮೇಲ್ ಮಾಡ್ತಾರಲ, ಅದು ತಪ್ಪು. ದೈಹಿಕವಾಗಿ ಹಿಂಸೆ ಕೊಡೋದು, ನಾವು ಸೆಕ್ಸ್‌ವರ್ಕ್ ಮಾಡಿ ದುಡಿಯಕ್ ಬಿಟ್ಟು ಅದ್ನ ಬಾಚ್ಕಂಡ್ ಹೋಗದು ತಪ್ಪು. ಇದೆಲ್ಲ ಹೊಳೆದಿದ್ದೇ ನಿಜಾನ ಮನಸು ಒಪ್ಕಂಬಿಡ್ತು. ಎಷ್ಟೋ ಬೇಜಾರು ಕಮ್ಮಿ ಆದಂಗನಿಸ್ತು. ಸಾಯಕ್ಕಂತ ಹೋದೋಳು ಮನ್ಸು ಗಟ್ಟಿ ಮಾಡ್ಕಂಡ್ ವಾಪಸ್ ಬಂದೆ. 

ಆದ್ರೆ ಬಿಟ್ಟೋಗಿದ್ದೋನು ಮತ್ತೆ ಬಂದ. ಅವ್ನ ಮದ್ವೆ ಆಗೋ ಹುಡ್ಗಿ ಮನೆಗೋಗಿ ರಂಪ ಮಾಡಿ ಮದ್ವೆ ನಿಲ್ಸಿದ್ನಲ ನಾನು. ಬೇರೆ ಗತಿ ಇಲ್ಲಾಂತ ಆಮೇಲೂ ಏಳು ವರ್ಷ ಒಟ್ಗೆ ಇದ್ದ. ಕೊನೆಗೆ ಒಂದಿನ ಎಲ್ಲನು ತಗಂಡು ಹೋದ. ಮಕ್ಳಾಗ್ದೆ ಇರೋರನ್ನ, ತಮ್ ಬೀಜಕ್ಕೆ ಮಕ್ಳ ಹೆರದೆ ಇರೋರ‍್ನ ತನ್ನ ಹೆಂಗ್ಸು ಅಂತ ಗಂಡಸ್ರು ಬಾವಿಸೋದೇ ಇಲ್ಲ ಅಂತ ಪೂನಾದ ಅಕ್ಕ ಹೇಳಿದ್ದು ನಿಜ. ಈಗ ಬುದ್ಧಿ ಬಂದಿದೆ. ನೀವೆಲ್ಲ ಹೇಳ್ತಿರ್ತೀರಲ್ಲ, ಮದ್ವೆ ಅನ್ನೋದೇ ಹೆಂಗಸ್ರನ್ನ ಕಟ್ಟಿಹಾಕದು ಅಂತ, ನಂಗೂ ಹೌದನ್ಸಿದೆ. ಅದ್ರ ಸುದ್ದಿ ಬ್ಯಾಡ ಅಂತ ಕೈಬಿಟ್ಟು ನನ್ನ ನಾನೇ ಪ್ರೀತಿ ಮಾಡದು ಕಲ್ತಿದಿನಿ.

ಒಳಗೊಳ್ಗೆ ಏನ್ನೋ ಕಳಕಂಡಿದಿವಿ ಅನ್ನೋದು ಕಾಡ್ತ ಇರುತ್ತೆ. ಏನ್ನ ಕಳಕೊಂಡಿದಿವಿ? ಕಳ್ಕಂಡಿದ್ದು ಕುಟುಂಬನಾ? ಹುಟ್ಟಿದ ಲಿಂಗದ ಗುರ‍್ತುಗಳನ್ನಾ? ಗೌರವ, ಅಂತಸ್ತನ್ನಾ? ಗೊತ್ತಿಲ್ಲ. ಇದ್ದಿದ್ದನ್ನ ಕತ್ತರ‍್ಸೋದು ಸುಲಭ. ಇಲ್ದಿದ್ನ ಕೂಡ್ಸಕ್ಕಾಗತ್ತ? ಗರ್ಭಕೋಶ ಅಂಟುಸ್ಕಳಕಾಗ್ದೆ ಒದ್ದಾಡ್ತಿವಿ. ಪಿಲ್ಸ್ ನುಂಗಿನುಂಗಿ ಮೊಲೆ ಬರುಸ್ಕಳಕ್ಕೆ ನೋಡ್ತಿವಿ. ನೀವೆಲ್ಲ ಮಕ್ಳು ಬ್ಯಾಡಂತ ಪಿಲ್ಸ್ ದಿನ್ಕೆ ಒಂದು ನುಂಗಿದ್ರೆ ನಾವು ಆರೇಳು ನುಂಗ್ತಿವಿ. ಊಂ ಕನಕ್ಕ, ಪಿಲ್ಸ್ ಕಂಪ್ನಿ ಉದ್ದಾರಾಗಿರದೆ ನಮ್ಮೋರಿಂದ ತಿಳ್ಕ. ಮೊಲೆ ಬಂದಂಗಾಗುತ್ತೆ, ಆದ್ರೆ ಅದು ಅದಲ್ಲ, ಬರೀ ಕೊಬ್ಬು. ಕೊನ್ಗೆ ಮೈ ಹೇರ‍್ಕಂಡು, ಡಯಾಬಿಟೀಸು ಅದೂಇದೂ ಶುರುವಾಗುತ್ತೆ.

ಮುಟ್ಟು ಅಂದ್ರೆ ನೀವ್ ಬೇಸ್ರ ಮಾಡ್ಕೊತೀರ. ಅಯ್ಯೊ, ತಿಂಗ್‌ತಿಂಗ್ಳ ಕೂತು ಬೇಸ್ರ ಆಗೋಯ್ತು, ಹೊಟ್ಟೆ ನೋವು, ಯಾವಾಗ್ ನಿಲ್ಲುತ್ತೊ ಅಂತಿರ. ಆದ್ರೆ ಅದು ನಮ್ ಕನಸು. ಇದ್ಕಿದ್ದಂಗೆ ಏನೋ ಕನಸು ಬಿದ್ದಂಗಾಗುತ್ತೆ. ಇದ್ಕಿದ್ದಂಗೆ ಹೊಟ್ಟೆನೋವು ಬಂದು ಈಗ ಮುಟ್ಟಾಗೇ ಬಿಡ್ತಿನೇನೋ ಅಂತ ಆಸೆ ಆಗುತ್ತೆ. ಮಾತಾ ದೇವಿ ಏನಾದ್ರು ಗರ್ಭಚೀಲ ಇಟ್ಬಿಟ್ಳ ವಳ್ಗೆ ಅಂತ ಆಸೆ ಆಗುತ್ತೆ. ಕಾಲಿನ ಮಧ್ಯ ಉಚ್ಚೆ ಹರಿದ್ರು ಮುಟ್ಟಿನ್ ರಕ್ತ ಇರ‍್ಬೋದ ಅಂತ ಮುಟ್ಟಿ ನೋಡ್ಕಳೊ ಹಂಗೆ ಆಗುತ್ತೆ. ನಿಮ್ಗೆ ನಗು ಬರ‍್ಬೋದು. ಆದ್ರೆ ಹೆಂಗೆ ನಿರ್ವಾಣ ಆದ್ಮೇಲೆ ಮಾತಾ ಆಶೀರ್ವಾದದಿಂದ ಹುಡ್ಗ ಇದ್ದೋನು ಹೆಂಗ್ಸಾದ್ನೊ ಹಂಗೆ ಏನೋ ಪವಾಡ ನಡ್ದು, ಏನಾರ ಮಾಯಮೋಡಿ ಆಗಿ ಹೊಟ್ಟೆ ಒಳಗೊಂದ್ ಚೀಲ ಕೂತ್ಬಿಡುತ್ತಾ ಅಂತ ಅನಿಸ್ತಿರುತ್ತೆ. ಹಂಗೇನು ಆಗಲ್ಲ, ಗೊತ್ತು. ಆದ್ರೂ.. ಒಂದಾಸೆ, ಬದ್ಕಕ್ಕೆ ಏನಾರ ಬೇಕಲ, ಅದ್ಕೆ.

ಮಕ್ಳು ಬೇಕೂಂತ ಆಸೆ ಇಟ್ಕಂಡಿರ‍್ತೀವಲ, ಅದ್ಕೆ ನಮ್ಗೆ ಚೇಲಾಗಳ್ನ ಮಾಡ್ತಾರೆ. ನಂಗೆ ಅಂತೋರು ಇಬ್ರು ಚೇಲಾ ಇದಾರೆ. ನಾವು ಒಟ್ಗೆ ಇರ‍್ತಿವಿ, ಒಟ್ಗೆ ವಾಸ ಮಾಡ್ತಿವಿ. ನಾನೂ ದುಡಿತಿನಿ, ಅವ್ರೂ ದುಡೀತಾರೆ. ಮನೆ ಬಾಡ್ಗೆ, ಕರ್ಚು ಎಲ್ಲ ಡಿವೈಡ್ ಮಾಡ್ಕತಿವಿ. ನಾನು ನನ್ ಚೇಲಗಳ ಮನ್ಗೆ ಹೋಗಿ ಅವ್ರ ಅಪ್ಪ ಅಮ್ಮನ್ನ ಒಪ್ಸಕ್ಕೆ ಅಂತ ಪ್ರಯತ್ನ ಪಟ್ಟಿದಿನಿ. ನನ್ ಪ್ರಕಾರ ನಮ್ಮಂತೋರನ್ನ ಅವ್ರವ್ರ ಮನೆಯೋರೇ ಒಪ್ಕಂಡು ಬೆಳೆಸಿದ್ರೆ ಸಮಸ್ಯೆನೇ ಇರಲ್ಲ. ಹಂಗಾಗ್ತಿಲ್ಲ ಅನ್ನದೇ ಎಲ್ಲ ಪ್ರಾಬ್ಲಂಗೆ ಕಾರಣ. ಮನೇಲಿದ್ರೆ ಎಜುಕೇಷನ್ ಮುಂದುವರೆಸ್ಬೋದು, ಸೆಕ್ಸ್‌ವರ್ಕಿಗೆ ಬೀದಿಗಿಳಿಯೋ ಸಮಸ್ಯೆ ಇರಲ್ಲ. ನಾನಿರೋ ಸಂಘಟನೆ ಮುಖ್ಯವಾಗಿ ಕೆಲಸ ಮಾಡ್ತಿರೋದೇ ಈ ವಿಷಯದ ಬಗ್ಗೆ. ಅಂಗವಿಕಲ ಮಗೂನ ಹೇಗೆ ನೋಡ್ಕೊತೀರೋ, ಕಾಯಿಲೆ ಬಿದ್ದೋರನ್ನ ಹೇಗೆ ಆರೈಕೆ ಮಾಡ್ತಿರೋ ಹಾಗೆ ಇಂತಾ ಮಕ್ಳನ್ನೂ ನಿಂನಿಮ್ಮ ಮನ್ಲೇ ಇಟ್ಕಂಡು ಜವಾಬ್ದಾರಿ ತಗಳಿ ಅಂತ ಹೇಳ್ತಿನಿ. ಒಂದಷ್ಟು ಜನ ಕನ್ವಿನ್ಸ್ ಆಗ್ತಾರೆ. ಕೆಲವ್ರನ್ನ ಏನು ಮಾಡಿದ್ರೂ ಒಪ್ಸಕ್ಕಾಗಲ್ಲ, ಮನೆಗೆ ಬಂದ್ರೆ ಕೊಲ್ತೀವಿ, ಕತ್ರುಸ್ತೀವಿ ಅಂತಾರೆ.

ಹಿಂಗೇ ಕಣಕ್ಕ, ಆದ್ರೆ ಆ ದೇವ್ರು ಅಂಬೋ ಲೌಡಿಮಗ, ನಮ್ ಹೊಟ್ಟೆ ವಳಗೊಂದ್ ಚೀಲ ಇಡದ್ ಮರ‍್ತು ಬಾರಿ ಅನ್ಯಾಯ ಮಾಡ್ದ ಕಣಕ್ಕ. ಹೊರ‍್ಗಿನ ರೂಪ ಹೆಂಗಾರ ಇರ್ಲಿ, ಅದೊಂದ್ ಇದ್ದಿದ್ರೆ ನಮ್ ಎಲ್ಲಾ ಕಷ್ಟಗಳು ಮಟಾಮಾಯ ಆಗ್ತಿದ್ವು ಅಲ್ವ? ಏನೋ.. ಯಾವ್ದ್ರಿಂದ ಯಾವ್ದು ಅಂತ ತಿಳಿಲಾರ‍್ದ ಹಂಗೆ ನಂ ಪರಿಸ್ತಿತಿ. ಏನೇನೋ ಮನ್ಸಲ್ಲಿ ಕೊರಿತಾ ಇರುತ್ತೆ. ಅದ್ನ ಮರೆಯಕ್ಕೆ ಕುಡಿತಿವಿ. ಅಷ್ಟೇಯ.’

***

ಮಾತಾಡಿ ಆಡಿ ಸುಸ್ತಾದಳೇನೋ ಎನ್ನುವಂತೆ ನೂರಿ ಎದ್ದು ಆಚೆ ಹೋದಳು. ಒಂದಾದಮೇಲೊಂದು ಚೊಂಬು ನೀರನ್ನು ಮುಖದ ಮೇಲೆ ಸುರಿದುಕೊಳ್ಳುತ್ತಲೇ ಇದ್ದಳು. ಮೊಬೈಲು ತೆಗೆದು ಒಂದು ಹಾಡು ಹಚ್ಚಿದಳು, ‘ನಾನೇ ಭಾಗ್ಯವತಿ, ಇನ್ನು ನಾನೇ ಪುಣ್ಯವತಿ..’ ತೇಲಿಬಂತು. 

‘ಹೌದು ನೂರಿ, ನೀನು ಭಾಗ್ಯವತಿ. ನಿನ್ನಿಷ್ಟದ ಬದುಕನ್ನು ಆಯ್ಕೆ ಮಾಡಿಕೊಂಡಿದ್ದೀ. ಮನೆ ಇಲ್ಲದೆ ಎಷ್ಟು ಜನ ನಿಮ್ಮವರು ಒದ್ದಾಡಲ್ವ? ಹಂಗಿರ‍್ತ ಕಡಲ ದಂಡೆಯಲ್ಲಿ ಪದ್ಯ ಬರಿತಾ, ಹಾಡು ಕೇಳ್ತಾ ನಿನ್ನಷ್ಟಕ್ಕೆ ನೀನಿರಬಹುದಾದಂಥ ಒಂದು ಸೂರನ್ನ ನಿನ್ನ ಕಷ್ಟ, ಪರಿಶ್ರಮದಿಂದ ಗಳಿಸಿದ್ದೀ. ನಂಗಂತೂ ನಿನ್ನ ನೋಡಿ ಖುಶಿಯಾಗುತ್ತೆ ಕಣೆ’ ಎಂದೆ. ಆದರೆ ಅದನ್ನು ಕೊಡಿಸಲು ಅವಳ ಸಂಘಟನೆಯವರು ಎದುರಿಸಿದ ವಿರೋಧವೇನು ಕಡಿಮೆಯಲ್ಲವೆಂದು ಅವಳು ವಿವರಿಸಿದ ಮೇಲೇ ಗೊತ್ತಾಗಿದ್ದು.

***

ಬಾಳ ಜನ ಬೇಗ ಸ್ಕೂಲು ಬಿಡ್ತಾರೆ. ಎಲ್ಲ ರೇಗ್ಸೋದ್ರಿಂದ ಕಾಲೇಜು ಬಿಡ್ತಾರೆ. ಯಾರೂ ಕೆಲ್ಸಕ್ ಕರೆಯಲ್ಲ. ಉದ್ಯೋಗ ನಂ ಓದಿಗ್ ಸಿಕ್ಕಲ್ಲ. ಭಿಕ್ಷೆ ಎತ್ತಕ್ ಹೋದ್ರೆ ಕೈಕಾಲ್ ಗಟ್ಟಿ ಇದೆ, ಕೆಲ್ಸ ಮಾಡ್ರಿ ಅಂತಾರೆ ಹೊರ‍್ತು ಯಾರೂ ಕೆಲ್ಸ ಕೊಡಲ್ಲ. ಹೊಟ್ಟೆಪಾಡ್ಗೆ ಮನೆ ಬಿಟ್ ಬಂದ್ಮೇಲೆ ಏನ್ಮಾಡದು? ಅನಿವಾರ್ಯವಾಗಿ ಸೆಕ್ಸ್‌ವರ್ಕ್‌ಗೆ ಹೋಗ್ಬೇಕಾಗುತ್ತೆ. 

ಏನ್ ವಿಚಿತ್ರ ಅಂತಂದ್ರೆ ಸಮಾಜ ‘ನೀ ಗಂಡಲ್ಲ, ಹೆಣ್ಣಂತೂ ಅಲ್ವೇ ಅಲ್ಲ’ ಅನ್ನುತ್ತೆ. ಆದ್ರೆ ಮಲಿಕ್ಕ ಬಾ ಅಂತ ಕರೆಯುತ್ತೆ! ಹಸಿವು ಎಂತಾದ್ದು ಅಂದ್ರೆ ಎಷ್ಟೋ ಸಲ ಒಂದ್ ಬಿರ್ಯಾನಿ ಪ್ಯಾಕೆಟ್ಟಿಗೆ ಸೆಕ್ಸ್‌ವರ್ಕ್ ಮಾಡ್ಬೇಕಾಗುತ್ತೆ. ಎಂತೆಂತೋರ ಜೊತೆನೋ ಮಲಿಕ್ಕ ಬೇಕಾಗುತ್ತೆ. ಕಮ್ಮಿ ದುಡ್ಡಿರೋರು ಸಿನಿಮಾ ಟಾಕೀಸ್ಗೆ ಹೋಗಣ ಅಂತರೆ. ಅಲ್ಲಿ ಹಿಂದಿನ್ ಸೀಟ್ನ ಮೂಲೆ ಹಿಡ್ದು ಕೂತು ಸಿನಿಮಾ ನೋಡ್ತ ಸೆಕ್ಸ್‌ವರ್ಕ್ ಮಾಡದು. ಲಾಡ್ಜ್‌ಗೆ ಹೋದ್ರೆ ಸ್ವಲ್ಪ ಹೆಚ್ಚು ದುಡ್ಡು ಬರುತ್ತೆ ನಿಜ. ಆದ್ರೆ ಅಲ್ಲಿ ಬಾರೀ ಹಿಂಸೆ. ಒಳ್ಳೇರು ನಮ್ಮತ್ರ ಬರದು ಕಮ್ಮಿ. ಇಲ್ಲದ್ ತೀಟೆ ಇಟ್ಕಂಡೋರು, ಕ್ರೂರಿಗಳು, ಕಾಯ್ಲೆ ಹತ್ತುಸ್ಕಂಡೋರು, ಏನೂ ಗೊತ್ತಿಲ್ದೆ ಕೆಟ್ ಕುತೂಹಲ ಇರೋರು, ಕಾಸಿಲ್ದೋರೇ ನಮ್ಮತ್ರ ಬರೋದು. ಆದ್ರೆ ನಮ್ಗೆ ಬಾಡಿಗೆಗೆ, ಕೊಳ್ಳಲಿಕ್ಕೆ ಮನೆ ಸಿಗದೆ ಇರಕ್ಕೆ ಸೆಕ್ಸ್‌ವರ್ಕೇ ಮುಖ್ಯ ಕಾರಣ. ಸಿಕ್ಕಾಪಟ್ಟೆ ಬಾಡ್ಗೆ ಹೇಳಕ್ಕೂ ಇದೇ ಕಾರಣ. ಗಿರಾಕಿಗಳು, ತಲೆ ಹಿಡಿಯೋರು, ಪೊಲೀಸ್ರು ಎಲ್ಲ ಮನೆ ಹತ್ರ ಬಂದ್ ಗಲಾಟೆ ಎಬ್ಸದಕ್ಕೆ ಯಾರೂ ನಮ್ಮುನ್ನ ಇರಕ್ ಬಿಡಲ್ಲ. ಹೆಚ್ಚು ಬಾಡ್ಗೆ ಕೊಡ್ತಿವಿ ಅಂದ್ರೂ ಕೊಡಲ್ಲ. ವೋಟ್ ಕೇಳಕ್ ಬರ‍್ತಿರಿ ಈಗ ಸಹಾಯ ಮಾಡ್ರಿ ಅಂತ ಕಾರ್ಪೊರೇಟ್ರ ಹತ್ರ ಹೋಗ್ತೀವಿ. ಅವ್ರು ಸ್ಲಮ್ಮೋ ಗಿಮ್ಮೋ ತೋರುಸ್ತರೆ. ಇಲ್ಲಾ ಯಾವ್ದಾದ್ರೂ ಅಡ್ಡಾದೊಳ್ಗೆ ಬಿಡ್ತಾರೆ. ಅತ್ವಾ ಯಾವ್ದಾದ್ರು ದೆವ್ವದ ಮನೆ, ಭೂತದ ಮನೆ, ವಾಸ್ತು ಸರಿಯಿಲ್ದಿದ್ ಮನೆ ಇರುತ್ತಲ, ಅಲ್ಲಿ ಬಿಡ್ತರೆ. ಅಂತೂ ಕೊನೆಗೆ ಗೂಂಡಾಗಳೇ ಗತಿ ಅನ್ನಂಗಾಗುತ್ತೆ.

ಎಲ್ಲಿ ಹೋದ್ರು ಈಗಾಗ್ಲೆ ಅಲ್ಲಿರೋ ನಮ್ಮೋರು, ‘ಇದು ನಮ್ಮ ಏರಿಯಾ, ಬರಬೇಡಿ’ ಅಂತ ಜಗಳ ತೆಗೀತಾರೆ. ಆ ಜಗಳಕ್ಕೆ ರೋಸಿ ಸುತ್ತಮುತ್ಲ ಮನೆಯೋರು ನಿಮ್ಮಂಥೋರು ನಂ ಪಕ್ಕ ಇರದೇ ಬೇಡ ಅಂತಾರೆ. ಎಷ್ಟೋ ಸಲ ಗಲಾಟೆನೇ ಆಗೋಗಿದೆ. ಸುತ್ತಮುತ್ತ ಇದ್ದೋರು ಹೊಡ್ದುಬಡ್ದು ಮನೇಲಿದ್ದಿದ್ನ ಹೊರಗೆ ಬಿಸಾಕಿದ್ದೂ ಇದೆ. ಕೆಲವ್ರಂತೂ ನಾವಂದ್ರೆ ಒಂತರ ಹುಳ ನೋಡ್ತಾರಲ್ಲ ಅಸಯ್ಯವಾಗಿ, ಹಂಗೆ ನೋಡ್ತಾರಕ್ಕ. ಕಣ್ಣಲ್ಲಿ, ಮಾತಲ್ಲಿ ಅಷ್ಟು ತಿರಸ್ಕಾರ. ಒಂದ್ಸಲ ಅಂತೂ ನನ್ ಕೈಕಾಲು ಕಟ್ಟಿ ಹೊರಗೆ ಎಳ್ದು ಬೀದೀಲಿ ಬಿಸಾಕಿದ್ರು. ಸುತ್ತಮುತ್ತ ಎಲ್ಲ ನೋಡ್ತ ಓಡಾಡ್ತಾರೆ ಹೊರ‍್ತು ಯಾರೂ ಬಂದು ನನ್ ಮುಟ್ಲೂ ಇಲ್ಲ. ಏನಾಯ್ತೂಂತ ಕೇಳ್ಲೂ ಇಲ್ಲ. ನಾವು ಹೆಣ್ಣುಹೆಣ್ಣು ಅಂದ್ಕತೀವಿ. ಆದ್ರೆ ಆ ಹೆಂಗುಸ್ರೋ ನಮ್ಮುನ್ ಮುಟ್ಟದ್ಕೂ ರೆಡಿ ಇಲ್ಲ. ಅಂಗ್ಡಿ ಕಟ್ಟೆ ಮೇಲೆ ಮಲಗಿದ್ರೆ ಯಾರೋ ಚಕ್ಕಾ ಅಂತ ಕೋಲಲ್ಲಿ ತಿವ್ದು ಮಾತಾಡುಸ್ತಾರೇ ಹೊರ‍್ತ ಅಜ್ಜಿಗಳೂ ಸೈತ ಮುಟ್ಟಲ್ಲ. ಯಾಕಿಂತ ಅಸಯ್ಯವೋ ನಮ್ಮೇಲೆ? ಇಂತಾ ಸೃಷ್ಟಿ ಆಗಿದ್ದು ಯಾರಿಂದ? ನಾವೇ ಮಾಡ್ಕಂಡಿದ್ದ?

ನೋಡಕ್ಕೆ ಹಿಂಗ್ ದೈತ್ಯರಂಗೆ ಕಾಣ್ತಿವಿ. ದನಿ ಗಡಸು. ಆದ್ರೆ ನಮ್ಮಷ್ಟು ಅಳ್ಳೆದೆಯೋರು ಯಾರಿಲ್ಲ ಅಕ್ಕ. ಹೆದ್ರಿಹೆದ್ರಿ ಅರ್ಧ ಸತ್ತಂಗೇ ಇರ‍್ತಿವಿ. ಧೈರ್ಯ ಬರದು ಕುಡುದ್ರೆ ಮಾತ್ರ. ಅವ್ರು ಬಂದು ಹೊಡೀತಾ ಇರ‍್ತಾರಲ್ಲ, ಆಗ ಸುಮ್ನೆ ಹೊಡುಸ್ಕತ ನಿಂತಿರ‍್ತಿವಿ. ಹೆದರ‍್ಕೆ ಮರೀಲಿಕ್ಕೆ ದೊಡ್ಡ ಗಂಟ್ಲಲ್ಲಿ ಕೂಗ್ತಿವಿ, ಕುಡಿತಿವಿ. ಹಳಳೇ ಚಿತ್ರಗೀತೆ, ಭಾವಗೀತೆನ ಗಟ್ ಹೊಡ್ದು ಹಾಡ್ತೀವಿ. ಹಿಂದಿ ತಮಿಳು ತೆಲುಗು ಕನ್ನಡ ಎಲ್ಲಾ ಭಾಷೆ ಹಾಡ್ನೂ ಹಾಡ್ತೀವಿ. ಆದ್ರೆ ಯಾವಾಗ್ಲು ಹೆದ್ರಿಕೆ. 

ಸಂಭ್ರಮನೂ ಇಲ್ದೆ ಇಲ್ಲ. ವರ್ಷಕ್ಕೊಂದ್ಸಲ ವಿಳಿಪುರಂ ಅಂತೊಂದು ಊರಿದೆ ತಮಿಳ್ನಾಡಲ್ಲಿ. ಅಲ್ಲಿ ಚಿತ್ರೈ ಮಾಸ್ದಲ್ಲಿ ಅಂದ್ರೆ ಬೇಸ್ಗೆನಲ್ಲಿ ಹದಿನೈದ್ ದಿನ ನಮ್ಮೋರ ಉತ್ಸವ ನಡೀತ್ತೆ. ಅಲ್ಲಿಗೆ ಹೋಗಕ್ಕೆ ಕಾಯ್ತಿರ‍್ತೀವಿ. ಮಾಭಾರತದಲ್ಲಿ ನಾಗದೇವ್ತೆ ಉಲೂಪಿನ ಅರ್ಜುನ ಮದ್ವೆ ಆಗ್ತಾನಲ, ಅವರಿಗೆ ಅರಾವಣ ಅಂತ ಮಗ ಹುಟ್ತಾನೆ. ಅರಾವಣನು ಯುದ್ಧದಲ್ಲಿ ಪಾಂಡವ್ರಿಗೆ ಗೆಲುವು ಸಿಗ್ಲಿ ಅಂತ ತನ್ನ ತಲೆ ತಾನೆ ಕತ್ರುಸ್ಕಂಡ್ ಕಾಳಿಗೆ ಬಲಿ ಕೊಟ್ಕಳಕೆ ಹೋಗ್ತಾನೆ. ಆಗ ಕೃಷ್ಣ ಪರಮಾತುಮ ‘ಮೆಚ್ದೆ ನಿನ್ ಭಕ್ತಿಗೆ, ಏನ್ ವರ ಬೇಕು’ ಅನ್ನುತ್ಲೆ, ನಂಗೆ ಮೂರು ವರ ಕೊಡು: ವೀರನ ಕೈಲಿ ಸಾಯ್ಬೇಕು, ಕಡ್ದ ನನ್ನ ತಲೆ ಮಾಭಾರತ ಯುದ್ಧನ ಪೂರ್ತಿ ನೋಡ್ಬೇಕು, ಸಾಯದ್ರಲ್ಲಿ ಮದ್ವೆ ಆಗ್ಬೇಕು ಅಂತನೆ. ಇನ್ನೇನ್ ಈಗ ಸಾಯೊ ಗಂಡ್ಸನ್ನ ಯಾವ್ ಹೆಂಗ್ಸು ಮದ್ವೆ ಆಯ್ತಳೆ? ಯಾರೂ ಸಿಗಲ್ಲ. ಕೊನೆಗೆ ಕೃಷ್ಣನೇ ಮೋಹಿನಿ ಆಗಿ ಅವ್ಳುನ್ನ ಮದ್ವೆ ಆಯ್ತನೆ. 

ಮೋಹಿನಿ ಅಂದ್ರೆ ಯಾರಂದ್ಕಂಡೆ? ನಾವೇ ಕನಕ್ಕ.

ಅರಾವಣ ಕೂಡ್ಲೆ ಸಾಯದ್ರಿಂದ ಮೋಹಿನಿ ಮುಂಡೆ ಆಗ್ಬೇಕಾಗುತ್ತೆ. ಜಾತ್ರೆ ದಿವ್ಸ ಅಲ್ಲಿ ನಾವು ಮೋಹಿನೀರು ಅರಾವಣನ್ನ ಮದ್ವೆ ಆಗ್ತೀವಿ. ಹದ್ನೆಂಟು ದಿನ ಯುದ್ಧದ ಉತ್ಸವ ಆದ್ಮೇಲೆ ವಿಧವೆ ಆಗೋ ಶಾಸ್ತ್ರ. ಬಳೆ ಒಡ್ಕಂಡು, ಎದೆ ಬಡ್ಕಂಡ್ ಅತ್ತು, ಕುಂಕ್ಮ ಅಳ್ಸಿ, ಎಲ್ಲ ಮಾಡ್ತಾರೆ. ಸೇಮು, ಗಂಡ ಸತ್ರೆ ಮಾಡಲ್ವ, ಅಂಗೇ. ಗಂಡ್ನು ಇಲ್ಲ, ಸತ್ತೂ ಇಲ್ಲ, ಸುಮ್‌ಸುಮ್ನೆ ನಾಟ್ಕ ಅಂತ ಎಲ್ರಿಗು ಗೊತ್ತು, ಆದ್ರೂ ವರ್ಷೊರ್ಷನೂ ನಿಜಾನ್ನೋವಷ್ಟು ದುಕ್ಕದಿಂದ, ಬಲೇ ಚನಾಗಿ ಮಾಡ್ತಿವಿ, ಎಂಜಾಯ್ ಮಾಡ್ತಿವಿ. ಇನ್ನು ಆರು ತಿಂಗ್ಳಿರುವಾಗಲೆ ವಿಗ್ಗು, ಇನ್ನೂ ಮೂರ‍್ತಿಂಗಳಿರುವಾಗ್ಲೆ ಸೀರೆ ತಗಂಡು ಕಾಯ್ತ, ಆ ದಿನ ನಮ್ಮೋರೆಲ್ಲ ಓಡೋಡಿ ಬರ‍್ತಾರೆ. ಕುಡದು ಕುಣ್ದು ಸೀರೆ ಉಟ್ಕಂಡು ವಿಗ್ ಹಾಕ್ಕಂಡು ಕೊನೇಗ್ ಅಳ್ತ ಮನೆಗೆ ಹೋಗ್ತಾರೆ. ಬಲವಂತಕ್ಕೆ ಮದುವೆಯಾಗಿರೋ ನಮ್ಮೋರು ಕೆಲವ್ರು ಅಲ್ಲಿಗೆ ಹರಕೆ ನೆಪ ಕಟ್ಕಂಡು ಬತ್ತಾರೆ. ಅವ್ರು ನಮ್ಮಂಗೆ ಹೊರ‍್ಗೆ ಬಂದಿರಲ್ಲ, ಒತ್ತಾಯದಲ್ಲಿ ಮದ್ವೆ ಮಾಡಿರ‍್ತಾರೆ. ತಂ ಮಗ ಚಕ್ಕ ಆದ್ರು ಪಂಚೆ ಉಟ್ಕಂಡ್ ಗಂಡ್ಸಂಗೇ ಇರ‍್ಬೇಕು ಹೊರ‍್ತ ಸೀರೆ ಉಡ್ಬಾರ್ದು ಅನ್ನುತ್ತೆ ಸಮಾಜ. ಏನ್ಮಾಡನ..’

***

ಮಾತಾಡುತ್ತ ಆಡುತ್ತ ತಲೆ ಮೇಲಿನ ಗಂಟು ಬಿಚ್ಚಿದಳು. ಸುರುಳಿ ಸುತ್ತಿದ್ದ ಕೂದಲು ಅಲೆಅಲೆಯಾಗಿ ನಿಧಾನ ಜಾರುತ್ತ ಕೆಳಗಿಳಿಯುತ್ತ ಕಪ್ಪು ಕಡಲು ಅವಳ ಬೆನ್ನ ಮೇಲೆ ಹರಡಿಕೊಂಡಿತು. ದಡಕ್ಕೆ ಅಲೆಗಳ ಅಪ್ಪಳಿಸುತ್ತ ಭೋರಿಡತೊಡಗಿತು..

‘ನೋಡು, ಇದು ತಂತಾನೇ ಬೆಳದಿರೋ ತಲೆ ಕೂದ್ಲು. ಹದ್ನೈದು ವರ್ಷಕ್ಕೆ ಎಲ್ಲ ಕಣ್ಣಾಕೋವಷ್ಟು ಉದ್ದಾಗಿದೆ. ಆದ್ರೆ ಈಗ ಹಣೆ ದೊಡ್ಡ ಆಗಕ್ ಶುರುವಾಗಿದೆ. ನಮ್ಮೋರಲ್ಲಿ ತುಂಬ ಜನ್ಕೆ ವಯಸ್ಸು ನಲವತ್ ದಾಟ್ತಿದ್ದಂಗೇ ಬಾಲ್ಡ್ ಆಗಕ್ ಶುರುವಾಗುತ್ತೆ, ಜಡೆ ಹಾಕಕ್ಕಾಗಲ್ಲ, ವಿಗ್ ಶುರುವಾಗುತ್ತೆ. ಮತ್ತಷ್ಟು ಕೃತಕ ಹೆಣ್ಣುಗಳಂತೆ ಕಾಣ್ತಿವಿ. ಜನ ನಂ ವೇಷ, ಭಾಷೆ ಎಲ್ಲಾ ನಾಟ್ಕ ಅಂತ್ಲೆ ತಿಳ್ಕತಾರೆ. ‘ಇವ್ರುದ್ದು ಎಲ್ಲ ಅತಿ’ ಅಂತ ಸಿಟ್ಟಾಗ್ತಾರೆ. ಒಂದ್ವಿಷ್ಯ ಒಪ್ಕಬೇಕು, ನಮ್ದು ಸ್ವಲ್ಪ ಅತಿನೇ. ಏನೇನೋ ಅತಿಗಳ ವಳ್ಗೇ ನಾವು ಬದುಕಿರದು. ಅದುಕ್ಕೋ ಏನೋ ಸೆಕ್ಸ್ ಅಂದ್ರೆ ನಮ್ಮೋರ‍್ಗೆ ಬಾಳಾ ಪ್ರೀತಿ. ಬಾಯ್ಬಿಟ್ರೆ ಅವೇ ಮಾತು, ಅವೇ ಪದ, ಅವೇ ಜೋಕು. ನಾನು ಆಗಾಗ ನಂ ಮೀಟಿಂಗಲ್ಲಿ ಹೇಳ್ತಿರ‍್ತೀನಿ, ಸೆಕ್ಸ್ ಬಗ್ಗೆನೇ ಮಾತಾಡದ್ನ ಕಮ್ಮಿ ಮಾಡಣ; ಬದುಕು ಅಂದ್ರೆ ಅನ್ನ ಇದ್ದಂಗೆ. ಸೆಕ್ಸ್ ಅಂದ್ರೆ ಉಪ್ಪಿನಕಾಯಿ ಇದ್ದಂಗೆ. ಅನ್ನಕ್ಕಿಂತ ಉಪ್ಪಿನಕಾಯಿ ಹೆಚ್ಚು ತಿನ್ನಕ್ಕಾಗಲ್ಲ, ತಿನ್ಲೂಬಾರ್ದು ಅಂತ. ನಾವು ಮಾತೆತ್ತಿದ್ರೆ ಸೆಕ್ಸ್ ಅನ್ನೋದ್ ನೋಡಿ ಉಳದೋರು ನಮ್ಗೆ ಬೇಕಿರೋದು, ಗೊತ್ತಿರೋದು ಅದೊಂದೇ ಅಂತ ತಿಳ್ಕಂಡವ್ರೆ. ನಮ್ಗೆ ತೊಂದ್ರೆ ಇರೋದು, ಗೊಂದ್ಲ ಇರೋದು ಸೆಕ್ಸ್ ಬಗ್ಗೆನೇ ಅಲ್ವ? ಅದ್ಕೆ ಆ ವಿಷ್ಯನೆ ಎತ್ತೆತ್ತಿ ಮಾತಾಡ್ತಿವಿ. ಅಲ್ಲಿ ಸದಾ ಹಿಂಸೆ ಇರದ್ರಿಂದ ನಾವೂ ವಯಲೆಂಟ್ ಆಗಿರ‍್ತೀವಿ. 

ಗೊತ್ತಿಲ್ಲ, ಹಿಂಗೇ ಎಷ್ಟ್ ದಿನನೋ. ಇನ್ನೊಂದ್ ಜಲ್ಮ ಅಂತೇನಾರಾ ಇದ್ರೆ ಹಿಂಗ್ ಅರ್ಧಬರ್ಧ ಆಗಿ ಮಾತ್ರ ಹುಟ್ಟುಸ್ಬೇಡಪ್ಪ ಅಂತ ದೇವ್ರಲ್ಲಿ ಕೇಳ್ಕೊತೀನಿ. ಎಷ್ಟಂದ್ರು ನಾವ್ ಪೂರ್ಣ ಅಲ್ಲ, ಅರ್ಧ ಸರ್ಕಲ್ಲೆ ಅಕ್ಕಾ. ಇಂತಾ ಬದುಕು ಯಾರ‍್ಗೂ ಬ್ಯಾಡ..’

ಬರಬರುತ್ತ ಅವಳ ದಪ್ಪ ದನಿ ಗದ್ಗದವಾಯಿತು. ಏನೆಂದು ಸಮಾಧಾನಿಸಲಿ ಅವಳನ್ನು? ಉಸಿರು ಕಟ್ಟಿದಂತಾಗಿ ಮುಖಕ್ಕೆ ನೀರು ಹಾಕಿಕೊಳ್ಳಲು ಸಿಂಕಿನ ಬಳಿ ನಡೆದೆ. ಕನ್ನಡಿಯಲ್ಲಿ ನೋಡುತ್ತೇನೆ, ನನ್ನ ತುಟಿ ಮೇಲೂ ತೆಳುವಾದ ಮೀಸೆ! ದವಡೆಯ ಚೌಕಾಕಾರ, ರಟ್ಟೆಯ ಮಾಂಸದಲ್ಲೆಲ್ಲೊ ಒಪ್ಪಿತ ಲಿಂಗದ್ದಲ್ಲದ ಆಕಾರ!! ನೂರಿ ಹೇಳಿದ್ದು ನನ್ನ ಮಟ್ಟಿಗೂ ನಿಜವೇ?! ನಾನೂ ಅರ್ಧ ಸರ್ಕಲ್ಲೆ ..

‘ನೂರಿ, ಪರಿಪೂರ್ಣ ಗಂಡ್ಸು ಹೆಂಗ್ಸು ಅಂತ ಯಾರಿದಾರೆ ಹೇಳು? ಪಕ್ಕಾ ಹೆಂಗ್ಸು ಅಂದ್ಕಂಡಿರೋ ಹೆಣ್ಣನಲ್ಲು ದ್ವನಿ, ಮಾತು, ನಡಿಗೆ, ಕೂದಲು, ಕೈಕಾಲ್ನ ಆಕಾರ, ಗಡಸುತನ - ಹಿಂಗ್ ಯಾವ್ದೋ ಒಂದರಲ್ಲಿ ಗಂಡಸ್ತನ ಅಂತಾರಲ್ಲ ಅದು ಇದ್ದೇ ಇರುತ್ತೆ. ಎಲ್ಲಾ ಹೆಂಗಸರೂ ಹೆರಲ್ಲ ತಿಳ್ಕ. ಕೆಲವ್ರಿಗೆ ಗರ್ಭಕೋಶನೂ ಇರಲ್ಲ, ಆದ್ರೂ ಅವ್ರು ಹೆಂಗಸರೇ. ಹಂಗೇ ಗಂಡ್ಸರಲ್ಲು. ಮಕ್ಳನ್ನು ತಂ ಬೀಜಕ್ಕೆ ಹುಟ್ಸಕ್ಕಾಗ್ದಿರೋ ಎಷ್ಟು ಗಂಡಸ್ರು ಇಲ್ಲ? ಹೆಣ್ಣು, ಗಂಡು ಅನ್ನೋ ವ್ಯಾಖ್ಯಾನ ಅವರ ದೇಹ ರಚನೆ, ಕ್ರಿಯೆಯಿಂದ ಮಾತ್ರ ಅಳೆಯೋದಲ್ಲ ಅಂತ ನಿಮ್ಮಿಂದಲೇ ನಮ್ಗೆ ಅರ್ಥವಾಗಿದ್ದು. ಜೆಂಡರ್ ಬಗ್ಗೆ ಹೊಸ್ತನ್ನ ನಿಮ್ಮ ವಿಚಾರಗಳಿಂದ್ಲೇ ನಾವು ಕಲೀತಿರೋದು. ಅಪೂರ್ಣ, ಅರ್ಧ ಸರ್ಕಲ್ಲು ಅಂತೆಲ್ಲ ಇಲ್ಲ ಅಂತ ನೀವೇ ನಮ್ಗೆ ಹೇಳಿಕೊಟ್ಟಿರೋದು. ಪೂರ್ಣ ಅನ್ನೋದೊಂದು ಬಿಂದು ಕಣೆ. ಅದಕ್ಕೆ ಅರ್ಧ ಗಿರ್ಧ ಇಲ್ಲ, ಅಲ್ವಾ?’

ಒಂದು ನಿಟ್ಟುಸಿರಿನೊಂದಿಗೆ ನೂರಿ ಮುಂದುವರೆದಳು. ‘ನೀನೇಳದೂ ಸರಿನೇ. ಪ್ರಕೃತಿ ನೋಡೇ ನಾವು ಸಮಾಧಾನ ಮಾಡ್ಕಳದು. ಅಲ್ಲೂ ಹೂಬಿಡದ ಬಳ್ಳಿ, ಹಣ್ಣು ಬಿಡದ ಮರ ಇಲ್ವೆ? ಅದೂ ಸೃಷ್ಟೀಲಿ ಸಹಜನೇ ಅಲ್ವೆ? ಹಂಗೇ ನಾವೂ ಅಂತ ಸಮಾಧಾನ ಮಾಡ್ಕತೀವಿ. ಏನೋ ಮಾತಾಡ್ತ ಆಡ್ತ ನಿನ್ನೆದ್ರು ದುಕ್ಕ ಬಂದು ಹಂಗಂದೆ. ಮಕ್ಳಿಲ್ಲದ ಗಂಡಎಂಡ್ರು ಮಾಡಂಗೆ, ನಾನೀಗ ಒಂದು ಹುಡುಗಿನ ಅಡಾಪ್ಟ್ ಮಾಡ್ಕಂಡಿದೀನಿ. ಅವುಳ್ಗೆ ತಾಯ್ತಂದೆ ಇಲ್ಲ. ಮನ್ಲೇ ಇದ್ಲು. ನಮ್ಮವ್ವ ನೋಡ್ಕತಿತ್ತು. ಈಗ ೧೨ ವರ್ಷ ಆದ್ಮೇಲೆ ಬೋರ್ಡಿಂಗ್ ಸ್ಕೂಲ್ಗೆ ಹಾಕಿದೀನಿ. ರಜೇಲಿ ಇಲ್ಗೆ ಕರ‍್ಕಂಡ್ ಬತ್ತಿನಿ. ಆ ಉಡ್ಗಿ ಬಂದ್ಮೇಲೆ ನಮ್ಮವ್ನು ಬಲು ಕುಶಿಯಾಗಿದಾಳೆ. ಅದ್ಕೇನು ಬಟ್ಟೆ, ಬಳೆ, ಬಂಗಾರ ಅಂತ ಒದ್ದಾಡ್ತ ಇರ್ತಾಳೆ.

ಈ ಕಡೆ ನಾನು ಸಂಸ್ಥೆಯೋರು ಕೊಡಿಸಿದ ಕೆಲಸಕ್ಕೆ ಹೋಗ್ತ, ಸಂಘಟನೆ ಮಾಡ್ತ, ಜೊತೆಗೆ ನಾಟ್ಕ ಪಾಟ್ಕ ಅಂತ ಶುರು ಹಚ್ಕಂಡಿದಿನಿ. ನನ್ನ ಕತೆನೇ ಬರ‍್ಕಂಡೆ. ಅದ್ರಲ್ಲೇನ್ ಇತ್ತೋ, ಕಾಣೆ. ಎಲ್ರಿಗು ಬಾರಿ ಇಷ್ಟಾಗೋಯ್ತು. ನಾಟ್ಕ ಮಾಡಿದ್ರು, ಸಿನ್ಮ ಮಾಡಿದ್ರು. ನಾಟ್ಕದಲ್ಲಿ ನನ್ ಪಾರ್ಟು ನಾನೆ ಮಾಡ್ತಿನಿ. ಒಂದ್ ಷೋಗಿಷ್ಟು ಅಂತ ಕೊಡ್ತರೆ. ಯಾವಾಗೊ ಬರಿಬೇಕನುಸ್ದಾಗ ಪದ್ಯನೂ ಬರೀವೆ. 

ಇಂಗೇ ಕಳ್ದಿದೆ ಕಾಲ.. ಎಲ್ರಿಗು ದಿನ ಸರಿಯಲ್ವೆ, ಅಕ ಅಂಗೆ, ನಂಗೂ ಆಗ್ತ ಇದೆ ಅಷ್ಟೆಯ.. 

ನೀ ನಿನ್ ಮಗುಳ್ಗೆ ತಗಂಡಿದಿಯಲ, ಎಲ್ಮರ್ ಆನೆ ಕತೆ, ಅದು ನಮ್ ಕತೆನೆ ಅಕ್ಕಾ. ಒಂದಲ್ಲಾ ಒಂದಿನ ಮನುಶ್ರು, ಸಮಾಜ ಅಂದ್ರೆ ಎರಡೇ ಬಣ್ಣ ಅಲ್ಲ, ಹಲವು ಬಣ್ಣಗಳ ಮಳೆಬಿಲ್ಲು ಅಂತ ಅರ್ಥ ಮಾಡ್ಕಂಡಾರು ಅಂತ ನಾವೂ ಕಾಯ್ತಿದೀವಿ ಕಣಕ್ಕಾ..’

***

ಅಲ್ಲಿ ದೂರದಲ್ಲಿ, ಕಡಲ ಬಯಲಲ್ಲಿ ತೇಲುವ ಬೋಟು. ಅದರೊಳಗೆ ಮಿಣಿಗುಟ್ಟುವ ಕ್ಷೀಣ ಬೆಳಕು. ಸುತ್ತುತ್ತಾ ಸುತ್ತುತ್ತಾ ಬರುವ ದೀಪಸ್ಥಂಭದ ಕೋಲುಮಿಂಚು.. 

ಮನೆ ತುಂಬೆಲ್ಲ ಒಂದಷ್ಟು ಕಾಲ ನೀರವ ಮೌನ. ಕಡಲ ಮೇಲಿಂದ ಬೀಸುವ ಗಾಳಿ ಸದ್ದು, ದೂರದಲ್ಲಿ ಊಳಿಡುವ ಹಕ್ಕಿ, ನಗರದ ಎದೆಯೊಳಗೆ ಕತ್ತಲ ರಾತ್ರಿ ಇಳಿಯುತ್ತಿರುವಂತೆ ಕ್ಷೀಣವಾಗುತ್ತಿರುವ ನಗರ ಸದ್ದುಗಳು.

ಹೆಣ್ತನದ ಸಂಕಲೆಯಾಚೆ ದಾಟಬೇಕೆಂಬ ನನ್ನ ಕನಸು, ಹೆಣ್ಣಾಗಬೇಕೆಂಬ ಅವಳ ಬಹುವರ್ಣದ ಕನಸಿನೆದುರು ಪೇಲವವಾಗಿತ್ತು. ಕೊನೆಗೂ ಸಂಕಲೆ ಯಾವುದು, ಬಿಡುಗಡೆ ಯಾವುದು ಎಂಬ ಪ್ರಶ್ನೆ ಕಡಲ ಮೇಲಿಂದ ಬೀಸಿ ಬರತೊಡಗಿತು. 

- ಡಾ. ಎಚ್. ಎಸ್. ಅನುಪಮಾ

(2017)


No comments:

Post a Comment