Friday, 28 August 2015

ಖುರೇಶಿಗಳು: ವ್ಯಾಘ್ರ ಸೇನೆಯ ಗೋ ಭಕ್ತಿಗೆ ನಲುಗಿದವರು..






ಎಲ್ಲೋ ಹಿಂಡಿದರೆ ಇನ್ನೆಲ್ಲೋ ಸುರಿಯುತ್ತದೆ. ಎಲ್ಲೋ ಒತ್ತಿದರೆ ಇನ್ನೆಲ್ಲೋ ತೆರೆಯುತ್ತದೆ. ಬಹುಸಮುದಾಯಗಳ ವೈವಿಧ್ಯಮಯ ಭಾರತದಲ್ಲಿ ಕೈಗೊಳ್ಳುವ ಯಾವುದೇ ಕ್ರಿಯೆಯೂ ಹೀಗೇ ಕೊನೆಯಾಗುವಾಗ ಒಂದು ಸಮುದಾಯವನ್ನೇ ಗುರಿಯಾಗಿಸಿ ತೆಗೆದುಕೊಳ್ಳುವ ಕ್ರಮಗಳು ಹಲವು ದುಸ್ಸಾಧ್ಯತೆಗಳನ್ನು ಸಹಜವಾಗೇ ಹೊಂದಿರುತ್ತವೆ. ಅದರಲ್ಲೂ ಆಹಾರ, ವರ್ತನೆ, ಉಡುಪುಗಳಂತಹ ದೈನಂದಿನ ಆಗುಹೋಗುಗಳು ಕಾಯ್ದೆಕಾನೂನಿಗೊಳಪಟ್ಟರೆ ಹೆಸರಿಡಲಾಗದ ಹಲವು ಸಂಕಟಗಳು ಭುಗಿಲೇಳುತ್ತವೆ.

ನಮ್ಮಲ್ಲಿ ಆಹಾರ ಕುರಿತ ಚರ್ಚೆ, ವಿವಾದ ಆಗೀಗ ಶುರುವಾಗುತ್ತ ಇರುತ್ತದೆ. ಒಂದೆಡೆ ಕೋಟ್ಯಂತರ ಮಕ್ಕಳು, ಜನರು ಹಸಿವು ಅಪೌಷ್ಟಿಕತೆಯಿಂದ ನರಳುತ್ತಿದ್ದರೆ ಇನ್ನೊಂದೆಡೆ ಹೊಟ್ಟೆತುಂಬಿದವರ ಖಯಾಲಿಗೆ ಸಿಕ್ಕ ಪಶುಪಕ್ಷಿಗಳು ಅಳಿವಿನಂಚಿಗೆ ಸರಿಯುತ್ತಿವೆ. ಜೊತೆಗೆ ತಿನ್ನುವುದು ಹೇಗಿರಬೇಕು? ಯಾವುದಿರಬೇಕು? ಎಂಬ ಪ್ರಶ್ನೆಗಳು ಧಾರ್ಮಿಕ ಆಯಾಮ ಪಡೆದು ಜೀವನ್ಮರಣದ ಪ್ರಶ್ನೆಗಳೋ ಎಂಬಂತೆ ಭಾವಿಸಲ್ಪಡುತ್ತಿವೆ. ಅದರಲ್ಲೂ ಗೋವು, ಗೋಮಾಂಸ ಕುರಿತಂತೆ ಕೊನೆ ಮೊದಲಿಲ್ಲದ ಚರ್ಚೆ ನಡೆದಿದೆ. ಒಂದು ವರ್ಗ ಗೋಹತ್ಯೆ ಮಾಡಬೇಡಿ, ಮುದಿ ಎತ್ತುದನಗಳ ಮಾರಲೂಬೇಡಿ, ಅದರ ಬದಲು ಗೋಮೂತ್ರ, ಸಗಣಿ ಸಂಗ್ರಹಿಸಿ ಶುದ್ಧೀಕರಿಸಿ ಮಾರಾಟ ಮಾಡಿ; ಅದು ಹಲವು ಕಾಯಿಲೆಗಳಿಗೆ ದಿವ್ಯೌಷಧ ಎನ್ನುತ್ತಿದೆ. ಅವರ ಅಬ್ಬರದಲ್ಲಿ ‘ಗೋಮಾತೆಯೆಂಬ ಕಲ್ಪನೆಯೇನೋ ಸುಂದರವಾಗಿದೆ; ಆದರೆ ಅದು ವ್ಯಾವಹಾರಿಕವಲ್ಲ’ ಎಂಬ ಕಹಿಸತ್ಯ ಹೇಳುವುದೂ ಧರ್ಮದ್ರೋಹ ಎನಿಸಿಕೊಂಡಿದೆ.

ಬಹುಸಂಖ್ಯಾತರ ಧಾರ್ಮಿಕತೆಯ ಭಾಗವೆಂದು ಗೋಹತ್ಯಾ ನಿಷೇಧ ಕಾಯ್ದೆ ಏಪ್ರಿಲ್‌ನಲ್ಲಿ ಮಹಾರಾಷ್ಟ್ರದಲ್ಲಿ ಜಾರಿಯಾಗಿದೆ. ಆದರೆ ಅದರಿಂದ ಮಹಾರಾಷ್ಟ್ರದಾದ್ಯಂತ ಎಲ್ಲ ಧರ್ಮಗಳಿಗೆ ಸೇರಿದ ಸುಮಾರು ಹತ್ತು ಲಕ್ಷ ಜನರ ಉದ್ಯೋಗ, ವ್ಯಾಪಾರಕ್ಕೆ ಸಂಚಕಾರ ಒದಗಿದೆ. ಪ್ರಖ್ಯಾತ ಕೊಲ್ಲಾಪುರ ಚಪ್ಪಲಿ ವ್ಯವಹಾರಕ್ಕೆ ಹೊಡೆತ ಬಿದ್ದಿದೆ. ಹಳೆ ಎತ್ತುಗಳ ಮಾರಲಾರದೆ ಹೊಸ ಜೋಡಿ ಕೊಳ್ಳಲು ಸಾಧ್ಯವಾಗದೇ ಸಣ್ಣ ರೈತರು ಕಂಗಾಲಾಗಿದ್ದಾರೆ. ಅಷ್ಟೇ ಅಲ್ಲ, ಒಂದಿಡೀ ಸಮುದಾಯ ತನ್ನ ಜೀವನಾಧಾರವಾದ ವೃತ್ತಿಗೆ ಒದಗಿದ ಕಂಟಕದಿಂದ ಹಿನ್ನಡೆ ಅನುಭವಿಸುತ್ತಿದೆ.

ಆ ಸಮುದಾಯವೇ ಮಹಾರಾಷ್ಟ್ರದ ಖುರೇಶಿಗಳು.

ನಿಸರ್ಗದ ಅಪಾಯದಂಚಿನಲ್ಲಿರುವ ತಳಿಯ ಪಶುಪಕ್ಷಿಗಳನ್ನು ಬೇಟೆಯಾಡಿ ಹಸಿವೆ ತಣಿಸಿಕೊಳ್ಳುವುದು ಅಪರಾಧ. ಅವುಗಳ ಉಳಿವಿಗೆ ಕಾಯ್ದೆಯ ಬೆಂಬಲ ಅಗತ್ಯ. ಆದರೆ ಸಾವಿರಾರು ವರ್ಷಗಳಿಂದಲೂ ಮಾಂಸ, ಹಾಲುಹೈನಕ್ಕೆಂದೇ ಸಾಕಲ್ಪಟ್ಟ; ವಿಶ್ವಾದ್ಯಂತ ಅರ್ಧ ಜನರ ಆಹಾರವಾಗಿರುವ ಗೋವಿಗೆ ಕಾಯ್ದೆಯ ರಕ್ಷಣೆ ಅವಶ್ಯವಿದೆಯೆ? ಗೋವಿನ ರಕ್ಷಣೆಗೆ ಕಾಯ್ದೆ ಖಂಡಿತಾ ಬೇಕಿರಲಿಲ್ಲ, ಅದು ಬೇಕಾದದ್ದು ಜನರ ಮತಗಳ ಮೇಲೆ ಕಣ್ಣಿಟ್ಟ ವ್ಯಾಘ್ರಸೇನೆಯ ಪಟ್ಟಭದ್ರತೆಗೆ. ದೇಶಾದ್ಯಂತ ಹಿಂದೂತ್ವ ಪ್ರತಿಪಾದಿಸುವ ಗೋಸುತರು ಅಧಿಕಾರಕ್ಕೆ ಬಂದು, ಮಹಾರಾಷ್ಟ್ರದಲ್ಲೂ ಕಳೆದ ಚುನಾವಣೆಯ ಬಳಿಕ ಅಧಿಕಾರ ಚುಕ್ಕಾಣಿ ಹಿಡಿದಾಗ ಇದುವರೆಗೆ ನಾನಾ ಕಾರಣಗಳಿಂದ ತಡೆಹಿಡಿಯಲ್ಪಟ್ಟಿದ್ದ ‘ಮಹಾರಾಷ್ಟ್ರ ಅನಿಮಲ್ ಪ್ರಿಸರ್ವೇಷನ್ ಅಮೆಂಡ್‌ಮೆಂಟ್ ಆಕ್ಟ್’ ಜಾರಿಗೆ ಬಂತು. ಈ ಕಾಯ್ದೆಯ ವಿರುದ್ಧ ಕೆಲವರು ಹೈಕೋರ್ಟಿಗೆ ಹೋದಾಗ ಮುಂಬೈ ಹೈಕೋರ್ಟು ಗೋಹತ್ಯಾ ನಿಷೇಧ ಕಾಯ್ದೆಯನ್ನು ಎತ್ತಿ ಹಿಡಿಯಿತು. ದನಕರು ಕಡಿಯುವುದಷ್ಟೆ ಅಲ್ಲ, ಅದರ ವ್ಯಾಪಾರ ಹಾಗೂ ದನದ ಮಾಂಸ ಹೊಂದಿರುವುದೂ ಅಪರಾಧವಾಗಿ ಐದು ವರ್ಷ ಜೈಲುವಾಸದವರೆಗೆ ಶಿಕ್ಷೆ ನಿಗದಿಯಾಯಿತು.

ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ವರದಿ ಪ್ರಕಾರ ವಿಶ್ವದಲ್ಲೇ ಅತಿ ಕಡಿಮೆ ಮಾಂಸ ಸೇವಿಸುವ; ಮೂರನೇ ಒಂದು ಭಾಗ ಜನ ಸಸ್ಯಾಹಾರಿಗಳೆಂದು ಹೇಳಿಕೊಳ್ಳುವ ದೇಶ ಭಾರತ. ೮೦% ಹಿಂದೂಗಳು ದನದ ಮಾಂಸ ತಿನ್ನುವುದಿಲ್ಲವೆಂದೇ ಲೆಕ್ಕ. ಆದರೆ ಇದು ವಿಶ್ವದಲ್ಲೇ ಅತಿ ದೊಡ್ಡ ಜಾನುವಾರು ಮಾಂಸದ ಉತ್ಪಾದಕ ದೇಶ. ಭಾರತದ ಖ್ಯಾತ ರಫ್ತು ಬಾಸ್ಮತಿ ಅಕ್ಕಿಯಲ್ಲ, ಎಮ್ಮೆ ಮಾಂಸ! ಅರಬ್ ಮತ್ತು ಪೂರ್ವ ಏಷ್ಯಾ ದೇಶಗಳಲ್ಲಿ ಭಾರತದ ಎಮ್ಮೆ ಮಾಂಸ ಬಹು ಜನಪ್ರಿಯವಾಗಿದೆ. ಕಳೆದ ವರ್ಷ ೪.೩ ಬಿಲಿಯನ್ ಡಾಲರ್ ಮೌಲ್ಯದ ಎಮ್ಮೆ ಮಾಂಸ ರಫ್ತಾಗಿದೆ. ಎಮ್ಮೆ ಪೂಜೆ ಮಾಡದ ಗೋಸುತರ ಕಾಲದಲ್ಲಿ ಎಮ್ಮೆ ಮಾಂಸ ರಫ್ತು ಕಳೆದ ವರ್ಷಕ್ಕಿಂತ ೧೬% ಹೆಚ್ಚಾಗಿದೆ! ಗೋಹತ್ಯೆ ನಿಷೇಧದ ಬಳಿಕ ಎಮ್ಮೆ ಮಾಂಸ ವ್ಯಾಪಾರ ಸ್ಥಳೀಯವಾಗಿಯೂ ಹೆಚ್ಚಾಗಿದ್ದು ಮುಂಬಯಿಯ ದೇವನಾರ್‌ನಲ್ಲೆ ಮೊದಲು ದಿನಕ್ಕೆ ೯೦ ಎಮ್ಮೆ ಕಡಿಯುತ್ತಿದ್ದರೆ ಈಗ ೩೦೦ ಎಮ್ಮೆ ಕಡಿಯಲಾಗುತ್ತಿದೆ.

ಮಹಾರಾಷ್ಟ್ರದ ಖುರೇಶಿಗಳು ಭಾರತದ ಜಾತಿವ್ಯವಸ್ಥೆಯ ಉದ್ಯೋಗ-ಜಾತಿ ಸಂಬಂಧದ ಸಿಕ್ಕುಗಳಲ್ಲಿ ಮಾಂಸ ಮಾರಾಟ, ಚರ್ಮ ಮಾರಾಟ, ಪ್ರಾಣಿಗಳ ಕೊಳ್ಳುವ ವ್ಯವಹಾರದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡ ಸಮುದಾಯವಾಗಿದ್ದಾರೆ. ದನದ ಮಾಂಸ ತಿನ್ನುವವರೇನೋ ತಮ್ಮ ಆಯ್ಕೆಯಲ್ಲಿ ನಾಲಿಗೆ ರುಚಿಯಲ್ಲಿ ಕೊಂಚ ಹೆಚ್ಚು ಕಡಿಮೆ ಮಾಡಿಕೊಂಡಾರು. ಆದರೆ ಮಾಂಸ ವ್ಯಾಪಾರವನ್ನೇ ಉದ್ಯೋಗವಾಗಿ ನಂಬಿದ ಈ ಸಮುದಾಯದ ಎದುರಿನ ಆಯ್ಕೆಗಳು ಅಷ್ಟು ಸುಲಭವಾಗಿ ಬದಲಾಗಲಾರವು. ಈಗ ಖುರೇಶಿಗಳು ಎಮ್ಮೆ ಮಾಂಸದ ವ್ಯಾಪಾರದಲ್ಲಿ ತೊಡಗಿದ್ದರೂ ಭಾರತದ ಎಮ್ಮೆಗಳ ಸಂಖ್ಯೆ (೧೩ ಕೋಟಿ) ದನಕ್ಕೆ ಹೋಲಿಸಿದರೆ (೨೮.೩ ಕೋಟಿ) ಕಡಿಮೆಯಿರುವುದರಿಂದ ವಹಿವಾಟು ಕಡಿಮೆಯಾಗಿದೆ.


ಯಾರೀ ಖುರೇಶಿಗಳು?


ಮಾಂಸ ವ್ಯಾಪಾರದ ಒಳಹೊರಗು ಅರಿತ ಸುನ್ನಿ ಮುಸ್ಲಿಮರ ಸಮುದಾಯ ಖುರೇಶಿಗಳದು. ಅವರಿಗೆ ಅವರದೇ ಜಾತಿಯ ಜಮಾತೆಯಿದ್ದು ಇದು ಭಾರತದ ಅತಿ ಹಳೆಯ ಜಮಾತೆಗಳಲ್ಲಿ ಒಂದಾಗಿದೆ. ಕಸಾಯ್ ಎಂದರೆ ಉರ್ದುವಿನಲ್ಲಿ ಕಡಿಯುವವ. (ಗಸಾಬ್ (ಅರೆಬಿಕ್) - ಕಟುಕ, ಸೀಳುವವ) ಮಾಂಸ ಕಡಿಯುವ ಕೆಲಸ ಮಾಡುವವರದು ಕಸ್ಸಾಬ್ ಪಂಗಡ. ಅವರ ಸಾಮಾನ್ಯ ಸರ್‌ನೇಮ್ ಖುರೇಶಿ. ಆದರೆ ಎಲ್ಲ ಖುರೇಶಿಗಳೂ ಕಸ್ಸಾಬ್‌ಗಳಲ್ಲ. ಅದೊಂದು ಅರಬ್ ಬುಡಕಟ್ಟು. ಪ್ರವಾದಿ ಮಹಮದರ ಅಜ್ಜ ಈ ಬುಡಕಟ್ಟು ಗುಂಪಿನ ಮುಖ್ಯಸ್ಥರೇ ಆಗಿದ್ದರು. ಭಾರತದ ಖುರೇಶಿಗಳು ದೆಹಲಿ ಸುಲ್ತಾನರ ಕಾಲದಲ್ಲಿ ವಲಸೆ ಬಂದು ಇಲ್ಲಿ ನೆಲೆಯಾದವರು. ಈಗ ಹಲವು ರಾಜ್ಯಗಳಲ್ಲಿ ಹಂಚಿಹೋಗಿದ್ದಾರೆ. ಅವರಲ್ಲಿ ಕೆಲ ಮತಾಂತರಗೊಂಡ ಸಮುದಾಯಗಳೂ ಇವೆ. ಅವರು ಉರ್ದು ಜೊತೆಗೆ ಸ್ಥಳೀಯ ಭಾಷೆ ಮಾತನಾಡುತ್ತಾರೆ. ಅವರಲ್ಲಿ ಕೋಳಿಕುರಿ ಕಡಿಯುವ ಚಿಕ್ವಾಗಳು (ಉತ್ತರ ಪ್ರದೇಶ), ಎಮ್ಮೆದನ ಕಡಿವ ಕಸ್ಸಾಬ್‌ಗಳು ಹಾಗೂ ವೃತ್ತಿಪರ ಅಡುಗೆಯವರಾಗಿರುವ ಬಾವರ್ಚಿ (ಲಕ್ನೊ, ಗುಜರಾತ್) ಗಳೆಂಬ ಮೂರು ಪಂಗಡಗಳಿವೆ. ಅವಧಿ ಅಡಿಗೆಯ ದಮ್ ಬಿರಿಯಾನಿ, ರುಮಾಲೆ ರೋಟಿಗಳ ಗರಿಮೆಯಲ್ಲಿ ಬಾವರ್ಚಿಗಳ ಶ್ರಮವಿದೆ. ಭಾರತದ ಖುರೇಶಿಗಳ ಒಟ್ಟೂ ಜನಸಂಖ್ಯೆ ೯.೩ ಲಕ್ಷ. ಪಾಕಿಸ್ತಾನದಲ್ಲೂ ಕಸ್ಸಾಬ್‌ಗಳಿದ್ದು ಅವರ ಮೂಲ ರಾಜಸ್ಥಾನದ ರಜಪೂತ ಬುಡಕಟ್ಟುಗಳಾಗಿವೆ. ಅವರು ಮುಖ್ಯವಾಗಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿದ್ದಾರೆ. ಅವರಲ್ಲೇ ಒಂದು ಉಪಸಮುದಾಯವಾದ ‘ಪೆಂಜಾ’ ಹತ್ತಿ ಬಿಡಿಸುವ, ಮಾರುವ ವ್ಯವಹಾರದಲ್ಲೂ ತೊಡಗಿಕೊಂಡಿದೆ. ಜಮ್ಮುಕಾಶ್ಮೀರದಲ್ಲಿ ಅವರದು ಮೇಲ್ಜಾತಿ ಮುಸ್ಲಿಂ ಸಮುದಾಯ. ಮಸೂದಿ, ಬುಖಾರಿ, ಖುರೇಶಿ ಎಂಬ ಮೂರು ಸರ್‌ನೇಮ್‌ಗಳಿವೆ.

ಮಹಾರಾಷ್ಟ್ರದ ಖುರೇಶಿಗಳು ಹೈದರಾಬಾದಿನ ನಿಜಾಂ ಸೈನ್ಯದಲ್ಲಿದ್ದವರು ಅಮರಾವತಿಗೆ ಬಂದು ಮಹಾರಾಷ್ಟ್ರದಲ್ಲಿ ನೆಲೆಯಾದವರು. ಉಳಿದೆಲ್ಲ ಕಡೆಗಳಲ್ಲಿ ಹೇಗೋ ಹಾಗೆ ಇಲ್ಲಿಯೂ ಗಾಯ್ ಕಸಾಯ್ (ದನ ಕಡಿಯುವವರು) ಹಾಗೂ ಛೋಟಾ ಕಸಾಯ್ (ಕುರಿಮೇಕೆಕೋಳಿ ಕಡಿಯುವವರು) ಎಂದು ಎರಡು ಪಂಗಡಗಳಿವೆ. ಚೌಧರಿ, ಸೌದಾಗರ್, ಸಿಕ್ಕು ಎಂಬ ಸರ್‌ನೇಮ್‌ಗಳಿವೆ.

ಗೋಮಾಂಸ ಸೇವನೆ ಮತ್ತು ಭಾರತೀಯತೆ 

ಗೋಮಾಂಸ ಸೇವನೆ, ಗೋವಧೆ ಮುಸ್ಲಿಂ ದಾಳಿಕಾರರು ಭಾರತವನ್ನು ಆಕ್ರಮಿಸಿದ ಮೇಲೆ ಶುರುವಾಯಿತೆಂಬ ಜನಪ್ರಿಯ ಕಟ್ಟುಕತೆ ಚಾಲ್ತಿಯಲ್ಲಿದೆ. ಆದರೆ ಅರಬ್ಬರಿಗೆ ಗೋಮಾಂಸ ಗೊತ್ತೇ ಇರಲಿಲ್ಲ. ಅವರದು ಕುರಿ, ಆಡು ಅಥವಾ ಒಂಟೆ ಮಾಂಸದ ಆಹಾರ. ಭಾರತಕ್ಕೆ ಬಂದ ಮೇಲೆಯೇ ಅರಬ್ಬರು ಗೋಮಾಂಸ ರೂಢಿಸಿಕೊಂಡದ್ದು. ಮೊಘಲ್ ದೊರೆಗಳೂ ಗೋವಧೆ ನಿಷೇಧಿಸಿದ್ದರು. ಬಾಬರ್ ತನ್ನ ಮಗನಿಗೆ ಬರೆದಿಟ್ಟ ಸಲಹಾರೂಪದ ಉಯಿಲಿನಲ್ಲಿ ಹಿಂದೂಸ್ತಾನದ ಜನರ ಮನಸ್ಸನ್ನು ಅವರವರ ರೂಢಿ, ಧರ್ಮಗಳ ಆಚರಣೆ ಗೌರವಿಸುವ ಮೂಲಕ ಗೆಲ್ಲಬೇಕೆಂದೂ; ವಿಶೇಷವಾಗಿ ಗೋಹತ್ಯೆ ನಿಷೇಧ ಮಾಡಬೇಕೆಂದೂ ಸೂಚಿಸಿದ್ದ. ಮೈಸೂರಿನ ಹೈದರ್ ಅಲಿ ಗೋವಧೆ ಮಾಡಿದವರ ಕೈಕಡಿಯುವ ಶಿಕ್ಷೆ ನೀಡುತ್ತಿದ್ದ. ಅಕ್ಬರ್, ಜಹಾಂಗೀರ್, ಅಹ್ಮದ್ ಷಾ ಕೂಡಾ ಕೆಲಮಟ್ಟಿಗೆ ಗೋಹತ್ಯೆ ನಿಷೇಧ ಚಾಲ್ತಿಯಲ್ಲಿಟ್ಟಿದ್ದರು.  

ಪಶುಸಂಗೋಪನೆ ಮತ್ತು ಕೃಷಿಯನ್ನು ಜೀವನಾಧಾರ ಕಸುಬಾಗಿ ಹೊಂದಿದ ಭಾರತ ಉಪಖಂಡದ ನಾಗರಿಕತೆ ಮೊದಲಿನಿಂದ ಗೋಮಾಂಸ ಬಳಸಿದೆ. ಪಶುಸಂಗೋಪನೆಯೇ ಮುಖ್ಯ ಕಸುಬಾಗಿದ್ದ ಆರ್ಯಕುಲಗಳು ಗೋವಧೆಗೆ ಖ್ಯಾತವಾಗಿದ್ದವು. ದೇವರಿಗೆ ಯಜ್ಞಯಾಗಗಳ ಬಲಿಯಾಗಿ ಗೋವು ಮತ್ತು ಕುದುರೆಗಳನ್ನು ವಧಿಸಿ ಅರ್ಪಿಸಲಾಗುತ್ತಿತ್ತು. ಯಾಗದ ನಂತರ ಪುರೋಹಿತರೂ ಸೇರಿದಂತೆ ಯಾರ‍್ಯಾರು ಮಾಂಸದ ಯಾವ್ಯಾವ ಭಾಗ ಹಂಚಿಕೊಳ್ಳಬೇಕೆಂದು ಶಾಸ್ತ್ರಗ್ರಂಥಗಳಲ್ಲಿ ವಿವರಿಸಲಾಗಿತ್ತು. ಗೋಮಾಂಸ ತಳಸಮುದಾಯಗಳಿಗೆ ದುರ್ಲಭವಾಗಿದ್ದರೂ ಪುರೋಹಿತ ವರ್ಗಕ್ಕೆ ಮಾತ್ರ ಒಂದಲ್ಲ ಒಂದು ಪೂಜೆ, ಯಜ್ಞದ ನೆಪದಲ್ಲಿ ಸಿಗುತ್ತಿತ್ತು. ಕ್ರಿಸ್ತಪೂರ್ವ ಕಾಲದ ಭಾರತದಲ್ಲಿ ಗೋವಧೆ ಯಾವ ಮಟ್ಟಿಗಿತ್ತು ಎಂದರೆ ಅತಿಥಿ ಬಂದರೆ ಒಂದು ಗೋವು ಕಡಿಯುವುದೇ. ಅದಕ್ಕೇ ಅತಿಥಿಯನ್ನು ‘ಗೋಘ್ನ’ನೆಂದು ಕರೆಯುತ್ತಿದ್ದರು.

ಆಗ ಯಜ್ಞಯಾಗಾದಿಗಳ ನೆಪದಲ್ಲಿ ಅಮಾಯಕ ಗೋ ಹತ್ಯೆ ನಡೆಯುವುದು ಕಂಡು ಕೆಲ ಜೀವಗಳು ಸಂಕಟಪಟ್ಟವು. ಅಮಾನವೀಯ ವಧೆಯನ್ನು ನಿಲ್ಲಿಸಬೇಕೆಂದು ಜನರ ಮನವೊಲಿಸಿದರು. ಅವರೇ ಬುದ್ಧ, ಜಿನರಾದರು. ಪೂಜೆ, ಯಾಗಗಳಿಂದ ಬೇಸತ್ತ ಜನ ಅಹಿಂಸೆ ಬೋಧಿಸುವ, ಎಲ್ಲ ಜೀವಿಗಳನ್ನು ಸಮಾನವಾಗಿ ನೋಡುವ ಬೌದ್ಧ, ಜೈನ ತತ್ವಗಳೆಡೆ ಆಕರ್ಷಿತರಾದರು. ಆಗ ಎಚ್ಚೆತ್ತ ಪುರೋಹಿತವರ್ಗ ಗೋಸುತರಾಗಿ, ಸಸ್ಯಾಹಾರಿಯಾಗಿ, ಅದೇ ತನ್ನ ಶ್ರೇಷ್ಠತೆಯೆಂದು ಸಾರತೊಡಗಿತು. ಅಂದು ಗೋಮಾಂಸ ತಿನ್ನುವುದಷ್ಟೇ ಅಲ್ಲ, ಎಲ್ಲ ರೀತಿಯ ಮಾಂಸಾಹಾರ ತ್ಯಜಿಸಿದವರೇ ಇಂದು ಗೋವು ಮಾತೆ, ಅದರ ರೋಮರೋಮಗಳಲ್ಲೂ ದೇವರಿದ್ದಾನೆ, ಭಾರತವೆಂಬ ಹಿಂದೂ ಮೆಜಾರಿಟಿ ದೇಶದಲ್ಲಿ ಜನ ಗೋಮೂತ್ರ ಕುಡಿಯಬೇಕೇ ಹೊರತು ಗೋಮಾಂಸ ತಿನ್ನಬಾರದು ಎಂಬ ಒತ್ತಾಯ ಹೇರುತ್ತಿದ್ದಾರೆ.

ದನ ಸಾಕುವಿಕೆ ಒಂದು ವ್ಯವಹಾರ. ಸಾಕಿದ ದನವನ್ನು ಪ್ರೀತಿಸಬಹುದೇ ಹೊರತು ಗೋಮಾತೆ ಎಂಬ ಭಕ್ತಿಯಿಂದ ಯಾರೂ ದನ ಸಾಕಲಾರರು. ಹಿಂಡಿ, ಬೂಸಾ, ಗೊಬ್ಬರ, ಸಗಣಿಗಳ ಲಾಭ ನಷ್ಟ ಲೆಕ್ಕಾಚಾರಗಳು ವ್ಯವಹಾರಸ್ಥ ರೈತರಿಗೆ ಗೊತ್ತಿದೆ. ಅದರಲ್ಲೂ ಬರನೆರೆಗಳಿಂದ ಕಂಗೆಟ್ಟು ತನ್ನ ಕೂಳು ತಾನು ಬೆಳೆದುಕೊಳ್ಳಲಾಗದ ರೈತನಿಗೆ ರಾಸುಗಳಿಗೆ ಮೇವೊದಗಿಸುವ, ನೀರುಣಿಸಿ ಕಾಳಜಿ ಮಾಡುವ ಕಷ್ಟ ಗೊತ್ತಿದೆ. ಹಿಂದೂಮುಸ್ಲಿಮರೆನ್ನದೆ ವಯಸ್ಸಾದ ಎತ್ತು-ದನ-ಗೊಡ್ಡು ದನಗಳನ್ನು ಮಧ್ಯವರ್ತಿಗಳಿಗೆ ಮಾರಿ ಹೊಸ ದನ, ಎತ್ತು ಕೊಳ್ಳುವುದು ಎಂದಿನಿಂದ ನಡೆದುಬಂದ ರೂಢಿಯಾಗಿದೆ. ಗೋಮಾತೆಯನ್ನು ಪೂಜಿಸುವ ಹಿಂದೂಗಳೇ ಮುದಿಯಾದ, ಗೊಡ್ಡಾದ, ಕೈಕಾಲು ಮುರಿದು ಉಪಯೋಗಕ್ಕೆ ಬಾರದ ರಾಸುಗಳನ್ನು ಸಾಕಲು ಸಾಧ್ಯವಿಲ್ಲವೆಂದು ಮಾರಿದ್ದಾರೆ. ಮಾರಿದ ದನ ಎಲ್ಲಿಹೋಗಿ ಏನಾಗುವುದೆನ್ನುವುದು ಓಪನ್ ಸೀಕ್ರೆಟ್. ಆದರೆ ಗೋವು ಸಾಕಿ ಗೊತ್ತಿಲ್ಲದ ಅತಿಭಾವುಕ ಗೋಪೂಜಕರ ತಲೆಬುಡವಿಲ್ಲದ ಗೋ ಭಕ್ತಿಗೆ ಮುದಿ ಜಾನುವಾರು ವಿಲೇವಾರಿ ಮಾಡಲಾಗದೆ; ಹೊಸ ಎತ್ತಿನ ಜೋಡಿ ಕೊಳ್ಳಲಾಗದೆ ರೈತರು ಕಂಗಾಲಾಗುತ್ತಿದ್ದಾರೆ..

ಹೊಸದಲ್ಲ

ಗೋಹತ್ಯಾ ನಿಷೇಧ ಹಿಂದುತ್ವ ಪ್ರತಿಪಾದಿಸುವವರ ಇವತ್ತಿನ ಹುನ್ನಾರವಷ್ಟೆ ಅಲ್ಲ. ಈ ನಿಷೇಧ ತರುವಲ್ಲಿ ಮಹಾರಾಷ್ಟ್ರ ಮೊದಲಿನದೂ ಅಲ್ಲ. ಸಂಪೂರ್ಣ ನಿಷೇಧ ತಂದ ಹನ್ನೊಂದನೆಯ ರಾಜ್ಯ ಅದು. ಹರ‍್ಯಾಣ, ಪಂಜಾಬ್ ಮೊದಲಾದ ರಾಜ್ಯಗಳಲ್ಲಿ ೧೯೪೭ರಿಂದಲೂ ಈ ಕಾಯ್ದೆ ಚಾಲ್ತಿಯಲ್ಲಿದೆ. ಕೇರಳ, ತ್ರಿಪುರ, ಅರುಣಾಚಲ ಪ್ರದೇಶದಂತಹ ಕೆಲವೇ ರಾಜ್ಯಗಳನ್ನು ಹೊರತುಪಡಿಸಿ ಭಾರತದ ಒಟ್ಟು ೨೪ ರಾಜ್ಯಗಳು ಬೇರೆಬೇರೆ ರೀತಿಯ ಗೋಹತ್ಯಾ ನಿಷೇಧ ಕಾನೂನನ್ನು ಹೊಂದಿವೆ. ಸ್ವಾತಂತ್ರ್ಯ ಬಂದಾಗಿನಿಂದ ಈ ವರ್ಷದವರೆಗೆ ವಿವಿಧ ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ, ಹೋರಾಟಗಾರರು ಈ ಕಾಯ್ದೆಯನ್ನು ಬುಗುರಿಯಂತೆ ಬೇಕಾದಾಗ ಬೇಕಾದಲ್ಲಿ ಬೇಕಾದಷ್ಟು ತಿರುಗಿಸಿದ್ದಾರೆ. ಇದರಿಂದ ಮೊರಾರ್ಜಿ ದೇಸಾಯಿ, ಇಂದಿರಾಗಾಂಧಿ, ವಿನೋಬಾ ಭಾವೆ ಯಾರೂ ಹೊರತಲ್ಲ. ೧೯೬೬ರಲ್ಲಿ ವಿಶ್ವಹಿಂದೂ ಪರಿಷದ್ ಗೋಹತ್ಯಾ ನಿಷೇಧ ಕಾಯ್ದೆ ತರಬೇಕೆಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತು. ಎಲ್ಲ ಒತ್ತಡಗಳ ನಡುವೆ ಇಂದಿರಾ ಕಾಯ್ದೆ ತರಲು ಸಾಧ್ಯವಿಲ್ಲವೆಂದರು. ಹತ್ತು ಸಾವಿರ ಜನ ಕಾಯ್ದೆ ಪರವಿದ್ದ ವಕೀಲರು ಸಂಸತ್ ಭವನವನ್ನು ಸುತ್ತುವರೆಯಲು ಯತ್ನಿಸಿದರು. ದೆಹಲಿ ಕಾಂಗ್ರೆಸ್ ಅಧ್ಯಕ್ಷ ಕಾಮರಾಜ್ ಅವರ ಮನೆಗೆ ಬೆಂಕಿ ಹಚ್ಚಲಾಯಿತು. ಗೃಹಮಂತ್ರಿ ಗುಲ್ಜಾರಿಲಾಲ್ ನಂದಾ ರಾಜೀನಾಮೆಯಿತ್ತರು. ಆಂತರಿಕ ಮತ್ತು ಬಾಹ್ಯ ಒತ್ತಡಗಳ ಕಾರಣವಾಗಿ ಹಲವು ರಾಜ್ಯಗಳು ನಿಷೇಧ ಕಾನೂನನ್ನು ಜಾರಿಮಾಡಿದವು.

ಸಂವಿಧಾನದ ಏಳನೇ ಷೆಡ್ಯೂಲಿನಲ್ಲಿ ಜಾನುವಾರು ಹತ್ಯೆ ನಿಷೇಧಿಸಿ, ತಳಿಯನ್ನು ರಕ್ಷಿಸಲು ರಾಜ್ಯಗಳಿಗೆ ಕಾಯ್ದೆ ರೂಪಿಸುವ ಅಧಿಕಾರ ನೀಡಲಾಗಿದೆ. ಅದು ‘ಡೈರೆಕ್ಟಿವ್ ಪ್ರಿನ್ಸಿಪಲ್ಸ್ ಆಫ್ ಸ್ಟೇಟ್ ಪಾಲಿಸಿ’ಯಲ್ಲಿ ಸೇರಿದೆ. ಕೃಷಿ ಮತ್ತು ಪಶುಸಂಗೋಪನೆಯನ್ನು ಅಭಿವೃದ್ಧಿಗೊಳಿಸಿ ಜಾನುವಾರು ತಳಿ ರಕ್ಷಿಸಲು ರಾಜ್ಯಗಳಿಗಿರುವ ನಿರಪೇಕ್ಷ ಅಧಿಕಾರವನ್ನೇ ದಾಳವಾಗಿಟ್ಟುಕೊಂಡು ಹಿಂದುತ್ವ ಸಂಘಟನೆ-ಪಕ್ಷಗಳು ಚದುರಂಗ ಆಡುತ್ತಿವೆ. ಅವರ ತಾಳಕ್ಕೆ ತಕ್ಕಂತೆ ಗೋಹತ್ಯಾ ನಿಷೇಧ ಕಾಯ್ದೆಗಳು ಸಾಂವಿಧಾನಿಕವಾಗಿ ಸಿಂಧು ಎಂದು ೨೦೦೫ರಲ್ಲಿ ಸುಪ್ರೀಂಕೋರ್ಟೂ ಹೇಳಿದೆ. ಕೆಲ ರಾಜ್ಯಗಳು ‘ಹತ್ಯೆ ಮಾಡಲ್ಪಡಬಹುದಾದ’ ಗೋವು (ವಯಸ್ಸಾದ, ದುಡಿಯದ) ಎಂದು ಪ್ರಮಾಣಪತ್ರ ಪಡೆದ ಗೋವುಗಳನ್ನು ಕಡಿಯಲು ಅನುಮತಿ ನೀಡಿದರೆ ಮತ್ತೆ ಕೆಲವು ಸಂಪೂರ್ಣ ನಿಷೇಧಗೊಳಿಸಿವೆ.

ಸಂಪೂರ್ಣ ಗೋಹತ್ಯೆ ನಿಷೇಧದಿಂದ ಇದುವರೆಗೆ ಸಾಧಿಸಿರುವುದಾದರೂ ಏನು? ರಾಜಕೀಯ ಪಕ್ಷವೊಂದರ ಹಿಂದುತ್ವ ಟ್ರಂಪ್ ಕಾರ್ಡನ್ನು ಆಗಾಗ ಚಲಾವಣೆ ಮಾಡಲು; ಅಲ್ಪಸಂಖ್ಯಾತರನ್ನು ಹೆದರಿಸಿ ‘ಹದ್ದುಬಸ್ತಿನಲ್ಲಿಡಲು’ ಅಗತ್ಯ ಹತಾರವೊಂದು ಈ ಕಾಯ್ದೆಯ ರೂಪದಲ್ಲಿ ಒದಗಿದಂತಾಗಿದೆ. ಜೊತೆಗೆ ಹಿಂದೂ, ಹಿಂದೂಯೇತರರ ಗೋಮಾಂಸ ತಿನ್ನುವ ‘ಆಹಾರ ಅಲ್ಪಸಂಖ್ಯಾತ’ ಸಮುದಾಯ ತನ್ನ ಆಯ್ಕೆಯನ್ನು ಬದಲಿಸಿಕೊಳ್ಳುವಂತಾಗಿದೆ. ಹಲವು ಕಡೆ ಗೋವನ್ನು ಕದ್ದು ಸಾಗಿಸಿ ಕಡಿಯಲಾಗುತ್ತಿದೆ. ಅನುಮತಿಯಿಲ್ಲದ ಕಾನೂನು ಬಾಹಿರ ಕಸಾಯಿಖಾನೆಗಳೂ, ಗೋಶಾಲೆಗಳೂ ಹೆಚ್ಚಾಗಿವೆ.


ಯಾವುದೇ ಮಾಂಸವನ್ನೂ ತಿನ್ನಲಾರೆ ಎಂಬ ಸಸ್ಯಾಹಾರಿಗಳ ಅತಿ ಅಹಿಂಸೆಯನ್ನಾದರೂ ರುಚಿಮೀಮಾಂಸೆಯೆಂದು ಅರ್ಥಮಾಡಿಕೊಳ್ಳಬಹುದು. ಆದರೆ ದನ ತಿನ್ನಬೇಡಿ, ಹಂದಿ ತಿನ್ನಬೇಡಿ, ನಾಯಿ ತಿನ್ನಬೇಡಿ ಎಂಬಂತಹ ರುಚಿ ಮತ್ತು ಭಕ್ತಿಯ ಧಾರ್ಮಿಕ ಹೇರಿಕೆಗಳನ್ನು ಈ ಕಾಲದಲ್ಲಿ ಹೇಗೆ ಅರ್ಥಮಾಡಿಕೊಳ್ಳುವುದು? ಮಸೀದಿಮಿನಾರುಗಳು, ಬುದ್ಧಮೂರ್ತಿಗಳು, ಪ್ರಾಚ್ಯ ದೇಗುಲಗಳು ಯಾವ ನಂಬಿಕೆಯ ಹೆಸರಿನಲ್ಲಿ ವಿಶ್ವಾದ್ಯಂತ ಉದುರಿಬೀಳುತ್ತಿವೆಯೋ ಅದೇ ನಂಬಿಕೆಯ ಅತಿಯೇ ಆಹಾರ ಆಯ್ಕೆ ವಿಷಯದಲ್ಲೂ ನಿರ್ಬಂಧ ಹೇರುತ್ತಿವೆ. ಹೀಗಿರುತ್ತ ಯಾವುದನ್ನು ಬೆಂಬಲಿಸುವುದು? ದುಷ್ಟ ಮಾನವರ ದುಷ್ಟತನಗಳಿಗೊಂದು ಸಮರ್ಥನೆಯಾಗಿ ಒದಗತೊಡಗಿರುವ ಧರ್ಮಗಳನ್ನು, ಧರ್ಮಾಚರಣೆಗಳನ್ನೂ ಯಾವ ಮಾಪನದಲ್ಲಿ ಅಳೆಯುವುದು?

ಗೊತ್ತಿಲ್ಲ. ಆದರೆ ಸ್ವರ್ಗವೋ, ಜನ್ನತೋ, ಪ್ಯಾರಡೈಸೋ ಎಂಬುದೊಂದು ನಿಜವಾಗಿ ಇದ್ದರೆ ಖಂಡಿತವಾಗಿ ನಾವು ದೇವರಿಗಲ್ಲ, ಶ್ರೇಷ್ಠಕನಿಷ್ಠವರ್ಜ್ಯವೆಂದು ವಿಂಗಡಿಸಲ್ಪಟ್ಟ ಪ್ರಾಣಿಗಳಿಗೆ ಉತ್ತರಿಸಬೇಕಾಗುತ್ತದೆ. ಈ ಭೂಮಿಯಿಡೀ, ಅದರ ಮೇಲಿನ ಜೀವಸಂಕುಲವಿಡೀ ನನ್ನ ಹೊಟ್ಟೆಗೇ ಎಂದು ಭಾವಿಸಿದ ಮಾನವ ನಾಲಿಗೆಯ ಹಪಾಹಪಿಗೆ ಕಾರಣ ಕೊಡಬೇಕಾಗುತ್ತದೆ..

ತಿನ್ನುವವರ, ತಿನ್ನದವರ ಮಧ್ಯೆ ಗೋಡೆಯೊಂದು ಗೋವಿನ ರೂಪದಲ್ಲಿ ಬೆಳೆಯುತ್ತಿರುವಾಗ ಆರೋಗ್ಯಕರ ನಿಲುವು ಯಾವುದು ಎಂದು ಮನಸು ಯೋಚಿಸುತ್ತಿದೆ. ರೂಸೋ ಮಾತುಗಳನ್ನು ಅನುಸರಿಸಿ ಹೇಳುವುದಾದರೆ, ‘ನಿನ್ನ ಆಹಾರ ಆಯ್ಕೆ ನನ್ನದೂ ಆಗಿರಬೇಕಿಲ್ಲ. ಆದರೆ ನಿನ್ನ ಆಹಾರ ಆಯ್ಕೆ ನಿನ್ನ ಹಕ್ಕು ಎನ್ನುವುದನ್ನು ನಾನು ಕೊನೆತನಕ ಎತ್ತಿಹಿಡಿಯುತ್ತೇನೆ. ಎಲ್ಲ ತೆರನ ಹೇರಿಕೆಯನ್ನು ವಿರೋಧಿಸುತ್ತೇನೆ..’ ಎನ್ನುವುದು ಸೌಹಾರ್ದದ ಸಹಬಾಳ್ವೆಯ ಬೀಜಮಂತ್ರ ಎನಿಸುತ್ತಿದೆ..
















Thursday, 20 August 2015

ಮಹಿಳಾ ಚಳುವಳಿ: ಬಿಕ್ಕಟ್ಟು ಮತ್ತು ಹೊರ ದಾರಿಗಳು







(ಆ. ೧೫, ೧೬ರಂದು ದಾವಣಗೆರೆಯಲ್ಲಿ ನೂರ್ ಶ್ರೀಧರ್ ಮತ್ತು ಸಂಗಾತಿಗಳು ವಿವಿಧ ಸೈದ್ಧಾಂತಿಕ ಧಾರೆಯ ಜನಪರ ಸಂಘಟನೆಗಳನ್ನು ಒಗ್ಗೂಡಿಸುವ ದೃಷ್ಟಿಯಿಂದ ‘ಸಮಾನತೆಗಾಗಿ ಜನಾಂದೋಲನ’ ಸಂಘಟಿಸಿ ಎರಡು ದಿನದ ಐಕ್ಯತಾ ಸಮಾವೇಶ ನಡೆಸಿದರು. ಮೊದಲ ದಿನ ‘ವಿವಿಧ ಧಾರೆಯ ಚಳುವಳಿಗಳು ಎದುರಿಸುತ್ತಿರುವ ಬಿಕ್ಕಟ್ಟು ಹಾಗೂ ಕೂಡಿ ಕಂಡುಕೊಳ್ಳಬೇಕಾದ ಪರಿಹಾರಗಳು’ ಎಂಬ ಗೋಷ್ಠಿಯಲ್ಲಿ ಮಹಿಳಾ ಚಳುವಳಿ ಕುರಿತು ಆಡಿದ ಮಾತುಗಳ ಬರಹ ರೂಪವಿದು.)

ಕರ್ನಾಟಕದಲ್ಲಿ ಒಂದು ಸ್ವಾಯತ್ತ ಮಹಿಳಾ ಚಳುವಳಿ ಚಾಲ್ತಿಯಲ್ಲಿದೆಯೇ? ಹಲವು ಸೈದ್ಧಾಂತಿಕ ಸಂಘಟನೆಗಳಲ್ಲಿ, ಜನಪರ ಗುಂಪುಗಳಲ್ಲಿ, ಜಾತಿ ಗುಂಪುಗಳಲ್ಲಿ, ಕಾರ್ಮಿಕ ಸಂಘಟನೆಗಳಲ್ಲಿ ಮಹಿಳಾ ಹಿತಾಸಕ್ತಿ ಹಾಗೂ ಕ್ರಿಯಾಶೀಲ ಸಂಪನ್ಮೂಲ ಹರಿದು ಹಂಚಿ ಹೋಗಿರುವಾಗ ಮಹಿಳಾ ಹಿತಾಸಕ್ತಿಗೇ ಮೀಸಲಾದ ಮಹಿಳಾ ಚಳುವಳಿ ಇದೆಯೇ? ಎಂಬ ಪ್ರಶ್ನೆಗಳಿವೆ. ಹೌದು, ಸ್ವಾಯತ್ತ ಮಹಿಳಾ ಚಳುವಳಿ ಇಲ್ಲ. ಆದರೆ ಹಲವು ಸಂಘಟನೆಗಳಲ್ಲಿ ಹಂಚಿಹೋದ ಕ್ರಿಯಾಶೀಲ ಹೆಣ್ಣುಜೀವಗಳನ್ನೆಲ್ಲ ಒಂದೆಡೆ ಸೇರಿಸಿ ಸಂಘಟನೆಗಳ ಜಾಲ ಹೆಣೆಯುವ ಕನಸು ಕಂಡು ‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ ಅಸ್ತಿತ್ವಕ್ಕೆ ಬಂದಿತು. ನೂರಾರು ಸಂಘಸಂಸ್ಥೆಗಳು ಭಾಗೀದಾರರಾಗಿ ಮೂರು ಬಾರಿ ಎಲ್ಲ ಒಂದೆಡೆ ಕಲೆತು ಸಮಾವೇಶ ಸಂಘಟಿಸಿದೆವು. ಸಮಾನ ಮನಸ್ಕ ಸಂಘಟನೆಗಳ ಜಾಲವಾಗಿ ಅದನ್ನು ರೂಪಿಸಬೇಕೆಂದು ಕನಸಿದೆವು. ಅದರ ಲೋಪದೋಷ ಹಾಗೂ ಆಗಬೇಕಾದ ಮಾರ್ಪಾಟುಗಳು ಸಾಕಷ್ಟಿದ್ದರೂ ‘ಐಕ್ಯ ಮಹಿಳಾ ಒಕ್ಕೂಟ’ದ ಅನುಭವದ ಹಿನ್ನೆಲೆಯಲ್ಲಿ ಮಹಿಳಾ ಚಳುವಳಿ ಎದುರಿಸುತ್ತಿರುವ ಬಿಕ್ಕಟ್ಟುಗಳು ಮತ್ತು ಚಳುವಳಿಯಲ್ಲಿರುವ ಮಹಿಳೆಯರ ಬಿಕ್ಕಟ್ಟುಗಳ ಸುತ್ತ ನನ್ನ ಮಾತುಗಳಿವೆ.

ಕಾಲ್ತೊಡಕುಗಳು: 

೧. ಒಂದು ತಲೆ, ಇಪ್ಪತ್ತು ಕೈಯ ಮಹಿಳೆಗಿರುವ ಎಲ್ಲ ಮಿತಿಗಳು ಮಹಿಳಾ ಚಳುವಳಿಗೂ ಇವೆ. ಒಂದೇ ಮಿದುಳು ಬಳಸಿ ೨೦ ಕೈಗಳಲ್ಲಿ ಅವಳು ಕೆಲಸ ಮಾಡಬೇಕು: ಆಯುಧ ಹಿಡಿಯಬೇಕು, ಹೂಮಾಲೆ ಹಾಕಬೇಕು, ಧಾನ್ಯವನ್ನೂ ಸುರಿಸಬೇಕು, ಅಂಕುಶ ಬಳಸಬೇಕು, ಬಾವುಟ ಹಿಡಿದೆತ್ತಬೇಕು, ಎಲ್ಲದರ ಜೊತೆಗೆ ಒಂದು ಹಸ್ತ ಅಭಯವನ್ನೂ ಸೂಚಿಸಬೇಕು. ಹಲವು ಕೆಲಸಗಳ ಒಮ್ಮೆಗೆ ಒಬ್ಬರೆ ಮಾಡಬೇಕಾದ ಬಲವಂತ ಮತ್ತು ಅನಿವಾರ್ಯತೆ ಏನಿದೆಯೋ ಅದು ಮಲ್ಟಿ ಟಾಸ್ಕಿಂಗ್ ಎಂಬ ಬಹುದೊಡ್ಡ ಬಿರುದಿಗೆ ಪಾತ್ರವಾಗಿ ಅದೇ ಮಹಿಳೆಯ ದೊಡ್ಡ ಮಿತಿಯಾಗಿದೆ. ಸಾಮಾನ್ಯ ಮಹಿಳೆಯರಿಗೆ ನಿತ್ಯದ ಜವಾಬ್ದಾರಿ, ಜಂಜಡಗಳ ಹೊರತಾಗಿ ತನಗಾಗಿ ತಾನು ಒಂದು ತಾಸು, ಒಂದು ದಿನ ಕಳೆಯುವುದೇ ದೊಡ್ಡ ಲಕ್ಷುರಿಯಾಗಿರುವಂತೆ ಚಳುವಳಿಯೊಳಗೆ ತೊಡಗಿಕೊಂಡಿರುವ ಮಹಿಳೆಯರಿಗೂ ನಿರ್ವಹಿಸಲು ಅಸಾಧ್ಯವೆನ್ನುವಷ್ಟು ಜವಾಬ್ದಾರಿಗಳು ಹೆಗಲೇರಿವೆ.

ಸಮಾಜ ಈಗ ಹೆಣ್ಣು ಎಂದು ಯಾರನ್ನು ನೋಡುತ್ತಿದೆಯೋ ಅವಳು ನಿಜವಾದ ಹೆಣ್ಣಲ್ಲ. ಅದು ಪುರುಷಪ್ರಧಾನ ಸಮಾಜದ ಕಲ್ಪನಾ ವಿಲಾಸ ಹೆಣ್ಣು ಹೇಗಿರಬೇಕೆಂದು ವ್ಯಾಖ್ಯಾನಿಸಿದೆಯೋ ಆ ಚೌಕಟ್ಟಿಗೆ ಸರಿಯಾಗಿ ತನ್ನನ್ನು ಮೌಲ್ಡ್ ಮಾಡಿಕೊಂಡ ಹೆಣ್ಣು. ಗುಟ್ಟು ಕಾಪಾಡುವುದರಲ್ಲೇ ಹೆಣ್ತನವಿದೆ ಎಂದು ಭಾವಿಸಿದ ಹೆಣ್ಣು. ದುರಂತವೆಂದರೆ ತಾನು ಕಳೆದುಕೊಂಡಿರುವುದೇನೆಂದೇ ತಿಳಿದಿಲ್ಲದವರು ಅವರು. ಅಂಥವರನ್ನು ಹೋರಾಡಿ ಪಡೆಯೋಣವೆಂದು ಸಂಘಟಿಸುವುದು ಹೇಗೆ? ಮುಳುಗಿದ ಅರಿವೇ ಇಲ್ಲದವರನ್ನು ಮೇಲೆತ್ತುವುದು ಹೇಗೆ?

ಅಮೆರಿಕನ್ ಆಫ್ರಿಕನ್ ಬರಹಗಾರ್ತಿ ಗ್ರಾಡಾ ಕಿಲೋಂಬಾ ತಮ್ಮ ಒಂದು ಲೇಖನದಲ್ಲಿ ಅವರ ಹಿರಿಯರಾದ ಕರಿಯ ಗುಲಾಮರು ತಮ್ಮ ನೆನಪಿನಿಂದ ಹೇಳುತ್ತಿದ್ದ ಸಂಕಟವನ್ನು ಪ್ರಸ್ತಾಪಿಸಿದ್ದಾರೆ. ಅಮೆರಿಕದ ಬಿಳಿಯ ಮಾಲೀಕರು ತಮ್ಮ ಎಸ್ಟೇಟು, ತೋಟ, ಮನೆಗಳಲ್ಲಿ ಕೆಲಸ ಮಾಡುವ ಕರಿಯ ಗುಲಾಮರ ಬಾಯಿಯಲ್ಲಿ ದವಡೆಗಳ ನಡುವೆ ಒಂದು ಕಬ್ಬಿಣದ ಕಚ್ಚುಕಂಬಿಯನ್ನಿಡುತ್ತಿದ್ದರು. ಗುಲಾಮರು ಪರಸ್ಪರ ಮಾತನಾಡುತ್ತ ಕಾಲ ವ್ಯಯಿಸಬಾರದು ಹಾಗೂ ಕಬ್ಬು, ಕಾಫಿ-ಕೋಕೋ ಬೀಜಗಳ ಅವರು ತಿನ್ನಬಾರದು ಎನ್ನುವುದು ಕಚ್ಚುಕಂಬಿಯ ಉದ್ದೇಶ. ಈ ಪದ್ಧತಿ ಸುಮಾರು ೩೦೦ ವರ್ಷ ಚಾಲ್ತಿಯಲ್ಲಿತ್ತು. ಅದು ಸೊಲ್ಲಡಗಿಸುವ, ಬಲವಂತದ ಮೌನ ಹೇರುವ ಕ್ರಮ. ಜನಸಮುದಾಯದ ಹಕ್ಕಿನ ನಿರಾಕರಣೆ. ಕರಿಯ ಗುಲಾಮರಂತೆ ಮಹಿಳೆಯರೂ ಸಾವಿರಾರು ವರ್ಷಗಳಿಂದ ಅದೃಶ್ಯ ಕಚ್ಚುಕಂಬಿಯನ್ನು ತಮ್ಮ ಬಾಯಲ್ಲಿಟ್ಟುಕೊಂಡೇ ಬದುಕಿದ್ದಾರೆ. ಅದನ್ನು ತೆಗೆಯಲಾಗಿದ್ದರೂ ಅದೃಶ್ಯವಾದದ್ದನ್ನು ಊಹಿಸಿಕೊಂಡೇ ಮೌನವಾಗಿದ್ದಾರೆ. ಹೀಗೆ ಹಲ್ಲು ಕಚ್ಚಿ ಸಹಿಸಿಕೊಂಡಿರುವವರ ಬಾಯಿ ಬಿಚ್ಚಿಸುವುದಕ್ಕೆ ಇರುವ ಸವಾಲುಗಳೇ ಮಹಿಳಾ ಚಳುವಳಿ ಕಟ್ಟಲು ಇರುವ ಮೊದಲ ತೊಡಕುಗಳಾಗಿವೆ.
. ಸಮಾನತೆಗಾಗಿ ಎಷ್ಟೋ ಆಂದೋಲನಗಳು ನಡೆದವು. ಅದರಲ್ಲೆಲ್ಲ ಹೆಣ್ಮಕ್ಕಳಿದ್ದರು. ಭಕ್ತಿ ಚಳುವಳಿ, ವಚನ ಚಳಿವಳಿಯಲ್ಲಿ ಮಹಿಳೆಯರಿರಲಿಲ್ಲವೆ? ಸುಧಾರಣಾ ಚಳುವಳಿಗಳಲ್ಲಿ ಕ್ರಿಯಾಶೀಲರಾದ ಮಹಿಳೆಯರಿರಲಿಲ್ಲವೆ? ಅಂಬೇಡ್ಕರ್ ಹುಟ್ಟುಹಾಕಿದ ದಲಿತ ಚಳುವಳಿಯಲ್ಲಿ ಮಹಿಳೆಯರಿರಲಿಲ್ಲವೆ? ಸ್ವಾತಂತ್ರ್ಯ ಚಳುವಳಿಯಲ್ಲಿ, ಕಾರ್ಮಿಕ ಚಳುವಳಿಯ ಕಾರ್ಯಕರ್ತರಾಗಿ, ಪರಿಸರ ಚಳುವಳಿಗಳಲ್ಲಿ ಮಹಿಳೆಯರಿರಲಿಲ್ಲವೆ? ಅವರೆಲ್ಲ ಏನಾದರು? ಎಲ್ಲಿ ಹೋದರು? ಇಷ್ಟೆಲ್ಲ ಚಳುವಳಿಗಳಲ್ಲಿ ಮಹಿಳಾ ಪಾಲ್ಗೊಳ್ಳುವಿಕೆಯು ಒಂದು ಮಹಿಳಾ ಚಳುವಳಿಯನ್ನು ಕಟ್ಟಿ ಮುನ್ನಡೆಸಬಲ್ಲ ನಾಯಕತ್ವ ಸೃಷ್ಟಿಸಿತೆ? ಏಕೆ ಹೀಗಾಯಿತು?

ಏಕೆಂದರೆ ಮಹಿಳೆಯರೇನೋ ಎಲ್ಲ ಕಡೆ ಇದ್ದರು, ನಂತರ ಅದೃಶ್ಯವಾದರು. ಅವರ ಇಲ್ಲದಿರುವಿಕೆ ಯಾರನ್ನೂ ಕಾಡಲೇ ಇಲ್ಲ. ಮಹಿಳೆಯ ಇಲ್ಲದಿರುವಿಕೆ ಒಂದು ಪಕ್ಷ, ಸಂಘಟನೆ, ವೇದಿಕೆ, ನಾಯಕರುಗಳಿಗೆ ಕಾಡದೇ ಇರುವುದು ಮಹಿಳಾ ಚಳುವಳಿ ಮತ್ತು ಚಳುವಳಿಯ ಮಹಿಳೆಯರು ಎದುರಿಸುತ್ತಿರುವ ಬಿಕ್ಕಟ್ಟು ಎನ್ನಬಹುದಾಗಿದೆ.

೩. ಈ ಅಸಮಾನ ನೆಲದಲ್ಲಿ ಬೆಳೆಕಳೆಯ ಕೃಷಿ ಹೇಗಿದೆ? ಕಳೆಗಿಡಗಳು ಮರಗಳಾಗಿ ಬೆಳೆದು ಬೆಳೆಯನ್ನೆಲ್ಲ ಆವರಿಸಿ ಕಳೆ ಯಾವುದು, ಬೆಳೆ ಯಾವುದು ತಿಳಿಯದಂತಾಗಿದೆ. ಸುಲಿಯುವವ ಮಹಾದಾನಿಯಂತೆ, ಕೊಲ್ಲುವವ ಜೀವರಕ್ಷಕನಂತೆ ವೇಷ ತೊಟ್ಟಿದ್ದಾನೆ. ಹೀಗೆ ಕಳೆಯು ಮರವಾಗಿ ಬೆಳೆಯುತ್ತ ಚಿಗುರುತ್ತ ಹೋಗಿರುವಾಗ ಚಿಗುರು ಚಿಗುಟುವುದೇ ಕಳೆನಾಶ ಎಂದು ಒಂದು ವರ್ಗ ಭಾವಿಸಿದೆ. ಎಲ್ಲೆಲ್ಲಿಂದ, ಯಾರಿಂದ ಎಂಬ ತರತಮ ಭೇಧವಿಲ್ಲದೆ ದುಡ್ಡು ತಂದು, ಚಿಗುರು ಚಿವುಟಿ, ರಾಶಿ ಹಾಕಿ, ಫೋಟೊ ತೆಗೆದು, ವರದಿ ಕಳಿಸಿ ಮತ್ತೆ ಎಲ್ಲೆಲ್ಲಿಂದಲೋ ಹಣ ಪಡೆದು.. ಈಗ ಇದೇ ಚಳುವಳಿ ಅನಿಸಿಕೊಂಡುಬಿಟ್ಟಿದೆ.

ಹೌದು, ನಾನು ಎನ್‌ಜಿಒಗಳ ಬಗೆಗೆ ಮಾತನಾಡುತ್ತಿದ್ದೇನೆ. ಹೊಸತಲೆಮಾರು ಚಳುವಳಿಯ ಕಡೆಗೆ ಆಕರ್ಷಿತರಾಗದಿರಲು ಒಂದು ಕಾರಣ ಫಂಡೆಡ್ ಸಮಾಜಸೇವೆ ಮಾಡುವ ಎನ್‌ಜಿಒಗಳು. ಸಮಾಜಸೇವೆಯನ್ನು ಹೇಗೆ ಮಾಡಬೇಕೆಂದು ಕಲಿಸುವ ಎಂಎಸ್‌ಡಬ್ಲ್ಯು ಪದವಿ ಪಡೆದ ವಿದ್ಯಾರ್ಥಿಗಳು ಎಷ್ಟು ಕಾಲೇಜುಗಳಿಂದ ಹೊರಬರುತ್ತಿದ್ದಾರೆ? ಅವರೆಲ್ಲ ಚಳುವಳಿಯ ಮುಂದುವರಿಕೆಯ ಕೊಂಡಿಗಳಾಗಿ ಏಕೆ ಬರುತ್ತಿಲ್ಲ? ಕಾರಣ ಅವರನ್ನೆಲ್ಲ ಸೆಳೆದಿರುವ ಎನ್‌ಜಿಒಗಳು.

ನೈಜ ಬದ್ಧತೆಯಿಂದ ಕೆಲಸ ಮಾಡುವ ಕೈಬೆರಳೆಣಿಕೆಯಷ್ಟು ಎನ್‌ಜಿಒಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲವೂ ಎಲ್ಲೆಲ್ಲಿಂದಲೋ ಹರಿದು ಬರುವ ಧನಸಹಾಯದಿಂದ ಕೆಲಸ ಮಾಡುತ್ತವೆ. ಭೂಮಿ ಮೇಲಿನ ಎಲ್ಲ ವಿಷಯಗಳ ಬಗೆಗೆ ಕೆಲಸ ಮಾಡಲು ಲೆಕ್ಕವಿಲ್ಲದಷ್ಟು ಎನ್‌ಜಿಒಗಳಿವೆ. ಅವು ಕೈಗೆತ್ತಿಕೊಳ್ಳದ ವಿಷಯಗಳೇ ಇಲ್ಲ. ಯುವ ಮನಸ್ಸುಗಳ ಶಕ್ತಿ, ಸಮಯ, ಸಂಪನ್ಮೂಲ, ಸಂವೇದನೆಯನ್ನೆಲ್ಲ ಬಾಡಿಗೆ ಪಡೆವ ಎನ್‌ಜಿಒಗಳು ಪ್ರತಿಫಲವಿಲ್ಲದೆ ಸಮಾಜಸೇವೆಯಿಲ್ಲ ಎನ್ನುವಂತೆ ಮಾಡುತ್ತಿವೆ. ಸಮಾಜಸೇವೆಯೂ ಒಂದು ಜೀವನಾಧಾರ ಕಸುಬು, ಢಾಳಾದ ಸಾರ್ವಜನಿಕತೆ ಹಾಗೂ ಪ್ರಸಿದ್ಧಿ ತರುವಂಥದು ಎನ್ನುವ ಧೋರಣೆ ಹುಟ್ಟಿಸಿವೆ. ತರುಣ ಪೀಳಿಗೆಯ ಸೂಕ್ಷ ಮನಸುಗಳು ವ್ಯವಸ್ಥಿತವಾಗಿ ಎನ್‌ಜಿಒ ಜಾಲಕ್ಕೆ ಬಿದ್ದು ಸಂಘಟನಾ ಶಕ್ತಿ ಹಿನ್ನಡೆ ಕಂಡಿದೆ.

ರಾತ್ರಿ ಹಗಲೆನ್ನದೆ ಹಾದಿಬೀದಿ ಅಲೆದಾಡಿ, ಪೋಸ್ಟರು ಅಂಟಿಸಿ, ಸಭೆ-ಮೆರವಣಿಗೆ ಮಾಡಿ, ಯಾವ ಆಮಿಷ, ಕಂಫರ್ಟ್‌ಗೂ ಬಲಿಯಾಗದೇ ಕೆಲಸ ಮಾಡುವ ಬದ್ಧತೆಯ ಕಾರ್ಯಕರ್ತರನ್ನು ಎನ್‌ಜಿಒ ಸೃಷ್ಟಿಸುವುದಿಲ್ಲ. ಆ ಮನಸ್ಥಿತಿಯ ಅಪಾಯವೆಂದರೆ ತಮಗೆ ಪೂರಕವಾದ ವಿಷಯವನ್ನಷ್ಟೆ ಅವು ಗಮನಿಸುತ್ತವೆ. ದುಡ್ಡು ಬರುವಷ್ಟು ದಿನ ಸಮಾಜಸೇವೆ ಮಾಡುತ್ತವೆ. ಸುಂದರ ವಾರ್ಷಿಕ ವರದಿಗಾಗಿ ಇರುವುದನ್ನೆಲ್ಲ ತಿರುಚಿ ಬರೆದರೂ ಆಶ್ಚರ್ಯವಿಲ್ಲ. ಸಾಮಾಜಿಕ ಸಮಸ್ಯೆಗಳ ಮೂಲ ಕುರಿತು ತಲಸ್ಪರ್ಶಿ ಹೋರಾಟ ಕಟ್ಟುವ ಗೋಜಿಗೇ ಹೋಗುವುದಿಲ್ಲ. ಸಮಸ್ಯೆಯನ್ನು ಸಮಗ್ರವಾಗಿ ಗ್ರಹಿಸದ, ಸಮಸ್ಯೆಯ ಪರಿಹಾರ ತನ್ನ ಆದ್ಯತೆಯಲ್ಲದ, ದುಃಖಿತನ ದುಃಖಕ್ಕೂ ಹಪಾಹಪಿತನದಲ್ಲಿ ಬೆಲೆ ನಿಗದಿಗೊಳಿಸುವ ಎನ್‌ಜಿಒಗಳು ಭವಿಷ್ಯದ ಚಳುವಳಿಯ ದೊಡ್ಡ ಅಡ್ಡಗೋಡೆಗಳು. ಅದರ ಹಿಡಿತದಿಂದ ಸಮಸ್ಯೆಗಳನ್ನೂ, ಬಾಧಿತರನ್ನೂ, ಸೂಕ್ಷ್ಮ ಮನಸುಗಳನ್ನೂ ಹೊರತರುವುದು ವಿಶಾಲ ನೆಲೆಯ ಹೋರಾಟ ಕಟ್ಟಲು ಅವಶ್ಯವಾಗಿವೆ. ಅದರಲ್ಲಿರುವ ನಮ್ಮದೆ ಬಂಧುಗಳಿಗೆ ‘ನೀವು ಬರಿ ಚಿಗುರನ್ನಷ್ಟೆ ಚಿವುಟುತ್ತಿದ್ದೀರಿ. ಅದರಿಂದ ಆ ಹೆಮ್ಮರ ನಾಶ ಆಗುವುದಿಲ್ಲ. ಕಾಂಡ ಕತ್ತರಿಸೋಣ ಬನ್ನಿ, ಬೇರು ಹರಡೋಣ ಬನ್ನಿ. ಅದಾಗದಿದ್ದರೆ ಕನಿಷ್ಟ ಪಕ್ಷ ಕಾಯಿ ಕೊರಕ ಹುಳ, ಕಾಂಡ ಕೊರೆವ ಹುಳು, ಬೇರು ಶಿಥಿಲಗೊಳಿಸುವ ಗೆದ್ದಲಾದರೂ ಆಗುವ ಬನ್ನಿ’ ಎಂದು ಕರೆಯಬೇಕಾಗಿದೆ.

. ಎಲ್ಲ ಒಟ್ಟು ಹೋಗೋಣ ಅಂದುಕೊಳ್ಳುವುದು ಸುಲಭ; ಎಲ್ಲರ ಒಟ್ಟುಹಾಕುವುದು ಅಷ್ಟು ಸುಲಭವಲ್ಲ. ಉಪ್ಪು ನೀರಿನಲ್ಲಿ ಕರಗುತ್ತದೆ. ಸಕ್ಕರೆ ನೀರಿನಲ್ಲಿ ಕರಗುತ್ತದೆ. ಆದರೂ ಕರಗಿಸಿಕೊಂಡ ತೊಟ್ಟು ನೀರನ್ನು ನಾಲಿಗೆ ಮೇಲೆ ಹಾಕಿಕೊಂಡರೆ ಅದರ ಉಪ್ಪುತನ, ಸಕ್ಕರೆತನ ಬಯಲಾಗಿ ಕರಗಿರುವುದು ಅರಿವಾಗುತ್ತದೆ. ಅದೇ ನೀರು-ಎಣ್ಣೆ? ಎಣ್ಣೆ-ಉಪ್ಪು? ಉಪ್ಪು-ಸಕ್ಕರೆ? ಅವು ಎಂದೆಂದಿಗೂ ವಿಲೀನವಾಗಲಾರವು. ಇವತ್ತು ನಮ್ಮ ಸಂಘ, ಸಂಘಟನೆ, ಸಂಸ್ಥೆಗಳು ಉಪ್ಪಿನ ಹಾಗೆ, ಸಕ್ಕರೆ ಹಾಗೆ, ಒಳ್ಳೆಣ್ಣೆ ಹಾಗೆ, ಹರಳೆಣ್ಣೆ ಹಾಗೆ, ಶಿಲೆಯ ಹಾಗೆ, ಶಿಲಾರಸದ ಹಾಗೆ ತಮ್ಮ ಸ್ವರೂಪ, ಉದ್ದೇಶ, ಗುರಿ, ಸ್ಥಿತಿಗಳಲ್ಲಿ ನಿಶ್ಚಿತವಾದ ಚೌಕಟ್ಟುಗಳಲ್ಲಿ ಮೌಲ್ಡ್ ಆಗಿರುವುದರಿಂದ ಐಕ್ಯತೆ ಕಷ್ಟವಾಗಿದೆ. ಕರಗಿಬಿಡುವ, ಕರಗಿಸಿಬಿಡುವ; ಕರಗಿ, ಕರಗಿಸಿಯೂ ಅನನ್ಯತೆಯ ಗುರುತು ಉಳಿಸಿಕೊಳ್ಳುವ ದ್ರಾವಣ - ದ್ರಾವಕದಂತಹ ಸ್ಥಿತಿ ಬಂದಾಗಲಷ್ಟೆ ನಿಜವಾದ ಐಕ್ಯ ಹೋರಾಟ ಸಾಧ್ಯವಾಗುತ್ತದೆ. ಕರಗಲು ಯಾರೂ ಸಿದ್ಧವಿರದ ಐಡೆಂಟಿಟಿ ಪ್ರಜ್ಞೆಯ ಕಾಲಮಾನವೇ ಐಕ್ಯ ಹೋರಾಟಕ್ಕಿರುವ ದೊಡ್ಡ ಬಿಕ್ಕಟ್ಟಾಗಿದೆ.

೫. ಅಂತೂ ಇಷ್ಟೆಲ್ಲ ಅಡ್ಡಿಆತಂಕಗಳ ನಡುವೆಯೇ ಎರಡು ಹೆಜ್ಜೆ ಹೇಗೋ ಮುಂದಿಟ್ಟೇಬಿಟ್ಟೆವು ಅಂತ ಭಾವಿಸಿ. ಇಟ್ಟ ಹೆಜ್ಜೆ ಹಿಂದೆಳೆಯುವಂತಹ ಎರಡು ದೊಡ್ಡ ಆತಂಕಗಳು ನಮ್ಮೆದುರಿಗಿವೆ. ಮೊದಲನೆಯದು ಜಾತಿಧರ್ಮದ ಆಧಾರದ ಮೇಲೆ ಮನುಷ್ಯರನ್ನು ಒಡೆಯುವ, ಅದಕ್ಕೆ ಶೋಷಿತರನ್ನು ದಾಳವಾಗಿ ಬಳಸಿಕೊಳ್ಳುವ ಕೋಮುವಾದ. ಅದು ತಲೆಯಲ್ಲಿ ತುಂಬುವ ವಿಷ ಎಷ್ಟು ತೀಕ್ಷ್ಣವಾದದ್ದೆಂದರೆ ಅದನ್ನು ಖಾಲಿ ಮಾಡಿ ತೊಳೆಯಲು ಸಾಧಾರಣ ಡಿಟರ್ಜೆಂಟ್‌ಗಳ ಕೈಲಿ ಸಾಧ್ಯವಿಲ್ಲ. ಎರಡನೆಯ ತೊಡಕು ಐಹಿಕ ಸುಖಭೋಗಗಳೇ ಆತ್ಯಂತಿಕ ಸತ್ಯ ಎಂದು ಮನುಷ್ಯ ಭಾವಿಸುವಂತೆ ಮಾಡಿರುವ ಮಾರುಕಟ್ಟೆ ಆರ್ಥಿಕತೆ. ಇವೆರೆಡೂ ಬದಲಾವಣೆಗೆ ತುಡಿವ ಪ್ರತಿಯೊಬ್ಬರ ಶತ್ರುಗಳಾಗಿವೆ. ದಮನಿತರನ್ನು ಪ್ರಶ್ನೆಗಳೂ ಹುಟ್ಟದ ಸನಾತನ ಮನಸ್ಥಿತಿಗೆ ದೂಡಲು ಇವೆರೆಡೂ ಹವಣಿಸುತ್ತವೆ. ಮನುಷ್ಯರನ್ನು ಮನಸನ್ನು ಅನಗತ್ಯ ದ್ವಂದ್ವಗಳಲ್ಲಿ ಮಗ್ನಗೊಳಿಸುವ ಅವು ಚಳುವಳಿಗಳನ್ನು ಚಿವುಟುತ್ತ, ಒಡೆಯುತ್ತ ಅಡ್ಡಗಾಲಾಗಿವೆ.

೬. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂದಾದಮೇಲೆ ಮತ್ತೇಕೆ ಹೋರಾಟ ಎನ್ನುತ್ತ ಚಳುವಳಿ, ಹೋರಾಟಗಳನ್ನು ಕಾನೂನು ವಿರೋಧಿ ಕ್ರಿಯೆಯೆಂದೂ, ಅದು ಶಾಂತಿ ಸುವ್ಯವಸ್ಥೆ ಕಾಪಾಡಲು ದೊಡ್ಡ ತೊಂದರೆಯೆಂದೂ ಆಳುವ ವರ್ಗ ಹಾಗೂ ‘ಗಣ್ಯ’ರು ದೂಷಿಸುವುದನ್ನು ಕೇಳುತ್ತೇವೆ. ಆದರೆ ಚಳುವಳಿ ಪ್ರಜಾಪ್ರಭುತ್ವ ವಿರೋಧಿಯಲ್ಲ, ಅದು ಪ್ರಜಾಪ್ರಭುತ್ವಕ್ಕೆ ಪೂರಕ. ಹಾಗೆ ನೋಡಿದರೆ ಪ್ರಜಾಪ್ರಭುತ್ವ ಜೀವಂತ ಇದೆ ಎನ್ನಲು ಒಂದು ಲಕ್ಷಣ ಚಳುವಳಿ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಬರಬರುತ್ತ ಚಳುವಳಿಗಳು ದುರ್ಬಲಗೊಳ್ಳುವಂತೆ, ಒಡೆಯುವಂತೆ, ಅವಸಾನವಾಗುವಂತೆ ನೋಡಿಕೊಳ್ಳಲಾಗುತ್ತಿದೆ. ಮುಕ್ತ ಅವಕಾಶ, ಚಲನೆ ಕಡಿಮೆಯಾಗುತ್ತಿದೆ. ಮುಕ್ತವಾಗಿ ಆಡುವ, ಬರೆಯುವ ಅವಕಾಶಗಳನ್ನು ಪ್ರಜಾಪ್ರಭುತ್ವದ ಹೆಸರಿನಲ್ಲೇ ಕಿತ್ತುಕೊಳ್ಳಲಾಗಿದೆ. ಅಷ್ಟೆ ಅಲ್ಲ, ಎಲೈಟ್ ವರ್ಗ ಆಕ್ಟಿವಿಸ್ಟ್‌ಗಳನ್ನು ಲೇವಡಿಯ ವಸ್ತುಗಳಂತೆ ನೋಡುತ್ತದೆ. ಚಳುವಳಿಗಾರರನ್ನು ಭಯೋತ್ಪಾದಕರೆನ್ನುವಂತೆ, ಕಾನೂನು ಭಂಜಕರೆಂಬಂತೆ ನೋಡುವುದನ್ನೂ ಗಮನಿಸಬಹುದಾಗಿದೆ. ಇಂಥ ಹಿತಾಸಕ್ತಿಗಳೇ ಹೋರಾಟ, ಚಳುವಳಿಗಳು ಸಾಂಕೇತಿಕಗೊಳ್ಳುವಂತೆ ಮಾಡುತ್ತಿವೆ. ಹೋರಾಟ ಸಾಂಕೇತಿಕವಾದರಷ್ಟೆ ಸಹಿಸುತ್ತೇವೆ, ಇಲ್ಲವಾದಲ್ಲಿ ಅದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂಬ ಸಂದೇಶವನ್ನು ಆಳುವವರು ನೀಡಿದ್ದು ಎಲ್ಲ ಚಳುವಳಿಗಳೂ ಕ್ಷೀಣಗೊಳ್ಳಲು ಇದೊಂದು ಕಾರಣವಾಗಿದೆ.

ಕೂಡಿ ಕಂಡುಕೊಳ್ಳಬೇಕಾದ ದಾರಿಗಳು:


ಚಳುವಳಿ ಆಯಾ ಕಾಲಕಾಲಕ್ಕೆ ತಕ್ಕಂತೆ ಪುನರ್‌ನವೀಕರಣಗೊಳ್ಳಲೇಬೇಕು. ವ್ಯಕ್ತಿ ಅಥವಾ ವಿಷಯಾಧಾರಿತ ಚಳುವಳಿಗಳು ಕಾಲಾನಂತರ ಸ್ಥಗಿತಗೊಳ್ಳಬಹುದು ಅಥವಾ ನಿಲ್ಲಬಹುದು. ಆದರೆ ಶೋಷಣೆ, ದಮನಗಳು ಅನಾದಿಯಿಂದ ಸಂಭವಿಸುತ್ತಲೇ ಇದ್ದು ಈಗಲೂ ಮುಂದುವರೆದಿವೆ. ಹಾಗಾಗಿ ಜನ ಚಳುವಳಿ ಶಿಥಿಲಗೊಳ್ಳಲು ನಾನಾ ಕಾರಣಗಳಿದ್ದರೂ ಚಳುವಳಿಯ ನಿನ್ನೆಯನ್ನು ಗೌರವಪೂರ್ವಕವಾಗಿ ಅವಲೋಕಿಸುತ್ತಲೇ ವರ್ತಮಾನಕ್ಕೆ ಹೊಸಹಾದಿ ಕಟ್ಟಿಕೊಳ್ಳುವುದು ಅವಶ್ಯವಾಗಿದೆ. ಮಾಹಿತಿ ಕ್ರಾಂತಿಯ ಈ ಯುಗದಲ್ಲಿಯೂ ಧರ್ಮ/ಜಾತಿಯಂತಹ ಭಾವುಕ ವಿಷಯಗಳ ಹೊರತಾಗಿ ಜನರನ್ನು ಸಂಘಟಿಸಿ ಚಳುವಳಿ ಕಟ್ಟುವುದು ಕಷ್ಟವೆನಿಸಿದೆ. ಹಾಗಿರುವಾಗ ಕೇವಲ ಮಹಿಳಾ ಚಳುವಳಿಯಷ್ಟೇ ಅಲ್ಲ, ಎಲ್ಲ ಧಾರೆಗಳ ಕೂಡಿಸಿದ ಐಕ್ಯ ಚಳುವಳಿ ಕಟ್ಟುವ ದಾರಿ ಯಾವುದು?


  • ಅದಕ್ಕಾಗಿ ನಾವು ಎರೆಹುಳದಂತೆ ಕೆಲಸ ಮಾಡಬೇಕು. ನೆಲ ಆರ್ದ್ರಗೊಂಡದ್ದೇ ಅದನ್ನು ಸಡಿಲಗೊಳಿಸಿ ಮಣ್ಣೊಳಗೆ ಗಾಳಿ ನುಸುಳಬಿಡುವ ಎರೆಹುಳುವಿನಂತೆ ನಮ್ಮನಮ್ಮ ಊರಿನಲ್ಲಿ ಕೆಲಸ ಮಾಡಬೇಕು. ಎರೆಹುಳುವಿನದು ಬದಲಾವಣೆ ಪ್ರಕ್ರಿಯೆಯ ಮೂಲಹಂತ, ಕೆಳಹಂತ. ಅದನ್ನು ನಿರ್ಲಕ್ಷಿಸದೆ ಊರು, ಕೇರಿ, ಬಡಾವಣೆಯ ಜನರನ್ನು ಕಣ್ಗಾವಲು ಸಮಿತಿಗಳೆಂದು ಸಂಘಟಿಸಬಹುದು. ಯಾವುದೇ ಸಿದ್ಧಾಂತದ ಹೆಸರೆತ್ತದೆ ಅವರ ಬೇಡಿಕೆ, ಅವಶ್ಯಕತೆಗಳನ್ನೇ ಮೂಲಾಧಾರವಾಗಿಟ್ಟುಕೊಂಡು ಜನರನ್ನು ಗುಂಪುಗೂಡಿಸಬಹುದು. ನಂತರವೂ ಜನಸಂಪರ್ಕ ಪರಸ್ಪರ ಉಳಿಯುವಂತೆ ಬುಡಮಟ್ಟದ ಕೆಲಸ ಮಾಡಬಹುದು. ಇವತ್ತು ಕಟ್ಟಲಿರುವ ಹೊಸ ಚಳುವಳಿಗೆ ನಾಯಕರಲ್ಲ, ಎರೆಹುಳದಂತೆ ಕೆಲಸ ಗೇಯಬಲ್ಲ ಕಾರ್ಯಕರ್ತರ ಅವಶ್ಯಕತೆ ಹೆಚ್ಚಾಗಿದ್ದು ಅವರ ತಯಾರಿಸುವುದು ಮೊದಲ ಆದ್ಯತೆಯಾಗಿದೆ. 
  • ಚಳುವಳಿಯು ಡೆಮಾಕ್ರಸಿ ಎಂಬ ಒಪ್ಪಿತ ವ್ಯವಸ್ಥೆಯನ್ನು ಪ್ರಶ್ನಿಸುತ್ತಲೇ ಅದನ್ನು ಅರ್ಥಪೂರ್ಣವಾಗುವಂತೆ ಮಾಡಬೇಕು. ಜನಾಭಿಪ್ರಾಯ ರೂಪಿಸಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಬಳಸಿ ಜನ ರಾಜಕೀಯ ಪ್ರಜ್ಞೆ ಹೊಂದುವಂತೆ, ಕ್ರಿಯಾಶೀಲವಾಗಿ ಸಮಾಜದ, ಪ್ರಜಾಪ್ರಭುತ್ವದ ಪ್ರಕ್ರಿಯೆಗಳಲ್ಲಿ ಭಾಗವಹಿಸುವಂತೆ ಮಾಡಬೇಕು. 
  • ಪ್ರಬಲ ಮಹಿಳಾ ಧ್ವನಿ ನಮ್ಮಲ್ಲಿನ್ನೂ ಹೊಮ್ಮಬೇಕಿದೆ. ಚಳುವಳಿಯ ಹೊರಗೆ ದೊಡ್ಡಸಂಖ್ಯೆಯ ಮಹಿಳೆಯರಿದ್ದು ಅವರನ್ನು ಎಚ್ಚರಿಸುವ, ಚಳುವಳಿಯೊಳತರುವ ಕಾರ್ಯ ಅಗತ್ಯವಾಗಿ ಆಗಬೇಕಾಗಿದೆ. ಪ್ರಾಥಮಿಕ ಹಂತದಲ್ಲಿರುವ ಮಹಿಳಾ ಚಳುವಳಿಯನ್ನು ರಿವೈವ್ ಮಾಡುವಲ್ಲಿ ಉಳಿದವರೆಲ್ಲ ಶ್ರಮವಹಿಸಬೇಕು. ಈಗಿರುವ ಎಲ್ಲ ಚಳುವಳಿ, ಹೋರಾಟಗಳೂ ಸೂಕ್ತ ಮಹಿಳಾ ಪಾಲುದಾರಿಕೆಯನ್ನು ಹೊಂದದಿದ್ದಲ್ಲಿ, ಮಹಿಳಾ ವಿಷಯಗಳನ್ನು ಪರಿಗಣಿಸದಿದ್ದಲ್ಲಿ ಯಾವ ಬದಲಾವಣೆಯನ್ನೂ ಕನಸುವಂತಿಲ್ಲ. ರಾಜಕಾರಣವೇ ಇರಲಿ ಅಥವಾ ಕೋಮುವಾದ ವಿರೋಧ, ಜಾತಿ ವಿನಾಶ, ಪರಿಸರ/ಬುಡಕಟ್ಟು ಹೋರಾಟದಂತಹ ಮತ್ತಿನ್ಯಾವುದೇ ಹೋರಾಟವಿರಲಿ, ಅಲ್ಲಿ ಸಶಕ್ತ ಮಹಿಳಾ ಧ್ವನಿ ಕೇಳುತ್ತಿಲ್ಲವೆಂದರೆ ಅದು ಚಳುವಳಿಯ ಸೋಲೆಂದೇ ಭಾವಿಸಬೇಕು.
  • ಚಳುವಳಿಯಲ್ಲಿದ್ದವರ ವೈಯಕ್ತಿಕ ದೋಷದಿಂದ ಅಥವಾ ಸಂಘಟನಾತ್ಮಕ ಲೋಪದಿಂದ ಹೋರಾಟ, ಚಳುವಳಿಗಳು ವಿಭಿನ್ನ ಗುಂಪು-ವ್ಯಕ್ತಿ-ಹಿತಾಸಕ್ತಿ-ಸಿದ್ಧಾಂತದಲ್ಲಿ ಒಡೆದು ದೊಡ್ಡ ಪ್ರಮಾಣದ ಬದಲಾವಣೆ ಸಾಧ್ಯವಾಗದೇ ಹೋಗಿದೆ. ಎಂದೇ ಐಕ್ಯ ಹೋರಾಟ ಇವತ್ತಿನ ತುರ್ತಾಗಿದೆ. ಭಿನ್ನ ಸೈದ್ಧಾಂತಿಕ ಹಾಗೂ ತಾತ್ವಿಕ ಹಿನ್ನೆಲೆಯ ಜನರನ್ನು ಒಂದುಗೂಡಿಸುವ ದುಸ್ತರವಾದ ಆದರೆ ತುರ್ತಾದ ಆಶಯವನ್ನಿಟ್ಟುಕೊಂಡೇ ಕೆಲಸ ಮಾಡಬೇಕಿದೆ. 


  • ಅದಕ್ಕೆ ನಾವು ಖೋಖೋ ತಂಡ ಆಡುವಂತೆ ಕೆಲಸ ಮಾಡಬೇಕು. ಸಾಮೂಹಿಕ ಜವಾಬ್ದಾರಿ, ಸಾಮೂಹಿಕ ಗೆಲುವುಸೋಲು, ಅವಶ್ಯವಿರುವಾಗ ಅವಶ್ಯವಿರುವವರ ಚಲನೆ. ಆದರೆ ಪರಸ್ಪರ ಪೂರಕ ಚಲನೆ. ಹೀಗಿರಲು ಸಾಧ್ಯವಾಗಬೇಕಾದರೆ ಸಂಘಟನೆಗಳು ಅಸ್ತಿತ್ವದ ಭಯ ಬಿಡಬೇಕು. ನನ್ನ ಆಸ್ಪತ್ರೆ ಪಕ್ಕ ಮತ್ತೊಂದು ಶುರುವಾದರೆ ಎಲ್ಲಿ ರೋಗಿಗಳು ಕಮ್ಮಿಯಾದಾರೋ ಎಂದು ಹೆದರದೆ ಒಟ್ಟಾರೆ ಜನರ ಆರೋಗ್ಯ ಕಾಪಾಡಲು ಇನ್ನೊಂದು ಕೈಸೇರಿತಲ್ಲ ಎಂದುಕೊಂಡು ಪ್ರಾಮಾಣಿಕವಾಗಿ ನನ್ನ ಕೆಲಸ ನಾನು ಮಾಡಬೇಕು. 


ಕೊನೆಗೂ ಹೋರಾಟದ ಎಲ್ಲ ನದಿಗಳೂ ಹರಿಯಬೇಕಿರುವುದು ಸಮಾನತೆಯ ಕಡಲ ಕಡೆಗೆ ತಾನೇ ಎಂದು ಅರಿಯಬೇಕು.

ಇದಾವುದೂ ಸಾಧ್ಯವಿಲ್ಲವಾದರೆ ಮುಂದಿನ ಪೀಳಿಗೆಗೆ ಕನಿಷ್ಟ ಪಕ್ಷ ನಮ್ಮ ಪೂರ್ವಗ್ರಹಗಳನ್ನಾದರೂ ದಾಟಿಸದಿರೋಣ. ಎಲ್ಲವೂ ವಿಸರ್ಜನೆಯಾಗಲಿ. ಆಗಲಾದರೂ ಹೊಸತು ಹುಟ್ಟಬಹುದು. ತೆಲುಗು ಕವಿ ನಗ್ನಮುನಿ ಹೇಳುವಂತಾಗಬಹುದು:

‘ನನಗೆ ರಾಕೆಟ್ ಬೇಡ,
ಚಂದ್ರನಂಗಳದ ಮೇಲಿಳಿಯುವುದೂ ಬೇಡ.
ಏರೋಪ್ಲೇನುಗಳು ಬೇಡ,
ಜನಬದುಕನ್ನು, ಕಾಲವನ್ನು ನಾಶ ಮಾಡುವ
ರಾಜಕಾರಣವೂ ಬೇಡ.
ರೈಲು ಬೇಡ, ಬಸ್ಸು ಬೇಡ,
ಈ ನಾಗರಿಕತೆಯ ಯಾವ ಗಡಿಬಿಡಿಯೂ ಬೇಡ.
ಶಿಲಾಯುಗದ ಹತಾರುಗಳ ಹಿಡಿದು
ಚರಿತ್ರೆಯ ಗುಹೆಯೊಳಗೆ ಹೋಗುತ್ತೇನೆ.
ಈ ಮನುಷ್ಯ ಪಶುಪಕ್ಷಿಗಳ ಮೃತದೇಹಗಳನ್ನು
ನನ್ನೊಳಗೆ ಹುಗಿಯುತ್ತೇನೆ.
ವ್ಯವಸ್ಥೆಯೆಂಬ ಮರಗುದುರೆಯ ಸುಟ್ಟು ಬೂದಿ ಮಾಡುವ
ಇಂಧನವೊಂದ ಹುಡುಕುತ್ತೇನೆ.

ಹೊಸ ಆಸೆ, ಹೊಸ ಬದುಕು, ಕನಸುಗಳೊಂದಿಗೆ
ಹೊಸಬಟ್ಟೆ ನೇಯುತ್ತೇನೆ.
ದಿಗಂಬರನಾಗಿ ದಿಕ್ಕುಗಳ ನಡುವೆ
ದಿಕ್ಕಿಲ್ಲದೇ ಬಿದ್ದಿರುವ ಮನುಷ್ಯನಿಗೆ
ಹೊಸಬಟ್ಟೆ ಹೊದಿಸುತ್ತೇನೆ..’

***


ರಾಜಕೀಯವಾಗಿ ಅಹಿಂದ ಎನ್ನುತ್ತೇವೆ, ಬಹುಜನ ಸಮಾಜ ಎನ್ನುತ್ತೇವೆ. ಆ ರಾಜಕೀಯ ಪದಗಳು ವಾಸ್ತವದ ಗುಂಪುಗಳಾಗಿ ಅನುವಾದಗೊಳ್ಳಬೇಕಾದರೆ, ಪ್ರಜಾಪ್ರಭುತ್ವ ಅರ್ಥಪೂರ್ಣವಾಗಬೇಕಾದರೆ ಇರುವುದು ಒಂದೇ ದಾರಿ - ಐಕ್ಯ ಚಳುವಳಿ. ಮಹಿಳೆಯರೂ ಸೇರಿದಂತೆ ಎಲ್ಲ ಜನಪರ ಗುಂಪುಗಳೂ ತಂತಮ್ಮ ಚಳುವಳಿಗಳ ಬಲಪಡಿಸುತ್ತಲೇ ಒಗ್ಗಟ್ಟಾಗಿ ಮುನ್ನಡೆಯುವುದಷ್ಟೇ ಪ್ರಸಕ್ತ ಕಾಲಮಾನ ನಮ್ಮಿಂದ ಬಯಸುವ ಹೆಜ್ಜೆಯೆನಿಸುತ್ತಿದೆ..





Monday, 17 August 2015

ಉಳುವ ಯೋಗಿ: ಒಂದು ಬಿನ್ನಹ..





ಕಳೆದ ತಿಂಗಳು ಇನ್ನೇನು ವಿಧಾನಸಭೆ ಅಧಿವೇಶನ ಶುರುವಾಗಬೇಕೆನ್ನುವ ಹೊತ್ತಿಗೆ ಯಾವುದೋ ಪಿಡುಗು ಇದ್ದಕ್ಕಿದ್ದಂತೆ ಬಂದೆರಗಿತೆಂಬಂತೆ ಪತ್ರಿಕೆಗಳಲ್ಲಿ ಪ್ರತಿದಿನ ರೈತ ಆತ್ಮಹತ್ಯೆಯ ವರದಿಗಳು ಬರತೊಡಗಿ ಪೀಪ್ಲಿ ಲೈವ್ ಸಿನಿಮಾ ನೆನಪಾಯಿತು..

೨೦೧೦ರಲ್ಲಿ ರೈತ ಆತ್ಮಹತ್ಯೆಯನ್ನು ವಸ್ತುವಾಗುಳ್ಳ ಪೀಪ್ಲಿ ಲೈವ್ ಎಂಬ ಚಿತ್ರ ಜನಪ್ರಿಯವಾಯಿತು. ಕೊಂಚ ಸೋಮಾರಿ ಮತ್ತು ಕುಡುಕ ರೈತ ನತ್ಥಾ ಮಾತಾಡುತ್ತ ಕುಳಿತಿದ್ದ ಹಳ್ಳಿಯ ಮುಖ್ಯರಿಗೆ ಸಾಲಸೋಲದಿಂದ ಪಾರಾಗಲು ಸಹಾಯ ಮಾಡಿ ಎಂದು ಕೇಳಲು ಹೋದಾಗ ಅವರು, ‘ಆತ್ಮಹತ್ಯೆ ಮಾಡಿಕೊ, ಸಾಲ ಮನ್ನಾ ಆಗಿ, ದುಡ್ಡು ಬಂದು ಮನೆಯವರೂ ಉದ್ಧಾರ ಆಗ್ತಾರೆ’ ಎಂದು ಲಘುವಾಗಿ ಉತ್ತರಿಸುತ್ತಾರೆ. ಅದನ್ನವ ಚಹಾದಂಗಡಿಯಲ್ಲಿ ತನ್ನ ಸೋದರನೊಂದಿಗೆ ಮಾತನಾಡುತ್ತ ಹೇಳುವುದನ್ನು ಸ್ಥಳೀಯ ಪತ್ರಕರ್ತನೊಬ್ಬ ಕೇಳಿಸಿಕೊಂಡು ಇನ್ನೇನು ಆತ್ಮಹತ್ಯೆಗೊಳಗಾಗುತ್ತಿರುವ ರೈತನ ಕೊನೆಯ ಕ್ಷಣಗಳ ಲೈವ್ ಕವರೇಜ್ ಮಾಡಿ ಸೆನ್ಸೇಷನಲ್ ಸ್ಟೋರಿ ಮಾಡಲು ಸಿದ್ಧನಾಗುತ್ತಾನೆ. ಇದರ ವಾಸನೆ ಗ್ರಹಿಸಿದ್ದೇ ಪ್ರತಿಸ್ಪರ್ಧಿ ಚಾನೆಲ್ಲುಗಳು, ಆಡಳಿತ ಪಕ್ಷ-ವಿರೋಧ ಪಕ್ಷದವರು, ಬೇರೆಬೇರೆ ಸಂಘಟನೆಗಳ ಜನರು ಪೀಪ್ಲಿಗೆ ಬಂದು ಇನ್ನೇನು ಸಾವಿಗೆ ಶರಣಾಗಲಿರುವ ರೈತನ ಮನೆಯೆದುರು ಠಿಕಾಣಿ ಹೂಡುತ್ತಾರೆ. ನತ್ಥ ಹೆದರಿ ಅಡಗುತ್ತಾನೆ. ಕೊನೆಗೆ ನತ್ಥನನ್ನು ಅಪಹರಿಸಿ ದವಸದ ಉಗ್ರಾಣದಲ್ಲಿಡಲಾಗುತ್ತದೆ. ಬೆಂಕಿ ಆಕಸ್ಮಿಕದಲ್ಲಿ ಉಗ್ರಾಣ ಸುಟ್ಟು, ಟಿವಿ ವರದಿಗಾರ ಸಾಯುತ್ತಾನೆ. ಆದರೆ ಸುಟ್ಟುಹೋದ ವ್ಯಕ್ತಿಯನ್ನು ಆತ್ಮಹತ್ಯೆ ಮಾಡಿಕೊಳ್ಳಬೇಕಿದ್ದ ನತ್ಥ ಎಂದು ಗುರುತಿಸುತ್ತಾರೆ. ನತ್ಥನದು ಆತ್ಮಹತ್ಯೆಯಲ್ಲದ ಕಾರಣ ಪರಿಹಾರವೂ ಬರುವುದಿಲ್ಲ. ಇತ್ತ ಬ್ಯಾಂಕ್ ಅಧಿಕಾರಿಗಳು ಲಿಲಾವು ಕೂಗಿ ಅವನ ಆಸ್ತಿ, ಮನೆ ಹರಾಜಾಗುತ್ತಿದ್ದರೆ ಅತ್ತ ಅವರೆಲ್ಲರಿಂದ ತಪ್ಪಿಸಿಕೊಂಡು ಮೊದಲೇ ಊರು ಬಿಟ್ಟಿದ್ದ ನತ್ಥ ಗುರ್‌ಗಾಂವ್‌ನಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿರುತ್ತಾನೆ..!

ರೈತ ಆತ್ಮಹತ್ಯೆ ವಸ್ತುವನ್ನು ಆ ಸಿನಿಮಾ ನಿಭಾಯಿಸಿದ ಬಗೆಗೆ ಹಲವು ಪ್ರಶ್ನೆಗಳಿವೆ. ಆದರೆ ಅನ್ನ ಬೆಳೆವವನ ಆತ್ಮಹತ್ಯೆ ಎಂಬ ಅತಿಸೂಕ್ಷ್ಮ ವಿಷಯವನ್ನು ಮಾಧ್ಯಮಗಳು ಮತ್ತು ರಾಜಕೀಯ ಪಕ್ಷಗಳು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತವೆ ಎಂದು ವಿಡಂಬನಾತ್ಮಕವಾಗಿ ಪೀಪ್ಲಿ ಲೈವ್ ಹೇಳಿತ್ತು. ಈಗ ಸಮೃದ್ಧ ಕೃಷಿ ಪ್ರದೇಶವೆನ್ನದೆ, ಬರಗಾಲದ ಊರೆನ್ನದೆ ಎಲ್ಲೆಡೆಯಿಂದ ರೈತ ಆತ್ಮಹತ್ಯೆ ವರದಿಗಳು ಬರುತ್ತಿರುವಾಗ, ಉಳುವ ಯೋಗಿಗೆ ಬದುಕು ಭಾರವಾಗುವ ಪರಿಸ್ಥಿತಿ, ಮನಸ್ಥಿತಿ ಏಕೆ ಬಂತು? ರೈತ ಆತ್ಮಹತ್ಯೆಗಳು ಅತಿ ಹೆಚ್ಚು ಎಲ್ಲಿ ಸಂಭವಿಸಿವೆ? ಯಾವ ಕಾರಣಕ್ಕೆ ಸಂಭವಿಸಿವೆ? ಯಾವ ಬೆಳೆ ಬೆಳೆವ ರೈತರು ಹೆಚ್ಚು ಆತ್ಮಹತ್ಯೆಗೊಳಗಾಗಿದ್ದಾರೆ? ಒಟ್ಟೂ ಸಮಾಜದ ಆತ್ಮಹತ್ಯೆ ಪ್ರಮಾಣ ಹಾಗೂ ರೈತ ಆತ್ಮಹತ್ಯೆ ಪ್ರಮಾಣದ ಸಂಬಂಧ ಎಂತಹುದು? ಈ ವಿಷಯಗಳ ಕುರಿತ ಕೆಲವು ಸಂಶಯರೂಪಿ ಆಲೋಚನೆಗಳನ್ನು ಹಂಚಿಕೊಳ್ಳಬೇಕಾಗಿದೆ..

ಆತ್ಮಹತ್ಯೆ ಏಕೆ?



ರೈತ ಆತ್ಮಹತ್ಯೆ ಇಂದು ನಿನ್ನಿನ ವಿದ್ಯಮಾನವಲ್ಲ. ಮನುಷ್ಯ ಒಂದೆಡೆ ನೆಲೆ ನಿಂತು ನೆಲಕ್ಕೆ ಹಕ್ಕುದಾರನಾದ ಕ್ಷಣದಿಂದಲೇ ನೆಲದ ಆಗುಹೋಗುಗಳು ಜೀವನ್ಮರಣದ ಪ್ರಶ್ನೆಗಳಾಗಿ ಪರಿಗಣಿಸಲ್ಪಟ್ಟವು. ರಾಜ್ಯಸಾಮ್ರಾಜ್ಯಗಳ ಕೋಶ ತುಂಬುತ್ತಿದ್ದಿದ್ದೇ ರೈತ ಬೆಳೆದ ಫಸಲಿನಿಂದ. ಹಾಗಾಗಿ ಬರವೋ ನೆರೆಯೋ ರೈತನನ್ನು ಎಲ್ಲ ಆಳುವವರೂ ಶಕ್ತ್ಯಾನುಸಾರ ಸುಲಿದಿದ್ದಾರೆ. ಆದರೆ ಭಾರತದ ರೈತರ ನಿಜವಾದ ಸಂಕಷ್ಟಗಳು ಎದುರಾದದ್ದು ವಸಾಹತುಶಾಹಿ ಆಡಳಿತದಲ್ಲಿ. ತಮಗೆ ಅವಶ್ಯವಿದ್ದ ಹತ್ತಿ, ಕಬ್ಬು, ತಂಬಾಕಿನಂತಹ ವಾಣಿಜ್ಯ ಬೆಳೆಗಳನ್ನು ರೈತ ಬೆಳೆಯುವಂತೆ ಒತ್ತಾಯಿಸಲು ಅದನ್ನು ಬೆಳೆಯದವರಿಗೆ ಭಾರೀ ತೆರಿಗೆ ಹೇರಿದರು. ಇಂತಹ ಸುಲಿಗೆಕೋರ ಬ್ರಿಟಿಷರು ಒಂದುಕಡೆಯಿದ್ದರೆ, ಬಡ್ಡಿಗಾಗಿ ಅಕ್ಷರಶಃ ರೈತರನ್ನು ಸುಲಿವ ಲೇವಾದೇವಿಗಾರರು ಇನ್ನೊಂದೆಡೆ ನಿಂತು ೧೮-೧೯ನೇ ಶತಮಾನದ ಭಾರತದ ರೈತರನ್ನು ದಂಗೆಯೇಳುವಂತೆ, ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಿದರು. ಸ್ವಾತಂತ್ರ್ಯಾನಂತರ ಭೂಹೀನರಿಗೆ ಭೂಮಿ ಹಂಚುವ ಬದಲು ಅಭಿವೃದ್ಧಿ ಯೋಜನೆಗಳಿಗೆಂದು ಸರ್ಕಾರವೇ ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾಗಿ ರೈತರ ಕೃಷಿಭೂಮಿ ಕಸಿಯುತ್ತಿದೆ. ಬೃಹತ್ ಬಂಡವಾಳಗಾರರು ಕೃಷಿಕ್ಷೇತ್ರಕ್ಕೆ ಕಾಲಿಟ್ಟು, ಜಾಗತಿಕ ಮಾರುಕಟ್ಟೆ ವ್ಯವಸ್ಥೆಯನ್ನು ದೇಶ ಒಪ್ಪಿಕೊಂಡ ಕಾರಣ ರೈತ ಬದುಕು ಅತಂತ್ರವಾಗುತ್ತ, ರೈತ ಆತ್ಮಹತ್ಯೆ ಹೆಚ್ಚುತ್ತ ಹೋಗಿದೆ.

ಈ ಘನತೆವೆತ್ತ ನಾಗರಿಕತೆಯ ಐರನಿ ಎಂದರೆ ಒಂದೆಡೆ ಬೆಳೆದ ಬೆಳೆಗೆ ದರ ಸಿಗದೇ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ; ಮತ್ತೊಂದು ಕಡೆ ಆಹಾರ ಧಾನ್ಯಗಳ ವಿಪರೀತ ಬೆಲೆಯಿಂದ ಹಸಿವು, ಅಪೌಷ್ಟಿಕತೆಗೀಡಾಗಿ ಜನ ಸಾಯುತ್ತಿದ್ದಾರೆ. ಕೃಷಿ ಮಾರುಕಟ್ಟೆ ವ್ಯವಸ್ಥೆ ಅಸಂಖ್ಯ ದಲ್ಲಾಳಿಗಳು ಹಾಗೂ ಮಧ್ಯಮಹಂತದ ಮಾರಾಟಗಾರರಿಂದ ತುಂಬಿಹೋಗಿ ದವಸಧಾನ್ಯಗಳು ಕೊಳ್ಳುವವನಿಗೆ ತುಟ್ಟಿಯಾಗಿವೆ, ಮಾರುವವನಿಗೆ ಅಗ್ಗವಾಗಿ ನಷ್ಟ ತರುತ್ತಿವೆ. ಹರಿಸಿದ ಬೆವರಿಗೆ ತಕ್ಕ ಗಳಿಕೆ ಇಲ್ಲದಿರುವುದು ಸಾಲ-ಬಡತನ-ಆತ್ಮಹತ್ಯೆಯ ವಿಷವರ್ತುಲಕ್ಕೆ ರೈತರನ್ನು ದೂಡುತ್ತಿದೆ.

ಯಾವುದೇ ಆತ್ಮಹತ್ಯೆಯಂತೆ ರೈತ ಆತ್ಮಹತ್ಯೆಗೂ ಒಂದೇ ಕಾರಣವಿಲ್ಲ. ಈ ಕುರಿತು ನಡೆದ ಹಲವಾರು ಅಧ್ಯಯನಗಳಲ್ಲಿ ಮೃತ ವ್ಯಕ್ತಿಯ ಕುಟುಂಬದವರು ತಿಳಿಸಿದಂತೆ ಆತ್ಮಹತ್ಯೆಯ ಕಾರಣಗಳು ಒಂದಕ್ಕಿಂತ ಹೆಚ್ಚಿವೆ. ವಾಣಿಜ್ಯ ಬೆಳೆ ಬೆಳೆಯುವಲ್ಲಿ, ಅದರಲ್ಲೂ ಹತ್ತಿ ಮತ್ತು ಕಾಫಿ ಪ್ರದೇಶಗಳಲ್ಲಿ ಅತಿ ಹೆಚ್ಚು ರೈತ ಆತ್ಮಹತ್ಯೆಗಳಾಗಿವೆ. ಅಲ್ಲದೆ ಒಂದು ಹೆಕ್ಟೇರಿಗಿಂತ ಕಡಿಮೆ ಭೂಮಿಯಿರುವವರು; ೩೦೦ಕ್ಕಿಂತ ಹೆಚ್ಚು ರೂಪಾಯಿ ಸಾಲವಿರುವವರು ಆತ್ಮಹತ್ಯೆಗೆಳಸಿದ್ದು ಹೆಚ್ಚು. ಈಗ ನೀರಾವರಿಯಿರುವ ಕಬ್ಬು ಬೆಳೆ ಪ್ರದೇಶಕ್ಕೂ ಇದು ವ್ಯಾಪಿಸಿದೆ. ಕುಡಿತ/ಜೂಜು ಮತ್ತಿತರ ಚಟಗಳು; ಬೆಳೆ ನಾಶ; ತೊಡಗಿಸಿದ ಹಣ ಬಾರದಿರುವುದು; ಕೌಟುಂಬಿಕ ಸಮಸ್ಯೆ; ಕಾಯಿಲೆ; ಹೆಣ್ಣು ಮಕ್ಕಳ ಮದುವೆ ಸಾಲ; ಮನೆ ಖರ್ಚು; ಸಾಲಬಾಧೆ - ಹೀಗೆ ಆತ್ಮಹತ್ಯೆಯ ಕಾರಣಗಳು ಏನೇ ಇದ್ದರೂ ಇವೆಲ್ಲದರ ಮೂಲ ಇವತ್ತಿನ ಆರ್ಥಿಕತೆಯಿಂದ ಜೀವನಶೈಲಿ-ಬದುಕು-ಧೋರಣೆಗಳಲ್ಲಿ ಆಗಿರುವ ಬದಲಾವಣೆಯಲ್ಲಿದೆ.

ಕೃಷಿ ಭಾರತದ ಎಲ್ಲೆಡೆ ಒಂದೇ ತೆರನಾಗಿಲ್ಲ, ಹಾಗೇ ಕೃಷಿಕರ ಧೋರಣೆಗಳೂ ಸಹಾ. ಎರಡು ತಲೆಮಾರುಗಳ ಹಿಂದಿನ ಜೀವನ ಕ್ರಮಕ್ಕೂ ಇವತ್ತಿನದಕ್ಕೂ ಹೇಗೆ ಅಜಗಜಾಂತರ ವ್ಯತ್ಯಾಸವಿದೆಯೋ ಹಾಗೆಯೇ ಕೃಷಿಯಲ್ಲೂ, ಬೆಳೆಯ ವೈವಿಧ್ಯ-ಆದ್ಯತೆಯಲ್ಲೂ ಬದಲಾವಣೆಗಳಾಗಿವೆ. ತರಹೇವಾರಿ ದವಸಧಾನ್ಯಗಳ ಜಾಗವನ್ನು ವಾಣಿಜ್ಯ ಬೆಳೆಗಳು ಆಕ್ರಮಿಸಿಕೊಂಡಿವೆ. ರೈತಾಪಿ ಕುಟುಂಬಗಳ ಇವತ್ತಿನ ಪೀಳಿಗೆಯ ಉದ್ಯೋಗ ಆದ್ಯತೆಗಳನ್ನು ಗಮನಿಸಿದರೆ ಗದ್ದೆತೋಟಹೊಲದ ಕೆಲಸ ಬೇಡ ಎಂದು ಯಾವುದೇ ಕೆಲಸವಾದರೂ ಸರಿ, ನಗರಗಳಿಗೆ ವಲಸೆ ಹೋಗುವ ಒಲವು ಕಾಣಿಸುತ್ತಿದೆ. ಅವರಿಗೆ ಹೀಗೆ ಯಾಕನಿಸಿತು? ಕೈಯಿಂದ ಮಾಡುವ ಕೆಲಸಕ್ಕಿಂತ ಯಂತ್ರದ ಜೊತೆ ಮಾಡುವ ಕೆಲಸ ಉಚ್ಚ ಎಂಬ ಭಾವನೆ ಹೇಗೆ ಬೆಳೆಯಿತು? ಸುಭಾಷ್ ಪಾಲೇಕರ್, ಫುಕುವೋಕಾರ ಶೂನ್ಯಕೃಷಿಗಿಂತ ಹೆಚ್ಚು ಮೊನಸಾಂಟೋ ಬಣ್ಣದ ಮಾತು ಏಕೆ ಆಪ್ಯಾಯಮಾನವೆನಿಸಿತು?

ಏಕೆಂದರೆ ಬದಲಾದ ಜೀವನಕ್ರಮವು ಯಾವುದನ್ನು ಮಾದರಿ ಎಂದು ಬಿಂಬಿಸುವುದೋ, ಅದು ರೈತ ವಿರೋಧಿಯಾಗಿದೆ. ಶ್ರಮ ಮತ್ತು ರೈತಾಪಿ ಕೆಲಸದ ಸಾಮಾಜಿಕ ಮೌಲ್ಯ ದಿನಗಳೆದಂತೆ ಇಳಿಯುತ್ತಿದೆ. ಅಭಿವೃದ್ಧಿ, ಖಾಸಗೀಕರಣದ ಕಾರಣವಾಗಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿರುವ ಬೃಹತ್ ಬಂಡವಾಳವು ಅಂಚಿನಲ್ಲಿರುವ ರೈತರ ಬದುಕನ್ನು ಇನ್ನಷ್ಟು ಅಂಚಿಗೆ ಸರಿಸುತ್ತಿದೆ. ಸರ್ಕಾರ ಕೈಯೆತ್ತಿ ರೈತನ ಭೂಮಿಯನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಕೊಡುತ್ತಿದೆ. ಈ ಕಾರಣಕ್ಕೇ ಆತ್ಮಹತ್ಯೆಗೂ ಅಭಿವೃದ್ಧಿಗೂ ಸಂಬಂಧ ಕಂಡುಬರುತ್ತದೆ. ಇದನ್ನು ಅಂಕಿಅಂಶಗಳು ಧೃಢಪಡಿಸುತ್ತವೆ.

ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ಅಂಕಿಅಂಶಗಳ ಪ್ರಕಾರ ದಕ್ಷಿಣದ ಐದು ರಾಜ್ಯಗಳಲ್ಲಿ (ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಕೇರಳ) ರೈತ ಆತ್ಮಹತ್ಯೆ ಪ್ರಮಾಣ ಅತಿ ಹೆಚ್ಚು. ಇಡೀ ದೇಶದ ಮುಕ್ಕಾಲು ಭಾಗ ರೈತ ಆತ್ಮಹತ್ಯೆ ಈ ಐದು ರಾಜ್ಯಗಳಲ್ಲಿ ಸಂಭವಿಸುತ್ತದೆ. ಒಟ್ಟು ಆತ್ಮಹತ್ಯೆಯ ಕಾಲುಭಾಗ ಮಹಾರಾಷ್ಟ್ರವೊಂದರಲ್ಲೇ ಸಂಭವಿಸುತ್ತದೆ. ಅತಿ ಬಡರಾಜ್ಯಗಳೂ, ಅತಿ ಜನ ಬಾಹುಳ್ಯವಿರುವ ರಾಜ್ಯಗಳೂ ಆದ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ, ಕೃಷಿ ಪ್ರಧಾನ ರಾಜ್ಯಗಳಾದ ಹರ‍್ಯಾಣಾ, ಪಂಜಾಬುಗಳಲ್ಲಿ ರೈತ ಆತ್ಮಹತ್ಯೆ ಕಡಿಮೆಯಿದೆ.

೨೦೧೨ರ ಒಂದು ವರ್ಷ ಅವಧಿಯ ಅಂಕಿಅಂಶ ನೋಡಿದರೆ:

ದೇಶಾದ್ಯಂತ ಒಟ್ಟೂ - ೧.೩೫ ಲಕ್ಷ ಆತ್ಮಹತ್ಯೆ ಸಂಭವಿಸಿದೆ.

ಅದರಲ್ಲಿ ರೈತ ಆತ್ಮಹತ್ಯೆ - ೧೩,೭೫೪
ಮಹಾರಾಷ್ಟ್ರ - ೩,೭೮೬
ಆಂಧ್ರ ಪ್ರದೇಶ - ೨,೫೭೨
ಕರ್ನಾಟಕ  - ೧,೮೭೫
ಮಧ್ಯಪ್ರದೇಶ  - ೧,೧೭೨
ಕೇರಳ      - ೧,೦೮೧
ಉತ್ತರ ಪ್ರದೇಶ - ೭೪೫
ಗುಜರಾತ್ - ೫೬೪
ಅಸ್ಸಾಂ - ೩೪೪
ತಮಿಳುನಾಡು - ೪೯೯
ಹರ‍್ಯಾಣಾ - ೨೭೬
ರಾಜಸ್ಥಾನ್ - ೨೭೦
ಪಂಜಾಬ್ - ೭೫
ಬಿಹಾರ - ೬೮..



ಸಾಮಾಜಿಕ, ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ದಕ್ಷಿಣದ ರಾಜ್ಯಗಳಲ್ಲಿ ಆತ್ಮಹತ್ಯೆ ಹೆಚ್ಚು, ರೈತ ಆತ್ಮಹತ್ಯೆಯೂ ಹೆಚ್ಚು. ಇದನ್ನು ಹೇಗೆ ವಿವರಿಸುವುದು? ವ್ಯಕ್ತಿಯ ಅಪರಿಹಾರ್ಯ ಕಷ್ಟಗಳ ನೀಗುವ ಮಾರ್ಗ ಆತ್ಮಹತ್ಯೆ ಎಂದು ಸಾಂಸ್ಕೃತಿಕವಾಗಿ ಈ ಪ್ರದೇಶ ಒಪ್ಪಿಕೊಂಡಿದೆಯೇ? ಅಭಿವೃದ್ಧಿ ಹುಟ್ಟಿಸಿದ ಆತಂಕ, ಆಧುನಿಕ ಬದುಕಿನ ಹುಸಿ ಮಾದರಿಗಳು ರೈತರನ್ನು ಹತಾಶೆಗೆ ನೂಕಿದೆಯೆ?

ರೈತ ಬದುಕು ಮತ್ತು ಗ್ರಾಮೀಣ ಬದುಕು ಅತ್ಯಂತ ಶಾಂತಿಯುತ, ಆರೋಗ್ಯಯುತ, ಆದರ್ಶ ಬದುಕು ಎಂದು ಹಲವರು ಭಾವಿಸುತ್ತಾರೆ. ಆದರೆ ಅಪಾಯದಂಚಿನಲ್ಲಿರುವ ವೃತ್ತಿ ಮತ್ತು ಜೀವಿ ಎಂದರೆ ರೈತನೇ. ಭಾರತವಷ್ಟೇ ಅಲ್ಲ, ರೈತ ಆತ್ಮಹತ್ಯೆ ಅಂತಾರಾಷ್ಟ್ರೀಯ ಸಮಸ್ಯೆಯಾಗಿದೆ. ಶ್ರೀಲಂಕಾ, ಕೆನಡಾ, ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾಗಳಲ್ಲೂ ರೈತರ ಆತ್ಮಹತ್ಯೆ ಸಂಭವಿಸುತ್ತದ. ಉಳಿದ ಸಾಮಾಜಿಕ, ಆರ್ಥಿಕ, ರಾಜಕೀಯ ಅಂಶಗಳ ಜೊತೆಗೆ ರೈತರ ಆತ್ಮಹತ್ಯೆಗೆ ಕಾರಣವೆಂದು ಕೆಲವು ಅಂಶಗಳನ್ನು ಗುರುತಿಸಲಾಗಿದೆ:


  • ಕೃಷಿಗೆ ನಿವೃತ್ತಿ ವಯಸ್ಸು ಇಲ್ಲ, ಇದು ದಣಿವಿಗೆ, ಏಕತಾನತೆಗೆ ಹತಾಶೆಗೆ ಕಾರಣವಾಗಬಹುದಾಗಿದೆ. 
  • ಉಳಿದ ವೃತ್ತಿಗಳ ಮಕ್ಕಳಿಗಿಂತ ಕೃಷಿಕರ ಮಕ್ಕಳು ನಡುವಯಸ್ಸಾದರೂ ಹಿರಿಯರ ನಿಯಂತ್ರಣದಲ್ಲೇ ಇರಬೇಕಾಗುತ್ತದೆ. ಇದು ತರುಣ ಪೀಳಿಗೆಗೆ ಸ್ಟ್ರೆಸ್ ಹುಟ್ಟಿಸುತ್ತದೆ. ಕೌಟುಂಬಿಕ ಅಶಾಂತಿ, ಕುಡಿತದ ಚಟಕ್ಕೆ; ಬಹುತೇಕ ಆತ್ಮಹತ್ಯೆಗಳು ೪೦ರ ಆಸುಪಾಸು ಸಂಭವಿಸುವುದಕ್ಕೆ ಇದೂ ಕಾರಣವಾಗಿದೆ.
  • ಕರ್ನಾಟಕ ಮತ್ತು ಆಂಧ್ರಗಳಲ್ಲಿ ನಡೆದ ಅಧ್ಯಯನದ ಪ್ರಕಾರ ೪೦% ರೈತರು ಕೃಷಿಯನ್ನು ಬಿಡಲು ಬಯಸುತ್ತಾರೆ. ಅನಿವಾರ್ಯವೆಂದಷ್ಟೆ ಅದಕ್ಕೆ ಅಂಟಿಕೊಂಡಿದ್ದಾರೆ. ಮನಸ್ಸಿಲ್ಲದ ಕೆಲಸ ಖುಷಿ ಕೊಡುವುದಿಲ್ಲ. ಮಾರುಕಟ್ಟೆಯ ಬೇಡಿಕೆ, ಹವಾಮಾನ ಮತ್ತು ಆಳುವವರ ನಿಯಂತ್ರಣಗಳ ಜೊತೆಗೆ ಆಡುವ ಜೂಜು ಕೃಷಿ. ಅಲ್ಲಿ ಎಲ್ಲ ಅನಿಶ್ಚಿತ. ಎಂದೇ ಅದು ಅತಿ ಹೆಚ್ಚು ಆತಂಕ ಸೃಷ್ಟಿಸುವ ವೃತ್ತಿಯೂ ಹೌದು. ಆತಂಕ, ಅನಿಶ್ಚಿತತೆ, ಅಸುರಕ್ಷಿತತೆಗಳು ರೈತರಿಗೆ ಚಟ ಅಂಟಿಸುವ ಕಾರಣಗಳೂ ಆಗಿದ್ದು ಖಿನ್ನತೆಗೆ, ಆತ್ಮಹತ್ಯೆಗೆ ಇದೇ ಕಾರಣವಾಗಿದೆ.



ಸಾಲ ಶೂಲ

ಈಗ ರೈತಪರ ಮಾತನಾಡುವವರು ಸಾಲಮನ್ನಾ ಒಂದೇ ಆತ್ಮಹತ್ಯೆ ತಡೆಯಲು ಪರಿಹಾರ ಎನ್ನುವಂತೆ ಮಾತನಾಡುವುದು ಕೇಳಿಬರುತ್ತಿದೆ. ಆದರೆ ನೋಡಿ: ೨೦೦೬ರಲ್ಲಿ ಹತ್ತಿ ಮತ್ತು ಕಿತ್ತಳೆ ಬೆಳೆಗೆ ಪ್ರಸಿದ್ಧವಾದ ಮಧ್ಯ ಮಹಾರಾಷ್ಟ್ರದ ಅತ್ಯಂತ ಹಿಂದುಳಿದ ವಿದರ್ಭ (ನಾಗ್ಪುರ ಮತ್ತು ಅಮರಾವತಿ ವಿಭಾಗಗಳನ್ನೊಳಗೊಂಡ ಮೊದಲಿನ ಬೇರಾರ್ ಪ್ರಾಂತ್ಯ) ದೇಶಾದ್ಯಂತ ಸರಣಿ ರೈತ ಆತ್ಮಹತ್ಯೆಗಳಿಂದ ಗಮನ ಸೆಳೆಯಿತು. ಆತ್ಮಹತ್ಯೆಯ ವರದಿಗಳು ಬಂದ ಕೂಡಲೇ ಕೇಂದ್ರ ಸರ್ಕಾರ ೧೧,೦೦೦ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಿಸಿತು. ಇದುವರೆಗೂ ಸತ್ತ ರೈತ ಕುಟುಂಬಗಳಿಗೆ ತಲಾ ಒಂದು ಲಕ್ಷ; ೭೧೨ ಕೋಟಿ ಬಡ್ಡಿ ಮನ್ನಾ; ಸುಧಾರಿತ ಸಾಲ ಸೌಲಭ್ಯ; ನೀರಾವರಿ ಉತ್ತಮಪಡಿಸುವುದು; ತಜ್ಞರಿಂದ ಸಲಹೆ; ಹೈನುಗಾರಿಕೆ, ತೋಟಗಾರಿಕೆ, ಮೀನುಗಾರಿಕೆಯೇ ಮೊದಲಾದ ಇತರ ಉತ್ಪಾದನಾ ಮಾರ್ಗಗಳನ್ನು ಜೊತೆಜೊತೆಗೇ ಪ್ರೋತ್ಸಾಹಿಸುವುದು ಇತ್ಯಾದಿ ಕ್ರಮಗಳನ್ನು ಆ ಪ್ಯಾಕೇಜಿನಲ್ಲಿ ಗುರುತಿಸಲಾಗಿತ್ತು. ಅದೇ ವರ್ಷ ದಕ್ಷಿಣದ ಐದು ರಾಜ್ಯಗಳ ೩೧ ಜಿಲ್ಲೆಗಳನ್ನೂ ಗುರುತಿಸಿ ವಿಶೇಷ ಯೋಜನೆ ಘೋಷಿಸಲಾಯಿತು. ಆದರೆ ಉದ್ದೇಶಿತ ಯೋಜನೆಗಳಲ್ಲಿ ಕಾರ್ಯರೂಪಕ್ಕೆ ಬಂದಿದ್ದು ಸಾಲ ನೀಡುವಿಕೆ, ಸಾಲಮನ್ನಾ, ಬಡ್ಡಿಮನ್ನಾದಂತಹ ಆರ್ಥಿಕ ಸಂಗತಿಗಳೇ ಹೊರತು ಕೃಷಿ ವಿಧಾನ, ಬೆಳೆ, ಪರ್ಯಾಯ ಆರ್ಥಿಕತೆ ಕುರಿತ ಸಲಹೆ-ಯೋಜನೆಗಳು ಕಾಗದದಿಂದ ನೆಲಕ್ಕಿಳಿಯಲಿಲ್ಲ.

೨೦೦೬ರಲ್ಲಿ ದೇಶದಲ್ಲಿ ೧೭,೦೬೦ ರೈತ ಆತ್ಮಹತ್ಯೆ ಸಂಭವಿಸಿತ್ತು. ನಂತರದ ವರ್ಷಗಳ ಅಂಕಿ ಅಂಶ ಹೀಗಿದೆ:

೨೦೦೭ - ೧೬,೬೩೨
೨೦೦೮ - ೧೬, ೭೯೬
೨೦೦೯ - ೧೭, ೩೬೮
೨೦೧೦ - ೧೫, ೯೬೪
೨೦೧೧ - ೧೪,೦೨೭
೨೦೧೨ - ೧೩, ೭೫೪
೨೦೧೩- ೧೧, ೭೭೨
೨೦೧೪ - ೧೨,೩೬೦

ಎಲ್ಲ ಪ್ಯಾಕೇಜುಗಳ ನಂತರವೂ ಈ ಒಂಭತ್ತು ವರ್ಷಗಳಲ್ಲಿ ರೈತರ ಆತ್ಮಹತ್ಯೆಗಳು ನಿರಂತರ ಸಂಭವಿಸುತ್ತಿವೆ. ಮಹಾರಾಷ್ಟ್ರ ಅತಿ ಹೆಚ್ಚು ರೈತ ಆತ್ಮಹತ್ಯೆ ಸಂಭವಿಸುವ ರಾಜ್ಯವಾಗಿ ಮುಂದುವರೆದಿದೆ. ಏಕೆ ಹೀಗೆ?

ಸಾಲ ಮನ್ನಾ, ಬಡ್ಡಿ ಮನ್ನಾದಂತಹ ಜನಪ್ರಿಯ ಘೋಷಣೆಗಳು, ಕ್ರಮಗಳು ರೈತರ ಬವಣೆಯನ್ನು ಸದ್ಯಕ್ಕೆ ನೀಗುತ್ತವೆ. ಆದರೆ ಸಮಸ್ಯೆ ಹಾಗೆಯೇ ಮುಂದಾಟುತ್ತದೆ. ಜೊತೆಗೆ ಸರ್ಕಾರಿ ಸಾಲವೇನೋ ಮನ್ನಾ ಆಗಬಹುದು, ಆದರೆ ‘ಕಿಬ್ಬದಿಯ ಕೀಲು ಮುರಿವ’ ಲೇವಾದೇವಿಗಾರರ ಸಾಲ, ಕೈಸಾಲಗಳು ಹೇಗೆ ಮನ್ನಾ ಆದಾವು? ೨೪-೫೦% ತನಕ ದುಬಾರಿ ಬಡ್ಡಿ ವಿಧಿಸುವ ಖಾಸಗಿ ಲೇವಾದೇವಿಗಾರರಿಂದ ಹೊಲಮನೆ ಅಡವಿಟ್ಟು ಮಾಡುವ ಸಾಲಗಳ ತೀರಿಸುವವರಾರು? ಬಡ್ಡಿಚಕ್ರಬಡ್ಡಿಗಳ ಸುಳಿಗೆ ಸಿಕ್ಕು ಸೋತು ಆತ್ಮಹತ್ಯೆಗೆ ಶರಣಾಗುವ ರೈತನಿಗೆ ಭಾರೀ ಮರಣೋತ್ತರ ಪರಿಹಾರ ಸಿಕ್ಕರೆ ಅದು ದುರ್ಬಲ ಮನಸಿನವರಿಗೆ ಸಾಯುವ ಅಪೇಕ್ಷೆ ಹುಟ್ಟಿಸುವುದಿಲ್ಲವೆ? ಆತ್ಮಹತ್ಯೆಗೆ ಸಾಮಾಜಿಕ ಸಮಸ್ಯೆಗಳೂ ಕಾರಣವಾಗಿರುವಾಗ ಕೇವಲ ಹಣ ಕೊಟ್ಟುಬಿಟ್ಟರೆ ರೈತ ಸಮಸ್ಯೆಗಳೆಲ್ಲ ಮಾಯವಾಗಿಬಿಡುವವೇ? ಅನ್ನದಾತನನ್ನು ಇಕೋ ತಕೋ ಸಾಲವೆಂದು ಸಾಲಗಾರನನ್ನಾಗಿಸಿ ಘನತೆ ಕುಗ್ಗಿಸಿದ ಪಾಪಕ್ಕೆ ಶಿಕ್ಷೆ ಅನುಭವಿಸಬೇಕಾಗುವುದು ಯಾರು? ಸಾಲವಿಲ್ಲದೆ ಕೃಷಿ ಸಾಧ್ಯವಿಲ್ಲವೆ?



ಇವೆಲ್ಲ ಪ್ರಶ್ನೆಗಳಿಗೆ ಉತ್ತರಿಸಿಕೊಂಡು ದೀರ್ಘಾವಧಿ ಬಾಳಿಕೆ ಬರುವ ಕಾರ್ಯಕ್ರಮ ಜಾರಿಯಾಗುವಂತೆ ನೋಡಿಕೊಳ್ಳಬೇಕು. ರೈತರು ಎಲ್ಲಕ್ಕೂ ಸಾಲವನ್ನೇ ನೆಚ್ಚಿಕೊಂಡು ಮುಂದುವರೆಯುವ ಮನಸ್ಥಿತಿ ತಲುಪದಂತೆ ಎಚ್ಚರಿಸಬೇಕು. ಸಾಲವನ್ನು ಅಧಿಕೃತ ಬ್ಯಾಂಕುಗಳಿಂದ, ಉತ್ಪನ್ನ ಹೆಚ್ಚಿಸುವ ಉದ್ದೇಶಗಳಿಗಾಗಿ ಮಾತ್ರ ಮಾಡಬೇಕೆಂದು ರೈತರ ಮನವೊಲಿಸಬೇಕು. ಏಕೆಂದರೆ ಸಾಲ ಕೊಡುವುದು ಕಷ್ಟವಲ್ಲ. ಆದರೆ ಅದು ಪಡೆದವ ತಲೆಯೆತ್ತಿ ನಿಲ್ಲಲು ಸಹಾಯ ಮಾಡಿದರಷ್ಟೇ ಅದಕ್ಕೊಂದು ಅರ್ಥವಿದೆ. ಈಗ ಸಾಲ ಶೂಲದಂತೆ ರೈತರ ಆತ್ಮನಾಶ ಮಾಡುತ್ತಿರುವಾಗ ಭಿನ್ನವಾಗಿ ಯೋಚಿಸಬೇಕಾದದ್ದು ಅನಿವಾರ್ಯವಾಗಿದೆ.

ರೈತರಿಗಷ್ಟೇ ಅಲ್ಲ, ಪ್ರತಿಯೊಬ್ಬನನ್ನೂ ಬಿಕ್ಕಟ್ಟುಗಳ ನಡುವೆ ಉಸಿರಾಡುವಂತೆ ಮಾಡಬಲ್ಲ ಸುಸ್ಥಿರ ಜೀವನವಿಧಾನವು ಸರಳ ಬದುಕಿನಲ್ಲಿದೆ. ಅದನ್ನು ವಿಶಾಲ ಸಮಾಜವೂ ಅರಿತು ಅದರಂತೆ ಬದುಕಲು ಕಲಿಯಬೇಕು..

ರೈತ ಮಹಿಳೆಯ ವಿಸ್ಮೃತಿ



ನೆಲದ ಒಡತಿಯೋ, ಕೂಲಿಯೋ - ಅಂತೂ ನೆಲದಲ್ಲಿ ಕೈಯಾಡಿಸುವವರಲ್ಲಿ ಮಹಿಳೆಯದು ಸಿಂಹಪಾಲು. ದವಸಧಾನ್ಯಗಳ ಬಿತ್ತಿ, ಕುಯ್ದು, ಬಡಿದು, ತೂರಿ, ಒಪ್ಪ ಓರಣ ಸಂಗ್ರಹ ಮಾಡುವ ಬಹುಪಾಲು ಕೆಲಸಗಳು ಅವರ ಪಾಲಿನವು. ರೈತ ಆತ್ಮಹತ್ಯೆಗಳಲ್ಲಿ ಹೆಣ್ಣುಮಕ್ಕಳ ಕತೆ ಏನಿರಬಹುದು ನೋಡಹೊರಟರೆ ಒಟ್ಟೂ ಜನಸಂಖ್ಯೆಯ ಆತ್ಮಹತ್ಯೆಯ ಪ್ರಮಾಣದಲ್ಲಿ ಹೇಗೋ ಹಾಗೆ ರೈತ ಆತ್ಮಹತ್ಯೆಗಳಲ್ಲೂ ಪುರುಷರದೇ ಮೇಲುಗೈ. (ಪ್ರತಿ ಲಕ್ಷ ರೈತರಿಗೆ ೧೬. ೨ ಪುರುಷ ರೈತರು, ಲಕ್ಷ ರೈತ ಮಹಿಳೆಯರಲ್ಲಿ ೬.೨ ಮಹಿಳೆಯರು ಆತ್ಮಹತ್ಯೆಗೆ ಶರಣಾಗುತ್ತಾರೆ.) ಬಹುಶಃ ಹೊಲಮನೆ ಎರಡೂ ಕಡೆ ಹೆಗಲಿಗೇರುವ ಜವಾಬ್ದಾರಿಯ ಹೊರೆಗಳು ರೈತಮಹಿಳೆಯ ಆತಂಕ, ಖಿನ್ನತೆಗೆ ಕಾರಣವಾಗಿರಬಹುದಾಗಿದೆ.

ಒಂದು ಕತೆ ನೆನಪಾಗುತ್ತಿದೆ:

ಭೂಮಿ ಮೇಲೆ ಜನಸಂಖ್ಯೆ ಹೆಚ್ಚಾಯಿತು. ಎಲ್ಲೆಲ್ಲೂ ಹಾಹಾಕಾರ. ತಿನ್ನಲು, ಕುಡಿಯಲು ಸಿಗದೆ ಬರ. ಹುಟ್ಟಿಸಿದವ ಹುಲ್ಲು ಮೇಯಿಸನೇ? ಅವ ಭೂಮಿ ಮೇಲಿರುವವರನ್ನು ದೋ..ಡ್ಡದೊಂದು ವ್ಯೋಮನೌಕೆಯಲ್ಲಿ ಮಂಗಳ ಗ್ರಹದ ಮೇಲಿಳಿಸಿ ಮಂಗಳವಾಗಲಿ ಎಂದ. ಭೂಮಿ ಮೇಲಿಂದ ಹೋದವರು ಅಲ್ಲಿ ತಾವು ಕೊಂಡು ಹೋದ ದವಸ ದಾನ್ಯ ತಿಂದುಂಡು ಆರಾಮ ಅಲೆದರು. ತಂದದ್ದು ಖರ್ಚಾಯಿತು. ಆಗ ಕಾಡುಮೇಡು ತಿರುಗಿದರು. ಹಣ್ಣುಹಂಪಲು ಬೇರು ಗೆಡ್ಡೆಗೆಣಸು ಚಿಗುರು ತಿಂದರು. ಅದೂ ಖಾಲಿಯಾಯಿತು. ಈಗ ಕೂಗಿ ಕರೆದರು.

‘ತಂದೇ..’
ತಂದೆ ಬಂದ. ಅವನಿಗೆ ಅವರು ಹೇಳದೆ ಎಲ್ಲ ಅರಿವಾಯಿತು. ಅವನೆಂದ,
‘ತಂದದ್ದು ಇದ್ದದ್ದು ಖಾಲಿಯಾಯಿತೇ? ಹಾಗಾದರಿನ್ನು ನೀವು ಬೆಳೆಯಬೇಕು..’
‘ಹೌದೇ? ಆದರೆ ಹೇಗೆ?’
‘ಉತ್ತಿರಿ, ಬಿತ್ತಿರಿ.’
‘ಉತ್ತಿ ಬಿತ್ತುವುದೆ? ಬೀಜ ಎಲ್ಲಿ?’
‘ತರಲಿಲ್ಲವೆ? ಕೇಳಿ ನೋಡಿ’

ಯಾರ ಬಳಿಯಿದೆ ಬೀಜ? ಅರಸ ಮಂತ್ರಿಯ ಕೇಳಿದ. ಮಂತ್ರಿ ಆಪ್ತ ಸಹಾಯಕನ ಕೇಳಿದ. ಅವ ವ್ಯಾಪಾರಿ ಬಳಿ. ವ್ಯಾಪಾರಿ ದಲ್ಲಾಳಿ ಬಳಿ. ದಲ್ಲಾಳಿ ರೈತನ ಬಳಿ. ರೈತ ಜೀತದವನ ಬಳಿ. ಊಂಹ್ಞೂಂ, ಯಾರ ಬಳಿಯೂ ಬೀಜ ಇಲ್ಲ.

ಪರಸ್ಪರ ಮೂದಲಿಕೆ, ಗುದ್ದಾಟ ಶುರುವಾಯಿತು. ಏಕೆ ಗದ್ದಲವಾಗುತ್ತಿದೆಯೆಂದು ನೋಡಲು ರೈತನ ಹೆಂಡತಿ ಹೊರಬಂದಳು. ಕೊನೆಗೆ ಎಲ್ಲ ಗದ್ದಲ ಬೀಜ ಇಲ್ಲದ್ದಕ್ಕೆ ಎಂದು ತಿಳಿಯಿತು. ಕೂಡಲೆ ಗಂಡನ  ಕರೆದಳು. ಬೀಜ ನಮ್ಮಲ್ಲಿದೆ ಎಂದಳು. ಅವನಿಗೆ ತನ್ನ ಹೆಂಡತಿ ಹೇಳಿದ್ದು ಕೇಳಿ ಇವಳಿಷ್ಟು ಜಾಣೆ ಎಂದು ತನಗೆ ಗೊತ್ತೇ ಇರಲಿಲ್ಲವಲ್ಲ ಎಂದು ಆಶ್ಚರ್ಯವಾಯಿತು. ಅವಳು ಭೂಮಿಯಿಂದ ಬರುತ್ತ ಯಾವುದಕ್ಕೂ ಇರಲಿ ಅಂದು ಪಾವು ಬೀಜವನ್ನು ಸೆರಗಿನಲ್ಲಿ ಕಟ್ಟಿಕೊಂಡು ಬಂದಿದ್ದಳು. ಬಂದವಳೇ ಮಡಕೆಯಲ್ಲಿಟ್ಟು ಹೂತಿದ್ದಳು! ಅವಳಷ್ಟೆ ಅಲ್ಲ, ಸೆರಗಿನ ಮರೆಯಲ್ಲಿ ಎಲ್ಲ ಹೆಂಗಸರೂ ಹೀಗೇ ಏನೋ ಒಂದನ್ನು ಕಟ್ಟಿಕೊಂಡು, ಗುಟ್ಟಾಗಿ ತಂದು ಹುಗಿದಿದ್ದರು!

ಇದು ಕತೆ. ಆದರೆ ವಾಸ್ತವದಲ್ಲಿ ಬೀಜ ಕಂಪನಿಗಳು ರೈತನ ಹೆಂಡತಿಯನ್ನು ಎಂಥ ವಿಸ್ಮೃತಿಗೊಳಪಡಿಸಿವೆಯೆಂದರೆ ಅವಳು ಸೆರಗಲ್ಲಿ ಮುಂಜಾಗರೂಕತೆಯಾಗಿ ಬೀಜ ಕಟ್ಟಿಕೊಳ್ಳುವುದನ್ನೇ ಮರೆಸಲು ಅವರು ಯಶಸ್ವಿಯಾಗಿದ್ದಾರೆ! ಕೃಷಿಯ ಬಿಕ್ಕಟ್ಟುಗಳ ಬೀಜ ಬಿತ್ತನೆ ಬೀಜ ಮತ್ತಿತರ ರೈತ ಅವಶ್ಯಕ ವಸ್ತುಗಳ ವ್ಯಾಪಾರೀಕರಣದಲ್ಲಿ ಅಡಗಿದೆ.

ನಾವೆಲ್ಲಿ ತಪ್ಪಿದೆವು?



ಮನುಷ್ಯನ ನೆಲದ ಸಂಬಂಧ ಆರೆಂಟು ಸಾವಿರ ವರ್ಷಗಳದ್ದು. ನಾಗರಿಕತೆ ಬೆಳೆದಿದ್ದೇ ಕೃಷಿ ಶುರುವಾದ ನಂತರ. ನೆಲತಾಯಿಯ ಸಂಬಂಧ, ನೆಲವೆಂಬ ಸಂಪನ್ಮೂಲ ಅಂತಿಂಥವಲ್ಲ. ನೆಲದ ನಂಟಿನ ಕಾರಣವಾಗಿ ರೈತ ಗಳಿಸಿಕೊಂಡ ಜ್ಞಾನವೂ ಅಸಾಮಾನ್ಯವಾದದ್ದು. ಅಲ್ಲಿ ತೊಡಗಿಸಬೇಕಾದ ಶ್ರಮವೆಂಬ ಬಂಡವಾಳ ಯಾರೂ ಹೇಳಿಕೊಡದ ಪಾಠವನ್ನು ನೆಲ ಮುಟ್ಟುವವರಿಗೆ ಹೇಳಿಕೊಡುತ್ತದೆ. ಯಾವ ನೆಲದಲ್ಲಿ, ಯಾವ ಬೆಳೆಯನ್ನು, ವರ್ಷಕ್ಕೆ ಎಷ್ಟು ಬೆಳೆಯನ್ನು ಬೆಳೆಯಬೇಕು? ಬಿತ್ತನೆ ವಿಧಾನ, ನೆಲದ ತಯಾರಿ, ಕಳೆಕೀಟಪ್ರಾಣಿಗಳ ನಿರ್ವಹಣೆ, ಬೀಜ ಸಂಗ್ರಹ, ಬೆಳೆಯ ಸಂಗ್ರಹ-ವಿನಿಮಯ-ವಿನಿಯೋಗ ಹೇಗೆ ಎನ್ನುವುದನ್ನೆಲ್ಲ ನೆಲ ಮನುಷ್ಯನಿಗೆ ಹೇಳಿಕೊಟ್ಟಿದೆ. ಮಳೆ ಕಡಿಮೆಯಿರುವ ಬರದ ನಾಡಿನಲ್ಲೂ, ಹಿಮಾಲಯದಲ್ಲೂ, ಮಲೆನಾಡಿನಲ್ಲೂ, ಕರಾವಳಿಯಲ್ಲೂ, ಉಷ್ಣಸಮಶೀತೋಷ್ಣ ವಲಯದ ಬಯಲುಗಳಲ್ಲೂ, ಬೆಟ್ಟಗುಡ್ಡಗಳ ಕಡಿದಾದ ಇಳಿಜಾರಿನಲ್ಲೂ, ನದಿ ಬಯಲಿನಲ್ಲೂ, ದ್ವೀಪದಲ್ಲೂ, ಜ್ವಾಲಾಮುಖಿಯ ಸಖ್ಯದಲ್ಲೂ - ಒಟ್ಟಾರೆ ಮನುಷ್ಯರು ಎಲ್ಲೆಲ್ಲಿ ಇದ್ದಾರೋ ಅಲ್ಲಲ್ಲಿನ ನೆಲದ ಗುಣ ಅರಿತು ಸಾಗುವಳಿ ಮಾಡಿ ಬರನೆರೆಗಳ ದಾಟಿ ಬದುಕಿ ಬಂದಿದ್ದಾರೆ. ಸಾವಿರಾರು ವರ್ಷಗಳಿಂದ ತಿನ್ನಲು ತಮಗೆಷ್ಟು ಬೇಕೋ ಅಷ್ಟು ಮಾತ್ರವಲ್ಲದೆ, ಭೂಮಿ ಮೇಲಿರುವ ನೆಲಹೀನರ, ಬೆವರು ಹರಿಸದವರ ಪರವಾಗಿಯೂ ಬೆಳೆ ಬೆಳೆದಿದ್ದಾರೆ.

ಹೀಗಿರುತ್ತ ರೈತರ ಅತಂತ್ರ ಬದುಕು, ಬೆಳೆಯ ವಿಫಲತೆ, ಆತ್ಮಹತ್ಯೆ, ಸಾಲ ಬಾಕಿ ಇತ್ಯಾದಿ ಎಲ್ಲ ಅಂದರೆ ಎಲ್ಲಕ್ಕೂ ಪ್ರಭುತ್ವವೇ ಕಾರಣವೆಂದು ನಾವು ಹೇಳಿದರೆ ಅದು ರೈತರ ಪಾರಂಪರಿಕ ಜ್ಞಾನಕ್ಕೆ ಮಾಡುವ ಅಪಚಾರವಾಗುತ್ತದೆ. ಇವತ್ತಿನ ರೈತರು ಆತ್ಮಹತ್ಯೆಯನ್ನು ಪರಿಹಾರವಾಗಿ ಕಾಣುತ್ತಿರುವುದರ ಹಿಂದೆ ಪ್ರಭುತ್ವದ ಪಾಲು ಎಷ್ಟು ಇದೆಯೋ ಅಷ್ಟೇ ಕೃಷಿಗೆ ಸಂಬಂಧಿಸಿದ ಮೂಲಾಧಾರಗಳೆಲ್ಲ ಹಿಂದಿರುಗಲಾರದಷ್ಟು ಬದಲಾಗಲು ಬಿಟ್ಟ ನಮ್ಮ ಪಾಲೂ ಇದೆ. ರೈತರ ಸಾವು ಬದುಕುಗಳನ್ನು ಇಡಿಇಡಿಯಾಗಿ ಪ್ರಭುತ್ವದ ಕೈಗೆ ಕೊಟ್ಟವರು ಯಾರು? ಆಗ ನಾವೇನು ಮಾಡುತ್ತಿದ್ದೆವು? ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ, ಕಳೆನಾಶಕ, ಉಪಕರಣಗಳಿಗೆಲ್ಲ ಬಹುರಾಷ್ಟ್ರೀಯ ಕಂಪನಿಗಳನ್ನು ಅವಲಂಬಿಸತೊಡಗಿದ ರೈತರನ್ನು ಸಾವಯವ ಕೃಷಿ, ಪರ್ಯಾಯ ಕೃಷಿ, ಶೂನ್ಯ ಕೃಷಿಯ ಬಳಕೆಗೆ ಮನವೊಲಿಸುವಲ್ಲಿ ನಾವು ಸೋತೆವು. ತಂತಮ್ಮ ನೆಲದ ಸತ್ವ, ನೀರಿನ ಲಭ್ಯತೆ ಮೇಲೆ ಮಳೆ ಆಧಾರಿತ ಕೃಷಿ ಮಾಡುತ್ತಿದ್ದ ರೈತರು ಕೊಳವೆ ಬಾವಿ ಕೊರೆದು, ನೀರಾವರಿಯಲ್ಲೂ ವಾಣಿಜ್ಯ ಬೆಳೆ ಬೆಳೆಯತೊಡಗಿದಾಗ ಅದರ ಅಪಾಯ ಗುರುತಿಸಿ ಹೇಳುವಲ್ಲಿ ವಿಫಲವಾದೆವು. ರಸಾತಳಕ್ಕಿಳಿದ ಅಂತರ್ಜಲ ಹುಡುಕಲು ಒಂದಾದ ಮೇಲೊಂದು ಕೊಳವೆಬಾವಿ ಕೊರೆವಾಗ ಸಾಲ ಮನ್ನಾ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದೆವೇ ಹೊರತು ಭೂ ತಾಪಮಾನ ಏರಿಕೆ, ಮಳೆ ನೀರು-ಚಾವಣಿ ನೀರು ಸಂಗ್ರಹದಂತಹ ವಿಜ್ಞಾನಿ-ಪರಿಸರವಾದಿಗಳ ಸಲಹೆಗಳನ್ನೆಲ್ಲ ಬೊಗಳೆ ಮಾತುಗಳೆಂದು ಅತ್ತ ಸರಿಸಿದೆವು. ಕೂಲಿಕಾರ್ಮಿಕರೂ ಸಿಗದ ನಷ್ಟದಾಯಕ ಕೃಷಿಗೆ ಬೇಸತ್ತು ರೈತರೇ ಅಭಿವೃದ್ಧಿ ಯೋಜನೆಗಳಿಗೆ ಭೂಮಿ ಪರಭಾರೆ ಮಾಡಿ ನಗರ ಸೇರುವ ಒಲವು ತೋರಿದಾಗ ಬಹುರಾಷ್ಟ್ರೀಯ ಕಂಪನಿಗಳನ್ನು, ಪ್ರಭುತ್ವವನ್ನು ದೂರಿದೆವು. ರೈತ ಬದುಕು, ಸಮಸ್ಯೆ, ಒಲವು ನಿಲುವು, ನಂಬಿಕೆ-ಮೂಢನಂಬಿಕೆಗಳನ್ನು ಸಮಗ್ರವಾಗಿ ಗ್ರಹಿಸಲು ವಿಫಲವಾಗಿ ರೈತರೆಂದರೆ ಬೀಜ, ಸಾಲ, ಎಂಎನ್‌ಸಿ, ಆತ್ಮಹತ್ಯೆ ಎಂದು ಭಾವಿಸಿ ಅವರನ್ನು ರಕ್ಷಿಸಹೊರಟೆವು.

ಹೀಗಿರುತ್ತ ಪ್ರಜ್ಞಾವಂತರ ಜವಾಬ್ದಾರಿ ರೈತರೊಡನೆ ಸಂವಾದ, ರೈತಸ್ನೇಹಿ ಬದುಕು, ಬದಲಾವಣೆಗೆ ವ್ಯಕ್ತಿಗತ ಹಾಗೂ ಪ್ರಭುತ್ವದ ನೆಲೆಯಲ್ಲಿ ಒತ್ತಾಯ ತರುವುದು.. ಇತ್ಯಾದಿ ಬಹುಸ್ತರಗಳದು ಎಂದು ಅರಿಯಲು ವಿಫಲವಾದದ್ದು ಕೃಷಿಕರಲ್ಲದ ನಮ್ಮಂಥವರ ದೊಡ್ಡ ಲೋಪವಾಗಿದೆ.

ಹಾಗಾದರೆ ಏನು ಮಾಡಬೇಕು?


  • ಪ್ರತಿ ರೈತನೂ ತನ್ನ ಕುಟುಂಬಕ್ಕೆ ಕನಿಷ್ಠ ಆಹಾರ ಭದ್ರತೆ ಒದಗಿಸುವಷ್ಟು ಆಹಾರ ಧಾನ್ಯವನ್ನು ಬೆಳೆದುಕೊಂಡು ಸುಸ್ಥಿರ, ಸರಳ ಬದುಕನ್ನು ಕಲ್ಪಿಸಿಕೊಳ್ಳಬೇಕು.
  • ಭಾರತದಂತಹ ಸಣ್ಣ-ಅತಿಸಣ್ಣ ಹಿಡುವಳಿಗಳ ದೇಶದಲ್ಲಿ ಕೃಷಿ ಬದುಕಿನ ಮೂಲ ಅವಶ್ಯಕತೆಗಳನಷ್ಟೆ ತೀರಿಸಬಲ್ಲುದೇ ಹೊರತು ಲಾಭ ಮಾಡಿಕೊಡುವಂಥದಲ್ಲ. ಆದ್ದರಿಂದ ರೈತರು ಕೇವಲ ಕೃಷಿಯನ್ನೇ, ಒಂದೇ ಬೆಳೆಯನ್ನೇ ನೆಚ್ಚದೆ ಪರ್ಯಾಯ ಆರ್ಥಿಕ ದಾರಿಗಳನ್ನು ಕಂಡುಕೊಳ್ಳಬೇಕು. ಪೂರಕ ಉದ್ಯಮವಾಗಿ ಹೈನುಗಾರಿಕೆ, ತೋಟದ ಬೆಳೆ, ಮಿಶ್ರ ಬೆಳೆ, ಕಡಿಮೆ ಅವಧಿಯ ವಾಣಿಜ್ಯ ಬೆಳೆಗಳನ್ನೂ ಬೆಳೆಯುವಂತೆ ಸಲಹೆ ನೀಡಬೇಕು. ಭಾರತದ ೮೦% ಕೃಷಿ ಇವತ್ತಿಗೂ ಮಳೆಯಾಧಾರಿತವಾಗಿರುವುದರಿಂದ ಬರನೆರೆಗಳು ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆ ಹೆಚ್ಚು. ಎಂದೇ ಜಾನುವಾರು ಸಾಕಾಣಿಕೆಯು ರಾಸಾಯನಿಕ ಬಳಕೆಯ ಅವಲಂಬನೆ ತಪ್ಪಿಸಿ ಹೈನುಗಾರಿಕೆಯ ಲಾಭವನ್ನೂ ಕೊಡಬಹುದು.
  • ಭೂಮಿಯಿರುವವರ ಕಷ್ಟ ಒಂದು ತೆರನದಾದರೆ ಭೂಹೀನರ ಕಷ್ಟ ಮತ್ತೊಂದು ತೆರನದು. ಒಟ್ಟಾರೆ ಭೂಹೀನ ಕೃಷಿಕೂಲಿಕಾರ್ಮಿಕರಿಗೆ ತಕ್ಕ ಕೂಲಿ ಸಿಗಬೇಕು. ಹಾಗಾಗಲು ಬೆಳೆವವನಿಗೆ ತಕ್ಕ ಬೆಲೆ ದೊರೆಯಬೇಕು. ಆದರೆ ಕೊಳ್ಳುವವನಿಗೆ ದವಸಧಾನ್ಯಗಳ ಬೆಲೆ ಕೈಗೆಟುಕುವಂತೆಯೂ ಇರಬೇಕು. ಪರಸ್ಪರ ವಿರುದ್ಧವೆನಿಸುವಂತಿರುವ ಈ ಮೂರೂ ಸಂಗತಿಗಳು ಸಾಕಾರಗೊಳ್ಳಲು ಏನು ಮಾಡಬೇಕು? ಅದಕ್ಕೆ ಕೃಷಿಉತ್ಪನ್ನ ಮಾರಾಟ ವ್ಯವಸ್ಥೆ ಆಮೂಲಾಗ್ರ ಬದಲಾಗಬೇಕು. ಏಕೆಂದರೆ ಎಲ್ಲ ಸಮಸ್ಯೆಗಳ ತಾಯಿಬೇರು ತಪ್ಪು ಮಾರಾಟ ವ್ಯವಸ್ಥೆಯಲ್ಲಿ ಅಡಗಿದೆ. ಸ್ಥಳೀಯವಾದದ್ದು ಸ್ಥಳೀಯರಿಗೆ ನೇರವಾಗಿ ತಕ್ಕ ಬೆಲೆಯಲ್ಲಿ ದೊರಕುವಂತಹ ಸಹಕಾರಿ ಮಾರಾಟ ವ್ಯವಸ್ಥೆಯ ಕಡೆಗೆ ತುರ್ತು ಗಮನ ಹರಿಸಬೇಕು. ತಜ್ಞರ ತಂಡವು ಆದ್ಯತೆಯ ಮೇರೆಗೆ ಇದನ್ನು ಕೈಗೆತ್ತಿಕೊಳ್ಳಬೇಕು.
  • ಮುಕ್ತ ಆರ್ಥಿಕತೆಯ ನೆಪದಲ್ಲಿ ವಿದೇಶೀ ವ್ಯಾಪಾರಿಗಳು, ಸ್ವದೇಶಿ ಬಿಲಿಯನೇರುಗಳು ತರಕಾರಿ-ಹಣ್ಣಿನ ಅಂಗಡಿ ತೆರೆದರೆ ಗ್ರಾಹಕನಿಗೆ ನಯಾಪೈಸೆ ಲಾಭ ಆಗಬಹುದು. ಆದರೆ ರೈತನಿಗೆ ಹನ್ನೆರೆಡಾಣೆ ನಷ್ಟದ ಬಾಬತ್ತೇ ಆಗುತ್ತದೆ. ಜಾಗತಿಕ ಮುಕ್ತ ಮಾರುಕಟ್ಟೆ ವ್ಯವಸ್ಥೆ ಹೀಗೇ ಮುಂದುವರೆದಲ್ಲಿ ಭಾರತದ ಕೃಷಿಕ್ಷೇತ್ರವಷ್ಟೇ ಅಲ್ಲ, ದೇಶವೇ ದಿವಾಳಿಯಾಗಿ ಇನ್ನೊಂದು ಗ್ರೀಸ್ ಆಗಲಿದೆ. ವಿಶ್ವಬ್ಯಾಂಕ್ ಮತ್ತು ಜಾಗತೀಕರಣದ ಹಿಂದಿನ ಮಾರುಕಟ್ಟೆ ಶಕ್ತಿಗಳು ಗ್ರೀಸ್ ಆತ್ಮಹತ್ಯೆ ಮಾಡಿಕೊಳ್ಳಲು ನೇರ ಕಾರಣರಾಗಿದ್ದಾರೆ. ಎಗ್ಗಿಲ್ಲದೆ ತಕ್ಕಡಿ ಥೈಲಿ ಹಿಡಿದು ಬರುವವರಿಗೆಲ್ಲ ರತ್ನಗಂಬಳಿ ಹಾಕಿ ಸ್ವಾಗತಿಸುವ ನಮ್ಮ ಸರ್ಕಾರ ಗ್ರೀಸ್‌ನಿಂದ ಪಾಠ ಕಲಿಯಬೇಕಿದೆ. ಇದು ಸಾಲಮನ್ನಾಗಿಂತ ತುರ್ತಿನ ಕ್ರಮವಾಗಿದೆ.  
  • ಪ್ರತಿಯೊಬ್ಬರೂ ತಮ್ಮ ಊಟದ ತಟ್ಟೆಯಲ್ಲಿ, ಬದುಕಿನಲ್ಲಿ ಸ್ಥಳೀಯತೆಯನ್ನು ಬೆಂಬಲಿಸುವ, ಸರಳವಾಗಿರುವ ಆಹಾರ ಕ್ರಮ ರೂಢಿಸಿಕೊಳ್ಳಬೇಕು.
  • ನಮ್ಮ ಸಮೀಪದ ರೈತರೊಡನೆ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು. ಸಾಧ್ಯವಾದಷ್ಟು ಅವರಿಂದ ನೇರ ಖರೀದಿ ಮಾಡಬೇಕು. ಗ್ರಾಮೀಣ ಭಾಗದ ವೈದ್ಯರು ರೈತರೊಡನೆ ಆಪ್ತ ಸಂವಾದ ನಡೆಸಿ ಆತಂಕದ ಪರಿಸ್ಥಿತಿ ಎದುರಿಸಲು ಅಗತ್ಯವಿರುವ ಮನೋಸ್ಥೈರ್ಯ ಬೆಳೆಸಿಕೊಳ್ಳುವಂತಹ ಮಾರ್ಗಗಳ ಸೂಚಿಸಬೇಕು.




ಕಳೆ ಬೆಳೆ ಗುರುತಿಸಿ ಕಳೆ ಕಿತ್ತುಹಾಕುವ ಕೆಲಸವನ್ನು ರೈತಬಂಧು ಇಡಿಯ ಸಮಾಜಕ್ಕೆ ಹೇಳಿಕೊಡುವವನು. ಆದರೆ ಭಾರತದಲ್ಲಿ ಪ್ರತಿ ೩೨ ನಿಮಿಷಕ್ಕೊಬ್ಬ ರೈತ ಸಾವನ್ನಪ್ಪುತ್ತಾನೆ.

ಹಾಗೆಯೇ ಪ್ರತಿ ೧೮ ನಿಮಿಷಕ್ಕೊಂದು ದಲಿತ ದೌರ್ಜನ್ಯ ಸಂಭವಿಸುತ್ತದೆ. ಪ್ರತಿ ೬ ನಿಮಿಷಕ್ಕೊಬ್ಬಳು ತಾಯಿ ಹೆರಿಗೆಯ ವೇಳೆ ಸಾಯುತ್ತಾಳೆ. ಪ್ರತಿ ೨೦ ನಿಮಿಷಕ್ಕೊಬ್ಬ ಹೆಣ್ಣು ಅತ್ಯಾಚಾರಕ್ಕೊಳಗಾಗುತ್ತಾಳೆ. ಹೀಗೆ ಸಾಯುವವರ ಲೆಕ್ಕ ಹೇಳಿದಾಗಲಷ್ಟೇ ಬೆಚ್ಚಿ ಎಚ್ಚೆತ್ತುಕೊಳ್ಳುವ ಜಡತನವನ್ನು ವ್ಯವಸ್ಥೆಯೂ, ನಾವೂ ನೀಗಿಕೊಳ್ಳಬೇಕು. ಅಂಥ ಒಂದು ದಿನ ರೈತ ಆತ್ಮಹತ್ಯೆಯಷ್ಟೇ ಅಲ್ಲ, ಯಾವ ಸಾಮಾಜಿಕ ಸಮಸ್ಯೆಯ ಕುರಿತೂ ಹೀಗೆಲ್ಲ ಗಮನ ಸೆಳೆವ ಅವಶ್ಯಕತೆಯೇ ಬಾರದಿರಬಹುದು..