Thursday 20 August 2015

ಮಹಿಳಾ ಚಳುವಳಿ: ಬಿಕ್ಕಟ್ಟು ಮತ್ತು ಹೊರ ದಾರಿಗಳು







(ಆ. ೧೫, ೧೬ರಂದು ದಾವಣಗೆರೆಯಲ್ಲಿ ನೂರ್ ಶ್ರೀಧರ್ ಮತ್ತು ಸಂಗಾತಿಗಳು ವಿವಿಧ ಸೈದ್ಧಾಂತಿಕ ಧಾರೆಯ ಜನಪರ ಸಂಘಟನೆಗಳನ್ನು ಒಗ್ಗೂಡಿಸುವ ದೃಷ್ಟಿಯಿಂದ ‘ಸಮಾನತೆಗಾಗಿ ಜನಾಂದೋಲನ’ ಸಂಘಟಿಸಿ ಎರಡು ದಿನದ ಐಕ್ಯತಾ ಸಮಾವೇಶ ನಡೆಸಿದರು. ಮೊದಲ ದಿನ ‘ವಿವಿಧ ಧಾರೆಯ ಚಳುವಳಿಗಳು ಎದುರಿಸುತ್ತಿರುವ ಬಿಕ್ಕಟ್ಟು ಹಾಗೂ ಕೂಡಿ ಕಂಡುಕೊಳ್ಳಬೇಕಾದ ಪರಿಹಾರಗಳು’ ಎಂಬ ಗೋಷ್ಠಿಯಲ್ಲಿ ಮಹಿಳಾ ಚಳುವಳಿ ಕುರಿತು ಆಡಿದ ಮಾತುಗಳ ಬರಹ ರೂಪವಿದು.)

ಕರ್ನಾಟಕದಲ್ಲಿ ಒಂದು ಸ್ವಾಯತ್ತ ಮಹಿಳಾ ಚಳುವಳಿ ಚಾಲ್ತಿಯಲ್ಲಿದೆಯೇ? ಹಲವು ಸೈದ್ಧಾಂತಿಕ ಸಂಘಟನೆಗಳಲ್ಲಿ, ಜನಪರ ಗುಂಪುಗಳಲ್ಲಿ, ಜಾತಿ ಗುಂಪುಗಳಲ್ಲಿ, ಕಾರ್ಮಿಕ ಸಂಘಟನೆಗಳಲ್ಲಿ ಮಹಿಳಾ ಹಿತಾಸಕ್ತಿ ಹಾಗೂ ಕ್ರಿಯಾಶೀಲ ಸಂಪನ್ಮೂಲ ಹರಿದು ಹಂಚಿ ಹೋಗಿರುವಾಗ ಮಹಿಳಾ ಹಿತಾಸಕ್ತಿಗೇ ಮೀಸಲಾದ ಮಹಿಳಾ ಚಳುವಳಿ ಇದೆಯೇ? ಎಂಬ ಪ್ರಶ್ನೆಗಳಿವೆ. ಹೌದು, ಸ್ವಾಯತ್ತ ಮಹಿಳಾ ಚಳುವಳಿ ಇಲ್ಲ. ಆದರೆ ಹಲವು ಸಂಘಟನೆಗಳಲ್ಲಿ ಹಂಚಿಹೋದ ಕ್ರಿಯಾಶೀಲ ಹೆಣ್ಣುಜೀವಗಳನ್ನೆಲ್ಲ ಒಂದೆಡೆ ಸೇರಿಸಿ ಸಂಘಟನೆಗಳ ಜಾಲ ಹೆಣೆಯುವ ಕನಸು ಕಂಡು ‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ ಅಸ್ತಿತ್ವಕ್ಕೆ ಬಂದಿತು. ನೂರಾರು ಸಂಘಸಂಸ್ಥೆಗಳು ಭಾಗೀದಾರರಾಗಿ ಮೂರು ಬಾರಿ ಎಲ್ಲ ಒಂದೆಡೆ ಕಲೆತು ಸಮಾವೇಶ ಸಂಘಟಿಸಿದೆವು. ಸಮಾನ ಮನಸ್ಕ ಸಂಘಟನೆಗಳ ಜಾಲವಾಗಿ ಅದನ್ನು ರೂಪಿಸಬೇಕೆಂದು ಕನಸಿದೆವು. ಅದರ ಲೋಪದೋಷ ಹಾಗೂ ಆಗಬೇಕಾದ ಮಾರ್ಪಾಟುಗಳು ಸಾಕಷ್ಟಿದ್ದರೂ ‘ಐಕ್ಯ ಮಹಿಳಾ ಒಕ್ಕೂಟ’ದ ಅನುಭವದ ಹಿನ್ನೆಲೆಯಲ್ಲಿ ಮಹಿಳಾ ಚಳುವಳಿ ಎದುರಿಸುತ್ತಿರುವ ಬಿಕ್ಕಟ್ಟುಗಳು ಮತ್ತು ಚಳುವಳಿಯಲ್ಲಿರುವ ಮಹಿಳೆಯರ ಬಿಕ್ಕಟ್ಟುಗಳ ಸುತ್ತ ನನ್ನ ಮಾತುಗಳಿವೆ.

ಕಾಲ್ತೊಡಕುಗಳು: 

೧. ಒಂದು ತಲೆ, ಇಪ್ಪತ್ತು ಕೈಯ ಮಹಿಳೆಗಿರುವ ಎಲ್ಲ ಮಿತಿಗಳು ಮಹಿಳಾ ಚಳುವಳಿಗೂ ಇವೆ. ಒಂದೇ ಮಿದುಳು ಬಳಸಿ ೨೦ ಕೈಗಳಲ್ಲಿ ಅವಳು ಕೆಲಸ ಮಾಡಬೇಕು: ಆಯುಧ ಹಿಡಿಯಬೇಕು, ಹೂಮಾಲೆ ಹಾಕಬೇಕು, ಧಾನ್ಯವನ್ನೂ ಸುರಿಸಬೇಕು, ಅಂಕುಶ ಬಳಸಬೇಕು, ಬಾವುಟ ಹಿಡಿದೆತ್ತಬೇಕು, ಎಲ್ಲದರ ಜೊತೆಗೆ ಒಂದು ಹಸ್ತ ಅಭಯವನ್ನೂ ಸೂಚಿಸಬೇಕು. ಹಲವು ಕೆಲಸಗಳ ಒಮ್ಮೆಗೆ ಒಬ್ಬರೆ ಮಾಡಬೇಕಾದ ಬಲವಂತ ಮತ್ತು ಅನಿವಾರ್ಯತೆ ಏನಿದೆಯೋ ಅದು ಮಲ್ಟಿ ಟಾಸ್ಕಿಂಗ್ ಎಂಬ ಬಹುದೊಡ್ಡ ಬಿರುದಿಗೆ ಪಾತ್ರವಾಗಿ ಅದೇ ಮಹಿಳೆಯ ದೊಡ್ಡ ಮಿತಿಯಾಗಿದೆ. ಸಾಮಾನ್ಯ ಮಹಿಳೆಯರಿಗೆ ನಿತ್ಯದ ಜವಾಬ್ದಾರಿ, ಜಂಜಡಗಳ ಹೊರತಾಗಿ ತನಗಾಗಿ ತಾನು ಒಂದು ತಾಸು, ಒಂದು ದಿನ ಕಳೆಯುವುದೇ ದೊಡ್ಡ ಲಕ್ಷುರಿಯಾಗಿರುವಂತೆ ಚಳುವಳಿಯೊಳಗೆ ತೊಡಗಿಕೊಂಡಿರುವ ಮಹಿಳೆಯರಿಗೂ ನಿರ್ವಹಿಸಲು ಅಸಾಧ್ಯವೆನ್ನುವಷ್ಟು ಜವಾಬ್ದಾರಿಗಳು ಹೆಗಲೇರಿವೆ.

ಸಮಾಜ ಈಗ ಹೆಣ್ಣು ಎಂದು ಯಾರನ್ನು ನೋಡುತ್ತಿದೆಯೋ ಅವಳು ನಿಜವಾದ ಹೆಣ್ಣಲ್ಲ. ಅದು ಪುರುಷಪ್ರಧಾನ ಸಮಾಜದ ಕಲ್ಪನಾ ವಿಲಾಸ ಹೆಣ್ಣು ಹೇಗಿರಬೇಕೆಂದು ವ್ಯಾಖ್ಯಾನಿಸಿದೆಯೋ ಆ ಚೌಕಟ್ಟಿಗೆ ಸರಿಯಾಗಿ ತನ್ನನ್ನು ಮೌಲ್ಡ್ ಮಾಡಿಕೊಂಡ ಹೆಣ್ಣು. ಗುಟ್ಟು ಕಾಪಾಡುವುದರಲ್ಲೇ ಹೆಣ್ತನವಿದೆ ಎಂದು ಭಾವಿಸಿದ ಹೆಣ್ಣು. ದುರಂತವೆಂದರೆ ತಾನು ಕಳೆದುಕೊಂಡಿರುವುದೇನೆಂದೇ ತಿಳಿದಿಲ್ಲದವರು ಅವರು. ಅಂಥವರನ್ನು ಹೋರಾಡಿ ಪಡೆಯೋಣವೆಂದು ಸಂಘಟಿಸುವುದು ಹೇಗೆ? ಮುಳುಗಿದ ಅರಿವೇ ಇಲ್ಲದವರನ್ನು ಮೇಲೆತ್ತುವುದು ಹೇಗೆ?

ಅಮೆರಿಕನ್ ಆಫ್ರಿಕನ್ ಬರಹಗಾರ್ತಿ ಗ್ರಾಡಾ ಕಿಲೋಂಬಾ ತಮ್ಮ ಒಂದು ಲೇಖನದಲ್ಲಿ ಅವರ ಹಿರಿಯರಾದ ಕರಿಯ ಗುಲಾಮರು ತಮ್ಮ ನೆನಪಿನಿಂದ ಹೇಳುತ್ತಿದ್ದ ಸಂಕಟವನ್ನು ಪ್ರಸ್ತಾಪಿಸಿದ್ದಾರೆ. ಅಮೆರಿಕದ ಬಿಳಿಯ ಮಾಲೀಕರು ತಮ್ಮ ಎಸ್ಟೇಟು, ತೋಟ, ಮನೆಗಳಲ್ಲಿ ಕೆಲಸ ಮಾಡುವ ಕರಿಯ ಗುಲಾಮರ ಬಾಯಿಯಲ್ಲಿ ದವಡೆಗಳ ನಡುವೆ ಒಂದು ಕಬ್ಬಿಣದ ಕಚ್ಚುಕಂಬಿಯನ್ನಿಡುತ್ತಿದ್ದರು. ಗುಲಾಮರು ಪರಸ್ಪರ ಮಾತನಾಡುತ್ತ ಕಾಲ ವ್ಯಯಿಸಬಾರದು ಹಾಗೂ ಕಬ್ಬು, ಕಾಫಿ-ಕೋಕೋ ಬೀಜಗಳ ಅವರು ತಿನ್ನಬಾರದು ಎನ್ನುವುದು ಕಚ್ಚುಕಂಬಿಯ ಉದ್ದೇಶ. ಈ ಪದ್ಧತಿ ಸುಮಾರು ೩೦೦ ವರ್ಷ ಚಾಲ್ತಿಯಲ್ಲಿತ್ತು. ಅದು ಸೊಲ್ಲಡಗಿಸುವ, ಬಲವಂತದ ಮೌನ ಹೇರುವ ಕ್ರಮ. ಜನಸಮುದಾಯದ ಹಕ್ಕಿನ ನಿರಾಕರಣೆ. ಕರಿಯ ಗುಲಾಮರಂತೆ ಮಹಿಳೆಯರೂ ಸಾವಿರಾರು ವರ್ಷಗಳಿಂದ ಅದೃಶ್ಯ ಕಚ್ಚುಕಂಬಿಯನ್ನು ತಮ್ಮ ಬಾಯಲ್ಲಿಟ್ಟುಕೊಂಡೇ ಬದುಕಿದ್ದಾರೆ. ಅದನ್ನು ತೆಗೆಯಲಾಗಿದ್ದರೂ ಅದೃಶ್ಯವಾದದ್ದನ್ನು ಊಹಿಸಿಕೊಂಡೇ ಮೌನವಾಗಿದ್ದಾರೆ. ಹೀಗೆ ಹಲ್ಲು ಕಚ್ಚಿ ಸಹಿಸಿಕೊಂಡಿರುವವರ ಬಾಯಿ ಬಿಚ್ಚಿಸುವುದಕ್ಕೆ ಇರುವ ಸವಾಲುಗಳೇ ಮಹಿಳಾ ಚಳುವಳಿ ಕಟ್ಟಲು ಇರುವ ಮೊದಲ ತೊಡಕುಗಳಾಗಿವೆ.
. ಸಮಾನತೆಗಾಗಿ ಎಷ್ಟೋ ಆಂದೋಲನಗಳು ನಡೆದವು. ಅದರಲ್ಲೆಲ್ಲ ಹೆಣ್ಮಕ್ಕಳಿದ್ದರು. ಭಕ್ತಿ ಚಳುವಳಿ, ವಚನ ಚಳಿವಳಿಯಲ್ಲಿ ಮಹಿಳೆಯರಿರಲಿಲ್ಲವೆ? ಸುಧಾರಣಾ ಚಳುವಳಿಗಳಲ್ಲಿ ಕ್ರಿಯಾಶೀಲರಾದ ಮಹಿಳೆಯರಿರಲಿಲ್ಲವೆ? ಅಂಬೇಡ್ಕರ್ ಹುಟ್ಟುಹಾಕಿದ ದಲಿತ ಚಳುವಳಿಯಲ್ಲಿ ಮಹಿಳೆಯರಿರಲಿಲ್ಲವೆ? ಸ್ವಾತಂತ್ರ್ಯ ಚಳುವಳಿಯಲ್ಲಿ, ಕಾರ್ಮಿಕ ಚಳುವಳಿಯ ಕಾರ್ಯಕರ್ತರಾಗಿ, ಪರಿಸರ ಚಳುವಳಿಗಳಲ್ಲಿ ಮಹಿಳೆಯರಿರಲಿಲ್ಲವೆ? ಅವರೆಲ್ಲ ಏನಾದರು? ಎಲ್ಲಿ ಹೋದರು? ಇಷ್ಟೆಲ್ಲ ಚಳುವಳಿಗಳಲ್ಲಿ ಮಹಿಳಾ ಪಾಲ್ಗೊಳ್ಳುವಿಕೆಯು ಒಂದು ಮಹಿಳಾ ಚಳುವಳಿಯನ್ನು ಕಟ್ಟಿ ಮುನ್ನಡೆಸಬಲ್ಲ ನಾಯಕತ್ವ ಸೃಷ್ಟಿಸಿತೆ? ಏಕೆ ಹೀಗಾಯಿತು?

ಏಕೆಂದರೆ ಮಹಿಳೆಯರೇನೋ ಎಲ್ಲ ಕಡೆ ಇದ್ದರು, ನಂತರ ಅದೃಶ್ಯವಾದರು. ಅವರ ಇಲ್ಲದಿರುವಿಕೆ ಯಾರನ್ನೂ ಕಾಡಲೇ ಇಲ್ಲ. ಮಹಿಳೆಯ ಇಲ್ಲದಿರುವಿಕೆ ಒಂದು ಪಕ್ಷ, ಸಂಘಟನೆ, ವೇದಿಕೆ, ನಾಯಕರುಗಳಿಗೆ ಕಾಡದೇ ಇರುವುದು ಮಹಿಳಾ ಚಳುವಳಿ ಮತ್ತು ಚಳುವಳಿಯ ಮಹಿಳೆಯರು ಎದುರಿಸುತ್ತಿರುವ ಬಿಕ್ಕಟ್ಟು ಎನ್ನಬಹುದಾಗಿದೆ.

೩. ಈ ಅಸಮಾನ ನೆಲದಲ್ಲಿ ಬೆಳೆಕಳೆಯ ಕೃಷಿ ಹೇಗಿದೆ? ಕಳೆಗಿಡಗಳು ಮರಗಳಾಗಿ ಬೆಳೆದು ಬೆಳೆಯನ್ನೆಲ್ಲ ಆವರಿಸಿ ಕಳೆ ಯಾವುದು, ಬೆಳೆ ಯಾವುದು ತಿಳಿಯದಂತಾಗಿದೆ. ಸುಲಿಯುವವ ಮಹಾದಾನಿಯಂತೆ, ಕೊಲ್ಲುವವ ಜೀವರಕ್ಷಕನಂತೆ ವೇಷ ತೊಟ್ಟಿದ್ದಾನೆ. ಹೀಗೆ ಕಳೆಯು ಮರವಾಗಿ ಬೆಳೆಯುತ್ತ ಚಿಗುರುತ್ತ ಹೋಗಿರುವಾಗ ಚಿಗುರು ಚಿಗುಟುವುದೇ ಕಳೆನಾಶ ಎಂದು ಒಂದು ವರ್ಗ ಭಾವಿಸಿದೆ. ಎಲ್ಲೆಲ್ಲಿಂದ, ಯಾರಿಂದ ಎಂಬ ತರತಮ ಭೇಧವಿಲ್ಲದೆ ದುಡ್ಡು ತಂದು, ಚಿಗುರು ಚಿವುಟಿ, ರಾಶಿ ಹಾಕಿ, ಫೋಟೊ ತೆಗೆದು, ವರದಿ ಕಳಿಸಿ ಮತ್ತೆ ಎಲ್ಲೆಲ್ಲಿಂದಲೋ ಹಣ ಪಡೆದು.. ಈಗ ಇದೇ ಚಳುವಳಿ ಅನಿಸಿಕೊಂಡುಬಿಟ್ಟಿದೆ.

ಹೌದು, ನಾನು ಎನ್‌ಜಿಒಗಳ ಬಗೆಗೆ ಮಾತನಾಡುತ್ತಿದ್ದೇನೆ. ಹೊಸತಲೆಮಾರು ಚಳುವಳಿಯ ಕಡೆಗೆ ಆಕರ್ಷಿತರಾಗದಿರಲು ಒಂದು ಕಾರಣ ಫಂಡೆಡ್ ಸಮಾಜಸೇವೆ ಮಾಡುವ ಎನ್‌ಜಿಒಗಳು. ಸಮಾಜಸೇವೆಯನ್ನು ಹೇಗೆ ಮಾಡಬೇಕೆಂದು ಕಲಿಸುವ ಎಂಎಸ್‌ಡಬ್ಲ್ಯು ಪದವಿ ಪಡೆದ ವಿದ್ಯಾರ್ಥಿಗಳು ಎಷ್ಟು ಕಾಲೇಜುಗಳಿಂದ ಹೊರಬರುತ್ತಿದ್ದಾರೆ? ಅವರೆಲ್ಲ ಚಳುವಳಿಯ ಮುಂದುವರಿಕೆಯ ಕೊಂಡಿಗಳಾಗಿ ಏಕೆ ಬರುತ್ತಿಲ್ಲ? ಕಾರಣ ಅವರನ್ನೆಲ್ಲ ಸೆಳೆದಿರುವ ಎನ್‌ಜಿಒಗಳು.

ನೈಜ ಬದ್ಧತೆಯಿಂದ ಕೆಲಸ ಮಾಡುವ ಕೈಬೆರಳೆಣಿಕೆಯಷ್ಟು ಎನ್‌ಜಿಒಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲವೂ ಎಲ್ಲೆಲ್ಲಿಂದಲೋ ಹರಿದು ಬರುವ ಧನಸಹಾಯದಿಂದ ಕೆಲಸ ಮಾಡುತ್ತವೆ. ಭೂಮಿ ಮೇಲಿನ ಎಲ್ಲ ವಿಷಯಗಳ ಬಗೆಗೆ ಕೆಲಸ ಮಾಡಲು ಲೆಕ್ಕವಿಲ್ಲದಷ್ಟು ಎನ್‌ಜಿಒಗಳಿವೆ. ಅವು ಕೈಗೆತ್ತಿಕೊಳ್ಳದ ವಿಷಯಗಳೇ ಇಲ್ಲ. ಯುವ ಮನಸ್ಸುಗಳ ಶಕ್ತಿ, ಸಮಯ, ಸಂಪನ್ಮೂಲ, ಸಂವೇದನೆಯನ್ನೆಲ್ಲ ಬಾಡಿಗೆ ಪಡೆವ ಎನ್‌ಜಿಒಗಳು ಪ್ರತಿಫಲವಿಲ್ಲದೆ ಸಮಾಜಸೇವೆಯಿಲ್ಲ ಎನ್ನುವಂತೆ ಮಾಡುತ್ತಿವೆ. ಸಮಾಜಸೇವೆಯೂ ಒಂದು ಜೀವನಾಧಾರ ಕಸುಬು, ಢಾಳಾದ ಸಾರ್ವಜನಿಕತೆ ಹಾಗೂ ಪ್ರಸಿದ್ಧಿ ತರುವಂಥದು ಎನ್ನುವ ಧೋರಣೆ ಹುಟ್ಟಿಸಿವೆ. ತರುಣ ಪೀಳಿಗೆಯ ಸೂಕ್ಷ ಮನಸುಗಳು ವ್ಯವಸ್ಥಿತವಾಗಿ ಎನ್‌ಜಿಒ ಜಾಲಕ್ಕೆ ಬಿದ್ದು ಸಂಘಟನಾ ಶಕ್ತಿ ಹಿನ್ನಡೆ ಕಂಡಿದೆ.

ರಾತ್ರಿ ಹಗಲೆನ್ನದೆ ಹಾದಿಬೀದಿ ಅಲೆದಾಡಿ, ಪೋಸ್ಟರು ಅಂಟಿಸಿ, ಸಭೆ-ಮೆರವಣಿಗೆ ಮಾಡಿ, ಯಾವ ಆಮಿಷ, ಕಂಫರ್ಟ್‌ಗೂ ಬಲಿಯಾಗದೇ ಕೆಲಸ ಮಾಡುವ ಬದ್ಧತೆಯ ಕಾರ್ಯಕರ್ತರನ್ನು ಎನ್‌ಜಿಒ ಸೃಷ್ಟಿಸುವುದಿಲ್ಲ. ಆ ಮನಸ್ಥಿತಿಯ ಅಪಾಯವೆಂದರೆ ತಮಗೆ ಪೂರಕವಾದ ವಿಷಯವನ್ನಷ್ಟೆ ಅವು ಗಮನಿಸುತ್ತವೆ. ದುಡ್ಡು ಬರುವಷ್ಟು ದಿನ ಸಮಾಜಸೇವೆ ಮಾಡುತ್ತವೆ. ಸುಂದರ ವಾರ್ಷಿಕ ವರದಿಗಾಗಿ ಇರುವುದನ್ನೆಲ್ಲ ತಿರುಚಿ ಬರೆದರೂ ಆಶ್ಚರ್ಯವಿಲ್ಲ. ಸಾಮಾಜಿಕ ಸಮಸ್ಯೆಗಳ ಮೂಲ ಕುರಿತು ತಲಸ್ಪರ್ಶಿ ಹೋರಾಟ ಕಟ್ಟುವ ಗೋಜಿಗೇ ಹೋಗುವುದಿಲ್ಲ. ಸಮಸ್ಯೆಯನ್ನು ಸಮಗ್ರವಾಗಿ ಗ್ರಹಿಸದ, ಸಮಸ್ಯೆಯ ಪರಿಹಾರ ತನ್ನ ಆದ್ಯತೆಯಲ್ಲದ, ದುಃಖಿತನ ದುಃಖಕ್ಕೂ ಹಪಾಹಪಿತನದಲ್ಲಿ ಬೆಲೆ ನಿಗದಿಗೊಳಿಸುವ ಎನ್‌ಜಿಒಗಳು ಭವಿಷ್ಯದ ಚಳುವಳಿಯ ದೊಡ್ಡ ಅಡ್ಡಗೋಡೆಗಳು. ಅದರ ಹಿಡಿತದಿಂದ ಸಮಸ್ಯೆಗಳನ್ನೂ, ಬಾಧಿತರನ್ನೂ, ಸೂಕ್ಷ್ಮ ಮನಸುಗಳನ್ನೂ ಹೊರತರುವುದು ವಿಶಾಲ ನೆಲೆಯ ಹೋರಾಟ ಕಟ್ಟಲು ಅವಶ್ಯವಾಗಿವೆ. ಅದರಲ್ಲಿರುವ ನಮ್ಮದೆ ಬಂಧುಗಳಿಗೆ ‘ನೀವು ಬರಿ ಚಿಗುರನ್ನಷ್ಟೆ ಚಿವುಟುತ್ತಿದ್ದೀರಿ. ಅದರಿಂದ ಆ ಹೆಮ್ಮರ ನಾಶ ಆಗುವುದಿಲ್ಲ. ಕಾಂಡ ಕತ್ತರಿಸೋಣ ಬನ್ನಿ, ಬೇರು ಹರಡೋಣ ಬನ್ನಿ. ಅದಾಗದಿದ್ದರೆ ಕನಿಷ್ಟ ಪಕ್ಷ ಕಾಯಿ ಕೊರಕ ಹುಳ, ಕಾಂಡ ಕೊರೆವ ಹುಳು, ಬೇರು ಶಿಥಿಲಗೊಳಿಸುವ ಗೆದ್ದಲಾದರೂ ಆಗುವ ಬನ್ನಿ’ ಎಂದು ಕರೆಯಬೇಕಾಗಿದೆ.

. ಎಲ್ಲ ಒಟ್ಟು ಹೋಗೋಣ ಅಂದುಕೊಳ್ಳುವುದು ಸುಲಭ; ಎಲ್ಲರ ಒಟ್ಟುಹಾಕುವುದು ಅಷ್ಟು ಸುಲಭವಲ್ಲ. ಉಪ್ಪು ನೀರಿನಲ್ಲಿ ಕರಗುತ್ತದೆ. ಸಕ್ಕರೆ ನೀರಿನಲ್ಲಿ ಕರಗುತ್ತದೆ. ಆದರೂ ಕರಗಿಸಿಕೊಂಡ ತೊಟ್ಟು ನೀರನ್ನು ನಾಲಿಗೆ ಮೇಲೆ ಹಾಕಿಕೊಂಡರೆ ಅದರ ಉಪ್ಪುತನ, ಸಕ್ಕರೆತನ ಬಯಲಾಗಿ ಕರಗಿರುವುದು ಅರಿವಾಗುತ್ತದೆ. ಅದೇ ನೀರು-ಎಣ್ಣೆ? ಎಣ್ಣೆ-ಉಪ್ಪು? ಉಪ್ಪು-ಸಕ್ಕರೆ? ಅವು ಎಂದೆಂದಿಗೂ ವಿಲೀನವಾಗಲಾರವು. ಇವತ್ತು ನಮ್ಮ ಸಂಘ, ಸಂಘಟನೆ, ಸಂಸ್ಥೆಗಳು ಉಪ್ಪಿನ ಹಾಗೆ, ಸಕ್ಕರೆ ಹಾಗೆ, ಒಳ್ಳೆಣ್ಣೆ ಹಾಗೆ, ಹರಳೆಣ್ಣೆ ಹಾಗೆ, ಶಿಲೆಯ ಹಾಗೆ, ಶಿಲಾರಸದ ಹಾಗೆ ತಮ್ಮ ಸ್ವರೂಪ, ಉದ್ದೇಶ, ಗುರಿ, ಸ್ಥಿತಿಗಳಲ್ಲಿ ನಿಶ್ಚಿತವಾದ ಚೌಕಟ್ಟುಗಳಲ್ಲಿ ಮೌಲ್ಡ್ ಆಗಿರುವುದರಿಂದ ಐಕ್ಯತೆ ಕಷ್ಟವಾಗಿದೆ. ಕರಗಿಬಿಡುವ, ಕರಗಿಸಿಬಿಡುವ; ಕರಗಿ, ಕರಗಿಸಿಯೂ ಅನನ್ಯತೆಯ ಗುರುತು ಉಳಿಸಿಕೊಳ್ಳುವ ದ್ರಾವಣ - ದ್ರಾವಕದಂತಹ ಸ್ಥಿತಿ ಬಂದಾಗಲಷ್ಟೆ ನಿಜವಾದ ಐಕ್ಯ ಹೋರಾಟ ಸಾಧ್ಯವಾಗುತ್ತದೆ. ಕರಗಲು ಯಾರೂ ಸಿದ್ಧವಿರದ ಐಡೆಂಟಿಟಿ ಪ್ರಜ್ಞೆಯ ಕಾಲಮಾನವೇ ಐಕ್ಯ ಹೋರಾಟಕ್ಕಿರುವ ದೊಡ್ಡ ಬಿಕ್ಕಟ್ಟಾಗಿದೆ.

೫. ಅಂತೂ ಇಷ್ಟೆಲ್ಲ ಅಡ್ಡಿಆತಂಕಗಳ ನಡುವೆಯೇ ಎರಡು ಹೆಜ್ಜೆ ಹೇಗೋ ಮುಂದಿಟ್ಟೇಬಿಟ್ಟೆವು ಅಂತ ಭಾವಿಸಿ. ಇಟ್ಟ ಹೆಜ್ಜೆ ಹಿಂದೆಳೆಯುವಂತಹ ಎರಡು ದೊಡ್ಡ ಆತಂಕಗಳು ನಮ್ಮೆದುರಿಗಿವೆ. ಮೊದಲನೆಯದು ಜಾತಿಧರ್ಮದ ಆಧಾರದ ಮೇಲೆ ಮನುಷ್ಯರನ್ನು ಒಡೆಯುವ, ಅದಕ್ಕೆ ಶೋಷಿತರನ್ನು ದಾಳವಾಗಿ ಬಳಸಿಕೊಳ್ಳುವ ಕೋಮುವಾದ. ಅದು ತಲೆಯಲ್ಲಿ ತುಂಬುವ ವಿಷ ಎಷ್ಟು ತೀಕ್ಷ್ಣವಾದದ್ದೆಂದರೆ ಅದನ್ನು ಖಾಲಿ ಮಾಡಿ ತೊಳೆಯಲು ಸಾಧಾರಣ ಡಿಟರ್ಜೆಂಟ್‌ಗಳ ಕೈಲಿ ಸಾಧ್ಯವಿಲ್ಲ. ಎರಡನೆಯ ತೊಡಕು ಐಹಿಕ ಸುಖಭೋಗಗಳೇ ಆತ್ಯಂತಿಕ ಸತ್ಯ ಎಂದು ಮನುಷ್ಯ ಭಾವಿಸುವಂತೆ ಮಾಡಿರುವ ಮಾರುಕಟ್ಟೆ ಆರ್ಥಿಕತೆ. ಇವೆರೆಡೂ ಬದಲಾವಣೆಗೆ ತುಡಿವ ಪ್ರತಿಯೊಬ್ಬರ ಶತ್ರುಗಳಾಗಿವೆ. ದಮನಿತರನ್ನು ಪ್ರಶ್ನೆಗಳೂ ಹುಟ್ಟದ ಸನಾತನ ಮನಸ್ಥಿತಿಗೆ ದೂಡಲು ಇವೆರೆಡೂ ಹವಣಿಸುತ್ತವೆ. ಮನುಷ್ಯರನ್ನು ಮನಸನ್ನು ಅನಗತ್ಯ ದ್ವಂದ್ವಗಳಲ್ಲಿ ಮಗ್ನಗೊಳಿಸುವ ಅವು ಚಳುವಳಿಗಳನ್ನು ಚಿವುಟುತ್ತ, ಒಡೆಯುತ್ತ ಅಡ್ಡಗಾಲಾಗಿವೆ.

೬. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂದಾದಮೇಲೆ ಮತ್ತೇಕೆ ಹೋರಾಟ ಎನ್ನುತ್ತ ಚಳುವಳಿ, ಹೋರಾಟಗಳನ್ನು ಕಾನೂನು ವಿರೋಧಿ ಕ್ರಿಯೆಯೆಂದೂ, ಅದು ಶಾಂತಿ ಸುವ್ಯವಸ್ಥೆ ಕಾಪಾಡಲು ದೊಡ್ಡ ತೊಂದರೆಯೆಂದೂ ಆಳುವ ವರ್ಗ ಹಾಗೂ ‘ಗಣ್ಯ’ರು ದೂಷಿಸುವುದನ್ನು ಕೇಳುತ್ತೇವೆ. ಆದರೆ ಚಳುವಳಿ ಪ್ರಜಾಪ್ರಭುತ್ವ ವಿರೋಧಿಯಲ್ಲ, ಅದು ಪ್ರಜಾಪ್ರಭುತ್ವಕ್ಕೆ ಪೂರಕ. ಹಾಗೆ ನೋಡಿದರೆ ಪ್ರಜಾಪ್ರಭುತ್ವ ಜೀವಂತ ಇದೆ ಎನ್ನಲು ಒಂದು ಲಕ್ಷಣ ಚಳುವಳಿ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಬರಬರುತ್ತ ಚಳುವಳಿಗಳು ದುರ್ಬಲಗೊಳ್ಳುವಂತೆ, ಒಡೆಯುವಂತೆ, ಅವಸಾನವಾಗುವಂತೆ ನೋಡಿಕೊಳ್ಳಲಾಗುತ್ತಿದೆ. ಮುಕ್ತ ಅವಕಾಶ, ಚಲನೆ ಕಡಿಮೆಯಾಗುತ್ತಿದೆ. ಮುಕ್ತವಾಗಿ ಆಡುವ, ಬರೆಯುವ ಅವಕಾಶಗಳನ್ನು ಪ್ರಜಾಪ್ರಭುತ್ವದ ಹೆಸರಿನಲ್ಲೇ ಕಿತ್ತುಕೊಳ್ಳಲಾಗಿದೆ. ಅಷ್ಟೆ ಅಲ್ಲ, ಎಲೈಟ್ ವರ್ಗ ಆಕ್ಟಿವಿಸ್ಟ್‌ಗಳನ್ನು ಲೇವಡಿಯ ವಸ್ತುಗಳಂತೆ ನೋಡುತ್ತದೆ. ಚಳುವಳಿಗಾರರನ್ನು ಭಯೋತ್ಪಾದಕರೆನ್ನುವಂತೆ, ಕಾನೂನು ಭಂಜಕರೆಂಬಂತೆ ನೋಡುವುದನ್ನೂ ಗಮನಿಸಬಹುದಾಗಿದೆ. ಇಂಥ ಹಿತಾಸಕ್ತಿಗಳೇ ಹೋರಾಟ, ಚಳುವಳಿಗಳು ಸಾಂಕೇತಿಕಗೊಳ್ಳುವಂತೆ ಮಾಡುತ್ತಿವೆ. ಹೋರಾಟ ಸಾಂಕೇತಿಕವಾದರಷ್ಟೆ ಸಹಿಸುತ್ತೇವೆ, ಇಲ್ಲವಾದಲ್ಲಿ ಅದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂಬ ಸಂದೇಶವನ್ನು ಆಳುವವರು ನೀಡಿದ್ದು ಎಲ್ಲ ಚಳುವಳಿಗಳೂ ಕ್ಷೀಣಗೊಳ್ಳಲು ಇದೊಂದು ಕಾರಣವಾಗಿದೆ.

ಕೂಡಿ ಕಂಡುಕೊಳ್ಳಬೇಕಾದ ದಾರಿಗಳು:


ಚಳುವಳಿ ಆಯಾ ಕಾಲಕಾಲಕ್ಕೆ ತಕ್ಕಂತೆ ಪುನರ್‌ನವೀಕರಣಗೊಳ್ಳಲೇಬೇಕು. ವ್ಯಕ್ತಿ ಅಥವಾ ವಿಷಯಾಧಾರಿತ ಚಳುವಳಿಗಳು ಕಾಲಾನಂತರ ಸ್ಥಗಿತಗೊಳ್ಳಬಹುದು ಅಥವಾ ನಿಲ್ಲಬಹುದು. ಆದರೆ ಶೋಷಣೆ, ದಮನಗಳು ಅನಾದಿಯಿಂದ ಸಂಭವಿಸುತ್ತಲೇ ಇದ್ದು ಈಗಲೂ ಮುಂದುವರೆದಿವೆ. ಹಾಗಾಗಿ ಜನ ಚಳುವಳಿ ಶಿಥಿಲಗೊಳ್ಳಲು ನಾನಾ ಕಾರಣಗಳಿದ್ದರೂ ಚಳುವಳಿಯ ನಿನ್ನೆಯನ್ನು ಗೌರವಪೂರ್ವಕವಾಗಿ ಅವಲೋಕಿಸುತ್ತಲೇ ವರ್ತಮಾನಕ್ಕೆ ಹೊಸಹಾದಿ ಕಟ್ಟಿಕೊಳ್ಳುವುದು ಅವಶ್ಯವಾಗಿದೆ. ಮಾಹಿತಿ ಕ್ರಾಂತಿಯ ಈ ಯುಗದಲ್ಲಿಯೂ ಧರ್ಮ/ಜಾತಿಯಂತಹ ಭಾವುಕ ವಿಷಯಗಳ ಹೊರತಾಗಿ ಜನರನ್ನು ಸಂಘಟಿಸಿ ಚಳುವಳಿ ಕಟ್ಟುವುದು ಕಷ್ಟವೆನಿಸಿದೆ. ಹಾಗಿರುವಾಗ ಕೇವಲ ಮಹಿಳಾ ಚಳುವಳಿಯಷ್ಟೇ ಅಲ್ಲ, ಎಲ್ಲ ಧಾರೆಗಳ ಕೂಡಿಸಿದ ಐಕ್ಯ ಚಳುವಳಿ ಕಟ್ಟುವ ದಾರಿ ಯಾವುದು?


  • ಅದಕ್ಕಾಗಿ ನಾವು ಎರೆಹುಳದಂತೆ ಕೆಲಸ ಮಾಡಬೇಕು. ನೆಲ ಆರ್ದ್ರಗೊಂಡದ್ದೇ ಅದನ್ನು ಸಡಿಲಗೊಳಿಸಿ ಮಣ್ಣೊಳಗೆ ಗಾಳಿ ನುಸುಳಬಿಡುವ ಎರೆಹುಳುವಿನಂತೆ ನಮ್ಮನಮ್ಮ ಊರಿನಲ್ಲಿ ಕೆಲಸ ಮಾಡಬೇಕು. ಎರೆಹುಳುವಿನದು ಬದಲಾವಣೆ ಪ್ರಕ್ರಿಯೆಯ ಮೂಲಹಂತ, ಕೆಳಹಂತ. ಅದನ್ನು ನಿರ್ಲಕ್ಷಿಸದೆ ಊರು, ಕೇರಿ, ಬಡಾವಣೆಯ ಜನರನ್ನು ಕಣ್ಗಾವಲು ಸಮಿತಿಗಳೆಂದು ಸಂಘಟಿಸಬಹುದು. ಯಾವುದೇ ಸಿದ್ಧಾಂತದ ಹೆಸರೆತ್ತದೆ ಅವರ ಬೇಡಿಕೆ, ಅವಶ್ಯಕತೆಗಳನ್ನೇ ಮೂಲಾಧಾರವಾಗಿಟ್ಟುಕೊಂಡು ಜನರನ್ನು ಗುಂಪುಗೂಡಿಸಬಹುದು. ನಂತರವೂ ಜನಸಂಪರ್ಕ ಪರಸ್ಪರ ಉಳಿಯುವಂತೆ ಬುಡಮಟ್ಟದ ಕೆಲಸ ಮಾಡಬಹುದು. ಇವತ್ತು ಕಟ್ಟಲಿರುವ ಹೊಸ ಚಳುವಳಿಗೆ ನಾಯಕರಲ್ಲ, ಎರೆಹುಳದಂತೆ ಕೆಲಸ ಗೇಯಬಲ್ಲ ಕಾರ್ಯಕರ್ತರ ಅವಶ್ಯಕತೆ ಹೆಚ್ಚಾಗಿದ್ದು ಅವರ ತಯಾರಿಸುವುದು ಮೊದಲ ಆದ್ಯತೆಯಾಗಿದೆ. 
  • ಚಳುವಳಿಯು ಡೆಮಾಕ್ರಸಿ ಎಂಬ ಒಪ್ಪಿತ ವ್ಯವಸ್ಥೆಯನ್ನು ಪ್ರಶ್ನಿಸುತ್ತಲೇ ಅದನ್ನು ಅರ್ಥಪೂರ್ಣವಾಗುವಂತೆ ಮಾಡಬೇಕು. ಜನಾಭಿಪ್ರಾಯ ರೂಪಿಸಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಬಳಸಿ ಜನ ರಾಜಕೀಯ ಪ್ರಜ್ಞೆ ಹೊಂದುವಂತೆ, ಕ್ರಿಯಾಶೀಲವಾಗಿ ಸಮಾಜದ, ಪ್ರಜಾಪ್ರಭುತ್ವದ ಪ್ರಕ್ರಿಯೆಗಳಲ್ಲಿ ಭಾಗವಹಿಸುವಂತೆ ಮಾಡಬೇಕು. 
  • ಪ್ರಬಲ ಮಹಿಳಾ ಧ್ವನಿ ನಮ್ಮಲ್ಲಿನ್ನೂ ಹೊಮ್ಮಬೇಕಿದೆ. ಚಳುವಳಿಯ ಹೊರಗೆ ದೊಡ್ಡಸಂಖ್ಯೆಯ ಮಹಿಳೆಯರಿದ್ದು ಅವರನ್ನು ಎಚ್ಚರಿಸುವ, ಚಳುವಳಿಯೊಳತರುವ ಕಾರ್ಯ ಅಗತ್ಯವಾಗಿ ಆಗಬೇಕಾಗಿದೆ. ಪ್ರಾಥಮಿಕ ಹಂತದಲ್ಲಿರುವ ಮಹಿಳಾ ಚಳುವಳಿಯನ್ನು ರಿವೈವ್ ಮಾಡುವಲ್ಲಿ ಉಳಿದವರೆಲ್ಲ ಶ್ರಮವಹಿಸಬೇಕು. ಈಗಿರುವ ಎಲ್ಲ ಚಳುವಳಿ, ಹೋರಾಟಗಳೂ ಸೂಕ್ತ ಮಹಿಳಾ ಪಾಲುದಾರಿಕೆಯನ್ನು ಹೊಂದದಿದ್ದಲ್ಲಿ, ಮಹಿಳಾ ವಿಷಯಗಳನ್ನು ಪರಿಗಣಿಸದಿದ್ದಲ್ಲಿ ಯಾವ ಬದಲಾವಣೆಯನ್ನೂ ಕನಸುವಂತಿಲ್ಲ. ರಾಜಕಾರಣವೇ ಇರಲಿ ಅಥವಾ ಕೋಮುವಾದ ವಿರೋಧ, ಜಾತಿ ವಿನಾಶ, ಪರಿಸರ/ಬುಡಕಟ್ಟು ಹೋರಾಟದಂತಹ ಮತ್ತಿನ್ಯಾವುದೇ ಹೋರಾಟವಿರಲಿ, ಅಲ್ಲಿ ಸಶಕ್ತ ಮಹಿಳಾ ಧ್ವನಿ ಕೇಳುತ್ತಿಲ್ಲವೆಂದರೆ ಅದು ಚಳುವಳಿಯ ಸೋಲೆಂದೇ ಭಾವಿಸಬೇಕು.
  • ಚಳುವಳಿಯಲ್ಲಿದ್ದವರ ವೈಯಕ್ತಿಕ ದೋಷದಿಂದ ಅಥವಾ ಸಂಘಟನಾತ್ಮಕ ಲೋಪದಿಂದ ಹೋರಾಟ, ಚಳುವಳಿಗಳು ವಿಭಿನ್ನ ಗುಂಪು-ವ್ಯಕ್ತಿ-ಹಿತಾಸಕ್ತಿ-ಸಿದ್ಧಾಂತದಲ್ಲಿ ಒಡೆದು ದೊಡ್ಡ ಪ್ರಮಾಣದ ಬದಲಾವಣೆ ಸಾಧ್ಯವಾಗದೇ ಹೋಗಿದೆ. ಎಂದೇ ಐಕ್ಯ ಹೋರಾಟ ಇವತ್ತಿನ ತುರ್ತಾಗಿದೆ. ಭಿನ್ನ ಸೈದ್ಧಾಂತಿಕ ಹಾಗೂ ತಾತ್ವಿಕ ಹಿನ್ನೆಲೆಯ ಜನರನ್ನು ಒಂದುಗೂಡಿಸುವ ದುಸ್ತರವಾದ ಆದರೆ ತುರ್ತಾದ ಆಶಯವನ್ನಿಟ್ಟುಕೊಂಡೇ ಕೆಲಸ ಮಾಡಬೇಕಿದೆ. 


  • ಅದಕ್ಕೆ ನಾವು ಖೋಖೋ ತಂಡ ಆಡುವಂತೆ ಕೆಲಸ ಮಾಡಬೇಕು. ಸಾಮೂಹಿಕ ಜವಾಬ್ದಾರಿ, ಸಾಮೂಹಿಕ ಗೆಲುವುಸೋಲು, ಅವಶ್ಯವಿರುವಾಗ ಅವಶ್ಯವಿರುವವರ ಚಲನೆ. ಆದರೆ ಪರಸ್ಪರ ಪೂರಕ ಚಲನೆ. ಹೀಗಿರಲು ಸಾಧ್ಯವಾಗಬೇಕಾದರೆ ಸಂಘಟನೆಗಳು ಅಸ್ತಿತ್ವದ ಭಯ ಬಿಡಬೇಕು. ನನ್ನ ಆಸ್ಪತ್ರೆ ಪಕ್ಕ ಮತ್ತೊಂದು ಶುರುವಾದರೆ ಎಲ್ಲಿ ರೋಗಿಗಳು ಕಮ್ಮಿಯಾದಾರೋ ಎಂದು ಹೆದರದೆ ಒಟ್ಟಾರೆ ಜನರ ಆರೋಗ್ಯ ಕಾಪಾಡಲು ಇನ್ನೊಂದು ಕೈಸೇರಿತಲ್ಲ ಎಂದುಕೊಂಡು ಪ್ರಾಮಾಣಿಕವಾಗಿ ನನ್ನ ಕೆಲಸ ನಾನು ಮಾಡಬೇಕು. 


ಕೊನೆಗೂ ಹೋರಾಟದ ಎಲ್ಲ ನದಿಗಳೂ ಹರಿಯಬೇಕಿರುವುದು ಸಮಾನತೆಯ ಕಡಲ ಕಡೆಗೆ ತಾನೇ ಎಂದು ಅರಿಯಬೇಕು.

ಇದಾವುದೂ ಸಾಧ್ಯವಿಲ್ಲವಾದರೆ ಮುಂದಿನ ಪೀಳಿಗೆಗೆ ಕನಿಷ್ಟ ಪಕ್ಷ ನಮ್ಮ ಪೂರ್ವಗ್ರಹಗಳನ್ನಾದರೂ ದಾಟಿಸದಿರೋಣ. ಎಲ್ಲವೂ ವಿಸರ್ಜನೆಯಾಗಲಿ. ಆಗಲಾದರೂ ಹೊಸತು ಹುಟ್ಟಬಹುದು. ತೆಲುಗು ಕವಿ ನಗ್ನಮುನಿ ಹೇಳುವಂತಾಗಬಹುದು:

‘ನನಗೆ ರಾಕೆಟ್ ಬೇಡ,
ಚಂದ್ರನಂಗಳದ ಮೇಲಿಳಿಯುವುದೂ ಬೇಡ.
ಏರೋಪ್ಲೇನುಗಳು ಬೇಡ,
ಜನಬದುಕನ್ನು, ಕಾಲವನ್ನು ನಾಶ ಮಾಡುವ
ರಾಜಕಾರಣವೂ ಬೇಡ.
ರೈಲು ಬೇಡ, ಬಸ್ಸು ಬೇಡ,
ಈ ನಾಗರಿಕತೆಯ ಯಾವ ಗಡಿಬಿಡಿಯೂ ಬೇಡ.
ಶಿಲಾಯುಗದ ಹತಾರುಗಳ ಹಿಡಿದು
ಚರಿತ್ರೆಯ ಗುಹೆಯೊಳಗೆ ಹೋಗುತ್ತೇನೆ.
ಈ ಮನುಷ್ಯ ಪಶುಪಕ್ಷಿಗಳ ಮೃತದೇಹಗಳನ್ನು
ನನ್ನೊಳಗೆ ಹುಗಿಯುತ್ತೇನೆ.
ವ್ಯವಸ್ಥೆಯೆಂಬ ಮರಗುದುರೆಯ ಸುಟ್ಟು ಬೂದಿ ಮಾಡುವ
ಇಂಧನವೊಂದ ಹುಡುಕುತ್ತೇನೆ.

ಹೊಸ ಆಸೆ, ಹೊಸ ಬದುಕು, ಕನಸುಗಳೊಂದಿಗೆ
ಹೊಸಬಟ್ಟೆ ನೇಯುತ್ತೇನೆ.
ದಿಗಂಬರನಾಗಿ ದಿಕ್ಕುಗಳ ನಡುವೆ
ದಿಕ್ಕಿಲ್ಲದೇ ಬಿದ್ದಿರುವ ಮನುಷ್ಯನಿಗೆ
ಹೊಸಬಟ್ಟೆ ಹೊದಿಸುತ್ತೇನೆ..’

***


ರಾಜಕೀಯವಾಗಿ ಅಹಿಂದ ಎನ್ನುತ್ತೇವೆ, ಬಹುಜನ ಸಮಾಜ ಎನ್ನುತ್ತೇವೆ. ಆ ರಾಜಕೀಯ ಪದಗಳು ವಾಸ್ತವದ ಗುಂಪುಗಳಾಗಿ ಅನುವಾದಗೊಳ್ಳಬೇಕಾದರೆ, ಪ್ರಜಾಪ್ರಭುತ್ವ ಅರ್ಥಪೂರ್ಣವಾಗಬೇಕಾದರೆ ಇರುವುದು ಒಂದೇ ದಾರಿ - ಐಕ್ಯ ಚಳುವಳಿ. ಮಹಿಳೆಯರೂ ಸೇರಿದಂತೆ ಎಲ್ಲ ಜನಪರ ಗುಂಪುಗಳೂ ತಂತಮ್ಮ ಚಳುವಳಿಗಳ ಬಲಪಡಿಸುತ್ತಲೇ ಒಗ್ಗಟ್ಟಾಗಿ ಮುನ್ನಡೆಯುವುದಷ್ಟೇ ಪ್ರಸಕ್ತ ಕಾಲಮಾನ ನಮ್ಮಿಂದ ಬಯಸುವ ಹೆಜ್ಜೆಯೆನಿಸುತ್ತಿದೆ..





No comments:

Post a Comment