Friday, 11 September 2015

ಎಂ. ಎಂ. ಕಲಬುರ್ಗಿ: ಪೂರ್ವಭಾಷಿಗೆ ಶರಣು..




ಕವಿರಾಜಮಾರ್ಗಕಾರ ಬಣ್ಣಿಸಿದ ಕಾಲದ ಕನ್ನಡ ಜನಪದಲ್ಲಿ ನ್ಯಾಯಯುತ ಹಕ್ಕು ಪ್ರತಿಪಾದಿಸಿದವರ ಕೈ ಕಡಿಯುವುದು, ಪ್ರತಿಭಟಿಸುವವರ ಹತ್ಯೆಗೈಯುವುದು, ಪ್ರಶ್ನಿಸುವವರ ಮುಖಕ್ಕೆ ಮಸಿ, ಸಗಣಿ ಬಳಿಯುವುದು ಇತ್ತೋ ಇಲ್ಲವೋ, ಆದರೆ ಈಗ ಕನ್ನಡ ನುಡಿಯಂತೇ ಕನ್ನಡ ಜನಪದವೂ ಆತಂಕ, ಅಭದ್ರತೆಯನ್ನೆದುರಿಸುತ್ತಿದೆ. ಕವಿರಾಜಮಾರ್ಗಕಾರನ ಕಾಲ ಕುರಿತು ಅಧ್ಯಯನ ನಡೆಸಿದ ಕನ್ನಡ ದನಿಯೊಂದನ್ನು ಬಲವಂತದ ಮೌನಕ್ಕೆ ದೂಡಲಾಗಿದೆ.

ಹೌದು. ೭೭ ವರ್ಷದ ಎಂ. ಎಂ. ಕಲಬುರ್ಗಿಯವರನ್ನು ಧಾರವಾಡದಲ್ಲಿ ಆಗಸ್ಟ್ ೩೦ರಂದು ಗುಂಡಿಟ್ಟು ಕೊಲ್ಲಲಾಯಿತು. ಹಿಂದೂ-ಲಿಂಗಾಯತ-ವೀರಶೈವ ಧರ್ಮ ಕುರಿತು ಕೆಲವು ಅಪ್ರಿಯ ವಾದಗಳ ಕಟ್ಟಾ ಪ್ರತಿಪಾದಕರಾಗಿದ್ದ; ಬಸವಣ್ಣನ ಕೊಲೆಗಾರರೆಂದು ಮಠ-ಗುರುಗಳನ್ನು ಟೀಕಿಸುತ್ತಿದ್ದ; ಕನ್ನಡ ನುಡಿಯ, ಜನ ಬದುಕಿನ ದೇಸೀ ಆಕರಗಳನ್ನು ಹುಡುಕಿ, ಅರ್ಥೈಸಿ, ವಿಶ್ಲೇಷಣೆಗೆ ಒಡ್ಡುತ್ತಿದ್ದ ಸತ್ಯನಿಷ್ಠ ಸಂಶೋಧಕನ ಬದುಕನ್ನು ಅನುಚಿತ ರೀತಿಯಲ್ಲಿ ಕೊನೆಗೊಳಿಸಲಾಯಿತು. ಗುರುವೇ ಎಂದು ಒಳಬಂದವರೇ ಗುಂಡು ಹಾಕಿ ಹೋದರು. ಇದುವರೆಗೆ ಅಲ್ಲೆಲ್ಲೆಲ್ಲೋ ಸಂಭವಿಸುತ್ತಿದ್ದದ್ದು ಇಂದು ನಮ್ಮಂಗಳದಲ್ಲೇ ಸಂಭವಿಸಿ ಪ್ರಜ್ಞಾವಂತರು ದಿಗ್ಭ್ರಮೆಗೊಂಡರು. ಅವರ ಹತ್ಯೆಯನ್ನು ದೇಶಾದ್ಯಂತ ಸಾಹಿತಿ-ಚಿಂತಕರು ಖಂಡಿಸಿದರು. ಚಂಪಾ, ಕನ್ನಡದ ಆರು ಉದಯೋನ್ಮುಖ ಕವಿಗಳು, ಹಿಂದಿ ಲೇಖಕ ಉದಯಪ್ರಕಾಶ್ ಸೇರಿದಂತೆ ಹಲವರು ತಮ್ಮ ಪ್ರಶಸ್ತಿ, ಪಾರಿತೋಷಕಗಳನ್ನು ಹಿಂತಿರುಗಿಸಿದರು. ಅತಿದುಃಖದ, ಅತಿ ಆಕ್ರೋಶದ ಪ್ರತಿಕ್ರಿಯೆಗಳು ಕೇಳಿಬಂದ ಬೆನ್ನಲ್ಲೇ ‘ಎಲ್ಲ ಅತಿಯಾಯಿತು, ಸುಮ್ಮನಿರಿ’ ಎಂಬ ಧಾಟಿಯ ಅತಿ ನ್ಯೂಟ್ರಲ್ ಪ್ರತಿಕ್ರಿಯೆಗಳೂ ಕೇಳಿಬಂದವು. ಯಾವ ಪುರೋಹಿತಶಾಹಿಯನ್ನು ಕಲಬುರ್ಗಿ ಟೀಕಿಸುತ್ತಿದ್ದರೋ ಅದರ ಮುಂದುವರೆದ ಕೊಂಡಿಗಳಂತಿದ್ದ ಮಠ, ಟ್ರಸ್ಟ್, ಸಂಸ್ಥೆಗಳೊಂದಿಗೆ ಅವರಿಗಿದ್ದ ಸೌಹಾರ್ದ ಸಂಬಂಧ-ಒಡನಾಟವನ್ನು ನೆನೆಸಿಕೊಂಡು ಕೆಲ ಮನಸುಗಳು ಕಸಿವಿಸಿಗೊಂಡವು. ಒಟ್ಟಾರೆ ಅವರವರ ಭಾವ, ಭಕುತಿಗೆ ತಕ್ಕಂತೆ ಅವರನ್ನು ನೆನಪಿಸಿಕೊಂಡರು, ದುಃಖಗೊಂಡರು, ಆಕ್ರೋಶಗೊಂಡರು.

ಆದರೆ ಎಲ್ಲಕ್ಕಿಂತ ವಿಲಕ್ಷಣವಾಗಿ ಕರಾವಳಿ ಮತ್ತಿತರ ಕಡೆಗಳಲ್ಲಿ ಅವರು ಬರೆದ ಒಂದಕ್ಷರವನ್ನೂ ಓದಿರದ ಧರ್ಮಾಂಧರಿಂದ ಸಂಭ್ರಮದ ಪ್ರತಿಕ್ರಿಯೆ ವ್ಯಕ್ತವಾಯಿತು! ಧರ್ಮದ್ರೋಹಿಗೆ ತಕ್ಕ ಶಾಸ್ತಿಯಾಯಿತು ಎಂದು ಜಾಲತಾಣಗಳಲ್ಲಿ ಕಮೆಂಟುಗಳು ಬಂದವು. ಮುಂದಿನ ಸರದಿ ಯಾರದು ಎಂದೂ ಹಿಟ್‌ಲಿಸ್ಟ್ ಬಿಡುಗಡೆ ಮಾಡಲಾಯಿತು. ಅದರ ಆಧಾರದ ಮೇಲೆ ಕೆಲವರ ಬಂಧನ, ಬಿಡುಗಡೆಯೂ ಆಯಿತು.

ಅಂತರ್ಜಾಲದಲ್ಲಿ ಹಿಟ್‌ಲಿಸ್ಟ್?! ನಿಜ. ಇವತ್ತು ಸ್ಥಳೀಯ, ಅಂತಾರಾಷ್ಟ್ರೀಯ ಘಟನೆ ತೀವ್ರಗಾಮಿ ಮನಸುಗಳಲ್ಲಿ ಯಾವ ತೆರನ ಪ್ರತಿಕ್ರಿಯೆ ಹುಟ್ಟುಹಾಕುತ್ತದೆ ಎಂದು ನೋಡಲು ಅಂತರ್ಜಾಲ ಗಮನಿಸಬೇಕು. ಅಂತರ್ಜಾಲವು ಕಲಿತ, ತರುಣ ಪೀಳಿಗೆಯ, ಒಂದು ವರ್ಗದ ಮನಸ್ಥಿತಿಯ ಪ್ರತಿಬಿಂಬವಾಗಿದ್ದು ಶಿಷ್ಟರೆಂದುಕೊಂಡವರ ದುಷ್ಟತನವನ್ನು ಅನಾವರಣಗೊಳಿಸುವ ಮಾಧ್ಯಮವಾಗಿದೆ. ಕೆರಳಿದ ಹಾಗೂ ಅಸಹನೆಯ ಸಮಾಜ ಸೃಷ್ಟಿಸುವಲ್ಲಿ ಮಾಧ್ಯಮ ಮತ್ತು ಅಂತರ್ಜಾಲದ ಮಹತ್ವದ ಪಾತ್ರವಿದೆ. ಭಾರತದಲ್ಲಂತೂ ಅಂತರ್ಜಾಲದ ಕಮೆಂಟಿಗರ ಪಡೆಯೇ ಸೃಷ್ಟಿಯಾಗಿದ್ದು ಮುಕ್ತ ವಿಚಾರಗಳನ್ನು, ಅದರ ಪ್ರತಿಪಾದಕರನ್ನು ‘ಬುಜೀ’ (ಬುದ್ಧಿಜೀವಿ) ಗಳೆಂದು ಅದು ಮನಬಂದಂತೆ ಹಣಿಯುತ್ತದೆ. ಧರ್ಮ, ದೇವರು, ಜಾತಿ, ದೇಶ, ಭಾಷೆ ಕುರಿತ ಸಣ್ಣ ವಿಮರ್ಶೆ, ಟೀಕೆಯೂ ಸಮಾಜದಲ್ಲಿ ಎಂತೋ ಅಂತೆಯೇ ಜಾಲದಲ್ಲೂ ಅತಿವೇಗದ ತೀವ್ರ ಪ್ರತಿಕ್ರಿಯೆ ಹುಟ್ಟುಹಾಕುತ್ತಿದೆ. ಅಂತರ್ಜಾಲಿಗರ ಉಗ್ರ ಗುಂಪು ಒಂದು ಆರೋಗ್ಯಕರ ಚರ್ಚೆ ನಡೆಯುವುದೇ ಸಾಧ್ಯವಾಗದಂತೆ ಮಾಡುತ್ತ ಬೀದಿಹೋರಾಟದಷ್ಟೆ ಭರಾಟೆಯಿಂದ ಜಾಲಿಗರ ಕಾಳಗ ನಡೆಸುತ್ತದೆ.

ಇವತ್ತು ಎಲ್ಲ ದೇಶ, ಧರ್ಮಗಳಲ್ಲೂ ಈ ಉನ್ಮಾದದ ಮನಸ್ಥಿತಿ ಇದೆ. ಇದು ಇದ್ದಕ್ಕಿದ್ದಂತೆ ಸೃಷ್ಟಿಯಾದದ್ದಲ್ಲ. ಅದಕ್ಕೆ ಪ್ರಸಕ್ತ ರಾಜಕೀಯ ಹುಟ್ಟುಹಾಕುವ ಸಾಮಾಜಿಕ ಹಾಗೂ ಹುಸಿ ಧಾರ್ಮಿಕತೆಯ ವಾತಾವರಣ ಕಾರಣವಾಗಿದೆ. ಹಿಂಸೆಯನ್ನು ವೈಭವೀಕರಿಸುವ, ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಅದು ಸೃಷ್ಟಿಸುತ್ತದೆ. ಇದು ಕಲಬುರ್ಗಿ ಹಂತಕರನ್ನಷ್ಟೇ ಅಲ್ಲ; ಪೆರುಮಾಳ್ ಮುರುಗನ್, ಶಿರೀನ್ ದಳವಿ, ಬಿನಾಯಕ್ ಸೇನ್, ತೀಸ್ತಾ, ಸಂಜೀವ ಭಟ್ ಮುಂತಾದ ಎಷ್ಟೋ ಸಂವೇದನಾಶೀಲರ ಕೊಲೆಗಾರರನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಸಿದೆ. ಒಟ್ಟಾರೆ ಹೇಳುವುದಾದರೆ ಕಲಬುರ್ಗಿಯವರ ಹತ್ಯೆಗೆ ಕಾರಣ ಮತ್ತು ಸುಳುಹುಗಳು ಅಂತರ್ಜಾಲದಲ್ಲೇ ದೊರೆಯುತ್ತವೆ.

ಈ ಹತ್ಯೆ ಮತ್ತದರ ಕುರಿತು ನಡೆಯುತ್ತಿರುವ ಚರ್ಚೆಗಳ ಹಿನ್ನೆಲೆಯಲ್ಲಿ ಕೆಲ ಅಂಶಗಳನ್ನು ಗಮನಿಸಬಹುದು:


  • ಕಲಬುರ್ಗಿ ಅವರ ಹತ್ಯೆ ಇಂಥವರಿಂದಲೇ ಆಯಿತೆನ್ನಲು ಇನ್ನೂ ಯಾವ ಸುಳುಹೂ ದೊರೆತಿಲ್ಲ. ಆದರೆ ಇದು ವಿಚಾರ ವಿರೋಧಿಗಳ ಕೃತ್ಯ ಎನ್ನುವುದು ಓಪನ್ ಸೀಕ್ರೆಟ್. ಕಲಬುರ್ಗಿಯವರ ಸಮಕಾಲೀನರೂ, ಸಹವರ್ತಿಗಳೂ ಆಗಿದ್ದ, ಅವರಂತೇ ಮಠ-ಪೀಠ ವ್ಯವಸ್ಥೆಗಳನ್ನು ಟೀಕಿಸುತ್ತಿದ್ದ ಲಿಂಗಣ್ಣ ಸತ್ಯಂಪೇಟೆ ಅನುಮಾನಾಸ್ಪದವಾಗಿ ಕೊಲೆಯಾಗಿದ್ದರು. ಕಲಬುರ್ಗಿಯವರಿಗೂ ಪ್ರಾಣ ಬೆದರಿಕೆಯ ಕರೆಗಳು ಬಂದು ಕೆಲವು ದಿನ ಪೊಲೀಸ್ ರಕ್ಷಣೆ ಒದಗಿಸಲಾಗಿತ್ತು. ಪೊಲೀಸ್ ರಕ್ಷಣೆ ಬೇಡವೆಂದು ಅವರೇ ನಿರಾಕರಿಸಿದ ಮೇಲೆ ಹತ್ಯೆ ಸಂಭವಿಸಿದೆ. ಅದು ಮೂಲಭೂತವಾದಿಗಳಿಂದಲೇ ಆದದ್ದು ಎಂದುಕೊಳ್ಳುವುದಾದರೆ ಅವರು ಬಹಳ ಸಾಫ್ಟ್ ಟಾರ್ಗೆಟ್ ಆಗಿದ್ದರು. ಅವರಿಗಿಂತ ಖಂಡತುಂಡ ಮಾತುಗಳಲ್ಲಿ ಯಾವುದೇ ಅನುಮಾನ, ಭಯವಿರದೆ ಮೂಲಭೂತವಾದದ ಎಲ್ಲ ಒಳಮಗ್ಗುಲು, ಆಯಾಮಗಳನ್ನು ಬರಹ-ಪುಸ್ತಕ ರೂಪದಲ್ಲಿ ಹೊರ ಹಾಕುವ ಹತ್ತಾರು ಚಿಂತಕರು, ಹೋರಾಟಗಾರರು ಕನ್ನಡದಲ್ಲಿದ್ದಾರೆ. ಆದರೂ ಅವರನ್ನೇ ಏಕೆ ಆಯ್ದುಕೊಳ್ಳಲಾಯಿತು? ಇದು ಅಪರಾಧ ಸಂಹಿತೆಯ ಒಳಸೂಕ್ಷ್ಮಗಳಿಗೆ ನಮ್ಮನ್ನು ಕೊಂಡೊಯ್ಯುತ್ತದೆ. ಯಾವಾಗಲೂ ವ್ಯವಸ್ಥೆಗೆ ಒಳಗಿದ್ದು ವಿರುದ್ಧ ಮಾತನಾಡುವ ‘ಕ್ರಿಟಿಕಲ್ ಇನ್‌ಸೈಡರ‍್ಸ್’ ಮೇಲೆ ಹೆಚ್ಚು ಸಿಟ್ಟಿರುತ್ತದೆ. ಉದಾಹರಣೆಗೆ ನಾನು ಹಿಂದೂ ಎಂದು ಅದರ ಒಳಹುಳುಕುಗಳ ಕುರಿತು ಹೇಳುವ ಗಾಂಧಿ ಹಿಂದೂ ಉಗ್ರಗಾಮಿಗಳಿಂದ ಕೊಲ್ಲಲ್ಪಡುತ್ತಾರೆ. ಹಂತಕ ವ್ಯವಸ್ಥೆ ಉಳಿದವರನ್ನು ಭಯಗೊಳಿಸುವ ಸಲುವಾಗಿ ಇಂಥ ಸಾಫ್ಟ್ ಟಾರ್ಗೆಟ್‌ಗಳನ್ನೇ ಆಯ್ದುಕೊಳ್ಳುತ್ತದೆ. 
  • ಇವತ್ತು ಕಾಲ ನಾವು ತಿಳಿದಷ್ಟು ಅಮಾಯಕವಾಗಿಲ್ಲ. ಮೂಲಭೂತವಾದದ ಹುನ್ನಾರಗಳಿಗೆ ಕವಿ, ಚಿಂತಕರ ಅಂತರಂಗದ ಮಾತು, ಸ್ಪಷ್ಟತೆ, ನಿರ್ಭಯ ಸ್ವತಂತ್ರ ಪ್ರವೃತ್ತಿಗಳೆಲ್ಲ ಬಲಿಯಾಗುತ್ತಿರುವ ಸೂಚನೆ ಕಾಣತೊಡಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ಹಿರಿಕಿರಿಯರೆನ್ನದೆ ನಾವೆಲ್ಲ ಮಾತನಾಡುತ್ತೇವೆ. ಆದರೆ ಯಾವ ಮೂಲಭೂತವಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆಯೊ ಅದರ ಸಾಂಸ್ಕೃತಿಕ ಮುಖವಾಡ ಕಿತ್ತೆಸೆದು ನೋಡಲು, ಅದರ ನಾನಾವೇಷಗಳನ್ನು ಗುರುತಿಸಲು, ಸಂತಾನ ಅರಿಯಲು ನಾವು ವಿಫಲರಾಗಿದ್ದೇವೆ. ಕಲಬುರ್ಗಿಯವರಂಥ ಹಿರಿಯ ಚಿಂತಕ, ಸಾಹಿತಿಗಳೂ ಇದರಿಂದ ಹೊರತಲ್ಲ. ಕೆಲ ಚಿಂತಕರು ಸಂಘಟಕರ ಥಳಕುಬಳುಕು, ಶಿಸ್ತು, ಸಿರಿಗಳಿಗೆ ಮಾರುಹೋಗಿ ಜನವಿದ್ದಲ್ಲೆಲ್ಲ ಜಾತ್ರೆ ಎಂದುಕೊಂಡು ಹೋಗುತ್ತಿದ್ದಾರೆ. ಆದರೆ ಸಿರಿ ಪ್ರದರ್ಶನದ ಜಾತ್ರೆಯಲ್ಲಿ ನಮ್ಮ ಮನೆದೇವರಾದ ಕಲ್ಲುದೈವಗಳಿರುವುದಿಲ್ಲ; ಬರಿ ಉತ್ಸವ ಮೂರ್ತಿಗಳೇ ಇರುತ್ತವೆ. ಅಷ್ಟೇ ಅಲ್ಲ, ಹಂಗಿನರಮನೆಯು ತನ್ನಲ್ಲಿ ಬಂದುಹೋದವರ ಹೆಸರನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವುದೂ ಚಿಂತಕರಿಗೆ ತಿಳಿಯದೇ ಹೋಗಿದೆ. ಈ ಹತ್ಯೆಯ ನಂತರವಾದರೂ ಮೂಲಭೂತವಾದಿ ಪಕ್ಷ-ಸಂಘಗಳೊಂದಿಗೆ ಸಂಬಂಧವಿರುವ ಯಾವುದೇ ಸಭೆಸೆಮಿನಾರುಗಳಲ್ಲಿ ಭಾವಹಿಸುವ ಕುರಿತು ನಾವು ಮರು ಯೋಚಿಸಬೇಕಿದೆ. 
  • ಕಲಬುರ್ಗಿ ಹತ್ಯೆ ಖಂಡಿಸಿ ರಾಜಧಾನಿಯಲ್ಲಿ ಹಾಗೂ ಧಾರವಾಡ-ಉತ್ತರ ಕರ್ನಾಟಕದಲ್ಲಿ ಪ್ರತಿಭಟನೆ, ಖಂಡನೆ ವ್ಯಕ್ತವಾಗುತ್ತಿದೆ. ಧಾರವಾಡ ಕೇಂದ್ರಿತ ಆಗುಹೋಗುಗಳು ತನಿಖಾ ವ್ಯವಸ್ಥೆ ಚುರುಕಾಗುವಂತೆ ಒತ್ತಡ ಸೃಷ್ಟಿಸುತ್ತಿವೆ. ಕಲಬುರ್ಗಿಯವರೊಡನೆ ನಿತ್ಯ ಒಡನಾಡಿದವರು ಸದ್ಯದ ಆಘಾತ ಹಾಗೂ ನಾಳೆಯ ಜವಾಬ್ದಾರಿಗಳೆರಡರ ಸಮತೋಲ ಕಾಯ್ದುಕೊಳ್ಳುತ್ತ ಪ್ರತಿನಿತ್ಯ ಒಟ್ಟಾಗಿ ಚರ್ಚಿಸುತ್ತ ಜಾಗೃತರಾಗಿ, ಒಗ್ಗಟ್ಟಾಗಿರಬೇಕಾದ ಅವಶ್ಯಕತೆ ಕುರಿತು ಸ್ಪಷ್ಟವಾಗತೊಡಗಿದ್ದಾರೆ. ಹತ್ಯೆ ವಿರೋಧಿ ಸಮಿತಿ ರಚನೆಯಾಗಿ ನ್ಯಾಯದ ಆಗ್ರಹಕ್ಕೆ ಹೋರಾಟದ ಸ್ವರೂಪ ನೀಡುತ್ತಿದೆ.


ಇದಕ್ಕಿಂತ ಭಿನ್ನವಾಗಿ ಗುಟ್ಟಾಗಿ ಚೆಡ್ಡಿ ತೊಟ್ಟ ಚಿಂತಕರ ಪಡೆ ಪ್ರಪಂಚದ ಬೇರಾವುದೇ ದೇಶದಲ್ಲಿಲ್ಲದಷ್ಟು ಅಭಿವ್ಯಕ್ತಿ ಸ್ವಾತಂತ್ರ್ಯ ಭಾರತದಲ್ಲಿದೆ; ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಎನ್ನುವುದೆಲ್ಲ ಬುದ್ಧಿಜೀವಿಗಳ ಅನಗತ್ಯ ಬೊಗಳೆ ಎಂದು ಬೆನ್ನು ನೀವಿಕೊಳ್ಳುತ್ತಿದೆ. ಅದು ಅವರ ಅನುಭವವಾಗಿ ನಿಜವಿರಬಹುದು. ಯಾಕೆಂದರೆ ವ್ಯವಸ್ಥೆಯ/ಧರ್ಮ-ಜಾತಿಯ ಪರವಾಗಿ ನೀವಿರುವುದಾದರೆ ಭಾರತದಲ್ಲಿ ಹೇರಳ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ ಯಥಾಸ್ಥಿತಿಯನ್ನು ಒಪ್ಪದೆ ಹೊಸವಿಚಾರ ಪ್ರತಿಪಾದಿಸುವವರಿಗಷ್ಟೆ ಆ ಸ್ವಾತಂತ್ರ್ಯದ ಇತಿಮಿತಿಗಳೇನೆಂದು ಸ್ಪಷ್ಟವಾಗಿ ಅರಿವಾಗುತ್ತಿದೆ.



  • ಯಾವುದೇ ಸರ್ಕಾರವಿರಲಿ, ಎಂಥ ಗಹನ ಅಪರಾಧವೇ ಇರಲಿ, ಅದು ಪ್ರಭಾವೀ ಧರ್ಮ/ಜಾತಿ/ಪಕ್ಷದ ವ್ಯಕ್ತಿಗೆ ಸಂಬಂಧಿಸಿದ್ದಾದರೆ ಹೇಗೆ ಮುಚ್ಚಿ ಹೋಗುತ್ತಿದೆಯೆಂದು ನಾವು ನೋಡುತ್ತಿದ್ದೇವೆ. ಯಾವುದೇ ಜಾತಿಯ, ಪಂಥದ ಸ್ವಾಮಿಯಲ್ಲದ ನಿತ್ಯಾನಂದನನ್ನೇನೋ ಹಿಡಿದು ಹಾಕಿದರು. ಆದರೆ ಸ್ವಾಮಿಯೊಬ್ಬ ತಮ್ಮನ್ನು ಅತ್ಯಾಚಾರ ಮಾಡಿದ್ದಾನೆ ಎಂದು ಆ ಕುಲದ ಹೆಣ್ಮಕ್ಕಳು ಪದೇಪದೇ ದೂರು ಕೊಟ್ಟರೂ ವ್ಯವಸ್ಥೆಯೇ ಭೇದಿಸಲಾಗದ ಕೋಟೆ ಕಟ್ಟಿ ಆತನನ್ನು ರಕ್ಷಿಸುತ್ತಿದೆ. 


ನಮ್ಮ ತನಿಖಾ ತಂಡದ ನಾಯಿಗಳಾದರೋ ವಾಸನೆ ಮೂಸುತ್ತ ಮೂಸುತ್ತ ಒಂದು ಸರ್ಕಲಿನಲ್ಲೋ, ಬಸ್‌ಸ್ಟ್ಯಾಂಡ್-ರೈಲ್ವೆ ಸ್ಟೇಷನಿನಲ್ಲೊ ನಿಂತುಬಿಡುತ್ತವೆ. ಅಲ್ಲಿಂದ ಮುಂದೆ ವಿಶಾಲ ಬಯಲೂ, ಅದರ ತುಂಬ ಗವಿ-ಬಿಲ-ಗುಹೆಗಳೂ ಇದ್ದು ಅಲ್ಲಿ ಸಾಕ್ಷಿಯೆಂಬ ಇರುವೆಯನ್ನು ಹುಡುಕುವುದೇ ಕಷ್ಟವಾಗಿದೆ. ಗುಂಡು ಹಾರಿಸಿದ ಶಾರ್ಪ್ ಶೂಟರುಗಳ ಸುಳಿವು ದೊರೆತೀತು. ಅವರಿಗೆ ಕಾಸು ಕೊಟ್ಟ ರೌಡಿಯ ಸುಳಿವು ದೊರೆತೀತು. ಆದರೆ ಆ ರೌಡಿಯನ್ನು ಸಾಕಿಕೊಂಡ ಅಪ್ಪಅಮ್ಮಗಳ ಬಗೆಗೆ ಯಾವ ಸಾಕ್ಷಿಯೂ ದೊರೆಯುವುದಿಲ್ಲ. ದೊರೆತರೂ ಕ್ರಮ ಕೈಗೊಳ್ಳುವುದು ಸಾಧ್ಯವಾಗುತ್ತಿಲ್ಲ. ಪ್ರಭಾವೀ ವ್ಯಕ್ತಿಯವರೆಗೆ ಬಂದುನಿಂತು ತನಿಖೆ ‘ಇಲ್ಲಿಗೀ ಕತೆ ಮುಗಿಯಿತು’ ಎಂದು ಅಪೂರ್ಣಗೊಳ್ಳುವುದೇ ಜಾಸ್ತಿಯಾಗಿದೆ. ಲಿಂಗಣ್ಣ ಸತ್ಯಂಪೇಟೆ ಅವರ ಶವ ಚರಂಡಿಯಲ್ಲಿ ಅರೆನಗ್ನಾವಸ್ಥೆಯಲ್ಲಿ ಪತ್ತೆಯಾಗಿ; ನರೇಂದ್ರ ಧಾಬೋಲ್ಕರ್, ಪನ್ಸಾರೆ ಹತ್ಯೆಯಾಗಿ ವರ್ಷಗಳೇ ಉರುಳಿದರೂ ಹಂತಕರ ಸುಳಿವು ಸಿಗದಿರುವುದು ನಮ್ಮ ಕಣ್ಣೆದುರಿಗಿದೆ.





ಹೀಗಿರುತ್ತ ಹತ್ಯೆ ಖಂಡಿಸಿ ಹಂತಕರನ್ನು ಹಿಡಿಯುವಂತೆ ಸರ್ಕಾರವನ್ನು ಒತ್ತಾಯಿಸುವುದು; ಹಲವೆಡೆ ಬರಹಗಾರರು, ಚಿಂತಕರು ಸಭೆ ನಡೆಸಿ, ತಮಗೆ ದೊರಕಿದ ಪ್ರಶಸ್ತಿ ಸಮ್ಮಾನಗಳನ್ನು ನಿರಾಕರಿಸಿರುವುದು ಮುಂತಾದ ಸಾಂಕೇತಿಕ ಹಾಗೂ ಸೃಜನಶೀಲ ಕ್ರಮಗಳೆಲ್ಲ ತನಿಖೆ ಚುರುಕುಗೊಳ್ಳುವಂತೆ ಒತ್ತಡ ಸೃಷ್ಟಿಸುವಲ್ಲಿ ಯಶಸ್ವಿಯಾಗಿವೆ. ಬಹುಪಾಲು ಅಪರಾಧ ತನಿಖೆಗಳೆಲ್ಲ ನಾನಾ ಕಾರಣಗಳಿಗಾಗಿ ಹಳ್ಳ ಹಿಡಿಯುತ್ತಿರುವಾಗ ಜಡಭರತ ವ್ಯವಸ್ಥೆಯ ಮೇಲೆ ಒತ್ತಡ ತರುವ ಸಲುವಾಗಿ ನಿರಂತರ ಹೋರಾಟ, ನ್ಯಾಯ ದೊರೆಯುವವರೆಗೆ ಹೋರಾಟ ಅಗತ್ಯವಾಗಿದೆ. ಎಂದೇ ಕಲಬುರ್ಗಿಯವರ ಹತ್ಯೆಯ ಸಂದರ್ಭದಲ್ಲಿ ಹಿರಿಕಿರಿಯರು ಭಿನ್ನಭೇದ ಮರೆತು ಒಟ್ಟಾಗಿ ಸೆ. ೧೪ರಂದು ಧಾರವಾಡದಲ್ಲಿ ಬೃಹತ್ ರ‍್ಯಾಲಿ ಮತ್ತು ಸಮಾವೇಶದಲ್ಲಿ ಒಗ್ಗೂಡಿದರು. ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಸಮಾನ ಮನಸ್ಕರ ಜೊತೆಗೆ ಸ್ಥಳೀಯ ವಿದ್ಯಾರ್ಥಿಗಳೂ ಸಾವಿರಾರು ಸಂಖ್ಯೆಯಲ್ಲಿ ಸೇರಿ ಹಂತಕರನ್ನು ಗುರುತಿಸುವಂತೆ; ಹಂತಕ ವ್ಯವಸ್ಥೆಯ ಬೇರುಗಳನ್ನು ಬುಡಮಟ್ಟ ಕಿತ್ತುಹಾಕುವಂತೆ ಒತ್ತಾಯಿಸಿದರು. ವಿಚಾರಕ್ಕೆ ವಿಚಾರ ಉತ್ತರವಾಗಬೇಕೇ ವಿನಹ ಹತ್ಯೆಯಲ್ಲ; ಹತ್ಯೆ ಹೇಡಿಗಳ ಕೆಲಸ ಎಂಬ ಅಭಿಪ್ರಾಯ ಕೇಳಿಬಂತು. ಒಟ್ಟಾರೆ ಕೋಮುವಾದವನ್ನೂ, ಅದು ಸೃಷ್ಟಿಸುವ ಅಸಹನೆಯನ್ನೂ ತೊಡೆಯಲು ಕಲಬುರ್ಗಿ ಹತ್ಯೆಯನ್ನು ಮುಂದಿಟ್ಟುಕೊಂಡು ಶ್ರಮಿಸಬೇಕು; ಎಳೆಯ ಮನಸುಗಳಲ್ಲಿ ಆರೋಗ್ಯಕರ ಧಾರ್ಮಿಕತೆ ಬೆಳೆಸಬೇಕು; ಜಿಲ್ಲಾ ಕೇಂದ್ರಗಳಲ್ಲೂ ಸರಣಿ ಹೋರಾಟಗಳಾಗಬೇಕು ಎಂದು ನಿರ್ಧರಿಸಲಾಯಿತು.

ಜೀವಮಾನವಿಡೀ ಕಲಬುರ್ಗಿಯವರು ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದರು. ಅವರ ಮರಣವೂ ಜಾಗ್ರತ ಗುಂಪೊಂದು ಕ್ರಿಯಾಶೀಲವಾಗುವಂತೆ ಮಾಡಿರುವುದು ‘ಶರಣರ ಗುಣವನ್ನು ಮರಣದಲ್ಲಿ ಕಾಣು’ ಎಂಬ ಮಾತು ನಿಜಗೊಳ್ಳುವಂತೆ ಮಾಡಿದೆ. ಕಲಬುರಗಿಯವರನ್ನು ಮೌನವಾಗಿಸಿರುವೆವೆಂದು ಯಾರೂ ಬೀಗದಿರಲಿ, ಇದುವರೆಗೆ ಬಾಯಿಗೆ ಬೀಗ ಹಾಕಿಕೊಂಡವರ ನಾಲಿಗೆಗಳಲ್ಲೂ ಕಲಬುರ್ಗಿ ನುಡಿಯತೊಡಗಿದ್ದಾರೆ!

***

ಈ ದುರ್ಘಟನೆಯ ಬಳಿಕ ಅವರ ಆಪ್ತೇಷ್ಟರು, ಶಿಷ್ಯರು ಕಲಬುರ್ಗಿಯವರ ಗೆಯ್ಮೆ ಗರಿಮೆಗಳನ್ನು, ಅವರ ಮಾತು-ಚಿಂತನೆ-ವ್ಯಕ್ತಿತ್ವವನ್ನು ನೆನಪಿಸಿಕೊಂಡು ಎಲ್ಲೆಲ್ಲೂ ಬರೆಯುತ್ತ, ಮಾತನಾಡುತ್ತಿರುವಾಗ ಅವರನ್ನು ಎಂದೂ ಭೇಟಿಯಾಗದ, ಫೋನಿನಲ್ಲಿ ಮಾತನಾಡದ, ಅವರ ಒಂದೂ ಭಾಷಣ-ಪಾಠ ಕೇಳದ, ಅಷ್ಟಾಗಿ ಓದಿಕೊಂಡಿಲ್ಲದ ನಾನು ಏನು ಬರೆಯುವುದು ಎಂದುಕೊಳ್ಳುತ್ತಿದ್ದೆ. ಆದರೆ ಒಳದನಿ ಏಕೆ ಅವರು ನಿನ್ನ ಅಕ್ಷರ ಬಂಧುವಲ್ಲವೆ ಎಂದು ಪ್ರಶ್ನಿಸುತ್ತಿದೆ. ಈ ಸಾವಿನ ಕುರಿತು ಬರೆಯಬೇಕಾದ ಒತ್ತಡ ಸೃಷ್ಟಿಸಿದೆ.

ಮನುಷ್ಯ ದೇಹ ಅಮರವಲ್ಲ. ಅವನ ಚೇತನ ಕಾಲದ ಸರಪಳಿಯಲ್ಲಿ ಭಾಷೆಯ ಒಂದು ಕೊಂಡಿ. ಒಬ್ಬ ಬರಹಗಾರನ ಸಾವು ಕೇವಲ ಒಂದು ಮಾನವ ಜೀವದ ಇಲ್ಲವಾಗುವಿಕೆಯಲ್ಲ. ಅದು ಒಂದು ಭಾಷೆಯ ಒಂದು ಸಂವೇದನೆಯ ಸಾವು. ಬರಹಗಾರನೆಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ, ದೇಹವಲ್ಲ, ಆತ ಅವನಂತೆ ಯೋಚಿಸುವ ಒಂದು ಸಮುದಾಯದ, ಒಂದು ತಲೆಮಾರಿನ ಪ್ರತಿನಿಧಿ. ಬರವಣಿಗೆ ಎಂದರೆ ಆಡದವರ ಮಾತು, ಕಾಣದವರ ಕಣ್ಣು. ವಾಲ್ಮೀಕಿ ರಾಮನ ಕುರಿತು ಹೇಳುವಂತೆ ಬರಹಗಾರ ‘ಪೂರ್ವಭಾಷಿ’. ಎದುರಿರುವವರು ಆಡಲಾರದ, ಅನುಭವಿಸಲಾರದ ಸಂಕಟಗಳಿಗೆ ಮಾತಿನ ರೂಪ ಕೊಟ್ಟು ಅವರಿಗಿಂತ ಮೊದಲೇ ಆಡುವವ. ಅದರಲ್ಲೂ ಸಂಶೋಧಕನ ಸ್ಥಾನ ಕವಿಗಿಂತ, ಬರಹಗಾರನಿಗಿಂತ ವಿಭಿನ್ನ ಹಾಗೂ ವಿಶಿಷ್ಟ. ಸತ್ಯನಿಷ್ಠುರಿಯಾಗಿ ಚರಿತ್ರೆ ತಿಳಿಯಬೇಕಾದ, ತಿಳಿಸಬೇಕಾದ ಜವಾಬ್ದಾರಿ ಸಂಶೋಧಕರ ಹೆಗಲ ಮೇಲಿರುತ್ತದೆ. ಎಂದೇ ದಿಟ್ಟವಾಗಿ, ವಿಶಿಷ್ಟವಾಗಿ ಚರಿತ್ರೆಯ ಮೂಲ ಆಕರಗಳನ್ನೇ ಶೋಧಿಸುತ್ತ ನಡೆದಿದ್ದ; ನಾನೆಂದೂ ನೋಡಿರದ, ಮಾತನಾಡಿರದ, ಕಲಬುರ್ಗಿಯವರ ಸಾವು ಒಳಗೊಂದು ತಂತಿ ಕಡಿದ ಅನುಭವ ಹುಟ್ಟಿಸುತ್ತಿದೆ.

ಅಳಿವಿರದ ಚೇತನವೇ, ಇಡುವ ಹೆಜ್ಜೆಗಳಲಿಷ್ಟು ಸತ್ಯದ ಕಸುವು ತುಂಬು, ನಮಸ್ಕಾರ..




No comments:

Post a Comment