(ಶೀನಾ-ಇಂದ್ರಾಣಿ)
ಒಂದು ಮೆಸೇಜ್ ಈಗ ಅಂತರ್ಜಾಲದಲ್ಲಿ ಹರಿದಾಡುತ್ತಿದೆ:
‘ಕೇವಲ ಎರಡೇ ಎರಡು ಪ್ರಶ್ನೆಗಳಿಗೆ ಸರಿ ಉತ್ತರ ಬರೆಯಿರಿ, ಐಎಎಸ್ ಪರೀಕ್ಷೆ ಪಾಸು ಮಾಡಿ. ಉಳಿದ ಎಲ್ಲ ಪ್ರಶ್ನೆಗಳಿಗೆ ನೀವು ತಪ್ಪು ಉತ್ತರಿಸಿದರೂ ಅಥವಾ ಉತ್ತರಿಸದಿದ್ದರೂ ಪರವಾಗಿಲ್ಲ, ಈ ಎರಡು ಪ್ರಶ್ನೆಗೆ ಉತ್ತರಿಸಿ:
ಮೊದಲ ಪ್ರಶ್ನೆ: ಇಂದ್ರಾಣಿ ಮುಖರ್ಜಿಯ ನಿಖರವಾದ ವಂಶವೃಕ್ಷ ರಚಿಸಿ.
ಎರಡನೆ ಪ್ರಶ್ನೆ: ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ?..’
ಇಲ್ಲಿ ಗೇಲಿಗೊಳಗಾಗಿರುವುದು ಆಧುನಿಕ ಕುಂತಿ ಇಂದ್ರಾಣಿ ಮುಖರ್ಜಿ. ಒಂದೂವರೆ ತಿಂಗಳಿನಿಂದ ಎಲ್ಲ ಸುದ್ದಿಮಾಧ್ಯಮಗಳಲ್ಲೂ ರಾರಾಜಿಸಿದ, ಹಲವು ‘ಮಾಜಿ’ ಎಂಬ ಪ್ರಿಫಿಕ್ಸ್ ಹೊಂದಿದ ಇಂದ್ರಾಣಿ ಮುಖರ್ಜಿ. ಮದುವೆಗೂ ಮುನ್ನ ಉಂಟಾದ ಸಾಂಗತ್ಯದ ಫಲವಾಗಿ ಹೆತ್ತ ಮಕ್ಕಳಿಬ್ಬರನ್ನು ಸಾವಿರಾರು ಮೈಲಿ ದೂರದಲ್ಲಿ ತನ್ನ ತಾಯ್ತಂದೆಯರ ಬಳಿ ಇಟ್ಟಿದ್ದಷ್ಟೆ ಅಲ್ಲ, ಹದಿವಯಸ್ಸು ಕಳೆದನಂತರ ಅವರು ತನ್ನೊಡನೆ ಇರಲು ಬಂದರೆ ಮಕ್ಕಳನ್ನು ತಮ್ಮತಂಗಿಯೆಂದು ಎಲ್ಲರಿಗು ಪರಿಚಯಿಸಿದ ಇಂದ್ರಾಣಿ ಮುಖರ್ಜಿ. ಯಾವ ಅನೂಹ್ಯ ಶಂಕೆಸಂಚುಗಳಲ್ಲಿ ಮುಳುಗಿಹೋದಳೋ, ಅಂತೂ ಕಣ್ಣಲ್ಲಿ ರಕ್ತವಿಲ್ಲದೆ ತನ್ನ ಮಗಳನ್ನೇ ಕೊಂದ ಇಂದ್ರಾಣಿ ಮುಖರ್ಜಿ.
ದಿನದಿನಾ ಪತ್ತೇದಾರಿ ಧಾರಾವಾಹಿಯಂತೆ ಕಂತುಗಳಲ್ಲಿ ಬಿಚ್ಚಿಕೊಂಡ ಕೊಲೆಯ ವಿವರಗಳಿಂದ ಹತಭಾಗ್ಯೆ ಮಗಳು ಶೀನಾ ಬೋರಾ ಎಲ್ಲರ ಕಣ್ಣು ನೀರಾಡುವಂತೆ ಮಾಡಿದಳು. ಪ್ರಸ್ತುತ ಮಾಧ್ಯಮಗಳು ತಮ್ಮ ಪ್ರೈಂಟೈಂ ಅನ್ನು ಇದಕ್ಕೇ ಮೀಸಲಿಟ್ಟು ಒಂದಾದ ಮೇಲೊಂದು ಸ್ಫೋಟಕ ಸುದ್ದಿಗಳನ್ನು ದಿನನಿತ್ಯ ಹೊರಹಾಕಿದವು. ಇಂದ್ರಾಣಿ-ಪೀಟರರ ಮಹತ್ವಾಕಾಂಕ್ಷಿ ಯೋಜನೆ ಐಎನ್‌ಎಕ್ಸ್ ಎಂಬ ಮಾಧ್ಯಮ ಸಂಸ್ಥೆಯ ಹೆಸರು ಕೇಳದ ಸಾಮಾನ್ಯರೂ ಸಹಾ ಇದು ಥಳುಕಿನ ಲೋಕದ ದಗಲ್ಬಾಜಿ ಕೃತ್ಯವೆಂದೇ ಅಂದುಕೊಂಡರು. ಅವರು ನೋಡುತ್ತಿದ್ದ ಕಳಪೆ ಥ್ರಿಲ್ಲರ್‌ಗಳಿಗಿಂತ ಇದು ಯಾವ ರೀತಿಯಲ್ಲೂ ಭಿನ್ನವಾಗಿರಲಿಲ್ಲ.
ಸಿನಿಮಾದಲ್ಲಿ ಆದಂತೆಯೇ ಈ ಕೇಸಿನಲ್ಲಿ ತನಿಖೆ, ಪರೀಕ್ಷೆ, ವರದಿ ಎಲ್ಲವೂ ಕರಾರುವಾಕ್ ಆಗಿ ನಡೆದು, ಇನ್ನೇನು ಈ ಕೊಲೆ ಕೇಸಿನ ಕೊನೆ ಬಂತೇ ಹೋಯಿತೆನ್ನುವಾಗ ಸಾವಿರಾರು ಕೋಟಿ ರೂಪಾಯಿ ಆಸ್ತಿ ತನಿಖೆ ಮತ್ತದರ ಲಿಂಕುಗಳನ್ನು ಹರಡತೊಡಗಿದ ದಕ್ಷ ಪೊಲೀಸ್ ಅಧಿಕಾರಿ ಎತ್ತಂಗಡಿಯಾದರು. ಖುದ್ದು ಆಸಕ್ತಿ ವಹಿಸಿ ಪ್ರಕರಣದ ಹೂರಣ ಬಯಲು ಮಾಡಿದ ಮುಂಬೈ ಪೊಲೀಸ್ ಕಮಿಷನರ್ ರಾಕೇಶ್ ಮಾರಿಯಾ ವರ್ಗಾವಣೆಯಾದರು. ಬಡ್ತಿ ಪಡೆದು ‘ಹೋಂಗಾರ್ಡ್ಸ್ ನಿರ್ದೇಶಕ’ ಎಂಬ ಅತ್ಯಂತ ನಿಷ್ಕ್ರಿಯ ಸ್ಥಾನಕ್ಕೆ ಕಳಿಸಲ್ಪಟ್ಟರು! ಸಾಲದೆಂಬಂತೆ ಕಾಲಮಿತಿಯನಿಟ್ಟುಕೊಂಡು ವಿಸ್ತೃತ ತನಿಖೆ ನಡೆಸುತ್ತಿದ್ದ ಮಹಾರಾಷ್ಟ್ರ ಪೊಲೀಸರಿಂದ ಆ ಕೇಸನ್ನು ಹಿಂಪಡೆದು ಸಿಬಿಐಗೆ ವರ್ಗಾಯಿಸಲಾಯಿತು!!
ಜನರ ವಿಶ್ವಾಸ ಕಳೆದುಕೊಳ್ಳುತ್ತಿರುವ ಆರಕ್ಷಕ ವ್ಯವಸ್ಥೆಯಲ್ಲಿ ಮಾರಿಯಾರಂಥ ಅಪರೂಪದ ಅಧಿಕಾರಿಗಳು ನ್ಯಾಯ ಸಿಗಬಹುದೆನ್ನುವ ಆಶಾಭಾವನೆ ಮೂಡಿಸುವಂತಿರುತ್ತಾರೆ. ಆದರೆ ಅಂಥವರ ಕೈಗಳನ್ನೂ ಕಟ್ಟಿ ಹಾಕುವ ಇಂಥ ಹುನ್ನಾರಗಳು ನ್ಯಾಯದಾನ ವ್ಯವಸ್ಥೆ ಕುರಿತು ಜನ ಸಿನಿಕರಾಗುವಂತೆ ಮಾಡುತ್ತವೆ. ಒಟ್ಟಾರೆ ಭಾರತದಲ್ಲಿ ಏನು ಮಾಡಿಯೂ ದಕ್ಕಿಸಿಕೊಳ್ಳಲು ಸಾಧ್ಯವಿದೆ ಎಂಬ ಭಾವನೆ ಬೆಳೆಯುತ್ತಿದೆ.
ಹಾಗಾಗಿಯೇ ಈ ಬರಹದಲ್ಲಿ ಎಷ್ಟು ಪ್ರಶ್ನಾರ್ಥಕ ಚಿಹ್ನೆ, ಆಶ್ಚರ್ಯಸೂಚಕ ಚಿಹ್ನೆ ಬಳಸಿದರೂ ಕಡಿಮೆಯೇ..
ಯಾರು ಈ ಇಂದ್ರಾಣಿ ಬೋರಾ ಯಾನೆ ಇಂದ್ರಾಣಿ ಖನ್ನಾ ಯಾನೆ ಇಂದ್ರಾಣಿ ಮುಖರ್ಜಿ?
೩೦ ವರ್ಷ ಕೆಳಗಿನ ಈಶಾನ್ಯ ಭಾರತದ ಒಂದು ಪುಟ್ಟ ಪಟ್ಟಣದ ಹುಡುಗಿ ಇಂದ್ರಾಣಿ. ಪಿಯುಸಿವರೆಗೆ ಕಲಿತ ಹುಡುಗಿ ಮುಂದೆ ಪದವಿ ಕಲಿಯಲು ಕೊಂಚ ದೂರದ ಶಿಲ್ಲಾಂಗ್ ಸೇರುತ್ತಾಳೆ. ಅಲ್ಲಿ ಒಬ್ಬಾತನ ಪರಿಚಯವಾಗುತ್ತದೆ. ಅಷ್ಟೇನೂ ಸಿರಿವಂತನಲ್ಲದ, ಸ್ಫುರದ್ರೂಪಿಯಲ್ಲದ, ಮಹತ್ವಾಕಾಂಕ್ಷಿಯಲ್ಲದ ವ್ಯಕ್ತಿ ಆತ. ಅವರಿಬ್ಬರು ನಾಲ್ಕು ವರ್ಷ ಒಟ್ಟಿಗೆ ವಾಸಿಸುತ್ತಾರೆ. ಹುಡುಗಿ ಮನೆಯವರಿಗೆ ತಿಳಿಯಿತೊ ಇಲ್ಲವೊ, ತಿಳಿದರೂ ಏನಾದರೂ ಹೇಳಿದರೋ ಇಲ್ಲವೋ ಅಂತೂ ಅವರಿಬ್ಬರೂ ಮದುವೆಯಾಗದೇ ಒಂದು ಹೆಣ್ಣು, ಒಂದು ಗಂಡು ಮಗುವಿನ ತಾಯ್ತಂದೆಯರಾಗುತ್ತಾರೆ. ತಾವು ಜೊತೆಜೊತೆಯಾಗಿ ನೋಡಿದ ಸಿನಿಮಾ ನೆನಪಿನಲ್ಲಿ ಹುಡುಗಿಗೆ ಶೀನಾ ಎಂದೂ; ಸೋವಿಯತ್ ಅಧ್ಯಕ್ಷ ಮಿಖಾಯಿಲ್ ಗೋರ್ಬಚೆವ್ ನೆನಪಿಗೆ ಮಗನಿಗೆ ಮಿಖಾಯಿಲ್ ಎಂದೂ ಹೆಸರಿಸುತ್ತಾರೆ. ಬರಬರುತ್ತ ಮಹತ್ವಾಕಾಂಕ್ಷಿಯಾದ ಆ ಹುಡುಗಿಗೆ ತನ್ನ ಸಂಗಾತಿಯ ಆದಾಯ ತನ್ನ ಖರ್ಚು ಸರಿತೂಗಿಸುವಷ್ಟು ಇಲ್ಲ; ತನ್ನ ಶಕ್ತಿ ಸಾಧ್ಯತೆಗಳು ಶಿಲಾಂಗ್ ಅನ್ನೂ ಮೀರಿ ಬಹಳ ಇದೆ ಎಂದೆನಿಸಿದ್ದೇ ಹೆತ್ತ ಮಕ್ಕಳನ್ನು ತಾಯ್ತಂದೆಯರ ಸುಪರ್ದಿಗೆ ಬಿಟ್ಟು ನಾಪತ್ತೆಯಾಗಿಬಿಟ್ಟಳು. ಮುಂದಿನ ೧೦ ವರ್ಷ ಅವಳ ಸುದ್ದಿಯಿಲ್ಲ.
ಇತ್ತ ಊರಲ್ಲಿ ಬಿಟ್ಟ ಮಕ್ಕಳಿಬ್ಬರೂ ತಮ್ಮ ಅಜ್ಜನ ಸರ್‌ನೇಮ್ ಬೋರಾ ಇಟ್ಟುಕೊಂಡೇ ಬೆಳೆದವು. ಆ ಸಣ್ಣ ಊರಲ್ಲಿ ಅವರ ಅಜ್ಜಿಅಜ್ಜ ಇವರನ್ನು ತಮ್ಮ ಮಕ್ಕಳೆಂದು ಹೇಳಿಕೊಳ್ಳಲು ಸಾಧ್ಯವಿರಲಿಲ್ಲ; ಹಾಗೆಂದರೆ ಯಾರೆಂದು ಹೇಳಿದ್ದಿರಬಹುದು? ತಮ್ಮ ನಿಜ ಗುರುತು ಹೇಳಿಕೊಳ್ಳಲಾಗದೆ ಮಕ್ಕಳು ಏನೇನು ಸಂಕಟ ಅನುಭವಿಸಿದವೊ? ಆವಾಗೀವಾಗ ಮಕ್ಕಳ ಅಪ್ಪ ಬಂದು ಭೇಟಿಮಾಡುತ್ತಿದ್ದ. ಆದರೆ ಅವನನ್ನು ಬರದಂತೆ ಅಜ್ಜಅಜ್ಜಿಮಾವಂದಿರು ತಡೆಯುತ್ತಿದ್ದರು. ಕೊನೆಗೆ ಅವನೂ ಬೇರೆ ಮದುವೆಯಾದ. ಆ ಎಳೆಯ ಹುಡುಗಿ ಶೀನಾ ೧೦ನೇ ತರಗತಿಯವಳಿದ್ದಾಗ ಬರೆದುಕೊಂಡ ಡೈರಿಯ ಕೆಲಪುಟಗಳು ಇತ್ತೀಚೆಗೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಅದನ್ನು ಓದಿದರೆ ಕಲ್ಲೂ ಕರಗುತ್ತದೆ.
ಸಾಕಲು ಸಾಧ್ಯವಿಲ್ಲದ ಮೇಲೆ ಭೂಮಿ ಮೇಲೆ ಮಕ್ಕಳನ್ನು ತರುವುದು ಅಪರಾಧ. ಏಕೆಂದರೆ ಹೆತ್ತವರ ಕ್ಷಣದ ಮೈಮರೆವಿಗೆ ಶಿಕ್ಷೆ ಅನುಭವಿಸಬೇಕಾಗುವುದು ಎಳೆಯ ಮಕ್ಕಳು. ಶೀನಾಳ ಡೈರಿಯ ಪುಟಪುಟಗಳಲ್ಲಿ ಎಳೆ ಹುಡುಗಿಯ ಒಂಟಿತನ, ಹತಾಶೆ, ಖಿನ್ನತೆ ಒಳಗನ್ನು ಅಲ್ಲಾಡಿಸುವಷ್ಟು ತುಂಬಿಕೊಂಡಿವೆ. ಅವಳು ತನ್ನ ತಂದೆಗೆ ಪದೇಪದೇ ಪತ್ರ ಬರೆದಿದ್ದಾಳೆ. ತನಗೆ ಎಂಥದೋ ಸರ್ಟಿಫಿಕೇಟ್ ಬೇಕು, ಕಳಿಸು ಎಂದು ಕೇಳಿಕೊಂಡಿದ್ದಾಳೆ. ತಮ್ಮ ಜಾತಿ ಯಾವುದು, ತನಗೆ ಗೊಂದಲವಾಗುತ್ತಿದೆ ಎಂದು ಕೇಳಿದ್ದಾಳೆ. ‘ಮಾವಂದಿರೊಡನೆ ನೀನು ವ್ಯವಹಾರ ಮಾಡುವುದೇಕೆ? ಅವರು ನಿನಗೆ ಖಂಡಿತ ಸಹಾಯ ಮಾಡಲಾರರು. ನೀನು ಹಿಟಾಚಿ ಕೆಲಸ ಬಿಟ್ಟು ಒಳ್ಳೆಯ ಕೆಲಸ ನೋಡು’ ಎಂದಿದ್ದಾಳೆ. ‘ಅಜ್ಜ, ಅಜ್ಜಿ ಇಬ್ಬರೂ ನೀನು ಕೆಟ್ಟವನು ಎನ್ನುತ್ತಾರೆ. ಆದರೆ ನನಗೆ ಹಾಗನಿಸುತ್ತಿಲ್ಲ, ಬರೆದಿಟ್ಟ ಪತ್ರ ಕಳಿಸಲು ಎನ್‌ವೆಲಪ್ ಸಿಗುತ್ತಿಲ್ಲ, ಅದು ಎಲ್ಲಿ ಸಿಗುತ್ತದೆ?’ ಎಂದು ಮುಗ್ಧವಾಗಿ ಕೇಳಿದ್ದಾಳೆ. ಮೊದಮೊದಲು ತನ್ನಮ್ಮನ ಬಗೆಗೆ ಹೆಮ್ಮೆಯಿಂದ ಬರೆದುಕೊಂಡ ಶೀನಾ, ಅವಳೊಬ್ಬ ಭರವಸೆಯ ಉದ್ಯಮಿಯೆಂದು ಪೇಪರಿನಲ್ಲಿ ಬಂದ ಫೋಟೋ ಕತ್ತರಿಸಿಟ್ಟುಕೊಂಡಿದ್ದಾಳೆ. ಆದರೆ ಕೊನೆಗೆ ‘ಅವಳು ನನ್ನಮ್ಮನಲ್ಲ, ನನ್ನ ಕಡುವೈರಿ’ ಎನ್ನುತ್ತಾಳೆ. ‘ಎಲ್ಲ ಹ್ಯಾಪಿ ಬರ್ತ್ ಡೇ ಎನ್ನುತ್ತಿದ್ದಾರೆ. ಆದರೆ ನನಗೆ ಈ ಬದುಕಿನಲ್ಲಿ ಯಾವ ಖುಷಿಯೂ ಇಲ್ಲ’ ಎನ್ನುತ್ತ ವಿಷಣ್ಣಳಾಗುತ್ತಾಳೆ.
ಇತ್ತ ಮಕ್ಕಳ ಕತೆ ಹೀಗಾದರೆ ಅತ್ತ ಮಕ್ಕಳ ಅಮ್ಮ ಕಲಕತ್ತ ತಲುಪಿ, ಎಚ್‌ಆರ್ ಕಂಪನಿ ಶುರುಮಾಡಿ, ತನಗಿಂತ ಹೆಚ್ಚು ಪ್ರಾಯದ ಉದ್ಯಮಿಯನ್ನು ಮದುವೆಯಾಗಿ, ಇನ್ನೂ ಒಬ್ಬ ಮಗಳು ವಿಧಿಯನ್ನು ಹೆತ್ತಳು. ತನ್ನ ಬೆಳವಣಿಗೆಯ ವೇಗಕ್ಕೆ ಕಲಕತ್ತವೆಂಬ ಕೆರೆ ಸಾಲದೆಂದು ಅನಿಸಿದ್ದೇ ಮೀನು ತಿಮಿಂಗಿಲವಾಗಲು ಮುಂಬೈ ಕಡಲಿಗೆ ಜಿಗಿಯಿತು. ಎರಡನೆಯ ಪತಿಗೆ ಡೈವೋರ್ಸ್ ಕೊಟ್ಟು ಮಗಳ ಜೊತೆ ಮುಂಬೈ ಸೇರಿದಳು. ರಿಲಯನ್ಸ್, ಸ್ಟಾರ್ ಟಿವಿ ಮೊದಲಾದ ಗ್ರಾಹಕರನ್ನು ಹೊಂದಿದ ಅವಳ ಕಂಪನಿ ಬೆಳೆದೇ ಬೆಳೆಯಿತು. ಅಲ್ಲಿ ಪರಿಚಯವಾದವ ಅವಳಿಗಿಂತ ತುಂಬ ಹಿರಿಯನಾದ ಪೀಟರ್ ಮುಖರ್ಜಿ. ಆತ ಸ್ಟಾರ್ ಇಂಡಿಯಾದ ಸಿಇಒ. ಡೈವೋರ್ಸಿಯಾಗಿದ್ದ ಅವನಿಗೆ ಮೊದಲ ಮದುವೆಯಿಂದ ಹುಟ್ಟಿದ ಇಬ್ಬರು ಗಂಡು ಮಕ್ಕಳಿದ್ದರು. ಇಂದ್ರಾಣಿ ಆತನನ್ನು ಮದುವೆಯಾದಳು, ತನ್ನ ಮೊದಲ ಸಂಬಂಧವನ್ನೂ, ಅದರಿಂದ ಹುಟ್ಟಿದ ಎರಡು ಮಕ್ಕಳ ವಿವರಗಳನ್ನು ಮುಚ್ಚಿಟ್ಟು ವಿಧಿ ತನ್ನ ಏಕಮಾತ್ರ ಪುತ್ರಿ ಎಂದಳು. ಮತ್ತೆ ತಮಗೆ ಮಕ್ಕಳು ಬೇಡವೆಂದು ತನ್ನ ಮಗಳು ವಿಧಿಯನ್ನು ಪೀಟರ್ ದತ್ತು ತೆಗೆದುಕೊಳ್ಳುವಂತೆ ಮಾಡಿದಳು.
ನಾಟಕವೇನೋ ಭರ್ಜರಿಯಾಗೇ ನಡೆಯುತ್ತಿತ್ತು. ಥಳುಕಿನ ಸ್ವರ್ಗಲೋಕದ ಮಂದಿಯ ಬದುಕಲ್ಲವೆ? ಜನಸಾಮಾನ್ಯರ ಊಹೆಗೂ ನಿಲುಕದ ವೈಭೋಗ. ಆಗ ಅಸ್ಸಾಮಿನಿಂದ ಬಂದಿಳಿದರು ಶೀನಾ, ಮಿಖಾಯಿಲ್. ಅವರ ಅಜ್ಜಿಅಜ್ಜರಿಗೆ ವಯಸ್ಸಾಗಿತ್ತು, ನೋಡಿಕೊಳ್ಳುವವರಿರಲಿಲ್ಲ. ಅವರನ್ನು ಮುಂಬೈಯ ತನ್ನ ಪ್ರತಿಷ್ಠಿತ ವಲಯದಲ್ಲಿ ತಮ್ಮ, ತಂಗಿಯೆಂದು ಪರಿಚಯಿಸಿ, ಪ್ರತಿಷ್ಠಿತ ಕಾಲೇಜಿಗೆ ಓದಲು ಸೇರಿಸಿ, ಸಕಲ ವೈಭೋಗಗಳಲ್ಲಿ ಮಕ್ಕಳನ್ನು ಮುಳುಗಿಸಿ, ನಿಜ ಮರೆಮಾಚುವಂತೆ ಅವರನ್ನು ಒತ್ತಡದಲ್ಲಿಟ್ಟು, ಮಿಖಾಯಿಲ್ ಮದಿರೆಯ ದಾಸನಾಗಿ, ಐಷಾರಾಮಿ ಬದುಕನ್ನು ಪ್ರೀತಿಸುವ ಹುಡುಗನಾಗಿ, ಶೀನಾ ತಾಯಿಯ ಜೊತೆ ನಿರಂತರ ಸಂಘರ್ಷಕ್ಕಿಳಿದು ಬೇರೆ ವಾಸಿಸತೊಡಗಿ, ಪೀಟರನ ಮಗನನ್ನು ಪ್ರೇಮಿಸತೊಡಗಿ, .. ..
ಕೊನೆಗೆ,
ತನ್ನ ತಾಯಿಯ ಮೂರನೇ ಗಂಡನ ಮೊದಲ ಹೆಂಡತಿಯ ಮಗನನ್ನು ಪ್ರೀತಿಸಿದ ತಪ್ಪಿಗೆ ಶೀನಾ ತನ್ನ ತಾಯಿ ಯಾನೆ ಅಕ್ಕ ಇಂದ್ರಾಣಿಯಿಂದ ಕೊಲೆಯಾದಳು. ಕೊಲೆಯಾದ ಮೂರು ವರ್ಷ ಬಳಿಕ ಓಹೋ, ಇಂಥ ತಮ್ಮ ಪರಿಚಿತೆ ಸತ್ತಳೆಂದು ಲೋಕಕ್ಕೆ ಅರಿವಾಯಿತು..
ನಡುವೆ ಎಂಥ ಗೋಡೆ!
ಇದೊಂದು ವಿಸ್ತೃತಗೊಳ್ಳುತ್ತ ವಿಚ್ಛಿದ್ರಗೊಂಡ ಕುಟುಂಬದ ದುರಂತ ಕತೆ. ಇಲ್ಲಿ ವರ್ಷಗಟ್ಟಲೆ ರಕ್ತಬಂಧುವೊಬ್ಬರು ಕಣ್ಣಿಗೆ ಬೀಳದಿದ್ದರೂ, ಎಲ್ಲಿದ್ದಾರೋ ಏನೋ ಎಂದು ತಿಳಿಯದಿದ್ದರೂ ಉಳಿದವರಿಗೆ ಏನೂ ಅನಿಸುವುದೇ ಇಲ್ಲ. ಅಮೆರಿಕದಲ್ಲಿದ್ದಾಳೆ ಎಂದು ತನ್ನ ‘ತಂಗಿ’ ಶೀನಾ ಕುರಿತು ‘ಅಕ್ಕ’ ಇಂದ್ರಾಣಿ ಹೇಳಿದ್ದೇ ತಡ, ಶೀನಾಳ ಪ್ರೇಮಿ, ತಮ್ಮ, ಗೆಳತಿ, ತಂದೆ, ಅಜ್ಜಿಅಜ್ಜ ಇತ್ಯಾದಿ ಯಾರೆಂದರೆ ಯಾರೂ ಅವಳ ಬಗ್ಗೆ ಯೋಚಿಸದೆ, ಹುಡುಕದೆ, ಅವಳ ಸಂಪರ್ಕವೇ ಇಲ್ಲದೆ ಇದ್ದುಬಿಡುತ್ತಾರೆ! ಕಾಣೆಯಾದವಳ ಬಗೆಗೆ, ಸಂಪರ್ಕಕ್ಕೆ ಸಿಗದವಳ ಬಗೆಗೆ ಯಾರೂ ಯೋಚಿಸದೆ, ಹುಡುಕದೆ ಇರುತ್ತಾರೆ! ಇವತ್ತಿನ ಇ ಮೇಲ್, ಮೆಸೇಜ್, ವಾಟ್ಸಪ್, ಟ್ವಿಟರ್ ಯುಗದಲ್ಲಿ ಮನುಷ್ಯರ ನಡುವೆ ಸಂವಹನವೇ ಇಲ್ಲದಂಥ ಗೋಡೆ ಎದ್ದಿದೆಯೆಂದಾದರೆ ಅದೆಷ್ಟು ದಪ್ಪದ ಗೋಡೆ ಅದು? ಆ ಗೋಡೆ ಕಟ್ಟಿಕೊಂಡದ್ದಕ್ಕೆ ತೆರಬೇಕಾದ ಬೆಲೆಯಾದರೂ ಎಷ್ಟು? ವ್ಯಕ್ತಿಗಿಂತ ವಸ್ತುಗಳೇ ಮೌಲಿಕವೆನಿಸಿಕೊಂಡ ಸರಕಿನ ಯುಗದಲ್ಲಿ ಹೀಗಾಗುವುದೆ ಅಥವಾ ಮನುಷ್ಯ ಪ್ರಾಣಿಯ ದುಷ್ಟತನವನ್ನು ದೇಶ, ಕಾಲಗಳು ಪಳಗಿಸದೆ ಹೋದಾಗ ಇಂಥದ್ದು ಸಂಭವಿಸುವುದೆ?
ಈ ಕತೆಯಲ್ಲಿ ನಾವು ಕೇಳಿದ್ದೆಲ್ಲ ನಿಜವೇ ಆದರೂ ಅಲ್ಲಿ ಹಲವು ಖಾಲಿ ಜಾಗಗಳಿವೆ. ಬಿಟ್ಟ ಸ್ಥಳಗಳಲ್ಲಿ ನಿಮ್ಮ ಊಹೆಯನ್ನೇ ತುಂಬಿಕೊಳ್ಳಬೇಕು. ಯಾಕೆಂದರೆ ಯಾವ ಮದುವೆಯ ಕುರಿತು, ಯಾವ ಸಂಬಂಧಗಳ ಕುರಿತು ಯಾರ‍್ಯಾರು ತಂತಮ್ಮ ಪಾರ್ಟ್‌ನರುಗಳಲ್ಲಿ ಎಷ್ಟೆಷ್ಟು ಏನೇನು ಹೇಳಿಕೊಂಡಿದ್ದರೊ, ಎಷ್ಟು ಮುಚ್ಚಿಕೊಂಡಿದ್ದರೊ ಅವರಿಗೇ ಗೊತ್ತು. ಇರಲಿ. ಅವೆಲ್ಲ ಅವರವರ ಅಂತರಂಗದ ಯಾರೂ ನೋಡಬಾರದ ಒಳಕೋಣೆಗಳಲ್ಲೇ ಇರಲಿ; ಆದರೆ ತಾನು ಹೆತ್ತ ಮಗುವಿನ ಮೇಲೆ ತಾಯಿಗೆ ಮಮಕಾರ ಬೆಳೆಯದಿರಲು, ಕೊಲ್ಲಲು ಹೇಗೆ ಸಾಧ್ಯ?
ಸಾಧ್ಯವಿದೆ. ಏಕೆಂದರೆ ಹೆತ್ತ ಕೂಡಲೇ ಹೆಣ್ಣು ಅಮ್ಮನಾಗುವುದಿಲ್ಲ. ಅಮ್ಮತನವನ್ನು ಸಂಭ್ರಮಿಸುವ ಮನಸ್ಥಿತಿಯನ್ನು ರೂಪಿಸಲು ಕುಟುಂಬ, ಅಪ್ಪ, ಸಮಾಜ ಇರಬೇಕು. ಇಲ್ಲದಿದ್ದರೆ ಹೊಟ್ಟೆಯಲ್ಲಿರುವ ಮಗುವನ್ನು ಬೇಡ ಎಂದು ತೆಗೆದುಹಾಕಿದಷ್ಟೆ ಸುಲಭವಾಗಿ ಬೆಳೆದು ನಿಂತ ಮಗಳನ್ನೂ, ಮಗನನ್ನೂ ಇಲ್ಲವಾಗಿಸಿಬಿಡುತ್ತಾರೆ. ಅಲ್ಲದೆ ತಾನು ಹೆತ್ತದ್ದೋ, ಮತ್ತೊಬ್ಬರು ಹೆತ್ತದ್ದೋ, ಪ್ರಾಣ ತೆಗೆಯದೆ ಇರಲು ಒಳಗೊಂದು ಸರಿತಪ್ಪು ವಿವೇಚನೆಯ ತಕ್ಕಡಿ ಅವಶ್ಯವಿದೆ. ಅದಿಲ್ಲದಿದ್ದರೆ ತನ್ನೆಲ್ಲ ಸಂಕಟಗಳ ಪರಿಹಾರ ಇನ್ಯಾರದೊ ಸಾವಿನಲ್ಲಿ ಅಡಗಿದೆ ಎಂಬ ದುಷ್ಟ ಭ್ರಮೆ ಮನಸ್ಸನ್ನಾವರಿಸುತ್ತದೆ.
ಅದೇನೇ ಆಗಲಿ, ಸರಿತಪ್ಪು ಯಾವುದೆಂದು, ಯಾರದೆಂದು ಸುಲಭದಲ್ಲಿ ನಿರ್ಧರಿಸಲಾಗದ ಈ ದುಷ್ಟ ಕಾಲದಲ್ಲಿ ಶೀನಾ ಬೋರಾಗೆ ದೊರೆತಂಥ ಅಮ್ಮ-ಅಪ್ಪ-ಅಜ್ಜಿಅಜ್ಜ-ಕುಟುಂಬ ಮತ್ತಾರಿಗೂ ಸಿಗದಿರಲಿ..
No comments:
Post a Comment