Tuesday, 15 December 2015

ನಜೀಂ ಹಿಕ್ಮತ್ ಕವಿತೆಗಳು




(ಚಿತ್ರ: ವೆನಿಜುವೆಲಾ ಅಧ್ಯಕ್ಷ ಹ್ಯೂಗೋ ಷಾವೆಜ್ ಜೈಲಿನಲ್ಲಿದ್ದಾಗ 1992ರಲ್ಲಿ ಬರೆದ ಚಿತ್ರ)
೧  ಭಾವೀ ಜೈಲುವಾಸಿಗಳಿಗೆ ಕೆಲ ಸಲಹೆಗಳು

ಜೈಲೊಳಗಿದ್ದು ಪತ್ರಗಳಿಗಾಗಿ ಕಾಯುವುದು
ವಿಷಾದ ಗೀತೆಗಳ ಹಾಡುವುದು
ರಾತ್ರಿಯಿಡೀ ನಿದ್ದೆಗೆಟ್ಟು
ಸೂರು ದಿಟ್ಟಿಸುತ್ತ ಮಲಗುವುದು
ಮಧುರವೇ ಇರಬಹುದು,
ಆದರೆ ಅಪಾಯಕಾರಿ.

ಒಂದು ಕ್ಷೌರದಿಂದ ಮತ್ತೊಂದಕ್ಕೆ
ನಿನ್ನ ಮುಖ ಗಮನಿಸು
ವಯಸ್ಸು ಮರೆತುಬಿಡು,
ಹೇನುಗಳಿಗಾಗಿ ಹುಡುಕು.
ವಸಂತ ರಾತ್ರಿಗಳ ನಿರೀಕ್ಷಿಸು
ರೊಟ್ಟಿಯ ಕೊನೆ ತುಂಡನ್ನೂ ತಿನ್ನಲು ಮರೆಯದಿರು
ಎದೆತುಂಬಿ ನಗದೆ ಇರಬೇಡ
ಯಾರಿಗೆ ಗೊತ್ತು
ನೀ ಪ್ರೇಮಿಸುವ ನಿನ್ನವಳು ಪ್ರೀತಿ ನಿಲಿಸಬಹುದು
ಅದೇನು ಮಹಾ ಎನಬೇಡ
ಹಸಿರು ಮರವೊಂದು ಉರುಳಿ ಒಳಗೇ ನಿನ್ನಮೇಲೆ ಬಿದ್ದಂತೆ ಅದು

ಒಳ ಕುಳಿತು ಹೂದೋಟ, ಗುಲಾಬಿಗಳ ಕುರಿತು
ಯೋಚಿಸುವುದು ತರವಲ್ಲ
ಕಡಲು, ಪರ್ವತಗಳ ಬಗೆಗೆ ಯೋಚಿಸು
ಪುರುಸೊತ್ತಿಲ್ಲದಷ್ಟು ಓದು, ಬರೆ
ನೇಯುವುದು, ಕನ್ನಡಿ ಮಾಡುವುದೂ
ಒಳ್ಳೆಯದೆಂದು ನನ್ನ ಸಲಹೆ
ಅಂದರೆ,
ಹತ್ತು ಹದಿನೈದು ವರುಷ
ಒಳಗಿದ್ದು ಕಳೆಯಲಾಗದೆಂದಲ್ಲ
ಇರಬಹುದು
ಎಲ್ಲಿಯವರೆಗೆ ನಿನ್ನೆದೆಯ ಎಡಭಾಗದ ಒಡವೆ
ತನ್ನ ಹೊಳಪು ಕಳಕೊಳ್ಳುವುದಿಲ್ಲವೋ
ಅಲ್ಲಿಯವರೆಗೆ..

(ಮೇ ೧೯೪೯)

೨  ಬದುಕು


ಒಂದುವೇಳೆ
ದೊಡ್ಡ ಕಾಯಿಲೆಗೆ ತುತ್ತಾಗಿ
ಆಪರೇಷನ್ ಆಗಲೇಬೇಕಿದೆ ಎಂದುಕೋ
ಓಟಿಯ ಆ ಬಿಳಿ ಮೇಜಿನಿಂದ ನಾವು
ಮೇಲೇಳದೆ ಇರಬಹುದು
ಇಷ್ಟು ಬೇಗ ಸಾಯಬೇಕಲ್ಲ ಎಂದು
ಕೊಂಚ ದುಃಖವೂ ಇರಬಹುದು
ಆದರೂ
ಜೋಕು ಕೇಳಿ ನಗುತ್ತೇವೆ,
ಕಿಟಿಕಿಯಾಚೆ ಮಳೆಯಾಗುತ್ತಿದೆಯೇ ನೋಡುತ್ತೇವೆ,
ಕುತೂಹಲ ಆತಂಕದಿಂದ
ಬ್ರೇಕಿಂಗ್ ನ್ಯೂಸ್‌ಗಾಗಿ ಎದುರು ನೋಡುತ್ತೇವೆ..

ಒಂದುವೇಳೆ
ಹೋರಾಡಲೇಬೇಕಾದ ಕಾರಣಕೆ
ರಣರಂಗದಲ್ಲಿರುವೆವು ಎಂದುಕೊ
ಅಲ್ಲಿ, ಮೊದಲ ದಿನದ ಮೊದಲ ದಾಳಿಯಲ್ಲೇ
ಮಕಾಡೆ ಬಿದ್ದು ನಾವು ಸಾಯಬಹುದು.
ಸಿಟ್ಟುಆತಂಕಗಳೊಡನೆ ನಮಗಿದು ಗೊತ್ತಿರಲೂಬಹುದು.
ಆದರೂ
ವರುಷಗಟ್ಟಲೆ ನಡೆಯಲಿರುವ ಯುದ್ಧದ ಕುರಿತು
ಅದರ ಪರಿಣಾಮಗಳ ಕುರಿತು
ನಮ್ಮ ಕೊನೆಗಾಲದ ಕುರಿತು
ಚಿಂತಿಸುತ್ತೇವೆ

ನಾವು ಜೈಲಿನಲ್ಲಿರುವೆವೆಂದುಕೊಳ್ಳೋಣ
ವಯಸ್ಸು ಐವತ್ತರ ಹತ್ತಿರ
ಕಬ್ಬಿಣದ ಕದ ತೆರೆಯಲು
ಇನ್ನೂ ಹದಿನೆಂಟು ವರುಷ..
ಆದರೂ
ಗೋಡೆಗಳಾಚೆಗಿನ ಹೊರ ಜಗತ್ತಿನೊಡನೆ
ಜನ, ಪ್ರಾಣಿ, ಹೋರಾಟ, ಗಾಳಿಯೊಡನೆ
ಬದುಕುತ್ತೇವೆ

ಬದುಕನ್ನು ಎಷ್ಟು ಗಂಭೀರವಾಗಿ ಪರಿಭಾವಿಸಬೇಕೆಂದರೆ
ಎಪ್ಪತ್ತರಲ್ಲೂ ಆಲಿವ್ ಮರಗಳ ನೆಡಬೇಕು
ನಿನ್ನ ಮಕ್ಕಳು ಮೊಮ್ಮಕ್ಕಳಿಗೆಂದಲ್ಲ
ಸಾವಿನ ಭಯವಿದ್ದರೂ ಅದನು
ನಂಬುವುದಿಲ್ಲವೆಂದು ಹೇಳಲು,
ಬದುಕು ಅದಕಿಂತ ತೂಕದ್ದೆಂದು ತೋರಿಸಲು..

ಎಲ್ಲೇ ಇರಲಿ, ಹೇಗೇ ಇರಲಿ,
ಬದುಕಬೇಕು ನಾವು ಸಾವೇ ಇಲ್ಲದವರಂತೆ
ಸಾವು ತಟ್ಟದವರಂತೆ..
(೧೯೪೮)

(ಕನ್ನಡಕ್ಕೆ: ಅನುಪಮಾ, ಕವಲಕ್ಕಿ.)

(ನಜೀಂ ಹಿಕ್ಮತ್ (೧೯೦೨-೧೯೬೩) ಟರ್ಕಿಯ ಕವಿ, ನಾಟಕಕಾರ, ನಿರ್ದೇಶಕ. ತಮ್ಮ ರಾಜಕೀಯ ನಿಲುವುಗಳ ಹಾಗೂ ಕಮ್ಯುನಿಸ್ಟ್ ಸಿದ್ಧಾಂತದ ಮೇಲಿದ್ದ ಒಲವಿನ ಕಾರಣವಾಗಿ ಪದೇಪದೇ ಬಂಧನಕ್ಕೊಳಗಾಗಿ ಅಥವಾ ದೇಶಭ್ರಷ್ಟನಾಗಿ ಆತ ತನ್ನ ಜೀವನದ ಬಹುಕಾಲ ಕಳೆಯಬೇಕಾಯಿತು. ೧೯೩೮ರಲ್ಲಿ ನೌಕಾಸೇನೆಯ ನಾವಿಕರು ನಜೀಂ ಕವಿತೆ ಓದಿದಾಗ ಅದು ಮಿಲಿಟರಿ ಕ್ಷಿಪ್ರಕ್ರಾಂತಿಗೆ ಕವಿ ಕೊಡುತ್ತಿರುವ ಕುಮ್ಮಕ್ಕು ಎಂದು ಭಾವಿಸಿ ಬಂಧಿಸಲಾಯಿತು. ೨೮ ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು. ೧೯೫೦ರಲ್ಲಿ ಶಾಂತಿ ಪ್ರಶಸ್ತಿ ಬಂದಾಗ ಅವರ ಬಿಡುಗಡೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಾಬಿ ನಡೆಯಿತು. ಜೈಲಿನಲ್ಲೇ ಅವರು ಎರಡು ಬಾರಿ (೧೫ ದಿನ ಮತ್ತು ೧೭ ದಿನ) ತಮ್ಮ ಬಿಡುಗಡೆಗೆ ಉಪವಾಸ ಸತ್ಯಾಗ್ರಹ ಮಾಡಿದರು. ಕೊನೆಗಂತೂ ಅವರ ಬಿಡುಗಡೆಯಾದ ನಂತರ ತಮ್ಮ ಸಾವಿನವರೆಗೂ ಸೋವಿಯತ್ ಯೂನಿಯನ್‌ನಲ್ಲಿದ್ದರು. ಆತನ ಹೆಸರನ್ನೂ ಟರ್ಕಿಯಲ್ಲಿ ನಿಷೇಧಿಸಲಾಗಿತ್ತು. ೨೦೦೧ರಲ್ಲಿ ಕವಿಯ ಜನ್ಮ ಶತಮಾನೋತ್ಸವದ ವೇಳೆ ಮೂಲಭೂತವಾದಿಗಳ ವಿರೋಧದ ನಡುವೆಯೂ ಅವರಿಗೆ ಮರಳಿ ಟರ್ಕಿಯ ಪೌರತ್ವ ಘೋಷಿಸಬೇಕೆಂದು ಐದು ಲಕ್ಷ ಮಂದಿ ಸಹಿ ಅಭಿಯಾನದಲ್ಲಿ ಪಾಲ್ಗೊಂಡರು. ಇತ್ತೀಚೆಗಷ್ಟೆ ಅವರ ಕವಿತೆಗಳ ಮೇಲಿನ ನಿಷೇಧ ತೆರವುಗೊಂಡು ಲಭ್ಯವಾಗಿವೆ.)

No comments:

Post a Comment