ಹೆಣ್ಣು ಬೇಡದವಳು, ಅದರಲ್ಲೂ ಮದುವೆಯಾಗುವ ತನಕ ತಂದೆತಾಯಿಯರಿಗೆ ಜವಾಬ್ದಾರಿಯ ಹೊರೆ ಆದವಳು ಎನ್ನುವುದು ಬದುಕಿನ ಒಂದಲ್ಲಾ ಒಂದು ಗಳಿಗೆ ಎಲ್ಲ ಹೆಣ್ಮಕ್ಕಳ ಅನುಭವಕ್ಕೆ ಬಂದಿರುತ್ತದೆ. ವಿಜ್ಞಾನ ತಂತ್ರಜ್ಞಾನ ಮುಂದುವರೆದಷ್ಟೂ, ಅಭಿವೃದ್ಧಿ ಸೂಚ್ಯಂಕಗಳು ಏರಿದಷ್ಟೂ ಹೆಣ್ಣು ಬದುಕಿನ ಆಪತ್ತು ಹೆಚ್ಚತೊಡಗಿದೆ. ಒಂದು ಕಡೆ ಸ್ತ್ರೀಭ್ರೂಣ ಹತ್ಯೆ-ಸ್ತ್ರೀಶಿಶುಹತ್ಯೆ ಸಂಭವಿಸುತ್ತಿದ್ದರೆ; ಮತ್ತೊಂದೆಡೆ ನಿರ್ಲಕ್ಷ್ಯದಿಂದ ಹೆಣ್ಣುಮಕ್ಕಳ ಮರಣದ ಸಂಖ್ಯೆಯೂ ಹೆಚ್ಚುತ್ತಿದೆ. ಇದರ ನಡುವೆ ಅಂತೂಇಂತೂ ಭೂಮಿಗೆ ಬಂದ ಹೆಣ್ಣುಮಕ್ಕಳ ಪಾಲನೆ-ಪೋಷಣೆ-ರಕ್ಷಣೆ-ಮದುವೆ ಮೊದಲಾದ ಜವಾಬ್ದಾರಿಗಳಿಂದ ಸುಸ್ತಾಗಿ ‘ಸಾಕಪ್ಪಾ’ ಎನ್ನುವ ಪಾಲಕರ ನಿಟ್ಟುಸಿರು ಅವರಿಗಿಟ್ಟ ಹೆಸರುಗಳಲ್ಲಿ ವ್ಯಕ್ತವಾಗುತ್ತದೆ. ನಮ್ಮಲ್ಲಿ ಅಸಂಖ್ಯ ಸಾಕಮ್ಮ, ಸಾಕವ್ವಗಳಿದ್ದಾರೆ. ಅವರೆಲ್ಲ ಮಕ್ಕಳು ಸಾಕೆನಿಸಿದ ಮೇಲೆ, ಅದರಲ್ಲೂ ಹೆಣ್ಣುಮಕ್ಕಳು ಸಾಕಾದ ಮೇಲೆಯೇ ಹುಟ್ಟಿದವರು. ಮತ್ತೆ ಕೆಲವು ಕಡೆ ‘ಸಾಕು ಸಾವಿತ್ರಿ, ಬೇಕು ಬೆನಕ’ ಮಾತು ಚಾಲ್ತಿಯಲ್ಲಿದೆ. ಹೆಣ್ಣು ಸಾಕೆನಿಸಿದರೆ ಅವರಿಗೆ ಸಾವಿತ್ರಿ ಎಂದು ಹೆಸರಿಡುವುದು, ಮತ್ತೆ ಗಂಡು ಬೇಕೆನಿಸಿದರೆ ಹುಟ್ಟಿದ ಗಂಡಿಗೆ ಬೆನಕ (ವಿನಾಯಕ)ನಿಗೆ ಸಂಬಂಧಪಟ್ಟ ಹೆಸರಿಡುವುದು ಚಾಲ್ತಿಯಲ್ಲಿದೆ.
ಲಿಂಗ ಅಸಮಾನತೆ, ತಾರತಮ್ಯಕ್ಕೆ ಎಷ್ಟೆಲ್ಲ ಮುಖಗಳು! ಮಗುವಿಗಿಡುವ ಹೆಸರಿನಲ್ಲೂ ಅದು ವ್ಯಕ್ತವಾಗುತ್ತದೆಯೆ? ಹೌದು. ಮೊನ್ನೆ ಈಚೆಗೆ ಇಪಿಡಬ್ಲ್ಯು ಪತ್ರಿಕೆಯಲ್ಲಿ ಓದಿದ ಸರ್ವೇ ಮತ್ತು ವರದಿ ಆ ಸುದ್ದಿಯ ಆಳಕ್ಕಿಳಿದು ನೋಡುವಂತೆ ಮಾಡಿತು.
ಅಕ್ಟೋಬರ್ ೨೦೧೧ರಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಜಿಲ್ಲಾಡಳಿತ ತನ್ನ ಜಿಲ್ಲೆಯ ಆಯ್ದ ೨೮೫ ಹೆಣ್ಣುಮಕ್ಕಳಿಗೆ ಬೇರೆ ಹೆಸರು ಇಡುವ ಸಮಾರಂಭವನ್ನು ಆಯೋಜಿಸಿತು. ಅಂದು ಮುಖ್ಯಮಂತ್ರಿಯಾಗಿದ್ದ ಪೃಥ್ವಿರಾಜ ಚವಾಣರ ಜಿಲ್ಲೆ ಸತಾರಾದಲ್ಲಿ ೧-೪೦ ವರ್ಷ ಒಳಗಿನ ಹೆಣ್ಮಕ್ಕಳು ತಮ್ಮ ಹೆಸರು ಬದಲಿಸಿಕೊಂಡರು. ಕೆಲವರು ಹೆಸರನ್ನು ತಾವೇ ಆಯ್ದುಕೊಂಡರೆ, ಮತ್ತೆ ಕೆಲವರಿಗೆ ತಾಯಿ/ಗೆಳತಿ/ಬಂಧು ಸೂಚಿಸಿದ ಹೆಸರಿಡಲಾಯಿತು. ೪ ವರ್ಷದ ನಕುಶಿ ಲೋಂಢೆ ಈಗ ಭಾಗ್ಯಶ್ರೀ ಆಗಿದ್ದರೆ, ನಕುಶಿ ಮಾನೆ (೧೧) ಈಗ ನಿಖಿತಾ. ನಕುಶ ರಾಥೋಡ್ (೧೩) ಐಶ್ವರ್ಯಾ ಆಗಿದ್ದರೆ ನಕುಶಿ ಭಿಷೆ (೧೭) ಪೂನಂ ಎಂದು ಹೆಸರಾದಳು. ನಕುಶಿ ಮೋರೆ (೧೬) ಸಂಚಿತಾ ಎಂದು ಹೆಸರಿಟ್ಟುಕೊಂಡರೆ ನಕುಶಿ ಚಂದ್ರಕಾಂತ ಪವಾರ್ (೧೧) ಈಗ ಕೋಮಲ್ ಆದಳು. ಅವರೆಲ್ಲರ ಹೆಸರು ಬದಲಾದ ಕುರಿತು ಸರ್ಕಾರ ಅಫಿಡವಿಟ್ ನೀಡಿತು. ಅಂದಿನಿಂದ ಅವರು ತಮ್ಮ ಹೊಸಹೆಸರುಗಳಲ್ಲಿ ವ್ಯವಹರಿಸಲು ಕಾನೂನಾತ್ಮಕ ಅನುಮತಿ ಸಿಕ್ಕಿತು. ಆ ಹೆಣ್ಣುಮಕ್ಕಳು ಶಾಲೆಗೆ ಹೋಗಿ ಬರಲು ಬಸ್ಸು ಸೇವೆ ಉಚಿತ, ಶಾಲೆಯ ಶುಲ್ಕ ರದ್ದು ಮಾಡಲಾಯಿತು. ಅವರ ಪಾಲಕರಿಗೆ ಉಚಿತ ಪಡಿತರ ನೀಡಲಾಯಿತು.
ಇದರಲ್ಲೊಂದು ವಿಶೇಷ ಗಮನಕ್ಕೆ ಬಂದಿರಬಹುದು: ಬದಲಾದ ಹೆಸರಿನವರೆಲ್ಲರ ಮೂಲ ಹೆಸರು ನಕುಶಿ, ನಕುಶ ಅಥವಾ ನಕೂಸಾ ಆಗಿತ್ತು; ಅವರೆಲ್ಲ ಹೆಣ್ಣುಮಕ್ಕಳಾಗಿದ್ದರು. ಮರಾಠಿಯಲ್ಲಿ ನಕುಶಿ ಎಂದರೆ ‘ಬೇಡವಾದ’, ‘ಒಲ್ಲದ’. ಕನ್ನಡದಲ್ಲಿ ‘ಒಲ್ಲವ್ವ’ ಅಂದ ಹಾಗೆ. ಅವರಲ್ಲಿ ಎಲ್ಲ ಹುಡುಗಿಯರು ಹಿಂದೂಧರ್ಮಕ್ಕೆ, ಅರ್ಧಕ್ಕಿಂತ ಹೆಚ್ಚು ಹುಡುಗಿಯರು ಮರಾಠಾ ಸಮುದಾಯಕ್ಕೆ ಸೇರಿದವರು. ಬಹುಪಾಲು ಗ್ರಾಮೀಣ ಪ್ರದೇಶದವರಾಗಿದ್ದು ೬೫% ಬಡವರು (ಮಾಸಿಕ ಆದಾಯ ೨೦೦೦ಕ್ಕಿಂತ ಕಡಿಮೆ) ಇದ್ದವರು. ಬಹುಪಾಲು ಪಾಲಕರು ಅಶಿಕ್ಷಿತರು ಅಥವಾ ಕಡಿಮೆ ಶಿಕ್ಷಣ ಪಡೆದವರು, ಕೃಷಿ ಕಾರ್ಮಿಕರು. ೨೬ ನಕುಶಿಗಳಿಗೆ ಮೂವರು ಅಕ್ಕಂದಿರಿದ್ದರು. ಹೆಚ್ಚುಕಮ್ಮಿ ಎಲ್ಲರೂ ಅವರ ತಾಯ್ತಂದೆಯರಿಗೆ ಮೂರನೇ ಅಥವಾ ನಾಲ್ಕನೇ ಹೆಣ್ಣುಮಗು.
ದೇಶದ ಅತಿ ಕಡಿಮೆ ಲಿಂಗಸರಾಸರಿ ಇರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಐದನೆಯದು. ಕಳೆದ ದಶಕದಲ್ಲಿ ಲಿಂಗ ಸರಾಸರಿ ಅಲ್ಲಿ ನಿರಂತರ ಇಳಿಯುತ್ತ ಬಂದಿದೆ. ಸತಾರಾದಲ್ಲಿ ೧೦೦೦ ಗಂಡುಹುಡುಗರಿಗೆ ೮೮೦ ಹೆಣ್ಮಕ್ಕಳಿದ್ದಾರೆ. ಅಲ್ಲಿನ ಜನರಿಗೆ ‘ಹೆಣ್ಣುಮಗು ಬೆಳೆಸುವುದೂ ಒಂದೇ, ಪಕ್ಕದ ಮನೆ ತೋಟಕ್ಕೆ ನೀರು ಹಾಕೋದೂ ಒಂದೇ’ ಎಂಬ ಗಾದೆ ಮಾತಿನಲ್ಲಿ ನಂಬಿಕೆ. ಹೆಣ್ಣು ಎಂದರೆ ಹೊರೆ, ಅನಗತ್ಯ ಜವಾಬ್ದಾರಿ ಎಂದೇ ಬಹುಪಾಲು ಪಾಲಕರ ಅಭಿಪ್ರಾಯ. ವರದಕ್ಷಿಣೆಯಿಲ್ಲದೆ ಮದುವೆ ಮಾಡುವ ಯಾವ ಸಾಧ್ಯತೆಗಳೂ ಅವರಿಗಿಲ್ಲ. ಭಾರದ ವರದಕ್ಷಿಣೆ ಕೊಡದಿದ್ದರೆ ಅಥವಾ ಕೇಳಿದ್ದಕ್ಕಿಂತ ಕಡಿಮೆ ಕೊಟ್ಟರೆ ತಮ್ಮ ಮಗಳನ್ನು ಗಂಡನ ಮನೆಯವರು ಸರಿಯಾಗಿ ನೋಡಿಕೊಳ್ಳುವುದಿಲ್ಲ ಎಂಬ ನಂಬಿಕೆ ಬಲವಾಗಿದೆ. ವರದಕ್ಷಿಣೆ-ಮದುವೆ ಎಂಬ ಸಾಲಸೋಲದ ಬಾಬ್ತು ಹೆಣ್ಣುಮಗುವನ್ನು ‘ಬೇಡದವಳಾಗಿ’ಸಿದೆ. ಜೊತೆಗೆ ‘ಒಬ್ಬನಾದ್ರು ಮಗ ಬೇಕು, ಇಲ್ಲಂದ್ರ ಆಸ್ತಿಯೆಲ್ಲ ಬ್ಯಾರೇವ್ರಿಗೆ ಹೋಗತದ’ ಎಂಬ ಅಭಿಪ್ರಾಯ ಗಂಡುಮಗುವಿಗಾಗಿ ಹಂಬಲಿಸುವಂತೆ ಮಾಡುತ್ತದೆ. ಮಗನಿಗೆ ಆಸ್ತಿ ಹೋದರೆ ತಮ್ಮವರಿಗೆ ಹೋದಂತೆ; ಮಗಳಿಗೆ ಆಸ್ತಿ ಹೋದರೆ ‘ಬೇರೆ’ಯವರಿಗೆ ಹೋದಂತೆ ಎಂದೇ ತಿಳಿಯಲಾಗಿದೆ. ‘ನೂರು ಮಗನ ತಾಯಾಗು’, ‘ಹುಡುಗ ಹುಟ್ಟಲಿ’ ಎಂಬ ಆಶೀರ್ವಾದ ಮಾಮೂಲಾಗಿ ಕೇಳಿಸುತ್ತದೆ.
ಗಂಡು ಬಯಕೆಯ, ಹೆಣ್ಣು ಬೇಡದ ಸಮಾಜದ ಇವೆಲ್ಲ ನಂಬಿಕೆ, ಅಭಿಪ್ರಾಯಗಳು ಹೆಣ್ಣುಮಕ್ಕಳಿಗಿಡುವ ಹೆಸರಿನಲ್ಲು ಸೂಚಿತವಾಗುತ್ತವೆ. ಮೇಲೆಮೇಲೆ ಹೆಣ್ಣು ಹುಟ್ಟುವಾಗ ಒಂದಕ್ಕೆ ನಕುಶಿ/ನಕೂಸಾ ಎಂಬ ಹೆಸರಿಟ್ಟು; ಅದು ತಮಗೆ ಒಲ್ಲದ್ದು ಎಂದು ಬಹಿರಂಗವಾಗಿ ತೋರಿಸಿದರೆ ಹೆಣ್ಣು ಹುಟ್ಟಿಸಿದ ದೇವರಿಗೆ ನರಮನುಷ್ಯರ ಸಿಟ್ಟು ಅರ್ಥವಾಗಿ ಮುಂದಿನದು ಗಂಡೇ ಹುಟ್ಟುತ್ತದೆ ಎಂಬ ನಂಬಿಕೆ ಅಲ್ಲಿದೆ. ಹೆಣ್ಣಿಗೆ ಹಾಗೆ ಹೆಸರಿಟ್ಟ ನಂತರ ಕೆಲವರಿಗೆ ಗಂಡೂ ಹುಟ್ಟಿವೆ. ನಂತರ ಹೆಣ್ಣು ಹುಟ್ಟಿದವರೂ ಇಲ್ಲದಿಲ್ಲ. ಅಂಥ ಹೆಣ್ಮಕ್ಕಳಿಗೆ ‘ಸೀಮಾ’ ಎಂದು ಹೆಸರಿಸಿದ್ದಾರೆ. ‘ತಮ್ಮ ಸಹನೆಗೆ, ಕಾಯುವಿಕೆಗೆ ಇದೇ ಕೊನೆ(ಸೀಮಾ)’ ಎಂಬರ್ಥದಲ್ಲಿ ದೇವರಿಗೆ ಹಾಕಿರುವ ಧಮಕಿ ಆ ಹೆಸರು!
ಈ ನಕೂಸಾಗಳು ಬರೀ ಹೆಸರಿನಲ್ಲಷ್ಟೆ ಬೇಡದ ಮಗು ಅಲ್ಲ, ನಿಜವಾಗಲೂ ಬೇಡದ ಮಗುವಿನಂತೇ ಅವರನ್ನು ನಡೆಸಿಕೊಂಡಿರುವುದು ಹುಡುಗಿಯರ ಮಾತುಗಳಿಂದ ತಿಳಿಯುತ್ತದೆ. ಮೊದಲೇ ಹೆಣ್ಣು ಹುಟ್ಟಿದರೆ ನಾಮಕರಣ ಅದ್ದೂರಿಯದಲ್ಲ, ಅದರಲ್ಲು ನಕುಶಿ ಹೆಣ್ಣುಮಕ್ಕಳಿಗೆ ನಾಮಕರಣ ಮಾಡುವುದಿಲ್ಲ. ಒಬ್ಬ ತಾಯಿ ಹೇಳಿದಂತೆ, ‘ಉಳದ ಹೆಣ್ಮಕ್ಕಳಿಗಿ ಕಿವಿ ಚುಚ್ಚಿ ಬಂಗಾರದ ವಾಲಿ ಇಟ್ಟಿವ್ರಿ. ನಕುಸಗೆ ಬಂಗಾರ ಇಡಂಗಿಲ್ರಿ. ಹಂಗರೆ ದೇವ್ರಿಗೆ ನಮ್ಗೆ ಬ್ಯಾಸ್ರ ಆಗೇದಂತ ತಿಳದು ಮುಂದ ಗಂಡು ಕೊಡಲಿ ಅಂತರಿ..’
ಇಂಥಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಿಸುವ, ಲಿಂಗ ತಾರತಮ್ಯ ಸರಿಪಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ತೆಗೆದುಕೊಂಡ ಹಲವು ಕ್ರಮಗಳಲ್ಲಿ ಹೆಸರು ಬದಲಿಸುವ ಅಭಿಯಾನವೂ ಒಂದು. ಆದರೆ ಹೆಸರೇನೋ ಬದಲಿಸಲಾಯಿತು. ಆಮೇಲೇನಾಯಿತು? ಆ ಸಂದರ್ಶನ, ಅಧ್ಯಯನದ ವಿವರಗಳು ನಮ್ಮ ದೇಶದ ಗ್ರಾಮೀಣ ಮನಸ್ಥಿತಿಗೆ ಹಿಡಿದ ಕನ್ನಡಿಯಂತಿವೆ.
ಹೆಸರು ಬದಲಿಸಿದ ಎರಡು ವರ್ಷ ನಂತರ ಸತಾರಾ, ಜಾವೊಳಿ, ಮಹಾಬಲೇಶ್ವರ್, ಫಲ್ತಾನ್, ಕೋರೆಗಾಂವ್, ಕರಾಡ್ ಮತ್ತು ಪಟನಾ ತೆಹಶೀಲುಗಳಲ್ಲಿ ಸರ್ವೇ ನಡೆಯಿತು. ೪೨ ಹಳ್ಳಿಗಳ ೭೭ ಕುಟುಂಬಗಳ ೧೦೦ ಹೆಣ್ಮಕ್ಕಳ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯ ಅಧ್ಯಯನ, ಸಂದರ್ಶನ ನಡೆಯಿತು. ೧೦ ವರ್ಷ ಮೇಲ್ಪಟ್ಟ ೪೨ ಹುಡುಗಿಯರ ಸಂದರ್ಶನ ಮಾಡಲಾಯಿತು.
ಅವರಲ್ಲಿ ೫೬% ವಿದ್ಯಾರ್ಥಿನಿಯರಾಗಿದ್ದರು. ೧೦% ಹೆಣ್ಮಕ್ಕಳು ಕೂಲಿ ಮಾಡುತ್ತಿದ್ದರು. ಬಹಳಷ್ಟು ಪಾಲಕರು ತಮ್ಮ ಮಕ್ಕಳ ಮುಂದೆಯೇ ಅವರು ಬೇಡದವರು ಎಂದು ಹೇಳಿದಾಗ ಹದಿಹರೆಯದ ಕೆಲ ಹೆಣ್ಮಕ್ಕಳು ಮುಖ ಸಣ್ಣ ಮಾಡಿಕೊಂಡು ಸಂದರ್ಶಕರೆದುರು ಅತ್ತವು. ಒಬ್ಬಳು ಮೊದಲು ತನಗೆ ತನ್ನ ಹೆಸರಿನ ಅರ್ಥ ತಿಳಿದಿರಲಿಲ್ಲವೆಂದೂ, ಉಳಿದ ಹುಡುಗರು ಛೇಡಿಸಿದಾಗ ತಿಳಿಯಿತೆಂದೂ, ಆಗ ಬಹಳ ಬೇಸರವಾಯಿತೆಂದೂ ಹೇಳುತ್ತ ಬಿಕ್ಕಿದಳು. ಮತ್ತೊಬ್ಬ ನಕೂಸ ‘ಯಾರಾದ್ರೂ ನನ್ ಹೆಸ್ರು ಕೇಳಿದ್ರೆ ಹೇಳಕ್ಕೆ ನಾಚ್ಗೆ ಆಗದು, ಅವ್ರೆಲ್ಲಿ ನಗಾಡ್ತಾರೊ ಅಂತ ಅಂಜಿಕಿ ಆಗದು. ನನ್ನ ಎಲ್ಲ ನಕೆ ಅಂತ ಗಿಡ್ಡ ಹೆಸರಿಂದೆ ಕರೆಯೋರು. ಇನ್ಮೇಲೆ ನನ್ ಹೆಸ್ರು ಬೇರೆ ಆಗಿದೆ. ಇದುವರ‍್ಗೆ ನಾ ಬೇಡಾಗಿದ್ದೆ, ಇನ್ನು ಬೇಕಾದೋಳು ಅಂತ ಆಗೋಹಂಗೆ ಸಾದಿಸಿ ತೋರುಸ್ತೀನಿ’ ಎಂದು ತನ್ನ ಹೊಸ ಹೆಸರಿನ ಬಗೆಗೆ ಭರವಸೆ, ಅಭಿಮಾನ ವ್ಯಕ್ತಪಡಿಸಿದಳು. ೩೦ ರ ಆಸುಪಾಸಿನ ನಕುಶಿ ಒಬ್ಬಳು, ‘ಅಪ್ಪ ಅವ್ವಿ ಉಳಿದ ಅಣ್ತಮಂದ್ರು, ಅಕ್ತಂಗೇರಿಗೆ ಪ್ರೀತಿ ಮಾಡ್ತ ನನ್ನನ್ನ ಮಾತ್ರ ದೂರ ಇಡೊರು. ಎಷ್ಟ್ ಬೇಸ್ರ ಆಗದಂದ್ರೆ ಇವ್ರು ಹುಟ್ಸಿದ್ ಕೂಡ್ಲೆ ಯಾಕ್ ಕೊಂದ್ ಹಾಕ್ಲಿಲ್ಲ ಅನ್ಸದು’ ಎಂದಳು. ೧೫ ವರ್ಷದ ಈಗ ಸುನಿತ ಆಗಿರುವ ನಕೂಸ, ‘ಈಗ್ಲೂ ಅದೇ ಹಳೇ ಹೆಸರಿಂದ್ಲೆ ಕರಿತಾರೆ. ನಿಮ್ಮನೆಯೋರ್ಗೇ ನೀ ಬ್ಯಾಡ, ಸರ್ಕಾರ ಹೊಸ ಹೆಸರಿಟ್ರೆ ಏನ್ ಪ್ರಯೋಜ್ನ ಅಂತಾರೆ’ ಎಂದು ತನ್ನ ಅಳಲು ತೋಡಿಕೊಂಡಳು. ೨೫ ವರ್ಷದ ನಕುಶಿ, ಶಾಲೆ ಕಲಿಯುವಾಗ ಮಾಸ್ತರು ‘ನಕುಸ’ ಪದ ಒಡೆದು ಬಿಡಿಸಲು ಹೇಳಿದಾಗ ಇವಳು ಸುಮ್ಮನೆ ನಿಂತದ್ದು ನೋಡಿ ಸಿಟ್ಟಿನಿಂದ ‘ನಕೊ ಅಸ್ಲೇಲಿ ಮೂಳ್ಗಿ = ನಕೂಸಾ’ ಎಂದು ಪದ ಬಿಡಿಸಿದರೆಂದೂ; ಆಗ ಸಹಪಾಠಿಗಳೆಲ್ಲ ನಗಾಡಿ ತನಗೆ ಅವಮಾನವಾಗಿದ್ದನ್ನೂ ನೆನಪಿಸಿಕೊಂಡಳು.
ಆದರೆ ಪಾಲಕರಿಗೆ ಈ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ. ಅಳುವ ಮಗಳನ್ನು ನೋಡುತ್ತಿದ್ದರೂ ವಿಚಲಿತರಾಗದೆ ಗಂಡು ಹುಟ್ಟದ ತಮ್ಮ ಕಷ್ಟಗಳ ಬಗೆಗೆ, ಹುಟ್ಟಿದ ಹೆಣ್ಣುಮಕ್ಕಳನ್ನು ಮದುವೆಯ ತನಕ ರಕ್ಷಿಸಿ ವರದಕ್ಷಿಣೆ ತೆತ್ತು ದಾಟಿಸಬೇಕಾದ ಸಂಕಷ್ಟದ ಬಗೆಗೆ ಹೇಳಿಕೊಳ್ಳುತ್ತ ಹೋದರು. ಬಹುಪಾಲು ಅಮ್ಮಂದಿರು ಬರಿ ಹೆಣ್ಣು ಹೆತ್ತದ್ದಕ್ಕೆ ದೈಹಿಕ, ಮಾನಸಿಕ ಹಿಂಸೆಗೆ ನಿರಂತರ ಒಳಗಾಗುತ್ತಿದ್ದದ್ದು ಅವರ ಮಾತುಗಳಲ್ಲಿ ವ್ಯಕ್ತವಾಯಿತು. ಹಾಗಾಗಿ ತಾಯಂದಿರಿಗೇ ಗಂಡುಮಗುವಿನ ತೀವ್ರ ಹಂಬಲ ಇರುವುದು ಮಾತಿನಲ್ಲಿ ತಿಳಿದುಬರುತ್ತಿತ್ತು. ಈಗ ಐಶ್ವರ್ಯ ಆಗಿರುವ ನಕೂಸಳ ಅಪ್ಪ ತಾನು ಮಗಳನ್ನು ಹಳೆಯ ಹೆಸರಲ್ಲೆ ಕರೆಯುವುದಾಗಿ ವಾದಿಸಿದ. ‘ನಾಯಾಕೆ ಸರಕಾರದೋರು ಇಟ್ಟ ಹೆಸರಿಂದೆ ಕರಿಬೇಕು? ಅವ್ಳು ಈಗೂ ನಮ್ಗೆ ಬ್ಯಾಡಾದವ್ಳೆಯ. ಸರ್ಕಾರ ಅವಳ ಮದುವಿ ತಂಕ ರೊಕ್ಕ ಕೊಡಲಿ, ವರದಕ್ಷಿಣಿ ರೊಕ್ಕ ಕೊಡಲಿ, ಆಗ ನಾನು ಅವರಿಟ್ಟ ಹೆಸ್ರು ಕರಿತೇನಿ’ ಎಂದ!
ಇಲ್ಲಿ ಪಾಲಕರು ಅಲ್ಟ್ರಾಸೌಂಡ್ ತಂತ್ರಜ್ಞಾನ ಬಳಸಿ ಹೆಣ್ಣು ಭ್ರೂಣ ಹತ್ಯೆ ಮಾಡಲಿಲ್ಲ, ಅಥವಾ ಮಗು ಹುಟ್ಟಿದ ಮೇಲೆ ಹೆಣ್ಣು ಶಿಶು ಹತ್ಯೆಯನ್ನೂ ಮಾಡಲಿಲ್ಲ. ಆದರೆ ಹುಟ್ಟಿದ ಹೆಣ್ಣಿನ ಮೇಲೆ ತಮ್ಮ ಅಸಮಾಧಾನ ತೋರಿಸಿ ದೇವರು ಮುಂದಾದರೂ ಗಂಡು ಕೊಡಲಿ ಎಂದು ಹಾರೈಸಿದರು!
***
ಹೆಸರಲ್ಲೇನಿದೆ ಎನ್ನಬಹುದು. ಇದೆ, ಪಾಲಕರು ಮಕ್ಕಳಿಗಿಡುವ ಹೆಸರಲ್ಲಿ ಎಲ್ಲ ಇದೆ. ಅವರ ನಿರೀಕ್ಷೆ, ಕನಸು, ಆಸೆನಿರಾಸೆ, ಕಷ್ಟ - ಎಲ್ಲವೂ. ಆದರೆ ತವರಿನವರು ಇಟ್ಟ ಹೆಸರನ್ನು ಗಂಡನ ಮನೆಗೆ ಹೋಗುವಾಗ ಈಗಲೂ ಬದಲಾಯಿಸಿಕೊಳ್ಳಬೇಕಾಗಿರುವ ಕಾಲದಲ್ಲಿ ತವರಿಗೂ ತಂಗಿ ಬೇಡದವಳೆನಿಸಿಕೊಂಡು ಬದುಕಬೇಕಿರುವುದು ಕಾಲದ ದುರಂತವಾಗಿದೆ.
ಹಚ್ಚಡದ ನೇಯ್ಗೆಯಲ್ಲಿ ತಾರತಮ್ಯದ ಎಳೆಗಳೂ ಇರುತ್ತವೆ, ಅವುಗಳ ಹಲವು ಅವತಾರಗಳನ್ನು ಗುರುತಿಸಬೇಕು ಅಷ್ಟೆ. ಭಾರತೀಯ ಸಮಾಜದ ಅಸಂಖ್ಯ ಸನ್ನೆ, ಸಂಜ್ಞೆ, ಸೂಕ್ಷ್ಮಗಳು ಲಿಂಗತಾರತಮ್ಯವನ್ನು ಎತ್ತಿ ತೋರಿಸುತ್ತವೆ. ಹೆಣ್ಣನ್ನು ದೇವರೆಂದು, ಹೆಣ್ಣಿರುವಲ್ಲಿ ದೇವತೆಯಿರುವಳೆಂದು ಪೂಜಿಸಿದ ಸಂಸ್ಕೃತಿ ನಮ್ಮದು ಎಂದು ಕೊಚ್ಚಿಕೊಳ್ಳುವ ಈ ನಾಡಿನಲ್ಲಿ ವರದಕ್ಷಿಣೆಯಿಲ್ಲದೆ ಹೆಣ್ಮಕ್ಕಳ ಮದುವೆ ಮಾಡಲಾಗದಿರುವುದು ಬಹುಪಾಲು ಬಡ ಕುಟುಂಬಗಳ ಸಂಕಷ್ಟಕ್ಕೆ ಕಾರಣವಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿ ಹಾಗೂ ನಂತರ ಎಷ್ಟು ವರದಕ್ಷಿಣೆ ನಿಷೇಧ ಕಾಯ್ದೆಗಳು ಬಂದವು? ಆದರೆ ಈಗಲೂ ಆ ಕುರಿತು ಜನರ, ತರುಣರ ಅಭಿಪ್ರಾಯವೇನಾದರೂ ಬದಲಾಗಿದೆಯೆ?
ಒಟ್ಟಾರೆ ಯಾವುದೇ ಸಾಮಾಜಿಕ ಬದಲಾವಣೆಯೂ ಕೇವಲ ಕಾನೂನುಗಳಿಂದ ಸಾಧ್ಯವಾಗುವುದಿಲ್ಲ; ಬಾಧಿತ ಎಚ್ಚೆತ್ತು ಹೋರಾಡಬೇಕು ಹಾಗೂ ಸಮಾಜ ಬದಲಾವಣೆಯ ಯತ್ನದಲ್ಲೊಮ್ಮೆ ಹೊರಳಬೇಕು; ಆಗ ಮಾತ್ರ ನಕುಸ ಎಂದು ಹೆಸರಿಟ್ಟರೇನಂತೆ, ತಾನು ಎಲ್ಲರಿಗು ಬೇಕಾದವಳಾಗಿ ಬದುಕುವೆನೆಂಬ ಆತ್ಮವಿಶ್ವಾಸವನ್ನು ಹೆಣ್ಣು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ.
Excellent one
ReplyDeleteoh my god,,,heegella ideya hennina shoshaneya mukhagalhu...atyuttama lekhanakkagi anupamaravarige dhanyavada
ReplyDeleteoh my god,,,heegella ideya hennina shoshaneya mukhagalhu...atyuttama lekhanakkagi anupamaravarige dhanyavada
ReplyDelete