Friday 11 March 2016

ರೋಹಿತ್ ವೇಮುಲ: ಎರಡು ಕವಿತೆಗಳು





೧. ಬಲೆ ಎಂದಿನಿಂದ ಇದೆ

ತಮಾ, ವೇಮುಲ
ಯಾಕಯ್ಯ ತಂದೆ ಇಂಥ ತಳಮಳ?
ನೆತ್ತರ ಬಸಿದು
ನರನಾಡಿ ಹೊಸೆದು
ದೊಂದಿ ಹೊತ್ತಿಸ ಹೊರಟವನು
ಉರಿದು ಲಯವಾಗಬಹುದೆ ಹೀಗೆ
ಯಾರೊ ಹೊತ್ತಿಸಿದ ಕಿಚ್ಚಿಗೆ?
ಒದ್ದೆ ರೆಕ್ಕೆಯ ಹಕ್ಕಿಗೆ
ಒಳಗದೆಂಥ ಬೇಗೆ?

ಕಿತ್ತುಕೊಂಡವರು ಬಿಟ್ಟುಬಿಡಲಾರರು ಸುಲಭಕ್ಕೆ.
ಸೋಲುವ ಭಯಕೆ ಕತ್ತಿಯಾಗಿಸುತಾರೆ ನಾಲಿಗೆ.
ನಿನ್ನ ಕಣ್ಣಹನಿ ಎಣಿಸಲು
ಕೊಳ್ಳಿದೆವ್ವಗಳು ಪಹರೆ ಕೂತಿವೆ.
ತಮ್ಮ ಹಸಿವೆ ತೀರಿಸಲು ಬೇಯಿಸುತಾವೆ
ನಿನ್ನನೊಂದು ರೊಟ್ಟಿ ತುಣುಕೆಂಬ ಹಾಗೆ.
ಧರೆಗೆ ರಕ್ತಗಂಬಳಿ ಹಾಸುವವರೆಗೆ
ನೆಮ್ಮದಿಯಿಲ್ಲ ಅಧಿನಾಯಕನಿಗೆ
ಗೌಳಿ ಪತನ ಫಲ ನೆಚ್ಚಿ ತಿರುಗಿಸಲಾಗಿದೆ
ನೆಲದ ಗಡಿಯಾರಗಳ ಹಿಂದಕೆ.

ರೆಕ್ಕೆ ತೇವಗೊಂಡ ಹಕ್ಕಿಗಳೇ
ಹಣತೆಯೆಂದೂ ಕಗ್ಗತ್ತಲ ಕುರಿತು ದುಃಖಿಸುವುದಿಲ್ಲ
ಕೊಳಲೆಂದೂ ಮೌನ ಭಾಷೆ ಆಡುವುದಿಲ್ಲ
ಕರುಣದ ಗುರುವಿದ್ದಾನೆ ನಮಗೆ
ನಿತ್ಯಸೂರ್ಯ ಬಾಬಾ ಇದ್ದಾರೆ
ನಮ್ಮ ಹಗಲುಗಳಿಂದ ಬೆಳಕ ಕಿತ್ತುಕೊಳ್ಳಲಾರರು ಯಾರೂ
ಇರುಳಿನಾಗಸದಿಂದ ಚಿಕ್ಕೆಗಳ ಕದಿಯಲಾರರು ಯಾರೂ..

ಜಿಗಣಿ ಬಲೆ ಎಂದಿನಿಂದ ಇದೆ
ಮಾಲಕರು ಬದಲಾಗಿದ್ದಾರೆ ಅಷ್ಟೆ
ಬನ್ನಿ, ಕಿತ್ತು ಕಡಿದು ಹಾರಿಬಿಡೋಣ ಒಟ್ಟಿಗೆ
ಸೂರ್ಯ, ಬಿಸಿಲು, ರೆಕ್ಕೆ, ಮುಗಿಲು
ಎಲ್ಲವೂ ನಮದೆ..

೨ ಕರುಣವೆಂಬುದು ಬರಿಯ ಶಬುದವಷ್ಟೆ 


(ಚಿತ್ರ: ಅಂತರ್ಜಾಲದಿಂದ, ಬರೆದವರು ಕರುಣಾ ಪ್ರಿಯಾ, ಒರಿಸ್ಸಾ)
ಶಾಯಿ ಕುಡಿವ ಲೇಖನಿ
ಪತಾಕೆ ಹಿಡಿವ ಕೈ
ತುತ್ತುಣಿಸುವ ಬೆರಳೂ
ಕೊಲುವ ಹತಾರವಾಗಿ
ಹರಿತಗೊಳುತಿರುವ ಈ ಹೊತ್ತು
ಪ್ರಾರ್ಥಿಸುತ್ತಿದ್ದೇವೆ
‘ಕಟುಕನೆ ಕತ್ತಿ ಹಿಡಿದ ಕೈ ಕೆಳಗಿಳಿಸು
ಮಸೆಯದಿರು ಅಲಗು’ ಎಂದು.
ಕುರಿಮಂದೆ ಸಾಲಾಗಿ
ತಲೆಗೊಟ್ಟು ನಿಂತಿರುವಾಗ
ಸುಮ್ಮನಾದೀತೇ ಕತ್ತಿ?
ಬಿಮ್ಮನುಳಿದೀತೇ ರಟ್ಟೆಯ ಶಕ್ತಿ?
ತಣ್ಣಗಿದ್ದೀತೇ ಹಸಿ ನೆತ್ತರ ಕಂಡು
ಬಿಸಿಯಾಗುವ ಮನದ ಭಕುತಿ?

ಕಲ್ಲಿಗು ದೇವರಿಗು
ಪವಾಡಕೂ ಕಣ್ಕಟ್ಟಿಗೂ
ಬಲಿಗೂ ಓಕುಳಿಗೂ
ಫರಕೇ ಇಲ್ಲದ ಕಡೆ
ಸಹಸ್ರಮಾನಗಳಿಂದ
ಶಬುದಗಳು ಉದುರಿ ಬೀಳುತ್ತಲಿವೆ.
ಒಂದು ಹನಿ ಮಳೆ ಬೀಳದೆ
ಯುಗಯುಗಾಂತರಗಳೇ ಸರಿದು ಹೋಗಿವೆ.
ಸಮತೆಯ ನೀರೆರೆಯಲೇಬೇಕು
ಹಸಿರೆಲೆ ಒಣಗುವ ಮೊದಲೆ..
ಇಲ್ಲವಾದರೆ
ಕರುಣವೆಂಬುದು ಬರಿಯ ಶಬುದವಷ್ಟೆ..

                                                                                    ಡಾ. ಎಚ್. ಎಸ್. ಅನುಪಮಾ


2 comments:

  1. ಎರಡೂ ಕವನಗಳು ಕಣ್ಣ ಕನಿಗೂಡಿಸಿದವು.

    ReplyDelete
  2. ಕರುಳ ಹಿಂಡುವ ಕವನಗಳು , ಶಬುದವಾಗದೇ ಇರಲಿ ಕರುಣೆ.

    ReplyDelete