Sunday, 2 October 2016

‘ಗ್ರಾಮ ಸ್ವರಾಜ್ಯ ಜಾಥಾ’ ಅಕ್ಟೋಬರ್ ೨, ಗಾಂಧಿ ಜಯಂತಿ, ೨೦೧೬

‘ಕವಲಕ್ಕಿ ನಾಗರಿಕ ವೇದಿಕೆ’ 

‘ಗ್ರಾಮ ಸ್ವರಾಜ್ಯ ಜಾಥಾ’
ಅಕ್ಟೋಬರ್ ೨, ಗಾಂಧಿ ಜಯಂತಿ, ೨೦೧೬

ದೇವರಲ್ಲಿ ನಂಬಿಕೆ ಇಡುವುದೆಂದರೆ
ದಿನದ ಇಪ್ಪತ್ನಾಲ್ಕು ಗಂಟೆಯೂ ಕೆಲಸ ಮಾಡುವುದು
- ಮೋಹನದಾಸ ಕರಮಚಂದ ಗಾಂಧಿ

ಬಂಧುಗಳೇ, 

ಮೋಹನದಾಸ ಕರಮಚಂದ ಗಾಂಧಿ ಗ್ರಾಮಸ್ವರಾಜ್ಯದ ಕನಸು ಕಂಡವರು. ಆರ್ಥಿಕವಾಗಿ ಅಷ್ಟೇ ಅಲ್ಲ, ಸಾಮಾಜಿಕ ಹಾಗೂ ರಾಜಕೀಯ ಅಧಿಕಾರದ ದೃಷ್ಟಿಯಿಂದ ಪ್ರತಿ ಗ್ರಾಮವೂ ಸ್ವತಂತ್ರವಾಗಿ, ಸ್ವಾಯತ್ತವಾಗಿ, ಸುಸ್ಥಿರ ಬದುಕನ್ನು ಹೊಂದಬೇಕೆಂದು ಬಯಸಿದವರು. ಭ್ರಷ್ಟಾಚಾರ ಮುಕ್ತ ಪ್ರಾಮಾಣಿಕ ಬದುಕನ್ನು ಕೇವಲ ಬಾಯಿಮಾತಿಗೆ ಹೇಳದೆ ಅದರಂತೆಯೇ ಬದುಕಿ ತೋರಿಸಿದ ಅಪರೂಪದ ರಾಜಕೀಯ ನಾಯಕ ಅವರು. ಸರಳ ಹಾಗೂ ಶ್ರಮದ ಬದುಕನ್ನು ಪ್ರತಿಪಾದಿಸುತ್ತಿದ್ದ ಅವರ ಜೀವನ ಶೈಲಿ ಮಾರುಕಟ್ಟೆ ಯುಗದ ಈ ದಿನಗಳಲ್ಲಿ  ಅನುಕರಣೀಯ.

ಸಹಸ್ರಾರು ವರ್ಷಗಳ ನಾಗರಿಕತೆಯ ಭಾರತದ ಹಳ್ಳಿಗಳು ಕೃಷಿಯನ್ನೇ ಆದಾಯ ಮೂಲವಾಗಿ ನಂಬಿಕೊಂಡುಬಂದವು. ಆದರೆ ಯೋಜನೆಗಳಿಗೆ ಭೂಮಿ ಪರಭಾರೆ, ನೆರೆ, ಬರ, ಕೂಲಿಕಾರ್ಮಿಕರ ಅಭಾವ, ಸೂಕ್ತ ದರ ಸಿಗದೆ ಹೋಗುವುದು ಮೊದಲಾದ ಮೂಲಭೂತ ಸಮಸ್ಯೆಗಳಿಂದ ಕೃಷಿ ಕ್ಷೇತ್ರವು ನಲುಗುತ್ತಿದೆ. ಕೃಷಿ ನಷ್ಟದಾಯಕ ಉದ್ಯಮವಾಗತೊಡಗಿ ನಗರ ವಲಸೆ ತೀವ್ರವಾಗಿದೆ. ಬಡತನ ಮತ್ತು ಕೀಳರಿಮೆ ಹೊಸತಲೆಮಾರಿನ ಹಳ್ಳಿಗರನ್ನು ಆವರಿಸಿ ಆತ್ಮವಿಶ್ವಾಸ ಕಡಿಮೆಯಾಗುವಂತೆ ಮಾಡಿದೆ. ಇದೆಲ್ಲದರ ಜೊತೆಗೆ ಪ್ರಸ್ತುತ ಭಾರತದ ಹಳ್ಳಿಗಳು ಜಾತಿಕೂಪಗಳಾಗಿ, ಮರಿ ರಾಜಕಾರಣಿಗಳ ಜಗಳದ ನೆಲೆಗಳಾಗಿ, ಕೋಮುಸಂಘರ್ಷದ ಕೇಂದ್ರಗಳಾಗಿ ರೂಪಾಂತರಗೊಳ್ಳುತ್ತಿವೆ. 

ಹೀಗಿರುತ್ತ ಗಾಂಧಿ ಜಯಂತಿ ಆಚರಿಸುವುದೆಂದರೆ ಗಾಂಧಿ ಅವರ ಅಪೂರ್ಣ ಕನಸುಗಳನ್ನು ನಾವೂ ಕಂಡು ಅದನ್ನು ಸಾಕಾರಗೊಳಿಸುವುದು. ಎಂದೇ ಗಾಂಧಿ ಚಿಂತನೆಗಳನ್ನು ಅರಿಯಲು; ಗ್ರಾಮಗಳೊಡನೆ ನಗರವಾಸಿಗಳೂ ಸರಳ, ಸ್ವಚ್ಛ ಬದುಕಿನ ಜೀವನ ರೀತಿಗಳನ್ನು ಅಳವಡಿಸಿಕೊಳ್ಳಲು; ಗಾಂಧಿ ಕನಸಿನ ಆರೋಗ್ಯಕರ ಗ್ರಾಮ ಸಮಾಜ ಸಾಕಾರಗೊಳ್ಳಲು ಜನಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎನಿಸಿ ಕವಲಕ್ಕಿ ಮತ್ತು ಸುತ್ತಮುತ್ತಲ ಗ್ರಾಮಸ್ಥರ ಕಾಲ್ನಡಿಗೆ ಜಾಗೃತಿ ‘ಗ್ರಾಮ ಸ್ವರಾಜ್ಯ ಜಾಥಾ’ವನ್ನು ಇದೇ ಅಕ್ಟೋಬರ್ ೨ರಂದು ಸಂಘಟಿಸಲಾಗಿದೆ. 

‘ಗ್ರಾಮ ಸ್ವರಾಜ್ಯ’ ಎಂದರೆ ಸ್ವಚ್ಛ ಹಾಗೂ ಸ್ವಾಯತ್ತ ಗ್ರಾಮ. ಅಂತಹ ಗ್ರಾಮೋದಯವೇ ಈ ಜಾಗೃತಿ ಜಾಥಾದ ಉದ್ದೇಶ. ಇವತ್ತು ಹಳ್ಳಿಗಳ ಸ್ವಚ್ಛತೆಗೆ ನಿರಂತರವಾದ ಯಾವುದೇ ನೈರ್ಮಲ್ಯ ಕಾರ್ಯಕ್ರಮವಿಲ್ಲ. ಸ್ವಚ್ಛಗ್ರಾಮ ಪ್ರತಿ ಗ್ರಾಮಸ್ಥನ ಹಕ್ಕು. ಆದರೆ ಗ್ರಾಮ ನೈರ್ಮಲ್ಯದ ಯೋಜನೆಗಳು ಸಂಡಾಸು ರೂಮು ಕಟ್ಟುವುದರ ಆಚೆಗೆ ಹೋಗಿಯೇ ಇಲ್ಲ. ಬರೀ ಶೌಚಾಲಯ ಕಟ್ಟಿದರೆ ಗ್ರಾಮ ಸ್ವಚ್ಛತೆ ಸಾಧಿಸಿದಂತಾಗುವುದಿಲ್ಲ. ದಿನನಿತ್ಯ ಉತ್ಪತ್ತಿಯಾಗುವ ಕಸ ವಿಲೇವಾರಿ ಕುರಿತ ಸಾರ್ವಜನಿಕರ ಅಸಡ್ಡೆ ಹಾಗೂ ಸೂಕ್ತ ವಿಲೇವಾರಿ ವ್ಯವಸ್ಥೆ ಇಲ್ಲದಿರುವುದರ ಕಾರಣವಾಗಿ ಇವತ್ತು ಭಾರತದ ಪ್ರತಿ ಹಳ್ಳಿಯೂ ತಿಪ್ಪೆಗುಂಡಿಯಂತಾಗಿದೆ. ಪ್ಲಾಸ್ಟಿಕ್ ಎಂಬ ಸರ್ವಾಂತರ್ಯಾಮಿ ರಕ್ತಬೀಜಾಸುರನ ಹಾವಳಿಯಿಂದ ಜನರ ಆರೋಗ್ಯವಷ್ಟೆ ಅಲ್ಲ, ದನಕರುಜಾನುವಾರುಗಳ ಆರೋಗ್ಯವೂ ಚಿಂತಾಜನಕವಾಗುತ್ತಿದೆ. 

ಇದರ ಜೊತೆಗೆ ಉತ್ತರ ಕನ್ನಡ ಎಂಬ ವಿರಳ ಜನಸಾಂದ್ರತೆಯ ಅರಣ್ಯಭೂಮಿಯ ಜಿಲ್ಲೆಯಲ್ಲಿ ‘ಗ್ರಾಮ’ಗಳ ವ್ಯಾಖ್ಯೆ ಬದಲಾಗಿ ಹೊಸದಾಗಿ ಸೃಷ್ಟಿಯಾದ ಜನವಸತಿ ಪ್ರದೇಶಗಳನ್ನು ‘ಗ್ರಾಮ’ಗಳೆಂದು ಗುರುತಿಸುವ ಕೆಲಸ ಆಗಬೇಕಿದೆ. ಆಗಷ್ಟೇ ಜನ ಕುಡಿಯುವ ನೀರು, ರಸ್ತೆ, ದೀಪ, ನೈರ್ಮಲ್ಯ, ಆಟದ ಮೈದಾನ ಹಾಗೂ ಸ್ಮಶಾನಗಳೆಂಬ ಅವಶ್ಯಕ ಸವಲತ್ತುಗಳನ್ನು ಪಡೆದು ಬದುಕಲು ಸಾಧ್ಯವಾಗುತ್ತದೆ. ನಮ್ಮ ಹಕ್ಕೊತ್ತಾಯಗಳು:

  • ಪ್ಲಾಸ್ಟಿಕ್ ಬಳಕೆ ನಿಷೇಧ ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಯಾಗಬೇಕು. 
  • ೭೫ ಮನೆಗಳಿರುವ ಜಾಗವನ್ನು ‘ಗ್ರಾಮ’ ಎಂದು ಪರಿಗಣಿಸಬೇಕು.
  • ಅಂತಹ ಪ್ರತಿ ಗ್ರಾಮಕ್ಕೂ ಕಸ ವಿಲೇವಾರಿ ವ್ಯವಸ್ಥೆ ಕಲ್ಪಿಸಬೇಕು. ಅದಕ್ಕಾಗಿ ಪ್ರತ್ಯೇಕ ಕರ ವಿಧಿಸಿ ಪ್ರತಿ ಗ್ರಾಮಕ್ಕೂ, ಗ್ರಾಮ ಪಂಚಾಯ್ತಿಗೂ ಕಸ ವಿಲೇವಾರಿ ಮಾಡಿಕೊಳ್ಳುವ ಹಕ್ಕು, ವ್ಯವಸ್ಥೆ ಕಲ್ಪಿಸಬೇಕು. ಪ್ರತಿ ಗ್ರಾಮದಲ್ಲೂ ಪಂಚಾಯ್ತಿ ನಿರ್ವಹಣೆ ಮಾಡುವ ಒಂದು ಕಾಂಪೋಸ್ಟ್ ಪಿಟ್ ಅನ್ನು ನಿರ್ಮಿಸಿ ಕಾಂಪೋಸ್ಟ್ ತಯಾರಿಸುವ ವಿಧಾನ ಅಭಿವೃದ್ಧಿಗೊಳಿಸಿ ಹರಾಜು ಮಾಡಬೇಕು. ಮುಂದಿನ ವ್ಯವಸ್ಥೆಯಾಗುವವರೆಗೆ ಪಟ್ಟಣ ಪಂಚಾಯ್ತಿಗಳ ಕಸ ವಿಲೇವಾರಿ ವ್ಯವಸ್ಥೆಯನ್ನು ಅಕ್ಕಪಕ್ಕದ ಹಳ್ಳಿಗಳ ತನಕ ವಿಸ್ತರಿಸಬೇಕು. 
  • ಪ್ರತಿ ಗ್ರಾಮಕ್ಕೂ ಒಬ್ಬ ನೈರ್ಮಲ್ಯ ಕಾರ್ಮಿಕರನ್ನು ನೇಮಿಸಬೇಕು.
  • ರಸ್ತೆ ಪಕ್ಕ ಇರುವ, ಪ್ರತಿನಿತ್ಯ ಹೊರ ಊರಿನವರು ಬಂದು ಹೋಗುವ, ಮನೆಗಳಲ್ಲಿ ಸ್ವಂತ ಶೌಚಾಲಯ ನಿರ್ಮಿಸಿಕೊಳ್ಳಲು ಶಕ್ತರಲ್ಲದವರು ಇರುವ ಪ್ರತಿ ಗ್ರಾಮದಲ್ಲಿ ಸೂಕ್ತ ನಿರ್ವಹಣೆಯೊಂದಿಗೆ ಒಂದು ಸಾರ್ವಜನಿಕ ಶೌಚಾಲಯ ಇರುವಂತೆ ನೋಡಿಕೊಳ್ಳಬೇಕು.
  • ಸ್ವಚ್ಛ ಕುಡಿಯುವ ನೀರು ಎಲ್ಲರ ಹಕ್ಕು. ನೀರು ಸರಬರಾಜು ಮತ್ತು ನಿರ್ವಹಣೆ ಮಾಡುವ ಬಳಕೆದಾರರ ಸಮಿತಿಗಳನ್ನು ಆಯಾ ಗ್ರಾಮದಲ್ಲಿ ರಚಿಸಿ ಖಾಯಂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. 
  • ಬೆಳೆಯುತ್ತಿರುವ ಜನಸಂಖ್ಯೆಗನುಗುಣವಾಗಿ ಪ್ರತಿ ಗ್ರಾಮಕ್ಕೂ ಒಂದು ಆಟದ ಮೈದಾನ ಹಾಗೂ ರುದ್ರಭೂಮಿ ನಿರ್ಮಿಸಿಕೊಡಬೇಕು. ಪ್ರತಿ ತಾಲೂಕು ಕೇಂದ್ರದಲ್ಲಿ ಒಂದು ವಿದ್ಯುತ್ ಚಿತಾಗಾರ ನಿರ್ಮಿಸಬೇಕು.
  • ಮುಖ್ಯರಸ್ತೆ ಅಥವಾ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಪ್ರತಿಗ್ರಾಮಕ್ಕೂ ನಿರ್ಮಿಸಿ ಬಸ್ ಸೌಲಭ್ಯ ನೀಡಬೇಕು.
  • ಹೊಸದಾಗಿ ನಿರ್ಮಾಣವಾಗುವ ಮನೆಗಳು ‘ಮಳೆನೀರು ಕೊಯ್ಲು’ ಹಾಗೂ ಸೌರವಿದ್ಯುತ್ ಅಳವಡಿಸಿಕೊಳ್ಳುವುದು ಕಡ್ಡಾಯಗೊಳಿಸಬೇಕು ಹಾಗೂ ಈಗಾಗಲೇ ನಿರ್ಮಾಣಗೊಂಡ ಕಟ್ಟಡಗಳು ಹಂತಹಂತವಾಗಿ ಅವುಗಳನ್ನು ಅಳವಡಿಸಿಕೊಳ್ಳುವಂತೆ ಮನವೊಲಿಸಬೇಕು. ಈ ಕುರಿತು ಸೂಕ್ತ ತಿಳುವಳಿಕೆ ಹಾಗೂ ಸಹಾಯಧನ ನೀಡಿಕೆಯ ಕುರಿತು ಗ್ರಾಮಸಭೆಗಳಲ್ಲಿ ಚರ್ಚಿಸಬೇಕು.

ಈ ಮೂಲಕ ನಾವು ಗ್ರಾಮಸ್ಥರು ಕಾಲಮಿತಿಯೊಳಗೆ ನಮ್ಮೆಲ್ಲ ನ್ಯಾಯಯುತ ಬೇಡಿಕೆಗಳನ್ನು ಎಲ್ಲ ಹಳ್ಳಿಗಳಿಗೂ ಕಲ್ಪಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ಮೂಲಸೌಕರ್ಯ ಕೊರತೆ, ನಿರುದ್ಯೋಗ, ವಲಸೆ ಮುಂತಾದ ಸಮಸ್ಯೆಗಳಿಂದ ಬೇಸತ್ತ ಗ್ರಾಮೀಣ ಜನತೆಗೆ ಸ್ವಾಯತ್ತ ಮತ್ತು ಸುಸ್ಥಿರ ಬದುಕನ್ನು ಕಲ್ಪಿಸಿಕೊಡಲು ಒತ್ತಾಯಿಸುತ್ತೇವೆ.

ಕುಡಿವ ನೀರು ನಮ್ಮ ಹಕ್ಕು. ರುದ್ರಭೂಮಿ ನಮ್ಮ ಹಕ್ಕು.
ಸ್ವಚ್ಛ ಊರು ನಮ್ಮ ಹಕ್ಕು, ಸ್ವಚ್ಛ ಊರು ನಮ್ಮ ಹೊಣೆ.


(ನಮೂದಿಸಿರುವ ಹಕ್ಕೊತ್ತಾಯಗಳ ಸಲುವಾಗಿ  ಅಕ್ಟೋಬರ್ ೨ನೇ ತಾರೀಖು ಭಾನುವಾರ ಕವಲಕ್ಕಿಯ ಸುತ್ತಮುತ್ತಲ ಊರುಗಳ ನಾಗರಿಕರು ಬೆಳಿಗ್ಗೆ ೬.೦೦ಕ್ಕೆ ಜಾಥಾ ಹೊರಟು 7 ಕಿಮೀ ಕಾಲ್ನಡಿಗೆಯ ಕವಲಕ್ಕಿ-ಹೊನ್ನಾವರ `ಗ್ರಾಮ ಸ್ವರಾಜ್ಯ ಜಾಥಾ'ವನ್ನು ಯಶಸ್ವಿಯಾಗಿ ಮುಗಿಸಿದೆವು. ಕವಲಕ್ಕಿ ಆಜುಬಾಜಿನ ಗ್ರಾಮಸ್ಥರು, ಬೈಕ್ ಸವಾರರೂ ಜಾಥಾದಲ್ಲಿದ್ದರು. ಹುಲಿಯಪ್ಪನಕಟ್ಟೆ, ಬಾಳೆಗದ್ದೆ, ಗುಡ್ಡೇಬಾಳ ಕತ್ತರಿ, ಭಾಸ್ಕೇರಿ, ಶೇಡಿಬಾಳ, ಆರೊಳ್ಳಿಯಲ್ಲಿ ನಿಂತು, ಆಯಾ ಊರುಗಳ ಗ್ರಾಮಸ್ಥರನ್ನು ಸೇರಿಕೊಂಡು ಹೊನ್ನಾವರ ತಲುಪಿದೆವು. ಹೊನ್ನಾವರದಲ್ಲಿ   ಹೊನ್ನಾವರದಲ್ಲಿ ರೋಟರಿ, ಲಯನ್ಸ್, ಕನ್ನಡ ಪರ ಸಂಘಟನೆಗಳು, ಗ್ರೀನ್ ಟೀಂ ಹೊನ್ನಾವರ ಮೊದಲಾದ ಜನಪರ ಸಂಘಟನೆಗಳು ನಮ್ಮೊಡನೆ ಸೇರಿಕೊಂಡವು. ಸಮಾವೇಶಗೊಂಡ ಗ್ರಾಮಸ್ಥರು-ನಾಗರಿಕರನ್ನುದ್ದೇಶಿಸಿ ಹೊನ್ನಾವರದ ಗಣ್ಯರು ಮಾತನಾಡಿದರು. ತಹಶೀಲ್ದಾರ ಕಚೇರಿಗೆ ತೆರಳಿ ಹಕ್ಕೊತ್ತಾಯಗಳ ಸಲ್ಲಿಸಿದಾಗ ತಹಶೀಲ್ದಾರರು ಸೂಕ್ತ ಕ್ರಮಕ್ಕೆ ಶಿಫಾರ್ಸು ಮಾಡುವುದಾಗಿ ತಿಳಿಸಿದರು.)

No comments:

Post a Comment