Tuesday, 18 October 2016

ಖೈರ್ಲಾಂಜಿ: ದೌರ್ಜನ್ಯಗಳು ಮತ್ತಷ್ಟು ದೌರ್ಜನ್ಯಗಳನ್ನು ಹೆರುತ್ತಿರುವ ಕಾಲದಲ್ಲಿ..




ಇವರು ಮಹಾರಾಷ್ಟ್ರದ ಭಂಡಾರಾ ಜಿಲ್ಲಾ ಕೇಂದ್ರದ ಹುಡುಗರ ಹಾಸ್ಟೆಲಿನ ಸೆಕ್ಯುರಿಟಿ ಗಾರ್ಡ್ ಆಗಿರುವ ವ್ಯಕ್ತಿ. ಅವರನ್ನು ಎಲ್ಲರೂ ಕರುಣೆಯಿಂದ, ಅನುಮಾನದಿಂದ, ಉಪೇಕ್ಷೆಯಿಂದ ವಿಚಿತ್ರವಾಗಿ ನೋಡುತ್ತಿದ್ದಾರೆ ಎನಿಸುತ್ತಿದೆಯೆ? ಹೌದು, ಆ ಗಾರ್ಡನ್ನು ಗನ್ನು ಹಿಡಿದ ಇಬ್ಬರು ಪೊಲೀಸರು ಕಾಯುತ್ತಾರೆ. ಭೀಕರ ಸತ್ಯವನ್ನು ಕಂಡ ಮತ್ತು ಅನುಭವಿಸಿದ ಆತನ ದಾರುಣ ನೆನಪುಗಳು ಕೋರ್ಟಿಗೆ ಬಹು ಅಮೂಲ್ಯವಾಗಿರುವುದರಿಂದ ಅವರನ್ನು ರಕ್ಷಿಸುವ ಹೊಣೆ ಸಮಾಜಕ್ಕಿದೆ. ಹಳ್ಳಿಯಲ್ಲಿದ್ದ ಅವರ ಸ್ವಂತ ಮನೆ ನೆತ್ತರಲ್ಲಿ ಮಿಂದೆದ್ದು, ಹೊತ್ತುರಿದು ಈಗ ಬಿಕೋ ಎನ್ನುತ್ತ ಸ್ಮಾರಕವಾಗಿರಲು ಸರ್ಕಾರ ಬೇರೆ ಕಡೆ ವಾಸದ ಮನೆ ನೀಡಿದೆ. ಪಕ್ಕದ ಹಳ್ಳಿಯಲ್ಲಿ ನಾಲ್ಕೆಕರೆ ಭೂಮಿ ಕೊಟ್ಟಿದೆ. ಸರ್ಕಾರಿ ನೌಕರಿ ನೀಡಿದೆ.

ಆತನ ಮುಖದಲ್ಲಿರುವ ಭಾವ ದುಃಖವೋ, ಅಸಹಾಯಕತೆಯೊ, ಕಿಚ್ಚೋ, ಹೇಸಿಗೆಯೊ, ಪ್ರತಿರೋಧವೋ ಒಂದೂ ತಿಳಿಯದಂತಿದೆಯೆ? ಇದಕ್ಕಿಂತ ಹೆಚ್ಚು ಇನ್ನೇನನ್ನು ಯಾರು ಯಾರಿಗಾದರೂ ಮಾಡಿಯಾರು ಎಂದು ಆ ಚಹರೆ ಪ್ರಶ್ನಿಸುತ್ತಿದೆಯೆ? ಒಳಗೆ ಬನ್ನಿ. ಇದು ಅವರ ಮನೆ. ಬಾಡದ ಪ್ಲಾಸ್ಟಿಕ್ ಹೂಹಾರ ಹಾಕಿಕೊಂಡು ನಾಲ್ಕು ಫೋಟೋಗಳು ಕಾಣುತ್ತಿವೆಯೆ? ಅವರೆಲ್ಲ ಈಗ ನೆನಪಾಗಿ ಉಳಿದಿರುವ ಆತನ ಕುಟುಂಬ ಸದಸ್ಯರು. ಹೆಂಡತಿ ಸುರೇಖಾ (೪೪ ವರ್ಷ), ಮಗಳು ಪ್ರಿಯಾಂಕ (೧೮ ವರ್ಷ), ಇಬ್ಬರು ಮಗಂದಿರಾದ ಕಣ್ಣು ಕಾಣದ ರೋಶನ್ (೨೩) ಹಾಗೂ ಸುಧೀರ್ (೨೧) ಅವರ ಫೋಟೋಗಳವು. ಅಕೋ ಅಲ್ಲಿ, ಮನೆಯ ಹೊರಗಿನಂಗಳಲ್ಲಿ ಒಂದು ಮುರಿದ ಮಂಚ ನಿಮ್ಮ ಗಮನ ಸೆಳೆಯುತ್ತಿದೆಯೆ? ಹಳ್ಳಿಯಲ್ಲಿದ್ದ ತನ್ನ ಗುಡಿಸಲಿನ ಏಕೈಕ ಪೀಠೋಪಕರಣವಾಗಿದ್ದ ಆ ಮಂಚವನ್ನು ಒಂದು ಕಾಲದ ತನ್ನ ಬದುಕಿನ ಪುರಾವೆಯೋ ಎನ್ನುವಂತೆ ಆತ ಜತನದಿಂದ ಕಾಪಾಡಿಕೊಂಡಿದ್ದಾರೆ. ಕುಟುಂಬದ ನೆನಪು ಆ ಜೀವಕ್ಕೆ ಬಹು ಅಮೂಲ್ಯವಾದದ್ದು. ಏಕೆಂದರೆ ಆ ನೆನಪುಗಳ ಹೊರತು ಆತ ಏಕಾಂಗಿ. ಊರೊಳಗಿದ್ದೂ ಏಕಾಂಗಿ. ಯಾಕೆಂದರೆ ಅವರ ಬಂಧುಗಳಿಗೆ, ಸ್ನೇಹಿತರಿಗೆ ಅವರೊಡನೆ ಬದುಕಲು ಭಯ. ಸತ್ಯ ಹೇಳಲು ಭಯ. ಮನೆಗೆ ಕಾಲಿಡಲು ಭಯ.



ಇಷ್ಟಾದರೂ ಆ ವ್ಯಕ್ತಿಯ ಗುರುತು ಹತ್ತುತ್ತಿಲ್ಲವೆ? ಅಯ್ಯೋ ಪಾಪ, ಹೋಗಲಿ ಬಿಡಿ. ಗುರುತು ತಿಳಿಯಲು ಆತ ಅಚ್ಛೇ ದಿನಗಳ ತಂದು ಸುರಿಯಲಿರುವ ಜನನಾಯಕನಲ್ಲ, ಕಾವಿಯುಟ್ಟ ಸ್ವಾಮಿಯಲ್ಲ, ಗಡಿಯಲ್ಲಿ ಹುತಾತ್ಮನಾದ ಸೈನಿಕನಲ್ಲ..

ಇರಲಿ, ತಗೊಳ್ಳಿ ಅವರ ವಿಳಾಸ:

ಮಿ. ಭಯ್ಯಾಲಾಲ್ ಭೋತ್ಮಾಂಗೆ,
ಸಾಕೀನ - ಖೈರ್ಲಾಂಜಿ,
ತಾಲೂಕ - ಮೊಹಾಡಿ,
ಜಿಲ್ಲೆ - ಭಂಢಾರಾ,
ರಾಜ್ಯ - ಅಂಬೇಡ್ಕರರ ಮಹಾರಾಷ್ಟ್ರ.

ಸೆಪ್ಟೆಂಬರ್ ೨೯, ೨೦೦೬. ೧೦ ವರ್ಷ ಹಿಂದೆ..

೨೦೦೦ನೇ ಇಸವಿಯಲ್ಲಿ ದೊಮ್ಮ ಭಿಮ್ತೆ ಎಂಬಾತನಿಂದ ೦.೬ ಹೆಕ್ಟೇರ್ ನೆಲವನ್ನು ಭೋತ್ಮಾಂಗೆ ಕುಟುಂಬ ಖರೀದಿಸಿತ್ತು. ಅದರಲ್ಲಿ ೦.೪ ಹೆಕ್ಟೇರ್ ಅನ್ನು ಊರ ರಸ್ತೆಗೆ ಬಿಟ್ಟು ಕೊಡಬೇಕಾದ ಪರಿಸ್ಥಿತಿ ಬಂದಾಗ ಒಲ್ಲದ ಮನಸಿನಿಂದ ಅನಿವಾರ್ಯವಾಗಿ ಬಿಟ್ಟುಕೊಟ್ಟರು. ಆದರೆ ಉಳಿದ ೦.೨ ಹೆಕ್ಟೇರ್ ನೆಲವನ್ನೂ ಬಿಟ್ಟುಕೊಡಬೇಕೆಂದಾಗ ಭಯ್ಯಾಲಾಲ್ ನಿರಾಕರಿಸಿದರು. ಅವರ ಮೇಲೆ ಹಲ್ಲೆಯಾಯಿತು. ಭೋತ್ಮಾಂಗೆಗಳನ್ನು ತಲೆಯೆತ್ತದಂತೆ ಗದುಮ ಬೇಕೆಂದು ಊರ ಸಿರಿವಂತರು ಪ್ರಯತ್ನಿಸುತ್ತಿದ್ದರೆ, ಭಯ್ಯಾಲಾಲ್ ಮತ್ತು ಸುರೇಖಾ ಹೇಗಾದರೂ ಅದೇ ಊರಿನಲ್ಲಿ ಆತ್ಮಘನತೆಯಿಂದ ಬದುಕಿ ತೋರಿಸಬೇಕೆಂಬ ಛಲ ಹೊತ್ತಿದ್ದರು.

ಸೆ. ೩, ೨೦೦೬. ಸಿದ್ಧಾರ್ಥ ಗಜಬಿಯೆ ಪಕ್ಕದ ಹಳ್ಳಿ ಘುಸಾಲಾದ ಪೋಲೀಸ್ ಪಾಟೀಲ. ಭೋತ್ಮಾಂಗೆಗಳಿಗೆ ಬಂಧು. ಸಿದ್ಧಾರ್ಥ ಮತ್ತವನ ತಮ್ಮ ರಾಜನ್ ಅವರೊಡನೆ ಊರ ಮೇಲ್ಜಾತಿಯವರ ಚಕಮಕಿ ನಿರಂತರ ನಡೆಯುತ್ತಿತ್ತು. ಒಮ್ಮೆ ಸಿದ್ಧಾರ್ಥ ರೇಶನ್ನಿನಲ್ಲಿ ಕ್ಯೂ ನಿಂತು ಮೇಲ್ಜಾತಿಯವರಿಗೆ ಸರದಿ ಬಿಟ್ಟು ಕೊಡದೆ ರೇಶನ್ ತೆಗೆದುಕೊಂಡು ಹೋದಾಗ ತೀವ್ರವಾಗಿ ಹಲ್ಲೆಗೊಳಗಾದ. ಕೂಡಲೆ ಆಸ್ಪತ್ರೆ ಸೇರಿದ ಸಿದ್ಧಾರ್ಥ ಪೋಲೀಸರಿಗೆ ದೂರು ಕೊಟ್ಟ. ಆ ಪ್ರಕರಣಕ್ಕೆ ಸುರೇಖಾ ಹಾಗೂ ಮಗಳು ಪ್ರಿಯಾಂಕ ಪ್ರತ್ಯಕ್ಷ ಸಾಕ್ಷಿಗಳಾಗಿದ್ದರು. ಎಫ್‌ಐಆರ್ ದಾಖಲಾಗಿ ಸಿದ್ಧಾರ್ಥನ ಮೇಲೆ ಹಲ್ಲೆ ಮಾಡಿದವರು ಬಂಧನಕ್ಕೊಳಗಾದರು.

ಸೆ. ೨೯, ೨೦೦೬ರಂದು ಬೇಲ್ ಮೇಲೆ ಬಿಡುಗಡೆಯಾಗಿ ಅವರು ಲಾಕಪ್ಪಿನಿಂದ ಹೊರ ಬಂದರು. ಕೂಡಲೇ ಸ್ಥಳೀಯ ಶಾಸಕರೊಬ್ಬರು ಫೋನು ಮಾಡಿ, ‘ಬಿಡುಗಡೆಯಾದ ನಿಮ್ಮನ್ನು ಸಿದ್ಧಾರ್ಥ ಹೊಡೆಯಲಿದ್ದಾನೆ, ದಲಿತರು ಈ ಪರಿ ಸೊಕ್ಕಲು ಅವಕಾಶ ಕೊಡಲೇಬಾರದು’ ಎಂದು ಪ್ರಚೋದಿಸಿದರು. ೫೦-೬೦ ಜನ ಕತ್ತಿ, ಕೊಡಲಿ, ಕೋಲು ಹಿಡಿದು ಟ್ರ್ಯಾಕ್ಟರಿನಲ್ಲಿ ಸಿದ್ಧಾರ್ಥ-ರಾಜನ್ ಅವರನ್ನು ‘ವಿಚಾರಿಸಿ’ಕೊಳ್ಳಲು ಹೊರಟರು. ಕೂಡಲೇ ಸುರೇಖಾ ಫೋನು ಮಾಡಿ ರಾಜನ್ ಗಜಬಿಯೆಗೆ ವಿಷಯ ತಿಳಿಸಿದಾಗ ಸೋದರರಿಬ್ಬರೂ ತಪ್ಪಿಸಿಕೊಂಡರು. ಆದರೆ ಜಾತಿ ಎಂಬ ಅಡಕತ್ತರಿಯ ನಡುವೆ ಸಿಲುಕಿಕೊಂಡವರು ಭೋತ್ಮಾಂಗೆ ಕುಟುಂಬದವರು.

ಸಂಜೆ ಐದರ ವೇಳೆ. ಸುರೇಖಾ ಮನೆಯಲ್ಲಿ ಅಡಿಗೆ ಮಾಡುತ್ತಿದ್ದರೆ, ಮಕ್ಕಳು ಓದುತ್ತಿದ್ದರು. ಟ್ರ್ಯಾಕ್ಟರ್‌ಗಳಲ್ಲಿ ಬಂದ ಕೆರಳಿದವರು ತಮ್ಮನ್ನು ಅಪರಾಧಿಗಳನ್ನಾಗಿಸಿ ಸಾಕ್ಷ್ಯ ಹೇಳಿದ ಭೋತ್ಮಾಂಗೆಗಳನ್ನು ಹಿಗ್ಗಾಮುಗ್ಗಾ ಹೊಡೆದರು. ಬಟ್ಟೆ ಕಳಚಿ ಥಳಿಸಿದರು. ರೋಶನ್‌ಗೆ ಪ್ರಿಯಾಂಕ ಜೊತೆ ಸಂಭೋಗ ನಡೆಸುವಂತೆ ಹೇಳಿದರು. ಒಪ್ಪದಿದ್ದಾಗ ಅವನ ಗುಪ್ತಾಂಗಗಳ ಮೇಲೆ ಒದ್ದರು. ಎಲ್ಲರ ಬಟ್ಟೆ ಕಳಚಿ ನಗ್ನರಾಗಿ ಊರು ಸುತ್ತಿ ಬರಲು ಹೇಳಿದರು. ಪ್ರಿಯಾಂಕಳ ಮೇಲೆ ಗುಂಪು ಅತ್ಯಾಚಾರ ನಡೆಸಿ, ಸ್ತನಗಳ ಮೇಲೆ ಕೊಡಲಿಯಿಂದ ಹೊಡೆದು, ಅವಳ ಗುಪ್ತಾಂಗದೊಳಗೆ ಕೋಲು ತೂರಿದರು. ಇದನ್ನೆಲ್ಲ ಮಾಡುವಾಗ ದಲಿತೇತರ ಹೆಂಗಸರು ನೋಡುತ್ತ ನಿಂತು ತಮ್ಮ ಗಂಡಸರನ್ನು ಹುರಿದುಂಬಿಸುತ್ತಿದ್ದರು. ನಂತರ ಸುರೇಖಾಳನ್ನು ವಿವಸ್ತ್ರಗೊಳಿಸಿ, ಭೀಕರವಾಗಿ ಹಿಂಸಿಸಿ, ಹಲವರು ಅತ್ಯಾಚಾರಗೈದರು. ಸೈಕಲ್ ಚೈನಿನಿಂದ, ಕೋಲಿನಿಂದ ಮನಬಂದಂತೆ ಹೊಡೆದು ಎಲ್ಲರ ಕಾಲಿನೆಲುಬುಗಳು ಮುರಿದುಹೋದವು. ಭೀಕರ ಹಿಂಸೆಗೆ ಆಗಲೇ ಅರೆಜೀವವಾಗಿದ್ದವರು ತಲೆಗೆ ಬಿದ್ದ ಕೊಡಲಿ ಪೆಟ್ಟಿಗೆ ತಣ್ಣಗಾಗಿ ಹೋದರು.






ಈ ಭೀಭತ್ಸಕ್ಕೆ ಕೆಲಸದಿಂದ ಮನೆಗೆ ಬಂದ ಭಯ್ಯಾಲಾಲ್ ಹಾಗೂ ಆತ ಓಡಿಹೋಗಿ ಕರೆತಂದ ರಾಜನ್ ಗಜಬಿಯೆ ಸಾಕ್ಷಿಗಳಾಗಿದ್ದರು. ಅವರು ಭಯದಿಂದ ನಿರ್ವಿಣ್ಣರಾಗಿ ಬಳಿಯ ಪೊದೆಯಲ್ಲಿ ಅವಿತು ನಡೆಯುತ್ತಿರುವುದನ್ನು ನೋಡುತ್ತಿದ್ದರು. ಪೊಲೀಸರಿಗೆ ಫೋನು ಮಾಡಿದರು. ಅವರು ಬರಲು ನಾಲ್ಕು ತಾಸು ತಡವಾಯಿತು.

ಆಕಾಶ ಕೆಂಪೇರಿ ನೆತ್ತರ ಮಡುವಿನಲ್ಲಿ ಸೂರ್ಯ ಮುಳುಗಿಹೋಯಿತು. ಆ ದೇಹಗಳನ್ನು ಚಕ್ಕಡಿಯಲ್ಲಿ ತುಂಬಿ ಊರಾಚೆ ಎರಡು ಕಿಮಿ ದೂರದ ಕಾಲುವೆ ಬಳಿ ಬಿಸಾಡಿದರು. ಏಳು ಗಂಟೆ ಹೊತ್ತಿಗೆ ಎಲ್ಲ ಮುಗಿದುಹೋಯಿತು. ರಾತ್ರಿ ಹತ್ತಕ್ಕೆ ಒಬ್ಬ ಪೋಲೀಸ್ ಪೇದೆ ಬಂದ. ಆದರೆ ಅವನು ಕತ್ತಲ ಕಾರಣ ನೀಡಿ ಏನು ಮಾಡಲೂ ಸಾಧ್ಯವಿಲ್ಲ ಎಂದ! ಕಣ್ಣಿದ್ದೂ ಕುರುಡಾದ, ಕಿವಿಯಿದ್ದೂ ಕಿವುಡಾದ ಖೈರ್ಲಾಂಜಿ ಎಂಬ ಗ್ರಾಮವು ಅನ್ಯಾಯವಾಗಿ ತನ್ನ ನಾಲ್ಕು ಜೀವಗಳ ಕಳೆದುಕೊಂಡರೂ ಏನೂ ಆಗಲಿಲ್ಲವೆಂಬಂತೆ ಆ ರಾತ್ರಿಯನ್ನು ಕಳೆದು ಬಿಟ್ಟಿತು..

ಇಪ್ಪತ್ನಾಲ್ಕು ತಾಸು ತರುವಾಯ ದೂರು ದಾಖಲಾಯಿತು. ಶವಗಳ ಪೋಸ್ಟ್ ಮಾರ್ಟಂ ನಡೆಯಿತು. ದೇಹದ ಒಂದಿಂಚೂ ಬಿಡದೆ ಗಾಯಗೊಂಡ, ರಕ್ತ ಹೆಪ್ಪುಗಟ್ಟಿದ ಗುರುತುಗಳಿರುವ, ಸಂಪೂರ್ಣ ನಗ್ನ ಹೆಣ್ಣು ದೇಹಗಳನ್ನು ನೋಡಿದ ವೈದ್ಯರು ‘ಮಿದುಳಿನ ತೀವ್ರ ರಕ್ತಸ್ರಾವದಿಂದ ಸಾವು ಸಂಭವಿಸಿದೆ’ ಎಂದು ವರದಿ ಕೊಟ್ಟು ಕೈತೊಳೆದುಕೊಂಡರು. ‘ಪೋಲೀಸರು ರೇಪ್ ಸುದ್ದಿ ಹೇಳಲಿಲ್ಲ, ನಾನು ನೋಡಲಿಲ್ಲ’ ಎಂದು ಅತ್ಯಾಚಾರವನ್ನು ಶಂಕಿಸದೇ ಹೋದರು.

೫೦ ವರ್ಷ ಕೆಳಗೆ ..

ಖೈರ್ಲಾಂಜಿಯಿಂದ ೧೨೦ ಕಿಮೀ ದೂರದಲ್ಲಿದ್ದ ನಾಗ್ಪುರದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್, ‘ಹಿಂದೂ ಧರ್ಮ ಮತ್ತದರ ಸವರ್ಣೀಯ ಸಮಾಜ ಎಂದೂ ಪರಿವರ್ತನೆಯಾಗದು. ಅದಕ್ಕಾಗಿ ನಾವು ದಲಿತರೇ ಧರ್ಮ ಪರಿವರ್ತನೆಗೊಳಗಾಗಬೇಕು’ ಎಂದು ಲಕ್ಷಾಂತರ ಬೆಂಬಲಿಗರೊಡನೆ ಬೌದ್ಧಾನುಯಾಯಿಯಾಗಿದ್ದರು. ಆಗಲೇ ಭೋತ್ಮಾಂಗೆಗಳೂ ಬೌದ್ಧರಾಗಿದ್ದರು. ಆದರೇನು, ಅವರ ಧರ್ಮ ಪರಿವರ್ತನೆಯಾದರೂ ಸಮಾಜ ಪರಿವರ್ತನೆಯಾಗಲಿಲ್ಲ. ಅವರನ್ನು ನೋಡುವ ಕಣ್ಣುಗಳ ದೃಷ್ಟಿ ಬದಲಾಗಲಿಲ್ಲ. ಅರ್ಧ ಶತಮಾನ ಕಳೆದರೂ, ಹಲವೆಂಟು ಕಾಯ್ದೆಕಾನೂನು ಬಂದರೂ, ಮೀಸಲಾತಿ ನೀಡಿದರೂ ಅಂಬೇಡ್ಕರ್ ಮುನ್ನಡೆಸಿದ್ದ ಸಮುದಾಯಕ್ಕೆ ತನ್ನದೆನ್ನುವ ಒಂದು ಗಟ್ಟಿ ಸೂರು, ಮತ್ತೊಂದು ಮೆಟ್ಟು ಜಾಗ ಸಿಗಲಿಲ್ಲ.

ಭಯ್ಯಾಲಾಲರದು ಪದಗಳಿಗೆ ನಿಲುಕಲಾಗದ ದಿಕ್ಕೇಡಿ ಮನಸ್ಥಿತಿ. ಯಾವ ಮಾತೂ, ಯಾರ ಭರವಸೆಯೂ ಭಯ್ಯಾಲಾಲರಿಗೆ ಧೈರ್ಯ ತುಂಬಲಾಗದೇ ಹೋದವು.



(ಭೋತ್ಮಾಂಗೆಗಳ ಮನೆ)

ಖೈರ್ಲಾಂಜಿಯಲ್ಲಿದ್ದದ್ದು ಮೂರೇ ಮೂರು ದಲಿತರ ಮನೆಗಳು. ಒಂದಷ್ಟು ಆದಿವಾಸಿಗಳದ್ದು. ಬಹುಪಾಲು ಮನೆಗಳು ಮರಾಠರವು. ಎಲ್ಲೋ ಕೆಲವು ಸಿರಿವಂತ ಕುಣಬಿ ಜಮೀನುದಾರರವು. ಅಲ್ಲಿ ಯಾವಾಗಲೂ ಹಿಂದೂ ಮಧ್ಯಮ ಜಾತಿಗಳಿಗೂ, ‘ಬೌದ್ಧ’ ದಲಿತರಿಗು ಚಕಮಕಿ. ಈ ಮೊದಲು ಜಾತಿ ಯಜಮಾನಿಕೆಯ ಹೆಸರಲ್ಲಿ ನಡೆದ ಎಷ್ಟೋ ಅನ್ಯಾಯಗಳು ಹೊರಲೋಕಕ್ಕೆ ಗೊತ್ತೇ ಆಗದೆ ಮುಚ್ಚಿಹೋಗಿದ್ದವು. ಆದರೆ ಈ ಹತ್ಯಾಕಾಂಡ ನಡೆದ ನಂತರ ಅಲ್ಲಿನ ಪ್ರಭಾವಿಗಳು ಎಷ್ಟೇ ಪ್ರಯತ್ನಪಟ್ಟರೂ ಸುದ್ದಿ ಮುಚ್ಚಿಡಲಾಗಲಿಲ್ಲ. ನಕ್ಸಲೈಟ್ ಕೃತ್ಯವೆಂದು ಬಿಂಬಿಸಿ ಕೈತೊಳೆದುಕೊಳ್ಳಲು ಪ್ರಯತ್ನಿಸಿದರೂ ಸಹ ದೇಶಾದ್ಯಂತ ನಿಜ ಸುದ್ದಿ ಹರಡಿತು. ದಲಿತ ಮತ್ತು ಜನಪರ ಸಂಘಟನೆಗಳು ಪ್ರತಿಭಟನೆಗಿಳಿದವು. ಎಲ್ಲೆಲ್ಲು ಸಭೆ, ಸಮಾವೇಶ, ಜಾಥಾಗಳು ನಡೆದವು. ಕಮ್ಯುನಿಸ್ಟ್ ಸಂಘಟನೆಗಳು ತೀವ್ರ ಪ್ರತಿಭಟನೆ ದಾಖಲಿಸಿದವು. ಜಾತಿ ದ್ವೇಷಕ್ಕೆ ಬಲಿಯಾದ ಕುಟುಂಬಕ್ಕೆ ದೇಶಕ್ಕೆ ದೇಶವೇ ಮಿಡಿಯಿತು. ಮಾಧ್ಯಮ, ಪೋಲೀಸರು, ಸಂಘಟನೆಗಳು ಎಲ್ಲವೂ ಖೈರ್ಲಾಂಜಿ ಎಂಬ ಪುಟ್ಟ ಹಳ್ಳಿಯ ಬೀದಿಬೀದಿ ತುಂಬಿಕೊಂಡವು. ಅಂತಾರಾಷ್ಟ್ರೀಯ ಮಟ್ಟದಲ್ಲು ಖೈರ್ಲಾಂಜಿ ದೌರ್ಜನ್ಯ ಪ್ರತಿಧ್ವನಿಸಿತು.



ನ್ಯಾಯಕ್ಕಾಗಿನ ಕೂಗು ತಾರಕಕ್ಕೇರಿದಂತೆ ತುರ್ತು ವಿಚಾರಣೆಗಾಗಿ ಫಾಸ್ಟ್ ಟ್ರ್ಯಾಕ್ ಟ್ರಯಲ್ ಕೋರ್ಟು ಸ್ಥಾಪನೆಯಾಯಿತು. ಹಳೆಯ ಶವಪರೀಕ್ಷೆ ವರದಿಯಲ್ಲಿ ಅತ್ಯಾಚಾರ ನಡೆದ ಕುರಿತು ಏನನ್ನೂ ಬರೆಯದಿದ್ದ ಬಗೆಗೆ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದಾಗ ಮತ್ತೆ ಪೋಸ್ಟ್ ಮಾರ್ಟಂ ನಡೆಸಲಾಯಿತು. ಆದರೆ ಆ ವೇಳೆಗೆ ಶವಗಳು ಕೊಳೆತು ಅತ್ಯಾಚಾರಕ್ಕೆ ‘ಸೂಕ್ತ ಸಾಕ್ಷ್ಯ’ ಒದಗಲಿಲ್ಲ. ಸುರೇಖಾ ಕರೆ ಮಾಡಿದ ಮೊಬೈಲ್ ಸಿಮ್ ಅನ್ನು ಮಹಜರ್ ವೇಳೆಗೆ ಪೊಲೀಸರು ಒಯ್ದಿದ್ದರೂ ನಂತರ ‘ಕಳೆದು’ ಹೋದದ್ದು ಸಿಗಲಿಲ್ಲ. ಇದೆಲ್ಲ ಹಿನ್ನಡೆಗಳ ಜೊತೆಗೆ ಜಾತಿಗ್ರಸ್ಥ ಸಮಾಜದ ಪಟ್ಟುಗಳ ಭಯಕ್ಕೆ ಕೋರ್ಟಿಗೆ ಸಾಕ್ಷ್ಯ ಹೇಳಲು ಯಾರೂ ಮುಂದೆ ಬರಲಿಲ್ಲ.

ಆ ಹಳ್ಳಿಯಲ್ಲಿ ಎಲ್ಲರಿಗೆ ಎಲ್ಲರೂ ಗೊತ್ತು. ೧೭೮ ಮನೆಗಳಿಗೂ ಈ ಕೃತ್ಯ ನಡೆದ ಸ್ಥಳ ಕೂಗಳತೆಯ ದೂರದಲ್ಲಿದೆ. ಆದರೆ ಎಲ್ಲರೂ ಆ ಸಂಜೆ ಏನಾಯಿತೆಂದು ತಮಗೆ ‘ಗೊತ್ತೇ ಇಲ್ಲ’ ಎಂದರು. ತಮಗೆ ವಿಷಯ ತಿಳಿದದ್ದು ಮರುದಿನ ಬೆಳಿಗ್ಗೆ ಕಾಲುವೆಯ ಬಳಿ ಸುರೇಖಾ ಶವ ನೋಡಿದಾಗಲೇ ಎಂದು ಹೇಳಿದರು! ‘ಹಿಡಿ, ಹೊಡಿ, ಓಡಲು ಬಿಡಬೇಡ, ಹಾಕು’ ಎಂದು ಕೂಗುವುದನ್ನು ಕೇಳಿದ ಆಚೀಚಿನ ಹಟ್ಟಿಯ ಜನ, ದನಗಳನ್ನು ಹಿಡಿಯಲು ಯಾರೋ ಓಡುತ್ತಿದ್ದಾರೆ ಎಂದು ಭಾವಿಸಿದರಂತೆ! ಗತಪ್ರಾಣರಾಗುತ್ತಿದ್ದವರ ಆಕ್ರಂದನ, ಚೀರಾಟ ಯಾರ ಕಿವಿಗೂ ಬೀಳಲೇ ಇಲ್ಲವಂತೆ!!

ಕೊನೆಗೆ ಭಯ್ಯಾಲಾಲ್, ಗಜಬಿಯೆ ಸೋದರರು ಮತ್ತಿತರ ಸಾಕ್ಷ್ಯಗಳ ಆಧಾರದ ಮೇಲೆ ೨೦೦೮ರಲ್ಲಿ ಕೋರ್ಟು ಗಮನಾರ್ಹ ತೀರ್ಪು ನೀಡಿತು. ಎಂಟು ಪ್ರಮುಖ ಆರೋಪಿಗಳಲ್ಲಿ ಆರು ಜನರಿಗೆ ಮರಣದಂಡನೆ, ಇಬ್ಬರಿಗೆ ೨೫ ವರ್ಷ ಜೈಲು ಶಿಕ್ಷೆ ವಿಧಿಸಿತು.

ದಲಿತಪರ ಸಂಘಟನೆಗಳು ಮತ್ತು ಮನಸುಗಳು ಖೈರ್ಲಾಂಜಿ ಹತ್ಯಾಕಾಂಡಕ್ಕೆ ತ್ವರಿತವಾಗಿ ಸೂಕ್ತ ನ್ಯಾಯ ದೊರೆಯಿತೆಂದು ನೆಮ್ಮದಿಗೊಂಡವು. ಸಂಘಟನೆಗಳ ಒತ್ತಾಸೆ ಮತ್ತು ಜನಬೆಂಬಲ ಇದ್ದರೆ ದೌರ್ಜನ್ಯ ತಡೆ ಕಾಯ್ದೆ ತಮ್ಮ ನೆರವಿಗೆ ಬರಬಹುದು ಎಂದು ಜನಸಾಮಾನ್ಯರು ಭರವಸೆ ತಳೆದರು.

ಆದರೆ, ೨೦೧೦ರಲ್ಲಿ ಈ ತೀರ್ಪಿನ ವಿರುದ್ಧ ಕೊಲೆ ಆರೋಪಿಗಳು ಹೈಕೋರ್ಟಿಗೆ ಹೋದರು. ಅವರ ಮೇಲ್ಮನವಿ ಪರಿಗಣಿಸಿದ ಮುಂಬೈ ಹೈಕೋರ್ಟಿನ ನಾಗಪುರ ಪೀಠ, ‘ಇದು ಅಪರೂಪದಲ್ಲಿ ಅಪರೂಪದ ಪ್ರಕರಣವಲ್ಲ’ ಎಂದು ೬ ಜನರ ಮರಣದಂಡನೆಯನ್ನು ೨೫ ವರ್ಷ ಜೈಲು ಶಿಕ್ಷೆಗೆ, ಇಬ್ಬರ ೨೫ ವರ್ಷ ಜೈಲು ಶಿಕ್ಷೆಯನ್ನು ಜೀವಾವಧಿ ಜೈಲು ಶಿಕ್ಷೆಗೆ (೧೪ ವರ್ಷ) ಇಳಿಸಿತು. ಅಷ್ಟೇ ಅಲ್ಲ, ಇದು ಜಾತಿಗೆ ಸಂಬಂಧಿಸಿದ ಪ್ರಕರಣವೇ ಅಲ್ಲ, ಇದು ಪ್ರತೀಕಾರ ಕೊಲೆ ಎಂದು ದಲಿತ ದೌರ್ಜನ್ಯ ತಡೆ ಕಾಯ್ದೆ ಪ್ರಕಾರ ಶಿಕ್ಷೆ ನೀಡಲು ನಿರಾಕರಿಸಿತು.

ಇದುವರೆಗೆ ಆದದ್ದೇ ಈ ಪ್ರಕರಣದಲ್ಲೂ ಆಯಿತು. ಕೆಳಹಂತದ ಕೋರ್ಟು ಜನಾಭಿಪ್ರಾಯಕ್ಕೆ ಅನುಗುಣವಾಗಿ ನ್ಯಾಯಯುತ ತೀರ್ಪು ನೀಡಿದರೂ, ಮೇಲಿನ ಕೋರ್ಟಿನಲ್ಲಿ ಪ್ರಭಾವಿಗಳ ಹಸ್ತಕ್ಷೇಪವು ನ್ಯಾಯದಾನದ ವ್ಯಾಖ್ಯಾನವನ್ನೇ ಬುಡಮೇಲು ಮಾಡಿತು.

ಇಡೀ ಘಟನೆಗೆ ಏಕೈಕ ಪ್ರತ್ಯಕ್ಷ ಸಾಕ್ಷಿ ಭಯ್ಯಾಲಾಲ್ ಈಗ ಸುಪ್ರೀಂ ಕೋರ್ಟಿಗೆ ಹೋಗಿದ್ದಾರೆ. ಹಲವು ಪ್ರಾಣ ಬೆದರಿಕೆಯ ಕರೆಗಳನ್ನು, ಪ್ರಾಣಾಂತಿಕ ನೋವುಗಳನ್ನು ಎದುರಿಸಿದರೂ; ಬದುಕು ಮೂರಾಬಟ್ಟೆಯಾಗಿದ್ದರೂ; ನ್ಯಾಯ ಮರೀಚಿಕೆ ಅನಿಸಿದ್ದರೂ ನ್ಯಾಯ ಪಡೆಯಬೇಕೆಂಬ ಛಲವೇ ಅವರನ್ನು ಬದುಕಿಸಿರುವಂತಿದೆ.

ಇದರ ನಡುವೆ ಐದು ವರ್ಷ ಕೆಳಗೆ ಕೆಲ ಟಿವಿ ಚಾನೆಲ್ಲುಗಳು ಭಯ್ಯಾಲಾಲ್ ಅವರ ಮನೆಗೆ ಹೋಗಿ ಒಂದು ‘ಸ್ಟೋರಿ’ ತಯಾರಿಸಿದವು. ಅವರ ಮನೆಯಲ್ಲಿದ್ದ ಶೀಲಾ ಎಂಬ ಹೆಣ್ಣುಮಗಳನ್ನು ಭಯ್ಯಾಲಾಲ್ ಮರುಮದುವೆಯಾಗಿರಬಹುದೇ ಎಂಬ ಶಂಕೆ ಹರಿಯಬಿಟ್ಟವು. ಅವರಿಬ್ಬರನ್ನೂ ಒಟ್ಟು ಕೂರಿಸಿ ಒಂದು ಶಾಟ್ ತೆಗೆದಿದ್ದವು. ಇದು ಸೃಷ್ಟಿಸಿದ ಅನಗತ್ಯ ಚರ್ಚೆ ಕೊನೆಗೊಳಿಸಲು ಭಯ್ಯಾಲಾಲ್ ಪತ್ರಿಕಾಗೋಷ್ಠಿ ಕರೆದು, ‘ನಾನು ಮರುಮದುವೆಯಾಗಿಲ್ಲ, ಪ್ರಕರಣದ ಸಲುವಾಗಿ ಊರೂರಿಗೆ, ಕೋರ್ಟಿಗೆ ಓಡಾಡಬೇಕಿರುವುದಿಂದ ಮನೆ ನಿಭಾಯಿಸಲು ಒಬ್ಬರನ್ನು ಗೊತ್ತು ಮಾಡಿಕೊಂಡಿರುವೆ. ಮನೆಯಲ್ಲಿರುವುದು ಮನೆಗೆಲಸದ ಶೀಲಾ ಅಷ್ಟೆ’ ಎಂದು ಹೇಳಬೇಕಾಯಿತು.

ಭಯ್ಯಾಲಾಲ್ ಮರುಮದುವೆಯಾಗಿರುವರೋ ಇಲ್ಲವೋ ಬೇರೆ ವಿಷಯ. ಆದರೆ ಆತ ಮರುಮದುವೆಯಾದರೆ ಅದೇನೂ ತಪ್ಪಲ್ಲ. ಆತ ಸದಾ ಬಾಧಿತ ಸ್ಥಿತಿಯಲ್ಲಿಯೇ ಇರಬೇಕೆಂದು ಬಯಸುವುದೂ ಸಾಧುವಲ್ಲ.





(ಕಲೆ: ಸೌರಭ್ ಸಿಂಗ್) 
ಭಾರತ ಎಷ್ಟು ಪುರಾತನವೋ, ದಲಿತರ ಮೇಲಿನ ದೌರ್ಜನ್ಯಗಳೂ ಅಷ್ಟೇ ಪುರಾತನ. ರಾಮಾಯಣ ಎಷ್ಟು ಜನಜನಿತವೋ, ಶಂಭೂಕ ವಧೆಯೂ ಅಷ್ಟೇ ವಾಸ್ತವ. ಅಸ್ಪೃಶ್ಯತೆ ಮತ್ತು ಅದು ಕೊಡಮಾಡಿರುವ ದಮನಿತ ಸ್ಥಿತಿಯಿಂದ ಹೊರಬರಲು ದಲಿತ ಸಮುದಾಯ ನಡೆಸುವ ಪ್ರಯತ್ನಗಳನ್ನು ಸಮಾಜ ಉದಾರವಾಗಿ, ನ್ಯಾಯಯುತವಾಗಿ ನೋಡುತ್ತಿಲ್ಲ. ಸಾಮಾಜಿಕ ಸ್ತರದಲ್ಲಿ ಅವರು ಮೇಲೇರುತ್ತಿದ್ದ ಹಾಗೆ ಅತ್ಯಂತ ಕ್ರೂರ ಮತ್ತು ವಿಕೃತ ದೌರ್ಜನ್ಯ ನಡೆಸಲಾಗುತ್ತಿದೆ. ಎಂದೇ ಎಷ್ಟೆಲ್ಲ ಕಾಯ್ದೆ ಕಾನೂನುಗಳು ಬಂದರೂ ದೌರ್ಜನ್ಯ ನಿರ್ಭಯವಾಗಿ, ನಿರಂತರವಾಗಿ ನಡೆಯುತ್ತಿದೆ.

ದಲಿತ ದೌರ್ಜನ್ಯಗಳನ್ನು ಉಳಿದ ಕ್ರಿಮಿನಲ್ ಅಪರಾಧಗಳಂತೆ ಪರಿಗಣಿಸಲಾಗುವುದಿಲ್ಲ. ಹಾಗೆ ಮಾಡುತ್ತಿರುವುದರಿಂದಲೇ ನ್ಯಾಯದಾನ ಸಾಧ್ಯವಾಗುತ್ತಿಲ್ಲ. ಏಕೆಂದರೆ ಜಾತಿ ದೌರ್ಜನ್ಯ ಎನ್ನುವುದು ತುಂಬ ವ್ಯವಸ್ಥಿತವಾಗಿ ನಡೆಯುವ ಸಮಾಜದ ಹುನ್ನಾರ. ಅದು ಯಾರೋ ಒಬ್ಬರ ಐಡಿಯಾ ಆಗಲೀ, ಬಲಪ್ರಯೋಗ ಅಥವಾ ಹುನ್ನಾರವಾಗಲೀ ಆಗಿರುವುದು ಸಾಧ್ಯವಿಲ್ಲ. ಖೈರ್ಲಾಂಜಿ ಪ್ರಕರಣದಲ್ಲಿ ನಾಲ್ವರು ಅಮಾಯಕರ ಜೀವಹಾನಿ, ಘನತೆ ಹಾನಿಯಾಗುವವರೆಗೆ ಒಂದು ಪ್ರಕರಣ ಯಾಕೆ ಮತ್ತು ಹೇಗೆ ಬೆಳೆಯಿತು ಎಂದು ಗಮನಿಸಿ ಸರಿಪಡಿಸಲು ಯತ್ನಿಸದಿದ್ದರೆ ಭವಿಷ್ಯದಲ್ಲಿ ಸಂಭವಿಸಲಿರುವ ಇನ್ನಷ್ಟು ಇಂಥ ದೌರ್ಜನ್ಯಗಳ ತಡೆಯಲು ಸಾಧ್ಯವಿಲ್ಲ.

ಮಹಾರಾಷ್ಟ್ರದ ಖೈರ್ಲಾಂಜಿಯೇ ಇರಲಿ, ಗುಜರಾತಿನ ಊನಾವೇ ಆಗಲಿ - ದಲಿತರ ಮೇಲೆ ದೌರ್ಜನ್ಯ ನಡೆಸುವವರಿಗೆ ತಮ್ಮ ಕೃತ್ಯ ಉಳಿದ ಸಮಾಜಕ್ಕೆ ತಿಳಿದರೆ ಎಂಬ ಕಾನೂನಿನ ಭಯವೂ ಇಲ್ಲ, ನೈತಿಕ ಭಯವಂತೂ ಇಲ್ಲವೇ ಇಲ್ಲ. ದಲಿತ ಶಂಭೂಕನ ಕೊಂದರೂ ನರಹತ್ಯೆಯ ಪಾಪ ತಟ್ಟದು ಎಂದು ಶ್ರೀರಾಮನಿಗಿದ್ದ ಧೈರ್ಯವೇ ಅವರ ಜೊತೆಯೂ ಇದೆ. ಊನಾದಲ್ಲಿ ದನದ ಚರ್ಮ ಸುಲಿಯುತ್ತಿದ್ದ ದಲಿತ ಯುವಕರನ್ನು ಥಳಿಸಿದ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟವರು ಕೃತ್ಯ ಎಸಗಿದ ಗೋ ರಕ್ಷಕರು. ಅವರಿಗೆ ನಿರಪರಾಧಿಗಳನ್ನು ಜಾತಿ ಹೆಸರಿನಲ್ಲಿ ಶಿಕ್ಷಿಸುವುದು, ಕಾನೂನು ಕೈಗೆ ತೆಗೆದುಕೊಳ್ಳುವುದು ಕಾನೂನಾತ್ಮಕವಾಗಿ ತಪ್ಪು ಎಂಬ ಜ್ಞಾನ ಇದೆ. ಆದರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ, ಇ ಮಾಧ್ಯಮದಲ್ಲಿ ಕ್ರಿಯಾಶೀಲರಾದ ಬಹುಸಂಖ್ಯೆಯ ದಲಿತ ತರುಣರಿದ್ದು ಅವರನ್ನು ರೊಚ್ಚಿಗೇಳಿಸುವ, ಭಯಗೊಳಿಸುವ ಉದ್ದೇಶದಿಂದಲೆ ಊನಾ ವೀಡಿಯೊ ಸಾರ್ವಜನಿಕವಾಗಿದೆ.

ಒಟ್ಟಾರೆ, ‘ಅವರ’ ಮೇಲಿನ ಪ್ರೀತಿಗೂ, ‘ಇವರ’ ಮೇಲಿನ ದ್ವೇಷಕ್ಕೂ, ಎಲ್ಲಕ್ಕು ಕಾರಣ ಒಂದೇ: ಜಾತಿ.

ಭಾರತದಲ್ಲಿ ಜಾತಿ ಇಲ್ಲ, ಜಾತೀಯತೆ-ತಾರತಮ್ಯ ಇಲ್ಲ ಎಂದು ಕೆಲ ಪಂಡಿತರು ಕವಡೆ ಉರುಳಿಸಿ, ಗುಣಿಸಿ, ಭಾಗಿಸಿ, ಘಂಟಾಘೋಷವಾಗಿ ಸಾರುತ್ತಿದ್ದಾರೆ. ಆದರೆ ಭಾರತದಲ್ಲಿ ಜಾತಿ ಇದೆ. ಜಾತಿ ಮಾತ್ರ ಇದೆ. ಜಾತಿ ಜೀವಂತವಾಗಿದೆ.

ಏಕೆಂದರೆ ಜಾತಿಗುರುತು ಹೆಮ್ಮೆಯಾಗಿ ಬೆಳೆಯುತ್ತಲಿದೆ, ಅದು ಕೊಲ್ಲುತ್ತದೆ ಮತ್ತು ಅತ್ಯಾಚಾರ ಮಾಡುತ್ತದೆ!



ಒಂದು ವಿಚಿತ್ರ ವೈರುಧ್ಯ

ಜುಲೈ ೧೩, ೨೦೧೬. ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಕೋಪರ್ಡಿಯ ಇಟ್ಟಿಗೆ ಭಟ್ಟಿ ಕಾರ್ಮಿಕರ ಮಗಳು - ೧೫ ವರ್ಷದ ಶಾಲಾ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಬರ್ಬರ ಕೊಲೆ ಮಾಡಲಾಯಿತು. ಮರಾಠಾ ಸಮುದಾಯದ ಆ ಹುಡುಗಿಯ ದೇಹವನ್ನು ತೀವ್ರವಾಗಿ ಹಿಂಸಿಸಲಾಗಿತ್ತು. ಕೂಡಲೇ ಆರೋಪಿಗಳ ಬಂಧಿಸಲಾಯಿತು.

ಬಂಧಿತರು ಮೂವರೂ ದಲಿತ ಯುವಕರು. ಕುಡಿದು ಭೀಕರ ಅತ್ಯಾಚಾರವೆಸಗಿ ಕೊಲೆ ಮಾಡಿದ್ದರು.

ಒಂದು ತಿಂಗಳು. ಒಂದೇಒಂದು ತಿಂಗಳಲ್ಲಿ ಅಹ್ಮದ್ ನಗರ ಮತ್ತಿತರ ಕಡೆಗಳಲ್ಲಿ ಮರಾಠಾ ಸಂಘಸಂಸ್ಥೆಗಳು ಈ ಅತ್ಯಾಚಾರ ವಿರೋಧಿಸಿ ‘ಮೂಕ ಮೆರವಣಿಗೆ’ ನಡೆಸಿದವು. ಮಾಧ್ಯಮದ, ಜನರ ಗಮನ ಸೆಳೆದ ‘ಮರಾಠಾ ಕ್ರಾಂತಿ ಮೂಕ್ ಮೋರ್ಚಾ’ ನಾಸಿಕ, ಪುಣೆ, ಸತಾರಾ, ಲಾತೂರು, ಕೊಲ್ಲಾಪುರ ಮೊದಲಾಗಿ ಎಲ್ಲ ಕಡೆ ನಡೆಯಿತು. ಸೆ. ೨೧ರಂದು ನವಿ ಮುಂಬಯಿಯಲ್ಲಿ ಬೃಹತ್ ಸಮಾವೇಶ ಜರುಗಿತು. ಕೇವಲ ಸತಾರಾ ಒಂದರಲ್ಲೆ ಮೋರ್ಚಾ ವೇಳೆ ೨೦ ಲಕ್ಷ ಜನ ಒಟ್ಟಾಗಿ ಹೆದ್ದಾರಿಯ ಪ್ರಯಾಣಕ್ಕೆ ತಡೆಯುಂಟಾಯಿತು. ಕರ್ನಾಟಕದ ಬೀದರಿನಲ್ಲೂ ‘ಮೀ ಮರಾಠ’ ಎಂದು ಬೃಹತ್ ಮೌನಜಾಥಾ ನಡೆಯಿತು. ಇದುವರೆಗೆ ಅಂಥ ೩೬ ಮೋರ್ಚಾಗಳು ನಡೆದಿವೆ. ಈ ಮೋರ್ಚಾಗಳಲ್ಲಿ ಬಹುಸಂಖ್ಯೆಯ ಹುಡುಗಿಯರು, ಬಯಲುಸೀಮೆಯ ರೈತರೇ ಮೊದಲಾಗಿ ಎಲ್ಲ ಮರಾಠಾ ಜನವರ್ಗಗಳೂ ಪಾಲ್ಗೊಂಡಿವೆ.







ಸ್ಥಳೀಯ ಬೇಡಿಕೆಗಳ ಜೊತೆಗೆ ಮರಾಠಾ ಸಮುದಾಯ ಮುಂದಿಟ್ಟ ಮೂರು ಮುಖ್ಯ ಬೇಡಿಕೆಗಳು:

೧. ಅತ್ಯಾಚಾರ ಆರೋಪಿಗಳಿಗೆ ಉಗ್ರ ಶಿಕ್ಷೆ ವಿಧಿಸಿ.
೨. ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮರಾಠರಿಗೆ ಮೀಸಲಾತಿ ನೀಡಿ.
೩. ಅಂಕಿ ಅಂಶ ಪ್ರಕಾರ ಈಗಿರುವ ದಲಿತ ದೌರ್ಜನ್ಯ ತಡೆ ಕಾಯ್ದೆಯಿಂದ ಅತಿ ಹೆಚ್ಚು ಶಿಕ್ಷೆಗೊಳಗಾಗಿರುವವರು, ಬಂಧಿಸಲ್ಪಟ್ಟವರು ಮರಾಠರು. ಎಂದೇ ಆ ಕಾಯ್ದೆಗೆ ಒಂದೋ ತಿದ್ದುಪಡಿ ತನ್ನಿ ಇಲ್ಲವೆ ಅದನ್ನು ರದ್ದು ಮಾಡಿ.

ಎರಡು ದಶಕಗಳಿಂದ ಕೇಳುತ್ತ ಬಂದ ಮೀಸಲಾತಿ ಕೂಗು ಈಗ ಜೋರಾಗಿದೆ. ಹರ‍್ಯಾಣಾ ರಾಜಸ್ಥಾನದ ಜಾಟರಂತೆ, ಗುಜರಾತಿನ ಪಟೇಲರಂತೆ ಮಹಾರಾಷ್ಟ್ರದ ಮರಾಠರು ಮೀಸಲಾತಿ ಕೇಳತೊಡಗಿದ್ದಾರೆ. ಕೂಡಲೇ ಮಹಾರಾಷ್ಟ್ರ ಸರ್ಕಾರ ಓಬಿಸಿ ಮೀಸಲಾತಿಗೆ ಭಂಗ ತರದಂತೆ ೧೬% ಮೀಸಲಾತಿ ಮರಾಠರಿಗೆ, ೫% ಮೀಸಲಾತಿ ಮುಸ್ಲಿಮರಿಗೆ ನೀಡಿದೆ. ಅದನ್ನು ವಿರೋಧಿಸಿ ‘ಯುತ್ ಫಾರ್ ಈಕ್ವಾಲಿಟಿ’ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದು ಈಗ ಹೈಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ.

ಮಹಾರಾಷ್ಟ್ರದ ಜನಸಂಖ್ಯೆಯಲ್ಲಿ ದಲಿತರು ೧೦.೮% ಇದ್ದರೆ, ಮರಾಠರು ೩೩% ಇದ್ದಾರೆ. ಓಬಿಸಿಗಳು ೨೮% ಇದ್ದಾರೆ. ಮರಾಠಾ ಸಮುದಾಯದ ರಾಜಕೀಯ ನಾಯಕರು, ಉದ್ದಿಮೆಪತಿಗಳು ಹಾಗೂ ‘ಗಣ್ಯ’ರೂ ಸಾಕಷ್ಟಿದ್ದಾರೆ. ೫೬ ವರ್ಷಗಳಲ್ಲಿ ೧೩ ಮುಖ್ಯಮಂತ್ರಿಗಳು ಮರಾಠಾ ಸಮುದಾಯದವರೇ ಆಗಿ ಹೋಗಿದ್ದಾರೆ. ಅಲ್ಲಿನ ಸಕ್ಕರೆ ಮತ್ತು ಶಿಕ್ಷಣ ಕ್ಷೇತ್ರ ಮರಾಠಾ ಪ್ರಾಬಲ್ಯ ಹೊಂದಿದೆ. ಆದರೆ ಅತಿ ದೊಡ್ಡ ಸಮುದಾಯದ ಒಳಗಿನ ಅಸಮತೋಲನ ಆಕ್ರೋಶ ಹುಟ್ಟಿಸಲು ಕಾರಣವಾಗಿದೆ.

ಮಹಾರಾಷ್ಟ್ರದ ಪ. ಜಾತಿಗಳು ೭.೫% ಕೃಷಿ ಒಡೆತನ ಹೊಂದಿದ್ದರೆ ಪ. ವರ್ಗದವರು ೬.೨% ಕೃಷಿ ಒಡೆತನ ಪಡೆದಿದ್ದಾರೆ. ೭೮.೬%ನಷ್ಟು ಕೃಷಿ ಒಡೆತನ ಮರಾಠರದು. ಆದರೆ ಆ ಸಮುದಾಯದ ೩೫% ಜನ ಭೂಹೀನ ಕೂಲಿ ಕೆಲಸದವರಾಗಿದ್ದಾರೆ. ಅಭಿವೃದ್ಧಿ ಯೋಜನೆಗಳಿಗೆ ಕೃಷಿಭೂಮಿ ಪರಭಾರೆಯಾಗಿದೆ. ಅವಿಭಕ್ತ ಕುಟುಂಬಗಳು ಅಳಿದು, ಕೃಷಿ ಭೂಮಿ ಒಡೆದು, ಸಣ್ಣ ಕೃಷಿ ಹಿಡುವಳಿಗಳು ನಷ್ಟದಾಯಕವಾಗಿ ಪರಿಗಣಿಸಿವೆ. ಅತಿ ಹೆಚ್ಚು ರೈತ ಆತ್ಮಹತ್ಯೆಗಳು ಮರಾಠಾ ಸಮುದಾಯದಲ್ಲೇ ಸಂಭವಿಸುತ್ತಿವೆ. ಶಿಕ್ಷಣದತ್ತ ಒಲವು ಕಡಿಮೆ ಇರುವುದರಿಂದ ಸರ್ಕಾರಿ ಉದ್ಯೋಗಾವಕಾಶ ಕಡಿಮೆಯಾಗಿದೆ.

ಜನರಿಗೆ ತಮ್ಮ ಈ ಪರಿಸ್ಥಿತಿಗೆ ಕಾರಣ ಜನನಾಯಕರ ನಿಷ್ಕ್ರಿಯತೆ ಎಂಬ ಆಕ್ರೋಶವಿದೆ. ಮೂಕ ಮೋರ್ಚಾವನ್ನು ಮೊದಲು ಬಹಿರಂಗವಾಗಿ ಯಾವ ಪಕ್ಷದ ಮರಾಠಾ ರಾಜಕಾರಣಿಯೂ ಬೆಂಬಲಿಸಲಿಲ್ಲ. ಹೆಚ್ಚಿನ ಮರಾಠಾ ಜನನಾಯಕರು ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವುದೂ ಕಾರಣವಿರಬಹುದು. ಆದರೆ ಈಗ ಶಿವಾಜಿ ಮಹಾರಾಜನ ವಂಶಸ್ಥ, ಸತಾರಾದ ಎನ್‌ಸಿಪಿ ಶಾಸಕ ಉದಯನ ರಾಜೇ ಭೋಸಲೆ, ಮತ್ತೊಬ್ಬ ವಂಶಸ್ಥ-ಎಂಪಿ ಸಂಭಾಜಿ ರಾಜೇ ಛತ್ರಪತಿ, ಮಹಾರಾಷ್ಟ್ರ ಕಂದಾಯ ಮಂತ್ರಿ ಚಂದ್ರಕಾಂತ ಪಾಟೀಲ್ ಮೊದಲಾದವರು ಬೆಂಬಲಿಸುತ್ತಿದ್ದಾರೆ. ಆದರೂ ಸಮುದಾಯದ ಬಲಾಢ್ಯ ರಾಜಕಾರಣಿಗಳು ಸ್ವಜಾತಿಯ ಜನರನ್ನು ಮತಬ್ಯಾಂಕ್ ಎಂದು ಪರಿಗಣಿಸಿದರೇ ಹೊರತು ಒಳಸಂಕಷ್ಟಗಳತ್ತ ಗಮನ ಹರಿಸಲಿಲ್ಲ ಎನ್ನುವುದು ಬಹುತೇಕ ಮರಾಠರ ಅಭಿಪ್ರಾಯವಾಗಿದೆ.

ಒಟ್ಟಾರೆ ತಮಗಿಂತ ‘ಕೆಳಗಿದ್ದು’ ಈಗ ಮೀಸಲಾತಿ ಸವಲತ್ತು ಪಡೆದು ‘ಮೇಲೆ’ ಬರುತ್ತಿರುವ ದಲಿತರತ್ತ ಮರಾಠರ ಕಣ್ಣು ಕೆಂಪಾಗಲು ಹಲವು ಕಾರಣಗಳಿವೆ. ಇತ್ತ ಮುಂದುವರೆಯದ, ಅತ್ತ ‘ಹಿಂದುಳಿದ’ ಗುಂಪಿಗೂ ಸೇರದ ಮಧ್ಯಮ ಜಾತಿಗಳ ಆಕ್ರೋಶ ದಲಿತರ ಮೇಲೆ ತಿರುಗುತ್ತಿದೆ.

ಈ ಬೆಳವಣಿಗೆಗಳು ಜಾತಿಜಾತಿಗಳ ನಡುವೆ ದ್ವೇಷದ ವಿಷ ಹರಡುವ ಎಲ್ಲ ಅಪಾಯ ಗೋಚರಿಸತೊಡಗಿದೆ. ಅಕ್ಟೋಬರ್ ಎರಡನೆಯ ವಾರದಲ್ಲಿ ಮರಾಠಿ ಸಾಹಿತ್ಯ ಪರಿಷತ್ ಸತಾರಾ ಬಳಿ ಪಟನ್ ಎಂಬಲ್ಲಿ ಅಂಬೇಡ್ಕರ್-೧೨೫ ನಿಮಿತ್ತ ಸಾಹಿತ್ಯ ಸಮ್ಮೇಳನ ಏರ್ಪಡಿಸಿತ್ತು. ಅದಕ್ಕೆ ದಲಿತ ಸಾಹಿತಿ ಪ್ರಜ್ಞಾ ಪವಾರ್ ಅಧ್ಯಕ್ಷರಾಗಿದ್ದರು. ದಲಿತ ಚಿಂತಕ ರಾವ್ ಸಾಹೇಬ್ ಕಸಬೆ ಮುಖ್ಯ ಅತಿಥಿಗಳಾಗಿದ್ದರು. ಅವರಿಬ್ಬರೂ ತಮ್ಮ ಭಾಷಣದಲ್ಲಿ ಶಿವಾಜಿ ಕುರಿತು ನೀಡಿದ ಹೇಳಿಕೆಯಿಂದ ಮರಾಠರ ಮನಸ್ಸಿಗೆ ನೋವಾಗಿದೆಯೆಂದು, ದಲಿತರಿಗೆ ಶಿವಾಜಿ ಕುರಿತು ಮಾತನಾಡಲು ಹಕ್ಕಿಲ್ಲವೆಂದು ಸ್ಥಳೀಯ ಮರಾಠಾ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ ಬಲವಂತವಾಗಿ ಇಬ್ಬರು ದಲಿತ ಸಾಹಿತಿಗಳನ್ನು ಸಭೆಯಿಂದ ಹೊರಕಳಿಸಿದವು.

ಇದರ ನಡುವೆ ಮಧ್ಯಮ ಜಾತಿಗಳು ಮೀಸಲಾತಿಗೆ ಒತ್ತಾಯಿಸಿರುವಲ್ಲೆಲ್ಲ ಮೀಸಲಾತಿ ನೀತಿ ವಿರೋಧಿಸುವ ಹಿಂದೂತ್ವ ಸರ್ಕಾರ ಆಳುವ ಪಕ್ಷವಾಗಿರುವುದು; ಮೀಸಲಾತಿ ವಿರೋಧಿಸುವ ‘ಯುತ್ ಫಾರ್ ಈಕ್ವಾಲಿಟಿ’ಯಂತಹ ಸಂಘಟನೆಗಳು ಈ ಸಂದರ್ಭ ಬಳಸಿ ಮೀಸಲಾತಿ ನೀತಿ ಅಪ್ರಯೋಜಕ, ನಿರುಪಯುಕ್ತ ಎಂದು ಬಿಂಬಿಸುತ್ತಿರುವುದು ಗಮನಿಸಬೇಕಾದ ಸಂಗತಿಯಾಗಿದೆ.

ಮರಾಠಾ ಮೋರ್ಚಾ ಹಲವು ಪ್ರಶ್ನೆಗಳನ್ನೂ, ವಿಷಯಗಳನ್ನೂ ಮುನ್ನೆಲೆಯ ಚರ್ಚೆಗೆ ತಂದಿದೆ.

ಜಾತಿವ್ಯವಸ್ಥೆಯಿಂದ ಬಾಧಿತರು ತಮ್ಮ ಐಡೆಂಟಿಟಿಯನ್ನು, ಬಾಧಿತ ಸ್ಥಿತಿಯನ್ನು ಜಾತಿಯಾಚೆಗೆ ಗುರುತಿಸಿಕೊಳ್ಳದಿರುವುದು ಇಂಥ ವೈರುಧ್ಯಮಯ ಬೆಳವಣಿಗೆಗೆ ಕಾರಣವೇ? ಮೀಸಲಾತಿ ಯಾರಿಗೆ, ಏಕೆ ನೀಡಲಾಗಿದೆಯೆಂದು ನಮ್ಮ ಜನ ಸಮುದಾಯಗಳು ಅರಿತಿಲ್ಲವೆ? ‘ಹಿಂದುಳಿದಿರುವಿಕೆ’, ‘ದಲಿತತ್ವ’ಗಳ ಆಧಾರ ಏನು? ಜಾತಿ/ವರ್ಗಗಳಿಗಿರುವ, ಅದರಲ್ಲು ಅಧಿಕಾರಸ್ಥ ಜಾತಿ/ವರ್ಗಗಳಿಗಿರುವ ಪ್ರಭಾವವು ಸಮಾಜ ಕಲ್ಯಾಣದ ಸ್ವರೂಪವನ್ನೇ ಬುಡಮೇಲು ಮಾಡಬಹುದೆ?

ಭಾರತದ ಪ್ರತಿ ಜಾತಿಯೊಳಗೊಂದು ಕೆಳ ‘ವರ್ಗ’ ಇದೆ. ಆ ವರ್ಗ ಒಟ್ಟೂ ಸಮಾಜದಲ್ಲಿ ಹಾಗೂ ತಮ್ಮದೇ ಜಾತಿಯಲ್ಲಿ ಮೇಲ್ಚಲನೆಯ ಅವಕಾಶ ಸಿಗದೇ ಕಂಗೆಟ್ಟಿದೆ. ಎಂದೇ ದಲಿತೇತರ ಸಮುದಾಯಗಳಿಗೆ ಸೇರಿದ ಕೆಳವರ್ಗಗಳು ದಲಿತರಿಗೆ ನೀಡುವ ಮೀಸಲಾತಿ ಮತ್ತಿತರ ಸವಲತ್ತುಗಳನ್ನು ಅನುಮಾನದಿಂದ, ಈರ್ಷ್ಯೆಯಿಂದ ನೋಡುತ್ತವೆ. ತಮ್ಮ ‘ಕೆಳ’ ಸ್ಥಿತಿಯ ಅಸಹಾಯಕತೆಯಲ್ಲಿ ಕಣ್ಣೆದುರು ಕಾಣುವ ಮತ್ತು ತಮ್ಮ ಅನುಭವಕ್ಕೆ ಸಿಕ್ಕ ವಾಸ್ತವವನ್ನಷ್ಟೆ ಅವು ನಿಜ ಎಂದುಕೊಳ್ಳುತ್ತವೆ. ಎಂದೇ ಅವರ ಕೆಂಗಣ್ಣು ಸವಲತ್ತು ಪಡೆಯಬಲ್ಲ ದಲಿತ ಸಮುದಾಯದತ್ತ ತಿರುಗುತ್ತಿದೆ. ಕೆಳವರ್ಗಗಳ ಈ ಆಕ್ರೋಶವನ್ನು ಅವರದೇ ಜಾತಿಯ ಮೇಲ್ವರ್ಗ ದುರುಪಯೋಗಪಡಿಸಿಕೊಳ್ಳುತ್ತಿರುವುದು ಇವತ್ತಿನ ವೈರುಧ್ಯಗಳ ಹಿಂದಿನ ಕಾರಣವಾಗಿದೆ. ದೌರ್ಜನ್ಯ ತಡೆ ಕಾಯ್ದೆ ವಿಚಾರದಲ್ಲೂ ಅಷ್ಟೆ, ದಲಿತ ಸಮುದಾಯದೊಳಗಿರುವ ಮೇಲ್ಚಲನೆ ಪಡೆದ ವರ್ಗವು ತನ್ನ ಹಿತಾಸಕ್ತಿ ಕಾಪಾಡಿಕೊಳ್ಳಲು ಆ ಕಾಯ್ದೆ ಮತ್ತು ದಲಿತ ಐಡೆಂಟಿಟಿಯನ್ನು ದಾಳದಂತೆ ಬಳಸುವುದು ದಲಿತೇತರರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲ ವ್ಯಕ್ತಿಗಳ ಸ್ವಾರ್ಥದಿಂದ ಇಡೀ ದಲಿತ ಸಮುದಾಯವು ಉಳಿದ ಸಮಾಜವನ್ನು ತನ್ನ ಮೈಮೇಲೆಳೆದುಕೊಳ್ಳುವಂತಾಗಿದೆ.

ದೌರ್ಜನ್ಯಗಳು ಮತ್ತಷ್ಟು ದೌರ್ಜನ್ಯಗಳನ್ನು ಹೆರುತ್ತಿರುವ ಕಾಲದಲ್ಲಿ ವಂಚಿತರ ಹಕ್ಕು ಪ್ರತಿಪಾದನೆಯನ್ನು ನ್ಯಾಯಯುತವಾಗಿ ಆಲಿಸುವ ಕಿವಿಗಳಿಗೆ, ಅರಿಯುವ ಮನಸುಗಳಿಗೆ ಈ ನೆಲದಲ್ಲಿ ಬರವಿದೆ. ಇರುವೆ ಗುಂಪುಗೂಡುವುದು ನೋಡಿ ಕಿರುಬಗಳು ಮತ್ಸರಗೊಳ್ಳುತ್ತಿವೆ. ಮೇಲ್ವರ್ಗಗಳು ತಮ್ಮ ಹಿತಾಸಕ್ತಿಗೆ ಏನನ್ನೂ ಮಾಡಬಲ್ಲರೆನ್ನಲು ಭಾರತದ ಸಕಲ ಜಾತಿಗಳೂ ಸಾಕ್ಷಿಯಾಗಿರುವಾಗ ಮೀಸಲಾತಿ ನೀತಿ, ದೌರ್ಜನ್ಯ ಕಾಯ್ದೆ ಉಪಯೋಗ-ದುರುಪಯೋಗ ಮುಂತಾದ ವಿಷಯಗಳ ಕುರಿತು ತಲಸ್ಪರ್ಶಿಯಾಗಿ, ವಸ್ತುನಿಷ್ಠವಾಗಿ ಯೋಚಿಸುವ ಕಾಲ ಬಂದಿದೆ.

(ಫೋಟೋ ಮತ್ತು ಚಿತ್ರಗಳು - ಅಂತರ್ಜಾಲದಿಂದ)


No comments:

Post a Comment