Thursday, 14 December 2017

ಮನ್ನಿಸಿ, ಇವು ಮಾಂಟೋ ಕತೆಯ ಸಾಲುಗಳಲ್ಲ..




ಒಂದು

ಅದೊಂದು ದುರಾದೃಷ್ಟದ ಇರುಳು. ಆ ಇರುಳು ಕಳೆದು ಬೆಳಗಾಗುವುದರಲ್ಲಿ ಎಷ್ಟೆಷ್ಟೋ ಸಮೀಕರಣಗಳು ಬದಲಾದವು, ಲೆಕ್ಕವಿಲ್ಲದಷ್ಟು ಬದುಕುಗಳು ಬಯಲಾದವು.

೧೯ರ ಎಳೆಯ ಪೋರ. ಮೀಸೆ ಬಲಿಯದ ನೂರು ಕನಸುಗಳ ಆ ಹುಡುಗ ಕಾಲೇಜು ಬಿಟ್ಟವ ದುಡಿಮೆಯತ್ತ ಮುಖ ಮಾಡಿದ್ದ. ಕುಟುಂಬದ ಜವಾಬ್ದಾರಿಗೆ ಹೆಗಲು ಕೊಡಲು ಅಣ್ಣ, ಅಪ್ಪನೊಡನೆ ತಾನೂ ಬಂದರದಲ್ಲಿ ಕೆಲಸ ಮಾಡುತ್ತಿದ್ದ. ತರುಣ ರಕ್ತದವನಲ್ಲವೇ, ದೇವರು-ಧರ್ಮ-ಭಾಷೆ-ದೇಶ ಎಂಬಿತ್ಯಾದಿ ವಿಷಯಗಳು ಸೆಳೆಯುತ್ತಿದ್ದವು. ಒಂದು ಗುಂಪಿನೊಡನೆ ತನ್ನನ್ನು ಗುರ್ತಿಸಿಕೊಳ್ಳತೊಡಗಿದ್ದ. ಎರಡು ಉದ್ರಿಕ್ತ ಗುಂಪುಗಳ ನಡುವೆ ಸಂಘರ್ಷವಾಗುತ್ತಿದೆ ಎಂದು ತಿಳಿದರೆ ಏನಾಗುತ್ತಿದೆ ಎನ್ನುವುದನ್ನು ಅಲ್ಲಿಯೇ ಹೋಗಿ ನೋಡಿ ಬರುವ ಹರೆಯದ ಹುಂಬ ಕುತೂಹಲ.

ಆ ಇರುಳು..

ಮರುಬೆಳಗೆದ್ದು ಶಬರಿಮಲೆಗೆ ಹೋಗಲು ಅಯ್ಯಪ್ಪ ಸ್ವಾಮಿ ದೇವರ ಮಾಲೆ ಹಾಕಬೇಕಿತ್ತು. ಆದರೆ ಚಕಮಕಿ ನಡೆದಲ್ಲಿ ಬೈಕು ನಿಲ್ಲಿಸಿ ಬಂದಿದ್ದ. ಬೈಕು ತರುವೆನೆಂದು ಹೇಳಿ ಮನೆಬಿಟ್ಟು ಹೋದ. ಹಾಗೆ ಹೋದವನು ಮತ್ತೆ ಬರಲೇ ಇಲ್ಲ..

ಮನೆಯವರು ಹುಡುಕಿದರು. ಕಂಗಾಲಾದರು. ಅಮ್ಮ ಭೋರಾಡಿ ಅತ್ತರು. ಹೋದವ ಎಲ್ಲೂ ಕಾಣುತ್ತಿಲ್ಲ. ಮೊಬೈಲಿಗೂ ಕರೆ ಹೋಗುತ್ತಿಲ್ಲ. ಪೊಲೀಸರಲ್ಲಿ ಹೇಳಿದರು, ದೂರಿತ್ತರು. ಊಂಹ್ಞೂಂ, ಹುಡುಗ ಎಲ್ಲೂ ಇಲ್ಲ..

ಆದರೆ ಅದಾದ ೨ನೇ ದಿನ ಬೆಳಿಗ್ಗೆ ಆ ಊರ ಕೆರೆಯಲ್ಲಿ ಕೊಳೆತು, ಊದಿ ವಿಕಾರಗೊಂಡಿದ್ದ ಶವವೊಂದು ಬಕ್ಕಲು ಬೋರಲು ಸ್ಥಿತಿಯಲ್ಲಿ ನೀರಿನಲ್ಲಿ ತೇಲಿತು. ಮೇಲೆತ್ತಿ ತಿರುಗಿಸಿ ನೋಡಿದರೆ, ಅದು ಅವನೇ. ಅಯ್ಯೋ..

ಮುಳುಗಿದ್ದವ ಮೇಲೆ ತೇಲಿದ್ದ. ಈಗ ದುಃಖ ಅವನ ಕುಟುಂಬವನ್ನು ಮುಳುಗಿಸಿತು. ಅಷ್ಟೇ ಅಲ್ಲ, ದುಃಖವು ಶವ ಕಂಡ ಎಲ್ಲರನ್ನು ಮುಳುಗಿಸುವ ಅರಬಿ ಕಡಲೇ ಆಯಿತು..

ಎರಡು



ಆ ಮೂರೂ ಜನರಿಗೆ ಲಾರಿಯಲ್ಲಿ ಹೊಂಯ್ಞಿಗೆ ತುಂಬಿಕೊಂಡು ಹೊರಟಾಗ ಹೀಗಾದೀತೆಂಬ ಯಾವ ಕಲ್ಪನೆಯೂ ಇರಲಿಲ್ಲ. ಅಂದು ಬೆಳಿಗ್ಗೆ ಹಳ್ಳಿಯೊಂದರ ಹೊರವಲಯದಲ್ಲಿ ರಸ್ತೆ ಮೇಲೆ ನಿಂತಿದ್ದ ಒಂದಷ್ಟು ಹುಡುಗರು ಲಾರಿ ಚಾಲಕನ ಸೀಟಿನಲ್ಲಿರುವವನ ಹೊರಚಹರೆಯಿಂದಲೇ ಆತನ ಧರ್ಮವನ್ನು ನಿಶ್ಚಯಿಸಿಬಿಟ್ಟರು. ಕೈಯಡ್ಡಮಾಡಿ ನಿಲ್ಲಿಸಿ ಹೆಸರು ಕೇಳಿ, ಹೊರಗೆಳೆದು ಹೊಡೆಯತೊಡಗಿದರು. ಆಗಲೇ ಅವರಿಗೆ ಏನಾಗಬಹುದೆಂಬ ಅರಿವಾದದ್ದು. ಉಳಿದವರಿಬ್ಬರು ಹೊಡೆತ ತಿಂದು ಎದ್ದೆನೋ ಬಿದ್ದೆನೋ ಎಂದು ಓಡಿ ಹೋದರು. ಲಾರಿ ನಿಲ್ಲಿಸಿದ ಚಾಲಕ ಸಿಕ್ಕಿಕೊಂಡ. ಅವನನ್ನು ಅಟ್ಟಾಡಿಸಿ ಹೊಡೆದಟ್ಟಿದ ಗುಂಪು ಮತ್ಯಾರದೋ ಬೆನ್ನು ಹತ್ತಿ ಹೋಯಿತು. ಜೀವವುಳಿದರೆ ಸಾಕೆಂದು ಕಾಡುಬಿದ್ದ ಅವ, ಕೊಂಚ ಸುಧಾರಿಸಿಕೊಂಡು ಹೊರಟಾಗ ಮತ್ತೆ ಇನ್ನೊಂದು ಉದ್ರಿಕ್ತ ಗುಂಪು ಎದುರಾಯಿತು. ಅವರು ಕಬ್ಬಿಣದ ರಾಡಿನಿಂದ ಬಡಿದು ಕೆಡವಿ ಪೆಟ್ರೋಲು ಸುರಿದು ಇನ್ನೇನು ಬೆಂಕಿಯಿಕ್ಕಬೇಕು, ಅಷ್ಟರಲ್ಲಿ ದೂರದಲ್ಲಿ ಬರುತ್ತಿದ್ದ ಜನರ ಮಾತು ಕೇಳಿ ಓಡಿಹೋದರು.

ಎರಡನೆಯ ಬಾರಿ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದ. ರಾಡಿನಿಂದ ಬಿದ್ದ ಹೊಡೆತಕ್ಕೆ ಕಾಲು ಮುರಿದು ಗಾಯವಾಗಿದ್ದರೂ ಕುಂಟಿದ ತೆವಳಿದ. ಮನೆಯೊಂದು ಕಂಡಂತಾಗಿ ಹೋಗಿ ನೀರು ಕೇಳಿದ. ಆ ಬ್ರಾಹ್ಮಣ ಸಮುದಾಯದ ಕುಟುಂಬ ಹಸಿದ, ಗಾಯಗೊಂಡ, ಬಾಯಾರಿದ ಇವ ಹುಚ್ಚನಿರಬೇಕೆಂದೇ ಭಾವಿಸಿತು. ಏನೇ ಅಂದುಕೊಂಡರೂ ಮೋರಿಯಲ್ಲಿ ಅಡಗಿ ಕುಳಿತವನಿಗೆ ಮೂರು ದಿನ ಅನ್ನ, ನೀರು ಕೊಟ್ಟು ಪೊರೆಯಿತು. ಅವರಿಗೆ ಗೊಂದಲ. ಇವನಿಗೆ ಭಯ. ಕೊನೆಗೊಂದು ನಟ್ಟಿರುಳು ತೆವಳುತ್ತ ಮುಖ್ಯರಸ್ತೆ ತಲುಪಿ, ಬೆಳಗಿನ ಜಾವ ವಾಕಿಂಗ್ ಹೋಗುವವರ ಮಾತಿನಿಂದ ಗಲಾಟೆ ಕಡಿಮೆಯಾಗಿದೆ ಎಂದು ತಿಳಿದ. ಮೋರಿ ಬಿಟ್ಟು ಎದ್ದು ಹೊರ ಬಂದ. ಬಳಲಿ, ಗಾಯಗೊಂಡು, ಭಯದಿಂದ ಅರೆಹುಚ್ಚನಂತಾಗಿದ್ದ ವ್ಯಕ್ತಿಯನ್ನು ಬೀಟಿನ ಪೊಲೀಸರು ಆಸ್ಪತ್ರೆಗೆ ಸೇರಿಸಿದರು. ಆ ವೇಳೆಗೆ ಇತ್ತ ಅವನ ಮನೆಯವರು ಅವ ಸತ್ತೇ ಹೋಗಿರುವನೆಂದು ರೋದಿಸತೊಡಗಿದ್ದರು. ಊರಿನವರು ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು.

ಅಂತೂ ಈಗ ಮನೆ ತಲುಪಿರುವ ಆತನಿಗೆ ಬದುಕು ಬೋನಸ್ ಎನಿಸಿದೆ. ಮರು ಜನ್ಮ ಸಿಕ್ಕಿದ ಅನುಭವವಾಗುತ್ತಿದೆ.

ಮೂರು


ರಾತ್ರಿ ೧೧.೪೫. ಫೋನು ರಿಂಗಣಿಸಿತು. ‘ನಮ್ಮ ಮನೆ ಎದುರು ನಿಂತು ಸುಮಾರಷ್ಟು ಜನ ಕಲ್ಲು ತೂರ‍್ತ ಇದಾರೆ. ನಮ್ಗೆ ಬಯ ಆಗ್ತ ಇದೆ. ಕೆಲವಷ್ಟು ಗಾಜು ಪುಡಿಪುಡಿ ಆದ್ವು. ಹೊರಗೆ ಹೋಗಿ ಯಾರಂತ ನೋಡ್ಲಿಕ್ಕೆ, ನಿಲ್ಸಿ ಅಂತ ಹೇಳ್ಲಿಕ್ಕೆ ಹೆದರ‍್ಕೆ. ಮೇಡಂ, ಎಂಥ ಮಾಡುದು?’

ಎಂಥ ಮಾಡುವುದು?

‘ಪೊಲೀಸಿನವ್ರ ಜೀಪಿಗೇ ನಾವು ಬೆಂಕಿ ಹಚ್ಚಿದ್ರು. ಇನ್ನು ಈ ಮನೆ ಯಾವ ಲೆಕ್ಕ? ಇವತ್ತು ಮಾತ್ರ ಬಿಡಬಾರ್ದು. ಈ .. .. ಮಕ್ಳ ಮನೆ ಸುಟ್ಟೇ ಹಾಕ್ಬೇಕು.’ ಹಾಡುಹಗಲೇ ಅವರ ಮನೆ ಮುಂದೆ ಸೇರಿದ್ದ ಗುಂಪು ಅವರ ಮನೆಗೆ ಕೇಳುವಂತೇ ಈ ಮಾತು ಆಡುತ್ತ, ಕಲ್ಲು ಹೊಡೆಯಲು ಶುರು ಮಾಡಿತು. ‘ನಲ್ವತ್ತೈದ್ ವರ್ಷಾಯ್ತು ಈ ಊರ‍್ಗೆ ಬಂದು. ನಂ ಮಕ್ಳುಮರಿ ಎಲ್ಲ ಇಲ್ಲೇ ಹುಟ್ಟಿದ್ದು. ಯಾವತ್ಗೂ ಹಿಂಗನಿಸಿರ‍್ಲಿಲ್ಲ. ಆದ್ರೆ ಇವತ್ ಬಾಳಾ ಬೇಜಾರಾಗ್ತೆ ಇದೆ. ಈ ಊರೇ ಬಿಟ್ಬಿಡಬೇಕ್ ಅನುಸ್ತ ಇದೆ. ಇವತ್ತು ಮನೆ ಸುಟ್ಟೇ ಬಿಡ್ತಾರೇನೋ ಅನಿಸ್ತಿದೆ. ನಾವ್ ತಪ್ಪುಸ್ಕಂಡು ಹೋಗುದಾದ್ರು ಹೇಗೆ? ಎಲ್ಲಿಗೆ? ಮನೇಲಿದ್ದ ಡಾಕ್ಯುಮೆಂಟ್ಸ್, ಹಣ, ವಡವೆ ಯಾರ ಮನ್ಲಿ ಇಡುವುದು? ಎಂಥ ಮಾಡುದು ಮೇಡಂ?’

ಎಂಥ ಮಾಡುವುದು?

ಕಲ್ಲು ಒಡೆದ ಗಾಜಿನ ತುಂಡೊಂದು ೬ ತಿಂಗಳ ಮಗುವಿನ ಗಲ್ಲ ತಾಕಿ ಛಿಲ್ಲಂತ ನೆತ್ತರು ಬಂತು. ಮಗುವಿನ ಅಮ್ಮ ಅಳುತ್ತಿದ್ದಾರೆ. ಅಜ್ಜಿ ಇನ್ನೇನು ಗತಿ ಕಾದಿದೆಯೋ ಎಂದು ಗಡಗಡ ನಡುಗಿ ಕುಸಿದಿದ್ದಾರೆ. ಐದು ದಿನದಿಂದ ಬಾಗಿಲು ಜಡಿದುಕೊಂಡು ಮನೆಯೊಳಗೇ ಕೂತುಕೂತು ಬೇಸರವಾದ ಮಗುವಿನ ಅಕ್ಕ, ‘ಅಳುದು ಯಂತಕೆ? ಆಸ್ಪತ್ರೆಗೆ ಯಾಕ್ ಹೋಗ್ತ ಇಲ್ಲ? ಕುಡಿಲಿಕ್ ಹಾಲು ಯಾಕ್ ಕೊಡ್ತ ಇಲ್ಲ? ನಾ ಯಾಕೆ ಹೊರಗೆ ಹೋಗಿ ಆಡ್ಬಾರ್ದು? ಶಾಲೆಗ್ ಯಾಕೆ ರಜ? ಅವ್ರು ಕಲ್ಲು ಯಾಕೆ ಹೊಡಿತಿದಾರೆ? ನಾವ್ ಏನು ತಪ್ಪು ಮಾಡಿದಿವಿ?’ ಇವೇ ಮೊದಲಾದ ಹತ್ತಾರು ಪ್ರಶ್ನೆಗಳ ಒಂದಾದಮೇಲೊಂದು ಕೇಳುತ್ತಿದ್ದಾಳೆ. ಅಮ್ಮ ಕೇಳುತ್ತಿದ್ದಾಳೆ, ‘ಹೇಳಿ ಮೇಡಂ, ನಾವು ಎಂಥ ಮಾಡುದು?’

ಎಂಥ ಮಾಡುವುದು?

ಅವರೆಲ್ಲ ಒಟ್ಟೊಟ್ಟಿಗೆ ಓದುತ್ತ ಬೆಳೆದವರು. ದೇವರು, ಧರ್ಮದ ಮಕ ನೋಡದೇ ಒಟ್ಟಿಗೇ ಜಾತ್ರೆಯಲ್ಲಿ ಬೆಂಡುಬತಾಸು, ಕಜಿಮಿಜಿ, ಜಿಲೇಬಿ ಸವಿದು ಯಕ್ಷಗಾನ ಆಟ ನೋಡಿದವರು. ಅವರೆಲ್ಲ ಜೊತೆಜೊತೆ ಡ್ರೈವಿಂಗ್ ಕಲಿತವರು, ಜೊತೆಜೊತೆಗೆ ಬೈಕು ಓಡಿಸಿದವರು, ಜೊತೆಜೊತೆಗೆ ಬಿರಿಯಾನಿ ತಿಂದು ಪಾರ್ಟಿ ಮಾಡಿದವರು. ಈಗ ಹಳೆಯ ಗೆಳೆಯರು ಧರ್ಮದ ಗುರುತು ಹಿಡಿದು ಉಲ್ಟಾ ತಿರುಗಿ ಬಿದ್ದಿರುವಾಗ, ಮನೆ ಸುಟ್ಟು ಬೂದಿ ಬೂದಿ ಮಾಡುವೆವೆನ್ನುವಾಗ ಅವ ಕೇಳುತ್ತಿದ್ದಾನೆ, ‘ಮೇಡಂ, ನ್ಯಾಯನಾ ಇದು? ಫ್ರೆಂಡ್ಸ್ ಮೇಲೆ ಕಂಪ್ಲೇಂಟ್ ಕೊಡಕ್ಕಾಗುತ್ತಾ? ನಾವೀಗ ಎಂಥ ಮಾಡುದು?’

ಎಂಥ ಮಾಡುವುದು?

ಅಪ್ಪನಿಲ್ಲದ ಬಡ ಸಂಸಾರ. ತುಂಬು ಸಂಸಾರ. ಅವರಿವರ ಬಳಿ ಸಾಲಸೋಲ ಮಾಡಿ ಅಮ್ಮ ಮೂರನೆಯ ಮತ್ತು ಕೊನೆಯ ಮಗಳಿಗೆ ದೇವಸ್ಥಾನದ ಬಳಿಯ ಛತ್ರದಲ್ಲಿ ಮದುವೆ ಎಬ್ಬಿಸಿದ್ದಳು. ಈಗ ನೋಡಿದರೆ ಊರಿಡೀ, ತಾಲೂಕು ಇಡೀ ಗಲಾಟೆ ಶುರುವಾಗಿದೆ. ದಿಬ್ಬಣ ಹೊರಡಲು ಕಳಿಸಬೇಕಾದ ಟೆಂಪೋದವ ಗಲಾಟೆ ಇರುವುದರಿಂದ ನಾಳೆ ಬೆಳಗಾತ ಅಲ್ಲಿ ಹೋಗಲು ಆಗುವುದಿಲ್ಲ ಎನ್ನುತ್ತಿದ್ದಾನೆ. ದೂರದಿಂದ ಬರಬೇಕಾದ ನೆಂಟರಿಷ್ಟರು ಬಸ್ಸು, ಟೆಂಪೋಗಳಿಲ್ಲದೆ ಬರಲು ಸಾಧ್ಯವಾಗದು, ಮದುವೆ ಮುಂದೆ ಹಾಕು ಎನ್ನುತ್ತಿದ್ದಾರೆ. ಗಂಡಿನ ಮನೆಯವರು ಯಾಕೋ ಶಕುನ ಸರಿಯಿಲ್ಲ, ನಾವು ದೇವರಲ್ಲಿ ಇನ್ನೊಮ್ಮೆ ಈ ಸಂಬಂಧದ ಬಗ್ಗೆ ಕೇಳಬೇಕು ಎನ್ನುತ್ತಿದ್ದಾರೆ.

ಸಾಲ, ಬಂಗಾರ, ವರದಕ್ಷಿಣೆ, ಛತ್ರ-ಊಟದ ಅಡ್ವಾನ್ಸ್.. ಅಯ್ಯೋ, ಮತ್ತೆ ಎಲ್ಲವನ್ನು ಇನ್ನೊಮ್ಮೆ ಮಾಡಬೇಕೆ? ಅಮ್ಮ ಕೇಳುತ್ತಿದ್ದಾಳೆ, ‘ಇಡಗುಂಜಿ ಮಾಗಣಪತಿ, ನನ್ನತ್ರ ಸಾದ್ದಿಲ್ಲೆ, ನಾ ಈಗ ಎಂಥ ಮಾಡುದು?

ಎಂಥ ಮಾಡುವುದು?



ಮನ್ನಿಸಿ, ಇವು ಸಾದತ್ ಹಸನ್ ಮಾಂಟೋನ ಕತೆಯ ತುಣುಕುಗಳಲ್ಲ.

ಇದ್ದಕ್ಕಿದ್ದಂತೆ ಒಂದು ದಿನ ಹೀಗೆಲ್ಲ ಆಯಿತು. ೨೦೧೭ರ ಡಿಸೆಂಬರ್ ತಿಂಗಳು ಬರುವವರೆಗೂ ಇದನ್ನು ಯಾರೂ ಊಹಿಸಿರಲಿಲ್ಲ. ಎಲ್ಲ ಸಮುದಾಯದವರು ಹಲವು ವರ್ಷಗಳಿಂದ ಚೆನ್ನಾಗಿಯೇ ಇದ್ದಂಥ ನಮ್ಮೂರಿನಲ್ಲಿ, ಹೊನ್ನೂರಿನಲ್ಲಿ ಹೀಗಾಗುತ್ತದೆ ಎಂದು ಯಾರೂ ಯೋಚಿಸಿರಲಿಲ್ಲ. ಎಲ್ಲೆಲ್ಲೋ ಕೋಮುಗಲಭೆಗಳಾದರೂ ಅದರ ಯಾವ ನೆರಳೂ ಬಿದ್ದಿರದ ನಮ್ಮೂರಲ್ಲಿ, ಅರಬಿ ಕಡಲಲ್ಲಿ ಶರಾವತಿ ಲೀನಗೊಂಡಷ್ಟು ಸಹಜವಾಗಿ ಎಲ್ಲ ಜನಸಮುದಾಯಗಳೂ ಒಂದಾಗಿದ್ದ ಊರಿನಲ್ಲಿ ಇಂಥ ಚಂಡಮಾರುತ ಬೀಸೀತೆಂದು ಯಾರೂ ಊಹಿಸಿರಲಿಲ್ಲ.

ಒಖಿ ಬಂದಿತ್ತು, ಹೋಯಿತು. ಅಂಥ ಎಷ್ಟೋ ಮುನ್ನ ಬಂದಿದ್ದವು, ಹೋಗಿದ್ದವು. ನಮ್ಮ ಕಡಲದಂಡೆ ಸುರಕ್ಷಿತವಾಗಿಯೇ ಇತ್ತು. ಬಟ್ ನಾಟ್ ಎನಿ ಮೋರ್. ಈಗ ಬೀಸುತ್ತಿರುವುದು ಅಸಲಿಗೆ ಚಂಡಮಾರುತವೋ, ಅಥವಾ ಕಡಲ ಮೇಲಣ ಗಾಳಿ ಭರಾಟೆಯೇ ಹೀಗಿದೆಯೋ ತಿಳಿಯುತ್ತಿಲ್ಲ. ಇದು ಸದ್ಯ ನಿಲ್ಲುವಂತೆ ಕಾಣುತ್ತಿಲ್ಲ. ಪ್ರಮಾದಗಳು ಅಷ್ಟು ಸುಲಭದಲ್ಲಿ ಸರಿಯಾಗುವಂತೆ ಕಾಣುತ್ತಿಲ್ಲ.

ಯಾರ ನಂಬುವುದು? ಯಾರ ದೂರುವುದು?

ಒಡೆದದ್ದು ಜೋಡಿಸುವುದು ಬಲು ಕಷ್ಟ..

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದೆರೆಡು ವಾರಗಳಿಂದ ಸಂಭವಿಸುತ್ತಿರುವ ಘಟನಾವಳಿಗಳು ಎಲ್ಲರಿಗೂ ನೋವು ತರುವಂಥವಾಗಿವೆ. ಒಂದು ತರಹದ ಅಸಹಾಯಕ ದಿಕ್ಕೇಡಿತನ ಹಲವರನ್ನು ಆವರಿಸಿದೆ. ಕೋಮುಚಕಮಕಿಯಾದ ದಿವಸ ನಾಪತ್ತೆಯಾಗಿ ೨ ದಿನಗಳ ಬಳಿಕ ಕೆರೆಯಲ್ಲಿ ಶವವಾಗಿ ತೇಲಿದ ೧೯ ವರ್ಷದ ಪರೇಶ್ ಮೇಸ್ತ ಎಂಬ ಹುಡುಗನ ಸಾವಿಗಾಗಿ ಜಿಲ್ಲೆಯಾದ್ಯಂತ ಜನ ಕಂಬನಿ ಮಿಡಿದಿದ್ದಾರೆ.

೧೯ ವರ್ಷ ಯಾರಿಗೂ ಸಾಯುವ ವಯಸ್ಸಲ್ಲ. ಭವಿಷ್ಯದ ನೂರಾರು ಕನಸುಗಳು, ಅವನ್ನು ಸಾಕಾರಗೊಳಿಸಿಕೊಳುವ ತೀವ್ರ ಜೀವನೋತ್ಸಾಹದ, ತಹತಹದ ಕಾಲ ಅದು. ಅಂಥ ವಯೋಮಾನದ ಪರೇಶ್ ಎಂಬ ಯುವಕನ ಸಾವು - ಯಾರಿಂದಲೇ, ಯಾವ ಕಾರಣದಿಂದಲೇ ಆಗಿದ್ದರೂ ಅತ್ಯಂತ ದುಃಖಕರ ಸಂಗತಿ. ಅದರಲ್ಲೂ ಶ್ರಮಿಕರ ಅವನ ಕುಟುಂಬಕ್ಕೆ ದುಡಿಯುವ ಹುಡುಗನ, ಪೀತಿಯ ಮಗನ ಸಾವಿನಿಂದ ಆಗಿರುವ ನಷ್ಟ, ಆಘಾತ ಯಾವ ಪರಿಹಾರದಿಂದಲೂ ತುಂಬುವುದು ಸಾಧ್ಯವಿಲ್ಲ. ಕರಾವಳಿಯ ಮನೆಗಳಲ್ಲಿ ಈ ಪರಿಸ್ಥಿತಿ ಮರುಕಳಿಸದೇ ಇರಲಿ. ಮಗನ ಕಳೆದುಕೊಂಡ ಅವನ ಹೆತ್ತವರ ದುಃಖ ಮತ್ತಾರಿಗೂ ಬಾರದೇ ಇರಲಿ.

ಎಂದೇ ಅವನ ಸಾವಿಗೆ ಕಾರಣವಾದವರನ್ನು ಪತ್ತೆ ಹಚ್ಚಿ, ತಪ್ಪಿತಸ್ಥರನ್ನು ಶಿಕ್ಷಿಸಲೇಬೇಕು. ಆ ಸಾವಿಗೆ ಕಾರಣವಾದ ಪರಿಸ್ಥಿತಿ ಮತ್ತೆ ಉದ್ಭವಿಸದಂತೆ ನೋಡಿಕೊಳ್ಳಲೇಬೇಕು.

ಪರೇಶನ ಸಾವಿನ ದಿಗ್ಭ್ರಮೆ ಒಂದು ಕಡೆಯಾದರೆ; ಎಳೆಯನ ಸಾವಿನ ಕುರಿತು ದುಃಖಗೊಂಡಿರುವ ಸಮಾಜದಲ್ಲಿ ಶಾಂತಿ ಕದಡುವ ಘಟನೆಗಳು ಒಂದಾದಮೇಲೊಂದು ಕಡೆ ಸಂಭವಿಸುತ್ತಿರುವುದು ಮತ್ತಷ್ಟು ಆಘಾತ ನೀಡುವ ವಿಷಯವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿ, ಪ್ರಚೋದನೆಗಳನ್ನೇ ಜನ ನಿಜವೆಂದು ನಂಬಿ ಹಿಂಸಾತ್ಮಕ ಕ್ರಿಯೆಗಿಳಿದಿದ್ದಾರೆ. ಪರೇಶನ ಸಾವಿಗಾಗಿ ಶೋಕಿಸುವವರು ತಮ್ಮ ಆಕ್ರೋಶವನ್ನು ಸಾರ್ವಜನಿಕ ಆಸ್ತಿಪಾಸ್ತಿ, ಅನ್ಯ ಕೋಮಿನ ಅಮಾಯಕರ ಮೇಲೆ ತೋರಿಸುತ್ತಿದ್ದಾರೆ. ಸಣ್ಣಪುಟ್ಟ ಹಳ್ಳಿಗಳನ್ನೂ ಕೋಮುದ್ವೇಷ, ಭಯ ಆವರಿಸತೊಡಗಿದೆ. ಇದರ ನಡುವೆ ಅಲ್ಲೊಂದು ಇಲ್ಲೊಂದು ಮಾನವೀಯತೆ ಮೆರೆದವರ ಸುದ್ದಿಗಳೂ ಬರುತ್ತಿವೆ.

ಒಡೆಯುವುದು ಬಲು ಸುಲಭ. ಕೂಡಿಸುವುದು ತೀರಾ ಕಷ್ಟ. ಹೀಗಿರುತ್ತ ಪ್ರಚೋದನೆಗಳಿಂದ ವಿಭಿನ್ನ ಕೋಮಿನ ಜನರು ಒಬ್ಬರ ಮೇಲೊಬ್ಬರು ಹಗೆ ಸಾಧನೆಗೆ ತೊಡಗದಂತೆ ನೋಡಿಕೊಳ್ಳಬೇಕಾದದ್ದು ಜವಾಬ್ದಾರಿಯುತ ನಾಗರಿಕರ ಕರ್ತವ್ಯವಾಗಿದೆ. ಅವಸರದ ತೀರ್ಮಾನಗಳಿಗೆ ತಲುಪದೇ ನ್ಯಾಯ ಅನ್ಯಾಯಗಳ ಕುರಿತು ಯೋಚಿಸಿ ನಡೆದುಕೊಳ್ಳಬೇಕಾದ ತುರ್ತು ಇವತ್ತಿನ ಸಮಾಜಕ್ಕೆ ಇದೆ. ಆ ಮೂಲಕ ಪ್ರಾಕೃತಿಕ ಸೌಂದರ್ಯದ, ಶಾಂತಿಯ ನಾಡಾಗಿದ್ದ ಉತ್ತರ ಕನ್ನಡದಲ್ಲಿ ಸೌಹಾರ್ದದ ಬಾಳ್ವೆ ಮತ್ತೆ ನೆಲೆಗೊಳ್ಳುವಂತೆ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲಾ ಕೋಮಿನ ಮುಖಂಡರು, ಧಾರ್ಮಿಕ ವ್ಯಕ್ತಿಗಳು, ಸರ್ವ ಪಕ್ಷಗಳ ಮುಖಂಡರು, ಜನಪರ ಸಂಘಟನೆಗಳು ತಂತಮ್ಮ ಭೇದ ಮರೆತು ಸಮಾಜ ಮೊದಲಿನ ಶಾಂತ ಸ್ಥಿತಿಗೆ ಬರುವಂತೆ ಮಾಡಲು ಶ್ರಮಿಸಬೇಕು.

ನಾನುನೀನು ಅವರು ಇವರು ಮನುಜರಾಗಿ ಹುಟ್ಟಿದವರು
ಕೈಗೆ ಕೈ ಜೋಡಿಸು ಬಾ, ಹೊಸ ಜಗತ್ತು ನಮ್ಮದು.. 




Sunday, 29 October 2017

ಎರಡಳಿದು




ಈ ಕೊಡದಿಂದ ಆ ಕೊಡಕ ಜಿಗಿ ಅಂತಿ.
ಅದನ ಕ್ರಾಂತಿ ಅಂತ ಹ್ಯಾಂಗ್ ನಂಬಲಿ?

ಕೊಡಪಾನ ಒಲ್ಯಾಂದರ ಹೊಂಡಕ ಸುರಕೊ ಅಂತಿ
ಗುಂಡಿ ನೀರಿಲೆ ಈಸೋದ್ರಾಗ ಹೊಸಾದೇನೈತಿ?

ಈ ಮಗ್ಗಲ ನೂಸ್ತದಂದ್ರ ಆಚಿ ಮಗ್ಗಲಾ ತಿರುಗಂತಿ
ಆಕಾಶಲೋಕದ ಕನಸ ಕಂಡು ಹಂಗ ಹ್ಯಾಂಗ್ ಸುಮ್ಮಿರಲಿ?

ಖರೆ, ಇಟ್ಟಲ್ಲಿಂದ ಹಂದಬೇಕು ಒಂದರೆ ಹೆಜ್ಜಿ
ಆಗಷ್ಟ ಮುಂದ್ ಹೋಗಾಕ್ ಹುಕಿ ಹುಟ್ಟತೇತಿ

ಗೂಟದಂತ ಕಾಲಿನ್ಯಾಗ ಕಂಪನ ಮೂಡಬೇಕಂದ್ರ
ನೀ ಮೀಟಬೇಕು ಫರಕ ಅಳಿಸೊ ತಂಬೂರಿ ತಂತಿ

ಆವಾಗ್ ನೋಡು ಜೀಂವಾ,
ಕರಿಯೂದನು ಬ್ಯಾಡ ಕೊರಗೂದನೂ ಬ್ಯಾಡ
ಅನುವಿನ ತನು ಕಳಚಿ ನಿನ ಬಲ್ಲಿ ನೀನ ಆಗಿ ಬರತೇನಿ
ಎರಡಳಿದು ನಿನ ಬಲ್ಲಿ ನೀನ ಆಗಿ ಇರತೇನಿ

(ಚಿತ್ರ: ಅಂತರ್ಜಾಲ)

Thursday, 19 October 2017

ಒಂದು ಗಜಲ್, ಒಂದು ಕವಿತೆ





ಎಚ್ಚರ

(ಆಧಾರ್ ಲಿಂಕ್ಡ್ ಕವಿತೆ, ಆಧಾರ್ ನಂಬರ್ 8191 1421 1611 31)

ಮುಜರಾಯಿ ಇಲಾಖೆ ಇತಿಹಾಸ ಬೋಧಿಸುವುದಾದರೆ
ಸರ್ಕಾರ ಮಾರಾಟದ ಮಳಿಗೆಯಾದರೆ
ನದಿ ಪರ್ವತ ಗಣಿಗಳೆಲ್ಲ ಕೇವಲ ಅಸೆಟ್
ಖರ್ಚು ಮಾಡುವವನೇ ಆದರ್ಶ ನಾಗರಿಕ
ಬದುಕು ಸಂಬಳವಿಲ್ಲದ ನೌಕರಿ
ಹರ್ಕ್ಯುಲಿಸ್ ಸಿಸಿಫಸರ ಗ್ರೀಸ್ ದಿವಾಳಿ

ಆಗ ..
ಬೇರು ಸಮೇತ ಕಿತ್ತು ಹಾಕಿರುವವೆಲ್ಲ
ವಸ್ತು ಸಂಗ್ರಹಾಲಯದಲ್ಲಿ ನೋಡ ಸಿಗುತಾವೆ.
ಬಣ್ಣ ಬದಲಾಯಿಸುತ್ತ ಇರುವವರೆಗೆ ನೀವು ಕ್ಷೇಮ
ಎಂದು ಬೋಧಿಸಲಾಗುತ್ತದೆ
ಅನಾದಿವಾಸಿಗಳು ಎದೆತನಕ ಮುಳುಗಿದರೂ
ನರ್ಮದೆ ಸರೋವರವಾಗುತಾಳೆ..

ಎಚ್ಚರ ಗೆಳೆಯಾ, ಭಾರತ ಹೊಳೆಯುತಿದೆ
ನಿನ್ನ ಗುರುತು ಕೇವಲ ಗುರುತಿನ ಚೀಟಿಯಷ್ಟೇ.
ಬಂಗಾಳದ ಹುಲಿ, ಬರ್ಮಾದ ರೊಹಿಂಗ್ಯಾ
ಇಬ್ಬರಲಿ ಯಾರು ಮೊದಲು ನಿರ್ನಾಮವಾಗುವರು
ಎನ್ನುವುದು ಕೇವಲ ಒಂದು ಜೋಕ್ ಅಷ್ಟೇ.

ಗೆಳೆಯಾ, ಇವು ಅಚ್ಛೇ ದಿನಗಳು
ಮುಜರಾಯಿ ಇಲಾಖೆ ಇತಿಹಾಸ ಬೋಧಿಸುತಿರಲು
ಸರ್ಕಾರ ಮಾರಾಟ ಮಳಿಗೆಯಾಗಿರಲು
ದೇಶವೇ ಒಂದು ಅಸೆಟ್
ನೀನು ಕೊಳ್ಳಲ್ಪಡುವ ಮಾಲು,
ಕೊಳ್ಳುಬಾಕನೇ ಅಮೂಲ್ಯ ಕಸ್ಟಮರು,
ಒಂದು ಮತವಷ್ಟೇ ನಿನ್ನ ವ್ಯಾಲ್ಯೂ.
ನಿನ್ನ ಗುರುತು ಆಧಾರ ಕಾರ್ಡು
‘ಮಡಿಸಬೇಡ, ಹಾಳುಮಾಡಬೇಡ,
ಗರ್ಭದಿಂದ ಗೋರಿಯವರೆಗೂ ಬೇಕು,
ಕಳಕೊಳಬೇಡ, ಹುಶಾರು!’


ಯಾರಿಂದ ಯಾರಿಗೆ?




ನಾನು ಬುಗುರಿ ನೀನು ಚಾಟಿ ಬಿಡುಗಡೆ ಯಾರಿಂದ ಯಾರಿಗೆ?
ನೀನು ಬುಗುರಿ ನಾನು ಚಾಟಿ ಬಂಧನ ಯಾರಿಂದ ಯಾರಿಗೆ?

ನಾನು ನಿದ್ರೆ ನೀನು ಕನಸು ನಶೆ ಯಾರಿಂದ ಯಾರಿಗೆ?
ನೀನು ನಿದ್ರೆ ನಾನು ಕನಸು ಎಚ್ಚರ ಯಾರಿಂದ ಯಾರಿಗೆ?

ನಾನು ಕಡಲು ನೀನು ಬಿಸಿಲು ಬೇಗೆ ಯಾರಿಂದ ಯಾರಿಗೆ?
ನೀನು ಕಡಲು ನಾನು ಬಿಸಿಲು ಮಳೆಯು ಯಾರಿಂದ ಯಾರಿಗೆ?

ನಾನು ಚಿಗುರು ನೀನು ಬೇರು ಬೆಳಸು ಯಾರಿಂದ ಯಾರಿಗೆ?
ನೀನು ಚಿಗುರು ನಾನು ಬೇರು ಯಾರ ಕಸುವು ಯಾರಿಗೆ?

ನಾನು ವೀಳ್ಯೆ ನೀನು ಅಡಕೆ ರಸವು ರುಚಿಯು ಯಾರದು?
ನೀನು ಅಡಕೆ ನಾನು ವೀಳ್ಯೆ ನಂಟು ಬಾಯೊಡನಾರದು?

ನೀನು ಎಳೆಯು ಹಚ್ಚಡವು ನಾನು ಬೆಚ್ಚನನುಭವ ಯಾರದು?
ನಾನು ಎಳೆಯು ಹಚ್ಚಡವು ನೀನು ಒಂಟಿತನವೆಲ್ಲಿರುವುದು?

ಬತ್ತಿ ನೀನು ಹಣತೆ ನಾನು ಜೀವತೈಲ ತುಂಬಿರಲು, ಅನು,
ಬೆಳಕು ದಿಟವು ಕತ್ತಲೆಯೂ ದಿಟವು ಪ್ರಶ್ನೆ ಏಳುವುದೇತಕೊ?

Thursday, 12 October 2017

ನನ್ನ ಅಕ್ಕ, ನನ್ನ ಆತ್ಮಸಂಗಾತಿ..





















ಅವಳು ಕೂಗಾಡಿದಳು ಅಬ್ಬರಿಸಿದಳು
ಎಷ್ಟೋ ಸಲ ಸ್ಫೋಟಿಸಿದಳು
ಮೇಲ್ಜಾತಿಯ ಇದು.. ಬ್ರಾಹ್ಮಣ್ಯದ ಅದು..
ಅದರೊಳಗಿನ ಅಮಾನವೀಯತೆ ಕುರಿತು
ಅದರೊಳಗಿನ ಅನ್ಯಾಯ ಕುರಿತು

ತಡೆಯಿರಿ ಒಂದು ನಿಮಿಷ..
ಇವಳು ಅವಳೇನಾ?
ಮೆಲು ಮಾತಿನವಳು
ಮೃದುವಾಗಿ ಆಲಿಂಗಿಸುವವಳು?
ಎಳೆಗೂಸುಗಳು
ಅಸ್ಪ್ರುಶ್ಯರು
ಮುಸ್ಲಿಮರು
ಮಹಿಳೆಯರು
ಅಲ್ಪಸಂಖ್ಯಾತರು
ಮಾವೋವಾದಿಗಳ ಅಪ್ಪಿದವಳು?

ಕೆಲ ಹುಚ್ಚುನಾಯಿಗಳು 
ಅವಳೊಂದು ಹೆಣ್ಣುನಾಯೆಂದು ಜರೆದವು
ಕೆಲವರು ಸೂಳೆಯೆಂದರು
ಯಾಕೆಂದರೆ ಅವಳು ಒಬ್ಬಂಟಿಯಾಗಿದ್ದಳು
ತನಗಿಷ್ಟ ಬಂದಂತೆ ಬದುಕಿದಳು
ಆದರೆ ಅವಳ ಅಕ್ಕ ಎಂದರು ನೂರಾರು ಜನ 
ಅಮ್ಮ ಎಂದವರು ಸಾವಿರಾರು ಜನ 
ನಾನೂ ಗೌರಿ ಎನುತಿದ್ದಾರೆ ಈಗ ಲಕ್ಷಾಂತರ ಜನ

ಕಾರಿನ ಕಿಟಕಿಯಿಂದ ಸಿಗರೇಟು ತುಂಡು
ಬಿಸುಡಿದವರಿಗೆ ಉಗಿದಿದ್ದಳು
ಟೂವೀಲರಿನವರ ಮೇಲೆ ಬಿದ್ದೀತೆಂದು!
ಅವಳ ಮನೆಯೇ ತೋಟವಾಗಿತ್ತು
 ಎಷ್ಟೋ ಹಾವುಗಳು ಅಲೆಯುತ್ತ ಬರುತಿದ್ದವು 
ಕಾಯುತಿದ್ದಳು ಸಹನೆಯಿಂದ
ಅದು ಸರಿದು ಹೋಗುವ ತನಕ
ತಡೆಯದೇ, ಗಾಯಗೊಳಿಸದೇ, ಕೊಲ್ಲದೇ.
ಅದರಷ್ಟಕ್ಕೆ ಅದು ಇವಳಷ್ಟಕ್ಕೆ ಇವಳು..

ಆದರೆ ಬಂದೇ ಬಂತು ಕೊನೆಗೊಂದು ಹಾವು
ಸರಿದು ಹೋಗಲೇ ಇಲ್ಲ ಮನುಷ್ಯ ಹಾವು
ಎರಡು ಚಕ್ರದ ಮೇಲೆ ಬಂದು
ಅವಳೊಳಗಿನ ಬೆಂಕಿ ನಂದಿಸಿದ ಹಾವು
ಅವಳ ಸುಮ್ಮನಾಗಿಸಿದ ಹಾವು..

ಗೌರಿಯ ಸುಮ್ಮನಾಗಿಸುವುದೆ?

ಹ್ಹಹ್ಹಹ್ಹ! ಒಳ್ಳೇ ತಮಾಷೆ!!
ಅವಳು ಸೂರ್ಯಕಾಂತಿಯ ಬೀಜದಂತೆ ಸಿಡಿದಳು
ಭಾರತದಾದ್ಯಂತ ಚದುರಿದಳು
ಇಲ್ಲೂ ಅಲ್ಲೂ ಸಾಗರದಾಚೆಗೂ
ಈಗ ಮೌನವೇ ಗುಣುಗುಣಿಸುತ್ತಿದೆ, 
ಪ್ರತಿಧ್ವನಿಸುತ್ತಿದೆ
ನಾನು ಗೌರಿ ನಾನೂ ಗೌರಿ..

- ಇಂಗ್ಲಿಷ್ ಮೂಲ: ಕವಿತಾ ಲಂಕೇಶ್

















ಕನ್ನಡಕ್ಕೆ: ಡಾ. ಎಚ್. ಎಸ್. ಅನುಪಮಾ

Friday, 8 September 2017

ಗೌರಿ ಲಂಕೇಶ್ - ಕೆಂಪಾದವೋ ಎಲ್ಲಾ ಕೆಂಪಾದವೋ..




ಟ್ರಿಣ್ ಟ್ರಿಣ್ ಟ್ರಿಣ್..

ಮೂರೇ ರಿಂಗಿಗೆ ಮೊಬೈಲ್ ಕರೆ ಕಟ್ ಆಯಿತೆಂದರೆ ಪೇಶೆಂಟ್ ನೋಡುವುದನ್ನು ಒಮ್ಮೆ ನಿಲ್ಲಿಸಿ ವಾಪಸ್ ಕರೆ ಮಾಡುತ್ತಿದ್ದೆ. ಯಾಕೆಂದರೆ ಅದು ಗೌರಿ ಲಂಕೇಶ್ ಅವರದ್ದೆ ಆಗಿರುತ್ತಿತ್ತು. ‘ಮೂರು ರಿಂಗಾದ್ರು ಎತ್ತದವರು ಬ್ಯುಸಿ ಅಂತ ಅರ್ಥ. ಅವರು ಎತ್ತುವರೆಗೂ ಮೊಬೈಲ್ನ ಕಿವಿಗಿಟ್ಕೋಂಡ್ ಕೂರಕ್ಕೆ ನನ್ಕೈಲಾಗಲ್ಲಪ್ಪ..’ ಎನ್ನುತ್ತ ಒಂದು ಸ್ಫೋಟಕ ನಗೆ ನಕ್ಕು ಮಾತು ಮುಂದುವರೆಸುತ್ತಿದ್ದರು ಗೌರಿ. ಇನ್ನು ಆ ಮೂರು ರಿಂಗಿನ ಕರೆ ಬರಲಾರದು ಎಂದು ನೆನೆಸಿಕೊಳ್ಳಲು ದುಃಖವಾಗುತ್ತಿದೆ. ಮೊನ್ನೆ ಸೆಪ್ಟೆಂಬರ್ ೫ರ ರಾತ್ರಿ ತಮ್ಮ ಮನೆ ಬಾಗಿಲಿನಲ್ಲೇ ಹಂತಕರಿಂದ ಹತ್ಯೆಗೊಳಗಾದ ಗೌರಿ ಲಂಕೇಶ್ ಸಾವು ಈಗ ಕ್ರಿಯಾಶೀಲವಾಗಿರುವ ಬಹುತೇಕ ಮನಸುಗಳಲ್ಲಿ ಒಂದು ಖಾಲಿಯನ್ನೂ, ಅಗಣಿತ ಪ್ರಶ್ನೆಗಳನ್ನೂ, ಕಣ್ತುಂಬ ದುಃಖವನ್ನೂ, ಸಿಟ್ಟು-ಹತಾಶೆಯನ್ನೂ ತುಂಬಿದೆ.

ಒಂದು ಕತೆ ನೆನಪಾಗುತ್ತಿದೆ: ಕೇಡಿಗನೊಬ್ಬನ ಮುಷ್ಟಿಯಲ್ಲಿ ಚಂದದ ಹಕ್ಕಿ ಸಿಲುಕಿಕೊಂಡಿದೆ. ಮುಷ್ಟಿಯೊಳಗಿರುವುದು ಬದುಕಿದೆಯೋ ಇಲ್ಲವೋ ಎಂದವ ಕೇಳುತ್ತಿದ್ದಾನೆ. ಬದುಕಿದೆ ಎಂದರೆ ಅವ ಕೈಯಲ್ಲೇ ಹಿಸುಕಿ ಗುಟ್ಟಾಗಿ ಕೊಲ್ಲುತ್ತಾನೆ, ಸತ್ತಿದೆ ಎಂದರೆ ಹೌದೇ ಎಂದು ನಿಮ್ಮ ಕಣ್ಣೆದುರೇ ಕೊಲ್ಲುತ್ತಾನೆ. ಅಭಿವ್ಯಕ್ತಿ ಸ್ವಾತಂತ್ರ್ಯವೆಂಬ ಚೆಂದದ ಹಕ್ಕಿಯ ಕತೆ ಈಗ ಹೀಗೇ ಆಗಿದೆಯೇ? ಮುಕ್ತವಾಗಿ ಮಾತನಾಡಿದರೆಂದು, ಬರೆದರೆಂದು ಎಷ್ಟೆಷ್ಟು ಅನನ್ಯ ಜೀವಗಳ ಕಳೆದುಕೊಂಡೆವು? ಇನ್ನೂ ಎಷ್ಟು ಕಾಲ ಹೀಗೆ ಮುಂದುವರೆಯಬೇಕು ಇದು? ಎಂಬಂಥ ಎಷ್ಟೋ ಪ್ರಶ್ನೆಗಳು ನಮ್ಮ ನಡುವೆ ಹರಿದಾಡತೊಡಗಿವೆ.

ಗೌರಿಯ ವಿಚಾರಗಳನ್ನು ತಮ್ಮ ವಿಚಾರಗಳಿಂದ ಎದುರಿಸಲಾರದ ಅವಿಚಾರಿಗಳ ಹೇಡಿತನದ ಕೃತ್ಯ ಈ ಹತ್ಯೆ. ಏಳು ಬುಲೆಟ್ ಅಲ್ಲ, ಅರ್ಧ ಬುಲೆಟ್ ಹೊಕ್ಕರೂ ಸಾಕು ಎನ್ನುವಂತಿದ್ದ ಶಿಥಿಲ ದೇಹದೊಳಗಿನ ಚೈತನ್ಯ ಕುರಿತು ‘ಅವರು’ ಎಷ್ಟು ಭಯಗೊಂಡಿದ್ದಾರೆಂದು ಇದು ತಿಳಿಸಿಕೊಡುತ್ತದೆ. ಗೌರಿಯ ಸಮಯ-ಶಕ್ತಿಯನ್ನೆಲ್ಲ ಅಸಂಖ್ಯ ಕೇಸುಗಳ ಅಲೆದಾಟದಲ್ಲಿ ಹರಣಮಾಡಲು ಮೂಲಭೂತವಾದಿಗಳು ಹತ್ತಾರು ಕೇಸುಗಳನ್ನು ಅವರ ಮೇಲೆ ದಾಖಲಿಸಿದ್ದರು. ‘ಕರ್ನಾಟಕದಲ್ಲಿ ಎಲ್ಲೆಲ್ಲಿ ಕೋರ್ಟಿದಾವೊ ಅಲ್ಲೆಲ್ಲ ನಂದೊಂದು ಕೇಸು ನಡೀತಿದೆ ಕಣಪ್ಪ, ನನ್ಗೆ ಟೈಮಿಲ್ಲ, ದೂರದೂರ ಎಲ್ಲು ನನ್ನ ಕರಿಬೇಡೀಪ್ಪಾ’ ಎನ್ನುತ್ತಿದ್ದರು ಗೌರಿ. ಆದರೆ ಅಷ್ಟೆಲ್ಲ ಬೆದರಿಕೆ, ಕೋರ್ಟ್ ಕೇಸುಗಳ ಹೊರತಾಗಿಯೂ ನಿರ್ಭೀತಿಯಿಂದ ಬರೆಯುತ್ತಿದ್ದದ್ದು, ಓಡಾಡುತ್ತಿದ್ದದ್ದು ಅಪರೂಪದ ದಿಟ್ಟತನವೇ ಸರಿ!





ವಿದ್ಯಾರ್ಥಿ ಸಂಘಟನೆ, ಮಹಿಳಾ-ದಲಿತ-ರೈತ-ಪರಿಸರ-ಆದಿವಾಸಿ ಸಂಘಟನೆ, ಲಿಂಗತ್ವ ಅಲ್ಪಸಂಖ್ಯಾತರ ಹೋರಾಟ, ಹಿಂದೂತ್ವವಾದಿಗಳ ಅತಿಗಳಿಗೆ ಸಿಲುಕಿ ನೊಂದ ಸಮುದಾಯಗಳ ಹೋರಾಟಗಳಲ್ಲಿ ಸಕ್ರಿಯವಾಗಿದ್ದವರೆಲ್ಲರಿಗು ಗೌರಿ ಅಕ್ಕನಂತಿದ್ದರು. ಅವರಲ್ಲಿ ಯಾರಾದರೂ ಕಷ್ಟದಲ್ಲಿದ್ದರೆ ಹಿಂದೆಮುಂದೆ ನೋಡದೆ ನೆರವಿಗೆ ಧಾವಿಸುತ್ತಿದ್ದರು. ಹೊಸಪೀಳಿಗೆಯ ಹೋರಾಟಗಾರರನ್ನು ಅತ್ಯಂತ ಭರವಸೆ, ಪ್ರೀತಿಯಿಂದ ಅಪ್ಪಿಕೊಳ್ಳುತ್ತಿದ್ದ ಜೀವ ಅದು. ಅವರ ಕುಟುಂಬ ಬೆಳೆಬೆಳೆದು ಎಷ್ಟು ವಿಸ್ತಾರವಾಗಿತ್ತು ಎಂದರೆ ದೂರದ ರಾಜ್ಯಗಳ ದಿಟ್ಟ ಹೋರಾಟಗಾರರಾಗಿದ್ದ ಕನ್ನಯ್ಯ, ಜಿಗ್ನೇಶ್, ಶೆಹ್ಲಾ ರಶೀದ್, ಚಂದ್ರಶೇಖರ್ ಆಜಾದ್ ಅವರ ‘ಮಕ್ಕಳಾ’ಗಿದ್ದರು. ಎಲ್ಲಿಯೇ ಆಗಿರಲಿ, ಚಳುವಳಿ-ಹೋರಾಟಗಾರರೊಡನೆ ಅಷ್ಟು ತಾದಾತ್ಮ್ಯ..

ಜೀವಪರವಾಗಿ ಯೋಚಿಸುವ ಎಲ್ಲರೂ ‘೩ಡಿ’ ಬಗೆಗೆ ನಂಬಿಕೆ ಹೊಂದಿರುತ್ತಾರೆ - ಡೆಮಾಕ್ರೆಸಿ, ಡಿಸೆಂಟ್ ಮತ್ತು ಡೈವರ್ಸಿಟಿ (ಪ್ರಜಾಪ್ರಭುತ್ವ, ಭಿನ್ನಮತ, ಬಹುತ್ವ). ಗೌರಿ ಲಂಕೇಶ್ ಕೂಡ ಸದಾ ಚರ್ಚೆಗೆ ಮುಕ್ತವಾಗಿದ್ದರು. ‘ಸಿದ್ಧರಾಮಯ್ಯನವರಿಗೆ ನೀವು ಕೊಡುವ ಮಾರ್ಕ್ಸ್ ಸ್ವಲ್ಪ ಹೆಚ್ಚೇ ಆಗುತ್ತಿದೆ, ಲಂಕೇಶ್ ಇದ್ದಿದ್ದರೆ ಇಷ್ಟು ಕೊಡುತ್ತಿರಲಿಲ್ಲ ಅಲ್ಲವೆ?’ ಎಂದರೆ ‘ಹೌದಾ?’ ಎನ್ನುತ್ತಲೇ ಅದಕ್ಕೆ ಈ ಕಾಲದ ಕಾರಣಗಳನ್ನು ವಿವರಿಸಿ ಹೇಳಿದ್ದರು. ‘ಏನಿದು, ಶರಣತತ್ವ ಎಲ್ಲ ಮರೆತು ಮತ್ತೊಂದು ಬ್ರಾಹ್ಮಿನಿಕಲ್ ಜಾತಿಯಾಗಿರುವ ಲಿಂಗಾಯತರ ಬಗೆಗೆ ಕಮ್ಯುನಿಸ್ಟರಾಗಿ ಹೀಗೆ ಬರೆದಿರುವಿರಲ್ಲ, ಒಬ್ಬ ಮಹಿಳೆಯಾಗಿ ನಿಮ್ಮ ನಿಲುವಿನ ಬಗೆಗೆ ನನಗೆ ತುಂಬ ಕುತೂಹಲವಿತ್ತು’ ಎಂದು ಲಿಂಗಾಯತ ಧರ್ಮ ಪ್ರತಿಪಾದನೆ ಕುರಿತು ಅನುಮಾನ ತೋರಿಸಿದ್ದೆ. ಸಂಯಮದಿಂದ ನನ್ನ ಸಂಶಯಗಳನ್ನೆಲ್ಲ ಕೇಳಿಕೊಂಡು, ಕೆಲವನ್ನು ಒಪ್ಪಿ, ಮತ್ತೆ ಕೆಲವನ್ನು ಭೇಟಿಯಾದಾಗ ವಿವರವಾಗಿ ಮಾತಾಡುವ ಎಂದಿದ್ದರು. ಕೂದಲನ್ನು ಬಿಳಿಯಾಗಿಸಿದಾಗ, ‘ಐ ದೋಂಟ್ ವಾಂಟ್ ಟು ಡೈ. (ಬಣ್ಣ ಹಚ್ಚಲು ಇಷ್ಟವಿಲ್ಲ). ಗ್ರೇಸ್‌ಫುಲಿ ನನ್ನ ವಯಸ್ಸನ್ನು ಒಪ್ಪಿಕೊಂಡಿರುವೆ’ ಎಂದಿದ್ದರು. ಕೆಲಸಂಚಿಕೆಗಳ ಶಬ್ದ ಬಳಕೆ ಬಗೆಗೆ ತಕರಾರೆತ್ತಿದಾಗ, ‘ಅವಕ್ಕೆ ಕೆಪ್ಪು. ಮೃದು ಭಾಷೆಯಲ್ಲಿ ಹೇಳಿದರೆ ಲಾಲಿ ಹಾಡಿನಂತೆ ಕೇಳಿಸೋ ಚಾನ್ಸಿದೆ’ ಎಂದು ನಕ್ಕಿದ್ದರು. ಗೌರಿ ಬಳಿ ಹೀಗೆಲ್ಲ ಚರ್ಚಿಸಿದ್ದ ಸಂಗತಿಗಳನ್ನು ಎಷ್ಟೋ ಪ್ರಗತಿಪರರ ಬಳಿ ಆಡಿದರೆ ಒಂದೇಟಿಗೆ ನನಗೆ ‘ಚೆಡ್ಡಿ’ ತೊಡಿಸಿಬಿಡುತ್ತಾರೆ. ಅಥವಾ ‘ಹಾಗಾದ್ರೆ ಈ ಸಲ ನಿಂ ವೋಟು ಬಿಜೆಪಿಗಾ?’ ಎಂದು ಚುಚ್ಚುತ್ತಾರೆ. ಸಂವಾದಕ್ಕೆ ತಮ್ಮ ಕಿಟಕಿ, ಬಾಗಿಲು, ಮನಸುಗಳ ಮುಚ್ಚಿ ಕೂತಿರುವ ಅಂಥವರ ನಡುವೆ ಒಬ್ಬ ಚಳುವಳಿಕಾರ್ತಿಯಾಗಿ ಗೌರಿ ಮಾಗಿದ್ದರು.

ಸಾಮಾಜಿಕ ಹೋರಾಟಗಳಿಗೆ, ಅದರಲ್ಲೂ ವಿಶೇಷವಾಗಿ ನಕ್ಸಲ್ ಚಳುವಳಿಗೆ ಹೆಣ್ತನದ ಟಚ್ ಕೊಟ್ಟವರು ಗೌರಿ. ಸಾಕೇತ್ ರಾಜನ್, ಪಾರ್ವತಿ-ಹಾಜಿಮಾ ಮತ್ತಿತರ ಅಮೂಲ್ಯ ಜೀವಗಳ ಹತ್ಯೆ ಅವರನ್ನು ಎಷ್ಟು ಅಲುಗಾಡಿಸಿತೆಂದರೆ ಭೂಗತರಾಗಿದ್ದ ಹೋರಾಟಗಾರರು ಮತ್ತೆ ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳುವಂತೆ ಮಾಡಲು ಸಾಕಷ್ಟು ಶ್ರಮ ವಹಿಸಿದರು. ಬಹುಶಃ ಕರ್ನಾಟಕದ ನಕ್ಸಲ್ ಹೋರಾಟವು ಜನಪರ ಹೋರಾಟವಾಗುವುದರಲ್ಲಿ; ಇವತ್ತಿನಷ್ಟು ಅಹಿಂಸಾತ್ಮಕವಾಗಿ, ಕ್ರಿಯಾಶೀಲವಾಗಿ ಇರುವುದರಲ್ಲಿ ಗೌರಿ ಅಕ್ಕನ ಪಾತ್ರ ದೊಡ್ಡದಿದೆ.


ಕಾಲಕ್ರಮೇಣ ಕೆಲವು ಚಳುವಳಿಕಾರರಲ್ಲಿ ಅಹಮು ತುಂಬಿಕೊಳ್ಳುತ್ತದೆ, ಚಳುವಳಿಯಲ್ಲೂ ಅಹಮು ಬೆಳೆಯುತ್ತದೆ. ಅಹಂ ನಿರಸನಕ್ಕಿರುವ ದಾರಿ ತಮ್ಮ ಪಕ್ಷ-ಸಿದ್ಧಾಂತ-ಸಂಘಟನೆಯ ಆಚೆಗೂ ನಿಂತು ಸಮಷ್ಟಿಯ ಒಳಿತನ್ನು ಗ್ರಹಿಸುವುದು. ಇದಕ್ಕೆ ಗೌರಿ ಲಂಕೇಶ್ ಒಳ್ಳೆಯ ಉದಾಹರಣೆಯಾಗತೊಡಗಿದ್ದರು. ನಕ್ಸಲ್ ಹೋರಾಟಗಾರರ ಪರವಾಗಿದ್ದದ್ದಕ್ಕೆ, ಕಮ್ಯುನಿಸ್ಟರಾದದ್ದಕ್ಕೆ ಅನುಮಾನ-ಬೈಗುಳ-ಟೀಕೆ-ವಿಮರ್ಶೆಯ ಮಳೆ ಸುರಿದಾಗಲೂ ದಮನಿತ ಸಮುದಾಯ-ಸಂಘಟನೆ-ಸೂಕ್ಷ್ಮ ಮನಸುಗಳ ಒಡನಾಡಿಯಾಗಿದ್ದರು. ಕೆಂಪು, ನೀಲಿ ಬಿಳಿ ಎಂದು ಬಣ್ಣಗಳಲ್ಲಿ; ಅದರ ಶೇಡ್‌ಗಳಲ್ಲಿ ಜನಪರ ಚಳುವಳಿಗಳು ಹಂಚಿಹೋಗಿರುವುದನ್ನು ಕೊನೆಗೊಳಿಸಲು; ಐಕ್ಯ ಹೋರಾಟವನ್ನು ವಾಸ್ತವಗೊಳಿಸಲು ನಿರಂತರ ಪ್ರಯತ್ನ ನಡೆಸಿದ್ದರು. ಸೈದ್ಧಾಂತಿಕ ಗೋಡೆಗಳನ್ನೆಲ್ಲ ಮೀರಿ ಮಾನವ ತತ್ವದ ಕಡೆಗೆ ಚಲಿಸಲು ಯತ್ನಿಸುತ್ತಿದ್ದರು.

ಅವರ ಭೌತಿಕ ವಯಸು ೫೫ ಆಗಿತ್ತು. ಆದರೆ ಜೈವಿಕ ವಯಸು ಅದರ ಎರಡು ಪಟ್ಟಾಗಿರಬಹುದು. ಒಂದು ಕಾಲಮಾನದಲ್ಲಿ ಎರಡು ಬದುಕುಗಳ ಬದುಕಿದ ತೀವ್ರವಾದಿ ಗೌರಿ. ಕಡಿಮೆ ನಿದ್ರೆ, ಸೇದಿ ಬಿಸುಡುತ್ತಿದ್ದ ಅಸಂಖ್ಯ ಸಿಗರೇಟುಗಳಿಂದ ಕಾಲವನ್ನು ಹೆಚ್ಚುವರಿಯಾಗಿ ಕಡ ಪಡೆದಿದ್ದರೇ? ಗೊತ್ತಿಲ್ಲ. ಈಗ ಎಲ್ಲರ ನೆನಪುಗಳಿಂದ ಗೌರಿ ಎದ್ದೆದ್ದು ಬರುವಾಗ ಇರಬಹುದೆನಿಸುತ್ತಿದೆ.

ಪತ್ರಕರ್ತರು, ಹೋರಾಟಗಾರರು, ಸಾಹಿತಿಗಳು, ಸೂಕ್ಷ್ಮಜ್ಞ ರಾಜಕಾರಣಿಗಳ ಸಂಗಾತಿಯಾಗಿದ್ದ ಗೌರಿ, ಸಾವಿರಾರು ತರುಣ ತರುಣಿಯರ, ಸೂಕ್ಷ್ಮ ಮನಸುಗಳ ನೆನಪಿನಲ್ಲಿ ದಾಖಲಾಗಿದ್ದಾರೆ. ನಿಜಾರ್ಥದಲ್ಲಿ ಸಾವನ್ನು ಗೆದ್ದಿದ್ದಾರೆ. ಆದರೆ ಅದರ ನಡುವೆಯೇ, ‘ನಮ್ಮನೆಯಲ್ಲಿ ಇವತ್ತು ಊಟಕ್ಕೆ ಹೋಳಿಗೆ’ ಎಂದು ಗೌರಿ ಸಾವನ್ನು ಸಂಭ್ರಮಿಸುತ್ತಿರುವ ಸಂಸ್ಕಾರವಂತರೂ ನಮ್ಮ ನಡುವಿದ್ದಾರೆ. ಅವರ ಮೇಲೆ ಇಲ್ಲಸಲ್ಲದ ಆಪಾದನೆ ಹೊರಿಸಿ, ಎಲ್ಲ ತಾವೇ ಕಂಡವರಂತೆ ಬರೆದು, ತಮ್ಮ ಮಾನ ಕಾಪಾಡಿಕೊಳ್ಳುತ್ತಿರುವ ನಿರ್ಬುದ್ಧಿಜೀವಿಗಳಿದ್ದಾರೆ. ‘ಗೌರಿಯ ಪಿಂಡದ ಅಗುಳಿಗೆ ಮುತ್ತುತ್ತಿವೆ ವಿಚಾರವಾದಿ ಕಾಗೆಗಳು’ ಎಂದು ಬರೆವ ಅವಿಚಾರವಾದಿಗಳಿದ್ದಾರೆ.

ಆ ಕತ್ತಲ ಮನಸುಗಳಲಿಷ್ಟು ಬೆಳಕು ತುಂಬಲಿ, ‘ನಾವೂ ಗೌರಿಯೇ’ ಎಂದು ಸಾರಿ ಹೇಳುತ್ತಿರುವ ಸಾವಿರಾರು ಎಳೆಯ ಹೃದಯಗಳೂ ಇವೆ. ಅವರ ದನಿಗಳಲ್ಲಿ ನಮ್ಮ ನಾಳಿನ ಸಮಾನತೆಯ, ಬಹುತ್ವದ ಕನಸುಗಳು ಮೊಳಕೆಯೊಡೆಯುತ್ತಿವೆ..

***

ಏನೇ ಸಮಾಧಾನ ಹೇಳಿಕೊಂಡರೂ, ಸಾವು ಸಾವೇ. ಅವರನ್ನು ಕಳೆದುಕೊಂಡಿದ್ದು ದೊಡ್ಡ ನಷ್ಟವೇ. ಚಳುವಳಿಗಾರರ ಅಂತರಾಳದ ಮಾತುಗಳಿಗೆ ಕಿವಿಯಾಗಿದ್ದ ಒಂದು ಸ್ಪೇಸ್ ಕಡಿಮೆಯಾಗಿದೆ. ಹೀಗಿರುತ್ತ ಹೋರಾಟಗಾರರ ಮೂಲಧ್ಯೇಯಗಳಾದ ೩ಡಿ - ಡೆಮಾಕ್ರಸಿ, ಡೈವರ್ಸಿಟಿ ಮತ್ತು ಡಿಸೆಂಟ್ ಅನ್ನು ಗೌರವಿಸುವುದು; ಮೌನವಾಗಿರದೇ ಅನ್ಯಾಯವೆನಿಸಿದ್ದರ ವಿರುದ್ಧ ಬರಹ-ಹೋರಾಟ ನಡೆಸುವುದು ಗೌರಿ ಅಕ್ಕನಿಗೆ ತೋರಬಹುದಾದ ನಿಜವಾದ ಗೌರವವಾಗಿದೆ.

ಕೆಂಪಾದವೋ ಎಲ್ಲಾ ಕೆಂಪಾದವೋ..
ಹಸುರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ
ನಿಮ್ಮ ನೆತ್ತರ ಹೀರಿಕೊಂಡು ಕೆಂಪಾದವು..
ಗೌರಿ ಅಕ್ಕಾ, ನಿನಗಿದು ಪ್ರೀತಿಯ ಸಲಾಮು..





Tuesday, 29 August 2017

ಮೂರು ಕವಿತೆಗಳು





(ಅಂತರ್ಜಾಲ ಚಿತ್ರ) 

ಲೇಡೀಸ್ ವೆಹಿಕಲ್


ಮಾರಲು ಇಷ್ಟವಿಲ್ಲ ಖರೆ,
ಹಾಗಂತ ಎಷ್ಟು ಕಾಲ ಇಟ್ಟುಕೊಳುವುದು
ಎಂಬ ಸಬೂಬಿಗೆ
ವರ್ಷಗಟ್ಟಲೆ ಓಡಿಸಿದ ನನ್ನ ಕಾರು
ಹರಾಜು ಕಟ್ಟೆಯೇರಿತು.
ದಾಖಲೆಯ ಯಜಮಾನ ಇವನು
ಹಾದಿಬೀದಿ ಓಡಿಸಿದವಳು ನಾನು

ಕೊಡುವ ಸುದ್ದಿ ಹೊರಹಾಕಿದ್ದೆ ಶುರು
ತಾ ನಾ ಎಂದು ಓಡೋಡಿ ಬಂದರು
ಗಿರಾಕಿ, ಏಜಂಟರು.
ಅರೆರೆ! ಹಳೆಯ ಕಾರಿಗೆ ಇಷ್ಟು ಕಿಮ್ಮತ್ತು!?

‘ಲೇಡೀಸ್ ವೆಹಿಕಲ್ ಅಲ್ವೆ ಮೇಡಂ?
ತೊಳದು ಒರಸಿ ವಯನಾಗಿ ಇಟ್ಕೋತಾರೆ
ಗುದ್ದಿರಲ್ಲ, ಉರುಳಿಸಿರಲ್ಲ,
ಹುಚ್ಚುಚ್ಚಾರ ಓಡಿಸಿರಲ್ಲ, ಅದಕ್ಕೇ
ಸೆಕೆಂಡ್ ಹ್ಯಾಂಡ್ ಆದ್ರೂ ಡಿಮ್ಯಾಂಡು..’
ಮಹಾ ರಹಸ್ಯ ಬಿಡಿಸಿದವನಂತೆ
ಕಿಸಕ್ಕನೆ ನಕ್ಕಿದ್ದ ಏಜೆಂಟು.
ವಿಲೇವಾರಿಯಾಗೇಬಿಟ್ಟಿತು ಹಳೆ ಮಾಡೆಲು.

ಇವನ ಮೀಸೆ ಹಿಂದೆ ಒಂದು ವಾರೆ ನಗೆ..
‘ನಿನ ಕಾಲು ಕ್ಲಚ್ ಮೇಲಿಂದ ಇಳಿದಿದ್ದು
ನೋಡೇ ಇಲ್ಲ ನಾನು.
ಕ್ಲಚ್‌ಪ್ಲೇಟ್ ಎಕ್ಕುಟ್ಟಿ ಹೋದ ಹಾಗಿತ್ತು?
ಯಾರೋ ಬಕರಾನೆ ಇರಬೇಕು,
ಲೇಡೀಸ್ ವೆಹಿಕಲ್ ಅಂತ
ಮೇಲೆ ಬಿದ್ದು ತಗಂಡು ಹೋದವನು.
ಪಾಪ ಅವನಿಗೇನು ಗೊತ್ತು?
ಹೆಂಗಸರ ಡ್ರೈವಿಂಗ್ ಥೇಟ್
ಅವರ ಮನಸಿನ ಹಾಗೆ ಎಂದು?
ಎಲ್ಲೆಂದರಲಿ ಕಾರು
ಸಾಕೆಂದ ಕೂಡಲೇ ಗಕ್ಕೆಂದು ನಿಲ್ಲಬೇಕು
ಬೇಕೆಂದ ಕೂಡಲೇ ಚಾಲೂ ಆಗಬೇಕು
ನಿಂತಿರಬೇಕು, ಆದರೆ ನಿಂತೇ ಇರಬಾರದು
ನಡೆಯುತ್ತಿರಬೇಕು ಆದರೆ ಓಡಬಾರದು..’

ಹೌದು ಮಾರಾಯನೆ,
ಸದ್ಯ, ಏಜೆಂಟನೆದುರು ವ್ಯಾಖ್ಯಾನಗಳ ಹರಡದೆ
ಮುಚ್ಚಿಟ್ಟು ಗಾಡಿಯ ಗುಟ್ಟು, ಪುಣ್ಯ ಕಟ್ಟಿಕೊಂಡೆ.
ಹೌದು ಕಣೋ, ಎಚ್ಚೆತ್ತ ಹೆಣ್ತನವೇ ಹಾಗೆ
ಎಷ್ಟೊತ್ತಿಗೆ ಬ್ರೇಕ್ ತುಳಿಯಬೇಕಾಗುತ್ತೋ
ಯಾವಾಗ ಗೇರು ಬದಲಿಸಬೇಕಾಗುತ್ತೋ
ಸಂಸಾರವೆಂಬ ಕ್ಲಚ್ ಮೇಲೆ
ಕಾಲಿಟ್ಟವರಿಗಷ್ಟೇ ಗೊತ್ತು ಧಗೆ

ಬೂದಿ ಮಾತ್ರ ಬಲ್ಲದು ಬೇಯುವ ಬೇಗೆ.


ಕ್ರೌರ್ಯದ ನಸೀಬಿನಲ್ಲಿ


ಎಷ್ಟು ಒತ್ತಿಕೊಂಡರೇನು
ಬಿಗಿದ ಮೊಲೆ ಸಡಿಲಾಗಬಹುದೆ?
ಮಕಾಡೆ ನೆಲಕಂಟಿ ಮಲಗಿದರೆ
ಒಡಲ ಉರಿ ತಂಪಾಗಬಹುದೆ?
ಸೋರಿ ಉಕ್ಕಿ ಹೊರಚೆಲ್ಲಿದರೂನು
ತನ್ನ ಮೊಲೆಹಾಲ ತಾಯಿ ತಾ ಕುಡಿಯಬಹುದೆ?

ನಿನ್ನ ಕಂಗಳ ಖಾಲಿತನ
ಈಟಿಯಾಗಿ ಇರಿಯುತ್ತ
ಮೈದಡವಿ ನಾನಾಡುವ ಮಾತು
ಹುಸಿಯೆನಿಸುತಿರುವ ಈ ಹೊತ್ತು
ತಾಯೇ, ಮನ್ನಿಸು..
ತೊಟ್ಟಿಲು ಕಟ್ಟಲಾಗದ ಬಡವಿ ನಾನು
ಮಣ್ಣಲಿಟ್ಟು ಬಂದೆ ನಿನ್ನ ಹಿಳ್ಳೆಗಳನು

ಕ್ರೌರ್ಯದ ನಸೀಬಿನಲ್ಲಿ
ಕಂಡವರ ರಕ್ತ ಹರಿಸಿ
ಕೊಲುವುದಷ್ಟೇ ಬರೆದಿದೆ.
ನೋವು ತಿಂದರೂ ಪೊರೆದು
ನೇರೂಪಗೊಳಿಸುವ ತಾಕತ್ತು
ಹೆಣ್ಣು ಮನಸಿಗಷ್ಟೇ ಒಲಿದಿದೆ.

ಸುಡುವ ಬೆಂಕಿಯೋ,
ಕಣ್ಣೀರು ಬರಿಸುವ ಹೊಗೆಯೋ
ಒಲೆದಂಡೆ ಬೆಚ್ಚಗಿದೆ
ಮರಳಿ ಬಾ ಪ್ರಿಯ ಬೆಕ್ಕೇ,
ಅಷ್ಟು ಹಾಲು ಕುಡಿ
ಬರಲಿ ನಾಳೆಗಷ್ಟು ಕನಸು ಕೂಡಿ..

(ಮೋಳ ಬೆಕ್ಕು ನಮ್ಮ ಬೆಕ್ಕಿನ ಮೂರು ಹೂ ಮರಿಗಳ ಕತ್ತು ಮುರಿದು ಕೊಂದು ಹಾಕಿತು. ಹಾಲು ಬಿಗಿದು ಸೋರುವ ಮೊಲೆಗಳ ನೆಕ್ಕಿಕೊಳಲಾರದೆ, ನೆಲಕೊತ್ತಿ ಮಲಗುತ್ತಾ, ಮರಿಗಳ ಕರೆಯುತ್ತಾ ಬೆಕ್ಕಮ್ಮ ವಾರವಿಡೀ ಅಲೆಯಿತು..)


ಪಟ್ಟೆ ಹುಲಿ


ನಾನೇ ಅಳತೆ ನೋಡಿ ಆಯ್ದುಕೊಂಡದ್ದು
ಕಚ್ಚಿ ಗಾಯಗೊಳಿಸಿ ನೋಯಿಸುವಾಗ
ಹೇಗೆ ಸುಮ್ಮನೆ ನಡೆಯುವುದು?
ನೊಂದ ನೋವ ಬಲ್ಲರೆ ನೋಯಿಸುವವರು?

ನಿನ್ನ ಸಿಟ್ಟಿಗೆ
ಹಾರ್ಮೋನು, ಗಾದೆ, ತತ್ವ, ಅಹಮು
ಎಲ್ಲದರ ಬೆಂಬಲವಿದೆ
ನನ್ನ ಸೋಲಿಗೆ
ತಾಯ್ತನದ ನೆವ ಮಾತ್ರವಿದೆ

ಗರ್ಭ ಗವಿಯೊಳಗಿದ್ದ
ಪಟ್ಟೆ ಹುಲಿ ಸಿಟ್ಟನ್ನು
ಎಂದೋ ಹೆತ್ತು ಹಗುರವಾಗಿದ್ದೇನೆ
ಅದೀಗ ಅನಾಥ ತಿರುಗುತ್ತಿದೆ
ಶಬ್ದ ಗೋರಿಗಳ ನಡುವೆ...

ಇನ್ನು ಬಸುರಾಗಲು ಸಾಧ್ಯವಿಲ್ಲ
ನನ್ನ ಸಿಟ್ಟಿಗೂ

ನಿನ್ನದಕ್ಕೂ..

(line drawings by Krishna Giliyar)


Wednesday, 26 July 2017

ಹಕ್ಕಿಪಿಕ್ಕಿ ಸಮುದಾಯ ಕುರಿತು ‘ಸಿಕ್ಕಿದ್ರೆ ಶಿಕಾರಿ, ಇಲ್ದಿದ್ರೆ ಭಿಕಾರಿ’






ಹೆಸರು ಕೇಳಿ ಮಾತ್ರ ಗೊತ್ತಿದ್ದ ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋನಲ್ಲಿ, ಶತದಿನೋತ್ಸವ-ಆರು ತಿಂಗಳು-ಒಂದು ವರ್ಷ ಓಡಿದ ಸಿನಿಮಾ ಫಲಕಗಳ ನಡುವೆ ಕುಳಿತು ಒಂದು ಸಾಕ್ಷ್ಯ ಚಿತ್ರ ನೋಡಿದೆವು.

ಯಾರ ಕುರಿತು ನಾವು ಕಣ್ಣಿದ್ದೂ ಕುರುಡರಾಗಿದ್ದೇವೋ, ಕಿವಿಯಿದ್ದೂ ಕಿವುಡರಾಗಿದ್ದೇವೋ ಅಂತಹವರ ಕುರಿತ ಚಿತ್ರವದು. ಕಳೆದ ೨೫ ವರ್ಷಗಳಿಂದ ಹಕ್ಕಿಪಿಕ್ಕಿ ಸಮುದಾಯದೊಡನೆ, ಮಹಿಳಾ ಸಂಘಟನೆಗಳೊಡನೆ ಎಲೆಯ ಮರೆಯ ಕಾಯಂತೆ ಕೆಲಸ ಮಾಡುತ್ತಿರುವ ಅಂತಃಕರಣದ ಗೆಳತಿ ಮಧು ಭೂಷಣ್ ಹಾಗೂ ಅಲೆಮಾರಿ ಬುಡಕಟ್ಟು ಸಮುದಾಯಗಳ ಬದುಕನ್ನು ಸಾಕ್ಷ್ಯಚಿತ್ರಗಳಾಗಿ ಸೆರೆ ಹಿಡಿಯುವ ಸಮರ್ಥ ನಿರ್ದೇಶಕ ವಿನೋದ್ ರಾಜಾ - ಇವರಿಬ್ಬರ ಬದ್ಧತೆಯಿಂದ ಹಕ್ಕಿಪಿಕ್ಕಿ ಎಂಬ ಅರೆ ಅಲೆಮಾರಿ ಸಮುದಾಯ ಕುರಿತ ಸಾಕ್ಷ್ಯಚಿತ್ರ ‘ಸಿಕ್ಕಿದ್ರೆ ಶಿಕಾರಿ, ಇಲ್ದಿದ್ರೆ ಭಿಕಾರಿ’ ರೂಪುಗೊಂಡಿದೆ. ಈ ಚಿತ್ರದ ಇನ್ನೊಂದು ವಿಶೇಷ ಅದೇ ಸಮುದಾಯದವರಾಗಿ ಶಿಕ್ಷಣ ಪಡೆದು ಈಗ ಜೋಗದಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿರುವ ಕುಮುದಾ ಅವರ ಭಾಗವಹಿಸುವಿಕೆ.

ಹಕ್ಕಿಪಿಕ್ಕಿ ಸಮುದಾಯದವರನ್ನು ನೀವು ಖಂಡಿತಾ ನೋಡಿರುತ್ತೀರಿ. ಸಂತೆ-ಜಾತ್ರೆ-ತೇರುಪೇಟೆಯಲ್ಲಿ ಒಂದಷ್ಟು ಮಾಸಲು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಬಣ್ಣದ ಎಣ್ಣೆಯಿಟ್ಟುಕೊಂಡು ನೋವುಗಳೇ ತಮ್ಮ ಬಲೆಗೆ ಬಂದು ಬೀಳುವಂತೆ ‘ಹಳೇನೋವು-ಹೊಸನೋವು-ಸಂದುನೋವು-ಮಾಯದ ನೋವುಗಳಿಗೆ ಮಾಲಿಶ್’ ಎಂದು ಕೂಗಿಕರೆಯುವ ವಿಶಿಷ್ಟ ಚಹರೆಯ ಜನರನ್ನು ನೋಡಿರುತ್ತೀರಿ. ನಿಮ್ಮ ಊರ ಬೀದಿಗಳಲ್ಲಿ ತಮ್ಮದೇ ಆದ ರಾಗ-ಧಾಟಿ-ಶೃತಿಯಲ್ಲಿ ‘ಹಳೇ ಕೂದ್ಲಾ, ಕಡ್ಡಿ, ಪಿನ್ನಾ, ಬಾಚಣಿಕೆ, ಟಿಕ್ಲೀ..’ ಎಂದು ಕೂಗುತ್ತ ಸಾಗುವ ಕೃಶ ಮಹಿಳೆಯನ್ನು ನೋಡಿರುತ್ತೀರಿ. ಹೂವಿನ ಸರ, ಮಣಿಸರ, ಮಣಿಯುಂಗುರ, ವುಲನ್-ಮಕಮಲ್ಲಿನ ನಾನಾ ಪ್ರಾಣಿಪಕ್ಷಿಗಳ ಗೊಂಬೆಗಳನ್ನು ರಸ್ತೆಬದಿ ರಾಶಿಹಾಕಿ ಮಾರುವ ಜನರನ್ನು ಖಂಡಿತ ನೋಡಿರುತ್ತೀರಿ.

ಇಪ್ಪತ್ನಾಲ್ಕು ವರ್ಷಗಳ ಹಳ್ಳಿಯ ವೈದ್ಯಕೀಯ ಪ್ರಾಕ್ಟೀಸಿನಲ್ಲಿ ನಾನು ಹಕ್ಕಿಪಿಕ್ಕಿಗಳಿಗೆ ನಾನಾ ರೀತಿ ಮುಖಾಮುಖಿಯಾಗಿರುವೆ. ಸಣ್ಣ ಪ್ರಚೋದನೆಗೂ ನಿಷ್ಕಳಂಕವಾಗಿ ಎದೆಯಾಳದಿಂದ ಬರುವ ಅವರ ನಗುವಿಗೆ ವಿನೀತಳಾಗಿದ್ದೇನೆ. ಕೆಲವು ಆರೋಗ್ಯ ಮಾಹಿತಿಗಳನ್ನು ಅವರಿಗೆ ದಾಟಿಸಲಾಗದೇ ಸೋಲೊಪ್ಪಿಕೊಂಡಿದ್ದೇನೆ. ಸರ್ಕಾರಿ ಸವಲತ್ತುಗಳ ಬಗೆಗೆ ಅವರಿಗೆ ತಿಳಿದಿದೆಯೋ ಇಲ್ಲವೋ? ತಲುಪಿವೆಯೋ ಇಲ್ಲವೋ? ಎಂದು ನಮ್ಮೂರ ಗುಡ್ಡಗಳ ಇಳಿಜಾರಲ್ಲಿ ಟೆಂಟು ಕಟ್ಟಿಕೊಂಡವರ ಬಳಿ ಹೋಗಿ ಕೇಳಿದರೆ ಹೆಂಗಸರು ಮುಖ ತುಂಬ ಪ್ರಶ್ನೆ ತುಂಬಿಕೊಂಡು ನನಗೇ ಅವನ್ನು ಹಿಂದಿರುಗಿಸಿದರು. ತೂರಾಡುತ್ತಿದ್ದ ಗಂಡಸರು ತಮ್ಮ ಬಿಡಾರದ ಬಳಿ ನನ್ನ ಕಂಡದ್ದಕ್ಕೆ ಸಂದಿ, ಹಳು ಹೊಕ್ಕು ಮಾಯವಾದರು. ಇನ್ನೂ ಅವರ ಜಗತ್ತಿನೊಳಗೆ ಸುಲಭದ ಪ್ರವೇಶ ಸಿಗದೆ ಹೊರಗುಳಿದಿದ್ದೇನೆ.

ಕಣ್ಣೆದುರು ಕಾಣುವ ಎಷ್ಟೋ ಹಕ್ಕಿಗಳ ಬದುಕಿನ ಹಾಗೇ ಅಲೆಮಾರಿ ಬದುಕೂ ನಮ್ಮ ಮಟ್ಟಿಗೆ ಅನಾಮಿಕ, ಅದೃಶ್ಯ. ಅವರು ಬರುವುದಾಗಲೀ, ಇರುವುದಾಗಲೀ ನಮ್ಮ ಗಮನಕ್ಕೇ ಬಂದಿರುವುದಿಲ್ಲ. ಆಗೀಗ ಕಣ್ಣಿಗೆ ಬಿದ್ದು ಮರೆಯಾಗುವವರ ಭಾಷೆ ಯಾವುದೋ, ಹಾಡುಹಸೆ ಯಾವುವೋ, ದೇವರುಗಳು ಯಾರೋ, ದಿನನಿತ್ಯದ ಬದುಕು ಹೇಗೆ ಸಾಗಿಸುವರೋ, ಕ್ರಿಮಿನಲ್ ಟ್ರೈಬ್ಸ್ ಆಕ್ಟ್ ೧೮೭೧ರ ಪ್ರಕಾರ ಬ್ರಿಟಿಷರಿಂದ ಅಪರಾಧಿ ಬುಡಕಟ್ಟು ಎಂಬ ತಪ್ಪು ಶಿರೋನಾಮೆಗೆ ಒಳಗಾಗಿ ಎಷ್ಟು ಕಷ್ಟಪಟ್ಟರೋ, ತುತ್ತಿನ ಚೀಲ ತುಂಬಿಸಲು ಏನೇನು ಮಾಡಿದರೋ - ಇವೆಲ್ಲದರ ಬಗೆಗೆ ನಮಗೆ ಏನೂ ಗೊತ್ತಿರುವುದಿಲ್ಲ. ಈ ಜನ ಯಾರು, ಇಂತಹ ವಸ್ತುಗಳ ವ್ಯಾಪಾರದ ಲಾಭದಿಂದ ಹೇಗೆ ಬದುಕು ಸಾಗಿಸುತ್ತಾರೆ ಎಂದು ಮನೆಯೆದುರು ಹಾದು ಹೋದಾಗಲೂ ನಾವು ಯೋಚಿಸಿರುವುದಿಲ್ಲ. ‘ಸಿಕ್ಕಿದ್ರೆ ಶಿಕಾರಿ, ಇಲ್ದಿದ್ರೆ ಭಿಕಾರಿ’ಯಂತಹ ಸಾಕ್ಷ್ಯಚಿತ್ರಗಳು ಅವರ ಬದುಕುಬವಣೆ ಕುರಿತು ನಮ್ಮ ಕಣ್ತೆರೆಸಬೇಕಾಗಿದೆ.

ಅದಕ್ಕೇ ಈ ಮತ್ತು ಇಂತಹ ಸಾಕ್ಷ್ಯಚಿತ್ರಗಳು ಮೌಲಿಕವಾದವು ಎಂದು ಅನಿಸುತ್ತಿದೆ.



ವಗ್ರಿ ಬೋಳಿ ಎಂಬ ಭಾಷೆ ಮಾತನಾಡುವ ಹಕ್ಕಿಪಿಕ್ಕಿಗಳು ಬಗ್ರಿ, ಚಿಗರಿ ಬೇಟೆಗಾರ, ಗುವ್ವಾಲೊಳ್ಳು, ಹರಣ್ ಶಿಕಾರಿ, ಮೇಲ್ ಶಿಕಾರಿ ಮುಂತಾದ ಹೆಸರುಗಳಿಂದ ಕರೆಯಲ್ಪಡುತ್ತಾರೆ. ಹೆಸರೇ ಹೇಳುವಂತೆ ಅವರದು ಶಿಕಾರಿಯನ್ನೇ ನೆಚ್ಚಿಕೊಂಡಿದ್ದ ಪಶ್ಚಿಮ ಭಾರತದ ಸಮುದಾಯ. ತಮ್ಮ ದೊರೆ ರಾಣಾ ಪ್ರತಾಪನನ್ನು ಮೊಘಲ್ ದೊರೆ ಸೋಲಿಸಿದ ಬಳಿಕ ಕೆಲವರು ಪಾಕಿಸ್ತಾನದ ಕಡೆ ವಲಸೆ ಹೋದರೆ, ಬಹುಪಾಲು ಜನ ದಕ್ಷಿಣದ ಕಡೆಗೆ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ಕೇರಳಗಳಲ್ಲಿ ಚದುರಿದರು. ಕರ್ನಾಟಕದ ದಕ್ಷಿಣ ಭಾಗದಲ್ಲಿ ಹೆಚ್ಚು ಹರಡಿಕೊಂಡರು. ಈಗಲೂ ದಾದಾಜಿ, ಜೋಗನ್, ವಿಖ್ಲಿ, ನೋಕೊರ್, ದುರ‍್ಗಾ-ಕಲ್ಕಾ, ಚಾಮುಂಡೇಶ್ವರಿ ಮೊದಲಾದ ದೇವರುಗಳನ್ನು ತಮ್ಮ ಟೆಂಟು, ವಸ್ತುಗಳೊಡನೆ ಹೊತ್ತು ರಾಜ್ಯ-ದೇಶದ ಗಡಿದಾಟಿ ಅಲೆಯುತ್ತಾರೆ. ಅಲೆಮಾರಿತನದ ಕಾರಣವಾಗಿ ತಮ್ಮ ಭಾಷೆಯಲ್ಲದೆ ಕನ್ನಡ, ಹಿಂದಿ, ತಮಿಳು, ಮಲೆಯಾಳಿ, ತೆಲುಗು, ಕೊಂಕಣಿ ಮುಂತಾಗಿ ಹಲವು ಭಾಷೆಗಳ ಸುಲಲಿತವಾಗಿ ಮಾತಾಡಲು ಕಲಿತಿದ್ದಾರೆ.



ಈ ಸಾಕ್ಷ್ಯಚಿತ್ರ ದಾಖಲಿಸುವಂತೆ ಹಕ್ಕಿಪಿಕ್ಕಿಗಳ ಹೆಸರುಗಳು ಬಹು ವಿಚಿತ್ರವಾಗಿವೆ. ಕಾಫಿ, ಡಿವಿಷನ್, ಚಾಕೊಲೇಟ್ ಬಾಯಿ, ಇನ್ಸ್‌ಪೆಕ್ಟರ್, ಸಕ್ರೆ, ಹೈಕೋರ್ಟ್, ಡಿವೈಎಸ್ಪಿ, ಎಂಪಿ ಶಂಕರ್, ಜಪಾನ್, ಇಂಗ್ಲಿಷ್, ಪಿಸ್ತೂಲ್, ಸೈಕಲ್ ರಾಣಿ, ಗವರ್ನಮೆಂಟ್, ಶಾದಿ, ಗ್ಲೂಕೋಸ್, ತರ‍್ಟಿ ಸಿಕ್ಸ್ ಇವೆಲ್ಲ ವ್ಯಕ್ತಿಗಳ ಹೆಸರುಗಳು! ಹೆರಿಗೆಯಾದ ಹೊತ್ತಲ್ಲಿ ಯಾವ ವ್ಯಕ್ತಿ, ಸ್ಥಳ, ವಸ್ತುವಿನ ಹೆಸರು ಹೊಸದಾಗಿ ಗಮನ ಸೆಳೆವುದೊ ಆ ಹೆಸರನ್ನು ಮಗುವಿಗಿಡುವವರು ಅವರು. ಕೋರ್ಟ್ ಎಂಬಾತನಿಗೆ ಆ ಹೆಸರು ಬಂದಿದ್ದು ಅವನ ತಾಯ್ತಂದೆಯರ ಟೆಂಟು ಕೋರ್ಟಿನ ಬಳಿಯಿದ್ದಾಗ ಅವ ಹುಟ್ಟಿದ್ದರಿಂದ. ಮೊದಲು ನದಿ-ಬೆಟ್ಟ-ಮರಗಳ ಹೆಸರಿಡುತ್ತಿದ್ದವರು ಇಂತಹ ಚಿತ್ರವಿಚಿತ್ರ ಹೆಸರಿಡಲು ಕಾರಣವಿದೆ. ಹಿರೀಕನೊಬ್ಬ ವಿವರಿಸುವಂತೆ ಅವರದು ‘ಸಿಂಗ್’ ಸರ್‌ನೇಮ್ ಪಡೆದಿದ್ದ ಕ್ಷತ್ರಿಯ ಸಮುದಾಯವಾಗಿತ್ತು. ಆದರೆ ಹೊಸನೆಲದಲ್ಲಿ ನೆಲೆಗೊಳ್ಳಬೇಕಾದ ಪರಿಸ್ಥಿತಿ ಬಂದಾಗ ಯಾವ ನೆಲದ ನೀತಿನಿಯಮ, ಕಾನೂನುಗಳನ್ನೂ ಕೇರ್ ಮಾಡದೆ ಮುಕ್ತವಾಗಿ ತಿರುಗಾಡಿಕೊಂಡಿರುವಂತೆ ಆಯಿತು. ಒಂದೆಡೆ ನೆಲೆ ನಿಲ್ಲದೆ ಊರೂರಿಗೆ ‘ಓಡಿಹೋಗುವ’ವರಾದ್ದರಿಂದ ಸಮಾಜ ಅವರನ್ನು ಕಳ್ಳರೆಂಬಂತೆ ನಡೆಸಿಕೊಂಡಿತು. ಅದರ ಮೇಲೆ ಬ್ರಿಟಿಷರು ಕೊಟ್ಟ ಅಪರಾಧಿ ಬುಡಕಟ್ಟು ಎಂಬ ಕಿರೀಟ ಬೇರೆ. ಹೀಗಿರುವಾಗ ತಮ್ಮ ಕುಲದ ಗುರುತು ಮರೆಸಲು ಬೇರೆಬೇರೆ ಹೆಸರುಗಳು ಅವರಿಗೆ ನೆರವಾಗುತ್ತಿದ್ದವಂತೆ. ಜೊತೆಗೆ ಅಲೆಮಾರಿತನದ ಇತಿಹಾಸವನ್ನು, ಹುಟ್ಟಿದ ಕಾಲ-ಸ್ಥಳದ ಪರಿಚಯವನ್ನು ಆ ಹೆಸರುಗಳು ನೀಡುವುದರಿಂದ ಅಂತಹ ಹೆಸರಿಟ್ಟರಂತೆ.

ಈಗ ಅವರ ಹೆಸರುಗಳು ಬದಲಾಗಿವೆ. ಈಗಿನ ಬಹುತೇಕ ಮಕ್ಕಳು ಟಿವಿ ಸೀರಿಯಲ್‌ಗಳ, ಸಿನಿಮಾ ನಾಯಕನಾಯಕಿಯರು, ರಾಜಕೀಯ ನೇತಾರರ ಹೆಸರು ಹೊತ್ತಿದ್ದಾರೆ.

ಹಕ್ಕಿಪಿಕ್ಕಿಗಳದು ಮಾತೃಪ್ರಧಾನ ಸಮಾಜ. ವರದಕ್ಷಿಣೆ ಇಲ್ಲ, ವಧು ದಕ್ಷಿಣೆ ಇದೆ. ಪೂಜಿಸುವ ದೇವರು ಒಂದೇ ಇರುವ ವಂಶಗಳ ನಡುವೆ ಮದುವೆ ನಿಷಿದ್ಧವಾಗಿದೆ. ಸಮುದಾಯದ ಸ್ವಾಯತ್ತ ಹೆಣ್ಮಕ್ಕಳು ವಸ್ತುಗಳ ತಯಾರಿ, ಮಾರಾಟ, ಹಣಕಾಸು ವ್ಯವಹಾರ ಎಲ್ಲದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಮಹಿಳೆಯರ ಸಣ್ಣಸಣ್ಣ ಗುಂಪುಗಳು ಒಂದೂರಿಂದ ಇನ್ನೊಂದೂರಿಗೆ ಅಲೆಯುತ್ತ ವ್ಯಾಪಾರ ಮಾಡಿ ಬರುತ್ತವೆ.




ಜನಗಣತಿ ಪ್ರಕಾರ ಅವರ ಜನಸಂಖ್ಯೆ ಅಜಮಾಸು ೧೮ ಸಾವಿರ. ಕರ್ನಾಟಕದಲ್ಲಿ ೧೧೦೦೦ ಜನ, ತಮಿಳುನಾಡಿನಲ್ಲಿ ೭೦೦೦, ಆಂಧ್ರದಲ್ಲಿ ೩೦೦, ಪಾಂಡಿಚೆರಿಯಲ್ಲಿ ೧೦೦ ಜನ ಇದ್ದಾರೆ. ಆದರೆ ಈ ಸಂಖ್ಯೆ ಸರಿಯಲ್ಲ ಎಂದೇ ಹಲವರ ಭಾವನೆ. ಕರ್ನಾಟಕದಲ್ಲೇ ೧೮೦೦೦ಕ್ಕಿಂತ ಹೆಚ್ಚು ಜನರಿದ್ದಾರೆ ಎಂದು ಬುಡಕಟ್ಟು ಅಧ್ಯಯನಗಳು ಹೇಳುತ್ತವೆ. ಅವರು ತಮ್ಮನ್ನು ತಾವು ಯಾವ ಧರ್ಮದಲ್ಲೂ ಗುರುತಿಸಿಕೊಳ್ಳದೆ ಪ್ರಕೃತಿಯೇ ಧರ್ಮವಾಗಿ ಬದುಕಿದ್ದರು. ವರ್ಣಧರ್ಮವಂತೂ ಅವರನ್ನು ನಾಲ್ಕು ವರ್ಣಗಳಾಚೆಯ ಪಂಚಮರ ಆಚೆಗೂ ದೂಡಿತ್ತು. ಆದರೆ ಕಾಲ ಬದಲಾಗಿದೆ. ಈಗವರು ಹಿಂದೂತ್ವದ ಮತ್ತು ಕ್ರೈಸ್ತ ಮಿಷನರಿಗಳ ಕೈಯ ದಾಳವಾಗಿದ್ದಾರೆ. ಒಂದು ಮಾಹಿತಿಯಂತೆ ಅವರಲ್ಲಿ ೯೯% ‘ಹಿಂದೂ’ಗಳು, ೧% ಕ್ರೈಸ್ತರು, ಬೆರಳೆಣಿಕೆಯಷ್ಟು ಜನ ಮುಸ್ಲಿಮರು. ಹಲವರು ಬ್ರಹ್ಮಕುಮಾರಿಯರ ಪಂಥ ಪಾಲಿಸುತ್ತಾರೆ.

ಅವರಲ್ಲಿ ಊರೂರು ಸುತ್ತುತ್ತ ತಮ್ಮ ವ್ಯಾಪಾರೀ ಚಾಕಚಕ್ಯತೆಯನ್ನು ಹಳ್ಳಿ-ಕೇರಿಗಳಿಂದ ಹಿಡಿದು ಪರರಾಜ್ಯ, ಪರದೇಶಗಳಿಗೂ ವಿಸ್ತರಿಸಿದವರು ಇದ್ದಾರೆ! ಟಿಬೆಟ್, ಶ್ರೀಲಂಕಾ, ಯೂರೋಪು, ಆಫ್ರಿಕಾ, ದಕ್ಷಿಣ ಅಮೆರಿಕದ ತನಕ ಹೋಗಿ ಕೂದಲು, ತೈಲ, ಮಣಿ, ಬೇರು, ಹುಲಿಯುಗುರು ಮಾರಿ ಬಂದಿದ್ದಾರೆ. ಕೆಲವರು ಚರ್ಚಿನ ವತಿಯಿಂದ ಹೋಗಿಬಂದರೆ ಮತ್ತೆ ಕೆಲವರು ಫಾರಿನ್ ಟೂರಿಸ್ಟುಗಳನ್ನು ಹಿಡಿದು, ಸಾಲಸೋಲ ಮಾಡಿ, ಪಾಸ್‌ಪೋರ್ಟು ವೀಸಾ ಮಾಡಿಸಿಕೊಂಡು ಹೋಗಿಬಂದಿದ್ದಾರೆ. ವಿದೇಶ ತಿರುತಿರುಗಿ ಕೆಲವರ ಪಾಸ್‌ಪೋರ್ಟ್ ಪುಸ್ತಕ ತುಂಬಿ, ನಂತರ ೩-೪ ಪುಸ್ತಕ ತುಂಬಿವೆ! ಭಾಷೆ-ಜನ ಗೊತ್ತಿಲ್ಲದ ದೇಶಗಳಿಗೂ ಹೋಗಿ ವ್ಯಾಪಾರ ಮಾಡಲು ಅವರಿಗಿರುವ ಹುಕಿ, ಧೈರ್ಯ ಅಚ್ಚರಿ ಹುಟ್ಟಿಸುವಂತಿದೆ.

ಅವರ ವ್ಯಾಪಾರಿ ರಹಸ್ಯಗಳಲ್ಲಿ ಕೆಲವನ್ನು ಕೇಳಿ: ರುದ್ರಾಕ್ಷಿ ಒರಿಜಿನಲ್ ಮಣಿಯನ್ನು ಆಭರಣ ಮಾಡುವವರಿಗೆ ಕೊಡುತ್ತಾರಂತೆ, ಯಾಕೆಂದರೆ ಅವರು ಅಸಲಿ ನಕಲಿ ಪತ್ತೆಹಚ್ಚುಬಿಡುತ್ತಾರೆ. ಅದೇ, ನಕಲಿ ರುದ್ರಾಕ್ಷಿಯನ್ನು ಜ್ಯೋತಿಷಿಗಳಿಗೆ ಮಾರುತ್ತಾರಂತೆ! ಕುರಿ-ಆಡು-ಆಕಳ ಗೊರಸನ್ನು ಕೆತ್ತಿ ಅದರಿಂದ ಹುಲಿಯುಗುರು ತಯಾರಿಸುತ್ತಾರಂತೆ! ತಮ್ಮ ಬಳಿ ಯಾರೂ ಸುಳಿಯದಂತೆ ರಕ್ಷಿಸಿಕೊಳ್ಳಲು ಸ್ನಾನ ಮಾಡದೆ ಮೈ ವಾಸನೆ ಸೂಸಲು ಬಿಡುತ್ತಾರಂತೆ!

***

ಸತತ ಚಲಿಸುತ್ತಿದ್ದ, ಇಡಿಯ ವಿಶ್ವವೇ ಮನೆಯಾಗಿದ್ದ ನಿಜ ವಿಶ್ವಮಾನವರು, ನಿಜ ಜಂಗಮರು ಅವರು. ಮನರಂಜನೆ, ವ್ಯಾಪಾರ, ಬೇಟೆ, ಕಲೆ ಮುಂತಾಗಿ ಜನಸಮುದಾಯಗಳ ನಡುವಿನ, ಸಾಮ್ರಾಜ್ಯಗಳ ನಡುವಿನ ಸೇತುವೆಯಾಗಿ; ರಾಜ್ಯಗಳ ಏಳುಬೀಳುಗಳಿಗೆ ಸಾಕ್ಷಿಯಾಗಿ ಇದ್ದವರು. ಸಂಪರ್ಕ ಸಂವಹನ ಸುಲಭವಿಲ್ಲದ ಕಾಲದಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳು ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ಚಲಿಸುತ್ತ ಈ ನೆಲದ ಭಾಷೆ, ಸಂಸ್ಕೃತಿ, ಆಚರಣೆಗಳು ವೈವಿಧ್ಯಮಯವಾಗಿ ರೂಪುಗೊಳ್ಳಲು ಕಾರಣರಾಗಿದ್ದರು.

ಆದರೆ ಈಗ ಆಧುನಿಕತೆ ಹಾಗೂ ಜಾಗತೀಕರಣಗಳು ಭಾರತೀಯ ಸಮಾಜದ ಚಿತ್ರಣವನ್ನು ಆಮೂಲಾಗ್ರ ಬದಲಿಸುತ್ತಿರುವಾಗ ಅಲೆಮಾರಿಗಳ ಪಾರಂಪರಿಕ ಜೀವನ ವಿಧಾನ ಪಲ್ಲಟಗೊಳ್ಳತೊಡಗಿದೆ. ಅಂಚಿನ ಸಮುದಾಯಗಳು ತಬ್ಬಲಿಯಾಗತೊಡಗಿವೆ. ಪ್ರಕೃತಿ-ಅರಣ್ಯವೇ ತಮ್ಮ ಶರೀರವೆಂಬಂತೆ ಸಹಬಾಳ್ವೆಯಿಂದ ಬದುಕಿದ್ದವರಿಗೆ ಅಭಿವೃದ್ಧಿ, ಅರಣ್ಯ ರಕ್ಷಣೆ, ಕೈಗಾರಿಕೀಕರಣಗಳ ರೂಪದಲ್ಲಿ ಕಷ್ಟ ಬಂದೆರಗಿದೆ. ಈಗ ಅವರ ಕುಲ ಅಪರಾಧಿಯಲ್ಲದಿರಬಹುದು, ಅವರ ಶಿಕಾರಿ ವೃತ್ತಿ ಅಪರಾಧವೆನಿಸಿಕೊಂಡಿದೆ. ಜೀವಂತ ಹಕ್ಕಿಗಳನ್ನು ಹಿಡಿದು ಸಾಕುವ ಅವರ ಜ್ಞಾನ ಅಪರಾಧವಾಗಿದೆ. ಸ್ವತಂತ್ರ ಭಾರತವು ೧೯೫೨ರಲ್ಲಿ ‘ಕ್ರಿಮಿನಲ್ ಟ್ರೈಬ್ಸ್’ ಪಟ್ಟಿಯನ್ನು ಡಿನೋಟಿಫೈ ಮಾಡಿ ವಸತಿ, ಶಿಕ್ಷಣ, ಉದ್ಯೋಗ ಪಡೆಯಲು ಕೆಲವು ಯೋಜನೆಗಳನ್ನು ಹಾಕಿಕೊಂಡಿದೆ. ಆದರೆ ಅಲೆಮಾರಿ ಬದುಕಿನ ಸಮಸ್ಯೆಗಳಿಗಿಂತ ಅಲೆಮಾರಿಗಳೇ ಸಮಸ್ಯೆ ಎಂದು ನಾಗರಿಕ ಸಮಾಜ ಹಾಗೂ ಪ್ರಭುತ್ವ ಭಾವಿಸಿರುವುದಕ್ಕೋ ಏನೋ, ಮುನ್ನೋಟವಿಲ್ಲದ ಯೋಜನೆಗಳು ಅವರ ಬದುಕಿಗೆ ಕಂಟಕಗಳಾಗಿ ಪರಿಣಮಿಸಿವೆ.

ಹೀಗೆ ಈ ಸಾಕ್ಷ್ಯಚಿತ್ರ ಕಾಣಿಸುವುದೆಲ್ಲ ಹಕ್ಕಿಪಿಕ್ಕಿ ಸಮುದಾಯದ ಏಳುಬೀಳಿನ ಕತೆ. ‘ನಾಗರಿಕ’ಗೊಳಿಸುವ ಯತ್ನದ ಫಲವಾಗಿ ತಮ್ಮ ಜಂಗಮತ್ವ ಕಳೆದುಕೊಂಡು, ತಮ್ಮ ಗಡಿಗಳ ಕುಗ್ಗಿಸಿಕೊಂಡು, ನಾಲ್ಕು ಗೋಡೆಗಳ ನಡುವೆ, ಒಂದು ಕೇರಿ-ಊರಿನ ಮಟ್ಟಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡು ಸ್ಥಾವರಗೊಳ್ಳಲು ಹೊರಟವರ ಸಂಕಷ್ಟದ ಕತೆ. ‘ನೆಲ ನಮ್ಮದಲ್ಲ-ನಾವು ನೆಲಕೆ ಸೇರಿದವರು’ ಎನ್ನುತ್ತ ಎಲ್ಲೂ ನೆಲೆ ನಿಲ್ಲದೇ ಹರ್ಗಿಸ್ ನೆಲಪತಿಗಳಾಗಲೊಪ್ಪದೇ ಉಳಿದವರ ಕತೆ. ಈಗ ದಶಕಗಳಿಂದ ಬೀಡುಬಿಟ್ಟ ನೆಲದ ಹಕ್ಕುಪತ್ರ ತಮಗೆ ಕೊಡಿ ಎಂದು ಹೋರಾಡುತ್ತಿರುವವರ ಕತೆ.


ಈ ಸಾಕ್ಷ್ಯಚಿತ್ರವು ಹಕ್ಕಿಪಿಕ್ಕಿಗಳ ಬದುಕಿನ ಕುರಿತು ಹಲವು ಒಳ ಸುಳುಹು, ಹೊಳಹುಗಳನ್ನು ಹೊಂದಿದೆ. ಈ ಮೊದಲು ‘ಮಹುವಾ ಮೆಮಾಯರ‍್ಸ್’, ‘ದ ಬೀ, ದ ಬೇರ್ ಅಂಡ್ ದ ಕುರುಬ’ ಮೊದಲಾದ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರಗಳ ತೆಗೆದ ವಿನೋದ್ ರಾಜಾ ಸಾಕಷ್ಟು ವಸ್ತು, ವಿವರ, ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿ ಈ ಸಾಕ್ಷ್ಯಚಿತ್ರ ರೂಪಿಸಿದ್ದಾರೆ. ವಿಷಯ ಹಂದರವನ್ನು, ಸಂಭಾಷಣೆಯನ್ನು ಮಧು ಭೂಷಣ್ ನೀಡಿದ್ದಾರೆ. ಒಟ್ಟಾರೆ ಹೇಳುವುದಾದರೆ ಈ ಚಿತ್ರ ನೋಡುವವರಿಗೆ ಸಮಾಜದಿಂದ ಅವಗಣನೆಗೆ ಒಳಗಾದ ಲೋಕದೊಳಗೊಂದು ಸುತ್ತು ಹೋಗಿಬಂದ ಅನುಭವವಾಗುತ್ತದೆ. ಅವರಿಗಾಗಿ ಏನೂ ಮಾಡದ, ಅವರ ಕುರಿತು ಕಿಂಚಿತ್ತೂ ಚಿಂತಿಸದ ನಮ್ಮ ಬೇಜವಾಬ್ದಾರಿತನದ ಬಗೆಗೆ ನಾಚಿಕೆಯಾಗುತ್ತದೆ. ಹಕ್ಕಿಪಿಕ್ಕಿಗಳಿಗಾಗಿ, ಅವರಂಥ ಅದೃಶ್ಯ ಸಮುದಾಯಗಳಿಗಾಗಿ ಏನಾದರೂ ಮಾಡಬಯಸುವವರು ಒಮ್ಮೆಯಾದರೂ ಈ ಚಿತ್ರವನ್ನು ನೋಡಿ ತಮ್ಮ ದಾರಿಯನ್ನು ಸ್ಪಷ್ಟಪಡಿಸಿಕೊಳ್ಳಬಹುದಾಗಿದೆ.

ಆದರೆ ಹೇಳಬೇಕಾದ್ದು ಇನ್ನೆಷ್ಟೋ ಇದೆ; ತಮ್ಮ ಹಕ್ಕು ಸವಲತ್ತುಗಳ ಕುರಿತ ಪ್ರಜ್ಞೆ ಎಚ್ಚೆತ್ತು ಅವರು ಸಂಘಟಿತರಾಗಬೇಕಿದೆ; ಅಂಬೇಡ್ಕರರಂಥ ಧೀಮಂತ ನಾಯಕನೊಬ್ಬ ಅವರ ನಡುವೆ ಹುಟ್ಟಿ ಬರಬೇಕಿದೆ. ಅದಕ್ಕೆ ಪೂರಕವಾಗಿ ಹಕ್ಕಿಪಿಕ್ಕಿಗಳೊಂದಿಗಿನ ತಮ್ಮ ಒಡನಾಟದ ಅನುಭವಗಳನ್ನು, ಈ ಚಿತ್ರ ದಾಖಲಿಸದ ಇನ್ನೆಷ್ಟೋ ತಿಳಿವನ್ನು ಮಧು ದಾಖಲಿಸಬೇಕು. ಒಂದೂಕಾಲು ಗಂಟೆಯಲ್ಲಿ ತೋರಿಸಲಾಗದೆ ಬಿಟ್ಟ ಸೂಕ್ಷ್ಮಗಳನ್ನು ಬರೆಯಬೇಕು.


(ಚಿತ್ರಗಳು: ಅಂತರ್ಜಾಲ)

Monday, 10 July 2017

‘ಮುಟ್ಟಿನ ಮನುಷ್ಯ’ ಅರುಣಾಚಲಂ ಮುರುಗಾನಂದಂ




ಒಂದೆಡೆ ತಮ್ಮ ಮನೆಯ ಹೆಂಗಸರ ಮುಟ್ಟಿನ ಕುರಿತು ಮಾತನಾಡದ, ಏನೂ ಗೊತ್ತಿಲ್ಲದ, ಹಿಂಜರಿಕೆ-ಅಸಡ್ಡೆ ತುಂಬಿಕೊಂಡ ಪುರುಷ ಸಮಾಜದ ಇದ್ದರೆ, ಮತ್ತೊಂದೆಡೆ ತಮ್ಮ ಪೊರೆವ ಹೆಣ್ಣುಕುಲ ಅನುಭವಿಸುವ ಅನಿವಾರ್ಯ ಸಂಕಟವನ್ನು ತಾವು ಹಂಚಿಕೊಳ್ಳಲಾರೆವಲ್ಲ, ಅವರಿಗೆ ಏನಾದರೂ ಸಹಾಯ ಮಾಡಲೇಬೇಕಲ್ಲ ಎಂಬ ತುಡಿತ ಹೊಂದಿರುವವರೂ ಇರುತ್ತಾರೆ. ಆದರೆ ಸಮಾಜ, ಹೆಣ್ಮಕ್ಕಳೂ ಸಹ, ಅಂಥವರನ್ನು ಸುಲಭವಾಗಿ ಸ್ವೀಕರಿಸುವುದಿಲ್ಲ. ತಮ್ಮ ಮುಟ್ಟಿನ ಬಗ್ಗೆ ಪುರುಷ ಹೆಚ್ಚು ಮಾತನಾಡಿದರೆ ಅನುಮಾನದಿಂದ ನೋಡುತ್ತಾರೆ. ಅಮೆರಿಕದ ಎಳೆಯ ವಿವಾಹಿತ ಮಿತ್ರ ಗಿರಿ ಗುಂಜಗೋಡು, ‘ಮುಟ್ಟು-ಪ್ಯಾಡುಗಳ ಕುರಿತು ಸಹಜವೆಂಬಂತೆ ಗಂಡಸರು ಮಾತನಾಡಿದರೆ, ಅಂಗಡಿಗಳಲ್ಲಿ ಪ್ಯಾಡು-ಟ್ಯೂಬು-ಬ್ರ್ಯಾಂಡುಗಳ ಬಗ್ಗೆ ಹೆಚ್ಚು ಕೇಳಿದರೆ, ಅಮೆರಿಕದಲ್ಲೂ ಅಂಥವರನ್ನು ಬೀದಿ ಕಾಮಣ್ಣನಂತೆ ನೋಡುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಭಾರತದಲ್ಲೂ ಹೆಂಗಸರ ಮುಟ್ಟಿನ ಮ್ಯಾನೇಜ್‌ಮೆಂಟ್ ಬಗೆಗೆ ಇನ್ನಿಲ್ಲದಷ್ಟು ತಲೆ ಕೆಡಿಸಿಕೊಂಡ ವ್ಯಕ್ತಿಯೊಬ್ಬರನ್ನು ಮೊದಲು ಅರೆಹುಚ್ಚನೆಂದು ತೀರ್ಮಾನಿಸಿ ಕುಟುಂಬ, ಸಮಾಜ ಹೊರಹಾಕಿತು. ‘ಪ್ಯಾಡ್‌ಮ್ಯಾನ್’, ‘ಮುಟ್ಟಿನ ಮನುಷ್ಯ’ ಎಂಬ ಅಡ್ಡಹೆಸರಿಟ್ಟು ಕರೆಯಿತು. ಈಗ ಅದೇ ವ್ಯಕ್ತಿ ಗ್ರಾಮೀಣ, ಬಡ ಹೆಣ್ಮಕ್ಕಳ ಮುಟ್ಟನ್ನು ಸಹ್ಯಗೊಳಿಸಿದರೆಂದು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಆ ವ್ಯಕ್ತಿ ಅರುಣಾಚಲಂ ಮುರುಗಾನಂದಂ. ಅವರ ಬದುಕು-ಸಾಧನೆ ಕುರಿತು ತಿಳಿಯಲು ಇದು ಸಕಾಲ.

ಕೊಯಮತ್ತೂರಿನ ಅರುಣಾಚಲಂ ಮುರುಗಾನಂದಂ ಉಳಿದ ಬ್ರ್ಯಾಂಡುಗಳು ತಯಾರಿಸುವ ಪ್ಯಾಡುಗಳ ಮೂರನೇ ಒಂದರಷ್ಟು ಬೆಲೆಗೆ ಪ್ಯಾಡು ತಯಾರಿಸುವ ಯಂತ್ರ ಅಭಿವೃದ್ಧಿಪಡಿಸಿದ್ದಾರೆ. ಅವರ ಮಿನಿ ಮಶಿನುಗಳು ಹಲವು ಸ್ವಸಹಾಯ ಗುಂಪುಗಳಿಗೆ ಸಣ್ಣ ಉದ್ದಿಮೆ ಸ್ಥಾಪಿಸಲು, ಗ್ರಾಮೀಣ ಭಾಗದ ಮಹಿಳೆಯರು ಉದ್ಯೋಗಸ್ಥರಾಗಲು ಸಹಾಯ ಮಾಡಿವೆ. ಆ ಯಂತ್ರದ ಪೇಟೆಂಟ್ ಪಡೆದಿರುವ ಅವರು ಆ ಸರಳ ಯಂತ್ರಗಳನ್ನು ೧೦೬ ದೇಶಗಳಿಗೆ ವಿಸ್ತರಿಸುವ ಇರಾದೆ ಹೊಂದಿದ್ದಾರೆ. ವಿಶ್ವಾದ್ಯಂತ ಮನ್ನಣೆಗೆ ಪಾತ್ರರಾದ ಅವರ ಬದುಕಿನ ವಿವರವೇ ಒಂದು ಸಿನಿಮಾ ನೋಡಿದ ಅನುಭವ ನೀಡುತ್ತವೆ.

ಕೊಯಮತ್ತೂರಿನ ಕೈಮಗ್ಗ ಕಾಯಕದ ದಂಪತಿಗಳ ಮಗ ಅರುಣಾಚಲಂ. ಅವರ ತಂದೆ ರಸ್ತೆ ಅಪಘಾತದಲ್ಲಿ ಮರಣ ಹೊಂದಿದಾಗ ೧೪ನೇ ವರ್ಷಕ್ಕೆ ಶಾಲೆ ಬಿಟ್ಟು ಮನೆಯ ಬಡತನ ನೀಗಿಸಲು ಯಾವ್ಯಾವುದೋ ಕೆಲಸ ಮಾಡಿದರು. ಮೆಕ್ಯಾನಿಕ್ ಆದರು. ಬಟ್ಟೆ, ಲಡಿಯ ವ್ಯಾಪಾರ ಮಾಡಿದರು. ನೂಲುಂಡೆಯ ಏಜೆಂಟ್ ಆದರು. ಗ್ಯಾರೇಜಿನಲ್ಲಿ ಯಂತ್ರಗಳ ನಡುವೆ ದುಡಿದರು. ಅಂತೂ ದುಡಿಮೆ ಕೈಹತ್ತುವ ವೇಳೆಗೆ ತಮ್ಮ ೩೬ನೇ ವಯಸ್ಸಿನಲ್ಲಿ ಶಾಂತಿಯನ್ನು ಮದುವೆಯಾದರು. ಅವರ ಹೆಂಡತಿ ಮುಟ್ಟಾದಾಗ ಬಳಸಲು ಹಳೆಯ ಚಿಂದಿ ಬಟ್ಟೆ ಹಾಗೂ ಪೇಪರ್ ಬಳಸುತ್ತಿದ್ದದ್ದು ಗಮನಕ್ಕೆ ಬಂದು ತೀರಾ ಆಘಾತಗೊಂಡರು. ಬಹಳಷ್ಟು ಮಹಿಳೆಯರು ಅಂಥವನ್ನೇ ಬಳಸುವರೆಂದೂ, ಪ್ಯಾಡು ತುಟ್ಟಿ ಎಂದೂ ಜವಾಬು ಬಂತು. ಕಚ್ಛಾವಸ್ತುಗಳಿಗೆ ೧೦ ಪೈಸೆ ಖರ್ಚಾಗದಿದ್ದರೂ ಕಂಪನಿಗಳು ಒಂದು ಪ್ಯಾಡಿಗೆ ೪ ರೂಪಾಯಿ ತೆಗೆದುಕೊಳ್ಳುತ್ತವೆಂದು ಅವರಿಗೆ  ತಿಳಿಯಿತು. ಹೆಣ್ಮಕ್ಕಳಿಗೆ ಶುಭ್ರವಾದ ಕಡಿಮೆ ಬೆಲೆಯ ಪರ್ಯಾಯ ಹುಡುಕಲೇಬೇಕೆಂಬ ಪ್ರಯತ್ನ ಶುರುವಾಯಿತು.

ಸರಿ, ಅಲ್ಲಿಂದ ಪ್ಯಾಡು ಮಾಡುವ ಅವರ ಪ್ರಯೋಗ ಶುರು. ಮೊದಲು ಹತ್ತಿ ಬಳಸಿ ಪ್ಯಾಡು ತಯಾರಿಸಿದರು. ಅದನ್ನು ಅವರ ಹೆಂಡತಿ ಮತ್ತು ಅಕ್ಕತಂಗಿಯರು ಸರಿಯಿಲ್ಲವೆಂದು ನಿರಾಕರಿಸಿದರು. ಅವರದನ್ನು ಉತ್ತಮಗೊಳಿಸಲು ಬದಲಿಸುತ್ತ ಹೋದರು. ಬದಲಾದಂತೆ ಅದು ಸರಿಯಿಲ್ಲ ಎಂಬ ಪ್ರತಿಕ್ರಿಯೆಯೇ ಪ್ರತಿಸಲ ಬಂತು. ಅವರು ಹೊಸಹೊಸ ಆಕಾರ, ವಸ್ತುಗಳಲ್ಲಿ ಪ್ಯಾಡುಗಳನ್ನೇನೋ ಮಾಡುತ್ತ ಹೋದರು. ಆದರೆ ಹೆಂಡತಿ, ಸೋದರಿಯರು ತಮ್ಮ ಪರೀಕ್ಷೆ ಫಲಿತಾಂಶ ತಿಳಿಸಲು ಒಂದು ತಿಂಗಳು ಕಾಯಬೇಕಿತ್ತು. ಕೊನೆಕೊನೆಗೆ ಮನೆಯ ಹೆಣ್ಮಕ್ಕಳು ಇವರ ವಸ್ತುಗಳಿಗೆ ಪರೀಕ್ಷಕರಾಗಿ ಆಗಿ ಬೇಸತ್ತು ಅವರ ತಲೆ ಕೆಟ್ಟಿದೆಯೆಂದು ನಿರ್ಧರಿಸಿದರು.

ಬೇರೆ ಹೆಂಗಸರಿಗೆ ತಮ್ಮ ಹೊಸಹೊಸ ವಿನ್ಯಾಸದ ಪ್ಯಾಡುಗಳ ಕೊಟ್ಟು ಹೇಗಿವೆಯೆಂದು ಕೇಳತೊಡಗಿದರು. ಅವರು ಒಂದಷ್ಟು ದಿನ ಮಾಹಿತಿ ಕೊಟ್ಟರೂ ಮುಟ್ಟಿನ ಸೂಕ್ಷ್ಮಗಳನ್ನು ಒಂದು ಗಂಡಸಿನ ಜೊತೆ ಚರ್ಚಿಸಲು ಹಿಂಜರಿದರು. ಮೆಡಿಕಲ್ ಕಾಲೇಜಿನ ಹುಡುಗಿಯರಿಗೆ ಉಚಿತವಾಗಿ ಕೊಟ್ಟು, ಬಳಸಿದ ಪ್ಯಾಡ್‌ಗಳನ್ನು ನಂತರ ಮರಳಿ ಕೊಡಬೇಕೆಂದು ಕೇಳಿದರು. ಅದೂ ಕಷ್ಟವಾದಾಗ ಕೊನೆಗೆ ಪ್ರಾಣಿರಕ್ತ ತುಂಬಿದ ಚೀಲಕ್ಕೊಂದು ಸೋರುವ ಟ್ಯೂಬು ಫಿಕ್ಸ್ ಮಾಡಿ ಅದನ್ನು ಕಟ್ಟಿಕೊಂಡು ರಕ್ತಸ್ರಾವವನ್ನು ತಮ್ಮ ಪ್ಯಾಡು ಹೇಗೆ ತಡೆಯುವುದೆಂದು ಅರಿಯಲು ತಾವೇ ಯತ್ನಿಸಿದರು. ಇದು ಜನರಿಗೆ ತಿಳಿದು ನಗೆಪಾಟಲಿಗೀಡಾದರು. ಅವರ ಕುಟುಂಬದವರು, ಜಾತಿಯವರು ಅವರನ್ನು ದೂರವಿಟ್ಟರು. ಹೆಂಡತಿ ಶಾಂತಿ ಮನೆ ಬಿಟ್ಟು ಹೋದರು.


ಈಗ ಅರುಣಾಚಲಂ ಏಕಾಂಗಿ. ಆದರೇನು, ಅವರ ಗುರಿಯನ್ನು ಬಿಡಲಿಲ್ಲ. ಏನು ಮಾಡಿದರೆ ಪ್ಯಾಡುಗಳು ಬಳಸಿದ ನಂತರವೂ ಆಕಾರ ಉಳಿಸಿಕೊಳ್ಳುತ್ತವೆ? ಹೇಗೆ ಅವು ಹೆಚ್ಚು ರಕ್ತ ಹೀರಿಕೊಂಡು ಮುದ್ದೆಯಾಗದಿರಲು ಸಾಧ್ಯವಿದೆ? ಎಂಬ ಬಗ್ಗೆ ತಲೆಕೆಡಿಸಿಕೊಂಡರು. ಪ್ಯಾಡುಗಳು ತಮ್ಮ ಶೇಪು ಉಳಿಸಿಕೊಳ್ಳುವಂತೆ ಕಂಪನಿಗಳು ಪೈನ್‌ವುಡ್ ತಿರುಳನ್ನು ಬಳಸುತ್ತವೆಂದು ತಿಳಿಯಲು ಅವರಿಗೆ ೨ ವರ್ಷ ಹಿಡಿಯಿತು. ಆ ಕಚ್ಛಾವಸ್ತುವಿನಿಂದ ವಿವಿಧ ಆಕಾರ ವೈವಿಧ್ಯದ ಪ್ಯಾಡು ತಯಾರಿಸುವ ೩.೫ ಕೋಟಿ ರೂ ವೆಚ್ಚದ ಮಶೀನು ವಿದೇಶದಿಂದ ಬರಬೇಕಿತ್ತು. ಅದುವೇ ಪ್ಯಾಡಿನ ಬೆಲೆ ಹೆಚ್ಚಿಸಿತ್ತು. ಆಗ ಅರುಣಾಚಲಂ ಲಭ್ಯವಿರುವ ಉಪಕರಣಗಳಿಂದ ೬೫,೦೦೦ ರೂಪಾಯಿ ವೆಚ್ಚದಲ್ಲಿ ತಾವೇ ಮಶೀನು ತಯಾರಿಸಿದರು! ಮುಂಬಯಿಯ ವ್ಯಾಪಾರಿಯೊಬ್ಬನ ಬಳಿ ಪೈನ್‌ವುಡ್ ತಿರುಳು ಕೊಂಡು, ಅದರ ನಾರು ತೆಗೆದು, ಸಣ್ಣ ಪುಡಿ ಮಾಡಿ, ಒತ್ತಿ, ಶುದ್ಧಗೊಳಿಸಿ, ಪ್ಯಾಡುಗಳ ತಯಾರಿಸಿಯೇ ಬಿಟ್ಟರು. ಐಐಟಿ ಮದ್ರಾಸಿನಲ್ಲಿ ಅದನ್ನು ತೋರಿಸಿ ಸಲಹೆ ಪಡೆದು ವಿನ್ಯಾಸ ಕೊಂಚ ಬದಲಿಸಿದರು.


ಅಲ್ಲಿಂದಾಚೆ ಯಶೋಗಾಥೆ.



ಜನಧನ ಎತ್ತಿ ಜಯಶ್ರೀ ಇಂಡಸ್ಟ್ರೀಸ್ ಶುರುಮಾಡಿದರು. ಅದು ಸರಳ, ಕಡಿಮೆ ಬೆಲೆಯ, ನ್ಯಾಪ್ಕಿನ್ ತಯಾರಿಸುವ ಮಿಶಿನನ್ನು ತಯಾರಿಸಿ ವಿತರಿಸುತ್ತದೆ. ಬೃಹತ್ ಬಂಡವಾಳ ಹೂಡಿ ದೊಡ್ಡ ಪ್ರಮಾಣದಲ್ಲಿ ಯಂತ್ರತಯಾರಿ ಘಟಕ ಹೂಡುವಂತೆ ಎಷ್ಟೋ ಸಲಹೆಗಳು, ಆಫರ್‌ಗಳು ಬಂದರೂ ಅರುಣಾಚಲಂ ಜಗ್ಗಲಿಲ್ಲ. ಸಣ್ಣ ಉದ್ದಿಮೆ ಶುರು ಮಾಡುವವರಿಗೆ, ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳಿಗೆ ಮಾತ್ರ ಅವನ್ನು ಪೂರೈಸುತ್ತಾರೆ. ೨೩ ರಾಜ್ಯಗಳಲ್ಲಿ ಎಷ್ಟೋ ಮಹಿಳೆಯರಿಗೆ ಅದು ಕೆಲಸ ಕೊಟ್ಟಿದೆ. ಮಹಿಳಾ ಸ್ವಸಹಾಯ ಸಂಘಗಳಿಂದ ತಯಾರಾದ ನ್ಯಾಪ್ಕಿನ್ ಅನ್ನೇ ಮಹಾರಾಷ್ಟ್ರ ಸರ್ಕಾರ ಖರೀದಿಸಿ ವಿತರಿಸುತ್ತಿದೆ. ಹಲವರು ಅದರಲ್ಲಿ ಸುಧಾರಣೆ ತರುವ ಕುರಿತೂ ಪ್ರಯತ್ನ ನಡೆಸುತ್ತಿದ್ದಾರೆ. ಕೆಲವರು ಪೈನ್‌ವುಡ್ ಬದಲು ಬಿದಿರು ಅಥವಾ ಬಾಳೆಗಿಡದ ತಿರುಳು ಬಳಸುವ ಯೋಚನೆಯಲ್ಲೂ ಇದ್ದಾರೆ.

ಇವೆಲ್ಲ ಅರುಣಾಚಲಂ ಅವರೆಡೆಗೆ ದೇಶದ ಗಮನ ಸೆಳೆಯಲು ಕಾರಣವಾಯಿತು. ಹಲವು ಐಐಟಿ, ಐಐಎಂಗಳಿಗೆ ಹೋಗಿ ಮಾತನಾಡಿದರು. ಹಲವಾರು ಪ್ರಶಸ್ತಿಗಳು ಅವರನ್ನರಸಿ ಬಂದವು. ದೇಶವಿದೇಶಗಳಲ್ಲಿ ಮನ್ನಣೆ ಸಿಕ್ಕಿತು. ೨೦೧೬ರಲ್ಲಿ ಅವರಿಗೆ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ಕೊಟ್ಟು ಗೌರವಿಸಿತು. ಅವರ ಮೇಲೊಂದು ಸಾಕ್ಷ್ಯಚಿತ್ರ (ಮೆನ್‌ಸ್ಟ್ರುವಲ್ ಮ್ಯಾನ್) ಬಂದಿದೆ. ಜೀವನಚಿತ್ರವೂ (ಪ್ಯಾಡ್ ಮ್ಯಾನ್) ಬಂದಿದೆ.






ಆದರೆ ಅರುಣಾಚಲಂ ಅವರಿಗೆ ಎಲ್ಲಕ್ಕಿಂತ ದೊಡ್ಡ ಪ್ರಶಸ್ತಿಯೆಂದರೆ ಅವರ ಹೆಂಡತಿ ಶಾಂತಿ ಪೇಪರು, ಟಿವಿಗಳಲ್ಲಿ ತನ್ನ ಗಂಡನ ಯಶೋಗಾಥೆ ಕಂಡು, ಕೇಳಿದಮೇಲೆ ಮತ್ತೆ ಮನೆಗೆ ಮರಳಿ ಬಂದಿದ್ದಾರೆ. ತನ್ನ ಗಂಡನಿಗೆ ತಲೆ ಕೆಟ್ಟದ್ದು ಅಲ್ಲವೆಂದು ಈಗವರಿಗೆ ಖಚಿತವಾಗಿದೆ!



Saturday, 8 July 2017

ಆ ಮೂರು ದಿನದ ಚಿಂತಿ





ಮನುಷ್ಯ ಸೃಷ್ಟಿ, ಹೆಣ್ತನದ ಸಕಲ ಆಗುಹೋಗುಗಳ ಮೂಲವಾದ ಕ್ರಿಯೆ ಋತುಸ್ರಾವ. ಆದರೆ ಆ ಮೂರು ದಿನಗಳ ಕುರಿತು ಮಾನವ ಸಮಾಜಕ್ಕಿರುವ ಅಜ್ಞಾನ, ಅಸಡ್ಡೆ ಹೇಳಲಸಾಧ್ಯ. ಆ ಕುರಿತು ಹೆಣ್ಮಕ್ಕಳೂ ಮನಬಿಚ್ಚಿ ಮಾತಾಡುವುದಿಲ್ಲ. ಮುಟ್ಟು ಎಂದು ಹೇಳುವುದೇ ಮರ್ಯಾದೆಯ ಪ್ರಶ್ನೆ, ಅದೂ ಗಂಡಸರ ಎದುರಿಗಂತೂ ಆ ಮಾತು ಎತ್ತುವುದೇ ನಿರ್ಲಜ್ಜತನ ಎಂಬ ಭಾವನೆ ಎಷ್ಟುಮಟ್ಟಿಗೆ ಬೇರೂರಿದೆಯೆಂದರೆ ಸ್ವತಃ ಮುಟ್ಟಿನ ದಿನಗಳಲ್ಲಿ ನೋಯುವ, ಬೇಯುವ, ಆ ಕಾರಣಕ್ಕಾಗೆ ನಿರ್ಲಕ್ಷ್ಯಕ್ಕೆ ಗುರಿಯಾಗಿ ‘ಹೊರಗಿರುವ’ ಹೆಣ್ಮಕ್ಕಳು ಅದನ್ನೊಂದು ಅತ್ಯಂತ ಖಾಸಗಿ ವಿಷಯವಾಗಿಸಿಕೊಂಡಿದ್ದಾರೆ. ಸಮಸ್ಯೆಗಳನ್ನು ವೈದ್ಯರ ಬಳಿಯೂ ಹೇಳುವುದಿಲ್ಲ. ಹೀಗೆ ಮುಟ್ಟು ‘ಹುಶ್ ಹುಶ್’ ಸಂಗತಿಯಾದ ಕಾರಣಕ್ಕೇ ಮುಟ್ಟಾದ ಮೂರು ದಿನ ಅವರಿಗೇನಾಗುತ್ತದೆ, ರಕ್ತಹರಿವನ್ನು ಹೇಗೆ ಮ್ಯಾನೇಜ್ ಮಾಡುತ್ತಾರೆ, ಅವರ ಸಮಸ್ಯೆಗಳೇನು ಎಂಬ ಬಗೆಗೆ ಸಮಾಜ ಇದುವರೆಗು ಯೋಚಿಸಿರಲಿಲ್ಲ. 

ಈಗ ಅಂತಹ ಕಾಲ ಬಂದಿದೆ. ಸಮಾಜ ಮುಟ್ಟಿನ ಬಗೆಗಷ್ಟೆ ಅಲ್ಲ, ‘ಮುಟ್ಟಿನ ಸ್ಯಾಲೆ’ ಕುರಿತೂ ಚಿಂತಿಸುತ್ತಿದೆ. 2000ನೇ ಇಸವಿಯಲ್ಲಿ ಆಸ್ಟ್ರೇಲಿಯಾ ಸರ್ಕಾರ ಮುಟ್ಟಿನ ಟ್ಯಾಂಪೂನುಗಳಿಗೆ 12% ಜಿಎಸ್ಟಿ ವಿಧಿಸಿದಾಗ; ಬ್ರಿಟನಿನಲ್ಲಿ 2014ರಲ್ಲಿ ಪ್ಯಾಡು-ಟ್ಯಾಂಪೂನುಗಳ ಮೇಲೆ ವ್ಯಾಟ್ ವಿಧಿಸಿದಾಗ ಮಹಿಳೆಯರಿಂದ ‘ಏಕ್ಸ್ ದಿ ಟ್ಯಾಂಪೂನ್ ಟ್ಯಾಕ್ಸ್’, ‘ಸ್ಟಾಪ್ ಟ್ಯಾಕ್ಸಿಂಗ್ ಪಿರಿಯಡ್ಸ್’ ಮುಂತಾದ ಅಭಿಯಾನಗಳು ನಡೆದವು. ಸರ್ಕಾರ, ಸಮಾಜಗಳು ಮೈ ಕೊಡವಿ ಎಚ್ಚೆತ್ತವು. ಈಗ ಭಾರತದಲ್ಲು ಸ್ಯಾನಿಟರಿ ನ್ಯಾಪ್ಕಿನ್‌ಗಳು 12.5% ಜಿಎಸ್ಟಿಗೆ ಒಳಗಾಗಿ ಇನ್ನಷ್ಟು ತುಟ್ಟಿಯಾಗಿ ವಿಸ್ತೃತ ಚರ್ಚೆ-ಹೋರಾಟ-ಅಭಿಯಾನಕ್ಕೆ ದಾರಿಯಾಗಿವೆ. 

ಏನಾದರಿರಲಿ, ಅಧಿಕ ತೆರಿಗೆ ವಿಧಿಸುವ ಮೂಲಕ ಇಂಥದೊಂದು ಮುಕ್ತ ಚರ್ಚೆ ಏರ್ಪಡಲು ಸಹಾಯ ಮಾಡಿದವರಿಗೆ ಧನ್ಯವಾದಗಳು.

ಈ ಮೊದಲು ಆ ಮೂರು ದಿನ ಹೇಗೆ ನಿಭಾಯಿಸುತ್ತಿದ್ದರು? ಯಾರಿಂದಲೂ ಮುಟ್ಟಿಸಿಕೊಳ್ಳದೆ ಏಕಾಂಗಿಯಾಗಿ ಆರಾಮ ಮೂರು ದಿನ ಕಳೆಯುತ್ತಿದ್ದರೋ, ಅಥವಾ ಹೊರಗೆ ಗೇಯಬೇಕಾದ ಕಷ್ಟಕುಲದ ಶ್ರಮಿಕ ಹೆಣ್ಮಕ್ಕಳು ಅದೊಂದು ಅನಿವಾರ್ಯ ಕರ್ಮವೆಂದು ಹೊರೆ ಹೊತ್ತು ತಿರುಗುತ್ತಿದ್ದರೋ? ಯಾರಿಗೂ ಗೊತ್ತಿಲ್ಲ, ಯಾಕೆಂದರೆ ಯಾವ ಅಜ್ಜಿ ಮುತ್ತಜ್ಜಿಯೂ ವಿವರವಾಗಿ ಹಾಡಲಿಲ್ಲ, ಹೇಳಲಿಲ್ಲ. ಒಂದಾನೊಂದು ಕಾಲದಿಂದ ಮುಟ್ಟಿನ ಅವಧಿಯಲ್ಲಿ ಸಾಮಾನ್ಯ ಹೆಣ್ಮಕ್ಕಳ ಪರಿಸ್ಥಿತಿ ಏನಾಗಿತ್ತು ಎಂದು ಯಾವ ಸಾಹಿತ್ಯವೂ ಉಲ್ಲೇಖಿಸಿಲ್ಲ. ವರ್ಷಗಟ್ಟಲೆ ಕಾಡಿನಲ್ಲುಳಿದ, ತಿಂಗಳುಗಟ್ಟಲೆ ರಾವಣ ನಗರದಲ್ಲಿದ್ದ ಸೀತೆ ಮುಟ್ಟಾದಾಗ ಏನು ಮಾಡಿದಳೋ ರಾಮಾಯಣ ತಿಳಿಸುವುದಿಲ್ಲ. 

ಅಮ್ಮ ಪರ್ರನೆ ತನ್ನ ಮೆತ್ತನ್ನ ಹಳೆ ಸೀರೆಯನ್ನು ಚೌಕುಳಿ ಆಕಾರಕ್ಕೆ ಹರಿದು, ಮಡಚಿ ತೊಡೆ ಸಂದಿ ಬೀಳದಂತೆ ಇಟ್ಟುಕೋ ಎಂದದ್ದು ಬಹುಶಃ ಮುಟ್ಟಿನ ಸ್ರಾವವನ್ನು ಹೇಗೆ ನಿಭಾಯಿಸುವುದು ಎನ್ನುವ ಕುರಿತು ಹೇಳಿಕೊಡುವ ಮೊದಲ ಮತ್ತು ಕೊನೆಯ ಪಾಠ. ಮೊದಮೊದಲ ದಿನಗಳಲ್ಲಿ ಅಮ್ಮನ ಮೇಲ್ವಿಚಾರಣೆ ಕೊಂಚ ಮಟ್ಟಿಗೆ ಇರುತ್ತದಾದರೂ ಬರಬರುತ್ತ ಅದು ಪ್ರತಿ ತಿಂಗಳ ಮಾಮೂಲಿ ರೇಜಿಗೆ, ರಗಳೆಯೆನಿಸಿಬಿಡುತ್ತದೆ. ಮೂರು ಪ್ಲಸ್ ಎರಡು ದಿನಗಳಲ್ಲಿ ತಾನು ಮೈಲಿಗೆಯವಳು ಎಂದು ಅವಳನ್ನು ನಂಬಿಸಿ ಮತ್ತಷ್ಟು ಕೀಳರಿಮೆ ಹುಟ್ಟಿಸಲಾಗುತ್ತದೆ. ಅಕಸ್ಮಾತ್ ಉಟ್ಟ ಬಟ್ಟೆ ರಕ್ತಕಲೆಯಾದರೆ ಅವಮಾನ. ಕನಿಷ್ಟ ಶುಚಿ, ಕಾಮನ್‌ಸೆನ್ಸ್ ಇಲ್ಲದ ಹೆಣ್ಣೆಂಬ ತಿರಸ್ಕಾರ. ಖಾಸಗಿ ಸ್ಥಳವಿರದ ಕಡೆ ಎಲ್ಲೆಲ್ಲೋ ಯಾವ್ಯಾವಾಗಲೋ ಮುಟ್ಟಾಗಿಬಿಟ್ಟರೆ ಕಂಗಾಲು. ಕರ್ಚೀಫು, ಕೈಗೆ ಸಿಕ್ಕ ಬಟ್ಟೆ, ಕಾಗದ, ಹತ್ತಿ ಏನೇನನ್ನೆಲ್ಲ ‘ಪ್ಯಾಡು’ಗಳಾಗಿಸಬೇಕಾದ ಅನಿವಾರ್ಯತೆ. ಮಳೆಗಾಲದಲ್ಲಿ ಬಟ್ಟೆ ಒಣಗದೇ ಕಮಟು ನಾತ ಸೂಸುವಾಗ ಎಲ್ಲರೆದುರಿಗೆ ಅದನ್ನುಟ್ಟು ಹೋಗುವುದು ಹೇಗೆಂದು, ಅಕಸ್ಮಾತ್ ಬಿಸಿಲು ಮುಖ ಕಂಡಾಗ ಹೊರಗೆ ಒಣಗಿಸುವುದು ಹೇಗೆಂದು ಮುಜುಗರ. ಕುಡಿಯಲೇ ನೀರು ಸಿಗದ ಊರುಗಳಲ್ಲಿ ಮುಟ್ಟಿನ ಬಟ್ಟೆ ತೊಳೆಯಲು ಅನುಭವಿಸಿರಬಹುದಾದ ಕಷ್ಟ ಊಹಾತೀತ. ಹೊರಗೆ ತಿರುಗಾಡಲು ಹೋಗುವಾಗ, ಶಾಲೆಕಾಲೇಜುಕಚೇರಿಗೆ ಹೋಗುವಾಗ ಬಟ್ಟೆ ಬದಲಿಸಲು ಆಗದೇ, ಬದಲಿಸಿದರೆ ತೊಳೆಯಲಾಗದೇ, ಬಳಸಿದ್ದು ಬ್ಯಾಗಿನೊಳಗೆ ಇಟ್ಟುಕೊಳ್ಳಲಾಗದೆ, ಬಿಸಾಡಲಾಗದೇ .. ಅಯ್ಯಯ್ಯಯ್ಯೋ, .. ಯಾಕಾದರೂ ಈ ಕಾಲದಲ್ಲಿ ಹೊರಬಿದ್ದೆನೋ, ಯಾಕಾದರೂ ಹುಡುಗಿಯಾದೆನೋ ಅನಿಸುವಂತ ಮೂರು ದಿನದ ಅಪರಂಪಾರ ಕಷ್ಟ ಪರಂಪರೆ! ಇದು ಅನಾದಿಯಿಂದ ಹೆಣ್ಣು ಎದುರಿಸಿಕೊಂಡುಬಂದ ಒಳಸಂಕಟಗಳ ಸರಮಾಲೆ.

ಹೀಗಿರುತ್ತ ಬೇಕಾದಾಗ ಬಳಸಿ ಬಿಸಾಡುವ ಸ್ಯಾನಿಟರಿ ನ್ಯಾಪ್ಕಿನ್ ಬಳಕೆಗೆ ಬಂದಾಗ ಸ್ವರ್ಗದಿಂದಿಳಿದು ಬಂದ ಒಂದು ವರದಂತೆ ಅದು ಹೆಣ್ಮಕ್ಕಳಿಗೆ ಕಂಡಿದ್ದರೆ ಅಚ್ಚರಿಯಿಲ್ಲ. ಹೆಣ್ಣು ಕಲಿಕೆ-ದುಡಿಮೆಗೆ ಮನೆಯಿಂದ ಹೊರಬೀಳುವುದು ಹೆಚ್ಚಾಗುತ್ತ ಹೋದಂತೆ ಯಾವ ಕಾನೂನೂ ಇಲ್ಲದೆ, ಯಾವ ಜಾಹೀರಾತೂ ಇಲ್ಲದೆ, ಹಳ್ಳಿ ದಿಲ್ಲಿಯೆನದೆ ಸರಸರ ಸ್ಯಾನಿಟರಿ ಪ್ಯಾಡಿನ ಜನಪ್ರಿಯತೆ ಏರಿಬಿಟ್ಟಿತು. ಅದರ ಇರವು-ಬಳಕೆ ಕುರಿತು ಎಲ್ಲ ವರ್ಗ-ವಯೋಮಾನದ ಹೆಣ್ಮಕ್ಕಳೂ ಅರಿತರು. ಎಲಎಲಾ! ಎಷ್ಟು ಸುಲಭ, ಎಷ್ಟು ನಿರಾಳ! ಶಿಕ್ಷಣ-ಉದ್ಯೋಗವೆಂದು ಹೊರಗೆ ಓಡಾಡುವವರಿಗೆ, ನೀರಿರುವವರಿಗೆ, ಇಲ್ಲದವರಿಗೆ, ತಿರುಗಾಟ ಅನಿವಾರ್ಯವಾದವರಿಗೆ ಬಳಸಿ ಬಿಸಾಡುವ, ಸುಲಭದಲ್ಲಿ ಹೊತ್ತೊಯ್ಯಬಲ್ಲ ನ್ಯಾಪ್ಕಿನ್ ತುಂಬ ಆಪ್ತವೆನಿಸಿ ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿತು. ಅಪಾಯವೋ, ನಿರಪಾಯವೋ, ಹಿಂದೆಮುಂದೆ ಯೋಚಿಸದೇ ಅದರ ಸುಲಭ ಬಳಕೆಗೆ ಎಲ್ಲರೂ ಮಾರುಹೋದರು. 

ಅದು ಹೆಣ್ಮಕ್ಕಳನ್ನು ಬಾಧಿಸುತ್ತಿದ್ದ ಪ್ರಜನನ ಅಂಗಗಳ ಸೋಂಕುರೋಗದ ಪ್ರಮಾಣವನ್ನು ಗಮನಾರ್ಹವಾಗಿ ಕುಗ್ಗಿಸಿತು. ಆ ಮೂರು ದಿನಗಳಲ್ಲೂ ಧೈರ್ಯವಾಗಿ ಹೊರಹೋಗಲು, ಮಾಮೂಲಿಯಾಗಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಆತ್ಮವಿಶ್ವಾಸ ತುಂಬಿತು. 2011ರ ಸರ್ವೇ ಪ್ರಕಾರ ಈಗ ಭಾರತದ 12% ಹೆಣ್ಮಕ್ಕಳು ಸ್ಯಾನಿಟರಿ ಪ್ಯಾಡ್ ಬಳಸುತ್ತಿದ್ದಾರೆ. ಈ ಆರು ವರ್ಷಗಳಲ್ಲಿ ಬಳಕೆದಾರರ ಸಂಖ್ಯೆ ಹೆಚ್ಚಾಗಿರಬಹುದು. ಈಗ ಒಂದಷ್ಟು ಮಹಿಳೆಯರಿಗೆ ಅದು ಅನಿವಾರ್ಯ ಅನಿಸಿರಲೂಬಹುದು. 

ಆದರೆ ನಡುನಡುವೆ ಸ್ಯಾನಿಟರಿ ನ್ಯಾಪ್ಕಿನ್ ಬಳಕೆಯ ಮಿತಿಗಳು, ಅದರಿಂದಾಗಬಹುದಾದ ತೊಂದರೆಗಳ ಬಗೆಗೆ ದೀರ್ಘ ಚರ್ಚೆ, ವಾದವಿವಾದವೂ ನಡೆಯಿತು. ಅದು ಈಗಲೂ ನಡೆಯುತ್ತಿದೆ. 

ಸ್ಯಾನಿಟರಿ ಪ್ಯಾಡಿನ ಕುರಿತು ಇರುವ ಮುಖ್ಯ ತಕರಾರುಗಳು ಹೀಗಿವೆ:

  • ಅದು ತುಟ್ಟಿ. ನಮ್ಮಲ್ಲಿ ಲಭ್ಯವಿರುವ ಉತ್ತಮ ನ್ಯಾಪ್ಕಿನ್‌ಗಳು ಎಷ್ಟು ತುಟ್ಟಿಯೆಂದರೆ ಮುಕ್ಕಾಲುಪಾಲು ಜನ ‘ಬಡತನ ರೇಖೆ’ ಹತ್ತತ್ತಿರ ಬದುಕುವ ಭಾರತೀಯರಿಗೆ ಅದು ಕೈಗೆಟುಕದಂತಾಗಿದೆ. ಈಗ ಭಾರತದ 35.5 ಕೋಟಿ ಮುಟ್ಟಾಗುವ ಮಹಿಳೆಯರಲ್ಲಿ 70% ಮಹಿಳೆಯರು ಪ್ರತಿ ತಿಂಗಳು ಅಷ್ಟು ದುಡ್ಡು ಕೊಟ್ಟು ಪ್ಯಾಡ್ ಕೊಳ್ಳಲು ತಾವು ಸಮರ್ಥರಲ್ಲ ಎಂದೇ ಹೇಳಿದ್ದಾರೆ.
  • ಮತ್ತೊಂದು ಸಮಸ್ಯೆ ಬಳಸಿದ ಪ್ಯಾಡಿನ ವಿಲೇವಾರಿಯದು. ಪ್ರತಿತಿಂಗಳು ಭಾರತ ದೇಶ ಒಂದು ಬಿಲಿಯನ್ (೧೦೦ ಕೋಟಿ) ಕರಗದ ನ್ಯಾಪ್ಕಿನ್ ಪ್ಯಾಡುಗಳನ್ನು, ೯೦೦೦ ಟನ್ ಕರಗದ ನ್ಯಾಪ್ಕಿನ್ ಕಸವನ್ನು ತನ್ನ ಪರಿಸರಕ್ಕೆ ಸೇರಿಸುತ್ತಿದೆ! ಮೊದಲೇ ನಮ್ಮ ಕಸ ವಿಲೇವಾರಿ ಅಭ್ಯಾಸಗಳು ಆರೋಗ್ಯಕರವಾಗಿಲ್ಲ. ಬಳಸಿ ಬಿಸಾಡುವ ವಸ್ತುವನ್ನು ಎಲ್ಲಿ ಬಿಸಾಡಿದೆ, ಏನಾಯಿತು ಎಂಬ ಬಗೆಗೆ ನಾವು ಯೋಚಿಸುವರೇ ಅಲ್ಲ. ನ್ಯಾಪ್ಕಿನ್ನುಗಳು ಮಣ್ಣಲ್ಲಿ ಕರಗಲಾರವು. ಅವು ಲೀಕ್ ಪ್ರೂಫ್ ಆಗಲು ಪ್ಲಾಸ್ಟಿಕ್ ಹೊರಕವಚ ಹೊಂದಿವೆ. ಅವನ್ನು ಸುಡುವುದೂ ಅಪಾಯ, ಯಾಕೆಂದರೆ ಪ್ಯಾಡಿನಲ್ಲಿರುವ ರೇಯಾನ್ ಎಂಬ ವಸ್ತುವು ಡಯಾಕ್ಸಿನ್ ಎಂಬ ವಿಷಕಾರಕವನ್ನು ಹೊಂದಿದೆ. ಪ್ಯಾಡನ್ನು ಸುಟ್ಟಾಗ ಹೊರಸೂಸುವ ಡಯಾಕ್ಸಿನ್ ಜೀವಪರಿಸರಕ್ಕೆ ಹಾನಿಕಾರಕವಾಗಿದೆ. ಅಕಸ್ಮಾತ್ ಸೋಂಕಿರುವ ರಕ್ತದ ಪ್ಯಾಡನ್ನು ತಿನ್ನುವುದು ಪಶುಪಕ್ಷಿಕ್ರಿಮಿಕೀಟಗಳಿಗೂ ಅಪಾಯಕಾರಿಯಾಗಿದೆ. ಶಾಲಾಕಾಲೇಜು-ಹೋಟೆಲು-ಮತ್ತಿತರ ಕಡೆಗಳಲ್ಲಿ ತಾವು ವಿತರಿಸಿ ಬಳಸಲ್ಪಟ್ಟ ನ್ಯಾಪ್ಕಿನ್ನುಗಳಿಗೆ ‘ಡಬ್ಬ’ ಇಟ್ಟಿದ್ದೇವೆಂದು ಹೇಳಬಹುದು. ಆದರೆ ‘ಡಬ್ಬ’ಕ್ಕೆ ತುಂಬಿದ ನ್ಯಾಪ್ಕಿನ್ ಆಮೇಲೆ ಏನಾಗುತ್ತಿದೆ? ನಾವು ಕೊಳ್ಳುವ ಬ್ರ್ಯಾಂಡುಗಳ ಪರಿಸರ ಸ್ನೇಹಿ ವಿಲೇವಾರಿಯೆಂದರೆ ಬಳಸಿದ ನಂತರ ಪೇಪರಿನಲ್ಲಿ ಸುತ್ತಿ ಸಂಗ್ರಹಿಸಿ ಭೂಮಿಯೊಳಗೆ ಹೂಳುವುದು. ಆದರೆ ಬಳಸಿದ ಬಹುಪಾಲು ಪ್ಯಾಡುಗಳು ಎಲ್ಲೆಂದರಲ್ಲಿ ಬಿಸಾಡಲ್ಪಟ್ಟು, ಹಾದಿಬೀದಿಗಳಲ್ಲಿ ನಾಯಿಗಳು ಎಳೆದಾಡಿ, ಚಿಂದಿ ಆಯುವವರ ಕೈಗಳ ಗಲೀಜು ಮಾಡಿ, ಸಾರ್ವಜನಿಕ ಟಾಯ್ಲೆಟ್ಟಿನಲ್ಲಿ ತುಂಬಿ ಅವು ಕಟ್ಟಿಕೊಳ್ಳುವಂತಾಗಿರುವುದನ್ನು ಕಾಣಬಹುದು. ನ್ಯಾಪ್ಕಿನ್ ಸೃಷ್ಟಿಸುವ ಅಪಾಯ, ಅಧ್ವಾನಗಳಿಗೆ ಪೌರಕಾರ್ಮಿಕರನ್ನು, ಚಿಂದಿ ಆಯುವವರನ್ನು ಕೇಳಿದರೆ ಗೊತ್ತಾಗುತ್ತದೆ. ನಗರಗಳಲ್ಲಿ ಹೆಸರಿಗಾದರೂ ಕಸ ವಿಲೇವಾರಿಗೊಂದು ವ್ಯವಸ್ಥೆಯಿದೆ. ಆದರೆ ಹಳ್ಳಿಗಳ ದೇಶ ಭಾರತದಲ್ಲಿ ಗ್ರಾಮೀಣ ಕಸ ವಿಲೇವಾರಿಗೆ ಯಾವ ಖಾಯಂ ವ್ಯವಸ್ಥೆ ಇದೆ? ಅದರ ಕುರಿತು ಯಾವ ಸ್ವಚ್ಛ ಭಾರತ ಮಿಷನೂ ತಲೆ ಕೆಡಿಸಿಕೊಂಡಿಲ್ಲ. ಹಳ್ಳಿಗಳಲ್ಲಿ ಊರ ಹೊರಗಿನ ರಸ್ತೆ, ಮೈದಾನ, ತಿಪ್ಪೆ, ಕಾಡು, ಗುಡ್ಡಗಳಲ್ಲಿ ಪ್ಲಾಸ್ಟಿಕ್ಕೂ, ಅದರೊಳಗೆ ತುಂಬಿ ಚೆಲ್ಲಾಡಲ್ಪಟ್ಟ ಕಸದಲ್ಲಿ ನ್ಯಾಪ್ಕಿನ್ನುಗಳೂ ಕಾಣುತ್ತವೆ. ವರ್ಷಾನುಗಟ್ಟಲೆ ಹಳೆಯ ಮುಟ್ಟಿನ ಪಳೆಯುಳಿಕೆಗಳನ್ನು ನ್ಯಾಪ್ಕಿನ್ನುಗಳ ರೂಪದಲ್ಲಿ ಕಾಣುವಂತಾಗಿದೆ. ಸ್ಯಾನಿಟರಿ ನ್ಯಾಪ್ಕಿನ್‌ನಂತೆ ಮಕ್ಕಳಿಗೆ ಬಳಸುವ ಪ್ಯಾಡುಗಳಿಗೂ ಈ ಮಾತು ಅನ್ವಯಿಸುತ್ತದೆ.


  • ನ್ಯಾಪ್ಕಿನ್ ತಯಾರಿಯ ಬಗೆಗೆ ಬಹುಪಾಲು ಜನರಿಗೆ ತಿಳಿದಿರುವುದಿಲ್ಲ. ಅದನ್ನು ಕಂಪನಿಗಳು ತಿಳಿಸುವುದೂ ಇಲ್ಲ. ಅದರಲ್ಲಿ ಬಳಸುವ ಹಲವು ಕಚ್ಛಾ ವಸ್ತುಗಳು ಪೆಟ್ರೋಲಿಯಂ ಹಾಗೂ ಅರಣ್ಯ ಉಪ ಉತ್ಪನ್ನಗಳು. ಹತ್ತಿ, ಪ್ಲಾಸ್ಟಿಕ್ ಮತ್ತು ಮರದ ಹೊಟ್ಟು-ತಿರುಳಿನಿಂದ ತಯಾರಾಗುವ ಸಿಂಥೆಟಿಕ್ ರೆಯಾನ್ ಬಳಸಿ ಅವನ್ನು ತಯಾರಿಸಲಾಗುತ್ತದೆ. ನ್ಯಾಪ್ಕಿನ್ ಬಳಕೆಯಿಂದ ಯೋನಿ ಸೋಂಕು, ತುರಿಕೆ, ಬಿಳಿ ಮುಟ್ಟು, ಫಂಗಸ್ ಸೋಂಕು ಉಂಟಾಗುವುದು ಈ ಕಚ್ಛಾವಸ್ತುಗಳಿಂದ. ಅದರಲ್ಲು ರಕ್ತ ಹೀರಿಕೆ ವೇಗವಾಗಲೆಂದು ಬಳಸುವ ಪಾಲಿಆಕ್ರಿಲೇಟ್ ಜೆಲ್, ಲೀಕ್ ಪ್ರೂಫ್ ಆಗಲು ಬಳಸುವ ಪಾಲಿ ಇಥಿಲೀನ್, ಪರಿಮಳಕ್ಕೆಂದು ಬಳಸುವ ರಾಸಾಯನಿಕಗಳು ದುಷ್ಪರಿಣಾಮಗಳಿಗೆ ಕಾರಣವಾಗಿವೆ. ಅಲ್ಲದೆ ಒಬ್ಬ ಮಹಿಳೆ ಜೀವಿತಾವಧಿಯ ೩೦-೪೦ ವರ್ಷ ನಿರಂತರ ಡಯಾಕ್ಸಿನ್ ಸಂಪರ್ಕಕ್ಕೆ ಬರುವುದರಿಂದ, ಪ್ಯಾಡು ಯೋನಿಯ ಒಳ ಲೋಳ್ಪೊರೆಯ ಸಂಪರ್ಕಕ್ಕೆ ಬರುವುದರಿಂದ ಕ್ಯಾನ್ಸರ್ ರೋಗಕಾರಕವಾಗಬಹುದು ಎಂಬ ಶಂಕೆಯಿದೆ. 

ಈ ವಾದಗಳಲ್ಲಿ ಹುರುಳಿರಬಹುದು, ಇಲ್ಲದಿರಬಹುದು ಆದರೆ ಹೆಣ್ಮಕ್ಕಳು ತುಟ್ಟಿಯಾದರೂ ನ್ಯಾಪ್ಕಿನ್ ಕೊಂಡು, ಬಳಸಿ, ಹೇಗೋ ವಿಲೇವಾರಿ ಮಾಡಿ ಎಷ್ಟು ಒಗ್ಗಿದ್ದಾರೆಂದರೆ ಅವರು ಮರಳಿ ‘ಬಟ್ಟೆಯ ದಿನ’ಗಳಿಗೆ ಹೋಗಲಾರದವರಾಗಿದ್ದಾರೆ. ನಾವು ದಿನೇದಿನೇ ‘ಬಳಸಿ ಬಿಸಾಡುವ’ ವಸ್ತುಗಳ ದಾಸರಾಗುತ್ತಿದ್ದೇವೆ. ಅಪಾರ ಪ್ರಮಾಣದ ಮರುಬಳಸಲಾಗದ, ಪರಿಸರಕ್ಕೆ ಅಪಾಯಕಾರಿಯಾದ ಕಸ ಉತ್ಪತ್ತಿ ಮಾಡುತ್ತಿದ್ದೇವೆ. ಅದರ ಒಳಿತು ಕೆಡುಕುಗಳ ಬಗೆಗೆ ಕಿಂಚಿತ್ ಯೋಚಿಸದೆ ಈಗ ಬಟ್ಟೆಯಿಂದ ಪ್ಯಾಡಿಗೆ ಬಂದಿದ್ದೇವೆ. ಆದರೂ ಮರುಚಿಂತಿಸಬೇಕಾದ ಹೊತ್ತು ಬಂದಿದೆ.
ಹಾಗಾದರೆ ಪರಿಸರ ಸ್ನೇಹಿಯಾಗಿ ಹೇಗೆ ‘ಮುಟ್ಟ’ನ್ನು ನಿಭಾಯಿಸುವುದು? 

ಇಡಿಯ ಮಹಿಳಾ ಸಂಕುಲಕ್ಕೇ ಅನ್ವಯವಾಗುವ ಏಕೈಕ ಪರಿಸರ ಸ್ನೇಹಿ, ದೇಹ ಸ್ನೇಹಿ ವಿಧಾನ ಇಲ್ಲ. ಅವರವರ ಆದ್ಯತೆ, ಅವಶ್ಯಕತೆ, ವಯಸ್ಸು, ಕೊಳ್ಳುವ-ಬಳಸುವ ಸಾಮರ್ಥ್ಯದ ಮೇಲೆ 3-4 ವಿಧಾನಗಳು ಲಭ್ಯವಿವೆ.
  • ಯಾರಿಗೆ ಸಮಯ, ನೀರು, ಸಹನೆ ಲಭ್ಯವೋ ಮತ್ತು ಸಾಧ್ಯವೋ ಅವರು ಹಳೆಯ ವಿಧಾನಕ್ಕೆ ಮರಳಬಹುದು. ಶುಭ್ರ, ಒಣ, ಹತ್ತಿಯ ಬಟ್ಟೆಗಳನ್ನು ಬಳಸಬಹುದು. 
  • ಬಟ್ಟೆಯ ಪ್ಯಾಡುಗಳೂ ಬಳಕೆಯಲ್ಲಿವೆ. ಹತ್ತಿಬಟ್ಟೆ ಮತ್ತು ಸೆಣಬನ್ನು ಅದರಲ್ಲಿ ಬಳಸುತ್ತಾರೆ. ಅವನ್ನು ತೊಳೆದು ಒಣಗಿಸಿ ಮತ್ತೆ ಬಳಸಬಹುದಾಗಿದೆ. ನಾನಾ ಆಕಾರ, ವಿನ್ಯಾಸ, ಸ್ವರೂಪಗಳಲ್ಲಿ ಅವು ಲಭ್ಯವಿವೆ.
  • ಮದುವೆಗಿಂತ ಮುನ್ನ ಬಳಸಲು ಯುವ ಸಮುದಾಯಕ್ಕೆ ನ್ಯಾಪ್ಕಿನ್ ಸೂಕ್ತವಾಗಿದೆ. ಅದಕ್ಕಾಗಿ ಸರ್ಕಾರ ಸಹಾಯ ಧನ ನೀಡಿ ಪರಿಸರಸ್ನೇಹಿ ನ್ಯಾಪ್ಕಿನ್‌ಗಳನ್ನು ಅತಿ ಕಡಿಮೆ ದರದಲ್ಲಿ ತಯಾರಿಸಲು ಉತ್ತೇಜಿಸಬೇಕು. ಜೊತೆಗೆ ನ್ಯಾಪ್ಕಿನ್‌ಗಳಿಗೆ ಸೂಕ್ತ ವಿಲೇವಾರಿ ವ್ಯವಸ್ಥೆ ಕಲ್ಪಿಸಬೇಕು. ತಮಿಳುನಾಡಿನ ಕೊಯಮತ್ತೂರಿನ ಅರುಣಾಚಲಂ ಮುರುಗನಾಥನ್, ಗೋವಾದ ಪಿಳ್ಗಾಂವ್ ಹಳ್ಳಿಯ ಸ್ವಸಹಾಯ ಸಂಘ ಸಹೇಲಿ, ಮತ್ತವರಂಥ ಅನೇಕ ಸಣ್ಣ ಉದ್ದಿಮೆದಾರರು ಕಡಿಮೆ ಬೆಲೆಯ ಪರಿಸರ ಸ್ನೇಹಿ, ಮಣ್ಣಿನಲ್ಲಿ ಕರಗುವ ನ್ಯಾಪ್ಕಿನ್ನುಗಳನ್ನು ತಯಾರಿಸುತ್ತಿದ್ದಾರೆ. ಗೋವಾ ಹಳ್ಳಿಯ ‘ಸಹೇಲಿ’ ಗುಂಪಿನ ಮಹಿಳೆಯರು 8 ದಿನದಲ್ಲಿ ಮಣ್ಣಿನಲ್ಲಿ ಕರಗುವ ನ್ಯಾಪ್ಕಿನ್ ತಯಾರಿಸಿರುವುದಾಗಿ ಹೇಳಿದ್ದಾರೆ. ಅವರ ಮುಖ್ಯ ಕಚ್ಛಾವಸ್ತು ಪೈನ್ ವುಡ್ ಪೇಪರ್. ಅದರ ಜೊತೆ ಬಟರ್ ಪೇಪರ್, ಸಿಲಿಕಾನ್ ಪೇಪರ್, ನಾನ್ ವೂವನ್ ಪೇಪರ್ ಮತ್ತು ಹತ್ತಿಯನ್ನೂ ಬಳಸುತ್ತಾರೆ. ಸೋಂಕುರಹಿತವಾಗಿಸಲು ಯುವಿ ರೇಡಿಯೇಷನ್ನಿಗೊಳಪಡಿಸಲಾಗುತ್ತದೆ. ಎಲ್ಲ ಕಚ್ಛಾವಸ್ತುಗಳೂ ತಮಿಳುನಾಡಿನಿಂದ ಬರುತ್ತವೆ ಎನ್ನುತ್ತಾರೆ ಸಹೇಲಿಯ ಜಯಶ್ರೀ. 8 ಪ್ಯಾಡುಗಳಿರುವ ಅವರ ‘ಸಖಿ’ ಪ್ಯಾಕಿನ ಬೆಲೆ 40 ರೂಪಾಯಿ. ಈ ಪ್ಯಾಡುಗಳ ಪರಿಸರಸ್ನೇಹಿ ಗುಣ ಕುರಿತ ಸತ್ಯಾಸತ್ಯತೆಯನ್ನು ಸಂಶೋಧನೆಗೊಳಪಡಿಸಿ ಸರ್ಕಾರ ಸಹಾಯ ಧನ ಒದಗಿಸಿ ಉತ್ತೇಜಿಸಬೇಕು. ಸ್ಯಾನಿಟರಿ ನ್ಯಾಪ್ಕಿನ್‌ನಂತೆ ಮಕ್ಕಳಿಗೆ ಬಳಸುವ ಪ್ಯಾಡುಗಳಿಗೂ ಈ ಮಾತು ಅನ್ವಯಿಸುತ್ತದೆ.
  • ಯೋನಿಯೊಳಗಿಟ್ಟುಕೊಳ್ಳುವ ಸಣ್ಣ ಕೊಳವೆಯಂತಹ ಟ್ಯಾಂಪೂನುಗಳು ಬಳಕೆಯಲ್ಲಿವೆ. ರಕ್ತ ಹೀರಿಕೊಳ್ಳಬಲ್ಲ ಸೀಮೆಸುಣ್ಣ ಆಕಾರದ ವಸ್ತು ಟ್ಯಾಂಪೂನ್. ಅದರ ತುದಿಗೊಂದು ದಾರದ ಬಾಲವಿರುತ್ತದೆ. ಇದನ್ನು ಯೋನಿಯೊಳಗೆ ತೂರಿಸಿಕೊಂಡು ನಂತರ ದಾರದ ಸಹಾಯದಿಂದ ಹೊರಗೆಳೆದು ಹಾಕಲಾಗುತ್ತದೆ. ಇದನ್ನು ಸಾವಿರಾರು ವರ್ಷಗಳಿಂದ ಹೆಣ್ಮಕ್ಕಳು ಬಳಸಿದ್ದಾರೆ. ಈಜಿಪ್ಟಿನ ಹೆಣ್ಮಕ್ಕಳು ಪ್ಯಾಪಿರಸ್ ಎಂಬ ನದಿದಡದ ಆಪುಹುಲ್ಲಿನ ದಂಟಿನ ತಿರುಳಿನಿಂದ ಮಾಡಿದ ಟ್ಯಾಂಪೂನು ಬಳಸಿರುವರೆಂದು ಅವರ ಹೀರೋಗ್ಲಿಫಿಕ್ಸ್ ದಾಖಲೆಗಳು ಹೇಳಿವೆ. ಜಪಾನಿನಲ್ಲಿ ಪೇಪರಿನ ಟ್ಯಾಂಪೂನ್ ಬಳಸುತ್ತಿದ್ದರು. ವಿಶ್ವದ ಬೇರೆಬೇರೆ ಕಡೆ ಹೀರಿಕೊಳ್ಳುವ ಗುಣವಿರುವ ನಾನಾ ವಸ್ತುಗಳಿಂದ ಅವನ್ನು ತಯಾರಿಸಿ ಬಳಸಲಾಗಿದೆ. ಈಗಲೂ ಅವು ಕೆಲವೆಡೆ ವಿಸ್ತೃತ ಬಳಕೆಯಲ್ಲಿವೆ. ಆದರೆ ಮಾರುಕಟ್ಟೆಯಲ್ಲಿ ಈಗ ಕಾಟನ್, ರೆಯಾನ್, ಪಾಲಿಎಸ್ಟರ್, ಪಾಲಿಇಥಿಲೀನ್, ಪಾಲಿಪ್ರೊಪಿಲೀನ್‌ಗಳಿಂದ ಮಾಡುತ್ತಾರೆ. ಇವುಗಳಲ್ಲಿ ಕಾಟನ್ ಬಿಟ್ಟರೆ ಉಳಿದವು ಕರಗುವ ವಸ್ತುಗಳಲ್ಲ. ಎಂದೇ ಪರಿಸರ ಸ್ನೇಹಿ ವಿಲೇವಾರಿ ಸವಾಲಿನದಾಗಿದೆ. ಅಲ್ಲದೆ ಕನ್ಯೆಯರಿಗೆ ಅದು ಸೂಕ್ತವಲ್ಲ. 
  • ಕನ್ಯೆಯರಲ್ಲದ ಹೆಣ್ಮಕ್ಕಳು ಆರಾಮವಾಗಿ ಬಳಸಬಹುದಾದ ಒಂದು ಪರ್ಯಾಯವಿದೆ. ಅದು ‘ಮುಟ್ಟಿನ ಬಟ್ಟಲು’ ಅಥವಾ ‘ಮೆನ್‌ಸ್ಟ್ರುವಲ್ ಕಪ್’. ಶಿ ಕಪ್, ಸಿಲ್ಕಿ ಕಪ್, ಗ್ರೀನ್ ಕಪ್, ದಿವಾ ಕಪ್ (ಕೆನಡ), ಮೂನ್ ಕಪ್ (ಯುಕೆ) ಮುಂತಾದ ಬ್ರ್ಯಾಂಡ್ ಹೆಸರುಗಳಲ್ಲಿ ದೊರೆಯುತ್ತದೆ. ಇದು ಐದಾರು ದಶಕಗಳಿಂದ ಅಮೆರಿಕ, ಕೆನಡ, ಯುಕೆ ಮತ್ತಿತರ ಕಡೆ ಬಳಕೆಯಲ್ಲಿದೆ. ಭಾರತದಲ್ಲೂ ಬಳಸಲ್ಪಡುತ್ತಿದೆ. ಆದರೆ ಇದಿನ್ನೂ ಜನಪ್ರಿಯವಾಗಬೇಕಿದೆ.
ಇದು ನಮ್ಮ ಭವಿಷ್ಯದ ಪರಿಣಾಮಕಾರಿ, ಸುರಕ್ಷಿತ, ಪರಿಸರ ಸ್ನೇಹಿ, ಕಾಸ್ಟ್ ಎಫೆಕ್ಟಿವ್ ಪರ್ಯಾಯ ವಿಧಾನವಾಗಿದ್ದು ಈ ಕುರಿತು ಕೆಲ ಮಾಹಿತಿ ನೀಡುವುದು ಒಳ್ಳೆಯದೆನಿಸುತ್ತಿದೆ:



ಇದು ಟ್ಯಾಂಪೂನಿನಂತೆ ಯೋನಿಯೊಳಗಿಟ್ಟುಕೊಳ್ಳಬೇಕಾದ ‘ಬಟ್ಟಲು.’ ಆದರೆ ಎಂಥದೋ ಒಂದು ವಸ್ತುವನ್ನು ದೇಹದೊಳಗಿಟ್ಟುಕೊಳ್ಳುವುದೆಂದರೆ ನಮಗೆ ಹಿಂಜರಿಕೆ, ನೂರಾರು ಪ್ರಶ್ನೆ. ಇದನ್ನು ಒಳಗಿಟ್ಟುಕೊಂಡರೆ ಏನಾದೀತೋ ಎಂಬ ಭಯ. ಸಹಜವೇ. ಮುಟ್ಟಿನ ಬಟ್ಟಲನ್ನು ಮೆಡಿಕಲ್ ಗ್ರೇಡ್ ಸಿಲಿಕಾನ್‌ನಿಂದ ತಯಾರಿಸಿರುತ್ತಾರೆ. ಮಕ್ಕಳಿಗೆ ಬಾಟಲಿ ಹಾಲು ಕುಡಿಸುವಾಗ ಬಳಸುವ ಸಿಲಿಕಾನ್ ನಿಪ್ಪಲ್ ನೋಡಿರುತ್ತೀರಿ. ಅಂಥದೇ ಮೆತ್ತನ್ನ ಆದರೆ ಧೃಢವಾದ ವಸ್ತು ಅದು. ಮೆಡಿಕಲ್ ಗ್ರೇಡ್ ಸಿಲಿಕಾನ್ ಒಂದು ಅದ್ಭುತ ಸಂಶೋಧನೆ. ಅದು ಮಾನವ ದೇಹಕ್ಕೆ ಅತ್ಯಂತ ಹೊಂದಿಕೊಳ್ಳುವ ವಸ್ತು. ಮಾನವ ದೇಹದೊಳಗೆ, ಹೊರಗೆ ಇಡಲು ಬಳಸುವ ಎಷ್ಟೋ ವಸ್ತು-ಉಪಕರಣಗಳನ್ನು ಇದರಿಂದ ತಯಾರಿಸುತ್ತಾರೆ. ಸಿಲಿಕಾನಿನಲ್ಲಿ ಕಡಿಮೆ ಅವಧಿಗೆ ದೇಹದೊಳಗಿರುವ; ದೀರ್ಘಾವಧಿಗೆ ದೇಹದೊಳಗಿರುವ; ದೇಹದ ಒಳಭಾಗದಲ್ಲಿ ಬಳಸದ ಎಂದು ಮೂರು ವಿಧಗಳಿವೆ. ಮೂತ್ರ ಹೊರಹೋಗಲು ಹಾಕುವ ನಳಿಗೆ (ಕ್ಯಾಥೆಟರ್), ಕಣ್ಣಿಗೆ ಹಾಕುವ ಕಾಂಟ್ಯಾಕ್ಟ್ ಲೆನ್ಸ್, ಕೆಟರ‍್ಯಾಕ್ಟ್ ಸರ್ಜರಿ ನಂತರ ಕಣ್ಣಿನೊಳಗಿಡುವ ಲೆನ್ಸ್, ಸ್ತನ ದೊಡ್ಡದು ಮಾಡಲು ಒಳಗಿಡುವ ವಸ್ತು, ಮೂಗಿಗೆ ಹಾಕುವ ಪೈಪು, ಆಪರೇಷನ್ನಿನ ನಂತರ ಸ್ರಾವ-ದ್ರವ ಹೊರಹರಿದುಹೋಗಲು ಹಾಕುವ ಡ್ರೈನ್, ಟ್ಯೂಬುಗಳು, ಕಾಂಡೋಂ (ನಿರೋಧ್), ಸೆಕ್ಸ್ ಟಾಯ್ಸ್, ಆಕ್ಸಿಜನ್-ನೆಬುಲೈಸೇಷನ್ ಮಾಸ್ಕ್, ದೇಹದೊಳಗಿರಿಸುವ ನಾನಾ ಇಂಪ್ಲಾಂಟುಗಳು ವಗೈರೆ ವಗೈರೆ ಇದೇ ವಸ್ತುವಿನಿಂದಲೇ ತಯಾರಾಗುವಂಥವು.

ಮನುಷ್ಯ ದೇಹ ಸಮುದ್ರವಿದ್ದ ಹಾಗೆ. ಅದು ಹಾಗೆ ಯಾವುದೆಂದರೆ ಅದನ್ನು ಒಳಗಿಟ್ಟರೆ ಸುಮ್ಮನಿರುವುದಿಲ್ಲ. ತನ್ನ ದೇಹಕ್ಕೆ ‘ಬಯೋ ಕಂಪ್ಯಾಟಿಬಲ್’ ಅಲ್ಲದ ವಸ್ತುವನ್ನು ಒಳಗಿಟ್ಟರೆ ಅದನ್ನು ಕೀತು, ಕೊಳೆತು, ಬಾವು ಬರಿಸಿ, ಕರಗಿಸಿ, ಗೆಡ್ಡೆಗೊಂಡು, ಏನೋ ಆಗುವಂತೆ ಮಾಡಿ ಹೊರಬಿಸಾಡುತ್ತದೆ. ವಸ್ತು ಅಷ್ಟೇ ಅಲ್ಲ, ಮನುಷ್ಯ ಅಂಗವೇ ಆದ ‘ಕಿಡ್ನಿ’ಯನ್ನು ಬೇರೆಯವರಿಂದ ದಾನವಾಗಿ ಪಡೆದು ಕೊನೆಗೆ ಹೊಂದದಿದ್ದರೆ ‘ನನಗದು ಬೇಡ’ ಎಂದು ಹೊರಬಿಸಾಡುತ್ತದೆ. ಅಂತಹ ದೇಹವು ಸಿಲಿಕಾನನ್ನು ಸುಮ್ಮನೆ ತಡೆದುಕೊಳ್ಳುತ್ತದೆ. ಯಾಕೆಂದರೆ ಸಿಲಿಕಾನ್ ದೇಹದೊಂದಿಗೆ ಯಾವುದೇ ಕ್ರಿಯೆ-ಪ್ರತಿಕ್ರಿಯೆ ನಡೆಸದ ನಿರ್ಲಿಪ್ತ ವಸ್ತು. ಸಿಲಿಕಾನ್, ಆಕ್ಸಿಜನ್, ಕಾರ್ಬನ್, ಹೈಡ್ರೋಜೆನ್‌ಗಳ ಪಾಲಿಮರ್ ಅದು. ಅಂಟುವುದಿಲ್ಲ, ವಿಷಕಾರಕವಲ್ಲ, ಉಷ್ಣತೆ ಏರುಪೇರಿಗೆ ಜಗ್ಗುವುದಿಲ್ಲ. ನೀರು ಹೀರಿಕೊಂಡು ಉಬ್ಬುವುದಿಲ್ಲ. ಕರೆಂಟು ಹರಿಯಗೊಡುವುದಿಲ್ಲ. ಎಲ್ಲಕ್ಕಿಂತ ವಿಶೇಷ ಗುಣವೆಂದರೆ ಅದು ಮಣ್ಣಿನಲ್ಲಿ ಸುಲಭವಾಗಿ ಕರಗಬಲ್ಲ ವಸ್ತು.

ಮುಟ್ಟಿನ ಬಟ್ಟಲೂ ಸಿಲಿಕಾನಿನ ಉತ್ಪನ್ನವಾಗಿರುವುದರಿಂದ ಸುಲಭ ಬಳಕೆ, ಮರುಬಳಕೆ ಸಾಧ್ಯವಾಗಿದೆ. ಎಂದೇ ಅದಕ್ಕೆ ವಿಶೇಷ ಗಮನ ನೀಡಬೇಕಿದೆ.

ಮುಟ್ಟಿನ ಬಟ್ಟಲನ್ನು ಹಾಕಿಕೊಳ್ಳುವುದು ಸುಲಭ. ತಿರುಗಿಸಿಟ್ಟ ಗಂಟೆಯಾಕಾರದ ಬಟ್ಟಲುಗಳ ಬುಡದಲ್ಲಿ ಒಂದು ಚೊಟ್ಟು ಇರುತ್ತದೆ. ಒಂದು ಕಾಲನ್ನು ಕುರ್ಚಿ ಅಥವಾ ಕಮೋಡಿನ ಮೇಲಿಟ್ಟು ಇನ್ನೊಂದು ಕಾಲಿನ ಮೇಲೆ ನಿಂತು ಹಾಕಿಕೊಳ್ಳಬಹುದು. ತುದಿ ಮಡಚಿ ಯೋನಿಯೊಳಗೆ ತುಂಬಿ ಒಮ್ಮೆ ತಿರುಪಿದಂತೆ ಸರಿಸಿದರೆ ಮುಗಿಯಿತು, ಒಳಹೋಗಿ ಅಗಲಗೊಂಡು ಹರಡಿಕೊಂಡು ಗಚ್ಚಾಗಿ ಹಿಡಿದು ಕೂರುತ್ತದೆ. ಅವರವರ ರಕ್ತಸ್ರಾವಕ್ಕೆ ತಕ್ಕಂತೆ 4 ರಿಂದ 12ತಾಸಿಗೊಮ್ಮೆ ಅದನ್ನು ಬದಲಿಸಬೇಕಾಗುತ್ತದೆ. ಅದರ ಬುಡದ ನಿಪ್ಪಲಿನಂತಹ ಚೊಟ್ಟು ಎಳೆದರೆ ಹೊರಬರುತ್ತದೆ. ಹೊರತೆಗೆದು, ತೊಳೆದು ಮತ್ತೆ ಬಳಸಬೇಕು. ತಿಂಗಳ ಸ್ರಾವ ಮುಗಿದ ಕೂಡಲೇ ನೀರಲ್ಲಿ ಕುದಿಸಿ, ಒಣಗಿಸಿ, ಇಟ್ಟುಕೊಳ್ಳಬಹುದು. ಒಂದು ಕಪ್ ಅನ್ನು ೧೦ ವರ್ಷದ ತನಕ ಬಳಸಬಹುದು.

ಅವರವರ ಎತ್ತರ, ಗಾತ್ರ, ಸ್ರಾವದ ಪ್ರಮಾಣದ ಮೇಲೆ ಭಿನ್ನ ಅಳತೆಯ ಕಪ್‌ಗಳು ಲಭ್ಯವಿವೆ. ಶಿ ಕಪ್ 28 ಎಂಎಲ್ ಹಿಡಿಯುತ್ತದೆ. ದಿವಾ ಕಪ್ 30 ಎಂಎಲ್. ಸಾಧಾರಣವಾಗಿ ತಿಂಗಳ ಸ್ರಾವ 35 ಎಂಎಲ್ ಇರುತ್ತದೆ. ಅದು 10-80 ಎಂಎಲ್ ತನಕವೂ ಇರಬಹುದು. ಮಕ್ಕಳಾಗದ 30 ವರ್ಷ ಒಳಗಿನವರು ಸ್ಮಾಲ್ ಕಪ್ ಬಳಸುವುದು ಸೂಕ್ತ. 30 ವರ್ಷ ಮೇಲ್ಪಟ್ಟವರು, ನಾರ‍್ಮಲ್ ಡೆಲಿವರಿ ಆಗಿ ಮಕ್ಕಳ ಹೆತ್ತವರು ಮೀಡಿಯಂ ಅಥವಾ ಲಾರ‍್ಜ್ ಕಪ್ ಬಳಸಬಹುದು. ಸಾಮಾನ್ಯವಾಗಿ ಸ್ರಾವದ ಸಮಯದಲ್ಲಿ ಪ್ರತಿದಿನ ಬೆಳಿಗ್ಗೆ ಒಮ್ಮೆ, ರಾತ್ರಿ ಒಮ್ಮೆ ಕಪ್ ಬರಿದುಮಾಡಿ ತೊಟ್ಟುಕೊಂಡರೆ ಸಾಕಾಗುತ್ತದೆ.

ಒಬ್ಬ ಮಹಿಳೆ ಸರಾಸರಿ 30-40 ವರ್ಷ ಮುಟ್ಟಿನ ಸ್ರಾವಕ್ಕೊಳಗಾಗುತ್ತಾಳೆ. ಇಡಿಯ ಜೀವಮಾನಕ್ಕೆ ೪ ಕಪ್ ಸಾಕು. ಒಂದರ ಬೆಲೆ 500 ರೂಪಾಯಿ. ಎಂದರೆ 10 ವರ್ಷಕ್ಕೆ 500 ರೂಪಾಯಿ ಖರ್ಚಾಗುತ್ತದೆ. ಒಂದು ವರ್ಷಕ್ಕೆ 50 ರೂಪಾಯಿ ಬೇಕು. ಅಂದರೆ.. ತಿಂಗಳಿಗೆ 4 ರೂಪಾಯಿ ಸಾಕು!






ಆದರೆ ವೈದ್ಯಕೀಯವಾಗಿ ಸುರಕ್ಷಿತವೆಂದು ಸೂಚಿಸಲ್ಪಟ್ಟರೂ ಹಾಗಾದೀತು ಎಂದು ಹೆದರಿ, ಹೀಗಾದೀತು ಎಂದು ಅಂಜಿ, ಮತ್ತಿನ್ನೇನೇನೋ ಆದೀತು ಎಂದು ಹಿಂಜರಿದು, ತನ್ನ ಅಂಗದೊಳಗೆ ತಾನೇ ಏನನ್ನೋ ತೂರಿಸಿ ಇಟ್ಟುಕೊಳ್ಳಲು ಅಸಹ್ಯ ಪಟ್ಟು ಮಹಿಳೆಯರು ಪ್ಯಾಡಿನಷ್ಟು ಸುಲಭವಾಗಿ ಅದಕ್ಕಿನ್ನೂ ಒಗ್ಗಿಕೊಳ್ಳದೇ ಇದ್ದಾರೆ. ಜೊತೆಗೆ ಪ್ರತಿ ತಿಂಗಳು ಸ್ಯಾನಿಟರಿ ಪ್ಯಾಡ್ ಮಾರಿದರೆ ಬರುವಷ್ಟು ಲಾಭ 10 ವರ್ಷ ಬಾಳಿಕೆ ಬರುವ ಕಪ್ ಮಾರಿದರೆ ಬರುವುದಿಲ್ಲವಾದ್ದರಿಂದ ಕಂಪನಿಗಳು ಅದರ ತಯಾರಿ, ಮಾರಾಟಕ್ಕೆ ಮುಂದೆ ಬರುತ್ತಿಲ್ಲ.

ಆದರೆ ಭವಿಷ್ಯದ ಆಯ್ಕೆ ಇದು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಎಂದೇ ಸರ್ಕಾರ ಈ ಮುಂಚೆ ನಿರೋಧ್ ತಯಾರಿಸಿ ಪುಕ್ಕಟೆ ವಿತರಿಸಿದಂತೆ ಈ ಕಪ್‌ಗಳನ್ನೂ ತಯಾರಿಸಿ ಬಳಸಲು ಕೊಡುವುದು, ಜಾಗೃತಿ ಮೂಡಿಸುವುದು ಅವಶ್ಯವಾಗಿದೆ.

ಮುಟ್ಟು ಎನಲು ಹಿಂಜರಿಕೆ. ಮುಟ್ಟಿನ ಬಟ್ಟೆ ತೊಳೆದು ಬಿಸಿಲಿಗೆ ಒಣಗಿಸಲು ಹಿಂಜರಿಕೆ. ನಮ್ಮ ಅಂಗಾಂಗಗಳ ಮುಟ್ಟಿಕೊಳಲೂ ಹಿಂಜರಿಕೆ. ಅದರ ಬಗೆಗೆ ಮಾತನಾಡಲೂ ಹಿಂಜರಿಕೆ. ಏನು ಮಾಡುವುದೆಂದು ಕೇಳಲೂ ಹಿಂಜರಿಕೆ. ಹೇಳಿದ್ದನ್ನು ಕೇಳಿಸಿಕೊಳ್ಳಲೂ ಹಿಂಜರಿಕೆ. ಅನುಸರಿಸಲೂ ಅನುಮಾನ ಭರಿತ ಹಿಂಜರಿಕೆ.

ಅವನ್ನೆಲ್ಲ ದಾಟಿ ಅಂಥ ಒಂದು ದಿನ ಬಂದೀತು, ಆಗ ಹೆಣ್ಮಕ್ಕಳೆಲ್ಲ ತಮ್ಮ ದೇಹವನ್ನು ಸ್ನೇಹಭಾವದಿಂದ ನೋಡಿಯಾರು. ಪ್ಯಾಡು, ಟ್ಯಾಂಪೂನ್, ಕಪ್ಪುಗಳು ಅವರಿಗೆ ಮಾತ್ರ ಅಲ್ಲ, ಅವರನ್ನು ಹೆತ್ತ ಭೂಮಿಗೂ ಸ್ನೇಹಿಯಾಗುವಂತಾದೀತು.

(ಚಿತ್ರಗಳು: ಅಂತರ್ಜಾಲ ಕೃಪೆ)

Saturday, 1 July 2017

ಗ್ವಾನೊ ಕಥನ




ಸದಾ ಒದ್ದೆಯಾಗಿ ಮಂಜು ಮುಸುಕಿದ ಪೆಸಿಫಿಕ್ ಸಮುದ್ರ ದಂಡೆ, ಭೂಮಿ ಮೇಲಿನ ಅತಿ ಒಣಹವೆಯ ಪ್ರದೇಶವಾದ ಅಟಕಾಮಾ ಮರುಭೂಮಿ - ಇವೆರೆಡರ ನಡುವೆ ಹರಡಿಕೊಂಡಿರುವ ಪುರಾತನ ನಾಗರಿಕತೆಯ ತೊಟ್ಟಿಲು ಪೆರು. ಎರಡು ಸಮಾನಾಂತರ ಪರ್ವತ ಶ್ರೇಣಿಗಳಿರುವ, ೨೦-೩೦ ನದಿಗಳು ಹರಿವ ದೇಶ ಅದು. ಅತಿ ತೇವಾಂಶ-ಅತಿ ಒಣಹವೆ, ಅತಿ ನೀರು-ಮಳೆಯೇ ಬೀಳದ ಮರುಭೂಮಿ, ಕಡಿದಾದ ಇಳಿಜಾರು-ನೀರು ನಿಂತುಬಿಡುವ ಬಯಲು - ಹೀಗೆ ಸಂಪೂರ್ಣ ವಿಭಿನ್ನ ನೆಲ ಲಕ್ಷಣಗಳ ಹೊಂದಿರುವ ದೇಶ ಪೆರು. ಹವಾಮಾನಕ್ಕೆ ತಕ್ಕಂತೆ ವೈವಿಧ್ಯಮಯ ಬೆಳೆ ಬೆಳೆದಿರುವ ಯಶಸ್ವಿ ಕೃಷಿಕರು ಅವರು.

ಪೆರುವಿನ ಪವಿತ್ರ ಕಣಿವೆಯಲ್ಲಿ ಪಯಣಿಸುವಾಗ ಎಲ್ಲೆಲ್ಲು ಬೆಳೆದುನಿಂತ ಹಸಿರು ಕಣ್ತುಂಬುವಂತಿತ್ತು. ಗುಡ್ಡದ ಇಳಿಜಾರುಗಳಲ್ಲಿ, ಕಡಿದಾದ ಪರ್ವತಗಳ ಪಾರ್ಶ್ವದಲ್ಲಿ ಕಡೆದ ಮೆಟ್ಟಿಲುಗಳಲ್ಲಿ, ಬಯಲುಗಳಲ್ಲಿ ಎಲ್ಲೆಲ್ಲು ಸಮೃದ್ಧ ಮತ್ತು ವೈವಿಧ್ಯಮಯ ಬೆಳೆ. ಅದನ್ನು ನೋಡುವಾಗ, ನಮ್ಮ ಕೃಷಿಯೂ, ರೈತ ಆತ್ಮಹತ್ಯೆಗಳೂ ನೆನಪಿಗೆ ಬಂದವು. ನಮ್ಮ ರೈತರು ರಸಗೊಬ್ಬರ-ಬೀಜ ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ, ನಮಗಿಂತ ಮೊದಲೇ ಜಾಗತೀಕರಣಗೊಂಡ ಪೆರುವಿನ ರೈತರು ಗೊಬ್ಬರ, ಬೀಜಕ್ಕಾಗಿ ಸಾಲ ಮಾಡುವರೇ? ಆತ್ಮಹತ್ಯೆಗೆಳಸುವರೇ? ಎಂಬ ಪ್ರಶ್ನೆ ಸುಳಿಯಿತು.

ಏನು ಗೊಬ್ಬರ ಹಾಕಿ ಬೆಳೆ ಬೆಳೆಯುತ್ತಾರೋ? ಅಲ್ಪಾಕ, ಲಾಮಗಳ ಹಿಕ್ಕೆಯೋ ಅಥವಾ ರಸಗೊಬ್ಬರವೋ? ನಮ್ಮ ಚರ್ಚೆಯ ಮಾತು ಅರ್ಥಮಾಡಿಕೊಂಡನೋ ಎನ್ನುವಂತೆ ಗೈಡ್ ಉತ್ತರಿಸಿದ:

‘ಗ್ವಾನೊ ವಾನೊ.’

‘ಗ್ವಾನೊ?’

‘ಹೌದು, ಅದು ಗೊಬ್ಬರ. ನಮ್ಮ ಆಂಡಿಯನ್ ಭಾಷೆಯಲ್ಲಿ ವ್ಯಾನೊ ಎನ್ನುತ್ತೇವೆ. ಕೇಳಿಲ್ಲವೇನು?’

‘ಇಲ್ಲ. ಏನು ವ್ಯಾನೊ ಎಂದರೆ?’

‘ನೈಟ್ರೇಟ್ ಯುದ್ಧ ಎಂದು ಓದಿಲ್ಲವೆ? ವಾರ್ ಆಫ್ ಪೆಸಿಫಿಕ್ ಗ್ವಾನೋಗಾಗಿಯೇ ನಡೆದದ್ದು. ನೈಟ್ರೇಟ್ ಎಂದರೆ ಗ್ವಾನೋ. ರೈತರ ಕೈ ಹಿಡಿದಿದ್ದು ಅದೇ.’

ರೈತರು ಆತ್ಮಹತ್ಯೆಗೆಳಸದಂತೆ ತಡೆದ ಗ್ವಾನೊ! ಅದಕಾಗಿ ಯುದ್ಧ!!



ಏನಿದು ಗ್ವಾನೊ?

ಗ್ವಾನೊ ಮೂಲ ಕೆದಕಿ ಹೊರಟಾಗ ಆಸಕ್ತಿದಾಯಕ ನೈಟ್ರೇಟ್ ಕಥನ ಎದುರಾಯಿತು.

ನೈಟ್ರೇಟ್ ಆಧುನಿಕ ಮನುಷ್ಯನಿಗೆ ಅತ್ಯವಶ್ಯ ರಾಸಾಯನಿಕ. ಅದಕ್ಕೆ ಹಲವು ಉಪಯೋಗಗಳು. ಗೊಬ್ಬರ ತಯಾರಿ, ಸ್ಫೋಟಕ, ಹೊಗೆ ಬಾಂಬು, ರಾಕೆಟ್ ಪ್ರೊಪೆಲೆಂಟ್, ಗ್ಲಾಸ್ ಎನಾಮೆಲ್, ಆಹಾರ ಸಂರಕ್ಷಣೆ ಎಲ್ಲದರಲ್ಲು ಅದು ಉಪಯೋಗಿಸಲ್ಪಡುತ್ತಿದೆ. ಅಟಕಾಮಾ ಮರುಭೂಮಿಯಲ್ಲಿ ಸಾಲ್ಟ್ ಪೀಟರ್ ಶೋಧಿಸಲ್ಪಟ್ಟು, ೨೦ನೇ ಶತಮಾನದಲ್ಲಿ ಕೃತಕ ತಯಾರಿಕಾ ವಿಧಾನಗಳ ಅಭಿವೃದ್ಧಿಪಡಿಸುವವರೆಗೂ ನೈಟ್ರೇಟ್‌ನ ಮೂಲ ಆಕರವಾಗಿ ಜಗತ್ತು ಗ್ವಾನೊವನ್ನೇ ನೆಚ್ಚಿಕೊಂಡಿತ್ತು.

ಗ್ವಾನೊ ಎಂದರೆ ಹಕ್ಕಿ ಉದುರಿಸಿದ ಪಿಷ್ಠೆ. ಗುಹೆಗಳ ಹಕ್ಕಿ, ಬಾವಲಿ ಮತ್ತು ಕಡಲ ಹಕ್ಕಿಗಳ ಹಿಕ್ಕೆ ಅತ್ಯಂತ ನೈಟ್ರೊಜನ್‌ಯುಕ್ತ. ಅದರಲ್ಲು ಕ್ರಿಮಿಕೀಟ ತಿನ್ನುವ ನೆಲದ ಹಕ್ಕಿಗಳ ಪಿಷ್ಟೆಗಿಂತ; ಗುಹೆಯ ತಂಪಲ್ಲಿ ವಾಸಿಸುವ ಬಾವಲಿಗಳ ಪಿಷ್ಟೆಗಿಂತ ಕಡಲಹಕ್ಕಿಗಳ ಪಿಷ್ಟೆ ಹೆಚ್ಚು ಸಾರಜನಕ, ಪೊಟ್ಯಾಷಿಯಂ ಹಾಗೂ ರಂಜಕಯುಕ್ತ. ಎಂದೇ ಕಡಲ ಹಕ್ಕಿಪಿಷ್ಟೆ ಸಮೃದ್ಧ ಬೆಳೆಗೆ ಸಹಾಯಕ.

ಸಾವಿರಾರು ವರ್ಷಗಳಿಂದ ಆಂಡಿಯನ್ ಜನರು ಗ್ವಾನೊ ಬಳಸಿ, ಮಣ್ಣಿನ ಫಲವತ್ತತೆ ಮತ್ತು ಇಳುವರಿ ಹೆಚ್ಚಿಸಬಹುದೆಂದು ತಿಳಿದಿದ್ದರು. ಇಂಕಾ ರಾಜರು ಗ್ವಾನೊ ಬಳಕೆಯ ಮೇಲೆ ನಿರ್ಬಂಧ ಹೇರಿದ್ದಲ್ಲದೆ ಕಡಲ ಹಕ್ಕಿಗಳ ಕೊಂದವರಿಗೆ, ಅವುಗಳ ಸಂತಾನೋತ್ಪತ್ತಿಗೆ ತೊಂದರೆ ಕೊಟ್ಟವರಿಗೆ ಮರಣದಂಡನೆ ವಿಧಿಸುತ್ತಿದ್ದರು.

ಕಡಲ ಹಕ್ಕಿಗಳು ಈ ಪರಿ ಸಂಖ್ಯೆಯಲ್ಲಿ ಇಲ್ಲಿಗೇ ಏಕೆ ಬಂದವು?

ದಕ್ಷಿಣ ಅಮೆರಿಕದ ಪಶ್ಚಿಮ ತೀರದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಹರಿಯುವ ಶೀತನೀರಿನ ಪ್ರವಾಹ ‘ಹಂಬೋಲ್ಟ್ ಕರೆಂಟ್’. ಅದರ ಉತ್ತರ ತುದಿ ಪೆರು. ಅದು ಎಲ್ಲ ಸಮೃದ್ಧ ಪೋಷಕಾಂಶಗಳು ಪೆರುವಿನ ಕಡಲಾಳ ಬಂದು ಬೀಳುವಂತೆ ಮಾಡುತ್ತದೆ. ಅದಕ್ಕೇ ಅಲ್ಲಿ ಹೆಚ್ಚು ಆಲ್ಗೆ, ಶಿಲೀಂಧ್ರಗಳು ಬೆಳೆಯುತ್ತವೆ. ಅದನ್ನು ತಿಂದು ಮೀನು ಬೆಳೆಯುವುದರಿಂದ ಪ್ರಪಂಚದ ಎಲ್ಲ ಕಡೆಗಿಂತ ಹೆಚ್ಚು ಮೀನು ಪೆರುವಿನ ಕಡಲಲ್ಲಿ ದೊರೆಯುತ್ತದೆ.

ಮೀನು ಹೆಚ್ಚಿರುವುದರಿಂದ ವಲಸೆ ಬರುವ ಕಡಲ ಹಕ್ಕಿಗಳ ಸಂಖ್ಯೆಯೂ ಹೆಚ್ಚು. ಸಮುದ್ರದ ನಡುವಿರುವ ಸಣ್ಣಪುಟ್ಟ ದ್ವೀಪಗಳಿಗೆ ಪೆಂಗ್ವಿನ್, ಪೆಲಿಕನ್ ಸೇರಿದಂತೆ ಲಕ್ಷಾಂತರ ಹಕ್ಕಿಗಳು ಪ್ರತಿವರ್ಷ ವಲಸೆ ಬರುತ್ತವೆ. ಒಣಗುಡ್ಡೆಗಳಂತಹ ಆ ದ್ವೀಪಗಳಲ್ಲಿ ಗಿಡಮರಗಳಿಲ್ಲ, ಗರಿಕೆ ಬೆಳೆಯುವುದಿಲ್ಲ, ಎಲೆ, ಕಡ್ಡಿಗಳೂ ಸಿಗುವುದಿಲ್ಲ. ಹಕ್ಕಿಗಳು ತಮ್ಮ ತುಪ್ಪಳ ಮತ್ತು ಪಿಷ್ಟೆಯಲ್ಲೇ ಮೆತ್ತನ್ನ ಗೂಡು ಕಟ್ಟುತ್ತವೆ. ಮರಿಗಳ ಹಾರಿಸಿಕೊಂಡು ಹೋಗುವವರೆಗೆ ಕೆಲ ತಿಂಗಳು ಅಲ್ಲೆ ತಂಗುತ್ತವೆ.

ಹೀಗೆ ಸಾವಿರಾರು ವರ್ಷಗಳಿಂದ ವರ್ಷವರ್ಷವೂ ಪದರು ಪದರುಗಳಲ್ಲಿ ಮಿಲಿಯಗಟ್ಟಲೆ ಹಕ್ಕಿಗಳ ಪಿಷ್ಟೆ, ಪುಚ್ಛ ಬಿದ್ದುಬಿದ್ದು ಆ ಪುಟ್ಟ ದ್ವೀಪಗಳು ಗೊಬ್ಬರದ ಗುಡ್ಡಗಳಾಗಿ ಪರಿವರ್ತನೆಗೊಂಡಿವೆ. ಪೆರುವಿನ ಬಳಿ ಕೆಲವು ದ್ವೀಪಗಳಂತೂ ೧೦೦-೧೫೦ ಅಡಿ ಆಳದವರೆಗೆ ಹಕ್ಕಿಯ ಹಿಕ್ಕೆಯಿರುವ ಅತ್ಯಂತ ಫಲವತ್ತಾದ ಗೊಬ್ಬರ ಗುಡ್ಡಗಳಾಗಿ ರೂಪುಗೊಂಡಿವೆ. ಮಳೆಯೇ ಬರದ ಒಣ ಹವಾಮಾನವಾದ್ದರಿಂದ ಸಹಸ್ರಾರು ವರ್ಷದಿಂದ ಸಂಗ್ರಹವಾದ ಗ್ವಾನೋದಲ್ಲಿ ೮-೧೬% ನೈಟ್ರೇಟ್ ಅಂಶ ಹಾಗೇ ಉಳಿದು ಬಂದಿದೆ. ಅಷ್ಟೇ ಅಲ್ಲ, ಅದು ‘ವಾಸನೆ’ಯನ್ನೂ ಕಳೆದುಕೊಂಡ ಗೊಬ್ಬರವಾಗಿದೆ.





‘ಅತ್ಯಧಿಕ ಇಳುವರಿ ಬೇಕೆ? ಗ್ವಾನೊ ಬಳಸಿ..’

ಕಡಲ ಹಕ್ಕಿಗಳ ಹಿಕ್ಕೆ ಗೊಬ್ಬರ ಕುರಿತು ಸ್ಪ್ಯಾನಿಶ್ ಆಕ್ರಮಣಕಾರರು ಪೆರುವಿಯನ್ನರಿಂದ ತಿಳಿದುಕೊಂಡರು. ಅಲೆಕ್ಸಾಂಡರ್ ಹಂಬೋಲ್ಟ್ ಎಂಬ ಯೂರೋಪಿಯನ್ ಭೂಗೋಳಶಾಸ್ತ್ರಜ್ಞ ಗ್ವಾನೊ ಬಳಕೆ ಬಗೆಗೆ ವಿಸ್ತೃತವಾಗಿ ಅಧ್ಯಯನ ನಡೆಸಿ ಬರೆದರು. ೧೮೦೨ರ ಬಳಿಕ ಗ್ವಾನೊ ವ್ಯಾಪಾರದ ಭರಾಟೆ ಶುರುವಾಯಿತು. ಸ್ಪೇನಿನಿಂದ ಸ್ವತಂತ್ರವಾದ ಮೇಲೆ ಪೆರು ೧೮೨೦-೨೫ರ ನಡುವೆ ತನ್ನ ಮೊದಲ ಹಡಗು ತುಂಬ ಗ್ವಾನೋ ಸರಕನ್ನು ಬ್ರಿಟನಿಗೆ ರಫ್ತು ಮಾಡಿತು. ಬ್ರಿಟನಿನ ಕಂಪನಿಯೊಂದು ದಲ್ಲಾಳಿಯಾದ ಮೇಲೆ ಗ್ವಾನೋ ಅದೃಷ್ಟ ಖುಲಾಯಿಸಿತು.


ಹತ್ತಿ, ಮೆಕ್ಕೆಜೋಳ ಬೆಳೆಗೆ ಗ್ವಾನೊ ಅತ್ಯುತ್ತಮ ಎಂಬ ಜಾಹೀರಾತು ಎಲ್ಲೆಲ್ಲು ಕಂಡುಬಂತು. ಗ್ವಾನೊ ಹಕ್ಕಿಗಳ ಹಿಕ್ಕೆಯಲ್ಲಿ ಎಷ್ಟು ನೈಟ್ರೊಜನ್ ಇದೆಯೆಂದರೆ ಸ್ಫೋಟಕಗಳನ್ನು ತಯಾರಿಸಬಹುದು ಎಂಬ ಜನಪ್ರಿಯ ನಂಬಿಕೆ ಚಾಲ್ತಿಗೆ ಬಂತು. ೧೮೪೦ರಿಂದ ೧೮೮೦ರ ನಡುವೆ ೪೦ ವರ್ಷಗಳಲ್ಲಿ ೨೦ ಮಿಲಿಯನ್ ಟನ್ ಗ್ವಾನೋ ಮಾರಾಟವಾಯಿತು. ಹೆಚ್ಚಿನದು ಬ್ರಿಟನ್ನಿಗೇ ಹೋಯಿತು. ೧೮೫೮ನೇ ಇಸವಿ ಒಂದರಲ್ಲೇ ಬ್ರಿಟನ್ ೩ ಲಕ್ಷ ಟನ್ ಗ್ವಾನೋ ಖರೀದಿಸಿತು. ಬೇಡಿಕೆ ಹೆಚ್ಚುತ್ತ ಹೋದಂತೆ ಚಿಂಚಾ ಮತ್ತಿತರ ದ್ವೀಪಗಳಿಂದ ಹಕ್ಕಿಹಿಕ್ಕೆಭರಿತ ಮಣ್ಣು, ಗೊಬ್ಬರದ ರಫ್ತು ವಹಿವಾಟು ಹಿಂದೆಂದೂ ಇಲ್ಲದ ವೇಗದಲ್ಲಿ ನಡೆಯಿತು. ೧೮೪೯ರಲ್ಲಿ ೭೯ ಜನ ಮೊದಲ ಚೀನೀ ಕೆಲಸಗಾರರು ಗೊಬ್ಬರ ಗಣಿಗಾರಿಕೆಗೆಂದೇ ಪೆರುವಿಗೆ ವಲಸೆ ಬಂದರು. ಮುಂದಿನ ಕಾಲು ಶತಮಾನದಲ್ಲಿ ಒಂದು ಲಕ್ಷ ಚೀನೀ ಕೆಲಸಗಾರರು ಗ್ವಾನೊ ತೆಗೆಯುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪೆರುವಿನ ಕಾಡುಗಳಲ್ಲಿ, ಪರ್ವತ-ಗಣಿಗಳಲ್ಲಿ ಸಾವಿರಾರು ಮೈಲು ರೈಲು ಮಾರ್ಗ ಹಾಕಲಾಯಿತು. ಆ ರೈಲುಮಾರ್ಗಗಳು ಚಿನ್ನ, ಬೆಳ್ಳಿ, ತವರ, ರಬ್ಬರ್ ಹಾಗೂ ಗ್ವಾನೋಗಳನ್ನು ಸಾಗಿಸುವ ಉದ್ದೇಶದಿಂದ ರೂಪುಗೊಂಡವು.

ಪೆರು ತನ್ನ ಭಾರೀ ಅಂತಾರಾಷ್ಟ್ರೀಯ ಸಾಲ ತೀರಿಸಿಕೊಂಡಿತು. ಆರ್ಥಿಕತೆ ಉಚ್ಛ್ರಾಯ ಸ್ಥಿತಿ ಮುಟ್ಟಿತು. ಗೊಬ್ಬರದಿಂದ ಗಳಿಸಿದ ಲಾಭ ಎರಡು ಬಿಲಿಯನ್ ಡಾಲರ್ ದಾಟಿತು!

ಲಾಭದ ಆಸೆಗೆ ಬಿದ್ದು ೧೮೫೬ರಲ್ಲಿ ಅಮೆರಿಕ (ಯುಎಸ್‌ಎ) ಗ್ವಾನೊ ಕಾಯ್ದೆ ಜಾರಿಗೆ ತಂದಿತು. ಅದರ ಪ್ರಕಾರ ಪೆಸಿಫಿಕ್ ಮಹಾಸಾಗರದಲ್ಲಿ ಮಾನವ ವಸತಿಯಿಲ್ಲದ ಯಾವುದೇ ನಿರ್ಜನ ದ್ವೀಪದಲ್ಲಿ ಅಮೆರಿಕದ ಪ್ರಜೆ ಗ್ವಾನೊ ಸಂಗ್ರಹವನ್ನು ಕಂಡುಹಿಡಿದರೆ ಅವರಿಗೆ ಆ ಗ್ವಾನೊ ಮೇಲೆ ಸಂಪೂರ್ಣ ಸ್ವಾಮ್ಯವಿರುತ್ತದೆ ಹಾಗೂ ಆ ದ್ವೀಪ ಅಮೆರಿಕಕ್ಕೆ ಸೇರುತ್ತದೆ! ಯಾರದೂ ಅಲ್ಲದ ನೆಲದ ಹಕ್ಕುಗಳನ್ನು ಅಮೆರಿಕವು ತನಗೆ ತಾನೇ ಕೊಟ್ಟುಕೊಂಡ ಕಾಯ್ದೆ ಅದು. ಅಂತಹ ೬೦ಕ್ಕೂ ಹೆಚ್ಚು ದ್ವೀಪಗಳು ಪತ್ತೆಯಾಗಿ ಅಮೆರಿಕಕ್ಕೆ ಸೇರಿದವು. ಈಗಲೂ ೯ ದ್ವೀಪಗಳು ಅಮೆರಿಕದ ಸುಪರ್ದಿನಲ್ಲೇ ಇವೆ.

ಗ್ವಾನೋ ದ್ವೀಪಗಳ ಅಧಿಪತ್ಯಕ್ಕಾಗಿ ಸಾಲುಸಾಲು ಯುದ್ಧಗಳೇ ನಡೆದವು. ೧೮೬೪-೬೬ರಲ್ಲಿ ಸ್ಪೇನ್ ಹಾಗೂ ಚಿಲಿ ದೇಶಗಳು ಒಟ್ಟಾಗಿ ಪೆರು ಮಿತ್ರಪಡೆಗಳ ಮೇಲೆ ಯುದ್ಧಕ್ಕೆ ಹೋದವು. ಚಿಂಚಾದ್ವೀಪದಲ್ಲಿ ಯುದ್ಧವಾಗಿ ಪೆರು ಚಿಲಿಗೆ ಸೋತಿತು. ಅರ್ಧಕ್ಕರ್ಧ ಗ್ವಾನೋ ದ್ವೀಪಗಳು, ಅಟಕಾಮಾದ ಒಂದಷ್ಟು ಭಾಗ ಚಿಲಿಯ ಪಾಲಾಯಿತು. ಚಿಲಿ ಬರಿಯ ಗ್ವಾನೊ ಮಾರಾಟದ ಲಾಭದಿಂದ ೩೦ ವರ್ಷಗಳಲ್ಲಿ ತನ್ನ ಖಜಾನೆಯನ್ನು ೯೦೦% ಹೆಚ್ಚಿಸಿಕೊಂಡಿತು. ೧೮೭೦ರ ವೇಳೆಗೆ ಸಾಲ್ಟ್ ಪೀಟರ್ ಎಂಬ ನೈಟ್ರೇಟ್ ಕಚ್ಛಾವಸ್ತು ಅಟಕಾಮಾ ಮರುಭೂಮಿಯಲ್ಲಿ ಲಭ್ಯವಿದೆಯೆಂದು ತಿಳಿದಾಗ ಗ್ವಾನೊ ಬೇಡಿಕೆಯ ಒತ್ತಡ ಕೊಂಚ ಕಡಿಮೆಯಾಯಿತು. ಪೆರು ಇದ್ದಕ್ಕಿದ್ದಂತೆ ಕಡಿಮೆಯಾದ ಆದಾಯ ತುಂಬಿಸಲು ಗ್ವಾನೋವನ್ನು ಬಳಿದು ಬಾಚಿ ಫ್ರಾನ್ಸಿಗೆ ಮಾರಿತು.

೧೯೧೦ರ ಹೊತ್ತಿಗೆ ಸಾವಿರಾರು ವರ್ಷಗಳಿಂದ ಸಂಗ್ರಹವಾಗಿದ್ದ ಗ್ವಾನೊ ಖಾಲಿಯಾಯಿತು!

ಇಳಿಯುತ್ತಿರುವ ಸಂಗ್ರಹ, ಏರುತ್ತಿರುವ ಬೆಲೆಯಿಂದ ಎಚ್ಚೆತ್ತ ಯೂರೋಪು ಪರ್ಯಾಯ ತಯಾರಿಕಾ ವಿಧಾನ ಅಭಿವೃದ್ಧಿಪಡಿಸದೇ ಬೇರೆ ಮಾರ್ಗವಿರಲಿಲ್ಲ. ಅದು ಕೈಗಾರಿಕಾ ಕ್ರಾಂತಿಯ ಕಾಲ. ಫ್ರಿಟ್ಜ್ ಹೇಬರ್ ಎಂಬ ಯುವ ವಿಜ್ಞಾನಿ ವಾತಾವರಣದಲ್ಲಿದ್ದ ನೈಟ್ರೊಜನ್ (ಸಾರಜನಕ)ವನ್ನು ಸಂಗ್ರಹಿಸಬಹುದೆಂದು ತೋರಿಸಿದ. ಅವನ ಜೊತೆಗೆ ಬಾಶ್ ಎಂಬ ವಿಜ್ಞಾನಿಯೂ ಸೇರಿ ೧೯೦೯ರಲ್ಲಿ ‘ಹೇಬರ್ ಬಾಶ್ ಪ್ರೋಸೆಸ್’ ಅಭಿವೃದ್ಧಿಪಡಿಸಿ ಗಾಳಿಯ ಸಾರಜನಕ ಸಂಗ್ರಹಿಸುವ ವಿಧಾನ ರೂಪಿಸಿದರು. ಇದು ಚಂದ್ರನ ಮೇಲೆ ಮಾನವ ಇಳಿದಷ್ಟೇ ಪ್ರಾಮುಖ್ಯತೆಯ, ‘ಗಾಳಿಯಿಂದ ಬ್ರೆಡ್ಡನ್ನು ಉತ್ಪತ್ತಿ ಮಾಡುವಷ್ಟೆ’ ಅಚ್ಚರಿಯ ಒಂದು ಸಂಶೋಧನೆ ಎಂದು ಬಣ್ಣಿಸಲಾಗಿದೆ. ಯಾಕೆಂದರೆ ಆಗ ಜಗತ್ತು ಗೊಬ್ಬರಕ್ಕಾಗಿ ಹಸಿದಿತ್ತು, ಅದಕ್ಕಾಗಿ ಯುದ್ಧಗಳೇ ನಡೆದಿದ್ದವು. ಹೀಗಿರುತ್ತ ನೈಟ್ರೊಜನ್ ತಯಾರಿ ಸಾಧ್ಯವಾದಾಗ ಜರ್ಮನಿ ಅಮೋನಿಯಾ ತಯಾರಿಸುವ ವಿಧಾನ ಕಂಡುಕೊಂಡರೆ, ಬ್ರಿಟನ್ ಸೂಪರ್ ಫಾಸ್ಫೇಟ್ ಉತ್ಪಾದಿಸುವ ವಿಧಾನ ಸಂಶೋಧಿಸಿತು. ರಸಗೊಬ್ಬರಕ್ಕಾಗಿ ಹಾಗೂ ಸ್ಫೋಟಕಕ್ಕಾಗಿ ನೈಟ್ರೇಟ್ ತಯಾರಿಸುವ ಕಚ್ಛಾವಸ್ತುವಿನ ಭಂಡಾರದ ಹೆಬ್ಬಾಗಿಲು ತೆರೆಯಿತು. ಜಗತ್ತಿನ ಮೂರನೇ ಒಂದು ಭಾಗ ಜನರ ಹೊಟ್ಟೆ ತುಂಬಿಸಲು ಸಾಧ್ಯಮಾಡಿದೆ ಎಂದು ನಂಬಲಾದ ನೈಟ್ರೇಟ್ ರಸಗೊಬ್ಬರ ತಯಾರಿ ಶುರುವಾಯಿತು.

ಆ ಹೊತ್ತಿಗೆ ದ್ವೀಪಗಳ ಗ್ವಾನೊ ಬರಿದಾಗತೊಡಗಿತ್ತು. ಅದು ಬರಿಯ ಗೊಬ್ಬರವಾಗಿರಲಿಲ್ಲ; ಆ ದ್ವೀಪಗಳ ಸಾವಿರಾರು ವರ್ಷಗಳ ಇತಿಹಾಸದ ದಾಖಲೆಯಾಗಿತ್ತು. ಎಷ್ಟೊ ಅಕಶೇರುಕ ಜೀವಿಗಳಿಗೆ ಬಾವಲಿ ಹಿಕ್ಕೆಯೇ ಮುಖ್ಯ ಆಹಾರವಾಗಿತ್ತು. ಗ್ವಾನೋ ಗಣಿಗಾರಿಕೆ ನಡೆದಲ್ಲೆಲ್ಲ ಬಾವಲಿಗಳ ಸಂಖ್ಯೆ ಕ್ಷೀಣಿಸಿತು. ಗಣಿಗಾರಿಕೆಯ ಸದ್ದಿಗೆ ಅವು ಉಣ್ಣಲು ಮರೆತವು. ಆತಂಕಕ್ಕೆ ಸುಮ್ಮನೆ ಹಿಕ್ಕೆ ಉದುರಿಸಿದವು. ಶಬ್ದವೇ ಅವುಗಳ ಸಾವಿಗೆ ಕಾರಣವಾಯಿತು.

ಅತಿ ಮೀನುಗಾರಿಕೆ ಮತ್ಸ್ಯಕ್ಷಾಮಕ್ಕೆ ನಾಂದಿ ಹಾಡಿ ವಲಸೆ ಬರುವ ಹಕ್ಕಿಗಳ ಸಂಖ್ಯೆಯೂ ಗಮನಾರ್ಹವಾಗಿ ಇಳಿಮುಖವಾಯಿತು. ೧೯೫೦ರ ವೇಳೆಗೆ ೩೦ ಮಿಲಿಯನ್ ಕಡಲ ಹಕ್ಕಿಗಳು ಪೆರು ತೀರಕ್ಕೆ ಬರುತ್ತಿದ್ದರೆ ಈಗ ಅವುಗಳ ಸಂಖ್ಯೆ ೪ ಮಿಲಿಯನ್‌ಗೆ ಇಳಿದಿದೆ. ಈಗ ಗ್ವಾನೊ ಸ್ಥಳೀಯ ಬಳಕೆಗಷ್ಟೆ ಸೀಮಿತವಾಗಿದೆ. ಪೆರು ಸರ್ಕಾರ ಗ್ವಾನೋ ದ್ವೀಪಗಳಿಂದ ಗಣಿಗಾರಿಕೆಯನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿ ಬೇಲಿ ಹಾಕಿ ಕಾಯುತ್ತಿದೆ. ಏನಾದರೂ ಬಳಿದು ಬಾಚಿ ಬರಿದಾಗಿಸಿದ ಸಾವಿರಾರು ವರ್ಷಗಳ ಸಂಗ್ರಹ ಮತ್ತೆ ಮುಂಚಿನಂತಾಗಲು ಸಾಧ್ಯವೇ?

ನಿಸರ್ಗ ಮತ್ತು ನಾಗರಿಕತೆ ಪರಸ್ಪರ ಸಹಬಾಳ್ವೆಯಿಂದ ಬಾಳಿದರೆ ಮಾತ್ರ ಪೂರಕವಾದಾವು. ಆಗ ಮಾತ್ರ ಮನುಷ್ಯರಿಗೆ ಸುಸ್ಥಿರ ಬದುಕು ಸಾಧ್ಯವಾಗಬಹುದು. ಕಡಲ ಒಳ ಹರಿವು ಮೀನುಗಳ ಬೆಳೆಸಬಲ್ಲದು. ಮೀನು ಹಕ್ಕಿಯ ಹೊಟ್ಟೆ ತುಂಬಿಸಬಲ್ಲದು. ಹಕ್ಕಿ ತನ್ನ ಪಿಷ್ಟೆಯಿಂದ ನೆಲದ ಸಾರ ಹೆಚ್ಚಿಸಿ ಮನುಷ್ಯನ ಹೊಟ್ಟೆ ತುಂಬಿಸಬಲ್ಲದು.

ಈ ಸರಪಳಿಯನ್ನು ಎಲ್ಲೇ ಭಂಗಗೊಳಿಸಿದರೂ ಅದು ಅನೂಹ್ಯ ಅಪಾಯಗಳಿಗೆಡೆ ಮಾಡಿಕೊಡಬಹುದು. ನಾವೀಗ ಅಂಥ ಅಸಂಖ್ಯ ಅಪಾಯಗಳಿಗೆ ಸಾಕ್ಷಿಯಾಗಿದ್ದೇವೆ. ಇನ್ನಾದರೂ ಪಾಠ ಕಲಿಯದಿದ್ದರೆ ನಮಗೆ ಮತ್ತೊಂದು ಕೊನೆಯ ಅವಕಾಶ ಸಿಗಬಹುದೆ?

***

ಪೆರುವಿನ ರೈತರು ಆತ್ಮಹತ್ಯೆಗೆಳಸುವರೆ ಎಂಬ ನಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಗೈಡ್ ಅದಕ್ಕೆ ವ್ಯಂಗ್ಯವಾಗಿ ಉತ್ತರಿಸಿದ. ‘ಪೆರುವಿನ ರೈತರು ಬೇರೆ ರೀತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕಾಫಿಗೆ ಬೆಲೆ ಇಲ್ಲ. ಆಲೂಗೆ ಬೆಲೆ ಇಲ್ಲ. ಅಸ್ಪರಾಗಸ್ ಬೆಳೆ, ಬೆಲೆ ಸಾಲುವುದಿಲ್ಲ. ಏನು ಮಾಡುವುದು? ಆಗವರು ಕೋಕಾ ಬೆಳೆದರು. ಉಳಿದವೆಲ್ಲ ಕೈಕೊಟ್ಟಾಗ ಕಾಸಿಗಾಗಿ ಕಾನೂನುಬಾಹಿರ ಮಾದಕದ್ರವ್ಯ ಕೋಕಾ ಬೆಳೆದರು. ನಿಮಗೆ ಗೊತ್ತೆ? ೧೯೯೫ರಲ್ಲಿ ವಿಶ್ವದ ನಂಬರ್. ೧ ಕೋಕಾ ಬೆಳೆವ ದೇಶ ಪೆರು ಆಗಿತ್ತು! ಜಗತ್ತಿನ ೬೦% ಕೊಕೇನ್, ಕೋಕಾ ಬೆಳೆ, ಪೆರುವಿನಲ್ಲೆ ಬೆಳೆಯಲಾಗುತ್ತಿತ್ತು. ೨ ಲಕ್ಷ ಪೆರು ಕುಟುಂಬಗಳು, ೧೦ ಲಕ್ಷ ರೈತರು ತಮ್ಮ ಜೀವನಾಧಾರವಾಗಿ ಅದೊಂದೇ ಬೆಳೆಯನ್ನು ನಂಬಿದ್ದರು. ಅದನ್ನು ತಡೆಯಲು ಸರ್ಕಾರ ಮಾದಕದ್ರವ್ಯ ತುಂಬಿದ ವಿಮಾನಗಳನ್ನು ಹೊಡೆದುರುಳಿಸಬೇಕಾಯ್ತು. ಹತಾಶರಾದವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕೋಕಾ ಬೆಳೆಯುವುದು ಅದಕ್ಕಿಂತ ಭಿನ್ನವೆ? ನಿಮ್ಮ ಮಕ್ಕಳನ್ನು ಮಾದಕ ವಸ್ತು ಜಾಲ ತನ್ನ ಭಾಗವಾಗಿಸಿಕೊಂಡರೆ, ನಿಮ್ಮ ಮಗಳನ್ನು ಮಾದಕ ವಸ್ತು ಕಳ್ಳಸಾಗಣೆದಾರರು ಎತ್ತೊಯ್ದು ಅಪಹರಿಸುವುದಾದರೆ, ಆದರೂ ನೀವು ಕೋಕಾ ಬೆಳೆಯುವಿರಾದರೆ ಅದು ಆತ್ಮಹತ್ಯೆಯಲ್ಲವೆ? ಇರಲಿ, ನಮ್ಮ ರೈತರು ಪ್ರಾಣ ತೆಗೆದುಕೊಳುವವರಲ್ಲ. ಅದರಲ್ಲು ಗೊಬ್ಬರ, ಬೀಜಕ್ಕೆ ಎಂದೂ ಇಲ್ಲ. ಗ್ವಾನೊ ಅಂತೂ ಇದ್ದೇ ಇದೆ. ಈಗ ರಾಸಾಯನಿಕ ಗೊಬ್ಬರವೂ ಬಂದಿದೆ’ ಎಂದರು.

ಪೆರುವಿನಲ್ಲಿ ಮಿಲಿಟರಿ ಆಡಳಿತವಿದ್ದಾಗ ಕೋಕಾ ಬೆಳೆಯುವುದು ಕಡಿಮೆ ಮಾಡಲು ಹಲವು ಕ್ರಮಗಳ ತೆಗೆದುಕೊಳ್ಳಲಾಯ್ತು. ಒಂದಷ್ಟು ಭ್ರಷ್ಟತೆ, ಒಂದಷ್ಟು ಯಶಸ್ಸು.

ಪೆರುವಿನಲ್ಲಿ ೭೨% ರೈತರು ೬ ಹೆಕ್ಟೇರಿಗಿಂತ ಕಡಿಮೆ ಕೃಷಿ ಭೂಮಿ ಉಳ್ಳವರು, ಸಣ್ಣ ರೈತರೆಂದು ಕರೆಸಿಕೊಂಡವರು. ಇನ್ನೂ ಹಳೆಯ ಕೃಷಿ ವಿಧಾನಗಳನ್ನೇ ನೆಚ್ಚಿಕೊಂಡು ಉಳುಮೆ ಮಾಡುವವರು. ಕಿವಿಚ, ಕಿನುಆ, ಕೈಹುಆ, ಲೀಮಾ ಬೀನ್, ತಾರ‍್ವಿ ಮೊದಲಾದ ತಮ್ಮ ದೇಶದ್ದೇ ಆದ ಅನನ್ಯ ಧಾನ್ಯ ಬೆಳೆಯುವವರು. ಆದರೆ ಈಗ ಅಲ್ಲಿ ಕೃಷಿಯತ್ತ ಒಲವು ಕಡಿಮೆಯಾಗುತ್ತಿದೆ. ಕೃಷಿ ಲಾಭಕರವಲ್ಲ ಎನಿಸಿ ಯುವಸಮೂಹ ನಗರಗಳಿಗೆ ವಲಸೆ ಹೋಗುತ್ತಿದೆ. ಸಣ್ಣರೈತರು ಗಣಿ ಕೆಲಸಗಳಿಗೆ ಹೊರಡುತ್ತಿದ್ದಾರೆ. ಗ್ರಾಮೀಣ ಪೆರುವಿನ ಜನಸಂಖ್ಯೆ ಬರಿಯ ೨೩% ಎನ್ನುವುದನ್ನು ಗಮನಿಸಿದರೆ ಕೃಷಿಗೆ ಕಡಿಮೆಯಾಗುತ್ತಿರುವ ಒಲವು ತಿಳಿದುಬರುತ್ತದೆ.

ಎಲ್ಲೋ ಒತ್ತಿದರೆ ಇನ್ನೆಲ್ಲೋ ಸುರಿಯುತ್ತದೆ. ಎಲ್ಲೋ ಚುಚ್ಚಿದರೆ ಇನ್ನೆಲ್ಲೋ ಗಾಯವಾಗುತ್ತದೆ. ಎಂಥ ಸಂಕೀರ್ಣ ಸಮಾಜದಲ್ಲಿ, ಎಂಥ ಸಂಕೀರ್ಣ ಕಾಲದಲ್ಲಿ ನಾವು ಬದುಕಿದ್ದೇವೆ! ನಿಜ, ವಿಶ್ವಸಂಸ್ಥೆಯ ಪರಿಸರ ದಿನಾಚರಣೆ - ೨೦೧೭ರ ಘೋಷವಾಕ್ಯ, ‘ಜನರನ್ನು ನಿಸರ್ಗದೊಡನೆ ಬೆಸೆಯುವುದು’ ಬರಿಯ ಘೋಷಣೆಯಾಗದೆ ನಮ್ಮ ಬದುಕೇ ಆಗಬೇಕಾದ ದಿನ ಹತ್ತಿರ ಬಂದಿದೆ.



Monday, 12 June 2017

ಪವಿತ್ರ ಕಣಿವೆಯ ದಾರಿಯಲ್ಲಿ..




ಮೋಡ ಮುಸುಕಿದ ಹಿಮಶಿಖರಗಳು


ದಕ್ಷಿಣ ಅಮೆರಿಕಾ, ಪೆರು ಅಂದಕೂಡಲೇ ಇಂಕಾ ಸಾಮ್ರಾಜ್ಯ ನೆನಪಾಗುತ್ತದೆ. ಪವಿತ್ರ ಕಣಿವೆಯ ಹೆಸರು ನೆನಪಿನಲ್ಲಿ ತೇಲಿಹೋಗುತ್ತದೆ. ಏನಿದು ಪವಿತ್ರ ಕಣಿವೆ? ಆಂಡೀಸ್ ಪರ್ವತಶ್ರೇಣಿಯ ಉರುಬಂಬಾ, ವಿಲ್ಕಮಾಯು, ವಿಲ್ಕನೋಟಾ ನದಿಗಳ ಕಣಿವೆ ಪ್ರದೇಶ ‘ಪವಿತ್ರ’ ಆದದ್ದು ಏಕೆ?

ಪವಿತ್ರವನ್ನು ತಿಳಿಯುವುದು ಸುಲಭವೇ? ಅದಕ್ಕೆ ಪಂಚೇಂದ್ರಿಯಗಳನ್ನು ಮುಕ್ತವಾಗಿ ತೆರೆದಿಟ್ಟುಕೊಳ್ಳಬೇಕು. ಸುತ್ತಲನ್ನು ನಿನ್ನೆನಾಳೆಯೊಂದಿಗೆ, ಅದರೆಲ್ಲ ಅಂದಚಂದ ಬಣ್ಣಗಳೊಂದಿಗೆ ಒಳಗಿಳಿಸಿಕೊಳ್ಳಬೇಕು. ಹಾಗೊಂದು ಸಣ್ಣಪ್ರಯತ್ನವಾಗಿ ಇಂಕಾ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಆಂಡೀಸ್ ತಪ್ಪಲಿನ ಕೊಸ್ಕೊ ನಗರ, ಅದರ ಬುಡದ ಆ ಕಣಿವೆಯಲ್ಲಿ ಕೆಲಕಾಲ ಸುಳಿದಾಡಿದೆವು.

ಪೆರು ಕೃಷಿಕರ ದೇಶ. ಕೊಸ್ಕೊ ಪೆರುವಿನ ಧಾನ್ಯ ಕಣಜ. ಕೃಷಿಯೇ ಅಲ್ಲಿನ ಸಂಸ್ಕೃತಿ. ಕೃಷಿಯೇ ಜೀವನಾಡಿ. ಭೂಮಿಯ ಹೊಕ್ಕುಳೆಂದು ಬಣ್ಣಿಸಲಾದ ಕೊಸ್ಕೊ ಸಮುದ್ರಮಟ್ಟದಿಂದ ೧೧,೨೦೦ ಅಡಿ ಎತ್ತರದಲ್ಲಿ, ಆಕಾಶದಲ್ಲಿದ್ದಂತೆ ಇದೆ. ಆ ದಿನ್ನೆ ಊರಿನ ಸುತ್ತಲ ಬೆಟ್ಟದ ಕಣಿವೆಗಳಲ್ಲಿ ಫಲವತ್ತಾದ ಕೃಷಿಭೂಮಿಯಿದೆ, ಸದಾ ಹರಿವ ಉರುಬಂಬಾ, ವಿಲ್ಕಮಾಯು, ವಿಲ್ಕನೋಟಾ ನದಿಗಳಿವೆ. ವಿಲ್ಕನೋಟಾ ಎಂದರೆ ಅಯ್ಮಾರಾ ಭಾಷೆಯಲ್ಲಿ ‘ಪವಿತ್ರ ನದಿ’. ವಿಲ್ಕಮಾಯು ಎಂದರೆ ಕೆಚುಆ ಭಾಷೆಯಲ್ಲಿ ನಕ್ಷತ್ರ ನದಿ. ಇವೆರೆಡು ಒಂದೇ ನದಿಯ ಎರಡು ಹೆಸರು. ಅದೇ ಮುಂದೆ ಪಾತಾಕಂಚಾ ಹೊಳೆ ಕೂಡಿಕೊಂಡು ಉರುಬಂಬಾ ನದಿಯಾಗುತ್ತದೆ. ಪೂರ್ವಪಶ್ಚಿಮಕ್ಕೆ ೬೦ ಕಿಲೋಮೀಟರು ಉದ್ದಕ್ಕೆ ಈ ನದಿಯಗುಂಟ ಇರುವ ಕಣಿವೆ ಪ್ರದೇಶವನ್ನು ಪವಿತ್ರ ಕಣಿವೆ ಎನ್ನುತ್ತಾರೆ. ಕಣಿವೆ ಪವಿತ್ರ ಏಕೆಂದರೆ ಅದು ಹವಾಮಾನ, ನೆಲದ ಫಲವತ್ತತೆ, ಸುರಕ್ಷೆ, ನೀರಿನ ಲಭ್ಯತೆಗಳಿಂದಾಗಿ ಮನುಷ್ಯ ವಾಸಕ್ಕೆ ಅತ್ಯಂತ ಸಮಂಜಸವಾಗಿರುವ ಪ್ರದೇಶವಾಗಿದೆ. ಅದು ಅವರ ಅನ್ನ ಬೆಳೆವ, ಅವರ ರಾಜರ ಕಾಪಿಟ್ಟ ನೆಲವಾಗಿದೆ.





ಕೊಸ್ಕೊ-ಲೀಮಾ ಹೈವೇಯಲ್ಲಿ ಕೊಸ್ಕೊನಿಂದ ಮಚುಪಿಚು ಕಡೆಗೆ ಹೋಗುವಾಗ ಪವಿತ್ರ ಕಣಿವೆಯ ಮೇಲೇ ಹಾದು ಹೋಗಬೇಕು. ಕೊಸ್ಕೊ ದಾಟುತ್ತಿದ್ದ ಹಾಗೆ ರಸ್ತೆಯ ಎರಡೂ ಕಡೆ ನೋಡಿದಷ್ಟು ದೂರದವರೆಗೂ ಹಸಿರು ಹೊದ್ದು ಬಣ್ಣಬಣ್ಣದ ಹೂ ಮುಡಿದ ವಿಸ್ತಾರ ಹೊಲಗಳು, ಮೆಟ್ಟಿಲುಗಳ ಕಡೆದುಕೊಂಡು ನಿಂತ ಬೃಹದಾಕಾರದ ಪರ್ವತಗಳು ಎದುರುಗೊಂಡವು. ಒಂದಿಂಚು ನೆಲವನ್ನೂ ಪಾಳು ಬಿಡದೇ, ನೆಲದ ಮೇಲ್ಮೈಯ ಉಬ್ಬುತಗ್ಗುಗಳಿಗೆ ಸರಿಯಾಗಿ ಹೊಲದ ಹಾಳೆಗಳು ಹರಡಿಕೊಂಡಿದ್ದವು. ರೇಖಾಗಣಿತದ ಆಕೃತಿಗಳನ್ನು ಹಸಿರಿನಿಂದ ನೆಲದ ಮೇಲೆ ಬರೆದಂತೆ ಬಯಲು ಕಂಗೊಳಿಸುತ್ತಿತ್ತು. ಹಸಿರು ಸಮೃದ್ಧಿಗೆ ಮೈಮರೆತು ಹೀಗೇ ಒಂದಷ್ಟು ದೂರ ಕ್ರಮಿಸಿದ ಮೇಲೆ..

ನಿರ್ಜನ ಬೆಟ್ಟದ ತುತ್ತತುದಿಯ ಒಂದು ಬಿಂದು ಮುಟ್ಟಿದೆವು. ಕಣ್ಣೆದುರು ಅಜೇಯವೆಂಬಂತೆ ಉದ್ದಾನುದ್ದ ಹರಡಿದ ಬೃಹತ್ ಪರ್ವತ ಸಾಲು. ಬೆಟ್ಟಗಳ ಇಳಿಜಾರುಗಳಲ್ಲಿ, ತಪ್ಪಲ ಬಯಲಲ್ಲಿ ಬೆಳೆದುನಿಂತ ವೈವಿಧ್ಯಮಯ ಹೊಲಗಳು. ಬಣ್ಣಬಣ್ಣದ ಇರುವೆಗಳಂತೆ ಚಲಿಸುವ ಮೋಟುಲಂಗ ಹಾಕಿದ ಎರಡು ಜಡೆಯ ಹೆಂಗಸರು. ಲಾಮಾ, ಅಲ್ಪಾಕ, ಕುರಿ ಹಿಂಡುಗಳ ಮೇಯಿಸುವ ಹುಡುಗರು, ಅವರ ಜೊತೆಗೇ ಹಿಂಡಿನಿಂದ ಅಷ್ಟು ದೂರದಲ್ಲಿ ಜೂಲು ನಾಯಿಗಳು..


ಬೀಸುವ ಸುಂಯ್ಞ್ ಎಂಬ ಗಾಳಿಸದ್ದಿನ ಹೊರತು ನೆಲಬಯಲುಗಳ ಯಾವ ಶಬ್ದಗಳೂ ಕೇಳದ ಎತ್ತರ. ಈ ಬೆಟ್ಟಗಳಾಚೆ ಅಕೋ ಇನ್ನಷ್ಟು ಎತ್ತರದಲ್ಲಿ ಹಿಮ ಹೊದ್ದ ಆಂಡೀಸ್ ಶ್ರೇಣಿ.. ಯಾರು ನೋಡಲಿ, ಬಿಡಲಿ, ಉಪಕ್ರಮಿಸಲಿ, ಅತಿಕ್ರಮಿಸಲಿ, ಬಾವುಟ ಹಾರಿಸಲಿ, ಬೇಲಿ ಹಾಕಿಕೊಳ್ಳಲಿ - ತಾನು ಮಾತ್ರ ತಾನಿರುವ ಹಾಗೆಯೇ ಇರುವ; ಹಾಗಲ್ಲದಿದ್ದರೆ ಇಲ್ಲವಾಗುವೆನೆನುವ ಪ್ರಕೃತಿ! ಪರ್ವತಗಳೆದುರು ನಿಂತಾಗ ಈ ಎಲ್ಲ ಸಹಸ್ರಮಾನಗಳಲ್ಲಿ ಅಲ್ಲಿ ಬದುಕಿದ, ಆಡಿ ನಲಿದ, ರಕ್ತ ಹರಿಸಿದ, ಸೋತ, ಗೆದ್ದ, ಜನಸಮುದಾಯಗಳ ಚೇತನ; ಅವರ ಬದುಕಿನ ಸತ್ಯ-ಸೌಂದರ್ಯಗಳು ಕಣ್ಣೆದುರು ಬಂದು ನಿಂತಂತಾಯಿತು. ಇರುವುದ ಇರುವ ಹಾಗೇ ಅರಿಯುವ ಅರಿವು ಕೊಡು ಎಂದು ಮನಸು ಆರ್ತವಾಗಿ ಪ್ರಾರ್ಥಿಸಿತು..

ಎಲ್ಲೇ ಹೋದರೂ, ಎಷ್ಟು ಬಾರಿ ನೋಡಿದರೂ ಪರ್ವತಗಳೆದುರು ನಿಂತರೆ ಒಳಗೊಂದು ಅಂತಃಸ್ಫುರಣೆಯುಂಟಾಗುತ್ತದೆ. ಪ್ರಕೃತಿಯಲ್ಲಿ, ಅದರ ಸೌಂದರ್ಯದಲ್ಲಿ, ಅದು ಹೇಳುವ ಸತ್ಯದಲ್ಲಿ ನೀನು ಲೀನವಾಗು; ‘ಸ್ವ’ ವನ್ನು ಕಳೆದುಕೊ ಎಂದು ಯಾರೋ ಪಿಸುಗುಡುವ ಭಾಸವಾಗುತ್ತದೆ. ಘಟ್ಟಕಣಿವೆಯೆದುರು, ಜಲಪಾತದೆದುರು ಮಾತುಮರೆತು ಹೋಗಿ ಇದು ಅನುಭವಕ್ಕೆ ನಿಲುಕುತ್ತದೆ. ಅವತ್ತು ಅಲ್ಲಿ, ಆ ಕ್ಷಣದಲ್ಲಿ, ಪವಿತ್ರ ಕಣಿವೆಯ ಪರ್ವತ ದೃಶ್ಯ ತನ್ನ ಮನಮೋಹಕ, ಘನತೆವೆತ್ತ ಸೌಂದರ್ಯದಿಂದ ಒಳಹೊರಗುಗಳ ತುಂಬಿಕೊಂಡಿತು. ‘ನಾನು’ ಕರಗಿ ಹರಡಿ ಆವಿಯಾದಂತೆನಿಸಿತು.

ಆಗ, ಅರೆ, ಈಗ ಬಿಸಿಲಿದ್ದದ್ದು ಈಗ ಮೋಡವಾಗಿ ಆವರಿಸಿ ಸೋನೆಮಳೆ ಶುರುವಾಗಿಬಿಟ್ಟಿತು. ಅದೋ ಅದೋ, ನೋಡನೋಡುವುದರಲ್ಲಿ ಕಾಮನಬಿಲ್ಲು ಕಣ್ಣೆದುರು ಅರಳಿಬಿಟ್ಟಿತು. ಸುತ್ತಲ ಪರ್ವತಗಳ ಚೂಪಾದ ಶಿಖರಗಳ ತುದಿಯಿಂದ ನೆಲದವರನ್ನು ಮಾತನಾಡಿಸಲು ಇಳಿದು ಬಂದವೋ ಎನ್ನುವಂತೆ ಮೋಡಗಳು ಸರಸರ ಕೆಳಗಿಳಿಯತೊಡಗಿದವು. ಮೆಲ್ಲನೆ ಬೀಸುವ, ಒಳಗೆಲ್ಲ ನಡುಕ ಹುಟ್ಟಿಸುವ ತಣ್ಣನೆಯ ಗಾಳಿ, ಸಣ್ಣ ಮಳೆ, ದೂರದ ಶಿಖರಗಳ ಮೇಲೆ ನೆರಳುಬಿಸಿಲಿನ ಆಟವಾಡುತ್ತಿರುವ ಸೂರ್ಯ..

ಇಲ್ಲಿ ದೇವರಿರದೆ ಇನ್ನೆಲ್ಲಿರಲು ಸಾಧ್ಯವಿದೆ? ಇಂಥ ಬೃಹತ್ತನ್ನು ನಮ್ಮೆದುರು ತೆರೆದಿಡುವ ಪ್ರಕೃತಿಗಿಂತ ಇನ್ನಾವ ದೇವರಿರಲು ಸಾಧ್ಯವಿದೆ? ಈ ಸಾಕ್ಷಾತ್ಕಾರವನ್ನು ಹುಲುಮಾನವರಲ್ಲಿ ಮೂಡಿಸುವ ಇದು ಪವಿತ್ರ ಕಣಿವೆಯೇ ಸೈ.

ನಾವು ರಸ್ತೆಮೇಲೆ ಚಲಿಸತೊಡಗಿದಂತೆ ನಮ್ಮ ಮುಂದೆಮುಂದೆ ಕಾಮನಬಿಲ್ಲೂ ಚಲಿಸತೊಡಗಿತು. ನಿಜ, ನಂಬಿ, ಅದೋ, ಅಲ್ಲೇ ರಸ್ತೆ ಮೇಲೇ ಅದರ ಬುಡ ಇತ್ತು! ಈಗ ಇನ್ನೇನು ನಮ್ಮ ವಾಹನ ಈ ಬೆಟ್ಟದ ಬುಡಕ್ಕೆ, ಕಾಮನಬಿಲ್ಲಿನೊಳಗೇ ಹೋಗುತ್ತದೆ ಎಂಬ ರೋಮಾಂಚನದೊಂದಿಗೆ ಮುಂಬರಿದೆವು. ಆದರೆ ಎಷ್ಟು ದೂರ ಚಲಿಸಿದರೂ ಕಾಮನಬಿಲ್ಲು ನಮ್ಮಿಂದ ಅಷ್ಟೇ ಮುಂದೆ ಚಲಿಸುತ್ತಿತ್ತು. ಎಂದೂ ಮುಟ್ಟಲಾಗದ, ಎಂದೂ ಕಣ್ಮರೆಯೂ ಆಗದ ಕ್ಷಿತಿಜದಂಚಿನಂತೆಯೇ ನಿಲುಕದಾಯಿತು..




ಈ ಅದ್ಭುತ ರಮ್ಯ ಪ್ರಕೃತಿಯನ್ನೂ, ಸಕಲ ಚರಾಚರಗಳನ್ನೂ ಸೃಷ್ಟಿಸಿ ಪೊರೆವ ಪಚಮಾಮಾ, ವಿರಕೋಹಾ, ನಿಮಗೆ ಶರಣು..
ಈ ಚೆಲುವ ಭೂಮಿಯನ್ನೂ; ಸೂರ್ಯ, ಚಂದ್ರ, ಮುಗಿಲು, ತಾರೆಯರನ್ನೂ; ಮಳೆಗುಡುಗು ಸಿಡಿಲನ್ನೂ; ಪವಿತ್ರ ನದಿಯನ್ನೂ ಸೃಜಿಸಿದ ವಿಶ್ವಹೃದಯವೇ ನಿನಗೆ ಶರಣುಶರಣು..

ಕಡಿದಾದ ಕಣಿವೆ ಹೊಲಗಳಲಿ
ಈಗತಾನೆ ಅರಳಿದೆ ಹೂವು.
ಬಂಡೆ ಸೀಳಿನಿಂದ 
ತಂತಾನೆ ಸುರಿವ ಶುದ್ಧ ನೀರು.
ಶಿಖರಾಗ್ರಗಳ ಮೇಲೆ
ಬಿಸಿಲಿಗೆ ಹೊಳೆವ ಹಿಮ.
ಅಡರುವ ಕಾಡಿನ ಪರಿಮಳ 
ಚಿಟಿಕೆ ಸದ್ದೂ ಮಾರ್ದನಿಗೊಳುವ 
ರಮ್ಯ ಏಕಾಂತ, ನಿಶ್ಶಬ್ದ.
ನಡುವೆ ತೇಲಿಬರುವ ಅಯ್ಮಾರಾ ಹೆಣ್ಣಿನ ಹಾಡು
ಚಂಗನೆ ನೆಗೆವ ಮರಿ ಅಲ್ಪಾಕದ ಹೆಜ್ಜೆ ತೊದಲು

ಹಕ್ಕಿಯನ್ನು ಹಾವನ್ನು
ಬೆಟ್ಟದ ಹುಲಿಯನ್ನು 
ಪೂಜಿಸುವವರ ನಡುವೆ ನಿಂತಿದ್ದೇನೆ
ನೆಲಮುಗಿಲ ಚೆಲುವು ದೇಹಆತ್ಮಗಳ ಬೆಸೆದಿದೆ
ಎದೆ ತುಂಬಿರುವ ಕುಂದಿರದ ಈ ಚೆಲುವೆಲ್ಲ
ಭಾರತೀ, ನೀನಿತ್ತ ಮೊದಲ ಉಸಿರಿಗೇ ಅರ್ಪಣೆ

ನಿನ್ನ ಬಿಟ್ಟೆ, ಹೊರಟುಬಿಟ್ಟೆ ಎನಬಹುದೆ?
ಚಿಟ್ಟೆ ಕೋಶರೆಕ್ಕೆಯ ಹೊತ್ತೇ ಹಾರುತ್ತಿದೆ
ಯಾವುದೋ ಆದಿಮ ಲೋಕದ 
ಧೂಳಿನ ನಡುವೆ ಪಾದ ಚಲಿಸುವಾಗಲೂ
ನೋಟ ನಿನ್ನೊಳಗೇ ಇದೆ

ಮಳೆ ಬಿಸಿಲುಗಳ ಸಂಜೆ
ಧುತ್ತನೆ ಕಣ್ಣೆದುರು ಅರಳಿದ ಕಾಮನಬಿಲ್ಲು
ಎಷ್ಟು ಸಾವಿರ ಮೈಲು ದೂರವಿದ್ದರೇನು
ನಿನ್ನ ನೆನೆಯದಿರಬಹುದೇ ನಾನು?

ರಾಜರ ಹೊಲ ಪಿಸಾಕ್




ಕೊಸ್ಕೊನಿಂದ ಘಟ್ಟ ಇಳಿದಿಳಿದು ಕೆಳಬಂದೆವು. ಪವಿತ್ರ ಕಣಿವೆಯಲ್ಲಿ ಮೊದಲು ವಿಲ್ಕನೋಟಾ ನದಿ ಸಿಕ್ಕಿತು. ಅದರ ಎರಡೂ ದಂಡೆಗಳಲ್ಲಿ ಏ..ತ್ತರ ಬೆಳೆದುನಿಂತ ಮೆಕ್ಕೆಜೋಳದ ಹೊಲಗಳಿದ್ದವು. ಆ ಊರು ಪಿಸಾಕ್. ಒಂದೊಂದು ಸ್ಥಳೀಯ ಬುಡಕಟ್ಟು ಕುಲ ಗೆದ್ದ ಮೇಲೂ ಇಂಕಾಗಳು ಅಲ್ಲೊಂದೊಂದು ಊರು ಕಟ್ಟಿದರು. ಹಾಗೆ ೧೪೪೦ರಲ್ಲಿ ಕುಯೊ ಕುಲದ ಮೇಲಿನ ವಿಜಯದ ನಂತರ ಕಟ್ಟಿದ ಊರು ಇದು. ಚಿಂಚೆರೊ, ಒಲ್ಲಂಟಾಯ್ ಟ್ಯಾಂಬೊಗಳ ಹಾಗೆ ಫಲವತ್ತಾದ ಈ ಪ್ರದೇಶ ಇಂಕಾರಾಜನ ವೈಯಕ್ತಿಕ ಆಸ್ತಿಯಾಗಿತ್ತು. ಇಲ್ಲಿಯ ಮೆಕ್ಕೆಜೋಳ ಅತ್ಯಂತ ಪ್ರಸಿದ್ಧ ಮತ್ತು ತುಟ್ಟಿ. ಪಿಸಾಕ್ ಕಾರ್ನ್ ಬಗ್ಗೆ ಕೇಳಿನೋಡಿ, ಪೆರುವಿಯನರು ಅದರ ಗುಣಗಳ ಬಗ್ಗೆ ಹಾಡು ಕಟ್ಟಿ ಒಂದೇಸಮ ಹಾಡತೊಡಗುತ್ತಾರೆ.

ಕ್ರಿ. ಶ. ೧೫೩೦ರಲ್ಲಿ ಸ್ಪ್ಯಾನಿಶ್ ದಾಳಿಕೋರ, ಕೊನೆಯ ಇಂಕಾನನ್ನು ಮೋಸದಿಂದ ಕೊಂದ ಫ್ರಾನ್ಸಿಸ್ಕೊ ಪಿಜಾರೊ ಪಿಸಾಕನ್ನು ನಾಶಪಡಿಸಿದ್ದ. ೧೫೭೦ರಲ್ಲಿ ವೈಸರಾಯ್ ಟಾಲೆಡೊ ಮತ್ತೆ ಕಟ್ಟಿದ. ಈಗ ಅದು ತನ್ನ ಮಾರುಕಟ್ಟೆಗೆ, ಸಂತೆಗೆ ಪ್ರಖ್ಯಾತ. ವಾರಕ್ಕೆ ಮೂರು ದಿನ ಅಲ್ಲಿ ಸಂತೆ ನೆರೆಯುತ್ತದೆ. ಅದರಲ್ಲಿ ವ್ಯಾಪಾರ ಮಾಡಲು ಕೊಸ್ಕೊದಿಂದಲೂ ವ್ಯಾಪಾರಿಗಳು, ಟೂರಿಸ್ಟರು ಬರುವರಂತೆ; ಅದು ಇಂಕಾ ಕಾಲದಿಂದಲೂ ಹಳ್ಳಿಗರು ಸಂತೆಯಲ್ಲಿ ಸಾಮಾನು ಮಾರುವ ಜಾಗವಾಗಿತ್ತಂತೆ.

ನಾವೂ ಪಿಸಾಕ್ ಮಾರ್ಕೆಟ್ ಪ್ರವೇಶಿಸಿದೆವು. ಕಣ್ಣಿಗೆ ರಸದೌತಣ.. ಪರ್ಸಿಗೆ ಕನ್ನ!

ಒಲ್ಲಂಟಾಯ್ ಟ್ಯಾಂಬೊ

ಕೊಸ್ಕೊನಿಂದ ೬೦ ಕಿಮೀ ದೂರದಲ್ಲಿ, ಸಮುದ್ರಮಟ್ಟದಿಂದ ೨೫೦೦ ಮೀಟರ್ ಎತ್ತರದಲ್ಲಿ, ಪಾತಾಕಂಚಾ ಎಂಬ ಪುಟ್ಟನದಿ ವಿಲ್ಕನೋಟಾ ನದಿಯನ್ನು ಸೇರುವಲ್ಲಿ ಒಲ್ಲಂಟಾಯ್ ಟ್ಯಾಂಬೊ ಎಂಬ ವಿವಿಧೋದ್ದೇಶ ಹೊತ್ತ ಇಂಕಾಗಳ ಊರು ಇದೆ. ಅದು ಆಡಳಿತಾತ್ಮಕ, ರಕ್ಷಣಾತ್ಮಕ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಕೇಂದ್ರವಾಗಿದ್ದದ್ದು. ಪಚಕುಟಿ ಎಂಬ ಇಂಕಾರಾಜನ ಕಾಲದಲ್ಲಿ ದೊರೆಯ ಖಾಸಗಿ ಜಮೀನಾಗಿ ರೂಪುಗೊಂಡ ಸ್ಥಳಗಳಲ್ಲಿ ಇದೂ ಒಂದು. ಟ್ಯಾಂಬೊ ಕುಲದವರ ಗೆದ್ದು ಪಚಕುಟಿ ಒಲ್ಲಂಟಾಯ್ ಟ್ಯಾಂಬೊ ಅಭಿವೃದ್ಧಿಪಡಿಸಿದ. ಅಲ್ಲಿ ಜಗಲಿ ಕೃಷಿ, ಮೆಟ್ಟಿಲು ಕೃಷಿ ಪದ್ಧತಿಯನ್ನು ಜಾರಿಗೊಳಿಸಿದ. ಹೊಸಹೊಸ ಕಟ್ಟಡಗಳ ಕಟ್ಟಿದ. ಪೂಜಾಸ್ಥಳ, ಶಸ್ತ್ರಾಸ್ತ್ರ ಸಂಗ್ರಹಾಗಾರ, ಧಾನ್ಯ ಸಂಗ್ರಹಾಗಾರಗಳನ್ನು ಹತ್ತಿರ ಇರುವ ಬೆಟ್ಟಗಳ ಮೇಲೆ ರೂಪಿಸಿದ. ರಾಜಧಾನಿ ಕೊಸ್ಕೊಗಿಂತ ಹೆಚ್ಚು ಉರುಬಂಬಾ ಕಣಿವೆಯಲ್ಲಿ ತಾನು ಕಟ್ಟಿದ ಈ ನಗರದಲ್ಲಿಯೇ ಪಚಕುಟಿ ಇರುತ್ತಿದ್ದ. ಸ್ಪ್ಯಾನಿಶ್ ಆಕ್ರಮಣದ ನಂತರ ಮ್ಯಾಂಕೊ ಎಂಬ ಕೊನೆಗಾಲದ ಇಂಕಾರಾಜ ಮತ್ತೊಮ್ಮೆ ಕಟ್ಟಹೊರಟ ಹೊಸ ಇಂಕಾ ಸಾಮ್ರಾಜ್ಯಕ್ಕೆ ಇದೇ ಕೇಂದ್ರವಾಗಿತ್ತು.

ತಲೆಯನ್ನು ೯೦ ಡಿಗ್ರಿ ಪೂರ್ತಿ ಮೇಲೆತ್ತಿದರೆ ಮಾತ್ರ ಆಕಾಶ ಕಂಡೀತು, ಅಷ್ಟೆತ್ತರದ ಬೃಹತ್ ಪರ್ವತಗಳ ತಪ್ಪಲಲ್ಲಿ ಈ ಊರು ಇದೆ. ಆಸುಪಾಸಿನ ಪರ್ವತಗಳ ಮೇಲೆ ವಿಸ್ತೃತವಾಗಿ ನಿರ್ಮಿಸಲ್ಪಟ್ಟ ಕೃಷಿ ಟೆರೇಸುಗಳಿವೆ. ಪರ್ವತಗಳ ಮೇಲೆ ಬೆಳೆ ಸಂಗ್ರಹಿಸುವ ಗೋಡೌನುಗಳು ಕೂಡಾ ಕಲಾತ್ಮಕವಾಗಿ ಕಟ್ಟಲ್ಪಟ್ಟಿವೆ.

ಈಗ ಮಚುಪಿಚುವಿಗೆ ಹೋಗುವ ಹೆಬ್ಬಾಗಿಲು ಒಲ್ಲಂಟಾಯ್ ಟ್ಯಾಂಬೊ. ಮಚುಪಿಚುವಿನ ರೈಲು ಹೊರಡುವುದು, ನಾಲ್ಕುದಿನಗಳ ಇಂಕಾ ಟ್ರೇಲ್ ಟ್ರೆಕಿಂಗ್ ಶುರುವಾಗುವುದು ಎಲ್ಲ ಅಲ್ಲಿಂದಲೇ. ಎಂದೇ ಅದು ಪ್ರವಾಸಿಗರಿಂದ ತುಂಬಿದ ಜನದಟ್ಟಣೆಯ ಊರಾಗಿದೆ. ಊರು ಪ್ರವೇಶಿಸಿದ ಕೂಡಲೇ ಇಂಕಾರಾಜನ ವೇಷಧಾರಿ ಎದುರಾದ. ಮುಂದೆಹೋದಂತೆ ಇನ್ನಷ್ಟು ಇಂಕಾ ವೇಷಧಾರಿಗಳು ಸೆಲ್ಫೀಗಳಿಗೆ ಪ್ರವಾಸಿಗರ ಜೊತೆ ಪೋಸು ಕೊಡುತ್ತ ನಿಂತಿದ್ದರು. ಪ್ರವಾಸ ಉದ್ಯಮವಾದ ಫಲ ನಾವಿಲ್ಲಿ ಪೆರುವಿನಲ್ಲಿದ್ದೇವೆ. ಹಸಿದ ಪ್ರವಾಸಿ ಕಂಗಳಿಗೆ ಏನನ್ನು ಉಣಬಡಿಸಬಹುದೆಂದು ಪೆರುವಿನ ಜನ ಬಲು ಚೆನ್ನಾಗಿ ಅರಿತಿದ್ದಾರೆ.

ಊರೊಳಗೆ ಹಲವು ಇಂಕಾ ಕಾಲದ ರಚನೆಗಳಿವೆ. ಇನ್ನೂ ಉತ್ಖನನಗೊಳ್ಳುತ್ತಿರುವ ರಚನೆಗಳಿವೆ. ಊರಿನ ಅಂಚಿನಲ್ಲಿರುವ ಎತ್ತರದ ಪರ್ವತದ ಮೇಲೆ ಆಚರಣಾತ್ಮಕ-ಧಾರ್ಮಿಕ ಸ್ಥಳವಾಗಿದ್ದ ಸೂರ್ಯ ದೇವಾಲಯವಿದೆ. ಕೆಳನಿಂತು ನೋಡಿದರೆ ಆಕಾಶದತನಕ ಇರುವಂತೆ ಕಾಣುವ ಕಡಿದಾದ ಮೆಟ್ಟಿಲುಗಳ ಹತ್ತಿ ಅಲ್ಲಿ ಹೋಗಬೇಕು. ಒಂದುಕಡೆ ಎತ್ತರದ ಮೆಟ್ಟಿಲುಗಳ ನೋಡಿ ಆಸ್ಟಿಯೋ ಅರ್ಥ್ರೈಟಿಸ್ ಕಾಲು ಹೆದರುತ್ತಿದ್ದರೆ; ಇನ್ನೊಂದೆಡೆ ಕುಡಿಯುವ ನೀರಿನ ಚಿಲುಮೆಗಳು, ಕೋಣೆಗಳು, ಮರಣಾನಂತರ ವಿಧಿ ನಡೆಸುವ ಜಾಗ, ಅಪೂರ್ಣ ಸೂರ್ಯ ದೇವಾಲಯ ಎಲ್ಲವೂ ಮೇಲಿದೆ, ನೋಡಲು ಬಾರೆನ್ನುತ್ತ ಮಕ್ಕಳು ಪುಸಲಾಯಿಸುತ್ತಿದ್ದವು.


(ಬೆಟ್ಟದ ನಡುವೆ ಕಾಣುತ್ತಿರುವ ಸಂಗ್ರಹಾಗಾರಗಳು)

ಮೇಲೆ ಹತ್ತತೊಡಗಿದಂತೆ ಕಾಣುವ ಸುಂದರ ದೃಶ್ಯಗಳು ಕಾಲನ್ನೂ, ನೋವನ್ನೂ ಮರೆಸಿಬಿಟ್ಟವು. ಹತ್ತಿಹತ್ತಿ ಹತ್ತುವಾಗ ಆಕಾಶದವರೆಗೆ ಬೆಳೆದು ನಿಂತ ಪರ್ವತಗಳು ನಮ್ಮೊಡನೇ ಏರುತ್ತ ಹೋಗುತ್ತವೆ. ಸುತ್ತಮುತ್ತಲ ಬೃಹತ್ ಶಿಖರಗಳು, ‘ನಮ್ಮ ಸಮಕ್ಕೆ ಬಂದೆನೆಂಬ ಹೆಮ್ಮೆಯೆ ನಿಮಗೆ?’ ಎಂದು ನಮ್ಮ ಕಡೆ ನೋಡಿ ನಗುತ್ತವೆ. ಹರಿವ ನದಿ, ಕಣಿವೆ, ಮೆಟ್ಟಿಲು ಕೃಷಿ, ಸೂರ್ಯನ ನೆರಳು ಬೆಳಕಿನಾಟಗಳು ದೂರದತನಕ ಕಾಣಿಸುತ್ತವೆ.

ಗೋಡೆ ಕಟ್ಟಿಟ್ಟಂತೆ ನಿಂತ ಪರ್ವತಸಾಲು ಇದ್ದರೂ, ಉರುಬಂಬಾ ನದಿ ಮೇಲಿನ ಗಾಳಿ ರುಮುರುಮು ಬೀಸುತ್ತ ಮೇಲೆ ಬಂದೇಬಿಟ್ಟಿತು. ಬಿಸಿಲಿದ್ದರೂ ಕೊರೆವ ಚಳಿ. ಅರೆಬರೆ ಕೆತ್ತಿದ, ಕಟ್ಟಲು ಸಾಗಿಸಿ ಈಗ ಚದುರಿಬಿದ್ದ, ಕಟ್ಟಲ್ಪಟ್ಟು ನಂತರ ಕೆಡವಲ್ಪಟ್ಟ ಕಲ್ಲುಗಳೆಲ್ಲ ಎಲ್ಲೆಂದರಲ್ಲಿ ಬಿದ್ದಿದ್ದವು. ಈ ಕಲ್ಲು, ನದಿ, ಬಂಡೆ, ಗಾಳಿಗೆ ಮಾತು ಬಂದರೆ ನಿಜವಾಗಿ ಏನು ನಡೆಯಿತು? ಯಾರದು ನ್ಯಾಯ, ಯಾವುದು ಅನ್ಯಾಯ? ಯಾಕವರೆಲ್ಲ ಈ ಊರು ಬಿಟ್ಟುಹೋದರು? ಯಾವಾಗ ಹೋದರು? ಯಾಕೆ ಕಟ್ಟಿದರು? ಎಂಬ ನಿಜ ಗೊತ್ತಾಗಬಹುದೆ?

ಎದುರುಗಡೆ ಕಾಣುವ ಪರ್ವತದ ಮೇಲೆ ಧಾನ್ಯ-ಶಸ್ತ್ರಾಸ್ತ್ರ ಸಂಗ್ರಹಾಗಾರಗಳನ್ನು ಗೈಡ್ ತೋರಿಸಿದರು. ಅಷ್ಟೇ ಅಲ್ಲದೆ ಎದುರಿನ ಪರ್ವತದ ಬಂಡೆಗಳಲ್ಲಿ ಮನುಷ್ಯ ಮುಖದ ಆಕಾರ ಕಾಣುತ್ತದೆ, ನೋಡಿ ಎಂದರು. ಬೆಟ್ಟದ ಒಂದು ಪಾರ್ಶ್ವದಲ್ಲಿ ಕಲ್ಪಿಸಿಕೊಳ್ಳಬಹುದಾದ ಬೃಹತ್ ಮುಖರೂಪವಿದೆ, ಅದು ಸೃಷ್ಟಿಕರ್ತ ವಿರಕೋಚಾನ ಮುಖ ಎಂದು ನಂಬಲಾಗಿದೆ. ಆ ಮುಖದ ಆಕಾರ ಕಾಣುವವರೆಗು ಗೈಡ್ ಬಿಡುವುದಿಲ್ಲ ಅಥವಾ ಕಾಣದಿದ್ದರೂ ನೀವು, ‘ಹ್ಞಾಂಹ್ಞಾಂ, ಕಂಡೆ, ಓಹೋಹೋ’ ಎನ್ನುವವರೆಗೂ ಅವರು ಬಿಡುವುದಿಲ್ಲ. ಮೇಲುಗಡೆ ಆರು ದೊಡ್ಡ ಬಂಡೆಕಲ್ಲುಗಳ ನಿಲಿಸಿ ಒಂದರ ಮೇಲೆ ಅಸ್ಪಷ್ಟವಾಗಿ ಪಚಮಾಮಾ (ಭೂಮ್ತಾಯಿ) ಸಂಕೇತವಾದ ಮೆಟ್ಟಿಲು (ಪಾತಾಪಾತಾ) ಕೆತ್ತಲಾಗಿದೆ. ಅದು ಸೂರ್ಯ ದೇವಾಲಯ ಎಂದರು ಗೈಡ್! ಬಾಗಿಲಿರದ, ಕೆತ್ತನೆಯಿರದ ಅದನ್ನು ದೇವಾಲಯ ಎಂದು ಊಹಿಸಿಕೊಳ್ಳುವುದೇ ನಮಗೆ ಕಷ್ಟವಾಯಿತು. ಅದು ಅರೆಬರೆಯಾದದ್ದಿರಬೇಕು ಅಲ್ಲವೇ ಎಂದೆವು. ಅಲ್ಲ, ಅದು ಪೂರ್ಣ ದೇವಾಲಯ. ಅದುವೇ ಸೂರ್ಯನ ದೇವಾಲಯ. ಸೂರ್ಯನ ಪೂಜಿಸುವ ಆಲಯ ಬಯಲಲ್ಲದೆ ಬೇರಿನ್ನೇನು ಆಗಿರಲು ಸಾಧ್ಯ ಎಂದರು. ಇಂಕಾಗಳ, ಆಂಡಿಯನ್ನರ ಪೂಜಾಸ್ಥಳ ಬಾಗಿಲಿರುವ ಮುಚ್ಚಿದ ರಚನೆಗಳಲ್ಲ. ಬಟಾಬಯಲೇ ಅವರ ಪೂಜೆಗೆ ಪ್ರಶಸ್ತ ಸ್ಥಳ ಎಂದರು.



(ಸೂರ್ಯ ದೇವಾಲಯ)
ಅರೆ, ಹೌದಲ್ಲವೆ? ಮೇಲೆ ನೀಲಿ ಆಕಾಶ, ಸುತ್ತ ಬೆಟ್ಟ, ಬೀಸುವ ತಣ್ಣನೆಯ ಗಾಳಿ, ಕಣ್ಣೆದುರೇ ಪ್ರತ್ಯಕ್ಷ ಕಾಣುವ ಸೂರ್ಯ-ಚಂದ್ರ-ನೀಹಾರಿಕೆಗಳು.. ಚಾವಣಿಯಿರದ ತೆರೆದ ಬಯಲಿನಲ್ಲಿ ಬಾನಿನಡಿ ನಿಲ್ಲುವುದಕಿಂತ ದೇವರನ್ನು ಪೂಜಿಸಲು ಇನ್ಯಾವ ಪ್ರಶಸ್ತ ಸ್ಥಳವಿದೆ?

ಚೆಲುವಿನ, ಒಲವಿನ ಸಾಕ್ಷಾತ್ಕಾರ!! ಇದು ಪವಿತ್ರ ಕಣಿವೆಯೇ ಸೈ.

(ಇಲ್ಲಿ ಬಳಸಲಾದ ಎಲ್ಲ ಫೋಟೋ ತೆಗೆದವಳು  ಪುಟ್ಟಿ ಪೃಥ್ವಿ.)