Thursday, 22 February 2018

ಮಹಿಳಾ ಪಯಣ: ಹೀಗೆರೆಡು ವಿಭಿನ್ನ ಮಾರ್ಗ





ಇತ್ತೀಚೆಗೆ ಪ್ರಕಟವಾದ ಒಂದು ಸಮೀಕ್ಷೆಯ ಪ್ರಕಾರ ವಿಶ್ವದಲ್ಲಿ ಮಹಿಳೆಯರಿಗೆ ಅಪಾಯಕಾರಿಯಾದ ರಾಷ್ಟ್ರಗಳಲ್ಲಿ ಭಾರತ ೪ನೆಯ ಸ್ಥಾನದಲ್ಲಿದೆ. (ಮೊದಲ ೩ ಸ್ಥಾನಗಳಲ್ಲಿ ಆಫ್ಘನಿಸ್ತಾನ, ಸುಡಾನ್, ಪಾಕಿಸ್ತಾನಗಳಿವೆ). ಭಾರತೀಯ ಸಮಾಜದ ಕೌಟುಂಬಿಕ, ಧಾರ್ಮಿಕ, ಸಾಮಾಜಿಕ, ರಾಜಕೀಯ ರಚನೆ-ಸಂಸ್ಥೆಗಳೆಲ್ಲದರಲ್ಲಿ ಅಂತರ್ಗತವಾಗಿ ಲಿಂಗ ತಾರತಮ್ಯ, ಹಿಂಸೆ ತುಂಬಿಕೊಂಡಿದೆ. ಇದು ವಾಸ್ತವ. ಆದರೆ ಆಧುನಿಕ, ಪ್ರಜಾಪ್ರಭುತ್ವ ದೇಶವಾದ ಭಾರತೀಯ ಸಮಾಜದಲ್ಲಿ ಲಿಂಗಾಧಾರಿತ ಹಿಂಸೆ ಈ ಪರಿ ಇನ್ನೂ ಜೀವಂತವಾಗಿರಲು ಕಾರಣಗಳೇನು?

ಕುಟುಂಬ ವ್ಯವಸ್ಥೆಯ ರಾಚನಿಕ ಲೋಪಗಳು ಲಿಂಗತಾರತಮ್ಯ ಮತ್ತು ಹಿಂಸೆ ಜೀವಂತವಾಗಿರಲು ಮುಖ್ಯ ಕಾರಣ ಎನ್ನುವುದು ಮಹಿಳಾ ಚಿಂತಕಿಯರ ಅಭಿಪ್ರಾಯವಾಗಿದೆ. ಭಾರತೀಯ ಕುಟುಂಬ ವ್ಯವಸ್ಥೆಯು ಮನೆ, ಮಕ್ಕಳು, ಸಂಸಾರದ ಸಕಲ ಏಳುಬೀಳುಗಳನ್ನು ಹೆಣ್ಣಿನ ತಲೆಗೆ ಕಟ್ಟುತ್ತದೆ. ಎಷ್ಟು ಓದಿದರೂ, ಅಧಿಕಾರದ ಯಾವುದೇ ಸ್ಥಾನದಲ್ಲಿದ್ದರೂ, ಆರ್ಥಿಕವಾಗಿ ಸಬಲಳಾದರೂ ಕುಟುಂಬದಲ್ಲಿ ಹೆಣ್ಣು ನಿಭಾಯಿಸಬೇಕಾದ ಪಾತ್ರಗಳ ಸ್ವರೂಪ ಬದಲಾಗಿಲ್ಲ. ಅಡುಗೆ-ಮನೆವಾರ್ತೆಗಳೆಂಬ ಎರಡು ಕೊನೆಮೊದಲಿರದ ಜವಾಬ್ದಾರಿಗಳು ಮತ್ತು ಅವು ಪೋಷಿಸುವ ನಿರೀಕ್ಷೆಗಳು ಹೆಣ್ಮಕ್ಕಳು ಕೌಟುಂಬಿಕ ವಲಯಕ್ಕೇ ತಮ್ಮ ಕೆಲಸ, ಶಕ್ತಿಗಳ ಮಿತಿಗೊಳಿಸಿಕೊಳ್ಳುವಂತೆ ಮಾಡುತ್ತವೆ. ಹೆಣ್ಣಿನ ಅವಕಾಶ-ಸಾಧ್ಯತೆಗಳನ್ನು ಮಿತಿಗೊಳಿಸುತ್ತವೆ. ಇನ್ನು ವಿಷಮ ದಾಂಪತ್ಯ ಬದುಕು ಒದಗಿಬಿಟ್ಟರಂತೂ ಅದು ಹೆಣ್ಮಕ್ಕಳ ಎದೆಯೊಳಗೆ ಚಿಟುಕು ಮುಳ್ಳಾಗಿ ಕುಟುಕುತ್ತ ಅವರ ಅಂತಃಸ್ಸತ್ವವನ್ನೇ ನಾಶಮಾಡಿಬಿಡುತ್ತದೆ. ಆದರೂ ಅದರ ನಡುವೆ ಎಲ್ಲೋ ಕೆಲವು ದಿಟ್ಟೆಯರು ತಮಗಾದ ನೋವು ತಮ್ಮದಷ್ಟೇ ಅಲ್ಲ, ತನ್ನದಷ್ಟೇ ಅಲ್ಲ, ಅದು ಬಹಳಷ್ಟು ಹೆಣ್ಮಕ್ಕಳನ್ನು ಬಾಧಿಸುತ್ತಿರುವಂಥದು ಎಂಬ ಅರಿವು ಪಡೆದು ವ್ಯವಸ್ಥೆಗೇ ಸವಾಲು ಹಾಕಿ ನಿಲ್ಲುತ್ತಾರೆ.

ಇದಲ್ಲದೆ ಇನ್ನೊಂದು ಮಾದರಿಯ ದಾಂಪತ್ಯವನ್ನೂ ನೋಡುತ್ತೇವೆ. ಅವರು ಕುಟುಂಬ, ದಾಂಪತ್ಯಕ್ಕೆ ಬೆನ್ನು ಮಾಡದೇ ಪತ್ನಿಪತಿಯರು ಸಹಜೀವಿಗಳಾಗಿ ಬದುಕಿ, ಒಬ್ಬರನ್ನೊಬ್ಬರು ಅರಿತು, ಪರಸ್ಪರರ ಭಿನ್ನಾಭಿಪ್ರಾಯಗಳಿಗೆ ಸಾಕಷ್ಟು ಅವಕಾಶವನ್ನೂ ಇಟ್ಟುಕೊಂಡು ಕ್ರಿಯಾಶೀಲವಾಗಿ ತೊಡಗಿಕೊಳ್ಳುತ್ತಾರೆ. ದಾಂಪತ್ಯವೆಂದರೆ ಒಂದು ವ್ಯಕ್ತಿತ್ವ ಇನ್ನೊಂದರೊಳಗೆ ವಿಲೀನವಾಗುವುದಲ್ಲ. ಬದಲಾಗಿ ಒಬ್ಬರು ಇನ್ನೊಬ್ಬರನ್ನು ಬೌದ್ಧಿಕವಾಗಿ, ಮಾನಸಿಕವಾಗಿ ತಮ್ಮ ಸಾಂಗತ್ಯದಿಂದ ಶ್ರೀಮಂತಗೊಳಿಸುವುದು ಎಂದು ನಂಬಿ ಜೊತೆಯಾಟ ಆಡುತ್ತಾರೆ.

ಸಿಡಿದು ನಿಂತು ತನ್ನದೇ ಅಸ್ಮಿತೆ ರೂಪಿಸಿಕೊಳ್ಳುವುದು, ಕುಟುಂಬದೊಡನಿದ್ದೂ ಸ್ವಾಯತ್ತ ಯೋಚನೆ-ಬದುಕು ಸಾಧ್ಯವಾಗಿಸಿಕೊಳ್ಳುವುದು -  ಇವು ಕೌಟುಂಬಿಕ ಸಂಕಲೆಯೊಳಗೇ ರೂಪುಗೊಳ್ಳುವ ಮಹಿಳಾ ಶಕ್ತಿಯ ಎರಡು ಮಾದರಿಗಳು. ಇಲ್ಲಿ ಅಂತಹ ಇಬ್ಬರ ಕುರಿತು ಚರ್ಚಿಸಲಾಗಿದೆ.

ಒಬ್ಬರು ಸ್ವತಃ ಕೌಟುಂಬಿಕ ದೌರ್ಜನ್ಯಕ್ಕೀಡಾಗಿ, ಶಿಕ್ಷಣ-ಆರ್ಥಿಕ ಭದ್ರತೆ ಇಲ್ಲದಿರುವಾಗಲೂ ದಿಟ್ಟತನದಿಂದ ತನ್ನ ಸಂಕಷ್ಟಗಳಿಂದ ಹೊರಬಂದು, ಮಜ್ಲಿಸ್ ಎಂಬ ಸಂಸ್ಥೆ ಕಟ್ಟಿ ಸಾವಿರಾರು ಹೆಣ್ಮಕ್ಕಳಿಗೆ ಉಚಿತ ಕಾನೂನು ಸೇವೆ ನೀಡುತ್ತಿರುವ ಫ್ಲೇವಿಯಾ ಆಗ್ನೆಸ್. ಮತ್ತೊಬ್ಬರು ಗ್ರಾಮವಿಕಾಸದ ಕನಸು ಕಾಣುತ್ತಾ ೧೯೮೭ರಲ್ಲಿ ಪುಣೆಯಿಂದ ೧೮೦ ಕಿಮೀ ದೂರದ ಮಾಲ್‌ಶಿರಸ್ ಎಂಬ ಹಳ್ಳಿಗೆ ಹೋಗಿ ಐದು ವರ್ಷ ನೆಲೆಸಿ ಗ್ರಾಮೀಣ ಮಹಿಳೆಯರ ಸರ್ವಾಂಗೀಣ ಪ್ರಗತಿಗಾಗಿ ಪರ್ಯಾಯ ವಿಧಾನ ಅರಸುತ್ತ ಮಾಸೂಮ್ ಎಂಬ ಸಂಸ್ಥೆ ಕಟ್ಟಿದ ಮನಿಶಾ ಗುಪ್ತೆ-ರಮೇಶ್ ಅವಸ್ಥಿ ದಂಪತಿಗಳು.


ಹಳ್ಳಿಗೆ ಹೋದ ನಗರದ ಜೋಡಿ



೬೧ ವರ್ಷದ ಪುಣೆಯ ಮನಿಶಾ ಮೂರನೇ ತಲೆಮಾರಿನ ಹೋರಾಟಗಾರರ ಮನೆತನದ ಹಿನ್ನೆಲೆಯವರು. ಅವರ ಅಜ್ಜ ನೀಲಕಾಂತ ಗುಪ್ತೆ ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲೆಂದು ವಕೀಲಿ ವೃತ್ತಿ ತೊರೆದವರು. ತಮ್ಮ ಮಕ್ಕಳನ್ನೂ ಸಮಾಜಸೇವೆಗೈಯಲು ಪ್ರೋತ್ಸಾಹಿಸಿದವರು. ಮನಿಶಾ ಅವರ ತಾಯ್ತಂದೆಯರಾದ ವಸಂತ ಮತ್ತು ಶಾಲಿನಿ ಗುಪ್ತೆ ಸೋಶಿಯಲಿಸ್ಟ್ ಪಕ್ಷದ ಸದಸ್ಯರು ಮತ್ತು ಟ್ರೇಡ್ ಯೂನಿಯನ್ ಚಳುವಳಿಯ ವೇಳೆ ಪರಿಚಯವಾಗಿ ಉಟ್ಟ ಖಾದಿಬಟ್ಟೆಯಲ್ಲೇ ಸರಳ ವಿವಾಹವಾದವರು. ವಸಂತ ಗುಪ್ತೆ ಹಿಂದೂ ಮಜ್ದೂರ್ ಸಭಾದ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದರು. ಹೀಗಾಗಿ ರಾಷ್ಟ್ರ ಸೇವಾದಳ, ಸಾಣೆ ಗುರೂಜಿ ಅವರ ಪ್ರಭಾವವಲಯದಲ್ಲಿಯೇ ಮನಿಶಾ ಬಾಲ್ಯ ಕಳೆಯಿತು. ಮಾನವಹಕ್ಕುಗಳ ಪರ ದನಿಯೆತ್ತುವುದು ಸಹಜವೆಂಬಂತೆ ಅವರಿಗೆ ಒಲಿಯಿತು.

ಮೈಕ್ರೋಬಯಾಲಜಿ ಎಂಎಸ್ಸಿ ಮಾಡುತ್ತಿದ್ದ ಮನಿಶಾಗೆ ಪ್ರಯೋಗಶಾಲೆಯಲ್ಲಿ ಮೈಕ್ರೋಸ್ಕೋಪಿನ ಅಡಿಯಲ್ಲಿ ನೋಡುವಾಗ ಇಡಿಯ ವಿಶ್ವವನ್ನೇ ಕಂಡಂತೆನಿಸುತ್ತಿತ್ತು. ಆದರೆ ಮಹಿಳಾ ಸಮಸ್ಯೆಗಳತ್ತ ನೋಡುವಾಗ ಅದಷ್ಟೆ ಸಾಲದು ಎನಿಸಿತು. ಮಹಿಳಾ ದೌರ್ಜನ್ಯ, ಬಾಲ್ಯವಿವಾಹ, ಮಹಿಳಾ ಹಕ್ಕುಗಳ ಕುರಿತು, ಪ್ರಜನನ ಆರೋಗ್ಯ ಹಕ್ಕುಗಳ ಕುರಿತು ಏನಾದರೂ ಮಾಡಲೇಬೇಕೆಂಬ ತುಡಿತ ಹುಟ್ಟಿತು.

ಅದು ಜಯಪ್ರಕಾಶ್ ನಾರಾಯಣ್ ಅವರ ‘ಸಂಪೂರ್ಣ ಕ್ರಾಂತಿ’ ದೇಶಾದ್ಯಂತ ತರುಣತರುಣಿಯನ್ನು ಸೆಳೆದ ಕಾಲ. ಸಮಾಜವಾದಿ ಕುಟುಂಬ ಹಿನ್ನೆಲೆಯ ಮನಿಶಾ ಜೆಪಿ ಚಳುವಳಿಯ ಛಾತ್ರ ಯುವ ವಾಹಿನಿ ಸೇರಿದರು. ಸಮಾಜಶಾಸ್ತ್ರ ಎಂಎ ಮುಗಿಸಿ ಪಿಎಚ್‌ಡಿ ಮಾಡತೊಡಗಿದರು. ಮುಂಬಯಿಯ ಸ್ಲಮ್ಮಿನಲ್ಲಿಯೂ ಕೆಲಸ ಮಾಡುತ್ತಿದ್ದರು. ಅದೇವೇಳೆ ಐಐಟಿ ಡೆಲ್ಲಿಯ ಪದವೀಧರ, ಅರ್ಥಶಾಸ್ತ್ರದ ಸ್ನಾತಕೋತ್ತರ ಪದವೀಧರ, ಪಾಕಿಸ್ತಾನದ ಪಂಜಾಬಿನಿಂದ ಭಾರತದ ವಿಭಜನೆ ವೇಳೆ ಗಡಿಯೀಚೆ ವಲಸೆ ಬಂದ ಕುಟುಂಬದ ಡಾ. ರಮೇಶ್ ಅವಸ್ಥಿ ಎಂಬ ತರುಣನೂ ಜೆಪಿ ಚಳುವಳಿಯಲ್ಲಿದ್ದ. ಮುಂಬಯಿ ಸ್ಲಮ್ಮಿನಲ್ಲಿ ಮನಿಶಾ-ರಮೇಶ್ ಪರಿಚಿತರಾದರು. ೧೯೮೨ರಲ್ಲಿ ಬಾಳಸಂಗಾತಿಗಳಾದರು.

ಅಂದಿನಿಂದ ‘ದ ವೀಕ್’ ಪತ್ರಿಕೆಯ ‘ಕಪಲ್ ಆಫ್ ದ ಇಯರ್ ೨೦೧೭’ ಆಗುವವರೆಗಿನ ಅವರ ಪಯಣದ ದಾರಿ ಸ್ಫೂರ್ತಿದಾಯಕವಾಗಿದೆ.

‘ನಿಜವಾದ ಭಾರತ ನೋಡಬೇಕಾದರೆ ಹಳ್ಳಿಗಳಿಗೆ ಹೋಗಿ. ದೇಶ ಬದಲಾಯಿಸಬೇಕಾದರೆ ಜನರ ಜೊತೆಗಿರಿ. ಕಡಿಮೆ ಮಾತನಾಡಿ, ಹೆಚ್ಚು ಕೇಳಿ, ಹೆಚ್ಚು ಗ್ರಹಿಸಿ. ಉತ್ತರಗಳ ಜೊತೆಗೆ ಹೋಗಬೇಡಿ, ಜನರ ನಾಡಿಮಿಡಿತ ಅರಿತರೆ ಉತ್ತರ ಅವರಿಂದಲೇ ಬರುತ್ತದೆ. ಜನರ ಜೊತೆ ಕೈಕೈ ಜೋಡಿಸಿ, ಜನರಿಂದ ದೂರ ಹೋಗಬೇಡಿ’ ಎಂದು ‘ಸಂಪೂರ್ಣ ಕ್ರಾಂತಿ’ ಪ್ರತಿಪಾದಿಸಿದ ಜೆಪಿ ಹೇಳುತ್ತಿದ್ದರೆ, ಅವರ ಮಾತು ಈ ಯುವಜೋಡಿಯ ಮನದಾಳಕ್ಕಿಳಿದು ಪ್ರಭಾವಿಸಿತು.

ಆಗ ಭಾರತದ ಮೊದಲ ತಲೆಮಾರಿನ ಪ್ಲಾಸ್ಟಿಕ್ ಸರ್ಜನ್ ಡಾ ನೋಶಿರ್ ಹೋರ್ಮಸ್ಜಿ ಅಂತಿಯಾ ಪುಣೆಯ ಖ್ಯಾತ ವೈದ್ಯರಾಗಿದ್ದರು. ವೈದ್ಯಕೀಯದ ಜೊತೆಗೆ ಸಮಾಜಸೇವೆಯಲ್ಲೂ ತೊಡಗಿಕೊಂಡಿದ್ದರು. ಕುಷ್ಠರೋಗಿಗಳ ಸೇವೆಗಾಗಿ ಸಂಸ್ಥೆ ಕಟ್ಟಿದ್ದರು. ಗ್ರಾಮೀಣ ಆರೋಗ್ಯ ಸೇವೆಯ ಎಲ್ಲ ಹಂತಗಳಲ್ಲೂ ಕೆಲಸ ಮಾಡುತ್ತಿದ್ದರು. ಹಲವು ಅಖಿಲಭಾರತ ಮಟ್ಟದ ಸಂಸ್ಥೆಗಳ ಹುಟ್ಟುಹಾಕಿದ್ದರು. ಅವರ ಸಂಪರ್ಕಿಸಿದ ಮನಿಶಾ-ರಮೇಶ್ ತಾವೂ ಹಳ್ಳಿಗೆ ಹೋಗಲು ಸಿದ್ಧವೆಂದು ಹೇಳಿದರು. ಮೈಯ ಕಣಕಣದಲ್ಲಿ ಏನಾದರೂ ಮಾಡಬೇಕೆಂಬ ಹುಕಿ ತುಂಬಿಕೊಂಡ ಅವರಿಬ್ಬರಿಗೆ ಡಾ. ಅಂತಿಯಾ ಒಂದು ಯೋಜನೆಯ ನೀಲನಕ್ಷೆ ಬರೆಯಲು ಹೇಳಿದರು. ಹೀಗೆ ರೂರಲ್ ಹೆಲ್ತ್ ಎಜುಕೇಷನ್ ಪ್ರಾಜೆಕ್ಟ್ ರೂಪುಗೊಂಡಿತು.

ರಮೇಶ್ ಮಿತಭಾಷಿ. ಮನಿಶಾ ಚಟಪಟನೆ ಅರಳು ಹುರಿದಂತೆ ಮಾತನಾಡುವವರು. ಸಾಕಷ್ಟು ಗುಣಸ್ವಭಾವದ ಭಿನ್ನತೆಗಳ ನಡುವೆಯೂ ಒಂದೇ ಗುರಿಯೆಡೆಗೆ ನಡೆದರು. ಗ್ರಾಮವಿಕಾಸದ ಕನಸು ಕಾಣುತ್ತಾ ೧೯೮೭ರಲ್ಲಿ ಪುಣೆಯಿಂದ ೧೮೦ ಕಿಮೀ ದೂರದ ಮಾಲ್‌ಶಿರಸ್ ಎಂಬ ಹಳ್ಳಿಗೆ ಹೋದರು. ಆ ಗ್ರಾಮದಲ್ಲಿಲ್ಲದ ಕನಿಷ್ಠ ಸವಲತ್ತುಗಳು, ಕೌಟುಂಬಿಕ ದೌರ್ಜನ್ಯವೇ ಮೊದಲಾದ ಸಮಸ್ಯೆಗಳು ಅನುಭವಕ್ಕೆ ಬಂದವು. ಗ್ರಾಮವಾಸ್ತವ್ಯ ಹಲವು ವಾಸ್ತವಗಳ ಕಡೆಗೆ ಅವರ ಗಮನ ಸೆಳೆಯಿತು.

ಸಮಾಜ ಮತ್ತು ಸರ್ಕಾರ ತಾಯಿಯ ಆರೋಗ್ಯದ ಬಗೆಗೆ ಗಮನ ಹರಿಸುವಷ್ಟು ಮಹಿಳಾ ಆರೋಗ್ಯದ ಬಗೆಗೆ ಗಮನ ಹರಿಸುವುದಿಲ್ಲ. ಹೆಣ್ಣಿನ ಪ್ರಾಮುಖ್ಯತೆ, ಗಮನ ಎಲ್ಲ ಅವಳು ತಾಯಿಯಾದ ಮೇಲಷ್ಟೆ. ಸರ್ಕಾರದ ಯೋಜನೆಗಳೂ ಸಹ ಹೆಣ್ಣು ತಾಯಿಯಾದಾಗಲಷ್ಟೆ ಆರೋಗ್ಯ ಮುಖ್ಯ ಎಂದು ಹೇಳುತ್ತವೆ ಎಂಬ ಸತ್ಯ ಅರಿವಿಗೆ ಬಂತು. ಇಂಥ ಲೋಪಗಳಿಗೆ ದಾರಿ ಹುಡುಕುವ ಕನಸು ಹೊತ್ತು ‘ಮಾಸೂಮ್’ ಅಥವಾ ‘ಮಹಿಳಾ ಸರ್ವಾಂಗೀಣ್ ಉತ್ಕರ್ಷ ಮಂಡಲ್’ ರೂಪುಗೊಂಡಿತು.

ಮೊದಲು ಎಂಟು ಕೈಮಗ್ಗಗಳ ತಂದು ಒಂದು ಯೋಜನೆ ಪ್ರಾರಂಭಿಸಿದರು. ಕೈಮಗ್ಗಗಳಲ್ಲಿ ಮಾಲ್ಶಿರಸ್ ಮತ್ತು ಸುತ್ತಮುತ್ತಲ ೧೮ ಗ್ರಾಮಗಳ ಮಹಿಳೆಯರು ಬಂದು ನೇಯತೊಡಗಿದರು. ಬೆಳಿಗ್ಗೆ ಒಂಭತ್ತರಿಂದ ಸಂಜೆ ಐದರ ತನಕ ಸಂಘದ ಕೆಲಸಗಳಾದರೆ ಸಂಜೆಯ ನಂತರ ಇತರೆ ಕೆಲಸಗಳು. ರಮೇಶ್ ಊರ ಜನರಿಗೆ ರೇಡಿಯೊ-ವಾಚು-ಟಿವಿ ರಿಪೇರಿ ಮಾಡಿಕೊಡುತ್ತ ಹತ್ತಿರವಾದರು. ಯಾರದಾದರೂ ಮನೆಗೆ ನುಗ್ಗಿದ ಹಾವು-ಚೇಳುಗಳ ಹಿಡಿದು, ಲಾಗ್‌ಬುಕ್‌ನಲ್ಲಿ ಬರೆದುಕೊಂಡು, ಕಾಡಿಗೆ ಬಿಡುತ್ತಲಿದ್ದರು. ವೈದ್ಯರ ಕುಟುಂಬದ ಅವರಿಗೆ ಸಣ್ಣಪುಟ್ಟ ಕಾಯಿಲೆಗಳಿಗೆ ಔಷಧಿ ಕೊಡುವುದು ಗೊತ್ತಿತ್ತು. ಆ ಗ್ರಾಮಕ್ಕೆ ಹತ್ತಿರವಿದ್ದ ೩ ಪಿಎಚ್‌ಸಿಗಳ ಸಹಾಯದಿಂದ ೫ ವರ್ಷ ಆರೋಗ್ಯ ಜಾಗೃತಿಯ ಕೆಲಸ ಮಾಡಿದರು. ಎರಡು ವರ್ಷ ಕಾಲ ಆಯ್ದ ಮಹಿಳೆಯರಿಗೆ ಆರೋಗ್ಯ ಸಹಾಯಕಿಯ ತರಬೇತಿ ನೀಡತೊಡಗಿದರು.

ಬರಿಯ ಆರೋಗ್ಯ ಕುರಿತ ಕಾಳಜಿಯಷ್ಟೇ ಸಾಕಾಗದು ಎಂದರಿತು ಕೌಟುಂಬಿಕ ದೌರ್ಜನ್ಯಕ್ಕೀಡಾದ ಮಹಿಳೆಯರಿಗೆ ಕೌನ್ಸೆಲಿಂಗ್ ಮಾಡಲು ಹಾಗೂ ಕಾನೂನು ಅರಿವು ಮೂಡಿಸಲು ಸಂವಾದ ಎಂಬ ಕೇಂದ್ರ ತೆರೆದರು. ಅದು ಪುಣೆ ಜಿಲ್ಲಾ ಕೋರ್ಟಿನ ಉಚಿತ ಕಾನೂನು ಸೇವಾ ಕೇಂದ್ರದೊಡನೆ ಕೆಲಸ ಮಾಡತೊಡಗಿತು. ಮನೆಮನೆಯ ದಿನನಿತ್ಯದ ಹಿಂಸೆ ತಡೆಗಟ್ಟಲು ವಾಲಂಟಿಯರ್ಸ್ ಅನ್ನು ತಯಾರು ಮಾಡಲಾಯಿತು. ನಿಧಾನವಾಗಿ ಹಳ್ಳಿಗಳು ಮಾಸೂಮ್ ಮಹಿಳೆಯರ ಆಶಯಗಳನ್ನು ಅರಿತುಕೊಂಡವು. ಪುರುಷರು ಇನ್ನು ಹಿಂಸೆ ನಡೆಯುವುದಿಲ್ಲವೆಂಬ ಸತ್ಯ ಅರಗಿಸಿಕೊಂಡರು. ಸುತ್ತಲ ಗ್ರಾಮಗಳ ‘ಸಂವಾದ’ ಕೇಂದ್ರಗಳಲ್ಲಿ ಬುಧವಾರ ಮತ್ತು ಶನಿವಾರ ವಕೀಲರು ಬಂದು ಕೇಸುಗಳ ಪರಿಶೀಲಿಸತೊಡಗಿದರು.



ಇದರ ಜೊತೆಗೆ ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಬಾಂಗ್ಲಾದೇಶದ ಮಹಮದ್ ಯೂನಸ್ ಅವರ ಮೈಕ್ರೋಫೈನಾನ್ಸಿಂಗ್ ವ್ಯವಸ್ಥೆಯನ್ನು ರಮೇಶ್ ಅವಸ್ಥಿ ಅಭ್ಯಸಿಸಿದರು. ಸೂಕ್ತ ಬದಲಾವಣೆಗಳೊಂದಿಗೆ ಸಾಲ-ಉಳಿತಾಯ ಯೋಜನೆಯ ಸ್ವಸಹಾಯ ಗುಂಪುಗಳ ರೂಪಿಸಿದರು. ಪ್ರತಿತಿಂಗಳೂ ಸ್ವಲ್ಪ ಹಣ ಉಳಿಸುವುದು ಮತ್ತು ಅವಶ್ಯ ಬಿದ್ದಾಗ ಸಾಲ ತೆಗೆದುಕೊಳ್ಳುವ ಯೋಜನೆ ಜನಪ್ರಿಯವಾಯಿತು. ಜೊತೆಗೆ ಗ್ರಾಮಸಭೆಗೆ ಮಹಿಳೆಯರು ಹೋಗುವಂತೆ ಮಾಡಲು, ಮಹಿಳಾ ಪ್ರಾತಿನಿಧ್ಯ ಅರ್ಥಪೂರ್ಣವಾಗುವಂತೆ ಮಾಡಲು ನಾನಾ ಕಾರ್ಯಕ್ರಮ ಹಾಕಿಕೊಂಡರು. ಸಮಾಜರಚನೆಯಲ್ಲಿ ತಾರತಮ್ಯಕ್ಕೆ ಮೂಲಕಾರಣವಾದ ಜಾತಿ, ವರ್ಗಗಳ ನೆಲೆಯಿಂದಲೂ ಕೆಲಸಗಳನ್ನು ವಿಸ್ತರಿಸಿಕೊಂಡರು. ಮಕ್ಕಳಿಗಾಗಿ ಗ್ರಂಥಾಲಯ, ಆಟೋಟ ಸ್ಪರ್ಧೆಗಳ ನಡೆಸಿದರು.

೨೦೧೦ರಲ್ಲಿ ಮನಿಶಾ ಮತ್ತು ರಮೇಶ್ ಮಾಸೂಮ್‌ನಿಂದ ತಮ್ಮ ನಾಯಕತ್ವ ಹಿಂತೆಗೆದುಕೊಂಡಿದ್ದಾರೆ. ಈಗಲ್ಲಿ ಆರು ಗುಂಪುಗಳು ಕೆಲಸ ಮಾಡುತ್ತಿವೆ. ಎರಡನೆಯ ತಲೆಮಾರಿನ ಮಹಿಳೆಯರು ಇದ್ದಾರೆ. ‘ನಾವು ದಾನನೀಡಲು ಹೋಗಲಿಲ್ಲ. ಜನರು ಫಲಾನುಭವಿಗಳೂ ಆಗಿರಲಿಲ್ಲ. ಆದರೆ ಜನ ಸಾಮಾಜಿಕ ಬದಲಾವಣೆಯ ಪ್ರಕ್ರಿಯೆಯಲ್ಲಿ ತೊಡಗಿಕೊಂಡರು. ಹಿಂಸೆಯಿರದ, ಸ್ವತಂತ್ರ ಸಮಸಮಾಜ ಬಂದರೆ ಬದುಕು ಈಗಿಗಿಂತ ಹಸನಾಗುವುದೆಂದು ತಿಳಿಸಲು ಹೋಗಿದ್ದೆವು. ಅಂಥ ಬದಲಾವಣೆ ತರಲು ಹೋಗಿದ್ದೆವು. ಬದಲಾವಣೆ ಸಂಭವಿಸಲು ಮೊದಲಾದರೆ ನಮ್ಮ ಕೆಲಸ ಮುಗಿದಂತೆ. ನಮ್ಮ ಕೆಲಸ ಕಳೆದುಕೊಳ್ಳುವುದೇ ನಮ್ಮ ಕೆಲಸ. ಲೂಸಿಂಗ್ ಜಾಬ್ ಈಸ್ ಅವರ್ ಜಾಬ್’ ಎಂದು ಈಗ ಹಿಂತಿರುಗಿ ನೋಡುತ್ತ ಆ ದಿನಗಳ ನೆನೆಯುತ್ತಾರೆ ಮನಿಶಾ.

ಈ ದಂಪತಿಗಳಿಗೆ ಪ್ರತೀಕ್ ಮತ್ತು ಪ್ರಿಯಾ ಎಂಬ ಇಬ್ಬರು ಮಕ್ಕಳು. ಪ್ರತೀಕ್ ಕೆನಡಾದಲ್ಲಿ ಕಾನೂನು ತಜ್ಞ, ಎಂಜಿನಿಯರ್ಸ್ ವಿದೌಟ್ ಬಾರ್ಡರ‍್ಸ್‌ನಲ್ಲಿ ಕೆಲಸ ಮಾಡುತ್ತಾರೆ. ಪ್ರಿಯಾ ಅಮೆರಿಕದಲ್ಲಿದ್ದಾರೆ. ದಕ್ಷಿಣ ಏಷ್ಯಾದ ಮಹಿಳೆಯರ ಸಂಘಟನೆ ‘ಮನವಿ’ಯಲ್ಲಿ ಕೆಲಸ ಮಾಡುತ್ತಾರೆ.

ಮನಿಶಾ ಬರಹಗಾರ್ತಿಯೂ ಹೌದು. ‘ಆನರ್ ಅಂಡ್ ವುಮೆನ್ಸ್ ರೈಟ್ಸ್’, ‘ಕಾನ್ಸೆಪ್ಟ್ ಅಂಡ್ ಪ್ರಾಕ್ಟೀಸ್ ಆಫ್ ಪೇಟ್ರಿಯಾರ್ಕಲ್ ಆನರ್ ಇನ್ ರೂರಲ್ ಮಹಾರಾಷ್ಟ್ರ’, ‘ಅಬಾರ್ಷನ್ ನೀಡ್ಸ್ ಆಫ್ ವುಮೆನ್ ಇನ್ ಇಂಡಿಯಾ’ ಇತ್ಯಾದಿ ಪುಸ್ತಕಗಳ ಬರೆದಿದ್ದಾರೆ, ಸಂಪಾದಿಸಿದ್ದಾರೆ. ಜಾನ್ ಹಾಪ್ಕಿನ್ಸ್ ವಿ.ವಿ.ದಲ್ಲಿ ಡಿಪಾರ್ಟ್‌ಮೆಂಟ್ ಆಫ್ ಇಂಟರ್‌ನ್ಯಾಷನಲ್ ಹೆಲ್ತ್‌ನಲ್ಲಿ ವಿಸಿಟಿಂಗ್ ಫೆಲೋ ಆಗಿದ್ದಾರೆ.

ಮಜ್ಲಿಸ್ ಎಂಬ ಕೈದೀಪ ಹಚ್ಚಿಟ್ಟ ಫ್ಲೇವಿಯಾ ಆಗ್ನೆಸ್ 




೭೧ ವರ್ಷದ ಫ್ಲೇವಿಯಾ ಆಗ್ನೆಸ್ ಮಂಗಳೂರು ಬಳಿಯ ಕದ್ರಿಯವರು. ಪ್ರೌಢಶಾಲೆಯವರೆಗೆ ಚಿಕ್ಕಮ್ಮನೊಡನೆ ಮಂಗಳೂರಿನಲ್ಲಿದ್ದು ವಿದ್ಯಾಭ್ಯಾಸ ಪಡೆಯುತ್ತಿದ್ದರು. ಅದೇವೇಳೆ ಯೆಮನಿನ ಆಡೆನ್ನಿನಲ್ಲಿದ್ದ ತಂದೆ ತೀರಿಕೊಂಡರು. ತಂದೆಯ ಅಕಾಲ ಮರಣದ ಬಳಿಕ ಟೈಪಿಸ್ಟ್ ಆಗಿ ಕೆಲಕಾಲ ವಿದೇಶದಲ್ಲಿ ದುಡಿದರು. ಕೊನೆಗೆ ಕುಟುಂಬ ಮಂಗಳೂರಿಗೆ ಮರಳಿತು. ೨೦ ವರ್ಷಕ್ಕೇ ಅವರ ಮದುವೆಯಾಯಿತು. ಆದರೆ ಸಾಂಸಾರಿಕ ಬದುಕು ತೀರ ದುರ್ಭರವಾಗಿತ್ತು. ತನಗಿಂತ ಹಿರಿಯರಾಗಿದ್ದ ಪತಿಯಿಂದ ಸಾಕಷ್ಟು ದೌರ್ಜನ್ಯ ಅನುಭವಿಸಿದರು. ಮೂರು ಮಕ್ಕಳ ಸಾಕುತ್ತ ೧೩ ವರ್ಷದ ವೈವಾಹಿಕ ಬದುಕಿನಲ್ಲಿ ಸಾಕಷ್ಟು ಹಿಂಸೆ ಅನುಭವಿಸಿದರು. ಕ್ರೈಸ್ತ ಧರ್ಮದ ಪ್ರಕಾರ ವಿಚ್ಛೇದನೆಯೂ ಸಿಗುವಂತಿರಲಿಲ್ಲ. ಯಾಕೆಂದರೆ ಆ ಧರ್ಮದ ಪ್ರಕಾರ ಕೌಟುಂಬಿಕ ದೌರ್ಜನ್ಯವು ವಿಚ್ಛೇದನಕ್ಕೆ ಕಾರಣವಾಗುವುದಿಲ್ಲ. ಕೊನೆಗೆ ಮುಂಬಯಿಗೆ ಹೋಗಿ, ಕೋರ್ಟಿನ ಮೊರೆ ಹೋದರು. ಕಾನೂನಾತ್ಮಕ ವಿಚ್ಛೇದನೆ ಪಡೆದರು. ಮಕ್ಕಳ ಕಸ್ಟಡಿ ಪಡೆದರು. ವೈವಾಹಿಕ ಬದುಕು, ವಿಚ್ಛೇದನೆ ಪಡೆಯುವ ಕಷ್ಟಗಳು, ಕೌಟುಂಬಿಕ ದೌರ್ಜನ್ಯವನ್ನು ಸಹಜವೆಂಬಂತೆ ಪರಿಗಣಿಸುವ ಸಮಾಜ - ಇವೆಲ್ಲ ಅನುಭವಗಳೇ ಅವರನ್ನು ಹೋರಾಟಗಾರ್ತಿಯಾಗಿ ರೂಪಿಸಿದವು.

ಮದುವೆಯಾಗುವಾಗ ಬರಿಯ ಎಸ್ಸೆಲ್ಸಿ ಪಾಸು ಮಾಡಿದ್ದವರು ನಂತರ ವಿದ್ಯಾಭ್ಯಾಸ ಮುಂದುವರೆಸಿದರು. ಶ್ರೀಮತಿ ನಾಥೂಬಾಯಿ ದಾಮೋದರ ಥ್ಯಾಕರ್ಸೆ (ಎಸ್‌ಎನ್‌ಡಿಟಿ) ಮಹಿಳಾ ವಿಶ್ವವಿದ್ಯಾಲಯದಲ್ಲಿ ೧೯೮೦ರಲ್ಲಿ ಸಮಾಜಶಾಸ್ತ್ರ ವಿಷಯವಾಗಿ ಡಿಗ್ರಿ ಮುಗಿಸಿದರು. ೧೯೮೮ರಲ್ಲಿ ಕಾನೂನು ಪದವಿ ಪಡೆದು ಮುಂಬೈ ಹೈಕೋರ್ಟಿನಲ್ಲಿ ವಕೀಲಿಕೆ ಶುರು ಮಾಡಿದರು. ೧೯೯೨ರಲ್ಲಿ ಸ್ನಾತಕೋತ್ತರ ಕಾನೂನು ಪದವಿ (ಎಲ್‌ಎಲ್‌ಎಂ) ಪಡೆದು ನಂತರ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲಿನಲ್ಲಿ ಎಂ.ಫಿಲ್ ಮುಗಿಸಿ (೧೯೯೭) ಅಲ್ಲೇ ಗೌರವ ಪ್ರಾಧ್ಯಾಪಕರಾದರು. ‘ಪಾಲಿಟಿಕ್ಸ್ ಆಫ್ ಪರ್ಸನಲ್ ಲಾಸ್ ಇನ್ ಡಿಫರೆಂಟ್ ರಿಲಿಜಿಯಸ್ ಕಮ್ಯುನಿಟೀಸ್’ ಅವರ ಪಿಎಚ್‌ಡಿ ಪ್ರಬಂಧದ ವಿಷಯ. ನಂತರ ಆಕ್ಸಫರ್ಡ್ ವಿವಿ ಪ್ರೆಸ್ ಅದನ್ನು ಪುಸ್ತಕವಾಗಿ ಪ್ರಕಟಿಸಿತು.

ಅವರು ಕೌಟುಂಬಿಕ, ವೈವಾಹಿಕ, ಆಸ್ತಿ ಕಾನೂನು ಪರಿಣಿತರು. ನಟಿ, ನಿರ್ದೇಶಕಿ, ಕಲಾವಿದೆ ಮಧುಶ್ರೀ ದತ್ತಾ ಅವರೊಡನೆ ೧೯೯೦ರಲ್ಲಿ ‘ಮಜ್ಲಿಸ್’ ಎಂಬ ಮಹಿಳೆ ಮತ್ತು ಕಾನೂನು ಸಲಹಾ ಕೇಂದ್ರ ನಡೆಸುತ್ತಿದ್ದಾರೆ. ಇದುವರೆಗೆ ೫೦ ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಆ ಸಂಸ್ಥೆ ಕಾನೂನು ಸಹಾಯ ನೀಡಿದೆ. ಅವರಲ್ಲಿ ಹೆಚ್ಚಿನವರು ಅನಾಥರು. ಇದರ ಮೂರುಪಟ್ಟು ಜನರಿಗೆ ಕಾನೂನು ಸಲಹೆ ನೀಡಿದ್ದಾರೆ. ನಿರ್ಭಯಾ ಪ್ರಕರಣ ಮತ್ತು ಶಕ್ತಿ ಮಿಲ್ ಅತ್ಯಾಚಾರ ಪ್ರಕರಣದ ವೇಳೆ ಆರೋಪಿಗಳಿಗೆ ಮರಣದಂಡನೆ ವಿಧಿಸಿದಾಗ ಫ್ಲೇವಿಯಾ ಅದನ್ನು ವಿರೋಧಿಸಿದರು. ಅಷ್ಟೇ ಅಲ್ಲ, ಮರಣದಂಡನೆ ಶಿಕ್ಷೆ ಪಡೆಯುವವರ ವರ್ಗ ಹಿನ್ನೆಲೆ ವಿಶ್ಲೇಷಿಸಿ ಅದು ರದ್ದಾಗಬೇಕೆಂದೂ ಕೋರಿದ್ದರು. ತ್ರಿವಳಿ ತಲಾಖ್ ಕುರಿತು, ಏಕರೂಪ ನಾಗರಿಕ ಸಂಹಿತೆ ಕುರಿತು ಹಿಂದೂತ್ವವಾದಿ ಪಕ್ಷವೇ ಏಕೆ ಮಾತನಾಡುತ್ತಿದೆ ಎಂಬುದನ್ನು ಆಳವಾಗಿ ವಿಶ್ಲೇಷಿಸುತ್ತ ಅವೆರೆಡನ್ನೂ ವಿರೋಧಿಸಿದ್ದರು. ಮುಂಬಯಿಯ ಬಾರ್ ಡ್ಯಾನ್ಸರುಗಳ ಪರವಾಗಿ ವಾದಿಸಿದ್ದರು. ಇವತ್ತಿಗೂ ಮಹಿಳಾ ಪರ ಕಾನೂನು ಕುರಿತ ಚರ್ಚೆ ಬಂದರೆ ಅಲ್ಲಿ ಎದ್ದು ಕಾಣುವ ಹೆಸರು ಅವರದು.



ಮಧುಶ್ರೀ ದತ್ತಾ ಅವರು ನಿರ್ದೇಶಿಸಿದ ‘ಸ್ಕ್ರಿಬಲ್ಸ್ ಆನ್ ಅಕ್ಕ’ ಎಂಬ ವಚನಕಾರ್ತಿ ಅಕ್ಕಮಹಾದೇವಿ ಕುರಿತ ಕಿರುಚಿತ್ರವನ್ನು ಅವರು ನಿರ್ಮಿಸಿದ್ದಾರೆ. ಒಂದೇಸಮ ಕೋರ್ಟ್ ಕೇಸು ನಡೆಸಿ ಬೇಸತ್ತು ಈಗ ಬರವಣಿಗೆಯತ್ತ ಮುಖ ಮಾಡಿದ್ದೇನೆ ಎಂದು ತಾವೇ ಹೇಳಿಕೊಳ್ಳುತ್ತಾರೆ. ‘ಲಾ ಅಂಡ್ ಜೆಂಡರ್ ಇನಿಕ್ವಾಲಿಟಿ’, ‘ವುಮೆನ್ ಅಂಡ್ ಲಾ ಇನ್ ಇಂಡಿಯಾ’, ‘ಫ್ಯಾಮಿಲಿ ಲಾ’ - ಸಂಪುಟ ೧ ಮತ್ತು ೨,’ ‘ಆಫ್ ಲಾಫ್ಟಿ ಕ್ಲೇಮ್ಸ್ ಅಂಡ್ ಮಫ್ಲ್ಡ್ ಲಾಸ್’ ಮೊದಲಾದ ಮೌಲಿಕ, ಅಧ್ಯಯನಪೂರ್ಣ ಗ್ರಂಥಗಳನ್ನು ರಚಿಸಿದ್ದಾರೆ. ‘ಮೈ ಸ್ಟೋರಿ, ಅವರ್ ಸ್ಟೋರಿ.. ಆಫ್ ರಿಬಿಲ್ಡಿಂಗ್ ಬ್ರೋಕನ್ ಲೈವ್ಸ್’ ಎಂಬ ಆತ್ಮಚರಿತ್ರಾತ್ಮಕ ಪುಸ್ತಕ ಬರೆದಿದ್ದಾರೆ. ಅದು ಹಲವು ಭಾಷೆಗಳಿಗೆ ಅನುವಾದಗೊಂಡಿದೆ.



ಸಹನೆ, ಶಾಂತಿ, ತ್ಯಾಗ, ಕ್ಷಮೆಗಳಂಥ ಗುಣಗಳ ಹೇರಿಕೆಯಡಿ ಮಹಿಳೆಗೆ ಹಿಂಸೆಯನ್ನು ಸಹಿಸಿಕೊಳ್ಳುವುದು ಹಾಗೂ ತನ್ನನ್ನು ತಾನು ಹಿಂಸಿಸಿಕೊಳ್ಳುವುದು ರೂಢಿಯಾಗಿದೆ. ಸ್ವಯಂ ಹಿಂಸೆಯಿಂದ ಬಿಡುಗಡೆ ಹೊಂದುವ, ತನ್ನ ಪರಿಸ್ಥಿತಿಗೆ ಕಾರಣಗಳನ್ನರಿಯುವ, ತನ್ನಂತಹ ಇತರರನ್ನು ಗುರುತಿಸುವ ಅರಿವು ಮೂಡಿದರಷ್ಟೆ ಆತ್ಮಗೌರವದ, ಘನತೆಯ ಬದುಕು ಸಾಧ್ಯವಾಗುವುದು. ಅದೇ ಮಹಿಳಾ ಸಬಲೀಕರಣ. ಸಬಲೀಕರಣ ಮುಟ್ಟುವ ಗುರಿಯಲ್ಲ, ವಿಸ್ತಾರಗೊಳ್ಳುವ ನಿರಂತರ ಪ್ರಕ್ರಿಯೆ. ಆಸ್ಫೋಟದಂತೆ ಅದು ಸಂಭವಿಸುವಂಥದ್ದಲ್ಲ, ಬದಲು ದೀಪದಂತೆ ಉರಿಯಬೇಕಾದ ನಿರಂತರ ಪ್ರಕ್ರಿಯೆ. ‘ನನಗೆ ನಾನೇ ಬೆಳಕು’ ಎಂದು ಬಿಡುಗಡೆಯ ದಾರಿಯ ಶೋಧಿಸಿಕೊಳ್ಳುತ್ತಲೆ ಪಕ್ಕದ ಹಣತೆ ಹಚ್ಚಿಡುವ ಇಂಥ ಹೆಣ್ಣುಜೀವಗಳೇ ಸೋದರಿತ್ವದ ಶಕ್ತಿಯ ನಿಜ ಪ್ರತೀಕಗಳಾಗಿವೆ.

ಅಲ್ಲವೆ?

(ವಿ.ಸೂ: ಇವರಿಬ್ಬರೂ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ನಡೆಸುವ ಮಹಿಳಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಮಾ. ೮, ೯, 2018ರಂದು ಶಿವಮೊಗ್ಗಕ್ಕೆ ಬರುತ್ತಿದ್ದಾರೆ.)



No comments:

Post a Comment