Friday, 25 January 2019

ನಮ್ಮ ಸಂವಿಧಾನ ರಚನೆಯಲ್ಲಿ ಮಹಿಳೆಯರು





ಭಾರತ ದೇಶದ ಕಟು ಸಾಮಾಜಿಕ ವಾಸ್ತವ ಅನುಭವಕ್ಕೆ ಬರುವುದು ಇಲ್ಲಿನ ವಂಚಿತ ಸಮುದಾಯಗಳಿಗೆ ಮಾತ್ರ. ಜಾತಿ ಕಾರಣವಾದ ದಮನ ಒಂದು ಬಗೆಯ ದಲಿತತ್ವವನ್ನು ತಳ ಸಮುದಾಯಗಳಿಗೆ ಹುಟ್ಟಿನಿಂದಲೇ ಒದಗಿಸಿದರೆ ಲಿಂಗದ ಕಾರಣವಾಗಿ ಪ್ರತಿ ಜಾತಿಯ, ವರ್ಗದ ಹೆಣ್ಣು ಎರಡನೆಯ ದರ್ಜೆಯ ಪ್ರಜೆಯಾಗಿಯೇ ಮುಂದುವರೆದಿದ್ದಾಳೆ. ಜನರ ಬುದ್ಧಿಭಾವಗಳನ್ನು ಆವರಿಸಿರುವ ತಾರತಮ್ಯದ ಕಲ್ಪನೆಗಳು ಮಾನವ ಹಕ್ಕು ಬದುಕಿನಲ್ಲಿ ಅಳವಡದಂತೆ ತಡೆದಿವೆ. ಇಂಥ ಲೋಪಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಭಾರತೀಯ ಸಮಾಜದ ಒಂದು ಮಹತ್ತರ ಪ್ರಯತ್ನ ನಮ್ಮ ಸಂವಿಧಾನ.

ಮತ್ತೆ ಜನವರಿ 26 ಬಂದಿದೆ. ರಕ್ತರಹಿತ ಕ್ರಾಂತಿಯನ್ನು ಸಾಧ್ಯಮಾಡುವಷ್ಟು ಸಶಕ್ತವಾದ ಭಾರತ ಸಂವಿಧಾನ ಕುರಿತು ನಾನಾ ಸ್ತರದ ಚರ್ಚೆ, ವಿಶ್ಲೇಷಣೆ ನಡೆಯುತ್ತಿದೆ. ಸಂವಿಧಾನವು ಸ್ತ್ರೀಪುರುಷರೆಲ್ಲರಿಗು ಸಮಾನ ಹಕ್ಕುಗಳನ್ನು ನೀಡಲು ಕಾರಣಕರ್ತರಲ್ಲೊಬ್ಬರಾದ, ಭಾರತದ ಮಹಿಳಾ ಚಳುವಳಿ ಸಧೃಢವಾಗಲು ತಾತ್ವಿಕ ಚಿಂತನೆಗಳನ್ನೊದಗಿಸಿದ ಬಾಬಾಸಾಹೇಬ್ ಅಂಬೇಡ್ಕರರನ್ನು ಮಹಿಳೆಯರು ವಿಶೇಷವಾಗಿ ನೆನೆಯುತ್ತೇವೆ. ಮತ್ತೊಂದು ವಿಶೇಷವಿದೆ, ಸಂವಿಧಾನ ರಚನಾ ಸಭೆಯಲ್ಲಿ 15 ಮಹಿಳೆಯರೂ ಇದ್ದರು. ಬಹುಶಃ ಅದುವರೆಗೆ ವಿಶ್ವದ ಯಾವ ಸಂವಿಧಾನ ರಚನಾ ಸಭೆಯಲ್ಲೂ ಮಹಿಳೆಯರಿರಲಿಲ್ಲ, ಆದರೆ ಭಾರತದ ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಎಲ್ಲ ಸ್ತರದ, ಸಮುದಾಯದ ಹೆಣ್ಣುಮಕ್ಕಳೂ ಇರಲೇಬೇಕೆಂದು ಗಾಂಧೀಜಿ, ನೆಹರೂ ಮೊದಲಾದವರು ಪಟ್ಟುಹಿಡಿದು ಆಯ್ಕೆ ಮಾಡಿದ ಕಾರಣ ಅವರಲ್ಲಿದ್ದರು. ಬದುಕಿಡೀ ತಾರತಮ್ಯ ಅನುಭವಿಸುತ್ತ, ಬೌದ್ಧಿಕ ಬೆಳವಣಿಗೆ, ಬದಲಾವಣೆಗೆ ಅವಕಾಶವೇ ಇಲ್ಲದಿದ್ದ ಸಂಪ್ರದಾಯಶೀಲ ಸಮಾಜವೊಂದರ ಹೆಣ್ಣುಮಕ್ಕಳು ಸ್ವಸಾಮರ್ಥ್ಯದಿಂದ ಸಂವಿಧಾನ ರಚನಾ ಸಭೆಗೆ ಪ್ರವೇಶ ಪಡೆದದ್ದು ಸಾಮಾನ್ಯ ಸಂಗತಿಯಲ್ಲ. ಅಲ್ಲಿ ಮಹಿಳೆಯರಿದ್ದರೆಂಬುದೇ ನಮ್ಮ ನೈತಿಕ ಧೈರ್ಯ ಹೆಚ್ಚಿಸುತ್ತದೆ. ಅವರ ಹಿನ್ನೆಲೆ, ಕೊಡುಗೆ, ಹೆಣ್ಣುಸ್ವಭಾವಗಳನ್ನು ಉಳಿದವರು ಸ್ವೀಕರಿಸಿದ ವಿವರಗಳನ್ನು ಗಮನಿಸಿದರೆ ಅಂದಿನ ಸಾಮಾಜಿಕ-ರಾಜಕೀಯ ವಾತಾವರಣ ತಿಳಿಯುತ್ತದೆ.

ಆದರೆ ಎಂದೂ ಆ ಮಹಿಳೆಯರ ಕೊಡುಗೆ ಬಗೆಗೆ ಒಂದು ಸಾಲಿನ ಉಲ್ಲೇಖವೂ ಕೇಳುವುದಿಲ್ಲವೇಕೆ? ಅವರು ಅನಾಮಿಕರಾಗುಳಿದದ್ದೇಕೆ? ಮಹಿಳಾ ಚರಿತ್ರೆಯೇ ಹಾಗೆ. ಅನಾಮಿಕತೆಯೇ ಅದರ ಮುಖ್ಯ ಲಕ್ಷಣ.

ಹಾಗಾಗದಂತೆ ಈ ಬರಹ.

ಕೇಂದ್ರ ಮತ್ತು ಪ್ರಾಂತ್ಯ ಶಾಸನಸಭೆಗಳಿಗೆ ಚುನಾಯಿತರಾದ ಜನಪ್ರತಿನಿಧಿಗಳಿಂದ 272 ಜನ ಸಂವಿಧಾನ ರಚನಾ ಸಭೆಗೆ ಆಯ್ಕೆಯಾದರು. ಅವರಲ್ಲಿದ್ದ 15 ಮಹಿಳೆಯರು ಸ್ವಾತಂತ್ರ್ಯ ಹೋರಾಟಗಾರ್ತಿಯರು. ವಿಶಿಷ್ಟ ವ್ಯಕ್ತಿತ್ವ, ಹೋರಾಟದ ಗುಣ ಇದ್ದ ಸಾಮಾಜಿಕ ಕಾರ್ಯಕರ್ತೆಯರು. ಅವರು ಅಧ್ಯಕ್ಷೀಯ ಪ್ಯಾನೆಲ್ ಹಾಗೂ ವಿವಿಧ ಉಪಸಮಿತಿಗಳಲ್ಲಿದ್ದರು. ಅವರಲ್ಲಿ ವಕೀಲೆಯರಿದ್ದರು, ವಿಭಿನ್ನ ಕೌಟುಂಬಿಕ-ಜಾತಿ-ಧರ್ಮ-ಭಾಷಿಕ ಹಿನ್ನೆಲೆಯವರಿದ್ದರು. ಬಾಲ್ಯವಿವಾಹ, ವೈಧವ್ಯ, ಕೌಟುಂಬಿಕ ದೌರ್ಜನ್ಯ, ಹಿಂಸೆ, ಆಸ್ತಿ ಕಬಳಿಸುವಿಕೆ, ಜಾತಿ ದಬ್ಬಾಳಿಕೆಗಳಂತಹ ಪಿತೃಪ್ರಾಧಾನ್ಯದ ದಮನಕ್ಕೆ ಬಲಿಯಾದವರಾಗಿದ್ದರು. ಗಾಂಧಿವಾದ, ಸಮಾಜವಾದ, ಮಹಿಳಾವಾದ ಮೊದಲಾದ ಭಿನ್ನ ಚಿಂತನಾಧಾರೆಗಳೊಡನೆ ಗುರ್ತಿಸಿಕೊಂಡು ಜನರೊಡನೆ ಕೆಲಸ ಮಾಡುತ್ತಿದ್ದರು. ಸಂವಿಧಾನ ಸಭೆಯ ಕಲಾಪಗಳಿಗೆ ತಪ್ಪದೆ ಹಾಜರಾಗಿ ವಿವಿಧ ಉಪಸಮಿತಿಗಳಲ್ಲಿ, ಗೊತ್ತುವಳಿ ಮಂಡಿಸುವಲ್ಲಿ, ಸಂವಿಧಾನ ಅಂಗೀಕರಿಸುವ ಚರ್ಚೆಗಳಲ್ಲಿ ಪಾಲ್ಗೊಂಡಿದ್ದರು.

ಮಹಿಳೆಯರ ಭಾಗವಹಿಸುವಿಕೆ ಕುರಿತು ಹೆಚ್ಚಿನ ಮಾಹಿತಿ ದೊರಕುವುದಿಲ್ಲ. ಯಾಕೆಂದರೆ ಸಂವಿಧಾನ ರಚನಾ ಸಭೆಯ ಆಗುಹೋಗುಗಳ ವರದಿ ಸಿಗುತ್ತದೆ. ಆದರೆ ಉಪಸಮಿತಿಗಳ ನಡಾವಳಿ ಸಿಗುವುದಿಲ್ಲ. ಇತ್ತೀಚೆಗೆ ರಾಜ್ಯಸಭಾ ಕಾರ್ಯಾಲಯ ಬಿಡುಗಡೆ ಮಾಡಿದ ಸಂವಿಧಾನ ಸಭೆಯ ಕೆಲವು ಮಹಿಳಾ ಸದಸ್ಯರ ಭಾಷಣದ ಮೊದಲ ಸಂಪುಟದಲ್ಲಿ ಸಿಕ್ಕ ವಿವರಗಳ ಪ್ರಕಾರ ಅಲ್ಲಿದ್ದ ಮಹಿಳೆಯರು, ಅವರ ಮತಕ್ಷೇತ್ರಗಳು, ಚರ್ಚಿಸಿದ ಕೆಲ ವಿಷಯಗಳು ಹೀಗಿವೆ:

೧. ಅಮ್ಮು ಸ್ವಾಮಿನಾಥನ್, (ಮದರಾಸು) - ಮೂಲಭೂತ ಹಕ್ಕು ಮತ್ತು ನಿರ್ದೇಶಕ ತತ್ವಗಳು
೨. ಆನಿ ಮಸ್ಕರೇನೆ, (ತಿರುವಾಂಕೂರು, ಕೊಚಿನ್ ಯೂನಿಯನ್) _ ಪ್ರಾಂತೀಯ ಚುನಾವಣೆ, ರಕ್ತರಹಿತವಾಗಿ ಭಾರತ ಗಣರಾಜ್ಯದೊಳಗೆ ಸಂಸ್ಥಾನಗಳ ವಿಲೀನ, ವೇಳಾಪಟ್ಟಿ.
೩. ಬೇಗಂ ಐಜಾಜ್ ರಸೂಲ್, (ಯುನೈಟೆಡ್ ಪ್ರಾವಿನ್ಸ್): ಮೂಲಭೂತ ಹಕ್ಕು, ಅಲ್ಪಸಂಖ್ಯಾತರ ಹಕ್ಕು, ಚುನಾವಣೆ, ಪಕ್ಷದಾಚೆಗೆ ಮಂತ್ರಿಗಳ ಸ್ವಾಯತ್ತತೆ, ಪ್ರತ್ಯೇಕ ಮತಕ್ಷೇತ್ರ ಮತ್ತು ಮೀಸಲಾತಿ, ಕರಡು ಸಂವಿಧಾನ.
೪. ದಾಕ್ಷಾಯಿಣಿ ವೇಲಾಯುಧನ್, (ಮದರಾಸು): ಅಂಬೇಡ್ಕರ್‌ಗೊಂದು ಮನವಿ, ಹರಿಜನ, ಜೀತವಿಮುಕ್ತಿ, ಹರಿಜನರಿಗೆ ಮೀಸಲಾತಿ ಮತ್ತು ಪ್ರತ್ಯೇಕ ಮತಕ್ಷೇತ್ರ, ಕರಡು ಸಂವಿಧಾನ, ಅಸ್ಪೃಶ್ಯತೆಯ ವಿರುದ್ಧ ಹೋರಾಟ.
೫. ದುರ್ಗಾಬಾಯಿ ದೇಶಮುಖ್, (ಮದರಾಸು): ನ್ಯಾಯಾಧೀಶರ ನೇಮಕ, ಹೈಕೋರ್ಟ್‌ಗಳ ಸ್ಥಾಪನೆ, ಭಾರತೀಯರೇ ನ್ಯಾಯಾಧೀಶರು. ದೇವದಾಸಿಪದ್ಧತಿ ರದ್ಧತಿ, ಸರ್ವರಿಗು ಮುಕ್ತ ಶಿಕ್ಷಣ, ಮೂಲಭೂತ ಹಕ್ಕಿಗೆ ಚ್ಯುತಿ ಬಂದರೆ ಸಾಂವಿಧಾನಿಕ ಪರಿಹಾರ, ಯುವಜನತೆಯಲ್ಲಿ ವಿಶ್ವಾಸ, ಸುಪ್ರೀಂಕೋರ್ಟಿನ ಅಪೆಲೇಟ್ ಜ್ಯೂರಿಸ್‌ಡಿಕ್ಷನ್, ಮಕ್ಕಳ-ತರುಣರ ಹಕ್ಕುಗಳು, ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ಹೇರಿದ ಮಿತಿ, ಸಂವಿಧಾನ ರಕ್ಷಿಸಲು ಸುಪ್ರೀಂಕೋರ್ಟ್, ಕರಡು ಸಂವಿಧಾನ.
೬. ಹನ್ಸಾ ಜೀವರಾಜ ಮೆಹ್ತಾ, (ಮುಂಬೈ}: ಮಹಿಳೆಗೆ ಸಾಮಾಜಿಕ-ಆರ್ಥಿಕ-ರಾಜಕೀಯ ನ್ಯಾಯ, ರಾಷ್ಟ್ರಧ್ವಜ, ಸಂವಿಧಾನ ಕೆಲಸ ಮಾಡಬೇಕಾದರೆ ಜನರು ವಹಿಸಬೇಕಾದ ಹೊಣೆ.
೭. ಕಮಲಾ ಚೌಧುರಿ, (ಯುನೈಟೆಡ್ ಪ್ರಾವಿನ್ಸ್)
೮. ಲೀಲಾ ರಾಯ್, (ಪಶ್ಚಿಮ ಬಂಗಾಳ)
೯. ಮಾಲತಿ ಚೌಧರಿ, (ಒರಿಸ್ಸಾ)
೧೦. ಪೂರ್ಣಿಮಾ ಬ್ಯಾನರ್ಜಿ, (ಯುನೈಟೆಡ್ ಪ್ರಾವಿನ್ಸ್): ಸರ್ಕಾರಿ ಶಾಲಾಪಠ್ಯದಲ್ಲಿ ಧಾರ್ಮಿಕ ಪಠ್ಯ, ಪಠ್ಯದ ಮೇಲೆ ಸರ್ಕಾರದ ನಿಯಂತ್ರಣ, ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ, ರಾಜ್ಯ ಶಾಸನಸಭೆಗಳಿಗೆ ಆಯ್ಕೆಯಾಗುವವರ ವಯೋಮಿತಿ, ಮೇಲ್ಮನೆಯ ಪ್ರಾಮುಖ್ಯತೆ, ಸ್ಥಳೀಯ ಸಂಸ್ಥೆಗಳ ಆರ್ಥಿಕತೆ, ಶಿಕ್ಷಣ ಯೋಜನೆಗಳ ರೂಪಿಸಲು ವಿಶೇಷ ವ್ಯವಸ್ಥೆ, ವಿಚಾರಣಾಧೀನ ಖೈದಿಗಳ ಹಕ್ಕು, ಸಂಸತ್ತಿನಲ್ಲಿ ತೆರವಾದ ಮಹಿಳೆಯರ ಸ್ಥಾನಕ್ಕೆ ಮಹಿಳೆಯರನ್ನೇ ತುಂಬುವುದು, ಜನರ ಸಾರ್ವಭೌಮತ್ವ, ಅಂಬೇಡ್ಕರರ ಕರಡು ಸಂವಿಧಾನಕ್ಕೆ ಬೆಂಬಲ.
೧೧. ರಾಜಕುಮಾರಿ ಅಮೃತ್ ಕೌರ್, (ಸೆಂಟ್ರಲ್ ಪ್ರಾವಿನ್ಸ್, ಬೇರಾರ್)
೧೨. ರೇಣುಕಾ ರೇ, (ಪಶ್ಚಿಮ ಬಂಗಾಳ): ಮಹಿಳಾ ಸಮಾನತೆ, ಮಹಿಳಾ ನ್ಯಾಯ, ಧರ್ಮನಿರಪೇಕ್ಷ ರಾಷ್ಟ್ರದಲ್ಲಿ ಧಾರ್ಮಿಕ ಅಲ್ಪಸಂಖ್ಯಾತ- ಬಹುಸಂಖ್ಯಾತರ ಪ್ರಶ್ನೆ, ಶಾಲಾ ಪಠ್ಯದಲ್ಲಿ ಧಾರ್ಮಿಕ ವಿಷಯ, ಕರಡು ಸಂವಿಧಾನ ಕುರಿತು ಟೀಕೆ, ಮಹಿಳಾ ಸಾಗಾಟ, ದೇವದಾಸಿಪದ್ಧತಿ ತಡೆ.
೧೩. ಸರೋಜಿನಿ ನಾಯ್ಡು, (ಬಿಹಾರ): ಎಲ್ಲರ ಒಳಗೊಳ್ಳುವ ಸಂವಿಧಾನ ಸಭೆ, ರಾಷ್ಟ್ರಧ್ವಜ
೧೪. ಸುಚೇತಾ ಕೃಪಲಾನಿ, (ಯುನೈಟೆಡ್ ಪ್ರಾವಿನ್ಸ್): ವಂದೇ ಮಾತರಂ
೧೫. ವಿಜಯಲಕ್ಷ್ಮಿ ಪಂಡಿತ್, (ಯುನೈಟೆಡ್ ಪ್ರಾವಿನ್ಸ್): ವಸಾಹತೋತ್ತರ ವಿಶ್ವ: ಏಷಿಯಾದ ಪ್ರಾಮುಖ್ಯತೆ,



(ಎಡದಿಂದ ಬಲಕ್ಕೆ: ನಿಂತವರು: ದುರ್ಗಾಬಾಯಿ ದೇಶಮುಖ್, ರೇಣುಕಾ ರೇ, ಆನಿ ಮಸ್ಕರೇನಸ್, ಬೇಗಂ ಐಜಾಜ್ ರಸೂಲ್, ಲೀಲಾ ರಾಯ್, ದಾಕ್ಷಾಯಿಣಿ ವೇಲಾಯುಧನ್. ಕುಳಿತವರು: ಸುಚೇತಾ ಕೃಪಲಾನಿ, ಹನ್ಸ ಮೆಹ್ತಾ, ಅಮೃತ್ ಕೌರ್, ಕಮಲಾ ಚೌಧುರಿ?, ಅಮ್ಮು ಸ್ವಾಮಿನಾಥನ್.)

ಇಷ್ಟಂತೂ ನಿಜ, ಭಾರತದಲ್ಲೇನಾಗುತ್ತಿದೆ, ಏನಾಗಬೇಕು ಎಂಬ ಬಗೆಗೆ ಅಲ್ಲಿದ್ದ ಎಷ್ಟೋ ಪುರುಷರಿಗಿಂತ ಮಹಿಳೆಯರು ಸ್ಪಷ್ಟ, ವಾಸ್ತವವಾದಿ ನಿಲುವು ಹೊಂದಿದ್ದರು. ಮಹಿಳಾ ಹಕ್ಕುಗಳ ಬಗೆಗಷ್ಟೇ ಅಲ್ಲದೆ ಅಂಚಿನ ನೆಲೆಯವರ ಹಕ್ಕುಗಳ ಬಗೆಗೂ ಮಾತನಾಡಿದರು. ಅವರ ಬದುಕಿನ ವಿವರಗಳು ಇವತ್ತಿಗೂ ಸ್ಫೂರ್ತಿದಾಯಕವಾಗಿವೆ. ಇಬ್ಬರ ಕುರಿತು ಇಲ್ಲಿ ಬರೆಯಲಾಗಿದೆ:

ದಾಕ್ಷಾಯಿಣಿ ವೇಲಾಯುಧನ್ (1912-1978)  




ಕೊಚ್ಚಿಯ ಮುಲವುಕ್ಕಾಡ್‌ನಲ್ಲಿ 1912ರಲ್ಲಿ ಹುಟ್ಟಿದ ಪುಲಯಾ ಎಂಬ ಅಸ್ಪೃಶ್ಯ ಸಮುದಾಯದ ದಾಕ್ಷಾಯಿಣಿ ಸಂವಿಧಾನ ಸಭೆಯ ಅತಿ ಕಿರಿಯ ಸದಸ್ಯೆಯಾಗಿದ್ದರು. ಬೀದಿಬೀದಿಗಳಲ್ಲಿ ಮೊದಲೇ ಗೊತ್ತುಪಡಿಸಿದ ಜಾಗಗಳಲ್ಲಿ ನಿಂತು ವಿಚಿತ್ರ ಸದ್ದು ಹೊರಡಿಸಿ ಮುಟ್ಟಬಾರದ ತಾನು ಬಂದೆನೆಂದು ಕೂಗಿ ಹೇಳಿ ಮುಂದುವರೆಯಬೇಕಾಗಿದ್ದ ಕಷ್ಟಕುಲ ಅವರದು. ಸಮುದಾಯದ ಹೆಣ್ಮಕ್ಕಳು ಸ್ತನಗಳನ್ನು ಮಣಿಸರಗಳಿಂದ ಮುಚ್ಚಿಕೊಳ್ಳಬೇಕಿತ್ತು. ಹೀಗಿರುತ್ತ ನೇರ ನಿಲುವಿನ, ಗಂಭೀರ ಸ್ವಭಾವದ, ದಿಟ್ಟಮಾತಿನ ಮಹಿಳೆಯಾಗಿ ದಾಕ್ಷಾಯಿಣಿ ರೂಪುಗೊಳ್ಳುವುದರ ಹಿಂದೆ ಕೇರಳ ಅಸ್ಪೃಶ್ಯ ಸಮುದಾಯಗಳ ಹೋರಾಟ ಕಥನ ಇದೆ.

ಪುಲಯಾ ಸಮುದಾಯದ ಹೋರಾಟಗಾರ ಅಯ್ಯನ್ ಕಾಳಿಯಿಂದ ಪ್ರಭಾವಿತರಾಗಿದ್ದ ಅವರ ತಂದೆ ಅಳಕಿ, ಪೂಮಾಲಾ, ಚಕ್ಕಿ, ಕಾಳಿ, ಕುರುಂಬಾ, ಕಿಲಿಪಕ್ಕ ಮೊದಲಾದ ಕ್ಷುದ್ರವೆನಿಸುವ ಹೆಸರಿಡದೆ ಎಳವ ಜಾತಿಯವರಿಡುವ ದಾಕ್ಷಾಯಿಣಿ ಎಂಬ ಹೆಸರನ್ನು ಮಗಳಿಗಿಟ್ಟಿದ್ದರು. ಪದವಿಗೆಂದು ಮದರಾಸಿಗೆ ಹೋದಾಗ ದಾಕ್ಷಾಯಿಣಿ ಎದೆಮೇಲೆ ವಸ್ತ್ರ ಧರಿಸಿದ ಮೊದಲ ಪುಲಯಾ ಮಹಿಳೆಯಾದರು. ಮದರಾಸು ವಿಶ್ವವಿದ್ಯಾಲಯದ ಪ್ರಯೋಗಾಲಯದಲ್ಲಿ ಹೊರಗೆ ನಿಂತು ಪ್ರಯೋಗ ನೋಡಿಕೊಂಡರೂ ಅತ್ಯುತ್ತಮ ದರ್ಜೆಯಲ್ಲಿ 1935ರಲ್ಲಿ ಬಿಎಸ್ಸಿ ಪದವಿ ಪಡೆದು ಮೊದಲ ಪದವೀಧರ ದಲಿತ ಮಹಿಳೆಯಾದರು.

ಶಿಕ್ಷಣ ಮುಗಿಸಿದ ನಂತರ ಗಾಂಧೀಜಿಯವರಿಂದ ಪ್ರಭಾವಿತರಾಗಿ ರಾಷ್ಟ್ರೀಯ ಹೋರಾಟದಲ್ಲಿ ತೊಡಗಿಕೊಂಡರು. ಆದರೆ ಗಾಂಧೀಜಿಯವರ ಜೊತೆಗೆ ಭಿನ್ನಮತದ ಸಂಬಂಧ ಇಟ್ಟುಕೊಂಡಿದ್ದರು. ಅಸ್ಪೃಶ್ಯತೆ ಜೀವಂತವಿರುವವರೆಗೆ ‘ಹರಿಜನ’ ಎಂಬ ಪದ ಅಸ್ಪೃಶ್ಯರ ಬದುಕನ್ನು ಕೊಂಚವೂ ಬದಲಿಸಲಾರದು ಎಂದು ಕಟುವಾಗಿ ಹೇಳುತ್ತಿದ್ದರು. ತಮ್ಮ ಕುಟುಂಬದವರೆಲ್ಲ ಕ್ರೈಸ್ತರಾದರೂ ತಾನು ಪುಲಯಾ ಆಗುಳಿದ ದಾಕ್ಷಾಯಿಣಿ, ದಲಿತ ಹೋರಾಟಗಾರ ರಾಮನ್ ಕೆಳನ್ ವೇಲಾಯುಧನ್ ಅವರನ್ನು 1940ರಲ್ಲಿ ಸರಳ ಮದುವೆಯಾದರು. ಗಾಂಧಿ-ಕಸ್ತೂರಬಾ ಇಬ್ಬರೂ ಮದುವೆಗೆ ಬಂದಿದ್ದರು.



1942ರಲ್ಲಿ ಕೊಚ್ಚಿ ಲೆಜಿಸ್ಲೇಟಿವ್ ಕೌನ್ಸಿಲಿಗೆ ನಾಮಕರಣ ಸದಸ್ಯೆಯಾಗಿದ್ದ ಅವರು 1946ರಲ್ಲಿ ಸಂವಿಧಾನ ರಚನಾ ಸಭೆಗೆ ಆಯ್ಕೆಯಾದರು. ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಲು ಎರಡು ಮುಖ್ಯ ಉದ್ದೇಶಗಳಿದ್ದವು: 1. ಹೊಸ ಸಂವಿಧಾನದ ಮೂಲಕ ಭಾರತೀಯರಿಗೆ ಬದುಕುವ ಹೊಸ ಸಾಮಾಜಿಕ ಚೌಕಟ್ಟನ್ನು ರೂಪಿಸಿಕೊಡುವುದು 2. ಅಸ್ಪೃಶ್ಯತೆ ಕಾನೂನುಬಾಹಿರ, ಅನ್ಯಾಯ ಎಂದು ಸಾಧಿಸಿ ವಂಚಿತರಿಗೆ ನ್ಯಾಯ ಒದಗಿಸುವುದು. ಪರಿಶಿಷ್ಟ ವರ್ಗಗಳ ಕುರಿತ ಚರ್ಚೆ ನಡೆದಾಗಲೆಲ್ಲ ಅವರು ಅಂಬೇಡ್ಕರರಿಗೆ ಬೆಂಬಲವಾಗಿ ನಿಂತಿದ್ದರು. ಅಸ್ಪೃಶ್ಯ ಎಂದು ಕರೆಸಿಕೊಳ್ಳುವ ಸಮುದಾಯವೇ ಇಲ್ಲದಂತೆ ಸಮಾಜ ರೂಪುಗೊಳ್ಳಲಿ ಎಂದು ಭಾವುಕವಾಗಿ ಹೇಳುತ್ತಿದ್ದ ಅವರು ಒಂದಾದಮೇಲೊಂದು ಪ್ರಶ್ನೆ ಎತ್ತುತ್ತ, ಅಸ್ಪೃಶ್ಯತೆ ನಿಷೇಧಿಸುವ ಅನುಚ್ಛೇದ 17ರ ಬಗೆಗೆ, ಹರಿಜನರಿಗೆ ಸಿಗಬೇಕಾದ ಮಾನವಹಕ್ಕುಗಳ ಬಗೆಗೆ ಗಮನ ಸೆಳೆಯುತ್ತ, ‘ನಿಮ್ಮ ಸಮಯ ಮುಗಿಯಿತು’ ಎಂದು ಸಭಾಧ್ಯಕ್ಷರು ಪದೇಪದೇ ನೆನಪಿಸುವವರೆಗೂ ನಿರರ್ಗಳವಾಗಿ ಮಾತನಾಡುತ್ತಿದ್ದರು. ಐದಡಿ ಎತ್ತರದ ದಾಕ್ಷಾಯಿಣಿ ‘ಫೈರ್ ಬ್ರ್ಯಾಂಡ್’ ಎಂದೇ ಹೆಸರುವಾಸಿ.

ಗಾಂಧೀಜಿ ಮತ್ತು ಅಂಬೇಡ್ಕರ್ ಇಬ್ಬರಿಂದ ಪ್ರಭಾವಿತಾಗಿದ್ದರೂ ಇಬ್ಬರಿಂದಲೂ ಅಂತರ ಕಾಯ್ದುಕೊಂಡಿದ್ದರು. ಅವರದು ಹಿಂದೂ ಧರ್ಮದಿಂದ, ರಾಷ್ಟ್ರೀಯ ಹೋರಾಟದಿಂದ ಸಂಪೂರ್ಣ ಸಿಡಿದುನಿಂತು ಸ್ವಾಯತ್ತ ಸಮಾಜ ಕಟ್ಟುವ ಅಂಬೇಡ್ಕರ್ ಮಾರ್ಗಕ್ಕಿಂತ; ಮೇಲ್ಜಾತಿಯವರ ಮನವೊಲಿಸಿ ಹಿಂದೂ ಧರ್ಮದೊಳಗೇ ಹರಿಜನರನ್ನು ಉಳಿಸಬಯಸುವ ಗಾಂಧೀಮಾರ್ಗಕ್ಕಿಂತ ಭಿನ್ನವಾದ, ಆದರೆ ಅವೆರೆಡನ್ನೂ ಒಳಗೊಂಡ ಮಾರ್ಗವಾಗಿತ್ತು. 1947, ಆಗಸ್ಟ್ 28ರಂದು ಮಾತನಾಡುತ್ತ, ‘ಹರಿಜನ ಎಂದಾದರೂ ಕರೆಯಿರಿ, ಮತ್ತಿನ್ಯಾವ ಹೆಸರಿನಿಂದಾದರೂ ಕರೆಯಿರಿ, ಎಲ್ಲಿಯವರೆಗೆ ಪರಿಶಿಷ್ಟ ವರ್ಗದವರು ಆರ್ಥಿಕ ಗುಲಾಮಗಿರಿಯಲ್ಲಿ ಬದುಕುತ್ತಾರೋ, ಅಲ್ಲಿಯವರೆಗೆ ಪ್ರತ್ಯೇಕ ಮತಕ್ಷೇತ್ರವಾಗಲೀ, ಜಂಟಿ ಮತಕ್ಷೇತ್ರ ಹೊಂದುವುದಾಗಲೀ, ಶೇಕಡಾ ಪ್ರಾತಿನಿಧ್ಯ ಪಡೆಯುವುದಾಗಲೀ ಏನೂ ಅರ್ಥವಿಲ್ಲದ್ದು. ವೈಯಕ್ತಿಕವಾಗಿ ನಾನು ಯಾವುದೇ ಸ್ಥಳದಲ್ಲಿ ಯಾವುದೇ ರೀತಿಯ ಮೀಸಲಾತಿಯನ್ನು ವಿರೋಧಿಸುತ್ತೇನೆ. ಎಲ್ಲ ಪಕ್ಷಗಳು ತಮಗೆ ಗುಲಾಮರಾಗಿರುವ ಹರಿಜನ ಅಭ್ಯರ್ಥಿಗಳನ್ನೇ ಮೀಸಲು ಕ್ಷೇತ್ರದಲ್ಲಿ ನಿಲಿಸಿಯಾರು. ಅಂಥವರಿಂದ ಹರಿಜನರಿಗೇನು ಲಾಭ?’ ಎಂದು ಕೇಳಿದ್ದರು.

ಸಂವಿಧಾನ ರಚನೆಯ ಜವಾಬ್ದಾರಿಯ ನಂತರ ಚುನಾವಣಾ ರಾಜಕಾರಣಕ್ಕಿಳಿಯದೆ ದೆಹಲಿಯ ಕಸಗುಡಿಸುವವರೊಡನೆ, ಸ್ಲಂವಾಸಿಗಳ ನಡುವೆ ಕೆಲಸ ಮಾಡಿದರು. 1977ರಲ್ಲಿ ಮಹಿಳಾ ಜಾಗೃತಿ ಪರಿಷದ್ ಸ್ಥಾಪಿಸಿದರು. ಮೊದಲ ರಾಷ್ಟ್ರೀಯ ದಲಿತ ಮಹಿಳಾ ಸಮಾವೇಶವನ್ನು ದೆಹಲಿಯಲ್ಲಿ ಏರ್ಪಡಿಸಿದರು. ಮಗಳು ಮೀರಾ ಒಂಭತ್ತು ವರ್ಷದವಳಿರುವಾಗಲೇ ದೇಹ ಬದಲಾವಣೆ ಕುರಿತು ಚಿತ್ರ ಬರೆದು ತಿಳಿಸಿ ಮುಟ್ಟಿನ ಬಗೆಗೆ ವೈಜ್ಞಾನಿಕ ಮನೋಭಾವ ಬಿತ್ತಿದ್ದನ್ನು ಪ್ರಸ್ತುತ ಗುಜರಾತಿನಲ್ಲಿರುವ, ತನ್ನಮ್ಮ ಅರೆಬರೆ ಬರೆದಿಟ್ಟಿದ್ದ ಆತ್ಮಚರಿತ್ರೆ ‘ನಾಟ್ ಬಾರ್ನ್ ಇನ್ ಎ ಪೂರ್ ಪುಲಯಾ ಫ್ಯಾಮಿಲಿ’ಯನ್ನು ಪ್ರಕಟಣೆಗೆ ಸಿದ್ಧಗೊಳಿಸುತ್ತಿರುವ ಮೀರಾ ನೆನಪಿಸಿಕೊಳ್ಳುತ್ತಾರೆ.

ಹನ್ಸಾ ಜೀವರಾಜ್ ಮೆಹ್ತಾ (1897-1995): 




ಭಾರತಕ್ಕೆ ಭೇಟಿ ನೀಡಿದ್ದ ವಿಶ್ವಸಂಸ್ಥೆಯ ಮಾಜಿ ಮಹಾಕಾರ್ಯದರ್ಶಿ ಬಾನ್ ಕಿ ಮೂನ್ ಒಬ್ಬ ಭಾರತದ ಮಹಿಳೆಯನ್ನು ಸ್ಮರಿಸಿ ಶ್ಲಾಘಿಸಿದ್ದರು. ಡಿಸೆಂಬರ್ 10, 1948ರ ವಿಶ್ವ ಮಾನವಹಕ್ಕು ಘೋಷಣೆಯು ‘ಆಲ್ ಮೆನ್ ಆರ್ ಬಾರ್ನ್ ಈಕ್ವಲ್’ ಎಂದಿತ್ತು. ಆದರೆ ವಿಶ್ವಸಂಸ್ಥೆಯ ಮಾನವಹಕ್ಕು ಘೋಷಣಾ ಸಮಿತಿಯ ಉಪಾಧ್ಯಕ್ಷರಾಗಿದ್ದ ಭಾರತೀಯ ಮಹಿಳೆ, ಅದನ್ನು ‘ಆಲ್ ಹ್ಯೂಮನ್ ಬೀಯಿಂಗ್ಸ್ ಆರ್ ಬಾರ್ನ್ ಈಕ್ವಲ್’ ಎಂದು ಮಾಡಿಸಿದ್ದರು. ಮಹಿಳಾ ಹಕ್ಕುಗಳನ್ನು ಮಾನವ ಹಕ್ಕುಗಳಿಂದ ಬೇರೆಯಾಗಿ ಪರಿಗಣಿಸುವುದನ್ನು ಒಪ್ಪಲು ಸಾಧ್ಯವೇ ಇಲ್ಲವೆಂದು ಗಟ್ಟಿಧ್ವನಿಯಲ್ಲಿ ಪ್ರತಿಪಾದಿಸಿದ್ದ ಮಹಿಳಾ ಹೋರಾಟಗಾರ್ತಿ ಹನ್ಸಾ ಜೀವರಾಜ ಮೆಹ್ತಾ. ಭಾರತ ಸಂವಿಧಾನ ರಚನಾ ಸಭೆಯ ಸದಸ್ಯರಾಗಿದ್ದ ಅವರು ಇಂಥದೇ ಮಹಿಳಾ ಸೂಕ್ಷ್ಮ ಬದಲಾವಣೆಗಳನ್ನು ಮೂಲಭೂತ ಹಕ್ಕುಗಳ ರಚನೆಯುದ್ದಕ್ಕೂ ಮಾಡಿಸಿದರು.

ಬರೋಡಾ ದಿವಾನರ ಮಗಳಾಗಿದ್ದ ಹನ್ಸಾ ಇಂಗ್ಲೆಂಡಿನಲ್ಲಿ ಸಮಾಜಶಾಸ್ತ್ರ, ಜರ್ನಲಿಸಂ ಪದವಿ ಪಡೆದರು. 1922ರಲ್ಲಿ ಸರೋಜಿನಿ ನಾಯ್ಡು ಅವರನ್ನೂ, ಅವರ ಮೂಲಕ ಗಾಂಧೀಜಿಯವರನ್ನೂ ಭೇಟಿಯಾದರು. ನಂತರ ಗಾಂಧಿಯ ಖಾಸಗಿ ವೈದ್ಯರಾದ ಜೀವರಾಜ ನಾರಾಯಣ ಮೆಹ್ತಾರನ್ನು ಮದುವೆಯಾದರು. ಈ ಅಂತರ್ಜಾತಿ ಮದುವೆಗೆ ದೊಡ್ಡ ಹುಯಿಲೆದ್ದಾಗ ಹನ್ಸಾ ಅವರ ರಾಜಕೀಯ ಗುರು ಬರೋಡಾದ ಸಯ್ಯಾಜಿರಾವ್ ಗಾಯಕ್ವಾಡ್ ಬೆಂಬಲಕ್ಕೆ ನಿಂತಿದ್ದರು.

ಮುಂಬಯಿ ಲೆಜಿಸ್ಲೇಟಿವ್ ಕೌನ್ಸಿಲಿಗೆ ಚುನಾಯಿತರಾಗಿದ್ದ ಹನ್ಸಾ, ಕುಟುಂಬಯೋಜನೆ ಜಾರಿಯಾಗಬೇಕೆಂದು ಒತ್ತಾಯಿಸಿದ್ದರು. ಬಾಲ್ಯವಿವಾಹ ನಿಷೇಧ ಕಾಯ್ದೆ ಶಾರದಾ ಆಕ್ಟ್ ಅನ್ನು ಸಿದ್ಧಪಡಿಸಿದ್ದರು. 1945-46ರಲ್ಲಿ ಅಖಿಲ ಭಾರತ ಮಹಿಳಾ ಸಭಾದ ಅಧ್ಯಕ್ಷರಾಗಿ ಮಹಿಳೆಯರ ಮೂಲಭೂತ ಹಕ್ಕುಗಳ ಪಟ್ಟಿ ಸಿದ್ಧಗೊಳಿಸಿದರು. ಮಹಿಳಾ ಸಮಾನತೆ, ಸಮಾನ ವೇತನ, ಸಮಾನ ಉದ್ಯೋಗಾವಕಾಶ, ವರದಕ್ಷಿಣೆ ನಿಷೇಧ ಜಾರಿಯಾಗಬೇಕೆಂದು ಹಕ್ಕೊತ್ತಾಯ ಮಂಡಿಸಿದ್ದರು. ವಿಧವಾ ವಿವಾಹ ಪ್ರೋತ್ಸಾಹಿಸುತ್ತಿದ್ದರು. ಪಶ್ಚಿಮ, ಉತ್ತರ ಭಾರತಗಳಲ್ಲಿ ಎಲ್ಲ ಧರ್ಮಗಳ ಹೆಣ್ಣುಮಕ್ಕಳೂ ಅನುಸರಿಸುವ ಪರ್ದಾ ಪದ್ಧತಿ ಮಹಿಳಾ ಘನತೆ ಕುಗ್ಗಿಸುವುದರಿಂದ ನಿಷೇಧವಾಗಬೇಕೆಂದು ವಾದಿಸುತ್ತಿದ್ದರು. ವಿಶ್ವಸಂಸ್ಥೆಯ ಮಹಿಳಾ ಹಕ್ಕು ಉಪಸಮಿತಿಯ ಸದಸ್ಯೆಯೂ ಆಗಿದ್ದ ಅವರು ಭಾರತದ ಮಹಿಳಾ ಹಕ್ಕೊತ್ತಾಯಗಳು ವಿಶ್ವಸಂಸ್ಥೆಯ ಮಹಿಳಾ ಹಕ್ಕುಗಳಲ್ಲಿ ಸೇರುವಂತೆ ಮಾಡಿದರು. ಅದೇ ಅವಧಿಯಲ್ಲಿ ದಕ್ಷಿಣ ಏಷ್ಯಾದ ಮೊದಲ ಮಹಿಳಾ ವಿಶ್ವವಿದ್ಯಾಲಯ ಎಸ್‌ಎನ್‌ಡಿಟಿ (ಶ್ರೀಮತಿ ನಾಥಿಬಾಯಿ ದಾಮೋದರ ಥ್ಯಾಕರ್ಸೆ) ವಿ.ವಿ. ಉಪಕುಲಪತಿಯೂ ಆದರು. ಸಂವಿಧಾನ ಸಭೆಗೆ ಆಯ್ಕೆಯಾಗಿ ಕರಡು ರಚನಾ ಸಮಿತಿಯ ಮೂಲಭೂತ ಹಕ್ಕುಗಳ ಉಪಸಮಿತಿಯಲ್ಲೂ ಇದ್ದರು. ಆಗಸ್ಟ್ 14ರ ಮಧ್ಯರಾತ್ರಿ ಸಂವಿಧಾನ ಸಭೆಯ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್ ಸ್ವಾತಂತ್ರ್ಯ ಪ್ರಮಾಣ ತೆಗೆದುಕೊಂಡರೆ, ಹನ್ಸಾ ಭಾರತೀಯ ಮಹಿಳೆಯರ ಪರವಾಗಿ ರಾಷ್ಟ್ರಧ್ವಜ ಸ್ವೀಕರಿಸಿದರು.



ಹಲವು ಜವಾಬ್ದಾರಿಗಳು ಒಟ್ಟೊಟ್ಟಿಗೆ ಬಂದರೂ, ಸಂವಿಧಾನ ಸಭೆಯ ಕಲಾಪಗಳಿಗೆ ತಪ್ಪದೆ ಹಾಜರಾಗುತ್ತಿದ್ದರು. ಏಕರೂಪ ನಾಗರಿಕ ಸಂಹಿತೆಯನ್ನು ಸಂವಿಧಾನಾತ್ಮಕವಾಗಿ ನ್ಯಾಯಸಮ್ಮತಗೊಳಿಸಲು ಡಾ. ಅಂಬೇಡ್ಕರ್, ಅಮೃತ್ ಕೌರ್, ಮಿನೂ ಮಸಾನಿ ಮತ್ತಿತರರ ಜೊತೆಗೂಡಿ ಸಾಕಷ್ಟು ಚರ್ಚೆ ನಡೆಸಿದರು. ಸರ್ವಧರ್ಮಗಳಿಗೂ ಅನ್ವಯವಾಗುವ, ಸಮ್ಮತವಾಗುವ ಏಕರೂಪ ನಾಗರಿಕ ಸಂಹಿತೆಗೆ ಅವರ ಬೆಂಬಲವಿತ್ತು. ವಿಭಿನ್ನ ಧರ್ಮದ ಭಾರತೀಯರಿಗೆ ಭಿನ್ನ ಅಸ್ಮಿತೆಗಳಿರುವ ಬದಲು ಭಾರತೀಯ ಎಂಬ ಒಂದೇ ಅಸ್ಮಿತೆ ಇರುವಂತೆ ನೋಡಿಕೊಳ್ಳುವುದು ಪ್ರಭುತ್ವದ ಜವಾಬ್ದಾರಿ ಎಂದವರು ಭಾವಿಸಿದ್ದರು. ಆದರೆ ಇದನ್ನು ಮೂಲಭೂತ ಹಕ್ಕಾಗಿ ಪರಿಗಣಿಸಲು ಮಾಡಿದ ಯತ್ನಗಳು ವ್ಯರ್ಥವಾಗಿ ಕೊನೆಗದು ನಾನ್‌ಜಸ್ಟಿಫೈಯಬಲ್ ನಿರ್ದೇಶಕ ತತ್ವವಾಯಿತು.

ಮಹಿಳೆಗೆ ಮೀಸಲಾತಿಗಿಂತ ಹೆಚ್ಚಾಗಿ ಸಾಮಾಜಿಕ ನ್ಯಾಯ, ರಾಜಕೀಯ ನ್ಯಾಯ ಮತ್ತು ಆರ್ಥಿಕ ನ್ಯಾಯ ಬೇಕಾಗಿದೆ ಎಂದು ಹೇಳುತ್ತಿದ್ದ ಅವರು ಹಿಂದೂ ವೈಯಕ್ತಿಕ ಕಾನೂನು ಸುಧಾರಣೆಯ ಪರವಾಗಿದ್ದರು. ಹಿಂದೂ ಕೋಡ್ ಬಿಲ್ ಅನ್ನು ರಚಿಸುತ್ತಿದ್ದ ಉಪಸಮಿತಿಯ ಸದಸ್ಯೆಯಾಗಿದ್ದ ಅವರು, ಅದು ಹಿಂದೂ ಸಮಾಜ ಸುಧಾರಣೆ ದಿಕ್ಕಿನಲ್ಲಿ ಕ್ರಾಂತಿಕಾರಕ ಮೈಲುಗಲ್ಲೆಂದು ಬಣ್ಣಿಸಿದ್ದರು. ‘ಆದರೆ ಈಗ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಪ್ರಜಾಪ್ರಭುತ್ವವು ಎಲ್ಲ ವ್ಯಕ್ತಿಗಳಿಗೂ ಸಮಾನತೆ ನೀಡುತ್ತದೆ. ಆ ಹಿನ್ನೆಲೆಯಲ್ಲಿ ಆಸ್ತಿಹಕ್ಕು, ಮದುವೆ ಮೊದಲಾದ ವಿಷಯಗಳನ್ನು ಮೊದಲಿಗಿಂತ ಭಿನ್ನವಾಗಿ ನೋಡಬೇಕಾಗುತ್ತದೆ. ಮಹಿಳಾ ದಮನಕ್ಕೆ ಮೂಲಕಾರಣವಾದ ಧರ್ಮಗಳ ವೈಯಕ್ತಿಕ ಕಾನೂನುಗಳ ಹಿಡಿತದಿಂದ ಮಹಿಳೆಯನ್ನು ಹಿಂದೂ ಕೋಡ್ ಬಿಲ್ ಪಾರುಮಾಡುವುದಿಲ್ಲ; ಎಂದೇ ಅದರ ಜೊತೆಜೊತೆಗೆ  ಏಕರೂಪ ನಾಗರಿಕ ಸಂಹಿತೆ ಬರದಿದ್ದರೆ ಉಪಯೋಗವಿಲ್ಲ’ ಎನ್ನುವುದು ಹನ್ಸಾ ಮತ್ತು ಬಹುಪಾಲು ಮಹಿಳಾ ಸದಸ್ಯರ ಅಭಿಪ್ರಾಯವಾಗಿತ್ತು. ಆದರೆ ಅಂದಿನ ಕೋಮುಸೂಕ್ಷ್ಮ ಪರಿಸ್ಥಿತಿಯಲ್ಲಿ ಏಕರೂಪ ನಾಗರಿಕ ಸಂಹಿತೆ ಅಸಾಧ್ಯ ಎಂದೇ ನೆಹರೂ ಮತ್ತು ಅಂಬೇಡ್ಕರ್ ಭಾವಿಸಿದರು. ಕೊನೆಗೆ ಹಿಂದೂ ಕೋಡ್ ಬಿಲ್ ಬೆಂಬಲ ಪಡೆಯದೆ ಬಿದ್ದು ಹೋಯ್ತು.

ಎಸ್‌ಎನ್‌ಡಿಟಿ ಮಹಿಳಾ ವಿ.ವಿ. ಉಪಕುಲಪತಿಯಾಗಿದ್ದ ಅವರು ಕೊನೆಯವರೆಗು ಹಲವು ವಿಶ್ವವಿದ್ಯಾಲಯಗಳಲ್ಲಿ ಹಾಗೂ ಸಂಘಸಂಸ್ಥೆಗಳಲ್ಲಿ ಕೆಲಸ ಮಾಡುತ್ತ ಮಹಿಳಾ ಹಕ್ಕು, ಶಿಕ್ಷಣ ಮತ್ತು ಸುಧಾರಣೆಗಾಗಿ ಶ್ರಮಿಸಿದರು. ಬರಹಗಾರ್ತಿಯಾಗಿದ್ದ ಅವರು ಮಕ್ಕಳಿಗಾಗಿಯೂ ಹಲವು ಪುಸ್ತಕ ಬರೆದರು. ಗಲಿವರ‍್ಸ್ ಟ್ರಾವೆಲ್ಸ್ ಸೇರಿದಂತೆ ಕೆಲವು ಇಂಗ್ಲಿಷ್ ಪುಸ್ತಕಗಳನ್ನು ಭಾರತೀಯ ಭಾಷೆಗಳಿಗೆ ಅನುವಾದಿಸಿದರು.

***

ಇಲ್ಲಿ ಕೆಲ ವಿಷಯ ಗಮನಿಸಬಹುದು.

ಸಂವಿಧಾನ ಸಭೆಯಲ್ಲಿದ್ದ ಬಹುಪಾಲು ಹೆಣ್ಮಕ್ಕಳು (ಅಲ್ಪಸಂಖ್ಯಾತ ಸಮುದಾಯದವರೂ ಸೇರಿದಂತೆ) ಏಕರೂಪ ನಾಗರಿಕ ಸಂಹಿತೆಯ ಪರವಾಗಿದ್ದರು. ಅವರಷ್ಟೇ ಅಲ್ಲ ಡಾ. ಅಂಬೇಡ್ಕರ್, ಮಿನೂ ಮಸಾನಿ, ನೆಹರೂ ಮೊದಲಾದವರೂ ಭಾರತೀಯರಿಗೆ ಒಂದೇ ರಾಷ್ಟ್ರೀಯ ಐಡೆಂಟಿಟಿ ಇರಬೇಕಲ್ಲದೆ ವಿಭಿನ್ನ ಜಾತಿ-ಧರ್ಮಗಳ ಐಡೆಂಟಿಟಿ ಅಳಿಸಿ ಹೋಗಬೇಕು; ಆಗಮಾತ್ರ ಐಕ್ಯತೆ ಕಾಪಾಡಬಹುದು ಎಂದು ನಂಬಿದ್ದರು. ಅಲ್ಲಿದ್ದ ಮಹಿಳೆಯರು ಧರ್ಮಗಳೇ ಮಹಿಳಾ ಶೋಷಣೆಯ ಹತಾರಗಳನ್ನೊದಗಿಸುವಂಥವು; ಏಕರೂಪ ನಾಗರಿಕ ಸಂಹಿತೆ ಬಂದರೆ ಕ್ರಾಂತಿಕಾರಕವಾಗಿ ಅದು ಧರ್ಮಗಳಿಗೆ ಮಹಿಳೆಯರ ಮೇಲಿರುವ ಹಿಡಿತ ತಪ್ಪಿಸುತ್ತವೆ ಎಂದು ಭಾವಿಸಿದ್ದರು. ಇದು ಅಂದಿನ ಬಹುಪಾಲು ಪ್ರಜ್ಞಾವಂತರ ಅಭಿಪ್ರಾಯವಾಗಿತ್ತು. ಆದರೆ ಇವತ್ತು ಏಕರೂಪ ನಾಗರಿಕ ಸಂಹಿತೆ ಬೆಂಬಲಿಸುವುದೆಂದರೆ ಬಹುಸಂಖ್ಯಾತ ಧರ್ಮದವರ ದಬ್ಬಾಳಿಕೆಯನ್ನು ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಹೇರುವ ಅಪಾಯವಾಗಿ ಕಾಣತೊಡಗಿದೆ. ಈ ಅರ್ಧ ಶತಮಾನದಲ್ಲಿ ರಾಷ್ಟ್ರೀಯತೆ ಮತ್ತು ರಾಜಕಾರಣದಲ್ಲಿ ಹೆಚ್ಚೆಚ್ಚು ಧರ್ಮದ ಮೇಲುಗೈ ಆಗಿರುವುದನ್ನು ಇದು ಸೂಚಿಸುತ್ತದೆ. ಬಹುಸಂಖ್ಯಾತ ಧರ್ಮದವರ ರಾಷ್ಟ್ರೀಯತೆ ಪರಿಕಲ್ಪನೆಯಲ್ಲಾದ ಪಲ್ಲಟವನ್ನು ತಿಳಿಸುತ್ತದೆ.

ಹಾಗೆಯೇ ಹಿಂದೂ ಕೋಡ್‌ಬಿಲ್. ಸಂವಿಧಾನ ಜಾರಿಯಾಗುವ ಮೊದಲು ಹಿಂದೂ ಕೋಡ್‌ಬಿಲ್ ಜಾರಿಗೆ ಅಂಬೇಡ್ಕರ್ ಪ್ರಯತ್ನಿಸಿದ್ದರು. ಅದು ಭಾರತೀಯ ಮಹಿಳೆಯರ ಬದುಕಿನಲ್ಲಿ ಅತಿ ದೊಡ್ಡ ಬದಲಾವಣೆ ತರುವುದೆಂಬ ವಿಶ್ವಾಸ ಅವರದಾಗಿತ್ತು. ಆ ಬಿಲ್‌ನಲ್ಲಿದ್ದ ಹಲವು ವಿಷಯಗಳ ಬಗೆಗೆ ಬಹುಪಾಲು ಮಹಿಳೆಯರು ಸಹಮತ ಹೊಂದಿರಲು ಸಾಕು. ಏಕೆಂದರೆ ಅವರೆಲ್ಲ ಒಂದಲ್ಲ ಒಂದು ರೀತಿ ಭಾರತೀಯ ಸಮಾಜದ ಹೆಣ್ಣು ದಮನಕ್ಕೆ ಒಳಗಾದವರೇ ಆಗಿದ್ದರು. ಮಹಿಳಾ ಹಕ್ಕುಗಳ ಬಗೆಗೆ, ಸ್ವಾಯತ್ತ ಬದುಕಿನ ಬಗೆಗೆ ಒಲವು ಹೊಂದಿದವರೇ ಆಗಿದ್ದರು. ಆದರೆ ಇಂದು ನಾವು ಅಂಬೇಡ್ಕರರ ಹಿಂದೂ ಕೋಡ್‌ಬಿಲ್‌ಗೆ ಅಭೂತಪೂರ್ವ ಸ್ವಾಗತ ಕೋರುವಂತೆ ಅಂದು ಆಗಲಿಲ್ಲ. ಕೆಲವರನ್ನು ಹೊರತುಪಡಿಸಿ ಮಹಿಳಾ ಸದಸ್ಯರಿಂದಲೂ ಬೆಂಬಲ ಸಿಗಲಿಲ್ಲ. ಹಿಂದೂ ಕೋಡ್ ಬಿಲ್ ಕುರಿತ ಚರ್ಚೆ ಸಂವಿಧಾನ ಸಭೆಯ ಆಚೆಗೆ ನಡೆದದ್ದು. ಅದರಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ, ಅಭಿಪ್ರಾಯಗಳೇನಿದ್ದವು ಎಂಬ ಬಗೆಗೆ ಹೆಚ್ಚು ಮಾಹಿತಿ ಲಭ್ಯವಿಲ್ಲ. ಆ ಬಗೆಗೆ ಇನ್ನುಮೇಲೆ ಸಂಶೋಧನೆ ಆರಂಭವಾಗಬೇಕಿದೆ.

ಹೀಗೆ ಅರ್ಧ ಶತಮಾನ ಕೆಳಗೆ ಮೇಲಿನ ಎರಡು ವಿಷಯಗಳ ಬಗೆಗೆ ಇವತ್ತಿಗಿಂತ ಭಿನ್ನ ಅಭಿಪ್ರಾಯ ಇದ್ದದ್ದು ಏಕೆನ್ನುವುದು ಕುತೂಹಲಕರ ಅಧ್ಯಯನದ ವಸ್ತುವಾಗಬಹುದಾಗಿದೆ.

ವಿಶ್ವಾದ್ಯಂತ ಪ್ರತಿ ವರ್ಷ ಕನಿಷ್ಠ 20 ದೇಶಗಳ ಸಂವಿಧಾನ ರಚನೆಯ ಕೆಲಸ, ತಿದ್ದುಪಡಿಯ ಕೆಲಸ ಆಗುತ್ತ ಇರುತ್ತದೆ. ಸಂವಿಧಾನ ರಚನೆ ಮೊದಲು ಪಂಡಿತರ ಕೆಲಸವಾಗಿತ್ತು. ಈಗದು ಪ್ರಜೆಗಳೆಲ್ಲರಿಗೆ ಮುಕ್ತವಾಗಿ ಚರ್ಚೆಗೆ ತೆರೆದುಕೊಂಡು ಜನರದಾಗುತ್ತ ನಡೆದಿದೆ. ಹೀಗಿರುತ್ತ ಶಾಂತಿಯ ಸಮಾಜಕ್ಕಾಗಿ ಮತ್ತು ಒಳಗೊಳ್ಳುವಿಕೆ ಎಂಬ ಉದಾತ್ತ ಮೌಲ್ಯವನ್ನು ಎತ್ತಿ ಹಿಡಿಯುವುದಕ್ಕಾಗಿ ಸಂವಿಧಾನ ರಚನೆಯ ಎಲ್ಲ ಹಂತದಲ್ಲೂ ಮಹಿಳೆಯರು ಜವಾಬ್ದಾರಿಯುತವಾಗಿ ಭಾಗವಹಿಸುವುದು ಅವಶ್ಯವಾಗಿದೆ. ಕಾಗದದ ಮೇಲಿನ ಸಮಾನತೆ ನೆಲದ ಮೇಲಿನ ವಾಸ್ತವವಾಗಬೇಕೆಂದರೆ ಎಲ್ಲ ಹಂತಗಳಲ್ಲಿ ಮಹಿಳಾ ಭಾಗವಹಿಸುವಿಕೆ ಮತ್ತು ಒಳಗೊಳ್ಳುವಿಕೆ ಅವಶ್ಯವಾಗಿದೆ.

ರಾಜಕೀಯ ಒಳಗೊಳ್ಳುವಿಕೆ ಏಳು ದಶಕಗಳ ಕೆಳಗೇ ಭಾರತ ಸಂವಿಧಾನ ರಚನಾ ಸಭೆಯಲ್ಲಿ ಸಾಧ್ಯವಾಗಿತ್ತು. ಎಂದೇ ಈ ನೆಲದ ಹೆಣ್ಣುಗಳಿಗೆ ಸಂವಿಧಾನವು ತಮ್ಮ ಆಶೋತ್ತರಗಳನ್ನು ಬಿಂಬಿಸುವ, ಸಮಸ್ಯೆಗಳನ್ನು ಪರಿಹರಿಸುವ ಸಮರ್ಥ ಸಹಾಯಹಸ್ತವಾಗಿಯೇ ಉಳಿದುಕೊಂಡಿದೆ. ವರದಕ್ಷಿಣೆ, ಮದುವೆ, ವಿಚ್ಛೇದನ, ಜೀವನಾಂಶ, ಗರ್ಭಪಾತ, ಕುಟುಂಬಯೋಜನೆ, ಆಸ್ತಿಹಕ್ಕು, ಮಕ್ಕಳ ಕಸ್ಟಡಿಯ ಹಕ್ಕು ಮುಂತಾದ ಮಹಿಳೆಯ ಭಾವುಕ, ವೈಯಕ್ತಿಕ ಜಗತ್ತನ್ನು ಅಲ್ಲಾಡಿಸುವಂತಹ ಪ್ರಬಲ ವಿಷಯಗಳ ಬಗೆಗೆ ಕೋರ್ಟು ಬಂಧು-ಹಿತೈಷಿಯ ಸ್ಥಾನದಲ್ಲಿ ನಿಲ್ಲುವಂತೆ ಸಂವಿಧಾನವು ನ್ಯಾಯವ್ಯವಸ್ಥೆಯನ್ನು ರೂಪಿಸಿದೆ. ಆದರೇನು, ಬರಬರುತ್ತ ಎಲ್ಲ ರಂಗಗಳಲ್ಲೂ ಮಹಿಳಾಸ್ನೇಹಿ ವಾತಾವರಣ ಕ್ಷೀಣಿಸುತ್ತಿದೆ. ಸ್ತ್ರೀಪುರುಷರೆಲ್ಲ ಸಮಾನರು ಎಂದು ಸಂವಿಧಾನ ಹೇಳಿದರೆ ಸಾಲದು, ಅದು ರೂಢಿಯಾಗಿ ಆಚರಣೆಗೆ ಬರಬೇಕಿದೆ. ಆ ದಿಕ್ಕಿನಲ್ಲಿ ಭಾರತೀಯ ಸಮಾಜ ಇನ್ನಾದರೂ ನಡೆಯಲೆಂದು ಗಣರಾಜ್ಯ ದಿನದ ಸಂದರ್ಭದಲ್ಲಿ ಹಾರೈಸೋಣ.

(ಚಿತ್ರಗಳು ಅಂತರ್ಜಾಲದಿಂದ ಪಡೆದವು. ಮೇಲಿನ ವಿಷಯ ಕುರಿತು ಹೆಚ್ಚಿನ ವಿವರಗಳನ್ನು `ಸಂವಿಧಾನ ಮತ್ತು ಮಹಿಳೆ' ಪುಸ್ತಕದಲ್ಲಿ ಪಡೆಯಬಹುದು.)








No comments:

Post a Comment