ಶಾಂತಸಾಗರದಲೊಮ್ಮೆ ದುಷ್ಟ ಅಲೆಗಳೆದ್ದವು
ತೈಲಕೂ ಬೆಂಕಿಗೂ ಘೋರ ಜಗಳ ಹಬ್ಬಿತು
ಹೃದಯಕುಂಜ ಅರಳಿದಲ್ಲೆ ಗೋಧರೆಯ ನೆಲದಲ್ಲಿ
ಎಗ್ಗಿಲ್ಲದೆ ಹಗೆ ಕಿಚ್ಚು ಮೂಲೆಮೂಲೆ ಹಾಯಿತು
‘ಜನ ಸಿಟ್ಟು ತೋರಿಸಲಿ ಬಿಡಿ’ ಜನನಾಯಕರೆಂದರು
ತ್ರಿಶೂಲ ತಲವಾರುಗಳ ಕೈಲಿತ್ತು ಕೆಣಕಿದರು
ಜಾಫ್ರಿ ಬಾನು ಬೆಹೆನರು ಜೀವಂತ ಉರಿವಾಗ
ದರ್ಜಿ ಕುತಬುದ್ದೀನರು ದೀನಜೀವರಾದರು
ಕಣ್ಣೆದುರೇ ಉರಿಯಿತು ಮನೆ, ಮಳಿಗೆ, ಮಸೀದಿ
ಷಹರ, ಊರು, ಕೇರಿ ಪಾಳು ಮಸಣದಂತಾಗಿ
ಬೂದಿಯಾಯಿತು ಬದುಕು, ಗೆಳೆತನವು ಚೂರಾಗಿ
ಸುಟ್ಟು ಕರಕಲಾದವು ಹೂ ಬೀಜ ಗಿಡ ಬಳ್ಳಿ
ಅಹಮದಾಬಾದಿನ ಫುಟ್ಪಾತು ಗಲ್ಲಿಗಳಲ್ಲಿ
ಪಾದರಕ್ಷಿಸುತಿದ್ದ ಅಶೋಕನೆಂಬ ಮೋಚಿ
ನೆರಳಿಲ್ಲ, ಕೂಳಿಲ್ಲ, ನೊಂದಿದ್ದ ಭಗ್ನ ಪ್ರೇಮಿ
ಹಸಿವೆಂಬ ಉದುರೆಲೆಗೆ ತಾಗಿತು ಧರ್ಮದ ಕಿಡಿ
ಕೆಲಸವಿರದ ಹತಾಶ ಅಶೋಕರು ಉರಿದ ಹೊತ್ತು
ತುಳಿತುಳಿದು ಬಳಿಬಳಿದು ಜೀವ ಕೆರಳಿದ ಹೊತ್ತು
ಕೇಸರಿಯ ಕೈಗಳು ತೋರಿದವು ಶತ್ರುವನು
ಹೆಸರು, ಬಣ್ಣ, ದಿರಿಸಲೇ ಗುರುತಿಸಿದರು ‘ವೈರಿ’ಯನು
ಗುಲಬರ್ಗ್ ಮಸಣವಾಗಿ ಬಿಳಿ ಬಾನು ಕಫನಾಗಿ
ಷಹರವೇ ಬೆಂದಿತು ಜೀವಜೀವ ಕಮರಿತು
ಮುಗಿಲಗಲ ಕರಿಹೊಗೆ ಮುಸುಕಿ ಉಸಿರುಗಟ್ಟಿತು
ಹಗಲು ಮಸುಕಾಯಿತು ಚಂದ್ರತಾರೆ ನೊಂದಿತು
ಭೀತಿಯೇ ಅನ್ನವಾಗಿ ಶಂಕೆಯೇ ತಟ್ಟೆಯಾಗಿ
ವಾದ ಜಗಳ ಗಲಭೆಯಲಿ ಬೀದಿಬೀದಿ ಕರಗಿತು
ಕ್ರುದ್ಧ ಪ್ರಕ್ಷುಬ್ಧ ಮನಸು, ರಾಡಿ ಕೆಸರು ಹರಿಯುತಿರಲು
ಸಬರಮತಿ ಬೆಂದಳು, ನೆತ್ತರ ನದಿಯಾದಳು
ದಧೀಚಿಯ ಬೆನ್ನುಹುರಿ ವಜ್ರಾಸ್ತ್ರವಾಗಿತ್ತು
ಬಾಪುವಿನ ಎದೆ ನೆತ್ತರು ಬ್ರಹ್ಮಾಸ್ತ್ರವಾಗಿತ್ತು
ಬನ್ನಿಮರದ ಎಲೆಎಲೆಯೂ ಲಾಠಿ ಚಾಕು ಬಚ್ಚಿಟ್ಟು
ಚರ್ಮ ಸುಲಿದು ಕಣ್ಣು ಕಿತ್ತು ನ್ಯಾಯ ಸಿಡಿಯಾಡಿತು
ತ್ರಿಶೂಲದ ಕೈ ಕಿವುಡಿಗೆ, ತಿಲಕಗಳ ಕುರುಡಿಗೆ
ಗೋವು ಗಾಯಗೊಂಡಿತು, ದರಗಾ ಗಾಯಗೊಂಡಿತು
ಕಣ್ಣುಗಾಯ, ಬೆನ್ನು ಗಾಯ, ಪಾದ ಪದುಮಕ್ಕೆ ಗಾಯ
ಬನ್ನಿ ಬೇವು ಮಾವುಗಳಿಗೆ ಮಾಯದಂಥ ರಣಗಾಯ..
ಸಿಟ್ಟಾದರೂ ಎಷ್ಟು ದಿನ ಇರಬಹುದು ಅಣ್ಣಾ?
ಹಗೆಯ ಹೊಗೆಗೆಷ್ಟುಸಿರು ಕಟ್ಟೇವು ಅಕ್ಕಾ?
ಎಷ್ಟು ಕಾಲ ಬರಗಾಲ ಜಲ ಒಣಗಿಸೀತವ್ವಾ?
ಎಷ್ಟು ಕಾಲ ಕಣ್ಣು ಕನಸ ಮರೆತೀತು ತಮ್ಮಾ?
ಕ್ರೋಧಾಗ್ನಿಯಲಿ ಅಡುಗೆಯೊಲೆ ಅಗುಳ ಬೇಯಿಸೀತೆ?
ಹಗೆಯ ಹಬೆ ಮೋಡವಾಗಿ ಮಳೆಯ ಸುರಿಸೀತೇ?
ನೆಲದ ಹದ ಮರೆತವರು ಹುಲ್ಲು ನೆಲ್ಲು ಬೆಳೆದಾರೇ?
ಕರುಣವಿರದ ಕಂಗಳಲಿ ಸುಖ ನಿದಿರೆ ತುಂಬೀತೇ?
ಎಚ್ಚರಾಯ್ತು ಜನ ಜನಾರ್ದನರ ಗಾಯ ನೋವುಗಳಿಗೆ
ಹಗಲು ಹರಿಯಿತು ದುಡಿದು ದಣಿದ ಗರೀಬ ಕೇರಿಗಳಿಗೆ
ಕುತಬುದ್ದೀನರೂ ಅಶೋಕ ಪಾರಮಾರರೂ
ಕೈ ಹಿಡಿದು ಅಪ್ಪಿದರು, ಎದೆನೋವು ಬಸಿದರು
ಹಸಿವೆಯೆಂಬ ಪರಮಸತ್ಯದೆದುರು ಬೆತ್ತಲಾದಾಗ
ದಾಂಡು, ತ್ರಿಶೂಲ, ತಲವಾರುಗಳ ನಶೆ ಇಳಿಯಿತು
ಹಗೆಸಾಧನೆಗೆ ಕಾಲಾಳು ತಾನೆಂಬುದರಿವಾಗಿ
ಹೊಲಿವುದರ ಒಳ ಗ್ಯಾನ ನೆಲವ ಪೊರೆಯಿತು
ತೊಗಲು ಸುಲಿದ ಬೆನ್ನುಗಳು ಊನಾದ ಗಾಯಗಳು
ಬಾಬಾರ ಸ್ಮರಿಸಿದವು ಸ್ವಾಭಿಮಾನ ಬೆಳಗಿದವು
ಆಜಾದಿಯ ಅಜಾನಿಗೆ ಹೆಜ್ಜೆಹಾಕಿ ಅಶೋಕಣ್ಣ
ನಡೆದ ಅಹಮದಾಬಾದಿಂದ ಊನಾದವರೆಗೆ
ಮುಷ್ಟಿ ಕಟ್ಟಿದ ಅಶೋಕ ಕಿರುಚು ಗಂಟಲ ಅಶೋಕ
ಉರಿವುದರ ಜೊತೆಜೊತೆಗೆ ತಾನೂ ಉರಿದ ಅಶೋಕ
ಮೈಗೆಲ್ಲ ಕೋಪದರಿವೆ ಹೊದ್ದುಕೊಂಡಿದ್ದ ಅಶೋಕ
ಅರಿವಿನ ಚಪ್ಪಲಿ ಹೊಲಿದ ನಡೆವ ಪಾದಗಳಿಗೆ
ಅತ್ತ ಕುತಬುದ್ದೀನಣ್ಣ ಹೊತ್ತಗೆಯ ಬರೆಬರೆದ
ಹೆಕ್ಕಿ ಹೊಲೆದು ಸೇರಿಸಿದ ಬಣ್ಣದರಿವೆ ಚೂರ
ಬುವಿಯ ಚಳಿ ಕಳೆಯಲು ಪ್ರೇಮ ಕೌದಿ ಹೊದಿಸಿದ
ಕಟ್ಟೆಯೊಡೆದು ಹರಿಯಿತು ಕುಲ ಮರೆತ ಸ್ನೇಹ ಜಲ
ದಿಲ್ಲಿ ದರವಾಜದಲಿ ‘ಏಕತಾ ಚಪ್ಪಲಿ ಮಾರ್ಟು’
ಅಶೋಕನ ದುಕಾನಿಗೆ ಪಾದವಿಟ್ಟ ಕುತಬುದ್ದೀನು
ಅವರು ತೊಟ್ಟ ಅಂಗಿ ದರ್ಜಿಯಣ್ಣ ಹೊಲೆದದ್ದು
ಪಾದ ಪೊರೆವ ಚಪ್ಪಲಿ ಮೋಚಿಯಣ್ಣನ ಅರಿವು
ಮಸಣದಲೂ ಚಿತೆಯ ಬಳಿ ಹಣತೆ ಉರಿವಂತೆ
ಕದ್ದಿಂಗಳ ಇರುಳಲ್ಲಿ ಚಿಕ್ಕೆ ಬೆಳಗುವಂತೆ
ಸುಟ್ಟುರಿದ ಅಡವಿಯಲಿ ಹಕ್ಕಿ ಉಲಿವಂತೆ
ಬಾಪುಬಾ ಕುಟಿಯಿದೆ, ಚರಕ ತಿರುಗುತ್ತಿದೆ
ಮೆಟ್ಟಡಿಯ ಮುಳ್ಳು ಮೃದು ಹೂವಾಗಿ ಅರಳಿದೆ
ನಡೆವವರಿಗೆ ತೊಡಿಸಿಹರು ಅರಿವಿನ ಆವುಗೆ
ಕೈ ಹಿಡಿದು ಅಶೋಕ ಅನ್ಸಾರಿಯರು ನಗುತಿರೆ
ಬಾಪು ಬಾಬಾರಿಗದೇ ತಲೆಹೊರೆಯ ಕಾಣಿಕೆ
ಕರುಣದ ಮಳೆ ಬಿದ್ದು ಮಸಣ ಒದ್ದೆಯಾಯಿತು
ಹನಿಗೆ ಕಾದಿದ್ದ ಹಸಿರು ಸಿರಿ ಬಿತ್ತ ಮೊಳೆಯಿತು
ಚಿತ್ತದಾಗಸದಲ್ಲಿ ಪ್ರೇಮರವಿ ಮೂಡಿರಲು
ಬಾಪು ಬಾ ನಕ್ಕರು.. ಸಬರಮತಿ ನಕ್ಕಿತು
ಪ್ರೇಮಬಲವೇ ಬೀಜವಾಗಿ, ಮನೋಬಲವೇ ಹತ್ತಿಯಾಗಿ
ಬದುಕು ನೂಲಾಗಿದೆ, ಜೀವ ಖಾದಿಯಾಗಿದೆ
ಭೂಕಂಪಕಲುಗಿದರೂ ದಳ್ಳುರಿಗೆ ನಲುಗಿದರೂ
ಹೃದಯಕುಂಜದೆದೆ ಬಾಗಿಲು ಎಲ್ಲರಿಗೂ ತೆರೆದಿದೆ
ವಸಂತ ಪ್ರೇಮ ಸುರಿಯಿತು ಬೆಂದ ಮರುಭೂಮಿಗೆ
ಹರಿದಳು ಸಬರಮತಿ ಗಲ್ಲಿ ಮೂಲೆಗಳಿಗೆ
ಧೂಳು ಹೊಡೆದು ಕಸ ಬಳೆದು ಅಂಗಳಕೆ ರಂಗವಲ್ಲಿ
ಷಹರದಂಗೈ ತುಂಬ ಸ್ನೇಹಸುಖದ ಮದರಂಗಿ
(೨೦೦೨ರಲ್ಲಿ ಗುಜರಾತಿನ ಅಹಮದಾಬಾದ್-ಗೋಧ್ರಾಗಳಲ್ಲಿ ಸಂಭವಿಸಿದ ಭೀಕರ ಕೋಮುಹಿಂಸಾಚಾರದ ವೇಳೆ ಎಲ್ಲೆಡೆ ಪ್ರಕಟಗೊಂಡ ಜೋಡಿಚಿತ್ರಗಳಿವು. ಭಯ, ಅಸಹಾಯಕತೆಯಿಂದ ಕೈ ಮುಗಿದು ಗಲಭೆಕೋರರನ್ನು ಕೇಳಿಕೊಳ್ಳುತ್ತಿರುವ ದರ್ಜಿ ಕುತ್ಬುದ್ದೀನ್ ಅನ್ಸಾರಿ ಹಾಗೂ ತಲೆಗೆ ಕೇಸರಿ ಪಟ್ಟಿ ಬಿಗಿದು ರಾಡು ಝಳಪಿಸುವ ಕ್ರುದ್ಧ ತರುಣ ಅಶೋಕ ಪಾರಮಾರ ಮೋಚಿ ಅವರ ಈ ಫೋಟೋಗಳನ್ನು ಬೇರೆಬೇರೆ ಕಡೆ ತೆಗೆಯಲಾಗಿದ್ದರೂ, ಆ ಮುಖಗಳು ಇಡಿಯ ಸನ್ನಿವೇಶವನ್ನು ಭಾವುಕವಾಗಿ ಅಭಿವ್ಯಕ್ತಿಸುವಂತಿದ್ದು ಖ್ಯಾತವಾದವು. ಹಲವು ವರ್ಷ ಕಳೆದ ನಂತರ ಅನ್ಸಾರಿಯವರ ಆತ್ಮಕತೆ ಗುಜರಾತಿಯಲ್ಲಿ, ಹಾಗೂ ಮಲೆಯಾಳಂ ಭಾಷೆಯಲ್ಲಿ ಪ್ರಕಟವಾಯಿತು. ಅಶೋಕ ಪಾರಮಾರ ಅವರು ಊನಾದವರೆಗಿನ ದಲಿತ ಸ್ವಾಭಿಮಾನ ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡರು. ಅಹಮದಾಬಾದಿನಲ್ಲಿ ‘ಏಕತಾ ಚಪ್ಪಲಿ ಅಂಗಡಿ’ ತೆರೆದು ಅದರ ಉದ್ಘಾಟನೆಗೆ ಕುತ್ಬುದ್ದೀನ್ ಅನ್ಸಾರಿಯವರನ್ನು ಕರೆದರು.)
No comments:
Post a Comment