Friday, 7 February 2020

ಸಬರಮತಿ: ನದಿ ಮತ್ತು ನಾನು..



(ಹೃದಯ ಕುಂಜ)





(ಸಬರಮತಿ ರಿವರ್ ಫ್ರಂಟ್)


ಒಂದು ಕಾರ್ತೀಕ ಅಮಾವಾಸ್ಯೆ, ಸೂರ್ಯ ಮುಳುಗಿದ ಮೇಲೆ..

ಬಾ ಬಾಪು ಮಹದೇವರ ಆಶ್ರಮಕೆ ಕಾಲಿಟ್ಟೆ
ದುಧಾ ದಾನಿ ಮಗನರು ನೆಟ್ಟ ನೆರಳಡಿ ಕೂತೆ
ಬನ್ನಿ, ಜಾಲಿ, ಬೇವುಗಳ ಜೀವಭೂಮಿಯಲಲೆದೆ
ಜನದೇವರ ಹೆಜ್ಜೆಗುರುತು ಕದ್ದಿಂಗಳಲು ಕಂಡೆ

ರಾತ್ರಿ ಹಗಲೆನ್ನದೆ ಗಾಳಿ, ಚಳಿ, ಮಳೆಯೆನದೆ
ನೆಲದೇವರು ದುಡಿದಿದ್ದ ತಾವಲ್ಲವೇ ಅದು?!
ಎದ್ದು ಹೋದರು ಸಂಜೆ ಪ್ರಾರ್ಥನೆಗೆ ಕುಳಿತವರು
ಎದ್ದಾಗ ನಡೆವಾಗ ಮಿಸುಕಿದ ಮರಳ ಸದ್ದು

ಪಶ್ಚಿಮದ ಕೆಂಪು ಕರಗಿ ಇರುಳು ಹರಿಯಿತು
ಸತ್ಯ ಕತ್ತಲಿನಂತೆ ಹರಡತೊಡಗಿತು
ಕತ್ತಲಲೂ ಎಷ್ಟೊಂದು ಕಾಣಬಹುದಿತ್ತು!
ಬೀಳುವ ನಕ್ಷತ್ರಗಳು, ಹೊಳೆವ ನಗರ ದೀಪಗಳು..

ಮೆಲ್ಲ ಇಳಿಯತೊಡಗಿತು ಕರುಣದ ಕಾರಿರುಳು
ಮುಗಿಲ ಪ್ರಾರ್ಥಿಸುತ ನಿಂತ ಎಲೆಯುದುರಿದ ಮರಗಳು
ಮೈತ್ರಿ ಹನಿ ಬೀಳುತಿದೆ ಟಪಟಪ ಟಪಟಪವೆಂದು
ದಿಟ್ಟಿಸಿದರೆ ಅಣುಅಣುವೂ ಸೂರ್ಯನದೇ ತುಣುಕು

ಕತ್ತಲ ತೆರೆದು ತೋರಿಸುವ ಕಪ್ಪನೆ ಆ ಇರುಳು
ಒಳ ಬೆಳಕ ಬಯಲಿಗೆಳೆವ ಬೆಳ್ಳನೆ ಆ ಇರುಳು
ಕತ್ತಲಲೂ ಹೊಳೆಯುತಿತ್ತು ನದಿಯ ಮೆಟ್ಟಿಲು
ಪುಳಕ್ಕನೆ ಹಾರುತಿರುವುದದೋ ಬೆಳ್ಳಿಮೀನು

ಕತ್ತಲಲಿ ಕಂಡಷ್ಟು, ಕಂಡದ್ದೆಲ್ಲ ಸತ್ಯ
ಕತ್ತಲಲಿ ಕೇಳಿದ್ದು, ಕೇಳಿದಷ್ಟೂ ಸತ್ಯ
ಕತ್ತಲಲಿ ಮುಟ್ಟಿ ಅರಿವಾದಷ್ಟೂ ಸತ್ಯ
ಕತ್ತಲಲಿ ಜಾನಿಸಿ ಬೆಳಕಾದಷ್ಟೂ ಸತ್ಯ

ಅಂದು ಅಮಾವಾಸ್ಯೆ, ಅಲ್ಲಿದ್ದವರು ನಾವಿಬ್ಬರೇ
ನದಿ ಮತ್ತು ನಾನು.. ಕಾವಲುಗಾರಗೆ ಅಂಜಿಕೆ
ಇರುಳು ಬಂದವರು ಉಳಿದಾರು ಬೆಳಕು ಹರಿವವರೆಗೆ
ಮುಳುಗಿಬಿಟ್ಟಾರು ಅಲ್ಲೇ ಸಬರಮತಿಯೊಳಗೆ!

‘ಸತ್ಯ ಅಖಂಡ ಮಗೂ, ಸಮ್ಯಕ್ ದಿಟ್ಟಿಯಿರಬೇಕು
ವಿವಶಗೊಳದೇ ಎಚ್ಚರದಿ ಗ್ರಹಿಸು ಎಲ್ಲವನ್ನು’
ಯಾರಿವರು? ಓ ಅಲ್ಲಿ, ಈ ಮಾತು ಉಲಿದವರು?
ಬುವಿಯ ಪ್ರೇಮಕೆ ಬಾನ ಚಿಕ್ಕೆಯಾಗಿ ಹೊಳೆವವರು?

ಮಿನುಗುತಿದ್ದರು ಬಾಪು, ಮತ್ತೆ ಉತ್ತರಕೆ ಬಾಬಾ
ಅಗೋ ಅಲ್ಲಿ ಕಬೀರ ಇಗೋ ಇಲ್ಲಿ ಬಸವ
ಅಲ್ಲಿ ಅಕ್ಕ ಇಲ್ಲಿ ಮೀರಾ ಮತ್ತಲ್ಲಿರುವಳು ಲಲ್ಲಾ
ಸತ್ಯ ಅರಸಿ ಪ್ರೇಮ ಬಂದಿಯಾದ ಜೀವರು ಎಲ್ಲಾ

ಬಿಮ್ಮಗೆ ಕುಳಿತ ನಾನು, ಸುಮ್ಮ ನಿಂತ ಸಬರಮತಿ
ನಮ್ಮ ನಡುವೆ ಹರಿಯುತಿತ್ತು ಮೌನದರಿವು
ಹಗಲ ಕೋಲಾಹಲಗಳು ವಿರಮಿಸಿದ ಆ ಹೊತ್ತು
ಜೀವಾದಿ ಜೀವಗಳು ಬಳಿ ಬಂದವು ಎಚ್ಚೆತ್ತು

(`ಸಬರಮತಿ' ದೀರ್ಘ ಕವಿತೆಯ ಒಂದು ಭಾಗ - `ನದಿ ಮತ್ತು ನಾನು')

3 comments:

  1. "ಸತ್ಯ" ಎಂಬ ತತ್ವದ ಪ್ರತಿಮೂರ್ತಿ ಸಬರಮತಿಯ ಸಂತನ ಚೇತನ ಎದೆಯಾಳದಲ್ಲಿ ದೀವಿಗೆಯಂತೆ ಬೆಳಗೀತೆಂಬ ಆಶಯ ಇಂದಿನ ಪ್ರಜಾವಾಣಿಯ ನಿಮ್ಮ ಲೇಖನ "ಎದೆಯ ಸಂವಿಧಾನ" ದಲ್ಲಿ ವ್ಯಕ್ತವಾಗಿರುವಂತೆ ಈ ಕವನವೂ ಬಿಂಬಿಸುತ್ತಿದೆ.

    ReplyDelete
  2. ಮೇಲಿನ ಅಭಿಪ್ರಾಯ, ಕೆ.ಆರ್.ಉಮಾದೇವಿ ಉರಾಳ.

    ReplyDelete