Wednesday, 18 March 2020

‘ಏನೂ ಕೆಲ್ಸ ಮಾಡಲ್ಲ’




ನಾವೆಲ್ಲ ಕಲಿತ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ. ಎಷ್ಟೋ ವರುಷದ ನಂತರ ಶಾಲೆಯಲ್ಲಿ ಕಲಿತವರೆಲ್ಲ ಒಟ್ಟು ಸೇರಿದ್ದೆವು. ಲಂಗ ಚಡ್ಡಿ ಕಾಲದಲ್ಲಿ ಒಬ್ಬರನ್ನೊಬ್ಬರು ನೋಡಿ ಆಮೇಲೆ ದೂರವಾದ ಗೆಳೆಯ, ಗೆಳತಿಯರನ್ನು ನೋಡಿ ಮತ್ತೆ ಬಾಲ್ಯದ ಸಂತೋಷ, ಸಂಭ್ರಮ ಅನುಭವಿಸುತ್ತಿದ್ದೆವು. ಒಂದೇ ಮಣೆ ಮೇಲೆ ಕೂತು ಮಗ್ಗಿ ಬಾಯಿಪಾಠ ಮಾಡಿದ, ಅಕ್ಷರ ತಿದ್ದಿದ ನಿರ್ಮಲಾ, ಶರಾವತಿ, ಲಕ್ಷ್ಮಿ, ಅಮೀನಾ ಎಲ್ಲ ಸಿಕ್ಕಿಬಿಟ್ಟರು. ಹಲವರು ಅದೇ ಹಳ್ಳಿಯ ಆಸುಪಾಸಿನಲ್ಲಿ ಸಂಸಾರವಂದಿಗರಾಗಿದ್ದರೆ ನಾವು ಕೆಲವರಷ್ಟೇ ದೂರದೂರುಗಳ ಸೇರಿದ್ದೆವು. ಎಲ್ಲರಿಗೂ ಖುಷಿಯೋ ಖುಷಿ. ಹೇಳಲಾಗದ ಆನಂದದಲ್ಲಿ ನಮ್ಮ ಮಾತಿನ ಕೊಟ್ಟೆ ಬಿಚ್ಚತೊಡಗಿತು..

‘ನೀ ಈಗ ಏನ್ ಕೆಲಸದಲ್ಲಿದೀ ಅಮೀನಾ?’ ಚಟಪಟನೆ ಮಾತನಾಡುತ್ತಿದ್ದ, ಬಲು ಆಸ್ಥೆಯಿಂದ ಅಲಂಕರಿಸಿಕೊಂಡು ಬಂದಿದ್ದ ಗೆಳತಿಯನ್ನು ಕೇಳಿದೆ.

‘ಕೆಲ್ಸ ಏನೂ ಇಲ್ಲ ಮರಾಯ್ತಿ, ಹಿಂಗೇ ಮನೇಲಿದ್ದೆ..’

‘ಹಿಂಗೇ ಎಲ್ಲಿರ‍್ತದೆ ಅದು? ಬೀಡಿ ಕಟ್ಟುದು, ಮಲ್ಗೆ ಮಾಲೆ ಮಾಡಿ ಮಾರುದು, ಸುರಗಿ ಮಕ್ಕೆ, ಕಾಡರಶ್ಣ ತಂದು ಕಮ್ತೀರಿಗೆ ಹಾಕುದು ಏನಾದ್ರು ಮಾಡ್ತನೇ ಇರ್ತದೆ..’ ಲಕ್ಷ್ಮಿ ಮಾತು ಸೇರಿಸಿದಳು.

‘ನೀಯೆಂತ ಕೆಲ್ಸ ಮಾಡ್ತಿದ್ಯೆ ಲಕ್ಷ್ಮಿ?’ ದುಬೈಯಿಂದ ಬಂದಿದ್ದ ರೀಟಾ ಕೇಳಿದಳು.

‘ಎಂತದೂ ಇಲ್ವೆ. ಎಂಥ ಮಣ್ಣು ಕೆಲ್ಸವೇನೋ ನಮದು. ಬಟ್ಟೆ ತೊಳಿ, ಪಾತ್ರೆ ತಿಕ್ಕು, ಮೀನು ಕತ್ತರ್ಸು, ಹಪ್ಪಳ ಉಪ್ಪಿನಕಾಯಿ ಮಾಡು, ಹಾಸು, ಮಡಚು, ಸಾರಸು, ಗೇರು, ಒಕ್ಕು, ರುಬ್ಬು .. ಹೀಂಗೇ. ನಿಮ್ಮಂಗೆ ಗನಾ ಕೆಲ್ಸ ಅಲ್ವೇ ನಮ್ದು, ಮೊದ್ಲಿಲ್ಲ, ಕೊನೆಯಿಲ್ಲ. ಸಾಯ್ಲಿ..’

‘ನಾವು ಕೆಲ್ಸ ಅಂತ ಹೊರಗೆ ಹೋಗಿ ನಾಕು ಕಾಸು ತರೋರಾದ್ರೂ ನೀ ಹೇಳ್ದ್ಯಲೆ ಈಗ, ಅಂತ ಯಾವ ಕೆಲ್ಸನೂ ಕಮ್ಮಿ ಆಗಿಲ್ಲ. ಹೆಣ್ಣುಮಕ್ಕಳ ಕೆಲ್ಸದಿಂದಲೆ ಮನೆ ಮನೆಯಾಗಿರೋದು. ನಾವು ಹೆಮ್ಮೆ ಪಡ್ಬೇಕು ಅದ್ಕೆ, ಬೇಸರ ಯಂತಕ್ ಲಕ್ಷ್ಮಿ?’

‘ಬ್ಯಾಸ್ರ ಯಾಕಂದ್ರೆ ಇಷ್ಟಪ ಕೆಲ್ಸ ಮಾಡ್ತಿದ್ರೂ ಮನೆ ಗಣಸ್ರ ಕೇಳಿದ್ರೆ ಈ ಹೆಂಗಸ್ರಿಗೆ ಎಂತ ಕೆಲ್ಸ? ನಾವ್ ದುಡ್ಕ ಬಂದಿದ್ನ ಮಾಡ್ಕಂಡ್ ತಿಂಬೂದು ಅಷ್ಟೆಯ ಅಂತ ನಗಾಡ್ತ್ರು. ಮನೆ ಕೆಲ್ಸಕ್ಕೆ ಕಾಸಿಲ್ಲ, ಕಿಮ್ಮತ್ತಿಲ್ಲ. ನೀವೆಲ್ಲ ಹೊರಗೋಗಿ, ತಿರುಗಾಡಿ ಕಾಸು ಗಳಿಸೋವಂಗಾದ್ರಿ. ನಮ್ದು ಏನಿದ್ರು ಎಲ್ಲ ಇಲ್ಲೆಯ, ಮೀಟಿಂಗು ಟ್ರಿಪ್ಪು ಪಾರ್ಟಿ ಜೈಲು ಎಲ್ಲಾವ್ದೂ ಒಂದಾ ಬಾವಿಕಟ್ಟೆ ಅತ್ವಾ ಅಡಿಗೆ ಕಟ್ಟೆಲೇ ಮುಗೀಬೇಕು. ಆದ್ರೂ ಪೋಲಕ ಹೊಲುಸ್ಬೇಕು, ಜಾತ್ರೇಲಿ ಬಳೆ ಇಟ್ಕಬೇಕು ಅಂತ ಗಣಸ್ರ ಹತ್ರ ದುಡ್ ಕೇಳಿದ್ರೆ ನೂರು ಮಾತು.. ನಿರ್ಮಲಾ, ಶರಾವತಿ, ಲಕ್ಷ್ಮಿ, ಸುಧಾ, ನಮ್ಮೆಲ್ಲಾರದೂ ಅಷ್ಟೇ, ಕೆಲಸ ಅಂತ ಕಣ್ಗೆ ಯಾರ‍್ಗೂ ಕಾಣ್ದೇ ಇರೋ ಕೆಲ್ಸನ ಒಂದೇಸಮ ಮಾಡ್ತಾನೇ ಇದೀವಿ...’

ಲಕ್ಷ್ಮಿಯ ದನಿಯಲ್ಲಿದ್ದ ಖೇದ ಎಲ್ಲರ ಅನುಭವಕ್ಕೆ ನಿಲುಕಿ ಚಣ ಮೌನ ಆವರಿಸಿತು.

ಈ ವಿಷಾದದ ದನಿಗಳು ಗೃಹಬಂಧನಕ್ಕೊಳಗಾಗಿ ಗೃಹಸೇವಕಿಯರಾದ ಗೃಹಪಾಲಕಿಯರದು. ಒಂದಿಡೀ ಸಂಸಾರದ ಹೊಟ್ಟೆ-ನಾಲಗೆಯ ಕಾಳಜಿ, ಹಿರಿಕಿರಿಯರ ಹೊತ್ತುಗೊತ್ತಿನ ಪೂರೈಕೆ, ರಿಪೇರಿ, ಸ್ವಚ್ಛತೆ, ಸಾಮಾನು ದಾಸ್ತಾನು, ಹಿತ್ತಲು-ಅಂಗಳ-ದನಕರು-ಗಿಡಗಂಟಿ ಮೇಲ್ವಿಚಾರಣೆಗಳನ್ನೆಲ್ಲ ನೋಡಿಕೊಳ್ಳುವ ಮನೆಯೊಡತಿಯರ ಆಡಲಾಗದ ಮಾತುಗಳಿವು. ಕೆಲವರಿಗೆ ಮನೆಕೆಲಸದ ಜೊತೆ ಕೃಷಿ ಕೆಲಸವಿದ್ದರೆ ಮತ್ತೆ ಕೆಲವರಿಗೆ ಅಂಗಡಿ, ಹಣ್ಣು-ತರಕಾರಿ ಬೆಳೆಯುವುದು, ಹಾಲು ವ್ಯಾಪಾರ ಇತ್ಯಾದಿ ಮೇಲುವಸಿ ಕೆಲಸವಿರುತ್ತದೆ. ಮಕ್ಕಳ ಹೊತ್ತು ಹೆತ್ತು ಸಾಕುವುದು, ಮನೆಯ ಅಶಕ್ತರಿಗೆ, ಅನಾರೋಗ್ಯದವರಿಗೆ ಹೆಗಲಾಗಿ ಸೇವೆ ಮಾಡುವುದು ಹೆಂಗಸರದೇ ಹೊಣೆ. ಎರಡು ಕೈಗಳಿಗೆ ಇಪ್ಪತ್ತು ಕೈಗಳ ಕೆಲಸವಿರುತ್ತದೆ. ಎಷ್ಟು ಮಾಡಿದರೇನಂತೆ? ‘ಏನ್ಕೆಲಸ ಮಾಡ್ತಿದೀರಾ?’ ಎಂದು ಯಾರಾದರೂ ಕೇಳಿದರೆ, ಗೃಹಲಕ್ಷ್ಮಿಯರು ‘ಏನೂ ಇಲ್ಲ’ ಎನ್ನುತ್ತಾ ಮುರುಟಿಕೊಳ್ಳುತ್ತಾರೆ!

ಬರಿಯ ಅಡುಗೆ ಮನೆಯೊಂದರಲ್ಲಿ ದಿನಕ್ಕೆ ನೂರು ಸಲ ಕೂತೇಳುತ್ತಾರೆ, ಐನೂರು ಸಲವಾದರೂ ಬಗ್ಗಿ ಏಳುತ್ತಾರೆ. ಬಾವಿ, ಬಟ್ಟೆಕಲ್ಲಿನೆದುರು ಬೆವರು ಸುರಿಸುತ್ತಾರೆ, ಒಲೆಯೆದುರು ರಕ್ತ ನೀರು ಮಾಡುತ್ತಾರೆ. ಆದರೂ ಅವರಿಗೆ ತಾವು ಮಾಡುತ್ತಿರುವ ಕೆಲಸದ ಬಗೆಗೆ ಹೆಮ್ಮೆಯಿಲ್ಲ, ಅದು ಹೇಳಿಕೊಳ್ಳಬೇಕಾದ ಕೆಲಸವೆನಿಸಿಲ್ಲ, ಯಾಕೆ?

ಯಾಕೆಂದರೆ ಹೆಣ್ಣುಗಳಿಗೆ ಮನೆವಾರ್ತೆಯ ದುಡಿಮೆ ಎಂದರೆ ಕೊನೆಮೊದಲಿರದ, ವಿರಾಮವಿರದ ಸ್ವಾತಂತ್ರ್ಯಹರಣ. ಅದು ರಜೆಯಿರದ, ವೇತನವಿರದ, ವಿರಾಮವೂ ಇರದ ಹೇರಲ್ಪಟ್ಟ ದುಡಿಮೆ. ಆ ದುಡಿಮೆ ಅವರಿಗೆ ಗೌರವ ತರುತ್ತಿಲ್ಲ, ಅಧಿಕಾರ ನೀಡುತ್ತಿಲ್ಲ, ಸ್ವಾತಂತ್ರ್ಯ ನೀಡುತ್ತಿಲ್ಲ. ಬದಲಾಗಿ ಗೌರವ, ಅಧಿಕಾರ, ಸ್ವಾತಂತ್ರ್ಯ ಎಲ್ಲಕ್ಕೂ ಎರವಾಗಿದೆ. ಹೆಣ್ಣುತನವನ್ನು ಸಾಬೀತುಪಡಿಸುವುದೇ ಮನೆಯೊಳಗಿನ ಉಚಿತ ದುಡಿಮೆ ಎನ್ನಲಾಗುತ್ತದೆ.

ಅವರಿಗೆ ತಮ್ಮ ದುಡಿಮೆ ಗೌರವದ ಕಾಯಕವೆನಿಸದಿರಲು ಇದೇ ಕಾರಣವಾಗಿದೆ.

ಕಾಣದ ಕೆಲಸ, ಕೇಳದ ಕಥೆ..






ಕಾಯಕವೇ ಶ್ರೇಷ್ಠ, ಕಾಯಕವೇ ಧರ್ಮ ಎಂದ ಶರಣರ ನೆಲ ನಮ್ಮದು. ‘ಅನ್ನ ಶ್ರಮ’ ಎನ್ನುತ್ತಿದ್ದರು ಗಾಂಧೀಜಿ. ‘ವಸ್ತುವಿನ ತಯಾರಿಕೆಯ ಹಿಂದೆ ರಕ್ತ, ಬೆವರು, ಕಣ್ಣೀರು ಇರುತ್ತದೆ. ಅದನ್ನು ಅದೃಶ್ಯವಾಗಿಸಿ ಸರಕಿಗೆ ಮೌಲ್ಯ ತುಂಬಲಾಗುತ್ತದೆ’ ಎಂದ ಕಾರ್ಲ್ ಮಾರ್ಕ್ಸ್. ಕೆಲಸದ ಮೇಲುಕೀಳು ವಿಭಜನೆಯಿಂದ ಹುಟ್ಟಿದ ಜಾತಿವ್ಯವಸ್ಥೆಯನ್ನೇ ಅಂಬೇಡ್ಕರರು ನಿರಾಕರಿಸಿದರು. ಶ್ರಮದ ಮಹತ್ವದ ಬಗೆಗೆ ಎಲ್ಲ ಮಹಾನುಭಾವರೂ ತಿಳಿಸಿ ಹೇಳಿದರು. ಆದರೂ ಮನೆವಾರ್ತೆಯ ಶ್ರಮ ಕೀಳೆನಿಸಿಕೊಂಡು ಕೇವಲ ಹೆಣ್ಣುಗಳ ಹೆಗಲ ವಜ್ಜೆಯಾಗಿಸಿತು. ಅವರ ಕೆಲಸವೆಲ್ಲ ವೇತನ ರಹಿತ, ಉಚಿತ, ಕಡ್ಡಾಯ ಸೇವೆಯೇ ಆಯಿತು.

ಒಂದು ಅಧ್ಯಯನದಂತೆ ಪ್ರತಿ ಹೆಣ್ಣೂ ಪ್ರತಿದಿನ ವೇತನವಿರದ ೨೯೭ ನಿಮಿಷ ಸೇವೆಯ ಕೆಲಸ ಮಾಡಿದರೆ ಪ್ರತಿ ಗಂಡೂ ೩೧ ನಿಮಿಷ ಅಂತಹ ಕೆಲಸ ಮಾಡುತ್ತಾನೆ. ಎಂದರೆ ಪ್ರತಿ ಮನೆಯೂ ಮನೆಯಾಗಿರುವುದರ ಹಿಂದೆ ಕನಿಷ್ಟ ಒಬ್ಬಳ ‘ರಕ್ತ, ಬೆವರು, ಕಣ್ಣೀರು’ ಇದೆ.

ಆದರೂ ಸಮಾಜ ಹೇಗಿದೆಯೆಂದರೆ, ಮನೆಯಲ್ಲಿ ಹೆಣ್ಣು ಹುಟ್ಟುವುದು ಬೇಡ. ಹೆಣ್ಣು ದೇವರ ಬಳಿ ಬರುವುದು ಬೇಡ. ಅವಳ ಬುದ್ಧಿಮತ್ತೆ ತೋರಿಸುವುದು ಬೇಡ. ಅಧಿಕಾರದ ಸನಿಹ ಬರುವುದು ಬೇಡವೇ ಬೇಡ. ಬೇಕಿರುವುದು ಅವಳ ದೇಹ-ಬೆವರು-ರಕ್ತ ಮಾತ್ರ. ಅದೂ ಗಂಡಿನ ಸೇವೆ ಮಾಡಲು ಮತ್ತು ಮಕ್ಕಳ ಹೆತ್ತು ಕೊಡಲು. ‘ದಾಸಿಯಂತೆ ಸೇವೆ ಮಾಡುವ, ಮಂತ್ರಿಯಂತೆ ಸಮಾಲೋಚನೆಗೆ ಸಿಗುವ, ರಂಭೆ(ವೇಶ್ಯೆ)ಯಂತೆ ಹಾಸಿಗೆ ಸುಖವ ಕೊಡುವ, ತಾಯಿಯಂತೆ ಉಣಿಸುವ, ರೂಪದಲ್ಲಿ ಲಕ್ಷ್ಮಿಯಂತೆ, ಇರುವ’ ಮಾದರಿ ಹೆಣ್ಣು ಪತ್ನಿಯಾಗಿ ಬೇಕು ಎಂದೇ ಎಲ್ಲ ಗಂಡುಗಳು ನಿರೀಕ್ಷಿಸುತ್ತಾರೆ. ಪುರುಷ ಸಮಾಜದ ಈ ಧೋರಣೆಯನ್ನು ಕತೆ, ಹಾಡು, ಪುರಾಣಗಳಾಗಿಸಿ ಹೆಣ್ಣುಗಳ ತಲೆಗೆ ತುಂಬಲಾಗಿದೆ. ಮಾತೃದೇವತೆ, ಅನ್ನಪೂರ್ಣೆ, ಕ್ಷಮಯಾಧರಿತ್ರೀ ಮೊದಲಾದ ಮುಳ್ಳಿನ ಕಿರೀಟಗಳನ್ನು ಹೆಣ್ಣುಗಳ ತಲೆಯ ಮೇಲಿಡಲಾಗಿದೆ.

ಹತ್ತು ಹಲವು ನಿರೀಕ್ಷೆಗಳಿಗೆ ತಕ್ಕವಳಾಗಿ ಬದುಕಲು ಹಲವಾರು ಕೆಲಸಗಳನ್ನು ಒಮ್ಮೆಗೇ ಮಾಡಬೇಕಾದ ಬಲವಂತ ಮತ್ತು ಅನಿವಾರ್ಯತೆ ಹೆಣ್ಣುಗಳ ಮೇಲಿದ್ದರೂ, ಅದು ‘ಮಲ್ಟಿಟಾಸ್ಕಿಂಗ್’ ಎಂಬ ಬಿರುದಿಗೆ ಪಾತ್ರವಾಗಿದೆ. ಆದರೆ ಹೆಣ್ಣು ಬದುಕಿನ ಗುಣಾತ್ಮಕತೆಯನ್ನು ಅದೇ ಕಡಿಮೆ ಮಾಡಿದೆ. ಕೆಲಸದ ಸ್ಥಳದಲ್ಲೂ ಮಹಿಳೆಗೆ ಎರಡನೆಯ ದರ್ಜೆ ಸ್ಥಾನ, ಅಪಾಯಗಳೇ ಹೆಜ್ಜೆಹೆಜ್ಜೆಗೂ ಎದುರಾಗುತ್ತವೆ. ಈಗವರು ಮನೆಯಾಚೆಗೂ ದುಡಿದು ಗಳಿಸುತ್ತಿದ್ದರೂ ಮನೆಗೆ ಬಂದನಂತರ ವಿರಾಮ ಮರೀಚಿಕೆಯಾಗಿದೆ. ಅತಿಶ್ರಮದ ಅನುಭವಗಳು ಹೆಣ್ಣು ಜನ್ಮ ಕೀಳು, ಹೆಣ್ಣು ಜನ್ಮ ಬೇಡ ಎಂದು ಹೆಣ್ಣುಗಳೇ ಹೇಳುವಂತೆ ಮಾಡಿವೆ.

ಅರಿಸ್ಟಾಟಲ್ ‘ಗಂಡು ಅಂತ ಒಂದೇ ಪ್ರಬೇಧ ಇದ್ದು ಹೆಣ್ಣು ಅಪೂರ್ಣ ಮಾನವ ಜೀವಿಯಾಗಿದ್ದಾಳೆ’ ಎನ್ನುತ್ತಾನೆ. ಇದನ್ನೇ ಗಂಡುಪ್ರಧಾನ ಸಮಾಜ ಈಗಲೂ ನಂಬಿಕೊಂಡಿದೆ. ಆದರೆ ಲಿಂಗತಾರತಮ್ಯವು ಪ್ರಾಕೃತಿಕವಲ್ಲ, ಸಾಂಸ್ಕೃತಿಕವಾದದ್ದು ಎಂದು ಲೋಕಕ್ಕೆ ತಿಳಿಸಬೇಕಾದ ಅವಶ್ಯಕತೆಯಿದೆ. ಅದಕ್ಕೆ ಒಂದೇ ದಾರಿ: ‘ಸಮತೆಯೆಡೆಗೆ ನಮ್ಮ ನಡಿಗೆ..’ ಈ ಬಾರಿ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಹಿಳಾ ದಿನದ ಘೋಷವಾಕ್ಯ ‘ಸಮಾನತೆಯ ತಲೆಮಾರು ನನ್ನದು: ಪಡೆಯುತಿಹೆವು ಮಹಿಳಾ ಹಕ್ಕುಗಳ ಅರಿವು’ ಇದನ್ನೇ ಧ್ವನಿಸುವಂತಿದೆ.

ಸಮಾನತೆಯ ಅರ್ಥವನ್ನು, ಸೌಂದರ್ಯವನ್ನು ಸಮಾಜ ಅರಿತು ರೂಢಿಸಿಕೊಂಡಲ್ಲಿ ಆಗ ಈ ಭೂಮಿ ಖಂಡಿತವಾಗಿ ಈಗಿರುವುದಕ್ಕಿಂತ ನೆಮ್ಮದಿಯ ನೆಲೆಯಾಗುತ್ತದೆ. ಎಷ್ಟೋ ಸಂಕಟಗಳು ತಂತಾವೇ ಪರಿಹಾರ ಕಾಣುತ್ತವೆ.

 (ಚಿತ್ರಗಳು: ಅಂತರ್ಜಾಲದಿಂದ)


No comments:

Post a Comment