ಇಡೀ ಮಾರ್ಚ್ ತಿಂಗಳು ಮಹಿಳಾ ದಿನಾಚರಣೆ ಆಚರಿಸಲ್ಪಡುತ್ತದೆ. ಓಹೋಹೋ! ಇನ್ನೇನು ಮಹಿಳೆಯರಿಗೆ ಸ್ವರ್ಗ ಕೈಗೆಟುಕಿತು ಎನ್ನುವಂತೆ, ಜಗವೇ ಮಹಿಳಾ ಪರವಾಯಿತೋ ಎನುವಂತೆ.. ಎಲ್ಲರೂ ಮಹಿಳಾ ದಿನ ಆಚರಿಸುವವರು, ಹೆಣ್ಣನ್ನು ನೆನೆದು ಗೌರವಿಸುವವರೇ.. ಏರ್‌ಲೈನ್ ಕಂಪನಿಗಳು, ಕಾಸ್ಮಿಟಿಕ್ ಕಂಪನಿಗಳು, ಜ್ಯುವೆಲರಿ ಕಂಪನಿಗಳು, ಬ್ರಾಂಡೆಡ್ ಬಟ್ಟೆ-ವಸ್ತುಗಳ ಮಾಲ್‌ಗಳಿಂದ ಹಿಡಿದು ಬೀದಿ-ಕೇರಿ-ಶಾಲೆಗಳಲ್ಲೂ ಮಹಿಳಾ ದಿನಾಚರಣೆ ಆಚರಿಸಲಾಗುತ್ತದೆ. ಮ್ಯೂಸಿಕಲ್ ಚೇರ್, ಅಡುಗೆ ಸ್ಪರ್ಧೆ, ತಿನ್ನುವ ಸ್ಪರ್ಧೆ, ಫ್ಯಾಷನ್ ಷೋ ಏನೆಲ್ಲ ನಡೆಯುತ್ತವೆ. ಮಹಿಳೆಯರ ಒಂದು ಕೇಶಾಲಂಕಾರದ ಸಲೂನಿನಲ್ಲಿ ಎಲ್ಲ ಫ್ಯಾಷನ್‌ಗು ೨೫% ಡಿಸ್ಕೌಂಟ್! ಕೂದಲು ನೇರ ಇದ್ದದ್ದು ಸುರುಳಿ; ಸುರುಳಿ ಇದ್ದದ್ದು ನೇರ; ಕಪ್ಪು ಇದ್ದದ್ದು ವರ್ಣಮಯ; ಬಿಳಿ ಇದ್ದದ್ದು ಕಪ್ಪು ವಗೈರೆ ವಗೈರೆ ಮಾಡಿಕೊಡುತ್ತಾರೆ. ಆ ಸಲೂನಿನಲ್ಲಿರುವವರೆಲ್ಲ ಹುಡುಗರೆ. ಹುಡುಗಿಯರ ತಲೆ ತಿಕ್ಕಿ, ತೊಳೆದು, ಹಿಂಡಿ, ಎಳೆ ಎಳೆಯಾಗಿ ಬಿಡಿಸಿ, ಒಣಗಿಸಿ, ಪಾಲು ಮಾಡಿ, ಇಸ್ತ್ರಿ ಮಾಡಿ, ನೇರ, ಸುರುಳಿ ಹೀಗೆ ನಾನಾ ತರಹದ ಫ್ಯಾಷನ್ ಮಾಡುತ್ತಿದ್ದಾರೆ! ಆಭರಣದಂಗಡಿಯಲ್ಲಿ ಮಜೂರಿಯಿಲ್ಲ. ಕೆಲವಡೆ ಶುದ್ಧ ಕುಂಕುಮ ಸಪ್ತಾಹ ನಡೆಯುತ್ತದೆ. ಯಾವ ಐದು ಶುದ್ಧ ವಸ್ತುಗಳಿಂದ ಶುದ್ಧ ಕುಂಕುಮ ತಯಾರಿಸುವುದು ಮತ್ತು ಆ ಮೂಲಕ ಮುತ್ತೈದೆತನ ಕಾಪಾಡಿಕೊಳ್ಳುವುದು ಅಂತ ಅಲ್ಲಿ ಹೇಳಿಕೊಡುತ್ತಾರೆ!
ಆಹಾ ಮಹಿಳಾಪರ ಲೋಕವೇ!?
ತಡೆ ತಂಗಿ. ಇದು ಒಂದು ಮುಖ. ಇನ್ನೊಂದು ಕಡೆ ನೋಡಿದರೆ..
ಮಹಿಳಾ ದಿನ ಆಚರಿಸಿದ ಒಬ್ಬನೇ ಒಬ್ಬ ಗಂಡಸೂ ‘ಇನ್ನುಮುಂದೆ ನೀನೊಬ್ಬಳೇ ಅಡಿಗೆ, ಪಾತ್ರೆ, ಸ್ವಚ್ಛತೆ ಕೆಲಸ ಮಾಡುವುದು ಬೇಡ. ಇವತ್ತಿಂದ ಎಲ್ಲ ಫಿಫ್ಟಿ ಫಿಫ್ಟಿ ಎಂದು ಹೇಳುವರೇ? ಖಂಡಿತಾ ಇಲ್ಲ. ಮೂರು ತಿಂಗಳ ಮಗುವಿನಿಂದ ಹಿಡಿದು ತೊಂಭತ್ತರ ಮುದುಕಿಯವರೆಗೆ ಪ್ರತಿ ಇಪ್ಪತ್ತೈದು ನಿಮಿಷಕ್ಕೊಬ್ಬಳು ದಾಖಲೆಗೆ ಸಿಗುವ ಹಾಗೆ ಅತ್ಯಾಚಾರಕ್ಕೊಳಗಾಗುತ್ತಿದ್ದಾಳೆ. ದೆಹಲಿಯ ಗಾರ್ಗಿ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಹುಡುಗಿಯರ ಕಾರ್ಯಕ್ರಮ ವಿರೋಧಿಸಿ ಒಂದು ಗುಂಪು ಸಾಮೂಹಿಕವಾಗಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹೊರನಡೆಯಿತು. ಗುಜರಾತಿನ ಭುಜ್‌ನ ಕಾಲೇಜೊಂದು ದೇವಾಲಯ ಆವರಣದಲ್ಲೇ ಇರುವುದರಿಂದ ಮುಟ್ಟಾದವರು ಊಟದ ಒಳಾವರಣಕ್ಕೆ ನಿಯಮ ಉಲ್ಲಂಘಿಸಿ ಬಂದಿದ್ದಾರೆಂದು ತಿಳಿದು ಶಿಕ್ಷಕಿಯರ ಸಹಾಯದಿಂದ ನೂರಾರು ವಿದ್ಯಾರ್ಥಿನಿಯರ ಒಳಉಡುಪು ತೆಗೆಸಿ ಮುಟ್ಟಾಗಿದ್ದರೆಯೋ ಇಲ್ಲವೋ ಪರೀಕ್ಷಿಸಿತು!
ಹಾಗಾದರೆ ಮಹಿಳಾ ವಾಸ್ತವ ಯಾವುದು?
ಮ್ಯೂಸಿಕಲ್ ಚೇರ್, ಫ್ಯಾಷನ್ ಷೋ, ರಿಯಾಯ್ತಿ, ಸಂಭ್ರಮಗಳಷ್ಟೆ ಮಹಿಳಾ ದಿನಾಚರಣೆಗಳಲ್ಲ. ಅತ್ಯಾಚಾರ, ದೌರ್ಜನ್ಯ, ತಾರತಮ್ಯ, ಅಸಮಾನತೆಯ ಮಾತುಗಳಷ್ಟೇ ಮಹಿಳಾ ದಿನಾಚರಣೆಯ ಉದ್ದೇಶವಲ್ಲ. ಪುರುಷ ವಿರೋಧವಷ್ಟೇ ಮಹಿಳೆಯರ ಗುಂಪುಗೂಡುವಿಕೆಯ ಅಜೆಂಡಾ ಅಲ್ಲ. ಮಹಿಳಾ ದಿನಾಚರಣೆ ಎಂದರೆ ಘನತೆಯ ಬದುಕಿಗೆ ಮಹಿಳೆಯರು ನಡೆಸಿದ ಹೋರಾಟದ ನೆನಪು. ದೌರ್ಜನ್ಯ ವಿರೋಧವನ್ನಷ್ಟೆ ನಾವು ಮಾತನಾಡುತ್ತಿರುವಂತೆ ಕೇಳುತ್ತಿದೆ, ಆದರೆ ನಮ್ಮ ಮಾತು ಹಿಂಸೆಯ ವಿರುದ್ಧ, ಎಲ್ಲ ತಾರತಮ್ಯದ ವಿರುದ್ಧ, ಯುದ್ಧದ ವಿರುದ್ಧ, ಅಧಿಕಾರ ಕೇಂದ್ರೀಕರಣದ ವಿರುದ್ಧ.
ಸಮಾಜದ ಎಲ್ಲ ಪುರುಷಾಕೃತಿಗಳನ್ನು ಮುಖಾಮುಖಿಯಾಗುವವಳು ಮಹಿಳೆ. ಪುರುಷಾಕೃತಿ ಎನ್ನುವುದು ಜೈವಿಕ ಪುರುಷತ್ವದ ಕುರಿತ ಮಾತಷ್ಟೆ ಅಲ್ಲ. ಜಾತಿ, ಧರ್ಮ, ಯುದ್ಧ, ಅಧಿಕಾರಗಳೆಲ್ಲ ಪುರುಷಾಕೃತಿಗಳೇ. ಇವೆಲ್ಲದರ ದುಷ್ಟತನವನ್ನು ಅಳೆಯಬಲ್ಲವಳು ಅವೆಲ್ಲದರಿಂದ ಬಾಧಿತಳಾದ ಮಹಿಳೆಯೇ. ಹಾಗಾಗಿ ಮಹಿಳಾ ದಿನ ಆಚರಿಸುವುದೆಂದರೆ ಹಸಿವಿನ ವಿರುದ್ಧ, ಎಲ್ಲ ಶೋಷಣೆ-ಹಿಂಸೆಯ ವಿರುದ್ಧ, ಅಸಮಾನತೆಯ ವಿರುದ್ಧ, ಸಮತೆಯ ಸಮಾಜಕ್ಕಾಗಿ ಮುನ್ನಡೆಯುವ ವಿಚಾರ.
ಮಹಿಳಾ ದಿನ ಎಂದರೆ ಮಹಿಳೆಯರು ತಮ್ಮ ಚೈತನ್ಯ ಹೆಚ್ಚಿಸಿಕೊಳ್ಳುವ ದಿನ. ಅದಕ್ಕಾಗಿ ಮಹಿಳೆಯರು ಎರಡು ರೀತಿಗಳಲ್ಲಿ ಗಟ್ಟಿಯಾಗಬೇಕು. ಗಟ್ಟಿಯೆಂದರೆ ಕಣ್ಣೀರಾಗದ, ಅಯ್ಯೋ ಎನದ ಗಡಸು ಎದೆಗಲ್ಲುಗಳಾಗುವುದಲ್ಲ. ಬದಲಿಗೆ ಸ್ವ ಇಚ್ಛೆಯಿಂದ, ಸಹಜ ಸರಳ ಸ್ವಾಯತ್ತ ಜೀವನ ನಡೆಸಲು ಧೃಢವಾಗುವುದು. ಅದಕ್ಕಾಗಿ ಹೊರಗಿನ ಸಮಾಜದಲ್ಲಿ ದಿಟ್ಟವಾಗಿ ನಡೆಯಲು, ಗಟ್ಟಿಯಾಗಿ ಮಾತನಾಡಲು, ಘನತೆಯಿಂದ ಬದುಕಲು ಹಕ್ಕು ಸ್ವಾತಂತ್ರ್ಯಗಳನ್ನು ಗಳಿಸಿಕೊಳ್ಳಬೇಕು. ಜೊತೆಗೆ ಒಳಗಿನಿಂದಲೂ ಗಟ್ಟಿಯಾಗಬೇಕು.
ಸ್ವಮೋಹ ಮತ್ತು ಸ್ವಪ್ರೀತಿ
ವ್ಯಕ್ತಿತ್ವದ ಗಟ್ಟಿತನದ ಮೂಲ ಎಲ್ಲಿದೆ? ಅದು ಸ್ವ ಪ್ರೀತಿಯಲ್ಲಿದೆ. ಸ್ವಪ್ರೀತಿಯೆಂದರೆ ಶಕ್ತಿಮಿತಿಗಳೊಡನೆ ತನ್ನತನದ ಅರಿವು. ಸಮಾಜ ಈಗ ಹೆಣ್ಣು ಎಂದು ಯಾರನ್ನು ನೋಡುತ್ತಿದೆಯೋ ಅವಳು ನಿಜವಾದ ಹೆಣ್ಣಲ್ಲ. ಅದು ಪುರುಷಪ್ರಧಾನ ಸಮಾಜದ ಕಲ್ಪನಾ ವಿಲಾಸ ಹೆಣ್ಣು ಹೇಗಿರಬೇಕೆಂದು ವ್ಯಾಖ್ಯಾನಿಸಿದೆಯೋ ಆ ಚೌಕಟ್ಟಿಗೆ ಸರಿಯಾಗಿ ತನ್ನನ್ನು ತಿದ್ದಿತೀಡಿಕೊಂಡ ಹೆಣ್ಣು. ಗುಟ್ಟು ಕಾಪಾಡುವುದರಲ್ಲೇ, ಮೌನ ವಹಿಸುವುದರಲ್ಲೇ ಹೆಣ್ತನವಿದೆ ಎಂದು ಭಾವಿಸಿದ ಹೆಣ್ಣು. ಹಾಗಾಗಿ ತನ್ನ ನಿಜಸ್ವರೂಪ ಅರಿಯದೇ ಸ್ವಮೋಹದ ಬಲೆಯಲ್ಲಿ ಬಂಧಿಗಳಾಗಿರುವವರು ಅವರು.
ಕನ್ನಡಿಯೆದುರು ಒಂದೇ ಸಮ ನಿಂತು ಹುಬ್ಬು ತೀಡುವುದು, ಮುಖ ಚಹರೆ ನೋಡಿಕೊಳ್ಳುವುದು ಸ್ವಮೋಹ. ಈ ಉಡುಪು ತೊಟ್ಟರೆ ಅವರು ಹಾಗೆಂದಾರೋ, ಅದಕ್ಕೆ ಇವರು ಹೀಗೆಂದಾರೋ ಎಂದು ಯೋಚಿಸುತ್ತ ಯಾವುದನ್ನು ತೊಟ್ಟರೆ ಅತಿಸುಂದರಿಯಾಗಿ ಕಾಣುವೆನೆಂಬ ಜಿಜ್ಞಾಸೆಯಲ್ಲಿ ಕಾಲಹರಣ ಮಾಡುವುದು ಸ್ವಮೋಹ. ನಾಲಿಗೆ ರುಚಿಯ ಬೆನ್ನು ಹತ್ತಿ ಅಪೌಷ್ಟಿಕತೆಗೋ, ಅತಿ ಸೇವನೆಗೋ ಒಳಗಾಗುವುದು ಸ್ವಮೋಹ. ನಾಕು ಕಾಸು ಬಂದದ್ದೇ ಬಟ್ಟೆಬಂಗಾರದ ಅಂಗಡಿಗೆ ಓಡಿ ಥಳಥಳ ಹೊಳೆವ ವಸ್ತ್ರಾಭರಣಗಳ ಖರೀದಿಸುವುದು ಸ್ವಮೋಹ. ‘ಅಯ್ಯೋ, ನಾನು ಕಪ್ಪು, ಅಯ್ಯೋ, ನಾನು ಹೆಣ್ಣಾಗಿ ಹುಟ್ಟಿದೆ, ಈ ಬಣ್ಣ ಕಳೆಯಲು ಯಾವ ಕ್ರೀಮು ಹಚ್ಚಲಿ? ಯಾವ ಫೇಸ್‌ಪ್ಯಾಕ್ ಬಳಿಯಲಿ?’ ಎಂದು ಕೊರಗುವುದು ಸ್ವಮೋಹ. ತನ್ನ ರೂಪ, ಆಕಾರ, ಬಣ್ಣ, ಆರ್ಥಿಕ ಸ್ಥಿತಿಗಳ ಬಗ್ಗೆ ಸದಾ ಕೊರಗುತ್ತ, ಸಾಧುವಲ್ಲದ ದಾರಿಗಳಿಂದ ಅವನ್ನೆಲ್ಲ ಆಗಮಾಡಹೊರಡುವುದು ಸ್ವಮೋಹ.
ಆದರೆ ಸ್ವಮೋಹವು ಕೀಳರಿಮೆಯನ್ನು ಬೆಳೆಸುತ್ತದೆ. ಅನಗತ್ಯ ಸಂಗತಿಗಳಿಗೆ ಗಮನ ಕೊಡುವಂತೆ ಮಾಡುತ್ತದೆ. ನಮ್ಮ ದೇಹದ ನಿಜವನ್ನು ನಾವೇ ಗುರುತಿಸದಂತೆ, ಗೌರವಿಸದಂತೆ, ಒಪ್ಪಿಕೊಳ್ಳದಂತೆ ಸಂಕೀರ್ಣ ಸ್ವಭಾವ ರೂಪುಗೊಳ್ಳುತ್ತದೆ. ನನ್ನನ್ನು ನಾನೇ ಪ್ರೀತಿಸದಿದ್ದರೆ, ಅದು ಇರುವ ಹಾಗೆಯೇ ಒಪ್ಪಿಕೊಳ್ಳದಿದ್ದರೆ ಹೊರಜಗತ್ತಿನ ತಾರೀಫಿನ ಮರ್ಜಿಗೆ ಒಳಗಾಗಿ, ಇಲ್ಲಸಲ್ಲದ ಪ್ರಯತ್ನ ಮಾಡುತ್ತ ಸುಸ್ತಾಗಬೇಕಾಗುತ್ತದೆ. ಕೆಲವೊಮ್ಮೆ ಕೀಳರಿಮೆ ತನ್ನ ರೂಪ-ಸಂಪತ್ತಿನ ಬಗೆಗಷ್ಟೇ ಅಲ್ಲ, ತನ್ನವರ ಬಗೆಗೂ ವಿಸ್ತರಿಸುವುದಿದೆ.
ಇದರ ಮೂಲ ನಮ್ಮ ದುಃಖ ಗುರುತಿಸಿ ಅರ್ಥೈಸಿಕೊಳ್ಳುವಲ್ಲಿ ನಾವು ವಿಫಲರಾಗಿರುವುದರಲ್ಲಿದೆ. ರೂಪ-ಸ್ವರೂಪಗಳು ದುಃಖಕಾರಣವಾಗಲಾರವು ಎಂದು ನಮಗೆ ನಾವೇ ತಿಳಿಸಿಕೊಳ್ಳುವುದರಲ್ಲಿ, ಸಮಾಜಕ್ಕೆ ತಿಳಿಯಹೇಳುವುದರಲ್ಲಿದೆ. ಸ್ವತಃ ನಮಗೆ, ಸಮಾಜದ ಇತರ ಜೀವಿಗಳಿಗೆ, ಪ್ರಕೃತಿಗೆ ಹಾನಿಯುಂಟುಮಾಡಬಹುದಾದ ನಮ್ಮ ದುರ್ಗುಣಗಳನ್ನು, ತಪ್ಪು ನಡೆಗಳನ್ನು ಸ್ವಭಾವ-ರೂಢಿ-ಮಾತು-ಕ್ರಿಯೆಗಳನ್ನು ಮೊದಲು ಬದಲಿಸಿಕೊಳ್ಳಬೇಕು, ನಿಜ. ಯಾರೆಂದರೆ ಯಾರಿಗೂ ಹಾನಿಮಾಡದ ನನ್ನ ಬಣ್ಣ, ಮೂಗಿನ ಆಕಾರ, ಕಣ್ಣು, ತಲೆಗೂದಲು, ಧ್ವನಿ ಹೇಗೇ ಇದ್ದರೂ ಅದರಿಂದ ಯಾರಿಗೆ ಹಾನಿ? ಯಾವ ಸಮಾಜಕ್ಕೆ ನಷ್ಟ? ಆದರೆ ಅದನ್ನು ಒಪ್ಪಿತವಾಗುವಂತೆ ಬದಲಿಸಿಕೊಳ್ಳುವುದರಲ್ಲೇ ನಮ್ಮ ಗಮನ ನೆಟ್ಟುಹೋಗಿದೆ.
ಎಂದೇ ಸ್ವಮೋಹ ಸಲ್ಲದು. ಬದಲಾಗಿ ಸ್ವಪ್ರೀತಿ ಬೆಳೆಸಿಕೊಳ್ಳಬೇಕು.
ನಾನು ಕಪ್ಪು ಹೌದು, ಆದರೆ ಅದು ನನ್ನ ಸಾಮರ್ಥ್ಯವನ್ನು ಮಿತಿಗೊಳಿಸುವುದಿಲ್ಲ.
ನಾನು ಕುಳ್ಳಿ, ಹೌದು, ಆದರೆ ಅದು ನನ್ನ ಸಾಮರ್ಥ್ಯದ ಮಿತಿಯಾಗುವುದಿಲ್ಲ
ನಾನು ದಪ್ಪ, ಹೌದು, ಆದರೆ ಅದು ನನ್ನ ಸಾಮರ್ಥ್ಯ ವಿಸ್ತರಣೆಗೆ ತಡೆಯಾಗುವುದಿಲ್ಲ.
ನನಗೆ ಮೆಳ್ಳೆಗಣ್ಣು, ಹೌದು, ಆದರೆ ದಿಗಂತದ ತನಕ ದಿಟ್ಟಿಸಲು ನನಗಿಲ್ಲ ತಡೆ
ನನ್ನ ಸ್ತನಗಳು ಸಣ್ಣಗಿವೆ, ಹೌದು; ನನಗೆ ಮೆಳ್ಳೆಗಣ್ಣು, ಹೌದು; ನನ್ನ ಯಾವುದೋ ಅಂಗ ಊನ, ಹೌದು; ನನ್ನ ಬಳಿ ನೀರಿನಂತೆ ಖರ್ಚು ಮಾಡಲು ಹಣವಿಲ್ಲ, ಹೌದು; ಆದರೆ ಅದು ಇರುವುದೇ ಹಾಗೆ. ನಾನಿರುವುದೇ ಹೀಗೆ.
ನಾನಿರುವುದೇ ಹೀಗೆ. ನನ್ನ ದೇಹ ನನಗೆ, ನನ್ನ ಬದುಕು ನನಗೆ. ಇದೇ ಹೆಣ್ಣುತನ.
ಈ ಅರಿವು ಹುಟ್ಟುವುದೇ ಸಾಕ್ಷಾತ್ಕಾರ. ಈ ಅರಿವೇ ಸ್ವಪ್ರೀತಿ. ನನ್ನ ದೈಹಿಕ ಚಹರೆಗಳನ್ನು, ದೇಹ ವಾಸ್ತವಗಳನ್ನು ವಸ್ತುಸ್ಥಿತಿಯನ್ನು ತಿಳಿದು, ಅರಗಿಸಿಕೊಂಡು, ಗೌರವಿಸತೊಡಗಿದರೆ ಆಗ ಅಸೂಯೆ, ಕೀಳರಿಮೆ, ಕೋಪ, ದ್ವೇಷದಂತಹ ಅನುಪಯುಕ್ತ ಸಂಗತಿಗಳಿಗೆ ಮನೋಲಯವು ಪೋಲಾಗಲಾರದು. ನಮ್ಮ ಸಬಲೀಕರಣದ ಹೆಬ್ಬಾಗಿಲನ್ನು ನಾವೇ ತೆರೆದುಕೊಳ್ಳಬಹುದು.
(ಚಿತ್ರಗಳು: ಅಂತರ್ಜಾಲದಿಂದ)
"ಚಿತ್ತವನು ತಿರುಗಿಸೊಳಗಡೆ, ನೋಡು ನೋಡಲ್ಲಿ ಸತ್ವದಚ್ಛಿನ್ನ ಝರಿ..." ಒಳಗಿನ ಸತ್ವದರಿವೇ ಹೆಣ್ತನದ ಶೋಭೆ ಮತ್ತು ಶಕ್ತಿ ಎಂಬ ಸಂದೇಶದ ಲೇಖನಗಳಿಗಾಗಿ ಅಭಿನಂದನೆಗಳು
ReplyDeleteಮೇಲಿನ ಕಮೆಂಟ್..ಕೆ.ಆರ್.ಉಮಾದೇವಿ ಉರಾಳ್
ReplyDelete