ಕಾಡು ತೊರೆಯ ಜಾಡು
ಇವತ್ತಿನ ನಾನು ನಾನಾದ ಕಾರಣ ಏನೆಂದು ಕೇಳಿದ್ದೀರಿ. ಇದುವರೆಗಿನ ಬದುಕಿನ ಸಾರಸಂಗ್ರಹದಲ್ಲಿ ನಿನ್ನ ಹೆಜ್ಜೆ ಜಾಡು ಗುರುತಿಸು ಎಂದಿರುವಿರಿ. ಇವೆಲ್ಲವನ್ನು ಓದಿದವರಿಗೆ ತಮ್ಮ ಬದುಕಿನಲ್ಲಿ ಹಾದು ಬಂದ ಹಂತಗಳೇ ಇವು, ಇದರಲ್ಲಿ ಹೊಸತೇನಿದೆ ಎಂದು ಅನಿಸಬಹುದು. ಹೌದು. ನನ್ನ ಬದುಕಿನಲ್ಲಿ ವಿಶೇಷವಾದದ್ದು ಏನೂ ಘಟಿಸಲಿಲ್ಲ. ಎಲ್ಲರಿಗೂ ಏನೆಲ್ಲ ಸಂಭವಿಸಬಹುದೋ ಅದಷ್ಟೇ ನನಗೂ ಸಂಭವಿಸಿತು.
ಶಿಕ್ಷಕ ವೃತ್ತಿಯ, ಸಾಂಪ್ರದಾಯಿಕ ಮನಃಸ್ಥಿತಿಯ ತಾಯ್ತಂದೆಯರ ಮಗಳಾಗಿ ಹುಟ್ಟಿದೆ. ತಂದೆಯ ಊರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆಬ್ಬಾಗಿಲು. ತಾಯಿ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಕಣಕಟ್ಟೆಯವರು. ಅವರಿಬ್ಬರು ಪ್ರೌಢಶಾಲೆಯಲ್ಲಿ ಶಿಕ್ಷಕ, ಶಿಕ್ಷಕಿಯರಾಗಿ ಕೆಲಸ ಮಾಡುತ್ತ ವರ್ಗಾವಣೆಗೊಳಗಾಗುತ್ತ ಇದ್ದದ್ದರಿಂದ ನನ್ನ ವಿದ್ಯಾಭ್ಯಾಸ ಮೂರ್ನಾಲ್ಕು ಜಿಲ್ಲೆಗಳ ಹಳ್ಳಿಗಳಲ್ಲಿ ಆಯಿತು. ತಂದೆ ಇದ್ದ ತರಳಬಾಳು ಮಠದ ಪ್ರೌಢಶಾಲೆಗಳು ಅತಿ ಹಿಂದುಳಿದ ಹಳ್ಳಿಗಳಲ್ಲಿದ್ದವು. ನಗರ ಪ್ರದೇಶಗಳಿಂದ ದೂರವಿರುವ ಹಳ್ಳಿಗಳ ಕನ್ನಡ ಮೀಡಿಯಂ ಶಾಲೆಗಳಲ್ಲಿ ನಾವು ಮೂವರು ಮಕ್ಕಳು ವಿದ್ಯಾಭ್ಯಾಸ ಮಾಡಿದೆವು. ಒಂದೇ ಕೋಣೆಯಲ್ಲಿ ಎರಡು ತರಗತಿಯಿದ್ದ, ದಿನಕ್ಕೊಬ್ಬರಂತೆ ಪಾಳಿ ಮೇಲೆ ಬೀಗ ತೆಗೆದು, ಕಸ ಹೊಡೆದು, ಶನಿವಾರ ನೆಲಕ್ಕೆ ಸಗಣಿ ಸಾರಿಸಿ ನಮ್ಮ ತರಗತಿ ನಾವೇ ಸಿದ್ಧಪಡಿಸಿಕೊಳ್ಳಬೇಕಾದಂತಹ ಶಾಲೆಗಳವು. ಅಂಕಗಳಿಕೆ ಸ್ಪರ್ಧೆಯಂತೂ ಇರಲೇ ಇಲ್ಲ. ನಾಲ್ಕೈದು ಮೈಲಿ ನಡೆದು ಬಸ್ ಹತ್ತಬೇಕಿದ್ದ, ಶೌಚಕ್ಕೆ ಚೊಂಬು ಹಿಡಿದು ಬಯಲಿಗೆ ಹೋಗಬೇಕಿದ್ದ ಆ ಹಳ್ಳಿಗಳು ವಿವಿಧ ಸಂಸ್ಕೃತಿ, ಉಪಭಾಷೆ, ಜಾತಿ, ಹವಾಮಾನ, ಆಹಾರಪದ್ಧತಿ, ಬದುಕಿನ ಮಜಲುಗಳನ್ನು ಪರಿಚಯಿಸಿದವು. ಬಹುತ್ವ ಸಹಜ ಅನುಭವವಾಗಿ ಒಳಗಿಳಿಯಿತು. ಹಳ್ಳಿಗಳಲ್ಲಿ ಬಾಡಿಗೆ ಮನೆಗಳೂ ಸಿಗುತ್ತಿರಲಿಲ್ಲವಾಗಿ ಯಾರದೋ ದೊಡ್ಡ ಮನೆಯ ಒಂದು ಭಾಗದಲ್ಲಿ ನಮಗಾಗಿ ಮಾಡಿದ ಪಾರ್ಟಿಶನ್ ಮನೆಯಲ್ಲಿ ಇರುತ್ತಿದ್ದೆವು. ಅಡುಗೆ ಮನೆಯ ಕೊಡುಕೊಳುವಿಕೆಯೂ ನಡೆಯುತ್ತಿತ್ತು. ನನ್ನ ಬಾಲ್ಯವೆಲ್ಲ ಹೀಗೆ ಕುಡಿಯುವ ನೀರು, ಮಿಕ್ಸರ್, ಗ್ಯಾಸ್, ಟಿವಿ, ಫೋನ್, ಬಸ್ಸು, ರೈಲು ಮುಂತಾಗಿ ಯಾವುದೂ ಇಲ್ಲದ ತಾವುಗಳಲ್ಲಿ ಕಳೆಯಿತು. ಗ್ರಾಮೀಣ ಬದುಕಿನ ಸ್ವರೂಪ, ಕುರೂಪ, ಸೌಂದರ್ಯಗಳ ಅರಿವಾಗಿ ನೀರೊಳಗೆ ಮೀನಿರುವಷ್ಟೇ ಸಹಜವಾಗಿ ಹಳ್ಳಿಯಲ್ಲಿ ಇರಲಿಕ್ಕೆ ಸಾಧ್ಯವಾಯಿತು. ಒಟ್ಟಾರೆ ಯಾವುದೋ ಒಂದು ಊರಿನ, ಒಂದು ಜಾತಿಯ ಕೇರಿಯಲ್ಲಿ ನಾನು ಬೆಳೆಯಲಿಲ್ಲ ಎನ್ನುವುದು ಬಾಲ್ಯಕಾಲ ನನಗಿತ್ತ ಕೊಡುಗೆಯೆಂದೇ ಭಾವಿಸಿದ್ದೇನೆ.
ಅಂದಿನ ದಿನಗಳಲ್ಲಿ ನಮ್ಮ ಊರಿಗೆ ದಿನಪತ್ರಿಕೆ ಬರುತ್ತಿರಲಿಲ್ಲ, ಆದರೆ ಪ್ರಜಾಮತ, ವನಿತಾ, ಮಯೂರ, ತುಷಾರ, ಕಸ್ತೂರಿ ಹೀಗೆ ನಿಯತಕಾಲಿಕಗಳನ್ನು ಅವು ಹಳತಾದರೂ ಅಪ್ಪ ಕೊಂಡು ತರುತ್ತಿದ್ದರು. ಅವರಂತೆಯೇ ನಾನೂ ಸಿಕ್ಕಿದ್ದನ್ನೆಲ್ಲ ಓದುವುದು. ಆಗ ಶುರುವಾದ ಒಂದು ಪತ್ರಿಕೆ ತಂದೆಯವರ ಗಮನ ಸೆಳೆಯಿತು. ಸಂತೆಗೆ ಪ್ರತಿವಾರ ಪೇಟೆಗೆ ಹೋದಾಗ ತಪ್ಪದೇ ಆ ಹೊಸ ಪತ್ರಿಕೆ ತರಲು ಶುರುಮಾಡಿದರು. ಅದು ಲಂಕೇಶ್ ಪತ್ರಿಕೆ. ಸಿಹಿ ಖಾದ್ಯ ತಿನ್ನುತ್ತಿರುವೆನೋ ಎಂಬಷ್ಟು ಮಗ್ನಳಾಗಿ ಒಂದಕ್ಷರ ಬಿಡದೆ ಓದುತ್ತಿದ್ದೆ. ಲಂಕೇಶ್ ಎಂದರೆ ಅತೀವ ಆರಾಧನೆ ಬೆಳೆಯಿತು. ನನ್ನ ಯೋಚನೆಯ ದಿಕ್ಕು ಮತ್ತು ಓದುವ ರುಚಿಯನ್ನು ವಿಸ್ತರಿಸಿದವರು ಲಂಕೇಶ್. ಪತ್ರಿಕೆ ಓದುತ್ತ ಬರೆಯುವ ತುಡಿತವೂ ಆಗುತ್ತಿತ್ತು. ಎಷ್ಟು ಚೆನ್ನಾಗಿ ಬರೆದಿದ್ದಾರಲ್ಲ ಎಂಬ ಅಚ್ಚರಿ. ಉಳಿದವರ ಬರಹ ರುಚಿಸದಷ್ಟು ಲಂಕೇಶ್ ಆವರಿಸಿದರು. ರಾಜ್ಯ, ದೇಶಗಳ ರಾಜಕೀಯ, ಸಾಹಿತ್ಯಿಕ ವಿದ್ಯಮಾನವೆಲ್ಲ ನನಗೆ ಗೊತ್ತು ಅನ್ನುವಂತೆ ಅನಿಸತೊಡಗಿತು. ಏಳನೇ ತರಗತಿಯಲ್ಲಿ ಒಂದು ಪದ್ಯ ಬರೆದೆ. ನಮ್ಮ ಮನೆಯ ಪ್ರೀತಿಯ ಮೊಲ ಶೆಲ್ಲಿಯು ನಾಯಿ ಬಾಯಿಗೆ ತುತ್ತಾದಾಗ ದುಃಖದಿಂದ ಬರೆದದ್ದು. ಆ ಪದ್ಯವನ್ನು ತಂದೆ ‘ವನಿತಾ’ ಪತ್ರಿಕೆಗೆ ಕಳಿಸಿದರು. ಐದು ರೂಪಾಯಿ ಬಹುಮಾನದ ಸಂಭಾವನೆ ಗಳಿಸಿದೆ! ನಂತರ ಪದ್ಯ ಬರೆಬರೆದು ಒಟ್ಟಿದೆ. ಯಾರಿಗೂ ತೋರಿಸದೇ ಬಚ್ಚಿಟ್ಟುಕೊಂಡು ಡೈರಿ ತುಂಬಿಸುತ್ತ ಹೋದೆ.
ಹೆಣ್ತನವೆಂಬ ಕಣ್ಕಟ್ಟು
ಬಾಲ್ಯದ ನೆನಪುಗಳಲ್ಲಿ ಅಜ್ಜನ ಮನೆ ಹಸಿರಾಗಿರುವ ಜಾಗ. ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಟ್ಟದ ಬೆಟ್ಟಗಳ ಸೆರಗಿನ ಎರಡೇ ಎರಡು ಮನೆಗಳ ‘ಊರು’ ಹೆಬ್ಬಾಗಿಲು. ಅಮ್ಮ, ಅಪ್ಪ ವಿಧಿಸದಿದ್ದ; ತರಳಬಾಳು ಶಾಲೆಯಿದ್ದ ಊರುಗಳಲ್ಲಿ ಕಾಣಿಸದ ಕೆಲವೊಂದು ಆಚರಣೆಗಳನ್ನು ಅಲ್ಲಿ ಕಂಡು ದಂಗಾಗುತ್ತಿತ್ತು. ಅಜ್ಜನೊಡನೆ ವಾದ ಮೊದಲಾಗುತ್ತಿತ್ತು. ಬೇಲಿ ತುದಿಯಲ್ಲಿ ನಿಂತು ಅಡಿಕೆ ಪಡೆವ ದನ ಕಾಯುವ ಸಣ್ಣಿ, ಅವಳ ಜೊತೆ ಬರುತ್ತಿದ್ದ ಚಡ್ಡಿಯಿಲ್ಲದ ಮಕ್ಕಳು, ಇಡಿಯ ಮನೆ ಸುತ್ತಿಬಳಸಿ ಮುಂಚೇಕಡೆಯಿಂದ ಹಿತ್ತಲಿಗೆ ಬಂದು ಬಳ್ಳೆ ಮೇಲೆ ಬಡಿಸಿದ ತಂಗಳನ್ನವನ್ನು ದೊಡ್ಡ ಪರಮಾನ್ನವೆಂಬಂತೆ ಸ್ವೀಕರಿಸುತ್ತಿದ್ದ ಅವರ ಬಡತನ ನನ್ನಲ್ಲಿ ಮ್ಲಾನತೆಯನ್ನು ಹುಟ್ಟಿಸುತ್ತಿತ್ತು. ಅಜ್ಜ ಸಿರಿವಂತರಾಗಿರಲಿಲ್ಲ. ಆದರೆ ಕ್ರೂರಿಯೂ ಅಲ್ಲ. ಅವರಿಗೆ ಈ ಜೀವಗಳ ಮೇಲೆ ಕನಿಕರವಿತ್ತು. ಆದರೆ ತಮ್ಮ ಚಾಕರಿ ಮಾಡಿದರು; ಪ್ರತಿಯಾಗಿ ಎಲಡಿಕೆ, ಬೆಲ್ಲ, ಬಾಯಾರು, ಅನ್ನ, ಭತ್ತ ಪಡೆದರು ಎನ್ನುವುದರ ಆಚೆಗೆ ಹೆಚ್ಚೇನೂ ನಂಟು ಇರಲಿಲ್ಲ. ಕಾರ್ಯಕಟ್ಲೆ ಇರುವಾಗ ಕರೆಯಬೇಕೆಂದಿಲ್ಲ, ಅವರ ಕೇರಿಗೆ ಕೇರಿಯೇ ಹಿತ್ತಿಲ ಓಳಿಯಲ್ಲಿ ಕುಳಿತಿರುತ್ತಿತ್ತು. ಎಲ್ಲ ಪಂಕ್ತಿಗಳೂ ಮುಗಿದ ಮೇಲೆ ಅವರ ಊಟ. ಉಳಿದಿದ್ದ ಸಿಹಿ, ಭಕ್ಷ್ಯ, ಕರಿದ ತಿಂಡಿಗಳನ್ನು ಎಡಗೈ, ಬಲಗೈ ಮುಂದೆ ಹಿಡಿದು, ಮನೆಯಲ್ಲಿರುವ ಅವರಿಗೆ ಕೊಡಿ, ಇವರಿಗೆ ಕೊಡಿ ಎಂದು ಕೇಳಿಕೇಳಿ ಪಡೆಯುತ್ತಿದ್ದರು. ಆ ಗಳಿಗೆಗಳು ಬಗೆಹರಿಯದ ದುಃಖ, ವಿಷಾದಗಳನ್ನು ಹುಟ್ಟಿಸುತ್ತಿದ್ದವು.
ಹೆಣ್ಣು ಪ್ರಜ್ಞೆ ಜಾಗೃತಗೊಳ್ಳುವುದು ಸಾಂಪ್ರದಾಯಿಕ ಕುಟುಂಬದಲ್ಲಿ ಬೆಳೆದ ಭಾರತೀಯ ಹೆಣ್ಣಿಗೆ ಏನೂ ಕಷ್ಟವಿಲ್ಲ. ನನ್ನ ಮಟ್ಟಿಗೆ ಅಜ್ಜನ ಮನೆ ಅಂತಹ ‘ತನ’ಗಳನ್ನು ಜಾಗೃತಗೊಳಿಸಿದ ಸ್ಥಳಗಳಲ್ಲಿ ಅಗ್ರಸ್ಥಾನ ಪಡೆದಿದೆ. ಅಮ್ಮ ಅಲ್ಲಿ ಹೋದಾಗ ಮುಟ್ಟಾದರೆ ಹೊರಗೆ ಕೂರುತ್ತಿದ್ದಳು. ನನ್ನ ತಂದೆಯ ಇಬ್ಬರು ಸೋದರತ್ತೆಯರು (ನನಗೆ ಅಜ್ಜಿಯರು) ಬಾಲವಿಧವೆಯರು. ಒಬ್ಬರ ಗಂಡ ಮೈನೆರೆಯುವುದರೊಳಗೆ ತೀರಿಹೋಗಿ ಅವರ ಒಂಭತ್ತು ದಶಕದ ತುಂಬು ಬದುಕು ಬೋಳುತಲೆಯಲ್ಲಿ, ಕೆಂಪು ಸೀರೆಯಲ್ಲಿ, ಒಪ್ಪತ್ತು ಊಟದಲ್ಲಿ ಕ್ಷಯಿಸಿ ಹೋಗುವಂತಾಗಿತ್ತು. ಮತ್ತೊಬ್ಬರು ಹದಿನಾರು ಆಗುವುದರಲ್ಲಿ ಎರಡು ಹೆಣ್ಣು ಹೆತ್ತು, ಗಂಡ ಧನುರ್ವಾಯು ಬಂದು ತೀರಿಕೊಂಡಾಗ ಎರಡು ಕೈಗೂಸುಗಳೊಡನೆ ವಿಧವೆಯಾಗಿ ತವರು ಸೇರಿದ್ದರು. ಆ ಎರಡು ಜೀವಗಳು ಬದುಕಿದ್ದ ಪರಿಸ್ಥಿತಿ, ಅವರೆದುರಿಸುತ್ತಿದ್ದ ಅವಮಾನ-ಭರ್ತ್ಸನೆ-ಅಸಹಾಯಕತೆ, ಅವರಿಗಾಗುವ ಅನ್ಯಾಯಗಳೆಲ್ಲ ಹೆಣ್ಣುಪರವಾದ ಯೋಚನೆಗಳನ್ನು ಬಿತ್ತಿದವು. ಎಲ್ಲದಕ್ಕೂ ಅಜ್ಜನೇ ಕಾರಣ ಎನ್ನುವಂತೆ, ಅಜ್ಜ ಬದುಕಿದ್ದಷ್ಟು ದಿನವೂ ಅವರೊಡನೆ ವಾದ ವಾಗ್ವಾದ ಬಿಟ್ಟು ಬೇರೆ ಮಾತಾಡಲೇ ಇಲ್ಲ. ಮುಟ್ಟಾದರೂ ಹೇಳಲೇ ಇಲ್ಲ. ಹಾಗೆ ನೋಡಿದರೆ ಎಳೆತರಲ್ಲಿ ಇಬ್ಬರು ಹೆಂಡಿರನ್ನು ಜ್ವರದ ಗಡ್ಡೆಗೆ ಕಳೆದುಕೊಂಡ ವಿಧುರ ಅಜ್ಜ ಆರುಮಕ್ಕಳ ಸಂಸಾರವನ್ನು ಬಹು ಕಷ್ಟದಲ್ಲಿ ನಿಭಾಯಿಸಿದ್ದ. ಬಡತನದ ಅಜ್ಜನೂ ದುಃಖಿಯೇ ಆಗಿದ್ದ. ಯಾಕೋ ಅದು ಮನ ತಲುಪಿರಲಿಲ್ಲ. ಅಜ್ಜಿಯರ ದಾರುಣ ಬದುಕು ವಿಚಲಿತಗೊಳಿಸಿಬಿಟ್ಟಿತ್ತು.
ನಾವಿದ್ದ ಹಳ್ಳಿಯಲ್ಲಿ ನೋಡಿದ ಆ ಹುಚ್ಚಿಯೂ ಅಷ್ಟೆ. ಮೈಮೇಲಿನ ಬಟ್ಟೆಯ ನೆದರಿಲ್ಲದೆ ಓಡಾಡುವವಳ ಕಾಲ ನಡುವೆ ರಕ್ತ ಸೋರಿಸುವ ಮಾಂಸದ ತುಂಡು ಜೋತಾಡುತ್ತಿತ್ತು. ಅದು ಕೆಳಜಗ್ಗಿದ ಗರ್ಭಕೋಶ ಎಂದು ತಿಳಿದದ್ದು ಮೆಡಿಕಲ್‌ಗೆ ಹೋದಮೇಲೆ. ಅವಳ ಮೇಲೆ ಬಲಾತ್ಕಾರವಾಗುತ್ತಿತ್ತು! ಅವಳು ಕಿರುಚುತ್ತಿದ್ದಳು. ಮಣ್ಣು ತೂರುತ್ತಿದ್ದಳು. ಆ ದಾರುಣವನ್ನು ಹೇಗೆ ವರ್ಣಿಸಲಿ?
ಮತ್ತೆ ಆ ಅವ, ರಾಕ್ಷನ ರೂಪಿ. ನಾವು ನೋಡನೋಡುತ್ತಲೇ ಒಂದಾದಮೇಲೊಂದು ಮೂರು ಮದುವೆಯಾಗಿ ಮೂವರು ಹೆಂಡಿರನ್ನು ಹೊಡೆದು, ಬಡಿದು, ಹಿಂಸಿಸಿ ಮಣ್ಣು ಮಾಡಿದ. ಆದರೂ ನಮ್ಮ ಕುಟುಂಬ ಆ ಹಳ್ಳಿ ಬಿಡುವ ಹೊತ್ತಿಗೆ ನಾಲ್ಕನೆಯ ಮದುವೆಗೆ ಸಿದ್ಧನಾಗಿದ್ದ! ಆ ಪರಮ ಹಿಂಸಾರೂಪಿಗೆ ಒಂದಾದಮೇಲೊಂದು ಹೆಣ್ಣುಗಳು ಸಿಗುವರಲ್ಲ?! ಅವರೇಕೆ ಇವನನ್ನು ಒಲ್ಲೆ ಎನ್ನರು? ಎನಿಸುತ್ತಿತ್ತು. ಒಂದು ರಜೆಯಲ್ಲಿ ವಾವೆಯಲ್ಲಿ ಅಕ್ಕನಾದವರ ಮನೆಗೆ ಹೋಗಿದ್ದೆವು. ನನಗಿಂತ ಹಿರಿಯಳಾದ, ತವರಿನ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿ ಮಗುವಿದ್ದ ಅವರು ತಮ್ಮ ಮೇಲಾಗುವ ಹಿಂಸೆಯನ್ನು ಸಣ್ಣವಯಸ್ಸಿನ ನನ್ನ ಬಳಿ ಹೇಳಿ, ತೋರಿಸಿ ಭೋರಾಡಿ ಅತ್ತು ಬಿಟ್ಟಿದ್ದರು. ಪುಟ್ಟವಳಾದ ನನಗೆ ಹೇಳಿದರೆ ನಾನು ಯಾರಿಗೂ ಹೇಳುವುದಿಲ್ಲ ಎಂಬ ಧೈರ್ಯವೆ? ತವರುಮನೆ ತೊರೆದು ಬಂದಿದ್ದ ಆ ಅಕ್ಕನಿಗೆ ನನ್ನ ಹೊರತು ಹೇಳಿಕೊಳ್ಳಲೂ ಜನ ಸಿಕ್ಕಿರಲಿಲ್ಲವೆ? ನಾನಾದರೂ ಆ ಬಂಡೆಗಲ್ಲಿನಂತಹ ಭಾವನಿಂದ ಈ ಅಕ್ಕನನ್ನು ಹೇಗೆ ಪಾರಾಗಿಸಲಿ? ಅವರು ನನ್ನಮ್ಮನ ಬಳಿಯೂ ವಿಷಯ ಹೇಳಬೇಡವೆಂದದ್ದು ಯಾಕೆ? ಅಷ್ಟು ಬಡಿಯುವ ಭಾವನಿಗೆ ಮತ್ತೆ ಗಡಿಬಿಡಿಯಲ್ಲಿ ಬಿಸಿಬಿಸಿ ರೊಟ್ಟಿ ಮಾಡಿ, ಗರಿಮುರಿಯಿರುವಾಗಲೇ ತುಪ್ಪ, ಚಟ್ನಿ ಎಂದು ರುಚಿರುಚಿಯಾಗಿ ಯಾಕೆ ಅಕ್ಕ ಬಡಿಸುತ್ತಾರೆ?
ಉತ್ತರವಿರದ ಪ್ರಶ್ನೆಗಳು. ಕೊನೆಮೊದಲಿರದ ಪ್ರಶ್ನೆಗಳು ತೆರೆಯಂತೆ ಏಳುತ್ತಲೇ ಹೋದವು. ದಂಡೆಗಪ್ಪಳಿಸಿ ಹಿಂದೆ ಹೋಗಿ, ಚಣ ಸುಮ್ಮನಾಗಿ ಮತ್ತೆ ಅಪ್ಪಳಿಸಲೆಂಬಂತೆ ನೊರೆಯೆಬ್ಬಿಸುತ್ತ ಬರುತ್ತಲೇ ಹೋದವು.
ಹಾಸ್ಟೆಲಿನ ಪಾಠ
ಪಿಯುಸಿಗೆ ಶಿವಮೊಗ್ಗದ ಡಿವಿಎಸ್ ಕಾಲೇಜು ಸೇರಿದೆ. ಹಾಸ್ಟೆಲಿನ ಬದುಕು ಸಹಬಾಳ್ವೆಯ ಪಾಠ ಹೇಳಿಕೊಟ್ಟಿತು. ಕಾಲೇಜಿನಲ್ಲಿ ಕನ್ನಡ ಬೋಧಿಸುತ್ತಿದ್ದ ಶಿವಮೊಗ್ಗ ಮುನೀರ್, ರಹಮತ್ ತರೀಕೆರೆ ಸರ್ ಅವರು ವಿಜ್ಞಾನ ವಿಭಾಗದವಳಾದರೂ ಸಾಹಿತ್ಯಿಕ ಆಸಕ್ತಿ ಇಟ್ಟುಕೊಂಡಿದ್ದೆನೆಂದು ವಿಶೇಷ ಕಾಳಜಿ ತೋರಿಸಿದರು. ಕವನಸ್ಪರ್ಧೆ, ಭಾಷಣ, ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಗೆ ಸೈನ್ಸ್ ವಿದ್ಯಾರ್ಥಿನಿಯನ್ನು ಕರೆದೊಯ್ದು ನನ್ನನ್ನು ಜೀವಂತವಾಗಿಟ್ಟರು. ನಂತರ ಬಳ್ಳಾರಿಯ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪ್ರವೇಶ ದೊರೆಯಿತು. ಬಾಲ್ಯದನುಭವಗಳಂತೆಯೇ ಬಳ್ಳಾರಿಯ ದಿನಗಳು ಅವಿಸ್ಮರಣೀಯ ಅನುಭವ ನೀಡಿದವು.
ಬಳ್ಳಾರಿಯ ಹಾಸ್ಟೆಲಿನಲ್ಲಿ ನಾವೈದು ಜನ ಹುಡುಗಿಯರಿದ್ದೆವು. ಸರಳ ಉಡುಪಿನ, ಕನ್ನಡ ಮಾತಾಡುವ, ‘ಬಜಾರಿ’ ಹುಡುಗಿಯರ ಗುಂಪು ಅದು. ಒಬ್ಬೊಬ್ಬರದು ಒಂದೊಂದು ಸ್ವಭಾವ, ಹಿನ್ನೆಲೆ. ಆದರೂ ಅದು ಹೇಗೋ ಆಪ್ತರಾಗಿದ್ದೆವು. ಹುಡುಗರು ನಮ್ಮನ್ನು ‘ಬಂಡಾಯ ಗುಂಪು’ ಎಂದು ಕರೆಯುತ್ತಿದ್ದರು. ಏಪ್ರನ್ ಮೇಲಿರುವುದರಿಂದ ಕಾಣುವುದಿಲ್ಲ ಎಂದೋ, ನಮ್ಮ ಬಳಿ ಅಷ್ಟು ಒಳ್ಳೊಳ್ಳೆಯವು ಇರಲಿಲ್ಲವೆಂದೋ ಅಥವಾ ಬಳ್ಳಾರಿಯ ಸೆಕೆಗೋ ಅಂತೂ ಬ್ರಾ ಧರಿಸದೆ ‘ಬ್ರಾ ಲೆಸ್ ಬಂಡಾಯಾಸ್’ ಎಂದು ಕರೆಸಿಕೊಂಡಿದ್ದೆವು! (ಹಾಗೆಂದು ಇತ್ತೀಚೆಗೆ ನಡೆದ ಅಲಮ್ನಿ ಮೀಟ್‌ನಲ್ಲಿ ತಿಳಿಯಿತು!) ನಡೆದು ಹೋಗುವಾಗ ಹಿಂದಿನಿಂದ ನನಗೆ ‘ಬಂಡಾಯ’ ಎಂದು ಚುಡಾಯಿಸುತ್ತ ಊಳಿಡುವಂತೆ ಕೂಗುತ್ತಿದ್ದರು. ಅಲ್ಲೇ ತಿರುಗಿ ನಿಂತು ಅವರನ್ನು ಬೈದು ಮುಂದೆ ಹೋಗುತ್ತಿದ್ದೆ. ಬಜಾರಿಯಂತೆ ಮಾತನಾಡುವೆನೆಂದು ಸಾಕಷ್ಟು ರ‍್ಯಾಗಿಂಗ್‌ಗೆ ಒಳಗಾದೆ. ಮೊದಲ ವರ್ಷವೆಲ್ಲ ಭಯದಲ್ಲಿ, ಬಂಡಾಯದಲ್ಲಿ, ಕುತೂಹಲದಲ್ಲಿ ಕಳೆಯಿತು. ಅಲ್ಲೊಂದು ವಾಲ್‌ಜರ್ನಲ್ ಇತ್ತು. ಅದಕ್ಕೆ ನನ್ನನ್ನು ಎಡಿಟರ್ ಮಾಡಿದರು. ಬರೆಯುವ ವಿದ್ಯಾರ್ಥಿಗಳ ಸಂಪರ್ಕವಾಯಿತು. ಬರೆದರೆ ಲಂಕೇಶ್ ತರಹ ಬರೆಯಬೇಕು ಎಂಬ ಬಯಕೆಯಿತ್ತಲ್ಲ, ದೊಡ್ಡ ಮನುಷ್ಯಳಂತೆ ಘನಗಂಭೀರವಾಗಿ ವಾಲ್‌ಜರ್ನಲಿಗೆ ಸಂಪಾದಕೀಯ ಬರೆಯತೊಡಗಿದೆ. ಹಾಸ್ಟೆಲು, ಬಳ್ಳಾರಿಯ ಬಿಸಿಲು, ಹೆಂಡ ಕುಡಿಯುವ ವೈದ್ಯ ವಿದ್ಯಾರ್ಥಿಗಳು, ಬಳ್ಳಾರಿಯ ಬಡತನ, ಅಪೌಷ್ಟಿಕ ಮಕ್ಕಳು ಮುಂತಾಗಿ ಇದ್ದದ್ದನ್ನು, ಕಂಡದ್ದನ್ನು ಕಂಡಹಾಗೆ ಬರೆದು ಅಂಟಿಸಿ ಬಿಡುತ್ತಿದ್ದೆ. ಆಗ ನನಗೆ ಹುಡುಗರು ಎಂದರೆ ಪುಂಡರು, ಪೋಕರಿಗಳು, ಕೆಟ್ಟವರು ಎಂಬ ಭಾವನೆಯಿತ್ತು. ಯಾವ ಅಹಿತಕರ ಅನುಭವವಾಗಿರದಿದ್ದರೂ ಹುಡುಗರು ಅಪಾಯಕಾರಿ ಜೀವಿಗಳು, ಅವರಿಂದ ದೂರವಿರುವುದೇ ಉತ್ತಮ ಎಂದು ಭಾವಿಸಿದ್ದೆ. ಅದರಲ್ಲೂ ನನ್ನ ಓರಗೆಯ ಹುಡುಗರು ಒಳ್ಳೆಯವರಿರಬಹುದೆಂದು ಅನಿಸಿರಲೇ ಇಲ್ಲ. ಹುಡುಗಿಯರ ಹಾಸ್ಟೆಲಿನ ಎದುರು ಕುಡಿದು ಬಂದು ಗಲಾಟೆ ಹಾಕುವ ಹುಡುಗರನ್ನು ಬೈದು ಒಂದು ವಾರ ಸಂಪಾದಕೀಯ ಬರೆದೆ. ಭಾವೀ ವೈದ್ಯರ ಬೇಜವಾಬ್ದಾರಿಯನ್ನು ಕಟುವಾಗಿ ಟೀಕಿಸಿದೆ. ತಗೋ, ಎಡಿಟೋರಿಯಲ್ ಅನ್ನು ಹರಿದು ಹಾಕಿದ ಹುಡುಗರು ಗ್ರಂಥಾಲಯದೆದುರು ನನ್ನನ್ನು ಅಟಕಾಯಿಸಿಕೊಂಡರು. ಸೀನಿಯರ್‌ಗಳೆಂದರೆ ಗೌರವ ಕೊಡಬೇಕೆಂದು ಗೊತ್ತಿಲ್ಲವೇ ಎನ್ನುತ್ತ ಮೈಮೇಲೆ ಬೀಳುವವರಂತೆ ಸುತ್ತುವರೆದರು. ಮಾತಿಗೆ ಮಾತು. ಚಕಮಕಿಯ ಪ್ರಶ್ನೆಗೆ ಕಿಡಿಯ ಉತ್ತರ. ಆ ಸಮಯದಲ್ಲಿ ಪರಿಚಯವಾದ ಕತೆಗಾರ ಕೃಷ್ಣ ಮುಂದೆ ಬಾಳಸಂಗಾತಿಯೂ ಆದ.
ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗ ಮೂಲತಃ ಬಳ್ಳಾರಿಯವರೇ ಆದ, ಶಿವಮೊಗ್ಗದಲ್ಲಿ ನೆಲೆಸಿದ್ದ ಸಾಹಿತ್ಯಾಸಕ್ತ ಹಿರೇಹಾಳ ಇಬ್ರಾಹಿಂ ಸಾಹೇಬರು ಮತ್ತು ನನ್ನ ಗುರುಗಳಾದ ಮುನೀರ್ ಬಾಷಾ ಸೇರಿ ಶಿವಮೊಗ್ಗದಲ್ಲಿ ಮುಸ್ಲಿಂ ಸಾಹಿತ್ಯ ಸಂವೇದನೆ ಕುರಿತು ಸಮಾವೇಶ ಮಾಡಿದರು. ಕೊನೆಯ ದಿನದ ಕವಿಗೋಷ್ಠಿಯಲ್ಲಿ ಕವಿತೆ ಓದಲು ನನ್ನನ್ನು ಕರೆದರು. ಬಹುಶಃ ಇದು ಹಿರಿಯ ಕವಿಗಳ ಮಧ್ಯೆ ಕವಿ ಎಂದು ಕರೆಸಿಕೊಂಡು ಓದಿದ ನನ್ನ ಜೀವನದ ಮೊದಲ ಅನುಭವವಾಗಿತ್ತು.
ಒಂದೇಸಮ ಗಿಜಿಗುಡುವ ರೋಗಿಗಳಿಂದ ತುಂಬಿರುತ್ತಿದ್ದ ಓಪಿಡಿ, ಕುಷ್ಠ-ಕ್ಷಯ-ಸುಟ್ಟಗಾಯದವರ ವಾರ್ಡುಗಳು, ಕೋಟೆಯ ಕೆಂಪುದೀಪ ಪ್ರದೇಶ, ಕೌಲ್‌ಬಜಾರ್, ಏಕಶಿಲಾಬಂಡೆ, ಹಾಸ್ಟೆಲ್ ಹಿಂದೆಯೇ ಇದ್ದ ರಿಮ್ಯಾಂಡ್ ಹೋಮಿನ ‘ಬಾಲಾಪರಾಧಿ’ ಮಕ್ಕಳ ಒಡನಾಟ, ಕಿವುಡು ಮೂಕ, ಕುರುಡ ಮಕ್ಕಳ ಶಾಲೆಗೆ ಭೇಟಿ, ಪರಿತ್ಯಕ್ತ ಮಹಿಳೆಯರ ಸ್ತ್ರೀಸೇವಾ ನಿಕೇತನಕ್ಕೆ ಭೇಟಿ ಮೊದಲಾದವು ನನ್ನೊಳಗಿನ ನನ್ನನ್ನು ಎಬ್ಬಿಸಿದವು. ಅದರಲ್ಲೂ ಕಾಫಿಸೀಮೆಗೆ ವಲಸೆ ಹೋಗುವವರು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಆಗುವುದಿಲ್ಲವೆಂದು ಸುಳ್ಳು ಕಂಪ್ಲೇಂಟ್ ಮಾಡಿಸಿ, ತಮ್ಮ ಮಕ್ಕಳನ್ನು ರಿಮ್ಯಾಂಡ್ ಹೋಮಿನ ‘ಸೇಫ್ ಕಸ್ಟಡಿ’ಗೆ ತಂದು ಬಿಡುತ್ತಿದ್ದುದು ನಾನರಿಯದ ಬದುಕಿನ ಇನ್ನೊಂದು ಮುಖವನ್ನು ತೆರೆದು ತೋರಿಸಿತು. ಮಾತೆತ್ತಿದರೆ ಬಳಬಳ ಕಣ್ಣೀರು ಸುರಿಸುತ್ತಿದ್ದ ಆರನೇ ತರಗತಿಯ ಒಬ್ಬ ಹುಡುಗ ನನ್ನನ್ನು ಒದ್ದೆಮುದ್ದೆಯಾಗಿಸಿದ. ಗಾಂಧಿಯ ಪ್ರಭಾವ ದಟ್ಟವಾಗಿ ವಾರಕ್ಕೆರೆಡು ದಿನ ಉಪವಾಸ ಮಾಡತೊಡಗಿದೆ. ಬರಬರುತ್ತ ನಾಸ್ತಿಕಳಾದೆ.
ಅಂದಿನ ದಿನಗಳಲ್ಲಿ ನಮ್ಮ ಹಾಸ್ಟೆಲ್‌ನಲ್ಲಿ ಬೇರೆ ಸಂಘ ಸಂಸ್ಥೆಗಳ ಒಡನಾಟ ಇದ್ದವರು ಹೆಚ್ಚಾಗಿದ್ದರು. ಡಿಎಸ್‌ಎಸ್‌ನಲ್ಲಿ ಸಕ್ರಿಯಳಾಗಿದ್ದ ಅರುಂಧತಿ ನನ್ನ ಆಪ್ತ ಗೆಳತಿಯಾಗಿದ್ದಳು. ಮೆಡಿಕಲ್ ಕಾಲೇಜಿಗೆ ಪೀಪಲ್ಸ್ ವಾರ್ ಸುದ್ದಿ ಬರುತ್ತಿತ್ತು. ಕಾಮ್ರೇಡ್‌ಗಳು ಬರುತ್ತಿದ್ದರು. ಕೆಲವು ವಿದ್ಯಾರ್ಥಿಗಳಿಗೆ ಅವರ ಸಂಪರ್ಕವಿದ್ದಿರಲೂಬಹುದು. ಬಂದ ವರ್ಷವೇ ನಮಗಿಂತ ತುಂಬ ಸೀನಿಯರ್ ಆಗಿದ್ದ ಹಾಸ್ಟೆಲ್‌ಮೇಟ್ ಒಬ್ಬರು ಚಳ್ಳಕೆರೆ ಬಳಿಯ ಗುಡ್ಡದ ಮೇಲೊಂದು ಶಿಬಿರಕ್ಕೆ ನಮ್ಮನ್ನು ಕರೆದೊಯ್ದರು. ಅವರೆಷ್ಟು ಒತ್ತಾಯಿಸಿದರೂ, ಮನವೊಲಿಸಿದರೂ ಆ ಹಿಂದುತ್ವವಾದಿ ಸಂಘಟನೆ ನಮಗೆ ಇಷ್ಟವಾಗಲೇ ಇಲ್ಲ. ಗಾಂಧಿ ಸೇವಾಶ್ರಮದವರು ‘ರಾಷ್ಟ್ರೀಯ ಏಕತಾ ಸದ್ಭಾವನಾ ಶಿಬಿರ’ವನ್ನು ಜಮ್ಮುವಿನಲ್ಲಿ ಏರ್ಪಡಿಸಿದಾಗ ನಾನದರ ಸದಸ್ಯೆಯಲ್ಲದಿದ್ದರೂ ಹದಿನೈದು ದಿನಗಳ ಶಿಬಿರಕ್ಕೆ ತಂಡದೊಡನೆ ಹೋಗಿ ಬರುವ ಅವಕಾಶ ದೊರೆಯಿತು. ಮುಮ್ತಾಜ್ ನನ್ನ ಅತ್ಯಾಪ್ತ ಗೆಳತಿಯಾಗಿದ್ದಳು. ಮುಸ್ಲಿಂ ಗೆಳತಿಯರ ಜೊತೆ ಅವರ ‘ಇಸ್ತಮಾ’ಗಳಿಗೆ ಹೋಗಿಬರುತ್ತಿದ್ದೆ. ಬಾಬರಿ ಮಸೀದಿ ಧ್ವಂಸ ಸಂಭವಿಸಿದ ಕಾಲ. ಎಲ್ಲ ಮುಸ್ಲಿಂ ಹುಡುಗಿಯರೂ ಒಂದೇಕಡೆ ಇರುತ್ತೇವೆ ಎಂದು ಮತ್ತೊಂದು ಬ್ಲಾಕಿಗೆ ಹೊರಟರು. ಸಾಂಪ್ರದಾಯಿಕಳಲ್ಲದ, ಬುರ್ಖಾ ಸ್ಕಾರ್ಫ್ ಧರಿಸದ ಮುಮ್ತಾಜ್ ಅಲ್ಲಿ ಹೋಗಲೂ ಆರಳು, ಹೋಗದೆಯೂ ಇರಲಾರಳು ಎನ್ನುವಂತಾದಾಗ ಅವಳ ಗೊಂದಲ ನನ್ನನ್ನು ಯೋಚಿಸಲು ಹಚ್ಚಿತು. ಕೊನೆಗೆ ಉಳಿದ ಮುಸ್ಲಿಂ ಹುಡುಗಿಯರ ಜೊತೆಗೆ ತಾನೂ ಹೋದದ್ದಲ್ಲದೆ, ನೀನೂ ಬಾರೆಂದು ಮುಮ್ತಾಜ್ ನನ್ನನ್ನೂ ಕರೆದೊಯ್ದಳು. ಅಲ್ಲಿದ್ದರೂ ಕ್ರಿಸ್ಮಸ್ ಮತ್ತು ಹೊಸವರ್ಷಕ್ಕೆ ಎಂದಿನಂತೆ ಚರ್ಚಿಗೆ ಹೋಗಿಬಂದೆವು. ಆಸ್ತಿಕ ಗೆಳತಿಯ ಜೊತೆ ಹನುಮಂತನ ಗುಡಿಗೂ ಹೋಗಿ ಬರುತ್ತಿದ್ದೆವು. ಹೀಗೆ, ಎಲ್ಲದರ ಒಳಹೊಗುವ ಕುತೂಹಲ. ಎಲ್ಲವನ್ನು ಗಮನಿಸುತ್ತ ಉಳಿದೆ.
ವೈದ್ಯೆ ಸಾಹಿತಿ
ಮದುವೆಯಾಗಿ, ಹಳ್ಳಿಗೆ ಬಂದು, ವೃತ್ತಿ ಶುರುಮಾಡಿದ ಬಳಿಕ ಮತ್ತೊಂದು ಲೋಕಕ್ಕೆ ಪ್ರವೇಶವಾಯಿತು. ಈಗ ಸಂಸಾರಸ್ಥೆಯಾದ ನನ್ನ ಎರಡು ಕೈ ಹತ್ತು ಕೈಯಾಗಲೇಬೇಕಾಯಿತು. ಒಂದು ದಶಕ ಏನೂ ಬರೆಯಲು ಸಾಧ್ಯವಾಗಲಿಲ್ಲ. ಸಣ್ಣಮಕ್ಕಳು, ನೆಲೆಗೊಳಿಸಬೇಕಿದ್ದ ಸಂಸಾರ, ಆಸ್ಪತ್ರೆ-ಮನೆಯ ನಿಭಾವಣೆಗಳಲ್ಲಿ ಓದಿಗಷ್ಟೆ ಸಮಯ ಮೀಸಲಿಟ್ಟು, ಬರವಣಿಗೆ ಪೂರಾ ನಿಲ್ಲಿಸಿದೆ. ನನ್ನದೇ ಆದ ಸಮಯ ಸಿಗುತ್ತಿರಲಿಲ್ಲ. ಮನೆಗೆಲಸ, ವೃತ್ತಿಯಲ್ಲದೆ ಇನ್ನೂ ಏನೇನೋ ಮಾಡಬೇಕು, ಮಾಡಬಲ್ಲೆ ಎಂದು ಗೊತ್ತಿದ್ದರೂ ಅದಕ್ಕೆ ಬೇಕಾದ ಸಮಯ ಇಂದು ಸಿಕ್ಕೀತು, ನಾಳೆ ಸಿಕ್ಕೀತು ಎಂಬ ಮರೀಚಿಕೆಯ ಹಿಂದೆ ಆಶಾ ಭಾವನೆಯಿಂದ ಹೋಗುತ್ತಿದ್ದೆ. ಬರಬರುತ್ತ, ಯಾವುದನ್ನು ಅಮ್ಮ ಹೇಳಿದಾಗ ‘ಹೋಗಮ, ಅದು ನಿನ್ನ ಕಾಲದ ಕತೆ’ ಎನ್ನುತ್ತಿದ್ದೆನೋ, ಅವೆಲ್ಲ ನನ್ನ ಕಾಲಕ್ಕೂ, ನನಗೂ ನಿಜ ಎನ್ನುವುದು ಅರಿವಿಗೆ ಬಂತು. ಕೊಳೆಯಾದ ದಿಂಬು, ಧೂಳು ಹಿಡಿದ ಕಪಾಟು, ಆಗಬೇಕಿರುವ ಕೆಲಸ, ನಾಳಿನ ತಿಂಡಿಯ ಚಿಂತೆ ಎಲ್ಲ ನನ್ನದು ಮಾತ್ರವೇ. ಮನೆಯಿಂದ ಹೊರಬೀಳುವಾಗ ಹೇಗಿರುವುದೋ ಬರುವಾಗ ಮನೆ ಹಾಗೆಯೇ ಇರುವುದು. ನಾನು ಕೈಹಾಕದಿದ್ದರೆ ಒಂದು ಅಣು ಕಸವೂ ಅತ್ತ ಸರಿದು ಚೊಕ್ಕಗೊಳ್ಳುವುದಿಲ್ಲ! ಎಲ್ಲವನ್ನು ಮೈಮೇಲೆಳೆದುಕೊಂಡು ಹತ್ತು ಕೈಯ ಚಾಮುಂಡಾಂಬೆಯೆಂಬಂತೆ ಮಾಡಿದ್ದೇ ಮಾಡಿದ್ದು. ಕೊನೆಗೆ ತಿಳಿಯಿತು, ಓಹೋ! ಮಾಡುತ್ತಿರುವ ಈ ಎಲ್ಲದನ್ನು ಸಾಯುವ ತನಕ ಮಾಡಿದರೂ ಮುಗಿಯಿತು ಎಂದಾಗುವುದಿಲ್ಲ. ಪುರುಸೊತ್ತು, ವಿರಾಮ ನನಗೆಂದಿಗೂ ಸಿಗುವುದಿಲ್ಲ. ಮಾಡಬೇಕಿರುವುದನ್ನೆಲ್ಲ ಈಗಲೇ, ಈ ಜಂಜಾಟಗಳ ಜೊತೆಗೇ ಮಾಡಬೇಕೇ ಹೊರತು ಮುಂದೊಂದು ಸುವರ್ಣ ಯುಗ ಬರುವುದಿಲ್ಲ ಎಂದು ಹೊಳೆದು ಹೋಯಿತು.
ಬೆಟ್ಟದ ದಾರಿಯಲ್ಲಿ ಏರುತ್ತಿದ್ದೆವು. ಬೆಟ್ಟದ ಮೇಲಿನಿಂದ ಅಬ್ಬಿ ಧಭಧಭ ಹಾರುತ್ತಿತ್ತು. ಅದನ್ನು ನೋಡನೋಡುತ್ತ ಕಾಡು ತೊರೆಯ ಜಾಡೇ ಪ್ರತಿ ಹೆಣ್ಣಿನದೂ ಎನಿಸಿತು. ಎಲ್ಲೋ ಹುಟ್ಟಿ, ಎಲ್ಲೆಲ್ಲೋ ಬೆಳೆದು, ಗುಂಡಿ ಸಿಕ್ಕಲ್ಲಿ ನಿಂತು, ಕಣಿವೆಯಿದ್ದರೆ ಹಾರಿ, ಆಚೀಚಿನ ಹಳ್ಳತೊರೆಗಳ ಕೂಡಿಕೊಂಡು ಅಂತಿಮ ಗಮ್ಯದತ್ತ ಹರಿಯುವುದು. ಅದನ್ನು ನೋಡಿ ಮತ್ತೆ ಬರವಣಿಗೆಯ ತುಡಿತ ಹುಟ್ಟಿತು. ಓದು ಎಷ್ಟೋ ಅಷ್ಟೇ ಬರವಣಿಗೆಯೂ ನನ್ನೊಡಲಾಳದ ಜೀವಚಿಲುಮೆ ಎನಿಸಿ ‘ಮಲೆಗಳಲ್ಲಿ ಮದುಮಗಳು’ ಎಂಬ ಕವಿತೆಯ ಜೊತೆಗೆ ಮತ್ತೆ ಕತೆ, ಕವಿತೆಗಳ ಬರವಣಿಗೆ ಪ್ರಾರಂಭವಾಯಿತು. ಸುತ್ತಲ ಆಗುಹೋಗುಗಳ ಬಗೆಗೆ ನನಗೆ ಖಚಿತ ವಿರೋಧಗಳು, ನಿಲುವುಗಳು ರೂಪುಗೊಳ್ಳತೊಡಗಿದವು. ನನ್ನ ಅನಿಸಿಕೆಗಳನ್ನು ಹೇಳಬೇಕು, ನನಗನ್ನಿಸಿದ್ದನ್ನು ಹಂಚಿಕೊಳ್ಳಬೇಕು ಅನಿಸಿದ್ದೇ ಸಂಘಟನೆಯ ಉತ್ಸಾಹ ಶುರುವಾಯಿತು. ಮಕ್ಕಳಿಬ್ಬರೂ ‘ತಮ್ಮ ಜಡೆ ತಾವು ಹೆಣೆದುಕೊಳ್ಳುವಷ್ಟು’ ದೊಡ್ಡವರಾಗಿ ಕೊಂಚ ಸಮಯ ಒದಗಿಸಿಕೊಳ್ಳಲು ಸಾಧ್ಯವಾಯಿತು. ಮತ್ತೆ ಇತ್ತಲ್ಲ, ರಾತ್ರಿಯೆಂಬ ಕರುಣಾಳು. ಓದುವ, ಬರೆಯುವ ಕೆಲಸಕ್ಕೆ ಲೇಬರ್ ರೂಮಿನ ಕಾಯುವಿಕೆಯ ಸಮಯವೂ ಉಪಯೋಗವಾಯಿತು. ‘ಕೆಂಡಸಂಪಿಗೆ’ಯಲ್ಲಿ ಬರೆದೆ. ಪತ್ರಿಕೆಗೆ ಬರೆಯಲು ಮೊದಲು ಮಾಡಿದೆ.
‘ವೈದ್ಯೆಯಾಗಿಯೂ ನೀವು ಇಷ್ಟೊಂದು ಸಾಹಿತ್ಯ ಕೃಷಿ..?’ ಮುಂತಾದ ಮಾತುಗಳನ್ನು ಪದೇಪದೇ ಕೇಳುತ್ತಿರುತ್ತೇನೆ. ಹಾಗೆ ನೋಡಿದರೆ ಸಾಹಿತ್ಯ ಮತ್ತು ವೈದ್ಯಕೀಯ ಎರಡೂ ಬೇರೆ-ಬೇರೆ ಅಲ್ಲ. ಅವು ಒಂದಕ್ಕೊಂದು ಪೂರಕ. ಏಕೆಂದರೆ ವೈದ್ಯರಿಗೆ ಸಾಹಿತ್ಯಕೃಷಿಗೆ ಬಿತ್ತಲು ಬೇಕಾದ ಅತ್ಯಮೂಲ್ಯ ಬೀಜಗಳು ವಿಪುಲವಾಗಿ ದೊರೆಯುತ್ತವೆ. ಬದುಕಿನ ಎಲ್ಲ ಬಣ್ಣಗಳನ್ನು, ಮನುಷ್ಯ ಸ್ವಭಾವಗಳನ್ನು ನೇರವಾಗಿ ಹತ್ತಿರದಿಂದ ನೋಡಲು ವೈದ್ಯವೃತ್ತಿಯಲ್ಲಿ ಸಾಧ್ಯವಿದೆ. ಸಾಹಿತಿ ಅಥವಾ ಸಾಹಿತಿಯ ಮುಖ್ಯ ಉದ್ದೇಶ ಸಮಾಜದಲ್ಲಿ ಇರುವ ನೋವು, ದುಃಖಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಜನಸಮುದಾಯಕ್ಕೆ ಹೇಳುವುದು. ವೈದ್ಯರು ಮಾಡುವುದೂ ಅದನ್ನೇ. ಹಾಗಾಗಿ ವೃತ್ತಿನಿರತರಾಗಿಯೂ ಆಕ್ಟಿವಿಸ್ಟ್ ಆಗಲು ಚಿಮ್ಮುಹಲಗೆಯಂತೆ ವೈದ್ಯಕೀಯವು ಒದಗಿಬರುತ್ತದೆ. ಹೀಗೆ ವೃತ್ತಿ ಕಾರಣವಾಗಿ ಪ್ರತಿನಿತ್ಯ ಹಳ್ಳಿಯ ಜನರ ಜೊತೆಗಿನ ಒಡನಾಟ ಓದುಗಳಾದ ನನ್ನನ್ನು ಬರಹಗಾರ್ತಿಯಾಗಿ, ಸಂಘಟಿತ ಚಟುವಟಿಕೆಯಲ್ಲಿ ವಿಶ್ವಾಸವುಳ್ಳವಳನ್ನಾಗಿ ರೂಪಿಸಿತು.
೨೦೦೭-೦೮ರ ವೇಳೆಗೆ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೊನ್ನಾವರದಲ್ಲಿ ಸಂಘಟಿಸಲು ಶುರು ಮಾಡಿದೆವು. ಸಂಪರ್ಕ ಜಾಲ ಬೆಳೆಯುತ್ತ ಹೋಯಿತು. ಸಾಹಿತಿಗಳ, ಹೋರಾಟಗಾರರ, ಸಂಘಟನೆಗಳ ನಂಟು ಬೆಳೆಯುತ್ತ ಹೋದಹಾಗೆ ವೈಚಾರಿಕವಾಗಿ ನಾನೂ ಬೆಳೆದೆ. ಅಂಬೇಡ್ಕರ್ ಗಾಢವಾಗಿ ಪ್ರಭಾವಿಸಿದರು. ನಾಮದೇವ ಢಸಾಳ್ ಬೆಚ್ಚಿ ಬೀಳಿಸಿದರು. ಮತ್ತೆ ಓದಿದ ಚೆ, ಭಗತ್ ತಲ್ಲಣಿಸುವಂತೆ ಮಾಡಿದರು. ತೇಲ್ತುಂಬ್ಡೆ ಇಷ್ಟವಾದರು. ಈ ಹಂತದಲ್ಲಿ ಪರಿಚಯವಾದ ಲಡಾಯಿ ಪ್ರಕಾಶನದ ಬಸೂ ನನ್ನ ಯೋಚನೆಯ, ಬರಹದ-ಬದುಕಿನ ದಿಕ್ಕನ್ನೇ ಬದಲಿಸಿದ ಸಂಗಾತಿ. ಬಸೂವಿನ ಒಡನಾಟ, ಸಾಂಗತ್ಯ ಇಲ್ಲದಿದ್ದರೆ ಇಷ್ಟು ಬರಹ-ಪ್ರಕಟಣೆ ಸಾಧ್ಯವಾಗುತ್ತಿರಲಿಲ್ಲ. ನಾವು ಕನಸಿದ ಸಮಾವೇಶ, ಸಭೆ, ಸೆಮಿನಾರು, ಗೋಷ್ಠಿಗಳಿಗೆ ಲೆಕ್ಕವಿಲ್ಲ. ಚರ್ಚಿಸಿದ್ದು, ವಾದಿಸಿದ್ದು, ಮುನಿಸಿಕೊಂಡದ್ದು, ಹಂಚಿಕೊಂಡದ್ದಕ್ಕೆ ಎಣೆಯಿಲ್ಲ. ಆತನೊಂದಿಗಿನ ಕೊಡುಕೊಳುವಿಕೆ, ಜಗಳಗಳು ನನ್ನನ್ನೂ, ನನ್ನ ಚಿಂತನಾಲೋಕವನ್ನು ಇವತ್ತಿಗೂ ಸಜೀವವಾಗಿಟ್ಟಿವೆ.
ಈ ಸಮಯದಲ್ಲೇ ದು. ಸರಸ್ವತಿ ಎಂಬ ಅಕ್ಕ ಪರಿಚಯವಾದಳು. ಬಸುವಿನಂತೆಯೇ ಅವಳೂ ಉಡಿಯಲ್ಲಿ ಕನಸಿನ ಬೀಜಗಳನ್ನಿಟ್ಟುಕೊಂಡು ಬಿತ್ತುವಾಕೆ. ಅವಳ ಕನಸಿನ ಹಕ್ಕಿಗೆ ರೆಕ್ಕೆ ಕಟ್ಟಿ ಹಾರಿಸಿದ ಸಬಿಹಕ್ಕ, ಗುಲಾಬಿ, ವಾಣಿ ಮತ್ತಿತರ ಗೆಳತಿಯರು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಹುಟ್ಟಿಗೆ ಕಾರಣರಾದರು. ನನ್ನನ್ನು ವಿನೀತಗೊಳಿಸಿದ್ದು, ಸೋದರಿತ್ವದ ಪ್ರಜ್ಞೆಯನ್ನು ಗಾಢವಾಗಿ ಬೆಳೆಸಿದ್ದು, ಚರ್ಚೆ ಮಾತುಕತೆಗಳ ಮೂಲಕ ಸ್ತ್ರೀವಾದದ ಆಚರಣಾ ಪಠ್ಯವನ್ನು ಅರ್ಥ ಮಾಡಿಸಿದ್ದು ಒಕ್ಕೂಟವೇ ಎನ್ನಬೇಕು.
ಈಗ ನನ್ನ ಮಾತು-ಕ್ರಿಯೆಗಳ ಜೊತೆ ‘ಗುರುತಿಸಿಕೊಳ್ಳುವ’ ತಾಣ ‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ ಮತ್ತು ಲಡಾಯಿಯ ‘ಮೇ ಸಾಹಿತ್ಯ ಮೇಳ ಬಳಗ’. ಇವೆರೆಡೂ ಜೊತೆಗುಂಪುಗಳು ಸಂಘಟಿತ ಕ್ರಿಯೆಗಳ ಸ್ಥಾಪಿತ ಚೌಕಟ್ಟನ್ನು ಮುರಿದು, ಪ್ರಚಾರ-ತೋರುಗಾಣಿಕೆಯ ಹಪಾಹಪಿಯಿಲ್ಲದೆ ಕ್ರಿಯಾಶೀಲವಾಗಿ, ಅರ್ಥಪೂರ್ಣವಾದ ಕೆಲಸ ಮಾಡುವ ಬಗೆಗೆ ಯೋಚಿಸುವುದನ್ನು ಕಲಿಸಿದವು. ಬಿಕ್ಕಟ್ಟಿನ ಕಾಲದಲ್ಲೂ ಸೂಕ್ಷ್ಮವಾಗಿ ಚಿಂತಿಸುವುದು, ಕೆರಳದೇ ಪ್ರೀತಿಯಿಂದ ಕೆಲಸ ಮಾಡುವುದು ಸಾಧ್ಯ ಎನ್ನುವುದನ್ನು ಮನದಟ್ಟು ಮಾಡಿಕೊಟ್ಟವು.
ಮರದೊಳಗೆ ಮರ ಹುಟ್ಟಿ
ಬದಲಾವಣೆ ವ್ಯಕ್ತಿಗತ ಮತ್ತು ಸಾಮಾಜಿಕ - ಎರಡೂ ನೆಲೆಯಲ್ಲಿ ಸಂಭವಿಸಬೇಕು. ಓದು, ಬರಹ, ಜನರ ಒಡನಾಟ, ಆಳದ ಧ್ಯಾನ, ಅನುಭವ, ಗ್ರಹಿಕೆ ಎಲ್ಲದರಿಂದ ವ್ಯಕ್ತಿಗತ ಬದಲಾವಣೆ ಸಂಭವಿಸುತ್ತದೆ. ಆದರೆ ಅಷ್ಟೇ ಸಾಲದು. ನಾವು ಯಾವ ಸಮೂಹದ ಭಾಗವೋ ಆ ಸಮೂಹವೂ ಬದಲಾಗಬೇಕು ಎಂದು ಪ್ರಯತ್ನಿಸುವುದು ಮುಖ್ಯ. ಸುತ್ತಮುತ್ತಲ ಸಮಾಜವೂ ನಾ ನಂಬಿದ ಬದಲಾವಣೆಯ ಕಡೆಗೆ ಗಮನ ಹರಿಸುವಂತೆ, ಆ ಕಡೆಗೆ ಚಲಿಸಲು ಉತ್ತೇಜಿಸುವಂತೆ ಮಾಡುವುದು ಅವಶ್ಯಕ. ಅದಕ್ಕೆ ನನ್ನ ವೃತ್ತಿ ಮತ್ತು ಬರಹ ಒದಗಿ ಬರುತ್ತಿವೆ.
ಹೀಗೆ..
ಉತ್ತರವಿರದ ಪ್ರಶ್ನೆಗಳು ಎಂದು ನಾನಂದುಕೊಂಡ ಜಟಿಲ ಸಂಗತಿಗಳಿಗೆಲ್ಲ ಓದುಬರಹವು ತಿಳಿವಿನ ಮಾರ್ಗ ಹುಡುಕಿಕೊಟ್ಟಿದೆ. ಬದುಕನ್ನೇ ಉತ್ತರವಾಗಿಸಬೇಕು ಎಂದು ಹಲವು ಜೀವಗಳು ಹೇಳಿಕೊಟ್ಟಿವೆ. ಗಾಂಧಿ, ಬಸವಣ್ಣ, ಅಕ್ಕ, ಲಂಕೇಶ್, ಅಂಬೇಡ್ಕರ್, ರೂಮಿ, ಬುದ್ಧ, ಫುಲೆ, ಶಾಹೂ, ಮಾರ್ಕ್ಸ್, ಸಾವಿತ್ರಿಬಾಯಿ, ಕಸ್ತೂರಬಾ, ಗಿಬ್ರಾನ್, ರೋಗಿಗಳು, ಹೋರಾಟಗಾರರು - ಹೀಗೆ ನನ್ನೊಳಗಿಳಿದ, ಅರಳಿದ, ಬೆಳೆದ ಸರ್ವರೊಳಗಿಂದ ಒಂದೊಂದು ನುಡಿಗಲಿತು ನನ್ನ ಹೆಜ್ಜೆಗಳು ರೂಪುಗೊಳ್ಳುತ್ತಿವೆ.
ಮರದೊಳಗೆ ಮರ ಹುಟ್ಟಿ, ಮರ ಚಿತ್ರ ಕಾಯಾಗುವ ಹಾಗೆಯೇ ಮನುಷ್ಯ ಮನವೊಂದು ಲೇಖಕಿ/ಕ ಆಗುವ ಪ್ರಕ್ರಿಯೆ ಸಂಭವಿಸುತ್ತದೆ. ಇಷ್ಟು ಬರೆದಾದಮೇಲೂ ಇವತ್ತಿನ ಅನುಪಮಾ ಆಗಿ ಯಾವಾಗ ಬದಲಾದೆ? ಹೇಗೆ? ಎನ್ನುವುದನ್ನು ಗುರುತಿಸಿದೆ ಎನ್ನಲಾರೆ. ಅದು ತೆನೆಯೊಳಗೆ ಹಾಲು ತುಂಬಿದ್ದು ಹೇಗೆ? ಯಾವಾಗ? ಎಂದು ಹೇಳುವಷ್ಟೇ ಕಷ್ಟದ್ದು, ಅಲ್ಲವೇ?
(‘ಟಿವಿ೯ ಕನ್ನಡ ಡಿಜಿಟಲ್’ಗೆ ಬರೆದದ್ದು)
ಈ ನಿಮ್ಮ "ವ್ಯಕ್ತಿ ವಿಕಾಸ ವೃತ್ತಾಂತ"ವು, revolution ನಿಟ್ಟಿನಲ್ಲಿ ನಿಮ್ಮ evolution ಹೇಗಾಯಿತು ಎಂಬುದನ್ನು ಸಂಕ್ಷಿಪ್ತವಾಗಿಯಾದರೂ, ಸ್ವಾದಿಷ್ಟವಾಗಿ, ಸತ್ಯವತ್ತಾಗಿ ನೋಟಕ್ಕಿರಿಸುತ್ತದೆ. "ಬಂಡಾಯ"ದ ಬಂಡಿಯೋಡಿಸುತ್ತ, ಬಾಳ ಬಂಡವಾಳಕ್ಕಾಗಿ, ಭಂಡಾರದ ಬುಗ್ಗೆಗಾಗಿ ಬಂಡೆಗಳ ಬೆಂಬತ್ತುವ, ಪುಂಡ ಗಡವಗಳನ್ನು ಬೆಂಡೆತ್ತುವ, ಮತ್ತು ‘ಗಂಡು ಬೀರಿ’ರುವ ಬಲೆಯನ್ನು ಸಿಗಿದು ಸಿಳ್ಳೆಹೊಡೆಯುವ ಗಂಡೆದೆಯ [ನಿಮ್ಮ ಮಾತಿನಲ್ಲಿ, (braಹ್ಮನೇ broದರ್ ಆಗಿ ಬಂದರೂ), bra ಧರಿಸಲು bother ಮಾಡಿಕೊಳ್ಳದ] ಬಂಡುಕೋರಿಯರು ಸಾಮಾನ್ಯವಾಗಿ ನನ್ನ ಗಮನವನ್ನು ಬೇಗನೆ ಸೆಳೆಯುವುದರಿಂದಾಗಿ, ಈ ಲೇಖನವು ತಲೆದೋರುತ್ತಿದ್ದಂತೆಯೇ, ನಾನು ನಿಮ್ಮ ಬೆಳವಿನ ಬಗೆಯತ್ತಲೂ ಚುರುಕಾಗಿ, ಅದರ ಜಾಡು ಹಿಡಿಯಲು ತವಕದಿಂದ ತೆರಳಿದೆ. ಆಗ ನನಗೆ ಪ್ರತ್ಯಕ್ಷವಾದುದೆಂದರೆ, ನಿಮ್ಮ nucleus ಒಳಗೇ ಹುದುಗಿರುವ nuclear 'fusion' bomb. ಇದರ ಗುಣವು ಏಕ್‍ದಮ್ ಸಿಡಿಯುವಂತಾಗಿರದೆ, "sustained action" ಆಗಿದ್ದು, ಜೊತೆಗೆ, ಮುಖ್ಯವಾಗಿ, "fusion" ಎಂದರೆ, "ಒಂದುಗೂಡಿಸುವಿಕೆ", "ಬೆಸುಗೆ" ಇಂಥ 'positive charge'ಗಳಿಂದ ಚಾಲಿತವಾಗುವಂಥದ್ದು! ಈ ನಿಮ್ಮ ಜಾಯಮಾನವೇ ಈ ಜಾಡನ್ನು ರೂಪಿಸಿದ್ದು. ಇದರಿಂದಾಗಿಯೇ ನಿಮಗೆ ಸ್ಫೂರ್ತಿದಾಯಕ ಲೇಖಕರು (ವಿಶೇಷವಾಗಿ, ಶ್ರೀಲಂಕೇಶ್), ಶಿಕ್ಷಕರು, ಸಹಪಾಠಿಗಳು, ಸಹವರ್ತಿಗಳು, ಸಮಾನಮನಸ್ಕ ಶ್ರೋತೃಗಳು ಎಲ್ಲ ಸಿಗುತ್ತ ಹೋದರು; ಸಹಜೀವನದ ಸವಿಜೇನು ಸಿಗುತ್ತ ಹೋಯಿತು; ನೀವೂ ಅದನ್ನು ಹುರುಪಿನಿಂದಲೇ ಹಂಚುತ್ತ ಹೋದಿರಿ. ಜೊತೆಗೇ, ನಿಮ್ಮೊಳಗಿನ ಸ್ಫೋಟಕ ಶಕ್ತಿಯು, ಭಂಡತನದ ಬಂಡೆಗಳನ್ನು ("ಭಂಡಾಸುರ"ರನ್ನು) ಭೇದಿಸುವುದರಲ್ಲಿ ಸಕ್ರಿಯಗೊಂಡಿತು. ಇದರಿಂದ ನನಗೆನಿಸಿದ್ದು: "ಮುಖ್ಯವಾಹಿನಿ"ಯ ದಾದಾಗಿರಿಯನ್ನು ಧಿಕ್ಕರಿಸಿ, "ಎಡಕ್ಕೆ ವಾಲುವ" whyಚಾರಿಕ ಬಾಗು ಬೀಜದಲ್ಲೇ ಇದ್ದು, ಆಮೇಲಿನ ಅನುಭವಗಳಿಂದಾಗಿ ಕ್ರಮೇಣ ಸ್ಫೋಟಿಸುತ್ತದೇನೋ?! Left-handedness, left-hemisphere ಎಂದೆಲ್ಲ ವಿಜ್ಞಾನಿಗಳು ಹೇಳುವಂತೆ, ಬಲಿತೆಗೆದುಕೊಂಡೇ, ಬಲಾತ್ಕಾರದಿಂದೇ ಬದುಕುವ "ಬಲ"ಶಾಲಿ ವರ್ಗಕ್ಕೆ ಪ್ರಬಲ ಪ್ರತಿಕ್ರಿಯೆಯಾಗಿ ("antibody" ಮಾದರಿ), "left power" - left-out ಜನಪರ power - ಎನ್ನಬಹುದಾದಂಥದ್ದು ಸಹಜವಾಗಿಯೇ ಹೊಮ್ಮುವುದೇನೋ! ಸ್ವಾರಸ್ಯವೆಂದರೆ ಈ "ಎಡವಟ್ಟು" ತರಹೆಗೆ ಇಂಗ್ಲಿಶ್‍ನಲ್ಲಿ "sinister" ಎನ್ನುವುದು! ಸದ್ಯ ಇಲ್ಲಿ ಯಾರೂ (ಇನ್ನೂ) ಈ ಗುಣವನ್ನು "ವಾಮಾಚಾರ" ಎಂದಿಲ್ಲ!
ReplyDeleteಅರಿವೆಯ ಪರಿವೆಯೇ ಇಲ್ಲದೆ, ಲೈಂಗಿಕ ಬಲಾತ್ಕಾರಕ್ಕೊಳಗಾಗಿ, "ನೇತಾಡುವ ಗರ್ಭಕೋಶ"ವನ್ನು ಹೊತ್ತು, ಹಳ್ಳಿಯಲ್ಲಿ ತಿರುಗಾಡುತ್ತಿದ್ದ ಗತಿಹೀನ, ಮತಿಭ್ರಮಿತ ಹೆಣ್ಣುಮಗಳು; ಬಾಲಾಪರಾಧಿಗೃಹಕ್ಕೆ ತಳ್ಳಲ್ಪಟ್ಟು ಬಳಬಳನೆ ಅಳುತ್ತಿದ್ದ ಬಳ್ಳಾರಿಯ ಬಾಲಕ; ಕೆಂಪು ಸೀರೆಯಲ್ಲಿ ಒಪ್ಪತ್ತೂಟ ಮಾಡುತ್ತಿದ್ದ ಬಾಲವಿಧವೆಯರು, ಹೀಗೆ ನೀವು ಕಾಣಬೇಕಾಗಿ ಬಂದ ಅನೇಕ ಕಹಿ, ನಿಜಜೀವನ ಘಟನೆಗಳ ವಿವರಗಳು ಈ ಲೇಖನಕ್ಕೆ ಮಾನವೀಯ ಮೃದುತ್ವವನ್ನಿತ್ತಿವೆ.
ವೈದ್ಯರು ಲೇಖಕರಾಗುವ ಬಗೆಗೆ ನೀವು ಹೇಳಿರುವುದು ನಿಜ: ಪರಿಣಾಮಕರ ಲೇಖನವಸ್ತು ಅವರಿಗಿಂತಲೂ ಹೆಚ್ಚು ಬೇರೆ ಯಾರಿಗೆ ಸಿಕ್ಕೀತು? Alexis Carrel ಎಂಬ French surgeon and Nobel laureate ಬರೆದಿರುವ, “Man the Unknown”, ಇನ್ನೊಬ್ಬ Nobel ಪ್ರಶಸ್ತಿ ವಿಜೇತ-ವೈದ್ಯ Albert Schweitzer ಬರೆದಿರುವ “Reverence for Life”--ಈ ಎರಡು ಪ್ರಸಿದ್ಧ ಪುಸ್ತಕಗಳು ನನಗೆ ಇಲ್ಲಿ ನೆನಪಾದುವು. ನಿಮ್ಮ ಈ ಲೇಖನವೂ ಹೀಗೆಯೇ ಜೀವನದ grassroots ಪುಷ್ಟಿ ಪಡೆದಿದ್ದು, "ಸಜೀವ"ವಾಗಿದೆ. ಇದರಲ್ಲಿರುವ ಹಳ್ಳಿಯ ಬಾಳಿನ ನೋಟಗಳು, ಅಲ್ಲಿಯ ನುಡಿಸೊಗಡು (ಓಳಿ, ನೆದರು, ಬಾಯಾರು, ಬಳ್ಳೆ...), ಈ ಜೀವಂತಿಕೆಯನ್ನು ಹಿಗ್ಗಿಸುವಂತಿವೆ. ಬೇರೆ ನಿಮ್ಮ ಲೇಖನಗಳಂತೆ ಇಲ್ಲಿಯೂ ವಿಶೇಷವಾಗಿ "ಅನುಪಮಾ"ರ ಸುಕವಿತಾ ಪ್ರತಿಭೆಯು "ಉಪಮಾ"ಗಳಲ್ಲಿ ಮಿರುಗುತ್ತಿದೆ. ("ಉಪಮಾ" ಎಂದರೆ "upma" ಎಂದೇ? - ಎಂದು ಕೆಲವರು ಕೇಳಬಹುದು). ಎಲ್ಲಕ್ಕಿಂತ ಮೇಲಾಗಿ, "ಬದಲಾವಣೆಯು ವ್ಯಕ್ತಿಗತವಾಗಿಯೇ ಉಳಿಯದೆ, ಸುತ್ತಲ ಸಮಾಜವನ್ನೂ ಪ್ರಭಾವಿಸಬೇಕು" ಎಂಬ ನಿಮ್ಮ ಮಾತು ತುಂಬ ಸ್ವಾಗತಾರ್ಹವಾಗಿದೆ; ಅದನ್ನು ಮರುದನಿಸುವ ನಿಮ್ಮ ನಡೆಯು ಬಹಳ "ಮೆಚ್ಚಬಲ್" ಆಗಿದೆ. ಹೀಗಾಗಿ, ಇದನ್ನು ಓದಿದ ಮೇಲೆ, ನಿಮಗೆ "Doctor of Social Pathology" ಎಂಬ ಗೌರವ ಪದವಿ ನೀಡಿದ್ದೇನೆ; ದಯೆಯಿರಿಸಿ ಅಂಗೀಕರಿಸುವಿರಿ ಎಂದು ನಂಬಲೇ?
ನಿಮ್ಮ ವಿಕಾಸ ವೃತ್ತಾಂತ ಒಂದೆರಡು ಪುಟಗಳಿಗೆ, TV talkಗಳಿಗೆ ತುರುಕಲ್ಪಡುವಂಥದ್ದಲ್ಲ. ಈ "memoirs" ಒಳಗೆ ಸೊಗಸಾದ full-scale autobiography ಆಗುವ potential ಕಂಗೊಳಿಸುತ್ತಿದೆ. ಆ ನಿಮ್ಮ ಆತ್ಮಕಥೆಯನ್ನು ಓದಿ, "'ಹೇಗಿದ್ಲು ಹೇಗಾದ್ಲು ಗೊತ್ತಾ?' ನಮ್ಮ ಕನ್ನಡದ, ನಮ್ಮ ಹಳ್ಳಿಯ ಹುಡುಗಿ" ಎಂದು, particularly ಪೆಣ್‍ಕೂಸುಗಳಲ್ಲಿ, ಹುರಿಯೇರಬೇಕು.
|ಶ್ರೀ ಬಂಡಾಯಾಯ ನಮೋ ನಮಃ|
--ಕೋವಿಗಾರ್ ಗುಂಡುಗೋವಿಂದ್, "ಗಟವಾಣಿ" ಪತ್ರಿಕೆ, ಬಜಾರಿ ಬಜಾರ್, ಎಡ ಅಡ್ಡರಸ್ತೆ-೧, ಗಯ್ಯಾಳಿ ಕಾವಲ್ (ಆಗ್ನೇಯ).