Sunday, 24 October 2021

ಕಲ್ಯಾಣ - ಬಸವಣ್ಣ

 




ಬರಹಕ್ಕೆಂದು ಸೃಷ್ಟಿಸಿಕೊಳ್ಳುವ ಏಕಾಂತದ ಕ್ಷಣಗಳು ಒಂಟಿತನದ ಬಾವಿಯಲ್ಲಿ ಮುಳುಗಿಸುವ ಸಾಧ್ಯತೆಯಿದೆ. ಅದನ್ನು ಕಳೆದುಕೊಳ್ಳಲು ಬಸವಣ್ಣ ತುಳಿದ ದಾರಿ ಗುರುತುಗಳ ಊಹಿಸುತ್ತ, ಬಸವಣ್ಣನನ್ನು ಅರಸುತ್ತ ಕಲ್ಯಾಣ ಸುತ್ತಿದ್ದಾಯಿತು. ಈಗಿರುವ ಊರು ನಮ್ಮ ಕಲ್ಪನೆಯ ಕಲ್ಯಾಣದಂತಿರಲು ಸಾಧ್ಯವಿಲ್ಲ. ಒಂದಷ್ಟು ಪಳೆಯುಳಿಕೆಗಳಾದರೂ ಸಿಕ್ಕೀತೆಂಬ ಭರವಸೆಯಿಂದ ಹದಿನೈದು ತಾಸು ದೂರವಿರುವ ಬಸವ ಕಲ್ಯಾಣವನ್ನು ಹೋಳಿಹುಣ್ಣಿಮೆಯ ಹೊತ್ತಿಗೆ ತಲುಪಿದ್ದಾಯಿತು. ಆ ಪಾದದರಿವು ಇಲ್ಲಿದೆ:




ಫೋರ್ಟ್, ಕೋಟೆ ಅಂದಾಗ ಕಣ್ಕಣ್ಣು ಬಿಟ್ಟ ಸಾರಥಿಯು ಕಿಲ್ಲಾ ಅಂದದ್ದೇ ಭರ್ರನೆ ‘ಕೋಟೆ ವಸ್ತುಸಂಗ್ರಹಾಲಯದ ಎದುರು ತಂದು ನಿಲ್ಲಿಸಿದ. ದಾರಿಯುದ್ದಕ್ಕೂ ಹಳೆಯ ಶಾಸನ, ಶಿಲ್ಪ, ಕಂಬಗಳು ಪಾಯಕಲ್ಲು, ಒಗೆಯುವ ಕಲ್ಲು, ಹಾಸುಕಲ್ಲುಗಳಾಗಿ ಕಂಡದ್ದು ನನ್ನ ಭ್ರಮೆಯೇ? ತಿಳಿಯಲಿಲ್ಲ.

ಹೆಸರು, ಸಮಯ, ಊರು ಬರೆದು ಸಹಿ ಮಾಡಿ ವಸ್ತುಸಂಗ್ರಹಾಲಯದ ಒಳಹೊಕ್ಕರೆ ಅಂಗಾಂಗಗಳು ಛಿದ್ರಗೊಂಡ ಜಿನಬಿಂಬಗಳೂ, ಶಿವಶಿವೆಯರೂ, ವಿಷ್ಣುವಿನ ಅವತಾರಗಳೂ, ಬೋದಿಗೆಯ ಆಧಾರ ಶಿಲ್ಪಗಳೂ, ಅರೆಬರೆ ನಾಶವಾದ ಬಸ್ತಿ, ದೇಗುಲದ ಭಾಗಗಳೂ ಹರಡಿಕೊಂಡಿದ್ದವು. ಅವು ಎಲ್ಲಿ ದೊರೆತವು? ಯಾವ ಕಾಲಮಾನದವು? ಎಂಬ ಮಾಹಿತಿ ಬರೆದಿರಲಿಲ್ಲ. ಎಲ್ಲೋ ಒಂದೆರೆಡು ಶಿಲ್ಪಗಳ ಎದುರು ‘ನಾರಾಯಣಪುರ, ೧೨ನೆಯ ಶತಮಾನ ಎಂದು ಕಂಡದ್ದು ಬಿಟ್ಟರೆ ಉಳಿದಂತೆ ಸ್ಥಳ, ಕಾಲ ಬರೆದು ಅಂಟಿಸಿದ್ದ ತುಂಡುಗಳು ಕಿತ್ತು ಹೋಗಿದ್ದವು. ಲೋಹದ ತುಂಡುಗಳನ್ನು ಕಿಡಿಗೇಡಿಗಳು ಕಿತ್ತೊಯ್ದು ಮಾರಿಬಿಡುವರಂತೆ! ಹೊರಬರುವ ಮುನ್ನ ‘ಮ್ಯೂಸಿಯಂ ಸೂಕ್ತ ನಿರ್ವಹಣೆಯಿಲ್ಲದೆ ಸೊರಗಿದೆ. ಅತ್ಯಮೂಲ್ಯ ಶಿಲ್ಪಗಳು ಶಿಥಿಲಗೊಂಡು, ನಿರ್ಲಕ್ಷ್ಯಕ್ಕೊಳಗಾಗಿವೆಯೆಂದು ಸಂದರ್ಶಕರ ಪುಸ್ತಕದಲ್ಲಿ ಬರೆದುಬಿಟ್ಟೆ. ಪ್ರವೇಶದ್ವಾರದಲ್ಲಿದ್ದವರು ಬರೆಯುತ್ತಿರುವುದನ್ನು ದಿವ್ಯ ನಿಸ್ಪೃಹತೆಯಲ್ಲಿ ಓದಿ ಅತ್ತ ತಿರುಗಿದರು.

ನೂರಾರು ಎಕರೆ ವಿಸ್ತಾರದ ಹಲವು ಸುತ್ತಿನ ಕೋಟೆಯದು. ಆನೆಗಳು ಬಂದು ಒದ್ದರೂ ಬೀಳಿಸಲಾಗದ ಬೃಹತ್ ಬಾಗಿಲು, ದುಂಡನೆಯ ಕಲ್ಲುಗುಂಡುಗಳು, ಕೋಟೆಯ ಸುತ್ತೂ ಆಳ ಕಂದಕ, ಮದ್ದರೆಯುವ ಸ್ಥಳ, ಮದ್ದು ಸಂಗ್ರಹಿಸುವ ಕೋಣೆ, ರಾಣಿಯರ ಆವಾಸ, ಈಜುವ ಕೊಳ, ಬಣ್ಣದ ಕೊಳ (ರಂಗೀನ್ ಮಹಲ್), ಆನೆ ಕುದುರೆಗಳ ಲಾಯ, ದರ್ಬಾರ್, ಝರಿಯಂತೆ ನೀರು ಬೀಳುವ ಮೀನಿನಾಕಾರದ ಇಳಿಜಾರು, ರಾಣಿಯರ ಗ್ಯಾಲರಿ, ಬೃಹತ್ ಬೀಸೆಯ ಕಲ್ಲು, ಫಿರಂಗಿ ತೋಪುಗಳು, ಬಹುದೂರದವರೆಗಿನ ಹಾದಿ ತೋರಿಸುವ ಎತ್ತರದ ಬುರುಜುಗಳು, ದಾಖಲೆಗಳನ್ನಿಡುವ ಕೋಣೆ, ಸುರಂಗ, ಗರಡಿಮನೆ, ಮೊಹರಂಗೆ ಅಲಿ ದೇವರ ಕೂರಿಸುವ ಕಟ್ಟೆ - ಒಂದೇ ಎರಡೇ? ಶತಮಾನಗಟ್ಟಲೆ ಕಾಲಾವಧಿಯಲ್ಲಿ ಯೋಜನಾಬದ್ಧವಾಗಿ ಕಟ್ಟಿದ ನೂರಾರು ರಚನೆಗಳು ಅಲ್ಲಿವೆ. ಚಾಲುಕ್ಯರು, ಕಳಚೂರ್ಯ ಬಿಜ್ಜಳನ ಕಾಲದ ಕುರುಹಗಳಾಗಿ ಲಾಂಛನಗಳು, ದೇವಾನುದೇವತೆಗಳು, ಪೌರಾಣಿಕ ಶಿಲ್ಪಗಳಿವೆ. ಅನಂತರ ಬಂದವರ ಸೇರಿಸುವ-ಒಡೆಯುವ-ಕೀಳುವ ಹುಮ್ಮಸದ ಕುರುಹುಗಳು ಢಾಳಾಗಿ ಗೋಚರಿಸುತ್ತವೆ. ಕೋಟೆಯೊಳಗೆ ಮಂದಿರವೂ ಇದೆ, ಮಸೀದಿಯೂ ಇದೆ.

ಈಗ ಎಲ್ಲೆಡೆ ಕಸದ ರಾಶಿ. ನಾಕಾರು ಆಳೆತ್ತರದ ಕೋಟೆಗೋಡೆಯ ಮೇಲೆ ಹಳು, ಕಳೆ ಬೆಳೆದು ಶಿಥಿಲಗೊಳ್ಳುತ್ತಿದೆ. ಸುಣ್ಣಗಾರೆ ಉದುರಿ ಬೀಳುತ್ತಿದೆ. ಗೋಡೆ, ಕಂಬಗಳ ಮೇಲೆ ಇತಿಹಾಸ ನಿರ್ಮಾಪಕರು ತಮ್ಮ ಪ್ರಿಯರ, ಅಪ್ರಿಯರ ಹೆಸರುಗಳನ್ನು ಕೆತ್ತಿದ್ದಾರೆ. ಮಂದಿರ, ಮಸೀದಿಗಳಿಗೂ ಅವರು ವಿನಾಯ್ತಿ ನೀಡಿಲ್ಲ.

ಇದು ಬಸವಣ್ಣ ಭಂಡಾರಿಯಾಗಿ ಹೊಕ್ಕುಹೊರಟ ಕೋಟೆಯೇ? ಶರಣತತ್ತ್ವಗಳನ್ನು ಬೆಂಬಲಿಸಿ, ಬಳಿಕ ಪಟ್ಟಭದ್ರರ ಕಿವಿಕಚ್ಚುವಿಕೆಗೆ ಶರಣರನ್ನು ಬೆಂಬತ್ತಿ ಬಡಿದ ಬಿಜ್ಜಳನ ಕೋಟೆಯೇ? ಆನೆಗೆ ಶರಣರನ್ನು ಕಟ್ಟಿ ಎಳೆಸಿದ್ದು ಇಲ್ಲೇ? ಕಲ್ಪನೆಯ ಹಂಸವು ಗತವೆಂಬ ಆಗಸದಲ್ಲಿ ಕೋಟೆಯನ್ನು ಸುತ್ತಿಸುತ್ತಿ ಬಂದರೂ ಯಾವುದೂ ಸ್ಪಷ್ಟವಿಲ್ಲ. ಕೋಟೆ ಸುತ್ತಿಸಿಕೊಂಡು ಬಂದ ಮೇಲ್ವಿಚಾರಕ ಕಂ ಕಾವಲುಗಾರ ಕಂ ಕೆಲಸಗಾರ ಹೇಳಿದ: ‘ಬಸವಣ್ಣಾರು ಅದುಕ ಹೇಳ್ಯಾರ, ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.!

ಬಸವ, ಇದು ನಿನ್ನ ಸಂದೇಶವಾ?



ಮರುಬೆಳಿಗ್ಗೆ ಬೇಗನೆದ್ದು ಊರ ಹೊರಗಿದ್ದ ನುಲಿಯ ಚಂದಯ್ಯನ ಗವಿಯೆಡೆಗೆ ರಿಕ್ಷಾ ಹತ್ತಿ ಹೊರಟದ್ದಾಯಿತು. ಏಳೂವರೆಗಿಂತ ಮೊದಲು ಪ್ರವೇಶವಿಲ್ಲ. ಹಿಂದಿನಿಂದ ಹೋಗಬಹುದು ಎಂದು ಹಿರಿಯರಾದ ರಿಕ್ಷಾಭಾಯಿ ಹೇಳಿದರು. ದಾರಿಮೇಲೆ ಉರ್ದು-ಕನ್ನಡ-ಮರಾಠಿ ಮಿಶ್ರಿತ ಭಾಷೆಯಲ್ಲಿ ಮಾತುಕತೆ ನಡೆಯಿತು. ಮೂರು ಭಾಷೆಗಳ ಮಿಶ್ರಣದ ಕಲ್ಯಾಣಿಗರ ಮಾತು ಕೇಳುವುದೇ ಒಂದು ಸ್ವಾರಸ್ಯ. ಅಲ್ಲಿಯ ಕೋಮು ಸಾಮರಸ್ಯ ಹೇಗಾದರೂ ಇರಲಿ, ಭಾಷೆಗಳು ಮಾತ್ರ ಒಂದರೊಳಗೊಂದು ಬೆಸೆದುಕೊಂಡು ವಿಶಿಷ್ಟ ಕಲ್ಯಾಣಗನ್ನಡವನ್ನು ಸೃಷ್ಟಿಸಿರುವುದು ವಿಶೇಷವಾಗಿದೆ. ಅವರೊಂದು ಕುತೂಹಲಕರ ಪ್ರಸಂಗ ಹೇಳಿದರು.

ನುಲಿಯ ಚಂದಯ್ಯನ ಗುಹೆಯ ಬಳಿ ಉದ್ಯಾನವನ, ಸ್ಮಾರಕ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಅಲ್ಲೊಂದು ಬಾಬಾರ ದರ್ಗಾವೂ ಇತ್ತು. ಉದ್ಯಾನ ವಿಸ್ತರಿಸಿದರೆ ದರ್ಗಾಗೆ ಹಾನಿಯಾಗುವುದೆಂದು ಮುಸ್ಲಿಂ ಬಾಂಧವರು ದನಿಯೆತ್ತಿದರು. ಕೊಂಚ ಚಕಮಕಿ ಸಂಭವಿಸಿತು.

‘ಪೈಲೆ ನಾವೂ ಅವುರು ಕೂಡೆ ದೀಪಳಿ, ಉರುಸ ಮಾಡತಿದ್ವಿ. ನಮ್ಗೆ ಪೀರ್ ಬ್ಯಾರೆ ಅಲ್ಲ, ಚಂದಯ್ಯ ಶರಣ್ರು ಬ್ಯಾರೆ ಅಲ್ಲ. ಈಗ ಪಾಲಿಟಿಕ್ಸ್ ಬಂದೈತಿ. ಬಸವುರು ನಮ್ಮರು ಮಾತ್ರ ಅಂತಾರ. ಆದ್ರೆ ಬಸವರು ಅವುರಿಗಷ್ಟ ಅಲ್ಲ, ನಮ್ಮೋರ್ ಭೀ ಹೌದು. ಅನಬವ ಮಂಟಪದಾಗೆ ನಮ್ಮೋರ್ ಭೀ ಇದ್ರು. ಈಗೂ ಅಲಿಘರ‍್ಲಿಂದ ನಂ ಜನಾ ಇಲ್ಲೀಗ್ ಬಂದು ಬಸವರ ಬಗ್ಗೆ ತಿಳಕಂಡ್ ಹೋಕ್ಕಾರ. ಹೀಂಗಿರತ ಪಾಲಿಟಿಕ್ಸ್ ಬಂದು ದರ್ಗಾ ಬೀಳಸಾಕ ಜೆಸಿಬಿ ತಂದ್ರು. ಆದ್ರ ಅದರಾಗ ಬಿಜಲಿ ಹರದು ಡ್ರೈವರಗ ಕರೆಂಟು ಹೊಡೀತು. ಅಂವಾ ಪರೇಶಾನ್ ಆದ. ಆಗೇ ಚಲಾನಾ ಹೋತಾ ನೈ ಅಂದು ಕಾಮ್ ಚೋಡ್ಕೆ ಭಾಗಾ. ಹೀಂಗಿರತ ಡೀಸಿ ಸಾಹೇಬ್ ಏಕ್ ಸಪನ ದೇಖೆ. ಕನಸಿನ್ಯಾಗ ಬಸವರು ಬಂದು ‘ನಾ ಬ್ಯಾರೇ ಅಲ್ಲ, ಆ ಪೀರ ಬ್ಯಾರೇ ಅಲ್ಲ, ಯಲ್ಲಾ ಕೆಲ್ಸಾ ನಿಲುಸ್ರಿ ಅಂತ ಜೋರು ಮಾಡಿದುರಂತ. ವ್ಹಾಂ ದೇಖೊ, ದೈನೇಕ್ಕ, ದರಗಾ ಅದ ಅಲ್ಲಿ.

ಒಬ್ಬ ಅಧಿಕಾರಿಗೆ ಕನಸು ಬಿದ್ದು ಹೀಗೂ ಆಗುವುದಾದರೆ ಇಂಥ ಕನಸುಗಳು ಬೀಳುತ್ತಲೇ ಇರಲಿ, ಓ ದೇವರೇ ಎಂದುಕೊಳ್ಳುವಾಗ ‘ಈಗೇನರೆ ಬಸವುರು ಬಂದು ಎಲೆಕ್ಷನ್ನಿಗೆ ನಿಂತಿದ್ದರ ಇವ್ರೇ ಸೋಲಿಸ್ತಿದ್ರು ಮೇಡಂ ಎಂದು ಬೆಚ್ಚಿ ಬೀಳಿಸಿದರು. ಆಧುನಿಕ ಬಿಜ್ಜಳರನ್ನು ನಾವು ಸೃಷ್ಟಿಸುತ್ತಿರುವುದು ನಿಜವೇ. ಗುಹೆಯ ಹಿಂಭಾಗದಲ್ಲಿಳಿಸಿದ ಅವರೊಡನೆ ದರ್ಗಾ ಕಂಡು ಪೀರನನ್ನೂ ಚಂದಯ್ಯನನ್ನೂ ಬಂಧಿಸಿರಬಹುದಾದ ನೂಲು ಯಾವುದೆಂದು ಯೋಚಿಸುತ್ತ ಗವಿಯ ಕಡೆ ಹೋಗುವಾಗ ಕಾಗೆ ಉಲಿಯಿತು: ‘ಇವ ನಮ್ಮವ ಇವ ನಮ್ಮವ ಎನ್ನುವ ಪೀರನ ಅನುಯಾಯಿಗಳ ಎದೆಯಲ್ಲಿ ಇದ್ದಾನೆ ಬಸವಣ್ಣ.

 ಬಸವಣ್ಣನ ಅರಿವಿನ ಮನೆ ಎಲ್ಲೆಂದು ಕೇಳಿ ಅತ್ತ ಹೊರಟಾಯಿತು. ಬೃಹತ್ ಮೈದಾನದಂತಹ ಆವರಣ ಪ್ರವೇಶಿಸುವಾಗ ಹಿಂದಿಯಲ್ಲಿ ಬರೆದ ‘ಬಾಬಾಸಾಹೇಬ್ ಫಲಕ ಗಮನ ಸೆಳೆಯಿತು. ಅಲ್ಲೊಂದು ಸಮಾಧಿಯಿದೆ. ಸೊಲ್ಲಾಪುರದ ಬಾಬಾಸಾಹೇಬ್ ಮಲ್ಲಪ್ಪ ವಾರದ್ ಅವರದು. ಸ್ವಾತಂತ್ರ್ಯಾನಂತರ ಕಲ್ಯಾಣವು ಬರಿಯ ಒಂದು ಹೋಬಳಿಯಾಗಿ, ದೊಡ್ಡ ಹಳ್ಳಿಯಾಗಿ, ತನ್ನ ಗತವನ್ನು ಊಹಿಸಿಕೊಳ್ಳಲಾಗದ ವಿಸ್ಮೃತಿಯಲ್ಲಿದ್ದಾಗ ಒಂದೆಡೆ ಫ. ಗು. ಹಳಕಟ್ಟಿಯವರು ವಚನಗಳನ್ನು ಸಂಗ್ರಹಿಸಿ ಪ್ರಕಟಿಸಿ ವಚನಕಾಲದ ಅರಿವನ್ನು ಕಟ್ಟಿಕೊಟ್ಟರೆ ಇತ್ತ ಬಾಬಾ ಮಲ್ಲಪ್ಪ ವಾರದ್ ಅವರು ಕಲ್ಯಾಣವೆಂಬ ಊರೇ ಬಸವಣ್ಣನ ಕಲ್ಯಾಣವೆನ್ನುವುದನ್ನು ಜನರಿಗೆ ನೆನಪಿಸಿಕೊಟ್ಟರು. ಗಿಡಗಂಟೆ ಬೆಳೆದು, ಕಾಡುಪ್ರಾಣಿಗಳ, ಬಾವಲಿಗಳ ಆವಾಸವಾಗಿದ್ದ ಗುಹೆಗಳನ್ನು ಪತ್ತೆ ಹಚ್ಚಿದರು. ಹಲವು ಸಾಕ್ಷ್ಯಾಧಾರಗಳನ್ನಿಟ್ಟುಕೊಂಡು ಯಾವುದು ಯಾರ ಗುಹೆ ಇರಬಹುದೆಂದು ಹೆಸರಿಸಿದರು. ಹೂಳು ತುಂಬಿದ್ದ ತ್ರಿಪುರಾಂತಕ ಕೆರೆದಂಡೆಯ ಗುಡಿ, ಗವಿಗಳನ್ನು ಒಂದೊಂದಾಗಿ ಪತ್ತೆ ಹಚ್ಚಿ ತಾವೇ ಸ್ವಚ್ಛಗೊಳಿಸತೊಡಗಿದರು. ಬಸವ ಜಯಂತಿಯಂದು ರಥೋತ್ಸವ ಶುರು ಮಾಡಿಸಿದರು. ಬಳಿಕ ಹಲವರು ಅವರೊಡನೆ ಕೈಜೋಡಿಸಿದರು. ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಬಂದು ಕಲ್ಯಾಣವು ಇವತ್ತಿನ ಸ್ವರೂಪ ಪಡೆಯಿತು. ಒಟ್ಟಾರೆ ಕಲ್ಯಾಣ ಎಂಬ ಕಸಬಾ ಹೋಬಳಿಯು ಇಂದಿನ ಬಸವ ಕಲ್ಯಾಣವಾಗುವುದರಲ್ಲಿ ನಿಸ್ಪೃಹವಾಗಿ, ಪ್ರತಿಫಲಾಪೇಕ್ಷೆಯಿಲ್ಲದೆ ದುಡಿದ ಬಾಬಾಸಾಹೇಬ್ ಮಲ್ಲಪ್ಪ ವಾರದ್ ಅವರಂಥವರ ಪಾತ್ರ ಹಿರಿದಾಗಿದೆ ಎಂದು ಬೇವಿನ ಮರದ ಕೆಳಗೆ ಕುಳಿತಿದ್ದ ಕಲ್ಯಾಣದ ಹಿರಿಯರೊಬ್ಬರು ನೆನೆಸಿದರು.

‘ಎನಗಿಂತ ಕಿರಿಯರಿಲ್ಲ ಎಂದ ಬಸವಣ್ಣನನ್ನು ಈ ಬಾಬಾ ಅವರಲ್ಲಲ್ಲದೇ ಮತ್ತೆಲ್ಲಿ ಹುಡುಕುವುದು?


ಬಿರುಬಿಸಿಲಲ್ಲಿ ಹಸಿವೆಯಾಯಿತೋ, ಬಾಯಾರಿಕೆಯಾಯಿತೋ ತಿಳಿಯದೇ ಒಂದು ಖಾನಾವಳಿಗೆ ಹೋದೆವು. ಭಾನುವಾರವೆಂದು ಹಲವು ಖಾನಾವಳಿಗಳು ಮುಚ್ಚಿದ್ದವು. ಅಂತೂ ತೆರೆದಿದ್ದ ಒಂದು ಕಾಣಿಸಿತು. ಗಿರಾಕಿಯಿಲ್ಲದೇ ಒಳಗಿನವರು ಒಂದೊಂದು ಬೆಂಚಿನ ಮೇಲೆ ಆರಾಮದಲ್ಲಿ ಕುಳಿತಿದ್ದರು. ಬಾಗಿಲಿನಲ್ಲೇ ಇದ್ದ ಅಜ್ಜಿ ಬರ್‌ಬರ್ರಿ ಎಂದು ಮನೆಗೆ ಬಂದ ಅತಿಥಿಗಳೋ ಎಂಬಂತೆ ಸ್ವಾಗತಿಸಿ ಒಳಗೆದ್ದು ಹೋದರು. ಅವರ ಬೆನ್ನು ಪೂರಾ ಬಾಗಿತ್ತು. ತಮ್ಮ ರಾಜಕೀಯ ಒಲವನ್ನು ಪ್ರದರ್ಶಿಸುವವರಂತೆ ಭಜರಂಗಬಲಿಯ ಚಿತ್ರಪಟದ ಕೆಳಗೆ ಗಲ್ಲಾದಲ್ಲಿ ಅಜ್ಜ ಕುಳಿತಿದ್ದರು. ನಮ್ಮೆದುರು ಒಂದು ತಟ್ಟೆ, ಸಣ್ಣ ಬಟ್ಟಲ ತುಂಬ ಸುಟ್ಟ ಸೇಂಗಾಬೀಜ, ಹಸಿ ತರಕಾರಿ ಬಂದವು. ಒಂದೊಂದೇ ಕಾಳು ಬಾಯಿಗೆಸೆದುಕೊಳ್ಳುತ್ತಾ ಸುತ್ತ ತಿರುಗಿದರೆ..

ಅಲ್ಲೊಂದು ತೀರಾ ಅಪರೂಪದ ಚಿತ್ರಪಟ. ಇದುವರೆಗೆ  ನೋಡಿರದ ಚಿತ್ರಪಟ. ಅದರ ನಡುಮಧ್ಯದಲ್ಲಿದ್ದದ್ದು ಗಾಂಧೀಜಿ. ಅವರ ಹಿನ್ನೆಲೆಯಲ್ಲಿ ಓಂ. ಕೆಳಗೆ ‘ಆರ್ಯ ದೇಶ್ ಕೆ ಆದರ್ಶ್ ನೇತಾ, ಮರ್ಯಾದಾ ಪುರುಷೋತ್ತಮ್, ಮಹಾತ್ಮಾ ಶ್ರೀ ಗಾಂಧೀಜಿ ಎಂದು ಬರೆದಿತ್ತು. ಸ್ವಾತಂತ್ರ್ಯ ವೃಕ್ಷದ ಎಲೆಎಲೆಯಲ್ಲಿಯೂ ಕಾಂಗ್ರೆಸ್ಸಿನ ನೂರಾರು ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳಿದ್ದವು. ಮೇಲೊಂದು ವೃತ್ತದಲ್ಲಿ ನೆಹರೂ ಮಂತ್ರಿಮಂಡಲ. ಎಲ್ಲಕ್ಕಿಂತ ಮೇಲೆ ಭಾರತ ಮಾತಾ. ಗಾಂಧೀಜಿ ಪಕ್ಕ ಸಣ್ಣಗೆ ಕಸ್ತೂರಬಾ. ಗಾಂಧಿ ಮತ್ತು ನೆಹರೂ ಅವರ ಹಣೆಗೆ ಒಂದು ವಿಭೂತಿಯ ಬೊಟ್ಟು. ಕೆಳಗೆ ಕುದುರೆಯನೇರಿ ಕುಳಿತ ನೆಹರೂ, ಶಾಸ್ತ್ರಿ, ಪಟೇಲ, ಅಬ್ದುಲ್ ಕಲಾಂ ಆಜಾದ್. ಅದು ‘ಬೌರಿಂಗ್ ಪೇಟ್, ಕೋಲಾರದಲ್ಲಿ ೧೯೪೬ರಲ್ಲಿ ಶ್ರೇಷ್ಟಿಯೊಬ್ಬರಿಂದ ಮುದ್ರಿತವಾದ ಚಿತ್ರಪಟ.

ಅದರ ಪಕ್ಕದಲ್ಲಿ ಶಿರಡಿಯ ಸಾಯಿಬಾಬಾ ಅನ್ನ ಕುದಿಯುತ್ತಿರುವ ಪಾತ್ರೆಗೆ ಬರಿಗೈ ಹಾಕಿ ಅನ್ನ ತೆಗೆಯುತ್ತಿರುವ ಚಿತ್ರಪಟ. ಇದ್ದಕ್ಕಿದ್ದಂತೆ ನಗುವ ಸಾಯಿಬಾಬಾರ ಚಿತ್ರ ಝಗ್ಗನೆ ಬೆಳಗಿತು. ಮೊದಲ ಗಿರಾಕಿಗೆ ಊಟ ಕೊಡುವಾಗ ಸಾಯಿಬಾಬಾರ ಚಿತ್ರಪಟದ ಎದುರಿನ ದೀಪ ಉರಿಯುವುದಂತೆ. ನಮ್ಮೆದುರು ವಿಭೂತಿ ಉಂಡೆ ಬಂತು. ಎಲ್ಲಿಂದ ಬಂದೀರಿ, ಯಾಕ ಬಂದೀರಿ ಎಂದು ಅಜ್ಜಿ ವಿಚಾರಿಸಿದರು. ಉದ್ದೇಶ ತಿಳಿದು ಅವರಿಗೆ ಅಚ್ಚರಿಯಾಯಿತು. ‘ಆತಾತು, ನೋಡ್ರೆವ್ವ, ಇದು ಸಣ್ಣೂರು. ಎಲ್ಲಾನು ಒಂದಿನದಾಗ ನೋಡಬಹುದು ಎಂದು ನೋಡಬೇಕಾದ ಸ್ಥಳಗಳ ಪಟ್ಟಿ ಕೊಟ್ಟರು. ‘ಏ, ಹಂಚಿನ ಮ್ಯಾಗಿಂದ ತೋಂಡ್ ಬಾ, ಅವ್ರು ಅಲ್ಲಿಂದ ಇಲ್ಲಿಗ್ ಬಂದಾರ ಎಂದು ಬಿಸಿಬಿಸಿ ರೊಟ್ಟಿ ಹಾಕಿಸಿದರು.

ಅವರು ಕೊಟ್ಟ ಸ್ಥಳೀಯ ಬೆಲ್ಲಗಟ್ಟಿ ಹಿಡಿದು ಹೊರಬಂದು ಬೋರ್ಡು ನೋಡಿದರೆ ಅದು ‘ತಿರುಪತಿ ಲಿಂಗಾಯತ ಖಾನಾವಳಿ! ತಿರುಪತಿಗೂ ಲಿಂಗಾಯತಕ್ಕೂ ಎಲ್ಲಿಗೆಲ್ಲಿಯ ಸಂಬಂಧ? ಗಾಂಧಿ, ಸಾಯಿಬಾಬಾ, ಬಜರಂಗಬಲಿಯಿರುವ ಭಗವಾ ಧ್ವಜ ಒಟ್ಟಿಗಿರಲು ಹೇಗೆ ಸಾಧ್ಯ?

ಬಸವಣ್ಣ, ಈ ನಂಟು ಬೆಸೆದದ್ದು ‘ಅನ್ಯರಿಗೆ ಅಸಹ್ಯ ಪಡಬೇಡ ಎಂದ ನೀನೇ ಇರಬೇಕು.

ಆ ನಸುಕು ನುಲಿಯ ಚಂದಯ್ಯನ ಗವಿ ಹೊರಗಿನ ನಿರ್ಜನ ಮಂಟಪವು ಸೂರ್ಯ ನಮಸ್ಕಾರ ಮಾಡು ಬಾ ಎಂದು ಆಹ್ವಾನಿಸುವಂತಿತ್ತು. ಆದರೆ ಕಾಯಕದವರ ನೆಲದಲ್ಲಿ ಕಸ, ಕೊಳೆಯ ರಾಶಿ ಕಣ್ಣೆದುರು ಬಿದ್ದಿರುವಾಗ ಕಂಡರೂ ಕಾಣದವರಂತೆ ಅಂಗಸಾಧನೆ ಮಾಡಲು ನಾಚಿಕೆಯೆನಿಸಿತು. ಕೆಳಬಿದ್ದ ಹುಣಿಸೆಯ ಬರಲು ಜೋಡಿಸಿ, ಗುಡಿಸಿ, ಕಸ ರಾಶಿ ಮಾಡಿ ಹೊರಬಂದಾಗ ಅಲ್ಪ ಸಮಾಧಾನ!

ಓಹ್, ಇನ್ನು ಬಸವಣ್ಣನನ್ನು ಗತದ ಪಳೆಯುಳಿಕೆಗಳಲ್ಲಿ ಹುಡುಕುವುದಲ್ಲ. ಪ್ರತಿಮೆ, ಪೂಜೆ, ಪಾದಪೂಜೆ, ಜಾತ್ಯಸ್ಥರ ಮಠಗಳು ಬಸವಣ್ಣನನ್ನು ಮುಚ್ಚಿಟ್ಟರೂ, ಬಚ್ಚಿಟ್ಟರೂ ಅವ ಇಲ್ಲಿಯೇ ಇದ್ದಾನೆ, ಒಳಗಿದ್ದಾನೆ ಎಂಬ ವಿಶ್ವಾಸವು ಸೂರ್ಯನಷ್ಟೇ ಸ್ಪಷ್ಟವಾಯಿತು. ದಕ್ಷಿಣದ ಮನೆಗೆ ಹೊರಟದ್ದಾಯಿತು.


 



 (March 2021)


5 comments:

  1. ಉಪಯುಕ್ತ ಮಾಹಿತಿ.ಮತ್ತೊಮ್ಮೆ ಅಲ್ಲಿ ಹೋಗಿ ಬಂದಂತಾಯಿತು.ಅಲ್ಲಿ ಹೋದಾಗಿನ ನಿಮ್ಮ ಅನುಭವಗಳ ನಿರೂಪಣೆಯೂ ಚೆನ್ನಾಗಿದೆ.

    ReplyDelete
  2. ಸೂಕ್ಷ್ಮ ವೀಕ್ಷಣೆ-ಸಂವೇದನೆಗಳ ನಿಮ್ಮ ಬರಹ ಕೇವಲ ವರದಿಯಾಗಿರದೆ ಬಸವಕಲ್ಯಾಣದ ಇಂದಿನ ಪರಿಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ಮಾಡಿತು. ಧನ್ಯವಾದಗಳು.

    ReplyDelete
  3. ಜೊತೆಯಲ್ಲಿ ಬಂದ ಅನುಭವ ನನಗಾಯಿತು.
    ನಿಜ. ಎಲ್ಲಿ ಹೋದರೂ ಶೋಭಿಸುವ ಕಸವೇ ಇಂದು ನಮ್ಮೆಲ್ಲ ಪ್ರವಾಸೀ ಸ್ಥಳಗಳ ಐಡೆಂಟಿಟಿಯೇ ಆಗಿಬಿಟ್ಟಿದೆ!

    ReplyDelete
  4. ನಿಮ್ಮ ಈ ಬಸವಕಲ್ಯಾಣಾನುಭವ ಮಂಟಪವನ್ನು ಸುತ್ತಿ, ನಾನೂ ನಿಮ್ಮೊಡನೆ ಆ "Holy ಹುಣ್ಣಿಮೆ"ಯ "ಪಾದದರಿವು" ಪಡೆದಂಥ ಅನುಭವವಾಯಿತು. ಇಲ್ಲಿ ನನ್ನ ಮುಂದೆ ಮೊದಲು ಕಂಗೊಳಿಸಿದ್ದು, "M.P." ಗಾಂಧೀ, ಅರ್ಥಾತ್ "ಮರ್ಯಾದಾ ಪುರುಷೋತ್ತಮ್" ಗಾಂಧೀ ಚಿತ್ರ, ಮತ್ತು ಅದರ ಹಿನ್ನೆಲೆಯ "(ಶಾ ಋಕ್) ಖಾನ್-ಆವಳಿ" ಕಥೆ. ಮೊದಲಿಗೆ ಈ ಚಿತ್ರವು ವಿಚಿತ್ರವೆನಿಸಿದರೂ, ಇದರಲ್ಲಿ ಮತ್ತು ಒಟ್ಟು ಈ ಕಥೆಯಲ್ಲಿ ಎದ್ದು ಕಾಣುವ ವಿಭಿನ್ನ ಮತಗಳ ಸನ್ನಿಧಿಯಿಂದಾಗಿ, "ಇದೂ 'ಕೂಡಲ ಸಂಗಮ' ತಾನೇ?" ಎಂಬ ಅರಿವಾಗಿ ನವಿರೆದ್ದಿತು. "ಬುದ್ಧನೂ ಸೇರಿಬಿಟ್ಟಿದ್ದರೆ, ಇದೊಂದು pantheon ಎಂದೇ ಆಗಿಬಿಡುತ್ತಿತ್ತಲ್ಲವೇ?" ಎನಿಸಿತು. ಕೂಡಲೆ, ಅಲ್ಲೇ ಸಮೀಪದಲ್ಲಿರುವ (ಭೀಮಾನದಿ ದಂಡೆಯ) ಬುದ್ಧನ "ಸನ್ನತಿ", ಮತ್ತು 'qaum' ('ಕೋಮು') ಸೌಹಾರ್ದಕ್ಕೆ ಹೆಸರಾಗಿರುವ "ಅಷ್ಟೂರು", ಎರಡೂ ನೆನಪಾಗಿ, ಈ "ಬಸವಭೂಮಿ-ಪೀರ್‌ಭೂಮಿ"ಯ "ಕೂಡಲು" ಗುಣವು 'ಝಗ್' ಎಂದು ಕೋರಯಿಸಿತು. ನುಲಿಯ ಚಂದಯ್ಯ ಹೊಸೆಯುತ್ತಿದ್ದ ಹಗ್ಗ ಮತ್ತು ಗಾಂಧೀ ಎಳೆಯುತ್ತಿದ್ದ ನೂಲು ಹೆಣೆದುಕೊಂಡು, ಇಂದಿಗೂ ಇಲ್ಲಿಯ ಗುಹಾಂತರಗಳಲ್ಲಿ ಗುಹ್ಯವಾಗಿ "ಪವಾಡ" ಎಸಗುತ್ತ, ಅಂತರಮತೀಯ ಅರಿವೆಯನ್ನು ಗಟ್ಟಿಯಾಗಿಟ್ಟಿವೆ ಎನಿಸುತ್ತದೆ.
    ಬಿಜ್ಜೆವಳ (ವಿದ್ಯೆಯ ವೃತ್ತಿಯವನು) ಕೋಟೆಗೆ "ಗೀರಲಂಕಾರ" ಸೇವೆಗೈಯುವ 'ಬಿಜ್ಜೆಗ'ರು ('ವಿದ್ಯಾವಂತ'ರು; "graffiti" ಚಾಳಿಯ ಚಾಲಾಕಿಗಳು), ಮತ್ತು ಅಲ್ಲಿಯ ಗೋಡೆಗಳನ್ನು ವಿಧ್ವಂಸ ಮಾಡುವ ವಿದ್ವಾಂಸರು (veteran vandals), ಇವರೆಲ್ಲ ಎಂಥೆಂಥ "ಕಲ್ಯಾಣ ಕಾರ್ಯ" ಮಾಡುತ್ತಿದ್ದಾರೆ ಎಂಬುದನ್ನು ಇಲ್ಲಿ ಚುರುಕಾಗಿ ತಿಳಿಪಡಿಸಿ ಎಚ್ಚರಿಸಿದ್ದೀರಿ. ಈ "ಕೊಳೆಯುಳಿಕೆ"ಗಳೇ, ನಾಳೆ "ಪಳೆಯುಳಿಕೆ"ಗಳಾಗಿ, ಇತಿಹಾಸವು ಇನ್ನಷ್ಟು ಹದಗೆಡುವ ಅಪಾಯವಿದೆ.
    ಫ.ಗು. ಹಳಕಟ್ಟಿ ಮತ್ತು ಬಾಬಾ ಸಾಹೇಬ ವಾರದ, ಇವರ ಜೋಡಿಯು, "ಬಸವಂ ಶರಣಂ ಗಚ್ಛಾಮಿ" ಎನ್ನುತ್ತ ನೀಡಿದ ಐತಿಹಾಸಿಕ ಸೇವೆಗೆ, ನನ್ನ ಎದೆಯಾಳದಿಂದೊಂದು "ಬಸವಪಾದದ ಹೂವು" ಇರಲಿ!

    ReplyDelete
  5. ಜನಸಾಮಾನ್ಯರ ನಡುವೆ ಧರ್ಮ, ಜಾತಿ ಎನ್ನುವ ಜಗಳ ಅಪರೂಪ. ಇವತ್ತಿನ ರಾಜಕಾರಣ ಕಿಡಿ ಹೊತ್ತಿಸಿ ಚಂದ ನೋಡುತ್ತಾ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ.

    ReplyDelete